21 September 2022

ಮಡಿಕೇರಿ ಟಿಪ್ಪಣಿಗಳು

[ಕಳೆದ ಒಂದು ವರ್ಷದಲ್ಲಿ ವಿವಿಧ ಕೌಟುಂಬಿಕ ಕೂಟಗಳ ನೆಪದಲ್ಲಿ ನನಗೆ ಹುಟ್ಟೂರು - ಮಡಿಕೇರಿಗೆ, ಕೆಲವು ಭೇಟಿ ಕೊಡುವುದು ಅನಿವಾರ್ಯವಾಯ್ತು. ಆಗ ಮೂಡಿದ ಸಾಮಾಜಿಕ ಕಾಳಜಿಯ ಸಾಮಯಿಕ ಟಿಪ್ಪಣಿಗಳನ್ನು ಫೇಸ್ ಬುಕ್ಕಿನಲ್ಲಿ ಪ್ರಕಟಿಸುತ್ತ ಬಂದಿದ್ದೆ. ಇಲ್ಲಿ ಅವುಗಳನ್ನು ಪರಿಷ್ಕರಿಸಿ, ಕಾಲಾನುಕ್ರಮದಲ್ಲೇ ಸಂಕಲಿಸಿದ್ದೇನೆ.]



೧. ಭಾಗಮಂಡಲ ಮುಳುಗಿದರೂ ಸೇತುವೆ...



ಕೌಟುಂಬಿಕ ಕಾರ್ಯಕ್ರಮ (೨-೯-೨೧) ಒಂದಕ್ಕಾಗಿ ತಲಕಾವೇರಿಯ ಸಮೀಪದ ‘ಕಾವೇರಿ ಯಾತ್ರಿಕ ಧಾಮ’ಕ್ಕೆ ಹೋಗಿ ಬರುವಾಗ ಭಾಗಮಂಡಲದಲ್ಲಿ ಕಾವೇರಿಯ ಮೇಲಿನ ಈ ಅಪೂರ್ಣ ಸೇತುವೆ ಕಂಡೆ. ಅದರ ಸ್ಥಗಿತಗೊಂಡ ಕಾರ್ಯದ ಪ್ರಾಚೀನತೆ ಮತ್ತು ಅಪೂರ್ಣತೆ ನೋಡಿ, ಖಂಡಿತವಾಗಿಯೂ ಇದು ಜವಾಹರಲಾಲ್ ನೆಹರೂ ಮಾಡಿದ ಇನ್ನೊಂದು ಮಹಾಪರಾಧ ಎಂದೇ ನಿರ್ಧರಿಸಿದ್ದೆ. ಆದರೆ ಈಗ ಮಂಗಳೂರು ಪಂಪ್ವೆಲ್ ವೃತ್ತ, ಕುಂದಾಪುರದ ಮೇಲ್ಸೇತುಗಳೆಲ್ಲ ದೇಶಭಕ್ತರ ಉಸ್ತುವಾರಿಯಲ್ಲಿ ಹತ್ತಕ್ಕೂ ಮಿಕ್ಕು ವರ್ಷ ಕಳೆದೂ ಉತ್ತಮಿಕೆಗೆ

ತುಡಿಯುತ್ತಿರುವ (ಆದರೆ ಎಂದೂ ಮುಟ್ಟದ) ಉನ್ನತ ಆದರ್ಶ ನೆನಪಾಯ್ತು. ಇದು ಕೇವಲ ನಾಲ್ಕೇ ವರ್ಷ ಹಳತಂತೆ ಪಾಪ. ಅದರ ಬುಡದ ಅವ್ಯವಸ್ಥೆ ಸಾವಿರವನ್ನು ಊರವರೂ ಭಕ್ತರೂ ಅಪಾರ ದೇಶಪ್ರೇಮದಲ್ಲಿ ತಾಳಿಕೊಳ್ಳುತ್ತಲೇ ಇದ್ದಾರಂತೆ. ಯಾಕೇಂದ್ರೇ ಮುಂದೊಂದು ಕಾಲದಲ್ಲಿ ಜಲಪ್ರಳಯವೇ ಆದರೂ ಭಾಗಮಂಡಲ ಊರಿಗೆ ಊರೇ ಮುಳುಗಿದರೂ ಸ್ವತಃ ಶ್ರೀ ಶ್ರೀ ಭಗಂಡೇಶ್ವರನೇ ಜಲಸ್ತಂಭನಕ್ಕೊಳಗಾದರೂ ಈ ಅಪೂರ್ಣ ಸೇತುವೆಯ ಅವಶೇಷಗಳು ಮುಳುಗದು! ಈ ಅರಿವು ನನ್ನಲ್ಲೂ ಜಾಗೃತವಾದಾಗ ಹೃದಯ ತುಂಬಿಬಂತು. "ಭಾರತ್ ಮತಾಕೀ ಜೈ, ಭಾಜ-ಪಾಕೀ ಜೈ, ಮೋದಿಜೀ ಕೀ ಜೈ, ಯಡ್ಡೀಜೀ ಕೀ ಜೈ, ಬಂಮೈಜೀ ಕೀ...." ಎಂಬ ಘೋಷಣಾ ಸರಣಿಯನ್ನು ತಡೆಯದಾದೆ.

೨. ಕೊಡಗಿನ ಸಮಾಜಾಭಿವೃದ್ಧಿಗೆ ಹೆಣಗಿದ ಪ್ರಮುಖರು


ಹಿನ್ನೆಲೆಯಲ್ಲಿ ಕೆಲ ಹಿರಿಯರ ಪಟಗಳು

ಪ್ರಸಾದ್ ರಕ್ಷಿದಿಯವರು ಹುಟ್ಟು ಹಾಗೂ ಬಾಲ್ಯದ ಕೆಲಕಾಲವನ್ನು ಮಡಿಕೇರಿಯಲ್ಲಿ ಕಂಡವರು. ಅನಂತರ ಕುಟುಂಬದ ಜತೆ ಸಕಲೇಶಪುರದ ರಕ್ಷಿದಿಗೆ ವಲಸೆ ಹೋದರೂ ಅಷ್ಟೇನೂ ದೂರದ್ದಲ್ಲದ ಕೊಡಗಿನ ಸಂಬಂಧವನ್ನು ಸಾಕಷ್ಟು ಉಳಿಸಿಕೊಂಡೇ ಇದ್ದರು. ಹಾಗೆ ಅವರಿಗೆ ಮೂಲತಃ ಕೊಡಗಿನವರೇ ಆದರೂ ಸದ್ಯ (೩-೯-೨೦೨೧) ಸಕಲೇಶಪುರದಲ್ಲಿ ನೆಲೆಸಿರುವ ಕುಕ್ಕುಪುಳಿ ವಾಸುದೇವಶರ್ಮರಲ್ಲಿ ಈ ಪಟ ಸಿಕ್ಕಿತಂತೆ. ಇದು ೧೯೫೬ರಲ್ಲಿ ಕೊಡಗಿನ ನೀರ್ಕೊಲ್ಲಿಯ ಕೃಷ್ಣರಾಜ ಮಾಸ್ಟರು ಹೆಚ್ಚಿನ ಅಧ್ಯಯನಕ್ಕಾಗಿ ಅಮೆರಿಕಾಕ್ಕೆ ಹೋಗುವ ಸಂದರ್ಭದಲ್ಲಿ,
ಉಳಿದಿರುವ ಅಷ್ಟೇನೂ ಹಳತಲ್ಲದ ಕಟ್ಟಡದ ಭಾಗ

‘ಕೊಡಗು ಬ್ರಾಹ್ಮಣ ಸಂಘ’ದಲ್ಲಿ ವಿದಾಯ ಸಮಾರಂಭ ನಡೆಸಿದ್ದರ ದಾಖಲೆ. ಆ ದಿನಗಳಲ್ಲಿ ಸಾರ್ವತ್ರಿಕವಾಗಿ ಬಡತನ ಮತ್ತು ಸವಲತ್ತುಗಳ ಕೊರತೆ ತೀವ್ರವೇ ಇತ್ತು. ಆಗ ಜಾಗೃತ (ಬ್ರಾಹ್ಮಣ) ಸ್ಥಿತಿವಂತರು ತಮ್ಮ ಮಿತಿಯಲ್ಲಿ ಸಾಮಾಜಿಕ ಹಿತಕ್ಕಾಗಿ ಕಟ್ಟಿಕೊಂಡ ಸಂಸ್ಥೆಗಳಲ್ಲಿ ‘ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ’ ಒಂದು. ಪಟದಲ್ಲಿ ಮೊದಲು ನಾನು ಕೆಲವು ವ್ಯಕ್ತಿಗಳನ್ನು ಗುರುತಿಸಿದೆ. ಮತ್ತೆ ಫೇಸ್ ಬುಕ್ಕಿನಲ್ಲಿ ಚಿತ್ರ ಸಹಿತ ಪ್ರಕಟಿಸಿ, ಗೆಳೆಯರ ಸಲಹೆಯಲ್ಲಿ ಪರಿಷ್ಕರಿಸಿಕೊಂಡೆ. ಆ ಪಟ್ಟಿ ಹೀಗಿದೆ: (ಈಗಲೂ ಹೊಸದಾಗಿ ನೀವು ಗುರುತು, ತಿದ್ದು ಎಂದು ಸೂಚಿಸಿದರೆ ಅವಶ್ಯ ಪರಿಷ್ಕರಿಸುತ್ತೇನೆ)
ಕೆಳಗಿನಿಂದ ಮೇಲಕ್ಕೆ ಆರು ಸಾಲು, ಎಲ್ಲವೂ ಎಡದಿಂದ ಬಲಕ್ಕೆ
ಮೊದಲ ಸಾಲು: ಮೊದಲಿಗರು ಜಿಟಿ ನಾರಾಯಣ ರಾವ್ (ನನ್ನಪ್ಪ). ಬಲಗಡೆ ಕೊನೆಯವರು ಎಂ.ಎಸ್.ಸುಬ್ಬರಾಯರು. ಬಲಗಡೆಯಿಂದ ಮೂರನೆಯವರು ಸಿಂಗಾಪುರ ಈಶ್ವರ ಭಟ್ಟರು(ಕೈಲಂಕಜೆ) ಉಳಿದ ಯಾರೂ ಗೊತ್ತಿಲ್ಲ.

ಎರಡನೇ ಸಾಲು: ೧. ಬಿ.ಸೂರ್ಯನಾರಾಯಣ ರಾವ್ (ಮುಖ್ಯೋಪಾಧ್ಯಾಯರು), ೨. ವೆಂಕಟರಮಣರಾವ್ (ಸರಕಾರೀ ಕಾಲೇಜಿನ ಪ್ರಾಂಶುಪಾಲರು, ಗಣಿತಾಧ್ಯಾಪಕ), ೩. ಎಂ.ಎ. ರಾಮಚಂದ್ರರಾವ್ (ಭೌತ ಅಧ್ಯಾಪಕ), ೪. ಬಾಳಿಗರು (?), ೫. ಜಿ.ಎನ್.ತಿಮ್ಮಪ್ಪಯ್ಯ (ನನ್ನಜ್ಜ, ಬ್ಯಾಂಕ್, ಕೃಷಿ), ಜಿ.ಎಂ.ಮಂಜನಾಥಯ್ಯ (ಗುಂಡುಕುಟ್ಟಿ, ಕೃಷಿ), ಗುಡ್ಡೆಹಿತ್ಲು ಶಿವಣ್ಣಯ್ಯ (ಕೃಷ್ಣರಾಜ ಮಾಷ್ಟ್ರ ತಂದೆ), ಜಿ.ಎಸ್.ಕೃಷ್ಣರಾಜು (ಅಮೆರಿಕಕ್ಕೆ ಹೊರಟುನಿಂತವರು) ಎನ್.ಆರ್ .ಗೋಪಾಲಕೃಷ್ಣ (ನ್ಯಾಯಾಧೀಶ), ಸಿ.ಎಸ್.ನಾರಾಯಣ (ವಕೀಲ), ಎಂ.ಎಸ್.ಅನಂತ ಪದ್ಮನಾಭರಾಯರು (ಹರಿದಾಸ), ಐಭಟ್ರ ಸುಬ್ಬರಾಯರು, ಬಿ.ಟಿ.ಗೋವಿಂದಯ್ಯ, ರಾಮಕೃಷ್ಣ ಉಡುಪರು (ಕನ್ನಡ ಅಧ್ಯಾಪಕ), ರಾಮಣ್ಣ ಮೇಷ್ಟ್ರು (ಶಿಕ್ಷಕ)

ಮೂರನೇ ಸಾಲು : ೧. ಗೊತ್ತಿಲ್ಲ, ೨. ಎಂ.ಎಸ್.ಸುಬ್ಬರಾಯರು, ೩. ಜವಾಹರ್, ೪. ಕೆ.ಎನ್ ಸೀತಾರಾಮ, ೫. ಜಿ.ವಿ.ಕೃಷ್ಣಮೂರ್ತಿ, ೬. ಎಚ್ ಕೆ.ಚಂದ್ರಶೇಖರ್, ೭. ಕೃಷ್ಣಪ್ಪ, ೮. ಎನ್.ಎಸ್.ತಿಮ್ಮಪ್ಪಯ್ಯ (ಪತ್ರಿಕೋದ್ಯಮಿ), ೯. ಡಾ| ಜಿ.ಎನ್.ರಾಮಚಂದ್ರ ರಾವ್ (ನನ್ನ ಚಿಕ್ಕಜ್ಜ, ವೈದ್ಯ), ೧೦. ಎಂ.ಎಸ್.ರಾಮಯ್ಯ (ಮಕ್ಕೀಮನೆ), ೧೧. ಗೊತ್ತಿಲ್ಲ, ೧೨. ನಂಜುಂಡಯ್ಯ (ಸ್ಟ್ಯಾಂಪ್ ವೆಂಡರ್), ೧೩. ಗೊತ್ತಿಲ್ಲ, ೧೪. ಜಿ.ಎಂ.ಗೋಪಾಲಕೃಷ್ಣ (ಗುಂಡುಕುಟ್ಟಿ, ಕೃಷಿಕರು), ೧೫. ಜಿ.ಎಂ.ಮೋಹನ್ (ಗುಂಡುಕುಟ್ಟಿ)

ನಾಲ್ಕನೇ ಸಾಲು: ೧. ಹಾಗೂ ೨. ಗೊತ್ತಿಲ್ಲ, ೩. ಮೂಟೇರಿ ಕೃಷ್ಣಯ್ಯ, ೪. ಡಾ| ಜಿ.ಎಸ್.ರಾಮಚಂದ್ರ ಭಟ್ (ವೈದ್ಯ), ೫. ಸಿ ಆರ್. ನಾರಾಯಣ ರಾವ್ (ರಾಮಣ್ಣ ಮಾಷ್ಟ್ರ ಮಗ, ವಿದ್ಯಾ ಇಲಾಖೆ?), ೬. ಎಸ್.ಎಸ್.ಗೋಪಾಲ ಕೃಷ್ಣ, ೭. ಎಂ.ಎ. ಶೇಷಗಿರಿರಾವ್, ೮. ಕಾಶ್ಯಪ, ೯. ಸಿ ಎಸ್.ರಾಮಚಂದ್ರ, ೧೦. ನೀರ್ಕಜೆ ಮಹಾಬಲೇಶ್ವರ ಭಟ್ (ಅಧ್ಯಾಪಕ), ೧೧. ಕೊಳಚಿಪ್ಪು ವೆಂಕಟರಮಣ ಭಟ್ (ಅರಣ್ಯಾಧಿಕಾರಿ), ೧೨. ಶ್ರೀನಿವಾಸ್ ಸಾಯ, ೧೩. ಗೊತ್ತಿಲ್ಲ, ೧೪. ಜಿ.ಎಸ್.ಕೇಶವಾಚಾರ್ (ಶಿಕ್ಷಕರು - ನನ್ನಪ್ಪನಿಗೂ), ೧೫. ಕೃಷ್ಣಯ್ಯ (ಅಧ್ಯಾಪಕ)

ಐದನೇ ಸಾಲು: ಜಿ.ಡಿ.ಪರಮೇಶ್ವರ, ೨. ಸಿ.ವಿ.ಶ್ರೀನಿವಾಸರಾವ್ (ಉದ್ಯಮಿ- ಸಿವಿಎಸ್ ಬ್ರ.), ೩. ಸಿ.ವಿ ಸದಾಶಿವರಾವ್ (ಉದ್ಯಮಿ-ಸಿವಿಎಸ್ ಬ್ರ), ೪. ಬಿ.ಎಸ್. ಗೋಪಾಲಕೃಷ್ಣ (ಶಕ್ತಿ ಪತ್ರಿಕೆ), ೫. ಪಾರ್ಥಸಾರಥಿ, ೬. ಎಚ್.ಕೆ.ರಾಮಮೂರ್ತಿ, ೭. ಆರ್.ಎಸ್.ಕಾಶೀಪತಿ ೮. ಟಿ.ಕೇಶವಭಟ್ (ಶಿಕ್ಷಕ) ೯. ಗೋಪಾಲಕೃಷ್ಣಭಟ್ , ೧೦. ಜನಾರ್ದನ ಬಾಳಿಗ (ಅಧ್ಯಾಪಕ), ೧೧. ಬಿ.ಕೆ. ಕೃಷ್ಣಯ್ಯ (ಅಧ್ಯಾಪಕ), ೧೨,೧೩ ಗೊತ್ತಿಲ್ಲ

ಆರನೇ ಸಾಲು: ಜಿ.ಆರ್.ಗಣಪಯ್ಯ, ೨. ಎ. ಕೆ.ಭೀಮರಾವ್, ೩. ಟಿ.ಆರ್. ಗೋಪಾಲಕೃಷ್ಣ ಆಚಾರ್, ೪. ಗೊತ್ತಿಲ್ಲ, ೫. ಎನ್.ಎಸ್.ರಾಮದಾಸ್, ೬. ಎಸ್.ಎಸ್.ಶಂಕರನಾರಾಯಣ, ೭. ಗೊತ್ತಿಲ್ಲ, ೮. ಎ. ಬಿ.ರಮೇಶ್, ೯. ಶೇಷಾದ್ರಿ, ೧೦. ಗೊತ್ತಿಲ್ಲ

ಪ್ರಸಾದ್ ರಕ್ಷಿದಿಯವರು ತಿಳಿಸಿದಂತೆ: ವಾಸುದೇವ ಶರ್ಮರ ತಂದೆ - ಸೀತಾರಾಮಯ್ಯನವರು ಈ ಪಟದಲ್ಲಿದ್ದಾರಂತೆ. ಅವರು ೧೯೫೮ರಲ್ಲಿ ನಿಧನರಾಗಿದ್ದಾರೆ.

