23 July 2013

ಸಹಕಾರ ಸಂಘದ ಅವರೋಹಣ ಪರ್ವ!


ಜಿಟಿನಾರಾಯಣ ರಾಯರಮುಗಿಯದ ಪಯಣ ವಿ-ಧಾರಾವಾಹಿಯ ಕಂತು ಹದಿನಾಲ್ಕು
ಅಧ್ಯಾಯ ಇಪ್ಪತ್ತಾರರಲ್ಲಿ ನಾಲ್ಕನೇ ಭಾಗ

ಸಂಘದ ವ್ಯವಹಾರದಲ್ಲಿ ನನ್ನ ಕೆಲಸವಾಗಲೀ ಹೊಣೆಗಾರಿಕೆ ಆಗಲೀ ಎಂದೂ ಕಡಿಮೆ ಆಗಲಿಲ್ಲ. ಆಗುವ ಲಕ್ಷಣವೂ ಇರಲಿಲ್ಲ. ಏನಿದ್ದರೂ ಏರುವುದೊಂದೇ, ನಮ್ಮೆಲ್ಲರ ಸೇವೆಯನ್ನೂ ಅದು ಸ್ವಾಹಾಕರಿಸಿ ಅಧಿಕ ಗ್ರಾಸವನ್ನು ಬೇಡುತ್ತಿತ್ತು. ಯಾವುದೋ ಗಳಿಗೆಯಲ್ಲಿ ಯಾವುದೋ ಭಾವನೆಯಿಂದ ಪ್ರವರ್ತಿಸಿದ ಈ ಸಂಘ ಈಗ ನನ್ನ ಸಮಸ್ತ ವ್ಯಕ್ತಿತ್ವವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವಂತೆ ನನಗೆ ಅನ್ನಿಸತೊಡಗಿತು. ಇದಕ್ಕೆ ಹಲವಾರು ಬೇರೆ ಕಾರಣಗಳೂ ಇದ್ದುವು. ಅವುಗಳ ಪೈಕಿ ಮುಖ್ಯವಾದ ನಾಲ್ಕನ್ನು ಮಾತ್ರ ಇಲ್ಲಿ ಬರೆಯುತ್ತೇನೆ.


ಒಂದನೆಯದು, ಸಹಕಾರ ಇಲಾಖೆಯ ರಂಗಿನಲ್ಲಿ ಕ್ರಮೇಣ ಆದ ಬದಲಾವಣೆ. ನಮ್ಮ ಸಂಘಕ್ಕೆಸಹಕಾರ ಎಂಬ ವಿಶೇಷಣ ಒದಗಿಸಿದ ಸವಲತ್ತು ಒಂದೇ ಒಂದು: ನಾವು ಆ ದಿನಗಳ ಕಾನೂನು ಪ್ರಕಾರ ನಮ್ಮ ಲಾಭದ ಮೇಲೆ ಆದಾಯ ತೆರಿಗೆ ಪಾವತಿಸಬೇಕಾಗಿರಲಿಲ್ಲ. ಇದೇನೂ ಭಾರೀ ಉಳಿತಾಯ ಆಗಿರಲಿಲ್ಲ. ಕಾರಣ ನಮ್ಮ ಲಾಭಾಂಶ ಸದಾ ಬಲು ಕಡಿಮೆ. ಇದರಲ್ಲೂ ಹೆಚ್ಚಿನ ಅಂಶವನ್ನು ನಾವು ಬಡ ವಿದ್ಯಾರ್ಥಿಗಳಿಗೆ ಹಂಚಿಬಿಡುತ್ತಿದ್ದೆವು. ಇತ್ತ ಸಹಕಾರ ಇಲಾಖೆಯ ವಕ್ತಾರರು ನಮ್ಮ ಹಿರಿಮೆಯನ್ನು ಹಾಡಿ ಹೊಗಳಿ ಇದು ತಮ್ಮ ಉತ್ತಮ ಸಂಘಟನೆಯ ಪ್ರತೀಕವೆಂದು ಪ್ರಚಾರ ಮಾಡಲು ಹಿಂಜರಿಯುತ್ತಿರಲಿಲ್ಲ. ಹಾಗಿದ್ದರೂ ನಮ್ಮನ್ನು ಅವರು ನಡೆಸಿಕೊಂಡ ರೀತಿ ನಾವು ಇಲಾಖೆಯ ಒಂದು ಅಂಗ, ಅವರ ಕೃಪಾಶ್ರಯದಲ್ಲಿ ಇರುವ ತಾಬೆದಾರರು ಎಂಬಂತೆ. ಇದರಿಂದಾಗಿ ಇಲಾಖೆ - ಸಂಘ ನಡುವೆ ಒಂದು ತರಹದ ಬಿಗುಮಾನ ರಂಗೇರತೊಡಗಿತು. ವಾರ್ಷಿಕ ಲೆಕ್ಕ ಪರಿಶೋಧನೆಗೆ ಬರುತ್ತಿದ್ದ ಕಿರಿ-ಮರಿ-ಹೊಸ ಇನ್ಸ್ಪೆಕ್ಟರುಗಳಿಗೆ ಸ್ವಂತ ಕೆಲಸದಲ್ಲಿ ಯಾವ ಅನುಭವ ಯಾ ಪ್ರಾವೀಣ್ಯ ಇಲ್ಲದಿದ್ದರೂ ಅಧಿಕಾರದ ಹಮ್ಮುಬಿಮ್ಮುಗಳಿಗೇನೂ ಕೊರತೆ ಇರಲಿಲ್ಲ. ಲೆಕ್ಕ ತಪಾಸಣೆ ಮಾಡುವ ಮುಖ್ಯ ಕರ್ತವ್ಯವನ್ನು ಬಿಟ್ಟು ನಾನಿಲ್ಲದಾಗ, ಮ್ಯಾನೇಜರನಿಗೆ ಅಕೌಂಟೆಂಟನಿಗೆ ಕಿರುಕುಳ ಕೊಡಲು ತೊಡಗಿದರು. ಈ ಸಲ್ಲದ ನಡವಳಿಕೆಯನ್ನು ವಿರೋಧಿಸಿ ನಾನವರಿಗೆ ತಿಳಿಯ ಹೇಳಿದ್ದು ಪಥ್ಯವಾಗಲಿಲ್ಲ. ಫಲಿತಾಂಶ ವಾರ್ಷಿಕ ಲೆಕ್ಕ ಪರಿಶೋಧನ ವರದಿ ಕ್ಷುದ್ರ ಲೋಪದೋಷಗಳನ್ನು ಎತ್ತಿ ಹಿಡಿಯುವ ಮತ್ತು ನಮ್ಮ ಕಾರ್ಯನೀತಿಯ ಮೇಲೆ ಟೀಕೆ ಎಸೆಯುವ ಭಾರಿ ಹೊತ್ತಗೆ ಆಯಿತು. ವ್ಯಾಪಾರವೊಂದೇ ಉದ್ದೇಶವಾಗಿರುವ ನಮ್ಮ ಸಂಘವನ್ನು ಸರ್ಕಾರದ ಯಾವುದೇ ಕಛೇರಿಯನ್ನು ತಪಾಸಿಸುವ ರೀತಿ ಪರಿಶೀಲಿಸತಕ್ಕದ್ದಲ್ಲ. ಬದಲು, ವಾಣಿಜ್ಯ ಲೆಕ್ಕ ಪರಿಶೋಧನೆಗೆ ಒಳಪಡಿಸಬೇಕು ಎಂದು ನಾನು ವಾದಿಸಿದೆ. ಲಕ್ಷಾಂತರ ರೂಪಾಯಿಗಳ ವ್ಯಾಪಾರ ಆಗಿ ಅಸಂಖ್ಯಾತ ಗ್ರಾಹಕರಿಗೆ ವಿಪುಳ ಸೇವೆ ಒದಗಿಸಿ ಮಾರುಕಟ್ಟೆಯ ಮೇಲೆ ತುಂಬ ಆರೋಗ್ಯಕರ ಪ್ರಭಾವ ಬೀರಿ ಸಾವಿರಾರು ರೂಪಾಯಿಗಳ ಲಾಭ ಪಡೆದು ಸಹಕಾರ ಕ್ಷೇತ್ರಕ್ಕೆ ಹೆಸರು ತಂದಿದ್ದ ನಮ್ಮ ಸಂಘದ ಲೋಪ ದೋಷಗಳು ಯಾವುವು ಗೊತ್ತೇ? ನಾಲ್ಕಾಣೆ, ಎಂಟಾಣೆ ಕೂಲಿ ಪಾವತಿ ಮಾಡಿದ್ದಕ್ಕೆ ರಶೀತಿಗಳು ಇಲ್ಲದಿರುವಿಕೆ (ಒಂದು ವರ್ಷದಲ್ಲಿ ಈ ಸಂಖ್ಯೆ ಸಾವಿರವನ್ನು ಮೀರುತ್ತದೆ). ಖಾಲಿ ಗೋಣಿ, ಟಿನ್ ಮುಂತಾದವನ್ನು ಒಟ್ಟಾಗಿ ಮೊದಲೇ ಪ್ರಕಟಿಸಿ ಸಾರ್ವಜನಿಕವಾಗಿ ಹರಾಜು ಹಾಕದೆ ಆಗಾಗ ಮಾರಿ ಮುಗಿಸಿದ್ದು. ರಜಾದಿನ ಕೂಡ ಬಂದು ದುಡಿದು ವ್ಯಾಪಾರವನ್ನು ಏರಿಸಿ ತನ್ಮೂಲಕ ಲಾಭಾಂಶವನ್ನು ವರ್ಧಿಸಿದ ನೌಕರರಿಗೆ ಆಯಾ ತಿಂಗಳೇ ಅಧಿಕ-ವೇಳೆ-ದುಡಿಮೆ ಭತ್ಯ ನೀಡಿದ್ದು. ಗೌರವ ಕಾರ್ಯದರ್ಶಿ ಮಂಗಳೂರಿಗೋ ಮೈಸೂರಿಗೋ ಸ್ವಂತ ಕೆಲಸಕ್ಕಾಗಿ ಹೋಗಿದ್ದಾಗ ಸಂಘದ ಕಾರ್ಯವನ್ನೂ ಮಾಡಿ ಅದಕ್ಕಾಗಿ ವೆಚ್ಚವಾದ ಕೇವಲ ಕೂಲಿ, ಲಗ್ಗೇಜು ಮೊದಲಾದ ವಾಸ್ತವ ಮೊಬಲಗನ್ನು ಮಾತ್ರ ಖರ್ಚು ಹಾಕಿದ್ದಕ್ಕೆ ಕಾರ್ಯಕಾರೀ ಮಂಡಳಿಯ ಅನುಮೋದನೆ ಪಡೆಯದಿದ್ದುದು. ಗೌರವ ಕಾರ್ಯದರ್ಶಿ ಉಪನಿಬಂಧನೆ ಪ್ರಕಾರ ಗೌರವ ಸಂಭಾವನೆ (ವಾರ್ಷಿಕವಾಗಿ ಐನೂರು ಆರುನೂರು ರೂಪಾಯಿಗಳನ್ನು  ಇದು ಮೀರುತ್ತಿರಲಿಲ್ಲ) ಪಡೆದದ್ದಕ್ಕೆ (ಈ ಮೊತ್ತವನ್ನಾದರೂ ನಾನು ಆಗಾಗಲೇ ಅರ್ಹ ಬಡ ವಿದ್ಯಾರ್ಥಿಗಳಿಗೆ ಹಂಚಿಬಿಟ್ಟಿದ್ದೆ ಎಂಬುದಕ್ಕೆ ಅಲ್ಲಿಯೇ ಲಿಖಿತ ಪುರಾವೆಗಳಿದ್ದರೂ) ಇಲಾಖೆಯ ಅನುಮತಿ ಪಡೆಯದಿದ್ದುದು. ಕೆಲವೊಂದು ಸಾರ್ವಜನಿಕ ಸಂಸ್ಥೆಗಳಿಗೆ ಉಪನಿಬಂಧನೆಗಳ ಷರತ್ತುಗಳಿಗೆ ವಿರುದ್ಧವಾಗಿ, ಸಾಲವಾಗಿ ಮಾಲುಗಳನ್ನು ನೀಡಿದ್ದು, ಇತ್ಯಾದಿ. ಇವೆಲ್ಲವೂ ಇಲಾಖೆಯ ಕುರುಡು ಕಾನೂನಿನ ದೃಷ್ಟಿಯಿಂದ ಸರಿಯೇ ಇರಬಹುದು. ಸಹಕಾರ ಕ್ಷೇತ್ರದ ಒಳಿತಿಗಾಗಿಯೇ ಇದ್ದವಾಗಿರಬಹುದು. ಆದರೆ ಈ ಜೀವರಹಿತ ವಿಧಿನಿಯಮಗಳು ನನ್ನಲ್ಲಿ ತಿರಸ್ಕಾರ ಭಾವನೆಯನ್ನು ಉಂಟುಮಾಡಿದುವು. ಬೆಳೆಯುತ್ತಿರುವ ಆರೋಗ್ಯವಂತ ಉಪಕಾರೀ ಪ್ರಾಣಿಗೆ ಅದರ ಒಳಿತಿಗಾಗಿಯೇ ತೊಡಿಸುವ ಸಂಕೋಲೆಗಳಿವು ಎಂದು ಭಾವಿಸಿದೆ. ಇನ್ಸ್ಪೆಕ್ಟರರ ಪುಟಗಟ್ಟಲೆ ದೋಷ ಯಾದಿಗೆ ನಾನು ಒಂದೇ ಒಂದು ಸಮಜಾಯಿಸಿಕೆ ನೀಡುತ್ತಿದ್ದೆ: ಪ್ರಸಕ್ತ ವ್ಯಾಪಾರ-ಸಿಬ್ಬಂದಿ ನಿಷ್ಪತ್ತಿಯಲ್ಲಿ ಇದು ಅನಿವಾರ್ಯ. ಮುಂದೆ ನೌಕರರ ಸಂಖ್ಯೆಯನ್ನು ಏರಿಸಿದಾಗ ಇದನ್ನು ಗಮನಿಸಲಾಗುವುದು. ಸಹಜವಾಗಿ ನನ್ನ ಧೋರಣೆ ಇಲಾಖೆಗೆ ಹಿಡಿಸಲಿಲ್ಲ.

