31 December 2013

ಕುಲಪತಿ ಬೀರಿದ ಕ್ಷಿಪಣಿ ತಿರುಗುಬಾಣವಾದಾಗ

ಜಿಟಿನಾರಾಯಣ ರಾಯರಮುಗಿಯದ ಪಯಣ ವಿ-ಧಾರಾವಾಹಿಯ ಕಂತು ಮೂವತ್ತೇಳು
ಅಧ್ಯಾಯ ೮೧  (ಮೂಲದಲ್ಲಿ ೫೩)

೧೯೮೬ರ ಸೆಪ್ಟೆಂಬರ್ ಕೊನೆಗೆ ನಾನು ನಿವೃತ್ತನಾಗಬೇಕಿತ್ತು. ಆಗ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದವರು ವೈ.ಪಿ. ರುದ್ರಪ್ಪ ಮತ್ತು ಕುಲಸಚಿವ ಎಸ್. ನಾರಾಯಣಶೆಟ್ಟಿ (ಸುಜನಾ ಎಂಬ ಕಾವ್ಯನಾಮದ ಖ್ಯಾತ ಕವಿ). ಇನ್ನು ನಮ್ಮ ಸಂಸ್ಥೆಯ ನಿರ್ದೇಶಕರಾಗಿದ್ದವರು ಎಚ್. ತಿಪ್ಪೇರುದ್ರಸ್ವಾಮಿ. ರುದ್ರಪ್ಪ ಹೆಸರಿಗೆ ತಕ್ಕಂತೆ ಶಿಸ್ತುನಿಷ್ಠುರರು, ಸತ್ಯಸಂಧರು ಮತ್ತು ಉಗ್ರಕೋಪಿಷ್ಠರೆಂದೇ ಪ್ರಸಿದ್ಧರು. ಆ ವೇಳೆಗೆ ವಿಶ್ವವಿದ್ಯಾನಿಲಯದೊಳಗಿನ ಸ್ಥಿತಿ ಏನಾಗಿತ್ತು ಗೊತ್ತೇ?
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ
ಮತ್ತು, “ದಾರುಗಟ್ಟಿ ಮಾಳ್ಪರಿಲ್ಲದೆ ಕಾಲ ಕತ್ತಲೆಯೊಳಗೆ.... ಸೋರುತಿಹುದು ಮನೆಯ ಮಾಳಿಗಿ” (ಶಿಶುನಾಳ ಶರೀಫ).
ವಿಶ್ವಕೋಶದಲ್ಲಿಯ ನಮ್ಮ ಭವಿಷ್ಯವೇ ಶೂನ್ಯಗಾಮಿಯಾಗುತ್ತಿದೆಯೋ ಎಂಬ ಆತಂಕದ ದಿನಗಳವು. ಇಂಥ ಅರಾಜಕತೆಗೆ ಶಾಸ್ತಿ ಮಾಡಲು ಒಬ್ಬ ಉಕ್ಕಿನ ಆಡಳಿತಗಾರರಾಗಿ ಬಂದವರೇ ರುದ್ರಪ್ಪ. ಕೇವಲ ಬೆರಳೆಣಿಕೆಯ ದಿನಗಳಲ್ಲೇ ಅವರು ತಮ್ಮ ಉಕ್ಕುತನವನ್ನು ಆಡಳಿತೆಯ ಜಡಯಂತ್ರಕ್ಕೆ ಪ್ರಹಾರಿಸಿ ಎಲ್ಲ ಕೆಲಸಗಳ್ಳ ಅಲಸಿಗರಿಗೂ ಸಿಂಹಸ್ವಪ್ನವಾದರು. ಅವರ ಕಾರ್ಯವೈಖರಿಯ ವಿವರಗಳು ಜನಜನಿತವಾಗಿ ನನ್ನ ಕಿವಿಗೂ ಮುಟ್ಟುತ್ತಿದ್ದುವು. “ಭಲೇ ರುದ್ರಪ್ಪ!” ಎಂದುಕೊಳ್ಳುತ್ತಿದ್ದೆ ಮನದೊಳಗೆ.


ಅದೇ ಮಾರ್ಚ್ ೩೦ರ ಅಪರಾಹ್ಣ ನನಗೆ ಕುಲಸಚಿವರಿಂದ ಬಂದ ದೂರವಾಣಿ ಸಂದೇಶ: ಮರುದಿನ (ಮಾರ್ಚ್ ೩೧) ಮುಂಜಾನೆ ನಮ್ಮ ಸಂಸ್ಥೆಯ ಶೈಕ್ಷಣಿಕ ವಿಭಾಗದ ಹೊರತಾಗಿ ಉಳಿದ ವಿಭಾಗಗಳ ಸಿಬ್ಬಂದಿ ವರ್ಗದವರನ್ನು ಕುಲಪತಿಗಳು ಖುದ್ದು ಭೇಟಿಮಾಡಲು ಬಯಸಿದ್ದಾರೆ; ಮುಂಜಾನೆ ೧೦ ಗಂಟೆಗೆ ಸರಿಯಾಗಿ ನಾವೆಲ್ಲರೂ ಅವರ ಕೊಠಡಿಯಲ್ಲಿ ಹಾಜರಿರತಕ್ಕದ್ದು. ಆ ವಿಭಾಗಗಳಿವು: ವಿಶ್ವಕೋಶ, ಭಾಷಾಂತರ, ಜಾನಪದ, ಎಪಿಗ್ರಾಫಿಯ ಕರ್ನಾಟಿಕ, ಹರಿದಾಸ ವಾಙ್ಮಯ ಮತ್ತು ಹಸ್ತಪ್ರತಿಒಟ್ಟು ನಾವು ಸುಮಾರು ೩೫ ಮಂದಿ ಇದ್ದೆವು.    ನನ್ನ ಸ್ನೇಹಿತರೇ ಆಗಿದ್ದ ಸುಜನಾರನ್ನು ವಿವರಣೆ ಬೇಕೆಂದು ಕೋರಿದೆ: ಇದೊಂದು ಅಧಿಕೃತ ಭೇಟಿ, ಆದ್ದರಿಂದ ನಮ್ಮ ಸಂಸ್ಥೆಯ ನಿರ್ದೇಶಕರನ್ನು ಆಹ್ವಾನಿಸಬೇಕು, ಆಡಳಿತೆಯ ಹೊಣೆ ಇಲ್ಲದ ಸಿಬ್ಬಂದಿಯನ್ನು ಕರೆಯುವುದರ ಉದ್ದೇಶವೇನು? ನಿರ್ದೇಶಕರು ಈಗ ಊರಲ್ಲಿಲ್ಲವಾಗಿ ಈ ಆದೇಶವನ್ನು ಉಪನಿರ್ದೇಶಕರ ಮೂಲಕ ಅಧಿಕೃತವಾಗಿ ನಮಗೆ ಜಾರಿಮಾಡಬೇಕು.
      “ಬನ್ನಿ, ಕುಲಪತಿಗಳಿಗೆ ನಿಮ್ಮನ್ನೆಲ್ಲ ನೋಡಿ ಮಾತಾಡಬೇಕೆಂದಾಗಿದೆ, ಅಷ್ಟೆ. ಬೇರೆ ಏನೂ ಇಲ್ಲಎಂದು ಮಾತ್ರ ಸಮಜಾಯಿಶಿ ನೀಡಿದರು.

ಮಾರ್ಚ್ ೩೧, ೧೯೮೬. ನಾವೆಲ್ಲರೂ ೯-೪೫ರ ಹೊತ್ತಿಗೆ ಕುಲಪತಿಯವರ ಕೊಠಡಿಯೊಳಗೆ ಜಮಾಯಿಸಿದ್ದೆವು. ೧೦ಕ್ಕೆ ಸರಿಯಾಗಿ ಅವರು ಕುಲಸಚಿವ ಮತ್ತು ಇತರ ಅಧಿಕಾರಿಗಳ ಸಹಿತ ಬಂದರು. ಅಂದೇ ನಾನವರನ್ನು ಮೊದಲ ಸಲ ನೋಡಿದ್ದು. ಮುಖ ಕೋಪದಿಂದ ನಿಗಿನಿಗಿಯುತ್ತಿತ್ತು. ಏನಪಾಯ ಕಾದಿದೆ? ನಮ್ಮ ವಂದನೆಗಳಿಗೆ ಪ್ರತಿವಂದನೆ ಸಲ್ಲಿಸದೆ ಕುಳಿತುಕೊಳ್ಳಲು ಸನ್ನೆ ಮಾಡಿದರು, ಮತ್ತು ಎಲ್ಲರಿಗೂ ಕಾಪಿ಼, ಬಿಸ್ಕತ್ ಕೊಡಲು ಜವಾನನಿಗೆ ಆದೇಶಿಸಿದರು. ಇದ್ದವರಲ್ಲಿ ಹಿರಿಯನಾಗಿದ್ದ ನನ್ನ ಆಸನ ನೇರ ಅವರ ಎದುರಿಗೇ ಇತ್ತು. ಮುಂದಿನ ಮಾತುಕತೆ ಇಂಗ್ಲಿಷಿನಲ್ಲಿ:
      ನನ್ನನ್ನೇ ದಿಟ್ಟಿಸಿ ನೋಡುತ್ತ ಅವರು ಅಪ್ಪಣೆ ಮಾಡಿದರು, Do you know why I have asked you all to come here?
Please clarify, sir.
This evening you are all going to get your marching orders. Before that I wanted to see the faces of my subordinates.
That alerted the military facet of my personality. With such naked exhibition of filthy power, I felt, offence is the best form of defense. I shouted, You dare not do it Mr Rudrappa. We are in a free country, not under any dictatorship. If in spite of knowing it, you pass the dismissal orders on us, be it known to you that they will be fought in the appropriate Court of Law.
Hold your tongue. Do you know to whom you are talking?
Very much I do. Im talking to a cheap third-rate administrator. On the other hand do you know to whom you are talking? An internationally acclaimed science writer.
Turning to my colleagues I shouted, Friends! Its just waste of time to be here. Lets all walk out. Thus the meeting ended in a fiasco, but holding the Sword of Damocles over our heads.  

