(ಪ್ರಾಕೃತಿಕ ಭಾರತ ಸೀಳೋಟ - ೧೨)
ಕೇದಾರ ನಾಥದ ‘ವಿಜಯ’ಕ್ಕೆ ನಾನು ಅನುಭವಿಸಿದ ನೋವು ಹೆಚ್ಚೇ ಆಗಿತ್ತು. ಹಾಗಾಗಿ ಮರುದಿನದ ಬದರೀ ಯಾನದ ಯೋಚನೆಯನ್ನು ನಾನು ಮತ್ತು ದೇವಕಿ ಕೈ ಬಿಟ್ಟೆವು. ಸೋನ್ ಪ್ರಯಾಗಿನಿಂದ ಬದರಿಗೆ ಹೋಗಿ ಮರಳುವಲ್ಲಿ ಕವಲೂರಾಗಿ ಸಿಗುವ ಊರು ಕರ್ಣಪ್ರಯಾಗ್. ಅಲ್ಲಿ ನಮಗೆ ಎರಡು ದಿನದ ವಿಶ್ರಾಂತಿ, ಇತರರು ಬದರೀನಾಥಕ್ಕೆ. (ಇಂದು ದಾರಿಯ ಸಾಧ್ಯತೆಗಳು ತುಂಬ ಬದಲಿವೆ, ಬಿಡಿ.) ತಂಡವಾದರೂ ಸಾಕಷ್ಟು ಸೋತಿದ್ದುದರಿಂದ ಬೆಳಿಗ್ಗೆ (೨೦-೫-೯೦) ಸುಮಾರು ಎಂಟು ಗಂಟೆಯ ಹೊತ್ತಿಗೆ ಎಲ್ಲರು ಒಟ್ಟಾಗಿಯೇ ಸೋನ್ ಪ್ರಯಾಗ್ ಬಿಟ್ಟೆವು.
ರುದ್ರಪ್ರಯಾಗದಲ್ಲೊಂದು ಸೈನ್ಯದ ಆಸ್ಪತ್ರೆ ಕಾಣಿಸಿತು. ಅಲ್ಲಿ ವೈದ್ಯರಿನ್ನೂ ಬಂದಿರಲಿಲ್ಲ. ಹಿರಿಯ ಶುಶ್ರೂಷಕ ಸಹೃದಯತೆಯಲ್ಲೇ ನನ್ನ ಪರೀಕ್ಷೆ ಮಾಡಿದರು. ಮತ್ತೆ ತಾನು ಸೈನಿಕ ಆಸ್ಪತ್ರೆಯ ನಿಯಮಾನುಸಾರ ಸಾರ್ವಜನಿಕ ಚಿಕಿತ್ಸೆ ಕೊಡಲಾಗದ್ದಕ್ಕೆ ಮೊದಲು ಕ್ಷಮೆ ಯಾಚಿಸಿದರು. ಅನಂತರ "ಈಗಾಗಲೇ ನಿಮ್ಮಲ್ಲಿ ಇರುವ ನೋವು ಉಪಶಮನಕಾರಕ ನುಂಗಿ ಸುಧಾರಿಸಿಕೊಳ್ಳಿ. ಊರಿಗೆ ಹೋಗಿ ಅವಶ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಿ" ಎಂದು ಸಲಹೆಯನ್ನಷ್ಟೇ ಕೊಟ್ಟರು.
ಮುಂದೆ ಯಾವುದೋ ಸಾಕಷ್ಟು ದೊಡ್ಡ ಪೇಟೆಯಲ್ಲಿ ಸಾಗಿದ್ದಂತೆ ಹಿಂದಿಯಲ್ಲಿ ವೈದ್ಯಕೀಯ ಚಿಕಿತ್ಸಾಲಯ ಒಂದರ ಬೋರ್ಡು ಕಾಣಿಸಿತು. ಸಾಂಪ್ರದಾಯಿಕ ವೇಷಭೂಷಣದ ವೈದ್ಯಬ್ರಹ್ಮ, ಎದುರೊಂದಷ್ಟು ರೋಗಿಗಳ ಸಂತೆ ನಡೆಸಿದ್ದರು. ಅಸಹಾಯಕತೆಯಷ್ಟೇ ನನ್ನನ್ನು ಅಲ್ಲಿಗೆ ದೂಡಿದ್ದಿರಬೇಕು. ಎರಡು ಮಿನಿಟು ನನ್ನ ಹರಕು ಮುರುಕು ಹಿಂಗ್ಲಿಷ್ ವಿವರಣೆ ಕೊಟ್ಟೆ. ಸುಮ್ಮನೆ ಕೇಳಿದ ಪುಣ್ಯಾತ್ಮ, ಆಸನ ಬಿಟ್ಟೇಳದೆ, "ಹರೀ ಕಾ ನಾಮ್ ಲೋ. ಸುನಾ ನೈ ಕ್ಯಾ - ತೇನ ವಿನಾ ತೃಣಮಪಿ ನ ಚಲತಿ...." ಎಂದು ಪ್ರವಚನ ಶುರು ಮಾಡಿದ. ಮಾಮೂಲೀ ದಿನಗಳಲ್ಲಾಗಿದ್ದರೆ ನಾನು ಸುಮ್ಮನೆ ನಕ್ಕು ಬರುವ ಪ್ರಸಂಗ. ಅಲ್ಲಿ ಮಾತ್ರ ನನ್ನ ನೋವು ನುಡಿಸಿತ್ತು, "ನನಗೆ ದೈಹಿಕ ಬೇನೆ ಮಾತ್ರ ಇದೆ, ಮಾನಸಿಕ ಅಲ್ಲ!"
ಅಪರಾಹ್ನ ಒಂದೂವರೆಗೆ ಕರ್ಣಪ್ರಯಾಗದಲ್ಲಿ ಎಲ್ಲ ಒಟ್ಟಿಗೆ ಊಟ ಮಾಡಿದೆವು. ಮತ್ತೆ ನಾವು ಹಿಡಿದ ಹೋಟೆಲ್ ಗುರುತಿಟ್ಟುಕೊಂಡು, ನಾಲ್ಕು ಬೈಕು ಮತ್ತು ಏಳು ಮಂದಿ ಬದರಿಯತ್ತ ಸಾಗಿದರು.
(ಔ.೨೬೦೦. ನಮ್ಮ ದಿನದ ಓಟ ೧೦೮ ಕಿಮೀ)
ಪ್ರಯಾಗಗಳೆಲ್ಲವೂ ನಮ್ಮ ಕೂಡ್ಲುಗಳು ಅರ್ಥಾತ್ ನದಿ ಸಂಗಮಗಳು. ನಾಲ್ಕೈದು ಪುಟ್ಟ ಕೋಣೆಗಳ, ಒಂದು ಮಾಳಿಗೆಯ ಬಡಕಲು ಹೋಟೆಲ್ ನಮ್ಮದು. ನಮ್ಮ ಅದೃಷ್ಟಕ್ಕೆ ನೇರ ಸಂಗಮಕ್ಕೆ ಅಭಿಮುಖವಾದ ಮಾಳಿಗೆ ಕೋಣೆಯೇ ಸಿಕ್ಕಿತ್ತು. ಹೋಟೆಲಿನ ಹಿತ್ತಲಿನಲ್ಲೇ ಎಂಬಂತೆ ತಗ್ಗಿನಲ್ಲಿ ಶಿವನ ಪುಟ್ಟ ಗುಡಿ, ಎದುರು ಬಳಕಾಡುವ ಎಳೆ ಅರಳಿ ಸಸಿ. ಆಚೆಗೆ ಮೈಸೊಕ್ಕಿನ ದಿನಗಳಲ್ಲಿ ನದಿಗಳೆರಡರ ಸೊಕ್ಕಿನ ಉರುಡಾಟದ ಕಳದಂತೆ ತೋರುವ ಕಲ್ಲುಗುಂಡುಗಳ, ಮರಳಿನ ಒಣ ಹಾಸು. ಆ ಕೊನೆಯಲ್ಲಿ ಘನ ಸ್ಫಟಿಕದ ಹಾಸಿನಂತೇ ತೋರುತ್ತಿದ್ದ ನಿರ್ಮಲ ಪ್ರವಾಹ. ಮೂಡುತ್ತರದಿಂದಿಳಿವ ಸರಸ ನಾಟ್ಯಪ್ರವೀಣೆ ಅಲಕನಂದಾದೊಡನೆ, ಮೂಡು ತೆಂಕಣಿಂದ ಬರುವ ಪಿಂಡಾರ ಹಿತವಾಗಿ ತೋಳಿಗೆ ತೋಳು ಬೆಸೆದು ಸಂಭ್ರಮಿಸುವ ಕಲಕಲ. ವಿರಾಮದ ದಿನಗಳ ಜನರ ನದಿ ಸಂಸ್ಕೃತಿ, ಅಪರೂಪಕ್ಕೆ ಬರುವ ಯಾತ್ರಿಗಳ ಸಣ್ಣಪುಟ್ಟ ಧಾರ್ಮಿಕ ಕಲಾಪಗಳಿಗೆಲ್ಲ ನಾವು ಎರಡೂ ದಿನ ಒಳ್ಳೆಯ ಸಾಕ್ಷಿಗಳೇ ಆಗಿದ್ದೆವು.
