28 September 2020

ಡಾರ್ಜಿಲಿಂಗ್ ಮತ್ತು ಮಿರಿಕ್ ಮಿಸ್ಟೇಕ್

(ಭಾರತ ಅ-ಪೂರ್ವ ಕರಾವಳಿಯೋಟ - ೭) 



ಕಾಲೇಜು ದಿನಗಳಿಂದ ನನ್ನ ದೊಡ್ಡ ಕನಸು - ಡಾರ್ಜಿಲಿಂಗ್ ಭೇಟಿ ಮತ್ತು ತೇನ್ ಸಿಂಗ್ ಶಿಷ್ಯತ್ವ ಗಳಿಕೆ. ಸಿಕ್ಕ ಮೊದಲ ಅವಕಾಶ - ೧೯೭೧ರ ಅಸ್ಸಾಂ ಭೇಟಿ, ನಾನು ಮಿಂಚು ನೋಟಕ್ಕಾದರೂ ಡಾರ್ಜಿಲಿಂಗ್ ಎಂದು ತಿಣುಕಿದ್ದೆಲ್ಲ ನಿಮಗೆ ತಿಳಿದೇ ಇದೆ (ನೋಡಿ: ೫. ಮತ್ತೆ ಮತ್ತೆ ನಾಯಕತ್ವದ ಪ್ರಶ್ನೆ). ಹಾಗಾಗಿ ಪ್ರಸ್ತುತ ಸಾಹಸಯಾನ ಯೋಜಿಸುವಂದು, ತೇನ್‍ಸಿಂಗ್ ಇಲ್ಲದ ಡಾರ್ಜಿಲಿಂಗಿನಲ್ಲಿ ಒಂದು ರಾತ್ರಿಗಾದರೂ ನಿಂತು, ದೃಶ್ಯಗಳನ್ನು ಕಣ್ಣು ತುಂಬಿಕೊಳ್ಳಬೇಕೆಂದು ನಿಶ್ಚೈಸಿದ್ದೆ. ಅದಕ್ಕನುಕೂಲ ಆರಂಭ ಬಿಂದುವಾಗಿ ನಮಗೊದಗಿದ್ದು ಸುಖ್ನಾ

ಅರಣ್ಯ ವಲಯದಲ್ಲಿದ್ದ ಮಹಾನಂದಾ ಅಭಯಾರಣ್ಯದ ಅತಿಥಿಗೃಹ. ಸಿಲಿಗುರಿಯಿಂದ ಡಾರ್ಜಿಲಿಂಗಿಗೆ ಇರುವ ಮುಖ್ಯ ದಾರಿ ಇದರ ಎದುರಿನಲ್ಲೇ ಹಾಯುತ್ತದೆ. ಇದರ ಜತೆಜತೆಗೇ ಹರಿದಿದೆ - ವಿಶ್ವಖ್ಯಾತ ವಿಹಾರೀ ಪುಟಾಣಿ ರೈಲು ಮಾರ್ಗ (ನ್ಯಾರೋ ಗೇಜ್). ಸಿಲಿಗುರಿಯಿಂದ ಡಾರ್ಜಿಲಿಂಗಿಗೆ ಇರುವ ಇನ್ನೊಂದು ಮಾರ್ಗ ಸ್ವಲ್ಪ ಗಿಡ್ಡ, ಆದರೆ ಹೆಚ್ಚು ಕಠಿಣದ್ದು - ಮಿರಿಕ್ ಮಾರ್ಗ. ಇದು ಮುಖ್ಯ ದಾರಿಗೂ ತುಸು ಪಶ್ಚಿಮ ಮಗ್ಗುಲಿನಲ್ಲಿದೆ. 


ಅರಣ್ಯಾಧಿಕಾರಿ ಯಾದವರ ಬಳಿ ಮಾತಾಡಿ ಮರಳಿದ ಮೇಲೆ, ಬೈಕ್ ಏರಿ ನಾವೆಲ್ಲ ಹತ್ತೇ ಕಿಮೀ ಅಂತರದ ಮಹಾನಂದ ವನಧಾಮದ ಅತಿಥಿಗೃಹ ಸೇರಿಕೊಂಡೆವು. ಆ ವನಧಾಮ ೧೯೫೯ರಲ್ಲೇ ಔಪಚಾರಿಕ ಘೋಷಣೆ ಕಂಡರೂ ೧೯೭೫ರಿಂದ ನಿಧಾನಕ್ಕೆ ರೂಪುಗೊಳ್ಳತೊಡಗಿತ್ತು. ಅಲ್ಲಿನ ಸೌಕರ್ಯಗಳು ಇನ್ನೂ ಪ್ರಾಥಮಿಕ ಹಂತದಲ್ಲೇ ಇದ್ದವು. ಅಲ್ಲಿನ ಅಧಿಕಾರಿ ಯಾದವರ ಆಜ್ಞಾಧಾರಕನಾಗಿಯೂ ವೈಯಕ್ತಿಕವಾಗಿಯೂ ಸ್ನೇಹಶೀಲರೇ ಆಗಿದ್ದರು. ವನಧಾಮಗಳ ಸೌಕರ್ಯಗಳಿರುವುದೇ ‘ಹಣದ ಚೀಲ’ಗಳಿಗೆ ಎನ್ನುವ ಕಟು ಸತ್ಯಕ್ಕೆ ವಿರುದ್ಧವಾಗಿ, ಅಲ್ಲಿ ನಮಗೆ ತಲಾ ರೂ ಹತ್ತಕ್ಕೆ ಸುವ್ಯವಸ್ಥೆಯ ವಿಸ್ತಾರ ವಸತಿಯೇ ಸಿಕ್ಕಿತ್ತು. ನಾವು ಬೆಳಕಿದ್ದಂತೇ ಅಲ್ಲಿಗೆ ತಲಪಿದ್ದರೂ ವನಧಾಮ ಸುತ್ತುವ ಸಮಯ ಮೀರಿ ಹೋಗಿತ್ತು. ಮತ್ತೆ ಅತಿಥಿ ಗೃಹದ ಮೇಟಿ ನಮ್ಮ ಕನಿಷ್ಠ ಆಹಾರ ಪಾನೀಯಗಳ ವ್ಯವಸ್ಥೆಯನ್ನು ಸುಲಭ ಬೆಲೆಯಲ್ಲಿ ಚೆನ್ನಾಗಿಯೇ ಪೂರೈಸಿದಮೇಲೆ ಕೇಳಬೇಕೇ. ಮಾಲ್ಡಾದ ನಿದ್ರೆ ಬಾಕಿಯನ್ನು ಬಡ್ಡಿ ಸಹಿತ ಮುಗಿಸುವಂತೆ ಬೇಗನೇ ಮಲಗಿದೆವು. 

(ತಾ ೨೭, ದಿನದ ಓಟ ೨೭೩ ಕಿಮೀ) 

