ಅಧ್ಯಾಯ ೭೮ (ಮೂಲದಲ್ಲಿ ೫೦)
ಅಂದಾಜು ೧೯೭೪. ಅದೇ ಜೂನ್
ತಿಂಗಳ ಒಂದು ದಿನ ನಮ್ಮ ಮನೆಗಿಬ್ಬರು ಅಪರಿಚಿತರು ಬಂದರು. ಇವರಲ್ಲೊಬ್ಬ
ಬೆಂಗಳೂರಿನಲ್ಲಿ ತತ್ಪೂರ್ವ ನನ್ನ ಶಿಷ್ಯ ಆಗಿದ್ದರಂತೆ, ಹೆಸರು ಜಯದೇವ.
ಆದರೆ ನನಗೆ ಕೊಂಚವೂ ನೆನಪಿರಲಿಲ್ಲ. ಭವ್ಯ ಗಾತ್ರದ ಹಸನ್ಮುಖಿ
ಮತ್ತು ಯಾವುದೇ ಸಾಹಸವನ್ನು ಪ್ರದರ್ಶಿಸಿ ಗೆಲ್ಲಬಲ್ಲೆನೆಂಬ ಆತ್ಮವಿಶ್ವಾಸವಿದ್ದಾತ. ಕಾಲೇಜ್ ವ್ಯಾಸಂಗಾನಂತರ ಎಂಎಸ್ಐಎಲ್ ಸಂಸ್ಥೆ ಸೇರಿದ್ದನೆಂದು
ತಿಳಿಯಿತು. ಇವರ ಜೊತೆಗಿದ್ದ ತುಸು ಹಿರಿಯನ ಹೆಸರು ಪೀಟರ್ ಕೊಲಾಸೊ.
ಇವರು ಆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ. ಎಲ್ಲವೂ
ನನಗೆ ಟಿಂಬಕ್ಟೂ ಭಾಷೆ! ಅವರನ್ನೇ ಪ್ರಶ್ನಿಸಿ ತಿಳಿದುಕೊಂಡೆ ಆ ನಾಲ್ಕು
ಅಕ್ಷರಗಳ ಬೀಜಮಂತ್ರದ ಮಹಿಮೆಯನ್ನು: Mysore Sales International
Limited ಎಂಬುದೊಂದು
ಸರ್ಕಾರಿ ಸ್ವಾಮ್ಯದ ಸ್ವಾಯತ್ತ ವಾಣಿಜ್ಯ ಸಂಸ್ಥೆ. ಇದರ ಹಲವಾರು ಯೋಜನೆಗಳ ಪೈಕಿ ವಿದ್ಯಾರ್ಥಿ ಆವಶ್ಯಕತೆಗಳಾದ
ಲೇಖನ ಸಾಮಗ್ರಿಗಳ ತಯಾರಿಕೆ ಮತ್ತು ಸಗಟು ವ್ಯಾಪಾರ ಒಂದು. ಕಾಗದದ ಬೆಲೆ
ತೀರ ತುಟ್ಟಿಯಾಗಿದ್ದ ಆ ದಿನಗಳಂದು ಎಂಎಸ್ಐಎಲ್ ರಂಗ ಪ್ರವೇಶಿಸಿ ಸಾದಿಲ್ವಾರು
ರಂಗದಲ್ಲಿಯ ಕೊರತೆಯನ್ನು ನೀಗಿತ್ತು ಮತ್ತು ಗಮನಾರ್ಹ ಬೆಲೆ ನಿಯಂತ್ರಣ ಕೂಡ ಸಾಧಿಸಿ ವಿದ್ಯಾರ್ಥಿಗಳ
ಪ್ರೀತಿ ಗಳಿಸಿತ್ತು. ಇವರ ‘ಲೇಖಕ್’ ಛಾಪಿನ ಲೇಖನ
ಸಾಮಗ್ರಿಗಳು ಕರ್ನಾಟಕಾದ್ಯಂತ ಒಂದು ಕ್ರಾಂತಿಯನ್ನೇ ಸಾಧಿಸಿದ್ದುವು.
ಇವೆಲ್ಲ ವಿವರಗಳನ್ನು ತುಂಬ ಕುತೂಹಲದಿಂದ
ಆಲಿಸಿದೆ. “ಹಿಂದೆ ಮಡಿಕೇರಿಯಲ್ಲಿ ಇಂಥದೊಂದು
ಪ್ರಯೋಗವನ್ನು ನಮ್ಮ ಕಾಲೇಜಿನಲ್ಲಿ ಮಾಡಿದುದರ ನೆನಪಾಗುತ್ತಿದೆ. ಅದು ಹಾಗಿರಲಿ,
ಈಗ ಇಲ್ಲಿ ನನ್ನಿಂದೇನು ನಿರೀಕ್ಷಿಸುತ್ತೀರಿ?” ಇವರೇಕೆ ಸುಂಕದವನ
ಜೊತೆ ಇಷ್ಟೊಂದು ಸುಖ ದುಃಖ ಹಂಚಿಕೊಳ್ಳುತ್ತಿದ್ದಾರೆ ಎಂದು ನನಗೆ ಆಶ್ಚರ್ಯ.
ಪೀಟರ್ ದನಿಗೂಡಿಸಿದರು, “ಈಗ ನಿಮ್ಮಿಂದಲೇ ಮುಂದಿನ ಮಾರ್ಗಕ್ರಮಣವಾಗಬೇಕು. ಅಖಿಲ ಕರ್ನಾಟಕದ
ಎಲ್ಲ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಅನ್ವಯವಾಗುಂತೆ ಇದೇ ವರ್ಷಾಂತ್ಯದಲ್ಲಿ ನಾವೊಂದು ‘ಲೇಖಕ್ ಸ್ಪರ್ಧೆ’ ಏರ್ಪಡಿಸಬೇಕೆಂದು ನಿರ್ಧರಿಸಿದ್ದೇವೆ.”
ಮುಂದಿನ ಪ್ರಶ್ನೋತ್ತರಗಳಿಂದ ಮೂಡಿದ
ಚಿತ್ರವಿದು: ಈ ಸ್ಪರ್ಧೆಯಲ್ಲಿ ಎರಡು ಹಂತಗಳಿರಬೇಕು - ಲಿಖಿತ ಪರೀಕ್ಷೆ.
ಇದರಲ್ಲಿ ಉತ್ತೀರ್ಣರಾದವರಿಗೆ ಮೌಖಿಕ ಸಂದರ್ಶನ. ಅತ್ಯಂತ
ರಹಸ್ಯವಾಗಿಯೂ ನಿಷ್ಪಾಕ್ಷಿಕವಾಗಿಯೂ ನಿರ್ವಹಿಸಲ್ಪಡಬೇಕಾದ ಈ ಯೋಜನೆಯ ಕಾರ್ಯಸೂಚಿಯನ್ನೂ ಪ್ರಶ್ನಾಪತ್ರಿಕೆಯನ್ನೂ
ನಾನು ಸಿದ್ಧಪಡಿಸಿಕೊಡಬೇಕು. ನನ್ನ ವಿಶ್ವಾಸಕ್ಕೆ ಪಾತ್ರರಾದ ಇತರ ವಿದ್ವಾಂಸರ
ಸಹಾಯ ಪಡೆದುಕೊಳ್ಳಬಹುದು, ಎಲ್ಲರಿಗೂ ಗೌರವ ಸಂಭಾವನೆಯನ್ನು ಕಂಪೆನಿ ಕೃತಜ್ಞತಾಪೂರ್ವಕವಾಗಿ
ಪಾವತಿಸುತ್ತದೆ, ಇತ್ಯಾದಿ.
ನಾನೆಂದೆ “ಇದು ನನ್ನ ಆಸಕ್ತ ಕ್ಷೇತ್ರವಲ್ಲ. ಬೆಂಗಳೂರಿನಲ್ಲಿಯೇ
ಸಾಕಷ್ಟು ಮಂದಿ ಶಿಕ್ಷಣವೇತ್ತರಿದ್ದಾರೆ. ಅಲ್ಲೆ ಪ್ರಯತ್ನಿಸಿ.”
ಜಯದೇವ, “ಆದರೆ ಅಲ್ಲೊಬ್ಬರು ಜಿಟಿ ನಾರಾಯಣರಾವ್
ಇಲ್ಲ! ಈ ಕೆಲಸ ನಿಮ್ಮಿಂದ ಆಗುತ್ತದೆ, ನಿಮ್ಮಿಂದಲೇ ಆಗಬೇಕು.
ದಯವಿಟ್ಟು ಒಪ್ಪಿಕೊಳ್ಳಿ ಮತ್ತು ನಮ್ಮ ಕಡೆಯಿಂದ ನಿಮಗೇನು ಸಹಕಾರ ಬೇಕು ಎಂಬುದನ್ನು
ಹೇಳಬೇಕು.”
ಪ್ರಾಮಾಣಿಕವಾದ, ಅನೈತಿಕವಲ್ಲದ,
ನನ್ನಿಂದ ಅಸಾಧ್ಯವಲ್ಲದ ಮತ್ತು ಸಾಮಾಜಿಕವಾಗಿ ಅನುಪಯುಕ್ತವಲ್ಲದ ಯಾವುದೇ ಹೊಸ ಸವಾಲು
ಅಯಾಚಿತವಾಗಿ ಎದುರಾದಾಗ ವಿನಯಪೂರ್ವಕವಾಗಿ ಅದಕ್ಕೆ ಯುಕ್ತ ಜವಾಬು ಕೊಡಲು ಪ್ರಯತ್ನಿಸುವುದು ನನ್ನ
ಸ್ವಭಾವ. ಒಪ್ಪಿಕೊಂಡೆ. ನನ್ನ ವಿಶ್ವಾಸಕ್ಕೆ ಪಾತ್ರರಾದ
ಸನ್ಮಿತ್ರರ ನೆರವಿನಿಂದ ಲಿಖಿತ ಪರೀಕ್ಷೆಯ ಪ್ರಶ್ನಾಪತ್ರಿಕೆ, ಇದರ ಮುದ್ರಣ,
ಉತ್ತರಪತ್ರಿಕೆಗಳ ಮೌಲ್ಯಮಾಪನ ಮುಂತಾದ ವಿವರಗಳನ್ನು ತಯಾರಿಸಿಕೊಟ್ಟೆ. ಕರ್ನಾಟಕದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿಯೂ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಈ ಲಿಖಿತ
ಪರೀಕ್ಷೆಯನ್ನು ಒಂದೇ ದಿನ ಅದೇ ಅವಧಿಯಲ್ಲಿ ಎಂಎಸ್ಐಎಲ್ ನಡೆಸಿತು.
ಭಾಗವಹಿಸಿದ ವಿದ್ಯಾರ್ಥಿಗಳ ಸಂಖ್ಯೆ ೨೫,೦೦೦ವನ್ನೂ ಮೀರಿತ್ತು!