ಕಾತರತೆ ಮತ್ತು ಆತಂಕಸಹಿತ ಆ ಹಗಲಿಡೀ ಕಳೆದೆವು. ವಜಾ ಆಜ್ಞೆ ಬರಲೇ ಇಲ್ಲ. ಕ್ರಮೇಣ ಜಿನುಗಿದ ಒಳ ಸುದ್ದಿ: ನಮ್ಮ ವಿಭಾಗಗಳಿಗೆ ಮಾರ್ಚ್ ೩೧ರೊಳಗೆ ಬರಬೇಕಾಗಿದ್ದ ಸರ್ಕಾರೀ ಅನುದಾನವಿನ್ನೂ ಬಂದಿರಲಿಲ್ಲವಂತೆ, ಯಾರೋ ಬೃಹಸ್ಪತಿ ಬಾಬು ಸೂಚಿಸಿದನಂತೆ ಸಂಬಂಧಿಸಿದ ಎಲ್ಲ ನೌಕರರನ್ನೂ ವಜಾಗೊಳಿಸಿಬಿಡೋಣವೆಂದು! ವಜಾ ಆದೇಶಗಳು ಟೈಪ್ ಆಗಿ ಕುಲಸಚಿವರ ರುಜು ಕೂಡ ಅವುಗಳಿಗೆ ಬಿದ್ದಿದ್ದುವಂತೆ. ಸದ್ಯ, ಕೊನೆ ಗಳಿಗೆಯಲ್ಲಿ ಕುಲಪತಿ ವಿವೇಚನೆ ತಳೆದು ಅವನ್ನು ತಡೆಹಿಡಿದಿದ್ದರು.

ಅನ್ಯಕಾರ್ಯ ನಿಮಿತ್ತ ಬೇರೆಡೆಗೆ ಹೋಗಿದ್ದ ನಮ್ಮ ನಿರ್ದೇಶಕ ತಿಪ್ಪೇರುದ್ರಸ್ವಾಮಿಯವರು ಸಂಸ್ಥೆಗೆ ಮರಳಿದೊಡನೆ ಈ ವೃಥಾ ಘಟಸ್ಫೋಟದ ವಿಷಯ ತಿಳಿದು ರುದ್ರಕೋಪಾವಿಷ್ಟರಾಗಿ ಕುಲಸಚಿವ ಮತ್ತು ಕುಲಪತಿ ಇಬ್ಬರನ್ನೂ ದೂರವಾಣಿಯಲ್ಲೇ ದಬಾಯಿಸಿದರು, ಮತ್ತು ಸಂಸ್ಥೆಯ ನಮ್ಮೆಲ್ಲರ ಸಹಿತ ಕುಲಪತಿ ಕಚೇರಿ ಎದುರು ಸಾಂಕೇತಿಕ ಧರಣಿ ಕುಳಿತರು ಕೂಡ. ಇವರ ಸಚ್ಚಾರಿತ್ರ್ಯ ಮತ್ತು ಮುಂದಾಳುತನ ಹೇಗಿತ್ತು ಗೊತ್ತೇ? “ನಡೆ ಚನ್ನ, ನುಡಿ ಚನ್ನ, ಎಲ್ಲಿ ನೋಡಿದಡಲ್ಲಿ ಚನ್ನ! ಪ್ರಮಥರೊಳಗೆ ಚನ್ನ, ಪುರಾತರೊಳಗೆ ಚನ್ನ!” (ಬಸವಣ್ಣ). ಋಜ ನೈತಿಕ ತ್ರಾಣದೆದುರು ನಗ್ನ ಪ್ರಭುಶಕ್ತಿ ಎಷ್ಟು ನಿಷ್ಪರಿಣಾಮಕಾರಿ ಎಂಬುದು ಇಂಥ ಸಂದರ್ಭಗಳಲ್ಲಿ ಎದ್ದು ಕಾಣುತ್ತದೆ.

ಸೆಪ್ಟೆಂಬರ್ ೧೯೮೬ರ ಆರಂಭದಲ್ಲಿ ನಾನು ನನ್ನ ವೃತ್ತಿ ಸಂಬಂಧವಾದ ಎಲ್ಲ ದಾಖಲೆಗಳನ್ನೂ ಪೂರ್ತಿಗೊಳಿಸಿ ಅದೇ ೩೦ರ ಸಂಜೆ ನಿವೃತ್ತನಾಗಲು ವಿಶ್ವವಿದ್ಯಾನಿಲಯದ ಅನುಮತಿ ಕೋರುವ ಔಪಚಾರಿಕ ಮನವಿ ರವಾನಿಸಿದೆ. ಜೊತೆಗೆ, ಅಜ್ಞಾತ ಅನಾಮಧೇಯನಾಗಿದ್ದ ನನ್ನನ್ನು ಇಲ್ಲಿಗೆ ಕರೆದು ತಂದು ವಿಶ್ವಕೋಶದಂಥ ಪ್ರತಿಷ್ಠಿತ ಯೋಜನೆಯೊಂದಿಗೆ ಬೆಳೆಯಲು ಮುಕ್ತ ಅವಕಾಶವಿತ್ತುದಕ್ಕಾಗಿ ಕೃತಜ್ಞತೆ ಸೂಚಿಸುವ ಪತ್ರವನ್ನೂ ಲಗತ್ತಿಸಿದೆ.

೩೦ರ ಅಪರಾಹ್ಣ ಕಚೇರಿಗೆ ವಿದಾಯ ಹೇಳಿ ಕುಲಪತಿಯವರ ಕೊಠಡಿಗೆ ಹೋದೆ -- ಕೇವಲ ಮೌಖಿಕ ಧನ್ಯವಾದ ಸೂಚಿಸಲೆಂದು. ಅವರು ನಗುನಗುತ್ತ ಸ್ವಾಗತಿಸಿದರು! “ಎಲ್ಲರ ಹಾಗಲ್ಲರೀ ನೀವು. ನೇರ ನುಡಿ ನೇರ ನಡೆಯವರು. ಏನೂ ರಿಯಾಯತಿ ಬೇಡದವರು. ನಿಮ್ಮ ಈ ನಡವಳಿಕೆ ನನಗೆ ತುಂಬ ಇಷ್ಟ. ನನ್ನಿಂದೇನಾಗಬೇಕು?”
      ವಿಸ್ಮಯ ಆಶ್ಚರ್ಯಗಳಿಂದ ಒಂದು ಕ್ಷಣ ಅವಾಕ್ಕಾದೆ. ಮತ್ತೆ ಹೇಳಿದೆ, “ಎಲ್ಲರೂ ಒಳ್ಳೆಯವರೇ, ಸರ್. ಆದರೆ ಹೆಚ್ಚಿನವರಿಗೆ ಅಧಿಕಾರಿಯ ಎದುರು ನಿಂತು ಮಾತಾಡಲು ಅಂಜಿಕೆ. ವಿಶ್ವವಿದ್ಯಾನಿಲಯದ ಸಮಸ್ತ ನೌಕರರಿಗೂ ಪಿತೃ ಸ್ಥಾನದಲ್ಲಿರುವ ಹಿರಿಯರಾದ ನಿಮಗೆ ನಾನಿದನ್ನು ವಿವರಿಸಬೇಕೇ? ನನ್ನ ನಿವೃತ್ತಿ ವೇತನ ಪತ್ರಗಳನ್ನು ಒಂದು ತಿಂಗಳ ಹಿಂದೆಯೇ ನಿಮ್ಮಲ್ಲಿಗೆ ಕಳಿಸಿದ್ದೇನೆ. ದಯವಿಟ್ಟು ಅವನ್ನು ಶೀಘ್ರವಾಗಿ ಪರಿಶೀಲಿಸಿದರೆ ತುಂಬ ಉಪಕಾರವಾಗುತ್ತದೆ.”

ಪವಾಡ! ಮುಂದಿನ ನಾಲ್ಕು ವಾರಗಳ ಒಳಗೆ ನಿವೃತ್ತಿವೇತನ ಮತ್ತು ಇತರ ಸೌಲಭ್ಯಗಳಿಗೆ ಸಂಬಂದಿಸಿದ ಎಲ್ಲ ಆದೇಶಗಳೂ ಜಾರಿಯಾಗಿದ್ದುವು! ನಿಜ, (ಪುರಂದರದಾಸರ ಕ್ಷಮೆ ಕೋರಿ) ಸತ್ಯವಂತರಿಗಿದು ಕಾಲ ಹೌದು, ದುಷ್ಟ ಜನರಿಗಿದು ದುರ್ಭಿಕ್ಷ ಕಾಲ!

ಕೆಲವು ಅವಿಸ್ಮರಣೀಯ ಘಟನೆಗಳು
ಅಧ್ಯಾಯ ೮೨  (ಮೂಲದಲ್ಲಿ ೫೪)

ಕನ್ನಡ ಬೀಜಾಕ್ಷರ ಮಂತ್ರ

ಖಗೋಳ ವಿಜ್ಞಾನದಲ್ಲಿ ಪುಸ್ತಕ ಬರೆಯುತ್ತಿದ್ದೆ (೧೯೫೧). ನಕ್ಷತ್ರಗಳ ವರ್ಗೀಕರಣ ಕುರಿತ ಒಂದು ಆಕರ್ಷಕ ಸೂತ್ರವಾಕ್ಯವನ್ನು ಇಂಗ್ಲಿಷ್ ಆಕರ ಪ್ರಬಂಧದಲ್ಲಿ ಓದಿದಾಗ ಕನ್ನಡದಲ್ಲಿಯೂ ಸದೃಶ ವಾಕ್ಯ ರಚಿಸಬೇಕೆಂಬ ತವಕ ತೀವ್ರವಾಯಿತು. ಅದರ ಒಕ್ಕಣೆ: Wha! Oh Be A Fine Girl Kiss Me Right Now Sweet! ಇಲ್ಲಿಯ ಅರ್ಥರಸವನ್ನು ಕ್ಷಣಕಾಲ ಬದಿಗಿಟ್ಟು ವಿಜ್ಞಾನ ಸ್ವಾರಸ್ಯವನ್ನು ಪರೀಕ್ಷಿಸೋಣ. ಕೋಟಿ ಕೋಟಿ ನಕ್ಷತ್ರಗಳ ರೋಹಿತಗಳನ್ನು (spectra) ಭೌತವಿಜ್ಞಾನ ನಿಯಮಾನುಸಾರ ವಿಶ್ಲೇಷಿಸಿ ನಿರ್ದಿಷ್ಟ ಕ್ರಮಾನುಸಾರ ಅಳವಡಿಸಿದರೆ ಅವು ೧೧ ಗುಂಪುಗಳಲ್ಲಿ ಅಡಕವಾಗುತ್ತವೆಂದು ತಿಳಿಯಿತು. ಇವನ್ನು ಆಯಾ ಸಂಶೋಧಕನ ಆಗಿನ ಮರ್ಜಿಗನುಗುಣವಾಗಿ W - ವರ್ಗ, O - ವರ್ಗ, B - ವರ್ಗ ಎಂದು ಮುಂತಾಗಿ ಹೆಸರಿಸಲಾಯಿತು (೧೯೨೪ರ ಸುಮಾರಿಗೆ). ಇಲ್ಲಿ ಬೀಜಾಕ್ಷರಗಳ ಪುನರಾವರ್ತನೆ ಆಗತಕ್ಕದ್ದಲ್ಲ ಎಂಬುದೊಂದೇ ಷರತ್ತು. ಹೀಗೆ ಲಭಿಸಿದ ಅಕ್ಷರಪಙ್ತಿಯನ್ನು ನೆನಪಿಡುವುದು ಹೇಗೆ? ಕ್ರಮಸರಣಿಯಲ್ಲಿ ಅಕ್ರಮ! ಈ ಸಮಸ್ಯೆಯಲ್ಲಿ ಮಗ್ನನಾಗಿದ್ದ ಯುವ ನವವಿವಾಹಿತ ಆದರೆ ಸದ್ಯ ವಿರಹದಗ್ಧ ವಿಜ್ಞಾನಿಯ ಎದುರು ಮೇಲಿನ ಸೂತ್ರವಾಕ್ಯ ಮಿಂಚಿತೆಂದು ಆಕರ ಗ್ರಂಥದಲ್ಲಿ ನಿರೂಪಿತವಾಗಿತ್ತು.

