(ಮರ ಕೆತ್ತನೆಯಲ್ಲಿ ಹೊಸ ಹೆಜ್ಜೆ)
ಧಾಂ ಧೂಂ ಸುಂಟರಗಾಳಿ
ಕಳೆದ ಮಳೆಗಾಲದ ಮೊದಲ ಪಾದದ ಒಂದು ರಾತ್ರಿ (೨೫-೫-೧೮), ಹನ್ನೊಂದೂವರೆಯ ಸುಮಾರಿಗೆ ಗಾಳಿ ಮಳೆಯ ಅಬ್ಬರಸಂಗೀತ ನಮ್ಮ ನಿದ್ರೆಗೆಡಿಸಿತು. ನೇರ ಹಿತ್ತಿಲಿನಲ್ಲಿ ಬರಲಿದ್ದ ವಸತಿಸಮೂಹದ ಜಿಂಕ್ ಶೀಟ್ ಗೋಡೆ ರೋಮಾಂಚನದಲ್ಲಿ ಗಲಗಲಿಸಿತು, ರೆಂಬೆಕೊಂಬೆಗಳು ಅದರ ಬೆನ್ನ ಚಪ್ಪರಿಸಿ ಕಣಕಣಿಸಿದವು. ನಿಗೂಢತೆ ಹೆಚ್ಚಿಸುವಂತೆ ಕರೆಂಟು ಹೋಯ್ತು; ಮಿಂಚಿನ ಛಮಕ್ಕಿಗೆ
ಬಡಬಲ್ಬು ಸಾಟಿಯೇ! ಗುಡುಗಿನ ತಾಳಕ್ಕೆ ಮಳೆ ಕುಣಿಯತೊಡಗಿತು. ತಾರಸಿ ಕಕ್ಕಟ್ಟಿಗೆ ಒತ್ತಿನಿಂತ ತೆಂಗಿನ ಮರ ಭಾರೀ ರಸಿಕನಂತೆ ತಲೆ ಒಲೆಯುತ್ತ, ಧಗ್ ದಗ್ಗೆಂದು ಗೋಡೆ ಗುದ್ದಿತು. ಬಟ್ಟೆ ಒಗೆಯುವ ಕಲ್ಲಿನ ಮೇಲಿದ್ದ ಹಿಂಡಲಿಯಂ ಕೈಪಾತ್ರೆ, ಕಿವಿಗೆ ಗಾಳಿ ಹೊಕ್ಕವರಂತೆ ಕೆಳ ಹಾರಿ ರಿಂಗಣಿಸಿತು. ನಡುಕೋಣೆಯ ಒಡಕುಗನ್ನಡಿಯ ಕಿಟಕಿಪಡಿ ಬಡಿದುಕೊಂಡಾಗ ನಾನು ಅಸಹನೆಯಲ್ಲೇ ಕ್ರಿಯಾಶೀಲನಾಗಬೇಕಾಯ್ತು. ಮಂಪರುಗಣ್ಣಲ್ಲೇ ಹಿತ್ತಿಲ ಬಾಗಿಲ ಮೂರ್ಮೂರು ಬೋಲ್ಟ್ ತೆರೆದು, ಜಗುಲಿ ಗೇಟಿನ
ಬೀಗ ತೆರೆಯುವುದರೊಳಗೆ ರಸಿಕವೃಂದದ ದಾಂಧಲೆ ಮಿತಿ ಮೀರಿತ್ತು. ಒಡಕುಗನ್ನಡಿ ಕಿಟಕಿ, ನಾವು ತಡೆಯಾಗಿಟ್ಟಿದ್ದ ಭಾರದ ಶಿಲಾತುಣುಕನ್ನು ಝರ್ರೆಂದು ತಳ್ಳಿ, ಠಳ್ಳೆಂದು ಬೀಳಿಸಿ, ದೊಡ್ಡದಾಗಿ ನಕ್ಕಂತೆ ತೆರೆದುಕೊಂಡಿತು. ಪಡಿ ಮತ್ತೆ ಬಡಿದು ಪೂರ್ತಿಗನ್ನಡಿ ಪುಡಿಯಾಗುವುದನ್ನು ತಡೆಯಲು ಧಾವಿಸಿದೆ. ತಾರಸಿ ಮೆಟ್ಟಿಲಡಿ ಭರ್ರೆಂದು ತೂರಿ ಬಂದ ಗಾಳಿಯೊಡನೆ ಅಪ್ಪಾಲೆ-ತಿಪ್ಪಾಲೆಯಾಡುತ್ತಿದ್ದ ಮಳೆ ಅಯಾಚಿತವಾಗಿ ನನ್ನನ್ನೂ ಸಂಭ್ರಮದಲ್ಲಿ ಮುಳುಗಿಸಿಬಿಟ್ಟಿತು. ನಿದ್ದೆಯ ಜಡವೆಲ್ಲ ಹರಿದಿತ್ತು. ಪಡಿಯನ್ನು ಹಗುರಕ್ಕೆ ಮುಚ್ಚಿ, ಬೆಂಬದಿಗೆ ಇನ್ನಷ್ಟು ಕಲ್ಲತುಣುಕುಗಳನ್ನು ಒತ್ತಿಟ್ಟು, ಮತ್ತೆ ಬೀಗ ಬೋಲ್ಟು ಸುಧಾರಿಸಿ ಒಳಬರುತ್ತಿದ್ದಂತೆ......
ಬಿತ್ತೋ ಬಿತ್ತೂ....
ದೇವಕಿಯ ಚರವಾಣಿ ರಿಂಗಣಿಸಿತು. ನಮ್ಮ ಒತ್ತಿನ ವಸತಿ ಸಮೂಹದ ಎರಡನೇ ಮಾಳಿಗೆಯ ಸುಜಯರ ಕರೆ! "ನೋಡಿ, ನಿಮ್ಮ ಸೀತಾಫಲದ ಮರ ನಮ್ಮ ಫ್ಲ್ಯಾಟಿನತ್ತ ಬಿದ್ದಿದೆ!" ಆತಂಕದಲ್ಲೇ ಕೋಣೆಯ ಕಿಟಕಿಯಲ್ಲೇ ಟಾರ್ಚಿನ ಬೆಳಕೋಲಟ್ಟಿ ನೋಡಿದೆವು -ಮಾಮೂಲೀ ಸರಳು, ಕೋಲ್ಗಳ್ಳನ ಬಲೆ, ಸೊಳ್ಳೆಬಲೆ ಎಂಬ ಮೂರು ಸುತ್ತಿನ ಕೋಟೆ ಕಳೆದು, ಕತ್ತಲೆ, ಮಳೆ ಬೆರೆತು ಎಲ್ಲ ಮಯಮಯ. ಎರಡು ವರ್ಷಗಳ ಹಿಂದಷ್ಟೇ ಆ ಬದಿಯ ಗೋಡೆ ಬಿದ್ದ ಸಂಕಟ, ಅನಂತರ ಎಚ್ಚರಿಕೆಗೆಂಬಂತೆ ಗಟ್ಟಿಯೇ ಇದ್ದ ಎರಡು ತೆಂಗಿನಮರಗಳನ್ನು ಕಡಿದು ಕಳೆದ ದುಃಖ, ದುರಸ್ತಿ ಮಾಡಿದ ವೆಚ್ಚ, ಸರ್ರೆಂದು ಮನಃಪಟಲದಲ್ಲಿ ಮರುಪ್ರದರ್ಶನವಾಯ್ತು. ಆದರೆ ಆ ಕ್ಷಣದಲ್ಲಿ ಏನೂ ಮಾಡಲಾಗದ ಅಸಹಾಯಕತೆಯನ್ನು ಒಪ್ಪಿಕೊಂಡು, "ಬೆಳಿಗ್ಗೆ ನೋಡೋಣ" ಎಂದಷ್ಟೇ ಉತ್ತರಿಸಿ ಮತ್ತೆ ಮಲಗಿದೆವು; ನಿದ್ರಿಸಲಿಲ್ಲ.
ಉತ್ತರಕ್ರಿಯೆ
ಸೀತಾಫಲದ ಮರ ನಡು ಅಂಗಳದಲ್ಲಿತ್ತು. ಮತ್ತು ಸುಮಾರು ಒಂದಡಿ ವ್ಯಾಸದ ಗಟ್ಟಿ ಜೋಡು ಕಂಬಗಳಂತೆ ನಮ್ಮ ಎರಡನೇ ಮಾಳಿಗೆಯ ಎತ್ತರಕ್ಕೂ ನಿಂತು ತಲೆಗೆ ಭಾರೀ ಹಸುರಿನ ಮುಂಡಾಸು ಹೊತ್ತಿತ್ತು. ಅದಕ್ಕೆ ಅತ್ತ ವಸತಿ ಸಮೂಹ, ಇತ್ತ ಎರಡು ಬದಿಗೆ ನಮ್ಮ ಮನೆ ಮತ್ತಿನೊಂದಕ್ಕೆ
ಮೊದಲೇ ಹೇಳಿದ ಜಿಂಕ್ ಶೀಟ್ ಮರೆಯೇನೋ ಇತ್ತು. ಆದರೆ ಈ ರಕ್ಷಣಾಕೋಟೆಯನ್ನು ಯಾಮಾರಿಸಿ ಬಂದ ಮಾಯಾವಿ ಸುಳಿಗಾಳಿ ಮರದ ಮುಂಡಾಸು ತಿರುಚಿ, ಬುಡ ಮಗುಚಿ ಕೆಡಹಿತ್ತು. ನಿಷ್ಪಾಪಿ ಮರ ನಿಧಾನಕ್ಕೆ ವಸತಿ ಸಮೂಹದ ಮೆಟ್ಟಿಲ ಸಾಲಿನ ಕುಂದಗಳನ್ನು ತಪ್ಪಿಸಿ, (ಅದರ ನೆತ್ತಿಯಲ್ಲಿ ಭಾರೀ ನೀರಟಾಂಕಿ ಬೇರೇ ಇತ್ತು!) ಮನೆಗಳ ಕಿಟಕಿ, ಹತ್ತೆಂಟು ಕೊಳಾಯಿ ಸಾಲುಗಳನ್ನು ಹಗುರಕ್ಕೆ ನೇವರಿಸಿ, ಮುರಿ, ಒಡೆ ಮಾಡದೆ, ನಮ್ಮ ಪೌಳಿಗೋಡೆಯ ಮೇಲೆ ಮೈಚಾಚಿ ಅಸುನೀಗಿತ್ತು. ವಸತಿ ಸಮೂಹಕ್ಕೆ ಬರುತ್ತಿದ್ದ ಎರಡು ಟೀವೀ ಕೇಬಲ್ಲುಗಳು ಇದರ ಕೊಂಬೆಗಳ ಜಾಲದಲ್ಲಿ ಬಿಗಿದುಕೊಂಡಿದ್ದರೂ ಭಂಗವಾಗಿರಲಿಲ್ಲ. ಈಗ ಮರದ ಎಚ್ಚರವನ್ನು ಗೌರವಿಸಿ, ‘ಶವಸಂಸ್ಕಾರ’ ಮಾಡುವುದಷ್ಟೇ ನಮಗುಳಿದ ಜವಾಬ್ದಾರಿ.
ನಿನಗೆ ನೀನೇ ಗೆಳೆಯ ನೀನೇ.......
ಹಿಂದಿನ ಸಲ ನಮ್ಮೊಂದು ಭಾರೀ ಬಾಳೇ ಬುಡ ಸುಮಾರು ಹದಿನೆಂಟು ಅಡಿ ಎತ್ತರದ ಗೋಡೆಯನ್ನೇ ನೂಕಿಕೊಂಡು ಬಿದ್ದಾಗ ಕಂತ್ರಾಟುದಾರನೊಬ್ಬನನ್ನು ಕರೆಸಿದ್ದೆ. ಮತ್ತಾತನ ‘ಪರಿಣತ ಸಲಹೆ’ಯಲ್ಲಿ ನಿಷ್ಪಾಪೀ ಎರಡು ತೆಂಗಿನ ಮರಗಳನ್ನು ಕಳೆದುಕೊಂಡಿದ್ದೆ. ಹಾಗಾಗಿ ಈ ಬಾರಿ ಯಾರನ್ನೂ ಕಾಯಲಿಲ್ಲ. ನಾನೂ ದೇವಕಿಯೂ ಇದ್ದೆರಡು ಮೊಂಡುಗತ್ತಿಗಳಿಗೆ ‘ಉಪಾಧ್ಯ-ಅರ’ ಉಜ್ಜಿ ಬಾಯಿ ಕೊಟ್ಟು, ಏಳೂವರೆ ಗಂಟೆಯ ಸುಮಾರಿಗೆ ಅಖಾಡಕ್ಕೆ ಧುಮುಕಿದೆವು. ಮಹಡಿ ಕಟ್ಟುವ ಕಾಲದಲ್ಲಿ ತಂದಿದ್ದ ದಪ್ಪದ ಮಿಣಿ, ನಮ್ಮ ಮೆಟ್ಟಿಲಟ್ಟಳಿಗೆ, ವಸತಿ ಸಮೂಹದ ಎರಡು ಏಣಿ, ಮನೆಗಳ ಬಾಲ್ಕನಿ, ಕಿಟಕಿಗಳ ಸೆಜ್ಜಗಳನ್ನೆಲ್ಲ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತ, ಓಡಾಡಿ ಎಲ್ಲ ಕಡಿದು ಕಳೆದೆವು. ಮತ್ತೆ
ನಮ್ಮಂಗಳಕ್ಕೇ ಎಳೆದು ಹಾಕಿ, ಮಣ್ಣ ಸತ್ವ ಹೆಚ್ಚಿಸುವಂತೆ ಹೊಂಡ ಮಾಡಿ ಹೂಳುವಾಗ ಅಪರಾಹ್ನ ಎರಡು ಗಂಟೆಯೇ ಕಳೆದಿತ್ತು! ಕತ್ತಿ ಗೀರಿದ ಗಾಯ, ನಿತ್ಯ ಬಳಸದೇ ಕತ್ತಿಯಾಡಿಸಿದ್ದಕ್ಕೆ ಅಂಗೈಯಲ್ಲಿ ಗುಳ್ಳೆ ಮತ್ತು ಅಲ್ಲಿ ಇಲ್ಲಿ ಹಗ್ಗ ಉಜ್ಜಿದ ಗಾಯಗಳ ಪ್ರಶಸ್ತಿಯೂ ಸಂದಿತ್ತು!!