ಇವುಗಳ ಯಾಂತ್ರಿಕ (ಅಂದು ಗಣಕವಿನ್ನೂ
ರಂಗಪ್ರವೇಶಿಸಿರಲಿಲ್ಲ) ಮೌಲ್ಯಮಾಪನಾ ನಂತರ ಮೊದಲ ಸುಮಾರು ೨೫೦ ಪತ್ರಿಕೆಗಳನ್ನು
ಅಂತಿಮ ತೀರ್ಮಾನಕ್ಕೆಂದು ನನಗೆ ಕಳಿಸಿದರು. ಇವುಗಳಲ್ಲಿಯ ಪ್ರಬಂಧಗಳನ್ನು
ಓದಿ (ಇದನ್ನು ಯಾಂತ್ರಿಕವಾಗಿ ಮಾಡಲಾಗುವುದಿಲ್ಲ) ನಾನು ಮೊದಲ ಸುಮಾರು ೫೦ ಮಂದಿಯನ್ನು ಆಯಬೇಕಿತ್ತು. ಈ ಕೆಲಸದಲ್ಲಿ
ಮಗ್ನನಾಗಿದ್ದಾಗ ಒಂದು ನಿರ್ದಿಷ್ಟ ಕೇಂದ್ರದಿಂದ ಬಂದ ಉತ್ತರ ಪತ್ರಿಕೆಗಳಲ್ಲಿಯ ಪ್ರಬಂಧಗಳೆಲ್ಲವೂ
ತದ್ರೂಪಿಗಳಾಗಿದ್ದುವು! ಇನ್ನೊಂದು ಕೇಂದ್ರದಿಂದ ಬಂದವೆಲ್ಲವೂ ಹಿಂದೆಂದೋ
‘ಸುಧಾ’ ಸಾಪ್ತಾಹಿಕದಲ್ಲಿ ಖುದ್ದು ನಾನೇ ಪ್ರಕಟಿಸಿದ್ದ ಜನಪ್ರಿಯ ವಿಜ್ಞಾನ ಲೇಖನವೊಂದರ ನಕಲುಗಳಾಗಿದ್ದುವು!
ಎಲ್ಲಿವರೆಗೆಂದರೆ ಈ ಪ್ರಬಂಧಗಳ ಪೈಕಿ ಕೆಲವಲ್ಲಿ ನನ್ನ ಹೆಸರನ್ನು ಕೂಡ ಆ ವಿದ್ಯಾರ್ಥಿಗಳು
ನಕಲು ಮಾಡಿದ್ದರು! ಉಭಯ ಸಂದರ್ಭಗಳಲ್ಲಿಯೂ ಆ ಎಲ್ಲ ವಿದ್ಯಾರ್ಥಿಗಳ ಉತ್ತರ
ಪತ್ರಿಕೆಗಳನ್ನು ರದ್ದು ಮಾಡಿದೆ. ಮುಂದಿನ ಸೂಕ್ಷ್ಮ ತಪಾಸಣೆಯಿಂದ ತಿಳಿದ
ಸಂಗತಿ ಆಘಾತಕಾರಿಯಾಗಿತ್ತು. ತಮ್ಮ ಶಾಲೆಗಳಿಗೆ ‘ಹೆಸರು’ ಬರಬೇಕೆಂಬ ಸದಾಶಯದಿಂದ
(?) ಸಾಕ್ಷಾತ್ ಉಪಾಧ್ಯಾಯರೇ ಉತ್ತರಗಳನ್ನು ಕರಿ ಹಲಗೆ ಮೇಲೆ ಬರೆಯುತ್ತಿದ್ದರಂತೆ!
ನಿಜ, ಹರಕೊಲ್ಲಲ್ ಪರ ಕಾಯ್ವನೇ? ಪ್ರಾಮಾಣಿಕ ಮಾರ್ಗಗಮನದಲ್ಲಿ ಎದುರಾಗುವ ಒಂದೊಂದು ವೈಫಲ್ಯವೂ ಅಪ್ರಾಮಾಣಿಕ ವಿಧಾನದಿಂದ ಗಳಿಸುವ
ಯಾವುದೇ ಯಶಸ್ಸಿಗಿಂತ ಶ್ರೇಷ್ಠವಲ್ಲವೇ?
ಅಂತಿಮವಾಗಿ ಉತ್ತೀರ್ಣರಾದ ಅಂದಾಜು
೫೦ ವಿದ್ಯಾರ್ಥಿಗಳನ್ನು ಎಂಎಸ್ ಐಎಲ್ ಸಂಸ್ಥೆ ಬೆಂಗಳೂರಿಗೆ ಆಹ್ವಾನಿಸಿ ಮೌಖಿಕ ಸಂದರ್ಶನ ಏರ್ಪಡಿಸಿತು. ನಿರ್ಣಾಯಕ
ಮಂಡಳಿಯ ಸದಸ್ಯರನ್ನು ನಾವು ಮೂವರು (ಪೀಟರ್, ಜಯದೇವ
ಮತ್ತು ನಾನು) ಪರ್ಯಾಲೋಚಿಸಿ ನಿರ್ಧರಿಸಿದೆವು. ವಿದ್ಯಾರ್ಥಿಯ ಆಸಕ್ತ ವಿಷಯ ಕುರಿತೇ ನಾವು ಸಾವಕಾಶವಾಗಿ ಮತ್ತು ಅನೌಪಚಾರಿಕವಾಗಿ ಮಾತು ಕತೆ
ನಡೆಸಿ ಆತನ/ಆಕೆಯ ವ್ಯಕ್ತಿತ್ವವನ್ನು ಅಳೆಯುತ್ತಿದ್ದೆವು. ಆತನಿಗೆ ಎಷ್ಟು ಅಥವಾ ಏನು ಗೊತ್ತಿಲ್ಲ ಎಂಬುದನ್ನು ಪತ್ತೆಹಚ್ಚುವುದಲ್ಲ ಈ ಸಂದರ್ಶನದ ಉದ್ದೇಶ.
ಬದಲು, ತಾನು ತಿಳಿದಿರುವುದರಲ್ಲಿ ಆತನ ಅರಿವು ಮತ್ತು ಅಭಿವ್ಯಕ್ತಿ
ಕೌಶಲವೇನು ಎಂಬುದರ ಮಾಪನೆ ಮಾತ್ರ. ಮೊದಲ ಸ್ಥಾನ ಗಳಿಸಿದಾತನಿಗೆ
‘ವರ್ಷದ ಲೇಖಕ್ ವಿದ್ಯಾರ್ಥಿ’ ಎಂಬ ಬಿರುದು
ಸಹಿತ ಮೌಲ್ಯಯುತ ಬಹುಮಾನವನ್ನೂ ಪ್ರದಾನಿಸಲಾಗುತ್ತಿತ್ತು. ಉಳಿದ ಭಾಗಿಗಳಿಗೆ
ಯುಕ್ತ ಪಾರಿತೋಷಿಕಗಳನ್ನು ಕೊಡುತ್ತಿದ್ದರು. ಸಮಸ್ತ ಖರ್ಚು ವೆಚ್ಚಗಳನ್ನೂ
ಸಂಸ್ಥೆ ಭರಿಸುತ್ತಿತ್ತು. ಹೀಗೆ ಆಯಾ ‘ವರ್ಷದ
ಲೇಖಕ್ ವಿದ್ಯಾರ್ಥಿ’ ಶೋಧ ಮುಂದಿನ
ಹತ್ತು ಹನ್ನೊಂದು ವರ್ಷ ಅವ್ಯಾಹತವಾಗಿ, ಪ್ರತಿವರ್ಷವೂ ನನ್ನ ಹಿರಿತನದಲ್ಲಿ,
ಮುಂದುವರಿಯಿತು.
ಮುಂದಿನ ವರ್ಷಗಳಲ್ಲಿ ಲಿಖಿತ ಪರೀಕ್ಷೆಗಳಲ್ಲಿ
ವ್ಯಾಪಕ ಸುಧಾರಣೆಗಳನ್ನು ತಂದೆವು. ಸಂದರ್ಶನ ಕೇಂದ್ರಗಳನ್ನು ಆಯಾ ವಲಯದ ವಿದ್ಯಾರ್ಥಿಗಳ
ಸೌಕರ್ಯಾರ್ಥ ಕರ್ನಾಟಕದ ವಿವಿಧ ಕೇಂದ್ರಗಳಲ್ಲಿ ಏರ್ಪಡಿಸಿದೆವು. ಬೆಳಗಾವಿ,
ಗುಲಬರ್ಗಾ, ಹುಬ್ಬಳ್ಳಿ, ಉಡುಪಿ,
ಮಂಗಳೂರು, ತುಮಕೂರು, ಮಡಿಕೇರಿ,
ಮೈಸೂರು ತುಂಗಭದ್ರಾ ಕಟ್ಟೆ ಮುಂತಾದವು. ಮಂಡಳಿಯ ಸದಸ್ಯರಾಗಿ
ಸೇವೆ ಸಲ್ಲಿಸಿದ ಕೆಲವು ಗಣ್ಯರ ಹೆಸರುಗಳು ನೆನಪಿನಲ್ಲಿವೆ. ಎ.ಎನ್. ಮೂರ್ತಿರಾವ್, ಗೋಪಾಲಕೃಷ್ಣ ಅಡಿಗ,
ಕುಶಿ ಹರಿದಾಸ ಭಟ್ಟ, ಎಚ್ಚೆಸ್ಕೆ, ಯು. ಆರ್. ಅನಂತಮೂರ್ತಿ, ಜೆ. ಆರ್. ಲಕ್ಷ್ಮಣರಾವ್, ಕೆ.ಬಿ. ಸದಾನಂದ, ಹಾ.ಬ. ದೇವರಾಜ ಸರ್ಕಾರ್ ಮೊದಲಾದವರು.
ಇಂಥ ಒಂದು ಬೈಠಕ್ಕಿನಲ್ಲಿ ಹೊಸತೊಂದು ಹೊಳಹು ಮಿನುಗಿತು. ಅದೇನೆಂಬುದು ಮುಂದಿನ ಅಧ್ಯಾಯದ ವಸ್ತು.
ಬೀರಿತು ಪರಿಮಳ ‘ಪಾವೆಂ ಕಸ್ತೂರಿ’
ಅಧ್ಯಾಯ ೭೯ (ಮೂಲದಲ್ಲಿ ೫೧)
೧೯೭೬ರ ಕೊನೆಯ ಪಾದದಲ್ಲಿ ಆ ವರ್ಷದ ‘ಲೇಖಕ್’ ಬೈಠಕ್ಕು.
ಎಂಎಸ್ಐಎಲ್ ನವರ ಬೆಂಗಳೂರು ಕಚೇರಿಯಲ್ಲಿ ಸಂದರ್ಶಕ ಮಂಡಳಿಯ
ನಾವು ಕೆಲವರು - ಗೋಪಾಪಕೃಷ್ಣ
ಅಡಿಗ, ಎಚ್ಚೆಸ್ಕೆ, ಯು. ಆರ್. ಅನಂತಮೂರ್ತಿ, ಕುಶಿ ಹರಿದಾಸ ಭಟ್ಟ
ಮೊದಲಾದವರು - ವಿರಾಮದ ವೇಳೆ
ಹರಟೆ ಹೊಡೆಯುತ್ತಿದ್ದೆವು. ಆಗ ಅಡಿಗರು ಪಾವೆಂ ಎಂಬ ಮಾನವ ಬೃಹಸ್ಪತಿಯ ಪ್ರಸ್ತಾವನೆ
ಎತ್ತಿದರು.
