19 July 2013

ಅದ್ವಿತೀಯ ಕಪ್ಪೆ ಶಿಬಿರ - ೨

[ವಿಶೇಷ ಸೂಚನೆ: ಇದನ್ನು ಓದುವ ಮುನ್ನ ೭-೯-೧೨ ಮತ್ತು ೧೪-೯-೧೨ರಂದು ನಾನಿಲ್ಲೇ ಎರಡು ಭಾಗಗಳಲ್ಲಿ ಪ್ರಕಟಿಸಿದ ಮಂಡೂಕೋಪಖ್ಯಾನವನ್ನು ಮತ್ತೊಮ್ಮೆ ಓದಿಕೊಳ್ಳುವುದು ಉತ್ತಮ]



“ಬಿಸಿಲೆಯಲ್ಲಿ ಕಪ್ಪೆ ಶಿಬಿರ ನಡೆದದ್ದು ಕಳೆದ ಮಳೆಗಾಲದ ಕೊನೇ ಪಾದ. ಈಗ ಹೊಸ ಮಳೆಗಾಲದ ಮೊದಲಪಾದ. ವೈಜ್ಞಾನಿಕ ಅಧ್ಯಯನಾಸಕ್ತರು ಋತುವೊಂದರಲ್ಲಿ ಕನಿಷ್ಠ ಮೂರು ಹಂತಗಳಲ್ಲಿ ಕ್ಷೇತ್ರ ಕಾರ್ಯ ನಡೆಸಿದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಈಗ ನಡೆಸೋಣವೇ” ಸ್ವತಃ ಡಾ| ಕೆವಿ ಗುರುರಾಜ್ (ಕೆವಿಜಿ) ಮೊದಲ ಶಿಬಿರದ ‘ಕ್ಯಾಪ್ಟನ್’ ದೀಪಿಕಾರಿಗೆ ಪತ್ರ ಬರೆದರು. ಅದನ್ನು ಸಂತೋಷದಿಂದಲೇ ಸ್ವಾಗತಿಸಿದೆವು. ದೀಪಿಕಾ ಮತ್ತು ‘ವೈಸ್ ಕ್ಯಾಪ್ಟನ್’ ವಿವೇಕ್ ಹದಿನೈದು ದಿನಗಳ ಮೊದಲೇ ಊಟ ವಾಸಗಳ ವ್ಯವಸ್ಥೆಗೆ ಬಿಸಿಲೆ ‘ಸಂಬಂಧಿ’ಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಬಿಸಿಲೆ ಮಾಮೂಲೀ ದಿನಗಳಲ್ಲೇ ಚರವಾಣಿಗೆ ಬಹುತೇಕ ‘ಅವ್ಯಾಪ್ತ’ವಾದದ್ದು. ಮಳೆಗಾಲದ ಪರಿಣಾಮಗಳೊಡನೆ ಸ್ಥಿರವಾಣಿ ಸಂಪರ್ಕವೂ ಅಸಾಧ್ಯವಾದದ್ದು ಆಶ್ಚರ್ಯವೇನೂ ಅಲ್ಲ. ಇವರು ಖುದ್ದು ಹೋಗುವುದು ಅನಿವಾರ್ಯವಾಯಿತು. ದೀಪಿಕಾಗೆ ಜೊತೆಗೊಡಲೆಂದೇ ವಿವೇಕ್ ಬೆಂಗಳೂರಿನಿಂದ ಮಂಗಳೂರಿಗೆ ಬಂದು, ಇಬ್ಬರೂ ದಿನದ ಮೊದಲ ಸುಬ್ರಹ್ಮಣ್ಯ ಬಸ್ ಹಿಡಿದರು. ಅಲ್ಲಿನ ಎಲ್ಲಾ ‘ಗ್ರಹಗಳೂ’ ಪ್ರಶಸ್ತವಾಗಿದ್ದುದಕ್ಕೆ ಸುಬ್ರಹ್ಮಣ್ಯ-ಬಿಸಿಲೆಯ ನಡುವೆ ದಿನಕ್ಕೊಮ್ಮೆ ಮಾತ್ರ ಓಡಾಡುವ ಬಸ್ಸು ಅಂದು ಇವರಿಗೆ ಎರಡೂ ದಿಕ್ಕಿನಲ್ಲಿ ಸಿಕ್ಕಿತ್ತು! ನಡುವೆ ಸಿಕ್ಕ ಸುಮಾರು ಮೂರು ಗಂಟೆಗಳ ಅವಧಿಯಲ್ಲಿ ಇವರು, ತುಳಸಿ ಹೋಟೆಲಿನ ದೇವೇಗೌಡ ದಂಪತಿ ಹಾಗೂ ಸಮುದಾಯಭವನದ ಮಲ್ಲೇಶಪ್ಪರನ್ನು ನೋಡಿ ಎಲ್ಲ ನಿಗದಿಗೊಳಿಸಿದ್ದರು.

ಅಶೋಕವನದಲ್ಲಿ ನಡೆದ ಪ್ರಥಮ ಕಪ್ಪೆ ಶಿಬಿರಕ್ಕೆ ಸಂಘಟನೆ ಮತ್ತು ಮುಖ್ಯ ಅಭ್ಯರ್ಥಿಗಳು ಮಂಗಳೂರಿನವರು, ಕೆವಿಜಿ ಮತ್ತು ಕೆಲವೇ ಅಭ್ಯರ್ಥಿಗಳು ಬೆಂಗಳೂರಿನವರು. ಆದರೆ ಈ ಎರಡನೆಯದಕ್ಕೆ ಸಂಘಟನೆ ಇಲ್ಲಿನದು, ಸಂಪನ್ಮೂಲ ವ್ಯಕ್ತಿಗಳೊಡನೆ ಬಹುತೇಕ ಭಾಗಿಗಳು ಘಟ್ಟದ ಮೇಲಿನವರೇ ಆಗಿದ್ದರು! ಅವರೆಲ್ಲ ವಿವಿಧ ಸಮಯಗಳಲ್ಲಿ ಹೊರಟು, ವಿವಿಧ ಸೌಕರ್ಯಗಳನ್ನು (ಕಾರು, ಬಸ್ಸು) ನೆಚ್ಚಿ ಸುಮಾರು ಏಕಕಾಲಕ್ಕೆ ಬಿಸಿಲೆ ಸೇರುವುದು ನಿಗದಿಯಾಗಿತ್ತು! ರೋಹಿತ್ ರಾವ್ ಸಾರಥ್ಯದಲ್ಲಿ ಹೊರಟ ಮಂಗಳೂರ ಜೀಪಿಗೆ ಮೊದಲ ಕಂತಿನ ಯಾತ್ರಿಗಳು - ದೀಪಿಕಾ, ಸಂದೀಪ್, ವಿನಾಯಕ ಮತ್ತು ನಾನು. ನವ್ಯಾ ಮೈಸೂರಿನಿಂದ ರಾತ್ರಿ ಬಸ್ಸಿನಲ್ಲಿ ಬಂದು ನಮ್ಮೊಡನೇ ಸೇರಿಕೊಂಡರು. ನಮ್ಮ ಘೋಷಿತ ಯಾನಾರಂಭ ಐದೂ ಕಾಲೆಂದಿದ್ದರೂ ನಿಜ ಸಮಯ ಆರು ಗಂಟೆಗೆ ಮಂಗಳೂರು ಬಿಟ್ಟೆವು. ವಿವೇಕ್, ಸೌಮ್ಯ ಮತ್ತು ಚಿನ್ಮಯಿ ಬೆಂಗಳೂರಿನಿಂದ ರಾತ್ರಿ ಬಸ್ಸಿನಲ್ಲಿ ಸುಬ್ರಹ್ಮಣ್ಯಕ್ಕೆ ಬಂದು ನಮ್ಮನ್ನು ಕಾದಿದ್ದರು. ಉಪ್ಪಿನಂಗಡಿ, ಕಡಬ ದಾರಿಯಲ್ಲಿ ಹೋಗಿ ನಾವು ಈ ಎರಡನೇ ಕಂತನ್ನು ಕುಳ್ಕುಂದದಲ್ಲಿ ಸೇರಿಸಿಕೊಂಡೆವು. ಮುಂದೆ ಉಳಿದದ್ದು ಬಿಸಿಲೆಘಾಟಿ. ಇದು ಕಿಲೋಮೀಟರ್ ಲೆಕ್ಕದಲ್ಲಿ ಬೆಂಗಳೂರಿನವರಿಗಿಂತಲೂ (೨೬೪ ಕಿಮೀ) ಅರ್ಧಕ್ಕೂ ಕಡಿಮೆ ಅಂತರದಲ್ಲೇ(೧೨೫ ಕಿಮೀ) ಮಂಗಳೂರಿಗರಿಗೆ ದಕ್ಕುತ್ತದೆ. ಹಾಗೆಯೇ ಹೆದ್ದಾರಿ ಲೆಕ್ಕ ತೆಗೆದರೂ ಅತ್ತ ಸಕಲೇಶಪುರದಿಂದ (ಸು. ೪೦ ಕಿಮೀ) ಹಳ್ಳಿಗಾಡಿನ ಹರಕು ದಾರಿಯ ಸವಾರಿಯಾದರೆ ಇತ್ತಣ ಕುಳ್ಕುಂದದ ಏರುದಾರಿ (ಸುಮಾರು ೧೫ಕಿಮೀ) ಅರ್ಧಕ್ಕು ಕಡಿಮೆಯೇ. ಆದರೆ ಆ ಕಿರಿದಂತರದಲ್ಲೇ ಅದು ಕೊಡುವ ಅನುಭವ ಅನನ್ಯ!

