ಜಿಟಿ ನಾರಾಯಣರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿಮೂರು
ಅಧ್ಯಾಯ ಇಪ್ಪತ್ತಾರರಲ್ಲಿ ಮೂರನೇ
ಭಾಗ
ವ್ಯಾಪಾರ ಒಂದು ಅಮಲು. ತತ್ರಾಪಿ ಗೌರವಸೇವೆಯ
ವ್ಯಾಪಾರ ಕ್ಷೇತ್ರ ನೇರ ಸಮಾಧಿ ಸ್ಥಿತಿಗೆ ಉತ್ತಾರಣೆಗೊಳಿಸುವ ಅಮೃತಪಾನ. ಇದರ ಮುಂಚೂಣಿಯಲ್ಲಿ ನಿಂತವನಿಗೆ ದಿನ ದಿನ ಹೊಸ ಹಸುರನ್ನು ಅರಸಿ ಸಾಗುವ ಮತ್ತು ತನ್ಮೂಲಕ
ವ್ಯಾಪಾರ ಮೊಬಲಗು ಏರಿದುದನ್ನು ನೋಡುವ ರಸಾನಂದ ಒದಗುತ್ತಲೇ ಇರುವುದು. ಸಂಶೋಧಕನಿಗೆ
ಪ್ರಾಪ್ತವಾಗುವ ಸಂತೋಷವಾದರೂ ಈ ಬಗೆಯದೇ ಇರಬೇಕು. ಹೀಗೆ ನಾನು ಹುಚ್ಚು ಕುದುರೆಯ
ನಾಗಾಲೋಟದಿಂದ ದೌಡಾಯಿಸುತ್ತಿದ್ದಾಗ ಸಹಜವಾಗಿ ಮಾರಾಟ ಸಾಮಗ್ರಿಗಳ ಪೂರೈಕೆ, ಬಂದ ವಸ್ತುಗಳನ್ನು ಓರಣವಾಗಿ ಅಟ್ಟಳಿಗೆಗಳಲ್ಲಿ ಅಳವಡಿಸುವುದು, ಸಮಗ್ರವಾಗಿ ಮಳಿಗೆಯನ್ನು ಸುಟಿಯಾಗಿ ಇರಿಸುವುದು, ಲೆಕ್ಕಪತ್ರಗಳನ್ನು
ಆಯಾ ದಿನವೇ ಚುಕ್ತಗೊಳಿಸುವುದು ಇದುವೇ ಮುಂತಾದ ಅತ್ಯಂತ ಆವಶ್ಯಕ ಹಾಗೂ ಜರೂರು, ಆದರೆ ಬಲು ಬಿಡಿಚಲು ಬಡಿಸುವಂಥ, ಕೆಲಸಗಳು ತುಂಬ ಹಿಂದೆ ಬೀಳುತ್ತಿದ್ದುವು.
ಯಾವುದೇ ಸಾಹಸದ ಅಂತಿಮ ಯಶಸ್ಸಿಗೆ ಅದರ ಅಧೋರಚನೆ (infrastructure) ಅತಿಭದ್ರವಾಗಿ
ಇರಬೇಕಾದದ್ದು ಪ್ರಥಮಾವಶ್ಯಕತೆ ಎಂಬುದು ಸಿದ್ಧಾಂತ ರೂಪದಲ್ಲಿ ಮಾತ್ರ ನನ್ನನ್ನು ಸ್ಪರ್ಶಿಸಿತ್ತು.
ಅದನ್ನು ನೆಲಕ್ಕೆ ಇಳಿಸಲು ಬೇಕಾಗುವ ಪ್ರವೃತ್ತಿ ಎಂದೂ ನನ್ನದಲ್ಲ. ಈ ಭೀಕರ ಕೊರಕಲನ್ನು ಸ್ವಯಂ ಪ್ರೇರಣೆಯಿಂದ ತುಂಬಿ ನಮ್ಮ ಸಂಘಕ್ಕೆ ಉಕ್ಕಿನ ನೆಲಗಟ್ಟನ್ನು
ಒದಗಿಸಿದವರು ನನ್ನ ಸಹೋದ್ಯೋಗೀ ಮಿತ್ರರಾದ ಜನಾರ್ದನ ಬಾಳಿಗರು. ಕೆಲಸವೆಲ್ಲ
ಅವರದು. ಹೆಸರು ಮಾತ್ರ ನನ್ನದು ಎಂದು ನಾನಿಲ್ಲಿ ಬರೆಯುವುದು ಭಾವುಕತೆಯಿಂದ
ಅಲ್ಲ, ಉಪಚಾರಕ್ಕಾಗಿಯೂ ಅಲ್ಲ (ಮುಂದೆ ನೋಡಿ:
ಅಧ್ಯಾಯ ೨೮).
ರಾಮಕೃಷ್ಣ, ರಾಮಚಂದ್ರಯ್ಯ,
ಬಾಳಿಗರಂಥವರೇ ನೆಲದ ಸಾರ. ಇಂಥ ಬಹುಮಂದಿಯ ಒಡನಾಟ ನಿರಂತರವಾಗಿ
ಆ ದಿನಗಳಂದು ಒದಗಿದ್ದರಿಂದಲೇ ನಾನು ಎಂದೂ ಹಿಂಗದ ಹುಮ್ಮಸ್ಸಿನಿಂದ ದಣಿವರಿಯದೇ ದುಡಿಯುವುದು ಸಾಧ್ಯವಾಯಿತು.
ಯಾವುದೇ ಸಾರ್ವಜನಿಕ ವ್ಯವಹಾರದಲ್ಲಿ
ಎರಡು ಪ್ರಮುಖ ಮುಖಗಳನ್ನು ಗುರುತಿಸಬಹುದು: ಕಾರ್ಯಮುಖ, ವರದಿಮುಖ.
ವ್ಯವಹಾರದ ಉದ್ದೇಶ ಸಿದ್ಧಿಗೋಸ್ಕರ ಪ್ರತ್ಯಕ್ಷವಾಗಿ ನಾವು ಏನನ್ನು ಎಸಗುವೆವೋ ಅದೇ
ಕಾರ್ಯ. ಇದನ್ನು ನಡೆಸುವ ಮುನ್ನ, ನಡೆಸುತ್ತಿರುವ
ವೇಳೆ ಮತ್ತು ನಡೆಸಿ ಆದ ಮೇಲೆ ನಾವು ಶೇಖರಿಸಿ, ಸಂಸ್ಕರಿಸಿ ಬರೆದು ದಫ್ತರಿಸುವ
ಸಮಸ್ತ ದಾಖಲೆಗಳೂ ಈ ವ್ಯವಹಾರದ ವರದಿ. ಸಹಕಾರ ಸಂಘದಲ್ಲಿ ಪ್ರತ್ಯಕ್ಷ ವ್ಯಾಪಾರ
ಅದರ ಕಾರ್ಯಮುಖವನ್ನು ಬಿಂಬಿಸಿದರೆ ರಶೀತಿ ಪುಸ್ತಕಗಳು, ಲೆಕ್ಕ ಪತ್ರಗಳು
ಮುಂತಾದುವು ವರದಿಮುಖವನ್ನು ಪ್ರತಿಬಿಂಬಿಸುತ್ತವೆ. ವಾಸ್ತವವಾಗಿ ಇಲ್ಲಿಯದು
ಬಿಂಬ - ಪ್ರತಿಬಿಂಬ ಸಂಬಂಧ. ದತ್ತ ಮುಹೂರ್ತದಲ್ಲಿ
ಯಾವುದು ಬಿಂಬ, ಯಾವುದು ಪ್ರತಿಬಿಂಬ ಎಂಬುದರ ನಿರ್ಧರಣೆ ನಾವು ಏನನ್ನು ಅರಸುತ್ತಿದ್ದೇವೆ
ಎಂಬುದನ್ನು ಅವಲಂಬಿಸಿದೆ. ವರದಿಯ ತಪಾಸಣೆ ಮಾದುತ್ತಿರುವಾಗ ಇದು
(ವರದಿ) ಬಿಂಬವೂ ಆದ್ದರಿಂದ ಕಾರ್ಯ ಪ್ರತಿಬಿಂಬವೂ ಆಗುತ್ತದೆ.
ಕಾರ್ಯ ಹೇಗೆ ನಡೆಯುತ್ತಿದೆ ಎಂಬುದರತ್ತ ಗಮನ ಹರಿಸಿದಾಗ ಇದು ಬಿಂಬ, ಆದ್ದರಿಂದ ವರದಿ ಪ್ರತಿಬಿಂಬ ಎನಿಸಿಕೊಳ್ಳುತ್ತದೆ. ಎರಡು ಪರಿಶುದ್ಧವಿದ್ದಾಗ
ಉದ್ದೇಶ ಸಿದ್ಧಿ ಸಮರ್ಪಕವಾಗಿರುತ್ತದೆ. ಯಾವುದೇ ಒಂದರಲ್ಲಿ ಐಬು ತಲೆದೋರಿದರೆ
ಅದು ಇನ್ನೊಂದಕ್ಕೂ ತಾಗುವುದು ಇಲ್ಲಿಯ ಸಯಾಮೀ ಅವಳಿಗಳ ಅವಿನಾ ಸಂಬಂಧದ ಒಂದು ಮುಖ್ಯ ಲಕ್ಷಣ.
ಸಿದ್ಧಾಂತದ ಮಟ್ಟದಲ್ಲಿ ಇದು ಸರಿ. ಆದರೆ ರಂಗಕ್ಕೆ ಇಳಿವ
ಪ್ರತಿಯೊಬ್ಬನೂ ಕೆಲವು ಪ್ರಾಯೋಗಿಕ ಸಮಸ್ಯೆಗಳನ್ನು ಎದುರಿಸುತ್ತಾನೆ. ನಮಗೆ
ಎದುರಾದಂಥವನ್ನು ಮಾತ್ರ ಇಲ್ಲಿ ಪ್ರಸ್ತಾವಿಸುವೆನು.
ಸಹಕಾರ ಸಂಘವೆಂದು ಹೆಸರು ತಳೆದು
ಸಹಕಾರ ಕಾಯ್ದೆಗೆ ಅನುಗುಣವಾಗಿ ರಚಿತವಾದ ಸಂಘದ ಉಪನಿಬಂಧನೆಗಳ ರೀತ್ಯಾ ಕೆಲಸ ಮಾಡುತ್ತೇವೆ ಎಂದು ಒಪ್ಪಿ
ರಂಗಕ್ಕೆ ದುಮುಕಿದ ನಾವು ಕಡ್ಡಾಯವಾಗಿ ಪಾಲಿಸಬೇಕಾಗಿದ್ದ ಕೆಲವು ಮುಖ್ಯ ನಿಯಮಗಳಿವು: ವ್ಯಾಪಾರ ಕ್ಷೇತ್ರದಲ್ಲಿ
ಗ್ರಾಹಕರಕ್ಷಣೆಯೊಂದನ್ನೇ ಹೆಗ್ಗುರಿಯಾಗಿ ಇರಿಸಿ ದುಡಿಯತಕ್ಕದ್ದು. ಮುಕ್ತ
ಮಾರುಕಟ್ಟೆಯೊಡನೆ ಪೈಪೋಟಿ ನಡೆಸತಕ್ಕದ್ದಲ್ಲ. ನಮ್ಮ ಪ್ರತಿಯೊಂದು ವಹಿವಾಟನ್ನೂ
ಸಮರ್ಥಿಸುವಂಥ ದಾಖಲೆಗಳನ್ನು ಸಹಕಾರ ಇಲಾಖೆ ವಿಧಿಸಿರುವ ರೀತಿಯಲ್ಲಿ ಬರೆದು ಯಾವಾಗ ಬೇಕೆಂದರೆ ಆಗ
ಕ್ಷಿಪ್ರ ತಪಾಸಣೆಗೆ ದೊರೆಯುವಂತೆ ಇಡತಕ್ಕದ್ದು. ಇಲ್ಲಿಯ ಸಮಸ್ತ ವ್ಯವಹಾರಗಳೂ
ನಿಯತಕಾಲಿಕವಾಗಿ ಕಾರ್ಯನಿರ್ವಾಹಕ ಸಮಿತಿಯ ಕೂಲಂಕಶ ತಪಾಸಣೆಗೆ ಒಳಪಟ್ಟು ಅದರ ಮಂಜೂರಾತಿಯನ್ನು ಪಡೆಯತಕ್ಕದ್ದು.
