18 June 2021

ಅಂಬರೀಷ ಗುಹೆ


೧೯೮೦ರ ದಶಕದಲ್ಲಿ ಬುಲ್ಡೋಜರ್ ಮತ್ತು ತೂತು ಭಾವಿಯ ಕ್ರಾಂತಿ ಚುರುಕಾಗಿತ್ತು. ಭೂಗರ್ಭದ ಜಲನಿಧಿ ಸರ್ವವ್ಯಾಪಿ ಮತ್ತು ಅಕ್ಷಯ ಎನ್ನುವ ಹುಚ್ಚಿನಲ್ಲಿ ಕೃಷಿಕರು ಎಲ್ಲೆಂದರಲ್ಲಿ ಗುಡ್ಡೆಗಳನ್ನು ತಟ್ಟಾಗಿಸುತ್ತ ತೋಟ ವಿಸ್ತರಣೆ ನಡೆಸಿದ್ದರು. ಅದಕ್ಕೆ ಪೂರಕವಾಗಿ ಭೂಗರ್ಭ ಶಾಸ್ತ್ರಜ್ಞರು, ಮೂಲನೆಲದ ರಚನೆ ನೋಡಿ, ಕೆಲವು ಯಂತ್ರೋಪಕರಣಗಳ ಪ್ರಯೋಗದಿಂದ (ವೆಚ್ಚವೂ ಸಾಕಷ್ಟು ಇದ್ದಿರಬೇಕು), ಅಸ್ಪಷ್ಟ ಜಲಮೂಲಗಳನ್ನು ಗುರುತಿಸಿಕೊಡುತ್ತಿದ್ದರು. ಆದರೆ ‘ವಿಜ್ಞಾನದ ವಿನಯ’ಕ್ಕೆ ಒಗ್ಗಿಕೊಳ್ಳದ ಮತ್ತು ಕೃಷಿಯ ಹೆಸರಿನಲ್ಲಿ ವಾಣಿಜ್ಯ ಬೆಳೆಯ ಗೀಳು ಹಿಡಿಸಿಕೊಂಡ ಜನರಿಗೆ ಅಷ್ಟು ಸಾಲದಾಯ್ತು. ಆಗ ವಾಸ್ತುಬ್ರಹ್ಮರು,

ಮಂತ್ರದ್ರಷ್ಟಾರರು, ಪರಂಪರೆಯ ಕುಶಲಿಗಳು, ಕವಡೆ ಚೆಲ್ಲುವವರೇ ಮೊದಲಾದವರು ಹೆಚ್ಚಿಕೊಂಡರು. "ನೂರಕ್ಕೆ ನೂರು ಖಚಿತ" ಎನ್ನುವಂತೆ ಬೇಗಡೆ ಮಾತುಗಳನ್ನಾಡಿ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದರು. ಪುಸ್ತಕ ವ್ಯಾಪಾರಿಯಾಗಿ ನಾನು ಅಂಥ ಸಾಕಷ್ಟು ದೇಶೀ ಮತ್ತು ವಿದೇಶೀ ಪುಸ್ತಕಗಳನ್ನು ಮಾರುತ್ತಲೂ ಇದ್ದೆ. ಹಾಗೆ ನನಗೂ ಪರಿಚಿತವಾದ ಒಂದು ತಂತ್ರ ಡೌಸಿಂಗ್. ಅದನ್ನು ಸರಳವಾಗಿ ಹೇಳುವುದಿದ್ದರೆ, ಕವೆಗೋಲೋ ಓಲಾಡುವ ಕೀಸರಪಳಿಯನ್ನೋ ಬಳಸಿ, ಮುಖ್ಯವಾಗಿ ನೀರು ಗುರುತಿಸುವ ತಂತ್ರ.


ಸಸ್ಯಶಾಸ್ತ್ರಜ್ಞ ಜತೆಗೇ ಪ್ರಾಯೋಗಿಕ ಕೃಷಿಪಂಡಿತರೂ ಆಗಿದ್ದ ಮೂಡಬಿದ್ರೆಯ ಡಾ| ಎಲ್.ಸಿ ಸೋನ್ಸರು (ನೋಡಿ:ನೀನಾಸಂ...) ಕ್ರಿಶ್ಚನ್ ಆದರೂ (ಮೂರ್ತಿಪೂಜಾ ನಂಬಿಕೆಗಳಿಲ್ಲದವರು ಎಂಬ ಅರ್ಥದಲ್ಲಿ) ದೇವಬಿಂಬ ಮತ್ತು ಮಂದಿರಗಳ ಅಧಿಭೌತಿಕ ಶಕ್ತಿಗಳ (Energy, Aura) ಕುರಿತು ವಿಶ್ವಾಸವಿಟ್ಟಿದ್ದರು. ರೇಕೀ, ಡೌಸಿಂಗ್ ಮುಂತಾದ ಅಸಾಂಪ್ರದಾಯಿಕ ಚಿಕಿತ್ಸಾ ಕ್ರಮ ಅಥವಾ ತಂತ್ರಗಳಲ್ಲಿ ಸ್ವಲ್ಪ ಮಟ್ಟಿಗೆ ಪ್ರಯೋಗ ಪರಿಣತಿಯನ್ನೂ ಗಳಿಸಿದ್ದರು. ಅವರದೇ ಕೃಷಿಭೂಮಿಯ ಜಲನಿರ್ವಹಣೆಗೆ ಡೌಸಿಂಗ್ ಬಹಳ ಅನುಕೂಲಗಳನ್ನು ಒದಗಿಸಿತ್ತಂತೆ. ಆಗೀಗ ಅವರ ಪರಿಣತಿಯನ್ನು ಕೇಳಿ ಬಂದವರನ್ನೂ ಮನ್ನಿಸಿ, ಸೋನ್ಸರು ಅನ್ಯ ಪ್ರದೇಶಗಳಲ್ಲೂ ಬಾವಿ, ತೂತುಬಾವಿಗಳಿಗೆ ಧಾರಾಳ ಸ್ಥಾನ ನಿರ್ದೇಶನ ಮಾಡಿದ್ದರು.


ಸೋನ್ಸ್ ಅವರ ಬಹುಮುಖೀ ಆಸಕ್ತಿಗಳಿಗೆ ಸಹಜವಾಗಿ ದೊಡ್ಡ ಪುಸ್ತಕಪ್ರೇಮಿಯೂ ಹೌದು. ಹಾಗೆ ಅವರು ನನ್ನ ಪುಸ್ತಕ ಮಳಿಗೆಗೆ ಬಂದಾಗೆಲ್ಲಾ ನನ್ನ ಪ್ರಕೃತಿ ಸಂಬಂಧೀ ಚಟುವಟಿಕೆಗಳ ಕುರಿತೂ ಧಾರಾಳ ವಿಚಾರ ವಿನಿಮಯ ನಡೆಸುವುದಿತ್ತು. ಅಂಥ ಒಂದು ಸನ್ನಿವೇಶದಲ್ಲಿ, ಅಂದರೆ ೧೯೮೩ರ ಒಂದು ಭೇಟಿಯಲ್ಲಿ ಅವರು ನನ್ನಲ್ಲಿ "ಗುಹಾಶೋಧಕರಿಗೆ ಕಾಂತಾವರದಲ್ಲೊಂದು ಹೊಸ ಸವಾಲಿದೆ" ಎಂದು ಕೆಣಕಿದರು.


ಮೂಡಬಿದ್ರೆ - ಕಾರ್ಕಳ ದಾರಿಯ ಬೆಳ್ವಾಯಿ ಕವಲಿನಿಂದ ನಾಲ್ಕೂವರೆ ಕಿಮೀ ಪಶ್ಚಿಮಕ್ಕಿರುವ ಕಾಂತೇಶ್ವರ ದೇವರ ಊರು ಕಾಂತಾವರ. ಸೋನ್ಸ್ ಒಮ್ಮೆ ಕಾಂತಾವರಕ್ಕೆ ಹೋದಾಗ ಕ್ಷೇತ್ರದ ‘ಎನರ್ಜಿ’ಯನ್ನು ಅನುಭವಿಸಿದರಂತೆ. ಮುಂದುವರಿದು ದೇವಳದ ಕೆರೆ, ಅದರ ಮೂಲ ನೆಲೆಯೆಂದೇ ಜನಪದ ನಂಬಿದ ಅಂಬರೀಷ ಗುಹೆಯ ಪರಿಚಯ ಪಡೆದರು. ಸಹಜವಾಗಿ ಅವರ ಡೌಸಿಂಗ್ ತಂತ್ರ ಪ್ರಯೋಗಿಸಿ, ಅಂಬರೀಷ ಗುಹಾಜಾಲದ ನಕ್ಷೆ ಮಾಡಿದರು, ಮಂಗಳೂರಿಗೆ ಬಂದಾಗ, ನನ್ನೆದುರು ಇಟ್ಟಿದ್ದರು. ನಾನು ಕೂಡಲೇ ಗುಹೆಯ ವಾಸ್ತವ ದರ್ಶನದ ಅನುಭವ ಗಳಿಸಲು ತಂಡ ಹೊರಡಿಸಿದೆ.....

