17 September 2020

ಮೆಟ್ರೋದಲ್ಲಿ ಕಾಣೆಯಾದ ಮೂವರು!

(ಭಾರತ ಅ-ಪೂರ್ವ ಕರಾವಳಿಯೋಟ - ೩) 



ಏಪ್ರಿಲ್ ೧೭, ೧೯೯೬ ಬುಧವಾರದ ಬೆಳಿಗ್ಗೆ ನಾವು ಸುಪ್ರಸನ್ನರಾಗಿಯೇ ಕಲ್ಕತ್ತ ರೈಲ್ವೇ ನಿಲ್ದಾಣವೇನೋ ತಲಪಿದ್ದೆವು. ಆದರೆ ಮತ್ತಿನ ಮೂರೂವರೆ ಗಂಟೆಗಳ ಅನಾವಶ್ಯಕ ಹೋರಾಟದಲ್ಲಿ ವಿಜಯಿಗಳಾದರೂ ಹಸಿ ಹೊಟ್ಟೆಯಲ್ಲಿ, ಕ್ರುದ್ಧ ಮನಸ್ಸಿನಲ್ಲಿ ಬೈಕುಗಳೊಡನೆ ಹೊರಬಿದ್ದೆವು. ಮೊದಲು ಬೈಕುಗಳ ಹೊಟ್ಟೆ, ಅನಂತರ ನಮ್ಮ ಹೊಟ್ಟೆ ತುಂಬಿಸಿಕೊಂಡೆವು. ಸೂರ್ಯ ಆಗಲೇ ಅಗ್ನಿವರ್ಷಕ್ಕೆ ತೊಡಗಿದ್ದ. (ಉಪಾಧ್ಯರ ವರದಿ -ಅಂದು ಮಧ್ಯಾಹ್ನದ ತಾಪಮಾನ ೪೩ ಡಿಗ್ರಿ) ಮೊದಲಲ್ಲೇ ಸರಳವಾಗಿ ಪೋಲಿಸರ ತಡೆ ಬಂತು. ಪ. ಬಂಗಾಳದಲ್ಲಿ ಆ ಕಾಲದಲ್ಲೇ ಸಹವಾರರಿಗೂ ಶಿರಸ್ತ್ರಾಣ ಕಡ್ಡಾಯವಿತ್ತು, ನಾವು ಒಯ್ದೇ ಇರಲಿಲ್ಲ. ನಮ್ಮ ಅಜ್ಞಾನವನ್ನು ಪೊಲಿಸರು ಮನ್ನಿಸಿದರು. ಮತ್ತೆ ನಿರ್ವಿಘ್ನವಾಗಿ.... 

ಗಂಗಾ ಬ್ರಹ್ಮಪುತ್ರ ನದಿಗಳ ಮುಖಜಭೂಮಿಯ ಸಾವಿರಾರು ಕುದುರುಗಳಲ್ಲಿ ವ್ಯಾಪಿಸಿರುವ ‘ಸುಂದರಬನ್ಸ್ ವ್ಯಾಘ್ರಧಾಮ’ದಂತದ್ದು ಜಗತ್ತಿನಲ್ಲೇ ಇನ್ನೊಂದಿಲ್ಲ.

ಅದನ್ನು ನೋಡುವುದರಿಂದಲೇ ನಮ್ಮ ಎರಡನೇ ಭಾರತ ಸಾಹಸಯಾನವನ್ನು ಪ್ರಾರಂಭಿಸುವ ಯೋಜನೆ ನನ್ನದಿತ್ತು. ಅದಕ್ಕನುಕೂಲವಾಗುವಂತೆ ಕಲ್ಕತ್ತಾ ವಾಸ/ ದರ್ಶನವನ್ನು ಸ್ವಲ್ಪ ಹೆಚ್ಚೇ ಮಾಡಲು ನಮಗೆ ಒಳ್ಳೆಯ ಅವಕಾಶ ಒದಗಿಸಿದವರು ಸ್ವಾಮೀ ಜಗದಾತ್ಮಾನಂದ (೧೯೨೯-೨೦೧೮). ರಾಮಕೃಷ್ಣಾಶ್ರಮದ ಬಹು ಗೌರವಾನ್ವಿತ ಸಂನ್ಯಾಸಿಗಳಲ್ಲಿ ಜಗದಾತ್ಮಾನಂದರದು ದೊಡ್ಡ ಹೆಸರು. ಅಪ್ಪಟ ಕನ್ನಡಿಗರೇ ಆದ ಸ್ವಾಮೀಜೀ ತನ್ನ ಓದು, ಅಧ್ಯಯನ ಹಾಗೂ ಸಮಾಜಸೇವೆಗಳ

ಅನುಭವಗಳನ್ನು ಕ್ರೋಢೀಕರಿಸಿ ಬರೆದ ‘ಬದುಕಲು ಕಲಿಯಿರಿ’ (೨ ಭಾಗಗಳು) ಪುಸ್ತಕವಂತೂ ಕನ್ನಡ ಪ್ರಕಾಶನರಂಗದಲ್ಲಿ ಅದ್ವಿತೀಯ ದಾಖಲೆಯನ್ನೇ ಮಾಡಿದೆ. ಅಷ್ಟೆಲ್ಲಾ ಎತ್ತರದಲ್ಲಿದ್ದೂ ಸ್ವಾಮಿಗಳು, ಅನ್ಯ ಕಾರ್ಯಗಳಲ್ಲಿ ಮಂಗಳೂರಿಗೆ ಬಂದಾಗೆಲ್ಲ ನನ್ನ ಅಂಗಡಿಗೆ ಭೇಟಿ ಕೊಡುವುದನ್ನು, ಏನಲ್ಲದಿದ್ದರೂ ನನ್ನನ್ನು ವಿಚಾರಿಸಿಕೊಳ್ಳುವುದನ್ನು ಎಂದೂ ತಪ್ಪಿಸಿದವರಲ್ಲ. ಇದರಲ್ಲಿ ಪಾರಂಪರಿಕ ಮಠ ಮಂದಿರಗಳಂತೆ ಮಡಿಮೈಲಿಗೆಗಳ ಲೆಕ್ಕ ಇಡದ ರಾಮಕೃಷ್ಣಾಶ್ರಮದ ಸರಳತೆ ಇತ್ತು. ಜಗದಾತ್ಮಾನಂದರ ವೈಯಕ್ತಿಕ ಪುಸ್ತಕ ಪ್ರೀತಿಯೂ ಇತ್ತು. ಎಲ್ಲಕ್ಕೂ ಮುಖ್ಯವಾಗಿ ನನ್ನ ನೆಪದಲ್ಲಿ (ಗುರುಪುತ್ರ!) ನನ್ನ ತಂದೆಯನ್ನು ಸ್ಮರಿಸುವ ದೊಡ್ಡ ಹೃದಯವಂತಿಕೆ ಇತ್ತು. (ಇವರು ಕಾಲೇಜು ದಿನಗಳಲ್ಲಿ ನನ್ನ ತಂದೆಯ ಶಿಷ್ಯರಾಗಿದ್ದರು!) ನಮ್ಮ ಸಾಹಸಯಾನದ ಯೋಜನಾವಧಿಯಲ್ಲಿ ಮೊದಲ ಮತ್ತು ಬಹುಮುಖ್ಯ ಬೇಡಿಕೆಗಳ ಪತ್ರ ಹೋದದ್ದೇ ಸ್ವಾಮಿ ಜಗದಾತ್ಮಾನಂದರಿಗೆ. ಆ ದಿನಗಳಲ್ಲಿ ಅವರು ಕಲ್ಕತ್ತಾದಲ್ಲಿರುವ ರಾಮಕೃಷ್ಣಾಶ್ರಮದ ಪ್ರಧಾನ ಮಠದಲ್ಲಿ (ಬೇಲೂರು ಮಠ)

ಸನ್ಯಾಸಿಗಳ ಶಿಕ್ಷಣ ಕೇಂದ್ರದ ವರಿಷ್ಠರಾಗಿದ್ದರು. ಸ್ವಾಮೀಜಿಯವರಿಂದ ನಾನು ಬಯಸಿದ್ದು ಎರಡು, ಅವರು ಕೊಟ್ಟದ್ದು ಅಪಾರ. ಮೊದಲನೆಯದಾಗಿ, ನಮ್ಮ ಕಲ್ಕತ್ತಾ ದಿನಗಳಿಗೆ ಸರಳ ವಸತಿ ವ್ಯವಸ್ಥೆ. ಅವರು ದಕ್ಷಿಣ ಕಲ್ಕತ್ತಾದಲ್ಲಿರುವ ಕರ್ನಾಟಕ ಅಸೋಸಿಯೇಷನ್ನಿನ ಭವನ (ಅಧ್ಯಕ್ಷ - ಡಾ| ಜಿ.ಆರ್. ಅಶೋಕ್ (ದಂತವೈದ್ಯ) ದಾರಿ ಕಾಯುವಂತೆ ಮಾಡಿದ್ದರು. ನಾವು ಆ ವಿಳಾಸ ಹುಡುಕಿಕೊಂಡು ಹೊರಟೆವು. (ಎರಡನೇ ಬೇಡಿಕೆಯನ್ನು ಮುಂದೆ ಪ್ರಾಸಂಗಿಕವಾಗಿ ಹೇಳುತ್ತೇನೆ) 

