20 December 2013

ಅತ್ರಿ ಜಾಲತಾಣದ ವೀಕ್ಷಣೆ ಲಕ್ಷ ದಾಟಿತು!

ಬರುವ (೨೦೧೪) ಮಾರ್ಚ್ ತಿಂಗಳೊಡನೆ ಅತ್ರಿ ಬುಕ್ ಸೆಂಟರ್ ಮುಚ್ಚಿ, ಅಂದರೆ ನಾನು ಪುಸ್ತಕ ವ್ಯಾಪಾರಿತನದಿಂದ ನಿವೃತ್ತಿ ತೆಗೆದುಕೊಂಡು ವರ್ಷವೆರಡು ಕಳೆದಂತಾಗುತ್ತದೆ. ಸುದ್ದಿ ಮಾಡುವುದು, ಪ್ರಚಾರ ಗಿಟ್ಟಿಸುವುದು ಅಷ್ಟಾಗಿ ನನಗೆ ಹಿಡಿಸಿದ್ದಿಲ್ಲ. ಬ್ರೇಕಿಂಗ್ ನ್ಯೂಸ್ ಎಂಬಿತ್ಯಾದಿ ಶಬ್ದಾಲಂಕಾರ ಸಹಿತ ನುಸಿ ಹೋದರೂ ಗಜಗಮನದ ಗದ್ದಲವೆಬ್ಬಿಸುವವರ ನಡುವೆ (ತಮಾಷೆ ಎಂದರೆ ಆನೆ ಅತ್ಯಂತ ನಿಶ್ಶಬ್ದವಾಗಿ ನಡೆಯುತ್ತದೆ!) ನಾನು ಏನೂ ಹೇಳದೇ ನಿತ್ಯದಂತೆ ಮಾರ್ಚ್ ಮೂವತ್ತೊಂದರ ರಾತ್ರಿ ಬಾಗಿಲು ಹಾಕಿ ಬಂದವನು ಹಾಗೇ ಸುಮ್ಮನುಳಿದರೇನು ಎನ್ನುವ ವಿಚಾರ ಒಂದು ಕಡೆ. ಆದರೆ ಸಾರ್ವಜನಿಕ ಸಂಪರ್ಕದಲ್ಲೇ ವೃತ್ತಿ, ಪ್ರವೃತ್ತಿಗಳನ್ನು ಕಂಡುಕೊಂಡು ಯಶಸ್ವಿಯಾಗಿ ಜೀವನ ಅರಳಿಸಿಕೊಂಡ ನನಗೆ ತಿಳಿಸಿ ಹೋಗುವ ಜವಾಬ್ದಾರಿ ಬೇಡವೇ ಎನ್ನುವ ಭಾವ ಇನ್ನೊಂದು ಕಡೆ. ಆಗ ಸಮರ್ಥವಾಗಿ ಒದಗಿದ್ದು, ಅಷ್ಟರಲ್ಲೇ ಮೂರು ವರ್ಷಗಳನ್ನು ಮೀರಿ ಬೆಳೆದಿದ್ದ ನನ್ನ ಈ ಜಾಲತಾಣ. 


ಬೆರಳಚ್ಚು ಯಂತ್ರ (ನನ್ನ ಲೇಖನಗಳ ಸುಂದರ ಮುದ್ರಣಕ್ಕೆ, ಅಂಗಡಿಯ ಕೆಲವು ಪತ್ರವ್ಯವಾಹಾರಕ್ಕೂ), ವಿಸ್ತೃತ ಕ್ಯಾಲ್ಕುಲೇಟರಿನಿಂದ (ಅಂಗಡಿಯ ಲೆಕ್ಕಾಚಾರವನ್ನೆಲ್ಲ ಟ್ಯಾಲಿಯಲ್ಲಿ ನಡೆಸುತ್ತಿದ್ದೆ) ಆಚೆಗೆ ಗಣಕವನ್ನು ಬಳಸುವ ಯೋಚನೆಯಿಲ್ಲದವನಿಗೆ ಅಭಯಸಿಂಹ (ಮಗ) ಜಾಲತಾಣದ ಲೋಕ ಸಂಘಟಿಸಿಕೊಟ್ಟ. ನಾನು ನನಗೆ ತಿಳಿದ ತಂತ್ರಾಂಶದಲ್ಲಿ (ಬರಹ) ಲೇಖನವನ್ನು ಕುಟ್ಟಿ, ಪೂರಕ ಚಿತ್ರ, ನಕ್ಷೆ ಮತ್ತು ಪ್ರಕಟಣಾ ಸೂಚನೆಗಳನ್ನು ಅಭಯನಿಗೆ ಮಿಂಚಂಚೆ ಮೂಲಕ ಕಳಿಸುವುದಷ್ಟೇ ಸಾಕು (ಇಂದಿಗೂ ಅದೇ ಮಟ್ಟದಲ್ಲಿದ್ದೇನೆ!). ಜಾಲತಾಣದ ವ್ಯವಸ್ಥೆ, ಸೌಂದರ್ಯ, ನಿರ್ವಹಣೆ ಎಲ್ಲ ಅಭಯನಿಗೆ (ಅವನೇ ಹೇಳುವಂತೆ) ಕೆಲವೇ ಮಿನಿಟುಗಳ ಕೈಚಳಕ! ಮೊದಮೊದಲು ಅಲ್ಲಿ ಇಲ್ಲಿ ಮುದ್ರಣಮಾಧ್ಯಮಗಳಿಗೆ ಕೊಟ್ಟ ಲೇಖನಗಳ ಯಥಾಪ್ರತಿಯನ್ನು ಅನಿಯತವಾಗಿ ಇಲ್ಲಿ ಪ್ರಕಟಣೆಗೆ ಸಜ್ಜುಗೊಳಿಸುತ್ತ ಹೋದೆ. ಅಭಯ ಜಾಲತಾಣದ ಸೌಕರ್ಯಗಳ ಮತ್ತು ಸಾರ್ವಜನಿಕ ಉಪಯುಕ್ತತೆಗಳ ಶೋಧ ಮತ್ತು ಅಳವಡಿಕೆ ನಡೆಸುತ್ತಿದ್ದಂತೆ ನನ್ನ ಉತ್ಸಾಹ ಏರುತ್ತ ಹೋದ ಫಲವಾಗಿ ಇಂದು ಅತ್ರಿ.. ಮುಚ್ಚಿಹೋಗಿಲ್ಲ; ವಾಣಿಜ್ಯ ವಹಿವಾಟುಗಳ ಸ್ಥಿತಿ ಕಳಚಿ, ಹೆಚ್ಚು ಸಮಾಜಮುಖಿಯಾಗಿ ದೃಢವಾಗಿದೆ. ಇದಕ್ಕೆ ಸಾಕ್ಷಿಯಾಗಿ ಇಂದು ಅತ್ರಿಯ ಜಾಲತಾಣ ಲಕ್ಷ ವೀಕ್ಷಣೆಯ ಗಡಿ ದಾಟಿದೆ, ಲಕ್ಷ್ಯ ಲಕ್ಷ ಛೇದಿಸಿದೆ!

ಅತ್ರಿಬುಕ್ ಜಾಲತಾಣ ಮೊದಲುಗೊಂಡದ್ದು ವರ್ಡ್ ಪ್ರೆಸ್ಸಿನಲ್ಲಿ. ಸುಮಾರು ಮೂರೂವರೆ ವರ್ಷಗಳಲ್ಲಿ ೭೦,೩೦೩ ವೀಕ್ಷಕರ ಗಮನ ಸೆಳೆದಿತ್ತು. ಈ ವೇಳೆಗೆ ಇದರ ನಿರ್ವಾಹಕ ಅಭಯ, ವರ್ಡ್‌ಪ್ರೆಸ್ಸಿಗಿಂತಲೂ ಬ್ಲಾಗರ್ ಸ್ಪಾಟ್‌ನಲ್ಲಿ ಸೌಲಭ್ಯಗಳ ಹೆಚ್ಚಳವಿರುವುದು ಗಮನಿಸಿ ಅಲ್ಲಿಗೆ ಬದಲಿಸಿದ. ಹಳೆಯ ಜಾಲತಾಣದ ಎಲ್ಲಾ ಲೇಖನ, ಪ್ರತಿಕ್ರಿಯೆಗಳನ್ನು ಯಥಾವತ್ತು ಹೊಸತಕ್ಕೆ ವರ್ಗಾಯಿಸಿದ. ವೀಕ್ಷಕ ಎಣಿಕೆ ಮಾತ್ರ ಮತ್ತೆ ಸೊನ್ನೆಯಿಂದ ತೊಡಗುವಂತಾಗಿತ್ತು. ಆದರೆ ಈಚಿನ ಸುಮಾರು ಎರಡೇ ವರ್ಷದಲ್ಲಿ ಇದು ಸ್ವತಂತ್ರವಾಗಿ ಒಂದು ಲಕ್ಷ ವೀಕ್ಷಣೆಯನ್ನು ದಾಟಿ ಮುಂದುವರಿದಿದೆ. ಇದರ ಮೈಲುಗಲ್ಲುಗಳಲ್ಲಿ ಒಟ್ಟು ೩೦೧ ಲೇಖನಗಳು (ಧಾರಾವಾಹಿಗಳಿರುವುದರಿಂದ ಕಂತುಗಳು ಎನ್ನಲೂಬಹುದು),  ೨೪೪೬ ಪ್ರತಿಕ್ರಿಯೆಗಳು ಸೇರಿವೆ. ಜಾಲತಾಣದ ಪ್ರದರ್ಶನ ಮುಖದ ಹಿಂದೆ (ಯಕ್ಷಗಾನದ ಚೌಕಿ ಅನ್ನಿ!) ಸರಿದರೆ ಇನ್ನಷ್ಟು ಅಂಕಿಸಂಕಿಗಳು, ಜಗತ್ತಿನ ಯಾವ ಯಾವ ಮೂಲೆಯಿಂದ ವೀಕ್ಷಕರಿದ್ದಾರೆ ಎಂದೆಲ್ಲಾ ತಿಳಿಯಬಹುದು. ಹೀಗೆ ಕ್ಷಣಮಾತ್ರದಲ್ಲಿ ಜಾಗತಿಕ ವ್ಯಾಪ್ತಿಪಡೆಯುವ ಈ ಮಾಧ್ಯಮವನ್ನು ನಾವೆಷ್ಟು ಜವಾಬ್ದಾರಿಯುತವಾಗಿ ನಡೆಸಿಕೊಳ್ಳಬೇಕು ಎಂಬ ಎಚ್ಚರವನ್ನೂ ಪಡೆಯಬಹುದು.

