ಕನ್ನಡ ರಾಜ್ಯೋತ್ಸವದ ನೆಪದಲ್ಲಿ ವಾರ್ಷಿಕ
ವಿಧಿಯಾಗಿ ನಿನ್ನೆ `ವಿಜೇತ’ರ ಪಟ್ಟಿ ಘೋಷಣೆಯಾಗಿದೆ. ಇದರಲ್ಲಿ ಸಕಾರಣ ವೈಯಕ್ತಿಕವಾಗಿ ನಾನು ಸಂಭ್ರಮಪಡಬಹುದಾದ
ಕೆಲವು ಹೆಸರುಗಳಿವೆ. ಅದನ್ನು ಮೊದಲು ಹಂಚಿಕೊಳ್ಳುತ್ತೇನೆ.
ಜೆ. ಆರ್ ಲಕ್ಷ್ಮಣರಾವ್ – ೯೫ರ ಹರಯದ
ಹಿರಿಯ ಸಾಹಿತಿ. ಕೇವಲ ಭಾಷಾ ಪ್ರಾವೀಣ್ಯದವರ ಸಂಚಿನಲ್ಲಿ, ವಾಸ್ತವದಲ್ಲಿ ಅವಮಾನಕಾರಿಯಾಗಿ `ವಿಜ್ಞಾನ
ಸಾಹಿತಿ’ ಎಂದೇ ವರ್ಗೀಕರಿಸಿ, ಇಷ್ಟು ಕಾಲ ಪ್ರಶಸ್ತಿ ದೂರರಾಗಿದ್ದವರು. ಗಣಿತಾಧ್ಯಾಪಕನಾಗಿದ್ದುಕೊಂಡು,
ಸುಧಾ ವಾರಪತ್ರಿಕೆಯ `ನಕ್ಷತ್ರ ವೀಕ್ಷಣೆ’ ಅಂಕಣದಿಂದಷ್ಟೇ ಕನ್ನಡ ಸೆಜ್ಜದಲ್ಲಿ ಕಿರು ಹಣತೆಯಾಗಿದ್ದ
ನನ್ನ ತಂದೆ – ಜಿ.ಟಿ. ನಾರಾಯಣರಾವ್, ಕನ್ನಡ ವಿಶ್ವಕೋಶವೆಂಬ ಹೆದ್ದೀಪದಲ್ಲಿ ಒಂದಾಗಲು ನಿಮಿತ್ತರಾದವರಲ್ಲಿ
ಜೆ.ಆರ್. ಲಕ್ಷ್ಮಣರಾಯರು ಮುಖ್ಯರು. (ಕನ್ನಡದ ಕರೆ ಅಧ್ಯಾಯ ನೋಡಿ. )
ನನಗೆ ಅತ್ರಿ ಬುಕ್ ಸೆಂಟರ್ ಹೆಸರಿನಲ್ಲಿ
ಪುಸ್ತಕ ಪ್ರಕಾಶನವನ್ನು ಕೈಗೆತ್ತಿಕೊಳ್ಳುವಲ್ಲಿ ಇದ್ದ ಏಕೈಕ ಬಲ ತಂದೆ ಜಿಟಿನಾ. ಅವರಿಗಾದರೋ ಕನ್ನಡ
ಸಾಹಿತ್ಯಕ್ಕೆ (ಗಮನಿಸಿ – ವಿಜ್ಞಾನ ಸಾಹಿತ್ಯವಲ್ಲ!) ವಿಶಿಷ್ಟ ಪ್ರಕಟಣೆಗಳನ್ನೇ ಕೊಡಬೇಕು ಎಂಬ ತುಡಿತ,
ಆ ಹುಡುಕಾಟಗಳಲ್ಲಿ ಮೊದಲು ಹೊಳೆದ ಹೆಸರುಗಳಲ್ಲಿ ಜೆ.ಆರ್.ಲ ಮುಖ್ಯವಾದದ್ದು. ಬೈಜಿಕ ವಿದ್ಯುತ್ತು
– ಜೆ.ಆರ್.ಲ ನಮಗಾಗಿ ಬರೆದುಕೊಟ್ಟರು, ೧೯೯೨ರಲ್ಲಿ ನಾವದನ್ನು ಪ್ರಕಟಿಸಿದೆವು. (ಪ್ರತಿಗಳು ಅಲಭ್ಯ.
ಸದ್ಯ ನವಕರ್ನಾಟಕ ಪಬ್ಲಿಕೇಶನ್ಸಿನಲ್ಲಿ ಜೆ. ಆರ್.
ಲ ಅವರ ಹಲವು ಕೃತಿಗಳು ಮರುಮುದ್ರಣಗೊಂಡಿವೆ) ಅವರನ್ನು ಪ್ರೀತಿ, ಗೌರವಗಳಿಂದ ದುಡಿಸಿಕೊಳ್ಳುವಲ್ಲಿ
ತಂದೆಗಿದ್ದ ಆಶಯವನ್ನು, ಅದೇ ಪುಸ್ತಕದ ಬೆನ್ನುಡಿಯಲ್ಲಿ ಹೀಗೆ ಬರೆದುಕೊಂಡಿದ್ದಾರೆ:
“ಇಂದಿನ ಪ್ರಪಂಚ ಅನುಭೋಗಾತಿರೇಕ (ಕನ್ಸ್ಯೂಮರಿಸಂ)
ಎಂಬ ತೀವ್ರಜ್ವರಗ್ರಸ್ತವಾಗಿದೆ. ಋಣಂ ಕೃತ್ವಾ ಘೃತಂಪಿಬೇತ್ – ಈ ಅನುಕೂಲ ಸೂತ್ರದ ಕರಾಳಮುಖವಿದು.
ಸರಕು ಸೇವೆಗಳ ಮಿತಿರಹಿತ ಅನುಭೋಗವೇ ನಿಜ ಪ್ರಗತಿಯ ಮಾನಕ ಎಂಬ ಭ್ರಮೆಯ ಅಮಲಿನಿಂದ ನಾವಿಂದು ತೂರಾಡುತ್ತಿದ್ದೇವೆ.
`ಸರಳ ಜೀವನ ಗಹನ ಚಿಂತನ’ ಎಂಬ ದಿವ್ಯಾದರ್ಶವೀಗ `ಕುಜೀವನ ನಚಿಂತನ’ ಎಂಬುದಾಗಿ ವಿಪರ್ಯಯಿಸಿದೆ. ಕಾರಣವೇನು?
ಮೊದಲು ಮಾನವ ತಂತ್ರ ವಿದ್ಯೆಯನ್ನು (ಟೆಕ್ನೋಲಜಿ) ರೂಪಿಸಿ, ಪಳಗಿಸಿ ಇದರ ನೆರವಿನಿಂದ ಬದುಕಿನಲ್ಲಿ
ಹಲವಾರು ಸೌಕರ್ಯಗಳನ್ನು ಗಳಿಸಿದ. ನಿಸರ್ಗದಿಂದ ಪಡೆದ/ ಬಗೆದ/ ದೋಚಿದ/ ಕಬಳಿಸಿದ ಪರ್ದಾರ್ಥಗಳ ಮೇಲೆ
ನೈಸರ್ಗಿಕ ನಿಯಮಗಳನ್ನು ವ್ಯವಸ್ಥಿತವಾಗಿ ಅನ್ವಯಿಸಿ ಉಪಯುಕ್ತ ಸರಕು ಸೇವೆಗಳನ್ನು `ಸೃಷ್ಟಿಸುವ’ ಕ್ರಿಯಾವಿಧಾನವೇ
ತಂತ್ರವಿದ್ಯೆ. ಇದರ `ಆಹಾರ’ ಶಕ್ತಿ.