[ಅ-ಪೂರ್ವ ಕರಾವಳಿಯೋಟವನ್ನು ೧೯೯೬ರಲ್ಲಿ ಪೂರೈಸಿದ್ದರೂ ದಿನಚರಿಯ ಚುಟುಕುಗಳನ್ನು ಕಥನದ ವಿಸ್ತಾರಕ್ಕಿಳಿಸುವಲ್ಲಿ ನಾನು ಹಿಂದಿದ್ದೆ. ೨೦೧೬ ರಲ್ಲಿ ಹೀಗೇ ಗೆಳೆಯ ಗಿರೀಶ್ ಪಾಲಡ್ಕರೊಡನೆ ಮಾತಾಡುವಾಗ ಅವರ ಡಾರ್ಜಿಲಿಂಗ್ ಅನುಭವದ ಪ್ರಸ್ತಾಪ ಬಂತು. ಅದಕ್ಕೆ ಸಂವಾದಿಯಾಗಿ ನನ್ನೊಳಗಿನ ಈ ೧೯೯೬ರ ಡಾರ್ಜಿಲಿಂಗ್‍ ನೆನಪು ಜಾಗೃತವಾಯ್ತು. ಆಗ ಇಷ್ಟನ್ನು ಮಾತ್ರ ನಾನು ಬರೆದು, ಇಬ್ಬರ ಅನುಭವಗಳನ್ನೂ ಕಸಿ ಮಾಡಿ, ನಮ್ಮದೇ ಧ್ವನಿ ಸಹಿತ (ಪೋಡ್ ಕ್ಯಾಸ್ಟಿಂಗ್) ಇಲ್ಲೇ ‘ಡಾರ್ಜಿಲಿಂಗ್ ಜೋಡು ಕಥನ’ವನ್ನಾಗಿಸಿದೆ. (ಆಸಕ್ತರು ಅಲ್ಲಿ ಚಿಟಿಕೆ ಹೊಡೆಯ್ದಿರಿ. ಕಥನ ಮೂರು ಭಾಗಗಳಲ್ಲಿದೆ. ಓದಬಹುದು, ಕೇಳಲೂ ಬಹುದು!) ಈಗ ಅದರ ನನ್ನ ಭಾಗದ ಕಥನವನ್ನು ಸಣ್ಣಪುಟ್ಟ ಪರಿಷ್ಕರಣೆಗಳೊಂದಿಗೆ ಇಲ್ಲಿ ಬೆಸೆಯುತ್ತಿದ್ದೇನೆ.] 


ಬೆಳಿಗ್ಗೆ (೨೫-೪-೯೬) ಐದೂವರೆಗೇ ನಾವು ವನವೀಕ್ಷಣೆಗೆ ಸಜ್ಜಾಗಿದ್ದೆವು. ಕಾಡಿನೊಳಗೆ ಕಚ್ಚಾ ಮಾರ್ಗವೇನೋ ಇತ್ತು. ಆದರೆ ಇಲಾಖೆಯ ಬಳಿ ಸಾರ್ವಜನಿಕ ವೀಕ್ಷಣಾ ಸೌಕರ್ಯಕ್ಕೆ ಯಾವುದೇ ವಾಹನವಿರಲಿಲ್ಲ. ಹಾಗಾಗಿ ಕಿಶೋರ್ ಬೈಕಿನಲ್ಲಿ ಅರಣ್ಯ ರಕ್ಷಕ - ಮೊಣಿಪ್ರಧಾನ್‍ನನ್ನು, ಮೂರನೇ ಸಹವಾರನನ್ನಾಗಿ ಹೊತ್ತು ವನಧಾಮದೊಳಕ್ಕೇ ಬೈಕ್ ಓಡಿಸಿದೆವು. ವನ್ಯ ಸಲಗವೊಂದು ಈಚೆಗೆ ಸಮೀಪದಲ್ಲೇ ಸುಳಿದಾಡಿದ ಲಕ್ಷಣವಾಗಿ ಒಂದೆರಡು ಲದ್ದಿ ಗುಪ್ಪೆ ನಮ್ಮನ್ನು

ಎಚ್ಚರಿಸಿತ್ತು. ಉಳಿದಂತೆ ನಮಗೆ ಘಟ್ಟವಲಯದಲ್ಲಿ ಕಾಣುವ ಎಲ್ಲ ನೈಜ ಕಾಡುಗಳಂತೆ ಅದೂ ಕೀಟ ಹಕ್ಕಿಗಳ ಮೇಳವಿದ್ದೂ ನಿಗೂಢ ಮೌನವನ್ನೇ ಹೊದ್ದಿತ್ತು. ಮಂಗ, ಜಿಂಕೆ, ಕೆಲವು ಹಕ್ಕಿ ಬಿಟ್ಟು ವಿಶೇಷ ದರ್ಶನವೇನೂ ಆಗಲಿಲ್ಲ. ಸುಮಾರು ಏಳು ಕಿಮೀ ಓಟದ ಕೊನೆಯಲ್ಲಿ ಮಹಾನಂದಾ ನದಿ ದಾಟುವ ಸೇತುವೆಗೆ ಸಾಕೆನ್ನಿಸಿ ಮರಳಿದೆವು. ಇಂದನ್ನಿಸುತ್ತದೆ, ಏಳು ಕಿಮೀ ಬೈಕೋಡಿಸುವುದು ಬಿಟ್ಟು, ನಾವು ಒಂದೆರಡೇ ಕಿಮೀ ನಿಶ್ಶಬ್ಧವಾಗಿ ನಡೆದಿದ್ದರೂ ಹೆಚ್ಚಿನ ವನ್ಯ ದರ್ಶನವಾಗುತ್ತಿತ್ತು! 

ಸುಖ್ನಾದಿಂದ ಡಾರ್ಜಿಲಿಂಗ್ ಪೇಟೆ ಸುಮಾರು ಎಂಬತ್ತು ಕಿಮೀ ದಾರಿ. ಆದರೆ ಸಮುದ್ರ ಮಟ್ಟದಿಂದ ಔನ್ನತ್ಯದ ಲೆಕ್ಕ ತೆಗೆದರೆ

ಸುಮಾರು ೭೦೦೦ ಅಡಿ ಏರುವ ಕಟ್ಟೇರಿನ ಸವಾಲು. ಉರಿ ಸೆಕೆಯಿಂದ ಬಿಡಿಸಿಕೊಂಡು ಕೊರೆ ಶೀತದ ತೆಕ್ಕೆಗೆ ಬೀಳುವ ವಿಚಿತ್ರ. ನಾವು ಕೊಲ್ಕೊತ್ತ ಬಿಟ್ಟಂದಿನಿಂದ ಪ್ರತಿ ಸಂಜೆ ಸಿಗುತ್ತಿದ್ದ ಮಳೆ ಇಂದು ಬೆಳಿಗ್ಗೆಯೇ ಅಟಕಾಯಿಸುವ ಹುನ್ನಾರದಲ್ಲಿತ್ತು. ವಾತಾರಾವಣ ಬಿಟ್ಟ ಮಂಡೆಯಲ್ಲಿ (ಯಕ್ಷಗಾನದ ಭಾಷೆ) ದಟ್ಟ ಮೋಡ ಕುರುಳುಗಳು ಉರುಳೇಳುತ್ತಿದ್ದಂತೆ, ಗುಡುಗು ಮಿಂಚಿನ ಮೇಳಕ್ಕೆ ಹೆಜ್ಜೆಯಿಕ್ಕಲು ರಂಗದಂಚಿನಲ್ಲಿ ಕಾದಿದ್ದ. ನಾವು ವಿನೀತರಾಗಿ, ಎಲ್ಲ ಗಂಟು ಮೂಟೆಗಳನ್ನು ಪ್ಲ್ಯಾಸ್ಟಿಕ್

ಹಾಳೆಗಳಿಂದ ಸುತ್ತಿಯೇ ಬೈಕಿಗೆ ಬಿಗಿದಿದ್ದೆವು. ನಾವೂ ಉಣ್ಣೆಯಂಗಿ, ಮಂಗನತೊಪ್ಪಿಗಳ ಮೇಲೆ ಮಳೆಕೋಟು, ಪ್ಯಾಂಟು ಏರಿಸಿಯೇ ಎಂಟೂಮುಕ್ಕಾಲರ ಹೊತ್ತಿಗೆ ದಾರಿಗಿಳಿದೆವು. 