ಜಾಲತಾಣದ ಔದಾರ್ಯಗಳನ್ನು ಗುರುತಿಸುತ್ತಿದ್ದಂತೆ ಇದರಲ್ಲಿ ನನ್ನ ತಂದೆಯ ಮುದ್ರಣದಲ್ಲಿಲ್ಲದ ಎಲ್ಲಾ ಕೃತಿಗಳನ್ನು ಧಾರಾವಾಹಿ ಮಾಡಲು ತೊಡಗಿದೆ. ವಿದ್ಯುನ್ಮಾನ ಪುಸ್ತಕಗಳ (ವಿ-ಪುಸ್ತಕ) ಮಾತು ಪ್ರಚಾರಕ್ಕೆ ಬರುತ್ತಿದ್ದಂತೆ ಧಾರಾವಾಹಿಯಾಗಿ ಬಂದ ಪುಸ್ತಕ ಕಂತುಗಳನ್ನು ಒಗ್ಗೂಡಿಸುತ್ತ - ವಿ-ಪುಸ್ತಕ ಪ್ರಕಾಶನವನ್ನೇ ಜಾಲತಾಣಕ್ಕೆ ಸೇರಿಸುವುದು ಸಾಧ್ಯವಾಯ್ತು. ಇಲ್ಲಿ ಸದ್ಯ ಎಂಟಕ್ಕೂ ಮಿಕ್ಕು ವಿ-ಪುಸ್ತಕಗಳು ಲಭ್ಯ. ತಂದೆ ಲೇಖನವನ್ನು ಸದಾ ಸಮಾಜದ ಋಣಸಂದಾಯ ಎಂದೇ ಹೇಳುತ್ತಿದ್ದರು. ಅಂದರೆ ಸರಳ ಜೀವನಯಾಪನೆಗೆ ಬೇಕಾದಷ್ಟನ್ನು ಸಮಾಜ ನನಗೆ ಒದಗಿಸಿದೆ. ಇದರಿಂದ ನನ್ನಲ್ಲಿ ಸೇರಿರುವ ಸಂಪತ್ತನ್ನು ಅಷ್ಟೇ ಜವಾಬ್ದಾರಿಯಿಂದ ನಾನು ಸಮಾಜಕ್ಕೆ ಕೊಡಬೇಕು. ಹೀಗಾಗಿ ಬರವಣಿಗೆ ವಾಣಿಜ್ಯ ವಹಿವಾಟು ಅಲ್ಲದಲ್ಲಿ ತಂದೆ ರಾಯಧನ (ರಾಯಲ್ಟಿ), ಸಮ್ಮಾನ ಮುಂತಾದವನ್ನು ಎಂದೂ ಬಯಸಲಿಲ್ಲ. ಇದೇ ಆದರ್ಶವನ್ನು ಒಪ್ಪಿಕೊಂಡು ನಾನು ಅತ್ರಿ ಬುಕ್ ಸೆಂಟರಿನ ಪ್ರಕಾಶನವನ್ನೂ ನಡೆಸಿದ್ದೆ. ಮುದ್ರಣ ಪುಸ್ತಕೋದ್ಯಮದಲ್ಲಿ ಅನಿವಾರ್ಯವಾಗಿ ಕಾಗದ, ಮುದ್ರಣ, ಬಿಡಿ ಮಾರಾಟಗಾರರ ಆದಾಯಗಳಲ್ಲದೆ (ವಟ್ಟಾ ಅಥವಾ ರಿಯಾಯ್ತಿ) ದಾಸ್ತಾನು ಜಾಗ, ನಿರ್ವಹಣಾ ವೆಚ್ಚಗಳೂ (ಕಟ್ಟುವ, ಸಾಗಿಸುವ, ಬ್ಯಾಂಕ್ ಇತ್ಯಾದಿ) ಸೇರಿಯೇ ಮುದ್ರಿತ ಸರಳ ಬೆಲೆ ನಿಗದಿಯಾಗಬೇಕಾಗುತ್ತದೆ. ಅಂಥದ್ದರಲ್ಲಿಯೂ ಮಾರಿಹೋಗಲು ಅಂದಾಜಿಸಿದ ಕಾಲಮಿತಿಯನ್ನು ಮೀರಿ ಉಳಿಯುವ ಪುಸ್ತಕ ದಾಸ್ತಾನು ಪ್ರಕಾಶನದ ಅಸ್ತಿಭಾರವನ್ನೇ ನಷ್ಟಮಾಡುತ್ತದೆ. (ಆರೆಂಟು ವರ್ಷ ಮೀರಿ ಇನ್ನೂ ನನ್ನ ಕೆಲವು ಪ್ರಕಟಣೆಗಳು ನನ್ನಲ್ಲಿ ಮಾರದೇ ಉಳಿದಿವೆ. ಸಿರಿಗನ್ನಡ ಕೇವಲ ಉಕ್ತಿ ಸೌಂದರ್ಯ ಅಥವಾ ಚಂದದ ಜಾಹೀರಾತು ನುಡಿಗಟ್ಟು ಮಾತ್ರ) ಈ ಯಾವ ಲೆಕ್ಕಾಚಾರಗಳ ಗೋಜಲಿಲ್ಲದಿರುವುದರಿಂದ ವಿ-ಪುಸ್ತಕವನ್ನು (ವೃತ್ತಿಪರವಾಗಿ ಅವಲಂಬಿಸಿದವರು ಮಾರಿಕೊಳ್ಳುವುದು ತಪ್ಪಲ್ಲ.) ನಾನು ಅಂತರ್ಜಾಲದಲ್ಲೇ ಓದಲು ಅಥವಾ ಆಸಕ್ತರು ವಿದ್ಯುನ್ಮಾನ ಸಲಕರಣೆಗಳಿಗೆ ಇಳಿಸಿಕೊಂಡು ಅನುಕೂಲದಲ್ಲಿ ಬಳಸಲು ಮುಕ್ತಗೊಳಿಸಿದ್ದೇನೆ. (ಮುಕ್ತ ವಿ-ಪುಸ್ತಕಲೋಕಕ್ಕೆ ಸ್ವಾಗತ ನೋಡಿ) ಈ ಸಾಲಿನಲ್ಲಿ ಇದೇ ಜನವರಿ ಎರಡನೇ ವಾರದಲ್ಲಿ ಧಾರಾವಾಹಿಯ ನಲ್ವತ್ತೊಂದು ಕಂತುಗಳನ್ನು ಮುಗಿಸಿಕೊಂಡು ತಂದೆಯ ಆತ್ಮಕಥೆ - ಮುಗಿಯದ ಪಯಣ (ಮುದ್ರಣದಲ್ಲಿ ನಾನೂರಮೂವತ್ತಕ್ಕೂ ಮಿಕ್ಕು ಪುಟಗಳ ಗ್ರಂಥ) ಪ್ರಕಟವಾಗಲಿರುವುದು ಒಂದು ಘನ ಮೈಲುಗಲ್ಲು ಎನ್ನಬಹುದು.

