ಜಾತಿ ಮತಗಳ ಚಕ್ರ ಸುಳಿ ಮೀರಿ - ೬
ಹುಟ್ಟಿನ ಆಕಸ್ಮಿಕದೊಡನೇ ಸಮಾಜದಲ್ಲಿ ಬಹುತೇಕರ ಅಪ್ಪ, ಅಮ್ಮ, ಅಣ್ಣ, ಅಜ್ಜಿ ಇತ್ಯಾದಿ ಅನೇಕ ಭೌತಿಕ ಸ್ಥಾನಗಳೂ ಭಾವನಾತ್ಮಕ ಜವಾಬ್ದಾರಿಗಳೂ ಸೇರಿಕೊಳ್ಳುತ್ತವೆ. ಅವನ್ನು ಹೊರತುಪಡಿಸಿ ಒಂದು ವ್ಯಕ್ತಿತ್ವವನ್ನು ರೂಪಿಸುವ ಪ್ರಭಾವಗಳನ್ನು ಸೋದಾಹರಣವಾಗಿ ಕಾಣಿಸುವ ಉದ್ದೇಶಕ್ಕೇ ಈ ಮಾಲಿಕೆಯನ್ನು ಮೀಸಲಾಗಿರಿಸಿದೆ. ಅದು ಒಂದು ಮಿತಿಯ ಆತ್ಮಕಥನವೂ ಆದದ್ದು ಆಕಸ್ಮಿಕ. ಆದರೆ ಈ ಕೊನೆಯಲ್ಲಿ, ನಾನು ‘ಮೀರಿದವು’ ಅಥವಾ ಸ್ವತಂತ್ರವೆಂದು ನಂಬಿದ ಪ್ರಭಾವಗಳೂ ಬಹುತೇಕ ‘ಮೂಲ ಆಕಸ್ಮಿಕ’ದ ಭಾಗವೇ ಆಗಿರುತ್ತದೆ ಎಂದರಿವಾಯ್ತು. ಅಂಥಾ ತಂದೆಯನ್ನೇ ತಿಳಿದುಕೊಳ್ಳುವ ಪ್ರಯತ್ನದೊಡನೆ, ನನ್ನ ವಿದ್ಯಾರ್ಥಿ ದಿನಗಳ ಉದಾಹರಣೆಗೇ ಸರಣಿಯನ್ನು ಮುಗಿಸುತ್ತಿದ್ದೇನೆ.
ತನ್ನ ಸ್ವಭಾವವನ್ನು ತಂದೆಯೇ ಹೇಳಿಕೊಳ್ಳುವುದಿತ್ತು, "ಧುಮುಕಿ ಆಳ ನೋಡುವ ಪ್ರವೃತ್ತಿ." ಅದು ಮಾತಿನ ಚಂದಕ್ಕೆ ಹೇಳಿದ್ದೆನ್ನುವಂತೆ ಅವರ ಓದು, ಲೋಕಾನುಭವ, ಶಿಸ್ತು, ಶ್ರಮಗಳಿಗೆ ಸಾಕ್ಷಿಯಾಗಿ ಹಿಡಿದ ಕೆಲಸದಲ್ಲಿ ಯಶಸ್ಸು ಸಾಧಿಸುತ್ತಿದ್ದರು. ಹೆಚ್ಚಿನ ಸಲ ಎದುರು ಬಿದ್ದವನಿಂದಲೂ ಮೆಚ್ಚುಗೆ ಗಳಿಸುತ್ತಿದ್ದರು. ಅಂಥವುಗಳಲ್ಲಿ ತಂದೆಯೇ ಕಟ್ಟಿ, ಉಚ್ಛ್ರಾಯಕ್ಕೆ ಮುಟ್ಟಿಸಿದ್ದ ಮಡಿಕೇರಿ ಕಾಲೇಜ್ ಸಹಕಾರಿ ಸಂಘ (ಸುಮಾರು ೧೯೫೩ರಿಂದ ೧೯೬೨, ನೋಡಿ ಅವರದೇ ಪುಸ್ತಕ - ಸವಾಲನ್ನು ಎದುರಿಸುವ ಛಲ) ನನ್ನ ಬಾಲ ಮನಸ್ಸನ್ನು ತುಂಬ ಪ್ರಭಾವಿಸಿದ್ದಿರಬೇಕು. ಬಹುಶಃ ಅದೇ ಮುಂದೊಂದು ದಿನ ನನಗೆ ಪುಸ್ತಕೋದ್ಯಮಿಯಾಗಿ ನೆಲೆಸಲು ಗಟ್ಟಿ ನೆಲವನ್ನು ತೋರಿಸಿರಬೇಕು.