ಪಾಡಿಗಾರು ವೆಂಕಟರಮಣ ಆಚಾರ್ಯರ ಅಸಂಖ್ಯ ‘ಕಾವ್ಯಾವತಾರಗಳ’ ಪೈಕಿ ಪಾವೆಂ ಪ್ರಸಿದ್ಧವಾದದ್ದು. ಸ್ವಂತ ಪ್ರತಿಭೆ, ಪರಿಶ್ರಮ ಮತ್ತು ವಿಶಾಲದೃಷ್ಟಿಗಳ ಫಲವಾಗಿ ಬಹುಶ್ರುತತ್ವ ಗಳಿಸಿದ ವೃತ್ತಿ ಪತ್ರಿಕೋದ್ಯಮಿ
ಇವರು. ಮೊದಲು ‘ಕರ್ಮವೀರ’ದ ಸಂಪಾದಕ ವಿಭಾಗದಲ್ಲು ದುಡಿದು, ಬೆಳೆದು,
ಮುಂದೆ ‘ಕಸ್ತೂರಿ’ಯ ಸ್ಥಾಪಕ ಸಂಪಾದಕರಾಗಿ ಅದಕ್ಕೆ
ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟ ಪತ್ರಿಕಾ ಪ್ರಪಂಚದ ಭೀಷ್ಮಾಚಾರ್ಯರಿವರು. ಪ್ರಪಂಚದಾದ್ಯಂತ
ನವಲೇಖಕರನ್ನು ಪತ್ತೆ ಹಚ್ಚಿ ಪುರಸ್ಕರಿಸಿ ಸಿದ್ಧ ಪ್ರಸಿದ್ಧ ಲೇಖಕರನ್ನಾಗಿ ದ್ರವ್ಯಾಂತರಿಸಿದ
(transmute) ಸ್ಪರ್ಶ ಮಣಿಯೂ
ಹೌದು. ಇಂಥವರ ಸಾಲಿಗೆ ನನ್ನನ್ನೂ ಹೇಗೆ ಇವರು ತಮ್ಮ ಪ್ರೀತಿಯ ಬಲದಿಂದ ಸೇರಿಸಿದರೆಂಬ
ಸಂಗತಿಯನ್ನು ಹಿಂದೆ (ಅಧ್ಯಾಯ ೨೨) ಹೇಳಿದ್ದೇನೆ.
ಇಸವಿ ೨೦೦೧ರಲ್ಲಿ ಪ್ರಕಟವಾದ ‘ವಿಜ್ಞಾನ ಸಪ್ತರ್ಷಿಗಳು’ ಎಂಬ ನನ್ನ ಪುಸ್ತಕವನ್ನು
ಇವರಿಗೆ ಅರ್ಪಿಸುತ್ತ ಬರೆದೆ: “ನನ್ನ ಕಾಲೇಜ್ ದಿನಗಳಂದು (೧೯೪೨-೪೭) ಎಲ್ಲ ಹುಡುಗರಂತೆ ನಾನಾದರೂ ಮೊದಲು ದೊಂಬರಲಾಗ ಹೊಡೆದದ್ದು
ಕಗ್ಗ ಗೀಚಿಕೆಯ ಮತ್ತು ಬರಿಸುವ ದೊರಗು ನೆಲದಲ್ಲಿ. ಮುಂದೆ ಹುಚ್ಚಾಟವಾಡಿದ್ದು
ಸಣ್ಣ ಕತೆಗಳ ಮಾಯಾಲೋಕದಲ್ಲಿ. ಆದರೆ ಶೀಘ್ರದಲ್ಲೇ ಭ್ರಮನಿಸರಸನಗೊಂಡು ಆ
ಕ್ಷೇತ್ರಗಳಿಂದ ಕಂಬಿಕಿತ್ತು ಜನಪ್ರಿಯ ವಿಜ್ಞಾನ ವಾಙ್ಮಯ ರಚನೆಯ ಸಾಹಸಕ್ಕೆ ಕೈ ಹಾಕಿದೆ
(೧೯೪೯).
ನನ್ನ ಮೊದಲ ಲೇಖನವೇ - ಆ ಹಿಂದಿನ ಕವನ ಕತೆಗಳಂತಲ್ಲದೆ, ‘ಕರ್ಮವೀರ’ದಲ್ಲಿ ಪ್ರಕಟಣೆಗೆ ಸ್ವೀಕೃತವಾಗಿತ್ತು. ಎಲ್ಲಕ್ಕೂ
ಮಿಗಿಲಾಗಿ ಖುದ್ದು ಸಂಪಾದಕರೇ ನನಗೆ ಕಾಗದ ಬರೆದು, ಮುಂದೊಂದು ದಿನ ನನ್ನನ್ನು
ಭೇಟಿಯಾಗಿ, ನನ್ನ ಪ್ರಯೋಗದ ನಾವೀನ್ಯವನ್ನು ಮೆಚ್ಚಿದರು. ಈ ಅಪ್ರಸಿದ್ಧ ಮತ್ತು ಅನಾಮಧೇಯ ತರುಣನನ್ನು (ವಯಸ್ಸು ೨೩)
ಹೀಗೆ ಬೆನ್ನು ತಟ್ಟಿ ಹುರಿದುಂಬಿಸಿದವರು ಕನ್ನಡದ ಹಿರಿಯ ಪತ್ರಿಕೋದ್ಯಮಿ,
ಪ್ರಖರ ವಿಚಾರಮತಿ ಮತ್ತು ಪ್ರಸಿದ್ಧ ಲೇಖಕ ಪಾ.ವೆಂ ಆಚಾರ್ಯರು
(೧೯೧೫-೯೧). ಸ್ವತಃ ಉತ್ತಮ ಕವಿ
- ಲೇಖಕರೂ ನವ ಪ್ರತಿಭೆಗಳಿಗೆ ಪ್ರೋತ್ಸಾಹವಿತ್ತು ಮಾರ್ಗದರ್ಶನ ಮಾಡಿ ಯುವ ಲೇಖಕರ
ಪೀಳಿಗೆಯ ನಿರ್ಮಾಪಕರೂ ಆಗಿದ್ದ ಶ್ರೀಯುತರಿಗೆ ಈ ಪುಸ್ತಕವನ್ನು ಗೌರವಸಹಿತವಾಗಿ ಅರ್ಪಿಸುವುದು ನನಗೆ
ಬಲು ಪ್ರಿಯವಾದ ಕೆಲಸ.”
ಪಾವೆಂ ಪೆಸರ್ ಕೇಳಿ ಬಲ್ಲೆಯೇಂ? ಪರಿಶುದ್ಧ
ಜೀವನಕೆ ತಾಣವನ್, ಕರ್ತವ್ಯ ಮೇರವನ್,
ಸೇವಾಪರಾಯಣನ್, ಪರಗುಣೋತ್ತೇಜಕನ್
ಭಾವಪ್ರಪಂಚದಾ ಮಾಂತ್ರಿಕನ್ ಅತ್ರಿಸೂನು
ಈಗ ಬೈಠಕ್ಕಿಗೆ ಮರಳೋಣ. ಅಡಿಗರು ಮುಂದುವರಿಸಿದರು,
“ಈಚೆಗೆ ಅವರನ್ನು ನೋಡಿದ್ದೆ. ತುರ್ತು ಶಸ್ತ್ರಕ್ರಿಯೆಯಾಗಿ
ಸಾವು-ಬದುಕು ನಡುವೆ ಹೋರಾಟ ನಡೆಸಿ ಜೀವಚ್ಛವವಾಗಿ ಮರಳಿದ್ದಾರೆ.
ಆದರೆ ಅದೇ ಹಿಂದಿನ ತೀಕ್ಷ್ಣ ಬುದ್ಧಿಮತ್ತೆ, ಸುಹಾಸಪ್ರಜ್ಞೆ
ಮತ್ತು ಸದಾಶಯ ಅವರಲ್ಲಿ ಜೀವಂತವಾಗಿವೆ. ಆರ್ಥಿಕವಾಗಿಯೂ ಸೋತು ಹೋಗಿರುವಂತೆ
ತೋರುತ್ತದೆ. ಇಂತಿದ್ದರೂ ಆತಿಥ್ಯ ಉಪಚಾರಗಳಲ್ಲಿ ಎಂದಿನಂತೆ ‘ವಿನಾ ದೈನ್ಯೇನ ಜೀವನಂ’ ನಡೆಸುತ್ತಿರುವ
ಆತ್ಮ ಪ್ರತ್ಯಯವಂತ. ಇಡೀ ಸಮಾಜ ಅವರ ಜೊತೆಗಿದೆ, ಅವರ ಬಹುಮುಖ ಸೇವೆಯನ್ನು ಮೆಚ್ಚಿ ಅವರಿಗೆ ಕೃತಜ್ಞವಾಗಿದೆ ಎಂಬ ಭರವಸೆಯನ್ನು ಅವರಿಗೆ ನಾವೀಗ
ಸಾರ್ವಜನಿಕವಾಗಿ ವ್ಯಕ್ತಪಡಿಸುವುದು ಜರೂರಿನ ಅಗತ್ಯ. ಏನು ಮತ್ತು ಹೇಗೆ
ಮಾಡೋಣ?”
ನಮ್ಮ ಸಮಿತಿಯ ಯುವಮಿತ್ರ ಮತ್ತು
ಕಾರ್ಯದಕ್ಷ ಜಯದೇವ ಹೇಳಿದರು, “ನಾನವರನ್ನು ನೋಡಿಲ್ಲ. ಆದರೆ ಅವರ
ವಿವಿಧ ಸಾಹಿತ್ಯ ಮುಖಗಳ ನಿಕಟ ಪರಿಚಯ ನನಗುಂಟು. ಅವರಿಗೊಂದು ಸಾರ್ವಜನಿಕ
ಸನ್ಮಾನ ಏರ್ಪಡಿಸೋಣ, ನಮ್ಮ ಸಂಸ್ಥೆಯ ಮತ್ತು ವೈಯಕ್ತಿಕವಾಗಿ ನನ್ನ ಕಡೆಯಿಂದ
ಪೂರ್ಣ ಸಹಕಾರ ಆಶ್ವಾಸಿಸುತ್ತೇನೆ. ನಿರ್ವಹಣೆಯ ಬಗೆಯನ್ನು ನಮ್ಮ ಜಿಟಿಎನ್ಸರ್ ವಿವರಿಸಬೇಕು.”
‘ಕನ್ನಡದಲಿ ಹರ
ತಿರಿಯುವನು’ - ಇದು ನನ್ನ ಬದುಕಿನ
ಒಂದು ಮಂತ್ರ. ನಾನೆಂದೆ, “ಸನ್ಮಾನ, ಪ್ರಶಸ್ತಿ,
ಪ್ರಚಾರ ಎಲ್ಲ ಸರಿ. ಆದರೆ ಮುಖ್ಯವಾಗಿ ಅವರಿಗೊಂದು ಹಿರಿ
ಸಂಚಿಯನ್ನು ಒಪ್ಪಿಸುವುದು ನಮ್ಮ ಧ್ಯೇಯವೆಂದಿಟ್ಟುಕೊಂಡು ಮುನ್ನಡೆಯೋಣ. ಖುದ್ದು ಅಡಿಗರ ಅಧ್ಯಕ್ಷತೆಯಲ್ಲಿ ‘ಪಾವೆಂ ಸನ್ಮಾನ ಸಮಿತಿ’ಯನ್ನು ಸ್ಥಾಪಿಸಿ ಮುನ್ನಡೆಯೋಣ.” ಮುಂದೆ ನಡೆದ
ಚರ್ಚೆಯ ಫಲಶ್ರುತಿಯಾಗಿ ನಾನು ಆ ಸಮಿತಿಯ ಸಂಘಟನ-ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯಾಗಿಯೂ ಜಯದೇವ ಜಾಹೀರಾತು-ಕಾರ್ಯದರ್ಶಿಯಾಗಿಯೂ
ಇತರ ಪಾವೆಂ-ಅಭಿಮಾನೀಗಣ್ಯರು ಸದಸ್ಯರಾಗಿಯೂ ಇರಬೇಕೆಂದು ತೀರ್ಮಾನಿಸಲಾಯಿತು.
