26 November 2013

ಉರುಳಾಗಿ ಕಾಡಿತ್ತು ಮಾತು

ಜಿಟಿನಾರಾಯಣ ರಾಯರಮುಗಿಯದ ಪಯಣ ವಿ-ಧಾರಾವಾಹಿಯ ಕಂತು ಮೂವತ್ತೆರಡು
ಅಧ್ಯಾಯ ಅರವತ್ತ ಎಂಟು [ಮೂಲದಲ್ಲಿ ೪೦]

೯೬೮ರ ನವೆಂಬರ್, ಬೆಂಗಳೂರು ವಿಶ್ವವಿದ್ಯಾಲಯದ ಹುದ್ದೆಗೆ ಔಪಚಾರಿಕ ಸಂದರ್ಶನ (ಹಾಗೆಂದು ಅಲ್ಲಿಯ ವರಿಷ್ಠರು ನನಗೆ ಆಶ್ವಾಸಿಸಿದ್ದರು) ನಡೆಯಿತು. ಖುದ್ದು ಗಣಿತವಿಭಾಗದ ಮುಖ್ಯಸ್ಥರೇ ನನ್ನ ಅರ್ಹತೆ, ಸಾಮರ್ಥ್ಯ ಮುಂತಾದವನ್ನು ಕುರಿತು ನನಗೇ ಮುಜಗರವಾಗುವಂತೆ ಸಮಿತಿಗೆ ವರ್ಣಿಸಿದರು. ಇನ್ನುಳಿದಿರುವುದೇನು? ವಿಧಾನ ವೀಥಿಯ ಈ ಕಡೆಯಿಂದ (ಸರ್ಕಾರೀ ಕಾಲೇಜ್) ಆ ಕಡೆಗೆ (ಸೆಂಟ್ರಲ್ ಕಾಲೇಜ್) ಅಧಿಕೃತವಾಗಿ ದಾಟುವುದು ಮಾತ್ರ ಎಂಬ ಸಂತೃಪ್ತ ಭಾವದಿಂದ ತೇಲುತ್ತಿದ್ದೆ.

ಮರುದಿನ ಕುಲಸಚಿವರಿಂದಲೂ ಗಣಿತಮುಖ್ಯಸ್ಥರಿಂದಲೂ ನನಗೆ ತುರ್ತು ಕರೆ. ಇಂದೇ ಹುದ್ದೆಯ ಆದೇಶ ಪತ್ರ ಕೊಡುತ್ತಾರೆಂಬ ಪೂರ್ಣ ಭರವಸೆಯಿಂದ ಹೋದೆ, ಮೊದಲು ಕುಲಸಚಿವರಲ್ಲಿಗೆ. ತೀರ ವಿಷಣ್ಣ ವದನರಾಗಿ ಅವರೆಂದರು, ವಿಭಾಗ ಮುಖ್ಯಸ್ಥರು ನಿಮ್ಮ ನೇಮನವನ್ನು ಒಪ್ಪಲಿಲ್ಲ. ಇನ್ನೊಂದು ಅಧಿಕ ಉಪನ್ಯಾಸಕ ಹುದ್ದೆ ಕೇಳಿರೆಂದು ಅವರಿಗೆ ಸೂಚಿಸಲಾಗಿದೆ. ಅವರಿಂದ  ಅಧಿಕೃತ ಕೋರಿಕೆ ಬಂದ ಒಡನೆ ಮಂಜೂರು ಮಾಡಿ ನಿಮ್ಮನ್ನು ನೇಮಿಸುತ್ತೇವೆ. ಒಟ್ಟಾರೆ ನಿಮ್ಮ ಸೇವೆ ವಿಶ್ವವಿದ್ಯಾಲಯಕ್ಕೆ ಬೇಕೇಬೇಕು.

ಮುಖ್ಯಸ್ಥರಲ್ಲಿಗೆ ಹೋದಾಗ ಇನ್ನೊಂದು ಆಘಾತ, ನಿಮ್ಮ ಸಾಮರ್ಥ್ಯ ಮತ್ತು ಯೋಗ್ಯತೆ ಗಮನಿಸಿ ನಿಮ್ಮನ್ನು ಇನ್ನೂ ಉನ್ನತ ಶ್ರೇಣಿಯಲ್ಲಿ, ಸದ್ಯವೇ ವಿಶ್ವವಿದ್ಯಾಲಯ ಪ್ರಾರಂಭಿಸಲಿರುವ ಪ್ರಸಾರಾಂಗದ ನಿರ್ದೇಶಕರಾಗಿ, ನೇಮಿಸಬೇಕೆಂಬುದು ನನ್ನ ಅಭಿಪ್ರಾಯ. ಈ ಕಾರಣದಿಂದಲೇ ಉಪನ್ಯಾಸಕ ಹುದ್ದೆಗೆ ಬೇರೊಬ್ಬರನ್ನು ಶಿಫಾರಸು ಮಾಡಿದ್ದೇನೆ.


ನಾನು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ, ನನ್ನ ಭವಿಷ್ಯ ಕುರಿತು ನಿರ್ಣಯಿಸಬೇಕಾದವ ನಾನೇ ಹೊರತು ಬೇರೆ ಯಾರೂ ಅಲ್ಲ. ಗೊತ್ತಿಲ್ಲದ ನನ್ನನ್ನು ಅವರು ಹುಡುಕಿ ಬಂದರು. ಗೊತ್ತಿರುವ ನೀವಾದರೋ ಈಗ ಉಲ್ಟಾ ಹೊಡೆಯುತ್ತಿದ್ದೀರಿ. ನಿಮ್ಮ ನೈತಿಕ ಮಾನಕದ ಬಗ್ಗೆ ನನಗೆ ಖೇದವಿದೆ. ಹೇಗೂ ಇರಲಿ ಸರ್ಕಾರೀ ಹುದ್ದೆ ನನಗಿದ್ದೇ ಇದೆಯಲ್ಲ.

ನನ್ನ ನೆಲ ಬೆಂಗಳೂರು, ಹೊಲ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬಲ ಕನ್ನಡದ ಕೆಲಸ ಎಂದು ನಾನು ದುಡಿದಿದ್ದ ನೆಲೆ ಈಗ ಹಠಾತ್ತನೆ ಪರಕೀಯವಾಗಿತ್ತು. ಯಾವುದೋ ದುಷ್ಟ ರಾಜಕೀಯಕ್ಕೆ ಗಣಿತ ಮುಖ್ಯಸ್ಥರು ಸಿಕ್ಕಿಹಾಕಿಕೊಂಡು ಅದರಿಂದ ವಿಮೋಚನೆಗೊಳ್ಳಲು ಬೆಕ್ಕಿನ ತಲೆಗೆ ತುಪ್ಪ ಪೂಸಿದಂತೆ ನನ್ನೆದುರು ಹೊಸ ಹುದ್ದೆಯ ಆಮಿಷ ಒಡ್ಡಿದ್ದರು. ನನಗೆ ಅವರು ಕೊಡಲಿದ್ದೇವೆಂಬ ಪ್ರಸಾರಾಂಗದ ನಿರ್ದೇಶಕತ್ವ ಎಂಬುದಕ್ಕೆ ಆಗಲೇಕನ್ನಡ ಪಠ್ಯ ಪುಸ್ತಕ ಸಮಿತಿಯಲ್ಲಿ ಸಾಕಷ್ಟು ಅನುಭವ ನನಗೆ ಲಭಿಸಿತ್ತು. ಒಂದು ನಿದರ್ಶನ ನೋಡಿ.

ಸಮಿತಿಯ ವತಿಯಿಂದ ನಾವು ತಜ್ಞರಿಗೆ ಅಧಿಕೃತ ಪತ್ರ ಬರೆದು ಹಸ್ತ ಪ್ರತಿಗಳನ್ನು ಆಹ್ವಾನಿಸುತ್ತಿದ್ದೆವು. ಮುಂದೆ ಇವನ್ನು ಬೇರೆ ಬೇರೆ ಹಂತಗಳಲ್ಲಿ ವಿವಿಧ ಸಂಸ್ಕಾರಗಳಿಗೆ ಒಳಪಡಿಸಿ ಪರಿಷ್ಕೃತವಾದವನ್ನು ಮುದ್ರಣಾಲಯಕ್ಕೆ ರವಾನಿಸುತ್ತಿದ್ದೆವು. ಮುದ್ರಿತ ಕೃತಿಗಳಿಗೆ ನಿಯಮಾನುಸಾರ ರಾಯಧನವನ್ನೂ ಪಾವತಿಸುತ್ತಿದ್ದೆವು. ಆದ್ದರಿಂದ ವಿಶ್ವವಿದ್ಯಾಲಯದ ಪ್ರಕಟಣೆ, ಅದೂ ಕನ್ನಡದಲ್ಲಿ ಎಂದರೆ, ಆಯಾ ಲೇಖಕರಿಗೆ ಅದೊಂದು ಪ್ರತಿಷ್ಠೆಯ ಸೂಚಕವಾಯಿತು. ವೃತ್ತಿ ಬಡ್ತಿಗೆ ಹೇತುವೂ ಆಯಿತು. ಇವೆಲ್ಲ ಪ್ರಕ್ರಿಯೆಗಳ ವೇಳೆ ವಿಷಯ, ಗುಣಮಟ್ಟ, ಶೈಲಿ ಕುರಿತಂತೆ ಕನ್ನಡತನ ಮತ್ತು ಸಮಗ್ರ ವ್ಯವಹಾರ ಕುರಿತಂತೆ ಪಾರದರ್ಶಕತೆ ಮಾತ್ರ ನನ್ನೆದುರು ಇರುತ್ತಿದ್ದ ಲಕ್ಷ್ಯಗಳು.

ಇಲ್ಲೇ ನನಗೆ ಹೊಸ ಮತ್ತು ಊಹಿಸಿರದ ವೃತ್ತಿ ಗಂಡಾಂತರ ಎದುರಾದದ್ದು. ನಮ್ಮ ಪ್ರಕಟಣೆಗಳ ಸಂಖ್ಯೆ ಏರಿದಂತೆ ಲೇಖಕರ ಕೋಮು ವಿವರಗಳು ಬೇಕೆಂಬ ಅಲಿಖಿತ ಕೋರಿಕೆ ಪ್ರಬಲ ವ್ಯಕ್ತಿಯೊಬ್ಬರಿಂದ ಬಂತು. ಮಾತಿನಲ್ಲೇ ಹೇಳಿದೆ, ಅವೆಂದೂ ಇಲ್ಲಿ ಪರಿಗಣನೆಗೆ ಬರುವುದಿಲ್ಲ. ಇಂಥ ವೃಥಾ ಹಸ್ತಕ್ಷೇಪ ಯಾರೂ ಎಂದೂ ಎಲ್ಲಿಯೂ ಮಾಡತಕ್ಕದ್ದಲ್ಲ.

ಈ ನೇರ ನುಡಿ ಕ್ರಮೇಣ ಉರುಳುವ ಹಿಮಗಡ್ಡೆಯಂತೆ ತೋರಗೊಳ್ಳುತ್ತ ಹೋಗುತ್ತಿತ್ತೆಂದು ಕೆಲವು ಮಿತ್ರರಿಂದ ತಿಳಿದಾಗ ನನ್ನಲ್ಲಿ ಮೊಳೆತದ್ದು ತಿರಸ್ಕಾರ. ನಿವೃತ್ತ ಪ್ರಾಧ್ಯಾಪಕರೊಬ್ಬರು ನನ್ನಲ್ಲಿಗೆ ಬಂದು ತಮ್ಮ ಓಬೀರಾಯನ ಕಾಲದ ಹಸ್ತಪ್ರತಿಯೊಂದನ್ನು ಕೊಟ್ಟು ಹೆಚ್ಚು ಕಡಿಮೆ ಆದೇಶಿಸಿದರು, ಇದನ್ನು ನೀವು ಪ್ರಕಟಿಸಬೇಕು. ಶಿಫಾರಸು ಪತ್ರಗಳನ್ನು ಲಗತ್ತಿಸಿದ್ದೇನೆ, ನೋಡಿಎಂದರು. ಆ ಹಸ್ತಪ್ರತಿ ವಿಜ್ಞಾನಕ್ಕೆ ಸಂಬಂಧಿಸಿದ್ದಲ್ಲ. ಆದರೂ ಅದರ ಮೊದಲ ಪುಟದಲ್ಲೇ ಹಲವಾರು ಸ್ಖಾಲಿತ್ಯಗಳಿದ್ದುದನ್ನು ಅವರಿಗೆ ಓದಿ ಹೇಳಿದೆ. ಸಾಮಾನ್ಯ ಪ್ರಜ್ಞೆ ಇರುವ ಯಾರಿಗೂ ಹೊಳೆಯುವ ದೋಷವದು.
ಕನ್ನಡಕ್ಕೆ ಇಷ್ಟು ಸಾಕು. ನನಗೆ ಪುಸ್ತಕ ಶೀಘ್ರದಲ್ಲಿಯೇ ಹೊರಬರುವುದು ಮುಖ್ಯ. ನೋಡಿ ಎಂಥೆಂಥ ಪ್ರಬಲ ರಾಜಕಾರಣಿಗಳು ನನ್ನ ಈ ಕೃತಿಗೆ ಶಿಫಾರಸು ಕಾಗದ ಕೊಟ್ಟಿದ್ದಾರೆ.
ತಾಳ್ಮೆಗೆಡದೆ ಅವರಿಗೇನೋ ಸಬೂಬು ಹೇಳಿ ಸದ್ಯದ ಸ್ಫೋಟದಿಂದ ಪಾರಾದೆ. ಆದರೆ ಈ ಎಲ್ಲ ಕಿರಿಕಿರಿಗಳು ನನ್ನನ್ನು ಅಂತರ್ಮುಖಿಯಾಗಿಸಿದುವು: ಅಧಿಕಾರ, ಹಣ ಮತ್ತು ವಶೀಲಿ ಇರುವ ಯಾವುದೇ ಹುದ್ದೆ ಅಥವಾ ಹೊಣೆಯ ಹತ್ತಿರ ನಾನು ಸುಳಿಯತಕ್ಕದ್ದಲ್ಲ.

ಒಡನೆ ದೇಜಗೌಅವರಿಗೆ ಪತ್ರ ಬರೆದೆ. ಸಾರಾಂಶ: ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನೀಡಿದ್ದ ವಚನವೆಂಬ ಉರುಳಿನಿಂದ ಪಾರಾಗಿದ್ದೇನೆ; ಹಿಂದಿನ ಆಹ್ವಾನ ಇಂದೂ ಸಿಂಧುವಾಗಿದ್ದರೆ ಮೈಸೂರಿಗೆ ಬರಲು ಸಿದ್ಧನಿದ್ದೇನೆ. ಆದರೆ ಇದರಿಂದ ಅಲ್ಲಿ ಅವರು (ಮೈಸೂರು) ಈಗಾಗಲೇ ನೇಮಿಸಿರಬಹುದಾದ ಇನ್ನೊಬ್ಬರನ್ನು ವಿಸ್ಥಾಪಿಸಬೇಕಾದರೆ ನನ್ನ ಬಗ್ಗೆ ಮರೆತುಬಿಡಿ - ಪರರಿಗೆ ಮುಳುವಾಗಿ ನಾನು ಮೆರೆಯಬೇಕಾಗಿಲ್ಲ.

ಅವರ ಮಾರೋಲೆ (ಡಿಸೆಂಬರ್ ೬, ೧೯೬೮), ...ನೀವು ಕನ್ನಡ ವಿಶ್ವಕೋಶದ ವಿಜ್ಞಾನ ವಿಭಾಗದ ಸಂಪಾದಕರಾಗಿ ಬರಲು ಒಪ್ಪಿಕೊಂಡಿರುವುದು ನನಗೆ ತುಂಬ ಸಂತೋಷವನ್ನುಂಟುಮಾಡಿದೆ. ನಿಮ್ಮಂಥ ತಜ್ಞರ ಹಾಗೂ ನುರಿತ ಲೇಖಕರ ಸಹಾಯ ಸಹಕಾರಗಳು ದೊರಕುವುದಾದರೆ ವಿಶ್ವಕೋಶ ಬಹು ಶೀಘ್ರವಾಗಿ ಹೊರಬೀಳುತ್ತದೆ... ನಿಮ್ಮ ಆಗಮನಕ್ಕಾಗಿ ನಾನು ತುಂಬ ಕಾತರದಿಂದಿದ್ದೇನೆಂದು ಹೇಳಬೇಕಾಗಿಲ್ಲ, ತಾನೆ?ಸಾಮಾನ್ಯತೆಯನ್ನು ಅಸಮಾನ್ಯತೆಗೆ ಉತ್ತಾರಣೆಗೊಳಿಸುವ ಪರುಷಸ್ಪರ್ಷಕ್ಕೆ (ಪುರುಷಸ್ಪರ್ಷಕ್ಕೆ ಕೂಡ) ಉದಾಹರಣೆ ನಮ್ಮ ಆದರಣೀಯ ದೇಜಗೌ.

ಮರುದಿನ ಸಾಕ್ಷಾತ್ ಹರಿದಾಸ ಭಟ್ಟರೇ ನನ್ನ ಮನೆಗೆ ಬಂದರು. ದೇಜಗೌರಿಗೆ ನನ್ನ ಕಾಗದ ತಲಪಿದಾಗ ಇವರೂ ಮೈಸೂರಿನಲ್ಲಿದ್ದರಂತೆ. ಅಂದಿನ ತನಕವೂ ಅವರಿಗೆ ವಿಜ್ಞಾನ ಸಂಪಾದಕ ಹುದ್ದೆಗೆ ಸಮರ್ಥ ವ್ಯಕ್ತಿ ದೊರೆತಿರಲಿಲ್ಲವಂತೆ. ತುರ್ತಾಗಿ ಗಂಟು ಮೂಟೆ ಕಟ್ಟಿ ಮೈಸೂರಿನಲ್ಲಿ ಹೊಸ ಬಿಡಾರ ಹೂಡಲು ಸನ್ನದ್ಧರಾಗಿ ಎಂದು ಸಲಿಗೆಯಿಂದ ಆಜ್ಞಾಪಿಸಿದರು.