ನಾವುಳಿದಿದ್ದ ವನಧಾಮದ ಎದುರೇ ಪುಟ್ಟ ನಿಲ್ದಾಣಸಹಿತ ಸಪುರ ಹಳಿಯ (ನ್ಯಾರೋಗೇಜ್) ರೈಲ್ವೇ ಜಾಡು ಹರಿದದ್ದು ಕಂಡಿದ್ದೆವು. ಅದು ನಮ್ಮ ದಾರಿಗೆ ಪಕ್ಕದಲ್ಲೇ ಜತೆಗೊಡುತ್ತಿತ್ತು. ಹಲವೆಡೆಗಳಲ್ಲಿ ಯಾವುದೇ ಔಪಚಾರಿಕ ಸಮಸೇತಿನ (ಲೆವೆಲ್

ಕ್ರಾಸ್) ಲಕ್ಷಣಗಳಿಲ್ಲದೆ ಹಳಿಗಳು ದಾರಿಯ ಮೇಲೇ ಅಡ್ಡಾದಿಡ್ಡಿ ಓಡುವುದೂ ಇತ್ತು. ಅಂತಲ್ಲೆಲ್ಲ ರೈಲು ಬಂದರೆ ರಸ್ತೆಯ ಮೇಲೆ ಓಡಾಡುವವರೇ ದಾರಿ ಕೊಡಬೇಕು ಎನ್ನುವುದು ಗೊತ್ತಿದ್ದದ್ದೇ. ಆದರೆ ಖಾಲೀ ಹಳಿಗಳನ್ನು ಹಾಯುವಾಗಲೂ ದ್ವಿಚಕ್ರಿಗಳು ಬಹಳ ಜಾಗ್ರತೆ ವಹಿಸಲೇಬೇಕು. ಇಲ್ಲವಾದರೆ ಹಳಿ ಮತ್ತು ಡಾಮರಿನ ನಡುವಣ ಸಣ್ಣ ವ್ಯತ್ಯಾಸವೂ ನಮ್ಮನ್ನು ಅನಿಯಂತ್ರಿತವಾಗಿ ದಾರಿಯಿಂದಾಚೆಗೆ ಎಸೆದುಬಿಡಬಹುದು. ತಿರುಗಾಸುಗಳಲ್ಲಂತೂ ಚಕ್ರ ಧಾರಾಳ ಜಾರಬಹುದು! ಒಂದೆಡೆ ಕಿಶೋರ್ ಬೈಕ್ ಹಾಗೇ ಜಾರಿ ಮಗುಚಿದರೂ ನಿಧಾನಿಯಾಗಿದ್ದುದರಿಂದ ಅಪಾಯವಾಗಲಿಲ್ಲ. ತೋರಿಕೆಗೆ ಕಾಡು, ವನ್ಯ ಎಂಬ ಭಾವ ಬಂದರೂ ಮಾರ್ಗದಂಚಿನ ಜನವಸತಿ ಉದ್ದಕ್ಕೂ ಅಲ್ಲಲ್ಲಿ ಇತ್ತು. ಇತರ ವಾಹನ ಸಂಚಾರ ಧಾರಾಳವೇ ಇದ್ದರೂ ಎಲ್ಲ ಮುಚ್ಚಿದ ದೇಹದವು; ದ್ವಿಚಕ್ರಗಳು ವಿರಳ. ಕೆಲವು ವಲಯಗಳಲ್ಲಿ ಚಿರಿಪಿರಿ ಮಳೆಯೋ ಹಾದು ಹೋಗುವ ಮೋಡವೋ ನಮ್ಮ ದೃಷ್ಟಿ ಮಂದ ಮಾಡಿ, ಸಣ್ಣದಾಗಿ ಕಾಡಿತ್ತಾದರೂ ಭಯ ಹುಟ್ಟಿಸಲಿಲ್ಲ. 


ಆ ದಿನಗಳಲ್ಲಿ ರೈಲು ಸವಾರಿ ದಿನಕ್ಕೆ ಒಂದೇ ಬಾರಿ (ಎದುರುಬದುರಿನ ಪ್ರಯಾಣ) ಇದ್ದಿರಬೇಕು. ಈಗ ಬಹುಶಃ ಪೂರ್ಣ ಓಟ ಇಲ್ಲ. ಡಾರ್ಜಿಲಿಂಗ್ ಶಿಖರವಲಯದಲ್ಲಿ ಕೇವಲ ೧೪ಕಿಮೀ ವಿಹಾರದ ಸುತ್ತು ಮಾತ್ರ ಹಾಕುತ್ತದಂತೆ. (ವಿಡಿಯೋ ನೋಡಿ) ನಡುವೆ ಎಲ್ಲೋ ಒಂದು ನಿಲ್ದಾಣದಲ್ಲಿ ಮಾತ್ರ ನಮಗೆ ರೈಲಿನ ದರ್ಶನ ಲಾಭವಾಗಿತ್ತು. ಎರಡು ಡಬ್ಬಿಯ ಮತ್ತು ಬಲು ನಿಧಾನೀ ಚುಕುಪುಕುವನ್ನು ಪೂರ್ಣ ಮನಸ್ಸಿನಲ್ಲಿ ನಿಂತು ನೋಡಲು, ಅದರ ಪೂರ್ಣ ಬಳುಕು ಓಟದ ಚಂದವನ್ನು ಕಣ್ಣು

ಹಾಗೂ ಕ್ಯಾಮರಾದಲ್ಲಿ ತುಂಬಿಕೊಳ್ಳಲು ಚಿರಿಪಿರಿ ಮಳೆ ಬಿಡಲಿಲ್ಲ. ಅಂದು ಇಂದಿನಂತೆ ಬಹು ಸಾಮರ್ಥ್ಯದ ಡಿಜಿಟಲ್ ಕ್ಯಾಮರಾಗಳಿರಲಿಲ್ಲ. ನನ್ನಲ್ಲಿದ್ದ ಸಾಮಾನ್ಯ ಕ್ಯಾಮರಾದಲ್ಲಿ ಪ್ರತಿ ಕ್ಲಿಕ್ ಎಂದರೂ ರೀಲು, ಸಂಸ್ಕರಣ ಮತ್ತು ಮುದ್ರಣದ ವೆಚ್ಚಗಳ ಲೆಕ್ಕ ಕಾಡುತ್ತಿತ್ತು. ಮತ್ತೆ ಮಳೆಯಲ್ಲಿ ಕ್ಯಾಮರಾವನ್ನು ಪ್ಲ್ಯಾಸ್ಟಿಕ್ ಆವರಣದಿಂದ ಹೊರತೆಗೆಯುವ ಯೋಚನೆಯೂ ಕಷ್ಟದ್ದೇ ಇತ್ತು! 

ಏರುದಾರಿಯಲ್ಲಿ ಚಳಿ, ಮಳೆಯೂ ಏರುತ್ತಿದ್ದಂತೆ ನಾವು ಹಸಿವಿಲ್ಲದಿದ್ದರೂ ದೇಹಕ್ಕೆ ಬಿಸಿಯೂಡಲು ಚಾದುಕಾನುಗಳನ್ನು

ಮೂರು ನಾಲ್ಕು ಕಡೆ ಬಳಸಿಕೊಂಡೆವು. ಡಾರ್ಜಿಲಿಂಗ್ ಪೇಟೆ ಸಮೀಪಿಸುತ್ತಿದ್ದಂತೆ ಮಳೆ, ಗಾಳಿ ಭರ್ಜರಿಯೇ ಹೊಡೆಯಿತು. ಸಾಮಾನ್ಯ ಪಾದರಕ್ಷೆಯೊಡನೆ, ಕೈಗವುಸು ಇಲ್ಲದ ಸ್ಥಿತಿಯಲ್ಲಿ ಸವಾರರಿಬ್ಬರಿಗೂ ಕೈ ಪಾದಗಳು ಮರಗಟ್ಟಿದ ಅನುಭವದೊಡನೆ ಹೊಟ್ಟೆ ನಡುಕವೇ ಬರುತ್ತಿತ್ತು. ಹಾಗಾಗಿ ಒಂದೆರಡು ಡಾಬಾಗಳಲ್ಲಿ ಔಪಚಾರಿಕ ಮೇಜು ಕುರ್ಚಿ ಬಿಟ್ಟು, ಅವರ ಸೌದೇ ಒಲೆಗಳಿಗೇ ಮುತ್ತಿಗೆ ಹಾಕಿ ಕುಳಿತು, ಚಾ ಕುಡಿದು ಸುಧಾರಿಸಿಕೊಂಡಿದ್ದೆವು. (ಈ ಕಾಲದಲ್ಲಿ ಗ್ಯಾಸ್ ಸ್ಟವ್ ಬಂದು, ಚಳಿ ಕಾಯಿಸುವ ಅವಕಾಶ ಕಡಿಮೆ!) ಅಪರಾಹ್ನ ಒಂದು

ಮುಕ್ಕಾಲರ ಹೊತ್ತಿಗೆ ನಾವು ಡಾರ್ಜಿಲಿಂಗ್ ಸೇರಿದ್ದೆವು. 

