25 June 2019

ಬಿಸಿಲೆಗೆ ಓಡಿದ ಸೈಕಲ್ಲುಗಳ ಬೆಂಬತ್ತಿ


‘ನಾವೂ ಸೈಕಲ್ಲಿಗರು’ (ವೀಯಾರ್ಸೀ) ಮಂಗಳೂರಿನ ಮೂರನೇ ಸೈಕಲ್ ಸಂಘ. ಇದರ ಜತೆಗಾರನಾದ ದಂತವೈದ್ಯ ಗೆಳೆಯ ಪುಂಡಿಕಾಯ್ ರಾಮರಾಜ ಮೊನ್ನೆ ಆದಿತ್ಯವಾರ ಸೈಕಲ್ಲಿನಲ್ಲಿ ಕೇವಲ ಬಿಸಿಲೆ ಘಾಟಿ ಏರುವ ಯೋಜನೆ ಸಂಘಟಿಸಿದ್ದರು. ಹಾಗೆ ಬೆಳೀಗ್ಗೆ ಮಂಗಳೂರಿನಿಂದ ನಾಲ್ಕು, ಉಡುಪಿಯಿಂದ ಒಂದು ಕಾರನ್ನೇರಿ ಹನ್ನೊಂದು ಸೈಕಲ್ ಮತ್ತು ಸವಾರರು ಸುಬ್ರಹ್ಮಣ್ಯದತ್ತ ಹೊರಡುವವರಿದ್ದರು. ನಿಮಗೆಲ್ಲ ತಿಳಿದಂತೆ ‘ಅಶೋಕವನ’ದ ರಚನೆಯೊಡನೆ, ಬಿಸಿಲೆಯ ಕುರಿತ ನನ್ನ
ಮೋಹಕ್ಕೆ ಹೆಚ್ಚಿನ ಮೆರುಗು ಇದೆ. ಅಲ್ಲಿಗೆ ರಾಮರಾಜ್ ಜತೆಗೆ, ಶ್ಯಾಮಪ್ರಸಾದ್ ನಾಯಕ್, ಸರ್ವೇಶ ಸಾಮಗ, ಹರಿವಿಜಯ್, ನಿತಿನ್, ಮಹೇಶ್ವರಿ, ಅನಾಸ್, ರಾಜೇಶ್ ನಾಯಕ್, ಮಯಾಂಕ್, ಶಿನನ್ ಮತ್ತು ಕೃಷ್ಣಕುಮಾರ್ ಸೈಕಲ್ ಮಿತ್ರರು, ಇದೇ ಮೊದಲ ಬಾರಿ ಭೇಟಿ ಕೊಡುತ್ತಿದ್ದಾರೆಂದ ಮೇಲೆ ನಾನಲ್ಲಿರಬೇಡವೇ? ಮೊದಲು ಸ್ವಂತ ಸೈಕಲ್ ಏರಿಯೇ ಹೋಗುವುದೆಂದು ಯೋಚಿಸಿದ್ದೆ. ಆದರೆ ಈಚಿನ ದಿನಗಳಲ್ಲಿ ನನ್ನ ಮರ ಕೆತ್ತುವ ಹವ್ಯಾಸ ತೀವ್ರವಾಗಿ, ನಿತ್ಯದ ಸೈಕಲ್ ಅಭ್ಯಾಸದಿಂದ ಸ್ವಲ್ಪ ದೂರ ಉಳಿದಿದ್ದೆ. ಹಾಗಾಗಿ ಒಮ್ಮೆಗೇ ಸುಮಾರು ೨೩ಕಿಮೀ
ಘಟ್ಟದೇರು ದಾರಿಗೆ ಸೈಕಲ್ ಹಿಡಿದು ಹೋಗಲು ಹಿಂಜರಿದೆ. ಆದರೇನು, ಒಟ್ಟು ಸೈಕಲ್ ಬಳಗ ಆಯ್ಕೆಯನ್ನು ನನಗೆ ಮುಕ್ತವಾಗಿಸಿತು. ರಾಮರಾಜ ಪ್ರೀತಿಯಿಂದಲೇ ಕಾರಿನಲ್ಲಿ ನನ್ನನ್ನು ಸೇರಿಸಿಕೊಂಡರು. ಇನ್ನೋರ್ವ ಗೆಳೆಯ - ಮಹೇಶ್ವರೀ, ಘಾಟೀ ಏರುವಲ್ಲಿ ನನ್ನ ಬಳಕೆಗೆ ಅವರ ಕಾರನ್ನೇ ಕೊಟ್ಟು, ತಂಡಕ್ಕೆ ಅಘೋಷಿತ ರಕ್ಷಕ-ಮಾರ್ಗದರ್ಶಿಯ ಸ್ಥಾನವನ್ನೇ ರೂಪಿಸಿಬಿಟ್ಟರು! 


