13 July 2020

ಪ್ರಾಕೃತಿಕ ಭಾರತದ ಸೀಳೋಟ

ಮಂಗಳೂರು - ಹುಬ್ಬಳ್ಳಿ, ಪೀಠಿಕೆ ಸಹಿತ (ಭಾಗ - ೧)

ಷಣ್ಮುಖರು

ಕಳೆದ ಶತಮಾನದ ಕೊನೆಯ ದಶಕ, ನಿಖರವಾಗಿ ೧೯೯೦ರ ಏಪ್ರಿಲ್ ೨೫ನೇ ಬುಧವಾರ ಬೆಳಿಗ್ಗೆ ಆರೂವರೆ ಗಂಟೆ. ಗೆಳೆಯರೇ ಆದ ಯಜ್ಞ, ರೋಹಿತ್ ರಾವ್, ಮೋಹನ್, ಪ್ರಸನ್ನ, ಇಂದುಶೇಖರ, ಬೋಸ್ ಮೊದಲಾದವರು ಟ್ಯಾಗೋರ್ ಉದ್ಯಾನವನದೆದುರು, ನಾವು ಊರು ಬಿಡುವುದನ್ನು ಖಾತ್ರಿ ಪಡಿಸಿಕೊಳ್ಳಲೆಂಬಂತೆ ಬಂದಿದ್ದರು. ನಾವು ಆರು ಮಂದಿ (ಐದು ಗಂಡು, ಒಂದು ಹೆಣ್ಣು), ದೀರ್ಘ ಪ್ರಯಾಣಕ್ಕೆ ಮತ್ತು ವಾಸ್ತವ್ಯಕ್ಕೆ ಅಗತ್ಯವಾದ ಮಿತ ಸಾಮಾನುಗಳ ಹೊರೆ ಹೊತ್ತ ಮೂರು ಹೀರೋ ಹೊಂಡಾ ಮೋಟಾರ್ ಬೈಕ್‍ಗಳನ್ನೇರಿ (೧೦೦ ಸಿಸಿ) ಹೊರಟಿದ್ದೆವು. ಗಡಿಯಾರದ ಮೂರೂ ಮುಳ್ಳುಗಳು ಒಂದರ ಮೇಲೊಂದಾಗುವ ವೇಳೆಗೆ ಬಾವುಟ ಗುಡ್ಡೆಯ ಮೇಲೆ ಸಾಂಕೇತಿಕ ಬಾವುಟ ಹಾರಿತು, ಮೂರೂ ವಾಹನಗಳು ಒಂದರ ಹಿಂದೊಂದರಂತೆ ಅಖಿಲ ಭಾರತದ ಲಕ್ಷ್ಯವಿಟ್ಟುಕೊಂಡು ಚಿಮ್ಮಿದ್ದವು. 

ಬಾಲಣ್ಣ
ಬಾಲಕೃಷ್ಣ ಸೋಮಯಾಜಿ (ಬಾಲಣ್ಣ) - ಮಜ್ಗಾಂ ನೌಕರ, ಅವರ ಸವಾರಿಗೆ ಸಹವಾರ ಪಿ. ವೆಂಕಟ್ರಮಣ ಉಪಾಧ್ಯ (ಉಪಾಧ್ಯ) - ಸಾಲಿಗ್ರಾಮದ ವ್ಯಾಪಾರಿ. ಮೊಡಂಕಾಪಿನ (ಬಂಟ್ವಾಳ) ಶಾಲಾ ಉಪಾಧ್ಯಾಯ ವಿಷ್ಣು ಪಿ. ನಾಯಕ್ (ನಾಯಕ್) ಗಾಡಿಗೆ ಬೆಂಬಲಿಗ ರಂಗಕರ್ಮಿ ರಾಜಶೇಖರ ರಾವ್ (ರಾಜ). ಪುಸ್ತಕ ವ್ಯಾಪಾರಿ ನನಗೆ ಮಾತ್ರ ಹತ್ತು ವರ್ಷದಿಂದ ಬೆಂಬಿಡದ ಜೀವನ ಸಂಗಾತಿ, ಗೃಹಿಣಿ - ದೇವಕಿ. 

ಕರಾವಳಿ ಉದ್ದದ ರಾಷ್ಟ್ರೀಯ ಹೆದ್ದಾರಿ ನಮಗೆ ಏನೂ ಹೊಸದಲ್ಲ. ಮೂಲ್ಕಿ ಉಡುಪಿಗಳನ್ನು ಸದ್ದಿಲ್ಲದೆ ಹಿಂದೆ ಸರಿಸಿದೆವು. ಅದು ಚರವಾಣಿ ಇಲ್ಲದ ಕಾಲ. ಇದ್ದ ಸ್ಥಿರವಾಣಿಗೆ, ನೆರೆಮನೆಯಂಥ ಉಡುಪಿಯೂ (ಎಸ್ಟೀಡಿ ಶುರುವಾದ ಕಾಲ) ಟ್ರಂಕಾಲಿನ ದೂರ. ಹಾಗಾಗಿ ನಾವು ಮಂಗಳೂರು ಬಿಟ್ಟ ಯಾವ ಸೂಚನೆ ಇಲ್ಲದಿದ್ದರೂ ಉಪಾಧ್ಯರ ತೌರೂರು ಚಪ್ಪೆಯಾಗದಂತೆ ನೋಡಿಕೊಂಡರು ಅಣ್ಣ - ಮಂಜುನಾಥ ಉಪಾಧ್ಯ. ಆ ಬೆಳಿಗ್ಗೆ ಸಾಲಿಗ್ರಾಮದ ಹೆದ್ದಾರಿ ಪಕ್ಕದಲ್ಲಿ ಅಂದಾಜಿನಲ್ಲೇ ಕಾದು ನಿಂತು, ಶುಭಾಶಯ ಕೋರಿದರು. ನಮ್ಮ ಮೊದಲ ನಿಜದ ನಿಲುದಾಣ, ಉಪಾಹಾರದ ಬಿಡುವು - ಕುಂದಾಪುರದಲ್ಲಿತ್ತು. 

‘ಭಾರತ ಸೀಳೋಟ’ - ಮುಖ್ಯವಾಗಿ ಪ್ರಾಕೃತಿಕ ವೈಶಿಷ್ಟ್ಯಗಳನ್ನೇ ಪೋಣಿಸಿದ ಸಾಹಸಯಾನ. ಅದು ಹಿಮಾಲಯದ
ಉಪಾಧ್ಯ
ಚತುರ್ಧಾಮಗಳವರೆಗೂ ಚಾಚಿಕೊಳ್ಳಲಿತ್ತು. ಸುಮಾರು ಮೂವತ್ತು ದಿನಗಳ ಬೈಕ್ ಯಾನ, ಹಿಂಬರುವ ದಾರಿಯಲ್ಲಿ ರೈಲು. ಉರಿ ಬಿಸಿಲಿನಿಂದ ಹಿಮ ಶೈತ್ಯದವರೆಗೆ, ಜಡಿಮಳೆಯಿಂದ ಬಿರುಗಾಳಿಯವರೆಗೆ ನಾವು ಒಡ್ಡಿಕೊಳ್ಳುವುದಿತ್ತು. ಅದಕ್ಕೆ ಸರಿಯಾಗಿ ಸವಾರಿಯಲ್ಲೂ ವಿಶ್ರಾಂತಿಯಲ್ಲೂ ನಮ್ಮನ್ನು ಕಾಪಿಡುವ ಎಲ್ಲವನ್ನೂ ನಾವು ಅತ್ಯಂತ ಮಿತಿಯಲ್ಲಿ ಜತೆಗೊಂಡಿದ್ದೆವು. 

ನಾನು ಬೈಕಿಗೆ ವಿಶೇಷ ಗಾತ್ರದ ಎರಡು ಜಿಂಕ್ ಡಬ್ಬಿಗಳನ್ನು ಮಾಡಿಸಿ, ಹಿಂದೆ
ಇಕ್ಕೆಲಗಳಿಗೆ ಜೋಡಿಸಿಕೊಂಡಿದ್ದೆ. ರೆಕ್ಸಿನ್ನಿನಲ್ಲಿ ಮತ್ತೆರಡು ಚೀಲಗಳನ್ನು
ಮಾಡಿಸಿ, ಪೆಟ್ರೋಲ್ ಟ್ಯಾಂಕಿನ ಆಧಾರದಲ್ಲಿ ಎದುರಿನ ಎರಡು ಮಗ್ಗುಲುಗಳಿಗೂ ನೇತು ಬಿಟ್ಟಿದ್ದೆ. ಮಾರ್ಗದರ್ಶಿಯಂಥ ಆವಶ್ಯಕತೆಗಳು ಸುಲಭದಲ್ಲಿ ಸಿಗುವಂತೆ ಟ್ಯಾಂಕಿನ ಮೇಲಿನ ತೆಳು ಚೀಲದಲ್ಲಿತ್ತು. ಮತ್ತೂ ಅನಿವಾರ್ಯವಾದವನ್ನು ದೊಡ್ಡ ಬೆನ್ನಚೀಲಕ್ಕೆ ತುಂಬಿ, ಬೈಕಿನ ಹಿಂದಿನ ಕ್ಯಾರಿಯರಿಗೆ ಬಿಗಿದು ಕಟ್ಟಿದ್ದೆ. ವಾಹನದ ದಾಖಲೆಗಳು, ಗುರುತಿನ ಚೀಟಿ, ಹಣ, ಟ್ರಾವೆಲ್ಲರ್ಸ್ ಚೆಕ್ಕಾದಿಗಳನ್ನು ಮಾತ್ರ ಉದ್ದ ಕೈಯ ಚೀಲದಲ್ಲಿ ಎದೆಗಡ್ಡಲಾಗಿ ನೇತು ಹಾಕಿಕೊಂಡಿದ್ದೆ. ಕ್ಯಾಮರಾ ಕಂಠಾಭರಣವೇ ಆಗಿತ್ತು. 