ಗಂಗಾ ಅಥವಾ ಪ್ರಾದೇಶಿಕವಾಗಿ ಗುರುತಿಸುವಂತೆ ಹೂಗ್ಲಿ ನದಿ ಕಲ್ಕತ್ತಾವನ್ನು ಇಬ್ಬಾಗಿಸಿದೆ. ರೈಲ್ವೇ ನಿಲ್ದಾಣವಿದ್ದ ಪಶ್ಚಿಮ ದಂಡೆ - ಹೌರಾ, ಪೂರ್ವ ದಂಡೆ - ಕಲ್ಕತ್ತಾ ಎನ್ನುವುದು ಇಲ್ಲಿನ ರೂಢಿ. ಇವೆರಡನ್ನು ಪ್ರಥಮವಾಗಿ ಸಂಪರ್ಕಿಸುವ ತೆಪ್ಪ-ಸೇತುವೊಂದು (ಪೊಂಟೂನ್ ಬ್ರಿಜ್) ೧೮೭೪ರ ಸುಮಾರಿಗೆ ನಿರ್ಮಾಣಗೊಂಡಿತ್ತು. ಆದರೆ ಅದು ಬಂಗಾಳ ಕೊಲ್ಲಿಯ ಆಘಾತಗಳನ್ನೂ ನದಿ ಸಾರಿಗೆಯ

ವಿಪರೀತಗಳನ್ನೂ ಸಹಿಸಿಕೊಳ್ಳುವಲ್ಲಿ ವಿಪರೀತ ಬಳಲುತ್ತಿತ್ತು. ಅದನ್ನು ಕಳೆದು, ‘ಹೊಸತು’ ಎಂದೇ ಹೆಸರು ಹೊತ್ತು ಬಂದದ್ದು (೧೯೪೩) ಇಂದಿನ ಹೌರಾ ತೂಗು ಸೇತುವೆ. ಇದರ ಅಂಕಿಸಂಕಿಗಳ, ದಾಖಲೆಗಳ ವಿವರಗಳನ್ನೆಲ್ಲ ನೀವೇ ವಿಕಿಪೀಡಿಯಾಗಳಲ್ಲಿ ನೋಡಿಕೊಳ್ಳಿ. ಆದರೆ ಪ್ರತ್ಯಕ್ಷವಾಗಿ ಕಂಡ ಮತ್ತು ವೈಯಕ್ತಿಕವಾಗಿ ಕೇಳಿದ ನಾಲ್ಕೇ ಮಾತುಗಳು ಸ್ಮರಣೀಯವೇ ಇವೆ. 


ಬ್ರಿಟಿಷ್ ಯುಗದ ಹೌರಾ ಸೇತುವೆಯನ್ನು ೧೯೬೫ರ ಸುಮಾರಿಗೆ ‘ರವೀಂದ್ರ ಸೇತು’ ಎಂದು ನಾಮಕರಣ ಮಾಡುವಲ್ಲಿ ಇದ್ದ ಭಾರತೀಯ ಜಾಗೃತಿ, ಸೇತುವೆಯ ಆರೈಕೆಯಲ್ಲಿ ಅಷ್ಟಾಗಿ ತೊಡಗಿದಂತೆ ಕಾಣಿಸಲಿಲ್ಲ. ಹೊರಗಿನಿಂದ ನೋಡುವಾಗ, ನದಿಯಲ್ಲೆಲ್ಲೂ ಕಾಲೂರದ ಭಾರೀ ಕಬ್ಬಿಣದ ಹಂದರವಷ್ಟೇ ಎರಡು ದಂಡೆಗಳನ್ನು ಮುಟ್ಟಿದಂತೆ ತೋರುತ್ತದೆ. ಅದರ ಒಂದು ತೆಳು ಪದರದಲ್ಲಷ್ಟೇ ಎಲ್ಲಾ ನಾಗರಿಕ ಗೊಂದಲಗಳು, ಅದರ ಬಾಲ ಇದು ಮೂಸಿ, ಮತ್ತಿದರ ಬಾಲ ಇನ್ನೊಂದು ಮೂಸಿದಷ್ಟೇ ದಟ್ಟವಾಗಿ ಈ ದಡ ಆ ದಡ ಮಾಡುವುದನ್ನು ಕಾಣುತ್ತೇವೆ. ಇದರೊಳಗೆ ವಿಶೇಷವಾಗಿ ಯಾವುದೇ ವರ್ಗಸೂಚೀ ವಿಂಗಡಣೆಗಳೂ ಇಲ್ಲ. ಪಾದಚಾರಿಯಿಂದ ತೊಡಗಿ ಮನುಷ್ಯ, ಎತ್ತು ಮತ್ತು ಕುದುರೆಗಳೆಳೆವ ವಿವಿಧ ಗಾಡಿಗಳು, ಸೈಕಲ್, ಸ್ಕೂಟರ್, ಬೈಕ್, ರಿಕ್ಷಾಗಳಂತ ಕಿರು ವಾಹನಗಳಿಂದ ತೊಡಗಿ ಸಾಲು ಚಕ್ರಗಳುಳ್ಳ ಲಾರಿವರೆಗೆ ಎಲ್ಲ ವಾಹನಗಳೂ ಪ್ರಾಥಮಿಕ ಚಲನಶೀಲರ ವೇಗದಲ್ಲಿ ತೆವಳುತ್ತಿರುತ್ತವೆ. ಸಣ್ಣ ಅಪವಾದ - ದಾರಿಯ ನಡುವೆ ಹಾದು ಹೋಗಿರುವ ಹಳಿಗಳಿಗೇ

ಕಚ್ಚಿಕೊಂಡು ಗುಡುಗುಡಾಯಿಸುವ ಟ್ರಾಮುಗಳು. ಎರಡು ದಂಡೆಯ ಗಟ್ಟಿ ನೆಲದಲ್ಲಿ ತ್ರಿವಿಕ್ರಮ ಪಾದ ಊರಿ ನಿಂತ ಭಾರೀ ಉಕ್ಕಿನ ಸ್ತಂಭ ರಚನೆಗೆ ಅಷ್ಟೇ ಭಾರೀ ಉಕ್ಕಿನ ಮಿಣಿಯಲ್ಲಿ ತೂಗಿಬಿದ್ದ ಸೇತುವೆಯೆಂಬ ಮಹಾವ್ಯವಸ್ಥೆ ಸಣ್ಣದಾಗಿ ತೊನೆಯುತ್ತ ಏಳು ದಶಕಗಳನ್ನೇ ಕಳೆದರೂ ನಿಜ ಕದಲದುಳಿದಿದೆ. 

ನಾವು ಭಾರೀ ಎಚ್ಚರದಲ್ಲೇ ಗಂಗಾಪ್ರವಾಹದ ಮೇಲಿನ ರಬೀಂದ್ರ

ಸೇತುವಿನ ಪ್ರವಾಹದಲ್ಲಿ ಸೇರಿಕೊಂಡೆವು. ಎಲ್ಲೂ ನಿಲ್ಲುವ ಪ್ರಶ್ನೆ ಇಲ್ಲ, ಸ್ಪಷ್ಟ ಅತ್ತಿತ್ತ ನೋಡುವ ಧೈರ್ಯವೂ ನಮಗೆ ಬರಲಿಲ್ಲ. ಸೇತು ಅದುರದುರಿ ಬಿರಿದು ಉದುರಿತೋ ಸವಕಳಿಗೆ ಹರಿದು ಬಾಯಿಬಿಟ್ಟಿತೋ ಎನ್ನುವಂತೆ ಅದರ ನೆಲ ಅಲ್ಲಲ್ಲಿ ಹರಿದುಹೋಗಿತ್ತು. ಅದನ್ನು ಮುಚ್ಚುವಂತೆ ವಿವಿಧ ಗಾತ್ರದ ಭಾರೀ ಉಕ್ಕಿನ ಹಾಳೆಗಳನ್ನು ಹಾಗೇ ಎಸೆದುಬಿಟ್ಟಿದ್ದಾರೆ. ಅವು ದಾಟುವ ವಾಹನಗಳ ತೂಕಕ್ಕನುಗುಣವಾಗಿ ಚೂರು ಎದ್ದು ಬಿದ್ದು ಧಣಧಣ ಸದ್ದು ಮಾಡುವಾಗ, ಒಟ್ಟಾರೆ ಗದ್ದಲದೊಡನೆ ಸೇರಿ ನಮಗೋ ಭಾರೀ ದಿಗಿಲು. ರೈಲ್ವೇ ಪಟ್ಟು ಕಳಚಿಕೊಂಡವರನ್ನು ಸೇತು ಬಲಿ ಹಾಕುತ್ತೋಂತ! ಇಲ್ಲಿ ಎಂದಲ್ಲ, ಮುಂದಿನ ದಿನಗಳಲ್ಲಿ ನಾವು ಕಂಡಂತೆ ಒಟ್ಟಾರೆ ಕಲ್ಕತ್ತಾದಲ್ಲೇ ವಾಹನಗಳು ಪರಸ್ಪರ ಒರೆಸಿಕೊಳ್ಳುವುದು ತೀರಾ ಸಾಮಾನ್ಯ. ಮತ್ತೆ ಅಂಥವಕ್ಕೆಲ್ಲ ಜನ ತಲೆ ಕೆಡಿಸಿಕೊಳ್ಳುವುದೂ ಕಡಿಮೆ. ಪೋಲಿಸರಂತೂ ‘ಟ್ರಾಫಿಕ್ ಕಂಟ್ರೋಲರ್ಸ್’ ಅಲ್ಲ, ‘ಟ್ರಾಫಿಕ್ ಪುಷರ್ಸ್’; ಯಾವುದೇ ವಾಹನ ‘ಶ್ರುತಿ’ ಕಡಿಯುವಂತೆ ನಿಂತರೆ, ಅಕ್ಷರಶಃ ಮುಂದಕ್ಕೆ

