ಶ್ಯಾಮಲಾ
ಮಾಧವ ಅವರ ಆತ್ಮಕಥಾನಕ
ಧಾರಾವಾಹಿ - ನಾಳೆ ಇನ್ನೂ ಕಾದಿದೆ
ಇದರ
ಅಧ್ಯಾಯ - ೧೪
ಮದರಾಸಿನಿಂದ ಮಿಸ್ ಲಲಿತಾ ವೇಲಾಯುಧನ್ ನಮ್ಮ ಜ಼ುವಾಲಜಿ ವಿಭಾಗಕ್ಕೆ ರೀಡರ್ ಆಗಿ ಬಂದರು. ಎತ್ತರವಾದ ಮೋಹಕ ರೂಪವಾದರೂ ಬಿಗುವಾದ ಚೆಹರೆ. ಒಂದಿನ,
ತುಂಬ ಅಚ್ಚುಕಟ್ಟಾಗಿ, ನೀಟ್ ಆಗಿ ಪುಟ ತುಂಬ ಎದ್ದುಕಾಣುವಂತೆ ಬಿಡಿಸಿದ್ದ ನನ್ನ ಡಯಾಗ್ರಾಮ್ ಹಾಳೆಯನ್ನು ಕ್ಲಾಸ್ನಲ್ಲಿ ಎತ್ತಿ ತೋರಿ, ಪುಟ್ಟದಾದ್ದನ್ನು ಹೀಗೆ ದೊಡ್ಡದಾಗಿ ಬಿಡಿಸಿದವರಾರು, ಎಂದು ಕೇಳಿ, ಸಂಕೋಚದಿಂದ ಎದ್ದುನಿಂತ ನನ್ನ ಮುಖವನ್ನು ನೋಡಿಯೇ ನನ್ನನ್ನು ಹೃದಯಕ್ಕೆ ಹತ್ತಿರವಾಗಿಸಿಕೊಂಡ ಮಿಸ್ ಲಲಿತಾಗೆ ಕಾಲೇಜ್ನಲ್ಲಿ ಪ್ರಿಯರಾದವರು, ಅಥವಾ ಅವರನ್ನು ಪ್ರೀತಿಸಿದವರು ಬೆರಳೆಣಿಕೆಯಷ್ಟೇ ಎನ್ನಬಹುದು. ಆದರೆ ಅವರು ತೋರಿದ ಪ್ರೀತಿಯಿಂದಾಗಿ ನನಗಂತೂ ಅವರ ಮೇಲೆ ಅದೇನೋ ಮೋಹ ಬೆಳೆಯಿತು. ಫೈನಲ್ ಇಯರ್ನಲ್ಲಿ ಮದರಾಸ್ಗೆ ಎಕ್ಸ್ಕರ್ಶನ್ ಹೊರಟಾಗ, ರೈಲಿನಲ್ಲಿ ನಿದ್ರಿಸದೆ ಇದ್ದ ನನ್ನನ್ನು ಅವರು ತಮ್ಮ ತೊಡೆಯ ಮೇಲೆ ತಲೆ ಇರಿಸಿಕೊಂಡು ನಿದ್ದೆಹೋಗುವಂತೆ ಮಮತೆ ತೋರಿದ್ದರು. ಆದರೆ ಸಂಕೋಚದಿಂದ ನಾನು ನಿದ್ರಿಸದೆ ಎದ್ದು ಬಿಟ್ಟಿದ್ದೆ. ತುಂಬ ಹೋಮ್ಸಿಕ್ ಎಂದು ಪ್ರೀತಿಯಿಂದಲೇ ಅವರು ನನ್ನನ್ನು ಜರೆದಿದ್ದರು. ದುರದೃಷ್ಟದಿಂದ, ಮದರಾಸ್ ತಲುಪಿದ ಮರುದಿನವೇ ಜ್ವರ ಬಂದು ಮತ್ತೆಲ್ಲೂ ಹೋಗಲಾಗದೆ ನಾನು ಹಾಸ್ಟೆಲ್ ರೂಮ್ನಲ್ಲೇ ಉಳಿಯ ಬೇಕಾಯ್ತು.