ತಂಡದ ಉಳಿದವರು ಪೂರ್ವ ಗೆಳೆಯರೇ ಆದರೂ ವಿಭಿನ್ನ ಸ್ಥಳ ಮತ್ತು ಆಸಕ್ತಿಯವರು. ಅವರೆಲ್ಲ ಕೆಲವು ವಾರಗಳಿಂದಲೇ ಬೈಕಿಗೆ ಸರಿಯಾಗಿ ತಮ್ಮ ಆವಶ್ಯಕತೆಗಳ ಪರಿಷ್ಕರಣೆ ಮತ್ತು ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದರು. ಬೈಕುಗಳಿಗೆ ಟ್ಯಾಂಕ್
ನಾಯಕ್
ಚೀಲಗಳಲ್ಲಷ್ಟೇ ನನ್ನನ್ನು ಅನುಸರಿಸಿದ್ದರು. ಉಳಿದಂತೆ
ಮಾಮೂಲೀ ಡಬ್ಬಿ, ಕ್ಯಾರಿಯರ್ ಮತ್ತು ಅಲ್ಲಿ ಇಲ್ಲಿ ಜೋತು ಬಿಟ್ಟ ಚೀಲಗಳಲ್ಲಿ ಆವಶ್ಯಕತೆಗಳನ್ನು ಸುಧಾರಿಸಿಕೊಂಡಿದ್ದರು. 

ಒಟ್ಟು ಯೋಜನೆಯನ್ನು ನಾನು ಸುಮಾರು ಮೂರು ತಿಂಗಳಲ್ಲಿ ರೂಪಿಸಿದ್ದೆ. ಫಲಿತಾಂಶವನ್ನು ಸವಿವರ ಕೈ ಬರಹದ ನಕ್ಷೆಯೊಂದಕ್ಕೆ ಅಳವಡಿಸಿದ್ದೆ. ಇದರ ಯಥಾಪ್ರತಿ ಆರೂ ಮಂದಿಯ ಆಪ್ತ ಚೀಲಗಳಲ್ಲಿತ್ತು. ಅಲ್ಲದೆ ಹಣ ಮತ್ತು ವೈಯಕ್ತಿಕ ದಾಖಲೆಗಳನ್ನು ಎಲ್ಲರೂ ಹಾಗೆ ಇರಿಸಿಕೊಳ್ಳುವುದನ್ನು ಕಡ್ಡಾಯ ಮಾಡಿಕೊಂಡಿದ್ದೆವು. (ಯಾವುದೇ ಕಾರಣಕ್ಕೆ ಯಾರು ತಂಡ ತಪ್ಪಿಸಿಕೊಂಡರೂ ಅನಾಥರಾಗಬಾರದು ಎಂಬ ಎಚ್ಚರ.) ದೇವಕಿ ಪ್ರತ್ಯೇಕ ಚೀಟಿ ಇಟ್ಟುಕೊಂಡು ಸಮಯ, ಬೈಕ್ ಮೀಟರ್ ಓದಿನೊಡನೆ ಹಾದು ಹೋದ ಮುಖ್ಯ ಊರುಗಳ ಹೆಸರುಗಳನ್ನು ನನಗಾಗಿ ದಾಖಲಿಸಿಕೊಳ್ಳುತ್ತಿದ್ದಳು. 

ಉಪಾಧ್ಯ ಯುಕ್ತ ಸರಳ ಸಲಕರಣೆಯೊಡನೆ ಸ್ಥಳಗಳ ಔನ್ನತ್ಯ, ತಾಪಮಾನ, ವಾತಾವರಣದ ತೇವಾಂಶಗಳ ದಾಖಲೆಯನ್ನು ಸ್ವಂತ ಉಮೇದಿನಲ್ಲಿ ಸಂಗ್ರಹಿಸಿಕೊಳ್ಳುತ್ತಿದ್ದರು. (ಅವರ ಪಟ್ಟಿಯನ್ನೇ
ಆಧರಿಸಿದ ಅಂಕಿಸಂಕಿಗಳನ್ನು ಲೇಖನದುದ್ದಕ್ಕೆ ಸೇರಿಸುತ್ತೇನೆ, ಗಮನಿಸಿ.) ಉಪಾಧ್ಯ ಕ್ಯಾಮರಾವನ್ನೂ ತಂದಿದ್ದರು. ಆದರೆ ಅವರ ಚಿತ್ರಗ್ರಹಣಕ್ಕೆ, ನನ್ನಂತೆ ಒಟ್ಟಾರೆ ಸಾಹಸಯಾನದ ದಾಖಲೀಕರಣದ ಉದ್ದೇಶವಿರಲಿಲ್ಲ. ಎಲ್ಲದರಲ್ಲೂ ಕುತೂಹಲ ಮತ್ತು ಪ್ರಯೋಗಶೀಲತೆ ಉಪಾಧ್ಯರ ಜೀವನಶ್ರುತಿ. (ನೋಡಿ: ಉಪಾಧ್ಯ ಹೆರೆಮಣೆ) ಅದನ್ನು ತಣಿಸುವಂಥವನ್ನೆಲ್ಲ ಅವರು ಕ್ಯಾಮರಾದಲ್ಲೂ ಮಾಡಿದರು. ಸಾಹಸಯಾನೋತ್ತರ ದಿನಗಳಲ್ಲಿ ಅವನ್ನು ನನಗವರು ತೋರಿಸಿದ್ದೂ ಇತ್ತು. ಆ ದಿನಗಳಲ್ಲಿ
ರಾಜ
ಅವನ್ನು ಪ್ರತಿ ಮಾಡಿಸಿ ಇಟ್ಟುಕೊಳ್ಳುವುದು ನನ್ನ ಆರ್ಥಿಕತೆಗೆ ಹೊರೆ ಎಂದು ಅನ್ನಿಸಿರಬೇಕು. ಮೂವತ್ತು ವರ್ಷಗಳ ಕಾಲಗರ್ಭದಲ್ಲಿ ಅವನ್ನು ಅವರಾದರೂ ಉಳಿಸಿಕೊಂಡಿದ್ದಾರೋ ಎಂಬ ಸಂಶಯದಲ್ಲೇ ವಿಚಾರಿಸಿದ್ದೇನೆ. ಯಾಕೆಂದರೆ ಹಿಂದೊಮ್ಮೆ ಅವರೇ
ಹೇಳಿದ್ದಿತ್ತು, "ಆಸಕ್ತಿಗಳು ಬದಲಿದಂತೆಲ್ಲ ಹಳತನ್ನು ಕಟ್ಟಿ, ಅಟ್ಟದ ಅಜ್ಞಾತಕ್ಕೆ ತಳ್ಳಿಬಿಡುತ್ತೇನೆ." ಹಾಗೂ ಏನಾದರೂ ಬಂದರೆ ಮುಂದಿನ ಕಂತುಗಳಲ್ಲಿ ಬಳಸಿಕೊಳ್ಳುತ್ತೇನೆ. ಉಳಿದ ಮೂವರಲ್ಲಿ ರಾಜಶೇಖರ್ ಕ್ಯಾಮರಾ ತಂದಿದ್ದರು. ಇಂದು ವಿಚಾರಿಸುವಾಗ ಅಂದಿನ ಚಿತ್ರಗಳಲ್ಲಿ ಉಳಿಸಿಕೊಂಡದ್ದು ಏನೂ ಇಲ್ಲ! 

ಪ್ರವಾಸೀ ದಿನಗಳ ಆಯ್ಕೆಯಲ್ಲಿ ಮುಖ್ಯವಾಗಿ ನನ್ನ ಅನುಕೂಲ ನೋಡಿಕೊಂಡಿದ್ದೆ. ಮಾರ್ಚ್ ಮೂವತ್ತೊಂದರ ಆರ್ಥಿಕ ವರ್ಷಾಂತ್ಯದೊಡನೆ ಪುಸ್ತಕದ ಅಂಗಡಿಯ ಸಾಂಸ್ಥಿಕ ಗಿರಾಕಿಗಳೆಲ್ಲ ಒಂದೆರಡು ತಿಂಗಳ ವಿರಾಮದಲ್ಲಿರುತ್ತಾರೆ. ಆಗ ನನ್ನ ಗೈರುಹಾಜರಿಯಲ್ಲಿ ಅನ್ಯರಿಗೆ ಅಂಗಡಿ
ಉಸ್ತುವಾರಿಗೆ ಸುಲಭ. ಮತ್ತೆ ಸವಾರಿಯನ್ನು ಬಿರುಬಿಸಿಲಲ್ಲಾದರೂ ಮಾಡಬಹುದು, ನಿರಂತರ ಮಳೆ, ಕೆಸರುಗಳಲಲ್ಲ ಎನ್ನುವುದೂ ಮುಖ್ಯವೇ. ಕೊನೆಯದಾಗಿ, ಹಿಮ ವಲಯಗಳಲ್ಲಂತು ಅವು ನಮಗೆ ಹೇಳಿ ಮಾಡಿಸಿದ ದಿನಗಳು.
ಮಂಜುಗಡ್ಡೆಗಳು ಕರಗುತ್ತ, ನಮ್ಮ ಅಂತಿಮ ಲಕ್ಷ್ಯವಾದ ಚತುರ್ಧಾಮಗಳು ತೆರೆದುಕೊಳ್ಳುವ ಕಾಲ. ಆ ವೇಳೆಯಲ್ಲಿ ಅಲ್ಲಿ ಚದುರಿದ ಮಳೆ ಬಂದರೂ ಸಣ್ಣದಿರುತ್ತದೆ ಮತ್ತು ಚಳಿ ಕಡಿಮೆ ಇರುತ್ತದೆ. 