ಎರಡನೆಯದು, ಪ್ರಾಂಶುಪಾಲರೊಬ್ಬರ ಅನುಚಿತ ವರ್ತನೆ. ಅವರು ಕಾಲೇಜಿಗೆ ವರ್ಗವಾಗಿ ಬಂದು ಅಧಿಕಾರ ವಹಿಸಿಕೊಂಡ ತರುಣದಲ್ಲಿ ನನ್ನನ್ನು ಕರೆದು ಸಂಘದ ವಿಚಾರ ಆತ್ಮೀಯವಾಗಿ ಮಾತಾಡಿ ವಿವರಗಳನ್ನು ಕೇಳಿ ತಿಳಿದುಕೊಂಡರು. ಮತ್ತೆ ನಾಲ್ಕು ದಿವಸಗಳ ಬಳಿಕ ಪುನಃ ನನ್ನನ್ನು ಬರಹೇಳಿ ಕಳಿಸಿ ಮಾತು ಆರಂಭಿಸಿದರು, ಸಂಘದಲ್ಲಿ ಹಣಕಾಸಿನ ವಹಿವಾಟು ಹೇಗೆ?
ಸದಾ ಮುಗ್ಗಟ್ಟು. ಆದರೆ ಆ ಕಾರಣದಿಂದ ವ್ಯಾಪಾರ ಎಂದೂ ಕುಂಠಿತವಾಗಲಿಲ್ಲ.
ಅದಲ್ಲ ನಾನು ಕೇಳಿದ್ದು. ದಿನ ದಿನ ನಗದು ಸಂಗ್ರಹದ ವಿಲೇವಾರಿ ಏರ್ಪಾಡು ಏನು?
ನೇರ ಬ್ಯಾಂಕಿಗೆ ಜಮೆ ಆಗುತ್ತದೆ. ಪಾವತಿಗಳೆಲ್ಲವೂ ಹೆಚ್ಚಾಗಿ ಚೆಕ್ ಮೂಲಕವೇ. ಈ ಎಲ್ಲ ಕ್ರಿಯೆಗಳೂ ಖುದ್ದು ನನ್ನ ನಿರ್ದೇಶನದಲ್ಲಿಯೇ ನಡೆಯುತ್ತವೆ.
ಅದು ಸರಿ. ಹಾಗಾದರೆ ಪದನಿಮಿತ್ತ ಅಧ್ಯಕ್ಷನಾಗಿ ನನ್ನ ಹೊಣೆಗಾರಿಕೆ ಏನು?
ಅದು ಉಪನಿಬಂಧನೆಗಳಲ್ಲಿ ಸ್ಪಷ್ಟವಾಗಿ ಇದೆ. ಮುಖ್ಯವಾಗಿ ಗೌರವ ಕಾರ್ಯದರ್ಶಿಯನ್ನು ನಾಮಕರಿಸುವುದು ನಿಮ್ಮ ಖುಷಿ. ಮತ್ತೆ ಅದು ಹದ್ದು ಮೀರಿ ಹೋಗದಂತೆ ಉಸ್ತುವಾರಿ ವಹಿಸುವುದು, ಇತ್ಯಾದಿ.
ಹಾಗೋ? ಈಗ ಅಧ್ಯಕ್ಷನಾಗಿರುವ ನನಗೆ ಒಂದೈನೂರು ರೂಪಾಯಿ ಬೇಕಲ್ಲ?
ನಮ್ಮದು ಹಣ ಲೇವಾದೇವಿ ಸಂಘ ಅಲ್ಲ. ವ್ಯಾಪಾರ ಸಂಘ. ಇಲ್ಲಿ ಅಂಥ ಏರ್ಪಾಡು ಇಲ್ಲ.
ಆದರೆ ಅಧ್ಯಕ್ಷನಾದ ನಾನು ಅಪ್ಪಣೆ ಮಾಡಿದರೆ?
ಲಿಖಿತ ಆದೇಶ ನೀಡಿ, ಮತ್ತು ನನ್ನ ರಾಜಿನಾಮೆ ಪತ್ರ ಸ್ವೀಕರಿಸಿ.
ಮಾತು ಮುಂದುವರಿಯಲಿಲ್ಲ. ಮತ್ತೆ ಕೆಲವು ದಿವಸಗಳ ಬಳಿಕ ನನಗೊಂದು ಸಂಗತಿ ತಿಳಿಯಿತು: ಅವರು ಹಲವಾರು ಮಂದಿ ಅಧ್ಯಾಪಕರನ್ನು ತಮ್ಮ ಕೊಠಡಿಗೆ ಕರೆಸಿ ಗೌರವ ಕಾರ್ಯದರ್ಶಿತ್ವವನ್ನು ಅವರಿಗೆ ಕಟ್ಟಲು ಸೂಚಿಸಿದ್ದರಂತೆ. ಆದರೆ ಪ್ರತಿಯೊಬ್ಬರೂ ಈ ಹೊಣೆಗಾರಿಕೆಯನ್ನು ಎರಡನೆಯ ಯೋಚನೆ ಇಲ್ಲದೇ ನಿರಾಕರಿಸಿದ್ದರಂತೆ; ಕೆಲವರಂತೂ ಭಾವಾವಿಷ್ಟರಾಗಿ ನನ್ನ ಗುಣಗಾನ ಮಾಡಿದ್ದರಂತೆ.