ಕೆಲವು ಜೀವನವೃತ್ತಾಂತಗಳಲ್ಲಿ, ಹಿರಿಯ ಕಿರಿಯನನ್ನು (ತಂದೆ ಮಗ) ಕೂರಿಸಿಕೊಂಡು "ಮಾಡು, ಮಾಣ್ (ಮಾಡದಿರು)"ಗಳನ್ನು ಉಪದೇಶಿಸುವುದು ಕಾಣುತ್ತೇವೆ. ಆದರೆ ವಿದ್ಯಾರ್ಥಿ ದಿನಗಳಲ್ಲಿ ನಾನೂ ತಂದೆಯೂ ನೇರ ಮುಖಕೊಟ್ಟು ಮಾತಾಡಿದ್ದೇ ಇಲ್ಲ. (ತಮ್ಮಂದಿರಿಗಾಗುವಾಗ ತಂದೆ ಪಳಗಿದ್ದರು!) ಆಟೋಟಗಳು ಸಮಯದಂಡಕ್ಕೆ, ಓದೊಂದೇ ವಿದ್ಯೆ, ಇತರ ಸಾಧನೆಗಳು ಹವ್ಯಾಸಕ್ಕೆ ಎಂದೇ ಅವರು ಖಚಿತವಾಗಿ ಹೇಳುತ್ತಿದ್ದ ದಿನಗಳವು. ಆದರೆ "ಮುಂದೆ ನೀನು ಇಂಥಾದ್ದಾಗು" ಎಂದು ಅವರು ತನ್ನ ಮಕ್ಕಳಿಗೆ ಹೇರಿದ್ದೂ ಹೇಳಿದ್ದೂ ಇಲ್ಲ. ಕಲಿಕೆ ಮತ್ತು ವೃತ್ತಿ ಲಕ್ಷ್ಯಗಳಲ್ಲಿ ನಮ್ಮ ಆಯ್ಕೆಯನ್ನು ಪೂರ್ಣ ಬೆಂಬಲಿಸಿದ್ದರು, ಎಡವಿದಾಗ ಆಸರೆಯನ್ನೂ ಕೊಟ್ಟಿದ್ದರು. ಆದರೆ ಎಂದೂ ಅಯಾಚಿತ (ಸ್ವಂತ ಅಭಿಪ್ರಾಯ) ವಿಮರ್ಶೆಯನ್ನು ಮಾಡಲೇ ಇಲ್ಲ. ನಾನು ಪದವಿಪೂರ್ವ ತರಗತಿಯಲ್ಲಿ ಅನುತ್ತೀರ್ಣನಾದಾಗ, ಕಲಿಕೆಯ ಉದ್ದಕ್ಕೂ ಪರೋಕ್ಷವಾಗಿ ಉಡಾಫೆಯನ್ನೇ ಸಾಧಿಸಿದರೂ ಒರೆಗೆ ಹಚ್ಚಲಿಲ್ಲ, ಭಂಗಿಸಲಿಲ್ಲ.
