17 September 2020

ರೈಲ್ವೇಯಲ್ಲಿ ಪ್ರಭಾವ, ವಿಭಾವಗಳು


(ಭಾರತ ಅ-ಪೂರ್ವ ಕರಾವಳಿಯೋಟ - ೨) 

೧೯೯೬ರ ಏಪ್ರಿಲ್ ಹದಿನಾಲ್ಕರಂದು ಮೋಟಾರ್ ಬೈಕ್ ಏರದೇ ನಮ್ಮ ಬೈಕ್ ಮಹಾಯಾನ ಮೊದಲ್ಗೊಂಡಿತ್ತು. ಅಂದು ಬೆಳಿಗ್ಗೆ ಕಿಶೋರ್ ಮತ್ತು ನಾನು ಬೈಕುಗಳನ್ನು ಮಂಗಳೂರು ರೈಲ್ವೇ ನಿಲ್ದಾಣಕ್ಕೊಯ್ದು ಗೆಳೆಯ ಕಿಶನ್ ಬಂಗೇರಾರ (ಇವರು ನಿಲ್ದಾಣದ ಸ್ವಾಗತಕಾರ) ಸಹಾಯಕರಿಗೊಪ್ಪಿಸಿದೆವು. ಬೈಕ್ ಯಾನದ ನಾಲ್ವರ ರೈಲ್ವೇ ಪ್ರಯಾಣದ ಟಿಕೇಟ್ ಒಟ್ಟು ರೂ. ೧೪೨೦/-ಶುಲ್ಕ ಕೊಟ್ಟು (ಮೂರು ಅಟ್ಟಳಿಗೆ ಮಲಗು ಸೌಕರ್ಯದ ಮೂರನೇ ದರ್ಜೆ ಡಬ್ಬಿ) ತಿಂಗಳ ಮುಂಚೆಯೇ ಕಾಯ್ದಿರಿಸಿದ್ದಾಗಿತ್ತು. ಈಗ ಬೈಕುಗಳಿಗೆ ‘ಪ್ಯಾಕಿಂಗ್’ ಶಾಸ್ತ್ರ ಮಾಡಿಸಿ, ಪ್ರಯಾಣದ ಟಿಕೆಟ್ಟಿಗೆ ಲಗತ್ತಿಸಿದಂತೆ ಬ್ರೇಕ್ ವ್ಯಾನ್ ಶುಲ್ಕ ರೂ ೧೩೪೦ ಕೊಟ್ಟು ರಸೀದಿ ಮಾಡಿಸಿಕೊಂಡು ಬಂದೆವು. ಸಂಜೆಗೆ ಉಪಾಧ್ಯರು ಸಾಲಿಗ್ರಾಮದಿಂದ ನಮ್ಮ ಮನೆಗೇ ಬಂದು ಸೇರಿಕೊಂಡರು. ಬೇಗನೇ ಊಟದ ಶಾಸ್ತ್ರ ಮುಗಿಸಿ, ಕತ್ತಲ ಪರದೆ ಬೀಳುತ್ತಿದ್ದಂತೆ, ನಾವು ಮೂವರು ಗಂಟು ಗದಡಿ ಸಮೇತ ರಿಕ್ಷಾ ಏರಿ ರೈಲ್ವೇ ನಿಲ್ದಾಣ ಸೇರಿಕೊಂಡೆವು. ಕಿಶೋರ್ ಪ್ರತ್ಯೇಕವಾಗಿ ಬಂದರು. ಬೈಕುಗಳು ನಮಗೂ ಮೊದಲೇ ರೈಲೇರಿ ಕುಳಿತಿದ್ದವು. 

ನಮಗೆ ಶುಭವಿದಾಯ ಕೋರುವ ಸಂಭ್ರಮಕ್ಕೆ ಕೆಲವು ಆತ್ಮೀಯರೂ ಬಂದಿದ್ದರು. ನನ್ನ ತಂದೆ, ಅಭಯ, ಮಾವ ಗೌರೀಶಂಕರ, ಅತ್ತೆ ದೇವಕಿ, ಅವರ ಮಗ ಸುಬ್ರಹ್ಮಣ್ಯರು ಸಂಬಂಧಿಗಳ ನೆಲೆಯಲ್ಲೂ ಬಂದಿದ್ದರು. ಕಿಶೋರರ ಅಣ್ಣ, ನಮ್ಮ ಹಿಂದಿನ ಸಾಹಸಯಾನದ ಭಾಗವೇ ಆಗಿದ್ದ ಬಾಲಣ್ಣ, ಪ್ರಸನ್ನ ಮತ್ತು ಮೋಹನ್ ಇದರಲ್ಲಿ ಸೇರಿಕೊಳ್ಳಲಾಗದ ವಿಷಾದವನ್ನು ಹತ್ತಿಕ್ಕಿ, ನಗೆಹೊತ್ತು ನಿಂತಿದ್ದರು. ಗೆಳೆತನದ ಬಲದಲ್ಲಿ ‘ಪವಾಡಪುರುಷ’ ನರೇಂದ್ರ ನಾಯಕ್, ಸೀತಾರಾಂ ನಾಯಕ್, ಸುರೇಶ್ ಕುಮಾರ್, ಮಹೇಶ ಶೆಣೈ, ಪ್ರಕಾಶ್ ಸಾಂಗ್ವಿ, ಕಿಶೋರ್ ಕೆ ಮುಂತಾದವರೂ ಔಪಚಾರಿಕ ಹೊರೆಗಳಿಲ್ಲದೆ ಶುಭಾಶಯ ಕೋರುತ್ತಿದ್ದಂತೆ, ರಾತ್ರಿ ೮.೧೫ಕ್ಕೆ ಮದ್ರಾಸ್ ಮೇಲ್ ರೈಲು ಜೈಕಾರ ಹಾಕಿತ್ತು. (‘ಮದ್ರಾಸ್’ - ‘ಚೆನ್ನೈ’ ಆದದ್ದು ೧೯೯೬ರಲ್ಲಿ) 

ಕಿಶೋರ್ ಮನೆಯಲ್ಲಿ ಊಟ ಮಾಡದೇ ಬಂದ ತಪ್ಪಿಗೆ, ಪ್ರವಾಸದ ಮೊದಲ ರುಚಿ ಎಂದುಕೊಳ್ಳುತ್ತ ಮಾರಿಕೊಂಡು ಬಂದ ಪರೋಟಾ ಪ್ಯಾಕೇಟಿನಲ್ಲೇ ಸುಧಾರಿಸಿದರು. ಅವರು ನಿಜದಲ್ಲಿ ಅನ್ನಪ್ರಿಯರು. ತಮಾಷೆ ಎಂದರೆ ಈ ಪರೋಟಾ ಬೋಣಿ, ಅವರನ್ನು ಯಾನದುದ್ದಕ್ಕೆ ಗೋಧಿ ಉತ್ಪನ್ನಗಳನ್ನೇ ಕೊಟ್ಟು ಸತಾಯಿಸಿತು! 

ಒಂಬತ್ತೂವರೆಯ ಸುಮಾರಿಗೆ, ಕಾಸರಗೋಡು ಕಳೆಯುತ್ತಿದ್ದಂತೆ, ನಾವೆಲ್ಲ ನಿಗದಿತ ಮಲಗು ಸ್ಥಾನಗಳನ್ನು ಸೇರಿಕೊಂಡೆವು. ಕೆಳ ಸೀಟಿನ ಆಚೀಚೆ ನಾನು ದೇವಕಿ, ಮಧ್ಯೆ ಒಂದರಲ್ಲಿ ಉಪಾಧ್ಯ, ಮೇಲಿನೊಂದರಲ್ಲಿ ಕಿಶೋರ್. ದೊಡ್ಡ ಚೀಲಗಳ ಕುರಿತಂತೆ ಅದೃಷ್ಟವನ್ನೇ ನೆಚ್ಚಿ ಎಲ್ಲವನ್ನೂ ಸೀಟಿನಡಿಗೆ ನೂಕಿಬಿಟ್ಟೆವು. ನಗದು ಮತ್ತು ಅಮೂಲ್ಯ ದಾಖಲೆಗಳ ಆಪ್ತ ಚೀಲವನ್ನಷ್ಟೇ ಅವಚಿಕೊಂಡು ನಿದ್ರೆ ಹೊದ್ದುಕೊಂಡೆವು. ಸಿಗ್ನಲ್ ಸಿಗದೇ ಎಲ್ಲೆಲ್ಲೋ ಗಾಡಿ ನಿಂತು ಒದರಾಡಿದ್ದು, ಯಾವುದೋ ನಿಲ್ದಾಣದ ನೀರವತೆಯನ್ನು ಎಣ್ಣೆ ಕಾಣದ ನೂಕುಗಾಡಿ ಕೀಚಲಿಟ್ಟು ಹರಿದದ್ದು, ಅಪರಾತ್ರಿಯಲ್ಲೂ ಚಟದಾಸರಿಗೆನ್ನುವಂತೆ ಆಗೀಗ "ಕೋಫೀಈಈ" ಅನುರಣಿಸಿದ್ದಕ್ಕೆಲ್ಲಾ ನಾವು ಸ್ಪಂದಿಸಲಿಲ್ಲ. ಆದರೆ ಯಾವ್ಯಾವುದೋ ನಿಲ್ದಾಣದಲ್ಲಿ ಅನಾಮಧೇಯರು ನಮ್ಮ ಡಬ್ಬಿಯ ಬಾಗಿಲು ಕುಟ್ಟಿ ಬೊಬ್ಬಿಟ್ಟಾಗ ಉತ್ತರಿಸದಿರುವುದು ಹೇಗೆ? ಪಟ್ಟಾಪಟ್ಟಿ ಪೈಜಾಮ ಅಲಂಕರಿಸಿದ ಕೋಳಿಕಾಲನೊಬ್ಬ, ಗಂಟೆಗೆರಡು ಸಲ ಮೇಲಿನ ಅಟ್ಟಳಿಗೆಯಿಂದಿಳಿದು, ಮಂಪರುಗಣ್ಣಲ್ಲಿ ಯಾರ್ಯಾರದೋ ಮೆಟ್ಟು ಹಾಕಿ, ಎಡವಿ, ಕಮಟಿದ ನೆಟ್ ಬನಿಯನ್ ಮೀರಿದ ತನ್ನ ಡೊಳ್ಳು ಹೊಟ್ಟೆಯಲ್ಲಿ ಮಲಗಿದ್ದ ನಮ್ಮನ್ನು ನೂಕಾಡಿ, ತನ್ನ ಜಲಬಾಧೆ ತೀರಿಸಿಕೊಳ್ಳುವ ಓಡಾಟ ನಡೆಸುವಾಗ ಗೊಣಗದಿರುವುದು ಹೇಗೆ? ಇದರ ಮೇಲೆ "ನಿದ್ರೆ ಹೇಗಾಯ್ತು" ಎಂದು ಪ್ರತ್ಯೇಕ ಹೇಳಬೇಕೇ? ಹೆಚ್ಚೆಂದರೆ ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ ಮತ್ತು ಪೂರ್ವಜನ್ಮದ ಕರ್ಮಫಲ ಎಂದು ಗೀತಾಚಾರ್ಯನನ್ನೇ ಉದ್ಧರಿಸಬಹುದು! 

ಹಗಲು (೧೫-೪-೯೬) ಹನ್ನೆರಡು ಗಂಟೆಯ ಸುಮಾರಿಗೆ ಮದ್ರಾಸು ತಲಪಬೇಕಿದ್ದ ರೈಲು ಆರಾಮವಾಗಿ ಅಪರಾಹ್ನ ಮೂರೂವರೆಗೆ ಮುಟ್ಟಿದಾಗ ನಮಗೆ ಆತಂಕವಾದರೂ ಗಾಡಿಯಲ್ಲಿದ್ದ ಅನ್ಯ ಅನುಭವಿಗಳು ನಕ್ಕರು. ತಡ ಸಂಜೆ ಸೇರುವುದು, ಮುಂದಿನ ರೈಲಿಗೆ ಹೋಗುವವರ ಗಾಡಿ ತಪ್ಪಿಸುವುದೆಲ್ಲ ಇದಕ್ಕೆ ಮಾಮೂಲಂತೆ. ಅದರ ಅರಿವಿಲ್ಲದೇ ಬೆಳಿಗ್ಗೆ ರೈಲಿನಲ್ಲಿ ಊಟ ಬೇಕಾದವರ ಪಟ್ಟಿ ಮಾಡಲು ಬಂದವನನ್ನು ಬರಿದೇ ಸಾಗಹಾಕಿದ್ದೆವು. ಕೊನೆಗೆ ಆ ತಪ್ಪಿಗೆ, ಏನೇನೋ ತಿಂದು ಕಷ್ಟಪಟ್ಟದ್ದೂ ಆಗಿತ್ತು. ಇನ್ನು ನಿಲ್ದಾಣದ ಗೊಂದಲಗಳೇನೋ ಎಂದು ತುಸು ಆತಂಕ, ತರಾತುರಿಗಳಲ್ಲೇ ಎಲ್ಲ ಚೀಲ ಸಮೇತ ಇಳಿದು ಬ್ರೇಕ್ ವ್ಯಾನಿನತ್ತ ಹೋಗಿದ್ದೆವು. 

