11 August 2018

ವೈಮಿಯಾ ಹುಚ್ಚು, ಉಚ್ಚಿಲಕ್ಕೂ ಬರಲಿ!


ಮೊನ್ನೆ ಗೆಳೆಯ ವೆಂಕಟ್ರಮಣ ಉಪಾಧ್ಯರು "ಇದೊಂದು ವಿಚಿತ್ರ ನದಿ ನೋಡಿ ಮಾರಾಯ್ರೇ. ಜನರ ಹುಚ್ಚಾಟವನ್ನಿದು ಮನ್ನಿಸಿ, ಮತ್ತೆ ಮತ್ತೆ ಸಂಭ್ರಮಕ್ಕೆ ಅವಕಾಶ ಕೊಡುತ್ತಲೇ ಇದೆಯಂತೆ!" ಎಂದು ಈ ಸೇತು ಕೊಟ್ಟರು: 

ನಾನು ನೋಡಿದೆ, ನಿಸ್ಸಂದೇಹವಾಗಿ ಸಂತೋಷಪಟ್ಟೆ. ಆದರೆ ಮರುಕ್ಷಣಕ್ಕೆ ಉದ್ಗರಿಸಿದ್ದಿಷ್ಟೇ "ಅಯ್ಯೋ ಇದು ನಮ್ಮ ಉಚ್ಚಿಲ ಬಟಪಾಡಿಯ ತ್ರಿವೇಣೀ!"


ವಾಸ್ತವದಲ್ಲಿ ಈ ಚಲಚಿತ್ರದಲ್ಲಿ ಬರುವ ‘ವೈಮಿಯಾ’, ಹವಾಯಿ ದ್ವೀಪ ಸಮೂಹಗಳಲ್ಲೊಂದು ಪುಟ್ಟ ನದಿ. ಎಲ್ಲ ನದಿಗಳಂತೆ ಅದೂ ಕಲಕಲಿಸುತ್ತ ಸಾಗರ ಸಂಗಮಿಸುತ್ತದೆ. ಆದರೆ ಮಹಾಸಾಗರಕ್ಕೆ ಇದರೊಡನೆ ಮಕ್ಕಳಾಟ. ಆಗಾಗ ಭಾರೀ ತೆರೆಗೈಗಳಲ್ಲಿ ಮರಳ ದಿಬ್ಬ ಎಬ್ಬಿಸಿ ಇದರ ಬಾಯಿ ಮುಚ್ಚಿಬಿಡುತ್ತದೆ. ಆಗ ಊರ ಜನ ವೈಮಿಯಾಕ್ಕೆ ಸಹಾಯ ಮಾಡಿ, ಸಂಭ್ರಮಿಸುವುದು ಉಪಾಧ್ಯರಿಗೇನು ನನಗೂ ಬಹಳ ಉಲ್ಲಾಸದಾಯಕಾವಾಗಿ ಕಾಣಿಸಿತು. ಜನ ಪರ್ವ ಕಾಲದಲ್ಲಿ ವೈಮಿಯಾ ಅಳಿವೆಗೆ ಆಯುಧ ಸನ್ನದ್ಧರಾದರೂ ಮೋಜಿನ ಹಬ್ಬದ್ದೇ ಹೆಚ್ಚಿನ ನಿರೀಕ್ಷೆಯಲ್ಲಿ, ಸಕುಟುಂಬ ಹೋಗುತ್ತಾರೆ. ತೋಡುಗೈಗಳನ್ನು (ಶೊವೆಲ್) ಬಳಸಿ ಮರಳು ಬಗೆಯುತ್ತಾರೆ, ನದಿಗೆ ಕಡಲಿನ ನೂಲೆಳೆ ಸಂಬಂಧ ಕುದುರಿಸುತ್ತಾರೆ. ಮುಂದೆ ಬೇಂದ್ರೆಯವರ ಗಂಗಾವತರಣವನ್ನು ಕಾಳಿಂಗರಾಯರ ಮೋಡಿಯಲ್ಲಿ ಕೇಳಿದ್ದೇ ಕಣ್ಣೆದುರು ದೃಶ್ಯವಾಗುತ್ತದೆ -

 ".....ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುದ್ಧ ಶುದ್ಧ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ದರೆಗಿಳಿಯಲಿದ್ದ ಧೀರೆ
ಸಿರಿವಾರಿಜಾತ ವರಪಾರಿಜಾತ ತಾರಾ ಕುಸುಮದಿಂದೆ
ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ......" 

