03 January 2014

ವಿನಯ್ - ಬೆಳಕಿನ ಚಿತ್ತಾರ

ಡಿಸೆಂಬರ್ ಮೊದಲ ವಾರ, ಮೊದಲು ಚರವಾಣಿಯ ಸಂದೇಶದಲ್ಲಿ ಅನಂತರ ಮುಖಪುಸ್ತಕದಲ್ಲೂ ಗೆಳೆಯ (ಪಶುವೈದ್ಯ) ಮನೋಹರ ಉಪಾಧ್ಯರ ಪ್ರಕಟಣೆ ಬಂತು - ಬೆಳಕಿನ ಚಿತ್ತಾರ - ಗ್ಲೋ ಆರ್ಟ್,  ನೋಡಲು ಬನ್ನಿ, ಬನ್ನಿ. ಇದಕ್ಕೂ ಕೆಲವು ತಿಂಗಳ ಹಿಂದೆ ಹೀಗೊಂದು ವಿಶಿಷ್ಟ ಕಲಾಪ್ರಕಾರ ಬೆಂಗಳೂರಿನಲ್ಲಿ ಇದೇ ಮೊದಲು ಸಾರ್ವಜನಿಕ ವೇದಿಕೆಗೇರುತ್ತಿದೆ ಎಂದು ಕೇಳಿದ್ದೆ. ಸ್ವಲ್ಪವೇ ಕಾಲಾನಂತರ ಅದೇ ಶಿವಮೊಗ್ಗದಲ್ಲೂ ಪ್ರಸ್ತುತಿಗೊಳ್ಳಲಿದೆ ಎಂದೂ ತಿಳಿದಿದ್ದೆ. ಆಗೆಲ್ಲ ಅಂತರ ಮತ್ತು ಅನುಕೂಲಗಳ ಇಬ್ಬಂದಿಯಲ್ಲಿ ನಾನು ಹೋಗಲಾಗದೆ ತಳಮಳಿಸಿದ್ದೆ. ಅದು ಮಂಗಳೂರಿಗೇ ಬರುತ್ತಿದೆ, ಡಿಸೆಂಬರ್ ೨೭ರ ಸಂಜೆ ಡಾನ್ ಬಾಸ್ಕೋ ಹಾಲಿನಲ್ಲೇ ಪ್ರಸ್ತುತಿಗೊಳ್ಳಲಿದೆ ಎನ್ನುವಾಗ ಉಳಿದದ್ದು ತಾಳ್ಮೆಯ ಇಳಿಯೆಣಿಕೆ ಮಾತ್ರ.


ಗ್ಲೋವರ್ಮ್ ಅರ್ಥಾತ್ ಮಿಣುಕು ಹುಳು ಕೇಳಿದ್ದೇನೆ, ಕಂಡಿದ್ದೇನೆ. ಆದರೆ ಗ್ಲೋ ಆರ್ಟ್ ಅಥವಾ ಬೆಳಕಿನ ಚಿತ್ತಾರ - ಕೇಳಿಲ್ಲ, ಊಹಿಸಲೂ ಇಲ್ಲ. ವಿಜ್ಞಾನಿಗಳು ಬೆಳಕಿನ ವೇಗವನ್ನು ಲೆಕ್ಕದಲ್ಲಿ ಹಿಡಿದಿದ್ದಾರೆ - ಸೆಕೆಂಡಿಗೆ ಮೂರು ಲಕ್ಷ ಕಿಮೀ. ವಿಜ್ಞಾನ ಕಂಡ ಅತ್ಯಂತ ದೊಡ್ಡ ಮಾನಕಕ್ಕೆ ಸ್ಫೂರ್ತಿ ಬೆಳಕು - ಜ್ಯೋತಿರ್ವರ್ಷ! ಅಂಥದ್ದನ್ನು ಐದು-ಹತ್ತು ಮಿನಿಟಿಗೆ, ಸಾರ್ವಜನಿಕ ವೀಕ್ಷಣೆಗೆ ಒಡ್ಡಿಕೊಳ್ಳುವಂತೆ, ಅದೂ ಚಿತ್ರರೂಪಿಸುವಲ್ಲಿ ಬಳಸುವುದು, ಹಿಡಿದು ಇಡುವುದಂದರೇನು? ಸಿನಿಮ ಒಂದು ಲೆಕ್ಕದಲ್ಲಿ ಬೆಳಕಿನ ಚಿತ್ರವೇ; ಸ್ಥಿರ ಪರದೆಯ ಮೇಲಕ್ಕೆ ಪ್ರಕ್ಷೇಪಿತ ಬೆಳಕು. ಹಾಗೇ ನಭೋಮಂಡಲದ ಕತ್ತಲನ್ನೇ ಪರದೆಯಂತೆ ಬಳಸಬಹುದಾದ ಲೇಸರ್ ಚಿತ್ತಾರಗಳ ವೈಭವವೂ ನಾವು ತಿಳಿಯದ್ದೇನಲ್ಲ. ಈ ಎರಡೂ ಪ್ರಕಾರಗಳಲ್ಲಿ ಬೆಳಕಿನ ಮೂಲ ಬತ್ತಿದ ಮರುಕ್ಷಣದಲ್ಲಿ ಚಿತ್ರ ನಷ್ಟವಾಗುತ್ತದೆ. ಇನ್ನೂ ಮುಖ್ಯವಾಗಿ, ಅವುಗಳಲ್ಲಿ ನೇಪಥ್ಯದಲ್ಲಿ ಕಲಾ ಪ್ರೌಢಿಮೆಯಿದ್ದರೂ (ನಟ, ನಿರ್ದೇಶಕ, ಬೆಳಕು, ಕ್ಯಾಮರಾ ಇತ್ಯಾದಿ) ಅಂದಂದಿನ ಪ್ರಕಟನೆಯಲ್ಲಿ ಮೆರೆಯುವುದು ಶುದ್ಧ ತಂತ್ರಜ್ಞಾನ ಮಾತ್ರ. ಹಾಗಾಗಿ ಎಂದೂ ಎಲ್ಲೂ ಕಲಾವಿದನ ಗೈರುಹಾಜರಿಯಲ್ಲಿ ಒಂದೇ ನಿಖರತೆಯೊಡನೆ ಮರುಪ್ರದರ್ಶನಕ್ಕೂ ದಕ್ಕುತ್ತದೆ. ಆದರೆ ಈ ಬೆಳಕಿನ ಚಿತ್ತಾರ ಹಾಗಲ್ಲ. ಅದನ್ನು ತಿಳಿದುಕೊಳ್ಳಲು (ಬಹುತೇಕ) ಕಲಾವಿದ ವಿನಯ್ ಹೆಗಡೆಯವರದೇ ಮಾತು ಮತ್ತು (ಅಲ್ಪಸ್ವಲ್ಪ) ವಿನಯ್ ಕೃತಿಯ ವೀಕ್ಷಣೆಯೊಡನೆ ನನ್ನ ಗಳಿಕೆಯ ಗ್ರಹಿಕೆಯನ್ನು ಇಲ್ಲಿ ವಿಸ್ತರಿಸುತ್ತೇನೆ.

