28 October 2016

ಯಶಸ್ಸಿನ ಉತ್ತುಂಗದಲ್ಲಿ – ಪರ್ವತಾರೋಹಣ ಸಪ್ತಾಹ

(ಪರ್ವತಾರೋಹಣ ಸಪ್ತಾಹದ ಏಳನೇ ಅಧ್ಯಾಯ)

ಸಪ್ತಾಹದ ಕೊನೆಯ ದಿನದಂದು ಸಮಾರೋಪದ ಸಭಾ ಕಲಾಪವೂ ನೀವೇ ಅನುಭವಿಸಿ ಕಾರ್ಯಕ್ರಮದ ನಾಂದಿಯೂ ಸೇರಿ ಸಮನಿಸಿತ್ತು. ಆರೋಹಣಕ್ಕೆ ಸಲಕರಣೆಗಳ ದಾನಕೊಟ್ಟು, ಪರೋಕ್ಷವಾಗಿ ನಮ್ಮ ಚಟುವಟಿಕೆಗಳಿಗೆ ಸಂಘಟಿತ ರೂಪಗೊಟ್ಟ ಡಿ. ವಿರೇಂದ್ರ ಹೆಗ್ಗಡೆಯವರದೇ ಸಂಸ್ಥೆ – ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಅದಕ್ಕೆ ಅಪ್ಯಾಯಮಾನವಾದ ಆತಿಥೇಯ. ನಮ್ಮೆಲ್ಲ ಆಶಯಗಳಿಗೂ ಪೂರ್ಣ ಬೆಂಬಲ ಕೊಟ್ಟವರು ಕಾಲೇಜಿನ ಪ್ರಾಂಶುಪಾಲ ಪ್ರೊ| ಎಸ್. ಪ್ರಭಾಕರ್. ಪ್ರಭಾಕರರಿಗೆ ನನ್ನ ಹೆಂಡತಿ ದೇವಕಿ ಮತ್ತವಳ ತಂಗಿಯಂದಿರಿಬ್ಬರೂ ತಮ್ಮದೇ ಕಾಲೇಜಿನ ವಿದ್ಯಾರ್ಥಿನಿಯರು ಎಂಬ ಹೆಚ್ಚಿನ ಹೆಮ್ಮೆ. ಅವರ ಲೆಕ್ಕದಲ್ಲಿ ಕಲಾಪಗಳು ಕಾಲೇಜಿನದೇ 'ಅಳಿಯ'ನದು!
ಸಭೆಗೆ ಮುಖ್ಯ ಅತಿಥಿಯಾಗಿ ಪರಿಸರ ಪ್ರೀತಿಯ ಶಂಪಾ ದೈತೋಟರನ್ನೇ ಕರೆಸಿದ್ದರು. ಅನ್ಯ ಕಾರ್ಯಾರ್ಥ ಮೈಸೂರಿನಿಂದ ಪುತ್ತೂರಿನವರೆಗೆ ಬಂದಿದ್ದ ನನ್ನಪ್ಪಮ್ಮಾದಿ ಕೆಲವು ಬಂಧುಗಳೂ ಕೇವಲ ನನ್ನ ಹಾರಾಟಕ್ಕೆ ಸಾಕ್ಷಿಯಾಗಲು ಉಜಿರೆಗೆ ಬಂದಿದ್ದರು. ಆದರೆ ಕಾಲೇಜಿನ ಪ್ರಾಂಶುಪಾಲರು ಅಷ್ಟಕ್ಕೆ ಬಿಡದೆ, ನನ್ನ ತಂದೆಯನ್ನೂ ಇನ್ನೋರ್ವ ಅತಿಥಿ ಎಂದೇ ಪರಿಗಣಿಸಿ, ವೇದಿಕೆಗೇರಿಸಿ, ವಿಶೇಷ ಭಾಷಣವನ್ನೂ ಮಾಡಿಸಿ ಬಿಟ್ಟರು. (ಸಪ್ತಾಹಕ್ಕೆ ಮುನ್ನುಡಿಯಾಗಿ ತಂದೆ ಉದಯವಾಣಿ ಪತ್ರಿಕೆಗೆ ಬರೆದಿದ್ದ ಪತ್ರ ಅವರ ಮಾತಿನ ಆಧಾರ ಶ್ರುತಿಯಂತೇ ಇದೆ. ಆಸಕ್ತರು ಇಲ್ಲಿರುವ ಯಥಾಪ್ರತಿಯನ್ನೇ ದೊಡ್ಡದು ಮಾಡಿ ಓದಿಕೊಳ್ಳಬಹುದು).
ಇಲ್ಲಿ ನಾನು ಚಾರ್ಮಾಡಿಯಿಂದ ಶಿರಾಡಿಗೆ (ಆಸಕ್ತರು ಹೆಸರಿನ ಮೇಲೆ ಚಿಟಿಕೆ ಹೊಡೆದು ಈಗಲೂ ಕೇಳಬಹುದು) ನಡೆಸಿದ ಸಾಹಸಯಾನವನ್ನೇ ವಿಶೇಷ ಭಾಷಣವಾಗಿ ವಿಸ್ತರಿಸಿದೆ. ಹಿಂದಿನ ಆರು ದಿನಗಳಿಗೆ ಹೋಲಿಸಿದರೆ ಇಲ್ಲಿ ಮಾತುಗಳು ತುಸು ಹೆಚ್ಚೇ ಆಯ್ತೋ ಏನೋ. ಆದರೆ ನಮ್ಮ ಉದ್ದೇಶವಾದರೂ  ಕಾಲೇಜಿನ ಕಲಾಪ ಮುಂದಿನ ಸಾರ್ವಜನಿಕ ಕಲಾಪಕ್ಕೆ, ಅಂದರೆ, `ನೀವೇ ಅನುಭವಿಸಿ – ನಿಶಾಚಾರಣ ಮತ್ತು ಏರಿಕಲ್ಲು ಏರೋಣ’ಕ್ಕೆ ಸೇತುವಾಗಬೇಕಿತ್ತು; ಹಾಗೇ ಆಯ್ತು. ಪ್ರದರ್ಶನ ಮತ್ತು ಸಭೆ ಮುಗಿಯುವಾಗ ರಾತ್ರಿಯೂಟಕ್ಕಷ್ಟೇ ಬಿಡುವು ಉಳಿದಿತ್ತು!

ಪರ್ವತಾರೋಹಣವನ್ನು ವಾಣಿಜ್ಯೀಕರಿಸುವ ಉಮೇದು ಆರೋಹಣಕ್ಕಿರಲಿಲ್ಲ. ನಾವು ಪ್ರದರ್ಶನ ಕೊಟ್ಟ ಕಾಲೇಜುಗಳಲ್ಲಿ ಕೆಲವೆಡೆ ಅಯಾಚಿತವಾಗಿ ನಮಗೆ ಗೌರವಧನ ಕೊಟ್ಟರು. ಅಂಟುಚೀಟಿ ಮಾರಿದ್ದರಿಂದ ಸ್ವಲ್ಪ ಹಣವಾಗಿತ್ತು. ಇವುಗಳ ಮೊತ್ತ ಆರೂ ದಿನ ನಮ್ಮ ತಂಡ ಊರೂರು ತಿರುಗಿದಾಗ ಬಸ್ಸಿನ ವೆಚ್ಚ, ಕೆಲವೆಡೆ ಊಟ ಉಪಾಹಾರಕ್ಕೆ ಒದಗಿತ್ತು. ಕೊರತೆ ಬಂದಲ್ಲಿ ವೆಚ್ಚವನ್ನು ಅಂದಂದು ಭಾಗವಹಿಸಿದವರೊಳಗೆ ಸಮಾನವಾಗಿ ಹಂಚಿಕೊಳ್ಳುವುದೆಂದೇ ಯೋಚಿಸಿದ್ದೆವು. ಆದರೆ ಅದರ ಅಗತ್ಯ ಬರಲಿಲ್ಲ. ಹೆಚ್ಚಿನೆಲ್ಲ ಕಾಲೇಜುಗಳು ನಮಗೆ ಊಟ ಉಪಾಹಾರವಂತೂ ಕೊಟ್ಟೇ ಕೊಟ್ಟರು, ಅಯಾಚಿತ ಗೌರವಧನ ಬೋನಸ್. ನೀವೇ ಅನುಭವಿಸಿ ಕಲಾಪಕ್ಕೆ ನಾವು ಅನಿವಾರ್ಯ ಉಪಚಾರಗಳನ್ನಷ್ಟೇ ಪೂರ್ವ ಪರಿಚಿತ ಕೆಲವು ದಾನಿಗಳಿಂದ ಬಯಸಿದೆವು. ಜಿಲ್ಲೆಯ ವಿವಿಧ ಮೂಲೆಗಳಿಂದ ಬಂದು, ಹೋಗುವ ವೆಚ್ಚವನ್ನು ಆಯಾ ಅಧ್ಯಾಪಕ, ವಿದ್ಯಾರ್ಥಿ ಮಿತ್ರರ ಬಳಗಗಳೇ ವಹಿಸಿಕೊಂಡವು. ಅನ್ನದಾನಕ್ಕೆ ಹೆಸರಾಂತ ಧರ್ಮಸ್ಥಳದ ಅಂಗವೇ ಆದ ಸಿದ್ಧವನದಲ್ಲಿ ಎಲ್ಲ ಭಾಗಿಗಳಿಗೂ ಉಚಿತ ಊಟದ ವ್ಯವಸ್ಥೆಯಾಗಿತ್ತು. ಆರೋಹಣದ ಸದಸ್ಯರು ಮತ್ತು ಹದಿನೈದು ಹೆಂಗಳೆಯರೂ ಸೇರಿ ೯೪ ಮಂದಿಯ ತಂಡ, ಊಟ ಮುಗಿಸಿ ಮತ್ತೆ ಕಾಲೇಜು ವಠಾರಕ್ಕೆ ಬಂದು ಪೂರ್ವ ನಿಗದಿಯಂತೆ ಒಂಬತ್ತೂವರೆಯ ಮುಹೂರ್ತಕ್ಕೆ ಕಾದಿದ್ದರು. ತಂಡಕ್ಕೆ ಮುಂದಾಳು, ಹಿಂದಾಳು ಮತ್ತು ನಡನಡುವೆ ಪ್ರೋತ್ಸಾಹದ ನುಡಿ ಕೊಡುತ್ತ ನಿಶಾಚಾರಣ ಯಶಸ್ವಿಗೊಳಿಸುವುದನ್ನು ಆರೋಹಣದ ಸದಸ್ಯರು ಸಹಜವಾಗಿ ವಹಿಸಿಕೊಂಡಿದ್ದರು. ಸಪ್ತಾಹದ ಸಮಾರೋಪಕ್ಕೆ ಬಂದಿದ್ದ ಶಂಪಾ ದೈತೋಟರ ಮನೆಯಾದರೋ ಚಾರಣದ ದಾರಿಯಲ್ಲೇ ಸಿಗುವ ಮುಂಡಾಜೆಯಲ್ಲಿತ್ತು. ಅದನ್ನು ನೆಪ ಮಾಡಿಕೊಂಡು ಅವರು “ಕ್ರಿಯೆಯಲ್ಲೂ ನಿಮ್ಮೊಡನಿದ್ದೇನೆ” ಎಂದು ತೋರಿಸಲು ಅಲ್ಲಿವರೆಗೆ ನಡೆದೇ ಜತೆಗೊಡಲು ಕಾದಿದ್ದರು. ಇದು ತಂಡಕ್ಕೆ ಹೆಚ್ಚಿನ ಕುಮ್ಮಕ್ಕು ಕೊಟ್ಟಿತು. ಒಂಬತ್ತೂವರೆಗೆ ಸರಿಯಾಗಿ ಪ್ರಾಂಶುಪಾಲ ಪ್ರಭಾಕರರು ನಿಶಾನಿ ಹಾರಿಸುವುದರೊಂದಿಗೆ ನಿಶಾಚಾರಣ ಮೊದಲ್ಗೊಂಡಿತು.

