03 December 2013

ವಿಶ್ವಕೋಶದ ಪ್ರಗತಿ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ ವಿ-ಧಾರಾವಾಹಿಯ ಕಂತು ಮೂವತ್ಮೂರು
ಅಧ್ಯಾಯ ಎಪ್ಪತ್ತೆರಡು  (ಮೂಲದಲ್ಲಿ ೪೪)
                   
ವಿಶ್ವಕೋಶ ಸಂಪುಟಗಳ ಪ್ರಕಟಣೆಯ ಮುನ್ನಡೆಯನ್ನು ಮುಂದಿನ ಯಾದಿಯಲ್ಲಿ ನೋಡಬಹುದು: ಒಂದನೆಯ ಸಂಪುಟ ‘ಅ’ದಿಂದ ‘ಆರ್ಸೆನಿಕ್’ ವರೆಗೆ, ಡೆಮಿ ಚತುರ್ಥಾಕಾರ, ೯೬೭ ಸಚಿತ್ರ ಪುಟಗಳು ಮತ್ತು ೧೦  ವರ್ಣಫಲಕಗಳು, ೧೯೬೯.

ಎರಡನೆಯ ಸಂಪುಟ ‘ಆಲ’ದಿಂದ ‘ಎರಟಾಸ್ಥೆನೀಸ್’ ವರೆಗೆ, ೯೬೪ ಸಚಿತ್ರ ಪುಟಗಳು ಮತ್ತು ೧೪ ವರ್ಣಫಲಕಗಳು, ೧೯೭೦. ಮೂರನೆಯ ಸಂಪುಟ ‘ಎರಟೋ’ದಿಂದ ‘ಕರೀಲಿಯ’ದ ವರೆಗೆ, ೯೬೪ ಸಚಿತ್ರ ಪುಟಗಳು ಮತ್ತು ೧೩ ವರ್ಣಫಲಕಗಳು, ೧೯೭೧. ನಾಲ್ಕನೆಯ ಸಂಪುಟ ‘ಕರೀಷಕ’ದಿಂದ ‘ಕೂಡಲ ಸಂಗಮ’ದ ವರೆಗೆ, ೯೬೦ ಸಚಿತ್ರ ಪುಟಗಳು ಮತ್ತು ೧೬ ವರ್ಣಫಲಕಗಳು ೧೯೭೨. ಐದನೆಯ ಸಂಪುಟ ‘ಕೂಡಲಿ’ಯಿಂದ ‘ಗಣ’ದ ವರೆಗೆ, ೯೬೦ ಸಚಿತ್ರ ಪುಟಗಳು ಮತ್ತು ೧೩ ವರ್ಣಫಲಕಗಳು, ೧೯೭೨. ಆರನೆಯ ಸಂಪುಟ ‘ಗಣಕ’ದಿಂದ ‘ಗ್ವಾಡ್ಲೂಪ್’ ವರೆಗೆ, ೯೫೬ ಸಚಿತ್ರ ಪುಟಗಳು ಮತ್ತು ೧೦ ವರ್ಣಫಲಕಗಳು, ೧೯೭೩. ಏಳನೆಯ ಸಂಪುಟ ‘ಗ್ವಾನಾಕೋ’ದಿಂದ ‘ಜಲಸಸ್ಯಗಳು’ ವರೆಗೆ, ೯೫೪ ಸಚಿತ್ರ ಪುಟಗಳು ಮತ್ತು ೮ ವರ್ಣಫಲಕಗಳು ೧೯೭೪. ಎಂಟನೆಯ ಸಂಪುಟ ‘ಜಲಾಂತರ್ಗಾಮಿ’ಯಿಂದ ‘ಡೇಲಿಯ’ದ ವರೆಗೆ, ೯೫೦ ಸಚಿತ್ರ ಪುಟಗಳು ಮತ್ತು ೮ ವರ್ಣಫಲಕಗಳು, ೧೯೭೪. ಒಂಬತ್ತನೆಯ ಸಂಪುಟ ‘ಡೇವಿಡ್’ನಿಂದ ‘ಧ್ವನಿಶೋಧಕ’ದ ವರೆಗೆ, ೧೦೦೪ ಸಚಿತ್ರ ಪುಟಗಳು ಮತ್ತು ೫ ವರ್ಣಫಲಕಗಳು, ೧೯೭೭. ಹತ್ತನೆಯ ಸಂಪುಟ ‘ನ’ದಿಂದ ‘ಪಾರಿಜಾತ’ದ ವರೆಗೆ, ೯೮೨ ಸಚಿತ್ರ ಪುಟಗಳು ಮತ್ತು ೧೧ ವರ್ಣಫಲಕಗಳು, ೧೯೮೦. ಹನ್ನೊಂದನೆಯ ಸಂಪುಟ ‘ಪಾರಿವಾಳ’ದಿಂದ ‘ಬಳ್ಳಿಗಾವೆ’ ವರೆಗೆ, ೯೭೨ ಸಚಿತ್ರ ಪುಟಗಳು ಮತ್ತು ೫ ವರ್ಣಫಲಕUಳು, ೧೯೮೩. ಹನ್ನೆರಡನೆಯ ಸಂಪುಟ ‘ಬಾಂಗ್ಲಾದೇಶ’ದಿಂದ ‘ಮಣಿಪುರ’ದ ವರೆಗೆ, ೧೦೩೮ ಸಚಿತ್ರ ಪುಟಗಳು ಮತ್ತು ೫ ವರ್ಣಫಲಕಗಳು, ೧೯೮೬. ಹದಿಮೂರನೆಯ ಸಂಪುಟ ‘ಮಣಿಪುರಿ’ಯಿಂದ ‘ರಾಷ್ಟ್ರಪತಿ’ ವರೆಗೆ, ೯೮೮ ಸಚಿತ್ರ ಪುಟಗಳು ಮತ್ತು ೫ ವರ್ಣಫಲಕಗಳು, ೧೯೯೮. ಹದಿನಾಲ್ಕನೆಯ (ಮತ್ತು ಕೊನೆಯ) ಸಂಪುಟ ‘ರಾಷ್ಟ್ರೀಯ ಉದ್ಯಾನ’ದಿಂದ ‘ಳ’ದ ವರೆಗೆ, ೧೨೭೩ ಸಚಿತ್ರ ಪುಟಗಳು ಮತ್ತು ೬ ವರ್ಣಫಲಕಗಳು, ೨೦೦೪.


೧೯೭೪ರ ತನಕ ಸ್ಥಿರಗತಿಯಲ್ಲಿ ಸಂಪುಟಗಳು ಹೊರಬಂದುವು. ಮುಂದಿನ ವರ್ಷಗಳಲ್ಲಿ ಪ್ರಗತಿ ಕ್ರಮೇಣ ಕುಂಠಿತವಾಗುತ್ತ ೧೩ನೆಯ ಮತ್ತು ೧೪ನೆಯ (ಇದು ಪ್ರಸಕ್ತ ಯೋಜನೆ ಪ್ರಕಾರ ಕೊನೆಯದು) ಸಂಪುಟಗಳು ತೀರ ಮಂದಗತಿಯಲ್ಲಿ ಪ್ರಕಟವಾದುವು, ಏಕೆ? ವಿಶ್ವವಿದ್ಯಾನಿಲಯದ ಆಡಳಿತೆಯಲ್ಲಿ ಈ ಪ್ರತಿಷ್ಠಿತ ಯೋಜನೆ ಕುರಿತಂತೆ ಆಸ್ಥೆ ಮತ್ತು ಬದ್ಧತೆ ಹಿಂಗಿದ್ದುವು. ಇದೊಂದು ಅನಿವಾರ್ಯವಾಗಿ ಹೊರಲೇಬೇಕಾದ ಭಾರ ಎಂಬ ನಿರ್ಲಕ್ಷ್ಯ ಧೋರಣೆ ಮೈದಳೆಯಿತು. ಖಾಲಿ ಹುದ್ದೆಗಳನ್ನು ತುಂಬಲಿಲ್ಲ, ಇದ್ದವರಿಗೆ ಯಾವುದೇ ಬಡ್ತಿ ಅಥವಾ ಸಂಬಳ ಹೆಚ್ಚಳ ಮಾಡಲಿಲ್ಲ, ವಿಶ್ವಕೋಶದತ್ತ ಮಲತಾಯಿ ಧೋರಣೆ ಎದ್ದು ಕಾಣುತ್ತಿತ್ತು.

ಸಂಯೋಜಕ ಸಂಪಾದಕ ಪ್ರಹ್ಲಾದರಾಯರು (ಇವರೊಬ್ಬ ಬಹುಶ್ರುತ ಶಿಕ್ಷಣಪಟು) ಮಾರ್ಚ್ ೧೯೮೦ರಲ್ಲಿ ನಿವೃತ್ತರಾದರು, ಆಂತರಿಕ ಬಡ್ತಿ ನೀಡಿ ಆ ಸ್ಥಾನವನ್ನು ಭರ್ತಿಮಾಡಲಾಯಿತೇ ವಿನಾ ಅವರ ಅಂತಸ್ತಿನ ವಿದ್ವಾಂಸರನ್ನು ನೇಮಿಸುವುದರ ಮೂಲಕ ಅಲ್ಲ. ಕಾರ್ಯನಿರ್ವಾಹಕ ಸಂಪಾದಕ ವೀರಪ್ಪ ಪ್ರಸಾರಾಂಗದ ನಿರ್ದೇಶಕರಾಗಿ ತೆರಳಿದರು (೪-೧೦-೧೯೮೧). ಆಡಳಿತೆಯ ಆ ಹೆಚ್ಚಿನ ಹೊಣೆಯನ್ನು ನನ್ನ ಮೇಲೆ ಹೇರಿದರು. ಆ ಮೊದಲೇ ಮಾನವಿಕ ಸಂಪಾದಕ ಮತ್ತು ಜಂಗಮ ವಿಶ್ವಕೋಶ ಎಚ್ಚೆಸ್ಕೆಯವರು ನಿವೃತ್ತರಾಗಿದ್ದರು (೩೧-೧೨-೧೯೮೦). ಮತ್ತೆ ಆಂತರಿಕ ಬಡ್ತಿಯಿಂದ ಈ ಹುದ್ದೆಯನ್ನು ಭರ್ತಿಮಾಡಲಾಯಿತು. ಇಂಥ ಸನ್ನಿವೇಶದಲ್ಲಿ ಪ್ರಗತಿ ಸಹಜವಾಗಿ ನಿಧಾನವಾಯಿತು. ಇದ್ದವರ ಮಾನಸಿಕ ಧೃತಿ (morale) ಕನಿಷ್ಠ ಮಟ್ಟದಲ್ಲಿತ್ತು.