ಕಾಲೇಜಿನ ಮತ್ತು ಮಕ್ಕಳ ಶೈಕ್ಷಣಕ ವರ್ಷ ಮುಗಿದೊಡನೆ (ಮೇ ೧೯೬೯) ಮೈಸೂರಿಗೆ ಹೊರಡಲು ನನ್ನ ಲಿಖಿತ ಸಮ್ಮತಿ ರವಾನಿಸಿದೆ: ಅಲ್ಲಿಯ ಬೌದ್ಧಿಕ ಪರಿಸರ ನನಗಿಷ್ಟವಾದರೆ ಹಾಗೂ ಅವರಿಗೆ (ದೇಜಗೌ) ನನ್ನ ಕಾರ್ಯಶೈಲಿ ಒಪ್ಪಿಗೆಯಾದರೆ ಸದ್ಯಕ್ಕೆ ಸರಕಾರದಿಂದ ಎರವಲು ಸೇವೆ ಮೇರೆಗೆ ಬರಲು ಸಿದ್ಧನಿದ್ದೇನೆ ಎಂಬುದು ಸಾರಾಂಶ. ಮುಂದಿನದು ಕೇವಲ ಔಪಚಾರಿಕ ದಫ್ತರ ಚಲಾವಣೆ: ಮೈಸೂರು ವಿಶ್ವವಿದ್ಯಾನಿಲಯದಿಂದ ಕಾಲೇಜ್ ಶಿಕ್ಷಣ ನಿರ್ದೇಶಕರಿಗೆ ಕೋರಿಕೆ ಪತ್ರ ಹೋಯಿತು, ಯುಕ್ತ ವೇಳೆಯಲ್ಲಿ ಬಿಡುಗಡೆ ಆದೇಶ ಬಂದಿತು. ಅಧಿಕೃತವಾಗಿ ಕಾಲೇಜ್ ಸೇವೆಯಿಂದ ಹೊರಡುವ ಮೊದಲು ನಿರ್ದೇಶಕಿ ಜಯಲಕ್ಷ್ಮಮ್ಮಣ್ಣಿಯವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಲು ಹೋದೆ. ಅವರೊಂದು ದೊಡ್ಡ ಮಾತು ಹೇಳಿ ನನಗೆ ಶುಭವಿದಾಯ ಕೋರಿದರು, ನಿಮ್ಮಂಥ ಸಮರ್ಥರ ಸೇವೆಯನ್ನು ನಮ್ಮ ಇಲಾಖೆಯಿಂದ ತಾತ್ಕಾಲಿಕವಾಗಿಯಾದರೂ ಎರವಲು ಕೊಡುವುದು ನನಗೇನೂ ಪ್ರಿಯವಾದ ಸಂಗತಿಯಲ್ಲ. ಆದರೆ ಕನ್ನಡದ ಕೆಲಸ ಬಲು ದೊಡ್ಡದು. ಕನ್ನಡ ನಾಡಿಗೆ ಒಳ್ಳೆಯದಾಗಲಿ.

ಹೀಗೆ ಹಲವು ಹೃದಯಗಳು, ಸದಾಶಯಗಳು ಮತ್ತು ಘನೋದ್ದೇಶಗಳು ಸಂಘನಿಸಿ ನನ್ನನ್ನು ಬೆಂಗಳೂರಿನಿಂದ ಮೈಸೂರಿಗೆ ಉಡಾಯಿಸಿದುವು. ಅರಿಯದ ನೆಲದಲ್ಲಿ, ತಿಳಿಯದ ಕಾರ್ಯ ನಿರ್ವಹಿಸಲು, ಗೊತ್ತಿಲ್ಲದ ಭವಿಷ್ಯ ಕುರಿತು ಹೊಸ ಹವೆಗೆ ದುಮುಕಿದೆ ಮತ್ತು ವಿಶ್ವಕೋಶ ಪರ್ವತಾರೋಹಣಕ್ಕೆ ಸಜ್ಜಾದೆ; ಮೈಸೂರು ಮಾನಸ ಗಂಗೋತ್ರಿಯಲ್ಲಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕನಾಗಿ ಜೂನ್ ೧೭, ೧೯೬೯ರ ಮುಂಜಾನೆ ದಾಖಲಾದೆ. ಸಂಸ್ಥೆಯ ನಿರ್ದೇಶಕರೂ ಪದನಿಮಿತ್ತ ವಿಶ್ವಕೋಶದ ಪ್ರಧಾನ ಸಂಪಾದಕರೂ ಆಗಿದ್ದ ದೇಜಗೌಅವರು ನನ್ನನ್ನು ಆದರದಿಂದ ಸ್ವಾಗತಿಸಿದರು, ಮತ್ತು ಸಂಸ್ಥೆಯ ಎಲ್ಲ ವಿಭಾಗಗಳಿಗೂ ನನ್ನನ್ನು ಕರೆದೊಯ್ದು ಆತ್ಮೀಯವಾಗಿ ಪರಿಚಯಿಸಿದರು. ಅವರು ಪರಗುಣ ಪರಮಾಣುವುಮಂ ಗಿರಿಗೈದುರ್ಬುವ ಸುಜನರೆಂಬುದು ಹೆಜ್ಜೆಹೆಜ್ಜೆಗೂ ನನ್ನ ಅರಿವಿಗೆ ಬಂದು ಕೆಲಸ ಮತ್ತು ಪರಿಸರದ ಬಗ್ಗೆ ಉತ್ಸಾಹ ಹಾಗೂ ಭರವಸೆ ತಳೆದೆ.  

ಕನ್ನಡ ವಟವೃಕ್ಷದ ಆಶ್ರಯದಲ್ಲಿ
ಅಧ್ಯಾಯ ಅರವತ್ತ ಒಂಬತ್ತು [ಮೂಲದಲ್ಲಿ ೪೧]

ಕನ್ನಡ ಅಧ್ಯಯನ ಸಂಸ್ಥೆ ಎಂಬ ದೃಢ ಮತ್ತು ಭವ್ಯ ಕಾಂಡದಿಂದ ನಾಡನುಡಿಯ ಹಲವಾರು ಕೊಂಬೆ ರೆಂಬೆಗಳು ಟಿಸಿಲೊಡೆದು ಈ ಭವ್ಯ ವಟವೃಕ್ಷ ನಳನಳಿಸುತ್ತಿತ್ತು. ಕೆಲವನ್ನು ಹೆಸರಿಸಬಹುದು: ಕನ್ನಡ ಎಂಎ, ಪಿಎಚ್ಡಿ ಮತ್ತು ಸಂಶೋಧನ ವಿಭಾಗ, ಭಾಷಾಂತರ ಶಾಖೆ, ಜಾನಪದ, ಎಪಿಗ್ರಾಫಿಯಾ ಕರ್ನಾಟಿಕಾ ಇತ್ಯಾದಿ. ೧೯೬೮ರಿಂದೀಚೆಗೆ ವಿಶ್ವಕೋಶ ವಿಭಾಗವೂ ಇದಕ್ಕೆ ಜಮೆಯಾಯಿತು. ಇವೆಲ್ಲ ವಿಭಾಗಗಳ ಮುಖ್ಯಸ್ಥರು ದೇಜಗೌ. ಹಾಮಾ ನಾಯಕ, ಎಲ್. ಬಸವರಾಜು, ಎಚ್. ತಿಪ್ಪೇರುದ್ರಸ್ವಾಮಿ, ಎನ್. ಬಸವಾರಾಧ್ಯ, ಟಿ.ವಿ. ವೆಂಕಟಾಚಲ ಶಾಸ್ತ್ರಿ, ಜೀಶಂಪ, ಸಿಪಿಕೆ, ಪಿ. ಆರ್ ತಿಪ್ಪೇಸ್ವಾಮಿ ಮೊದಲಾದ ಪ್ರಸಿದ್ಧ ವಿದ್ವಾಂಸರ ಆಡುಂಬೊಲವದು. ವಿಶ್ವಜ್ಞಾನದ ಸಮಗ್ರ ಸಂಪುಟ ವಿಶ್ವಕೋಶವಾಗಬೇಕಾಗಿದ್ದುದರಿಂದ ಒಂದೆಡೆ ಇವರೆಲ್ಲರೂ ಸೇರಿದ್ದುದು ನಮಗೊಂದು ವರದಾನ.

ವಿಶ್ವಕೋಶದ ಸಂಪಾದಕ ವರ್ಗದಲ್ಲಿದ್ದವರು ಕೆ.ಟಿ ವೀರಪ್ಪ (ಕಾರ್ಯನಿರ್ವಾಹಕ), ಎನ್. ಪ್ರಹ್ಲಾದರಾವ್ (ಸಂಯೋಜಕ), . ಮೈಲಾರಿ ರಾವ್ (ಮಾನವಿಕ) ಮತ್ತು ಇರರ ಸಹಾಯಕರು. ಈ ವರ್ಗಕ್ಕೆ ನಾನು ವಿಜ್ಞಾನ ಸಂಪಾದಕನಾಗಿ ಜಮೆಯಾದೆ. ನನ್ನ ಕೆಲಸಕ್ಕೆ ನೇರ ಸಂಬಧಿಸಿದಂತೆ ಈಗಾಗಲೇ ಅಲ್ಲಿದ್ದವರು ವಿಜ್ಞಾನ ಉಪಸಂಪಾದಕ ಎಸ್. ರಾಮಪ್ರಸಾದ್, ಇವರು ಗಣಿತ ಎಂಎಸ್ಸಿ ಪದವೀಧರ, ಯುವಕ, ಉತ್ಸಾಹದ ಚಿಲುಮೆ, ಜನಪ್ರಿಯ ವಿಜ್ಞಾನ ಲೇಖಕ ಮತ್ತು ಸಂಪಾದನ ಕಾರ್ಯದಲ್ಲಿ ಆ ವೇಳೆಗಾಗಲೇ ದುಡಿದು ಅನುಭವ ಗಳಿಸಿದವರು. ಯುದ್ಧಸಿದ್ಧ ಸ್ಥಿತಿಯಲ್ಲಿ ಇಡೀ ಬಳಗ ಕಾರ್ಯಬದ್ಧವಾಗಿದ್ದುದನ್ನು ನೋಡಿ ನನಗೆ ಆತ್ಮ ವಿಶ್ವಾಸ ಮೂಡಿತು.

ರಾಮಪ್ರಸಾದರಿಗೆ ನಾನೆಂದೆ, ಈ ಕೆಲಸಕ್ಕೆ ನಾನು ಪೂರ ಹೊಸಬ - ಹುಮ್ಮಸ್ಸು ಇದೆ, ಆದರೆ ಕೌಶಲವರಿತಿಲ್ಲ. ನಿಮ್ಮಲ್ಲಿ ಎರಡೂ ಸಂಗಮಿಸಿವೆ. ಆದ್ದರಿಂದ ನೀವು ಕೈಹಿಡಿದು ನಡೆಸಬೇಕು ನನ್ನನ್ನು. ನಮ್ಮ ವೃತ್ತಿ ನಾಮಗಳೇನೇ ಇರಲಿ ನಾವು ಪರಸ್ಪರ ಪೂರಕ ಪೋಷಕವಾಗಿ ಕೆಲಸ ಮಾಡುತ್ತ ವಿಶ್ವಕೋಶದ ವಿಜ್ಞಾನ ವಿಭಾಗವನ್ನೊಂದು ಸುಂದರ ಶಿಲ್ಪವಾಗಿ ಕಡೆಯೋಣ.
ಈ ಕವಿವಾಣಿಯನ್ನು ಅವರು ಅಷ್ಟೇ ಸಹಜವಾಗಿ ಮುಂದುವರಿಸಿದರು, ಸರಿದಾರಿ ತಪ್ಪದಂತೆ, ಅಲ್ಲವೇ? ನನಗೆ ಇವರ ಕಾವ್ಯ ಪ್ರಜ್ಞೆ ಕೂಡ ಬಲು ಪ್ರಿಯವಾಯಿತು.
ನೋಡಿ ರಾಮಪ್ರಸಾದ್! ಕೇವಲ ಹುಟ್ಟಿನ ಆಕಸ್ಮಿಕತೆಯಿಂದ ನಾನು ಹಿರಿಯ. ಆದರೆ ಆಡಳಿತೆಯ ಈ ಬಂಧ ಕುರಿತಂತೆ ನೀವೇ ಹಿರಿಯರು. ಆದ್ದರಿಂದ ನಾನು ಸಂಪಾದಿಸಿದ ಲೇಖನವನ್ನು ನೀವೂ ನೀವು ಸಂಪಾದಿಸಿದುದನ್ನು ನಾನೂ ಜ್ಞೇಯನಿಷ್ಠವಾಗಿ ಮುಕ್ತಮನದಿಂದ ವಿಮರ್ಶಿಸಿ ಯುಕ್ತವಾದುದನ್ನು ಮಾತ್ರ ಮುದ್ರಣಕ್ಕೆ ಅಣಿಗೊಳಿಸಭೇಕು. ಇಲ್ಲಿನಾನು ಎಂಬುದಿಲ್ಲ, ವಿಶ್ವಕೋಶ ಒಂದೇ ಸಿಂಧು ಎಂದೆ.

ಆಗ ಚಾಲ್ತಿಯಲ್ಲಿದ್ದ ಕ್ರಮವಿದು: ವಿಷಯತಜ್ಞರಿಂದ ಕೂಡಿದ್ದ ಸಲಹಾ ಸಮಿತಿಗಳವರು (ಇವನ್ನು ಸರ್ಕಾರವೇ ಹಿಂದೆ ನೇಮಿಸಿತ್ತು) ಸಾಹಿತ್ಯ, ಮಾನವಿಕ, ವಿಜ್ಞಾನ, ಕಲೆ, ಕ್ರೀಡೆ, ಇತಿಹಾಸ ಮುಂತಾದ ವಿವಿಧ ಪ್ರಕಾರಗಳಲ್ಲಿ ಶೀರ್ಷಿಕೆಗಳನ್ನು ಆಯ್ದು ಕನ್ನದ ವರ್ಣಮಾಲೆಯ ಕ್ರಮದಲ್ಲಿ ಅಳವಡಿಸಿ, ಅವುಗಳ ಸ್ಥೂಲ ವ್ಯಾಪ್ತಿಯನ್ನು ನಿಗದಿಸಿ ಆಯಾ ವಿಷಯಗಳಲ್ಲಿ ಪರಿಣತರಾದವರಿಂದ ಲೇಖನಗಳನ್ನು ಆಹ್ವಾನಿಸಿ ಸಂಗ್ರಹಿಸಿಟ್ಟಿದ್ದರು. ಸಂದ ಆ ಸುಮಾರು ೧೩ ವರ್ಷಗಳಲ್ಲಿ ಜಮಾಯಿಸಲಾಗಿದ್ದ ಈ ದಫ್ತರಗಳು ಎಂಥವರನ್ನೂ ಕಂಗೆಡಿಸುವಂತಿದ್ದುವು: ಅದುರಿನ ಈ ಬೆಟ್ಟದಿಂದ ಲೋಹದ ತುಣುಕನ್ನು ಹೆಕ್ಕುವ ಸಂಪಾತಿ ದೃಷ್ಟಿ ಮತ್ತು ಧನ್ವಂತರಿ ಕೌಶಲ ನಮಗಿದೆಯೇ?

ಆಗ ನನ್ನ ಮೇಜಿನ ಮೇಲೆ ವರ್ಣಮಾಲೆಯ ಮೊದಲ ಅಕ್ಷರ ಆಕಾರದಲ್ಲಿದ್ದ ನೂರಾರು ವಿಜ್ಞಾನಲೇಖನಗಳ ಹಲವಾರು ಕೆಂಪುಪಟ್ಟಿ ದಫ್ತರಗಳು ಜಮಾಯಿಸಿದ್ದುವು. ವಿಜ್ಞಾನ ಪ್ರಕಾರದಲ್ಲಿ ಜೀವ, ವೈದ್ಯ ಮತ್ತು ಭೂವಿಜ್ಞಾನಗಳಿಗೆ ಸಂಬಂಧಿಸಿದ ಲೇಖನಗಳನ್ನು ಇತರ ಗೌರವ ಸಂಪಾದಕರು ಸಂಪಾದಿಸಿ ನಮಗೆ ಸಕಾಲದಲ್ಲಿ ಒಪ್ಪಿಸುತ್ತಿದ್ದರು. ಉಳಿದವು ಅಂದರೆ ಗಣಿತ, ಭೌತ, ಖಗೋಳ, ರಸಾಯನ ಮುಂತಾದವನ್ನು ರಾಮಪ್ರಸಾದರ ನೆರವಿನಿಂದ ನಾನು ನಿರ್ವಹಿಸಬಲ್ಲೆ. ಇನ್ನು ಗಂಗೋತ್ರಿಯ ವಿವಿಧ ವಿಭಾಗಗಳಲ್ಲಿಯ ವಿಶೇಷಜ್ಞರ ಸಲಹೆ ಮತ್ತು ಮಾರ್ಗದರ್ಶನ ಪಡೆಯುವ ಅವಕಾಶ ಹೇಗೂ ಸುಲಭ ಲಭ್ಯವಾಗಿತ್ತು. ಇವೆಲ್ಲ ಸೂಕ್ಷ್ಮಗಳನ್ನು ಹಿರಿಯರಾದ ಪ್ರಹ್ಲಾದರಾಯರು ನನಗೆ ಪ್ರೀತಿಯಿಂದ ತಿಳಿಸುತ್ತ, ಅಂತಿಮವಾಗಿ ನಿಮ್ಮ ಶಿಲುಬೆಯನ್ನು ನೀವೇ ಹೊರಬೇಕು! ಎಂಬ ಎಚ್ಚರಿಕೆ ಮಾತನ್ನೂ ಹೇಳಿದರು.
ಹಾಗಾದರೆ ಸಂಪಾದನ ಕಾರ್ಯವನ್ನು ಹೇಗೆ ತೊಡಗಲಿ? ಇಲ್ಲಿ ಅನುಸರಿಸಬೇಕಾದ ತಂತ್ರವೇನು?
ಅವರೆಂದರು, ಶೀರ್ಷಿಕೆ ಸರಿಯಾಗಿದೆಯೇ? ಕನ್ನಡಕ್ಕೆ ಹೊಂದುವುದೇ? ಇದು ಮೊದಲ ಪ್ರಶ್ನೆ. ಇಲ್ಲವಾದರೆ ಸಮರ್ಪಕವಾದುದನ್ನು ನಾವೆಲ್ಲರೂ ಕೂಡಿ ಚರ್ಚಿಸಿ ಅಳವಡಿಸಬೇಕು. ಮೊದಲ ವಾಕ್ಯ ಆ ಶೀರ್ಷಿಕೆಯ ಸಂಕ್ಷಿಪ್ತ ವ್ಯಾಖ್ಯೆಯಾಗಿರಬೇಕು. ಮುಂದಿನವು ಇದಕ್ಕೆ ಪೂರಕವಾದವಾಗಿರುವಂತೆ ಅವನ್ನು ನೇರ್ಪುಗೊಳಿಸಬೇಕು. ಈ ಕುಸುರಿ ಕೆಲಸದಲ್ಲಿ ಅನಾವಶ್ಯಕ ವಿವರಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಿ, ಅಧಿಕ ಮಾಹಿತಿಗಳು ಬೇಕೆನಿಸಿದರೆ ಆಕರ ಗ್ರಂಥಗಳ ಪರಾಮರ್ಶೆಯಿಂದ ಅವನ್ನು ಪಡೆದು ಸೇರಿಸಿ. ಮಾದರಿಗೆ ಇಂಗ್ಲಿಷ್ನಲ್ಲಿರುವ ಎನ್ಸೈಕ್ಲೊಪಿಡಿಯಾ ಬ್ರಿಟಾನಿಕಾ ಮತ್ತು ಇತರ ವಿಶ್ವಕೋಶಗಳನ್ನು ನೋಡುತ್ತಿರಬೇಕು. ನಡೆದಂತೆ ದಾರಿ, ಅಲ್ಲವೇ?