ಝರಿ ತೊರೆಗಳ ವೈಭವ, ಹೂ ಹಸಿರಿನ ಅಲಂಕಾರ, ಬೆಟ್ಟದ ಮೈಯನ್ನು ಬಿಗಿದಿಟ್ಟ ಶಿಸ್ತಿನ ಕಾವಲುಗಾರರಂತೆ ಆಕಾಶದೆತ್ತರದ ಮರಗಳು, ಜೀವಾಜೀವಗಳ ಅಸಂಖ್ಯ ಸ್ವನಗಳು, ಪರಿಮಳಗಳು - ಸಂಕ್ಷಿಪ್ತವಾಗಿ ಹೇಳುವುದಿದ್ದರೆ ಪ್ರಾಕೃತಿಕ ವೈಭವ ಇಲ್ಲಿ ಅನುಭವಿಸಿದಷ್ಟೂ ಮುಗಿಯದು. ಆದರೆ ನಾಗರಿಕ ಸವಲತ್ತು ಎಣಿಸಿದರೆ ಇಪ್ಪತ್ಮೂರು ಕಿಮೀ ಉದ್ದಕ್ಕೆ ನಿರ್ಜನ ಕಗ್ಗಾಡು. ಮಳೆಗಾಲದ ಮರ-ಬೀಳು, ದರೆ-ಜರಿ, ಚರಂಡಿ-ನಿಗಿ, ಕೊರಕಲಾಗು ಎನ್ನುವ ಬಹುಮುಖೀ ಸಂಕಟಕ್ಕೆ ಸಿಕ್ಕು ನರಳುತ್ತ ಹಾವಾಡುವ ಏರು ರಸ್ತೆ. ಈ ಅವಶೇಷದ ಮೇಲೆ ವಾಹನ ಓಡಿಸುವ ಕತೆಯೂ ಅಷ್ಟೇ ಸ್ವಾರಸ್ಯದ್ದು! ಅದೃಷ್ಟ ನಮ್ಮ ಜೊತೆಗಿದ್ದದ್ದಕ್ಕೆ ನಾವು ಹೋಗುವ ವೇಳೆ ಮಳೆ ಬಿಟ್ಟಿತ್ತು ಮತ್ತು ಆವರೆಗೆ ಉರುಳಿದ್ದ ಮರಗಳನ್ನಷ್ಟು ಇಲಾಖೆ ಕಡಿದು ದಾರಿ ಬಿಡಿಸಿತ್ತು. ಸುಮಾರು ಒಂಬತ್ತೂವರೆಗೆ ನಾವು ಗುರಿ ಸೇರಿದೆವು.

[ಕಾಲಾತಿಕ್ರಮಣಕ್ಕೆ ಕ್ಷಮೆಯಿರಲಿ: ಮಾರಣೇ ದಿನ, ಶಿಬಿರ ಮುಗಿಸಿ ಮರಳುವಾಗ ಈ ಅದೃಷ್ಟ ನಮ್ಮ ಜೊತೆಯಿರಲಿಲ್ಲ. ರಾತ್ರಿ ಏಳು ಗಂಟೆಯ ಸುಮಾರಿಗೆ ಬಿಸಿಲೆ ಬಿಟ್ಟಿದ್ದೆವು. ಕಗ್ಗಾಡಿನ ಕತ್ತಲನ್ನು ಮಳೆ, ಮೋಡ ಗಾಢಗೊಳಿಸಿತ್ತು. ಇನ್ನೂ ಅರ್ಧ ದಾರಿ ಸಲ್ಲುವುದರೊಳಗೆ ಎದುರು ದಾರಿ ಭಾರೀ ಮರ ಬಿದ್ದು ಬಂದಾಗಿತ್ತು. ಆ ಕಿಷ್ಕಿಂಧೆಯಲ್ಲಿ ಜೀಪ್ ಹಿಂದೆ ತಿರುಗಿಸಿ ಮತ್ತೆ ಬಿಸಿಲೆ ಸೇರಿ, ಮುಂದೆ ಹೆಚ್ಚಿದ ಮಂಜು ಮಳೆಯ ಜೊತೆಗೆ ಎಳೆಯುವ ನಿದ್ರೆಯ ವಿರುದ್ಧವೂ ಪರದಾಡಿಕೊಂಡೇ ಮಂಗಳೂರು ಸೇರುವಾಗ ಅಪರಾತ್ರಿ ಮೂರು ಗಂಟೆ!]

ಅತ್ತಣಿಂದ ಬೆಂಗಳೂರಿನ ಅಭ್ಯರ್ಥಿಗಳಾದ ಸಂತೋಷ್, ಕಾರ್ತಿಕ್, ಅನೂಪ್, ಸುಮನ್, ಅಪರ್ಣ, ಗುರುಪ್ರಸಾದ್, ಶಿಶಿರ್ ರಾವ್, ಅನಂತ್ ಮತ್ತು ಅವಿನಾಶ್ ತಂಡ ಎರಡು ಕಾರುಗಳಲ್ಲಿ ಚೆನ್ನರಾಯಪಟ್ಟಣಕ್ಕೆ ಬಂತು. ಅಲ್ಲಿ ಹೆದ್ದಾರಿ ಬಿಟ್ಟು ಹೊಸದೇ ಒಳದಾರಿಗಳನ್ನು ಅನುಸರಿಸಿ ಬಿಸಿಲೆ ನಮಗಿಂತಲೂ ಮೊದಲೇ ತಲಪಿದ್ದರು. ಬಿಸಿಲೆಗೆ ಸಮೀಪದ ಊರೇ ಆದ ಶನಿವಾರ ಸಂತೆಯಿಂದ ಆಶ್ರಿತ ಇದ್ದದ್ದರಲ್ಲಿ ಕಡಿಮೆ ‘ಪ್ರಯಾಣ-ಸುಖ’ ಅನುಭವಿಸಿ (ಸ್ವಂತ ಕಾರಿನಲ್ಲಿ ‘ಡ್ರಾಪ್’ ಪಡೆದು) ಬಂದಿದ್ದರು. ಕೊನೆಯ ಕಂತು - ಸಂಪನ್ಮೂಲ ವ್ಯಕ್ತಿಗಳಾದ ಡಾ| ಕೆವಿ ಗುರುರಾಜ್ (ಕೆವಿಜಿ), ಅವರ ಹೆಂಡ್ತಿ ಪ್ರೀತಿ, ಹಾಗೂ ಪ್ರಕಾಶಕ-ಗೆಳೆಯ ಸುಧೀರ್. ಅವರು ಹಿಂದಿನ ಶಿಬಿರಕ್ಕೆ ಬಂದ ನೆನಪು ಮತ್ತು ನಕ್ಷೆಯನ್ನೇ ನೆಚ್ಚಿ ಸಕಲೇಶಪುರ ದಾರಿ ಹಿಡಿದಿದ್ದರು. ಅವರು ಬರುವುದು ಇನ್ನೂ ತಡವೆಂಬ ಸುದ್ದಿ ದೀಪಿಕಾಗೆ ಯಾವುದೋ ಮಾಯೆಯಲ್ಲಿ ತಿಳಿದಿತ್ತು. ಹಾಗಾಗಿ ನಾವಿದ್ದವರಷ್ಟು ಜನ ಮೊದಲು ತುಳಸಿ ಹೋಟೆಲಿನಲ್ಲಿ ಹೊಟ್ಟೇಪಾಡು ನೋಡಿಕೊಂಡೆವು. ಮತ್ತೆ ‘ಸ್ಥಳ ಪರಿಚಯ’ಕ್ಕಿಳಿದೆವು!