ವಾತಾವರಣದ ತೀವ್ರತೆ ಮತ್ತು ನಮ್ಮ ತಯಾರಿಯ ಕೊರತೆ ಸೇರಿ ಗಾಢ ಪ್ರಭಾವಿಸಿದ್ದರಿಂದ ಡಾರ್ಜಿಲಿಂಗ್ ಮುಟ್ಟಿದ ಸಂಭ್ರಮ, ಸಮಯ ಕಳೆಯದೆ ನಗರ ಸುತ್ತುವ ಯೋಜನೆಗಳೆಲ್ಲ ಬೆಟ್ಟ ಹತ್ತಿತ್ತು! ಹೆಚ್ಚು ಚೌಕಾಸಿಗಿಳಿಯದೆ, ತುರ್ತಾಗಿ ಸಿಕ್ಕ ಹೋಟೆಲ್ ಕೋಣೆ ಹಿಡಿದೆವು. ಮತ್ತಷ್ಟೇ ಚುರುಕಾಗಿ ಗಂಟು ಗದಡಿ ಬಿಚ್ಚಿ ಬಿಸಾಡಿ, ಒಣ ಬಟ್ಟೆಗಳಿಗೆ ಬದಲಿ, ಹಾಸುಗೆಯ

ಮೂರು ಪದರದ ರಗ್ಗುಗಳ ನಡುವೆ ಕನಿಷ್ಠ ಅರ್ಧ ಗಂಟೆಯಾದರೂ ಹುಗಿದುಹೋದ ಮೇಲಷ್ಟೇ ಜೀವ ಬಂದ ಹಾಗಿತ್ತು! ಉಪಾಧ್ಯರ ಉಷ್ಣಮಾಪಕ ತಾಪಮಾನ ೧೭ ಡಿಗ್ರಿ ಎಂದು ಸರಿಯಾಗಿಯೇ ತೋರಿದ್ದಿರಬೇಕು. ಆದರೆ ನಮಗೆ ಸಿಕ್ಕ ಶೀತಲ ಮಳೆಯ ಹೊಡೆತ, ಮಂಜು ಬೀಸುಗಾಳಿ ಸೇರಿ ತಾಪಮಾನ ಶೂನ್ಯವನ್ನೇ ಮುಟ್ಟಿದ್ದ ಅನುಭವ ನಮಗಾದದ್ದಿರಬೇಕು. 


ಡಾರ್ಜಿಲಿಂಗ್ ಪ್ರತ್ಯೇಕ ರಾಜ್ಯದ ಸ್ಥಾನವನ್ನು ಕೇಳುತ್ತಿದ್ದ ಕಾಲವದು. ನಾವು ತಲಪಿದಂದು ಅದರ ಲೆಕ್ಕದಲ್ಲಿ ಬಂದ್ ಆಚರಣೆಯಲ್ಲಿದ್ದದ್ದು ನಮ್ಮ ಜಡಕ್ಕೆ ಅನುಕೂಲವೇ ಆಯ್ತು. ಸಂಜೆ ಸಣ್ಣದಾಗಿ ಬಂದಾದ ಪೇಟೆಯೊಳಗಿನ ಒಂದಷ್ಟು ದಾರಿಗಳನ್ನು ನಡೆದು ನೋಡಿದ್ದಷ್ಟೇ ಲಾಭ. ಹೋಟೆಲಿನವನು ಸೂಚಿಸಿದಂತೆ, ಮರುದಿನ ಬೆಳಿಗ್ಗೆ ಸ್ಥಳೀಯ ‘ಹುಲಿಗುಡ್ಡೆ’ (ಟೈಗರ್ ಹಿಲ್) ನೆತ್ತಿಯಿಂದ ಸುದೂರದ ‘ಚಿನ್ನದ ಬೆಟ್ಟ’ದ (ಕಾಂಚನಗಂಗಾ) ನೆತ್ತಿಯ ಮೇಲೆ ಉದಯ ಭಾಸ್ಕರನ ಕಿರಣಲೀಲೆಯನ್ನು ನೋಡುವುದಿತ್ತು. ಅದಕ್ಕೆ ಅಲ್ಲಿನ ಜೀಪ್ ಚಾಲಕರ ಬಳಗ ಸಂಜೆಯೇ ಹೋಟೆಲ್ ಸುತ್ತಿ ಗಿರಾಕಿ ಗಟ್ಟಿ ಮಾಡಿಕೊಂಡಿದ್ದರು. ಬೆಳಿಗ್ಗೆ ಬೇಗ ಏಳುವ ನೆಪ ಸೇರಿ ಬೇಗನೇ ಹಾಸುಗೆ ಸೇರಿಕೊಂಡೆವು. (ಔ.೭೫೦೦, ತಾ. ೧೭.೫, ದಿನದ ಓಟ ೮೦ ಕಿಮೀ) 

ಹೋಟೆಲಿನವ ಮೂರೂವರೆಗೇ ನಮ್ಮನ್ನೆಚ್ಚರಿಸಿದ್ದ. ಜೀಪೂ ಸರಿ ಸಮಯಕ್ಕೇ ಬಂದು

ಒಯ್ದಿತ್ತು. ಪೂರ್ಣ ಮಲಗಿದ್ದ ಪೇಟೆ ಮಂಜಿನಲ್ಲಿ ಮುಳುಗಿ ತಟಕಿಕ್ಕುತ್ತಿತ್ತು. ಬೆಚ್ಚನೆ ಹೋಟೆಲೊಳಗಿಂದ ಹೊರಬಿದ್ದ ನಮಗೆ ಒಮ್ಮೆಗೆ ಚಳಿ ಮೂಳೆಯನ್ನೇ ಕೊರೆಯುವಂತನ್ನಿಸಿತ್ತು. ಆದರೆ ಮುಚ್ಚಿದ ಜೀಪಿನೊಳಗೆ ಆರೆಂಟು ಮಂದಿಯೊಡನೆ ಬಿಗಿದು ಕುಳಿತದ್ದರಿಂದ ತತ್ಕಾಲೀನವಾಗಿ ಬಚಾವಾದೆವು. (ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಇಂದಿನಗಳಲ್ಲಿ?) ಜೀಪು ಅಂಕಾಡೊಂಕಿನ ದಾರಿಯಲ್ಲಿ ಎಲ್ಲೆಲ್ಲೋ ಏರಿಳಿದು, ಸುತ್ತಿ ಸುಳಿದು, ಬಿಸಿ ಕಾಫಿಯ ಥರ್ಮಸ್ ಫ್ಲಾಸ್ಕ್ ಹೊತ್ತ ಒಂದಿಬ್ಬರು

ತರುಣಿಯರನ್ನೂ ಸೇರಿಸಿಕೊಂಡು, ಸುಮಾರು ಇಪ್ಪತ್ತು ಕಿಮೀ ದೂರದ ಟೈಗರ್ ಹಿಲ್ಲಿನ ತಲೆಯಲ್ಲಿ ಇಳಿಸಿತು. (೨೬-೪-೯೬ ಶುಕ್ರವಾರ ಬೆ. ೬ ಗಂ, ತಾ ೧೦, ಔ. ೮೩೦೦) 

