[೧೯೭೫
ಡಿವಿಕೆ ಮೂರ್ತಿಯವರ ಪೂರ್ಣ ಅಭಯ ಮತ್ತು ತಂದೆ - ಜಿಟಿನಾ ಪುಸ್ತಕ ಲೋಕದೊಡನೆ ಗಳಿಸಿದ್ದ ಸದ್ಭಾವಗಳನ್ನಷ್ಟೇ ಬಂಡವಾಳವಾಗಿಟ್ಟುಕೊಂಡು (ಗಮನಿಸಿ - ಹಣವಲ್ಲ!) ನಾನು ಮಂಗಳೂರಿನಲ್ಲಿ
ಅತ್ರಿ ಬುಕ್ ಸೆಂಟರ್ ತೆರೆದಿದ್ದೆ. ನನ್ನ ತಂದೆಗೆ ಗಣಿತವೇ ಮೊದಲಾಗಿ ವಿಜ್ಞಾನ ವಿಷಯಗಳು ಕಲಿಕೆ ಮತ್ತು
ವೃತ್ತಿ ಅಗತ್ಯಕ್ಕೆ ರೂಢಿಸಿಕೊಂಡಿದ್ದರೂ ಅವರ ವೈವಿಧ್ಯಮಯ ಆಸಕ್ತಿಯ ಹರಹು ಸಾಹಿತ್ಯ, ಲಲಿತಕಲೆಗಳನ್ನು
ಬಿಟ್ಟಿರಲಿಲ್ಲ. ನಾನು ವಿದ್ಯಾರ್ಥಿ ದೆಸೆಯಲ್ಲೇ ಗಮನಿಸಿದ್ದೆ - ನಮ್ಮ ಮನೆಗೆ ‘ಟೈಮ್ಸ್’, ‘ಸೈಂಟಿಫಿಕ್ ಅಮೆರಿಕನ್’ ಬಂದಂತೇ ‘ಸಾಕ್ಷಿ’ (ಸಂ: ಗೋಪಾಲಕೃಷ್ಣ ಅಡಿಗ, ಪ್ರ: ಕೆವಿ ಸುಬ್ಬಣ್ಣ ಅಥವಾ ಅಕ್ಷರ ಪ್ರಕಾಶನ)
ಬರುತ್ತಿತ್ತು. ನಾನು ಅವನ್ನೆಲ್ಲ ಕೇವಲ ಪುಟ ಮಗುಚಿ ನೋಡುತ್ತಿದ್ದೆ, ವಿಶೇಷ ಹಚ್ಚಿಕೊಂಡದ್ದಿಲ್ಲ.
ಆದರೆ ಅಂಗಡಿ ತೆರೆದಾಗ ಅದೇ ಕೆವಿ ಸುಬ್ಬಣ್ಣ ಅರ್ಥಾತ್ ಅಕ್ಷರ ಪ್ರಕಾಶನ ‘ಒಳ್ಳೆಯ ಪುಸ್ತಕದಂಗಡಿಗೆ’ ಅದೆಷ್ಟು ಅನಿವಾರ್ಯ ಎಂದು ತಿಳಿದುಕೊಂಡೆ. ನಾನವರಿಗೆ ನೇರ ಪತ್ರಿಸಿದೆ.
ಎಲ್ಲರಲ್ಲಿ ಮಾಡಿದಂತೆ ವೈಯಕ್ತಿಕ ನಂಬಿಕೆಯ ಮೇಲೆ ಸಾಲದಲ್ಲಿ ಪುಸ್ತಕ ಕೇಳಿದ್ದೆ. ಕೇಳಿದ ಪುಸ್ತಕಗಳೆಲ್ಲ
ಯಾವುದೇ ಪ್ರಕಾಶಕ ಕೊಡುವಂತೇ ಬಂತು, ಮೇಲೊಂದು ಟಿಪ್ಪಣಿ ಈ ಅರ್ಥದಲ್ಲಿ ಬಂತು: ನಿಮ್ಮ ಬಗ್ಗೆ ಡಿವಿಕೆ
ಶಿಫಾರಸು ಮಾಡಿದ್ದಾರೆ. ನಿಮಗೆ ಬೇಕಾದಂತೆ ಪುಸ್ತಕ ತರಿಸಿಕೊಳ್ಳಿ, ಅನುಕೂಲವಾದಾಗ ಕಂತಿನಲ್ಲೋ
ಬಿಲ್ಲು ಪ್ರಕಾರವೋ ಪಾವತಿ ಕಳಿಸಿ. (ನನ್ನ ಮೂವತ್ತಾರು ವರ್ಷಗಳ ಅನುಭವದುದ್ದಕ್ಕೆ ನಮ್ಮೊಳಗೆ ಲಕ್ಷಾಂತರ
ವಹಿವಾಟು ನಡೆದಿತ್ತು; ಅವರು/ ‘ಅಕ್ಷರಪ್ರಕಾಶನ’ ಒಂದು ದಿನವೂ ಪಾವತಿ ಕೇಳಿದ್ದಿಲ್ಲ!) ಡಿವಿಕೆ ದೊಡ್ಡತನದ ಬಗ್ಗೆ ನನಗೆ
ಹೊಸತಾಗಿ ತಿಳಿಯುವಂತದ್ದೇನಿರಲಿಲ್ಲ. ಹೀಗೆ ಅಂದೇ ಬೆಂಗಳೂರಿನ ಸಾಹಿತ್ಯ ಭಂಡಾರ ಅಥವಾ ಮ. ಗೋವಿಂದರಾಯರಿಗೂ
ಸಾಲದ ಮೇಲೆ ಪುಸ್ತಕ ಕೋರಿ ಪತ್ರಿಸಿದ್ದೆ. ಅವರೂ ನಿಶ್ಶರತ್ತಾಗಿ ಪುಸ್ತಕಗಳನ್ನು ಕಳಿಸಿಕೊಟ್ಟರು.
ಆದರೆ ‘ಸುಬ್ಬಣ್ಣ ನಿಮ್ಮ ಬಗ್ಗೆ ಒಳ್ಳೇ ಮಾತು ಹೇಳಿದರು’ ಎಂದು ಸೇರಿಸಿದ್ದು ಅಂದಿನ ನನ್ನ ಮಿತಿಯಲ್ಲಿ, ಆಶ್ಚರ್ಯವನ್ನೇ ಉಂಟು
ಮಾಡಿತ್ತು. ಸುಬ್ಬಣ್ಣನವರು ತಾನು ನಂಬಿದ್ದರ ಕುರಿತು ಇನ್ನೆಲ್ಲೇ ಜಾಮೀನು ನಿಲ್ಲುವಷ್ಟು ಔದಾರ್ಯವಂತ!
ಪೂರಕವಾಗಿ ಸ್ವಲ್ಪ ಮುಂದುವರಿದ ಕಾಲದ ಇನ್ನೊಂದು ಅನುಭವವನ್ನೂ ಸಣ್ಣದಾಗಿ
ಇಲ್ಲೇ ಹೇಳಿಬಿಡುತ್ತೇನೆ. ಕೇರಳದತ್ತ ಹೋಗುವ ದಾರಿಯಲ್ಲೋ ಮಂಗಳೂರಿನದ್ದೇ ಇನ್ಯಾವುದೋ ಕಲಾಪಕ್ಕೆ ಬಂದಲ್ಲೋ
ಹೆಗ್ಗೋಡು ಬಳಗದವರು ಬಿಡುವು ಮಾಡಿಕೊಂಡು ನನ್ನಂಗಡಿಗೆ ಬರುತ್ತಿದ್ದರು. (ಒಂದೆರಡು ಬಾರಿ ಸ್ವತಃ ಸುಬ್ಬಣ್ಣನವರೇ
ಬಂದಿದ್ದರು. ಅಕ್ಷರ, ಇನ್ನೂ ಮುಖ್ಯವಾಗಿ ಟಿ.ಪಿ ಅಶೋಕರು ಬಂದದ್ದರ ಲೆಕ್ಕ ನನ್ನಲ್ಲಿಲ್ಲ) ನೀನಾಸಂ
ಗ್ರಂಥಾಲಯಕ್ಕೆ ಈ ವಲಯದಿಂದ ದಕ್ಕದಿದ್ದ ಪುಸ್ತಕಗಳನ್ನು ಧಾರಾಳ ಆರಿಸುತ್ತಿದ್ದರು. ಅವರ ಹಿರಿ ಖರೀದಿಗೆ
ಬಿಡಿ ಪುಸ್ತಕ ವ್ಯಾಪಾರಿಯಾಗಿ ನಾನು ಕೊಡುತ್ತಿದ್ದ ವಟ್ಟಾ (ಡಿಸ್ಕೌಂಟ್) ಕುರಿತು ಒಮ್ಮೆಯೂ ಚೌಕಾಸಿ
ಮಾಡಲಿಲ್ಲ. ಕೈಯಲ್ಲಿ ಇದ್ದಷ್ಟು ದುಡ್ಡು ಕೊಡುತ್ತಿದ್ದರು. ಅಕಸ್ಮಾತ್ ಹಣ ಕಡಿಮೆ ಬಂದರೆ ಊರಿಗೆ ಮರಳಿದ
ಕೂಡಲೇ ಡ್ರಾಫ್ಟ್ ಮಾಡಿ ಕಳಿಸುತ್ತಿದ್ದರು. ಇಲ್ಲಿ ಬಹು ಮುಖ್ಯವಾಗಿ ಗಮನಿಸಬೇಕಾದದ್ದು, ಅವರೆಂದೂ
ನಾನು ಕೊಡಲಿದ್ದ ಬಾಕಿಗೆ (ಅಕ್ಷರಪ್ರಕಾಶನದಿಂದ ನಾನು ತರಿಸಿಕೊಂಡ ಪುಸ್ತಕಗಳ ಮೌಲ್ಯ) ಅವರು ಖರೀದಿಸಿದ
ಪುಸ್ತಕಗಳನ್ನು ಹೊಂದಿಸುವ ಮಾತು ಆಡುತ್ತಿರಲಿಲ್ಲ!
ಗೆಳೆಯ ಲಕ್ಷ್ಮೀನಾರಾಯಣ ರೆಡ್ಡಿ ಸೇರಿದಂತೆ ಮಂಗಳ ಫಿಲ್ಮ್ ಸೊಸಾಯಿಟಿ
ಮಂಗಳೂರಿನಲ್ಲಿ ಚಲನಚಿತ್ರ ರಸಗ್ರಹಣ ಶಿಬಿರ ಆಯೋಜಿಸಿ, ಕೆವಿ ಸುಬ್ಬಣ್ಣನವರನ್ನು ಸಂಪನ್ಮೂಲ ವ್ಯಕ್ತಿಯಾಗಿ
ಕರೆಸಿಕೊಂಡಿದ್ದರು. ಕೊನೆಯಲ್ಲಿ ಇವರು ಸಂಸ್ಥೆಯ ವತಿಯಿಂದ ಸುಬ್ಬಣ್ಣನವರಿಗೆ ಸಂಕೋಚದಲ್ಲೇ ‘ಹೀಗೇ
ಸ್ವಲ್ಪ’ ಸಂಭಾವನೆಯ ಲಕೋಟೆ ಹಿಡಿಸಿ, ಕಳಿಸಿಕೊಟ್ಟರು. ಮರುಟಪಾಲಿನಲ್ಲಿ ಎಂಬಂತೆ
ಸುಬ್ಬಣ್ಣನವರಿಂದ ಒಂದಷ್ಟು ಹಣ ಮತ್ತೊಂದು ಪುಟ್ಟ ಟಿಪ್ಪಣಿ ಬಂತು: “ಕ್ಷಮಿಸಿ, ನಾನಲ್ಲಿ ಲಕೋಟೆ ತೆರೆದು ನೋಡಿರಲಿಲ್ಲ. ನನ್ನ ಊಟ, ವಾಸ
ನೀವು ನೋಡಿಕೊಂಡಿದ್ದೀರಿ. ಕಲಾಪ ಕುಶಿ ಕೊಟ್ಟಿದೆ. ಹೋಗಿ ಬರುವ ಖರ್ಚು ಕಳೆದು ಉಳಿದ ಹಣ ವಾಪಾಸ್!”