ಹೋಗುತ್ತಾ ಉಪ್ಪಿನಂಗಡಿ ಕಳೆದು, ಕಡಬದಲ್ಲಿ ತಿಂಡಿಗೆ ನಿಂತೆವು. ಕುಳ್ಕುಂದದಲ್ಲಿ ಮಳಿಗೆಯೊಂದರ ವಿಸ್ತಾರ ಅಂಗಳದಲ್ಲಿ, ನನ್ನನ್ನುಳಿದು ಎಲ್ಲ (ಒಂಬತ್ತು ಮಂದಿ) ಕಾರು ಬಿಟ್ಟು, ಹೊತ್ತೊಯ್ದಿದ್ದ ಸೈಕಲ್ ಸಜ್ಜುಗೊಳಿಸಿದರು. ಎಂಟು ಗಂಟೆಯ ಸುಮಾರಿಗೆ ಬಿಸಿಲೆ ವಿಜಯ ಯಾತ್ರೆ ಹೊರಟೇಬಿಟ್ಟಿತು. ಹಸಿರ ಚೌಕಟ್ಟಿನ ನಡುವೆ, ಮಂಜಿನರಮನೆಯಲ್ಲೇ ನೆಲೆಸಿದ್ದ ಕುಮಾರ ಪರ್ವತ, ಕೇವಲ ಹನಿಗಳ ಸೇಸೆ ಇಕ್ಕಿ ಸ್ವಾಗತಿಸಿತು. ನಾನು ಮಾತ್ರ
ಮಹೇಶ್ವರಿಯವರ ಕಾರಿನ ತತ್ಕಾಲೀನ ಚಾಲಕನಾಗಿ, ಮೊದಮೊದಲು ತಂಡದಿಂದ ಸಾಕಷ್ಟು ಮುಂದೆ ಹೋಗಿ, ಆಯಕಟ್ಟಿನ ಜಾಗಗಳಲ್ಲಿ ಕಾದು ನಿಂತು ಚಿತ್ರಗ್ರಹಣ ನಡೆಸಿದೆ. ಮುಂದುವರಿದಂತೆ ತಂಡದ ವೈವಿಧ್ಯದಲ್ಲಿ ಚುರುಕೋಟದ ಮೊಲಗಳಂತೆ, ಸ್ಥಿರಗತಿಯ ಆಮೆಗಳೂ ಸ್ಪಷ್ಟವಾಗತೊಡಗಿದವು. ಅಗತ್ಯ ಬಿದ್ದರೆ ರಕ್ಷಣೆಗೆ ಒದಗುವ ನಿರೀಕ್ಷೆಯಲ್ಲಿ ನಾನು ಅಲ್ಲಲ್ಲಿ ನಿಂತು, ಹಿಂದಿನವರಿಗೆ ಜತೆಗೊಟ್ಟೆ. 


ಸುಮಾರು ೨೩ ಕಿಮೀ ಉದ್ದದ ಮಾರ್ಗದಲ್ಲಿ ಮೊದಲ ಹತ್ತು, ಅಂದರೆ ಬೂದಿಚೌಡಿ ಮಂಟಪದವರೆಗಿನದು ಬಹುತೇಕ ಸಮತಟ್ಟು. ಇದರಲ್ಲೂ ದಕ ಮತ್ತು ಹಾಸನ ಜಿಲ್ಲಾ ಗಡಿಯವರೆಗಿನ ಡಾಮರು, ಮತ್ತಿನ ಕಾಂಕ್ರೀಟ್ ಹಾಸು ತುಂಬ ನಯವಾಗಿಯೇ ಇದೆ. ಇದನ್ನು ಬ್ರಿಟಿಷರು ಯಾವುದೋ ಸ್ಥಳೀಯ ಅರಸನ ಸಾರೋಟು (ಬಹುಶಃ ಕುದುರೆ ಗಾಡಿ) ಸೌಕರ್ಯಕ್ಕಾಗಿಯೇ ಮಾಡಿಕೊಟ್ಟರು ಎಂದು ಕೇಳಿದ್ದೆ. ಹಾಗಾಗಿ ಎಲ್ಲೂ ಏರುಗತಿ ತೀವ್ರವಾಗದ ಎಚ್ಚರ ವಹಿಸಿದ್ದಾರೆ. ಇಲ್ಲಿ ಕಳೆದ ಎರಡು ಮೂರು ವರ್ಷಗಳಿಂದ
ಹಾಸನ ಜಿಲ್ಲಾ ವಲಯದಲ್ಲಿ ತೊಡಗಿದ ಮಾರ್ಗ ವಿಸ್ತರಣೆ ಮತ್ತು ಕಾಂಕ್ರಿಟೀಕರಣ, ಇಂದು ಬಹ್ವಂಶ ಮುಗಿದಿದೆ. ಮೇಲಿನ ವಲಯದಲ್ಲಿ ಸುಮಾರು ಮೂರ್ನಾಲ್ಕು ಕಿಮೀ ಉದ್ದಕ್ಕೆ ಕಾಂಕ್ರೀಟ್ ಟೊಪ್ಪಿ ಬಾಕಿಯುಳಿಸಿ ಮತ್ತೆ ಬಿಸಿಲೆ ಹಳ್ಳಿಯವರೆಗೆ ಚೊಕ್ಕ ಡಾಮರೀಕರಣ ಮಾಡಿಬಿಟ್ಟಿದ್ದಾರೆ. ಹೀಗಾಗಿ ಇಲ್ಲಿನ ಸೈಕಲ್ ಸವಾರಿ ಎಂದರೆ ಏನೂ ಭಾರೀಯಲ್ಲದ ನಿಶ್ಚಿತ ವೇಗದಲ್ಲಿ, ಕೇವಲ ಘಟ್ಟ ಹತ್ತಿಸುವ ಪ್ರಯತ್ನ ಮಾತ್ರ. ಪೆಡಲುತ್ತ ವಲಯದ ಏಕೈಕ ದೊಡ್ಡ ತೊರೆ - ಅಡ್ಡಹೊಳೆ, ಅತ್ತ ಗಗನಚುಂಬಿ ಕನ್ನಡಿಕಲ್ಲು ಇತ್ತ
ಪಾತಾಳದರ್ಶನದ ಕುಮಾರಧಾರಾ ಕಣಿವೆಯನ್ನು ಜಾಣ್ಮೆಯಲ್ಲಿ ನಿವಾರಿಸಿದಂತೆ ಸಾಗುವಾಗ ಎಂಥಾ ಅರಸಿಕನೂ "ಚಂದ, ಚಂದಾ..." ಎಂದು ಅವಕ್ಕೆ ಚಂದಾ ಕೊಡದಿರುವುದು ಸಾಧ್ಯವೇ ಇಲ್ಲ! 


