26 March 2020

ಸದಾಶಿವ ನೀಲಕಂಠನಲ್ಲ!


ಚಿತ್ರ ಕೃಪೆ - ತಿಳಿದಿಲ್ಲ
ಆ ಬೆಳಿಗ್ಗೆ (ಸೆಪ್ಟೆಂಬರ್ ೧೧,೨೦೧೯) ಆಕಾಶದಲ್ಲಿ ಮೋಡ ಕಟ್ಟಿದ್ದು ನೋಡಿ ನಾನು ಸೈಕಲ್ ಸರ್ಕೀಟ್ ಕೈ ಬಿಟ್ಟಿದ್ದೆ. ಆದರೆ ಸುಮಾರು ಏಳೂವರೆಯ ಹೊತ್ತಿಗೆ ದೇವಕಿಗೆ ನಳಿನಿಯ ಫೋನ್ ಕರೆ ಬಂತು."ಅಶೋಕ ಭಾವ ಇದ್ದರೆ, ಕೂಡಲೇ ಬೈಕೇರಿ ನಮ್ಮನೆಗೆ ಬರಲಿ. ಸೈಕಲ್ ಬೇಡ". ನಾನು ದಡಬಡ ಬಟ್ಟೆ ಬದಲಿಸಿ, ಬೈಕ್ ತೆಗೆಯುವುದರೊಳಗೆ ದೇವಕಿ "ಏನು ವಿಷಯ" ಎಂದು ಕೇಳಿದ್ದಳು. "ಸದಾಶಿವ ಯೋಗಕ್ಕೆ ಹೋದವರು ಇನ್ನೂ ಬಂದಿಲ್ಲ. ಅದಕ್ಕೆ ಹೋಗುವಾಗ, ಎಂದಿನಂತೆ ಮೊಬೈಲ್ ತೆಗೆದುಕೊಂಡೂ ಹೋಗಿಲ್ಲವಾದ್ದರಿಂದ ವಿಚಾರಿಸುವ ಅವಕಾಶವೂ ಇಲ್ಲ. ನನಗೆ ತುಂಬ ಆತಂಕವಾಗಿದೆ" ಎಂದಷ್ಟೇ ಹೇಳಿದ್ದಳು. ಆತ ಎಲ್ಲೋ ಗೆಳೆಯರೊಡನೆ ಪಟ್ಟಾಂಗದಲ್ಲಿ ಸಮಯದ ಪರಿವೆ ತಪ್ಪಿಸಿಕೊಂಡಿರಬೇಕು ಎಂದುಕೊಳ್ಳುತ್ತಲೇ ನಾನು ಧಾವಿಸಿದೆ. ದಾರಿಯುದ್ದಕ್ಕೂ ನನ್ನ ಬಗೆಗಣ್ಣು, ನನ್ನಷ್ಟೇ ತರಾತುರಿಯಲ್ಲಿ ಮನೆಯತ್ತ ಸ್ಕೂಟರ್ ಓಡಿಸುವ ಸದಾಶಿವನನ್ನೇ ಕಾಣುತ್ತಿತ್ತು. ಆದರೆ ಬಿಜೈ ಹೊಸ ರಸ್ತೆಯಲ್ಲಿನ ‘ರಾಗ’ದಲ್ಲಿ ಸದಾಶಿವನಿರಲಿಲ್ಲ. ನಳಿನಿ ಬಾಗಿಲಿಗೆ ಬೀಗ ಹಾಕಿ, ಹೊರಡಲು ನಿಂತಿದ್ದವಳು, ಉಮ್ಮಳಿಸುತ್ತಿದ್ದ ದುಃಖವನ್ನು ನುಂಗಿಕೊಂಡು, ಸಣ್ಣದಾಗಿ ಪರಿಸ್ಥಿತಿ ಬಿಡಿಸಿಟ್ಟಳು.
ಚಿತ್ರ ಕೃಪೆ ತಿಳಿದಿಲ್ಲ

ಸದಾಶಿವ ಎಂದಿನಂತೆ ಅಂದೂ ಯೋಗ ತರಗತಿಗೆ ಹೋಗಿದ್ದಾನೆ ಎಂದು ನಳಿನಿ ಭಾವಿಸಿದ್ದಳು. ಹಾಗಾಗಿ ಈಕೆಯೂ ನಿತ್ಯದಂತೆ, ತಿಂಡಿ ಕಾಫಿಯ ಪ್ರಾಥಮಿಕ ತಯಾರಿ ಮುಗಿಸಿ, ಸ್ವತಂತ್ರವಾಗಿ ವಾಕಿಂಗ್ ಹೋದಳು. ಆದರೆ ಇವಳು ಮನೆಗೆ ಮರಳಿದಾಗ, ಎಂದಿನಂತೆ ಮುಂದಾಗಿ ಬರಬೇಕಿದ್ದ ಸದಾಶಿವ ಕಾಣಿಸಲಿಲ್ಲ. ಅರೆ ಇದೇನಿದು ಎಂದುಕೊಳ್ಳುತ್ತ, ಒಳಗೆ ಆತ ಬಿಟ್ಟು ಹೋಗಿದ್ದ ಮೊಬೈಲ್ ಕೈಗೆತ್ತಿಕೊಂಡಳು. ಅದರಲ್ಲೇನೂ ಕರೆಗಳಿರಲಿಲ್ಲ. ಸಂದೇಶದ ಅಂಕಣದಲ್ಲಿ ಮಾತ್ರ ಯೋಗ ಗುರುಗಳಿಗೆ "ನಾನಿಂದು ಯೋಗಕ್ಕೆ ಬರುತ್ತಿಲ್ಲ" ಎಂದಿದ್ದದ್ದು ಆಶ್ಚರ್ಯ ಹುಟ್ಟಿಸಿತು. ಆಗ ಇವಳಿಗೆ ಮೊಬೈಲ್ ಅಡಿಯಲ್ಲಿಟ್ಟಿದ ಎರಡು ಪತ್ರಗಳು ಕಾಣಿಸಿದವು. ಅವುಗಳ ಮುಖ್ಯ ಒಕ್ಕಣೆ - "ನನ್ನನ್ನು ನೇತ್ರಾವತಿ ಕರೆಯುತ್ತಿದೆ! ನಳಿನಿ, ರಂಜನ್, ದೀಪಿಕಾ, ಚೈತ್ರಾ, ಮನು ನನ್ನನ್ನು ಕ್ಷಮಿಸಿ. ಮಾನಸಿಕ ತುಮುಲ ತಾಳಲಾರೆ, ಎಲ್ಲಕ್ಕೂ ನಾನೇ ಜವಾಬ್ದಾರ. ನನ್ನ ದೇಹದಾನ ಮಾಡಿ. ಉತ್ತರಕ್ರಿಯೆ ಎಂಬ ದುಂದುವೆಚ್ಚ ಬೇಡ. ನೇತ್ರಾವತಿ ಕರೆಯುತ್ತಿದೆ!" 
ಚಿತ್ರ: ಲೇಖಕ

ನಾನು ಮೊದಲು ಪೋಲಿಸರಲ್ಲಿ ದೂರು ದಾಖಲಿಸೋಣವೆಂದೆ. ನಳಿನಿ ಸಮ್ಮತಿಸಿದಳು. ಮತ್ತೆ ಹೇಳಿದಳು. "ಸದಾಶಿವನ ಅಣ್ಣ ಸದ್ಯ ಅಮೆರಿಕದಲ್ಲಿದ್ದಾರೆ. ಹಾಗಾಗಿ ಸದಾಶಿವನ ಅಕ್ಕ, ಭಾವರಿಗೆ, ತಿಳಿಸಿದ್ದೇನೆ, ಅವರಿಗೆ ಠಾಣೆಗೇ ಬರಲು ತಿಳಿಸುತ್ತೇನೆ." ನಾನು ನಳಿನಿಯೊಡನೆ ಬೈಕಿನಲ್ಲಿ ಆಕಾಶವಾಣಿ ಪಕ್ಕದ ಪೋಲೀಸ್ ಠಾಣೆಗೆ ಧಾವಿಸಿದೆ. ಆಡಳಿತಾತ್ಮಕವಾಗಿ ಬಿಜೈ ವಠಾರದ ಠಾಣಾವಲಯ ಉರ್ವಾವಂತೆ. ಆದರೂ ಇಲ್ಲಿನವರು ಪತ್ರ ನೋಡಿ, ಪರಿಸ್ಥಿತಿಯ ಗಾಂಭೀರ್ಯಕ್ಕೆ ಸರಿಯಾಗಿ, ಕೂಡಲೇ ದೂರು ದಾಖಲಿಸಿಕೊಂಡು, ಪೋಲಿಸ್ ಸಂದೇಶವಾಹಿನಿಗೆ ಹಾಕಿದರು. ಅಷ್ಟೇ ಮುಖ್ಯವಾಗಿ ಸಂಬಂಧಿಸಿದ ಉರ್ವಾ ಠಾಣೆಗೂ ನೇತ್ರಾವತಿ ಸಂಕ ವಲಯದ ಕಂಕನಾಡಿ ಠಾಣೆಗೂ ದೂರವಾಣಿ ಕರೆಮಾಡಿಯೇ ಸುದ್ಧಿ ಪ್ರಸರಿಸಿದರು. 