ಆದರೆ ಇವನ್ನು ನಿಭಾಯಿಸುವಾಗ ಸೀಮಿತ ಕಾಲಾವಕಾಶ, ಸೀಮಿತ
ಜನಬಲ (ಎಲ್ಲರೂ ಬಿಟ್ಟಿ ದುಡಿಮೆಗಾರರೇ; ನಮಗೆ
ರಂಗದಲ್ಲಿ ಕುಣಿಯುವುದರಿಂದ ಲಭಿಸುತ್ತಿದ್ದ ಸಂತೋಷ ನೇಪಥ್ಯ ಕಾರ್ಯದಿಂದ ಒದಗುತ್ತಿರಲಿಲ್ಲ - ಮಾನವ ಸಹಜ ದೌರ್ಬಲ್ಯ
ಎನ್ನಿ ಬೇಕಾದರೆ) ಇದ್ದ ನಮ್ಮ ಸಂಘದಲ್ಲಿ ಸಹಜವಾಗಿ ಕಾರ್ಯ ವರದಿ ಮುಖಗಳ
ನಡುವೆ ಸಮಶ್ರುತಿ ಸಮಗತಿ ಏರ್ಪಡಲಿಲ್ಲ. ಕನಿಷ್ಠಾವಶ್ಯಕತೆಯನ್ನು ಮಾತ್ರ
ನಾವು ಪೂರೈಸಿಕೊಂಡು ಹೋಗಿದ್ದೆವು. ಅಂದರೆ ಪ್ರತಿಯೊಂದು ಮಾರಾಟವನ್ನು ಬಿಲ್
ಮೂಲಕವೇ ಮಾಡುವುದು, ಪ್ರತಿಯೊಂದು ನಗದು ಅಥವಾ ಸಾಲ ಕೊಡುಕೊಳು ವ್ಯವಹಾರಕ್ಕೂ
ಲೆಕ್ಕ ಇಡುವುದು, ದಿನ ದಿನ ನಗದು ಹಣವನ್ನು ಲೆಕ್ಕ ಮಾಡಿ ಅಂದಂದಿನ ವಹಿವಾಟಿನೊಡನೆ
ತಾಳೆ ನೋಡಿ ಸರಿಪಡಿಸುವುದು - ಇಷ್ಟನ್ನು ಎಚ್ಚರಿಕೆಯಿಂದ ಮಾಡುತ್ತ ಬೀಸುವ ದೊಣ್ಣೆಯಿಂದ ಪಾರಾಗಿ ಮರುದಿನವನ್ನು ಸ್ವಾಗತಿಸುತ್ತಿದೆವು.
ವ್ಯಾಪಾರದ ಬೀಸು ಬಿರುಸುಗಳಿಂದಾಗಿ ಆದಿತ್ಯವಾರ ಕೂಡ ರಜೆ ತೆಗೆದುಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ.
ಇತ್ತ ಕಾರ್ಯ ನಿರ್ವಾಹಕ ಸಮಿತಿಯ ಸಭೆಗಳು ಜರಗಲೇ ಇಲ್ಲ. ದಾಸ್ತಾನು ಪುಸ್ತಕವನ್ನಂತೂ ತೊಡಗಿಯೇ ಇರಲಿಲ್ಲ. ಜೊತೆಗೆ ನಾನು
ಎನ್ಸಿಸಿ ಅಧಿಕಾರಿಯೂ ಆಗಿದ್ದೆ.
ದಾಸ್ತಾನು ಪುಸ್ತಕದಲ್ಲಿ ಎರಡು
ಬಗೆಗಳಿವೆ ಎಂಬುದಾಗಿ ಸಹಕಾರ ಸಂಘಗಳ ಇನ್ಸ್ಪೆಕ್ಟರ್ ಎನ್.ಟಿ ಅಪ್ಪಯ್ಯ
ಹೇಳಿದ್ದರು. ಒಂದನೆಯ ಬಗೆಯದ್ದರಲ್ಲಿ ವಸ್ತುವಾರು ಪುಟಗಳನ್ನು ತೆರೆಯಬೇಕು.
ಪ್ರತಿದಿನವೂ ಬಂದ ಮತ್ತು ಹೋದ ವಸ್ತುಗಳನ್ನು ಈ ಪುಟಗಳಿಗೆ ಬರಾಯಿಸಿ ನಿವ್ವಳ ಸಂಖ್ಯೆ
ಕ್ಷಿಪ್ರ ತಪಾಸಣೆಗೆ ದೊರೆಯುವಂತಿರಬೇಕು. ಈ ಸಂಖ್ಯೆ ಆ ವಸ್ತುವಿನ ವಾಸ್ತವಿಕ
ಸಂಖ್ಯೆ ಜೊತೆ ತಾಳೆ ಆಗಬೇಕು. ಇಂಥ ದಾಸ್ತಾನು ಪುಸ್ತಕ ಸಂಘದ ಸಮಗ್ರ ವಸ್ತುಗಳ
ಕ್ರಮೀಕೃತ ಪ್ರತಿಬಿಂಬ. ಇದರಲ್ಲಿಯ ಪ್ರತಿಯೊಂದು ನಮೂದಿಗೂ ಒಡನೆ ಪರಿಶೀಲನೆಗೆ
ದೊರೆಯುವ ದಾಖಲೆಗಳು ಇದ್ದೇ ಇರುವುದರಿಂದ ಸಂಘದಲ್ಲಿ ಲಪಟಾಯಿಸಿಕೆ ಬಲು ಕಷ್ಟ ಸಾಧ್ಯವಾಗುತ್ತದೆ.
ಹೀಗೆ ಈ ವಸ್ತು-ಪುಟ ದಾಸ್ತಾನು ಪುಸ್ತಕ ಸಂಘದ ಹಿತವನ್ನು
ಸದಾ ಕಾದಿಡುವ ಪಡಿಯಳ (ಬಾಗಿಲು ಕಾಯುವಾತ). ಎರಡನೆಯ
ಬಗೆಯದರಲ್ಲಿ ದಿನ ದಿನ ಮಾರಾಟಕ್ಕಾಗಿ ತರಿಸಿದ ಸಾಮಗ್ರಿಗಗಳ ಮಾರಾಟ ಬೆಲೆಯನ್ನೂ (ಅಸಲು ಬೆಲೆಯನ್ನಲ್ಲ) ಆಯಾ ದಿವಸ ನಡೆದ ವ್ಯಾಪಾರ ಮೌಲ್ಯವನ್ನೂ
ಯುಕ್ತ ಕಾಲಮುಗಳಲ್ಲಿ ಬರಾಯಿಸುತ್ತ ಸಾಗಬೇಕು. ಆ ಮಾರಾಟಮೌಲ್ಯ-ಪುಸ್ತಕದ ಪ್ರಕಾರ ಯಾವುದೇ ದಿನಾಂತ್ಯದಲ್ಲಿ ದೊರೆಯುವ ಸಂಖ್ಯೆ ಈ ಗಳಿಗೆ ಅಲ್ಲಿ ದಾಸ್ತಾನಿನಲ್ಲಿರುವ
ಸಾಮಗ್ರಿಗಳ ಒಟ್ಟು ಮಾರಾಟ ಬೆಲೆಗೆ ಸಮವಾಗುತ್ತದೆ. ಮೊದಲನೆಯದು ಶುದ್ಧ ವೈಜ್ಞಾನಿಕವಾದದ್ದು
ಎಂಬುದರಲ್ಲಿ ಸಂದೇಹ ಇಲ್ಲ. ಎರಡನೆಯದೋ ಅನುಕೂಲ ಸಿಂಧು. ಏನೂ ಇಲ್ಲದೇ ಇರುವುದಕ್ಕಿಂಥ ಲೇಸು,
ಅಷ್ಟೆ. ವಸ್ತು-ಪುಟ ದಾಸ್ತಾನು
ಪುಸ್ತಕವನ್ನು ಸಮರ್ಪಕವಾಗಿ ಇಡಲು ಗುಮಾಸ್ತರ ಹಾಗೂ ತಪಾಸಣೆಗಾರರ ಒಂದು ಪಟಾಲಮ್ಮೇ ಬೇಕಾಗುತ್ತದೆ.
ಮಾರಾಟಮೌಲ್ಯ-ಪುಸ್ತಕವನ್ನು ಮುಂದುವರಿಸಿಕೊಂಡು ಹೋಗಲು
ಇಂಥ ತಾಪತ್ರಯ ಇಲ್ಲದಿದ್ದರೂ ಕೇವಲ ಒಂದೆರಡು ದಿವಸಗಳಲ್ಲೇ ಇಲ್ಲಿಯ ಅಸಹಜತೆ ಹಾಗೂ ನಿಷ್ಪ್ರಯೋಜಕತೆ
ಇದರ ಉಪಯುಕ್ತತೆಯ ಬಗ್ಗೆ ನಮ್ಮ ನಂಬಿಕೆಯನ್ನೇ ಕೆಡಿಸಿಬಿಡುತ್ತವೆ. ಆದ್ದರಿಂದ
ನಾವು ಹಿಡಿದ ಹಾದಿ ಏನು? ಉಭಯ ತೊಂದರೆಗಳಿಂದಲೂ ದೂರವಾದದ್ದು: ಯಾವ ಬಗೆಯ ದಾಸ್ತಾನು ಪುಸ್ತಕವನ್ನೂ ಆರಂಭಿಸಲೇ ಇಲ್ಲ! ನಮ್ಮ ಮೂಲಭೂತ
ಪ್ರಾಮಾಣಿಕತೆ ಮತ್ತು ನಿಷ್ಠುರ ಶಿಸ್ತೇ ನಿಜವಾದ ದಾಸ್ತಾನು ಪುಸ್ತಕವೆಂದು ಧೈರ್ಯ ತಳೆದು ವ್ಯಾಪಾರವನ್ನು
ಮುಂದುವರಿಸಿದೆವು.
ಮೊದಲ ವರ್ಷದ ವ್ಯವಹಾರಗಳನ್ನು
ತಪಾಸಣೆ ಮಾಡಲು ಎನ್.ಟಿ ಅಪ್ಪಯ್ಯನವರೇ ಬಂದರು. ನಮ್ಮ ಸಂಘದ ಸ್ಥಾಪನೆಗೆ ಮುಖ್ಯ ಕಾರಣರಾದ
ಈ ಸಹೃದಯರ ಮಾರ್ಗದರ್ಶನದಲ್ಲಿಯೇ ನಾವು ಲೆಕ್ಕ ಪತ್ರಗಳನ್ನು ಇಟ್ಟಿದ್ದೆವು. ವಿದ್ಯಾವಂತರು ನಿಸ್ಪೃಹತೆಯಿಂದ ನಡೆಸುತ್ತಿರುವ ಈ ಸಂಘ ಮಾದರಿ ಸಂಸ್ಥೆ ಆಗಬೇಕು ಎಂಬುದು
ಇವರ ಆಸೆ. ನಮ್ಮ ಅಪ್ರಬುದ್ಧ ಲೆಕ್ಕಪತ್ರಗಳ ನಡುವೆ ವೈಜ್ಞಾನಿಕ ಕ್ರಮವನ್ನು
ತಂದು ವ್ಯವಸ್ಥೆ ಏರ್ಪಡಿಸಲು ಇವರಂಥ ಅನುಭವಿಗಳು ಕೂಡ ಸಾಕಷ್ಟು ಕಾಲ ಹೋರಾಡಬೇಕಾಯಿತು. ಗಣಿತ ವಿದ್ಯಾರ್ಥಿಯಾದ ನಾನು ವಾಣಿಜ್ಯದ ಅಂಕೆ ಸಂಖ್ಯೆಗಳ ಗೊಂಡಾರಣ್ಯದಲ್ಲಿ ಅವೆಷ್ಟೋ ಒಳದಾರಿಗಳನ್ನು
ಆಗಾಗ ಕಂಡುಕೊಂಡು, ಆದರೆ ಎಲ್ಲಿಯೂ ಬಿಡಿಗಾಸು ಅಥವಾ ಮಾಲು ಪೋಲಾಗದಂತೆ ಎಚ್ಚರವಹಿಸಿ,
ಮುಂದಕ್ಕೆ ನೆಗೆಯುತ್ತ ದಿನ ದಿನ ತಕ್ಕಡಿಯನ್ನು ಸರಿಯಾಗಿ ಸಂತುಲಿಸಿಕೊಂಡು ಹೋಗುತ್ತಿದ್ದೆ.