ಹೊತ್ತು ಹೊತ್ತಿಗೆ ಮೆಟ್ಟಿಲಿಳಿದು, ಪಿಂಡಾರಿ ನದಿಗಡ್ಡಲಾದ, ಬಹುಶಃ ಸೈನ್ಯದ ರಚನೆಯೇ ಆದ ಸಪುರ ಉಕ್ಕಿನ ಸೇತುವೆಯನ್ನು ನಿಧಾನಕ್ಕೆ ನಡೆದು ದಾಟುತ್ತಿದ್ದೆವು. ಎದುರು ದಂಡೆಯಲ್ಲಿ ಸ್ವಲ್ಪ ಪ್ರಶಸ್ತವೆಂದು ಕಂಡುಕೊಂಡಿದ್ದ ಧಾಬಾದಂತದೇ ಖಾನಾವಳಿಯಲ್ಲಿ, ಊಟ ಉಪಾಹಾರ ಮಾಡಿ ಮರಳುತ್ತಿದ್ದೆವು. ಸಮಯ ಕಳೆಯಲು ಯಾವುದೇ ಸಾಹಿತ್ಯ, ಸೌಕರ್ಯ ಇಲ್ಲದ್ದು ಒಂದು ಕೊರತೆ ಎಂದು ಅನ್ನಿಸಲೇ ಇಲ್ಲ. ಸುತ್ತಣ ಮಹಾಮಲೆಯನ್ನು, ಅಂದರೆ ಏಳೆಂಟು ದಶಕಗಳ ಹಿಂದೆಯೇ ಜಿಂ ಕಾರ್ಬೆಟ್ಟನ ಅದ್ಭುತ ವನಗಾಥಾಗಳಿಗೆ ವಾಸ್ತವರಂಗವಾಗಿದ್ದ ಲೋಕವನ್ನು ನಮ್ಮ ಪುಟ್ಟ ಕಣ್ಣುಗಳ ಮಿತಿಯಲ್ಲಿ ತುಂಬಿಕೊಳ್ಳುತ್ತಿದ್ದೆವು. ಉಳಿದಂತೆ ಓತಪ್ರೋತ ಪತ್ರ ಬರೆಯುವುದು, ಅತಿನಿದ್ರೆ ತೆಗೆಯುವುದಷ್ಟೇ ಕೆಲಸ!
ಎರಡು ವರ್ಷಗಳ ಹಿಂದಷ್ಟೇ (೨೦೧೮) ಗೆಳೆಯ ಹರಿಪ್ರಸಾದ್ ಶೇವಿರೆಯ ಒತ್ತಾಯದ ಮೇಲೆ, ಅವರಣ್ಣ ಎಕೆ ರಾವ್ ಕೃಪೆಯಲ್ಲಿ ನಾನು ದೇವಕಿ ಕೇದಾರ-ಬದರಿ ಪ್ರವಾಸ ಬಂದಿದ್ದೆವು. ನಮ್ಮ ಬೈಕ್ ಯಾನದ ಅನುಭವಗಳಿಗೆ ಹೋಲಿಸಿದರೆ ಈ ಯಾತ್ರೆಯೊಂದು ರಾಜಯೋಗ. ಆಗ ಬದರಿನಾಥದಿಂದ ಮರಳುವ ದಾರಿಯಲ್ಲಿ, ಸಣ್ಣ ಚಾ ವಿರಾಮಕ್ಕೆಂದು ಮತ್ತಿದೇ ಕರ್ಣಪ್ರಯಾಗಕ್ಕೆ ಬಂದಿದ್ದಾಗ ನಾವು ನಿಜಕ್ಕೂ ಭಾವುಕರಾಗಿದ್ದೆವು. ಇಪ್ಪತ್ತೆಂಟು ವರ್ಷಗಳ ಹಿಂದಿನ ನೆನಪುಗಳ ಮರುರೂಪಣೆಯಲ್ಲಿ ಮುಳುಗಿದ್ದೆವು. ಒಮ್ಮೆಗೆ ಕಳೆದ ಬಾಲ್ಯ ಮತ್ತೆ ಕಾಣುವ ಯೋಗ ಬಂದಂತಾಗಿತ್ತು. ಮನಸ್ಸಿನ ವೇಗಕ್ಕೆ ಕೂಡಿತಾದಷ್ಟು ಕಾಲುಗಳನ್ನು ಹೊಂದಿಸಿ, ನೆನಪುಗಳ ದುರ್ಬಲ ಎಳೆಗಳಿಗೆ ಹೊಸ ಬಲ ಕೊಡುವಂತೆ "ಇದೇ ನಾವಿಬ್ಬರು ವಾಸವಿದ್ದ ಹೋಟೆಲ್, ಇದೇ ಪ್ರಯಾಗದ ಸ್ನಾನಗಟ್ಟೆ, ಹೋ! ಬಳುಕುತ್ತಿದ್ದ ಅರಳಿ ಸಸಿ ಬಲಿತ ಮರವಾಗಿದೆ, ಗುಡಿ ವರ್ಣರಂಜಿತ ಮಹಾಮಂದಿರವೇ ಆಗಿದೆ, ಸಪುರ ಉಕ್ಕಿನ ಸೇತುವೆಗಿದೆಂಥ ವಿಸ್ತರಣೆ, ಬಡಕಲು ಧಾಬ ಹೊತ್ತ ನೆಲದ ಮೇಲೆ ಬಹುಮಹಡಿಗಳ ಹೋಟೆಲ್, ಅಲಕನಂದಾದ ಕಣಿವೆಗಳಲ್ಲಿ ಬಲು ಆಳಕ್ಕೆ ಅನುರಣಿಸುವ ಲಾರಿಗಳ ರಾಗಮಾಲಿಕೆ....."!! ಕ್ಷಮಿಸಿ, ಮತ್ತೆ ಮೂವತ್ತು ವರ್ಷಗಳ ಹಿಂದಣ ಕತೆಗೆ ಮರಳುತ್ತೇನೆ.
ಅಂದು ಕರ್ಣಾಪ್ರಯಾಗದಲ್ಲಿ ನಮ್ಮನ್ನು ಬಿಟ್ಟು ಮುಂದುವರಿದವರ ಅನುಭವ ಕಥನ ನನ್ನ ತುತ್ತಲ್ಲ. ಹಾಗೆಂದು "ಏನಾದರೂ ಕೊಡ್ರೀ..." ಎಂದರೆ, ರಾಜ, ನಾಯಕ್, ಬಾಲರೆಲ್ಲ ಮೂಕರು. ಮೋಹನ್ ಸಂಪರ್ಕದಲ್ಲೇ ಇಲ್ಲ. ಪ್ರಸನ್ನ ಗೊಂದಲಮೂರ್ತಿ. ಉಪಾಧ್ಯ ಲೇಖನಗಳ ಮಟ್ಟಿಗೆ ಪ್ರತಿಕ್ರಿಯೆಯಲ್ಲಿ ನನ್ನನ್ನು ಹಿಂಬಾಲಿಸಿಯಾರಷ್ಟೇ! (ಅವರು ಉಳಿದಂತೆ ನಿಮಗೆಲ್ಲ ಗೊತ್ತೇ ಇದೆ, ನಿಜದ ಆತ್ಮನಿರ್ಭರ ವ್ಯಕ್ತಿ) ಕೊನೆಗೆ ಉಳಿದ ರೆಡ್ಡಿ, ಕೋವಿಡ್ಡಿನ ದಿಗ್ಬಂಧನಗಳ ಶೃಂಖಲೆಯಲ್ಲಿ, ಐದು ತಿಂಗಳಿನಿಂದಲೂ ಮಗಳೂರು - ಹೈದರಾಬಾದ್‍ನಲ್ಲಿ, ಮೂಲೆಪಾಲಾಗಿದ್ದಾರೆ. ಆದರೂ ಮರೆವನ್ನು ಮೀರಿ ಕೊಟ್ಟ ಚಿತ್ರಣವನ್ನೇ ತುಸು ತಟ್ಟಿ, ತಡವಿ ನಿಲ್ಲಿಸುತ್ತೇನೆ.
ಕರ್ಣಪ್ರಯಾಗದಿಂದ ತೊಡಗಿದಂತೆ ಬದರಿನಾಥದವರೆಗೂ ಅಲಕನಂದಾ ನದೀ ಕಣಿವೆ ಇವರ ದಾರಿ. ಹಲವು ಮಹಾ ಏರಿಳಿತ, ವಿಪರೀತ ಅಂಕಾಡೊಂಕಿಗಳ ಜತೆಯಲ್ಲಿ ನೂರಿಪ್ಪತ್ತು ಕಿಮೀನ ಓಟ. ಕೊನೆಯಲ್ಲಿ ಹೆಚ್ಚುವರಿ ೭೮೦೦ ಅಡಿಯ ಔನ್ನತ್ಯಕ್ಕೇರಿಸಿ, ತಾಪಮಾನದ ವ್ಯತ್ಯಾಸದಲ್ಲಿ ಅರ್ಧಕ್ಕರ್ಧ ಬೀಳಿಸಿ, ನಡುಗಿಸುವ ತಾಣ ಬದರೀನಾಥ ಇವರ ಲಕ್ಷ್ಯ. ಆ ದಾರಿಯ ಎದುರಿನಲ್ಲಿ ಗಂಗೋತ್ರಿ ದಾರಿ ತೀರಾ ಸೌಮ್ಯವಂತೆ. ರಸ್ತೆಯ ಬಲಬದಿಯಲ್ಲಿ ಹಿಮ ಹೊದ್ದು ಮಲಗಿದ ನೆಲ, ಕಿರಿದಾದ ರಸ್ತೆ, ಮತ್ತೊಂದು ಬದಿಯಲ್ಲಿ ಬುಸುಗುಟ್ಟುವ ಅಲಕನಂದಾ. ಕೆಲವೆಡೆ ಹಿಮಶೈತ್ಯದ ಕಿರು ತೊರೆಗಳಿಗೇ ಇಳಿದು ದಾಟಿಸುವ ಅನಿವಾರ್ಯತೆ. ಮತ್ತೆಷ್ಟೆಷ್ಟೋ ಉದ್ದಕ್ಕೆ ಮುಷ್ಟಿ ಗಾತ್ರದ ಹೊಳೆಕಲ್ಲುಗಳ ಹಾಸೇ ಇವರ ದಾರಿ. ಯಾವ ಕ್ಷಣಕ್ಕೂ ಶಿಲಾ ಅಥವಾ ಹಿಮವರ್ಷವಾಗುವ ಸಾಧ್ಯತೆಯನ್ನು ನೆನೆಸಿದರೆ ಇಂದಿಗೂ ರೆಡ್ಡಿಯವರಿಗೆ ನಡುಕ ಹುಟ್ಟುತ್ತದೆ. (ಮೊನ್ನೆ ೨೦೧೭ರಲ್ಲಿ ನಾನು ಕಂಡ ಎಷ್ಟೆಷ್ಟೋ ಪರಿಷ್ಕೃತ ಬದರೀ ದಾರಿಯೇ ರೆಡ್ಡಿ ಮಾತು ಉತ್ಪ್ರೇಕ್ಷೆ ಅಲ್ಲ ಎಂದು ಸಾರುತ್ತದೆ.)