“ಏನ್ ದೇವೇಗೌಡ್ರೇ ನಿಮ್ಮ ಬೋರ್ಡೇ ಮುರ್ದು ಹೋಗಿದ್ಯಲ್ಲಾಂ"ದೆ. “ಅಯ್ಯೋ ಬೋರ್ಡ್ ಮಾತ್ರ ಅಲ್ಲ. ಅಂಗಳದ ದ್ವಡ್ಡ ಹಲಸಿನ ಮರಾನೂ ಉರುಳ್ಹೋಗದೆ. ಅದ್ಕೂ ಎಚ್ಗೆ...” ನಮ್ಮ ಬಿಸಿಲೆಯ ಅನ್ನದಾತ ಅರ್ಥಾತ್, ತುಳಸಿ ಹೋಟೆಲಿನ ಯಜಮಾನ ದೇವೇಗೌಡ ಉರುಫ್ ಕರಿಯಣ್ಣ ಪಟ್ಟಿ ಬಿಚ್ಚುತ್ತಿದ್ದಂತೆಯೇ ನಾವೂ ಕಾಣತೊಡಗಿದ್ದೆವು. ಮಳೆಗಾಲ ಈ ಸಲ ಬಿಸಿಲೆಗೆ ಅಪ್ಪಳಿಸಿಯೇ ಪ್ರವೇಶಿಸಿತ್ತು. ಗಾಳಿಯ ಉತ್ಪಾತಕ್ಕೆ ವಿದ್ಯುತ್, ದೂರವಾಣಿ ಸಂಪರ್ಕಗಳೆಲ್ಲ ಕಡಿದು ಆಗಲೇ ಮೂರು ನಾಲ್ಕು ದಿನಗಳಾಗಿದ್ದುವು. ಸುಬ್ರಹ್ಮಣ್ಯ ಬಸ್ ಬರದೇ ದಿನ ಎರಡಾಗಿತ್ತು. ತೀರಾ ತುರ್ತಿಗೆ ಒದಗುತ್ತಿದ್ದ ಚಾಣಕ್ಯ ದಿಬ್ಬದಲ್ಲೂ (ನೆನಪಿದೆಯಲ್ಲಾ :-) ) ಜಾಲ ಸಂಪರ್ಕ ಕಡಿದುಹೋಗಿತ್ತು. ಸಾಲದ್ದಕ್ಕೆ ಊರಿನ ನಾಲ್ಕೈದು ಚರವಾಣಿಗಳೂ ವಿದ್ಯುತ್ ಪುನಶ್ಚೇತನ ಇಲ್ಲದೇ ನಿಸ್ತೇಜಗೊಂಡಿದ್ದವು. (ನಮ್ಮ ಒಂದು ಕಾರಿನಲ್ಲಿ ರೀಚಾರ್ಜ್ ವ್ಯವಸ್ಥೆಯಿದೆಯೆಂದು ತಿಳಿದು ಮೂರು ಚರವಾಣಿಗಳು ಜೀವನಾಂಶ ಪಡೆದದ್ದು ನನ್ನ ಗಮನಕ್ಕೆ ಬಂದಿದೆ!) ತುಳಸಿ ಹೋಟೆಲಿನದ್ದು ಇನ್ನೊಂದೇ ಸಂಕಟ. ಅಲ್ಲಿ ಅಟ್ಟು, ಬಡಿಸಿ, ತೊಳೆಯುವಲ್ಲಿಯವರೆಗೆ ದೇವೇಗೌಡ್ರ ಹೆಂಡತಿ - ಕಮಲಮ್ಮ - ಸಹಾಯಕರಿಲ್ಲದ ಗೃಹಮಂತ್ರಿ; ಏಕಾಕಿ! ದೇವೇಗೌಡ - ದನ, ಕೋಳಿ ಆರೈಕೆ, ಸೌದೆ, ನೀರು ಸಾಮಾನು ಪೂರೈಕೆ ಇತ್ಯಾದಿ ಎಕ್ಸ್ಟರ್ನಲ್ ಅಫೇರ್ಸ್‌ಗಳೊಡನೆ ಅಲ್ಪ ಸ್ವಲ್ಪ ಸಹಾಯ ಮಾಡುವುದಿತ್ತು. ಆದರೆ ಕರೆಂಟು ಕೈಕೊಟ್ಟು ಮಿಕ್ಸಿ ಓಡದೇ ಇದ್ದಾಗ ಮೂಲೆಪಾಲಾದ ಕಡೆಯುವ ಕಲ್ಲನ್ನು ಮರಳಿ ಅಧಿಕಾರಕ್ಕೇರಿಸಿ ನಿಭಾಯಿಸುವ ಸಾಹಸ ‘ಗೌಡ್ರ ಹೆಂಗುಸ್ರ’ದ್ದೇ ಗ್ರಹಚಾರ - ಪಾಪ! (“ದೇವತಾ ಹೆಣ್ಣುಗಳೆಷ್ಟು ಅದೃಷ್ಟವಂತರು! ಭಕ್ತಾದಿಗಳಿಗೆ ಎರಡು ಕೈಯಲ್ಲಿ ಅಭಯ ವರದೆಯರಾದರೂ ಮತ್ತೆರಡರಲ್ಲಿ ಕೂಡಿ, ಬೀಸಿ ಮಾಡಬಹುದಲ್ಲ” ಎನ್ನುತ್ತಾನೆ ಅಭಿನವ ತೆನಾಲಿರಾಮ!!) 

ನಮಗೆ ವಾಸಕ್ಕೊದಗಿದ ಸಮುದಾಯ ಭವನಕ್ಕೆ ಸುಭದ್ರವಾದ ಬಾವಿಯೇನೋ ಇತ್ತು. ಆದರೆ ಸವಲತ್ತುಗಳ ದೌಲತ್ತಿನಲ್ಲಿ (ಕಕ್ಕೂಸಿನಲ್ಲಿ ವಿದೇಶೀ ಕಮೋಡ್ ಕೂರಿಸಿ, ಉಪಯೋಗಿಸಿದವರಿಗೆ ‘ಎರಡೂ’ ಶುಚಿ ಮಾಡಲು ಫ್ಲಶ್ ಟ್ಯಾಂಕ್ ಹಾಗೂ ಫ್ಲಶ್ ಪೈಪ್ ಕೊಟ್ಟಿದ್ದರು!) ಬಾವಿಯಲ್ಲೊಂದು ಮೋಟಾರ್ ಮುಳುಗಿಸಿದ್ದರು. ವಿದ್ಯುತ್ ಸಂಪರ್ಕ ಇಲ್ಲಿ ಭವನಕ್ಕೆ ಬೆಳಕು ಕೊಡುವುದಕ್ಕಿಂತ ತುರ್ತಾಗಿ ಬಾವಿಯ ಮೋಟಾರಿಗೆ ಒದಗಿದ್ದು ಸಹಜವೇ ಇತ್ತು! ಕಟ್ಟಡದ ಎದುರು ಜಗುಲಿಯ ತಲೆಯ ಮೇಲೊಂದು ಸಿಂಟೆಕ್ಸ್ ಟ್ಯಾಂಕ್ ಹೇರಿ, ಅದಕ್ಕೆ ಬಾವಿ ನೀರು ಎತ್ತುಗಡೆ ನಡೆಸಿದ್ದರು. ಆ ಟ್ಯಾಂಕಿಗೆ ಕೊಳಾಯಿ ಹಾಕಿ ಭವನದ್ದೆ ಎರಡೆರಡು ಸ್ನಾನ, ಕಕ್ಕೂಸುಗಳ ನೀರಾವರಿ ವ್ಯವಸ್ಥೆಯೊಡನೆ ಆಸುಪಾಸಿನ ಮನೆಗಳಿಗೊದಗುವಂತೆ ಎರಡು ಮೂರು ಸಾರ್ವಜನಿಕ ನಲ್ಲಿಗಳನ್ನೂ ವಠಾರದೊಳಗೆ ಕೊಟ್ಟಿದ್ದರು. (ಮಳೆ ದೂರಾದ ದಿನಗಳಲ್ಲಿ ಮುನ್ನೂರು ಹೆಜ್ಜೆ ದೂರದಿಂದ ಊರಿನ ಎರಡು ಹೋಟೆಲಿನವರೂ ಈ ನಲ್ಲಿ ನೀರನ್ನೇ ತಮ್ಮ ಬಳಕೆಗೆ ನೆಚ್ಚುವುದು ನಾನು ಗಮನಿಸಿದ್ದೇನೆ) ಇದು ಸವಲತ್ತಲ್ಲ, ಪಾರತಂತ್ರ್ಯ ಎನ್ನುವುದು ಈಗ ಸ್ಪಷ್ಟವಾಗಿತ್ತು. ಬಾವಿಗೆ ಕನಿಷ್ಠ ವೆಚ್ಚದ ಮತ್ತು ಸರಳ ವ್ಯವಸ್ಥೆಯಾಗಬಹುದಾಗಿದ್ದ ರಾಟೆ, ಹಗ್ಗ, ಕೊಡಪಾನ ಭವನದಲ್ಲಿ ಬಿಡಿ, ಅದನ್ನು ನೆಚ್ಚಿದ ಸಮೀಪದ ಯಾವ ಮನೆಗಳಲ್ಲೂ ಇರಲಿಲ್ಲ! ಪಕ್ಕದಲ್ಲೇ ಜೀರ್ಣೋದ್ಧಾರ ಕಂಡಿದ್ದ ಪ್ರಾಚೀನ ಕೆರೆಯೇನೋ ಇತ್ತು. ನಾಲ್ಕೇ ಮೆಟ್ಟಲಿಳಿದು ನೀರು ಮೊಗೆಯೋಣವೆಂದರೆ ಬಾಲ್ದಿ, ಪಾಟೆಗಳಿಲ್ಲ. ಅದಕ್ಕೂ ಮಿಗಿಲಾಗಿ ಆ ಕೆರೆ ಆರೈಸಿ, ಬಳಸುವವರಿಲ್ಲದೆ ಗೊಸರು, ಅವಮಾನಿಸುವಂತೆ ಭವನದಿಂದಿಳಿವ ಕೊಳಚೆ ಕೂಡಿಸಿಕೊಂಡಿತ್ತು. ನಮ್ಮ ಅದೃಷ್ಟಕ್ಕೆ ಇಲ್ಲಿ ಆಕಾಶರಾಯರಿಗೆ ಪೂರ್ಣ ಕಡಿವಾಣ ಮತ್ತು ಅವಹೇಳನ ಮಾಡುವಲ್ಲಿ ನಾಗರಿಕತೆ ಸೋತಿತ್ತು. ಭವನದೊಳಗಿದ್ದ ದೊಡ್ಡ ತೋಪನ್ನು ಇಬ್ಬರು ಹೊತ್ತು ತಂದು ಮಾಡಿನ ಮಳೆನೀರಿಗೊಡ್ಡಿದೆವು. ನಮ್ಮೆರಡೂ ದಿನಗಳ ಅದಕು ಇದಕು ಎದಕು ಛಾನೀಸಂ (ಛಾವಣಿ ನೀರು ಸಂಗ್ರಹವನ್ನು ವಿಸ್ತೃತವಾಗಿ ಕನ್ನಡಿಗರಿಗೆ ಪರಿಚಯಿಸಿದ ಶ್ರೀಪಡ್ರೆಯವರ ಪ್ರಯೋಗ) ಧಾರಾಳ ಒದಗಿತು. ಕುಡಿನೀರ ಭದ್ರತೆಗೆ ‘ದೈವಕೃಪೆ’ಯೇ ಬಂತು! ಭವನದ ಪಕ್ಕದಲ್ಲೇ ಒಂದು ಪುಟ್ಟ ದೇವಸ್ಥಾನವಿದೆ. ಅದರ ಅಂಗಳದ ನಲ್ಲಿಗೆ ಹಿತ್ತಲಿನ ಕಾಡಿನ ಯಾವುದೋ ಝರಿಪಾತ್ರೆಯ ಸಂಪರ್ಕ ಕಲ್ಪಿಸಿದ್ದರು. ಅದಕ್ಕೆ ವಿದ್ಯುತ್ತಿನ ಬಾಧೆಯೂ ಇಲ್ಲ, ಮಾಲಿನ್ಯದ ಸೋಂಕೂ ತಟ್ಟಿಲ್ಲ! 