ಭಾರತದ ಸ್ವಾತಂತ್ರ್ಯಪೂರ್ವ ಸ್ಥಿತಿಯಲ್ಲಿ, ಮೇಲ್ಕಾಣಿಸಿದ ಮಹನೀಯರುಗಳು ಸಮಾಜಸೇವೆಯಲ್ಲಿ ತಮ್ಮ ಆರ್ಥಿಕ ಮಿತಿಗೊಂದು ಚೌಕಟ್ಟೆಂದಷ್ಟೇ ಪರಿಗಣಿಸಿ ಹೆಸರಿನಲ್ಲಿ ‘ಕೊಡಗು ಮತ್ತು ಬ್ರಾಹ್ಮಣ’ ವಿಶೇಷಣಗಳನ್ನು ಸೇರಿಸಿರಬೇಕು. (ಪ್ರಾದೇಶಿಕ ಅಥವಾ ಜಾತೀಯ ಸಂಕುಚಿತಾರ್ಥದಲ್ಲಿ ಅಲ್ಲ) ಹಾಗಾಗಿ ಸಂಘ ಇಂದು ಶತಮಾನೋತ್ಸವವನ್ನು ಕಂಡಿದೆ ಮತ್ತು ತೀರಾ ಈಚೆಗೆ ಹೊಸ ಕಟ್ಟಡವನ್ನೂ ಹೊಂದಿದೆ. ಅದನ್ನು ನನಗೆ ನೋಡಿ ಅನುಭವಿಸುವ ಮೊದಲ ಅವಕಾಶ ಸಿಕ್ಕಿದ್ದು....


೩. ಗಾರೇ ತೋಟದ ಆಂಜನೇಯ



ನೂಜಿಲದ ರಾಮಕೃಷ್ಣ ಭಟ್ ಮತ್ತು ವತ್ಸಲಾರ (ದೇವಕಿಯ ತಂಗಿ) ಮಗ - ಅಕ್ಷರನಿಗೆ ಹುಲಿತಾಳದ ಮುರಳೀಧರ ಮತ್ತು ಶೈಲಜರ ಮಗಳು ವಿನಯಳ ಜತೆ ವಿವಾಹ ನಿಶ್ಚಿತಾರ್ಥದ (ಬದ್ಧ) ಪ್ರಯುಕ್ತ, ಮಡಿಕೇರಿಗೊಂದು ಸಣ್ಣ ಭೇಟಿ ಕೊಟ್ಟಿದ್ದೆ (೩೦-೫-೨೦೨೧). ಬೆಳಿಗ್ಗೆ ಮಂಗಳೂರು ಬಿಡುವಾಗ ಮಳೆಗಾಲವೇ ಕವುಚಿಕೊಂಡಂತಿತ್ತು. ಆದರೆ ಅತ್ತ ಸರಿದಂತೆ ಮತ್ತು ಸಂಜೆ ಮರಳುವಾಗ ವಾತಾವರಣ ತಿಳಿಯಾದದ್ದು ಮಾತ್ರವಲ್ಲ, ಸಂಮೋಹಕವಾಗಿತ್ತು. ಕಲಾಪ ವ್ಯವಸ್ಥೆಯಾಗಿದ್ದ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಶ್ರೀ ಲಕ್ಷ್ಮೀನರಸಿಂಹ

ಕಲ್ಯಾಣ ಮಂಟಪ, ಹಳೆ ವಠಾರದೊಳಗೇ ಹೊಸ ರೂಪದಲ್ಲಿ ಮೂಡಿದ್ದು ನಮ್ಮ ಸಂಭ್ರಮವನ್ನು ಹೆಚ್ಚಿಸಿತು. ಔಪಚಾರಿಕ ಕಲಾಪಗಳ ನಡುವೆ ನಾನು ಸಣ್ಣ ಬಿಡುವು ಮಾಡಿಕೊಂಡು ಹೊರ ಜಾರಿದ್ದಕ್ಕೆ...

ಕಲ್ಯಾಣ ಮಂಟಪದ ಒತ್ತಿಗೇ ಇತ್ತು - ‘ಗಾರೇತೋಟ’. ಅದು ವಾಸ್ತವದಲ್ಲಿ ಒಂದು ಪುಟ್ಟ ಮೈದಾನ ಮತ್ತು ಕೇಂದ್ರದಲ್ಲೊಂದು

ಸಣ್ಣ ಕಟ್ಟಡ - ಆಂನೇಯನ ಗುಡಿ, ಅಲ್ಲಿ ಸಣ್ಣದಾಗಿ ಭಜನೆ, ಪರ್ವ ಕಾಲಗಳಲ್ಲಿ ತುಸು ದೊಡ್ಡದಾಗಿ ಸಾಂಸ್ಕೃತಿಕ ಕಲಾಪಗಳು ನಡೆಯುವುದಿತ್ತು. (ಆರಾಧನೆಗೆ ಪಕ್ಕದಲ್ಲಿ ಊರಿಗೇ ದೊಡ್ಡದಾದ ಮತ್ತು ಪುರಾತನದ್ದೂ ಆದ ಓಂಕಾರೇಶ್ವರ ದೇವಸ್ಥಾನ ಇದೆ) ನನ್ನ ಅನೇಕಾನೇಕ ಹಿರಿಯ ಬಂಧುಗಳ ಬಾಲ್ಯಕ್ಕೆ ಚೇತೋಹಾರಿ ಆಟದ ಮೈದಾನವೇ ಆಗಿತ್ತು ಈ ಗಾರೇತೋಟ. ಅಲ್ಲಿ ನಡೆದ ಭಜನೆ, ಹರಿಕಥೆ, ಸಂಗೀತ ಕಛೇರಿಗಳನ್ನು ನಾನು ಅನುಭವಿಸಿದ್ದು ತುಂಬಾ ಕಡಿಮೆ ಮತ್ತು ಆ ಕುರಿತ ನನ್ನ ನೆನಪುಗಳೂ ತೀರಾ ಮಸುಕು. (ನಾನು ಹತ್ತರ ಹರಯದಲ್ಲೇ

ಮಡಿಕೇರಿ ಬಿಟ್ಟೆ) ನನ್ನ ನೆನಪಲ್ಲಿ ಸ್ಪಷ್ಟವಾಗಿ ಉಳಿದಿರುವುದು ತೀರಾ ಈಚೆಗೆ ಅಲ್ಲಿ ನಡೆದ ಅಷ್ಟಾವಧಾನ ಮಾತ್ರ. ನಾನು ಕೊಟ್ಟ ಸಂಪರ್ಕದ ನೆಪದಲ್ಲಿ, ನನ್ನ ಚಿಕ್ಕಪ್ಪ ರಾಘವೇಂದ್ರನೇ ಸಂಘಟಿಸಿದ್ದ ಅವಧಾನಿ ಆರ್. ಗಣೇಶರ ಅಷ್ಟಾವಧಾನ ತುಂಬ ಚೆನ್ನಾಗಿಯೇ ನಡೆದಿತ್ತು. ಈಗ ನೋಡುತ್ತೇನೆ...

ಗಾರೇತೋಟ ಮೈದಾನದ ಹೃದಯ ಸೀಳಿದಂತೆ ರಸ್ತೆ ಹರಿದಿದೆ, ಅದರೊಳಗೆ ಭದ್ರ ಪಾಗಾರ, ದ್ವಾರ ಸಹಿತ ಹೊಸದೇ ಭರ್ಜರಿ ರಚನೆಯೊಂದು, ಭಿನ್ನ ದಿಕ್ಕಿಗೆ ಮುಖ ತಿರುಗಿಸಿ ಕುಳಿತಿದೆ - ಶ್ರೀ

ಆಂಜನೇಯ ದೇವಸ್ಥಾನ. ಅಲ್ಲೀಗ ನಿತ್ಯ (ವಿವಿಧ ದರಗಳ) ದೈವಾರಾಧನೆ ನಡೆಯುತ್ತದೆ. ಉಳಿದಂತೆ ಅನೌಪಚಾರಿಕ ಸಾಮಾಜಿಕ ಸಂಬಂಧಗಳಿಗಿದ್ದ (ಸಂಜೆಯ ವೇಳೆ ಪ್ರಾಯಸ್ಥರಿಗೊಂದು ವಿಹಾರಸ್ಥಳ ಮತ್ತು ಯುವಕರಿಗೆ ಕ್ರೀಡಾ ಕೇಂದ್ರ - ಕೊಕ್ಕೋ, ಕಬಡ್ಡಿ, ಕ್ರಿಕೆಟ್...) ಸ್ಥಳ ಸಂಕೋಚಗೊಂಡಿದೆ. ವಿಧಿನಿಷೇಧಗಳು ಹೆಚ್ಚಿವೆ. ನಾನು ದೇವಳಕ್ಕೆ ಸಣ್ಣ ಸುತ್ತು ಹಾಕಿ ಹೊರಡುವ ವೇಳೆಗೆ ಪಾಗಾರದ ಅಂಚಿನಲ್ಲೇ ವಿಶ್ರಮಿಸಿದ್ದ ‘ಕ್ರಿಕೆಟ್ ವೀರ’ರನ್ನು ಕಂಡು ಇದ್ದುದರಲ್ಲಿ ಸಣ್ಣ ತೃಪ್ತಿ ಸಿಕ್ಕಿತ್ತು.

ಗಾರೇತೋಟದ ಇನ್ನೊಂದು ಮಗ್ಗುಲಿನ ಅದ್ಭುತವೇ ಓಂಕಾರೇಶ್ವರ ದೇವಸ್ಥಾನ. (ಅದರ ಸ್ಥಳಪುರಾಣವನ್ನಾಧರಿಸಿದ ಕತೆ - ಪಂಜರದ ಗಿಳಿ) ಇಂದು ದುಷ್ಟ ರಾಜಕಾರಣಕ್ಕೆ ದೇಶದ ಧಾರ್ಮಿಕ ಸಾಮರಸ್ಯವೇ ಹದಗೆಡುತ್ತಿದೆ. ಅದರ ಮುನ್ನೆಲೆಯಲ್ಲಿ ಸ್ಪಷ್ಟ ಐತಿಹಾಸಿಕ ದಾಖಲೆ ಮತ್ತು ಜನಪದ ನಂಬಿಕೆಯನ್ನು ಉಳಿಸಿಕೊಂಡೇ ಬಂದಿರುವ ಈ ದೇವಳ ನೋಡುವುದು ಚೇತೋಹಾರಿ ಅನುಭವ. ಬ್ರಾಹ್ಮಣ ಹತ್ಯಾದೋಷ ನಿವಾರಣೆಗಾಗಿ, ಲಿಂಗಾಯಿತ ರಾಜ ಕಟ್ಟಿಸಿದ ದೇವಳವಿದು. ರಚನೆಗೆ ಭವ್ಯತೆಯನ್ನು ಕೊಡುವ ಗುಮ್ಮಟ ಇಸ್ಮಾಮಿಕ್ ಶೈಲಿಯದು! ಸಮಯಾಭಾವದಲ್ಲಿ ನಾನು ಕೇವಲ ಇಣುಕುನೋಟವನ್ನಷ್ಟೇ ಪಡೆದು ಮುಂದುವರಿದೆ. ಆದರೆ ಬದ್ಧಕ್ಕೆ ಬಂದಿದ್ದ ಅನೇಕ ಬಂಧುಗಳು, ಮೊದಲ ಬಾರಿಗೆನ್ನುವಂತೆ ಅಲ್ಲಿಗೆ ಹೋಗಿ, ಸುಂದರ ಕೆರೆ ಬಳಸಿ ನಡೆದು, ನಡುವಣ ಮಂಟಪದ ನೋಟಕ್ಕೆ ಮನಸೋತು, ಉನ್ನತ ಪಾವಟಿಗೆಗಳನ್ನೇರಿ ಒಳಪ್ರಾಕಾರ ಸೇರಿ, ಪ್ರದಕ್ಷಿಣಾದಿ ದರ್ಶನ, ತೀರ್ಥ ಪ್ರಸಾದಗಳಿಂದ ಧನ್ಯರಾದದ್ದು ಕೇಳಿ ಸಂತಸಪಟ್ಟೆ.


ಐದನೇ ತರಗತಿಯ ಎಳವೆಯಲ್ಲೇ ನಾನು ಮಡಿಕೇರಿ ಬಿಟ್ಟರೂ ಆಪ್ತ ಬಂಧುಗಳ ಭೇಟಿ ತೀರಾ ವಿರಳವಾಗಿ ಆಗುತ್ತಿದ್ದರೂ ಮಾನಸಿಕ ಅನುಸಂಧಾನದಲ್ಲಿ ಇಂದಿಗೂ ನಾನು ಮಡಿಕೇರಿಯವನೇ ಆಗುಳಿದಿದ್ದೇನೆ. ಆ ಭಾವನಾಸ್ರೋತಕ್ಕೆ ಕಾಲಕಾಲಕ್ಕೆ ಪುನರುಜ್ಜೀವನವನ್ನು ಊಡುತ್ತಲೇ ಬಂದ ಮೂರು ನೆಲೆಗಳು - ನನ್ನ ಮೂಲ ಮನೆ - ಮೋದೂರು (ಚಿಕ್ಕಪ್ಪ ದಿವಾಕರ ಇಂದಿನ ಯಜಮಾನ, ಮಡಿಕೇರಿಯಿಂದ ಸುಮಾರು ಆರು ಮೈಲು ದೂರದ ಹಳ್ಳಿ), ಚಿಕ್ಕಪ್ಪ ರಾಘವೇಂದ್ರನ ಮನೆ ದ್ವಾರಕಾ (ಸರಕಾರೀ ಜೂನಿಯರ್ ಕಾಲೇಜು ರಸ್ತೆ) ಮತ್ತು ಇನ್ನೋರ್ವ (ಚಿಕ್ಕಜ್ಜನ ಮಗ) ಚಿಕ್ಕಪ್ಪ ನಾರಾಯಣ ರಾವ್ ಮನೆ - ಜ್ಯೋತಿ (ಬ್ರಾಹ್ಮಣರ ಕೇರಿ). ಹಳೆಗಾಲದ ಮಾತಿನಂತೆ ಹೇಳುವುದಿದ್ದರೆ, ಕಲ್ಯಾಣ ಮಂಟಪದಿಂದ ಜ್ಯೋತಿಗೆ ಕೂಗಳತೆ ದೂರ! ಈಚೆಗೆ (೨೦೨೧ರ ಮಾತು) ನಾರಾಯಣ ಹಿರಿಯ ಮಗ

ರಾಮೂ ಮತ್ತು ಏಕೈಕ ತಮ್ಮ ಸದಾಶಿವನನ್ನು ಅಕಾಲಿಕವಾಗಿ ಕಳೆದುಕೊಂಡಿದ್ದ. ಐದು ಮಿನಿಟಿಗೆ ಜ್ಯೋತಿಗೆ ಹೋಗಿ, ನನ್ನ ಮೇಲೂ ಇರುವ ದುಃಖದ ಹೊರೆಯನ್ನು ಕಾಣಿಸಿ ಬಂದೆ.

ಕಲ್ಯಾಣ ಮಂಟಪದಲ್ಲಿ ಶುಭ ಸಂದರ್ಭಕ್ಕೆ ಒಪ್ಪುವ ಪೂಜೆ, ಸಾಂಪ್ರದಾಯಿಕ ಬದ್ಧದ (ನಿಶ್ಚಿತಾರ್ಥ) ಕಲಾಪಗಳು ವೇದಿಕೆಯ ಮೇಲೆ ಸಾಂಗವಾಗಿ ಸಾಗಿದವು. ಕೆಳಗೆ ಪೂರ್ವಪರಿಚಯಗಳ ನವೀಕರಣ, ಹೊಸ ಪರಿಚಯಗಳ ಸಂಧಾನ, ಅಸಂಖ್ಯ ಮಾತಿನ ಮಂಟಪಗಳು, ಮಕ್ಕಳಾಟಗಳು ನಿಧಾನಕ್ಕೆ ಊಟದವರೆಗೂ ಲಂಬಿಸಿದವು. ಬಡಿವಾರವಿಲ್ಲದ ಮಹಾಭೋಜನದೊಂದಿಗೆ, ಬರಲಿರುವ ಮದುವೆಯ ಬುತ್ತಿ ಕಟ್ಟಿಕೊಂಡು ಎಲ್ಲರೂ ಮರಳಿದೆವು.

೪. ಮೂರು ಬಸ್ಸೇರಿ ಮಡಿಕೇರಿಗೆ


ಚಿಕ್ಕಪ್ಪ ನಾರಾಯಣರಾವ್ ಶ್ರೀದೇವಿ ದಂಪತಿಯ ಹಿರಿ ಮಗ (ನಮಿತಾ ರಾವ್ ಪತಿ) ರಾಮುವಿನ ದೇಹಾಂತದ ಪ್ರಥಮ ವಾರ್ಷಿಕ ಕಲಾಪಕ್ಕೆಂದು (೨೭-೭-೨೨) ಮಡಿಕೇರಿಯ ‘ಜ್ಯೋತಿ’ ಮನೆಗೆ ಹೊರಟಿದ್ದೆ. ಜೊತೆಗೇ ವಿಪರೀತ ಮಳೆಯಲ್ಲಿ ಮಡಿಕೇರಿ ನಗರ ಪ್ರವೇಶದಲ್ಲಿ (ಟೋಲ್ ಗೇಟ್), ಜಿಲ್ಲಾಧಿಕಾರಿ ಕಛೇರಿಯನ್ನು (ಐದು ಕೋಟಿಯ ಕಟ್ಟಡವನ್ನು ಎಂಟು ಕೋಟಿ ವೆಚ್ಚದಲ್ಲಿ) ಹೊತ್ತ ಭಾರೀ ದರೆ ಕುಸಿಯುವ ಸ್ಥಿತಿಯಲ್ಲಿದೆ. ಅದಕ್ಕೆ ಹೆದರಿದ ಜಿಲ್ಲಾಧಿಕಾರಿ, ಭಾರೀ ವಾಹನ ಸಂಚಾರವನ್ನು ನಿರ್ಬಂಧಿಸಿ, ಪರ್ಯಾಯ ವ್ಯವಸ್ಥೆಗಳನ್ನು ಮಾಡಿದ್ದಾರೆ ಎಂಬ ಸುದ್ಧಿಯೂ ಸಿಕ್ಕಿತು. ಅದರ ಮೇಲೆ, ನಿನ್ನೆ ಮೊನ್ನೆ ಎಂಬಂತೆ ಕೊಯ್ನಾಡಿನಲ್ಲಿ ನೆರೆ ಆವೃತ್ತ ಮನೆಯ ಸಂತ್ರಸ್ತರ ನೇರಪ್ರಸಾರದ ಅಹವಾಲು, ಪೆರಾಜೆ ವಲಯದ ನಿತ್ಯ ಭೂಕಂಪನಗಳು, ಕೊನೆಗೆ ನಾಲ್ಕು ವರ್ಷಗಳ ಹಿಂದಿನ ಭೀಕರ ಭೂಕುಸಿತದ ತಾಣಗಳ ಬಳಿ ‘ಕೆಲಸ ಪರಗತಿಯಲ್ಲಿದೆ’ ಎಂದು ಬೋರ್ಡು ಹಚ್ಚಿಕೊಂಡು ನಿದ್ರಿಸುತ್ತಿರುವ ದೃಶ್ಯಗಳನ್ನೆಲ್ಲ ಸಾಧ್ಯವಾದಷ್ಟು ನಡೆದು ನೋಡಬೇಕೆಂದೇ ಅಂದಾಜಿಸಿದೆ. ಆದರೆ ಗೃಹಪ್ರವೇಶದಲ್ಲಿ ಹೊಸ್ತಿಲು ಎಡಗಿದಂತೆ...