ಕುಂಬಿಗೆ ಕಾಯಕಲ್ಪ
ಮಳೆ ಕಳೆದ ಹೊಸತರಲ್ಲಿ ಸೀತಾಫಲ ಮರದ ಸಮಾಧಿ ಕೆದಕಿ, ಗೊಬ್ಬರ ಹಂಚುವಾಗ ಒಂದು ಪ್ರಧಾನ ಕಾಂಡ ಗಟ್ಟಿಯಾಗಿಯೇ ಉಳಿದದ್ದು ಗಮನಿಸಿದೆ. ಅದು ಬಿಸಿಲಿಗೆ ಆರಿದ ಮೇಲೆ ಬಚ್ಚಲೊಲೆಗೆ ಉರುವಲಾದೀತೆಂದು ಪಕ್ಕಕ್ಕೆ ನೂಕಿಬಿಟ್ಟೆ. ಎಂಟು ಹತ್ತು ದಿನ ಕಳೆಯುವಾಗ, ಅನ್ಯ ಯೋಚನೆಯೊಂದು ಹೊಳೆದದ್ದಕ್ಕೆ, ಇನ್ನೂ ಹಸಿತನವನ್ನು ಉಳಿಸಿಕೊಂಡಿದ್ದ ಆ ಬೊಡ್ಡೆಯ ದಪ್ಪ ತೊಗಟೆ ಸುಲಿದೆ. ಒಮ್ಮೆಗೆ
ಮನೆಯೆಲ್ಲಾ ದುರ್ನಾತ ಪಸರಿಸಿದರೂ ದಿಂಡು ಬಲವಾಗಿತ್ತು. ಪಸೆ ಆರಿದ ಮೇಲೆ ನೋಡಿದರಾಯ್ತೆಂದು ಅದನ್ನು ನೆರಳಿಗೂ ಬಹುತೇಕ ಮರೆವಿಗೂ ತಳ್ಳಿದ್ದೆ. ಸುಮಾರು ಎರಡು ತಿಂಗಳು ಕಳೆದಾಗ, ನನ್ನ ಲಲಿತ ನಟನಾ ಶಿಲ್ಪ ಅಷ್ಟಪದಿಯನ್ನು ರೂಪಿಸಿದ ಹತ್ಯಾರುಗಳು) ಕೆಲಸ ಕೊಡು ಎಂದಂತಾಯ್ತು. ಸೀತಾಫಲದ ದಿಂಡನ್ನು ಇಬ್ಬರು ಸೇರಿ, ಮೊದಲ ಮಾಳಿಗೆಯ ತೆರೆದ ಜಗುಲಿಗೆ (ಆಪರೇಷನ್ ಥೇಟಾರ್!) ದಾಖಲಿಸಿದೆವು.
ಆದಿಯಲಿ.....
ಒಂದೆರಡು ವರ್ಷಗಳ ಹಿಂದೆ ಬೆಂಗಳೂರಿನ ಲಾಲ್ಭಾಗಿನಲ್ಲಿ, ಗಾಳಿಗೆ ಮಗುಚಿದ, ಬೇರು ಕುಂಬಾಗಿ ಸತ್ತ ಮರಗಳನ್ನು, ಇದ್ದಂತೇ ಸಣ್ಣಪುಟ್ಟ ಕೆತ್ತನೆ ಕೊಟ್ಟು ಮೂಡಿಸಿದ ಸುಂದರ ಶಿಲ್ಪಗಳು ಕಂಡಿದ್ದೆ. ಅದರ ಕೆಲವು ಚಿತ್ರಗಳೂ ನನ್ನಲ್ಲಿವೆ. ಹೆಗ್ಗೋಡಿನಲ್ಲಿ ಬಹುಶಃ ಲಿಂಗನಮಕ್ಕಿ ಮುಳುಗಡೆಯಿಂದ ತಂದು ಕೆತ್ತಿದ ಇಂಥವೇ ಆದರೆ ಕರಿಗಟ್ಟಿದ ಕಾಷ್ಠಶಿಲ್ಪಗಳನ್ನೂ ಕಂಡಿದ್ದೆ. ಅಂಥದ್ದೇ ಯೋಚನೆಯೊಡನೆ
ನಮ್ಮ ಸೀತಾಫಲ ಬೊಡ್ಡೆಯ ಮೇಲೆ ಉಳಿ ಸುತ್ತಿಗೆ ಕೆಲಸ ಶುರು ಮಾಡಿದೆ.
ಸುಮಾರು ಎರಡೂಕಾಲಡಿ ಸುತ್ತಳತೆಯ, ನಾಲ್ಕೂವರೆ ಅಡಿ ಎತ್ತರದ ಬೊಡ್ಡೆಗೆ, ತಲೆಯಲ್ಲೊಂದು ಕೊಂಬೆಯ ಮೋಟು. ಅದು ಬಹುತೇಕ ಉರುಟಾಗಿದ್ದರೂ ಸಣ್ಣ ಸಣ್ಣ ಗಂಟು, ಗಾಯಗಳಲ್ಲದೆ, ತೇವ ಆರುವಾಗ ಕೆಲವೆಡೆ ಉದ್ದಕ್ಕೆ ಬಿರಿದುಕೊಂಡದ್ದೂ ಇತ್ತು. ಬಿರುಕುಗಳು ಬೊಡ್ಡೆಯನ್ನೇ ಇಬ್ಭಾಗ ಮಾಡುವಷ್ಟು ಉದ್ದಕ್ಕಿರಲಿಲ್ಲ. ಹಾಗೆಂದು ಉಳಿ ಪ್ರಯೋಗದಲ್ಲಿ ಅವಗಣಿಸುವಂತೆವೂ ಅಲ್ಲ. ಬೊಡ್ಡೆಯ ನೆತ್ತಿ
ಗರಗಸದ ಕೊಯ್ತಕ್ಕೆ ಸಿಕ್ಕಿ ಚೊಕ್ಕ ಸಪಾಟಿತ್ತು. ಬುಡ ಮಾತ್ರ ನನ್ನ ಅಡ್ಡಾದಿಡ್ಡಿ ಕತ್ತಿ ಪೆಟ್ಟಿಗೆ ಸಿಕ್ಕು ಮೊಂಡಾಗಿತ್ತು. ಬೊಡ್ಡೆಯ ಬುಡದಲ್ಲಿ ಸುಮಾರು ಎಂಟಿಂಚು ಹಾಗೇ ಬಿಟ್ಟು, ಉಳಿದಂತೆ ಸುಮಾರು ಐದಾರು ಇಂಚಿನ ಅಂತರಗಳಲ್ಲಿ ಒಂಬತ್ತು ಖಂಡಗಳನ್ನು ಗುರುತಿಸಿದೆ. ಮತ್ತೆ ಬಿರುಕುಗಳಿಗೆ ಸಾತತ್ಯ ಸಿಕ್ಕದಂತೆ, ಕಂಬದ ಸುತ್ತೆಲ್ಲಾದರೂ ಹಂತಕ್ಕೊಂದರಂತೆ ಕಿಂಡಿಗಳನ್ನು ಕೊರೆಯತೊಡಗಿದೆ. ಕಲ್ಪನಾ ಪ್ರಪಂಚದ ಹೆಬ್ಬೆಟ್ಟು ತಿಮ್ಮನಿಗೆ (ಒಂದೆರಡು ಇಂಚು ಎತ್ತರ) ಅನುಕೂಲವಾಗುವಂತೆ, ಮೂರು ನಾಲ್ಕು ಇಂಚು ಎತ್ತರದ
ತ್ರಿಕೋನಾಕೃತಿಯ ಗುಹೆಗಳು. ಮೊದಲ ಹಂತದಲ್ಲಿ ಮಾತ್ರ ಆಯತಾಕಾರದಲ್ಲಿ ಕೆತ್ತಿ, ‘ಮಹಾದ್ವಾರ’ ಎಂದು ಗುರುತಿಸಿಕೊಂಡೆ. ಎಲ್ಲವನ್ನೂ ನನ್ನ ಕಾಲಿಂಚು ಅಗಲದ ಉಳಿ ತಲಪುವ ಆಳ, ಅಂದರೆ ಬಹುತೇಕ ಬೊಡ್ಡೆಯ ಕೇಂದ್ರ ಮುಟ್ಟುವಷ್ಟು ಉದ್ದಕ್ಕೆ ಕೆತ್ತಿದೆ.
ಸ್ತಂಭ ಪೀಠಸ್ತವಾದ ಬಗೆ
ಮಹಾದ್ವಾರದಿಂದ ಕೆಳಗೆ ಹಾಗೇ ಬಿಟ್ಟ ಅಂಶದ ಎರಡು
ಮಗ್ಗುಲುಗಳಲ್ಲಿ ಓರೆಯಲ್ಲಿ ತುಸು ಕೆತ್ತಿ ಸಪಾಟು ಮಾಡಿದೆ. ಅದಕ್ಕೆ ಹೊಂದುವಂತೆ ಎರಡು ಎಂಟಿಂಚು ಅಗಲ, ಒಂದು ಇಂಚು ದಪ್ಪದ ಹಲಿಗೆಗಳನ್ನು ಆಯ್ದುಕೊಂಡೆ. ಅವು ಮಹಾದ್ವಾರಕ್ಕೆ ಸರಿಯಾಗಿ ಚೂಪು ಬರುವಂತೆ, ಬೊಡ್ಡೆಯ ಸಪಾಟು ಮೈಗಳಿಗೆ ಫೆವಿಕಾಲಿನಲ್ಲಿ ಅಂಟಿಸಿ, ಬಲವಾದ ಆಣಿಗಳನ್ನೂ ಜಡಿದೆ. ಸ್ತಂಭ ನಿಂತಾಗ ಪೀಠಕ್ಕೆ ಹಿಮ್ಮೈಬಲ ಬರುವಂತೆ ಮೂರನೇ ದಿಕ್ಕಿಗೆ ರೀಪೊಂದನ್ನು ಗಟ್ಟಿ ಮಾಡಿದೆ. ಮಹಾದ್ವಾರದ ಎದುರಿಗೆ ಹೊಂದುವಂತೆ ನಿಂತ ಹಲಿಗೆಗಳಲ್ಲಿ ಚಡಿ ಮಾಡಿ, ತುಂಡು ರೀಪುಗಳನ್ನು ಅಡ್ಡ ಬಡಿದು
ಮೆಟ್ಟಿಲನ್ನೂ ರೂಪಿಸಿದೆ. ಮುಂದಿನ ಹೆಜ್ಜೆ, ಸ್ತಂಭವನ್ನು ದೃಢವಾಗಿ ನಿಲ್ಲಿಸಿದ ವ್ಯವಸ್ಥೆಗೆ ಕಲಾತ್ಮಕ ದಿಬ್ಬದ ವೇಷ ಕಟ್ಟುವ ಕೆಲಸ.
ಹಲಿಗೆ ಜೋಡಣೆಯ ಸುಮಾರು ಅರ್ಧ ಎತ್ತರದಲ್ಲಿ ಸಪುರ ಚಡಿಗಳನ್ನು ಕತ್ತರಿಸಿದೆ. ಅದರೊಳಗಿನಿಂದ ಹಾಯ್ದಂತೆ ಸಪುರ ಬೆತ್ತವೊಂದನ್ನು ಒಂದು ಸುತ್ತು ಎಳೆದು ಕಟ್ಟಿದೆ. ಬೆತ್ತಕ್ಕೆ ಅಲ್ಲಲ್ಲಿ ತಂತಿ ತುಂಡುಗಳನ್ನು ಬಿಗಿದು, ಇನ್ನೊಂದು ತುದಿಯನ್ನು ಎಳೆದು, ಸಣ್ಣ ಆಣಿಗಳಿಂದ ಸ್ತಂಭಕ್ಕೂ ಬಂಧಿಸಿದೆ. ಈ ಹಂದರದ ಮೇಲೆ ಹಳೆಯ ಕೊಡೆಬಟ್ಟೆಯನ್ನು
ಹೊದೆಸಿ, ಒಳ ಅಂಚನ್ನು ಬೊಡ್ಡೆಗೆ ಅಂಟಿಸಿದೆ. ಹೊರ ಅಂಚನ್ನು ಬೆತ್ತವನ್ನು ಸುತ್ತಿ, ಅಡಿಗೆ ಮಡಚಿ, ಬಿಗಿಯಾಗಿ ಕೈ ಹೊಲಿಗೆ ಹಾಕಿ ಹಂದರ ಗಟ್ಟಿ ಮಾಡಿದೆ.
ಹಂದರದ ಮೇಲೆ ಮೊದಲಿಗೆ, ಪ್ಲ್ಯಾಸ್ಟರ್ ಆಫ್ ಪ್ಯಾರೀಸ್ (ಪೀಯೋಪಿ) ಪ್ರಯೋಗ ಮಾಡಿದೆ. ಹಿಂದೆ ಅದರೊಡನೆ ಕೆಲಸ ಮಾಡಿದ್ದಾಗಲೀ ಬಳಸುವ ವಿಧಾನದ ತಿಳಿವಾಗಲೀ ನನಗಿರಲಿಲ್ಲ. ಒಂದು ಕೇಜೀ ಪ್ಯಾಕೇಟ್ ಕೊಂಡು ತಂದು, ಮೊದಲಿಗೆ ಸ್ವಲ್ಪವನ್ನು ನೀರಿನಲ್ಲಿ ಕಲಸಿದೆ. ಅದು ಅಲ್ಲಲ್ಲಿ ಹರಳುಗಟ್ಟಿಕೊಂಡು ಅಸಹಕಾರೀ ಕೆಸರಿನಂತಿತ್ತು. ಹಾಗೇ
ಹಂದರದ ಮೇಲೆ ಸುಮಾರು ದೋಸೆ ದಪ್ಪಕ್ಕೆ ಒತ್ತೊತ್ತಿ ಮೆತ್ತಿ, ಆರಲು ಬಿಟ್ಟೆ. ದಿನ ಬಿಟ್ಟು ನೋಡುವಾಗ, ಪೀಯೋಪಿ ತೆಳು ಹಪ್ಪಳದಂತೆ ಮೇಲೇಳತೊಡಗಿತ್ತು. ಅದಕ್ಕೆ ಬಲ ಸಾಲದಾಯ್ತೆಂದು ಅಂದಾಜಿಸಿ, ಉಳಿದಷ್ಟೂ ಪೀಯೋಪಿಯನ್ನು ಮತ್ತೆ ಕಲಸಿ, ಸಾಕಷ್ಟು ದಪ್ಪವಾಗಿಯೇ ಹಾಕಿದೆ. ದಿನ ಎರಡು ಕಳೆಯುವಾಗ ಇದೂ ಬಿರುಕು ಬಿಟ್ಟಿತ್ತು; ಹಪ್ಪಳ ಹೋಗಿ ಕೊಬ್ಬರಿ ಬರ್ಫಿ ಸಿಕ್ಕಿದ ಸಂಕಟ!
ಪೀಯೋಪಿಯನ್ನು ಪೂರ್ಣ ಕಳಚಿ, ಎರಡನೇ ಪ್ರಯೋಗಕ್ಕೆ ಸಿಮೆಂಟನ್ನೇ ಆಶ್ರಯಿಸಿದೆ. ಮೊದಲ ಹೆಜ್ಜೆಯಲ್ಲಿ ಸಾಕಷ್ಟು
ದಪ್ಪಕ್ಕೆ ಸ್ವಲ್ಪ ಮರಳು ಸಹಿತದ ಪಾಕವನ್ನೇ ಹಾಕಿದೆ. ಎರಡು ದಿನ ಬಿಟ್ಟು, ಸ್ತಂಭವನ್ನು ಹಗ್ಗದ ಸಹಾಯದಲ್ಲಿ ತಲೆಕೆಳಗಾಗಿ ನೇತಾಡಿಸಿದೆ. ಹಾಗೆ ತೆರವಾದ ತಳದಲ್ಲಿ ಬೊಡ್ಡೆಯ ಕೊನೆ ಹಾಗೂ ಹಲಗೆಗಳ ಪೀಠ ಉಳಿದು ಏನೂ ಕಾಣದಂತೆ ದಪ್ಪವಾಗಿಯೇ ಮೊದಲಿನಂತೇ ಸಿಮೆಂಟ್ ಪಾಕ ತುಂಬಿದೆ. ಕಾಲಕಾಲಕ್ಕೆ ನೀರು ಕೊಟ್ಟು, ಗಟ್ಟಿಯಾದ ಮೇಲೆ, ಬೊಡ್ಡೆಯನ್ನು ನೇರ ನಿಲ್ಲಿಸಿಕೊಂಡೆ. ಈಗ ಶುದ್ಧ ಸಿಮೆಂಟ್ ಮಣ್ಣಿಯಲ್ಲಿ, ದಿಬ್ಬಕ್ಕೆ ನನ್ನ ಕಲ್ಪನೆಯ ಏರಿಳಿತಗಳನ್ನೂ ನಯಸಾಣಿಕೆಯನ್ನೂ ಮಾಡಿ ಮುಗಿಸಿದೆ.