ಸುಮಾರು ಏಳು ವರ್ಷದ ಹಿಂದೆ, ಅಂದು ‘ಅಶೋಕವನ’ದ ಜಾಗ ನೋಡಿ, (ಅದನ್ನು ಮಾರಲಿದ್ದ) ಸಣ್ಣೇ ಗೌಡ್ರ ಮಕ್ಕಳೊಡನೆ ಮಾತುಕತೆ ನಡೆಸುತ್ತ ತುಳಸಿ ಹೋಟೆಲಿನಲ್ಲಿ ಚಾ ಕುಡಿದು ಅಂಗಳದಲ್ಲಿ ನಿಂತಿದ್ದೆ. ಎದುರಿನ ದಟ್ಟ ವನದಾಚೆಗೆ ಅಸ್ಪಷ್ಟವಾಗಿ ಧಿಗ್ಗನೆದ್ದ ಭಾರೀ ಬಂಡೆ ಕಾಣಿಸಿತು. ನಮ್ಮಲ್ಲಿದ್ದ ಪರ್ವತಾರೋಹಿಯ ಕುತೂಹಲಕ್ಕೆ ದೇವೇಗೌಡ್ರು ತಣ್ಣೀರೆರಚಿದರು “ಅಯ್ಯೋ, ಅದು ಕಲ್ಲುಗುಡ್ಡೆ. ದಾರಿ ಬರೀ ಜಿಗ್ಗು, ಹತ್ತಾಕಾಯ್ಕಿಲ್ಲ.” ಶಿಲಾರೋಹಿಯ ಪ್ರಥಮ ಪಾಠ - ಬಂಡೆಗಳಲ್ಲಿ ಹತ್ತಿದ ಬಂಡೆ ಮತ್ತು ಹತ್ತದ ಬಂಡೆಗಳಿವೆ; ಹತ್ತಲಾಗದ ಬಂಡೆಗಳಿಲ್ಲ! ಹಾಗೆ ಅಂದು ಅನಾವರಣಗೊಂಡ ಕಲ್ಲುಗುಡ್ಡೆ, ಯಾರಿಗೂ ಆ ವಲಯದ ಸಂಕ್ಷಿಪ್ತ ಮತ್ತು ಕಡಿಮೆ ಅವಧಿಯ ಪರಿಚಯಕ್ಕೆ ಹೇಳಿಮಾಡಿಸಿದ ತಾಣ. ಕಪ್ಪೆ ಶಿಬಿರಕ್ಕೆ ಬಂದ ಹೆಚ್ಚಿನವರು ಶುದ್ಧ ಪೇಟೆಯವರು! ನಮಗಿದ್ದ ಅರ್ಧ-ಮುಕ್ಕಾಲು ಗಂಟೆಯ ಅವಧಿಯಲ್ಲಿ ಆ ವಲಯದ ಪರಿಚಯಕ್ಕೆ ಉತ್ತಮ ತಾಣವೆಂದೇ ಕಂಡು ನಾನು ಘೋಷಿಸಿದೆ “ಚಲೋ ಕಲ್ಲುಗುಡ್ಡೆ!”

ಸುಭಾಷ್ ಗೌಡ್ರ ಮನೆ ಹಿತ್ತಿಲಿನ ಏಲಕ್ಕಿ ಮಡಿ ದಾಟಿದ್ದೇ ಅಲ್ಲಲ್ಲಿ ಭಾರೀ ಮರ, ಎಡೆಯಲ್ಲಿ ನುಸಿಯೂ ನುಸಿಯದಂತೆ ಹೆಣೆದುಕೊಂಡ ಆನೆಗಾತ್ರದ ಪೊದರು. ಸವಕಲು ಜಾಡೇನೋ ಸ್ಪಷ್ಟವಾಗಿಯೇ ಇತ್ತು; ಹಾಗೇ ಕವಲುಗಳು ಕೂಡಾ! ಕಾಡಿನ ‘ಮೌನ’ಕ್ಕೆ ಹಗಲಿನ ಶ್ರುತಿಗಾರರಂತೆ, ಮಳೆಗಾಲದ ಸಂಭ್ರಮವನ್ನು ಸ್ತುತಿಸುವ ಖವ್ವಾಲಿ ಗಾಯಕರಂತೆ ನಡೆದ ನಿರಂತರ ಬಿಬ್ಬಿರಿ (ಜೀರುಂಡೆ) ಸ್ವರ ಮೇಳ ಹೊಸಬರಿಗೆ ತಲ್ಲಣ ಹುಟ್ಟಿಸುವಷ್ಟು ತೀವ್ರವಾಗಿತ್ತು. ಎಲ್ಲೋ ತಾಮ್ರ ಕುಟ್ಟಿದಂತೆ, ಅಜ್ಞಾತ ಕಣಿವೆಯ ಸುದೂರದಲ್ಲೆಲ್ಲೋ ಯಾರೋ ಏಕಾಂಗಿ ದೀರ್ಘ ಶಿಳ್ಳೆ ಪಲುಕಿದಂತೆ ಹಕ್ಕಿಯುಲಿಗಳು, ಅಪೂರ್ವಕ್ಕೆ ಸಿಂಗಳೀಕಗಳ ‘ಘೂ’ಕಾರ ರೋಮಾಂಚನವನ್ನು ಉಂಟುಮಾಡುತ್ತಿದ್ದುವು. (ಮೊದಲೆಲ್ಲಾ ಕಾಡೇ ಅನುರಣಿಸುತ್ತಿದ್ದ ಕೆಂಜಳಿಲಿನ ‘ಚೊಳ್ ಚೊಳ್’ ಮಾತ್ರ ಈ ವಲಯದಿಂದ ನಿಶ್ಚಿತವಾಗಿ ಇಲ್ಲವಾಗುವಂತೆ ಮಾಡಿದ್ದಕ್ಕೆ ಕಳ್ಳಬೇಟೆಯವರನ್ನು ಶಪಿಸಬೇಕೋ ಉಸ್ತುವಾರಿಯ ಇಲಾಖೆಗೆ ಸಮ್ಮಾನ ಪತ್ರ ಕೊಡಬೇಕೋ ನೀವೆ ಯೋಚಿಸಿ) ಆದರೆ ಕಛೇರಿ ಗಾಯನದ ಶ್ರಾವ್ಯ ಪರವಶತೆಗೆ ಇಲ್ಲಿ ಆಸ್ಪದವಿಲ್ಲ. ಅವನ್ನು ಮಿಕ್ಕಿದ ಸದ್ದುಗಳಿಗೆ, ಬಹುಮುಖ್ಯವಾಗಿ ಆನೆಯ ಚಲನವಲನಗಳನ್ನು ಸೂಚಿಸುವ ಸದ್ದು, ಸೂಚನೆಗಳಿಗೆ ನಾವು ಕಿವಿ, ಕಣ್ಣಾದಷ್ಟೂ ಸಾಲದು. ಜೊತೆಗೆ ಮಳೆಯೊಡನೆ ಅಕ್ಷರಶಃ ಮೊಳಕೆಯೊಡೆದಂತೇ ಹೆಜ್ಜೆಗೆ ಹತ್ತು ಹತ್ತಿಕೊಳ್ಳುವ ಜಿಗಣೆ, ಅನಿವಾರ್ಯವಾಗಿ ಮರಸುಗಳನ್ನು ಬಿಟ್ಟು ಹರಿದಾಡುವ ಹಾವುಗಳ ಬಗ್ಗೆಯೂ ಎಚ್ಚರದಿಂದ ಇರಬೇಕಾಗುತ್ತಿತ್ತು. ನಮ್ಮ ತಂಡಕ್ಕೆ ಮುನ್ನೆಚ್ಚರಿಕೆಯ ಕೆಲಸ ಸಾಕಷ್ಟು ಪರಿಣಾಮಕಾರಿಯಾಗಿಯೇ ಆಗಿತ್ತು. ನಮ್ಮಲ್ಲಿ ಎಷ್ಟು ಕಾಲುಗಳೋ ಅಷ್ಟೂ ವೈವಿಧ್ಯ ಜಿಗಣೆ ನಿರೋಧಕ ವ್ಯವಸ್ಥೆಯಾಗಿತ್ತು!