ಪ್ರಾಂಶುಪಾಲರ ಕೊಠಡಿಗೆ ಹೋದೆ, ಈ ಗೌರವ ಕಾರ್ಯದರ್ಶಿತ್ವ ನಾನು ಬಯಸಿ ಬಂದದ್ದಲ್ಲ, ವಿಶ್ವಾಸದಿಂದ ಬಿದ್ದ ಮಾಲೆ. ವಿಶ್ವಾಸ ಕೆಟ್ಟಾಗ ಮಾಲೆ ಉರುಳಾಗುವುದು ಸರಿಯಷ್ಟೆ. ನನ್ನನ್ನು ಈ ಹೊಣೆಗಾರಿಕೆಯಿಂದ ಒಡನೆ ಬಿಡುಗಡೆ ಮಾಡಿ.       
ಇಂಥ ಸನ್ನಿವೇಶದ ತೀರ್ವತೆಯನ್ನು ಅರ್ಥಮಾಡಿಕೊಳ್ಳಬಲ್ಲ ಸಂವೇದನೆಯೇ ಅವರ ಬರಡು ಬುದ್ಧಿಗೆ ಇರಲಿಲ್ಲ. ಯಾವ ಪ್ರತಿಕ್ರಿಯೆಯೂ ಅವರಿಂದ ಪ್ರಕಟವಾಗಲಿಲ್ಲ. ನಾನೇ ಭಂಡನಾಗಿ ಅಲ್ಲಿಂದ ಹೊರಟೆ. ಯಥಾಸ್ಥಿತಿ ಮುಂದುವರಿಯಿತು. ಆದರೆ ಈ ಶೀಂತ್ರಿ ಪ್ರಾಂಶುಪಾಲ ಎಂದಾದರೂ ನನ್ನನ್ನು ಕಂಬಿ ತಪ್ಪಿಸುವುದು ಕಟ್ಟಿಟ್ಟದ್ದೇ ಎಂಬ ಹೊಸ ಅರಿವು ಮೂಡಿತು. ಇದು ಸಂಘದ ಅಂತೆಯೇ ನನ್ನ ಆರೋಗ್ಯದ ದೃಷ್ಟಿಯಿಂದ ಅಪೇಕ್ಷಣೀಯವಾಗಿರಲಿಲ್ಲ.

ಮೂರನೆಯದು, ಕಾಲೇಜಿನ ಹವೆ ಕ್ರಮೇಣ ಬಿಗಡಾಯಿಸಿತು. ವಿದ್ಯಾರ್ಥಿಗಳ ಸಂಖ್ಯೆ ಏರುತ್ತಿದ್ದಂತೆ ಸಹಜವಾಗಿ ಅವರಲ್ಲಿ ಆಗೀಗ ಹಲವು ನಿಷೇಧಾತ್ಮಕ ಪ್ರವೃತ್ತಿಗಳು ತಲೆದೋರುತ್ತಿದ್ದುವು. ಇವು ಮುಷ್ಕರಗಳ ರೂಪದಲ್ಲಿ, ಕೆಲವು ಅಧ್ಯಾಪಕರ ವಿರುದ್ಧ ಸಂಪಿನ ರೋಷದಿಂದ, ಸಾಮೂಹಿಕವಾಗಿ ಅತಿರೇಕ ವರ್ತನೆಯ ತೀವ್ರತೆಯಲ್ಲಿ ಇತ್ಯಾದಿ ಪ್ರಕಟವಾಗುತ್ತಿದ್ದುವು. ಅಧಿಕಾರದ ವಿರುದ್ಧ ವಿನಾ ಕಾರಣ ಬಂಡೇಳುವುದು ಪ್ರಗತಿಯ ಲಕ್ಷಣ ಎಂದು ಹಲಮಂದಿ ವಿದ್ಯಾರ್ಥಿಗಳು ತಪ್ಪಾಗಿ ತಿಳಿದಿದ್ದರು ಎಂದು ಅನಿಸುತ್ತಿತ್ತು. ಇಂಥ ಒಂದು ಸಂದರ್ಭದಲ್ಲಿ ನಮ್ಮ ಸಂಘ (ಅವರದು ಕೂಡ) ಅವರ ವಕ್ರ ದೃಷ್ಟಿಗೆ ಎದುರಾಯಿತು. ಸಂಘದ ಚಟುವಟಿಕೆಗಳನ್ನು ಚರ್ಚಿಸಲು ವಿಶೇಷ ಮಹಾಸಭೆಯೊಂದನ್ನು ಕರೆಯಬೇಕು ಎಂಬ ಲಿಖಿತ ಮತ್ತು ಸಾಕಷ್ಟು ಮಂದಿ ವಿದ್ಯಾರ್ಥಿ ಸದಸ್ಯರ ರುಜು ಪಡೆದ ಮನವಿಯನ್ನು ಅವರು ಸಂಘದ ಅಧ್ಯಕ್ಷರಾದ ಪ್ರಾಂಶುಪಾಲರಿಗೆ ಸಲ್ಲಿಸಿದರು. ಅವರಿದನ್ನು ಅಭಿಪ್ರಾಯಕ್ಕಾಗಿ ನನ್ನಲ್ಲಿಗೆ ಕಳಿಸಿದರು. ಸ್ಪಷ್ಟ ವಿಷಯವನ್ನು ನಮೂದಿಸದೇ ಕೇವಲ ಕುಹಕೋದ್ದೇಶದಿಂದ ಪ್ರಭಾವಿತವಾದ ಈ ಮನವಿಯನ್ನು ತಿರಸ್ಕರಿಸುವುದೊಂದೇ ಸರಿಯಾದ ಕ್ರಮ ಎಂಬುದಾಗಿ ನನ್ನ ಮಿತ್ರರು ಅನೇಕರು ಬೋಧನೆ ನೀಡಿದರು. ನಾನು ಪ್ರಾಂಶುಪಾಲರ ಕೊಠಡಿಗೆ ಹೋಗಿ ವಿಶೇಷ ಮಹಾಸಭೆಯ ದಿನವನ್ನು ಆಗಿಂದಾಗಲೇ ಗೊತ್ತುಪಡಿಸಿ ಯಾವುದೇ ಚರ್ಚೆಗೂ ಸಂಘ ಸಿದ್ಧವಾಗಿದೆ ಎಂಬುದಾಗಿ ಪ್ರಕಟಪಡಿಸಿದೆ. ಬಹುಶಃ ಈ ನಿಲವು ರುಜುಗಾರರಲ್ಲಿ ಹಲಮಂದಿಗೆ ಅನಿರೀಕ್ಷಿತವಾಗಿದ್ದಿರಬೇಕು. ಅವರೆಲ್ಲರೂ ನನಗೆ ಪರಿಚಿತರೇ, ಹೆಚ್ಚಿನವರು ಹೇಗೂ ನನ್ನ ವಿದ್ಯಾರ್ಥಿಗಳೇ. ಅವರು ಬಿಡಿಬಿಡಿಯಾಗಿ ಬಂದು ನನ್ನನ್ನು ಕಂಡು ತಾವು ತಿಳಿಯದೇ ಮಾಡಿದ ತಪ್ಪನ್ನು ನಾನು ಮನ್ನಿಸಬೇಕೆಂದು ಕೋರಿದರು. ಹೇಗೂ ಸಭೆ ಏರ್ಪಡಿಸಿ ಆಗಿದೆ. ಅಲ್ಲಿಗೆ ಖಂಡಿತ ಬನ್ನಿ. ಬಂದು ನಿಮ್ಮ ಹೊಗಳಿಕೆ ತೆಗಳಿಕೆ ಎಲ್ಲವನ್ನೂ ಸಕಾರಣವಾಗಿ ಮಂಡಿಸಿ. ಪ್ರಾಮಾಣಿಕತೆಗೆ ಚ್ಯುತಿ ಬರದಿರಲಿ ಎಂದು ಅವರನ್ನು ಕಳಿಸಿದೆ. ಸಭೆ ಸೇರಿತು. ಪ್ರಾಂಶುಪಾಲರೇ ಅಧ್ಯಕ್ಷರು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಸೇರಿದ್ದರು. ಪ್ರಾಸ್ತಾವಿಕ ಮಾತು ಮುಗಿದ ಬಳಿಕ ಮನವಿದಾರರ ಮುಂದಾಳಿಗೆ ಮಾತಾಡಲು ಎಡೆ ಮಾಡಿಕೊಟ್ಟೆವು. ಅವನು ಭಾರೀ ಕಡತಗಳನ್ನು ಹೊತ್ತು ತಂದಿದ್ದುದನ್ನು ನೋಡಿದ್ದೆ. ತಯಾರಿಸಿದ್ದು ಏನನ್ನೋ ಆದರೆ ಅಲ್ಲಿ ಒದರಿದ್ದರ ಸಾರಾಂಶವಿಷ್ಟು, ನಮ್ಮ ಹೆಮ್ಮೆಯ ಸಂಘ ಎಂದರೆ ನಮ್ಮ ಅಭಿಮಾನದ ಗೌರವ ಕಾರ್ಯದರ್ಶಿಯವರ ದುಡಿಮೆಯ ಫಲ. ಇವರಿಲ್ಲದಿದ್ದರೆ ಇದು ಎಂದೋ ಹೇಳಹೆಸರಿಲ್ಲದೇ ಹೋಗುತ್ತಿತ್ತು. ಈ ಧಾಟಿಯಲ್ಲಿ ಮುಂದುವರಿಸಿ, ಈಗ ನಮ್ಮ ಬೇಡಿಕೆಗಳು ಬಲು ಸಾಮಾನ್ಯವಾದವು. ಅವನ್ನು ತಾವು ಈಡೇರಿಸಿದರೆ ತುಂಬ ಉಪಕೃತರಾಗುವೆವು. ಒಂದನೆಯದು, ಮಹಾಸಭೆಯಲ್ಲಿ ಸದಸ್ಯರೆಲ್ಲರಿಗೂ ಉಪಾಹಾರದ ಏರ್ಪಾಡಾಗಬೇಕು. ಎರಡನೆಯದು, ನಾವೇ ಸಂಘದ ಒಳಹೊಕ್ಕು ಬೇಕಾದ ಸಾಮಗ್ರಿಗಳನ್ನು ನೋಡಿ ಆಯ್ದು ತೆಗೆದುಕೊಳ್ಳುವ ವ್ಯವಸ್ಥೆ ಆಗಬೇಕು ಎಂಬುದಾಗಿ ಮುಗಿಸಿದ. ಅಪಸ್ವರ ಎಲ್ಲೂ ಬರಲಿಲ್ಲ. ಅಷ್ಟೇ ಅಲ್ಲ - ನನ್ನ ಕೊರಳಿಗೆ ಒಂದು ಹೂಹಾರ ಹಾಕಿ ಒಲವಿನ ಉರುಳು ತೊಡಿಸಿಯೂ ಬಿಟ್ಟ!