ಬೊಡ್ಡೆಯ ಮೇಲಿನ ಆಳ ಗಾಯಗಳು!
ಮೊದಲಲ್ಲೇ ಹೇಳಿಬಿಡುತ್ತೇನೆ, ಇವು ಮರದ ಸಹಜ ಗಾಯಗಳಲ್ಲ! ಹತ್ಯಾರು ಹಿಡಿದ ನನ್ನ ಕೆತ್ತನೆಯ ಇನ್ನಷ್ಟು ವಿವರಗಳು! ಗುಹೆಗಳ ನೆಲ ಮತ್ತು ಎರಡೋ ಮೂರೋ ಮಗ್ಗುಲುಗಳನ್ನು ಹೊರಗಿನಿಂದಲೇ ಉಳಿ ಕೊಟ್ಟು, ಸಾಕಷ್ಟು ನಯವಾಗಿಸಿದೆ. ಆದರೆ ಹಿಂದಿನ ಗೋಡೆ ಅಥವಾ ಬೊಡ್ಡೆಯನ್ನು ಅಡ್ಡ ಹಾಕಿದಾಗ ಮಾಟೆಯ ತಳವನ್ನು ಚೊಕ್ಕ
ಮಾಡುವುದು ಆಗಲಿಲ್ಲ. ಇದನ್ನು ನಿವಾರಿಸುವಂತೆ ನಡುವಿನ ಆರೂ ಅಂತಸ್ತುಗಳಿಗೆ ತದ್ವಿರುದ್ಧ ದಿಕ್ಕುಗಳಲ್ಲಿ ಎರಡನೇ ಬಾಯಿ ತೆರೆದೆ. ಇವೆಲ್ಲ ಪಕ್ಕಾ ಲೆಕ್ಕಾಚಾರದವೇನಲ್ಲ - ಅನುಕೂಲ, ಅನಿವಾರ್ಯತೆಗಳ ಮಿಶ್ರಣ. ಹಾಗಾಗಿ ಪ್ರತಿ ಗುಹೆಯ ಭಿನ್ನ ದ್ವಾರಗಳು ಏಕ ರೂಪದಲ್ಲಿಲ್ಲ, ತಳ ಸಮಮಟ್ಟಕ್ಕೂ ಇಲ್ಲ.
ಬೊಡ್ಡೆಯ ಮೇಲ್ಕೊನೆಯ ಬಳಿ ಚಾಚಿಕೊಂಡಿದ್ದ ಮೋಟಿನ ಮೇಲರ್ಧ ಪೂರ್ತಿ ಕೆತ್ತಿ ತೆಗೆದೆ. ಉಳಿದಂತೆ ದಪ್ಪಕ್ಕೆ ತುದಿ, ತಳ ಮತ್ತು ಅಂಚು ಉಳಿಯುವಂತೆ ತಿರುಳನ್ನು ಮಾತ್ರ
ತೆಗೆದೆ. ಹಾಗೆ ಮೂಡಿದ ಓಣಿಯಂತ ರಚನೆಯ ಸಮಮಟ್ಟಕ್ಕೆ ಮತ್ತು ನೇರಕ್ಕೆ ಅಲ್ಲಿನ ಗುಹೆಗೆ ಮೂರನೇ ದ್ವಾರವನ್ನೂ ತೆರೆದೆ. ಸಿ, ಅಂತಸ್ತಿನಲ್ಲಿ ಕೊಂಬೆ ಮೋಟಿನ ನೇರಕ್ಕೆ ಮೂರನೇ ದ್ವಾರ ಕೊಟ್ಟೆ. ಎಲ್ಲ ಅಂಚುಗಳನ್ನು ಉರುಟು, ನುಣ್ಣಗೂ ಮಾಡಿದಾಗ ಅಲ್ಲಿ ಅಲಂಕಾರಿಕ ಬಿಸಿಲ ಸೆಜ್ಜವೇ (ಬಾಲ್ಕನಿ) ರೂಪುಗೊಂಡಿತ್ತು.
ಗುಹಾದ್ವಾರಗಳ ವಿಕಾರವನ್ನು ಮರೆಸುವಂತೆ ಕೆಲವಕ್ಕೆ ಚೂರುಪಾರು ಅಲಂಕಾರಗಳನ್ನು ಹೊಸೆದೆ. ಮುಖ್ಯದ್ವಾರದ ಮೇಲೆ ಜ್ವಾಲಾಭಾಂಡ, ಪಕ್ಕದ ಕಿಟಕಿಗೆ ಕಿರೀಟ, ಉಳಿದಂತೆ
ತಳ ತೋರಣ, ಪಡಿನೆರಳ ಅಚ್ಚು, ‘ರತ್ನ’ ಕೂರಿಸಿದ ಠಕ್ಕು, ಬಳುಕು ರೇಖೆಗಳು, ತಾರೆ ಜಗುಳಿದ ಜಲಪಾತ, ಮಗ್ಗುಲನ್ನಾವರಿಸಿದ ಖರ್ಜೂರ ಮರ ಎಂದು ಕಲ್ಪನಾಲಹರಿಯನ್ನು ಮುಕ್ತವಾಗಿ ಹರಿಸಿದೆ.
ಜಾಹೀರಾತು ಕರಪತ್ರದಲ್ಲೊಂದು ಪುಟ್ಟ ಗಾಡಿಯ ಚಿತ್ರ ನನ್ನ ಗಮನ ಸೆಳೆಯಿತು. ಆ ಚಿತ್ರವನ್ನು ಕತ್ತರಿಸಿ, ಒಂದು ಗುಹಾದ್ವಾರದ ಅಡಿಗೆ ಅಂಟಿಸಿದೆ. ಮತ್ತಾ ಗಾಡಿ ರೇಖೆಗಳ ಮೇಲೆ ಉಳಿಕಚ್ಚು ಹಾಕುತ್ತ ಮೊದಲು ಉಬ್ಬು ಚಿತ್ರ ಮೂಡಿಸಿದೆ. ಆದರೆ ಸಪಾಟು ಚಿತ್ರ ದಪ್ಪವನ್ನು (ಮೂರನೇ ಆಯಾಮ) ವರ್ಣಛಾಯೆಗಳಲ್ಲಷ್ಟೇ ಕಾಣಿಸಿತ್ತು. ನಾನು ಅತ್ಯುತ್ಸಾಹದಲ್ಲಿ ಚಕ್ರ, ನೊಗಗಳಿಂದ ತೊಡಗಿ, ಕೊನೆಯಲ್ಲಿ ನಿಜದ ಗಾಡಿಯೇ ಗುಹೆಯನ್ನು ಹೊತ್ತ ಸ್ಥಿತಿಯತ್ತ ನಡೆದಿದ್ದೆ. ಈ ಯೋಜನೆಯಿಲ್ಲದ ನಡೆಯಿಂದ ಚಪ್ಪಟೆ ಚಿತ್ರ ಉರುಟು ಕಾಂಡದಲ್ಲಿ ಕೆಲವು ಅವಾಸ್ತವಗಳೊಡನೆ ಮೂಡಿತ್ತು. ಈ
‘ಮಕ್ಕಳಾಟ’ ನಟರಾಜ ಕೆತ್ತನೆಯಲ್ಲಿ ನನ್ನನ್ನು ಇನ್ನಷ್ಟು ಸಂಕೀರ್ಣವಾಗಿ ಕಾಡಿತು.
ಅಂತರ್ಜಾಲದ ಅಸಂಖ್ಯ ನಟರಾಜ ವಿಗ್ರಹಗಳ ಚಿತ್ರಗಳಿಂದ, ಕನಿಷ್ಠ ಅಲಂಕಾರ ಮತ್ತು ಸರಳ ರೇಖೆಗಳ ಒಂದನ್ನು ಆಯ್ದುಕೊಂಡೆ. ನನ್ನ ಅಳತೆಗೆ ತಕ್ಕಂತೆ, ಎರಡು ಗಣಕ ಪ್ರಿಂಟ್ ತೆಗೆದು, ಒಂದನ್ನು ಸ್ತಂಭದ ಖಾಲೀ ಜಾಗದಲ್ಲಿ ಅಂಟಿಸಿ ಕೆತ್ತತೊಡಗಿದೆ. ಇನ್ನೊಂದನ್ನು ರೂಪದರ್ಶಿಯಾಗಿ ಬಳಸಿಕೊಂಡೆ. ಇದೂ ಗಾಡಿಯಂತೆ ಮೊದಲು ಉಬ್ಬು ಚಿತ್ರ, ಅನಂತರ ಮೂರನೇ ಆಯಾಮಕ್ಕೆ ಬಂದ ಶಿಲ್ಪ. ಗಾಡಿಯಲ್ಲಿ ಬಹುತೇಕ ಸರಳ ರೇಖೆಗಳು, ನಿಭಾವಣೆ ಸುಲಭವಾಗಿತ್ತು. ಇಲ್ಲಿ ಮನುಷ್ಯ ದೇಹದ ಬಾಗು ಬಳಕು, ಭಿನ್ನ ಭಾವ ಸಾರುವ ನಾಲ್ಕು ಕೈ, ಕೆದರಿದ ಕೇಶರಾಶಿ, ವಿಶಿಷ್ಟ ಭಂಗಿಯ ಕಾಲುಗಳು, ಎದೆ ಹರಹು, ನಡು ಸಪುರ.... ಹೇಗೋ ಸುಧಾರಿಸಿದೆ. ಒರಟೊರಟಾದ ಒಂದು ಹಂತಕ್ಕೆ "ಇನ್ನು
ಮುಂದುವರಿಯುವುದಿಲ್ಲ" ಎಂದು ನಿಲ್ಲಿಸಿದ್ದೆ. ಆದರೆ ಹೀಗೇ ಮನೆಗೆ ಬಂದ ಪರಿಚಿತರೆಲ್ಲ ‘ಸೂಪರ್’ ಕೊಟ್ಟ ಧೈರ್ಯದಲ್ಲಿ, ನಟರಾಜನ ಮುಖಕ್ಕೂ ಉಳಿ ಹಿಡಿದಿದ್ದೆ. ಆದರೆ ಕೆಲವೇ ಮಿನಿಟುಗಳಲ್ಲಿ ನನ್ನ ಮಿತಿಯ ಪೂರ್ಣ ಅರಿವು ಬಂತು. ವಿರೂಪ ಸಾಧನೆಗೆ ನೆಪಗಳನ್ನು ಹುಡುಕುವಂತಾಗುವ ಮೊದಲೇ ಮೂಲ ರೇಖಾಚಿತ್ರಕ್ಕೆ ಮುಗಿಸಿದೆ.
ನವಿಲಿನಲ್ಲಿ ಸುಂದರ ಗರಿಗಳ ರೂಪಣೆಯಲ್ಲಿ ನನ್ನ ಪರಿಣತಿಯ ಕೊರತೆಯಷ್ಟೇ ಕುಂಬು ಬೊಡ್ಡೆಯ ಮಿತಿಯೂ ಸೇರಿದೆ ಎಂದು ಸಂತೋಷದಲ್ಲಿ ಹೇಳಬಲ್ಲೆ. ಗರಿಯ ಎಳೆ ಎಳೆಗಳನ್ನು ಕೆತ್ತುವುದು ಅಸಾಧ್ಯವೆನ್ನಿಸಿತು. ಬಣ್ಣ ಕೊಟ್ಟ ದಾರ, ಹುಲ್ಲಿನ ಹಿಡಿಯ ಎಳೆಗಳನ್ನೆಲ್ಲ ಅಂಟಿಸುವ ಪ್ರಯೋಗ ಮಾಡಿದರೂ ಚಂದಕ್ಕುಳಿಯಲಿಲ್ಲ. ಕೊನೆಯಲ್ಲಿ ತೆಳು ಉಬ್ಬುಚಿತ್ರವನ್ನಷ್ಟೇ ಮಾಡಿ, ಬಣ್ಣದ ಬ್ರಷ್ಷನ್ನೇ ಅಸ್ಪಷ್ಟವಾಗಿ ಆಡಿಸಿದೆ. ದೇಹ ಮತ್ತು ಕಾಲುಗಳಿಗೆ ಸ್ವಲ್ಪ ಮಟ್ಟಿಗೆ ಮೂರನೇ
ಆಯಾಮವನ್ನು ಕೊಟ್ಟರೂ ನೋಟಕರು ಕೇಳುವ ಮುನ್ನ, ನಾನೇ "ನವಿಲು" ಎಂದು ಹೇಳಿಬಿಡುತ್ತೇನೆ!
ಉಳಿದಂತೆ ಎಲ್ಲೂ ಸ್ತಂಭದ ಮೈ ಖಾಲಿಯಿರದಂತೆ ಕೆಲವು ಕುಟ್ಟಣೆ ನಡೆಸಿದೆ. ಅವುಗಳಲ್ಲಿ ಮುಖ್ಯವಾದವು ಸ್ತಂಭದ ಬುಡದಿಂದ ಕೊಡಿವರೆಗೆ ಹಬ್ಬಿದ ಎರಡು ಬಳ್ಳಿಗಳು. ಒಂದರ ಮಗ್ಗುಲಿಗೆ ನಿಜ ಬೆಳಕಿನ ವ್ಯವಸ್ಥೆಯ ವಿದ್ಯುತ್ ವಯರ್ ಹುಗಿದೆ. ಆ ಬಳ್ಳಿ - ‘ವಿದ್ವಲ್ಲರಿ’, ಇನ್ನೊಂದು ಕಲ್ಪವಲ್ಲಿ. ಬಳ್ಳಿಗಳ ವಿಶಿಷ್ಟ ಬಳುಕು, ಮೋಹಕ ದಾಂಗುಡಿ, ಅವಾಸ್ತವಿಕ ಎಲೆ, ಹೂವು, ಹಣ್ಣು ನೋಟಕರಿಗೆ ಕೇವಲ ಅಚ್ಚರಿಮೂಡಿಸಿದರೆ ವಿಕಲ್ಪಲತೆ ಸಾರ್ಥಕ! ಅಲ್ಲೂ ನನ್ನನುಕೂಲಕ್ಕೆ ಒದಗಿದ ಕೆಲವನ್ನು ಮೂರು ಆಯಾಮಗಳಲ್ಲಿ ಕಾಣಿಸಿದ್ದೇನೆ. ಇದು ಯಶ ಕಂಡಲ್ಲಿ ಸಂತೋಷ, ಕೊರತೆಯಾದಲ್ಲಿ ಪೂರ್ವಯೋಜನೆ ಮಾಡಿಕೊಳ್ಳದ್ದಕ್ಕೆ ವಿಷಾದ
ಸ್ವಲ್ಪ ಕಾಡುತ್ತದೆ. ಸ್ವತಂತ್ರವಾಗಿಯೂ ಮೂಡಿದ ಬಿಡಿ ಕೆತ್ತನೆಗಳಲ್ಲಿ ಎಲೆ, ಹೂವು, ಹಲ್ಲಿ, ಚಿಟ್ಟೆಗಳನ್ನೆಲ್ಲ ಬಹುತೇಕ ಉಬ್ಬುಚಿತ್ರಗಳ ಮಿತಿಗೇ ಮುಗಿಸಿಕೊಂಡೆ. ಅಸ್ಪಷ್ಟವಾಗಿ ಒಂದು ನೈಜ ಹಣ್ಣೆಲೆ ಅಂಟಿಸಿದ್ದಲ್ಲದೆ, ‘ಶಿಲ್ಪಿ’ಯ ಹೆಸರನ್ನೂ ಕಾಣಿಸಿದ್ದೇನೆ.