ಮಂಗಳೂರಿನಿಂದ ಬೆಳಗ್ಗಿನ ಮೊದಲ ಬಸ್ಸಿಗಾಗಿ ಜ್ಯೋತಿ ಬಸ್ ತಂಗುದಾಣಕ್ಕೆ ಧಾವಿಸಿದ್ದೆ. ಇಲ್ಲಿ ಜನ ನಿಲ್ಲಬೇಕಿದ್ದ ಪುಟ್ಟಪಥದ ಉದ್ದಕ್ಕೂ ಮುಚ್ಚಿಗೆ ತೆಗೆದು ಹಾಕಿ, ಜನನುಂಗಲು ಮೋರಿ ಬಾಯಿಕಳೆದು ನಿಂತಿತ್ತು. ನಾನು ಕಂಡಂತೆ, ಜ್ಯೋತಿ ನಿಲುದಾಣ ಕಳೆದ ನಲ್ವತ್ತಾರು ವರ್ಷಗಳ ಉದ್ದಕ್ಕೂ ಉತ್ತಮಿಕೆಯ ಕನಸನ್ನೇ ಜೀವಂತವಾಗಿಟ್ಟುಕೊಂಡು ಬಂದಿದೆ! ಕರದಾತ ಕತ್ತೆಗಳ ಮುಂದೆ ಕಟ್ಟಿದ ಒಣಕಲು ಮೂಲಂಗಿಗೆ ಈಗ ‘ಸ್ಮಾರ್ಟ್ ಸಿಟಿ’ ಎಂಬ ಹೊಸ ರಂಗಿನ ಕ್ಯಾರಟ್, ಅಷ್ಟೆ. ನನಗೆ ಮಡಿಕೇರಿಯಲ್ಲಿನ ಮನುಷ್ಯ-ಪ್ರಕೃತಿ ಸಂಘರ್ಷದ ಸಂದರ್ಶನಕ್ಕೆ ಇದು ಒಳ್ಳೆಯ ಪೀಠಿಕೆಯೇ ಇದ್ದಿರಬೇಕು.

ಮಂಗಳೂರು - ಬೆಂಗಳೂರು (ಮಡಿಕೇರಿ, ಮೈಸೂರು ಮೂಲಕ) ಕೆಂಬಸ್ಸು ಬರುವಾಗಲೇ ಮುಕ್ಕಾಲು ಗಂಟೆ ವಿಳಂಬ (೬.೪೫). ದಾರಿ ನೋಡುವ ಅನುಕೂಲಕ್ಕೆ ನಾನು ಎದುರಿನ (ಚಾಲಕನಿಗೆ ಸಮಭುಜದ) ಅಡ್ಡ ಸೀಟನ್ನೇ ಹಿಡಿದುಕೊಂಡೆ. ಗೊರಗೊರ ಎನ್ನುತ್ತಿದ್ದ ಬಸ್ಸು ನಾಗುರಿಯಿಂದ ಪಡೀಲಿನತ್ತ ಏರುವಲ್ಲೇ ಸುಸ್ತಾಗತೊಡಗಿತ್ತು. ಬಸ್ಸಿನ ನಿರ್ವಾಹಕ ನನ್ನ ಪಕ್ಕಕ್ಕೇ ಬಂದು ಕುಳಿತು,. ಚಾಲಕನೊಡನೆ ಹತಾಶೆ ತೋಡಿಕೊಂಡ. ಮತ್ತೆ ಮತ್ತೆ ಪ್ರಯತ್ನ ಮಾಡಿ, ಡಿಪೋ ಸಂಚಾಲಕನ ಚರವಾಣಿ ಸಂಪರ್ಕ ಸಾಧಿಸಿ, "ಲಾಂಗ್ ರೂಟಿಗೆ ಎಂಥಾ ಬಸ್ ಕೊಟ್ಟಿದ್ದೀರಾ...." ಗೊಣಗಾಡಿದ. ಪರೋಕ್ಷವಾಗಿ ನನಗೆ ಇಲಾಖೆಯ ಲಂಚ ಪ್ರಪಂಚದ ಸುಳಿವೂ ಸಿಕ್ಕಿತು! ಕಡೆಗೂ ಸಿಕ್ಕಿದ ಪರಿಹಾರ "ಅಡ್ಜಸ್ಟ್ ಮಾಡಿಕೊಳ್ಳಿ.". ನಾನು ಧೈರ್ಯ ಮಾಡಿ ಚಾಲಕನನ್ನು ಕೇಳಿದ್ದೆ "ಮಡಿಕೇರಿ ಎಷ್ಟೊತ್ತಿಗೆ..."? ಆತ ವಿಷಾದದ ನಗೆ ಬೀರಿ "ಗೊತ್ತಿಲ್ಲಾ ಸಾರ್..." ಎನ್ನಬೇಕೇ! ಬಿರುಸಿನ ಮಳೆ ಮತ್ತು ಚಳಿಯಲ್ಲಿ ಚಾರಣಕ್ಕೆಂದೇ ನಾನು ಬೆನ್ನಚೀಲ ತುಂಬಿದ್ದ ಸ್ವೆಟ್ಟರ್, ಮಂಗನತೊಪ್ಪಿ, ಶೀತನಿರೋಧಕ ಅಂಗಿ, ಮಳೆಕೋಟು ಮತ್ತು ಅರ್ಧಾಳುದ್ದದ ಕೊಡೆ ನನ್ನನ್ನು ಅಣಕಿಸಿ ನಕ್ಕವು.

ಜೋಡುಮಾರ್ಗದವರೆಗಿನ ಚತುಷ್ಪಥ ಬಹುತೇಕ ಮಟ್ಟಸವಾಗಿಯೇ ಇದೆ. ಚಾಲಕ ಇದರಲ್ಲೇ ಸಾಧ್ಯವಾದಷ್ಟು ಸಮಯದ ಉಳಿತಾಯಕ್ಕೆ ಅಂದಾಜಿಸಿದಂತಿತ್ತು. ಸಾಕಷ್ಟು ವಿರಳವೇ ಇದ್ದರೂ ಆಗೀಗ ಸಿಕ್ಕ ಇತರ ವಾಹನಗಳನ್ನು (ಪೊಲಿಸ್, ಅಂಬುಲೆನ್ಸುಗಳಂತೆ) ಸುದೀರ್ಘ ಸಿಳ್ಳೆ ಹೊಡೆದೆಚ್ಚರಿಸುತ್ತ ಹಿಂದಿಕ್ಕಿದ. ಕ್ಷಣಕ್ಕೊಮ್ಮೆ ಪ್ರತ್ಯಕ್ಷವಾಗುತ್ತಿದ್ದ ಹೊಂಡ ಒಡಕುಗಳನ್ನು ಸಾಧ್ಯವಾದಷ್ಟು ಬಳಸಿದರೂ ಆಳ ಅಗಲವನ್ನು ‘ಘೋಷಿಸುವ’ ದಡಬಡ ಸದ್ದು, ಆಘಾತಗಳು ಕಡಿಮೆ ಏನೂ ಇರಲಿಲ್ಲ. ವೇಗತಡೆ ಬೇಲಿಗಳಂತೂ ನೂಲೆಳೆಯಂತರದಲ್ಲಿ ಹಿಂದೆ ಸರಿದರೂ ಚಾಲಕ ಯಾಕ್ಸಿಲೇಟರ್ ಮೇಲಿನ ಒತ್ತದ ಕಡಿಮೆ ಮಾಡಲಿಲ್ಲ. (ಹಾಗೆಂದು ಭಾರೀ ವೇಗವೇನೂ ಇರಲಿಲ್ಲ, ಬಿಡಿ) ಅದರ ಮೇಲೆ, ದಾರಿಯ ಸ್ಥಿತಿಗತಿಗೂ ತಮಗೂ ಸಂಬಂಧ ಇಲ್ಲವೆನ್ನುವಂತೆ ಕಾಡಿದ ಸುಂಕದ ಕಟ್ಟೆಯಲ್ಲಿ ಕೆಂಗಣ್ಣು ಹಸಿರಾಗುವುದನ್ನು ಕಾದು, ಜೋಡುಮಾರ್ಗದಲ್ಲಿ ನಾಕೆಂಟು ಮಂದಿಯನ್ನು ಏರಿಸಿಕೊಂದೇ ಸಾಗಿತು ನಮ್ಮ ಮಹಾ ಓಟ. ನೇತ್ರಾವತಿಯನ್ನು ಅಡ್ಡ ಹಾಯ್ದಮೇಲೆ ನಿರೀಕ್ಷಿಸಿದ್ದ ಚತುಷ್ಪಥೀಕರಣದ ಅಡ್ಡಿಗಳು ತೊಡಗಿದರೂ ನಮ್ಮ ಚಾಲಕನ ಸದಾಶಯ ತಗ್ಗಲಿಲ್ಲ. ಹಾಗೆಂದು ಮೇಲ್ಕಾರಿನಿಂದ ಮುಂದೆ ಸಿಕ್ಕ ಕೆಲವು ಆಶ್ಚರ್ಯಕರ ನೋಟಗಳನ್ನು ಹೇಳದಿರಲಾರೆ. ಮೊದಲಿಗೇ...


ಕೈಲಾಸದ ಬುಡಕ್ಕೆ ಕೈಯಿಟ್ಟ ದಶಶಿರನ ಪುರಾಣ ಇಲ್ಲಿ ರೂಪುವಡೆದಿತ್ತು. ನರಹರಿಪರ್ವತದ ಬುಡಕ್ಕೆ ಜೆಸಿಬಿ ಟಿಪ್ಪರುಗಳ ಸೇವೆಕೊಟ್ಟು ಮಣ್ಣು ಕಳೆಯುತ್ತಿದ್ದಂತೇ ಅತ್ತ, ನೆತ್ತಿಗೇ ವಾಹನಯೋಗ್ಯ ರಸ್ತೆಯಿಟ್ಟ ಎಜೆ ಶೆಟ್ಟರ ಭಕ್ತಿ (ಉದ್ದಿಮೆಯ) ಅಸಾಮಾನ್ಯವಾದದ್ದೇ. ಅದಕ್ಕೆ ಸಾಕ್ಷಾತ್ ಸದಾಶಿವ ದೇವರೇ ಒಲಿದು ಬಯಲಾದನೋ ಎಂಬಂತೆ ನರಹರಿಪರ್ವತವೇ ಮಂಜಮುಸುಕಿನಲ್ಲಿ ಕಣ್ಮರೆಯಾಗಿತ್ತು. ಮುಂದುವರಿದಂತೆ, ಇನ್ನೊಬ್ಬ ಭಕ್ತಾಗ್ರಣಿಯ ಮನುಷ್ಯತ್ವ ಮೀರಿದ ನುಡಿಮುತ್ತುಗಳ ಪ್ರವಾಹಕ್ಕೆ ಊರಿಗೂರೇ ನಾಚಿಕೊಂಡಂತಿತ್ತು; ಕಲ್ಲಡ್ಕ ಮಂಜಿನವಗುಂಠನದಲ್ಲಿತ್ತು. ಮೇಲ್ಸೇತು ಹಾಯ್ಸಿಕೊಳ್ಳಲು ಮೊಳೆಯುತ್ತಿದ್ದವು ಭಾರೀ ಕುಂದಗಳು. ಜಗತ್ತಿನೆಲ್ಲ ಕಲ್ಲು, ಕಬ್ಬಿಣ, ಸಿಮೆಂಟ್ ಮಿಶ್ರಣಗಳೂ ಇಲ್ಲಿಗೇ ಮೀಸಲೆಂಬಂತೆ ನಡೆದಿದ್ದ ಚತುಷ್ಪಥೀಕರಣದ ಕಾರ್ಯಗಳೂ ಮಕ್ಮಲ್ಲಿನ ಮುಸುಕಿನಲ್ಲಿ ಕಾಠಿಣ್ಯ ಕಳೆದು ರಮ್ಯವಾಗಿ ಕಾಣುತ್ತಿದ್ದವು. ಸೂರಿಕುಮೇರಿನ ಬಳಿ, ಗುಡ್ಡೆ ಬಗಿದು, ಕಣಿವೆ ತುಂಬಿದ ಬೆರಗಿಗೆ ಬಾಕಿಯಾಗಿ ದೂರದಲ್ಲೇ ಉಳಿದಿದ್ದ ಗುಡ್ಡೆ, ಮರಗಿಡಬಳ್ಳಿ ಸಹಿತ "ಅಷ್ಟೇ ಸಾಕೇ? ನಮ್ಮನ್ನೂ ಒಪ್ಪಿಸಿಕೊಳ್ಳಿ" ಎಂದು ನೂರು ಮೀಟರಿಗೂ ಉದ್ದಕ್ಕೆ ಹೊಸದಾಗಿಯೇ ಕಟ್ಟಿದ್ದ ತಡೆಗೋಡೆಯನ್ನು ಮಗ್ಗಾಮಲಗಿಸಿ ದಾರಿಗೆ ಹರಿದಿತ್ತು. ಒಟ್ಟಾರೆಯಲ್ಲಿ ಕಳಚಿಹೋದ ಪರಿಸರಕ್ಕೆ ಗಗನ ಮಂಡಲ ರೋದಿಸಿತ್ತು.

ಪುತ್ತೂರಿನ ಕಟ್ಟೆಪೂಜೆ ಮುಗಿಸಿ ಹೆಚ್ಚಿದ ಜನಬಲದೊಡನೆ ಕೆಂಬಸ್ಸು ಮುಂದುವರಿಯಿತು. ಘಟ್ಟ ಸಮೀಪಿಸುವ ಸೂಚನೆಗಳು ಹೆಚ್ಚುತ್ತಿದ್ದಂತೆ, ಬಸ್ಸಿನ ಗೂರಲು ಉಲ್ಬಣಿಸಿ, ಕನಕ ಮಜಲಿನಿಂದ ತುಸು ಮುಂದೆ, ಎಲ್ಲೂ ಅಲ್ಲದಲ್ಲಿ ಸತ್ತೇಹೋಯಿತು. ಮತ್ತದು

ಚಾಲಕ, ನಿರ್ವಾಹಕರ ಯಾವ ಚಿಕಿತ್ಸೆಗೂ ಸ್ಪಂದಿಸಲೇ ಇಲ್ಲ. ಸನ್ನಿವೇಶ ನನಗೆ, "ಇಲ್ಲಿಂದಲೇ ಚಾರಣಿಸು" ಎಂದು ವಿಪರೀತ ಸವಾಲನ್ನೇ ಒಡ್ಡಿ ಅಣಕಿಸಿದಂತಿತ್ತು. ಐದತ್ತು ಮಿನಿಟು ಕಳೆದಾಗ ಒಂದು ಪುತ್ತೂರು - ಸುಳ್ಯ, ಸರ್ವಜನ ಸಹಕಾರೀ (ಶಟಲ್) ಬಸ್ ಬಂತು. ನಮ್ಮ ನಿರ್ವಾಹಕ ತಾಳ್ಮೆಯಿಂದ "ಸುಳ್ಯದವರಷ್ಟೇ ಇದಕ್ಕೇರಿ, ಉಳಿದವರಿಗೆ ಇನ್ನೊಂದೇ ಬೆಂಗಳೂರು ಬಸ್ಸು ಇನ್ನೇನು ಬಂದುಬಿಡುತ್ತದೆ..." ಎನ್ನುತ್ತಲೇ ಇದ್ದ. ಆದರೆ ನಾನು ಭಾರೀ ಕಾರ್ಯಾವಸರ ಇದ್ದವನಂತೆ ಅದಕ್ಕೇ ಏರಿಬಿಟ್ಟೆ. ಅದುವರೆಗಿನ ಬಸ್ಸು ಕಾಯಿಲಸ್ಥನಾದರೆ, ಇದು ಘೋಷಿತ ನಿಧಾನಿ (ಶಟಲ್). ನಾಲ್ಕು ಕಿಮೀ ಕಳೆಯುವುದರೊಳಗೆ, ಹಿಂದಿನ ನಿರ್ವಾಹಕ ಹೇಳಿದ್ದ ಇನ್ನೊಂದೇ ಬೆಂಗಳೂರು ಬಸ್ಸು ನಮ್ಮನ್ನು ಹಿಂದಿಕ್ಕಿ ಹೋಯ್ತು. ಒಮ್ಮೆಗೆ ನನ್ನ ಕರುಳು ಕಿವಿಚಿದಂತೇ ಆಗಿತ್ತು. ಆದರೆ ನನ್ನ ಸೀಮಿತ ಅದೃಷ್ಟಕ್ಕೆ ನಾನು ಸುಳ್ಯ ತಲಪುತ್ತಿದ್ದಂತೆ, ಆ ಬೆಂಗಳೂರು ಬಸ್ಸು ಕಾಫಿ ವಿರಾಮಕ್ಕೆ ನಿಂತದ್ದು ಇನ್ನೇನೂ ಹೊರಡುತ್ತಿದ್ದಂತೇ ಸಿಕ್ಕಿತು. ಸೀಮಿತ ಅದೃಷ್ಟ ಎಂದೆನಲ್ಲವೇ - ಸುಳ್ಯದಲ್ಲಿ ತಿಂಡಿ ತಿನ್ನುವುದಿರಲಿ, ಉಚ್ಚೆ ಹೊಯ್ಯುವ ಯೋಚನೆಗೂ ಅವಕಾಶವಿಲ್ಲದಂತೆ ಆ (ಮೂರನೇ) ಬಸ್ಸಿನಲ್ಲಿ ಸೇರಿಕೊಂಡಿದ್ದೆ.