ಸಾಂಪ್ರದಾಯಿಕ ಲೆಕ್ಕ ನಮೂದು ವಿಧಾನ, ಅದೆಷ್ಟೇ ಆವಶ್ಯ
ಹಾಗೂ ವೈಜ್ಞಾನಿಕ ಎಂಬುದು ನನಗೆ ಮನವರಿಕೆ ಆಗಿದ್ದರೂ, ಎಂದೂ ಹಿಡಿಸಲಿಲ್ಲ.
ಹೀಗೆ ನಾನು ವಿಹರಿಸುತ್ತಿದ್ದ ನಿರಂಕುಶ ಕ್ಷೇತ್ರದಲ್ಲಿ ವ್ಯವಸ್ಥೆಯ ಅಂಕುಶ ಪ್ರಯೋಗ
ಮಾಡುವುದು, ಅದೂ ಮಾನವೀಯ ಆಸಕ್ತಿ ಮೌಲ್ಯಗಳು ಬೆರೆತಿರುವಲ್ಲಿ,
ಎಷ್ಟು ಕಷ್ಟ ಎಂಬುದು ಈ ಬಗೆಯ ವ್ಯವಹಾರಗಳಲ್ಲಿ ಕೈ ಆಡಿಸಿದವರಿಗೆ ಎಲ್ಲರಿಗೂ ತಿಳಿದೇ
ಇರುವುದು.
ಇನ್ಸ್ಪೆಕ್ಟರ್ ಅಪ್ಪಯ್ಯನವರು ‘ತಮಸೋಮಾ ಜ್ಯೋತಿರ್ಗಮಯ’ ಎಂಬ ಉಕ್ತಿಯಲ್ಲಿ
ಅಚಲ ನಂಬಿಕೆ ಇದ್ದವರು. ಅದನ್ನು ಅವರು ಪ್ರತ್ಯಕ್ಷ ಸಾಧಿಸಿ ಲೆಕ್ಕ ಪರಿಶೋಧನ
ವರದಿಯನ್ನು ಸಿದ್ಧಪಡಿಸಿದರು. ವ್ಯಾಪಾರರಂಗದಲ್ಲಿ, ಗ್ರಾಹಕ ಸೇವೆಯಲ್ಲಿ ಮತ್ತು ಶಿಕ್ಷಣದಲ್ಲಿ ನಾವು ನಡೆಸಿದ್ದು ಒಂದು ಪವಾಡವೆಂದೇ ಅಂಕೆ ಅಂಶಗಳ
ಸಮೇತ ಸಾಬೀತುಪಡಿಸಿದರು. ‘ಸಹನಾವವತು’ ಎಂಬ ನಮ್ಮ ಧ್ಯೇಯವನ್ನು
ನಾವು ಸಾಧಿಸಿದ್ದೆವು. ಕೊನೆಯಲ್ಲಿ ಅವರು ಒಂದಿಷ್ಟು ವ್ಯವಹಾರ ನೀತಿಯನ್ನು ನನಗೆ ಖುದ್ದಾಗಿ ಬೋಧಿಸಿದರು.
“ನಿಸ್ವಾರ್ಥ ಹಾಗೂ ಉತ್ಸಾಹೀ ಕಾರ್ಯಕರ್ತರು
ಎಂಥ ವಿಜಯವನ್ನು ಸಾಧಿಸಬಲ್ಲರು ಎಂಬುದನ್ನು ನಾನಿಲ್ಲಿ ಪ್ರತ್ಯಕ್ಷ ಕಂಡಿದ್ದೇನೆ. ಆದರೆ ಇದೊಂದು
ಶಾಶ್ವತ ಸಂಸ್ಥೆಯಾಗಿ ಅಭಿವರ್ಧಿಸುತ್ತ ಮುನ್ನಡೆಯುತ್ತಿರಬೇಕಾದರೆ ನೀವು ಈಗಿಂದಲೇ ಇದನ್ನು ಸುಭದ್ರ
ತಳಹದಿಯ ಮೇಲೆ ನೆಲೆಗೊಳಿಸಲೇಬೇಕು. ವಿವಿಧ ಲೆಕ್ಕ ಪುಸ್ತಕ ಹಾಗೂ ಪತ್ರಗಳನ್ನು
ಸಹಕಾರ ನಿಯಮಾನುಸಾರ ಇಡುವ ದಿಶೆಯಲ್ಲಿ ಆದ್ಯ ಲಕ್ಷ್ಯ ಹರಿಸಲೇಬೇಕು. ಇಲ್ಲವಾದರೆ
ಸ್ವತಃ ನಿಮ್ಮ ಚಾರಿತ್ರ್ಯಕ್ಕೆ ಕೂಡ ಕಳಂಕ ತಟ್ಟುವ ಅಪಾಯ ಉಂಟು. ಹೀಗೆ ಹೇಳುವಾಗ
ಕಾಗದ ಪತ್ರ ಸರಿಯಾಗಿ ಇರುವಲ್ಲೆಲ್ಲ ವ್ಯವಹಾರ ತಂತಾನೇ ಪರಿಶುದ್ಧವಾಗಿರುತ್ತದೆ ಎಂಬ ಭ್ರಮೆ ಏನೂ ನನಗಿಲ್ಲ.
ಆದರೆ ನಿಮ್ಮ ಹಿತ ದೃಷ್ಟಿಯಿಂದ ಇದು ತೀರ ಅವಶ್ಯ. ಇದನ್ನು ಹೇಗೆ ಸಾಧಿಸಬಹುದು ಎಂಬುದರ ವಿಚಾರ
ನೀವೇ ಯೋಚಿಸಿ ನಿರ್ಧರಿಸಬೇಕು.”
ಅಂದು ಏಕಕಾಲದಲ್ಲಿ ನಾಲ್ಕು ನಾವೆಗಳಲ್ಲಿ
ನನ್ನ ಪ್ರಯಾಣ - ಪಾಠ ಪ್ರವಚನ, ಎನ್ಸಿಸಿ, ಸಹಕಾರ ಸಂಘ ಮತ್ತು ಸಂಸಾರ; ಆದರ್ಶ - ಪಂಡಿತ ಮದನ ಮೋಹನ ಮಾಳವೀಯ ಮತ್ತು ಬಾಲಗಂಗಾಧರ ತಿಲಕ.
ಒಂದು ವಿಷಯವಂತೂ ಆ ವೇಳೆಗೆ ಸ್ಪಷ್ಟವಾಗಿ
ನನಗೆ ಅರ್ಥವಾಗಿತ್ತು: ನಮ್ಮ ಸಂಘದ ಸಮಸ್ತ ವರದಿಗಳನ್ನು ಸಮರ್ಪಕವಾಗಿ ಇಡಲು ಬೇಕಾಗುವ ಕಾಲಾವಕಾಶ, ತಾಳ್ಮೆ, ಅನುಭವ ಯಾವುದೂ ಗೌರವ ಕಾರ್ಯಕರ್ತರಾದ ನಮಗೆ ಇರಲಿಲ್ಲ,
ಎಂದೂ ಅವು ಒದಗುತ್ತಲೂ ಇರಲಿಲ್ಲ. ಅನುಭವಿಯಾದ ಗುಮಾಸ್ತನನ್ನು
ನೇಮಿಸೋಣ ಎಂದರೆ ಆರ್ಥಿಕವಾಗಿ ನಮಗೆ ಸಾಕಷ್ಟು ತ್ರಾಣ ಇರಲಿಲ್ಲ. ಸರಕಾರದಿಂದ
ಯಾ ಇತರ ಮೂಲಗಳಿಂದ ನಮಗೆ ಧನ ಸಹಾಯ ಏನೂ ಲಭಿಸಿರಲಿಲ್ಲ. ಆದ್ದರಿಂದ ನಾವೇ,
ವ್ಯಾಪಾರ ಎಂದೂ ಹಿನ್ನಡೆಯದಂತೆ, ಸ್ವಸಾಮರ್ಥ್ಯದ ಪರಿಧಿಯೊಳಗೆ
ಲೆಕ್ಕಪತ್ರಗಳ ಉಸ್ತುವಾರಿ ಕೂಡ ನೋಡಿಕೊಳ್ಳುತ್ತ ಮುಂದುವರಿಯುವುದೊಂದೇ ತಾತ್ಕಾಲಿಕ ಪ್ರಾಯೋಗಿಕ ಪರಿಹಾರ
ಎಂದು ನಿರ್ಧರಿಸಿದೆವು.
ನಮ್ಮ ಅನುಕೂಲತೆ - ಅನನುಕೂಲತೆ
ಒಂದನ್ನೂ ಕೇಳದೆ ಭೂಮಿ ಉರುಳಿತು, ಋತುಗಳು ಪುನರಾವರ್ತಿಸಿದುವು.
ಹಳೆ ವಿದ್ಯಾರ್ಥಿಗಳು ನಿರ್ಗಮಿಸಿದರು. ಹೊಸ ಹುರುಪುಗಳು
ಅಧಿಕ ಸಂಖ್ಯೆಯಲ್ಲಿ ಆಗಮಿಸಿದುವು. ನಮಗೆ ಮೂರು ವರ್ಷ ಪ್ರಾಯ ಆಗಿಯೇ ಹೋಯಿತು
(೧೯೫೭). ಆ ವೇಳೆಗೆ ಕೊಡಗು ರಾಜ್ಯ ಅಖಿಲ ಕರ್ನಾಟಕದಲ್ಲಿ
ವಿಲೀನಗೊಂಡಿದ್ದುದರಿಂದ ಕೊಡಗಿನ ಪ್ರಜಾ ಸರ್ಕಾರ ಬರಖಾಸ್ತಾಗಿತ್ತು. ಇತ್ತ
ಗ್ರಾಹಕರಿಂದ ಉಕ್ಕು ಪಾತ್ರೆಗಳಿಗೆ ಬೇಡಿಕೆ ಉಕ್ಕುತ್ತಿತ್ತು. ಒಮ್ಮೆ ರುಚಿ
ನೋಡಿದ ಅವರು ಮತ್ತೆ ಅವುಗಳಿಗಾಗಿ ನಮ್ಮಲ್ಲಿಗೆ ಬಂದಾಗ ಹತಾಶರಾಗಿ ಪೇಟೆಗೆ ಹೋಗುತ್ತಿದ್ದರು.
ಅಲ್ಲೋ? ಈಗ ಉಕ್ಕಿನ ದರ ಬೆಳ್ಳಿಯ ದರಕ್ಕೆ ಜಿಗಿದಿತ್ತು;
ಸೌದಾಮಿನಿಯ ಕ್ಷಣಿಕ ಮಿಂಚಿನಿಂದ ಉದ್ಭವಿಸಿದ ನಿರ್ವಾತದಲ್ಲಿ ವಾಯು ಅಣುಗಳು ಅಧಿಕ
ಸಂಖ್ಯೆಯಲ್ಲಿ ಸಂಘಟ್ಟಿಸುವಂತೆ.
