22 March 2020

ಬಿದಿರ ಸೇತುವೆ ಸರಣಿ.......

ಮೇಘಾಲಯದ ಗಿರಿಕೊಳ್ಳಗಳಲ್ಲಿ - ೫ 

ಮೋಡಗಳ ನಾಡಿನ ವಾಹ್ಖೆನ್ ಹಳ್ಳಿಯ ಮಹಾಬಂಡೆ, ಮೌರಿಂಗ್ ಖಾಂಗ್, ಜಗದೇಕ ಬಂಡೆಸುಂದರಿಯನ್ನು ಪ್ರೇಮಿಸಿದ. ಆದರೆ ಎಂದಿನಂತೆ ಬಂಡೆಖಳನೊಬ್ಬ ಸುಂದರಿಯನ್ನು ತನ್ನ ವಶಮಾಡಿಕೊಂಡ. ಪರಮಸಾಹಸಿಯಾದ ಮೌರಿಂಗ್ ಖಾಂಗ್ ವೀರಪಂಥವನ್ನೇ ಆಯ್ದುಕೊಂಡ. ಸಂಭವಿಸಿದ ಭೀಕರ ಸಂಗ್ರಾಮದಲ್ಲಿ ಮೌರಿಂಗ್ಖಾಂಗ್ ಎಡಗೈ ಕಳೆದುಕೊಂಡರೂ ಖಳನ ರುಂಡ ಹಾರಿಸಿ, ವಿಜಯಮಾಲಿಕೆಯೊಂದಿಗೆ ಪ್ರಿಯತಮೆಯನ್ನು ವರಿಸಿದ. ಅಂದಿನಿಂದ ಇಂದಿನವರೆಗೂ ಸದಾ ಅಬ್ಬರದ ಆನಂದಘೋಷವಿಕ್ಕುವ ಉಮ್ರ್ಯೂ ನದಿಯ ತಟದಲ್ಲಿ ನಿಂತು, ಪರ್ವತ ಮಾಂಡಲಿಕರ ಸಭೆಗೊಟ್ಟು, ಬಂಡೆಗಳ ಮಹಾರಾಜನಾಗಿ ಮೌರಿಂಗ್ ಖಾಂಗ್ ಮೆರೆದಿದ್ದಾನೆ. ಆತನನ್ನು ತಾಗಿದಂತೆ
ನಿಂತ ವಿಜಯವಧು ಬಂಡೆ ಸುಂದರಿ, ಅನತಿದೂರದಲ್ಲಿ ರುಂಡ ಕಳಚಿದ ಬಂಡೆಖಳನ ಕಳೇವರ, ಇಂದಿಗೂ ಪ್ರೀತಿಯ ಅಮರತ್ವವನ್ನೂ ಶೌರ್ಯಗಾಥೆಯನ್ನೂ ಸಾರುತ್ತಲೇ ಇದ್ದಾರೆ. ವಾಹ್ಖೆನ್ನಿನ ಹುಲು ಮಾನವರು, ತಲೆತಲಾಂತರದಿಂದ ಹೊಳೆ, ಬಂಡೆ, ಗಿರಿ, ಕಾನು ಎಂದು ಜಾಡು ಮೂಡಿಸುತ್ತ ನಡೆದೇ ಈ ಬಂಡೆರಾಜನಿಗೆ ಗೌರವ ಸಲ್ಲಿಸುತ್ತಲೇ ಬಂದಿದ್ದಾರೆ. ಕಾಲದ ಮಹಿಮೆಯಲ್ಲಿ ವಿಶ್ವಪ್ರಸರಣಗೊಂಡ ಕತೆ, ಎಲ್ಲೆಲ್ಲಿಂದಲೋ ಚಾರಣಿಗರ ಸಾಹಸ ಕಾಣಿಕೆಯನ್ನೂ ಸಲ್ಲಿಸುವುದಿತ್ತು. ಆದರೆ ಕಳೆದೊಂದೆರಡು ವರ್ಷಗಳ ಹಿಂದೆ, ಸ್ಥಳೀಯ ಪ್ರಜಾವರ್ಗ (ಹಳ್ಳಿಜನ) ತಮಗೆ ಪರಂಪರೆಯಲ್ಲಿ ಸಿದ್ಧಿಸಿದ ಸೇತುಬಂಧನ ವಿದ್ಯಾ ಬಲದಲ್ಲಿ, ಬಂಡೆ ರಾಜನ ಸಂದರ್ಶನಕ್ಕೆ ಕಲ್ಪಿಸಿದ ನೂತನ ವೈಶಿಷ್ಟ್ಯವೇ - ಬಿದಿರ ಸೇತುವೆ ಸರಣಿ ಅಥವಾ ಇಂಗ್ಲಿಷಿನಲ್ಲಿ ಹೇಳುವಂತೆ ಬ್ಯಾಂಬೂ ಟ್ರಯಲ್!

ದಾರಿ ಕೊನೆಗೊಂಡಲ್ಲಿ, ನಾವು ಕಾರಿಳಿದಲ್ಲಿ, ಒಮ್ಮೆಗೆ ಎರಡೋ ಮೂರೋ ಮನೆಯಷ್ಟೇ ತೋರುವ ಪುಟ್ಟ ಹಳ್ಳಿ ವಾಹ್ಖೆನ್. ಮೂಲತಃ ಊರ ಸುಮಾರು ಇಪ್ಪತ್ತೇ ಉತ್ಸಾಹಿಗಳು ಕತ್ತಿ, ಮೊಳೆ, ಸುತ್ತಿಗೆ, ಹಗ್ಗ, ಗುದ್ದಲಿ, ಪಿಕ್ಕಾಸುಗಳಿಂದಷ್ಟೇ ಸಜ್ಜಾಗಿ ಸೇತುಬಂಧಕ್ಕಿಳಿದಿದ್ದರಂತೆ. ಉತ್ಸಾಹ ಸಾಂಕ್ರಾಮಿಕವಾಗಿ, ಸೇತು ಸರಣಿ ಪೂರ್ಣಗೊಳ್ಳುವಾಗ ಎಂಬತ್ತರವರೆಗೂ ಜನ ಕೈ ಸೇರಿಸಿದ್ದರಂತೆ. ಟಿಕೆಟ್ ಅಡ್ಡ, ಚಾ ದುಕಾನು, ಮನೆ ಮುಪ್ಪುರಿಕೊಂಡ ಮರದ ಪುಟ್ಟ ಅಟ್ಟಳಿಗೆಯಲ್ಲಿ ತಲಾ ಐವತ್ತು
ರೂಪಾಯಿಯ ಟಿಕೆಟ್ ಖರೀದಿಸಿ ಹೊರಟೆವು. ಮಿಳ್ಳೆ ಕಣ್ಣಿನ ಹಿರಿಯನೊಬ್ಬ ನಮಗೆ ದಾರಿ ತೋರಿಸುವಂತೆ ಮುಂದಿದ್ದ. "ಗೈಡಾ" ಎಂದು ಕೇಳಿದಾಗ ಕಿರು ನಗೆ ಮಾತ್ರ ಕೊಟ್ಟ! ಎದುರೇ ಕಾಣುತ್ತಿದ್ದ ವಿಸ್ತಾರ ಕಣಿವೆಯತ್ತ ಇಳಿದೆವು. 

ಎರಡೂ ಪಕ್ಕದಲ್ಲಿ ಹಿಡಿಸೂಡೀ ಹುಲ್ಲಿನ ಹಸಿರು, ಆಚೆ ಕಿತ್ತಳೆ ಬಾಳೆಯಾದಿ ಅನ್ಯ ಕೃಷಿ ನಡೆದಿದ್ದ ಗುಡ್ಡೆ. ಕಾಲ್ದಾರಿ ಸಣ್ಣದಾಗಿ ವಾಲಾಡಿದರೂ ನೇರ ಇಳಿದಿತ್ತು. ತೀರಾ ಅಗತ್ಯವಿದ್ದಲ್ಲಿ ಕಲ್ಲೋ ಕೋಲೋ ಅಡ್ಡ ಹುಗಿದು ಮೆಟ್ಟಿಲು ಮಾಡಿದ್ದರೂ ನಿರಂತರ ಬಳಕೆಯಲ್ಲಿ ದೃಢವಾದ ಸವಕಲು ಜಾಡು. ಹತ್ತು ಮಿನಿಟಿನಲ್ಲಿ ಗುಂಡು ಕಲ್ಲುಗಳ ಹರಗಣದ ನಡುವೆ, ಇಂದು ದುರ್ಬಲವಾಗಿ ಹರಿವ, ಸಾಕಷ್ಟು ಅಗಲ ಪಾತ್ರೆಯುಳ್ಳ ತೋಡಿನಂಚಿಗೆ ಇಳಿನಡೆ ಮುಗಿದಿತ್ತು. 

ತೋಡು ದಾಟುವಲ್ಲೇ ಹಳ್ಳಿಗರ ಬಿದಿರ ಸೇತುವೆ ರಚನಾ ಕೌಶಲದ ಪ್ರಥಮ
ಮತ್ತು ಸ್ಪಷ್ಟ ಚಿತ್ರ ನಮಗೊದಗಿತ್ತು. ಸಹಜವಾಗಿ ಎದುರಾಗುವ ಬಂಡೆಯನ್ನೋ ಮೇಲೆ ಚಾಚಿದ ಜೀವಂತ ಮರದ ಕೊಂಬೆಯನ್ನೋ ಇದ್ದಂತೆ ಆಧಾರಕ್ಕಷ್ಟೇ ಬಳಸಿ, ಕೊರಕಲಿನ ಏರಿಳಿತವನ್ನು ಸಮ ನಡಿಗೆಯ, ಇಕ್ಕೆಲಗಳಲ್ಲಿ ರಕ್ಷಣಾ ಕಟ್ಟಿನ ಸುಲಭ ಸೇತು ಮಾಡಿದ್ದರು. ಇದಕ್ಕೆ ಇಡಿ ಇಡೀ ಬಿದಿರ ಕೋಲುಗಳನ್ನು, ಬಲ ಬರುವಷ್ಟೂ ಸಂಖ್ಯೆಗಳಲ್ಲಿ, ಅಗತ್ಯದ ಬಾಗು ತಿರುಚುಗಳೊಡನೇ ಬಳಸಿದ್ದರು. ಅಗತ್ಯ, ಆಯಕಟ್ಟಿನ ಜಾಗಗಳನ್ನು ನೋಡುತ್ತ ಬಹುತೇಕ ಹಗ್ಗದ ಕಟ್ಟುಗಳಲ್ಲಿ, ಆಣಿ ಬಡಿದಾದರೂ ಬಿಗಿ
ಮಾಡಿದ್ದರು. ತುಂಡು ಅಡ್ಡ ಬಿದಿರುಗಳು, ಅವಶ್ಯವಿದ್ದಲ್ಲಿ ಸೇತುವಿನುದ್ದಕ್ಕೆ ಇತರ ಕಾಡು ಕಂಬಗಳನ್ನೂ ಬಳಸಿದ್ದುಂಟು. ಇವು ಕಮರಿಯ ಎರಡು ದಂಡೆಗಳನ್ನಷ್ಟೇ ಆಧರಿಸುವ ಸರಳ ಪಾಲಗಳ ತತ್ತ್ವವನ್ನು ಮೀರಿ, ಹಗುರ ಏರು ಅಥವಾ ಇಳಿಜಾರು, ನೇರ ಏಣಿಯಂತೆ, ಓರೆ, ತಿರುವುಮುರುವುಗಳ ಉದ್ದಕ್ಕೂ ಸಾಗುವುದನ್ನು ಮುಂದೆ ಧಾರಾಳ ಕಂಡೆವು. ಸಂದರ್ಭಕ್ಕೆ ತಕ್ಕಂತೆ ನಾಲ್ಕು ಹೆಜ್ಜೆಯ ಸೇತು ಅಥವಾ ನೂರಡಿ ಉದ್ದಕ್ಕೂ ಸೇತು ಇದ್ದರೆ ಆಶ್ಚರ್ಯವೇನೂ ಇಲ್ಲ. ಈ ರಚನೆಗಳು ಬರಿಯ ಸೇತಲ್ಲ, ಮೂರೂ ಬದಿಯಿಂದ
ಆವರಿಸುವ ಬಿದಿರ ಹಂದರಗಳೇ ಆಗಿವೆ. ಈ ರಚನೆಗಳಲ್ಲಿ ನಾವು ಕಲ್ಪಿಸದ ಎತ್ತರ ಮತ್ತು ಅಂತರಗಳನ್ನು ಸಾಧಿಸುವಲ್ಲಿ, ಸಾಮಾನ್ಯವಾಗಿ ಊಹಿಸದ ಮೂಲಗಳನ್ನೆಲ್ಲ ತುಂಬ ಸರಳ ಎನ್ನುವಂತೆ ಬಳಸಿದ್ದನ್ನು ಕಾಣುವಾಗ, ಈ ಬೆಟ್ಟಗಾಡಿನ ಮಂದಿ ಸೇತು-ಪ್ರವೀಣ ಖ್ಯಾತಿಯನ್ನು ಸುಮ್ಮನೇ ಪಡೆದಿಲ್ಲ ಎಂದು ಹೊಗಳದವನಿಲ್ಲ. (ನೆನಪಿರಲಿ, ಜೀವಂತ ಬೇರ ಸೇತೂ ಇವರದೇ ಕೊಡುಗೆ!) ಯಾವ್ಯಾವುದೋ ಕೋನದಲ್ಲಿ ಬಂಡೆ, ನೆಲದ ಮೇಲೆ ಬಿದಿರೋ ಕಾಡಕಂಬವೋ ಕಿಸಗಾಲಿಟ್ಟು ನಿಂತೋ ಎಲ್ಲೋ ಬಾಗಿದ ಮರದ ಕೊಂಬೆಗೇ
ನೇತು ಬಿದ್ದೋ ತೀರಾ ಅಗತ್ಯ ಬಂದಲ್ಲಿ ಮಣ್ಣ ನೆಲದಲ್ಲಿ ಗುಂಡಿ ತೆಗೆದು ತುದಿ ಹೂತು ಹಾಕಿಯೋ ಆಧಾರ ಕಂಡಿದ್ದಾರೆ. ಯಾವುದೇ ಮಡಿವಂತಿಕೆ ಇಟ್ಟುಕೊಳ್ಳದೆ ಅನಿವಾರ್ಯವಾದ ಎಡೆಗಳಲ್ಲಿ ಈ ಕಾಲಕ್ಕೆ ತಕ್ಕಂತೆ, ಕನಿಷ್ಠ ಬಂಡೆಗಳನ್ನು ಕೊರೆದು, (ಜೀವಂತ ಬೇರು ಸೇತುವೆಗಳಲ್ಲೂ ಸೇರಿಸಿಕೊಂಡಂತೆ) ಉಕ್ಕಿನ ಸರಳುಗಳನ್ನೇ ಹುಗಿದು ಬಂದೋಬಸ್ತು ಸಮರ್ಪಕವಾಗಿಸಿದ್ದಾರೆ. ಇಷ್ಟಾಗಿಯೂ ಎಲ್ಲೂ ನಿರರ್ಥಕವಾಗಿ, ಅಂದರೆ ಅಲಂಕಾರಕ್ಕಾಗಿಯೋ ಸೇತುವೆ ಸರಣಿಗಳನ್ನೇ ಕೊಡಬೇಕು ಎಂಬ ಹಠಕ್ಕಾಗಿಯೋ
ಸೇತುವೆಗಳನ್ನು ಮಾಡಿಲ್ಲ. ಸರಣಿಯಲ್ಲಿ ಸಹಜವಾಗಿ ಒದಗುವ ನೆಲವಿದ್ದಲ್ಲೆಲ್ಲ ಸವಕಲು ಜಾಡುಗಳನ್ನೇ ಬಲಪಡಿಸಿದ್ದಾರೆ. ಇನ್ನು..... 

ಸೇತುವೆ ಸರಣಿಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಜವಾಬ್ದಾರಿಯಲ್ಲೂ ಅಂದರೆ ಇಂಥ ಕಠಿಣ ಪರಿಸ್ಥಿತಿಗಳನ್ನು ನಿತ್ಯ ಕಾಣದ ಬಳಕೆದಾರರ ಭದ್ರತೆ ದೃಷ್ಟಿಯಿಂದಲೂ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಸರಣಿ ಎಲ್ಲಾ ಋತುಮಾನಗಳಲ್ಲೂ ಏಕ ರೀತಿಯ ಬಳಕೆಗೊಗ್ಗುವಂತೆ ಅಡ್ಡ ಸಲಕೆಗಳು, ಗಟ್ಟಿ ಕೈ ತಾಂಗುಗಳು, ಮುಂದುವರಿದು ರಕ್ಷಣಾ ಬೇಲಿಗಳನ್ನೂ ಧಾರಾಳ ಒದಗಿಸಿದ್ದಾರೆ. ‘ಬ್ಯಾಂಬೂ ಟ್ರಯಲ್’ ಎನ್ನುವಲ್ಲಿನ ಬಿದಿರು ಇಲ್ಲಿನ ಪ್ರಧಾನ ಪಾತ್ರಿ ಮಾತ್ರ. ಸಣ್ಣ ಒಲೆತದ ಲಯ ಹಿಡಿದು ಹೆಜ್ಜೆ ಹೆಜ್ಜೆಯನ್ನೂ ತೂಗಿ ಇಡುತ್ತ, ಬಿದಿರ ಪಂಜರದ ಎಡೆಗಳಲ್ಲಿ ಇಣುಕುವ ಪಾತಾಳದೃಶ್ಯದ ಭಯ ಮೀರುತ್ತ, ಸುಮಾರು ಎರಡು ಕಿಮೀ ಉದ್ದದ ಚಾರಣ ಪೂರೈಸುವ ಸಂಕಲ್ಪ ಗಟ್ಟಿಯಿದ್ದ ಯಾರಿಗೂ ನಿರಪಾಯವಾಗಿ, ಬಿದಿರ ಸೇತು ಸರಣಿ
ರೋಮಾಂಚಕ ಚಾರಣಾನುಭವ ಕೊಡುವುದರಲ್ಲಿ ಸಂದೇಹವೇ ಇಲ್ಲ. ಇದರಲ್ಲಿ ಸಾಗುವ ಆನಂದವಾದರೂ ಎಂಥದ್ದೂ ಎಂದರೇ........ 