೫. ಸಮಯದ ಕೊಲೆ


ಇಲ್ಲಿ ಕತೆಯನ್ನು ಸ್ವಲ್ಪ ಹಿಂದೆ ಸರಿಯಲು ಬಿಟ್ಟು, ಮುಂದಕ್ಕೆ ನೂಕ್ತೇನೆ! ಎರಡನೇ ಬಸ್ ಸುಳ್ಯದ ಮುಖ್ಯ ಪೇಟೆಗೆ ಬರುತ್ತಿದ್ದಂತೆ, ಕೇಸರಿ ಶಾಲು ಭುಜಕ್ಕೇರಿಸಿದ ಗುಂಪು, ವಾಹನ ಸಂಚಾರ ತಡೆಯುತ್ತಾ ಸುಳ್ಯ ಬಂದ್ ಮಾಡಲು ತೊಡಗಿತ್ತು. ನಮ್ಮ ಬಸ್ಸಿಗೂ ನಿಲ್ದಾಣದಿಂದ ಮುಂದೆ ಹೋಗದಿರಲು ‘ಕೆಟ್ಟಪ್ಪಣೆ’ ಆಯ್ತು. ಕಾರಣ - ಹಿಂದಿನ ರಾತ್ರಿ ನೆಟ್ಟಾರಿನಲ್ಲಿ ನಡೆದ ‘ಹಿಂದೂ ಕೊಲೆ.’ ಅಲ್ಲೇ "ಇದು ತಿಂಗಳ ಹಿಂದೆ (ಇನ್ನೆಲ್ಲೋ) ನಡೆದ ಮುಸ್ಲಿಂ ಕೊಲೆಗೆ (ಮಾನ್ಯ ಮುಖ್ಯಮಂತ್ರಿಯವರ ಹೇಳಿಕೆಯಂತೆ) ಸಹಜ ಪ್ರತಿಕ್ರಿಯೆ"

ಎಂದೂ ಕೇಳಿದೆ! ಇಂದು ಸರತಿ ಸಾಲು ಹಿಡಿದಂತೆ, ‘ಸುರತ್ಕಲ್ಲಿನಲ್ಲಿ ಮುಸ್ಲಿಂ ಕೊಲೆ’ (ಪಣಂಬೂರಿನ ಲಾರಿ ಕೆಲಸಗಾರ ಪಾಝೀಲ್) ಕೇಳುತ್ತಿದೆ. ಕೊಲೆಯಾದ ನೆಟ್ಟಾರಿನ ಪ್ರವೀಣನ ಹೆಂಡತಿಯೇ ಬೊಮ್ಮಾಯಿ ಮತ್ತು ಕಲ್ಲಡ್ಕ ಭಟ್ಟರಲ್ಲಿ "ಇನ್ನಾದರೂ ಯಾರದೋ ಗಂಡ, ಇನ್ಯಾರದೋ ಮಗ, ಮತ್ಯಾರದೋ ಅಪ್ಪ....ಎಂಬ ಮನುಷ್ಯ ಸಂಬಂಧ ನೋಡಿ, ಕೊಲೆ ಸರಣಿ ನಿಲ್ಲಿಸಿ" ಎಂದು ಮಾಡಿಕೊಂಡ ಮನವಿಯಂತೂ ಹೃದಯವಿದ್ರಾವಕ.

ಸುಳ್ಯ ಬಸ್ ನಿಲ್ದಾಣದಲ್ಲಿ ಬಸ್ಸುಗಳೂ ವಿದ್ಯಾರ್ಥಿಗಳೂ ಕಿಕ್ಕಿರಿದಿದ್ದರು. ನನ್ನ ಅದೃಷ್ಟಕ್ಕೆ, ನಾನು ತುರ್ತಾಗಿ ಏರಿಕೊಂಡ (ಮೂರನೇ) ಬೆಂಗಳೂರು ಬಸ್ ‘ಲಾಂಗ್ ರೂಟ್’ ಎಂಬ ರಿಯಾಯ್ತಿಯಲ್ಲಿ, ಅರೆಬರೆ ಮುಂಜಾವಿನ ಬಾಗಿಲು ತೆರೆಯುತ್ತಿದ್ದಂತೆ ಬಂದಾಗುತ್ತಿದ್ದ ಸುಳ್ಯವನ್ನು ಕಳಚಿಕೊಂಡಿತು. ಬಸ್ಸಿನೊಳಗೆ ಒತ್ತೊತ್ತಿ ಜನ ತುಂಬಿದ್ದರೂ ನಾನು ತತ್ಕಾಲೀನ ಎನ್ನುವಂತೆ ನಿರ್ವಾಹಕನ ಆಸನ ಆಕ್ರಮಿಸಿದ್ದು ಒಳ್ಳೇದೇ ಆಯ್ತು. ಆತ ಮಡಿಕೇರಿವರೆಗೂ ಪ್ರಯಾಣಿಕರ ನಿರ್ವಹಣೆಯಲ್ಲಿದ್ದುದರಿಂದ ನನ್ನನ್ನು ಎಬ್ಬಿಸಲು ಬರಲೇ ಇಲ್ಲ.

ಸಂಪಾಜೆವರೆಗೆ ನನಗೆ ಇನ್ನೋರ್ವ ಕೆಯೆಸ್ಸಾರ್ಟೀಸೀ ಚಾಲಕನೇ (ಪೆರಾಜೆ ಮೂಲದವರು) ಸಹಸೀಟಿಗನಾಗಿ ಸಿಕ್ಕಿದ್ದ. ಅವರೊಡನೆಯ ಮಾತುಕತೆ ನನ್ನ ‘ಜನರಲ್ ನಾಲೆಜ್ ಇಮ್ಪ್ರೂವ್’ ಮಾಡಿತು! ಮಂಗಳೂರಿನ ಬಸ್ಸು ಪೂರ್ಣ ಸ್ಥಗಿತಗೊಳ್ಳುವುದನ್ನು ಕಾಯದೇ ಜೋಡುಮಾರ್ಗ ಅಥವಾ ಪುತ್ತೂರು ಡಿಪೋಗಳಿಂದ ಬದಲಿ ಬಸ್ ಪಡೆಯುವ ವ್ಯವಸ್ಥೆ ಇಲಾಖೆಯಲ್ಲಿತ್ತಂತೆ. ಆದರೆ ನಮ್ಮ ಮಾತಿನ ಫಲಿತಾಂಶದಲ್ಲಿ ಒಟ್ಟಾರೆ ಇಲಾಖೆಯೇ ಸರಿಯಿಲ್ಲ ಎಂದು ಕಾಣಿಸಿತ್ತು. ಆ ಲೆಕ್ಕದಲ್ಲಿ, ನನಗಾದ ಗಡಿಬಿಡಿ, ವಿಳಂಬಗಳನ್ನು ಮೀರಿ, ಒಂದೇ ಟಿಕೆಟ್ ವೆಚ್ಚದಲ್ಲಿ ಪಯಣ ನಡೆದೇ ಇತ್ತು ಎನ್ನುವ ಅಲ್ಪತೃಪ್ತಿಯೂ ಸೇರಿಕೊಂಡಿತು. ಹಾಗಾಗಿ ಮೊದಲ ಬಸ್ ಇಳಿವಾಗ ಯೋಚಿಸಿದ್ದಂತೆ, ಮಂಗಳೂರಿಗೆ ಮರಳಿದ ಮೇಲೆ ಎರಡನೇ (ಮಹಾಯುದ್ಧ?) ‘ಡಿಪಾರ್ಟ್‍ಮೆಂಟ್ ಬ್ಯಾಶಿಂಗ್’ ಸ್ಪಿರಿಟ್ ಡೌನ್ ಆಯ್ತು. (ಮೊದಲನೇ ಮಹಾಯುದ್ಧ - ಚಾಲಕನಿಂದ ದೇವಕಿ ಮುಖಕ್ಕುಗಿಸಿಕೊಂಡ ಕತೆ, ಹಿಂಬಾಲಿಸಲಿದೆ!)

ಮೂರನೇ ಬಸ್ಸಿನ ಏರೆಳೆಯುವ ಸಾಮರ್ಥ್ಯವೂ ಕಡಿಮೆಯೇ ಇತ್ತು. ಹಾಗೆಂದು ಕಾಲವೇನೂ ತಾಳ ತಪ್ಪಲಿಲ್ಲ. ನನಗೆ ಯೋಜನೆಯಂತೆ ಕಾಟಗೇರಿಯಲ್ಲಿ ಬಸ್ಸಿಳಿಯುವ ಮುಹೂರ್ತ ಮೀರಿಹೋಗಿತ್ತು. ಮತ್ತೆ ನಾನಂದುಕೊಂಡಂತೆ ಅಲ್ಲಿ ಬಸ್ ಕೂಡಾ ಭಾಗಮಂಡಲದ ದಾರಿಗೆ ಹೊರಳಲೂ ಇಲ್ಲ. ನಾನು ಕುಳಿತೇ ಇದ್ದೆ. ತಾಲತ್ ಮನೆಗೂ ಮೊದಲಿನ ಮೇಕೇರೀ ಕವಲಿನಲ್ಲಿ ತಿರುಗುತ್ತದೆನ್ನುವಾಗ, ನಾನು ಎರಡು ಕಿಮೀಯಾದರೂ ನಡೆಯುವ ಉತ್ಸಾಹದಲ್ಲಿ ಸೀಟ್ ಬಿಟ್ಟಿದ್ದೆ. ಆದರೆ ನಿರ್ವಾಹಕ "ಸ್ಟಾಪಿಲ್ಲಾ ಸಾರ್" ಎಂದದ್ದಕ್ಕೆ ಸರಿಯಾಗಿ, ಲಗ್ಗೇಜ್ ರ್ಯಾಕ್ ನನ್ನ ತಲೆಗೇ ಮೊಟಕಿ ಕೂರಿಸಿತು. ಹತ್ತೂಮುಕ್ಕಾಲಕ್ಕೆ, ಚಂದಕ್ಕೆ ಬಿಸಿಲು ಕಾಯುತ್ತಿದ್ದಂತೆ ನಾನು ಸ್ವೆಟ್ಟರ್, ಕೊಡೆಯಾದಿ ಅನಾವಶ್ಯಕ ಹೊರೆ ಸಹಿತ, ಹ್ಯಾಪ್ಮೋರೆ ಹೊತ್ತು ಟೋಲ್ ಗೇಟಿನಲ್ಲಿಳಿದೆ.


ಬ್ರಾಹ್ಮಣರ ಕೇರಿಯ ‘ಜ್ಯೋತಿ’ ಮನೆ ನನ್ನ ಲಕ್ಷ್ಯ. ಆಸ್ಪತ್ರೆ ಗೇಟಿನ ಬಳಿಯ ಒಳದಾರಿ ಬಿಟ್ಟು, ಮುಖ್ಯ ದಾರಿಯಲ್ಲೇ ನಾಲ್ಕು ಹೆಜ್ಜೆ ಹಾಕಿ ಬಲ ಹೊರಳಿದೆ. ಅದೊಂದು ಪುಟ್ಟ ಚೌಕಿ - ರಾಜಾಸೀಟಿನ ದಾರಿ ಅಡ್ಡ ಹಾಯ್ದು ದೇವಸ್ಥಾನದೆಡೆಗೆ ನುಗ್ಗುವ ಕೇಂದ್ರ. ಅಲ್ಲಿ ಮುಖ್ಯದಾರಿಯ ಎಡ ಮೂಲೆ ಜಿಲ್ಲಾ ಸಹಕಾರೀ ಬ್ಯಾಂಕಿನ ಕಛೇರಿ; ಒಂದು ಕಾಲದಲ್ಲಿ ನನ್ನಜ್ಜನ (ಜಿ.ಎನ್. ತಿಮ್ಮಪ್ಪಯ್ಯ) ವೃತ್ತಿರಂಗವೂ ಆಗಿತ್ತು. ಅದಿಂದು ಹೊಸ ಬೋರ್ಡ್, ಬಣ್ಣದಲ್ಲಿದ್ದು ನನ್ನನ್ನು ಆಕರ್ಷಿಸಲಿಲ್ಲ. ಆದರೆ ಎದುರು ಮೂಲೆಯ, ಹಳೆಗಾಲದ ನೆನಪನ್ನು ಉಳಿಸಿಕೊಡುವ ಕಟ್ಟಡವನ್ನು ಗಮನಿಸದಿರುವುದುಂಟೇ. ನನ್ನ ಬಾಲ ದಿನಗಳಲ್ಲಿ (೧೯೫೦ರ ದಶಕ), ಅಲ್ಲಿ ಚಿಕ್ಕಜ್ಜ (ಜಿಎನ್ ರಾಮಚಂದ್ರ ರಾವ್ - ಜ್ಯೋತಿ ಮನೆಯ ಕೀರ್ತಿಶೇಷ ಯಜಮಾನ) ಹೋಮಿಯೋಪಥಿ ಕ್ಲಿನಿಕ್ ನಡೆಸಿದ್ದರು. ಅವರಿತ್ತ ಅಸಂಖ್ಯ ಸಿಹಿಗುಳಿಗೆಗಳನ್ನು ನೆನೆಸಿಕೊಳ್ಳುತ್ತ ಒಂದು ಚಿತ್ರ ಹಿಡಿದುಕೊಂಡೆ. (ಚಿತ್ರದಲ್ಲಿ ಕಾಣುವ ‘ರೋಶನಿ ಗೋಲ್ಡ್’ ಮಳಿಗೆಯ ಜಾಗದಲ್ಲಿ ಕ್ಲಿನಿಕ್ ಇತ್ತು. ಬಾಳೆಹಣ್ಣು ಜೋಪಡಿ, ಪುಟ್ಟಪಥ ಮತ್ತದರ ಮೇಲಕ್ಕೆ ವಿಸ್ತರಿಸಿದ ತರಕಾರೀ ಮಳಿಗೆಗಳೆಲ್ಲ ಆಧುನಿಕ ಕೊಡುಗೆಗಳು!)

ಚಿತ್ರ ತೆಗೆಯುತ್ತಿದ್ದಂತೆ ನನ್ನ ಹಿಂದೆಯೇ ಇದ್ದ ‘ವಿನಾಯಕ ಪ್ಯೂರ್ ವೆಜ್ಜಿ’ನ ಬೀದಿಬದಿಯ ದೋಸೆ ಹಂಚು ಚೊಂಯ್ ಎಂದಿತ್ತು, ಚುಟ್ಟಿ ಕರಂಚಿದ ಪರಿಮಳ ನನ್ನ ಹೊಟ್ಟೆಯ ಕೊರಗನ್ನು ಕೆಣಕಿತ್ತು. ಮತ್ತೆ ನೇರ ಜ್ಯೋತಿ ಮನೆಗೆ ಹೋದರೆ ಸಮಯ ತಿಂಡಿಗೆ

ತುಂಬಾ ತಡ ಮತ್ತು (ವರ್ಷಾಂತಿಕದ) ಊಟಕ್ಕೆ ಬಹಳ ಬೇಗವಾದೀತು ಎಂದುಕೊಂಡು, ಸೆಟ್ ದೋಸೆ, ಚಾ ಮುಗಿಸಿಬಿಟ್ಟೆ. ಮತ್ತೆ ದೇವಳದ ದಾರಿಯಲ್ಲೇ ಸುಮಾರು ಮುನ್ನೂರು ಮೀಟರ್ ನಡೆದು, ಎಡಕ್ಕೆ ಶೋಭಿಸಿದ್ದ ಓಂಕಾರೇಶ್ವರ ದೇವಳದ ಕೆರೆಯಂಗಳಕ್ಕಿಳಿದೆ. ಹಗಲು ಕನಸಿನಲ್ಲಿದ್ದ ಮೀನುಗಳಿಗೆ ಹಾಯ್ ಹೇಳಿ, ದೇವಳದತ್ತ ಕ್ಯಾಮರಾ ಚಿಟಿಕಿಸಿ, ಕೆರೆಯಂಚಿನಲ್ಲೇ ನಡೆದು, ಬ್ರಾಹ್ಮಣರ ಕೇರಿಯ ಮನೆ ಸೇರಿಕೊಂಡೆ.


[೫.(ಅ) ಉಪಕತೆ: ದೇವಕ್ಕಿ ಚಾಲಕನಿಂದ ಮುಖಕ್ಕುಗಿಸಿಕೊಂಡದ್ದು!


ಅಂದು (೨೮-೧೨-೨೧) ನಾವಿಬ್ಬರು ಬೆಂಗಳೂರಿನಿಂದ ರಾಜಹಂಸ ಬಸ್ಸೇರಿ ಮಂಗಳೂರಿಗೆ ಹೊರಟಿದ್ದೆವು. ದೇವಕಿ ಕಿಟಕಿ ಬದಿಯಲ್ಲಿದ್ದಂತೆ ನಾವು ನೇರ ಚಾಲಕನ ಹಿಂದಿನ ಸೀಟಿನಲ್ಲಿದ್ದೆವು. ಬಸ್ಸೋಡುತ್ತಿದ್ದಂತೆ, ಹಾಸನಕ್ಕೂ ತುಸು ಮೊದಲು, ಚಾಲಕ ತನ್ನ ಕಿಟಕಿಯಲ್ಲಿ ಹೊರಗುಗುಳಿದ್ದು ದೇವಕಿಯ ಮುಖಕ್ಕೂ ಸಿಡಿದಿತ್ತು. ಅದನ್ನು ನಾವು ಅಲ್ಲೂ

ಹಾಸನ ನಿಲ್ದಾಣದಲ್ಲಿ ಬಸ್ ನಿಂತಾಗಲೂ ಆವೇಶವಿಲ್ಲದೇ ಪ್ರತಿಭಟಿಸಿದೆವು. ಚಾಲಕ ಪ್ರಾಮಾಣಿಕವಾಗಿಯೇ ಕ್ಷಮೆ ಕೋರಿದ್ದ. ನಾವು ಮಂಗಳೂರಿಸಿದ ಮೇಲೆ, ಇದು ಇಲಾಖೆಗೂ ತಿಳಿದಿರಬೇಕೆಂಬ ಉದ್ದೇಶದಲ್ಲಿ ಮಂಗಳೂರು ವಿಭಾಗಕ್ಕೆ ಪತ್ರವನ್ನ್ನು ಬರೆದಿದ್ದೆ. ಅದರಲ್ಲೇ ಘಟನೆ ಆಕಸ್ಮಿಕವಾದ್ದರಿಂದ ಚಾಲಕನಿಗೆ ಕೇವಲ ವಾಗ್ದಂಡನೆ ಕೊಟ್ಟರೆ ಸಾಕೆಂದೂ ಆಶಿಸಿದ್ದೆವು. ಕರಾರಸಾಸಂಸ್ಥೆಯ ವಿಭಾಗ ಮುಖ್ಯಸ್ಥ - ಅರುಣ್, ಚಾಲಕನ ಮೇಲೆ ಇಲಾಖಾ ಕ್ರಮ ಕೈಗೊಂಡದ್ದನ್ನು ತಿಳಿಸಿ, ನಮಗೆ ವಿಷಾದ ಪತ್ರವನ್ನೂ ಕಳಿಸಿದರು.]