ಬುಧವಾರ (೨೬-೧-೮೩), ಗಣರಾಜ್ಯೋತ್ಸವದ ರಜಾದಿನ, ಬೆಳಿಗ್ಗೆ ನಾವೇಳು ಮಂದಿ ಬೈಕ್, ಸ್ಕೂಟರ್ ಹೊಂದಿಸಿಕೊಂಡು ಮೂಡಬಿದ್ರೆ ಸೇರಿದ್ದೆವು. ಅಂದಿನ ಹರೀಶಾಚಾರ್, ಇಂದಿನ ಹರೀಶ ಪೇಜಾವರ - ಔಷಧ ಕಂಪೆನಿಯ ಮಾರಾಟ ಪ್ರತಿನಿಧಿಯಾಗಿ ಊರೂರು ‘ತಿರುಗೂಳಿ’, ಇಂದು ಹಿರಿಯ ವಿತರಕ. ಅಕ್ಬರಾಲಿ - ಅಂದು ಮಂಗಳೂರಲ್ಲೇ ತತ್ಕಾಲೀನ ಗುಮಾಸ್ತಗಿರಿಗಳಲ್ಲಿ ನವೆದಿದ್ದರು. ಅನಂತರ ಖಾಯಂ ಸರಕಾರೀ ವೃತ್ತಿಯಲ್ಲಿ ವಿಧಾನ ಸೌಧ ಸೇರಿದವರನ್ನು ಮತ್ತೆ ಕಂಡಿಲ್ಲ. ಕೀರ್ತಿ - (ಯಜ್ಞರ ಆಪ್ತ ಗೆಳೆಯ ಮತ್ತು) ವೃತ್ತಿಪರ ಫೊಟೋಗ್ರಾಫರ್ - ಅಂದೂ ಇಂದೂ. ಐತಪ್ಪ ರೈ - ಲೆಕ್ಕ ಪರಿಶೋಧಕ. ಬಾಲಕೃಷ್ಣ ಯಾನೆ ಬಾಲಣ್ಣ, ಅಂದು ಪಣಂಬೂರು, ಇಂದು ಮುಂಬೈವಾಲಾ - ಮಝಗಾಂವ್ ಡಾಕ್ ತಂತ್ರಜ್ಞ. ತಂಡದ ಕಿರಿಯ ಎ.ಪಿ ಚಂದ್ರಶೇಖರ (ನನ್ನ ಸೋದರ ಮಾವನ ಮಗ) - ಅಂದು ಅರವಿಂದ ಮೋಟಾರ್ಸಿನ ಟೆಂಪೋ ವಿಭಾಗದ ಫೋರ್ಮನ್, ಈಗ ಮೈಸೂರಿನಲ್ಲಿ ಹಿರಿಯ ಸಾವಯವ ಕೃಷಿಕ.

ಕಾಂತೇಶ್ವರ ದೇಗುಲದ ಪಕ್ಕದಲ್ಲಿ ಪೂರ್ವ- ಪಶ್ಚಿಮವಾಗಿ ಒಂದು ಪುಟ್ಟ ಗುಡ್ಡ ಸಾಲಿದೆ. ಅದರ ಉತ್ತರ ತಪ್ಪಲಿನ ಕುರುಚಲು ಮೆಟ್ಟಿ ಸ್ವಲ್ಪ ಮೇಲೇರಿದರೆ ಕಚ್ಚಾ ಮುರಕಲ್ಲ ಹಾಸು ಕಾಣಬಹುದು. ಅದರಲ್ಲಿ ಹಳ್ಳಿಗರು ತೋರುವ ಕೆಲವು ಪ್ರಾಚೀನ ಕಾಲದ ಕೆತ್ತನೆಯ ಗುಳಿಗಳಿವೆ. ಇವು ಸ್ಥಳಪುರಾಣದಲ್ಲಿ ಬರುವ ಅಂಬರೀಷನೆಂಬ ಋಷಿಯ ತಪಸ್ಸಿಗೆ ಪೂರಕವಾಗಿ ಒದಗಿದ ಕುಂಡಿಕೆಗಳಂತೆ. ಅಲ್ಲೇ ಏಣಿನ ಒಳಮೈಯಲ್ಲಿ, ಪೊದೆಗಳೆಡೆಯಲ್ಲಿ ಇರುವ ಒಂದು ಪ್ರಾಕೃತಿಕ ಹರಕೇ ಅಂಬರೀಷ ಗುಹೆಯ ಪ್ರವೇಶದ್ವಾರ. ಅಲ್ಲೇ ಒಳಗೆ ಋಷಿಯ ತಪೋಬಲದಲ್ಲಿ ಮೈದಳೆದ ಪುಟ್ಟ ತೀರ್ಥದ ಕೊಳವಿದೆಯಂತೆ. ಮುಂದೆ ಅದೇ ಗುಪ್ತಗಾಮಿನಿಯಾಗಿ ಕಾಂತೇಶ್ವರ ದೇವಳದಲ್ಲಿ ಕೊಳವಾಗಿ ಪ್ರತ್ಯಕ್ಷವಾಗಿದೆ ಎನ್ನುತ್ತಾರೆ ಸ್ಥಳಪುರಾಣಿಕರು.

ಪರ್ವ ಕಾಲದಲ್ಲಿ ಭಕ್ತಾದಿಗಳು ಕನಿಷ್ಠ ಬಟ್ಟೆಯಲ್ಲಿ, ಧೂಪದೀಪಗಳೊಡನೆ ಅಂಬರೀಷ ಗುಹಾ ಪ್ರವೇಶ ಮಾಡಿ, ವಿಶೇಷ ತೀರ್ಥ ಸ್ನಾನವೇನೋ ಮಾಡುತ್ತಾರೆ. ಆದರೆ ಅದರಿಂದಾಚೆಗಿನ ಪೊಳ್ಳನ್ನು ಶೋಧ ಮಾಡಿದ ಕತೆಗಳಿಲ್ಲ. ಬದಲಿಗೆ ತಮ್ಮ ಅಸಹಾಯಕತೆಯನ್ನು ಮರೆಸುವಂತೆ, ಮತ್ತು ಎಲ್ಲೆಡೆಗಳಲ್ಲಿ ಇರುವಂತೆ, ಕಾಶಿ ರಾಮೇಶ್ವರಗಳಂತ ದೂರದ ಪುಣ್ಯ ಕ್ಷೇತ್ರಕ್ಕೆ ಒಳದಾರಿ ಹೇಳುತ್ತಾರೆ. ಹಾಗೇನಿಲ್ಲ ಎಂದು ಸೋನ್ಸರು ಒಂದಷ್ಟು ಅಂಕಾಡೊಂಕಿ ರೇಖಾಚಿತ್ರವನ್ನು ಪಣವಾಗಿ ಒಡ್ಡಿದ್ದರು. ಅದನ್ನು ಪ್ರಮಾಣಿಸಲು ಬಂದ ನಮಗೊಬ್ಬ ಸ್ಥಳೀಯರು ಮಾರ್ಗದರ್ಶಿಯಾಗಿ ಒದಗಿದರು. ಅವರ ಅನುಭವ ಗುಹೆಯ ಒಳಗಿನ ತೀರ್ಥದ ಕೊಳದಿಂದ ಮುಂದಿರಲಿಲ್ಲ. ಆದರೆ ನಾವು ಮುಂದಿನ ಅಪರಿಚಿತ ವಲಯಕ್ಕೂ ನುಗ್ಗುವ ಎಚ್ಚರವಹಿಸಿದ್ದೆವು. ಆತ್ಮರಕ್ಷಣೆಗಾಗಿ ಬೂಟು, ಮೈ ಮುಚ್ಚ ಬಟ್ಟೆ, ಅನಿವಾರ್ಯತೆಗೆ ಒದಗುವಂತೆ ಕತ್ತಿ, ಹಗ್ಗದ ಸುರುಳಿ ಹಿಡಿದು, ಟಾರ್ಚ್ ಇತ್ಯಾದಿ ಒಯ್ದಿದ್ದೆವು.