ಜನವೋ ಜನ. ಕೈ ಹೊಸೆಯುತ್ತ, ಮುಖ ತೀಡಿಕೊಳ್ಳುತ್ತಾ ಆ ದಿಣ್ಣೆ, ಈ ಅಟ್ಟಳಿಗೆ ಎಂದೋಡಾಡುತ್ತಿದ್ದರು. ಬಾಯಿಯಲ್ಲಿ ಹಬೆಯಾಡಿಸುತ್ತಾರೋ ಸಿಗರೇಟಿನ ಹೊಗೆಬಿಡುತ್ತಾರೋ ಎಂದು ಅರ್ಥವಾಗದ ಸ್ಥಿತಿ. ಕಾಫಿ ಮಾರುವವರ ಸರಭರ, ಕುಡಿದ ಲೋಟ ತೂರುವವರ ಉಡಾಫೆ, ಹರಟೆಯ ಕಚಪಚ -

ಜನಮರುಳೋ ಜಾತ್ರೆ ಮರುಳೋ! ಇದ್ಯಾವುದರ ಲೆಕ್ಕ ಇಡದ ಸೂರ್ಯ, ಅಂದೂ ಸಕಾಲಕ್ಕೇ ಎದ್ದಿದ್ದ. ಆದರೆ ಮಂಜಿನ ತೆರೆಮರೆಯಾಟದಲ್ಲಿ ಬಲು ದೂರದ ದೃಶ್ಯವೆಲ್ಲ ಮಸಕು, ಮಂಕು. ಕಾಂಚನಗಂಗಾ ಹಿಮಶಿಖರದ ರಜತಕಾಂತಿ ಸುವರ್ಣಕಳೆ ಗಳಿಸುವ ಪ್ರಾಕೃತಿಕ ಅದ್ಭುತ ನಮಗೆ ಅನ್ಯರ ಕಥನದ ಸತ್ಯವಷ್ಟೇ ಆಯ್ತು. ಪಶ್ಚಿಮದ ಮರಳ ತೀರದಲ್ಲಿ ನಿತ್ಯ ಬೀಳ್ಕೊಡುವವರು ಇಲ್ಲಿ ಸ್ವಾಗತಿಸಲು ಬಂದದ್ದು ನೋಡಿ, ಸೂರ್ಯ ನಕ್ಕು ಹಾಡಿರಬೇಕು "ಎಂಥಾ ಮರುಳಯ್ಯಾ ಇದು

ಎಂಥಾ ಮರುಳೋ!" 

ನನಗೆ ಡಾರ್ಜಿಲಿಂಗಿನ ಪ್ರಧಾನ ಆಕರ್ಷಣೆ ಎಚ್.ಎಂ.ಐ (ಹಿಂದುಸ್ತಾನ್ ಮೌಂಟೇನೇರಿಂಗ್ ಇನ್ಸ್‍ಟಿಟ್ಯೂಟ್). ಅದರಲ್ಲಿ ಖುದ್ದು ಎವರೆಸ್ಟ್ ವೀರ ತೇನ್ಸಿಂಗರಿಂದ (೧೯೧೪-೧೯೮೬) ಪರ್ವತಾರೋಹಣದ ಪಾಠ ಕಲಿತವರು ನನ್ನ ಪರ್ವತಾರೋಹಣದ ಗುರು – ಮೈಸೂರಿನ ವಿ.ಗೋವಿಂದರಾಜ್. ಯೋಜನಾ ಹಂತದಲ್ಲಿ, ಯಾವುದಕ್ಕೂ ಇರಲಿ ಎಂದು ಗೋವಿಂದರಾಜರಿಂದ ಒಂದು ಪರಿಚಯದ ಪತ್ರವನ್ನೂ

ಬರೆಸಿಟ್ಟುಕೊಂಡಿದ್ದೆ. ಮತ್ತೆ ದಕ ವಲಯದಲ್ಲಿ ೧೯೭೫ರಿಂದೀಚೆಗೆ, ನನ್ನ ಪರ್ವತಾರೋಹಣ ಸಾಧನೆಯ ಸೂಕ್ಷ್ಮಚಿತ್ರಣವನ್ನು ಇಂಗ್ಲಿಷಿನಲ್ಲಿ ಸಜ್ಜುಗೊಳಿಸಿಕೊಂಡಿದ್ದೆ. ಏನಲ್ಲದಿದ್ದರೂ ನನಗೆ ಬಹು ಗೌರವಾನ್ವಿತ ಸಂಸ್ಥೆಯ ವರಿಷ್ಠನೊಡನೆ (ಗಮನಿಸಿ - ತೇನ್ಸಿಂಗ್ ಬದುಕಿರಲಿಲ್ಲ) ನಾಲ್ಕು ಮಾತಾಡಲಿದ್ದೇನೆಂಬ ಉತ್ಸಾಹ ತುಸು ಹೆಚ್ಚೇ ಇತ್ತು. ಆದರೆ ಅಲ್ಲಿ ಪ್ರಕೃತಿಪರ ಚಟುವಟಿಕೆಗಳೆಲ್ಲ ಸಂಸ್ಥೀಕರಣದ ಬಿಸಿಯಲ್ಲಿ ಸತ್ತೇ ಹೋಗಿತ್ತು. ಸೇನೆಯಲ್ಲಿ ಸೇವಾ ಹಿರಿತನದವರು ಯಾರೋ



ಸಂಸ್ಥೆಯ ನಿರ್ದೇಶಕರಾಗಿದ್ದರು. ಅವರ ಆಗಮನ ಮತ್ತು ಸಾರ್ವಜನಿಕ ಭೇಟಿಯ ಅವಧಿಗಳು ನಮ್ಮ ಅನುಕೂಲಕ್ಕಿರಲಿಲ್ಲ. "ಕರ್ನಾಟಕದಿಂದ ಬೈಕೇರಿ ಬಂದಿದ್ದಾರೆ, ಪರ್ವತಾರೋಹಿಗಳು, ನಮ್ಮ ಸಂಸ್ಥೆಯದೇ ಹಿರಿಯ ವಿದ್ಯಾರ್ಥಿಯ ಶಿಷ್ಯ ಬಳಗ..." ಇತ್ಯಾದಿ ಅಲ್ಲಿದ್ದ ಯಾರ ಕುತೂಹಲವನ್ನೂ ಕೆರಳಿಸಲಿಲ್ಲ. "ಬಾದ್ ಮೆ ಆವೋ" ಕೇಳಿಸಿಕೊಂಡು ಇಳಿದು ಹೋದೆ. ಆಮೇಲೂ ಹೋಗುವ ‘ದರ್ದು’ ನಮಗೇನೂ ಇರಲಿಲ್ಲ. ಎಷ್ಟೇ ಭವ್ಯ ಇತಿಹಾಸವುಳ್ಳ ಸಂಸ್ಥೆಯೂ ಬದಲುವ ಕಾಲಕ್ಕೆ ಸ್ಪಂದಿಸುವ ಸಾಮರ್ಥ್ಯದಿಂದಷ್ಟೇ ಉಪಯುಕ್ತ ಅನ್ನಿಸಬಹುದು,

ಗೌರವಾರ್ಹವಾಗಬಲ್ಲುದು. ವರ್ತಮಾನಕ್ಕೆ ಅಳವಡದಿರುವ ಆದರ್ಶ ಪುಸ್ತಕದ ಬದನೇಕಾಯಿ. 