ಮೂರು ನಾಲ್ಕು ಕವಲು ಜಾಡುಗಳನ್ನು ಚುರುಕಾಗಿ ಕಳೆಯುತ್ತಿದ್ದಂತೆ ನೇರ ಏರಿಕೆ. ಸ್ವಲ್ಪ ಏಲಕ್ಕಿ ಮಲೆಯೊಂದನ್ನು ಮತ್ತೆ ಸಣ್ಣ ಮರ, ವಿರಳ ಪೊದರು, ದಟ್ಟ ಬಳ್ಳಿಗಳ ಹಂದರಗಳ ನಡುವಣ ಜಾಡು. ಅಲ್ಲಿಲ್ಲಿ ತಪ್ಪಿಯೇ ಹೋಗುವಷ್ಟು ಪ್ರಾಕೃತಿಕ ಶಕ್ತಿಗಳು ಕೆಲಸ ಮಾಡಿದ್ದುವು. ಆದರೆ ಎಲ್ಲ ಹತ್ತೇ ಮಿನಿಟಿನಲ್ಲಿ ಮುಗಿದು, ಒಮ್ಮೆಲೆ ಆಕಾಶವೇ ಕವುಚಿ ಬಿದ್ದ ಅನುಭವ. ಕಾಡಿನ ಕೋಟೆ ಹರಿದು ನಾವು ಕಲ್ಲುಗುಡ್ಡೆಯ ನೆತ್ತಿಯಲ್ಲಿದ್ದೆವು.

ಕಲ್ಲುಗುಡ್ಡೆಯ ಆಚೆಗೆ ಕರಾವಳಿಗೆ ತೆರೆದ ಮೈ (ಪಶ್ಚಿಮ), ಸುಮಾರು ಆರ್ನೂರು- ಏಳ್ನೂರಡಿ ಉದ್ದಕ್ಕೆ ಇಳಿಜಾರು ಬಂಡೆಯಾಗಿ ತೆರೆದುಕೊಂಡಿತ್ತು. ಋತುಮಾನ ಸಹಜವಾದ ಮಂಜುಮೋಡದ ಸಡಗರದಲ್ಲಿ ಆರ್ಭಟಿಸುವ ಗಾಳಿ, ಕುಟ್ಟಿನೋಡುವ ದಪ್ಪದಪ್ಪ ಮಳೆಹನಿಗಳಷ್ಟೇ ನಮಗೆ ದಕ್ಕಿತು. “ತಪ್ಪಲಿನಲ್ಲೇ ಇರುವ ನಮ್ಮ ಅಶೋಕವನದಿಂದ ತೊಡಗಿ, ಘಟ್ಟ ಇಳಿಯುವ ದಾರಿ, ಸುಬ್ರಹ್ಮಣ್ಯದ ಬೆಳಕು, ಅರಬೀ ಸಮುದ್ರದ ಮಿರಮಿರ ನೋಟದವರೆಗೂ ದೃಶ್ಯ ಅಬಾಧಿತ” ಎನ್ನುವುದು ತಂಡಕ್ಕೆ ಬರಿಯ ನನ್ನ ಹೇಳಿಕೆಯಾಗುಳಿಯಿತು; ಅನುಭವ ಆಗಲಿಲ್ಲ! ಗುಡ್ಡೆಯ ಏಕಶಿಲಾ ಹಾಸು ಉತ್ತರಕ್ಕೆ ತಿರುವು ತೆಗೆದುಕೊಂಡಂತೆ ಪುಡಿ ಬಂಡೆಗಳೊಡನೆ ಹುಲ್ಲು, ಪೊದರು, ಕುಬ್ಜಮರಗಳ ಕಾಡು ಕವಿದಿತ್ತು. ಗುಡ್ಡೆಯ ದಕ್ಷಿಣ ದಿಕ್ಕಿನಲ್ಲಿ ಸುಮಾರು ಮುನ್ನೂರು ನಾನೂರಡಿಯ ನೇರ ಕಮರಿಯಿತ್ತು. ಅನ್ಯ ಋತುಗಳಲ್ಲಿ ಅಲ್ಲಿ ನಿಂತು ನೇರ ತಪ್ಪಲಿನ ವೈವಿಧ್ಯಮಯ ಹಸುರಿನ ಚಪ್ಪರದೆಡೆಯಲ್ಲಿ ಹಾವಾಡುವ ಮೋಟಾರು ದಾರಿಯ ಇಣುಕುನೋಟ ಪಡೆಯುವುದೇ ಒಂದು ಮೋಜು. ತುಸು ಆಚೆಗೆ ದಿಗಂತವನ್ನು ಸಂಕ್ಷಿಪ್ತಗೊಳಿಸುವಂತೆ ಮಲೆತ ಕುಮಾರಪರ್ವತ ಶ್ರೇಣಿಯನ್ನು ಕಣ್ತುಂಬಿಕೊಳ್ಳುವುದು ಎಂದೂ ಹಳತಾಗದ ಅನುಭವ, ಧನ್ಯತೆಯ ಸಮಯ.

ಡಾ| ಕೆವಿ ಗುರುರಾಜ್ ಬಳಗ ಅತ್ತ ಉಪಾಹಾರಕ್ಕೆ ತುಂಬಾ ತಡವೂ ಇತ್ತ ಊಟಕ್ಕೆ ತುಸು ಬೇಗವೂ ಎನ್ನುವ ಹೊತ್ತಿಗೆ ಬಿಸಿಲೆ ತಲಪಿದರು. ಆದರೆ ಅವರು ನಮ್ಮ ಮಾತಿನ ಉಪಚಾರವನ್ನೂ ನಿರೀಕ್ಷಿಸದೆ ಕಾರ್ಯತತ್ಪರವಾದದ್ದು ವಿಷಯಪ್ರೀತಿಗೂ ತನ್ನನ್ನು ‘ವಿಶೇಷಿಸಿ’ಕೊಳ್ಳದ ವಿನಯಕ್ಕೂ ಸಾಕ್ಷಿ! ಈ ಬಾರಿ ವಿದ್ಯುಜ್ಜನಕ, ದೃಶ್ಯ ಪ್ರಕ್ಷೇಪಕಗಳೇ (“ಅಶೋಕರೇ ಜನರೇಟರ್, ಪ್ರಾಜೆಕ್ಟರ್ ಅಂತ ಹೇಳಿಯಪ್ಪಾ!”) ಮೊದಲಾದ ತರಗತಿ ವ್ಯವಸ್ಥೆಗಳನ್ನೆಲ್ಲ ಕೆವಿಜಿ ಮೊದಲೇ ಬೇಡವೆಂದಿದ್ದರು. ಕ್ಷೇತ್ರಕಾರ್ಯವೇ ಮುಖ್ಯ ಲಕ್ಷ್ಯವಾದ್ದರಿಂದ ನಮ್ಮನ್ನೆಲ್ಲ ಒಟ್ಟು ಕೂರಿಸಿ, ಹತ್ತೇ ಮಿನಿಟಿನಲ್ಲಿ ಪರಸ್ಪರ ಪರಿಚಯ ಹಾಗೂ ಪ್ರಸ್ತುತ ಶಿಬಿರ ಕಲಾಪಗಳ ರೂಪುರೇಖೆ ಬಿಡಿಸಿಟ್ಟರು.