ಜೋಶಿ ಮಠ ಒಂದು ಸಣ್ಣ ಊರು. ಅಲ್ಲಿಂದ ಬದರಿಯತ್ತಣ ದಾರಿಗಿರುವ ಪೊಲೀಸ್ ಚೆಕ್ಪೋಸ್ಟ್ ಬಹಳ ಬಿಗಿ. ರಸ್ತೆ ಇನ್ನಷ್ಟು ಕಿರಿದಾಗಿ, ಅಪಘಾತಗಳ ಸಂಭವ ಇರುವುದರಿಂದ, ನಾಲ್ಕು ಚಕ್ರದ ವಾಹನಗಳಿಗೆ ಸರದಿಯಲ್ಲಿ ಏಕಮುಖ ಸಂಚಾರವನ್ನಷ್ಟೇ ಕೊಡುತ್ತಿದ್ದರು. ಅದರಲ್ಲೂ ದಾರಿಯ ಅನಿಶ್ಚಿತತೆಗೆ ಹೆದರಿ, ಸಂಜೆ ನಾಲ್ಕರ ನಂತರ ಒಟ್ಟಾರೆ ಸಂಚಾರವನ್ನೇ ಬಂದ್ ಮಾಡುತ್ತಿದ್ದರು. ನಮ್ಮವರೋ ಕತ್ತಲೆಗೆ ಮುನ್ನ ಬದರಿ ಎಂದಷ್ಟೇ ಅಂದಾಜಿಸಿದ್ದರು, ಸಹಜವಾಗಿ ಗೇಟಿನ ಲೆಕ್ಕದಲ್ಲಿ ತಡವಾಗಿದ್ದರು. ಪೋಲಿಸರು ಬಿಡಲಿಲ್ಲ. ಇವರ ಅದೃಷ್ಟಕ್ಕೆ ಆಗ ಅಲ್ಲಿಗೆ ಬಂದ ಓರ್ವ ಸೈನ್ಯಾಧಿಕಾರಿ, ಔದಾರ್ಯ ಮೆರೆದು, ಮುಂದುವರಿಯಲು ಅವಕಾಶ ಮಾಡಿಸಿದ್ದರು. ಹಾಗೆ ಸಂಜೆ ಬೆಳಕು ಪೂರ್ಣ ಮಾಸುವ ಮುನ್ನ ಇವರು ಬದರಿಯೇನೋ ಮುಟ್ಟಿದರು. ಆದರೇ...
ಅಲ್ಲಲ್ಲಿ ತೊರೆ ನೀರು ತಾಗಿ ಕೆಳ ಭಾಗದಲ್ಲಿ ಒದ್ದೆಯಾದ ಪ್ಯಾಂಟ್ ಐಸ್ ಪ್ಯಾಕಿನಂತೇ ಕೊರೆಯುತ್ತಿತ್ತು. ಬೈಕೋಟದ ಬೀಸುಗಾಳಿ ಸೇರಿ ಕೊಟ್ಟ ಹಿಂಸೆಗೆ, ಬದರಿಯ ಮಾಮೂಲೀ ಚಳಿ ಸೇರಿ ಕೆಟ್ಟೆವೋ ಸತ್ತೆವೋ ಎನ್ನುವ ಸ್ಥಿತಿ! ಹಾಗೆಂದು ತುರ್ತಾಗಿ ಬೆಚ್ಚನ್ನ ಕೋಣೆ ಸೇರೋನವೆಂದರೆ, ಇವರು ಹೊಕ್ಕ ಹೋಟೆಲಿನವರೆಲ್ಲ ತಾರಮ್ಮಯ್ಯ ಆಡಿಸುವವರೇ. ‘ಹೋಟೆಲ್ ಇಂದ್ರಲೋಕ’ದ ಮಹಾಶಯ, "ಅಭಿ ದೋ ಘಂಟೆ ಮೆ ಆಪ್ಕೋ ಕಮರ ಮಿಲೆಗ" ಎಂದು ತ್ರಿಶಂಕು ಸ್ವರ್ಗಕ್ಕೇ ತಳ್ಳಿದ್ದನಂತೆ. ಆಗ ಇವರ ರಕ್ಷಣೆಗೆ ಒದಗಿದ್ದು ಪೇಜಾವರ ಮಠದ ಶಾಖೆ. ಅಲ್ಲಿನ ಆಡಳಿತಾಧಿಕಾರಿಗೆ ಊರವರು ಎನ್ನುವುದಕ್ಕೂ ಮಿಗಿಲಾಗಿ ಪ್ರಸನ್ನನ ‘ತುಳು ಪಟ್ಟ’ನ್ನು ತಳ್ಳಿ ಹಾಕುವುದಾಗಲಿಲ್ಲವಂತೆ. ಎರಡು ಕೋಣೆ, ದಪ್ಪನೆಯ ಹೊದಿಕೆಯ ಸೌಭಾಗ್ಯ ಸಿಕ್ಕಿದ ಮೇಲೆ ಕೇಳಬೇಕೇ, ಏಳೂ ಮಂದಿಗೆ ರಾತ್ರಿ ಕಳೆದದ್ದೇ ತಿಳಿಯಲಿಲ್ಲ!
(ಔನ್ನತ್ಯ ೧೦೪೦೦, ರಾತ್ರಿ ೯ ಗಂಟೆಗೆ ತಾ. ೧೩, ತೇ.೩೫%, ಮರು ಬೆಳಗ್ಗೆ ೬ ಗಂಟೆಗೆ ತಾ. ೮, ತೇ.೪೦%)
ಬೆಳಿಗ್ಗೆ (೨೧-೫-೯೦) ಏಳುವುದೆಲ್ಲಾ ಸರಿ, ಸೆಟಗೊಂಡ ಕೀಲುಗಳಿಗೆ, ಪ್ರಾತಃ ಕರ್ಮಗಳಿಗೆ ಬಿಸಿ ನೀರ ಸಾಂತ್ವನ ಇಲ್ಲದಿದ್ದರೆ ಹೇಗೆ? ಸ್ವಲ್ಪ ದೂರದಲ್ಲೇ (ಯಮುನೋತ್ರಿಯಂತೇ) ಸಹಜ ಬಿಸಿನೀರಿನ ಕೊಳವೇನೋ ಇತ್ತು. ಆದರೆ ಅಲ್ಲಿ ಜನ ಸಂದಣಿ ವಿಪರೀತ. ಆಗ ಬಂದೊಬ್ಬ ಪುಣ್ಯಾತ್ಮ "ಹತ್ತು ರೂ ಗೆ ಒಂದು ಡಬ್ಬ ಬಿಸಿನೀರು" ಎಂದನಂತೆ. ಕುಶಿಯಲ್ಲಿ ಎಲ್ಲರೂ ಸ್ನಾನವನ್ನೂ ಪೂರೈಸಿದ್ದರಂತೆ. ಮತ್ತೆ ನೋಡಿದರೆ ಅವನ ಜಲ ಮೂಲ ಅದೇ ಬಿಸಿನೀರ ಕೊಳ!