ದೇವಳದಿಂದ ಗುಡ್ಡೆಗೆ ನಡೆದು, ಗುಳಿ ನೋಡಿ, ಕತೆ ಕೇಳಿಸಿಕೊಂಡೆವು. ಮತ್ತೆ ಸಾಲು ಹಿಡಿದು ಎಚ್ಚರದ ಹೆಜ್ಜೆಯಲ್ಲಿ ಅಂಬರೀಷ ಗುಹಾಮುಖವನ್ನು ಸೇರಿದೆವು. ಕರಾವಳಿಯ ಭೂರಚನೆಯ ಮೇಲ್ಮೈಗಳಲ್ಲಿ ಮುರಕಲ್ಲ (ಜಂಬಿಟ್ಟಿಗೆ) ಹಾಸು ಸಾಮಾನ್ಯ. ಇವುಗಳ ನಡುವೆ ಶೇಡಿಮಣ್ಣಿನ (ಬಿಳಿ, ವಿಶೇಷ ಅಂಟಿಲ್ಲದ ಮಿದು ಮಣ್ಣು) ಪದರಗಳು ಹಾಸುಹೊಕ್ಕಾಗಿರುತ್ತವೆ. ಆ ಮಣ್ಣು ಒಳ ನೀರ ಧಾರೆಗಳಲ್ಲಿ ತೊಳೆದು ಹೋಗಿ ಉಳಿವ ದೊಡ್ಡ ಪೊಳ್ಳುಗಳನ್ನೇ ಜನಪದ ಗುಹೆ, ಗವಿ, ಬಿಲ, ಮಾಟೆ, ಮಾಂಟೆ, ಬಾಂಜಾರ ಎಂಬ ಹಲವು ಹೆಸರುಗಳಲ್ಲಿ ಗುರುತಿಸಿವೆ. ಮುಂದುವರಿದು ಆ ಗುಹೆಗಳ ಬಳಕೆಯ ಅಂದಾಜಿನಲ್ಲಿ ಬಾವಲಿ, ಪಿಲಿಗಳಂತ (ಚಿರತೆ) ಅನ್ಯ ಜೀವಿಗಳ ಹೆಸರು ಪೂರ್‍ವಪದವಾಗಿ ಬರುವುದಿದೆ. ಸ್ಥಳಪುರಾಣ ಅಥವಾ ಜನಪದ ಕಥಾನಕಗಳ ಬಲದಲ್ಲಿ ತೀರ್ಥ, ದೇವರುಗಳ ಮೂಲನೆಲೆ ಎಂದಿತ್ಯಾದಿ ಪವಿತ್ರ ತಾಣವನ್ನಾಗಿಸುವುದೂ ಇದೆ. ಅಂಥ ಕಾಲ್ಪನಿಕ ವೈಭವಗಳನ್ನು ಕಳಚಿ ನೋಡಿದ್ದೇ ಆದರೆ, ಅಂಬರೀಷ ಗುಹೆ ಗುಡ್ಡೆಯ ಒಂದು ಮಳೆನೀರ ಹಳ್ಳದಲ್ಲಿ, ಕುರುಚಲಿನ ಮರೆಯಲ್ಲಿನ ಮನುಷ್ಯ ನುಗ್ಗಬಹುದಾದಷ್ಟು ದೊಡ್ಡ ಬಿರುಕು ಮಾತ್ರ.


ಹಸಿರನ್ನು ಕೈಯಲ್ಲೇ ಸರಿಸಿ, ಪೊಳ್ಳಿನೊಳಕ್ಕೆ ಬೆಳಕೋಲನ್ನಿಕ್ಕಿ ಕಲಕಿದೆವು. ಹೊರಗಿನ ಉರಿಬಿಸಿಲಿಗೆ ಹೊಂದಿಕೊಂಡಿದ್ದ ದಿಟ್ಟಿಗೇನೂ ದಕ್ಕಲಿಲ್ಲ. ಸದ್ಯ ಒಳಗಿಡುವ ಹೆಜ್ಜೆಯನ್ನು ಅಪಾಯಕಾರಿ ಗುಂಡಿಗೆ ಇಳಿಸಬೇಕಿಲ್ಲ, ತಲೆಯನ್ನು ಮೊಟಕುವ ಚಪ್ಪರವೂ ಅಲ್ಲಿಲ್ಲ ಎನ್ನುವುದಷ್ಟೇ ಅರಿವಾಯ್ತು. ಹರಕುಹರಕಾಗಿ ಸುಮಾರು ಐದಾರಡಿ ವ್ಯಾಸದಲ್ಲಿ ತೆರೆದುಕೊಂಡಿದ್ದ ಅಂಬರೀಷ ಗುಹೆಯನ್ನು ನಾವು ಪರಸ್ಪರ ನಾಲ್ಕೈದಡಿ ಅಂತರವಿಟ್ಟುಕೊಂಡು ಸಾಲಿನಲ್ಲಿ ಪ್ರವೇಶಿಸಿದೆವು. ತಲೆ ತಗ್ಗಿಸಿ, ಸೊಂಟ ಡೊಂಕಿಸಿ, ದಕ್ಷಿಣಾಭಿಮುಖವಾಗಿ ನುಗ್ಗಿದೆವು. ಐದು ಮಿನಿಟು ದೀಪ ಆರಿಸಿ ಕತ್ತಲನ್ನೇ ನಿಟ್ಟಿಸಿ, ನಮ್ಮ ಕಣ್ಣನ್ನು ಹೊಂದಿಸಿಕೊಂಡೆವು. ಎಡಗೈಯಲ್ಲಿ ಟಾರ್ಚ್, ಬಿಲವಾಸಿ ಜಂತುವೇನಾದರೂ (ಕಾಡು ಹಂದಿ, ಮುಳ್ಳು ಹಂದಿ...) ನಮ್ಮ ಮೈಮೇಲೇ ಏರಿ ಬಂದರೆ ರಕ್ಷಣೆಗೆಂಬಂತೆ ಬಲಗೈಯ ಕತ್ತಿಯೂ ಬಿಗಿ ಮುಷ್ಠಿಯೊಳಗಿತ್ತು. ಅವೆರಡಕ್ಕು ಮಿಗಿಲಾಗಿ ಕಣ್ಣು, ಕಿವಿ, ಮೂಗು ಚುರುಕಾಗಿತ್ತು. ಗವಿಗಳಿಗೆ ಸಹಜವಾದ ಬಾವಲಿಮೂರಿ, ತೇವಭರಿತ ಪರಿಸರದಲ್ಲಿ, ಹಗುರ ಆದರೆ ದೃಢ ಹೆಜ್ಜೆ ಊರುತ್ತ ಸಾಮಾನ್ಯ ಇಳುಕಲಿನಲ್ಲಿ ಒಂದು ವಿಶಾಲ ಅಂಕಣ ಸೇರಿದ್ದೆವು.


ಸುಮಾರು ಮೂವತ್ತಡಿ ವ್ಯಾಸ ಹನ್ನೆರಡಡಿ ಎತ್ತರದ ನಿರ್ಮಿತಿ. ಮಳೆಗಾಲ ಮುಗಿದ ಹೊಸತರಲ್ಲಿ ಅಲ್ಲೇ ತೆಳುವಾಗಿ ನೀರು ಮಡುಗಟ್ಟಿರುತ್ತದಂತೆ, ಭಕ್ತರು ತೀರ್ಥಸ್ನಾನ ಮಾಡುತ್ತಾರಂತೆ. ಇದರ ದಕ್ಷಿಣದ ಕೆಳಮೂಲೆಯಲ್ಲಿ ಜಾರಿಕೂತ ಎರಡುಮಹಾಬಂಡೆಗಳ ಇರುಕಿನಲ್ಲಿ ನಮಗೆ ಮುಂದಿನ ದಾರಿ ತೋರಿತು. ಟಾರ್ಚು ಬೆಳಗದೆ ಮುಂದೆ ದಾರಿಯಿಲ್ಲ. ಸೊಂಟ ಬಗ್ಗಿಸಿ ಸಮತಳದಲ್ಲಿ ಹತ್ತೆಜ್ಜೆ ಇಟ್ಟೆವು. ಅದು ಇನ್ನೊಂದು ಸಣ್ಣ ಭವನದಂತೇ ಇತ್ತು. ನಾವು ನೆಟ್ಟಗಾಗಿ ಮುಂದುವರಿದದ್ದೇ ಸಣ್ಣ ನೀರಿನ ಹೊಂಡ ಎದುರಾಯ್ತು. ಋತುಮಾನದ ಲೆಕ್ಕದಲ್ಲಿ ತಡವಾಗುವ ಶ್ರದ್ಧಾಳುಗಳು ಇಲ್ಲಿ ತೀರ್ಥಸ್ನಾನ ಮಾಡುತ್ತಾರಂತೆ. ನಮ್ಮ ಕಾಲಿನ ಮೀನಖಂಡ ತೋಯಿಸುವಷ್ಟೇ ಆಳ ಮತ್ತು ನಾಲ್ಕಡಿ ವ್ಯಾಸದ ನೀರ ಹರಹು. ಅದು ಸಾಕಷ್ಟು ಕೀಟ ಕೊಳೆಗೂ ಆಶ್ರಯವಾದಂತಿತ್ತು. ನಾವು ನೀರನ್ನು ವಿಶೇಷ ಕಲಕದೆ ಮುಂದುವರಿದೆವು. ಗುಹೆ ತೀವ್ರವಾಗಿ ಎಡಕ್ಕೆ ತಿರುಗುವುದರೊಡನೆ ಏರುಮುಖಿಯೂ ಆಯ್ತು. ಜೊತೆಗೆ ವೈಶಾಲ್ಯವೂ ಹೆಚ್ಚಿದ್ದರಿಂದ, ಕೈಕಾಲು ಸಡಿಲಿಸಿದೆವು. ಅಲ್ಲಿ ಬಂಡೆಗುಂಡುಗಳ ಅಸ್ತವ್ಯಸ್ತ ರಾಶಿಯೇ ನಮಗೆ ಮೆಟ್ಟಿಲುಗಳು. ಅವುಗಳ ಸಮತೋಲನ ತಪ್ಪಿಯೋ ಕಂಪನದಲ್ಲೋ ಗುಹೆ ಕುಸಿಯಬಾರದೆಂಬ ಎಚ್ಚರ ಕಾಯ್ದುಕೊಂಡು ನಿಧಾನಕ್ಕೆ ಏರಿದೆವು.