ನಮ್ಮ ಸಸ್ಯವಿಜ್ಞಾನ ವಿಭಾಗದ ಸಹಾಯಕ ಸಂಪಾದಕ ಕೆ.ಬಿ.ಸದಾನಂದ ಮೊದಲು ನನ್ನಂತೆಯೇ ಸರ್ಕಾರೀ ಸೇವೆಯಿಂದ ಎರವಲು ಬಂದವರು. ಇದರಲ್ಲೇ ಮುಂದುವರಿಯಲು ಅವರು ಇಷ್ಟಪಟ್ಟರು. ನಮಗೂ ಅವರ ಸಕ್ರಿಯ ಪಾತ್ರ ಉಪಯುಕ್ತವಾಗಿತ್ತು. ಹೀಗಾಗಿ ವಿಶ್ವವಿದ್ಯಾನಿಲಯ ಅವರಿಗೆ ಲಿಖಿತ ಆದೇಶ ನೀಡಿ ಸರ್ಕಾರದಿಂದ ಬಿಡಗಡೆ ಪತ್ರ ಒದಗಿಸಲು ತಾಕೀತು ಮಾಡಿತು. ಸರಿ, ಅವರು ಆ ಕೋರಿಕೆ ಕಾಗದವನ್ನು ವಿಶ್ವವಿದ್ಯಾನಿಲಯದ ಮೂಲಕ ಕಳಿಸಿದರು. ಆಗಾಗ ನೆನಪಿನೋಲೆಗಳನ್ನೂ ರವಾನಿಸಿದ್ದಾಯಿತು. ಒಂದೆರಡು ವರ್ಷಗಳೇ ಈ ವೃಥಾ ಪಿಷ್ಟಪೇಷಣದಲ್ಲಿ ವ್ಯರ್ಥವಾದುವು. ಏತನ್ಮಧ್ಯೆ ಎರವಲು ಸೇವೆಯಲ್ಲೇ ಸದಾನಂದ ಮುಂದುವರಿದರು. ಇಷ್ಟಾಗುವಾಗ ಸರ್ಕಾರದಿಂದ ಒಂದು ಬಾಂಬ್ ನಮ್ಮ ಮೇಲೆ ಬಿತ್ತು: ತತ್‌ಕ್ಷಣವೇ ಸದಾನಂದರನ್ನು ಸರ್ಕಾರೀ ಸೇವೆಗೆ ವಾಪಾಸು ಕಳಿಸತಕ್ಕದ್ದು!    ವಿಶ್ವಕೋಶದ ಕಾರ್ಯನಿರ್ವಾಹಕ ಅಥವಾ ಪ್ರಧಾನ ಸಂಪಾದಕರಾಗಲೀ ಆಡಳಿತ ವಿಭಾಗದ ಹಿರಿಯ ಅಧಿಕಾರಿಗಳಾಗಲೀ (ಕುಲಸಚಿವ, ಕುಲಪತಿ) ಈ ವಿಚಾರದಲ್ಲಿ ನಿರ್ಲಿಪ್ತರಾಗಿದ್ದು ಸದಾನಂದರನ್ನು ಹಿಂದಕ್ಕೆ ಕಳಿಸಲು ಸಿದ್ಧತೆ ನಡೆಸಿದರು. ಇವರನ್ನು ಉಳಿಸಿಕೊಳ್ಳಲು ವಿಜ್ಞಾನ ಸಂಪಾದಕನಾಗಿ ನಾನೇನು ಮಾಡಬಹುದು? ಆಗ ಶಿಕ್ಷಣ ಮಂತ್ರಿಯಾಗಿದ್ದವರು ಎಂದೋ ಮಂಗಳೂರಿನಲ್ಲಿ ನನ್ನ ವಿದ್ಯಾರ್ಥಿಯಾಗಿದ್ದ ಬಿ.ಸುಬ್ಬಯ್ಯಶೆಟ್ಟಿ. ನೇರ ಇವರಲ್ಲಿಗೇ ಸದಾನಂದರ ಜೊತೆ ಹೋಗಿ ಇಡೀ ಸಮಸ್ಯೆಯನ್ನು ವಿವರಿಸಿದ್ದಾಯಿತು, “ಇದು ಕನ್ನಡದ ಕೆಲಸ. ಇದರಲ್ಲಿ ಮುಂದುವರಿಯಲು ಅಭ್ಯರ್ಥಿಗೆ ಇಷ್ಟವಿದೆ, ವಿಶ್ವವಿದ್ಯಾನಿಲಯಕ್ಕೆ ಸಮ್ಮತಿ ಇದೆ, ಇಂಥಾದ್ದರಲ್ಲೂ ಈ ಎಡವಟ್ಟು ಸಂಭವಿಸಿರುವುದು ಶಿಕ್ಷಣ ಇಲಾಖೆಯ ಜಡತ್ವದಿಂದ. ದಯವಿಟ್ಟು ಒಡನೆ ಯುಕ್ತ ಆದೇಶ ಹೊರಡಿಸಿ.” ಮುಂದಿನ ಕೆಲವೇ ದಿನಗಳಲ್ಲಿ ಎಲ್ಲವೂ ಸರಿಯಾಯಿತು, ಸದಾನಂದ ಶಾಶ್ವತವಾಗಿ ನಮ್ಮ ಜೊತೆ ಉಳಿದರು.  

ಹಾ.ತಿ.ಕೃಷ್ಣೇಗೌಡ ಇನ್ನೊಬ್ಬ ಸಮರ್ಥ ಯುವ ಸಹಾಯಕ ಸಂಪಾದಕ. ಸಾಹಿತ್ಯ, ಜಾನಪದ, ಕಲೆ ಮುಂತಾದವು ಇವರ ಕ್ರಿಯಾಕ್ಷೇತ್ರ. ಉತ್ತಮ ಸಂಶೋಧಕರಾಗಿ ಒಳ್ಳೆಯ ಕೆಲಸ ಮಾಡಿ ಪಿಎಚ್‌ಡಿ ಪದವಿ ಗಳಿಸಿದರು. ನಮ್ಮ ಸೋದರ ಪ್ರಕಟಣೆಯಾಗಿ ೧೯೭೯ರಲ್ಲಿ ಪ್ರಕಾಶಿತವಾದ ಕನ್ನಡ ವಿಷಯ ವಿಶ್ವಕೋಶ ‘ಕರ್ನಾಟಕ’ ಸಂಪುಟದ ಸಹಾಯಕ ಸಂಪಾದಕರಾಗಿ ಉತ್ಕೃಷ್ಟ ಸೇವೆ ಸಲ್ಲಿಸಿದ್ದರು (ಡೆಮಿ ಚತುರ್ಥಾಕಾರದ ೧೬೯೮ ಸಚಿತ್ರ ಪುಟಗಳು ಮತ್ತು ೬ ವರ್ಣಫಲಕಗಳು). ೧೯೮೧ರಲ್ಲಿ ವೀರಪ್ಪ ನಿರ್ಗಮಿಸಿದಾಗ ಪ್ರಧಾನ ಸಂಪಾದಕ ಹಾಮಾನಾ ಅವರಿಗೆ ಹೇಳಿದೆ, “ವೃತ್ತಿಜ್ಯೇಷ್ಠತೆ ಗಮನಿಸಿ ಸದಾನಂದ ಅಥವಾ ಕೃಷ್ಣೇಗೌಡರಿಗೆ ಕಾರ್ಯನಿರ್ವಾಹಕ ಸಂಪಾದಕ ಹುದ್ದೆಗೆ ಬಡ್ತಿಕೊಡಿ.”
“ಅವರಿಗೆ ಅನುಭವ ಸಾಲದು. ನೀವೇ ಈ ಹೆಚ್ಚಿನ ಹೊರೆ ಹೊರಲು ಸರಿ.”
“ಹಾಗಾದರೆ ಸದಾನಂದರನ್ನು ವಿಜ್ಞಾನ ಸಂಪಾದಕರಾಗಿ ಬಡ್ತಿಕೊಟ್ಟು ನೇಮಿಸಿ. ಈ ಕೃತಕ ಅಂತಸ್ತು ವ್ಯತ್ಯಾಸಗಳನ್ನು ಮರೆತು ನಾವೆಲ್ಲ ಒಂದೇ ತಂಡವಾಗಿ ಸಹಕರಿಸಿ ದುಡಿಯುತ್ತಿದ್ದೇವೆ. ಒಬ್ಬರಿಗಾದರೂ ಸದ್ಯ ಬಡ್ತಿ ದೊರೆಯಬೇಕು.”
ಆದರೆ ಇಂಥ ಯಾವ ಸುಧಾರಣೆಗೂ ನಾಯಕರು ಸಿದ್ಧರಿರಲಿಲ್ಲ. ಏಕೆ? ಸ್ವಪ್ರತಿಷ್ಠೆಗೆ ಭಂಗ ಬಂದೀತೆಂಬ ವಿನಾಕಾರಣ ಆತಂಕ ಎಂಬುದು ಅನೇಕ ಸೂಕ್ಷ್ಮ ಸಂದರ್ಭಗಳಲ್ಲಿ ನನ್ನ ಗಮನಕ್ಕೆ ಬರುತ್ತಿತ್ತು.

೧೯೮೦ರ ದಶಕದಲ್ಲಿ ಯಾವುದೋ ಸರ್ಕಾರೀ ಆದೇಶದ ಮೇರೆಗೆ ವಿಶ್ವವಿದ್ಯಾನಿಲಯ ತನ್ನ ಸಿಬ್ಬಂದಿಯನ್ನು ಶಿಕ್ಷಣೇತರ (nonteaching) ಮತ್ತು ಶೈಕ್ಷಣಿಕ (teaching) ಎಂಬ ಎರಡು ವಿಭಾಗಗಳಾಗಿ ವಿಂಗಡಿಸಿತು. ಮೊದಲ ವಿಭಾಗದವರ ನಿವೃತ್ತಿ ವಯಸ್ಸು ೫೫, ಎರಡನೆಯವರದು ೬೦ ಎಂಬ ಹುಕುಂ ಕೂಡ ಜಾರಿಗೆ ಬಂತು. ಸ್ಪಷ್ಟವಾಗಿ ಇದೊಂದು ಪಕ್ಷಪಾತ ಅಥವಾ ಒಡೆದು ಆಳುವ ನೀತಿಯಾಗಿತ್ತು. ಎನ್.ಬಸವಾರಾಧ್ಯರು ಆಗ ನಮ್ಮ ಸಂಸ್ಥೆಯ ಗ್ರಂಥ ಸಂಪಾದನಾ ವಿಭಾಗದ ಉಪನಿರ್ದೇಶಕರಾಗಿ ಉತ್ಕೃಷ್ಟ ವಿದ್ವತ್ಪೂರ್ಣ ಸೇವೆ ಸಲ್ಲಿಸುತ್ತಿದ್ದರು. ಸತ್ಯಸಂಧರು, ಅಧಿಕಾರಮದೋನ್ಮತ್ತರ ಎದುರು ಸೆಟೆದು ನಿಂತು ಆತ್ಮ ಪ್ರತ್ಯಯ ಮೆರೆದ ದಿಟ್ಟರು. ಈ ಕಾರಣಕ್ಕಾಗಿ ಮೇಲಧಿಕಾರಿಗಳಿಗೆ ಇವರು ನುಂಗಲಾರದ ತುತ್ತಾಗಿದ್ದರು. ೧೯೮೧ರ ಆರಂಭದಲ್ಲಿ ಒಂದು ದಿನ ಬಸವಾರಾಧ್ಯರಿಗೆ ಯಾವುದೇ ಪೂರ್ವಸೂಚನೆ ಇಲ್ಲದೇ, “ಇಂದು ನಿಮಗೆ ವಯಸ್ಸು ೫೫ ತುಂಬಿರುವುದಾಗಿ ನಿಮ್ಮನ್ನು ಸೇವೆಯಿಂದ ಕಾನೂನು ಪ್ರಕಾರ ನಿವೃತ್ತಿಗೊಳಿಸಲಾಗಿದೆ” ಎಂಬ ದಿಢೀರ್ ಆದೇಶ ಬಂತು.

ಈ ಅಕ್ರಮ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ಬಸವಾರಾಧ್ಯರು ರಾಜ್ಯದ ಉಚ್ಚನ್ಯಾಯಪೀಠಕ್ಕೆ ರಿಟ್ ಅರ್ಜಿ ಹಾಕಿ ತಡೆ ಆಜ್ಞೆ ತಂದರು. ಆಗ ಇವರೆತ್ತಿದ ಆಕ್ಷೇಪಣೆಗಳೆರಡು: ಶೈಕ್ಷಣಿಕ ಕಾರ್ಯವನ್ನೇ ತಾವು ಕೂಡ ಮಾಡುತ್ತಿರುವುದು, ಜೊತೆಗೆ ನಿವೃತ್ತಿ ಕುರಿತಂತೆ ಕಾನೂನು ಪ್ರಕಾರ ತಮಗೆ ೬ ತಿಂಗಳ ಮುನ್ಸೂಚನೆ ನೀಡಿರಬೇಕಾಗಿತ್ತು, ಆದರೆ ವಿಶ್ವವಿದ್ಯಾನಿಲಯ ಈ ಯಾವ ಅಂಶವನ್ನೂ ಪರಿಗಣಿಸಿಲ್ಲ. ವಿಶ್ವವಿದ್ಯಾನಿಲಯ ಜಗ್ಗಲಿಲ್ಲ. ವ್ಯಾಜ್ಯವನ್ನು ಮುಂದುವರಿಸಿತು. ಒಂದೆರಡು ವರ್ಷ ಸೆಣಸಿ ತೀರ್ಪು ಬಸವಾರಾಧ್ಯರ ಪರ - ಅವರ ಹುದ್ದೆ ಕೂಡ ಶೈಕ್ಷಣಿಕ - ಬಂದಾಗ ಅವರ ಸೇವೆಯನ್ನು ೬೦ರ ತನಕ ಮುಂದುವರಿಸಲೇಬೇಕಾಯಿತು. ವಿಶ್ವವಿದ್ಯಾನಿಲಯ ತೀವ್ರ ಮುಖಭಂಗ ಅನುಭವಿಸಬೇಕಾಯಿತು. 