ನಾನು ಈ ನೂತನ ಸವಾಲನ್ನು ಸ್ವೀಕರಿಸಿದಾಗ ವಿಶ್ವಕೋಶದ ಮೊದಲ ಸುಮಾರು ೮೦ ಪುಟಗಳ ಮುದ್ರಣ ಕರಡುಗಳು ಸಿದ್ಧವಾಗಿದ್ದುವು. ಇವುಗಳಿಂದ ವಿಜ್ಞಾನಕ್ಕೆ ಸಂಬಂಧಿಸಿದವನ್ನು ಆಯ್ದು ನನಗೆ ಕೊಟ್ಟರು. ಅವೆಲ್ಲವನ್ನೂ ಅಭ್ಯಸಿಸಿದಾಗ ನನ್ನ ಗೊಂದಲ ಹೆಚ್ಚಾಯಿತು. ಅವೇ ವಿಷಯಗಳ ಸಂವಾದೀ ಇಂಗ್ಲಿಷ್ ಲೇಖನಗಳನ್ನು ಓದಿದಾಗ ಇಂಥ ಯಾವ ಸಮಸ್ಯೆಯೂ ಉಧ್ಭವಿಸಲಿಲ್ಲ. ಹಾಗಾದರೆ ಗೊಂದಲದ ಕಾರಣವೇನು? ಪ್ರಹ್ಲಾದರಾಯರ ಜೊತೆ ಕೂಕಂಕಷವಾಗಿ ಚರ್ಚಿಸಿದಾಗ ಕೆಲವು ಸೂತ್ರಗಳು ಅನುಗತವಾದುವು: ವಿಜ್ಞಾನ ವಿಷಯ ಕುರಿತಂತೆ ಕನ್ನಡ ಶೈಲಿಗೆ ಶಿಷ್ಟೀಕರಣ ಮತು ಪಾರಿಭಾಷಿಕ ಪದಗಳಲ್ಲಿ ಕನ್ನಡದ ಜಾಯಮಾನಕ್ಕೆ ಒಪ್ಪುವಂತೆ ಏಕರೂಪತೆ ತರುವುದು ಅನಿವಾರ್ಯ ಅಗತ್ಯ; ಅಲ್ಲದೇ ಲೇಖಕರ ಅಂತಸ್ತು, ಪದವಿ ಮುಂತಾದವನ್ನು ಪರಿಗಣಿಸದೇ ವಿಶ್ವಕೋಶದ ಶೈಲಿಗೆ ಆ ಲೇಖನ ಹೊಂದುವಂತೆ ಅದನ್ನು ಪುನಾರೂಪಿಸಲು ಸಂಪಾದಕ ಹಿಂಜರಿಯಬಾರದು.

ಕೆಲವು ಉದಾಹರಣೆಗಳು:
ಆಲದ ಮರ ಅನೇಕ ಬೀಳಲುಗಳನ್ನು ಹೊಂದಿದ್ದು ಅದು ಎಲ್ಲ ಕಡೆಗಳಲ್ಲಿಯೂ ಬೆಳೆಯುತ್ತದೆ.
ಟೀಕೆ: ಅರ್ಥ ಸಂಬಂಧವಿರದ ಎರಡು ವಾಕ್ಯಗಳ ಕೃತಕ ಜೋಡಣೆ ಇದು. ಇನ್ನು ಆಲದ ಮರ ಎಲ್ಲ ಕಡೆಗಳಲ್ಲಿಯೂ ಬೆಳೆಯುತ್ತದೆ ಎಂಬ ವಾಕ್ಯ ಅಸ್ಪಷ್ಟ. ಆದ್ದರಿಂದ ಈ ಸಂಕೀರ್ಣ ವಾಕ್ಯ, ಆಲದ ಮರಕ್ಕೆ ಅನೇಕ ಬೀಳಲುಗಳಿವೆ. ಇದು ಬೆಳೆಯುವ ಪ್ರದೇಶಗಳು ಸಾಧಾರಣವಾಗಿ. . . ಆಕರ ಗ್ರಂಥವನ್ನು ಪರಿಶೀಲಿಸಿ ಉಳಿದ ಭಾಗವನ್ನು ತುಂಬುವುದೊಂದೇ ಹಾದಿ.

ರೂಢಿಯ ಮಾತಿನಲ್ಲಿ ಬಳಸುವ ಉಷ್ಣ, ಕಾವು, ಶಾಖ, ಉಷ್ಣತೆ, ತಾಪ, ಬಿಸಿತನ ಮುಂತಾದ ಪರ್ಯಾಯ ಪದಗಳನ್ನು ವಿಜ್ಞಾನ ಲೇಖನದಲ್ಲಿ ಹಾಗೆಯೇ ಬರೆದರೆ ಅರ್ಥ ಅಸ್ಪಷ್ಟವಾಗುತ್ತದೆ. ಇಂಗ್ಲಿಷಿನಲ್ಲಿ heat, temperature ಪರ್ಯಾಯ ಪದಗಳಲ್ಲ. ಮೊದಲನೆಯದು ಶಕ್ತಿ (energy), ಎರಡನೆಯದು ಈ ಶಕ್ತಿಯ (effect, ಮೊತ್ತವನ್ನಲ್ಲ) ಪರಿಣಾಮವನ್ನು ಅಳೆಯುವ ಮಾನಕ. ಅದನ್ನು ಕ್ಯಾಲರಿಗಳಲ್ಲಿಯೂ ಇದನ್ನು ಡಿಗ್ರಿಗಳಲ್ಲಿಯೂ ನಿರೂಪಿಸುತ್ತಾರೆ. ಕನ್ನಡದಲ್ಲಿ ಇವನ್ನು ಅನುಕ್ರಮವಾಗಿ ಉಷ್ಣ ಮತ್ತು ಉಷ್ಣತೆ ಎಂದು ಶಿಷ್ಟೀಕರಿಸಿ ಬಳಸಿದೆ.

ಇಂಗ್ಲಿಷಿನಲ್ಲಿ invention, discovery, exploration, research, symbol, code, sign, signal, rotation, revolution ಮುಂತಾದವು ವಿಭಿನ್ನ ಅರ್ಥಗಳಿರುವ ವಿವಿಕ್ತ ಪದಗಳು - ಅಂಕಿತ ನಾಮಗಳಂತೆ. ರೂಢಿಯಲ್ಲಿ  ಮೊದಲಿನ ನಾಲ್ಕು ಪದಗಳನ್ನುಕಂಡುಹಿಡಿ ಎಂದೂ ಮುಂದಿನ ನಾಲ್ಕನ್ನುಸಂಕೇತ ಅಥವಾ ಪ್ರತೀಕ ಎಂದೂ ಕೊನೆಯವನ್ನುಸುತ್ತು ಎಂದೂ ಸಲೀಸಾಗಿ ಹೇಳಿ ಸುಧಾರಿಸುತ್ತವೆ. ವಿಜ್ಞಾನಲೇಖನಗಳಲ್ಲಿ ಹೀಗೆ ಮಾಡುವಂತಿಲ್ಲ. ರೂಢಿಯ ಪ್ರಯೋಗಗಳನ್ನೂ ಭಾಷಾಮರ್ಯಾದೆಯನ್ನೂ ಅನುಲಕ್ಷಿಸಿ ಅವುಗಳಿಗೆ ಅನುಕ್ರಮವಾಗಿ ಉಪಜ್ಞೆ, ಆವಿಷ್ಕಾರ, ಅನ್ವೇಷಣೆ, ಸಂಶೋಧನೆ, ಪ್ರತೀಕ, ಸಂಕೇತ, ಚಿಹ್ನೆ, ಸಂಜ್ಞೆ, ಆವರ್ತನೆ, ಪರಿಭ್ರಮಣೆ ಎಂಬ ಪದಗಳನ್ನು ಬಳಸಲು ತೊಡಗಿದೆವು. ಆರಂಭದ ದಿನಗಳಲ್ಲಿ ನನಗೆ ಪ್ರಹ್ಲಾದರಾಯರಿಂದ ಲಭಿಸಿದ ಮಾರ್ಗದರ್ಶನ ತುಂಬ ಉಪಯುಕ್ತವಾಯಿತು. ಪ್ರಧಾನ ಸಂಪಾದಕ ಮತ್ತು ಸಂಸ್ಥೆಯ ನಿರ್ದೇಶಕ ದೇಜಗೌ ಪ್ರತಿದಿನ ನಮ್ಮ ಕೊಠಡಿಗಳಿಗೆ ಸದ್ದು ಗದ್ದಲವಿಲ್ಲದೆ ಪೂರ್ವಸೂಚನೆ ನೀಡದೆ ಬಂದು ಸಂಪಾದನೆಯ ವೇಳೆ ಎದುರಾಗುತ್ತಿದ್ದ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ನಮ್ಮದೊಂದು ಸುಸಂಘಟಿತ ಸ್ವರಮೇಳ, ಸಂಪಾದಕವರ್ಗದ ನಾವು ಬಿಡಿ ಕಲಾವಿದರು, ಕನ್ನಡ ವಿಶ್ವಕೋಶ ಎಂಬ ಘನ ಸಂಗೀತಕೃತಿಯನ್ನು ಒಟ್ಟಾಗಿ ಹಾಡುತ್ತಿದ್ದೆವು. ಮೇಳನಾಯಕರು ದೇಜಗೌ.

ಒಮ್ಮೆ ನನಗೊಂದು ಗುರುತರ ಸಮಸ್ಯೆ ಎದುರಾಯಿತು: ಅತಿಶೀತಶಾಸ್ತ್ರ (croygenics) ಕುರಿತ ಲೇಖನದ ಸಂಪಾದನೆ. ಇದನ್ನು ಬರೆದವರು ಬಲು ಹಿರಿಯ (ಆಗ ನಿವೃತ್ತ) ಭೌತವಿಜ್ಞಾನ ಪ್ರಾಧ್ಯಾಪಕ-ಸಂಶೋಧಕರು, ವಿಶ್ವಕೋಶ ಯೋಜನೆ ಸರಿಕಾರದ ಅಧೀನದಲ್ಲಿದ್ದಾಗ ನೇಮಿಸಿದ್ದ ಭೌತವಿಜ್ಞಾನ ಉಪಸಮಿತಿಯ ಅಧ್ಯಕ್ಶರಾಗಿದ್ದವರು. ಎಲ್ಲ ಸರಿ, ಲೇಖನ ಮಾತ್ರ ಕಾಲೇಜ್ ತರಗತಿಯೊಂದಕ್ಕೆ ಪಾಠಮಾಡಿ ಬರೆಸಿದ ಟಿಪ್ಪಣಿಯ ಶೈಲಿಯಲ್ಲಿತ್ತು, ವೃಥಾ ಲಂಬಿತವಾಗಿತ್ತು, ಎಲ್ಲಕ್ಕೂ ಮಿಗಿಲಾಗಿ ಸುಮಾರು ೧೯೪೫ರಿಂದೀಚೆಗೆ ಈ ಕ್ಷೇತ್ರದಲ್ಲಾಗಿದ್ದ ಅಗಾಧ ಆವಿಷ್ಕಾರಗಳ ಬಗೆ ಇದರಲ್ಲಿ ಉಲ್ಲೇಖನವೇ ಇರಲಿಲ್ಲ. ಭೌತವಿಜ್ಞಾನದ ವಿದ್ಯಾರ್ಥಿಯಲ್ಲದ ನಾನು ಇದನ್ನು ಸಂಪಾದಿಸಲು ಶಕ್ತನಲ್ಲ ಎಂದೆನಿಸಿದ್ದರಿಂದ ನನ್ನ ಸಮಸ್ಯೆಯನ್ನು ದೇಜಗೌರ ಮುಂದಿಟ್ಟೆ. ಒಡನೆ ಅವರು ನನ್ನನ್ನು ವಿಶ್ವವಿದ್ಯಾನಿಲಯದ ಭೌತವಿಜ್ಞಾನ ಮುಖ್ಯಸ್ಥ ಎಸ್. ಚಂದ್ರಶೇಖರ್ರಲ್ಲಿಗೆ ಕರೆದೊಯ್ದರು. ಇವರಿಗೆ ಕನ್ನಡ ಓದಲು ಬರುತ್ತಿರಲಿಲ್ಲ. ಇವರು ನನ್ನ ಸಮಸ್ಯೆಯನ್ನು ಅರ್ಥಮಾಡಿಕೊಂಡು ತಮ್ಮ ಸಹೋದ್ಯೋಗಿ ಸಿ.ಕೆ ವೆಂಕಟನರಸಿಂಹಯ್ಯನವರಲ್ಲಿಗೆ ಕಳಿಸಿದರು. ಹಾಗಾದರೆ ದಯವಿಟ್ಟು ನೀವೇ ಈ ಲೇಖನವನ್ನು ಯುಕ್ತವಾಗಿ ತಿದ್ದಿ, ಸಂಕ್ಷೇಪಿಸಿ, ನೇರ್ಪುಗೊಳಿಸಿ ನನಗೆ ಕೊಡಿ ಎಂದೆ.
ಹಾಗೆ ಮಾಡುವುದು ಗುರುದ್ರೋಹವಾದೀತು. ಏಕೆಂದರೆ ಈ ಲೇಖಕರು ನನಗೆ ಗುರುಗಳಾಗಿದ್ದವರು, ಮಹಾ ಕೋಪಿಷ್ಠ ಕೂಡ.
ಚಿಂತೆ ಬೇಡ, ನಾನೇ ಆ ಹೊಣೆ ಹೊರುತ್ತೇನೆ. ಆದರೆ ಸಂಪಾದನ ಕಾರ್ಯ ನೀವು ಮಾಡಿಕೊಡಬೇಕು ಎಂದು ಅಂಗಲಾಚಿದೆ. ಆದರೆ ಸಿಕೆವಿ ಒಪ್ಪಲಿಲ್ಲ. ನಿಮ್ಮ ಮುಜಗರ ನನಗೆ ಅರ್ಥವಾಗುತ್ತದೆ. ಈಗ ನಾನೇ ಈ ಲೇಖನವನ್ನು ಸಂಪಾದಿಸಿ, ಸಂಸ್ಕರಿಸಿ, ಆಧುನೀಕರಿಸಿ ನಿಮಗೊಪ್ಪಿಸುತ್ತೇನೆ. ನನ್ನ ಈ ಕೆಲಸದಲ್ಲಿ ನುಸುಳಿರಬಹುದಾದ ಅಸ್ಪಷ್ಟತೆ, ಅಸಂಪೂರ್ಣತೆ, ತಪ್ಪು ವಿವರಣೆ ಮುಂತಾದವನ್ನು ನೀವು ತಿದ್ದಿ ಕೊಡಬೇಕು ಎಂದೆ, ಒಪ್ಪಿದರು. ಹೀಗೆ ಪುಟಪಾಕಗೊಂಡ ಆ ಲೇಖನ ಒಂದನೆಯ ಸಂಪುಟದಲ್ಲಿ ಪ್ರಕಟಣೆಗೂ ಹೋಯಿತು.

೧೯೬೯ ಕರ್ನಾಟಕ ರಾಜ್ಯೋತ್ಸವ ದಿನದಂದು (ನವಂಬರ್ ೧) ದೇಜಗೌ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನೇಮನಗೊಂಡಿದ್ದರು. ಸಹಜವಾಗಿ ವಿಶ್ವಕೋಶದಲ್ಲಿಯ ನಮಗೆಲ್ಲ ಅಂದು ಅತಿ ಸಂಭ್ರಮದ ದಿನ ಕೂಡ. ಅಂದಿನಿಂದ ಅಧ್ಯಯನ ಸಂಸ್ಥೆಯ ನಿರ್ದೇಶಕ ಮತ್ತು ವಿಶ್ವಕೋಶದ ಪ್ರಧಾನ ಸಂಪಾದಕರು ಹಾ.ಮಾ ನಾಯಕ. ಕುಲಪತಿ ದೇಜಗೌ ಗೌರವ ಪ್ರಧಾನ ಸಂಪಾದಕರಾಗಿರಲು ಸಮ್ಮತಿಸಿದರು. ಈ ವೇಳೆಗೆ ಮೊದಲನೆಯ ಸಂಪುಟದ ಮುದ್ರಣ ಮುಗಿದಿದ್ದು ಅನಾವರಣಕ್ಕೆ ಸಿದ್ಧವಾಗಿತ್ತು. ಹೀಗೆ ವಿಶ್ವಕೋಶದಲ್ಲಿಯ ನಮಗೆಲ್ಲ ಇದೊಂದು ಮುಪ್ಪುರಿ ಶ್ರಾಯದ ಸಂತಸ: ರಾಜ್ಯೋತ್ಸವ ಮಾಸ, ಕುಲಪತಿ ದೇಜಗೌ ಅವರ ಸಮ್ಮುಖದಲ್ಲಿ ವಿಶ್ವಕೋಶದ ಅನಾವರಣ, ಮತ್ತು ನಮ್ಮ ಸುಸಂಘಟಿತ ಪ್ರಯತ್ನದ ಪ್ರಥಮ ಯಶಸ್ಸು.