ಪ್ರತಿ ವರ್ಷದ ಲೆಕ್ಕ ಪರಿಶೋಧನ
ವರದಿಯಲ್ಲಿ ಕಾಣಿಸುತ್ತಿದ್ದ ಅಭ್ಯಂತರಗಳು ಗೌರವ ಕಾರ್ಯದರ್ಶಿಯಾದ ನನ್ನನ್ನು ನೇರ ಸೆರೆಮನೆಗೆ ರವಾನಿಸಲು
ಸಾಕಾಗುವಷ್ಟು ಹಿರಿಗಾತ್ರದಲ್ಲಿದ್ದುವು. ಹಿಂದಿನ ವಿದ್ಯಾರ್ಥಿ ಮಿತ್ರರು ಓದು ಮುಗಿಸಿ ಕಾಲೇಜು
ಬಿಟ್ಟುಹೋಗಿದ್ದರು. ಹೊಸಬರು ಸಿಗಲಿಲ್ಲ. ಬಾಳಿಗರು
ಮತ್ತು ನಾನು ಇಬ್ಬರೇ ‘ಹಳೆ ಅಪರಾಧಿ’ಗಳಾಗಿ ಉಳಿದವರು. ಅಚ್ಯುತನ್
ಪಿಳ್ಳೆಯವರ ಮೇಲೆ ರಾಜಕೀಯ ದೋಷಾರೋಪಣೆ ಮಾಡಿ ಹಿಂದಕ್ಕೆ ಕಳಿಸಲಾಗಿತ್ತು (ಅಧ್ಯಾಯ ೨೭ ನೋಡಿ). ಹೊಸತಾಗಿ ಬಂದವರು? ಆದರೆ ಸಂಘ ನಮ್ಮ ಪೂರ್ಣಾವಧಿಯ ಸೇವೆಯಿಂದಲೂ ತೃಪ್ತಿ ತಳೆವ ಸ್ಥಿತಿಯಲ್ಲಿರಲಿಲ್ಲ.
ಇವೆಲ್ಲ ಅಂಶಗಳನ್ನೂ ಅನುಲಕ್ಷಿಸಿ, ಹೊಸ ಪ್ರಾಂಶುಪಾಲರ
ಅನುಮತಿಯ ಮೇರೆಗೆ, ಎರಡು ನಿರ್ಧಾರಗಳನ್ನು ತಳೆದೆ: ಒಂದು, ಉಕ್ಕು ವಿಭಾಗವನ್ನು ಪುನರಾರಂಭಿಸಿ ಸದಾ ಸ್ತಿಮಿತ ವ್ಯಾಪಾರ
ಇರುವಂತೆ ಮಾಡುವುದು. ಎರಡು, ಪೂರ್ಣಾವಧಿಯ ಒಬ್ಬ
ಗುಮಾಸ್ತ-ಮತ್ತು-ಮಾರಾಟಗಾರನನ್ನು ನೇಮಿಸುವುದು.
ಈ ಮೊದಲು ಉಲ್ಲೇಖಿಸಿದ್ದ ಅಪ್ಪಯ್ಯನವರು
ಈ ವೇಳೆಗೆ ಸ್ಥಳೀಯ ಸಹಕಾರೀ ಶಿಕ್ಷಣಶಾಲೆಯಲ್ಲಿ ಒಬ್ಬ ಶಿಕ್ಷಕರಾಗಿದ್ದರು. ಅವರ ಶಿಫಾರಸಿನ
ಮೇರೆಗೆ ಅವರ ಶಿಷ್ಯನೇ ಆಗಿದ್ದ ಒಬ್ಬ ಅಭ್ಯರ್ಥಿಯನ್ನು ಗುಮಾಸ್ತನಾಗಿ ನೇಮಿಸಿಕೊಂಡೆವು. ಅತ್ಯಂತ ಶುಭ್ರ ಚಾರಿತ್ರ್ಯವಂತನೀತ, ಕಾರ್ಯನಿಷ್ಠನೀತ,
ಶಿಸ್ತುಗಾರನೀತ ಎನ್ನುವ ವಿಚಾರದಲ್ಲಿ ಅವರಿಂದ ನಮಗೆ ಪೂರ್ಣ ಭರವಸೆ ದೊರೆತಿತ್ತು.
ಇಲ್ಲಿಯ ಸನ್ನಿವೇಶ ಹೇಗಿತ್ತು? ಹಲವು ಹತ್ತು ಸಾವಿರ ರೂಪಾಯಿ
ಮೌಲ್ಯದ ಸಾರ್ವಜನಿಕ ನ್ಯಾಸವನ್ನು ಯಾವುದೇ ವಿಧವಾದ ದಾಖಲೆ ಯಾ ಇಡುಗಂಟು ಇಲ್ಲದೇ ಮಾರಾಟ ಮಾಡಲು ನಾವು
ಅವನಿಗೆ ನೇರವಾಗಿ ಒಪ್ಪಿಸುವವರಿದ್ದೆವು - ವಿಶ್ವಾಸಾರ್ಹತೆ,
ಪ್ರಾಮಾಣಿಕತೆ, ಋಜುತ್ವ, ಆರ್ಜವ
ಎಂಬಿವೇ ಮುಂತಾದ ಅಮೂರ್ತ (ಅಸ್ಪಷ್ಟವೂ ಅನ್ನಿಬೇಕಾದರೆ) ಗುಣಗಳನ್ನು ಅವನಲ್ಲಿ ನಿರೀಕ್ಷಿಸಿದ್ದೆವು. ನಾನೂ ಅವನೊಡನೆ ಸಮಭುಜನಾಗಿ
ಈ ಹಿಂದಿನಂತೆಯೇ, ದುಡಿದು ವ್ಯಾಪಾರಾಭಿವೃದ್ಧಿಯನ್ನು ಸಾಧಿಸುವವನಿದ್ದೆ. ಬಾಳಿಗರ ಮತ್ತು ಆಯ್ದ ಕೆಲವು ವಿದ್ಯಾರ್ಥಿಗಳ ಸೇವೆ ಕೂಡ ನಮಗೆ ದೊರೆಯುತ್ತಿತ್ತು.
ಇತ್ತ ನಮ್ಮ ಹೊಸ ಗುಮಾಸ್ತನಿಗೆ ಸ್ಥಳೀಯವಾಗಿ ಎಲ್ಲಿಯೂ ದೊರೆಯದಿದ್ದ ಆರ್ಥಿಕ ಸಂಭಾವನೆ
ಮತ್ತು ಇತರ ಸವಲತ್ತುಗಳನ್ನು ನೀಡಿದ್ದೆವು. ಬೋನಸ್, ವೇಳೆ ಮೀರಿದ ದುಡಿಮೆಗೆ ಅಧಿಕ ಸಂಭಾವನೆ, ಸಾಲ ರೂಪದಲ್ಲಿ ಅವನಿಗೆ
ಬೇಕಾಗುವ ಸಾಮಗ್ರಿಗಳು ಇವೇ ಮುಂತಾದ ರಿಯಾಯಿತಿಗಳನ್ನು ನಾವಾಗಿಯೇ ತಿಳಿದು ಒದಗಿಸಿದ್ದೆವು.
ಅವನು ಸಂತೋಷಿಯಾಗಿ ಪೂರ್ಣ ನಿಷ್ಠೆಯಿಂದ ಈ ಸಂಘವನ್ನು ಬೆಳೆಸಬೇಕು, ಸಂಘದ ಆದರ್ಶವನ್ನು ಇನ್ನಷ್ಟು ಸಫಲಗೊಳಿಸಬೇಕು ಎಂಬುದು ನಮ್ಮ ಘನ ಉದ್ದೇಶ. ಆದರೆ ತಿಂಗಳುಗಳು ಉರುಳಿದಂತೆ ಒಂದು ಸಂಗತಿ ಸ್ಪಷ್ಟವಾಯಿತು: ನಮ್ಮ
ಗುಮಾಸ್ತನ ಒಲವು ಇದ್ದುದು ‘ಅಧಿಕ ಸಂಬಳ, ಜಾಸ್ತಿ
ಸವಲತ್ತು, ಕಡಿಮೆ ಕೆಲಸ’ದ ಕಡೆಗೆ. ತಡವಾಗಿ ಬಂದು
ಬೇಗ ಹೋಗಿ ಇದ್ದಾಗ ಕೆಲಸ ಮಾಡದೇ ಗೊಣಗುವುದು ಇವನ ನೀತಿ ಆಯಿತು. ಕಡವಾಗಿ
ಇವನು ಕೊಂಡ ಉಕ್ಕು ಪಾತ್ರೆಗಳನ್ನು ನಗದಾಗಿ ಹೊರಗೆ ಮಾರಿ ಚಲಾವಣೆಗೆ ದುಡ್ಡು ಮಾಡಿಕೊಳ್ಳುತ್ತಿದ್ದ
ಎಂಬುದು ನನಗೆ ಗೊತ್ತಾಯಿತು. ಅತಿ ಹೆಚ್ಚು ಕೆಲಸ ಇದ್ದ ದಿನವೇ ಇವನು ಗೈರುಹಾಜರ್.
ಪ್ರತಿದಿನ ಸಾಯಂಕಾಲ ನಗದು ಹಣವನ್ನು ತಾಳೆ ಮಾಡುವಾಗ ಹೊಂದಾಣಿಕೆಯೇ ಇರುತ್ತಿರಲಿಲ್ಲ.
ಒಂದೋ ಹೆಚ್ಚು, ಇಲ್ಲವೇ ಕಡಿಮೆ. ಹೆಚ್ಚು ಹಣ ಇದ್ದರೆ ಬಿಲ್ ಬರೆಯದೇ ವ್ಯಾಪಾರ ನಡೆದಿದೆ ಎಂದೂ ಕಡಿಮೆ ಇದ್ದರೆ ಹಣ ಸೋರಿಹೋಗಿದೆ
ಎಂದೂ ಮೊದಲಿಗೆ ಹೊಳೆವ ಕಾರಣ. ಗುಮಾಸ್ತನ ಕುಹಕ ಮನಸ್ಸು ಇಂಥ ಸನ್ನಿವೇಶಗಳನ್ನು
ಕೃತಕವಾಗಿ ನಿರ್ಮಿಸಿ ನಮ್ಮನ್ನು ಬೇಸ್ತು ಬೀಳಿಸುವುದು ಅಸಂಭಾವ್ಯ ಏನೂ ಅಲ್ಲ. ವಸ್ತು-ಪುಟ ದಾಸ್ತಾನು ಪುಸ್ತಕ ಇಲ್ಲದ (ವಾಸ್ತವವಾಗಿ ಯಾವುದೇ ವಿಧದ ದಾಸ್ತಾನು ಪುಸ್ತಕ ಇಲ್ಲದ) ನಮ್ಮ
ಸಂಗಹದ ಬೆಲೆ ಬಾಳುವ ಪಾತ್ರೆಗಳನ್ನು ಈತ ನೇರ ಲಪಟಾಯಿಸಿದರೆ ಅದು ನಮಗೆ ತಿಳಿವ ಬಗೆಯೇ ಇರಲಿಲ್ಲ - ಕದಳಿವನದೊಳು
ಮದ್ದಾನೆ ಹೊಕ್ಕಂಥ ಪರಿಸ್ಥಿತಿ. ನಿದ್ರಾನಾಶ ಏನೆಂದೇ ಗೊತ್ತಿರದಿದ್ದ ನನಗೆ
ಈಗ ಅದರ ಅನುಭವ ಕಟುವಾಗಿ ಆಗತೊಡಗಿತ್ತು. ನನ್ನ ಕೆಲಸ ಏನಾದರೂ ಕಡಿಮೆ ಆಯಿತೇ?
ಕೆಲಸ ಜಾಸ್ತಿ, ಚಿಂತೆ ಹೆಚ್ಚು, ದುಗುಡ ದುಮ್ಮಾನ ದಿನ ದಿನ ಏರಿಕೆ. ಎಲ್ಲಿಯ ತನಕ? ಮಾಲೀಕ ಕೆಲಸದ ಹೊಣೆಯನ್ನು ಹಗುರ ಮಾಡಿಕೊಳ್ಳಲು ಸಹಾಯಕನನ್ನು ನೇಮಿಸುವನು. ಆದರೆ ಅವನಿಗೆ ತಿಳಿಯದಂತೆ ಆ ಸಹಾಯಕ ಹೊಸ ಒಂದು ಸಮಸ್ಯೆಯನ್ನು ತನ್ನೊಡನೆ ತಂದಿರುತ್ತಾನೆ.