ನನ್ನ ಸೇವಾದಾಖಲಾತಿ ಪ್ರಕಾರ ೧೯೮೧ ಸೆಪ್ಟೆಂಬರ್ ೧೪ರಂದು ನನಗೆ ೫೫ ತುಂಬಲಿತ್ತು (ವಾಸ್ತವ ಜನನ ದಿನಾಂಕ ೩೦-೧-೧೯೨೬). ಬಸವಾರಾಧ್ಯ ಪ್ರಕರಣದಿಂದ ಎಚ್ಚೆತ್ತ ವಿಶ್ವವಿದ್ಯಾನಿಲಯ ಅದೇ ಸೆಪ್ಟೆಂಬರ್ ೧೪ರಂದು ನಿವೃತ್ತನಾಗಲು ನನಗೆ ೬ ತಿಂಗಳ ಮೊದಲೇ ಲಿಖಿತ ಅನುಮತಿ ನೀಡಿತು (ಮಾರ್ಚ್ ೧೯೮೧). ಸಂಸ್ಥೆಯ ನಿರ್ದೇಶಕ ಹಾ.ಮಾ.ನಾಯಕರು ನನ್ನನ್ನು ತಮ್ಮ ಕೊಠಡಿಗೆ ಕರೆಸಿ ಈ ಆದೇಶವನ್ನು ಕೊಡುತ್ತ, “ನಾನು ತೀವ್ರ ವ್ಯಥೆಯಿಂದ ನಿರ್ವಹಿಸಬೇಕಾದ ಕರ್ತವ್ಯವಿದು” ಎಂದರು.
“ಹಾಗೇನೂ ಯೋಚಿಸಬೇಡಿ. ಏಕೆಂದರೆ ನಿವೃತ್ತನಾಗಲು ನನಗೇನೂ ಆತಂಕವಿಲ್ಲ. ಎಲ್ಲ ಹೊಣೆಗಳನ್ನೂ ಪೂರೈಸಿದ್ದೇನೆ. ಆರೋಗ್ಯ ಚೆನ್ನಾಗಿದೆ. ಮುಂದೆ ಸ್ವತಂತ್ರವಾಗಿ ಕನ್ನಡದಲ್ಲಿ ವಿಜ್ಞಾನ ಪ್ರಸಾರ ಕಾರ್ಯಮಗ್ನನಾಗಿರುತ್ತೇನೆ. ಆದರೆ ಒಂದು ವ್ಯಥೆ ಇದೆ: ಈ ೧೪-ಸಂಪುಟಗಳ ಯೋಜನೆಯಲ್ಲಿ ೧೦ ಮಾತ್ರ ಸದ್ಯ ಪೂರ್ಣವಾಗಿದೆ. ಸರಿ, ಅದು ಮುಂದಿನವರ ಸಾಹಸವಾಗಲಿ.”
“ಹಾಗಲ್ಲ. ಇದೊಂದು ಕೇವಲ ಕಾನೂನಿನ ಆವಶ್ಯಕತೆ ಪೂರೈಸಲು ಬಂದಿರುವ ಹುಕುಂ. ಈಗ ನೀವೊಂದು ಕೆಲಸ ಮಾಡಿ: ನಿಮ್ಮ ಸೇವಾವಿಸ್ತರಣೆ ಕೋರುವ ಒಂದು ಅರ್ಜಿಯನ್ನು ವಿಶ್ವವಿದ್ಯಾನಿಲಯಕ್ಕೆ ಈಗಲೇ ಸಲ್ಲಿಸಬೇಕು. ಉಳಿದುದೆಲ್ಲ ನನಗೆ ಬಿಡಿ.”
“ಏನು ಮಾತು ನಾಯಕರೇ! ನನ್ನ ಅಪೇಕ್ಷೆ ಅಥವಾ ಕೋರಿಕೆ ಇಲ್ಲದೇ ಈ ಅಪ್ಪಣೆ ಬಂದಿದೆ. ಸರಿ, ಇದನ್ನು ಒಪ್ಪುತ್ತೇನೆಂದಾಗ ನೀವು ಬೇರೇನೋ ಹೇಳುತ್ತೀರಿ. ಒಂದು ಅಂಶ ಸ್ಪಷ್ಟಪಡಿಸಬಯಸುತ್ತೇನೆ: ಮೈಸೂರು ವಿಶ್ವವಿದ್ಯಾನಿಲಯದ ಪ್ರೀತಿಪೂರ್ವಕ ಆಹ್ವಾನ ಮನ್ನಿಸಿ ಬಂದಾತ ನಾನು, ಅರ್ಜಿ ಸಲ್ಲಿಸಿ ಬಂದಾತನಲ್ಲ, ಈಗ ಖಂಡಿತ ಆ ಕೆಲಸ ಮಾಡಲಾರೆ, ಕ್ಷಮಿಸಿ.”
“ಹಾಗಲ್ಲ. ಈ ಕೆಲಸ ಮಾಡಲು ನಿಮ್ಮಷ್ಟು ಸಮರ್ಥರು ಯಾರೂ ಇಲ್ಲ. ನಿಮ್ಮ ಸೇವೆ ನಮಗೆ ಬೇಕೇ ಬೇಕು. ಕಾನೂನಿನ ಆವಶ್ಯಕತೆ ಪೂರೈಸಲು ನಿಮ್ಮ ಒಂದು ಅರ್ಜಿ ಬೇಕಾಗಿದೆ, ಅಷ್ಟೆ. ದಯವಿಟ್ಟು ಹಾಗೆ ಮಾಡಿ.” ಅವರು ದೀನರಾಗಿದ್ದರು.
ಈ ಒಗಟು ನನಗರ್ಥವಾಗಲಿಲ್ಲ. ಆದರೆ ಅವರ ಮನ ನೋಯಿಸಲು ಇಷ್ಟಪಡದೆ ಒಂದು ಮಾತು ಹೇಳಿದೆ, “ಆಗಲಿ, ನಿಮ್ಮ ಮಾತಿಗೆ ಬೆಲೆ ಕೊಟ್ಟು ಅರ್ಜಿ ಬರೆದುಕೊಡುತ್ತೇನೆ, ಆದರೆ ನನ್ನದೇ ಧಾಟಿಯಲ್ಲಿ. ಒಂದೋ ಅದನ್ನು ನಿಮ್ಮ ಶಿಫಾರಸು ಸಹಿತ ಕುಲಸಚಿವರಿಗೆ ಕಳಿಸಿ, ಇಲ್ಲವೇ ನನ್ನನ್ನು ನಿವೃತ್ತನಾಗಲು ಬಿಡಿ.”

ನ್ಯಾಯವು ವ್ಯಕ್ತಿಯ ಪರವಾಗಿದ್ದು ಆತ ನೀತಿಚ್ಯುತನಾಗದಿರುವಾಗ ಆತನಲ್ಲೊಂದು ಸಾತ್ತ್ವಿಕ ಆಕ್ರೋಶ ಮೂಡಿ ಮುನ್ನುಗ್ಗಲು ಧೈರ್ಯ ನೀಡುತ್ತದೆ. ಸೇನಾಪರಿಭಾಷೆಯಲ್ಲಿ “Offence is the best form of defence.” (ಆಕ್ರಮಣವೇ ಅತ್ಯುತ್ಕೃಷ್ಟ ರಕ್ಷಣೋಪಾಯ.) ಮೂರು ಮುಖ್ಯ ಅಂಶಗಳನ್ನು ಒತ್ತಿಹೇಳುವ ಅಧಿಕೃತ ಪತ್ರವೊಂದನ್ನು ಬರೆದುಕೊಟ್ಟೆ. ಸಾರ:
“ಮೂಲತಃ ಶೈಕ್ಷಣಿಕವಲಯದಲ್ಲಿದ್ದ ನನ್ನನ್ನು ವಿಶ್ವವಿದ್ಯಾನಿಲಯ ಆಹ್ವಾನಿಸಿ ಪ್ರಸ್ತುತ ಉನ್ನತ ಶೈಕ್ಷಣಿಕ ಕಾರ್ಯನಿರ್ವಹಣೆಗೆ ನಿಯೋಜಿಸಿದ್ದಾಗಿದೆ. ಆದ್ದರಿಂದ ನನ್ನ ಹುದ್ದೆ ಶಿಕ್ಷಣೇತರ ಅಲ್ಲ. ಎರಡನೆಯದಾಗಿ, ೧೪-ಸಂಪುಟಗಳ ಕನ್ನಡ ವಿಶ್ವಕೋಶ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ನನ್ನನ್ನೀಗ ನಡುನೀರಿನಲ್ಲಿ ಕಾನೂನಿಗೂ ನನ್ನ ಇಚ್ಛೆಗೂ ವಿರುದ್ಧವಾಗಿ ನಿವೃತ್ತಿಗೊಳಿಸಿದರೆ ಅದೊಂದು ಸಾಮಾಜಿಕ ಅನ್ಯಾಯವೆನಿಸುತ್ತದೆ. ಅಲ್ಲದೇ ಸದ್ಯ ನನ್ನ ಹುದ್ದೆ ತುಂಬಬಲ್ಲ ಇನ್ನೊಬ್ಬ ಅರ್ಹ ವ್ಯಕ್ತಿ ಇಲ್ಲ. ಮೂರನೆಯದಾಗಿ ನಾನು ಈ ಉಲ್ಲಾಸದಾಯಕ ಸವಾಲಿನ ಜೊತೆ ಬೆಳೆದು ಬಂದಿದ್ದೇನೆ. ಇಲ್ಲಿಯ ತನಕ ನಾನು ಗಳಿಸಿರುವ ಅನುಭವ ಇದೇ ಯೋಜನೆಗೆ ಒದಗಿ ಇದು ಪೂರ್ಣಗೊಳ್ಳುವುದನ್ನು ನೋಡಬೇಕೆಂಬ ಬಯಕೆ ನನಗುಂಟು. ಈ ಮೂರನ್ನೂ ನೀವು (ವಿಶ್ವವಿದ್ಯಾಲಯ) ಗಂಭೀರವಾಗಿ ಪರಿಗಣಿಸಿ ಸದ್ಯದ ಆದೇಶವನ್ನು ರದ್ದುಮಾಡಬೇಕು, ಮತ್ತು ನನ್ನ ಸೇವಾವಧಿಯನ್ನು ೬೦ರ (೧೯೮೬) ತನಕವೂ ವಿಸ್ತರಿಸುವ ಹುಕುಂ ಹೊರಡಿಸಬೇಕು. ನೀವು ಮಾಡದಿದ್ದರೆ ನಾನು ಉಚ್ಚನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿಯೇತೀರುತ್ತೇನೆ.”  