ದೇವಕಿ
ನನ್ನ ತಂದೆ ೧೯೫೩ರಷ್ಟು ಹಿಂದೆ ಸ್ವತಂತ್ರವಾಗಿ ಮಡಿಕೇರಿ ಕಾಲೇಜು ಸಹಕಾರಿ ಸಂಘದ ಅಧ್ಯಾಪಕ-ಕಾರ್ಯದರ್ಶಿಯಾಗಿ ನಿಂತು, ಸೊನ್ನೆ ಬಂಡವಾಳದಿಂದ ಲಕ್ಷ ಠೇವಣಿಯವರೆಗೆ ಕಟ್ಟಿದ ಅನುಭವಿ. ೧೯೭೫ರಲ್ಲಿ ಪೂರ್ವಾನುಭವ ಏನೂ ಇಲ್ಲದ ನಾನು ಮಂಗಳೂರಿನಲ್ಲಿ ಅಂಗಡಿ ತೆರೆಯುವ ಕಾಲಕ್ಕೆ ಅವರೇ ತಮ್ಮ ವೃತ್ತಿಗೆ ತಿಂಗಳ ಕಾಲ ರಜೆ ಮಾಡಿ ಬಂದು, ದೃಢ ಅಡಿಪಾಯವನ್ನು ಹಾಕಿಕೊಟ್ಟವರು. ಅವರು ಪ್ರಾಯ ಸಹಜವಾಗಿ ೧೯೮೬ರಲ್ಲಿ ನಿವೃತ್ತರಾಗಿದ್ದರು. ಆ ಹೊಸತರಲ್ಲೇ (೧೯೮೭) ಒಮ್ಮೆ ಹತ್ತು ದಿನಗಳ ಕಾಲ ನಾನು ಹೀಗೇ ಬೈಕೇರಿ ದಕ್ಷಿಣ ಭಾರತ ತಿರುಗಿ (ನೋಡಿ: ದಕ್ಷಿಣಾಪಥದಲ್ಲಿ ಚಕ್ರವರ್ತಿಗಳು) ಬಂದಾಗ ಅಂಗಡಿಯನ್ನು ನನಗಿಂತಲೂ ಚೆನ್ನಾಗಿಯೇ ನೋಡಿಕೊಂಡ ಅನುಭವ ಬೇರೆ ಇತ್ತು. ಈ ಬಾರಿಯೂ ಅವರು ನಿರ್ಯೋಚನೆಯಿಂದ ಮೂರು ದಿನ ಮುಂಚಿತವಾಗಿಯೇ ಮೈಸೂರು ಬಿಟ್ಟು ಬಂದು, ನನ್ನ ಅಂಗಡಿಯನ್ನು ವಹಿಸಿಕೊಂಡರು. ಮೈಸೂರ ಮನೆಗಾದರೋ ತಮ್ಮ ಅನಂತನ ಕುಟುಂಬ ಇದ್ದುದರಿಂದ ನನ್ನ ತಾಯಿಯೂ ಅಷ್ಟೇ ಸಂತೋಷದಲ್ಲಿ ಮೈಸೂರು ಮನೆಯನ್ನು ಅನಂತ, ರುಕ್ಮಿಣಿಯರ ಪೂರ್ಣಾನುಭವಕ್ಕೆ ಬಿಟ್ಟು ಇಲ್ಲಿ ತಂದೆಗೆ ಜೊತೆಗೊಟ್ಟರು. ಮನೆಯ ಎಲ್ಲ ಕಲಾಪ ಮತ್ತು ಮೊಮ್ಮಗ ಅಭಯನನ್ನು (ಎಂಟೊಂಬತ್ತು ವರ್ಷ) ಸುಧಾರಿಸಲು ಸಜ್ಜಾಗಿದ್ದಳು. ಸಹಜವಾಗಿ ಭಾರತ ಸೀಳೋಟಕ್ಕೆ ನನ್ನ ಉತ್ಥಾರಣಾ ಮಂಚಿಕೆ (ಲಾಂಚಿಂಗ್ ಪ್ಯಾಡ್) ಭದ್ರವಾಗಿತ್ತು. ಬೆಳಿಗ್ಗೆ ಹೊರಡುವಾಗ ಗೊಂದಲ ಮೂಡದಂತೆ, ಹಿಂದಿನ
ನಾನೇ ಮಾರಾಯ್ರೇ
ಸಂಜೆಯೇ ಉಪಾಧ್ಯ ನಮ್ಮನೆಗೂ ನಾಯಕ್ ರಾಜಶೇಖರ್ ಜತೆಗೂ ಬಂದು ಉಳಿದಿದ್ದರು. ಬೆಳಗ್ಗೆ ಹೊರಡುವ ವೇಳೆಗೆ ನಮ್ಮೂವರಿಗೆ ತಾಯಿಯೇ ತಿಂಡಿ ತೀರ್ಥ ಕೊಟ್ಟು, ಪೂರ್ಣ ನೂಕುಬಲವನ್ನೂ ಒದಗಿಸಿದ್ದರು. ಆದರೆ ನಮ್ಮ ತಂಡದ ಉಳಿದ ಮೂರೂ ಮಂದಿಯದು ಬ್ರಹ್ಮಚಾರಿ ಬಿಡಾರ. ಅವರು ಕುಂದಾಪುರದ ಹೊಟೇಲ್ ಶೆರಾನ್ (ಪಾವತಿಕೊಟ್ಟು) ಆತಿಥ್ಯ ಸ್ವೀಕರಿಸಿದರು. 

ಸಾಹಸಯಾನದ ಮುಖ್ಯ ಉದ್ದೇಶ ಆದಷ್ಟು ವಾಹನದಲ್ಲೇ ಪ್ರಾಕೃತಿಕ ವಿಶೇಷಗಳ ಪ್ರಾಥಮಿಕ ಸಂದರ್ಶನ. ಯೋಜನಾ ಹಂತದಲ್ಲಿ ವನಧಾಮ, ಘಟ್ಟ, ನದಿ, ಮರುಭೂಮಿ, ಹಿಮಾಲಯಗಳ ಅಂದಾಜುಪಟ್ಟಿ ಇಟ್ಟುಕೊಂಡು ಭೂಪಟಗಳಲ್ಲಿ ಪೋಣಿಸುವ ಕೆಲಸ ನಡೆಸಿದ್ದೆ. ಇದರಲ್ಲಿ ದೊಡ್ಡ ನಾಗರಿಕ ವ್ಯವಸ್ಥೆಗಳನ್ನು ಆದಷ್ಟು ನಿವಾರಿಸುವಲ್ಲಿ ನನಗೆ ಸಹಾಯಕ್ಕೆ ಒದಗಿದವು ಕೆಲವು ಐತಿಹಾಸಿಕ ಸ್ಥಳಗಳು. ಈ ಮಾಲೆಯಲ್ಲಿ ನಾವು ನೋಡಬೇಕಾದ ಎರಡು ಸ್ಥಳಗಳ ನಡುವಣ ದಾರಿ ಗುರುತಿಸಿದೆ. ಮತ್ತೆ ದಿನದ ಪ್ರಯಾಣದ ಅಂತರಕ್ಕೊಂದು ಕನಿಷ್ಠ ಮಿತಿ ಹಾಕಿಕೊಂಡು, ವೀಕ್ಷಣಾ ಸಮಯ ಮತ್ತು
ಯೋಜನೆಯ ಎರಡು ತುಣುಕುಗಳು
ವಾಸಾನುಕೂಲವನ್ನು ನೋಡಿಕೊಂಡೆ. ನೆನಪಿರಲಿ, ಅವು ಅಂತರ್ಜಾಲದ ಅನುಕೂಲಗಳು (ಗೂಗಲ್ ಮ್ಯಾಪ್, ವಿಕಿಪೀಡಿಯಾ ಇತ್ಯಾದಿ) ಇಲ್ಲದ ದಿನಗಳು. ಆದರೂ ಮಾಹಿತಿಗೆ ಯಾವುದೇ ಕೊರತೆ ಬಾರದಂತೆ ಒದಗಿದ್ದು ನನ್ನ ಪುಸ್ತಕದಂಗಡಿ ಮತ್ತು ಸಂಪರ್ಕಗಳು. ಇಲ್ಲಿ ಯಾವುದೇ ಹೆಚ್ಚುವರಿ ಖರ್ಚಿಲ್ಲದೇ ನನಗೆ ಆಧುನಿಕ ನಕ್ಷೆಗಳು, ಪ್ರವಾಸೀ ಕೈಪಿಡಿಗಳು ಒದಗಿದವು. ಮತ್ತೆ ಭಾರತದ ವಿವಿಧ ಮೂಲೆಗಳಿಂದ ಬರುತ್ತಿದ್ದ ವಿವಿಧ ಪ್ರಕಾಶನದ ಪ್ರತಿನಿಧಿಗಳು ಅವಕ್ಕೆ ಪ್ರಾಯೋಗಿಕ ಹೊಳಪು ನೀಡುತ್ತಿದ್ದರು. ಹಾಗೊಂದು ನಕ್ಷೆ ಮಾಡಿಕೊಂಡರೂ ಪ್ರಯಾಣದಲ್ಲಿ ಸ್ಥಳೀಯವಾಗಿ ಸಿಗುವ ಯಾವುದೇ ಹೊಸ ವಿಚಾರ, ಒಳದಾರಿಗಳಿಗೂ ನಮ್ಮ ಮನಸ್ಸನ್ನು ಮುಕ್ತವಾಗಿಟ್ಟುಕೊಂಡಿದ್ದೆವು. 