ನಳಿನಿ ಠಾಣೆಯಲ್ಲಿ ದಾಖಲೆಗೆ ಹೆಚ್ಚಿನ ವಿವರಗಳನ್ನು ಕೊಡುತ್ತಿದ್ದಂತೆ, ನಾನು ಸದಾಶಿವನ ಸ್ಕೂಟರ್ ವಿವರ ಪಡೆದುಕೊಂಡು, ಒಬ್ಬನೇ ನೇತ್ರಾವತಿ ಸಂಕದತ್ತ ಬೈಕೋಡಿಸಿದೆ. ಮಳೆಗೆ ಅದೇನು ಅವಸರವಿತ್ತೋ - ಪದವಿನಿಂದ ಜೆಪ್ಪಿನಮೊಗರಿನವರೆಗೂ ಧೋ ಎಂದು ಜಡಿಗುಟ್ಟಿ ಹೊಡೆಯಿತು. ಮಳೆಕೋಟು ಇಲ್ಲದಿದ್ದರೂ ನಾನು ನಿಲ್ಲಲಿಲ್ಲ. ಉಳ್ಳಾಲ ಸಂಕದ ಈಚೆ ಕೆಲವು, ಸಂಕದ ನಡುವೆಯೂ ಒಂದು ನಿರ್ಜನ ಸ್ಕೂಟರ್ ನಿಂತಿತ್ತು. ಆದರೆ ಅವು ನಳಿನಿ ಕೊಟ್ಟ ಚಹರೆಗೆ ಹೊಂದಲಿಲ್ಲ. ಕಲ್ಲಾಪುವರೆಗೆ ಹೋಗಿ ಬಲ ಹೊರಳಿ ಇನ್ನೊಂದು ಪಥದಲ್ಲಿ ಮರಳುವಾಗ, ಸಂಕಕ್ಕಿಂತಲೂ ಸುಮಾರು ನೂರೈವತ್ತು ಮೀಟರ್ ಮೊದಲೇ ಮರದ ಕೆಳಗೆ ಬೇಕಾದ ಸ್ಕೂಟರ್ ನಿಂತಿತ್ತು; ಸದಾಶಿವ ಇರಲಿಲ್ಲ. ಚರವಾಣಿಸಿ ನಳಿನಿಗೂ ಪೋಲಿಸರಿಗೂ ತಿಳಿಸಿದೆ. 
ಚಿತ್ರ ಲೇಖಕ

ನನ್ನಷ್ಟಕ್ಕೆ ಸಂಕದ ಮೇಲೆ ನಡೆದು, ಹೊಳೆಗೆ ಹುಡುಕು ನೋಟ ಹಾಕಿದೆ, ರೈಲ್ವೇ ಹಳಿಯತ್ತ ಸಾಗುವ ಕಾಲ್ದಾರಿಯಲ್ಲಿ ಸಾಗಿ, ಅಲ್ಲೆಲ್ಲೋ ಬಲೆ ಹಾಕುತ್ತಿದ್ದವನನ್ನು ವಿಚಾರಿಸಿದೆ, ಪೊದರುಗಳ ಅಂಚಿನಲ್ಲಿ ಇಣುಕಿದೆ. ಮಳೆಗಾಲದ ಕೊನೆಯ ಪಾದವಾದ್ದರಿಂದ ನೀರು ವಿಶೇಷ ಕಲಂಕಿರಲಿಲ್ಲ. ಆದರೆ ಸೆಳೆತ ಜೋರೇ ಇದ್ದಂತಿತ್ತು. ನಿರುಕಿಸಿದ್ದೆಲ್ಲವೂ ವ್ಯರ್ಥ. ಸಮಯ ಸಂದಂತೆ ಹೆಚ್ಚು ಪೋಲಿಸರು, ಕರಾವಳಿಯುದ್ದಕ್ಕೆ ಅವರ ಸಂಪರ್ಕದಲ್ಲಿದ್ದ ಮೀನುಗಾರರೆಲ್ಲ ಹುಡುಕಿರಬೇಕು, ಪ್ರಯೋಜನಕ್ಕೆ ಬರಲಿಲ್ಲ. 

ಸಂಜೆಯ ವೇಳೆಗೆ ಊರಲ್ಲಿದ್ದ ಸಂಬಂಧಿಗಳು, ಬೆಂಗಳೂರು ಮೈಸೂರುಗಳಿಂದ ರಂಜನ್, ಚೈತ್ರಾದಿ ಬಂಧುಗಳೂ ಸೇರಿಕೊಂಡರು. ವಿಷಾದದ ನಿಟ್ಟುಸಿರಷ್ಟೇ ದೊಡ್ಡದಾಯ್ತು. ಮಳೆಗಾಲದ ಹೊಳೆಯ ಸೆಳವಿನಲ್ಲಿ ಏನು ಹೇಳುವುದೂ ಅಸಾಧ್ಯ ಎನ್ನುವ ಮಾತಷ್ಟೇ ಗಟ್ಟಿಯಾಯ್ತು. ಶವ ಸಿಕ್ಕಿದರೆ ಅನಿಶ್ಚಿತತೆಗೆ ಕೊನೆ ಮತ್ತು ಬಂಧುಗಳ ಅತಂತ್ರಕ್ಕೊಂದು ಕೊನೆ ಎಂಬ ಮಾತು ಇದ್ದೇ ಇದೆ. ಆದರೂ ಆಸೆಯ ಒಂದು ಕಿಡಿ - ಕೊನೆಯ ಗಳಿಗೆಯಲ್ಲಿ ಸದಾಶಿವ ಮನಸ್ಸು ಬದಲಾಯಿಸಿ ದೇಶಾಂತರ ಹೋಗಿರಬಹುದು, ಎಂದಾದರೂ ಮರಳಿಯಾನು ಎನ್ನುವುದನ್ನಷ್ಟೇ ನೆಚ್ಚಿ, ಎಲ್ಲರೂ ದೈನಂದಿನ ಕಲಾಪಗಳಿಗೆ ಹೊಂದಿಕೊಳ್ಳಲೇಬೇಕಾಯ್ತು. 
ಚಿತ್ರ ಲೇಖಕ

ಹಾರಿದ್ದೇ ನಿಜವಾದರೆ, ಹೆಣ ಮರುದಿನ ತೇಲಬೇಕು. ಅದು ನೇತ್ರಾವತಿಯ ದಂಡೆಗಳಲ್ಲೋ ಸಮುದ್ರದ ಉಬ್ಬರಕ್ಕೆ ಸಿಕ್ಕು ಒತ್ತಿನ ಫಲ್ಗುಣಿಯ ಸೆರಗಿನಲ್ಲೋ ಕಡಲು ಕಾಲಕಾಲಕ್ಕೆ ಬದಲಿಸುವ ಹೊಯ್ಲಿನಲ್ಲಿ ದಕ್ಷಿಣದಲ್ಲಿ ಮಂಜೇಶ್ವರ ಕಾಸರಗೋಡಿನವರೆಗೂ ಉತ್ತರದಲ್ಲಿ ಮೂಲ್ಕಿ ಉಡುಪಿಯವರೆಗೂ ಮೇಲೆ ಬೀಳುವ ಸಾಧ್ಯತೆಯಿತ್ತು. ಆ ಎಲ್ಲ ಸ್ಥಳಗಳ ಬೆಸ್ತ ಸಮುದಾಯದ ಸಹಕಾರಿಗಳಿಗೆ ಪೋಲಿಸ್ ಕ್ರಮದಂತೆ ವಿವರಗಳನ್ನು ಕೊಟ್ಟಿದ್ದರು. ನಾವಾಗಿ ಪತ್ರಿಕಾ ಪ್ರಕಟಣೆ ಕೊಡಲಿಲ್ಲ. ಆದರೂ ಕೆಲವು ಪತ್ರಿಕೆಗಳು ಪೋಲಿಸ್ ಮಾಹಿತಿಯನ್ನಾಧರಿಸಿ ಸಚಿತ್ರ ವರದಿ ಹಾಕಿದ್ದೂ ಆಯ್ತು. ಕಾಫಿಡೇ ಸಿದ್ಧಾರ್ಥ ಹೀಗೇ ನೇತ್ರಾವತಿಗೆ ಹಾರಿಕೊಂಡಾಗ ಮಾಡಿದ ವಿಪರೀತ ಹುಡುಕಾಟಗಳ (ಪಾತಾಳಗರಡಿ ಹಿಡಿದ ಬೆಸ್ತರು, ಅಸಂಖ್ಯ ದೋಣಿ ತಂಡಗಳು, ಡ್ರೋನ್, ಕೋಸ್ಟಲ್ ಗಾರ್ಡಿನ ಹೆಲಿಕಾಪ್ಟರ್, ಹೋವರ್ ಕ್ರಾಫ್ಟ್...) ಹಿಂದಿದ್ದ ರಾಜಕೀಯ ಆಸಕ್ತಿಗಳೇನೂ ನಮಗಿರಲಿಲ್ಲ. ಸದಾಶಿವನ ಇರವು ಅಳಿವಿನ ಅನಿಶ್ಚಿತತೆ ನಿವಾರಣೆಯಾಗಲೇ ಇಲ್ಲ. 
ಚಿತ್ರ ಲೇಖಕ