ಎನ್.ಸಿ.ಸಿ ಆಫೀಸರ್ ಆಗಿ ತಂದೆ ಹದಿನೇಳು ವರ್ಷಗಳ ಸೇವೆ ಸಲ್ಲಿಸಿದರು. ರಕ್ಷಣೆಯ ಬಿಸುಪಿನೊಡನೆ ತರಬೇತಿಯ ಆಳ, ಶಿಸ್ತಿನ ಬಿಗಿ, ಕೊಡುವಲ್ಲಿ ಅಪ್ರಕಟಿತ ಪ್ರೀತಿ ಪ್ರತಿಯಾಗಿ ಗೌರವ (ಅವರಿಂದ ಶಿಕ್ಷೆಗೊಳಗಾದವರೂ ಹಿಂದೆ ಬಿಟ್ಟು ಮೆಚ್ಚಿದ್ದು ಧಾರಾಳ ಕೇಳಿದ್ದೇನೆ.) ಉಳಿಸಿಕೊಂಡರು. ಅವರು ಕಾಲೇಜು ವಿದ್ಯಾರ್ಥಿಗಳಿಗೆ ಎನ್.ಸಿ.ಸಿ ಕಡ್ಡಾಯವಿದ್ದ ಕಾಲದಲ್ಲಿ ಅಧಿಕಾರಿಯಾಗಿ ದುಡಿದವರು. ಎಷ್ಟೋ ವಿದೇಶಗಳಲ್ಲಿ ಪ್ರಬುದ್ಧರಿಗೆ ಸೀಮಿತ ಸೈನ್ಯ-ಸೇವೆ ಕಡ್ಡಾಯವಿದ್ದಂತೇ ಇಲ್ಲಿನ ಎನ್.ಸಿ.ಸಿ ರೂಪುಗೊಂಡಿತ್ತು. ತಂದೆ ಮೂಲ ಆಶಯಕ್ಕೆ ಸ್ವಲ್ಪವೂ ಭಂಗ ಬಾರದಂತೆ ನೋಡಿಕೊಂಡರು, ಜತೆಗೇ ತರುಣ ಮನಸ್ಸುಗಳು ‘ದೊಡ್ಡ ಬಂದೂಕು’ ಅಷ್ಟೇ ಆಗದಂತೆ ವಿಶೇಷ ಕಾಳಜಿಯನ್ನೂ ವಹಿಸಿದರು. ಇವರು ಮಡಿಕೇರಿಯಲ್ಲಿದ್ದಾಗ ಭಾಗಮಂಡಲ-ತಲಕಾವೇರಿಗೆ ಕಡಿದ ರಸ್ತೆ, ಬಳ್ಳಾರಿಯ ಕೇಂದ್ರ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದಂದು ಎನ್.ಸಿ.ಸಿ ವಿದ್ಯಾರ್ಥಿಗಳಿಂದ ಕೊಟ್ಟ ‘ಮರಸು ಯುದ್ಧ ಪ್ರದರ್ಶನ’ (ambush), ಬೆಂಗಳೂರಿನ ವಿಶೇಷ ದಳ, ಕಳಶಪ್ರಾಯವಾಗಿ ಕುದುರೆಮುಖ ಚಾರಣಗಳು ಕೆಲವು ನಿದರ್ಶನಗಳು.
ವೃತ್ತಿ ಗಣಿತಾಧ್ಯಾಪಕರಾದರೂ ಪರೋಕ್ಷವಾಗಿ ತಗುಲಿಸಿಕೊಂಡ ದೊಡ್ಡ ವಿಷಯ ಆಕಾಶವೀಕ್ಷಣೆ. ಆ ಕುರಿತು ಇವರಷ್ಟು ಲೇಖನ, ಪುಸ್ತಕಗಳನ್ನು ಕನ್ನಡದಲ್ಲಿ ಕೊಟ್ಟವರಿಲ್ಲ. ಅವೆಲ್ಲವನ್ನೂ ಮೀರಿಸುವಂತೆ (ದೂರದರ್ಶನ ಇಲ್ಲದ ಕಾಲದಲ್ಲಿ) ಆಕಾಶವಾಣಿಯ ಮೈಸೂರು, ಮಂಗಳೂರು ನಿಲಯಗಳಿಂದ ರಾತ್ರಿಗಳಲ್ಲಿ ಇವರು ನೇರ ಕೊಟ್ಟ ನಕ್ಷತ್ರ ವೀಕ್ಷಕ ವಿವರಣೆಗಳಂತೂ ರಾಜ್ಯಾದ್ಯಂತ ಪ್ರಸಾರವಾಗುತ್ತಿದ್ದವು, ಮನೆ ಮಾತಾಗಿದ್ದವು. ವಿವಿಧ ಕಾಲೇಜು, ಸಂಘಗಳು ಇವರ ಸಂಗದಲ್ಲಿ ಅಹೋರಾತ್ರಿ ನಡೆಸಿದ ಆಕಾಶವೀಕ್ಷಣೆಗಳು ಅದೆಷ್ಟು ‘ಮಾನವದೀಪ’ಗಳಿಗೆ ಬೆಳಕಿನ ಕುಡಿ ಮುಟ್ಟಿಸಿತೆಂದು ಹೇಳಿ ಮುಗಿಯುವಂತದ್ದಲ್ಲ.