ಹಿಂದಿನ ಭಾಗದಲ್ಲಿ ಹೇಳಿದಂತೆ, ಎಂ.ಎಸ್ ಭಟ್ಟರ ಗೆಳೆತನದ ಬಲದಲ್ಲಿ ಮದ್ರಾಸಿನಲ್ಲಿ ನಮಗೆ ನಿವೃತ್ತ ರೈಲ್ವೇ ಎಂಜಿನಿಯರ್ ಬಿ.ಎ. ಮಲ್ಯ ಮತ್ತು ಹಾಲೀ ರೈಲ್ವೇ ಸೇವೆಯಲ್ಲಿ ಹಿರಿಯ ಅಧಿಕಾರಿಗಳೇ ಆಗಿದ್ದ ಅವರಿಬ್ಬರು ಪುತ್ರರು - ಗಣೇಶ್ ಮಲ್ಯ ಮತ್ತು ಗೋಪಿನಾಥ್ ಮಲ್ಯ ಒಲಿದಿದ್ದರು. ನಮ್ಮ ಚೀಲಗಳನ್ನು ಒಂದೆಡೆ ಗುಡ್ಡೆ ಹಾಕಿ ದೇವಕಿ, ಉಪಾಧ್ಯರನ್ನು ಕಾವಲಿಗಿಟ್ಟು ನಾನು ಕಿಶೋರ್ ಫೋನ್ ಬೂತಿಗೆ ಧಾವಿಸಿ ಮಲ್ಯರನ್ನು ಸಂಪರ್ಕಿಸಿದೆ. ನಿಜದಲ್ಲಿ ಅದರ ಅವಶ್ಯಕತೆಯೇ ಇರಲಿಲ್ಲ. ನಾನು ವಾಪಾಸು ಬರುವುದರೊಳಗೇ ಮಲ್ಯರುಗಳು ನಿಯೋಜಿಸಿದ್ದ ರೈಲ್ವೇ ಪೋಲಿಸರು ನಮ್ಮ ಬೈಕುಗಳನ್ನು ಜಾಗ್ರತೆಯಲ್ಲಿ ಇಳಿಸಿಟ್ಟಿದ್ದರು. ಮತ್ತೂ ತಡ ರಾತ್ರಿ ಹೊರಡಲಿದ್ದ ಹೌರಾ ಎಕ್ಸ್‍ಪ್ರೆಸ್ಸಿಗೆ ತುಂಬುವ ಭರವಸೆಯನ್ನೂ ಕೊಟ್ಟುಬಿಟ್ಟರು. 

ರೈಲು ಸಕಾಲಕ್ಕೆ ತಲಪುತ್ತದೆ ಎಂಬ ಅಂದಾಜಿನಲ್ಲಿ, ‘ಅರ್ಧ ದಿನ ಮದ್ರಾಸ್ ದರ್ಶನ’ ಎಂದೇ ಬರೆದುಕೊಂಡಿದ್ದ ನನ್ನ ಟಿಪ್ಪಣಿಯ ಮೇಲೊಂದು ಅಡ್ಡ ಗೀಟು ಹಾಕಿದೆ. ರೈಲ್ವೇ ನಿಲ್ದಾಣದ ಹೊರವಲಯದ ಸಣ್ಣ ಹೋಟೆಲಿನಲ್ಲೊಂದು ಕೋಣೆ ಹಿಡಿದೆವು. ಸ್ನಾನೇತ್ಯಾದಿ ಮುಗಿಸಿ, ಮಂಚವೋ ನೆಲವೋ ಎಂದು ಯೋಚಿಸದೇ ಧಾರಾಳ ನಿದ್ರೆ ತೆಗೆದೆವು. ತಮಿಳು ನಾಡಿನ ಹೋಟೆಲ್ ಸಂಸ್ಕೃತಿ ತಿಂಡಿ ಊಟಗಳಲ್ಲಿ ಯಾವತ್ತೂ ಸಮೃದ್ಧಿ ಮತ್ತು ಧಾರಾಳಿ. ಹಾಗೆ ಹೊತ್ತು ಹೊತ್ತಿಗೆ ಒಳ್ಳೇ ತಿಂಡಿ, ಊಟವನ್ನೂ ಮುಗಿಸಿ ಮುಂದಿನ ಎರಡು ರಾತ್ರಿ ಒಂದು ಹಗಲಿನ ಪಯಣಕ್ಕೆ ಪುನಶ್ಚೇತನರಾದೆವು. ಎಂಟೂವರೆ ಗಂಟೆಯ ಸುಮಾರಿಗೆ ಮತ್ತೆ ರೈಲ್ವೇ ನಿಲ್ದಾಣಕ್ಕೆ ನಡೆದೆವು. 

ಮದ್ರಾಸ್ ನಿಲ್ದಾಣದಲ್ಲಿ ರಾತ್ರಿ ರೈಲ್ವೇ ಸಂಚಲನ ಹೆಚ್ಚಿದ್ದಿರಬೇಕು. ಜನ ಸಂದಣಿ ವಿಪರೀತ. ಆ ನೂಕುನುಗ್ಗಲಿನಲ್ಲಿ ಹೊರೆ ಹೊತ್ತ ನಾವು ಪರಸ್ಪರ ಕಣ್ಣಳತೆ ತಪ್ಪಿಹೋಗದ ಎಚ್ಚರವಹಿಸಿಕೊಂಡಿದ್ದೆವು. ಅಂಥಲ್ಲಿ ಒಬ್ಬ ಯುವಕ ಒಮ್ಮೆಗೆ ನನ್ನನ್ನು ಅಡ್ಡಗಟ್ಟಿ, ಅಂಗೈಯಲ್ಲೇನೋ ತೋರಿಸಿ (ಅವನ ಗುರುತಿನ ಬಿಲ್ಲೆಯೆಂದು ಆಮೇಲೆ ಅಂದಾಜಿಸಿದೆ) "ಪೋಲಿಸ್" ಎಂದು ಉಸುರಿ ಜನಪ್ರವಾಹದ ಅಂಚಿಗೆ ಸರಿಯುವಂತೆ ಕೈ ತೋರಿದ. ನಾವು ಮೂಲತಃ ಬೈಕ್ ಯಾನಕ್ಕೆ ಸಜ್ಜುಗೊಂಡವರಾದ್ದರಿಂದ ದಿರಿಸು ಮತ್ತು ಹೊರೆ ಸಾಂಪ್ರದಾಯಿಕ ಪ್ರಯಾಣಿಕರದ್ದಂತಿರಲಿಲ್ಲ. ಮತ್ತದು ಎಲ್ಟಿಟಿಯಿಗಳ ಉಚ್ಛ್ರಾಯದ ಕಾಲ. ಏನೇ ಇರಲಿ, ನಾನು ಬದಿಗೆ ಸರಿದು ನಿಂತೆ. ಆತ ಇಂಗ್ಲಿಷಿನಲ್ಲೇ ಹೆಸರು, ಊರು, ಪ್ರಯಾಣದ ಉದ್ದೇಶ ಇತ್ಯಾದಿ ಕೇಳಿದ. ನಮಗೆ ಅಡಗಿಸಿಡುವಂತದ್ದೇನೂ ಇರಲಿಲ್ಲವಾದ್ದರಿಂದ, ಹೇಳಿದೆ. ಆತ ಒಮ್ಮೆಲೆ ಕನ್ನಡದಲ್ಲೇ "ಅಂದ್ರೆ ಕನ್ನಡ ಬರುತ್ತಾ?" ಕೇಳಿದ. ನಾನು ಹಗುರವಾಗಿ "ಧಾರಾಳವಾಗಿ, ಯಾಕೆ ನಾನು ಎಲ್ಟೀಟಿಯೀ ತರಾ ಕಾಣ್ತೀನಾ?" ಎಂದು ಸಣ್ಣ ನಗೆಚಾಟಿಕೆ ಬಿಟ್ಟೆ. ಜೊತೆಗೆ ನಮ್ಮ ಪ್ರವಾಸದ ವಿವರ ತೋರಿಸಲು ನಕ್ಷೆ ತೆಗೆಯ ಹೊರಟೆ. ಆತನೂ ಸಣ್ಣದಾಗಿ ನಕ್ಕು, ಮುಖ ಉಳಿಸಿಕೊಳ್ಳುವವನಂತೆ "ಇಲ್ಲ ಇಲ್ಲ, ಏನೂ ಬೇಡ ಬಿಡಿ. ಉಡುಪಿ ಬ್ರಹ್ಮಾವರದ ಕಡೆಯಿಂದ ಖೋಟಾನೋಟಿಗರು ಬರುವ ಗುಮಾನಿಯಿದೆ. ಅಷ್ಟಕ್ಕೇ..." ಎಂದು ತೊದಲಿ, ನನ್ನನ್ನು ಹೋಗ ಹೇಳಿದ ಮತ್ತು ಆತ ಸಂದಣಿಯಲ್ಲಿ ಕರಗಿಹೋದ! ಹುಲ್ಲ ಮೆದೆಯಲ್ಲಿ ಸೂಜಿ ಹುಡುಕುವ ಅವನ ಕಷ್ಟಕ್ಕೆ ನಾನು ಕನಿಕರಪಡುತ್ತ ಕಾದಿದ್ದ ಮೂವರೊಡನೆ ನಮ್ಮ ರೈಲಿನ ತಂಗುಕಟ್ಟೆ ಸೇರಿಕೊಂಡೆ. 

ಪ್ರತಿ ಹತ್ತು ಮಿನಿಟಿಗೊಂದೊಂದರಂತೆ ನಿಲ್ದಾಣದ ವಿವಿಧ ತಂಗುಕಟ್ಟೆಗಳಿಂದ ದೇಶದ ದಶ ದಿಕ್ಕುಗಳಿಗೆ ರೈಲುಗಳು ಹೊರಡುವ ಘೋಷಣೆಗಳು ಕೇಳುತ್ತಲೇ ಇತ್ತು. ನಾವು ತುಸು ಬೇಗವೇ ಹೋಗಿದ್ದೆವು. ನಮ್ಮ ‘ಹೌರಾ’ ಗಾಡಿ ಬರಬೇಕಿದ್ದಲ್ಲಿ ಇನ್ನೂ ‘ಕನ್ಯಾಕುಮಾರಿ’ ತಂಗಿದ್ದಳು. ಆದರೆ ಸ್ವಲ್ಪ ಆಚೆ ಹೌರಾ ಬ್ರೇಕ್ ವ್ಯಾನ್ ತುಂಬಲಿದ್ದ ಒಂದಷ್ಟು ಹೊರೆಗಳ ಜತೆ ನಮ್ಮೆರಡು ಬೈಕು ನಿಂತಿರುವುದು ಕಂಡು ಸಮಾಧಾನವಾಯ್ತು. ಪೋಲಿಸರ ಪಾಳಿ ಬದಲಿದ್ದರಿಂದ ಅದನ್ನಿಳಿಸಿದ ಮಂದಿ ಅಲ್ಲಿರಲಿಲ್ಲ. ಏರಿಸುವ ಮಂದಿಗೆ ನಮ್ಮ ಗುರುತಿರಲಿಲ್ಲವಾದ್ದರಿಂದ ನಾವು ಅಜ್ಞಾತರಾಗಿಯೇ ಉಳಿದೆವು. ಸಕಾಲಕ್ಕೆ ಕನ್ಯಾಕುಮಾರಿ ಹೋಗಿ ಹೌರಾ ಬಂದಾಗ, ಅವೆಲ್ಲ ಸುಕ್ಷೇಮವಾಗಿ ಡಬ್ಬಿ ಸೇರಿದ್ದನ್ನು ಖಾತ್ರಿಪಡಿಸಿಕೊಂಡೇ ನಾವು ನಮ್ಮ ಕಾಯ್ದಿರಿಸಿದ ಜಾಗ ಸೇರಿಕೊಂಡೆವು. ಹತ್ತೂವರೆಯ ಸುಮಾರಿಗೆ ಹೊಸದೇ ಶ್ರುತಿ ಮತ್ತು ಲಯವಿನ್ಯಾಸದಲ್ಲಿ ರೈಲು ನಮ್ಮನ್ನು ಸೇರಿಸಿಕೊಂಡು ಹೌರಾದತ್ತ ಹೊರಟಿತು. 