ಕೋಣೆ ಬಿಟ್ಟು ಹೊರ ಬಂದರೆ, ರೆಡ್ಡಿಯವರದೇ ಮಾತಿನಲ್ಲಿ "ತಿಳಿ ಆಕಾಶ. ಪೂರ್ವ ದಿಕ್ಕಿನ ಕೆಲವು ಹಿಮಶಿಖರಗಳು ಬಂಗಾರದ ಗಟ್ಟಿಗಳು. ಚಳಿಯಲ್ಲೂ ಅದು ಮನಸ್ಸಿಗೆ ಉಲ್ಲಾಸ ನೀಡಿತು". ಮೊದಲು ದೇವಳ ದರ್ಶನ ಮುಗಿಸಿಕೊಂಡರು. ಹೆಚ್ಚಿನ ವೀಕ್ಷಣೆಗೆ ಮೂರು ಕಿಮೀ ಮುಂದಿನ ಮಾನ ಹಳ್ಳಿಗೆ (ಔ. ೧೦೪೦೦) ನಡೆದರು. ಚತುರ್ಧಾಮಗಳಲ್ಲೂ ಸ್ಥಳೀಯ ಮಂದಿ ಚಳಿಗಾಲದ ವಿಪರೀತಕ್ಕೆ ಎಲ್ಲ ಕಾರ್ಯಗಳನ್ನೂ ಕೈ ಬಿಟ್ಟು, ಜಾನುವಾರು ಸಹಿತ ಹೆಚ್ಚು ಕಮ್ಮಿ ಆರು ತಿಂಗಳ ಕಾಲ ಕಡಿಮೆ ಔನ್ನತ್ಯದ ಸ್ಥಳಗಳಿಗೆ ವಲಸೆ ಹೋಗುವುದು ಮಾಮೂಲು. ಹಾಗೆ ‘ಮಾನ’ದಲ್ಲಿ ಇನ್ನೂ ಹಲವು ಮನೆಗಳು ಬೀಗದಲ್ಲೇ ಇದ್ದವು. ಆದರೇನು ಮತ್ತೂ ಮುಂದಿದ್ದ ಗಡಿ ಕಾವಲಿನ ಸೇನಾಠಾಣೆ ಸದಾ ಜಾಗೃತ. ಅಲ್ಲಲ್ಲಿ ಕವಿದು ಬಿದ್ದ ಹಿಮರಾಶಿಯನ್ನು ಆ ಬಿ.ಎಸ್.ಎಫ್ ದಳದವರು (ಬಾರ್ಡರ್ ಸೆಕ್ಯುರಿಟಿ ಫೋರ್ಸ್) ಕಡಿದು ದಾರಿ ಬಿಡಿಸುತ್ತಲೇ ಇದ್ದರು.
ಮಾನದಿಂದಲೂ ಎರಡು ಕಿಮೀ ಆಚಿನ ವಸುಧಾರಾ ಜಲಪಾತಕ್ಕೂ (ಔ. ೧೧೬೦೦) ಇವರು ಪಾದ ಬೆಳೆಸಿದರು. ವಸುಧಾರಾ ವಾಸ್ತವದಲ್ಲಿ ಇನ್ನೂ ಧುಮ್ಮಿಕ್ಕುವ ಜಲಪಾತವಾಗಿರಲಿಲ್ಲ. ಚಳಿಗಾಲದ ಹಿಮ ಕರಗಲು ಆರಂಭವಾಗಿತ್ತಷ್ಟೆ. ನೀರು ತೆಳ್ಳಗೆ ಜಿನುಗುತ್ತಿತ್ತು. "ಆದರೂ ಆ ದೃಶ್ಯದಲ್ಲೊಂದು ಬೇರೇ ಚಂದ, ತಿಂಗಳ ನಂತರದ ನೀಲ ಧಾರೆ"ಯನ್ನೇ ಕಂಡಿತ್ತು ರೆಡ್ಡಿಯವರ ಸಾಹಿತ್ಯ ಸಮೃದ್ಧ ಮನಸ್ಸು; ನಾಳೆ ಇಂದಿನ ಕನಸು! ರೆಡ್ಡಿ ಮಾತುಗಳಲ್ಲೇ "ವಸುಧಾರಾದ ಸ್ವಲ್ಪ ಕೆಳಗೆ, ಅನತಿ ದೂರದಲ್ಲಿ ಒಂದು ಸರೋವರ. ಆ ಸರೋವರದ ಎರಡೂ ಬದಿಯಲ್ಲಿ ತೆರೆದ ರೆಕ್ಕೆಗಳಂತೆ ನಿಂತ ಹಿಮ ರಾಶಿ. ಅಲ್ಲಿನ ಸುಮಾರು ನೂರು ಅಡಿ ಉದ್ದಕ್ಕೆ, ಹಿಮ ರಾಶಿಯ ಮೇಲೆ ಕುಳಿತು ಜಾರಾಟದ ಖುಷಿ ಅನುಭವಿಸಿದೆವು. ಕೆಲವರಂತು ಎರಡೆರಡು ಬಾರಿ ಜಾರಿ ಹೆಚ್ಚಿಗೇ ಸಂಭ್ರಮಿಸಿದರು."
(ಹೆಚ್ಚಿನ ಓದಿಗೆ: ೨೦೧೮ರಲ್ಲಿ ನಾನು ಕಂಡ ಬದರೀನಾಥ)
ಊಟ ಮಾಡಿಯೇ ಕೋಣೆಗೆ ಮರಳಿದರು. ಇನ್ನೊಂದು ರಾತ್ರಿಗೆ ಅಲ್ಲಿ ನಿಲ್ಲುವ ಧೈರ್ಯ ಮಾಡದೇ ವಾಪಾಸು ಹೊರಟರು. ಮತ್ತದೇ ದಾರಿಯ ಉರುಡಾಟ, ಮಳೆಯ ಕಾಟ, ಕೊನೆಗೆ ರಾತ್ರಿಯೂ ಕವುಚಿಕೊಂಡಿತು. ಇಷ್ಟರಲ್ಲೇ ಕತ್ತಲಾದ ನಂತರ ಆ ದಾರಿಯಲ್ಲಿ ಹೋಗುವುದು ಅಸಾಧ್ಯ ಎಂದು ಇವರೆಲ್ಲ ಕಂಡುಕೊಂಡಿದ್ದರು. ರೆಡ್ಡಿ ಉವಾಚ - "ಸಕಾಲಕ್ಕೆ ಸಿಕ್ಕಿದ ಸ್ವಲ್ಪ ದೊಡ್ಡ ಪೇಟೆ ಚಮೋಲಿಯಲ್ಲಿ, ಹೋಟೆಲ್ ಹಿಡಿದು ಬದುಕಿದೆವು. ನೆನೆದ ಕಾಲುಚೀಲಗಳ ಗಬ್ಬು ವಾಸನೆ ಸಹಿಸಿಕೊಂಡು ಒಳ್ಳೇಯ ನಿದ್ರೆಯನ್ನೇ ತೆಗೆದೆವು. ಬೆಳಿಗ್ಗೆ ಮಾತ್ರ ಬೇಗ ಹೊರಟು, ಪ್ರಯಾಣ ಬೆಳೆಸಿ, ಎಂಟು ಗಂಟೆಗೇ ಅಶೋಕರನ್ನು ಸೇರಿಕೊಂಡೆವು."
(ಬೆಳಿಗ್ಗೆ ತಾ. ೧೫, ತೇ. ೪೭%, ಔ.೩೫೦೦)
ಹೊಸ ಹಗಲಲ್ಲಿ (೨೨-೫-೯೦) ನಾವೂ ನವಚೇತನರಾಗಿದ್ದೆವು. ನಾನು ಎರಡು ದಿನಗಳ ವಿಶ್ರಾಂತಿ, ಉಪಶಮನಕಾರಿ ಮುಲಾಮು, ಮಾತ್ರೆಗಳೂಡಿದ ಹೊಸ ಶಕ್ತಿಗೆ, ದೇವಕಿಯ ಶಾಲುಸಿಂಬಿಗಳ ಹಳೆ ಯುಕ್ತಿ ಸೇರಿಸಿ, ಪೂರ್ವ ಯೋಜನೆಯಂತೇ (ಮಂಕುತಿಮ್ಮನ?) ಯಾನ ಸೊಗಯಿಸಿದೆ. ಕರ್ಣಪ್ರಯಾಗವನ್ನು ಬೀಳ್ಕೊಂಡೆವು. ಮಂಗಳೂರೆಂಬ ದಕ್ಷಿಣ ತುದಿಯಿಂದ ದಿಲ್ಲಿಯೆಂಬ ಉತ್ತರದ ಉದ್ದಕ್ಕೂ ಚತುರ್ಧಾಮಗಳ ಅಗಲಕ್ಕೂ ಬೈಕ್ ಸಾಹಸಯಾನವನ್ನು ವ್ಯಾಪಿಸುವ ಕಾರ್ಯ ಮುಗಿದಿತ್ತು. ಇನ್ನೇನಿದ್ದರೂ ಹಿಂದಿರುಗುವ ದಾರಿ. ದಾರಿ ಹೊಸದೇ ಆದ್ದರಿಂದ ಸಿಕ್ಕ ಬಿಡಿ ನೋಟಗಳನ್ನಷ್ಟೇ ಹೆಕ್ಕುತ್ತ ಸಾಗಿದೆವು. ರಾಣೀಖೇತಿನಲ್ಲಿ ಊಟಕ್ಕೆ ನಿಂತು, ಅಲ್ಮೋರಾ ಹಿಂದಿಕ್ಕಿ, ಸಂಜೆಗೆ ದಿನದ ಲಕ್ಷ್ಯ ನೈನಿತಾಲ್ ಸೇರಿದೆವು.