ಮಂಗಳೂರಿನಿಂದ ನಾವು ಹಿಡಿದದ್ದು ಹೆಸರಿಗಷ್ಟೇ ಪಶ್ಚಿಮ ಕರಾವಳಿಯ ರಾಷ್ಟ್ರೀಯ ಹೆದ್ದಾರಿ. ಇಂದು ಸರಾಗವಾಗಿರುವ ಚತುಷ್ಪಥ, ಅಂದು ನಮ್ಮ ಕಲ್ಪನೆಯಲ್ಲೂ ಇರಲಿಲ್ಲ. ಒಡ್ಡೊಡ್ದು ಡಾಮರು ಹಾಸು ಮತ್ತು ಮುಫತ್ತು ಹೊಂಡಗಳು ಕಡಿಮೆಯಿರುವುದೇ ಹೆದ್ದಾರಿ ಎಂದು ನಂಬಿದ್ದೆವು. ಬೈಕುಗಳ ಅಗತ್ಯದ ಒಂದು ಸಾಲು ಚಕ್ರದೋಟಕ್ಕೆ ಅಡ್ಡಿಯಿಲ್ಲದಿರುವುದೇ ನಮ್ಮ ಭಾಗ್ಯ ಎಂದುಕೊಂಡಿದ್ದೆವು. ಹಾಗಾಗಿ ದಾರಿ ಕುಂದಾಪುರದಿಂದ ಮುಂದೆ ಅಗಲ ಕಿರಿದಾದರೂ ನಮ್ಮ ಉತ್ಸಾಹಕ್ಕೇನೂ ಕೊರತೆಯಾಗಲಿಲ್ಲ. ಅಂದಾಜಿಗೆ ಮೊದಲೇ (೧೦.೪೫) ಕುಮಟಾ ದಾಟಿದ್ದೆವು. ನಮ್ಮ ದಿನದ ಲಕ್ಷ್ಯ ಹುಬ್ಬಳ್ಳಿಯಾದ್ದರಿಂದ ಅಂಕೋಲದ ಬಳಿ ಎಲ್ಲೋ ಬಲ ಹೊರಳಿ ಘಟ್ಟ ಏರುವ ಅಂದಾಜಿತ್ತು. ಆದರೆ ಅದಕ್ಕೂ ಮುನ್ನ ಹೊಸದೊಂದು ಕವಲಿನಲ್ಲಿ ‘ಯಲ್ಲಾಪುರಕ್ಕೆ -> ೨೬ ಕಿಮೀ ಉಳಿತಾಯದ ದಾರಿ’ ಎಂದೇ ಬೋರ್ಡು ಹಾಕಿದ್ದರು. ಹೊಸತಾದ ಡಾಮರೂ ಕಾಣಿಸಿತು, ಅನುಸರಿಸಿದೆವು. ಮುಂದುವರಿದಂತೆ ಹಿಲ್ಲೂರು ಎಂಬಲ್ಲಿ ದೊಡ್ಡ ಹೊಸ ಸೇತುವೆ ಸಿಕ್ಕಿತು. ಪಕ್ಕದಲ್ಲೇ ಒಂದು ಸುಂಕದ ಕಟ್ಟೆಯನ್ನೂ ತೆರೆದಿದ್ದರು. ಇಂದಿನಂತೇ ‘ಪಾವತಿಸು ಬಳಸು’; ನನ್ನ ಅನುಭವಕ್ಕೆ ಹೊಸತು! ಅಲ್ಲಿನ ದರ ವಾಹನಕ್ಕೆ ‘ಐವತ್ತು ಪೈಸೆ’ ಆದರೂ ನಾವು ಪ್ರತಿಭಟನೆ ಸಹಿತ ಕೊಟ್ಟೆವು. ಬರಿಯ ಐವತ್ತು ಪೈಸೆ ಎಂದು ನಗಬೇಡಿ, ಅಂದು ಲೀಟರ್ ಪೆಟ್ರೋಲಿನ ಗರಿಷ್ಠ ದರ ರೂ ಹನ್ನೆರಡು! 

ಹೊಸ ದಾರಿಯಲ್ಲಿ ದೂರ ಕಡಿಮೆಯಾದದ್ದಿರಬಹುದು. ಆದರೆ ಹಾಳು ದಾರಿಯ ಹೊಡೆತ, ಸಮಯ ಖಂಡಿತ ಸಣ್ಣದಾಗಲಿಲ್ಲ. ಹೊಸ ಸೇತುವೆ ಬಂದ ಸಣ್ಣ ಭಾಗಕ್ಕಷ್ಟೇ ಹೊಸ ದಾರಿ ಕಾಣಿಸಿದ್ದರು. ಉಳಿದಂತೆ ಘಟ್ಟ ಏರುವ ಕಷ್ಟದೊಡನೆ ದಾರಿ ಎಂದರೆ ಡಾಮರ್ ಕಿತ್ತ ಜಾಡು. ಕುಕ್ಕುಟ ಓಟದಲ್ಲೇ ಸುಧಾರಿಸುತ್ತಿದ್ದಂತೆ ನನ್ನ ಬೈಕ್ ‘ಕೆಮ್ಮ’ತೊಡಗಿತು. ನಾವು ಬೈಕಿನ ಪ್ರಥಮ ಚಿಕಿತ್ಸೆಗಳಿಗೂ ಸಜ್ಜಾಗಿದ್ದೆವು. ಆದರೆ ಅವು ವಿಶೇಷ ಫಲಕಾರಿಯಾಗಲಿಲ್ಲ. ಏನೇನೋ ಆರೈಕೆ ಮಾಡುತ್ತ ಚೂರು ಚೂರೇ ಓಡಿಸಿ ಯಲ್ಲಾಪುರ ತಲಪುವಾಗ ಸಾಕು ಸಾಕಾಗಿತ್ತು. ಅಂದಿನ ಯಲ್ಲಾಪುರಕ್ಕೊಬ್ಬನೇ ಬೈಕ್ ಮೆಕ್ಯಾನಿಕ್ - ರವಿ ಹೆಗಡೆ. ಆತ ಇನ್ನೂ ಯೆಜ್ದಿ, ರಾಜದೂತ್ ಬೈಕ್‍ಗಳ ಮಾಯೆ ಕಳಚಿಕೊಂಡು ಫೋರ್ ಸ್ಟ್ರೋಕ್ ಇಂಜಿನ್ ಪರಿಣತಿಗೆ ಬಂದಿರಲಿಲ್ಲ. ನಾವು ಅಪರಿಣತ ಕೈಗಳಲ್ಲಿ ಪ್ಲಯರು ಸ್ಪ್ಯಾನರ್ ಹಿಡಿದು ಒದ್ದಾಡಿದ್ದನ್ನು ಆತ ತುಸು ಪರಿಣತ ರೀತಿಯಲ್ಲಿ ನಿರ್ವಹಿಸಿ "ಇದಕ್ಕೆ ಹಾರ್ಟ್ ಟ್ರಬಲ್. ಸದ್ಯ ಇಷ್ಟೇ ಸರಿ. ಹುಬ್ಬಳ್ಳಿಲಿ ಹೀರೋಹೊಂಡಾ ಡೀಲರ್ ಛಡ್ಡಾ ಏಜನ್ಸೀಸಿಗೆ ಹೋಗಿ" ಎಂದು ಸಾಗಹಾಕಿದ. 

ಯಲ್ಲಾಪುರದಲ್ಲೇ ಎರಡು ಗಂಟೆಯೊಳಗೇ ನಮ್ಮ ಹೋಟೆಲ್ ಊಟವೂ ( ಸಂಭ್ರಮ್ - ಐದೂವರೆ ರೂಪಾಯಿಗೆ ಫುಲ್ ಮೀಲ್!) ಮುಗಿದಿತ್ತು. ಮುಂದಿನ ಸುಮಾರು ಎಪ್ಪತ್ತು ಕಿಮೀಗೆ ಅರ್ಧದಿನ ಬೇಕೇ ಎಂಬ ಉಡಾಫೆ ಮೂಡಿತು. ಮೆಕ್ಯಾನಿಕ್ ಮಾತನ್ನು ತಳ್ಳಿ ಹಾಕಿ ಯೋಜನಾ ನಕ್ಷೆಯನ್ನೇ ಅನುಸರಿಸಿದೆವು. ಅಂಕೋಲಾ ದಾರಿಯಲ್ಲೇ ತುಸು ಹಿಂದೆ ಹೋಗಿ, ಮಾಗೋಡು ಅಬ್ಬಿಯ ದಾರಿ ಹಿಡಿದೆವು. 