ಕೊಡಿಮರ
ಸ್ತಂಭಕ್ಕೆ ಶಿರೋಭೂಷಣದಂತೆ ನೆತ್ತಿಯಲ್ಲೊಂದು ‘ಜೀವಂತ ಮರ’ ನಿಲ್ಲಿಸುವ ಯೋಚನೆ ಮೊದಲೇ ಇತ್ತು. ಅದಕ್ಕೆ ಸುಮಾರಿಗೆ ಹೊಂದುವಂತೆ ಬೇರೊಂದು ಒಣ ಕೊಂಬೆಯನ್ನು ಸಜ್ಜುಗೊಳಿಸಿದ್ದೆ. ಆದರೆ ಕೆಲವೇ ದಿನಗಳಲ್ಲಿ ನಮ್ಮಂಗಳದಲ್ಲೇ ಮಗುಚಿದ ಕರಿಬೇವಿನ ಬೇರಜಾಲ ಸಹಿತದ ಬುಡ ಹೆಚ್ಚು ಹೊಂದಿಬಂತು. ಅದರ ಬೇರ ಜಾಲದಲ್ಲಿ ಹೆಚ್ಚೆನಿಸಿದವನ್ನು ಕತ್ತರಿಸಿ, ಕೊರತೆ ಅನ್ನಿಸಿದ ಒಂದು ದಿಕ್ಕಿಗೆ ಇನ್ನೊಂದೇ ಕೋಲು ಕಸಿ ಮಾಡಿ ಕೊಡಿಮರ
ರೂಪಿಸಿದೆ. ಸ್ತಂಭದ ನೆತ್ತಿಯ ನಡುವೆ, ಒಂದೆರಡು ಸೆಮೀ ಆಳದ ತೆಳು ತೂತ ಮಾಡಿ, ಹೊಂದುವಂತೆ ಬೇವಿನ ಕಾಂಡ ತುದಿಯನ್ನು ಕೀಸಿ, ಪೆವಿಕಾಲಿನಲ್ಲಿ ಲೇಪ ಕೊಟ್ಟು ಬಿಗಿಮಾಡಿದೆ. ಆದರೆ ಸ್ತಂಭವನ್ನು ಇತರ ಕೆಲಸಕ್ಕೆ ಅಡ್ಡ ಹಾಕಿದಾಗ, ಸುತ್ತಿಗೆ ಪೆಟ್ಟಿನ ಕಂಪನಗಳಿಂದಲೂ ಕೊಡಿಮರ ಕಳಚಿಕೊಳ್ಳುತ್ತಿತ್ತು. ಕೊನೆಯಲ್ಲಿ ಅದಕ್ಕೆ ನಾಲ್ಕೂ ದಿಕ್ಕಿನಲ್ಲಿ ಕಬ್ಬಿಣದ ‘L’ ಇಟ್ಟು, ತಿರುಪಾಣಿ ಹಾಕಿ ನಿಶ್ಚಿಂತನಾದೆ. ಮುಂದೆ ಈ ವ್ಯವಸ್ಥೆ ಮತ್ತು ವಿದ್ಯುತ್ ವಯರ್‍ಗಳೆಲ್ಲವನ್ನು ಕಂದು ಬಣ್ಣ ಮಿಶ್ರಣ ಮಾಡಿದ ಡೆಂಟ್‍ಫಿಲ್ ಲೇಪದಲ್ಲಿ ಹುಗಿದುಬಿಟ್ಟೆ.
ಮರದ ಕಿರು ರೆಂಬೆಗಳ ಸ್ಥಾನಕ್ಕೆ ತಂತಿ, ಅನ್ಯ ಕಡ್ಡಿಗಳನ್ನು ಹೊಂದಿಸಲು ನೋಡಿದ್ದಿತ್ತು. ತೃಪ್ತಿ ಕೊಡಲಿಲ್ಲ. ಕೊನೆಯಲ್ಲಿ ಬೇರ ಕವಲುಗಳನ್ನೆ ನಂಬಿದೆ. ಎಲೆಗಳ ಟೊಪ್ಪಿ ಮೂಡಿಸಲು
ಬಣ್ಣದ ಕಾಗದಗಳ ಕತ್ತರಿಕೆಗಳು, ತೆಳು ಬಟ್ಟೆಯೊಂದರ ಹೊದಿಕೆಗಳ ಪ್ರಯೋಗ ಯಾಕೋ ಕುಶಿ ಕೊಡಲಿಲ್ಲ. ಕೊನೆಯಲ್ಲಿ ಆ ಹಸಿರು ಬಟ್ಟೆಯನ್ನು ಚೂರುಚೂರಾಗಿಸಿ, ಒಂದೇ ಎಳೆಯಲ್ಲಿ ಪೋಣಿಸಿ, ‘ಕೊಂಬೆ’ಗಳ ಉದ್ದುದ್ದಕ್ಕೆ ಗೋಂದಿನಿಂದ ಅಂಟಿಸಿ ಮುಗಿಸಿದೆ. ಡೆಂಟ್ ಫಿಲ್ಲಿನಲ್ಲಿ ಮೂಡಿಸಿದ ಪೊಟರೆ, ಫೆವಿಕಾಲಿನಲ್ಲಿ ಅಂಟಿಸಿದ ಅಕೇಸಿಯಾ ಬೀಜದುಂಡೆ, ಕೊಂಬೆಯೊಂದರಿಂದ ಇಳಿಸಿದ ಉಯ್ಯಾಲೆ ಇದಕ್ಕೆ ಭವ್ಯತೆ ತರಬಹುದು ಎಂದು ಆಶಿಸಿದ್ದೇನೆ.
ಹಾರುಗಪ್ಪೆ
ಸ್ತಂಭದಲ್ಲಿ ಮೂಡುತ್ತಿದ್ದ ವಿವಿಧ ಬಿಂಬಗಳನ್ನು ಅಂದಂದೇ ಫೇಸ್ ಬುಕ್ಕಿನಲ್ಲಿ ಹಾಕುತ್ತ ಬಂದಿದ್ದೆ. ಆಗ ನಡುವೆ ಎಲ್ಲೋ ಕಪ್ಪೆಮಿತ್ರ ಕೆವಿ ಗುರುರಾಜರು, ತಮ್ಮ ಅಭ್ಯರ್ಥಿಗೆ ಪ್ರಾತಿನಿಧ್ಯ ವಿಚಾರಿಸಿಕೊಂಡರು. ಪ್ರತಿಕ್ರಿಯೆಯಾಗಿ
ನಾನು ಸ್ವತಂತ್ರ ಕಪ್ಪೆ ಮೂರ್ತಿ ಕೆತ್ತುವುದನ್ನೇ ಕೈಗೆತ್ತಿಕೊಂಡೆ. ನಾವು ಮನೆ ಮಾಡಿದ ಹೊಸತರಲ್ಲಿ, ದೇವಕಿಯಪ್ಪ, ನನ್ನ ಮಾವ - ಕೊಂದಲಕಾನ ಕೃಷ್ಣ ಭಟ್ಟರು, ಒಂದು ಪರೆಂಗಿ ಮಾಡಿಕೊಟ್ಟಿದ್ದರು. (ತೂಕದ ಮರದ ಪೀಠದ ಮೇಲೆ ನಿಲ್ಲಿಸಿದ ಕಬ್ಬಿಣದ ಭರ್ಚಿಯೇ ಪರೆಂಗಿ. ಇದರಲ್ಲಿ ತೆಂಗಿನ ಸಿಪ್ಪೆ ಸುಲಿಯುವುದು ತುಂಬ ಸುಲಭ.) ದೇವಕಿ ಪರೆಂಗಿಯನ್ನು ಬಚ್ಚಲು ಒಲೆಯ ಪಕ್ಕದಲ್ಲೇ ಇಟ್ಟು ಬಳಸಿಕೊಂಡಿದ್ದಳು. ಎಂದೋ ಬಚ್ಚಲ ಬೆಂಕಿ ವಿಸ್ತರಿಸಿದಾಗ ಅದರ ಒಂದು ತುದಿ ತುಸು ಕರಿಕಾಗಿದ್ದರೂ ಗಟ್ಟಿಯೇ ಇತ್ತು. ಮುಂದೊಂದು ಕಾಲಕ್ಕೆ ಇನ್ನೂ ಸುಲಭದ ತೆಂಗು-ಸುಲಿ ಲೋಹದ ಸಲಕರಣೆ ಬಂದಾಗ ಪರೆಂಗಿ ಮೂಲೆ ಪಾಲಾಗಿತ್ತು.
ಪರೆಂಗಿಯ ಪೀಠ ಗಟ್ಟಿ ಬೀಟಿ ಮರದ್ದು. ಹಾಗಾಗಿ ಅದರ ಸುಟ್ಟು ಕರಿಕಾದ ತುದಿಯಿಂದೊಂದು ತುಣುಕನ್ನು ನಾನು ಕಪ್ಪೆ ಶಿಲ್ಪಕ್ಕಾಗಿ ಕತ್ತರಿಸಿಕೊಂಡೆ.
ಗೂಗಲ್ ಇಮೇಜಸ್ಸಿನಿಂದ ಹಾರುಗಪ್ಪೆಯ ಬಾಹ್ಯರೇಖೆಗಳು ಸ್ಪಷ್ಟವಾಗುವ ಚಿತ್ರವೊಂದನ್ನು ಆಯ್ದು, ಹಿಂದಿನಂತೆ ಎರಡು ಪ್ರಿಂಟ್ ತೆಗೆದು, ಒಂದನ್ನು ಮರದ ತುಂಡಿಗೆ ಅಂಟಿಸಿಕೊಂಡೆ. ಮೊಂಡುಮೂತಿ, ಕಣ್ಣಿನ ದಿಬ್ಬ, ಬೆನ್ನಿನ ಗೂನು, ಮೋಟು ಮುಂಗೈಗಳು, ಮಡಚಿದ ದೀರ್ಘ ಹಿಂಗಾಲುಗಳು, ವಿವರವಾದ ಬೆರಳುಗಳು, ನಡು ಸಣ್ಣ
ಎಂದೆಲ್ಲ ರೂಕ್ಷ ರೂಪವನ್ನು ಸಪುರ ಉಳಿ ಸುತ್ತಿಗೆ ಗುರುತಿಸಿಕೊಂಡೆ. ಮರ ‘ಅಗ್ನಿಪರೀಕ್ಷೆ’ ಕಂಡದ್ದಕ್ಕೋ ಏನೋ ಕೆಲವೆಡೆ ಸ್ವಲ್ಪ ಬಿರಿದಂತಿತ್ತು, ಗಡಸುತನ ಹೆಚ್ಚಿದಂತೆಯೂ ಇತ್ತು. ದೊಡ್ಡ ಭಾಗಗಳನ್ನು ಪುಟ್ಟ (ಇಟಾಲಿಯನ್) ಗರಗಸದಲ್ಲಿ ಕಳೆಯುವ ಪ್ರಯತ್ನ ಮಾಡಿದೆ. ಗರಗಸ ಕಚ್ಚಿಕೊಳ್ಳಲಿಲ್ಲ. ಇನ್ನೂ ಸಣ್ಣ ಹಲ್ಲುಗಳ ಹ್ಯಾಕ್ಸಾ ಬ್ಲೇಡನ್ನೇ ಪ್ರಯೋಗಿಸಬೇಕಾಯ್ತು. ಲೆಕ್ಕಕ್ಕೆ ಐದಾರು ಇಂಚಿನ ಮರದ ತುಣುಕಾದರೂ ಒಂದೊಂದು ಮಗ್ಗುಲಿನಲ್ಲೂ ಗಂಟೆಗಟ್ಟಳೆ ಕುಯ್ತ. ಅನಿವಾರ್ಯವಾದಲ್ಲಷ್ಟೇ ಸಪುರ ಉಳಿ, ಹಗುರ
ಪೆಟ್ಟು. ಅಷ್ಟಾಗಿಯೂ ಕೆಲಸದ ನಡುವೆ ಒಮ್ಮೆ ಕಪ್ಪೆಯ ಒಂದು ತೊಡೆ, ಇನ್ನೊಮ್ಮೆ ಒಂದು ಮುಂಗೈ ಕಳಚಿ ಬಂದಿತ್ತು. ತೊಡೆ ಫೆವಿಕಾಲ್ ಬಂಧನ ಒಪ್ಪಿಕೊಂಡಿತು. ಕೈ ಮಾತ್ರ ನಿಲ್ಲಲೇ ಇಲ್ಲ! ಹೊರಗೆ ಕಾಣುವಂತೆ ತಿರುಪಾಣಿ ಹಾಕುವ ಅನಿವಾರ್ಯತೆ ಒಪ್ಪಿಕೊಂಡೆ. ಈ ಮುರಿತಗಳು ಕಲಿಸಿದ ಪಾಠದಿಂದಾಗಿ ಬಾಯಿಯ ಸೀಳು ಕಾಣಿಸುವ, ಬೆರಳು ಮೂಡಿಸುವ, ಕೈಕಾಲುಗಳನ್ನು ಹೆಚ್ಚು ಬಿಡಿಸುವುದೇ ಮೊದಲಾದ ಪ್ರಯತ್ನಗಳನ್ನು ಕೈ ಬಿಟ್ಟೆ. ಉಳಿದೆಲ್ಲ ಕೆತ್ತನೆಗಳನ್ನು ಬಹು ದೀರ್ಘ ಅವಧಿಯಲ್ಲಿ, ಕೇವಲ ಅರ
ಹಾಗೂ ಮರಳು ಕಾಗದಗಳ ಉಜ್ಜಿನಲ್ಲೇ ಪೂರೈಸಿದೆ. ಅಷ್ಟಾಗಿಯೂ ಮರ ಸುಟ್ಟ ಕುರುಹುಗಳನ್ನು (ಭುಜದ ಬಳಿ ಬಿರಿದ ಲಕ್ಷಣಗಳು) ಪೂರ್ಣ ನಿವಾರಿಸುವುದು ಆಗಲೇ ಇಲ್ಲ. ಮಾದರಿಯಾಗಿ ಆರಿಸಿಕೊಂಡಿದ್ದ ಚಿತ್ರಕ್ಕೆ ದೂರವಾದ ಒಂದು ಮೂರ್ತಿಯಷ್ಟೇ ಸಾಧಿತವಾಯ್ತು!