ಎಂಥ ಹೊಂದಾಣಿಕೆಯೆಂದು ಬಾಯಿ ಚಪ್ಪರಿಸಿದೆ. ಏಕೆಂದರೆ ಕೇವಲ ಕೆಲವೇ ತಿಂಗಳ ನನ್ನ ಮದುವೆ ಆಗಿತ್ತು ಮತ್ತು ಪ್ರಕೃತ ನನ್ನ ಹೆಂಡತಿ ತವರಿಗೆ ಹೋಗಿ ನಾನೂಮೇಘಸಂದೇಶದ ಯಕ್ಷನ ಸ್ಥಿತಿಯಲ್ಲಿದ್ದೆ. ಕನ್ನಡದಲ್ಲಿ ಇಂಥ ಒಂದು ಸೂತ್ರವಾಕ್ಯ ಹೆಣೆಯುವುದು/ ಹೊಸೆಯುವುದು/ ಪೋಣಿಸುವುದು ಸಾಧ್ಯವೇ? Poetry is emotion recollected in tranquility (ಶಾಂತ ಸನ್ನಿವೇಶದಲ್ಲಿ ಪುನಸ್ಮರಿಸಿದ ಭಾವೋತ್ಕಟತೆಯೇ ಕಾವ್ಯ) ಎಂಬ ವರ್ಡ್ಸ್ವರ್ತ್ ಕವಿಯ ವ್ಯಾಖ್ಯೆಗೆ ಶರಣಾದೆ. ರಾಜರತ್ನಂ ಹೇಳಿರುವಂತೆ ಅಕ್ಕೋ ಬಂತು ಪದಗೋಳ್ ಬಾಣಾ! ಆ ನಸುಮುಂಜಾನೆ ಹೊಳೆದ ಚೆಲುಗನ್ನಡದ ಸೂತ್ರ ವಾಕ್ಯ: ವ್ಹಾರೆವಾ! ಓ ನನ್ನ ಬಾಳ್ಬೆಳಕೆ ಆಗಮಿಸು ಫೇನಮಯ ಗೋರಸವ ಕೊಡು ನನಗೆ ಮೃದುಭಾಷಿ ರಸಿಕಮಣಿ ನಗುನಗುತ ಸಾರೆಲೇ! ಇಲ್ಲಿಯ ಪ್ರತಿಯೊಂದು ಗಣದ ಪ್ರಥಮಾಕ್ಷರದ ಇಂಗ್ಲಿಷ್ ಅವತರಣಿಕೆ: W,O,B,A,F,G,K,M,R,N,S ಕನ್ನಡ ಭಾಷೆ ಇಂಗ್ಲಿಷಿನ ಎತ್ತರಕ್ಕೆ ಏರಲಾರದೆಂದು ಆರ್ಭಟಿಸುವ ಅಭಿಮಾನಶೂನ್ಯ ಕನ್ನಡಿಗರು ಗಮನಿಸಬೇಕು, ಇಲ್ಲಿಲ್ಲದುದುಳಿದುದೇ? ಜೇನು ಸುರಿವ ಹಾಲು ಹರಿವ ದಿವಂಭೂಮಿಗಿಳಿದುದೇ? (ಮಂಜೇಶ್ವರ)

ಕಗ್ಗ ಹೊಸೆವ ಕವಾಯತಿ
ಕನ್ನಡ ವಿಜ್ಞಾನ ವಾಙ್ಮಯ ರಚನೆ ಕುರಿತ ತಜ್ಞರ ಒಂದು ಗೋಷ್ಠಿಯಲ್ಲಿ ಒಬ್ಬ ಹಿರಿಯರು ಒಡ್ಡಿದ ಸವಾಲಿದು:
There was a young girl named Miss Bright
Who could run much faster than light
She travelled one day
In an Eiensteinian way
And arrived on the previous night!

ಐನ್ಸ್ಟೈನ್ ಮಂಡಿಸಿದ ವಿಶೇಷ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ ಪ್ರಕಾಶ ವೇಗವೇ ಭೌತ ವಿಜ್ಞಾನದಲ್ಲಿ ಗರಿಷ್ಠತಮ ಎಂದಿದೆ. ವಿಜ್ಞಾನ ಕಥಾಲೇಖಕರು, ಹಾಗಾದರೆ ಬೆಳಕಿನ ವೇಗವನ್ನು, ಕಲ್ಪನೆಯಲ್ಲಾದರೂ ಒಬ್ಬಾತ ಮೀರಿ ಜಿಗಿದರೆ ಏನಾದೀತು ಎಂಬ ಪ್ರಶ್ನೆ ಎತ್ತಿ ಅದೇ ಸಿದ್ಧಾಂತರ ಸಮೀಕರಣಗಳನ್ನು ಆಶ್ರಯಿಸಿ ಉತ್ತರ ಪಡೆಯಲು ಮುಂದಾದರು. ಆಗ ಕಾಲವೇ ಹಿಮ್ಮೊಗವಾಗಿ (ಅಂದರೆ ಭೂತಕಾಲಾಭಿಮುಖವಾಗಿ) ಸರಿಯುತ್ತದೆಂಬ ವಿಚಿತ್ರ ಪರಿಹಾರ ಅವರಿಗೆ ಲಭಿಸಿತು. ಚೆಲುಗನ್ನಡದಲ್ಲಿ ಈ ಸ್ವಾರಸ್ಯವನ್ನು ಹೇಳುವುದು ಹೇಗೆ? ಆಗ ಒಂದು ಮುಂಜಾನೆ ಹೊಳೆದ ಕಗ್ಗ:
ಬೆಳಕಿನ ವೇಗಕ್ಕಿಂತಲು ರಭಸದಿ
ಓಡುವ ಪೋಕರಿ ಹುಡುಗಿ ಉಷಾ
ಐನ್ಸ್ಟೈನರ ರಿಲೆಟಿವಿಟಿ ಕ್ರಮದಲಿ
ಜಿಗಿಯುತಲಿಳಿದಳು ಕಳೆದ ನಿಶಾ!

ಕೋಪಶಮನಾರ್ಥಾಯ ವಿನಯಮಂತ್ರಂ ಜಪಂ ಕೃತ್ವಾ
ನಾನು ವಿಶ್ವಕೋಶಕ್ಕೆ ಸೇರಿದ ಹೊಸದರಲ್ಲಿ ನಡೆದ ಘಟನೆ. ಕೊಠಡಿಯಲ್ಲಿ ಕಾರ್ಯಮಗ್ನನಾಗಿದ್ದೆ. ಅನಿರೀಕ್ಷಿತವಾಗಿ ಇಬ್ಬರು ಅಪರಿಚಿತರು ಒಳಬಂದರು: ಒಬ್ಬ ಹಿರಿಯ, ಇನ್ನೊಬ್ಬ ವಿದ್ಯಾರ್ಥಿ. ಶಾಲಾದಿನಗಳಲ್ಲಿ ನನ್ನ ಸಹಪಾಠಿಯಾಗಿದ್ದ ಯು.ಕೆ. ಚಂದ್ರಶೇಖರ್ ಆ ಹಿರಿಯನೆಂದು ಒಡನೆ ಗುರುತಿಸಿದೆ. ಕಿರಿಯನನ್ನು ನನಗೆ ಪರಿಚಯಿಸುತ್ತ ಹೇಳಿದ, ನೋಡು ಜೀಟೀ ಈ ಹುಡುಗನ ಹೆಸರು ಶ್ರೀನಿವಾಸ. ಈತ ಕಾಸರಗೋಡು ವಿಶ್ವ ವಿದ್ಯಾಲಯದ ಬಿಎ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿ ಮೈಸೂರು ವಿಶ್ವವಿದ್ಯಾನಿಲಯದ ಎಂಎ ಅರ್ಥಶಾಸ್ತ್ರ ವಿಭಾಗಕ್ಕೆ ದಾಖಲಾಗಲು ಅರ್ಜಿ ಸಲ್ಲಿಸಿದ್ದಾನೆ. ಅಲ್ಲಿಯ ಫಲಿತಾಂಶ ತೀರ ನಿಧಾನವಾಗಿ ಪ್ರಕಟವಾದ್ದರಿಂದ ಅದು ತುಸು ತಡವಾಗಿ ಇವರಿಗೆ ತಲಪಿದೆ. ಇಲಾಖೆಗೆ ಹೋಗಿ ವಿಚಾರಿಸಿದರೆ ಪರಿಶೀಲಿಸಲು ಸಾಧ್ಯವಿಲ್ಲ ಎಂದುನಿರಾಕರಿಸಿದರು. ನೋಡು, ಇವನು ಮಾಡಿರದ ತಪ್ಪಿಗಾಗಿ, ಅಪ್ಪಟ ಕನ್ನಡಿಗನಾದ ಇವನಿಗೆ ಖುದ್ದು ಕನ್ನಡ ನಾಡಿನಲ್ಲಿಯೇ ಈ ನಿರಾಶೆ. ನೀನೊಂದು ಮಾತು ಹೇಳಬಹುದೇ?