ಮಾಗೋಡು ಅಬ್ಬಿಯ ಅಂಚಿನಿಂದ
ಮಾಗೋಡು ಬೇಡ್ತಿ ಹೊಳೆ ದಂಡೆಯ ಒಂದು ಕುಗ್ರಾಮ. ಅಲ್ಲಿ ಹೊಳೆ ಭಾರೀ ಕಗ್ಗಲ್ಲ ಕೊರಕಲಿನ ಆಳದಲ್ಲಿ ಇನ್ನಷ್ಟು ಆಳಕ್ಕೆ ಬೀಳುವ ಜಲಪಾತವಿದೆ ಮತ್ತು ಮುಂದೆಂದೋ ಮಳೆಯ ದಿನಗಳಲ್ಲಿ ಕಂಡಂತೆ ಆಕರ್ಷಕವೂ ಇದೆ. ನಮ್ಮೀ ಮೊದಲ ಭೇಟಿ ಕಾಲಕ್ಕೆ ಹೊಳೆ ಭಾರೀ ಸುದ್ದಿಯಲ್ಲಿತ್ತು. ಸರಕಾರ ಅದೆಲ್ಲೋ ಬೇಡ್ತಿಗೆ ಅಣೆಕಟ್ಟು ಹಾಕಿ ವಿದ್ಯುತ್ ಉತ್ಪಾದಿಸುತ್ತೇವೆ ಎಂದಿದ್ದರು. ಅದಕ್ಕೆ ವಿರುದ್ಧವಾಗಿ ಸ್ವರ್ಣವಲ್ಲೀ ಮಠಾದೀಶರ ನೇತೃತ್ವದಲ್ಲಿ ಭಾರೀ ಜನಾಂದೋಲನವಾಗಿ, ತತ್ಕಾಲೀನ ತಡೆ ಕಂಡಿತ್ತು. ದಾರಿಯಲ್ಲಿ ಸಿಗುವ ಹಳೆಗಾಲದ ಪೋಲಿಸ್ ತರಬೇತಿ ಕೇಂದ್ರವನ್ನು ಸರಕಾರ ವಿದ್ಯುತ್ ಯೋಜನೆಯ ನೆಪದಲ್ಲಿ ಅರೆಬರೆ ಖಾಲಿ ಮಾಡಿದ್ದನ್ನೂ ನಾವು ಕಂಡೆವು. ದಾರಿ ಘಟ್ಟದೆತ್ತರದಲ್ಲೇ ಹೋಗಿ, ಜಲಪಾತವಿದ್ದ ಕಮರಿಯ ಅಂಚಿನಲ್ಲಿ ಮುಗಿದಿತ್ತು. ಅಲ್ಲಿ ಆಳದಲ್ಲಿ ಹರಿದು ಬಂದ ಹೊಳೆ ಮತ್ತಷ್ಟು ಆಳಕ್ಕೆ ಧುಮುಕುವ ಪ್ರಾಕೃತಿಕ ವ್ಯವಸ್ಥೆಯೇನೋ ತುಂಬ ಆಕರ್ಷಕವಾಗಿಯೇ ಇತ್ತು. ಆದರೆ ನಾವು ಹೋದಂದಿನ ಒಂದೇ ದೊಡ್ಡ ಕೊರತೆ - ನೀರು! ಕೆಳಗಿನ ಹೊಂಡದಲ್ಲಿ ನಿಂತ ಸ್ವಲ್ಪ ನೀರು ಬಿಟ್ಟರೆ ಪೂರ್ತಿ ಹೊಳೆ ಪಾತ್ರೆ ಒಣಗಿ ಹೋಗಿತ್ತು. ಹಾಗಾಗಿಯೇ ಇರಬೇಕು, ಮಾರ್ಗಸೂಚೀ ಫಲಕದಲ್ಲಿ ಯಾರೋ ಬುದ್ಧಿವಂತ ‘ಜಲ’ವನ್ನು ಕೆರೆಸಿ ತೆಗೆದು ಬಿಟ್ಟಿದ್ದ! (ಮಾಗೋಡು .....ಪಾತಕ್ಕೆ ->) ದಾರಿ ಮುಗಿದಲ್ಲಿ ಪ್ರವಾಸಿ ಬಂಗ್ಲೆ, ವಿಹಾರಕ್ಕೆ ಒಂದಷ್ಟು ಮೆಟ್ಟಿಲು, ಬಳ್ಳಿಮಾಡ, ಪ್ರಪಾತದಂಚಿಗೆ ಅಲಂಕಾರಿಕ ಬೇಲಿ ಎಂದೆಲ್ಲ ಸರಕಾರ ಹಣ ಸುರಿದದ್ದು ಕಾಣಿಸುತ್ತಿತ್ತು. ಯೋಜನೆಗಳನ್ನು ಶುರು ಮಾಡುವ ಪ್ರೀತಿ ನಿರ್ವಹಣೆಯಲ್ಲಿ ಉಳಿದಿದಂತಿರಲಿಲ್ಲ. ಎಲ್ಲ ನಿರ್ಜನವಾಗಿ, ಹಾಳು ಸುರಿದಿತ್ತು. ಬಂಗ್ಲೆಯ ಕಿಟಕಿ ಬಾಗಿಲಿನ ಕನ್ನಡಿಗಳನ್ನು ಹುಡಿ ಮಾಡಿ, ವಯರಿಂಗ್ ಕಿತ್ತು ಪ್ರಜಾವರ್ಗವೂ ತಮ್ಮ ‘ನಾಗರಿಕತೆ’ ಸಾರಿಕೊಂಡ ಕ್ರಮವಂತು ವಿಷಾದನೀಯವೇ ಸರಿ. 

ಮರಳಿ ಯಲ್ಲಾಪುರಕ್ಕೆ ಬರುವಾಗ ಕೆಮ್ಮು, ರಿಪೇರಿಯ ಸರ್ಕಸ್ಸುಗಳಲ್ಲಿ ಬಳಲಿದ ನನ್ನ ಬೈಕಿಗೆ ದಾಹ ಹೆಚ್ಚಾಗಿತ್ತು, ಪೆಟ್ರೋಲ್ ರಿಸರ್ವ್ ಮುಟ್ಟಿತ್ತು. ಯಲ್ಲಾಪುರದಲ್ಲಿ ವಿಚಾರಿಸುವಾಗ "ಊರಿಗೆ ಪೆಟ್ರೋಲ್ ಬಂಕೂ ಒಂದೇ! ಆದರೆ ಅದು ಬ್ಲ್ಯಾಕ್ನವನನ್ನು (ಟೆಂಪೋ ಪಾಂಡು) ಪ್ರೋತ್ಸಾಹಿಸಲು ವಾರಕ್ಕೆ ಮೂರು ಸಲ NO STOCK ಘೋಷಿಸುತ್ತದೆ" ಎಂದೂ ತಿಳಿಯಿತು. ನಮ್ಮ ಅದೃಷ್ಟಕ್ಕೆ ಟೆಂಪೋ ಪಾಂಡು ಅಡ್ಡೆಯಲ್ಲಿ ಪೆಟ್ರೋಲ್ ಧಾರಾಳ ಇತ್ತು. ‘ವಿಪರೀತ ಬೆಲೆ’ ಕೊಟ್ಟು (ಲೀಟರಿಗೆ ರೂ ೧೫/-), ಎರಡು ಲೀಟರ್ ಸುರಿಸಿಕೊಂಡೆ. ಇನ್ನು ಹುಬ್ಬಳ್ಳಿವರೆಗೆ ನಿಶ್ಚಿಂತೆ ಎಂದು ಕೊಂಡೆವು. ಆದರೆ ನಮ್ಮ ತಾಳ್ಮೆ ಪರೀಕ್ಷಿಸುವಂತೆ, ನಲ್ವತ್ತು ಕಿಮೀ ಕಳೆಯುವುದರೊಳಗೆ ಬೈಕ್ ಮತ್ತೆ ದಾಹ ಎಂದಿತ್ತು! ಆಗ ಸಿಕ್ಕ ಊರು - ಕಲಘಟಕಿ. ನಮ್ಮ ಖೊಟ್ಟಿ ಅದೃಷ್ಟಕ್ಕೆ ಅಲ್ಲಿ ‘ಟೆಂಪೋ ಪಾಂಡು’ ಸಂಬಂಧಿಕರೂ ಇರಲಿಲ್ಲ. ಇಳಿಜಾರುಗಳಲ್ಲಿ ಇಂಜಿನ್ ಬಂದ್ ಮಾಡಿ, ಸುಲಭದ ದಾರಿಗಳಲ್ಲಿ ಅನ್ಯರಿಂದ ‘ಒದೆಸಿಕೊಂಡು’ ಹೆಚ್ಚಿನ ಪಾಡುಪಡದೇ ಆರೂವರೆಗೆ ಹುಬ್ಬಳ್ಳಿ ತಲಪಿದ್ದೆವು. 