ಸುಮಾರು ಹದಿನಾಲ್ಕು ಕಿಮೀ ಚಾರಣದ ಕೊನೆಯಲ್ಲಿ ಕಗ್ಗಾಡಿನೊಳಗೆ ಕಚ್ಚಾ ವಿರಾಮತಾಣ ಗುರುತಿಸಿ, ಕನಿಷ್ಠಾವಶ್ಯಕತೆಗಳನ್ನು ಸಜ್ಜುಗೊಳಿಸಲು ನಾನು ಮತ್ತೊಬ್ಬ ಗೆಳೆಯ (ಬಹುಶಃ ಸಮೀರನಿದ್ದಿರಬೇಕು) ಮುಂದಾಗಿ ಹೊರಟಿದ್ದೆವು. ನಮಗನುಕೂಲಕ್ಕೆ ಒದಗಿದವರು ನೆರಿಯ ಹೆಬ್ಬಾರರು. ಎರಡು ಬುಟ್ಟಿ ತುಂಬಾ ವಗ್ಗರಿಸಿ ಕಲಸಿದ ಅವಲಕ್ಕಿ, ಧಾರಾಳ ಬಾಳೇಹಣ್ಣು ಮತ್ತು ಎಲ್ಲ ಸಾಗಿಸಲು ಚಾಲಕ ಸಹಿತ ಜೀಪು ಅವರ ಸೇವೆ. ಚಾ ಕಾಯಿಸಲು ಜೀನಸು, ಪಾತ್ರೆ ಪರಡಿ, ನೀರಿನ ಕ್ಯಾನು, ಮಂಗಳೂರಿನ ಆಜಾದ್ ಕಾರ್ಖಾನೆ ಕೊಟ್ಟಿದ್ದ ಬಿಸ್ಕೆಟ್ ಡಬ್ಬಗಳು, ಶಿಲಾರೋಹಣದ ಸಲಕರಣೆಗಳನ್ನೆಲ್ಲ ಅದೇ ಜೀಪಿನಲ್ಲಿ ಹೇರಿಕೊಂಡಿದ್ದೆವು. ಚಾರ್ಮಾಡಿ ಘಾಟಿಯಲ್ಲಿ ಹದಿನಾಲ್ಕನೇ ಕಿಲೋ ಕಲ್ಲು, ಎಂದರೆ ಹಿಂದೆ ನಾವು ಏರಿಕಲ್ಲನ್ನು ಪ್ರಥಮ ಬಾರಿಗೆ ಏರಿದಾಗ (ನೋಡಿ: ಕೊಲಂಬಸ್ ಏರಿಕಲ್ಲನ್ನುಕಂಡ) ಡಾಮರು ದಾರಿ ಬಿಟ್ಟ ತಾಣದಲ್ಲಿ ಜೀಪಿಳಿದೆವು. ಮತ್ತೆ ಚಾಲಕ ಸೇರಿದಂತೆ ಎಲ್ಲ ಟಾರ್ಚ್ ಬೆಳಗಿಕೊಂಡು ತೊರೆ ದಾಟಿದೆವು. ಅಲ್ಲೇ ತುಸು ಆಚೆ ಸ್ವಲ್ಪ ಮಟ್ಟಸ ನೆಲ, ದೊಡ್ಡ ಮರಗಳಿದ್ದು, ಪೊದರು ವಿರಳವಿದ್ದ ತಾಣ ಆಯ್ದುಕೊಂಡೆವು, ಎಲ್ಲ ಹೊರೆಗಳನ್ನೂ ಸಾಗಿಸಿಕೊಂಡೆವು. ಕೊನೆಯಲ್ಲಿ ಜೀಪನ್ನು ಕಳಿಸಿಕೊಟ್ಟೆವು. ಉಳಿದ ಸಮಯದಲ್ಲಿ ನೆಲವನ್ನು ತುಸು ಹಸನುಗೊಳಿಸಿ, ತೊರೆಯಿಂದ ನೀರು ಸಂಗ್ರಹಿಸಿ, ಕೊನೆಯಲ್ಲಿ ಸುತ್ತ ಮುತ್ತ ಧಾರಾಳವೇ ಇದ್ದ ಉದುರು ಮರ, ಕೊಂಬೆಗಳನ್ನು ಶಿಬಿರಾಗ್ನಿಗೆಂದು ಒಟ್ಟುತ್ತಾಹೋದೆವು. ಚಾರಣಿಗರು ಬರುವ ವೇಳೆ ಅಂದಾಜಿಸಿ, ನಿಯಂತ್ರಿತ ಶಿಬಿರಾಗ್ನಿ ಎಬ್ಬಿಸಿದೆವು. ತೊರೆಯಿಂದ ಸಂಗ್ರಹಿಸಿದ ನೀರನ್ನು ಪ್ರತ್ಯೇಕ ಹೂಡಿದ ಒಲೆಯಲ್ಲಿ ಕಾಯಿಸಿ ಚಾ ಬಿಸ್ಕೆಟ್ ಕೊಡಲೂ ಸಜ್ಜಾಗಿ ಕುಳಿತೆವು.

ಇತ್ತ ಮುಖ್ಯ ತಂಡವಾದರೋ ಚಂದ್ರನ ಬೆಳಕಿನಲ್ಲಿ ಡಿಸೆಂಬರ್ ತಣ್ಪು ಹರಿಯುವಂತೆ ಬಿರುಸಾಗಿಯೇ ನಡಿಗೆಗಿಳಿದಿತ್ತು. ಏಗ್ನೆಸ್ ಕಾಲೇಜಿನ ಅಧ್ಯಾಪಕ ಜಯಂತ – ಆರೋಹಣದ ಸದಸ್ಯ, ಸಣ್ಣಾಳು, ತಂಡದ ಮುಂಚೂಣಿಯಲ್ಲಿದ್ದರು. ಸ್ವೆಟ್ಟರ್ ಹಾಕಿ, ತಲೆಗೆ ಮಂಗನತೊಪ್ಪಿ ಏರಿಸಿ, ಬಗಲಲ್ಲಿ ಸ್ವಂತ ಅಗತ್ಯಗಳ ಚೀಲ ಜೋತು ಹಾಕಿಕೊಂಡಿದ್ದ ಜಯಂತರನ್ನು ನಾನು “ಭೋ ಸ(ಚ)ಳಿ ಚಿಕ್ಕೇಗೌಡ್ರೇ. ಒಂದ್ ಬೀಡಿ ಹಚ್ಕಳೀ” ಎಂದೇನೋ ತಮಾಷೆ ಮಾಡಿದ್ದೆ! ನಡೆನಡೆಯುತ್ತಿದ್ದಂತೆ ಅವರು ಕವಚಗಳನ್ನೆಲ್ಲ ಕಳಚಿಕೊಂಡು, ಜಯಂತಾಚಾರ್ ಆಗಿ (ಇವರು ಕರ್ನಾಟಕ ಸಂಗೀತದಲ್ಲಿ ಪಿಟೀಲು ಪ್ರಾವೀಣ್ಯವುಳ್ಳವರು) ಘಟ್ಟದ ಬಾಗುಬಳಕಿನ ಆರೋಹಣಕ್ಕೆ ಸಮರ್ಥ ಸಾಥ್ ನೀಡಿದ್ದು ಆಶ್ಚರ್ಯವಲ್ಲ. ಪ್ರದರ್ಶನಗಳಲ್ಲಿ ನಮ್ಮ ಹಗ್ಗಗಳನ್ನು ಗೋಡೆಯ ಅಂಚು ಘಾಸಿಗೊಳಿಸದಂತೆ ನಾವು ಒಂದೆರಡು ಗೋಣಿ ಹಾಸಿಕೊಳ್ಳುತ್ತಿದ್ದೆವು. ಆಗಿನ್ನೂ ವಿದ್ಯಾರ್ಥಿ ದೆಸೆ ಕಳಚಿಕೊಳ್ಳದ ಸುಬ್ರಾಯ ಕಾರಂತರಿಗೆ ಅದರ ಜವಾಬ್ದಾರಿ; ಕೀಟಲೆ ಪ್ರವೀಣ ಶರತ್ತಿನ ಬಾಯಲ್ಲಿ ಅವರು ಗೋಣಿಕಾರಂತ! ಹಾಗೆಂದು ಶರತ್ತಿನ ಜಾತಕ ಶುದ್ಧ ಮಾಡಲು ಆರೋಹಣದ ಗೆಳೆಯರ ಬಳಗದಲ್ಲಿ ಜನಗಳೇನು ಕಡಿಮೆಯಿರಲಿಲ್ಲ. ಇನ್ನೂ ಹರಯ ಇಪ್ಪತ್ತೈದು ದಾಟದ ತಾರುಣ್ಯದಲ್ಲೇ ಆತ ಸೂರ್ಯನ ಬಾಯಲ್ಲಿ “ಅಜ್ಜೇರ್.” ಸೂರ್ಯನಿಗೆ ಶರತ್ತನ ಪ್ರತ್ಯಸ್ತ್ರ “ಹ್ಯಾಪೆ.” ಇಂದು `ಆಚಾರ್’ ಬಿಟ್ಟ ಹರೀಶ್ (ಪೇಜಾವರ) ಬಾಯಿಗೆ ಸಿಕ್ಕಿದರಂತೂ ಶರನ್ನಾಮ ಶತಸಹಸ್ರ ಮೀರುವುದಿದೆ! ಅವರಲ್ಲದೆ ಕಿರಣ್ ಕುಲಕರ್ಣಿ, ರೋನಾಲ್ಡ್, ಪ್ರಕಾಶ್ ನಾಟೇಕರ್, ಬಾಲಕೃಷ್ಣ, ಸಮೀರರಾವ್ ಮುಂತಾಗಿ ಇಂದು ನನ್ನ ನೆನಪಿನಿಂದ ಜಾರಿದ ಅಸಂಖ್ಯ ಮಿತ್ರ ಬಳಗ ಯಾವುದೇ ಹಣ, ಹೆಸರು, ಪ್ರಶಸ್ತಿಗಳ ಮೋಹವಿಲ್ಲದೇ ಆ ದಿನಗಳಲ್ಲಿ ಒಗ್ಗೂಡಿದ್ದಕ್ಕೆ ಒಟ್ಟು ಕಲಾಪಗಳು ನಿರ್ಯೋಚನೆಯಿಂದ ನಿರ್ವಿಘ್ನವಾಗಿ ನಡೆಯಿತು.