ನಾವು ಮುಂದುವರಿದಷ್ಟೂ ನಮ್ಮ ಬೆಳಕೋಲಿಗೆ ಬೆದರಿ ಬಾವಲಿ ಸಂತೆ ಹೆಚ್ಚೆಚ್ಚು ಒಳಸರಿದು ಒತ್ತಡಕ್ಕೆ ಒಳಗಾಗುತ್ತಿತ್ತು. ಆಗೀಗ ಸಣ್ಣ ಚೀತ್ಕಾರ, ಸರಭರ ರೆಕ್ಕೆ ಬಡಿತ ಮತ್ತು ಅತ್ತಿತ್ತ ಹಾರುವ ಗಲಿಬಿಲಿ. ನಮ್ಮ ಲೆಕ್ಕಕ್ಕೆ ಬಾವಲಿ ಚಟುವಟಿಕೆ ಪ್ರಾಣವಾಯುಸೂಚಿ. ವಿದೇಶೀ ಉತ್ಪ್ರೇಕ್ಷಿತ ಕಥಾಚಿತ್ರಗಳನ್ನು ನೋಡಿದ ಮಂದಿ (ವ್ಯಾಂಪಾಯರ್ಸ್...), ಮಾಯ ಮಾಟಗಳ ಮೂಢನಂಬಿಕೆ ಕಟ್ಟಿಕೊಂಡ ಮಂದಿ, ನಮ್ಮನ್ನು ಮತ್ತೆ ಮತ್ತೆ ಕೇಳುವುದಿದೆ, "ಬಾವಲಿಗಳು ಕಚ್ಚುವುದಿಲ್ಲವೇ? ರಕ್ತ ಹೀರುವುದಿಲ್ಲವೇ?" ಅಂದು ನಮಗೆ ಸ್ಪಷ್ಟವಾಗಿಯೇ ತಿಳಿದಿತ್ತು, ಭಾರತೀಯ ಬಾವಲಿಗಳು ರಕ್ತಪಿಪಾಸುಗಳು ಅಲ್ಲ. ಆದರೆ ಇಂದಿನ ಅರಿವಿನಲ್ಲಿ ‘ಹುಚ್ಚಿ’ನ ವೈರಾಣುವೇ (ರ್ಯಾಬೀಸ್) ಸೇರಿದಂತೆ ಕೆಲವು ಸೋಂಕುಕಾರಕಗಳ ಅಪಾಯವೇನೋ ಇತ್ತು. ಆದರೆ ಅಂದು ಹೊಸತೇನೋ ಕಾಣುವ ಉತ್ಸಾಹದಲ್ಲಿ, ಅಜ್ಞಾನವೇ... ಅಲ್ಲಲ್ಲ, ಮಿತಜ್ಞಾನವೇ ಪರಮಸುಖವಾಗಿತ್ತು!


ಅಂಬರೀಷ ಗುಹೆ ಒಂದು ಸ್ತರದಲ್ಲಿ ಸಪುರಗೊಳ್ಳುತ್ತ, ಮಾಡೂ ತಗ್ಗುತ್ತ ಕಿರಿದಾಗುತ್ತ ಬಂತು. ಅಲ್ಲಿ ನೆಲವೂ ಎದುರಂಚಿಗೆ ತುಸು ಇಳಿಜಾರಾಗಿತ್ತು. ಎದುರು ಕೊನೆಯಲ್ಲಿ ಇನ್ನೊಂದೇ ಪುಟ್ಟ ಕೊಳದೊಡನೆ ಗುಹೆ ಬಹುತೇಕ ಮುಗಿದಂತೇ ತೋರಿತು. ಹಾಗೆಂದು ಬೆಳಕೋಲಿನಲ್ಲಿ ಸೂಕ್ಷ್ಮವಾಗಿ ಬೆದಕುತ್ತಿದ್ದಂತೆ, ಕೊಳದ ಕೊನೆಯಲ್ಲಿ ಗುಹಾಮಾಡು ನೀರ ಮೇಲೆ ನಾಲ್ಕಾರು ಇಂಚಿನಷ್ಟು ಸಂದುಳಿಸಿದ್ದು ಕಾಣಿಸಿತು. ಸಂದಿನ ಅಗಲ ಮತ್ತು ನೀರಿನ ತೆಳು ಸಂಚಲನ, ನಮ್ಮನ್ನು ತಗ್ಗಿ, ಅತ್ತಣ ಲೋಕವನ್ನು ಇಣುಕಲು ಆಹ್ವಾನಿಸಿತು. ಎಷ್ಟೋ ಬಾರಿ ಅನ್ಯ ಗುಹೆಗಳಲ್ಲಿ ಎತ್ತರ ಕಡಿಮೆಯಾದಲ್ಲೆಲ್ಲಾ ನಾಲ್ಗಾಲು, ಆಮೆಗಾಲು (ಹೊಟ್ಟೆ ಎಳೆಯುವುದಕ್ಕಿಂತ ತುಸು ಮೇಲೆ) ಹಾಕಿದ್ದಿತ್ತು. ಇದರಲ್ಲಿ ಮೊಣಕೈಯಿಂದ ಮಣಿಗಂಟಿನವರೆಗೆ ಮುರಕಲ್ಲಿನ ಗೀರು ಗಾಯಗಲೂ ಮಾಮೂಲು! ಆದರೆ ಇಲ್ಲಿ ಅಷ್ಟೇ ಅಲ್ಲ, ಕತ್ತೆತ್ತಿ ಎದುರು ದಿಟ್ಟಿಸುವುದೂ ಉಸಿರಾಡುವುದೂ ಅಸಾಧ್ಯವಿತ್ತು. (ನಾವು ಏಡಿಗಣ್ಣರಲ್ಲವಲ್ಲಾ!) ಅನಿವಾರ್ಯವಾಗಿ ನಮ್ಮಲ್ಲೇ ಒಬ್ಬ ಮಡುವಿನಲ್ಲಿ ಅಂಗಾತ ಮಲಗಿದ. ಹಿಂತಲೆ, ಕಿವಿಯ ಮಟ್ಟಕ್ಕೂ ನೀರಿತ್ತು. ಹಾಗೇ ಟಾರ್ಚ್ ಹಿಡಿದ ಕೈಯನ್ನು ಮೊದಲು ಸಂದಿನಾಚೆಗೆ ಚಾಚಿ ಕಣ್ಣೋಟ ಬೀರಿದ. ಮತ್ತೊಂದು ಕೈಯನ್ನೂ ಎರಡೂ ಕಾಲುಗಳನ್ನೂ ನೆಲಕ್ಕೊತ್ತಿ, ಭುಜವನ್ನು ನಿಧಾನಕ್ಕೆ ಕೊಸರಾಡುತ್ತ ನೀರಲ್ಲೇ ತಲೆಯನ್ನು ಸಂದಿನೊಳಕ್ಕೆ ನೂಕಿದ. ಆಶ್ಚರ್ಯಕರವಾಗಿ ಅತ್ತ ಗುಹೆಯ ಚಪ್ಪರ ಮೇಲೇರಿತ್ತು, ಒಳಗಿನ ವಿಸ್ತೀರ್ಣವೂ ಹೆಚ್ಚಿತ್ತು. ಈತ ಅತ್ತ ದಾಟಿಯೇ ಬಿಟ್ಟ. ಅನಂತರ ಇನ್ನೂ ಕೆಲವರು (ಎಲ್ಲರೂ ಅಲ್ಲ) ಅವರವರ ಸಮಯ ತೆಗೆದುಕೊಂಡು ಹಿಂಬಾಲಿಸಿದೆವು. ಹಿಂಬಾಲಿಸಿದವರ ತಂತ್ರ ಮಾತ್ರ ತುಸು ಭಿನ್ನ. ಮೊದಲಿಗನ ಭರವಸೆಯ ಮೇಲೆ ಕವುಚಿದ್ದಂತೇ ತೆವಳಿದೆವು. ಮುಂದೆ ನೋಡಲಾಗದಿದ್ದರೂ ಕತ್ತನ್ನು ಪೂರ್ಣ ಮಗ್ಗುಲಿಗೆ ಹೊರಳಿಸಿಕೊಂಡು ಹೊಟ್ಟೆ ಎಳೆದು ಪ್ರಗತಿ ಸಾಧಿಸಿದೆವು. ವಿಳಂಬಿತ ಸರದಿಯಲ್ಲಿ, ಅಪಾರ ದೈಹಿಕ ಶ್ರಮದಲ್ಲಿ, ಹೆಜ್ಜೆ ಹೆಜ್ಜೆಗೂ ಕಾಡುವ ಮಾನಸಿಕ ಗೊಂದಲದಲ್ಲಿ ಹೆಚ್ಚಿನೆಲ್ಲರೂ ಜಲಬಂಧ ಪಾರಾಗಿದ್ದೆವು. ಅಂದಿನ ನಮ್ಮ ‘ಕೂರ್ಮಾವತಾರ’ಕ್ಕೆ ಇಂದು ಬರೆಹದಲ್ಲಿ ಎಷ್ಟು ರಂಗು ಕೊಟ್ಟರೂ ಕಡಿಮೆಯೇ!