ಮುಂದಿನ ಐದಾರು ದಿನಗಳಲ್ಲಿ ನನ್ನ ಸೈಕಲ್ ಸರ್ಕೀಟುಗಳನ್ನು ಕ್ರಮವಾಗಿ ಈ ನೀರ ದಂಡೆಗಳಲ್ಲೇ ಮಾಡಿದೆ. ಮತ್ತು ನನ್ನ ವಿಚಾರಣೆಯಾದರೂ ಸದಾಶಿವ ಸಂಬಂಧಿಯೇ ಇತ್ತು. ಫಲ ಮಾತ್ರ ಶೂನ್ಯ. ಮರು ಬೆಳಿಗ್ಗೆಯೇ ಉಳ್ಳಾಲ ಅಳಿವೆಯ ಕಲ್ಲಿನ ರಾಶಿಯ ಮೇಲೆ ಕುಳಿತು ಗಾಳ ಹಾಕಿದವನ್ಯಾರೋ ನೇರ ಪ್ರವಾಹದ ಸೆಳೆತದಲ್ಲಿ ಹೆಣವೊಂದು ಸಮುದ್ರದತ್ತ ಹೋಗುವುದು ಕಂಡ ಸುದ್ದಿ ಸಿಕ್ಕಿತು. ಆದರೆ ಅಳಿವೆಯ ಕಲ್ಲೋಲದಲ್ಲಿ ಅದನ್ನು ಸಂಗ್ರಹಿಸುವುದಿರಲಿ, ಹೆಚ್ಚು ಕಾಲ ದಿಟ್ಟಿಬಂಧದಲ್ಲಿ ಉಳಿಸಿಕೊಳ್ಳಲೂ ಆಗಲಿಲ್ಲವಂತೆ. ಒಮ್ಮೆ ಅರ್ಧ ದಿನದ ಮೋಟಾರ್ ಬೈಕ್ ಶೋಧದಲ್ಲಿ ನನ್ನ ಬೆನ್ನಿಗೆ ಕುಳಿತು, ರಂಜನ್ ಕೂಡಾ ಬಂದಿದ್ದ. ಎಲ್ಲ ನಿಷ್ಪಲ. 
ಚಿತ್ರ ಲೇಖಕ

ಅನುಭವಿಗಳು ಹೇಳುವಂತೆ, ನದಿಯಲ್ಲಿ ಬರುವ ನೀರ ಮೊತ್ತ, ಗಾಳಿಯ ದಿಕ್ಕು ಮತ್ತು ಸಮುದ್ರದ ಭರತ ಇಳಿತಗಳನ್ನನುಸರಿಸಿ ತೇಲಿ ಬರುವ ಯಾವುದೇ ವಸ್ತು (ಶವವಾದರೂ) ಸಮುದ್ರದ ವಿಭಿನ್ನ ದಂಡೆಗೆಷ್ಟೋ ಅಷ್ಟೇ ಆಳ ಸಮುದ್ರಕ್ಕೂ ನೂಕಿ ಹೋಗುವ ಸಾಧ್ಯತೆ ಇತ್ತು. ದಂಡೆಯಲ್ಲಿ ಸಿಗುವ ಅವಕಾಶ ನೂರಕ್ಕೆ ಐವತ್ತೇ ಅಂತೆ! ವ್ಯರ್ಥ ವಾರ ಕಳೆದ ಮೇಲೆ, ಜಲಸಮಾಧಿಯಾಗಿರಬೇಕು ಎಂದಷ್ಟೇ ಅಂದಾಜಿಸಿ, ನಮ್ಮ ಮನವನ್ನು ನಾವೇ ಸಂತೈಸುವುದಷ್ಟೇ ಆಯ್ತು. ಸುಮಾರು ಎರಡು ವಾರಗಳ ಒಳಗೆ ಎಲ್ಲೋ ಕಾರವಾರದಲ್ಲಿ, ಕಾಸರಗೋಡಿನಲ್ಲಿ ಹೆಣಗಳು ಸಿಕ್ಕ ವರದಿಗಳು ಪತ್ರಿಕೆಗಳಲ್ಲಿ ಬಂದದ್ದಿತ್ತು. ಆಗೆಲ್ಲ ಕೆಲವು ಪರಿಚಿತರು ದೂರವಾಣಿಸಿದ್ದಿತ್ತು. ನಾವೂ ಅಧಿಕೃತ ಪೋಲಿಸ್ ಠಾಣೆಯೂ ಅದನ್ನು ಗಮನಿಸಿದ್ದೇವೆ ಎಂದರೂ ತಮ್ಮ ಕಾಳಜಿಯನ್ನು ಹೆಚ್ಚು ಸಾಬೀತು ಮಾಡಲು ಹೊರಟವರಂತೆ ಅವರು ವಾದಿಸಿದ್ದೂ ಇತ್ತು. ಹಾಗೇ ಆತ್ಮಹತ್ಯೆಗೆ ಕಾರಣ ಹುಡುಕುವ ಅನಾವಶ್ಯಕ ಉತ್ಸಾಹದಲ್ಲಿ, ಆತ್ಮೀಯರ ಕುರಿತು ತಪ್ಪು ವ್ಯಾಖ್ಯಾನಗಳನ್ನು ಮಾಡಿದ್ದೂ ಇತ್ತು. ಗಾಯದ ಮೇಲೆ ಬರೆ ಎಳೆಯುವ ಅವರನ್ನೆಲ್ಲ ವಿರೋಧಿಸುವ ಸಮಯ ಅದಲ್ಲ. ಹಾಗಾಗಿ ಅಂಥವರನ್ನೂ ಮನಸ್ಸಿನಲ್ಲೇ ಉದಾರವಾಗಿ ಕ್ಷಮಿಸಿ, ಚಂದಕ್ಕೆ ಮಾತು ಮುಗಿಸುವ ಸಂಕಟ ತುಸು ಹೆಚ್ಚೇ ತ್ರಾಸದಾಯಕವಾಗಿತ್ತು! 
ಚಿತ್ರ ಕೃಪೆ ತಿಳಿದಿಲ್ಲ

ಸದಾಶಿವ ನನಗಿಂತ ಪ್ರಾಯದಲ್ಲಿ ಸಣ್ಣ, ಸಂಬಂಧದಲ್ಲಿ ನನ್ನ ಸೋದರಮಾವನ ಮಗಳ ಗಂಡನಾದ ಲೆಕ್ಕದಲ್ಲಿ ತಮ್ಮನೂ ಆಗುತ್ತಿದ್ದ. ಆದರೆ ನನಗಾತನ ಪೂರ್ವಪರಿಚಯ ಏನೂ ಇಲ್ಲದೇ ಬ್ಯಾಂಕ್ ಅಧಿಕಾರಿ ಎನ್ನುವುದೇ ಹೆಚ್ಚು ಪ್ರಭಾವ ಬೀರಿದ್ದಿರಬೇಕು. ಸದಾಶಿವ ವೃತ್ತಿನಿರತನಾಗಿ ಹೊರ ಊರುಗಳಲ್ಲಿದ್ದದ್ದೇ ಹೆಚ್ಚಾದ್ದರಿಂದಲೂ ನನಗೆ ಒಡನಾಟ ಕಡಿಮೆ. ಮತ್ತೆ ನಕ್ಕದ್ದು, ಅತ್ತದ್ದು, ಕೆಕ್ಕರಿಸಿದ್ದನ್ನೆಲ್ಲ ಬೆರಳ ತುದಿಯ ಸ್ಪರ್ಷದಲ್ಲಿ ವಿಶ್ವವ್ಯಾಪೀ ಮಾಡುವ ಫೇಸ್ ಬುಕ್ಕಿನಂಥ ಸಾಮಾಜಿಕ ಮಾಧ್ಯಮದ ದಿನಗಳೂ ಅವು ಅಲ್ಲ. ತೀರಾ ಅಪರೂಪಕ್ಕೆ ಕುಟುಂಬದ ಔಪಚಾರಿಕ ಕಲಾಪಗಳಲ್ಲಷ್ಟೇ ನಮ್ಮ ಮುಖಾಮುಖಿಯಾಗುತ್ತಿತ್ತು. ಆಗ ರೂಢಿಯ ಬಲದಲ್ಲಿ ನಾನು ಎದುರಿನಿಂದ ಬ್ಯಾಂಕ್ ಮ್ಯಾನೇಜರ್ ಸದಾಶಿವನನ್ನು ಬಹುವಚನದಲ್ಲೇ ಮಾತಾಡಿಸಿದರೂ ಹಿಂದಿನಿಂದ ನಳಿನಿ ಗಂಡ ಎಂಬ ಆತ್ಮೀಯತೆಯಲ್ಲಿ ಏಕವಚನವನ್ನೇ ಉಳಿಸಿಕೊಂಡೆ.
ಚಿತ್ರ ಲೇಖಕ
(ಇಂಥ ಸಣ್ಣ ವಿಚಿತ್ರಗಳು ನಮ್ಮಲ್ಲಿ ಹಲವಿವೆ ಎನ್ನುವುದಕ್ಕೆ, ಇಲ್ಲಿ ಅತ್ತಿಗೆ ಎದುರೇ ಇರುವುದಕ್ಕೆ, ಒಂದು ಸಣ್ಣ ಉದಾಹರಣೆ ಹೇಳಿಬಿಡುತ್ತೇನೆ: ನಾನು ಹುಟ್ಟಿದಾರಭ್ಯ ಕಂಡ ಸೋದರ ಮಾವ ತಿಮ್ಮಪ್ಪಯ್ಯರನ್ನು ನಾನು ರೂಢಿಯಲ್ಲಿ ‘ಅಣ್ಣ’ ಎಂದೇ ಸಂಬೋಧಿಸಿದವ ಮತ್ತು ಎಲ್ಲಾ ಪ್ರೀತಿ ಗೌರವಗಳೊಡನೆ ಏಕವಚನದಲ್ಲೇ ಮಾತಾಡಿಸಿದವ. ಆದರೆ ಅವರ ಹೆಂಡತಿಯನ್ನು (ಇವರನ್ನೂ ನಾನು ರೂಢಿಯಲ್ಲಿ ಅತ್ತಿಗೆ ಎನ್ನುವವ) - ಹೊಸದಾಗಿ ಬಂದವರು ಎಂದೇ ನನ್ನ ಬಾಲ ಮನಸ್ಸು ಗುರುತಿಸಿದ್ದಕ್ಕೋ ಏನೋ ಬಹುವಚನದ ದೂರದಲ್ಲೇ ಉಳಿಸಿಬಿಟ್ಟೆ!) ಉಪಕತೆಯ ಬೆಳಕಿಲ್ಲದೆಯೂ ನನ್ನ ಸದಾಶಿವ ಸಂಬೋಧನೆ ಕುಟುಂಬದೊಳಗೆ ಎಲ್ಲರಿಗೂ ತಿಳಿದೇ ಇರುವುದರಿಂದ, ಅದನ್ನೇ ಮುಂದುವರಿಸುತ್ತೇನೆ, ಹೊಸಬರು ತಪ್ಪು ತಿಳಿಯಬಾರದು.