ವಿನಯ್ ನಾಲ್ಕೇ ಪೀಠಿಕೆ ಮಾತುಗಳನ್ನು ಎಂದಿನ ಬೆಳಕಿನಲ್ಲೇ ಆಡಿದರು. ಅನಂತರ ಇಡೀ ಸಭಾಭವನವನ್ನು ಶುದ್ಧ ಕತ್ತಲೆಯಲ್ಲಿ ಮುಳುಗಿಸಿ, ಮೂರು ದ್ಯುತಿ-ಸಂವೇದೀ (ತನ್ನ ಮೇಲೆ ಬಿದ್ದ ಬೆಳಕನ್ನು ಕೆಲಕಾಲ ಹಿಡಿದಿಟ್ಟುಕೊಳ್ಳಬಲ್ಲ) ಪರದೆಗಳನ್ನು ವೇದಿಕೆಯ ಮೇಲೆ ಬಿಡಿಸಿದರು. ಮೊದಲೇ ಕೊಟ್ಟ ಎಚ್ಚರಿಕೆಯಂತೆ ಸಭಾಭವನ ಮತ್ತು ಪ್ರೇಕ್ಷಕ ಮೂಲಗಳಲ್ಲಿ ಯಾವುದೇ ಬೆಳಕು ಬೆಳಗುವಂತಿರಲಿಲ್ಲ. ಆ ಪರದೆಯ ಮೇಲೆ ಕಲಾವಿದ ಎರಡು ಕೈಗಳಲ್ಲಿ ಹಿಡಿದಿದ್ದ ಟಾರ್ಚುಗಳನ್ನು ಅಗತ್ಯಾನುಸಾರ ಬೆಳಗುತ್ತ, ಆರಿಸುತ್ತ, ಅಗತ್ಯಕ್ಕೆ ತಕ್ಕಂತೆ ಕೈಗಳನ್ನು ಆಡಿಸುತ್ತ ನಿಖರ ಬೆಳಕೋಲುಗಳನ್ನು ಹಾಯಿಸುತ್ತಿದ್ದರು. ಅದು ಕೆಲವೇ ಮಿನಿಟುಗಳ ಅಂತರದಲ್ಲಿ ಅವರು ಉದ್ದೇಶಿಸಿದ ಚಿತ್ರವನ್ನು ಅರಳಿಸುತ್ತಿತ್ತು. ಬೆಳಕಿನ ಮೂಲ ಆರಿದ ಮೇಲೂ ಐದು ಹತ್ತು ಮಿನಿಟಿನವರೆಗೆ, ಸಭೆ ಗ್ರಹಿಸುವಷ್ಟು ಸ್ಪಷ್ಟವಾಗಿ ಕೇವಲ ಬೆಳಕಿನ ಚಿತ್ರ ಪರದೆಯ ಮೇಲೇ ಉಳಿದಿರುತ್ತಿತ್ತು. ವಿನಯರ ಮಾತಿನಲ್ಲೇ ಹೇಳುವುದಿದ್ದರೆ ಇದು ಕಾಗದ-ಪೆನ್ನು ಅಥವಾ ಕ್ಯಾನ್ವಾಸ್-ಕುಂಚಗಳ ಘರ್ಷಣೆಯಿಂದ ಮೂಡುವ ರೂಪವಲ್ಲ. ಇಲ್ಲಿ ಬೆಳಕಿನ ಮೂಲ ದ್ಯುತಿ-ಗ್ರಾಹೀ ಪರದೆಯಿಂದ ಕನಿಷ್ಠ ಒಂದಿಂಚಿನ ಅಂತರವನ್ನಾದರೂ ಕಾಯ್ದುಕೊಳ್ಳಲೇಬೇಕು. ವಿವಿಧ ಚೂಪುಗಳ ಟಾರ್ಚುಗಳ ಬಳಕೆ, ಬೆಳಕೊಡ್ಡುವಲ್ಲಿನ ಅವಧಿ, ಬಾಗುಬಳಕುಗಳು ಚಿತ್ರದ ಸಾಧ್ಯತೆಗಳನ್ನು, ಕಲಾವಿದನ ಕೌಶಲ್ಯವನ್ನು ಅನಂತವಾಗಿ ಅನ್ವೇಷಿಸುತ್ತವೆ.