ಗುಹೆ ಈಗ ನಮ್ಮ ಕುಕ್ಕುರುಗಾಲು, ನಾಲ್ಗಾಲು ನಡಿಗೆಗೆ ಪ್ರಶಸ್ತ ಓಣಿಯಂತಿತ್ತು. ನೀರಿಂದ ಎದ್ದು ಹಗುರಕ್ಕೆ ಎಡ ತಿರುಗಿ ಸಾಗಿತ್ತು. ಮೊದಲ ಆರೆಂಟು ಅಡಿಯಷ್ಟು (ಬಹುಶಃ ಹಿಂದೆ ನೀರು ವ್ಯಾಪಿಸಿ ನಿಂತಿದ್ದ ಸ್ಥಳ) ದೂರ ದೂಳೇಳುವಷ್ಟು ನಯವಾದ ಮಣ್ಣಿತ್ತು. ಮುಂದೆ ಚರಳು ಕಲ್ಲು ಗಿಡಿದಿತ್ತು. ಸುಮಾರು ಆರು ಮೀಟರಿನನಂತರ ಬಲಕ್ಕೆ ತಿರುಗಿ, ಒಮ್ಮೆ ನಮಗೆಲ್ಲ ನೆಟ್ಟಗೆ ನಿಲ್ಲುವಷ್ಟೂ ವಿಸ್ತರಿಸಿತ್ತು. ಭೂಗರ್ಭದ ಗಟ್ಟಿ, ಮಿದು, ಮಳೆಗಾಲದ ನೀರ ಹರಿವು, ಕುಸಿತ, ಸವಕಳಿಗಳ ಇತಿಹಾಸವೇ ನಮ್ಮೆದುರು ತೆರೆದಿತ್ತು. ಆದರೇನು ವೈಜ್ಞಾನಿಕವಾಗಿ ಅದನ್ನು ಕಾಣುವಲ್ಲಿ ನಮ್ಮದು ಮಿತಜ್ಞಾನ! ಇನ್ನೂ ದುಃಖದ ಸಂಗತಿ, ಅಧ್ಯಯನಶೀಲವಾಗಿ ಕಾಣಲು ತರಬೇತಾದ ಬಹುಮಂದಿ ವೃತ್ತಿಭದ್ರತೆಯ ಲೋಲುಪತೆಯಲ್ಲಿ ನಿರಾಸಕ್ತರು.

ಜಲಸಂದೋತ್ತರದಲ್ಲಿ ಗುಹೆ ಮೇಲೆ ಬಲಕ್ಕೆ ತಿರುಗುತ್ತ, ಹರಕು ಬಂಡೆಗಳ ಸಪುರ ಓಣಿಯಾಗಿತ್ತು. ನಾವು ಅಂಬೆಗಾಲಿನಲ್ಲಿ ತುಸು ಏರುತ್ತ ಸಾಗಿದೆವು. ಮುಂದುವರಿದಂತೆ ಹರಕು ಕಲ್ಲುಗಳೆಡೆಯಲ್ಲಿ ನೀರು ಸಣ್ಣದಾಗಿ ಇಳಿದು ಬರುತ್ತಿತ್ತು. ಗುಹೆ ಇನ್ನಷ್ಟು ಸಪುರಗೊಳ್ಳುತ್ತ ಮತ್ತೆ ಹಗುರಕ್ಕೆ ಎಡಮುರಿಯುತ್ತಿದ್ದಂತೆ ಬಾವಲಿ ಲೋಕದ ಗೊಂದಲ ಹೆಚ್ಚಿದಂತನ್ನಿಸಿತು. ಅವಕ್ಕೆ ನಮ್ಮ ಬೆಳಕೋಲು ತಪ್ಪಿಸಿ ಮತ್ತೂ ಮುಂದುವರಿಯಲು ಅವಕಾಶವೇ ಉಳಿದಿರಲಿಲ್ಲ. ನಾವು ಗುಹೆಯ ತಾರ್ಕಿಕ ಕೊನೆ ಮುಟ್ಟಿದ್ದೆವು. ಒಂದೆರಡು ಬಾರಿ ಬಾವಲಿಗಳು ಆಕಸ್ಮಿಕವಾಗಿಯೇ ಮೈ ಸವರಿದ್ದಿತ್ತು. ಅವು ನಮ್ಮ ಮುಖಕ್ಕೆ ಡಿಕ್ಕಿ ಹೊಡೆಯದಂತೆ ಎಚ್ಚರವಹಿಸಿಕೊಂಡೆವು. (ಬಾವಲಿಗಳು ದೃಷ್ಟಿಗಿಂತ ಹೆಚ್ಚಿನ ನಿಖರತೆಯಲ್ಲಿ ಶ್ರವಣಾತೀತ ಧ್ವನಿ ತರಂಗಗಳನ್ನು ಅವಲಂಬಿಸಿ ಹಾರುತ್ತವೆ. ಹಾಗಾಗಿ ನಿಜದಲ್ಲಿ ನಮ್ಮ ಎಚ್ಚರಕ್ಕಿಂತ ಅವುಗಳ ಕೌಶಲ್ಯವೇ ದೊಡ್ಡದು.) ಅಲ್ಲಿ ಭೂಮೇಲ್ಮೈಯಲ್ಲಿನ ಮರಗಳ ಬೇರು ಜೊಂಪೆಗಟ್ಟಿ ನೇತು ಬಿದ್ದದ್ದು ಕಾಣುತ್ತಿತ್ತು. ನಮ್ಮ ನಾಲ್ಗಾಲು, ತೆವಳುಗಳಲ್ಲದೆ, ಎಡಬಲ ಹೊರಳಲೂ ಆಸ್ಪದ ಇಲ್ಲ ಎನ್ನುವ ಸ್ಥಿತಿ ಬಂದದ್ದರಿಂದ ವಾಪಾಸಾಗುವುದು ಅನಿವಾರ್ಯವಾಯ್ತು.

ಗುಹೆಯನ್ನು ನಕ್ಷೆಗಿಳಿಸುವ ಯೋಚನೆಯಲ್ಲಿ ನಾವು ದಿಕ್ಸೂಚಿ ಮತ್ತು ಹಗ್ಗವನ್ನೂ ಒಯ್ದಿದ್ದೆವು. ಶೋಧದ ಭರ, ಮಂಕು ಟಾರ್ಚಿನ ಬೆಳಕು ನಮ್ಮ ದಾಖಲಾತಿಗೆ ತುಂಬ ಅವಕಾಶಗಳನ್ನೇನೂ ಕೊಡಲಿಲ್ಲ. ಆದರೂ ಸರಿಯಾಗಿ ಹಗ್ಗ ಎಳೆದು ಅಂತರ ಮತ್ತು ಅಲ್ಲಲ್ಲಿ ತಿರುವಿನ ನಿಖರತೆಯನ್ನು ಒಯ್ದಿದ್ದ ಕಾಗದಲ್ಲಿ ಟಿಪ್ಪಣಿಯಂತೂ ಮಾಡಿಕೊಂಡಿದ್ದೆವು. ಆ ಅಂದಾಜಿನಂತೆ ನಾವು ಒಂದು ನೂರಾ ಎಂಟು ಮೀಟರಿನಷ್ಟು ಒಳ ಸರಿದಿದ್ದೆವು. ಅದರಲ್ಲಿ ಜಲಬಂಧವನ್ನು ಬಗೆಹರಿಸಿದ್ದಂತೂ "ಅತಿ ವಿಶೇಷ" ಎಂಬ ಧನ್ಯತೆಯೊಂದಿಗೆ ಹಿಂಪಯಣಕ್ಕಿಳಿದೆವು. ಮೊದಲಲ್ಲಿ ಇರುಕಿನ ಚರಂಡಿಯೊಳಗೇ ಉದ್ದಂಡ ಬಿದ್ದಂತಿದ್ದ ನಮ್ಮ ದೇಹವನ್ನು ಹಿಂದಕ್ಕೆ ತಿರುಗಿಸುವುದೂ
ಅಸಾಧ್ಯವಿತ್ತು. ಹಾಗಾಗಿ ಹತ್ತಿಪ್ಪತ್ತಡಿ ನುಲಿದು, ಹೊಣಕಾಡಿ ಹಿಂದೆ ಸರಿದೆವು. ಅವಕಾಶ ಸಿಕ್ಕಲ್ಲಿ ತಿರುಗಿಕೊಂಡರೂ ಈಗ ಪರಿಚಿತ ಜಾಡೇ ಆದರೂ ಹಿಂಪಯಣ ಒಂದು ಮಾತಿನಲ್ಲಿ ಮುಗಿಸುವಂತದ್ದೇನೂ ಆಗಿರಲಿಲ್ಲ.

