30 October 2020

ವಿಜಯ ಧಾವಂತ ಕರ್ನೂಲಿನವರೆಗೆ

(ಭಾರತ ಅ-ಪೂರ್ವ ಕರಾವಳಿಯೋಟ - ೧೫) 



ಎಲುರು ಹೋಟೆಲಿನಿಂದ ದೇವಕಿ ಅಭಯನಿಗೆ ಬರೆದ ಪತ್ರ "...ವಿಜಯವಾಡಾ ಇಲ್ಲಿಂದ ೬೪ ಕಿಮೀ ಮಾತ್ರ. ಅಲ್ಲಿ ಕಲ್ಕೂರರ ಇನ್ನೋರ್ವ ಗೆಳೆಯರ ಹೋಟೆಲ್ ನಮ್ಮನ್ನು ಕಾದಿದ್ದಂತೇ ನಾವಿಲ್ಲೇ ಉಳಿಯಬೇಕಾಯ್ತು..... ಒರಿಸ್ಸಾಕ್ಕೆ ಬಂದ ಮೇಲೆ ನಮ್ಮೂರಿನದೇ ವಾತಾವರಣ - ಬೆವರು ಬೆವರು. ಇಲ್ಲೆಲ್ಲ ಗೇರು ಕೃಷಿ ತುಂಬಾ ಕಾಣುತ್ತಿದೆ. ಮಾವಿನ ಹಣ್ಣು ರಾಶಿ ರಾಶಿ. ಇಲ್ಲೊಂದು ಜಾತಿಯ ಮಾವಿನ ಹಣ್ಣು (ರಸಾಲ) ಜೂಸ್ ಬಾಟಲಿನಂತೇ ಇದೆ ಗೊತ್ತಾ. ಹಣ್ಣನ್ನು ಹಾಗೇ ಹಗೂರಕ್ಕೆ ಎಲ್ಲ

ದಿಕ್ಕಿನಿಂದ ಹಿಸುಕಬೇಕು. ಮತ್ತೆ ತೊಟ್ಟಿನ ಬಳಿ ಮುಚ್ಚಳ ತೆರೆದಂತೆ ಸಣ್ಣದಾಗಿ ಸಿಪ್ಪೆಯನ್ನು ಕತ್ತರಿಸಿ ಹೀರಿದರೆ, ಗುಳವೆಲ್ಲ ಗುಳು ಗುಳುಕ್! ಕೊನೆಯಲ್ಲಿ ಸಿಪ್ಪೆಯ ಚೀಲದೊಳಗೆ ಗೊರಟು ಮಾತ್ರ. ಕಾಕಿನಾಡದ ಆಸುಪಾಸಿನಲ್ಲಿ ಬಹಳ ದೊಡ್ಡ ಅಕ್ಕಿ ಮಿಲ್ಲುಗಳಿವೆ. ಮತ್ತೊಂದು ವಿಶೇಷ - ಕಲ್ಕತ್ತಾದಲ್ಲಿ ಹತ್ತಿ ಸೀರೆ ಉಡುವವರನ್ನು ಕಂಡಂತೆ, ಇಲ್ಲಿ ಮುತ್ತಿನ ಸರ ಧರಿಸುವವರು

ಜಾಸ್ತಿ. ಅದೆಲ್ಲ ನಿನಗ್ಯಾಕೆ ಅಲ್ವಾ ....." 

ಬೆಳಿಗ್ಗೆ (೧೪-೫-೯೬) ೫.೩೫ಕ್ಕೆ ಎಲುರು ಬಿಟ್ಟೆವು. ಸ್ವಲ್ಪದರಲ್ಲೇ ಹೆದ್ದಾರಿ ಸಿಕ್ಕಿ ಮತ್ತೆ ಓಟ ನಿರುಮ್ಮಳವಾಯ್ತು. ಆರೂ ಕಾಲಕ್ಕೆ ಗನ್ನವರಂ, ಏಳು ಗಂಟೆಗೆ ವಿಜಯವಾಡಾ. ಅಲ್ಲಿ ಕಲ್ಕೂರರ ಪರಿಚಯದಲ್ಲಿ, ಪಿ. ಚಂದ್ರಶೇಖರ್ ತಮ್ಮ ಹೋಟೆಲ್ ಮನೋರಮಾಕ್ಕೆ ನಮಗೆ ಮುಕ್ತ ಆಮಂತ್ರಣ ಕೊಟ್ಟಿದ್ದರು. ಅದನ್ನು ಅನಿವಾರ್ಯವಾಗಿ ತಪ್ಪಿಸಿಕೊಂಡ ಅಳುಕಿನಲ್ಲಿ, ಅದೇ

ಹೋಟೆಲಿಗೆ ಹೋಗಿದ್ದೆವು. ಬೆಳಗ್ಗಿನ ವಹಿವಾಟು ಇನ್ನೇನು ಶುರುವಾಗಿತ್ತಷ್ಟೆ. ಯಜಮಾನರು ಬರುವುದು ಇನ್ನೂ ತಡ ಎಂದು ತಿಳಿಯಿತು. ನಮ್ಮ ಪರಿಚಯ ಹೇಳಿಕೊಳ್ಳದೇ ಚೆನ್ನಾಗಿ ಉಪಾಹಾರ ಮುಗಿಸಿದೆವು. ಬಿಲ್ ಪಾವತಿಗೆ ಹೋದಾಗ ಮಾತ್ರ ಸಿಕ್ಕಿಬಿದ್ದೆವು! ಗಲ್ಲಾದಲ್ಲಿದ್ದ ನಿರ್ವಾಹಕ ಭಾರೀ ಚುರುಕಿದ್ದರು. ಬೈಕೇರಿ ಬಂದ ನಮ್ಮನ್ನು ಕಂಡದ್ದೇ ಅಂದಾಜಿಸಿ, ಮನೆಯಲ್ಲಿದ್ದ ಯಜಮಾನರಿಗೆ ಫೋನಿಸಿದ್ದರು. ನಾವು ಬಿಲ್ ಕೊಡಲು ಎದ್ದಾಗ, ಮತ್ತೆ ಫೋನಾಯಿಸಿ ಚಂದ್ರಶೇಖರ್ ಅವರನ್ನು

ಮಾತಿನಲ್ಲೇ ಭೇಟಿ ಮಾಡಿಸಿಬಿಟ್ಟರು. ಅವರು ನಮ್ಮ ತಿಂಡಿ ಬಿಲ್ ಸ್ವೀಕರಿಸುವುದಿರಲಿ, "ಇಂದಾದರೂ ಉಳಿದು ಹೋಗಿ" ಎಂದೇ ಒತ್ತಾಯಿಸಿದ್ದರು! ಅವರಿಗೆ ಕೃತಜ್ಞತೆಗಳನ್ನಷ್ಟೇ ಹೇಳಿ, ಏಳೂವರೆ ಗಂಟೆಗೆ ಮುಂದಿನ ದಾರಿ ಹಿಡಿದೆವು. 

ಇಂದು ವಿಜಯದಶಮಿಯ ಗದ್ದಲ ಕೇಳುತ್ತಿರುವಂತೆ, ವಿಜಯವಾಡದ ನೆನಪಿಗೆ ಸೇರಿ ಬಂದ ಕೆಲವು ‘ವಿಜಯ’ದ ಕತೆಗಳನ್ನು ಹೇಳಿಬಿಡುತ್ತೇನೆ. ವಿಜಯವಾಡಾ ನಗರದ ನಡುವೆ ಇರುವ ಬೆಟ್ಟದ ಹೆಸರು ಇಂದ್ರಕೀಲಕ. ಅದು ಪುರಾಣ ಕಾಲದಲ್ಲಿ

ಅಲ್ಲಿದ್ದ ಉಗ್ರ ತಪವನ್ನಾಚರಿಸಿದ ಮಹರ್ಷಿಯೊಬ್ಬನ ಹೆಸರಂತೆ. ಋಷಿಯ ತಪಸ್ಸಿಗೆ ಮಹಿಷಾಸುರ ವಿಘ್ನಕಾರಿಯಾದನಂತೆ. ಆಗ ಋಷಿ ದೇವಿ ಕನಕದುರ್ಗೆಯ ಮೊರೆಹೋದನಂತೆ. ದೇವಿ ಮಹಿಷಮರ್ಧಿನಿಯಾಗಿ ಮೆರೆದು, ಇಂದ್ರಕೀಲಕ ಬೆಟ್ಟದಲ್ಲಿ ಸಾರ್ವಕಾಲಿಕವಾಗಿ ನೆಲೆಸಿದ್ದಾಳೆ. ಆಕೆಯ ವಿಜಯದ ನೆಲೆಯಾಗಿ ಊರು ವಿಜಯವಾಡ. ಮೈಸೂರಿಗರೇ ಕ್ಷಮಿಸಿ, ಮಹಿಷಾಸುರನ ಕುರಿತು ನಿಮಗೇನಾದರೂ ತಕರಾರಿದ್ದರೆ, ಉತ್ತರಿಸಲು ಜನ ನಾನಲ್ಲ! ದ್ವಾಪರ ಯುಗದಲ್ಲಿ ಪಾಂಡುಪುತ್ರ ಅರ್ಜುನ ಶಿವನ ಧ್ಯಾನ ಮಾಡಿ, ಯಶ ಸಾಧಿಸಿದ್ದೂ ಇದೇ ಇಂದ್ರಕೀಲಕ ಪರ್ವತದಲ್ಲಿ. ಹಾಗಾಗಿ ವಿಜಯನ ವಿಜಯದ ನೆಲೆಯಾಗಿಯೂ ಇದು ವಿಜಯವಾಡ. ಇನ್ನೊಂದೇ ಸ್ಥಳಪುರಾಣದಂತೆ, ಕೃಷ್ಣಾನದಿಯ ಹರಿವನ್ನು ಇಂದ್ರಕೀಲಾದ್ರಿ ಅಡ್ಡಗಟ್ಟಿತ್ತಂತೆ. ಕೆಳ ಪಾತ್ರೆಯ ನೆಲವೂ ಜನಜೀವನವೂ ಬಂಜರಾಗಿತ್ತು. ಜನ ಶಿವನನ್ನು ಒಲಿಸಿಕೊಂಡರು. ಶಿವನ ಆದೇಶಕ್ಕೆ