ನನ್ನ ಕಾಡು ಬೆಟ್ಟ ಸುತ್ತುವ ತಂಡಕ್ಕೆ ಮಳೆಗಾಲದ ಏರಿನಲ್ಲಿ ಲಿಂಗನಮಕ್ಕಿ
ಹಿನ್ನೀರಿನ ಊರುಗಳಲ್ಲಿ ಸುತ್ತಿ ಸಾಗರಕ್ಕಾಗಿ ಮರಳುವ ಮನಸ್ಸಾಯಿತು. ನಮ್ಮದು ಯಾವುದೇ ಅನುದಾನ ಪಡೆಯದ,
ಹಣಕಾಸು ಸಂಚಯನವೂ ಇಲ್ಲದ (ಒಲ್ಲದ) ಅನೌಪಚಾರಿಕ ಸಂಘಟನೆ. ಕನಿಷ್ಠ ಖರ್ಚು, ಗರಿಷ್ಠ ಅನುಭವ ಸದಾ ನಮ್ಮ
ಲಕ್ಷ್ಯ. ಆಯಾ ಕಾರ್ಯಕ್ರಮದ ಸಾರ್ವಜನಿಕ ವೆಚ್ಚವನ್ನು ತಲೆಲೆಕ್ಕದಲ್ಲಿ ಸಮವಾಗಿ ಹಂಚಿ ಮುಗಿಸಿಬಿಡುತ್ತಿದ್ದೆವು.
ಹಾಗೆಂದು ಹೊರಗಿನವರಿಗೆ, ವೃತ್ತಿಪರರಿಗೆ ಹೊರೆ ಖಂಡಿತಾ ಆಗದ ಎಚ್ಚರವಹಿಸುತ್ತಿದ್ದೆವು. ಆ ಲೆಕ್ಕದಲ್ಲೇ
ನಾನು ಸುಬ್ಬಣ್ಣನವರನ್ನು ಒಂದು ರಾತ್ರಿಗೆ (ಸಾಗರ ಬಿಟ್ಟು) ಹೆಗ್ಗೋಡಿನಲ್ಲಿ ನಮಗೆ ಸರಳವಾಗಿ ಸೂರೊದಗಿಸಲು
ಕೇಳಿಕೊಂಡೆ. (ಹೋ ನಮ್ಮಲ್ಲಿಗೆ ಬರ್ತೀರಾ, ಸಂತೋಷಾ ಬನ್ನಿ ಬನ್ನಿ. . . ಎಂಬಿತ್ಯಾದಿ) ಠಕ್ಕಿನ ಸಂಭ್ರಮವಿಲ್ಲದೆ,
ವ್ಯಾವಹಾರಿಕ ಮಾತುಗಳೂ ಇಲ್ಲದೆ ಕೂಡಲೇ ಒಪ್ಪಿಗೆ ಬಂತು. ನಮ್ಮ ತಂಡ (ಸುಮಾರು ಹತ್ತು ದ್ವಿಚಕ್ರಿಗಳು,
ಮಕ್ಕಳೂ ಸೇರಿದಂತೆ ಇಪ್ಪತ್ತಕ್ಕೂ ಮಿಕ್ಕು ಸದಸ್ಯರು) ಕುಂದಾಪುರ, ಕೊಲ್ಲೂರು, ತುಮರಿ ಹಾದು ಹೆಗ್ಗೋಡು
ತಲಪುವಾಗ ಕತ್ತಲಾಗಿತ್ತು. ಜಡಿ ಮಳೆ, ಘಾಟಿ, ಕಾಡು, ಗೊಸರು, ದೋಣಿಸವಾರಿ, ಜಾರಾಟ, ಬೀಳಾಟ ಎಲ್ಲ ಸುಧಾರಿಸಿ
ಮುಗಿಸಿದಾಗ ತೊಯ್ದು ತೊಪ್ಪೆ, ಬಸವಳಿದು ಬೆಪ್ಪೇ ಆಗಿದ್ದೆವು. ಆದರೆ ಅಲ್ಲಿ ಸ್ವತಃ ಸುಬ್ಬಣ್ಣ (ಮಗ
ಅಕ್ಷರಾದಿ ಅಗತ್ಯದ ಒಡನಾಡಿ ಬಳಗದೊಡನೆ) ಅಗ್ಗಿಷ್ಟಿಕೆ, ಬಿಸಿ ಕಷಾಯದೊಡನೆ ಕಾದಿದ್ದರು. ಕೆಲಸಕ್ಕೆ
ತಕ್ಕ ಬಿಸಿನೀರು, ಊಟ, ಉಪಚಾರಕ್ಕೂ ವ್ಯವಸ್ಥೆಯಿತ್ತು. ನಾಟಕ ಶಾಲೆಯ ಅಂಗವಾದ ಅತಿಥಿಗೃಹದ ಹಾಲಿನ ಉದ್ದಕ್ಕೆ
(ಮದುವೆ ಮನೆಗಳಂತೆ, ಇಸ್ಟಾರ್ ಹೋಟೆಲ್ಗಳಂತಲ್ಲದೆ) ಚಾಪೆ, ಕಂಬಳಿಗಳ ಹಾಸೂ ಸಜ್ಜಾಗಿತ್ತು. ಆದರೆ ಅವನ್ನು
ಮೀರಿ, ನಮಗೆ ಔಪಚಾರಿಕ ಹೊರೆಯಾಗದಂತೆ, ಉದ್ದಕ್ಕೂ ಸ್ವತಃ ಸುಬ್ಬಣ್ಣನವರೇ ಓಡಾಡಿಕೊಂಡು ವೈಚಾರಿಕ ಮಾತುಕತೆ
ನಡೆಸಿದರು. (ನನ್ನ ನೆನಪು ಸರಿಯಾದರೆ, ಆಗಷ್ಟೇ ನಾಗೇಶ ಹೆಗಡೆಯವರ ‘ಇರುವುದೊಂದೇ ಭೂಮಿ’ ಪುಸ್ತಕವನ್ನು ಅಕ್ಷರಪ್ರಕಾಶನ ಪ್ರಕಟಿಸಿತ್ತು.) ಕೊನೆಯಲ್ಲಿ ಅವರದೇ
ಶಿವರಾಮ ಕಾರಂತ ರಂಗಮಂದಿರದಲ್ಲಿ ನಮಗಾಗಿ - ಕೇವಲ ಇಪ್ಪತ್ತು ಮಂದಿಗಾಗಿ, (ಘೋಷಣೆಯಿಲ್ಲದ ಅವೇಳೆಯಲ್ಲಿ ಬಾಗಿಲು
ಹಾರುಹೊಡೆದಿಟ್ಟರೂ ನರಪಿಳ್ಳೆ ಸುಳಿಯದ ಆ ಹಳ್ಳಿಮೂಲೆಯಲ್ಲಿ) ಆಯ್ದ ವಿಶ್ವ ಮಟ್ಟದ ಕಿರು ಸಿನಿಮಾಗಳ
ಪ್ರದರ್ಶನವನ್ನೇ ಕೊಟ್ಟರು; ದಿನದ ಬಳಲಿಕೆಯಲ್ಲಿ ನಾವೇ “ಸಾಕು” ಎನ್ನುವವರೆಗೆ!
ಇವನ್ನು ಅಂದು ಅಲ್ಲ, ಇಂದೂ ಇನ್ನೆಲ್ಲೂ ನಿರೀಕ್ಷಿಸುವುದು ಅಸಾಧ್ಯ. ಆ ವೇಳೆಗೆ ಸುಬ್ಬಣ್ಣನವರ ಔದಾರ್ಯದ
ಪರಿಚಯ ನನಗೆ ಸಾಕಷ್ಟಿತ್ತು. ಆದರೆ ಕರ್ತವ್ಯಚ್ಯುತನಾಗದ ಎಚ್ಚರದಲ್ಲಿ ನಮ್ಮ ಊಟವಾಸದ ಖರ್ಚು ತುಂಬಿಸುವ
ಮಾತು ಪ್ರಸ್ತಾವಿಸಿದ್ದೆ. ಅವರ ಕವಳ ತುಂಬಿದ ಬಾಯಿ ಮಾತಿಗೆ ಬಿರಿಯದಿದ್ದರೂ ಪ್ರೀತಿಗೆ ತುಸು ಬಾಗಿದ್ದರಲ್ಲಿ,
ಕಣ್ಣ ಮಿಟುಕಿನಲ್ಲಿ ‘ಎಲ್ಲ ಸಂದ’ ರಸೀದಿ ಪಡೆದು
ಮರಳಿದ್ದೆವು.
ನೀನಾಸಂ ಈಚಿನ ಕೆಲವು ದಶಕಗಳಿಂದ ಸಾರ್ವಜನಿಕರಿಗಾಗಿ ನಡೆಸಿಕೊಂಡು ಬರುತ್ತಿರುವ
(ಸಿನಿಮಾ ರಸಗ್ರಹಣ, ಸಂಸ್ಕೃತಿ ಶಿಬಿರ ಎಂದೇನೇ ಹೆಸರಿಸಲಿ) ವಾರ್ಷಿಕ ಶಿಬಿರ ನನಗೆ ಅಂಗಡಿಯ ನೆಪದಲ್ಲಿ
ಸದಾ ಎಟುಕದ ಹಣ್ಣಾಗಿಯೇ ಉಳಿದಿತ್ತು. ಪ್ರತಿ ಬಾರಿಯೂ ನನಗದರಲ್ಲಿ ಅಭ್ಯರ್ಥಿಯಾಗಲ್ಲದಿದ್ದರೂ ಆಯ್ದ
ಎರಡು ಮೂರು ದಿನಗಳಿಗಾದರೂ (ಆ ವರ್ಷದ ‘ತಿರುಗಾಟ’ದ ನಾಟಕಗಳ ಮೊದಲ ಪ್ರದರ್ಶನ ಇದ್ದ ದಿನಗಳೇ ಆದರೂ) ಭಾಗಿಯಾಗುವಂತೆ ಆಮಂತ್ರಣವಂತೂ
ಬಂದೇ ಬರುತ್ತಿತ್ತು. ಅದೊಂದು ವರ್ಷ, ಆರೋಹಣ ತಂಡ ಉಕ ಜಲಪಾತಗಳ ಬೆಂಬತ್ತಿ
ಹೊರಟಿತ್ತು. ಆ ದ್ವಿಚಕ್ರ ಸಾಹಸಯಾನ ಕೊನೆಯ ದಿನ
ಹೆಗ್ಗೋಡು ಹಾದು ಹೋಗುವಂತೆ ಯೋಜಿಸಿದ್ದೆ. ಮತ್ತದು ಆ ವರ್ಷದ ನೀನಾಸಂ ಶಿಬಿರಾರಂಭದ ಮುನ್ನಾ ದಿನವೇ
ಆಗಿತ್ತು. ಅಂದು ನಮ್ಮ ತಂಡದಲ್ಲಿದ್ದ ಗೆಳೆಯ ಕೃಶಿ, ಸಕಾಲದಲ್ಲಿ ಅಭ್ಯರ್ಥಿತನ ಕೋರಿ, ಶಿಬಿರ ಶುಲ್ಕ
ತುಂಬಿ ಸ್ಥಾನವನ್ನೂ ಗಿಟ್ಟಿಸಿದ್ದರು. ಹಾಗೆ ಹೋಗಿದ್ದಾಗ ವಠಾರದ ಸಂಭ್ರಮ ನೋಡಿ, ಎಲ್ಲರಿಗೂ ಸುಲಭ
ಲಭ್ಯರಾಗಿರುತ್ತಿದ್ದ ಸುಬ್ಬಣ್ಣನವರಿಂದ ಮುಖತಃ ಹೆಚ್ಚಿನ ಹೇಳಿಕೆ ಪಡೆದ ಮೇಲೆ ನನ್ನ ಕೊರಗು ಉಲ್ಬಣಿಸಿತು.