ತಂದೆ (ಆತ್ಮಕಥೆ - ಮುಗಿಯದ ಪಯಣದಲ್ಲಿ ಹೇಳಿಕೊಂಡಂತೆ) ಬಾಲ್ಯವನ್ನು ಗಾನಲೋಲನಾಗಿಯೇ ಕಂಡವರು. ಮದ್ರಾಸಿನಲ್ಲಿ ಕಳೆದ ಕಾಲೇಜು ದಿನಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಘನ ರಸಿಕನಾಗಿಯೇ ರೂಪುಗೊಂಡರು. ಮನೆಗಷ್ಟೇ ಸೀಮಿತಗೊಂಡ ಇವರ ಸಿಳ್ಳೆಗಾನಗಳು ಪರಿವಾರವನ್ನೆಲ್ಲಾ ಗಾಢವಾಗಿಯೇ ಪ್ರಭಾವಿಸಿತ್ತು. ಅಧ್ಯಾಪಕನ ಶಿಸ್ತಿನ ಟೈ ಕೋಟಿನಲ್ಲೇ ಇವರು ಮಡಿಕೇರಿ ಸರಕಾರೀ ಕಾಲೇಜಿನ ವೇದಿಕೆಯಲ್ಲಿ ಚಕ್ಕಳಬಕ್ಕಳ ಹಾಕಿ ಕುಳಿತು ಪಿಟೀಲು ನುಡಿಸುವ ಪಟ ನಾನು ನೋಡಿದ್ದೇನೆ. ಮಡಿಕೇರಿಯಲ್ಲಿದ್ದಾಗ ಇವರೊಂದು ಮೃದಂಗ ಖರೀದಿಸಿದ್ದರು. ಅವರು ಬಿಡುವು ಮಾಡಿಕೊಂಡು "ಸೊಗಸುಗಾ ಮೃದಂಗ ಗಾನಮೂ..." ಎಂದು ಮೃದಂಗಕ್ಕೆ ಹಿಂಸೆ ಕೊಡಲು ಕುಳಿತರೆ, ಎದುರು ತಂಗಿ ಸರಸ್ವತಿ, ತಮ್ಮ ದಿವಾಕರರು ಗಟ್ಟಿಯಾಗಿ ತಾಳ ತಟ್ಟಲು ಕೂರಲೇಬೇಕಾಗುತ್ತಿತ್ತು. (ನಾನು ಆಟಕ್ಕಿರುತ್ತಿದ್ದೆ, ಲೆಕ್ಕಕ್ಕಲ್ಲ!) ತಂದೆಯ ಸಂಗೀತ ಪ್ರೇಮ ವ್ಯವಸ್ಥಿತವಾಗುವಲ್ಲಿ ಪ್ರಾಯೋಗಿಕ ಹೆಜ್ಜೆ ಮೈಸೂರಿನ ‘ಸಹೃದಯ ಬಳಗ’, ದೃಢವಾದ ಹೆಜ್ಜೆ ‘ಗಾನಭಾರತೀ.’