ರೇಖಾಚಿತ್ರಗಳ ಮಾದರಿಗಳಿಂದ ತೊಡಗಿದ ಪ್ರದರ್ಶನ ಭಾವಚಿತ್ರಗಳ ಎತ್ತರಕ್ಕೇರುತ್ತಿದ್ದಂತೆ ವಿನಯರ ಪ್ರಯೋಗಗಳ ವೈವಿಧ್ಯ ಅನಾವರಣಗೊಳ್ಳುತ್ತ ಹೋಯಿತು. ಹಣೆಯ ಉಬ್ಬು, ಮೂಗಿನ ಓರೆ, ಗಲ್ಲದ ಮುಂಚಾಚುಗಳನ್ನಷ್ಟೇ ಕೈದೀಪ ಮಸಿಹಲಗೆಯಲ್ಲಿ ಮೆತ್ತುವಾಗ ಏನಿದು ಅಸಂಗತ ಎನ್ನುವ ಭಾವ ಪ್ರೇಕ್ಷಕರನ್ನು ಕಾಡದಿರಲಿಲ್ಲ. ಆದರೆ ಪರದೆಯ ಮೇಲೆ ಮತ್ತೂ ಆವರಿಸಿದ ಕತ್ತಲಿಗೊಂದು ಆವರಣ ಕೊಟ್ಟು ಮುಖದ ಪರಿಧಿ ನಿಗದಿಸಿದಾಗ, ಕಣ್ಣಿಗೆ ದೃಷ್ಟಿ ಕೊಟ್ಟಾಗ ಉಳಿದದ್ದು ಬೆರಗಿನ ಉದ್ಗಾರ - ಅರೆ! ಇದು ಶಿವರಾಮ ಕಾರಂತ! ಶತಾವಧಾನಿ ಗಣೇಶರು ಬೇರೊಂದು ಸಂದರ್ಭದಲ್ಲಿ ಹೇಳಿದ್ದಕ್ಕೆ ಸಾಮ್ಯ ಇಲ್ಲಿತ್ತು: ಕಾರಂತರನ್ನು ಸುತ್ತುವರಿದಿದ್ದ ಕಪ್ಪನ್ನು ವಿನಯ್ ಬೆಳಕಿನಿಂದ ನಿವಾರಿಸಿದ್ದರು. ವಿನಯ್ ಕೈಯಲ್ಲಿನ ಬೆಳಕೋಲಿನ ಒಂದು ಚಳಕ ಸುತ್ತುವರಿದ ಅಸಂಗತ ಕತ್ತಲನ್ನು ಪ್ರತ್ಯೇಕಿಸಿದಾಗ ಗರ್ಭೀಕೃತ ಕೇದಗೆ ಮುಂದಲೆ ಪ್ರತ್ಯಕ್ಷವಾಗಿತ್ತು. ಆಗ ಮೂಡಿದ ಆನಂದಾಶ್ಚರ್ಯಕ್ಕೆ ಮೊಳಗಿದ ಕಿವಿಗಡಚಿಕ್ಕುವ ಚಪ್ಪಾಳೆ ಧ್ವನಿಯೇ ಪ್ರಮಾಣ. ವಿನಯರ (ಹೆಣ್ಣುಕೊಟ್ಟ) ಮಾವ - ಮಂಟಪ ಪ್ರಭಾಕರ ಉಪಾಧ್ಯ, ಎದುರು ಇಲ್ಲದ ಪಾತ್ರಗಳನ್ನು ಕೇವಲ ತನ್ನ ಪ್ರತಿಕ್ರಿಯಾ ಕುಣಿತ ಮಣಿತಗಳಿಂದ, ಹಾವ ಭಾವಗಳಿಂದ ನಮ್ಮ ಮನೋಭಿತ್ತಿಯಲ್ಲಿ ಕಡೆದು ನಿಲ್ಲಿಸುವ ಏಕವ್ಯಕ್ತಿ ಯಕ್ಷ-ಪರಿಣತ. ಈ ಅಳಿಯನೂ ಸ್ವಲ್ಪ ಹಾಗೇ - ಕತ್ತಲಲ್ಲಿ ಮಸಿಯಾದ ಪರದೆಯ ಎದುರು ಆಗೀಗ ತಾನೇ ಬೆಳಗುವ ಮಿತಬೆಳಕಿನಲ್ಲಿ ಹಿಂದೆಮುಂದಾಡುತ್ತ, ಬಾಗಿಬಳಕುವ ಭ್ರಮಾ ಅಸ್ತಿತ್ವ ತೋರುತ್ತ (ಪಾರ್ಶ್ವಛಾಯೆ ಅರ್ಥಾತ್ Silhoutte) ಇಲ್ಲದ ಚಿತ್ರಗಳನ್ನು ಮೂರ್ತೀಭವಿಸುವ ಕಲಾವಿದ. ಯಾರು ಈ ವಿನಯ್ ಹೆಗಡೆ ಎನ್ನುವುದನ್ನು ಸಭಾಮುಖದಲ್ಲಿ ಸುಂದರ ನುಡಿಚಿತ್ರದೊಡನೆ ಕೊಟ್ಟ ಶ್ರೀಮತಿ (ದಂತವೈದ್ಯೆ) ವಿದ್ಯಾ ಮನೋಹರ ಉಪಾಧ್ಯ ಅವರ ಮಾತಿನಲ್ಲೇ ಕೇಳಿ:
ನೆರೆದಿರುವ ಎಲ್ಲಾ ಚಿತ್ರಪ್ರೇಮಿಗಳಿಗೆ ಆತ್ಮೀಯ ಸ್ವಾಗತ. ಒಂದು ವಿನೂತನವಾದ ಕಾರ್ಯಕ್ರಮ - ಬೆಳಕಿನ ಚಿತ್ತಾರವನ್ನು ಇಂದು ಏರ್ಪಡಿಸಿದ್ದೇವೆ.
ಭಾರತೀಯ ಪರಂಪರೆ ಸಂಗೀತ, ನೃತ್ಯ, ಶಿಲ್ಪ, ತತ್ತ್ವಶಾಸ್ತ್ರಗಳೇ ಮೊದಲಾದವುಗಳಿಂದ ಶ್ರೀಮಂತವಾದದ್ದು; ಇಲ್ಲಿಯ ಕಲ್ಪನೆಗಳೂ ಅಷ್ಟೇ ಆಳವೂ ಅದ್ಭುತವೂ ಆಗಿವೆ. ಶೂನ್ಯದಿಂದ ಸಂಗೀತ ಎನ್ನುವ ಕಲ್ಪನೆ ಹೇಗೆ ಸಂಗೀತ ಪರಂಪರೆಯಲ್ಲಿ ಒಂದು ಅದ್ಭುತ ಸಾಧ್ಯತೆಯನ್ನು ತಿಳಿಸುತ್ತದೋ ಹಾಗೇ ಕತ್ತಲಿನಿಂದ ಚಿತ್ತಾರ ಎಂಬ ಕಲ್ಪನೆಯೂ ಕೂಡಾ. ಕತ್ತಲಿನಿಂದ ಯಾಕೆ ಚಿತ್ರ ಬರಬಾರದು, ಬರೆಯಬಾರದು ಎಂಬ ಯೋಚನೆ ಶ್ರೀ ವಿನಯ ಹೆಗ್ಡೆ ಅವರ ಮನಸ್ಸಿನಲ್ಲಿ ಹುಟ್ಟಿ ಬೆಳೆದು ಈ ವಿಶಿಷ್ಟ ಪ್ರಯೋಗಕ್ಕೆ ನಾಂದಿಯಾಯಿತು. ಹೆಸರೇ ಹೇಳುವಂತೆ ಬೆಳಕಿನ ಚಿತ್ತಾರಕ್ಕೆ ಕತ್ತಲೆಯಲ್ಲಿರುವ ಪರದೆ, ಬೆಳಕು ಮಾಧ್ಯಮ. ಇದನ್ನು ಹಾಯಿಸುವ ಕೈದೀವಿಗೆ, ಅಂದರೆ ಟಾರ್ಚು ಇಲ್ಲಿಯ ಕುಂಚ ಅಥವಾ ಬ್ರಷ್. ಕತ್ತಲಲ್ಲಿ ಹುಟ್ಟಿ, ಬೆಳಕನ್ನು ಬಳಸಿಕೊಂಡು, ಕಪ್ಪನ್ನೂ ಕತ್ತಲನ್ನೂ ಹದವಾಗಿ ಉಳಿಸಿಕೊಂಡು ಇಲ್ಲಿನ ಕೃತಿಗಳು ರೂಪುಗೊಳ್ಳುತ್ತವೆ. ಕಲೆ ಮತ್ತು ವಿಜ್ಞಾನದ ಸಹಕಾರದಿಂದ ಈ ಚಮತ್ಕಾರ ಸಾಕಾರಗೊಳ್ಳುತ್ತದೆ. ಇಲ್ಲಿ ಮೂಡುವ ಬೆಳಕಿನ ಚಿತ್ರಗಳು ಕೆಲವೇ ಸಮಯ ಉಳಿಯಬಲ್ಲವಾದ್ದರಿಂದ ಅವು ಕತ್ತಲಪಟದ ಮೇಲೆ ಕ್ಷಣಿಕ, ಆದರೆ ಪ್ರೇಕ್ಷಕರ ಮನೋಪಟಲದ ಮೇಲೆ ಶಾಶ್ವತ. ಹೀಗೆ ಚಿತ್ರ ಬಿಡಿಸಲು ಕಲಾವಿದನಿಗೆ ಅಪಾರವಾದ ಸಾಧನೆ, ಚಾಕಚಕ್ಯತೆ, ನಾಜೂಕು, ಕಲ್ಪನೆಗಳು ಬೇಕು. ಒಮ್ಮೆ ಬೆಳಕು ಹಾಯಿಸಿದರೆ ಮತ್ತೆ ತಿದ್ದಲು ಅವಕಾಶವಿಲ್ಲ. ಐದರಿಂದ ಹತ್ತು ಮಿನಿಟಿನ ಒಳಗೆ ಚಿತ್ರ ಪೂರ್ಣಗೊಳ್ಳಲೇಬೇಕು. ಚಿತ್ರದ ಭಾವದ ಜತೆಗೇ ಜನರ ಕುತೂಹಲಕ್ಕೂ ರಂಜನೆಗೂ ಹದಪಾಕವಾಗಿ ಬಡಿಸಬೇಕು. ಹೀಗಾಗಿ ಇದು ಚಿತ್ರ ಪ್ರದರ್ಶನವಲ್ಲ, ಬೆಳಕನ್ನು ಚಿತ್ರವಾಗಿಸುವ ಪ್ರಕ್ರಿಯೆ, ನಾವೆಲ್ಲ ಇದಕ್ಕೆ ಸಾಕ್ಷಿಗಳು. ಹೀಗೆ ಕತ್ತಲೆ-ಬೆಳಕು, ಭಾವ-ರೇಖೆ, ವೇಗ-ಸೂಕ್ಷ್ಮತೆ ಇತ್ಯಾದಿ ಎರಡು ಮುಖಗಳ ಸಿದ್ಧಿ ಈ ಕಲಾವಿದನಿಗೆ ಸಾಧ್ಯವಾಗಿದೆ. ಇದಕ್ಕೆ ಕಾರಣ ಬಹುಶಃ ಅವರ ವ್ಯಕ್ತಿತ್ವವೂ ಹೀಗೆಯೇ ಎರಡು ಧ್ರುವಗಳ ನಡುವಿನ ಕೊಂಡಿಯಾಗಿ ಬೆಳೆದು ಬಂದದ್ದೋ ಏನೋ.
 