ಸದಾಶಿವ ಸೂಕ್ಷ್ಮಗ್ರಾಹಿ. ಆತನ ಪ್ರಿಯ ಹವ್ಯಾಸವಾದ ಫೊಟೋಗ್ರಫಿಯಲ್ಲಿನ ವಿಷಯ ವೈವಿಧ್ಯ ನೋಡಿದರೆ ನಿಮಗೆ ಅಂದಾಜಾಗಬಹುದು. ಸಣ್ಣದಾಗಿ ಹೆಸರಿಸುವುದಾದರೆ, ಎಲ್ಲರೂ ಕಾಣುವ ಚಂದ್ರನನ್ನು ಈತ ಹಲವು ವಿವರಗಳಲ್ಲಿ ದಾಖಲಿಸಿದ್ದಾನೆ. ಅವನು ಹಕ್ಕಿ, ಚಿಟ್ಟೆ, ಮುಂತಾದ ಪ್ರಾಕೃತಿಕ ವೈಶಿಷ್ಟ್ಯಗಳನ್ನು ಚೌಕಟ್ಟುಗಳಲ್ಲಿಟ್ಟ ಪರಿ ಸದಾ ಸುಂದರ, ಅದರಲ್ಲೂ ಕಣಜ ಒಂದು ಮೊಟ್ಟೆಯಿಡುವ ಮುನ್ನ ಜೀವಂತ ಜಿರಳೆಯೊಂದನ್ನು ಮಂಕುಗೊಳಿಸಿ ತನ್ನ ಗೂಡಿಗೆ ಎಳೆದುಕೊಂಡು ಹೋದ ವೀಡಿಯೋ ತುಣುಕಂತೂ ಬಹಳ ಜನಪ್ರಿಯವೇ ಆದ ಪ್ರಾಕೃತಿಕ ವಿದ್ಯಮಾನ. ಹಾಗೆಂದು ಆ ಕುರಿತು ದೊಡ್ಡ

ಚಿತ್ರ ಸದಾಶಿವರಾವ್
ಆಕಾಂಕ್ಷೆಗಳೇನೂ ಇಟ್ಟುಕೊಳ್ಳದೆ, ವಾಟ್ಸಪ್ ಫೇಸ್ ಬುಕ್ಕುಗಳ ಮಿತಿಯಲ್ಲೇ ಆತ ತೃಪ್ತ. ನನಗೆ ವಾಟ್ಸಪ್ಪಿನ ಸಂಬಂಧ ಇಲ್ಲ. ಆದರೆ ಫೇಸ್ ಬುಕ್ಕಿನಲ್ಲಿ ಸದಾಶಿವನ ಒಡನಾಟ ತುಂಬ ಇತ್ತು. ಅದರಲ್ಲೂ ಆತ ನಾಲಗೆ ರುಚಿಯನ್ನು ವಿಶೇಷವಾಗಿ ಪೋಷಿಸುವ ಫುಡ್ಡೀ ಬಳಗದ ಉಸ್ತುವಾರಿ ತುಂಬ ಸಮರ್ಥವಾಗಿ ನಡೆಸಿದ್ದ. ಸಾವಯವ, ಸಿರಿಧಾನ್ಯ, ಪ್ರಾದೇಶಿಕ ಖಾದ್ಯಗಳ ವಿಶಿಷ್ಟ ಪ್ರಯೋಗಗಳ ಒಲವು ಜಾಸ್ತಿಯೇ ಇತ್ತು. ಯಾವುದೋ ಸಂದರ್ಭದಲ್ಲಿ ಸದಾಶಿವ "ನನ್ನದೇನಿದ್ದರು ಅಡುಗೆ ಪ್ರಯೋಗಗಳ ಫಲಾನುಭವದ ಮತ್ತು ಚಿತ್ರ ತೆಗೆದು ಪ್ರಚಾರ ಕೊಡುವ ಪಾತ್ರ ಮಾತ್ರ. ಪ್ರಯೋಗಗಳೆಲ್ಲ ನಳಿನಿಯದ್ದೇ"
ಚಿತ್ರ ಸದಾಶಿವ ರಾವ್
ಎನ್ನುವಲ್ಲಿ ಸರಳ ಪ್ರಾಮಾಣಿಕತೆ ಮೆಚ್ಚುವಂತಿತ್ತು. ಸದಾಶಿವ ಮರೆಯಾದ ಸುಮಾರಿಗೆ ಮಂಗಳೂರಿನಲ್ಲಿ ಓಷನ್ ಪರ್ಲಿನವರ ಹೊಸ ಶಾಖೆ ’....ಇನ್’ ಶುರುವಾಗಿತ್ತು. ಸದಾಶಿವನ ವಿದಾಯದ ದುಃಖದ ಸಂವಾದಗಳಲ್ಲಿ ಆತನ ಅಕ್ಕ - ವಿಮಲಮ್ಮ, "ಹೊಸ ಹೋಟೆಲಿನ ತಿನಿಸುಗಳ ರುಚಿ ನೋಡಲು ಸದಾಶಿವನನ್ನು ಹೊರಡಿಸಬೇಕು ಅಂದುಕೊಂಡಿದ್ದೆ" ಎಂದದ್ದು ಸದಾಶಿವನ ರುಚಿಯಿರಲಿ, ಅಭಿರುಚಿಗೇ ಹಿಡಿದ ಕನ್ನಡಿ. 
ಚಿತ್ರ ಲೇಖಕ

ಸದಾಶಿವ ಬಹುರುಚಿಗಳ ಸಮನ್ವಯ ಸಾಧಿಸಿದ್ದರೂ ಕಹಿಯ ಹಾಗಲಕಾಯಿಯ ಬಗ್ಗೆ ಏನೋ ವಿಶೇಷ ಒಲವೂ ಇಟ್ಟುಕೊಂಡಿದ್ದ. ಸಾಂಪ್ರದಾಯಿಕ ಅಡುಗೆಗಳಲ್ಲಾದರೋ ಹಾಗಲದ ಕಹಿ ನಿವಾರಣೆ ಅಥವಾ ಅದನ್ನು ಹೊಡೆಯುವ ಮಸಾಲೆ ಪ್ರಯೋಗವೋ ಮುಖ್ಯ ಕಲಾಪ. ಆದರೆ ಅದಿಲ್ಲದೆಯೂ ಸದಾಶಿವನಿಗೆ ಹಾಗಲಕಾಯಿ ಬಲು ಪ್ರೀತಿ. ಇಂಥವರೂ ಇರುತ್ತಾರೆ ಎನ್ನುವುದಕ್ಕೆ ದಿನ ಸಂದ ನನ್ನೊಬ್ಬ ಚಿಕ್ಕಪ್ಪ - ಈಶ್ವರನ ನೆನಪು ಬರುತ್ತದೆ. ಆತ ಕಹಿಬೇವಿನ ಸೊಪ್ಪನ್ನು ಹಸಿಯಾಗಿಯೇ ಮುಷ್ಟಿ ತುಂಬ ಜಗಿಜಗಿದು, ರಸಾಸ್ವಾದಿಸುತ್ತ ನುಂಗುತ್ತ "ಇದರ ಸಿಹಿ ತಿಂದವರಿಗೇ ಗೊತ್ತು" ಎನ್ನುತ್ತಿದ್ದ! ಆದರೆ ಅದೇ ಕಹಿ ಜೀವನಶೈಲಿಯಲ್ಲಿ ಹಣಿಕುವುದನ್ನು ಮಾತ್ರ ಯಾರೂ ಬಯಸರು. ಸದಾಶಿವ ಬಯಸದೇ ಜೀವನದಲ್ಲಿ ಎದುರಿಸಿದ ಒಂದೆರಡು ಕಹಿಗಳು, ಪ್ರತ್ಯಕ್ಷ ನನ್ನನುಭವಕ್ಕೆ ಬಂದವನ್ನು ಇಲ್ಲಿ ಸಣ್ಣದಾಗಿ ಹೇಳುತ್ತೇನೆ. 
ಚಿತ್ರ ಲೇಖಕ