ಇಂದ್ರಕೀಲಾದ್ರಿ ಮಣಿದು, ಬೆಝ - ಅಂದರೆ ಗುಹೆಗಳ (ಸೀಳು ಅನ್ನಿ, ಸ್ಪಷ್ಟ ಗುಹೆಗಳೇನೂ ಇಲ್ಲ) ಮೂಲಕ ಕೃಷ್ಣೆಗೆ ದಾರಿ ಕೊಟ್ಟಿತಂತೆ. ಹಾಗೆ ಇದು ಬೆಝವಾಡವೂ ಹೌದು. ಕೃಷ್ಣಾ ನದಿ ಇಂದಿಗೂ ಇಂದ್ರಕೀಲಾದ್ರಿಯ ದಕ್ಷಿಣ ಕೊನೆಯನ್ನು ಆಪ್ತವಾಗಿ ಕೊರೆದೇ ಸಾಗುತ್ತಿದೆ ಮತ್ತೂ ದಕ್ಷಿಣಕ್ಕೆ ಪರ್ವತದ ಭಾಗವೇ ಆಗಿದ್ದಿರಬಹುದಾದ ಇನ್ನೊಂದೇ ಶಿಲಾಶಿಖರ ನಿಂತಿರುವುದನ್ನೂ ಚಿತ್ರದಲ್ಲಿ ನೋಡಬಹುದು. ಕೊನೆಯದಾಗಿ, ‘ಬೆಝವಾಡಾ’ವನ್ನು ಕಲಿಯುಗವೂ ಸಮರ್ಥಿಸಿದೆ. ತೀರಾ ಈಚೆಗೆ ಇಂದ್ರಕೀಲಾದ್ರಿಗೆ ಚಿತ್ತಿನಗರ ವಿಭಾಗದಲ್ಲಿ ಒಂದು ಸುರಂಗ ಮಾರ್ಗವನ್ನೇ (೧೯೬೫) ಮಾಡಿದ್ದಾರೆ. ಇದು ನಗರ ವಾಹನಗಳಿಗಾಗುತ್ತಿದ್ದ ಬಳಸಂಬಟ್ಟೆಯ ಹೊರೆಯನ್ನು ತುಂಬ ಇಳಿಸಿದೆ. ಅಷ್ಟೆಲ್ಲ ಮಹತ್ವದ ಇಂದ್ರಕೀಲಾದ್ರಿಗೆ ನಾವು ಬೈಕೋಡಿಸಿ, ಕನಕದುರ್ಗೆಯ ಸಂದರ್ಶನ ಪಡೆದು, ನಮ್ಮ ವಿಜಯಹಾರಕ್ಕೆ ಹೊಸದೇ ಪದಕ ಪೋಣಿಸಿಕೊಂಡೆವು. 

ಕತೆಗಳ ಪ್ರಪಂಚದಲ್ಲಿ ಇಂದ್ರಕೀಲಕ ಕೃಷ್ಣಾ ನದಿಗೆ ದಾರಿ ಕೊಟ್ಟು ಬರ ನೀಗಿಸಿದ್ದು ಕೇಳಿದ್ದೇವೆ. ಆದರೆ ಯುಗ ವಿಪರೀತದಲ್ಲಿ, ಇಂದ್ರಕೀಲಕದ ತಪ್ಪಲಿನಲ್ಲೇ ಬ್ರಿಟಿಷರು (೧೮೫೫) ನೀರಾವರಿಗಾಗಿಯೇ ಕೃಷ್ಣೆಗೆ ಭದ್ರ ತಡೆಗಟ್ಟೆ (ಡ್ಯಾಮ್ ಅಲ್ಲ, ಬ್ಯಾರೇಜ್) ನಿರ್ಮಿಸಿದ್ದಾರೆ. ಕನಕದುರ್ಗೆಯ ದರ್ಶನದಿಂದ ಮರಳುವ ದಾರಿಯಲ್ಲಿ ಕೃಷ್ಣಾ ನದಿ ಪಾತ್ರೆ ಹಾಗೂ ಅದರ ಹಿನ್ನೀರ ಹರಹುಗಳು ಸುಂದರ ವಿಹಂಗಮ ನೋಟಗಳು. ಈ ಅಣೆಕಟ್ಟು ಮುಖ್ಯ ಮೂರು ಕಾಲುವೆಗಳ ಮೂಲಕ ನಿರಾವರಿಯಲ್ಲಿ ಬಹಳ ಫಲಪ್ರದವಾಗಿ ಕೆಲಸ ಮಾಡುತ್ತಲೇ ಬಂದಿದೆ. ಸ್ವತಂತ್ರ ಭಾರತದಲ್ಲಿ, ಭಾಷಾವಾರು ರಾಜ್ಯವಾಗಿ ಆಂಧ್ರಪ್ರದೇಶ ರೂಪುಗೊಂಡ ಹೊಸತರಲ್ಲಿ, ತಡೆಗಟ್ಟೆಗೆ ತುಸು ಪರಿಷ್ಕರಣೆಯಲ್ಲಿ ಮುಖ್ಯ ವಾಹನಗಳ ಸೇತುವೆಯ (೧೯೫೫-೫೬) ಜವಾಬ್ದಾರಿಯನ್ನೂ ಸೇರಿಸಿದ್ದಾರೆ. ಹಾಗೆಂದು ಶತಮಾನದ ಹಿಂದಿನ ಮೂಲ ನಿರ್ಮಾತೃಗಳನ್ನು ಕಡತಗಳಿಗೆ ಸೀಮಿತಗೊಳಿಸಿ, (ಆಂಧ್ರದ ಪ್ರಥಮ ಮುಖ್ಯಮಂತ್ರಿ)

‘ತೇಪೆ ಹಾಕಿದ’ವರ (ಟಿ. ಪ್ರಕಾಶಂ ಬ್ಯಾರೇಜ್) ಹೆಸರು ಕೊಟ್ಟದ್ದು ಸರಿಯಲ್ಲ. ಇದು ಕಾಲದ ನಿರ್ಗುಣಕ್ಕೂ ಸಾಕ್ಷಿ ಎನ್ನಬೇಕು. 

[ನನಗಿಂತ ಕನಿಷ್ಠ ಐವತ್ತು ವರ್ಷಗಳ ಹಿಂದೆ ಶಿವರಾಮ ಕಾರಂತರು ದಕ ಜಿಲ್ಲೆಯ ಕಾಡು ಬೆಟ್ಟ ಅಲೆದು, ಅನುಭವವನ್ನು ತಮ್ಮ ಎಲ್ಲಾ ಸೃಜನಶೀಲ ಕೃತಿಗಳಲ್ಲಿ ಬಳಸಿದ್ದರು ಮತ್ತು ಸ್ಪಷ್ಟವಾಗಿ ‘ಚಿತ್ರಮಯ ದಕ’ ಎಂಬ ಸಚಿತ್ರ ಪುಸ್ತಕವನ್ನೇ ಪ್ರಕಟಿಸಿದ್ದರು. ‘ಚಿತ್ರಮಯ..’ ಪುಸ್ತಕಕ್ಕೆ ಕಾರಂತರೇ ಕ್ಯಾಮರಾ ಹಿಡಿದು ತೆಗೆದ ಚಿತ್ರಗಳನ್ನು, ಗುಣಮಟ್ಟದ ಮುದ್ರಣಕ್ಕಾಗಿ ಜರ್ಮನಿಗೆ ಕಳಿಸಿ ಮಾಡಿಸಿದ್ದರು. ಆದರೂ ನಾನು ಬೆಟ್ಟಗುಡ್ಡಗಳನ್ನು ಸುತ್ತಿ ಪತ್ರಿಕೆಗಳಲ್ಲಿ ಬರೆಯುವ ಕಾಲಕ್ಕೆ, ನನ್ನ ಯಾವ ಕುಮ್ಮಕ್ಕು, ಅನುಮೋದನೆ ಇಲ್ಲದಿದ್ದರೂ ಜನ ‘ಅಪೂರ್ವ’ ‘ಅದ್ವಿತೀಯ’ (ಹೆಚ್ಚಿನವು ಕೇವಲ ಮುಖಸ್ತುತಿ) ಎಂದೆಲ್ಲ ಕೊಂಡಾಡಿದರು! ಹೌದೇನೋ ಎಂಬ ಭ್ರಮೆ ನನ್ನ ತಲೆಗಡರುವ ಮೊದಲೇ ಇಂದಿನ ಯುವಸಾಧಕರು ಕೇಳುತ್ತಿದ್ದಾರೆ "ನೀವು

ಅಮೆದಿಕ್ಕೆಲ್ ಶಿಖರಕ್ಕೆ ಹೋಗಿದ್ದೀರಾ? ಕೂಡ್ಲು ತೀರ್ಥ ನೋಡಿದ್ದೀರಾ? ಜಾಂಬ್ರಿ ಗುಹೆ ಗೊತ್ತುಂಟಾ?..."; ಕಾಲಪುರುಷಂಗೆ ಗುಣಂ ಅಣಂ ಇಲ್ಲಂಗಡ] 

‘ಪ್ರಕಾಶಂ ಬ್ಯಾರೇಜ್’ ಮೇಲೇ ಕೃಷ್ಣಾ ನದಿ ದಾಟಿ, ಗುಂಟೂರು ದಾರಿ ಹಿಡಿದೆವು. ಹದಿನೈದಿಪ್ಪತ್ತು ಕಿಮೀ ಒಳಗೆ ದಾರಿಯ ಮಗ್ಗುಲಲ್ಲೇ ಪುಟ್ಟ ಗುಡ್ಡದ ಮೇಲೊಂದು ದೇವಳ, ತನ್ನ ಧವಳ ಕಾಂತಿಯಿಂದಲೇ ನಮ್ಮನ್ನು ಸೆಳೆದಿತ್ತು. ಶತಮಾನದ ಹಿಂದಿನ ಜಿನ ಬಸದಿಯ ಅಮೃತಶಿಲಾ ಕುಸುರಿ ವೈಭವವನ್ನು ಚುರುಕಾಗಿಯೇ ನೋಡಿ ಮುಂದುವರಿದೆವು. ಒಂಬತ್ತು ಗಂಟೆಗೆ ಗುಂಟೂರು. 