ನಮಗೆ ಹಳ್ಳಿಯಿಂದಿಳಿದಂತೆ ಸಿಗುವ ಸಣ್ಣ ತೋಡಿನ ಎದುರು ದಂಡೆಯ ಬೆಟ್ಟದ ಓರೆಯಲ್ಲಿ ಈ ಸೇತು ಸರಣಿ ಸಾಗುತ್ತದೆ. ಅಲ್ಲೇ ಸ್ವಲ್ಪ ಮುಂದೆ ಜಾಡಿನಿಂದ ಹತ್ತಿಪ್ಪತ್ತಡಿ ಕೆಳಗೆ ಎದುರಿನಿಂದ ಹರಿದು ಬರುವ ಸ್ವಲ್ಪ ದೊಡ್ಡದೇ ಇನ್ನೊಂದು ಹೊಳೆಯನ್ನು ನಾವು ಕಾಣುತ್ತೇವೆ. ಅಲ್ಲಿಂದ ಮುಂದೆ ಸೇತು ಸರಣಿ, ನಿಜ ಏರುಶ್ರಮ ಹೆಚ್ಚು ಅನುಭವಕ್ಕೆ ಬಾರದಂತೆ, ನಮ್ಮನ್ನು ಕ್ರಮವಾಗಿ ಏರುದಿಕ್ಕಿನಲ್ಲೇ ಶ್ರೇಣಿಯ ನೆತ್ತಿಯತ್ತ ಸಾಗಿಸುತ್ತದೆ. ಜತೆಗೇ ಸಹಜವಾಗಿ ಕಾಲಡಿಯ ಕಣಿವೆಯ ಆಳ, ಅಲ್ಲಿನ ಕಾಡು, ಬಂಡೆ ಝರಿಗಳ ನೋಟ ಬದಲಾಗುತ್ತ, ದಿಗಂತ ವಿಸ್ತರಿಸುತ್ತಾ ಹೋಗುತ್ತದೆ. ‘ಭಯದ ಮೀಟರ್’ ಎಂದೊಂದಿದ್ದರೆ, ಮಾಪಕ ಮುಳ್ಳು ಅಪಾಯದ ಕೆಂಬಣ್ಣದಲ್ಲೇ ಏರುತ್ತಿರುತ್ತದೆ. ಅದೇ ಮಳೆಗಾಲದಲ್ಲಾದರೋ (ಯೂ ಟ್ಯೂಬಿನಲ್ಲಿ ಹಿಂದಿನವರು ಹಾಕಿದ ಕೆಲವು ವಿಡಿಯೋಗಳಲ್ಲಿ ಕಾಣಬಹುದು) ನೆಲದ ಜಾಡುಗಳು ನೀಡುವ ಜಾರುವ ಅನುಭವ (ಕಲ್ಲು, ಅಡ್ಡಗಟ್ಟೆ ಸರಿಯಾಗಿಯೇ
ಕೊಟ್ಟಿದ್ದಾರೆ), ಬಂಡೆ ದರೆಗಳ ಮರೆಯಲ್ಲಿ ಸಾಗುವಾಗ ತಲೆಗೇ ಸುರಿವ ಕಿರು ಜಲಧಾರೆಗಳ ತಾಡನ, ಎಲ್ಲಂದರಲ್ಲಿ ಕಣ್ಣಾಮುಚ್ಚಾಲೆಯಾಡುವ ಮಂಜು, ಮೋಡಗಳ ಸಂಚಾರ ಕಲ್ಪಿಸಿದರೆ, ಇಂದಿನ ಧೈರ್ಯಸ್ಥರ ಎದೆಯೂ ನಡುಗಬಹುದು! ಈ ಹಿಂದೆ ಬಳ್ಳಿ ಸೇತುವೆಗಳಲ್ಲಿದ್ದಂತೇ ಇಲ್ಲೂ ಹಲವು ದೀರ್ಘ ಸೇತುಗಳಲ್ಲಿ, ಒಮ್ಮೆಗೆ ಹೆಚ್ಚು ಜನ ಸಾಗದಂತೆ ಎಚ್ಚರಿಕೆ ಫಲಕಗಳನ್ನು ಹಾಕಿದ್ದಾರೆ. ಸೇತುವೆಗಳು ಸಹಜವಾಗಿ ಕಿರುಗುಟ್ಟುವಾಗ, ನಮ್ಮ ಅದೆಷ್ಟು ಮೆಲುನಡೆಯೂ ತಡವರಿಸುತ್ತದೆ. ತೊಟ್ಟಿಲ ತೂಗಿನ ಅನುಭವ ಕೊಡುವಾಗ, ಮೆಲುಗಾಳಿ ತೀಡುವಾಗ, ಸಹಜ ಶೀತಲ ವಾತಾವರಣದಲ್ಲಿ ಮಧ್ಯಾಹ್ನದ ಬಿಸಿಲಾದರೂ ಕೇವಲ ಬೆಚ್ಚನ್ನ ಭಾವ ಮೂಡಿಸುವಾಗ ನಾವೆಲ್ಲಾ ಹೇಳಿದ್ದೇ ಹೇಳಿದ್ದು - ಅದ್ಭುತ ಅದ್ಭುತ! 

ನಮ್ಮೊಡನೆ ಮಾರ್ಗದರ್ಶಿಯಂತೆ ಹೊರಟ ಪಿಳ್ಳೆಗಣ್ಣ, ಭಾಷಾಬಂಧಿ!
(ಕ್ಷಮಿಸಿ, ಅವನ ಹೆಸರನ್ನು ಹಲವು ಸಲ ಕೇಳಿಕೊಂಡರೂ ನೆನಪಿಡುವುದು ಆಗಲೇ ಇಲ್ಲ!) ನಮ್ಮ ಹೆಚ್ಚಿನ ಮಾತುಗಳು ಅವನಿಗೆ ಅರ್ಥವೇ ಆಗುತ್ತಿರಲಿಲ್ಲ. ಆದರೆ ಎಲ್ಲ ಮಾತಿಗೂ ಮುಗ್ದ ಕಿರು ನಗುವಿನ ಪ್ರತಿಕ್ರಿಯೆಯನ್ನಂತೂ ಕೊಡುತ್ತಲೇ ಇದ್ದ. ಮೊದಲ ತೋಡು ದಾಟಿ, ಎದುರು ಹೊಳೆ ಕಾಣುವಲ್ಲಿ, ಒಂದು ಗೇಟಿನಂತ ರಚನೆ ಬಂದಾಗ ಆತ ಒಮ್ಮೆಲೇ ತಿರುಗಿ ನಿಂತು "ಟಿಕೆಟ್ ಟಿಕೆಟ್" ಎಂದು ನಮ್ಮಲ್ಲಿದ್ದ ಟಿಕೆಟ್ಟುಗಳನ್ನು ಸಂಗ್ರಹಿಸಿಕೊಂಡಾಗ ತಿಳಿಯಿತು, ಅಂವ ಉಸ್ತುವಾರಿ ಸಚಿವ! 

ತೋಡು ದಾಟುವಲ್ಲಿಗೇ ಸಾವಿತ್ರಿಯವರ ಭಯ ಮೇಲುಗೈ ಸಾಧಿಸಿತು. ಅವರು ಗಣಪತಿ ಭಟ್ಟರಿಗೆ ಮುಂದುವರಿಯಲು ಬಿಟ್ಟು, ಕಾರಿಗೆ ಮರಳಿದ್ದರು. ಗಣಪತಿ ಭಟ್ಟರು ಕಾಲಮಿತಿ ಆಟದವರಂತೆ, ನಮ್ಮನ್ನು ಹಿಂಬಿಟ್ಟು, ತಮ್ಮ ನಡೆಗಳನ್ನು ತುಸು ಚುರುಕಾಗಿಸಿದರು. ನಾವು ಸುಮಾರು ಒಂದೂ ಕಾಲು
ಗಂಟೆಯ ಚಾರಣ ಮುಗಿಸುವಲ್ಲಿ ಒಂದು ಬಾರೀ ಮುಂಚಾಚಿಕೆ ಬಂಡೆ
ನೆತ್ತಿ ತಲಪಿದ್ದೆವು. ಅಲ್ಲಿ ನೆತ್ತಿಯ ತಿರುವು ತೆಗೆಯುತ್ತಿದ್ದಂತೇ ಒಮ್ಮೆಗೆ ನಮ್ಮ ಅಂತಿಮ ಲಕ್ಷ್ಯ ಕಾಣಿಸಿತು. ನಾವು ಏರಿ ಬಂದ ಶ್ರೇಣಿ ಬಲ ತಿರುವು ತೆಗೆದಿತ್ತು. ಎದುರಿನ ಎರಡು ಸುದೂರ ಗಿರಿಶ್ರೇಣಿಗಳು, ಇತ್ತ ಮುಂದುವರಿಯಲು ನಿರಾಕರಿಸಿ ಹೊರಳಿದ್ದ ನಮ್ಮ ಶ್ರೇಣಿಯೂ ರೂಪಿಸಿದ ಆಳದ ಕಮರಿಯಯಿಂದ ಒಂದು ಭಾರೀ ಕೋಡುಗಲ್ಲು ಎದ್ದಿತ್ತು. ಹಲವು ವರ್ಷಗಳ ಹಿಂದೆ ಉದಕಮಂಡಲದ ಭವಾನಿ ಕಣಿವೆಯಲ್ಲಿ ಕಂಡ ರಂಗನಾಥ ಸ್ತಂಭವನ್ನೇ (ಚಿಟಿಕೆ ಹೊಡೆದು ನೋಡಿ) ನೆನಪಿಸುವಂತೆ ಇಲ್ಲಿ ನಿಂತಿತ್ತು -
ಮೇಘಾಲಯ ವಲಯ ದಿಗ್ಗಜ, ಸುಲಭ ಅಳತೆಗೆ ನಿಲುಕದ ದೈತ್ಯ, ಕಥನದ ಆದಿಯಲ್ಲೇ ಬಂದ ಮಹಾವೀರ ಮೌರಿಂಗ್ ಖಾಂಗ್! ವೀರಪಣದಲ್ಲಿ ಎಡಗೈ ಕಳೆದುಕೊಂಡೂ ಖಳನ ಭಂಜಿಸಿ, ಪ್ರಿಯತಮೆಯನ್ನು ಕೂಡಿ, ಶಿಖರ ಸಾಮಂತರ ನಡುವೆ ಯುಗಯುಗಳಾಚೆಗೂ ಸಭೆ ಕೊಟ್ಟೇ ಇರುವವ, ಕೊಳ್ಳಾದಾಳದಿಂದ ನಿತ್ಯ ನಿರಂತರ ಉಮ್ರ್ಯೂ ನದಿ ಹಾಕುವ ಜಯಘೋಷಲೋಲ, ಬಂಡೆಗಳ ಮಹಾರಾಜನಿಗೆ ನಮ್ಮ ಪರಾಕ್, ಬಹುಪರಾಕ್! ಅದಕ್ಕುತ್ತರವೆಂಬಂತೆ ಆ ಕೊಡಿಯನ್ನು ಆಗಲೇ ಸೇರಿದ್ದ ಗಣಪತಿ ಭಟ್ಟರು ವಿಜಯ ಚಿಹ್ನೆ
ತೋರಿ ಹರ್ಷೋದ್ಗಾರ ಹಾಕಿದರು.


ಬಂಡೆಗಳ ರಾಜನ ದರ್ಶನದ ಪುಳಕವನ್ನು ನಾವು ಅನುಭವಿಸುತ್ತ ವಿಶ್ರಮಿಸಿದ್ದಂತೆ, ಭಟ್ಟರು ವಾಪಸು ಬಂದಿದ್ದರು. ಅವರು ನಾವು ಬೆಳಿಗ್ಗೆ ಅಂದಾಜಿಸಿದಂತೇ ಸಾವಕಾಶವಾಗಿ ಒಂದು ಗಂಟೆಯೊಳಗೇ ಎಲ್ಲ ಪೂರೈಸಿದ ಸಂತೋಷ ಹಂಚಿಕೊಂಡರು. ಇನ್ನು ಸುಲಭವಾಗಿ ಸಂಜೆಯೊಳಗೆ ಶಿಲಾಂಗ್ ಸೇರಿಕೊಳ್ಳುತ್ತೇನೆಂದೂ ಹೇಳಿ, ಎರಡು ದಿನಗಳ ಮಟ್ಟಿಗೆ ನಮಗೆ ವಿದಾಯ ಹೇಳಿದರು. ಅವರು ಕಾರಿನತ್ತ, ನಾವು ಕೋಡುಗಲ್ಲಿನತ್ತ ಚಾರಣ ಮುಂದುವರಿಸಿದೆವು. 

ನೀಲಗಿರಿ ಶ್ರೇಣಿಯ ರಂಗನಾಥ ಸ್ತಂಭದಂತೇ ಈ ಮಹಾ ಬಂಡೆಯೂ ಐತಿಹಾಸಿಕ ಕಾಲದಲ್ಲೆಲ್ಲೋ ನಾವು ನಿಂತ ಶಿಖರ ಶ್ರೇಣಿಯಿಂದ ತುಸುವೇ ಪ್ರತ್ಯೇಕ ಸರಿದದ್ದಿರಬೇಕು. ಹಾಗಾಗಿ ಬಂಡೆಯ ನೆತ್ತಿಯಿಂದ ಸುಮಾರು ಐವತ್ತರ್ವತ್ತಡಿ ಆಳದಲ್ಲಿ, ಅದಕ್ಕೂ ನಮ್ಮ ನೆಲಕ್ಕೂ ಸಣ್ಣ ಭೂಭಾಗ ಇಂದೂ
ಸೇರಿಕೊಂಡೇ ಇದೆ. ಅದನ್ನು ನಮ್ಮ ಸೇತುಪ್ರವೀಣರು, ಬಹಳ ಎಚ್ಚರದ ಬಳಸುದಾರಿಯಲ್ಲಿ ಸಂಪರ್ಕಿಸಿ, ಬಂಡೆಯ ಸೆಜ್ಜದಂಥ ನೆಲೆಗೇರುವಲ್ಲಿ ಬಲು ಉದ್ದದ ಏಣಿಯನ್ನೇ ಹೊಸೆದಿದ್ದಾರೆ. ಭಯ, ಸಂಭ್ರಮಗಳ ಸಮಮಿಶ್ರಣದಲ್ಲಿ, ಎಲ್ಲವನ್ನು ನಾವು ಕ್ರಮವಾಗಿ ದಾಟಿ ಬಂಡೆ ನೆತ್ತಿ ಸೇರಿದೆವು. ಕಾರು ಬಿಟ್ಟಲ್ಲಿಂದ ಸುಮಾರು ಒಂದೂ ಕಾಲು ಗಂಟೆಯನ್ನಷ್ಟೇ ಬಳಸಿದ್ದೆವು. ಆ ದೃಶ್ಯ ವೈಭವಕ್ಕೆ ನನ್ನ ಮಾತಿನ ಮಿತಿ ಹೇರುವುದಿಲ್ಲ. ಚಿತ್ರ, ವಿಡಿಯೋ ತುಣುಕುಗಳನ್ನು ವಿವರಗಳಲ್ಲಿ ನೋಡಿ ಕಿಂಚಿದಾನಂದರಾಗಿ!
(ಪೂರ್ಣಾನಂದರಾಗಲು ನೀವೇ ಅಲ್ಲಿಗೆ ಹೋಗುವ ಪಣ ಇಂದೇ ತೊಡಿ!!) 