ಇಂದು ಪೇಟೆಯವರನ್ನು ಬಿಡಿ, ನೇರ ಹಳ್ಳಿಗಾಡಿನ ಜನಪದರಲ್ಲೂ ಡೋಂಕೃ ಕಪ್ಪೆ, ಕೆಂಗಪ್ಪೆ, ಹಸುರುಗಪ್ಪೆ, ಮರಗಪ್ಪೆ, ಹಾರುಗಪ್ಪೆ ಎಂಬಿತ್ಯಾದಿ ಕೇವಲ ತೋರಿಕೆಯ ಹೆಸರುಗಳಿಂದಾಚೆ ಕಪ್ಪೆಗಳನ್ನು ಗುರುತಿಸುವಲ್ಲಿ ನಾವು ಸೋಲುತ್ತೇವೆ. ಶೈಕ್ಷಣಿಕವಾಗಿಯೂ ‘ಕಪ್ಪೆಗಳು ಶೀತಲರಕ್ತ ಜೀವಿವರ್ಗಕ್ಕೆ ಸೇರಿದವು’ ಎನ್ನುವ ಪ್ರಾಥಮಿಕ ಶಾಲಾಪಾಠದ ಹೊರಗೆ ನಮ್ಮ ಕುತೂಹಲ ಬೆಳೆದದ್ದಿಲ್ಲ. “ಕೋಲ್ಡ್ ಬ್ಲಡ್ಡೆಡ್ ಅಲ್ಲ - ಎಕ್ಟೋಥರ್ಮ್, ಅಂದರೆ ಪರಿಸರದ ಉಷ್ಣಕ್ಕೆ ಸಂವಾದಿಯಾಗಿ ಸ್ಪಂದಿಸುವ ಜೀವಿಗಳು” ಎಂದು ಹೇಳಬೇಕಿದ್ದರೆ, ಅದಕ್ಕೆ ಕೆವಿಜಿ ಮಟ್ಟದ ಓದು ಕ್ಷೇತ್ರಕಾರ್ಯ ಮತ್ತು ಅಧ್ಯಯನ ಅವಶ್ಯ. ಅಜ್ಞಾನ (ಇಂದು ಅಸಂಬದ್ಧ ಮಾಹಿತಿಯ ಹುಚ್ಚುಹೊಳೆಯಲ್ಲಿ ಈಜಬಯಸುವ ನಮ್ಮ - ಸಾಮಾನ್ಯರ, ಉಡಾಫೆ ಎನ್ನಲೂಬಹುದು) ಮತ್ತು ವಿಜ್ಞಾನಗಳ ನಡುವೆ ಬಹು ದೊಡ್ಡ ಮಾಹಿತಿ ಕಂದರವಿದೆ. ಜೀವಿಗಳ ಕುರಿತಂತೆ ಪಾಶ್ಚಾತ್ಯರಿಂದ ಬಂದ ವೈಜ್ಞಾನಿಕ ವರ್ಗೀಕರಣ, ನಾಮಕರಣವನ್ನು ನಮ್ಮಲ್ಲಿ ಕಪ್ಪೆಗಳಿಗೆ ಅನ್ವಯಿಸಿ ಬಹಳ ಶ್ರಮ ಮತ್ತು ಶ್ರದ್ಧೆಯಿಂದ ನಡೆಸಿದವರಲ್ಲಿ ಕನ್ನಡಿಗರೂ ಆಗಿದ್ದ ಪ್ರೊ| ಸಿ.ಆರ್. ನಾರಾಯಣ ರಾಯರು (೧೮೮೨-೧೯೬೦) ಪ್ರಾತಃಸ್ಮರಣೀಯರು. ಸಲೀಂ ಅಲಿಗೆ ‘ಹಕ್ಕೀತಾತ’ ಇದ್ದಂತೇ ಸಿ.ಆರ್.ಎನ್ ರಾಯರಿಗೆ ‘ಕಪ್ಪೇರಾವ್’ ಅತ್ಯಂತ ಗೌರವ ಮತ್ತು ಪ್ರೀತಿಯ ಬಿರುದಾಗಿತ್ತು! ಕಪ್ಪೇರಾಯರನ್ನೂ ಮತ್ತವರು ವಿಶ್ವ-ಕಪ್ಪೆ ಮಾಹಿತಿಕೋಶಕ್ಕೆ ಪರಿಚಯಿಸಿದ ಹದಿನೆಂಟು ಕಪ್ಪೆಗಳನ್ನೂ ನಮಗೆ ಪರಿಚಯಿಸಿದ ಕೆವಿಜಿ ಆ ಮೂಲಭೂತ ಕಾರ್ಯವನ್ನು ಮುಂದುವರಿಸುವ ಛಲಹೊತ್ತಿದ್ದಾರೆ. 

‘ರಾಯರು ಪರಿಚಯಿಸಿದ ಹದಿನೆಂಟು ಕಪ್ಪೆ’ ಅಥವಾ ‘ಕಪ್ಪೆಗಳ ಪರಿಚಯ’ ಎನ್ನುವುದು ಸಂಖ್ಯಾ ಗಣತಿಯೂ ಅಲ್ಲ, ಅಬ್ರಾಮ ಭಾಮಿನಿ ರಹೀಮ ಸೋಫಿಯಾರ ಹಾಗೆ ಹಾಜರಿ ಪಟ್ಟಿಯೂ ಅಲ್ಲ. ವಿವಿಧ ಪರಿಸರಗಳಿಗನುಗುಣವಾಗಿ ಕಪ್ಪೆಗಳಲ್ಲಿ ಅಸಂಖ್ಯ ದೈಹಿಕ ಮಾರ್ಪಾಡುಗಳೂ ವರ್ತನ ಕ್ರಮಗಳೂ ರೂಢಿಸಿವೆ. ಆಯಾ ಪರಿಸರ ಮತ್ತು ಅಲ್ಲಿನ ಕಪ್ಪೆ ವೈವಿಧ್ಯವನ್ನು ಖಚಿತವಾಗಿ ಗುರುತಿಸಿ, ಸಾಕ್ಷ್ಯಸಹಿತ ವಿಜ್ಞಾನಲೋಕಕ್ಕೆ ಒಡ್ಡಿಕೊಳ್ಳುವುದು ಮಾತ್ರ ಇಲ್ಲಿ ‘ಪರಿಚಯ’ವಾಗುತ್ತದೆ. ಇದು ಒಮ್ಮೆ ಒಂದು ಕಪ್ಪೆಯನ್ನು ಕಂಡದ್ದೇ ಅಥವಾ ಒಂದು ಮಾದರಿಯನ್ನು ‘ಉಪ್ಪಿನಕಾಯಿ’ ಮಾಡಿದ್ದೇ ಸಾಧಿತವಾಗುವುದಿಲ್ಲ. ಆ ಕಪ್ಪೆಯ ಮಾದರಿಯೊಡನೆ ಅದರ ಎಲ್ಲಾ ಜೀವಿ ಅವಶ್ಯಕತೆಗಳನ್ನು (ಆಹಾರ, ನಿದ್ರಾ, ಮೈಥುನ ಎಂದು ಸರಳೀಕರಿಸಬಹುದು) ಎಲ್ಲಾ ಸಾಧ್ಯ ಸಾಕ್ಷಿಗಳೊಡನೆ ಪ್ರಸ್ತುತಪಡಿಸಬೇಕು. ಇದು ಸಾಮಾನ್ಯರಿಂದಾಗುವ ಕೆಲಸವಲ್ಲ. ಆದರೆ ಇದಕ್ಕೆ ಪ್ರೇರಣೆ ಕೊಡುವ ಮತ್ತು ಬಲು ವಿಸ್ತೃತ ಕ್ಷೇತ್ರ ಕಾರ್ಯವನ್ನು ಬಯಸುವ ಕೆಲಸವನ್ನಾದರೂ ಹವ್ಯಾಸಿಗಳು ಅವಶ್ಯ ಮಾಡಬಹುದು/ ಮಾಡಬೇಕು. ಕಪ್ಪೆಗಳ ಬಾಹ್ಯ ಲಕ್ಷಣವನ್ನು ಗುರುತಿಸಿ, ಲಭ್ಯ ಸ್ಥಳ ವೇಳೆಗಳನ್ನು ದಾಖಲಿಸುವ ಕನಿಷ್ಠ ಕಾರ್ಯವೂ ಜೀವವೈವಿಧ್ಯ ಸಂರಕ್ಷಣೆಯಲ್ಲಿ ಬಹು ದೊಡ್ಡ ಮೆಟ್ಟುಗಲ್ಲಾಗುತ್ತದೆ. (ಕ್ಷಮಿಸಿ, ಸಂಪೂರ್ಣ ಭಿನ್ನ ರಂಗದ ಉದಾಹರಣೆಯೊಂದನ್ನು ಇಲ್ಲಿ ಹೇಳದಿರಲಾರೆ: ಸಾಲಿಗ್ರಾಮ ಮಕ್ಕಳ ಮೇಳದ ಶ್ರೀಧರ ಹಂದೆಯವರು ಕಳೆದ ನಾಲ್ಕು ದಶಕಕ್ಕೂ ಮಿಕ್ಕು ಕಾಲದಿಂದ ಹೊಸ ಹೊಸಾ ಮಕ್ಕಳನ್ನು ಸ್ವಂತ ಖರ್ಚು, ಶ್ರಮಗಳಿಂದ ಸೀಮಿತ ಯಕ್ಷ-ಪ್ರದರ್ಶನಕ್ಕೆ ಸಜ್ಜುಗೊಳಿಸುತ್ತಲೇ ಇದ್ದಾರೆ. ‘ಎರಡು ಪ್ರಸಂಗಗಳಲ್ಲಿ ಒಬ್ಬ ಹುಡುಗ ಕುಣಿದದ್ದೇ ಯಕ್ಷಗಾನ ಉಳಿಯುತ್ತದೋ’ ಎಂದು ವ್ಯಂಗ್ಯವಾಡಿದವರಿದ್ದಾರೆ. 