ಜಾಲತಾಣ ನನ್ನ ಲೆಕ್ಕಕ್ಕೆ ಸಾರ್ವಜನಿಕದೊಡನೆ, ಸಾರ್ವಕಾಲಿಕವಾಗಿ, ಅನೌಪಚಾರಿಕ ಮತ್ತು ಅಮಿತ ಸಂವಹನಗಳ ಮಾಧ್ಯಮ. ಅದರ ಶಕ್ತಿಯನ್ನು ನನ್ನನುಭವ ಸಿದ್ಧವಾದ ಮತ್ತು ಸಾರ್ವಜನಿಕ ಉಪಯುಕ್ತವಾದ ಮಾಹಿತಿಗಳನ್ನು ಹಂಚಿಕೊಳ್ಳುವಲ್ಲಿ ಮಾತ್ರ ಬಳಸಬೇಕೆಂದೇ ನಿರ್ಧರಿಸಿದ್ದೇನೆ. ಅದು ಆತ್ಮಪ್ರಚಾರದ ಮಾಧ್ಯಮವಾಗಬಾರದೆಂಬ ಎಚ್ಚರವನ್ನೂ ತಳೆದಿದ್ದೇನೆ. ನನ್ನ ಒಂದು ಕಂತಿನ ಲಕ್ಷ್ಯ ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ೨೦ ಗಾತ್ರದ ಅಕ್ಷರಗಳಲ್ಲಿ ಹತ್ತು ಪುಟಗಳಿಗೆ ಕಡಿಮೆಯಿಲ್ಲದ ಬರಹ ಅಥವಾ ಸುಮಾರು ೧೭೦೦ ಶಬ್ದಗಳ ಬಂಧ. (ಚಿತ್ರ, ನಕ್ಷೆ ಪ್ರತ್ಯೇಕ). ಜಾಲತಾಣ ಯಾವುದೇ ಸ್ಥಳಮಿತಿಯನ್ನು ವಿಧಿಸುವುದಿಲ್ಲವಾದ್ದರಿಂದ ಪ್ರತಿ ಕಂತಿನ ಲೇಖನವನ್ನು ನಾನು ಸದಾ ತಾರ್ಕಿಕ ಕೊನೆಗಾಣಿಸಿಯೇ ಮುಗಿಸುತ್ತೇನೆ. (ಮುದ್ರಣ ಮಾಧ್ಯಮದಂತೆ ಪುಟ ಸಂಖ್ಯೆ ನೋಡಿ ಕತ್ತರಿಸಿಲ್ಲ, ಕೊರತೆಯಾಯ್ತೆಂದು ಮದುವೆ ಸಾರು ಮಾಡಿಲ್ಲ!) ನನ್ನ ಅನುಭವ ಕಥನದ ಮೇಲೆ ಸೇರಿಸುವ ಚಿತ್ರ, ರೂಪಿಸಿದ ನಕ್ಷೆಗಳು ಅನುಸರಿಸುವ ಉತ್ಸಾಹಿಗಳಿಗೆ ಪ್ರತಿ ತೆಗೆಯಲು ಅನುಕೂಲವಾಗುವಂತೆ ಜಾಲತಾಣದಲ್ಲಿ ಸ್ವತಂತ್ರವಾಗಿ ಲಭ್ಯವಿರುವಂತೆಯೂ ಮಾಡಿದ್ದೇನೆ. (ಜಾಲತಾಣದ ಮೇಲಂಚಿನಲ್ಲಿ ಪುಸ್ತಕ, ನಕ್ಷಾ, ಚಿತ್ರ, ಮುಂತಾದ ವಿಭಾಗಗಳ ಶೀರ್ಷಿಕೆ ಗಮನಿಸಿ, ಹೊಕ್ಕು ನೋಡಿ.) ಇದಕ್ಕೆ ಹೆಚ್ಚುವರಿಯಾಗಿ ಧ್ವನಿ ವಿಭಾಗವನ್ನೂ ಸೇರಿಸುವ ಮೊದಲ ಹೆಜ್ಜೆಯನ್ನಿರಿಸಿದರೂ ಹೆಚ್ಚು ಮುಂದುವರಿಯಲಾಗಿಲ್ಲ. 

ಜಾಲತಾಣಕ್ಕೆ ನಾನು ಓದುಗರನ್ನು ಆಹ್ವಾನಿಸುವಾಗೆಲ್ಲಾ ಹೇಳುವುದಿದೆ - ಪ್ರತಿಕ್ರಿಯಾ ಅಂಕಣದಲ್ಲಿ ದಯವಿಟ್ಟು ಹೊಗಳಿಕೆಯನ್ನು ತುಂಬಬೇಡಿ. (ಕೇವಲ ವೈಯಕ್ತಿಕ ವಿಚಾರಗಳಿದ್ದರೆ ಪ್ರತ್ಯೇಕ ಮಿಂಚಂಚೆ ಅಥವಾ ಇ-ಮೇಲ್ ಕಳಿಸಿ.) ತಪ್ಪಿದ್ದರೆ ತಿಳಿಸಿ, ನಿಮ್ಮ ಅನುಭವದಲ್ಲಿ ಸಮಾನರುಚಿಯವಿದ್ದರೆ ಸವಿವರ ಹಂಚಿಕೊಳ್ಳಿ; ಜಾಲತಾಣವನ್ನು ಹೆಚ್ಚು ಸಮೃದ್ಧಗೊಳಿಸೋಣ. ಇಂಥ ಅನುಭವಗಳು ಸ್ವತಂತ್ರ ಲೇಖನದಷ್ಟು ವಿಸ್ತರಿಸುವುದಿದ್ದಲ್ಲಿ ಅಂಕಣಬರಹದ ಸ್ಥಾನವನ್ನೇ ವಹಿಸಿಕೊಡುವುದು ನನಗೇನೂ ಭಾರವಲ್ಲ. ಜಾಲತಾಣಕ್ಕೆ ಮುದ್ರಣ ಮಾಧ್ಯಮದಂತೆ ಪುಟದ ಮಿತಿಗಳಿಲ್ಲ, ಖರ್ಚು ಮೊದಲೇ ಇಲ್ಲ! ನನ್ನ ಈ ವಿನಂತಿಯನ್ನು ಮನ್ನಿಸಿ ಹಿರಿಯ ಲೇಖಕರಾದ ಸಿ.ಎನ್. ರಾಮಚಂದ್ರನ್ ಅವರಿಂದ ತೊಡಗಿ ಸುಮಾರು ಹನ್ನೆರಡಕ್ಕೂ ಮಿಕ್ಕು ಲೇಖಕರು ಉದಾರವಾಗಿ ಲೇಖನಗಳನ್ನು ಕೊಟ್ಟು, ಜಾಲತಾಣಕ್ಕೆ ಹೆಚ್ಚಿನ ಘನತೆ ತಂದಿದ್ದಾರೆ. ಅನ್ಯ ಲೇಖಕರು ವಿಭಾಗವನ್ನೇ ನೀವು ಆಯ್ದು ಓದುವ ಅವಕಾಶ ಇದೆ ಗಮನಿಸಿ (ಇದರಲ್ಲಿ ಜಿಟಿನಾ ಸೇರಿಸಿಲ್ಲ. ಅವರಿಗೆ ಪ್ರತ್ಯೇಕ ವಿಭಾಗವನ್ನೇ ಕೊಟ್ಟಿದ್ದೇನೆ).

ವಿದ್ಯುನ್ಮಾನ ವಹಿವಾಟುಗಳು ಇಂದು ವಿಕಸಿಸಿರುವ ಪರಿಯಲ್ಲಿ ಅಂತರ್ಜಾಲಕ್ಕೇರಿಸಿದ ಪುಸ್ತಕ, ಮಾಹಿತಿಗಳೆಲ್ಲವನ್ನೂ ವಾಣಿಜ್ಯ ಸರಕುಗಳನ್ನಾಗಿಸುವ ಅವಕಾಶಗಳು ಧಾರಾಳವಿವೆ. ಅವನ್ನು ನಾನು ನಿರಾಕರಿಸಿಯೇ ನಡೆದಿರುವುದರಿಂದ ಅಂತರ್ಜಾಲದಲ್ಲಿ ಈಗಾಗಲೇ ಜನಪ್ರಿಯತೆಯನ್ನು ಗಳಿಸಿದ ಇತರ ಜಾಲತಾಣಗಳನ್ನು ಆಶ್ರಯಿಸಿಲ್ಲ; ಸ್ವತಂತ್ರ ಜಾಲತಾಣದಲ್ಲಿ ನಿಂತಿದ್ದೇನೆ. ಆದರೂ ಕಾಲಕಾಲಕ್ಕೆ ವಿಷಯಾಧಾರಿತವಾಗಿ ಇಲ್ಲಿನ ಹಲವು ಲೇಖನಗಳನ್ನು ಇತರ ಕೆಲವು ಜಾಲತಾಣಗಳು ಮರುಪ್ರಕಟಿಸಲು ಉತ್ಸಾಹ ತೋರಿದ್ದಿದೆ. ಅಂಥಲ್ಲೆಲ್ಲ ಯಾವುದೇ ಆರ್ಥಿಕ ನಿರೀಕ್ಷೆಗಳಿಲ್ಲದೆ ನಾನು ಅನುಮತಿಸಿದ್ದೇನೆ. ಆದರೆ ಅಷ್ಟೇ ಖಡಕ್ಕಾಗಿ ಲೇಖನವನ್ನು ಯಾವುದೇ ತಿದ್ದುಪಡಿಗಳಿಗೊಳಪಡಿಸದೇ (ಮುಖ್ಯವಾಗಿ, ಕತ್ತರಿಸಬಾರದು!) ಪ್ರಕಟಿಸಬೇಕು ಮತ್ತು ಮೂಲಜಾಲತಾಣದ ಸ್ಮರಣೆಯನ್ನು ಸ್ಪಷ್ಟವಾಗಿ ಕಾಣಿಸಬೇಕು ಎಂಬೆರಡು ನಿಬಂಧನೆಗಳನ್ನು ಮಾತ್ರ ಹೇರಿದ್ದೇನೆ. ಹೀಗೆ ಅವಧಿ, ಕೆಂಡಸಂಪಿಗೆಯೇ ಮೊದಲಾದ ಜಾಲತಾಣಗಳೂ ವಿಶಿಷ್ಟ ಕಲಾ ಅಥವಾ ಸಾಂಸ್ಕೃತಿಕ ಬಳಗಪೋಷಕ ನಿಯತಕಾಲಿಕಗಳಾದ ನೂಪುರಭ್ರಮರಿ, ತುಳುವ, ಬಲ್ಲಿರೇನಯ್ಯಗಳು ಬಳಸಿಕೊಂಡದ್ದೂ ಉಂಟು. ಸದ್ಯ ಆರೆನ್ನೆನ್ ಲೈವ್ ಎನ್ನುವ ಜಾಲತಾಣ ನನ್ನ ಜಾಲತಾಣದ ಹಳೆಯ ಒಂದೊಂದು ಕಂತನ್ನು ತನ್ನದೇ ಆಯ್ಕೆಯಲ್ಲಿ ಪ್ರತಿ ಸೋಮವಾರಕ್ಕೊಂದು ಖಾಯಂ ಅಂಕಣ ಬರಹವನ್ನಾಗಿ ಬಳಸಿಕೊಳ್ಳುತ್ತಲಿದೆ.