ಪಿಳ್ಳೆಗಣ್ಣಿನ ಟಿಕೆಟ್ ಚೆಕ್ಕರ್ ಇಂದು ಬೇರೆ ಪ್ರವಾಸಿಗಳಿಲ್ಲ ಎಂಬಂತೆ ನಮಗೇ ಜತೆಗೊಟ್ಟಿದ್ದ. ಆಗಾಗ ತನ್ನ ಸಂಚಿಯಿಂದ ತುಂಡು ಕಬ್ಬಿಣದ ಪೈಪೊಂದನ್ನು ತೆಗೆದು, ತಾಂಬೂಲ ತುಂಬಿ, ಮೋಟು ಸ್ಕ್ರೂಡ್ರೈವರ್ ಒಂದರಲ್ಲಿ ಕುಟ್ಟುತ್ತ, ತಿರುವುತ್ತ, ಬೇಕೆಂದಾಗ ಬಾಯಿಗಿಕ್ಕಿ ಜಗಿಯುತ್ತಲಿದ್ದ. ಒಂದೆರಡು ಕಡೆ ನಮಗೆ ನಮ್ಮ ಗುಂಪಿನ ಚಿತ್ರ ಬೇಕೆನ್ನಿಸಿ ಕೇಳಿದಾಗ, ಭಾರೀ ಸಂತೋಷದಿಂದಲೇ ನಮ್ಮ ಕ್ಯಾಮರಾ ಹಿಡಿದು ಚಿತ್ರಗ್ರಾಹಿಯಾಗುತ್ತಿದ್ದ. ಎಲ್ಲೋ ಒಂದೆರಡು ಬಾರಿ ಅವನನ್ನೂ ನಮ್ಮ ಚಿತ್ರದ
ಭಾಗವಾಗಬೇಕೆಂದು ಕೇಳಿದ್ದಿತ್ತು. ಆಗೆಲ್ಲ ಕೂಡಲೇ ಧರಿಸಿದ್ದ ಟೊಪ್ಪಿ, ಮೇಲೆ ಸುತ್ತಿಕೊಂಡ ಶಾಲು, ಚೀಲವನ್ನೆಲ್ಲ ಕಳಚಿ ದೂರವಿಟ್ಟು, ನಗೆ ತೊಟ್ಟು ನಿಲ್ಲುತ್ತಿದ್ದ ಮುಗ್ಧತೆಯಂತು ತುಂಬಾ ಚೆನ್ನಾಗಿತ್ತು. ನಾವಿನ್ನೂ ಕೋಡುಗಲ್ಲ ನೆತ್ತಿಯ ಆನಂದ, ವಿಶ್ರಾಂತಿಯಲ್ಲಿ ಇದ್ದಂತೆ, ಅತ್ತ ದೂರದಲ್ಲಿ ಇನ್ಯಾರೋ ಯಾತ್ರಿಗಳು ಕೇಕೆ ಹಾಕುತ್ತ ಬರುತ್ತಿರುವ ಸೂಚನೆ ಸಿಕ್ಕಿತು. ಕೂಡಲೇ ಪಿಳ್ಳೆಗಣ್ಣನೊಳಗಿದ್ದ ಟಿಕೆಟ್ ಚೆಕ್ಕರ್ ಜಾಗೃತನಾದ, ಈತ ಅತ್ತ ನಡೆದ. ಆ ಮಂದಿ ವಿರಾಮದಲ್ಲಿ ಮೇಲೆ ಬರುವ ಕಾಲದಲ್ಲಿ ನಾವು ವಾಪಾಸು ಹೊರಟೆವು. ಕಳೆದ ಪ್ರತಿ ಹೆಜ್ಜೆ, ಸೇತುವನ್ನು, ಕೊಳ್ಳದ ದೃಶ್ಯವನ್ನು ಮತ್ತೆ ಮತ್ತೆ ಸವಿಯುತ್ತ ಟಿಕೆಟ್ ಗೇಟಿನವರೆಗೂ ಹೋದೆವು. ಪಿಳ್ಳೆಗಣ್ಣಿನವ ಅಲ್ಲೇ ಬಂಡೆಯ ಮೇಲೆ ಕುಳಿತು, ಪಕ್ಕದಲ್ಲೆಲ್ಲೋ ಕಡಿದು ತಂದಿದ್ದ ವಾಟೆಯನ್ನು ಸೀಳಿ, ಕೀಸಿ ಪುಟ್ಟ ಸುಂದರ ಬುಟ್ಟಿ ನೆಯ್ದಿದ್ದ. ಅನಂತ ಅವನಿಗೆ ಇನಾಮು ಎಂಬಂತೆ ಐವತ್ತು ರೂಪಾಯಿ ಕೊಡಲು ಮುಂದಾದಾಗ ಸಂಕೋಚದಲ್ಲಿ
"ನೋ ನೋ..." ಎಂದು ಎರಡು ಹೆಜ್ಜೆ ಹಿಂದೆ ಸರಿದ. ಅನಂತ ಒತ್ತಾಯಿಸಿ ಹಿಡಿಸಿದಾಗ, ಆತ ಸಂತೋಷದಲ್ಲಿ, ಆ ಬುಟ್ಟಿಯನ್ನು ಅನಂತನ ತಲೆಗೇ ತೊಡಿಸಿಬಿಟ್ಟ. (ಆತನ ಹಣಮುಖಿಯಾಗದ ಪ್ರೀತಿ ಗೌರವಿಸುವಂತೆ, ಅನಂತ ಮತ್ತೆ ಐವತ್ತು ರೂಪಾಯಿಯನ್ನು ಬುಟ್ಟಿಯ ಬೆಲೆ ಎನ್ನುವಂತೆ ಅವನ ಕಿಸೆಗೆ ಹಾಕಿ, ಟೊಪ್ಪಿ ಒಪ್ಪಿಕೊಂಡ!) ಹೆಚ್ಚು ಕಮ್ಮಿ ಹೋದಷ್ಟೇ ಸಮಯದಲ್ಲಿ ನಾವು ಕಾರಿಗೆ ಮರಳಿದ್ದೆವು. ಯೂತ್ ಹಾಸ್ಟೆಲ್ಸಿನ ಔದಾರ್ಯದ ಕೊನೆಯ ತುತ್ತೆಂಬಂತೆ, ಕಟ್ಟಿ ತಂದಿದ್ದ ಬುತ್ತಿಯನ್ನು ಅಲ್ಲೇ ಮುಗಿಸಿ ಕಾರೇರಿದೆವು. 

ಆರೋಗ್ಯಪೂರ್ಣ ಅಭಿವೃದ್ಧಿ

ಕಾರು ಮತ್ತೆ ಶಿಲಾಂಗಿನತ್ತ ಸಾಗಿದ್ದಂತೇ ಬಿದಿರ ಸೇತು ಸರಣಿಯ ಸರಳತೆ, ಅನೌಪಚಾರಿಕತೆ, ಎಲ್ಲಕ್ಕೂ ಮುಖ್ಯವಾಗಿ ಪರಿಸರಪ್ರಿಯತೆ ನಮ್ಮ ತಲೆಗಳಲ್ಲಿ ಅಲೆಅಲೆಯಾಗಿ ಮರುಕಳಿಸುತ್ತಲೇ ಇತ್ತು. ಸರಕಾರೀ ವ್ಯವಸ್ಥೆ ಪ್ರಸ್ತುತ ಪಡಿಸಿದ ಸುಣ್ಣದ ಗುಹಾಜಾಲ ಅರ್ವಾಹ್‍ನಲ್ಲೂ ಸ್ವಲ್ಪ ಮಟ್ಟಿಗೆ ಇಂಥದ್ದೇ ಸ್ಥಿತಿ. ಆದರೆ ಅವರು ಮಾಡಿದ್ದೇನು? ದಾರಿ ಮುಗಿದಲ್ಲಿಂದ ಮೆಘಾ
ಪ್ರಾಜೆಕ್ಟ್ ಬೇಡ ಮೇಘಾಲಯದ ಆದರ್ಶ ಬೇಕು. ಎಲ್ಲಕ್ಕೂ ಮುಖ್ಯವಾಗಿ ಬಿದಿರ ಸೇತು ಸರಣಿ ಆ ಬೆಟ್ಟದ ಪ್ರಾಕೃತಿಕ ಸಮತೋಲನವನ್ನು ಸ್ವಲ್ಪವೂ ಕೆಡಿಸುವುದಿಲ್ಲ ಎನ್ನುವುದನ್ನು ನಮ್ಮ ಬೃಹತ್ ಅಭಿವೃದ್ಧಿ ಪರಿಣತರಿಗೆ ತಿಳಿಯ ಹೇಳುವುದು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಗುಹಾದ್ವಾರದವರೆಗೂ ಬೆಟ್ಟದ ಮೈಯಲ್ಲಿ ಉದ್ದಕ್ಕೂ ಕುಂದ, ಗೋಡೆಗಳಿಗೆಂದು ಅಸಂಖ್ಯ ಅಡಿಪಾಯ ತೋಡಿ ಆಳವಾದ ಗಾಯ ಮಾಡಿದ್ದರು. ಬಂಡೆಯೇ ಸಿಕ್ಕಲ್ಲಿ ನೂರೆಂಟು ಕೊರೆದು, ಪರಿಸರವನ್ನು ನಡುಗಿಸಿದ್ದರು. ಕೊನೆಯಲ್ಲಿ ಪ್ರಾಕೃತಿಕ ಸಮತೋಲನವನ್ನು ಮೀರುವ ಕಾಂಕ್ರೀಟ್ ರಚನೆಗಳನ್ನು ಹೇರಿ, ಸಹಜವಾಗಿ ಮನುಷ್ಯ ಚಟುವಟಿಕೆಗಳ ಹೊರೆಯನ್ನು ಹೆಚ್ಚಿಸಿದ್ದರು. ಮಳೆಗಾಲದ್ದೂ ಸೇರಿದಂತೆ ಸಹಜ ನೀರಿನ ಓಣಿಗಳನ್ನೆಲ್ಲ ತಮ್ಮ ರಚನೆಗಳ ಅನುಕೂಲಕ್ಕೆ ತಕ್ಕಂತೆ ಚರಂಡಿ, ಸೇತುವೆ ಮಾಡಿ ತಿದ್ದಿ ಬಿಟ್ಟಿದ್ದರು. ಇವುಗಳ ಪರಿಣಾಮವಾಗಿ ಒಂದು ಭಾರೀ ಕುಸಿತವೂ ಸೇರಿದಂತೆ ಅಸಂಖ್ಯ ಅವ್ಯವಸ್ಥೆಗಳನ್ನು ವಿಮರ್ಶಿಸುವ ವಿನಯ ತೋರದೆ, ಹೆಚ್ಚಿನ ಯೋಜನೆಗಳನ್ನೇ ಹೇರುವ ಚಿಂತನೆ ನಡೆಸಿದ್ದಾರೆ! ಅದೇ ಬಿದಿರ ಸೇತು ಸರಣಿಯನ್ನು ನೋಡಿ. ಇಲ್ಲಿ ಬಿಡಿಬಿಡಿಯಾಗಿ ಕಟ್ಟು ಕಳಚಬಹುದು, ಒಂದೊಂದು ಬಿದಿರು ಕುಂಬಾಗಬಹುದು. ಉಸ್ತುವಾರೀ ವ್ಯವಸ್ಥೆ
ಅಂಥವುಗಳಿಗೆ ಸದಾ ಕಣ್ಣಾಗಿರುವಾಗ, ಅಲ್ಲಲ್ಲಿಗೇ ಬದಲಿ ಮುಟ್ಟಿಸುವುದು ಯಾವ ವಿಶೇಷ ಶ್ರಮ ಅಥವಾ ಖರ್ಚನ್ನು ಕೇಳದು. ಬಿದಿರು ಎಂದಿದ್ದರೂ ಪುನರುತ್ಪಾದನ ಮಾಡಬಹುದಾದ ಮತ್ತು ಹಾಳಾದಲ್ಲೂ ಮತ್ತೆ ಸುಲಭವಾಗಿ ಪರಿಸರದೊಡನೆ ಒಂದಾಗುವ ಪ್ರಾಕೃತಿಕ ಸಂಪತ್ತು. ಅದೇ - ಕಬ್ಬಿಣ, ಸಿಮೆಂಟ್, ಕಲ್ಲು, ಮರಳುಗಳ ಒಂದು ಕಣವನ್ನೂ ನಾವು ಸೃಷ್ಟಿಸಲಾರೆವು!  

ಪವಿತ್ರವನ, ಮಾದರಿ ಹಳ್ಳಿ..... 

ಬಿದಿರ ಸೇತು ಸರಣಿಗೆ ಹೊರಡುವ ಮೊದಲೇ ಅಂದಿನ ರಾತ್ರಿಯಿಂದ(೧೪-೨) ತೊಡಗಿ ಮುಂದಿನೆರಡು ಹಗಲು ಕಳೆದು ಗೌಹಾತಿ ವಿಮಾನ ನಿಲ್ದಾಣ ತಲಪುವವರೆಗೆ (೧೬-೨ರ ಸಂಜೆ) ಕಲಾಪವನ್ನೂ ಗಟ್ಟಿ ಮಾಡಿದ್ದೆವು. ನಮಗೆ ಅಭಯನ ಸ್ನೇಹಶೀಲ ಸಂಪರ್ಕಗಳಲ್ಲಿ ಒಬ್ಬರಾಗಿ,
ಗೌಹಾತಿಯ ಮೃಣಾಲ್ ಕುಮಾರ್ (ಚರವಾಣಿ: ೦೯೪೦೧೧೬೦೮೭೬) ಸಂಪರ್ಕಕ್ಕೆ ಸಿಕ್ಕಿದ್ದರು. ಅವರು ಒಳ್ಳೆಯ ವೃತ್ತಿಪರ ಪ್ರವಾಸ ಸಂಯೋಜಕ. ನಮ್ಮ ಅಗತ್ಯಗಳನ್ನೆಲ್ಲ ಸಾವಧಾನದಲ್ಲಿ ಕೇಳಿ, ಕಡಿಮೆ ದರದಲ್ಲೇ ಸುಯೋಗ್ಯ ವ್ಯವಸ್ಥೆ ಮಾಡಿಕೊಟ್ಟಿದ್ದರು. ಆ ಪ್ರಕಾರ ನಾವು ರಾತ್ರಿ ವಾಸಕ್ಕಷ್ಟೆ ಗೌಹಾತಿ ಮುಟ್ಟಿದರೆ ಸಾಕಿತ್ತು. ಇದನ್ನು ಅಂದು ಬೆಳಿಗ್ಗೆ ಶಿಲಾಂಗಿನ ಕಾರು ನಿಕ್ಕಿ ಮಾಡುವಾಗಲೇ ಚಾಲಕನಿಗೆ ತಿಳಿಸಿದ್ದೆವು. ಅಲ್ಲದೆ, ಹಗಲಿನಲ್ಲಿ ಹೆಚ್ಚುವರಿ ಸಮಯ ಸಿಕ್ಕರೆ, ಶಿಲ್ಲಾಂಗ್ ದರ್ಶನ ಮಾಡಿಸುವಂತೆಯೂ ಮಾತಾಡಿದ್ದೆವು. ನಾವು ಬಿದಿರ ಸೇತು ಬೇಗ ಮುಗಿಸಿದ ಸಂತೋಷದಲ್ಲಿ, ಇನ್ನೂ ಕನಿಷ್ಠ ಮೂರು ಗಂಟೆಯ ಹೆಚ್ಚಿನ ಅನುಭವ ಸಂಗ್ರಹದ ಅಂದಾಜಿನಲ್ಲೆನೋ ಇದ್ದೆವು. ಆದರೆ ಈ ಕಾರ ಚಾಲಕನೂ ಹಿಂದಿನದ ಡೇವಿಡ್ಡನಂತೆ ಚಾಲಾಕೀತನವನ್ನೇ ಮೆರೆದ. ನಮ್ಮ ತಿಳುವಳಿಕೆಯ ಸ್ಥಳಗಳನ್ನು ನಗರ ಮಿತಿ, ದೂರ ಹೆಚ್ಚು ಎಂದೇನೇನೋ ಸಬೂಬು ಕೊಟ್ಟು, ಕೊನೆಯಲ್ಲಿ ಹರಕೆಯೊಪ್ಪಿಸಿದಂತೆ
ತಂದು ನಿಲ್ಲಿಸಿದ ಜಾಗ ಮೌಫ್ಲೇನ್ - ಪವಿತ್ರವನ (ಸೇಕ್ರೆಡ್ ಗ್ರೂವ್) ಮತ್ತು ಮಾದರಿ ಹಳ್ಳಿ. 