ಪ್ರವಾಸೋದ್ದಿಮೆಯ ಜನಪ್ರಿಯ ಹೆಸರುಗಳ ಪಟ್ಟಿಯಲ್ಲಿ ಮಸ್ಸೂರಿಗಿಂತಲೂ ಮುಂದಿರುವ ಹೆಸರು ನೈನಿತಾಲ್. ಸಹಜವಾಗಿ ನಮ್ಮ ಹಣದ ಮಿತಿಗೆಟಕುವ ಕೆಲವು ಹೋಟೆಲುಗಳಲ್ಲಷ್ಟೇ ವಿಚಾರಿಸಿ ಸೋತೆವು. "ನೀನಲ್ಲದೆ ಇನ್ಯಾರೂ ಇಲ್ಲವಯ್ಯಾ..." ಎಂದು ಅಲ್ಲಿನ ಯೂಥ್ ಹಾಸ್ಟೆಲ್ಸ್ ಶಾಖೆಯ ಮುಖ್ಯಸ್ಥ (ನಿವೃತ್ತ) ಕರ್ನಲ್ ಸಾಹೇಬರಿಗೆ ಶರಣಾದೆವು. ಅವರು ಸ್ವಲ್ಪ ದೊಡ್ಡವೇ ಇದ್ದ ತನ್ನ ಅಧಿಕೃತ ಕೋಣೆಯಲ್ಲೇ ಕೂರಿಸಿಕೊಂಡು ನಮ್ಮ ಬಿನ್ನಹಗಳಿಗೆ ಸಹೃದಯೀ ಶೋತೃವೇ ಆದರು. ಜೊತೆಗೇ ತನ್ನ ಅಸಹಾಯಕತೆಯನ್ನು ತೋಡಿಕೊಂಡರು. ನಾವು ಬರುವ ಮುನ್ನ, ಮೊದಲೇ ಭರ್ತಿಯಾಗಿದ್ದ ಭವನಕ್ಕೆ, ಪುಣೆಯಿಂದ ನೇಚರ್ ಕ್ಲಬ್ ಬಾಲರ ಬಳಗವೊಂದು ದಾಳಿಯಿಟ್ಟಿತ್ತು. ಮಕ್ಕಳ ಎಳೆ ಹರಯ (ಪ್ರಾಯ ೯ ರಿಂದ ೧೫) ಮತ್ತು ಆಸಕ್ತಿ ಇನ್ನೆಲ್ಲೋ ಕಳೆದು ಹೋಗದಂತೆ, ತಮ್ಮಲ್ಲೇ ಉಳಿಸಿಕೊಂಡು, ಸುಧಾರಿಸುವುದರಲ್ಲಿ ಕಳೆದು ಹೋಗಿದ್ದರು. ಈಗ ಇನ್ನಷ್ಟು ಸ್ವಾರಸ್ಯ ನಮ್ಮನ್ನು ಕಂಡು ಕರ್ನಲ್ ಸಾಬ್‍ಗೆ ತಹತಹವಾದಂತಿತ್ತು. ಒಮ್ಮೆಲೇ ಏನೋ ಹೊಳೆದವರಂತೆ, ಹೊರ ಹೋದರು. ಐದೇ ಮಿನಿಟಿನಲ್ಲಿ ಬಂದವರೇ "ಈ ಕಚೇರಿಯ ಜಮಖಾನ ಹಾಸಿದ ನೆಲವನ್ನು ನೀವು ಸುಧಾರಿಸಿಕೊಳ್ಳುವುದು ಸಾಧ್ಯವಾದರೆ, ಸೋಫಾ ಮೇಜೆಲ್ಲ ತೆರವು ಮಾಡಿಕೊಡಬಲ್ಲೆ. ಆದರೆ ಒಂದೇ ನಿಬಂಧನೆ - ಡಿನ್ನರಾದ ಮೇಲೆ ನೇಚರ್ ಕ್ಲಬ್ ಮಕ್ಕಳಿಗೆ ನಿಮ್ಮ ಅನುಭವ ಕಥನ ಆಗಬೇಕು." ಅನಿರೀಕ್ಷಿತ ಧಾಳಿಗೆ ಒಮ್ಮೆ ನನಗೆ ಬ್ಬೆಬ್ಬೆಬ್ಬೆ ಅನ್ನಿಸಿದರೂ ಅವರ ಒಳ್ಳೇತನಕ್ಕೆ ಸೋತೆ.
ಸಂಜೆಯ ಬೆಳಕು ಉಳಿದಿದ್ದಂತೆ, ಊರಿಗೇ ಹೆಸರು ಕೊಟ್ಟ ನಯನಾದೇವಿಯ (ಗುಡಿಯೊಂದಿಗಿನ) ತಾಲ್ (=ಸರೋವರ) ನೋಡಿ, ಅದರಲ್ಲಿನ ದೋಣಿ ‘ವಿಹಾರ’ದ (ಕರಾವಳಿಯ ನಮಗದು ತಮಾಷೆ) ರುಚಿಯನ್ನೂ ಅನುಭವಿಸಿ ಬಂದೆವು. ರಾತ್ರಿ ಊಟ ಮುಗಿಸಿದ ಮೇಲೆ ಮಕ್ಕಳ ಮೇಳದೊಡನೆ ಮುಖಾಮುಖಿ. ಐದು ಮಿನಿಟಿನಲ್ಲಿ ನಮ್ಮ ಯಾತ್ರಾ ಉದ್ದೇಶ ಮತ್ತು ನಾವು ಸವೆದ ದಾರಿ ಬಗ್ಗೆ ಹೇಳಿದೆ. ಅನಂತರ ಉತ್ಸಾಹೀ ಮಕ್ಕಳೊಡನೆ ಸ್ವಾರಸ್ಯಕರ ಪ್ರಶ್ನೋತ್ತರವೇ ನಡೆದಿತ್ತಂತೆ. ಅದಕ್ಕೆ ಅಂದೇ ನಾನು ಅಮ್ಮನಿಗೆ ಬರೆದ ಪತ್ರ! ಅದು ಬಿಟ್ಟರೆ, ಅಂದು ನಾನು ಆಡಿದ ಮಾತುಗಳ ಯಾವ ನೆನಪೂ ನನಗಿಲ್ಲ; ನಿಮ್ಮ ಅದೃಷ್ಟ! ಮಾತು, ಸಂವಾದಗಳ ಪರಿಣಾಮ ಮಕ್ಕಳಿಗೆ ಹೇಗಾಯ್ತೋ ತಿಳಿದಿಲ್ಲ, ನಮ್ಮವರಿಗಂತೂ ಒಳ್ಳೇದಾಯ್ತು ಎನ್ನುವುದಕ್ಕೆ ನಾಯಕರ ಗೊರಕೆ ಸಾಕ್ಷಿ ಮಾತ್ರ ನೆನಪಿದೆ.
(ದಿನದ ಓಟ ೧೯೮ ಕಿಮೀ. ತಾಪ ೧೭.೫, ಮರು ಬೆಳಿಗ್ಗೆ ೧೪.೫, ತೇ ೩೮%, ಮರು ಬೆಳಿಗ್ಗೆ ೪೩%, ಔನ್ನತ್ಯ ೭೨೦೦)
"ಚೈನಾ ಪೀಕ್ ಇಲ್ಲಿನ ಅತ್ಯುನ್ನತ ತಾಣ (ಸು. ೯೦೦೦ ಅಡಿ). ಸ್ವರ್ಗೀಯ ದೃಶ್ಯ, ಚಾರಣಿಗರಿಗೆ ಹೇಳಿ ಮಾಡಿಸಿದ ಸ್ಥಳ, ಬಿಳಿ ದೊರೆಗಳ ಕುದುರೆ ವಿಹಾರ ತಾಣ, ಈಗ ಬೈಕೂ ಓಡಿಸಬಹುದು..." ಎಂದೆಲ್ಲ ಕರ್ನಲ್ ಸಾಹೇಬರ ವಿವರಣೆಗೆ ಕಿವಿ ಕೊಟ್ಟು, ಬೆಳಿಗ್ಗೆ (೨೩-೫-೯೦) ಅಲ್ಲಿಗೆ ಬೈಕಿನಲ್ಲೇ ಹೋಗಿ ಬಂದೆವು. ಎಲ್ಲ ಗಿರಿಶಿಖರಗಳಂತೆ ಚಂದವೇ ಇತ್ತು, ಅದ್ವಿತೀಯವೇನಲ್ಲ. ಅದ್ಭುತದ ಭ್ರಮೆ ಹೊತ್ತೇ ಬರುವ ಪ್ರವಾಸಿಗಳ ಎದುರು ಹೇಳಿಕೊಳ್ಳಲು ಒಂದು ‘ಐಟಂ’; ಶೋ ಕೇಸಿನೊಳಗಿಟ್ಟ ಗೆದ್ದಲ ಗೂಡು! ನಿಜದ ಅದ್ಭುತ ಮುಂದಿನ ದಾರಿ....
ಮಸ್ಸೂರಿಗಾಗುವಾಗ ‘ಲೀಟರ್ ಪೆಟ್ರೊಲ್ ದಾರಿ’ ಎಂದೇ ಹಿಗ್ಗುತ್ತ ಏರಿದ್ದ ಘಡ-Wallನ್ನು, ಅದಕ್ಕೂ ಮಿಗಿಲಾದ ರೋಮಾಂಚನದಲ್ಲೇ ನೈನಿತಾಲ್ ಬಿಟ್ಟಿಳಿದಿದ್ದೆವು. ನೈನಿತಾಲಿನ ತೆಂಕು-ಪಡುವಿನ ತಪ್ಪಲಿಗೆ ಹಕ್ಕಿ ಹಾರಿದ ಲೆಕ್ಕದಲ್ಲಿ ಮೂರ್ನಾಲ್ಕೂ ಕಿಮೀ ಕೂಡಾ ಇಲ್ಲ. ಆದರೆ ದಾರಿ ಸುಮಾರು ೨೯ ಕಿಮೀನಷ್ಟು ನುಲಿದಾಡಿ, ಸುಮಾರು ೭೦೦೦ ಅಡಿ ಆಳಕ್ಕೆ ಬೀಳಿಸಿ, ತಾಪಮಾನದಲ್ಲಿ ದುಪ್ಪಟ್ಟು ಉಬ್ಬಿಸಿ ತಳದೂರು ಕಾಲದುಂಗಿ - ಒಂದು ಪುಟ್ಟ ಹಳ್ಳಿ ಕಾಣಿಸುತ್ತದೆ. (ತಾ. ೩೦, ತೆ. ೪೦% ಔನ್ನತ್ಯ ೧೨೦೦.) ಮಸ್ಸೂರಿ ತಲಪಿದಾಗ ಮುದುಡಿ ಬಿಸಿಯುಡುಪು ಹೇರಿಕೊಂಡಿದ್ದ ನಾವು, ಇಲ್ಲಿ ತದ್ವಿರುದ್ಧವಾಗಿ ಎಲ್ಲ ಬೆವರಿ ಬೆಪ್ಪಾಗಿ ಅಂಗಿಯನ್ನೇ ಕಳಚಿ ಎಸೆಯುವ ಸ್ಥಿತಿ.