ಸಂಪರ್ಕ ಸೇತುಗಳು
ಮೊದಲು ವಿವಿಧ ಅಂತಸ್ತುಗಳಿಗೆ ಒಳಗಿನಿಂದಲೇ ಮೆಟ್ಟಿಲ ಸಾಲು ಕೆತ್ತುವ ಹೊಳಹು ಹಾಕಿದ್ದೆ. ಐತಿಹಾಸಿಕ ಗುಂಬಜ್,
ಮಿನಾರುಗಳಲ್ಲಿ ಒಳಗಿನಿಂದ ಇಂಥ ಮೆಟ್ಟಿಲ ಸರಣಿ ಸಾಮಾನ್ಯವಾಗಿ ಎಲ್ಲರೂ ಕಂಡದ್ದೇ ಇದೆ. ಆದರೆ ಶಿಲ್ಪದ ಗಾತ್ರ, ನನ್ನ ಪರಿಣತಿ, ಮರದ ಗುಣ ಮತ್ತು ಲಭ್ಯ ಹತ್ಯಾರುಗಳ ಸಾಮರ್ಥ್ಯದಲ್ಲಿ ಅದು ಅಸಾಧ್ಯವೆನ್ನಿಸಿತು. ಹಾಗಾಗಿ ಗುಹೆಗಳ ಒಳ ಮಗ್ಗುಲಿನಲ್ಲಿ ಕೇವಲ ದ್ವಾರವನ್ನಷ್ಟೇ ಕಾಣಿಸಿದೆ. ಹೊರಮೈಯಲ್ಲಿ ಏರು ಮೆಟ್ಟಿಲುಗಳ ಕಾಲ್ಪನಿಕತೆಗೆ ಇಂಬು ಸಿಗುವಂತೆ, ಗವಾಕ್ಷಿಯನ್ನಷ್ಟೇ ಕಾಣಿಸಿ ತೃಪ್ತನಾದೆ. ಕೊನೆಯ ತಾರಸಿ ಅಥವಾ ಸ್ತಂಭದ ನೆತ್ತಿಗೇರುವಲ್ಲಿ ಮಾತ್ರ ಸ್ಪಷ್ಟ ಹೊರಗಿನ ಮೆಟ್ಟಿಲುಗಳನ್ನೇ ನೆಚ್ಚಿದೆ.
ಬಿಸಿಲ ಸೆಜ್ಜದ ದ್ವಾರದಂಚಿನಲ್ಲಿ ಕಟ್ಟೆಗೇರಲು ಎರಡು
ಮೆಟ್ಟಿಲು. ಮತ್ತೆ ಕಣ್ಣಂದಾಜಿನ ಓರೆಯಲ್ಲಿ ನೆತ್ತಿಗೆ ಪುಟ್ಟ ಮೆಟ್ಟಿಲ ಸಾಲು ಕಡಿದೆ. ಅದು ತೀರಾ ಕಡಿದೆನ್ನಿಸಿತು ಮತ್ತು ಬೊಡ್ಡೆಯ ದೌರ್ಬಲ್ಯದಲ್ಲಿ ತೀರಾ ಕಚ್ಚಾ ರೂಪ ಕಂಡಿತ್ತು. ಎರಡನೇ ಪ್ರಯತ್ನದಲ್ಲಿ, ಅದರ ಮೇಲೇ ಇಂಚುಪಟ್ಟಿ ಇಟ್ಟು, ಪೆನ್ಸಿಲ್ ರೇಖೆ ಎಳೆದು, ತುಸು ದೀರ್ಘವಾದರೂ ಹೊಸದೇ ಮೆಟ್ಟಿಲ ಸಾಲು ಮಾಡಿದೆ. ಅದು ಕಚ್ಚಾ ಮೆಟ್ಟಿಲ ಸಾಲನ್ನು ಪೂರ್ಣ ಜೀರ್ಣಿಸಿಕೊಂಡು ಹೆಚ್ಚು ಸುಂದರವಾಗಿ ಮೂಡಿತು.
ಮುಂದೊಂದು ಹಂತದಲ್ಲಿ ನನಗೆ ಮೇಲೇರಲು ಒಂದೆರಡು ಪರ್ಯಾಯ ದಾರಿಗಳನ್ನು ( - ಬಹುಮಹಡಿ ಕಟ್ಟಡಗಳಲ್ಲಿ
ಬೆಂಕಿ ಆಕಸ್ಮಿಕದಲ್ಲಿ ಜನ ಪಾರಾಗಲು ಪ್ರತ್ಯೇಕ ಸುರುಳೇಣಿ ಇಡುತ್ತಾರೆ ನೋಡಿ, ಹಾಗೆ) ಮಾಡುವ ಉಮೇದು ಬಂತು. ಅಂಥ ಮೂರು ಪರ್ಯಾಯ ಮಾರ್ಗಗಳನ್ನು ಬೊಡ್ಡೆಗೆ ಹೇರಿದೆ. ಮೊದಲನೆಯದಾಗಿ ಹೆಬ್ಬಾಗಿಲಿನ ಬಲ ಹಿಮ್ಮೈಯಲ್ಲಿ ದಿಣ್ಣೆಯಿಂದ ಮೊದಲ ಅಂತಸ್ತಿಗೆ ಅರೆ-ಗುಪ್ತದ್ವಾರ. ನೆಲದಿಂದ ಆರೇಳು ಬಹಿರಂಗ ಮೆಟ್ಟಿಲುಗಳು ಮತ್ತೆ ಬೊಡ್ಡೆಯಲ್ಲಿದ್ದ ಸಹಜ ಉಬ್ಬಿನೊಳ ಸೇರಿ, ಮೊದಲ ಅಂತಸ್ತಿನ ನೆಲದಲ್ಲಿ ಪ್ರಕಟವಾಗುವ ಗುಹಾದ್ವಾರ. ಎರಡನೇದು, ನಾಲ್ಕನೇ ಅಂತಸ್ತಿನಿಂದ ಐದನೇದ್ದಕ್ಕೇರಲು ಹಿಮ್ಮುರಿ ತಿರುವಿನ
ಬಹಿರಂಗ ಮೆಟ್ಟಿಲ ಸಾಲು. ಮೂರನೇದು, ಆರನೇ ಮಾಳಿಗೆಯಿಂದ ಐದಕ್ಕಿಳಿಯಲು ಮತ್ತೆ ಹಿಮ್ಮುರಿ ತಿರುವಿರುವ ಬಹಿರಂಗ ಜಾರೋಣಿ (Chute). ಇವನ್ನು ಕೆತ್ತುವ ಕಾಲಕ್ಕೆ ಬಳ್ಳಿಯ ಬಳುಕುಗಳೂ ಅಲಂಕಾರಿಕ ದ್ವಾರವೂ ರೂಪುಗೊಂಡಾಗಿತ್ತು. ನನ್ನ ಸಣ್ಣ ಎಡವಟ್ಟೂ ದುಡ್ಡಿನ ಮೋಹದಲ್ಲಿ ರಿಸಾರ್ಟಿನ ವಿಸ್ತರಣೆಗಿಳಿದು ಮನೆಯನ್ನು ಕಳೆದುಕೊಂಡವರ ಸ್ಥಿತಿ ತರಬಹುದಿತ್ತು. ಎಲ್ಲ ಎಚ್ಚರಿಕೆಯೊಡನೆಯೂ ಎರಡು ಕಡೆ ಬಿರುಕು ಬಿಟ್ಟ ಬಳ್ಳಿಗೆ ಅರಾಲ್ಡೈಟ್ ಚಿಕಿತ್ಸೆ ಕೊಡಬೇಕಾಯ್ತು. ಒಂದೆಡೆ ಗುಹೆಯ
ಅಲಂಕಾರಿಕ ದ್ವಾರಬಂಧ ಕೆಡದಂತೆ ಪ್ರತ್ಯೇಕ ಒಳ ಬಾಗಿಲನ್ನೇ ಕಡಿದು ಸುಧಾರಿಸಿದೆ. ಇನ್ನೂ ಹೆಚ್ಚಿನ ಕೆತ್ತನೆಗಳನ್ನು ಹೇರಿದರೆ ಬೊಡ್ಡೆ ತಾಳಿಕೊಳ್ಳದು ಎಂದು ಪರ್ಯಾಯ ದಾರಿಗಳ ಯೋಚನೆ ಕೈ ಬಿಟ್ಟೆ.
ಬಿಸಿಲ ಸೆಜ್ಜಕ್ಕೆ ಹೋಗಿ ಬರುವ ‘ಮಂದಿಗೆ’ ಮೋಟಿನ ಅಂಚುಗಳೇ ರಕ್ಷಣೆಗಿದ್ದವು. ಆದರೆ ಅಷ್ಟೇ ‘ಸಾರ್ವಜನಿಕ’ ಬಳಕೆಗೊಳಪಡುವ ತಾರಸಿ ಮತ್ತು ಅದಕ್ಕೇರುವ ಮೆಟ್ಟಿಲುಗಳಿಗೇನಾದರೂ ಕಟಕಟೆ ಕೊಡಬೇಕನ್ನಿಸಿತು. ಮೊದಲು ಅವು ಸೇರಿದಂತೆ ಮಹಾದ್ವಾರದ ಮೆಟ್ಟಿಲ
ಅಂಚುಗಳಲ್ಲೂ ದಪ್ಪ ತೆಂಗಿನಕಡ್ಡಿಯ ‘ಗೂಟ’ ಊರಿ, ಮೇಲೆ ತೆಳು ಬೆತ್ತದ ಸೀಳನ್ನು ಅಂಟಿಸಿ, ಕೈ ತಾಂಗು ಮಾಡಿದ್ದೆ. ಆದರೆ ಇತರ ಕೆತ್ತು, ಮೆತ್ತು ಕೆಲಸಗಳ ದಡಬಡದಲ್ಲಿ ಈ ಕೋಮಲ ರಚನೆಗಳು ರೂಪ ಕಳೆದುಕೊಂಡವು. ಆಗ ಮಹಾದ್ವಾರದ ಸಿಮೆಂಟ್ ದಿಬ್ಬದಲ್ಲೇ ಮೋಟು ಗೋಡೆ ಮಾಡಿಬಿಟ್ಟೆ. ತಾರಸಿ ಮೆಟ್ಟಿಲು ಹಾಗೂ ಅಂಚುಗಳಿಗೆ ಜೀನ್ಸ್ ಬಟ್ಟೆಯನ್ನು ಗೋಂದಿನಲ್ಲಿ ಸಂಸ್ಕರಿಸಿ ಗಟ್ಟಿ ಮಾಡಿ ಅಂಟಿಸಿದೆ. ಅವಕ್ಕೆ ಈಗ ಹೆಚ್ಚುವರಿ ಪೈಂಟಿನ ಬಲವೂ ಸೇರಿದೆ.
ತೇಪೆ ಕಾರ್ಯಗಳು
ಕುಂಬು ಮರದಲ್ಲಿ ಸಹಜವಾಗಿ ಮೂಡಿದ ಬಿರುಕು, ನನ್ನ ಕೆಲಸದಲ್ಲಿನ ತಪ್ಪುಗಳು ಮತ್ತು ಒಳನೆಲಗಳ ನಯಗಾರಿಕೆಗೆ ಕೆಲವು ತೇಪೆ ಹಾಕಿದ್ದೇನೆ. ನನ್ನ ಅಂಗಡಿ, ಮನೆಯ ಎಲ್ಲ ಮರಗೆಲಸಗಳಿಗೂ ಆದರ್ಶ ಬಡಗಿಯಾಗಿ ಒದಗಿದ್ದವ (ಕೀರ್ತಿಶೇಷ) ದೇವಪ್ಪಾಚಾರಿ. ಆತ ಮರದ ಹುಳುಕುಗಳನ್ನು ಪ್ರಯೋಗಿಸುತ್ತಿದ್ದ ಜೇನುಮೇಣ ನನ್ನಲ್ಲಿತ್ತು. ಹಾಗೇ ನನ್ನ
ನೆಚ್ಚಿನ ಪೈಂಟರ್ ಏಕನಾಥ್ ಬಳಸಿ ಉಳಿಸಿದ್ದ ಉಡ್-ಲಾಂಪಿಯೂ ಇದೆ. ಅವು ತೋರಿಕೆಗೆ ನುಣ್ಣನೆ ಮೈ ಕೊಟ್ಟರೂ ಗಟ್ಟಿಯುಳಿಯುತ್ತಿರಲಿಲ್ಲ. ಫೆವಿಕಾಲಿನಲ್ಲಿ (ಗೋಂದು) ಮರದ ಹುಡಿಯನ್ನು ಕಲಸಿ ತುಂಬಿದೆ. ಅದು ಸಂದು ತುಂಬಿದರೂ ಹರಳುಗಟ್ಟುವುದರಿಂದ ಖಚಿತ ರೂಪ, ನುಣ್ಣನೆ ನೋಟ ಕೊಡಲಿಲ್ಲ. ಪೈಂಟ್ ಅಂಗಡಿಯವರು, ಫ಼ೆವಿಕಾಲ್ ವುಡ್‍ಫಿಲ್ ಎಂಬ ದ್ರಾವಣ ಕೊಟ್ಟರು. ಬಿರುಕಿಗೆ ಬಿಗಿಯಾಗಿ ಮರದಹುಡಿ ತುಂಬಿ, ಅದರ ಮೇಲೆ ಆ ದ್ರಾವಣದ ಒಂದೆರಡು ಬಿಂದು ಬಿಟ್ಟೆ. ಅದು ಬುಸ್ಸೆಂದು ಸಣ್ಣದಾಗಿ ಹೊಗೆ ಬಿಟ್ಟು, ತಣಿದಾಗ ಭದ್ರವಾಗೇ ಕುಳಿತಿತು. (ಆ ಹೊಗೆ ಆರೋಗ್ಯಕರವಲ್ಲವಂತೆ!) ಆದರೆ ಇದೂ ಫೆವಿಕಾಲ್-ಮರದಹುಡಿ ಉಂಡೆಯದೇ ಗುಣ ತೋರಿತು. ಆಗ ಒದಗಿದವರು, ಅನುಭವೀ ಗೆಳೆಯ - ವೆಂಕಟ್ರಮಣ ಉಪಾಧ್ಯ. ಇವರು ಡೆಂಟ್‍ಫಿಲ್ ಎಂಬ ಇನ್ನೊಂದೇ ಪೇಯಿಂಟ್ ಉತ್ಪನ್ನವನ್ನು ಶಿಫಾರಸು ಮಾಡಿದರು. ಅದು ವಿವಿಧ ವರ್ಣಗಳಲ್ಲಿ ಬರುತ್ತದಂತೆ. ಆದರೆ ನನ್ನ ದುರದೃಷ್ಟಕ್ಕೆ ಅಪ್ಪಟ ಬಿಳಿಯದ್ದು ಮಾತ್ರ ಸಿಕ್ಕಿತ್ತು. ಇದು ತುಸು ನೀರು ಹೆಚ್ಚು ಹಾಕಿ ಕಲಸಿದ ಗೋಧೀ ಹಿಟ್ಟಿನಂತಿತ್ತು.