ಶಿಲಾಂಗ್ ಸಮೀಪದ, ವಿಸ್ತಾರ ಬೋಗುಣಿಯಂತಾ ಬಾಣೆಯಲ್ಲಷ್ಟೇ ಉಳಿದು ಬಂದ ಪ್ರಾಕೃತಿಕ ಕಾಡು ಇಂದಿನ ಭಾಷೆಯಲ್ಲಿ ಪವಿತ್ರವನವಾಗಿದೆ. ನಮ್ಮ ದಾರಿ ಒಂದು ಹಸಿರು ಬಾಣೆಯಲ್ಲಿ ಮುಗಿದಿತ್ತು. ಅಲ್ಲಿ ಎಡ ಮಗ್ಗುಲಿನ ಆಳ ಹೆಚ್ಚಿಲ್ಲದಂತಿದ್ದ ಕಣಿವೆಯಲ್ಲಿ ಪವಿತ್ರವನವಿದ್ದರೆ, ಬಲ ಮಗ್ಗುಲಿನ ಬೋಳು ದಿಬ್ಬದ ಮೇಲೆ ‘ಮೇಘಾಲಯದ ಸಾಂಪ್ರದಾಯಿಕ ಹಳ್ಳಿಯ ಮಾದರಿ’, ಸ್ವಾಗತ ಕಮಾನು ಕಟ್ಟಿ ಕಾದಿತ್ತು. ನಮ್ಮನ್ನು ಸಹಜವಾಗಿಯೇ ಎಡ ಮಗ್ಗುಲಿನ, ಹಸಿರುಗಪ್ಪಿನ ವನ ಮೊದಲಿಗೆ ಆಕರ್ಷಿಸಿತ್ತು. ನಾವು ಕಾರಿಳಿಯುವ ಮೊದಲು ಚಾಲಕ ಮಹಾಶಯ ಕಿವಿಯೂದಿದ, "ಗೈಡುಗಳು ನಾನೂರು ಐನೂರು ಕೇಳ್ತಾರೆ. ಅವರು ಬೇಕಿಲ್ಲ, ನೀವು ಸುಮ್ಮನೆ ಸ್ಪಷ್ಟ ಜಾಡಿನಲ್ಲಿ ಹೀಗೆ ಹೋಗಿ ಹಾಗೆ ಬಂದುಬಿಡಿ". ನಾವಾದರೂ ಸಸ್ಯವಿಜ್ಞಾನದ
ಗಂಭೀರ ವಿದ್ಯಾರ್ಥಿಗಳಲ್ಲ, ಮೇಲಿಂದ ಮೇಲೆ ನೋಡಿದರೆ ಸಾಕೆನ್ನುವವರೇ ಆದ್ದರಿಂದ ಗೋಣು ಹಾಕಿದ್ದೆವು. 

ಆ ವಲಯಕ್ಕೆ ನಮ್ಮ ಕಾರು ಬರುತ್ತಿದ್ದಂತೇ ಮುಚ್ಚಿದ ಕನ್ನಡಿಯೊಳಗಿನಿಂದಲೇ ವಾತಾವರಣದಲ್ಲಿ ಮಂಜು ಮುಸುಕಿದ್ದನ್ನು ಗಮನಿಸಿದ್ದೆವು. ಆದರೆ ಕಾರಿಳಿಯುತ್ತಿದ್ದಂತೆ ಅದು ಅನಿರೀಕ್ಷಿತ ಶೀತ ಮಾರುತದಂತೇ ಅಪ್ಪಳಿಸಿದಾಗ ಮಾತ್ರ ನಾವು ಕಂಗಾಲು. ನಮ್ಮ ಥರ್ಮಲ್ ಬಟ್ಟೆಗಳನ್ನು ದೊಡ್ಡ ಚೀಲಗಳ ಆಳಕ್ಕೆ ತುಂಬಿ, ಡಿಕ್ಕಿಯಲ್ಲಿ ಬಿಗಿ
ಮಾಡಿದ್ದರಿಂದ, ಸುಲಭದಲ್ಲಿ ತೆಗೆಯಲು ಸಮಯವಿರಲಿಲ್ಲ. ಕೈಚೀಲದಲ್ಲಿದ್ದೆಲ್ಲ ಬಿಸಿಯುಡುಪುಗಳನ್ನು ಹೇರಿಕೊಂಡು, ಕಣ್ಣೆರಡು ಬಿಟ್ಟು ತಲೆ ಪೂರಾ ಶಾಲು ಸುತ್ತಿ, "ಉಹುಹುಹುಹು" ರಾಗ ತೆಗೆಯುತ್ತ ಬೀಸುಗಾಲಿಕ್ಕಿದೆವು. 

ತುಂಡುಗಲ್ಲುಗಳನ್ನು ಹಾಸಿದ ಪುಟ್ಟಪಥ ನಮಗೆ ಹೆಚ್ಚಿನ ಧೈರ್ಯ ಕೊಟ್ಟಿತು. ನಾವು ಡೈಂತ್ಲೆನ್ ಅಬ್ಬಿಯ ಬಳಿ ಕಂಡಂತವೇ ಕಚ್ಚಾ ಕಲ್ಲ ಸ್ತಂಭಗಳು ಈ ಹುಲ್ಲುಗಾವಲಿನಲ್ಲೂ ಇದ್ದವು. ಮತ್ತೆ ಅಲ್ಲಿನಂತೆ ಇಲ್ಲೂ ವಿವರಣೆಗಳಿರಲಿಲ್ಲ. ಮುಂದುವರಿದಂತೆ ಮರಗಳ ಮರೆಯ ಸಣ್ಣ ತಗ್ಗಿನಲ್ಲಿ, ಲೈಟ್ರಿಂಗ್ಲ್ಯೂವಿನಲ್ಲಿ ಕಂಡಂತದ್ದೇ ನೆಲಬಾವಿ ಕಾಣಿಸಿತು. ದಾರಿ ಬದಿಯಿಂದ ಬಂದೊಬ್ಬ ಮಹಿಳೆ, ಅದರಿಂದ ನೀರು ಒಯ್ಯುವುದನ್ನೂ ಕಂಡೆವು. ನಾವು ಇನ್ನೇನು ವನದೊಳಗೊಂದು ಸುತ್ತು ಹಾಕುವುದಷ್ಟೇ ಬಾಕಿ ಎನ್ನುವಾಗ, ಹಿಂದಿನಿಂದ ವ್ಯವಸ್ಥಾಪನೆಯ ಮಂದಿ ಕೂಗಿ ವಾಪಾಸು ಕರೆದರು. ಕಾರಣ ಸರಳ -
ಸ್ಥಳೀಯ ವ್ಯಕ್ತಿಗಳ (ಮಾರ್ಗದರ್ಶಿಗಳು) ಕಣ್ಗಾವಲಿಲ್ಲದೇ ವನದೊಳಗೆ ಹೋದವರು, ಉದುರಿಬಿದ್ದ ರುದ್ರಾಕ್ಷಿ ಕದಿಯುತ್ತಾರಂತೆ! ನಮಗೆ ಆ ಚಳಿಯಲ್ಲೂ ಒಮ್ಮೆಗೆ ಬಿಸಿ ಏರಿತು. ಆದರೆ ದೇಶ ಕಾಲ ಗಮನಿಸಿ, ಇದರಜ್ಜನಂತ ವನ ನಮ್ಮಲ್ಲೇ ಕಂಡಿದ್ದೇವೆ ಎಂದು ನಮ್ಮಷ್ಟಕ್ಕೇ ಗೊಣಗಿಕೊಂಡು, ವಾಪಾಸು ನಡೆದು, ಮಾದರಿ ಹಳ್ಳಿಯತ್ತ ಹೊರಳಿದೆವು. 

ಹತ್ತಿಪ್ಪತ್ತು ಎಕ್ರೆ ಬೋಳು ಬಾಣೆಯಲ್ಲಿ ವಿಸ್ತೃತ ನಿವೇಶನಗಳಲ್ಲಿ ಕುಂಬಾದ, ಕುಸಿದು ಬಿದ್ದ ಕೆಲವು ಜೋಪಡಿಗಳೇನೋ
ಇದ್ದವು. ಉಳಿದಂತೆ ಪಕ್ಕಾ ಆಧುನಿಕ ರೂಪದ ಭಾರೀ ಭವನ ಮತ್ತು ಅಷ್ಟೇ ದೊಡ್ಡಕ್ಕೆ ನೀರಿನದೇನೋ ವ್ಯವಸ್ಥೆಗಳ ಕೆಲಸ, ಎಲ್ಲಾ ಸರಕಾರೀ ಕೆಲಸದಂತೆ ಅತಿ ವಿಲಂಬಿತ್ ತಾಳದಲ್ಲಿ ನಡೆದಿತ್ತು. ಹೀಗೆ ಅಲ್ಲೇ ಎಂದೋ ಪೂರ್ಣಗೊಂಡಿದ್ದಿರಬಹುದಾದ ಬಯಲು ರಂಗಭೂಮಿ, ವಾಣಿಜ್ಯ ಮಳಿಗೆಗಳೆಲ್ಲಾ ರಚನೆ, ಉಸ್ತುವಾರಿ ಮತ್ತು ಜನಪ್ರಿಯತೆ ಎಂಬ ಮೂರೂ ಮುಖಗಳಲ್ಲಿ ಕೊರತೆಯಿಂದ ಹಾಳು ಸುರಿಯುತ್ತಿತ್ತು. ಮಳಿಗೆ ಸಾಲಿನಲ್ಲಿ ಇದ್ದೊಂದು ಸುಸ್ಥಿಯ ಅಡ್ಡಾ - ಕಾಫೀ ಕೇಂದ್ರ, ನಮ್ಮನ್ನು ನೋಡಿದ
ಮೇಲೆ ನರಳಾಟದ ಸಂಗೀತ ಹಾಕಿ ಆಕರ್ಷಿಸಿತ್ತು. ಲೋಟಕ್ಕೆ ಹತ್ತೇ ರೂಪಾಯಿ ಎಂದ ಮೇಲೆ ನಾನಂತೂ ದಾಪುಗಾಲಿಕ್ಕಿಯೇ ಹೋಗಿದ್ದೆ. ಒಟ್ಟು ವ್ಯವಸ್ಥೆಯ ಹೇವರಿಕೆಯಲ್ಲಿ, ಉಳಿದವರು ಬೇಡ ಬೇಡವೆಂದರೂ ನಾನು "ಚಳಿಗೆ ಒಳ್ಳೇ ಮದ್ದು" ಎಂದೇ ಒಂದು ಲೋಟಾ ಕೊಂಡೆ. ಮೂಲದಲ್ಲಿ ಹಾಲು, ಕಾಫಿ, ಸಕ್ಕರೆಯ ಸಂಸ್ಕಾರವಿದ್ದಿರಬಹುದಾದ ಸಂಗತಿಗಳು ನಿರಂತರ ಕುದ್ದೋ ಕಲಕಿಯೋ ಕುದಿಯುವ ದಪ್ಪ ಮೊಸರಿನಂತಿತ್ತು. ಅದು ಹೊಟ್ಟೆಗಿಳಿದಾಗ, ನನಗೊಮ್ಮೆ ತಪ್ಪಿ ವಾಂತಿಗೆ ಮದ್ದು
ತೆಗೆದುಕೊಂಡಂತೆಯೇ ಅನ್ನಿಸಿತ್ತು. ಅದೃಷ್ಟಕ್ಕೆ ಏನೂ ಆಗಲಿಲ್ಲ. ಮತ್ತೆ ವಿರಾಮದಲ್ಲಿ ಯೋಚಿಸಿದಾಗ, ಆ ಲೋಟ ಆವರಿಸಿದ ನನ್ನ ಮರಗಟ್ಟಿದ ಬೆರಳುಗಳು ಅನುಭವಿಸಿದ ಸುಖ, ಆ ದ್ರವ ದೇಹಕ್ಕಿಳಿದಾಗ ಉಂಟಾದ ಉಲ್ಲಾಸದ ಭಾವಕ್ಕೆ ಹತ್ತಲ್ಲ ನೂರು ರೂಪಾಯಿ ಕೊಟ್ಟರೂ ಕಡಿಮೆ ಎಂದೇ ತೃಪ್ತಿಪಟ್ಟೆ. ಕಾಫಿ ಮಾರಾಟದವನ ಉದ್ದೇಶವಾದರೂ ಕೆಟ್ಟದ್ದಲ್ಲ. ಆದರೆ ಘೋಷಣೆಯಲ್ಲಿ ಮಾದರಿ ಗ್ರಾಮ ರೂಪಿಸಿದವ? ಯೋಜಿತ ದುರುದ್ದೇಶದಲ್ಲಿ ಹಾಳೂರಷ್ಟನ್ನೆ ಉಳಿಸಿ, ಸಾರ್ವಜನಿಕ ಬೊಕ್ಕಸಕ್ಕೆ
ಕೋಟ್ಯಂತರ ಹಣದ ಜುಲಾಬು ಹಿಡಿಸುವ ಮದ್ದು ಅರೆದವ, ಖಂಡಿತಕ್ಕೂ ಅಯೋಗ್ಯ! 

ಗೌಹಾತಿಯಲ್ಲಿ ಪ್ರೇಮಿಗಳ ದಿನ!

ನಮ್ಮ ಕಾರು ಶಿಲಾಂಗಿನ ಮಾಮೂಲೀ ಸಂಜೆಯ ಸಂಚಾರ ಗೊಜ್ಜಿನ (ವಾಹನ ಸಂಮರ್ದ ಅರ್ಥಾತ್ ಟ್ರಾಫಿಕ್ ಜ್ಯಾಂ!) ಎದುರೀಜು ಮಾಡುತ್ತಿತ್ತು. ಈ ರಾಜ್ಯ ಸಮೂಹ ವಾಹನ ಸೌಕರ್ಯಗಳನ್ನು ನಡೆಸುವಲ್ಲಿ ತುಂಬಾ ಹಿಂದುಳಿದಿದೆ.
ಆದರೆ ಬದಲಾವಣೆಯ ಅಲೆಯನ್ನು ಯಾರೂ ತಡೆಯುವಂತಿಲ್ಲವಲ್ಲ. ಈಚಿನ ದಿನಗಳಲ್ಲಿ ಆಸುಪಾಸಿನ ಹಳ್ಳಿಗಳಿಂದ ನಿತ್ಯ ಅಸಂಖ್ಯ ಜನ ನಗರ ನೌಕರಿಗಳಿಗೆ ಬಂದು ಹೋಗುತ್ತಾರಂತೆ. ಅವರಿಗೆ ಸಿಕ್ಕುವವೆಲ್ಲ ಸರ್ವೀಸ್ ವ್ಯಾನ್, ಪಿಕ್ಕಪ್ಪುಗಳಂತವು. ಹಾಗೆ ಒಳಗೆ ಜನ, ಸಾಮಾನು ತುಂಬಿ ಜಾಗವಿಲ್ಲದಾಗ, ಕೊರೆಯುವ ಚಳಿಗೆ ಬಿಗಿಯಾಗಿ ಶಾಲು ಸುತ್ತಿಕೊಂಡು, ಓಲಾಡುವ ದಾರಿಗೆ ವ್ಯಾನಿನ ಹಿಂದಿನ ಸ್ಟೆಪ್ನೀ ಚಕ್ರವನ್ನು ಅವುಚಿಕೊಂಡು ಕುಳಿತೊಬ್ಬ ಹಳ್ಳಿಗನನ್ನು ಕಂಡು ನಮ್ಮ ಬೆರಗಿಗೆ ಎಣೆಯಿಲ್ಲ. ಎಲ್ಲವನ್ನು ನಿಧಾನಕ್ಕೆ
ಪರಿಹರಿಸಿಕೊಂಡು ಗೌಹಾತೀ ದಾರಿ ಹಿಡಿಯುವಾಗ ಪೂರ್ಣ ಕತ್ತಲಾಗಿತ್ತು. ಮುಂದೆಲ್ಲೋ ಎತ್ತರದೂರಿನ ಚಳಿ ದೂರಾಯ್ತೆಂಬ ಧೈರ್ಯದಲ್ಲಿ ದಾಬಾ ಒಂದರೆದುರು ಚಾ ವಿರಾಮ ಮಾಡಿದೆವು. ಮುರುಟಿದ್ದ ಕೈಕಾಲು ಒದರಿ, ಸಾರ್ವಜನಿಕ ಮೂತ್ರಿ ಅಶುದ್ಧಿ ಮಾಡಿ, ಒಳ ಕುಳಿತೆವು. ಮಾಣಿನಿಯರು (ಹೌದು, ಮಾಣಿನಿ - ಅದು ಮಹಿಳಾ ಮಾಣಿಗಳ ಹೋಟೆಲ್!) ಕೊಟ್ಟ ದೊಡ್ಡ ತಟ್ಟೇ ಭರ್ತಿ ಗರಿಗರಿ ನೀರುಳ್ಳಿ ಬಜ್ಜಿ ಚಪ್ಪರಿಸಿ, ಮಸಾಲಾ ಚಾ ಕಾಫಿ ಹೀರಿ ನವಚೈತನ್ಯವಂತರಾದೆವು. 