ಹಂದೆಯವರು ಸಂತೃಪ್ತಿಯಲ್ಲಿ ಹೇಳುತ್ತಾರೆ “ಮುಂದೆ ಅವನು ಏನೇ ಆಗಲಿ, ಯಕ್ಷಗಾನಕ್ಕೊಬ್ಬ ಸಹೃದಯೀ ಪ್ರೇಕ್ಷಕನಂತೂ ಖಂಡಿತ ಆಗುತ್ತಾನೆ!”) ಅಂಥಾ ಸ್ವಯಂಸೇವಕರನ್ನು ಸಜ್ಜುಗೊಳಿಸುವುದೇ ಕೆವಿಜಿಯವರ ಈ ಶಿಬಿರದ ಪ್ರಧಾನ ಲಕ್ಷ್ಯವಾಗಿತ್ತು. ಈಗಾಗಲೇ ಐಐಎಸ್ಸಿಯ ಡಾ| ಹರೀಶ್ ಭಟ್ ಮತ್ತು ಗೆಳೆಯರು ಸಾರ್ವಜನಿಕರಿಗೆ ಸುಲಭವಾಗಿ ‘ಹಕ್ಕಿಗಳನ್ನು ಗುರುತಿಸಿ’ ಮಾಹಿತಿ ಕೋಶವನ್ನು ಸಮೃದ್ಧವಾಗಿಸಲು ಯುಕ್ತ ತಂತ್ರಾಂಶವನ್ನು ಉಚಿತವಾಗಿ ಬಿಡುಗಡೆ ಮಾಡಿದ್ದಾರೆ. ಅದೇ ನಿಟ್ಟಿನಲ್ಲಿ ‘ನೀ ಎಲ್ಲಾದರೂ ಇರು, ಎಂತಾದರೂ ಇರು, ಕಪ್ಪೆ ಗುರುತಿಸುತ್ತಿರು’ ಎನ್ನುವ ಕರೆ ಕೆವಿಜಿ ಕೊಟ್ಟರು. ಅದಕ್ಕೆ ಸೂಕ್ತವಾದ ಮಾಹಿತಿ ಪತ್ರದ ಮಾದರಿಯನ್ನು ತೋರಿಸಿದರು. ಶಿಬಿರಕ್ಕೆ ಬಾರದೆಯೂ ಇಂಥ ತಿಳುವಳಿಕೆ ಮತ್ತು ದಾಖಲಾತಿಯಲ್ಲಿ ಆಸಕ್ತರ ಅನುಕೂಲಕ್ಕಾಗಿ ಕೆವಿಜಿ ಕಪ್ಪೆಗಳ ಕುರಿತ ತನ್ನ ಪುಸ್ತಕ - Pictorial guide to Frogs & Toads of the Western Ghats, ಇದನ್ನು ಮುದ್ರಿತ ಹಾಳೆಗಳಿಂದ ವಿದ್ಯುನ್ಮಾನ ಮಾಧ್ಯಮಕ್ಕೂ ವಿಸ್ತರಿಸಿದ್ದಾರೆ. ತನ್ನ ಜಾಲ ತಾಣ - www.gururajakv.net , ಇದನ್ನು ನಿತ್ಯ ಸಮೃದ್ಧಗೊಳಿಸುತ್ತಲೂ ಇದ್ದಾರೆ.

ಪೂರ್ವಾಹ್ನದ ಉಳಿದ ವೇಳೆಗೆ ಎಂಬಂತೆ ಅಶೋಕವನದತ್ತ ಒಳದಾರಿಯುದ್ದಕ್ಕೆ ಕಪ್ಪೆ ‘ಬೇಟೆ’ಗೆ ಇಳಿದೆವು. ಎಡಕ್ಕೆ ಗದ್ದೆಯ ಕಾರುಭಾರು, ಬಲಕ್ಕೆ ಏಲಕ್ಕಿಮಲೆಯ ಹರಹು, ಮುಂದುವರಿದಂತೆ ಎರಡೋ ಮೂರೋ ವರ್ಷಗಳ ಹಿಂದೆ ಭಾರೀ ಮೋಪು ಸಾಗಿಸಿದ ಅವಶೇಷಗಳ ನೆಲ ಮತ್ತೆ ದಟ್ಟ ಕಾಡು. ಕೃಷಿಯ ಲೆಕ್ಕಕ್ಕೆ, ಸುಲಭದ ಮನುಷ್ಯ ಲಾಭಕ್ಕೆ ಕಾಡು ಕಳೆಯುವುದು ನಿರಂತರ ಅಗತ್ಯ. ಆದರೆ ಪ್ರಕೃತಿ ಔದಾರ್ಯದಲ್ಲಿ ಮನುಷ್ಯನ ಸಣ್ಣ ಪುಟ್ಟ ತಪ್ಪುಗಳನ್ನು ‘ಮುಚ್ಚುತ್ತಲೇ’ ಇತ್ತು. ಮಳೆಯ ಹೊಡೆತಕ್ಕೆ ದರೆ ಜರಿದು, ದಾರಿ ಜಾಡು ಕೊರಕಲು ಬಿದ್ದು, ಹುಲ್ಲು ಪೊದರು ಮರಗಳ ವಿಕಸನ ನಡೆದೇ ಇತ್ತು. ಜಾಡಿನ ನಡುವೆ ಮೂಡಿದ ತತ್ಕಾಲೀನ ತಗ್ಗಿನ ನೀರಿನಲ್ಲೂ ಗೊದಮೊಟ್ಟೆಗಳ ಹಿಂಡು. ಹಳೇ ಸೆಗಣಿ ಕುಪ್ಪೆಯನ್ನು ಮೀರಿ ‘ನಾನು ಯಾರು’ ಎಂದು ಪ್ರಶ್ನಾರ್ಥಕವಾಗಿಯೇ ನಿಂತು ಕೇಳುವಂತಿತ್ತು ಯಾವುದೋ ಒಂದು ಮೊಳಕೆ. 

ಅಬ್ಬಿ ಮಗುಚಿದ ಕಲ್ಲಿನರೆಯಲ್ಲಿ ಕಪ್ಪೆಯ ಠಿಕಾಣಿ. ನೋಡನೋಡುತ್ತಾ ಕಳೆದ ಶಿಬಿರದ ಮೂಲಾಂಶಗಳ ಮರೆವು ಕಳೆದೆವು. ಸಮಯದ ಪರಿವೆಯೂ ಕಳೆದು ಹೋಗುತ್ತಿದೆ ಎಂದು ಎಚ್ಚರಿಸಲೆಂಬಂತೆ ಮಣ್ಣು ತೊಳೆದುಹೋದ ಜಾಡಿನ ನಡುವಣ ಕಲ್ಲಕುಪ್ಪೆಯಡಿಯ ತರಗೆಲೆ ಕೊಳೆಯಲ್ಲಿ ಬೇರೂರಿ ನಿಂತ ಅಣಬೆ ‘ಅಪಾಯ’ದ ಬಣ್ಣ ತೋರಿಸಿತು! ಊಟಕ್ಕೆ ಮರಳಿದೆವು.

ಅಪರಾಹ್ನ ‘ಮಾಹಿತಿ ಪತ್ರ’ ತುಂಬುವ ಕೆಲಸವನ್ನು ಪ್ರಾಯೋಗಿಕವಾಗಿ ರೂಢಿಸಲು ಸ್ಪಷ್ಟ ಎರಡು ಗುಂಪು ಹಾಗೂ ಸಮೀಕ್ಷೆಗೆ ಎರಡು ವಲಯವನ್ನು ಗುರುತು ಮಾಡಿಕೊಟ್ಟರು. ಭವನದ ಅಂಗಳದಿಂದ ಎದುರು ರಸ್ತೆಯವರೆಗೆ ಒಂದು ಗುಂಪು ಕೆವಿಜಿಯವರೊಡನೆ ಕೆಲಸ ಮಾಡಿತು. ಇನ್ನೊಂದು ವಠಾರದ ಹೊರಗಿನಿಂದ ಹಿತ್ತಲಿನವರೆಗೆ ಸುಧೀರ್ ಮತ್ತು ಪ್ರೀತಿ ಗುರುರಾಜ್‌ರ ಸಹಕಾರದಲ್ಲಿ ನಡೆಸಿತು. ಮತ್ತೊಂದು ಅವಧಿಯಲ್ಲಿ ಎಲ್ಲರು ಒಟ್ಟಾಗಿ ಕೆರೆಯ ಪ್ರಭಾವಲಯದಲ್ಲಿ ಕಪ್ಪೆ ಸಮೀಕ್ಷೆ ನಡೆಸಿದೆವು.