ಆ ದಿನಕ್ಕೆ ನಮ್ಮ ಲಕ್ಷ್ಯ ನಾಗಾರ್ಜುನ ಸಾಗರ. (ಹಾಗೆ ಮುಟ್ಟಿದ್ದೂ ಹೌದು.) ಅದಕ್ಕೆ ಇಂದು ಗೂಗಲ್ ನಕ್ಷೆ, ಗುಂಟೂರು ಕಳೆದ ಮೇಲೆ ನೇರ ಸತ್ತೆನಾಪಳ್ಳಿ ತೋರಿಸುತ್ತದೆ. ಆದರೆ ನಾವು ಮುಖ್ಯ ರಸ್ತೆ ಬಿಟ್ಟು, ‘ಅಮರಾವತಿ’ಗೆ ಭೇಟಿಕೊಟ್ಟಿದ್ದೆವು. ಅದಕ್ಕಿಂದು ಎರಡು ಊಹೆಗಳನ್ನಷ್ಟೇ ಮಾಡಬಲ್ಲೆ. ಯೋಜನಾ ಹಂತದಲ್ಲಿ ಪೆನ್ಸಿಲ್ ಕಾಗದ ಹಿಡಿದು ಕೂತಾಗ, (ಅಖಂಡ) ಆಂಧ್ರಪ್ರದೇಶದಲ್ಲಿ ತೆಲಂಗಾಣ ಚಳವಳಿ ನಡೆಯುತ್ತಿದ್ದದ್ದು ನೆನಪಿತ್ತು. ಹಾಗೊಮ್ಮೆ ಹೋರಾಟ ಯಶಸ್ವಿಯಾದರೆ, ಹೊಸ ಆಂಧ್ರಪ್ರದೇಶಕ್ಕೆ ಅಮರಾವತಿ ರಾಜಧಾನಿಯಾಗುವ ಸಾಧ್ಯತೆಯೂ ಪ್ರಚಾರದಲ್ಲಿತ್ತು. ಅದನ್ನು ಮುಂದಾಗಿಯೇ ನೋಡುವ ತವಕ ಮೂಡಿದ್ದು ಮೊದಲ ಕಾರಣವಿರಬಹುದು. ಮತ್ತೊಂದು, ಆ ಸಮಯದಲ್ಲಿ ನಡೆದಿದ್ದ ಒಂದು ಟೀವೀ ಧಾರಾವಾಹಿಯ ಪ್ರಭಾವ. ‘ಅಮರಾವತಿಯ ಕತೆಗಳು’ ಎಂಬ ಹಿಂದಿ ಕಥಾ ಮಾಲಿಕೆಯಲ್ಲಿ ಕಾಣಿಸಿದ ಕೃಷ್ಣಾ ನದಿ ದಂಡೆಯ ಮನೋಹರ ದೃಶ್ಯಗಳು, ಅಲ್ಲಿನ ಖ್ಯಾತ ಬೌದ್ಧ ಸ್ತೂಪ ನಮ್ಮನ್ನು ಕರೆಸಿಕೊಂಡದ್ದೂ ಇರಬಹುದು. ಏನೊಂದು ಮೂವತ್ತು - ನಲವತ್ತು ಕಿಮೀ ಹೆಚ್ಚು ಓಟ ಎಂದುಕೊಂಡೇ ನಾನು ಗೀಟೆಳೆದಿರಬೇಕು, ಕಾರ್ಯರಂಗದಲ್ಲಿ ಅನುಸರಿಸಿರಬೇಕು. ನಮ್ಮ ಆಶಯಕ್ಕೆ ಅಮರಾವತಿ ಪೂರವಾಗಿತ್ತೇ? ಬಿಸಿಲಿನ ಹೊಡೆತ, ಸತತ ಸವಾರಿಯ ಸಂಕಟಗಳ ತತ್ಕಾಲೀನ ಪರಿಹಾರವೆಂಬಂತೆ, ನದಿ ತೀರದ ಮರದ ತಣ್ಣೆಳಲ್ಲಿ, ತಂಪುಗಾಳಿಗೆ ಮೈಯೊಡ್ಡಿ ಸುಮ್ಮನೆ ವಿಶ್ರಮಿಸಿದೆವೇ? ಯಾವುದೂ ನೆನಪಾಗುವುದಿಲ್ಲ. ಅಲ್ಲಿ ಸುಮಾರು ಒಂದು ಗಂಟೆಯ ಕಾಲ ವ್ಯಯಿಸಿದ ನಮೂದಷ್ಟೇ ನನ್ನಲಿದೆ. 


ಸತ್ತೆನಾಪಳ್ಳಿಯಲ್ಲಿ ಮತ್ತೆ ಮುಖ್ಯ ದಾರಿಗೆ ಮರಳಿ, ಪಿಡುಗುರಾಳ್ಳದಲ್ಲಿ ಹವಾನಿಯಂತ್ರಿತ ಹೋಟೆಲನ್ನೇ ಹುಡುಕಿ ಊಟಕ್ಕೆ ನಿಂತಿದ್ದೆವು! ಮುಂದೆಯೂ ಒಂದು ಕಡೆ ಸುಮಾರು ಅರ್ಧ ಗಂಟೆಗಳ ಕಾಲ ‘ಸಂಕಟ ಪರಿಹಾರ’ ವಿಶ್ರಾಂತಿ ತೆಗೆದುಕೊಂಡ ದಾಖಲೆಯಿದೆ. ಇಂದು ಗಣಕದೆದುರು ಮೆತ್ತನೆ ಕುರ್ಚಿಯಲ್ಲಿ ಕುಳಿತು, ಪಂಖದ ಗಾಳಿ ಬೀಸುತ್ತಿರುವಾಗ, ‘ಅನುಭವದ ನೆನಪೇ ಸಿಹಿ’ ಎಂದು ಧಾರಾಳ ಹೇಳಬಲ್ಲೆ! ದಡೆಪಲ್ಲಿ, ಗುರುಜಾಲ, ಮಚೆರ್ಲಕ್ಕಾಗಿ ನಾಗಾರ್ಜುನಸಾಗರ

ಅಣೆಕಟ್ಟು ವಲಯವನ್ನು ಸಂಜೆಯೇ ಸೇರಿದ್ದೆವು. ಅಲ್ಲಿ ಪ್ರವಾಸೀ ವೀಕ್ಷಣಾ ಮಿತಿಯಲ್ಲಿ ಅಣೆಕಟ್ಟನ್ನು ಅಳೆದು (೨.೬ ಕಿಮೀ ಉದ್ದ), ನೋಡಿ, ಇಲಾಖೆಯದೇ ಅತಿಥಿಗೃಹದಲ್ಲಿ ರಾತ್ರಿಗೆ ಒಪ್ಪಂದ ಮಾಡಿಕೊಂಡೆವು. 
(ಸಂಜೆ ತೇ ೨೦%, ಮರು ಬೆಳಿಗ್ಗೆ ತಾ ೩೪, ತೇ ೩೪%, ದಿನದ ಓಟ ೩೨೭ ಕಿಮೀ) 

ನಮ್ಮ ತುಂಗಭದ್ರಾ ನದಿಯ ಸಾಮಾಜಿಕ ಉಪಯುಕ್ತತೆಯ

ದೊಡ್ಡ ನೆಲೆ - ಹೊಸಪೇಟೆಯ ಅಣೆಕಟ್ಟು. ಮುಂದೆ ಇದು ಕರ್ನಾಟಕದೊಳಗೆ ಹಂಪಿ ಮತ್ತೆ ಆಂಧ್ರದೊಳಗೆ ಮಂತ್ರಾಲಯಗಳನ್ನು ‘ಪವಿತ್ರ’ಗೊಳಿಸಿ ಕೃಷ್ಣಾನದಿಯಲ್ಲಿ ವಿಲೀನವಾಗುತ್ತದೆ. ಅನಂತರ ಇನ್ನೊಂದು ಪುಣ್ಯಕ್ಷೇತ್ರ - ಶ್ರೀಶೈಲದ, ಪಾದ ತೊಳೆದು ಬರುವಾಗ ಸಿಕ್ಕುವುದೇ ಈ ನಾಗಾರ್ಜುನ ಸಾಗರದ ಅಣೆಕಟ್ಟು. ನಾಗಾರ್ಜುನ ಸಾಗರದಿಂದ ನಮ್ಮ ಸಾಹಸಯಾನದ ಅಂತಿಮ ಚರಣವಾದರೂ ಬಹುತೇಕ ತುಂಗಭದ್ರಾ ಕಣಿವೆಯ ಎದುರೀಜೇ ಆಗಿತ್ತು. ನಮ್ಮ

ಹೊಸದಿನದ (೧೫-೫-೯೬) ಗುರಿ - ಕರ್ನೂಲು. ನೇರ ದಾರಿಗದು ದೊಡ್ಡ ಲಕ್ಷ್ಯವಲ್ಲ, ಆದರೆ ನಮ್ಮ ಅಡ್ಡ ಓಟಗಳಲ್ಲಿ ನೋಡಲೇಬೇಕಾದ ಎರಡು ಹೆಸರುಗಳಿದ್ದವು - ಶ್ರೀಶೈಲ ಮತ್ತು ನಂದ್ಯಾಲ. ಇದರಿಂದ ಸುತ್ತಾಟ ಸ್ವಲ್ಪ ಹೆಚ್ಚಿನದೇ ಇತ್ತು. ಅದಕ್ಕೂ ಮಿಗಿಲಾಗಿ, ನಾವು ದಾಟಲಿದ್ದ ನಲ್ಲಮಲ ಅರಣ್ಯ ಪ್ರದೇಶ ನಕ್ಸಲ್ ಭಯೋತ್ಪಾದನೆಯ ಕೇಂದ್ರ ಎನ್ನುವುದು ನಮ್ಮನ್ನು ಹೆಚ್ಚು ಜಾಗೃತವಿರಿಸಿತ್ತು. ಐದೂಕಾಲು ಗಂಟೆಗೇ ನಾಗಾರ್ಜುನ ಬಿಟ್ಟೆವು. 

ನಾಗಾರ್ಜುನ ಅಣೆಕಟ್ಟೆಯ ಕೆಳ, ಬಲ ದಂಡೆಯ ಸಣ್ಣ ಪುಣ್ಯಕ್ಷೇತ್ರ - ಎತಿಪೋತಾಲ. ಇದು ದತ್ತಾತ್ರೇಯ ಹಾಗೂ ಏಕಮುಖಿಯರ ತಪೋನೆಲೆ. ಇದು ಲಂಬಾಣಿ ಸಮುದಾಯಕ್ಕೆ ಬಹಳ ಕಾರಣಿಕವೂ ಹೌದು. ಅದನ್ನು ನನ್ನ ದಿವ್ಯಜ್ಞಾನಚಕ್ಷುವಿನಲ್ಲಿ ಕಂಡು, ಯತಿ ತಪೋ ಸ್ಥಳ ಎನ್ನುವುದರ ಅಪಭ್ರಂಶವೇ ಎತಿಪೋತಾಲ ಎಂದೇ ದಿನಚರಿಯಲ್ಲಿ ದಾಖಲಿಸಿಕೊಂಡಿದ್ದೆ. ಆದರೆ ವಾಸ್ತವ