ಗೌಹಾತಿಯ ಹೃದಯದಲ್ಲೇ ಇರುವ ಹೋಟೆಲ್ ರಿಯಾಲ್ಟೋ ಆರು ಮಾಳಿಗೆಗಳ ಸುಂದರ ವ್ಯವಸ್ಥೆ. ಸ್ವತಃ ಮಾಲಿಕರೇ ಆರನೇ ಮಾಳಿಗೆಯಲ್ಲಿ ವಾಸವಿದ್ದುಕೊಂಡು, ದಾರಿ ಬದಿಯ ಮೆಟ್ಟಲಿನಿಂದ ಬೋಳು ತಾರಸಿಯವರೆಗೂ ವೈವಿಧ್ಯಮಯ ಸಸ್ಯ ಸಾಮ್ರಾಜ್ಯ ಹಬ್ಬಿಸಿದ್ದರು. ಎಲ್ಲಕ್ಕೂ
ಮುಖ್ಯವಾಗಿ ಆಹಾರ, ವಾಸಗಳ ರುಚಿ, ಶುಚಿಗಳಲ್ಲಿ ವೈಯಕ್ತಿಕ ನಿಗಾವಹಿಸುತ್ತಿದ್ದ ಕ್ರಮ ನಮಗೆ ಕುಶಿಕೊಟ್ಟಿತು. ನಮ್ಮ ಅರಿವಿಲ್ಲದೇ ಅಂದು ವ್ಯಾಲೆಂಟೈನ್ ಡೇ (ಪ್ರೇಮಿಗಳ ದಿನ) ಆಗಿತ್ತು. ಮತ್ತೆ ನಾಲ್ಕು ಜನರಿಗೆ ಕೋಣೆ ಎಂದಷ್ಟೇ ಕೇಳಿದ್ದ ನಮಗೆ ವ್ಯವಸ್ಥೆಯಾದದ್ದೂ ಸ್ವತಂತ್ರ ಎರಡು ಜೋಡಿಕೋಣೆಗಳು! ಭೋಜನಾಲಯದ ಅಲಂಕಾರ ವ್ಯಾಲೆಂಟೈನ್ ದಿನದ ವಿಶೇಷವೆಂದೂ ನಾವು ಅಂದಾಜಿಸಿರಲಿಲ್ಲ. ಇವೆಲ್ಲಕ್ಕೆ ಶಿಖರಪ್ರಾಯವಾಗಿ, ನಾವು ಊಟಕ್ಕೆ ಕುಳಿತಿದ್ದಾಗ ಹೋಟೆಲಿನ ಮಾಲಕಿ, ವಿಶೇಷವಾಗಿ
ನಮ್ಮ ಮೇಜಿಗೇ ಬಂದು "ಹ್ಯಾಪೀ ವ್ಯಾಲೆಂಟೈನ್ಸ್ ಡೇ" ಹೇಳಿದಾಗ ನಮ್ಮ ಬಸವಳಿದ, ಮುದಿಮುಸುಡು ಅರಳಿದ್ದು ಸುಳ್ಳಲ್ಲ! 

ಒಂದು ವಾರದಿಂದ ಸ್ವಸ್ಥವಾಗಿ ಸಿಗದಿದ್ದ ಬಿಸಿನೀರಿನ ಸ್ನಾನ, ಆಪ್ತ ಶಯನ ಸೌಕರ್ಯ, ಗಡಿಬಿಡಿಯಿಲ್ಲದ ಮುಂಜಾನೆ, ರಾತ್ರಿಯೂಟದಷ್ಟೇ ಸಮೃದ್ಧ ಮತ್ತು ರುಚಿಕರವಾದ ತಿಂಡಿಗಳೆಲ್ಲ ನಮ್ಮನ್ನು ಹೊಸ ಅನುಭವಕ್ಕೆ ಹೊಸ ಬಲ ತುಂಬಿ ಬೀಳ್ಕೊಟ್ಟವು. ಮಾಮೂಲೀ ವಹಿವಾಟುಗಳಲ್ಲಿ "ಕೋಣೆಗೆಷ್ಟು, ಊಟಕ್ಕೆಷ್ಟು, ತಿಂಡಿಗೆಷ್ಟು..." ಎಂದೆಲ್ಲ ನಮಗಾಗುವ ಸಣ್ಣ ಆತಂಕ, ನಿಮ್ಮೆಲ್ಲರ ಕುತೂಹಲವೂ ಇರಬಹುದು. ಆದರೆ ರಿಯಾಲ್ಟೋ ಹೋಟೆಲಿನ ಕುರಿತು ಸ್ಪಷ್ಟ ಉತ್ತರ ನನ್ನಲ್ಲಿಲ್ಲ. ಅದೂ ಸೇರಿದಂತೆ ಎರಡು ದಿನಗಳ ನಮ್ಮ ನಾಲ್ವರ ಎಲ್ಲ ಕಲಾಪವನ್ನೂ ಮೃಣಾಲ್ ಕುಮಾರ್ ಕೇವಲ ರೂ ೨೧,೦೦೦/-ಕ್ಕೆ, ಅದೂ ಕೇವಲ ಮಾತಿನ ಭರವಸೆಗೇ ಪೊಟ್ಟಣ
(ಪ್ಯಾಕೇಜ್!) ಕಟ್ಟಿಕೊಟ್ಟಿದ್ದರು. ಮೃಣಾಲ್ ಬೆಳಗ್ಗೆಯಷ್ಟೇ ನಮ್ಮನ್ನು ಭೇಟಿಯಾಗಿ, ಹಣ ಪಡೆದರು. ಮತ್ತೆ ಯೋಜನೆಯಂತೇ ಅವರು ಕೊಟ್ಟ ಕಾರೇರಿ ನಾವು ಕಾಜಿರಂಗದತ್ತ ಹೊರಟೆವು. 

ಹಲವು ವರ್ಷಗಳ ತಪಸಿನ ಫಲ - ಕಾಜಿರಂಗಾ........ 

೧೯೭೧ರಲ್ಲಿ ನಾನು ಅಸ್ಸಾಂಗೆ ಹೋಗುವೆನೆಂದಾಗ
ಮೊದಲು ತಲೆಯಲ್ಲಿ ಬಂದದ್ದೇ ಕಾಜಿರಂಗ - ಭಾರತದ ಏಕೈಕ ಘೆಂಡಾಮೃಗ ವನಧಾಮ. ಪೂರ್ವಾನುಭವ, ಸಂಘಟನಾ ಚಾತುರ್ಯವಿಲ್ಲದೇ ಕನಸಾಗಿಯೇ ಉಳಿಯಿತು. ೧೯೯೪ರ ಸುಮಾರಿಗೆ, ಎರಡನೇ ಅವಕಾಶ ಬಂದಿತ್ತು. ‘ಮೋಟಾರ್ ಸೈಕಲ್ಲೇರಿ ಭಾರತ ಸುತ್ತು’ ನಕ್ಷೆ ಗುರುತಿಸುವಾಗ ನನ್ನ ಆದ್ಯತೆಯ ಪಟ್ಟಿ ರೂಪುಗೊಂಡದ್ದೇ ಹೀಗೆ - ಹಿಮಚಿರತೆಗೆ ಡಾರ್ಜಿಲಿಂಗ್, ‘ಹುಲಿ ನಾಟಕ’ಕ್ಕೆ ಕನ್ಹಾ-ಬಾಂಧವಘರ್, ಮೊಸಳೆಗೆ ಭಿತ್ತರ್ ಕರ್ನಿಕಾ, ಕಡಲಾಮೆಗೆ ಕೇಂದ್ರಪಾರಾ, ನರಭಕ್ಷಕ ಹುಲಿಗಳಿಗೆ
ಸುಂದರಬನ್.... ಮತ್ತು ಘೆಂಡಾಮೃಗಕ್ಕೆ ಕಾಜಿರಂಗಾ. ಭೂಪಟದಲ್ಲಂತೂ ಜಲಪೈಗುರಿಯಿಂದ "ಕಾಜಿರಂಗ ಓ ಇಲ್ಲಿ" ಎನ್ನುವ ಭಾವ ಕಾಡಿತ್ತು. ಆದರೆ ಅಂದು ಅಸ್ಸಾಂ ರಾಜ್ಯ ಆಂತರಿಕ ಕಲಹದಲ್ಲಿ ಉರಿಯುತ್ತಿತ್ತು. ನಾವು ಅತ್ತ ತಲೆ ಹಾಕುವಂತೆಯೂ ಇರಲಿಲ್ಲ. ಈ ಬಾರಿ ಮೇಘಾಲಯ ಮುಗಿದ ಮೇಲೆ ನಾಲ್ಕು ದಿನ ಸ್ವಂತದ ಸುತ್ತಾಟ ಎಂದು ಭೂಪಟ ಬಿಡಿಸಿದ್ದೇ ನನ್ನ ಕಾಜಿರಂಗಾ ಬಲವಾದ ಮೊಳಕೆಯನ್ನೇ ಮೂಡಿಸಿತ್ತು. ತಂಡದ ಇನ್ನೈವರ ಬಯಕೆ... ಎನ್ನುವುದರೊಳಗೆ, ಗಣಪತಿ ಭಟ್ ದಂಪತಿ "ನಾವು ಹೇಗೂ
೧೬ರವರೆಗೆ ಯಾವುದಕ್ಕೂ ಬರಲಾರೆವು. ಅಲ್ಲದೆ ಕಾಜಿರಂಗ ಹಿಂದೊಮ್ಮೆ ನೋಡಿದ್ದೇವೆ" ಎಂದು ದಾರಿ ಮುಕ್ತಗೊಳಿಸಿದ್ದರು. ಮತ್ತೆ ದೇವಕಿ, ಅನಂತ, ರುಕ್ಮಿಣಿಯರಿಗೆ ಅನ್ಯ ವಿಶಿಷ್ಟ ಬೇಡಿಕೆಗಳೇನೂ ಇರಲಿಲ್ಲ. ಗೌಹಾತಿಯ ಪ್ರವಾಸ ಸಂಘಟಕ ಮೃಣಾಲ್ ಕುಮಾರ್ ಅಚ್ಚುಕಟ್ಟಿನ ಪ್ರವಾಸೀ ಪೊಟ್ಟಣ ಕಟ್ಟಿ ಮುಗಿಸಿದ್ದರು. ನಮ್ಮೆರಡು ರಾತ್ರಿಗಳನ್ನು ಗೌಹಾತಿ, ಕಾಜಿರಂಗದಲ್ಲಿಟ್ಟರು. ಎರಡು ಹಗಲುಗಳಲ್ಲಿ ಹೋಗಿ ಬರುವ ಪ್ರಯಾಣ, ವನದರ್ಶನ ಚಂದಕ್ಕೆ ಹೊಂದಿಸಿದ್ದರು. ಎರಡೂ ರಾತ್ರಿಯೂಟಗಳು
ಬೆಳಗ್ಗಿನ ತಿಂಡಿಗಳು, ವನಧಾಮಕ್ಕೆ ಪ್ರವೇಶ ಮತ್ತು ಜೀಪ್ ಸುತ್ತಾಟದ ವ್ಯವಸ್ಥೆಯನ್ನೂ ಮೃಣಾಲ್ ಸಮರ್ಪಕವಾಗಿಯೇ ಪೂರೈಸಿದ್ದರು. 

ಸುಮಾರು ಇನ್ನೂರು ಕಿಮೀ ಬಯಲು ಸೀಮೆಯ ಓಟ. ಅದರಲ್ಲೂ ಅರ್ಧದಷ್ಟು ಚತುಷ್ಪಥ. ಎರಡು ಮಗ್ಗುಲುಗಳಲ್ಲಿ ಮುಖ್ಯವಾಗಿ ಗದ್ದೆ, ಜವುಗು ಪ್ರದೇಶಗಳು ಹೆಚ್ಚು. ದಾರಿಯ ಉತ್ತಮೀಕರಣಕ್ಕೆ ಈಚೆಗೆ ಹೊಂದಿಕೊಂಡಂತೆ ಸುಣ್ಣ, ಇಟ್ಟಿಗೆಗಳ ಭಟ್ಟಿಗಳು, ಸಣ್ಣಪುಟ್ಟ ಕಟ್ಟಡಗಳು ಚದುರಿದಂತೆ
ಬರುತ್ತಿವೆ. ಒಂದೆಡೆ ಬಲ ಮಗ್ಗುಲಿನಲ್ಲಿ, ದಾರಿಯಿಂದ ಸುಮಾರು ಐವತ್ತಡಿ ಅಂತರದಲ್ಲಿ, ಬಹಳ ಉದ್ದಕ್ಕೆ ಭಾರತೀಯ ಸೈನ್ಯದ ಒಂದು ಖಾಯಂ ನೆಲೆ ವಿಸ್ತರಿಸಿರುವುದನ್ನು ಕಂಡೆವು. ಅದು ತನ್ನೆಲ್ಲ ಬೇಲಿ, ಕಂದಕ, ನಿಯತಾಂತರಗಳ ನಿರೀಕ್ಷಾ ಗೋಪುರಗಳಿಂದ ಭಯಾಧಾರಿತ ಗೌರವ ಹುಟ್ಟಿಸುತ್ತಿತ್ತು. ಹಾಗಾಗದಂತೆ ಭದ್ರತಾ ಬೇಲಿ ಮತ್ತು ನಮ್ಮ ದಾರಿಯ ನಡುವಣ ಜಾಗದಲ್ಲಿ, ನಿಯತಾಂತರದಲ್ಲಿ ಸಜೀವ ಗಾತ್ರದ ಸೈನಿಕ ಬೊಂಬೆಗಳನ್ನು ನಿಲ್ಲಿಸಿದ್ದರು. ಅವು ವೈವಿಧ್ಯಮಯ ಸಮವಸ್ತ್ರಗಳಲ್ಲಿ ಮತ್ತು
ಭಿನ್ನ ಸೇನಾ ಚಟುವಟಿಕೆಗಳಲ್ಲಿ ತೊಡಗಿದಂತಿದ್ದು, ಸಾರ್ವಜನಿಕ ಆಕರ್ಷಣೆ ಹೆಚ್ಚಿಸಿ, ಸೈನ್ಯದ ಕುರಿತು ಅಭಿಮಾನ ಅರಳುವಂತೆಯೂ ಮಾಡುತ್ತವೆ. ಕಾಜಿರಂಗ ಇನ್ನೇನು ೨೦-೩೦ ಕಿಮೀ ಎನ್ನುವ ಹಂತದಲ್ಲಿ ನಮ್ಮ ಚಾಲಕ, "ಜಿಂಕೆ, ಕಡವೆ ಮುಂತಾದ ವನ್ಯ ಮೃಗಗಳ ಸಹಿತ ಘೇಂಡಾಮೃಗಗಳೂ ಊರ ಜಾನುವಾರುಗಳೊಡನೆ ಮೇಯುತ್ತಿರುವ ಸಂಭವವಿದೆ, ಕಣ್ಣಿಡಿ" ಎಂದು ಎಚ್ಚರಿಸಿದ್ದ. ನಮಗೆ ಅದೃಷ್ಟವಿರಲಿಲ್ಲ, ಅಷ್ಟೆ. ಯೋಜನೆಯಂತೇ ಆರಾಮವಾಗಿ ಮಧ್ಯಾಹ್ನ ಕಾಜಿರಂಗದ ಟೀಜಿ ರಿಸಾರ್ಟ್
ಸೇರಿದೆವು. 

ವಾರದ ರಜಾದಿನ ಮತ್ತು ದೀರ್ಘ ರಜಾದಿನಗಳಲ್ಲಿ, ಅದರಲ್ಲೂ ಬೇಸಗೆಯ ದಿನಗಳಲ್ಲಿ ಪ್ರವಾಸಿಗಳಿಂದ ಗಿಜಿಗುಡುವ ಕಾಜಿರಂಗಕ್ಕೆ ನಾವು ಹೋದಂದು ‘ಸೀಸನ್ ಅಲ್ಲ’ವಂತೆ. ನಮ್ಮ ರಿಸಾರ್ಟ್ ಖಾಲಿ. (ರಾತ್ರಿಗಾಗುವಾಗ ಇನ್ನೊಂದು ಕುಟುಂಬ ಬಂದಿತ್ತು.) ಇಲ್ಲೂ ನಮಗೆ ರಾಜ ವೈಭವದ ಎರಡು ಜೋಡಿ ಕೋಣೆಗಳೇ ಸಿಕ್ಕವು. ಕಳೆದ ಒಂದು ವಾರದಲ್ಲಿ ಈ ಎರಡು ಬೆಟ್ಟ ಕಾಡುಗಳ ರಾಜ್ಯಗಳಲ್ಲಿ
ಕಾಣ ಸಿಕ್ಕ ಬಿದಿರು, ಬೆತ್ತ ಮತ್ತು ಫರ್ ಮರದ ತರಹೇವಾರಿ ದೈನಂದಿನ ಅಗತ್ಯಗಳು, ಸ್ಮರಣಿಕೆಗಳು, ಆಟಿಕೆಗಳಿಗೆ ಕಳಶಪ್ರಾಯವಾಗಿ ರಿಸಾರ್ಟಿನ ಕುರ್ಚಿ, ಮಂಚಗಳೆಲ್ಲ ಬೆತ್ತದ್ದೇ ಕಲಾಕೃತಿಗಳು! 