ಬಸವಾರಾಧ್ಯರು ಮತ್ತೆ ಮತ್ತೆ ಎಚ್ಚರಿಕೆ ಮಾತನ್ನು ಹೇಳುತ್ತ ಬಂದರು, “ನಿಮ್ಮ ಅರ್ಜಿಯ ಗತಿ ಏನಾಯಿತೆಂದು ನೀವು ಮತ್ತೆ ಮತ್ತೆ ವಿಶ್ವವಿದ್ಯಾನಿಲಯಕ್ಕೆ ನೆನಪಿನೋಲೆ ಕಳಿಸಿ ಅಧಿಕಾರಿಗಳನ್ನು ಕಂಡು ಮಾತಾಡದಿದ್ದರೆ ಸೆಪ್ಟೆಂಬರ್ ೩೦ರಂದು ಅವರು ನಿಮ್ಮನ್ನು ನಿವೃತ್ತಿಗೊಳಿಸುವುದು ನೂರಕ್ಕೆ ನೂರು ಖರೆ.” ಎಲ್ಲ ಬಗೆಯ ವಿಚಾರಣೆಗಳಿಗೂ ವಿಶ್ವವಿದ್ಯಾನಿಲಯದ ಪ್ರತಿಕ್ರಿಯೆ ನಿಗೂಢ ಮೌನ. ಸೆಪ್ಟೆಂಬರ್ ಆರಂಭದಲ್ಲೇ ಬಸವಾರಾಧ್ಯ ತಾಕೀತು ಮಾಡಿದರು, “ನೀವು ಈಗಿಂದೀಗಲೇ ಉಚ್ಚನ್ಯಾಯಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಿ ವಿಶ್ವವಿದ್ಯಾನಿಲಯದ ಹುಕುಮಿಗೆ ತಡೆಯಾಜ್ಞೆ ತರದಿದ್ದರೆ ೩೦ರಂದು ಅವರು ನಿಮ್ಮನ್ನು ನಿವೃತ್ತಿಗೊಳಿಸಿಯೇ ಬಿಡುತ್ತಾರೆ. ಮತ್ತಾದರೂ ನೀವು ನ್ಯಾಯಾಲಯದ ಮೆಟ್ಟಲು ಹತ್ತುವುದು ಅನಿವಾರ್ಯ. ಸಮರದಲ್ಲಿ ಹೇಗೋ ಬದುಕಿನಲ್ಲೂ ಹಾಗೆ ಮುನ್ನೆಚ್ಚರಿಕೆ ಜರೂರಿನ ಅಗತ್ಯ.”

ಸೆಪ್ಟೆಂಬರ್ ಎರಡನೆಯ ವಾರ. ಬೆಂಗಳೂರಿನಲ್ಲಿ ನನ್ನ ಅನೇಕ ಮಾಜಿ ಶಿಷ್ಯರು ವಕೀಲರಾಗಿ ಹೆಸರು ಮಾಡಿದ್ದರು. ಅವರ ಪೈಕಿ ಎ.ಗಣಪತಿ ಹೊಳ್ಳ ಎಂಬ ಹಿರಿಯ ಮತ್ತು ನುರಿತ ವಕೀಲರ ಮನೆಗೆ ಹೋಗಿ ನನ್ನ ಸಮಸ್ಯೆ ವಿವರಿಸಿದೆ ಮತ್ತು ಯುಕ್ತ ಮಾಹಿತಿ ಒದಗಿಸಿದೆ. ಆಗ ಅವರೊಂದು ಬಲು ದೊಡ್ಡ ಮಾತು ಹೇಳಿ ನನ್ನ ಮನ ಗೆದ್ದರು, “ನೀವು ನನ್ನ ಗುರುವಾಗಿ ಬಂದಿದ್ದರೆ ನನಗೆ ಹೆಚ್ಚು ಸಂತಸವಾಗಿರುತ್ತಿತ್ತು. ಈಗ ಕಕ್ಷಿಗಾರರಾಗಿ ಬಂದಿದ್ದೀರಿ. ಇದನ್ನೊಂದು ಅನುಗ್ರಹವೆಂದು ಭಾವಿಸಿ ನಿರ್ವಹಿಸುತ್ತೇನೆ. ಕಾನೂನು ದೃಷ್ಟಿಯಿಂದ ಇದು ತೀರ ಸರಳ ಸಂಗತಿ. ಲೀಲಾಜಾಲವಾಗಿ ನಿಮಗೆ ತಡೆಯಾಜ್ಞೆ ದೊರೆಯುತ್ತದೆ. ಅದರ ಉಸಾಬರಿ ನನಗೆ ಬಿಡಿ.”
“ಬಹಳ ಸಂತೋಷ. ಇದಕ್ಕೆ ತಾಗುವ ಖರ್ಚು, ನಿಮ್ಮ ಸಂಭಾವನೆ ಮುಂತಾದವೆಲ್ಲ ಸೇರಿ ನಾನು ನಿಮಗೆಷ್ಟು ಮೊಬಲಗು ಪಾವತಿಸಬೇಕು?”
“ಕೋರ್ಟಿಗೆ ಸಲ್ಲಿಸಬೇಕಾದ ಸ್ಟಾಂಪ್, ರಿಜಿಸ್ಟ್ರೇಶನ್ ಇತ್ಯಾದಿ ಹಣ ಮಾತ್ರ ಕೊಟ್ಟರೆ ಸಾಕು.”
“ನಿಮ್ಮ ಸೇವಾಶುಲ್ಕ?”
“ನನ್ನ ಪೂಜ್ಯ ಗುರುವಿನಿಂದ ನಾನದನ್ನು ತೆಗೆದುಕೊಳ್ಳುವುದಿಲ್ಲ. ಇದು ನಾನು ಪಾಲಿಸಿಕೊಂಡು ಬಂದಿರುವ ನೀತಿ. ದಯವಿಟ್ಟು ಒತ್ತಾಯ ಮಾಡಬೇಡಿ.”
“ಅಲ್ಲಪ್ಪಾ! ನಾವೇನೂ ಪ್ರಾಚೀನ ಗುರುಕುಲವಾಸಿಗಳಲ್ಲ. ನೀವು ಕಾಲೇಜಿಗೆ ಸಂಬಳ (college fees) ಪಾವತಿಸಿ ಓದಿದ್ದೀರಿ, ನಾನೋ ಮಾಸಿಕ ತಲಬು (monthly salary) ಪಡೆದು ಪಾಠ ಬೋಧಿಸಿದ್ದೇನೆ. ಈ ವ್ಯವಹಾರದಲ್ಲಿ ಪುಕ್ಕಟೆ ಸೇವೆ ಎಲ್ಲಿದೆ? ಆದ್ದರಿಂದ ನಿಮ್ಮ ಸಂಭಾವನೆ ದಯವಿಟ್ಟು ನಿಗದಿ ಮಾಡಿ.”
ಪರಸ್ಪರ ಗೌರವ ಅಭಿಮಾನಗಳ ಈ ಹವೆಯಲ್ಲಿ ಹೊಳ್ಳ ಒಂದು ಭರತವಾಕ್ಯ ಹೇಳಿ ನನ್ನ ಬಾಯಿಕಟ್ಟಿಸಿದರು, “ಹಾಗಾದರೆ ನೀವು ದಯವಿಟ್ಟು ಬೇರೆ ವಕೀಲರಲ್ಲಿಗೆ ಹೋಗಿ, ನನ್ನನ್ನು ಕ್ಷಮಿಸಿ.”
“ಇನ್ನೊಬ್ಬರ ಹತ್ತಿರ ಹೋಗುವ ಪ್ರಶ್ನೆಯೇ ಇಲ್ಲ. ನೀವೇ ನಿಮ್ಮ ಷರತ್ತಿನ ಪ್ರಕಾರವೇ ನನ್ನ ಈ ಫಿರ್ಯಾದಿಯನ್ನು ಒಪ್ಪಿಕೊಂಡು ಮುಂದುವರಿಸಿ” ಎನ್ನುತ್ತ ಕೋರ್ಟ್ ಶುಲ್ಕ ಪಾವತಿಸಿ ಹಗುರಾಗಿ ಮರಳಿದೆ. ಸೆಪ್ಟೆಂಬರ್ ದ್ವಿತೀಯಾರ್ಧ. ನಾನು ತಿರುವನಂತಪುರಕ್ಕೆ ವೃತ್ತಿ ನಿಮಿತ್ತ ಹೋಗಿದ್ದೆ. ಕೊನೆಯ ವಾರ ಹಿಂತಿರುಗಿ ಬರುತ್ತಿದ್ದಾಗ ಬೆಂಗಳೂರಿನಲ್ಲಿ ಅರ್ಧದಿನ ತಂಗಿ, ಹೊಳ್ಳರ ಮನೆಗೆ ಹೋದೆ. ಅವರು ನನಗೆ ಅಭಿನಂದನೆ ಸಲ್ಲಿಸುತ್ತ ನುಡಿದರು, “ತೀರ ಸುಲಭವಾಗಿ ತಡೆಯಾಜ್ಞೆ ದೊರೆತಿದೆ. ಅದನ್ನು ನೇರ ವಿಶ್ವವಿದ್ಯಾನಿಲಯಕ್ಕೆ ನೋಂದಾಯಿತ ಅಂಚೆ ಮೂಲಕ ಕೋರ್ಟೇ ರವಾನಿಸಿದೆ. ನೀವು ನಿಶ್ಚಿಂತೆಯಿಂದ ಮುದುವರಿಸಿ.”

ಆ ಮೊದಲು ನಾನು ಇಂಥ ವ್ಯಾಜ್ಯಗಳಲ್ಲಿ ವಕೀಲರ ನ್ಯಾಯೋಚಿತ ರುಸುಂ ಎಷ್ಟೆಂದು ಇತರರೊಡನೆ ವಿಚಾರಿಸಿ ಅಷ್ಟನ್ನು ಹೊಳ್ಳರಿಗೆ ಪಾವತಿಸುವುದೆಂದು ನಿಶ್ಚಯಿಸಿದ್ದೆ. ಅದೇ ಪ್ರಕಾರ ಅವರಿಗೊಂದು ಲಕ್ಕೋಟೆ ಕೊಟ್ಟೆ. ಅವರು ಸರಕ್ಕನೆ ತಮ್ಮ ಕೈ ಹಿಂದಕ್ಕೆ ಸೆಳೆದು, “ಏನಿದು ಸರ್? ನಾ ಮುಟ್ಟಲಾರೆ.”
“ಹೊಳ್ಳ! ಈಗ ನಾನು ನಿಮ್ಮ ಕಕ್ಷಿಗಾರನಾಗಿ ಮಾತಾಡುತ್ತಿಲ್ಲ, ಬದಲು ಗುರುವಾಗಿ ವಿಧಿಸುತ್ತಿದ್ದೇನೆ: ಪ್ರೀತಿಯ ಈ ಉಡುಗೊರೆಯನ್ನು ನೀವು ಸ್ವೀಕರಿಸಲೇಬೇಕು.”
“ನೀವು ನನ್ನನ್ನು ಸೋಲಿಸಿಬಿಟ್ಟಿರಿ, ಸರ್!”
“ಹಾಗಲ್ಲ. ನೀವು ಸೋತು ಗೆದ್ದಿರಿ, ನಾನು ಗೆದ್ದು ಸೋತೆ, ಫಲವಾಗಿ ವಿಶ್ವಾಸ ಸರ್ವತ್ರ ಪ್ರಸರಿಸಿತು. ವಿಶ್ವಾಸವಿಲ್ಲದ ಬದುಕು ಅರ್ಥಹೀನ ಅಲ್ಲವೇ?”
“ಸರಿ. ಈಗ ನೀವು ಮೈಸೂರಿಗೆ ಮರಳಿದ ಒಡನೆ ಕೋರ್ಟ್ ಆದೇಶ ಕುಲಸಚಿವರಿಗೆ ತಲಪಿದೆಯೇ, ಅದರ ಮೇಲೆ ಯುಕ್ತ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ವಿವರಗಳನ್ನು ಪರಿಶೀಲಿಸಿ ನನಗೆ ತಿಳಿಸುತ್ತ ಇರಿ. ಕಚೇರಿಗೆ ಬಂದಿದ್ದರೂ ಅದನ್ನು ದಾಖಲಿಸದೇ ಕಾಲಹರಣ ಮಾಡುವುದರಲ್ಲಿ ನಮ್ಮ ಬಾಬುಗಳು ನಿಸ್ಸೀಮರು.