ವಿನಯ ಹೆಗ್ಡೆ ಹುಟ್ಟಿದ್ದು ಶಿರಸಿಯ ಪುಟ್ಟ ಹಳ್ಳಿ ಗಡಿಕೈಯ ದೊಡ್ಡ ಕೃಷಿ ಮನೆತನದಲ್ಲಿ, ಭೈರುಂಬೆಯ ಶ್ರೀ ಕೇಶವ ಹೆಗ್ಡೆ-ರಾಧಾ ದಂಪತಿಯ ಕಿರಿಯ ಮಗನಾಗಿ. ಎಳವೆಯಿಂದಲೇ ತಮ್ಮ ಆಸಕ್ತಿಯನ್ನು ಪೋಷಿಸಿಕೊಂಡು ಬಂದ ಇವರು ಬೆಂಗಳೂರಿನ ಕೆನ್ ಶಾಲೆಯ ವಿದ್ಯಾರ್ಥಿಯಾದರು. ಮುಂದೆ ಭಾರತೀಯ ತತ್ತ್ವಶಾಸ್ತ್ರ, ಶಿಲ್ಪಶಾಸ್ತ್ರ ಪರಂಪರೆಗಳಲ್ಲಿ ಪ್ರಕಾಂಡ ಪಂಡಿತರೇ ಆದ ಸಾ. ಕೃ. ರಾಮಚಂದ್ರರಾಯರ ಶಿಷ್ಯವೃತ್ತಿಯಲ್ಲಿ ತೊಡಗಿಸಿಕೊಂಡರು ಹಾಗೂ ತಮ್ಮ ಪ್ರತಿಭೆಯನ್ನು ಶಿಲ್ಪಗಳಲ್ಲಿ ಅರಳಿಸಿದರು. ತನ್ನ ಯಾವತ್ತೂ ಸಾಧನೆಗೆ ಈ ಗುರುವಿನ ಕೊಡುಗೆ ಅನನ್ಯ ಎಂದು ವಿನಯ್ ಗೌರವಪೂರ್ವಕವಾಗಿ ನೆನೆಯುತ್ತಾರೆ. ಹೀಗೆ ಹಳೆಬೇರಿನ ಸತ್ವಹೀರಿ ಬೆಳೆದ ಇವರು ಹೊಸ ಚಿಗುರನ್ನು ಬೆಳೆಸಿದ್ದು ತಂತ್ರಜ್ಞಾನದ ಪ್ರಪಂಚದಲ್ಲಿ. ತ್ರೀ-ಡಿ ಕ್ಯಾರೆಕ್ಟರ್ ಮಾಡೆಲಿಂಗ್ ಮತ್ತು ಟೆಕ್ಸ್ಚರಿಂಗ್‌ನಲ್ಲಿ ವಿಶೇಷ ಪರಿಣತಿ ಪಡೆದು ಕೆನಡಾದ ವಾಂಕೂವರಿನ ಫಿಲಂ ಸ್ಕೂಲಿನ ಪದವಿ, ಸಿಂಗಾಪೂರದ ಲೂಕಾಸ್ ಅನಿಮೇಶನ್ನಿಂದ ಜೆಡಿ ಮಾಸ್ಟರ್ ಪದವಿ ಪಡೆದರು.
 