‘ನಾಮದ ಬಲ’ ಎಂದರೇನೆಂಬುದು
ಆಗ ನಮಗೆ ಸುವೇದ್ಯವಾಯಿತು. ಪಾವೆಂ - ನಾಮದ ಸುತ್ತಲಿನ
ಪರಿವೇಶ ಅಂಥ ಉಜ್ವಲತೆ ಪಡೆದಿತ್ತು ಎಂಬುದರ ಅರಿವು ನಮಗಾದದ್ದು ಅಕ್ಷರಶಃ ಪ್ರಪಂಚಾದ್ಯಂತ ನಮಗೆ ಲಭಿಸಿದ
ಬೆಂಬಲದಿಂದ. ದೇಣಿಗೆ ಮತ್ತು ‘ಪಾವೆಂ ಕಸ್ತೂರಿ’ ಸವಿಸಂಚಿಕೆಯಲ್ಲಿ
ಜಾಹೀರಾತು ಶುಲ್ಕ ಈ ಮೂಲಗಳಿಂದ ಸಂಗ್ರಹಿಸಿದ ಸುಮಾರು ರೂ ೨೭,೦೦೦ವನ್ನು
ದಿನಾಂಕ ೧೦-೯-೧೯೭೭ರಂದು ಮೈಸೂರಿನಲ್ಲಿ ಅವರಿಗೆ
ಸಾರ್ವಜನಿಕವಾಗಿ ಅರ್ಪಿಸಿ ಕೃತಕೃತ್ಯರಾದೆವು.
ಇನ್ನು ‘ಲೇಖಕ್’ ಕತೆ.
೧೯೯೨ರ ತನಕವೂ ಎಂಎಸ್‌ಐಎಲ್ ವಾರ್ಷಿಕ ‘ಲೇಖಕ್’ ಪರೀಕ್ಷೆ ನನ್ನ
ಹಿರಿತನದಲ್ಲೇ ಮುಂದುವರಿಯಿತು. ಅಷ್ಟರಲ್ಲಿ ಸಂಸ್ಥೆಯೂ ನಾನೂ ಸ್ವತಂತ್ರವಾಗಿ
ಆದರೆ ವಿಭಿನ್ನ ಕಾರಣಗಳಿಗಾಗಿ ಈ ಶೈಕ್ಷಣಿಕ ವ್ಯವಹಾರವನ್ನು ನಿಲ್ಲಿಸುವ ತೀರ್ಮಾನಕ್ಕೆ ಬಂದಿದ್ದೆವು.
ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಬದಲಾವಣೆಗಳಾಗಿ ನೂತನ ವ್ಯವಸ್ಥಾಪನೆ ಈ ಪರೀಕ್ಷೆಯನ್ನು
ಕೈದು ಮಾಡಿತು. ಇತ್ತ ನಾನು ಈ ಪುನರಾವರ್ತನೆ ‘ಡ್ರಿಲ್’ನಿಂದ ಸೋತಿದ್ದೆ: ಎಲ್ಲಿ ಕೆಲಸ
ಸಿದ್ಧ ವಿಧಿನಿಯಮಗಳ ಪುನರಾವರ್ತನೆ ಆಗುವುದೋ ಅಲ್ಲಿ ಸೃಜನಶೀಲತೆ ಎಂಬ ಒರತೆ ಇಲ್ಲದ ಸಾಹಸ ಪ್ರದರ್ಶನ
ಕೇವಲ ಶುಷ್ಕ ಆಗುತ್ತದೆ.
ಅಂದು ಜ್ಞಾನದ ನವಕ್ಷೇತ್ರಗಳ ಶೋಧನೆ, ಯುವಪ್ರತಿಭೆಗಳ
ಜೊತೆಗಿನ ಒಡನಾಟ ಮತ್ತು ಕರ್ನಾಟಕದ ವಿವಿಧ ಪ್ರೇಕ್ಷಣೀಯ ತಾಣಗಳಲ್ಲಿಯ ವಾಸ್ತವ್ಯ ಎಲ್ಲವೂ ಒದಗಿಸಿದ
ಅನುಭವ ಮಧುರ, ಅದರ ನೆನಪು ಮಧುರತರ. ಕೀಟ್ಸ್ ಕವಿಯ
heard
melodies are sweet, but those unheard are sweeter ಎಂಬ ಸಾಲುಗಳನ್ನು ಡಿವಿಜಿಯವರು
ಈ ಮುಂನಂತೆ ಭಾವಾನುವಾದಿಸಿದ್ದಾರೆ: “ಶ್ರುತಗಾನಮಭಿರಾಮಮಶ್ರುತಗಾನಮಭಿರಾಮತರಂ.”
ನಾವು ಮಾಡಿಸಿದ ಒಂದು ಮದುವೆ
ಅಧ್ಯಾಯ ೮೦ (ಮೂಲದಲ್ಲಿ ೫೨)
ಆ ಶುಭ ಪ್ರಾತಃಕಾಲ ಅಧ್ಯಯನ ಸಂಸ್ಥೆಯಲ್ಲಿಯ
ನನ್ನ ಕೊಠಡಿಗೊಬ್ಬ ವ್ಯಕ್ತಿ ಬಂದರು. ಹೆಚ್ಚುಕಡಿಮೆ ನನ್ನದೇ ವಯಸ್ಸು. ಅವರು ಕೊಡವರೆಂಬುದು (ಕೊಡಗಿನ ಮೂಲನಿವಾಸಿಗಳನ್ನು ಕೊಡವರೆಂದೂ
ಉಳಿದವರನ್ನು, ಉದಾಹರಣೆಗೆ ನನ್ನಂಥವರನ್ನು, ಕೊಡಗರೆಂದೂ
ಹೇಳುವುದು ವಾಡಿಕೆ) ಅವರ ಭವ್ಯ ಬಾಹ್ಯ ಸ್ವರೂಪ ಎದ್ದು ತೋರಿಸುತ್ತಿತ್ತು.
ನನಗವರು ಸಾಷ್ಟಾಂಗ ನಮಸ್ಕಾರ ಅರ್ಪಿಸಿದಾಗ ತುಂಬ ಮುಜುಗರವಾಯಿತು. ಕೊಡವರ ಸಂಪ್ರದಾಯದಲ್ಲಿ ಗುರು ಹಿರಿಯರಿಗೂ ಬ್ರಾಹ್ಮಣರಿಗೂ ಹೀಗೆ ಗೌರವ ಸಲ್ಲಿಸುತ್ತಿದ್ದುದು
ವಾಡಿಕೆ. ಎರಡೂ ಅಲ್ಲದ ನನಗೇಕೆ ಈ ಗೌರವ? (ಹುಟ್ಟಿನ
ಮತ್ತು/ಅಥವಾ ವೃತ್ತಿಯ ಆಕಸ್ಮಿಕತೆಯಿಂದ ವ್ಯಕ್ತಿಗೆ ಈ ಹಿರಿಮೆ ಪ್ರಾಪ್ತವಾಗುವುದಿಲ್ಲ.)
ಆ ಗಳಿಗೆ ಅವರು ಯಾರೆಂಬುದು ಹೊಳೆಯಿತು. ಮನಸ್ಸು ಮಡಿಕೇರಿ ದಿನಗಳಿಗೆ ಚಿಮ್ಮಿತು.
ಅವರ ಹೆಸರು ಅಪ್ಪಯ್ಯ, [ವಿಸೂ: ಈ ಪ್ರಸಂಗದ ಎಲ್ಲ ಹೆಸರುಗಳನ್ನೂ ಬದಲಿಸಲಾಗಿದೆ - ಅವ]
ನಮ್ಮ ಮನೆ ಎದುರಿನ ಸಾಲಿನಲ್ಲಿ ಅವರ ಸ್ವಂತ ಬಿಡಾರ, ಅವರ
ಹೆಂಡತಿಗೂ ನನ್ನ ಹೆಂಡತಿಗೂ ನಡುವೆ ಗಾಢ ವಿಶ್ವಾಸ ಮೈದಳೆದಿತ್ತು. ನಮ್ಮ
ಮಕ್ಕಳು ಒಟ್ಟಿಗೆ ಆಡಿ ಓಡಿ ಓದಿ ಬೆಳೆದಿದ್ದರು ಕೂಡ. ವೃತ್ತಿಯಲ್ಲಿ ಅಪ್ಪಯ್ಯ
ಬಾಡಿಗೆ ಕಾರ್ ಮಾಲಿಕ ಮತ್ತ ಚಾಲಕ. ನನ್ನ ಸಂಸಾರ ಮಡಿಕೇರಿ ಬಿಟ್ಟ
(೧೯೬೩) ಬಳಿಕ ನಮ್ಮ ಪತ್ನಿಯರ ನಡುವೆ ಆಗ ಈಗ ಪತ್ರ ವ್ಯವಹಾರ
ನಡೆಯುತ್ತಿತ್ತು. ಅವರು ಆರ್ಥಿಕವಾಗಿ ಸಂಕಷ್ಟಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರೆಂದು
ತಿಳಿದು ನೊಂದಿದ್ದೆ.
ನಾನೇ ಮಾತು ಶುರುಮಾಡಿದೆ, “ತೀರ ಅನಿರೀಕ್ಷಿತ
ನಿಮ್ಮ ಭೇಟಿ. ನೀವೆಲ್ಲರೂ ಆರೋಗ್ಯವೇ? ಮೈಸೂರಿಗೆ
ಯಾವಾಗ ಬಂದಿರಿ? ಏನು ವಿಶೇಷ?”
“ಬಹಳ ಕಷ್ಟದಲ್ಲಿದ್ದೇನೆ
ಸ್ವಾಮಿ. ಮನೆ ಮಾರಿದೆ. ಟ್ಯಾಕ್ಸಿ ಮಾರಿ ಬಾಡಿಗೆ
ಲಾರಿ ಕೊಂಡು ಓಡಿಸಿದೆ. ಅಲ್ಲಿಯೂ ನಷ್ಟವೇ. ಮಕ್ಕಳೆಲ್ಲ
ದೊಡ್ಡವರಾಗಿದ್ದಾರೆ. ಅವರ ಶಿಕ್ಷಣ ಮುಂದುವರಿಯಲೇಬೇಕು. ದಿಕ್ಕು ತೋಚಲಿಲ್ಲ. ಹೆಂಡತಿ ಹೇಳಿದಳು ‘ನಂಗಡ ದೇವ’ ಸ್ವಾಮಿಯವರನ್ನು ನೋಡಿ ಬನ್ನಿ ಎಂದು. ಹಾಗೆ ಬಂದಿದ್ದೇನೆ. ನೀವು ನಮ್ಮ ದೇವರು, ನೀವೇ ಕಾಪಾಡಬೇಕು.”