ಮದ್ರಾಸ್ ಮೇಲಿನಲ್ಲಿ ನಾವು ನಾಲ್ಕೂ ಮಂದಿ ಆರು ಮಂದಿಗಳ ಒಂದೇ ಅಂಕಣದೊಳಗೇ ಸ್ಥಾನ ಪಡೆದಿದ್ದೆವು. ಆದರಿಲ್ಲಿ ಮೂರು ಸ್ಥಾನ ಅಂಕಣದೊಳಗೂ ಒಂದು ಓಣಿಯಾಚೆಗೂ ಇತ್ತು. ಆಚಿನದ್ದನ್ನು ಕಿಶೋರ್ ಆಯ್ದುಕೊಂಡರು. ನಮ್ಮಂಕಣದ ಉಳಿದ ಮೂರು ಸೀಟನ್ನು ಮೂರು ಮಹಿಳಾಮಣಿಗಳು (ಮಗಳು, ಚಿಕ್ಕಮ್ಮ ಮತ್ತು ಅಜ್ಜಿಯಂತೆ) ಅಲಂಕರಿಸಿದ್ದರು. ಅವರು ಪಕ್ಕದ ಅಂಕಣದಲ್ಲಿದ್ದ ದೊಡ್ಡ ತಮಿಳು ಸಂಸಾರವೊಂದರ ಸದಸ್ಯರು. ಆ ಕುಟುಂಬ ಪ್ರಯಾಣದುದ್ದಕ್ಕೆ ಹೊತ್ತು ಹೊತ್ತಿಗೆ ಒದಗುವಂತೆ ಇಡ್ಲಿ, ಚಟ್ನಿ, ಪುಳಿಯೋಗರೆ, ಚಿಪ್ಸು, ಜ್ಯೂಸು ಎಂದೇನೆಲ್ಲ ಅಡುಗೆ, ಅವಕ್ಕೆಲ್ಲ ಹೊಂದುವಂತ ಪಾತ್ರೆ ಪರಡಿಗಳನ್ನೆಲ್ಲ ಒತ್ತರೆಯಾಗಿ ಜೋಡಿಸಿಟ್ಟುಕೊಂಡಿತ್ತು. ಅದರ ನಿರ್ವಹಣಾ ಹೊಣೆ ಈ ತ್ರಿಮೂರ್ತಿಗಳದು. ಚಿಕ್ಕಮ್ಮ ಕ್ರಿಯಾಬಿಂದು, ಎಂಎಸ್ಸಿ ವಿದ್ಯಾರ್ಥಿನಿಯಾದ ಮಗಳು ಸಹಾಯಕಿ, ಅಜ್ಜಿ ಮೇಲ್ವಿಚಾರಕಿ. ಅವರು ಅವನ್ನು ಕಾಲಕಾಲಕ್ಕೆ ಸಮರ್ಥವಾಗಿ ಕುಟುಂಬದ ಎಲ್ಲರಿಗೆ ವಿತರಣೆ ನಡೆಸಿದ ಚಂದ, ನಮಗೆ ಪ್ರಯಾಣದುದ್ದಕ್ಕೆ ರಂಜನೀಯ ಪ್ರದರ್ಶನವೇ ಆಗಿ ಒದಗಿತ್ತು. 

ಕಿಶೋರ್ ಎದುರಿನ ಸೀಟಿನಲ್ಲಿ ಓರ್ವ ಪ್ರಾಯಸಂದ ಮಹಿಳೆಯಿದ್ದರು. ರಾತ್ರಿಯಲ್ಲಿ ಆಕೆಗೆ ಎರಡೂ ಸೀಟುಗಳನ್ನು ಜೋಡಿಸುವ ಹಲಗೆ ಬಿಡಿಸಿದ ‘ಮಂಚ’ ಹಕ್ಕಿನದೇ ಇತ್ತು, ಮಲಗಿದ್ದರು. ಕಿಶೋರ್ ತನ್ನ ಹಕ್ಕಿನ ಮೇಲಿನ ಅಟ್ಟಳಿಗೆಯಲ್ಲಿ ಮಲಗಿದ್ದರು. ಆದರೆ ಬೆಳಕು ಹರಿದ ಮೇಲೂ (೧೬-೪-೯೬) ಆಕೆ ಹಲಗೆಯನ್ನು ಮಡಚದೆ, ಕಾಲು ಚಾಚಿಯೇ ಕುಳಿತುಕೊಂಡಳು. ಕಿಶೋರ್ ಆಕೆಯ ಪ್ರಾಯವನ್ನು ಗೌರವಿಸಿ ಸ್ವಲ್ಪ ಹೊತ್ತು ನಮ್ಮ ಜೊತೆ ಕುಳಿತು ಮಾತು ಕೊಚ್ಚಿದರು. ಕೆಲ ಸಮಯ ಬಾಗಿಲ ಬಳಿ ನಿಂತು, ಅಲ್ಲೇ ಕೂತು ಬೀಸುಗಾಳಿಗೆ ಮನ ಕೊಟ್ಟರು. ರೈಲು ನಿಂತಲ್ಲೆಲ್ಲ ಸ್ಟೇಶನ್ ಉದ್ದಗಲಕ್ಕೆ ದಮ್ಮಾಸ್ ಹಾಕಿ, ಚಾ ಹೀರಿದ್ದೆಲ್ಲ ಆಯ್ತು. ಕೊನೆಯಲ್ಲಿ ಅಳತೆಗೆ ಸಿಗದ ಸಮಯಕ್ಕೆ ಸೋತು, ಪುನಃ ಅಟ್ಟಳಿಗೆಗೇರಿ ನಿದ್ರೆಗೆ ಶರಣಾದರು. ಮಧ್ಯಾಹ್ನದೂಟ, ಸಂಜೆಯ ಚಾ ಎಂದು ಒಂದೆರಡು ಗಳಿಗೆ ಕೆಳಗಿಳಿದು ಹೀಗೇ ಠಳಾಯಿಸಿದದ್ದಿತ್ತು. ಉಳಿದಂತೆ, ಅಂಗುಲಂಗುಲ ತೆವಳುವ ಹುಳು ಜಗದಗಲ ಸುತ್ತುವ ಚೇತನವನ್ನು ಕೋಶಾವಸ್ಥೆಯಲ್ಲಿ ಕ್ರೋಢೀಕರಿಸುವಂತೆ, ನಮ್ಮ ಭಾರತಯಾನಕ್ಕೆ ಕಿಶೋರ್‍ ದೀರ್ಘ ನಿದ್ರೆ ತೆಗೆದು ಶಕ್ತಿ ಸಂಚಯಿಸಿದರೋ ಏನೋ! 

ರೈಲಿನಲ್ಲಿ ಊಟ ಕಾಫಿಗಳ ಪರಂಪರೆ ತುಂಬ ದೊಡ್ಡದೇ ಇದೆ. ನಿಲ್ದಾಣಗಳಲ್ಲಿ ಸಿಗುವ ಕ್ಯಾಂಟೀನು, ಕೈಗಾಡಿ, ರೈಲೋಡುತ್ತಿದ್ದಂತೆಯೂ ನಮ್ಮ ನಡುವೆಯೇ ಓಡಾಡಿ ಬರುವ ಕೈ ಹೊರೆಯವರದೆಲ್ಲ ಒಂದು ಬಗೆ. ಊಟ ತಿಂಡಿಗಳದೇ ಡಬ್ಬಿಯನ್ನು (ಪ್ಯಾಂಟ್ರಿ ಕಾರ್) ಜೋಡಿಸಿ ಅಲ್ಲೇ ಹೋಗಿ ಬೇಕಾದ್ದನ್ನು ಕೇಳಿ ತಿನ್ನುವ ಅಥವಾ ಕಾಲಕಾಲಕ್ಕೆ ಅಲ್ಲಿಂದಲೇ ನಾವು ಕುಳಿತಲ್ಲಿಗೆ ಬಿಸಿಯಾದ್ದನ್ನೇ ತರಿಸಿಕೊಳ್ಳುವ ಪರಿ ಇನ್ನೊಂದು. ಕೊನೆಯದು, ಈ ಬುಕ್ಕಿಂಗ್ ಏಜಂಟ್ರದು. ಹೌರಾ ಎಕ್ಸ್‍ಪ್ರೆಸ್ಸಿನಲ್ಲಿ ಪ್ಯಾಂಟ್ರೀ ಕಾರ್ ಇರಲಿಲ್ಲ. ಅನಿಶ್ಚಿತ ಕೈಗಾಡಿ ಮಾರಾಟದವರನ್ನು ನೆಚ್ಚುವುದೂ ನಮಗೆ ಸರಿ ಕಾಣಲಿಲ್ಲ. ಮದ್ರಾಸ್ ಮೇಲ್‍ನಲ್ಲಿ ಬುಕ್ಕಿಂಗ್ ಊಟ ತಿರಸ್ಕರಿಸಿ ಪಟ್ಟಪಾಡು ಹೊಸದಾಗಿಯೇ ಇದ್ದುದರಿಂದ ಇಲ್ಲಿ ಬೆಳಗ್ಗಿನ ತಿಂಡಿ ಮತ್ತು ಎರಡು ಊಟವನ್ನು ಅವರಿಂದಲೇ ಪಡೆದು ತೃಪ್ತರಾದೆವು. 

ಹಿಂದೆಲ್ಲ ಮುತ್ತುಗದೆಲೆ ಚೂರಿನಲ್ಲಿ ತಿನಿಸು, ಮಣ್ಣಿನ ಕುಡಿಕೆಗಳಲ್ಲಿ ತೀರ್ಥ ಸಿಗುತ್ತಿತ್ತು. ಹಾಗೆ ಬಳಸಿದವನ್ನು ಕಿಟಕಿಯಿಂದ ಹೊರಗೀಡಾಡುವುದು ತಪ್ಪೆಂಬ ಭಾವ, ಆ ಕಾಲಕ್ಕೆ ಅಷ್ಟಾಗಿ ಕಾಡುತ್ತಿರಲಿಲ್ಲ. ಆ ದಿನಗಳಲ್ಲಿ ಬುಕಿಂಗ್ ಏಜಂಟರ ತಿನಿಸಿನ ಬಟವಾಡೆಯ ಕ್ರಮ ವಿಶಿಷ್ಟವಾಗಿತ್ತು. ಏಜಂಟರು ಬಂದು ಕಾಯ್ದಿರಿಸುವಿಕೆ ಮೂರು ನಾಲ್ಕು ಗಂಟೆ ಮೊದಲೇ ನಡೆಯುತ್ತಿತ್ತು. ಮತ್ತೆ ಆ ಒಟ್ಟು ಅಗತ್ಯದ ವಿವರಗಳು (ಸಸ್ಯಾಹಾರಿ, ಮಾಂಸಾಹಾರಿ ಸಂಕಿಗಳು) ಬಹುಶಃ ದೂರವಾಣಿಯಲ್ಲಿ (ಆಗ ಇನ್ನೂ ಚರವಾಣಿ ಜನಪ್ರಿಯವಾಗಿರಲಿಲ್ಲ) ಮುಂದೆಲ್ಲೋ ಸಿಗುವ ಊಟ ತಯಾರಿಯ ನಿಲ್ದಾಣಕ್ಕೆ ರವಾನೆಯಾಗುತ್ತಿದ್ದಿರಬೇಕು. ಹಾಗೆ ನಿಗದಿಯಾದ ನಿಲ್ದಾಣಕ್ಕೆ ನಮ್ಮ ರೈಲು ಮುಟ್ಟುವಾಗ, ಮಿತ ಸಮಯದಲ್ಲೇ ಊಟ ಬಡಿಸಿದ ಸ್ಟೀಲ್ ಬಟ್ಟಲುಗಳ ಅಟ್ಟಿ ಗಾಡಿಯ ವಿವಿಧ ಓಣಿಗಳನ್ನು ಸೇರಿಕೊಳ್ಳುತ್ತವೆ. ತಟ್ಟೆಗಳೊಂದಿಗೇ ಏರಿದ ಯುವಕರು (ಬೇಕಾದರೆ ‘ಮಾಣಿಗಳು’ ಅನ್ನಿ) ಮುಂದೆ ಅರ್ಧ ಒಂದು ಗಂಟೆಯೊಳಗೇ ಅವನ್ನು ಸಮರ್ಥವಾಗಿ ಬಟವಾಡೆ ಮಾಡುವ ಚಂದ ನೋಡಿಯೇ ಅನುಭವಿಸಬೇಕು. ಆ ಕಾಲದಲ್ಲಿ ಹೆಚ್ಚಿನ ರೈಲುಗಳಲ್ಲಿ ಡಬ್ಬಿಯಿಂದ ಡಬ್ಬಿಗೆ ಸಂಪರ್ಕ ಸೇತು ಇರುತ್ತಿರಲಿಲ್ಲ. ಈ ಮಾಣಿಗಳು ಒಂದು ಕೈಯಲ್ಲಿ ಆರೆಂಟು ಊಟ ತುಂಬಿದ ತಟ್ಟೆಗಳ ಅಟ್ಟಿ ಎತ್ತಿ ಹಿಡಿದು, ಓಡುತ್ತಿರುವ ರೈಲಿನ ಹೊರ ವಲಯದಲ್ಲಿ ಡಬ್ಬಿಯಿಂದ ಡಬ್ಬಿಗೆ ಹೆಚ್ಚುಕಮ್ಮಿ ಸಂಜೀವಿನ ಹೊತ್ತ ಆಂಜನೇಯನಂತೇ ಹಾರಿ ಬರುತ್ತಿದ್ದರು! 