ಅಂತರ್ಜಾಲದ ನಿಭಾವಣೆಯಲ್ಲಿ ಪಳಗಿರುವ ಎಷ್ಟೋ ಮಂದಿ ನನ್ನ ತಾಣದ ನೇರ ಸದಸ್ಯತನದ ಪ್ರಯೋಜನವನ್ನು ಪಡೆಯುತ್ತಿರುವುದು ನನಗೆ ಪರೋಕ್ಷವಾಗಿ ತಿಳಿದಿದೆ, ಸಂತೋಷವಿದೆ. (ನನ್ನಲ್ಲಿ ಅವರ ಲೆಕ್ಕವಿಲ್ಲ.) ನಾನು ಉದ್ದೇಶಪೂರ್ವಕವಾಗಿ ಜಾಲತಾಣದ ಪ್ರಚಾರವನ್ನು ಎರಡು ಸ್ತರಗಳಲ್ಲಿ ಮಾಡುತ್ತಿದ್ದೇನೆ. ನನ್ನ ಪರಿಚಯಕ್ಕೆ ಬಂದು, ನನ್ನ ಬರವಣಿಗೆ ಬಯಸಿದವರೆಲ್ಲರ ಮಿಂಚಂಚೆ ವಿಳಾಸ (ಮೇಲ್ ಐಡಿ) ಸಂಗ್ರಹಿಸಿಕೊಳ್ಳುತ್ತಲೇ ಇರುತ್ತೇನೆ. ಅವನ್ನು ನನ್ನ ಗೂಗಲ್ ಅಂಚೆಪೆಟ್ಟಿಗೆಯಲ್ಲಿ ಸಹಜವಾಗಿರುವ ವರ್ಗೀಕರಣ ದಾಸ್ತಾನಿನಲ್ಲಿ ಜಾಲಿಗರ ಬಳಗವೆಂದೇ ಸಜ್ಜುಗೊಳಿಸಿಟ್ಟಿದ್ದೇನೆ. ಮತ್ತೆ ಪ್ರತಿ ಹೊಸ ಲೇಖನ ಪ್ರಕಟವಾಗುತ್ತಿದ್ದಂತೆ ಜಾಲಿಗ ಬಳಗಕ್ಕೆ ಅದರ ಸ್ವಾರಸ್ಯವನ್ನು ಚುಟುಕದಲ್ಲಿ ತಿಳಿಸುವ ಮತ್ತು ಸಿದ್ಧಸೇತು ಕೊಡುವ ವೈಯಕ್ತಿಕ ಪತ್ರ ಕಳಿಸುತ್ತೇನೆ. ಜಾಲತಾಣದ ಆರಂಭದ ದಿನಗಳಲ್ಲಿ ಪ್ರಕಟಣೆಗಳಿಗೆ ದಿನಮಾನದಲ್ಲಿ ನಿಯತತೆ ಇಟ್ಟುಕೊಂಡಿರಲಿಲ್ಲ. ಆದರೀಗ ಅವನ್ನೆಲ್ಲ ಶಿಸ್ತಿಗೊಳಪಡಿಸಿ ಪ್ರತಿ ಮಂಗಳವಾರ ಬೆಳಿಗ್ಗೆ ನನ್ನ ತಂದೆಯವರ ಕೃತಿಯ ಧಾರಾವಾಹಿ ಮತ್ತು ಶುಕ್ರವಾರ ಬೆಳಿಗ್ಗೆ ನನ್ನದು ಬರುವಂತೆ ಮಾಡಿದ್ದೇನೆ. ಸಹಜವಾಗಿ ನನ್ನ ಜಾಲಿಗರಿಗೆ ವಾರಕ್ಕೆರಡು ಅಂಚೆ ಹೋಗುವುದು ಖಾತ್ರಿಯಾಗಿದೆ. ಇದು ತಿಳುವಳಿಕೆ ಕೊಡುವ ಸಮೂಹ ಪತ್ರ ಆದರೂ ಹಲವರು ಅನುಕೂಲದಲ್ಲಿ ವೈಯಕ್ತಿಕವಾಗಿ ಉತ್ತರಿಸುವುದಿದೆ. ಕೆಲವರಿಂದ ಯಾಂತ್ರಿಕ ರಸೀದಿಯಂಥ ಉತ್ತರಗಳು ಬರುವುದೂ ಇದೆ. ಲೇಖನದ ವಿಷಯಕ್ಕೆ ಸಂಬಂಧಿಸಿದಂತೆ  ಉತ್ತರಿಸಿದವರ ಮಾತುಗಳಲ್ಲಿ ಸಾರ್ವಜನಿಕವಾಗಿ ಹಂಚಿಕೊಳ್ಳಬಹುದಾದ ವಿಷಯವಿದ್ದರೆ ನಾನವನ್ನು ಔಚಿತ್ಯವರಿತು ಜಾಲತಾಣದಲ್ಲಿ, ಅವರ ಹೆಸರಿನಲ್ಲೇ ಪ್ರಕಟಿಸಿದ್ದೇನೆ ಅಥವಾ ಅವರಿಗೆ ನೇರ ಉತ್ತರಿಸಿದ್ದೂ ಇದೆ. ಒಂದಿಬ್ಬರು ಸ್ಪಷ್ಟವಾಗಿ ನಾನು ಪತ್ರ ಕಳಿಸುವ ಕ್ರಮವನ್ನೇ ನಿರಾಕರಿಸಿದ್ದಿದೆ. ಅಂತರ್ಜಾಲದ ಅಂಚೆಪೆಟ್ಟಿಗೆ ವ್ಯವಸ್ಥೆ ಅಯಾಚಿತ ಪತ್ರಗಳನ್ನು, ಕಳಿಸಿದವರಿಗೆ ಮುಜುಗರ ಉಂಟುಮಾಡದಂತೆ ನಿರಾಕರಿಸಲು ಕೆಲವು ಅವಕಾಶಗಳನ್ನು ಕೊಡುತ್ತದೆ. ಹಾಗೆ ಮಾಡದೆ, ನನಗೇ ಬರೆದು ತಿಳಿಸಿದವರ ಕಾಳಜಿಯನ್ನು ಗೌರವಿಸಿ, ಉದ್ದೇಶವನ್ನು ಅಪಾರ್ಥಗ್ರಹಿಸದೆ, ಯಾವುದೇ ಸಬೂಬು ಹೇಳದೇ ಮನ್ನಿಸಿದ್ದೇನೆ, ಅವರ ವಿಳಾಸವನ್ನು ಜಾಲಿಗರ ಪಟ್ಟಿಯಿಂದ ರದ್ದುಪಡಿಸಿದ್ದೇನೆ.