ಯೋಜನಾ ದಿನಗಳಲ್ಲಿ ನಾನು ಹೀರೋ ಹೊಂಡಾ ಕಂಪೆನಿಯ ದಿಲ್ಲಿ ಪ್ರಧಾನ ಕಛೇರಿಗೆ ಮೂರು ಪುಟಗಳುದ್ದಕ್ಕೆ ಬರೆದುಕೊಂಡಿದ್ದೆ. "ಮೂರು ನಿಮ್ಮದೇ ಬೈಕುಗಳಲ್ಲಿ, ಸ್ವಂತ ಖರ್ಚಿನಲ್ಲಿ, ಭಾರತ ಸಾಹಸಯಾನ ನಡೆಸುತ್ತಿದ್ದೇವೆ. ನಿಮಗಾಸಕ್ತಿಯಿದ್ದರೆ ಪ್ರಾಯೋಜಿಸಿ ಮತ್ತೆ ಬೇಕಾದಂತೆ ಪ್ರಚಾರ ಗಿಟ್ಟಿಸಿಕೊಳ್ಳಿ. ನಮಗೆ ಕನಿಷ್ಠ, ದಾರಿಯಲ್ಲಿನ ನಿಮ್ಮ ಡೀಲರುಗಳ ಮೂಲಕ ಉಚಿತ ಸರ್ವೀಸ್ ಕೊಡಿಸಿ." ಅದರ ಪ್ರಾದೇಶಿಕ ಆಡಳಿತ ಶಾಖೆ ಬೆಂಗಳೂರಿಗೂ ಯಥಾ ಪ್ರತಿ ಕಳಿಸಿದ್ದೆ. ಬೆಂಗಳೂರಿನಲ್ಲಿ ಅನ್ಯ ವೃತ್ತಿಯಲ್ಲಿದ್ದ ಗೆಳೆಯ ಹರೀಶ್ ಪೇಜಾವರ್, ಬಿಡುವು ಮಾಡಿಕೊಂಡು, ಕಂಪೆನಿ ಪ್ರತಿನಿಧಿಯನ್ನು ದಿನ ದಿನ ಎನ್ನುವಂತೆ ಪ್ರಚೋದಿಸುವ ಕೆಲಸವನ್ನೂ ಮಾಡಿದರು. ಕೊನೆಗೆ ಆದದ್ದು ಪರ್ವತ ಪ್ರಸವ - ಕಂಪೆನಿಯ ಅಖಿಲ ಭಾರತ ಡೀಲರುಗಳ ಪಟ್ಟಿ, ಅದೂ ಹರೀಶ್ ಕೈಗೆ. ಜಡ ಕಂಪೆನಿ ಅದನ್ನು ನೇರ ನನಗೆ ಕಳಿಸುವಷ್ಟೂ ಸೌಜನ್ಯ ತೋರಲಿಲ್ಲ. ಆ ವಿಷಾದವನ್ನೆಲ್ಲ ಹುಬ್ಬಳ್ಳಿ-ಧಾರವಾಡಗಳಿಗೆ ಅಂದಿನ ಏಕೈಕ ಹೀರೋ ಹೊಂಡಾ ಡೀಲರ್ - ಛಡ್ಡಾ ಏಜೆನ್ಸೀಸ್ ತೊಡೆದು ಹಾಕಿತು. 

ಆ ದಿನಗಳಲ್ಲಿ ಮಂಗಳೂರಿನ ಏಕೈಕ ಹೀರೋಹೊಂಡಾ ಡೀಲರ್ ತ್ರಿಭುವನ್ ಕಂಪೆನಿ. ಅದರ ಮಾಲಿಕ ಸುನೀಲ್ ಕೀರ್ತಿ ನನಗೊಳ್ಳೆ ಪರಿಚಿತರು ಕೂಡಾ. ಆದರೆ ಅವರು ನಮ್ಮ ಸಾಹಸ ಯಾನವನ್ನು ಯಾಕೋ ಗಂಭೀರವಾಗಿ ಗ್ರಹಿಸಲೇ ಇಲ್ಲ. ಮತ್ತೆ ಕಂಪೆನಿಯ ರಿಪೇರಿ, ಸರ್ವೀಸ್ ದರಗಳೆಲ್ಲ ದುಬಾರಿ ಎಂದೇ ನನಗನ್ನಿಸಿದ್ದಕ್ಕೂ ನಾನು ಹೊರಗಿನ ಖಾಸಗಿ ಮೆಕ್ಯಾನಿಕ್ ಚಂದ್ರಹಾಸನಲ್ಲಿಗೆ ಹೋಗುತ್ತಿದ್ದೆ. ಚಂದ್ರಹಾಸ ಮೊದಲು ತ್ರಿಭುವನ್ನಿನಲ್ಲೇ ಕೆಲಸ ಕಲಿತು, ಅನುಭವ ಗಳಿಸಿದವ ಎಂಬ ವಿಶ್ವಾಸ ನನ್ನದು. ನಾವು ಹೊರಡುವ ಮೂರು ದಿನ ಮೊದಲೇ ಚಂದ್ರಹಾಸ ನನ್ನ ಬೈಕನ್ನು ಪೂರ್ತಿ ಕಳಚಿ, ಎಲ್ಲ ಪಕ್ಕಾಗೊಳಿಸಿ, ಜೋಡಿಸಿ ಕೊಟ್ಟಿದ್ದ. ಅನಂತರ ಅದನ್ನು ಪರೀಕ್ಷೆ ಮಾಡುವಷ್ಟು ನನಗೆ ಸಮಯ ಉಳಿಯದ್ದಕ್ಕೆ ಹಾಗೇ ಹೊರಟಿದ್ದೆವು. ಆ ಕೊರತೆ ಯಲ್ಲಾಪುರಕ್ಕಾಗುವಾಗ ಪ್ರಕಟವಾಗಿತ್ತು. 

ಎಡ ಕೊನೆಯಲ್ಲಿರುವವರು ಛಡ್ಡಾ
ಛಡ್ಡಾ ಏಜೆನ್ಸೀಸಿನ ದಿನದ ಕೆಲಸದ ಅವಧಿ ಮುಗಿಯುವ ವೇಳೆಗೆ ನಾವಲ್ಲಿದ್ದೆವು. ಆದರೆ ಮಾಲಿಕ, ತರುಣ ಸರ್ದಾರ್ಜೀ ನಮ್ಮನ್ನು ಹಾರ್ದಿಕವಾಗಿಯೇ ಸ್ವಾಗತಿಸಿದ್ದರು. ಸ್ವತಃ ಒಳ್ಳೇ ಮೆಕ್ಯಾನಿಕ್ ಕೂಡಾ ಆದ ಛಡ್ಡಾ "ಚಂದ್ರಹಾಸ ಎಂಜಿನ್ ಒಳಗೆ ಕೈ ಹಾಕಬಾರದಿತ್ತು" ಎಂದೇ ದೋಷ ಗುರುತಿಸಿದರು. ಅದೃಷ್ಟವಶಾತ್ ಸಣ್ಣ ಬಿಡಿಭಾಗ ಒಂದರ ಬದಲಿಯಲ್ಲಿ ಎಲ್ಲ ಸರಿಪಡಿಸಿದರು. ಸಾಲದ್ದಕ್ಕೆ ನನ್ನ ಬೈಕ್ ಹಾಗೂ ಉಳಿದೆರಡನ್ನೂ ಪೂರ್ಣ ತನಿಖೆ ಮಾಡಿ ಎಣ್ಣೆ ಗ್ರೀಸುಗಳನ್ನು ಕಾಣಿಸಿ ಕೊಟ್ಟರು. ಸಾವಧಾನದಲ್ಲಿ ಎಲ್ಲ ಮುಗಿಯುವಾಗ ರಾತ್ರಿ ಎಂಟೂವರೆ ಗಂಟೆಯಾಗಿತ್ತು. ಆ ಕೊನೆಯಲ್ಲಿ ಪುಣ್ಯಾತ್ಮ ಛಡ್ಡಾ "ನಿಮ್ಮ ಸಾಹಸಯಾನಕ್ಕೆ ಎಲ್ಲವೂ ನನ್ನ ಉಚಿತ ಕೊಡುಗೆ" ಎಂದು ಬಿಟ್ಟರು! ನಮ್ಮ ಪ್ರಾಮಾಣಿಕ ಒತ್ತಾಯಕ್ಕೂ ಅವರು ಮಣಿಯಲಿಲ್ಲ. ಬದಲಿಗೆ, ತನ್ನ ಪ್ರೇಮ ವಿವಾಹದ ಹೆಣ್ಣು ಮಂಗಳೂರಿನ ‘ಸುಜಾತಾ ಹೋಟೆಲ್’ನವರ ಮಗಳು, ಎಂದು ತಿಳಿಸಿ, "ಇದು ಮಾವನೂರಿಗೆ ಕೊಟ್ಟ ಬಳುವಳಿ" ಎಂದು ಹೊಸ ಸ್ನೇಹವನ್ನು ‘ಬಂಧು’ರವಾಗಿಸಿದರು! 