ಪೂರ್ಣ ಪ್ಯಾಂಟು, ಉದ್ದಕೈ ಅಂಗಿ, ಕಾಲಿಗೆ ಬೂಟು ಇದ್ದರೂ ನೀರಿನಲ್ಲಿ ನೆನೆದು, ಒರಟು ಕಲ್ಲ ಉಜ್ಜಾಟಗಳಲ್ಲಿ ಗೀರು ಗಾಯಗಳು ಧಾರಾಳವಾಗಿದ್ದವು. ಗುಹೆಯೊಳಗಿನ ವಾತಾವರಣದ ತೇವಾಂಶದಿಂದ, ಎಂದಿನಂತೆ ನಾನು ಮೊದಲ ಐದು ಮಿನಿಟಿನಲ್ಲೇ ‘ಉಪನಯನ’ವನ್ನು (= ಕನ್ನಡಕ) ಕಳಚಿಕೊಂಡಿದ್ದೆ. ನಾನು ‘ದೂರದೃಷ್ಟಿ’ಯಲ್ಲಷ್ಟೇ (=ಲಾಂಗ್ ಸೈಟ್) ಬಳಲುವವನಾದ್ದರಿಂದ, ಪರಸ್ಪರ ಅತಿ ಸಾಮೀಪ್ಯದ ಗುಹಾ ತೆವಳಿನಲ್ಲಿ ತಂಡದ ಹಿತಕ್ಕೇನೂ ದಕ್ಕೆಯಾಗಲಿಲ್ಲ. ಮೊಣಕಾಲು ಕೈಗಳೆಲ್ಲ ಗೀಚು ಗಾಯಗಳಲ್ಲಿ ಉರಿಯುತ್ತಿದ್ದರೂ ಮಿತವಾತಾವರಣದಲ್ಲಿ ಹೊಟ್ಟೆ ಎಳೆದ ಶ್ರಮಕ್ಕೆ ತೇಕುತ್ತಲೇ ಸಾಗಿದೆವು. ಲೆಕ್ಕದ ನಿಖರತೆಗಾಗಿ ತಾಳ್ಮೆಯಲ್ಲಿ ಮತ್ತೊಮ್ಮೆ ಅಳತೆ ಹಗ್ಗವನ್ನು ಚಾಚುವುದರಲ್ಲಿ ವ್ಯತ್ಯಯ ಬಾರದ ಎಚ್ಚರವಹಿಸಿದ್ದೆವು. ತಂಡದ ಕೆಲವು ಸದಸ್ಯರು ಅವರವರ ಮಿತಿಯಲ್ಲಿ ವಿವಿಧ ಹಂತಗಳಲ್ಲೇ ಅನುಸರಿಸುವುದನ್ನು ಬಿಟ್ಟಿದ್ದರು. ಹಾಗೇ ಜತೆಗೆ ಒಯ್ದಿದ್ದ ಕೆಲವು ಸಾಮಗ್ರಿಗಳು ಪ್ರಗತಿಗೆ ಹೊರೆ ಎನ್ನಿಸಿದಾಗ, ಅಲ್ಲಲ್ಲಿ ಕೈ ಚೆಲ್ಲಿದ್ದೆವು. ನಿಧಾನಕ್ಕೆ ಅವರನ್ನೂ ಅವನ್ನೂ ಕೂಡಿಕೊಂಡು ಮರಳಿದೆವು. ಮಂಕು ಬೆಳಕೋಲಿನಲ್ಲಿ ಅಕ್ಷರಶಃ ಛಿದ್ರಾನ್ವೇಷಣೆ ಮಾಡಲು ಅರಳಿದ್ದ ಕಣ್ಣು, ಹೊರಗಿನ ಸತ್ಯದ (ಸೂರ್ಯ) ಎದುರು ಕಿರಿದಾಗಿದ್ದಂತೆ ಅಂಬರೀಶ ಗುಹೆಯಿಂದ ಹೊರಬಿದ್ದಿದ್ದೆವು. ಒಟ್ಟು ಒಂದೂಮುಕ್ಕಾಲು ಗಂಟೆಯ ಸಾಧನೆ ಅಂಬರೀಷ ಗುಹೆ.

ಅಂಬರೀಷನಿಗೆ ಮರುಭೇಟಿ


ಮಂಗಳೂರಿಗೆ ಮರಳಿದ ಮೇಲೆ ಗುಹಾಟಿಪ್ಪಣಿಗಳು, ಹಗ್ಗದ ಅಳತೆ ಮತ್ತು ಮನೋಚಿತ್ರಗಳನ್ನು ಸಂಕಲಿಸಿ ಏನೋ ಒಂದು ಗೀಟೆಳೆದು, ಸೋನ್ಸರಿಗೆ ಕಳಿಸಿದೆ. (ಸೋನ್ಸರ ನಕ್ಷೆ ಮತ್ತು ನನ್ನ ಚಿತ್ರವೂ ಇಂದು ನನ್ನಲ್ಲುಳಿದಿಲ್ಲ!) ಅದು ಅವರ ಚಿತ್ರಕ್ಕೆ ತುಸು ಭಿನ್ನವಾಗಿಯೇ ಇತ್ತು. ಹಾಗೆಂದು ಸೋನ್ಸರದ್ದೇನೂ ಆಕ್ಷೇಪಣೆ ಇರಲಿಲ್ಲ. ಆದರೆ ನಮಗೆ ಸಿಕ್ಕ ಮಾರ್ಗದರ್ಶಿಯ ಮೂಲಕ ಕಥನ ಕೇಳಿದ್ದ ಕಾಂತಾವರದ ಮಾಸ್ತರರೊಬ್ಬರು ಸಣ್ಣದಾಗಿ ಅಪಸ್ವರ ತೆಗೆದಿದ್ದರು. "ಆರೋಹಣದವರು ಮೊದಲಲ್ಲೇ ಗುಹೆಯ ಇನ್ನೊಂದು ಕವಲನ್ನು ತಪ್ಪಿಸಿಕೊಂಡಿದ್ದಾರೆ. ಅವರ ಶೋಧನೆ ಪರಿಪೂರ್ಣವಾಗಿಲ್ಲ. ಅವರು ನಿಜ ಅಂಬರೀಷನ ತಪೋಭೂಮಿಯನ್ನು ನೋಡಿಯೇ ಇಲ್ಲ." ನಮಗೆ ಇನ್ನೊಮ್ಮೆ, ಹೆಚ್ಚಿನ ಎಚ್ಚರದಲ್ಲಿ, ಅದೇ ಗುಹಾಶೋಧವನ್ನು ಮಾಡುವಲ್ಲಿ ಯಾವ ಅಪಮಾನ ಅಥವಾ ಹಿಂಜರಿಕೆ ಇರಲಿಲ್ಲ. ಹಾಗಾಗಿ ಈ ಬಾರಿ ಹೆಚ್ಚಿನ ಸೂಕ್ಷ್ಮಗಳಲ್ಲಿ ಹೊಸ ಕವಲನ್ನೂ ಜಾಡು ಗುರುತಿಸುವುದನ್ನೂ ಯೋಜಿಸಿ ಹೊರಟೆವು.