ಅಕ್ಷರ ಲೋಕದಲ್ಲಿ ಕವಿ, ಕತೆಗಾರ ಎಂದು ತಂದೆ ಮೊದಲ ಕಸರತ್ತುಗಳನ್ನು ಮಾಡಿದರೂ ಗಟ್ಟಿ ನಿಂತದ್ದು ಕನ್ನಡದ ವಿಜ್ಞಾನ ಸಾಹಿತ್ಯ ನಿರ್ಮಾಪಕನಾಗಿ. ಆ ವಿಚಾರದಲ್ಲಿ ಪಾವೆಂ ಆಚಾರ್ಯರ ಪ್ರಭಾವವನ್ನು ತಂದೆ ಸ್ಮರಿಸದ ಅವಕಾಶಗಳಿಲ್ಲ. ತಂದೆ ಬೆಳವಣಿಗೆಯ ಮಹಡಿಗೇರುತ್ತ ಶಿವರಾಮ ಕಾರಂತರ ಅಂತಸ್ತಿನಲ್ಲಿ ಕೆಲವು ಕಾಲ ತಂಗಿದ್ದಿತ್ತು. ಆದರೆ ಬೇಗನೆ ವಸ್ತುನಿಷ್ಠತೆಯಲ್ಲಿ ಅವರಷ್ಟೇ ಖಡಕ್ಕಾಗಿ ಕಾರಂತರನ್ನೇ ತಿರಸ್ಕರಿಸಿ ತಂದೆ ನಿರ್ವಿವಾದವಾಗಿ ಮೇಲೇರಿದರು. ಕಾರಂತ ವ್ಯಕ್ತಿತ್ವ, ಅವರ ಬರವಣಿಗೆಯ ಹರಹುಗಳನ್ನೆಲ್ಲ ಅಪಾರ ಗೌರವಿಸಿದರೂ ಅವರ ವಿಜ್ಞಾನ ಸಾಹಿತ್ಯವನ್ನು ತಂದೆ ಒಪ್ಪಿಕೊಳ್ಳಲಿಲ್ಲ ಎನ್ನುವುದು ಸೌಮ್ಯವಾದೀತು, ಸಕಾರಣ ಖಂಡಿಸಿದರು.
ಲೋಕರೂಢಿಗಳಲ್ಲಿ ತಂದೆಯನ್ನು ಅಪ್ಪ, ಪಪ್ಪ, ಡ್ಯಾಡಿ, ಅಣ್ಣ, ಬಾಬ, ಮಾವಾದಿಗಳಿಂದ ಕರೆಯುವುದಿದೆ. ಅದರಲ್ಲಿ ನಮ್ಮದೊಂದು ವಿಚಿತ್ರ - ನನಗೆ ನೆನಪಿದ್ದ ದಿನಗಳಿಂದಲೂ ನಾವು ಮೂವರು ಮಕ್ಕಳು ತಂದೆಯನ್ನು ನೇರ ಏನೂ ಸಂಬೋಧಿಸಲೇ ಇಲ್ಲ. ಹೀಗೆ ಸಂಬಂಧ ಇದ್ದೂ ಇಲ್ಲದಂಥ ತಂದೆಯ ಪ್ರಭಾವವನ್ನಷ್ಟೇ ಇಲ್ಲಿ ದಾಖಲಿಸಿದ್ದೇನೆ. "ನಾನು ನುಡಿದಂತೆ ನಡೆ, ಮಾಡಿದಂತಲ್ಲ" ಎನ್ನುವವರು ಧಾರಾಳ ಸಿಗುತ್ತಾರೆ. ಆದರೆ ತಂದೆ, ನನಗೆ ನೇರ ನುಡಿದದ್ದು ಕಡಿಮೆ, ಲೋಕಕ್ಕೇ ಕಾಣುವಂತೆ ಮಾಡಿದ್ದು ಅಪಾರ. ಅದರಲ್ಲಿ ನನಗೂ ಧಾರಾಳ ದಕ್ಕಿದ್ದಾರೆ ಎಂದು ಸಂತೋಷದಿಂದ ಹೇಳಬಲ್ಲೆ.