ಅರ್ಲಿ ಹೊಯ್ಸಳ ಆರ್ಟ್ ಮತ್ತು ಧ್ಯಾನ ಚಿತ್ರಾವಳಿ ಎಂಬೆರಡು ಪುಸ್ತಕಗಳ ಕರ್ತೃವೂ ಆಗಿರುವ ವಿನಯ್, ಬನಾರಸಿನ ಕಿಷನ್ ಮಹಾರಾಜರಲ್ಲಿ ಗುರುಕುಲ ರೀತಿಯಲ್ಲಿ ತಬ್ಲಾ ಅಭ್ಯಾಸವನ್ನೂ ಮಾಡಿದ್ದಾರೆ.
ಒಂದು ಕಡೆ ಕಲ್ಲು, ಮರ, ಲೋಹ, ಫೈಬರ್ಗಳಂತಹ ಹಾರ್ಡ್ವೇರ್‌ಗಳೊಂದಿಗೆ ಉಳಿ, ಸುತ್ತಿಗೆ ಪೆಟ್ಟಿನ ವರಿಸೆ ತೋರಿಸಬಲ್ಲ ವಿನಯ್ ಇನ್ನೊಂದು ಕಡೆ ಹಾಲಿವುಡ್ಡಿನ ಡ್ರೀಮ್ ವರ್ಕ್ಸ್ ಕಂಪೆನಿಯಲ್ಲಿ ಅನಿಮೇಶನ್ ಸಿನಿಮಾಗಳ ಸಾಫ್ಟ್‌ವೇರ್ ಪ್ರಪಂಚದಲ್ಲಿ ಮೌಸ್‌ನೊಂದಿಗೆ ನಾಜೂಕಾಗಿ ಅಕ್ಷರಶಃ ಕೈಯಾಡಿಸುತ್ತಿದ್ದಾರೆ. ಹೀಗಾಗಿಯೇ ತಮ್ಮ ಹುಟ್ಟೂರಿನಲ್ಲಿ ವಿನಯ್ ಕೆತ್ತಿದ ಗಣಪನನ್ನು ಹೂ ಹಣ್ಣು ಕಾಯಿ ಸಹಿತ ಆಸ್ತಿಕರು ಭಾವಪರವಶತೆಯಿಂದ ಪೂಜಿಸುತ್ತಾ ಕೈ ಮುಗಿಯುತ್ತಿದ್ದರೆ, ಮಹಾನಗರಗಳಲ್ಲಿ, ಮಲ್ಟಿಪ್ಲೆಕ್ಸ್‌ಗಳಲ್ಲಿ ವಿನಯ್ ಕೈಚಳಕ ತೋರಿದ ಮಡಗಾಸ್ಕರ್ ೩, ಹೌ ಟು ಟ್ರೈನ್ ಯುವರ್ ಡ್ರ್ಯಾಗನ್-೨, ಮುಂತಾದ ಸಿನಿಮಾಗಳನ್ನು ಪಾಪ್ ಕಾರ್ನ್ ಪೆಪ್ಸಿಗಳೊಂದಿಗೆ ನೋಡುತ್ತಾ ಮಕ್ಕಳು, ಹಿರಿಯರು ಭಾವೋನ್ಮಾದದಿಂದ ಕೈತಟ್ಟುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ೩೦ರ ಅಂಚಿನ ವಿನಯ್‌ರ ಮುದ್ದಿನ ಮಡದಿ, ದಂತವೈದ್ಯೆ ಮಾಧುರಿ.
ಸಹೃದಯರೇ ಹೊತ್ತಿಳಿದ ಈ ಹೊತ್ತಿನಲ್ಲಿ ಸುತ್ತಲಿನ ಕತ್ತಲಿನಲ್ಲಿ ಚಿತ್ರಗಳು ಬೆಳಗುವ ಬೆರಗಿಗೆ ನಿಮ್ಮ ಚಿತ್ತ ಬಿತ್ತರವಾಗಲಿ. ಇದಕ್ಕಾಗಿ ನಿಮ್ಮನ್ನೂ ಈ ವೇದಿಕೆಯನ್ನೂ ಶಿರಸಿ ಗಡಿಕೈಯ ಕುಂಚ ಮಾಂತ್ರಿಕ ವಿನಯ್ ಹೆಗಡೆಯವರ ಕೈಗಳಿಗೆ ಒಪ್ಪಿಸುತ್ತಿದ್ದೇನೆ. ಇನ್ನು ಮುಂದಿನದು ಇಲ್ಲಿ ಕಾಣದೆಯೂ ಇರುವ ವಿನಯ್ ಹೆಗಡೆ ಅವರಿಂದ. (ವಿದ್ಯಾ ಅವರ ಮಾತುಗಳು ಮುಗಿದವು. ಇನ್ನೂ ಹೆಚ್ಚಿನ ವಿವರಗಳಿಗೆ ಅವಶ್ಯ ವಿನಯ್ ಹೆಗಡೆಯವರ ಜಾಲತಾಣ ನೋಡಿ: www.vinayhegde.com)
ಕರಾವಳಿಯ ದಿಗ್ಗಜ ಶಿವರಾಮ ಕಾರಂತರನ್ನು ಮೂಡಿಸುವ ನಮನದೊಡನೆ ವಿನಯ್ ಚಿತ್ರಪಯಣ ತೊಡಗಿತು. ಹಿಂಬಾಲಿಸಿದಂತೆ ಅರಳಿದ ಯಕ್ಷವೇಷ ಕಾರಂತರಿಗೂ ಕರಾವಳಿಯ ಜೀವನಾಡಿಗೂ ಅಪ್ಯಾಯಮಾನವಾಗಿಯೇ ಬಂತು. ಮುಂದೆ ಯಕ್ಷಗಾನಕ್ಕೆ ಪರ್ಯಾಯ ನಾಮವೇ ಎನ್ನುವ ದಶಾವತಾರವನ್ನೇ ವಿನಯ್ ಸ್ಮರಿಸಿಕೊಂಡರು. ಇತ್ತ ಸಾಗರದಲ್ಲಿ ಪವಡಿಸಿದ ಶ್ರೀಮನ್ನಾರಾಯಣ, ಸುತ್ತ ತಾರಾನಿವಹದ ನಭೋಮಂಡಲ ಆಧಾರಶ್ರುತಿಯಂತೆ ಮೂಡಿತು. ಮತ್ತಿನದು ಎದ್ದುಬೀಳುವ ತರಂಗಗಳಂತೆ, ಅನಂತದಲ್ಲಿ ಮೂಡಿಮುಳುಗುವ ಗ್ರಹತಾರಗೆಗಳಂತೆ ನಮ್ಮೆದುರಿನ ದ್ಯುತಿಪ್ರತಿಫಲಕದಲ್ಲಿ ದಶಾವತಾರದ ಚಿತ್ರಸರಣಿಯೇ ಅರಳುತ್ತ ಬಾಡುತ್ತ ಹೋಯಿತು. ಸರಳ ರೇಖೆಗಳ ಮತ್ಸ್ಯ, ಗಿರಿಧಾರಿಯಾಗಿ ಕೂರ್ಮ, ಭುವಿಯನ್ನೇ ಹೊತ್ತ ವರಾಹ ಜೀವವಿಕಾಸದ ಕ್ರಮಪಾಠ ಕೊಟ್ಟದ್ದಾಯ್ತು. ದುರುಳತೆಯ ಹೊಟ್ಟೆಬಗೆಯುವ ನರಸಿಂಹ, ಅಧರ್ಮದ ರಕ್ತವಿಳಿಸುವ ಭಾರ್ಗವರಲ್ಲಿ ಸಂಸ್ಕಾರ ಪ್ರಜ್ಞೆಯ ಜಾಗೃತಿಯಿತ್ತು. ವಾಮನ, ರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿಗಳ ಮೂಲಕ ವರ್ತಮಾನ ಹಾಗೂ ಸಾಮಾಜಿಕ ಮೌಲ್ಯಗಳ ತೊಳಗು ಕೊಟ್ಟು ವಿನಯ್ ಚಿತ್ರಸರಣಿ ಮುಗಿಸಿದರು. ಮುಂದೆ ಇವರ ರೇಖೆಗಳಲ್ಲಿ ಮೂಡಿದ ಕಾರು ಹೆದ್ದೀಪ ಬೆಳಗುವ, ಹಾರುಹಕ್ಕಿಯ ರೆಕ್ಕೆಗಳಿಗೆ ಬೀಸಿನ ತೋರ್ಕೆ ಕೊಟ್ಟ ಚಮತ್ಕಾರಗಳು ಪ್ರೇಕ್ಷಕರಲ್ಲಿ ಹೆಚ್ಚಿನ ಮುದವನ್ನೇ ಉಂಟುಮಾಡಿದುವು. ಕ್ರಿಸ್ಮಸ್ ಮರ ಹಾಗೂ ಮೊಂಬತ್ತಿಗಳನ್ನು ಹೊತ್ತ ಕೇಕ್ ಇದೇ ತಾನೇ ಕಳೆದ ಹಬ್ಬವನ್ನು ಜ್ಞಾಪಿಸಿದರೆ, ಮದರ್ ತೆರೆಸಾ ಚಿತ್ರ ವಿಶ್ವಶಾಂತಿಯ ಹರಕೆಹೊತ್ತಂತೆ ಕಾಣಿಸಿತು. ಇನ್ನೂ ಕೆಲವು ಬಿಡಿ ಚಿತ್ರಗಳೊಡನೆ ಸುಮಾರು ಒಂದೂವರೆ ಗಂಟೆಯ ಈ ಬೆಳಕಿನಾಟ ಅಪೂರ್ವ ಆನಂದವನ್ನು ಕೊಟ್ಟಿತು.