ಮೊದಲನೆಯದು, ಆತ ನಮ್ಮ ಸಂಬಂಧಕ್ಕೊಳಪಡುವ ಮೊದಲು, ಅಂದರೆ ‘ನಳಿನಿ-ಗಂಡ’ ಆಗುವುದಕ್ಕೂ ಸ್ವಲ್ಪ ಮೊದಲಿನದು. ನಳಿನಿಗೆ ಸಾಂಪ್ರದಾಯಿಕ ಕ್ರಮದಲ್ಲಿ ಮಾಯ್ಲಂಕೋಡಿಯ ಸದಾಶಿವ ರಾವ್ ಎಂಬ ತರುಣನೊಡನೆ ವಿವಾಹ ಸಂಬಂಧ ಕುದುರುತ್ತಿದ್ದ ಕಾಲವದು. ಅಂದು ನನ್ನ ಹೆಂಡತಿ - ದೇವಕಿಯ, ಸೋದರಮಾವ ಒಬ್ಬರು, ಕಾಸರಗೋಡಿನಿಂದ ಉದ್ದೇಶಪಟ್ಟು ಮಂಗಳೂರಿಗೆ ಬಂದು ಮೊದಲು ನನ್ನನ್ನೂ ಮತ್ತೆ ನನ್ನ ಕರೆಯಂತೆ ಬಂದ ನಳಿನಿಯಪ್ಪನನ್ನೂ ಭೇಟಿಯಾಗಿದ್ದರು. ಅವರಿಗೆ ಸದಾಶಿವ ಮೊದಲೇ ಸಮೀಪದ ಬಂಧು. ಅವರು ಯಾವುದೇ ಸ್ಪಷ್ಟ ಕಾರಣ ಕೊಡದೇ "ಸದಾಶಿವ ಸರಿಯಿಲ್ಲ" ಎನ್ನುವ ದುರ್ಬೋಧೆಯನ್ನು ನಮ್ಮಲ್ಲಿ ಬಿಂಬಿಸುವ ಪ್ರಯತ್ನ ಮಾಡಿದರು. ಆದರೆ ಅಷ್ಟರೊಳಗೆ ನಳಿನಿ ಸದಾಶಿವರು ಪತ್ರ ಮುಖೇನ ಪರಸ್ಪರರನ್ನು ಆಪ್ತವಾಗಿ ಪರಿಚಯಿಸಿಕೊಂಡಿದ್ದ ಬಲದಲ್ಲೂ ನನ್ನ ಮಾವನ ಅಪಾರ ಲೋಕಾನುಭವದಲ್ಲೂ ಆ ಮಾತನ್ನು ಪೂರ್ಣ ತಳ್ಳಿಹಾಕಿದರು. ಮತ್ತು ತಮ್ಮ ಮೊದಲ ನಿರ್ಧಾರದಲ್ಲಿ ದೃಢವಾಗಿ ನಿಂತರು. ನಿಧಾನವಾಗಿ ತಿಳಿದಂತೆ, ಕಾಸರಗೋಡಿನವರು ತಮ್ಮದೇ ಕೌಟುಂಬಿಕ ಕಲಹವೊಂದಕ್ಕೆ ಅನಾವಶ್ಯಕವಾಗಿ ಸದಾಶಿವನನ್ನು ಬಲಿಮಾಡಲು ಯತ್ನಿಸಿದ್ದರು. ಸದಾಶಿವ ನಳಿನಿಯರ ಮದುವೆಯಾಗಿ ಇಷ್ಟೂ ವರ್ಷಗಳ ಸಂಬಂಧದಲ್ಲಿ ಸದಾಶಿವನಲ್ಲಿ ಯಾರೂ ಎಲ್ಲೂ ಕುಂದು ಕಂಡದ್ದಿಲ್ಲ ಎಂದು ನಾನು ಪ್ರತ್ಯೇಕ ಹೇಳಬೇಕೇ. 
ಚಿತ್ರ ಸದಾಶಿವ ರಾವ್

ಸದಾಶಿವ ಒಳ್ಳೆಯ ಮಾತುಗಾರ, ಆತ ವೃತ್ತಿಜೀವನವನ್ನು ಬ್ಯಾಂಕ್ ನೌಕರಿಯಲ್ಲಿ ತೊಡಗಿ ಬೆಳೆಸಿಕೊಂಡವ. ಅದು ಒಂದು ಹಂತದಲ್ಲಿ ಗುಲಾಮಗಿರಿಯ ಅರಿವು ಕೊಟ್ಟಾಗ, ನಿರಾಕರಿಸಿ, ಸ್ವಯಂ ನಿವೃತ್ತಿ ತೆಗೆದುಕೊಂಡ ದಿಟ್ಟ. ಮತ್ತೆ ಪ್ರಾಯೋಗಿಕ ಅನುಭವಕ್ಕೆ ಹೆಚ್ಚಿನ ಅಧ್ಯಯನ ಸೇರಿಸಿ ಬ್ಯಾಂಕಿಂಗಿನಲ್ಲೇ ಶಿಕ್ಷಕನಾಗಿ ಹೊಸ ಎತ್ತರ ಕಂಡವ. ಬ್ಯಾಂಕಿಂಗ್ ಶಿಕ್ಷಕನಾಗಿ ಈತನ ಜನಪ್ರಿಯತೆ ಇಲ್ಲಿಂದ ದಿಲ್ಲಿಯ ದೂರಕ್ಕೆಳೆದರೂ ಮತ್ತೆ ತಾಪೇದಾರಿಯನ್ನು (ಆದಾಯಕ್ಕಾಗಿ ಜೀ ಹುಜೂರ್ ಎನ್ನುವ ಸ್ಥಿತಿಯನ್ನು) ನಿರಾಕರಿಸಿ, ಇಲ್ಲೇ ನಿಂತು ಬೇಡಿಕೆ ಉಳಿಸಿಕೊಂಡ ಛಲಗಾರ. ಆದರೆ ಸಾಮಾಜಿಕ ತಾಣಗಳಲ್ಲಿ ಈತನ ಮುಕ್ತ ವೈಚಾರಿಕ ನಿಲುವಿನ ಮತ್ತು ಅನುಭವ ಅಧ್ಯಯನಗಳ ಆಳದ ಪರಿಚಯವಿಲ್ಲದವರು ತರ್ಕ ಮೀರಿದ ಕಟು ವಿಮರ್ಶೆಗಳನ್ನು (ಅಂತರ್ಜಾಲದ ಭಾಷೆಯಲ್ಲಿ ಹೇಳುವುದಿದ್ದರೆ ಟ್ರಾಲ್) ಮಾಡಿದಾಗ, ಎಷ್ಟು ನೊಂದುಕೊಳ್ಳುತ್ತಿದ್ದನೋ ತಿಳಿದಿಲ್ಲ. ಆದರೆ ತಗ್ಗುತ್ತಿದ್ದ ಎನ್ನುವುದಕ್ಕೆ ನನ್ನದೇ ಒಂದು ಸಣ್ಣ ಉದಾಹರಣೆ: ಇದು ನಡೆದದ್ದು ಮುಖಾಮುಖಿ ಮಾತುಕತೆಯಲ್ಲಿ ಮಾತ್ರ. ಆನ್ ಲೈನ್ ಬ್ಯಾಂಕಿಂಗೋ ಪಾವತಿಯದೋ ಕುರಿತ ವಿಚಾರ ನಾನು ಸದಾಶಿವನೊಡನೆ ಚರ್ಚೆಗಿಳಿದಿದ್ದೆ. ನಾನು ಕೇವಲ ಸ್ವೈಪಿಂಗ್ ಮಿಶನ್ನನ್ನು ನನ್ನಂಗಡಿಯಲ್ಲಿ ಬಳಸಿ ಉಂಟಾದ ನಷ್ಟದ ಅನುಭವ ಮಾತ್ರ ಇದ್ದವ. ಇನ್ನೊಂದರ ಕುರಿತು ಅನನುಭವಿ ಮತ್ತು ಅಧ್ಯಯನ ಶೂನ್ಯ. ಸದಾಶಿವ "ಹಾಗಲ್ಲ ಅಶೋಕಭಾವಾ..." ಎಂದು ಒಮ್ಮೆ ಸಣ್ಣದಾಗಿ ವಿನಯದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ. ನಮ್ಮ ಮೂಲ ಮರಿಕೆ ಬಳಗದಲ್ಲಿ ಎಷ್ಟೋ ಸಲ ನಮ್ಮ ಕುದುರೆಗೆ ಮೂರು ಕಿವಿ ಎಂದು ಕುಶಾಲಿಗೇ ವಾದಿಸುವುದು, ಅಂದರೆ ಕೊಕ್ಕೆ ಹಾಕುವುದು ಸಾಮಾನ್ಯವಾಗಿ ನಡೆಯುತ್ತದೆ. ಬಹುಶಃ ಅದೇ ಆವೇಶದಲ್ಲಿ ನಾನು ಮಾತು ಮುಂದುವರಿಸಿರಬೇಕು, ಸದಾಶಿವ ಮೌನಿಯಾದ. ಆವೇಶ ಇಳಿದ ಮೇಲೆ, ಬ್ಯಾಂಕಿಂಗಿನ ವೈವಿಧ್ಯಮಯವಾದ ನೂರಾರು ಅನುಭವ, ಮೇಲೆ ಅಧ್ಯಯನ ಮಾಡಿದವನೊಡನೆ ಕೇವಲ ಒಂದು ಅನುಭವ ಇಟ್ಟುಕೊಂಡ ನನ್ನ ಮಿತಿಯನ್ನು ಒಪ್ಪಿ, ಪ್ರಸಂಗ ತಿಳಿಗೊಳಿಸಿ ಮುಗಿಸಿದೆ. 
ಚಿತ್ರ ಕೃಪೆ ತಿಳಿದಿಲ್ಲ