ಎರಡನೆಯ ಪ್ರಚಾರಾವಕಾಶ - ಮುಖಪುಸ್ತಕ (ಫೇಸ್ ಬುಕ್). ಇಂದು ಚಿತ್ರಗ್ರಹಣ ತ್ರಿವಿಕ್ರಮ ಗಾತ್ರದಲ್ಲಿ ಬೆಳೆದಪರಿಗೆ ಅಪ್ಯಾಯಮಾನವಾಗಿ ಒದಗುತ್ತಿದೆ ಮುಖಪುಸ್ತಕ. ಆಸಕ್ತಿ, ಅನುಭವ ಮತ್ತು ಅಧ್ಯಯನವಿಲ್ಲದಿದ್ದರೂ ಕೈಯಲ್ಲಿ ಹಿಡಿದ ಯಂತ್ರ ಸಾಮರ್ಥ್ಯದಿಂದ, ಅಂತರ್ಜಾಲ ಮತ್ತು ಗಣಕ ಮಹಾತ್ಮ್ಯದಿಂದ ಬಹು-ಕಾಳಜಿವಲಯಗಳಲ್ಲಿ ಮಿಂಚಲೆಳಸುವ ಮಂದಿಯ ದೌರ್ಬಲ್ಯವೂ ಆಗಿ ಬೆಳೆದಿದೆ ಮುಖಪುಸ್ತಕ. ಸ್ವಂತ-ಸಾರ್ವಜನಿಕಗಳೆಲ್ಲವನ್ನು ಮರೆತು, ತಮ್ಮ ಭಾವಭಂಗಿಗಳನ್ನೂ ನಿತ್ಯ ಚಟುವಟಿಕೆಗಳನ್ನೂ ಇಲ್ಲಿ ನಮೂದಿಸುವ ಜನ ಬಹಳ. ಇಲ್ಲಿ ನಾನು ಖಾತೆ ತೆರೆದು ನಿರ್ಯೋಚನೆಯಿಂದ ಜಾಲತಾಣದ ಪ್ರಚಾರಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದೇನೆ. ನನ್ನ ಇರವನ್ನು ಸ್ಥಾಪಿಸಲಿಕ್ಕಾಗಿ ಕೆಲವೊಮ್ಮೆ ನಾನೇ ಕೆಲವು ಲಘು ಟಿಪ್ಪಣಿಗಳನ್ನು ತುಂಬಿದ್ದಿದೆ. ಅನ್ಯ ನಮೂದುಗಳಿಗೆ ಚುಟುಕು ಪ್ರತಿಕ್ರಿಯೆಗಳನ್ನೂ ಹಾಕಿದ್ದಿದೆ. ಇದು ಮುಖಪುಸ್ತಕದ ಅನೌಪಚಾರಿಕತೆಯನ್ನು ಪೋಷಿಸುವುದರೊಡನೆ ವಿಚಾರದ ಕಿಡಿಯನ್ನು ಮುಟ್ಟಿಸೀತು ಎನ್ನುವುದು ನನ್ನ ಆಶಯ. ನನ್ನ ಅಥವಾ ಮಿತ್ರರುಗಳದ್ದೇ ಆದರೂ ಹೆಚ್ಚಿನ ಮಾಹಿತಿಯನ್ನೊದಗಿಸುವ ಜಾಲತಾಣದ ಸೇತುವನ್ನಂತು ನಿರ್ಲಜ್ಜವಾಗಿ ಒದಗಿಸುವುದೂ ಇರುತ್ತದೆ. (ಹೀಗೆ ಮಾಡುವಲ್ಲಿ ನಾನೇನೋ ಮಹಾ ಕಡಿದು ಹಾಕಿದ್ದೇನೆ ಎಂದಲ್ಲ, ಇನ್ನೂ ಎಷ್ಟು ಕೆಲಸ ನಡೆದಿದೆ ಎಂದು ಸೂಚಿಸುವುದು ನನಗೆ ಮುಖ್ಯವಾಗುತ್ತದೆ)

ಮುಖಪುಸ್ತಕವನ್ನು ಹೆಚ್ಚು ರೂಢಿಸಿಕೊಳ್ಳಲು ಸಾಮಾನ್ಯವಾಗಿ ಗೆಳೆತನ ಕೋರಿ ಬರುವ ಎಲ್ಲಾ ಹೆಸರುಗಳನ್ನೂ ನಾನು ಅನುಮೋದಿಸುತ್ತೇನೆ. ಅಲ್ಲದೆ, ಜಾಲತಾಣದಲ್ಲಿ ವಾರಕ್ಕೊಂದು ತುಣುಕಿನಂತೆ ಪುಸ್ತಕಗಳನ್ನು ಧಾರಾವಾಹಿಸಿದಂತೆ ಇಲ್ಲಿ ದೈನಿಕ ಧಾರಾವಾಹಿಯೊಂದನ್ನೂ ನಡೆಸುತ್ತಿದ್ದೇನೆ.  ಇಂಗ್ಲಿಷಿನಲ್ಲಿ ಅಲೀಸ್ ಕ್ಯಾಲಪ್ರೈಸ್ ಸಂಪಾದಿಸಿದ ಕೋಟಬಲ್ ಐನ್ಸ್‌ಟೈನ್ಅನ್ನು ನನ್ನ ತಂದೆ (ಜಿಟಿನಾ) ೧೯೯೮ರಷ್ಟು ಹಿಂದೆಯೇ ಕನ್ನಡಕ್ಕನುವಾದಿಸಿ, ಪುಸ್ತಕವಾಗಿ ಪ್ರಕಟಿಸಿದ್ದರು.[ಉಲ್ಲೇಖನೀಯ ಐನ್ಸ್ ಟೈನ್ ಪುಸ್ತಕದ ಮುಖಪುಟ ಹಾಕು] ಅದು ಸದ್ಯ ಮುದ್ರಣದಲ್ಲಿಲ್ಲ. ಹಾಗಾಗಿ ಅದನ್ನು ವಿ-ಪುಸ್ತಕ ಮಾಡುವ ದಾರಿಯಲ್ಲಿ ನಾನು ಸದ್ಯ ಮುಖಪುಸ್ತಕವನ್ನು ಬಳಸಿಕೊಳ್ಳುತ್ತಿದ್ದೇನೆ. ದಿನಕ್ಕೊಂದು ಐನ್ಸ್‌ಟೈನ್ ಆಣಿಮುತ್ತು ಈಗ ಸತತ ನೂರಾಮೂವತ್ತೆಂಟು ದಿನ ಮೀರಿ ಧಾರಾವಾಹಿಯಾಗಿ ನಡೆದಿದೆ, ವರ್ಷ ಮೀರಿಯೂ ಹರಿಯಲು ಸಜ್ಜುಗೊಂಡಿದೆ.

ಸಾಮಾನ್ಯವಾಗಿ ನಾನು ಜಾಲಿಗರಿಗೆ ಕಳಿಸಿದ ಪತ್ರದ ಪ್ರತಿಯನ್ನೇ ಮುಖಪುಸ್ತಕದಲ್ಲೂ ಪ್ರಕಟಿಸುತ್ತೇನೆ. ಕೆಲವೊಮ್ಮೆ ಲೇಖನದೊಡನೆ ಪ್ರಕಟವಾಗದ ಹೆಚ್ಚುವರಿ ಚಿತ್ರಗಳಿದ್ದರೆ, ರೋಚಕ ವಿಷಯಗಳಾದರೆ ಬನ್ನಿ, ನೋಡಿ, ಮರೆತು ನಿರಾಶರಾಗದಿರಿ ಮಾದರಿಯ ಜಾಹೀರಾತು ತಂತ್ರಗಳನ್ನೂ ಮುಖಪುಸ್ತಕದಲ್ಲಿ ಪ್ರಯೋಗಿಸಿ ನೋಡಿದ್ದೇನೆ. ಉದಾಹರಣೆಗೆ ಸಮ್ಮಿಲನ ಶೆಟ್ಟಿ ಚಿಟ್ಟೆ ಉದ್ಯಾನವನ ಕುರಿತ ನನ್ನ ಲೇಖನ  ಪ್ರಕಟಣೆಗೆ ಸುಮಾರು ಹದಿನೈದು ದಿನಗಳ ಮೊದಲೇ ಮುಖಪುಸ್ತಕದಲ್ಲಿ ಪ್ರಚಾರಕ್ಕೆ ತೊಡಗಿದ್ದೆ. ಬರಲಿರುವ ಲೇಖನದ ಸ್ಥಳ, ವಿಷಯದ ಕುರಿತಂತೆ ನಿಗೂಢತೆಯನ್ನುಳಿಸಿಕೊಂಡು ನಡೆಸಿದ ಪ್ರಚಾರ ತಂತ್ರ ಮೊದಲನೇ ದಿನದಲ್ಲೇ ಮುನ್ನೂರಕ್ಕೂ ಮಿಕ್ಕು, ಒಟ್ಟಾರೆ ನಾಲ್ಕು ದಿನಗಳ ಅವಧಿಯಲ್ಲಿ ಸುಮಾರು ಏಳ್ನೂರರವರೆಗೂ ವೀಕ್ಷಕರನ್ನು ಕೊಟ್ಟಿತ್ತು! 