ಹೀಗಾಗಿ ಪರದನಿಗೆ ಈಗ ಮೊದಲಿನ ಕೆಲಸದ ಜೊತೆಗೆ ಈ ಸಮಸ್ಯಾ ಪರಿಹಾರದ ಚಿಂತೆಯೂ ಸೇರಿಕೊಳ್ಳುವುದು.
ಪಾರ್ಕಿನ್ಸನ್ನನ ಈ ಸೂತ್ರದ ಪ್ರತ್ಯಕ್ಷಾನ್ವಯ ನನ್ನ ಮೇಲೆಯೇ ಆಗತೊಡಗಿದಾಗ ಸಹಜವಾಗಿ
ನಾನು ಶಾಶ್ವತ ಪರಿಹಾರಾನ್ವೇಷಣೆ ಮಾಡಲು ಹವಣಿಸಿದೆ. ಜಬರದಸ್ತು,
ಅನುನಯವಿನಯ, ನೀತಿಬೋಧನೆ ಯಾವುದೂ ಇವನನ್ನು ಸರಿ ಹಾದಿಗೆ
ತರಲಿಲ್ಲ. ಸ್ವತಃ ಇವನ ಗುರುಗಳನ್ನೇ ನಿಂದಿಸುವ ದಾರ್ಷ್ಟ್ಯ ಇವನದ್ದಾಗಿತ್ತು.
ಈಗೀಗ ಕೆಲಸ ಮಾಡದೆ ಹೋರುವುದು, ಎದುರಾಡುವುದು,
ಗಿರಾಕಿಗಳೊಡನೆ ಅಸಡ್ಡೆಯಿಂದ ವರ್ತಿಸುವುದು, ವಿನಾಕಾರಣ
ಗೈರುಹಾಜರಾಗುವುದು ಎಲ್ಲವೂ ಹೆಚ್ಚಾದುವು. ಇವನನ್ನು ವಜಾಗೊಳಿಸುವುದೊಂದೇ
ಶಾಶ್ವತ ಪರಿಹಾರ ಎಂದು ಭಾವಿಸಿ ಯುಕ್ತ ಮುಹೂರ್ತಕ್ಕಾಗಿ ಹೊಂಚುಹಾಕುತ್ತಿದ್ದೆ. ಈ ಪೊಲಿಸ್ - ಕಳ್ಳ ವ್ಯವಹಾರ ನನಗೆ ತುಂಬ ಸಂಕಟವನ್ನೂ ಕ್ಲೇಶವನ್ನೂ
ಉಂಟುಮಾಡುತ್ತಿತ್ತು. ಆದರೆ ಬೇರೆ ವಿಧಿ ಇರಲಿಲ್ಲ.
ಒಂದು ಅಪರಾಹ್ನ. ತರಗತಿ ಪಾಠ
ಮುಗಿಸಿದ ಬಳಿಗೆ ಎಂದಿನಂತೆ ಸಂಘಕ್ಕೆ ಬಂದು ಗಲ್ಲಾದಲ್ಲಿ ಕುಳಿತೆ. ಗಿರಾಕಿಗಳು
ಬರುತ್ತಿದ್ದರು. ಗುಮಾಸ್ತ ಗೊಣಗುತ್ತ ಅವರಿಗೆ ಸಾಮಾನು ಕೊಡುತ್ತಿದ್ದ.
ನಾನು ಬಿಲ್ ಬರೆದು ಹಣ ಪಡೆಯುತ್ತಿದ್ದೆ. ಹೀಗೆಯೇ ಮುಂದುವರಿಯುತ್ತಿದ್ದಾಗ
ಒಬ್ಬ ವಿದ್ಯಾರ್ಥಿ ಬಂದು, “ಸರ್! ನಾನು ಇದೀಗ ತಾನೇ ಕೊಂಡು ಹೋದ ಈ ಕ್ಲಿಪ್ಪರ್ ಪೆನ್ ಬದಲು ಹೆಚ್ಚು ಕ್ರಯದ ಬೇರೆ ಒಂದು ಪೆನ್
ಬೇಕು” ಎಂದು ಅದನ್ನೂ
ಅದರ ಬಿಲ್ಲನ್ನೂ ನನಗೆ ಕೊಟ್ಟ. ಬಿಲ್ಲಿನ ಮೇಲೆ ಪೆನ್ನಿನ ಬೆಲೆ ರೂ ೪.೫೦ನ್ನು ಗುಮಾಸ್ತ ಸರಿಯಾಗಿಯೇ ಬರೆದಿದ್ದ. ಅದರ ದ್ವಿಪ್ರತಿಯನ್ನು
ನಾನು ಸಹಜವಾಗಿ ತೆರೆದು ನೋಡಿದಾಗ ಅಲ್ಲಿ ಕಂಡದ್ದೇನು? ಆ ಇಂಗಾಲ ಪ್ರತಿಯಲ್ಲಿ
ಸ್ಪಷ್ಟವಾಗಿ ಇದ್ದದ್ದು ‘ಸ್ವೀಟ್ಸ್ ೦-೨೫.’ ಮೂಲಬಿಲ್ಲನ್ನೂ
ದ್ವಿಪ್ರತಿಯನ್ನೂ ಗುಮಾಸ್ತನ ಎದುರೊಡ್ಡಿದೆ. ಈ ಹಠಾತ್ ಆಕ್ರಮಣದಿಂದ ತತ್ತರಿಸಿ
ಹೋದ ಆತ ಆ ಕ್ಷಣ ದೀರ್ಘದಂಡ ಪ್ರಣಾಮ ಮಾಡಿ, “ತಪ್ಪಾಯ್ತು, ತಪ್ಪಾಯ್ತು,
ಕ್ಷಮಿಸಬೇಕು ಸರ್” ಎಂದು ಗೋಗರೆದು
ಅತ್ತ. ಆ ಗಳಿಗೆಯಲ್ಲಿ ನಾನು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸದೆ
(ನನ್ನ ಸ್ವಭಾವಕ್ಕೆ ತೀರ ವಿರುದ್ಧವಾದ ವರ್ತನೆ ಇದು) ಗಿರಾಕಿಗಳೆಲ್ಲರನ್ನೂ
ತೃಪ್ತಿಪಡಿಸಿ ಕಳಿಸಿದ್ದಾಯಿತು. ಅಂದಿನ ಸಂಜೆಯ ಲೆಕ್ಕ ತಪಾಸಣೆ ಮುಗಿಯಿತು.
ಮಾಮೂಲಿನಂತೆ ಹಣದಲ್ಲಿ ಖೋತಾ ಇತ್ತು. ಈ ವೇಳೆಗೆ ನನ್ನ
ಮನಸ್ಸು ಪೂರ್ಣಾಹುತಿಗೆ ಪಕ್ವವಾಗಿತ್ತು. ಆದ್ದರಿಂದ ಯಾವ ಉದ್ವೇಗವೂ ಇಲ್ಲದೇ
ಶಾಂತವಾಗಿ ಆದರೆ ಖಚಿತವಾಗಿ ಮಾತಾಡತೊಡಗಿದೆ, “ನಿನ್ನ ಮೇಲೆ ನಾನು ಇಟ್ಟಿದ್ದ
ವಿಶ್ವಾಸಕ್ಕೆ, ನಿನಗೆ ನೀಡಿದ ರಿಯಾಯಿತಿಗಳಿಗೆ ಸರಿಯಾದ ಪ್ರತಿಫಲ ದೊರೆಯಿತು.”
“ಮನ್ನಿಸಬೇಕು ಸರ್! ತಪ್ಪಾಯಿತು”
“ಖಚಿತ ಪುರಾವೆ ದೊರೆತದ್ದರಿಂದ
ತಾನೇ ಈ ನಿನ್ನ ತಪ್ಪೊಪ್ಪಿಗೆ? ನಮ್ಮ ಲೆಕ್ಕಕ್ಕೆ ಸಿಕ್ಕದೇ ಸೋರಿ ಹೋದ ಪ್ರಸಂಗಗಳೆಷ್ಟೋ?”
ಮಾತಿಲ್ಲ, ನಾನೇ ಮುಂದುವರಿಸಿದೆ,
“ಈಗೇನು ಮಾಡಬೇಕು?”
“ಕ್ಷಮಿಸಿಬಿಡಿ ಸರ್, ಮುಂದೆ ನೀವು
ಹೇಳಿದ ಹಾಗೆ ವಿಧೇಯನಾಗಿ ಇರುವೆನು.”
“ವಿಶ್ವಾಸಾಘಾತಕ್ಕೆ ಕ್ಷಮೆ ಇಲ್ಲ. ಈಗ ಎರಡು ಪರ್ಯಾಯಗಳನ್ನು
ಸೂಚಿಸುತ್ತೇನೆ: ಈ ಪ್ರಸಂಗವನ್ನು ಪೊಲಿಸರಿಗೆ ಒಪ್ಪಿಸುವುದು ಒಂದು,
ಮರುಮಾತಾಡದೆ ಈಗಿಂದೀಗಲೇ ನೀನು ರಾಜೀನಾಮೆ ಕಾಗದ ಬರೆದು ಒಪ್ಪಿಸಿ ಇಲ್ಲಿಂದ ಹೊರಟುಹೋಗುವುದು
ಎರಡು. ಹೇಳು, ಏನು ಮಾಡುತ್ತೀಯೆಂದು?”
ಅವನು ಹಲುಬಿದ, ಗೋಳಾಡಿದ,
ಕಾಲು ಹಿಡಿದ. ಇವೆಲ್ಲ ನಾಟಕಗಳಿಗೆ ನಾನು ಬಗ್ಗಲಿಲ್ಲ,
ಜಗ್ಗಲಿಲ್ಲ. ಕೊನೆಗೆ ರಾಜೀನಾಮೆ ಕಾಗದ ನಾನು ಹೇಳಿದಂತೆ
ಬರೆದು ನಮ್ಮಲ್ಲಿಂದ ಬಿಡುಗಡೆಗೊಂಡು ತೊಲಗಿಹೋದ. ಹೀಗೆ ಒಂದು, ದುಸ್ವಪ್ನ ಕರಗಿ ಹೋಯಿತು: ಅವನ ಒಂದು ವರ್ಷದ ಸೇವಾವಧಿಯಲ್ಲಿ ಸೋರಿ
ಮರೆ ಆಗಿರಬಹುದಾದ ಹಣ, ಮಾಲು ಎಷ್ಟು ಎಂಬುದರ ಅಂದಾಜೇ ನನಗೆ ಆಗಲಿಲ್ಲ.
ಈ ಘಟನೆ ನನ್ನೆದುರು ಎರಡು ಮುಖ್ಯ
ಪ್ರಶ್ನೆಗಳನ್ನು ಎತ್ತಿತು: ಅವನ ದುರ್ವರ್ತನೆಯನ್ನು ವೈಯಕ್ತಿಕ ಅಪರಾಧವೆಂದು ತಿಳಿಯಬೇಕೇ? ಅಥವಾ ಸಹಕಾರ ರಂಗದಲ್ಲಿ (ವ್ಯಾಪಕವಾಗಿ ಸಾರ್ವಜನಿಕ ವಲಯದಲ್ಲಿ)
ಹಬ್ಬುತ್ತಿರುವ ವೈರಸ್ಸಿನ ಪ್ರತೀಕವೆಂದು ಭಾವಿಸಬೇಕೇ? ಸಮಕಾಲೀನರು ಯಾರೂ ಇವುಗಳಿಗೆ ಉತ್ತರ ನೀಡಲಾರರು.
ಬುದ್ಧಿವಂತನಾದ ವಂಚಕನಿಗಿಂತಲೂ
ದಡ್ಡನಾದ ಪ್ರಾಮಾಣಿಕನೇ ಲೇಸು ಎಂದು ತೀರ್ಮಾನಿಸಿ ಇಂಥ ಒಬ್ಬನನ್ನು ಅರಸಲು ‘ಕರಿಯ ಕೈಗೆ
ಕುಸುಮ ಮಾಲೆಯಿತ್ತು’ ಕಳಿಸಿದೆವು. ನಮ್ಮ ಅದೃಷ್ಟದಿಂದ ನಗುಮೊಗದ,
ದುಡಿಮೆಗಾರ, ಪ್ರಾಮಾಣಿಕ, ಬಡವನೊಬ್ಬ
ದೊರೆತ. ಇವನಿಗೆ ಕೆಲಸದ ಯಾವ ಮಾಹಿತಿಯೂ ಇರಲಿಲ್ಲ. ಆದರೆ ಕೆಲಸ ಕಲಿಯುವುದರಲ್ಲೂ ಮಾಡುವುದರಲ್ಲೂ ಅತಿ ಶ್ರದ್ಧೆ ಆಸಕ್ತಿಗಳಿದ್ದುವು.