ಕನ್ನಡ ವಿಶ್ವಕೋಶದ ಪ್ರಥಮ ಸಂಪುಟ
ಅಧ್ಯಾಯ ಎಪ್ಪತ್ತು [ಮೂಲದಲ್ಲಿ ೪೨]

ಇದನ್ನು ನವಂಬರ್ ೨೧, ೧೯೬೯ರಂದು ಲೋಕಾರ್ಪಣೆಗೈಯಲಾಯಿತು. ಇದರ ಪೀಠಿಕೆಯಲ್ಲಿ ಕುಲಪತಿ ದೇಜಗೌ ಬರೆದಿರುವ ಮಾತು: ಆಧುನಿಕ ಯುಗದ ನಾಗರಿಕ ಮಾನವ ಹೊಂದಿರಬೇಕಾದ ಮೂಲಭೂತ ಅಗತ್ಯಗಳಲ್ಲಿ ವಿಶ್ವಕೋಶವೂ ಒಂದು, ದಿನೇ ದಿನೇ ಸಹಸ್ರಾರು ಶಾಖೆಗಳ ಮೂಲಕ ಅನಂತವಾಗಿ ವಿಕಾಸಗೊಳ್ಳುತ್ತಿರುವ ಜ್ಞಾನವಿಜ್ಞಾನಗಳನ್ನು ಗ್ರಹಿಸುವುದಾಗಲೀ ಸಂಗ್ರಹಿಸುವುದಾಗಲೀ ಒಬ್ಬ ವ್ಯಕ್ತಿಗೆ ಸಾಧ್ಯವಾಗದು. ಎಲ್ಲ ಶಾಖೆಗಳ ಸರ್ವಂಕಷ ಜ್ಞಾನವಲ್ಲದಿದ್ದರೂ ಸಾಮಾನ್ಯ ಜ್ಞಾನ ಈ ಕಾಲದ ಪ್ರತಿಯೊಬ್ಬ ನಾಗರಿಕ ವ್ಯಕ್ತಿಗೂ ಬೋಧಕನಿಗೂ ಅತ್ಯವಶ್ಯ. ವಿಶ್ವಕೋಶ ಸಮಕಾಲೀನ ಜೀವನದ ಪ್ರತಿಬಿಂಬವಾಗಿ, ರಾಷ್ಟ್ರೀಯ ಸಂಸ್ಕೃತಿಯ ವಾಹಕವಾಗಿ, ವಿಜ್ಞಾನ ಸಾಹಿತ್ಯದ ಮುಂಗೋಳಿಯಾಗಿ, ಜ್ಞಾನವಿಜ್ಞಾನಗಳ ಬಟ್ಟಿಯಿಳಿಸಿದ ಸಾರಸಂಗ್ರಹವಾಗಿ, ಜ್ಞಾನಪ್ರಕಾರ ಮಾಧ್ಯಮವಾಗಿ, ನಿರ್ದುಷ್ಟವಾಗಿ, ನಿಖರವಾಗಿ, ಸುಲಭಗ್ರಾಹ್ಯವಾಗಿ, ಸಂದರ್ಭಗ್ರಂಥವಾಗಿ ರಚನೆಗೊಂಡಾಗ ಅದೇ ಒಂದು ವಿಶ್ವವಿದ್ಯಾಲಯವಾಗಿ ಶ್ರೇಷ್ಠ ಗ್ರಂಥಭಂಡಾರವಾಗಿ ಪರಿಣಮಿಸುತ್ತದೆ. ಇಡೀ ವಿಶ್ವವನ್ನೇ ಪ್ರತಿಫಲಿಸುವ ಈ ಕೋಶ ಸರ್ವರಿಗೂ ಅಕ್ಷಯನಿಧಿಯಾಗುತ್ತದೆ, ಕಾಮಧೇನುವಾಗುತ್ತದೆ, ಕಲ್ಪತರುವಾಗುತ್ತದೆ. ಅದು ಜನತೆಯ ಬುದ್ಧಿಪ್ರಾಗಲ್ಭ್ಯವನ್ನೂ ಜನಭಾಷೆಯ ಸಮರ್ಪಕತೆಯನ್ನೂ ತೋರಿಸುತ್ತದೆ.

ಅರಿಸ್ಟಾಟಲನ ಕಾಲದಿಂದ ವಿಶ್ವಕೋಶದ ಕಲ್ಪನೆ ಇದ್ದಿರಬಹುದಾದರೂ ಅದು ಸ್ಪಷ್ಟವಾಗಿ ಸಾಕಾರತೆ ಪಡೆದದ್ದು ೧೭೬೮ರಲ್ಲಿ, ಎನ್ಸೈಕ್ಲೊಪೀಡಿಯಾ ಬ್ರಿಟಾನಿಕ ಪ್ರಕಟಗೊಂಡಾಗ. ಎರಡು ಮೂರು ದಶಕಗಳ ಹಿಂದೆಯೇ ಬಂಗಾಳಿ ಮತ್ತು ಮರಾಠಿ ವಿಶ್ವಕೋಶಗಳು ಪ್ರಕಟವಾದುವು. ಮೊನ್ನೆ ಮೊನ್ನೆ ತಾನೆ ತಮಿಳು ವಿಶ್ವಕೋಶ ಪ್ರಕಟವಾಯಿತು. ತೆಲುಗು, ಹಿಂದಿ ಮತ್ತು ಗುಜರಾತಿ ವಿಶ್ವಕೋಶಗಳು ತಯಾರಾಗುತ್ತಿವೆ. ಮಲಯಾಳಂ ವಿಶ್ವಕೋಶದ ರಚನೆ ಇದೇ ತಾನೆ ಪ್ರಾರಂಭವಾಗಿದೆ. ನಿಜಗುಣ ಶಿವಯೋಗಿಯವರವಿವೇಕ ಚಿಂತಾಮಣಿ ರಚಿತವಾದಾಗಲೆ ಕನ್ನಡದಲ್ಲಿ ವಿಶ್ವಕೋಶದ ಇತಿಹಾಸ ಪ್ರಾರಂಭವಾಯಿತೆನ್ನಬಹುದು. ವೈಜ್ಞಾನಿಕ ರೀತಿಯಲ್ಲಿ ರಚಿತವಾಗಿರುವ ಶಿವರಾಮ ಕಾರಂತರಬಾಲಪ್ರಪಂಚ (೧೯೩೬) ಮತ್ತು ಅವರ ವಿಜ್ಞಾನ ಪ್ರಪಂಚ (೧೯೫೯-೬೪) ಆ ಇತಿಹಾಸದ ಪ್ರಮುಖವಾದ ಮೈಲಿಗಲ್ಲುಗಳಾಗಿವೆ. ಈ ಎರಡು ವಿಶ್ವಕೋಶಗಳಿದ್ದರೂ ಇನ್ನೂ ವ್ಯಾಪಕವಾದ ವಿಶ್ವಕೋಶದ ಆವಶ್ಯಕತೆ ಇದ್ದೇ ಇದೆ. ೧೯೫೪ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಅಂದು ಕನ್ನಡ ಪ್ರಾಧ್ಯಾಪಕರಾಗಿದ್ದ ರಾಷ್ಟ್ರಕವಿ ಕೆ.ವಿ ಪುಟ್ಟಪ್ಪನವರ ಸಲಹೆಯ ಮೇರೆಗೆ, ವಿಶ್ವಕೋಶಕ್ಕೆ ಸಂಬಂಧಿಸಿದ ಯೋಜನೆಯನ್ನು ತಯಾರಿಸುವ ಸಲುವಾಗಿ ಅವರ ಅಧ್ಯಕ್ಷತೆಯಲ್ಲಿಯೇ ಒಂದು ಸಮಿತಿಯನ್ನು ನೇಮಿಸಿತು. ಪ್ರತಿಯೊಂದು ಸಂಪುಟದಲ್ಲಿಯೂ ಎಂಟು ನೂರು ಪುಟಗಳುಳ್ಳ ಹತ್ತು ಸಂಪುಟಗಳನ್ನು ಆರು ವರ್ಷಗಳ ಅವಧಿಯಲ್ಲಿ ತಯಾರುಮಾಡಬೇಕೆಂದೂ ಆ ಯೋಜನೆಗೆ ಹನ್ನೆರಡು ಲಕ್ಷ ರೂಪಾಯಿ ವೆಚ್ಚ ತಗಲುತ್ತದೆಂದೂ ಸಮಿತಿ ಶಿಫಾರಸು ಮಾಡಿತು. ಆ ಯೋಜನೆಯನ್ನು ವಿಶ್ವವಿದ್ಯಾನಿಲಯ ಸರ್ಕಾರಕ್ಕೆ ಕಳಿಸಿಕೊಟ್ಟು, ಅದಕ್ಕಾಗಿ ಸಲ್ಲುವ ಹಣವನ್ನು ಮಂಜೂರು ಮಾಡಿ ಕೊಡುವಂತೆ ಕೋರಿಕೆ ಸಲ್ಲಿಸಿತು. ಆಗ ಮುಖ್ಯಮಂತ್ರಿಗಳಾಗಿದ್ದ ಕೆ. ಹನುಮಂತಯ್ಯನವರು ವಿಶ್ವಕೋಶ ಯೋಜನೆಯ ಉಪಯುಕ್ತತೆಯನ್ನು ಮನಗಂಡು ಪರಿಶೀಲನೆಗಾಗಿ ಆ ಯೋಜನೆಯನ್ನು ವಿದ್ಯಾ ಇಲಾಖೆಗೆ ಒಪ್ಪಿಸಿದರು. ಅದು ಮುಂದೆ ಸಾಹಿತ್ಯ ಮತು ಸಂಸ್ಕೃತಿ ಅಭಿವೃದ್ಧಿ ಇಲಾಖೆಗೆ ವರ್ಗಾಂತರಗೊಂಡು ಎ.ಎನ್ ಮೂರ್ತಿರಾವ್ ಮತ್ತು ಕೆ.ಎಸ್ ಧರಣೇಂದ್ರಯ್ಯನವರ ನಿರ್ದೇಶನದಲ್ಲಿ ಅಂತಿಮ ರೂಪ ಪಡೆಯಿತು. ಪ್ರತಿಯೊಂದು ಸಂಪುಟವೂ ಒಂದು ಸಾವಿರ ಪುಟಗಳಿಂದ ಕೂಡಿದ್ದು ಹತ್ತು ಸಂಪುಟಗಳಲ್ಲಿ ವಿಶ್ವಕೋಶ ಪ್ರಕಟವಾಗತಕ್ಕದ್ದೆಂದೂ ಪ್ರತಿಯೊಂದು ಸಂಪುಟದ ಐದು ಸಾವಿರ ಪ್ರತಿಗಳನ್ನು ಮುದ್ರಿಸತಕ್ಕದ್ದೆಂದೂ ಅದಕ್ಕೆ ಸುಮಾರು ಹದಿನಾರು ಲಕ್ಷ ರೂಪಾಯಿ ವೆಚ್ಚವಾಗುತ್ತದೆಂದೂ ಕೊನೆಯದಾಗಿ ಅಂದಾಜು ಮಾಡಲಾಯಿತು. ಈ ಅಂತಿಮ ಯೋಜನೆಯನ್ನು ಸರ್ಕಾರ ಒಪ್ಪಿಕೊಂಡು ಅದರ ನಿರ್ವಹಣೆಗಾಗಿ ಒಂದು ಸಂಪಾದಕ ಸಮಿತಿಯನ್ನು ನೇಮಿಸಿತು. ಸಂಪಾದಕ ಸಮಿತಿ ಮೂರು ಬಾರಿ ಸಭೆ ಸೇರಿ, ೩೩ ವಿಷಯಗಳಿಗೆ ಸಂಬಂಧಿಸಿದ ಉಪಸಮಿತಿಗಳನ್ನು ನೇಮಿಸಿ, ಆ ಸಮಿತಿಗಳ ಸಹಾಯದಿಂದ ೩೦,೦೦೦ ಶೀರ್ಷಿಕೆಗಳು ವಿಶ್ವಕೋಶದ ಹತ್ತು ಸಂಪುಟಗಳಲ್ಲಿ ಸೇರ್ಪಡೆಯಾಗಬೇಕೆಂದೂ ಒಂದೊಂದು ಶೀರ್ಷಿಕೆಗೂ ಇಷ್ಟಿಷ್ಟು ಸ್ಥಳಾವಕಾಶವಿರಬೇಕೆಂದೂ ತೀರ್ಮಾನಿಸಿ, ಲೇಖಕರಿಗೆ ಸಲ್ಲಬೇಕಾದ ಸಂಭಾವನೆಯನ್ನು ನಿಗದಿಗೊಳಿಸಿ, ಪುನರ್ವಿಮರ್ಶಿತ ಅಂದಾಜು ಇಪ್ಪತ್ತೈದು ಲಕ್ಷ ರೂಪಾಯಿ ಆಗುತ್ತದೆಂದು ಸರ್ಕಾರಕ್ಕೆ ತಿಳಿಸಿತು. ಪುನರ್ವಿಮರ್ಶಿತ ಯೋಜನೆ ೧೯೬೪ ಜೂನ್ ತಿಂಗಳಲ್ಲಿ ಸರ್ಕಾರದಿಂದ ಮಂಜುರಾತಿ ಪಡೆಯಿತು. ಆ ಯೋಜನೆಯ ಸ್ಥೂಲ ವಿವರಗಳು ಹೀಗಿವೆ:
() ವಿಶ್ವಕೋಶದ ಗಾತ್ರ, ಆಕಾರ ಇತ್ಯಾದಿ: . ವಿಶ್ವಕೋಶದ ಲೇಖನಗಳು ಅಕಾರಾದಿಯಾಗಿರಬೇಕು ೨. ಆಕಾರ: ಡೆಮಿ, ಚೌದಳ ೩. ಸಾವಿರ ಪುಟಗಳ ೧೨ ಸಂಪುಟಗಳು ೪. ೧೦ ಪಾಯಿಂಟಿನ ಮೊಳೆ ೫. ಶೀರ್ಷಿಕೆಗಳು: ಸುಮಾರು ೩೦,೦೦೦ ೬. ಸಾಕಷ್ಟು ರೇಖಾ ಹಾಗೂ ವರ್ಣ ಚಿತ್ರಗಳು ೭. ಪ್ರತಿಗಳ ಸಂಖ್ಯೆ ೫,೦೦೦ ೮. ಒಟ್ಟು ಅಂದಾಜು ಖರ್ಚು ರೂ ೨೫,೦೦,೦೦೦ ೯. ಕಾಲಾವಕಾಶ ೧೯೫೭ನೆಯ ಇಸವಿಯಿಂದ ಹತ್ತು ವರ್ಷ ೧೦. ಬೆಲೆ ರೂ ೨೫೦.

() ವಿಶ್ವಕೋಶದ ರೂಪರೇಖೆಗಳು: . ಇದು ಸಾಮಾನ್ಯ ಜನರಿಗೂ ವಿದ್ವಾಂಸರಿಗೂ ಉಪಯುಕ್ತವಾದ ಸಂದರ್ಭ ಗ್ರಂಥವಾಗಬೇಕು. ಲೇಖನಗಳು ಚಿಕ್ಕದಾಗಿ, ಚೊಕ್ಕದಾಗಿರಬೇಕು. ಭಾಷೆ ಸರಳವಾಗಿರಬೇಕು. ಲೇಖನಗಳಲ್ಲಿ ಬರುವ ಸಂಗತಿಗಳು ನಿಖರವಾಗಿಯೂ ವಾಸ್ತವವಾಗಿಯೂ ಅತ್ಯಂತ ಆಧುನಿಕವಾಗಿಯೂ ಇರಬೇಕು. ಆವಶ್ಯಕವಾದೆಡೆಯಲ್ಲೆಲ್ಲ ವಿಜ್ಞಾನವಿಷಯಗಳಿಗೆ ಅಂತಾರಾಷ್ಟ್ರೀಯ ಶಬ್ದಗಳನ್ನೇ ಬಳಸಬೇಕು. ಭರತ ಖಂಡದಲ್ಲೆಲ್ಲ ಸರ್ವೇಸಾಮಾನ್ಯವಾಗಿ ಅಂಗೀಕೃತವಾಗಿರುವ ಮಾತುಗಳನ್ನು ಸ್ವೀಕರಿಸಬಹುದು. ಪರಿಭಾಷಾಕೋಶದಲ್ಲಿ ಸಮರೂಪತೆಯನ್ನು ಸಾಧಿಸುವುದಕ್ಕಾಗಿ ಒಂದು ಸಂಘಟನಾ ಸಮಿತಿಯಿರುತ್ತದೆ.
. ಪಾಶ್ಚಾತ್ಯ ದೇಶಗಳಲ್ಲಿ ಸಿದ್ಧವಾಗಿರುವ ವಿಶ್ವಕೋಶಗಳು ಸಾಮಾನ್ಯವಾಗಿ ಪಾಶ್ಚಾತ್ಯ ವಿಷಯಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತವೆ. ಆದರೆ ಕನ್ನಡ ವಿಶ್ವಕೋಶ ಅನುಕ್ರಮವಾಗಿ ಕರ್ಣಾಟಕ, ದಕ್ಷಿಣ ಭಾರತ, ಭಾರತ, ಏಷ್ಯ ಮತ್ತು ಪ್ರಪಂಚದ ಇತರ ದೇಶಗಳಿಗೆ ಸಂಬಂಧಿಸಿದ ವಿಷಯಗಳಿಗೆ ಉಚಿತವರಿತು ಪ್ರಾಶಸ್ತ್ಯ ನೀಡುತ್ತದೆ. ಎನ್ಸೈಕ್ಲೊಪೀಡಿಯ ಬ್ರಿಟಾನಿಕದಲ್ಲಾಗಲೀ ಅಥವಾ ಇತರ ಅಧಿಕೃತ ವಿಶ್ವಕೋಶದಲ್ಲಾಗಲೀ ಉಲ್ಲೇಖಿತವಾಗಿರುವ ಮುಖ್ಯ ಸಂಗತಿಗಳನ್ನು ಯಾವ ಕಾರಣದಿಂದಲೂ ಬಿಡಕೂಡದು. ಕರ್ಣಾಟಕಕ್ಕೆ ಸಂಬಂಧಿಸಿದ ವಿಷಯಗಳು ಸಾಕಷ್ಟು ಸಮಗ್ರವಾಗಿಯೂ ಸಮರ್ಪಕವಾಗಿಯೂ ನಿರೂಪಣೆಗೊಳ್ಳಬೇಕು.
. ವೈಜ್ಞಾನಿಕ, ಮಾನವಿಕ ಹಾಗೂ ತಾಂತ್ರಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಮುಖ್ಯ ಸಂಗತಿಗಳು ಕನ್ನಡ ವಿಶ್ವಕೋಶದಲ್ಲಿ ಸೇರ್ಪಡೆಯಾಗುತ್ತವೆ, ನಿಜ. ಜಾಗತಿಕ ದೃಷ್ಟಿಯಿಂದ ಪ್ರಮುಖವಲ್ಲದ ದೊರೆಗಳ, ಸೇನಾಧಿಪತಿಗಳ ಮತ್ತು ರಾಜನೀತಿ ಧುರೀಣರ ಹೆಸರುಗಳನ್ನು ಬಿಡಬೇಕಾಗುತ್ತದೆ. ಭರತಖಂಡದ ಇತಿಹಾಸದಲ್ಲಿ ಬರುವ ಹೆಸರುಗಳನ್ನು ಬಹುತೇಕವಾಗಿ ಉಳಿಸಿಕೊಳ್ಳಲಾಗುತ್ತದೆ. ನ್ಯೂಯಾರ್ಕ್, ಲಂಡನ್, ಆಕ್ಸಫರ್ಡ್, ಕೊಲಂಬಿಯ, ರೋಮ್ ಮೊದಲಾದ ದೊಡ್ಡ ಪಟ್ಟಣಗಳ ಹಾಗೂ ಪ್ರಸಿದ್ಧ ಸ್ಥಳಗಳ ವಿವರ ಅತ್ಯಗತ್ಯ. ಆಂಗ್ಲ ವಿಶ್ವಕೋಶಗಳಲ್ಲಿ ಒಂದೆರಡು ವಾಕ್ಯಗಳಲ್ಲಿಯೇ ಮುಕ್ತಾಯವಾಗಿರುವ ಪಟ್ಟಣಗಳ ವಿಷಯವನ್ನು ಕೈಬಿಡಬಹುದು. ಆದರೆ ಪ್ರತಿಯೊಂದು ರಾಷ್ಟ್ರದ ಭೌಗೋಳಿಕ ಮತ್ತು ಚಾರಿತ್ರಿಕ ವಿಷಯಗಳನ್ನು ವಿವರವಾಗಿ ತಿಳಿಸಬೇಕಾಗುತ್ತದೆ. ಪಾಶ್ಚಾತ್ಯ ದೇಶಗಳಿಗೆ ಸಂಬಂಧಿಸಿದ ವಿಷಯಗಳು ಆಂಗ್ಲ ವಿಶ್ವಕೋಶಗಳಲ್ಲಿ ವಿಪುಲವಾಗಿ ದೊರೆಯುತ್ತವೆ. ಆದರೆ ಕರ್ಣಾಟಕ ಮತ್ತು ಭರತಖಂಡಕ್ಕೆ ಸಂಬಂಧಿಸಿದ ವಿಷಯಗಳನ್ನು ತುಂಬ ಶ್ರಮವಹಿಸಿಯೇ ಸಂಪಾದಿಸಬೇಕಾಗುತ್ತದೆ.
. ವಿಷಯಸೂಚಿ, ಲೇಖಕ ಸೂಚಿ ಮತ್ತು ಚಿತ್ರ ಸೂಚಿಗಳನ್ನು ತಯಾರಿಸಬೇಕಾಗುತ್ತದೆ.