ಅಭ್ಯರ್ಥಿಯ ಸಾಧನೆ ಸಿದ್ಧಿಗಳು ಉತ್ಕೃಷ್ಟವಾಗಿದ್ದುವು: ಪ್ರಥಮ ದರ್ಜೆ, ಪ್ರಥಮ ಸ್ಥಾನ, ಆರ್ಥಿಕವಾಗಿ ಕೆಳ ಮಧ್ಯಮ ವರ್ಗ ಮತ್ತು ಹಿಂದುಳಿದ ಪಂಗಡಕ್ಕೆ ಸೇರಿದಾತ. ನಮ್ಮ ಸೌಕರ್ಯಕ್ಕಾಗಿ ನಾವು ಮಾದಿಕೊಂಡಿರುವ ನಿಯಮಗಳು ಅನ್ವಯದಲ್ಲಿ ಸಮಾಜ ವಿರೋಧಿಯಾದರೆ ಅವುಗಳಿಗೆ ನೈತಿಕ ಮಿತಿಯೊಳಗೆ ಯುಕ್ತ ತಿದ್ದುಪಡಿ ತರುವುದೇ ಸರಿಯಾದ ಮಾರ್ಗ. ನಿಯಮಗಳ ನಿರ್ಮಾಪಕನಾದ ಮಾನವ ಅವುಗಳ ದಾಸನಾಗಿ ನವೆಯ ಬೇಕಾಗಿಲ್ಲ ಎಂಬುದು ನಾನು ಸದಾ ಅನುಸರಿಸುತ್ತ ಬಂದಿರುವ ನೀತಿ.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ.ಟಿ. ಹುಚ್ಚಪ್ಪನವರು ನನಗೆ ಪೂರ್ತಿ ಅಪರಿಚಿತರು. ಬಲು ಕಟ್ಟುನಿಟ್ಟು ಕರಾರುವಾಕ್ಕು ಎಂದು ಕೇಳಿದ್ದೇನೆ. ಚಿಂತೆ ಇಲ್ಲ, ನನ್ನ ಹಿರಿಯ ಸಹೋದ್ಯೋಗಿ ಎಚ್ಚೆಸ್ಕೆಯವರಿಗೆ ಪರಮ ಮಿತ್ರರು, ಬನ್ನಿ ಎಂದು ಪಕ್ಕದ ಕೊಠಡಿಯಲ್ಲಿದ್ದ ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ ಅವರಲ್ಲಿಗೆ ಕರೆದುಕೊಂದು ಹೋಗಿ ಪರಿಸ್ಥಿತಿಯನ್ನು ವಿವರಿಸಿದೆ. ಮೈದಳೆದ  ಮಾನವೀಯತೆಯಾದ ಅವರು ಒಡನೆ ಹುಚ್ಚಪ್ಪನವರಿಗೆ ದೂರವಾಣಿಸಿ ಸಮಸ್ಯೆಯನ್ನು ಶ್ರುತಪಡಿಸಿದರು. ಕಳಿಸಿ ಪರಿಶೀಲಿಸುತ್ತೇನೆ ಎಂದು ಅವರಿಂದ ಬಂದ ಆಶ್ವಾಸನೆ ಮೇರೆಗೆ ಶ್ರೀನಿವಾಸ ಮತ್ತು ಚಂದ್ರಶೇಖರ ಅವರಲ್ಲಿಗೆ ಹೋದರು.

ಸ್ವಲ್ಪ ಹೊತ್ತಾದ ಮೇಲೆ ಶ್ರೀನಿವಾಸ ಪೆಚ್ಚುಮೋರೆ ಹೊತ್ತು ನನ್ನಲ್ಲಿಗೆ ಬಂದು ನಡೆದ ಘಟನೆ ಹೇಳಿದ, ಸರ್! ಅವರು ನನ್ನನ್ನು ವಿಶ್ವಾಸದಿಂದ ಬರಮಾಡಿಕೊಂಡು ಹೀಗೆ ಅವಧಿ ಮೀರಿ ಬಂದವರಿಗೆ ಸೀಟ್ ಕೊಡುವುದರಲ್ಲಿ ತಾವು ಆಡಳಿತ ವಿಭಾಗದ ಜೊತೆ ಎದುರಿಸಬೇಕಾಗುವ ತೊಡಕುಗಳನ್ನು ವಿವರಿಸತೊಡಗಿದರು. ಆಗ ನಾನೊಂದು ಪರಿಹಾರ ಸೂಚಿಸಿದೆಸರ್! ನಿಮಗೆ ಅಷ್ಟು ಕಷ್ಟವಾಗುವುದಾದರೆ ನಾನು ಕಾಸರಗೋಡಿನ ಹಿರಿಯ ವಕೀಲ ಬಿ.ಎಸ್. ಕಕ್ಕಿಲಾಯ ಹಾಗೂ ಸಾಹಿತಿ ಕಯ್ಯಾರ ಕಿಞ್ಞಣ್ಣ ರೈಯವರಿಂದ ಶಿಫಾರಸು ಪತ್ರ ತಂದು ಕುಲಪತಿ ದೇ. ಜವರೇಗೌಡರಿಗೆ ಒಪ್ಪಿಸಬಲ್ಲೆ. ಫಕ್ಕನೆ ರೊಚ್ಚಿಗೆದ್ದ ಹುಚ್ಚಪ್ಪನವರು `you get out of my sight’ ಎಂದು ಗುಡುಗಿದರು. ನಾನೇನು ತಪ್ಪು ಮಾಡಿದೆ?
ಅಪ್ರಿಯವಾದ ಸತ್ಯವನ್ನು ಅಕಾಲದಲ್ಲಿ ಹೇಳತಕ್ಕದ್ದಲ್ಲ ಎಂಬ ವ್ಯಾವಹಾರಿಕ ನಿಯಮ ಮುಗ್ಧನಾದ ನಿನಗೆ ತಿಳಿದಿಲ್ಲ. ನಿಮ್ಮಿಂದಲೇ ಈ ಉಪಕಾರ ಆಗಬೇಕೆಂದು ಅವರಿಗೆ ಪೂರ್ತಿ ಶರಣಾಗುವುದು ಬಿಟ್ಟು ನೀನೇಕೆ ಈ ಅಧಿಕ ಪ್ರಸಂಗ ಮಾಡಿದೆ? ಚಿಂತೆ ಇಲ್ಲ. ಅವರಲ್ಲಿಗೇ ಹೋಗೋಣ ಎಂದು ಅವನ ಸಹಿತ ಆ ಕ್ಷಣ ಹುಚ್ಚಪ್ಪನವರಲ್ಲಿಗೆ ಹೋಗಿ ಪರಿಸ್ಥಿತಿಯನ್ನು ವಿವರಿಸಿ ಕ್ಷಮೆ ಯಾಚಿಸಿದೆ, ಮತ್ತು ಈ ಅರ್ಹ ಅಭ್ಯರ್ಥಿಗೆ ಅವರೇ ಭರವಸೆ ನೀಡಬೇಕೆಂದು ಕೋರಿದೆ. ಅವರು ಪ್ರಸನ್ನರಾದರೆಂದು ಮುಖಭಾವದಿಂದ ತಿಳಿಯಿತು.

ಶ್ರೀನಿವಾಸನ ವಿಳಾಸ ಮತ್ತು ಹಳ್ಳಿಯ ತಂತಿ ಸಂಪರ್ಕ ಮಾಹಿತಿಗಳನ್ನು ಬರೆದಿಟ್ಟುಕೊಂಡು ಅವನನ್ನು ಬೀಳ್ಕೊಟ್ಟೆ. ವಾರಗಳುರುಳಿದುವು. ಆಗಸ್ಟ್ ೩೦ರ ಮಧ್ಯಾಹ್ನ ಹುಚ್ಚಪ್ಪನವರಿಂದ ನನಗೆ ಫೋನ್, ಶ್ರೀನಿವಾಸನಿಗೆ ಸೀಟ್ ಕೊಟ್ಟಿದ್ದೇನೆ. ನಾಳೆ ಸಂಜೆ ೫.೩೦ ಗಂಟೆಗೆ ಮೊದಲು ಅವನು ಶುಲ್ಕ ಕಟ್ಟಿ ದಾಖಲಾಗತಕ್ಕದ್ದು ಎಂದರು.

ಎಲ್ಲಿಯ ಕಾಸರಗೋಡಿನ ಆ ಕುಗ್ರಾಮ, ಎಲ್ಲಿಯ ಈ ಮೈಸೂರು! ಅವನಿಗೆ ಸಂದೇಶ ತಲಪಿ ಸಕಾಲದಲ್ಲಿ ಅವನಿಲ್ಲಿಗೆ ಬರುವುದು ಅಸಾಧ್ಯ ಎಂದಿತು ತರ್ಕ. ಆದರೆ ತರ್ಕಾತೀತ ಅಂತರ್ಬೋಧೆ (intuition) ಮಿಡಿಯಿತು ಆಪ್ತವಾಕ್ಯ ಅವನಿಗೊಂದು ಡಬ್ಬಲ್ ಎಕ್ಸ್ಪ್ರೆಸ್ ತಂತಿ ಸಂದೇಶ ಕಳಿಸು. ಒಡನೆ ಅಂಚೆ ಕಚೇರಿಗೆ ಧಾವಿಸಿ “join the course before 5.30 pm on August 31” ಎಂಬ ಆದೇಶವಿತ್ತೆ. ಆಡಳಿತಾಧಿಕಾರಿ ಮುತ್ತೇಗೌಡರಲ್ಲಿಗೆ (ಅಂದು ಇವರೂ ನನಗೆ ಅಪರಿಚಿತರು) ಹೋಗಿ ವಿಷಯ ಹೇಳಿ ಆತನೇನಾದರೂ ಒಂದೆರಡು ದಿನ ತಡವಾಗಿ ಬಂದರೆ ಪ್ರವೇಶ ಒದಗಿಸಬೇಕೆಂದು ಕೋರಿದೆ.
ಆಗ ಅವರು ನುಡಿದ ಮಾತು ಸದಾ ನನ್ನ ಮನದಲ್ಲಿ ಹಸುರಾಗಿದೆ, ಸ್ವಾಮೀ! ಇದು ಪ್ರತಿ ವರ್ಷದ ಸಮಸ್ಯೆ. ನಾವಿರುವುದು ವಿದ್ಯಾರ್ಥಿಗಳ ಕಷ್ಟ ಸುಖಗಳಿಗೆ ಸ್ಪಂದಿಸಲೆಂದೇ ಹೊರತು ಕುರುಡು ಆಡಳಿತ ನಿಯಮಗಳನ್ನು ಹೃದಯಹೀನವಾಗಿ ಚಲಾಯಿಸಲೆಂದಲ್ಲ. ಎಂದೇ ಸೆಪ್ಟೆಂಬರ್ ೧೫ರ ತನಕವೂ ನಮ್ಮ ಪ್ರವೇಶಪುಸ್ತಕವನ್ನು ಕೊನೆಗೊಳಿಸುವುದೇ ಇಲ್ಲ. ಅಂದರೆ ಅಂಥವರೆಲ್ಲರೂ ನಮ್ಮ ಪುಸ್ತಕದ ಪ್ರಕಾರ ಆಗಸ್ಟ್ ೩೧ರಂದೇ ಅಧಿಕೃತವಾಗಿ ದಾಖಲಾಗುತ್ತಾರೆ!