ಚಿತ್ರ ರಚನೆಯ ಉದ್ದಕ್ಕೂ ಆಯ್ದ ಧ್ವನಿಮುದ್ರಿಕೆಗಳ ಪೂರಕ ಸಂಗೀತವಿತ್ತು. ವಸ್ತು ಬದಲುತ್ತಿದ್ದಂತೆ ಆಗೀಗ ಕಲಾವಿದನ ಅಶರೀರವಾಣಿ ಮುಂದಿನ ನಡೆಯ ಕಿರು ವಿವರಣೆ ಕೊಡುವಾಗ ಕುಗ್ಗಿ ಮತ್ತೆ ಹಿಗ್ಗಿ ಸಾಗುತ್ತಿತ್ತು (ಬರಿಯ ಸಂಗೀತವಲ್ಲ) ಸುಸಂಗತ ಧ್ವನಿವೈವಿಧ್ಯ. ಚಿತ್ರದ ಆಯ ಅಳತೆಗಳ ಪರಿಭಾವನೆಗನುಗುಣವಾಗಿ ವಿನಯರ (ಮೊದಲೇ ಹೇಳಿದಂತೆ) ಪಾರ್ಶ್ವ ಛಾಯಾರೂಪ ಅತ್ತಿತ್ತ ತೊನೆಯುವುದು ಪ್ರೇಕ್ಷಕರ ಮನದಲ್ಲಿ ನಾಟ್ಯದ ಭ್ರಮೆಯನ್ನೇ ಉಂಟುಮಾಡಿದ್ದರೆ ಆಶ್ಚರ್ಯವಿಲ್ಲ. (ರಾ. ಗಣೇಶರ ಅವಧಾನದ ಸಂದರ್ಭದಲ್ಲಿ ಇನ್ನೋರ್ವ ಖ್ಯಾತ ಕಲಾವಿದ ಬಿಕೆಎಸ್ ವರ್ಮ ಕ್ಯಾನ್ವಾಸಿನ ಮೇಲೆ, ಸ್ಪಷ್ಟ ಬೆಳಕಿನಲ್ಲೇ ತನ್ನ ಕಾವ್ಯರಚನೆಯಲ್ಲಿ ನಿರತರಾದಾಗ ಹೀಗೇ ನಲಿದಾಡುತ್ತಿದ್ದರು!) ಪ್ರೇಕ್ಷಕನ ಕಲಾಲಹರಿಗೆ ಬಾಧ್ಯತೆಗಳು ಇಲ್ಲ. ಹಾಗೆಂದು ಇಲ್ಲಿ ಕಲಾವಿದ ಭಾವಲಹರಿಯಲ್ಲಿ ಕಳೆದುಹೋಗಲಾಗದು.

ಅವಧಾನಿ ಗಣೇಶರು ಬೆಳಕಿನಚಿತ್ತಾರ ನೋಡಿ ಉದ್ಗರಿಸಿದರಂತೆ ಇದು  ಆನೆಯದಾಡೆ ಮೊಳೆದ ಹಾಗೆ! ಕುಮಾರವ್ಯಾಸ ತನ್ನಗ್ಗಳಿಕೆಯ ಪಟ್ಟಿಯಲ್ಲಿ ಪದವಿಟ್ಟಳುಪದ ಮಾತಾಡಿದ್ದು ಬೆಳಕಿನ ಚಿತ್ತಾರದಲ್ಲಿ ಕಲಾವಿದನಿಗೆ ಅನಿವಾರ್ಯತೆಯೂ ಹೌದು. ಕ್ಯಾನ್ವಾಸ್, ಕಾಗದಗಳ ಮೇಲೆ ಬರೆದುದನ್ನು ಅಳಿಸಿ ಪುನಾರೂಪಿಸುವ ಅವಕಾಶಗಳು ಮುಕ್ತ. ಆದರೆ ಇಲ್ಲಿ ಬಿಟ್ಟ ಬೆಳಕಿಗೆ ಕತ್ತಲಿನ ಮಾಸು ತರಲಾಗದು. ಯಾರೂ ಬೆಳಕು ಬೀರಬಹುದು, ಕತ್ತಲನ್ನು ಚೆಲ್ಲಲಾರರು!

ವಿನಯ್ ಪ್ರಾಸಂಗಿಕವಾಗಿ, ಹೆಸರಿನಂತೇ ವಿನಯಪೂರ್ವಕವಾಗಿ ತನ್ನದು ಭಾರತದಲ್ಲಂತೂ ಸರ್ವ ಪ್ರಥಮ ಪ್ರಯತ್ನ, ತನ್ನದೇ ಆವಿಷ್ಕಾರ ಎನ್ನುವ ಮಾತಾಡಿದರು. ಪ್ರದರ್ಶನದ ಸಲಕರಣೆಗಳಾದ ಪರದೆ, ಟಾರ್ಚುಗಳ ಆವಿಷ್ಕರ್ತ ಇವರಲ್ಲದ ಮೇಲೆ ಹೇಳಿಕೆ ಹೆಚ್ಚಾಯ್ತೋ ಎನ್ನುವ (ಕೆಟ್ಟ?) ಕುತೂಹಲದಲ್ಲಿ ನಾನು ತುಸು ಜಾಲಾಡಿದೆ. ಅಲ್ಲಿ ಹಲವು ವಿಭಾಗಗಳಲ್ಲಿ ಗ್ಲೋಆರ್ಟ್ ಎಂಬ ಬಹುವರ್ಣಮಯವೂ ಸಂಕೀರ್ಣವೂ ಆದ ನಮೂದುಗಳೇನೋ ಇವೆ. ಆದರೆ ವಿವರಗಳಲ್ಲಿ ಅವೆಲ್ಲ ಯಂತ್ರಚಾಲಿತ; ಗಣಕಯಂತ್ರ ಪಾಂಡಿತ್ಯ! (ಅವಧಾನಿ ಗಣೇಶರನ್ನೋ, ಚದುರಂಗಿ ವಿಶ್ವನಾಥನ್ ಆನಂದರನ್ನೋ, ವಿಜ್ಞಾನಿ ಸ್ಟೀಫನ್ ಹಾಕಿಂಗರನ್ನೋ ಹೊಗಳುವ ಭರದಲ್ಲಿ ಹ್ಯೂಮನ್ ಕಂಪ್ಯೂಟರ್ ಎಂದು ಕರೆಯುವುದನ್ನು ನಾನಂತೂ ಗೌರವ ಎಂದು ಭಾವಿಸಿಲ್ಲ) ಇನ್ನೂ ಮುಖ್ಯವಾಗಿ ಆ ಬೆಳಕಿನ ಚಿತ್ರಗಳು ವಿನಯ್ ಪರಿಕಲ್ಪನೆಯಂತೆ ಸ್ವತಂತ್ರವಾಗಿ ನೆಲೆಸುವುದಿಲ್ಲ. ವ್ಯತಿರಿಕ್ತವಾಗಿ ಬೆಳಕಿನಮೂಲ ಬತ್ತಿದ್ದೇ ಅಸುನೀಗುವ ವಿಭ್ರಮೆಗಳು ಮಾತ್ರ.