ಇವನು ಬಂದದ್ದರಿಂದ ನಮ್ಮ ಒಳಾಡಳಿತದ ಸಮಸ್ಯೆಗಳೆಲ್ಲವೂ ಮಾಯವಾಗಿ ಹೋದುವು.
ವ್ಯಾಪಾರ ಹಾಗೂ ಗ್ರಾಹಕ ಸೇವೆ ಅತಿ ಕ್ಷಿಪ್ರವಾಗಿ ವರ್ಧಿಸಿದುವು. ನಮಗೆ ಐದು ವರ್ಷ ತುಂಬುವ ವೇಳೆಗೆ ಇವನನ್ನು ಮ್ಯಾನೇಜರ್ ಪದವಿಗೆ ಏರಿಸಿ ಒಬ್ಬ ಅಕೌಂಟೆಂಟನನ್ನೂ
ಒಬ್ಬ ಸೇವಕನನ್ನೂ ನೇಮಿಸಿದೆವು. ಹೀಗೆ ಭಾರೀ ಒಂದು ‘ಸಾಮ್ರಾಜ್ಯ’ದ ಹಿರಿತನ ನನಗೆ ಸಹಜವಾಗಿ ಬಂದೊದಗಿತು. ಸಂಘದ ಶಾಶ್ವತ
ಅಭಿವರ್ಧನೆಗೆ ಬೇಕಾಗುವ ಲೆಕ್ಕ ಪತ್ರಗಳನ್ನು ವ್ಯವಸ್ಥೆಗೊಳಿಸುವ ದಿಶೆಯಲ್ಲಿ ದಿಟ್ಟಿ ಹಾಯಿಸುವುದು
ಈಗ ಸಾಧ್ಯವಾಯಿತು.
ನಮ್ಮ ಅಂದಿನ ಘೋಷಣೆ ಜಾಹೀರಾತುಗಳ
ಮಾದರಿ ನೋಡಿ:
ನಿಮ್ಮ ಹಣಕ್ಕೆ ಯೋಗ್ಯ ಪ್ರತಿಫಲ
ಮತ್ತು ಸೇವೆ ಬೇಕೇ?
ಏರುತ್ತಿರುವ ಧಾರಣೆಯನ್ನು ತಡೆಹಿಡಿದಿಡಲು
ಬಯಸುವಿರೇ?
ನಿಮಗಿರುವ ದಾರಿ ಒಂದೇ: ಬನ್ನಿ ಕಾಲೇಜ್
ಸಂಘಕ್ಕೆ!
ಸಹಕಾರ ವ್ಯಾಪಾರೋದ್ಯಮದ ಮಹೋನ್ನತ
ನಿದರ್ಶನಕ್ಕೆ!
ಓದಲು ಪುಸ್ತಕ ಬರೆಯಲು ಕಾಗದ
ತಿನ್ನಲು ಬಿಸ್ಕತ್ ಧರಿಸಲು ಸ್ವೆಟ್ಟರ್
ಬೇಕಾದ್ದೆಲ್ಲವ ಹರ್ಷದೊಳೀಯುವ
ಕಾಮಧೇನುವನು ಕೇಳಲು ಬನ್ನಿ!
ಉದ್ಗ್ರಂಥಗಳ ಸಾಲೇ ಸಾಲು
ಬಣ್ಣ ಬಣ್ಣದ ಮಾಲೇ ಮಾಲು
ಮಿರಮಿರಗುತ್ತಿಹ ಸ್ಟೀಲೇ ಸ್ಟೀಲು
ಈ ವೈಭವವನು ನೋಡಲು ಬನ್ನಿ!
ಗ್ರಂಥಗಳು, ಪಠ್ಯ ಹಾಗೂ
ಉಪಪಠ್ಯ ಪುಸ್ತಕಗಳು, ಮಾರ್ಗದರ್ಶೀ ಪುಸ್ತಕಗಳು, ವಿದ್ಯಾರ್ಥಿಗಳಿಗೂ ಮುದ್ರಣಾಲಯಗಳಿಗೂ ಕಛೇರಿಗಳಿಗೂ ಬೇಕಾಗುವ ಸಮಸ್ತ ಲೇಖನ ಸಾಮಗ್ರಿಗಳು,
ಉಕ್ಕಿನ ಪಾತ್ರೆಗಳು, ಸರ್ವವಿಧವಾದ ಶೃಂಗಾರ ವಸ್ತುಗಳು,
ಉಣ್ಣೆ ವಸ್ತ್ರಗಳು ಮತ್ತು ನೇಯ್ಗೆಗಳು, ನೈಲಾನ್ ಕಾಲುಚೀಲಗಳು,
ಬಿಸ್ಕಟ್ ಬಗೆಗಳು, ಸಕ್ಕರೆ, ಜೇನು, ಕಾಫಿಬೀಜ, ಗೋಡಂಬಿ,
ಏಲಕ್ಕಿ, ದ್ರಾಕ್ಷಿ, ಕೇಸರಿ,
ತೆಂಗಿನೆಣ್ಣೆ, ಎಳ್ಳೆಣ್ಣೆ, ರಿಫೈನ್ಡ್ ಆಯಿಲ್, ಮುಂತಾದ ಆಹಾರ ಪದಾರ್ಥಗಳು, ಬಹುಮಾನವೀಯಲು ಕಪ್ಪುಗಳು, ಮೆಡಲುಗಳು, ಷೀಲ್ಡುಗಳು ಮುಂತಾದ ಆಕರ್ಷಕ ವಸ್ತುಗಳು, ಕೊಡೆಗಳು, ಮಳೆಕೋಟುಗಳು, ಗಂಬೂಟುಗಳು - ಹೀಗೆಯೇ
ಬೆಳೆಸಬಹುದು. ಈ ತೆರನಾಗಿ ನಮ್ಮ ಸೇವೆ ವ್ಯಾಪಕವಾಗಿತ್ತು. ಸ್ಥಳಾವಕಾಶ ದೊರೆತಿದ್ದರೆ ವಸ್ತ್ರ ವಿಭಾಗವನ್ನು ಪ್ರಾರಂಭಿಸುವ ಯೋಚನೆಯೂ ಇತ್ತು.
ಕೆಲವು ಹಿತೈಷಿಗಳು ಮಡಿಕೇರಿ ಪೇಟೆಯಲ್ಲಿ ನಮ್ಮ ಒಂದು ಶಾಖೆಯನ್ನು ತೆರೆಯಬೇಕೆಂದು
ಸೂಚಿಸಿದರು. ಅದು ಸಂಘಕ್ಕೆ ಪೂರ್ಣಾವಧಿಯ ಕಾರ್ಯದರ್ಶಿ ಬರುವ ತನಕ ಯೋಚಿಸತಕ್ಕದ್ದಲ್ಲ.
ಈಗಾಗಲೇ ಗೌರವ ಕಾರ್ಯದರ್ಶಿಯ ನಿಜವೃತ್ತಿ ಸಂಘ ಸೇವೆ, ಉಪವೃತ್ತಿ
ಕಾಲೇಜು ಅಧ್ಯಾಪನ ಎನ್ನುವ ತಿರುಗಾಮುರುಗಾ ಪರಿಸ್ಥಿತಿ ಆಗಿದೆ. ಇನ್ನು ಶಾಖೆಯನ್ನೇನಾದರೂ
ಆರಂಭಿಸಿದರೆ ಈ ಒಂಟೆಯೇ ಡೇರೆಯ ಯಜಮಾನ ಪೂರ್ತಿ ಆಗುವುದು ಖರೆ ಎಂದು ಭಾವಿಸಿ ಈ ಸೂಚನೆಯನ್ನು ತಳ್ಳಿ
ಹಾಕಿದೆ.
ಕೆಲವು ವೇಳೆ ವಿಶೇಷ ಆದೇಶಗಳು
ಬರುವುದಿತ್ತು. ಉದಾಹರಣೆಗೆ ಹಲವಾರು ಸಂಸ್ಥೆಗಳಿಗೆ ಗಾದ್ರೆಜ್ ಅಲ್ಮೈರಾಗಳು, ಸ್ಟೀಲಿನ
ಪೀಠೋಪಕರಣಗಳು ಇತ್ಯಾದಿಗಳ ಪೂರೈಕೆ. ಇಂಥವನ್ನು ಸಕಾಲದಲ್ಲಿ ಆಕರ್ಷಕ ಬೆಲೆಯಲ್ಲಿ
ಒದಗಿಸಿ ಅವುಗಳ ಕೃತಜ್ಞತೆಗೆ ಪಾತ್ರರಾಗಿದ್ದೆವು. ಒಮ್ಮೆ ಒಬ್ಬ ಮಿತ್ರರು,
“ನಮಗೆ ಹಾಲುಗರೆಯಲು ಎಮ್ಮೆ ಒದಗಿಸುವಿರಾ?” ಎಂದು ಲಘು ವಿನೋದ
ಮಿಶ್ರಿತವಾಗಿ ಕೇಳಿದ್ದರು. ಅವರನ್ನು ಹೆಬ್ಬಾಲೆಯ (ಕೊಡಗಿನಲ್ಲಿ ಎಮ್ಮೆಗಳಿಗೆ ಹೆಸರಾಂತ ಮಾರುಕಟ್ಟೆ) ಗಿರಾಕಿ ಮಿತ್ರರೊಬ್ಬರಿಗೆ
ಪರಿಚಯಿಸಿ ಈ ವ್ಯವಹಾರವನ್ನು ಕುದುರಿಸಿದ್ದೆವು. ಮುಫತ್ತಾಗಿ ನೀಡಿದ ಇಂಥ
ಸಲಹೆ ನೆರವುಗಳು ಅವೆಷ್ಟೊ. ನಮ್ಮ ಸಂಘವೆಂದರೆ ಕೇವಲ ವ್ಯಾಪಾರ ಸಂಸ್ಥೆ ಅಲ್ಲ.
ಒಂದು ಸಾಮಾಜಿಕ ಕೇಂದ್ರ, ಯಾವ ವಿಷಯವನ್ನೂ ಕುರಿತು ಸಮರ್ಥ
ಸಲಹೆ ಸಿಕ್ಕಬಲ್ಲ ಒಂದು ವಿನಿಮಯ ಕೇಂದ್ರ ಎಂಬ ಭಾವನೆ ನಂಬಿಕೆ ಸಾರ್ವತ್ರಿಕವಾಗಿ ಬೆಳೆದುವು.