ಕಾಲದುಂಗಿ ದಾರಿ ಮಗ್ಗುಲಲ್ಲೇ ಹಳ್ಳಿಗನೊಬ್ಬ ಪುಟ್ಟ ಪುಟ್ಟ ಮಣ್ಣಿನ ಕುಡಿಕೆಗಳಲ್ಲಿ ಎಮ್ಮೆ ಹಾಲಿನ ಖಡಕ್ ಮೊಸರು ಮಾರುತ್ತಿದ್ದ. ಮುದುಡುತ್ತ, ನಡುಗುತ್ತ ಹುಡಿ ಹಾಲಿನ ಸುಡು ಚಾಯದಲ್ಲಿ ಕಳೆದ ಹನ್ನೊಂದು ದಿನಗಳ ದಿವ್ಯ ಸ್ಮರಣೆಗೆನ್ನುವಂತೆ ಎಲ್ಲರೂ ಒಂದೊಂದು ಕುಡಿಕೆ ಮೊಸರನ್ನೇ ಚಪ್ಪರಿಸಿ ಕುಡಿದೆವು. ಮಾಮೂಲೀ ದಿನಗಳಲ್ಲಿ ಕಾಫಿಚಾಗಳನ್ನೇ ಬಯಸದ ಉಪಾಧ್ಯರಂತೂ ಚಳಿಗೇನಾದರೂ ಬೇಕೆನ್ನುವ ಸಂಕಟಕ್ಕೇ ಆ ಹನ್ನೊಂದು ದಿನ ಕುಡಿದ ಚಾಗಳ ಮೇಲೆ ಸೇಡು ತೀರಿಸುವಂತೆ ಎರಡು ಕುಡಿಕೆ ಮೊಸರನ್ನೇ ಏರಿಸಿ ಬಿಟ್ಟರು. ಪರಿಣಾಮ ಕೇಳಬೇಡಿ! ಮುಂದಿನರ್ಧ - ಒಂದು ಗಂಟೆಯೊಳಗೇ ನಮ್ಮ ಬೈಕುಗಳ ಸಾಲು ಆರಾಮವಾಗಿ ಓಡುತ್ತಿದ್ದಂತೆ, ಒಮ್ಮೆಗೆ ಉಪಾಧ್ಯರ ಬೊಬ್ಬೆ ಕೇಳಿಸಿತ್ತು. ಬಾಲ ಬೈಕ್ ನಿಲ್ಲಿಸಲೂ ಪುರುಸೊತ್ತಿಲ್ಲದಂತೆ, ಉಪಾಧ್ಯರು ಬೈಕ್ ಹಾರಿ, ಪಕ್ಕದ ಪೊದರ ಮರೆಗೆ, ನೀರಂಡೇ ಹಿಡಿದುಕೊಂಡು ಓಡಿದ್ದರು! ಮುಂದೆ ಹತ್ತು ಮಿನಿಟಿನ ಮೇಲೂ ಇನ್ನೊಮ್ಮೆ ಇದೇ ನಾಟಕ ಮರುಕಳಿಸಿತ್ತು. ಎಮ್ಮೆ ಮೊಸರು ಹೆಚ್ಚಾದರೆ ನಿರಪಾಯಕಾರಿ ಶುದ್ಧ ರೇಚಕ ಎಂದಷ್ಟೇ ಸಿದ್ಧವಾಯ್ತು.
ಜಿಂ ಕಾರ್ಬೆಟ್ (೧೮೭೫ರಿಂದ ೧೯೫೫) ನಮಗೆಲ್ಲ ಭಾರೀ ಸಾಹಸೀ ವನ್ಯ ಕಥನಕಾರ. ಆದರೆ ನಿಜದಲ್ಲಿ ಆ ಕಾಲಘಟ್ಟದ ಘಡವಾಲ್ ವಲಯದ ಮಲೆ ಮಕ್ಕಳಿಗೆ, ಆತ ಸಾಕ್ಷಾತ್ ದೇವರೇ ಆಗಿದ್ದ. ಹಳ್ಳಿಗರನ್ನು ಕಾಡುತ್ತಿದ್ದ ನರಭಕ್ಷಕ ಹುಲಿಗಳನ್ನು (ಚಿರತೆಯೂ) ಕೊಂದು ಕಳೆದದ್ದು ಆತನ ಬಹು ದೊಡ್ಡ ಸಾಧನೆ. ಸಹಜವಾಗಿ ಕಾಲದುಂಗಿಯಲ್ಲಿ ಜನಪದರು ಅವನ ಪುತ್ಥಳಿಯನ್ನೇ ನಿಲ್ಲಿಸಿ, ಮಂದಿರವನ್ನೇ ಕಟ್ಟಿದ್ದಾರೆ. ಬ್ರಿಟಿಷ್ ಸೈನ್ಯಾಧಿಕಾರಿಯಾಗಿದ್ದ ಕಾರ್ಬೆಟ್ ಗುರಿಕಾರತನದಲ್ಲಿದ್ದಷ್ಟೇ ತೀವ್ರ ವನ್ಯಪ್ರೇಮಿ. ಅವನ ಗೌರವಾರ್ಥ ಇಂದು ಅವನ ಮಂದಿರವೂ ಇರುವ ಕಾಲದುಂಗಿ ಬಂಗ್ಲೆ - ಕಾರ್ಬೆಟ್ ಮ್ಯೂಸಿಯಮ್ಮೇ ಆಗಿದೆ. ಅದಕ್ಕೆ ಐದು ಮಿನಿಟಿನ ಭೇಟಿ ಕೊಟ್ಟಿದ್ದೆವು. ಮುಂದುವರಿದು, ಅದೇ ಕಾರ್ಬೆಟ್ಟಿನ ಹೆಸರಿನಲ್ಲೇ ಖ್ಯಾತವಾದ ವನಧಾಮ ನೋಡಲು ಹನ್ನೊಂದೂವರೆ ಗಂಟೆಯ ಸುಮಾರಿಗೆ ರಾಮನಗರ ಸೇರಿದೆವು.
ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ಭಾರತದ ಪ್ರಥಮ (೧೯೩೬) ವನಧಾಮವೆಂದೂ ಪ್ರಥಮ (೧೯೭೪) ಹುಲಿ ಸಂರಕ್ಷಣಾ ಯೋಜನೆಯ ನೆಲೆಯೆಂದೂ ಖ್ಯಾತಿಯಿದೆ. ಸ್ಥಾಪನೆಯ ಕಾಲದಲ್ಲಿ ಅದು ಅಂದಿನ ಬ್ರಿಟಿಷ್ ರಾಜ್ಯಪಾಲನ ಗೌರವಾರ್ಥ ‘ಹೈಲೀ’ ಹೆಸರು ಹೊತ್ತಿತ್ತು. ಸ್ವತಂತ್ರ ಭಾರತ ಸರಕಾರ, ಈ ವನಧಾಮದ ಜೀವನದಿಯೇ ಆಗಿರುವ ‘ರಾಮಗಂಗೆ’ಯ ಹೆಸರಿಗೆ ೧೯೫೪ರಲ್ಲಿ ಬದಲಿಸಿತು. ಮತ್ತೆ ಮನ ಬದಲಿಸಿ, ಕೇವಲ ಜನ ಹಿತಕ್ಕಾಗಿ ವಿಖ್ಯಾತ ಬೇಟೆಗಾರನಾದರೂ ಆಂತರ್ಯದಲ್ಲಿ ವನ್ಯ ಸಂರಕ್ಷನೇ ಆಗಿದ್ದ ಜಿಂ ಕಾರ್ಬೆಟಿನ ಗೌರವಾರ್ಥ ‘ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ’ ಎಂದೇ ಅಂತಿಮಗೊಳಿದ್ದರು. (?) ಜಿಂ ಕಾರ್ಬೆಟ್ ಮತ್ತು ಈ ಕೆಲವು ‘ಪ್ರಥಮ’ಗಳ ಪ್ರಭಾವಲಯದ ಮುನ್ನೆಲೆಯಲ್ಲಿ ನಾವೆಲ್ಲ ವನ ಸಂದರ್ಶನಕ್ಕೆ ಕಾತರರಾಗಿದ್ದೆವು.