ಉಪ ಸಂಹಾರ
ಸರಣಿಯನ್ನು ಕೊನೆಗಾಣಿಸುವ ಯೋಚನೆಯೊಡನೆ ‘ತಂದೆ’ಯ ತುಣುಕು ಹೊಳೆಯಿತು. ಅಷ್ಟೇ ಆಕಸ್ಮಿಕವಾಗಿ ತಂದೆಯ ದೇಹಾಂತ್ಯದ ಸ್ಮೃತಿ ದಿನ ಸಪೀಪದಲ್ಲಿರುವುದು ನೆನಪಾಗಿ (೧೪-೯-೧೯೨೬ ರಿಂದ ೨೭-೬-೨೦೦೮), ಎರಡನ್ನೂ ಸಮೀಕರಿಸುವವನಿದ್ದೆ. ಆಗ ಮೂರನೆಯ ಪ್ರೇರಣೆಯಾಗಿ ಬಂತು ಪ್ರಜಾವಾಣಿಯ ಗೆಳೆಯ ಬಿ.ಎಂ ಹನೀಫ್ ಒತ್ತಾಯ. ‘ವಿಶ್ವ ಅಪ್ಪಂದಿರ ದಿನ’ಕ್ಕೆ (ಪ್ರತಿ ವರ್ಷದ ಜೂನ್ ಮೂರನೇ ಆದಿತ್ಯವಾರ) ನನ್ನ ಮತ್ತು (ಮಗ) ಅಭಯನ ದ್ವಂದ್ವ! ಹಾಗಾಗಿ ಸಾಂಪ್ರದಾಯಿಕ ಭಾಷೆಯಲ್ಲಿ ಹೇಳುವುದಿದ್ದರೆ ತಂದೆಯ ವಾರ್ಷಿಕ ತಿಥಿಗೂ ವಾರ ಮೊದಲೇ ನುಡಿತರ್ಪಣವನ್ನು ಇಲ್ಲೂ ಇಂದಿನ ಪ್ರಜಾವಾಣಿಯಲ್ಲೂ ಕೊಡುವಂತಾಗಿದೆ. (ಅಭಯ ನನ್ನ ಮೇಲೆ ನಡೆಸಿದ ‘ಮೌಲ್ಯ ಮಾಪನ’ವನ್ನು(?) ಆಸಕ್ತರು ಪ್ರಜಾವಾಣಿಯಲ್ಲೂ ಇಲ್ಲಿ ಸ್ವತಂತ್ರವಾಗಿಯೂ ಅಭಯನ ಗೋಡೆಯಲ್ಲಿ ಓದಿಕೊಳ್ಳಬಹುದು) ಇಲ್ಲಿ ಪ್ರಸ್ತಾಪಗೊಂಡ ಅನೇಕ ಅಪೂರ್ಣ ಕಥನಗಳನ್ನು ನಾನು ಮುಂದೆಂದಾದರೂ ಹೀಗೇ ಪೂರ್ಣಗೊಳಿಸಲೂಬಹುದು. ಯಾಕೆಂದರೆ, ಜಿ.ಎಸ್.ಎಸ್ ಹೇಳಿದ್ದಾರೆ "ಹಾಡುವುದು ಅನಿವಾರ್ಯ ಕರ್ಮ ಎನಗೆ."
ಜಿ ಟಿ ನಾರಾಯಣರಾಯರು ಮತ್ತು ಗೌರೀಶ ಕಾಯ್ಕಿಣಿಯವರು ನನಗೆ ಈಗಲೂ ತುಂಬಾ ಇಷ್ಟ. ಅವರ ಪ್ರಖರ ವೈಚಾರಿಕತೆಯ ನಡುವೆ ಮುಗ್ಧವಾದ ಮಗುತನವೊಂದು ಸದಾ ಜಾಗ್ರತವಾಗಿರುತ್ತಿತ್ತು. ಇದು ಅವರ ಮಾತುಗಳಲ್ಲಿ ಆಗಾಗ ಪ್ರಕಟವಾಗುತ್ತಿತ್ತು. ಜೆಟಿನಾ ಅವರ ಮೈಸೂರಿನ ಮನೆಗೊಮ್ಮ ಹೋಗಿದ್ದೆ. ಅವರಿಗಿಂತ ತುಂಬಾ ಕಿರಿಯನಾದ ನನ್ನೊಡನೆ ಅವರು ಬಾಯ್ದೆರೆದು ಮಾತಾಡಿದ ರೀತಿಗೇ ನಾನು ಮರುಳಾಗಿದ್ದೆ. ನೆಲನೋಡಿ ನಡೆಯುತ್ತಿದ್ದ ನನಗೆ ಆಕಾಶ ನೋಡಲು ಕಲಿಸಿದವರು ಅವರು.ಸಣ್ಣ ಮಟ್ಟಿನ ನಮ್ಮ ವೈಚಾರಿಕ ಚರ್ಚೆ ಮತ್ತು ಚಟುವಟಿಕೆಗಳ ನಡುವೆ ಜಿ ಟಿ ನಾ ಈಗಲೂ ಹಾಜರಿರುತ್ತಾರೆ. ೨೦ನೇ ಶತಮಾನ ಸೃಷ್ಟಿಸಿದ ಉದಾರವಾದೀ ಮಾನವೀಯತೆಗೆ ಸಂಕೇತವಾಗಿದ್ದ ಅವರಿಗೆ ನಾವು ಹಲವರು ಸದಾ ಋಣಿಗಳಾಗಿರುತ್ತೇವೆ.