ಇಂಥ ತಿಪ್ಪರ್ಲಾಗವನ್ನು ಕಲ್ಪನೆಯಲ್ಲಿಯೂ ನಿರೀಕ್ಷಿಸದಿದ್ದ ನನಗೆ ಆ ಗಳಿಗೆ ಏನು ಹೇಳಬೇಕೆಂಬುದು ತಿಳಿಯಲಿಲ್ಲ. ವಿದ್ಯಾರ್ಥಿಗಳನ್ನು ಹೊಗಳಿ ಅವರ ಬೆಂಬಲವೇ ಸಂಘದ ನಿಜವಾದ ತ್ರಾಣ ಎಬುದಾಗಿ ನುಡಿದು ಹೊರಬಂದೆ. ಆದರೆ ಈ ಘಟನೆ ಒಟ್ಟಾಗಿ ನನ್ನಲ್ಲಿ ಒಂದು ವಿಧದ ಸಾತ್ತ್ವಿಕ ರೋಷವನ್ನು ಉಂಟುಮಾಡಿತ್ತು. ಸಾರ್ವಜನಿಕ ಬಿಟ್ಟಿ ದುಡಿಮೆಯಲ್ಲಿ ಹೊಗಳಿಕೆ ನನಗೆ ಬೇಕಿರಲಿಲ್ಲ. ವೈಯಕ್ತಿಕ ಖಯಾಲಿಗಾಗಿ ದುಡಿದವನಿಗೆ ಆಗಾಗಲೇ ದೊರೆಯುವ ಖುಷಿಯೇ ನಿಜ ಪ್ರಸಾದ. ಆದರೆ ನನ್ನ ಚಾರಿತ್ರ್ಯವನ್ನು ಪ್ರಶ್ನಿಸುವಂಥ ನಡವಳಿಕೆಗಳನ್ನು, ಅವೇನು ಮಹಾ! ಸತ್ಯ ಹರಿಶ್ಚಂದ್ರನಿಗೂ ತಪ್ಪಿದ್ದಲ್ಲ. ಶ್ರೀರಾಮನೂ ಅವುಗಳಿಂದ ವಿಮುಕ್ತನಾಗಿರಲಿಲ್ಲ ಎಂಬ ನಿರ್ಲಕ್ಷ್ಯ ಭಾವದಿಂದ ಸ್ವೀಕರಿಸುವ ಸ್ಥಿತಪ್ರಜ್ಞತ್ವ ನನಗೆ ಅಂದು ಖಂಡಿತ ಇರಲಿಲ್ಲ (ವಯಸ್ಸು ೩೫).

ಕೊನೆಯದು, ಕಡಪಡೆದ ಒಡನಾಡಿಗಳಿಂದ ಬಿದ್ದ ಒದೆ. ಕಾಲೇಜಿನ ಸಮಸ್ತ ನೌಕರರಿಗೂ (ಇವರೆಲ್ಲರೂ ನನ್ನ ಸಹೋದ್ಯೋಗಿಗಳೇ ತಾನೇ) ಮಾಲುಗಳನ್ನು ಸಾಲವಾಗಿ ಕೊಟ್ಟು ಸಂಬಳದ ದಿನದಂದು ಪೂರ್ತಿ ಮೊಬಲಗನ್ನು ಪಡೆಯುವ ಸವಲತ್ತನ್ನು ಸಂಘದಲ್ಲಿ ಒದಗಿಸಿದ್ದೆವು. ವರ್ಷಗಳು ಉರುಳಿದಂತೆ ಸತ್ಯದ ಅಸಹ್ಯ ನಗ್ನಮುಖ ಗೋಚರವಾಯಿತು. ಬಹುಮಂದಿ ಸಂಭಾವಿತರಿಗೆಸಾಲವನು ಕೊಂಬಾಗ ಇದ್ದ ಹಾಲೋಗರ ತಿಂದ ಮುಸುಡು ಅದನ್ನು ಮರುಪಾವತಿ ಮಾಡುವಾಗ ಇರಲಿಲ್ಲ. ಇಂಥವರು ಮೇರೆ ಮೀರಿ ಸಾಮಾನುಗಳನ್ನು ಸಾಲವಾಗಿ ಖರೀದಿಸಿ ನಮ್ಮ ಆರ್ಥಿಕತೆಗೆ ಮುಳುವಾಗಿ ಪರಿಣಮಿಸಿದರು. ಸಂಘದ ನೌಕರರು ಹೋಗಿ ಹಣ ಕೇಳಿದರೆ ಇವರಿಗೆ ಅಪಮಾನ. ತಾವೇ ಪಾವತಿ ಮಾಡರು. ಖುದ್ದು ನಾನೇ ಹೋದಾಗ ನುಣುಚಿಕೊಳ್ಳುವ ಉತ್ತರ. ಇನ್ನು ಮುಂದೆ ಸಾಲ ಕೊಡುವುದಿಲ್ಲ ಎಂದರೆ ಜಗಳ. ಸದಾ ತೀರ್ಥಕ್ಷೇತ್ರ ಸಂಚಾರ ನಿರತನೂ ಭಗವದ್ಭಕ್ತನೂ ಆದ ಒಬ್ಬ ಸಹೋದ್ಯೋಗಿ ಮಿತ್ರನಂತೂ ನನ್ನ ಮೆಲೆ ಕೈ ಮಿಲಾಯಿಸಲು ಮೇಲೆದ್ದು ಬಂದ. ಅವನನ್ನು ತಡೆದು ಎರಡು ಇಕ್ಕಡಿಸುವ ದೈಹಿಕ ತಾಕತ್ತು ನನಗಿದ್ದರೂ ಇಂಥ ಒಂದು ದೃಶ್ಯ ಕಾಲೇಜಿನ ಹೆಸರಿಗೂ, ವೈಯಕ್ತಿಕವಾಗಿ ನಮ್ಮಿಬ್ಬರ ಹೆಸರುಗಳಿಗೂ ಮಸಿ ಬಳಿಯದಿರದು ಎಂಬುದರ ಅರಿವಾಗಿ ನಾನು ಆ ಸ್ಥಳದಿಂದ ಓಡಿ ಹೋದೆ. ಶುದ್ಧ ಹೇಡಿ, ಅಯೋಗ್ಯ ಎಂದು ಕೂಡ ಆತನಿಂದ ಬಿರುದುಗಳನ್ನು ಪಡೆದೆ.

ಮೇಲೆ ನಮೂದಿಸಿದ ಘಟನೆಗಳು ಮತ್ತು ಇತರ ಅಸಂಖ್ಯಾತ ಕೀಟಲೆ ಕೋಟಲೆ ದಾಂಧಲೆಗಳು ನಾನು ಏಕಾಂಗಿ ಆಗಿದ್ದಾಗ ನನ್ನ ಮನಶ್ಶಾಂತಿಯನ್ನು ಕದಡುವ ಹಿರಿಮಟ್ಟಕ್ಕೆ ಐದಿದ್ದುವು. ಅತಿ ವ್ಯಾಪಾರದ (ಅತಿ ಯಶಸ್ಸಿನ ಕೂಡ) ಪರಿಣಾಮವಾಗಿನೆತ್ತಿಗೇರಿದ್ದ ಪಿತ್ತ ಇಳಿದು ವಾಸ್ತವಾಂಶವನ್ನು ನಾನು ನಿರಪೇಕ್ಷವಾಗಿ ಪರಿಶೀಲಿಸುವುದು ಅನಿವಾರ್ಯವಾಯಿತು (೧೯೬೨).