“ನಾನು ದೇವರಲ್ಲ,
ಕೇವಲ ಸಾಮಾನ್ಯ ಮನುಷ್ಯ. ಇದು ಹಾಗಿರಲಿ. ಈಗ ನನ್ನಿಂದ ನೀವೇನು ಸಹಾಯ ನಿರೀಕ್ಷಿಸುತ್ತೀರಿ?”
“ಕೆಸ್ಆರ್ಟಿಸಿಯಲ್ಲಿ ಒಂದು ಡ್ರೈವರ್ ಕೆಲಸ ಕೊಡಿಸುವ ಕೃಪೆ ಮಾಡಬೇಕು.
‘ನಂಗಡ ದೇವ’ರಿಗೆ ಇದು ಖಂಡಿತ ಸುಲಭ.”
ಅವರ ಮುಗ್ಧ ನಂಬಿಕೆ ಅರ್ಥವಾಯಿತು. ಆದರೆ ಆ ಡ್ರೈವರ್
ಹುದ್ದೆ ದೊರಕಿಸಲು ನಾನೇನು ರಾಜಕಾರಣಿಯೇ, ಕುಬೇರನೇ, ಉಚ್ಚ ಅಧಿಕಾರಿಯೇ, ಪ್ರಭಾವೀ ವ್ಯಕ್ತಿಯೇ? ಇನ್ನು ಈ ವ್ಯವಹಾರ ಜಗತ್ತಿನಲ್ಲಿ ಲಂಚದ ಆಟ ಏನೆಂಬುದು ಓದಿ ಕೇಳಿ ಗೊತ್ತಿತ್ತು.
ಇಂಥ ಕರಾಳ ಪರಿಸರದಲ್ಲಿ ಈ ಮುಗ್ಧನಿಗೆ ಕೆಸ್ಆರ್ಟಿಸಿಯಲ್ಲಿ ಹುದ್ದೆ!? ಅದೂ ನನ್ನಂಥ ಬೋಳೆ ಮನುಷ್ಯನಿಂದ! ವಸ್ತು ಸ್ಥಿತಿಯನ್ನು ಅವರಿಗೆ ವಿವರಿಸಿ
ನನ್ನ ಪೂರ್ಣ ಅಸಹಾಯಕತೆಯನ್ನು ಸೂಚಿಸಿದೆ. ಅವರ ಪಲ್ಲವಿ ಒಂದೇ,
“ನೀವು ನಮ್ಮ ದೇವರು. ನಿಮ್ಮಿಂದ ಮಾತ್ರ ಇದು ಸಾಧ್ಯ.”
ಅವರ ದೈನ್ಯ ನನ್ನಲ್ಲಿ ಹೊಸ ಹೊಳಹನ್ನು
ಮಿಂಚಿಸಿತು, ದೂರವಾಣಿ ಎತ್ತಿಕೊಂಡೆ, ಮೈಸೂರಿನ ಕೆಎಸ್ಆರ್ಟಿಸಿ ಮುಖ್ಯಸ್ಥರಿಗೆ ಕರೆಕೊಟ್ಟೆ. ಅವರ ಪ್ರತಿಸ್ಪಂದನ ರಿಂಗಣಿಸಿದಾಗ ಮಾಮೂಲಿನಂತೆ ನನ್ನ ಪ್ರವರ ಹೇಳಿದೆ, “ನಮಸ್ಕಾರ
ಸ್ವಾಮಿ! ನಾನು ಜಿ.ಟಿ.ನಾರಾಯಣರಾವ್ ಮಾತಾಡುತ್ತಿದ್ದೇನೆ....”
“ಸಾರ್! ಏನು ಆಶ್ಚರ್ಯ, ಎಷ್ಟು ಸಂತೋಷ! ಸಾರ್! ನೀವು ನನ್ನ ವಿಜ್ಞಾನಗುರುಗಳು
ಮತ್ತು ಎನ್ಸಿಸಿ ಆಪಿ಼಼ಸರ್ ಗ್ಯಾಸ್ ಕಾಲೇಜಿನಲ್ಲಿ. ನನ್ನ ಹೆಸರು ಭೀಮಪ್ಪ ನಾಯಕ. ನನ್ನಿಂದೇನಾಗಬೇಕು ಸಾರ್?”
(ಅಧ್ಯಾಯ ೩೦ ನೋಡಿ)
ನನ್ನ ನಾಸ್ತಿಕ ಮನಸ್ಸು ಅಣಕಿಸಿತು, “ಈಗಲಾದರೂ ದೇವರಿದ್ದಾನೆಂದು ಒಪ್ಪುವೆಯಾ?”
“ಅಣ್ಣಾ ಭೀಮಪ್ಪ ನಾಯಕ! ನಿಮ್ಮಿಂದಲೇ
ಈಗ ಆಗಬೇಕಾದ ಸಹಾಯವಿದು. ನನ್ನ ಒಬ್ಬ ಹಳೆಯ ಮಿತ್ರನನ್ನು ನಿಮ್ಮಲ್ಲಿಗೆ
ಕಳಿಸುತ್ತಿದ್ದೇನೆ. ಅವರಿಗೆ ಕೆಎಸ್ಆರ್ಟಿಸಿಯಲ್ಲಿ ಡ್ರೈವರ್ ಕೆಲಸ ದಯವಿಟ್ಟು ಕೊಡಬೇಕು. ಲೈಸೆನ್ಸ್ ವಗೈರೆ
ಅಗತ್ಯಗಳು ಅವರ ಬಳಿ ಇವೆ.”
“ಬರಲಿ ಸಾರ್. ನಿಮ್ಮ ಆಜ್ಞೆಯನ್ನು
ಪಾಲಿಸುತ್ತೇನೆ.”
ಅದೇ ಸಂಜೆ ಅಪ್ಪಯ್ಯ ಹುದ್ದೆ ಆದೇಶ ಹಿಡಿದು ನಮ್ಮ ಮನೆಗೆ ಬಂದರು.
ಅವರಿಗೆ ಶುಭವಿದಾಯ ಹೇಳಿ ನನ್ನ ಎನ್ಸಿಸಿ ಸಮವಸ್ತ್ರಗಳನ್ನಿತ್ತು
ಕಳಿಸಿದೆ.
ಕೆಲವು ವರ್ಷಗಳು ಸಂದುವು. ನಮ್ಮ ಹೆಂಡಿರ
ನಡುವೆ ಪತ್ರ ವ್ಯವಹಾರ ಮುಂದುವರಿದಿತ್ತು. ಈ ಮಧ್ಯೆ ಅಪ್ಪಯ್ಯನವರ ಆರ್ಥಿಕ
ಸ್ಥಿತಿ ಸುಧಾರಿಸಿದ್ದರಿಂದ ಅವರು ಡ್ರೈವರ್ ಕೆಲಸ ಬಿಟ್ಟು ಕೊಡಗಿನಲ್ಲಿಯ ತಮ್ಮ ಕಾಪಿ಼ ತೋಟದಲ್ಲಿ
ನೆಲಸಿದರೆಂದೂ ಮಕ್ಕಳು ಬೆಂಗಳೂರಿನಲ್ಲಿ ಓದುತ್ತಿರುವರೆಂದೂ ತಿಳಿದು ತುಂಬ ಸಂತೋಷವಾಯಿತು.
ಒಮ್ಮೆ ರಜೆಯಲ್ಲಿ ಮಡಿಕೇರಿಗೆ
ಹೋಗಿದ್ದೆ. ಅಪ್ಪಯ್ಯನವರ ಕತೆಯನ್ನು ತಮ್ಮನಿಗೆ (ಚಿಕ್ಕಪ್ಪನ ಮಗ ನಾರಾಯಣ)
ಹೇಳಿದೆ. “ಇಲ್ಲಿಂದ ಅವರ ತೋಟಕ್ಕೆ ಹೆಚ್ಚೆಂದರೆ ೧೫ ಮೈಲು.
ನಿಮಗೆ ಉಮೇದು ಇದ್ದರೆ ಈಗಲೇ ಅಲ್ಲಿಗೆ ನನ್ನ ಮೋಟರ್ ಬೈಕಿನಲ್ಲಿ ಹೋಗಿ ಬರೋಣ.
ಈಗಿನ್ನೂ ೧೦ ಗಂಟೆ ಮಾತ್ರ. ಊಟದ ಹೊತ್ತಿಗೆ ವಾಪಾಸ್.”
ಹೋದೆವು. ಹಳ್ಳಿಯ ಹಸುರಿನ ಹರವಿನಲ್ಲಿ ಹುದುಗಿದ್ದ ಅವರ
ತೋಟವನ್ನು ಪತ್ತೆ ಹಚ್ಚಿ ಉಬ್ಬಲು (ಹಳ್ಳಿ ಮನೆಗಳಲ್ಲಿಯ ಗೇಟ್)
ಕಳಚಿ ಆತಂಕದಿಂದ ಒಳಗೆ ಕಾಲಿಟ್ಟೆವು: ಕೊಡವರ ಹಳ್ಳಿಮನೆಗಳಲ್ಲಿ
ನಾಯಿಗಳ ದಂಡೇ ಇರುವುದು ವಾಡಿಕೆ. ಜೊತೆಗೆ ಎಮ್ಮೆ, ದನ, ಹಂದಿ, ಕೋಳಿಗಳ ಹಿಂಡು ಕೂಡ.
ಆದರೆ ಆಶ್ಚರ್ಯ. ಈ ನಿರ್ಜನ ನೀರವ ನಿಸರ್ಗತಾಣ ಯಾರೋ ಪುಳಿಚಾರಿಗಳ
(ಬ್ರಾಹ್ಮಣರು) ಆಶ್ರಮದಂತಿತ್ತು: ತೆರೆದ ಕದ, ಅಲಂಕೃತ ತುಳಸೀಕಟ್ಟೆ, ರಂಗವಲ್ಲಿ
ಹಾಕಿದ ಕಾಲ್ದಾರಿ, ತುಂಬೆ, ದಾಸವಾಳ,
ಅಶ್ವತ್ಥಗಳ ಸಾಲು ಇತ್ಯಾದಿ! ನಾವು ತಪ್ಪು ಮನೆ ಹೊಕ್ಕಿರುವೆವೇ?