ಕಳೆದ ಮಳೆಗಾಲದಲ್ಲಿ ಮನುಷ್ಯಪ್ರೇರಣೆಯಿಂದ ಈ ದಾರಿಯಲ್ಲೂ ಉಂಟಾದ ಪ್ರಾಕೃತಿಕ ಹಾನಿಗಳನ್ನು ನೀವು ಇಲ್ಲಿ ಓದಿದ್ದೀರಿ (ನೋಡಿ: ಬಿಸಿಲೆಕುಸಿತ......). ಅಂದೇ ಜತೆಗೇ ಎನ್ನುವಂತೆ ಶಿರಾಡಿ, ಸಂಪಾಜೆ ಘಾಟಿಗಳೂ ಕುಸಿತ ಕಂಡಿದ್ದವು. ಆಗ ಎರಡು ಹೆದ್ದಾರಿಗಳಿಗಿಂತಲು ಚುರುಕಾಗಿ ಬಿಸಿಲೆ ಘಾಟಿಯನ್ನು ಸಾರ್ವಜನಿಕ ಓಡಾಟಕ್ಕೆ ಮುಕ್ತಗೊಳಿಸಿದ್ದೇ ನನಗೆ ಆಶ್ಚರ್ಯ ತಂದಿತ್ತು. ಇಂದು ಉಳಿದೆರಡು ಘಾಟಿಗಳು ತೆರೆದುಕೊಂಡಿದ್ದರೂ ಕೆಲಸ ಪರಿಪೂರ್ಣವಾಗಿಲ್ಲವೆನ್ನುವುದು ಯಾರಿಗೂ ಕಾಣುತ್ತದೆ.
ಆದರೆ ಇಲ್ಲಿ ಹಾಗಲ್ಲ. ಹೊಸ ಸೇತುವೆ, ಅಂಚಿನ ರಕ್ಷಣಾ ಗೋಡೆಗಳು, ಅಪಾಯಕಾರೀ ಬಂಡೆ, ಮರ ಮಣ್ಣನ್ನೆಲ್ಲ ನಿವಾರಿಸಿ ಸ್ವಚ್ಛಗೊಳಿಸಿರುವುದು ನಿಜಕ್ಕೂ ಮೆಚ್ಚುವಂತಿದೆ.

ಇದೇ ಚುರುಕು ಶಿರಾಡಿ, ಚಾರ್ಮಾಡಿ, ಸಂಪಾಜೆ ಘಾಟಿಗಳಿಗೆ ಯಾಕೆ ಬರಲಿಲ್ಲ ಎಂದು ಯಾರಿಗೂ ಮೂಡುವ ಪ್ರಶ್ನೆಗೆ, ನನಗೆ ಹೊಳೆದ ಸಮಾಧಾನವನ್ನೂ ಹೇಳಿಬಿಡುತ್ತೇನೆ. ಬಿಸಿಲೆ ಸೇರಿದಂತೆ ಹಾಸನ ಜಿಲ್ಲೆ - ದೇವೇಗೌಡರ ಕುಟುಂಬದ ಚುನಾವಣಾ ಕ್ಷೇತ್ರ! ಇಲ್ಲಿ ಸುಲಭವಾಗಿ ಸಾಧ್ಯವಾಗುವ ಕೆಲಸ ನಡೆಸುವುದು ಮತದಾರ ತುಷ್ಟೀಕರಣ
ತಂತ್ರವೇ ಇರಬೇಕು ಎನ್ನುವುದು ನನ್ನ ಗುಮಾನಿ. ನನ್ನ ಹಿಂದಿನ ಬಿಸಿಲೆ ಕುಸಿತದ ಲೇಖನದಲ್ಲೇ ಇದಕ್ಕೊಂದು ಸಾಕ್ಷಿಯೂ ಇದೆ, ಗಮನಿಸಿ: ಅಂದು ಪ್ರಾಕೃತಿಕ ವಿಪತ್ತು ಸಂಪಾಜೆ, ಶಿರಾಡಿಗಳನ್ನೂ ಸೇರಿಸಿಕೊಂಡೇ ಇಲ್ಲಿಗೂ ಎರಗಿತ್ತು. ಆದರೆ ಪ್ರಥಮಾದ್ಯತೆಯಲ್ಲಿ ಎಂಬಂತೆ ವಯೋವೃದ್ಧ ದೇವೇಗೌಡರೂ (ಕುಮಾರ) ರೇವಣ್ಣನವರೂ ಬಿಸಿಲೆ ಕುಸಿತ ಸ್ಥಳಕ್ಕೆ ತಡ ರಾತ್ರಿಯಾದರೂ ಭೇಟಿ ಕೊಟ್ಟಿದ್ದರು!



ವಾಹನ ಸಂಚಾರ ವಿರಳವೇ ಇತ್ತು. ಆದರೆ ಇದ್ದವುಗಳಲ್ಲಿ ವಿಹಾರಿಗಳ ಸಂಖ್ಯೆಯೇ ಹೆಚ್ಚು ಎನ್ನುವುದು ಗಮನಾರ್ಹ ವಿಷಯ. ನಾನು ಅಲ್ಲಲ್ಲಿ ಕಾಲು, ಅರ್ಧ ಗಂಟೆ ನಿಂತು ಮುಂದುವರಿಯುತ್ತಿದ್ದುದರಿಂದ ಸ್ವಲ್ಪ ವಿವರದಲ್ಲೇ ಕಂಡ ಎರಡು ವಿಹಾರಿ ಬಳಗದ ಕುರಿತು ಸ್ವಲ್ಪ ಹೇಳಲೇಬೇಕು. ಬಹುಶಃ ಇವು ಬಿಸಿಲೆಯ ನಿಜ ಉಪಯುಕ್ತತೆ ಎಷ್ಟು ಸುಳ್ಳು ಎನ್ನುವುದನ್ನೂ ಸಾರುತ್ತದೆ: ಒಂದು ತರುಣರ ಬಳಗ ಪುತ್ತೂರಿನಿಂದ ಕಾರಿನಲ್ಲಿ ಬಂದಿತ್ತು. (ವಿದ್ಯಾರ್ಥಿಗಳಲ್ಲ, ವೃತ್ತಿಪರರು.) ಒಂದು ಹಿಮ್ಮುರಿ ತಿರುವಿನಲ್ಲಿ ಅವರು ಕಾರು
ನಿಲ್ಲಿಸಿ, ಟೇಪ್ ಸಂಘೀತ ಹಾಕಿ, ಆಗಾಗ ಹುಯ್ಯಲಿಡುತ್ತ, ಏನೋ ಪಾರ್ಟಿ ನಡೆಸಿದರು. ನಾನು ನಿಂತಲ್ಲಿಗೆ ಅವರು ದೃಷ್ಟಿಗೆ ನಿಲುಕದಿದ್ದರೂ ಅವರ ಗದ್ದಲ ಪರಿಸರಗಾನಕ್ಕೆ ವ್ಯತಿರಿಕ್ತವಾಗಿದ್ದದ್ದು ಸ್ಪಷ್ಟವಾಗಿತ್ತು. ಈ ನಡುವೆ ಬಂದ ಕ.ರಾರಸಾಸಂನ ಬೆಂಗಳೂರು ಬಸ್ಸಿಗೆ ಇವರ ಅವ್ಯವಸ್ಥೆಯನ್ನು ಸುಧಾರಿಸಿಕೊಂಡು ಮುಂದುವರಿಯಲು ಸಾಕಷ್ಟು ಸಮಯವೇ ಹಿಡಿದಿತ್ತು. (ವಿಡಿಯೋ ನೋಡಿ)