‘ಆರೋಹಣ ಪರ್ವತಾರೋಹಿಗಳು ಸಾಹಸಿಗಳು, ಮಂಗಳೂರು’ ಇದಕ್ಕೆ ಸಾಂಸ್ಥಿಕರೂಪ ಕೊಡುವಲ್ಲಿ ಗಳಿಸಿದ ಅನುಭವ ನನಗಂತೂ ಸದಾ ಸ್ಮರಣೀಯ. (ನೋಡಿ: ) ನಾನು ಲೋಕೋಕ್ತಿಗೂ ಒಂದು ಮುಮ್ಮಾತು ಸೇರಿಸಿಯೇ ಅನುಭವಿಸುವವ: "ಹಾಸಿಗೆ ಮಾಡು, ಮತ್ತೆ ಅದಿದ್ದಷ್ಟೇ ಕಾಲು ಚಾಚು!" ಹಾಗಾಗಿ ಯೋಜನಾ ದಿನಗಳಲ್ಲಿ ನಾನು ಹೀರೋ ಹೊಂಡಾಕ್ಕೆ ಮಾಡಿದ ಮನವಿಯಂತೇ ಇನ್ನೂ ಕೆಲವರಿಗೆ ನಮ್ಮ ನೇರ ಆವಶ್ಯಕತೆಗಳನ್ನು ಪತ್ರ ಮುಖೇನ ಮುಟ್ಟಿಸಿದ್ದೆ. ಹಾಗೆ ಅಗತ್ಯದ್ದನ್ನು ಪೂರೈಸಿದ ಉದಾರಿಗಳಲ್ಲಿ ಧಾರವಾಡದ ಸಮಾಜ ಬುಕ್ ಡಿಪೋದ ಮಾಲಿಕ ಮನೋಹರ ಘಾಣೇಕರ್ ಮತ್ತು ಸೋದರರು ಮೊದಲಿಗರು. ಸಾಹಸಯಾನದಲ್ಲಿ ಹಣಸೊಕ್ಕಿನದ್ದಲ್ಲ, ಮಿತವ್ಯಯದ್ದು ಎನ್ನುವುದು ನನ್ನ ಪ್ರಧಾನ ಶ್ರುತಿ ಇತ್ತು. ಅದಕ್ಕಾಗಿ ನಮ್ಮ ದಾರಿಯಲ್ಲಿ ಒದಗಬಹುದಾದ ಪರಿಚಿತರಲ್ಲೆಲ್ಲ ಉಚಿತ ವಾಸವ್ಯವಸ್ಥೆಯನ್ನು ಕೋರಿದ್ದೆ. ಮನೋಹರ ಘಾಣೇಕರ್ ತಮ್ಮ ಖಾಸಾ ಸಂಪರ್ಕದಲ್ಲೇ ಇದ್ದ ಹುಬ್ಬಳ್ಳಿಯ ಆರೆಸ್ಸೆಸ್ ವಿಭಾಗದ ಕಛೇರಿ/ ಅತಿಥಿಗೃಹ - ‘ಮಧು ಕುಂಜ’ವನ್ನು ನಮಗೆ ಉಚಿತವಾಗಿ ಕೊಡಿಸಿದರು. ಸಂಘದ ನಿಯಮಾನುಸಾರ ಅತಿಥಿಗೃಹದಲ್ಲಿ ಸ್ತ್ರೀವಾಸಕ್ಕೆ ವಿರೋಧವಿತ್ತು. ಅದನ್ನು ಮನ್ನಿಸುವಂತೆ, ಪಕ್ಕದ ವಠಾರದಲ್ಲೇ ಗೃಹಸ್ಥರಾಗಿದ್ದ ಕಛೇರಿಯ ಉಸ್ತುವಾರಿ (ಘಾಣೇಕರರ ಭಾವ) ‘ಯಜಮಾನರು’ ದೇವಕಿಯನ್ನು ಅವರ ಮನೆ ಮಂದಿಯೊಂದಿಗೇ ಉಳಿಸಿಕೊಂಡರು. 

ಉದ್ಯಮವಾಗಿ ಕನ್ನಡ ಪುಸ್ತಕ ಪ್ರಕಾಶನವನ್ನು ದೃಢವಾಗಿಯೂ ಗೌರವಯುತವಾಗಿಯೂ ಕಟ್ಟಿದ ಆದಿಪುರುಷರಲ್ಲಿ ‘ಸಾಹಿತ್ಯ ಭಂಡಾರ’ದ ಎಂ. ಗೋವಿಂದರಾವ್ ಒಬ್ಬರು. ಗೋವಿಂದರಾಯರು ಪ್ರಥಮತಃ ಹುಬ್ಬಳ್ಳಿಯಲ್ಲಿ ಕಟ್ಟಿದ ಸಂಸ್ಥೆಯನ್ನು ತಮ್ಮನ ಮಕ್ಕಳಿಗೆ ವಹಿಸಿಕೊಟ್ಟು, ಬೆಂಗಳೂರಿಗೆ ವಲಸೆ ಹೋಗಿ, ಹೊಸದೇ ಸಾಹಿತ್ಯ ಭಂಡಾರವನ್ನು ಕಟ್ಟಿದರು, ಬಿಡಿ. ಹುಬ್ಬಳ್ಳಿ ಭಂಡಾರ, ಹಿರಿಯಣ್ಣನ ಕೆಟ್ಟ ಆಡಳಿತದಲ್ಲಿ ಶಿಥಿಲವಾಗತೊಡಗಿದಾಗ, ಸಿಡಿದು ಸ್ವತಂತ್ರವಾದವರು - ತಮ್ಮಂದಿರಾದ ಸುಬ್ರಹ್ಮಣ್ಯ ಮತ್ತು ಅಶೋಕ. ಅವರು ಕಟ್ಟಿದ ‘ಸಾಹಿತ್ಯ ಪ್ರಕಾಶನ’ (ಈಗ ದೊಡ್ಡ ಸಂಸ್ಥೆ) ಆಗಿನ್ನೂ ಬರಿಯ ಗೂಡಂಗಡಿ. ಆದರೆ ಸುಬ್ರಹ್ಮಣ್ಯರ ಮನಸ್ಸಿನ ಶ್ರೀಮಂತಿಕೆ ನಮ್ಮ ಸಾಹಸಯಾನವನ್ನು ಗಮನಿಸಿತ್ತು. ನಮಗೆ ಯಾವ ಸೂಚನೆ ಕೊಡದೇ ಮನೋಹರ ಘಾಣೇಕರರ ಮೂಲಕ ನಮ್ಮ ಕಾರ್ಯಕ್ರಮ ತಿಳಿದು, ಮಧು ಕುಂಜದಲ್ಲಿ ಸಂಜೆಯಿಂದಲೇ ನಮ್ಮ ದಾರಿ ಕಾದಿದ್ದರು. ನಾವು ಹೊರಗೆಲ್ಲೋ ಊಟ ಮುಗಿಸಿ, ತಡವಾಗಿಯೇ ಮುಟ್ಟಿದರೂ ಸುಬ್ರಹ್ಮಣ್ಯ ಅವರ ಒಂದಿಬ್ಬರು ಗೆಳೆಯರೊಂದಿಗೆ ಬಂದು, ಅನೌಪಚಾರಿಕವಾಗಿ ಆದರೆ ಹಾರ್ದಿಕವಾಗಿ ಅಭಿನಂದಿಸಿ, ಸಾರ್ಥಕ ಸ್ಮರಣಿಕೆ ಕೊಟ್ಟು (ಧಾರವಾಡ ಫೇಡೆ, ಒಂದು ಫಿಲ್ಮ್ ರೋಲ್ ಮತ್ತು ಸೇಬು ಕೀಸೇಲ ಯಾನೆ ಆಪಲ್ ಪೀಲರ್) ಹೋದದ್ದು ಎಂದೂ ಮರೆಯಲಾರೆ. 

ಹುಬ್ಬಳ್ಳಿಯಿಂದ ತೊಡಗಿದಂತೆ, ನಮ್ಮ ದಿನಾಂತ್ಯದ ಕಲಾಪಗಳು ಬಹುತೇಕ ಹೀಗೇ ಇರುತ್ತಿದ್ದವು. ಲಭ್ಯ ನೀರಿನಲ್ಲಿ ಸ್ನಾನ ಮಾಡುತ್ತಿದ್ದೆವು. ಬಟ್ಟೆಗಳನ್ನೂ ಅಷ್ಟೇ ಮುತುವರ್ಜಿಯಿಂದ ತೊಳೆದುಕೊಳ್ಳುತ್ತಿದ್ದೆವು. ಮತ್ತೆ ನಮ್ಮ ವಾಸಸ್ಥಳದ ವ್ಯವಸ್ಥೆಗೇನೂ ಬಾಧೆಯಾಗದಂತೆ ಅಲ್ಲೇ ಹಗ್ಗ ಕಟ್ಟಿ ಬಟ್ಟೆಗಳನ್ನು ಹರಗುತ್ತಿದ್ದೆವು. ಅನಿವಾರ್ಯವಾದ ಫ್ಯಾನ್ ಗಾಳಿ ನಮ್ಮ ನಿದ್ರೆಯನ್ನು ತಂಪಾಗಿಸಿದಂತೆ, ಬಟ್ಟೆಗಳನ್ನು ಮರು ಬೆಳಗ್ಗೆಗೆ ಒಣಗಿಸಿಯೂ ಕೊಡುತ್ತಿತ್ತು. ನಾನು, ದೇವಕಿ ರಾತ್ರಿ ಮಲಗುವಲ್ಲಿ ಎಷ್ಟು
ಪತ್ರಗಳ ಕಲಸು
ತಡವಾದರೂ ದಿನದ ಕಲಾಪಗಳನ್ನು ಒಂದಷ್ಟು ಪತ್ರಗಳಲ್ಲಿ ಬರೆಯುವುದನ್ನು ಬಿಡಲಿಲ್ಲ. ಅವನ್ನು ಮರು ಬೆಳಗ್ಗೆ ದಾರಿಯಲ್ಲೆಲ್ಲಾದರೂ ಅಂಚೆ ಡಬ್ಬಿಗೆ ಹಾಕುತ್ತಿದ್ದೆವು. ಅವುಗಳಲ್ಲೂ ನಾವು ಮಂಗಳೂರ ಮನೆಗೆ ಬರೆಯುತ್ತಿದ್ದವುಗಳಲ್ಲಿ ಒಂದು ತೆರನ ನಿರಂತರತೆಯನ್ನು ಕಾಯ್ದುಕೊಂಡೆವು. ಅಪ್ಪಮ್ಮರು ಆ ಪತ್ರಗಳನ್ನು ಕಾಯ್ದಿಟ್ಟುಕೊಂಡಿದ್ದರು. ಇಂದು, ನಿಜ ಯಾನ ಮಾಡಿ ಮೂವತ್ತು ವರ್ಷಗಳ ಮೇಲೆ, ನನ್ನ ನೆನಪನ್ನು ತೊಳೆದು ಕಥನವನ್ನು ನಡೆಸುವಲ್ಲಿ ಆ ಹದಿನೆಂಟು ಪತ್ರಗಳ ಪಾತ್ರ ದೊಡ್ಡದು. 