ಮೊದಲ ದಿನ ಮದರಾಸ್‌ನ ಚೋರ್‌ಬಜಾರ್ ಹಾಗೂ ಮಹಾಬಲಿಪುರಂ ಹಾಗೂ ಪಕ್ಷಿತೀರ್ಥ ನೋಡಲಾದುದಷ್ಟೇ ನನ್ನ ಭಾಗ್ಯ. ಚೋರ್ ಬಜಾರ್ನಲ್ಲಿ ಏಳು ರೂಪಾಯಿ ತೆತ್ತು ಕೊಂಡ ಮೋಹಕ ಕೃಷ್ಣಮೂರ್ತಿ ಈಗಲೂ ನನ್ನಮ್ಮನ ಮನೆಯಲ್ಲಿ ಸ್ವಸ್ಥಾನದಲ್ಲಿದೆ. ಶ್ವೇತ ವರ್ಣದ ಮಣ್ಣಿನ ಎರಡಡಿ ಎತ್ತರದ ಚೆಲುವಾದ ಮೂರ್ತಿ! ಅಸೌಖ್ಯದಿಂದ ಬಳಲಿ ಹಿಂದಿರುಗಿದ ನಾನು, ಮಂಗಳೂರು ರೈಲು ನಿಲ್ದಾಣದಲ್ಲಿ ಬಂದಿಳಿದಾಗ ಎಷ್ಟು ಸೋತಿದ್ದೆನೆಂದರೆ, ನನ್ನ ಚೆಲ್ವಕೃಷ್ಣ ಮೂರ್ತಿಯನ್ನು ರೈಲಿನಲ್ಲೇ ಮರೆತು ಬಿಟ್ಟಿದ್ದೆ. ಗೆಳತಿ ಶಾರದಾ, ನನಗಾಗಿ ಅವನನ್ನು ಹೊತ್ತು ತಂದು ಮನೆಯಲ್ಲಿ ನನಗೊಪ್ಪಿಸಿದ್ದಳು. ಬಳಲಿದ ನನ್ನನ್ನು ಕಂಡು ಮರುಗಿದ ತೆಕ್ಕುಂಜೆ ಮಾಷ್ಟ್ರು, ಹಿಂದಿನಿಂದಲೇ ಕೃಷ್ಣನನ್ನು ಹೊತ್ತು ಬಂದ ಶಾರದೆಯನ್ನು ಕಂಡು ನಕ್ಕು ಹಗುರಾಗಿದ್ದರು.
.
ಶಾರದಾ ಮಾಣಾಯ್ ತಂದೆ ಶಂಕರ್ ಮಾಣಾಯ್ ಅವರು, ನಮ್ಮ ತಂದೆ ನೌಕರಿಯಲ್ಲಿದ್ದ ವರ್ತಕ ವಿಲಾಸದ ಕೊಬ್ಬರಿ ಮಂಡಿಗೆ ಸರಕು ವ್ಯವಹರಿಸುತ್ತಿದ್ದರಿಂದ ನಮ್ಮ ತಂದೆಗೆ ಪರಿಚಿತರಿದ್ದರು. ಶಾರದಾ ನನ್ನ ಪ್ರಿಯ ಗೆಳತಿ. ಕಾವೂರಿನಲ್ಲಿ ವಿಶಾಲ ಗದ್ದೆ, ತೋಟದ ಮನೆ ಅವರದು. ಅಷ್ಟು ದೂರ
ನಮ್ಮ ಕಾಲೇಜ್ಗೆ ಗುಡ್ಡೆ, ಗದ್ದೆಗಳನ್ನು ಹಾದು ನಡೆದು ಬರುತ್ತಿದ್ದ ಶಾರದಾ ಬಲು ಮೆಲುಮಾತಿನ ಸೌಮ್ಯೆ. ಮುಂದೆ ಕನ್ನಡ ಎಂ. ಎ. ಮಾಡಿ, ಎಸ್. ವಿ. ಪರಮೇಶ್ವರ ಭಟ್ಟರ ಹಾಗೂ ಮಂದಾರ ಕೇಶವ ಭಟ್ಟರ ಪ್ರಿಯ ಶಿಷ್ಯೆಯಾದ ಶಾರದಾ ಒಳ್ಳೆಯ ಕವಿಯಾಗಿ ಹೆಸರಾದಳು. "ಮಳೆಗೆ ಮಿಂದ ಬಿಸಿಲು" ಎಂಬ ಅವಳ ಕವನ ಮುಂಬೈ ಶಾಲೆಗಳ ಕನ್ನಡ ಪಠ್ಯದಲ್ಲಿ ಸೇರ್ಪಡೆಯಾಗಿತ್ತು. ನಮ್ಮ ಸ್ನೇಹ ಇಂದಿಗೂ ಹಸಿರಾಗಿದೆ.