ಸಿದ್ಧ ಊಟ ರಿಸಾರ್ಟಿನಲ್ಲಿರಲಿಲ್ಲ. ಚಪ್ಪೆ ಮುಖ ಹೊತ್ತ ಬಾಣಸಿಗನಲ್ಲೇ ಪರಿಹಾರ ಕೇಳಿದೆವು. "ಹೊರಗೆಲ್ಲಾದರೂ ಸಿಗಬಹುದು. ಆದರೆ ಅವರಾದರೂ ನನ್ನಂತೇ ನಿಮ್ಮನ್ನು ಕಾಯಿಸಿಯೇ ಬೇಡಿಕೆ ಪೂರೈಸಿಯಾರು. ನಾ ಮಾಡ್ತೇನೆ
ಬಿಡಿ" ಎಂದ, ಒಪ್ಪಿದೆವು. ಸ್ವಲ್ಪ ಸಮಯ ಕಳೆದಾಗ, ನಮ್ಮದಲ್ಲದ ಪಾಕ ಪರಿಮಳ ಅಡುಗೆಮನೆಯಿಂದ ಬರುವಾಗ, ದೇವಕಿಗೆ ಯಾಕೋ ಕಸಿವಿಸಿ. ನಾವು ಮೊದಲೇ "ಮೀನು, ಮೊಟ್ಟೆಯೂ ಒಗ್ಗದ ಸಸ್ಯಾಹಾರಿಗಳು" ಎಂದು ಒತ್ತಿ ಹೇಳಿದ್ದರೂ ದೇವಕಿಯ ವಿಶ್ವಾಸ ಸಡಿಲಿತು. "ಮೈ ಮದದ್ ಕರೂಂ..." ಎಂದು ಮೆಲ್ಲಗೆ ಅಡುಗೆಮನೆಗೆ ಇಣುಕಲು ಹೋದಳು. ಬಾಣಸಿಗ ಜಾಣತನದಲ್ಲಿ "ನೈ ನೈ, ಹೋಗಯಾ..." ಎಂದು ಇವಳನ್ನು ತಳ್ಳಿಕೊಂಡೇ ಬಂದಂತೆ ಭೋಜನಾಲಯಕ್ಕೆ ಬಂದು, ಕೊಚ್ಚಿದ ನೀರುಳ್ಳಿ, ನಿಂಬೆ ಕಡಿ,
ಹಸಿಮೆಣ್ಸು ಇಟ್ಟು ಹೋದ. ಸಾಕಷ್ಟು ಬೇಗನೇ ಕುದಿಕುದಿ ಮಿಶ್ರ ತರಕಾರೀ ಗೊಜ್ಜು, ಬೇಳೆ ತೊವ್ವೆ ಬಂದವು. ಬಿಸಿ ಬಿಸಿ ರೋಟಿಗಳೂ ‘ಸಯೀ ದಿಶಾ, ಸಯೀ ಟೈಮಿಂಗ್’ನಲ್ಲಿ ಬಿಡುತ್ತಾ ಬಂದ. ನಾನೂ ಅನಂತನೂ ಒಂದೆರಡರ ಲೆಕ್ಕ ಹಿಡಿಯದೇ ನಿರಾತಂಕವಾಗಿ ಸಿಕ್ಸರೇ ಹೊಡೆದೆವು. ಆದರೆ ಮಹಿಳಾಮಣಿಗಳಿಬ್ಬರು, ಮುಖ್ಯವಾಗಿ ದೇವಕಿ, ಸಣ್ಣ ಓಟಗಳನ್ನಷ್ಟೇ ತೆಗೆದು, ಎಸೆತಕ್ಕೆ ಆಕ್ಷೇಪಣೆ ಸ್ವರ ಎತ್ತಿದಳು, "ಎಣ್ಣೆ ಏನೋ ಅಡ್ಡವಾಸನೆ ಬರುತ್ತಿದೆ." ಬಾಣಸಿಗ ‘ನೋ ಬಾಲ್’ ಸೂಚನೆಯನ್ನು ತಳ್ಳಿ ಹಾಕಿ, "ನೈ ನೈ, ಅಚ್ಚಾ
ರಿಫೈನ್ಡ್ ಆಯಿಲ್...." ವಾದಿಸಿದ. ಅಹವಾಲು ಮರುಪರಿಶೀಲನೆಗೆ ಥರ್ಡ್ ಅಂಪೈರಿಗೆ (ಹೋಟೆಲ್ ಮಣೆಗಾರನಲ್ಲಿಗೆ) ಹೋಯ್ತು. ಆತ "ಹಾಂ, ನಿಮಗೆ ಒಗ್ಗದ ಸಾಸಿವೆ ಎಣ್ಣೆ ವಾಸನೆಯಿರಬೇಕು" ಎಂದವನೇ ಆಟ ಕಾಯ್ದುಕೊಂಡ. ದೇವಕಿ ಒಮ್ಮೆ ತಿಂದದ್ದು ಬಾಯಿಗೆ ಬಂದಂತನ್ನಿಸುವ ಮಟ್ಟದ ಸಂಕಟ ಅನುಭವಿಸಿ, ಹೇಗೋ ಚೇತರಿಸಿಕೊಂಡಳು. ಪ್ರಸಂಗ ನೆನಪಿಸಿದರೆ ಇಂದೂ "ಸಾಸಿವೆ ಎಣ್ಣೆ ನಾನು ಕಾಣದವಳೇ. ಅದು ಮಾಂಸ ಕರಿದ ಎಣ್ಣೆಯೇ ಇರಬೇಕು" ಎಂಬ ವಾದದಲ್ಲಿ ಅಚಲಳಿದ್ದಾಳೆ!
(ಮಾಡಿಸಿದ ಪಾಪ ತಿಂದು ಪರಿಹಾರ ಆಗಿಹೋಗಿತ್ತು!) 

ನಮ್ಮ ವನ ಸಂಚಾರಕ್ಕಿದ್ದ ಜಿಪ್ಸಿ ರಿಸಾರ್ಟಿಗೆ ಬಂದು, ನಮ್ಮ ಊಟ ಮುಗಿಯುವುದನ್ನೇ ಕಾದಿತ್ತು. ಮುಂದೆ ಸುಮಾರು ಎರಡೂವರೆ ಗಂಟೆ, ಅಂದಾಜು ಇಪ್ಪತ್ತೈದು ಕಿಮೀನಷ್ಟು ಓಟದಲ್ಲದು, ನಮ್ಮನ್ನು ವನಧಾಮದ ಒಳಗಿನ ಕಚ್ಚಾದಾರಿಯಲ್ಲಿ ನಿಧಾನಕ್ಕೆ ಸುತ್ತಾಡಿಸಿತು. ಭಾರತದಲ್ಲಿ ಅಪರೂಪಕ್ಕೆ ಪುರುಷ ನಾಮಧಾರೀ ನದಿ - ಬ್ರಹ್ಮಪುತ್ರದ ಅಂಚಿನಲ್ಲಿ ಹರಡಿಕೊಂಡ ವಿಸ್ತಾರ ಜವುಗುಪ್ರದೇಶವನ್ನೇ ಮುಖ್ಯವಾಗಿ ನೆಚ್ಚಿಕೊಂಡ ವನಧಾಮವಿದು. ಬಹುತೇಕ ಎರಡೂ ಮಗ್ಗುಲಲ್ಲಿ ನೀರ ಹರಹುಗಳು, ಆನೆಯನ್ನೇ
ಮರೆಮಾಡುವಷ್ಟು ಎತ್ತರಕ್ಕೆ ಸೊಕ್ಕಿದ ಹುಲ್ಲು ತುಂಬಿದ ಜವುಗುಪ್ರದೇಶಗಳು ಘೆಂಡಾಮೃಗಕ್ಕೆ ಪ್ರಶಸ್ತ ನೆಲೆಯಂತೇ ಕಾಣುತ್ತಿತ್ತು. ನಮ್ಮ ದಾರಿಯ ಮಟ್ಟಿಗೆ ಅಲ್ಲಿ ಇಲ್ಲಿ ಅಂಚುಕಟ್ಟಿದಂತೆ ದಟ್ಟ ಕಾಡೂ ಸಿಕ್ಕಿದ್ದಿತ್ತು. ಒಟ್ಟಾರೆ ೩೪೮ ಚದರ ಕಿಮೀ ವಿಸ್ತೀರ್ಣದ ವನಧಾಮ, ಮುಖ್ಯವಾಗಿ ಮೂರು ದ್ವಾರಗಳಲ್ಲಿ ಹಾಗೂ ಎರಡು ಬಗೆಗಳಲ್ಲಿ (ಜಿಪ್ಸಿ ಮತ್ತು ಆನೆಸವಾರಿ) ವನ್ಯಾಸಕ್ತರಿಗೆ ಸೀಮಿತ ವೀಕ್ಷಣಾ ಯಾನಗಳಿಗೆ ತೆರೆದುಕೊಳ್ಳುತ್ತದೆ. ಇದು ಸುಮಾರು ಎರಡೂವರೆ ಸಾವಿರದಷ್ಟಿರುವ ಒಂದು ಕೊಂಬಿನ ಘೆಂಡಾಮೃಗಗಳಿಂದಲೇ ಪ್ರಸಿದ್ದ. ಆದರೆ ಹುಲಿ, ಆನೆ, ನೀರಾನೆ, ಹಂದಿ, ಆಮೆ, ಹಕ್ಕಿಗಳೇ ಮೊದಲಾದ ವನ್ಯ ಹಾಗೂ ವೈವಿಧ್ಯಮಯ ಜೀವಜಾಲವನ್ನು ತನ್ನ ಉಡಿಯಲ್ಲಿ ಆರೋಗ್ಯಪೂರ್ಣವಾಗಿ ಪೋಷಿಸುತ್ತಿದೆ. 

ನಮ್ಮ ವನವಿಹಾರದಲ್ಲಿ ಕಾಡು ಹಂದಿ, ಜವುಗುಪ್ರದೇಶದ ಜಿಂಕೆ, ಮಂಗ,
ಆಮೆ, ಹಕ್ಕಿಗಳು ಎಂದೆಲ್ಲ ಸಾಕಷ್ಟು ಕಾಣಸಿಕ್ಕವು. ಒಂದು ನೀರಾಶ್ರಯದಲ್ಲಿ ಸುಮಾರು ಹದಿನೈದು ಕಾಡಾನೆಗಳ ಹಿಂಡಿನ ಮೀಯಾಣ ನೋಡಲು ಸಿಕ್ಕಿತ್ತು. ನಾವು ನೋಡುತ್ತಿದ್ದಂತೆ ಅವುಗಳಲ್ಲೊಂದು, ಸಮಯಪರಿಪಾಲಕನ ಶಿಸ್ತಿನಲ್ಲಿ ಎದುರು ದಂಡೆಗೇರಿ ಘೀಳಿಟ್ಟದ್ದು, ಉಳಿದವು ಗಂಭೀರವಾಗಿ ನೀರಿನಿಂದ ಹೊರಬಂದು ಅನುಸರಿಸಿ ನಡೆದದ್ದು ಕುತೂಹಲಕರವಾಗಿತ್ತು. ಒಟ್ಟಾರೆ ಲೆಕ್ಕಕ್ಕೆ ಐದಕ್ಕೂ ಮಿಕ್ಕು ಘೆಂಡಾ ದರ್ಶನ ನಮಗಾದರೂ ಎಲ್ಲವೂ ದೂರ ದರ್ಶನಗಳೇ. ಹಂದಿ, ಜಿಂಕೆ, ಕೆಲವು ಹಕ್ಕಿಗಳಲ್ಲದೆ,
ಅಂಚುಗಳಲ್ಲಿ ಮೇಯುತ್ತಿದ್ದ ಊರ ಜಾನುವಾರುಗಳನ್ನೂ ಗಮನಿಸಿದೆವು. 

ಮೂರು ನಾಲ್ಕು ಜಿಪ್ಸಿಗಳಲ್ಲಿ, ಸಣ್ಣ ತಂಡಗಳಲ್ಲಿ ಅನ್ಯ ವನ್ಯಕುತೂಹಲಿಗಳು ಸಿಕ್ಕಿದ್ದರು. ಆನೆ ಸವಾರಿಯಲ್ಲಿ ಸುತ್ತಾಟ ಬೆಳಗ್ಗೆ ಮಾತ್ರವಂತೆ. ಹಾಗಾಗಿ ನಮಗೆ ದರ್ಶನವಾಗಲಿಲ್ಲ. ಪ್ರವಾಸಿಗಳಿಗೆ ಎಲ್ಲೂ ನಿಯೋಜಿತ ಸವಾರಿ ಬಿಟ್ಟು, ಅಡ್ಡಾಡುವ ಸ್ವಾತಂತ್ರ್ಯ ಇಲ್ಲ. ದಾರಿಯಲ್ಲಿ ಕೆಲವು ವನರಕ್ಷಕರ ಅಟ್ಟಳಿಗೆಗಳನ್ನು ದಾಟಿದ್ದಿತ್ತು. ನಡುವೆ ಒಂದು ಜಲಾಶ್ರಯದ
ಬಳಿಯ ಅಟ್ಟಳಿಗೆಯ ಅಂಗಳದಲ್ಲಿ ಎಲ್ಲ ವಾಹನಗಳಿಗೂ ಐದು - ಹತ್ತು ಮಿನಿಟಿನ ವಿರಾಮ ಮತ್ತು ನಮಗೆ ಇಳಿದು ಸಣ್ಣದಾಗಿ ಅಡ್ಡಾಡುವ ಅವಕಾಶವಿತ್ತು. ಆದರೆ ಅಟ್ಟಳಿಗೆ ಹತ್ತಿ ಹೆಚ್ಚಿನ ವೀಕ್ಷಣೆ ಮಾಡುವ ಆಸೆ ಹತ್ತಿಕ್ಕಬೇಕಾಯ್ತು. 

ಸೂರ್ಯಾಸ್ತ ಸಮೀಪಿಸುತ್ತಿದ್ದಂತೆ, ನಾವು ದ್ವಾರ ಸಮೀಪಿಸಿದ್ದೆವು. ಆಗ ಎರಡು ಸಾಕಾನೆಗಳು, ಜೂಲು ಬಿಟ್ಟುಕೊಂಡ ಹಿಮಯುಗದ ಆನೆ - ಮ್ಯಾಮತ್ತಿನಂತೆ, ನಡೆದು ಬರುವುದನ್ನು ಗಮನಿಸಿದೆವು. ನಿಜದಲ್ಲಿ ಅವು ಭಾರೀ ಹುಲ್ಲ ಹೊರೆ ಹೊತ್ತಿದ್ದವು. ಅದು ಎಲ್ಲೋ ಜವುಗು ಪ್ರದೇಶದಲ್ಲಿ ಅದರ ಮಾಹುತರು ಕಡಿದು ಬೆನ್ನಿಗೇರಿಸಿದ್ದು; ಅದರ ರಾತ್ರಿಯೂಟವನ್ನು ಬುತ್ತಿ ಕಟ್ಟಿಕೊಟ್ಟಂತೆ. ಒಬ್ಬ ಮಾಹುತ ಹುಲ್ಲ ಹೊರೆಯ ಮೇಲೆ ತನ್ನನ್ನು ಆನೆಗೆ ಹೇರಿಕೊಂಡಿದ್ದ. ಆನೆ ಅವಕ್ಕೆಲ್ಲ ಜಗ್ಗದ ದೈತ್ಯನಾದರೂ ತಂಗುದಾಣ ಬಂದಾಗ,
ಹೊರೆ ಇಳಿಸಿ, ಸೊಂಡಿಲಾರೆ (ಕೈಯಾರೆ ಎನ್ನುವಂತೆ) ಸರಪಳಿಯನ್ನು ಮಾಹುತರಿಗೆ ಎತ್ತಿಕೊಟ್ಟು, ತಮ್ಮನ್ನು ಕಟ್ಟಿಸಿಕೊಳ್ಳುತ್ತಿದ್ದದನ್ನು ಕಂಡಾಗ, ನಮ್ಮಲ್ಲಿ ವಿಷಾದ ಮೂಡದಿರಲಿಲ್ಲ. ಸ್ವಲ್ಪ ಮೊದಲು ಜಲಾಶ್ರಯದಲ್ಲಿ ವಿಹರಿಸಿ ಹೋದ ಹಿಂಡಿನಂತೆ, ಇವೂ ಎಲ್ಲೋ ಸ್ವತಂತ್ರ ಬಾಳ್ವೆ ಕಂಡುಕೊಳ್ಳಬೇಕಿತ್ತು, ಪಾಪ. ಇಂಥ ಸಂದರ್ಭಗಳಲ್ಲೆಲ್ಲ ನನಗೆ ನಾಗರಹೊಳೆ ವನಧಾಮ ಪುನರುಜ್ಜೀವನದ ಮಹಾನಾಯಕ ಚಿಣ್ಣಪ್ಪ ನೆನಪಿಗೆ ಬರುತ್ತಾರೆ. ಆಸಕ್ತಿ, ವೃತ್ತಿ ಮತ್ತು ಅಧ್ಯಯನದಿಂದ ಚಿಣ್ಣಪ್ಪ ಏಷ್ಯಾ ಆನೆಗಳ ಕುರಿತು
ಅದ್ವಿತೀಯ ಪಂಡಿತ. ನಾಗರಿಕತೆ ನಡೆದು ಬಂದ ಪರಿಯಲ್ಲಿ ಮತ್ತು ಇಲಾಖಾ ಪರಂಪರೆಯಲ್ಲಿ ಅವರು ಅನಿವಾರ್ಯವಾಗಿ ಸಾಕಷ್ಟು ಸಾಕಾನೆಗಳನ್ನೂ ನಿರ್ವಹಿಸಿದ್ದಾರೆ. ಆದರೂ ಆನೆಗಳ ಕುರಿತು ಅವರೊಳಗಿನ ಗೌರವ ಭಾವ ಜಾಗೃತಗೊಂಡಂದಿನಿಂದ, ವೈಯಕ್ತಿಕವಾಗಿ ಆನೆ ಸವಾರಿಯನ್ನು ಮಾಡಿದವರಲ್ಲ! ಭಾರತದ ಉತ್ತರ-ಪೂರ್ವ ಮೂಲೆಯ, ಏನೇನೂ ನಾಗರಿಕ ಸೌಕರ್ಯಗಳಿಲ್ಲದ ವನಧಾಮ ಒಂದನ್ನು ಚಿಣ್ಣಪ್ಪ ನೋಡಲು ಹೋಗಿದ್ದ ಕತೆ ಗೆಳೆಯ ನಿರೇನ್ ಹೇಳಿದ್ದರು. ಅಲ್ಲಿ ಎಲ್ಲರೂ ಮಾಡುವಂತೆ
ಸಾಕಾನೆಗಳ ಸವಾರಿಯನ್ನು ಚಿಣ್ಣಪ್ಪ ಒಪ್ಪಿಕೊಳ್ಳಲೇ ಇಲ್ಲವಂತೆ. ದಟ್ಟ ಕಾಡಿನಲ್ಲಿ, ಅಸಂಖ್ಯ ಜವುಗು ಪ್ರದೇಶಗಳಲ್ಲಿ, ದಿನಗಟ್ಟಳೆ ನಡೆದೇ ಆ ವನಧಾಮವನ್ನು ಅನುಭವಿಸಿದ್ದರಂತೆ! 