೧೯೯೬ರ ಹೌರಾ ಮೇಲ್ ಕಾಲಕ್ಕಾಗುವಾಗ ಅವೆಲ್ಲ ಕಳಚಿ ಹೋಗಿತ್ತು. ಹೌರಾ ಮೇಲ್ ಉದ್ದಕ್ಕೂ ನಮಗೆ ಊಟ ತಿಂಡಿಗಳೆಲ್ಲವೂ ಬಿಸಿಬಿಸಿಯಾಗಿ ಅಲ್ಯೂಮಿನಿಯಮ್ ಹಾಳೆ ಹಾಗೂ ಪ್ಲ್ಯಾಸ್ಟಿಕ್ ಪ್ಯಾಕುಗಳಲ್ಲಿ ಸೀಲಾಗಿ, ಸಕಾಲಕ್ಕೆ ಒದಗುತ್ತಿದ್ದವು. ಒಟ್ಟಾರೆಯಲ್ಲಿ ಹದಿನಾರರ ದಿನವನ್ನು ನಾವು ಕಾಲಕಾಲಕ್ಕೆ ಒದಗುತ್ತಿದ್ದ ಆಹಾರೋಪಚಾರಗಳಿಂದಾಗಿ, ಯಾವ ಗಡಿಬಿಡಿಯಿಲ್ಲದೇ ಊರುಗಳ ಪಟ್ಟಿ ಮಾಡುವಲ್ಲಿ, ಜಗನ್ನಾಟಕಗಳ (ಎದುರು ಬೆಂಚಿನ ತಮಿಳು ಕುಟುಂಬದ್ದೂ ಸೇರಿದಂತೆ) ಲೋಲುಪತೆಯಲ್ಲಿ, ನಡುನಡುವೆ ತೂಕಡಿಸುತ್ತಾ ಕಳೆದೆವು. ಎರಡನೇ ರಾತ್ರಿಯನ್ನಂತೂ ಹೆಚ್ಚು ನಿಶ್ಚಿಂತೆಯ ನಿದ್ರೆಯಲ್ಲೇ ಸವಿದೆವು. 

ಈಗ ಸ್ವಲ್ಪ ಹಿಂದೆ, ಅಂದರೆ ಮದ್ರಾಸಿನಿಂದ ಹೊರಟ ರಾತ್ರಿಗೇ ಬನ್ನಿ. ರೈಲು ರಾತ್ರಿಯುದ್ದಕ್ಕೆ ಬೆಳಗಿದ ದಾರಿಯನ್ನು ನಾವು ಕಾಣಲಿಲ್ಲ. ಆದರೆ ಯಾವುದೋ ಹಂತದಲ್ಲಿ ಅದು ಬಹು ಕಹಳೆ ನಾದದೊಡನೆ ಮಂದಗಮನವಾಗುತ್ತ, ಕಂಬಿ ಹಾಯುವ ಕೀಚಲು ಮತ್ತು ಕುಲುಕಾಟ ಹೆಚ್ಚೇ ಅನ್ನಿಸುತ್ತ ನಿಂತಾಗ ಮೂಡಣ ಮನೆ ಕೆಂಪಾಗಿತ್ತು (೧೬-೪-೯೬), ಬಂದದ್ದು ಭಾರತದ ಹೆಸರಾಂತ ರೈಲ್ವೇ ಸಂಗಮಗಳಲ್ಲಿ ಒಂದಾದ ವಿಜಯವಾಡಾ. ಆದರೆ ಅದರ ಹೊಗಳುಭಟರ ದಂಡೇ ಘೋಷಿಸುತ್ತಿದ್ದಂತೆ ನಿಲ್ದಾಣವಿಡೀ ಅನುರಣಿಸಿತ್ತು "ಇಡ್ಲಿ ವಡಾ..ಇಡ್ಲಿ ವಡಾಆ.." 

ವಿಜಯವಾಡಾದಿಂದ ನಮ್ಮ ವೀಕ್ಷಣಾ ನೋಟ ಹೆಚ್ಚು ಚೂಪಾಯಿತು ಎನ್ನಬೇಕು. ಯಾಕೆಂದರೆ, ಮುಂದಿನ ಕೆಲವೇ ದಿನಗಳಲ್ಲಿ ನಾವು ಇದೇ ವಲಯಗಳಲ್ಲಿ ವಿರುದ್ಧ ದಿಕ್ಕಿನಿಂದ ಬೈಕ್ ಸವಾರಿಯಲ್ಲಿ ಬರಲಿದ್ದೆವು! ರೈಲು ದಾರಿ ಮಾಮೂಲೀ ಮಾರ್ಗಕ್ರಮಣದಲ್ಲಿ ಸಿಗದ ಕೆಲವು ವೈಶಿಷ್ಟ್ಯಗಳ ದರ್ಶನವನ್ನೇನೋ ಮಾಡಿಸುತ್ತದೆ. ಉದಾಹರಣೆಗೆ ಕರಾವಳಿಯೋಟದಲ್ಲಿ ಅವು ನೇರಾನೇರ ಬೆಟ್ಟಗುಡ್ಡಗಳನ್ನು ಸೀಳಿ ಸಾಗುತ್ತವೆ, ಅಸಾಧ್ಯ ಎಂದಾಗ ಅವುಗಳ ಹೊಟ್ಟೆಗೇ ಹೊಕ್ಕು ಹೊರಡುತ್ತವೆ. ಅನಿವಾರ್ಯ ಎನ್ನುವಂತೆ ಜವುಗುಪ್ರದೇಶಗಳ ಮೇಲೆ ಎತ್ತರಿಸಿದ ದಿಬ್ಬಗಳ ಮೇಲಿನೋಟ. ಕೆಲವೊಮ್ಮೆ ಬಡಕಲು ತೊರೆಗೂ ಮಹಾನದಿಯ ಮಹತ್ವ ಕೊಡುವ ಸೇತುವೇ ಮೊದಲಾದ ಅದ್ಭುತಗಳು ಅನ್ಯತ್ರ ಸುಲಭ ಲಭ್ಯವಲ್ಲ. ಆದರೆ ಹಳಿಯ ಮಿತಿಯಲ್ಲಿ, ಋತುಮಾನಗಳ ಅಲ್ಪ ವೈವಿಧ್ಯದಲ್ಲಿ ಈ ನೋಟಗಳು ಸದಾ ಒಂದೇ. ಇನ್ನೂ ಹೆಚ್ಚಿಗೆ ಸಾಧಾರಣೀಕರಿಸುವುದಾದರೆ ಭೌಗೋಳಿಕವಾಗಿ ರೈಲ್ವೇ ಭಾರತದಲ್ಲಿ ಎಲ್ಲಿದ್ದರೂ ಅದು ಕಟ್ಟುವ ಜೈವಿಕ ಪರಿಸರ ಬಹುತೇಕ ಒಂದೇ! ಇತರ ವಾಹನ ದಾರಿಗಳು ತೆರೆದಿಡುವ - ದೃಶ್ಯ, ಸೇವ್ಯ, ವಿರಾಮವೇ ಮೊದಲಾದ ಅವಕಾಶಗಳಲ್ಲಿನ ವೈವಿಧ್ಯ ಅನಂತ. ಹಾಗಾಗಿ ರೈಲ್ವೇ ಪ್ರವಾಸದ ಕಥನಗಳು ಅದರ ಸಾಮಾಜಿಕ ಸ್ಪಂದನದಲ್ಲೇ ಹೆಚ್ಚು ಸ್ವಾರಸ್ಯವನ್ನು (ಅದರಲ್ಲೂ ಹಾಸ್ಯ!) ಕಂಡುಕೊಳ್ಳುತ್ತವೆ. ಮಾರ್ಗಕ್ರಮಣ ಅದರಲ್ಲೂ ಸ್ವಂತ ವ್ಯವಸ್ಥೆಯ ವಾಹನ ಮತ್ತದೂ ಸರಳವಿದ್ದಷ್ಟು ತೆರೆದುಕೊಳ್ಳುವ ದೃಶ್ಯ ವೈವಿಧ್ಯ ಮತ್ತು ಅನುಭವದ ಅವಕಾಶಗಳು ಅನಂತ. ಸಣ್ಣ ಉದಾಹರಣೆಯಾಗಿ ನಮ್ಮ ಶಿರಾಡಿ ಘಾಟಿಯನ್ನೇ ನೋಡಿ: ನೀವು ಎಷ್ಟು ಸಾವಿರ ಸಲ ಸಕಲೇಶಪುರ (ದೋಣಿಬಾಗಿಲು) - ಗುಂಡ್ಯ (ಶ್ರೀವಾಗಿಲು) ನಡುವೆ ರೈಲಿನಲ್ಲಿ ಓಡಾಡಿದರೂ (ಆಕಸ್ಮಿಕಗಳನ್ನು ಹೊರತುಪಡಿಸಿ) ಅದೇ ಓಟ, ಅದೇ ನೋಟ, ಅದೇ ನಿಲುಗಡೆ, ಅದೇ ಆಹಾರ. ಆದರೆ ದಾರಿಯಲ್ಲಾದರೆ ಹತ್ತೆಂಟು ಝರಿ ಜಲಪಾತಗಳನ್ನು ಅನುಭವಿಸಬಹುದು, ನೂರೆಂಟು ವಿಭಿನ್ನ ಚೌಕಟ್ಟುಗಳಿಗೆ ದೃಶ್ಯಗಳನ್ನು ಅಳವಡಿಸಬಹುದು, ಸಾವಿರಾರು ಆಹಾರ ಸಾಧ್ಯತೆಗಳನ್ನು ಶೋಧಿಸಬಹುದು, ವೈವಿಧ್ಯಮಯ ವಾಹನಗಳಿಂದ ಹಿಡಿದು ಚಾರಣದವರೆಗೆ ಎಷ್ಟೂ ಆಸಕ್ತಿಯ ಕವಲುಗಳನ್ನು ಪೋಷಿಸಬಹುದು. ಈ ಎಲ್ಲ ಕಾರಣಕ್ಕೇ ನಾವು ಭಾರತ ಓಟಕ್ಕೆ ಬೈಕುಗಳನ್ನು ಆಯ್ದುಕೊಂಡಿದ್ದೆವು ಎನ್ನುವುದನ್ನು ಪ್ರತ್ಯೇಕ ಹೇಳಬೇಕೇ! 