ಜಿ.ಎನ್.ಶ್ಯಾಮಲಾ - ಗುಡ್ಡೆಮನೆ ನಾರಾಯಣ ಶ್ಯಾಮಲಾ, ಎಂದಿದ್ದ ನಾನು,
ಬಿ.ಎಸ್.ಸಿ. ಮೊದಲ ವರ್ಷದ ಕೊನೆಗೇ ಅಂದರೆ, ಹದಿನೇಳರ ಹರೆಯದಲ್ಲಿ, ಮಾಧವರೊಡನೆ ವಿವಾಹ ಬಂಧನದಲ್ಲಿ ಬಂಧಿತಳಾದರೂ, ನಾನು `ಶ್ಯಾಮಲಾ ಮಾಧವ’ ಎಂದಾದುದು ಬಹಳ ವರ್ಷಗಳ ಬಳಿಕವೇ. ನನ್ನ ಹದಿನೈದರ ಹರೆಯದಲ್ಲೇ ಒಂದಿನ ಮುಂಬೈಯ ವರನೊಬ್ಬ ಕನ್ಯಾರ್ಥಿಯಾಗಿ ನನ್ನನ್ನು ನೋಡ ಬಂದಿದ್ದರು. ಅಷ್ಟೇನೂ ಪರಿಚಿತರಲ್ಲದ ಬಂಧುವೊಬ್ಬರೊಡನೆ ಅವರು ಬಂದು ಮನೆ ಹೊಕ್ಕಾಗ ನಾನು ಅಂಗಳದೆದುರಿನ ತಿಟ್ಟೆಯ ಮೇಲೆ ಸೀರೆ ಮೇಲೆತ್ತಿ ಸಿಕ್ಕಿಸಿ, ಒಗೆದ ಬಟ್ಟೆಯನ್ನು ವಯರ್ ಮೇಲೆ ಹರವುತ್ತಿದ್ದೆ. ಯಾರೋ ತಂದೆಯ ಪರಿಚಯದವರು, ಎಂದಂದು ಕೊಂಡಿದ್ದೆ. ಒಳಗಿನಿಂದ ತಂದೆಯವರು ಕರೆದಾಗ ಹೋಗಿ ಅವರೆದುರು ನಿಂತೆ. ಅವರು ಬಂದಿದ್ದ ವಿಷಯ ನನಗೆ ತಿಳಿದುದು ಆ ಮೇಲೆ. ನಮ್ಮಮ್ಮನ ಮಾವ – ನಮ್ಮಜ್ಜ, ವರನ ಉದ್ಯೋಗ, ಸಂಬಳದ ಬಗ್ಗೆ ವಿಚಾರಿಸಿ, ಹೇಗೆ, ಮದುವೆಯಾಗಿ ಸಂಸಾರ ಹೂಡಿದರೆ ದಿನ ಕಳೆಯಬಹುದೇ ಎಂದು ಕೇಳಿದರೆಂಬ ಅಸಮಾಧಾನದಿಂದ, ಹುಡುಗಿ ತೋರ ಇದ್ದಾಳೆಂದು ಅವರು ನಿರಾಕರಿಸಿದರೆಂದು ಕೆಲ ದಿನಗಳ ಬಳಿಕ ತಿಳಿದು ಬಂತು. ಅಷ್ಟು ಚಿಕ್ಕ ವಯಸ್ಸಲ್ಲೇ ವರನೊಬ್ಬ ನನ್ನನ್ನು ನೋಡ ಬಂದು ಮತ್ತೆ ತೋರವೆಂದು ಹೊರಟುಹೋದ ಬಗ್ಗೆ ಕೌತುಕದ ಮಾತುಗಳು ಕೇಳಿ ಬಂದಿದ್ದುವು.