ನಿರಾಳವಾಗಿ ಮರಳಿದೆ. ಆಶ್ಚರ್ಯ, ಮರುಸಂಜೆಯೇ ಶ್ರೀನಿವಾಸ ನನ್ನೆದುರು ಹಾಜರ್! ಸರ್! ನಿಮ್ಮ ತಂತಿ ನಿನ್ನೆ ಮಧ್ಯರಾತ್ರಿ ತಲಪಿತು. ಯಾವುದೋ ಲಾರಿ ಹಿಡಿದು ಸುಳ್ಯ ತಲಪಿ ಅಲ್ಲಿಂದ ಬೇರೆ ಬೇರೆ ಬಸ್ ಹತ್ತಿ ಇಂದು ಮಧ್ಯಾಹ್ನ ಮೈಸೂರು ಸೇರಿದೆ. ಮೊದಲು ಹುಚ್ಚಪ್ಪನವರನ್ನು ಭೇಟಿಮಾಡಿ ಕೃತಜ್ಞತೆ ಸಲ್ಲಿಸಿ ಅವರ ಸೂಚನೆ ಪ್ರಕಾರ ಆಡಳಿತ ಕಛೇರಿಗೆ ಹೋಗಿ ದಾಖಲೆ ಕೊಟ್ಟು ಶುಲ್ಕ ಕಟ್ಟಿ ಇದೀಗ ತಾನೇ ಬರುತ್ತಿದ್ದೇನೆ. ತಂತಿ ಕಳಿಸಲು ನಿಮಗೆ ಸಾಕಷ್ಟು ಖರ್ಚು ಆಗಿರಬೇಕು. ದಯವಿಟ್ಟು ಆ ಮೊಬಲಗು ಎಷ್ಟೆಂದರೆ ನಾನು ಪಾವತಿಸುತ್ತೇನೆ. ಅಲ್ಲದೇ ನಿಮ್ಮ ಸಕಾಲಿಕ ಉಪಕಾರವನ್ನು ನಾನು ಹೇಗೆ ಸ್ಮರಿಸಲಿ? ಎಂದ.
      ಭಲೆ! ನಿನ್ನ ಸುಟಿತನ, ಇನ್ನೊಬ್ಬರ ಬಗೆಗಿನ ಕಾಳಜಿ ಮತ್ತು ಉಪಕಾರಸ್ಮರಣೆ ಪ್ರಶಂಸನೀಯ. ನಾನು ಮಾಡಿದ ವೆಚ್ಚ ನಿನಗೆ ನನ್ನ ಪ್ರೀತಿಯ ಉಡುಗೊರೆ. ಮುಂದೆ ನಿನ್ನ ವಿಸ್ತಾರ ಜೀವನದಲ್ಲಿ ಇಂಥ ಸನ್ನಿವೇಶಗಳು ತಲೆದೋರಿದಾಗ ಇದೇ ರೀತಿ ಸಮಾಜಕ್ಕೆ ನೀನೆ ಸೇವೆ ಒಪ್ಪಿಸುವುದೇ ಉಪಕಾರಸ್ಮರಣೆಯ ವಿಧಾನ.
      ಆ ಎರಡು ವರ್ಷ ಶ್ರೀನಿವಾಸ ಓದಿ ಎಂಎ ಪದವಿಯನ್ನು ಉನ್ನತ ಸ್ಥಾನದಲ್ಲಿ ಗಳಿಸಿದ. ಮುಂದೆ ದೆಹಲಿಯಲ್ಲಿ ಯಾವುದೋ ಅಂತಾರಾಷ್ಟ್ರೀಯ ಸಂಸ್ಥೆ ಸೇರಿದನೆಂದೂ ಅಲ್ಲಿಂದ ಅಮೆರಿಕಕ್ಕೆ ತೆರಳಿ ವಿಶ್ವಸಂಸ್ಥೆಯಲ್ಲಿ ಹಿರಿಹುದ್ದೆ ಹಿಡಿದಿರುವನೆಂದೂ ಗೊತ್ತಾಗಿ ಸಂತೋಷವಾಯಿತು. ಎಂದಾದರೊಂದು ದಿನ ಅವನ ಪೂರ್ಣ ಸಾಹಸದ ವಿವರ ದೊರೆತೇ ದೊರೆಯುವುದೆಂಬ ಭರವಸೆ ನನಗಿದೆ.

ಅನಾಥ ಮಹಿಳೆಯ ಅಸೀಮ ದುಃಖ
೧೯೮೧ರಲ್ಲಿ ವಿಶ್ವಕೋಶದ ಕಾರ್ಯನಿರ್ವಾಹಕ ಸಂಪಾದಕತ್ವದ ಹೊಣೆಯೂ ನನ್ನ ಪಾಲಿಗೆ ಬಂದದ್ದು ಸರಿಯಷ್ಟೆ. ಆ ತರುಣದಲ್ಲಿ ನಮ್ಮ ವಿಭಾಗಕ್ಕೆ ಸುಮ (ಹೆಸರು ಬದಲಾಯಿಸಿದೆ) ಎನ್ನುವ ನಡುಹರೆಯದ ಮಹಿಳೆ ಹಂಗಾಮಿ ಪ್ರೂಫ್-ರೀಡರ್ (ಮುದ್ರಣ ಕರಡು ತಿದ್ದುವಾಕೆ) ಆಗಿ ವರ್ಗವಾಗಿ ಬಂದಳು. ಮಾಮೂಲಿನಂತೆ ಆಕೆಯ ಯೋಗಕ್ಷೇಮ ವಿಚಾರಿಸಿದೆ. ಅವಳನ್ನು ವಿಶ್ವವಿದ್ಯಾನಿಲಯದ ಒಬ್ಬ ಗುಮಾಸ್ತನಿಗೆ ವಿವಾಹಮಾಡಿದ್ದರು. ಇನ್ನೊಬ್ಬಾಕೆ ಬದುಕಿದ್ದಾಗಲೇ ಇದು ಆತನಿಗೆ ಎರಡನೆಯ ಮದುವೆ ಎಂದು ತಡವಾಗಿ ಇವಳಿಗೆ ತಿಳಿಯಿತು. ಸುಮಳಲ್ಲಿ ಅವನಿಗೊಬ್ಬ ಮಗಳೂ ಹುಟ್ಟಿದಳು. ಕೆಲವು ವರ್ಷಗಳ ಹಿಂದೆ ಅವನು ಸತ್ತುಹೋದಲೆಕ್ಕಪತ್ರಗಳ ಪ್ರಕಾರ ಅವನ ಎಲ್ಲ ಸ್ಥಿರಚರ ಸೊತ್ತುಗಳೂ ಮೊದಲ ಹೆಂಡತಿಗೇ ಸೇರಿದುವು. ಸುಮ ನಿರ್ಗತಿಕೆ, ಅನಾಥೆ. ಹೆಚ್ಚು ಓದಿಯೂ ಇರಲಿಲ್ಲ, ವೃತ್ತಿ ಅನುಭವವಂತೂ ಶೂನ್ಯ. ಜೀವನೋಪಾಯ? ಮಗಳ ಭವಿಷ್ಯ?

ವಿಶ್ವವಿದ್ಯಾನಿಲಯದ ಕರುಣಾಳು ಅಧಿಕಾರಿಯೊಬ್ಬರು ಸುಮಳಿಗೆ ಅಲ್ಲೇ ಏನೋ ಒಂದು ಹಂಗಾಮಿ ಹುದ್ದೆ ದೊರಕಿಸಿಕೊಟ್ಟಿದ್ದರು. ನನ್ನ ಈ ನೌಕರಿಯನ್ನು ಖಾಯಂ ಮಾಡಿಸಿಕೊಟ್ಟರೆ ತುಂಬ ಉಪಕಾರವಾಗುತ್ತದೆ ಸರ್ ಎಂದಳು ಸುಮ. ಸರಿ, ಅವಳ ಇಡೀ ಸಮಸ್ಯೆಯನ್ನು ದಾಖಲಿಸಿ ವಿಶ್ವವಿದ್ಯಾನಿಲಯಕ್ಕೊಂದು ಮನವಿ ಕಳಿಸಿದೆ. ಕುಲಸಚಿವರಿಗೂ ಕುಲಪತಿಯವರಿಗೂ ಈ ಸಮಸ್ಯೆಯನ್ನು ಮಾನವೀಯ ದೃಷ್ಟಿಯಿಂದ ಪರಿಶೀಲಿಸಬೇಕೆಂದು ವೈಯಕ್ತಿಕವಾಗಿ ಹೇಳಿದೆ ಕೂಡ.