ವಿಶಾಖಪಟ್ಟಣ ಕಳೆದ ಮೇಲೆಲ್ಲೋ ರಾತ್ರಿಯ ಮುಸುಕಿನಲ್ಲಿ, ನಮ್ಮರಿವಿಗೇ ಬಾರದೆ ರೈಲು ಯಾವುದೋ (ನಮ್ಮ ಮಂಗಳೂರಿನಂತ) ಏಕಮುಖ ಸಂಚಾರದ ನಿಲ್ದಾಣಕ್ಕೆ ಹೊಕ್ಕು ಹೊರಟಿರಬೇಕು. ಅಂದರೆ ಅದುವರೆಗೆ ನಾವು ರೈಲಿನ ಮುಂಭಾಗ ಎಂದುಕೊಂಡಲ್ಲಿಂದ ಎಂಜಿನ್ನನ್ನು ಕಳಚಿ, ಹಿಂಭಾಗ ಎಂದುಕೊಂಡಲ್ಲಿಗೆ ಜೋಡಿಸಿ, ಎಳೆಸಿದ್ದರು. ನಿಜದಲ್ಲಿ ರೈಲ್ವೇ ಡಬ್ಬಿಗಳಿಗೆ ಹಿಂದು ಮುಂದಿನ ಬೇಧವೇನೂ ಇಲ್ಲ. ಆದರೆ ಒಳಗೆ ಕುಳಿತ ನಮಗೆ ಅಷ್ಟರಲ್ಲಿ ರೂಢಿಸಿದ್ದ ಚಲನ ಪ್ರಜ್ಞೆ ಹಿಂದು ಮುಂದಾಗಿ ಹೋಯ್ತು. ನಮ್ಮೂವರ ಬಲ ಮಗ್ಗುಲಿಗೇ ‘ಹಿಂದೋಡುತ್ತಿದ್ದ ಕರಾವಳಿ’ ಸ್ಪಷ್ಟವಾಗಿ ಮಗ್ಗುಲು ಬದಲಿಸಿ ‘ಮುಂದೋಡಿದಂಥ’ ಅನುಭವವನ್ನು ರಾತ್ರಿಯುದ್ದಕ್ಕೂ ಕಳಚಿಕೊಳ್ಳುವುದು ಕಷ್ಟವಾಯ್ತು. ಬುದ್ಧಿಪೂರ್ವಕವಾಗಿ ನಾವು ಚೆನ್ನೈಗೆ ಮರಳುತ್ತಿಲ್ಲ ಎಂದು ಸಮಾಧಾನಿಸಿಕೊಂಡರೂ ಹೊಸ ಬೆಳಿಗ್ಗೆಯ (೧೭-೪-೧೯೯೬) ಆರು ಗಂಟೆಗೆ ಸರಿಯಾಗಿ ಹೌರಾ ನಿಲ್ದಾಣದ ಬೋರ್ಡು ಕಾಣುವವರೆಗೂ ಭಾವ ಸಂತೃಪ್ತಿ ಸಿಕ್ಕಿರಲಿಲ್ಲ. 


ಹೌರಾ ನಿಲ್ದಾಣ ಬಹಳ ದೊಡ್ಡದು. ಅದರ ೨೨ನೇ ತಂಗುಕಟ್ಟೆಯಲ್ಲಿ ನಮ್ಮ ಗಾಡಿ ನಿಂತಿತ್ತು. ನಾವು ಚುರುಕಾಗಿಯೇ ಇಳಿದು, ಹೊರೆಯನ್ನೆಲ್ಲ ಬ್ರೇಕ್ ವ್ಯಾನ್ ಸಮೀಪಕ್ಕೇ ಒಯ್ದಿಟ್ಟು, ಕೂಲಿಗಳು ಬೈಕ್ ಇಳಿಸುವುದನ್ನು ಕಾದೆವು. ಕೂಲಿಗಳು ಹೂವಿನ ಮೂಟೆಗಳಿಂದ ಹಿಡಿದು ತರಹೇವಾರಿ ಹೊರೆಗಳನ್ನೆಲ್ಲ ಇಳಿಸುತ್ತಾ ಇದ್ದರು. ಹಾಗೇ ಬಾಗಿಲ ಮಗ್ಗುಲಿನಲ್ಲೇ ತಳದಲ್ಲಿದ್ದ ನಮ್ಮ ಬೈಕುಗಳೇನೋ ಬೇಗನೇ ಹೊರ ಬಂದವು. ಸಾಗಣಾ ಪಟ್ಟಿ ತನಿಖೆ ಮಾಡಿಕೊಳ್ಳುತ್ತ ಹೊರೆ ಇಳಿಸಿಕೊಳ್ಳುತ್ತಿದ್ದ ಅಧಿಕಾರಿಗೆ ನಾವು ಗುರುತಿನ ರಸೀದಿ ತೋರಿಸಿ ಬೈಕ್ ವಶಪಡಿಸಿಕೊಳ್ಳಲು ಮುಂದಾದೆವು. ಆತ ಅದನ್ನು ಪಟ್ಟಿಗೆ ತಾಳೆ ನೋಡಿ, ಅಂಚಿನಲ್ಲಿ ‘recieved' ಎಂದು ಚುಟುಕು ಸಹಿ ಸಹಿತ ಬರೆದು ಕೊಟ್ಟ. ಮತ್ತೆ ೧೯ನೇ ತಂಗುಕಟ್ಟೆಯಲ್ಲಿರುವ ‘Perishables' ಕಚೇರಿಗೆ ಅದನ್ನು ತೋರಿಸಿ, ಗೇಟ್ ಪಾಸ್ ತರಲು ಸೂಚಿಸಿದ. ಆ ಕಚೇರಿ ತರಕಾರಿ, ಹೂ, ಮೀನು ಮುಂತಾದ ತಕ್ಷಣವೇ ವಿಲೇವಾರಿಯಾಗಬೇಕಾದ ಸಾಮನುಗಳಿಗಾಗಿಯೇ ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸುತ್ತಿತ್ತು. 

ಪೆರಿಶಬಲ್ಸ್ ಗುಮಾಸ್ತ ಚೀಟಿಗಿಂತ ಹೆಚ್ಚಿಗೆ ನಮ್ಮನ್ನು ನಖಶಿಖಾಂತ ನೋಡಿ ಬಂಗಾಳಿಯಲ್ಲಿ ಏನೋ ಗೊಣಗಿದ. ನಾನು ಇಂಗ್ಲಿಷ್ ಎಂದು ಸ್ಪಷ್ಟಪಡಿಸಿದ ಮೇಲೆ, ಬೈಕಿನ ಸಿಸಿ (ಸಾಮರ್ಥ್ಯ) ವಿಚಾರಿಸಿದಂತೆ ಮಾಡಿ, "ಬಂಗಾಳದ ಪ್ರವೇಶ ತೆರಿಗೆ ರೂ ೧೪೦೦ ಕೊಡಿ" ಎಂದ. ನಮಗದು ಅನಿರೀಕ್ಷಿತ ಆಘಾತ. ನಾನು ತಾಳ್ಮೆಯಿಂದ "ಇದು ಅಖಿಲ ಭಾರತ ರಸ್ತೆ ಕರ ಪಾವತಿ ಮಾಡಿದ, ನಮ್ಮದೇ ಬೈಕುಗಳು. ಮತ್ತಿವು ಕೇವಲ ಪ್ರವಾಸೀ ಅವಧಿಯಲ್ಲಷ್ಟೇ (ಎಂಟು ಹತ್ತು ದಿನ) ಬಂಗಾಳ ಸುತ್ತಿ ಹೊರ ಹೋಗುತ್ತವೆ. ಬಂಗಾಳದಲ್ಲಿ ಖರೀದಿ-ಮಾರಾಟಕ್ಕೆ ಬಂದ ಮಾಲಲ್ಲ, ನೆಲೆಸುವವೂ ಅಲ್ಲ. ಅವುಗಳ ಸಾಗಣೆ ವೆಚ್ಚ ಮಂಗಳೂರಿನಲ್ಲೇ ಪಾವತಿಸಿದ್ದೇವೆ, ನೀವಿಲ್ಲಿ ರಸೀದಿ ನೋಡಿ ಬಿಡುಗಡೆ ಮಾಡುವುದಕ್ಕಷ್ಟೇ ಅಧಿಕಾರಿ" ಎಂದು ಅವನಿಗೆ ಸ್ವರೂಪಜ್ಞಾನ ಮೂಡಿಸಿದೆ. 

‘ಪೆರಿಶಬಲ್ ಅಧಿಕಾರಿ’ ಹೊಸದೇ ದಾರಿ ಹುಡುಕಿದ. "ನಾವಿಲ್ಲಿ ಪ್ರವೇಶ ತೆರಿಗೆ ರಸೀದಿ ಹಾಕದಿದ್ದರೆ, ನಿಲ್ದಾಣದ ಗೇಟಿನ ಬಳಿಯಿರುವ ವಾಣಿಜ್ಯ ಕರ ಇಲಾಖೆ ತನಿಖೆ ಮಾಡುತ್ತದೆ. ಮತ್ತೆ ಅವರು ನಮಗೆ ದಂಡ ಹಾಕುತ್ತಾರೆ. ಅಷ್ಟು ತುರ್ತು ಇದ್ದರೆ, ನೀವು ಗೇಟಿನಿಂದ ‘ತಕರಾರಿಲ್ಲ’ (ನೋ ಆಬ್ಜೆಕ್ಷನ್) ಪತ್ರ ತನ್ನಿ" ಎಂದು ಬಿಟ್ಟ. ಅಲ್ಲಿಗೂ ಹೋಯ್ತು ನನ್ನ ಸವಾರಿ. ಗೇಟಿನ ವಾಣಿಜ್ಯ ಗುಮಾಸ್ತ ತಾನು ತನಿಖೆಗಷ್ಟೇ ಅಧಿಕಾರಿ. ಕರ ವಿನಾಯ್ತಿ ಬೇಕಿದ್ದರೆ, ಹನ್ನೊಂದು ಗಂಟೆಗೆ ತೆರೆಯುವ ವಾಣಿಜ್ಯ ಕರ ಇಲಾಖೆಯ ಕಚೇರಿಯಲ್ಲಿ, ‘ಬಾಬೂ’ ಭೇಟಿಯಾಗಬೇಕು ಎಂದು ಸೂಚಿಸಿದ. 

ಪ್ರತಿ ಹಂತದಲ್ಲೂ ನಾನು ನಮ್ಮ ಇತರ ಸದಸ್ಯರ ಬಳಿ ಬಂದು ಚರ್ಚೆ ಮಾಡಿ ಮುಂದುವರಿಯುತ್ತಿದ್ದೆ. ಅತ್ತ ಬ್ರೇಕ್ ವ್ಯಾನಿಂದ ಸಾಮಾನುಗಳನ್ನು ಇಳಿಸುತ್ತಿದ್ದ ಕೂಲಿ ಮುಖಂಡ ನನ್ನನ್ನು ಗಮನಿಸುತ್ತಲೇ ಇದ್ದ. ಈಗ ಆತ ನನ್ನನ್ನು ಪಕ್ಕಕ್ಕೆ ಕರೆದು, "ಇಲ್ಲಿ ಲಂಚವಿಲ್ಲದೇ ಏನೂ ನಡೆಯುವುದಿಲ್ಲ. ನನಗೆ ೪೦೦ ರೂಪಾಯಿ ಕೊಟ್ಟರೆ ಸಾಕು, ನಿಲ್ದಾಣದ ಹೊರಗೆ ನಿಮಗೆ ಬೈಕ್ ನಾ ಮುಟ್ಟಿಸುತ್ತೇನೆ" ಎಂದ. ಇಷ್ಟರಲ್ಲಿ ಎರಡು ಗಂಟೆಗಳೇ ಕಳೆದು ಹೋಗಿತ್ತು. ಸಾವಿರ ರೂಪಾಯಿ ಉಳಿಯಿತು ಎಂದು ಉಬ್ಬುವ ಬದಲಿಗೆ ನನ್ನ ಹಠ ಹೆಚ್ಚಿತು. 

ನನಗೆ ಇದ್ದವರಲ್ಲಿ ತಂಗುಕಟ್ಟೆಯ ಗುಮಾಸ್ತ ಹೆಚ್ಚು ಪ್ರಾಮಾಣಿಕನಂತೆ ಕಂಡಿತ್ತು. ಹಾಗಾಗಿ ಮತ್ತೆ ಅವನಲ್ಲೇ ‘ಗೇಟ್ ಪಾಸ್’ ಅವ್ಯವಸ್ಥೆ ಬಗ್ಗೆ ಹೇಳಿ, ಸಲಹೆ ಕೇಳಿದೆ. ನನ್ನ ನಂಬಿಕೆ ಹುಸಿಯಾಗಲಿಲ್ಲ. ಆತ "ಅಂದರೆ ಬಿಡಿ. ಈ ಲಗ್ಗೇಜುಗಳೆಲ್ಲ ಇನ್ನೇನು ಪೂರ್ತಿ ಇಳಿಸಿ ಮುಗಿಯುತ್ತೆ. ಆಮೇಲೆ ಅವು ಮಾಮೂಲಿನಂತೆ ನಮ್ಮ ಡೆಲಿವರಿ ಗೋಡೌನಿಗೆ ಹೋಗುತ್ತವೆ. ಅಲ್ಲಿನ ಗುಮಾಸ್ತ ಎಂಟು ಗಂಟೆಗೆ ಹೇಗೂ ಬರುತ್ತಾನೆ. ಆತ ಸಾಗಣೆ ವೆಚ್ಚ ಪೇಡೋ ಟುಪೇಯೋ ಮಾತ್ರ ನೋಡಬೇಕಾದವ. ಅಲ್ಲೇ ಬಿಡಿಸಿಕೊಳ್ಳಿ." ಆತ ಅಯಾಚಿತವಾಗಿ ಕಿಮಿಮಾತು ಹೇಳಿದ, "ಬೈಕನ್ನು ಗೋಡೌನಿಗೆ ಒಯ್ಯುವಲ್ಲಿ ಕೂಲಿಗಳು ಉದಾಸೀನ ಮಾಡಿಯಾರು, ಜಾಗ್ರತೆ!" ಆತನ ಮಾತು ಮುಗಿದಿರಲಿಲ್ಲ... 