ಸಕ್ಕರೆ ಸಿನಿಮಾ ಮಗನದ್ದೇ ಆದ್ದರಿಂದ ಬಿಡುಗಡೆಗೆ ಮುನ್ನ ತುಸು ಹೆಚ್ಚೇ ಎನ್ನುವಂತೆ ಮುಖಪುಸ್ತಕದಲ್ಲಿ ಪ್ರಚಾರ ಟಿಪ್ಪಣಿಗಳನ್ನು ಸಚಿತ್ರ ಹಾಕಿದ್ದೆ. ಅನಂತರ ಅವನ್ನು ಒಂದು ಕಾಲದ ಸತ್ಯ ಎನ್ನುವ ನೆಲೆಯಲ್ಲಿ ಸಂಕಲಿಸಿ, ಇಲ್ಲೇ ಜಾಲತಾಣಕ್ಕೂ ತಂದಿದ್ದೆ. (ಓದುಗ-ವೀಕ್ಷಕರು ಅದನ್ನು ಗೆಳೆ-ಸಂಬಂಧದ ವಿಸ್ತರಣೆ ಎಂಬ ಔದಾರ್ಯದಲ್ಲೇ ಓದಿ, ಸ್ಪಂದಿಸಿದ್ದಿರಬೇಕು.) ನನ್ನ ಅನುಭವಕ್ಕೆ ಬಂದಂತೆ ಮುಖಪುಸ್ತಕ ಹೆಚ್ಚಾಗಿ ಸಾರ್ವಜನಿಕದಲ್ಲಿ ಮುಖವಿಲ್ಲದವರ (ಕೆಟ್ಟ ಅರ್ಥದಲ್ಲಲ್ಲ, ಶ್ರೀಸಾಮಾನ್ಯರ) ಮುಖವಾಣಿ. ಇಲ್ಲಿ ಗಂಭೀರ ಗ್ರಹಿಕೆಗಳು, ಓದು ಮತ್ತು ಚಿಂತನಾಪರವಾದ ಪ್ರತಿಕ್ರಿಯೆಗಳು ಕಡಿಮೆ. ಕೇವಲ ಯಾಂತ್ರಿಕ ಚಿಟಿಕೆ ಮಾತ್ರದಿಂದ (ಲೈಕ್ ಹೊಡೆಯುವುದು!) ಇಲ್ಲಿ ಜನಪ್ರಿಯತೆಯನ್ನು ಗಳಿಸುವ ಮತ್ತು ಸಾರುವ ಮಂದಿ ಮೆರೆಯುತ್ತಾರೆ. ಸಹಜವಾಗಿ ನನ್ನ ಜಾಲತಾಣಕ್ಕೆ ಭೇಟಿಕೊಡದೆ ಲಾಯಕ್ ಚಿಟಿಕೆ ಹೊಡೆಯುವ ಮಂದಿ ಇದ್ದಾರೆ. ನನ್ನ ನಾಲ್ಕು ಸಾಲಿನ ಪತ್ರವನ್ನಷ್ಟೇ ಓದಿ, ಅದು ಜಾಲತಾಣದಲ್ಲಿರುವ ದೊಡ್ಡ ಲೇಖನಕ್ಕೆ ಕೈಕಂಬ ಎನ್ನುವುದನ್ನು ಅರ್ಥಮಾಡಿಕೊಳ್ಳದೆ, ಅದನ್ನೇ ವಿಮರ್ಶಿಸುವ ಮಂದಿಯನ್ನೂ ಕಂಡಿದ್ದೇನೆ. ಆದರೂ ಜಾಲತಾಣದ ನಿರ್ವಹಣಾ ನಕ್ಷೆಗಳನ್ನು ನೋಡಿದಾಗ ಲಕ್ಷ ವೀಕ್ಷಣೆಯಲ್ಲಿ ಮುಖಪುಸ್ತಕದ ದಾರಿ ಅನುಸರಿಸಿದವರು ಸಾಕಷ್ಟು ಮಂದಿಯಿದ್ದಾರೆ ಎನ್ನುವುದು ಸಮಾಧಾನದ ಸಂಗತಿ. 

ಕಳೆದ ಐದೂವರೆ ವರ್ಷಗಳಲ್ಲಿ ನನ್ನ ಜಾಲತಾಣಕ್ಕೆ ಗರಿಷ್ಠ ವೀಕ್ಷಣೆ ಮತ್ತು ಅನ್ಯ ಪ್ರಚಾರ ಪ್ರಚೋದನೆಗಳಿಲ್ಲದೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದ ಸನ್ನಿವೇಶಗಳು ಎರಡು. ಅವು ಅತ್ರಿ ಬುಕ್ ಸೆಂಟರಿಗೆ ಸಂಬಂಧಪಟ್ಟವೇ ಎನ್ನುವುದನ್ನು ನಾನಿಲ್ಲಿ ಧನ್ಯತೆಯಿಂದ ಸ್ಮರಿಸುತ್ತೇನೆ. ಮೊದಲನೆಯದರಲ್ಲಿ ನಾನು ಕೇವಲ ಅತ್ರಿಯ ಪ್ರಕಾಶನ ವಿಭಾಗವನ್ನು ಮುಚ್ಚುತ್ತಿರುವ ಘೋಷಣೆ ಹೊರಡಿಸಿದ್ದೆ. ಆ ದಿನಗಳಲ್ಲಿ ನಾನು ದೈನಂದಿನ ವೀಕ್ಷಕರ ಲೆಕ್ಕ ಪ್ರತ್ಯೇಕ ಇಟ್ಟಿರಲಿಲ್ಲ. ಆದರೆ ಪ್ರತಿಕ್ರಿಯೆಗಳ ಸಂದೋಹ ಮಾತ್ರ ಅಪೂರ್ವವಾಗಿ ೫೩ಕ್ಕೇರಿತ್ತು. ಇದರಲ್ಲಿ ನಾನು ಎಲ್ಲೂ ಸೂಚಿಸದ ಮತ್ತು ಉದ್ದೇಶಪಡದ ಸಂದೇಶವನ್ನು ಹಲವು ಓದುಗರು ಓದಿಕೊಂಡು ಗೊಂದಲಿಸಿದ್ದರು; ಪ್ರಕಾಶನವಲ್ಲ, ಅತ್ರಿ ಪುಸ್ತಕ ಮಳಿಗೆಯೇ ಮುಚ್ಚಿಹೋಗುತ್ತಿದೆ ಎನ್ನುವುದು ಅವರ ಆತಂಕ! ಆದರೆ ಸುಮಾರು ಎರಡು ವರ್ಷ ಕಳೆದು ನಿಜವಾಗಿಯೂ ಪುಸ್ತಕ ಮಳಿಗೆಯ ಮುಚ್ಚೋಣವನ್ನೇ ಅತ್ರಿ ಬುಕ್ ಸೆಂಟರ್ ಮುಚ್ಚಿ, ವಾನಪ್ರಸ್ಥ!’ ಎಂದು,  ಘೋಷಿಸಿದಾಗ ಒಂಬತ್ತು ದಿನಗಳ ಅಂತರದಲ್ಲಿ ಎರಡುಸಾವಿರಕ್ಕೂ ಮಿಕ್ಕು ವೀಕ್ಷಕರು ಭೇಟಿಕೊಟ್ಟು ೬೮ ಪ್ರತಿಕ್ರಿಯೆಗಳನ್ನು ದಾಖಲಿಸಿಬಿಟ್ಟರು!

ಅಂತರ್ಜಾಲದಿಂದ ಇಂದು ಗ್ರಂಥಾಲಯದ ಕಲ್ಪನೆಯೇ ಅಡಿಮೇಲಾಗಿದೆ. ಸಾಲೋಸಾಲು ಕಪಾಟುಗಳಲ್ಲಿ ಮುದ್ರಿತ ಪುಸ್ತಕಗಳನ್ನು ಗಿಡಿಯುವುದು, ವಿಷಯ, ಪುಸ್ತಕ, ಪುಟ ಎಂದು ಹುಡುಕುವುದು, ಅರ್ಥ, ಮುಂದುವರಿದ ಉಲ್ಲೇಖಗಳ ಶೋಧಕ್ಕಾಗಿ ಪುನರಪಿ ಕಪಾಟು, ವಿಷಯ, ಪುಸ್ತಕ, ಪುಟ ಎಂದು ಗಿರಕಿಹೊಡೆಯುತ್ತ ಅನಂತಕ್ಕಿಟ್ಟ ಸುರುಳೇಣಿಯನ್ನು ಏರಬೇಕಾಗಿಲ್ಲ. ಸಾರ್ವಜನಿಕಕ್ಕೆ ಕಾಣುವ ಜಾಲತಾಣದ ಲೇಖನಗಳ ಹಿನ್ನೆಲೆಯಲ್ಲಿ ಅಸಂಖ್ಯ, ಅನೂಹ್ಯ ಹೊಂದಾಣಿಕೆಗಳಿವೆ. ಸಣ್ಣ ಉದಾಹರಣೆ ಕೊಡುವುದಾದರೆ ಇಲ್ಲಿ ಕಾಣುವ ಚಿತ್ರಗಳು ಮತ್ತು ವಿಡಿಯೋ ತುಣುಕುಗಳು ಯೂ-ಟ್ಯೂಬ್‌ನಂಥಾ ಇನ್ನೊಂದೇ ವ್ಯವಸ್ಥೆಯಲ್ಲಿ ನೆಲೆಗೊಂಡಿರುತ್ತವೆ. ಹಾಗೇ ಇಲ್ಲಿನ ಸೇತುಗಳು ಇನ್ಯಾವುದೋ ಅಪರಿಚಿತ ನೆಲೆಗಳನ್ನು ಕ್ಷಣಮಾತ್ರದಲ್ಲಿ ನಮ್ಮೆದುರು ಅನಾವರಣಗೊಳಿಸುತ್ತಿರುತ್ತವೆ. ಜಾಲತಾಣದ ಓದು ಮುದ್ರಿತ ಅಕ್ಷರಗಳ ಓದಿನಿಂದ ಎಷ್ಟೋ ಮಿಗಿಲಾಗಿ ವೀಕ್ಷಣೆ, ಕ್ರಿಯೆ, ಶಬ್ದಗಳೇ ಮೊದಲಾದ ಆಯಾಮಗಳನ್ನೂ ಏಕಕಾಲಕ್ಕೆ ವ್ಯಾಪಿಸಿ, ಪ್ರಭಾವಿಯಾಗಿದೆ. ನನ್ನದೇ ಉದಾಹರಣೆ ನೋಡಿ: ನನ್ನ ಕ್ರಿಯಾತ್ಮಕ ಎನ್ನುವ ಸುಮಾರು ಐವತ್ತು ವರ್ಷಗಳ ಅವಧಿಯ ಅನುಭವವನ್ನು ಇತರರಿಗೆ ಕಟ್ಟಿಕೊಡಬೇಕಾದರೆ ಒಡ್ಡಿಕೊಳ್ಳುವ ಪಾತ್ರೆಗಳು ನೆನಪು, ಬರವಣಿಗೆ (ಪುಸ್ತಕ), ಚಿತ್ರ ಇತ್ಯಾದಿ. ಈ ಎಲ್ಲ ಉಪಾಧಿಗಳು ಕಾಲಕರ್ಮದಲ್ಲಿ ವಿಪರೀತ ಕ್ಷಯಿಸಿರುತ್ತವೆ, ಎಷ್ಟೋ ಬಾರಿ ಪೂರ್ಣ ವ್ಯರ್ಥವೇ ಆಗಿರುತ್ತವೆ. ಅವನ್ನೇ ಗಣಕಲೋಕಕ್ಕೆ, ಅದರ ವಿಸ್ತೃತ ಭಂಡಾರವಾಗಿ ಅಂತರ್ಜಾಲಕ್ಕೆ (ಜಾಲತಾಣದ ಮೂಲಕ) ಏರಿಸಿದಾಗ ವ್ಯಕ್ತಿಜೀವನದ ಸೀಮಿತ ಕಾಲಪ್ರಪಂಚಕ್ಕೆ ಹೋಲಿಸಿಕೊಂಡು ಹೇಳುವುದೇ ಆದರೆ ಅದು ನಿರ್ವಿವಾದವಾಗಿ ಅಮರ, ಅಪಾರ!