ನಿರಾಶೆಯಲ್ಲಿ ನಾವು ಪದ್ಮಜಾ ನಾಯ್ಡು ಪ್ರಾಣಿಸಂಗ್ರಹಾಲಯದತ್ತ ಹೋದೆವು. ಅದು ಮತ್ತು ಅದರ ವಿಸ್ತರಣೆಯಂತಿದ್ದ ಹಿಮಚಿರತೆ ಮತ್ತು ಹಿಮತೋಳಗಳ ಬಂಧೀಖಾನೆಗಳನ್ನೂ ನೋಡಿದೆವು. ಹಿಂದೆಲ್ಲ ಸರ್ಕಸ್ ಕಂಪೆನಿಗಳೂ ಸಂಚಾರಿ ಮೃಗಾಲಯಗಳೂ ಹುಲಿ ಸಿಂಹಗಳನ್ನು ಟಯರ್ ಗಾಡಿಗಳಲ್ಲಿಟ್ಟು ಊರೂರಿಗೆ ಒಯ್ದು ಪ್ರದರ್ಶನ

ಮಾಡುವುದನ್ನು ನೋಡಿದ್ದೇನೆ. ಇಲ್ಲಿ ಸರಕಾರೀ ಖಾಯಂ ವ್ಯವಸ್ಥೆ ಅದೇ ಕಿಷ್ಕಿಂಧೆ ಮತ್ತು ಅಷ್ಟೇ ಕೊಳಕಾಗಿದ್ದದ್ದೂ ನಮ್ಮ ನಿರಾಶೆಗೆ ಪುಟವಿಟ್ಟಿತ್ತು. ಸಾಹಸಯಾನ ಮುಗಿದ ಹೊಸದರಲ್ಲೇ ನಾವು ಭೇಟಿ ಕೊಟ್ಟ ವನಧಾಮಗಳ ಕುರಿತಂತೆ, ಒಂದು ಸಮೀಕ್ಷೆಯನ್ನು ಇಂಗ್ಲಿಷಿನಲ್ಲಿ ಬರೆದಿದ್ದೆ. ಅದನ್ನು ಈ ಧಾರಾವಾಹಿಯ ಕೊನೆಯಲ್ಲಿ ಪ್ರಕಟಿಸುತ್ತೇನೆ. ಇದರ ಕುರಿತ ಹೆಚ್ಚಿನ ವಿವರಗಳನ್ನು ನೀವಲ್ಲಿ ಕಾಣಬಹುದು. 

‘ವಿರಾಮ’ ಪದಕ್ಕೆ ನಮ್ಮ ಸಾಹಸಯಾನದಲ್ಲಿ ಅವಕಾಶವೇ ಇರಲಿಲ್ಲ. ಹಾಗೇ ಆರಾಧನಾ ಕೇಂದ್ರಗಳ ಭೇಟಿ ಅಥವಾ ಪೇಟೆ ಸುತ್ತುವ ಆಸಕ್ತಿಯೂ ನಮಗಿರಲಿಲ್ಲ. ಹವಾಮಾನದಲ್ಲಿ ಚಳಿ ಇದ್ದರೂ ಮಂದ ಬಿಸಿಲು ಕಾಯುತ್ತಿತ್ತು. ಆದರೆ ಅದು ಎಂದೂ ಬದಲಾಗಬಹುದು ಎನ್ನುವ ಅರಿವು ನಮಗಿದ್ದುದರಿಂದ, ಕೂಡಲೇ (ಹನ್ನೊಂದೂವರೆ) ಗಿರಿಪಟ್ಟಣವನ್ನು ಬಿಟ್ಟೆವು. ಈಗ ಮೊದಲೇ ಹೇಳಿದ ಒಳದಾರಿ, ಅರ್ಥಾತ್ ಮಿರಿಕ್ ದಾರಿ ನಮ್ಮ ಆಯ್ಕೆ. ಇದು ಸುಮಾರು ಹದಿನೈದು ಕಿಮೀ ಉಳಿತಾಯ ಮಾಡುವುದಕ್ಕೂ ಮಿಗಿಲಾಗಿ ಘಟ್ಟದ ಇನ್ನೊಂದು ಮಗ್ಗುಲನ್ನು ತೋರಿಸುತ್ತದೆ ಎನ್ನುವುದು ನಮಗೆ ಮುಖ್ಯವಾಗಿತ್ತು. ಮಿರಿಕ್ ದಾರಿ ಕೊನೆಯ ಹಂತದಲ್ಲಿ ಮಹಾನಂದಾದ ಅತಿಥಿಗೃಹಕ್ಕೊಂದು ಒಳದಾರಿಯೂ ಇದೆ ಎಂದು ನಮಗೆ ತಿಳಿದಿತ್ತು. ಹಾಗಾಗಿ ರಾತ್ರಿಗೆ ಅಲ್ಲೇ ತಂಗುವುದು ಎಂದು ತೀರ್ಮಾನಿಸಿಯೇ ಡಾರ್ಜಿಲಿಂಗ್ ಹಿಂದುಳಿಸಿದ್ದೆವು. 

ಇಳುಕಲು ತೀವ್ರ ಮತ್ತು ದಾರಿ ತುಸು ಹರಕು. ಮಳೆಯ ಲಕ್ಷಣಗಳೇನೂ ಇರಲಿಲ್ಲವಾದರೂ ಚಳಿ ಬಿಟ್ಟಿರಲಿಲ್ಲ. ನಾವು ಹಿಂದಿನ ದಿನದ್ದೇ ದಿರುಸಿನ ಬಂದೋಬಸ್ತಿನಲ್ಲೇ ಇದ್ದೆವು. ಮಿರಿಕ್ ಹಳ್ಳಿಯ ಡಾಬಾವೊಂದರಲ್ಲಿ ಊಟದ ಪರ್ಯಾಯ ವ್ಯವಸ್ಥೆಯನ್ನು ಮುಗಿಸಿಕೊಂಡು ಮುಂದುವರಿದೆವು. (ಗಂಟೆ ೧-೩೦, ಔ. ೬೩00) ದೀರ್ಘ ಸವಾರಿಗಳಲ್ಲಿ ನಮ್ಮೆರಡೂ ಬೈಕುಗಳು ಲಹರಿಯ ಮೇಲೆ ಒಂದೆರಡು ಕಿಮೀ ಹಿಂದೆ ಮುಂದಾಗುವುದಿತ್ತು. ಸಂಶಯಾಸ್ಪದ ಕವಲು ಅಥವಾ ಬಹುಕಾಲ ಹಿಂದಿನವರು ಕಾಣದಿದ್ದರೆ ಮಾತ್ರ ಕಾದು, ಜತೆಯಾಗುತ್ತಿದ್ದೆವು ಅಷ್ಟೆ. ಘಟ್ಟ ಪೂರ್ಣ ಇಳಿದು ಮುಗಿಯಿತು ಎಂದನ್ನಿಸಿದಲ್ಲಿ ಮುಂದಿದ್ದ ನಾನು ಸಹಜವಾಗಿ ನಿಲ್ಲಿಸಿದೆ. ಸೂರ್ಯ ನಿಷ್ಕರುಣಿ, ವಿಪರೀತ ಸೆಕೆ. ಮಳೆಕೋಟು, ಮಂಗನಟೊಪ್ಪಿ, ಸ್ವೆಟ್ಟರ್ ಎಲ್ಲ ಕಳಚಿ, ಅದನ್ನಿಡಲು ಕ್ಯಾರಿಯರ್ ಮೇಲಿನ ದೊಡ್ಡ ಬೆನ್ನಚೀಲ ಎಂದು ನೋಡುವಾಗಲೇ ಗೊತ್ತು – ಚೀಲ ಇಲ್ಲ! ಬಿಗಿದು ಕಟ್ಟಿದ್ದ ಹಗ್ಗ ಮಾತ್ರ ನೇಲುತ್ತಿತ್ತು. ಮಿರಿಕ್ಕಿನಲ್ಲಿ ಊಟ ಮಾಡಿ ಹೊರಡುವಾಗಲೂ ಚೀಲ ಗಟ್ಟಿಯಾಗಿ ಬೆನ್ನಿಗೇ ಇದ್ದ ನೆನಪು ದೇವಕಿಗೆ ಸರಿಯಾಗಿತ್ತು. ಅಂದರೆ ದಾರಿಯಲ್ಲೆಲ್ಲೋ ಬಿದ್ದಿರಬೇಕು. ನಮ್ಮಿಂದ ಹಿಂದಿದ್ದ ಕಿಶೋರ್, ಉಪಾಧ್ಯ ಅದನ್ನು ಕಂಡು, ತಂದಾರು ಎಂದು ಆಶಿಸಿದ್ದೇ ಬಂತು. ಮೂರೇ ಮಿನಿಟಿನಲ್ಲಿ ಬಂದ ಅವರ ಗಮನಕ್ಕದು ಸಿಗಲೇ ಇಲ್ಲ. ಅಂದರೆ ಸುಮಾರು ಹದಿನೈದು ಕಿಮೀ ಹಿಂದಿನ ಮಿರಿಕ್ಕಿನೊಳಗೇ ಎಲ್ಲೋ ದಾರಿ ಬದಿಗೆ ಉರುಳಿ ಸೇರಿಕೊಂಡಿರಬಹುದು ಎಂದು ತರ್ಕಿಸಿದೆವು. ಇನ್ನೇನು, ಈಗ ಬರುತ್ತೇವೆ ಎಂದುಕೊಂಡೇ ನಮ್ಮ ಸ್ವೆಟ್ಟರ್ ಕೋಟುಗಳನ್ನೆಲ್ಲ ಕಿಶೋರ್ ಜೋಡಿ ಬಳಿ ಕೊಟ್ಟು, ನಾವಿಬ್ಬರು ಹಿಂದೆ ಹೊರಟೆವು. 