ತೀರಾ ಅಪರಿಚಿತನಾದ ನನಗೆ, ಆ ಮಂದೆ ಬುದ್ಧಿಯನ್ನು ಪ್ರಶ್ನಿಸುವ ಸಾಹಸ ಮಾಡುವುದಾಗಲಿಲ್ಲ! ನಮ್ಮಲ್ಲಿನ
ಬಹುದೊಡ್ಡ ಸಂಖ್ಯೆಯ ಪ್ರವಾಸಿಗಳು ಹೊಸ ಅನುಭವಕ್ಕೆ ತೆರೆದು ಕೊಳ್ಳುವುದಕ್ಕೆ ಹೋಗುವುದೇ ಅಲ್ಲ. ಅವರ ವರ್ತನೆ, ತಮ್ಮ ನಿತ್ಯದ ಏಕತಾನತೆಯನ್ನು ಮರೆಸುವ ಸ್ಥಳ, ನಿತ್ಯದ ಬಿಗಿಯಿಂದ ಮುಕ್ತರಾಗುವ ಅವಕಾಶಕ್ಕಾಗಿ ಹೊಸ ಸ್ಥಳಗಳನ್ನು ಬಯಸುತ್ತಾರೆ. 



ಈ ವರ್ಷದ ಮಳೆಗಾಲ ಇನ್ನೂ ನಮ್ಮ ಜೀವನದಿಗಳಿಗೆ ಜೀವ ತುಂಬಿಯೇ ಇಲ್ಲ. ಉಪ್ಪಿನಂಗಡಿಯ ಸಂಗಮದಲ್ಲಿ ಕುಮಾರಧಾರೆ, ಮುಂದುವರಿದಂತೆ ನೇತ್ರಾವತಿ, ಕಡಬದಲ್ಲಿ ಗುಂಡ್ಯ ಹೊಳೆ, ಕೊನೆಗೆ ಬಿಸಿಲೆ ಘಾಟಿಯಲ್ಲಿ ಅಡ್ಡ ಹೊಳೆಯೂ ಸೊರಗಿ, ತಿಳಿಯಾಗಿಯೇ ಇವೆ. (ಸ್ವಚ್ಛ ಎನ್ನಲಾರೆ!) ಅಡ್ಡ ಹೊಳೆ ಸೇತುವೆಗೆ ಸೈಕಲ್ ತಂಡಕ್ಕೂ ಸ್ವಲ್ಪ ಮುಂದಾಗಿ ಹೋಗಿದ್ದ ನಾನು, ಚಿರಿಪಿರಿ ಮಳೆಗೆ ಕೊಡೆ ಬಿಡಿಸಿ ನಿಂತು, ಸೈಕಲ್ಲಿಗರನ್ನು ಕಾದಿದ್ದೆ. ಅದೊಂದು ಕಾರು ಘಟ್ಟ ಏರಿಕೊಂಡು ಬಂತು. ಅದರ ಚಾಲಕ ಹಾಗೂ ಮೂವರು
ಹುಡುಗಿಯರು, ಸೇತುವೆಯಿಂದ ಕಾಣುವ ದೃಶ್ಯಕ್ಕೆ ಮನಸೋತು, ಕಾರಿಳಿದು, ಪಟ, ಸ್ವಂತೀ ಎಂದೆಲ್ಲ ಸರ್ಕಸ್ ಶುರು ಮಾಡಿದರು. ನಾನು ಸಣ್ಣದಾಗಿ "ಕಾರು ಕರೆಗೆ ನಿಲ್ಲಿಸಿ, ಬಸ್ಸು ಬಂದರೆ ತೊಂದರೆಯಾದೀತು" ಎಂದೆ. ಚಾಲಕ "ಈ ದಾರೀಲಿ ಬಸ್ ಬರತ್ತಾ!!" ಎಂದು ಉದ್ಗರಿಸಿದರೂ ಸರಿ ಮಾಡಿದ. ಸ್ವಲ್ಪ ಹೊತ್ತಿಗೆ, ಅವರು ಸೇತುವೆ ಪಕ್ಕದಲ್ಲಿ ಇಳಿಯುತ್ತಿದ್ದ ಅಸ್ಪಷ್ಟ ಮೆಟ್ಟಿಲ ಸಾಲು ಕಂಡು, ಹೊಳೆಗಿಳಿಯಲು ಹೊರಟರು. ಪಿರಿಪಿರಿಗುಟ್ಟುತ್ತಿದ್ದ ಮಳೆಗೂ ಉತ್ಸಾಹ ಬಂದಿರಬೇಕು, ಜೋರಾಯ್ತು. ಒಮ್ಮೆಗೆ ತಂಡ