ದಾರಿಯೇನೋ ಚಾರ್ಮಾಡಿ ಹಾಯ್ದು ಮೂಡಿಗೆರೆ, ಚಿಕ್ಕಮಗಳೂರಾದಿ ಮುಖ್ಯ ಊರುಗಳಿಗೇ ಹೋಗುವ ರಾಜಮಾರ್ಗವೇ ಸರಿ. ಆದರೆ ಪಶ್ಚಿಮ ಘಟ್ಟದ ನೇರ ತಪ್ಪಲಾದ್ದರಿಂದ ಉಜಿರೆ ಕಳೆದು ಕೆಲವೇ ಅಂತರದೊಳಗೆ ಕಾಡಿನ ವಾತಾವರಣ ಗವ್ವೆಂದು ಮುಸುಕಿಕೊಂಡಿತ್ತು. ಇದನ್ನು ದೊಡ್ಡ ತಂಡವೊಂದರ ಭಾಗವಾಗಿ ಹೊಗುವಾಗ ಎಲ್ಲರಿಗೂ ಏನೋ ಅಪೂರ್ವ ಸಾಧಿಸುತ್ತಿರುವ ಭಾವ. ಅಪರೂಪಕ್ಕೆ ಸಿಗುತ್ತಿದ್ದ ವಾಹನಗಳಿಗೆ, ಮೊದಮೊದಲಲ್ಲಿ ಇನ್ನೂ ಎಚ್ಚರವಿದ್ದ ದಾರಿ ಬದಿಯ ಕೆಲವು ಹಳ್ಳಿ ಮನೆಗಳವರಿಗೂ ಇದು ಒಂದು ಚೋದ್ಯ. ಮುಂಡಾಜೆ ಹೋಯ್ತು, ಕಕ್ಕುಂಜೆ ಹಿಂದೆ ಬಿದ್ದಮೇಲೆ ಮೊದಲ ವಿರಾಮ ಚಾರ್ಮಾಡಿ ಗೇಟಿನಲ್ಲಿ. ಅಕಸ್ಮಾತ್ತಾಗಿ ಇನ್ನೂ ತೆರೆದಿದ್ದ ಅಲ್ಲಿನ ಗೂಡಂಗಡಿ, ಹೋಟೆಲುಗಳಿಗೆ  ಅನಿರೀಕ್ಷಿತ `ಲಕ್ಷ್ಮೀಯೋಗ’! ಒಂದೇ ಚಾಪುಂಡಿ ಮತ್ತೆ ಮತ್ತೆ ಕಾಯಿಸಿ ಹಿಂಡಿದ್ದಕ್ಕೆ, ಧಾರಾಳ ನೀರು ಸೇರಿಸಿಕೊಂಡ ಗುಟುಕು ಹಾಲು ಸಮರ್ಥ ಜೊತೆಯಾಗಿ ಕೊನೆಯಲ್ಲಿ “ಚುಡುಚುಡು ಚಾ” ಎಂದು ಕುಡಿದವರಿಗೆ ಸಿಕ್ಕಿದ್ದು ನಾಲಿಗೆ ಚುರುಗುಟ್ಟಿಸುವ ಸಕ್ಕರೆ ನೀರೇ ಇದ್ದಿರಬೇಕು.

ಚಂದ್ರ ಮರೆಯಾಗಿ, ಏರುದಾರಿ ಬಿಗಿಯಾಗಿ ಹಲವರಿಗೆ ನಡಿಗೆಯ ಲಯ ತಪ್ಪತೊಡಗಿತ್ತು. ಸಂದು, ಸ್ನಾಯುಗಳು ಕಿರುಗುಟ್ಟುವುದನ್ನು ಕೇಳಿದ್ದೇವೆ ಎನ್ನುತ್ತ ವಿಶ್ರಾಂತಿಯ ಒಲವು ತೋರುತ್ತಿದ್ದರು. ಆರಂಭ ಶೂರರು ಹಿಂದೆ ಬೀಳತೊಡಗಿದರೆ, ಸಮಚಿತ್ತದವರು ಮುಂದೊತ್ತತೊಡಗಿದರು. ಮೊದಲು ಕವಾಯತು ಗಾನಕ್ಕೆ ಹೆಜ್ಜೆ ಜೋಡಿಸಿದವರು ಕಾಲೆಳೆಯುತ್ತಿದ್ದರು. ಅತ್ತಿತ್ತ ಟಾರ್ಚು ಬೆಳಗಿ, ಅನಾವಶ್ಯಕ ಹುಯ್ಯಲೆಬ್ಬಿಸಿ ಸುಸ್ತನ್ನು ಮರೆಸಲು ಹೆಣಗುತ್ತಿದ್ದರು. ಕೊಳ್ಳದ ಆಳಗಳಿಗೆ ಆಶ್ಚರ್ಯದ ಉದ್ಗಾರಗಳನ್ನೆಸೆದು, ಮಸುಕಾಗಿ ಕಾಣಿಸಿದ ಎತ್ತರಗಳನ್ನು ಏರಿಕಲ್ಲೇ ಇರಬೇಕೆಂದು ಭ್ರಮಿಸುತ್ತ ದಾರಿ ಸವೆಸಿದರು.

ಅಂತೂ ತಂಡ ದಿನ ಕಳೆದು ಬಂದ ದಿನದಲ್ಲಿ, ಅಂದರೆ ಅಪರಾತ್ರಿ ಎರಡು ಗಂಟೆಯ ಸುಮಾರಿಗೆ ಎಂಟನೇ ಹಿಮ್ಮುರಿ ತಿರುವು ಕಳೆದು ಶಿಬಿರತಾಣವನ್ನು ಸಮೀಪಿಸಿತು. ಕೂಗು ಪ್ರತಿಕೂಗುಗಳಲ್ಲಿ ಪರಸ್ಪರ  ಸಂಪರ್ಕ ಸಾಧಿಸಿದೆವು. ಅದುವರೆಗೆ ರಾಜಮಾರ್ಗದ ಅಗಲವೆಲ್ಲಾ ನಮ್ಮದೇ ಎನ್ನುವಂತೆ ಒಟ್ಟಾರೆ ನಡೆದಿದ್ದವರೆಲ್ಲಾ ಇಲ್ಲಿ ಶಿಸ್ತಿನ ಸಾಲು ಹಿಡಿಯಬೇಕಾಯ್ತು. ಎಲ್ಲಂದರಲ್ಲಿ ದೀಪ ಬಿಟ್ಟು ಅಸಡ್ಡಾಳ ಹೆಜ್ಜೆ ಎಸೆದವರೆಲ್ಲ ಪ್ರತಿ ಹೆಜ್ಜೆ ಎಣಿಸುತ್ತ, ಹಿಂದೆ ಮುಂದೆ ನೋಡುತ್ತ ಸಮತೋಲನ ಕಾಪಾಡಿಕೊಳ್ಳುವಲ್ಲಿ ಹೆಣಗಿದರು. ಕೆಲವರಂತೂ ಪೊದೆಗಳನ್ನು ಒರೆಸಿ, ಕಲ್ಲುಗಳನ್ನು ಎಡವಿ, ತೊರೆಯ ಶೀತಲ ನೀರಿನಲ್ಲಿ ಪಾದ ಬುಳುಂಕಿಸಿದರು. ಕೆಲವರು ಮುಖಕ್ಕೆ ನೀರು ತಳಿದುಕೊಂಡರೆ, ಹಲವರು ಹೊಟ್ಟೆಗೂ ನಿರ್ಯೋಚನೆಯಿಂದ ಇಳಿಸಿಕೊಂಡಿದ್ದರು. ಇಂದು, ಮೂವತ್ತಾರು ವರ್ಷಗಳ ಬೆಳವಣಿಗೆಯಲ್ಲಿ, ಯಾರೂ ಇಲ್ಲಿನ ದಾರಿ ಬದಿಯ ಯಾವ ತೊರೆನೀರನ್ನು ನೇರ ಬಳಸಲಾಗದಷ್ಟು ಮುಂದುವರಿದಿದ್ದೇವೆ! ಮೊನ್ನೆ ಮೊನ್ನೆ ಸೈಕಲ್ ಯಾನದಲ್ಲಿ ಗಮನಿಸಿದಂತೆ ತರಹೇವಾರಿ ನಾಗರಿಕ ಕಸ ಅರ್ಥಾತ್ ವಿಷ ವ್ಯಾಪಿಸದ ಶಿಖರ ಕಣಿವೆಗಳಿಲ್ಲ!

ಆಗಸದೆತ್ತರಕ್ಕೆ ಕೆನ್ನಾಲಗೆ ಚಾಚಿ ಶಿಬಿರಾಗ್ನಿ ಎಲ್ಲರನ್ನೂ ಸ್ವಾಗತಿಸಿತು. ಬಳಲಿಕೆಗೆ ನಾಲ್ನಾಲ್ಕು ಬಿಸ್ಕೆಟ್, ಮೇಲೆ ಬಿಸಿ ಬಿಸಿ ಚಾ ಹಾಕಿ, ಉಳಿದಷ್ಟು ರಾತ್ರಿಗೆ ನಿದ್ರೆ ಹೆಕ್ಕಿಕೊಳ್ಳಲು ಜಾಗ ಸಿಕ್ಕಲ್ಲಿ ಹೆಚ್ಚಿನವರು ಕೈಕಾಲು ಚಾಚಿದರು. ಜನ್ಮದಲ್ಲಿ ಒಂದು ಮೈಲೂ ನಡೆಯದ ಕೆಲವರು, ಸಮೂಹ-ಸನ್ನಿಯಲ್ಲಿ ಬೆಟ್ಟದ ದಾರಿ ಏರಿ, ಅದೂ ಹದಿನಾಲ್ಕು ಕಿಮೀ ಬಂದದ್ದಿರಬೇಕೆಂದು ಅವರು ಬಿದ್ದುಕೊಂಡ ಪರಿ ಹೇಳುತ್ತಿತ್ತು. ಪೊದರು, ಕಲ್ಲು, ದರಗು, ಮಾಟೆ ಮತ್ತೆ ಮರೆಯಲ್ಲಿರಬಹುದಾದ ಹುಳ ಹಾವುಗಳ ಅರಿವೇ ಅವರಿಗಿದ್ದಂತಿರಲಿಲ್ಲ. ಸಂಘಟಕರ ನೆಲೆಯಲ್ಲಿ ನಾವು ಬಾಯ್ದೆರೆ ಸಾಕಷ್ಟು ಎಚ್ಚರಿಸಿದ್ದೆವು. ಅದಲ್ಲದೆ ಉಳಿದ ಕತ್ತಲವಧಿ ಪೂರಾ ನಮ್ಮಲಿ ಕೆಲವರು ಟಾರ್ಚು ಬೆಳಗಿಕೊಳ್ಳುತ್ತಾ ಮಲಗಿದವರ ಎಡೆಗಳಲ್ಲಿ ಕಣ್ಗಾವಲು ನಡೆಸಿದ್ದೆವು. ಅದೆಲ್ಲ ಇಂದು ನೆನೆಸುವಾಗ ಆಶ್ಚರ್ಯವಾಗುತ್ತದೆ - ನಮ್ಮ ಅದೃಷ್ಟಕ್ಕೆ ಯಾರಿಗೂ ಯಾವುದೇ ಅಪಾಯ ತಟ್ಟಲಿಲ್ಲ!