ತಳ್ಳುತ್ತಾರೆ! ಇದನ್ನು ಹೆಚ್ಚು ವಿಷದ ಪಡಿಸುವ ಒಂದು ಘಟನೆಯನ್ನೇ ಕೇಳಿ. ಯಾರದೋ ಕಾರು ಹೌರಾ ಸೇತುವಿನ ನಡುವೆ ಮುಷ್ಕರ ಹೂಡಿತ್ತಂತೆ. ಅಲ್ಲಿ ನಿಲ್ಲುವಂತಿಲ್ಲ ಎನ್ನುವ ಒತ್ತಡಕ್ಕೆ ಕಾರಿನದೇ ಸದಸ್ಯರೊಬ್ಬರು ಹೇಗೋ ಹಿಂದಕ್ಕೆ ನುಸುಳಿ, ಕನಿಷ್ಠ ಸೇತುವೆಯಿಂದಾಚೆಗಾದರೂ ನೂಕಿಬಿಡಲು ತೊಡಗಿದ್ದರಂತೆ. ಆದರೆ ಪಾಪ, ನಡುವೆ ಎಲ್ಲೋ ಸೇತುವೆಯ ತುಂಡು ತಗಡು ಜಾರಿ ತೆರೆದಿದ್ದ ಡೊಗರಿನ ಅರಿವಿಲ್ಲದೇ ಗಂಗಾಪಾಲಾಗಿ ಹೋದರಂತೆ! 

ನಾವು ವಹಿಸಿದ ಎಚ್ಚರಿಕೆ ಹೆಚ್ಚಾಯ್ತೋ ಅಥವಾ ಮಹಾಪ್ರವಾಹದ ನಡುವೆ ಬಿದ್ದ ತರಗೆಲೆ ಎಲ್ಲಿಗೂ ಮುಂದುವರಿಯದೆ ಗಿರಿಗಿಟ್ಲೆ ಹೊಡೆಯುವಂತಾಯ್ತೋ ತಿಳಿಯಲಿಲ್ಲ. ಸೇತುವೆ ಕಳೆದ ಮೇಲೆ ನಾವು ಅರಿವಿಲ್ಲದೇ ನಗರ ಸಾರಿಗೆ ಬಸ್ಸುಗಳ ತಂಗುದಾಣದ ಚಕ್ರವ್ಯೂಹದೊಳಗೆ ಸಿಕ್ಕಿಕೊಂಡಿದ್ದೆವು. ಹೇಗೆ ಹೋದರೂ ಜನ, ಬಸ್ಸುಗಳನ್ನು ಕಳಚಿಕೊಂಡು, ಕಲ್ಕತ್ತಾ ದಾರಿ ಹಿಡಿಯಲು ಸೋತೆವು. ಮತ್ತೆ ನಾಚಿಕೆ ಬಿಟ್ಟು,

ಬೈಕಿಳಿದು, ಬಸ್ ಚಾಲಕರ ಕರುಣಾಕಟಾಕ್ಷದಡಿಯಲ್ಲಿ ಅಡ್ಡಡ್ಡಕ್ಕೆ ಬೈಕ್ ನೂಕಿಯೇ ನಡೆದೆವು. ನಮ್ಮ ಅದೃಷ್ಟಕ್ಕೆ ಸಣ್ಣದಿದ್ದ ನಡು ದಿಬ್ಬವನ್ನು ಹತ್ತಿಳಿಸಿ ಹೊರಬಂದಿದ್ದೆವು. ಮುಂದೆ ಕರ್ನಾಟಕ ಸಂಘವಿದ್ದ ದಕ್ಷಿಣ ಕಲ್ಕತ್ತಾ, ರಾಜಾ ಬಸಂತ್ ರಾಯ್ ಮಾರ್ಗ ಹುಡುಕುವಲ್ಲೂ ಇಂಥದ್ದೇ ನೂರು ಗೊಂದಲಗಳು. ಅನಾವಶ್ಯಕ ಎಂಟು ಹತ್ತು ಕಿಮೀ ಎತ್ತೆತ್ತಲೋ ಓಡಾಡಿ, ಕೊನೆಯಲ್ಲಿ ಇನ್ನೊಮ್ಮೆ ನಾಚಿಕೆ ಬಿಡುವ ಪ್ರಸಂಗ. ದೂರವಾಣಿ ಗೂಡೊಂದಕ್ಕೆ ನುಗ್ಗಿ ಕರ್ನಾಟಕ ಅಸೋಸಿಯೇಶನ್ನಿನ ಅಧ್ಯಕ್ಷ ಡಾ|

ಅಶೋಕರಿಗೇ ಕರೆ ಮಾಡಿ "ದಾರಿ ಕಾಣದಾಗಿದೆ..." ರಾಗ ತೆಗೆದಿದ್ದೆ. 

ಅಶೋಕರ ತಂದೆ ಸರಕಾರೀ ತಾಬೇದಾರಿಯಲ್ಲಿ ಕನ್ನಾಡಿನಿಂದ ಕಲ್ಕತ್ತಾಕ್ಕೆ ಬಂದು ಅಲ್ಲೇ ನೆಲೆಸಿದ್ದವರು. ಸಹಜವಾಗಿ ಅಶೋಕ್ ವಿದ್ಯಾಭ್ಯಾಸ, ವೃತ್ತಿಜೀವನ ಮಾತ್ರವಲ್ಲ, ಕನ್ನಡ ಪ್ರೀತಿಯನ್ನೂ ಅಲ್ಲೇ ರೂಪಿಸಿಕೊಂಡದ್ದು ವಿಶೇಷವೇ ಸರಿ. ಅವರು ಮೂರ್ತಿ ಸಣ್ಣದಾದರೂ ಚಟುವಟಿಕೆಯಲ್ಲಿ ಪಾದರಸ. ನಾನು ಕೊಟ್ಟ

"ಇರುವಂಥಾ ಸ್ಥಳ"ದ ವಿವರ ಕೇಳಿದ್ದೇ "ಹೋ ನನ್ನ ಕ್ಲಿನಿಕ್ಕಿನ ಸಮೀಪವೇ ಇದ್ದೀರಿ. ಸಹಾಯಕ ಚೊಂಚೊಲ್ ಸ್ಕೂಟರೇರಿ ಬರ್ತಾನೆ ತಡೀರಿ" ಎಂದು ಬಿಟ್ಟರು. ಮತ್ತೆ ಹತ್ತೇ ಮಿನಿಟಿನಲ್ಲಿ ನಾವು ಚೊಂಚೊಲ್ ಬಾಲಗಳಾಗಿ ಅಶೋಕರ ಕ್ಲಿನಿಕ್ಕಿನ ಬಾಗಿಲು ಮುಟ್ಟಿದ್ದೆವು. ಅಲ್ಲಿ ಪಾರ್ಕಿಂಗ್ ಇರಲಿಲ್ಲ. ದಂತಕುಹರಿಗಳೋ ಭಗ್ನರೋ ವಕ್ರರೋ ಅಸಂಖ್ಯ ಕಾದಿದ್ದಂತೇ ಅಶೋಕ್ ಹೊರಗೋಡಿ ಬಂದು, ನಮಗೆ ಹಾರ್ದಿಕ ಸ್ವಾಗತ ಕೋರಿದ್ದರು. ಮತ್ತೆ ಚೊಂಚೊಲ್ ನೇತೃತ್ವದಲ್ಲೇ ಮುಂದಿನ ನಡೆ ಎಲ್ಲ ಹೇಳಿ ಸಂಘದ ಕಟ್ಟಡಕ್ಕೇ ಕಳಿಸಿಕೊಟ್ಟರು. ಚೊಂಚೊಲ್ ಮುಂದೆಲ್ಲೋ ಅಶೋಕರ ಹೆಂಡತಿ ಕೆಲಸ ಮಾಡುತ್ತಿದ್ದ ಕೆನರಾ ಬ್ಯಾಂಕ್ ಬಳಿಯೂ ಹೀಗೇ ನಿಲ್ಲಿಸಿ, ಪರಿಚಯಿಸಿಯೇ ನಮ್ಮನ್ನು ಸಂಘದ ಕಟ್ಟಡಕ್ಕೆ ಸಸೂತ್ರ ಮುಟ್ಟಿಸಿದ. 