ಈಚಿನ ದಿನಗಳಲ್ಲಿ ಸದಾಶಿವ ವಾಟ್ಸಪ್, ಫೇಸ್ ಬುಕ್ಕಿನಂಥ ಮಾಧ್ಯಮಗಳಲ್ಲಿ ತಳೆದ ರಾಜಕೀಯ ನಿಲುವುಗಳನ್ನು ಉದ್ದೇಶಪೂರ್ವಕ ಕುಟಿಲ ನೀತಿಯಲ್ಲಿ ಪರಿಣತರು ಖಂಡಿಸಿದ್ದರು. ಅದರಲ್ಲೂ ಕೌಟುಂಬಿಕವಾಗಿ ಆಪ್ತರು ಎನ್ನುವಂತವರೂ ಎದುರು ಕಂಡಾಗ ಹಲ್ಲು ಬಿಟ್ಟು, ಸಾರ್ವಜನಿಕವಾಗಿ ಜಾಲ ಮಾಧ್ಯಮಗಳಲ್ಲಿ ಕಟಕಿ ಹಂಚಿದ್ದು ಕಂಡಾಗ, ಇದು ಬರಿಯ ಹಾಸ್ಯವಲ್ಲ ಎಂದು ನನ್ನ ಮನಸ್ಸೇ ಕನಲಿ ಕೆಂಡವಾಗಿತ್ತು. ಪ್ರಕೃತಿ ಸದಾಶಿವನನ್ನು ನನ್ನಷ್ಟು ಒರಟನಾಗಿಸಲಿಲ್ಲ. ಹಾಗಾಗಿ ಆತನ ಕೊನೆಯ ಪತ್ರದಲ್ಲಿದ್ದ ಮಾನಸಿಕ ತುಮುಲ ಇಂಥವೇ ಇರಬೇಕು ಎಂದು ನನ್ನ ಊಹೆ. ಹಾಗಲಕಾಯಿಯ ಕಹಿಯಲ್ಲಿ ರುಚಿ ಕಂಡಾತ, ಮನುಷ್ಯರ ಮಾನಸಿಕ ಕಹಿಯನ್ನು ನುಂಗಿ ನೀಲಕಂಠನಾಗಲಿಲ್ಲ. ನಿಜದಲ್ಲಿ ವಿಷಕಂಠ ಎನ್ನುವುದು ಭಿನ್ನ ವ್ಯಕ್ತಿಗಳ ಸಹನೆಯ ಮಿತಿಸೂಚಕ ಮಾತ್ರ. ಆ ಮಿತಿ ಮೀರದಂತೆ ಉಳಿದು, ಕಾಲಕ್ಕೆ ಸಂದವರೆಲ್ಲ ಅಮರರೇ. ಯಾವುದೇ ವ್ಯಕ್ತಿಯ ದೀರ್ಘ ಕಾಲದ ಒಡನಾಟ, ಅವರ ಸಾಮಾಜಿಕ ಇರಸರಿಕೆಯ ಅರಿವು ನಮಗಿದ್ದಾಗ, ನಾವು ಪೂರ್ಣ ಕಾಣದ ನೂರೆಂಟು ಭ್ರಮೆಗಳಲ್ಲಿ ಅವರಿಗೆ ಕಹಿ ತಿನ್ನಿಸುವವರಾಗಬಾರದು, ವಿಶ್ವಾಸದ ಅಮೃತ ಕೊಟ್ಟು ಅಮರರನ್ನಾಗಿಸೋಣ. ಇಂದು ಮಾನಸಿಕ ವಿಜ್ಞಾನದಲ್ಲಿ ಸದಾಶಿವನ ಅಗಲಿಕೆಗೆ ಸ್ಪಷ್ಟ ವ್ಯಾಖ್ಯಾನವೇನೋ ಸಿಕ್ಕಿದೆ. ಆದರೆ ಅದಕ್ಕೂ ಹಿನ್ನೆಲೆಯನ್ನು ರೂಪಿಸುವ
ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮರೆಯದಿರೋಣ. 
****** ***** 
೧೫-೩-೨೦೨೦
ಚಿತ್ರ ಲೇಖಕ

5 comments:

  1. ಜೀವನ ಪ್ರೀತಿಯುಳ್ಳ ವ್ಯಕ್ತಿಯೊಬ್ಬ ತನ್ನ ಜೀವವನ್ನೇ ಕಳೆದುಕೊಳ್ಳುವ ಅತ್ಯಂತ ಕಠಿಣ ನಿರ್ಧಾರ ಕೈಗೊಂಡು ಅದನ್ನು ಕಾರ್ಯಗತ ಮಾಡಲು ಸಾಕಷ್ಟು ಪೂರ್ವಭಾವೀ ಸಿದ್ಧತೆ ಮಾಡಿಕೊಂಡದ್ದು ಸ್ಪಷ್ಟವೇ ಇದ್ದರೂ ಅದರ ಹಿಂದಿನ ಮನಸ್ಥಿತಿಯನ್ನರಿಯುವುದು ಸುಲಭವಲ್ಲ ಮತ್ತು ಅದರ ಹಿಂದಿನ ನಮಗೆ ಮೇಲ್ನೋಟಕ್ಕೆ ಕಾಣಿಸಿದ ಘಟನಾವಳಿಗಳು ಅಷ್ಟು ಪ್ರಬಲವೇ ಎನ್ನುವುದು ಪ್ರಶ್ನೆಯಾಗಿಯೆ ಉಳಿಯುತ್ತದೆ. ನನಗೆ ತಿಳಿದಂತೆ, ಸೈಕಾಲಾಜಿ - ಮನ:ಶಾಸ್ತ್ರ - ಆತ್ಮಹತ್ಯೆಯನ್ನು ಒಂದು ಅಸಹಜ ಮಾನಸಿಕತೆ, ಅಂದರೆ ಮಿದುಳಿನಲ್ಲಿ ಯಾವುದೋ ಒಂದು ಹಾರ್ಮೊನಿನ ಅಸಹಜ ಸ್ರಾವ ಎಂದು ವ್ಯಾಖ್ಯಾನಿಸುತ್ತದೆ.ಇಲ್ಲದೇ ಹೋದರೆ ಅಷ್ಟೊಂದು ಜೀವನಪ್ರೀತಿ, ಸೂಕ್ಷ್ಮ ಸಂವೇದನೆಯಳ್ಳ ರಸಗ್ರಾಹೀ ವ್ಯಕ್ತಿ ಇಂತಹ ನಿರ್ಧಾರ ತೆಗೆದುಕೊಳ್ಳಬಹುದಾದ ಸಾಧ್ಯತೆಯನ್ನೇ ನಂಬಲು ಕಷ್ಟಸಾಧ್ಯ. ನನಗೆ ಸದಾಶಿವರ ದುರಂತದ ಸುಳಿವು ಕೊಟ್ಟವಳು ನನ್ನ ದೊಡ್ಡ ಮಗಳು ಮಾನಸ.ಅವಳೂ ಸದಾಶಿವರ ಫೇಸ್-ಬುಕ್ ನ 'ಫುಡೀ' ಅಂಕಣದ ಅಭಿಮಾನೀ ಓದುಗಳು. "ಅವರು ಅತ್ರೀ ಅಂಕಲ್ ನ ಸಂಬಂಧಿಕರಂತೆ; ಒಮ್ಮೆ ವಿಚಾರಿಸು ಅಪ್ಪಾ" ಎಂದು ಒತ್ತಾಯಿಸಿದ್ದರೂ ನಾನು ಸಂಕೋಚದಿಂದ, ದುಖ್ಖದಿಂದ ಈ ವಿಷಯವನ್ನು ಪ್ರಸ್ತಾಪ ಮಾಡಲೇ ಇಲ್ಲ.ಕುಟುಂಬದ ದುಖ್ಖದಲ್ಲಿ ನಾನೂ ಭಾಗಿ ಎನ್ನುವುದನ್ನು ಪ್ರಾಮಾಣಿಕವಾಗಿ ಹೇಳುತ್ತೇನೆ.ಈ ಸಂದರ್ಭದಲ್ಲಿ ನನಗೆ ನೆನಪಿಗೆ ಬರುವ ಒಂದು ಘಟನೆ ಇಲ್ಲಿ ಆತೀ ಪ್ರಸ್ತುತ ಎಂದು ಅನಿಸಿದ್ದರಿಂದ ಬರೆಯುತ್ತಿದ್ದೇನೆ. ಡೇಲ್ ಕಾರ್ನೆಗಿ ಎನ್ನುವ ವಿಶ್ವವಿಖ್ಯಾತ ಮನ:ಶಾಸ್ತ್ರಜ್ನ ಬರೆದ ಒಂದು ಪುಸ್ತಕ: "How to stop worrying and start Living" ಮಿಲಿಯಗಟ್ಟಲೆ ಪ್ರತಿಗಳು ಬಿಕರಿಯಾಗಿ ದಾಖಲೆ ಸ್ಥಾಪಿಸಿದೆ. ಆದರೆ ದುರಾದೃಷ್ಟವೆಂದರೆ ಇದನ್ನು ಬರೆದ ಡೇಲ್ ಕಾರ್ನೆಗಿ ಆತ್ಮಹತ್ಯೆ ಮಾಡಿಕೊಂಡ. ಇದು ಯಾಕೆ ಹೀಗೆ ಎಂಬ ಪ್ರಶ್ನೆ ನಿರುತ್ತರವಾಗಿಯೇ ಇನ್ನೂ ಉಳಿದಿದೆ. ವಿಷಾದಭಾವದೊಂದಿಗೆ ವಿರಮಿಸುತ್ತಿದ್ದೇನೆ. ನಮಸ್ಕಾರ.