ಡಾ| ಸೋನ್ಸ್ ಈ ಬಾರಿ ಕವೆಗೋಲು ಹಿಡಿದುಕೊಂಡೇ ಬಂದಿದ್ದರು. ನಮ್ಮ ಅನ್ವೇಷಣೆಯ ಉದ್ದಕ್ಕೆ, ಅವರು ಗುಡ್ಡದ ಮೇಲ್ಮೈಯಲ್ಲೇ ಇದ್ದು, ಅನ್ಯ ಸಾಧ್ಯತೆಗಳ ಶೋಧದಲ್ಲಿದ್ದರು. ಕಾಂತೇಶ್ವರನ ಸನ್ನಿಧಿಯಲ್ಲಿ ಆಡಳಿತ ವರಿಷ್ಠರಾದ ಡಾ| ಜೀವಂಧರ ಬಲ್ಲಾಳರು ಸಿಕ್ಕಿ, ಶುಭಾಶಯವನ್ನು ಕೋರಿದರು. ಹಿಂದಿನ ಬಾರಿ ಚಿತ್ರಗ್ರಾಹಿ ಕೀರ್ತಿ (ಆರೋಹಣದ ಸದಸ್ಯನಾಗಿ) ನಮ್ಮೊಂದಿಗಿದ್ದರು (ನನ್ನ ‘ಚಕ್ರವರ್ತಿಗಳು’ ಪುಸ್ತಕದ ಮುಖಪುಟಕ್ಕೆ ವಿಶೇಷ ಚಿತ್ರ ತೆಗೆದು ಕೊಟ್ಟವರು ಇವರೇ). ಈ ಬಾರಿ ಹೆಚ್ಚಿನ ಬಲ ಕೊಡುವಂತೆ ಬೈಕೇರಿದ್ದ ನನ್ನ ಬೆಂಬಲಕ್ಕೆ ಬಂದವರು (ಇವರೂ ಆರೋಹಣ ಸದಸ್ಯ) ಯಜ್ಞ. ಇವರು ಮೂಲದಲ್ಲಿ ಚಿತ್ರ ಕಲಾವಿದನಾಗಿಯೇ ತರಬೇತುಗೊಂಡವರು (ನನ್ನ ‘ಪುಸ್ತಕ ಮಾರಾಟ ಹೋರಾಟ’ದ ಮುಖಪುಟ ಯಜ್ಞರದೇ ಕೈಚಳಕ). ಅನಂತರ ಉಜಿರೆಯ ಪ್ರಭುಗಳ ಮಾರ್ಗದರ್ಶನದಲ್ಲಿ ಕ್ಯಾಮರಾ ಹಿಡಿದು, ವೃತ್ತಿ ಚಿತ್ರಗ್ರಾಹಿಯಾಗಿ ಖ್ಯಾತರಾದವರು. ಇನ್ನೊಂದು ಬೈಕೇರಿ ಹೊರಟವರು ಕಿಶೋರ್ ಕುಮಾರ್ (ಮುಂದೆ ಇವರು ನಮ್ಮ ಎರಡನೇ ಭಾರತ ಬೈಕ್ ಯಾನಕ್ಕೂ ಜತೆಗೊಟ್ಟವರು) - ಸಿಂಡಿಕೇಟ್ ಬ್ಯಾಂಕಿನ ನೌಕರ. ಅವರ ಬೆನ್ನು ಹತ್ತಿದವರು - ಅರುಣ್ ನಾಯಕ್, ಕರಾಟಿಗಾ, ಹ್ಯಾಂಗ್ ಗ್ಲೈಡರ್ ಸಂಗಾತಿ. ಬಲ್ಮಠದ ಜೂಸ್ ಜಂಕ್ಷನ್ ಹಾಗೂ ಕಾರ್ನಾಡ್ ರಸ್ತೆಯ ಪಂಜಾಬೀ ಧಾಬಾದ ಮಾಲಿಕ.

ಮೂರನೇ ಜೋಡಿ ಮಂಗಳೂರು ಬಿಡುವಾಗ ಸ್ವಲ್ಪ ತಡ ಮಾಡಿತ್ತು. ದಿನ - ಆದಿತ್ಯವಾರ, ದಿನಾಂಕ ೬-೩-೧೯೮೩ ಒಂದೇ ಆದರೂ ಗಂಟೆ, ಮಿನಿಟು, ಏರಿದ ಸ್ಕೂಟರ್ (ಮುಹೂರ್ತ) ಬದಲಿದಕ್ಕೆ ‘ಲಕ್ಷಣ’ ಕೇಳುವುದೋ ಸರಳವಾಗಿ ದುರದೃಷ್ಟ ಎಂದು ತಳ್ಳುವುದೋ ನೀವೇ ನಿರ್ಧರಿಸಿ! ಆ ಈರ್ವರಲ್ಲಿ ಪ್ರಕಾಶ ನಾಟೇಕರ್ - ಮೂಲದಲ್ಲಿ ಗೇರುಸೊಪ್ಪೆಯವ, ವೃತ್ತಿಯಲ್ಲಿ ನನ್ನಂಗಡಿಯ ಸಹಾಯಕ. ಇವನಿಗೆ ವಾಹನ ಸವಾರಿ ಕಲಿಕೆಯೂ ಬಿಡುವ ಚಪಲವೂ ಅದಮ್ಯವಿದ್ದರೂ ವಾಹನ ಇರಲಿಲ್ಲ, ಅನುಭವ ಕಡಿಮೆಯಿತ್ತು. ಇನ್ನೊಬ್ಬರು - ಮಂಗಳಗಂಗೋತ್ರಿಯ ಗಣಿತ ಪ್ರಾಧ್ಯಾಪಕ ಸಂಪತ್ಕುಮಾರ್, ನನ್ನ ಮಾತಿನ ಮೋಡಿಗೆ ಸಿಕ್ಕಿ, ಅಂಬರೀಷ ದರ್ಶನದ ಬಯಕೆ ಅದಮ್ಯ ಕಟ್ಟಿಕೊಂಡವರು. ಇವರ ಬಳಿ ಹೊಸ ಸ್ಕೂಟರಿತ್ತು. ಆದರೆ ಕಲಿಕೆ ಹೊಸತಾದ್ದರಿಂದ ಅಷ್ಟು ದೂರ ಓಡಿಸಲು ಧೈರ್ಯವಿರಲಿಲ್ಲ. ಸಹಜವಾಗಿ ಮೇಳಾಮೇಳಿ ಚೆನ್ನಾಗಿಯೇ ಆಗಿತ್ತು - ಪ್ರಕಾಶ ಸವಾರಿಗೆ ಕುಳಿತ, ಸಂಪತ್ ಬೆಂಬಲಕ್ಕೆ. ಆದರೆ ಪ್ರಕಾಶ ಸ್ಕೂಟರಿಗೆ ಒಗ್ಗಿಕೊಳ್ಳುವ ಮುನ್ನ, ಬೆಳಗ್ಗಿನ ಮಂಜು ಮತ್ತು ಅವಸರದ ಓಟ ಸೇರಿ ಎಡಪದವಿನ ಬಳಿ ರಸ್ತೆಯ ಅಂಚು ಮೀರಿ, ಎಲ್ಲ ಮೋರಿಗೆ ಪಲ್ಟಿಸಿದ್ದರು. ಸವಾರರಿಗೂ ವಾಹನಕ್ಕೂ ತರಚಲು ಗಾಯದಿಂದಾಚೆ ಏನೂ ಆಗಲಿಲ್ಲ. ಆರಡಿಯಾಳದಿಂದ (ಕಿರು ಸೇತುವೆಯಾಳ) ತಮ್ಮನ್ನೂ ಸ್ಕೂಟರನ್ನೂ ಎತ್ತಿ ಹಾಕಿಕೊಂಡು ಮತ್ತೆ ಸುರಕ್ಷಿತವಾಗಿಯೇ ಕಾಂತಾವರದಲ್ಲಿ ನಮ್ಮನ್ನು ಸೇರಿಕೊಂಡರು.
(ಮೂಲ ಆಕರ: ೪-೩-೧೯೮೪ರ ಸುಧಾದಲ್ಲಿ ಪ್ರಕಟವಾದ ನನ್ನದೇ ಲೇಖನ)