ಸಹಜವಾಗಿ ನಾನು (ಅಂಗಡಿ ತಪ್ಪಿಸಲು) ಒಂದು ‘ಪಿಳ್ಳೆ ನೆಪ’ ಹುಡುಕಿಟ್ಟುಕೊಂಡೆ! ಅಂದು ತಂಡದೊಡನೆ ಮಂಗಳೂರಿಗೆ ಮರಳಿದೆ. ಆದರೆ
ನಾಲ್ಕೈದು ದಿನ ಕಳೆದು “ಪಾಪ, ಕೊನೆಯಲ್ಲಿ
ಕೃಶಿಯೊಬ್ಬರೆ ಬೈಕ್ ಚಲಾಯಿಸಿಕೊಂಡು ಬರ್ತಾರೆ. ಅವರಿಗೆ ಕಂಪೆನಿ ಕೊಡಲು...” ಎಂದು ಅಂಗಡಿಯನ್ನು ಹೆಂಡತಿಗೆ ವಹಿಸಿಕೊಟ್ಟು, ಬಸ್ಸೇರಿ ಹೆಗ್ಗೋಡು
ಸೇರಿಯೇ ಬಿಟ್ಟೆ. ಅಲ್ಲಿನ ಕಲಾಪಗಳ ಸವಿಯ ಒಂದಂಶವನ್ನು ಅನುಭವಿಸಿದೆ. (ಆ ವರ್ಷ ಸುಬ್ಬಣ್ಣನವರಿಗೆ
ಮ್ಯಾಗ್ಸೇಸೇ ಪ್ರಶಸ್ತಿ ಸಂದಿತ್ತು. ಮತ್ತು ಶಿಬಿರ ಕಲಾಪ ಪಟ್ಟಿಯಲ್ಲಿ ಪ್ರಶಸ್ತಿ ಪ್ರದಾನದ ಚಿತ್ರಿಕೆಯ
ಪ್ರದರ್ಶನವೂ ಇದ್ದು, ನನಗೂ ನೋಡಲು ಸಿಕ್ಕಿತ್ತು!)
ಅಂದೊಮ್ಮೆ ನನ್ನ ತಂದೆತಾಯಿಯರು ಹೀಗೇ ಕೆಲವು ಕಾಲ ಮಂಗಳೂರಿನಲ್ಲಿ ನಮ್ಮೊಂದಿಗಿದ್ದರು.
ಆ ಒಂದು ದಿನ ನಾವೆಲ್ಲ ತಾಯಿಯ ದರ್ಶನ ಬಯಕೆ ಪೂರೈಕೆಗಾಗಿ ಸಾಗರದ ಬಳಿಯ ಶ್ರೀಧರಾಶ್ರಮಕ್ಕೆ ಕಾರು ಮಾಡಿ
ಹೊರಟೆವು. ಪ್ರಯಾಣ ದೈಹಿಕವಾಗಿ ತಂದೆಗೆ ಯಾವ ತೊಂದರೆಯನ್ನೂ ಮಾಡುತ್ತಿರಲಿಲ್ಲ. ಆದರೆ ಸಂದರ್ಭ ಬಂದಲ್ಲೆಲ್ಲ
ಅವರಾಗಿಯೇ ಘೋಷಿಸಿಕೊಳ್ಳುತ್ತಿದ್ದ ಎರಡೂ ‘ವೈರಿ’ಗಳನ್ನು ಮರೆಯಲುಂಟೇ! (“ಪ್ರಯಾಣ ನನ್ನ ಮೊದಲ ವೈರಿ, ದೇವರು ಎರಡನೆಯದು.”) ಆ ‘ವ್ರತ’ಕ್ಕೆ ತೊಂದರೆಯಾಗದಂತೆ ಹಿಂದಿರುಗುವ ದಾರಿಯಲ್ಲಿ ಹೆಗ್ಗೋಡು (ಅಂದರೆ
ಸುಬ್ಬಣ್ಣ) ಭೇಟಿಯ ಆಮಿಶವನ್ನೂ ಕಲ್ಪಿಸಿದ್ದೆ. ಸುಬ್ಬಣ್ಣ ನಮ್ಮನ್ನು ಕಾದಿದ್ದರು. ಅವರು ಕ್ಯಾಂಟೀನಿನಲ್ಲಿ
ಉಸಳಿ ತಿನಿಸಿ, ಕಷಾಯ ಕುಡಿಸಿ, ವಠಾರವೆಲ್ಲ ತೋರಿಸಿ, ಧಾರಾಳ ಸಲ್ಲಪಿಸಿದರು. ತಂದೆ ಹಿಂದೆಂದೋ ಬ್ರೆಕ್ಟಿನ
ಗೆಲಿಲಿಯೋ ನಾಟಕ ನೋಡಿದಂದಿನಿಂದ ಕಟ್ಟಿಕೊಂಡ ಕನಸು - ಐನ್ಸ್‌ಟೈನರನ್ನೂ ಹಾಗೇ ರಂಗಕ್ಕೆ ತರಬೇಕು,
ಚರ್ಚಿಸಿದರು. ಇನ್ನೊಮ್ಮೆ ಅದಕ್ಕೆಂದೇ ಟಿಪ್ಪಣಿಗಳ ಹೊರೆ ಸಹಿತ ಹೆಗ್ಗೋಡಿಗೆ ಪಯಣಿಸಲೂ ತಂದೆ ನಿರ್ಧರಿಸುವಷ್ಟರಲ್ಲಿ,
ಅಂದಿನ ನಮ್ಮ ಮರುಪಯಣ ಎರಡು ಗಂಟೆಗಳ ಕಾಲ ವಿಳಂಬಿಸಿತ್ತು! (ಕಾಲದ ನಿಯತಿಯಲ್ಲಿ ಐನ್ಸ್‌ಟೈನ್ ನಾಟಕ
ರೂಪುಗೊಳ್ಳುವ ಆ ದಿನ ಬರಲೇ ಇಲ್ಲ)
ಅಂಥಾ ಸುಬ್ಬಣ್ಣ ಮಹಾರಾಜಾ ಕಾಲೇಜು ವಿದ್ಯಾರ್ಥಿ ಎಂದೂ ಅವರ ಆತ್ಮೀಯ
ಸಹಪಾಠಿ ಮತ್ತು ಗೆಳೆಯ ಯು.ಆರ್ ಅನಂತಮೂರ್ತಿಯವರ ಬರಹಗಳಲ್ಲಿ ಮೂರ್ತಿಯವರ ಕುರಿತ ಉಲ್ಲೇಖಗಳಲ್ಲಿ ಧಾರಾಳ
ತಿಳಿದಿದ್ದೆ. ಈ ಸಲದ ‘ಮಾತುಕತೆ’ (ನೀನಾಸಮ್
ಕಳೆದ ಇಪ್ಪತ್ತೇಳು ವರ್ಷಗಳಿಂದ ಖಾಸಗಿ ಪ್ರಸಾರದಲ್ಲಿ ಪ್ರಕಟಿಸುತ್ತಿರುವ ತ್ರೈಮಾಸಿಕ ಸಂಪರ್ಕ ಪತ್ರ,
ಸಂ. ೧೦೭) ಓದಿದಾಗ ಅವರ ಇನ್ನೋರ್ವ ಸಹಪಾಠಿ, ಅದಕ್ಕೂ ಮಿಗಿಲಾಗಿ ಮಹಾರಾಜಾ ಕಾಲೇಜಿನ ಹಾಸ್ಟೆಲಿನ ರೂಂ
ಮೇಟ್ - ಗಂಗಾಧರ್ ಕಲ್ಲಹಳ್ಳ ಹಲವು ಅನ್ಯತ್ರ ಅಲಭ್ಯ ಸುಬ್ಬಣ್ಣ-ಆಖ್ಯಾಯಿಕೆಗಳನ್ನು
ತಿಳಿದು ಪುಳಕಗೊಂಡೆ. ಇವು ‘ಮಾತುಕತೆ’ ಮುಟ್ಟದ ಇನ್ನಷ್ಟು
ಸುಬ್ಬಣ್ಣಾಭಿಮಾನಿಗಳಿಗೆ ಅವಶ್ಯ ಮುಟ್ಟಿಸಬೇಕೆಂಬ ತುಡಿತ ನನ್ನಲ್ಲುಂಟಾಯ್ತು. ಜೊತೆಗೆ ಇಲ್ಲೇ ಕೆಲವುವಾರಗಳ ಹಿಂದೆ ನಾನು ಮುಕ್ತ ಕೊನೆಯಿಟ್ಟು ನಿಲ್ಲಿಸಿದ್ದ ಮಹಾರಾಜಾ ಕಾಲೇಜು ನೆನಪುಗಳ ಸರಣಿಗೂ ಅಪ್ಯಾಯಮಾನವಾಗಿಹೊಂದುತ್ತದೆ ಎಂಬ ಭಾವವೂ ಜಾಗೃತವಾಯ್ತು. ಕೆ.ವಿ. ಅಕ್ಷರರ ಮೂಲಕ ಗಂಗಾಧರ್ ಕಲ್ಲಹಳ್ಳ ಅವರ ಅನುಮತಿ
ಪಡೆದು, ಈಗ ಯಥಾವತ್ತು ನಿಮ್ಮ ಮುಂದೆ ಪ್ರಸ್ತುತಪಡಿಸಲು ಸಂತೋಷಪಡುತ್ತೇನೆ - ಅಶೋಕವರ್ಧನ]
ಕೆ.ವಿ. ಸುಬ್ಬಣ್ಣ ಸ್ಮರಣೆ (ಮಹಾರಾಜ ನೆನಪುಗಳು - ಭಾಗ ಏಳು)
ಗಂಗಾಧರ್ ಕಲ್ಲಹಳ್ಳ
ದಿನಾಂಕ ೧೬ ಜುಲೈ ೨೦೧೩ರಂದು, ದಿ| ಕೆ.ವಿ. ಸುಬ್ಬಣ್ಣನವರು ನಿಧನರಾದ
ದಿನ, ಅವರ ಸ್ಮರಣಾರ್ಥ ನೀನಾಸಮ್ ಸಂಸ್ಥೆಯು ಒಂದು ವಿಶೇಷೋಪನ್ಯಾಸವನ್ನೂ ಮತ್ತು ನಾಟಕಪ್ರದರ್ಶನವನ್ನೂ
ಏರ್ಪಡಿಸಿತ್ತು. ಆ ಉಪನ್ಯಾಸ
ಕಾರ್ಯಕ್ರಮದ ಆರಂಭದಲ್ಲಿ, ಸುಬ್ಬಣ್ಣನವರ ಆಪ್ತಮಿತ್ರ ಗಂಗಾಧರ್ ಅವರು ತಮ್ಮ ಸುಬ್ಬಣ್ಣ-ಸ್ಮರಣೆಗಳನ್ನು
ಹಂಚಿಕೊಂಡರು. ಆ ಮಾತುಗಳ ಲಿಖಿತ ಆವೃತ್ತಿಯನ್ನೀಗ
ಇಲ್ಲಿ ಪ್ರಕಟಿಸಲಾಗುತ್ತಿದೆ.