ಕತ್ತಲೆಯಾಗುತ್ತಿದ್ದಂತೆ ಹಿಂದಿನಂತೆ ವಾಹನಗಳನ್ನೇರಿ ಅಶೋಕವನಕ್ಕೆ ಹೋದೆವು. ನಾವು ಹೋದ ದಿನ ಮಳೆಯ ಅಬ್ಬರ ತುಸು ಕಡಿಮೆಯಿತ್ತು. ಆದರೆ ಋತುವಿನ ಪ್ರಭಾವದಲ್ಲಿ ಎರಡೆರಡು ಮರ ಉರುಳಿ ಬಿದ್ದಿದ್ದುದರಿಂದ ಹಡ್ಲಿಗೆ ಜಾಡರಸುವುದೇ ತುಸು ಕಷ್ಟದ್ದಾಯಿತು. ಆದರೆ ಮತ್ತೆ ಮಳೆ, ಮಂಜಿನ ಪ್ರಭಾವ ಹೆಚ್ಚಿರದುದರಿಂದ, ತೊರೆಯೂ ಉಬ್ಬರಿಸದಿದ್ದುದರಿಂದ ಭಾಗಿಗಳು ಹೆಚ್ಚು ವ್ಯಾಪಕವಾಗಿ ಹರಡಿಕೊಂಡು ಮೋಜಣಿ ನಡೆಸುವುದು ಸಾಧ್ಯವಾಯ್ತು. ಹಗಲಿನ ಬಿಬ್ಬಿರಿ ಘೋಷವನ್ನು ರಾತ್ರಿ ಪಾಳಿಯಲ್ಲಿ ಮಂಡೂಕ ಸೈನ್ಯ ವಹಿಸಿಕೊಂಡಿತ್ತು.

ಆ ಕತ್ತಲಮೊತ್ತದಲ್ಲಿ ಬೆಳಕಿನ ಕೋಲು ಹಾಕಿ ಕಪ್ಪೆಯಿಂದ ಕಪ್ಪೆಗೆ ಕುಪ್ಪಳಿಸುವ ಮಂದಿಗೆ ಕನಿಷ್ಠ ಮೂಲ ಸ್ಥಾನದ ಅರಿವು ಮತ್ತು ಮರಳಿ ಹೋಗುವ ಜಾಡಿನ ಬಂದೋಬಸ್ತು ಕಾಣಿಸುವ ಸಲುವಾಗಿ ನಾನು ಮಾತ್ರ ಹಡ್ಲಿಗೆ ಇಳಿದಲ್ಲೇ ಹೆಚ್ಚುಕಮ್ಮಿ ಲಂಗರು ಹಾಕಿ ನಿಂತಿದ್ದೆ. ಆದರೂ ಒಂದಿಬ್ಬರು ಹಾರುವ ಕಪ್ಪೆ (ಮಲಬಾರಿಕಸ್) ಕೈವಶವಾದ ಸಂತೋಷವನ್ನು ಕೆವಿಜಿಯೊಡನೆ ಹಂಚಿಕೊಳ್ಳುವ ಸಲುವಾಗಿ ಧಾವಿಸಿದಾಗ ನಾನೂ ವಿಚಲಿತನಾಗಿದ್ದೆ! ಕಪ್ಪೆಯ ಮೇಲ್ಮೈ, ತಳಮೈ, ವಿವಿಧ ಕೋನಗಳೆಲ್ಲವನ್ನೂ ಪರಿಶೀಲಿಸಿ, ಚಿತ್ರಿಸಿಯಾದ ಮೇಲೆ ಮುಕ್ತ ಚಿತ್ರಕ್ಕಾಗಿ ಯಾರೋ ತಮ್ಮ ಅಂಗೈ ಮೇಲಿರಿಸಿಕೊಂಡರು. ಕಪ್ಪೆ ಅದುವರೆಗಿನ ‘ಹಿಂಸೆ’ಗೆ ಬೇಸತ್ತು ಕುಪ್ಪಳಿಸಿ ಕೂತದ್ದು ಮಾತ್ರ ನನ್ನ ಕೈಮೇಲೆ. ಸಂರಕ್ಷಕನ ಯಜಮಾನಿಕೆಯನ್ನದು ಮನ್ನಿಸಿತೆಂದು ತಮಾಷೆಗೆ ಹೇಳಿದರೂ ನನ್ನ ಜವಾಬಾರಿಯನ್ನಂತೂ ಅದು ಎಚ್ಚರಿಸಿದ್ದು ನಿಜವೇ ಇರಬೇಕು. 

ಎರಡನೇ ದಿನದ ಬೆಳಗ್ಗಿನ ಚಾರಣ/ ಸಮೀಕ್ಷೆ ದಾರಿಗುಂಟ ‘ಬೀಟೀಸ್ಪಾಟ್’ ಕಡೆಗೇ ನಡೆಯಿತು. ಉಪಾಹಾರದನಂತರ ಎಲ್ಲ ಭವನದೊಳಗೇ ಕುಳಿತು ಸಮೀಕ್ಷೆಗಳ ಕ್ರೋಢೀಕರಣ ನಡೆಸಿದೆವು. ಕಳೆದ ಬಾರಿಗೂ (ಸುಮಾರು ಹದಿನಾಲ್ಕು) ಮೂರು ಹೆಚ್ಚಿನ ಕಪ್ಪೆ ವೈವಿಧ್ಯ ಈ ಬಾರಿ ನಮಗೆ ದಕ್ಕಿತ್ತು. ನಮ್ಮ ಕ್ಷೇತ್ರಕಾರ್ಯ ಪ್ರಾಥಮಿಕ ಮಟ್ಟದ್ದು ಮತ್ತು ತುಂಬಾ ಸೀಮಿತ ವಲಯದ್ದು ಎಂಬ ಸ್ಪಷ್ಟ ಅರಿವು ಎಲ್ಲರಿಗೂ ಇತ್ತು. ಆದರೆ ವಿಶ್ವ ಕಪ್ಪೆ ಜ್ಞಾನಕೋಶದ ಸೇರ್ಪಡೆಗೆ ನಿಶ್ಚಯವಾಗಿ ನಮ್ಮದೊಂದು ಪುಟ್ಟ ಮತ್ತು ಪ್ರಥಮ ಹೆಜ್ಜೆ ಹೌದು ಎನ್ನುವ ಹೆಮ್ಮೆ ಉಳಿಸಿಕೊಂಡು ಶಿಬಿರ ಮುಗಿಸಿದೆವು.

ವಿಶೇಷ ಸೂಚನೆ: ಸಾರ್ವಜನಿಕರೂ ಕಪ್ಪೆ ಗುರುತಿಸುವ ಮಾಹಿತಿಪತ್ರಕ್ಕೆ ಇಲ್ಲಿ ಚಿಟಿಕೆ ಹೊಡೆಯಿರಿ ಮತ್ತು ನಿಮ್ಮ ಮಂಡೂಕ ಪ್ರೇಮವನ್ನು ಸಾರ್ಥಕಪಡಿಸಿಕೊಳ್ಳಿ.

6 comments:

  1. Tumba channagi moodi bandide SIR, chitragaLu channagive :). MaRa bidda chitra siglilla anodu ondu sanna besara.
    Dhanyavadalgalu :).

    ReplyDelete
  2. ಹಿರಿಯರೇ,
    ಬಹಳ ಚೆನ್ನಾಗಿ ವಿವರಿಸಿದ್ದೀರ. ಎರಡು ದಿನ ಪರಿಸರ ಮಧ್ಯೆ ನಿಮ್ಮೆಲ್ಲರ ಜೊತೆ ಸಮಯ ಕಳದದ್ದೇ ಗೊತ್ತಾಗಲಿಲ್ಲ. ಮತ್ತೆ ಭೇಟಿ ಮಾಡುವ.
    ಇಂತಿ, ಸಂತೋಷದಿಂದ ಸಂತೋಷ್.

    ReplyDelete
  3. ashoka vardhanare, dhanyavaadagalu. Android phone iruvavarigaagi, kappe tantramsha pukkate labhyavide. asaktaru http://www.gubbilabs.in/ illi melerisikolli. chandrakant

    ReplyDelete
  4. ಸುಬ್ರಹ್ಮಣ್ಯ ಬಿಪಿ19 July, 2013 18:55

    ಅದ್ಭುತವಾದ ಲೇಖನ! ಮೈ ನವಿರೇಳಿಸುವನ್ತಿತ್ತು ಚಾರಣದ ನಿರೂಪಣೆ. ಧನ್ಯವಾದಗಳು.

    ReplyDelete
  5. Laxminarayana Bhat P22 July, 2013 17:05

    Aha... entha kappe lokavayya!!! BhaLire!

    ReplyDelete
  6. ನಿಮ್ಮ ಲೇಖನದ ಮೂಲಕ ಮಂಡೂಕ ದರ್ಶನವಾದಂತಾಗಿ ಕೂಪ ಮಂಡೂಕದಿಂದ ಹೊರ ಬಂದಂತಾಯಿತು. ಧನ್ಯವಾದಗಳು.

    ReplyDelete