ಸೀಳು, ತಗ್ಗುಗಳಿಗೆ ಬಳುಕುವ ತೆಳು ಚೂರಿಯಲ್ಲಿ ಬಿಗಿಯಾಗಿ ತುಂಬಿದೆ. ಅದು ಒಂದೆರಡು ಗಂಟೆಯಲ್ಲಿ ಗಟ್ಟಿಯಾಯ್ತು, ಅವಶ್ಯವಿದ್ದಲ್ಲಿ ಕೆತ್ತನೆಗೂ ನುಣ್ಣಗೆ ಒಡ್ಡಿಕೊಂಡಿತು. ಅದರ ಶ್ವೇತವರ್ಣವನ್ನು ಪೇಯಿಂಟಿನಲ್ಲಿ ಮುಚ್ಚುವುದಾಗುತ್ತದೆ. ಆದರೆ ಮರದ ಸ್ವಾಭಾವಿಕ ಬಣ್ಣ, ಕೆತ್ತನೆಯ ಶ್ರಮ ಮತ್ತು ಮಿತಿಗಳನ್ನು ಮರೆಮಾಡಿ, ಬ್ಯೂಟೀಪಾರ್ಲರ್ ಸುಂದರಿಯ ಕದಪಿನಂತೆ ಮಾಡುತ್ತದೆ. ನನ್ನ ಶಿಲ್ಪ ವಾಣಿಜ್ಯ ಸರಕಲ್ಲ, ಸಾರ್ವಜನಿಕ ಪ್ರದರ್ಶನದ ಮಾಲೂ ಅಲ್ಲ ಎಂಬ ಅರಿವು ಡೆಂಟ್ ಫಿಲ್ ಜತೆ ರಾಜಿ ಮಾಡಿತು. ಮುಂದೆ ಅಗತ್ಯವಿದ್ದಲ್ಲಿ ಸ್ಥಳಕ್ಕೆ ಅನುರೂಪ ಆಯಿಲ್ ಪೇಂಟಿನ ಕೆಲವು ಹನಿಗಳನ್ನೇ ಕಲಸಿ ಮೆತ್ತಿದೆ. ಆದರೂ ಅಲ್ಲಲ್ಲಿ ಬಿಳಿಯಾಗಿಯೂ ಛಾಯಾವ್ಯತ್ಯಾಸಗಳಲ್ಲೂ ತೇಪೆ ಕಾಣುವುದನ್ನು ತಪ್ಪಿಸಲಾಗಲೇ ಇಲ್ಲ.
ಇಂಬುಗಳು, ಹತ್ಯಾರುಗಳು
ಬಹುತೇಕ ಕೆತ್ತನೆ ಕೆಲಸವೆಲ್ಲ ಸ್ತಂಭವನ್ನು ಅಡ್ಡ ಹಾಕಿಯೇ ನಡೆಸಿದ್ದೇನೆ. ಸ್ತಂಭದ
ಕೊಂಬೆ ಮೋಟು ಮತ್ತೆ ಪೀಠದ ಎತ್ತರವನ್ನು ಹೊಂದಿಸಿಕೊಳ್ಳಲು ಮರದ ಹುಡಿ ತುಂಬಿದ ಚೀಲವನ್ನು ಧಾರಾಳ ಬಳಸಿದೆ. ಕೊನೆಕೊನೆಯಲ್ಲಿ ಸುತ್ತಿಗೆ ಆಘಾತಗಳು ಪೀಠದ ಸಿಮೆಂಟ್ ಅಂಚುಗಳ ರೂಪ ಕೆಡಿಸದಂತೆ ಕಾರಿನ ಎರಡು ಹಳೆಯ ಟಯರುಗಳನ್ನೂ ಎಳೆದುಕೊಂಡೆ.
ಬಾಗಿಲ ಪಡಿಗಳು, ಕಪ್ಪೆಯಂಥ ಸ್ವತಂತ್ರ ಮರದ ತುಂಡುಗಳನ್ನು ಕೆತ್ತುವಾಗ ಬಿಗಿಯಾಗಿ ಹಿಡಿದಿಟ್ಟುಕೊಳ್ಳುವ ‘ವೈಸ್’ನಂಥ ಸಾಧನದ ಕೊರತೆ ಕಾಡಿದ್ದಿತ್ತು. (ತಿರುಪುಕೋಲಿನ ಒಂದು ಕೊನೆಯಲ್ಲಿ ದೃಢ ದವಡೆ,
ಇನ್ನೊಂದು ಸಂಚಾರಿ ದವಡೆಯ ವೈಸ್, ನೀವು ವಿವಿಧ ವಿನ್ಯಾಸಗಳಲ್ಲಿ ಬಹುತೇಕ ಎಲ್ಲಾ ಕುಶಲ ಕರ್ಮಿಗಳಲ್ಲಿ ಕಂಡೇ ಇರುತ್ತೀರಿ) ನನ್ನ ತತ್ಕಾಲೀನವೇ ಇರಬಹುದಾದ ಹವ್ಯಾಸಕ್ಕೆ ಕೆಲವು ನೂರು ರೂಪಾಯಿ ವೆಚ್ಚದಲ್ಲಿ ವೈಸ್ ಕೊಳ್ಳಲು ನನಗೆ ಮನಸ್ಸಾಗಲಿಲ್ಲ. ಆಗ ಒದಗಿದ್ದು ಹಿಂದೆ ಕಡಿದಿಟ್ಟ ಸುಮಾರು ಎರಡಡಿ ಉದ್ದದ ತೆಂಗಿನ ಮರದ ತುಂಡು. ಗರಗಸ ಹಾಕಿದ್ದರಿಂದ ಅದರ ಎರಡೂ ಕೊನೆಗಳು ಸಪಾಟಾಗಿದ್ದವು. ಅದನ್ನು ನಿಲ್ಲಿಸಿ, ಮೇಲೆ ನನ್ನ ಕಚ್ಚಾಮಾಲನ್ನು ಆಣಿಗಳಲ್ಲಿ ಬಂಧಿಸಿ ಕೆಲಸ ಮಾಡಿದೆ. ‘ಕೊಡಿಮರ’ದ ಕೆಲಸಕ್ಕಾಗುವಾಗ ತೆಂಗಿನ ತುಂಡಿನಲ್ಲಿ ಆಳದ ತೂತನ್ನೇ ಮಾಡಿ, ಬೇವಿನ ಕಾಂಡವನ್ನು ಇಳಿಸಿ, ಕೀಲಿನಲ್ಲಿ ಬಿಗಿ ಮಾಡಿಕೊಂಡು ರೂಪಣೆ ನಡೆಸಿದೆ.
ಸಪುರ ಕಂಡಿಗಳ ಒಳಗೆ ಕೆತ್ತುವಲ್ಲಿ ನನ್ನಲ್ಲಿದ್ದ ಅತ್ಯಂತ ಸಣ್ಣದೆನ್ನುವ ಕಾಲಿಂಚು ಉಳಿ ಅಪಾಯಕಾರಿಯೇ ಆಗುತ್ತಿತ್ತು. ಮೊದಲೇ ಬಿರಿದಿದ್ದ,
ಸಾಕಷ್ಟು ಹುಳಗಳೂ ಕೊರೆದಿದ್ದ ಬೊಡ್ಡೆಯನ್ನು ಈ ಉಳಿ ಎರಡು ಹೋಳು ಮಾಡಿಬಿಡಬಹುದಿತ್ತು. ಹಾಗಾಗಿ ನನ್ನಲ್ಲಿದ್ದ ವಿವಿಧ ಗಾತ್ರದ ಎರಡು ತೆಳು ಸ್ಕ್ರೂಡ್ರೈವರ್‍ಗಳನ್ನು ಅರದಲ್ಲಿ ಉಜ್ಜಿ ಉಳಿಯ ಸ್ಥಾನಕ್ಕೇರಿಸಿದೆ. ಒಂದೆರಡು ಹಳೆ ಚೂರಿ, ದಬ್ಬಣಕ್ಕೂ ಬಾಯಿ ಕೊಟ್ಟು ಬಳಸಿದೆ. ಅವುಗಳ ಸಹಜ ಪ್ಲ್ಯಾಸ್ಟಿಕ್ ಹಿಡಿ ಒಡೆದಾಗ, ಕಮ್ಮಾರ ಗಂಗಾಧರರ ಬಳಿ ಮರದ ಹಿಡಿಕೆ ಮಾಡಿಸಿಕೊಂಡೆ. ಇನ್ನೂ ಹೆಚ್ಚಿಗೆ ಕುಶಲಕರ್ಮಿಗಳು ಬಳಸುವ ವಿಶೇಷ ಹತ್ಯಾರುಗಳೇನಾದರೂ ಇವೆಯೇ ಎಂಬ ಹುಡುಕಾಟವನ್ನೂ ಉಳಿಸಿಕೊಂಡೇ ಇದ್ದೆ. ಆಗ ಅವರಿವರ ಕೇಳಿಕೆಯ ಮೇರೆಗೆ ವುಡ್ ಕಾರ್ವಿಂಗ್ ಟೂಲ್ಸೆಂದೇ ಖ್ಯಾತವಾದ ಆರು ಉಳಿಗಳ ಒಂದು ಕಟ್ಟು ನನಗೆ ದಕ್ಕಿತು. ಬೆಲೆ ಆರ್ನೂರು ರೂಪಾಯಿ. ಪುಟ್ಟ, ವಿಭಿನ್ನ ವಿನ್ಯಾಸದ ಉಳಿಗಳು ಸ್ವತಂತ್ರವಾಗಿ ಒಂದು ಕಲಾವಿಶೇಷದಂತೇ ಇದ್ದವು. ಆದರೆ ಪ್ರಾಯೋಗಿಕ ಹಂತದಲ್ಲಿ ಅವು ಸುತ್ತಿಗೆ ಪೆಟ್ಟು ತಿನ್ನಲು ಬಂದವಲ್ಲ ಎಂಬ ಅರಿವಾಯ್ತು. ಇವು ಯಾಂತ್ರಿಕ
ತಿರುಗಣೆಯಲ್ಲಿರುವ ಕಚ್ಚಾ ಮರವನ್ನು ಬೇಕಾದ ರೂಪಕ್ಕಿಳಿಸುವ ಒಡ್ಡು ಕೀಸುಳಿಗಳಂತೆ. ಪ್ರಸ್ತುತ ಬೊಡ್ಡೆ ಕೆತ್ತನೆಯ ಲೆಕ್ಕದಲ್ಲಿ ಷಣ್ಮುಖರು ನಿರುಪಯುಕ್ತರು.
ಬಣ್ಣಗಳಲ್ಲಿ ಕಸರತ್ತು
ನನ್ನ ಶಿಲ್ಪದ ಕಲ್ಪನೆಯಲ್ಲಿ ಮನೆಯಲ್ಲಿ ಸಹಜ ಲಭ್ಯವಿರುವ ವಸ್ತುಗಳನ್ನಷ್ಟೇ ಮುಖ್ಯವಾಗಿ ಬಳಸುವ ಅಂದಾಜಿತ್ತು. ಅದನ್ನು ಶಿಲ್ಪದ ವರ್ಣವೈವಿಧ್ಯಕ್ಕೆ ವಿಸ್ತರಿಸಲು ಅಂಗಳದ ಹೂ ಹಸಿರು, ಕಲ್ಲು ಮಣ್ಣು ಸಣ್ಣದಾಗಿ ಪ್ರಯೋಗಿಸಿ ನೋಡಿದೆ. ನೀರೋ ಕರಿದೆಣ್ಣೆಯನ್ನೋ ಮಾಧ್ಯಮವಾಗಿಸಿ ನುರಿದು, ತೇಯ್ದು ಮೆತ್ತಿದ್ದು ನಿಲ್ಲಲಿಲ್ಲ. ಅವನ್ನು ಕಾಸಿ ಸೋಸಿ ಪ್ರಯೋಗಿಸಿ ಬಣ್ಣ ಬಂದರೂ ಮೊದಲೇ ಕುಂಬಾದ ಬೊಡ್ಡೆಯ
ಬಾಳಿಕೆಗೆ ಸಹಾಯವಾದೀತೆಂದೂ ಅನಿಸಲಿಲ್ಲ. ನನ್ನ ಕೆಲಸದುದ್ದಕ್ಕೂ ಸಣ್ಣ ಹಾರುವ ಕೀಟಗಳು ಬೊಡ್ಡೆಯಲ್ಲಿನ ತಮ್ಮ ವಸತಿ ಯೋಜನೆಯನ್ನು ಊರ್ಜಿತದಲ್ಲೇ ಇಟ್ಟುಕೊಂಡಿದ್ದದ್ದೂ ನನ್ನನ್ನು ಕಾಡುತ್ತಿತ್ತು. ಹೀಗಾಗಿ ಮಧ್ಯಂತರದಲ್ಲಿ ನಾನೊಮ್ಮೆ ಇಡೀ ಸ್ತಂಭಕ್ಕೆ ವುಡ್ ಪ್ರೈಮರ್ ಬಳಿದೆ. ಮುಂದೆ ಚಿತ್ರ, ಮೂರ್ತಿಗಳ ಕೆತ್ತನೆ, ಉಜ್ಜಿಕೆಗಳಲ್ಲಿ ಪ್ರೈಮರ್ ಮಾಸಿದರೂ ಬೊಡ್ಡೆ ಹೀರಿಕೊಂಡ ಅಂಶ, ತೂತುಗಳು ಮುಚ್ಚಿಹೋದ ಪರಿಣಾಮ ಕೀಟ ಪ್ರಪಂಚವನ್ನು ಸಾಕಷ್ಟು ದೂರವಿಟ್ಟಿತು.
ಸೀತಾಫಲ ಮರ ಮತ್ತೆ ಕುಂಬಾದ ಸ್ಥಿತಿಗಳಿಂದ ಮೂಲ ಬಣ್ಣ
ಎಂದು ನೆಚ್ಚುವಂತದ್ದೇನೂ ಇರಲಿಲ್ಲ. ಅದರ ಮೇಲೆ ನನ್ನ ಬಣ್ಣ ಹಾಗೂ ಕೆತ್ತನೆಯ ಪ್ರಯೋಗಗಳೂ ಸೇರಿಕೊಂಡವು. ಹಾಗಾಗಿ ಕೊನೆಯಲ್ಲಿ ಹೆಚ್ಚಿನ ಭಾಗಗಳಿಗೆ ಬಹುಪಾಲು ಪಾರದರ್ಶಕವಾದ ಟಚ್-ವುಡ್ ಬಳಸಿದೆ. ವಿಶೇಷಪಟ್ಟ ಕೆತ್ತನೆ ಹಾಗೂ ವಿವಿಧ ಆಯಾಮಗಳ ಸ್ಪಷ್ಟನೆಗಾಗಿ ಕೆಲವು ಭಿನ್ನ ವರ್ಣಗಳನ್ನೂ ಬಳಸಿದ್ದೇನೆ.