ಅಷ್ಟರಲ್ಲೇ ಮನೆಯೊಳಗಿಂದ ಆಪಾದಮಸ್ತಕ ಕೊಡವ ಶ್ವೇತವಸನಧಾರಿ ಮಹಿಳೆಯೊಬ್ಬರು ಹೊರಬಂದರು,
ಬೆರಗುಗಣ್ಣುಗಳಿಂದ ನಮ್ಮನ್ನು ದಿಟ್ಟಿಸುತ್ತ “ನಂಗಡ ಸಾಮಿ
ಬಾತು” (ನಮ್ಮ ಸ್ವಾಮಿ ಬಂದರು) ಎಂದು ಆನಂದೋದ್ಗಾರವೆತ್ತುತ್ತ
ಅಲ್ಲೇ ನಮಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಇತ್ತ ತೋಟಕ್ಕೆ ಹೋಗಿದ್ದ ಅಪ್ಪಯ್ಯ
ತಮ್ಮ ಪೂಜೆಯ ಉಡುಪಿನಲ್ಲೇ ಅಲ್ಲಿಗೆ ಬಂದು ಸೇರಿಕೊಂಡರು. “ದೇವ ಬಂದ ನಮ್ಮ
ಸ್ವಾಮಿ ಬಂದ ದೇವರ ದೇವ ಶಿಖಾಮಣಿ ಬಂದನೋ!” ಎಂಬ ಪುರಂದರವಾಣಿಯಲ್ಲಿಯ ಭಕ್ತಿ
ನಿಷ್ಠೆ ಆ ದಂಪತಿಗಳಲ್ಲಿ ಕಂಡು ಪುಳಕಿತರಾದೆವು.
ಪರಸ್ಪರ ಯೋಗಕ್ಷೇಮ ವಿಚಾರಿಸಿದನಂತರ ನಾನು ಕೇಳಿದೆ,
“ಏನು ವಿಶೇಷವಿಂದು? ಮಡಿಯುಟ್ಟು ಪೂಜೆಗೆ ತಯಾರಾಗುತ್ತಿದ್ದೀರಿ?”
“ಇವತ್ತು ಶಿವರಾತ್ರಿ ಸ್ವಾಮಿ. ಸಾಕ್ಷಾತ್
ಶಿವ, ಸುಬ್ರಹ್ಮಣ್ಯರಂತೆ ನೀವಿಂದು ನಮ್ಮ ಮನೆಗೆ ಬಂದಿದ್ದೀರಿ.
ಈ ಮಧ್ಯಾಹ್ನದ ಫಲಾಹಾರ ನಮ್ಮಲ್ಲೇ ಸ್ವೀಕರಿಸಬೇಕು. ಮಡಿಕೇರಿಯಲ್ಲಿ
ನಿಮ್ಮ ಸಂಪರ್ಕ ಬಂದಂದಿನಿಂದ ನಾವೆಲ್ಲರೂ ಮಾಂಸಾಹಾರ ವರ್ಜಿಸಿ ಸಾತ್ತ್ವಿಕ ಜೀವನ ನಡೆಸುತ್ತಿದ್ದೇವೆ.”
“ಆಹಾರಕ್ರಮ ಅಭ್ಯಾಸದಿಂದ ಬರುತ್ತದೆ. ಇದರಲ್ಲಿ ಸಾತ್ತ್ವಿಕ ತಾಮಸಿಕ ಎಂಬ ತಾರತಮ್ಯ ಸಲ್ಲ. ಸಂಸ್ಕಾರದಿಂದ
ಸಾತ್ತ್ವಿಕತೆ ಮೊಳೆಯುತ್ತದೆ. ನಿಮ್ಮ ಸಂಸ್ಕಾರ ನಿಜಕ್ಕೂ ದೊಡ್ಡದು.”
ಇಲ್ಲಿಯ ವಿಪರ್ಯಾಸ ನೋಡಿ: ಹುಟ್ಟಾ
ಬ್ರಾಹ್ಮಣರಾದ ಮತ್ತು ಅದೇ ಸಂಪ್ರದಾಯದಲ್ಲಿ ಬೆಳೆದವರಾದ ನಮಗೆ ಅಂದು ಶಿವರಾತ್ರಿಯೆಂಬ ಸರಳ ಸತ್ಯವೂ
ಗೊತ್ತಿರಲಿಲ್ಲ! ಹುಟ್ಟಿನಿಂದ ಬರುವುದಲ್ಲ ಶ್ರೇಷ್ಠತೆ, ಪ್ರಾಮಾಣಿಕ ನಿಸ್ವಾರ್ಥ ಅನುಷ್ಠಾನದಿಂದ ಮಾತ್ರ ಲಭ್ಯ. ಕನಕದಾಸರು
ಹಾಡಿರುವಂತೆ, “ಆತ್ಮ ಯಾವ ಕುಲ, ಜೀವ ಯಾವ ಕುಲ?
ತತ್ತ್ವೇಂದ್ರಿಂiಗಳ ಕುಲ ಪೇಳಿರಯ್ಯ.” ಕೃತಾರ್ಥ ಭಾವದಿಂದ ಮಡಿಕೇರಿಗೆ ಮರಳಿದೆವು. ಮತ್ತೆ ಕೆಲವು ವರ್ಷಗಳು
ಉರುಳಿದುವು.
೧೯೮೦ರ ದಶಕ. ಒಂದು ಮುಂಜಾನೆ
ಅಪ್ಪಯ್ಯನವರಿಂದ (ಕೊಡಗು) ಅಕಸ್ಮಾತ್ತಾಗಿ ದೂರವಾಣಿ
ಕರೆ ಬಂತು, “ಒಂದು ಜಟಿಲ ಸಮಸ್ಯೆಯಲ್ಲಿ ಸಿಲುಕಿದ್ದೇವೆ. ಏನು ಮಾಡಬೇಕು ತಿಳಿಯುತ್ತಿಲ್ಲ. ನಿಮ್ಮನ್ನು ಅರ್ಜೆಂಟಾಗಿ ಬಂದು
ನೋಡಬೇಕಾಗಿದೆ. ಯಾವಾಗ?” ಉದ್ವೇಗದಿಂದ ಅವರ ಧ್ವನಿ
ಕಂಪಿಸುತ್ತಿತ್ತು.
“ನಾಡಿದ್ದು ಶನಿವಾರ ಮುಂಜಾನೆ? ಹೇಗೆ
ಬರುತ್ತೀರಿ?
“೧೦ ಗಂಟೆಗೆ ಮೊದಲೇ ಹಾಜರಾಗುತ್ತೇವೆ. ನಿಮ್ಮ ಆಶೀರ್ವಾದದಿಂದ ಈಗ ನಮಗೆ ಕಾರ್ ಬಂದಿದೆ.” ಸಕಾಲದಲ್ಲಿ
ಅವರಿಬ್ಬರೂ ಬಂದರು. ಹಿಂದಿನ ಸಂಜೆಯೇ ಮೈಸೂರಿಗೆ ಬಂದು ಹೊಟೇಲಿನಲ್ಲಿ ಕೊಠಡಿ
ಹಿಡಿದಿದ್ದರಂತೆ. ಒಂದು ಬಗೆಯ ಉದ್ವಿಗ್ನತೆ, ತುಮುಲತೆ
ಅವರನ್ನು ಬಾಧಿಸುತ್ತಿದ್ದಂತೆ ಭಾಸವಾಯಿತು. “ಏನು ವಿಶೇಷ ಅಪ್ಪಯ್ಯನವರೇ?”
“ನಮ್ಮ ಡಾಲಿ ಇದ್ದಾಳಲ್ಲ ಸ್ವಾಮಿ. ಅವಳದೇನೋ ಲವ್ ಅಧ್ವಾನ. ಮಹಾ ಹಠಮಾರಿ. ಇದು ಬೇಡ, ನಮ್ಮ ಜಾತಿ ಸಂಸ್ಕೃತಿ ಎಲ್ಲ ಕಳೆದುಕೊಂಡು ಮರ್ಯಾದೆಯಿಂದ
ಬಾಳುವುದು ಹೇಗೆ ಎಂದು ಎಷ್ಟು ಪರಿಯಾಗಿ ಹೇಳಿದರೂ ಅವಳು ಅಲುಗಾಡೋದಿಲ್ಲ. ನಮಗಂತೂ ಹುಚ್ಚು ಹಿಡಿದ ಹಾಗಾಗಿದೆ. ನೀವು ನಮ್ಮ ದೇವರು.
ಹೇಗಾದರೂ ಮಾಡಿ ನಮ್ಮನ್ನು ಈ ಹೇಸಿಗೆ ಗೊಸರಿನಿಂದ ಮೇಲೆತ್ತಬೇಕು.”
“ಅದಿರಲಿ. ಈಗ ಅವಳ ವಯಸ್ಸು ಎಷ್ಟು?
ಏನು ಓದಿದ್ದಾಳೆ? ಎಲ್ಲಿ ಕೆಲಸ ಮತ್ತು ವಾಸ?”
“ಇಪ್ಪತ್ತು ದಾಟಿದೆ. ಬಿಎ ಡಿಗ್ರಿ
ಪಾಸಾಗಿ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾಳೆ. ಬಸವನಗುಡಿಯ ಶಾರದಾ ಕುಟೀರದಲ್ಲಿ
ವಾಸ.”
“ಅಂದ ಮೇಲೆ ಅವಳಿಗೆ ಸ್ವತಂತ್ರವಾಗಿ ನಿರ್ಧರಿಸುವ ಹಕ್ಕು ಬಂದಿದೆ.
ಈಗ ಅವಳ ಲವರ್ ಯಾರು? ಅವನೇನಾದರೂ ಹಾಳು ಮೂಳು ಪೋಲಿಯಾದರೆ
ನಾವು ಅವಳಿಗೆ ಸಮಾಧಾನದಲ್ಲಿ ಬುದ್ಧಿ ಹೇಳಿ ತಿದ್ದುವುದಕ್ಕಿಂತ ಹೆಚ್ಚಿಗೇನೂ ಮಾಡಲಾರೆವು.
ಆ ಲವರ್ ಯಾರೆಂದು ನಿಮಗೆ ಹೇಳಿರುವಳೇ?”
“ಹೌದು. ಅದೇನೋ ವೇಂಕಟೇಶಾಚಾರ್ಯ ಎನ್ನುವವರ
ಮಗನಂತೆ, ಬ್ರಾಹ್ಮಣರ ಹುಡುಗನಂತೆ, ದೊಡ್ಡ ಕೆಲಸದಲ್ಲಿರುವನಂತೆ.
ಆದರೆ ನಮ್ಮ ಜಾತಿ, ಸಂಪ್ರದಾಯ? ಇದಾಗಕೂಡದು.”
ವೇಂಕಟೇಶಾಚಾರ್ಯ! ಗ್ಯಾಸ್ ಕಾಲೇಜಿನಲ್ಲಿ
ನನ್ನ ಹಿರಿಯ ಸಹೋದ್ಯೋಗಿ. ಕರ್ಮಠ ಸಂಪ್ರದಾಯಸ್ಥ. ನನ್ನ ಪರಮಗೌರವಕ್ಕೆ ಪಾತ್ರರಾದ ಆದರ್ಶ ಗೃಹಸ್ಥ. “ಅದಿರಲಿ ಅಪ್ಪಯ್ಯನವರೇ!
ಅವರೇನನ್ನುತ್ತಾರೆ ವಿಚಾರಿಸಿರುವಿರಾ?”
“ಬೇಡ ಸ್ವಾಮೀ! ಈ ಸಂಬಂಧ ಇಲ್ಲಿಗೇ
ಮುರಿಯುವಂತೆ ನೀವು ಸಹಾಯಮಾಡಬೇಕು.”
“ಆಚಾರ್ಯರು ನನ್ನ ಸ್ನೇಹಿತರು, ಹಿರಿಯರು.