ನಿಧಾನಕ್ಕೆ ಬೈಕೋಡಿಸುತ್ತ, ರಸ್ತೆಯ ಎರಡೂ ಬದಿಗಳನ್ನು ಕಣ್ಣೋಟದಲ್ಲೇ ಜಾಲಾಡುತ್ತಾ ಸಿಕ್ಕ ಜನ ಹಳ್ಳಿ ಕಾಡೆಂದಿಲ್ಲದೆ ನಮ್ಮದೊಂದೇ ಹಲುಬು "ಅಳಿಸಂಕುಲವೆ, ಮಾಮರನೆ, ಬೆಳದಿಂಗಳೆ, ಕೋಗಿಲೆಯೆ, ಕರೆದು ತೋರಿರೆ. ಚಿಲಿಮಿಲಿ ಎಂದೋದುವ ಗಿಳಿಗಳಿರ ಸರವರದೊಳಗಾಡುವ ಹಂಸಗಳಿರ, ಸರವೆತ್ತಿ ಪಾಡುವ ಕೋಗಿಲೆಗಳಿರಾ ಎರಗಿ ಬಂದಾಡುವ ತುಂಬಿಗಳಿರಾ ಗಿಡಗಹ್ವರದೊಳಗಾಡುವ ನವಿಲುಗಳಿರಾ ನೀವು ಕಾಣಿರೆ ಕಾಣಿರೇ..." ನಮ್ಮ ಚೀಲವಾ! ನಿಷ್ಪ್ರಯೋಜಕವಾಗಿ ಮಿರಿಕ್ಕಿನ ಊಟದ ಹೋಟೆಲನ್ನೇ ತಲಪಿದೆವು. ಹ್ಯಾಪ್ಮೋರೆ ಹೊತ್ತು, ಮಹಾಯಾನದ ಮೊದಲ ಪಾದದಲ್ಲೇ ಆದ ಮಹಾನಷ್ಟದ ಲೆಕ್ಕಾಚಾರ ಹಾಕುತ್ತಾ ಬದಲಿ ವ್ಯವಸ್ಥೆಗಳ ಚರ್ಚೆ ಮಾಡುತ್ತಾ ಮತ್ತೆ ಸಿಲಿಗುರಿಯತ್ತ ಹೊರಟೆವು. 

ನಾಲ್ಕೈದು ಕಿಮೀ ಕಳೆದು ಒಂದು ಹಳ್ಳಿ ದಾಟುತ್ತಿದ್ದಂತೆ, ಒಬ್ಬ ಹೆಂಗಸು ನಮ್ಮನ್ನು ಕೂಗಿ ಕರೆದಳು. ಬಾಡಿಹೋದ ಆಶಾಲತೆಗೆ ಅಮೃತವರ್ಷವೇ ಆಯ್ತು. ಗಂಟೆ ಮೊದಲು ಮಿರಿಕ್ ಸಮೀಪದಲ್ಲೇ ನಮ್ಮ ಬೈಕ್ ದಾಟುವಾಗ ಹಗ್ಗ ಕಳಚಿ ಉರುಳಿದ ಚೀಲ ನಡೆದು ಬರುತ್ತಿದ್ದ ಈಕೆಯ ಗಂಡನಿಗೇ ಸಿಕ್ಕಿತ್ತಂತೆ. ಆ ಮುಗ್ಧ ಹಳ್ಳಿಗ ಅದನ್ನು ವಿಲೇವಾರಿ ಮಾಡುವ ಚಿಂತೆಯಲ್ಲಿದ್ದಾಗ, ಪರಿಚಿತ ಜೀಪ್ ಚಾಲಕನೊಬ್ಬ ನೆರವಿಗೆ ಒದಗಿದ್ದ. ಆತ ಮಿರಿಕ್ಕಿಗೆ ಹೋದಾಗ, ಚೀಲವನ್ನು ಪೊಲಿಸ್ ಠಾಣೆಗೆ ಒಪ್ಪಿಸುತ್ತೇನೆ ಎಂದು ಒಯ್ದಿದ್ದ. ನಾವು "ಚೀಲ ಕಂಡಿರಾ" ವಿಚಾರಿಸಿಕೊಂಡು ಹೋಗುವಾಗ ಹಳ್ಳಿಗ ಅದೇ ತಾನೇ ಹಳ್ಳಿ ಮುಟ್ಟಿ ಮನೆ ಸೇರಿಬಿಟ್ಟಿದ್ದ. ಮತ್ತೆ ಹೆಚ್ಚು ಮಾತಾಡದೆ, ನಾನು ಬೈಕನ್ನು ಮಿರಿಕ್ಕಿನತ್ತ ಹೊರಡಿಸಿದೆ. ದೇವಕಿ ಆ ಹೆಂಗಸಿನ ಜತೆ ನಿಂತರೆ, ಹಳ್ಳಿಗ ನನ್ನ ಸಹವಾರನಾದ. ಅದೃಷ್ಟಕ್ಕೆ (ದುರದೃಷ್ಟಕ್ಕೋ?) ದಾರಿಯಲ್ಲಿ ಎದುರಾದ ಬಸ್ಸಿನಲ್ಲಿ ಜೀಪ್ ಚಾಲಕನೇ ಸಿಕ್ಕಿದ. ಅಲ್ಲಿ ಹಳ್ಳಿಗನನ್ನು ಬಸ್ಸಿಗೆ ಬಿಟ್ಟು, ಚಾಲಕನನ್ನೇ ಬೆನ್ನಿಗೆ ಹಾಕಿಕೊಂಡು ಮಿರಿಕ್ ಠಾಣೆಗೇ ಹೋಯ್ತು ಸವಾರಿ. ಪೋಲಿಸಿನವರು ಚೀಲವನ್ನು ಬೇಗನೇ ಬಿಟ್ಟುಕೊಟ್ಟರು. ಒಟ್ಟಾರೆ ಒಂದೆರಡು ಗಂಟೆ ವ್ಯರ್ಥವಾದರೂ, ಚಾಲಕನ ಚಾಲಾಕಿಯಲ್ಲಿ ‘ಇನಾಮು’ ಎಂದು ಮುನ್ನೂರು ರೂಪಾಯಿ ಕೈ ಬಿಟ್ಟರೂ ಎಲ್ಲ ವಸ್ತುಗಳು ಸುಕ್ಷೇಮವಾಗಿಯೇ ನನ್ನ ಕೈ ಸೇರಿದ್ದವು. 