ನಮ್ಮ ಗಿರಾಕಿಗಳೀಗ ಅಖಿಳ ಪ್ರಪಂಚ
ವ್ಯಾಪ್ತಿ ಪಡೆದಿದ್ದರು. ದೇಶ ವಿದೇಶಗಳಿಂದ ಕೊಡಗಿಗೆ ಬರುತ್ತಿದ ಪ್ರವಾಸಿಗಳು ರಾಜಧಾನಿ ಮಡಿಕೇರಿಯನ್ನು ಸಂದರ್ಶಿಸುತ್ತಿದ್ದುದು
ವಾಡಿಕೆ. ಇವರೆಲ್ಲರೂ ತಪ್ಪದೆ ಕಾಲೇಜ್ ಸಂಘಕ್ಕೆ ಬಂದು ಏನಿಲ್ಲೆಂದರೂ ಇಲ್ಲಿಯ
ಹೆಸರಾಂತ ಜೇನು, ಏಲಕ್ಕಿಯನ್ನು ಕೊಂಡೊಯ್ಯುತ್ತಿದ್ದರು. ಕಾಲೆಜ್ ಸೊಸೈಟಿಯ ಮಾಲು ಎಂದರೆ ಮುಗಿಯಿತು, ಜನ ಕಣ್ಮುಚ್ಚಿ ಬೆಲೆ
ವಿಚಾರ ಮರುಮಾತಾಡದೆ ತೆಗೆದುಕೊಂಡು ಹೋಗುತ್ತಿದ್ದರು. ನಮ್ಮಲ್ಲಿ ಮಾರುತ್ತಿದ್ದ
ಉಕ್ಕಿನ ಪಾತ್ರೆಗಳ ಬೆಲೆ ನೆರೆಯ ಮೈಸೂರು ಬೆಂಗಳೂರು ಮಂಗಳೂರುಗಳ ಪೈಪೋಟಿ ಮಾರುಕಟ್ಟೆಗಳ ಬೆಲೆಗಳಿಗಿಂತ
ಎಷ್ಟೊ ಕಡಿಮೆ ಇತ್ತು. ಇನ್ನು ತೂಕ, ಗುಣಮಟ್ಟ,
ಸೇವೆ ಮುಂತಾದವುಗಳಲ್ಲಿ ನಮ್ಮದೊಂದು ವಿಶೇಷ ದರ್ಜೆಯೇ ಆಗಿತ್ತು.
ಸಹಜವಾಗಿ ನಮಗೆ ಪದೇ ಪದೇ ತೀವ್ರ
ಆರ್ಥಿಕ ಸಂಕಷ್ಟ ತಲೆದೋರುತ್ತಿತ್ತು. ಬೆಳೆಯುತ್ತಿರುವ ಪ್ರತಿಯೊಂದು ವ್ಯಾಪಾರ ವ್ಯವಸ್ಥೆಯಲ್ಲಿಯೂ
ಇದು ಇದ್ದದ್ದೇ. ಬಹು ವರ್ಷಗಳ ಕಾಲ ಬ್ಯಾಂಕ್ ಸಾಲ ಏನನ್ನೂ ಪಡೆಯದೆ ನಿರಖು
ಠೇವಣಾತಿಗಳನ್ನು ಹಿತೈಷಿಗಳಿಂದ ಆಹ್ವಾನಿಸಿ ಮತ್ತು ಸಗಟು ಪೂರೈಕೆದಾರರಿಗೆ ನಮ್ಮ ವಿಶ್ವಾಸವನ್ನೇ ಒತ್ತೆ
ಇಟ್ಟು ಕ್ಷಿಪ್ರಾವಧಿ ಸಾಲದ ಮೇರೆಗೆ ಸಾಮಾನುಗಳನ್ನು ತರಿಸಿ ವ್ಯಾಪಾರ ಮಾಡುತ್ತಿದ್ದೆವು.
ಎಲ್ಲಿಯೂ ಎಂದೂ ಮರ್ಯಾದೆ ಹೋಗುವ ಪ್ರಸಂಗ ಎದುರಾಗಲಿಲ್ಲ. ಉದಾಹರಣೆ ನೋಡಿ: ಇಂದು ಅಪರಾಹ್ಣ ೨ ಗಂಟೆ ಒಳಗೆ ಬ್ಯಾಂಕಿಗೆ ೨೦೦೦
ರೂಪಾಯಿ ತುಂಬಲೇಬೇಕು. ಈಗ ಬೆಳಿಗ್ಗೆ ೧೦ ಗಂಟೆ. ನಮ್ಮಲ್ಲಿ ಒಟ್ಟಾಗಿ ಇರುವುದು ಕೇವಲ ೬೦೦ ರೂಪಾಯಿ. ಆದರೆ ನಿಶ್ಚಿತ
ಮುಹೂರ್ತದ ಮೊದಲು ವ್ಯಾಪಾರ ಕುದುರಿ ಅಥವಾ ಹಳೆಬಾಕಿ ಬಂದು ಅಥವಾ ಎರಡು ಕಾರಣಗಳಿಂದ ಬೇಕಾದ ಹಣ ಒದಗುವುದು
ಖಾತ್ರಿ. ಅನೇಕ ಸಲ ನಾನು ಖಾಸಗಿ ಆಗಿ ಸಾಲ ಪಡೆದು ಆರ್ಥಿಕ ತೊಂದರೆಗಳನ್ನು
ಪರಿಹರಿಸಿದ್ದುಂಟು. ನಮ್ಮಿಂದ ಸಾಲವಾಗಿ ಮಾಲುಗಳನ್ನು ಕೊಂಡಂಥ ನನ್ನ ಸಹೋದ್ಯೋಗಿ
ಮಿತ್ರರೆಲ್ಲರೂ ಶಿಸ್ತಿನಿಂದ ಸಕಾಲದಲ್ಲಿ ಹಣ ಮರುಪಾವತಿ ಮಾಡಿದ್ದರೆ ಇಂಥ ಪ್ರಸಂಗಗಳು ನಮಗೆ ಎಂದೂ
ಎದುರಾಗುತ್ತಿರಲಿಲ್ಲ. ಬಹುಶಃ ನನ್ನ ನಿರೀಕ್ಷೆ ಅತಿ ಆಯಿತೋ ಏನೋ?
ಇನ್ನು ಲಾಭದ ಅಂಚನ್ನು ಎತ್ತರಿಸಿದ್ದರೆ ನಾವು ಎಂದೋ ಹೇರಳ ಹಣ ಕೂಡಿಡಬಹುದಿತ್ತು.
ಆದರೆ ಲಾಭ ಗಳಿಸುವುದೊಂದೇ ನಮ್ಮ ನೀತಿ ಅಲ್ಲವಷ್ಟೆ? ಹೀಗಾಗಿ
ನಮ್ಮ ಸಂಚಿ ಸದಾ ಖಾಲಿ; ವ್ಯಾಪಾರ ಸದ ಟಾಪ್ ಗೇರ್! ಚಿಂತೆ ಎಂದೂ ತಪ್ಪಿದ್ದಲ್ಲ. ಬ್ಯಾಂಕ್ ಸಾಲ ಸುಲಭವಾಗಿ ದೊರೆಯಲಿದ್ದುದರಿಂದ
(ನಾವು ಈ ಸೌಕರ್ಯವನ್ನು ಪಡೆದು ಉಪಯೋಗಿಸಿಕೊಳ್ಳಬೇಕೆಂಬ ಕೋರಿಕೆ ವಾಸ್ತವವಾಗಿ ಸಹಕಾರೀ
ಬ್ಯಾಂಕಿನವರಿಂದಲೇ ಪದೇ ಪದೇ ಬರುತ್ತಿತ್ತು) ಅನಿವಾರ್ಯವಾಗಿ ಅದನ್ನು ಪಡೆದುಕೊಂಡೆವು
(ಕೇವಲ ಹತ್ತು ಸಾವಿರ ರೂಪಾಯಿಯ ಮಿತಿಯಲ್ಲಿ). ‘ಕಡ ಹುಟ್ಟಿ
ಬಡವ ಕೆಟ್ಟ’ ಎಂಬ ಗಾದೆಯ
ಅರ್ಥ ಬೇಗನೆ ನಮಗೆ ಚೆನ್ನಾಗಿ ಮನವರಿಕೆ ಆಯಿತು. ವ್ಯವಹಾರ ಸ್ವಾತಂತ್ರ್ಯವನ್ನು
ಕಡದೊಂದಿಗೆ ನಮ್ಮ ಅರಿವಿಲ್ಲದೆ ಕಳೆದುಕೊಂಡಿದ್ದೆವು. ಪರಿಣಾಮವಾಗಿ,
ಮಾನಧನನಾದ ನಾನು ಮತ್ತು ದಿಟ್ಟ ನಿಲವಿನ ನಮ್ಮ ಸಂಘ, ಕೆಲವು
ಅಹಿತಕರ ಕಹಿಗುಳಿಗೆಗಳನ್ನು ನುಂಗಬೇಕಾಯಿತು. ಹೀಗಾಗಿ ಆದಷ್ಟು ಬೇಗನೆ ಈ
ಸಾಲ ಖಾತೆಯನ್ನು ಮುಚ್ಚಿಬಿಡಬೇಕೆಂದು ನಿರ್ಧರಿಸಿದೆ. ಆದರೆ ಸಾಲವನ್ನು ಪಡೆದಷ್ಟು
ಸುಲಭ ಖಂಡಿತ ಅಲ್ಲ ಅದನ್ನು ಸಂದಾಯಿಸಿ ಮುಕ್ತನಾಗುವುದು ಎಂಬ ಸತ್ಯವೂ ಅರಿವಾಯಿತು. ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು, ಸ್ವಪ್ರಯತ್ನದಿಂದ ನಿಧಾನವಾಗಿ
ಹಾಸಿಗೆಯನ್ನು ವಿಸ್ತರಿಸಿ ಮತ್ತೆ ಹೆಚ್ಚಿನ ಸುಖ ಪಡೆಯುವುದು - ನಿಜವಾಗಿ
ಇವೇ ವಿರಶಾಂತಿಯ ಸೂತ್ರಗಳು.
ಈ ಪ್ರಕಾರವಾಗಿ ನಮ್ಮ ಬಲು ಎತ್ತರದ
ಬಿಗಿ ಸರಿಗೆ ಮೇಲಿನ ಸುಟಿ ನಡಿಗೆ ಮುಂದುವರಿದಿತ್ತು.
ನಮ್ಮ ಕಾಲೇಜಿನ ಸಮಸ್ತ ಕಟ್ಟಡಗಳು - ಸಂಘದ ಕಟ್ಟಡವೂ
ಸೇರಿದಂತೆ, ಸರ್ಕಾರದ ಕಾಮಗಾರಿ ಇಲಾಖೆಯ ಸುಪರ್ದಿಗೆ ಒಳಪಟ್ಟಿದ್ದುವು.
ಕೊಡಗು ಸರ್ಕಾರ ಇದ್ದಾಗ ಸಂಘ ಮತ್ತು ಕ್ಯಾಂಟೀನುಗಳಿಗಾಗಿ ಈ ಸೌಧವನ್ನು ನಿರ್ಮಿಸಿ
ಒದಗಿಸಿದ್ದರು. ನಾವು ಇದನ್ನು ಪ್ರವೇಶಿಸುವ ವೇಳೆಗೆ (೧೯೫೭) ವಿಶಾಲ ಮೈಸೂರು ಸರ್ಕಾರ ಅಧಿಕಾರ ವಹಿಸಿಕೊಂಡಿತ್ತು.