ನನ್ನ ಮಾತು ಕೇಳಿ: ನೀವು ಒಪ್ಪಿದರೆ ನಾವು ನೇರ ಅವರನ್ನೇ
ಕಂಡು ಮಾತಾಡೋಣ. ಹುಡುಗನ ಮತ್ತು ಅವನ ತಂದೆತಾಯಿಯರ ಅಭಿಪ್ರಾಯವೇನೆಂದು ತಿಳಿಯೋಣ.”
ಸಾಕಷ್ಟು ಪುಸಲಾವಣೆಯನಂತರ ಅಪ್ಪಯ್ಯ
ದಂಪತಿಗಳು ನನ್ನ ಸಲಹೆಯನ್ನು ಒಪ್ಪಿದರು. ಆಗಲೇ ಆಚಾರ್ಯರಿಗೆ (ಬೆಂಗಳೂರು)
ದೂರವಾಣಿಸಿ ಮರುದಿನ ಮುಂಜಾನೆ ಅವರ ಮನೆಯಲ್ಲಿ ಸೇರುವುದೆಂದು ನಿಶ್ಚಯಿಸಿದೆವು.
ಹನುಮಂತನಗರದಲ್ಲಿ ಆಚಾರ್ಯರ ಪ್ರಶಾಂತ ನಿವಾಸ. ಅವರು,
ಅವರ ಹೆಂಡತಿ ಮತ್ತು ನಾವಿಬ್ಬರು ದಂಪತಿಗಳು ಅಲ್ಲಿ ಕುಳಿತಿದ್ದೆವು. ಮಾತಿಲ್ಲ, ಗಂಭೀರ ವದನರಾಗಿದ್ದೆವು. ಆಕ್ರೋಶ ದುಮ್ಮಾನಗಳ ಪ್ರವಾಹಕ್ಕೆ ಪೂರ್ವಸೂಚನೆಯೋ ಎಂಬಂತೆ ದಿವ್ಯ ಮೌನ. ನಾನೇ ಅದನ್ನು ಮುರಿದೆ, “ಆಚಾರ್ಯರೇ! ಇಲ್ಲಿ ನಿಸರ್ಗದ ದೃಷ್ಟಿಯಿಂದ ಅಲ್ಲ, ಸಮಾಜದ ದೃಷ್ಟಿಯಿಂದ ತುಸು
ಅಸ್ವಾಭಾವಿಕ ಸನ್ನಿವೇಶ ಏರ್ಪಟ್ಟಿದೆ. ಏಕೆಂದರೆ ನಿಸರ್ಗ ಗಂಡು ಹೆಣ್ಣು
ಎಂಬ ವ್ಯತ್ಯಾಸವನ್ನು ಮಾನ್ಯ ಮಾಡುವುದೇ ಹೊರತು ಮಾನವಕೃತ ಜಾತಿಭೇದವನ್ನಲ್ಲ, ಎಂದೂ ಅಲ್ಲ. ನಮ್ಮ ಪುರಾಣಗಳು, ಮಹಾಕಾವ್ಯಗಳು,
ನೀತಿಕಥೆಗಳೆಲ್ಲವೂ ಈ ಜೀವನಮೌಲ್ಯವನ್ನು ಎತ್ತಿ ಹಿಡಿದಿವೆ. ಹೀಗಿದ್ದರೂ ಮನುಷ್ಯ ಮಾತ್ರ ತಾನೇ ನೇಯ್ದಿರುವ ಜಾತಿ ಬಲೆಗಳ ಬಂದಿಯಾಗಿ ಬಾಳುತ್ತಿದ್ದಾನೆ.
ಇಂಥ ವಿಚಿತ್ರ ಇಕ್ಕಟ್ಟಿನಲ್ಲಿ ನಾವು ಹೇಗೆ ಮುನ್ನಡೆಯಬೇಕು ಎಂಬ ಹಾದಿಯನ್ನು ಧರ್ಮ,
ಆಚರಣೆ, ಸಂಪ್ರದಾಯ ಎಲ್ಲದರಲ್ಲಿಯೂ ಹಿರಿಯರಾಗಿರುವ ನೀವು
ಕಾಣಿಸಬೇಕು.”
ಆ ಮೂರುನಾಲ್ಕು ನಿಮಿಷ ಗಂಭೀರ ಶಾಂತಿ. ಆಚಾರ್ಯರಾಗಲೀ ಅವರ ಹೆಂಡತಿಯಾಗಲೀ ಆಗ ಕಂಡಾಬಟ್ಟೆ ರೇಗಿ ರಂಪ ಮಾಡಬಹುದು, ಕಟ್ಟೆಯೊಡೆದ ಭಾವೋದ್ರೇಕ ಮೊದಲು ಹರಿದುಹೋಗಲಿ, ಬಳಿಕ ವಸ್ತುಸ್ಥಿತಿ
ಪರಿಶೀಲಿಸೋಣ, ಹುಡುಗನೂ ಡಾಲಿಯನ್ನು ಪ್ರೀತಿಸಿರುವುದು ನಿಜವಾದರೆ ನಾವು
ಆಶೀರ್ವಾದ ಮಾಡುವುದೊಂದೇ ಮಾರ್ಗ, ಹಾಗಲ್ಲದೇ ಆತ ನಿರಾಕರಿಸಿದರೆ ಮುಂದೇನು
ಹಾದಿ? ಹೀಗೆ ಹರಿಯಿತು ನನ್ನ ಚಿಂತನೆ. ಅಷ್ಟು
ಹೊತ್ತು ಧ್ಯಾನಸ್ಥರಾಗಿ ಕುಳಿತಿದ್ದ ಆಚಾರ್ಯರು ನಿಧಾನವಾಗಿ ಕಣ್ತೆರೆದು, “ನಾರಾಯಣರಾಯರೇ! ನಿಮ್ಮ ನಮ್ಮ ಸ್ನೇಹ ಸಂಬಂಧ ಎಷ್ಟು ಗಾಢವಾದುದೆಂದು
ನನಗೆ ಚೆನ್ನಾಗಿ ಗೊತ್ತಿದೆ. ಉಭಯ ಪಕ್ಷಗಳವರ ಹಿತ ಬಯಸುವ ನಿಮ್ಮ ಚಿಂತನೆಯ
ಧಾಟಿಯನ್ನು ನಾವಿಬ್ಬರೂ ಮನಸಾರೆ ಒಪ್ಪುತ್ತೇವೆ. ಡಾಲಿ ಚಿನ್ನದಂಥ ಹುಡುಗಿ.
ಶಾರದಾ ಕುಟೀರದಿಂದ ಪ್ರತಿ ಸಂಜೆ ನಮ್ಮಲ್ಲಿಗೆ ಬಂದು ರಾಮಾಯಣ, ಮಹಾಭಾರತ, ಉಪನಿಷತ್ ಮುಂತಾದವನ್ನು ನಮ್ಮ ಮಕ್ಕಳ ಜೊತೆ ಕಲಿಯುತ್ತ
ಬೆಳೆದು ಅರಳಿದ್ದಾಳೆ. ನಮ್ಮ ಮಗ ವಿಶಾಲ್ ಈಕೆಯನ್ನು ಒಲಿದಿದ್ದಾನೆ.
ನೀವೇ ಅಂದಿರುವಂತೆ ನಿಸರ್ಗದ ನೆಲೆಯಿಂದ ಅಸ್ವಾಭಾವಿಕವಲ್ಲದ ಈ ಸಂಬಂಧಕ್ಕೆ ನಮ್ಮ
ಪೂರ್ಣ ಸಮ್ಮತಿ ಉಂಟು.”
ತಲೆಮೇಲಿನ ಹಿಮಾಲಯಭಾರವನ್ನು ಹಠಾತ್ತನೆ
ಬಾಹ್ಯಶಕ್ತಿಯೊಂದು ಎತ್ತಿ ಬಿಸುಟಾಗ ಭಾರಮುಕ್ತನಾದವನ ಮನಃಸ್ಥಿತಿ ಏನು? ಅದಕ್ಕೆ ವಾಯುಲಘಿಮಾ
(levitation)
ಎನ್ನುತ್ತೇವೆ: ಗಾಳಿಯಲ್ಲಿ ತೇಲಿದಂಥ ಅನುಭವ. ಹಾಗಿತ್ತು ಆ ಪರಿಸರ. ಅಪ್ಪಯ್ಯ ದಂಪತಿಗಳ
ಮೊಗಗಳಲ್ಲಿ ಮಂದಹಾಸದ ಮುಗುಳು ಅರಳಿತು. ನನ್ನ ಹೆಂಡತಿಗೂ ನನಗೂ ಅದೇ ಭಾವ.
ಆಚಾರ್ಯರ ಮಗ ವಿಶಾಲ್ ಭಾರತೀಯ ವಿಜ್ಞಾನ ಮಂದಿರದಲ್ಲಿ (Indian Institute of Science) ಪ್ರಾsಧ್ಯಾಪಕ. ಪ್ರೇಮಿಗಳ ಮಧುರ ಬಂಧ ಏರ್ಪಡುವುದು ಸ್ವರ್ಗದಲ್ಲಲ್ಲವೇ?
“ಹಾಗಾದರೆ ಮುಂದೇನು ಮಾಡಬೇಕು, ಆಚಾರ್ಯರೇ?”
“ಕೊಡಗಿನ ಯಾವುದೇ ಪುಣ್ಯಕ್ಷೇತ್ರದಲ್ಲಿ ಮದುವೆಮಾಡಿ ಕೊಡಿ.
ಡಾಲಿ ನಮ್ಮ ಸೊಸೆಯಾಗಿ ಮನೆ ಸೇರುತ್ತಾಳೆ. ಮಗ ಸೊಸೆ ನಮ್ಮೊಟ್ಟಿಗೇ
ಇರುತ್ತಾರೆ.” ನಾನು ಕಂಡ ಒಬ್ಬ ಮಹಾನ್ ಪುರುಷ ವೇಂಕಟೇಶಾಚಾರ್ಯ:
ನಡೆ, ನುಡಿ, ಬಗೆಗಳಲ್ಲಿ ಸಾಮರಸ್ಯ,
ಕರ್ಮಠತೆಯೊಂದು ವೈಯಕ್ತಿಕ ಶಿಸ್ತು, ಇದು ಸಮಾಜಬಾಧಕವಾಗತಕ್ಕದ್ದಲ್ಲ
ಎಂಬ ಉದಾರನೀತಿಯನ್ನು ಅನುಷ್ಠಾನಕ್ಕೆ ತಂದಿದ್ದ ಆದರ್ಶ ವ್ಯಕ್ತಿ.