ಕಾಜಿರಂಗದಲ್ಲಿರುವ ಆರ್ಕಿಡ್ ಉದ್ಯಾನದ ಒಳಗಿನ ಬಯಲು ರಂಗದಲ್ಲಿ ನಿತ್ಯ ಸಂಜೆ ಅಸ್ಸಾಂ ಸಾಂಸ್ಕೃತಿಕ ಕಲಾಪಗಳ ಪ್ರದರ್ಶನ ಇರುತ್ತದೆಂದು ಮೃಣಾಲ್ ತಿಳಿಸಿದ್ದರು. ಅದನ್ನು ನೋಡ ಬೇಕಿದ್ದಲ್ಲಿ ನೀವೇ ಟಿಕೆಟ್ ಕೊಂಡು ಹೋಗಬಹುದು ಎಂದೂ ಸೂಚಿಸಿದ್ದರು. ಅವು ಒಂದೇ ವಠಾರದೊಳಗಿನ ಸಂಗತಿಗಳಾದರೂ ಪ್ರವೇಶಧನ ಪ್ರತ್ಯೇಕ ಮತ್ತು ದುಬಾರಿ. ಉದ್ಯಾನವನ್ನೂ ನೋಡುವ ಆಸಕ್ತಿ ನಮಗಿತ್ತು. ಆದರೆ ನಾವು ರಿಸಾರ್ಟ್ ತಲಪುವಾಗಲೇ ಕತ್ತಲಾದ್ದರಿಂದ ಆ ವೆಚ್ಚ ಉಳಿತಾಯವಾಯ್ತು! (ಯಾಕೆ? ಸಾಂಸ್ಕೃತಿಕ ಕಲಾಪಕ್ಕೆ
ಹೋದಾಗ ಅರೆಬರೆ ದೀಪದಲ್ಲಿ ಕಂಡ ಉದ್ಯಾನದ ರೂಪವಾದರೂ ಶಿಲ್ಲಾಂಗಿನ ‘ಮಾದರಿ ಹಳ್ಳಿ’ಯ ಕೃತಕತೆಯನ್ನು ಹೊದ್ದಂತೇ ಕಾಣಿಸಿತು.) 

ಆರೂವರೆಯ ಸುಮಾರಿಗೆ ಕಾರೇರಿ ಆರ್ಕಿಡ್ ಉದ್ಯಾನಕ್ಕೆ ಹೋದೆವು. ಕೇವಲ ಸಾಂಸ್ಕೃತಿಕ ಕಲಾಪಕ್ಕಷ್ಟೇ ‘ದಂಡ’ ಕೊಟ್ಟು ನೋಡಿದೆವು. ಅಸ್ಸಾಂನ ಕೆಲವು ಜನಪದ ನೃತ್ಯಪ್ರಕಾರಗಳನ್ನು ಪೋಣಿಸಿ ಸುಮಾರು ಒಂದೂವರೆ ಗಂಟೆಯ ಪ್ರದರ್ಶನವದು. ಹೇಳಿಕೊಳ್ಳುವಂತ ವಿಶೇಷವೇನೂ ಇಲ್ಲ. ಅದರ ನಿರ್ವಾಹಕ ‘ಬುದ್ಧಿವಂತ’ ಕೆಲವು ಕಾಲದಿಂದ ಈ ಸಾಂಸ್ಕೃತಿಕ ಗುತ್ತಿಗೆ ನಡೆಸುತ್ತಿರುವಂತೆ ತೋರಿತು. ಆತನ ಧ್ವನಿ ಮತ್ತು ನಿರ್ವಹಣಾ ಶೈಲಿಗಳು ಕೃತಕ ಗಹನತೆಯನ್ನೂ ನಮ್ಮಿಂದ
ನಾಟಕೀಯ ಪ್ರೋತ್ಸಾಹವನ್ನೂ ಬಯಸುವ ಕ್ರಮ ನನಗೆ ಹಿಡಿಸಲಿಲ್ಲ. ಕುಣಿತ ಮಣಿತಗಳಾದರೂ ನಮ್ಮ ಶಾಲಾ ಕಾಲೇಜು ಮಕ್ಕಳ ಸಾಮಾನ್ಯ ಜನಪದ ನೃತ್ಯಗಳಿಗಿಂತ ಉತ್ತಮವೂ ಇರಲಿಲ್ಲ. ಇದು ಊರಿನ ಮಿತಿಯೋ ಸರಕಾರೀ ಪ್ರಣೀತ ಕಲಾ ಬಳಗದ ಮಿತಿಯೋ ಗೊತ್ತಿಲ್ಲ. ಶಿಲ್ಲಾಂಗ್ ಮಾದರಿ ಹಳ್ಳಿಯ ವಠಾರದಲ್ಲಿನ ಬಯಲು ರಂಗಭೂಮಿ ಜೀವ ತಳೆದರೆ, ಅಲ್ಲಿನ ಸಭಾಭವನ ಪೂರ್ಣವಾದರೆ, ಮೇಘಾಲಯದಲ್ಲೂ ಇನ್ನೆಷ್ಟು ಇಂಥವು ಹುಟ್ಟಿಕೊಳ್ಳುತ್ತಾವೋ ಎಂದು ಯೋಚಿಸಿದಾಗ ಬೇಸರ ಹೆಚ್ಚಿತು. ಇದು ಸಿನಿಕನ
ಕಲ್ಪನಾಲಹರಿಯಲ್ಲ ಎನ್ನುವುದಕ್ಕೆ ನಮ್ಮೂರಿನದ್ದೇ ಒಂದು ಉದಾಹರಣೆ ಸಾಕಾದೀತು. ಕರ್ನಾಟಕ ಸರಕಾರ ಕಲೆ ಸಾಹಿತ್ಯಕ್ಕೆಂದೇ ರೂಪಿಸಿದ ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ಯ ನೆರಳಿಗೆ ಇಂದು ಯಾವುದೇ ಪ್ರಾಮಾಣಿಕ ಸಾಹಿತಿ, ಕಲೆಗಾರರು ಬರಲು ಭಯಪಡುತ್ತಾರೆ! 

ಕಾಜಿರಂಗದ ರಾತ್ರಿ ಗೌಹಾತಿಯಂತೇ ಸುಖವಾಗಿ ಕಳೆಯಿತು. ಬೆಳಗ್ಗಿನ ತಿಂಡಿಯನ್ನೂ ಏಳೂವರೆಯೊಳಗೇ ಮುಗಿಸಿ ಕಾರು ಹೊರಡಿಸಿದ್ದೆವು. ಮತ್ತೆ ನೇರ ಹೋದಲ್ಲಿ ಗೌಹಾತಿ ವಿಮಾನ ನಿಲ್ದಾಣ ನಮಗೆ ನಾಲ್ಕೂವರೆ ಗಂಟೆಯ ದಾರಿ. ಅಂದರೆ ನಮ್ಮಲ್ಲಿ ಕನಿಷ್ಠ ಮೂರು ಗಂಟೆಯಷ್ಟು ಹೆಚ್ಚುವರಿ ಸಮಯ ಉಳಿಯುತ್ತಿತ್ತು. ಅದರಲ್ಲಿ ಕನಿಷ್ಠ ಬ್ರಹ್ಮಪುತ್ರ ನದಿಯ ಸ್ಪಷ್ಟ ದರ್ಶನ, ಇನ್ನೇನಾದರೂ ಸಣ್ಣಪುಟ್ಟ ದಾರಿಬದಿಯ ಹೊಸ ಅನುಭವಗಳ ಆಸೆ ನಾವು ಕಟ್ಟಿಕೊಂಡದ್ದೇ ಬಂತು. ಚಾಲಕ ಮಹಾಶಯ, ಮೃಣಾಲ್
ಕುಮಾರರಿಗೆ ತಿಳಿಯದಂತೇ ನಮ್ಮಿಂದ ಏನಾದರೂ ಒಳಸಂಪಾದನೆ ಸಾಧ್ಯವೇ ಎಂಬ ಸಣ್ಣ ಶೋಧ ನಡೆಸಿದ. ನಾವು ಪ್ಯಾಕೇಜ್ ನೆನಪಿಸಿ, ಬೇಕಿದ್ದರೆ ಮೃಣಾಲ್ ಸಂಪರ್ಕಿಸುತ್ತೇವೆಂದಲ್ಲಿಗೆ ವರಸೆ ಬೇರೇ ಮಾಡಿದ. ಕಾರಿನ ವೇಗ ತಗ್ಗಿಸಿ, ದಾರಿ ಬದಿಯ ಕರಕುಶಲ ಮಳಿಗೆಯಲ್ಲಿ ವೇಳೆ ಕಳೆಸಿ, ಚಾ ವಿರಾಮ ಮತ್ತು ಭೋಜನ ವಿರಾಮಗಳನ್ನು ವಿಸ್ತರಿಸಿ, ಅಗತ್ಯಕ್ಕೂ ಒಂದು ಗಂಟೆ ಮೊದಲೇ ನಮ್ಮನ್ನು ಗೌಹಾತಿ ವಿಮಾನ ನಿಲ್ದಾಣಕ್ಕೆ ಮುಟ್ಟಿಸಿಬಿಟ್ಟ. ವಾರ ಕಾಲದಲ್ಲಿ ಕಂಡ ಪ್ರಾಕೃತಿಕ ಸೌಂದರ್ಯ ಮತ್ತು ಸಾಮಾನ್ಯ
ಜನರ ಸರಳತೆಗೆ ವಿರುದ್ಧವಾಗಿ ‘ಉದ್-ಯಮ’ ಹೇಗೆ ಕೊನೆಗೆ ಸಿಕ್ಕ ಮೂವರೂ ಚಾಲಕರನ್ನು ಹೇಗೆ ತಪ್ಪು ದಾರಿಯಲ್ಲಿ ಪಳಗಿಸಿದೆ ಎಂಬ ವಿಷಾದವಷ್ಟೇ ನಮ್ಮಲ್ಲುಳಿಯಿತು. 

ಸಕಾಲಕ್ಕೆ ಗಣಪತಿ ಭಟ್ ದಂಪತಿ ನಮ್ಮನ್ನು ವಿಮಾನ ನಿಲ್ದಾಣದಲ್ಲಿ ಸೇರಿಕೊಂಡರು. ಸಕಾಲಕ್ಕೆ ವಿಮಾನಯಾನವೂ ಸಂಪನ್ನಗೊಂಡಿತು. ಗಣಪತಿಭಟ್ ದಂಪತಿ ಮತ್ತು ನಮ್ಮ ಜೋಡಿ ಹೊರಟಂತೇ ಬೆಂಗಳೂರಿನ ನೆಲೆ ಕಂಡುಕೊಂಡರೆ, ಅನಂತ ರುಕ್ಮಿಣಿಯರು ನಿಲ್ದಾಣದಿಂದ ನೇರ ಮೈಸೂರಿಗೆ ಇರುವ ಏರ್ ಬಸ್ ಸೌಕರ್ಯ ಬಳಸಿಕೊಂಡರು. ಇಡಿಯ ಪ್ರವಾಸವನ್ನು ಕುರಿತಂತೆ ವಿರಾಮದ ಸಿಂಹಾವಲೋಕನಕ್ಕೆ ಅವಕಾಶ ಒದಗಿಸಿದ ಈ ಕಥನದಿಂದ ಸ್ಫುರಿಸಿದ ಒಂದೆರಡು ತಥ್ಯಗಳನ್ನಷ್ಟೇ ಸಂಗ್ರಹಿಸಿ ಮುಗಿಸುವುದಾದರೆ.....

"ರಂಗಾ ನಾಯಕ ಕೇಳು ರಾಜೀವ......" 

ಹಿಂದೆಲ್ಲ ಯೂಥ್ ಹಾಸ್ಟೆಲ್ಸ್ ಆಫ್ ಇಂಡಿಯಾ ಹಿಮಾಲಯದಲ್ಲಿ ಚಾರಣ ಶಿಬಿರಗಳನ್ನು ನಡೆಸುತ್ತಿದ್ದ ಪರಿ ಕೇಳಿ ನನಗೆ ಅಷ್ಟೇನೂ ಪ್ರೀತಿ ಬಂದಿರಲಿಲ್ಲ. ಆದರಿಲ್ಲಿ ಅವರದೇ ಮೇಘಾಲಯ ಶಾಖೆ ಆಯೋಜಿಸಿದ ‘ಚಾರಣ ಮತ್ತು ಗುಹಾಯಾನ’ ನಿಜಕ್ಕೂ ಆದರ್ಶಪ್ರಾಯವಾಗಿತ್ತು. ಯೂಥ್ ಹಾಸ್ಟೆಲ್ಸ್ ಸಂಘಟನೆಯ ಮೂಲ ಬಂಧದಲ್ಲೇ ಸಾಹಸೀ ತಂಡವನ್ನು ಆಯುವುದಕ್ಕಿರುವ ಮಾರ್ಗದರ್ಶೀ ಸೂತ್ರಗಳು ದುರ್ಬಲವಾಗಿವೆ. ಅದಕ್ಕೆ ಸಣ್ಣ ಉದಾಹರಣೆ
ನಮ್ಮದೇ ತಂಡ - ಅವರದೇ ಕಾನೂನು, ಯೂಥ್ ಎಂದರೆ ಪ್ರಾಯ ಹದಿನೆಂಟರ ಮೇಲೆ, ಅರವತ್ತರ ಒಳಗೆ ಎನ್ನುತ್ತದೆ. ಆದರೆ ನಮ್ಮ ತಂಡದಲ್ಲಿ ಹನ್ನೆರಡರ ಬಾಲೆಯೂ ಇದ್ದಳು ಎಪ್ಪತ್ನಾಲ್ಕರ ವೃದ್ಧೆಯೂ ಇದ್ದಳು! (ಅವರ ನಿರ್ವಹಣೆ ಸಾಮಾನ್ಯ ನಿರೀಕ್ಷೆಗಳನ್ನು ಮೀರಿಯೇ ಇದ್ದದ್ದು ತಂಡದ ಅದೃಷ್ಟ.) ಇನ್ನು ಮೇಘಾಲಯ - ಪ್ರವಾಸೋದ್ಯಮವಿರಲಿ, ಕನಿಷ್ಠ ಸಾರ್ವಜನಿಕ ಸವಲತ್ತುಗಳನ್ನೂ ಒದಗಿಸುವಲ್ಲಿ ಯಶಸ್ಸು ಬಹಳ ದೂರವಿರುವ ರಾಜ್ಯ. ಸಣ್ಣ ಉದಾಹರಣೆ - ರಾಜ್ಯ ರಾಜಧಾನಿಯೇ ಆದ, ಸಾಕಷ್ಟು ದೊಡ್ಡದೂ ಇರುವ
ಶಿಲ್ಲಾಂಗಿನೊಳಗೇ ಸಮರ್ಥ ಸಮೂಹ ಸಾರಿಗೆ ವ್ಯವಸ್ಥೆ, ಅಂದರೆ ಸಿಟಿ ಬಸ್ ಜಾಲ ಇಲ್ಲ. ಇನ್ನು ನಾವು ಅನುಭವಿಸಿದ ಜಾಗಗಳಿಗೆ ಸಾಮಾನ್ಯರು ಸಾರಿಗೆ, ಮಾರ್ಗದರ್ಶಿ ನೆಚ್ಚಿ ಹೋಗುವುದು ಅಸಾಧ್ಯ. ಈ ವಿಪರೀತಗಳ ಅರಿವಿದ್ದೂ ‘ಚಾರಣ ಮತ್ತು ಗುಹಾದರ್ಶನ’ ಕಲಾಪವನ್ನು ಕಳೆದ ಒಂದೆರಡು ವರ್ಷಗಳಿಂದ, ವಿವಿಧ ಋತುಮಾನಗಳಲ್ಲಿ, ತಲಾ ನಲ್ವತ್ತೈವತ್ತು ಮಂದಿಯ ಕನಿಷ್ಠ ಹತ್ತಿಪ್ಪತ್ತು ತಂಡಗಳಿಗಾದರೂ ಯಶಸ್ವಿಯಾಗಿ ಯೂಥ್ ಹಾಸ್ಟೆಲ್ಸ್ ಕೊಡುತ್ತಲೇ ಬಂದಿದೆ. ಮುಂದೆಯೂ ಕೊಡುವ ಉತ್ಸಾಹ
ಉಳಿಸಿಕೊಂಡಿದೆ. ವೈಯಕ್ತಿಕವಾಗಿ (ನನಗಿದ್ದಂತೆ) ಎಲ್ಲರಿಗೂ ಹತ್ತೆಂಟು ಕೊರತೆಗಳು ಕಾಡಿದ್ದಿರಬಹುದು. ಆದರೆ ಅವು ಯಾವವೂ ಕಲಾಪಗಳ ಯಶಸ್ಸಿನ ದಾರಿಯಲ್ಲಿ ಕಂಟಕವಾಗದಂತೆ ನಡೆಸಿಕೊಂಡು ಹೋಗುವ ಸಂಘಟಕರ ಮನೋಭಾವ ಬಹಳ ದೊಡ್ಡದು ಮತ್ತು ದೃಢವಾದದ್ದು. ಎಲ್ಲಕ್ಕೂ ಮತ್ತಿವೆಲ್ಲವೂ ನಮಗಿಬ್ಬರಿಗೆ ಒದಗಲು ಏಕೈಕ ಕಾರಣಳಾದ ರುಕ್ಮಿಣಿಗೂ ಧನ್ಯವಾದಗಳು, ಅಭಿನಂದನೆಗಳು. 