ಮನಸ್ಸಾಕ್ಷಿ: ಗಣಿತಾಧ್ಯಾಪಕನಾದ ನೀವು ಸ್ವಕ್ಷೇತ್ರದಲ್ಲಿ ಸಾಧಿಸಿದ್ದೇನು?
ನಾನು: ಪಾಠಪ್ರವಚನಗಳನ್ನು ಶ್ರದ್ಧೆಯಿಂದ ನಿರ್ವಹಿಸಿದ್ದು ಮಾತ್ರ.
ಮನಸ್ಸಾಕ್ಷಿ: ವ್ಯಾಪಾರ ಕ್ಷೇತ್ರದಲ್ಲಿ ಊರನ್ನು ಉದ್ಧರಿಸಲು ವಿನಿಯೋಗಿಸಿದ ಶ್ರಮ ಮತ್ತು ವೇಳೆಗಳಲ್ಲಿ ಸ್ವಲ್ಪಾಂಶವನ್ನಾದರೂ ನೀನು ಗಣಿತಾಧ್ಯಯನ ಮಾಡಲು ಮೀಸಲಿಟ್ಟಿದ್ದರೆ ಬೌದ್ಧಿಕವಾಗಿ ಸಾಕಷ್ಟು ಮೇಲೇರಬಹುದಿತ್ತಲ್ಲ?
ನಾನು: ಗೊತ್ತಿಲ್ಲ, ಆ ಅವಕಾಶವೇ ಒದಗಲಿಲ್ಲವಲ್ಲ.
ಮನಸ್ಸಾಕ್ಷಿ: ಅವಕಾಶ ಎಂದೂ ತಾನಾಗಿಯೇ ಬರದು. ಅದನ್ನು ಪ್ರಯತ್ನಪೂರ್ವಕವಾಗಿ ದೊರಕಿಸಿಕೊಳ್ಳಬೇಕು ಎಂಬುದು ನಿನಗೆ ತಿಳಿಯದ್ದೇ?
ನಾನು: ಹೌದು ತಿಳಿದಿದೆ.
ಮನಸ್ಸಾಕ್ಷಿ: ಹಾಗಾದರೆ ನೀನು ತಾರುಣ್ಯದ ಈ ಎಂಟು ವರ್ಷಗಳನ್ನು  ವೃಥಾಪೋಲು ಮಾಡಿದೆಯಲ್ಲ?
ನಾನು: ಆದರೆ ಸಂಘದಲ್ಲಿ ನಾನು ಯಶಸ್ಸು ಗಳಿಸಿದೆನಲ್ಲ?
ಮನಸ್ಸಾಕ್ಷಿ: ಅದು ಬರಿ ಭ್ರಮೆ. ಗಣಿತಾಧ್ಯಾಪಕನಾಗಿ ನೀನು ಗಣಿತ ಚಿಂತನೆ ಮುಂದುವರಿಸಲಿಲ್ಲ. ಸಂಸಾರವಂದಿಗನಾಗಿ ಮನೆಮಂದಿಯನ್ನು ಗಮನಿಸಲಿಲ್ಲ. ಊರಿಗೆ ಕೊಡೆ ಹಿಡಿದೆನೆಂಬ ಹಮ್ಮು ಮಾತ್ರ ನಿನ್ನದು. ಹೋಗಲಿ - ಈ ಸಂಸ್ಥೆ ನಿನ್ನ ಅನಂತರ ಉಳಿದೀತೆಂದು ನಂಬಿದ್ದೀಯಾ?
ನಾನು: ಆ ಗೊಡವೆ ನನ್ನದಲ್ಲ. ನಾನು ಅನಿವಾರ್ಯ ಎಂದು ಯಾವ ಹೊತ್ತಿನಲ್ಲೂ ಭಾವಿಸುವ ಮೂರ್ಖ ನಾನಲ್ಲ. ಆದರೆ ಈ ತನಕ ನಾನು ಮಾಡಿರುವ ಗ್ರಾಹಕ ಸೇವೆ, ಹಲವಾರು ಮಂದಿಗೆ ಉದ್ಯೋಗಾವಕಾಶವನ್ನು ಒದಗಿಸಿದ್ದು, ಮಾರುಕಟ್ಟೆಯಲ್ಲಿ ನಮ್ಮ ಸಂಸ್ಥೆ ಪ್ರಭಾವೀ ಕೇಂದ್ರವಾಗಿರುವುದು ಎಲ್ಲವೂ ವ್ಯರ್ಥವೇ? ಸುಳ್ಳೇ?
ಮನಸ್ಸಾಕ್ಷಿ: ಅದು ಯಾವುದನ್ನೂ ಕಡೆಗಣಿಸುವಂತಿಲ್ಲ. ಆದರೆ ಅವುಗಳಿಂದ ನಿನ್ನ ಉದ್ದಾರ ಆಗಲಿಲ್ಲ.
ನಾನು: ನನ್ನ ಉದ್ದಾರ ಅಂದರೇನು?  
ಮನಸ್ಸಾಕ್ಷಿ: ನಿನ್ನ ಕ್ಷೇತ್ರದಲ್ಲಿ ನಿನ್ನ ವೃತ್ತಿಯಲ್ಲಿ ಅತ್ಯುನ್ನತ ಶಿಖರ ಏರಲು ಪ್ರಯತ್ನಿಸುವುದೋಂದೇ ನಿನ್ನ ಉದ್ದಾರದ ಮಾರ್ಗ. ಮಿಕ್ಕುದೆಲ್ಲ ಒಂದು ವಿಧವಾದ ಕರ್ತವ್ಯ ಪರಾಙ್ಮುಖತೆ, ಕಠಿಣ ಪರಿಶ್ರಮದಿಂದ ಪಲಾಯನ ಮಾಡುವ ತಂತ್ರ, ಭಾನಗಡಿ ಮನಸ್ಸಿನ ದೊಂಬರಾಟಗಳು ಮಾತ್ರ.

ನನ್ನ ಮನಸ್ಸಾಕ್ಷಿ ಮುಂಜಾನೆಯ ೩ ಗಂಟೆಯ ನೀರವತೆಯಲ್ಲಿ ನನ್ನನ್ನು ಬಡಿದೆಬ್ಬಿಸಿ ತಿವಿದು ಕೇಳುತ್ತಿದ್ದ ಈ ಪ್ರಶ್ನೆಗಳನ್ನು ಎದುರಿಸಲು ನಾನು ಅಸಮರ್ಥನಾಗಿದ್ದೆ. ಬೆಳಗಾದೊಡನೆ ಸಂಘ ಯಮಭಾರದಿಂದ ನನ್ನನ್ನು ಜಗ್ಗುವುದು ಮಾಮೂಲಾಯಿತು. ಈ ಭಾರವೇನಾದರೂ ಅಕಸ್ಮಾತ್ತಾಗಿ ಕಳಚಿ ಹೋಗಿದ್ದರೆ ಚಂದ್ರನ ಮೇಲೆ ಆಕಾಶ-ಪೋಷಾಕುರಹಿತನಾಗಿ ಇಳಿವ ಮಾನವನ ಪಾಡು ನನ್ನದಾಗಿ ಹೋಗಿರುತ್ತಿತ್ತೋ ಏನೋ! ಮಡಿಕೇರಿಯಲ್ಲಿ ಇರುವ ತನಕವೂ ನನಗೆ ಮೋಕ್ಷ ಅಲಭ್ಯ. ಆದ್ದರಿಂದ ಪರ ಊರಿಗೆ ವರ್ಗ ಪಡೆದು ನೆಮ್ಮದಿಯಿಂದ ಕರಗಿ ಹೋಗುವುದೊಂದೇ ಸರಿಯಾದ ಹಾದಿ ಎಂದು ಯೋಚಿಸತೊಡಗಿದೆ.