ಅರೆಬರೆ ಚಂಡಿಯಾಗಿ ಕಾರು ಸೇರಿತು. ಮಳೆ ಕಡಿಮೆಯಾದಾಗ, ಮತ್ತೆ ಸೇತುವೆ ಸಂದಿಗಿಳಿದು, ಮುಳ್ಳು ಪೊದರು ಬಿಡಿಸಿಕೊಳ್ಳುತ್ತ, ಬಂಡೆ ಸುಧಾರಿಸಿಕೊಳ್ಳುತ್ತ ನೀರು ಮುಟ್ಟುವ ತವಕ ತೋರಿದರು. ನಾನು ಸಣ್ಣದಾಗಿ ಎಚ್ಚರಿಸಿದೆ, "ಬೇಡ, ಮಳೆಗೆ ಬಂಡೆಗಳು ಜಾರುತ್ತವೆ....". ನಿಜದಲ್ಲಿ, ಮೇಲೆ ದೊಡ್ಡ ಮಳೆ ಬಂದರೆ, ಇಲ್ಲಿ ಒಮ್ಮೆಗೆ ಪ್ರವಾಹ ಉಕ್ಕೀತು ಎನ್ನುವ ಭಯ ನನಗಿತ್ತು. ಆದರೆ ಹೇಳಿದರೆ ಕೇಳುವ ತಾಳ್ಮೆ ಅವರಿಗಿದ್ದೀತೇ, ಎಂಬ ಸಂಶಯದಲ್ಲೇ ಮಾತುಳಿಸಿದ್ದೆ. ಅದೃಷ್ಟಕ್ಕೆ ಅವರಿಗೆ ಬಂಡೆಗಳಿಂದ
ನೀರಿಗಿಳಿಯುವಷ್ಟು ದೃಢ ಹೆಜ್ಜೆಗಳಿರಲಿಲ್ಲ, ವಾಪಾಸಾದರು. ತಂಡ ಮತ್ತೆ ಕಾರು ತುಂಬಿಕೊಳ್ಳುತ್ತಿದ್ದಂತೆ, ಆ ಚಾಲಕ ನನ್ನಲ್ಲಿ ಕೇಳಿದ "ಕುಕ್ಕೆಗೆ ಇನ್ನೆಷ್ಟು ದೂರ?" ಆಗ ತಿಳಿಯಿತು, ಆ ‘ಬುದ್ಧಿವಂತರು’ ಹಾಸನದಿಂದ ಶಿರಾಡಿ ಘಾಟಿಯಲ್ಲಿಳಿದು, ಗುಂಡ್ಯದಲ್ಲಿ ಸರಿಯಾಗಿಯೇ ತಿರುಗಿ, ಸುಬ್ರಹ್ಮಣ್ಯವನ್ನೇ ಲಕ್ಷ್ಯವಾಗಿಟ್ಟುಕೊಂಡವರು. ಆದರೆ ಕುಳ್ಕುಂದದಲ್ಲಿ ತಪ್ಪಿ, ನೇರ ದಾರಿ ಹಿಡಿದು, ಇಲ್ಲಿವರೆಗೆ ಬಂದುಬಿಟ್ಟಿದ್ದರು. ಸ್ಥಳೀಯ ವಿವರಗಳ ಸಹಿತ ನಾನು ತಿದ್ದುಪಡಿ ಹೇಳಿದೆ. "ಸರಿ ಬಿಡಿ, ಅಂದ್ರೇ ಹತ್ತಿರದ ಬ್ಯೂಟೀ ಸ್ಪಾಟ್ (ಪ್ರಕೃತಿವೀಕ್ಷಣಾ ಕಟ್ಟೆ) ನೋಡ್ಕೊಂಡೇ ವಾಪಾಸ್ ಹೋಗ್ತೇವೆ" ಎಂದ ಚಾಲಕ ಮಹಾಶಯ! 


ನಮ್ಮ ಸೈಕಲ್ ತಂಡದ ಏಳು ಮಂದಿ ತುಸು ಮುಂದೆ ಹಿಂದೆ ಎಂದರೂ ಒಂದೆರಡು ಮಿನಿಟುಗಳ ಅಂತರದಲ್ಲೇ ಭರ್ಜರಿ ಸವಾರಿ ಮಾಡಿದ್ದರು. ನಡುವೆ ಸಿಕ್ಕ ಕಚ್ಚಾ ಮಾರ್ಗವನ್ನೂ ಸುಧಾರಿಸಿಕೊಂಡಿದ್ದರು. ಆದರೆ ಇಬ್ಬರು ಮಾತ್ರ, ತಮ್ಮ ಸಪುರ ಚಕ್ರ ಹೆದ್ದಾರಿ ಸವಾರಿಗಷ್ಟೇ ಸರಿ ಎಂದು ಹೆದರಿ, ಕಚ್ಚಾ ಮಾರ್ಗದಲ್ಲಿ ಸೈಕಲ್ ಇಳಿದು ನಡೆದೇ ಸುಧಾರಿಸತೊಡಗಿದರು. ಉಳಿದಂತೆ ಅವರಿಗೇನೂ ಕೊರಗು ಇರಲಿಲ್ಲ, ಕಾರಿನ ಸಹಾಯ ಬೇಕಿರಲಿಲ್ಲ. ಹಾಗಾಗಿ ನಾನು ನೇರ ಬಿಸಿಲೆಗೇ ಕಾರೋಡಿಸಿದೆ. 