ಮರುದಿನವೇ ವಿಶ್ವವಿದ್ಯಾನಿಲಯದ ಕುಲಸಚಿವ ವೆಂಕಟೇಶರನ್ನು ನೋಡಲು ಹೋದೆ. ಭೇಟಿ ನಿರಾಕರಿಸಿದರು. ಕುಲಪತಿ ಕೆ.ಎಸ್.ಹೆಗ್ಡೆಯವರ ಜೊತೆ ಈ ವಿಷಯ ಪ್ರಸ್ತಾವಿಸಿದಾಗ, “I dont care. You retire on the due date” ಎಂದು ಒರಟಾಗಿ ಅಬ್ಬರಿಸಿದರು. ಕುಲಸಚಿವಾಲಯದಲ್ಲಿಯ ಗುಮಾಸ್ತರಾಗಲೀ ಇವರ ಮೇಲಿನವರಾಗಲೀ, ಹೆಚ್ಚಿನವರು ನನ್ನ ಪರಿಚಿತರೇ ಆಗಿದ್ದರೂ, ಮೂಕರಾಗಿದ್ದರು. ಇಲ್ಲೇನೋ ಒಳಸಂಚು ನಾರುತ್ತಿದೆ ಎಂಬ ಗುಮಾನಿ ಬಂತು. ಸ್ಥಳೀಯ ಅಂಚೆ ಕಚೇರಿಯಲ್ಲಿ ವಿಚಾರಿಸಿದಾಗ ಕೋರ್ಟ್ ಪತ್ರವೊಂದನ್ನು ಕುಲಸಚಿವಾಲಯಕ್ಕೆ ಸೆಪ್ಟೆಂಬರ್ ೨೬ರಂದೇ ಬಟವಾಡೆ ಮಾಡಲಾಗಿತ್ತೆಂಬ ಸಂಗತಿ ತಿಳಿಯಿತು.  
“ನೀವು ಊಹಿಸಿದಂತೆಯೇ ಆಗಿದೆ” ಎಂದು ಹೊಳ್ಳರಿಗೆ ದೂರವಾಣಿಸಿದೆ (ಸೆಪ್ಟೆಂಬರ್ ೨೭).
“ಒಂದು ಕೆಲಸ ಮಾಡಿ ಮೇಷ್ಟ್ರೇ! ನೀವು ೩೦ರ ಮುಂಜಾನೆ ತನಕ ಕಾದು ಆಗಲೂ ಅವರು ಇದೇ ನಾಟಕ ಆಡುತ್ತಿದ್ದರೆ ನನಗೆ ಫೋನ್ ಮಾಡಿ.”

೩೦ರ ಮುಂಜಾನೆಯೂ ಯಥಾಸ್ಥಿತಿ. ಅವರೆಂದರು, “ಇಂದು ಸಂಜೆ ೪ ಗಂಟೆಗೆ ಮುನ್ನ ನನ್ನ ಒಬ್ಬ ಸಹಾಯಕ ವಕೀಲ ಕೋರ್ಟ್ ಆರ್ಡರ್ ಸಹಿತ ನೇರ ಕ್ರಾಫ಼ರ್ಡ್ ಹಾಲ್ ಪ್ರವೇಶ ದ್ವಾರಕ್ಕೆ ಬರಲಿದ್ದಾರೆ. ಆ ಮೊದಲೇ ನೀವಲ್ಲಿ ನಿಂತಿದ್ದು ಅವರನ್ನು ಗುರುತಿಸಿ ಕುಲಸಚಿವರಲ್ಲಿಗೆ ಕರೆದುಕೊಂಡು ಹೋಗಿ.” ಅವರು ಬಂದರು. ಉಭಯರಿಗೂ ಪರಸ್ಪರರನ್ನು ಗುರುತಿಸುವುದು ಕಷ್ಟವಾಗಲಿಲ್ಲ. ಕುಲಸಚಿವಾಲಯಕ್ಕೆ ಕರೆದುಕೊಂಡು ಹೋದೆ. ಅಲ್ಲಿ “ಕುಲಸಚಿವರು ಸಂಜೆ ೬ರ ತನಕ ಸಿಕ್ಕುವುದಿಲ್ಲ” ಎಂಬ ನಿಷ್ಠುರ ಪ್ರತಿಕ್ರಿಯೆ.
“ಚಿಂತೆ ಇಲ್ಲ. ಅವರ ಪರವಾಗಿ ನೀವು ಈ ಕೋರ್ಟ್ ಆರ್ಡರನ್ನು ಸ್ವೀಕರಿಸಿ ರಶೀತಿ ಕೊಡಿ” ಎಂದರು ಸಹಾಯಕವಕೀಲ.
“ಹಾಗೆ ಮಾಡಲು ನಮಗೆ ಅನುಮತಿ ಇಲ್ಲ.”
“ಸ್ವಾಮೀ! ಈಗ ಮುಖ್ಯ ಪ್ರಶ್ನೆ ಇದು: ನಾನೊಬ್ಬ ಉಚ್ಚನ್ಯಾಯಾಲಯದ ವಕೀಲ, ಅಲ್ಲಿಂದ ನಿಮಗೊಂದು ಆದೇಶ ಸಲ್ಲಿಸಲು ಖುದ್ದು ಬಂದಿದ್ದೇನೆ, ಇದನ್ನು ನೀವು ಯಾವುದೇ ಸಬೂಬು ಒಡ್ಡಿ ಪಡೆದುಕೊಳ್ಳಲು ನಿರಾಕರಿಸಿದರೆ ಅಂಥ ಧಾರ್ಷ್ಟ್ಯದ ನಡವಳಿಕೆ ನ್ಯಾಯಾಲಯ ನಿಂದನೆಯಾಗುತ್ತದೆ. ಏನು ಮಾಡುತ್ತೀರಿ?” ಆ ಅಧಿಕಾರಿ ಕುಲಸಚಿವರ ರಹಸ್ಯ ಕೊಠಡಿ ಹೊಕ್ಕು ಬಂದ, ತೆಪ್ಪಗೆ ಆದೇಶವನ್ನು ಸ್ವೀಕರಿಸಿ ರಶೀತಿ ಕೊಟ್ಟ! ನನ್ನ ನಿವೃತ್ತಿ ಆಜ್ಞೆ ಪುಸ್ಸಾಯಿತು! ಏಕಿಂಥ ವೈಯಕ್ತಿಕ ದ್ವೇಷ? ಅದೂ ವಿಶ್ವವಿದ್ಯಾನಿಲಯಕ್ಕೆ ಖ್ಯಾತಿ ತರುತ್ತಿದ್ದ ಕನ್ನಡ ವಿಶ್ವಕೋಶ ಯೋಜನೆಯಲ್ಲಿ ನಿಷ್ಠೆಯಿಂದ ದುಡಿಯುತ್ತಿದ್ದ ನನ್ನಂಥ ನಿರಪರಾಧಿ ವಿರುದ್ಧ? ಇಂದಿಗೂ ಅರ್ಥವಾಗಿಲ್ಲ.

ಅಲ್ಲಿಗೇ ಬಿಡಲಿಲ್ಲ ಅವರ (ವಿನಾ ಕಾರಣ) ಕೋಪ. ಫಿರ್ಯಾದಿಯನ್ನು ಮುಂದಿನ ಎರಡು ವರ್ಷಕ್ಕೂ ಹೆಚ್ಚು ಕಾಲ ಮುಂದುವರಿಸಿದರು: ನನ್ನದು ಶಿಕ್ಷಣೇತರ ಹುದ್ದೆ, ಆದ್ದರಿಂದ ವಿಶ್ವವಿದ್ಯಾನಿಲಯದ ಆದೇಶ ಸಾಧುವಾಗಿದೆ. ಆ ಅವಧಿಯಲ್ಲಿ ನನ್ನ ನಿಗದಿ ಸಂಬಳವೇನೋ ಬರುತ್ತಿತ್ತು. ಆದರೆ ಅದರಲ್ಲಿ ಮಾಮೂಲಾಗಿ ದೊರೆಯಬೇಕಾಗಿದ್ದ ಬಡ್ತಿ ಮಾತ್ರ ಮಂಜೂರಾಗಲಿಲ್ಲ. ಈ ನಡುವೆ ನಮ್ಮ ಎರಡನೆಯ ಮಗ ಆನಂದನ ಮದುವೆಗಾಗಿ ನಾನು ೧೦ ದಿವಸ ಸಂಚಿತ ರಜೆ ಬೇಕೆಂದು ಮುಂಚಿತವಾಗಿಯೇ ಅರ್ಜಿ ಹಾಕಿದೆ. ಇದಕ್ಕೆ ಬಂದ ಪ್ರತಿಕ್ರಿಯೆ, “Leave REFUSED. Go on loss of pay.” ಹಗೆತನ ಇನ್ನೂ ಹೊಗೆಯುತ್ತಿತ್ತು! ಕೋರ್ಟಿನ ಅಂತಿಮ ತೀರ್ಪು ನನ್ನ ಪರವಾಗಿದ್ದುದು ಮಾತ್ರವಲ್ಲ, ಅದು ವಿಶ್ವವಿದ್ಯಾನಿಲಯದ ಅಶೈಕ್ಷಣಿಕ ಧೋರಣೆಗೆ ಛೀಮಾರಿ ಕೂಡ ಹಾಕಿತ್ತು, “ವಿಶ್ವಕೋಶದ ಕೆಲಸ ಶೈಕ್ಷಣಿಕವಲ್ಲದಿದ್ದರೆ ಇನ್ನಾವುದು ಶೈಕ್ಷಣಿಕ? ಇಂಥ ಅಲ್ಪ ವಿಷಯವೂ ಈ ಅಧಿಕಾರಿಗಳಿಗೆ ತಿಳಿಯುತ್ತಿಲ್ಲವಲ್ಲ” ಎಂದು ಝಾಡಿಸಿ ಫಿರ್ಯಾದಿಯನ್ನು ವಜಾ ಮಾಡಿತು. ಆ ತನಕ ತಡೆ ಹಿಡಿದಿದ್ದ ನನ್ನ ಸವಲತ್ತುಗಳನ್ನು ಒಡನೆ ಮಂಜೂರು ಮಾಡತಕ್ಕದ್ದು, ಇಲ್ಲವಾದರೆ ನ್ಯಾಯಾಂಗ ನಿಂದನೆಯ ಪ್ರಕರಣವನ್ನು ವಿಶ್ವವಿದ್ಯಾನಿಲಯ ಎದುರಿಸಬೇಕಾದೀತೆಂದು ಅವರಿಗೆ ಅಧಿಕೃತ ಪತ್ರ ಬರೆದೆ. ಹಲವಾರು ನೆನಪಿನೋಲೆಗಳನ್ನು ಇಷ್ಟೇ ನಿಷ್ಠುರವಾಗಿ ಬರೆದಾಗ ಕೊನೆಗೂ ಅವೆಲ್ಲವೂ ಬಂದುವು.
    