ಜನ ಬಂದರೂ ಬಿಟ್ಟರೂ ಇಲ್ಲಿನ ಪ್ರಾಕೃತಿಕ ವ್ಯವಸ್ಥೆಯೇ ಕಟ್ಟಿ, ಬಿಚ್ಚಿ ಮಾಡುವಂಥದ್ದು! ತೊರೆಯ ಹರಿವು ಕಡಿಮೆಯಾದಾಗ ಕಡಲ ಅಲೆಗಳ ನೂಕಿನಲ್ಲಿ ಅಳಿವೆ (ನದಿಯ ಬಾಯಿ) ಮುಚ್ಚಿಹೋಗುತ್ತದೆ. ಹಾಗೆ ಏರ್ಪಟ್ಟ ಸರಸಿನಲ್ಲಿ ನಿಧಾನಕ್ಕೆ ನೀರು ಹೆಚ್ಚಿದಾಗ, ತೊರೆ ಮತ್ತೆ ತಾನೇ ದಾರಿ ಬಿಡಿಸಿಕೊಳ್ಳುತ್ತದೆ. ಈ ಪ್ರಾಕೃತಿಕ ಘಟನೆಯನ್ನು ತುಸು ಅವಸರಿಸಿ, ತಮ್ಮ ಸಂಭ್ರಮದ ಭಾಗವಾಗಿಸಿಕೊಳ್ಳುವ ಜನರ ಉತ್ಸಾಹವೇ ನಿಜದ ಸಂಭ್ರಮ. ಮೊದಲೇ ಹೇಳಿದಂತೆ ಸಕುಟುಂಬ ಬಂದವರು,
ಜಲಕ್ರೀಡಾ ಸಾಮಗ್ರಿ, ವಿಹಾರದ ದಿರುಸು, ತಿನಿಸು, ಪಾನೀಯಾದಿಗಳಿಂದಲೂ ಸಜ್ಜಾಗಿರುತ್ತಾರೆ. ನಾಲೆ ತೋಡುವುದರಿಂದ, ನೀರಿನೊಡನೆ ಅವರಾಡುವ ವೈವಿಧ್ಯಮಯ ಆಟ, ಅವನ್ನು ಅನುಭವಿಸುವ ಪರಿ ಕಣ್ತುಂಬುತ್ತದೆ, ಉತ್ಸಾಹ ಅವರ್ಣನೀಯ. (ನೀವೇ ಮೇಲಿನ ಸೇತು ಬಳಸಿ ಇನ್ನೊಮ್ಮೆ ನೋಡಿ) 

"ಅದೆಲ್ಲಾ ಸರಿ, ನಮ್ಮ ಉಚ್ಚಿಲ ಬಟಪಾಡಿ ಯಾಕೆ ಬಂತು? ಮತ್ತೆ ಸೈಕಲ್ ಸರ್ಕೀಟಿನಲ್ಲಿ ಯಾಕಿದರ ಜೋಡಣೆ?" ಉಚ್ಚಿಲ ಬಟಪಾಡಿಯಲ್ಲಿನ ತ್ರಿವೇಣೀ (ಉಚ್ಚಿಲ, ತಲಪಾಡಿ
ಮತ್ತು ಕುಂಜತ್ತೂರು ಹೊಳೆಗಳ) ಸಂಗಮ ನನ್ನ ಸೈಕಲ್ ಸರ್ಕೀಟ್, ದೋಣಿ ವಿಹಾರಗಳಲ್ಲಿ ನಿಮಗೆಲ್ಲ ತೀರಾ ಪರಿಚಿತವೇ ಇದೆ. ಸುಮಾರು ಎರಡು ದಶಕಗಳ ಹಿಂದೆ, ನಾನಿಲ್ಲಿ ಕೇಶವ ಉಚ್ಚಿಲರ ಮನೆಗೆ ಬಂದವನು ಇದನ್ನು ಮೊದಲ ಬಾರಿ ಕಂಡಾಗ, ಇದೇ ಭೂ ಅಂಚಿನಲ್ಲಿ ಈ ಸಂಗಮ ಸರಸಿ ಸಮುದ್ರದೊಡನೆ ಬೆಸೆದುಕೊಂಡಿತ್ತು. ಆದರೆ ಈಚಿನ ವರ್ಷಗಳಲ್ಲಿ (ಮುಖ್ಯವಾಗಿ ಸೈಕಲ್ ಸರ್ಕೀಟ್ ಶುರು ಮಾಡಿದ ಮೇಲೆ) ನಾನಿಲ್ಲಿಗೆ ಬಂದದ್ದಕ್ಕೆ ಲೆಕ್ಕವಿಲ್ಲ, ಮತ್ತೆ ನೋಡಿದಾಗೆಲ್ಲ ಅಳಿವೆ ಮುಚ್ಚಿದ್ದು, ತೆರೆದದ್ದು ಸಾಕಷ್ಟು ಕಂಡಿದ್ದೇನೆ. ತೆರೆದಾಗ - ಅದು ಒಮ್ಮೆ ಇಲ್ಲಿ, ಒಮ್ಮೆ ಅಲ್ಲಿಯಾದರೂ ಅಂಚಿಗೆ ಹೋಗಿ ಮರಳಿದ್ದೂ ಉಂಟು. ಮುಚ್ಚಿದ್ದಾಗ ಇಲ್ಲಿ ತೊಡಗಿದ ನಡಿಗೆ (ಸೈಕಲ್ ನೂಕಿಕೊಂಡು, ಬಿಡುವುದು ನನ್ನ ಸೈಕಲ್ಲಿಗೆ ಅಸಾಧ್ಯ) ಅತ್ತ ಮುಗಿಸಿ, ರಸ್ತೆಯಲ್ಲಿ ಮರಳಿದ್ದೂ ಉಂಟು. ಹಾಗೇ ಒಮ್ಮೆ ಮುಚ್ಚಿದ್ದ ಕಾಲದಲ್ಲಿ, ನಾನು ನಡೆದು ಸಾಗಿದ್ದಾಗ, ಎಂಟು ಹತ್ತು ತರುಣರು, ಮರಳು ತೋಡುತ್ತ
ಹೊಳೆ ಬಾಯಿ ಬಿಡಿಸುತ್ತಿದ್ದದ್ದಕ್ಕೂ ಸಾಕ್ಷಿಯಾಗಿದ್ದೆ. ಸರಸಿ ಉಬ್ಬುತ್ತಿದ್ದಂತೆ, ಮೇಲ್ದಂಡೆಯ ಜನವಾಸಕ್ಕೆಲ್ಲ ನೀರು ನುಗ್ಗುತ್ತದಂತೆ. ಇದರ ಅರಿವಿರುವ ಪಂಚಾಯತ್, ಅಂಥ ಸಮಯದಲ್ಲಿ ಪ್ರಾಕೃತಿಕ ನ್ಯಾಯಕ್ಕೆ ವಿಳಂಬಿಸದೇ ನಾಲೆ ಬಿಡಿಸುವವರಿಗೆ ಕೂಲಿಯ ವ್ಯವಸ್ಥೆಯನ್ನೇ ಇಟ್ಟುಕೊಂಡಿದೆಯಂತೆ. ಅಂಥಾ........ 