ಕೆಲವು ವರ್ಷಗಳ ಬಳಿಕ ಮಡಿಕೇರಿಗೆ ವರ್ಗವಾಗಿ ಬಂದ ಅಸಿಸ್ಟೆಂಟ್ ಎಂಜಿನಿಯರನೊಬ್ಬ
ಮಾಮೂಲಿನಂತೆ ನಮ್ಮ ಸಂಘಕ್ಕೂ ಬಿಜಯಂಗೈದು ತನ್ನ ಪ್ರವರವನ್ನು ಒಪ್ಪಿಸಿ ಖಾಸಗಿಯಾಗಿ ನನಗೊಂದು ಮನವಿ
(=ಹುಕುಂ) ಸಲ್ಲಿಸಿದ. ಅವನ ಬೇಡಿಕೆಯ
ಸಾಮಗ್ರಿಗಳನ್ನು ನಾವು ಕಾಣಿಕೆಯಾಗಿ ಅವನಿಗೆ ಒಪ್ಪಿಸಬೇಕು. ಅಧಿಕಾರದ ವಿವಿಧ
ಸ್ತರಗಳಿಂದ ಆಗ ಈಗ ಬರುತ್ತಿದ್ದ ಇಂಥ ಕೋರಿಕೆಗಳಿಗೆ ಮತ್ತು ಕಿರುಕುಳಗಳಿಗೆ ಎದುರಾಗಿ ನಾನು ಖಾಯಂ
ಅಸ್ತ್ರವೊಂದನ್ನು ಇರಿಸಿದ್ದೆ. “ಇದು ಸಾರ್ವಜನಿಕ ನ್ಯಾಸ. ನನ್ನನ್ನೂ
ಒಳಗೊಂಡಂತೆ ಇಲ್ಲಿ ಯಾರಿಗೂ ಇಂಥ ಸೌಕರ್ಯ ದೊರೆಯದು. ದಯಮಾಡಿ ಮನ್ನಿಸಬೇಕು.” ಹೆಚ್ಚಿನ ಮಂದಿ
ನನ್ನ ನಿಲವನ್ನು ಮೆಚ್ಚಿ ಮತ್ತೆ ಎಂದೂ ಇಂಥ ಪ್ರಾರ್ಥನೆಗಳನ್ನು ಸಲ್ಲಿಸುತ್ತಿರಲಿಲ್ಲ. ಆದರೆ ಈ ಅಸಿಸ್ಟೆಂಟ್ ಎಂಜಿನಿಯರ್ ಮಹೋದಯ ತನ್ನ ಬೇಡಿಕೆಯನ್ನು ನಾವು ಈಡೇರಿಸದಿದ್ದರೆ ಪರಿಣಾಮ
ಒಳಿತಾಗಲಿಕ್ಕಿಲ್ಲ ಎಂಬುದಾಗಿ ಬೆದರಿಕೆ ಹಾಕಿದ. ತಿಪ್ಪೆಗೆ ಕಲ್ಲೆಸೆದರೆ
ರಾಡಿ ಮುಖಕ್ಕೆ ರಟ್ಟಿ ಹೇಸಿಕೆ ಮಾಡುವುದಲ್ಲದೆ ಬೇರೇನಾದರೂ ಆದೀತೇ? ಹಾಗಾಗಿ
ನಾನು ಸುಮ್ಮನಿದ್ದೆ. ಕೆಲವು ತಿಂಗಳುಗಳ ಅನಂತರ ನಮಗೆ ಸರ್ಕಾರದಿಂದ
(ಕಾಮಗಾರಿ ಇಲಾಖೆಯ ಮೂಲಕ) ಒಂದು ‘ಪ್ರೇಮಪತ್ರ’ ಬಂತು.
ಅದರ ಪ್ರಕಾರ ನಾವು ತಿಂಗಳೊಂದರ ೨೦೦ ರೂಪಾಯಿಯಂತೆ ಬಾಡಿಗೆ ಪಾವತಿ ಮಾಡಬೇಕು,
ಮತ್ತು ಆ ತನಕದ ಹಳೆ ಬಾಕಿಯನ್ನು (೧೨,೦೦೦ ರೂಪಾಯಿಗಳನ್ನು ಮೀರುತ್ತಿತ್ತು) ಒಡನೆ ಸಲ್ಲಿಸಬೇಕು ಎಂದಿತ್ತು.
ಅಲ್ಲದೇ ಸಂಘ ಲಾಭದಾಯಕವಾಗಿ ಕೆಲಸ ಮಾಡುತ್ತಿರುವುದರಿಂದ ಈ ಮೊಬಲಗನ್ನು ಕೇಳಿರುವುದು
ನ್ಯಾಯವಾಗಿಯೇ ಇದೆ ಎಂಬ ವಿವರಣೆಯೂ (ಬರೆಯ ಮೇಲೆ ಉಪ್ಪಿನ ಲೇಪ ಕೂಡಾ)
ಇತ್ತು. ಪ್ರಾಂಶುಪಾಲರ ಮೂಲಕ ನಾವು ಸರ್ಕಾರಕ್ಕೆ ನಮ್ಮ
ಹಾಲೆಹವಾಲೆಗಳನ್ನು ಸಲ್ಲಿಸಿದೆವು. ಸಾರಂಶ ಇಷ್ಟೇ: ಕಾಲೇಜಿನ ಈ ಸಂಘವೂ ಗ್ರಂಥಾಲಯ, ಪ್ರಯೋಗಮಂದಿರ, ಕಛೇರಿ, ತರಗತಿ ಕೊಠಡಿಗಳಂಥ ಒಂದು ಸೇವಾ ಅಂಗ. ಇದು ಖಾಸಗಿ ಸಂಸ್ಥೆ ಅಲ್ಲ. ವಿದ್ಯಾರ್ಥಿಗಳಿಗೆ ಸರಕಾರ ಒದಗಿಸಬೇಕಾದ
ಸೌಕರ್ಯವೊಂದನ್ನು ಇದು, ಸರ್ಕಾರಕ್ಕೆ ಯಾವುದೇ ಆರ್ಥಿಕ ಭಾರ ತಾಗದಂತೆ,
ಚೆನ್ನಾಗಿ ನೀಡುತ್ತಿದೆ. ನಮ್ಮ ಮುಫತ್ತು ಸೇವೆ ಹಾಗೂ ದಕ್ಷ
ಆಡಳಿತೆಯ ಪರಿಣಾಮವಾಗಿ ಇದರಲ್ಲಿ ಲಾಭ ಉಂಟಾಗುತ್ತಿದೆ ಅಷ್ಟೆ. “ಲಾಭ ಬರುತ್ತಿದೆ ಆದ್ದರಿಂದ ಬಾಡಿಗೆ
ಕೊಡಿ” ಎಂದರೆ ಲಾಭ ಮಾಡುವುದು ಅಪರಾಧ
ಎಂಬ ಅರ್ಥ ಧ್ವನಿಸುತ್ತದೆ - ಇದು ಸರಿ ಅಲ್ಲ.
ಇನ್ನು ಯಾರು ಯಾರನ್ನು ಕೇಳುವುದು? ಎಡಗೈ ಬಲಗೈಯನ್ನೇ?
ಸರ್ಕಾರ-ಕಾಲೇಜು-ಸಂಘ ಎಲ್ಲ ಒಂದು
ಅಖಂಡ ವ್ಯವಸ್ಥೆಯ ಭಿನ್ನ ಏರ್ಪಾಡುಗಳು ಮಾತ್ರ.
ಬಾಡಿಗೆ ಹಾಗೂ ಪಾವತಿಗಾಗಿ ಅಸಿಸ್ಟೆಂಟ್
ಎಂಜಿನಿಯರನ ಕೀಟಲೆ ಕೋಟಲೆ ದಾಂಧಲೆಗಳು ಅತಿರೇಕಕ್ಕೆ ಮುಟ್ಟಿದಾಗ ಆತನ ಮೇಲಧಿಕಾರಿ ಎಕ್ಸಿಕ್ಯೂಟಿವ್
ಎಂಜಿನಿಯರರೊಡನೆ ನಾನು ಸ್ವತಃ ಮಾತಾಡಿ ಇವನ್ನು ತಾತ್ಕಾಲಿಕವಾಗಿ ನಿವಾರಿಸಿಕೊಂಡೆ. ಕೆಲವು ತಿಂಗಳುಗಳ
ಅನಂತರ ಸರಕಾರೀ ಆದೇಶ ಪ್ರಕಟವಾಯಿತು. ಅದರ ಪ್ರಕಾರ ಎಲ್ಲ ಸರ್ಕಾರೀ ಕಾಲೇಜುಗಳೂ
ವಿದ್ಯಾರ್ಥಿಗಳ ಉಪಯೋಗಾರ್ಥ ಮಡಿಕೇರಿ ಸರ್ಕಾರೀ ಕಾಲೇಜಿನ ಸಹಕಾರ ಸಂಘದ ಮಾದರಿಯಲ್ಲಿ ಸಂಘಗಳನ್ನು ಸ್ಥಾಪಿಸಬಹುದೆಂದೂ
ಅವುಗಳಿಗೆ ಕಾಲೇಜಿನಲ್ಲಿ ಮುಫತ್ತಾಗಿ ಕೊಠಡಿ ಪೀಠೋಪಕರಣ ಮುಂತಾದವನ್ನು ಒದಗಿಸಬೇಕೆಂದೂ ಇತ್ತು.
ಹೀಗೆ ನಮ್ಮ ನ್ಯಾಯಸ್ಮಮ್ಮತವಾದ ನಿಲವು ಮತ್ತು ವಿವರಣೆ ಸಾರ್ವತ್ರಿಕವಾಗಿ ಉಪಕಾರಿ
ಆದ ಒಂದು ಸರ್ಕಾರೀ ಆದೇಶಕ್ಕೆ ಕಾರಣವಾದುವು.
(ಮುಂದುವರಿಯಲಿದೆ)
Mulugalidda doni telida pariyannu odi snthoshavaythu, Ashoka, Vardhan. Aa muddaada chithradalliruvavarannu hesarisa bahude?
ReplyDeleteಶ್ಯಾಮಲಾ: ಮುಗಿಯದ ಪಯಣದುದ್ದಕ್ಕೆ ನನ್ನಲ್ಲಿರುವ ತಂದೆ ಸಂಬಂಧಿತ ಚಿತ್ರಗಳನ್ನು ಕೆಲವೇ ಬಾರಿ ಆಯ್ಕೆಯಿಂದ, ಹೆಚ್ಚಿನ ಸಮಯದಲ್ಲಿ ಹಂಚಿಹಾಕುವ ಉದ್ದೇಶಕ್ಕಷ್ಟೇ ಹಾಕುತ್ತಿದ್ದೇನೆ. ಹಾಗಾಗಿ ಚಿತ್ರಗಳಲ್ಲಿರುವವರನ್ನೆಲ್ಲಾ ನನಗೆ ತಿಳಿದಿದೆ ಎಂದಿಲ್ಲ. ಆದರೂ ಈ ಬಾರಿ ನಿಮ್ಮ ಕುತೂಹಲಕ್ಕೆ (ನನ್ನ ಚಪಲಕ್ಕೆ) ಕೆಲವು ವಿವರಗಳು: ಮೇಲಿನಿಂದ ಕೆಳಕ್ಕೆ ೧. ಅಮೆರಿಕಾದಲ್ಲಿ ಜಿಟಿಎನ್ ೨. ಗಾನಭಾರತಿಯ ಯಾವುದೋ ಕಾರ್ಯಕ್ರಮ: ಎಡದಿಂದ ಬಲಕ್ಕೆ - ಲಕ್ಷ್ಮೀದೇವಿ (ತಾಯಿ), ಜಿಟಿಎನ್, ಅಯ್ಯ (ಗಾನಭಾರತಿ ಅಧ್ಯಕ್ಷ), ಜೆ.ಅರ್. ಲಕ್ಷ್ಮಣರಾವ್, (ಗೊತ್ತಿಲ್ಲ. ೪. ರೋಟರಿ ಕಾರ್ಯಕ್ರಮದಲ್ಲಿ ಜಿಟಿಎನ್ - ಉಳಿದದ್ದೇನೂ ಗೊತ್ತಿಲ್ಲ. ೫. ಮದ್ರಾಸಿನಲ್ಲಿ ಜಿಟಿಎನ್ ದಂಪತಿ: ನಿಂತವರಲ್ಲಿ ಎಡದಿಂದ ಬಲಕ್ಕೆ - ಶ್ರೀಮತಿ ಮರಿಯಪ್ಪ ಭಟ್ಟ (ಅಂದಾಜು), ಮುಂಗ್ಲಿಮನೆ ಮರಿಯಪ್ಪ ಭಟ್ಟರು, ಕೈಗೂಸು ಗೊತ್ತಿಲ್ಲ, ಜಿಟಿಎನ್, ಕೈಗೂಸು - ನಾನೇ, ಲಕ್ಷ್ಮಿ ದೇವಿ, ಇತರರ್ಯಾರೂ ಗೊತ್ತಿಲ್ಲ
Deleteಪ್ರಾಮಾಣಿಕವಾಗಿ ದುಡಿಯಬೇಕು, ಬದುಕಬೇಕು ಅನ್ನುವ ಮಂದಿಗೆ ಎದುರಾಗುವ ತೊಂದರೆಗಳು ಸಾವಿರ. ಒಳ್ಳೆಯ ಬರಹ.
ReplyDeleteಗಿರೀಶ್, ಬಜಪೆ
ಕಪ್ಪು-ಬಿಳುಪಿನ ಛಾಯಾ ಚಿತ್ರ ಸುಂದರವಾಗಿದೆ. ಧನ್ಯವಾದಗಳು.
ReplyDelete