ಒಮ್ಮೆ ಸರ್ಕಾರದಿಂದ, “ವಿಶ್ವಕೋಶದ ಪ್ರಗತಿ ೧೯೮೦ರ ಅನಂತರ ತೀರ ನಿಧಾನವಾಗಿರುವುದೇಕೆ? ಸಮಸ್ಯೆಗಳೇನಿವೆ? ಇವನ್ನು ತಪಾಸಿಸಲು ಶಿಕ್ಷಣ ಮಂತ್ರಾಲಂiದ ಕಾರ್ಯದರ್ಶಿ ಸ್ವತಃ ವಿಶ್ವವಿದ್ಯಾನಿಲಯಕ್ಕೆ ಬಂದು ಸಂಬಂಧಿಸಿದ ಅಧಿಕಾರಿಗಳ ಜೊತೆ ವಿಚಾರ ವಿನಿಮಯ ಮಾಡಲಿದ್ದಾರೆ” ಎಂಬ ಪತ್ರ ಬಂತು. ಪ್ರಧಾನ ಸಂಪಾದಕ ನಾಯಕರು ಆ ಸಭೆಗೆ ನಾನು ಹೋಗಿ ನಮ್ಮ ಸಮಸ್ಯೆಗಳನ್ನು ವಿಶದೀಕರಿಸಬೇಕೆಂದು ಅಪೇಕ್ಷಿಸಿದರು. ನಾನೆಂದೆ, “ವಿಶ್ವವಿದ್ಯಾನಿಲಯದ ಉಪೇಕ್ಷಾಧೋರಣೆಯೇ ಇಲ್ಲಿಯ ಮುಖ್ಯ ದೋಷ. ನನಗಿಂತ ಚೆನ್ನಾಗಿ ಇದು ನಿಮಗೆ ಗೊತ್ತಿದೆ. ಅಲ್ಲದೇ ಇದನ್ನು ನೀವು ಅಧಿಕ ಪರಿಣಾಮಕಾರಿಯಾಗಿಯೂ ನಯವಾಗಿಯೂ ಮಂಡಿಸಬಲ್ಲಿರಿ. ನಾನಾದರೋ ಅವರ ಕಣ್ಣಿಗೆ ಕುಕ್ಕಿದಂತೆ ಯಾವ ನಯ ನಾಜೂಕೂ ಇಲ್ಲದೇ ಸತ್ಯವನ್ನು ಒದರಿ ಬಿಡುತ್ತೇನೆ. ವೃಥಾ ಮನಃಕಷಾಯಕ್ಕೆ ಕಾರಣವಾಗಬಹುದು.”
“ಇಲ್ಲ ಸರ್! ನೀವೇ ಹೋಗಿ” ಎಂದು ನನ್ನನ್ನೇ ಛೂಬಿಟ್ಟರು.

ಆ ಭವ್ಯ ಕೊಠಡಿಯಲ್ಲಿ ಕುಳಿತಿದ್ದವರು ಕುಲಪತಿ ಹೆಗ್ಡೆ, ಕುಲಸಚಿವ ವೆಂಕಟೇಶ್, ವಿತ್ತಾಧಿಕಾರಿ ಮತ್ತು ಕೇಂದ್ರ ಆಸನದಲ್ಲಿ ಕಾರ್ಯದರ್ಶಿ ಅಶ್ವತ್ಥನಾರಾಯಣ. ‘ಅಪರಾಧಿಸ್ಥಾನ’ದಲ್ಲಿ ನಾನು. ನಾನು ಮಾಡದ ತಪ್ಪಿಗಾಗಿ ನನ್ನ ಮೇಲೆ ದೋಷಾರೋಪಣೆ ಮಾಡಲು ಈ ಶೃಂಗಸಭೆ ಇಲ್ಲಿ ಜಮಾಯಿಸಿದೆ ಎಂಬುದು ಆಗಿನ ನನ್ನ ಮನಃಸ್ಥಿತಿ.  “ಆಕ್ರಮಣವೇ ಅತ್ಯುತ್ಕೃಷ್ಟ ರಕ್ಷಣೋಪಾಯ, ನಡೆ ಮುಂದೆ ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ” ಎಂದು ಮನ ವಿಡಿಯಿತು. ಕಾರ್ಯದರ್ಶಿ ಅತ್ಯಂತ ಸಭ್ಯ ಶೈಲಿ ಮತ್ತು ಇದಕ್ಕೊಪ್ಪುವ ದನಿಯಲ್ಲಿ ಪ್ರಸ್ತುತ ಸಭೆಯ ಉದ್ದೇಶವನ್ನು ವಿವರಿಸಿದರು. ತಾವು ಇಲ್ಲಿಗೆ ಬಂದಿರುವುದು ವಾಸ್ತವ ಸ್ಥಿತಿಗತಿ ಅರಿತು ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಏನು ಮಾಡಬಹುದು ಮತ್ತು ಮಾಡಬೇಕು ಎಂಬುದನ್ನು ಅರಿಯುವ ಸಲುವಾಗಿಯೇ ಹೊರತು ಯಾರ ಮೇಲಾದರೂ ಗೂಬೆ ಕೂರಿಸಲೆಂದಲ್ಲ ಎನ್ನುತ್ತ ಕುಲಪತಿಯತ್ತ ದೃಷ್ಟಿ ಹಾಯಿಸಿದರು.
ಕುಲಪತಿ ಒರಟಾಗಿ ಒದರಿದರು, “ನಮ್ಮ ಕಡೆಯಿಂದ ಸರ್ವ ಸಹಕಾರ ಕೊಟ್ಟಿದ್ದರೂ ಸಂಪಾದಕ ಮಂಡಳಿಯಲ್ಲಿಯ ನಿಧಾನ ಧೋರಣೆಯೇ ಇಲ್ಲಿಯ ಪ್ರಧಾನ ಕಾರಣ.”
ದೃಢ ಖಚಿತ ದನಿಯಲ್ಲಿ ನಾನೆಂದೆ, “ಇದು ಮಿಥ್ಯಾರೋಪಣೆ. ವಿಶ್ವವಿದ್ಯಾನಿಲಯವೇ ಈ ಸ್ಥಗಿತತೆಗೆ ಕಾರಣ.” ಕಡತಗಳನ್ನು ಬಿಚ್ಚಿ ಸಂಬಂಧಿಸಿದ ಪತ್ರವ್ಯವಹಾರವನ್ನು ತೋರಿಸಿದೆ. ಮುಖ್ಯಾಂಶಗಳು: ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ; ದುಡಿಯುತ್ತಿರುವ ಕೆಲವೇ ಮಂದಿಗೆ ಯಾವುದೇ ಬಡ್ತಿ ಮಂಜೂರಾಗುತ್ತಿಲ್ಲ; ವಿಶ್ವಕೋಶದ ಸಂಪುಟಗಳನ್ನು ಮುದ್ರಿಸುತ್ತಿರುವ ಸರ್ಕಾರೀ ಮುದ್ರಣಾಲಯಕ್ಕೆ ಮುದ್ರಣ ಕಾಗದ ಖರೀದಿಸಲು ಹಣ ಸಲ್ಲಿಸಿಲ್ಲ - ಆಡಳಿತೆಯ ಈ ಮರಳ್ಗಾಡಿನಲ್ಲಿ ನೀರಿನೂಟೆಯನ್ನೆಲ್ಲಿ ಅರಸೋಣ? ಕುಲಪತಿ ಚಡಪಡಿಸಿದರು. ಉಳಿದ ಅಧಿಕಾರಿಗಳು ಎಲ್ಲೋ ನೋಡಿದರು. ಕಾರ್ಯದರ್ಶಿಯವರೇ ಸಮಾರೋಪಿಸಿದರು, “ಇವೆಲ್ಲ ಕೊರೆಗಳನ್ನೂ ನೀಗಲು ವಿಶ್ವವಿದ್ಯಾನಿಲಯಕ್ಕೆ ಅವಶ್ಯವಾದ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ. ದಯವಿಟ್ಟು ಒಡನೆ ಸವಿವರ ಬೇಡಿಕೆ ಪತ್ರ ಬರೆಯಿರಿ.”
“ನಮ್ಮ ಹಳೆಯ ಕಾಗದಗಳಲ್ಲಿ ಇವೆಲ್ಲವನ್ನೂ ವಿಸ್ತಾರವಾಗಿ ಕಾಣಿಸಿದೆ. ಕುಲಪತಿಗಳ ಕಚೇರಿ ಯುಕ್ತ ಕ್ರಮ ಕೈಗೊಳ್ಳಬೇಕು, ಅಷ್ಟೆ” ಎಂದು ಮಾತು ಕೂಡಿಸಿದೆ.
ಮುಂದೇನಾಯಿತು ಗೊತ್ತೇ? ಆಡಳಿತ ವಿಭಾಗ ಯಥಾಪ್ರಕಾರ ಶಿಶಿರನಿದ್ರೆಗೆ (hibernation) ಶರಣಾಯಿತು! ನಿಜ, “ಯಥಾ ರಾಜಾ ತಥಾ ಪ್ರಜಾ, ಯಥಾ ಮತಿ ತಥಾ ಪಥ” ಅನುಭವಜನ್ಯ ಸತ್ಯೋದ್ಗಾರಗಳು. ದೇಜಗೌ ಯುಗದಿಂದ ಹೆಗ್ಡೆ ಯುಗಕ್ಕಾದ ಅಧಃಪತನ ಹೃದಯವಿದ್ರಾವಕವಾಗಿತ್ತು. ಆದರೂ ಕನ್ನಡದ ಕೆಲಸ ಮುಂದುವರಿಯಲೇಬೇಕು.

ತಮಿಳು ತಲೆಗಳ ನಡುವೆ
ಅಧ್ಯಾಯ ಎಪ್ಪತ್ಮೂರು  (ಮೂಲದಲ್ಲಿ ೪೫)

ಮದ್ರಾಸು ನಗರದಲ್ಲಿ ನಾನು ಐದು ವರ್ಷವಿದ್ದುದು (೧೯೪೪-೪೯) ಸರಿಯಷ್ಟೆ. ಮದ್ರಾಸು ಪ್ರಾಂತದಲ್ಲಿ ತಮಿಳು, ತೆಲುಗು, ಮಲೆಯಾಳಂ ಮತ್ತು (ಕೆಲವು) ಕನ್ನಡ ಪ್ರದೇಶಗಳೂ ಸೇರಿದ್ದುವು. ಈ ನಾಲ್ಕೂ ಮಾತೃಭಾಷೆಗಳವರ ಮನಃಸ್ಥಿತಿ ಕುರಿತಂತೆ ಆಗ ನನಗೊಂದು ಅನುಭವಜನ್ಯ ನಿಯಮ ಹೊಳೆಯಿತು: ಮೊದಲ ಮೂವರಿಗೆ ತಮ್ಮ ಭಾಷೆ, ನೆಲ ಮತ್ತು ಸಂಸ್ಕೃತಿ ಬಗ್ಗೆ ಅತಿಶಯ ಅಭಿಮಾನ, ಒಗ್ಗಟ್ಟು, ಎಂದೂ ಇತರರೆದುರು ತಲೆ ಬಾಗದವರು. ಕನ್ನಡಿಗರಾದರೋ ತಾವಿರುವ ತಾಣಕ್ಕನುಗುಣವಾಗಿ ತಾಳಹಾಕುವವರು, ದ್ರವ ಪದಾರ್ಥ ಪಾತ್ರೆಯ ಆಕಾರ ತಳೆಯುವಂತೆ. ಈ ದಾಕ್ಷಿಣ್ಯದ ದುಷ್ಫಲ ಅಭಿಮಾನಶೂನ್ಯತೆ ಮತ್ತು ಅಸ್ಮಿತಾರಾಹಿತ್ಯ. ಇಂದಿನ (೨೦೦೬) ಪರಿಸ್ಥಿತಿ ಎಲ್ಲರಿಗೂ ಸುವೇದ್ಯ: ಕನ್ನಡನಾಡಿನಲ್ಲೇ ಕನ್ನಡಕ್ಕೆ ಮನ್ನಣೆ ಇಲ್ಲ.