೧೯೫೬ರಿಂದ ೧೯೬೮ರವರೆಗೆ ವಿಶ್ವಕೋಶದ ಪ್ರಾಥಮಿಕ ಕಾರ್ಯಗಳು ಮಂದಗತಿಯಿಂದ ಸಾಗುತ್ತಿದ್ದುವು. ಈ ನಡುವೆ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ ವಿದ್ಯಾ ಇಲಾಖೆಯ ಅಂಗವಾಯಿತು. ಇಬ್ಬರು ಮೂವರು ವ್ಯಕ್ತಿಗಳು ವಿಶೇಷಾಧಿಕಾರಿಗಳಾಗಿ ನೇಮಕಗೊಂಡರು. ಹಿಂದಿನ ಸಂಪಾದಕ ಸಮಿತಿ ವಿಸರ್ಜನೆಯಾಗಿ ಮತ್ತೊಂದು ಸಂಪಾದಕ ಸಮಿತಿ ನೇಮಕವಾಯಿತು. ಅದರ ಜೊತೆಗೆ ಒಂದು ಸಂಘಟನಾಸಮಿತಿಯೂ ವ್ಯವಸ್ಥೆಗೊಂಡಿತು. ಸುಮಾರು ೬೦೦ ಲೇಖನಗಳು ಸಂಗ್ರಹಗೊಂಡುವು. ಆದರೂ ವಿಶ್ವಕೋಶದ ಪ್ರಥಮ ಸಂಪುಟ ಬೇಗನೆ ಹೊರಬರುವ ಲಕ್ಷಣ ಕಾಣಲಿಲ್ಲ. ವಿಶ್ವಕೋಶದ ಶೀಘ್ರ ಪ್ರಕಟಣೆಯಲ್ಲಿ ತುಂಬ ಆಸಕ್ತವಾಗಿದ್ದ ಸರ್ಕಾರ ಅದರ ಮಂದಗತಿಯನ್ನು ತೀವ್ರವಾಗಿ ಗಮನಿಸಿ, ಕೂಲಂಕಷವಾಗಿ ಪರ್ಯಾಲೋಚಿಸಿ, ಈ ಮಹತ್ತ್ವಪೂರ್ಣವೂ ಜವಾಬ್ದಾರಿಯುತವೂ ಆದ ಕಾರ್ಯವನ್ನು ವಿಶೇಷಾನುಕೂಲಗಳನ್ನು ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ ವಹಿಸುವುದು ಯುಕ್ತವೆಂದು ತೀರ್ಮಾನಿಸಿ, ೧೯೬೮ನೆಯ ವರ್ಷದ ಮಾರ್ಚಿ ತಿಂಗಳ ಅಂತ್ಯದಲ್ಲಿ ವರ್ಗಾವಣೆಯ ಆದೇಶವನ್ನು ಹೊರಡಿಸಿತು. ಆ ಆದೇಶದ ಮೇರೆಗೆ ವಿಶ್ವಕೋಶದ ಕಚೇರಿ ಮೇ ತಿಂಗಳ ಮೊದಲ ವಾರದಲ್ಲಿ ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಗೆ ವರ್ಗಾವಣೆಗೊಂಡಿತು. ಅದು ಅಂಕುರಾರ್ಪಣೆಗೊಂಡ ಜಾಗದಲ್ಲಿಯೇ ಮತ್ತೆ ನಾಟಿಗೊಂಡದ್ದು ಔಚಿತ್ಯದ ಹಾಗೂ ಸಂತೋಷದ ಸಂಗತಿಯಾಗಿದೆ.

ಮೇ ತಿಂಗಳ ಮಧ್ಯಭಾಗದಲ್ಲಿ ವಿಶ್ವಕೋಶದ ಕೆಲಸ ಪ್ರಾರಂಭವಾಯಿತು. ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರನ್ನು ಪ್ರಧಾನ ಸಂಪಾದಕರಾಗಿ ನೇಮಿಸಿ, ಅವರ ಸಲಹೆಯ ಮೇರೆಗೆ ನೂತನ ಸಂಪಾದಕ ಮಂಡಳಿಯನ್ನು ನೇಮಿಸಿತು. ಸಂಪಾದಕ ಮಂಡಳಿಯ ಸಭೆ ಮೂರು ಬಾರಿ ಸಮಾವೇಶಗೊಂಡು ಹಿಂದೆ ನಡೆದಿದ್ದ ಕೆಲಸವನ್ನೆಲ್ಲ ಪುನಃ ಪರಿಶೀಲಿಸಿ, ಪರಿಣತರ ನೆರವನ್ನು ಪಡೆಯಲನುಕೂಲವಾಗುವಂತೆ ಕೆಲವು ನಿರ್ಣಯಗಳನ್ನು ಕೈಗೊಂಡಿತು. ಕಚೇರಿಯ ಸಿಬ್ಬಂದಿವರ್ಗವನ್ನು ಪುನಃ ಪರಿಶೀಲಿಸಲಾಯಿತು; ಹೊಸ ಸಂಪಾದಕವರ್ಗವನ್ನು ನಿಯೋಜಿಸಲಾಯಿತು. ಸರ್ಕಾರ ಕೃಪೆಯಿಟ್ಟು ಇಬ್ಬರು ವಿದ್ವಾಂಸರನ್ನು ವಿಶ್ವಕೋಶದ ಕಚೇರಿಗೆ ಎರವು ನೀಡಿತು. ಇಷ್ಟೆಲ್ಲ ಪ್ರಾಥಮಿಕ ಕಾರ್ಯ ಮುಗಿಯುವ ಹೊತ್ತಿಗೆ ಹೆಚ್ಚು ಕಡಿಮೆ ಒಂದು ವರ್ಷವೇ ಕಳೆಯಿತು.

ಸಂಪಾದಕವರ್ಗ ನೇಮಕಗೊಂಡ ಅನಂತರ ಹಿಂದಿನ ಶೀರ್ಷಿಕೆಗಳ ಪಟ್ಟಿಯನ್ನು ಪರಿಶೀಲಿಸಿ, ನಾಲ್ಕು ಸಾವಿರಕ್ಕೂ ಮೇಲ್ಪಟ್ಟು ಹೊಸ ಶೀರ್ಷಿಕೆಗಳನ್ನು ಸೇರಿಸಲಾಯಿತು. ಹಿಂದಿನ ಉಪಸಮಿತಿಗಳ ಜೊತೆಗೆ ಕೆಲವು ಹೊಸ ಉಪಸಮಿತಿಗಳನ್ನು ಜೋಡಿಸಲಾಯಿತು. ಪ್ರಥಮ ಸಂಪುಟದಲ್ಲಿ ಸೇರ್ಪಡೆಯಾಗಿರುವ ಸುಮಾರು ೧೫೦೦ ಲೇಖನಗಳನ್ನು ಯುಕ್ತ ಕಂಡೆಡೆ ತಿದ್ದಿ, ಪುನರ್ಲೇಖಿಸಿ, ಪರಿಷ್ಕರಿಸಿ, ಸಂಪಾದಿಸಿ ಅಚ್ಚಿಗೆ ಸಿದ್ಧಪಡಿಸಲಾಯಿತು.

ಸಂಪಾದಕವರ್ಗ ವಾರಕ್ಕೊ ಪಕ್ಷಕ್ಕೊ ಒಮ್ಮೆ ಸಭೆ ಸೇರಿ ಲೇಖನ ಸಂಗ್ರಹ, ಸಂಪಾದನೆ ಹಾಗೂ ಪರಿಷ್ಕರಣ ಕಾರ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಚರ್ಚಿಸುತ್ತದೆ. ಸಂಪಾದಕರ ಉಪಸಮಿತಿಯ ಚರ್ಚೆಯಲ್ಲಿ ಸಿದ್ಧಗೊಂಡ ನಿರ್ಣಯಗಳನ್ನು ಆಗಾಗಲೇ ಸಂಪಾದಕ ಮಂಡಳಿಯ ಅವಗಾಹನೆಗೂ ಅಂಗೀಕಾರಕ್ಕೂ ಕಳುಸಿಸಲಾಗುತ್ತದೆ. ಹೀಗೆ ಅಂಗೀಕೃತವಾಗದ ನಿರ್ಣಯಗಳನ್ನು ವಿಶ್ವಕೋಶದ ಬಳಕೆದಾರರಿಗೂ  ಅನುಕೂಲವಾಗುವಂತೆ ಕೆಳಗೆ ಕೊಟ್ಟಿದೆ:

.   ಸಾಮಾನ್ಯವಾಗಿ ಪ್ರತಿ ಶೀರ್ಷಿಕೆಯ ಮೊದಲವಾಕ್ಯ ಶೀರ್ಷಿಕೆಯ ವ್ಯಾಖ್ಯೆಯನ್ನೊಳಗೊಂಡಿರುತ್ತದೆ. ಅದರ ವಿವರಣೆ ಅದನ್ನು ಹಿಂಬಾಲಿಸುತ್ತದೆ. ಪಾರಿಭಾಷಿಕ ಶಬ್ದಗಳನ್ನು ಬಳಸುವಾಗ ಆಯಾ ಶೀರ್ಷಿಕೆಯ ಮೊದಲ ವಾಕ್ಯದ ಕೊನೆಯಲ್ಲಿ ಮೂಲ ಪದವನ್ನು ಕನ್ನಡದಲ್ಲಿ ಲಿಪ್ಯಂತರಿಸಿದೆ. ಕೆಲವು ಕಡೆ ಸೌಲಭ್ಯ ಹಾಗೂ ಸ್ಪಷ್ಟತೆಗಾಗಿ ಪದಗಳನ್ನು ಆವರಣ ಚಿಹ್ನೆಗಳೊಳಗೆ ರೋಮನ್ ಲಿಪಿಯಲ್ಲಿ ಬರೆದಿದೆ.
.   ಪದೇ ಪದೇ ಉಪಯೋಗವಾಗುವ ಕೆಲವು ರೂಢಿಯ ಪದಗಳನ್ನು ಅವುಗಳ ಸಂಕೇತಾಕ್ಷರಗಳಿಂದ ನಿರ್ದೇಶಿಸಲಾಗಿದೆ. ಉದಾ: ಸೆಂಟಿಮೀಟರ್ - ಸೆಂಮೀ; ಕಿಲೊ ಮೀಟರ್ - ಕಿಮೀ; ಮೈಲಿ - ಮೈ; ಸುಮಾರು - ಸು; ವರ್ಷ - ವ ಇತ್ಯಾದಿ.
.   ಪರಿಭಾಷೆಯನ್ನು ಕನ್ನಡೀಕರಿಸುವಾಗ ವಿಶ್ವಕೋಶದ ಸಂಯೋಜಕ ಸಮಿತಿ ಸಿದ್ಧಪಡಿಸಿರುವ ಪಟ್ಟ್ಟೀಯನ್ನೂ ಭಾರತ ಸರ್ಕಾರ ತಯಾರಿಸಿರುವ ತಾಂತ್ರಿಕ ಶಬ್ದಕೋಶವನ್ನೂ ಮೈಸೂರು ಸರ್ಕಾರ ಪ್ರಕಟಿಸಿರುವ ಆಡಳಿತ ಶಬ್ದಕೋಶವನ್ನೂ ಜೊತೆಗೆ ಕನ್ನಡದ ನಾನಾ ಭಾಗಗಳಲ್ಲಿ ರೂಢಿಯಲ್ಲಿರುವ ಪದಗಳನ್ನೂ ಗಮನದಲ್ಲಿಟ್ಟುಕೊಂಡು ಯುಕ್ತರೀತಿಯಲ್ಲಿ ಬಳಸಿಕೊಂಡಿದೆ.
.   ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟನ್ನು ಮಾದರಿಯಾಗಿಟ್ಟುಕೊಂಡು ಶೀರ್ಷಿಕೆಗಳನ್ನು ಅಕಾರಾದಿಯಾಗಿ ಅಳವಡಿಸಲಾಗಿದೆ. ತಮ್ಮ ಲೇಖನಗಳಲ್ಲಿ ಲೇಖಕರು ಬಳಸಿರುವ ಪ್ರಾದೇಶಿಕ ಪರ್ಯಾಯ ಪದಗಳನ್ನು ಆದಷ್ಟು ಉಳಿಸಿಕೊಂಡು, ಉಳಿಸಿಕೊಳ್ಳಲಾಗದ ಪರ್ಯಾಯ ಪದಗಳನ್ನು ಅಡ್ಡಸೂಚಿಯಲ್ಲಿ ಕೊಟ್ಟಿದೆ. ಉದಾ: ಇಣಚಿ: ನೋಡಿ ಅಳಿಲು.
.   ಲೇಖನಗಳನ್ನು ಸಂಪಾದಿಸುವಾಗ ಆಯಾ ಲೇಖಕರ ಭಾಷಾರೀತಿಯನ್ನು ಸಾಧ್ಯವಾದಷ್ಟು ಮಟ್ಟಿಗೆ ಇದ್ದಂತೆಯೇ ಉಳಿಸಿಕೊಂಡು, ವಿಶ್ವಕೋಶದ ಒಟ್ಟಾರೆ ರಚನೆ ಮತ್ತು ಸ್ವರೂಪಗಳಿಗೆ ಸಂಬಂಧಿಸಿದಂತೆ ಏಕರೂಪತೆಯನ್ನು ಸಾಧಿಸುವ ಸಲುವಾಗಿ ಮಾತ್ರ ಕನಿಷ್ಠ ಮಾರ್ಪಾಡುಗಳನ್ನು ಮಾಡಲಾಗಿದೆ. ಅನಾವಶ್ಯಕ ಪ್ರತ್ಯಯಗಳನ್ನು (ಉದಾ: , ಅನ್ನು, ಯಾಕೆ ಹೀಗಾಯಿತೆಂದರೆ ಇತ್ಯಾದಿ) ಮತ್ತು ಬೇಡವಾದ ಸಹಾಯಕ ಕ್ರಿಯಾಪದಗಳನ್ನೂ ಸರಳ ಹಾಗು ಸ್ಪಷ್ಟತೆಯ ದೃಷ್ಟಿಯಿಂದ ಕೈಬಿಡಲಾಗಿದೆ.
.   ಇಸವಿಗಳನ್ನು ನಮೂದಿಸುವಾಗ ಕ್ರಿಸ್ತಪೂರ್ವವನ್ನು ಮಾತ್ರ ಉಳಿಸಿಕೊಂಡು ಕ್ರಿಸ್ತಶಕವನ್ನು ಕೈಬಿಡಲಾಗಿದೆ.
.   ಆಯಾ ಶೀರ್ಷಿಕೆಗಳ ಕೆಳಗೆ ಅವಕ್ಕೆ ಸಂಬಂಧಿಸಿದ ವಿಷಯಗಳನ್ನು ಸ್ಪಷ್ಟಪಡಿಸಿದ್ದರೂ ಹೆಚ್ಚಿನ ವಿಷಯಗಳನ್ನು ತಿಳಿಯಲೆಳಸುವ ಓದುಗರಿಗೆ ಅನುಕೂಲವಾಗಲೆಂದು ಮೂಲ ವಿಷಯಗಳ ಕೊನೆಯಲ್ಲಿ ಅಡ್ಡಸೂಚಿಗಳನ್ನು ಕೊಡಲಾಗಿದೆ. ಒಂದೇ ವಿಷಯದ ಬಗ್ಗೆ ಬೇರೆ ಬೇರೆ ಶಾಖೆಗಳಿಗೆ ಸಂಬಂಧಿಸಿದ ಮೂರು ನಾಲ್ಕು ಮಂದಿ ಲೇಖಕರಿಂದ ಲೇಖನಗಳು ಬಂದಿದ್ದರೆ ಆ ಎಲ್ಲ ಲೇಖನಗಳಲ್ಲಿ ಉತ್ತಮವಾಗಿರುವ ಮುಖ್ಯಾಂಶಗಳನ್ನು ಒಂದು ಕಡೆ ಕ್ರೋಢೀಕರಿಸಲಾಗಿದೆ. ಲೇಖನದ ಕೊನೆಯಲ್ಲಿ ಅಷ್ಟು ಜನರ ಹೆಸರನ್ನೂ ಅಕಾರಾದಿಯಾಗಿ ಕೊಟ್ಟಿದೆ; ಇಲ್ಲವೇ ಅವರವರು ಬರೆದಿರುವ ವಿಷಯಗಳಷ್ಟಕ್ಕೆ ಅವರವರ ಹೆಸರನ್ನು ಆಯಾ ಲೇಖನ ಭಾಗದ ಕೊನೆಯಲ್ಲಿ ಕೊಟ್ಟಿದೆ. ಅಡಿಯಲ್ಲಿ ನಕ್ಷತ್ರ ಚಿಹ್ನೆ ಇರುವ ಲೇಖನಗಳು ಸಂಪಾದಕರು ಬರೆದವು. ಲೇಖಕರ ಹೆಸರುಗಳ ಸಂಕ್ಷಿಪ್ತ ರೂಪಗಳಿಗೆ ರೋಮನ್ ಲಿಪಿಯನ್ನೇ ಬಳಸಿದೆ.
.   ಲೇಖಕರ ಸೂಚಿಪಟ್ಟಿಯ ಒತ್ತಿನಲ್ಲಿಯೇ ಚಿತ್ರಕಾರರ ಹೆಸರುಗಳನ್ನೂ ಅಕಾರಾದಿಯಾಗಿ ಕೊಟ್ಟಿದೆ. ಪುಟ ಸಂಖ್ಯೆ ಕನ್ನಡ ಅಂಕಿಗಳಲ್ಲಿಯೂ ಲೇಖನಗಳೊಳಗೆ ಬರುವ ಸಂಖ್ಯೆಗಳು ಅರಾಬಿಕ್ ಅಂಕಿಗಳಲ್ಲಿಯೂ ಇರುತ್ತವೆ.
.   ಯೂನೋ, ಹು ಮತ್ತು ಇಕಾಫೆ ಮೊದಲಾದ ಸಂಕ್ಷೇಪ ನಾಮಗಳು ಅಂತಾರಾಷ್ಟ್ರೀಯವಾಗಿ ಅಂಗೀಕೃತವಾಗಿದ್ದರೂ ಮೂಲ ಸಂಕೇತಾಕ್ಷರಗಳನ್ನೇ ಬಿಡಿ ಬಿಡಿಯಾಗಿ ಬರೆದಿದೆ. (ಉದಾ: ಯುಎನ್)
೧೦. ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಏಕವಚನ ಹಾಗೂ ಬಹುವಚನಗಳನ್ನು ರೂಢಿಗನುಸಾರವಾಗಿ ಬಳಸಿದೆ. ಇಪ್ಪತ್ತನೆಯ ಶತಮಾನದ ವ್ಯಕ್ತಿಗಳಿಗೂ ಹಿಂದಿನ ಆಚಾರ್ಯಪುರುಷರಿಗೂ ಬಹುವಚನವನ್ನೇ ಬಳಸಿದೆ.
೧೧. ಸೆಂಟಿಗ್ರೇಡ್, ಗ್ರಾಂ, ಸೆಕೆಂಡ್ (CGS - ಮೆಟ್ರಿಕ್ ಮಾನ) ಮತ್ತು ಫುಟ್, ಪೌಂಡ್, ಸೆಕೆಂಡ್ (FPS - ಬ್ರಿಟಿಷ್ ಮಾನ) ಏಕಮಾನ ಪದ್ದತಿಗಳ ಪೈಕಿ ಮೊದಲನೆಯ ಪದ್ಧತಿಯನ್ನೇ ಇಲ್ಲಿ ಸ್ವೀಕರಿಸಿದೆ.

ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ವಿಶ್ವಕೋಶದ ಕೆಲಸ ವಿಧಿವತ್ತಾಗಿ ನಡೆಯತೊಡಗಿದ್ದು ಕಳೆದ ಆರು ತಿಂಗಳಿಂದ. ನಮ್ಮ ಸಂಪಾದಕವರ್ಗ ಇದಕ್ಕಾಗಿ ತ್ರಿಕರಣಶುದ್ಧಿಯಾಗಿ ಅಹೋರಾತ್ರಿ ದುಡಿದಿದೆಯೆಂಬುದು ಅತಿಶಯೋಕ್ತಿಯಲ್ಲ. ಮೊದಲ ಸಂಪುಟದಲ್ಲಿ ಸೇರಬೇಕಾಗಿದ್ದ ಲೇಖನಗಳಲ್ಲಿ ಶೇಕಡಾ ಅರುವತ್ತರಷ್ಟು (ಅದಕ್ಕಿಂತಲೂ ಹೆಚ್ಚು) ಲೇಖನಗಳು ಬಂದಿರಲಿಲ್ಲ. ಅವುಗಳನ್ನು ಬರೆಸಿ, ಪರಿಷ್ಕರಿಸಿ, ಸಂಪಾದಿಸಿ ಈ ಮಹತ್ಕಾರ್ಯವನ್ನು ಆಗಗೊಳಿಸಿದ್ದಾರೆ. ಅನೇಕ ಲೇಖನಗಳನ್ನು ಸಂಪಾದಕವರ್ಗವೇ ಸಿದ್ಧಪಡಿಸಿದೆ. ಸೋಲರಿಯದ ಈ ದುಡಿಮೆಯಿಂದಾಗಿ ಇಂದು (೨೧-೧೧-೧೯೬೯) ಮೊದಲ ಸಂಪುಟ ಹೊರಬಂದಿದೆಇಷ್ಟಾದರೂ ವಿಶ್ವಕೋಶದಲ್ಲಿ ಯಾವ ಅರಕೆ ಕೊರತೆಗಳೂ ಇಲ್ಲವೆಂದು ನಾನು ಹೇಳುತ್ತಿಲ್ಲ. ಮಾನವೀಯ ದೌರ್ಬಲ್ಯಗಳ ಫಲವಾಗಿ ಅಲ್ಲಲ್ಲಿ ದೋಷಗಳು ನುಸುಳಿರಬಹುದು, ಉಳಿದಿರಬಹುದು. ಆದರೆ ಪ್ರಜ್ಞಾಪೂರ್ವಕವಾಗಿ ಅಂಥವುಗಳಿಗೆ ಎಡೆಗೊಟ್ಟಿಲ್ಲವೆಂದು ಹೇಳಬಯಸುತ್ತೇನೆ. ದೋಷಗಳಿದ್ದರೆ ಆಶ್ಚರ್ಯಪಡಬೇಕಾಗಿಯೂ ಇಲ್ಲ. ದೋಷ ಸಮರ್ಥನೆಗಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ಜಗತ್ತಿನ ಶ್ರೇಷ್ಠ ವಿಶ್ವಕೋಶವೆಂದು ಹೆಸರುಗಳಿಸಿರುವ ಎನ್ಸೈಕ್ಲೊಪೀಡಿಯ ಬ್ರಿಟಾನಿಕ ಕೂಡ ಇಂಥ ದೋಷಗಳಿಂದ ಮುಕ್ತವಾಗಿಲ್ಲವೆಂಬ ಸಂಗತಿಯನ್ನು ನಾವು ಗಮನಿಸಬಹುದಾಗಿದೆ. ಗೆಲಿಲಿಯೋ ಪಿಸಾದ ಓರೆಗೋಪುರದಲ್ಲಿ ನಡೆಸಿದನೆಂದು ಹೇಳಲಾದ ಪ್ರಯೋಗ ವಾಸ್ತವವಾಗಿ ನಡೆದೇ ಇರಲಿಲ್ಲವೆಂಬುದು ಪ್ರಮಾಣಭೂತವಾಗಿ ಸಿದ್ಧವಾಗಿ ಎರಡು ದಶಕಗಳು ಕಳೆದಿದ್ದರೂ ಬ್ರಿಟಾನಿಕದಲ್ಲಿ ಮಾತ್ರ ತಿದ್ದುಪಡಿಯಾಗಿಲ್ಲ. ಅಂತೆಯೇ ಕುರಿ, ಮೇಕೆಗಳನ್ನು ಷೇಕ್ಸ್ಪಿಯರ್ ಕದಿಯುತ್ತಿದ್ದನೆಂಬ ವಿಚಾರ ಅಸಂದಿಗ್ದವಾಗಿ ಅಪ್ರಾಮಾಣಿಕವೆಂದು ಸಿದ್ಧವಾದರೂ ಬ್ರಿಟಾನಿಕದ ಪುನರ್ಮುದ್ರಣಗಳಲ್ಲಿ ಷೇಕ್ಸ್ಪಿಯರ್ ಕುರಿಗಳ್ಳನಾಗಿಯೇ ಉಳಿದಿದ್ದಾನೆ. ಜನಶ್ರುತಿಯ ಈ ವಿಚಾರಗಳನ್ನು ಬದಿಗಿರಿಸಿದರೂ ಉಷ್ಣ, ಬಾಷ್ಪೀಕರಣ ಮತ್ತು ಕಾಮ್ಟನ್ ಪ್ರಭಾವ ಮುಂತಾದ ವೈಜ್ಞಾನಿಕ ವಿಷಯಗಳಿಗೆ ಸಂಬಂಧಿಸಿದಂತೆಯೂ ದೋಷಗಳು ಉಳಿದುಕೊಂಡಿವೆಯೆಂಬುದನ್ನು ಹಾರ್ವೆ ಐಸ್ ಬೈಂಡರ್ಅವರು ತಮ್ಮದಿ ಮಿತ್ ಆಫ್ ದಿ ಬ್ರಿಟಾನಿಕ ಎಂಬ ಗ್ರಂಥದಲ್ಲಿ ಉದಾಹರಿಸಿದ್ದಾರೆ. ನನ್ನ ಅಭಿಪ್ರಾಯ ಇಷ್ಟು: ಇಂಥ ಕೋಶದ ಕೆಲಸ ಒಂದು ಸಂಪುಟಕ್ಕೆ ಒಂದು ಮುದ್ರಣಕ್ಕೆ ಮುಗಿಯುವಂಥದೇ ಅಲ್ಲ. ಇದು ಅವಿಚ್ಛಿನ್ನವಾಗಿ ನಡೆಯಬೇಕಾದ ಶಾಶ್ವತ ಕಾರ್ಯ. ಮತ್ತೆ ಮತ್ತೆ ಅವುಗಳನ್ನು ಪರಿಷ್ಕರಿಸಬೇಕಾಗುತ್ತದೆ. ಎಲ್ಲ ವಿಷಯಗಳಿಗೆ ಸಂಬಂಧಿಸಿದ ಅತ್ಯಾಧುನಿಕ ವಿವರಗಳನ್ನು ಮುಂಬರುವ ಸಂಸ್ಕರಣಗಳಲ್ಲಿ ಅಳವಡಿಸಿಕೊಳ್ಳುವ ಸಲುವಾಗಿ ಒಂದು ಖಾಯಂ ತಜ್ಞ ವ್ಯವಸ್ಥೆಯೇ ಸದಾ ಜಾಗೃತವಾಗಿ, ಸದಾ ಕಾರ್ಯೋನ್ಮುಖವಾಗಿ ಇರಬೇಕಾಗುತ್ತದೆ. ಚಂದ್ರ ಮಾನವರಿಗೆ ಸಂಬಂಧಿಸಿದ ವಿವರಗಳನ್ನು ನಮ್ಮ ಈ ಮೊದಲ ಸಂಪುಟ ಒಳಗೊಂಡಿರುವುದು ನಮ್ಮ ಸಂಪಾದಕವರ್ಗದ ಶ್ರದ್ಧೆ, ನಿಷ್ಠೆ ಮತ್ತು ಅಧುನಾತಮ ವಿಚಾರಪರತೆಗೆ ಸಾಕ್ಷಿಯಾಗಿದೆ. ಹೀಗಾದರೇನೇ ನಮ್ಮ ಕನ್ನಡ ವಿಶ್ವಕೋಶ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ, ವಿದ್ವಾಂಸರಿಗೆ ಮತ್ತು ಸಂಶೋಧಕರಿಗೆ ಅತ್ಯಂತ ಉಪಯುಕ್ತವಾಗುವುದು, ಉಪಾದೇಯವಾಗುವುದು.

ಈ ಕೋಶ ಮತ್ತೊಂದು ವಿಚಾರವನ್ನೂ ಸ್ಪಷ್ಟಪಡಿಸಿದೆ. ವೈಜ್ಞಾನಿಕ, ಮಾನವಿಕ, ತಾಂತ್ರಿಕ - ಯಾವುದೇ ವಿಷಯವನ್ನಾದರೂ ಕನ್ನಡದಲ್ಲಿ ಸರಳವಾಗಿ, ಸುಲಭವಾಗಿ, ಹೃದಯವೇದ್ಯವಾಗುವಂತೆ ಹೇಳಬಹುದೆಂಬುದಕ್ಕೆ ಈ ಸಂಪುಟ ಸಾಕ್ಷೀಭೂತವಾಗಿದೆ. ಕನ್ನಡ ವಿಜ್ಞಾನಭಾಷೆಯಾಗಿ ಬೆಳೆದಿಲ್ಲವೆಂಬ ಸೊಲ್ಲು ಎಷ್ಟು ನಿರರ್ಥಕವಾದುದೆಂಬುದನ್ನು ಈ ಸಂಪುಟ ಪ್ರಮಾಣೀಕರಿಸುತ್ತದೆ. ಸಂಸ್ಕೃತ, ಪ್ರಾಕೃತ, ಅಪಭ್ರಂಶ, ಇಂಗ್ಲಿಷ್ ಇತ್ಯಾದಿ ಹಲವಾರು ಭಾಷೆಗಳ ಸಾರವನ್ನು ಹೀರಿ ಬೆಳೆದು ಸುಪುಷ್ಟವಾಗಿರುವ ಕನ್ನಡ ಯಾವುದೇ ಕಾರ್ಯಕ್ಕಾದರೂ ಸನ್ನದ್ಧವಾಗಿ ನಿಂತಿದೆ ಎಂಬುದಕ್ಕೆ ಬೇರಾವ ಪ್ರಮಾಣ ಪತ್ರವು ಬೇಕಿಲ್ಲ.

ದೇಜಗೌ ಅವರ ಔದಾರ್ಯ
ಅಧ್ಯಾಯ ಎಪ್ಪತ್ತೊಂದು [ಮೂಲದಲ್ಲಿ ೪೩]

ವಿಶ್ವಕೋಶದ ಒಂದನೆಯ ಸಂಪುಟದ ಬಿಡುಗಡೆಯ ಪರ್ವದಿನ (೨೧-೧೧-೧೯೬೯). ಅದೇ ಪೂರ್ವಾಹ್ಣ ಸಂಪಾದಕ ಮಂಡಳಿಯ ಸರ್ವಸದಸ್ಯರ ಸಭೆ ಸೇರಲಿದೆ. ಇದಕ್ಕೆ ಭೌತವಿಜ್ಞಾನೋಪಸಮಿತಿಯ ಅಧ್ಯಕ್ಷರೂ ಬರಲಿದ್ದಾರೆ. ಸಭೆಗೆ ಮೊದಲೇ ನಾನು ದೇಜಗೌ ಅವರಿಗೆ ಒಂದು ಸಂಗತಿ ಸ್ಪಷ್ಟಪಡಿಸಿದೆ, ನಮ್ಮ ಭೌತವಿಜ್ಞಾನದ ಪ್ರಾಧ್ಯಾಪಕರೇನಾದರೂ ಈ ಸಭೆಗೆ ಬಂದರೆ ಅವರು ತಮ್ಮ ಈ ಹ್ರಸ್ವೀಕೃತ ಲೇಖನದ ಬಗ್ಗೆ ಪ್ರಶ್ನೆ ಎತ್ತಿಯೇ ಎತ್ತುತ್ತಾರೆ. ಇಂಥ ಇಕ್ಕಟ್ಟಿನ ಸನ್ನಿವೇಶದಲ್ಲಿ ಅವರಿಗೆ ನೋವಾಗದಂತೆ ಆದರೆ ಸತ್ಯವನ್ನು ಮರೆಮಾಚದಂತೆ ಮೃದುವಾದ ಉತ್ತರವೀಯುವ ಜಾಣ್ಮೆ ನನಗಿಲ್ಲ. ನನ್ನ ನೇರ ಉತ್ತರ, ಅದು ನೈತಿಕವಾಗಿ ಮತ್ತು ಬೌದ್ಧಿಕವಾಗಿ ಎಷ್ಟೇ ಸಮರ್ಥನೀಯವಾಗಿದ್ದರೂ ಪ್ರಾಧ್ಯಾಪಕೋತ್ತಮರ ಅಂತಸ್ತು, ವಯಸ್ಸು ಮತ್ತು ಪ್ರವೃತ್ತಿ ಗಮನಿಸುವಾಗ ಸಭಾಮರ್ಯಾದೆಗೆ ಭಂಗ ತರದೆ ಇರದು. ಈ ವೃಥಾ ವಾಗ್ವಾದ ಮತ್ತು ಸಂತಾಪ ನಿವಾರಿಸುವ ಸಲುವಾಗಿ ನಾನು ಸಭೆಯಲ್ಲಿ ಪ್ರಾಧ್ಯಾಪಕರ ನೇರದೃಷ್ಟಿಗೆ ಬೀಳದಂತೆ ಹಿಂದೆ ಕೂರುತ್ತೇನೆ. ಬಾಯಿ ಬಿಡುವುದೇ ಇಲ್ಲ. ಎದುರಾಗಬಹುದಾದ ಸಮಸ್ಯೆಯನ್ನು ನೀವು ಹೇಗೆ ಬೇಕಾದರೂ ನಿಭಾಯಿಸಿ, ನನ್ನ ಆಕ್ಷೇಪಣೆ ಇಲ್ಲ.