ನಮ್ಮಣ್ಣ ನನ್ನನ್ನು ಗುಜ್ಜೆ, ಬೊಡ್ಡಿ ಎಂದೆಲ್ಲ ಕರೆಯುತ್ತಿದ್ದ. ಕರಂಗಲ್ಪಾಡಿ ಮನೆಯಲ್ಲಿ ನಮ್ಮ ಊಟದ ಮೇಜೊಂದಿತ್ತು. ತಂಗಿ ಮಂಜುಳಾ ನಡುವಿನಲ್ಲೂ, ನಾನು ಕೊನೆಯಲ್ಲೂ ಕುಳಿತು ಕೊಳ್ಳುತ್ತಿದ್ದೆವು. ತಂಗಿ ಮಂಜುಳನ ಊಟ ಮೊದಲು ಮುಗಿದರೆ, ನಾನು ಏಳಲು ಅವಳು ಕಾಯುತ್ತಿದ್ದಳು. " ಎದ್ದು ಹೊರಗೆ ಬರಬೇಕಾಗಿಲ್ಲ; ಎದ್ದು ಪುನಃ ಕೂತರೆ ಸಾಕು; ಅವಳು ಹಾರಿ ಈಚೆ ಬಂದು ಬಿಡ್ತಾಳೆ", ಎಂದು ಅಣ್ಣ ನನ್ನನ್ನು ಪರಿಹಾಸ ಮಾಡುತ್ತಿದ್ದ. ನಾನು ತನ್ನ ಜೊತೆಗೆ ಹೊರಗೆ ಬರ ಬಾರದೆಂದೂ, ಎಲ್ಲರೂ ನನ್ನನ್ನು ತನ್ನ ಅಕ್ಕನೆಂದು ಕೊಳ್ತಾರೆಂದೂ, "ಅಬ್ಬ"ಎಂದು ಕರೆಯ ಬಾರದೆಂದೂ ಸಿಟ್ಟಾಗುತ್ತಿದ್ದ. ನಾವು ಮಕ್ಕಳು ಮನೆಯಲ್ಲಿ ಅಬ್ಬ, ಬೇಬಿ, ಕುಂಞಿ, ಬಾಬ ಎಂದು ಕರೆಸಿಕೊಳ್ಳುತ್ತಿದ್ದೆವು. ಸನಿಹ ಬಂಧುಗಳು, ಆತ್ಮೀಯರಾಗಿದ್ದ ಟೀಚರ್ಸ್, ನಮ್ಮನ್ನು ಹಾಗೇ ಕರೆಯುತ್ತಿದ್ದರು. ಈಗಲೂ ಮನೆಯಲ್ಲಿ ಅದೇ ಹೆಸರು. ಆದರೆ ಅಣ್ಣನ ಆಣತಿಯಿಂದಾಗಿ ನಾನವನನ್ನು ಮೋಹನ್ ಎಂದೇ ಸಂಭೋಧಿಸಲಾರಂಭಿಸಿದೆ.
ನಮ್ಮ ಅಡಿಗೆ ಕೋಣೆಯ ಹಿಂದೆ ಅಣ್ಣನ ಕೋಣೆಯಿತ್ತು. ಕೋಣೆಯ ಬಾಗಿಲಲ್ಲಿ, "ಇದು ಮೋಹನನ ಕೋಣೆ" ಎಂದು ಬರೆದಿದ್ದು ಇನ್ನೂ ತಮ್ಮ ಕಣ್ಗಳಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಗೆಳತಿ ಶಾರದಾ ಹಾಗೂ ದಯಾ ಈಗಲೂ ನೆನಸಿಕೊಳ್ಳುತ್ತಾರೆ.