೧೯೬೨ರ ದ್ವಿತೀಯಾರ್ಧದಲ್ಲಿ ಚೈನಾದೇಶ ಭಾರತದ ವಿರುದ್ಧ ಹಠಾತ್ತಾಗಿ ಯುದ್ಧ ಸಾರಿತು. ಆಗ ರಾಷ್ಟ್ರ ಕೈಗೊಂಡ ಹಲವಾರು ದೇಶ ರಕ್ಷಣ ಕಾರ್ಯಗಳ ಪೈಕಿ ಎನ್ಸಿಸಿಯ ಕ್ಷಿಪ್ರ ವಿಸ್ತರಣೆಯೂ ಒಂದು. ಆ ವೇಳೆಗೆ ಎನ್ಸಿಸಿಯಲ್ಲಿ ಕ್ಯಾಪ್ಟನ್ ದರ್ಜೆಯ ಅಧಿಕಾರಿಯಾಗಿದ್ದ ನಾನು ಆ ವಿಸ್ತರಣೆಯ ಅಂಗವಾಗಿ ದೂರದ ಬಳ್ಳಾರಿಗೆ ಪೂರ್ಣಾವಧಿ ಮಿಲಿಟರಿ ಸೇವೆಯ ಅಧಿಕಾರಿಯಾಗಿ ಹೋಗಬೇಕಾಯಿತು. (ವಿವರಗಳಿಗೆ ನಾನು ಬರೆದಿರುವಎನ್ಸಿಸಿ ದಿನಗಳು ಪುಸ್ತಕ ಓದಬಹುದು.) (ರೂ ಐವತ್ತೈದು ವಿಳಾಸ ಸಹಿತ ಮನಿಯಾರ್ಡರ್ ಮಾಡಿದವರಿಗೆ ಉಚಿತ ಅಂಚೆ ಮೂಲಕ ಕಳಿಸಬಲ್ಲೆ. ಹೆಚ್ಚಿನ ಮಾಹಿತಿಗೆ ಜಾಲತಾಣಾದ ಮುಖಪುಟದ ಮೇಲಿರುವ ಪುಸ್ತಕಲೋಕ ತೆರೆದು ನೋಡಿ - ಅಶೋಕವರ್ಧನ) ಹೀಗೆ ನನ್ನರಿವಿಲ್ಲದೇ, ಒಂದು ರೀತಿ ಸ್ವಯಂಚಲಿಯಾಗಿ, ನಾನು  ಕಾಲೇಜಿನ ಹುದ್ದೆಯಿಂದ ಮತ್ತು ಮಡಿಕೇರಿಯಿಂದ ಬಿಡುಗಡೆಗೊಂಡು ಹೊರಟೇಬಿಟ್ಟೆ (೩೧--೧೯೬೩). ಇಂಥ ಒಂದು ಬದಲಾವಣೆ ಸಂಭವಿಸಲಿದೆ ಎಂಬ ಕುರುಹು ನನಗೆ ಆ ಹಿಂದಿನ ಏಪ್ರಿಲ್ ವೇಳೆಗೇ ತಿಳಿದಿದ್ದುದರಿಂದ ಸೊಸೈಟಿಯ ಹಿರಿತನವನ್ನು ವ್ಯವಸ್ಥಿತವಾಗಿ ಬೇರೆ ಅಧ್ಯಾಪಕ ಗೌರವ ಕಾರ್ಯದರ್ಶಿಯವರಿಗೆ ವಹಿಸಿಕೊಟ್ಟು ಅವರಿಗೆ ಯುಕ್ತ ತರಬೇತು ಕೊಡುವುದು ಸಾಧ್ಯವಾಯಿತು. ಸಂಘಕ್ಕೆ ಆರಂಭದಿಂದಲೂ ಬೆನ್ನೆಲುಬಿನಂತಿದ್ದ ಜನಾರ್ದನ ಬಾಳಿಗರ ಅಜ್ಞಾತ ಅಯಾಚಿತ ಸೇವೆ ಹೇಗೂ ಇತ್ತು (ಆದರೆ ಅವರು ಮಾತ್ರ ಯಾವ ಹೆಸರನ್ನೂ ಎಂದೂ ಸ್ವೀಕರಿಸಿದವರಲ್ಲ). ಇನ್ನು ಖುದ್ದು ನನ್ನೊಡನೆ ಪಳಗಿದ ಪೂರ್ಣಾವಧಿಯ ಮ್ಯಾನೇಜರ್, ಅಕೌಂಟೆಂಟ್, ಸೇವಕ ಇವರ ದಂಡು ದಕ್ಷತೆಯ ಉನ್ನತ ಮಟ್ಟದಲ್ಲಿತ್ತು. ವ್ಯಾಪಾರ, ಸುನಾಮ, ಗಿರಾಕಿಗಳ ಪೀಳಿಗೆ, ತಾಂತ್ರಿಕ ಜ್ಞಾನ ಎಲ್ಲವೂ ಸಮರ್ಪಕವಾಗಿದ್ದುವು. ಆರ್ಥಿಕ ಸ್ಥಿತಿಗತಿಗಳು ಆರೋಗ್ಯವಾಗಿ ವರ್ಧಿಸುತ್ತಲೇ ಇದ್ದುವು. ನನ್ನ ಉತ್ತರಾಧಿಕಾರಿಯವರಿಗೆ ನಾನು ನೀಡಿದ ಸಲಹೆ ಇದು, ನಮ್ಮ ಸಂಘವೊಂದು ಭಾರೀ ಮರ್ಸೆಡೆಸ್ ಬೆನ್ಝ್ ಲಾರಿ. ಇದರ ಯಾಂತ್ರಿಕ ಸ್ಥಿತಿ ಸೊಗಸಾಗಿದೆ. ಉತ್ಕೃಷ್ಟ ಮಾಲುಗಳನ್ನು ಇದರಲ್ಲಿ ಹೇರಲಾಗಿದೆ. ಕಂಡಕ್ಟರ್ ಕ್ಲೀನರ್ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ನುರಿತವರು, ಆಸಕ್ತರು, ಪ್ರಾಮಾಣಿಕರು. ದಾರಿ ವಿಶಾಲವಾಗಿ ಮಟ್ಟಸವಾಗಿ ಹಬ್ಬಿದೆ. ಈಗ ಇದು ಚೆನ್ನಾದ ವೇಗದಲ್ಲಿ ಓಡುತ್ತಿದೆ. ನೀವು ಚುಕ್ಕಾಣಿ ಚಕ್ರ ಹಿಡಿದು ಇದನ್ನು ಮುತುವರ್ಜಿಯಿಂದ ಓಡಿಸಿ, ವೇಗದ ಅಮಲು ಎಂದೂ ನಿಮ್ಮ ತಲೆಗೆ ಹುಗದಿರಲಿ.

ಮುಂದಿನ ಆರೇಳು ವರ್ಷಗಳಲ್ಲಿ ಸಂಘದ ಗೌರವ ಕಾರ್ಯದರ್ಶಿತ್ವದಲ್ಲಿ ಪದೇ ಪದೇ ಬದಲಾವಣೆಗಳಾದುವು. ಓರ್ವ ಗೌಡಬಂಗಾಳೀ ಮಹಾಶಯನ ಅಪ್ರಾಮಾಣಿಕ ದಬ್ಬಾಳಿಕೆಯ ಹೊಡೆತವನ್ನು ಸೈರಿಸಲಾರದ ಮ್ಯಾನೇಜರ್ ಹಾಗೂ ಅಕೌಂಟೆಂಟ್ ಕೆಲಸ ಬಿಟ್ಟು ಬೇರೆ ಊರುಗಳಿಗೆ ಹೊರಟು ಹೋದರು. ವ್ಯಾಪಾರ ತಗ್ಗಿತು. ಸಗಟು ಪೂರೈಕೆದಾರರಿಗೆ ಸಂಘದ ವಿಚಾರ ವಿಶ್ವಾಸ ಹಾರಿಹೋಯಿತು. ಗಿರಾಕಿಗಳಿಗೆ ಇಲ್ಲಿ ಯಾವುದೂ ಖಾತ್ರಿ ಬೆಲೆಗೆ ದೊರೆಯುವ ನಂಬಿಕೆ ಉಳಿಯಲಿಲ್ಲ. ಒಟ್ಟು ಗೋಟಾಳೆ. ಇಂಥ ಇಳಿಕೆಯ ದಿನಗಳಂದು ಬೇರೆ ಒಬ್ಬನನ್ನು ಮ್ಯಾನೇಜರನಾಗಿ ತಂದು ಪಟ್ಟ ಕಟ್ಟಿದರು. ‘ಮಾರಿಗೌತಣವಾಯ್ತು ಮುಂದಿನ ಈತನ ರಾಜ್ಯಭಾರ. ಆ ವೇಳೆ ಸಂಘದ ಪೂರ್ಣ ವಿಸರ್ಜನೆ ವ್ಯವಸ್ಥಿತವಾಗಿ ನಡೆದು ೧೯೭೩-೭೪ರ ವೇಳೆಗೆ ಅದರ ಕದಗಳಿಗೆ ಶಾಶ್ವತ ಬೀಗ ಬಿತ್ತು.

ನಾನು ಮಡಿಕೇರಿಯವನೇ ಆದ್ದರಿಂದ (೧೯೬೩ರ ಅನಂತರ ಪರ ಊರುಗಳಲ್ಲಿ ಕೆಲಸ ಮಾಡುತ್ತಿದ್ದೇನೆ) ಅಲ್ಲಿಗೆ ಹೋದಾಗಲೆಲ್ಲ ಯಾರಿಗೂ ತಿಳಿಯದಂತೆ ಕಾಲೇಜುವರೆಗೆ ಅಲೆದಾಡಿ ಸಂಘದ ಕಟ್ಟಡಕ್ಕೆ ಪ್ರದಕ್ಷಿಣೆ ಹಾಕಿ ಬರುವುದು ವಾಡಿಕೆ. ಆ ನೀರವ ಏಕಾಂತತೆಯಲ್ಲಿ ನನಗೆ ಸ್ಫುರಿಸುವ ಈ ಮುಂದಿನ ಚರಣ (ಕಡೆಂಗೋಡ್ಲು ಕ್ಷಮೆ ಕೋರಿ):

ಗಾಳಿಬೀಡಿನ ದಿಬ್ಬದ ಮೇಲೆ
ಕಾಲೇಜ್ ನಿಂತಿಹ ಬಂಜರು ನೆಲದಲಿ
ಕಟ್ಟಳೆಯುಂಟೇ ಕಟ್ಟುಗಳುಂಟೇ
ಹೊಯ್ಲಿಡುವಾ ಮಳೆ ಚಾಟಿಯಲಿ?