(ಮೇಘಾಲಯ ಸರಣಿ ಮುಗಿಯಿತು.)

3 comments:

  1. Hat's Off .. senior citizens... Keep it up... Let Your Energetic Spirit Attract Youngsters As Soon As Possible.... Regards .....

    ReplyDelete
  2. ಫೇಸ್ ಬುಕ್ಕಿನಲ್ಲಿ ಪದ್ಮ ಕುಮಾರಿಯವರು ಬರೆದಿದ್ದರು: ಮುಗಿದೇ ಹೋಯಿತಾ? ಈ ಮೇಘಾಲಯ ಪ್ರವಾಸ ಸರಣಿ ನನಗೆ ಅತ್ಯಂತ ಖುಷಿ ಕೊಟ್ಟಿತು. ಬಹುಶಃ ನೀವು ಭೇಟಿ ನೀಡಿದ ಸ್ಥಳಕ್ಕೆಲ್ಲಾ ಹೋಗಲು ಸಾಧ್ಯವಿಲ್ಲ ಎನ್ನುವ ಮನಸ್ಥಿತಿಯೂ ಇದಕ್ಕೆ ಕಾರಣ ಇರಬಹುದು.

    ಸ್ಥಳೀಯ ಆಹಾರ ವ್ಯವಸ್ಥೆಯನ್ನು ಸ್ವೀಕರಿಸಿ, ಖುಷಿ ಪಡಬೇಕು ಎನ್ನುವುದೂ ಪ್ರವಾಸದ ಒಂದು ಆಯಾಮವಾದರೂ ನಮ್ಮಂಥ ಪುಳಿಚಾರ್ಗಳಿಗೆ ಈಗ ಎಲ್ಲಿ ಹೋದರೂ ಸರಿಯಾದ ಹೋಟೆಲ್ ಹುಡುಕಿಕೊಳ್ಳುವುದೇ ದೊಡ್ಡ ಸಮಸ್ಯೆ. ಹೊಟ್ಟೆಪಾಡು ಸರಿ ಹೋದರೆ ಎಂಥಾ ಪ್ರವಾಸವಾದರೂ ಖುಷಿ ಕೊಟ್ಟುಬಿಡುತ್ತದೆ.

    ಮೂಲ ವ್ಯವಸ್ಥೆಗಳೇ ಕಾಣದ ಪ್ರವಾಸೋದ್ಯಮವೇ ನಮ್ಮಲ್ಲಿ ಹೆಚ್ಚಾಗಿದೆ. ಮೊನ್ನಿನ ಬಜೆಟ್ ಪ್ರಸ್ತಾವನೆಯಲ್ಲೂ ಇದನ್ನೇ ಕೇಳಿದ್ದು. ನಮ್ಮ ಜಿಲ್ಲೆಯ ವಾಣಿವಿಲಾಸ ಸಾಗರದ ಬಳಿ ಕೃಷ್ಣ ರಾಜೇಂದ್ರ ಒಡೆಯರ್ ಅವರ ಪ್ರತಿಮೆ ಸ್ಥಾಪಿಸುವರಂತೆ. ನಿಮ್ಮ ಪ್ರವಾಸ ಸುಸೂತ್ರವಾಗಿ ಸಂಪನ್ನಗೊಂಡಿದ್ದಕ್ಕೆ ಹಾಗೂ ಅದರ ರಸದೌತಣ ನಮಗೂ ದೊರೆಯುವಂತೆ ಮಾಡಿದ್ದಕ್ಕೆ ಧನ್ಯವಾದಗಳು.
    ಅಲ್ಲೇ ಕುಡ್ಪಿ ರಾಜ್ ಬರೆಯುತ್ತಾರೆ: ಕಾಜಿರಂಗ ಪಯಣದ ಪುರಾಣ, ಸಾಸಿವೆಯೆಣ್ಣೆಯ ಆಘ್ರಾಣ ಜೋರಾಗಿತ್ತು. ಇದನ್ನೋದಿಸಿಯೇ ಸುಮಾರು ದುಡ್ಡುಳಿಸಿ ಹೊಟ್ಟೆ, ನಾಲಿಗೆ, ಮೂಗು ಸುಸ್ಥಿತಿಯಲ್ಲಿರಿಸಿದ್ದಕ್ಕಾಗಿ ಧನ್ಯವಾದಗಳು.🤓

    ಅಲ್ಲೇ ಹೇಮ ಮಾಲಾ ಬರೆಯುತ್ತಾರೆ: ಎಲ್ಲಾ ಕಂತುಗಳನ್ನೂ ಓದಿದೆ..ಸೊಗಸಾದ ನಿರೂಪಣೆ, ಹಾಸ್ಯ ಖುಷಿ ಕೊಟ್ಟಿತು. ಇದೇ ಚಾರಣದಲ್ಲಿ (2019 ನವೆಂಬರ್ 07 ರ ಬ್ಯಾಚ್) ನಾನೂ ಭಾಗವಹಿಸಿದ್ದೆನಾದುದರಿಂದ, ನಮ್ಮ ತಂಡದ ಅನುಭವಗಳೂ ಬಹುತೇಕ ಹೀಗೆಯೇ ಇದ್ದುವು. ಆಗ ಮೇಘಾಲಯದಲ್ಲಿ ಮಳೆ ಇದ್ದುದರಿಂದ ಇನ್ನಷ್ಟು ಹಸಿರು, ಜಲಪಾತಗಳಲ್ಲಿ ಈಗಿರುವುದಕ್ಕಿಂತ ಹೆಚ್ಚಿನ ನೀರು, ಅತ್ತಿತ್ತ ಸುಳಿದಾಡುವ ಮೇಘ.....ಹೀಗೆ ಪ್ರಕೃತಿ ಇನ್ನೂ ಚೆನ್ನಾಗಿಯೇ ಇತ್ತು ಅನಿಸುತ್ತದೆ. ಉಳಿದಂತೆ, ನಮ್ಮ ವೈಯುಕ್ತಿಕ ಪ್ರವಾಸದ ಗಮ್ಯಸ್ಥಾನಗಳು ಬೇರೆ ಇದ್ದುವು. ಬಾಂಗ್ಲಾದೇಶದ ಬಾರ್ಡರ್, ಬ್ರಹ್ಮಪುತ್ರಾ ನದಿಯ ಸುತ್ತುಮುತ್ತಲಿನ ದೇವಾಲಯಗಳು ಇತ್ಯಾದಿ
    ಅಲ್ಲೇ ಕುಡ್ಪಿ ರಾಜ್ ಮುಂದುವರಿಸುತ್ತಾರೆ:
    ಮಿತ್ರರು ಅಗತ್ಯಕ್ಕಿಂತ ಜಾಸ್ತಿ ವಾಹನಗಳನ್ನು ಕೊಂಡುಕೊಂಡು ಪ್ರದರ್ಶನಕ್ಕಾಗಿ ಓಡಿಸುವಾಗ ಹವಾಮಾಲಿನ್ಯದ ಬಗ್ಯೆ ನಾನು ನನ್ನ ಅನ್ನಿಸಿಕೆಯನ್ನು ಪ್ರಕಟಿಸಿದಾಗ ಕೆಲವರು ಹೇಳಿದ್ದುಂಟು "ನೀನು ಹಳ್ಳಿಯಲ್ಲಿ ಗುಡಿಸಲು ಕಟ್ಟಿ ಎತ್ತಿನಗಾಡಿ ಓಡಿಸ್ಲಿಕ್ಕೆ ಸರಿ ಮಾರಾಯಾ. ನಿಂಗೆ ಯಾಕೆ ಇದೆಲ್ಲಾ!" 🙄
    ಗಾಂಧೀಜಿಯವರ ಗ್ರಾಮರಾಜ್ಯ ಕನಸನ್ನು ರಾಜಕೀಯ ದುರುದ್ದೇಶಗಳಿಗೆ ಉಪಯೋಗಿಸುವ ನಮ್ಮ ರಾಜತಾಂತ್ರಿಕರಿಗೆ ಆಧುನಿಕತೆಯ ಗಾಳಿ ತಾಗದೇ ಇರಬಲ್ಲದೇ? ಕಣ್ಣಿದ್ದೂ ಕುರುಡರಂತೆ, ಮೆದುಳಿದ್ದೂ ಮೂರ್ಖರಂತೆ ಕುರಿಮಂದೆಯಂತೆ ಜೀವಿಸಿ ಪಾಶ್ಚಾತ್ಯ ಜೀವನಶೈಲಿಯನ್ನು ಅನುಕರಣೆ ಮಾಡುವಲ್ಲಿ ಒಂದು ಹೆಜ್ಜೆ ಮುಂದಿರುವ ನಾವು ನಮ್ಮ ನೈಜ ಸಂಪತ್ತು ಯಾವುದೆಂದು ಗುರುತಿಸಬಲ್ಲೆವೆ? 🤔
    ದುಡ್ದೇ ದೊಡ್ದಪ್ಪ.
    ಪ್ರಕೃತಿ, ಪರಿಸರ ಯಾರದಪ್ಪ?
    ಯಾಕದರ ಬಗ್ಯೆ ತಲೆ ಕೆಡಿಸ್ಕೋತೀರಪ್ಪ?
    ಬೇಜಾನ್ ಕೊಳ್ಳೆ ಹೊಡೀರಪ್ಪ!
    ತುಂಬಾ ಕಷ್ಟ. ವಿನಾಶದ ಹಾದಿ ನಾವೇ ತಂದುಕೊಂಡು ಎಲ್ಲಾ ಕಳಕೊಂಡ ಮೇಲೆ ಕೆತ್ತೋದು ಮೆತ್ತೋದು... ಇದೇ ನಮ್ಮ ಹಣೆಬರಹ.
    ಅಲ್ಲೇ ಪ್ರಕಾಶ ಮಲಾರ್ ಬರೆಯುತ್ತಾರೆ:
    ನೈಜ ಸಂಪತ್ತು, ಪ್ರಕ್ರತಿ ಹಾಗೇ ನೈಜವಾಗಿ ಉಳಿಯಬೇಕಾದರೆ ಟೂರಿಸಂ ನಿಲ್ಲಿಸಬೇಕು. ಅವಲ್ಲಾ ಇರುವುದು ಜನರಿಗೆ ನೋಡಲು, ಅಭಿವೃದ್ಧಿಯೆಂದರೆ ಟೂರಿಸ್ಟುಗಳು ಬರಬೇಕು ಎಂಬುದೇ ಮೂರ್ಖತನ
    ಪದ್ಮ ಕುಮಾರಿ ಮುಂದುವರಿಸುತ್ತಾರೆ:
    ಮೊಸರು ಕಾಫಿ ಪ್ರಸಂಗ ಚೆನ್ನಾಗಿದೆ.ನಿಮ್ಮ ಸಕಾರಾತ್ಮಕ ದೃಷ್ಟಿ-ಈ ವಿಷಯ ಕ್ಕೆ ಸಂಬಂಧ ಪಟ್ಟಂತೆ ಇಷ್ಟ ಆಯ್ತು.
    ಮಾಣಿನಿ--ಈ ಪದ ಪ್ರಯೋಗ ಚೆನ್ನಾಗಿದೆ.ಆ ಕಡೆಯೆಲ್ಲಾ ಚಹಾದ ಬಳಕೆ ಹೆಚ್ಚು ಎಂದುಕೊಂಡಿದ್ದೆ.ಸರ್ಕೀಟ್ ಮುಗಿಸಿ ನೀವು ಯಾವಾಗಲೂ ಚಾ ಸಮಯಕ್ಕೆ ಬರುವವರು ಅಲ್ಲೇನೂ ಕಾಫಿ ಹೀರಿದಿರಿ?

    ಈ ನಗರ ಸುಸಜ್ಜಿತ ಹೋಟೆಲ್ ಬಿಟ್ಟು,ನೀವು ಯೂತ್ ಹಾಸ್ಟೆಲ್ ಬಿಟ್ಟ ನಂತರ ಊಟದ ಗತಿ ಹೇಗಿತ್ತು ಅಂತ ನಂಗೆ ಕುತೂಹಲ ಇತ್ತು.ಅದರ ಬಗ್ಗೆ ನೀವು ಬೆಳಕು ಚೆಲ್ಲಿಲ್ಲ.ಬರೀ ಚುರುಮುರಿ,ಕಾಫಿ ಬಗ್ಗೆ ಬರೆದಿರಿ.

    ReplyDelete
  3. ಅರ್ಧ ಮೇಘಾಲಯ ರಾಜ್ಯವನ್ನು ಐದಾರು ದಿನಗಳ ಕಾಲ ಒಂಟಿಯಾಗಿ ಸುತ್ತಿ ಬಂದ ನನಗೆ ಅದರ ನೆನೆಪುಗಳೆಲ್ಲಾ ಅದಾಗಲೇ ಮಾಸಿ ಹೋಗಿವೆ, ಪೋಟೊಗಳು ಹಾರ್ಡ್ ಡಿಸ್ಕ್ ಸಮಸ್ಯೆಯಿಂದ ಅಳಿಸಿಹೋದುವು. ಇವತ್ತು ಅಶೋಕವರ್ಧನರ ಮೇಘಾಲಯದ ಸರಣಿಯ ಬರಹಗಳನ್ನು ಪೋಟೊಗಳನ್ನು ನೋಡುವಾಗ ಮತ್ತೆ ವಾಪಸು ಮೇಘಾಲಯ ಸುತ್ತಿದ ಸುಖವಾಯಿತು.
    ಆಶೋಕವರ್ಧನರು ಸುತ್ತುವ ಜೊತೆಗೆ ಇಷ್ಟು ಬರೆಯುವ ಉತ್ಸಾಹ ಮತ್ತು ಸಂಯಮ ಎರಡೂ ಸಾಧಿಸಿರುವುದು ನಂಗೆ ಸೋಜಿಗ. ಮೇಘಾಲಯದ ಮೂರು ಸರಣಿ ಬರಹ ಬರೆದು ನಂತರ ನಾನು ಬಿಟ್ಟೇ ಬಿಟ್ಟೆ. ಆದ್ರೆ ಇವರು ಐದು ಸರಣಿಗಳಲ್ಲಿ ಮೇಘಾಲಯದ ಪ್ರಕೃತಿ, ಜನ, ಖಾಸಿಭಾಷೆ, ಸಂಸ್ಕೃತಿ, ಪ್ರವಾಸೋದ್ಯಮದ ಬಗ್ಗೆಯೂ ವಿಪುಲವಾಗಿ ಬರೆದಿದ್ದಾರೆ, ಆದ್ರೆ ಯಾಕೋ ಊಟೋಪಚಾರದ ವಿವರಗಳು ಕಡಿಮೆ‌ ಇದ್ದಂತಿವೆ. �� ನಾನಂತೂ ಇದ್ದಷ್ಟೂ ದಿನ ಕೋಳಿ, ಮೀನು, ಹಂದಿಮಾಂಸದೂಟ ಮಾಡಿದೆ. ಕೆಲವನ್ನು ಅಲ್ಲೇ ಸ್ನೇಹಿತನ ಮನೆಯಲ್ಲೇ ಅಡುಗೆ ಮಾಡಿ ತಿಂದದ್ದು. ಲೇಂಡ್ರಿಯೆಟ್ ಎಸ್ಟೇಟ್ ನ ಬ್ರಿಟಿಷ್ ಬಂಗಲೆಯ ನೆನೆಪು ಹಾಗೇ ಉಳಿದುಹೋಗಿದೆ. ಈ ಕೋವಿಡ್ ಕಾಲದಲ್ಲಿ ಕುಳಿತಲ್ಲೇ ಮತ್ತೊಮ್ಮೆ ಪ್ರವಾಸ ಮಾಡಿಸಿದ ಅಶೋಕವರ್ಧನರ ಸೇತುಗಳಿಗೆ ನಮಸ್ಕಾರ. ��

    ReplyDelete