ಗೆಳೆಯ ಸುಬ್ಬಣ್ಣ ತೀರಿಕೊಂಡು ಎಂಟು ವರ್ಷಗಳಾದವು. ಆದರೆ ನನಗೆ ಹೆಗ್ಗೋಡಿಗೆ
ಬಂದಾಗ ಈಗಲೂ ಸುಬ್ಬಣ್ಣ ನಮ್ಮ ಮಧ್ಯದಲ್ಲಿಯೇ ಇದ್ದಾರೆ ಅನ್ನಿಸುತ್ತೆ.
ಕಛೇರಿಯ ಮುಂಭಾಗದ ಅಡಿಕೆಯ ದಬ್ಬೆಯ ಬೆಂಚಿನ ಮೇಲೆ ಕುಳಿತುಕೊಂಡು ತಲೆ
ತಗ್ಗಿಸಿ ಎಲೆಅಡಿಕೆ ಚೀಲದೊಳಗೆ ಕೈಹಾಕಿ ಅಡಿಕೆ ಹುಡುಕುತ್ತಿರುವುದನ್ನು ನೊಡುತ್ತೀನಿ. ಉದ್ದನೆಯ ಕಪ್ಪು ಕೋಟುಧರಿಸಿ ಬರುವ ಅತಿಥಿಗಳನ್ನು
ನಗುಮೊಗದಿಂದ ಬನ್ನಿ ಬನ್ನಿ ಎಂದು ಆತ್ಮೀಯತೆಯಿಂದ
ಕರೆಯುವ ಸುಬ್ಬಣ್ಣ ಕಾಣಿಸುತ್ತಾರೆ. ಕಚೇರಿಯ ಒಳಗೆ ಕುಳಿತು ಎಲೆಅಡಿಕೆ ಹಾಕುತ್ತ ಯಾರೊಡನೆಯೋ ಗಂಭೀರವಾಗಿ
ಮಾತನಾಡ್ತಾ ಕುಳಿತಿರುವ ಸುಬ್ಬಣ್ಣ ಕಾಣಿಸ್ತಾರೆ. ಸಭಾಂಗಣದಲ್ಲಿ ಯಾರೋ ಉಪನ್ಯಾಸ ಮಾಡ್ತಿದ್ದಾಗ ಕೊನೆಯ
ಬೆಂಚಿನಲ್ಲಿ ಕುಳಿತು ತದೇಕಚಿತ್ತದಿಂದ ಉಪನ್ಯಾಸವನ್ನು ಕೇಳುತ್ತಾ ಕೈಯಲ್ಲಿ ಹೊಗೆಸೊಪ್ಪನ್ನು ತಿಕ್ಕುತ್ತ
ಕುಳಿತಿರುವ ಸುಬ್ಬಣ್ಣನನ್ನು ಕಾಣುತ್ತೇನೆ - ಹೀಗೆ ನಾನು ಎಲ್ಲೆಲ್ಲೂ ಸುಬ್ಬಣ್ಣನನ್ನು ಕಾಣುತ್ತೇನೆ.
ನಾನು ಇಂದು ಸುಬ್ಬಣ್ಣನವರ ಸಾಧನೆಗಳನ್ನಾಗಲಿ, ಬರಹಗಳನ್ನಾಗಲಿ ಅಥವ
ಚಿಂತನೆಗಳನ್ನಾಗಲಿ ಕುರಿತು ಮಾತನಾಡುವುದಿಲ್ಲ. ಸುಮಾರು ಅರವತ್ತು ವರುಷಗಳ ಹಿಂದಿನ ನನ್ನ ಮತ್ತು ಅವರ
ಒಡನಾಟವನ್ನು ಮಾತ್ರ ನಿಮ್ಮೊಂದಿಗೆ ಜ್ಞಾಪಿಸಿಕೊಳ್ಳಲು ಇಚ್ಛಿಸುತ್ತೇನೆ. ಅವರೊಡನೆ ನಾನು ಕಳೆದ ದಿನಗಳು
ನನ್ನ ಮನಸ್ಸಿನಲ್ಲಿ ಹಸಿರಾಗಿ ಹೆಪ್ಪುಗಟ್ಟಿ ಕುಳಿತಿದೆ.
ಸುಬ್ಬಣ್ಣ ನನಗೆ ಮೊದಲು ಪರಿಚಯವಾಗಿದ್ದು ಸುಮಾರು ೧೯೫೦-೫೧ ರಲ್ಲಿ.
ನಾವು ಇಂಟರ್ಮೀಡಿಯೇಟ್ ಓದಲು ಶಿವಮೊಗ್ಗಕ್ಕೆ ಹೋಗಿದ್ದಾಗ. ಆಗ ಜಿಲ್ಲೆಯಲ್ಲಿ ಇದ್ದುದು ಶಿವಮೊಗ್ಗೆಯ
ಇಂಟರಮೀಡಿಯೆಟ್ ಕಾಲೇಜ್ ಒಂದೇ. ಭದ್ರಾವತಿ, ಸಾಗರ, ತೀರ್ಥಹಳ್ಳಿ ಮುಂತಾದ ಕಡೆಗಳಿಂದ ಓದಲು ವಿಧ್ಯಾರ್ಥಿಗಳು
ಇಲ್ಲಿಗೇ ಬರಬೇಕಾಗಿತ್ತು. ಸಾಗರದಿಂದ ಬಂದ ಸುಬ್ಬಣ್ಣ ಚಿಕ್ಕಬ್ರಾಹ್ಮಣರ ಬೀದಿಯಲ್ಲಿದ್ದ ಸುಬ್ಬರಾವ್
ಎಂಬುವರ ಅಂಗಡಿಯ ಮಹಡಿಯ ಮೇಲಿದ್ದ ರೂಂ ಒಂದರಲ್ಲಿ ಇದ್ದರು. ಊಟ ಕುಪ್ಪಯ್ಯನ ಹೋಟೆಲ್‌ನಲ್ಲಿ. ಆಗ ತೀರ್ಥಹಳ್ಳಿ,
ಸಾಗರ ಮೊದಲಾದ ಮಲೆನಾಡಿನ ಬ್ರಾಹ್ಮಣ ಅಡಿಕೆ ಬೆಳೆಗಾರರಿಗೆ ಕುಪ್ಪಯ್ಯನ ಹೋಟೆಲ್ಲು ಅಚ್ಚುಮೆಚ್ಚು.
ಅಲ್ಲಿ ಮೇಜು ಕುರ್ಚಿಗಳಿರಲಿಲ್ಲ. ನೆಲದಮೇಲೆಯೇ ಬಾಳೆ ಎಲೆ ಊಟ. ಸಂಧ್ಯಾವಂದನೆ ಮಾಡುವವರಿಗೂ ಅಲ್ಲಿ
ವ್ಯವಸ್ಥೆ ಇತ್ತು. ಆಗ ಅಡಿಕೆ ಮಂಡಿಗಳಿದ್ದುದೆಲ್ಲ ಚಿಕ್ಕ ಬ್ರಾಹ್ಮಣರ ಬೀದಿಯಲ್ಲಿಯೇ. ಮಂಡಿಯಿಂದ
ಹಣ ತರಲು ಹೋದ ಬೆಳೆಗಾರರು ಕನಿಷ್ಠ ಮೂರು ನಾಲ್ಕು ದಿನ ಕಾಯಲೇಬೇಕು. ಕುಪ್ಪಯ್ಯನ ಹೋಟೇಲ್‌ನಲ್ಲಿ ಕಾಪಿ-ತಿಂಡಿ-ಊಟ.
ರಾತ್ರಿ ಮಲಗುವುದು ಮಂಡಿಯಲ್ಲಿ. ಆಗ ನಾನು ಇದ್ದುದು ಅದೇ ಬೀದಿಯಲ್ಲಿದ್ದ ಮೀನಾಕ್ಷಿ ಭವನದ ಮಹಡಿಯ
ಮೇಲೆ. ಸುಬ್ಬಣ್ಣ ವಿಜ್ಞಾನದ ವಿದ್ಯಾರ್ಥಿ. ನಾನು ಕಲಾ ವಿದ್ಯಾರ್ಥಿ. ನಮ್ಮ ಪರಿಚಯ ಹೆಚ್ಚು ನಿಕಟವಾಗಿಲ್ಲದಿದ್ದರೂ
ತೀರ್ಥಹಳ್ಳಿಯ ನನ್ನ ಸ್ನೇಹಿತ, ಸುಬ್ಬಣ್ಣನ ಸಹಪಾಠಿ ಎನ್.ವಿ.ಸುಬ್ಬರಾವ್ ಎಂಬುವರೊಡನೆ ಒಂದೆರಡು ಬಾರಿ
ಅವರ ರೂಮಿಗೂ ಹೋಗಿದ್ದೆ. ಗೋಡೆಯ ಮೇಲೆಲ್ಲಾ ಏನೇನೋ ಗೀಚಿದ ಚಿತ್ರಗಳು, ಬರಹಗಳು. ಮುಖ್ಯವಾಗಿ ನನ್ನ
ಗಮನ ಸೆಳೆದದ್ದು ಕುಪ್ಪಯ್ಯನ ಸ್ತುತಿ. “ನೆನೆಯದಿರಣ್ಣ ಶಿವಮೊಗ್ಗೆಯೊಳಿಂ ಪೆರೆತಾರುಮೊನೊಂದೆ
ಚಿತ್ತದಿಂ/ ನೆನೆವೊಡೆ ಕುಪ್ಪಯ್ಯನಂನೆನೆಯ. ಕುಪ್ಪಯ್ಯಂಗಾರ್ದೊರ?( ಅವನ ಹೆಂಡತಿ) ಕುಪ್ಪಯ್ಯನುಪ್ಪಿಟ್ಟು
ಕುಪ್ಪಯ್ಯನ ದೋಸೆ ಓಂಕಾಯಿ ಕುಪ್ಪಯ್ಯನ.....“ ಇದರಿಂದಾಗಿ ಅವರು ಕುಪ್ಪಯ್ಯನವರ ಸಿಟ್ಟಿಗೂ ಒಳಗಾಗಬೇಕಾಗಿತ್ತಂತೆ. ಆಗ ಅವರೊಡನೆ ಪಾ.ಸು.ಭಟ್ಟ, ಕಾನಲೆ ಕೃಷ್ಣಮೂರ್ತಿ,
ಟಿ.ಎಸ್. ಲಕ್ಷ್ಮೀನಾರಾಯಣ ರಾವ್ ಮುಂತಾದವರು ಅದೇ ಮಹಡಿಯ ರೂಂಗಳಲ್ಲಿ ಇದ್ದರು.
ನನ್ನ ಸುಬ್ಬಣ್ಣ ಅವರ ಸಂಬಂಧ ಹೆಚ್ಚು ನಿಕಟವಾದುದು ಮೈಸೂರು ಮಹಾರಾಜಾ
ಕಾಲೇಜು ಸೇರಿದ ಮೇಲೆ. ಅವರು ಕನ್ನಡ ಆನರ್ಸ್ ಸೇರಿದರು. ನಾನು ಬಿ.ಎ. ವಿದ್ಯಾರ್ಥಿಯಾದೆ. ನಮ್ಮಿಬ್ಬರಿಗೂ
ಆತ್ಮೀಯನಾದ ಅನಂತಮೂರ್ತಿ ಚಾಮುಂಡಿಪುರದಲ್ಲಿ ಒಂದು ರೂಂನಲ್ಲಿ ಉಳಿದಿದ್ದು ಸಾರ್ವಜನಿಕ ಹಾಸ್ಟೆಲ್‌ನಲ್ಲಿ
ಊಟಮಾಡುತ್ತಿದ್ದ. ನಾನು ಮತ್ತು ಸುಬ್ಬಣ್ಣ ಮಹಾರಾಜಾ ಕಾಲೇಜ್ ಹಾಸ್ಟೆಲ್‌ನಲ್ಲಿ ಒಂದೇ ರೂಮಿನಲ್ಲಿದ್ದೆವು.