೬. ಸಿಹಿ ತಪ್ಪಿದ ಪ್ರಸಂಗ


ಸಾಂಪ್ರದಾಯಿಕ ಕಲಾಪಗಳು ಮೃತರ ಅಗಲಿಕೆಯ ಭಾರವನ್ನು ಎರಡು ಹಂತಗಳಲ್ಲಿ ಇಳಿಸುತ್ತದೆ. ‘ಶುದ್ಧ’ದೊಡನೆ (ಸುಮಾರಿಗೆ ಹದಿಮೂರು ದಿನ)

ನಿತ್ಯ ಕಾರ್ಯಗಳಿಗೂ ‘ವರ್ಷಾಂತಿಕ’ದೊಡನೆ ಇತರ ಮಂಗಳ ಕಾರ್ಯಗಳಿಗೂ ಅನುಮತಿಯನ್ನು ಕೊಡುತ್ತದೆ. ಹಾಗೆ ಜ್ಯೋತಿ ಮನೆಯಲ್ಲಿ ರಾಮೂವಿನ ಅಗಲಿಕೆಯ ಎರಡನೇ ಹಂತದ ಕಲಾಪಗಳ ಮುಖ್ಯ ಭಾಗಗಳು ಮತ್ತು ಊಟ ಸಾಂಗವಾಗಿ ಆದರೆ ತುಸು ತಡವಾಗಿ ಮುಗಿದಿತ್ತು. ಕ್ರಮದಂತೆ ಅನಂತರವೇ ನಡೆಯುವ ‘ಮಂತ್ರಾಕ್ಷತೆ’ಗೆ (ಸಮಾರೋಪ ಎನ್ನಿ) ಕುಳಿತರೆ ನನ್ನ ಮರುಪ್ರಯಾಣಕ್ಕೆ ತೊಂದರೆಯಾಗುತ್ತದೆಂಬ ಆತಂಕ ನನ್ನಲ್ಲಿ ಮೂಡಿತು. ಸಹಜವಾಗಿ ನಾನು ಅದಕ್ಕೆ ನಿಲ್ಲದೇ ಹೊರಡುವುದಾಗಿ ನಾರಾಯಣನಲ್ಲಿ ನಿವೇದಿಸಿಕೊಂಡೆ. ಅವನೂ

ಅಷ್ಟೇ ಸಹಜವಾಗಿ ಒಪ್ಪಿ, "ಬರಲಾಗದ ದೇವಕಿಗೆ" ಎಂದು ಅಂದಿನ ಸಿಹಿ ಭಕ್ಷ್ಯಗಳ ಪೊಟ್ಟಣವನ್ನು ಕೊಟ್ಟ. ನಾನದನ್ನು ಮೂಲೆಯಲ್ಲಿ ಬಿಟ್ಟಿದ್ದ ಚೀಲಕ್ಕೆ ತುಂಬುತ್ತಿದ್ದಂತೆ, ಇನ್ನೋರ್‍ವ ಬಂಧು, ಕಾಸರಗೋಡಿನಿಂದ ಏಕಾಂಗಿಯಾಗಿಯೇ ಕಾರೇರಿ ಬಂದಿದ್ದ - ಡಾ| ತೇಜಸ್ವಿ ನನ್ನನ್ನು ಆಹ್ವಾನಿಸಿದರು. ಬರುವ ದಾರಿಯಲ್ಲಿ ನಾನು ಸುಳ್ಯ ಪುತ್ತೂರು ವಲಯಗಳಲ್ಲಿ ಹರತಾಳ ನಡೆಯುವ ಸಾಧ್ಯತೆಯನ್ನು ಕಂಡಿದ್ದೆ. ಖಾಸಗಿ ಕಾರಿಗೆ ಆ ಸಮಸ್ಯೆ ಬರಲಾರದೆಂದು ಕಂಡು, ನಾನು ಒಪ್ಪಿ, ಅವಸರ ಕಳೆದು, ಎಲ್ಲರೊಡನೊಂದಾದೆ. ಮಂತ್ರಾಕ್ಷತೆ ಮುಗಿದು,

ನಾಲ್ಕು ಗಂಟೆಯ ಸುಮಾರಿಗೆ ನಮ್ಮ ಮರುಯಾನ ತೊಡಗಿತ್ತು.

ನಾವಿನ್ನೂ ಒಂದು ಕಿಮೀ ಕಳೆಯುವುದರೊಳಗೆ ನನಗೆ ಜ್ಯೋತಿ ಮನೆಯಿಂದಲೇ ಅಸ್ಪಷ್ಟ ಚರವಾಣಿ ಕರೆ ಬಂತು. ಟೋಲ್ ಗೇಟಿನಿಂದ ಘಟ್ಟದ ತಪ್ಪಲಿನವೆಗೂ (ಸಂಪಾಜೆ) ಚರವಾಣಿಗಳು ಸಾಮಾನ್ಯವಾಗಿ "ವ್ಯಾಪ್ತಿ ಪ್ರದೇಶದ ಹೊರಗೆ/ ಒಳಗೆ" ಆಡುತ್ತಿರುತ್ತದೆ. ಗೊಂದಲ ಪರಿಹರಿಸುವಂತೆ ಆಯಕಟ್ಟಿನ ಜಾಗದಲ್ಲೇ ಕಾರು ನಿಲ್ಲಿಸಿ, ಮರುಸಂಪರ್ಕಿಸಿದ ಮೇಲೆ ವಿಷಯ ಸ್ಪಷ್ಟವಾಯ್ತು. ಮನೆ ಬಿಡುವಾಗ ನಾನು ಮೂಲೆಯಲ್ಲಿ ಬಿಟ್ಟಿದ್ದ

ನನ್ನ ಚೀಲದ ಬದಲಿಗೆ ಪುರೋಹಿತರೋರ್ವರ ಚೀಲ ತಂದುಬಿಟ್ಟಿದ್ದೆ. ಆದರೆ ಅದೃಷ್ಟಕ್ಕೆ ಅವರು ಇನ್ನೊಂದೇ ಕಾರಿನಲ್ಲಿ ನಮ್ಮದೇ ದಾರಿಯಲ್ಲಿ ಬರುವವರಿದ್ದರು. ಹಾಗಾಗಿ ನಮ್ಮ ಪಯಣ ಹತ್ತು-ಹದಿನೈದು ಮಿನಿಟು ವಿಳಂಬಿಸಿದ್ದು ಮಾತ್ರ. ಪುರೋಹಿತರಿದ್ದ ಕಾರು ನನ್ನ ಚೀಲ ಹಿಡಿದೇ ಬಂತು, ನಗುತ್ತಲೇ ವಿನಿಮಯಿಸಿಕೊಂಡು, ಎಲ್ಲ ಅವರವರ ದಾರಿ ಹಿಡಿದೆವು.

ಚಿರಿಪಿರಿ ಮಳೆಯೊಡನೆ ನಾವು ಸುಳ್ಯಪೇಟೆ ಪ್ರವೇಶಿಸಿದಾಗ ಹರತಾಳದ ವಾತಾವರಣವೇನೋ ದಟ್ಟವಾಗಿಯೇ ಇತ್ತು.

ಆದರೆ ಅದೃಷ್ಟಕ್ಕೆ ಬಸ್ ನಿಲ್ದಾಣದಲ್ಲಿ ಅದೇ ತಾನೇ ಹೊರಡಲಿದ್ದ (ಮೈಸೂರು - ಮಂಗಳೂರು) ವಾಲ್ವೋ ಬಸ್ಸು ಸಿಕ್ಕಿತು. ಅನಾವಶ್ಯಕ ಬಳಸು ದಾರಿ (ಜಾಲ್ಸೂರು - ಕಾಸರಗೋಡು..) ತಪ್ಪಿತು. ರಾತ್ರಿ ಎಂಟೂವರೆಯ ಸುಮಾರಿಗೆ ಮನೆ ತಲಪಿದವನೇ ದೇವಕಿಗೆ ಕಲಾಪ ಕಥನ ಮಾಡಿದೆ. ಸಹಜವಾಗಿ ದೇವಕಿ "ಅಂತೂ ಭಾರೀ ನಡೆಯುವ ಸೋಗು ಹಾಕಿ, ನನಗೆ ಕನಿಷ್ಠ ಜಿಲೇಬಿ ತಿನ್ನುವ ಯೋಗವನ್ನೂ..." ಎನ್ನುವಾಗ ನೆನಪಾಯ್ತು. ತಡೆಯಾಜ್ಞೆ ಕೊಟ್ಟು, ಹಾರಿಬಿದ್ದು ಹೋಗಿ, ಖಾತ್ರಿ ನನ್ನದೇ ಚೀಲವನ್ನು ದೇವಕಿಯ ಎದುರು ಈಡಾಡಿದೆ. ಸ್ವೆಟ್ಟರ್, ಮಂಗನತೊಪ್ಪಿ, ಶೀತನಿರೋಧಕ ಅಂಗಿ, ಮಳೆಕೋಟು ಮಾತ್ರವಲ್ಲ, ಹೋಗುವಾಗಲೇ ಕೊಂಡು ಓದಿ, ಸುಡೊಕು, ಪದಬಂಧದ ಧ್ಯಾನಗಳ ಅವಧಿಯಲ್ಲಿ ಸುಕ್ಕು ಮುಕ್ಕು ಮಾಡಿದ ಪ್ರಜಾವಾಣಿಯೂ ಎದುರು ಬಿದ್ದಿತ್ತು. ಆದರೆ ನನ್ನ ನಿರೀಕ್ಷೆಯ ಜಿಲೇಬಿ, ಮುಳುಕಗಳ ಕಟ್ಟು ಇರಲೇ ಇಲ್ಲ. ನಿಧಾನಿಸಿ ಯೋಚಿಸುವಾಗ ಹೊಳೆಯಿತು...

ನಾರಾಯಣ ದೇವಕಿಯನ್ನು ನೆನಪಿಸಿಕೊಂಡೇ ಕಟ್ಟಿಕೊಟ್ಟ ಪೊಟ್ಟಣವನ್ನು ನಾನು ಚೀಲಕ್ಕೆ ತುಂಬುವಾಗಲೇ ಎಡವಟ್ಟು ಮಾಡಿ, ಪುರೋಹಿತರ ಚೀಲಕ್ಕೇ ತುಂಬಿಬಿಟ್ಟಿದ್ದೆ. ನಮ್ಮ ಕಾರು ಜ್ಯೋತಿ ಮನೆ ಬಿಡುವ ಸ್ವಲ್ಪ ಮೊದಲೇ ತೇಜಸ್ವಿ "ಯಾರದ್ದೋ ಚರವಾಣಿಯ ಕರೆ ಕೇಳುತ್ತಿದೆ" ಎಂದಾಗ ನಾನು ಧೈರ್ಯದಲ್ಲಿ "ನನ್ನದಲ್ಲ" ಅಂದಿದ್ದೆ. ಮುಂದೆ ಚೀಲ ವಿನಿಮಯವಾದದ್ದು ಖಾತ್ರಿಯಾಗಿ ಪುರೋಹಿತರನ್ನು ಕಾಯುತ್ತಿದ್ದಾಗ "ಹೋ ಆಗ ಚೀಲದೊಳಗಿನ ಪುರೋಹಿತರ ಫೋನೇ ರಿಂಗಿದ್ದಿರಬೇಕು. ಪಾಪ ಅದರೊಳಗೆ ಅವರಿಟ್ಟಿದ್ದಿರಬಹುದಾದ ಕ್ರಿಯಾದಕ್ಷಿಣೆಯೂ ಹೋಯ್ತೂಂತ ಯೋಚಿಸಿದರೋ ಏನೋ..." ಎಂದೆಲ್ಲ ಹೇಳಿ ನಗಾಡಿದ್ದೆವು. ಆದರೆ ಕೊನೆಯಲ್ಲಿ "ಪುರೋಹಿತರಿಗೆ ಕ್ರಿಯಾ ದಕ್ಷಿಣೆಯ ಮೇಲೆ ಸಿಹಿ ತಿಂಡಿಗಳ ಪೊಟ್ಟಣವನ್ನೂ ಇಟ್ಟು, ನೀವು ಅರ್ಘ್ಯ ಬಿಟ್ಟಹಾಗಾಯ್ತು" ಎಂದೇ ದೇವಕಿ ನುಡಿದ ‘ಮಂತ್ರವಾಕ್ಕು’ಗಳಿಗೆ ನಾನು (ಮಂತ್ರಾಕ್ಷತೆಗೆ ತಲೆ ಬಾಗದವನು) ತಲೆ ಬಾಗಲೇ ಬೇಕಾಯ್ತು!


೭. ಕಾಂಕ್ ವುಡ್ ಉದ್ಯಾನವನ


ಅಕ್ಷರ ಮತ್ತು ವಿನಯರ ಮದುವೆ ೨೯-೮-೨೨ರಂದು ಮತ್ತದೇ (ಮೇಲೆ ‘೩. ಗಾರೆ ತೋಟದ ಆಂಜನೇಯ’ ನೋಡಿ) ಕಲ್ಯಾಣ ಮಂಟಪದಲ್ಲಿ ನೆರವೇರಿತು. ನಾವಿಬ್ಬರು ಅದಕ್ಕೆ ದಿನದ ಮೊದಲ ಬಸ್ಸೇರಿ ಹೋಗಿ ಭಾಗಿಗಳಾಗಿದ್ದೆವು. ಗ್ರಹ, ನಕ್ಷತ್ರಾದಿಗಳು ಎಷ್ಟು ಕರಾರುವಾಕ್ಕಾಗಿ ನಡೆದರೂ ಅವನ್ನು ಮನುಷ್ಯರಿಗೆ ಹೊಂದಿಸುವ ಜೋಯಿಸ ಮತ್ತು ನಡೆಸುವ ಪುರೋಹಿತರ ನಡೆಗಳಿಗೆ ಸರಿಯಾಗಿ ನನಗೆ ಸಾಕಷ್ಟು ಬಿಡುವು

ಸಿಕ್ಕಿತು. ನಾನು ಬಾದರಾಯಣ ಸಂಬಂಧಗಳ ದುರ್ಬಲ ಎಳೆಗಳನ್ನು ಮಾತಿನಲ್ಲಿ ಹೊಸೆಯುವ ಬದಲು ಸಣ್ಣ ಹೊರ ಸಂಚಾರ ನಡೆಸಿದೆ. ಹಾಗೆ ಸಿಕ್ಕ ಮತ್ತಷ್ಟು ಮಡಿಕೇರಿ ಚಿತ್ರಗಳು...

ಕಲ್ಯಾಣ ಮಂಟಪದ ದಾರಿಯಲ್ಲೇ ರಾಜಾಸೀಟಿನತ್ತ ನಡೆದಿದ್ದೆ. ದಾರಿ ಬದಿಯಲ್ಲಿ ಅಂದರೆ, ಹಿಂದೆ ನನ್ನ ಚಿಕ್ಕಜ್ಜನ ಚಿಕಿತ್ಸಾಲಯ ಇದ್ದ ಕಟ್ಟಡದ ಎದುರಿಗೆ ಬಂದಿದ್ದ ಹೊಸದೇ ಹೋಟೆಲ್ ಒಂದಕ್ಕೆ ಭಾರೀ ಗಾತ್ರದ ಮರದ ಬೊಡ್ಡೆಯನ್ನೇ ಅಡ್ಡ ಹಾಕಿ ಪಾಗಾರ

ಮಾಡಿದ್ದರು. ವಾಸ್ತವದಲ್ಲಿ ಅದು ಮರವಲ್ಲ, ಅದರಂತೆ ತೋರುವ ಕಾಂಕ್ರೀಟ್ ರಚನೆ - ಕಾಂಕ್ವುಡ್ ಎಂದು ತಿಳಿದಾಗ (ವಿಸ್ಮಿತನಾಗಲಿಲ್ಲ) ಬೆಪ್ಪಾದೆ! ಆ ದಾರಿಯ ಕೊನೆಯ ರಾಜಾಸೀಟಿನ ಉದ್ಯಾನದಲ್ಲಂತೂ ‘ಪ್ರದರ್ಶನಕ್ಕಿಟ್ಟ ಜೀವವೈವಿಧ್ಯ’ವೆಲ್ಲ (ಮರ, ಹೆಬ್ಬಾವು, ಡೈನೋಸಾರಸ್, ಜಿಂಕೆ, ಹುಲಿ, ಆನೆ...), ತುಸು ಮಾಸಿದರೂ ಬ್ಯೂಟೀ ಪಾರ್ಲರಿನಿಂದಲೇ ಎದ್ದು ಬಂದಂತೆ ರಂಗುರಂಗಾದ ಕಾಂಕ್ವುಡ್ ರಚನೆಗಳೇ. ಅವುಗಳನ್ನು ಸೇರಿಸಿದ ತೋಟಗಾರಿಕಾ ಇಲಾಖೆ ಮಾತ್ರ ತನ್ನ ಹಾಳುಬಿದ್ದ ಶೆಡ್ಡನ್ನೂ ಸೇರಿಸಿಕೊಂಡು, "ವನದೇವಿ

ವಿಜೃಂಭಿಸಿದ ಸೊಬಗು ಕೈ ಬೀಸಿ ಕರೆಯುತಿದೆ" ಎಂದೇ ಬೋರ್ಡು ಹಾಕಿಕೊಂಡಿದ್ದಾರೆ! ಆ ಬೋರ್ಡಿನ ಎದುರು ಕಡಿದಿಕ್ಕಿದ ಹಸಿರು, ಸ್ವಲ್ಪ ಮುಂದೆ ಗಾಳಿಗೆ ಅಡ್ಡಬಿದ್ದ ನಿಜದ ಮರಗಳೆಲ್ಲ ಇನ್ನಷ್ಟು ಕಾಂಕ್ವುಡ್.ಬರುವುದನ್ನು ಹಾರೈಸುವಂತೇ ಕಾಣಿಸಿತು..

೮. ಚರ್ಚಿಸ್ಕೂಲ್ ಮತ್ತು ಜಿಲ್ಲಾಧಿಕಾರಿ ಕಚೇರಿ


ಹಿಂದೆಲ್ಲ ಮಡಿಕೇರಿ ನಗರದ ಮೊದಲ ಬಸ್ ನಿಲುಗಡೆ ತಾಣ

ಟೋಲ್ಗೇಟ್ ಯಾನೆ ಸುಂಕದ ಕಟ್ಟೆಯಾಗಿತ್ತು. ಬದಲಿದ ದಿನಗಳಲ್ಲಿ ಸುಂಕದ ಕಟ್ಟೆ ಅಳಿದರೂ ಸುಮಾರಿಗೆ ಅಷ್ಟೇ ಹಳೆಯ ಸಂತ ಮೈಖೇಲರ ಇಗರ್ಜಿಯ ಗೋಪುರ (ನಿಯತ ಕಾಲಗಳಲ್ಲಿ ಮಧುರ ಗಂಟಾನಾದ ಸಹಿತ) ಮತ್ತು ಅದರದೇ ಅಂಗವಾದ ಶಾಲಾ (ಚರ್ಚಿಸ್ಕೂಲ್) ಗೇಟ್ ಮಡಿಕೇರಿಗೊಂದು ಆಪ್ತ ಸ್ವಾಗತ ಚಹರೆಯೇ ಆಗಿತ್ತು. ಮಂಗಳೂರಿನಲ್ಲಿ ಮೂಲ ಹಂಪನ ಕಟ್ಟೆ, ಜ್ಯೋತಿ, ನವಭಾರತೇತ್ಯಾದಿಗಳು ಮಾಯವಾದರೂ ಸ್ಥಳನಾಮದಲ್ಲಿ ಉಳಿದೇ ಇರುವಂತೆ ಟೋಲ್ಗೇಟ್ ಕೂಡಾ ಉಳಿದೇ ಇದೆ. ಆದರೆ....