"ನಾಗರಿಕತೆಯ ವಿಕಾಸ, ತಂತ್ರವಿದ್ಯೆಯ
ಅಭಿವರ್ಧನೆ ಮತ್ತು ಶಕ್ತಿಯ ಅಧಿಕ ವಿನಿಯೋಗ ಪರಸ್ಪರ ಕೊಕ್ಕೊಡುತ್ತ ವರ್ತಮಾನದ `ಸರ್ವಂ ತಂತ್ರವಿದ್ಯಾಮಯಂ’
ಸ್ಥಿತಿ ತಲಪಿವೆ. ಇದರ ಜೊತೆ ಅನಿವಾರ್ಯವಾಗಿ ತಳಕು ಹಾಕಿಕೊಂಡಿರುವ ಒಂದು ಹಾಲಾಹಲವೂ ಇದೆ; ಪರಿಸರ
ಮಾಲಿನ್ಯ.
"ಮಿತ ವೆಚ್ಚದಲ್ಲಿ ಮಾಲಿನ್ಯಶೂನ್ಯ ಅಪಾರ
ಶಕ್ತಿ ಬಸಿತ ಸಾಧ್ಯವೇ? ಈ ಸುಂದರ ಕಲ್ಪನೆಗೆ ಇಂಬುಕೊಡುವಂತೆ ಬೈಜಿಕ ಶಕ್ತಿ ಎಂಬ ಕಾಮಧೇನು ಒದಗಿ ಬಂದಿದೆ
ಎನ್ನುತ್ತಾರೆ ಬೈಜಿಕವಾದಿಗಳು. ಇಲ್ಲ, ಇಲ್ಲ ಬೈಜಿಕ ಶಕ್ತಿ ತೂರುವ ವಿಕಿರಣಮಾಲಿನ್ಯ ಮನುಕುಲಕ್ಕೆ
ಘೋರಾಪಾಯಕಾರಿ ಎನ್ನುತ್ತಾರೆ ಪರಿಸರವಾದಿಗಳು. ಇಂಗ್ಲಿಷಿನಲ್ಲಿ ಜನಪ್ರಿಯವಾಗಿರುವ ಕಗ್ಗ ಈ ದ್ವಂದ್ವವನ್ನು
ಪ್ರತೀಕಿಸುತ್ತದೆ:
ಪರಮಾಲ್ಪ ಗಾತ್ರದಾ ಪರಮಾಣುಛೇದನೆ
ಮಾನವ ಜನಾಂಗದಾ ತೀವ್ರ ಪ್ರಲೋಭನೆ
ಪರಮಾಣು ಮನದಿ ಸ್ಪಂದಿಸಿದೆ ಸಂವೇದನೆ
ಮರಳಿಸಲು ಬರುತಿಹುದು ದಿನದಿನಂ ಗುರುವಂದನೆ!
"ಈ ಎಲ್ಲ ವಿಷಯಗಳನ್ನು ವಿಜ್ಞಾನದ ಜ್ಞೇಯನಿಷ್ಠ
(ಆಬ್ಜೆಕ್ಟಿವ್) ಪಾತಳಿಯಲ್ಲಿ ಅತ್ಯಂತ ಕಳಕಳಿಯಿಂದ ಚರ್ಚಿಸಿ, ವಿವೇಕಯುತ ವ್ಯಾವಹಾರಿಕ ಪರಿಹಾರವನ್ನು
ಸೂಚಿಸುವ ಅಮೂಲ್ಯ ಪುಸ್ತಕವೇ `ಬೈಜಿಕ ವಿದ್ಯುತ್ತು’. ಇದರ ಲೇಖಕ ಜೆ. ಆರ್. ಲಕ್ಷ್ಮಣರಾಯರು (೧೯೨೧)
ಅಧ್ಯಯನ, ಚಿಂತನ, ಬೋಧನ ಮತ್ತು ಲೇಖನ ಕ್ರಿಯೆಗಳಲ್ಲಿ ಸಿದ್ಧಹಸ್ತರು."
ಇಂದು ಲಕ್ಷ್ಮಣರಾಯರು ಪ್ರಾಯ, ದೇಹಾರೋಗ್ಯ, ಎಲ್ಲಕ್ಕೂ ಮುಖ್ಯವಾಗಿ ಪ್ರಶಸ್ತಿಮೋಹ ಕಳೆದುಕೊಂಡ ಸ್ಥಿತಿಯಲ್ಲಿದ್ದಾರೆಂದು ನನ್ನ ತಿಳುವಳಿಕೆ. ಬೆಂಗಳೂರಿನ ಸಮಾರಂಭಕ್ಕೆ ಹೋಗುವುದಿರಲಿ, ಮೈಸೂರಿನಲ್ಲಿದ್ದಲ್ಲೇ ಎಷ್ಟು ಸಂಭ್ರಮಿಸುತ್ತಾರೋ ತಿಳಿದಿಲ್ಲ. ನನಗಂತೂ ಕುಶಿಯಾಗಿದೆ.
ಇಂದು ಲಕ್ಷ್ಮಣರಾಯರು ಪ್ರಾಯ, ದೇಹಾರೋಗ್ಯ, ಎಲ್ಲಕ್ಕೂ ಮುಖ್ಯವಾಗಿ ಪ್ರಶಸ್ತಿಮೋಹ ಕಳೆದುಕೊಂಡ ಸ್ಥಿತಿಯಲ್ಲಿದ್ದಾರೆಂದು ನನ್ನ ತಿಳುವಳಿಕೆ. ಬೆಂಗಳೂರಿನ ಸಮಾರಂಭಕ್ಕೆ ಹೋಗುವುದಿರಲಿ, ಮೈಸೂರಿನಲ್ಲಿದ್ದಲ್ಲೇ ಎಷ್ಟು ಸಂಭ್ರಮಿಸುತ್ತಾರೋ ತಿಳಿದಿಲ್ಲ. ನನಗಂತೂ ಕುಶಿಯಾಗಿದೆ.
ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ
ಕೆ. ಮುರಳೀಧರ ರಾವ್ (೧೯೨೪) ಅವರ ಮೇರು ಕೃತಿ ನೃತ್ಯಲೋಕ ನನ್ನದೇ ಪ್ರಕಟಣೆ ಎಂದು ಹೇಳುವಲ್ಲಿ ನನಗೆ
ಅತೀವ ಆನಂದವಿದೆ. (ನೃತ್ಯಲೋಕ ಕೊನೆಯ ಇಪ್ಪತ್ತೇ ಪ್ರತಿಗಳುಳಿದಿವೆ. ಆಸಕ್ತರು ಕೂಡಲೇ ರೂ ಮುನ್ನೂರು
ವಿಳಾಸ ಸಹಿತ ಕಳಿಸಿ. ಅಂಚೆ ಉಚಿತ) ಇವರ ವಿದ್ವತ್, ಬಹುಮುಖ ಆಸಕ್ತಿಗಳು (ನಾಟ್ಯವಲ್ಲದೆ ಚಿತ್ರ, ಫೊಟೋಗ್ರಫಿ,
ನಾಟಕ, ವೈವಿಧ್ಯಮಯ ಓದು...) ಇವರನ್ನು ನಿಂತಲ್ಲಿ ನಿಲ್ಲದಂತೆ, ಸಾಂಸಾರಿಕ ಬಂಧನದಲ್ಲಿ ಸಿಲುಕದಂತೆ
ಮಾಡಿತೋ ಏನೋ. ಈ ಪರಿವ್ರಾಜಕತ್ವದಲ್ಲಿ ಅಂದು ಕನ್ನಡ ವಿಶ್ವಕೋಶಕ್ಕೆ ಕೇವಲ ರೇಖಾಚಿತ್ರಕಾರನಾಗಿ ನನ್ನ
ತಂದೆಗೆ ಪರಿಚಿತರಾದರು. ಆದರೆ ಆಕಸ್ಮಿಕಗಳ ಸುಳಿಯಲ್ಲಿ ನಮ್ಮ ಮನೆಯವರೇ ಆದದ್ದು, ಅವರ ಹೆಬ್ಬೊತ್ತಗೆಯ
ಅಂಕುರಾರ್ಪಣೆಯಿಂದ ಫಲದಾಯಿಯಾಗುವವರೆಗೆ ನಾವೇ ಬೆಳೆದದ್ದು ಎಲ್ಲ ನನ್ನ ಜಾಲತಾಣದ ಓದುಗರಿಗೆ ನಾನು ಮತ್ತೆ
ಹೇಳುವುದಿಲ್ಲ.(ತಿಳಿಯದವರು ನೋಡಿ: ಅದೃಶ್ಯಲೋಕದ ಅನೂಹ್ಯರೂಪದ ಅನಂತಕಾಲದ ಯಾತ್ರಿಕ ಮತ್ತು
ನನ್ನ ತಂದೆಯದೇ ಪುಸ್ತಕಗಳು: ಶ್ರುತಗಾನ – ರೂ ೯೫, ಸಂಗೀತರಸನಿಮಿಷಗಳು ರೂ ೬೦ ಮತ್ತು With the
great minds Rs. 30.) ಯಾವುದೇ ಪ್ರಶಂಸೆ, ಪ್ರಶಸ್ತಿಗಳಿಗೆ ಗೌರವವನ್ನೇ ತರುವ ಮುರಳೀಧರರಾಯರಿಗೆ
ಈಗ ರಾಜ್ಯೋತ್ಸವದ ಸರದಿ ಬಂದದ್ದು ಸಂತೋಷದ ಸಂಗತಿ.
ಅಂದು (೨೦೦೫) ನಮ್ಮ ಮಗ ಅಭಯಸಿಂಹ,
ಪುಣೆಯ ಎಫ್.ಟಿ.ಐ.ಐಯ ವಿದ್ಯಾರ್ಥಿಜೀವನದ ಕೊನೆಯ ವರ್ಷದ `ಪರೀಕ್ಷೆ’ಯಾಗಿ ಕಿರುಚಿತ್ರವೊಂದನ್ನು ಮಾಡುವ
ಅನಿವಾರ್ಯತೆಯಲ್ಲಿದ್ದ. ಅದಕ್ಕೆ ಉಡುಪಿ ಯಕ್ಷಗಾನ ಕೇಂದ್ರ ಮತ್ತು ಅದರ ಮಹಾಗುರು ಬನ್ನಂಜೆ ಸಂಜೀವಸುವರ್ಣ
ಚಿಕ್ಕಮೇಳ ಕಟ್ಟಿಕೊಂಡೇ ಪುಣೆಗೆ ಹೋಗಿ ಪೂರ್ಣ ಸಹಕಾರ ಕೊಟ್ಟದ್ದು ಎಂದೂ ಮರೆಯುವಂತದ್ದಲ್ಲ. ಅದರಲ್ಲಿ
ಕಥಾನಾಯಕ – ನಿವೃತ್ತ ಯಕ್ಷಗಾನ ಕಲಾವಿದನ ಭೂಮಿಕೆಯಲ್ಲಿ ನಟಿಸಿದ, ನಿಜಜೀವನದಲ್ಲಿ ಯಕ್ಷಗಾನದ ಹಿರಿಯ
ಕಲಾವಿದನಾಗಿಯೇ ಪ್ರವೃತ್ತರಾಗಿದ್ದ ಪೇತ್ರಿ ಮಾಧವ ನಾಯ್ಕರು, ಸಹಜವಾಗಿ ನಮಗೆ ಆತ್ಮೀಯರೂ ಆದರು. ಅವರನ್ನು ಯಕ್ಷಗಾನ ವಿಭಾಗದಲ್ಲಿ ಸರಕಾರ ಪುರಸ್ಕರಿಸುತ್ತಿರುವುದು
ಯೋಗ್ಯತೆಗೆ ಸಂದ ಗೌರವವೇ ಸರಿ.
ನನ್ನ ಮೈಸೂರು ವಿಶ್ವವಿದ್ಯಾನಿಲಯದ
ಓದಿನ ನಾಲ್ಕು ವರ್ಷಗಳುದ್ದಕ್ಕೆ ಒಂದು ವರ್ಷದ ಹಿರಿಯ ಗೆಳೆಯನಾಗಿ, ಅಂದಿನಿಂದ ಇಂದಿನವರೆಗೂ ಹಲವು ತೆರದಲ್ಲಿ,
ಆತ್ಮೀಯ ಕುಟುಂಬ ಮಿತ್ರನಾಗಿಯೂ ಬೆಳೆದವರು ಈಶ್ವರ ದೈತೋಟ. ಪತ್ರಕರ್ತನಾದವ ಸಭೆ ಸಮಾರಂಭಗಳಲ್ಲಿ ಬರಿದೇ
ಟಿಪ್ಪಣಿ ಹಾಕಿ ಕೂರುವವನಲ್ಲ ಎನ್ನುವುದನ್ನು ಬಗೆತರದಲ್ಲಿ ಮೆರೆದವರು ಇವರು. ಅಂಗಡಿ, ಕಾಡು, ಬೆಟ್ಟ,
ಗುಹೆ ಎಂದು ನನ್ನ ಪಾಡಿಗೆ ಬಿದ್ದವನನ್ನು ಹನ್ನೆರಡು ವರ್ಷಕ್ಕೊಮ್ಮೆ ಪಾಣಾಜೆಯಲ್ಲಿ ಉಬ್ಬರಿಸುವ `ಜಾಂಬ್ರಿಪ್ರವೇಶ’ ಕಾಲದಲ್ಲಿ ಎಬ್ಬಿಸಿ, ವರ್ಷವೊಂದರ ಉದ್ದಕ್ಕೆ ಉದಯವಾಣಿಯಲ್ಲಿ ಪ್ರಾಕೃತಿಕ ಅನ್ವೇಷಣೆಗಳ ಸರಣಿ
ಪಟಾಕಿ ಹಚ್ಚಿದವರೇ ಈಶ್ವರ ದೈತೋಟ. ಮಣಿಪಾಲ, ಬೆಂಗಳೂರು, ಆ ಪತ್ರಿಕೆ ಈ ಛಾನೆಲ್ಲು ಎಂದೇನೇನೋ ಇವರು
ಹಾರಾಡಿ, ಅನನ್ಯ ಗುರುತಿನ ಕಲ್ಲುಗಳನ್ನು ನೆಟ್ಟಿರಬಹುದು. ಆದರೆ ನನ್ನ ಲೆಕ್ಕಕ್ಕೆ, ಇಂದಿಗೂ ಅದೇ ಮಹಾರಾಜಾ ಕಾಲೇಜಿನ
ಸಹಪಾಠಿ ಗೆಳೆಯ ಬಿಎ ಶ್ರೀಧರನ ಸ್ಕೂಟರಿಗೆ ನಿತ್ಯ ಸಾರಥಿಯಾಗಿದ್ದ ಚಿಗುರುಮೀಸೆಯವನ ಕಾರ್ಯೋತ್ಸಾಹ
ಉಳಿಸಿಕೊಂಡಿರುವ ಈಶ್ವರರನ್ನು ಕಾಣುವಾಗ, “ರಾಜ್ಯೋತ್ಸವ ಪ್ರಶಸ್ತಿಗೆ ನಿಸ್ಸಂದೇಹವಾಗಿ ಪಾತ್ರ” ಎಂದು
ಮನಸ್ಸು ಹಿಗ್ಗುತ್ತದೆ.