ಮಹಾರಾಜಾ ಕಾಲೇಜು ಹಾಸ್ಟೆಲ್ಲು ಆ ಕಾಲದಲ್ಲಿ ಒಂದು ಪ್ರತಿಷ್ಠೆಯ ಹಾಸ್ಟೆಲ್ಲು. ಅಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ
ಮಾತ್ರ ಅವಕಾಶವಿತ್ತು. ಯಾವ ವಿಶೇಷ ನಿರ್ಬಂಧಗಳೂ ಅಲ್ಲಿರಲಿಲ್ಲ. ಹಾಗಾಗಿ ಅನಂತಮೂರ್ತಿ ಹೆಚ್ಚುಕಾಲ
ನಮ್ಮ ಜೊತೆಗೇ ಹಾಸ್ಟೆಲ್‌ನಲ್ಲಿ ಕಳೆಯುತ್ತಿದ್ದ. ನಮ್ಮ ರೂಮಿಗೆ ಬಂದಾಗಲೆಲ್ಲ ಸುಬ್ಬಣ್ಣನೊಂದಿಗೆ
ಅವನ ವಾಗ್ವಾದ ನಡೆಯುತ್ತಿತ್ತು. ಅದು ಬಟ್ಟೆ ಹಾಕುವುದರಿಂದ ಹಿಡಿದು ಸಾಹಿತ್ಯ ಮತ್ತು ಸಮಾಜವಾದದವರೆಗೂ.
ಚರ್ಚೆಯಲ್ಲಿ ನ.ರತ್ನ, ವಿಶ್ವನಾಥ ಮಿರ್ಲೆ, ಗೋಪಾಲಕೃಷ್ಣ, ಪಿ. ಶ್ರೀನಿವಾಸರಾವ್ ಮೊದಲಾದವರೂ ಭಾಗವಹಿಸುತ್ತಿದ್ದರು.
ಸುಬ್ಬಣ್ಣನದು ತುಂಬ ಅವಸರದ ಪ್ರವೃತ್ತಿ. ಏನಾದರೂ ತಲೆಗೆ ಹೊಕ್ಕಿತೆಂದರೆ
ಅದನ್ನು ಮಾಡಿ ಮುಗಿಸುವವರೆಗೂ ವಿಶ್ರಾಂತಿಯಿಲ್ಲ. ಪುಸ್ತಕ ಪ್ರಕಟಿಸಬೇಕೆಂಬ ಹಂಬಲದಿಂದ “ಕೈಲಾಸಂ
ದರ್ಶನ” ಎಂಬ ಸಂಕಲವೊಂದನ್ನು ಅಚ್ಚುಹಾಕಿಸಿದರು. ಮುಂದೆ ಮಾರಾಟದ ಪ್ರಶ್ನೆ
ಬಂದಾಗ ಒಂದು ಹೊಸ ಉಪಾಯ ಯೋಚಿಸಿದರು. ವಯಸ್ಕರ ಶಿಕ್ಷಣ ಮಂಡಲಿಯಿಂದ ರಾಜ್ಯದಲ್ಲಿರುವ ಎಲ್ಲಾ ಮಹಿಳಾ
ಸಮಾಜಗಳ ಪಟ್ಟಿ ಪಡೆದು ಎಲ್ಲರಿಗೂ ಒಂದೊಂದು ಪ್ರತಿಯನ್ನು ವಿ.ಪಿ.ಪಿ. ಮೂಲಕ ಕಳುಹಿಸಿದರು. ಮಹಿಳೆಯರು
ತಿರಸ್ಕರಿಸುವುದಿಲ್ಲ ಎಂಬುದು ಅವರ ಧೃಢವಾದ ನಂಬಿಕೆಯಾಗಿತ್ತು. ಆದರೆ ಅವರ ನಂಬಿಕೆ ಹುಸಿಯಾಯಿತು.
ಹಾಸನದ ಮಹಿಳಾಮಂಡಲಿಯ ಹೊರತು ಉಳಿದವರೆಲ್ಲರೂ ವಿಪಿಪಿಯನ್ನು ತಿರಸ್ಕರಿಸಿದ್ದರು. ಇದರಿಂದಾಗಿ ಮತ್ತಷ್ಟು
ಆರ್ಥಿಕ ಹೊರೆಯನ್ನು ಹೊರಬೇಕಾಯಿತು. ಕೆಲವು ದಿನಗಳ ನಂತರ ಗಾಂಧೀಜಿಯವರನ್ನು ಕುರಿತ ಕವನ ಸಂಕಲನ “ಅಮರನಾದೈ
ತಂದೆ” ಪ್ರಕಟಿಸಿದರು. ಮುಂದೆ ಅವರು ಪ್ರಾರಂಭಿಸಿದ ಅಕ್ಷರ ಪ್ರಕಾಶನಕ್ಕೆ
ಬಹುಶ: ಇದೇ ನಾಂದಿ.
ಕಾಲೇಜಿನಲ್ಲಿ ಸುಬ್ಬಣ್ಣ ಎಲ್ಲರ ಗಮನ ಸೆಳೆದ ವಿದ್ಯಾರ್ಥಿ. ಆನರ್ಸ್‌ನ
ಮೂರು ವರ್ಷಗಳೂ ಸುಬ್ಬಣ್ಣ ಸಬ್ಜೆಕ್ಟ್ ಸ್ಕಾಲರ್. ಕೆ.ವಿ. ಪುಟ್ಟಪ್ಪ, ಡಿ.ಎಲ್. ನರಸಿಂಹ ಆಚಾರ್,
ಕೆ.ವಿ. ರಾಘವಾಚಾರ್, ಅನಂತ ರಂಗಾಚಾರ್, ಎಸ್.ವಿ. ಪರಮೇಶ್ವರ ಭಟ್ಟ, ಮೊದಲಾದವರು ಅವರ ಅಧ್ಯಾಪಕರು.
ಡಿ.ಎಲ್. ನರಸಿಂಹಾಚಾರ್ ಅವರು ಆದಿಪುರಾಣದ ಕೆಲವು ಸಂದರ್ಭಗಳನ್ನು ವಿವರಿಸುವಾಗ ಭಾವಪರವಶರಾಗಿ ಗದ್ಗದಿತರಾದದ್ದನ್ನು
ರೂಮಿಗೆ ಬಂದು ನನಗೆ ತಿಳಿಸುವಾಗ ಸುಬ್ಬಣ್ಣ ತಾವೂ ಆ ಭಾವನೆಯನ್ನು ಅನುಭವಿಸಿದ್ದು ನನಗೆ ನೆನಪಿದೆ.
ಕುವೆಂಪು ಅವರ ಕಾವ್ಯ ಮಿಮಾಂಸೆ, ಕಾ.ವೆಂ.ರಾಘವಾಚಾರ್ಯರ ಭಾಷಾಶಾಸ್ತ್ರ ತರಗತಿಗಳಿಗೆ ಸುಬ್ಬಣ್ಣ ಎಂದೂ
ತಪ್ಪಿಸಿಕೊಳ್ಳುತ್ತಿರಲಿಲ್ಲ. ಸುಬ್ಬಣ್ಣ ಎಲ್ಲ ಅಧ್ಯಾಪಕರಿಗೂ ಪ್ರಿಯರಾದ ವಿದ್ಯಾರ್ಥಿ.
ಆಗ ಮಹಾರಾಜಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ, ನಿವೃತ್ತಿಯ ಅಂಚಿನಲ್ಲಿದ್ದ
ವಿದ್ವಾಂಸ ಎಸ್.ವಿ.ರಂಗಣ್ಣ ಅವರಿಗೆ ಅಭಿನಂದನಾ ಗ್ರಂಥವೊಂದನ್ನು ಸಮರ್ಪಿಸಬೇಕೆಂಬ ಯೋಚನೆ ಸುಬ್ಬಣ್ಣನವರ
ತಲೆಗೆ ಹೊಕ್ಕಿತು. ತಡಮಾಡದೇ ಯೋಚನೆಯನ್ನು
ಹಾಸ್ಟೆಲ್‌ನಲ್ಲಿಯೇ ಇನ್ನೊಂದು ಕೊಠಡಿಯಲ್ಲಿದ್ದ ಹಾ.ಮಾ. ನಾಯಕರಿಗೆ ತಿಳಿಸಿ ಆ ಗ್ರಂಥಕ್ಕೆ “ಬಾಗಿನ” ಎಂಬ
ಹೆಸರನ್ನೂ ನಿರ್ಧರಿಸಿ ಕಾರ್ಯೋನ್ಮುಖರಾಗಿಯೇ ಬಿಟ್ಟರು. ಈ ಸಂಗತಿಯನ್ನು ತನ್ನ ಗಮನಕ್ಕೆ ತರಲಿಲ್ಲವೆಂದು
ಅನಂತಮೂರ್ತಿಗೆ ಸ್ವಲ್ಪ ಬೇಸರವಾಗಿತ್ತು. ಈ ಗ್ರಂಥಕ್ಕೆ ವಿದ್ವಾಂಸರೆಲ್ಲರಿಂದಲೂ ಲೇಖನಗಳನ್ನು ಆಹ್ವಾನಿಸಿದ್ದರು.
ಕುವೆಂಪುರವರ ಮನೆಗೆ ಹೋಗಿ ಲೇಖನವನ್ನು ಕೋರಿದಾಗ ಅವರು ಅವರು ವಿಷಯವನ್ನು ಹೇಳುತ್ತಾ ಹೋಗುವುದಾಗಿಯೂ
ಎಚ್ಚರಿಕೆಯಿಂದ ಕೇಳಿಸಿಕೊಂಡು ಲೇಖನವನ್ನು ತಯಾರಿಸಿ ತರಬೇಕಾಗಿಯೂ ತಿಳಿಸಿದ್ದರು. ವಿಷಯ “ಯಶೋಧರ
ಚರಿತೆಯಲ್ಲಿ ಕಾಮವಿಕಾರದ ನಿರೂಪಣೆ”. ಒಂದೆರಡು ದಿನಗಳ ನಂತರ ಸುಬ್ಬಣ್ಣ
ಲೇಖನ ತಯಾರಿಸಿ ಕುವೆಂಪುರವರಿಗೆ ತೋರಿಸಿದಾಗ ಅವರು ಓದಿನೋಡಿ - ಇಷ್ಟು ಚೆನ್ನಾಗಿ ವಿಷಯವನ್ನು ಹೆಣಿಯಲು
ನನಗೇ ಸಾಧ್ಯವಾಗುತ್ತಿರಲಿಲ್ಲ ಎಂದು ಮೆಚ್ಚಿಗೆ ವ್ಯಕ್ತಪಡಿಸಿದ್ದರಂತೆ. ಅದನ್ನು ಸುಬ್ಬಣ್ಣ ರೂಮಿನಲ್ಲಿ
ನನ್ನ ಮತ್ತು ಅನಂತಮೂರ್ತಿಯ ಎದುರು ಹೇಳಿಕೊಂಡು ಬೀಗಿದ್ದೇ ಬೀಗಿದ್ದು. ಇದೇ ಸಮಯದಲ್ಲಿ ವಯಸ್ಕರ ಶಿಕ್ಷಣ
ಸಮಿತಿಯವರು ಸುಬ್ಬಣ್ಣನವರ “ನಾವು
ತಿನ್ನುವ ಅಡಿಕೆ” ಎಂಬ ಪುಸ್ತಕವನ್ನು ಪ್ರಕಟಿಸಿದ್ದರು. ಅನಂತಮೂರ್ತಿ ಹಾಗಾದರೆ ಮುಂದೆ
“ನೀವು ತಿನ್ನುವ ಅಡಿಕೆ”, “ಅವರು
ತಿನ್ನುವ ಅಡಿಕೆ” ಎಂಬ ಪುಸ್ತಕಗಳು ಬರಬಹುದು ಎಂದು ಹಾಸ್ಯಮಾಡುತ್ತಿದ್ದ.