ಮಾಮೂಲಿನಂತಾಗಿದ್ದರೆ ಬಿಸಿಲೆಯಲ್ಲಿ ಭೀಕರ ಮಳೆ ಹೊಡೆಯುತ್ತಿದ್ದಿರಬೇಕು. ಆದರಿಂದು, ಆಗೀಗ ತೆಳು ಮಂಜಿನ ಹೊದಿಕೆಯನ್ನಷ್ಟೇ ಹೊದ್ದು, ನೂಕಿ ಬಿಸಿಲೇ ಆಟವಾಡಿಕೊಂಡಿತ್ತು. ಮುಂದಾಗಿ ಬಂದಿದ್ದ ಏಳೂ ಮಂದಿ, ಗೇಟಿನ ಬಳಿಯ ನಮ್ಮ ಮಾಮೂಲೀ ತುಳಸಿ ಹೋಟೆಲಿನಲ್ಲಿ, ಚಾ ಕೂಟ ನಡೆಸಿದ್ದರು. ಅನಂತರ ಘಟ್ಟ ಏರಿ ಬಂದ ಬಿಗಿತವನ್ನು ತುಸು ಇಳಿಸುವಂತೆ, ಒಂದೆರಡು ಕಿಮೀ ತುಸು ಮುಂದೆ ಹೋಗಿ ಬರುವುದಾಗಿ ಸೈಕಲ್ ಏರಿದರು, ನಾನು ಅಲ್ಲೇ ನಿಂತೆ. 

ಈ ಬಾರಿ ಬಿಸಿಲೆ ಹಳ್ಳಿಯ ಅಭಿವೃದ್ಧಿಸೂಚಕ ರೇಖೆ ಹೆಚ್ಚು ದಟ್ಟವಿರುವಂತೆ ಕಾಣಿಸಿತು! ಬಸ್ ತಂಗುದಾಣ ಹೊಸ ಅವತಾರ ತಾಳುತ್ತಿತ್ತು. ಅದರ ಹಿಂದಿದ್ದ ಕಚ್ಚಾ ಮಾರ್ಗ ತೀರಾ ಹೊಸದಾಗಿ ಕಾಂಕ್ರೀಟ್ ಹಾಸು ಕಂಡಿತ್ತು. ಕಳೆದ ಆರೇಳು ವರ್ಷಗಳ ಉದ್ದಕ್ಕೂ ಆ ದಾರಿ ಬಹುತೇಕ ಕಾಡಿನ ಭಾಗವೇ ಆಗಿ, ನಮ್ಮ ಬಳಗದ (ಡಾ| ಕೆವಿ ಗುರುರಾಜ್ ನೇತೃತ್ವ) ‘ಕಪ್ಪೆ ಶಿಬಿರ’ದ ಪ್ರಾಥಮಿಕ ಕ್ಷೇತ್ರ ಕಾರ್ಯಕ್ಕೆ ಧಾರಾಳವಾಗಿ ಒಡ್ಡಿಕೊಳ್ಳುತ್ತಿತ್ತು. ಇನ್ನು ಹಾಗೆ ಒದಗದು ಎಂದೇ ತೋರಿತು. ‘ಅಭಿವೃದ್ಧಿ’ಯ ವ್ಯಾಪ್ತಿ ತಿಳಿಯಲು ಅದರ
ಮೇಲೆ ಕಾರೋಡಿಸಿದೆ. ಅದು ಸಮಾಜ ಮಂದಿರದಿಂದಾಚೆ, ಗುಡ್ಡೆಗೂ ಹಿಂದಿನ ನಾಕೆಂಟು ಮನೆಯಿಂದಲೂ ಮುಂದಕ್ಕೋಡಿತ್ತು. ಅವೆಲ್ಲ ಸಣ್ಣ ಸಣ್ಣ ಹಿಡುವಳಿಗಳ, ಬಹುತೇಕ ಯಾವುದೇ ವಾಣಿಜ್ಯ ಬೆಳೆ ತೆಗೆಯಲಾಗದ ರೈತಾಪಿ ಮಂದಿಯ ವಲಯ. ಅಲ್ಲೂ ಕಳೆದ ಎಂಟು ಹತ್ತು ವರ್ಷಗಳಿಂದ (ಪ್ರಾಕೃತಿಕ ಅಸಮತೋಲನದಿಂದ), ಏರುತ್ತಿರುವ ಆನೆ ಕಾಟಕ್ಕೆ, ಗದ್ದೆಗಳನ್ನು ಹಡಿಲು ಬಿಟ್ಟು ಬಸವಳಿದವರೇ ಹೆಚ್ಚು. ಸರಕಾರದಿಂದ ನಷ್ಟಕ್ಕೆ ಪರಿಹಾರ, ಭವಿಷ್ಯಕ್ಕೆ ಆಶ್ವಾಸನೆ ಸಿಗದೇ ನೊಂದವರು. ಯೋಗ್ಯ ಬೆಲೆ
ಬಂದರೆ ಮಾರಿ ಹೋಗಲು ಸಿದ್ಧವಿರುವವರು. ಹಾಗಾದರೆ ಈ ಮಾರ್ಗದ ‘ಅಭಿವೃದ್ಧಿ’ ಯಾರಿಗಾಗಿ ಎಂಬ ವಿಚಾರ ನನಗೆ ಹಿಂಸೆ ಮಾಡಿತು. ನಾನು ಕಾಂಕ್ರೀಟ್ ದಾರಿಯ ಕೊನೆ ನೋಡುವ ಪ್ರಯತ್ನ ಬಿಟ್ಟು ಮುಖ್ಯ ದಾರಿಗೇ ಮರಳಿದೆ. 