ಕಲ್ಕತ್ತಾ ಕನ್ನಡ ಸಂಘ (ನನ್ನ ಮಸಕು ನೆನಪಿನಂತೆ) ಸಭಾಭವನ ಮತ್ತದರ ಕಲಾಪಗಳಿಗೆ ಪೂರಕವಾಗುವಂತೆ ಕೆಲವು ಕೋಣೆಗಳನ್ನಷ್ಟೇ ಹೊಂದಿತ್ತು. ಅದಕ್ಕೆ ಪ್ರತ್ಯೇಕ ಅತಿಥಿಗೃಹದ ಸೌಕರ್ಯ ಇರಲಿಲ್ಲ. ಆದರೆ ಸಂಘದ ನಿರ್ವಾಹಕ ಎನ್.ಎಸ್ ಶೇಷಾದ್ರಿ ನಮಗಾಗಿ ಮಾಳಿಗೆಯಲ್ಲಿದ್ದ ಅವರ ಟೇಬಲ್ ಟೆನ್ನಿಸ್ ಕೋಣೆಯನ್ನು ಖಾಲಿ ಮಾಡಿ, ದೊಡ್ಡ ದಪ್ಪ ಜಮಖಾನ ಹಾಸಿಕೊಟ್ಟಿದ್ದರು. ದೊಡ್ಡ ಕಿಟಕಿ, ಫ್ಯಾನ್ ನಮ್ಮ ಕನಿಷ್ಠ ಆವಶ್ಯಕತೆಗಳನ್ನು ಚೆನ್ನಾಗಿಯೇ ಪೂರೈಸಿದವು. ಶೌಚಾದಿಗಳಿಗೆ ಮಾತ್ರ ಕೆಳಗಿನ ಅಂಗಳದಲ್ಲಿದ್ದ ಸಾರ್ವಜನಿಕ ವ್ಯವಸ್ಥೆ ಅವಲಂಬಿಸಬೇಕಿತ್ತು. ಆದರೆ ಎಲ್ಲವೂ ನಮ್ಮ ನಾಲ್ಕೈದು ದಿನಗಳ ವಾಸಕ್ಕೆ, ಅದೂ ಕಲ್ಕತ್ತಾದಂಥ ಮಹಾನಗರದ ಹೃದಯದಲ್ಲೇ ಕೇವಲ ಇನ್ನೂರು ರೂಪಾಯಿ ಬಾಡಿಗೆಗೆ ಒದಗಿತ್ತು. ಅದಕ್ಕೂ ಮಿಗಿಲಾಗಿ ತಾವು ಕನಿಷ್ಟವನ್ನೇ ಕೊಡುತ್ತಿದ್ದೇವೆಂಬ ಅಲ್ಲಿನ ಕಾರ್ಯಕರ್ತರ (ಹಿಂದಿನ ಪಯಣದ ದಿಲ್ಲಿ ಅನುಭವಕ್ಕೆ ವ್ಯತಿರಿಕ್ತವಾಗಿ) ಹಾಗೂ ಸದಸ್ಯರ ಮನೋಭಾವ ನಮಗೆ ತುಂಬ ಸಂತೋಷವನ್ನೇ ಕೊಟ್ಟಿತು. 

ಕೋಣೆಯಲ್ಲಿ ಹೊರೆ ಇಳುಹಿ, ಪುನಶ್ಚೇತನರಾಗಿ, ವಿರಾಮದಲ್ಲೇ ಅಲ್ಲಿನ ಪೇಟೆಯಲ್ಲಿ ಸ್ವಲ್ಪ ಕಾಲಾಡಿಸಿದೆವು. ದೇವಕಿ, ಉಪಾಧ್ಯರಿಗೆ ತೋರಿಕೆಯ ಶಿರಸ್ತ್ರಾಣಗಳನ್ನು ಕೊಂಡೆವು. ಪಕ್ಕಾ ಸಸ್ಯಾಹಾರದ ಹೋಟೆಲ್ ಹುಡುಕುವಲ್ಲಿ ನಾವು ಸ್ವಲ್ಪ ಎಚ್ಚರವಹಿಸಿದ್ದೆವು. ಕಾರಣ ನಿಮಗೆಲ್ಲ ತಿಳಿದೇ ಇದೆ - ಬಂಗಾಳಿಗಳಿಗೆ ಮೀನು ಕಡಲ ಸಸ್ಯ! ಅಲ್ಲಿದ್ದ ದಿನಗಳಲ್ಲಿ ಅನುಭವಿಸಿದ ತಿನಿಸು ಪಾನೀಯಗಳ ವಿವರ ತಖ್ತೆ ಏನೂ ನಾನಿಟ್ಟಿಲ್ಲ. ಆದರೆ ನಾಲ್ಕು ದಾರಿ ಸೇರುವಲ್ಲೇ ಸಂಜೆಗಳಲ್ಲಿ ಪುಟ್ಟ ಕೈಗಾಡಿಯಲ್ಲಿ ತೆರೆದುಕೊಳ್ಳುತ್ತಿದ್ದ ‘ಹೊಟೆಲ್’ ಧಾರಾಳ ಬಳಸಿದ್ದೆವು. ಆತ ರೊಟ್ಟಿಯಂತ್ರದಂತೆ ಲಟ್ಟಿಸಿ, ಉಬ್ಬಿಸಿ ಕೊಡುತ್ತಿದ್ದ ಫುಲ್ಕಾ ರೊಟ್ಟಿಗಳಿಗೆ ಜನ ಮುತ್ತಿಗೆ ಹಾಕಿ ಒಯ್ಯುತ್ತಿದ್ದರು. ನಾವೂ ಅಲ್ಲಿ ಡಜನ್ನುಗಳ ಲೆಕ್ಕದಲ್ಲಿ ರೊಟ್ಟಿಗಳನ್ನು ಮುತ್ತುಗದೆಲೆಯಲ್ಲಿ ಸುತ್ತಿಸಿಕೊಂಡು, ಜತೆಗೇ ಇನ್ನೊಂದು ಸ್ಟವಿನಲ್ಲಿ ಕುದಿಯಾರದಂತಿರುತ್ತಿದ್ದ ಆಲೂ ಸಾಗೂವನ್ನು ಆತನೇ ಒದಗಿಸುತ್ತಿದ್ದ ಮಣ್ಣ ಕುಡಿಕೆಗಳಲ್ಲಿ ತುಂಬಿಕೊಂಡು ಬಂದು ಕೋಣೆಯಲ್ಲಿ ಮೆದ್ದದ್ದು ಮರೆಯಲಾರೆ. ಇನ್ನೆಲ್ಲೋ ಮುಖ್ಯ ಪರಿಕರ ಸಾಗೂ ಇದ್ದರೂ ಅದನ್ನು ಒತ್ತಟ್ಟಿಗೆ ನೂಕಿ ಉಪ-ಚಾರಕ್ಕೆಂಬಂತೆ ಬಿದ್ದಿದ್ದ ಮಾವಿನ ಹಣ್ಣಿನ ಸಿಹಿ ಉಪ್ಪಿನಕಾಯಿಯನ್ನು ಸುರಿಸುರಿದುಕೊಂಡು ತಿಂದದ್ದು ಅಷ್ಟೇ ಮಧುರ ನೆನಪು. ನಮ್ಮಲ್ಲಿ ಮುಖ್ಯವಾಗಿ ಕಾಡುಮಾವು - ಮಿಡಿಯಿಂದ ತೊಡಗಿ ಹಣ್ಣಿನವರೆಗೆ ವಿವಿಧ ಚಿತ್ರ ಹಿಂಸೆ ಅನುಭವಿಸಿ ಅನ್ನ ರೊಟ್ಟಿಯಾದಿ ಪ್ರಾಥಮಿಕ ತಿನಿಸುಗಳಿಗೆ ಕಾರ, ಸಿಹಿ ಸಾಂಗತ್ಯ ಕೊಡುವುದು ಗೊತ್ತಿದ್ದದ್ದೇ. ದೊಡ್ಡ ಅರ್ಥಾತ್ ಕಸಿ ಕಾಯಿಗಳಿಗೇನಿದ್ದರೂ ಬೆಳೆದು ಹಣ್ಣಾಗುವುದೊಂದೇ ಪರಮಪದ. ಅವನ್ನು ಕೇವಲ ಹಣ್ಣಾಗಿ, ಸಮೃದ್ಧಗೊಂಡ ಸೀಕರಣೆ, ರಸಾಯನದಂತೆಲ್ಲ ರೂಪಾಂತರಿಸಿದರೂ ಬಹುತೇಕ ಸ್ವತಂತ್ರ ಖಾದ್ಯವಿಶೇಷಗಳಾಗಿಯೇ ಉಳಿಯುತ್ತವೆ. ಕಲ್ಕತ್ತಾದ ಸಿಹಿ ಉಪ್ಪಿನ ಕಾಯಿ ದೊಡ್ಡ ಕಸಿ ಮಾವಿನ ಹಣ್ಣಿನದೇ ಆಗಿತ್ತು; ನಮ್ಮದು ಊಟವೆಲ್ಲ ಉಪ್ಪಿನಕಾಯಿಯೇ! 