(ವಿಕಿಪೀಡಿಯಾ) ಬೇರೇ ಇದೆ. ಪುಣ್ಯ ಕ್ಷೇತ್ರದ ಹಿನ್ನೆಲೆಯಲ್ಲೇ ಒಂದು ಸುಂದರ ಸರಣಿ ಜಲಪಾತವೂ ಇದೆ. ನಾಗಾರ್ಜುನ ಸಾಗರದ ಅಣೆಕಟ್ಟು ಕಳೆದ ಕೆಲವೇ ಅಂತರದಲ್ಲಿ, ಬಲದಂಡೆಯಲ್ಲಿ ಪ್ರಕಟಗೊಳ್ಳುವ ಮೂರು ಸಣ್ಣ ತೊರೆಗಳು - ಚಂದ್ರವಾಂಕಾ, ನಕ್ಕಲ ಮತ್ತು ತುಮ್ಮಲ. ಇವು ಕಲಕಲಿಸುತ್ತ ಬಂದು, ಸುಮಾರು ಎಪ್ಪತ್ತು ಅಡಿ ಆಳಕ್ಕೆ ಇಲ್ಲಿ ಧುಮುಕಿ, ಒಂದಾಗಿ ಕೃಷ್ಣೆಯತ್ತ ಹರಿಯುತ್ತವೆ. ಮೂರೂ ತೊರೆಗಳು ನೀರನ್ನು ‘ಎತ್ತಿ ಹೊಯ್ಯುವುದರ’ (ಜಲಪಾತ) ತೆಲುಗು ರೂಪವೇ ಎತಿ ಪೋತಾಲ! ಪ್ರವಾಸಿಗಳು ನಾಗಾರ್ಜುನ ಸಾಗರದ ದೊಡ್ಡ ಹೆಸರಿನ ಮೋಹಕ್ಕೆ ದೊಡ್ಡ ಸಂಖ್ಯೆಯಲ್ಲೇ ಬರುವುದಿರಬಹುದು. ಆದರೆ ಅಣೆಕಟ್ಟಿನ ಭದ್ರತೆಯ ಕಾರಣದಲ್ಲಿ ಸೀಮಿತ ದರ್ಶನ ಮತ್ತು ಚಟುವಟಿಕೆಯಷ್ಟೇ ಸಾಧ್ಯ. ಅದರಲ್ಲೂ ಮಳೆಗಾಲದಲ್ಲಿ ಕಿಂಡಿಗಳು ತೆರೆದಾಗ ಭೋರ್ಗರೆಯುವ ನೀರಿನ ಭಯ, ಒಣ ದಿನಗಳಲ್ಲಿ ಕಟ್ಟೆ ಬರಗೆಟ್ಟು ನಿಸ್ತೇಜ ಪಾತಾಳವನ್ನೇ ತೋರಿದಾಗ ಮೂಡಿದ ನಿರಾಶೆಗೆ, ಸನಿಹದ ಎತಿಪೋತಾಲ ಚಿರ ಚೇತೋಹಾರಿ ಚಿಕಿತ್ಸೆ ಕೊಡುತ್ತಿದೆ. ಇದರ ಜನಪ್ರಿಯತೆಯನ್ನು ಪ್ರವಾಸೋದ್ಯಮ ಇಲಾಖೆ ಮನಗಂಡಿದೆ. ಹಾಗಾಗಿ ಇದನ್ನು ಬೇಸಗೆಯ ದಿನಗಳಲ್ಲೂ ಪೋಷಿಸುವಂತೆ ಅಣೆಕಟ್ಟಿನಿಂದ ಸಣ್ಣ ಕಾಲುವೆಯನ್ನೇ ಮಾಡಿದ್ದಾರಂತೆ. ನಾವಲ್ಲಿ ಸಣ್ಣದಾಗಿ ಸುತ್ತಾಡಿ, ಮುಂದಿನ ದಾರಿ ಹಿಡಿದೆವು.  

ಮಚೆರ್ಲಾದವರೆಗೆ ಹಿಂದಿನದ್ದೇ ದಾರಿ. ಮತ್ತೆ ಭಾರೀ ಬೆಟ್ಟ ಮತ್ತು ಕಾಡಿನ (ನಲ್ಲಮಲ), ಬಹುತೇಕ ನಿರ್ಜನ ಪ್ರದೇಶಗಳ ಮೂಲಕ ಸವಾರಿ. ಲೆಕ್ಕಕ್ಕಿದು ಹೆದ್ದಾರಿ (೫೬೫) ಆದರೂ ಡಾಮರು ಕಿತ್ತ ಸೌಕರ್ಯ, ನಾವು ಎಲ್ಲೂ ಹೆಚ್ಚದಂತೆ ನೋಡಿಕೊಂಡಿತು.

ಯರ್ರಗಂಡದಲ್ಲಿ ತಿಂಡಿ ತಿಂದು, ಕೆಸಿನೆನಿ ಪಳ್ಳಿಯಲ್ಲಿ ಇನ್ನೊಂದೇ ಹೆದ್ದಾರಿಗೆ (ಗುಂಟೂರು - ಕರ್ನೂಲು, ಸಂ ೭೬೫) ಸಂಗಮಿಸಿ, ಸ್ಪಷ್ಟ ಪಶ್ಚಿಮಾಭಿಮುಖಿಗಳಾದೆವು. ಬೈಕುಗಳ ಪೆಟ್ರೋಲ್ ದಾಹಕ್ಕೆ ಸಿಕ್ಕ ದೊಡ್ಡ ಪೇಟೆ ಎಂದೇ ದೋರ್ನಾಲ ತಲಪಿದಾಗ ಸಂತೋಷಿಸಿದ್ದೆವು. ಆದರೆ ಸಣ್ಣ ವಿವರಗಳಲ್ಲಿ ಸರಕಾರಗಳು ಎಂದೂ ಮೋಸವೇ. ಆ ದಿನಗಳಲ್ಲಿ ಅಲ್ಲಿ ಬಂಕ್ ಇತ್ತೋ ಇಲ್ಲವೋ ನನಗೆ ನೆನಪಿಲ್ಲ. ಆದರೆ ಕಾಳಸಂತೆಯಲ್ಲಿ ಪೆಟ್ರೋಲ್ ಧಾರಾಳ ಇತ್ತು, ನಮಗೆ ಬೇರೆ ಗತಿಯಿರಲಿಲ್ಲ. ಇಂಥ ಸಾಮಾಜಿಕ ಅಸಮತೋಲನಗಳೇ ಸಾಮಾನ್ಯರನ್ನು ಭಯೋತ್ಪಾದನೆಯ ಅಸಹಾಯ ಶೌರ್ಯಕ್ಕೆ (ಕ್ರೌರ್ಯಕ್ಕೂ) ತಳ್ಳುವುದೆಂದೇ ಕಾಣುತ್ತದೆ. 


ಬಿಸಿಲಿನ ಉರಿ, ದಾರಿಯ ದುಸ್ಥಿತಿ ಮತ್ತು ಅಂಡಿನ ಗಾಯಗಳ ಸಂಕಟದ ಜತೆಗೆ ಹಲವರ ಎಚ್ಚರಿಕೆಯ ನುಡಿಗಳು, "ಅರಣ್ಯ ಪ್ರದೇಶಗಳಲ್ಲಿ ಜೊತೆಯಾಗಿಯೇ ಸಾಗಿ, ವಿರಮಿಸದಿರಿ, ಮುಖ್ಯ ದಾರಿ ಬಿಟ್ಟು (ಉಚ್ಚೆಹೊಯ್ಲಿಕ್ಕೆ, ಮತ್ತೊಂದಕ್ಕೆ...) ಸ್ವಲ್ಪವೂ ಹೊರಗೆ ಅಡ್ಡಾಡದಿರಿ, ಸಂಶಯಾಸ್ಪದ ಜನ ಅಥವಾ ರಚನೆಗಳನ್ನು (ನೆಲ ಬಾಂಬ್ ಇಟ್ಟಿರಬಹುದು) ಸೌಮ್ಯವಾಗಿಯೇ ನಿವಾರಿಸಿಕೊಳ್ಳಿ, ಸಾಧ್ಯವಾದರೆ ಯಾವುದಾದರೂ ಬಸ್ ಲಾರಿಯನ್ನೇ ಹಿಂಬಾಲಿಸಿ..." ಇತ್ಯಾದಿ ಒಳಗಿವಿಯಲ್ಲಿ ಗುಂಯ್ಗುಡುತ್ತಲೇ ಇದ್ದವು. ನಮ್ಮ ಅದೃಷ್ಟಕ್ಕೆ ಗೊಂದಲಿಸುವ ಕವಲು ದಾರಿಗಳಿರಲಿಲ್ಲ, ಕವಲಿದ್ದಲ್ಲೂ ಸ್ಪಷ್ಟ ಬೋರ್ಡುಗಳು ಇದ್ದವು. ಇಲ್ಲವಾದರೆ ಶತಮಾನಗಳ ಹಿಂದೆ ಭಕ್ತಿ ಪರವಶತೆಯಲ್ಲಿ ಇಲ್ಲೇ ನಡೆದಾಡಿದ ಅಕ್ಕಮಹಾದೇವಿಯಂತೆ ನಾವೂ ಗಿಡಮರಬಳ್ಳಿಗಳನ್ನೋ ಗಿಳಿ ನವಿಲುಗಳನ್ನೋ (ಒಂದೂ ಕಾಣಲಿಲ್ಲ) ಕೇಳಿ ಮುಂದುವರಿಯುವಷ್ಟು ನಿರ್ಜನ, ವಾಹನ ಶೂನ್ಯ ದಾರಿ. ಪುಟ್ಟ ಹಳ್ಳಿ - ಚಿಂತಲ ಕಳೆದು, ಶಿಖರಂ ಅಥವಾ ಅಕ್ಕನ ಆರಾಧ್ಯದೈವ ಚೆನ್ನಮಲ್ಲಿಕಾರ್ಜುನನ ಸಾನ್ನಿಧ್ಯವನ್ನು ಹನ್ನೊಂದೂ ಕಾಲಕ್ಕೆ ಮುಟ್ಟಿದೆವು. 