ಸಭೆ ಸೇರಿದೆ. ಅವರು ಬಂದಿದ್ದಾರೆ. ದೇಜಗೌ ಅಧ್ಯಕ್ಷತೆ ವಹಿಸಿದ್ದಾರೆ. ಸದಸ್ಯರಿಗೆ ವಿಶ್ವಕೋಶದ ಸಂಪುಟವನ್ನು ಕೊಡಲಾಗಿದೆ. ಪ್ರಾಸ್ತಾವಿಕ ಮಾತು ಅಭಿನಂದನೆ ಎಲ್ಲವೂ ಮುಗಿದಿವೆ. ಪ್ರಾಧ್ಯಾಪಕ ದೂರ್ವಾಸರು ನಾನು ಊಹಿಸಿದ್ದಕ್ಕಿಂತ ತೀವ್ರತರವಾಗಿ ತಮ್ಮ ಅಭ್ಯಂತರ ಮತ್ತು ಆಕ್ಷೇಪಣೆ ಪ್ರಹರಿಸಿದ್ದಾರೆ, ನಾವು ನಮ್ಮ ಜ್ಞಾನ ಹಾಗೂ ಅನುಭವ ಸರ್ವಸ್ವವನ್ನೂ ಧಾರೆಯೆರೆದು ಪರಿಷ್ಕರಿಸಿ ಕೊಟ್ಟ ಲೇಖನಗಳನ್ನು ಇಲ್ಲಿ ಸಂಕ್ಷೇಪಿಸಿ ಕುಲಗೆಡಿಸಲಾಗಿದೆ. ಯಾರೀ ಅಧಿಕಪ್ರಸಂಗ ಪ್ರದರ್ಶಿಸಿದವರು. ಅವರ ಅರ್ಹತೆ ಏನು?
ದೇಜಗೌ, ಒಂದು ಉದಾಹರಣೆ ಹೇಳಿ.
ಮಾರಿ ಕಣ್ಣು ಹೋತನ ಮೇಲೆಯೇ ಎಂಬಂತೆ ಅದೇ ಲೇಖನವನ್ನು ಅವರು ಉದ್ಧರಿಸಿ ಓದಬೇಕೇ!
ದೇಜಗೌ, ಅದರಲ್ಲಿ ತಾಂತ್ರಿಕ ದೋಷಗಳೇನಾದರೂ ನುಸುಳಿದೆಯೇ?
ಅವೇನೂ ಇಲ್ಲ ಅನ್ನಿ. ಆದರೆ ಓದುಗರಿಗೆ ಆವಶ್ಯ ಎಂದು ಅರಿತು ಸುದೀರ್ಘವಾಗಿ ನಿರೂಪಿಸಿದ್ದ ಮೂಲವನ್ನು ಈ ರೀತಿ ಮೊಟಕುಗೊಳಿಸಿದವರು ಯಾರು? ಅವರ ಯೋಗ್ಯತೆ ಏನು?
ವಿಜ್ಞಾನ ಸಂಪಾದಕರು ಏನನ್ನುತ್ತಾರೆ? ದೇಜಗೌ ನಾನು ಕೂತಿರದಿದ್ದ ಸಾಲಿನತ್ತ ದೃಷ್ಟಿ ಹರಿಸಿದರು! ‘ಮಾಣಿ ಕೂಸನ್ನು ನೋಡಿತ್ತ, ಕೂಸು ಗೋಡೆಯನ್ನು ನೋಡಿತ್ತ ಎಂಬಂತೆ ನಾನು ಪ್ರಾಧ್ಯಾಪಕ ಮಹಾಶಯರ ಶಾಪ ದೃಷ್ಟಿಗೆ ಈಡಾಗದಂತೆ ದಿಗಂತ ನೋಡಿದೆ! ದೇಜಗೌ ಮುಂದುವರಿಸಿ ವಿಶ್ವಕೋಶ ಲೇಖನಗಳ ಸಂಪಾದನೆಯಲ್ಲಿ ಎದುರಾಗುವ ಹಲವು ಬಗೆಯ ಜಟಿಲತೆಗಳನ್ನು ವ್ಯಾಪಕವಾಗಿ ಸೋದಾಹರಣ ವಿವರಿಸುತ್ತ ನಿರ್ದಿಷ್ಟ ಪ್ರಶ್ನೆಗೆ ನೇರ ಉತ್ತರಕೊಡುವುದನ್ನು ಬಲು ಜಾಣ್ಮೆಯಿಂದ ಅಡ್ಡ ಹಾಯುತ್ತ ಅವರ ಆಕ್ರೋಶವನ್ನು ತಂಪಿಸಿದರು. ತುಂಬ ಕೌಶಲದಿಂದ ವಿಷಯಾಂತರಿಸಿ ಸಭಾ ನಡವಳಿಕೆಯ ಧಾಟಿಯನ್ನೇ ಬದಲಾಯಿಸಿದರು. Filibuster ತಂತ್ರ! ಹೀಗೆ ಬಿರುಗಾಳಿಯಾಗಿ ಬಡಿದದ್ದು ಮೆಲುಗಾಳಿಯಾಗಿ ಮರೆ ಆಯಿತು.

ಮುಂದೊಂದು ದಿನ (೧೯೭೦) ದೇಜಗೌ ನೇರ ನನ್ನ ಕೊಠಡಿಗೆ ಬಂದು ಎಂದಿನ ಸರಳತೆ ಆತ್ಮೀಯತೆಯಿಂದ ಮಾತು ತೊಡಗಿದರು, ನಾನು ಕುಲಪತಿ ಆಗಿದ್ದೇನೆಂದರೆ ನೀವೇ ಆಗಿದ್ದೀರೆಂದು ಭಾವಿಸಿ. ಯಾವುದೇ ಅಳುಕು ಆತಂಕ ಬೇಡ. ಈಗ ನಾನು ಬಂದಿರುವುದು ಬೇರೆ ಒಂದು ವಿಷಯ ನಿಮ್ಮ ಜೊತೆ ಮಾತಾಡಲು. ನಿಮ್ಮೆಲ್ಲರ ಈ ನಿಃಸ್ವಾರ್ಥ ಪರಿಶ್ರಮದಿಂದ ವಿಶ್ವವಿದ್ಯಾನಿಲಯದ ಕೀರ್ತಿ ಪ್ರತಿಷ್ಠೆ ವರ್ಧಿಸಿವೆ. ಆದರೆ ನಿಮ್ಮ ಸೇವೆಗೆ ನಾವು ಕೊಡುತ್ತಿರುವ ವೇತನ ತೀರ ಕಡಿಮೆ. ಸರಕಾರೀ ಸೇವೆಯಿಂದ ಎರವಲಾಗಿ ಬಂದಿರುವ ನಿಮಗೂ ಪ್ರಹ್ಲಾದರಾಯರಿಗೂ ನಾವು ಈಗ ಚಾಲ್ತಿಯಲ್ಲಿರುವ ವಿಧಿನಿಯಮ ಮೀರಿ ಹೆಚ್ಚಿಗೆ ಏನೂ ಕೊಡುವಂತಿಲ್ಲ. ಸಂಪಾದಕರನ್ನು ಕನಿಷ್ಠ ಪಕ್ಷ ಯುಜಿಸಿ ಪ್ರವಾಚಕರ ಅಂತಸ್ತಿನಲ್ಲಿ ಸ್ಥಾಪಿಸಬೇಕೆಂಬುದು ನನ್ನ ಆಶಯ. ಇದಕ್ಕೆ ಒಂದು ಹಾದಿ ಯೋಚಿಸಿದ್ದೇನೆ. ಈ ಹುದ್ದೆಗಳನ್ನು ಯುಜಿಸಿ ರೀಡರರ ವೇತನ ಶ್ರೇಣಿಯಲ್ಲಿ ಜಾಹೀರಾತು ಮಾಡುತ್ತೇವೆ. ಆಗ ನೀವು ಇದಕ್ಕೆ ಅರ್ಜಿ ಸಲ್ಲಿಸಬೇಕು. ನಿಮ್ಮನ್ನು ನಾವು ಅಧಿಕೃತವಾಗಿ ನೇಮಿಸುತ್ತೇವೆ. ವಿಶ್ವವಿದ್ಯಾನಿಲಯದ ನೌಕರರೊಡನೆ ಕುಲಪತಿ ಮಾತಾಡಿದ ಪರಿ ಇದು.
ಹಿಂದೊಮ್ಮೆ ಬೆಂಗಳೂರಿನಲ್ಲಿ. . .
ನನ್ನ ಮಾತನ್ನು ನೀವು ನಂಬಬಹುದು, ಅದರಲ್ಲಿ ವಿಷಾದದ ಛಾಯೆ ಇತ್ತು.
ಆ ಅರ್ಥದಲ್ಲಿ ನಾನು ಹೇಳಲಿಲ್ಲ. ನನ್ನ ಅರ್ಥ ಬೇರೆ. ಈಗ ನಾನು ಅರ್ಜಿ ಹಾಕುತ್ತೇನೆಂದು ಇಟ್ಟುಕೊಳ್ಳಿ. ವೇತನ ಶ್ರೇಣಿ ಹಿರಿದೆಂಬ ಕಾರಣದಿಂದ ಸಾಕಷ್ಟು ಇತರ ಅರ್ಜಿಗಳು ಬಂದೇ ಬರುತ್ತವೆ. ಆ ಅಭ್ಯರ್ಥಿಗಳ ಪೈಕಿ ಅನೇಕರಿಗೆ ನನಗಿಂತ ಹೆಚ್ಚಿನ ಸಿದ್ಧಿಗಳೂ ಪ್ರಭಾವ ಪರಿವೇಷಗಳೂ ಇರುವುದು ಸಾಧ್ಯ. ಇನ್ನು ಜಾತಿ, ರಾಜಕೀಯ, ಸಂಪರ್ಕ ಒಂದೊಂದರಲ್ಲಿಯೂ ನನ್ನದು ತೀರ ಅನನುಕೂಲಕರ ಸ್ಥಾನ. ಪರಿಸ್ಥಿತಿ ಹೀಗಿರುವಾಗ ನೀವು ನಿಮ್ಮ ಮಾತು ಉಳಿಸಿಕೊಳ್ಳುವುದಕ್ಕಾಗಿ ಸರ್ಕಾರದ ಇಲ್ಲವೇ ಸಾರ್ವಜನಿಕರ ಟೀಕೆ ಆಕ್ರೋಶಗಳಿಗೆ ಗುರಿ ಆಗಬೇಕಾದೀತು, ಅದು ನನಗೆ ಸಮ್ಮತವಿಲ್ಲ. ಇನ್ನು ಸಂಬಳ? ಈಗ ಸಿಕ್ಕುತ್ತಿರುವುದು ನೆಮ್ಮದಿ ಬದುಕಿಗೆ ಧಾರಾಳ ಸಾಕು?
ಇದೆಲ್ಲ ವಿಚಾರ ಹಾಗಿರಲಿ. ಈ ವೃತ್ತಿ ನಿಮಗೆ ಪ್ರಿಯವಾಗಿದೆಯೇ? ಇಲ್ಲಿಯ ಸೇವೆ ಒಪ್ಪಿಗೆ ಆಗಿದೆಯೇ?
ಅತ್ಯಂತ ಪ್ರಿಯವಾಗಿದೆ. ನಾನು ತುಂಬ ಸಂತೋಷಿ ಆಗಿದ್ದೇನೆ.
ಹಾಗಾದರೆ ಉಳಿದ ಚಿಂತೆ ನನಗೆ ಬಿಡಿ. ಜಾಹೀರಾತು ಪ್ರಕಟವಾದಾಗ ಅರ್ಜಿ ಸಲ್ಲಿಸಿ.

ಸಂಪಾದಕರಾಗಿದ್ದವರು ನಾವು ನಾಲ್ವರು. ಕೆ.ಟಿ ವೀರಪ್ಪ ವಿಶ್ವವಿದ್ಯಾನಿಲಯದ ನೌಕರರೇ ಆಗಿದ್ದುದರಿಂದ ಅವರನ್ನು ಉನ್ನತ ಶ್ರೇಣಿಯಲ್ಲಿ ನೆಲೆಗೊಳಿಸುವುದು ಸುಲಭವಾಗಿತ್ತು. ಎನ್ ಪ್ರಹ್ಲಾದರಾವ್ ನನ್ನಂತೆ ಸರ್ಕಾರಿ ಸೇವೆಯಿಂದ ಎರವಲಾಗಿ ಬಂದವರು. ಎಚ್.ಎಸ್ ಕೃಷ್ಣಸ್ವಾಮಿ ಅಯ್ಯಂಗಾರ್ಯರು (ಎಚ್ಚೆಸ್ಕೆ) ವಿಶ್ವವಿದ್ಯಾನಿಲಯದ ನೌಕರರೇ ಆಗಿದ್ದರೂ ಅವರ ಸೇವೆ ವಿಶ್ವವಿದ್ಯಾನಿಲಯಕ್ಕೆ ಒದಗಿದ್ದು ತುಸು ಅಸಾಧಾರಣ ಸನ್ನಿವೇಶದಲ್ಲಿ. ತಾವು ಪ್ರಾಂಶುಪಾಲರಾಗಿದ್ದ ಒಂದು ಖಾಸಗಿ ಕಾಲೇಜಿನ ವ್ಯವಸ್ಥಾಪಕರ ಜೊತೆ ನೈತಿಕ ಕಾರಣಗಳಿಂದ ಎದುರಾದ ಭಿನ್ನಾಭಿಪ್ರಾಯದ ಕಾರಣವಾಗಿ ಅವರು ಇಳಿವಯಸ್ಸಿನಲ್ಲಿ ವೃತ್ತಿಗೆ ರಾಜೀನಾಮೆ ನೀಡಿ ಹೊರಬಂದು ತಮ್ಮ ವ್ಯಕ್ತಿತ್ವದ ಘನತೆ ಗೌರವ ಉಳಿಸಿಕೊಂಡಿದ್ದರು. ಇದು ತಿಳಿದೊಡನೆ ದೇಜಗೌ ಮತ್ತು ಹಾಮಾನಾ ಅವರನ್ನು ಸಂಪರ್ಕಿಸಿ ನಮ್ಮ ಯೋಜನೆಗೆ ಮಾನವಿಕ ಸಂಪಾದಕರಾಗಿ ಬರಲು ಆಹ್ವಾನಿಸಿ ಸಫಲರಾಗಿದ್ದರು.

ಜಾಹೀರಾತು ಪ್ರಕಟವಾಯಿತು. ಎಲ್ಲರೂ ಅರ್ಜಿ ಸಲ್ಲಿಸಿದೆವು. ಆಯ್ಕೆ ಭೇಟಿ ಕುಲಪತಿಗಳ ಕೊಠಡಿಯಲ್ಲಿ ನಡೆಯುವುದು ನಿಯಮ. ಆದರೆ ವಿಶ್ವಕೋಶದ ವಿಚಾರದಲ್ಲಿ ದೇಜಗೌ ಅದನ್ನು ಮುರಿದಿದ್ದರು. ನಮ್ಮ ಸಂಸ್ಥೆಯ ನಿರ್ದೇಶಕರ ಕೊಠಡಿಗೇ ಆಯ್ಕೆ ಸಮಿತಿ ಬಂದಿತು. ಸಮಿತಿಯ ಮುಂದು ನಾನು ಹಾಜರಾದೆ. ಕುಲಪತಿ ಹೇಳಿದರು, ನಿಮ್ಮನ್ನು ನಾವೇನು ಪ್ರಶ್ನೆ ಕೇಳುವುದು! ಹೊಸ ಶ್ರೇಣಿಯಲ್ಲಿ ನಿಮಗೆ ಎಷ್ಟು ಸಂಬಳ ದೊರೆಯಬೇಕು?
ಅದು ನಿಮಗೆ ಸೇರಿದ್ದು. ಈಗ ದೊರೆಯುತ್ತಿರುವುದಕ್ಕಿಂತ ಕಡಿಮೆ ಆಗದಿದ್ದರೆ ಸಾಕು.
ನೀವೇನಾದರೂ ನಮ್ಮನ್ನು ಕೇಳುವುದಿದೆಯೇ?
ಇಲ್ಲ.
ನಮ್ಮ ನೇಮಕಾತಿ ವೇತನಶ್ರೇಣಿ ಎಲ್ಲವೂ ಕುಲಾಧಿಪತಿಗಳ ಮಂಜೂರು ಪಡೆದು ಕ್ರಮೀಕೃತವಾದ (೧೯೭೧) ಬಳಿಕ ಒಂದು ದಿನ ದೇಜಗೌ ಹೇಳಿದರು, ನೀವು ಅಂದು ತರ್ಕಿಸಿದ ತೆರನಾಗಿಯೇ ಹಲವಾರು ಅಡ್ಡಿ ಆಡಚಣೆಗಳು ಎದುರಾದುವು. ಅವನ್ನೆಲ್ಲ ನಾನೇ ಸ್ವತಃ ಹೋಗಿ ನಿವಾರಿಸಬೇಕಾಯಿತು. ಇನ್ನು ಕನ್ನಡದ ಕೆಲಸ ಸಲೀಸಾಯಿತು.

೧೯೭೦ರ ಕೊನೆಯ ತಿಂಗಳೆಂದು ನೆನಪು. ಮೈಸೂರು ನಗರಭಿವೃದ್ಧಿ ವಿಶ್ವಸ್ಥಮಂಡಳಿ ಸಿದ್ಧ ಗೃಹಗಳ ವಿಕ್ರಯಕ್ಕೆ ಅರ್ಜಿ ಕರೆದು ಜಾಹೀರಾತು ಪ್ರಕಟಿಸಿತು. ನಾನೊಂದು ಅರ್ಜಿ ಸಲ್ಲಿಸಿದೆ. ಆದರೆ ಪ್ರಭಾವ? ಹಾ.ಮಾ ನಾಯಕರು ಅವರಾಗಿಯೇ ನನ್ನನ್ನು ಮಂಡಳಿಯ ಅಧ್ಯಕ್ಷರಲ್ಲಿಗೆ ಕರೆದೊಯ್ದು, ಇವರು ಕನ್ನಡದ ಕೆಲಸ ಮಾಡುತ್ತಿರುವವರು. ಇವರಿಗೆ ನೀವೊಂದು ಮನೆ ಮಂಜೂರು ಮಾಡಿದರೆ ಇವರ ಮನ ನೆಮ್ಮದಿ ಆಗುತ್ತದೆ. ಆಗ ಕನ್ನಡದ ಕೆಲಸ ಇನ್ನೂ ಸುಸೂತ್ರವಾಗುತ್ತದೆ ಎಂದರು. ದೇಜಗೌ ಅಧ್ಯಕ್ಷರಿಗೆ ಕಾಗದ ಬರೆದರು ಮತ್ತು ಅವರ ಜೊತೆ ದೂರವಾಣಿ ಮಾತಾಡಿದರು: ತನಗೆ ಅಧ್ಯಕ್ಷರು ನೀಡಬಹುದಾದ ವೈಯಕ್ತಿಕ ಸಹಾಯವೆಂದರೆ ನನಗೆ (ಜಿಟಿಎನ್) ಒಂದು ಮನೆ ಮಂಜೂರು ಮಾಡುವುದು ಎಂದರು.