ನಮ್ಮ ದಿನದ ಕಲಾಪವಾದರೋ ಮಧ್ಯಾಹ್ನದೂಟಕ್ಕೆ ಸುಬ್ರಹ್ಮಣ್ಯಕ್ಕೇ ಮರಳುವುದಿತ್ತು. ಹಾಗಾಗಿ ಇನ್ನೂ ಬಂದಿರದ ಇಬ್ಬರನ್ನು ಪ್ರಕೃತಿವೀಕ್ಷಣಾ ಕಟ್ಟೆಯ ಗೇಟಿನಲ್ಲೇ ಸವಾರಿ ಮುಗಿಸುವಂತೆ ಮಾಡಲು ಅಲ್ಲಿಗೇ ಹೋಗಿ, ಕಾದು ಕುಳಿತೆ. ಮಳೆಗಾಲ ಎಂದಿನಂತಾಗಿದ್ದರೆ ಹೊರ ಊರಿನವರ
ಸುಳಿವಿರಲಿ, ಊರವರೇ ಕಂಬಳಿಕುಪ್ಪೆ ಹಾಕಿ ಮನೆಯ ಮೂಲೆ ಸೇರಿರುತ್ತಿದ್ದರು. ಆದರಿಂದು ವೀಕ್ಷಣಾ ಕಟ್ಟೆ ಬಳಿ ಅದೇನು ವಾಹನ, ಅದೆಷ್ಟು ಜನ! ಅರ್ಧ ಒಂದು ಗಂಟೆ ಅಂತರದಲ್ಲಿ ನಮ್ಮವರೆಲ್ಲರೂ ವೀಕ್ಷಣಾ ಕಟ್ಟೆಯ ಜನಜಾತ್ರೆಯಲ್ಲಿ ಒಂದಾದೆವು. ನಮ್ಮವರ ಫೋಟೋ ಸೆಶನ್ ನಡೆಯುತ್ತಿದ್ದಂತೆ, ಅದುವರೆಗೆ ಮಂಜಿನಾಟವಷ್ಟೇ ಆಡಿಕೊಂಡಿದ್ದ ವಾತಾವರಣ ಬದಲಿತು. ಮೋಡಗಳು ಟಠಡಢಣ ಎಂದು ಗರ್ಜಿಸಿ, ಹನಿ ದೂತರನ್ನಟ್ಟಿ, ನಾವೆಚ್ಚರಗೊಳ್ಳುವುದರೊಳಗೆ ಭೋರ್ಗರೆವ ಮಳೆಯನ್ನೇ ಸುರಿಸಿತು. ನಮ್ಮವರು ಚಿತ್ರಗ್ರಹಣದ ಕಸರತ್ತುಗಳನ್ನು ಲಂಬಿಸದೇ ವಾಪಾಸು ಹೊರಡಲೇಬೇಕಾಯ್ತು.


ಸುಮಾರು ಅರ್ಧ ದಾರಿಯವರೆಗೂ ಮಳೆ ಧೋಗುಟ್ಟುತ್ತಲೇ ಇತ್ತು. ಒಂಬತ್ತು ಸೈಕಲ್ಲುಗಳು ರಸ್ತೆಯ ರಚ್ಚೆ, ಮಳೆಯ ಹುಚ್ಚಿಗೆ ಪೂರ್ಣ ತೆರೆದುಕೊಂಡು, ಸವಾರರು ಎಲ್ಲವನ್ನೂ ಮುಕ್ತವಾಗಿ ಕಂಡುಕೊಳ್ಳುತ್ತಾ ಎರಡಿಂಚಿನ ತೆರವು ಸಿಕ್ಕರೂ ದೃಢವಾಗಿ ಸೈಕಲ್ಲೋಡಿದರೆ ಸಾಕೆನ್ನುವಂತೆ ಇಳಿಜಾರಿನಲ್ಲಿ ಧಾವಿಸಿದರು. ಶ್ರಮಪೂರ್ಣ ಏರು ದಾರಿಯಲ್ಲಿ ನಿಲುಗಡೆಗಳು ಹೆಚ್ಚಾದರೆ ದೇಹಾಲಸ್ಯ ಬರುವ ಸಾಧ್ಯತೆ ಇತ್ತು. ಹಾಗಾಗಿ ಹಿಂದಿರುಗುವ ದಾರಿಯಲ್ಲಿ, "ಹೆಚ್ಚು ನಿಂತು ನಿಂತು ಹೋಗೋಣ, ‘ಅಶೋಕವನ’ ದರ್ಶನ ಮಾಡಿಸುತ್ತೇನೆ.
ಅನ್ಯ ಕಿರು ಸ್ಥಳಪುರಾಣಗಳನ್ನು ಕೇಳಿಸುತ್ತೇನೆ" ಎಂದೆಲ್ಲ ಮೊದಲೇ ಸೂಚನೆ ಕೊಟ್ಟಿದ್ದೆ. ನಿಜದಲ್ಲಿ ಒಂಬತ್ತೂ ಮಂದಿ ಅದಕ್ಕೆ ಸಿದ್ಧರೂ ಇದ್ದರು. ಆದರೆ ಆಕಾಶಭೂಮಿ ಒಂದಾದಂತೆ, ಬಾನಬೋಗುಣಿ ಖಾಲಿಯಾಗುತ್ತಿದ್ದಾಗ, ಎಲ್ಲರಿಗೂ ಚಕ್ರದುರುಳಿನ ಜಾಡಷ್ಟೇ ಸತ್ಯವಾಯ್ತು. ಹೊಟ್ಟೆ ತಾಳ ಕುಟ್ಟುವಾಗ ಅನ್ಯ ಕಥನಗಳ ರಮ್ಯವೂ ಮರವೆಗೆ ಸಂದಿತ್ತು. ನಾನೋ ಕಾರಿನೊಳಗೆ ಮಂಜುಗಟ್ಟುವ ಕನ್ನಡಿಗೂಡಿನ ಬಂಧಿ. ನಿಜ ಸದ್ದು, ಪೂರ್ಣ ಪ್ರಾಕೃತಿಕ ಕಲಾಪಗಳ ಅಂದಾಜು ಸಿಗದ, ನಾಲ್ಕೂ ಚಕ್ರಗಳ ಜಾಡು
ಸುಗಮವಾಗುವ ಆಶಯವನ್ನಷ್ಟೇ ನಂಬಿ ಹೋಗುತ್ತಿದ್ದವ. ಮಸುಕು ನೋಟದಲ್ಲಿ ಮರ ಬೀಳುತ್ತಿರುವುದು ಕಾಣದಿರಬಹುದು, ದರೆ ಕುಸಿದಲ್ಲಿ ಸಿಕ್ಕಿಬೀಳಬಹುದು, ಏನಲ್ಲದಿದ್ದರೂ ಮಳೆ ಸುರಿಯುತ್ತಿರುವಂತೆ ವೃಥಾ ಅವಸರಿಸುವ ವಾಹನಗಳ ಓಟವೂ ಅವಘಡಕ್ಕೆ ಕಾರಣವಾಗಬಹುದು ಎಂಬ ಹೆಚ್ಚಿನೆಚ್ಚರದಲ್ಲೇ ದಾರಿ ಕಳೆದುಬಿಟ್ಟೆ. ಅದೃಷ್ಟಕ್ಕೆ ಎಲ್ಲರೂ ಸುಕ್ಷೇಮವಾಗಿ ಎರಡು ಗಂಟೆಯ ಸುಮಾರಿಗೆ ಮತ್ತೆ ಕುಳ್ಕುಂದದಲ್ಲಿ ಒಂದಾದೆವು. 