ಲೋಕದ ಪರಿವೆಯಿಲ್ಲದೆ ಬಿದ್ದುಕೊಂಡ ಶಿಬಿರವಾಸಿಗಳಿಗೆ ಐದು ಗಂಟೆಗೇ ಉದಯರೋಗ ಕೇಳಿಸಿದೆವು. ಪ್ರಾತರ್ವಿಧಿಗಳಿಗೆ ತೊರೆಯನ್ನು ಅವರೆಲ್ಲ ಹೇಗೆ ಬಳಸಿದರು ಎಂದು ನಮ್ಮಲ್ಲಿ ಕಣ್ಣಿಟ್ಟವರಿಲ್ಲ. ಅನಂತರ ರಾತ್ರಿನಡಿಗೆಯ ಶ್ರಮ ಕಳೆದ ಮೇಲೆ ಅಮರಿದ್ದ ಚಳಿ ಹರಿಯುವಂತೆ ಚಾ ಹೀರಿ, ಬೆಟ್ಟದೆದುರು ಅವಲಕ್ಕಿ ಬೆಟ್ಟ ಕಟ್ಟಿ ಮುಕ್ಕಿ, ಗಂಟಲು ಕಟ್ಟದಂತೆ ಬಾಳೆಹಣ್ಣಿನಲ್ಲಿ ನೂಕಿ ಹೊಸತೇ ಸಾಹಸದ ಉಬ್ಬರದಲ್ಲಿದ್ದರು. ಕೇವಲ ಭ್ರಾಮಕ ಕಲ್ಪನೆ ಕಟ್ಟಿಕೊಂಡು ಬಂದು ತಂಡಕ್ಕೆ ತಡೆಯಾಗಬಾರದೆಂಬ ಎಚ್ಚರ ನಮ್ಮದು. ಹಾಗಾಗಿ ಏರಿಕಲ್ಲು ಏರೋಣದ ಕುರಿತು ತುಸು ಹೆಚ್ಚೇ ಬಣ್ಣ ಕಟ್ಟಿ ಹೇಳಿದಾಗ ಇಬ್ಬರು ಮಾತ್ರ ಹಿಂದೇಟು ಹಾಕಿದರು. ಅವರನ್ನು ಮತ್ತೆ ಬಂದಿದ್ದ ನೆರಿಯ ಜೀಪಿನಲ್ಲಿ, ಶಿಬಿರ ವ್ಯವಸ್ಥೆಯಲ್ಲುಳಿದ ಸಾಮಗ್ರಿಗಳೊಡನೆ ಉಜಿರೆಯತ್ತ ಕಳಿಸಿದ ಮೇಲೆ, ೯೨ರ ತಂಡ ಹಕ್ಕಿ ಹರಿಣಗಳು ಹರಿದೋಡುವಂತೆ ಹಾಕಿದರು ಬೊಬ್ಬೆ “ಏರಿಕಲ್ಲಿಗೆ ಜೈ! ಆರೋಹಣಕ್ಕೆ ಜೈ!”

ತುಸುವೇ ಬಲಕ್ಕೆ ಸರಿಯುತ್ತ ಹೆಚ್ಚು ಕಮ್ಮಿ ನೇರವಾಗಿ, ಜಾಡಿಲ್ಲದ ಬೆಟ್ಟಕ್ಕೆ ಲಗ್ಗೆ ಹಾಕಿದ್ದೆವು. ಅಗಾಧ ಮರಗಳ ಬುಡದಲ್ಲಿ, ಪೊದರುಗಳ ಎಡೆಯಲ್ಲಿ, ತುಂಡು ಬಂಡೆಗಳ ಬಳಸಿನಲ್ಲಿ ಜಾಡು ಮೂಡಿಸುತ್ತ ಸಾಗಿದೆವು. ಹುಲ್ಲಿನ ಮೇಲಿನ ಮಂಜಿನ ಮಣಿ ಮಿನುಗಿ, ಆರೋಹಿಗಳ ಹಣೆಯ ಮೇಲೆ ಬೆವರ ಹನಿಗಳು ಹರಿಯುವವರೆಗೂ ಏರುತ್ತಿದ್ದಂತೆ ಸೂರ್ಯ ಮೇಲೆ ಬಂದಿದ್ದ. ನುಸುಲು ಮಣ್ಣು ಜಾರಿದ್ದು, ಬೆತ್ತದ ಮುಳ್ಳ ಸರಿಗೆ ಮೈ ಕೊರೆದದ್ದು, ಮೈಮಾಲಿದ್ದಕ್ಕೆ ಮರದಬೊಡ್ಡೆಗೆ ತರಚಿದ್ದು, ಅಡಿಮಗುಚಿ ಕುಸಿದು ಕುಕ್ಕರಿಸಿದ್ದು, ಮುಳ್ಳಪೊದರಿಗೆ ಸಿಕ್ಕಿ ಶರಟು ಹರಿದದ್ದು, ಹೊತ್ತ ನೀರು ಸಾಲದೇ ಬಾಯಾರಿ ಬಳಲಿದ್ದು, ಏದುಸಿರು ಬಿಗಿದು ಕಣ್ಣು ಕತ್ತಲೆ ಕಟ್ಟಿದ್ದು – ಪಟ್ಟಿ ಮಾಡಿದಷ್ಟು ಮುಗಿಯದಂತೇ ಇದ್ದದ್ದೇ! ಅವರವರ ಮಿತಿಯಲ್ಲಿ, ಮಿತ್ರ ಬಳಗದ ಕುಮ್ಮಕ್ಕಿನಲ್ಲಿ ಚೇತರಿಸಿಕೊಳ್ಳುತ್ತ ಒಂಬತ್ತೂವರೆ ಗಂಟೆಯ ಸುಮಾರಿಗೆ ಪೂರ್ಣ ಕಾಡು ಹರಿದು ಬಂಡೆ ಗೋಡೆಯ ಹಂತಕ್ಕೆ ಮುಟ್ಟಿದ್ದೆವು. (ಭೌಗೋಳಿಕ ವಿವರಗಳ ಕುರಿತು ನಾನು ಮೊದಲೇ ಉಲ್ಲೇಖಿಸಿರುವ ನನ್ನ ಹಿಂದಿನ ಲೇಖನ ನೋಡಿ)

ತೊಂಬತ್ತೊಂದು ಸ್ವಭಾವಗಳನ್ನು (ನನ್ನನ್ನು ಬಿಟ್ಟು) ಇದೇ ಮೊದಲು ಎನ್ನುವಂತೆ ಮೆಟ್ಟಿಲು, ಸ್ಪಷ್ಟ ಜಾಡು ಇಲ್ಲದ ಗೋಡೆಯಂಥ ಕಲ್ಲ ಹಾಸು ಏರಿಸುವುದು ಸಾಮಾನ್ಯ ಕೆಲಸವಲ್ಲ. ಮೊದಲು ಶಿಲಾರೋಹಣದ ಕುರಿತು, ವೈಯಕ್ತಿಕ ರಕ್ಷಣೆ ಕುರಿತು ಸಣ್ಣ ಪಾಠ. ಅನಂತರ ಮಂದೆಯಾಗಿ ಬಂದವರನ್ನು ಬಂಡೆಯ ಚಡಿಯಲ್ಲಿ ಪಶ್ಚಿಮಕ್ಕೆ  ಸಾಲಾಗಿ ಸರಿಸಿ, ಆಯಕಟ್ಟಿನ ಸಂದೊಂದರಲ್ಲಿ ಏರುಮಂತ್ರ ಜಪಿಸಿದ್ದಾಯ್ತು. ಬಂಡೆಯ ಬಿರುಕು, ಚಡಿ, ಇಕ್ಕೆಲಗಳ ಆಧಾರ ಯಾವುದು ತಪ್ಪಿದರೂ ಆರೋಹಣದ ಸದಸ್ಯರು ಒದಗಿಸಿದ್ದ ಹಗ್ಗದ ರಕ್ಷಣೆ, ಒಬ್ಬೊಬ್ಬರನ್ನೇ ಶಿಖರವಲಯಕ್ಕೆ ದಾಟಿಸುತ್ತಿತ್ತು. ಒಟ್ಟಾರೆ ಬಳಲಿಕೆ, ಜಾರಿ ಉರುಳುವ ಭಯ, ತಂತ್ರಪಾಠದ ಮರೆವು ಹಲವರನ್ನು ಕಾಡಿದ್ದಿತ್ತು. ಕಾಲಿನ ನಡುಕ, ಮಾಂಸಖಂಡಗಳ ಸೆಟೆತ, ಕರುಣಾಕ್ರಂದನ, ಬಂಡೆಯನ್ನು ತಬ್ಬಿ ಮಲಗುವ ಪರಿ ವಿವರಿಸಿದಷ್ಟೂ ಮುಗಿಯದು. ಏರಿಕೆಯ ಮೇಲ್ತುದಿಯಲ್ಲಿ ಮತ್ತೆ ಸ್ವಲ್ಪ ಮಣ್ಣು, ಸಡಿಲ ಕಲ್ಲುಗಳೂ ಇದ್ದುವು. ಅವು ಏರುವವನ ಗಡಿಬಿಡಿಗೆ, ರಕ್ಷಣಾ ಹಗ್ಗದ ಓಲಾಟಕ್ಕೆ ಕೆಳಗುದುರುತ್ತಿದ್ದುದರಿಂದ ನಮ್ಮ ಸಂಖ್ಯೆ ಎಷ್ಟು ದೊಡ್ಡದಿದ್ದರೂ ಸರದಿಯಲ್ಲಿ ಒಬ್ಬೊಬ್ಬನಂತೇ ನಾವು ನಿಭಾಯಿಸುವುದು ಅನಿವಾರ್ಯವಾಯ್ತು. ಹೀಗೆ ಸುಮಾರು ಮೂರು ಗಂಟೆಗಳ ಅವಧಿಯ ಅವಿರತ `ನಿರ್ವಹಣೆಯ’ ಕೊನೆಯಲ್ಲಿ ತೊಂಬತ್ತೆರಡೂ ಮಂದಿ ಏರಿಕಲ್ಲು ವಿಜಯಿಗಳಾಗಿದ್ದರು!