ವೃತ್ತಿ ಪುಸ್ತಕ ವ್ಯಾಪಾರಿಯಾಗಿ ಅಂಗಡಿಯಲ್ಲಿ
ನಾನು ಎಂತೆಂಥಾ ಮಹಾನುಭಾವರನ್ನೂ ಕೇವಲ ಸರಕಾಗಿ ರೂಢಿಸಿಕೊಂಡಿದ್ದೆ. ದಯವಿಟ್ಟು ಗಮನಿಸಿ, ಇದು ಮಾನಾಪಮಾನದ
ಮಾತಲ್ಲ - ಸಹಜ ಸ್ಥಿತಿ. ಆದರೆ ತಮ್ಮ ದೇಶವಿದೇಶಗಳ ವೃತ್ತಿ ಸಂಬಂಧೀ ಓಡಾಟ ಮುಗಿಸಿ, ಉಜಿರೆಯಲ್ಲಿ
- ನಿವೃತ್ತ ಅಲ್ಲ, ಪೂರ್ಣ ಕಾಲಿಕ ಬರಹಗಾರನಾಗಿ, ನೆಲೆ ನಿಂತ ಕೆಟಿ ಗಟ್ಟಿಯವರೊಡನೆ ನನ್ನದು ಸರಕುತನ
ಮೀರಿದ ಸಂಬಂಧ. ಅವರೊಡನಾಟದ ಅಸಂಖ್ಯ ವಿವರಗಳನ್ನು ಇಂದು ಮನದಲ್ಲಿ ಮಳೆಯಾಗಲಾರದ ಮೋಡಗಳ ಚಂದದಲ್ಲಷ್ಟೇ
ಕಾಣಬಲ್ಲೆ. ಅವಸರಕ್ಕೆ ಒಂದು ಸಣ್ಣ ಹನಿ ಕಟ್ಟುತ್ತೇನೆ: ನಾವು ಐದಾರು ಮಂದಿ ಅಂಡಮಾನ್ ದ್ವೀಪಗಳನ್ನು
ನೋಡಲು ತಯಾರಿ ನಡೆಸಿದ್ದೆವು. ಅಂಗಡಿಯ ಅನುಕೂಲದಲ್ಲಿ ಎಷ್ಟೂ ನಕ್ಷೆ, ಮಾಹಿತಿ ನನಗೆ ಉಚಿತವಾಗಿಯೇ
ಒದಗಿತ್ತು. ಸಾಲದ್ದಕ್ಕೆ ಅಂತರ್ಜಾಲದ ಜಾಲಾಟವೂ ತಿಳಿದಿತ್ತು.
ಆದರೂ ವಿಸ್ತೃತ ವೈಯಕ್ತಿಕ ಅನುಭವ ಕಥನವಾಗಿ ನನಗೆ ನೆನಪಾದ ಕೆಟಿ ಗಟ್ಟಿಯವರ ಪುಸ್ತಕ – ನಿಸರ್ಗ ಕನ್ಯೆ
ಅಂಡಮಾನ್, ಮುದ್ರಣದಲ್ಲಿರಲಿಲ್ಲ. ನಾನು ಸಂಕೋಚದಲ್ಲೇ ಅವರಿಗೆ ಫೋನಾಯಿಸಿದೆ. ಕೂಡಲೇ ಅವರ ಆಪ್ತ ಸಂಗ್ರಹದ
ಪ್ರತಿಯೊಂದು (ಮಾರಾಟಕ್ಕಿದ್ದದ್ದಲ್ಲ) ನನಗೆ ಅಂಚೆಯಲ್ಲಿ ಹೊರಟು, ಸಕಾಲದಲ್ಲಿ ತಲಪಿತ್ತು. ಮುಂದೆ
ನನ್ನ ಅನುಭವ ಕಥನಕ್ಕೆ (ನೋಡಿ: ಬಂಗಾಳಕೊಲ್ಲಿಯ ಕಡೆದಿಟ್ಟ ನವನೀತ ಅಂಡಮಾನ್)
ಒಳ್ಳೆಯ ಆಕರವಾಗಿಯೂ ಆ ಪುಸ್ತಕ ಒದಗಿತ್ತು. ಗಟ್ಟಿಯವರಿಗೆ ಇಂದು ಬಂದ ಗೌರವ ನನಗೆ ಬಹಳ ಸಂತೋಷವನ್ನು ಕೊಟ್ಟಿದೆ.
ಮಂಗಳೂರಿನ ಯಾವುದೇ ಹಣ್ಣಿನಂಗಡಿಯಲ್ಲಿ
ನೀವು ಅನಾನಸಿಗೆ ಕೈ ಹಾಕಿದರೆ “ಒಳ್ಳೆ ಉಂಟು, ಸೋನ್ಸರದ್ದು” ಎನ್ನುವ ಮಾತು ಕೇಳಿಯೇ ಕೇಳುತ್ತೀರಿ.
ನನ್ನ `ಅಭಯಾರಣ್ಯ’ದ ಸಸ್ಯ ಪುನರುತ್ಥಾನದ ಕಲ್ಪನೆ ಹುಟ್ಟಿಕೊಂಡದ್ದು ಇದೇ ಡಾ| ಎಲ್.ಸಿ. ಸೋನ್ಸರ ಮೂಡಬಿದ್ರೆ
ಮಾದರಿಯಿಂದ. ನಾವು ಕಾಂತಾವರದ ಅಂಬರೀಷ ಗುಹೆ ಶೋಧಿಸಲು ಪ್ರೇರಣೆ ಮತ್ತು ಮಾಡಿಬಂದಾಗ ಒಳನೋಟದ ತಿದ್ದುಪಡಿಯನ್ನು
ಹೊರಗೇ ನಿಂತು, ಕೇವಲ ಡೌಸಿಂಗಿನಿಂದ ಕೊಟ್ಟವರು ಸೋನ್ಸರೇ. ಯಾವ ಸರಕಾರೀ ತೋಟಗಾರಿಕೆ, ಕೃಷಿ, ಅರಣ್ಯ
ಇಲಾಖೆಗಳೂ ಕನಸದ ಸಸ್ಯ ವೈವಿಧ್ಯದ ಸುಜ್ಞಾನಪೂರ್ಣ ಸಂಗ್ರಹ, ಆಸಕ್ತರೊಡನೆ ಸ್ನೇಹಪೂರ್ಣ ವಿಸ್ತರಣಗಳಲ್ಲಿ
ಸದಾ ಮುಕ್ತವಾಗಿರುವವರೂ ಇದೇ ಸೋನ್ಸರು. ನನ್ನಂಗಡಿಯ ಬಹಳ ಒಳ್ಳೆಯ ಗಿರಾಕಿ, ಖ್ಯಾತ ಸಸ್ಯವಿಜ್ಞಾನಿ
ಬಿಜಿಎಲ್ ಸ್ವಾಮಿಯ ಶಿಷ್ಯ ಎಂದಿತ್ಯಾದಿ ನಾನು ಕಂಡ ನೂರೆಂಟು ವಿಶೇಷಣಗಳಿಗೂ ಮೇಲೆ ನಿಂತ ಸೋನ್ಸರಿಗೆ
ರಾಜ್ಯೋತ್ಸವ ಪ್ರಶಸ್ತಿ ಕೊಡುವುದರಿಂದ (ಸವಕಲು ಮಾತಾಗಿ ಕೇಳಿದರೂ ವಾಸ್ತವವಾಗಿ) ಪ್ರಶಸ್ತಿಗೇ ಗೌರವ
ಬಂದಂತಾಗಿದೆ.