    ReplyDelete
  2. ನಮಸ್ಕಾರಗಳು.
    ಇತ್ತೀಚೆಗೆ ನಮ್ಮ ಸಂಸ್ಥೆಯ ಬಹು ಪ್ರಖ್ಯಾತ ಭೌತಶಾಸ್ತ್ರಜ್ಞೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಬಹಳ ಸಣ್ಣ ವಯಸ್ಸಿನಲ್ಲಿಯೇ ಬಹಳಷ್ಟು ಸಾದಿಸಿದ್ದ ಆಕೆ ಹೀಗೆ ಮಾಡಿಕೊಂಡದ್ದರ ಬಗೆ ಬಹಳ ಕಾಡಿತ್ತು. ಆ ಸಮಯದಲ್ಲಿ ನಮ್ಮ ಸಂಸ್ಥೆಯ ಒಬ್ಬರು ಹೇಳಿದ ಮಾತು ನನ್ನನ್ನು ಯೋಚನೆಗೆ ಹಚ್ಚಿತ್ತು. ನಾವು ನನ್ನ ದೇಹ/ಶರೀರ ನನ್ನದು ಎಂದುಕೊಂಡಿರುತ್ತೇವೆ. ಹಾಗೆ ನನ್ನದು ಎಂದುಕೊಂಡಾಗ ಹಾಗೆ ಅದನ್ನ ಏನು ಬೇಕಾದರೂ ಮಾಡಬಲ್ಲ ಹಕ್ಕು ನನಗಿದೆ ಎಂಬ ಭಾವ ಇರುತ್ತದೆ, ಹಾಗು ಅದು ತಪ್ಪಲ್ಲ ಎಂದು ಭಾವಿಸುತ್ತಾರೆ. ಅದೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಬೇರೆಯವರಿಗೆ ಕಂಡಿತ ಯಾವ ತೊಂದರೆಯೂ ಕೊಡದ ವ್ಯಕ್ತಿಯಾಗಿದ್ದರು. ಆದರೆ ತಮಗೆ ತಾವು ನೋವನ್ನು ಕೊಟ್ಟುಕೊಂಡರು. ಬಹುಷಃ ನನ್ನ ದೇಹ/ಶರೀರ "ನನ್ನದು" ಎಂಬ ಭಾವ ಅದನ್ನು ಏನು ಮಾಡಿದರೂ ತಪ್ಪಿಲ್ಲ ಎಂಬ ತೀರ್ಮಾನಕ್ಕೆ ಕೊಂಡೊಯ್ಯಲು ಸಹಕರಿಸುತ್ತ ಎಂಬ ಪ್ರಶ್ನೆ ಅಂದಿನಿಂದಲೂ ಕಾಡುತ್ತಲೇ ಇದೆ.

    ReplyDelete
  3. ದುಃಖವಾಗಿತು. ನಿಮ್ಮೊಟ್ಟಿಗೆ ನಿಮ್ಮ.ಬಂಧುಗಳ ಮ‌ನೆಗಳಿಗೆ ಬಂದಿರುವ ನನಗೆ ನಳಿನಿ, ಲಲಿತ, ಶೈಲಾ ತಮ್ಮಣ್ಣ ಎಲ್ಲ ಮನೆಯ ಮಕ್ಕಳೇ ಎಂಬ ಭಾವನೆ. ಆದರೆ ಅವರು ಬೆಳೆದು ಸ್ವತಂತ್ರ ಆಲೋಚನೆ ವ್ಯಕ್ತಿತ್ವ ಉಳ್ಳವರು ಎಂಬ ಅರಿವಿನಿಂದ ಅವರ ಜೊತೆ ವಾದಿಸಲು ಹೋಗುವುದಿಲ್ಲ. ಅವರ ಪಾಡಿಗೆ ಅವರನ್ನು ಬಿಟ್ಟು ಸುಮ್ಮನಾಗುತ್ತೇನೆ. ತಮ್ಮಣ್ಣ ಜೊತೆ ನಳಿನಿಯ ಗಂಡನೂ ನನ್ನಜೊತೆ ಟ್ರೋಲ್ ಮಾಡಿದ ನೆನಪು. ಎಂದಿನಂತೆ ಸುಮ್ಮನಾಗಿದ್ದೆ.
    ಆದರೆ ಸದಾಶಿವ ಬದುಕನ್ನು ಕೊನೆಗೊಳಿಸಿಕೊಂಡ ರೀತಿ ನನ್ನನ್ನು ಅಲುಗಿಸಿ ಎತ್ತಿ ಎಸೆದಂತೆ ಅನಿಸಿತು. ಕಾಫಿಡೇ ಸಿದ್ಧಾರ್ಥ ಬಿಟ್ಟುಹೋದ ದುಃಖ ಮನೆಯ ಮಗುವಿಗೇ ಬಂದಾಗ ತುಂಬ ಸಂಕಟವಾಯಿತು. ನಳಿನಿಗೆ ಸಂತಾಪಗಳು. ಸದಾಶಿವರಂಥ ಸೂಕ್ಷ್ಮ ಸಂವೇದನಶೀಲರು ಇಂಥ ನಿರ್ಧಾರ ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ನನಗೆ ಅರ್ಥವಾಗದ ದುಃಖದ ಸಂಗತಿ.

    ReplyDelete
  4. ಸ್ವಚ್ಛ ನೀರಿನಂತ ನಿರರ್ಗಳ ಬರಹ. ಮನಸ್ಸಿಗೆ ಬರುವ ಒಂದು ಖಾಯಿಲೆ ಹೀಗೆ ಲವಲವಿಕೆಯಿಂದ ತುಂಬಿರುವ ವ್ಯಕ್ತಿಯನ್ನು ಭಾದಿಸಿತು ಎಂದು ತಿಳಿಸಿ ಕೊಟ್ಟು ಹೋದರು ಸದಾಶಿವ ಮಾವ.

    ReplyDelete
  5. ಗೋವಾದಲ್ಲಿ ನಡೆದ ಸಿನೆಮೋತ್ಸವ (೨೦೦೪ರ ಸುಮಾರಿಗೆ) ನೋಡಲು ಹೋಗಿದ್ದೆ. ಸಹಜವಾಗಿ ಗೋವಾದ ಸಿಂಡಿಕೇಟ್ ಬ್ಯಾಂಕಿನಲ್ಲಿದ್ದ ಸದಾಶಿವ ಚಿಕ್ಕಪ್ಪನ ಮನೆಯಲ್ಲೇ ಒಂದು ವಾರ ಮೊಕ್ಕಾಂ ಮಾಡಿದ್ದೆ. ಅಷ್ಟೇ ಅಲ್ಲ, ಅವರ ಸ್ಕೂಟರನ್ನೂ ನಮ್ಮದೇ ಎಂಬಂತೆ ಬಳಸಲೂ ಕೊಟ್ಟಿದ್ದರು.