ಶಿಖರ ಪ್ರದೇಶದ ಕಲ್ಲುಗುಂಡುಗಳ ಒಟ್ಟಣೆ, ಕೋಡುಗಲ್ಲುಗಳು, ಗುಹಾ ಓಣಿ, ಒತ್ತಿನ ಹಾಸುಬಂಡೆ, ಸರ್ವೇಕ್ಷಣಾ ಇಲಾಖೆಯ ಗುಪ್ಪೆಯೊಡನೆ ಗುರುತಿಸಲ್ಪಟ್ಟ ನಿಜ ಶಿಖರದಲ್ಲೆಲ್ಲ ಆರೋಹಿಗಳ ಸಂತೆ, ಜೈಕಾರ ಉದ್ಗಾರಗಳ ಗದ್ದಲ ಮೆರೆದಿತ್ತು. ಇಂದಿನಂತೆ ಅಂಗೈಯಲ್ಲಿ ಬ್ರಹ್ಮಾಂಡ ಹುದುಗಿಸುವ ಕಾಲ ಅಲ್ಲವದು. ಛಾಯಾಚಿತ್ರಗ್ರಹಣ ಮೀಸಲಾದ ಕ್ಯಾಮರಾ, ರೀಲು, ಸಂಸ್ಕರಣ ಮತ್ತು ಪರಿಣತಿಗಳ ಸೆರೆಯಲ್ಲಿತ್ತು. ಆರೋಹಣದ ಸದಸ್ಯರೂ ವೃತ್ತಿಪರ ಛಾಯಾಚಿತ್ರಗ್ರಾಹಿಗಳೂ ಆಗಿದ್ದ ಗೆಳೆಯ – ಯಜ್ಞ ಮತ್ತು ಕೀರ್ತಿ ನಮ್ಮೊಡನಿದ್ದರು. ಅವರಿಗೆ ಪುರುಸೊತ್ತೇ ಇರಲಿಲ್ಲ. ಒಂಟಿಯಾಗಿ, ವಿವಿಧ ಗುಂಪುಗಳಲ್ಲಿ, ತರಹೇವಾರಿ ಭಂಗಿಗಳಲ್ಲಿ ಇಬ್ಬರೂ ಎಲ್ಲರಿಗೂ ಹೊಡೆದೇ ಹೊಡೆದರು! ಹಿನ್ನೆಲೆಗಳ ವೈಭವವಂತೂ ವಿವರಿಸಿದಷ್ಟು ಮುಗಿಯದು. ಬಲು ಆಳದಲ್ಲಿ ಕರಿ ಕಾಡಿನ ಮಧ್ಯೆ ಎಳೆದ ಅಂಕುಡೊಂಕಿನ, ಮರ ಮುಸುಕಿ ಅಲ್ಲಲ್ಲಿ ತುಂಡುತುಂಡಾದ ಗೀಟು ಮೂಡಿಗೆರೆಯತ್ತ ಸಾಗಿದ್ದ ಚಾರ್ಮಾಡಿಯ ರಾಜಮಾರ್ಗ. ಉತ್ತರಕ್ಕೆ ಬಲ್ಲಾಳರಾಯನ ದುರ್ಗದ ಶ್ರೇಣಿಯೇ ದಿಗಂತ. ಪೂರ್ವದ ಅಪೂರ್ವ ನೋಟಕ್ಕೆ ಸಿಕ್ಕುತ್ತಿತ್ತು ಜೇನುಕಲ್ಲು, ಮಿಂಚುಕಲ್ಲು. ದಕ್ಷಿಣಕ್ಕೆ ತಿರುಗಿದರೆ ಪುರಾಣಪ್ರಸಿದ್ಧ ಅಮೆದಿಕ್ಕೆಲ್, ಎತ್ತಿನ ಭುಜ, ಕುಮಾರಪರ್ವತ ಶ್ರೇಣಿಯೇ ಮೊದಲಾಗಿ ನಮ್ಮ ಲೆಕ್ಕಕ್ಕೆ ಅನಾಮಧೇಯವಾದರೂ ವೈವಿಧ್ಯಮಯ ಸವಾಲಿನ ನೂರೆಂಟು ಮೊಳಕೆಗಳು. ಗುಹಾ ಓಣಿ ಹಾಯ್ದು, ಕಲ್ಲಗುಪ್ಪೆಯ ಬಳಿ ಹೋಗಿ ಪಶ್ಚಿಮ ಮೈ ದೃಷ್ಟಿಸಿದರೆ ನೇರ ಎದುರು ಕಾಣುವುದೇ ಗಡಾಯಿಕಲ್ಲು ಅಥವಾ ಜಮಾಲಾಬಾದ್. ಅಲ್ಲಿಂದ ನಮ್ಮಲ್ಲಿಗೆ ಎಳೆದ ಬೆಳ್ಳಿಯ ಗೆರೆಯಂತೆ ಸೂರ್ಯರಶ್ಮಿಗೆ ಥಳಥಳಿಸುತ್ತಿತ್ತು ಎರುಮೈ ಹೊಳೆ – ನೇತ್ರಾವತಿಯ ಒಂದು ಮುಖ್ಯ ಉಪನದಿ. ಅದರೊಡನೆ ಬಿನ್ನಾಣದ ನಡೆ ಹಾಕಿದಂತೆ ಜತೆಗೊಟ್ಟಿತ್ತು ನಮ್ಮ ನಿಶಾಚಾರಣದ ಉಜಿರೆ-ಚಾರ್ಮಾಡಿಯ ರಾಜಮಾರ್ಗ. ದೃಷ್ಟಿ ಹಾಗೇ ಸರಿಸಿದರೆ ವಲಯ ವರಿಷ್ಠರಂತೆ ಗಾಂಭೀರ್ಯದಲ್ಲಿ ಮೆರೆದಿದ್ದವು ಕುದುರೆಮುಖ, ಹಿರಿಮರುದುಪ್ಪೆ.

ಎಲ್ಲರಿಗೂ ಏನು ಕೊಟ್ಟರೂ ಮುಕ್ಕಿ ತಿನ್ನುವ ಹಸಿವು, ಸಮುದ್ರವನ್ನಾದರೂ ಎತ್ತಿ ಕುಡಿಯುವ ದಾಹ. ಆದರೆ (ಬಹುಶಃ) ಪೂರ್ವ ಸೂಚನೆಯಂತೆ ಅವರವರೇ ತಂದಿದ್ದ ಒಣಕಲು ಚಪಾತಿಯೋ ಹಸಕು ಬ್ರೆಡ್ಡಿನ ತುಣುಕುಗಳೋ ಹಲ್ಲಿನ ಸಂದಿಗೂ ಸಿಗಲಿಲ್ಲ, ಒಯ್ದ ನೀರ ಹಂಡೆಗಳಲ್ಲುಳಿದ ಪಸೆ ಕಾದ ಕಾವಲಿಗೆ ಬಿದ್ದ ಹನಿಯಾಗಿತ್ತು. ಆರೋಹಣ ದಾನಿಗಳಿಂದ ಸಂಗ್ರಹಿಸಿದ್ದ ಬಿಸ್ಕೆಟ್, ಗ್ಲುಕೋಸ್ ಶಾಸ್ತ್ರಕ್ಕಷ್ಟೇ ದಕ್ಕಿತು. ಇಷ್ಟಾದರೂ ಅಪೂರ್ವ ಅನುಭವದ ಭಾಗಿಗಳಾದ ಭಾಗ್ಯವಂತರು ಶಿವಮುಡಿಯ ಗಂಗೆಯಂತೆ ಏರಿಕಲ್ಲಿನ ನೆತ್ತಿಯ ಉತ್ಸಾಹದ ಬುಗ್ಗೆಗಳೇ ಆಗಿದ್ದರು. ಹಾಗೆಂದು ಸಂಘಟಕರ ನೆಲೆಯಲ್ಲಿ ನಾವು ಮೈಮರೆತು ಕೂರುವಂತಿರಲಿಲ್ಲ; ಏರಿದವನು ಇಳಿಯಲೇಬೇಕು!

ಹತ್ತುವಾಗ ಕಾಲಿನ ಬಲ ಒಂದೇ ಸಾಕು. ಇಳಿಯುವಾಗ ಇಡಿಯ ದೇಹವನ್ನು ಎಳೆದು ಹಿಡಿಯುವ ಕಸುವು ಬೇಕು, ಆಳ ದಿಟ್ಟಿಸುವ ಕೆಚ್ಚು ಬೇಕು. ಕೇವಲ ಒಂದೇ ಗಂಟೆ ಬಿಡುವು ಕೊಟ್ಟು, ಅವರೋಹಣ ಪರ್ವ ಶುರು ಮಾಡಿದ್ದೆವು. ಹಗ್ಗವನ್ನು ಭದ್ರ ಆಧಾರವೊಂದಕ್ಕೆ ಕಟ್ಟಿ, ಬಂದದ್ದೇ ಬಂಡೆ ಸಂದಿಯಲ್ಲಿಳಿಯುವಂತೆ ಒಬ್ಬೊಬ್ಬರನ್ನೇ ಬಂಡೆಯಂಚಿಗೆ ತರುತ್ತಿದ್ದೆವು. ಶುದ್ಧ ಶೋಲ್ಡರ್ ರ್ಯಾಪ್ಲಿಂಗಿನದೇ ಕ್ರಮದಲ್ಲಿ ಹಗ್ಗವನ್ನು ಅವರ ದೇಹಕ್ಕೆ ಸುತ್ತುತ್ತ, ಕ್ರಮ ಹೇಳಿಕೊಡುತ್ತ, ಅಕ್ಷರಶಃ ಹಿನ್ನೂಕುತ್ತಿದ್ದೆವು. ಅನುಭವಿಗಳ ಮಾತು ತಳ್ಳಿಹಾಕುವಂತಿಲ್ಲ, ಶಾಸ್ತ್ರ ನೆಚ್ಚಲು ಧೈರ್ಯವಿಲ್ಲ, ಮಗ್ಗುಲಲ್ಲಿ ಇಣುಕಿ ಕೊಳ್ಳ ನೋಡಿದರಂತೂ ಕತೆ ಮುಗಿಯಿತೆನ್ನುವ ಭಾವ.
ಮುಗ್ಗರಿಸಿ ಕುಳಿತು, ಅನಾವಶ್ಯಕ ಹಸ್ತದ ಹಿಡಿತ ವಿಪರೀತ ಬಿಗಿ ಮಾಡಿ, ಬಾಹ್ಯ ಸೂಚನೆಗಳಿಗೆ ಬಧಿರರಾಗಿ ಒದ್ದಾಡಿದವರು ಒಬ್ಬಿಬ್ಬರಲ್ಲ. ಬಂಡೆ ಇಳಿಜಾರಿನ ಉದ್ದಕ್ಕೂ ಆರೋಹಣದ ಸದಸ್ಯರು ಆಯಕಟ್ಟಿನ ಜಾಗಗಳಲ್ಲಿ ಕುಳಿತು, ಧಾರಾಳ ಸೂಚನೆಗಳನ್ನು ಕೊಟ್ಟು, ಕೆಲವರಿಗೆ ಸಹಾಯ ಹಸ್ತವನ್ನೂ ಕೊಟ್ಟು ತಳ ಮುಟ್ಟಿಸುತ್ತಿದ್ದೆವು. ಭಯ, ಹಗ್ಗ ಉಜ್ಜುವ ಉರಿ (ಕೆಲವರಿಗೆ ಕಬ್ಬಿಣ ಕಾಯಿಸಿ ಬರೆಹಾಕಿದಂತೇ ಆಗಿದೆ!) ನಿಭಾಯಿಸುವುದರಲ್ಲಿ ಒಬ್ಬೊಬ್ಬರದೂ ಒಂದೊಂದು ಕತೆ! ಕೊನೆಯಲ್ಲಿ ತಂತ್ರಸಾಧನೆ ದೊಡ್ಡದೋ ನಿರಪಾಯವಾಗಿ ತಳ ತಲಪಿದ್ದು ಮುಖ್ಯವೋ ಎಂಬುದನ್ನು ಹೇಳಲಾಗದ ಗೊಂದಲ.