ಇಲ್ಲಿ ಇನ್ನೊಂದು ತುಸು ಲಘುವಾದ, ಅಪ್ರಾಸಂಗಿಕವೆನಿಸಿದರೂ ಪರವಾ ಇಲ್ಲ, ಅನುಭವವನ್ನು ದಾಖಲಿಸಬೇಕು. ದಕ್ಷಿಣ ಭಾರತದ ನಾಲ್ಕು ಮುಖ್ಯ ಪ್ರದೇಶಗಳ ವಿದ್ಯಾರ್ಥಿಗಳು ಅಂದು ಮದ್ರಾಸಿನಲ್ಲಿ ಓದುತ್ತಿದ್ದರು. ಗಣಿತ ಪಾಠಗಳಲ್ಲಿ ಇಂಗ್ಲಿಷಿನ z ಅಕ್ಷರವನ್ನು ಮತ್ತೆ ಮತ್ತೆ ಬಳಸುತ್ತೇವೆ. ಒಬ್ಬ ತಮಿಳನ ಉಚ್ಚಾರಣೆಯಲ್ಲಿ ಇದು ez, ತೆಲುಗನದರಲ್ಲಿ jhad, ಮಲೆಯಾಳಿಯದರಲ್ಲಿ sed, ಕನ್ನಡಿಗನದರಲ್ಲಿ zed.  ತಮಿಳರ ದೃಷ್ಟಿಯಲ್ಲಿ ತೆಲುಗ ಮಹಾಸ್ವಾರ್ಥಿ, ಮಲೆಯಾಳಿ ಕೂಪಮಂಡೂಕ, ಕನ್ನಡಿಗ ಬರೇ ಬೆಣ್ಣೆಮುದ್ದೆ, ತಾನಾದರೋ ಸಾಕ್ಷಾತ್ ಭಗವಂತನ ಅವತಾರವೇ! ಇನ್ನೂ ಒಂದು ಸಂಗತಿ ಅರಿತೆ: ನೀವು ಬಗ್ಗಿದರೆ ಅವರು ತಲೆ ತುಳಿಯುತ್ತಾರೆ, ಸೆಟೆದು ನಿಂತರೆ  ಕಾಲಿಗೆ ಬೀಳುತ್ತಾರೆ! ಒಂದು ಅಂಶವಂತೂ ನಿಜ: ತಮಿಳರ ಕಾರ್ಯದಕ್ಷತೆ, ಸಾಂಘಿಕ ಸಾಹಚರ್ಯ, ಸ್ವಜನಪ್ರೇಮ, ಕಲಾಪ್ರಜ್ಞೆ, ಪ್ರವರ್ತನಶೀಲತೆ (initiative) ಮುಂತಾದವು ನಿಜಕ್ಕೂ ಅನುಕರಣೀಯ ಸದ್ಗುಣಗಳು.
      


ತಮಿಳರ ಸ್ವಭಾಷಾಮೋಹ ಉಗ್ರಸ್ವರೂಪದ್ದು, ಸೃಷ್ಟಿಕರ್ತ ಬ್ರಹ್ಮನ ವದನಾರವಿಂದದಿಂದ ಮೊದಲು ಉದುರಿದ ಭಾಷೆ ತಮ್ಮದು, ಅದು ಸೆಂದಮಿಳ್ ಎಂಬುದು ಅವರ ಅಚಲ ನಂಬಿಕೆ. ಇಂಥ ಉಗ್ರ ತಮಿಳು ಅಸ್ಮಿತೆಗೆ ಹೆಚ್ಚಿನ ಕೋಡು ಎಂ.ಜಿ.ರಾಮಚಂದ್ರನ್ ತಮಿಳುನಾಡಿನ ಮುಖ್ಯಮಂತ್ರಿಯಾದಾಗ ಮೂಡಿತು. ಆ ಒಂದು ಸುದಿನ ಅಲ್ಲಿಯ ಸರ್ಕಾರ ‘ತಂಜಾವೂರು ತಮಿಳು ವಿಶ್ವವಿದ್ಯಾಲಯ’ವನ್ನು ರಾಜಧಾನಿ ಚೆನ್ನೈಯಲ್ಲಿ ಸ್ಥಾಪಿಸಿತು. ಉದ್ದೇಶ: ತಮಿಳು ಭಾಷೆ, ಸಂಸ್ಕೃತಿ, ಪ್ರದೇಶ, ಇತಿಹಾಸ ಮುಂತಾದವನ್ನು ಕುರಿತ ಸಮಗ್ರ ಸಂಶೋಧನೆ, ಪ್ರಕಟಣೆ ಮತ್ತು ಜಾಗತಿಕ ಪ್ರಚಾರ.

ಆರಂಭದ ದಿನಗಳಲ್ಲಿ ಅದರ ಅಧಿಕಾರಿಗಳು ಭಾರತೀಯ ಭಾಷೆಗಳ, ಮುಖ್ಯವಾಗಿ ದಕ್ಷಿಣದವುಗಳ ಸಾಲಿನಲ್ಲಿ, ತಮಿಳಿನ ವರ್ತಮಾನ ಸ್ಥಿತಿಯನ್ನು ಪರಿಶೀಲಿಸಿದರು. ಆಗ ಇವರಿಗೆ ಗೋಚರಿಸಿದ ಎರಡು ಅಪ್ರಿಯ ಮತ್ತು ಅಪಥ್ಯ ಸತ್ಯಗಳು: ತಮಿಳಿನಲ್ಲಿ ಸಮಗ್ರ ವಿಶ್ವಕೋಶ ಯೋಜನೆ ಇನ್ನೂ (೧೯೮೦ರ ದಶಕ) ಸಿದ್ಧವೇ ಆಗಿಲ್ಲ, ಕನ್ನಡದಲ್ಲಾದರೋ ಅದು ಈಗಾಗಲೇ ಭರದಿಂದ ಮುನ್ಸಾಗುತ್ತಿದೆ! ಹೇಗೆ ಸಾಧ್ಯ? ಕಾರ್ಯನಿರ್ವಾಹಕ ಸಂಪಾದಕನ ಹೊಣೆಯನ್ನೂ ಹೊತ್ತಿದ್ದ ನನಗೆ ತಮಿಳು ವಿಶ್ವವಿದ್ಯಾಲಯದಿಂದ ಒಂದು ಅಧಿಕೃತ ಪತ್ರ ಬಂತು: ನಮ್ಮ ಕಾರ್ಯಶೈಲಿ ಪರಾಂಬರಿಸಲು ಅವರ ಪ್ರತಿನಿಧಿಗಳು ನಮ್ಮಲ್ಲಿಗೆ ಬರಬಹುದೇ? ವಿಶ್ವವಿದ್ಯಾನಿಲಯದ ಅನುಮೋದನೆ ಪಡೆದು ಅವರಿಗೆ ಹಸುರು ಕಂದೀಲು ತೋರಿಸಿದೆವು. ಬಂದವರು ಇಬ್ಬರು: ತಮಿಳು ವಿಶ್ವಕೋಶದ ನಿಯೋಜಿತ ಪ್ರಧಾನ ಸಂಪಾದಕ ಮತ್ತು ವಿಜ್ಞಾನ ಸಂಪಾದಕ. ಮೊದಲನೆಯವರು ಆಡಳಿತಾಂಗದಿಂದ ನಿವೃತ್ತರಾಗಿದ್ದ ಐಎಎಸ್ ಅಧಿಕಾರಿ, ಎರಡನೆಯವರು ನಿವೃತ್ತ ರೇಲ್ವೇ ನೌಕರ, ತಮಿಳಿನಲ್ಲಿ ಜನಪ್ರಿಯ ವಿಜ್ಞಾನ ಲೇಖಕ. ಎರಡು ದಿವಸ ಪೂರ್ತಿ ನಮ್ಮ ಮುದ್ರಿತ ಸಂಪುಟಗಳನ್ನೂ ಕಾರ್ಯವೈಖರಿಯನ್ನೂ ಪರಿಶೀಲಿಸಿ, “ಇಷ್ಟು ಕಡಿಮೆ ಸಿಬ್ಬಂದಿ, ಎಷ್ಟೊಂದು ಅಗಾಧ ಸಾಧನೆ” ಎಂದು ಉದ್ಗರಿಸಿ, “ಹಾಗಾದರೆ ನಿಮ್ಮ ವೇತನಶ್ರೇಣಿ ಉನ್ನತವಾಗಿರಬೇಕಲ್ಲವೇ?” ಎಂದು ಪ್ರಶ್ನಿಸಿದರು.
ಅದನ್ನು ಅವರಿಗೆ ಕೊಟ್ಟು ಹೇಳಿದೆ, “ಇಲ್ಲಿ ಅತ್ಯಂತ ಹೆಚ್ಚು ಸಂಬಳ ಪಡೆಯುತ್ತಿರುವವ ನಾನು. ನನ್ನ ಸಮಗ್ರ ಮಾಸಿಕ ವೇತನ ರೂ ೧೦೦೦ಕ್ಕಿಂತ ಕಡಿಮೆ. ಇದು ಹಾಗಿರಲಿ. ನಿಮ್ಮಲ್ಲಿಯ ಸಿಬ್ಬಂದಿ ಮತ್ತು ಸಂಬಳ ಹೇಗಿವೆ?” 
ಒಬ್ಬ ಪ್ರಧಾನ ಸಂಪಾದಕ, ೫ ಸಂಪಾದಕರು, ಇವರಲ್ಲಿ ಒಬ್ಬೊಬ್ಬರಿಗೆ ತಲಾ ೩ ಉಪಸಂಪಾದಕರು, ಕಚೇರಿ ಸಿಬ್ಬಂದಿ ಇತ್ಯಾದಿ. ಸಂಬಳ ಪ್ರಧಾನ ಸಂಪಾದಕ ರೂ ೫೦೦೦ದಿಂದ ಮೇಲಕ್ಕೆ, ಸಂಪಾದಕನಿಗೆ ರೂ ೩೦೦೦ದಿಂದ ಮೇಲಕ್ಕೆ, ಉಪಸಂಪಾದಕನಿಗೆ ರೂ ೧೦೦೦ದಿಂದ ಮೇಲಕ್ಕೆ. ತುಟ್ಟಿಭತ್ಯೆ ಮುಂತಾದವು ಅಲಾಯಿದ. ಬಂದಿದ್ದವರ ಶೈಕ್ಷಣಿಕ ಅರ್ಹತೆ ಮತ್ತು ಅವರಲ್ಲಿಯ ವೇತನಶ್ರೇಣಿ ಗಮನಿಸಿ ನಾನು ಮನದಲ್ಲಿ ಅಂದುಕೊಂಡೆ ಜನ್ಮಕ್ಕೂ ಇವರಿಂದ ಈ ಕೆಲಸ ಸಾಧ್ಯವಾಗದು. ದುಡ್ಡಾಗಲೀ ರಾಜಕೀಯ ಪ್ರಭಾವವಾಗಲೀ ಇತರ ಯಾವುದೇ ಶಿಕ್ಷಣೇತರ ಆಸಕ್ತಿಗಳಾಗಲೀ ವಿಶ್ವಕೋಶ ರಚನೆಯಂಥ ಬೌದ್ಧಿಕ ಯಾನದಲ್ಲಿ ಉಪಯುಕ್ತವಾಗವು.

“ನಾವು ಬಲು ಬೇಗ ಮದ್ರಾಸಿನಲ್ಲಿ ಅಖಿಲಭಾರತ ವಿಶ್ವಕೋಶ ನಿರ್ಮಾಪಕರ ಸಮ್ಮೇಳನ ಏರ್ಪಡಿಸುತ್ತೇವೆ. ಅದಕ್ಕೆ ನೀವು ದಯವಿಟ್ಟು ಬರಬೇಕು ಮತ್ತು ನಿಮ್ಮ ಅನುಭವವನ್ನು ವಿವರಿಸಬೇಕು” ಎಂದರು. ಒಪ್ಪಿದೆ.