ಈಚಿನ ಅಭಿವೃದ್ಧಿ ಎಂಬ ಮಹಾಮಾರಿ ಜಿಲ್ಲಾಡಳಿತದ ತಲೆಗೇರಿ, ಶಾಲೆಯ ಹಿಂದಿನ ದಾರಿಯಲ್ಲಿ ನುಸಿದು, ಕಟ್ಟಡಗಳ ನಡುವೆ ದಾರಿ ಕಸಿದು, ಮಕ್ಕಳಿಗೆ ಎರಡು ವಠಾರಗಳಿಗೆ ಓಡಾಡಲು ಸೇತುವೆ ಬಲಿದು ಪ್ರಪಾತದಂಚಿನ ನೆಲದ ಮೇಲೆ ತ್ರಿವಿಕ್ರಮ ಪಾದ ಊರಿದೆ. ಬರುವವರಿಗೆ ಕುಂಡೆ (ಹಿತ್ತಿಲು) ತೋರುತ್ತ ನಿಂತ ಮಹಾಕಟ್ಟೋಣ, ಸುತ್ತಿ ಎದುರಿಗೆ ಬಂದರೂ ಸರಿಯಾಗಿ ಮುಖ ತೋರದಂತೆ ಸೆಟೆದು ನಿಂತಿದೆ, ಅಪ್ಪಟ ಸಾರ್ವಜನಿಕ ಅಗತ್ಯದ ಈ ಕಚೇರಿಯಲ್ಲಿ ಸಾರ್ವಜನಿಕ ಬಿಡಿ, ಸಿಬ್ಬಂದಿ ವಾಹನಗಳಿಗೂ ಸುಲಭ ತಂಗುದಾಣವಿಲ್ಲದಂತೆ

ಮಲೆತು ನಿಂತಿದೆ. ಈ ತ್ರಿವಿಕ್ರಮನೆದುರು ತಲೆ ಒಡ್ಡಿದ ಬಲೀಂದ್ರನಂತೆ ಬೆಟ್ಟ ಪಾತಾಳಕ್ಕೆ ಜಾರತೊಡಗಿದೆ. ಬೆಟ್ಟದ ಅಸಾಮರ್ಥ್ಯದ ಮೊದಲ ಹಂತದಲ್ಲಿ ತಂತ್ರಜ್ಞಾನದ ಮದವೇರಿದವರು ಏನೇನೋ ಚಿಕಿತ್ಸೆ ಮಾಡಿರಬೇಕು. (ಬುಡದಲ್ಲಿ ಸರಳ ಹಂದರ ಸಹಿತ ಕಾಂಕ್ರೀಟ್ ಗೋಡೆ, ದರೆಯಲ್ಲೇ ಎರಡು ಹಂತ, ಬೆಟ್ಟದ ಹೊಟ್ಟೆಗೆ ತೂತು ಹೊಡೆದು, ಕಾಂಕ್ರೀಟ್ ‘ಸರಳು’ಗಳ ಹೊಲಿಗೆ ಇತ್ಯಾದಿ) ಎಲ್ಲ ಮುಚ್ಚಿ ಚಂದ ಕಾಣುವಂತೆ ಭಾರೀ ಕಾಂಕ್ರೀಟ್ ಹಲಗೆಗಳನ್ನೂ ಪೇರಿಸಿದರು. "ಭಯಾನಕ ಕಾಂಕ್ರೀಟ್ ಗೋಡೆಯೇ ‘ಕರ್ನಾಟಕದ ಸ್ವಿಝರ್

ಲ್ಯಾಂಡಿ’ಗೆ ಸ್ವಾಗತ ಕೋರುತ್ತವೆ" ಎಂಬ ಅಣಕವಾಡುಗಳು ಹೊರಡುತ್ತಿದ್ದಂತೇ...

ಈಚಿನ ಮಹಾ-ಮಳೆಗಾಲದಲ್ಲಿ ಬೆಟ್ಟ ಕಾಂಕ್ರೀಟ್ ಹಲಗೆಗಳನ್ನೂ ಹೊರನೂಕತೊಡಗಿದೆ. ಭಾರೀ ಅಣೆಕಟ್ಟಿನ ಸೋರು ತೂತಕ್ಕೆ ಯಾರೋ ಬೆರಳೋ ಕೈಯೋ ಬೂಚಾಗಿಸಲು ಹೊರಟು ಅಣೆಕಟ್ಟೆಯಿರಲಿ, ಸ್ವಂತ ಜೀವವನ್ನೇ ಕಳೆದುಕೊಂಡ ಕತೆ ಕೇಳಿದ್ದೇವೆ. ಹಾಗೇ ಇಲ್ಲಿ ಬೆಟ್ಟ ನೂಕಿದ ಬುಡದ ಕಾಂಕ್ರೀಟ್ ಹಲಿಗೆಗೆ ‘ಬುದ್ಧಿವಂತ’ ಯಾರೋ ಮೂರು
ಇಂಚು ವ್ಯಾಸದ ಮರದ ಕಂಬದ ಊತ ಕೊಟ್ಟದ್ದಂತೂ ವಿಶ್ವವ್ಯಾಪೀ ನಗೆಪಾಟಲಿಗೀಡಾಯ್ತು. ಜಿಲ್ಲಾಧಿಕಾರಿ ದಿಕ್ಕೆಟ್ಟು (ಕಿಂಕರ್ತವ್ಯಮೂಢವಾಗಿ) ಮಂಗಳೂರು ದಾರಿಯನ್ನೇ ಬಂದ್ ಎಂದು ಘೋಷಿಸಿದರು. (ಪರ್ಯಾಯ ದಾರಿಗಳೋ ಒಂದಕ್ಕಿಂತ ಒಂದು ನರಕ. ಅಪ್ಪಂಗಳದ ಬಳಿ ಐರಾವತ ಬಸ್ ನಾಲ್ಕೈದು ಗಂಟೆ ರೋಡ್ ರೋಕೋ ನಡೆಸುವಂತಾಯ್ತು. ಮೇಕೇರಿ ಸಪುರ ದಾರಿಗೆ ನುಗ್ಗಿದ ಮಹಾವಾಹನಗಳು ಮೊದಲೇ ಕಿಷ್ಕಿಂದೆಯಾದ ಮೂರ್ನಾಡು ದಾರಿಯಲ್ಲಿ ಅದರದೇ ಅಸಾಧ್ಯ ವಾಹನ ಸಂಚಾರದೊಡನೆ ಏಗಬೇಕಾಗಿದೆ) ಇಂದು ಜಾರುತ್ತಿರುವ

ಹಲಿಗೆಗಳ ಎದುರು ಮರಳಚೀಲಗಳ ಗುಡ್ಡೆ ಕಟ್ಟಿದ್ದಾರೆ. ಮೇಲಿನ ಎರಡು ಹಂತಗಳಲ್ಲಿ ಬೆಟ್ಟ ನೀರು ಕುಡಿದು, ಹೆಚ್ಚಿನ ಒತ್ತಡ ಉಂಟು ಮಾಡದಂತೆ ಯಥೇಚ್ಛ ಸಿಲ್ಪಾಲಿನ್ ಹೊದಿಸಿ ಕೂತಿದ್ದಾರೆ. (ಪೋಲಿ ನಾಯಿಗಳು ಪರಿಸ್ಥಿತಿಯ ಕುರಿತು ತೀವ್ರ ನಿಗಾ ಇಟ್ಟಿರುವುದನ್ನು ಚಿತ್ರಗಳಲ್ಲಿ ಕಾಣಬಹುದು!)

"ಲಂಡನ್ ಬ್ರಿಜ್ ಈಸ್ ಫಾಲಿಂಗ್ ಡೌನ್ ಫಾಲಿಂಗ್ ಡೌನ್..." ಮಕ್ಕಳ

ಹಾಡಾದರೆ, "ಡೀಸೀ ಕಚೇರಿ ಬೀಳುತ್ತಿದೇ ಬೀಳುತ್ತಿದೇ..." ಪ್ರೌಢರೆಂಬವರ ದುರಂತ ಗೀತೆಯಾಗಿ, ಪರಿಸರದ್ರೋಹಕ್ಕೆ ತಕ್ಕ ಪಾಠವಾಗಿ ವಿಶ್ವಖ್ಯಾತಿ ಗಳಿಸುವ ದಿನಗಳು ದೂರವಿಲ್ಲ.

೯. ಗಾಂಧೀ ಮಂಟಪ, ಮೈದಾನ?


ಜಿಟಿ ನಾರಾಯಣ ರಾವ್ (ನನ್ನಪ್ಪ) ಆತ್ಮಕಥೆ - ಮುಗಿಯದ ಪಯಣದಲ್ಲಿ, ತನ್ನ ಮಾಧ್ಯಮಿಕ ಶಾಲಾ ದಿನಗಳನ್ನು ನೆನೆಯುತ್ತ ಬರೆಯುತ್ತಾರೆ "೧೯೪೦ಕ್ಕಿಂತ ಹಿಂದೆ.... ಮಹಾವ್ಯಕ್ತಿಯೊಬ್ಬ,

ಶ್ರೀಕೃಷ್ಣನಂಥ ಅವತಾರಪುರುಷನೊಬ್ಬ ಮೂರ್ತರೂಪದಲ್ಲಿ (ಮಡಿಕೇರಿಗೆ) ಬರಲಿದ್ದಾನೆಂಬ ಸಂಗತಿ ಆಬಾಲವೃದ್ಧರೆಲ್ಲರಲ್ಲಿಯೂ ಉತ್ಸಾಹದ ಹೊನಲನ್ನು ಹರಿಸಿತ್ತು..... ಆ ಮುಂಜಾನೆ ರಾಜಾಸೀಟಿನ ಮೈದಾನದಲ್ಲಿ.... ನಿರೀಕ್ಷೆ, ಉಲ್ಲಾಸ, ಉತ್ಸಾಹ, ಆನಂದ ಎಲ್ಲವೂ ದಂಡೆಮೀರಿ ಹರಿಯುತ್ತಿದ್ದಂತೆ ಘೋಷಣೆಗಳು ದಿಗ್ದಿಗಂತಗಳಲ್ಲಿ ಅನುರಣಿಸುತ್ತಿದ್ದಂತೆ..... ಕಾರು ಬಂತು. ಗುಂಡುಕುಟ್ಟಿ ಮಂಜುನಾಥಯ್ಯನವರು ಅದರ ಚಾಲಕ! ಅದರೊಳಗಿಂದ ಇಳಿದವರು ಗಾಂಧೀಜಿ!..." (ಪೂರ್ಣ ಕಥನಕ್ಕೆ: ಗಾಂಧೀ

ದರ್ಶನ)

ಐದನೇ ತರಗತಿಯವರೆಗೆ ಮಾತ್ರ ನಾನು ಮಡಿಕೇರಿಯಲ್ಲಿದ್ದೆ. ಆ ದಿನಗಳಲ್ಲಿ ಊರಿನೆಲ್ಲಾ ಮಕ್ಕಳನ್ನು ಸ್ವಾತಂತ್ರ್ಯೋತ್ಸವಕ್ಕೆ (ಗಣರಾಜ್ಯೋತ್ಸವಕ್ಕೂ?) ಸೇರಿಸುತ್ತಿದ್ದ ಸ್ಥಳವೂ ಅದೇ ಗಾಂಧಿ ಮೆಟ್ಟಿದ ನೆಲ - ರಾಜಾಸೀಟಿನ ಮೈದಾನ. ನನ್ನ ಕಾಲಕ್ಕೆ ಮೂಡಿದ ಸಣ್ಣ ವ್ಯತ್ಯಾಸ - ಮೈದಾನದ ಒಂದು ಅಂಚಿನಲ್ಲಿ ಮೂಡಿದ್ದ ಸರಳ ಸುಂದರ ರಚನೆ - ಗಾಂಧೀಮಂಟಪ. ಉಳಿದಂತೆ (ಗಾಂಧೀ-) ಮೈದಾನದ ದೀರ್ಘ ದಕ್ಷಿಣ-ಪಶ್ಚಿಮ

ಕೊನೆಯವರೆಗೂ ಅಂದರೆ ಐತಿಹಾಸಿಕ ಸರಳ ಮಂಟಪ - ರಾಜಾಸೀಟ್ ತನಕವೂ ವಿರಳ ಮರಗಳು ಮತ್ತು ಚೊಕ್ಕ ಹುಲ್ಲ ಹಾಸು ಮಾತ್ರ. ಹುಲ್ಲ ಹಾಸಿನ ಮೇಲೇ ನಮ್ಮೆಲ್ಲ ಉತ್ಸವದ ಚಟುವಟಿಕೆಗಳು - ದ್ವಜವಂದನೆ, ಕವಾಯತು, ಪ್ರತಿಭಾ ಪ್ರದರ್ಶನ ಇತ್ಯಾದಿ ನಡೆಯುತ್ತಿದ್ದವು.

ಇಂದು ಮಂಟಪದ ಅಗಲದಷ್ಟೇ ಮೈದಾನಕ್ಕೆ ಹರಕು ಬೇಲಿ, ಮುರುಕು ತಡಮೆ ರಚಿಸಿದ್ದಾರೆ. ಅದರ ಅಂಗಳ ಅವ್ಯವಸ್ಥಿತ ವಾಹನಗಳ ಓಡಾಟ/ ತಂಗುವಿಕೆಯಿಂದ ಕೊಚ್ಚೆ ಗುಂಡಿಯೇ

ಆಗಿದೆ. ಮಂಟಪದ ಹಿನ್ನೆಲೆಯಲ್ಲಿ ಶಾಲೆಯ ಅಸಂಗತ ಕಟ್ಟಡ ತಲೆ ಎತ್ತಿ, ನಮ್ಮ ಮಂಗಳೂರಿನ ಅನಾಚಾರವನ್ನೇ ನೆನಪಿಸಿತು. (ಮಂಗಳೂರಲ್ಲಿ ಭೀಕರ ಬಹುಮಹಡಿ ಕಟ್ಟಡಗಳ ನಡುವೆ ಊರಿನ ರಾಜಚಿಹ್ನೆಯಂತಿದ್ದ, ಟಾಗೂರ್ ಉದ್ಯಾನ ಮತ್ತು ದೀಪಸ್ತಂಭ ಬಹುತೇಕ ಕಸದ ತೊಟ್ಟಿಯೇ ಆಗಿದೆ). ಒಟ್ಟಾರೆ ಗಾಂಧೀಮಂಟಪವೇ ಅನಗತ್ಯ, ಅಸಂಗತ ಎನ್ನಿಸಿಕೊಳ್ಳುವ ದಿನಗಳು ದೂರವಿಲ್ಲ. ಅದರಿಂದ....

ದಕ್ಷಿಣ-ಪಶ್ಚಿಮಕ್ಕೆ ಸರಿದರೆ, ಭಾರೀ ರಂಗ ಭವನ ಸಹಿತ

ಬಯಲು ರಂಗಮಂದಿರ ಮಾಡಿದ್ದಾರೆ, ಹಾಳು ಸುರಿಯುತ್ತಿದೆ. ತೋಟಗಾರಿಕಾ ಇಲಾಖೆಯ ಗುಜರಿ ಇಲ್ಲಿ ಪ್ರದರ್ಶನಕ್ಕಿದೆ. ರಾಜಾಸೀಟ್ ಎಂಬ ಸರಳ ಮಂಟಪವಂತೂ ಅಭಿವೃದ್ಧಿ ಗಿಡುಗಗಳ ನಡುವೆ ಬಿದ್ದ ಗುಬ್ಬಿಯಂತೇ ಕರುಣಾಜನಕವಾಗಿದೆ. ಈಚಿನ ದಿನಗಳ ಸಾಮಾನ್ಯ ನಿಯಮ - ನಿರ್ಮಾಣದಲ್ಲಿರುವ ಆಸಕ್ತಿ ನಿರ್ವಹಣೆಯಲ್ಲಿಲ್ಲ, ಎದ್ದು ಕಾಣುತ್ತದೆ. ಆ ಕೊನೆಯಲ್ಲಿ ಮಕ್ಕಳ ರೈಲನ್ನು ಹೂತು ಹಾಕಿ, ಪ್ರಪಾತದ ಅಂಚಿನೊಂದಿಷ್ಟು ನೆಲಕ್ಕೆ ಪ್ರತ್ಯೇಕ ಬೇಲಿ, ದ್ವಾರ, ಟಿಕೆಟ್ ಅಡ್ಡೆ,

ಚೌಕೀದಾರನನ್ನಿಟ್ಟು ಪ್ರಕೃತಿಯನ್ನು ಇನ್ನಷ್ಟು ಹಾಳುಗೆಡಹಲು ಹಫ್ತಾ (ರೂ ಹತ್ತರ ಪ್ರವೇಶಧನ) ವಸೂಲೂ ಆಗುತ್ತಿದೆ.

೧೦ ಪ್ರಾಕೃತಿಕ ರಮ್ಯ ತಾಣ - ರಾಜಾ ಸೀಟ್


"ಕೊಡಗಿನ ರಾಜರುಗಳಲ್ಲಿ ಲಿಂಗರಾಜ ಓರ್ವ ವೈಭವಶಾಲಿಯಾದ ಅರಸ. (ಆಳ್ವಿಕೆಯ ಕಾಲ ೧೭೭೪-೮೦) ಆತ ಮಡಿಕೇರಿಯಲ್ಲಿದ್ದಾಗ ಪ್ರತಿ ಸಾಯಂಕಾಲವೂ ರಾಜಠೀವಿಗೊಪ್ಪುವ ಉನ್ನತ ಅಶ್ವವನ್ನೇರಿ ವಾಯುವಿಹಾರಾರ್ಥ

ಪಟ್ಟಣದ ದಕ್ಷಿಣ ಪ್ರಪಾತದಂಚಿಗೆ ಬಂದು ಪಶ್ಚಿಮಮುಖಿಯಾಗಿ ಕುಳಿತು, ದಿವ್ಯ ಸ್ವರ್ಗೀಯ ದೃಶ್ಯಾವಲೋಕನ ಮಾಡುತ್ತಿದ್ದನು. ಬೆಟ್ಟಗಳ ಸಾಲಿನ ಮೇಲೆ ಸಂಜೆ ಸೂರ್ಯನ ಸವಾರಿ ಚೆಂಬೆಳಕಿನ ರಸವನ್ನೇ ಸುರಿಸುತ್ತಿತ್ತು. ಮೋಡಗಳ ಒಟ್ಟಣೆಯಲ್ಲಿ ಸೂರ್ಯ ಹುಗ್ಗಾಟವಾಡುತ್ತ ಜಾರುತ್ತಿದ್ದಂತೆ ಕಂಡಿ ಸಿಕ್ಕಲ್ಲೆಲ್ಲ ಕಿರಣಕುಂಚಗಳನ್ನು ತೂರಿ ಮೇಘಬಿತ್ತಿಗಳ ಮೇಲೆ ಪರಿಪರಿಯ ವರ್ಣಗಳನ್ನೂ ಸ್ವರೂಪಗಳನ್ನೂ ರಚಿಸುತ್ತಲೂ ಅಳಿಸುತ್ತಲೂ ಇದ್ದ. ವನರಾಶಿ ಜ್ಯೋತಿಸಮುದ್ರದಲ್ಲಿ ಮುಳುಗಿ

ಮೂಕಾನಂದವನ್ನು ಅನುಭವಿಸುತ್ತಿತ್ತು....." ಹೀಗೆ ಸಾಗುತ್ತದೆ ಜಿಟಿನಾ ಅವರ ಕಥಾಸಂಕಲನ - ಕೊಡಗಿನ ಸುಮಗಳಲ್ಲಿನ ಒಂದು ಕತೆ. ಆ ರಾಜ ಪರಂಪರೆಯಲ್ಲಿ ಯಾರೋ ಸ್ಥಳದ ಆಕರ್ಷಣೆಗೆ ಸಾಂಕೇತಿಕವಾಗಿ ಕಟ್ಟಿಸಿದ ಪುಟ್ಟ ಚಚ್ಚೌಕ ಬೋಳು ಮಂಟಪವೇ - ರಾಜಾಸೀಟ್. ಇದನ್ನು (ಅಂತೆಯೇ ಗದ್ದುಗೆ, ಓಂಕಾರೇಶ್ವರ ದೇವಾಲಯಗಳನ್ನೂ) ಜನ ಎಂದೋ ಮಡಿಕೇರಿಯ ರಾಜಚಹರೆ ಎಂದೇ ಒಪ್ಪಿಯಾಗಿದೆ.