ಕೆಲವು ತಿಂಗಳು ಸಂದಾಗ ಸುಮ ನನ್ನ ಕೊಠಡಿಗೆ ಒಂದು ಮುಂಜಾನೆ ಬಂದು ಆರಕ್ಷಕ ಠಾಣೆಗೆ ಒಡನೆ ಹಾಜರಾಗಲು ಅವಳಿಗೆ ಬಂದಿದ್ದ ಲಿಖಿತ ಆದೇಶವನ್ನು ತೋರಿಸಿ ಹೇಳಿದಳು ನನಗೆ ಭಯವಾಗಿದೆ, ಸರ್. ನಾನೇನೂ ಅಪರಾಧ ಮಾಡಿಲ್ಲ. ನನಗೇಕೆ ಈ ಶಿಕ್ಷೆ? ಈಗ ನಾನೇನು ಮಾಡಲಿ ಹೇಳಿ.
      ಅವಳ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಡಿಸಿದಾಗ ತಿಳಿದ ಸಂಗತಿ ಇಷ್ಟು: ಸುಮಳ ತಮ್ಮ ಉಂಡಾಡಿ ಗುಂಡ. ಇವಳ ಮನೆಯಲ್ಲೇ ಜಾಂಡಾ. ಈಚೆಗೆ ಅಕ್ಕನ ಆಭರಣಗಳನ್ನು ಲಪಟಾಯಿಸಿದ್ದ. ಬೇರೆ ಯಾವುದೋ ಕಳವು ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ಈತ ತಾನು ಅಕ್ಕನ ಆಭರಣಗಳನ್ನು ಒತ್ತೆ ಇಟ್ಟಿದ್ದ ಚಿನಿವಾರನ ವಿಳಾಸ ಕೊಟ್ಟಿದ್ದ. ಪೊಲಿಸರು ಅವನ್ನು ವಶಪಡಿಸಿಕೊಂಡು ಠಾಣೆಗೆ ತಂದಿಟ್ಟಿದ್ದರು. ಈಗ ಸುಮ ಅಲ್ಲಿಗೆ ವೈಯಕ್ತಿಕವಾಗಿ ಹೋಗಿ ಅವುಗಳ ಗುರುತು ಹಿಡಿಯಬೇಕಾಗಿತ್ತು.
      ನೀವು ಒಬ್ಬರೇ ಠಾಣೆಗೆ ಹೋಗಬೇಡಿ. ಜೊತೆಯಲ್ಲಿ ಹಿರಿಯರೊಬ್ಬರನ್ನು ಕರೆದುಕೊಂಡು ಹೋಗಿ. ಮಾತು, ಬರೆಹ ಎಲ್ಲಿಯೂ ಸತ್ಯಚ್ಯುತರಾಗಬೇಡಿ ಎಂದೆ.
      ಯಾರೂ ನನಗೆ ಗತಿ ಇಲ್ಲ, ಸರ್.
      ಪರಿಸ್ಥಿತಿ ದಾರುಣವಾಗಿತ್ತು. ಒಂದು ಪ್ರಯತ್ನ ಮಾಡೋಣವೆಂದು ಪೊಲಿಸ್ ಮುಖ್ಯ ಕಛೇರಿಗೆ ದೂರವಾಣಿಸಿ ಎಂದಿನಂತೆ ನಮಸ್ಕಾರ ಸಲ್ಲಿಸಿ ನನ್ನ ಪ್ರವರ ಹೇಳಿದೆ. ಆ ಕಡೆಯಿಂದ ಬಂದ ಪ್ರತಿಕ್ರಿಯೆ ಎಷ್ಟು ಅನಿರೀಕ್ಷಿತವೋ ಅಷ್ಟು ಚೇತೋಹಾರಿಯೂ ಆಗಿತ್ತು. ನಾನು ನಿಮ್ಮ ಮಾಜಿ ಕ್ಯಾಡೆಟ್, ಸರ್! ನನ್ನ ಹೆಸರು ಬಿ.ಎಂ. ನಾಣಯ್ಯ. ಇಲ್ಲಿ ಡಿಎಸ್ಪಿ ಆಗಿದ್ದೇನೆ. ನನ್ನಿಂದೇನಾಗಬೇಕು, ಅಪ್ಪಣೆ ಮಾಡಿ.
      ನನ್ನಿಂದ ಸಮಸ್ತ ವಿವರಗಳನ್ನೂ ತಿಳಿದ ನಾಣಯ್ಯ ಹೇಳಿದರು, ಇದೇ ೨ ಗಂಟೆಗೆ ನಾನೇ ನಿಮ್ಮ ಮನೆಗೆ ಬರುತ್ತೇನೆ. ಸುಮ ಆಗ ನಿಮ್ಮ ಮನೆಯಲ್ಲೇ ಇರಲಿ.
      ಕ್ಲುಪ್ತ ಮುಹೂರ್ತದಲ್ಲಿ ನನ್ನ ಮನೆ ಎದುರೊಂದು ಪೊಲಿಸ್ ಜೀಪ್ ನಿಂತಿತು. ಅದರಿಂದ ಆರಡಿಯನ್ನೂ ಮೀರುವ ಎತ್ತರದ ಒಬ್ಬ ಹಿರಿಯ ಸಮವಸ್ತ್ರಧಾರಿ ಅಧಿಕಾರಿ ಪರಿವಾರ ಸಹಿತ ಇಳಿದು ಮಿಲಿಟರಿ ಗತ್ತಿನಲ್ಲಿ ನನ್ನ ಮನೆಗೆ ಬಂದಾಗ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು. ಅಕ್ಕಪಕ್ಕದ ಮನೆಗಳವರಿಗೆ ಗಾಬರಿ. ಹಾದಿಹೋಕರಿಗೆ ಕುತೂಹಲ. ನಾಣಯ್ಯ ಬಂದರು, ಕೊಡವ ಸಂಪ್ರದಾಯದಂತೆ ನನ್ನ ಪಾದ ಸ್ಪರ್ಷಿಸಿದರು. ಏನೂ ಚಿಂತೆ ಬೇಡ, ಸರ್. ಈಕೆ ಠಾಣೆಗೆ ಹೋಗಬೇಕಾಗಿಲ್ಲ. ಆದಷ್ಟು ಬೇಗ ಆಭರಣಗಳನ್ನು ಈಕೆಗೆ ಹಿಂದಿರುಗಿಸಲು ಏರ್ಪಾಡು ಮಾಡುತ್ತೇನೆ.
      ನಾಣಯ್ಯ ಹಾಗೆಯೇ ನಡೆದುಕೊಂಡರು. ಹಿಂದೆ (ನೋಡಿ: ಅಧ್ಯಾಯ ೮೦) ಅಪ್ಪಯ್ಯನವರ ಸಂದರ್ಭದಲ್ಲಿ ಭೀಮಪ್ಪ ನಾಯಕ ಸಲ್ಲಿಸಿದ ಉಪಕಾರ ಇದೇ ಮಾದರಿಯದಲ್ಲವೇ? ಇಂಥವರ ಸಂತತಿ ಸಾವಿರವಾಗಲಿ!
      ಯಥಾ ಕಾಲದಲ್ಲಿ ಸುಮಳ ಕೆಲಸ ಖಾಯಂ ಆಯಿತೆಂದು ತಿಳಿದು ಸಂತೋಷವಾಯಿತು. ಇತರರ ಕಂಬನಿ ಒರೆಸುವ ಸೇವೆಯನ್ನು ನಾವು ನಿರಂತರವಾಗಿ ಸಲ್ಲಿಸಬೇಕಾದದ್ದು ನಮ್ಮ ಕರ್ತವ್ಯ.

ಹಾಲ್ಜೇನು ಸೇರಿ ನೀವಾಗಿಹಿರಿ ಆಚಾರ್ಯ!
ಅಧ್ಯಾಯ ೮೩  (ಮೂಲದಲ್ಲಿ ೫೫)

ಕುವೆಂಪು (೧೯೦೪-೯೪) ಅವರು ಪಂಜೆ ಮಂಗೇಶರಾಯರಿಗೆ (೧೮೭೪-೧೯೩೭) ಅರ್ಪಿಸಿರುವ ಕವನ ಕಾಣ್ಕೆಯ ಆರಂಭದ ಸಾಲು ಪ್ರಸ್ತುತ ಅಧ್ಯಾಯದ ಶೀರ್ಷಿಕೆ. ನನ್ನ ಗೆಳೆಯ ಎಚ್.ಜಿ. ಸೂರ್ಯನಾರಾಯಣರಾಯರ (೧೯೨೪-೮೫) ಬಗ್ಗೆ ಅಧ್ಯಾಯ ೩೧ ಮತ್ತು ೪೮ರಲ್ಲಿ (ಬೆಂಗಳೂರಿನಲ್ಲಿ, ಸವಾಲನ್ನು ಎದುರಿಸುವಛಲ) ಸ್ಥೂಲವಾಗಿ ಪ್ರಸ್ತಾವಿಸಿದ್ದೇನೆ. ಇವರ ಕೃತಜ್ಞ ಅನುಜ ಎಚ್.ಜಿ. ಸೋಮಶೇಖರರಾವ್ಸೂರ್ಯಸ್ಮರಣೆ ಎಂಬ ಸಂಸ್ಮರಣ ಸಂಪುಟವನ್ನು ೨೦೦೨ರಲ್ಲಿ ಪ್ರಕಟಿಸಿದರು. ಇದರಲ್ಲಿ ಮುದ್ರಣವಾಗಿರುವ ನನ್ನ ಲೇಖನದ ಉದ್ಧೃತಾಂಶವನ್ನಿಲ್ಲಿ ಸೇರಿಸುವುದು ನನಗೆ ಪ್ರಿಯವಾದ ಸಂಗತಿ.

ಎಚ್ಜಿಎಸ್ ಕುರಿತಂತೆ ನಾನು (ಕುವೆಂಪು ಸಾಲಿಗೆ) ಪೋಣಿಸಬಹುದಾದ ಪಙ್ತಿಗಳಿವು:
ಹಾಲ್ಜೇನು ಸೇರಿ ನೀವಾಗಿಹಿರಿ ಆಚಾರ್ಯ!
ಸಜ್ಜನರ ಸಂಗ ಹೆಜ್ಜೇನು ಮೆದ್ದಂತೆ - ವಿ
ದ್ವಜ್ಜನರ ನಾಣ್ಣುಡಿಯ ಸಾಕಾರವೆಂದೆನಿಸಿ
ಕಜ್ಜ ಮುಗಿಯುವ ಮೊದಲೆ ತೆರಳಿದಿರಿ ಅತ್ರಿಸೂನು

ಅವರ ಮತ್ತು ನನ್ನ ಮೊದಲ ಭೇಟಿ ಬೆಂಗಳೂರಿನ ಸರ್ಕಾರೀ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಾಯಿತು - ಮಾರ್ಚ್ ೩೧, ೧೯೬೫ರಂದು, ಎಂದು ಹಿಂದೆ ಹೇಳಿದ್ದೇನೆ. ನಲ್ವತ್ತರ ಹಿರಿಕಿರಿ ಮಗ್ಗುಲಲ್ಲಿದ್ದ ಎಚ್ಜಿಎಸ್, ನಾನು ಮತ್ತು ಇತರ ಯುವ ಅಧ್ಯಾಪಕರು ನಮ್ಮ ಚಟುವಟಿಕೆಗಳನ್ನು ಕೇವಲ ಪಾಠ ಪ್ರವಚನಗಳ ಯಾಂತ್ರಿಕ ನಿರ್ವಹಣೆಗೆ ಸೀಮಿತಗೊಳಿಸಲಿಲ್ಲ. ಪಾಠೇತರ ಕಾರ್ಯಕಲಾಪಗಳಾದ ಕಾಲೇಜ್ ವಾರ್ಷಿಕ ಪಂಚಾಂಗ ಮತ್ತು ಪುರವಣಿ ಸಂಪಾದನೆ ಹಾಗೂ ಮುದ್ರಣ, ವಿದ್ಯಾರ್ಥಿ ಭಿತ್ತಿಪತ್ರಿಕೆಗಳ ನಿರ್ವಹಣೆ, ಸಾಹಿತ್ಯ, ಸಂಗೀತ ನಾಟಕ ಇತ್ಯಾದಿ ಸಂಸ್ಕೃತಿ ಪೋಷಕ ಕ್ರಿಯೆಗಳ ಚಾಲನೆ ಮತ್ತು ಪೋಷಣೆ, ಸಮಾಜಸೇವೆ ಎಲ್ಲದರಲ್ಲೂ ವಿದ್ಯಾರ್ಥಿಗಳ ಜೊತೆ ನಾವಿದ್ದೆವು. ರೈಫಲ್ ಕ್ಲಬ್ ಸ್ಥಾಪಿಸಿ, ಮಹಿಳೆಯರನ್ನೂ ಒಳಗೊಂಡಂತೆ, ಆಸಕ್ತ ಅಧ್ಯಾಪಕರಿಗೆ ತುಪಾಕಿ ತರಬೇತು, ಅಗ್ನಿಶಾಮಕ ಶಿಕ್ಷಣ, ನಕ್ಷತ್ರ ವೀಕ್ಷಣೆ, ಚಾರಣ ಮುಂತಾದವನ್ನು ಆಚರಣೆಗೆ ತಂದೆವು. ಸರ್ಕಾರೀ ದೊಡ್ಡಿ, ಗೊಬ್ಬರದ ಗುಂಡಿ ಎಂದು ಮುಂತಾಗಿ ಮಂದಿ ಮುಖ ಸಿಂಡರಿಸುತ್ತಿದ್ದ ನಮ್ಮ ಕಾಲೇಜಿಗೆ ಆಗ ವಸಂತಾಗಮನ! ಈ ಒಲವಿನ ಗುರುಕುಲದ ಅನಭಿಷಿಕ್ತ ಕುಲಪತಿಗಳು ಪ್ರಾಂಶುಪಾಲರಾದ ಆರ್.ಆರ್. ಉಮರ್ಜಿ, ಕುಲಸಚಿವರು ನಮ್ಮ ಎಚ್ಜಿಎಸ್.