ಪ್ರೆಸಿಡೆಂಟ್ ಸ್ಕೌಟ್ ಆಗಿದ್ದ ಅಣ್ಣ ಮಗುವಿನಲ್ಲೂ, ಹದಿಹರೆಯದಲ್ಲೂ, ಹಾಗೂ ಈಗಲೂ ಚೆಲುವನೇ. ಕಾಲೇಜ್ನಲ್ಲಿ ಒಮ್ಮೆ ಫೆದರ್ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಯಾವುದೇ ಪೂರ್ವ ತಯಾರಿಯಿಲ್ಲದೆ ಭಾಗವಹಿಸಿ ಗೆದ್ದು ಬಂದಿದ್ದ. ಪಿ.ಯೂ.ಸಿ.ಯಲ್ಲಿದ್ದಾಗ ರಘು, ಉಲ್ಲಾಸ ಕಾರಂತ ಮುಂತಾದ ಗೆಳೆಯರೊಡನೆ ಕುದುರೆ ಮುಖ ಚಾರಣಕ್ಕೆ ಹೋಗಿ ಬಂದಿದ್ದ. ಉಲ್ಲಾಸ ಕಾರಂತರ ಸೋದರಿ ಕ್ಷಮಾ ಕೂಡಾ ಆ ದಿನಗಳಲ್ಲಿ ಪರಿಚಿತಳಾಗಿದ್ದಳು. ಅಲೋಶಿಯಸ್ ಕಾಲೇಜ್ನಲ್ಲಿ ಆಗ ವೃತ್ತಿ ಶಿಕ್ಷಣವಿದ್ದು, ಕಾರ್ಪೆಂಟರಿಯಲ್ಲಿ ಚೆಲುವಾದೊಂದು ಕೃಷ್ಣನ ಚಿತ್ರಕ್ಕೆ ಮರದ ಫ್ರೇಮ್ ಕತ್ತರಿಸಿ ಸುಂದರ ಕಲಾಕೃತಿಯನ್ನು ಅಣ್ಣ ಸಿದ್ಧಗೊಳಿಸಿದ್ದ. ಕಾಲೇಜ್ ಮಾಕ್ ಪಾರ್ಲಿಮೆಂಟ್ನಲ್ಲಿ ವೈಸ್ ಪ್ರೆಸಿಡೆಂಟ್ ಡಾ. ಝಕೀರ್ ಹುಸೇನ್ ಆಗಿ ಅತ್ಯುತ್ತಮವಾಗಿ ಪಾತ್ರ ನಿರ್ವಹಿಸಿದ್ದ.
ಸಹಪಾಠಿಗಳೊಡನೆ ನಾಟಕ ತಂಡ ಕಟ್ಟಿಕೊಂಡು ಕುವೆಂಪುರವರ "ರಕ್ತಾಕ್ಷಿ" ನಾಟಕವನ್ನು ಮಾಷ್ಟ್ರು ತೆಕ್ಕುಂಜೆ ಗೋಪಾಲಕೃಷ್ಣ ಭಟ್ಟರ ನಿರ್ದೇಶನದಲ್ಲಿ, "ಕೆಂಗಣ್ಣ ಕಿಡಿ" ಎಂಬ ಶೀರ್ಷಿಕೆಯಲ್ಲಿ
ಆಗ ಹೊಸದಾಗಿ ತೆರೆದಿದ್ದ ಮಂಗಳೂರು ಟೌನ್ಹಾಲ್ನಲ್ಲಿ ಪ್ರದರ್ಶಿಸಿದ್ದು, ನಿಜಕ್ಕೂ ಅದೊಂದು ಅಮೋಘ ನಾಟಕವೇ ಆಗಿತ್ತು. ಸಂಜೀವ ಸುರತ್ಕಲ್, ರಾಜನಾಗಿ ನಾಯಕನ ಪಾತ್ರದಲ್ಲಿ ಮಿಂಚಿದರೆ, ಅಣ್ಣ ಹೈದರಾಲಿಯಾಗಿ ನಟಿಸಿದ್ದ. ಬಂಧುಗಳೂ, ಸಹಪಾಠಿಗಳೂ ಆದ ದಯಾನಂದ ಉಚ್ಚಿಲ್, ವಸಂತಕುಮಾರ್ ಉಚ್ಚಿಲ್ ಅವರೂ ಈ ನಾಟಕದಲ್ಲಿ ನಟಿಸಿ ಮನ ಸೆಳೆದಿದ್ದರು. ಅಂದು ರಂಗದಲ್ಲಿ ಕೆಂಪಾಗಿ ಹೊಳೆದ ವಸಂತ ಕುಮಾರ್ ಉಚ್ಚಿಲ್ಗೆ ಮುಂದೆ ಟೊಮೇಟೋ ವಸಂತ ಎಂದೇ ಹೆಸರಾಯ್ತು. ನಾಟಕದ ಕೊನೆಗೆ ರಾಜನಿಗೆ ಪ್ರೇತದರ್ಶನವಾಗುವ ದೃಶ್ಯದಲ್ಲಿ ಎತ್ತರ ಕಾಯದ ಭಗವಾನ್ ದಾಸ್, ತೆರೆಯ ಹಿಂದೆ ಪರದೆಯಲ್ಲಿ ದೈತ್ಯ ನೆರಳು ಮೂಡುವಂತೆ ಚಲಿಸಿದ್ದು ಅತ್ಯಂತ ರೋಮಾಂಚನಕಾರಿಯಾಗಿತ್ತು. ಅಣ್ಣ ಮೋಹನನ ಲೀಡರ್ಶಿಪ್ ಗುಣಗಳು ಕಾಲೇಜ್ನಲ್ಲೇ ಎದ್ದು ಕಾಣುತ್ತಿದ್ದುವು.