ನಿಜದಲ್ಲಿ ಪ್ರಾಕೃತಿಕ ಉನ್ನತ ನೆಲೆಗಳಿಂದ (ಆಗುಂಬೆ, ಬಿಸಿಲೆ, ಚಾರ್ಮಾಡಿ....) ಕೆಳಲೋಕವನ್ನು ನೋಡುವುದೆಂದರೆ, ವಿಸ್ತಾರಕ್ಕೆ ಬೆರಗು ಮತ್ತು ಹೋಲಿಕೆಯಲ್ಲಿ ನಮ್ಮ ಸ್ಥಾನಕ್ಕೆ ವಿನಯ ತಂದುಕೊಳ್ಳುವ ಕ್ಷಣಗಳು. ವ್ಯತಿರಿಕ್ತವಾಗಿ ಇಂದು ರಾಜಾಸೀಟ್ ಆವರಣ, ಪ್ರವಾಸೋದ್ದಿಮೆಯ ಹುಚ್ಚುಹೊಳೆಯಲ್ಲಿ ಮನುಷ್ಯ ಗರ್ವದ ಪ್ರದರ್ಶನವಾಗುತ್ತಿದೆ. ಪುಡಾರಿ ಮತ್ತು ಅಧಿಕಾರಶಾಹಿಗಳ ದುರಹಂಕಾರದಲ್ಲಿ ಯಂತ್ರ ಸಾಮರ್ಥ್ಯವೇ ಪರಮಶಕ್ತಿ ಎಂಬ ಭ್ರಮೆ ಇಲ್ಲೂ ಮೆರೆಯುತ್ತಿದೆ. ರಾಜಾಸೀಟ್

ಒಂದು ಬಿಡುಗಡೆಯ ಅವಕಾಶ ಎನ್ನುವುದನ್ನೇ ಮರೆತು, ಸಮೀಪದ ದಿಬ್ಬದಿಂದ ದಿಬ್ಬಕ್ಕೆ ಅಂತರ್ಲಾಕು, ಕಾಂಕ್ರೀಟುಗಳ ಪುಟ್ಟಪಥ, ಮೆಟ್ಟಿಲ ಸಾಲು, ದೀಪ, ಮಂಟಪ, ಅಲಂಕಾರಿಕ ಉದ್ಯಾನ, ನೃತ್ಯ ಕಾರಂಜಿ, ಮಕ್ಕಳ ರೈಲು ಎಂದೇನೇನೋ ವಿಹಾರ ಸೌಕರ್ಯಗಳ ಭಾರ ಹೇರಿದ್ದಾರೆ, ಹೇರುತ್ತಲೂ ಇದ್ದಾರೆ. ಈಗಾಗಲೇ ತಪ್ಪಲಿನಲ್ಲಿ ಹರಿಯುವ ಮಡಿಕೇರಿ - ಮಂಗಳೂರು ಹೆದ್ದಾರಿಗೆ ದರೆ ಕುಸಿದು, ಬೆಟ್ಟದ ಅಂತರಂಗವನ್ನು ಹೆಚ್ಚೆಚ್ಚು ತೆರೆದಿಡುತ್ತಲೇ ಇದೆ. ಇನ್ನು ರಾಜಾಸೀಟ್ ಸುಂದರೀಕರಣದಲ್ಲಿ ಶಿರೋಭಾರ ಹೆಚ್ಚಿಸಿ, ಸಹಜ

ನೀರ ಹರಿವನ್ನು ದಿಕ್ಕು ತಪ್ಪಿಸಿ.ಎಲ್ಲವೂ ಕೆಸರ ಕಲಸಿದಂತಾಗುವ ದಿನಗಳು ದೂರವಿಲ್ಲ.

ಮೊದಲು ಹೇಳಿದ ಕತೆಯನ್ನೀಗ ನನ್ನ ಮಾತುಗಳಲ್ಲಿ ತುಸು ಮುಂದುವರಿಸುತ್ತೇನೆ: ಲಿಂಗರಾಜನ ವಿಹಾರದ ಒಂದು ಸಂಜೆ, ಅಲ್ಲಿಗೊಬ್ಬ ಸುಂದರ ತರುಣಿ ಧಾವಿಸಿ ಬಂದು, ರಾಜಕಾರಣವಲ್ಲದ ಸಾಮಾಜಿಕ ಫಿರ್ಯಾದು ಒಂದನ್ನು ಮಂಡಿಸುತ್ತಾಳೆ. ರಾಜ ನ್ಯಾಯಪರಿಪಾಲನೆಯನ್ನು ಸಮರ್ಥವಾಗಿ ಮಾಡುತ್ತಾನೆ. (ಪೂರ್ಣ ಕತೆಗೆ

ನ್ಯಾಯಪರಿಪಾಲನೆ). ಆದರೆ ಇಂದು ರಾಜಾಸೀಟ್ ಸೇರಿದಂತೆ ಕೊಡಗಿನ ಘಟ್ಟದ ವಲಯದಲ್ಲಾಗುತ್ತಿರುವ ಅಭಿವೃದ್ಧಿಯ ಮೂರ್ಖತನಕ್ಕೆ, ತೆರೆದುಕೊಳ್ಳಲಿರುವ ಭೀಕರ ಪಾರಿಸರಿಕ ದುರಂತಕ್ಕೆ ಸ್ವತಃ (ರಾಜನ ಸ್ಥಾನದಲ್ಲಿರುವ) ಸರಕಾರವೇ ಕಾರಣವಾಗಿರುವಾಗ ನ್ಯಾಯ ಕೇಳುವುದಾದರೂ ಎಲ್ಲಿ?

೧೧ ಚಿಕ್ಕ ಚಿಕ್ಕಪ್ಪನ ವರ್ಷಾಂತಿಕ



ಜೀಯಾರ್ ಸದಾಶಿವ ರಾವ್ (ನನ್ನ ಅಪ್ಪನ ಚಿಕ್ಕಪ್ಪರಾದ) ಚಿಕ್ಕಜ್ಜನ (ನಾಲ್ವರಲ್ಲಿ) ಕೊನೇ ಮಗ. ಪ್ರಾಯದಲ್ಲಿ ನನಗಿಂತ ಸುಮಾರು ಆರು ತಿಂಗಳಿಗೆ ಕಿರಿಯವನಾದರೂ ಸಂಬಂಧ ಕೊಡುವ ಸ್ಥಾನದಲ್ಲಿ ಹಿರಿಯವನಾದ್ಧಕ್ಕೆ, ಕೇವಲ ತಮಾಷೆಯ ಸಂಬೋಧನೆ - ಚಿಕ್ಕ ಚಿಕ್ಕಪ್ಪ; ವಾಸ್ತವದಲ್ಲಿ ನಾವು ಒಳ್ಳೆಯ ಗೆಳೆಯರು. (ಪೂರ್ಣ ಓದಿಗೆ ನೋಡಿ - ಆರನೇ ಟಿಪ್ಪಣಿ,  ಕಾವೇರಮ್ಮನ ಪಾದಕ್ಕೆ...) ಆತ ಕಳೆದ ವರ್ಷ

ತೀರಿಕೊಂಡ. ಹೆಂಡತಿ - ಶಾಂತಾ, ಮಕ್ಕಳಾದ ರಘುನಂದನ (ಪತ್ನಿ ಶ್ರೇಯ ಮತ್ತು ಪುತ್ರ ಅಚಿಂತ್ಯ ಸಹಿತ) ಮತ್ತು ಚಿತ್ತರಂಜನ (೧೦-೯-೨೨) ವರ್ಷಾಂತಿಕ ಕಲಾಪಗಳನ್ನು ವ್ಯವಸ್ಥೆ ಮಾಡಿ, ಆಪ್ತರ ಕೂಟಕ್ಕೆ ನಮ್ಮನ್ನೂ ಮಡಿಕೇರಿ ಸಮೀಪದ ಬಲಮುರಿಗೆ ಆಹ್ವಾನಿಸಿದ್ದರು. ನಾವು ಇಂಥವನ್ನು ಗತಿಸಿದವರ ಸ್ಮರಣೆಗಿಂತಲೂ ಹಿಂದೆ ಬದುಕುಳಿದವರ ಸಮ್ಮಾನ ಎಂದೇ ಭಾವಿಸಿ ಹೊರಟೆವು.

ತಿಂಗಳ ಹಿಂದೆ ರಾಮೂ ವರ್ಷಾಂತಿಕದ ನೆಪದಲ್ಲಿ

ಅನುಭವಿಸಲಾಗದ ‘ಮಾರ್ಗಕ್ರಮಣ ಸುಖ’ವನ್ನು ಈ ಬಾರಿ ಮೋಟಾರ್ ಸೈಕಲ್ಲಿನಲ್ಲಿ ಪೂರೈಸಿಕೊಳ್ಳಬೇಕೆಂದೇ ಯೋಜಿಸಿದ್ದೆ. ಆದರೆ ಮಳೆ ಹಿಂದಿನ ರಾತ್ರಿಯಿಡೀ ಪಿರಿಗುಟ್ಟಿದ್ದಕ್ಕೆ ಸೋಲೊಪ್ಪಿ ಮತ್ತೆ ಮೊದಲ ಬಸ್ ಹಿಡಿದೆವು. ಸುಳ್ಯದಲ್ಲಿ ಕಾಫಿಂಡಿ. ಮಡಿಕೇರಿ ಟೋಲ್ಗೇಟಿನಲ್ಲಿ ಮತ್ತೆ ಮಳೆ ಹಾಜರ್. ಬಲಮುರಿ ಮಡಿಕೇರಿಯಿಂದಲೂ ಸುಮಾರು ೨೦ ಕಿಮೀ ಆಚೆ, ಮೂರ್ನಾಡು ಸಮೀಪದಲ್ಲಿತ್ತು. ನಾವು ಕೊಡೆ ಬಿಡಿಸಿ ಆಚಿನ ದಾರಿಗೆ ಧಾವಿಸುತ್ತಿದ್ದಂತೆ (ಖಾಸಗಿ) ಮೂರ್ನಾಡು ಬಸ್

ಸಿಕ್ಕಿದ್ದು ನಮ್ಮ ಅದೃಷ್ಟ. ಮೂರ್ನಾಡಿನಿಂದಲೂ ಆಚಿನ ಮೂರು ಕಿಮೀಯನ್ನು ನಾವು ಪಾಲು ಬಾಡಿಗೆಯ ‘ವಟವೃಕ್ಷ’ (ಸರ್ವಿಸ್ ಆಟೋರಾಕ್ಷಸ) ಆಶ್ರಯಿಸಿ ಮುಗಿಸಿಕೊಂಡೆವು.

ಬಲಮುರಿಯಲ್ಲಿ ಗಾಯತ್ರಿ ಚಾರಿಟೇಬಲ್ ಟ್ರಸ್ಟ್ ನಡೆಸುವ, ಸೀಮಿತ ಆಧುನಿಕ ಸೌಕರ್ಯಗಳುಳ್ಳ, ಸಾಕಷ್ಟು ಹಳೆಯ ದೇವಳ - ಶ್ರೀಕಣ್ವ ಮುನೇಶ್ವರ ದೇವರದ್ದು. ದೇವಳದ ಹಿತ್ತಿಲ ಸರಳ, ಸಭಾಭವನದಲ್ಲಿ ಸದಾಶಿವನ ಕುಟುಂಬ ಕಲಾಪದಲ್ಲಿ ತೊಡಗಿತ್ತು. ಭವನದ ಹಿತ್ತಿಲಿನ ಇಳಿಸಿದ ಮಾಡು ಮತ್ತು

ತತ್ಕಾಲೀನ ಹಸಿರು ಬಲೆಯ ಮರೆಯಲ್ಲಿ ಇನ್ಯಾರದೋ ವೈದಿಕ ಕ್ರಿಯೆಯೂ ನಡೆದಿತ್ತು, ಬೇಗನೇ ಮುಗಿಯಿತು. ನಮ್ಮ ಕಡೆಯ ಸೀಮಿತ ಆಮಂತ್ರಿತರು ಮಧ್ಯಾಹ್ನದ ಊಟದವರೆಗೂ ಬಂದು ಸೇರಿಕೊಳ್ಳುತ್ತಲೇ ಇದ್ದರು. ಅಪರ ಕರ್ಮಗಳಾದ್ದರಿಂದ ಕ್ರಿಯೆಗಳು ನಿಧಾನಕ್ಕೇ ನಡೆಯಿತು. ಹಾಗಾಗಿ ನಡುವೆ ನಾವಿಬ್ಬರು ಅಲ್ಲೇ ಸ್ವಲ್ಪ ಹೊರಗೆ ಅಡ್ಡಾಡಿ, ಸ್ಥಳ ಪರಿಚಯ ಮಾಡಿಕೊಳ್ಳಲು ಅನುಕೂಲವೂ ಆಯ್ತು.

ಮೊದಲ ಹಂತದ ಕೊನೆಯ ಅಂಗ ವೈದಿಕರ ಊಟ. ಅನಂತರ

ಆಗಮಿಸಿದ ನಮ್ಮೆಲ್ಲರ ಊಟ - ಎರಡು ಪಂಕ್ತಿಗಳಲ್ಲಾಯ್ತು. ನನ್ನ ಅಂದಾಜಿನಂತೆ, ವಿಶ್ವಾಸಿಗರ ಲೆಕ್ಕದಲ್ಲಿ ಅವಷ್ಟೂ ಅಗಲಿದ ಆತ್ಮಕ್ಕೆ ಸಲ್ಲುವ ಕ್ರಿಯೆಗಳು. ಮುಂದಿನವು - ಬದುಕುಳಿದವರ ಕಾಳಜಿಗೆ ಮೀಸಲು. ಬಂಧುಗಳೆಲ್ಲ ಸದಾಶಿವನ ಕುಟುಂಬಕ್ಕೆ ‘ಉಡುಗೊರೆ’ ಮಾಡಿದರು. ವೈದಿಕರು ಆಶೀರ್ವಚನ ಸಹಿತ ಮಂತ್ರಾಕ್ಷತೆ ಪ್ರದಾನಿಸಿದರು. ಇದು ಮೃತರ ಕುಟುಂಬ, ಸಂದ ಒಂದು ವರ್ಷದಲ್ಲಿ ತಡೆಹಿಡಿದಿರಬಹುದಾದ ಮಂಗಳ ಕಲಾಪಗಳಿಗೆ (ಉಪನಯನ, ಮದುವೆ ಇತ್ಯಾದಿ)

ನಿರ್ಬಂಧವನ್ನು ಕಳಚುತ್ತದೆ. ಅಗಲಿದವರ ಕುರಿತ ಆತ್ಮೀಯ ಭಾವ ಕಳೆದುಕೊಳ್ಳದೇ ‘ಜೀವನ ನಿರಂತರ’ ಎನ್ನುವುದನ್ನು ಸಾರುತ್ತದೆ.

ದಿನವಿಡೀ ಬರುತ್ತಿದ್ದ ಪಿರಿಪಿರಿ ಮಳೆ ಸಂಜೆಯಾಗುತ್ತಿದ್ದಂತೆ ಹೆಚ್ಚಬಹುದು, ನಮ್ಮ ಮರುಪಯಣ ಕಷ್ಟವಾಗಬಹುದು ಎಂಬ ನಮ್ಮ ಸಣ್ಣ ಭಯವನ್ನು ಡಾ| ಎಸ್.ಎಂ ಹೆಗ್ಡೆ ದಂಪತಿ ನಿವಾರಿಸಿದರು. ಅವರಿಬ್ಬರೇ ಚಾಲಕ ಸಹಿತ ಕಾರಿನಲ್ಲಿ ಮಂಗಳೂರಿನಿಂದ ಬಂದವರು ಮರುಪಯಣಕ್ಕೆ ನಮ್ಮನ್ನೂ

ಸೇರಿಸಿಕೊಂಡರು. ಹೆಗ್ಡೆ ದಂಪತಿ - ಸದಾಶಿವನ ಹೆಂಡತಿ ಶಾಂತಾಳ, ಅಕ್ಕ ಮತ್ತು ಭಾವ. ಹೆಗ್ಡೆಯವರು ಸುಮಾರು ನಾಲ್ಕೂವರೆ ದಶಕಗಳ ಕಾಲ ‘ಸುಬ್ರಹ್ಮಣ್ಯದ ಡಾಕ್ಟ್ರು’ ಆಗಿ ಖ್ಯಾತರು, ತೀರಾ ಈಚೆಗಷ್ಟೇ ತುರುಸಿನ ವೃತ್ತಿಯನ್ನು ಕಳಚಿಕೊಳ್ಳಲು ಸುಬ್ರಹ್ಮಣ್ಯ ಬಿಟ್ಟು, ಮಂಗಳೂರಿಗೆ ಬಂದು ಮಗನೊಡನೆ ನೆಲೆಸಿದ್ದಾರೆ. ನನ್ನ ಸ್ವಭಾವದ ದೋಷದಿಂದ ಮೊದಲಿಗೆ ನಾನು ಹೆಗ್ಡೆಯವರನ್ನು ಗುರುತಿಸಿರಲಿಲ್ಲ.. ಆದರೆ ೧೯೮೯ರ ನನ್ನ ಪರ್ವತಾರೋಹಣದ ಒಂದು ವಿಶೇಷ ಘಟನೆಯನ್ನು ಅವರೇ ನೆನಪಿಸಿದಾಗ ಎಲ್ಲ ಜಾಗೃತವಾಯ್ತು!.

(ವಿವರಗಳಿಗೆ ಓದಿ - ಕುಮಾರಧಾರೆಯ ವೀರಪ್ಪನ್...), ನಮ್ಮೊಳಗಿನ ಮಾತುಕತೆಗೆ ಲಗಾಮೇ ಉಳಿಯಲಿಲ್ಲ. ಏಕ ಸುಖ ಓಟದಲ್ಲಿ ನಾವು ಕತ್ತಲೆಗೂ ಮುನ್ನ ಮಂಗಳೂರಿಗೆ ಮರಳಿದ್ದೆವು.