ಹಿಂದಿನ ಸಲ ಸ್ಥಳೀಯ ಅನುಭವಿ ಮಾರ್ಗದರ್ಶನಕ್ಕಿದ್ದ ಕಾರಣಕ್ಕೋ ಎಂಬಂತೆ, ಅಂಬರೀಷ ಗುಹೆ ಪ್ರವೇಶಿಸಿದ್ದೇ ದಕ್ಷಿಣಾಭಿಮುಖವಾಗಿ ಮಾತ್ರ ಶೋಧಿಸುತ್ತ ನಡೆದಿದ್ದೆವು. ಈ ಬಾರಿ ಸ್ವತಂತ್ರರಾದ್ದರಿಂದ, ಪ್ರವೇಶಾಂಕಣದ ಪೂರ್ಣ ತನಿಖೆ ಮಾಡಿದೆವು. ಅದರ ಉತ್ತರ ನೆಲ ತುಂಬ ಇಳಿಜಾರಾಗಿತ್ತು. ಅದು ಪುಡಿ ಕಲ್ಲುಗಳದೇ ರಾಶಿಯಂತಿದ್ದರೂ ಸುಮಾರು ಆರು ಮೀಟರ್ ಆಚೆಗೊಂದು ಕಿರುಗಂಡಿ ಕಾಣಿಸಿತು. ಒಳಗೆ ನುಸುಳಿದರೆ ವಿಶಾಲವಾದ ಓಣಿಯೊಂದು ತೆರೆದುಕೊಂಡಿತ್ತು. ಅದು ಸುಮಾರು ಹನ್ನೆರಡಡಿ ಎತ್ತರ, ಇಪ್ಪತ್ತು ಅಡಿ ಅಗಲಕ್ಕೆ ವಿಸ್ತರಿಸಿಕೊಂಡು, ತುಸುವೇ ಬಲಕ್ಕೆ ತಿರುಗಿ ಸಾಗಿತ್ತು. ಅದರಲ್ಲಿ ಸುಮಾರು ಇಪ್ಪತ್ನಾಲ್ಕು ಮೀಟರಿನಷ್ಟು ಒಳಹೋದೆವು. ಅಲ್ಲಿ ಉತ್ತರ ದಿಕ್ಕಿಗೆ ಮೂರಡಿ ಆಳದ ಒಂದು ತಗ್ಗು. ತಳದಲ್ಲಿ ತೆಳು ನೀರು ನಿಂತಿತ್ತು. ಅದಕ್ಕಿಳಿದು ಮುಂದುವರಿದರೆ, ಇಗ್ಲುವಿನ ಒಳ ಸೇರಿದ ಅನುಭವ. ಮೂರಡಿ ಆಳ ಹನ್ನೆರಡಡಿ ವ್ಯಾಸದ ಬಾಣಲೆ ಕವುಚಿಟ್ಟಂತಿತ್ತು. ಮತ್ತೆ ಪೂರ್ವ ಅಂಚಿನಲ್ಲಿ, ಹಿತ್ತಿಲ ಬಾಗಿಲು ತೆರೆದಂತೆ ಇನ್ನೊಂದೇ ಸಂದು. ಮುಂದುವರಿದರೆ ಈಗ ದೊಡ್ಡ ಬಾಣಲೆಯ ಸರದಿ. ಇದರ ಪೂರ್ಣ ಆಯಾಮವನ್ನು ನಮಗೆ ಅಂದಾಜಿಸುವುದು ಕಷ್ಟವಾಗುವಂತೆ ಪೂರ್ವ ಅಂಚು ತೀವ್ರ ಇಳಿಜಾರಿನದಿತ್ತು. ನುಸುಲು ಮಣ್ಣಿನ ಹಸಿ ನೆಲ ನಮ್ಮ ಯಾವುದೇ ಚಟುವಟಿಕೆಯಲ್ಲೂ ಅಭದ್ರತೆಯ ನೆರಳು ಮೂಡಿಸುತ್ತಿತ್ತು. ಹಾಗಾಗಿ ಭದ್ರ ನೆಲದಲ್ಲಿ ಒಬ್ಬ ಕುಳಿತು, ಇನ್ನೊಬ್ಬನಿಗೆ ಹಗ್ಗದ ಆಸರೆ ಕೊಟ್ಟು ಆಳವನ್ನು ಶೋಧಿಸುವ ಕೆಲಸ ಮಾಡಿದೆವು. ಆ ತಳದಲ್ಲಿ ಒಂದು ಮಾಟೆ ಮುಂದಿನ ಏರಂಕಣದತ್ತ ತೆರೆದಿತ್ತು, ಆದರೆ ಅದು ನಮಗೆ ನುಸುಳಲೂ ಅಸಾಧ್ಯವಾಗುವಷ್ಟು ಕಿರಿದಾಗಿತ್ತು. ಅನಿವಾರ್ಯವಾಗಿ ಮರಳಿದೆವು.


ಅನಂತರ ಹಿಂದಿನ ಸಲ ಶೋಧಿಸಿದ್ದರಲ್ಲೇ ಜಲಸಂದುವಿನವರೆಗೆ ಇನ್ನೊಮ್ಮೆ ಹೋದೆವು. ಸಂದು ನೀರಿನಿಂದ ಹೆಚ್ಚು ಮುಕ್ತವಾಗಿತ್ತು. ಆದರೂ ಮತ್ತೊಮ್ಮೆ ತರಚಲು ಗಾಯಗಳನ್ನು ಹೊಂದುತ್ತ ಮುಂದುವರಿಯುವ ಉತ್ಸಾಹ ತೋರಲಿಲ್ಲ. (ಆದರೆ ಇಂಥದ್ದೇ ಹೊಸದು ಒದಗಿದರೆ, ಹಿಂಜರಿಯಲಾರೆವು ಎನ್ನುವುದಕ್ಕೆ ಸಾಕ್ಷಿಯಾಗಿ ‘ದುಗ್ಗುಳ ಮಾಟೆ’ಯ ಶೋಧವಿದೆ. ಮುಂದಿನ ಕಂತಿನಲ್ಲಿ ತೆರೆದಿಡುತ್ತೇನೆ).


ನಾವು ಹೊರಬರುವುದನ್ನೇ ಸೋನ್ಸರು ಕಾದಿದ್ದರು. ಅಲ್ಲಿ ಯಜ್ಞರು ಕೊಟ್ಟ ಕಚ್ಚಾ ಚಿತ್ರ ಸೋನ್ಸರ ಊಹಾಚಿತ್ರಕ್ಕೆ ಬಹುತೇಕ ಹೋಲುತ್ತಿತ್ತು! ನಮ್ಮ ಬೆರಗನ್ನು ಹೆಚ್ಚಿಸುವಂತೆ ಸೋನ್ಸರು, ಡೌಸಿಂಗ್ ಮನುಷ್ಯ ದೇಹದ ‘ಚೇತನ’ಗಳ ಕೊರತೆಯನ್ನೂ ಕಣಿ ನುಡಿಯಬಲ್ಲುದು ಎಂದರು. ಕಬರುಗೋಲನ್ನು ನಮ್ಮ ದೇಹಕ್ಕೆ ಮುಟ್ಟಿಸದೇ ನಖಶಿಖಾಂತ ಆಡಿಸಿ, ಏನೇನೋ ವಿಶ್ಲೇಷಣೆ ನಡೆಸಿದ್ದರು. ಆದರೆ ಯಜ್ಞರದ್ದೊಂದು ಬಿಟ್ಟು ಅವರ ಉಳಿದೆಲ್ಲ ಮಾತುಗಳೂ ಇಂದು ನನಗೆ ಮರೆತೇ ಹೋಗಿದೆ. ಯಜ್ಞರಿಗೆ ಮೊಣಕಾಲಿನ ಅಸ್ಥಿರತೆಯನ್ನು ಎತ್ತಿ ಆಡಿದ್ದರು. ಕಾಕತಾಳೀಯವೂ ಇರಬಹುದು, ಯಜ್ಞರಿಗೆ ಮೊಣಕಾಲ ದೌರ್ಬಲ್ಯ (ಗಂಟುವಾತ) ಮೊದಲಿನಿಂದಲೂ ಇತ್ತು. ಈಚೆಗೆ ಅದು ತೀವ್ರವಾಗಿ ಕೈಗೆ ಊರೆಗೋಲು ಹಿಡಿಸಿದೆ. ಅಂದಿನ ಮಟ್ಟಿಗೆ ಸೋನ್ಸರ ಕವೆಗೋಲೂ ನಮ್ಮೆಲ್ಲರನ್ನೂ ‘ಪಾಸ್’ ಮಾಡಿದ ಸಂತೋಷ ಸೇರಿಸಿಕೊಂಡೇ ಮಂಗಳೂರಿಗೆ ಮರಳಿದೆವು ಎನ್ನುವಲ್ಲಿಗೆ ಅಂಬರೀಷ ಗುಹಾಪ್ರಕರಣ ಮುಗಿದುದು.

3 comments:

  1. ಹಳೆಯ ಕಂದಕ/ ಗುಹೆ ಸಂಶೋದನೆ ಕೆಲವೊಮ್ಮೆ ಸರಿಸೃಪಗಳಿಂದ ಅಥವ ಆಮ್ಲಜನಕ ಕೊರತೆಯಿಂದ ಅಡಚಣೆ ಆಗುವುದು ಹೇಗೆ ನಿವಾರಿಸಿಕೊಳ್ಳುತ್ತಿದ್ದಿರಿ ? ಕುತೂಹಲಕ್ಕಾಗಿ ಕೇಳಿದ್ದು, ಬಾವುಲಿಗಳು ಇದೆ ಅಂದರೆ ಜೀವವಾಯು ಇದೆ ಅಂತ ನೀವು ತಿಳಿಸಿದ್ದು ನನ್ನ ಕುತೂಹಲ ತಣಿಸಿತು

    ReplyDelete
  2. Kannige kattuvante vivrisoddiri Ashok. Lekhana kushi kottitu.

    ReplyDelete
  3. ಕೆಲವು ಕುತೂಹಲ ತಣಿದಿದೆ....ಮತ್ತಷ್ಟು ಕುತೂಹಲ ಉಳಿದಿದೆ.

    ReplyDelete