ಕೈ ಬಿಟ್ಟ ಯೋಜನೆಗಳು
ಸ್ತಂಭದ ತಳದಿಂದ ಸಪುರ ಕೊಳವೆ ನುಗ್ಗಿಸಿ, ನಲ್ಲಿ ಸಂಪರ್ಕದಿಂದ ‘ನೀರಗುಹೆ’ ಕಾಣಿಸುವ ಯೋಚನೆ ಇತ್ತು. ಅದಕ್ಕೆ ಸ್ತಂಭದ ಬುಡದ ಸಹಜ ಒಳಸುಳಿಯನ್ನು ಚೂರು ಕೆತ್ತಿ, ತಳದಲ್ಲಿ ಪ್ರಾಥಮಿಕ ಹೊಂಡ ಕಾಣಿಸುವುದೆಲ್ಲ ಮಾಡಿದೆ. ಮುಂದೆ ಅಲ್ಲಿಂದ ಉಕ್ಕಿ ಜಿನುಗುವ ನೀರು ಜಲಪಾತದಂತಿಳಿದು, ಕೊಳದಂತ ತಗ್ಗಿನಲ್ಲಿ ತುಂಬಿ, ಕೊನೆಯಲ್ಲಿ ವ್ಯವಸ್ಥೆಯ ಹೊರಗಿನ ಬಕೆಟಿನಲ್ಲಿ ಸಂಗ್ರಹಿಸುವುದೆಂದೂ ಯೋಚಿಸಿದ್ದೆ. ಕೆತ್ತಿದ್ದ ಹೊಂಡದ ತಳದಿಂದ ಓರೆಯಲ್ಲಿ ಸುಮಾರು ಒಂದಡಿಯಷ್ಟು
ಆಳದ ತೂತು ಆಗಬೇಕಿತ್ತು. ಆರೆಂಟು ಇಂಚಿನವರೆಗಷ್ಟೇ ನನ್ನಲ್ಲಿದ್ದ ಒಂದೂವರೆ ಅಡಿ ಉದ್ದದ ಭೈರಿಗೆ ಸಹಕರಿಸಿತು. ಮತ್ತಿನದ್ದಕ್ಕೆ, ನನ್ನಲ್ಲಿದ್ದ ರೋಲಿಂಗ್ ಶಟರ್ ಎಳೆಯುವ ಕಬ್ಬಿಣ ಸರಳು ಆಯ್ದುಕೊಂಡೆ. ಅದರ ಕೊಕ್ಕೆಯ ತುದಿ ಕತ್ತರಿಸಿ, ಜಜ್ಜಿ, ಉಜ್ಜಿ ಬಾಯಿ ಕೊಟ್ಟೆ. ಬಾಯಿಯನ್ನು ತುಸು ಸೀಳಿ, ಬಗ್ಗಿಸಿ ತಿರುಪಿನಂತೆ ಬಳಸಲು ಪ್ರಯತ್ನಿಸಿದೆ, ಊಹೂಂ. ಚೂಪು ಮಾಡಿ, ಹಗುರಕ್ಕೆ ಸುತ್ತಿಗೆ ಪೆಟ್ಟನ್ನೂ ಕೊಟ್ಟು ನೋಡಿದೆ. ಹೆಚ್ಚು ಬಡಿದರೆ ಬೊಡ್ಡೆ ಮತ್ತು ಪೀಠ ತಡೆಯದು ಅನಿಸಿತು. ಆ ಸರಳನ್ನು ಕಮ್ಮಾರನಲ್ಲಿಗೆ ಒಯ್ದೆ. ಆತ ಸರಿಯಾದ ತಿರುಪಿನ ಬಾಯಿಯನ್ನೇ ಮಾಡಿಕೊಟ್ಟ. ಆದರೂ ಪ್ರಗತಿ ನಾಸ್ತಿ. ಕಾರಣ ಇಷ್ಟೇ ಒಳಗೆ ಘರ್ಷಣೆಯ ಬಿಸಿಯಲ್ಲಿ ಸರಳು ಊದಿ, ಅಲ್ಲಾಡದ ಸ್ಥಿತಿ ಬರುತ್ತಿತ್ತು. ಸರಳಿನ ಜತೆ ನೀರು ಹರಿಸಿ ನೋಡಿದೆ. ಆಗ ಹೊರಬರಬೇಕಾದ ಮರದ ಹುಡಿ ನೀರಿನಲ್ಲಿ ಕಲಸಿ, ಒಳಗೆ ಜಮಾಯಿಸಿ, ಸರಳನ್ನು ಕಚ್ಚಿಕೊಂಡಿತು. ಮುಂದಿಲ್ಲ, ಹಿಂದಿಲ್ಲ ಎನ್ನುವ ಸ್ಥಿತಿಯನ್ನು ಕೆಲವು ಸಲ ಅನುಭವಿಸಿ, ಕೊನೆಗೆ ನೀರು ಹರಿಸುವ ಯೋಜನೆಯನ್ನೇ ಬಿಟ್ಟೆ.
ಸ್ತಂಭದ ವಿದ್ಯುದೀಕರಣವನ್ನು ನಾನು ಮೊದಲೇ ಯೋಚಿಸಿದ್ದೆ. ವಿದ್ವಲ್ಲರಿಯಲ್ಲಿ ಹುಗಿದ ವಯರಿಗೂ ನೀರಗುಹೆಯಲ್ಲೇ ಹೊರಗಿನ ಪ್ಲಗ್ ಸಂಪರ್ಕ ಪಡೆಯುವ ಅಂದಾಜಿತ್ತು. ನೀರಗುಹೆ ಸೋತಾಗ, ವಯರನ್ನು ದಿಬ್ಬದ ಮೇಲೇ ಸಿಮೆಂಟ್ ಎರಕದಲ್ಲೇ ಮರೆಮಾಡಿದೆ. ಹೀಗೆ ಪ್ರತಿ ಗುಹಾಮುಖ, ವಿಶೇಷಪಟ್ಟ ಕೆತ್ತನೆ ಮತ್ತು ಕೊಡಿಮರಗಳಲ್ಲೆಲ್ಲ ಕೆಲವು ಚಿಕಣಿ ದೀಪಗಳನ್ನು ಬೆಳಗಿಸಬೇಕೆಂದಿದ್ದೆ. ವಿದ್ಯುತ್ ಮಳಿಗೆಯಾತನ ಸೂಚನೆಯಂತೆ ಚಿಕಣಿ ಬಲ್ಬ್, ಕೆಪಾಸಿಟರ್ ಮತ್ತು ಸಪುರ ವಯರ್ ಉಂಡೆ ಎಲ್ಲ ಕೊಂಡದ್ದಾಯ್ತು. ಆದರೆ ಪ್ರತೀ ಬಲ್ಬಿಗೂ ಕೆಪಾಸಿಟರ್ ಬೆಸೆಯುವ ಕೆಲಸ ನನ್ನಿಂದಾಗುವಂತೆ ಕಾಣಲಿಲ್ಲ. ಆಗ ಒದಗಿದವರು ಪವರ್ ಮೇಟ್ ಗೆಳೆಯ ಗೋಪಾಲಕೃಷ್ಣ ಬಾಳಿಗ. ನಾನು ಕೊಟ್ಟ ಮಾಲಿನ ಕೊರತೆ ತುಂಬುವುದರೊಡನೆ ಬೆಸೆಯುವ ಸೇವೆಯನ್ನೂ ಅವರು ಉಚಿತವಾಗಿಯೇ ಮಾಡಿಕೊಟ್ಟರು. ಅವುಗಳಲ್ಲಿ ಹೆಚ್ಚಿನವನ್ನು ಇಂದು ಏನೇನೋ ಮಾಡಿ ಸ್ತಂಭಕ್ಕೆ ಅಳವಡಿಸಿದ್ದೇನೆ. ಆದರೆ ಕೊನೆಯಲ್ಲಿ ಪ್ಲಗ್ ಸಂಪರ್ಕ ಕೊಟ್ಟಾಗ ಹಲವು ಉರಿದಂತೇ ಕೆಲವು ಸೋತಿದ್ದಾವೆ. ಅವು ನನ್ನ ಕೊಸರಾಟದಲ್ಲಿ ಸಂಪರ್ಕ ಕಳೆದುಕೊಂಡದ್ದಿರಬಹುದು. ಅದೇನೇ ಇರಲಿ, ಇಂದು ಈ ದೀಪವ್ಯವಸ್ಥೆಯೇ ನನ್ನ ಮೂರ್ತಿಗೆ
ಹೊಂದುವಂತೆ ಕಾಣುತ್ತಿಲ್ಲ. ಹಾಗೆಂದು ಬೊಡ್ಡೆಯಲ್ಲಿ ಹೂತು, ರಂಗು ತುಂಬಿಕೊಂಡ ಸಂಪರ್ಕಗಳನ್ನೆಲ್ಲ ಇನ್ನು ಕಿತ್ತು, ತೇಪೆ ಹಾಕುವ ತಾಳ್ಮೆ ಮತ್ತು ಸಮಯ ನನಗಿಲ್ಲ!
ಮಹಾದ್ವಾರ ಆಯತಾಕರದಲ್ಲಿದ್ದುದರಿಂದ ಎರಡು ಪಡಿಯ ಮುಚ್ಚಳ ಹೊಂದಿಕೊಂಡಿತು. ಉಳಿದೆಲ್ಲ ತ್ರಿಕೋನ ರೂಪದ ದ್ವಾರಗಳಿಗೂ ಪಡಿ ಮಾಡುವ ಉತ್ಸಾಹ ನನಗೆ ಒಮ್ಮೆ ಬಂದಿತ್ತು. ಪ್ರತಿ ದ್ವಾರದ ಭಿನ್ನ ಅಳತೆಗೆ ಹೊಂದುವಂತೆ ತೆಳು ಪ್ಲೈವುಡ್ಡಿನ ತುಣುಕುಗಳನ್ನು ಕತ್ತರಿಸಿ, ಅಂಚುಗಳನ್ನು ಮರಳು ಕಾಗದ, ಗೋಂದಿನಿಂದ ನಯಗೊಳಿಸಿಕೊಂಡೆ. ಮತ್ತೆ ಇವಕ್ಕೆ ಹೊಂದಿಕೊಳ್ಳುವಂತೆ, ಒಟ್ಟಾರೆ ಕಡಿದಿದ್ದ ದಾರಂದಗಳನ್ನೆಲ್ಲ ಸಮಮಟ್ಟಕ್ಕೆ ತಂದೆ. ಪಡಿಗಳಿಗೆ ಹೊಂದುವ ಪುಟ್ಟ ಬೀಜಾಗ್ರಗಳು ಮಾರುಕಟ್ಟೆಯಲ್ಲಿರಲಿಲ್ಲ. ಅದಕ್ಕೆ ತೆಳು ಕೊಡೆ ಬಟ್ಟೆಯದ್ದೇ ಸಪುರ ಸೀಳು ಮಾಡಿ ಪ್ರತಿ ಪಡಿಯ ಒಂದಂಚಿಗೂ ದ್ವಾರದ ಒಂದು ಬದಿಗೂ ಅಂಟಿಸುತ್ತ ಬಂದೆ. ಹೀಗೆ ಮುಚ್ಚಿದ ದ್ವಾರಕ್ಕೆ ಹೊರಗಿನಿಂದ ಕೀಲನ್ನೂ ಮಾಡಿದ್ದೆ. ಪ್ರಯೋಗದಲ್ಲಿ ಈ ಪಡಿಗಳನ್ನು ಹೊರಕ್ಕೇ ತೆರೆಯಬೇಕಾಯ್ತು. ಆಗ ಅವು ಇತರ ಕೆತ್ತನೆಗಳನ್ನು ಮರೆ ಮಾಡುವುದರೊಡನೆ ವಿಕಾರವಾಗಿಯೂ ಕಾಣಿಸಿತು. ಅಂತಿಮವಾಗಿ ಮಹಾದ್ವಾರವನ್ನಷ್ಟೇ
ಉಳಿಸಿಕೊಂಡು, ಉಳಿದವನ್ನು ಕಸ ಮಾಡಿದೆ.
ಅರ್ಥಪೂರ್ಣವಾಗಿ ಪುಟ್ಟ ಪ್ರಾಣಿ ಪಕ್ಷಿಗಳ ಗೊಂಬೆಗಳನ್ನು ಖರೀದಿಸಿ ತಂದು ಕೂರಿಸಬೇಕೆಂದಿದ್ದೆ. ಆದರೆ ಸುಲಭದ ಮಾರುಕಟ್ಟೆಯಲ್ಲಿ ಸಿಗುವ ಪುಟ್ಟ ಮಾದರಿಗಳೆಲ್ಲ ಚೈನಾ ಮಾಲು. (ಬೆಲೆ ಕಡಿಮೆಯೇ!) ಅವು ಸಿದ್ಧ ಕಟ್ಟುಗಳಲ್ಲೇ ಬರುವುದರಿಂದ, ಅರೆ ಮನಸ್ಸಿನಲ್ಲೇ ಹುಲಿ, ಸಿಂಹ, ಘೆಂಡಾಗಳೊಡನೆ ನಮ್ಮಲ್ಲಿಲ್ಲದ ಜಿರಾಫೆ, ಜೀಬ್ರಾ, ಗೊರಿಲ್ಲಾಗಳೂ ನನಗೆ ಹೆಸರಿಸಲಾಗದ ಕೆಲವು ಪಕ್ಷಿಗಳೂ ಬಂದಿವೆ. ಆ ನಿರಾಶೆಯಲ್ಲಿ ಮತ್ತೆ ಮನುಷ್ಯ ಬೊಂಬೆಗಳ
ಬೇಟೆಯನ್ನು ಕೈಬಿಟ್ಟೆ.
ಅರ್ಪಣೆ ಮತ್ತು ನಾಮಕರಣ
ಉದಕಮಂಡಲದ ವಲಯದೊಳಗಣ ಪ್ರಾಕೃತಿಕ ಶಿಲಾದೈತ್ಯ (ಸುಮಾರು ಎರಡು ಸಾವಿರ ಅಡಿ ಎತ್ತರ!) - ರಂಗನಾಥ ಸ್ತಂಭ, ಮತ್ತದರ ಆರೋಹಣ (ನೋಡಿ: ರಂಗನಾಥಸ್ತಂಬ ವಿಜಯ), ನನ್ನ ನೆನಪುಗಳಲ್ಲಿ ಸದಾ ಅದ್ವಿತೀಯ ಸ್ಥಾನವನ್ನೇ ಅಲಂಕರಿಸಿದೆ. ಹಾಗಾಗಿ ಸೀತಾಫಲದ ಕುಂಬು ಮರ ಕಂಡ ಮೊದಲಲ್ಲೇ ನನಗದರಲ್ಲಿ ರಂಗನಾಥ ಸ್ತಂಭದ ಚಿಕಣಿ ಪ್ರತಿನಿಧಿ ಕಂಡಿತ್ತು. ಕೆತ್ತನೆಯ ಪ್ರಾಥಮಿಕ ಹಂತದಲ್ಲಿದ್ದಾಗ ನನ್ನ ಆತ್ಮೀಯ ಮಾವ - ಎ.ಪಿ. ಗೌರೀಶಂಕರ, ತೀರಿಕೊಂಡರು. (ನೋಡಿ: ಗೌರೀಶಂಕರ ಸೋದರಳಿಯನೊಬ್ಬನ ನೆನಪುಗಳು) ಹಾಗೆ ಅವರ ಸಹವಾಸದ ಮಧುರಚಿತ್ರಗಳು ತಲೆಯಲ್ಲಿ ತಿರುಗುತ್ತಿದ್ದಂತೆ ಈ ಶಿಲ್ಪ ರೂಪುವಡೆಯಿತು. ಹಾಗಾಗಿ ಮಾವನಿಗೆ ಅರ್ಪಣೆ ಮತ್ತು ಅಶಿಕ್ಷಿತ,
ಅನಿರ್ದೇಶಿತ ಶಿಲ್ಪಿಯ ಅತ್ಯುನ್ನತಿಯ ಸಾಧನೆ ಎಂಬುದಕ್ಕೆ ಇದನ್ನು ‘ಗೌರೀಶಂಕರ’ ಎಂದೇ ಹೆಸರಿಸಿದ್ದೇನೆ.