ಸಂಜೆ ಸಮೀಪದ ರಬೀಂದ್ರ ಸರೋವರ್ ದಂಡೆಯಲ್ಲಿ ಸಣ್ಣದಾಗಿ ಸುತ್ತಾಡಿ ಬಂದೆವು. ತಡ ಸಂಜೆಯಲ್ಲಿ ನಿತ್ಯ ಎನ್ನುವಂತೆ ಸಂಘದ ಹಲವು ಸದಸ್ಯರು ಹಾಡು, ಆಟ, ಪಟ್ಟಾಂಗಕ್ಕೆಂದೇ ಬರುವವರಿದ್ದರು. ಸಂಘದ ಕಾರ್ಯದರ್ಶಿ ಮೈಸೂರು ಮೂಲದ (ಕ್ಷಮಿಸಿ ಹೆಸರು ಮರೆತಿದ್ದೇನೆ) ಐಯ್ಯಂಗಾರ್, ಆ ಸದಸ್ಯರೊಡನೆ ನಮ್ಮ ಅನೌಪಚಾರಿಕ ಭೇಟಿ, ಸಂವಾದ ಏರ್ಪಡಿಸಿದರು. ಅದರ ಮೇಲೆ ಬಿಸಿ ಸಮೋಸಾ, ಟೀ, ಕುಲ್ಫಿ ಕೂಡಾ ಇದ್ದಾಗ ಕೇಳಬೇಕೇ - ತುಂಬ ಆತ್ಮೀಯವಾಗಿತ್ತು. ಅಂದು ಭೇಟಿಯಾಗಿದ್ದ ಒಂದು ಕುಟುಂಬ, ಮುಂದೊಂದು ಕಾಲದಲ್ಲಿ ಮಗ - ನಂದಗೋಪಾಲ್ ವೃತ್ತಿಯ ನೆಪದಲ್ಲಿ ಮಂಗಳೂರಿಗೆ ಬಂದು ನೆಲೆಸಿ ಇಂದಿಗೂ ಸಂಪರ್ಕದಲ್ಲಿರುವುದನ್ನು ಇಲ್ಲೇ ಸ್ಮರಿಸಿಕೊಳ್ಳಬೇಕು. (ರಾತ್ರಿ ತಾಪಮಾನ ೩೮ ಡಿಗ್ರಿ ಸೆ.) 

೧೮-೪-೯೬ರ ಬೆಳಿಗ್ಗೆ ನಾವು ಐ.ಟಿ.ಡಿ.ಸಿಯ ‘ಕೊಲ್ಕತ್ತಾ ದರ್ಶನ’ದ ಬಸ್ಸೇರಿದ್ದೆವು. (ತಲಾ ರೂ ೭೫) ಅದರ ಭಾಗವಾಗಿ ಜೈನ ಮಂದಿರದ ಚಂದದ ಕನ್ನಡಿ ಕೆಲಸ ನೋಡಿದೆವು. ಕಾಳಿ ಮಂದಿರ ಹಾಗೂ ರಾಮಕೃಷ್ಣ ಆಶ್ರಮದ ಪ್ರಧಾನ ಮಂದಿರ - ಬೇಲೂರು ಮಠಕ್ಕೂ ಹೋಗಿದ್ದೆವು. ಅದು ನಮಗೆ ಅನಿರೀಕ್ಷಿತ ಭೇಟಿಯಾದ್ದರಿಂದ ನಾವು ಸ್ವಾಮಿ ಜಗದಾತ್ಮಾನಂದರ ಸಮಯ ಹಾಳು ಮಾಡಲಿಲ್ಲ. ಮುಂದೆ ಇಕೋ ಪಾರ್ಕ್ ತೋರಿಸಿ, ಸಂಜೆಯಾಗುತ್ತಿದ್ದಂತೆ ವಿಕ್ಟೋರಿಯಾ ಮ್ಯೂಸಿಯಂ ದರ್ಶಿಸಿದೆವು. ಬ್ರಿಟಿಷ್ ರಾಣಿ ವಿಕ್ಟೋರಿಯಾ ಗತಿಸಿದ ಕಾಲಕ್ಕೆ ಸ್ಮಾರಕವಾಗಿ (ಅಂದು ಕಲ್ಕತ್ತಾ ಭಾರತದ ರಾಜಧಾನಿ) ಈ ಯೋಜನೆ ರೂಪುಗೊಂಡಿತ್ತಂತೆ. ಅಂದಿನ ಭಾರತದ ಎಲ್ಲ ಪ್ರಾಂತ್ಯಗಳ ವಂತಿಗೆಯ ಮಹಾಮೊತ್ತ ಒಂದು ಕೋಟಿ ರೂಪಾಯಿಯ ವ್ಯವಸ್ಥೆ ಪೂರ್ಣಗೊಳ್ಳುವ ಕಾಲಕ್ಕೆ (೧೯೨೧) ದೇಶದ ರಾಜಧಾನಿ ಮಾತ್ರ ದಿಲ್ಲಿಗೆ ವರ್ಗಾವಣೆಗೊಂಡಿತ್ತು! ಮ್ಯೂಸಿಯಂ ಆ ಕಾಲದ ಮಿತಿಗೆ ನಿಲುಕಿದೆಲ್ಲ ಕೀಟ, ಹಕ್ಕಿ, ಪ್ರಾಣಿ ಮುಂತಾದ ಪ್ರಾಕೃತಿಯ ಮಾದರಿಗಳಿಗೆ ಜೀವೈತಿಹಾಸಿಕ ಮಹತ್ವ ದೊಡ್ಡದೇ ಇರಬಹುದು. ಹಾಗೆಂದು ಕಾಲರ್ಧ ಗಂಟೆಯ ಬಿಡುವಿನಲ್ಲಿ ಹತ್ತೆಂಟು ಸ್ಥಳಗಳನ್ನು ಸುತ್ತಿ ಬಂದಂತೇ ಇದನ್ನೂ ನೋಡುವಲ್ಲಿ ನಮಗಾಸಕ್ತಿ ಬರಲಿಲ್ಲ. ಹಾಗಾಗಿ ನಾವು ನಾಲ್ವರು ಪ್ರವಾಸೀ ಬಸ್ಸಿನಿಂದ ಕಳಚಿಕೊಂಡು ಮೆಟ್ರೋ ರೈಲಿನ ಸ್ವತಂತ್ರ ಅನುಭವಕ್ಕಾಗಿ ನಡೆದೆವು. 

ಮೂವರು ಕಾಣೆಯಾಗಿದ್ದಾರೆ! ಭಾರತದಲ್ಲಿ ಸರ್ವಪ್ರಥಮವಾಗಿ ಮೆಟ್ರೋ ಕಂಡ ನಗರ ಕಲ್ಕತ್ತ (೧೯೮೪). ಮೆಟ್ರೋ ಲೆಕ್ಕದಲ್ಲಿ ದಿಲ್ಲಿ ಎರಡನೇ ಸ್ಥಾನದಲ್ಲಿದೆ (೨೦೦೨). ಇಂದು ಬೆಂಗಳೂರಿಗೂ ಬಂದಿರುವ ಮೆಟ್ರೋ ಅನುಭವದ ನೆಲೆಯಲ್ಲಿ (೨೦೧೧), ೨೪ ವರ್ಷಗಳ ಹಿಂದಿನ ನಮ್ಮ ಪ್ರಥಮ ಅನುಭವವನ್ನು ದಯವಿಟ್ಟು ಅಳೆಯಬೇಡಿ. ಅದು ಗಾಂಪರೊಡೆಯರು ವಿಮಾನ ಏರಿದಷ್ಟೇ ಸ್ವಾರಸ್ಯಕರವೆಂದು ಕಂಡದ್ದರಿಂದ ಆ ಹೊಸತರಲ್ಲೇ ನಾನು ‘ಮೂವರು ಕಾಣೆಯಾಗಿದ್ದಾರೆ!’ ಎಂಬ ತಲೆಬರಹದಲ್ಲೊಂದು ಲೇಖನವನ್ನೇ ಪ್ರಕಟಿಸಿದ್ದೆ (ಉದಯವಾಣಿ). ಅದರ ಸಂಕ್ಷಿಪ್ತ ರೂಪವನ್ನೇ ಇಲ್ಲಿ ಬೆಸೆಯುತ್ತಿದ್ದೇನೆ. 