(ಮುಂದುವರಿಯಲಿದೆ)
ಲೇಖಕ್ ಸ್ಪರ್ಧೆಗಳು ನಿಜವಾಗಿಯೂ ಮಕ್ಕಳ ಪ್ರತಿಭೆಯನ್ನು ಬೆಳಗಿಸಲು ಸಹಾಯಕವಾಗಿದ್ದುವು. ನನ್ನ ಮಗನೂ ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಾದೇಶಿಕಮಟ್ಟದ ಪುರಸ್ಕಾರವನ್ನು ಪಡೆದುದು ನೆನಪಿದೆ. ಆದರೆ ಕೊಡಗಿನ ಮೂಲೆಯ ಗ್ರಾಮದಿಂದ ಮಡಿಕೇರಿಗೆ ಪರೀಕ್ಷೆಗೆಂದು ಹೋದ ಮಕ್ಕಳಲ್ಲಿ ವಿಜೇತರಾದವರು ದೂರವಾಣಿಯ ಸಂಪರ್ಕವೂ ಇಲ್ಲದ ಆದಿನಗಳಲ್ಲಿ ಮರುದಿನ ಬೆಳಗ್ಗೆ ಎಂಟುಗಂಟೆಗೆ (ಸನಿಹದ ಮೈಸೂರಿಗೆ ಬದಲಾಗಿ) ಬಹುದೂರದ ಮಂಗಳೂರಿನ ಶಾಲೆಯೊಂದರಲ್ಲಿ ಪ್ರತ್ಯಕ್ಷರಾಗಬೇಕೆನ್ನುವ ಷರತ್ತು ಹಾಕಿದ ಸಂಸ್ಥೆಯ ಮೂರ್ಖತನ, ಈ ಪರೀಕ್ಷೆಯ ಮಹತ್ವವನ್ನು ಮಂಕಾಗಿಸಿತು. -Gopal TS
ReplyDeleteನಿಜ, ನೀವು ಮತ್ತೇನು ಮಾಡಿದಿರಿ? (ಇದು ಜಿಟಿನಾ ಗಮನಕ್ಕೆ ಬರಬೇಕಾದದ್ದಲ್ಲ ಆದರೂ ಅವರಿಗೆ ಮತ್ತಾದರೂ ತಿಳಿಯಿತೇ?)
Delete
ReplyDeleteಪಾವೆಂ ಅವರ ಒಂದು ಮಾತು ನನಗೆ ಸದಾ ನೆನಪಿನಲ್ಲಿಳಿಯುವಂತದ್ದು. “ ಅತಿಯಾಗಿ ಬಯಕೆ ಇಲ್ಲವಾದರೆ ಅನಿವಾರ್ಯಕ್ಕೆ ತಲೆ ಬಾಗುವುದಾದರೆ ದೇವರನ್ನು ನಂಬಬೇಕಾಗಿಲ್ಲ” ಎನ್ನುವ ಸರಳ ಸತ್ಯ ಎಲ್ಲಿಯೊ ಓದಿದ್ದು ಇಪ್ಪತ್ತು ವರ್ಷ ಹಿಂದೆ. ಪಾವೆಂ ಸನ್ಮಾನ ಮತ್ತು ಮದುವೆ ಮಾಡಿಸಿದ ಕಥೆ ಎರಡೂ ಕುಶಿಯಾಯಿತು.
ಎರಡನೆ ವಿಷಯ ಅತ್ಯಂತ ರೋಚಕವಾದುದು.
ReplyDeleteಮಿತ್ರ ಅಶೋಕರಿಗೆ, ವಂದೇಮಾತರಮ್.
ReplyDeleteಹತ್ತು ಹಲವು ಕಾರಣಗಳಿಂದಾಗಿ, ಪ್ರತ್ಯೇಕವಾಗಿ ಸೋಮಾರಿ ತನದಿಂದಾಗಿ ಮಿಂಚಿನ ಅಂಚೆಗಳನ್ನ್ನು ಹಲವು ತಿಂಗಳು ಕಾಲ ತೆರೆದಿರಲಿಲ್ಲ. ಆದುದರಿಂದ ನಿಧಾನವಾಗಿ ಉತ್ತರ.
ಪ್ರೇಮ ವಿವಾಹ. ಸಾವಿರಾರು ಕೇಳಿದ್ದೇನೆ. ನೂರಾರು ಕಂಡಿದ್ದೇನೆ. ಹತ್ತು ಹಲವು ವ್ಯವಹಾರಗಳಲ್ಲಿ ತಲೆ ಹಾಕಿದ್ದೇನೆ. ನಿಮ್ಮ ತಂದೇಯವರಿಗೆ ನನ್ನ ಮತವಿದೆ. ಪಾಪ ಅವೆರೆಂದೂ ಚುನಾವಣೆಗೆ ನಿಲ್ಲಲಿಲ್ಲ. ಪ್ರೇಮ ವಿವಾಹ ಒಂದು ಪರೀಕ್ಷೆ. ಅದರಲ್ಲಿ ಜಿ.ಟಿ.ನಾ. ಅವರು ಮಾರ್ಗದರ್ಶಕರಾಗಿ ಡಾಲಿ ಮತ್ತು ವಿಶಾಲರಿಗೆ "ಪಚ್ಚಿಡಿ" (ಪಿ.ಎಚ್.ಡಿ.) ಕೊಟ್ಟರು. ತುಲಸಿದಾಸನ "ಕುಲ ಕೀಯೆ ಪವಿತ್ ದೊವೂ" ರುಜು ಮಾಡಿದರು. ಅವರ ದಾಂಪತ್ಯ ಜೀವನದಲ್ಲಿ ಹಾಲ್ಜೇನು ಹಾಯಿಸಿ, ಅವರುಗಳಿಗೆ ಸಕಲ ಸೌಭಾಗ್ಯಗಳನ್ನು ನೀಡೆಂದು ಹಾರೈಸ್ತುತ್ತೇನೆ. ಅಂದ ಹಾಗೆ ನೀಮಗೆ ದೇವರಲ್ಲಿ ಪ್ರ್ರಾರ್ಥಿಸುವ ಅಭ್ಯಾಸವಿಲ್ಲ. ಆದರೆ ನನ್ನನ್ನು ಪ್ರಾರ್ಥಿಸಬೇಡಿ ಅನ್ನುವವರಲ್ಲ. ಶ್ರೀಮಾನ್ ವೇಂಕಟೇಶಾಚಾರ್ಯ ಮತ್ತು ಅಪ್ಪಯ್ಯ ನವರ ಕುಟುಂಬಕ್ಕೂ ದೇವರಲ್ಲಿ ನಂಬಿಗೆ ಇರಬಹುದು.
ಅದಿರಲಿ. ಇತ್ತೀಚಿನ ದಿನಗಳಲ್ಲಿ ಪ್ರೇಮ ವಿವಾಹಗಳಿಂದಲೂ, ಹಿರಿಯ ಮುಂದಾಳುತನದಲ್ಲಿ ಜಾತಕ ಮುಹೂರ್ತ ಎಲ್ಲಾ ನೋಡಿ ನಡೆದ ಮದುವೆಗಳು ಹೆಚ್ಚಾಗಿ ವಿಚ್ಛೇದನವಾಗುತ್ತಿವೆ. ನಾನು ವಕೀಲನಾಗಿದ್ದ ೧೯೭೦ ರ ದಶಕದಲ್ಲಿ ಕೇವಲ ೩-೪ ವಿವಾಹ ವಿಚ್ಛೇದನ ಮೊಕದ್ದಮೆಗಳು ನಮ್ಮ ಇಡೀ ಕರ್ನೂಲು ಜಿಲ್ಲೆಯಲ್ಲಿ ಇರುತ್ತಿದ್ದುವು. ೨೦೧೩ ರಲ್ಲಿ ಅವುಗಳ ಸಂಖ್ಯೆ ೪೦೦. ಇದರಲ್ಲಿ ೭೫% ಬ್ರಾಹ್ಮಣರು. ಅವರಲ್ಲಿ ೭೫ % ಮೃದುವಲಯದವರು. ಅವರಲ್ಲಿ ೮೫% ಗುರುಹಿರಿಯರ ಒಪ್ಪಿಗೆಯಿಂದ "Arranged marriages." ಜಾತಕದ ಬಗ್ಗೆ ನನ್ನ ಅಭಿಪ್ರಾಯ: ನಂಟಸ್ತಿಕೆ ನಮಗೆ ನೆಚ್ಚಲಿಲ್ಲ; ಆಕಾಶದಲ್ಲಿದ್ದ ನಕ್ಷತ್ರಗಳ ಮೇಲೆ ಅಪವಾದ. ಮುಹೂರ್ತಗಳೇ ಇಲ್ಲವಾದಲ್ಲಿ "Indian Punctuality." ಇದು ನನ್ನ ನಿರ್ವಚನ ಮದುವೆಗಳ ಸಾಫಲ್ಯತೆ ಮುಖ್ಯ ಕಾರಣ ನೈತಿಕಾವಾದ್ ಹೆದರಿಕೆ: ಗುರು, ಹಿರಿಯರಿಗೆ; ನೆಂಟರಿಷ್ಟರಿಗೆ; ಆಚೀಚೆ ಮನೆಯವರಿಗೆ; ಬಂದು ಹೋಗುವವರಿಗೆ, ಇತ್ಯಾದಿ, ಇತ್ಯಾದಿ. ಅವಿಭಕ್ತ ಕುಟುಂಬಗಳಲ್ಲಿ ಇದೆಲ್ಲಾ ಇತ್ತು. ಈಗ. ಆರ್ಥಿಕ ಸಮಾನರಾಗಿರುಚ ಗಂಡ ಹೆಂಡಿರು, ದಂಪತಿಗಳು ಮಾತ್ರ ಬಿಡಾರ ಇರುವಲ್ಲಿ ಅವರು ಯಾರಿಗೆ, ಯಾಕೆ ಹೆದರಬೇಕು?
ನನಗೆ ಎಲ್ಲಾ ಸಾಮಜಿಕ ವರ್ಗದಲ್ಲೂ ನೆಂಟರಿಷ್ಟರಿದ್ದಾರೆ. ಅವರೆಲ್ಲರನ್ನೂ ನಮ್ಮ ಮನೆಗೆ ಸ್ವಾಗತಿಸುತ್ತೇನೆ. ಠೀಕಿಸುವವರಿಗೆ ನನ್ನ ಹಿತ ನುಡಿ. ಇಂದಿನ ತನಕ ನಿಮ್ಮ ಮನೆಯಲ್ಲಿ ಇಂತಹ ಸಂಘಟನೆ ನಡೆಯಲಿಲ್ಲ. ನಾಳೆ? ವಿಧಿಯ ಮೀರಲಳವಾರೈ?
ನಿಮ್ಮ ಮಕ್ಕಳು ಏನಾದರೂ ಹಾಗೆ ಮಾಡಿದ್ದರೆ? ಹತ್ತು ಹಲವು ಜನ ಕೇಳಿದ್ದರು. ನಾನು ನನ್ನಾಕೆ ಅದಕ್ಕೆ ಸಿದ್ಧವಾಗಿದ್ದೆವು. ಅವರು ಪ್ರೇಮಿಸಿದ ಹುಡುಗಿಯರನ್ನೇ ಅವರಿಗೆ ಮದುವೆ ಮಾಡಿಸಿದೆವು. ಅಕಾಸ್ಮಾತ್ತಾಗಿ ಅವರ ಸೋದರ ಮಾವನ ಮಕ್ಕಳೆ. ನಮಗೆ ವಧು ಪರೀಕ್ಷೆಯ ಸೀರಾ ಉಪ್ಪಿಟ್ಟೂ ಇಲ್ಲದಂತಾಯಿತು. ದಾಂಪತ್ಯ ಜೀವನದಲ್ಲಿ "ಗಂಡ ಹಿಂಡಿರ ಜಗಳ ಉಂಡು ಮಲಗುವ ತನಕ"; ಬಹಳ ಆವಶ್ಯ.