ವನಧಾಮದ ದ್ವಾರವೇ ಆದರ ರಾಮನಗರ ಸಾಕಷ್ಟು ದೊಡ್ಡ ಪಟ್ಟಣವೇ. ಆದರೆ ನಮ್ಮ ಅದೃಷ್ಟಕ್ಕೆ ವನಧಾಮದ ಅತಿಥಿಗೃಹದಲ್ಲೇ ನಮಗೆ ವಸತಿ ಅವಕಾಶ ಸಿಕ್ಕಿತ್ತು. ಅಲ್ಲಿನ ಊಟ ವಸತಿಗಳ ಸೌಕರ್ಯಗಳ ನೆನಪು ನನಗೇನೂ ಉಳಿದಿಲ್ಲ. ಚಳಿಪೀಡೆ ಬಿಟ್ಟ ಮೊದಲ ರಾತ್ರಿಯಾದ್ದರಿಂದ ಸೀಮಿತ ಅನುಕೂಲಗಳೂ ನಮಗೆ ಸವಿ ನೆನಪನ್ನೇ ಉಳಿಸಿರಬೇಕು. ಆದರೆ ಅಲ್ಲಿ ವನಧಾಮ ಸುತ್ತಾಡಲು ಖಾಸಗಿ ಬಾಡಿಗೆ ಕಾರುಗಳ ಚೌಕಾಶಿ ನಡೆಸಿದಾಗ ದೊಡ್ಡ ಆಶ್ಚರ್ಯ ಕಾದಿತ್ತು. ನಮ್ಮೊಳಗಿನ ಕನ್ನಡ ಮಾತು ಕೇಳಿದ ಚಾಲಕನೋರ್ವ "ಅರೆ ನೀವು ಕರ್ನಾಟಕದವರೇ..." ಎಂದೇ ಹಿಂದಿ ಮಿಶ್ರಿತ ಕನ್ನಡದಲ್ಲಿ ವಿಚಾರಿಸಿದ. ನೋಡಿದರೆ, ಆತ ಓರ್ವ ಅಪ್ಪಟ ‘ಅನಿವಾಸೀ ಕೊಡವ’. ಹೌದು, ಮೂರು ನಾಲ್ಕು ದಶಕಗಳ ಹಿಂದೆಯೇ ಈತನ ಅಪ್ಪ, ಕೊಡಗಿನ ಮೂಲೆಯಿಂದ ಏನೋ ಪರಿಸ್ಥಿತಿಗಳ ಒಯ್ಲಿನಲ್ಲಿ, ದೇಶದ ಒನ್ನೊಂದೇ ಮೂಲೆಯ ರಾಮನಗರಕ್ಕೆ ಬಾಡಿಗೆ ಕಾರಿನಲ್ಲಿ ಜೀವನ ದಾರಿ ಕಂಡುಕೊಂಡು ಬಂದಿದ್ದರು! ಅವರ ಸಾಂಸಾರಿಕ ಸಂಬಂಧಗಳೆಲ್ಲ ಇನ್ನೂ ಕೊಡಗಿನೊಡನೆ ಇದ್ದವು. (ನಮಗೆ ಆತನ ತಂದೆಯ ದರ್ಶನ ಲಾಭವಾಗಲಿಲ್ಲ) ಆತ ತನ್ನದ್ದಲ್ಲದೇ ಇನ್ನೊಂದು ಬಾಡಿಗೆ ವಾಹನವನ್ನೂ ನಮಗೆ ಮಾಡಿಕೊಟ್ಟು, ಆತ್ಮೀಯವಾಗಿ ವನದರ್ಶನ ಮಾಡಿಸಿದ.
ಇಷ್ಟೆಲ್ಲ ದೊಡ್ಡ ಮುಂಡಾಸಿನೊಡನೆ ನಾವು ಕಾರ್ಬೆಟ್ ವನಧಾಮ ಪರಿಭಾವಿಸಿದಾಗ, ನಮಗೆ ದೊಡ್ಡ ನಿರಾಶೆಯೇ ಆಯ್ತು. ಹಾಗೇ ಅಲ್ಲಿ ನೀರ ಕೊರತೆ, ಕಳ್ಳಬೇಟೆಯ ಕಾಟ, ಆಡಳಿತ ಅವ್ಯವಸ್ಥೆಗಳ ಕುರಿತು ಸಾಕಷ್ಟು ಕೇಳಿದ್ದೆ. ನಮ್ಮ ದುರಾದೃಷ್ಟಕ್ಕೆ ಅದು ಕಡು ಬೇಸಗೆಯ ದಿನ ಬೇರೆ ಆಗಿತ್ತು. ವನಧಾಮದ ಪ್ರವಾಸೀ ವಲಯಗಳು ತೀರಾ ಒಣಗಿ, ನಮಗೆ ಏನೂ ಕಾಣ ಸಿಗಲಿಲ್ಲ. ನಾನು ಅಂದು ಅಲ್ಲಿಂದ ಬರೆದೊಂದು ಪತ್ರದ ಎರಡು ಸಾಲುಗಳೇ ಎಲ್ಲ ಹೇಳುತ್ತದೆ - "ನಿಗದಿತ ಅವಧಿಪೂರ್ಣ ಕಚ್ಚಾ ಮಾರ್ಗಗಳಲ್ಲಿ ದಡಬಡಿಸಿ, ಮೈ ಗುದ್ದಿಕೊಂಡದ್ದೇ (ಮೊದಲೇ ನೋವಿನಲ್ಲಿದ್ದ ನಾನು ಆತಂಕ ಹೆಚ್ಚಿಸಿ ಕೊಂಡದ್ದೇ) ಬಂತು. ತಲಾ ರೂ ಎಪ್ಪತ್ತು ದಂಡ ಮಾಡಿ, ಪರಸ್ಪರ ದೂಳು ತಿನ್ನಿಸಿಕೊಂಡದ್ದು ಲಾಭ!"
(ತಾ.೩೧, ತೇ ೩೪%, ಔನ್ನತ್ಯ ೧೨೦೦, ದಿನದ ಓಟ ೭೮ ಕಿಮೀ)
೨೪-೫-೧೯೯೦ ನಮ್ಮ ಪ್ರಾಕೃತಿಕ ಭಾರತ ಸೀಳೋಟದ ಕೊನೆಯ ದಿನ. ಎಂದಿನಂತೆ ಬೆಳಿಗ್ಗೆ ಸುಮಾರು ಆರು ಗಂಟೆಗೇ ರಾಮನಗರ ಬಿಟ್ಟು ಆರೂ ಬೈಕುಗಳು ದಿಲ್ಲಿ ದಾರಿ ಹಿಡಿದಿದ್ದವು. ದಾರಿಯ ಕಾಶೀಪುರ್ ಎಂಬಲ್ಲಿ ಉಪಾಹಾರ ಮುಗಿಸಿದ್ದೆವು. ನಮ್ಮನ್ನು ತಡವಾಗಿ ಸೇರಿಕೊಂಡ ಎರಡು ಬೈಕಿನ ತ್ರಿಮೂರ್ತಿಗಳು ಮುಂದೆ ಮುರಾದಾಬಾದ್ ಕವಲಿನಲ್ಲಿ ಪ್ರತ್ಯೇಕವಾದರು. ಅವರು ಬಾಕಿ ಉಳಿದಿದ್ದ ಯಮುನೋತ್ರಿ ದರ್ಶನ ಮಾಡಿಕೊಂಡು ಸ್ವತಂತ್ರವಾಗಿಯೇ ಮಂಗಳೂರಿಗೆ ಮರಳುವವರಿದ್ದರು. ನಾವು ಮೀರತ್ತಿಗಾಗಿ, ಮಟಮಟ ಮಧ್ಯಾಹ್ನ (ಆ ದಿನಗಳ ದಿಲ್ಲಿ ತಾಪಮಾನ ಸರಾಸರಿ ನಲ್ವತ್ತು ಡಿಗ್ರಿಗಳಷ್ಟಿತ್ತು!) ಎರಡು ಗಂಟೆಗೆ ದಿಲ್ಲಿ ಕರ್ನಾಟಕ ಸಂಘ ತಲಪಿದ್ದೆವು. ಹಿಂದಿನಂತೆ ನಿರುಮ್ಮಳವಾಗಿ ಪಾತಾಳದ ಕೀಲಿಕೈ ಪಡೆದು, ಹೊರೆ ಹೊತ್ತು ಹಾಕಿದೆವು. ಎಲ್ಲಕ್ಕಿಂತ ಮುಖ್ಯವಾಗಿ ಎಷ್ಟೋ ವರ್ಷಗಳಿಂದ ಊಟದ ಮುಖ ಕಾಣದವರಂತೆ ಕ್ಯಾಂಟೀನಿನ ಊಟದ ಸರದಿ ಸಾಲಿನಲ್ಲಿ ಸೇರಿಕೊಂಡೆವು.
(ದಿನದ ಓಟ ೨೬೩ ಕಿಮೀ)
(ಮುಂದುವರಿಯಲಿದೆ)
Brilliant narration. Though going upto Badri is not so very adventurous now, with an excellent road and quite a few good hotels at Joshi math, which greeted me in December 2017.