ಶ್ರೀಶೈಲದಲ್ಲಿ ಭಕ್ತಿಭಾವವನ್ನುಳಿದು ನೋಡುವಂತದ್ದೇನೂ ನಮಗೆ ಕಾಣಲಿಲ್ಲ. ಅಲ್ಲೇ ಉತ್ತರ ಕೊಳ್ಳದಲ್ಲಿದ್ದ ಕೃಷ್ಣಾ ನದಿಯ ಸ್ನಾನ ಘಟ್ಟದ ಕುರಿತ ಅಸ್ಪಷ್ಟ ಮಾಹಿತಿಗಳು ನಮ್ಮನ್ನು ಆಕರ್ಷಿಸಲಿಲ್ಲ. ಆದರೆ ಇಂದು (ಅಂತರ್ಜಾಲದಿಂದ), ಅಲ್ಲಿ ಜಲವಿದ್ಯುತ್ತಿಗಾಗಿ ೧೯೬೦ರಲ್ಲಿ ನಿರ್ಮಾಣಕ್ಕೆ ತೊಡಗಿದ ಭಾರೀ ಅಣೆಕಟ್ಟಿನ ಕತೆ ತಿಳಿಯುತ್ತದೆ. ಅದು ಯಥಾಪ್ರಕಾರ ನಿಧಾನದ್ರೋಹದಲ್ಲಿ ನರಳಿದರೂ ೧೯೮೧ರಲ್ಲಿ ಕಾರ್ಯಾರಂಭ ಮಾಡಿತ್ತು. ಮತ್ತದರ ನೀರ ಮೇಲೇ ಈಚಿನ ದಿನಗಳಲ್ಲಿ, ಕೆಲವು ಶೋಧಕರು ದೋಣಿ ಸವಾರಿ ಹೋದ ಚಂದ, ಅಕ್ಕಮಹಾದೇವಿ ಐಕ್ಯಳಾದ ಗುಹೆಯನ್ನು ಶೋಧಿಸಿದ ವಿವರಗಳೆಲ್ಲ ತಿಳಿದಾಗ ಸಣ್ಣ ಪಶ್ಚಾತ್ತಾಪವೂ ಆಗುತ್ತದೆ. ಆದರೆ ಆ ದಿನಗಳಲ್ಲಿ ಇಂದು ಗೂಗಲ್ ನಕ್ಷೆ ಹೇಳುವಂತೆ ಪ್ರವಾಸಿ ಸೌಕರ್ಯಗಳು ಇದ್ದಿರಲಾರದು ಎಂದು ಸಮಾಧಾನಿಸಿಕೊಳ್ಳುತ್ತೇನೆ. 


ಶ್ರೀಶೈಲದಲ್ಲೇ ಊಟ ಮುಗಿಸೋಣವೆಂದರೆ ಸುಲಭ ಸಾರ್ವಜನಿಕ ವ್ಯವಸ್ಥೆ ಏನೂ ಕಾಣಲಿಲ್ಲ. ಮತ್ತೆ ಕಲ್ಕೂರರ ಪರಿಚಯದ ಬಲದಲ್ಲಿ ಮುಂದುವರಿಯಲು ಸಮಯದ ಕಟ್ಟು ಬಿಗಿಯುತ್ತಿತ್ತು. ಕೇವಲ ಅರ್ಧ ಗಂಟೆಯಲ್ಲೇ ಶ್ರೀಶೈಲ ಬಿಟ್ಟು, ಬಂದ ದಾರಿಯನ್ನೇ ಸವೆಸತೊಡಗಿದ್ದೆವು. ಏರು ದಾರಿಯಲ್ಲಿ ವಿರಮಿಸದಿದ್ದ ದಾರಿ ಬದಿಯ ಆಕರ್ಷಣೆ - ಫಲಧಾರಾ ಪಂಚಧಾರಾಗಳನ್ನು, ಬೈಕ್ ಬಿಟ್ಟು, ಮೆಟ್ಟಿಲಿಳಿದು ನೋಡಿ ಬಂದೆವು. ಲಗತ್ತಿಸಿದ ವಿಡಿಯೋದಲ್ಲಿರುವಂತೆ, ಆ ಕಾಲದಲ್ಲಿ ಹೀಗೆ ವ್ಯವಸ್ಥಿತ ಮೆಟ್ಟಿಲು, ಪ್ರವಾಸಿಗರೂ ಇರಲಿಲ್ಲ ಎಂದೇ ನನ್ನ ಅನಿಸಿಕೆ. ಸುಲಭ ಸಂಪರ್ಕ ಸಾಧ್ಯವಾದ್ದಕ್ಕೆ ಬೆಟ್ಟದ ಝರಿಗೆ ಕತೆ, ಆರಾಧನ ಮಹತ್ವ ಹಚ್ಚಿದ್ದರು, ಅಷ್ಟೆ. ಹದಿನೈದು ಇಪ್ಪತ್ತು ಮಿನಿಟು ವ್ಯರ್ಥವಾದ್ದಷ್ಟೇ ಬಂತು. 

ಹಸಿವು ಬಳಲಿಕೆಗಳೊಡನೆ ಇನ್ನೊಮ್ಮೆ ದೋರ್ನಾಲ ಮುಟ್ಟುವಾಗ ಗಂಟೆ ಎರಡು ಕಾಲು. ಊಟದ ಶಾಸ್ತ್ರ, ಅದಕ್ಕೂ ಮಿಗಿಲಾಗಿ ಅರ್ಧ ಗಂಟೆಯ ವಿಶ್ರಾಂತಿಯಲ್ಲಿ ತುಸು ಚೈರ್ತನ್ಯ ಗಳಿಸಿದೆವು. ಮತ್ತೆ ಸುಮಾರು ಅರವತ್ತು ಕಿಮೀಯಷ್ಟು ನಲ್ಲಮಲ ಗೊಂಡಾರಣ್ಯದ ಒಲಗೇ ಓಡೋಡಿ ಆತ್ಮಕೂರು ತಲಪುವಾಗ ಗಂಟೆ ೪.೫೦ ಆಗಿತ್ತು. ಇಲ್ಲಿ ಎರಡು ಮನಸ್ಸು - ನೇರ ಕರ್ನೂಲಾದರೆ ಸುಮಾರು ೭೦ ಕಿಮೀ, ಅಂದರೆ ಹೆಚ್ಚುಕಮ್ಮಿ ಸೂರ್ಯಾಸ್ತಕ್ಕೆ ಅಲ್ಲಿರುತ್ತಿದ್ದೆವು. ಆದರೆ ಯೋಜನೆಯಂತೆ ಸುಮಾರು ೫೦ ಕಿಮೀ ಅಡ್ಡ ದಾರಿ ಹಿಡಿದು ನಂದ್ಯಾಲಕ್ಕೆ ಭೇಟಿ ಕೊಡಬೇಕಿತ್ತು. ಅಂದರೆ (ಹೋಗಿ ಬರುವಲ್ಲಿ) ಮತ್ತೆ ಕನಿಷ್ಠ ನೂರು ಕಿಮೀ ಸೇರ್ಪಡೆ. ಹತ್ತು ವರ್ಷಗಳ ಹಿಂದೆ (೧೯೮೬) ನನ್ನ ತಂದೆ, ತಾಯಿಯರು ದೇವಕಿ ಅಭಯರನ್ನು ಕೂಡಿಕೊಂಡು ಬಳ್ಳಾರಿ ಕರ್ನೂಲು ಎಂದು ಸಣ್ಣ ಪ್ರವಾಸ ಮಾಡಿದ್ದರು. ಆಗ ಕಲ್ಕೂರರ ಮಾರ್ಗದರ್ಶನದಲ್ಲೇ ಮಹಾನಂದಿ ನೋಡಿದ್ದನ್ನು ವಿಶೇಷವಾಗಿ ವರ್ಣಿಸಿದ್ದರು. ಕಾಡಿನೊಳಗೆ ಕತ್ತಲು ಬೇಗ ಅನ್ನಿಸುತ್ತದೆ ಎಂದು ನಾವೇ ಸಂತೈಸಿಕೊಂಡೆವು. ಮತ್ತೆ ಇನ್ನೊಮ್ಮೆ ನಂದ್ಯಾಲಕ್ಕಾಗಿ ಬರುವುದುಂಟೇ ಎಂದು ಪ್ರಶ್ನಿಸಿಕೊಂಡೆವು. "ಜೈ ನಂದ್ಯಾಲ" ಎಂದು ಎಡ ಹೊರಳಿಯೇ ಬಿಟ್ಟೆವು. 


ಸುಮಾರು ಅರ್ಧ ದಾರಿಯಲ್ಲಿ ಎಡಕ್ಕೆ ವಿಸ್ತಾರವಾದ ವೆಲುಗೋಡು ಸರೋವರ ಮನರಂಜಿಸಿತು. ನಂದ್ಯಾಲ ಜಲಸಮೃದ್ಧ ನೆಲ ಎಂದೇ ಕೇಳಿದ್ದೆ. ಸಹಜವಾಗಿ ಈ ಸರೋವರವೂ ಪ್ರಾಕೃತಿಕ ಕೊಡುಗೆ ಎಂದೇ ಆ ದಿನಗಳಲ್ಲಿ ಗ್ರಹಿಸಿದ್ದೆ. ವಾಸ್ತವದಲ್ಲಿ ಇದು ಶ್ರೀಶೈಲಂ ಅಣೆಕಟ್ಟಿನಿಂದ ಬರುವ ಕಾಲುವೆ ಪೋಷಿಸುವ ಜಲಾಶಯ. ವರ್ತಮಾನದಲ್ಲಿ ಎಲ್ಲೆಡೆ ಕಾಡುವ ನೀರ ಕೊರತೆ ಶ್ರೀಶೈಲಂ ಅಣೆಕಟ್ಟನ್ನೂ ಬಿಟ್ಟಿಲ್ಲ. ತತ್ಪರಿಣಾಮವಾಗಿ ಕಳೆದ ವರ್‍ಷ (೨೦೧೯) ವೆಲುಗೋಡು ಸರೋವರ ಕೇವಲ ೧೦% ನೀರು ಹೊಂದಿದೆ ಎಂದೊಂದು ಪತ್ರಿಕಾವರದಿ ಹೇಳುತ್ತಿತ್ತು; ಹೆಸರು ಕ್ಷೀರಸಾಗರ, ಒಕ್ಕುಡುತೆ ಮಜ್ಜಿಗೆಗೆ ಗತಿಯಿಲ್ಲ! 