ಕುರಿತು ನೋಡಿದಾಗ, ಇದೇ ತೆರನ ಸಂತೋಷ
ಹಿಂದೆಯೂ ಕೆಲವು ಸಲ ನನಗಾದದ್ದಿದೆ. ಅಂಥ ಒಂದನ್ನು ವಿಸ್ತರಿಸಿದ್ದನ್ನೂ ಆಸಕ್ತರು ಇಲ್ಲೇ ಹಿಂದಿನ
ಲೇಖನ `ಇದೇ ಮೊದಲು ಎನ್ನುವಂತೆ ವಿಶ್ವಾಸಾರ್ಹ ರಾಜ್ಯೋತ್ಸವ ಪ್ರಶಸ್ತಿಗಳು’ ಇದರಲ್ಲಿ ನೋಡಬಹುದು. ನನ್ನ
ತಂದೆಗೂ ರಾಜ್ಯೋತ್ಸವ ಪ್ರಶಸ್ತಿ ಸಂದದ್ದಿತ್ತು. ಅದಕ್ಕೆ ಅರ್ಜಿ, ಗಣ್ಯರ ಶಿಫಾರಸು ಒಂದನ್ನೂ ತಂದೆ
ಮಾಡಿರಲಿಲ್ಲ. ಅಂದು ಘೋಷಣೆಗೆ ಮುನ್ನ ಇಲಾಖೆ ಮುಜುಗರ ತಪ್ಪಿಸಿಕೊಳ್ಳಲು ತಂದೆಯನ್ನು ಸಂಪರ್ಕಿಸಿ ತಿಳಿಸಿದಾಗಲೂ ಇವರು ಉತ್ತೇಜಿತರಾಗಿ ಒಪ್ಪಿದ್ದಿಲ್ಲ. ಅಷ್ಟೇ ಏಕೆ ನೇರ ಕುಟುಂಬದವರಲ್ಲಿ, ದೂರದೂರಿನಲ್ಲಿರುವ ನನಗೂ ಫೋನ್
ಮಾಡಿ ಕೇಳಿದ್ದಿತ್ತು “ಒಪ್ಪಲೇ? ನಿನಗೇನಾದರೂ ಮುಜುಗರವಾಗುವಂತ ಭಿನ್ನಮತವಿದೆಯೇ?!” `ಸಾಹಿತ್ಯ’ವನ್ನು ಪ್ರಶಸ್ತಿ ಪರಿಗಣನೆಯಲ್ಲಿ ವಿಚಾರ (ಅಂದರೆ ಕ್ರೀಡೆ, ಕೃಷಿ, ಆರೋಗ್ಯ, ವಿಜ್ಞಾನ ಎಂದಿತ್ಯಾದಿ) ಅಥವಾ ಪ್ರಕಾರಗಳ (ಅಂದರೆ ಸೃಜನಾತ್ಮಕ,
ಹಾಗೊಂದಿದ್ದರೆ `ಅಲ್ಲದ್ದು’ ಅಥವಾ ಕಾದಂಬರಿ, ಸಣ್ಣಕತೆ, ಕವಿತೆ, ಕಾವ್ಯ, ನಾಟಕ, ವಿಮರ್ಶೆ ಎಂದಿತ್ಯಾದಿ)
ಹೆಸರಿನಲ್ಲಿ ವಿಂಗಡಿಸುವುದು ತಪ್ಪು. ಇದು ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತವಾದ ವೈಚಾರಿಕ ಕೃತಿಗಳನ್ನು
`ಸಾಹಿತ್ಯ’ದಿಂದ ಬೇರ್ಪಡಿಸಿ ಹೆಸರಿಸಿ, ಪುರಸ್ಕಾರಗಳ ದೊಡ್ಡ ಮೊತ್ತವನ್ನು ತಮ್ಮೊಳಗೇ ಹಂಚಿಕೊಳ್ಳುವ
ಕೇವಲ ಭಾಷಾ ಜಾಣರ ಕುಹಕವೂ ಇರಬಹುದು. ಯಾಕೆಂದರೆ ತಂದೆಯ ಪಾಂಡಿತ್ಯವನ್ನು ಜೀರ್ಣಿಸಿಕೊಳ್ಳಲಾಗದ ಬಹುಮಂದಿ `ಶುದ್ಧ ಸಾಹಿತಿ'ಗಳು “ವಿಜ್ಞಾನ ನಮಗರ್ಥವಾಗೋಲ್ಲ” ಎಂದು ಬೊಗಳೆ ಬಿಡುತ್ತಿದ್ದುದು ನಮಗೆಲ್ಲ ತಿಳಿದೇ ಇತ್ತು. ಹೆದ್ದಾರಿಯೆಲ್ಲ
ಅವರೇ ಆವರಿಸಿಕೊಂಡಾಗ ವಿಜ್ಞಾನ ಸಾಹಿತ್ಯದ ಗಲ್ಲಿಯೊಳಗೂ ತಂದೆಗೆ ಪ್ರಶಸ್ತಿ ಬಂತಲ್ಲ ಎಂಬ ಧನ್ಯತೆಯಷ್ಟೇ
ನಮಗೆ ಬಂದುಬಿಟ್ಟಿತ್ತು! ಆ ದಿನಗಳಲ್ಲಿ ನಾನು ಪಡೆಯದ ವೈಚಾರಿಕ ಪಕ್ವತೆ ಇಂದು ಬಂದಿದೆ ಎಂದು ಭಾವಿಸುತ್ತ,
ಈಗ ನನ್ನ ಸಂಕಟವನ್ನು ತೋಡಿಕೊಳ್ಳುತ್ತೇನೆ.
ಮೊನ್ನೆ ಜುಲೈ ತಿಂಗಳಲ್ಲಿ ಕರ್ನಾಟಕ
ವಿದ್ಯಾವರ್ಧಕ ಸಂಘ, ಧಾರವಾಡದಿಂದ ನೇರ ಪಾಟೀಲ ಪುಟ್ಟಪ್ಪನವರೇ ಫೋನಾಯಿಸಿದ್ದರು. ಮುಂದುವರಿಕೆಯಾಗಿ
ಎರಡು ಪುಟದುದ್ದದ ಒತ್ತಾಯದ ಆಮಂತ್ರಣವೂ ಬಂದಿತ್ತು. ಕರ್ನಾಟಕ ಏಕೀಕರಣದ ಆಶಯಗಳು ವರ್ತಮಾನದಲ್ಲಿ ಹೇಗೆ
ನಿರರ್ಥಕಗೊಂಡಿವೆ ಎನ್ನುವುದರ ಪರಾಮರ್ಶೆ ಮತ್ತು ನಿರ್ದೇಶಕ ಒತ್ತಡಗಳ ರೂಪಣೆ ಅದರ ಉದ್ದೇಶವಿತ್ತು.
ನಿಜದಲ್ಲಿ ನಾನು ಸಾಮಾಜಿಕ ಆಡಳಿತವಲಯವನ್ನು ಭಾಷಾವಾರು ವಿಂಗಡಣೆ ಮಾಡಿದ್ದೇ ಸರಿಯಲ್ಲ ಎನ್ನುವ ಪೈಕಿ. ಹಾಗಾಗಿ ನಾನು ಹೋಗಲಿಲ್ಲ.