ಯಥಾಕಾಲದಲ್ಲಿ ಅವರು ಮೂರು ದಿನಗಳ ಆ ಸಮ್ಮೇಳನವನ್ನು ಮದ್ರಾಸಿನಲ್ಲಿ ಏರ್ಪಡಿಸಿದರು. ನಾನೂ ಹೋಗಿದ್ದೆ. ಜ್ಞಾನ-ವಿಜ್ಞಾನ-ಕಲೆಗಳ ಆ ಶೃಂಗಭೇಟಿಗೆ ಆಸೇತುಹಿಮಾಚಲ ಎಲ್ಲ ಭಾಷೆಗಳವರೂ ತಮ್ಮತಮ್ಮ ಸಾಧನೆಗಳ ಸಹಿತ ಬಂದಿದ್ದರು. ಮುಖ್ಯಮಂತ್ರಿ ಎಂಜಿಆರ್ ಅದನ್ನು ಉದ್ಘಾಟಿಸಿದರು. ಶಿಕ್ಷಣಮಂತ್ರಿ ತಮಿಳಿನ ಹಿರಿಮೆ ಗರಿಮೆಗಳನ್ನು ಹಾಡಿ ಹೊಗಳಿ ಆಶಯಭಾಷಣವಿತ್ತರು. ಎಲ್ಲವೂ ತಮಿಳಿನಲ್ಲಿ. ಉತ್ತರ ಭಾರತದ ಪ್ರತಿನಿಧಿಗಳವರಿಗೆ ಒಂದು ವಾಕ್ಯವೂ ಅರ್ಥವಾಗಲಿಲ್ಲ. ಅರ್ಥವಾದ ನನಗೆ ನಗು ತರಿಸುವಂತಿತ್ತು ಮಂತ್ರಿದ್ವಯರ ನುಡಿದೊಂಬರಾಟ: ಜಗತ್ತಿನ ಸರ್ವೋತ್ಕೃಷ್ಟ ಮತ್ತು ಪ್ರಾಚೀನತಮ ಭಾಷೆ ತಮಿಳಿನಲ್ಲಿ ಇನ್ನೂ ವಿಶ್ವಕೋಶವಾಗಿಲ್ಲ, ಇದರ ಕಾರಣವನ್ನು ಪ್ರಸ್ತುತ ಸಮ್ಮೇಳನ ಶೋಧಿಸಿ ವಿಶ್ವಕೋಶನಿರ್ಮಾಣಕ್ಕೆ ಎಲ್ಲ ಭಾಷೆಗಳವರಿಗೂ ಉಪಯುಕ್ತವಾಗುವಂಥ ವಿಧಿ ನಿಯಮಗಳನ್ನು ರೂಪಿಸಬೇಕು - ಇಷ್ಟು ಆ ಕಂಠಶೋಷಣಗಳ ಸಾರ.   

ವಾಸ್ತವ ವ್ಯವಹಾರಗಳಿಗೆ ಇಳಿದಾಗ ಪ್ರಕಟವಾದ ದೃಶ್ಯ ಹತಾಶೆ ತರುವಂತಿತ್ತು: ಹಿಂದಿ, ಬಂಗಾಲಿ, ಮರಾಠಿಗಳಂಥ ಮುಂಚೂಣಿ ಭಾಷೆಗಳಲ್ಲಿಯೂ ವಿಶ್ವಕೋಶ ರಚನೆಯಾಗಿರಲಿಲ್ಲ. ಕನ್ನಡವೊಂದರಲ್ಲೇ ಎನ್‌ಸೈಕ್ಲೊಪೀಡಿಯಾ ಬ್ರಿಟಾನಿಕಾ ಮಾದರಿಯಲ್ಲಿ ಆಗಲೇ ೧೦ ಸಂಪುಟಗಳು ಬೆಳಕು ಕಂಡಿದ್ದುವು. ಅವನ್ನೆಲ್ಲ ಅಲ್ಲಿ ಪ್ರದರ್ಶಿಸಿದೆ ಕೂಡ. ಮೊದಲ ಎರಡು ದಿನಗಳು ಅವರವರ ಮಾತೃಭಾಷೆಗಳಲ್ಲಿ ಈ ವೃಥಾ ಸಲ್ಲಾಪ ಮುನ್ನಡೆಯಿತು. ರಾಜಕುಮಾರಿಯ ಸ್ವಯಂವರಕ್ಕೆ ಆಗಮಿಸಿದ ಯುವಪರಾಕ್ರಮಿಗಳು ತಮ್ಮ ಅಟ್ಟಹಾಸಗಳನ್ನು ಕೊಚ್ಚಿಕೊಳ್ಳುವಂತೆ ಪ್ರಹಸನ ಸಾಗಿತು. ಕುರುಡರ ನಾಡಿನಲ್ಲಿ ಒಕ್ಕಣ್ಣನೇ ಸಾರ್ವಭೌಮನಂತಿತ್ತು ನನ್ನ ಸ್ಥಾನ! ಕೊನೆಯ ದಿನದ ಸಮಾರೋಪ ಭಾಷಣ ಮಾಡಲು ನನ್ನನ್ನು ಪ್ರಾರ್ಥಿಸಿದರು. ೧ ಗಂಟೆ ಕಾಲ ಇಂಗ್ಲಿಷಿನಲ್ಲಿ ಉಪನ್ಯಾಸವಿತ್ತೆ. ಸಾರ:

ಆತ್ಮಶ್ಲಾಘನೆ ಪರನಿಂದನೆಗಳಿಂದ ಯಾವ ರಚನಾತ್ಮಕ ಕಾರ್ಯವೂ ಸಿದ್ಧಿಸದು. ನಮ್ಮ ಭಾಷೆಯೇ ಸರ್ವಶ್ರೇಷ್ಠ ಎಂಬ ಭ್ರಮೆ ಆತ್ಮಘಾತಕ. ಭಾಷೆಗಳೆಲ್ಲವೂ ಮನುಷ್ಯಕೃತ. ಯಾವುದೇ ಭಾಷೆಯ ಹಿರಿಮೆ ಮತ್ತು ಪ್ರಸಾರ ಸಾಧ್ಯವಾಗುವುದು ಪ್ರತಿಭಾನ್ವಿತರು ಅದನ್ನು ತಮ್ಮ ಸೃಜನಶೀಲ ಭಾವನೆಗಳ ಸಂವಹನಕ್ಕೆ ಯುಕ್ತ ಮಾಧ್ಯಮವಾಗಿ ಬಳಸಿದಾಗ ಮಾತ್ರ. ವಿಲಿಯಮ್ ಶೇಕ್‌ಸ್ಪಿಯರ್ (೧೫೬೪-೧೬೧೬) ತನ್ನ ಯುಗಪವರ್ತಕ ನಾಟಕಗಳನ್ನು ಇಂಗ್ಲಿಷಿನಲ್ಲಿ  ಬರೆದದ್ದರಿಂದ (ಆ ದಿನಗಳಲ್ಲಿ ರಾಜಭಾಷೆ ಲ್ಯಾಟಿನ್) ಇಂಗ್ಲಿಷಿಗೆ ಅಂತಸ್ತು ಒದಗಿತು. ಅದೇ ರೀತಿ ಮೈಖೇಲ್ ಫ಼್ಯಾರಡೇ (೧೭೯೧-೧೮೬೭) ಭೌತವಿಜ್ಞಾನದಲ್ಲಿ ತಾನು ಗೈದ ಮೂಲಭೂತ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ತನಗೆ ತಿಳಿದಿದ್ದ ಏಕೈಕ ಭಾಷೆ ಇಂಗ್ಲಿಷಿನಲ್ಲಿ (ಇದು ಆತನ ತಾಯಿನುಡಿ ಕೂಡ) ಅಭಿವ್ಯಕ್ತಿಸಿದ್ದರಿಂದ ವಿಜ್ಞಾನಸಂವಹನ ಮಾಧ್ಯಮವಾಗಿಯೂ ಇಂಗ್ಲಿಷ್ ಪ್ರಸಿದ್ಧಿ ಗಳಿಸಿತು. ಆದ್ದರಿಂದ ೨೦ನೆಯ ಶತಮಾನದ ಕೊನೆಯ ಪಾದದಲ್ಲಿರುವ ಭಾರತೀಯರಾದ ನಾವು ಅನುಸರಿಸಬೇಕಾದ ಹಾದಿ ಒಂದೇ: ನಮ್ಮ ನಮ್ಮ ಮಾತೃಭಾಷೆಗಳಲ್ಲಿ ಆಧುನಿಕ ಚಿಂತನೆಗಳನ್ನು ಸಂವಹನಿಸಲು ದೃಢ ಪ್ರಯತ್ನ; ಈ ಜ್ಞಾನಯಜ್ಞದಲ್ಲಿ ಭಾಗಿಗಳಾಗುವ ವಿಶ್ವಕೋಶ ನಿರ್ಮಾಪಕರಲ್ಲಿ ವಿಷಯತಜ್ಞತೆ, ಇಂಗ್ಲಿಷ್-ಪ್ರಾವೀಣ್ಯ, ಮಾತೃಭಾಷಾ ಪ್ರಭುತ್ವ ಮತ್ತು ಈ ಕಾರ್ಯದ ಬಗ್ಗೆ ಪರಿಪೂರ್ಣ ನಿಷ್ಠೆ ಸಂಗಳಿಸಿರಲೇಬೇಕು. ಕನ್ನಡದಲ್ಲಿ ನಾವು ಈ ಕೆಲಸವನ್ನು ಸಾಧಿಸುತ್ತಿರುವೆವೆಂದರೆ ಕನ್ನಡ ಭಾಷೆ ಇತರ ಭಾಷೆಗಳಿಗಿಂತ ಶ್ರೇಷ್ಠವೆಂಬ ಕಾರಣದಿಂದ ಅಲ್ಲ, ಇತರ ಭಾಷಿಕರು ತಮ್ಮ ಕಣ್ಣು ತೆರೆದು ಜಗತ್ತನ್ನು ನೋಡಲಿಲ್ಲ ಅಥವಾ ಇಂಗ್ಲಿಷಿಗೆ ತಮ್ಮ ಅಸ್ಮಿತೆಯನ್ನೇ ಅರ್ಪಿಸಿಬಿಟ್ಟಿದ್ದಾರೆ ಎಂದರ್ಥ. ವಿಶ್ವಕೋಶ ನಿರ್ಮಾಣದ ಜೊತೆಗೆ ಶಿಕ್ಷಣ ಮತ್ತು ಆಡಳಿತ ಮಾಧ್ಯಮ ಆಯಾ ರಾಜ್ಯದಲ್ಲಿ ಆಯಾ ಪ್ರಾದೇಶಿಕ ಭಾಷೆಯೇ ಆಗಬೇಕೆಂಬ ಆದೇಶವನ್ನು ರಾಜ್ಯ ಸರ್ಕಾರಗಳು ಘೋಷಿಸಿ ಆಚರಣೆಗೆ ತರಬೇಕು. ಅಪೇಕ್ಷಿಸಿದವರಿಗೆ ಇಂಗ್ಲಿಷ್ ಕಲಿಯಲು ಅವಕಾಶಗಳನ್ನು ಒದಗಿಸಬೇಕು.

ಸಭಾಸದರ ಪ್ರತಿಕ್ರಿಯೆ ದಿವ್ಯಮೌನ! ಏಕೆಂದರೆ ಸ್ವಭಾಷಾಮೋಹ. ಆ ಸಮ್ಮೇಳನದಿಂದ ನನಗೊಂದು ಅಂಶ ಸ್ಪಷ್ಟವಾಯಿತು: ಕನ್ನಡಿಗರ ಕೀಳರಿಮೆಗೆ ಏನೂ ಕಾರಣವಿಲ್ಲ, ಜೊತೆಗೆ, ಸ್ವಂತ ಸಾಮರ್ಥ್ಯ ಮತ್ತು ಸಾಧನೆ ಕುರಿತಂತೆ ಅವಜ್ಞೆ ಸರ್ವಥಾ ಸಲ್ಲದು.

(ಮುಂದುವರಿಯಲಿದೆ)

1 comment:

  1. ಕನ್ನಡಿಗರು ಅಂದೂ ಅಷ್ಟೆ, ಇಂದೂ ಅಷ್ಟೆ..... ಹೆಸರಿಗಷ್ಟೆ ಅಭಿಮಾನ.... ಕನ್ನಡದಲ್ಲಿ ಸ್ವಚ್ಚವಾಗಿ ಮಾತನಾಡಿದರೆ ಅವಮಾನ...

    ReplyDelete