ವಿಕ್ಟೋರಿಯಾ ಮ್ಯೂಸಿಯ ಹತ್ತಿರದಲ್ಲೇ ದಾರಿ ಬದಿಯ ಪುಟ್ಟ ಕೋಣೆಯೇ ‘ಮೈದಾನ್’ ಮೆಟ್ರೋ ನಿಲ್ದಾಣದ ಪ್ರವೇಶ ಕಿಂಡಿ. ಕಲ್ಕತ್ತಾದ ಮೆಟ್ರೋ (‘ನಮ್ಮ ಮೆಟ್ರೋ’ದಂತಲ್ಲದೆ) ಬಹುತೇಕ ಭೂಮಿಯ ಆಳದಲ್ಲೇ ಸಂಚರಿಸುತ್ತದೆ. ಒಳಗೆ ಇಳಿಯುತ್ತಿದ್ದಂತೆ ವಿಸ್ತಾರಗೊಂಡ ಸೋಪಾನಗಳು, ಹೊರಲೋಕದ ಬಿಸಿಯನ್ನು ಮರೆಸುವ ಹವಾನಿಯಂತ್ರಿತ ವಾತಾವರಣ, ಎಲ್ಲವೂ ಚೊಕ್ಕ, ಏನೋ ನರುಗಂಪು! ದಿನದುದ್ದಕ್ಕೂ ಝಗಮಗಿಸಲೇ ಬೇಕಾದ ಆ ದೀಪ ಲೋಕ ನಮ್ಮನ್ನು ಕಂಗೆಡಿಸಿಬಿಟ್ಟಿತ್ತು. ನಮ್ಮ ಗಮಾರತನ ನೋಡಿ ಅದ್ಯಾರೋ ತರುಣ ಸಹಾಯಕ್ಕೆ ಒದಗಿದ. ಟಿಕೆಟ್ ಕೊಡಿಸಿ, ಪ್ಲ್ಯಾಟ್ ಫಾರಂ ತಿಳಿಸಿ, ಮುಂದೆ ಎರಡೋ ಮೂರೋ ನಿಲ್ದಾಣ ಕಳೆದ ಮೇಲೆ ಸಿಗುವ ‘ರೊಬೀಂದ್ರ ಸರೋಬರ್’ ಹೆಸರು ಒತ್ತಿ ಹೇಳಿದ್ದ. ರೈಲು ಬಲು ಚುರುಕು, ನಿಶ್ಶಬ್ದ, ಎಲ್ಲೂ ಹತ್ತಿಪ್ಪತ್ತು ಸೆಕೆಂಡಿಗೆ ಹೆಚ್ಚು ನಿಲ್ಲುವುದಿಲ್ಲ. ಸ್ವಲ್ಪ ಆಚೀಚೆ ಆದರೂ ತೊಂದರೆಯಿಲ್ಲ, ಬಾಗಿಲು ತೆರೆದು ಮತ್ತೆ ಮುಚ್ಚಿಕೊಳ್ಳುವುದರೊಳಗೆ ಒಳ ಸೇರಿಕೊಳ್ಳಿ ಎಂದು ಎಚ್ಚರಿಸಿ ಬೀಳ್ಕೊಂಡ. 

ನಾವು ಮತ್ತಷ್ಟು ಆಳಕ್ಕಿಳಿದು, ನಿಜ ನಿಲು ತಾಣವನ್ನೇ ಸೇರಿದೆವು. ಸುಮಾರು ಒಂದು ನೂರಡಿಯಷ್ಟೇ ಪ್ರಖರ ಬೆಳಕಿನ ವಲಯವೇ ನಿಲ್ದಾಣ. ಉಳಿದಂತೆ ಎರಡೂ ಕೊನೆಯಲ್ಲಿ ಹಳಿಗಳು ವಿರಳ ದೀಪಗಳ ಕತ್ತಲ ಕೂಪದಲ್ಲಿ ಕರಗಿಹೋದಂತಿತ್ತು. (ಎದುರು ಬದಿರು ಸಂಚಾರಕ್ಕಾಗಿ) ಎರಡು ಜೋಡಿ ಹಳಿಗಳು, ಕತ್ತಲಗುಂಡಿಯಲ್ಲಿ ಮಿರಿಮಿರಿ ಮಿಂಚುತ್ತಿದ್ದವು. ಹೆಚ್ಚು ಕಮ್ಮಿ ಐದು ಮಿನಿಟಿಗೊಂದರಂತೆ ಎರಡೂ ದಿಕ್ಕಿನಲ್ಲಿ ಗಾಡಿಗಳು ಓಡುತ್ತಿರುತ್ತವೆ ಎಂದು ಕೇಳಿದ್ದರಿಂದ, ನಾವು ಬಹಳ ಎಚ್ಚರದಿಂದಲೇ ‘ಮಿಂಚಿನ ಸೆಳಕ’ನ್ನು ಕಾದು ನಿಂತೆವು. ಜನ ಬಹುತೇಕ ಮೌನವಾಗಿ ಒಬ್ಬಿಬ್ಬರೆನ್ನುವಂತೆ ಬರುತ್ತಾ ಪ್ಲ್ಯಾಟ್‍ಫಾರಂನ ಉದ್ದಕ್ಕೆ ಹರಡಿಕೊಳ್ಳುತ್ತಲಿದ್ದರು. ಒಮ್ಮಿಂದೊಮ್ಮೆಗೆ ಅದು ಬಂತು. ಅನೂಹ್ಯ ಲೋಕದ ಹಾರುವ ತಟ್ಟೆಯೂ ಹೀಗೇ ಇರಬಹುದೇ ಎನ್ನುವಂತೆ, ಬೆಳಕಿನ ಕೋಲಿನಂತೇ ಬಂದು, ಗಕ್ಕನೆ ಹಳಿಗುಂಡಿಯನ್ನು ತುಂಬಿ ನಿಂತಿತ್ತು. ಅಷ್ಟೇ ಚುರುಕಾಗಿ ಅದರ ಎಲ್ಲ ಬಾಗಿಲುಗಳು ಹಾರುಹೊಡೆದಾಗ, ಭೂತಬಂಗ್ಲೆಗೆ ಸಂತೆ ನುಗ್ಗಿದಂತೆ ಗಿಜಿಗಿಜಿ ಜನ. ಕೂತ ಮಂದಿ, ನೇತ ಮಂದಿ, ಇಳಿ-ಹತ್ತುವ ತರಾತುರಿಗಳ ಗೌಜಿನಲ್ಲಿ, ಕಿಂದರಿಜೋಗಿಯ ಮಾಯಾ ಗುಹೆ ಕದವಿಕ್ಕುವ ಮುನ್ನ ಸೇರಿಕೊಳ್ಳುವ ಬಾಲರಂತೆ ನೂಕು ನುಗ್ಗಲು. ಬೆರಗು ಕಳೆದು ನಮ್ಮೂವರ ಕಾಲು ನೆಲ ಬಿಟ್ಟೇಳುವುದರೊಳಗೆ ಬಾಗಿಲು ಮುಚ್ಚಿತ್ತು. ನಿರುಮ್ಮಳವಾಗಿ ಧಾವಿಸಿದ ರೈಲಿನ ಒಳಗಿನಿಂದ ಉಪಾಧ್ಯರ ಕಣ್ಣ ಬೆಳಕಷ್ಟೇ ಕಂಡೆವು! ನಾವು "ಇನ್ನೈದು ಮಿನಿಟಲ್ಲವೇ.." ಎಂದುಕೊಂಡೆವು. 