೧೨ ಬಲಮುರಿ ಕ್ಷೇತ್ರ ಮಹಾತ್ಮ್ಯೆ


ಪುರಾಣದಲ್ಲಿ ಕವೇರ ಪುತ್ರಿ - ಕಾವೇರಿ, ಅಗಸ್ತ್ಯಾಶ್ರಮದಲ್ಲಿ ಕರಾರುಬದ್ಧ ದಾಂಪತ್ಯ ನಡೆಸಿದ್ದಳು. ಆ ಕರಾರುಭಂಗವಾದಂದು ಆಕೆ, ಸಂಸಾರಬಂಧನವನ್ನು

ಕಳಚಿಕೊಂಡು, (ಕಮಂಡಲನ್ನು ಉಕ್ಕಿಸಿದಳು, ಕೆರೆಗೆ ಹಾರವಾದಳು ಎಂದೆಲ್ಲ ಕತೆಗಳಿವೆ) ಲೋಕಪಾವನಗೊಳಿಸುವಂತೆ ನದಿಯಾಗಿ ಹರಿದಳು. "ನಿಲ್ಲು, ನಿಲ್ಲೇ..ಕಾವೇರೀ..." ಎಂದು ಬೆಂಬತ್ತಿದ ಅಗಸ್ತ್ಯರಿಂದ ಆಕೆ ಒಮ್ಮೆ ಗುಪ್ತಗಾಮಿನಿಯಾಗಿಯೂ ಮತ್ತೊಮ್ಮೆ ನಿರೀಕ್ಷಿತ



ಪಥದಿಂದ ಬಲ ಮುರಿದೂ (ಹೊರಳಿ), ತಪ್ಪಿಸಿಕೊಂಡಳಂತೆ. ಮೂಲ ಅಗಸ್ತ್ಯಾಶ್ರಮವೇ ಇಂದಿನ ತಲಕಾವೇರಿ. ಕಾವೇರಿ ಹೊರಳಿಕೊಂಡ ನೆಲೆ - ‘ಬಲಮುರಿ. ಕಾವೇರಿ ನದಿಯಲ್ಲಿ ನನಗೆ ತಿಳಿದಂತೆ, ಎರಡು ಬಲಮುರಿ ಕ್ಷೇತ್ರಗಳಿವೆ. ಮೈಸೂರಿನ ಕೆಯಾರ್ ಸಾಗರದ ತಪ್ಪಲಿನ ಬಲಮುರಿ ಮತ್ತು ಜತೆಗಿನ ಅಗಸ್ತ್ಯೇಶ್ವರ ದೇವಳವನ್ನು ನಾನು ವಿದ್ಯಾರ್ಥಿ ದೆಸೆಯಲ್ಲೇ ನೋಡಿದ್ದೆ. ಈಗ ವರ್ಷಾಂತಿಕ ನೆಪದಲ್ಲಿ ಮೂರ್ನಾಡಿನದ್ದನ್ನೂ ನೋಡಿದ್ದಾಗಿತ್ತು. ಆದರೆ ಇಲ್ಲಿ ದೇವಳ ಮಾತ್ರ ಕಾವೇರಿ ಪತಿ ಅಗಸ್ತ್ಯನದ್ದಲ್ಲ, ಕಣ್ವ ಮುನಿಗಳದ್ದು. ಮತ್ತೆ ಪುರಾಣ,

ಶಾಸ್ತ್ರಾಧಾರಗಳ ಲೆಕ್ಕದಲ್ಲೂ ಉತ್ತರ ಭಾರತೀಯನೇ ಆದ ಕಣ್ವ ಅಥವಾ ಕಣ್ವಾಶ್ರಮ (ಶಕುಂತಲೆಯ ಸಾಕು ತಂದೆ ಮತ್ತು ನೆಲೆ) ಕಾವೇರಿ ದಂಡೆಗೆ ಬಂದದ್ದು ಹೇಗೆ - ಬಲ್ಲವರು ಹೇಳಬೇಕು.

ಈ ದಿನಗಳಲ್ಲಿ ಇರುವುದಕ್ಕಿಂತ ಹೆಚ್ಚಿನದನ್ನು ಪ್ರದರ್ಶಿಸುವುದೇ ಲೋಕರೂಢಿಯಾಗಿದೆ. ಹಾಗಾಗಿಯೇ ಬಹುಶಃ ರೇಟಿಗೆ ದಕ್ಕುವ ಡಾಕ್ಟರೇಟುಗಳು, ಗಲ್ಲಿಗೊಂದರಂತೆ ಕೆಂಟುಕಿ ಕರ್ನಲ್ಲುಗಳು, ನೂರೆಂಟು ಕೆಲಸಕ್ಕೆ ಬಾರದ ಬಿರುದುಗಳು ಮೆರೆಯುತ್ತಲೇ

ಇರುತ್ತವೆ. ಸಾಮಾನ್ಯರಿಗೆ ಸಿಂಗಲ್ ‘ಶ್ರೀ’ ಮತ್ತು ಮಠದಯ್ಯರಿಗೆ ಡಬ್ಬಲ್ ‘ಶ್ರೀ’ಯಾದರೆ ಅಸಾಮಾನ್ಯನೆಂದು ಬಿಂಬಿಸಿಕೊಳ್ಳುವ ರವಿಶಂಕರ್ಗೆ ತ್ರಿಬ್ಬಲ್ ‘ಶ್ರೀ’ಗಳು! ಹೀಗೇ ಇನ್ನೊಬ್ಬ ಮಂಗಳೂರಿನ ಮಹಾತ್ಮ, ಅಧ್ಯಾತ್ಮಿಕ ಮಾರುಕಟ್ಟೆಗಿಳಿದಾಗ, ತಾನೇ ಬದಲಿಸಿಕೊಂಡ ಹೆಸರಿಗೆ ಡಬ್ಬಲ್ ‘ಈಶ್ವರ’ದ ಬಾಲ ಹಚ್ಚಿಕೊಂಡಿದ್ದ - ನರೇಶ್ವರೇಶ್ವರ!! ಇಂಥಾ ಪರಿಸ್ಥಿತಿಯಲ್ಲಿ ಮೂರ್ನಾಡು ಬಲಮುರಿಯ ಭಕ್ತರು ಕಣ್ವನಿಗೆ ಮುನಿತ್ವದ ಜತೆಗೇ ಈಶತ್ವ ಸೇರಿಸಿ - ಶ್ರೀ ಕಣ್ವಮುನೇಶ್ವರನನ್ನಾಗಿಸಿದ್ದು ನನಗೆ ವಿಶೇಷವೆನ್ನಿಸಲಿಲ್ಲ.

ಆದರೆ ಇಲ್ಲಿನ ಬೋರ್ಡು ಬರೆಯುವವರಿಗೆ ಅಷ್ಟು ಸಾಲದೆನ್ನಿಸಿತೋ ಏನೋ - ಒಂದು ಇಂಗ್ಲಿಷ್ ಬೋರ್ಡು ಮತ್ತು ದೇವಳದ ಕಬ್ಬಿಣದ ಗೇಟುಗಳಲ್ಲಿ ‘ಕಣ್ಣ’ನನ್ನೂ (ಕೃಷ್ಣ) ಸೇರಿಸಿಬಿಟ್ಟಿದ್ದಾರೆ!

ಗೂಗಲ್ ನಕ್ಷೆಯಲ್ಲಿ ಬಲಮುರಿ, ‘ಬಾಲೆಂಬರಿ’ಯಾಗಿರುವ ಚೋದ್ಯವನ್ನು ನಾನು ಫೇಸ್ ಬುಕ್ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದೆ.

ಇದು ಮಡಿಕೇರಿಯನ್ನು ಮರ್ಕ್ಯರ ಮತ್ತು ಕೊಡಗನ್ನು ಕೂರ್ಗ್ ಮಾಡಿದ ಬ್ರಿಟಿಷರ ಕೊಡುಗೆಯೇ ಅಥವಾ ಪ್ರಾದೇಶಿಕ ಉಚ್ಛಾರದ ಅರಿವಿಲ್ಲದ ಗೂಗಲ್ಲಿನ ತಪ್ಪೋ ಎಂದು ಊಹೆಗಳನ್ನೂ ಹರಿಸಿದ್ದೆ. ಆದರೆ ಅಲ್ಲಿ ಪ್ರತಿಕ್ರಿಯಿಸಿದ ಗೆಳೆಯರೊಬ್ಬರು "ಎರಡೂ ಅಲ್ಲ, ಇದು ಕೊಡವ ಭಾಷೆಯ ಕೊಡುಗೆ" ಎಂದು ಸಮಾಧಾನಿಸಿದರು. ಹೌದು, ನಮ್ಮ ತುಳುವರಿಗೆ ಉಪ್ಪಿನಂಗಡಿ, ಪಾಣೆಮಂಗಳೂರು, ಕಾರ್ಕಳಾದಿಗಳು ಕ್ರಮವಾಗಿ ಉಬಾರ್, ಪಾಣೇರ್‍, ಕಾರ್ಲಾ ಆಗಿರುವುದು ನಾನು ಮರೆತೇಬಿಟ್ಟಿದ್ದೆ. ನಕ್ಷೆಯಲ್ಲಿ ಕಾಣುವ ಮತ್ತೊಂದು ವಿಚಿತ್ರ - ವಾಸ್ತವದಲ್ಲಿ ಕಾವೇರಿ, ಇಲ್ಲಿ ವಿಶೇಷ ತಿರುವು (ಬಲಮುರಿ) ತೆಗೆದೇ ಇಲ್ಲ. ಬದಲಿಗೆ, ನಕ್ಷೆಯಲ್ಲೇ ಮುಂದುವರಿದರೆ ಕಾವೇರಿ ಇನ್ನೂ ಕೆಳಪಾತ್ರೆಯಲ್ಲಿ ಬರಿಯ ಬಲ ತಿರುವಲ್ಲ, ಶುದ್ಧ ಹಿಮ್ಮುರಿ ತಿರುವನ್ನೇ ತೆಗೆದದ್ದೂ ಕಾಣತ್ತೇವೆ. ಅಂದರೆ ‘ಬಲಮುರಿ’ ಎನ್ನುವುದು ಕೇವಲ ಕಪೋಲ ಕಲ್ಪನೆಯೂ ಇರಬಹುದು. ಅಥವಾ ನದಿಯೇ ಪುರಾಣಿಕರನ್ನು ಏಮಾರಿಸಲು ತನ್ನ ಹರಿ-ಪಥವನ್ನು ಬದಲಿಸಿದ್ದೂ ಇರಬಹುದು. ಹೆಚ್ಚಿನ ತನಿಖೆಯನ್ನು ಭೂ ವಿಜ್ಞಾನಿಗಳಿಗೆ ಬಿಟ್ಟು, ನಾವು ಇಲ್ಲದ ಹಂಪನ ಕಟ್ಟೆ, ನವಭಾರತ ಪತ್ರಿಕೆ ಮತ್ತು ಜ್ಯೋತಿ ಟಾಕೀಸುಗಳಂತೇ ಬಲಮುರಿಯನ್ನು ನಿರಪೇಕ್ಷ ಸ್ಥಳನಾಮವಾಗಿ ಸ್ವೀಕರಿಸಲು ಯಾವ ಅಡ್ಡಿಯೂ ಬರಲಾರದು!

೧೩ ಅಣ್ತಮ್ಮ ಸೇತುವೆಗಳು


ಮೂರ್ನಾಡಿನಿಂದ ಶ್ರೀಕಣ್ವಮುನೀಶ್ವರ ದೇವಳಕ್ಕೆ ಬರುವ ದಾರಿ ನೇರ ಮುಂದುವರಿದು ನೂರಿನ್ನೂರು ಅಡಿಯಲ್ಲೇ ಕಾವೇರಿ ದರ್ಶನ ಮಾಡಿಸುತ್ತದೆ. ಅದು ಅಂಚುಗಟ್ಟೆಗಳಿಲ್ಲದ ಹಳೆಗಾಲದ ಸೇತು - ಗಾತ್ರದಲ್ಲಿ ಸಣ್ಣ ಆದರೆ ಪ್ರಾಯದಲ್ಲಿ ಅಣ್ಣ, ಬಹುತೇಕ ಮುಳುಗು ಸೇತುವೂ ಹೌದು. ಅದರಲ್ಲಿ ಅಕಾಲಿಕವಾಗಿ ಕಾಲನ ಕಡತಕ್ಕೆ ಸೇರಿದ ಜೀವಗಳೆಷ್ಟೋ ಸೊತ್ತುಗಳೆಷ್ಟೋ ಲೆಕ್ಕವಿಟ್ಟವರಿಲ್ಲ. ಅದರ ಪರಿಣಾಮ ಎಂಬಂತೆ ಪಕ್ಕದಲ್ಲೇ ಈಚೆಗೆ ಹೊಸ ಸೇತುವೆ ಬಂದಂತಿದೆ, ಗಾತ್ರದಲ್ಲಿ ದೊಡ್ಡ ಆದರೆ

ಪ್ರಾಯದಲ್ಲಿ ತಮ್ಮ. ಅಲ್ಲಿ ಕಾಲೂರಿದ ಬೋರ್ಡೇನೋ (ಏಪ್ರಿಲ್ ೨೦೨೨) ಹನ್ನೊಂದೇ ತಿಂಗಳ ‘ಹೆರಿಗೆ’ ಎನ್ನುತ್ತಿದೆ. ಇದು ಐದು ಕಿಮೀ ರಸ್ತೆ, ಏಳು ಮೋರಿ ಮತ್ತು ಮೂರು ಸೇತುವೆ ಎಂದೂ ಹೇಳುತ್ತದೆ. ಆದರೂ ಊರವರು ಈ ‘ತಮ್ಮ ಸೇತುವೆ’ ತುಸು ಹಳತೇ, ರಸ್ತೆ ಅಭಿವೃದ್ಧಿಯ ಭಾಗ ಅಲ್ಲ ಎನ್ನುತ್ತಾರೆ. ಏನೇ ಇರಲಿ ಸೇತುವೆಯ ಇಂದಿನ ಸ್ಥಿತಿ ನೋಡಿದರೆ (ವಿಡಿಯೋ ಗಮನಿಸಿ) ಕಾಮಗಾರಿಯ ಗುಣಮಟ್ಟದ ಬಗ್ಗೆ ತೀವ್ರ ಸಂಶಯ ಬರುತ್ತದೆ, ಸೇತುವೆಯ ಅಡ್ಡ ತೊಲೆಗಳ ನಡುವೆ ಭಾರೀ ಗಿಡ ಬೇರುಬಿಟ್ಟಿದೆ. ಅಂಚಿನ ಕಟಕಟೆಗಳು ಶಿಥಿಲವಾಗಿವೆ. ನೆಲವಂತೂ ಸರಣಿ ಇಂಗುಗುಂಡಿಗಳನ್ನೇ ಮಾಡಿಟ್ಟಂತಿದೆ. ಶೀಘ್ರದಲ್ಲೇ ಕಾವೇರಿಯ ಮುನಿಸಿಗೆ ಸೇತುವೆ "ಗೋವಿಂದಾ" ಎಂದರೆ ಜನ ಹಳೇ ಸೇತುವೆಗೇ ಶರಣಾಗಬೇಕಾಗುತ್ತದೆ. ‘ಹಳ್ತೇ ಚಿನ್ನ’ ಎಂಬ ರೂಢಿ ಮಾತಿಗೆ ಬಲ ಬರುತ್ತದೆ.

ನಾವಿಬ್ಬರು ಮುಳುಗು ಸೇತುವೆ ದಾಟಿ, ಅಂಚಿನ ಮೆಟ್ಟಿಲ ಸಾಲಿನಲ್ಲಿ ಹೊಸ ಸೇತುವೆಗೇರಿ, ದಾಟಿ, ದೇವಳದ ಎದುರಿನ ಸ್ನಾನ

ಘಟ್ಟ ನೋಡಿ ಮರಳಿದೆವು. ಒಟ್ಟಾರೆಯಲ್ಲಿ ಬಂಧುಗಳ ಸಾಮೀಪ್ಯ, ಸಾಂಪ್ರದಾಯಿಕ ಎಂದು ಹೇಳಿಕೊಂಡರೂ ನಿಜ ಸಂಸ್ಕೃತಿ ಹೊಸದೇ ರೂಪಪಡೆಯುವ ಚೋದ್ಯವನ್ನು ಗ್ರಹಿಸಿದ ಸಂತೋಷ ಉಳಿಸಿಕೊಂಡೆವು. ಕತ್ತಲೆಗೆ ಮುನ್ನ ಮಂಗಳೂರು ಸೇರಿಕೊಂಡದ್ದಕ್ಕೆ.ವೈದ್ಯ ಎಸ್ ಎಂ ಹೆಗಡೆ ದಂಪತಿಗಳಿಗೆ ಕೃತಜ್ಞತೆಗಳು.


3 comments:

  1. ಚರಿತ್ರಾರ್ಹ ಅಂಶಗಳೂ ಅಡಕಗೊಂಡಿವೆ.

    ReplyDelete
  2. Vijay Thambanda

    ಸ್ವಲ್ಪ ಚರಿತ್ರೆ, ಸ್ವಲ್ಪ ರಾಜಕೀಯ, ಸ್ವಲ್ಪ ಬ್ರಾಹ್ಮಣ ಸಂಬಂಧಗಳು... ಚೆನ್ನಾಗಿದೆ. ಲೇಖನದಲ್ಲಿ ಬಂದಿರುವ ಕೆಲವರ ಪರಿಚಯ ನನಗೂ ಇದೆ.
    ಎಂ ಎಸ್ ಸುಬ್ಬರಾವ್ ಅವರು ಡಿ ಎನ್ ಕೃಷ್ಣಯ್ಯ ಜೊತೆ ಸೇರಿ 50ರ ದಶಕದಲ್ಲಿ ರಾಜೇಂದ್ರನಾಮೆ ಯನ್ನು ಸಂಪಾದಿಸಿದವರು. ಬಿಡಿ ಲೇಖನಗಳನ್ನು ಬರೆದ ವಿದ್ವಾಂಸರು ಇವರು.

    ReplyDelete
  3. ಶಿಲಪ್ಪದಿಕಾರಂ ( ತಮಿಳು ಮಹಾಕಾವ್ಯ) ದಲ್ಲಿ ಕಾವೇರಿಯನ್ನು ಪೊನ್ನಿ ಎಂದು ಕರೆಯಲಾಗಿದೆ. ಕೊಡಗಿನಲ್ಲಿ ಪೊನ್ನಪ್ಪ/ ಪೊನ್ನಮ್ಮ ಹೆಸರುಗಳು ಬಹಳ ಜನಪ್ರಿಯವೇ ಹೌದು. ಅಂದರೆ, ಕೊಡಗಿನಲ್ಲಿಯೂ ಕಾವೇರಿಯ ಹಳೆಯ ಹೆಸರು ಪೊನ್ನಿ ಅಂತಲೇ ಇದ್ದಿರಬೇಕು. ಯಾವುದೋ ಕಾಲಘಟ್ಟದಲ್ಲಿ ಅದು ಕಾವೇರಿ ಆಗಿರಬೇಕು. ನಿಮ್ಮ ಬಸ್‌ ಪುರಾಣ ಮತ್ತು ಹೊಸ ಹೆಸರುಗಳು ನಗು ಹುಟ್ಟಿಸಿತು

    ReplyDelete