ಮಂಗಳೂರು ಮುನಿಸಿಪಲ್ ಸೆಂಟಿನರಿ ಸಿಲೆಬ್ರೇಶನ್, ಸ್ಮರಣಾರ್ಹವಾಗಿ ನೆರವೇರಿತ್ತು. ನಾನಾಗ ಪಿ.ಯೂ.ಸಿ.ಯಲ್ಲಿದ್ದೆ. ಪಿ.ಯೂ.ಸಿ. ತರಗತಿಗೆ ಕೂರ್‍ಗ್‌ನ ಎಸ್ಟೇಟ್ ಒಂದರಿಂದ ಗರ್ಟಿ ಸುಂದರಿ ಮಥಾಯಸ್ ಪ್ರಭು ಎಂಬ ಹುಡುಗಿ ಬಂದು ಸೇರಿದ್ದಳು. ಈ ಉದ್ದದ ಹೆಸರಿನಂತೇ ಗರ್ಟಿ ತುಂಬ ಚುರುಕಾಗಿ ಗಮನ ಸೆಳೆವಂತಿದ್ದಳು. ಮುನಿಸಿಪಲ್ ಸೆಂಟಿನರಿ ಸಿಲೆಬ್ರೇಶನ್ನಲ್ಲಿ ಉಸ್ತುವಾರಿ ನೋಡುತ್ತಿದ್ದ ಸುವರ್ಣರನ್ನೇ ಮದುವೆಯಾಗಿ ಅವಳು ಮುಂದೆ ಗರ್ಟಿ ಸುವರ್ಣ ಮಥಾಯಸ್ ಪ್ರಭು ಎಂದಾದಳು. ನಗರದ ಸಾಮಾಜಿಕ ಕ್ಷೇತ್ರದಲ್ಲಿ ಹೆಸರಾದಳು.
ನಮ್ಮ ಹೈಸ್ಕೂಲ್ ಗೆಳತಿ ಶ್ರೀಮಂತಿನಿ ಕಾಲೇಜ್ನಲ್ಲೂ ನಮ್ಮ ಜೊತೆಗಿದ್ದಳು. ಶಿರ್ಮಿ ಎಂದೇ ನಾವವಳನ್ನು ಕರೆಯುತ್ತಿದ್ದೆವು. ಹೃದಯದ ಕವಾಟದಲ್ಲಿದ್ದ ತೂತಿನಿಂದಾಗಿ ಆರೋಗ್ಯ ಸಮಸ್ಯೆಯಿದ್ದ ಶಿರ್ಮಿ, ಪಿ.ಯೂ.ಸಿ.ಯಲ್ಲಿದ್ದಾಗ ಹೃದಯದ ಶಸ್ತ್ರಕ್ರಿಯೆಗಾಗಿ ಮುಂಬಯಿಗೆ ಹೋಗುವುದಾಗಿ ಹೇಳಿದ್ದಳು. ಡಾ. ದಸ್ತೂರ್ ಅವಳ ಹೃದಯದ ಶಸ್ತ್ರಕ್ರಿಯೆ ನಡೆಸುವವರಿದ್ದರು.