ಹುಟ್ಟಿದ ದಿನಾಂಕ, ಮದುವೆ ದಿನಾಂಕ, ವರ್ಷಾರಂಭ ಎಂದಿತ್ಯಾದಿ ಹಾರಾಡುವವರನ್ನೆಲ್ಲ ನಾನು ಗೇಲಿಮಾಡುತ್ತಿರುತ್ತೇನೆ. ಭೂಮಿಗೆ ಅತ್ಯಂತ ಕಿರಿದಾದ ಮನುಷ್ಯ ಜೀವಕ್ಕೇ ಲಕ್ಷಾಂತರ ವರ್ಷಗಳು ಸಂದಿವೆ. ಅದರ ವರ್ತಮಾನದ ಮುಖದಲ್ಲಿ ಸರಾಸರಿ ಅರುವತ್ತೆಪ್ಪತ್ತು ವರ್ಷವನ್ನಷ್ಟೇ ಕಾಣಬಲ್ಲ ವ್ಯಕ್ತಿಗೆ ಗ್ರಹಿಸುವ ತಾಕತ್ತಿದ್ದರೆ ಪ್ರತಿ ಕ್ಷಣವೂ ಅದ್ಭುತ, ಇಲ್ಲಾ ಏನೂ ಅಲ್ಲ. ಹಾಗಾಗಿ ಜಾಲತಾಣ ಕೊಡುವಷ್ಟೇ ಲೆಕ್ಕಾಚಾರ, ದಾಖಲೆಗಳನ್ನಷ್ಟೇ (ಟೆಲಿ-ಚಾನೆಲ್ಲುಗಳ ಟೀಯಾರ್ಪೀ?) ನೋಡುತ್ತ ಕೂರುವಷ್ಟು ತಾಳ್ಮೆವಂತ ನಾನಲ್ಲ. ಮನೆಯಲ್ಲಿದ್ದಾಗ ಪ್ರತಿ ದಿನದ ಮೂರೂ ಹೊತ್ತು ವಾರದ ಏಳೂ ದಿನ ವೀಕ್ಷಕರ ವರ್ತನೆಯ ಮೇಲೊಂದು ನನ್ನದೇ ಕಣ್ಣಿಟ್ಟಿರುತ್ತೇನೆ. ಮುಖಪುಸ್ತಕಕ್ಕೆ ದಿನದ ಬೇರೆ ಬೇರೆ ಹೊತ್ತಿನಲ್ಲಿ ಭೇಟಿಕೊಡುವವರಿಗೆ ನನ್ನ ನಮೂದುಗಳು ಕಣ್ತಪ್ಪಿಹೋಗದಂತೆ ಕೆಲವನ್ನು ಬೇರೆ ಬೇರೆ ಹೊತ್ತಿನಲ್ಲಿ ಪ್ರಕಟಿಸಿದ್ದೂ ಇದೆ. 

ಜಾಲತಾಣದ ನನ್ನ ಬಹುತೇಕ ಲೇಖನಗಳು ಕೆಲವು ದಿನಗಳ ಮುಂಚಿತವಾಗಿಯೇ ಕಾಲನಿರ್ದೇಶನದೊಡನೆ ಅಂತರ್ಜಾಲಕ್ಕೇರಿರುತ್ತವೆ. (ಒಂದು ಹಂತದಲ್ಲಿ ಮುಗಿಯದ ಪಯಣವನ್ನು ಎಲ್ಲ ಮಂಗಳವಾರಗಳಿಗೆಂಬಂತೆ ಮೂರು ತಿಂಗಳು ಮುಂಚಿತವಾಗಿಯೇ ಏರಿಸಿಯಾದದ್ದೂ ಇತ್ತು!) ನಿಗದಿತ ದಿನಾಂಕದಂದು ಅವು ಕರಾರುವಾಕ್ಕಾಗಿ ಸಾರ್ವಜನಿಕಕ್ಕೆ ತೆರೆದುಕೊಳ್ಳುತ್ತವೆ (ಪಾಶ್ಚಾತ್ಯ ಕಾಲಸೂಚಿಯನ್ನನುಸರಿಸುವ ಜಾಲತಾಣದಲ್ಲಿ ಇದು ಬಹುತೇಕ ನಮ್ಮ ರಾತ್ರಿ ಒಂದು ಗಂಟೆಗೇ ಘಟಿಸಿರುತ್ತದೆ). ನಾನು ಬೆಳಗ್ಗಿನ ಆರು ಗಂಟೆಯ ಸುಮಾರಿಗೆ ತನಿಖೆ ಮಾಡಿ, ಸೇತು ನಕಲಿಸಿ, ನನ್ನ ಜಾಲಿಗ ಬಳಗಕ್ಕೆ ಪತ್ರಗಳನ್ನೂ ಮುಖಪುಸ್ತಕಕ್ಕೆ ಟಿಪ್ಪಣಿಯನ್ನೂ ಏರಿಸುತ್ತೇನೆ. ಆದರೆ ಯಾವುದೇ ದಿನ ವೀಕ್ಷಣಾ ಜಾಗೃತಿ ಏರುವುದು ಮುಂಜಾನೆ ಹತ್ತು ಗಂಟೆಯಿಂದ ಸಂಜೆಯವರೆಗೆ. ಅಂದರೆ ಅವು ಸಾಮಾನ್ಯವಾಗಿ ಕಛೇರಿಗಳ ಕೆಲಸದ ಅವಧಿಯೇ ಆಗಿರುತ್ತದೆ. ಹೊಸ ಲೇಖನ ಅನಾವರಣಗೊಂಡ ಮೊದಲ ದಿನ ಸಹಜವಾಗಿಯೇ ವೀಕ್ಷಕರ ಸಂಖ್ಯೆ ದೊಡ್ದದಿರುತ್ತದೆ. ಆದರೂ ಅಂದು ಸಾರ್ವಜನಿಕ ರಜೆಯೇನಾದರೂ ಬಂದರೆ ಮತ್ತು ಸಾಮಾನ್ಯ ರಜಾ ದಿನಗಳಲ್ಲಿ (ಶನಿವಾರ, ಆದಿತ್ಯವಾರ) ವೀಕ್ಷಣೆ ಕಡಿಮೆಯೇ ಇರುತ್ತದೆ. ಅಂದರೆ ಗಣಕಗಳು ನಮ್ಮಲ್ಲಿ ಇನ್ನೂ ಮನೆವಾರ್ತೆಯ ಅಂಗಗಳಾಗಿಲ್ಲ. (ಇನ್ನೂ ಇಂಥ ಹಲವು ಲೆಕ್ಕಾಚಾರಗಳು ನನಗೆ ಅಭಯ ಕೃಪೆ!)