(ದಿನದ ಓಟ ೪೦೮ ಕಿಮೀ. ಮಂಗಳೂರು ಬಿಡುವಾಗ ತಾಪಮಾನ/ ತಾ. ೩೦ ಡಿಗ್ರಿ ಸೆಲ್ಶಿಯಸ್/ ಡಿ, ತೇವಾಂಶ/ ತೇ - ೪೩%, ಔನ್ನತ್ಯ/ ಔ - ೧೦೦ ಅಡಿ. ೨೬ರ ಬೆಳಿಗ್ಗೆ ಹುಬ್ಬಳ್ಳಿ ಬಿಡುವಾಗ ತಾ - ೩೦ ಡಿ, ತೇ ೪೭%) 

(ಮುಂದುವರಿಯಲಿದೆ)

8 comments:

  1. ಎಷ್ಟೊಂದು ಹೊಸ ಪದಗಳು / ಪರಿಭಾಷೆಗಳು ಇದಿರಾದುವು! ಹೊರಟ ದಿನವೇ ಬೈಕಿಗೆ ಜ್ವರ ಬಂದರೆ ನಾನು ಮುಂದೆ ಹೋಗದೇ ಉಳಿಯುತ್ತಿದ್ದೆ. ನಿಮ್ಮ ಧೈರ್ಯ ಅಸಾಮಾನ್ಯ. ದೇವಕಿ ಮೇಡಂ ಫೋಟೋ ಚಂದವೋ ಚಂದ.

    ReplyDelete
  2. very interesting introduction. Waiting for next episode of Bharatada Seelota.

    ReplyDelete
  3. ಮೊದಲ ದಿನವೇ ಬೈಕ್ ತೊಂದರೆ ಕೊಟ್ಟಿದ್ದು ಅದನ್ನು ನೀವು ನಿಭಾಯಿಸಿದ ಬಗೆ ನನಗೆ ಖುಷಿ ಆಯ್ತು... ಪಾಠ ವೂ ಆಯ್ತು... ಹಾಗೂ ನೀವು ಬೇಡ್ತಿ ಜಲಪಾತ ನೋಡದೆ ಬಿದಲಿಲ್ಲವಲ್ಲ....ಅಮ್ಮ..ಅಪ್ಪ...ನಿಮ್ಮಿಬ್ಬರ ಸಾಹಸಕ್ಕೆ ಹೆಗಲು ನೀಡಿದ್ದು ..ಕುಶಿ ಆಯ್ತು.

    ReplyDelete
    Replies
    1. ‘ವಲಸಿಗ’ನ ನಿಜ ನಾಮಧೇಯ, ಪರಿಚಯ ತಿಳಿಯುವ ಕುತೂಹಲವಿದೆ :-)

      Delete
  4. ಸುಮಾರು 30 ವರ್ಷಗಳ ಹಿಂದಿನ ತಮ್ಮ ಸಾಹಸಯಾತ್ರೆಯ ಇಂಚಿಂಚೂ ಬಿಡಿಸಿಹೇಳುವ ನಿಮ್ಮ ಜ್ಞಾಪಕಚಿತ್ರ ತುಂಬ ಗಟ್ಟಿಯಾದುದು. ತುಂಬ ಅಭಿಮಾನ ಮತ್ತು ಪ್ರೀತಿಯಿಂದ ಹುಬ್ಬಳ್ಳಿಯ ಮಧುಕುಂಜಕ್ಕೆ ತಮ್ಮನ್ನು ಭೇಷ್ ಹೇಳಲು ಬಂದಿದ್ದ ನಮ್ಮ ನೆನಪೇನೋ ಸರಿ. ಆದರೆ ಕೈಲಿ ಹಿಡಕೊಂಡು ಬಂದಿದ್ದ ಆ ಪುಟಾಣಿ ಕಾಣಿಕೆಗಳನ್ನೂ ತಾವು ಮರೆತಿಲ್ಲವಲ್ಲ? ಆ ಪ್ರವಾಸ ಹೋಗುವ ಮೊದಲು ತಾವು ನನಗೊಂದು (ಬಹುಶಃ ಎಲ್ಲ ಪ್ರಕಾಶಕರಿಗೂ) ಸೂಚನೆ ಕೊಟ್ಟಿದ್ದಿರಿ. ಸುಮಾರು 1 ತಿಂಗಳ ಕಾಲ ತಂದೆಯವರು ನನ್ನ ವ್ಯವಹಾರ ನೋಡಿಕೊಳ್ಳುತ್ತಾರೆ.....ಏನಾದರೂ ತುರ್ತು ಅಗತ್ಯವೆನಿಸಿದರೆ ಬೇಡಿಕೆ ಕಳಿಸಿಯಾರು, ತಾವು ಮನ್ನಿಸಿ...ಹಣವನ್ನು ನಾನು ಹಿಂತಿರುಗಿದ ನಂತರ ಕಳಿಸುವೆ..ಚಿಂತೆ ಬೇಡ....ಹೀಗೇನೋ ಬರೆದಿದ್ದ ಸಾಲುಗಳಲ್ಲೂ ತಮ್ಮ ಪ್ರವಾಸ
    ತಯಾರಿ ಮತ್ತು ವ್ಯವಹಾರ ಕಾಳಜಿ ಎರಡರ ಎಚ್ಚರವೂ ಇತ್ತು. ವೃತ್ತಿಯಿಂದೇನೋ ನಿವೃತ್ತರಾದಿರಿ. ಈ ಬರವಣಿಗೆಯ ಪ್ರವೃತ್ತಿ ಚಾಲೂ ಇಟ್ಟರೂ ಬರೀ ಈ ತಲೆನೋವಿನ ಪಾಟಿಗಳಲ್ಲಿ ಮಾತ್ರ ಎಂಬುದೊಂದು ನಮಗನಿಸುವ ಕೊರತೆ. ಬೇಡ. ಪುಸ್ತಕರೂಪವೇ ಚೆನ್ನ. ಬೇರೇನೂ ಗೊತ್ತಿರದ ನಮ್ಮಂಥ ಪ್ರಕಾಶಕರಂತೂ ಇದ್ದೇವೆ. ಬರೆದು ನಮ್ಮೆದುರು ಬಿಸಾಕುತ್ತಿರಿ.
    ಹುಬ್ಬಳ್ಳಿಯ ಛಡ್ಡಾ ನನಗೂ ಗೊತ್ತು. ಅವರ ಪಕ್ಕದ ಹೊಟೆಲ್ ಶೆಟ್ರ ಹುಡುಗಿ ಜೊತೆ ಸರದಾರರ ಪ್ರೇಮ ಸಲ್ಲಾಪವೂ ಆ ಮೊದಲು ಬಲು ಪ್ರಸಿದ್ಧ ಪ್ರಸಂಗವೇ ಇಲ್ಲಿ. ನಿಮ್ಮ ಬರಹ ಏನೆಲ್ಲ ನೆನಪಿನ ರಾಶಿಯನ್ನು ಕೆದಕಿತು ನೋಡಿ.
    ಅಂದಹಾಗೆ, ನಿನ್ನೆ ರಾತ್ರಿ ಓದಿದಾಕ್ಷಣ ಪ್ರತಿಕ್ರಿಯೆ ಬರೆದು ಹಾಕಿದ್ದು ಎಲ್ಲೋ ನಾಪತ್ತೆಯಾಯಿತು. ಯಾರ ಕೈವಾಡವೋ? ಈಗ ಮತ್ತೆ ಬೇರೆಯೇ ಬರೆಯಬೇಕಾಯಿತು.

    ReplyDelete
  5. ಭಾರತದ ಸೀಳೋಟದ ಮೂನ್ಸೂಚನೆಯನ್ನು ಘೋಷಿಸಿದಾಗ ಉಮೇದಿನಲ್ಲಿ ಬೇಗ ಬರಲಿ ಅಂದಿದ್ದರೂ, ಓದಲು ಇಂದು ಬಿಡುವಾಯಿತು. ನಿಮ್ಮ ಅಂದಿನ ಸಾಹಸಗಳು ನನ್ನಂತೆ ಹಲವರ ತಿರುಗುವ, ಗುಡ್ಡೆ ಹತ್ತುವ ಆಸಕ್ತಿಗಳಿಗೆ ಪ್ರೇರಣೆ. ಗಮ್ಯ ಸಾಧಿಸುವ ಯೋಜನೆ, ಜೊತೆಗೆ ಮಿತ್ರ ಸಹಯಾತ್ರಿಗಳು ಸೇರಿದಲ್ಲಿ ಬೈಕಿಗೆ ಕೆಮ್ಮು, ದಮ್ಮು ಏನು, ಜ್ವರಬಂದರೂ ಗುಣಪಡಿಸಿ ಸಾಗಬಹುದು. ಬಹು ನಿರೀಕ್ಷಿತ ಸರಣಿ ಬರುತ್ತಿರುವುದು ತುಂಬಾ ಸಂತೋಷ.

    ReplyDelete
  6. ಮೊದಲ ದಿನದ ಯಾನದ ಡೈರಿ ಓದಿದೆ, ಟೆಂಪೋ ಪಾಂಡು ನೆನಪಿನಲ್ಲಿ ಉಳಿದ.

    ReplyDelete
    Replies
    1. ನಾವು ನಂಬಿದವರೇ ನಮ್ಮನ್ನು ನೂರೈದು ರೂಪಾಯಿಯ Pondನಲ್ಲಿ ಮುಳುಗಿಸಿರುವಾಗ ಹದಿನೈದುರೂಪಾಯಿಯ (ಕಳ್ಳ) ಟೆಂಪೋ ಪಾಂಡು ಹೆಚ್ಚು ಪ್ರಿಯನಾಗುವ ಅಪಾಯ ಇದ್ದೇ ಇದೆ!

      Delete