ಸುಬ್ಬಣ್ಣ ಜಾನಪದ ಗೀತೆಯೊಂದನ್ನು ಆಧರಿಸಿ ರಚಿಸಿದ ರೂಪಕ ಆಕಾಶವಾಣಿಯಲ್ಲಿ
ಬಿತ್ತರಗೊಂಡಿತ್ತು. ಆ ದಿನ ನಮ್ಮ ಗುಂಪು ಆಕಾಶವಾಣಿಗೇ ಹೋಗಿ ಅಲ್ಲಿನ ಹುಲ್ಲುಹಾಸಿನ ಮೇಲೆ ಕುಳಿತು
ಕೇಳಿದ್ದು ನನಗೆ ನೆನಪಿದೆ. ಆ ಕಾಲದಲ್ಲಿ ಮಹಾರಾಜಾ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆ ನಡೆಸುತ್ತಿದ್ದ
“ಮಿತ್ರಮೇಳ”ದಲ್ಲಿನ ಸಕ್ರಿಯ ಸದಸ್ಯರಲ್ಲಿ ಸುಬ್ಬಣ್ಣ
ಒಬ್ಬರು. ನಾಟಕಗಳಲ್ಲಿ ಸುಬ್ಬಣ್ಣನವರದು ಹೆಚ್ಚಾಗಿ ಸ್ತ್ರೀ ಪಾತ್ರ. ಆದರೆ ಪುಟ್ಟಸ್ವಾಮಯ್ಯ ಅವರ ಷಾಜಹಾನ್ ನಾಟಕದಲ್ಲಿ
ಸುಬ್ಬಣ್ಣ ಷಾಜಹಾನ್ ಪಾತ್ರದಲ್ಲಿ ಬಹು ಚೆನ್ನಾಗಿ ಅಭಿನಯಿಸಿದ್ದು ನೆನಪಿನಲ್ಲಿದೆ. ಕುವೆಂಪುರವರ ರಕ್ತಾಕ್ಷಿ
ನಾಟಕದಲ್ಲಿ ಸುಬ್ಬಣ್ಣ ರುದ್ರಾಂಬೆ. ಅನಂತಮೂರ್ತಿ ಬಸವಯ್ಯ. ನಾನೂ ಒಂದು ಸಣ್ಣ ಪಾತ್ರ ವಹಿಸಿದ್ದೆ.
ಈ ನಾಟಕವನ್ನು ಕಾಲೇಜಿನಲ್ಲಿ ನೋಡಿದ ಮಂಡ್ಯದ ಶಂಕರಲಿಂಗೇಗೌಡರು ತಮ್ಮಲ್ಲಿಗೂ ಬಂದು ಆಡುವಂತೆ ಆಹ್ವಾನಿಸಿದ್ದರು. ಸ್ತ್ರೀ ಪಾತ್ರವನ್ನೇ ಸುಬ್ಬಣ್ಣ ಹೆಚ್ಚುಕಾಲ ಅಭಿನಯಿಸಬಾರದೆಂದೂ,
ಇದರಿಂದ ಅವರ ನಡವಳಿಕೆಗಳೇ ವ್ಯತ್ಯಾಸ ವಾಗಬಹುದೆಂದೂ ಅನಂತಮೂರ್ತಿ ತಮಾಷೆ ಮಾಡುತ್ತಿದ್ದ.
“ವಿದೂಷಕ” ಸುಬ್ಬಣ್ಣ
ಹೊರಡಿಸುತ್ತಿದ್ದ “ಭಿತ್ರಿಕೆ”(ಭಿತ್ತಿ ಪತ್ರಿಕೆ) ಎರಡು ವಾರಗಳಿಗೊಮ್ಮೆ
ಕಾಲೇಜಿನಲ್ಲಿ ಪ್ರಕಟವಾಗುತ್ತಿತ್ತು. ಒಂದು ಬಿದಿರಿನ ತಟ್ಟಿಯಮೇಲೆ ಅಂಟಿಸುತ್ತಿದ್ದ ಕೈ ಬರಹದ ಪತ್ರಿಕೆ
ಇದು. ಕವನ, ಹರಟೆ, ವ್ಯಂಗ್ಯಚಿತ್ರ, ವ್ಯಕ್ತಿ ಚಿತ್ರ ಮೊದಲಾದವುಗಳು ಈ ಪತ್ರಿಕೆಯಲ್ಲಿ ಇರುತ್ತಿದ್ದವು.
ಅನೇಕವೇಳೆ ಹಳೆಯ ಪತ್ರಿಕೆಗಳಿಂದ ಲೇಖನಗಳನ್ನೂ, ವ್ಯಂಗ್ಯಚಿತ್ರಗಳನ್ನೂ ಆರಿಸಿ ಹಾಕುತ್ತಿದ್ದೆವು.
ಲೇಖನದ ಕೊನೆಯಲ್ಲಿ ಚಿಕ್ಕದಾಗಿ “ಅಡಗಿದೆ ಬುಡ -ಎದ್ದಿದೆ ಗಿಡ” ಎಂಬ
ಟಿಪ್ಪಣಿ ಹಾಕಲು ಮರೆಯುತ್ತಿರಲಿಲ್ಲ. ಪರೀಕ್ಷೆ ಸಮೀಪಿಸಿದಾಗ ಪಠ್ಯವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು
ಪ್ರಕಟಿಸಿದಾಗ ವಿದ್ಯಾರ್ಥಿಗಳು ಗುಂಪು ಗುಂಪಾಗಿ ನಿಂತು ಲೇಖನ ನಕಲು ಮಾಡಿಕೊಳ್ಳುತ್ತಿರುವುದನ್ನು
ಕಂಡು ಖುಷಿ ಪಡುತ್ತಿದ್ದೆವು. ಒಮ್ಮೆ ಯಾರೋ ವಿದ್ಯಾರ್ಥಿಗಳು ಈ ಭಿತ್ತ್ರಿಕೆಯಮೇಲೆ ಏನೋ ಅಸಭ್ಯ ಮಾತುಗಳನ್ನು
ಗೀಚಿದ್ದರು. ಮುಂದಿನ ಸಂಚಿಕೆಯಲ್ಲಿ ಸುಬ್ಬಣ್ಣ ಈರೀತಿ ಗೀಚಿದ ವ್ಯಕ್ತಿಗಳ “ಶೀಘ್ರಸ್ಖಲನ
ಮನೋಭಾವವನ್ನು” ಖಂಡಿಸಿದ್ದರು. ದೂರು ಪ್ರ್ರಿನ್ಸಿಪಾಲರವರೆಗೂ ಹೋಯಿತು. ಆದರೆ ಆ ಮಾತು
ತಪ್ಪು ಎಂದು ಹೇಳಲು ಅವರಿಗೂ ಸಾಧ್ಯವಾಗಲಿಲ್ಲ.
ಹಾಸ್ಟೆಲ್ಲಿನಲ್ಲಿ ನಮ್ಮದು ಕೆ.ಎಂ.ಪಿ. ಪಾರ್ಟಿ. ಅದು ಸುಬ್ಬಣ್ಣ ಇಟ್ಟ
ಹೆಸರು. ಅಂದರೆ ಕಿಸಾನ್ ಮಜದೂರ್ ಪ್ರಜಾ ಪಾರ್ಟಿ ಅಲ್ಲ. ಕೆನೆ ಮೊಸರು ಪಾರ್ಟಿ. ಬೆಳಿಗ್ಗೆ ಹತ್ತು
ಗಂಟೆಗೆ ಸರಿಯಾಗಿ ಊಟಕ್ಕೆ ಹೋದವರಿಗೆ ಬಟ್ಟಲಿನಲ್ಲಿ ಕೆನೆ ಮೊಸರು ದೊರೆಯುತ್ತಿತ್ತು. ಹಾಸ್ಟೆಲ್ಲಿನ
ಮೆಸ್‌ನಲ್ಲಿದ್ದ ಪರಿಚಾರಕರಾಗಿದ್ದ ರಾಮರಾವ್ ಎಂಬುವವರಿಗೆ ಸುಬ್ಬಣ್ಣನ ಬಗ್ಗೆ ಬಹಳ ಗೌರವ ಮತ್ತು ಆದರ.
ಅದರಿಂದಾಗಿ ನಮಗೆ ಕೆನೆಮೊಸರು ಎಂದೂ ತಪ್ಪುತ್ತಿರಲಿಲ್ಲ.
ಪ್ರತೀ ವರ್ಷದ ಕೊನೆಯಲ್ಲಿ ಹಾಸ್ಟೆಲ್ ಡೇ ಸಂಭ್ರಮದಿಂದ ನಡೆಯುತ್ತಿತ್ತು.
ಆಗ ಅನೇಕ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುತ್ತಿದ್ದವು. “ಲವ್
ಲೆಟರ್ ರೈಟಿಂಗ್” ಕೂಡ ಆ ಸ್ಪರ್ಧೆಯಲ್ಲಿರುತ್ತಿತ್ತು. ಪ್ರತೀವರ್ಷ ಸುಬ್ಬಣ್ಣನವರಿಗೇ
ಬಹುಮಾನ. ಆದರೆ ಅನಂತಮೂರ್ತಿ ಮಾತ್ರ “ಹೇಗೋ ನಿನಗೆ ಬಹುಮಾನ ಬಂತು? ಯಾರಾದರೂ
ಹುಡುಗಿ ನಿನ್ನ ಪತ್ರ ಓದಿ ಪ್ರೀತಿಸಿದರೆ ಮಾತ್ರ ಅದು ಬಹುಮಾನಕ್ಕೆ ಯೋಗ್ಯ” ಎಂದು
ಛೇಡಿಸುತ್ತಿದ್ದ.
ಕಾಲೇಜಿನಲ್ಲಿದ್ದಾಗ ನಮಗೆ ಸಿಗರೇಟು ಸೇದುವ ಹವ್ಯಾಸ ಅಂಟುಕೊಂಡಿತ್ತು.
ಪ್ರತಿನಿತ್ಯ ಒಂದು ಪ್ಯಾಕ್ ಬರ್ಕ್ಲಿ, ಒಂದು ಪ್ಯಾಕ್ ಪ್ಲೇಯರ್ಸ್ ತರುತ್ತಿದ್ದೆವು. ನೂರಡಿ ರಸ್ತೆಯ
ಮೇಲ್ಭಾಗದಲ್ಲಿ, ರಾಮಸ್ವಾಮಿ ಸರ್ಕಲ್ ಪಕ್ಕ ಒಬ್ಬ ಉಡುಪಿ ಅಂಗಡಿಯವನನ್ನು ಅನಂತಮೂರ್ತಿ ಗುರ್ತು ಮಾಡಿಸಿ
ಕೊಟ್ಟಿದ್ದ. ಅವನಿಂದ ನಾವು ಕಡ ತರುತ್ತಿದ್ದೆವು. ಇದರ ಪಕ್ಕದಲ್ಲಿಯೇ ಮತ್ತೊಂದು ಹೋಟೆಲ್ - ಅದೂ ಉಡುಪಿಯವರದ್ದು
- ಅಲ್ಲಿ ಅನಂತಮೂರ್ತಿಗೆ ಸಾಲ ಸಿಗ್ತಾ ಇತ್ತು. ಇದರಿಂದಾಗಿ ನಮ್ಮ ಬಳಿ ದುಡ್ಡು ಇಲ್ಲದಿದ್ದಾಗಲೂ ತಿಂಡಿ-ಕಾಪಿಗೆ
ಕೊರತೆಯಾಗುತ್ತಿರಲಿಲ್ಲ. ಕೆಲವು ದಿನಗಳ ನಂತರ ನಮಗೆ ಸಿಗರೇಟು ಸೇದೋದು ತಪ್ಪು, ಬದಲಾಗಿ ಎಲೆ ಅಡಿಕೆ
ಹಾಕೋದೇ ಒಳ್ಳೆಯದು ಅಂತ ಅನ್ನಿಸಿತು. ಎಲೆ -ಅಡಿಕೆ-ಹೊಗೆಸೊಪ್ಪು-ಸುಣ್ಣ ಎಲ್ಲ ತಂದು ಒಂದು ಪೆಟ್ಟಿಗೆಯಲ್ಲಿಡಲು
ಪ್ರಾರಂಭಿಸಿದೆವು. ಆದ್ರೆ ಯಾವುದೂ ವ್ಯವಸ್ಥಿತವಾಗಿ ಇರುತ್ತಿರಲಿಲ್ಲ. ಒಂದಿದ್ದರೆ ಮತ್ತೊಂದು ಇರುತ್ತಿರಲಿಲ್ಲ.