ReplyDeleteಹೂಕಣಿವೆ ನೋಡಿ ಇಳಿದ ನಾವು ಗೋವಿಂದ ಘಾಟಿನಿಂದ ಬದರಿಗೆ ಪಯಣಿಸಿದೆವು.ಗೇಟ್ ಸಿಸ್ಟಮ್ ಕಾರಣದಿಂದ ನಾಲ್ಕು ಗಂಟೆ ಯ ಕೊನೆಯ ಬಸ್ಸ್ ಸಿಕ್ಕಿತು.ಬದರಿ ತಲಪಿದಾಗ ರಾತ್ರಿ ಆಗಿತ್ತು.ಯಾವುದೋ ಹೋಟೆಲ್ ನಲ್ಲಿ ರೂಂ ಸಿಕ್ಕಿತು.ದೇವಸ್ಥಾನ ನೋಡಲು ಹೊರಟಾಗ ಆ ಹೋಟೆಲ್ ನವನು ಹೊದೆಯಲು ಕೊಟ್ಟಿದ್ದ ಕಂಬಳಿಯನ್ನು ತೆಗೆದುಕೊಂಡು ಹೋಗಿ ಎಂದೇ ಸಲಹೆ ಕೊಟ್ಟಿದ್ದ.ನಾವಿಬ್ಬರೂ ಸ್ವೆಟರ್,ಜರ್ಕಿನ್ ಮೇಲೆ ಆ ಕಂಬಳಿಯನ್ನೂ ಹೋದ್ದು ದೇವಳದ ಬೀದಿಯಲ್ಲಿ ನಡೆಯುವಾಗ ಗಮನಿಸಿದ್ದು ಹೆಚ್ಚಿನ ಪ್ರವಾಸಿಗರು ಕಂಬಳಿಧಾರಿಗಳೇ ಆಗಿದ್ದರು.ಇನ್ನು ದೇವಾಲಯದ ಅರ್ಚಕರೂ ಪೂರ್ಣ ಬೆಚ್ಚನೆಯ ಉಡುಪಿನಲ್ಲಿದ್ದರು.ದರ್ಶನ ಮುಗಿಸಿ ಹೊರಬಂದಾಗ ಹೋಟೆಲ್ ಒಂದರ ಮುಂದೆ ಕನ್ನಡದಲ್ಲಿ ಒಂದು ಬೋರ್ಡ್"ಇಲ್ಲಿ ಊಟ ದೊರೆಯುತ್ತದೆ"ಅಂತ.ಎಂಟ್ಹತ್ತು ದಿನಗಳಿಂದ ಅನ್ನ ಕಾಣದ(ದಾಲ್ ಸಬ್ಜಿ,ರೋಟಿಗಳಲ್ಲಿ ಕಾಲ ಹಾಕಿದ್ದು)ನಾವು ಅಲ್ಲಿ ಹೋಗಿ ದ.ಭಾರತ ಊಟಕ್ಕೆ ಆರ್ಡರ್ ಮಾಡಿ ಜೊಲ್ಲು ಸುರಿಸುತ್ತಾ ಕೂತೆವು.ಹಬೆಯಾಡುತ್ತಿದ್ದ ಅನ್ನವೇನೋ ಬಂತು.ಸಾಂಬಾರ್ ಕಲೆಸುವಾಗಲೇ ತಣ್ಣಗೆ ಕೊರೆಯುತ್ತಿತ್ತು.ಅನ್ನ ರಬ್ಬರ್ನಂತಾಗಿ ಬಾಯಿಗೆ ಇಡಲಾಗಲಿಲ್ಲ.ಕೊನೆಗೆ ಹಳೇ ಗಂಡನ ಪಾದವೇ ಗತಿ ಎಂದು ರೋಟಿ ದಾಲ್ ತಿಂದು ರೂಮಿಗೆ ಬಂದಾಗ, ಕಾವಲುಗಾರ ಹೇಳಿದ್ದ: ಬೆಳಿಗ್ಗೆ ನಾಲ್ಕು ಗಂಟೆಗೆ ಏದ್ದೇಳಿ ನೀಲ ಕಂಠ ಪರ್ವತ ಕಾಣುತ್ತದೆ.ಅದೃಷ್ಟ ನಿಮ್ಮ ದಾಗಿದ್ದರೆ ದರ್ಶನ ಭಾಗ್ಯ ಸಿಗುತ್ತದೆ ಎಂದು.ರಾತ್ರಿ ಒಳ್ಳೆಯ ನಿದ್ದೆ ಮಾಡಿದೆವು.ಮೂರು ಗಂಟೆಗೇ ಎದ್ದೆವು.ಆದರೆ ನಿತ್ಯ ಕರ್ಮ ಕ್ಕೆ ಬಿಸಿನೀರಿಲ್ಲದೆ ಹಲ್ಲುಜ್ಜಲು ಹರ ಸಾಹಸ ಪಟ್ಟೆವು.ನಮ್ಮ ಕಷ್ಟ ನೋಡಲಾರದೆ ಕಾವಲುಗಾರ ಒಂದು ಬಕೆಟ್ ಬಿಸಿನೀರು ಸ್ನಾನ ಕ್ಕೆಂದು ತಂದ.ಆ ಚಳಿಗೆ ಬಟ್ಟೆ ಕಳಚಿ ಸ್ನಾನ ಮಾಡುವುದನ್ನು ಕಲ್ಪಿಸಿಕೊಳ್ಳಲೂ ಆಗದೆ ಬರೀ ಮುಖ ಮಾರ್ಜನ ಮಾಡಿಕೊಂಡು ಹೋಟೆಲಿನಿಂದ ಹೊರಬಂದಾಗ ನಾವು ಕಂಡ ಸ್ವರ್ಗ ಸದೃಶ ದೃಶ್ಯ ಕ್ಕೆ ಎಣೆಯೇ ಇರಲಿಲ್ಲ.ಪೂರ್ವದಲ್ಲಿ ಮೂಡುತ್ತಿದ್ದ ಸೂರ್ಯನ ಹೊಂಗಿರಣಗಳೊಂದಿಗೆ ನೀಲಕಂಠ ಪರ್ವತ ಚಿನ್ನದ ಬಣ್ಣ ವನ್ನೇ ಹೊದ್ದು ದರ್ಶನ ಕೊಟ್ಟಿದ್ದು ನಮ್ಮ ಜೀವಮಾನದಲ್ಲೇ ಮರೆಯದ ಅನುಭವ.ಹಿಂದಿನ ದಿನ ಬದರಿಯಲ್ಲಿ ಮಳೆ ಇತ್ತು.ಮರುದಿನ ಶುಭ್ರ ಆಕಾಶ.ನೀಲ ಗಗನದ ಹಿನ್ನೆಲೆಯಲ್ಲಿ ಕಂಡ ನೀಲಕಂಠ ಪರ್ವತ ದರ್ಶನ ಅಪೂರ್ವ ಅನುಭವ.ಹೋಟೆಲಿನವ ನಮ್ಮ ಅದೃಷ್ಟ ವನ್ನು ಹೊಗಳಿದ್ದೇ ಹೊಗಳಿದ್ದು.ಮಂಜು ಮುಸುಕಿದ ಕಾರಣದಿಂದ ನಾಲ್ಕು ದಿನ ಯಾರಿಗೂ ಕಾಣದ ನೀಲಕಂಠ ನಮಗೆ ದರ್ಶನ ನೀಡಿದ್ದು ಅದೃಷ್ಟ ವಲ್ಲದೇ ಇನ್ನೇನು?
ReplyDeleteಹಿಮಾಲಯ ದ ಅಗಾಧತೆಯನ್ನು,ಅಲ್ಲಿನ ಚಳಿಯ ಭೀಕರತೆಯನ್ನು ಅನುಭವಿಸಿದವರಿಗೇ ಗೊತ್ತು.ನಾವು ಒಂದೆರೆಡು ಬಾರಿ ಹೀಗೆ ಹೋಗಿ ಬಂದ ಮೇಲೆ ನನ್ನ ಸಹೋದ್ಯೋಗಿಯೊಬ್ಬಳು ಮೊದಲ ಬಾರಿ ಯಾವುದೋ ಟ್ರಾವೆಲ್ ಏಜೆನ್ಸಿ ಮೂಲಕ ಉ.ಭಾರತ ಪ್ರವಾಸ ಹೊರಟಳು.ಅಲ್ಲಿ ಚಳಿ ಹೇಗೆ ಎಂದು ನನ್ನ ಬಳಿ ವಿಚಾರಿಸಿದಾಗ ಇರುವ ವಿಚಾರ ತಿಳಿಸಿದ್ದೆ.ಏನ್ ಮಹಾ ಚಳಿ, ದುರ್ಗದಲ್ಲಿ ಚಳಿಗೆ ಸ್ವೆಟರ್ ಹಾಕದ ನನಗೆ ಅಲ್ಲಿ ಒಂದು ಸ್ವೆಟರ್ ಸಾಕಾಗಬಹುದು;ಬೇಡಾ ಅದರೊಂದಿಗೆ ಒಂದು ಶಾಲು ಎಕ್ಸ್ಟ್ರಾ ಸಾಕಾಗಬಹುದೆಂದು ಹೋಗಿ , ಒಂದು ಸ್ವೆಟರ್,ಒಂದು ಶಾಲ್ ಮಾತ್ರ ತೆಗೆದುಕೊಂಡು ಹೋಗಿ ,ಅಲ್ಲಿನ ಚಳಿ ಸಹಿಸಲಾರದೆ ಹೊಸದು ಕೊಂಡು ಕೊಳ್ಳಲು ಅವಕಾಶವಾಗದೆ ವಾಪಸ್ ಬಂದು ನನಗೆ ಹಿಡಿಶಾಪ ಹಾಕಿದಳು: ಅಷ್ಟು ಚಳಿ ಇರುತ್ತದೆ ಅಂತ ನೀವು ನನಗೆ ಹೇಳಲೇ ಇಲ್ಲ ಎಂದು.😆ಕಾಲು ಶತಮಾನ ಹಿಂದೆ ಹೋಗಿ ಹಳೆಯ ನೆನಪುಗಳಲ್ಲಿ ಕಳೆದುಹೋದೆ.ಧನ್ಯವಾದಗಳು.
ಔನ್ನತ್ಯದಲ್ಲಿ ಹಿಮ, ಛಳಿ - ಕೆಳಗೆ ವಿಪರೀತ ಸೆಖೆ - ನೀವು ಬಹುಷಃ ಇನ್ನೂ ಉತ್ತಮವಾದ ಸಮಯವನ್ನು ಆಯ್ದುಕೊಳ್ಳಬಹುದಿತ್ತೋ ಅಂತ ಕಾಣುತ್ತದೆ. ಈ ಪ್ರಯಾಣದ ಮೊದಲಿನ ಭಾಗಗಳನ್ನು ಓದಲಿಲ್ಲ, ಓದುತ್ತೇನೆ.
ReplyDelete