ಭರತ ವಾಕ್ಯ
ಸ್ತಂಭ ಇಂದು ತಾಳಿರುವ ರೂಪಕ್ಕೆ ನನ್ನಲ್ಲಿ ಯಾವುದೇ ಪೂರ್ವ ಯೋಜನೆ, ಅನುಕ್ರಮಣಿಕೆ ಇರಲಿಲ್ಲ. ಹೀಗಾಗಿ ಎಷ್ಟೋ ಬಾರಿ ಅನಾವಶ್ಯಕ ರಗಳೆಗಳನ್ನು ಅನುಭವಿಸಿದ್ದೂ ಇದೆ. ಆದರೆ ಈ ಕೆತ್ತನೆಗೆ ಯಾವುದೇ ಸಮಯಮಿತಿ, ಪ್ರದರ್ಶನದ ಉದ್ದೇಶ ಇರಲಿಲ್ಲವಾದ್ದರಿಂದ ಎಲ್ಲವನ್ನೂ
ವಿರಾಮದಲ್ಲಿ ಅನುಭವಿಸಿದೆ. ಯಾವುದೇ ಹಂತದಲ್ಲಿ ಕುಂಬು ಬೊಡ್ಡೆ ಮುರಿದು ಬಿದ್ದು, ಶಿಖರ ಸಾಧನೆ (ಶಿಲ್ಪದ ಪೂರ್ಣ ರೂಪ) ಎನ್ನುವ ಸ್ಥಿತಿ ನಾನು ಮುಟ್ಟದಿರುವ ಸಾಧ್ಯತೆ ಇತ್ತು. ಚಾರಣ ಪ್ರಿಯನಾದ ನನಗೆ ಅಂದಂದಿನ ದಾರಿ (ಪ್ರತಿ ಕೆತ್ತುವ ಕ್ಷಣಗಳು) ಕುತೂಹಲಕಾರಿಯಾಗಿತ್ತು, ಸಾಕು. ಒಟ್ಟಾರೆ ಕೈಚೆಲ್ಲುವ ಸನ್ನಿವೇಶ ಬರದೆ, ಅದು ತಳೆದ ಇಂದಿನ ರೂಪವನ್ನು ಪೂರ್ಣ ಎಂದು ಭಾವಿಸಿ, ಮುಗಿಸಿದ್ದೇನೆ. ಈ ಶಿಖರ ಸಾಧನೆ ದೊಡ್ಡದಲ್ಲ. ಆದರೆ ಕ್ರಮಿಸಿದ ದಾರಿ ಖಂಡಿತಾ ಸಣ್ಣದಲ್ಲ. ಹಿಂದೆ ತೆಂಗಿನ ಬೊಡ್ಡೆ, ಸಾಗುವಾನಿ ಬೇರುಗಳನ್ನೆಲ್ಲ ಕೆತ್ತಿದಾಗ ಅನುಭವಿಸಿದಂತೇ
ಸುತ್ತಿಗೆಯ ಮೂಕಪೆಟ್ಟು, ಉಜ್ಜುಗುಳ್ಳೆ, ಯಾಂತ್ರಿಕತೆಗಳೆಲ್ಲ ಕಾಡಿದ್ದಿದೆ. ರೂಢಿ ತಪ್ಪಿದ್ದಕ್ಕೆ ಬೆರಳು,
ತೋಳೂ ತತ್ಕಾಲೀನ ನೋವುಣಿಸಿದ್ದೂ ಸಾಮಾನ್ಯವೇನೂ ಅಲ್ಲ. ಆದರೆ ಕೆಲಸದ ಬದಲಾವಣೆಯೇ ವಿಶ್ರಾಂತಿ ಎಂದು
ಗಟ್ಟಿಯಾಗಿ ರೂಢಿಸಿಕೊಂಡದ್ದರಿಂದ ಮಾನಸಿಕ ಬಳಲಿಕೆ ನನ್ನನ್ನೆಂದೂ ಕಾಡಲಿಲ್ಲ. ಗಣಕದೆದುರಿನ ಬರಹದ
ಬೈಠಕ್ಕು, ಸೈಕಲ್ ಓಟ, ದೋಣಿಯಾಟ, ಚಾರಣ, ಪ್ರವಾಸ, ನಾಟಕ, ಸಿನಿಮಾ, ಯಕ್ಷಗಾನ....... ಹವ್ಯಾಸ ವೈವಿಧ್ಯಕ್ಕೆ
ಮರಕೆತ್ತನೆ ಚಂದಕ್ಕೆ ಹೊಂದಿಕೊಂಡಿದೆ. ‘ಗೌರೀಶಂಕರ ಸ್ತಂಭ’ ಯಾವ ಮಹಾ ಶಿಲ್ಪವೂ ಅಲ್ಲ. ಆದರೆ ಖಂಡಿತವಾಗಿಯೂ
ಪುರುಸೊತ್ತಿದ್ದ ಎಲ್ಲರೂ ಅನುಸರಿಸಬಹುದಾದ ಒಂದು ಆರೋಗ್ಯಪೂರ್ಣ ಹವ್ಯಾಸಕ್ಕೆ ನಿದರ್ಶನ ಎಂಬ ನೆಲೆಯಲ್ಲಿ
ಈ ಬರಹದ ಒಪ್ಪ
ಕೊಟ್ಟಿದ್ದೇನೆ. ಅದನ್ನೆಲ್ಲೂ ಸಾರ್ವಜನಿಕ ವೀಕ್ಷಣೆಗೆ ಇಡುವುದಿಲ್ಲ. ನಿಮ್ಮ ಹೆಚ್ಚಿನ
ಕುತೂಹಲ ತಣಿಸಲು ಇಲ್ಲಿರುವ ಚಿತ್ರ, ವಿಡಿಯೋ ತುಣುಕು ಪರ್ಯಾಪ್ತವಾಗಿವೆ. ಅದರಿಂದಲೂ ಮುಂದುವರಿದು
ನೀವೂ ಉಳಿ, ಸುತ್ತಿಗೆ ಹಿಡಿಯುವಂತಾದರೆ ನನ್ನೀ ಬರಹವೂ ಸಾರ್ಥಕವಾಗುತ್ತದೆ.
The art that evolved here is simply attractive one. the narration given about on that and the dedicated to your Sodara Mava Gourishankar is quite appropriate one. regards
ReplyDeleteಹವ್ಯಾಸಗಳ ಬದಲಾವಣೆ ಮಾಡುತ್ತಲೇ ಅದರಲ್ಲಿ ಖುಷಿ ಪಡುವ ನಿಮ್ಮ ಗುಣ ನಿಜಕ್ಕೂ ಅನುಕರಣೀಯ...ಸಾಮಾನ್ಯವಾಗಿ ಕುಂಬು ಮರ ಒಲೆಗೆ ಹೋಗುತ್ತದೆ, ಆದರೆ ನಿಮ್ಮ ಪ್ರಯೋಗಕ್ಕೆ ತೆರೆದುಕೊಂಡು ಹೊಸ ಬದುಕು ಕಂಡುಕೊಂಡ ಮರ ಗೌರಿಶಂಕರವಾಗಿ ಇನ್ನಷ್ಟು ವರ್ಷ ಬದುಕು ವಿಸ್ತರಿಸಿಕೊಂಡಿತು...
ReplyDeleteಮರ ಕೆತ್ತನೆ - ಶಿಲ್ಪಕಲೆಯಾಗಿ,
ReplyDeleteಬಣ್ಣಗಳ ಬಳಕೆ - ಚಿತ್ರಕಲೆಯಾಗಿ,
ಚೌ ಚೌ ಸರಕುಗಳು - ಅಮೂರ್ತಕಲೆಯಾಗಿ,
ಹೊಸ ಹವ್ಯಾಸ - ವೃತ್ತಿಪರ ಕೌಶಲವಾಗಿ,
ಇಡೀ ಕಾರ್ಯವೇ ಗೌರೀಶಂಕರದ ಉತ್ತುಂಗಕ್ಕೇರಿ
ಕಲಾ ವೈಭವವನ್ನು ಮೆರೆದಿದೆ!
ಅತ್ಯದ್ಭುತವಾಗಿದೆ. ಅಭಿನಂದನೆಗಳು.
ReplyDeleteಸುಜಾತ ತೆಕ್ಕಮೂಲೆಯವರು FBಯಲ್ಲಿ ದಾಖಲಿಸಿದ ಪ್ರತಿಕ್ರಿಯೆ:
ReplyDeleteಅವತರಿಸಿದ ಗೌರಿ ಶಂಕರ ಇಂದು ಮಧ್ಯಾಹ್ನ ದ ವರೆಗೆ ಮಿದುಳಿಗೆ ಮೇವಾಯಿತು...
ಮಳೆಗಾಲದಬ್ಬರದಿ, ನಿಗೂಢ ಕತ್ತಲಲಿ, ಮಿಂಚು ಗುಡುಗುಗಳ ತಾಳ ಮೇಳಕ್ಕೆ, ಅತ್ರಿಯ ಜ್ಞಾನ ಭಂಡಾರ ದ ತಮ್ಮ ನುಡಿಗಳು, ಬಿರುಮಳೆಯ ಆವಾಂತರಕ್ಕೆ ಟಾಠಡಾಢಣ ವಾಗಲು ನಿದ್ದೆಯ ಜಡ ಹರಿಯಿತು...
ಬಿರುಮಳೆಗೆ ಸೀತಾಫಲದ ಮರ ಪಕ್ಕದ ಫ್ಯಾ ಟ್ ನತ್ತ ಬಿದ್ದದ್ದು, ಅದರ ವೇದನೆ ಮತ್ತು ಸಂಕಟ ಗಳ ಅನುಭವಿಸಿದ ಬಗೆ, ಅಸಹಾಯಕತೆ, ಮರದ ಶವ ಸಂಸ್ಕಾರ, ಉತ್ತರ ಕ್ರಿಯೆ.. ಹಾಸ್ಯದ ಲೇಪನದೊಂದಿಗೆ ಮನದ ಸಂಕಟ ಗಳ ನಿರೂಪಣೆ, ಅಲ್ಲಿಗೆ ಒಂದನೇ ಚ್ಯಾಪ್ಟರ್ ಕ್ಲೋಸ್ಡ್...
ಮುಂದಿನ ಸ್ಟೋರಿ ಮತ್ತು ನೆರೇಶನ್ ವೆರಿ ವೆರಿ ಇಂಟರೆಸ್ಟಿಂಗ್... ಕುಂಬಿಗೆ ಕಾಯಕಲ್ಪ ದ ಪರಿಕಲ್ಪನೆ ತಮ್ಮ ಜ್ಞಾನ ಭಂಡಾರ ದ ಮೂರ್ತ ಕಲ್ಪನೆ... ಸೀತಾಫಲದ ಮರದ ಬೊಡ್ಡೆಯನ್ನು ಕಾಷ್ಠ ಶಿಲ್ಪವಾಗಿಸಿದ ತಮ್ಮ ಪರಿಶ್ರಮಕ್ಕೆ ಚಪ್ಪಾಳೆ...😄😄 ಸೊಗಸಾದ ವಿವರಣೆಯಲ್ಲಿಯೂ ಟಾಠಡಾಢಣ ದ ಗಾಂಭೀರ್ಯ..😊 ಸ್ತಂಭ ಪೀಠಸ್ತವಾದ ಬಗೆಯಂತೂ ಅದ್ಭುತ ವಿವರಣೆ...👌👌 ಕಲಾತ್ಮಕ ದಿಬ್ಬದ ವೇಷ ಕಟ್ಟುವ ಕಾಯಕಕ್ಕೆ ಎಲ್ಲಾ ಪರಿಕರಗಳನ್ನು ಒಟ್ಟು ಮಾಡಿದ್ದು.. ಮೂಲೆ ಮೂಲೆ ಗಳಲ್ಲಿದ್ದ ಪರಿಕರಗಳು ನಿಮ್ಮ ನೆರವಿಗೆ ಬಂದದ್ದು... ಹಂದರದ ಮೇಲಿನ ಪಿ ಯೋ ಪಿ ಪ್ರಯೋಗ ದ ಕಥೆ ಓದುವಾಗ ತುಸು ಸದ್ದು ಮಾಡಿಯೇ ನಕ್ಕೆ( ಪಕ್ಕದಲ್ಲಿ ಯಾರೂ ಇರಲಿಲ್ಲ) 😀😀
ಕಾಯಕದ ಪರಿಣತಿಯ ಕೊರತೆಗೆ ಹಪ್ಪಳ ದ ಬದಲು ಕೊಬ್ಬರಿ ಭರ್ಪಿ ಸಿಕ್ಕಿತಲ್ಲ..😊 ಆ ಮೇಲೆ ಸಿಮೆಂಟ್ ಪಾಕ್... ನಳ ಪಾಕದಷ್ಟು ಸುಲಭ ಅಲ್ಲ...,😊 ಕೊನೆಗೂ ಕಲ್ಪನೆಯ ಕೂಸಿಗೆ ಮೂರ್ತ ರೂಪ ಕೊಡುವಾಗ ರೂಪಗೊಂಡದ್ದು ಬಿಸಿಲ ಸಜ್ಜೆ...ಮತ್ತೆ ಗುಹೆ..ಕೆತ್ತನೆ.. ಉರುಟು ಕಾಂಡದಲ್ಲಿ ಚಪ್ಪಟೆ ಚಿತ್ರ.. ನಟರಾಜನ ಕೆತ್ತನೆ.. ನವಿಲು ಗರಿಗೆದರಿ ಕುಣಿದದ್ದು.. ವಿದ್ವಲ್ಲರಿ ಮತ್ತು ಕಲ್ಪವಲ್ಲಿ ಬಳ್ಳಿ ಗಳ ಚಿತ್ತಾರ.. ಒಟ್ಟಿನಲ್ಲಿ ವಿಕಲ್ಪಲತೆಗೆ ಸಾಕಾರ ರೂಪ... ಮುಂದಕ್ಕೆ ಸಾಥ್ ಕೊಟ್ಟ ಕಹಿಬೇವಿನ ಮರ.. ಅಲ್ಲಿ ರೂಪ ತಳೆದ ಹಾರುಗಪ್ಪೆ...ಓದುತ್ತಾ ಓದುತ್ತಾ ಹೋದಂತೆ ಯಾವುದೋ ಒಂದು ಅದ್ಭುತ ಕಲಾ ಪ್ರಪಂಚದೊಳಗೆ ಕಣ್ಣು ತೆರೆದು ಪಯಣಿಸಿದ ಅನುಭವ.. ಕಲಾಕೃತಿ ಯ ಕೆತ್ತನೆ ಯ ನಿಮ್ಮ ಶ್ರಮ ಕಣ್ಣಿಗೆ ರಾಚಿದಂತಾಯಿತು.. ಪೂರಕವಾಗಿ ಹಂತ ಹಂತವಾಗಿ ಕೊಟ್ಟ ಚಿತ್ರಗಳು ಮೂರ್ತತೆಯನ್ನು ಇಮ್ಮಡಿಸಿದವು. ಸೀತಾಫಲದ ಕುಂಬು ಮರವು ಗೌರೀಶಂಕರ ನಾಮಧೇಯ ದಿ ರೂಪು ತಳೆದ ಬಗೆ, ಕಲಾಕೃತಿ ಯ ಅರ್ಪಣೆ, ಭರತ ವಾಕ್ಯ ದ ವಿಮರ್ಶೆ ಗಳಿಗೆ ನನ್ನ ಪದಗಳೇ ಸೋತವು.... ಉಪಸಂಹಾರ: ಲಿಂಕ್ ಕಳುಹಿಸಿದಕ್ಕೆ ಒಂದೇ ಮಾತಲ್ಲಿ ಧನ್ಯವಾದಗಳು..🙏🙏