ನಂದ್ಯಾಲ ಅಂದರೆ ನಂದಿಯ ಆಲಯ. ಈ ಕ್ಷೇತ್ರದ ಸುಮಾರು ಹದಿನೈದು ಕಿಮೀ ವಲಯದೊಳಗೆ ಇರುವ ಒಂಬತ್ತು ನಂದಿ - ನವನಂದಿ, ದೇವಾಲಯಗಳಿಂದಲೇ ನಂದ್ಯಾಲ ಪ್ರಸಿದ್ಧ. ಅದರಲ್ಲೂ ನಂದ್ಯಾಲದಿಂದ ಸುಮಾರು ಹನ್ನೊಂದು ಕಿಮೀ

ಅಂತರದಲ್ಲಿರುವ ಮಹಾನಂದಿ, ಕೇಂದ್ರ ಆಕರ್ಷಣೆ. ಪೂರ್ಣ ಕತ್ತಲಾವರಿಸುವುದರೊಳಗೆ ಮುಖ್ಯವಾದ್ದನ್ನೇ ನೋಡುವ ಕಾತರದಲ್ಲಿ ನಾವು ನೇರ ಮಹಾನಂದಿಗೇ ಹೋಗಿದ್ದೆವು. ಅಲ್ಲಿ ಗರ್ಭಗುಡಿಯ ಸ್ವಯಂಭೂ ಲಿಂಗವನ್ನೇ ಆವರಿಸಿ ಜಲ ಬುದ್ಬುದಿಸುತ್ತದೆ. ಹಾಗೇ ಶಿವಲಿಂಗವನ್ನೂ ಸೇರಿಸಿದಂತೆ ಪುಟ್ಟ ಕೆರೆಯೇ (ಪುಷ್ಕರಣಿ) ಇದೆ. ಉಳಿದಂತೆ ದೇವಳದ ವಠಾರದ ಒಳಗೆ ಇನ್ನೆರಡು ಪುಷ್ಕರಣಿಗಳೂ ಇವೆ. ದೇಶದ ಕೆಲವೇ ಪ್ರಸಿದ್ಧ ದೇವಳಗಳಂತೆ (ಗೋಕರ್ಣ, ಕಾಶಿ, ಕೇದಾರ...) ಮಹಾನಂದಿಯಲ್ಲೂ ಭಕ್ತರಿಗೆ ಶಿವಲಿಂಗವನ್ನು ಸ್ಪರ್ಷಿಸಿ ಆರಾಧಿಸುವ ಅವಕಾಶವಿದೆ. ಒಳಗಿನ ಕೆರೆಯಲ್ಲಿ ಭಕ್ತರ ಮೀಯಾಣಕ್ಕೆ ಕಾಲಮಿತಿ ಇದ್ದಿರಬೇಕು. ಅದೇನೂ ಇಲ್ಲದ ಹೊರಗಿನ ಎರಡರಲ್ಲಿ ಜನ ಸುಖಸ್ನಾನದಲ್ಲಿದ್ದರು. ಬಿಸಿಲು, ಬೆವರುಗಳೊಡನೆ ಮೈ ಹುಡಿ ಮಾಡಿ ಬಂದಿದ್ದ ನಮಗಂತೂ ಅದು ನಿಸ್ಸಂದೇಹವಾಗಿ ಕಾಯಕಲ್ಪವನ್ನೇ ಕೊಡುತ್ತಿತ್ತು. ಆದರೆ ಪೂರ್ಣ ಮಾಸಿದ್ದ ಆಕಾಶ, ಬಾಕಿಯುಳಿದ ದಾರಿಯ ಉದ್ದ ಅಣಕಿಸಿತು. ಮಹಾನಂದಿ ಬಿಡುವಾಗ ರಾತ್ರಿ ಏಳೂವರೆ. ಗಡಿಬಿಡಿ ಏನೂ ಮಾಡಿಕೊಳ್ಳದೆ ಬೈಕೋಡಿಸಿ, ಕರ್ನೂಲು ತಲಪುವಾಗ ಎಂಟೂ ಮುಕ್ಕಾಲು. ಅವೇಳೆಯಲ್ಲಿ ಆತಿಥೇಯರನ್ನು ಮುಜುಗರಕ್ಕೊಳಪಡಿಸದಂತೆ ಊಟ ಮುಗಿಸಿ ಒಂಬತ್ತೂ ಕಾಲಕ್ಕೆ ಕಲ್ಕೂರರ ಮನೆ ಬಾಗಿಲು ತಟ್ಟಿದ್ದೆವು. 


"ಪ್ರಿಯ ಶ್ರೀ ಲೆಂಕಾರಿಗೆ ನಮಸ್ತೆ.... ನೀವು ನನ್ನನ್ನು ಒರಿಸ್ಸಾಕ್ಕೆ ಬಂದು ಭೇಟಿಯಾಗಲು ಕರೆದು ಗೌರವಿಸಿದ್ದೀರಿ. ಆದರೆ ಸದ್ಯ ನಿಮ್ಮ ಆಮಂತ್ರಣವನ್ನು ನನ್ನದೇ ಇಬ್ಬರು ಸೋದರಳಿಯಂದಿರಿಗೆ ವರ್ಗಾಯಿಸುತ್ತಿದ್ದೇನೆ. ಅಶೋಕ.... ನಾಲ್ಕು ಮಂದಿ, ಮೋಟಾರ್ ಸೈಕಲ್ಲೇರಿ ಸಾಹಸಯಾನದಲ್ಲಿ ಭಾರತ ಸುತ್ತುತ್ತಾ ಒರಿಸ್ಸಾಕ್ಕೂ ಬರಲಿದ್ದಾರೆ. ಅವರಿಗೆ ನಿಮ್ಮೆಲ್ಲಾ ಸಹಾಯ ಸಹಕಾರವನ್ನು ನೀಡುವುದೆಂದರೆ ನೀವು ನನ್ನನ್ನು ಸತ್ಕರಿಸಿದಂತೇ ಸರಿ...." ಇದು ಕೂರಾಡಿ ಚಂದ್ರಶೇಖರ ಕಲ್ಕೂರರು, ನಮ್ಮ ಸಾಹಸಯಾನಕ್ಕೆ ಪೂರಕವಾಗಿ ಬರೆದ ಅಸಂಖ್ಯ ಪತ್ರಗಳಲ್ಲಿ ಒಂದು! ಕೆ.ಸಿ. ಲೆಂಕಾ ಅಂದಿನ ಒರಿಸ್ಸಾ ಸರಕಾರದ ಓರ್ವ ಗೌರವಾನ್ವಿತ ಸಚಿವ ಮತ್ತು ಕಲ್ಕೂರರ ಆತ್ಮೀಯ ಮಿತ್ರ. 

ಕಲ್ಕೂರರು ಆಂಧ್ರಪ್ರದೇಶ ಹೋಟೆಲಿಗರ ಸಂಘದ ಗೌರವ ಕಾರ್ಯದರ್ಶಿ. ಆ ನೆಲೆಯಲ್ಲಿ, ನಮ್ಮ ದಾರಿಯನ್ನು ಅಂದಾಜಿಸಿ ಅವರು ಸ್ಪಷ್ಟವಾಗಿ ಆರು ವಿವಿಧ ಊರುಗಳ, ಮುಖ್ಯ ಹೋಟೆಲಿಗ ಮಿತ್ರರಿಗೆ ಇಂಥವೇ ಪತ್ರಗಳನ್ನು ಬರೆದಿದ್ದರು. ಅವುಗಳಲ್ಲಂತೂ ".... ಬರಲಿರುವ ಚುನಾವಣಾ ಬಿಸಿಯಲ್ಲದಿದ್ದರೆ ನಾನೂ ತಂಡದ ಭಾಗವಾಗಿಯೇ ಬರುತ್ತಿದ್ದೆ. ಈ ನನ್ನ ಸಮೀಪದ ಬಂಧುಗಳಿಗೆ ಊಟ ವಸತಿಯ ಎಲ್ಲಾ ಅನುಕೂಲ, ಸಹಕಾರ...." ನಮಗೆ ಮುಜುಗರವಾಗುವಷ್ಟು ನಮ್ಮನ್ನು ಅಟ್ಟದಲ್ಲಿಟ್ಟು ಸಹಾಯ ಕೋರಿದ್ದರು. 

ಕಲ್ಕೂರರ ಸಾಹಿತ್ಯ ಪ್ರೀತಿ ಅವರನ್ನು ಕರ್ನೂಲು ಜಿಲ್ಲಾ ಗ್ರಂಥಾಲಯ ಸಂಸ್ಥೆಯ ಅಧ್ಯಕ್ಷರನ್ನಾಗಿಸಿತ್ತು. ಸಹಜವಾಗಿ ಅವರಿಗೆ ರಾಜ್ಯದ ಇತರ ಜಿಲ್ಲಾ ಅಧ್ಯಕ್ಷರ ಮೈತ್ರಿಯೂ ಒಡನಾಟವೂ ಧಾರಾಳ ಇತ್ತು. ಕಲ್ಕೂರರು ಅವರಿಗೆಲ್ಲ ನಮ್ಮ ಪ್ರವಾಸದ ಮಾಹಿತಿ ಕೊಟ್ಟು, ನಮಗೆ ಅನುಕೂಲರಾಗಲು ಕೋರಿದ್ದರು. ಸಾಲದ್ದಕ್ಕೆ ನಮ್ಮ ಪ್ರವಾಸಾವಧಿಯಲ್ಲೇ ಅಲ್ಲಿನ ಗ್ರಂಥಾಲಯ ಸಂಸ್ಥೆಗಳು

ನಾಗಾರ್ಜುನಕೊಂಡದಲ್ಲೊಂದು ಮಹತ್ವದ ಸಮ್ಮೇಳನ ನಡೆಸಲಿದ್ದರು. ಅದರಲ್ಲಿ ಪ್ರಕಾಶಕ ಹಾಗೂ ಪುಸ್ತಕ ವ್ಯಾಪಾರಿಯ ನೆಲೆಯಲ್ಲಿ ನನ್ನನ್ನು ಮುಖ್ಯ ಅತಿಥಿಯಾಗಿಸಿಕೊಳ್ಳುವ ಉತ್ಸಾಹವನ್ನೂ ಕಲ್ಕೂರರು ತೋರಿದ್ದರು. ನಾನು ಒಪ್ಪಲಿಲ್ಲ ಬಿಡಿ. 