"ಧಡಕ್" ಎಂದು ಬ್ರೇಕ್ ವ್ಯಾನಿನಿಂದ ಭಾರೀ ಸದ್ದು ಬಂತು. ಅದರ ಕೊನೆಯ ಮೂಲೆಯಲ್ಲಿ ಏನೋ ಹಗುರ ಕಟ್ಟುಗಳ ಮೇಲೊಂದು ಮೊಪೆಡ್ಡನ್ನು ಅಡ್ಡಕ್ಕೆ ತುರುಕಿಸಿಟ್ಟಿದ್ದರು. ಕೂಲಿಗಳು ಕೆಳಗಿನ ಕಟ್ಟುಗಳನ್ನು ಎಳೆದಾಗ ಮೊಪೆಡ್ ಕೆಳಗೆ ಬಿದ್ದಿತ್ತು; ಅದಕ್ಕೆ ಅತ್ತವರು ಯಾರೂ ಇಲ್ಲ! ಇತ್ತ ನಮ್ಮ ಬೈಕುಗಳ ಪಕ್ಕದಲ್ಲಿ ಒಂದು ಸ್ಕೂಟರ್ ಕೂಡಾ ಇಳಿದು ನಿಂತಿತ್ತು. ಅಲ್ಲಿ ಕರ್ತವ್ಯದ ಮೇಲಿದ್ದ ಕನಿಷ್ಠ ಬಿಲ್ಲೆಯೊಬ್ಬ, ಕುಶಾಲಿಗೆಂಬಂತೆ ತನ್ನ ರೈಫಲ್ಲಿನ ಭರ್ಚಿಯ ತುದಿಯನ್ನು ಹಗುರಕ್ಕೆ ಸ್ಕೂಟರಿನ ಕೀಲಿ ತೂತಕ್ಕೆ ಹಾಕಿ ತಿರುಗಿಸಿ ಅದನ್ನು ಚಾಲೂ ಮಾಡಿ ದೊಡ್ಡದಾಗಿ ನಕ್ಕ. ಕೂಲಿಕಾರರಿಗೆಲ್ಲ ಅದು ದೊಡ್ಡ ಹಾಸ್ಯ. ಆತ ಸ್ಕೂಟರಿನ ಪ್ಯಾಕಿಂಗ್ ಶಾಸ್ತ್ರ ಇದ್ದಂತೇ ತಂಗು ಕಟ್ಟೆಯಲ್ಲೇ ಒಂದು ಸುತ್ತು ಸವಾರಿ ಮಾಡಿದ. ಎಲ್ಲೋ ಅದರ ಗೋಣಿಯೊಂದು ಜಗ್ಗಿದಂತಾಗಿ ಯಾತ್ರಿಗಳಿಗಿದ್ದ ಕಬ್ಬಿಣದ ಬೆಂಚಿಗೆ ಪಕ್ಕೆ ಬಡಿದು, ದೊಡ್ಡಾ ಮುಚ್ಚಳ ಕಳಚಿ ಬಿತ್ತು. ಕೂಲಿಗಳಿಗೆಲ್ಲ ನಗೆಯೋ ನಗೆ. ಕನಿಷ್ಠಬಿಲ್ಲೆ ಏನೂ ಆಗಿಲ್ಲ ಎನ್ನುವಂಟೆ ಸ್ಕೂಟರ್ ನಿಲ್ಲಿಸಿ, ಕಳಚಿದ್ದ ಮುಚ್ಚಳವನ್ನು ಅದರ ಮೇಲೆ ಹೇರಿ ಆರಾಮವಾಗಿ ನಡೆದುಬಿಟ್ಟ. ನಾವು ಬೈಕುಗಳ ಕುರಿತು ಹೆಚ್ಚು ಜಾಗೃತರಾದೆವು. 


ಸಾಮಾನುಗಳು ಗೋಡೌನಿಗೆ ಹೊರಟಾಗ, ಬೈಕುಗಳನ್ನು ನಾವೇ ನೂಕಿ ತರುತ್ತೇವೆಂದು ಮುಂದಾದೆವು. ಕೂಲಿ ಮುಖಂಡ ಸಿಡಿದ "ಗೇಟ್ ಪಾಸ್ ಇಲ್ಲದೇ ಹೊರಗಿನವರು ಪಾರ್ಸೆಲ್ ಮುಟ್ಟುವಂತಿಲ್ಲ." ಯಮ ಸತ್ಯವಾನನ ಕುತ್ತಿಗೆಗೆ ಪಾಶ ಹಾಕಿ ಎಳೆದೊಯ್ದ. ನಾವು ಸಾವಿತ್ರಿ ನಿಷ್ಠೆಯಲ್ಲಿ ನಿಕಟವಾಗಿಯೇ ಹಿಂಬಾಲಿಸಿದೆವು. ತಂಗು ಕಟ್ಟೆಗಳ ವಲಯ ಕಳೆದು ಓಣಿಯೊಂದರಲ್ಲಿ ‘ಯಮಕಿಂಕರರು’ ಧುತ್ತೆಂದು ನಿಂತರು. ನಮ್ಮ ಸತ್ಯನಿಷ್ಠೆಯನ್ನು ಹೊಗಳಲಿಲ್ಲ, ಸವಾಲು ಒಡ್ಡಿದರು. "ಗೋಡೌನಿಗೆ (ಯಮಾಲಯಕ್ಕೆ?) ಸಾಗಿಸಿದ್ದಕ್ಕೆ ನಮ್ಮ ಕೂಲಿಯನ್ನು ಇಲ್ಲೇ ಕೊಡಿ." ಸಾವಿತ್ರಿ ಸುಲಭದಲ್ಲಿ ಬಿಟ್ಟು ಕೊಟ್ಟಾಳೇ? "ಇಲಾಖೆ ವತಿಯಿಂದ ಒಯ್ಯುವವರಿಗೆ ನಾನು ಕೂಲಿ ಕೊಡುವಂತಿಲ್ಲ" ಎಂದೆ. ಆತ ಪಳಗಿದ ಕುಳ "ಆಯ್ತಂದರೆ, ನಾವು ಇಲಾಖೆಯ ಸಮಯಮಿತಿಯಂತೆ ನಮ್ಮ ನಾಷ್ಟಾ ಮುಗಿಸಿ ಬಂದು ಇದನ್ನು ಅಲ್ಲಿಗೆ ಮುಟ್ಟಿಸುತ್ತೇವೆ. ಮತ್ತೆ ಆಕಸ್ಮಿಕಗಳಿಗೆ..." ಎಂದಲ್ಲಿಗೆ ನಾನು ಸ್ವಲ್ಪ ತಗ್ಗಲೇಬೇಕಾಯ್ತು. "ನೀವಿದನ್ನು ಈಗಲೇ ಮುಟ್ಟಿಸಿ, ನಮಗೆ ಬೇಗ ಒಯ್ಯಲು ಸಹಕರಿಸಿದ್ದಕ್ಕೆ ಇನಾಮು ಕೊಡೋಣ, ನಡೆಯಿರಿ," ಎಂದೆ. ವರ ಕೊಟ್ಟು ಸಾವಿತ್ರಿಯನ್ನು ಹಿಂದೆ ಕಳಿಸಲು ಸೋತ ಯಮರಾಯನ ಮೆರವಣಿಗೆ ಮುಂದುವರಿಯಿತು. 

ಕಾರ್ಖಾನೆಯೊಂದರ ತಿಪ್ಪೆ ಕೊಟ್ಟಿಗೆಯಂತಿದ್ದ ರೈಲ್ವೇ ಗೋಡೌನ್ ಬಾಗಿಲು ಹಾಕಿತ್ತು. ಕಟ್ಟೆಯ ಕೂಲಿಗಳು ಅಲ್ಲಿನ ಗೋಡೌನ್ ಕೂಲಿಗಳ ಸುಪರ್ದಿಗೆ ಬೈಕುಗಳನ್ನೂ ಒಪ್ಪಿಸಿದರು. ಮತ್ತೆ ಕೂಡಲೇ ನಮ್ಮತ್ತ ಇನಾಮಿಗೆ ಕೈ ಚಾಚಿದರು. ನಾವಿಬ್ಬರೂ ಹತ್ತರ ಒಂದೊಂದು ನೋಟು ಅವರ ಕೈಗಿಟ್ಟೆವು. ಅವರು ಮತ್ತೂ ಗಿಂಜಿದ್ದಕ್ಕೆ ಮೇಲೆ ಒಂದೊಂದು ಐದರ ನೋಟು ಹೇರಿ ಸಾಗಹಾಕಿದೆವು. 

ಯಮಾಲಯದ ಚಿತ್ರಗುಪ್ತ (ಗೋಡೌನ್ ಸೂಪ್ರಿಂಟು) ಆರಾಮವಾಗಿಯೇ ಬಂದ. ತಲೆಗೆ ಹಾಕಿದ್ದ ಕಮ್ಮೆಣ್ಣೆ ಕಣ್ಣಿಗಿಳಿಯದಂತೆ ಹಣೆಯಲ್ಲಿ ದಟ್ಟ ಪೋಡರಿನ ಕಟ್ಟೆ ಕಟ್ಟಿದ್ದ. ಮತ್ತೆ ಹೊಟ್ಟೆಗಿಳಿಸಿದ್ದ ಎಣ್ಣೆ ನಡೆಯಲ್ಲಿ ಪ್ರಕಟವಾಗದಂತೆ ನಿಧಾನ ನಡೆ ಸಾಧಿಸಿದ್ದ. ಹುಳಿದೇಗು ಇನ್ನೊಬ್ಬರ ಮೂಗಿಗೆ ಬಡಿಯದಂತೆ ಬಾಯ್ತುಂಬ ಸುವಾಸಿತ ವೀಳ್ಯ, ಉಸಿರಿನಲ್ಲಿ ತಾಗದಂತೆ ಸೀಗರೇಟಿನ ಧೂಮಲೀಲೆಗಳನ್ನೆಲ್ಲ ನೋಡಿದಾಗಲೇ ಇನ್ನೇನೋ ಹೊಸ ಪಟ್ಟು ಬೀಳುತ್ತದೆಂದು ನಾವು ಸಜ್ಜಾದೆವು. ಆತ ಪೂರ್ವರಂಗದ ಕಸರತ್ತುಗಳನ್ನೆಲ್ಲ (ದೂಳು ಹೊಡೆಯುವುದು, ದೇವಿಗೆ ಹೂ ಚಡಾಯಿಸಿ ಊದುಬತ್ತಿ ಗಿರಿಗಿಟ್ಲೆ ಇತ್ಯಾದಿ) ಮುಗಿಸಿ, ಸಿಂಹವಿಷ್ಟರದಲ್ಲಿ ಕುಳಿತು "ಭಲ್ಲಿರೇನಯ್ಯಾ" ಎನ್ನುವಾಗ ವಿಚಾರಣಾಧೀನ ಜೀವರಂತೆ ನಮ್ಮನ್ನು ಒಪ್ಪಿಸಿಕೊಂಡೆವು. ನಮ್ಮ ನಿರಾಶೆಗೆ ಕಲಶವಿಟ್ಟಂತೆ ಆತ (ತಂಗುಕಟ್ಟೆ ಗುಮಾಸ್ತೆ ಹಾಡಿದ) ಪಲ್ಲವಿಗೇ ಬಂದ "ಇದ್ಯಾಕೆ ಇಲ್ಲಿಗೆ ಬಂತು? (ನೇರ ಸ್ವರ್ಗಕ್ಕೆ ಹೋಗಬೇಕಿತ್ತೇ?) ಪೆರಿಶಬಲ್ಸ್ ಗೇಟ್ ಪಾಸಿನಲ್ಲಿ ಹೊರಗಿಂದ ಹೊರಗೇ ಹೋಗಬೇಕು. ಒಳಗೆ ಸೇರಿಸಲ್ಲ, ಹೋಗಿ ತನ್ನಿ..." 