ReplyDelete೧೯೮೨ ರಲ್ಲಿ ನಾನು ಮೂಡಬಿದಿರೆ ದೂರವಾಣಿ ಇಲಾಖೆಗೆ ಕೆಲಸಕ್ಕೆ ಸೇರಿಕೊಂಡಿದ್ದೆ .ಅದೇ ವರ್ಷ ಸಮಾಜ ಮಂದಿರ ದಸರಾ ಉಪನ್ಯಾಸದಲ್ಲಿ ಜೀ ಟೀ ಎನ್ ರವರ ಭಾಷಣ ಕೇಳಿದೆ. ಒಂದು ಭಾಷಣವೂ ಇಷ್ಟು ಪರಿಣಾಮಕಾರಿಯಾಗಿರಲು ಸಾಧ್ಯ ಅಂತ ನಾನು ಒಪ್ಪಿಕೊಂಡದ್ದು ಆಗಲೇ.
ReplyDeleteಉಪನ್ಯಾಸದ ಶೀರ್ಷಿಕೆ ಮತ್ತು ಹೇಳಿದ ಬಗೆಯೇ ಸ್ವಾರಸ್ಯಕರವಾಗಿತ್ತು .ಶೀರ್ಷಿಕೆ ತಾರೆಯ ಖಾಸಗಿ ಬದುಕು .
ಆ ಬಳಿಕ ಅಲ್ಲಿ ಚದುರಂಗ ಹೆಸರಿನ ಮಕ್ಕಳ ನಾಟಕ ತಂಡವೊಂದನ್ನು ಕಟ್ಟಿಕೊಂಡು ಚಟುವಟಿಕೆ ನಡೆಸುತ್ತಿದ್ದೆವು .೮೪-೮೫ ಇರಬೇಕು ನಾವು ಕೆಲವು ಗೆಳೆಯರು ಒಟ್ಟಾಗಿ ಮೂಡುಬಿದಿರೆಯಿಂದ ಮೂಲ್ಕಿವರೆಗೆ ಒಂದು ದಿನದ ವಿಜ್ಞಾನ ನಾಟಕ ಜಾಥಾವನ್ನು ರೂಪಿಸಿಕೊಂಡೆವು. ನಡುವಣ ದಾರಿಯಲ್ಲಿ ಹಳ್ಳಿಗಳಲ್ಲಿ ನಾಟಕ ಪ್ರದರ್ಶನ ಮಾಡುತ್ತಾ ಸಂಜೆಯ ಪ್ರದರ್ಶನ ಮೂಲ್ಕಿ ಕಾಲೇಜಿನ ಬಳಿ ಎಂದು ನಿಗದಿಪಡಿಸಿದ್ದೆವು .ನಾವು ಮೂಲ್ಕಿಗೆ ಹೋದ ದಿನವೇ ಅಲ್ಲಿ ವಿಜ್ಞಾನ ಸಂಬಂಧಿಸಿದ ಸಂಕಿರಣವೊಂದರಲ್ಲಿ ಜಿಟಿಎನ್ ಭಾಷಣ ಮಾಡುತ್ತಿದ್ದಾರೆ ಎಂದು ತಿಳಿದು ಅಲ್ಲಿಗೆ ಹೋಗಿ ಬಹಳ ಮುಜುಗರದಿಂದ 'ಸರ್ ನಮ್ಮ ಬೀದಿ ನಾಟಕ ಪ್ರದರ್ಶನ ಇದೆ ನೀವು ನೋಡಿ ಬಂದರೆ ನಮಗೆ ಸಂತಸವಾಗುತ್ತದೆ ಎಂದು ಕೇಳಿಕೊಂಡೆವು. ಆಗ ಜಿಟಿಎನ್ ಸಂಜೆ ಅಲ್ವಾ ಬರಬಹುದಾಗಿತ್ತು ಆದರೆ ಇವತ್ತು ನನ್ನ ಆರೋಗ್ಯ ಅಷ್ಟು ಚೆನ್ನಾಗಿಲ್ಲ ಸ್ವಲ್ಪ ಜ್ವರ ಬಂದ ಹಾಗೆ ಇದೆ ಎಂದು ನಮ್ಮನ್ನು ಹೋಗಲು ತಿಳಿಸಿದರು ಸಂಜೆ ಸಮಾರೋಪ ಆದುದರಿಂದ ನಾವು ಮೂಲ್ಕಿ ಪೇಟೆಯ ಅಂಗಡಿಗಳವರಿಗೆ ,ರಸ್ತೆ ಬದಿಯಲ್ಲಿದ್ದ ಊರವರಿಗೆ ,ನಮ್ಮಲ್ಲಿದ್ದ ಕರಪತ್ರಗಳನ್ನು ನೀಡಿ ನಾಟಕಕ್ಕೆ ಬರಲು ಆಹ್ವಾನ ನೀಡುತ್ತಿದ್ದೆವು. ಇದ್ದಕ್ಕಿದ್ದ ಹಾಗೆ ಅಲ್ಲಿ ಕಾಣಿಸಿಕೊಂಡ ಜಿಟಿಎನ್ ,ಅಡ್ಯನಡ್ಕ ಕೃಷ್ಣಭಟ್ಟರು ನಮ್ಮ ತಂಡದೊಂದಿಗೆ ಸೇರಿ
'ಬನ್ನಿ ನಮ್ಮ ಹುಡುಗರು ವಿಜ್ಞಾನದ ಕುರಿತು ಬೀದಿ ನಾಟಕ ಮಾಡುತ್ತಾರೆ ನೀವೆಲ್ಲಾ ನೋಡಬೇಕು' ಎಂದೆಲ್ಲಾ ಹೇಳುತ್ತಾ ಊರವರನ್ನು ಕರೆದ ಬಗೆಗೆ ನಾವೆಲ್ಲ ಬೆರಗಾಗಿ ಹೋದೆವು. ಮಳೆ ಹನಿಸುತ್ತಿದ್ದ ಆ ದಿನಗಳಲ್ಲಿ ಸರ್ ತಲೆಯ ಮೇಲೆ ಚಿಕ್ಕ ಬಿಳಿ ಬಣ್ಣದ ಟವೆಲು ಹಾಕಿಕೊಂಡು ನಮ್ಮೊಡನೆ ನಡೆದು ಬಂದ ಅವರ ಸರಳತನಕ್ಕೆ ಅವರ ವಿದ್ವತ್ತಿಗೆ ನಾವೆಲ್ಲರೂ ಋಣಿಯಾಗಿ ಹೋದೆವು.ಆ ಬಳಿಕವೇ ಅವರ ಭಾಷಣ ಇದ್ದ ಸುದ್ದಿ ಕೇಳಿದ ಕೂಡಲೇ ಹೋಗಿ ಹಿಂದೆ ಕುಳಿತು ಭಾಷಣ ಕೇಳುವುದು ನನ್ನ ಸಾಂಸ್ಕೃತಿಕ ಜವಾಬ್ದಾರಿಯ ಕೆಲಸ ಎಂದು ಈ ತನಕ ಪಾಲಿಸಿಕೊಂಡು ಬಂದಿದ್ದೇನೆ .