ದೂರದೂರಿನ ಗುಂಪುಗಳನ್ನು ಆದ್ಯತೆಯಲ್ಲಿ ಒಟ್ಟು ಮಾಡಿ ಇಳಿಸುತ್ತ ಹೋಗಿದ್ದೆವು. ಹಾಗೆ ಒಂದೊಂದು ಕಾಲೇಜು ಪೂರ್ಣಗೊಂಡಂತೆಲ್ಲ ಆ ತಂಡಕ್ಕೆ, ಸ್ವತಂತ್ರವಾಗಿ ಬೆಟ್ಟ ಇಳಿದು, ದಾರಿ ಸೇರಲು ಸ್ಪಷ್ಟ ಸೂಚನೆ, ಮತ್ತೆ ಸಿಕ್ಕ ವಾಹನವೇರಿ ತಮ್ಮ ತಮ್ಮ ದಾರಿ ಕಂಡುಕೊಳ್ಳಲು ವಿದಾಯವನ್ನೂ ಹೇಳಿ ಮುಗಿಸಿದ್ದೆವು. ಅಲ್ಲಿ ಇಳಿಯುವುದೂ ಬಹಳ ಸುಲಭದ ಕೆಲವೇನೂ ಆಗಿರಲಿಲ್ಲ. ತರಗೆಲೆ ರಾಶಿ, ನುಸುಲು ಮಣ್ಣು, ಅಡಿತಪ್ಪಿ ಮಗುಚುವ ಪುಟ್ಟ ಬಂಡೆಗಳ ಫಿತೂರಿಯಲ್ಲಿ ಜಾರಿ ಬೀಳುವವರಿಗೇನೂ ಕೊರತೆಯಿರಲಿಲ್ಲ. ಮತ್ತೆ ಇಳುಕಲಿನ ತೀವ್ರತೆಗೆ ಹೆದರಿ ಮೊದಲೇ ಅಂಡೂರಿ, ಕಸ ಕಲ್ಲು ನೂಕುತ್ತ ಬಲು ಉದ್ದದ ಜಾರುಬಂಡೆಯಾಟವನ್ನೇ ಹಲವರು ಆಡಿದ್ದರು! ಈ ಗೊಂದಲಕ್ಕೆ ಕೆಲವರು ಬಲಕ್ಕೆ ಸರಿದದ್ದು ಹೆಚ್ಚಾಯ್ತು, ಕೆಲವರು ಎಡದ ಕೊರಕಲು ಅನುಸರಿಸಿದ್ದು ತಪ್ಪಾಯ್ತು ಎಂಬೆಲ್ಲ ಎಡವಟ್ಟುಗಳು ಸೇರಿಕೊಂಡವು.
ಬಲಕ್ಕೆ ಹೋದವರು ಏನೆಪೋಯಾದವರ ಕಾಡುದಾರಿ ಸಿಕ್ಕಿದ್ದರಿಂದ ದಾರಿ ಸೇರಿದ್ದರು. ಎಡಪಕ್ಷಪಾತಿಗಳಲ್ಲಿ ಕೆಲವರು ಡಾಮರಿನ ಆರನೇ ಹಿಮ್ಮುರಿ ತಿರುವಿನಲ್ಲಿ, ಮತ್ತೆ ಕೆಲವರು ನಾಲ್ಕನೇ ಹಿಮ್ಮುರಿ ತಿರುವಿನಲ್ಲಿ ಬಯಲಾಗಿದ್ದರು. ಸಪ್ತಾಹ ಮುಗಿದು ವಾರದ ಮೇಲೆ ಹೀಗೆ ಕಾಡು ನುಗ್ಗುನುರಿ ಮಾಡಿದವರ ರಂಗುರಂಗಿನ ಹಲವು ಕತೆಗಳು ನನಗೆ ಸಿಕ್ಕಿದ್ದವು. ಏನೆಪೋಯಾ ದಾರಿಯೆಡೆಗೆ ಹೋದ ಹುಡುಗಿಯರಿಗೆ ಒಂದು ಆನೆ ಕಾಣ ಸಿಕ್ಕಿ ಜೀವ ಬಾಯಿಗೆ ಬಂದಂತಾಗಿತ್ತಂತೆ. ದಿಕ್ಕೆಟ್ಟು ಓಡುವ ಮೊದಲು ಅದು ಮರ ಎಳೆಯಲು  ಬಂದಿದ್ದ ಸಾಕಾನೆ ಎಂದು ತಿಳಿದದ್ದರಿಂದ ಅವಘಡಗಳೇನೂ ಆಗಲಿಲ್ಲ. ಇನ್ನೊಂದು ಬಳಗಕ್ಕೆ ಆನೆಗಳ ಹಿಂಡೇ ಎದುರಾದಂತೆ ಭಾಸವಾಯ್ತಂತೆ. ಅವರಲ್ಲಿ ಬುದ್ಧಿವಂತನೊಬ್ಬ, ಸಕಾಲಕ್ಕೆ ತಲೆ ಉಪಯೋಗಿಸಿದ್ದರಿಂದ `ಕಾಡಾನೆಗಳ’ ಕತ್ತಿನಲ್ಲಿ ಸರಪಳಿಯಿರುವುದು ಅಸಾಧ್ಯ ಎಂದ ಮೇಲೆ ತಂಡ ನಿಸೂರಾಯ್ತಂತೆ. ಏನೇ ಆಗಲಿ, ಬೆಟ್ಟದ ಮೂರೂ ದಿಕ್ಕಿನಲ್ಲಿ ದಾರಿಗಳು ಆವರಿಸಿವೆ. ಮತ್ತು ಆ ವಲಯದಲ್ಲಿ ಅಪಾಯಕಾರೀ ಕೊಳ್ಳಗಳೇನೂ ಇಲ್ಲ ಎನ್ನುವುದು ನಮ್ಮ ವಿಶ್ವಾಸ. ಅದಕ್ಕೆ ಧಕ್ಕೆಯಾಗದಂತೆ ಎಲ್ಲರೂ ನಿರಪಾಯವಾಗಿ ಚದುರಿದ್ದರು. ಸಿಕ್ಕ ಬಸ್ಸೋ ಕಾರೋ ಲಾರಿಯೋ ಏರಿ, ಉಜಿರೆ ಬೆಳ್ತಂಗಡಿಗಳಲ್ಲಿ ಸರಿ ವಾಹನಗಳಿಗೆ ಬದಲಿ, ಊರು ಮನೆ ಸೇರಿಕೊಂಡಿದ್ದರು.

ಎಲ್ಲರನ್ನೂ ಬಂಡೆಯಿಂದಿಳಿಸಿ, ಹಗ್ಗ ಬಿಚ್ಚುವ ಹೊತ್ತಿನಲ್ಲಿ ಭಾನುತೇಜ ಮಂಕಾಗಿದ್ದ. ಆರೋಹಣದ ಸದಸ್ಯರಲ್ಲೂ ಹಲವರು, ಅಧೈರ್ಯದ ತಂಡಗಳಿಗೆ ದಾರಿ ತೋರುತ್ತ ಮುಂದಾಗಿ ಹೋಗಿಬಿಟ್ಟಿದ್ದರು. ಉಳಿದ ನಾವಾರೇಳು ಮಂದಿಯಷ್ಟೇ ಕೊನೇ ಬಂಡಿ ಎಂದುಕೊಳ್ಳುತ್ತ, ಟಾರ್ಚ್ ಬೆಳಗುತ್ತ ಇಳಿದೆವು. ಎಪ್ಪತ್ತೆಂಬತ್ತು ಮಂದಿ ಹತ್ತಿಳಿಯುವಲ್ಲಿ ಅಯೋಚಿತವಾಗಿ ಮೂಡಿಸಿದ ನೂರೆಂಟು ಜಾಡುಗಳಲ್ಲಿ, ಟಾರ್ಚ್ ಬೆಳಗುತ್ತ ಸರಿ ದಾರಿ ಕಂಡು ಹಿಡಿಯುವುದು ಭಾರೀ ಕಷ್ಟದ ಕೆಲಸ. ನಾವೂ ಒಮ್ಮೆ ಸ್ವಲ್ಪ ಕಳೆದುಹೋದರೂ ಸಾವರಿಸಿಕೊಂಡು, ಡಾಮರು ದಾರಿ ಸೇರುವಾಗ ರಾತ್ರಿ ಏಳೂವರೆ ಗಂಟೆಯೇ ಆಗಿತ್ತು.

ವಾಹನ ಸಂಚಾರ ತುಂಬ ವಿರಳವಿತ್ತು. ಇನ್ನೇನು ಮತ್ತೆ ನಿಶಾಚಾರಣವೇ ಗತಿಯೋ ಎಂದು ಯೋಚಿಸುವಾಗ ಭಾರೀ ತರಕಾರೀ ಹೇರಿನ ಲಾರಿಯೊಂದು ನಮಗೊಲಿಯಿತು. ಚಾಲಕನ ಕ್ಯಾಬಿನ್ನೊಳಗೆ ಆಗಲೇ ಜನ ತುಂಬಿದ್ದರು. ಕೇವಲ ಎರಡೂವರೆ ಅಡಿಯ ಕೆಳ ಚೌಕಟ್ಟಷ್ಟೇ ಇದ್ದ ಹಿಂಭಾಗದಲ್ಲಿ, ಕ್ಯಾಬಿನನ್ನೂ ಮೀರಿದ ಎತ್ತರಕ್ಕೆ ಮೂಲಂಗಿ, ಬೀಟ್ರೂಟ್, ಟೊಮೆಟೋ, ಕೊತ್ತಂಬರಿ, ಹರಿವೆ ಮುಂತಾದವುಗಳ ಗೋಣಿ ಮೂಟೆಗಳನ್ನು ರಾಶಿಹಾಕಿ ಹಗ್ಗ ಬಿಗಿದಿದ್ದರು. “ಅದರ ಮೇಲೇರಿಸಿಕೊಳ್ಳಬಲ್ಲೆವು. ಅಲ್ಲೂ ಕುಳಿತುಕೊಳ್ಳುವಂತಿಲ್ಲ, ಮೈಚಾಚಿ ಬಿದ್ದುಕೊಳ್ಳಬೇಕು. ಇಲ್ಲವಾದರೆ ದಾರಿಗೆ ಚಾಚಿದ ಮರದ ಕೊಂಬೆಗಳು ಹೊಡೆದಾವು” ಲಾರಿಯವರ ಸೂಚನೆ. ನಿಷ್ಠವಾಗಿ ಒಪ್ಪಿ, ಹತ್ತಿ ಲಾರಿ ಹೊರಡುವವರೆಗೆ ನಮ್ಮೆಲ್ಲ ನಿರ್ಧಾರಗಳು ಗಟ್ಟಿಯೇ ಇತ್ತು. ಒಂದು ರಾತ್ರಿಯ ನಿದ್ದೆಗೇಡಿತನ, ಎರಡು ಹಗಲಿನ ಬಳಲಿಕೆ, ತರಕಾರಿಮೂಟೆಗಳೋ ಹಂಸತೂಲಿಕಾ ತಲ್ಪ, ಲಾರಿಯೋಟದ ಜೋಕಾಲಿ ಜೀಕು, ತಂಗಾಳಿ ಎಲ್ಲ ಸೇರಿ ಫಿತೂರಿ ಮಾಡಬಾರದಲ್ಲಾ. ಎಳೆಯುತ್ತಿದ್ದ ಕಣ್ಣನ್ನು ಬಲವಂತವಾಗಿ ಬಿಡಿಸಿಕೊಳ್ಳುತ್ತ, ಪರಸ್ಪರ ಎಚ್ಚರಿಕೆ ಕೊಟ್ಟುಕೊಳ್ಳುತ್ತಲೇ ಇದ್ದೆವು “ಹೋಶಿಯಾರ್, ಆಲಿಸ್ ವೆಲ್.” ಆದರೆ ಒಂದೆರಡೇ ಕಿಮೀಯೊಳಗೆ, ಒಬ್ಬ ಆತುಕೊಂಡ ಟೊಮೆಟೋ ಮೂಟೆ, ಇವನ ಜಗ್ಗಾಟಕ್ಕೆ ಹಗ್ಗದ ಕಟ್ಟನ್ನು ಕಳಚಿಕೊಂಡು ಒಮ್ಮೆಲೆ ಲಾರಿ ಬಿಟ್ಟು ಧುಮುಕಲು ಸಜ್ಜಾಯ್ತು. ಆತ ಕೂಗಿಕೊಂಡ. ಆದರೆ ಕ್ಯಾಬಿನ್ನಿನ ಜನರ ನಡುವೆ ಗಿಡಿದುಕೊಂಡ, ಮತ್ತೆ ಪಟ್ಟಾಂಗದಲ್ಲೂ ಮುಳುಗಿದ್ದಿರಬಹುದಾದ ಚಾಲಕನಿಗೆ ಕೇಳಬೇಕಲ್ಲ. ಅದೃಷ್ಟಕ್ಕೆ ನಾವೆಲ್ಲ ಒಟ್ಟು ಸೇರಿ ಎಬ್ಬಿಸಿದ ಹುಯ್ಯಲು, ಕ್ಯಾಬಿನ್ನಿನ ಮೇಲೇ ಬಿದ್ದುಕೊಂಡಿದ್ದ ಗೆಳೆಯನೊಬ್ಬ ತಗಡು ಗುದ್ದಿದ ಗದ್ದಲವೆಲ್ಲ ಪರಿಣಾಮಬೀರಿ ಕಡೇ ಗಳಿಗೆಗೆ ಎನ್ನುವಂತೆ ಲಾರಿ ನಿಂತಿತು. ಎಲ್ಲ ಸರಿ ಮಾಡಿ ಹೊರಟ ಮೇಲೆ ಮತ್ತೆ ದೇವರಾಣೆ ಯಾರಿಗೂ ನಿದ್ರೆ ಬರಲಿಲ್ಲ!