ಸೂರ್ಯನಾರಾಯಣರಾಯರೊಬ್ಬ ಹುಟ್ಟಾ ಮುಂದಾಳು, ಸ್ವಾತಂತ್ರ್ಯ ಹೋರಾಟಗಾರ. ಎಂದೂ ತಮ್ಮ ಹಿರಿಮೆಯನ್ನು ಆದೇಶವಾಗಿ ವಿಧಿಸಿದವರಲ್ಲ. ಬದಲು, ತಮ್ಮ ನಡೆನುಡಿ ಬಗೆಗಳಿಂದ ಕಾಣಿಸಿದವರು. ಉದಾಹರಣೆಗೆ ನಾಟಕ ನಿರ್ದೇಶನ, ಲೇಖನ ಸಂಪಾದನೆ, ವರದಿ ತಯಾರಿಕೆ, ಅನುವಾದ ಕಲೆ ಮುಂತಾದ ಸಾಹಿತ್ಯ-ಹೃದಯ ಸಂಬಂಧೀ ಚಟುವಟಿಕೆಗಳಲ್ಲಿ ಅವರೇ ನಮ್ಮ ಮಾರ್ಗದರ್ಶಕರು. ನಮ್ಮ ತಪ್ಪುಗಳನ್ನು ಎತ್ತಿ ತೋರಿಸಲಿಲ್ಲ - ನಾವೇ ಅವನ್ನು ಗುರುತಿಸಿ ಸರಿಯಾದ ರೂಪ ಕಂಡುಕೊಳ್ಳಲು ನಯವಾಗಿ ನೆರವಾದರು. ಔದಾರ್ಯಕ್ಕೆ ಪರ್ಯಾಯ ನಾಮ ಎಚ್ಜಿಎಸ್. ಇಂದು ಅವರಿಲ್ಲ. ನನ್ನ ಅಂತರಾಳದಲ್ಲಿ ಮಿಡಿಯುತ್ತಿದೆ ಮಂಜೇಶ್ವರ ಗೋವಿಂದಪೈ (೧೮೮೩-೧೯೬೩) ನುಡಿ:
ನಮ್ಮ ತಪ್ಪನೆನಿತೊ ತಾಳ್ವೆ
ಅಕ್ಕರೆಯಿಂದೆಮ್ಮನಾಳ್ವೆ
ನೀನೆ ಕಣಾ ನಮ್ಮ ಬಾಳ್ವೆ
ನಿನ್ನ ಮರೆಯಲಮ್ಮೆವು

೧೯೬೯ರಲ್ಲಿ ನಾನು ಮೈಸೂರು ನಿವಾಸಿಯಾದೆ. ಅದೇ ತರುಣದಲ್ಲಿ ಎಚ್ಜಿಎಸ್ ಕೂಡ ಇಲ್ಲಿಗೆ ಬಂದರು. ಅನ್ಯ ಪರಿಸರದಿಂದ ವೃತ್ತಿ ಸಲುವಾಗಿ ಮೊದಲ ಬಾರಿಗೆ ಮೈಸೂರು ಸೇರಿದಾತ ನಾನು. ಅವರೋ ತವರಿಗೆ ಮರಳಿದವರು. ಕೊಡಗಿನ ಜೇನು ನಾನು ಹೌದೋ ಅಲ್ಲವೋ (ಹಾಗೆಂದು ಅವರು ಆಗಾಗ ನನ್ನ ಬಗ್ಗೆ ಮೆಚ್ಚು ನುಡಿ ಆಡುತ್ತಿದ್ದರು - ಪ್ರತಿ ವರ್ಷವೂ ನಾನು ನನ್ನ ತವರಾದ ಕೊಡಗಿನಿಂದ ಜೇನು ತರಿಸಿ ಮಿತ್ರರಿಗೆ ಹಂಚುತ್ತಿದ್ದೆ) ಅವರಂತೂ ಮೈಸೂರು ಮಲ್ಲಿಗೆಯೇ ಖರೆ. ಜೇನೆನ್ನಿ, ಮಲ್ಲಿಗೆಯೆನ್ನಿಒಳಗಿನ ಹೂರಣ ಒಂದೆ! (ಕೆಎಸ್) ಅವರು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಇಂಗ್ಲಿಷ್-ಕನ್ನಡ ನಿಘಂಟಿನ ಒಬ್ಬ ಸಂಪಾದಕರಾಗಿದ್ದರು. ನಾನು ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕನಾಗಿದ್ದೆ. ನಿಘಂಟೋ ವಿಶ್ವಕೋಶವೋ ಅಂತರಂಗದ ಹೂರಣ-ಪ್ರೇರಣ ಮತ್ತು ಬಹಿರಂಗದ ತೋರಣ ಒಂದೇ - ಅದು ಕನ್ನಡದ ಕಾರಣ!

ನಮ್ಮ ಹೂರಣ-ಪ್ರೇರಣ ಒಂದೇ ಆಗಿದ್ದರೂ ತೋರಣ-ಚಾರಣ ಪೂರ್ತಿ ವಿಭಿನ್ನವಾಗಿದ್ದುವು. ಇದರ ಅರ್ಥ: ಅಧ್ಯಯನ, ಚಿಂತನ, ಮಂಥನ, ಸಂಭಾಷಣೆ ಮುಂತಾದ ವೈಯಕ್ತಿಕ ಚಟುವಟಿಕೆಗಳು ಅವರಿಗೆ ಬಲು ಅಪ್ಯಾಯಮಾನ. ವಿವಿಧ ಮಟ್ಟಗಳಲ್ಲಿ ಮೊದಲ ಮೂರು ನನಗೂ ಹಾಗೆ. ಜೊತೆಯಲ್ಲೇ ಜನಪ್ರಿಯ ವಿಜ್ಞಾನ ಲೇಖನಗಳನ್ನು ಪುಸ್ತಕಗಳನ್ನೂ ಬರೆಯುವುದು ನನ್ನ ಮೆಚ್ಚಿನ ಹವ್ಯಾಸ. ಫಲಿತಾಂಶ ಅವರು ಕ್ರಮೇಣ ಏಕಾಕಿ ಮತ್ತು ಏಕಾಂಗಿ ಆದರು, ನಾನೆಂದೂ ಏಕಾಕಿ ಆಗಲಿಲ್ಲ. (ಏಕಾಕಿಜನಪರಿವೇಷ್ಟಿತನಲ್ಲದವ, ಏಕಾಂಗಿ= ಏಕಾಂತ ಚಿಂತನಪ್ರಿಯ. ಈ ಸೂಕ್ಷ್ಮವನ್ನು ಬೇರೊಂದು ಸಂದರ್ಭದಲ್ಲಿ ಎಚ್ಜಿಎಸ್ರಿಂದಲೇ ಅರಿತಿದ್ದೆ.)

ಅವರಂಥ ಸದಭಿರುಚಿಯ ಸಜ್ಜನ ಸಹೃದಯ ವಿದ್ವಾಂಸರ ಉಜ್ವಲ ಪ್ರತಿಭೆ ನಿಯೋಜಿತ ವೃತ್ತಿ ಮತ್ತು ಪ್ರತ್ಯಕ್ಷ ಸಂಭಾಷಣೆ ಈ ಎರಡು ನೆಲೆಗಳಿಂದ ಹೊರಗೆ ಬೆಳಗುತ್ತಿಲ್ಲವಲ್ಲ ಎಂಬ ಕೊರಗು ಬೆಂಗಳೂರು ದಿನಗಳಿಂದಲೇ ನನ್ನನ್ನು ಬಾಧಿಸುತ್ತಿತ್ತು. ಪರಿಪೂರ್ಣತಾನ್ವೇಷಕನೊಬ್ಬ ಸ್ವಂತ ಕೃತಿಯಲ್ಲೆಂದೂ ಪರಿಪೂರ್ಣತೆ ಕಾಣದಿರುವುದರಿಂದ ಕೃತಿ ರಚನೆಯದುಸ್ಸಾಹಸಕ್ಕೆ ಮುಂದಾಗುವುದಿಲ್ಲವೆಂಬ ಅನುಭವೋಕ್ತಿಗೆ ಅವರಲ್ಲಿ ನಿದರ್ಶನ ಕಂಡೆ.

ಕರ್ತಾರನ ಪ್ರಥಮ ದೋಷ ಮಾನವನ ಸೃಷ್ಟಿ. ದ್ವಿತೀಯ ಮತ್ತು ಅಂತಿಮ ದೋಷ ಮಾನವನಲ್ಲಿ ಪರಿಪೂರ್ಣತೆಯನ್ನು ಅನುಶೀಲಿಸುತ ಹಂಬಲದ ನಾಟಿ! ಎಂದು ನಾನು ಅವರನ್ನು ಛೇಡಿಸುವುದಿತ್ತು.
      ಎಲ್ಲರೂ ಬರೆಯುವವರಾದರೆ ಓದುವವರು ಯಾರು? ಅವರ ನಿರುದ್ವಿಗ್ನ ಜವಾಬು.
      ಪ್ರಾಜ್ಞರು ಲೇಖನಿ ಹಿಡಿಯದಿದ್ದರೆ ಖುದ್ದು ಅವರೇ ಬೂಸದ ಹುಚ್ಚು ಹೊಳೆಯಲ್ಲಿ ಉಸಿರು ಕಟ್ಟಿ ಸಾಯಬೇಕಾಗುತ್ತದೆ! ನನ್ನ ಚಬಕು.
      ಬರೆಯಬಲ್ಲ ಎಚ್ ಜಿ ಎಸ್ ಬರೆಯುತ್ತಿಲ್ಲ. ಇದು ನನ್ನಂತೆ ಅವರೊಂದಿಗೆ ನಿಕಟ ಸಾಹಚರ್ಯವಿದ್ದ ಎಲ್ಲ ಸನ್ಮಿತ್ರರ ಬೆರಗು ಮತ್ತು ಕೊರಗು ಕೂಡ. ಇದರಿಂದ ಸಾರಸ್ವತ ಲೋಕಕ್ಕೆ ಎಂಥ ನಷ್ಟವಿದೆ ಎಂಬ ಅರಿವು ನನಗಿತ್ತು. ಆದರೆನಾನೇನ ಮಾಡಲಿ ಬಡವನಯ್ಯ!
ಉಳ್ಳವರು ಶಿವಾಲಯವ ಮಾಡುವರು ಸನ್ನಿವೇಶ ತನ್ನಿಂದ ತಾನೇ ಒದಗಿ ಬಂದದ್ದು ಒಂದು ಚೋದ್ಯ: ಬೆಂಗಳೂರಿನ ಐಬಿಎಚ್ ಪ್ರಕಾಶನದವರು ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಪುಸ್ತಕಗಳ ರೂಪಣೆ ಮತ್ತು ರಚನೆಯ ಹೊಣೆಯನ್ನು ನನಗೆ ವಹಿಸಲು ಮುಂದೆ ಬಂದರು. ಇದು ಕನ್ನಡದ ಕೆಲಸ, ವಿಜ್ಞಾನ ವಾಙ್ಮಯದ ನಿರ್ಮಾಣ, ನಾನು ಬಿಡುವೇಳೆಯಲ್ಲಿ ಕೈಗೊಳ್ಳಬಹುದಾದ ಸ್ವತಂತ್ರ ವಿಹಾರ. ಅಂದರೆ ಇದು ನನ್ನ ಸಾಮರ್ಥ್ಯಮಿತಿಯೊಳಗಿತ್ತು.