ಹೀಗೆ ಶಿರ್ಮಿ ಕಾಲೇಜ್ಗೆ ಗೈರುಹಾಜರಿದ್ದ ಒಂದು ದಿನ ಬೆಳಿಗ್ಗೆ, ಅಸೆಂಬ್ಲಿಗೆ ಮುನ್ನ
ಪ್ರಿನ್ಸಿಪಾಲ್ , ಶಿರ್ಮಿಯ ಗೆಳತಿಯರಾದ ಪ್ರಭಾ, ಕ್ರಿಸ್ತಿನ್, ಝರೀನಾ ಹಾಗೂ ನನ್ನನ್ನು ಕರೆದು, ಶಿರ್ಮಿಯ ನಿಧನ ವಾರ್ತೆಯನ್ನರುಹಿ, ಆ ಬಗ್ಗೆ ಅವಳ ಕಸಿನ್ ಸುರೇಂದ್ರ ಬರೆದ ಪತ್ರವನ್ನು ನಮ್ಮ ಕೈಗಿತ್ತರು. ಹಾಗೂ ಸಂತಾಪ ಸೂಚಕ ಸಭೆಯ ಬಳಿಕ ನಾವು ನಾಲ್ವರೂ ಶಿರ್ಮಿಯ ಮನೆಗೆ ಹೋಗಿ ಕಂಡೋಲೆನ್ಸ್ ವಿಸಿಟ್ ಗೈದು ಬರಬೇಕೆಂದು ತಿಳಿಸಿದರು. ದುಃಖತಪ್ತರಾಗಿ ನಾವು ನಾಲ್ವರೂ ಶಿರ್ಮಿಯ ಮನೆ ಹೊಕ್ಕಾಗ, ಅವಳಮ್ಮ ಜಗಲಿಯಲ್ಲಿ ಅಕ್ಕಿ ಗೇರುತ್ತಿದ್ದವರು, ನಮ್ಮನ್ನು ಕಂಡು "ಶಿರ್ಮೀ", ಎಂದು ಕರೆದಾಗ ನಮ್ಮ ಅವಸ್ಥೆ ಏನಾಯ್ತೆಂದು ಏನು ಹೇಳುವುದು?! ಒಳಗಿನಿಂದ ಬಂದ ಶಿರ್ಮಿ, ಸಪ್ಪಗಾಗಿ
ತಾನು ಚೇತರಿಸುತ್ತಿರುವುದಾಗಿ ಹೇಳಿದಳು. ಅವಳಮ್ಮ, ಅವಳ ಎದೆಯಲ್ಲಿದ್ದ ಶಸ್ತ್ರ ಚಿಕಿತ್ಸೆಯ ಗುರುತನ್ನು ನಮಗೆ ತೋರಿದರು. ಪತ್ರದ ಬಗ್ಗೆ ಏನೂ ಹೇಳಲಾಗದೆ ನಾವು ಕಾಲೇಜ್ಗೆ ಹಿಂದಿರುಗಿದೆವು. ಸಂತಾಪಸೂಚಕ ಸಭೆಯ ಬಳಿಕ ಕಾಲೇಜ್ಗೆ ರಜೆ ಸಾರಲಾಗಿತ್ತು. ಪತ್ರದ ಹಸ್ತಾಕ್ಷರ ಶಿರ್ಮಿಯದೇ ಆಗಿತ್ತೆಂಬ ಸಂದೇಹ ನಮ್ಮೆಲ್ಲರದೂ ಆಗಿತ್ತು. ಕಾಲೇಜ್ ಗೇಟ್ ಎದುರು ನಾವು ಗೆಳತಿಯರು ನಿಂತಿದ್ದಾಗಲೆಲ್ಲ ಶಿರ್ಮಿ, ತನ್ನ ಕಸಿನ್ ಸುರೇಂದ್ರ, ಅದೋ, ಬೈಕ್ನಲ್ಲಿ ಹಾದುಹೋದ ಎನ್ನುತ್ತಿದ್ದರೂ, ನಮ್ಮಲ್ಲಿ ಯಾರ ಕಣ್ಣಿಗೂ ಆತ ಕಾಣಿಸಿರಲಿಲ್ಲ. ಮೆಡಿಕಲ್ ಸ್ಟ್ಯೂಡೆಂಟ್ ಎಂದು ಅವಳನ್ನುತ್ತಿದ್ದ ಸುರೇಂದ್ರ ಅವಳ ಇಮಾಜಿನರಿ ಕಸಿನ್ ಎಂದು ನಾವೆಲ್ಲ ಅರ್ಥ ಮಾಡಿಕೊಂಡಿದ್ದೆವು.