[ಕಲ್ಕೂರರ ಯೋಚನೆ ತಪ್ಪಲ್ಲ. ಅದನ್ನು ನಾನು ಒಪ್ಪಿಕೊಂಡಿದ್ದರೆ, ನನಗೆ ಹೋಗಿ ಬರುವ ಖರ್ಚು, ಊಟ ವಾಸ ಮತ್ತು ಗೌರವಧನವೂ ಅಧಿಕೃತವಾಗಿಯೇ ಸಿಕ್ಕುತ್ತಿತ್ತು! ನಮ್ಮ ಸರಕಾರ ಕೃಪಾಪೋಷಿತ ನೂರೆಂಟು ಅಕಾಡೆಮಿ, ಪ್ರಾಧಿಕಾರಗಳು ತಮ್ಮ ಅಧೀನದಲ್ಲಿ ಹಲವೆಡೆಗಳಲ್ಲಿ ಹಲವು ಸಂಘ ಸಂಸ್ಥೆಗಳಿಗೆ ‘ಉದಾರವಾಗಿ ಅನುದಾನ ಕೊಟ್ಟು’ ವಿವಿಧ ಕಲಾಪಗಳನ್ನು ‘ಪ್ರೋತ್ಸಾಹಿಸುವುದು’ ಕಾಣುತ್ತೇವೆ. ಆದರೆ ಹೆಚ್ಚಿನೆಡೆಗಳಲ್ಲಿ ಆ ಕಲಾಪಗಳಲ್ಲಿ ಪ್ರಾಧಿಕಾರ, ಅಕಾಡೆಮಿಗಳ ಅಧ್ಯಕ್ಷ, ಸದಸ್ಯರುಗಳು ಯೋಗ್ಯತೆ ಇಲ್ಲದೆಯೂ ಉದ್ಘಾಟಕ, ಅತಿಥಿ, ಅಧ್ಯಕ್ಷ ಎಂಬಿತ್ಯಾದಿ ಅನ್ನದಂಡದ ‘ಪದವಿ’ಗಳಲ್ಲಿ ಭಾಗಿಯಾಗಿ, ಪ್ರವಾಸದ ಮಝಾ ಅನುಭವಿಸುತ್ತಾರೆ. ಕಲಾಪ ವಹಿಸಿಕೊಂಡ ಸಂಸ್ಥೆಗಳು ಅನುದಾನದ ಹೆಚ್ಚಿನ ಭಾಗವನ್ನು ಅವರ ರಾಜೋಪಚಾರಕ್ಕೇ ಮೀಸಲಿಟ್ಟು (ಕೆಲವೊಮ್ಮೆ ಕೈಯಿಂದಲೂ ಹಾಕಿ), ಉಳಿದದ್ದರಲ್ಲಿ ಕೃತಾರ್ಥರಾಗುವುದು ನಾನು ತಿಳಿಯದ್ದೇನಲ್ಲ. ಆದರೆ ಇಲ್ಲಿ ಹಾಗೇನೂ ಇರಲಿಲ್ಲ. ಕಲ್ಕೂರರು ನನ್ನಲ್ಲಿ ಕಂಡ ಗುಣ ಮತ್ತು ಬಳಸಿಕೊಳ್ಳುವ ಉದ್ದೇಶ ಪ್ರಾಮಾಣಿಕವೇ ಇತ್ತು. ಆದರೆ ನಮ್ಮ ಯಾನದ ಅನಿಶ್ಚಿತತೆ ಮತ್ತು ಸಮಯದ ಮಿತಿಯಲ್ಲಿ ನಾನು ಅಂಥ ಯಾವುದೇ ಔಪಚಾರಿಕ ಬಂಧಗಳಿಗೆ ಸಿಕ್ಕಿಕೊಳ್ಳುವುದು ಸಾಧ್ಯವಿರಲಿಲ್ಲ. ನಾನು ಕೂಡಲೇ ಸವಿನಯ ನಿರಾಕರಿಸಿ ಪತ್ರಿಸಿದ್ದೆ ಕೂಡಾ.] 

ಸಾಹಸಯಾನದ ಯೋಜನಾ ಹಂತದಲ್ಲಿ ೧೬-೩-೯೬ರಂದು ಕಲ್ಕೂರರಿಗೆ ಮೊದಲ ಬಾರಿಗೆ, ಎಲ್ಲರಿಗೂ ಬರೆದಂತೆ ಸವಿವರ ಪತ್ರ ಬರೆದಿದ್ದೆ. ಅದು ಮುಟ್ಟಿದ ಬೆನ್ನಿಗೇ ಎಂಬಂತೆ ೨೧-೩-೯೬ರಿಂದ ತೊಡಗಿ, ನಾವು ಪ್ರವಾಸ ಹೊರಡುವ ದಿನದವರೆಗೂ (೧೪-೪-೯೬) ಕಲ್ಕೂರರು ನನಗೆ ಬರೆದ ಪತ್ರ, ಮಾಡಿದ ಫೋನ್ ಕರೆಗಳು, ಕಳಿಸಿದ ಮಾಹಿತಿಗಳಿಗೆ ಲೆಕ್ಕವಿಲ್ಲ. ರಮ್ಯ ಪತ್ರ, ಮಾತಿನಾಡಂಬರ ಹಲವರು ಮಾಡುತ್ತಾರೆ. ಇವರು ಹಾಗಲ್ಲ, ಬೆನ್ನು ಹಿಡಿದು, ಅಗತ್ಯವಿದ್ದಲ್ಲಿ ನೆನಪಿನೋಲೆ, ಎಸ್ಟೀಡೀ ಕರೆ ಮಾಡಿ ಅವರಿಂದ ಪ್ರತಿಕ್ರಿಯೆ ತರಿಸಿ, ನನಗೆ ಮುಟ್ಟಿಸುತ್ತಿದ್ದರು. ನಾವು ಮಂಗಳೂರು ಬಿಡುವ ಮುನ್ನ ಕಲ್ಕೂರರ ಕೃಪಾಛತ್ರ ಭುವನೇಶ್ವರದಿಂದ ತೊಡಗಿ ಬಳ್ಳಾರಿ ಗಡಿಯವರೆಗೂ ನಮ್ಮನ್ನು ತಂಪಾಗಿರಿಸಿತ್ತು ಎಂದರೆ ಅತಿಶಯೋಕ್ತಿಯಲ್ಲ. ಮೂಲದಲ್ಲಿ ನನ್ನ ಉದ್ದೇಶವಾದರೂ ಕಡಿಮೆ ಖರ್ಚಿನ ವಸತಿ ಪಡೆಯುವ ಮತ್ತು ವೀಕ್ಷಣೆಗೆ ಹೆಚ್ಚಿನ ಮಾಹಿತಿ, ಸವಲತ್ತುಗಳನ್ನು ಗಳಿಸುವಷ್ಟಕ್ಕೆ ಸೀಮಿತವಿತ್ತು. ಉಳಿದಂತೆ ನಮ್ಮ ಖಯಾಲಿಗೆ ಅನ್ಯ ವೃತ್ತಿಪರರು ದಾನವೋ ದಂಡವೋ ತೆರುವಂತಾಗಬಾರದೆಂದೇ ಬಯಸಿದ್ದೆ. ಹಾಗಾಗಿ ಕಲ್ಕೂರರು ಮತ್ತವರ ಗೆಳೆಯರು ಎಷ್ಟು ಉದಾರವಾಗಿದ್ದರೂ ನಾವು ಬಳಸಿಕೊಳ್ಳುವಲ್ಲಿ ತುಂಬ ಸಂಯಮವನ್ನೇ ಕಾಯ್ದುಕೊಂಡೆವು. "ಬರುತ್ತಾ ಇದ್ದೇವೆ, ಅಣಿಗೊಳಿಸಿ" ಎಂಬ ಅರ್ಥದ ಮುನ್ಸೂಚನೆಯನ್ನು ಕೊಟ್ಟು ಯಾರನ್ನೂ ಹಿಂಸಿಸಲಿಲ್ಲ. ನಾಗಾರ್ಜುನಸಾಗರ, ವಿಶಾಖಪಟ್ಟಣ, ಶ್ರೀಶೈಲದಂತ ಸ್ಥಳಗಳಲ್ಲಿ ನಮ್ಮ ಪರಿಚಯವನ್ನು ಮರೆಸಿಯೇ ಬಂದಿದ್ದೆವು. ಹಾಗೆಂದು ನೇರ ನಮ್ಮನ್ನು ವಹಿಸಿಕೊಂಡ ಭುವನೇಶ್ವರದ ಕೆದಿಲಾಯರು, ವಿಶಾಖಪಟ್ಟಣದ ಮೂರ್ತಿಯವರು ಮತ್ತು ಕಾಕಿನಾಡದ ಕೃಷ್ಣಮೂರ್ತಿಗಳಿಗೆ ಆದಷ್ಟೂ ಕಡಿಮೆ ಹೊರೆಯಾಗುವ ಎಚ್ಚರವಹಿಸಿದ್ದೆವು. ಕರ್ನೂಲಿನಲ್ಲಂತೂ ಕಲ್ಕೂರರನ್ನು ಮುಖತಃ ಭೇಟಿಯಾಗುವುದು, ಒಂದು ಹೊತ್ತಿಗಾದರೂ ಅವರ ಆತಿಥ್ಯವನ್ನು ಸ್ವೀಕರಿಸುವುದು ನಮಗೆ ಅತ್ಯಂತ ಹರ್ಷದಾಯಕವೂ ಪರಮ ಕರ್ತವ್ಯವೇ ಆಗಿದ್ದರೂ ಕಟುವ್ರತದ ಮಟ್ಟದಲ್ಲೇ ಪೂರೈಸಿಕೊಂಡೆವು! 

ಚಂದ್ರಶೇಖರ ಕಲ್ಕೂರರ ನಿರಾಶೆಗೆ ನಾವು ಅಸಹಾಯಕ ಮೌನವನ್ನಷ್ಟೇ ತಾಳಬೇಕಾಯ್ತು. ನಾವು ಸಂಜೆಯಾದರೂ ಕರ್ನೂಲು ಮುಟ್ಟಿದ್ದರೆ, ಅವರು ಊರಿನ ಹೋಟೆಲಿಗರ ಕೂಟದಲ್ಲೊಂದು ಅನೌಪಚಾರಿಕ ಸಮ್ಮಾನ, ಸಂತೋಷಕೂಟ ನಡೆಸುವ ಅಂದಾಜು ಹಾಕಿದ್ದರು. ಕೊನೆಗೆ ಮರು ಬೆಳಿಗ್ಗೆ ಒಂಬತ್ತು ಹತ್ತು ಗಂಟೆಯವರೆಗೆ ನಿಂತರೂ ಸಾಕು, ತಮ್ಮ ತೃಪ್ತಿಗೆ ಸಮ್ಮಾನ ಮಾಡುತ್ತೇವೆ ಎಂದಿದ್ದರು. ನಾವು ಊಟ ಮಾಡಿ ಬಂದದ್ದು, ಮರು ಬೆಳಗ್ಗೆ ತಿಂಡಿಗೂ ನಿಲ್ಲದೇ ಓಡುವ ಅನಿವಾರ್ಯತೆ ಇದ್ದದ್ದು ಅವರಿಗೇನು ನಮಗೂ ಬೇಸರದ ಸಂಗತಿಯೇ ಆಯ್ತು. ಕಲ್ಕೂರರ ಕರ್ನೂಲು ನಿವಾಸ ಅರಮನೆಯೇನೂ ಅಲ್ಲ. ಆದರೆ ಸಾಹಿತ್ಯ, ಕಲೆ, ಸಾಹಸ,

ಮುತ್ಸದ್ಧಿತನವೇ ಮುಂತಾದ ಗುಣಗಳನ್ನು ಗುರುತಿಸಿ, ಯಥಾನುಶಕ್ತಿ ಆತಿಥ್ಯ, ಅರ್ಥಪೂರ್ಣ ಸಮ್ಮಾನ (ಹಾರ, ತಗಡು ಅಲ್ಲ) ಕೊಡುವುದರಲ್ಲಿ ಅವರು ಯಾವ ಅರಸನಿಗೂ ಬಿಟ್ಟು ಕೊಡುವವರಲ್ಲ. ಅಂದು ಊರಲ್ಲಿರದ ಅವರ ಮಗ ಸೊಸೆಯರ ಕೋಣೆಯನ್ನೇ ನಮಗೆ ರಾತ್ರಿಗೆ ಬಿಟ್ಟುಕೊಟ್ಟಿದ್ದರು. ನಾವು ಬೆಳಿಗ್ಗೆ ಏಳೂವರೆ ಗಂಟೆಗೇ ಕರ್ನೂಲು ಬಿಡುವಾಗ, ಕಲ್ಕೂರ ಕುಟುಂಬಕ್ಕೆ ಹೆಚ್ಚು ಉಳಿಸಿಕೊಳ್ಳಲಾಗದ ಪ್ರಾಮಾಣಿಕ ದುಃಖವಿದ್ದರೂ ಹಾರ್ದಿಕ ಯಶಸ್ಸು ಕೋರಿದರು. 
(ದಿನದ ಓಟ ೪೬೬ ಕಿಮೀ. ಮರು ಬೆಳಿಗ್ಗೆ ತಾ ೩೪. ತೇ ೨೨%) 
(ಮುಂದುವರಿಯಲಿದೆ)