ಸಮರ್ಥ ಕನ್ನಡ ವಿಜ್ಞಾನ ಲೇಖಕರ ಪುಟ್ಟ ತಂಡ ಕಟ್ಟಿ, ಕೆಲಸದ ರೂಪರೇಷೆಗಳನ್ನು ನಿರ್ಧರಿಸಿ, ನಾವೆಲ್ಲರೂ ಲೇಖನ-ಸಂಪಾದನ-ಸಂಸ್ಕರಣ ಕ್ರ್ಯೆಗಳಲ್ಲಿ ಉದ್ಯುಕ್ತರಾದೆವು. ಹಸ್ತಪ್ರತಿಗಳು ಸಿದ್ಧವಾಗುತ್ತಿದ್ದಂತ್ತೆ ಅವನ್ನು ಎಚ್ಜಿಎಸ್ರಿಗೆ ಒಪ್ಪಿಸುತ್ತಿದ್ದೆವು: ಶೈಲಿಗೆ ಅಧಿಕ ಸ್ಪಷ್ಟತೆ ಮತ್ತು ಲಾಲಿತ್ಯ ಪೂಸುವ ಸಲುವಾಗಿ ಈ ಸಂಸ್ಕರಣ ಕ್ರಿಯಾವೇಳೆ ಅವರ ಜೊತೆ ಪಟ್ಟಾಗಿ ಗಂಟೆಗಟ್ಟಳೆ ಕುಳಿತು ಇಂಗ್ಲಿಷಿನ ನವುರು ಮಗ್ಗುಲುಗಳನ್ನು ಸ್ವಾಂಗೀಕರಿಸಿಕೊಂಡು ಮುಂದುವರಿದೆ. ಅಂದರೆ ನನ್ನ ೫೦ನೆಯ ವಯಸ್ಸಿನಲ್ಲಿ ನಾನವರ ಗುರುಕುಲ ಶಿಷ್ಯನಾದೆ. ನಮ್ಮ ಪುಸ್ತಕಗಳು ವಿದೇಶೀ ಶಿಷ್ಟ ಕೃತಿಗಳಿಗೆ ವಿಷಯ-ಶೈಲಿ-ಚಿತ್ರ-ವಿನ್ಯಾಸದಲ್ಲಿ ಸರಿಸಾಟಿ ಆದುವು. ನನಗೆ ಇಂಗ್ಲಿಷಿನಲ್ಲಿ ಸ್ವತಂತ್ರವಾಗಿ ಲೇಖನ ಮತ್ತು ಪುಸ್ತಕ ಬರೆಯುವ ಧೈರ್ಯ ಬಂದಿತು. ಈ ಅಧೀರ ಅರ್ಜುನನಿಗೆ, ‘ತಸ್ಮಾದ್ಯುಧ್ಯಸ್ವ ಭಾರತ ಎಂಬ ಬೀಜಮಂತ್ರವನ್ನು ನಲ್ಮೆಯಿಂದ ಉಪದೇಶಿಸಿದ ಪಾರ್ಥಸಾರಥಿ ನಮ್ಮ ಪ್ರಿಯ ಎಚ್ಜಿಎಸ್. ಅವರ ಮೌನ ಜ್ಞಾನಕೈಂಕರ್ಯ ಮತ್ತು ನಿರಪೇಕ್ಷ ಮಾರ್ಗದರ್ಶನ ಕುರಿತು ಹೇಳಬಹುದಾದ ನುಡಿ:
ಮರದೊಳಿಹ ಹಣ್ಣುಗಳನೆಣಿಸುವುದು ಬಲು ಸುಲಭ
ಹಣ್ಣೊಳಗೆ ಹುದುಗಿರುವ ಮರಗಳನೆಣಿಸಲಾರೆ!
ಸೃಷ್ಟಿವೈಚಿತ್ರ್ಯವಿದು - ಬ್ರಹ್ಮಾಂಡ-ಪಿಂಡಾಂಡ
ಸಂಬಂಧ, ಜೀವನ ರಹಸ್ಯವೋ! ಅತ್ರಿಸೂನು.
ಸಭ್ಯಸುಸಂಸ್ಕೃತ ಸಂತೃಪ್ತ ಸಂಸಾರ. ಪತ್ನಿ ಶಾರದಾರಾವ್ ಈ ಸ್ವಾಸ್ಥ್ಯದ ಆಧಾರ ಶ್ರುತಿ. ರಾಮನಾಥ, ನರೇಂದ್ರಹೊಸ ಚಿಗುರುಗಳು. ಎಚ್ಜಿಎಸ್ - ಇಂದು ಭೌತವಾಗಿ ನಮ್ಮೊಡನಿಲ್ಲ, ಆದರೆ ಬೌದ್ಧಿಕವಾಗಿ ಮತ್ತು ಜೀವನಮೌಲ್ಯವಾಗಿ ಸದಾ ಪ್ರಸ್ತುತರಾಗಿದ್ದಾರೆ.

In the Temple of Learning

Under the title `Here lies HGS the Good’ I wrote an obituary for Star of Mysore on HG Suryanarayana Rao (1924 to May 24, 1985). The note was published in the daily on May 25, 1985.
It is said of Viswamitra that he had a knack to see only the negative qualities in the people. Poor Harischandra became his target and you know the rest of the story. Could there be an Antivisvamitra? Those of us who had even a fleeting acquaintance with Professor H.G. Suryanarayana Rao, popularly known as HGS, would certainly vouchsafe that he would eminently fit into this mould. For, he never saw anything bad in any creature.
HGS was a first-rate student of English literature. Professors B.M. Srikantia and A.N. Murthy Rao were among his teachers and mentors. In the Government Arts and Science College, Bangalore, where he was teaching English and I Mathematics, some of us, his colleagues, usued to attend his classes for the sheer joy of getting a feel of current literature. He was a specialist in drama-directing and miscellany-editing. It looked as though he had sublimated his personality to the work entrusted to him and drew out the best in the students and the staff associated with him.
       He died young - sixty plus is no age to die. The long suffering he underwent was unbearable. He bore it with a courage of a Karna and dedication of a Nachiketha. In his untimely death, no doubt his suffering has come to the inevitable end, but the cultural life of the City has lost one of its stalwart torchbearers. For, no one loved humanity more than HGS.

Added in 2002
The great visionary and missionary Martin Luther wrote, “The prosperity of a country depends, not on the abundance of its revenues, nor on the strength of its fortifications, nor on the beauty of its public buildings, but it consists in the number of cultivated citizens, in its men of education, enlightenment, and character, here are to be found its true interest, its chief strength, its real power.”

HGS was a living example of a person who radiated the fragrance of character to those who came under his spell, and steeled them into men of education and strength.

Max Planck was the formulator of Quantum Theory (1900). It paved the way for Modern Physics as different from the erstwhile Classical or Newtonian Physics. The genius of the contemporary physicist Albert Einstein, who propounded the Theories of Relativity (Special in 1905, and General in 1915) was discovered by Planck, who at once invited Einstein to join him (Planck) at Berlin. The two eminent men were also great men of character who respected each other with genuine love. When Planck attained sixty in 1918, Einstein delivered the felicitation address at the Physical Society in Berlin. The theme was Principles of Research. It takes of thus, “In the temple of science and many mansions, and various indeed are they that dwell therein and the motives that have led them thither. Many take to science out of a joyful sense of superior intellectual power, science is their own special sport to which they look for vivid experience and the satisfaction of ambition; many others are to be found in the temple who have offered the products of their brains on this altar for purely utilitarian purposes. Were an angel of the Lord to come and drive all the people belonging to these two categories out of the temple, the assemblage would be seriously depleted, but there would still be some men, of both present and past times, left inside. Our Planck is one of them, and that is why we love him.”
Our dear HGS belonged to the `men inside the temple of learning’ like Planck. That is why even today, seventeen years after the passing away of his mortal frame, his flame sheds so much love and warmth on us.

He could be a fierce critic, but without meaning any offence to the other person. Once he took me to severe task for being blunt in my music review of a respected father figure ot the Hindustani music. I wrote under the caption `This is no music’ and threadbare analyzed the reasons for my conclusion. “If salt were to lose its savor how shall we salt it?” HGS had not attended the concert. Yet he told me point blank, “Even while agreeing with your argument, I do not approve of the style of presentation. That is not the way of the cultured!”
“But who by his hysterical behavior on the stage provoked contempt in our minds? Mysore audience cannot be fooled. Mine is a mild and civilized way of exhibiting the disappointment of the thousands of expectant dumb rasikas.”
“Yet you have brought down the dignity of the City.”
“Honest men by tolerating dishonesty run the risk of being ruled by dishonest men!”
We agreed to disagree. But this impact really did polish my Kodagu-roughness. Thus today whenever I am forced to write an adverse observation on a concert, book etc., after writing it I subject the contents to the HGS-test, “Would he have approved it,” and mend it appropriately. Hence he is as relevant to me today, perhaps even more, as he was then. Finally when the readers sincerely compliment me on my views and supposed English style I bow to the memory of HGS, in deep reverence, for, I learnt this art at his garadi.

(ಮುಂದುವರಿಯಲಿದೆ)

1 comment:

  1. ರುದ್ರಪ್ಪನ ಎದುರಿಗೆ ರುದ್ರಾವತಾರ ತಾಳಲು ಜಿಟಿಎನ್ ಅಲ್ಲದೆ ಇನ್ಯಾರಿಗೆ ತಾನೇ ಸಾಧ್ಯ? ಇದನ್ನೇ ನೈತಿಕಶಕ್ತಿ ಎನ್ನುವುದು.
    ಎಲ್. ಬಸವರಾಜು ಅವರ ನಗುಮುಖದ ಚಿತ್ರ ನೋಡಿದಾಗ ಅವರ ತರಗತಿಗಳ ನೆನಪಾಗಿ ಸಂತೋಷವಾಯಿತು. ವಂದನೆಗಳು.- ಟಿ.ಎಸ್. ಗೋಪಾಲ್

    ReplyDelete