ಮಳೆ ಪೂರ್ತಿ ಬಿಟ್ಟಿತ್ತು. ಸಮೀಪದ ಬಾವಿಯ ಸಹಾಯದಲ್ಲಿ
ಸೈಕಲ್ಲಿಗರು ಇದ್ದುದರಲ್ಲಿ ಶುಚಿಯಾಗಿ, ಬಟ್ಟೆ ಬದಲಿಸಿ, ಸೈಕಲ್ಲುಗಳನ್ನು ಮತ್ತೆ ಕಾರಿಗೇರಿಸಿದೆವು. ಸುಬ್ರಹ್ಮಣ್ಯ ಪೇಟೆಗೇ ಹೋಗಿ, ತಡವಾದರೂ ತೃಪ್ತವಾಗುವಂತೆ ಹೊಟ್ಟೆಪಾಡನ್ನೂ ಪೂರೈಸಿಕೊಂಡೆವು. ಬಂದದ್ದೇ ದಾರಿ ಹಿಡಿದು, ಐದು ಗಂಟೆಯ ಸುಮಾರಿಗೆ ಮತ್ತೆ ನಂನಂಮನೆ ಸೇರಿಕೊಂಡೆವು.

7 comments:

  1. Thanks for this articulating writing. I have walked from Kulkunda to Kudurasthe via Bisele ghat during 1982. The Gowdas of Sullia Taluk have migrated to Sullia from Igooru seeme during 15001600.

    ReplyDelete
    Replies
    1. ನಾನು ಬಿಸಿಲೆ ಘಾಟಿಯ ವಾಹನಯೋಗ್ಯ ಮಾರ್ಗವನ್ನಷ್ಟೇ ಅನುಭವಿಸಿ, ಸಾರ್ವಜನಿಕಕ್ಕೆ ತೆರೆದಿಟ್ಟದ್ದನ್ನು (೧೯೮೫) ನೀವು ಓದಿರದಿದ್ದರೆ ನೋಡಿ: http://www.athreebook.com/2011/01/blog-post.html ನೀವು ೧೯೮೨ರಲ್ಲಿ, ಅಂದರೆ ಮೂರು ವರ್ಷ ಮೊದಲೇ ಈ ದಾರಿಯನ್ನು ಅಲ್ಲಿ ಇಲ್ಲಿ ಮುಟ್ಟಿರಬಹುದಾದರೂ ಬಹ್ವಂಶ ಸವಕಲು ಒಳದಾರಿಗಳನ್ನೇ ಬಳಸಿರಬೇಕು. ಅದರ ಸವಿವರ ಕಥನ ಈಗ ಪುನಾರಚಿಸಬಹುದೇ?

      Delete
  2. ಕಳೆದ ವರ್ಷದ ಭಾರೀ ಮಳೆಗಾಲದ ನಂತರ ಬಿಸ್ಲೆಗೆ 4 ಜನರೊಡಗೂಡಿ ಬೈಕ್ ಸವಾರಿ ಹೋದ್ದು ಮರುಕಳಿಸಿದಂತಾಯ್ತು.

    26 June, 2019 09:11

    ReplyDelete
  3. ನಾನು ಇಡಿ ಓದಿದೆ ಲಾಯಕಿದ್ದು. ನನಿಗೆ ಅಲ್ಲಿ ನಿಮ್ಮ ಯವನಿಗರ ಓಡನೆ ಸೈಕಲ್ ಮೇಟ್ಟಲು ಏಡಿಯದಾ ಹೇಳಿ? ನಾನು ಮತ್ತೆ ಒಬ್ಬ ಅಂದ ಆಟಗಾರ (Athlete) ಮೊನ್ನೆ ೬೦ ಮೈಲು ಅಂದರೆ ೯೬ ಕಿಮಿ ಮಟ್ಟದ ಜಾಗದಲ್ಲಿ ೩ ಗಂಟೆಯಲ್ಲಿ ಟೇಂಡಮ ನಲ್ಲಿ ಮಾದಿದೆಯೋಂ. ಮತ್ತೆ ಕಾಂಬ

    ReplyDelete
  4. ಪಂಡಿತಾರಾಧ್ಯ ಮೈಸೂರು26 June, 2019 19:56

    ನೋಡಿ ಸಂತೋಷಪಟ್ಟೆ. ಈಗ ನನಗೆ ಅಷ್ಟೆ ಸಾಧ್ಯವಾದುದು

    ReplyDelete
  5. ಓದದ ಬಾಯಿ ಬಿಲದ ಬಾಯಿ :-)

    ReplyDelete
  6. ಆಪ್ಯಾಯಮಾನವಾದ ಬರಹ. ನೀವು ಹೇಳಿರುವಂತೆ ಕಾಡನ್ನು ನೋಡಲು ಬಂದವರು ಕಾಡಿನ ಸಹಜತೆಯನ್ನು ಸವಿಯುವ ಬದಲು ತಮ್ಮದೇ ಗರ್ಜನೆ ಮಾಡುತ್ತಾರೆ. ಇವರಿಗೆ ಅರಿವು ಬರಲು ನಿಮ್ಮ ಬರಹಗಳನ್ನು ಕಾಲೇಜು ಪಠ್ಯಗಳಲ್ಲಿ ಸೇರಿಸುವುದು ಉತ್ತಮವೇನೋ!?
    ಚಂದ್ರಶೇಖರ ದಾಮ್ಲೆ

    ReplyDelete