ನನ್ನ ಹಳೆಯ ಮಿತ್ರರು ಸಹೋದ್ಯೋಗಿಗಳು ಹಾಗೂ ಗಿರಾಕಿಗಳು ಈ ದುರಂತವನ್ನು ಕುರಿತು ಪ್ರಸ್ತಾವಿಸುವುದುಂಟು. ಇಂಥ ಮಾತುಗಳು ಮೂರು ವರ್ಗಗಳಲ್ಲಿ ಅಳವಡುತ್ತವೆ: ಒಂದು, ಈಗ ನನ್ನ ಭಾವನೆ ಏನು? ಎರಡು, ನನ್ನಂಥ ದುಡಿಮೆಗಾರರ ಅಭಾವದಿಂದಾಗಿ ಈ ದುರಂತ ಸಂಭವಿಸಿತು. ಮೂರು, ಮೂಲ ವ್ಯವಸ್ಥಾಪನೆಯಲ್ಲೇ ಹುದುಗಿದ್ದ ಯಾವುದೋ ಐಬಿನಿಂದಾಗಿ ಹೀಗಾಗಿರಬಹುದೇ? ಈ ವಿಚಾರಗಳನ್ನು ನಾನು ಬಿಡುವಿದ್ದಾಗ ಯೋಚಿಸಿವುದುಂಟು. ನನ್ನ ಅನ್ನಿಸಿಕೆಗಳು ಹೀಗಿವೆ:

ಒಂದನೆಯದಾಗಿ, ಈಗ ನನ್ನ ಭಾವನೆ ತಾತ್ತ್ವಿಕ ವಿಷಾದ ಮಾತ್ರ - ಚೆನ್ನಾಗಿ ಸಾರ್ವಜನಿಕೋಪಕಾರಿಯಾಗಿ ಕೆಲಸ ಮಾದುತ್ತಿದ್ದ ಒಂದು ಸಂಸ್ಥೆ ಮುಚ್ಚಿಹೋಯಿತಲ್ಲ ಎಂಬ ಕಾರಣದಿಂದ. ಅದರ ಸಾರಥ್ಯವನ್ನು ನಾನು ವಹಿಸಿದ್ದಾಗ ನನಗೆ ದೊರೆತ ಅನುಭವ ಸಂತೃಪ್ತಿ ಹೇಗೂ ಪೂರ್ಣ ನನ್ನ ಸೊತ್ತೇ ತಾನೇ.

ಎರಡನೆಯದಾಗಿ, ಮೇಲುನೋಟಕ್ಕೆ ಇದು ನಿಜವೆಂದೇ ತೋರಬಹುದಾದರೂ (ಜೊತೆಗೆ ಇಂಥ ಹೇಳಿಕೆಗಳು ವೈಯಕ್ತಿಕ ಬಡಾಯಿ ಪ್ರತಿಷ್ಠೆಗಳಿಗೆ ಪೋಷಕಗಳಾಗಿರುವುವಾದರೂ) ವಾಸ್ತವವಾಗಿ ಖೇದವನ್ನು ಉಂಟುಮಾಡುತ್ತದೆ. ರಾಷ್ಟ್ರದ ಭವಿಷ್ಯವನ್ನು ರೂಪಿಸುವಂಥ ಮತ್ತುಶೀಲಂ ಸರ್ವಸ್ಯ ಭೂಷಣಂ ಆದರ್ಶವನ್ನು ಧರಿಸಿದ್ದಂಥ ಆ ಮಹಾ ವಿದ್ಯಾಮಂದಿರದಲ್ಲಿ ಒಬ್ಬನೇ ಒಬ್ಬ ಸಮರ್ಥ ಪ್ರಾಮಾಣಿಕ ಧುರೀಣನೂ ದೊರೆಯದಾದನೇ? ಸಂಘ ನಡೆಸಲು ಬೇಕಾದದ್ದು ಮಹಾ ಮಿದುಳಲ್ಲ, ಸುಟಿ ವ್ಯಾಪಾರ ಚಾಕಚಕ್ಯವೂ ಅಲ್ಲ; ಬದಲು ಪ್ರಾಮಾಣಿಕತೆ, ಶಾಂತ ಚಿಂತನೆ, ನಿರಂತರ ದುಡಿಮೆ. ಯಾವುದೇ ಸಂಸ್ಥೆ (ಅಥವಾ ಅದಕ್ಕಿಂತ ಹಿರಿಯದಾದ ಯಾವುದೇ ವ್ಯವಸ್ಥೆ) ಕೇವಲ ಒಬ್ಬ ವ್ಯಕ್ತಿಯನ್ನು ಅವಲಂಬಿಸಿರುವ ವ್ಯಕ್ತಿ ಕೇಂದ್ರ ಸಂಘಟನೆಯಾದರೆ ಅದು ದೀರ್ಘ ಕಾಲ ಬಾಳಲು ಅರ್ಹತೆ ಪಡೆಯಲಾರದು.

ಮೂರನೆಯದಾಗಿ, ಇದಕ್ಕೆ ಉತ್ತರ ಹೇಳಲು ನಾನು ಸಮರ್ಥನಲ್ಲ. ಸಾರ್ವತ್ರಿಕವಾಗಿ ಒಂದು ಮಾತು ಹೇಳಬಹುದು ಅಷ್ಟೆ. ನಾವು ಸಂಘವನ್ನು ಸ್ಥಾಪಿಸಿದಾಗ ಯಾವುದೇ ವಿಧವಾದ ಸಿದ್ಧಾಲೇಖ್ಯವೂ ನಮ್ಮ ಮುಂದೆ ಇರಲಿಲ್ಲ. ಈ ಸುದೀರ್ಘ ಲೇಖನದಲ್ಲಿ ವಿವರಿಸಿರುವಂತೆ ಎಲ್ಲವೂ ಗ್ರಾಹಕರಿಗೆಕ್ಷಿಪ್ರ ಪ್ರಾಮಾಣಿಕ ಸೇವೆ ಎಂಬ ಏಕೈಕೋದ್ದೇಶದ ಸುತ್ತ ವಿಕಸಿಸಿದವು. ಇಂಥ ವಿಕಾಸಕ್ಕೆ ಪೋಷಕವಾಗಿದ್ದ ಪ್ರಧಾನ ಘಟಕಗಳೆಂದರೆ ಗೌರವ ಕಾರ್ಯದರ್ಶಿಯ ವ್ಯಕ್ತಿತ್ವ, ಕಾಲೇಜಿನ ಅಂತಸ್ತು ಹಾಗೂ ಸಮಕಾಲೀನ ಪರಿಸರ. ಅನೇಕ ವೇಳೆ ನಮ್ಮ ಸಂಘವೊಂದು ವ್ಯಕ್ತಿಕೇಂದ್ರ ವ್ಯವಸ್ಥೆಯೇ ಆಗಿದೆಯೋ ಏನೋ ಎಂಬ ಸಂದೇಹ ನನಗೆ ಬಂದದ್ದುಂಟು. ಆದರೆ ಮನುಷ್ಯನ ಚಟುವಟಿಕೆಗಳಲ್ಲಿ ಭಾರಿ ಭಾರಿ ಸರ್ಕಾರಗಳು ಕೂಡ ವ್ಯಕ್ತಿಕೇಂದ್ರ ಸಂಘಟನೆಗಳೇ ಆಗಿ ಏಳುವುದನ್ನೂ ಬೀಳುವುದನ್ನೂ ಇತಿಹಾಸ ನಮಗೆ ಪದೇ ಪದೇ ಎತ್ತಿ ಕಾಣಿಸುತ್ತದೆ. ಯಾವುದೇ ಸಂಸ್ಥೆ ವ್ಯಕ್ತಿ ಸ್ವಾರ್ಥಕೇಂದ್ರ ವ್ಯವಸ್ಥೆಯಾಗಿ ಬೆಳೆಯಬಾರದು. ಬದಲು ನಿಮಿತ್ತಮಾತ್ರಂ ಭವಸವ್ಯಸಾಚಿನ್ನಿಲವಿನ ವೃತ್ತಿಮೂಲ ವ್ಯವಸ್ಥೆಯಾಗಿ ಬೆಳಗಬೇಕು ಎಂದು ಮಾತ್ರ ಸೂಚಿಸಬಲ್ಲೆ. ತಾತ್ತ್ವಿಕವಾಗಿ ಇನ್ನೂ ಎತ್ತರಕ್ಕೆ ಏರಿ ಒಂದು ಮಾತು ಹೇಳಬಹುದು: ಪರಿಸರಕ್ಕೆ ಇಂಥ ಒಂದು ಸಂಘ ಅವಶ್ಯ ಎನ್ನಿಸಿದಾಗ ಅನುಕೂಲ ಬಲಗಳು ಒಂದೆಡೆ ಸಂಘನಿಸಿ ಕೆಲವು ವ್ಯಕ್ತಿಗಳಲ್ಲಿ ಆವಾಹನೆಗೊಂಡು ಉದ್ದೇಶ ಈಡೇರುತ್ತದೆ. ಸಂಘದ ಉಪಯುಕ್ತತೆ ಸಾಕೆಂದಾದಾಗ ಅವೇ ಬಲಗಳು ವಿಸಂಘಟನೆಗೊಂಡು ಸಂಘ ಬರಖಾಸ್ತಾಗುತ್ತದೆ. ಶ್ರೀಕೃಷ್ಣ ನಿರ್ಯಾಣಾನಂತರ ಅರ್ಜುನನಿಗೆ ಒದಗಿದ ಅನುಭವ ಇದೇ ಅಲ್ಲವೇ?

ವ್ಯಾಪಾರ ಪ್ರಪಂಚದಲ್ಲಿ ಗಿರಾಕಿ ಅನುಭವಿಸುವ ಬಗೆಬಗೆಯಾದ ಬವಣೆ ಮೋಸ ವಂಚಕೋಟಲೆಗಳ ಎದುರಾಗಿ ಅವನಿಗೆ ರಕ್ಷಣೆ ಕೊಡುವ ದಿವ್ಯ ಮಂತ್ರ ಯಾ ರಕ್ಷಕ ಅಸ್ತ್ರ ಯಾವುದೂ ನನಗೆ ತಿಳಿದಿಲ್ಲ. ಅಂಥಾದ್ದು ಒಂದು ಎಲ್ಲಿಯಾದರೂ ಇದ್ದರೆ ಅದು ಸಹಕಾರವಂತೂ ಖಂಡಿತ ಅಲ್ಲ.