ನಾನು ಪೆರಿಶಬಲ್ಸಿನವನಲ್ಲಿ ಎರಡನೇ ಪರೀಕ್ಷೆ ಎದುರಿಸುವವನ ದೈನ್ಯದಲ್ಲೇ ಹೋದೆ. ಆತ ‘ಕರಾಗ್ರೇ ವಸತೇ ಲಕ್ಷ್ಮೀ...’ ಹಳೆಯ ಶ್ಲೋಕದಲ್ಲೇ ಇದ್ದ. ನಾನು ತಡೆಯಲಾಗದ ಕೋಪದಲ್ಲಿ, ೨೪ ಗಂಟೆಯೂ ತೆರೆದಿರಬೇಕಾದ ಸ್ಟೇಶನ್ ಮಾಸ್ಟರ್ ಕೊಠಡಿಗೇ ನೇರ ನುಗ್ಗಿದೆ. ಅಲ್ಲಿ ರಾತ್ರಿ ಪಾಳಿಯವ ಹೋಗಿದ್ದ, ಹಗಲಿನವ ಬಂದಿರಲಿಲ್ಲ. ಅದೃಷ್ಟಕ್ಕೆ ಇದ್ದ ಹೊಣೆಗಾರನೊಬ್ಬ (ಇನ್ ಛಾರ್ಜ್), ಬೇರೊಂದೇ ಮೂಲೆಯಲ್ಲಿದ್ದ ‘ಭಾಂಗಿಗಳ ಮುಖ್ಯಸ್ಥ’ನನ್ನು (ಪಾರ್ಸೆಲ್ಸ್ ಚೀಫ್) ಕಾಣಲು ಸೂಚಿಸಿದ. ಅಲ್ಲಿಗೂ ಪಾದ ಬೆಳೆಸಿದೆ. ಅಧಿಕಾರಿ ಕುರ್ಚಿಯಲ್ಲಿರಲಿಲ್ಲ. ಅಲ್ಲಿನ ಜಿಡ್ಡುಗಟ್ಟಿದ ಬೆಂಚಿನ ಮೇಲೆ ಮೊದಲೇ ಬಂದೊಬ್ಬ ಸೇನಾಧಿಕಾರಿಯೋರ್ವನೂ ಏನೋ ಅಹವಾಲಿನೊಡನೆ ಕಾದಿದ್ದ. ಆತ ನಮ್ಮ ಕತೆ ಕೇಳಿ ಕನಿಕರಿಸಿದ. ಆತನಿಗೆ ಭಾಂಗಿ ಮುಖ್ಯಸ್ಥನ ದೋಸ್ತಿಯಿತ್ತು. ಮತ್ತು ಐದಾರು

ಮಿನಿಟಿನಲ್ಲೇ ಬಂದ ಆ ಅಧಿಕಾರಿಯನ್ನು ನಮ್ಮ ಪರವಾಗಿ ಒಲಿಸಿದ. ಅಧಿಕಾರಿ ನಮ್ಮ ರಸೀದಿಯ ಮೇಲೆ ‘ಸತಾಯಿಸಬೇಡಿ, ಗೇಟ್ ಪಾಸ್ ಕೊಡಿ’ ಎಂದು ಷರಾ ಹಾಕಿ ಮತ್ತೆ ‘ಪೆರಿಶಬಲ್ಸ್’ ಕಡೆ ತಳ್ಳಿದ. 

ಈ ಬಾರಿ ಪೆರಿಷಬಲ್ಸಿನ ಎದುರು ದಿಟ್ಟನಾಗಿ ನಿಂತೆ. ಆತ ಟಿಪ್ಪಣಿ ನೋಡಿ ರೇಗಾಡಿದ. "ನಾನು ಕಾನೂನು ಹೇಳಿದ್ದೆ, ಎಲ್ಲಿ ಸತಾಯಿಸಿದೆ? ಇನ್ನು ನಾನೇನೂ ಕೊಡುವುದಿಲ್ಲ, ಬೇಕಾದ್ದು ಮಾಡಿಕೊಳ್ಳಿ" ಎಂದ. (ಅಲ್ಲೂ ಒಬ್ಬ ತಲೆಹಿಡುಕ ನನ್ನನ್ನು ಚೌಕಾಸಿಗೆಂಬಂತೆ ಪಕ್ಕಕ್ಕೆ ಕರೆಸಿಕೊಂಡಿದ್ದ, ನಾನು ತಿರಸ್ಕರಿಸಿದೆ) ನಮ್ಮ ಅದೃಷ್ಟಕ್ಕೆ ಈ ಹೊತ್ತಿಗೆ ಅವನಿಂದ ತುಸು ಹಿಂದೆ ಅವನ ‘ಬಾಸ್’ ಬಂದು ಕೂತಿದ್ದರೂ ಏನೂ ಕೇಳದವನಂತೆ ಪೇಪರ್ ಪಠಣದಲ್ಲಿ ಮಗ್ನನಾದಂತೆ ನಟಿಸುತ್ತಿದ್ದದ್ದು ನನ್ನ ಗಮನಕ್ಕೆ ಬಂತು. ನಾನು ಅಹವಾಲು ಅವನಿಗೊಪ್ಪಿಸಿದೆ. ಆತ ಕರುಣಾಮಯಿ. ಎದ್ದು ಬಂದು ಗುಮಾಸ್ತೆಯನ್ನು ಬಂಗಾಳಿಯಲ್ಲೇ ಸೌಮ್ಯ ಮಾತುಗಳಿಂದ ಒಪ್ಪಿಸಲು ಪ್ರಯತ್ನಿಸಿದ. ಬಾಲ ನಾಯಿಯನ್ನು ಆಡಿಸುವ ಪರಿಗೆ ನಾನು ಆಶ್ಚರ್ಯಪಡುತ್ತಿದ್ದಂತೆ, ‘ಬಾಸ್’ ಸ್ವತಃ ಗೇಟ್ ಪಾಸ್ ಪುಸ್ತಕ ತೆಗೆದು, ನಮ್ಮ ಚೀಟಿಗಳಿಗೆ ಬಿಡುಗಡೆ ಬರೆದು ಕೊಟ್ಟ. ಮತ್ತೆ ಎಚ್ಚರಿಸಿದ "ಬೇಗ ಓಡಿ. ಗೋಡೌನಿನವ ಎಲ್ಲಾದರೂ ನಿಮ್ಮ ಬೈಕುಗಳನ್ನು ಅವನ ದಾಖಲೆಗೆ ಸೇರಿಸಿಕೊಂಡರೆ ಮತ್ತೆ ಸತಾವಣೆ ನಡೆದೀತು. ನಮ್ಮ ಅಧಿಕಾರದ ಮಿತಿ ಗೋಡೌನ್ ಗೇಟಿನವರೆಗೆ ಮಾತ್ರ" 

ತಮಾಷೆ ಎಂದರೆ, ಇಷ್ಟರಲ್ಲಿ ನಾವು ಜಡ್ಡುಗಟ್ಟಿದ್ದೆವು. "ಏನು ಬಂದರೂ ಸರಿ" ಎಂದು ಹಲ್ಲು ಕಚ್ಚಿಕೊಂಡೇ ಮಾಮೂಲೀ ನಡೆಯಲ್ಲೇ ಗೋಡೌನಿಗೆ ಹೋದೆವು. ಅದೃಷ್ಟಕ್ಕೆ ಬೈಕುಗಳು ಇನ್ನೂ ಒಳ ಹೋಗಿರಲಿಲ್ಲ. ಅಮಲುಕೋರ ತಕರಾರೆತ್ತದೆ ಬಿಟ್ಟುಕೊಟ್ಟ. ಬೈಕುಗಳನ್ನು ಗೇಟಿನತ್ತ ನೂಕುತ್ತಿದ್ದಂತೆ ಎರಡು ಮೂರು ಕೂಲಿಗಳು ‘ಸಹಾಯ’ಕ್ಕೆ ಎಂಬಂತೆ ಬಂದರು. ನಾವು ಅವರನ್ನು ಕಡೆಗಣ್ಣಲ್ಲೂ ನೋಡದೆ ಮುಂದುವರಿದೆವು. ಗೇಟಿನ ವಾಣಿಜ್ಯ ಕರ ಇಲಾಖೆಯವನಿಗೆ ಗೇಟ್ ಪಾಸ್ ಕೊಟ್ಟು ಹೊರಹೋದದ್ದು ಮಾತ್ರವಲ್ಲ, ನಿಲ್ದಾಣದ ನೆರಳೂ ಬೀಳದಷ್ಟು ದೂರಕ್ಕೆ ಹೋಗಿ ನಿಂತೆವು. 

ಇಂದಿನ ಕಣ್ಣಿನಲ್ಲಿ ನೋಡಿದರೆ, ಸುಮಾರು ನೂರೆಪ್ಪತ್ತು ವರ್ಷಗಳ ಇತಿಹಾಸವಿರುವ, ೨೩ಕ್ಕೂ ಮಿಕ್ಕು ತಂಗುಕಟ್ಟೆಗಳಿರುವ, ದಿನ ಒಂದಕ್ಕೆ ಆರ್ನೂರಕ್ಕೂ ಮಿಕ್ಕು ರೈಲುಗಳು, ಒಂದು ಲಕ್ಷಕ್ಕೂ ಮಿಕ್ಕು ಪ್ರಯಾಣಿಕರನ್ನು ಸುಧಾರಿಸುವ ಹೌರಾ ರೈಲ್ವೇ ನಿಲ್ದಾಣ ತೋರ ನೋಟದಲ್ಲಿ ವಿಶ್ವಖ್ಯಾತಿಯನ್ನೇ ಗಳಿಸಿದೆ. ಆದರೆ ಸಾರ್ವಜನಿಕ ರಂಗದ ಯಾವುದೇ ಸಂಸ್ಥೆ ಅನಿವಾರ್ಯವಾಗಿ ಒದಗಿದ ಅಧಿಕಾರ, ಕಳೆದ ಪ್ರಾಯ, ಕೂಡಿಸಿಕೊಂಡ ಸವಲತ್ತು, ಬಳಸಿದವರ ಸಂಖ್ಯೆ, ವಹಿವಾಟಿನ ಮೊತ್ತಗಳಿಂದ ಗೌರವಾರ್ಹವಾಗುವುದಿಲ್ಲ. ಅವುಗಳು ವರ್ತಮಾನದ ಪ್ರತಿ ಸನ್ನಿವೇಶಕ್ಕೂ (ಅದೆಷ್ಟೇ ಸಣ್ಣದಿರಲಿ) ಜನೋಪಯೋಗಿಯಾಗಿ ತನ್ನಿರವನ್ನು ಸಮರ್ಥಿಸಿಕೊಳ್ಳುತ್ತಲೇ ಇರಬೇಕು. ಮತ್ತೆ ಮತ್ತೆ ‘ರಾಜಶುದ್ಧಿ’ ಸಾರಲು ಪಾಡುಪಟ್ಟ ರಾಮನಂತಾಗಬೇಕು, ಹೊರತು ಪ್ರಶಾಂತಭೂಷಣರೆದುರು ಡೊಗ್ಗಾಲು ಹಾಕಿದ ಅತ್ಯುಚ್ಛ ನ್ಯಾಯಾಲಯದಂತಲ್ಲ. ಯಾವುದೋ ಮರದ ನೆರಳಿನಲ್ಲಿ ನಿಂತು, ಚೀಲದಿಂದ ಚೂರಿ ತೆಗೆದು (ನಿಲ್ದಾಣದೊಳಗೇ ತೆಗೆದಿದ್ದರೆ ಅಪಾರ್ಥಕ್ಕೀಡಾಗುವ ಭಯವಿತ್ತು!), ಬೈಕುಗಳನ್ನು ಪ್ಯಾಕಿಂಗ್ ಬಂಧನದಿಂದ ಬಿಡಿಸಿದೆವು. ರೈಲ್ವೇ ನಿಯಮದಂತೆ ಬೈಕುಗಳನ್ನು ಬಹುತೇಕ ಪೆಟ್ರೋಲ್ ಖಾಲಿಯ ಸ್ಥಿತಿಯಲ್ಲೇ ಸಾಗಿಸಿದ್ದೆವು. ಆದರೂ ಟ್ಯಾಂಕಿನೊಳಗಿದ್ದ ಸ್ವಲ್ಪ ಪೆಟ್ರೋಲಿನಲ್ಲೇ ಇಂಜಿನ್ ಚಾಲೂ ಮಾಡಿ, ನಿರಾಳವಾಗಿ ಪೆಟ್ರೋಲ್ ಬಂಕಿನತ್ತ ನಮ್ಮ ‘ಭಾರತ ಅ-ಪೂರ್ವ ಕರಾವಳಿಯೋಟ’ದ ಸವಾರಿಯಾರಂಭವನ್ನು ಮಾಡಿದ್ದೆವು. 