ಹಾಗೇ ಇನ್ನೊಂದು ಮಿಂಚು ಹೊಳೆದಾಗ ನಾವು ಹೆಡ್ಡರಾಗಲಿಲ್ಲ. ರಾಜಾರಾಮನ ಮಹಾಭೋಜನಕೂಟದಲ್ಲಿ ಉಪ್ಪಿನಕಾಯಿ ಮಿಡಿಯೊಳಗಿನಿಂದ ಚಿಮ್ಮಿದ ಕೋಗಿಲೆಗೆ ಸ್ಪರ್ದೆ ಕೊಟ್ಟ ವಾನರರನ್ನೂ ಮೀರಿಸುವಂತೆ, ಮೂವರೂ ಒಂದಾಗಿ ಗಾಡಿ ಒಳ ಸೇರಿದ್ದೆವು. ಮತ್ತೆ ಒಳಗಿನ ಯಾಂತ್ರಿಕ ತ್ರಿಭಾಷಾ ಘೋಷಣೆಗೆ (ಬಂಗಾಳಿ, ಹಿಂದಿ ಮತ್ತು ಇಂಗ್ಲಿಷ್) ಕಿವಿಯಾಗಿ, ಈಜುಕೊಳದ ಜಿಗಿಹಲಗೆಯ ಅಂಚಿನಲ್ಲಿ ನಿಂತವರಂತೆ ಕಾದೆವು. ನಿಯತ ಘೋಷಣೆ "....ರಬೀಂದ್ರ ಸದನ್..." ಹೆಸರು, ದಿಕ್ಕು ಕೇಳಿದ್ದೇ ಸಾಕಾಯ್ತು. ಬಾಗಿಲು ತೆರೆದ ಕ್ಷಣಕ್ಕೆ ಮತ್ತೆ ಮೂರರ ಕಟ್ಟು ಇಳಿಕಟ್ಟೆಗೆ ಧುಮುಕಿತ್ತು. 

ಅಲ್ಲಿ ನಮ್ಮ ಹುಡುಕು ನೋಟ ಬಯಸಿದ್ದು ಉಪಾಧ್ಯ. ಆದರೆ ನಾನೂ ಕಿಶೋರ್ ನಿಲ್ದಾಣದ ಎರಡೂ ಕೊನೆಯವರೆಗೂ ನಡೆದು ನೋಡಿದರೂ ಆಸಾಮಿ ನಾಪತ್ತೆ. ಟಿಕೆಟ್ ಗೇಟಿನವರೆಗೆ ಮೆಟ್ಟಿಲೇರಿದೆವು. ಅದು ಟಿಕೆಟ್ಟಿಲ್ಲದವರನ್ನು ಒಳಕ್ಕೆ ತಡೆದಷ್ಟೇ ಬಿಗಿಯಾಗಿ ಹೊರಹೋಗುವಾಗಲೂ ತಡೆಯುತ್ತದೆಂದು ನಮಗೆ ತಿಳಿಯಿತು. ಎಲ್ಲರ ಟಿಕೆಟ್ಟುಗಳೂ ನನ್ನ ಕಿಸೆಯಲ್ಲಿ ಬೆಚ್ಚಗಿತ್ತು. ಹಾಗಾದರೆ ಉಪಾಧ್ಯ ಎಲ್ಲಿ? ಅವರಿವರಲ್ಲಿ ನಮ್ಮ ಕತೆ ಹೇಳಿಕೊಂಡಾಗ ನಾವು ತಪ್ಪಿದ್ದು ತಿಳಿಯಿತು. ನಾವಿಳಿಯಬೇಕಿದ್ದದ್ದು ‘ರೊಬಿಂದ ಸದನ್’ ಅಲ್ಲ, ಮತ್ತೂ ಮುಂದಿನ ನಿಲ್ದಾಣ ರೊಬಿಂದ್ರ ಸರೋವರ್. ಇಷ್ಟಾಗುವಾಗ ಎರಡು ರೈಲು ದಾಟಿಯಾಗಿತ್ತು. ನಿಮಗೆಲ್ಲ ತಿಳಿದಂತೆ ಇಲ್ಲಿ ಟಿಕೆಟ್ ಹಳಸುವ ಸಮಸ್ಯೆ ಇಲ್ಲ. ಹಾಗಾಗಿ ಮೂರನೇ ರೈಲು ಬಂದದ್ದೇ ಮತ್ತೆ ಒಗ್ಗಟ್ಟಿನಲಿ ಬಲವಿದೆ ಎಂದು ಒಳ ಹಾರಿದ್ದೆವು, ರೊಬಿಂದ್ರ ಸರೋವರ್ ಬಂದಾಗ ಹಾಗೇ ಹೊರಬಿದ್ದೆವು. ಆದರೆ ಅಲ್ಲೂ ಉಪಾಧ್ಯರಿಲ್ಲ. 

ಮೆಟ್ರೋದಲ್ಲಿ ಗೇಟ್ ಹಾರುವುದು ಅಸಾಧ್ಯವಂತೆ. ಹೇಗೋ ದಾಟಿದರೂ ನಿಲ್ದಾಣದಿಂದ ಸಂಘದ ಕಟ್ಟಡಕ್ಕೆ ದಾರಿ ನಮಗೆಲ್ಲರಿಗೂ ಹೊಸತೇ. ಅವರಿವರಲ್ಲಿ ವಿಚಾರಿಸಿಕೊಂಡು ಹೋಗುವಲ್ಲಿ ಉಪಾಧ್ಯರಿಗೆ ಭಾಷೆಯ ಕಟ್ಟುಪಾಡೂ ಇತ್ತು - ತೀರಾ ಖರ್ಚಿಗೆ ತಕ್ಕಷ್ಟೇ ಇಂಗ್ಲಿಷ್ ಬಿಟ್ಟರೆ, ಕನ್ನಡ ಒಂದೇ ಸತ್ಯ! ನಿಲ್ದಾಣದ ವರಿಷ್ಠನಿಗೆ ದೂರು ಕೊಟ್ಟೆವು. ಅವರು "ಇದು ಮೆಟ್ರೋ ಮರ್ಯಾದೆ ಪ್ರಶ್ನೆ..." ಎಂದವರೇ ಮೆಟ್ರೋ ಜಾಲದ ಉದ್ದಕ್ಕೂ ಸಾರ್ವಜನಿಕ ಘೋಷಣೆಯ ಮೈಕ್ ಲೈನ್ ಹಿಡಿದು ಸುದ್ದಿ ಪ್ರಸರಿಸಿಯೇ ಬಿಟ್ಟರು - "ಬೆಂಕಟ್ರಮಣ ಉಪಾಧ್ಯೋ, ಕರ್ನಾಟಕೀ, ಪೊರ್ಸೀಡ್ ಟು ರೊಬಿಂದ್ರ ಸರೋಬರ್". ಇದು ಸರ್ತಿಗೆ ಎರಡೋ ಮೂರೋ ಬಾರಿಯಂತೆ ಐದು ಹತ್ತು ಮಿನಿಟಿನಲ್ಲಿ ಮತ್ತೆ ಪ್ರಸಾರಗೊಂಡಿತು. ವೆಂಕಟರಮಣನಿಗೇ ಸಂಕಟ ಬಂದರೆ ಕಾಯುವವರಾರು? ಅರ್ಧ ಗಂಟೆ ಕಾದು ನೋಡಿದೆವು. ಅನಂತರ ಅದೃಷ್ಟದ ಮೇಲೆ ಭಾರ ಹಾಕಿ ಹೊರ ಬಂದು, ಅವರಿವರಲ್ಲಿ ವಿಚಾರಿಸಿಕೊಂಡು ಕನ್ನಡ ಸಂಘ ಸೇರಿದಾಗ ಏನಾಶ್ಚರ್ಯ - ಉಪಾಧ್ಯ ಅಲ್ಲಿದ್ದರು! ಅದೂ ಅರ್ಧ ಗಂಟೆಗೂ ಮೊದಲೇ ಬಂದಿದ್ದರು! ಅದೇನೂ ಬಂಗಾಳೀ ಜಾದೂ ಅಲ್ಲ ಎನ್ನುವುದನ್ನು ಅವರ ಮಾತಿನಲ್ಲೇ ಕೇಳಿ: 

"ನಾನು ರೈಲೊಳಗೆ ಸೇರಿ ನೀವೆಲ್ಲ ಹೊರಗುಳಿದದ್ದು ಕಂಡಾಗ ಒಮ್ಮೆ ತಲೆ ಖಾಲಿಯಾಯ್ತು. ಹತ್ತಿದ ನಿಲ್ದಾಣ ಯಾವುದು, ಇಳೀಬೇಕಾದ್ದೆಲ್ಲಿ ಒಂದೂ ಹೊಳೀಲಿಲ್ಲ. ಹಾಗೇ ಇರುವಾಗ ಒಮ್ಮೆಲೆ ಮೈಕ್ "ಬರಲಿರುವ ನಿಲ್ದಾಣ ರಬೀಂದ್ರ ಸದನ್ ಬಲಬದಿಗಿದೆ" ಎಂದಾಗ ತಲೆ ಚುರುಕಾಯ್ತು. ರೈಲು ನಿಂತದ್ದೇ ಬುಡುಕ್ಕನೆ ಹೊರ ಹಾರಿದ್ದೆ. ರೈಲಿಳಿದ ಇತರರೊಂದಿಗೆ ಹೊರ ಹೋಗಲು ಟಿಕೆಟ್ಟಿಲ್ಲವಲ್ಲಾಂತ ಯೋಚನೆ ಮಾಡುತ್ತ ನಿಂತೆ. ಆಗ ನಾವು ನಿನ್ನೆ ಸಂಜೆ ಸಂಘದ ಹೊರಗೆ ಸುತ್ತಿದ್ದು ರೊಬೀಂದ್ರ ಸರೋವರ್ ಎಂದು ನೆನಪಾಯ್ತು. ಜಂಟಲ್ ಮ್ಯಾನ್ ಆಗಿ ತೋರಿದ ಒಬ್ಬರ ಬಳಿ ಹರಕು ಇಂಗ್ಲಿಷಲ್ಲಿ ವಿಚಾರಿಸಿದೆ. ಅವರು ಸರೋವರ್ ಮುಂದಿನ ನಿಲ್ದಾಣ ಎಂದರು. ಅಲ್ಲಿನ ಗೇಟಿನ ಹೊರಬದಿಗಿದ್ದ ಹುಡುಗನೊಬ್ಬನಲ್ಲಿ ನನ್ನ ಸಮಸ್ಯೆ ಹೇಳಿದೆ. ಆತ ಮೇಲೆ ಹೋಗಿ, ನನಗೆ ಹೊಸದೇ ಟಿಕೆಟ್ ಮಾಡಿಸಿ ತಂದು, ಕೈ ದಾಟಿಸಿದ. ನಾನು ಮರುಯೋಚನೆ ಮಾಡದೆ ಮತ್ತೆ ಬಂದ ರೈಲೇರಿದೆ...." 