ಮನುಷ್ಯನ ಯಾವುದೇ ಸಮಸ್ಯೆಗಳಿಗೆ ಪರಿಹಾರಗಳನ್ನು ಅರಸುವಾಗ ಸಮಕಾಲೀನ ಪರಿಸರವನ್ನು ಗಣನೆಗೆ ತೆಗೆದುಕೊಳ್ಳಲೇಬೇಕು. ಇಂಗ್ಲೆಂಡಿನ ಅಂದಿನ ಪರಿಸರದಲ್ಲಿ (ಔದ್ಯಮಿಕ ಕ್ರಾಂತಿ, ೧೮ನೆಯ ಶತಮಾನದ ಕೊನೆಯ ಭಾಗ) ಉದ್ಭವಿಸಿದ ಸಹಕಾರ ತತ್ತ್ವ ಇಂದಿನ ಭಾರತದ ವಿಭಿನ್ನ ಪರಿಸರದಲ್ಲಿ ತಾರಕ ಮಂತ್ರವಾದೀತೆಂಬ ನಂಬಿಕೆ ಅವೈಜ್ಞಾನಿಕವೆಂದು ನನ್ನ ಭಾವನೆ.

ಮಾನವ ಮನಸ್ಸಿನ ವಿಚಿತ್ರ ವ್ಯಾಪಾರಗಳು ವಿಧಿನಿಯಮ ಸಂತಗ್ರಂಥಪಂಥಾತೀತವಾದವು. ಪ್ರಾಮಾಣಿಕತೆ ಅಪ್ರಾಮಾಣಿಕತೆ ಇದರ ಎರಡು ಮುಖಗಳು. ವ್ಯಕ್ತಿ ಪ್ರಾಮಾಣಿಕನಾದಲ್ಲಿ ದಫ್ತರಗಳು ಅನಾವಶ್ಯಕ ಹೊರೆಗಳಾಗುತ್ತವೆ; ಅಪ್ರಾಮಾಣಿಕನಾದಲ್ಲಿ ಅವು ನಿಷ್ಪ್ರಯೋಜಕವಾಗುತ್ತವೆ ಅಥವಾ ಅಪ್ರಾಮಾಣಿಕ ವ್ಯವಹಾರಗಳಿಗೆ ಪ್ರಾಮಾಣಿಕತೆಯ ಸೋಗಿನ ಮೊಗವಾಡವನ್ನು ಒದಗಿಸುವ ರಕ್ಷಾಕವಚಗಳಾಗುತ್ತವೆ. ಆದ್ದರಿಂದ ಬೆಳೆಯುತ್ತಿರುವ ಒಂದು ಜೈವಿಕ ವ್ಯವಸ್ಥೆಯಲ್ಲಿ ಪ್ರಧಾನ ಲಕ್ಷ್ಯ ಇರಬೇಕಾದದ್ದು ವ್ಯಕ್ತಿಗಳ ಪ್ರಾಮಾಣಿಕತೆ, ನಿಷ್ಠೆ, ಶ್ರದ್ಧೆ ಮುಂತಾದ ಜೀವಂತ ಸದ್ಗುಣಗಳೆಡೆಗೆ, ಜೀವರಹಿತ ವಿಧಿ ನಿಯಮ ನಿರ್ಬಂಧಗಳೆಡೆಗಲ್ಲ.

ಜೈವಿಕವಾಗಿ ಅಭಿವರ್ಧಿಸುತ್ತಿರುವ ಒಂದು ಸಂಸ್ಥೆಯ ಆರೋಗ್ಯ ಹದಗೆಡದಷ್ಟು ಪ್ರಮಾಣದಲ್ಲಿ ಮಾತ್ರ ವಿಧಿ ನಿಯಮ ನಿರ್ಬಂಧಗಳು ಇರಬೇಕು - ಭೂಮಿಯ ಗುರುತ್ವಬಲ ನಮ್ಮ ಮೇಲಿರುವಂತೆ - ಹೊರತು ಸಾಕ್ಷಾತ್ ಅದರ ಬೆಳೆವಣಿಗೆಯನ್ನೇ ಕುಂಠಿಸುವ ಪಂಜರಗಳು ಅವು ಆಗಬಾರದು.

ನಗದು ಪುಸ್ತಕದ ವಿಚಾರ ಎಚ್ಚರವಹಿಸಿದರೆ ಖಾತಪುಸ್ತಕಗಳು ತಂತಾವೇ ಶುದ್ಧವಾಗಿರುತ್ತವೆ. ನಮ್ಮ ಯಾವುದೇ ವ್ಯವಹಾರದಲ್ಲಿ ಉದ್ದೇಶ ಶುದ್ಧವಾಗಿದ್ದು ದೈನಂದಿನ ನಡವಳಿಕೆ ನೇರವಾಗಿದ್ದರೆ ನಾವು ಸಾಕ್ಷಾತ್ ಪರಬ್ರಹ್ಮನಿಗೆ ಕೂಡ ಅಂಜಬೇಕಾಗಿಲ್ಲ.

ಯಾವುದೇ ಸಂಘದ ಅಭಿವರ್ಧನೆ ಎಂದೂ ಹಣದ ಕೊರತೆಯಿಂದ ನಿಲ್ಲಲಾರದು; ಅದು ಸ್ಥಗಿತವಾಗುವುದು ಅಥವಾ ಇಳಿಮೊಗವಾಗುವುದು ನಿಸ್ಪೃಹತೆಯಿಂದ ದುಡಿಯಬಲ್ಲ ವ್ಯಕ್ತಿಗಳ ಅಭಾವದಿಂದ. ಆದ್ದರಿಂದ ಆದ್ಯ ಗಮನ ಹರಿಯಬೇಕಾದದ್ದು ನಿಷ್ಠಾವಂತ ಕರ್ತವ್ಯ ಪರಾಯಣರ ಸಂಚಯನದತ್ತ, ಆರ್ಥಿಕ ಸಂಪನ್ಮೂಲಗಳ ಸಂಗ್ರಹದತ್ತ ಅಲ್ಲ.

ನಗದು ಪುಸ್ತಕವನ್ನು ಒಪ್ಪವಾಗಿಟ್ಟಿರಲು
ನಗುನಗುತ ಖಾತೆಗಳು ಸಂತುಲತೆಯೈದುವುವು
ಬಗೆನೇರ ನುಡಿನೇರ ನಡೆನೇರವಿರುವಲ್ಲಿ
ಸೊಗದ ಸಿರಿ ಹರಿಯುವುದು ದಿಟ ನೋಡು ಅತ್ರಿಸೂನು

(ಮುಂದುವರಿಯಲಿದೆ)

4 comments:

  1. Shows how our rule books often create problems which they actually wish to solve.

    ReplyDelete
  2. Article reiterates the truth that honest,sinciere,simple and hardworking people encounter lot of obstacles,hardships and ,at times,humiliation too.
    Sad, but true--That is Life.

    ReplyDelete
  3. ನಗದು ಪುಸ್ತಕದ ವಿಚಾರ ಎಚ್ಚರವಹಿಸಿದರೆ ಖಾತಪುಸ್ತಕಗಳು ತಂತಾವೇ ಶುದ್ಧವಾಗಿರುತ್ತವೆ. ನಮ್ಮ ಯಾವುದೇ ವ್ಯವಹಾರದಲ್ಲಿ ಉದ್ದೇಶ ಶುದ್ಧವಾಗಿದ್ದು ದೈನಂದಿನ ನಡವಳಿಕೆ ನೇರವಾಗಿದ್ದರೆ ನಾವು ಸಾಕ್ಷಾತ್ ಪರಬ್ರಹ್ಮನಿಗೆ ಕೂಡ ಅಂಜಬೇಕಾಗಿಲ್ಲ...
    ನುಡಿದಂತೆ ನಡೆದು ದಾರಿ ತೋರಿದವರ ಮಾತು ಮತ್ತೆ ಮತ್ತೆ ನೆನಪಾಗುತ್ತದೆ -ಭಾರತೀಯ ವಿದ್ಯಾಭವನ, ಮಂಗಳೂರಿನಲ್ಲಿ ಭಾಷಣ ಮಾಡುತ್ತಿರುವ ಚಿತ್ರ ಕಂಡಾಗ - ಅದೆಂಥ ತಾದಾತ್ಮ್ಯತೆ - ಸಂಗೀದಲ್ಲಿ ತಾರೆಗಳ ಚಿತ್ತಾರವನ್ನು ಹುಡುಕುತ್ತ ಹೊರಟಂತಿದೆ ..

    ReplyDelete
  4. ಜಿ.ಟಿ.ನಾರಾಯಣ ರಾಯರ “ಈ ಗೌರವ ಕಾರ್ಯದರ್ಶಿತ್ವ ನಾನು ಬಯಸಿ ಬಂದದ್ದಲ್ಲ, ವಿಶ್ವಾಸದಿಂದ ಬಿದ್ದ ಮಾಲೆ. ವಿಶ್ವಾಸ ಕೆಟ್ಟಾಗ ಮಾಲೆ ಉರುಳಾಗುವುದು ಸರಿಯಷ್ಟೆ. ನನ್ನನ್ನು ಈ ಹೊಣೆಗಾರಿಕೆಯಿಂದ ಒಡನೆ ಬಿಡುಗಡೆ ಮಾಡಿ.” ಎಂಬ ಪ್ರಾಂಶುಪಾಲಕರಿಗೆ ನೀಡಿದ ಮಾತು ಜಿ.ಟಿ.ನಾ ರ ಪ್ರಾಮಾಣಿಕ, ನಿಷ್ಟಾವಂತ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ, ಧನ್ಯವಾದಗಳು.

    ReplyDelete