ಇಂದು ಸಾರ್ವಜನಿಕ ಕಲಾಪಗಳಿಗೆ ಪ್ರಾಯೋಜಕರನ್ನು ಹುಡುಕುವ ಅವಶ್ಯಕತೆಯಿಲ್ಲ. ಪ್ರಾಯೋಜಕರ (ಪ್ರಚಾರ ಮತ್ತು) ಮಾನಕಗಳ ಯೋಗ್ಯತಾನುಸಾರ ಕಲಾಪಗಳನ್ನು ಹೊಸೆಯುವ ಸಂಘಟಕರೇ ಮುಖ್ಯ. ಸಂಘಟಕರ ಬಲದಲ್ಲಿ ಕಲೆ, ಕಲಾವಿದ ವೇದಿಕೆಯ ಮೇಲೆ ಬಹುತೇಕ ಅಪ್ರಬುದ್ಧರ ಕೂಟದಲ್ಲಿ ತೆವಳುವುದನ್ನು ಇಂದು ವಿನಯ ಎಂದೇ ಭಾವಿಸುವಂತಾಗಿದೆ. ಸಂಘಟಕರಾದರೋ ಪ್ರಪ್ರಪ್ರಥಮ ಪ್ರಯೋಗಗಳು, ಲಿಮ್ಕಾ ಗಿನ್ನೀಸ್ ಮಾನಕಗಳಿಗಾಗಿ ತಿಣುಕಾಟಗಳು, ಏನಲ್ಲದಿದ್ದರೂ ಗಲ್ಲಾಪೆಟ್ಟಿಗೆ ಚಿಂದಿ ಉಡಾಯಿಸುವ ಆಶಯಗಳಿಗಿಂತ ಕಡಿಮೆಯವಕ್ಕೆ ಇಂದು ವೇದಿಕೆ ಒದಗಿಸುವ ರುಚಿ ಉಳಿಸಿಕೊಂಡಿಲ್ಲ. ಬೆಳಕಿನ ಚಿತ್ತಾರವನ್ನು ಆರ್ಥಿಕ ವಹಿವಾಟು ಮಾಡದ ಕಲಾವಿದ ವಿನಯ್ ಹೆಗಡೆ, ಸಾರ್ವಜನಿಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದರೂ ಒಂದು ವ್ಯಕ್ತಿ, ಕಲಾಪ, ಮಾತು ಕಲಾ ಪ್ರಸ್ತುತಿಗೆ ಹೊರತಾಗಿ ವೇದಿಕೆಯ ಮೇಲೆ ತಾರದ ಮನೋಹರ ಉಪಾಧ್ಯ ದಂಪತಿ ಇಂದಿನ ದಿನಮಾನಗಳಲ್ಲಿ ಅತಿ ವಿರಳರ ಸಾಲಿನಲ್ಲಿ ಸೇರುತ್ತಾರೆ. ಸದ್ಯ ಏಕವರ್ಣದಲ್ಲಿರುವ (ಬಿಳಿ ಅಥವಾ ನಸು ನೀಲಿ?) ವಿನಯ ಹೆಗಡೆಯವರ ಪ್ರಯೋಗ ವರ್ಣರಂಜಿತವಾಗಿ ತೊಳಗಲಿ. ಹೊಸ ಜಾಡಿನ ಮೊದಲ ಮೆಟ್ಟಿಲಿನಲ್ಲಿ ನಿಂತ ಕಲಾವಿದ ವಿಸ್ತೃತ ಸಾಧ್ಯತೆಗಳನ್ನು ಶೋಧಿಸುತ್ತ ಕಲೋತ್ತುಂಗಕ್ಕೇರಿ ಮೆರೆಯಲಿ.
(ಬೆಳಕಿನ ಚಿತ್ತಾರಗಳ ಛಾಯಾಚಿತ್ರಗಳನ್ನು ಸುಂದರವಾಗಿ ಹಿಡಿದು, ಇಲ್ಲಿ ಬಳಕೆಗೂ ಒದಗಿಸಿ ಉಪಕರಿಸಿದವರು ಗೆಳೆಯ ಅರವಿಂದ ಕುಡ್ಲ. ಹೆಚ್ಚಿನ ಚಿತ್ರಗಳಿಗೆ ಅವಶ್ಯ ಅರವಿಂದರ ಜಾಲತಾಣ ನೋಡಿ: www.nannasaakshi.blogspot.in)

12 comments:

  1. ಅತ್ಯದ್ಬುತ! ವಿನಯ್ ಮತ್ತು ಅವರ ಬೆಳಕಿನ ಚಿತ್ತಾರವನ್ನು ಇಲ್ಲಿ ಚಿತ್ರಿಸಿದ್ದಕ್ಕಾಗಿ ನಿಮಗೂ ಧನ್ಯವಾದಗಳು!

    ReplyDelete
  2. I was spellbound... One of the most interesting presentations I have ever seen.....
    True to his name, Vinay is as humble as his talent.....