ಮೂರು ವರ್ಷಗಳ ಬಳಿಕ ಕಾಲೇಜ್ ಫೈನಲ್‌ನ ಪರೀಕ್ಷೆಯ ತಯಾರಿಯ ದಿನಗಳಲ್ಲಿ ಒಂದಿನ ನಮ್ಮ ಮನೆಗೆ ಬಂದಿದ್ದ ಶಿರ್ಮಿ, ತನ್ನ ಸೆಕೆಂಡ್ ಸರ್ಜರಿಗೆ ತಾನು ಜರ್ಮನಿಗೆ ಹೋಗಿ ಬಂದ ಬಗ್ಗೆ - ಏರ್ಪೋರ್ಟ್ ಹಾಗೂ ವಿಮಾನ ಪಯಣದ ವಿವರವನ್ನೂ ಒಳಗೊಂಡಂತೆ ಅಡೆತಡೆಯಿರದೆ ಸರಾಗವಾಗಿ ಒಂದರ್ಧ ಗಂಟೆಗೂ ಹೆಚ್ಚು ಕಾಲ ನಮ್ಮಮ್ಮನಿಗೆ ವಿವರಿಸಿದ್ದಳು! ಮುಂಬೈಯ ಭಾಂಡೂಪ್ನಲ್ಲಿ ನಾವು ವಾಸವಿದ್ದಾಗ, ಕಾಣಸಿಕ್ಕಿದ್ದ ಶಿರ್ಮಿ, ಪಕ್ಕದ ಚಾಲ್‌ನ ತನ್ನ ಸೋದರಮಾವನ ಮನೆಯಲ್ಲಿರುವುದಾಗಿ ತಿಳಿಸಿದ್ದಳು. ಮತ್ತೆ ಕಾಣಸಿಕ್ಕಿರಲಿಲ್ಲ. ಇದೇ ಶಿರ್ಮಿ, ಮುಂದೆ ಮುಂಬೈ ಜೆಸ್ಲಾಕ್ ಹಾಸ್ಪಿಟಲ್ನಲ್ಲಿ ಪೆಥಾಲಜಿಸ್ಟ್ ಆಗಿದ್ದಾಳೆಂದೂ ಕೇಳಿದ್ದೆ. ಎಂದಾದರೂ ಸಿಗುವಳೇನೋ ಎಂಬ ನಿರೀಕ್ಷೆಯಲ್ಲಿ ನಾನಿದ್ದೇನೆ.
ಕಾಲೇಜಲ್ಲಿ ಒಂದಿನ ಸರ್ವೋದಯದ ಕಾರ್ಯಕರ್ತ ನಾರಾಯಣ ಎಂಬವರು ಭೇಟಿಯಿತ್ತು, ಸರ್ವೋದಯ ತತ್ವದ ಬಗ್ಗೆ ಮಾಡಿದ ಭಾಷಣ ನನ್ನನ್ನು ಎಷ್ಟು ಸೆಳೆಯಿತೆಂದರೆ, ನಾನು ಅವರೊಡನೆ ಅವರ ಅನುಯಾಯಿಯಾಗಿ ಹೋಗಲು ಸಿದ್ಧಳಿದ್ದೆ. ಆದರೆ, ಪದವಿ ವಿದ್ಯಾಭ್ಯಾಸ ಮುಗಿಸದೆ ಹಾಗೆ ಹೋಗಲಾಗದೆಂದು ಆ ಮಹಾನುಭಾವ ತಿಳಿ ಹೇಳಿದರು. ರಾಮಕೃಷ್ಣ ಮಿಶನ್ ಹಾಗೂ ಮಠವೂ ನನ್ನನ್ನು ಸೆಳೆದಿತ್ತು. ನೆಹರೂರಿಗೆ ಪ್ರಿಯವಾದ ರಾಬರ್ಟ್ ಫ್ರಾಸ್ಟ್‌ನ ಕವಿತೆ, "ದ ವುಡ್ಸ್ ಆರ್ ಲವ್ಲೀ, ಡಾರ್ಕ್ ಆಂಡ್ ಡೀಪ್, ಬಟ್ ಐ ಹಾವ್ ಪ್ರಾಮಿಸ್ಸ್ ಟು ಕೀಪ್, ಮೈಲ್ಸ್ ಟು ಗೋ ಬಿಫೋರ್ ಐ ಸ್ಲೀಪ್, ಆಂಡ್ ಮೈಲ್ಸ್ ಟು ಗೋ ಬಿಫೋರ್ ಐ ಸ್ಲೀಪ್" ನನ್ನ ತಂದೆಯವರಿಗೂ ಅತ್ಯಂತ ಪ್ರಿಯವಾಗಿತ್ತು. ತಂದೆಯವರ ವಿಚಾರ, ಆದರ್ಶಗಳೇ ನನ್ನ ದಾರಿದೀಪವಾಗಿ ಬಾಳಲ್ಲಿ ನನ್ನನ್ನು ಮುನ್ನಡೆಸಿವೆ.
(ಮುಂದುವರಿಯಲಿದೆ)
No comments:
Post a Comment