ಸಪ್ತಾಹದ ಉದ್ದಕ್ಕೆ ನಾವು - ಆರೋಹಣದ ಗೆಳೆಯರು, ಒಟ್ಟಿಗೆ ಸಾರ್ವಜನಿಕ ಬಸ್ಸುಗಳಲ್ಲೇ ಹೋಗಿ ಬರುತ್ತಿದ್ದೆವು. ಉಜಿರೆಯ ಕಲಾಪಕ್ಕಾಗುವಾಗ ಹೆಚ್ಚಿನ ಸಂಘಟನಾ ವ್ಯವಸ್ಥೆಗಾಗಿ ನಾನು ತುಸು ಬೇಗನೇ ಹೋಗಬೇಕಾಯ್ತು. ಆ ಸಮಯಕ್ಕಾಗುವಾಗ ಏರಿಕಲ್ಲು ಹತ್ತುವ ಉತ್ಸಾಹದಲ್ಲಿ ಮೈಸೂರಿನಿಂದ ನನ್ನ ತಮ್ಮ ಅನಂತ ವರ್ಧನನೂ ಬಂದವನಿದ್ದ. ಹಾಗಾಗಿ ಅವನನ್ನೇರಿಸಿಕೊಂಡು ನಾನು ಮೋಟಾರ್ ಸೈಕಲ್ ಹೊರಡಿಸಿದ್ದೆ. ಎಲ್ಲ ಮುಗಿಸಿ ಮರಳುವ ದಾರಿಯಲ್ಲಿ ತರಕಾರಿ ಲಾರಿಯಿಂದ `ಬದುಕುಳಿದ’ ಮಿತ್ರರೇನೋ ಉಜಿರೆಯಲ್ಲಿ ಬೆಚ್ಚನೆ ಬಸ್ಸೇರಿಬಿಟ್ಟರು. ನಮ್ಮಿಬ್ಬರಿಗೆ ಬೈಕ್ ಸವಾರಿ ಬಾಕಿಯಿತ್ತು. ಎಲ್ಲೋ ಸಿಕ್ಕಿದ್ದನ್ನು ಹೊಟ್ಟೆಗೆ ಹಾಕಿ ಊಟದ ಶಾಸ್ತ್ರ ಮುಗಿಸಿ, ಉಜಿರೆ ಬಿಡುವಾಗ ಹತ್ತು ಗಂಟೆ ಕಳೆದಿತ್ತು. ಬೈಕೋಡಿಸುವಾಗ ನನಗೆ ನಿದ್ರೆ ಬಾರದು, ಅನಂತ ಮಾತ್ರ ತೂಕಡಿಸಬಾರದು ಎಂಬುದು ನಮ್ಮೊಳಗಾದ ಒಪ್ಪಂದ.
ಆ ದಿನಗಳಲ್ಲಿ ಆ ದಾರಿ ಸಾಕಷ್ಟು ಹಾಳು, ಸಪುರ ಮತ್ತು ಹೆಚ್ಚು ಅಂಕಾಡೊಂಕಿ ಬೇರೇ ಇದ್ದುದರಿಂದ `ಸವಾರಿಯ ಸುಖ’ವೂ ಕಾಡಲಾರದು ಎಂದು ನಂಬಿದ್ದೆ. ಆದರೂ ಮಡಂತ್ಯಾರು ಕಳೆದು ಮುಂದೆಲ್ಲೋ ಪುಟ್ಟ ಸೇತುವಿನ ಕಟ್ಟೆ ಕಂಡಲ್ಲಿ ಅದ್ಯಾವ ಮಾಯೆಯಲ್ಲೋ ಎರಡು ಕ್ಷಣಕ್ಕೆಂಬಂತೆ ನಿದ್ದೆ ನನ್ನ ಮೇಲೆರಗಿತ್ತು. ನಾನು ಬೈಕನ್ನು ಅನಿಯಂತ್ರಿತವಾಗಿ ದಾರಿಯ ಎಡಮಗ್ಗುಲಿನಿಂದ ಒಮ್ಮೆಲೇ ಬಲ ಮಗ್ಗುಲಿಗೆ ನುಗ್ಗಿಸಿಬಿಟ್ಟಿದ್ದೆ. ಎಡ ಹೊರಳಿದ್ದರೆ ಕಟ್ಟೆಗೆ ಗುದ್ದಿಯೋ ಹೊಂಡಕ್ಕೆ ಹಾರಿಯೋ ಅಪಘಾತವಾಗಬಹುದಿತ್ತು. ಬೇಡ, ಬಲ ಅಂಚನ್ನು ಪಾರುಗಾಣಿಸಿದ್ದರೂ ಇನ್ನೇನೋ ಆಗಬಹುದಿತ್ತು. ಅದೃಷ್ಟಕ್ಕೆ ನಿದ್ದೆ ಬಿರಿದು, ಬೈಕ್ ನಿಲ್ಲಿಸಿಬಿಟ್ಟೆ. “ಕಾಡು, ಬೆಟ್ಟ, ಊರೂರಿನ ಕಾಲೇಜು ಗೋಡೆಗಳನ್ನೆಲ್ಲ ವಾರಪೂರ್ತಿ ಹುಡಿಹಾರಿಸಿದ ವೀರರು, ಸಪಾಟು ರಸ್ತೆಯ ಮೇಲೆ ಮಗುಚಿಬಿದ್ದರು” ಎನ್ನುವ ಅಪಖ್ಯಾತಿ ತಪ್ಪಿತ್ತು. ಕೂಡಲೇ ಅಲ್ಲೇ ರಸ್ತೆಯಂಚಿಗೆ ಬೈಕ್ ನೂಕಿ, ಪ್ರಾಣಿ ಕಳ್ಳತನದ ಭೀತಿಗಳನ್ನೆಲ್ಲ ಕಟ್ಟಿಟ್ಟು, ಇಬ್ಬರೂ ಒಂದೊಂದು ಸೇತುವೆಕಟ್ಟೆಯ ಮೇಲೆ ಮೈಚಾಚಿ ಮಲಗಿಬಿಟ್ಟೆವು. ಸುಮಾರು ಅರ್ಧ ಗಂಟೆ ಸ್ವಯತಪ್ಪಿದಂಥ ನಿದ್ರೆ ಕಳೆದೆದ್ದಾಗ ಹೊಸಚೇತನ ಮೂಡಿತ್ತು. ಮತ್ತೇನೂ ಆಕಸ್ಮಿಕಗಳಿಲ್ಲದೆ ಮಂಗಳೂರಿಗೆ ಮರಳಿದ್ದೆವು.

ಮಳೆನಿಂತ ಮೇಲಿನ ಹನಿಗಳು:

ವಾರಪೂರ್ತಿ ಯಶಸ್ವಿಯಾಗಿ ನಡೆದ ಪರ್ವತಾರೋಹಣ ಕಲಾಪ, ಬೆನ್ನು ಹಿಡಿದಂತೆ ಬಂದ ಪ್ರಚಾರಸತ್ರ ಆರೋಹಣ ಪರ್ವತಾರೋಹಿಗಳು ಸಾಹಸಿಗಳು ಎಂಬ ಸಂಸ್ಥೆಯಲ್ಲದ ಸಂಸ್ಥೆಗೆ ಬೇಡಿಕೆಗಳ ಮಹಾಪೂರವನ್ನೇ ಹರಿಸಿತ್ತು. ಆಗ ತಾನೇ ಭಾರತಾದ್ಯಂತ ಬಲಗೊಳ್ಳುತ್ತಿದ್ದ `ಯೂಥ್ ಹಾಸ್ಟೆಲ್ಸ್’ ಮಂಗಳೂರಿನಲ್ಲಿ ತನ್ನ ಶಾಖೆಯನ್ನು ಹುಟ್ಟುಹಾಕಿತ್ತು. ಅದರ ಕಾರ್ಯಕರ್ತರು ಪರ್ವತಾರೋಹಣವನ್ನು ತಮ್ಮ ಭಾಗವಾಗಿಸಿಕೊಳ್ಳುವಲ್ಲಿ ಉಮೇದು ತೋರಿಸಿದರು. ಉಚಿತ ತರಬೇತು ಕೊಡುವುದು ನಮ್ಮ ಘೋಷಣೆಯಲ್ಲೇ ಇತ್ತು. ಆದರೆ ಯೂಥ್ ಹಾಸ್ಟೆಲ್ ನಮ್ಮನ್ನು ತನ್ನ ಸದಸ್ಯರನ್ನಾಗಿಸಿಕೊಂಡು ಮುಂದುವರಿಯುವುದಾಗಿ ಹೇಳಿದ್ದನ್ನು ನಾನೊಪ್ಪಲಿಲ್ಲ. ಆರೋಹಣದ ಅಲಿಪ್ತತೆಯನ್ನು ಕಾಯ್ದುಕೊಂಡೆ.

ಜಿಲ್ಲೆಯ ಇನ್ನೂ ಕೆಲವು ಕಾಲೇಜುಗಳು ಸ್ವಂತ `ಸಾಹಸ ಕೂಟ’ ಕಟ್ಟುವ ಉಮೇದು ತೋರಿಸಿದರು. ಅವರಿಗೆಲ್ಲ ಯೋಗ್ಯ ಕನಿಷ್ಠ ಸಲಕರಣೆಗಳನ್ನು ಸಂಗ್ರಹಿಸಿಕೊಳ್ಳಲು ಸಲಹೆ, ಮುಂದುವರಿದು ಉಚಿತ ತರಬೇತು ಕೊಡುವ ಉತ್ಸಾಹ ಆರೋಹಣದ್ದಿತ್ತು. ಹಾಗೆ ಸಲಕರಣೆಗಳನ್ನು ತರಿಸಿಕೊಳ್ಳುವಲ್ಲಿ ಸಪ್ತಾಹದ ಭಾಗವೂ ಆಗಿದ್ದ ಕುಂದಾಪುರದ ಭಂಡಾರ್ಕರ್ಸ್ ಕಾಲೇಜ್ - ಅಧ್ಯಾಪಕ ಮಿತ್ರ ಜಯರಾಮ್ ನಾಯಕತ್ವದಲ್ಲಿ, ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜು - ಅಧ್ಯಾಪಕ ಮಿತ್ರ ದೇವಪ್ಪ ಕುಳಾಯಿ ನಾಯಕತ್ವದಲ್ಲಿ, ಕೆಯಾರೀಸಿ ಅಥವಾ ಇಂದಿನ ಎನ್ನೈಟೀಕೆ – ವಿದ್ಯಾರ್ಥಿ ಮಿತ್ರ ಗೋಪಾಲಕೃಷ್ಣ ಬಾಳಿಗಾರ ಸಂಘಟನಾ ಚಾತುರ್ಯದಲ್ಲಿ ಮತ್ತು ಕಾರ್ಕಳದ ಭುವನೇಂದ್ರ ಕಾಲೇಜು - ಅಧ್ಯಾಪಕ ಮಿತ್ರ ರಾಧಾಕೃಷ್ಣರ ಮುಂದಾಳ್ತನದಲ್ಲಿ ಮುಂಬಂದರು. ಕಾರಣವೇನೋ ತಿಳಿಯದು, ಸಲಕರಣೆ ಬಂದ ಮೇಲೆ ಕುಂದಾಪುರ ಮಾತ್ರ ನಿಷ್ಕ್ರಿಯವಾಯ್ತು. ಗೋವಿಂದ ದಾಸ ಕಾಲೇಜಿನ ಸಾಹಸ ಕೂಟವನ್ನು ಕೊಡಂಜೆ ಕಲ್ಲಿಗೆ ಕರೆದೊಯ್ದು ಶಿಲಾಕೌಶಲಗಳ ಪ್ರಾಥಮಿಕ ತರಬೇತನ್ನು ಕೊಟ್ಟೆವು. ಕೇಯಾರೀಸೀಯಲ್ಲಿ ಸಾಹಸಿಕೂಟದ ಉದ್ಘಾಟನೆಯನ್ನೂ ನಾವೇ ಮಾಡಿದ್ದೆವು. ಅದನ್ನು ಸಭಾಕಲಾಪದ ಔಪಚಾರಿಕತೆಗೆ ಸೀಮಿತಗೊಳಿಸದೆ, ಸಂಸ್ಥೆಯ ಮುಖ್ಯ ಕಟ್ಟಡದ ಗೋಡೆಯ ಮೇಲೇ ರ್‍ಯಾಪ್ಲಿಂಗ್, ಇನ್ನೆಲ್ಲೋ ನದಿ ದಾಟುವ ಪ್ರದರ್ಶನವನ್ನೂ ಇಟ್ಟುಕೊಂಡಿದ್ದೆವು. ಮುಂದೊಂದು ವಾರ ಸಮೀಪದ ಪಡುಪಣಂಬೂರಿನಲ್ಲಿ ಹೆದ್ದಾರಿಯ ಅಂಚಿನ ಎತ್ತರದ ದರೆಯ ಮೇಲೆ ಪ್ರಾಥಮಿಕ ಶಿಲಾವರೋಹಣದ ತರಬೇತನ್ನೂ ಕೊಟ್ಟೆವು.


ಆರೋಹಣದ ಸಂಪರ್ಕಕ್ಕೂ ಮುನ್ನ ದಕ ಜಿಲ್ಲೆಯಲ್ಲಿ ವ್ಯವಸ್ಥಿತ ಸಾಹಸ ಚಟುವಟಿಕೆಗಳನ್ನು ನಡೆಸುತ್ತ ಬಂದ ಖ್ಯಾತಿ ಇರುವುದು ಭುವನೇಂದ್ರ ಕಾಲೇಜಿಗೆ ಮಾತ್ರ. ಅಲ್ಲಿನ ಅಧ್ಯಾಪಕ ಗೆಳೆಯ ರಾಧಾಕೃಷ್ಣರದು ಅದ್ಭುತ ಕ್ರತುಶಕ್ತಿ. ಇವರ ಕರಾಟೆ ಪ್ರಾವೀಣ್ಯ ಉತ್ತುಂಗಕ್ಕೇರಿದ್ದಾಗ ಶಿಷ್ಯರು, ಎದುರಿನಿಂದ ಹೇಳಲು ಧೈರ್ಯಸಾಲದೇ ಆದರೆ ಉತ್ಕಟ ಪ್ರೀತಿಯಿಂದ ಇಟ್ಟಿದ್ದ ಹೆಸರು ಕರಾಟೆಕೃಷ್ಣ!  ಇಂದು ಹೊಸ ತಲೆಮಾರಿನ ಸೈಕಲ್ಲುಗಳು ಬಂದು (ಬಹುತೇಕ ಶೋಕಿ) ಚಟುವಟಿಕೆಗಳು ಏರುತ್ತಿರುವುದನ್ನು ಕಾಣುತ್ತೇವೆ. ಆದರೆ ಮೂರು ದಶಕಕ್ಕೂ ಹಿಂದೆ, ಸಾದಾ ಸೈಕಲ್ಲುಗಳನ್ನೇ ನೆಚ್ಚಿ ನೂರಕ್ಕೂ ಮಿಕ್ಕು ಸಂಖ್ಯೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳನ್ನು ಊರೂರು ಸಾಹಸಯಾತ್ರೆಗೆ ಒಯ್ದ ಸಾಧನೆ ಇವರದ್ದು. ಇವರ ಸೈಕಲ್ ತಂಡ ಶಿಲಾರೋಹಣದ ಪ್ರಾಥಮಿಕ ತರಬೇತಿಗೆ ಹೆಚ್ಚು ಕಮ್ಮಿ ಐವತ್ತರ ಬಲದಲ್ಲಿ ಕೊಡಂಜೆ ಕಲ್ಲಿಗೆ ಬಂದ ಕಥನವನ್ನು ನಾನು ಬಹಳ ಹಿಂದೆಯೇ ಇಲ್ಲಿ ಭುವನೇಂದ್ರದ ಆರೋಹಿಗಳು ಎಂದೇ ದಾಖಲಿಸಿದ್ದನ್ನು ಈಗಲೂ ಆಸಕ್ತರು ಓದಿಕೊಳ್ಳಬಹುದು. ಆ ತಂಡಕ್ಕೆ ಇನ್ನೊಂದು ಸಲ ಕಾರ್ಕಳದ ಹಿತ್ತಲಿನಲ್ಲೇ ಇರುವ ನಕ್ರೆ ಕಲ್ಲಿನಲ್ಲಿ ಹೆಚ್ಚಿನ ತರಬೇತು ಕೊಟ್ಟದ್ದೂ ಇತ್ತು.
ಆರೋಹಣದ ಭಾಗವೇ ಆದ ಸಂತ ಏಗ್ನೆಸ್ ಕಾಲೇಜಿನ ಅಧ್ಯಾಪಕ ಗೆಳೆಯರಾದ ಜಯಂತ್ ಮತ್ತು ರೋನಾಲ್ಡ್ ಮಸ್ಕರೇಞಸ್, ಅವರ ಕೆಲವು ವಿದ್ಯಾರ್ಥಿನಿಯರಿಗೆ ಪರ್ವತಾರೋಹಣದ ರುಚಿ ಹಲವು ಸಲ ತೋರಿಸಿದ್ದರು. ಮಹಿಳಾ ಕಾಲೇಜಿನ ಮಿತಿಯಲ್ಲಿ ಅವರಿಗೆ ಕಾಲೇಜಿನದ್ದೇ ಸಾಹಸ ಸಂಘ ಕಟ್ಟುವುದು ಕಷ್ಟವಿತ್ತು. ಆದರೆ ಸಪ್ತಾಹದ ಯಶಸ್ಸಿನ ಬೆನ್ನಿಗೆ ತಮ್ಮ ಕಾಲೇಜಿಗೆ ಕನಿಷ್ಠ ಒಂದು ಪ್ರದರ್ಶನವಾದರೂ ಇರಲಿ ಎಂದು ಬಯಸಿದರು, ಚೆನ್ನಾಗಿಯೇ ನಡೆಸಿದೆವು. ಹಾಗೇ ಮಂಗಳೂರಿನ ಸರಕಾರೀ ಕಾಲೇಜಿನ ಅಧ್ಯಾಪಕ ಮಿತ್ರರಾದ ಸುಬ್ಬಪಕ್ಕಳರೂ ತಮ್ಮಲ್ಲೊಂದು ಪ್ರದರ್ಶನವಿರಿಸಿಕೊಂಡಿದ್ದರು. ಪುತ್ತೂರಿನ ವಿವೇಕಾನಂದ ಕಾಲೇಜಿನ ಅಧ್ಯಾಪಕ ಮಿತ್ರ ಮಾಧವ ಭಟ್ಟರ ನೇತೃತ್ವದಲ್ಲಿ ನಮ್ಮ ಸೂಚನೆಯ ಮೇರೆಗೇ ಕೊಡಂಜೆ ಕಲ್ಲಿಗೆ ಬಂದ ಆಯ್ದ ವಿದ್ಯಾರ್ಥಿ ಬಳಗಕ್ಕೂ ಶಿಲಾರೋಹಣದ ಪರಿಚಯ ಮಾಡಿಕೊಟ್ಟದ್ದಿತ್ತು.

ಇವೆಲ್ಲಕ್ಕೂ ಮುಖ್ಯವಾಗಿ ಸಪ್ತಾಹದ ಕೊನೆಯ ಭಾಗವಾಗಿ ಬಂದ ನಿಶಾಚಾರಣ ಮತ್ತು ಏರಿಕಲ್ಲು ಆರೋಹಣದ ಕೊನೆಯಲ್ಲಿ ಬಂದಿತ್ತೊಂದು ದಿಟ್ಟ ಪ್ರಶ್ನೆ, “ಇನ್ನೆಂದು, ಇಂಥ ಇನ್ನೊಂದು?”  ಅದಕ್ಕೂ ಆರೋಹಣ ಪೂರ್ಣ ಸಂತೋಷದಿಂದಲೇ ಉತ್ತರಿಸಿತ್ತು. ವರ್ಷ ಕಳೆದು, ಹಾಗೆ ಮೂಡಿದ ಕಲಾಪ “ಬನ್ನಿ ಬಲ್ಲಾಳರಾಯನ ದುರ್ಗಕ್ಕೆ!”

[ಇಲ್ಲಿ ಅದನ್ನೋದಿ ತಿಳಿಯುವ ಕುತೂಹಲಕ್ಕೆ ನೀವು ಕಾಯಲೇ ಬೇಕು ಮುಂದಿನ ಕಂತಿಗೆ]

(ಮುಂದುವರಿಯಲಿದೆ)

3 comments:

  1. ಎಲ್ಲ ನೆನೆಪುಗಳ ಸುರಿಮಳೆ ಗೈದಿದ್ದೀಯ. ನಿನ್ನ ಪ್ರತಿಯೊದು ಲೇಖನವ ಓದುವ ಆಸೆ ಆದರೆ ಕಾಲ ಪುರುಷ ನನ್ನ ಎಚ್ಚರಿಸುತಿರುತ್ತಾನೆ. ಆ ನೀನು ಬೆನ್ನ ಮೇಲೆ ಹೊತ್ತು ಮಾಡುವ ಉದರಕಾಪಾಡುವಿಕೆ ನೋಡಿದಾಗ ಎಲ್ಲ ಮರುಕಳಿಸಿತು ....

    ReplyDelete
  2. ಲಾರಿಯ ಮೇಲೆ ಟೊಮೆಟೋ ಆಲೂಗಡ್ಡೆ ಜೊತೆ ಉರುಳಾಡಿದ ವೃತ್ತಾಂತ ಸೊಗಸಾಗಿದೆ. ತರಕಾರಿ ಮೂಟೆಗಳಂತೆ ಲಾರಿ ಮೇಲೆ ಎಲ್ಲರನ್ನೂ ಹಗ್ಗದಲ್ಲಿ ಕಟ್ಟಿಬಿಟ್ಟಿದ್ದರೆ ಜಾರುವ ಆತಂಕವಿಲ್ಲದೆ ನಿದ್ದೆಗೆ ಶರಣಾಗಬಹುದಿತ್ತು !

    ReplyDelete