ಭೌಗೋಳಿಕವಾಗಿ ವಿಂಗಡಿಸಿ ಶಿಕ್ಷಣ, ಆರೋಗ್ಯ, ಕೃಷಿ ಎಂದಿತ್ಯಾದಿ ಇಲಾಖೆಗಳನ್ನು ಮಾಡಿದಂತೆ `ಭಾಷೆ’ಯನ್ನು ರಾಜ್ಯದ ಒಂದು ಅಂಗ ಮಾಡಬೇಕಿತ್ತು. ವಿಭಾಗಗಳ ಹೆಸರಾದರೂ ಜನಪದ ಮೂಲದಲ್ಲಿರುವಂತೆ ಸ್ಥಳದ ಗುಣ ಸೂಚಕವಾಗಿಯೇ ಬರಬೇಕಿತ್ತು. ಉದಾಹರಣೆಗೆ ದಕ ಜಿಲ್ಲೆಯೊಳಗಿರುವಂತೆ –ಪದವು (ಕೊಂಪದವು, ವಾಮದ ಪದವು ಇತ್ಯಾದಿ), -ಆಜೆ (ಕೊಣಾಜೆ, ಗುಣಾಜೆ ಇತ್ಯಾದಿ), -ಕಟ್ಟೆ (ಮಾವಿನ ಕಟ್ಟೆ, ನೇರಳಕಟ್ಟೆ ಇತ್ಯಾದಿ). ಆಗ ಸಹಜವಾಗಿ ಭಾವನಾತ್ಮಕ ವಿಚಾರಗಳು ಆಡಳಿತವನ್ನು ಪ್ರಭಾವಿಸುತ್ತಿರಲಿಲ್ಲ. ಯಾವುದೇ ದೇವಳಗಳ (ಮಂದಿರ, ಮಸೀದಿ, ಇಗರ್ಜಿ ಇತ್ಯಾದಿ ಸೇರಿಸಿಕೊಂಡ ವಿಶಾಲ ಅರ್ಥದಲ್ಲಿ) ಪೂಜೆಯಂತೆ, ಭಾಷಾ ಕಲಿಕೆಯವರ (ಕನ್ನಡ, ತುಳು, ಬ್ಯಾರಿ, ಕೊಡವ, ಅರೆ ಇತ್ಯಾದಿ) ಸಂಭ್ರಮದಂತೆ ದೊಡ್ಡ ಸಮಾಜದ ನಡೆಗೆ ತಡೆಯುಂಟು ಮಾಡದೆ (ಸಾರ್ವಜನಿಕ ರಜೆ ಮತ್ತು ನೇರ ಸರಕಾರದ ತೊಡಗುವಿಕೆ ತಪ್ಪೇ ತಪ್ಪು) ಸಾಗುತ್ತಿತ್ತು. ನನಗೆ ಗೊತ್ತು, ಈಗ ಹಿಂದೆ ಹೋಗಲಾಗುವುದಿಲ್ಲ. ಆದರೆ ತಪ್ಪು ಉದಾಹರಣೆಗಳನ್ನೇ ಮುಂದಿಟ್ಟುಕೊಂಡು ಹೆಚ್ಚಿನ ತಪ್ಪುಗಳನ್ನು ಮಾಡಬಾರದು ಎಂಬ ಕನಿಷ್ಠ ಜ್ಞಾನವನ್ನಾದರೂ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಐತಿಹಾಸಿಕ ವಿಚಾರಗಳಾದ ಏಕೀಕರಣ, ಗಡಿ, ನೀರುಗಳನ್ನು ನ್ಯಾಯಿಕ ಹೋರಾಟಕ್ಕೆ ಸೀಮಿತಗೊಳಿಸಬೇಕು. ಅದಕ್ಕೆ ಪೂರಕವಾದ ರಾಜಕೀಯ ಮನೋಸ್ಥಿತಿಯನ್ನು ತರಲು ಹೆಣಗಬೇಕು. ರಸ್ತೆ ತಡೆ, ಬಂದ್, ಮೆರವಣಿಗೆ, ಅನಧಿಕೃತ ಮತಸಂಗ್ರಹ ಮುಂತಾದವನ್ನು ಇನ್ನೊಂದು ಪಕ್ಷವೂ ಮಾಡಬಲ್ಲುದು ಎಂಬುದನ್ನು ಅರಿತುಕೊಳ್ಳಬೇಕು. ಅದಕ್ಕೂ ಹೆಚ್ಚಾಗಿ ಇಂಥವನ್ನು ಸಮಾಜವಿರೋಧೀ ಶಕ್ತಿಗಳು ದುರ್ಬಳಸಿಕೊಳ್ಳುತ್ತವೆ. ಈ ಮೂಲಭೂತ ಗೊಂದಲಗಳು ಬಗೆಹರಿದರೆ ತಂತಾನೇ ಈ ರಾಜ್ಯೋತ್ಸವ, ಪ್ರಶಸ್ತಿ, ಪುರಸ್ಕಾರ ಎಲ್ಲ ಅತಿರೇಕಗಳಿಗೂ ಅಂಕುಶ ಬೀಳುತ್ತದೆ.
ಭೌಗೋಳಿಕವಾಗಿ ವಿಂಗಡಿಸಿ ಶಿಕ್ಷಣ, ಆರೋಗ್ಯ, ಕೃಷಿ ಎಂದಿತ್ಯಾದಿ ಇಲಾಖೆಗಳನ್ನು ಮಾಡಿದಂತೆ `ಭಾಷೆ’ಯನ್ನು ರಾಜ್ಯದ ಒಂದು ಅಂಗ ಮಾಡಬೇಕಿತ್ತು. ವಿಭಾಗಗಳ ಹೆಸರಾದರೂ ಜನಪದ ಮೂಲದಲ್ಲಿರುವಂತೆ ಸ್ಥಳದ ಗುಣ ಸೂಚಕವಾಗಿಯೇ ಬರಬೇಕಿತ್ತು. ಉದಾಹರಣೆಗೆ ದಕ ಜಿಲ್ಲೆಯೊಳಗಿರುವಂತೆ –ಪದವು (ಕೊಂಪದವು, ವಾಮದ ಪದವು ಇತ್ಯಾದಿ), -ಆಜೆ (ಕೊಣಾಜೆ, ಗುಣಾಜೆ ಇತ್ಯಾದಿ), -ಕಟ್ಟೆ (ಮಾವಿನ ಕಟ್ಟೆ, ನೇರಳಕಟ್ಟೆ ಇತ್ಯಾದಿ). ಆಗ ಸಹಜವಾಗಿ ಭಾವನಾತ್ಮಕ ವಿಚಾರಗಳು ಆಡಳಿತವನ್ನು ಪ್ರಭಾವಿಸುತ್ತಿರಲಿಲ್ಲ. ಯಾವುದೇ ದೇವಳಗಳ (ಮಂದಿರ, ಮಸೀದಿ, ಇಗರ್ಜಿ ಇತ್ಯಾದಿ ಸೇರಿಸಿಕೊಂಡ ವಿಶಾಲ ಅರ್ಥದಲ್ಲಿ) ಪೂಜೆಯಂತೆ, ಭಾಷಾ ಕಲಿಕೆಯವರ (ಕನ್ನಡ, ತುಳು, ಬ್ಯಾರಿ, ಕೊಡವ, ಅರೆ ಇತ್ಯಾದಿ) ಸಂಭ್ರಮದಂತೆ ದೊಡ್ಡ ಸಮಾಜದ ನಡೆಗೆ ತಡೆಯುಂಟು ಮಾಡದೆ (ಸಾರ್ವಜನಿಕ ರಜೆ ಮತ್ತು ನೇರ ಸರಕಾರದ ತೊಡಗುವಿಕೆ ತಪ್ಪೇ ತಪ್ಪು) ಸಾಗುತ್ತಿತ್ತು. ನನಗೆ ಗೊತ್ತು, ಈಗ ಹಿಂದೆ ಹೋಗಲಾಗುವುದಿಲ್ಲ. ಆದರೆ ತಪ್ಪು ಉದಾಹರಣೆಗಳನ್ನೇ ಮುಂದಿಟ್ಟುಕೊಂಡು ಹೆಚ್ಚಿನ ತಪ್ಪುಗಳನ್ನು ಮಾಡಬಾರದು ಎಂಬ ಕನಿಷ್ಠ ಜ್ಞಾನವನ್ನಾದರೂ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಐತಿಹಾಸಿಕ ವಿಚಾರಗಳಾದ ಏಕೀಕರಣ, ಗಡಿ, ನೀರುಗಳನ್ನು ನ್ಯಾಯಿಕ ಹೋರಾಟಕ್ಕೆ ಸೀಮಿತಗೊಳಿಸಬೇಕು. ಅದಕ್ಕೆ ಪೂರಕವಾದ ರಾಜಕೀಯ ಮನೋಸ್ಥಿತಿಯನ್ನು ತರಲು ಹೆಣಗಬೇಕು. ರಸ್ತೆ ತಡೆ, ಬಂದ್, ಮೆರವಣಿಗೆ, ಅನಧಿಕೃತ ಮತಸಂಗ್ರಹ ಮುಂತಾದವನ್ನು ಇನ್ನೊಂದು ಪಕ್ಷವೂ ಮಾಡಬಲ್ಲುದು ಎಂಬುದನ್ನು ಅರಿತುಕೊಳ್ಳಬೇಕು. ಅದಕ್ಕೂ ಹೆಚ್ಚಾಗಿ ಇಂಥವನ್ನು ಸಮಾಜವಿರೋಧೀ ಶಕ್ತಿಗಳು ದುರ್ಬಳಸಿಕೊಳ್ಳುತ್ತವೆ. ಈ ಮೂಲಭೂತ ಗೊಂದಲಗಳು ಬಗೆಹರಿದರೆ ತಂತಾನೇ ಈ ರಾಜ್ಯೋತ್ಸವ, ಪ್ರಶಸ್ತಿ, ಪುರಸ್ಕಾರ ಎಲ್ಲ ಅತಿರೇಕಗಳಿಗೂ ಅಂಕುಶ ಬೀಳುತ್ತದೆ.
ಇಂದು ಕರ್ನಾಟಕದೊಳಗೆ `ಕನ್ನಡ’ ಎಂಬ
ಒಂದು ವಿಚಾರದಲ್ಲಿ ಅದೆಷ್ಟು ದೊಡ್ಡದಾಗಿ, ಅಷ್ಟೇ ವ್ಯರ್ಥವಾಗಿ ಸರಕಾರೀ ಯಂತ್ರ ತೊಡಗಿದೆ, ಸಾರ್ವಜನಿಕ
ಹಣ ಹಾಳಾಗುತ್ತಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ
ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅನುವಾದ
ಅಕಾಡೆಮಿ. ಕನ್ನಡ ಜಾನಪದ ಅಕಾಡೆಮಿ, ಕನ್ನಡ ಸಿನಿಮಾ, ಕನ್ನಡ ಪತ್ರಿಕೋದ್ಯಮ, ಕನ್ನಡ ನಾಟಕ, ಕನ್ನಡ
ವಿಶ್ವವಿದ್ಯಾನಿಲಯ..... ಇವುಗಳನ್ನು ಹೊರತುಪಡಿಸಿಯೂ ಇರುವೆಲ್ಲ ಸರಕಾರೀ ಇಲಾಖೆಗಳು, ಕನ್ನಡ ಸಾಹಿತ್ಯ
ಪರಿಷತ್ತು ಸೇರಿದಂತೆ ಸಾವಿರಾರು ಖಾಸಗಿ ಸಂಘ ಸಂಸ್ಥೆಗಳೂ `ಕನ್ನಡ’ ಎಂಬ ಕಬಂಧ-ಬಾಯಿ (ರಾಮಾಯಣದಲ್ಲಿ
ದೇಹವೆಲ್ಲ ಹೊಟ್ಟೆಯಾದ ರಕ್ಕಸನದು) ಕಳೆಯುತ್ತ, ಸಾರ್ವಜನಿಕ ಹಣದ (ಅದಕ್ಕೆ ಗೌರವಯುತ ಪದ `ಅನುದಾನ’!)
ಹಸಿವಿನಲ್ಲಿ ಬಳಲುತ್ತಲೇ ಇರುತ್ತವೆ. ಇವೆಲ್ಲವೂ ಮಾಡುವ
ಬಹಳ ಮುಖ್ಯ ಕಲಾಪ `ಕನ್ನಡದ ಪ್ರೋತ್ಸಾಹ’. ಅದು ಹೇಗೆ ಎಂದು ವಿವರಕ್ಕಿಳಿದರೆ, ಹಣದ ಬಟವಾಡೆ ಒಂದೇ
ಕಾಣುತ್ತದೆ. ಅದೂ ಸರದಿಯಲ್ಲಿ ಮುಕ್ಕುವ ಬಾಯಿಗಳನ್ನು ಹೆಚ್ಚಿಸುತ್ತವೆಯೇ ವಿನಾ ದುಡಿಯುವ ಕೈಗಳನ್ನಲ್ಲ
ಎನ್ನುವುದು ತೀರಾ ವಿಷಾದದ ಸಂಗತಿ. ಈ ಬಟವಾಡೆ ಎಲ್ಲ ಇಲಾಖೆ, ಸಂಘಗಳ ನಡುವೆ ಸ್ಪರ್ಧಾತ್ಮಕವಾಗಿ ಹೆಚ್ಚುತ್ತ,
ಮೊತ್ತದಲ್ಲಿ ಏರುತ್ತಲೇ ಸಾಗುತ್ತಿರುವುದು ಇನ್ನೂ ದೊಡ್ಡ ದುರಂತ. ಆ ನಿಟ್ಟಿನಲ್ಲಿ ಪ್ರಸ್ತುತ ರಾಜ್ಯೋತ್ಸವ
ಪ್ರಶಸ್ತಿ ಎಷ್ಟೇ ಪಾರದರ್ಶಕ, ಯೋಗ್ಯತಾನುಸಾರಿಯೇ ಆಗಿದ್ದರೂ ನನಗೆ ಸಂಕಟವನ್ನೇ ಕೊಡುತ್ತಿದೆ.
ನಾನು ಮೇಲೆ ಹೆಸರಿಸಿದಷ್ಟೇ ಜನವಲ್ಲ,
ಪಟ್ಟಿಯ ಎಲ್ಲರೂ (ಅರವತ್ತೋ ಹೆಚ್ಚೋ) ಅಪ್ಪಟ ಚಿನ್ನಗಳೆಂದೇ ಇಟ್ಟುಕೊಳ್ಳೋಣ. ಯಾರ ಸಾಧನೆಗಳನ್ನು ಸ್ವಲ್ಪವೂ
ಅವಮಾನಿಸುವ ಉದ್ದೇಶವಿಲ್ಲದೆ, ಕೇವಲ ಸರಕಾರದ ಬಟವಾಡೆ ಕ್ರಮವನ್ನು ವಿಶ್ಲೇಷಿಸಿದಾಗ, ನನ್ನ ಸಂಕಟಕ್ಕೆ
ವಿವರಣೆ ಕೊಟ್ಟಂತಾಗುತ್ತದೆ. ಉದಾಹರಣೆಗೆ ನನ್ನದೇ ಪ್ರಕಟಣೆ `ನೃತ್ಯಲೋಕ’ ತೆಗೆದುಕೊಳ್ಳಿ. ಇದಕ್ಕೆ
ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ, ಲಲಿತಕಲಾ ಅಕಾಡೆಮಿ, ಸಂಗೀತ ನೃತ್ಯ ವಿಶ್ವವಿದ್ಯಾನಿಲಯ
ಇನ್ನೂ ಒಂದಷ್ಟು ಹೆಸರುಗಳಲ್ಲಿ ಏಕಕಾಲಕ್ಕೆ ಪುರಸ್ಕಾರ ಪಡೆಯುವ ಅವಕಾಶವಿದೆ. ಇನ್ನದರ ಲೇಖಕನಿಗೂ ಹಾಗೇ.