    ಗೋವಾದಲ್ಲಿ ನನಗೆ ಮೊದಲ ಬಾರಿಗೆ ಸದಾಶಿವ ಚಿಕ್ಕಪ್ಪನ ಸಿನೆಮಾ ಮತ್ತು ಫೋಟೋಗ್ರಫಿ ಆಸಕ್ತಿಯ ಒಳ್ಳೇ ಪರಿಚಯವೂ ಆಯ್ತು. ಈಚೆಗೆ ನನ್ನ ಮೊದಲ ಪುಸ್ತಕ - ‘ಪಡ್ಡಾಯಿ ಚಿತ್ರ ಕಟ್ಟಿದ ಕಥೆ, ಚಿತ್ರ ಕಥೆ’, ಬಂದಾಗ, ಎರಡೇ ದಿನದಲ್ಲಿ ಓದಿ, ಮನಸ್ಸು ತುಂಬಾ ಒಳ್ಳೆಯ ಮಾತು ಹೇಳಿದ್ದರು. ಆ ಕುರಿತು ಅವರು ನನ್ನೊಂದಿಗೆ ವಾಟ್ಸ್ ಆಪ್ ಮೂಲಕ ನಡೆಸಿದ ಸಂಭಾಷಣೆಯೊಂದನ್ನು ನಾನು ಇನ್ನೂ ಇಟ್ಟುಕೊಂಡಿದ್ದೇನೆ. ಅದರ ಕೆಲವು ಸಾಲು ಇಲ್ಲಿವೆ ನೋಡಿ. "ಅಭಯ ’ಪಡ್ಡಾಯಿ’ ಪುಸ್ತಕ ನನ್ನನ್ನು ಓದಿಸಿಕೊಂಡು ಹೋಯಿತು .. ಓದುತ್ತಾ ಹೋದ ಹಾಗೇ ನನ್ನನ್ನು ಮುಖ್ಯವಾಗಿ ಕಾಡಿದ್ದು ಓಹೋ ಈ ವಿಷಯವನ್ನು ನಾನು ಸಿನೆಮಾದಲ್ಲಿ ಗಮನಿಸಲಿಲ್ಲವಲ್ಲ ಇನ್ನೊಮ್ಮೆಯಾದರೂ ನೋಡಬೇಕಲ್ಲ ಎಂದು. ಈ ಚಿತ್ರಕಥೆಯ ಮೂಲವೂ ಪಾಶ್ಚಿಮಾತ್ಯದಿಂದ ಬಂದಿದೆ ! ಒಟ್ಟಾರೆ ಒಂದು ಅಮೂಲ್ಯ ಪ್ರಸ್ತುತಿ ಆದರೆ ಈಗ ಸಿನೆಮಾವನ್ನು ಇನ್ನೊಂದು ಬಾರಿಯಾದರೂ ನೋಡಬೇಕೆಂಬ ಇಚ್ಛೆಯಾಗಿದೆ. ಶೀಘ್ರವೇ ಈ ಅವಕಾಶ ಲಭ್ಯವಾಗಲಿ." ವಿಚಿತ್ರ ಸಂದರ್ಭಗಳಿಂದಾಗಿ, ಚಿಕ್ಕಪ್ಪ ಮತ್ತೆ ನನ್ನ ಸಿನೆಮಾ ನೋಡಲಾಗಲಿಲ್ಲ ಎನ್ನುವ ಬೇಸರ ನನ್ನಲ್ಲಿ ಉಳಿದಿದೆ. ನಿನ್ನ ಮುಂದಿನ ಕೆಲಸಕ್ಕೆ ಎದುರು ನೋಡುತ್ತೇನೆ ಎಂದು ಪ್ರೋತ್ಸಾಹದ ನುಡಿ ಹೇಳಿದ್ದರು. ಅದಕ್ಕೆ ಅವರೇ ಉಳಿದಿಲ್ಲವಲ್ಲಾ!

    ನನ್ನ ಪ್ರತಿ ಹೆಜ್ಜೆಗೆ ಸದಾಶಿವ ಚಿಕ್ಕಪ್ಪನ ಪ್ರೀತಿ, ಬೆಂಬಲ ದಟ್ಟವಾಗಿತ್ತು. ಭೇಟಿಯಾದಾಗಲೆಲ್ಲಾ, ಅದು ವ್ಯಕ್ತವಾಗುತ್ತಿತ್ತು. ಎಲ್ಲ ಸಂಬಂಧಿಕರಂತೆ ಅದು ಬರಿಯ ಒಳ್ಳೇ ಮಾತ್ರಲ್ಲ, ಅವರೊಂದು ಪಾಲು ವಿಶೇಷವೇ ಇರುತ್ತಿತ್ತು. ಸದಾ ನಗುತ್ತಾ, ನನ್ನಂಥಾ ಮಕ್ಕಳಿಗೆ ಸಲಿಗೆ ನೀಡಿ, ಪ್ರೀತಿ ತೋರಿ, ಹಿರಿಯನ ಜವಾಬ್ದಾರಿಯನ್ನು ಚಂದಕ್ಕೆ ನಿಭಾಯಿಸಿದ್ದರು. ನಳಿನಿ ಚಿಕ್ಕಮ್ಮನೂ ಸೇರಿದಂತೆ ದಂಪತಿ, ನನ್ನ ಪ್ರತಿ ಹೆಜ್ಜೆಯಲ್ಲೂ, "ನಮ್ಮ ಅಭಯ" ಎಂದು ನೀಡಿರುವ ಪ್ರೀತಿ, ಬೆಂಬಲಕ್ಕೆ ನಾನು ಚಿರಋಣಿ.

    ಈಗ ಎದುರಾಗಿರುವ ಸಂದರ್ಭ ನನ್ನನ್ನು ಇನ್ನೂ ಕಾಡುತ್ತಲೇ ಇದೆ. ಎಲ್ಲೋ ಕಥೆಗಳಲ್ಲಿ, ವಾರ್ತೆಯಲ್ಲಿ ಓದಿದಾಗ ಆಗುವ ಅನುಭವ ನಮಗೇ, ನಮ್ಮವರಿಗೇ ಆದಾಗ ಅದಕ್ಕೆ ಒಂದು ವಿಚಿತ್ರ ಕಥೆಯಂಥಾ ಭಾವ ಮೂಡುತ್ತದೆ. ಇದನ್ನು ಹೇಗೆ ಎದುರಿಸಬೇಕು ಎಂದು ನಾವು ಸಿದ್ಧವೇ ಆಗಿರುವುದಿಲ್ಲ. ಇದು ನೇರ ಮಕ್ಕಳಾಗಿರುವ ರಂಜನ್, ಚೈತ್ರಾ ಮತ್ತು ಚಿಕ್ಕಮ್ಮನನ್ನು ಎಷ್ಟು ಕಾಡಬಹುದು ಎನ್ನುವ ಕಲ್ಪನೆಯೂ ನನಗೆ ನಿಲುಕುವುದಿಲ್ಲ.

    ಬ್ಯಾಂಕ್ ಸೇವಾವೃತ್ತಿಯಲ್ಲಿ ಅಖಿಲ ಭಾರತ ಸುತ್ತಿದವರು ಇವರು. ಆದರೆ ನಿವೃತ್ತಿಯ ಸಮೀಪದಲ್ಲಿ ಮಾತ್ರ ಸಿಕ್ಕ ಸ್ಥಳ ಬದಲಾವಣೆಯ (ವರ್ಗ) ಸನ್ನಿವೇಶದಿಂದ ಚಿಕ್ಕಪ್ಪನಿಗೆ ತುಸು ಖಿನ್ನತೆ ಕಾಡಿತ್ತು ಎಂದು ತಿಳಿದಾಗ, ಛೇ! ಸದಾಶಿವ ಚಿಕ್ಕಪ್ಪನಿಗೆ ಇದು ಹೇಗೆ ಸಾಧ್ಯ?! ಎಂದು ಅಚ್ಚರಿ ಪಟ್ಟಿದ್ದೆ. ಈಗ ನಡೆದ ಘಟನೆಯಂತೂ ತೀರಾ ನಂಬಲೇ ಆಗದಿರುವ ವಿಷಯ. ಸದಾ ಹಸನ್ಮುಖಿ, ಯಾರಿಗೂ ಕೇಡು ಬಯಸದ, ರಸವತ್ತಾದ ಮಾತಿಗೆ ಸದಾ ಸಿದ್ಧವಿದ್ದ, ಹಲವು ಆಸಕ್ತಿಗಳುಳ್ಳ ಮನುಷ್ಯ ಸದಾಶಿವ ಚಿಕ್ಕಪ್ಪ. ಅವರಿಗೆ ಹೀಗೆಲ್ಲ ಆಗೋದು ಸಾಧ್ಯವೇ ಇಲ್ಲ ಎಂದು ಅನಿಸಿತ್ತು. ಆದರೆ, ಮನುಷ್ಯನ ಮನಸ್ಸು - ನಿಸರ್ಗದಲ್ಲಿ ನಾವು ಅರ್ಥ ಮಾಡಿಕೊಳ್ಳದೇ ಇರುವ ಕೋಟಿ ವಿಷಯಗಳಲ್ಲಿ ಇದೂ ಒಂದು. ಹಾಗೇ ಅದಕ್ಕೆ ಕಾಣುವ ಕಾರಣಗಳೂ, ವಿಚಿತ್ರವೇ ಸರಿ. ಒಟ್ಟಿನಲ್ಲಿ, ಈಗಿನ ಪರಿಸ್ಥಿತಿಗೆ ನಾವು ಒಗ್ಗಿಕೊಳ್ಳಬೇಕು ಎನ್ನುವುದಷ್ಟೇ ನಿಜ. ಅವರ ಆದರ್ಶದಲ್ಲಿ ನಡೆಯುವ ಪ್ರಯತ್ನವನ್ನಷ್ಟೇ ನಾನು ಮಾಡಬಲ್ಲೆ.

    ReplyDelete