ಸುಣ್ಣ ಇಲ್ಲದೇ ಇದ್ದಾಗ ಅದಕ್ಕೊಂದು ಉಪಾಯವನ್ನು ಕಂಡುಕೊಂಡಿದ್ವಿ. ಆಗೆಲ್ಲ ಗೋಡೆಗಳಿಗೆ ಸುಣ್ಣ ಬಳಿಯುತ್ತಿದ್ದರು.
ಸುಣ್ಣ ಬೇಕಾದಾಗ ಗೋಡೆ ಕೀರಿಕೀರಿ ಸುಣ್ಣ ಪಡೆಯಬಹುದಾಗಿತ್ತು. ರತ್ನ, ವಿಶ್ವನಾಥ ಮಿರ್ಲೆ ಎಲೆ ಅಡಿಕೆಗೆ
ನಮ್ಮೊಡನೆ ಸೇರುತ್ತಿದ್ದರು. ನಮ್ಮ ರೂಮು ಹಾಸ್ಟೆಲ್ಲಿನ ಒಂದನೇ ಬ್ಲಾಕಿನ ಮಹಡಿಯ ಮೇಲಿತ್ತು. ಒಂದು ದಿನ ಎಲೆ ಅಡಿಕೆ ಹಾಕಿಕೊಂಡು ಕೂತಿದ್ದ ಸುಬ್ಬಣ್ಣ
ಬಾಯಲ್ಲಿ ತುಂಬಿದ್ದ ತಂಬುಲವನ್ನು ಅವಸರವಾಗಿ ಹೋಗಿ ವರಾಂಡದಿಂದ ಕೆಳಗೆ ಉಗುಳಿದರು. ದುರಾದೃಷ್ಟದಿಂದ
ಯಾರೋ ಕೆಳಗೆ ನಿಂತವರ ಮೇಲೆ ಅದು ಬಿತ್ತು. ಸುಬ್ಬಣ್ಣ ಹೆದರಿಕೊಂಡು ಇನ್ನು ಏನೋ ಒಂದು ಕಾದಿದೆ, ಜಗಳಕ್ಕೆ
ಆತ ಬರ್ತಾನೆ ಅಂತ ರೂಮಿನೊಳಗೆ ಬಂದು ಮುಸುಕು
ಹಾಕ್ಕೊಂಡು ಮಲಗಿದರು. ಸ್ವಲ್ಪ ಹೊತ್ತಿನ ನಂತರ “ನಾನೇ ಹೋಗಿ
ಅವನ ಕ್ಷಮೆ ಕೋರ್ತೀನಿ” ಅಂತ ಕೆಳಗೆ ಓಡಿದ್ರು. ಅಲ್ಲಿ ನೋಡಿದರೆ ಅಸಾಮಿನೇ ನಾಪತ್ತೆ. ಅವನು
ಹಾಸ್ಟಲ್ಲಿನವನಲ್ಲ. ಯಾರೋ ಅಪರಿಚಿತ. ಹೀಗಾಗಿ ಒಂದು ಗಂಡಾಂತರದಿಂದ ನಾವು ಪಾರಾದೆವು.
ಸುಬ್ಬಣ್ಣ ತುಂಬಾ ಉದಾರಿ. ಯಾರಾದರೂ ಸಹಾಯ ಅಪೇಕ್ಷಿಸಿದರೆ ಇಲ್ಲ ಅನ್ನುತ್ತಿರಲಿಲ್ಲ.
ಯಾವುದಾದರೂ ನಾಟಕ ಅಥವ ಸಿನಿಮಾಕ್ಕೆ ಹೋಗಬೇಕಾದರೆ ಅವರ ಜೊತೆಯಲ್ಲಿ ಒಂದು ಚಿಕ್ಕ ಗುಂಪು ಇರುತ್ತಿತ್ತು.
ಹೀಗಾಗಿ ಎಷ್ಟೋ ವೇಳೆ ಅವರಿಗೆ ದುಡ್ಡೇ ಇಲ್ಲದ ಸಂದರ್ಭ ಬರುತ್ತಿತ್ತು. ಒಂದು ಸಾರಿ ಹಣದ ಅವಶ್ಯಕತೆ
ಬಂದಾಗ ತಮ್ಮ ವಾಚನ್ನ ನೂರಡಿ ರಸ್ತೆಯಲ್ಲಿದ್ದ ಗಿರವಿ ಅಂಗಡಿ ಗಿರಿಯಪ್ಪನಲ್ಲಿಟ್ಟು ಹಣ ಪಡೆದಿದ್ದರು.
ಬಹುಷ: ಅವರು ಹಣವನ್ನು ಹಿಂತಿರುಗಿಸಿ ವಾಚನ್ನು ಪಡೆದದ್ದು ಕಾಲೇಜು ಮುಗಿಸಿ ಮನೆಗೆ ಹೊರಟಾಗಲೇ.
ಒಮ್ಮೆ ಟೌನ್ ಹಾಲ್‌ನಲ್ಲಿ ನೋಡಿದ “ಹೇಮರೆಡ್ಡಿ
ಮಲ್ಲಮ್ಮ” ನಾಟಕ ಜ್ಞಾಪಕವಾಗುತ್ತದೆ. ನಾಟಕವನ್ನು ಯತಾರ್ಥ ತೋರಿಸಬೇಕೆಂಬ ಹಂಬಲದಿಂದ
ಎತ್ತಿನ ಗಾಡಿಯನ್ನೇ ರಂಗದಮೇಲೆ ತಂದಿದ್ದರು. ಹೇಮರೆಡ್ಡಿ ಮಲ್ಲಮ್ಮ ಅತ್ತೆಯ ಮನೆಗೆ ಹೋಗುವ ದೃಶ್ಯ.
ತೆರೆ ಮೇಲಕ್ಕೆ ಸರಿದಂತೆ ಬೆಳಕಿಗೆ ಹೆದರಿ ಎತ್ತುಗಳು ಸ್ಟೇಜಿನ ಮೇಲಿಂದ ಪ್ರೇಕ್ಷಕರ ಮದ್ಯಕ್ಕೇ ಹಾರಿದವು. ಪ್ರೇಕ್ಷಕರೆಲ್ಲಾ ಚೆಲ್ಲಾಪಿಲ್ಲಿ. ಮುಂದಿನ ಸಾಲಿನಲ್ಲಿ
ಕುಳಿತ ನಾವೆಲ್ಲರೂ ಬದುಕಿದೆಯಾ ಬಡಜೀವವೇ ಎಂದು ಹಿಂತಿರುಗಿದ್ದು ಜ್ಞಾಪಕದಲ್ಲಿದೆ. ಹೀಗೆ ಇನ್ನೂ ಅನೇಕ
ನಾಟಕಗಳನ್ನು ನಾವು ನೋಡಿದ ನೆನಪಿದೆ.
ಸುಬ್ಬಣ್ಣಂದು ಬಹಳ ನಾಚಿಕೆ ಸ್ವಬಾವ. ಒಮ್ಮೆ ಅಂಚೆಯಲ್ಲಿ ಊರಿನಿಂದ
ಅವರಿಗೊಂದು ಪ್ಯಾಕೆಟ್ ಬಂದಿತ್ತು. ಅದು ಹಬ್ಬದಲ್ಲಿ ಮಾಡಿದ ಏನೋ ತಿಂಡಿಯನ್ನು ಕಳುಹಿಸಿದ್ದಾರೆ ಎಂದು
ನನಗೆ ಗುಮಾನಿ. ಆದರೆ ಸುಬ್ಬಣ್ಣ ಆ ಪ್ಯಾಕೆಟ್ಟನ್ನು ಕಬೋರ್ಡ್‌ನಲ್ಲಿ ಇಟ್ಟವರು ನಾಲ್ಕಾರು ದಿನ ತೆಗೆಯಲೇ
ಇಲ್ಲ. ನನಗೆ ಯಾವಗ ಇದನ್ನು ಬಿಚ್ಚುತ್ತಾರೆ ಎಂಬ ಕುತೂಹಲ. ಅನಂತಮೂರ್ತಿಗೆ ಗೊತ್ತಾಗಿದ್ದರೆ ಅವ ಯಾವ
ಮುಲಾಜೂ ಇಲ್ಲದೇನೆ ಅದನ್ನು ತೆಗೀತಿದ್ದ. ಕೊನೆಗೆ ನನಗೆ ಆ ಕುತೂಹಲ ತಡೆಯಲಾಗದೇ “ಸುಬ್ಬಣ್ಣ,
ಅಂದು ಬಂದ ಆ ಪ್ಯಾಕೆಟ್ ಬಿಚ್ಚಿ ಮಾರಾಯ್ರೇ” ಎಂದು ಒತ್ತಾಯಿಸಿದಾಗ ಅದನ್ನು ತೆಗೆದು
ನೋಡಿದ್ರೆ ಅದರೊಳಗಿದ್ದ ಹಬ್ಬದ ಹೋಳಿಗೆ ಹಾಳಾಗಿಹೋಗಿತ್ತು. ಸುಬ್ಬಣ್ಣ “ಸಾರಿ” ಅಂತ
ಹೇಳಿ ಆ ಪ್ರಸಂಗವನ್ನು ಮುಕ್ತಾಯಗೊಳಿಸಿದ್ರು.
ನಾವು ಕೆಲವುವ್ಯಕ್ತಿಗಳಿಗೆ ಅಡ್ಡ ಹೆಸರನ್ನು ಇಟ್ಟು ಕರೆಯುತ್ತಿದ್ದೆವು.
ರಸ್ತೆಯಲ್ಲಿ ಪ್ರತಿನಿತ್ಯ ನಿಂತು-ನಿಂತು ವಾಕ್ ಮಾಡುತ್ತಿದ್ದ ಹಿರಿಯರೊಬ್ಬರಿಗೆ “ಲಾರ್ಡ್
ನಿಂತ್ ನಿಂತ್ ಗೋ” ಎಂತಲೂ, ಮಾರ್ಕ್ಸ್‌ವಾದಿ ಗೋಪಾಲಕೃಷ್ಣನಿಗೆ “ಕೃಷ್ಣೋ
ವಿಚ್ ಗೋಪ್ಸ್ಕಿ” ಎಂತಲೂ, ಕೀರಲು ಧ್ವನಿಯ ಎ.ಕೆ. ರಾಮಾನುಜನ್‌ಗೆ “ಕೀಚಕ” ಎಂತಲೂ,
ಇಂಗ್ಲೀಷ್ ಪ್ರಾಧ್ಯಾಪಕ ಕೃಷ್ಣರಾವ್ ಅವರಿಗೆ “ಬರ್ಕ್ಲಿ” ಎಂತಲೂ
ಗುಟ್ಟಾಗಿ ಕರೆಯುತ್ತಿದ್ದೆವು. ರತ್ನ, ಸುಬ್ಬಣ್ಣ ಇಂತಹ ವಿಷಯಗಳಲ್ಲಿ ನಿಷ್ಣಾತರು.