(ಬಾಲಂಗೋಚಿ: ಅದೇ ರಾತ್ರಿ ನಾನು ಸುದೀರ್ಘವಾಗಿ ದೂರು ಪತ್ರವೊಂದನ್ನು ಇಂಗ್ಲಿಷಿನಲ್ಲಿ ಬರೆದು, ಮಾರಣೇ ದಿನ ಬೆಳಿಗ್ಗೆ ಹೌರಾ ರೈಲ್ವೇ ಮುಖಸ್ಥನಿಗೆ ನೋಂದಾಯಿತ ಅಂಚೆಯಲ್ಲಿ ಕಳಿಸಿದೆ. ನಿರೀಕ್ಷೆಯಂತೇ ಇಲಾಖೆಯಿಂದ ನನಗೆ ಒಂದು ರಸೀದಿಯೂ ಬರಲಿಲ್ಲ) 

(ಮುಂದುವರಿಯಲಿದೆ)

5 comments:

  1. ಪ್ರಿಯ ಅಶೋಕ ವರ್ಧನ,
    ಚಿಟಿಕೆ ಹೊಡೆದು ಮದ್ರಾಸ್ ರೇಲ್ ನಿಲ್ದಾಣದಿಂದ ನಾನೂ ಆ ಕಾಲದಲ್ಲಿ ನಿಮ್ಮೊಡನೆ ಪ್ರಯಾಣ ಮಾಡಿದೆ. ಹಿಮಾಲಯನ್ ಟ್ರೆಕಿಂಗ್ ಗೆ ಬೆಂಗಳೂರಿಂದ ರೈಲಲ್ಲಿ ಹೋದ ನೆನಪಾಯಿತು. ನಿಮ್ಮ ಬರವಣಿಗೆ ಅದ್ಭುತವಾಗಿದೆ ಅಂದರೆ ಹೊಗಳಿಕೆ ಅಂದುಕೊಳ್ಳಬೇಡಿ. ರೈಲು ಪ್ರಯಾಣ ಕುರಿತು ಕನ್ನಡದ ಅದ್ಭುತ ಬರಹ ಹುಡುಕಿ ಕೊಡಿ ಎಂದು ಯಾರಾದರೂ ಕೇಳಿದರೆ ನನ್ನ ಆಯ್ಕೆಯಲ್ಲಿ ಈ ಭಾಗವೂ ಇರುತ್ತದೆ. ಯಾರೂ ಕೇಳುವುದಿಲ್ಲ ಅನ್ನುವುದು ಬೇರೆಯ ಮಾತು. ನನ್ನ ಮನಸಿನಲ್ಲೇ ಕಲ್ಪಿಸಿಕೊಳ್ಳುವ ಹಲವು ಅಂಥಾಲಜಿಗಳಲ್ಲಿ ಇದು ಮತ್ತು ತಿರುಪತಿ ಬೆಟ್ಟ ಹತ್ತಿದ ನಿಮ್ಮ ಕಥನ ಮರೆಯಲಾರೆ. ಥ್ಯಾಂಕ್ಸ್. ಥ್ಯಾಂಕ್ಸ್.

    ReplyDelete
  2. ಈ ಅಧ್ಯಾಯ ನಿಜಕ್ಕೂ ಪ್ರವಾಸಕಥನಪ್ರಕಾರದ ಉತ್ಕೃಷ್ಟ ಬರೆವಣಿಗೆಗೊಂದು ಉದಾಹರಣೆ. ಕೇವಲ ಶುಷ್ಕ ಮಾಹಿತಿಗಳಿಂದ ಹಾಗೂ ಪ್ರಕೃತಿಯ ಉತ್ಪ್ರೇಕ್ಷಿತ ವರ್ಣನೆಯಿಂದ ತುಂಬಿಕೊಳ್ಳದೆ ಜನಜೀವನಕ್ಕೆ ಕನ್ನಡಿಹಿಡಿಯುವ ಇಂತಹ ಲೇಖನಗಳ ಓದು ಸಾರ್ಥಕ ಎನಿಸುತ್ತದೆ. ನಾವೆಲ್ಲರೂ ರೈಲಿನಲ್ಲಿ ಪ್ರಯಾಣಿಸಿದವರೇ. ಆದರೆ ಈ ಲೇಖನದಲ್ಲಿ ನಾವುಕಾಣದ ರೈಲುಪ್ರಯಾಣದ ಕೆಲವು ಅಪೂರ್ವ ಚಿತ್ರಣಗಳಿವೆ. ಹೌರಾ ಸ್ಟೇಶನಿನ ಜನಜಂಗುಳಿ, ಗದ್ದಲ ನೂಕುನುಗ್ಗಲುಗಳ ಜೊತೆ ಸರಕುಸಾಗಾಣಿಕೆಯ ಸಂಕೀರ್ಣತೆ, ತೆರಿಗೆ ಸಂಗ್ರಹಣೆಗಾಗಿ ಮಾಡಿದ, ತೆರಿಗೆಕಳ್ಳರನ್ನು ಹಿಡಿಯಲು ಬಳಸಬೇಕಾದ ನಿಯಮಗಳನ್ನು ಪ್ರಯಾಣಿಕರ ಶೋಷಣೆಗೆ ಬಳಸುವ ರೈಲ್ವೇ ನೌಕರರ ಭ್ರಷ್ಟತೆ, ವೈಯಕ್ತಿಕ ಲಾಭಕ್ಕಾಗಿ ತಮಗೆ ಅನ್ನ ನೀಡುವ ಸಾರ್ವಜನಿಕಸಂಸ್ಥೆಗಳನ್ನೇ ಕೊರೆಯುವ ಕೀಟಗಳ ಪಿಪಾಸೆ, ಅಡಿಯಿಂದ ಮುಡಿವರೆಗಿರುವ ಗೆದ್ದಲುಗಳ ಕೊರೆತದಿಂದ ಎಂತಹ ಹಳೆಮರವೂ ಕುಂಬಾಗಿ ಕುಸಿಯಬಹುದು ಎಂಬಂತೆ ನಿಂತಿರುವ ಹಳೆಯ ಹೌರಾಸ್ಟೇಶನ್ ಎಲ್ಲ ಜೀವಂತವಾಗಿ ಮೂಡಿಬಂದಿದೆ.

    ReplyDelete
  3. ೧೯೯೩ ರಲ್ಲಿ ನಮ್ಮ ವೃತ್ತಿಪೂರ್ವದ ತರಬೇತಿಗಾಗಿ ಕಲ್ಕತ್ತಾ (ಈಗ ಕೊಲ್ಕತ್ತಾ) ದಲ್ಲಿರುವ ನಮ್ಮದೇ ಇಲಾಖೆಯ(ನಾಗರಿಕ ವಾಯುಯಾನ) ಅಗ್ನಿಶಾಮಕ ತರಬೇತಿ ಕೇಂದ್ರಕ್ಕೆ ತರಬೇತಿಗಾಗಿ ಸೇರಿಕೊಳ್ಳಲು ಕರೆ ಬಂದಿತ್ತು. ಪತ್ರ ಅಂಚೆಯಲ್ಲಿ ಅದಾಗಲೇ ತಡವಾಗಿ ಕೊನೆಯ ದಿನಾಂಕವೂ ದಾಟಿ ಹೋಗಿತ್ತು. ಇನ್ನೇನು, ನಾನು ಹಾಗೂ ಆಯ್ಕೆಗೊಂಡ ಮತ್ತೋರ್ವ ಸ್ನೇಹಿತ ಶರೀಫ್ ಹೇಗೋ ಹೊರಟೇ ಬಿಟ್ಟೆವು. ರೈಲು ಪ್ರಯಾಣ, ಅದರಲ್ಲೂ ದೀರ್ಘ ಪ್ರಯಾಣಕ್ಕೆ ನಾವಿಬ್ಬರೂ ಹೊಸಬರು. ಕೊನೆ ಕ್ಷಣದ ಪ್ರಯಾಣವಾದ ಕಾರಣ ಮೀಸಲು ಬೋಗಿ ಟಿಕೇಟು ಲಭ್ಯವಾಗದೆ ಮಂಗಳೂರು ಚೆನ್ನೈ – ಕಲಕತ್ತಾ ದವರೆಗೂ ಸಾಮಾನ್ಯ ಬೋಗಿದಲ್ಲಿಯೇ ಪ್ರಯಾಣಿಸಬೇಕಾಯಿತು. ಅದೇ ವೆಸ್ಟ್‌ ಕೋಸ್ಟ್ ಎಕ್ಸ್‌ಪ್ರೆಸ್, ಅದೇ ಹೌರಾ ಮೆಯಿಲ್. ನಮಗಂತೂ ಬೋಗಿಯಿಂದ ಹೊರಗಿಳಿಯಲೂ ಧೈರ್ಯವಿಲ್ಲ. ನಾವು ಕುಳಿತ ಆಸನಗಳನ್ನು ಯಾರಾದರೂ ಆಕ್ರಮಿಸಿಕೊಂಡು ಬಿಟ್ಟರೆ..! ಹೀಗೆ ಹೇಗೇಗೋ ಪ್ರಯಾಣಿಸಿ ಕಲ್ಕತ್ತಾ ತಲುಪಿದ ನಮ್ಮ ಅನುಭವದ ನೆನಪು ನಿಮ್ಮ ಲೇಖನವನ್ನು ಓದುವಾಗ ಮತ್ತೊಮ್ಮೆ ಕಣ್ಣಮುಂದೆ ಬಂತು .
    ನಾವು ಹೌರಾದಿಂದ ಹಿಂದಿರುಗುವಾಗ “ಹುಲ್ಲ ಮೆದೆಯಲ್ಲಿ ಸೂಜಿ ಹುಡುಕುವ’ ಭದ್ರತಾ ತಪಾಸಣೆ ನಮ್ಮನ್ನು ಕಾಡಿತ್ತು. ತರಬೇತಿ ಬಿಡುಗಡೆ ಪತ್ರ ತೋರಿಸಿದಾಗಲೂ ಸಂಶಯ ಬಿಡದ ಆತ ಬ್ಯಾಗ್‌ನಲ್ಲಿದ್ದ ಎಲ್ಲಾ ಸಾಮಾನುಗಳನ್ನು ಹೊರತೆಗೆಯಬೇಕೆಂದಾಗ ಮಾತ್ರ ನಾನು ಸೌಮ್ಯವಾಗಿ “ನಮ್ಮ ತರಬೇತಿ ಕೇಂದ್ರಕ್ಕೆ ಫೋನ್‌ ಮಾಡಿ ಕೇಳಿ” ಎಂದಾಗಲಷ್ಟೇ ಬಿಟ್ಟು ಬಿಟ್ಟ.

    ReplyDelete
  4. "ಈ ಮಾಣಿಗಳು ಒಂದು ಕೈಯಲ್ಲಿ ಆರೆಂಟು ಊಟ ತುಂಬಿದ ತಟ್ಟೆಗಳ ಅಟ್ಟಿ ಎತ್ತಿ ಹಿಡಿದು, ಓಡುತ್ತಿರುವ ರೈಲಿನ ಹೊರ ವಲಯದಲ್ಲಿ ಡಬ್ಬಿಯಿಂದ ಡಬ್ಬಿಗೆ ಹೆಚ್ಚುಕಮ್ಮಿ ಸಂಜೀವಿನ ಹೊತ್ತ ಆಂಜನೇಯನಂತೇ ಹಾರಿ ಬರುತ್ತಿದ್ದರು!"

    ಇದು ಹೇಗೆಂದು ಕಲ್ಪನೆ ಮಾಡಿಕೊಳ್ಳಲು ಆಗುತ್ತಿಲ್ಲ !

    ReplyDelete
  5. ನಾನು ಶಾಲಾದಿನಗಳಲ್ಲಿ NCCಯಲ್ಲಿ ಸಕ್ರಿಯನಾಗಿದ್ದಾಗ ರೈಲಿನಲ್ಲಿ ಸಾಕಷ್ಟು ಓಡಾಡಿದ್ದೆ. ಒಂದು ಬಾರಿ ಶೂಟಿಂಗ್ ಸ್ಪರ್ಧೆಯಲ್ಲಿ ದೆಹಲಿಗೆ ಹೋಗಿ ಕೇರಳವನ್ನು ಪ್ರತಿನಿಧಿಸುವ ಸುಯೋಗ ದೊರಕಿತ್ತು. ಆಗ ನನಗೆ ಮೊದಲಬಾರಿಗೆ ಸುದೀರ್ಘ ರೈಲುಯಾನದ ಅನುಭವವಾದದ್ದು. ಅದಾದ ಮೇಲೆ ವಿವಿಧ ಸಂದರ್ಭಗಳಲ್ಲಿ ರೈಲು ಯಾನ ಮಾಡಿದ್ದಿದೆ (ಇತ್ತೀಚೆಗೆ ಸ್ವಲ್ಪ ಭಾರತೇತರ ದೇಶಗಳಲ್ಲಿ ಕೂಡ...)

    ಅದೆಲ್ಲದರ ನೆನಪು ಒತ್ತರಿಸಿಕೊಂಡು ಬಂತು :-) ತುಂಬಾ ಚೆನ್ನಾಗಿ ಬರೆದಿದ್ದೀರಿ!

    ReplyDelete