ಮನೆ ಮಂಜೂರಾಯಿತು. ಆದರೆ ಅದನ್ನು ಸ್ವಾಧೀನ ಪಡೆಯಲು ನಾನು ಒಡನೆ ರೂ ೩೫,೦೦೦ವನ್ನು ಮಂಡಳಿಗೆ ಪಾವತಿಸಬೇಕಾಗಿತ್ತು. ಕುಲಪತಿಗಳು ಹಲವಾರು ಪ್ರತಿಬಂಧಕ ಜಾಲಗಳನ್ನು ತುಂಡರಿಸಿ ಅಷ್ಟೂ ಮೊಬಲಗನ್ನು ವಿಶ್ವವಿದ್ಯಾನಿಲಯದಿಂದ ಸಾಲವಾಗಿ ಒದಗಿಸಿ ನನ್ನನ್ನು ಈ ಆರ್ಥಿಕ ಗಂಡಾಂತರದಿಂದ ಪಾರುಮಾಡಿ ಗೃಹಾಧಿಪತಿಯಾಗಿಸಿದರು.

ಒಂದು ದಿನ ಕಚೇರಿಗೆ ನಡೆದು ಹೋಗುತ್ತಿದ್ದೆ. ನನ್ನ ಹಿಂದಿನಿಂದ ಕಾರಿನಲ್ಲಿ ಬಂದ ದೇಜಗೌ, ಒಡೆದ ಒಂದು ಲಕ್ಕೋಟೆಯನ್ನು ನನಗೆ ಕೊಟ್ಟರು, ಈ ಕಾಗದ ಓದಿ ಸಾವಕಾಶವಾಗಿ, ತಲೆ ಬಿಸಿ ಆಗದಿರಲಿ. ಬರೆದವರ ಸ್ವಭಾವ ನಿಮಗೂ ನನಗೂ ಚೆನ್ನಾಗಿ ಗೊತ್ತಿದೆ. ವಿಷಯವೇನೆಂದು ವಿಮರ್ಶಿಸಿ ಅವರಿಗೆ ನಯವಾಗಿ ಉತ್ತರ ಬರೆಯುವಂತೆ ನಾಯಕರಿಗೆ ಹೇಳಿ. ಸಂಪಾದಕ ಮಂಡಳಿಯ ಗೌರವ ಸದಸ್ಯರೂ ನಾಡಿನ ಒಬ್ಬ ಪ್ರತಿಷ್ಠಿತರೂ ಆಗಿದ್ದ ಶಿವರಾಮ ಕಾರಂತರು ದೇಜಗೌ ಅವರಿಗೆ ಬರೆದಿದ್ದ ಸುದೀರ್ಘ ಇಂಗ್ಲಿಷ್ ಪತ್ರದ ಸಾರವಿಷ್ಟು:

ವಿಶ್ವಕೋಶದ ಸಂಪಾದಕವರ್ಗ ನಯವಂಚಕರ, ಕಡು ಮೋಸಗಾರರ ಮತ್ತು ಹಣ ಲೂಟಿಗಾರರ ದುಷ್ಟಕೂಟವೆಂದು ತೋರುತ್ತದೆ. ಒಬ್ಬ ಗಣ್ಯ ಲೇಖಕರ ಜೊತೆ ಈ ಕೂಟ ನಡೆದುಕೊಂಡಿರುವ ರೀತಿಯೇ ಇದಕ್ಕೆ ಸಾಕ್ಷಿ. ನಿರ್ದಿಷ್ಟ ವಿಷಯ ಕುರಿತು ಲೇಖನ ಬೇಕೆಂದು ಸಂಪಾದಕರು ಇವರನ್ನು ಕೇಳಿಕೊಂಡರು. ಇವರು ಸಕಾಲದಲ್ಲಿ ಅದನ್ನು ಕಳಿಸಿದರು. ಅದಕ್ಕೆ ಮಾರೋಲೆಯಾಗಿ ಬಂದ ಅಧಿಕೃತ ರಶೀತಿಯಲ್ಲಿನಿಮ್ಮ ಲೇಖನವನ್ನು ಪ್ರಕಟಿಸಲು ಸ್ವೀಕರಿಸಲಾಗಿದೆ ಎಂಬ ಷರಾ ಇದೆ. ಆದರೆ ಪ್ರಕಟಿತ ಲೇಖನ ಮಾತ್ರ ಬೇರೆಯವರ ಹೆಸರಿನಲ್ಲಿದೆ. ಇದರ ಅರ್ಥವೇನು? ನಿಜ ಲೇಖಕರಿಗೆ ಸಲ್ಲಬೇಕಾದ ಸಂಭಾವನೆಯನ್ನು ಸಂಪಾದಕರು ಈ ಕಾಲ್ಪನಿಕ ಹೆಸರಿಗೆ ವರ್ಗಾಯಿಸಿ ಹಣ ಲಪಟಾಯಿಸಿದರೆಂದು ತಾನೇ? ಇದು ನನ್ನ ಗಮನಕ್ಕೆ ಬಂದಿರುವ ಒಂದು ನಿದರ್ಶನ ಮಾತ್ರ. ಇಂಥ ಕುಕೃತ್ಯಗಳು ಇನ್ನೆಷ್ಟು ನಡೆದಿವೆಯೋ ಊಹಿಸಲಾರೆ.

ನಾನು ಕೋಪದಿಂದ ನಿಗಿ ನಿಗಿ ಕೆಂಡವಾದೆ. ಪ್ರಾಮಾಣಿಕತೆ ಯಾವೊಬ್ಬ ವ್ಯಕ್ತಿಯ ಏಕೈಕ ಸೊತ್ತಾಗಿರಬೇಕಾಗಿಲ್ಲ. ಯಾವುದೇ ಸಮಸ್ಯೆಗೆ ಎರಡು ಮುಖಗಳಿರುವುವು. ಈಗ ಒಂದನ್ನು ಮಾತ್ರ, ಅದೂ ಅಪೂರ್ಣವಾಗಿ ನೋಡಿರುವ ಕಾರಂತರು ನಮ್ಮನ್ನು ವಿಚಾರಿಸುವ ಸೌಜನ್ಯವನ್ನೂ ತೋರಿಸದೆ ನಮಗೆ ದುಷ್ಟಕೂಟವೆಂಬ ಬಿರುದು ದಯಪಾಲಿಸಿದ್ದು ಅತ್ಯಂತ ದುರದೃಷ್ಟಕರ. ಉನ್ನತ ಸ್ಥಾನದಲ್ಲಿರುವವರ ಉದ್ಧತ ವರ್ತನೆಯನ್ನು ನೇರ ಪ್ರಹಾರದಿಂದ ಅಮೂಲಾಗ್ರ ಉತ್ಪಾಟಿಸಿದ ಹೊರತು ಕೆಳಗಿನವರಿಗೆ ಉಳಿಗಾಲವಿಲ್ಲವೆಂಬುದು ಸೈನ್ಯದ ಒಂದು ಅಲಿಖಿತ ವಿಧಿ.

ಕಚೇರಿಯಲ್ಲಿ ಕಡತಗಳನ್ನು ಶೋಧಿಸಿದಾಗ ತಿಳಿದು ಬಂದ ಸಂಗತಿ ಇದು: ಗಣ್ಯ ಲೇಖಕರನ್ನು ಲೇಖನ ಬೇಕೆಂದು ಕೇಳಿಕೊಂಡದ್ದೇ ಅವರಿಂದ ಅದು ಸಕಾಲದಲ್ಲಿ ಬಂದದ್ದೂ ನಿಜ. ವಿಶ್ವಕೋಶದ ಆರಂಭದ ಆ ದಿನಗಳಲ್ಲಿಲೇಖನ ತಲಪಿದೆ ಎಂದು ಬರೆಯುವುದರ ಬದಲಾಗಿ ಅನನುಭವದ ಮತ್ತು ಪ್ರಾಯಶಃ ಅತ್ಯುತ್ಸಾಹದ ಕಾರಣವಾಗಿ ನಿಮ್ಮ ಲೇಖನವನ್ನು ಪ್ರಕಟಿಸಲು ಸ್ವೀಕರಿಸಲಾಗಿದೆ ಎಂದು ಬರೆದು ಕಳಿಸಿದ್ದೂ ನಿಜ. ಆದರೆ ಮುಂದೆ ಯಥಾಕಾಲದಲ್ಲಿ ಆ ಲೇಖನವನ್ನು ಸಂಬಂಧಿತ ಸಂಪಾದಕರು (ಎಚ್ಚೆಸ್ಕೆ) ಪರಿಷ್ಕರಿಸಲು ತೆಗೆದುಕೊಂಡಾಗ ಅದು ಪ್ರಕಟಣೆಗೆ ಪೂರ್ತಿ ಅಯೋಗ್ಯವೆಂಬುದು ಸ್ಪಷ್ಟವಾಯಿತು: ಪರಿಕಲ್ಪನೆಯಲ್ಲಿ ಅಸ್ಪಷ್ಟತೆ, ಭಾಷಾಸ್ಖಾಲಿತ್ಯ ಮತು ನೀರಸ ಶೈಲಿ ಮುಪ್ಪುರಿಗೊಂಡು ಅದೊಂದು ಸರ್ಕಾರೀ ಗಜೆಟ್ ಬರೆಹದಂತಿತ್ತು! ಆ ಕ್ಷೇತ್ರದಲ್ಲಿರುವ ತಜ್ಞರ ಅಭಿಪ್ರಾಯವೂ ಇದೇ ಆಗಿತ್ತು. ಹೀಗಾಗಿ ಅದನ್ನು ಪೂರ್ತಿಯಾಗಿ ಕೈಬಿಟ್ಟು ಅದೇ ವಿಷಯದ ಮೇಲೆ ಬೇರೆ ಒಬ್ಬರಿಂದ ಲೇಖನ ತರಿಸಿಕೊಂಡು ಇದನ್ನು ಪ್ರಕಟಿಸಲಾಗಿತ್ತು. ಮತ್ತು ಸಹಜವಾಗಿ ಈ ಎರಡನೆಯ ಲೇಖಕರ ಹೆಸರನ್ನು ಲೇಖನದ ಅಡಿಯಲ್ಲಿ ಕಾಣಿಸಲಾಗಿತ್ತು. ಮೊದಲಿನ ಲೇಖನಕ್ಕೂ ತರುವಾಯದ ಲೇಖನಕ್ಕೂ ಶೀರ್ಷಿಕೆಯಲ್ಲಿ ಮಾತ್ರ ಸಾಮ್ಯವಿತ್ತೇ ವಿನಾ ವಿಷಯ ವಿಸ್ತಾರದಲ್ಲಾಗಲೀ ನಿರೂಪಣಾ ಕ್ರಮದಲ್ಲಾಗಲೀ ಕನ್ನಡ ಶೈಲಿಯಲ್ಲಾಗಲೀ ಏನೂ ಹೋಲಿಕೆ ಇರಲಿಲ್ಲ. ನಿಜ, ಕಾನೂನಿನ ಸಂಕುಚಿತ ದೃಷ್ಟಿಯಲ್ಲಿ ನಾವು ಅಪರಾಧವೆಸಗಿದ್ದೆವು. ಆದರೆ ನೀತಿಯ ಪಾತಳಿಯಲ್ಲಿ, ಮಿಗಿಲಾಗಿ ವಿಶ್ವಕೋಶದ ಹಿರಿಮೆ ಕಾಯ್ದಿಡುವುದರಲ್ಲಿ, ಖಂಡಿತ ಪಥಚ್ಯುತರಾಗಿರಲಿಲ್ಲ.

ಬಡವನಾದರೂ ಆತ್ಮ ಪ್ರತ್ಯಯವನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದ ಸ್ಯಾಮ್ಯುಯೆಲ್ ಜಾನ್ಸನ್ ಎಂಬ ಮಹಾವಿದ್ವಾಂಸ ಧನೋನ್ಮತ್ತ ಲಾರ್ಡ್ ಚೆಸ್ಟರ್ಫೀಲ್ಡ್ನಿಗೆ ಬರೆದ ವಿಖ್ಯಾತ ಪತ್ರದ ಧಾಟಿಯಲ್ಲಿ ನಾಯಕರು ಆ ಪ್ರತಿಷ್ಠಿತರಿಗೆ ಮಾರೋಲೆ ಬರೆದು ನಮ್ಮನ್ನುಅಪವಾದ ಮುಕ್ತರನ್ನಾಗಿಸಿದರು.

(ಮುಂದುವರಿಯಲಿದೆ)

6 comments:

  1. great piece janarendare heeheye !
    -- MP joshy.

    ReplyDelete
  2. ಆಗಿನ ಉಪಕುಲಪತಿಗಳು ಮಾಡಿರಬಹುದಾದ ಘನಕಾರ್ಯಗಳಲ್ಲಿ ಜಿಟಿನಾ ಅವರನ್ನು ಕರೆಸಿದ್ದು ಒಂದೆಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು..

    ReplyDelete
  3. enjoyed reading. GTNA is always like ADIKE MARADA SALAKE.No compromise over [principles , Hats off .continue posting .

    ReplyDelete
  4. GTNA DEJAGOU sambandha vishishta.
    Deagou orva asadharana kanasugara ,practical chinthaka.Gunavannu pratibheyannu guruthisi thodagisuva gunapakshapathi, samsthe belesida nethara.
    - M Prabhakara joshy.

    ReplyDelete
  5. ಶ್ರೀಮಾನ ಅಶೋಕರಿಗೆ ವಂದೇಮಾತರಮ್.
    ೧೯೭೧ ಜನವರಿ ೧೦/೧೧ ರಂದು ಇರಬೇಕು.(ಅದೇ ಒಂದೆರಡು ದಿನಗಳಲ್ಲಿ ತಾ೧೨.೧.೧೯೭೧ - ಬೆಂಗಳೂರಿನಲ್ಲಿ ನನ್ನ ಹಿರಿ ಮಗ ಮುರಳೀಧರನ ಜನನ) ಬೆಂಗಳೂರಿನ ಗಾಂಧಿನಗರದ ಗುಂಡ್ಮಿ ರಾಮಕೃಷ್ಣ ಐತಾಳರ ಮನೆಯಲ್ಲಿ ವೀ.ಸಿ.ಯವಾರಿಗೆ ಔತಣ. ಸಂದರ್ಭ: ವೀ.ಸಿ. ಯವರ ಮಗಳು ಭಾವಿ ಮದುಮಗಳು. ನಿಮ್ಮ ತಂದೆಯವರೂ ಇದ್ದಂತೆ ನೆನಪು. ದೆ.ಜ.ಗೌ. ಕೂಡಾ ಬರುವವರಿದ್ದರು. ಎರಡು ಗಂಟೆ ತನಕ ಬರಲಿಲ್ಲ. ಎಲ್ಲರ ಒತ್ತಾಯದ ಮೇರೆಗೆ ವೀ.ಸಿ. ಯವರು ಊಟಕ್ಕೆ ಒಪ್ಪಿಕೊಂಡರು. ದೇ.ಜ.ಗೌ. ಸುಮಾರು ಮೂರು ಗಂಟೆಯ ಹೊತ್ತಿಗೆ ಬಂದರು. ಅವರು ವಿಶ್ವಕೋಶದ ಆರ್ಥಿಕ ನೆರವಿಗಾಗಿ ವಿದ್ಯಾಮಂತ್ರಿ ಕೆ.ವಿ. ಶಂಕರೆ ಗೌಡರನ್ನು ಭೇಟಿಯಾಗುವುದಿತ್ತು. ಬೇಟಿಯ ನಂತರ ಗೌಡರು :ಹೇಗೂ ಬಂದರಿದ್ದೀರಿ. ಒಮ್ಮೆ ಆರ್ಥಿಕ ಮಂತ್ರಿ ರಾಮಕೃಷ್ಣ ಹೆಗ್ದೆಯವರನ್ನು ಬೇಟಿಯಾಗೊಣ ಎಂದರು. ಹೆಗ್ಡೆಯವರು ವಿಷಯ ತಿಳಿದು ಕೊಂಡು "ನೀವು ಕೇಳಿದ್ದು ರೂ.೯೦ ಲಕ್ಹ. ನಮ್ಮಲ್ಲಿ ಇನ್ನೊಂದು ಹತ್ತು ಲಕ್ಷ ಇದೆ. ಅದನ್ನೂ ಕೇಟಾಯಿಸುತ್ತೇನೆ. ಈ ಕೋರಿಕೆಯನ್ನು ಪುನರ್ರಚನೆ ಮಾಡಿ ಕಳುಹಿಸಿ ಎಂದರು. ಏನೊಂದು ಔದಾರ್ಯ"! ಎಂದರು ಗೌಡರು. ಅದಕ್ಕೆ ವೀ.ಸಿ. ಯವರು. "ಅಲ್ಲಪ್ಪ ಅದು, ಕನ್ನಡದ ಅದೃಷ್ಟ. ನಿನ್ನ ಪ್ರಾಮಾಣಿಕತನಕ್ಕೆ, ಕಷ್ಟ ನಿರತೆಗೆ ಅವರಿಂದ ಬಂದ ಸ್ಪಂದನೆ.ಈ ವಿಶ್ವಾಸವನ್ನು ಕಳೆದುಕೊಳ್ಳಬೇಡ." ಎಂದರು.

    ReplyDelete
  6. Thumbs chennagide.
    G T n.ಅದ್ಯಯನ ಸಂಸ್ಥೆಯ ಒಳ ಅಂಗಳದಲ್ಲಿ ಇತರ ಮೂವರೊಡನೆ ನಿಂತ ಬಣ್ಣದ ಫೋಟೊ ದಲ್ಲಿ ಹಸಿರುಹುಲ್ಲು ಆಲಂಕಾರಿಕ ಗಿಡ ಯಾವುದೂ ಈಗ ಇಲ್ಲ. ಕಳೆದ ವಾರ ಹೋದಾಗ ನೋಡಿದೆ..

    ReplyDelete