ರಾತ್ರಿ ಊಟವಾದನಂತರ ನಮ್ಮ ಗುಂಪು ಓರಿಯಂಟಲ್ ರೀಸರ್ಚ್ ಇನ್ಸ್ಟಿಟ್ಯೂಟ್
ಹತ್ತಿರ ಹೋಗಿ ಕೆಲವು ಹೊತ್ತು ಹರಟೆ ಹೊಡೆಯುತ್ತಾ ಕುಳಿತುಕೊಳ್ಳುತ್ತಿತ್ತು. ಕೆಲವುವೇಳೆ ಅನಂತಮೂರ್ತಿ
ನಮಗೆ ಪಠ್ಯವಾಗಿದ್ದ ಶೇಕ್‌ಸ್ಪಿಯರ್, ಬರ್ನಾಡ್ ಷಾ ಅವರ ನಾಟಕಗಳನ್ನು ಓದಿ ವಿವರಿಸ್ತಿದ್ದ. ಅದರ ಬಗ್ಗೆ
ಚರ್ಚೆ ನಡೆಯುತ್ತಿತ್ತು. ನಾವಲ್ಲಿಗೆ ಹೋದಾಗ ನಡೆದ ಕೆಲವು ಘಟನೆಗಳನ್ನು “ಸುರಗಿ”ಯಲ್ಲಿ
ಅನಂತಮೂರ್ತಿ ಬರೆದಿದ್ದಾನೆ.
ಸುಬ್ಬಣ್ಣನಿಗೆ ಬಿಯರ್-ವಿಸ್ಕಿ ಇಂಥವುಗಳ ಪರಿಚಯವೇ ಇರಲಿಲ್ಲ. ಒಮ್ಮೆ
ನಾನು ನನ್ನ ದೂರದ ಬಂಧು ಮೆಡಿಕಲ್ ಓದುತ್ತಿದ್ದ ರವೀಂದ್ರನಾಥ ಕೊಡ್ಗಿ ಅವರ ರೂಮಿಗೆ ಹೋದಾಗ ಅವರು ಕೊಟ್ಟ
ಒಂದು ಗ್ಲಾಸ್ ಬಿಯರ್ ಅನ್ನು ಕುಡಿದು ರೂಮಿಗೆ ಬಂದೆ. ಸ್ವಲ್ಪ ಹೊತ್ತಿನ ನಂತರ ರೂಮಿಗೆ ಬಂದ ಅನಂತಮೂರ್ತಿ
ತಕ್ಷಣ ವಾಸನೆಯನ್ನು ಗ್ರಹಿಸಿ “ಏನೋ ಯಾರು ಬೀಯರ್ ಕುಡಿದಿದ್ದೀರಿ” ಅಂತ
ಪರೀಕ್ಷಿಸತೊಡಗಿದ. ಪಾಪ,ಸುಬ್ಬಣ್ಣನಿಗೆ ಬಿಯರ್ ವಾಸನೆ ಕೂಡ ಗೊತ್ತಿರಲಿಲ್ಲ. ಅವರು “ಏ ನೀನೇ
ಕುಡುಕೊಂಡು ಬಂದಿರಬೇಕು, ಇನ್ನ್ಯಾರು ಕುಡೀತಾರೆ” ಅಂತ ವಾದಿಸಿ
ನನ್ನನ್ನು ಬಚಾವ್ ಮಾಡಿದ್ರು. ಆದ್ರೆ ವಾಸನೆಯ ಪರಿಚಯ ಇದ್ದ ಅನಂತಮೂರ್ತಿಗೆ ಇದರಿಂದ ಬೇಜಾರಾಯಿತು. ಕೊನೆಗೆ ನಾನೇ ಗುಟ್ಟಾಗಿ ಅನಂತಮೂರ್ತಿ
ಕ್ಷಮೆ ಕೋರಿದೆ.
ಸುಬ್ಬಣ್ಣ ಒಂದುರೀತಿಯ ಸ್ಥಿತಪ್ರಜ್ಞ. ಪರೀಕ್ಷೆಯ ದಿನ ಕೂಡ ಊಟಮಾಡಿಬಂದು
“ಒಂದು ಘಂಟೆ ಬಿಟ್ಟು ಎಬ್ಬಿಸು” ಅಂತ ಆರಾಮಾಗಿ
ಮಲಗಿ ನಿದ್ರೆ ಮಾಡಿಬಿಡ್ತಿದ್ದರು. ನಂತ್ರ ಎದ್ದು ಯಾವ ಆತಂಕ, ಗಡಿಬಿಡಿ ಇಲ್ದೆ ಪರೀಕ್ಷೆಗೆ ಹೋಗ್ತಿದ್ದರು.
ತಿಂಗಳ ಕೊನೆಯಲ್ಲಿ ಖರ್ಚಿಗೆ ಹಣ ಇಲ್ದಿದ್ದಾಗಲೂ ಅಷ್ಟೇ “ಅಯ್ಯೋ, ಎಲ್ಲ್ಲಾದ್ರೂ
ಸಿಗತ್ತೆ” ಅಂತ ನಿಶ್ಚಿಂತೆಯಿಂದ ಇರ್ತಿದ್ದರು. ಸುಬ್ಬಣ್ಣನ ಓದಿನ ವಿಧಾನವೇ ವಿಶಿಷ್ಟ.
ಪುಸ್ತಕ ಹಿಡಿದು ಕೂತರೆ ಅದು ಮುಗಿಸೋವರೆಗೆ ಏಳ್ತಾ ಇರ್ಲಿಲ್ಲ. ನಾವೆಲ್ಲ ವಾಕ್ಯಗಳನ್ನು ಓದಿದರೆ ಅವರು
ಪುಟಪುಟವನ್ನೇ ಓದುತ್ತಿದ್ದರು. ನಂತರ ಓದಿದ ವಿಷಯವನ್ನು ಬೇರೆಯವರಿಗೆ ತಿಳಿಸಲೇಬೇಕು. ಹೀಗೆ ಸುಬ್ಬಣ್ಣನ
ಜೊತೆಯಲ್ಲಿ ಇರುವುದೇ ಒಂದು ಕಲಿಕೆ ಆಗಿರುತ್ತಿತ್ತು.
ಅನಂತಮೂರ್ತಿಯ ಬಗ್ಗೆ ಸುಬ್ಬಣ್ಣನಿಗೆ ಆಗಲೇ ಬಹಳ ಒಳ್ಳೆಯ ಅಭಿಪ್ರಾಯವಿತ್ತು.
ರಾಜಕೀಯಕ್ಕೆ ಹೋಗದಿದ್ದರೆ ಈತ ಬಹಳ ದೊಡ್ಡ ಬರಹಗಾರನಾಗ್ತಾನೆ ಅಂತ ಹೇಳಿದ್ದು ನನಗೆ ಜ್ಞಾಪಕವಿದೆ.
ಸುಬ್ಬಣ್ಣನ ನಿಲುವಿನ ಬಗ್ಗೆ ಅನಂತಮೂರ್ತಿಗೂ ತುಂಬಾ ಗೌರವವಿತ್ತು. ಮಾರ್ಕ್ಸ್‌ವಾದಿ ಗೋಪಾಲಕೃಷ್ಣನ
ಜೊತೆ ಸಮಾಜವಾದಿಗಳಾದ ಸುಬ್ಬಣ್ಣ ಮತ್ತು ಅನಂತಮೂರ್ತಿಯ ಚರ್ಚೆ ಆಗಾಗ್ಗೆ ನಡೆಯುತ್ತಿತ್ತು. ನಮ್ಮ ರೂಮಿಗೆ
ಆಗಾಗ್ಗೆ ನಿರಂಜನ ಬರುತ್ತಿದ್ದರು. ಅದು ಅವರ ಮತ್ತು ಡಾ. ಅನುಪಮ ಅವರ ಪ್ರೇಮ ಸಂಬಂಧ ನಡೆಯುತ್ತಿದ್ದ
ಕಾಲ. ಗೊಪಾಲಕೃಷ್ಣ ಇದಕ್ಕೆ ಸಹಕರಿಸುತ್ತಿದ್ದ. ನಮ್ಮ ರೂಮಿಗೆ ಬರುತ್ತಿದ್ದ ಅನುಪಮ ಅವರನ್ನು ದೂರದ
ಅವರ ಮನೆಗೆ ಕೆಲವುಸಾರಿ ಬಿಟ್ಟುಬರುತ್ತಿದ್ದೆವು. ಕಲಾವಿದ ಆರ್.ಎಸ್. ನಾಯ್ಡು ಅವರಿಗೆ ಸುಬ್ಬಣ್ಣನವರ
ಬಗ್ಗೆ ವಿಶೇಷ ಆದರ. ಮೈಸೂರಿಗೆ ಬಂದಾಗ ಇವರನ್ನು ನೋಡದೇ ಹೋಗುತ್ತಿರಲಿಲ್ಲ.
ಹೀಗೆ ಸುಬ್ಬಣ್ಣನ ಮತ್ತು ನನ್ನ ಒಡನಾಟದ ನೆನಪುಗಳು ಸುರಳಿ ಸುರಳಿಯಾಗಿ
ಬರುತ್ತವೆ. ಈ ಎಲ್ಲಾ ಜ್ಞಾಪಕಗಳ ಹೊರತಾಗಿ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ ಇನ್ನೂ ಉಳಿದಿರುವುದು
ಅವರ ನಿರ್ಮಲ ಪ್ರೇಮ, ವಿಶ್ವಾಸ, ಕಾಳಜಿ. ಕಾಲೇಜ್ ದಿನಗಳ ನಂತರ ಅವರ ಕೊನೆಯ ದಿನಗಳವರೆಗೂ ನಾನು ಅದನ್ನು
ಪಡೆದಿದ್ದೇನೆ. ನನ್ನ ಅನೇಕ ಸಂಕಷ್ಟದ ಕ್ಷಣಗಳಲ್ಲಿ ಅವರ ನೆರವು ನನಗೆ ದೊರೆತಿದೆ. ನನ್ನ ಒಬ್ಬ ಪ್ರೀತಿಯ
ಸೋದರನಂತೆ ಇದ್ದವರು. ತಮ್ಮ ವಿಶಿಷ್ಟ ಕ್ರಿಯಾಶೀಲತೆಯ ಮೂಲಕ ಮಲೆನಾಡು ಪ್ರದೇಶದ ಸಂಸ್ಕೃತಿಯನ್ನೇ ಬದಲಿಸಿದ್ದು
ಅವರ ಮಹತ್ವದ ಸಾಧನೆ. ಅಂಥವರ ಒಡನಾಡಿಯಾಗಿದ್ದುದು ನನಗೆ ಹೆಮ್ಮೆ.
“ನೆನೆಯದಿರಣ್ಣ
ಹೆಗ್ಗೋಡಿನೋಳಿಂ ಪೆರರಾನುಮನೊಂದೆ ಚಿತ್ತದಿಂ ನೆನೆವೊಡೆ ಸುಬ್ಬಣ್ಣನಂ ನೆನೆಯ” ಎಂಬ
ಹಾರೈಕೆಯೊಡನೆ ನನ್ನ ಮಾತನ್ನು ಮುಗಿಸುತ್ತೇನೆ.
ನೀನಾಸಂ ಮಾತುಕತೆಯಲ್ಲಿ ಗಂಗಾಧರ ಕಲ್ಲಹಳ್ಳ ಅವರ ಈ ಲೇಖನ ಓದಿ ಖುಶಿ ಪಟ್ಟಿದ್ದೆ .... ಈಗ ಮತ್ತೊಮ್ಮೆ ಖುಶಿಪಟ್ಟೆ.... ಜೊತೆಗೆ ನಿಮ್ಮ ಅನುಭವದ ಬರಹ ಕೂಡಾ ...
ReplyDelete------ಮೂರ್ತಿ ದೇರಾಜೆ