    Well presented in words sir... Thanks

    ReplyDelete
  3. ಅವ್ಯಕ್ತ ವಾದ ಕತ್ತಲಿನಲ್ಲಿ ವ್ಯಕ್ತವಾಗುವ ಬೆಳಕು. ಅದನ್ನು ಮೂರ್ತರೂಪಕ್ಕೆ ತಂದಿದ್ದು ವಿನಯ ಹೆಗಡೆ. ನಾವು ಕರಗಿದ ಕತ್ತಲಿನಲ್ಲಿ ಎದುರುತಂದ ಈ ಅನುಭೂತಿ ಅನುಪಮವಾಗಿತ್ತು.---- ನಾರಾಯಣ ಯಾಜಿ

    ReplyDelete
  4. jeevanram sullia03 January, 2014 11:20

    Nijakku Vinay kaththalalli moodisiddu VISMAYA !
    Asaadharana Prathibheya VINAY ge Abhinandanegalu.
    Athri sir,
    Belakina Chiththaravannu thumba chennagi anavaranagolisiddeeri
    nimage krithajnathegalu
    jan.12 randu Moodbidre Alvas nalli GLOW ART Programme madalu Dr.Mohan Alva sajjagiddare
    plz banni

    ..........Jeevanram Sullia

    ReplyDelete
  5. ಕುಶಲ ಶೆಟ್ಟಿ, ಅಳಿಕೆ03 January, 2014 14:07

    ಶ್ರೀಯುತ ವಿನಯ್ ಹೆಗಡೆಯವರ ಬೆಳಕಿನ ಚಿತ್ರ ಮನಸ್ಸಿಗೆ ಮುದ ನೀಡಿತು. ಕೃಷ್ಣ ತನ್ನ ಬಾಯಿಯಲ್ಲಿ ತಾಯಿಗೆ ಬ್ರಹ್ಮಾಂಡ ತೋರಿಸುವ ರೀತಿ ಅದ್ಭುತ. ಒಳ್ಳೆಯ ಲೇಖನಕ್ಕಾಗಿ ಕೃತಜ್ಞತೆಗಳು.

    ReplyDelete
  6. wonderfully captured in words..

    ReplyDelete
  7. nice write up.....vinay is on a mission...shimoga has already hosted 2 programmes and one more may be a mega event in kuvempu rangamandir....

    ReplyDelete
  8. ಗೋವಿಂದ04 January, 2014 06:04

    ತಪ್ಪಿಸಿಕೊಂಡೆ ನಾನು ಈ ಕಾರ್ಯಕ್ರಮ. ಸಂಜೆ ಐದೂವರೆ ವರೆಗೆ ಮಂಗಳೂರಲ್ಲಿದ್ದೆ ನೀವು ಮುಖಪುಟದಲ್ಲಿ ಹಾಕಿದ ಸುಳಿವು ಮರೆತು ಹೋಗಿತ್ತು.
    ಈಗ ಎಲ್ಲರಲ್ಲೂ ಕೆಮರಾ ಇದೆ. ಫೋಟೊನೂ ತೆಗಿತಾರೆ. ಆದರೆ ಹಂಚಿಕೊಳ್ಳುವುದೇ ಇಲ್ಲ.
    ಹಂಚಿಕೊಳ್ಳುವ ಆಸಕ್ತಿಯೇ ಹೋಗಿದೆ ಅನಿಸುತ್ತದೆ.

    ನೀವು ಪಾಲ್ಗೊಂಡ ಕಾರ್ಯಕ್ರಮದ ಅನುಭವ ಹಂಚುವಾಗ ಇಂದಿನ ಇನ್ನೊಂದು ಮುಖ ನೆನಪಾಗುತ್ತದೆ.

    ReplyDelete
  9. ಒಳ್ಳೆಯ ಕಾರ್ಯಕ್ರಮ ಎಂದು ನನ್ನ ಗೆಳೆಯರೂ ಹೇಳಿದರು, ನಾನು ಊರಲ್ಲಿಲ್ಲದೆ ತಪ್ಪಿಸಿಕೊಂಡದ್ದು ಬೇಸರವೆನಿಸುತ್ತದೆ.

    ReplyDelete
  10. ಮೂರ್ತಿ ದೇರಾಜೆ05 January, 2014 19:19

    ವಾ ...ಅಶೋಕ್ ... ವಿನಯ ಹೆಗಡೆಯವರ ಈ ಕಾರ್ಯಕ್ರಮದ ಬಗ್ಗೆ ಹೇಳುವುದಕ್ಕೆ .... ನನ್ನ ಮಾತು ಸೋತದ್ದೇ... ಹೆಸರಿಗೆ ತಕ್ಕಂತಾ ಈ ತುಂಬಿದ ಕೊಡದ ಬಗ್ಗೆ ಕೂಡಾ .... ನೀವು ಆಗ್ಬಹುದು ಮಾರಾಯ್ರೆ ... ಈ ವಿಡಿಯೋ ಮಾಡ್ತಾ ...ಕಾರ್ಯಕ್ರಮವನ್ನು
    ಅನುಭವಿಸುವುದು ಉಂಟಲ್ಲ .... ಅದೊಂದು ದೊಡ್ಡ ತಾಕತ್ತೇ... ನಿಮ್ಮ ಬರಹ ನೋಡುವಾಗ ... ಅದು ಅರ್ಥ ಆಯ್ತು.
    ಮತ್ತೆ ... ಪುತ್ತೂರಿನಲ್ಲಿ ಜನವರಿ 18 ....ಉಡುಪಿಯಲ್ಲಿ ಜನವರಿ 19 .... ಈ ಕಾರ್ಯಕ್ರಮ ವ್ಯವಸ್ತೆ ಮಾಡಿದ್ದೇವೆ ವಿನಯ್ ಒಪ್ಪಿದ್ದಾರೆ .....

    ReplyDelete
  11. ಪಂಪನ ಆದಿಪುರಾಣದಲ್ಲಿ, ವಜ್ರಬಾಹು ಮಹಾರಾಜನು ಆಕಾಶದಲ್ಲಿನ ಸುಂದರವಾದ ಮೋಡಗಳನ್ನು ನೋಡಿ ಅಂಥದೇ ಜಿನ ಮಂದಿರವನ್ನು ಕಟ್ಟಿಸಬೇಕೆಂದು ಆದರ ಚಿತ್ರವನ್ನು ಬರೆದುಕೊಳ್ಳುವಷ್ಟರಲ್ಲಿ ಆದು ಚದುರಿ ಕರಗಿಹೋಗಿ ಆವನ ವೈರಾಗ್ಯಕ್ಕೆ ಕಾರಣವಾದ ವರ್ಣನೆ ಇದೆ. ವಿನಯ ಹೆಗಡೆಯವರ ದ್ಯುತಿಲೇಖನ / ದ್ಯುತಿ ರೇಖೆಯ ಚಿತ್ರಗಳು ಆದಕ್ಕಿಂತ ಸ್ವಲ್ಪ ಹೆಚ್ಚು ಸಮಯ ಉಳಿಯುವಂತಾದುದರಿಂದ ನೀವು ಆದರ ಚಿತ್ರ ತೆಗೆದು ನಮಗೆ ತೋರಿಸುವಂತಾಯಿತು! ಆವರಿಗೂ ನಿಮಗೂ ಧನ್ಯವಾದಗಳು.

    ReplyDelete
  12. wonderstruk,missed the programme but will not miss on 18 or 19 jan 2014,the writeup is exellent,thank you for the same.k l reddy

    ReplyDelete