ಜಾಲತಾಣಗಳಲ್ಲಿ (ಮುಖಪುಸ್ತಕದಲ್ಲೂ) ಒಟ್ಟಾರೆ ಪ್ರತಿಕ್ರಿಯಿಸುವವರು (ಅಲ್ಪಸಂಖ್ಯಾತರು) ಪ್ರಾಥಮಿಕವಾಗಿ ಕನ್ನಡ ತಂತ್ರಾಂಶ ಮತ್ತೆ ಗಣಕ ಪರಿಣತಿಗಳಲ್ಲಿ ಹೆಚ್ಚು ಸ್ವತಂತ್ರರಾದಂತಿಲ್ಲ. ನನ್ನ ತಂದೆ (ಜಿಟಿನಾ) ಲೇಖಕನಾಗಿ ಮುದ್ರಣಕ್ಕಾಗಿ ಸುಂದರ ಹಸ್ತಪ್ರತಿ ತಯಾರಿಸುವ ಗರಡಿಯಲ್ಲೇ ಹೆಚ್ಚಿನ ಆಯುಷ್ಯ ಕಳೆದವರು. ಅವರದನ್ನು ಬಹಳ ವೀರಾವೇಶದಿಂದ ಸಮರ್ಥಿಸಿಕೊಳ್ಳುತ್ತಿದ್ದರು. ಆದರೆ ಕೊನೆಯಲ್ಲಿ, ಹೆಚ್ಚು ಕಡಿಮೆ ಆರೆಂಟು ವರ್ಷಗಳೊಳಗೇ ಕಾಲಪ್ರಭಾವದಲ್ಲಿ, ಅವರ ವಾದ - ಬೆರಳಚ್ಚು > ಗಣಕಮುದ್ರಣ > ಅಂತಿಮವಾಗಿ ಗಣಕಪರದೆ ಎನ್ನುವವರೆಗೆ ವಿಕಾಸವಾದದ್ದನ್ನು ಆಪ್ತವರ್ಗ ಬಹಳ ಆಶ್ಚರ್ಯದಿಂದಲೇ ಗಮನಿಸಿದ್ದೆವು! (ಅವರು ಕೊನೆಯುಸಿರೆಳೆಯುವ ಕೆಲವು ಕ್ಷಣಗಳ ಮೊದಲು ಅಮೃತೇಶ್ ಅವರ ಮನೆಯಲ್ಲಿ ಅವರ ಗಣಕದ ಪರದೆಯ ಮೇಲೇ ಲೇಖನ ಒಂದರ ಕರಡು ತಿದ್ದಿದ್ದರು!) ಇಂದು ನಮ್ಮ ಒಡನಾಟಕ್ಕೆ ಸಿಗುವ ಸಮಾಜ ಮುದ್ರಣ ಮಾಧ್ಯಮದಿಂದ ವಿದ್ಯುನ್ಮಾನಕ್ಕೆ ಹೊಂದಿಕೊಳ್ಳುವ ಬಹುದೊಡ್ಡ ಸಂಕ್ರಮಣ ಕಾಲದಲ್ಲಿದೆ. ಅದು ಬೇಗನೆ ಹೊಸದರಲ್ಲಿ ಮೈಮುರಿದೇಳುವುದರಲ್ಲಿ ಸಂದೇಹವೇನೂ ಇಲ್ಲ. ಹಾಗಾಗಿ ಜಾಲತಾಣದ ಭವಿಷ್ಯದ ಬಗ್ಗೆ, ಇನ್ನೂ ಮುಖ್ಯವಾಗಿ ಅದರ ಸಾರ್ವಜನಿಕ ಉಪಯುಕ್ತತೆಯ ಬಗ್ಗೆ ನನಗೆ ಅಪಾರ ಭರವಸೆಯಿದೆ. ಅದನ್ನು ಸೂಚಿಸುವ ದೊಡ್ಡ ಅಂಶವಾಗಿಯೇ ಈ ಲಕ್ಷೋತ್ತರ ನಡೆಯನ್ನು ನಾನು ಗ್ರಹಿಸುತ್ತೇನೆ.  

ಸುಮಾರು ಮೂರು ದಶಕಗಳ ಹಿಂದೆ ಬಾಗಲೋಡಿ ದೇವರಾಯರು ಹೇಳಿದ ಮಾತು ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ಅಶೋಕ, ನೀನು ನೋಡಿದ ಕಲ್ಲು, ಮರ, ನೀರು, ಬೆಟ್ಟವೇ ಮುಂತಾದವುಗಳನ್ನು ನಿನಗೆ ದಕ್ಕಿದ ಸಲಕರಣೆಯಲ್ಲೇ ದಾಖಲಿಸುತ್ತ ಬಾ. ಹಾಗೆ ಮಾಡುವಂದು ಅದೆಷ್ಟು ಅಸಂಗತವೆಂದು ಕಾಣಿಸಿದ್ದಿದ್ದರೂ ಇಂದಿನ ನನ್ನದೇ ನಡೆಗೆ ಅದು ದೊಡ್ಡ ಸಂಪತ್ತಾದ್ದನ್ನು ಇಲ್ಲಿ ಹೇಳಲೇಬೇಕು. ಅಂತೆಯೇ ಇಂದು ನಾನು ಜಾಲತಾಣದಲ್ಲಿಡುವ ಅಂಬೆಗಾಲು ಮುಂದೆ ಯಾರಿಗೋ ತ್ರಿವಿಕ್ರಮ ಪಾದವಾಗಿ ಕಾಣದಿದ್ದರೂ ಕಿಂಚಿದುಪಯುಕ್ತ ನಡೆಯಾಗಿ ಕಂಡೀತು ಎಂಬ ಸಂಭ್ರಮವನ್ನು ಈ ಲಕ್ಷವೀಕ್ಷಣೆ ನನ್ನಲ್ಲಿ ತುಂಬುತ್ತದೆ. ಸಂಭ್ರಮವನ್ನೂ ಮೀರಿ, ಅನಂತದ ನಡೆಗೆ ಹೀಗೂ ಒಂದು ನಡೆಮಡಿ ಹಾಸಿದ ಕೃತಾರ್ಥತೆ ತುಂಬುತ್ತದೆ.

7 comments:

  1. Nadenudiya daakhaleekaranada ee krithartha kayakakke abhinandane; Guri saadhaneya yashassigu abhinandan
    -- Shyamala

    ReplyDelete
  2. ಮಾಧ್ಯಮಗಳು ‘ಆಕರ್ಷಕತ್ವ’, ‘ ರಂಜನೆ’ಗಳಿಂದ ಭಯಂಕರ ಯಶಸ್ವಿಯಾಗುತ್ತಿರುವ ದಿನಗಳಲ್ಲಿ ನಿಮ್ಮ ಹಾಗೂ ನಿಮ್ಮಂತೆ ಉಪಯುಕ್ತ ಮೌಲ್ಯ, ಮಾಹಿತಿ ಪ್ರಸರಿಸುವ ಕೆಲಸ ಆಶಾದಾಯಕ ಮತ್ತು ಅಭಿನಂದನಾರ್ಹ. ನಿವೃತ್ತಿ ಜೀವನನಿವೃತ್ತಿಯಾಗದೆ ಹೇಗೆ ವಿಸ್ತರಿಸಬಹುದು ಎಂದು ತೋರಿಸಿದ್ದೀರಿ. ಮುಂದುವರಿಸಿ, ಶುಭಂ ಭವತು.

    ReplyDelete
  3. ಲಕ್ಷದೆಡೆಗೆ ಲಕ್ಷ್ಯವಿಲ್ಲದೆಯೇ ಲಕ್ಷ ದಾಟಿದ್ದು ಖುಷಿ ನೀಡಿತು. ಅಭಿನಂದನೆ
    ಮಾಲಾ

    ReplyDelete
  4. ಅಂತರ್ಜಾಲದ ಅಗಾಧ ಸಾಧ್ಯತೆಯನ್ನು ಅರ್ಥವತ್ತಾಗಿ ಹೇಗೆ ಬಳಸಬಹುದೆಂದು ತೋರಿಸಿಕೊಡುತ್ತಿರುವುದಕ್ಕೆ ಅಭಿನಂದನೆ. ಜಾಲತಾಣದ ವೀಕ್ಷಕರ ಸಂಖ್ಯೆ ಲಕ್ಷವನ್ನು ದಾಟಿದೆ ಅನ್ನುವುದು ಸಾಮಾನ್ಯ ಸಂಗತಿಯಲ್ಲ. ಈ ಹಿಂದೆ ಓದಿದ ಮುಗಿಯದ ಪಯಣವನ್ನು ಜಾಲತಾಣದಲ್ಲಿ ಚಿತ್ರಗಳೊಡನೆ ಓದುವಾಗ ಕೊಡುವ ಖುಷಿ ಬೇರೆಯೇ.

    ReplyDelete
  5. Congratulations Ashokere. ! on becoming a LAK PATHI !!!:-)

    ReplyDelete
  6. ಶುಭ ಹಾರೈಕೆಗಳು
    ಗಿರೀಶ್, ಬಜಪೆ

    ReplyDelete
  7. ಕುಶಲ ಶೆಟ್ಟಿ, ಅಳಿಕೆ24 December, 2013 14:58

    ಜಾಲತಾಣದ ವೀಕ್ಷಕರ ಸಂಖ್ಯೆ ಲಕ್ಷ ದಾಟಿರುವುದಕ್ಕೆ ತಮಗೆ ಅಭಿವಂದನೆಗಳು.
    ಆ ಲಕ್ಷ ಓದುಗರಲ್ಲಿ ನಾನೂ ಒಬ್ಬನಾಗಿರುವುದಕ್ಕೆ ಹೆಮ್ಮೆಯೆನಿಸುತ್ತಿದೆ.

    ReplyDelete