ಅಲ್ಲಿ ನಾನು ಬಾಯಿ ಹಾಕಬೇಕಾಯ್ತು "ಅಯ್ಯೋ ಅದರಲ್ಲೇ ನಾವೂ ಬಂದು ಅಲ್ಲೇ ತಪ್ಪಾಗಿ ಇಳಿದಿದ್ದೆವಲ್ಲಾ...." ಉಪಾಧ್ಯರು ಮುಗಿಸಿದರು "ಹ್ಹಹ್ಹಾ ನಿಮಗಿಳಿಯುವ ಗೊಂದಲ, ನನಗೆ ಹತ್ತುವ ಗಡಿಬಿಡಿ! ಜನರ ಮುಖ ಯಾರೂ ನೋಡಲೇ ಇಲ್ಲ. ನೀವೂ ಸದನ್, ಸಾಗರ್, ಸರೋವರ್ ಸರಿ ಮಾಡಿ, ಸಾರ್ವಜನಿಕ ಘೋಷಣೆ ಹಾಕಿಸುವ ಹೊತ್ತಿಗೆ ನಾ ಹೊರ ಬಂದಾಗಿತ್ತು. ನೀವು ನನ್ನನ್ನು ಅಲ್ಲಿ ಕಾಯುತ್ತಿದ್ದಾಗ ನಾನಿಲ್ಲಿ ನಿಶ್ಚಿಂತೆಯಲ್ಲಿ ತಿಂಡಿ ತಿಂದಾಗಿತ್ತು. ನಾ ಕಳೆದು ಹೋಗಿರಬಹುದು, ಮೂವರು ಕಾಣೆಯಾಗುಕ್ಕಿತ್ತಾ?!" 

(ಮುಂದುವರಿಯಲಿದೆ)

4 comments:

  1. ಇತರ ನಗರಗಳಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚೇ ಗಿಜಿಗಿಜಿ, ಟ್ರಾಫಿಕ್ ಅವ್ಯವಸ್ಥೆಗಳಿಗೆ ಕಲ್ಕತ್ತಾ ಅಂದು ಹೆಸರುವಾಸಿಯಾಗಿತ್ತು (ಇಂದು ಎಲ್ಲ ನಗರಗಳ ಪರಿಸ್ಥಿತಿಯೂ ಅದೇ ರೀತಿ ಇದೆ). ಅತೀ ಕಡಿಮೆ ಬೆಲೆಯಲ್ಲಿ ಚಹಾ ತಿಂಡಿ ಲಭ್ಯವಾಗುತ್ತಿದ್ದ ದಿನಗಳವು. ಆಗ ಬಹುಶಃ ಧರಮ್‌ತಾಲಾ ದಿಂದ ತಾಲಿಗಂಜ್‌ವರೆಗೆ ಹತ್ತೊ ಹನ್ನೆರಡೋ ಸ್ಟೇಶನ್‌ಗಳಿಗಷ್ಟೇ ಸೀಮಿತವಾಗಿದ್ದ ಮೆಟ್ರೋ ರೈಲು ಮಾತ್ರ ಅದ್ಭುತ ಲೋಕದಂತೆ ಭಾಸವಾಗಿತ್ತು. ಟ್ರಾಮ್‌ ಅನ್ನು ನೋಡಿ ಅದು ರೈಲೋ ಬಸ್ಸೋ ಎನ್ನುವುದೇ ಅರ್ಥವಾಗಿರಲಿಲ್ಲ. ಮಾನವರು ಎಳೆಯುವ ರಿಕ್ಷಾಗಳನ್ನು ಮೊದಲ ಬಾರಿಗೆ ನೋಡಿ “ಹೀಗೂ ಉಂಟೇ..!” ಎಂದೆನಿಸಿತ್ತು.

    ReplyDelete
  2. ಬಹಳ ಚಲೋ ಇದೆ. ಅ-ಪೂರ್ವ ಭಾರತ ಸಂಚಾರದ ಮೊದಲ ಎರಡು ಕಂತುಗಳೂ ಒಂದಕ್ಕಿಂತ ಇನ್ನೊಂದು ಮಿಗಿಲಾಗಿವೆ. ಹೌರಾ ರೈಲುನಿಲ್ದಾಣದಲ್ಲಿದ್ದ ಭ್ರಷ್ಟಾಚಾರ ಕೊಲ್ಕತ್ತೆಯ ಪೊಲೀಸರಲ್ಲಿಲ್ಲದಿದ್ದುದು ( ಸಹವಾರರು ತಲೆಮುಚ್ಚ ತೊಡದಿದ್ದುದನ್ನು ಫಲಾಪೇಕ್ಷೆಯಿಲ್ಲದೆ ಕ್ಷಮಿಸಿದ್ದು) ವಿಶೇಷ ಮತ್ತು ಮನುಷ್ಯತ್ವವೆಂಬುದು ಎಲ್ಲ ಕಾಲಗಳಲ್ಲೂ ಎಲ್ಲಾದರೊಂದು ಕಡೆ ಬದುಕಿರುತ್ತದೆ ಎಂಬುದಕ್ಕೆ ಸಾಕ್ಷಿ. ಇನ್ನು ಮೆಟ್ರೋ ಅನುಭವವಂತೂ ( ನನಗಿನ್ನೂ ಆ ಅನುಭವ ಆಗದ ಕಾರಣ) ಕಲ್ಪನೆಗಳನ್ಮು ಅರಳಿಸುವುದಲ್ಲದೆ ರೋಚಕ ಪತ್ತೇದಾರಿ ಪ್ರಸಂಗವಾಗಿಯೇ ಮೂಡಿಬಂದಿದೆ. ಇಲ್ಲಿ ನೆನಪಿಡಬೇಕಾದ ವಿಷಯಗಳೆಂದರೆ ಆ ಕಾಲದಲ್ಲಿ ಚರವಾಣಿಗಳಿರಲಿಲ್ಲ ಎಂಬುದು ಒಂದು. ಇದ್ದಿದ್ದರೆ ಆ ಕಳೆದುಹೋದ ಕಾತರ, ಗಾಬರಿ, ಕಷ್ಟ ಹಾಗೂ ಪುನರ್ಮಿಲನದ ರೋಮಾಂಚನ ಮತ್ತು ಸಂತಸ ಒಟ್ಟಾರೆ ಉಪಾಧ್ಯಾಯರ ಉಪಕಥೆ ಇರುತ್ತಿರಲಿಲ್ಲ ಎಂಬುದು ಇನ್ನೊಂದು.

    ReplyDelete
  3. ನಿಮ್ಮ ಮೆಟ್ರೋ ಸವಾರಿ ಅಂತೂ ಓದಲು ರೋಚಕವಾಗಿತ್ತು. ಉಪಾಧ್ಯ ಸರ್ ನಿಮಗಿಂತಾ ಉಸಾರ್ ಆಗಿ ಬಿಟ್ರು. ನಿಮ್ಮ ಬರವಣಿಗೆ ಓದುಗರನ್ನು ಹಿಡಿದಿಡುತ್ತದೆ.

    ReplyDelete
  4. ನಿಮ್ಮ ಕಲ್ಕತ್ತ ಮೆಟ್ರೋದ ವಿವರಣೆ ಓದುವಾಗ ಲಂಡನ್ ಟ್ಯೂಬ್ ನಲ್ಲಿ ಸುತ್ತಾಡಿದ ನೆನಪಾಯಿತು. ಬಹುಶಃ ಇದು ಅದೇ ಮಾದರಿಯದ್ದಿರಬೇಕು

    ReplyDelete