7 comments:

  1. This comment has been removed by a blog administrator.

    ReplyDelete
  2. ಅಶೋಕ್ ಹೇಳಿದಂತೆ, ೧೯೮೬ರ ಸುಮಾರಿಗೆ ನಾನೂ ಅಭಯನೂ ಮಹಾನಂದಿ ನೋಡಲು ಅತ್ತೆ ಮಾವಂದಿರೊಡನೆ ಹೋಗಿದ್ದೆ. ಬಳ್ಳಾರಿಯಿಂದಲೇ ನಮ್ಮ ಜತೆಗೆ ಇನ್ನೊಂದು ಕಾರಿನಲ್ಲಿ ಮಾವನ ಕೆಲವು ಮಿತ್ರರೂ ಬಂದಿದ್ದರು. ದೇವಳದ ಸಮೀಪ ಊಟಕ್ಕೇನೂ ಸಿಗದು ಎಂದು ಕೇಳಿದ್ದಕ್ಕೆ, ಬಳ್ಳಾರಿಯಿಂದಲೇ ಎಲ್ಲರಿಗೂ ಬಿಸಿಬೇಳೇ ಭಾತ್ ಮತ್ತು ಮೊಸರನ್ನ ಕಟ್ಟಿಸಿಕೊಂಡೂ ಹೋಗಿದ್ದೆವು. ದೇವಳದ ನೋಡುವುದೆಲ್ಲ ಮುಗಿಸಿ, ಹೊರ ಜಗುಲಿಯಲ್ಲಿ ಊಟಕ್ಕೆ ಕುಳಿತೆವು. ಆಗ ಮಾಮೂಲಿನಂತೆ ಒಬ್ಬ ಬಿಕ್ಷುಕಿ ಬಂದಳು. ಅತ್ತೆ ಅವಳಿಗೂ ತುಂಡು ಎಲೆ ಕೊಟ್ಟು, ಒಂದಷ್ಟು ಬಿಕ್ಷೆ ಹಾಕಿದರು. ಆಕೆ ಧನ್ಯತೆಯೊಡನೆ ಒಂದು ಮೂಲೆ ಸೇರಿ ತಿನ್ನುತ್ತಿದ್ದಳು. ನಮ್ಮದು ತಿಂದು ಮುಗಿಯುತ್ತಿದ್ದಂತೆ ಮಾವನ ಓರ್ವ ಮಿತ್ರ, ಅಯಾಚಿತವಾಗಿ ಉಸ್ತುವಾರಿ ಕೆಲಸ ವಹಿಸಿಕೊಂಡು, ಆ ಬಿಕ್ಷುಕಿಗೆ ತಾವೆಲ್ಲ ಉಂಡ ಸ್ಥಳವನ್ನು ಶುದ್ಧ ಮಾಡಲು ಆದೇಶಿಸಿದರು. ಒಮ್ಮೆಗೆ ಅತ್ತೆ ಸಿಡಿದರು, ಮಾವ ಬೆಂಬಲಿಸಿದರು "ನಾವು ಕೊಟ್ಟದ್ದು ಬಿಕ್ಷೆ, ಆಕೆಯ ಸೇವೆಗೆ ಶುಲ್ಕವಲ್ಲ. ನಮ್ಮ ಎಂಜಲು ನಾವೇ ಶುದ್ಧ ಮಾಡುತ್ತೇವೆ."

    ReplyDelete
  3. ಅತ್ರಿ ಒಳಗೆ ಬರಹ ರೂಪದಲ್ಲಿ ದೇವಕಿ ಪ್ರವೇಶ ಕುಶಿ ಆಯ್ತು. ಅಶೋಕಣ್ಣನ ಬರಹದಲ್ಲಿ ಹಾಸು ಹೊಕ್ಕಾಗಿದ್ದ ದೇವಕೀಯಕ್ಕ ಈಗ ನೇರ ಸಂಭಾಷಣೆಯಲ್ಲಿ...ನಿಮ್ಮ ಬರಹವನ್ನು ಎದುರು ನೋಡುತ್ತಿರುತ್ತೇನೆ. ನಾನು ಓದುಗಳು ಮಾತ್ರ. ವಿಮರ್ಶಕಿ ಅಲ್ಲ. ಆರೋಗ್ಯಕರ ಬರಹಗಳನ್ನ ಓದಿ ಸ್ವಾಸ್ಥ್ಯ ಉಳಿಸಿಕೊಂಡವಳು. ಅತ್ರಿ ನನ್ನ ಒಂದು ಆಶ್ರಯ ತಾಣ...ಕುಶಿ ಆಯ್ತು ನಿಮ್ಮ ಬರಹ ಓದಿ. ಚಿಕ್ಕ ಚೊಕ್ಕ ಬರಹ ಮತ್ತು ಅದರ ಸಂದೇಶ..

    ReplyDelete
  4. ನಾನು ಆಂಧ್ರ ಸುತ್ತಿದ್ದು ಕಡಿಮೆಯೇ!. ಹಾಗಾಗಿ ಕುತೂಹಲದಿಂದ ಉತ್ಸಾಹದಿಂದ ಓದಿದೆ. ಕೃಷ್ಣಾ ನದಿಯೇ ಆಂಧ್ರ ಸಂಸ್ಕೃತಿಯನ್ನು ಕಟ್ಟಿದಂತಿದೆ.

    ReplyDelete
  5. 1990ರ ಜನವರಿಯಲ್ಲಿ ನಾವು ಮಹಾನಂದಿ, ಶ್ರೀಶೈಲ, ಹೈದರಾಬಾದ್ ಪ್ರವಾಸ ಹೋಗಿದ್ದೆವು.ಇಲ್ಲಿಯವರೆಗೆ ಸಾರಿಗೆ ವಾಹನವನ್ನೇ ಆಶ್ರಯಿಸಿದ್ದು.ಹೈದರಾಬಾದಿನಿಂದ ಆಂಧ್ರ ಪ್ರದೇಶದ ಪ್ರವಾಸೋದ್ಯಮ ಇಲಾಖೆಯ ಯೋಜಿತ ಪ್ರವಾಸ.ಅದರಲ್ಲಿ ಒಂದು ದಿನದ ಪ್ರವಾಸ ಈ ನಾಗಾರ್ಜುನ ಸಾಗರ,ಕೊಂಡ ಹಾಗೂ ಎತ್ತಿ ಪೋತಲ ಜಲಪಾತ ದ ಸಂದರ್ಶನ ಇತ್ತು.ಕೃಷ್ಣಾನದಿಯನ್ನು ಸಾಗರವಾಗಿ ಕಂಡು ಮೂಕವಿಸ್ಮಿತರಾಗಿದ್ದೆವು.ಎತ್ತಿಪೋತಲ ಜಲಪಾತದ ಸೌಂದರ್ಯ ತುಂಬಾ ಖುಷಿ ಕೊಟ್ಟಿತ್ತು.ಆದರೆ ಅದರ ಹಿನ್ನೆಲೆ/ಕತೆ ಏನೂ ತಿಳಿದಿರಲಿಲ್ಲ.ನಿಮ್ಮ ಲೇಖನ ಓದಿಯೇ ತಿಳಿದಿದ್ದು.ಉಳಿದಿದ್ದೂ ಅಷ್ಟೇ.
    ಬಳ್ಳಾರಿಯಿಂದ ಮುಂದಕ್ಕೆ apsrtc ಬಸ್ಸಿನಲ್ಲಿ ರಾತ್ರಿ ಪಯಣಕ್ಕೆ ಗನ್ ಮ್ಯಾನ್ ಹತ್ತಿದಾಗಲೇ ಸಹೋದ್ಯೋಗಿಗಳು ಹೇಳಿದ ಕತೆಗಳು ನೆನಪಾಗಿ ಬಿಟ್ಟಿತ್ತು.ನಾವು ನಾಲ್ಕು ಜನ ಮಹಿಳಾ ಮಣಿಗಳು ಇದ್ದಿದ್ದು.ಹಿಂದಿರುಗುವಾಗ ಆ ದಾರಿಯನ್ನು ಹಗಲಲ್ಲಿ ಕ್ರಮಿಸಿದ್ದು.ನರಪಿಳ್ಳೆಯ ಸುಳಿವಿರಲಿಲ್ಲ.ಗಂಡಸರು ಪ್ರಕೃತಿ ಕರೆಗೆ ಇಳಿದರೂ ನಾವ್ಯಾರೂ ಬಸ್ ಇಂದ ಇಳಿಯದೇ ಕೂತಿದ್ದು, ನೆನಪಾಯಿತು.ಈಗ ಪರಿಸ್ಥಿತಿ ಸುಧಾರಿಸಿರಬಹುದೇನೋ.
    ಹೋದ ಕಡೆಯೆಲ್ಲಾ ಹೋಟೆಲ್ ಗಳಲ್ಲಿ ಒಳ್ಳೆಯ ಊಟ ಸಿಕ್ಕಿದ್ದೂ ನೆನಪು.ಆದರೆ ಖಾರ ಮುಂದೆ.ಉಪ್ಪಿನಕಾಯಿಯಲ್ಲಿ ಎಣ್ಣೆ ಮುಂದೆ.

    ReplyDelete
  6. ಜೂಸ್ ಬಾಟಲಿನಂತ ಮಾವಿನ ಹಣ್ಣು ಬೆಂಗಳೂರಿನ ಜಿಕೆವಿಕೆ ಯಲ್ಲಿ ಬೆಳೆಯುತ್ತಾರೆ, ಹೆಸರು ಮಾತ್ರ ದಶೇರಿ.

    ReplyDelete
  7. ರಸಭರಿತ ಮಾವಿನಹಣ್ಣಿನ ಬಗ್ಗೆ ಮೊದಲ ಪ್ಯಾರಾದಲ್ಲೇ ಏಕೆ ಬರೆದಿರಿ? ಅದು ಓದಿದ ಮೇಲೆ ಅದರದ್ದೇ ಕನಸು, ಉಳಿದಂತೆ ಓದಿದ್ದೆಲ್ಲಾ ಮಸುಕು ಮಸುಕು, ಹ್ಹೆ ಹ್ಹೆ.

    ReplyDelete