ಮೊದಲೇ ಹೇಳಿದಂತೆ ರಾಜ್ಯದ ಉನ್ನತ ಪ್ರಶಸ್ತಿಗಳ (ರತ್ನ, ಪಂಪ, ಅತ್ತಿಮಬ್ಬೆ ಇತ್ಯಾದಿ) ಪೈಕಿ ಒಂದಾದ
`ಶಾಂತಲಾ’ ಬಂದಿದೆ. ಮೇಲಿನಿಂದ ರಾಜ್ಯೋತ್ಸವ ಪ್ರಶಸ್ತಿ ಈಗ. ಮುಂದೆ ಇನ್ನೂ ಹತ್ತೆಂಟು ಗೌರವಗಳು
(ನೆನಪಿರಲಿ, ಹಣವಿಲ್ಲದೆ ಯಾವುದೂ ಇಲ್ಲ) ಬರಬಾರದೆಂದೂ ಇಲ್ಲ. ಅಂದರೆ ಒಂದೇ ಮೂಲದ (ಕರ್ನಾಟಕ ಸರಕಾರ)
ಸಾರ್ವಜನಿಕ ಹಣ ಹೀಗೆ ನೂರೆಂಟು ಕಿಂಡಿಗಳಲ್ಲಿ ಹರಿದು ಹೋಗುವುದು ಸರಿಯೇ? ಇದಕ್ಕೂ ಮೂಲದ ಪ್ರಶ್ನೆ
– ರಾಜ್ಯ ಸರಕಾರ ಇಂಥವುಗಳಲ್ಲಿ ತೊಡಗಿಕೊಳ್ಳಬೇಕೇ? ಇದನ್ನು ನಾನು ಇಲ್ಲೇ ಪ್ರಕಟವಾಗಿರುವ ನನ್ನ ಹಿಂದಿನ
ಲೇಖನ - ಪ್ರಜಾಸತ್ತೆಗೆ ಅವಮಾನ – ಪ್ರಶಸ್ತಿ, ಸಮ್ಮಾನದಲ್ಲಿ ಚರ್ಚಿಸಿದ್ದೇನೆ. ಹಾಗಾಗಿ ಇನ್ನು ವಿಸ್ತರಿಸದೇ ವಿರಮಿಸುತ್ತೇನೆ.
ನೀವು ಬರೆದದ್ದು ಸರಿಯಾಗಿದೆ. ನೀವು ಹೆಸರಿಸಿದವರು ಹಾಗೂ ಇನ್ನೂ ಅನೇಕರು ಖಂಡಿತವಾಗಿ ಯೋಗ್ಯರೇ ಹೌದು. ಸರಕಾರ ಇಂಥ ಪ್ರಶಸ್ತಿಗಳನ್ನು ಕೊಡಬೇಕೆ ಅಂತ ನೀವು ಕೊನೆಗೆ ಕೇಳಿದ್ದು ಸರಿಯಾಗಿದೆ. ಸರಕಾರ ಕೊಡಬೇಕಾಗಿಲ್ಲ . ಆದರೆ ಪ್ರಾಮಾಣೀಕವಾಗಿ ಹೇಳುತ್ತೇನೆ, ಮುಂದೆ ಅಕಸ್ಮತ್ತಾಗಿ ನನಗೆ ಕೊಟ್ಟರೆ ನಾನೂ ತಗೋಳ್ಳದೆ ಹೋಗಲಾರೆ!!! ಜೋಕ್ಸ್ ಅಪಾರ್ಟ್, ಒನ್ ಅ ಸೀರಿಯಸ್ ನೋಟ್, ಸರಕಾರ ಇಂಥ ಪ್ರಶಸ್ತಿ ಮಾತ್ರವಲ್ಲ, ಇನ್ನೂ ಹಲವಾರು ರೀತಿಯಲ್ಲಿ ವ್ಯಕ್ತಿಗಳನ್ನು ಗುರುತಿಸಿ, ಗೌರವಿಸಿ, ದೊಡ್ಡ ಹುದ್ದೆಗಳ ಜವಾಬುದಾರಿಯನ್ನು ನೀಡುತ್ತಲೇ ಇರುತ್ತದೆ. ಅಲ್ಲೆಲ್ಲವೂ ಸರಕಾರದ ವಿವೇಚನೆ ಅಂದರೆ ,ರಾಜಕೀಯ ಪ್ರಭಾವ,ಲಾಬಿ ಇತ್ಯಾದಿ ಎಲ್ಲವೂ ಇರುತ್ತೆ.ನೃಪತುಂಗ ಪ್ರಶಸ್ತಿಯಂಥ ಸಾಹಿತ್ಯ ಪ್ರಶಸ್ತಿ ನೋಡಿ. ಸಾಹಿತ್ಯ ಪ್ರಶಸ್ತಿಗಳು ಅಂತಲ್ಲ, ಕುಲಪತಿ,ಪ್ರಾಧಿಕಾರ ಇತ್ಯಾದಿ ನೇಮಕಾತಿ ಪ್ರಕ್ರಿಯೆಗಳು ಕೂಡ ಹಾಗೆಯೆ. ಹಾಗೆ ನೋಡಿದರೆ ಈ ಪ್ರಶಸ್ತಿಗಳನ್ನು ಪಡೆದವರಿಂದಾಗಿ ಸಮಾಜಕ್ಕೆ ದೊಡ್ಡ ಹಾನಿಯಾಗುವುದಿಲ್ಲ-ಒಂದಷ್ಟು ಹಣ ವ್ಯರ್ಥವಾಗಿ ಅವರಿಗೆ ಸಮ್ದಾಯವಾಗುತ್ತೆ ಅನ್ನುವುದನ್ನು ಹೊರತುಪಡಿಸಿದರೆ. ಆದರೆ ಮೇಲೆ ಹೇಳಿದ ಇತರ ನೇಮಕಾತಿಗಳು ಅಪಾತ್ರರ ಪಾಲಾದರೆ ದೊಡ್ಡ ಮತ್ತು ದೂರಗಾಮಿ ಹಾನಿಯಾಗುತ್ತದೆ. ಇನ್ನು ಪ್ರಜಾಪ್ರಭುತ್ವದಲ್ಲಿ ನಾವು ಅಯೋಗ್ಯರನ್ನೇ ಚುನಾವಣೇಯಲ್ಲಿ ಬಹುಮತದೊಂದಿಗೆ ಆರಿಸುತ್ತೇವೆ ಅಂದ ಮೇಲೆ ಈ ಪ್ರಶಸ್ತಿಗಳ ಪಾತ್ರ ಅಷ್ಟೆನು ದೊಡ್ಡದಲ್ಲವೇನೋ. - ಅಜಕ್ಕಳ ಗಿರೀಶ
ReplyDeleteNamaskara priyare.
ReplyDeleteI totally agree with you.
Hope the tax payers sentiments and money will be well respected.
Wishes.