"ಇನಾಮು" ಅತ್ತ ಪೋಲಿಸರಿಗೆ ಕೊಟ್ಟ ಲಂಚ ಎಂದು ನೀವು ಭಾವಿಸಿದರೆ, ತಪ್ಪು. ಇತ್ತ ಹಳ್ಳಿಗ ಹಕ್ಕೊತ್ತಾಯ ಇಟ್ಟ ಬಹುಮಾನ ಎಂದು ಊಹಿಸಿದರೂ ತಪ್ಪೇ. ನಿಜದಲ್ಲಿ ಅದು ಮಧ್ಯವರ್ತಿ ಚಾಲಕನ ಚಾಲಾಕೀ ಸಂಪಾದನೆ! ಅದು ನನ್ನ ಅರಿವಿಗೆ ಬಂದರೂ ಚೀಲ ಸಿಕ್ಕಿದ ಸಂತೋಷದಲ್ಲಿ ನಗಣ್ಯ ಮಾಡಿದೆ. ನಮ್ಮ ನಿಜ ಸಂತೋಷಕ್ಕೆ, ಗುಟ್ಟಾಗಿ ಹಳ್ಳಿಗನಿಗೆ ಪ್ರತ್ಯೇಕ ಇನಾಮು ಕೊಟ್ಟೆವು. ಏತನ್ಮಧ್ಯೆ ದೇವಕಿಗೆ ಸಿಕ್ಕ ಸುಮಾರು ಒಂದು ಗಂಟೆಯ ಹಳ್ಳಿಯ ಖಾಸಾ ಬೈಠಕ್ಕಿನಲ್ಲಿ, ಭಾಷಾ ತೊಡಕುಗಳನ್ನು ಮೀರಿ ಹಳ್ಳಿಗನ ಹೆಂಡತಿ ಮತ್ತು ಬಳಗದೊಡನೆ ವಿಶೇಷ ಪ್ರೀತಿಯಷ್ಟೇ ಸಿಕ್ಕಿತ್ತು. ಅದಕ್ಕೆ ಪ್ರತಿಯಾಗಿ ಮಂಗಳೂರಿಗೆ ಮರಳಿದ ಮೇಲೆ, ಅವರ ಬೇಡಿಕೆಯಂತೇ ಹಲವು ದೇವ ದೇವಿಯರ ಚಿತ್ರಗಳಿದ್ದ ಕೆಲವು ಪುಟ್ಟ ಹಿಂದೀ ಸ್ತೋತ್ರ ಪುಸ್ತಕಗಳನ್ನು ಸಂಗ್ರಹಿಸಿ, ಅಂಚೆಯಲ್ಲಿ ಕಳಿಸಿಯೂ ಕೊಟ್ಟೆವು! ವಂಚನೆ ಎಂಬುದು ವೃತ್ತಿ, ವರ್ಗ, ಭಾಷೆ, ಸಮುದಾಯ, ಧರ್ಮ ಇತ್ಯಾದಿಗಳಿಗೆ ಸಂಬಂಧಿಸಿದ್ದು ಅಲ್ಲವೇ ಅಲ್ಲ; ಕೇವಲ ವೈಯಕ್ತಿಕ. 

ಹಳ್ಳಿ ಬಿಡುವಾಗಲೇ ಸೂರ್ಯಾಸ್ತವಾಗಿತ್ತು. ಬೈಕ್ ಧಾವಿಸುತ್ತಿದ್ದಂತೆ ಶೀತದ ಧಾಳಿಗೆ ನಮ್ಮಲ್ಲಿ ಗುರಾಣಿ ಇಲ್ಲದೇ ಬಳಲಿದೆವು. ಗದಗುಟ್ಟುತ್ತ ಗೆಳೆಯರನ್ನು ಹಿಂದುಳಿಸಿದ ಜಾಗಕ್ಕೆ ಬಂದರೆ, ಅಲ್ಲಿನ ಪೂರ್ಣ ಕತ್ತಲಿನಲ್ಲಿ ಯಾರೂ ಇರಲಿಲ್ಲ! ಅದೃಷ್ಟಕ್ಕೆ ಅಲ್ಲೇ ಸಮೀಪದ ಮನೆಯೊಂದರಲ್ಲಿ ಸುದ್ದಿ ಬಿಟ್ಟಿದ್ದರು. ಕತ್ತಲಾದ ಮೇಲೆ ದಿಕ್ಕೆಟ್ಟು, ಒಳದಾರಿ ಹುಡುಕಿ ಸುಖ್ನಾ ಸೇರಲು ಧೈರ್ಯ ಸಾಲದೇ ನೇರ ಸಿಲಿಗುರಿಗೆ ಹೋಗಿದ್ದರು. ನೆನಪಿರಲಿ, ಅದು ಚರವಾಣಿಯ ದಿನಗಳಲ್ಲ. ನಾವೂ ಸಿಲಿಗುರಿಗೆ ಹೋದರೂ ಅಲ್ಲಿ ಪರಸ್ಪರ ಭೇಟಿ ಸಾಧ್ಯವಾಗುವಂತೆ ನಮ್ಮಲ್ಲಿ ಒಂದು ಪೂರ್ವ ನಿಶ್ಚಿತ ವಿಳಾಸ ಇರಲಿಲ್ಲ. ಮತ್ತೆ ಹೆಚ್ಚು ಯೋಚಿಸಲು ಮುಸುಕಿದ್ದ ಗಾಢಾಂಧಕಾರ, ಏರುತ್ತಿದ್ದ ಚಳಿಯೂ ಬಿಡಲಿಲ್ಲ. ನಾವು ಆ ಮನೆಯವರಲ್ಲೇ ವಿಚಾರಿಸಿಕೊಂಡು, ಪೂರ್ಣ ಅಜ್ಞಾತ ಮತ್ತು ಶುದ್ಧ ಕಾನನಾಂತರದ ಒಳದಾರಿ ಹಿಡಿದರೂ ಸುಕ್ಷೇಮವಾಗಿ ವನಧಾಮ ಸೇರಿಕೊಂಡೆವು. ಅಲ್ಲಿನ ಅತಿಥಿಗೃಹವೂ ನಮ್ಮನ್ನೇ ಕಾದಂತಿತ್ತು. ನಿರಾತಂಕವಾಗಿ ಉಂಡು, ನಿಶ್ಚಿಂತೆಯಲ್ಲಿ ಮಲಗಿದೆವು. (ದಿನದ ಓಟ ೧೬೫ ಕಿಮೀ) 

(ಮುಂದುವರಿಯಲಿದೆ)

3 comments:

  1. ಒಳ್ಳೆಯ ಧೈರ್ಯ ಮಾರಾಯರೆ..ಅಪರಿಚಿತ ಜಾಗದಲ್ಲಿ ದೇವಕಿ ಒಬ್ಬ ರೇ ಇರುವುದು, ಕತ್ತಲೆ ಯಲ್ಲಿ ಬೈಕ್ನಲ್ಲಿ ಹೋಗುವುದು.ಜೋಡಿ ಸರಿಯಾಗಿದೆ

    ReplyDelete
  2. ಆಪದ್ಧರ್ಮ!! ಅದಕ್ಕೂ ಮಿಗಿಲಾಗಿ, ಹಿಂದಿನ ಅಧ್ಯಾಯದಲ್ಲಿ ಉಲ್ಲೇಖಿಸಿದ ‘ಕಾಳಜಿಪೂರ್ಣ ನಿರುತ್ತೇಜಕರ’ ಮಾತು ನಿಜ ಮಾಡುವಂತ ಸೂಚನೆಯೂ ನಮಗೆ ಸಿಕ್ಕಲಿಲ್ಲ. ಆ ಹಳ್ಳಿ ಬಡವೆ ದೇವಕಿಗೆ ಚಾ ಕೊಡಲು ಹೊರಟಿದ್ದಳು!

    ReplyDelete
  3. ಮುಂದಿನದು ಕಿಶೋರ್ಗಗೂ ನನಗೂ ಭಯಂಕರ ವೇದನೆಯದ್ದೇ ಆಗಿತ್ತು.

    ReplyDelete