ತ್ರಿವೇಣೀ ಸಂಗಮ ಪ್ರಾಕೃತಿಕವಾಗಿ ಹವಾಯಿಯ ವೈಮಿಯಾಕ್ಕೆ ಯಾವುದೇ ಸಂಗತಿಯಲ್ಲಿ ಕಡಿಮೆಯದ್ದಲ್ಲ ಎಂದು ಇಲ್ಲಿ ಸಾರುವ ಉತ್ಸಾಹ ನನ್ನದು. ಅದರ ಇಂದಿನ
ಸ್ಥಿತಿಯನ್ನೇ ಕಾಣಿಸುವುದಕ್ಕಾಗಿ ಮೊನ್ನೆ (೯-೮-೧೮) ಬೆಳಿಗ್ಗೆಯೇ ಸೈಕಲ್ ಏರಿದ್ದೆ. ಹಿಂದೆ ಹತ್ತು ನೂರು ಸಲ ಮೆಟ್ಟಿದಂತೇ ತೊಕ್ಕೋಟು, ಕೋಟೆಕಾರು-ಬೀರಿ, ಸಂಕೊಳಿಗೆ ಬಂದದ್ದೇ ಬಲದ ಕವಲು ಹಿಡಿದು ಉಚ್ಚಿಲಕ್ಕೆ ಹೋದೆ. ಪಡುವಲ ಕೊನೆಯಲ್ಲಿ ಎಡಕ್ಕೆ ಹೊರಳಿ, ಬಟಪಾಡಿ ಭೂಶಿರ ಸೇರಿದೆ. ಬಲಕ್ಕೆ ಅಬ್ಬರದ ಕಡಲು, ಎಡಕ್ಕೆ ಮಳೆಗಾಲದ ಸ್ವಚ್ಛತೆಯಲ್ಲಿ ಥಳಥಳಿಸುವ ಪ್ರಶಾಂತ ಸರಸಿ - ತ್ರಿವೇಣೀ! ಇತ್ತಣ ಉಚ್ಚಿಲದಿಂದ (ಕರ್ನಾಟಕ) ಅತ್ತಣ ಕಣ್ವತೀರ್ಥದವರೆಗೆ (ಕೇರಳ) ಸುಮಾರು ಒಂದು ಕಿಮೀ ಉದ್ದಕ್ಕೆ ಚಾಚಿದ ಬರಿಯ ಮರಳ ಹಾಸು ಎರಡು ನೀರನ್ನು ಬೇರೆ ಮಾಡಿದೆ. ಇಲ್ಲೂ ಸಂಗಮದಲ್ಲಿ ನೀರು ಸೊಕ್ಕಿದಾಗ ಅಳಿವೆ ತೆರೆಯುತ್ತದೆ, ಸೊರಗಿದಾಗ ಕಡಲು ಮುಚ್ಚುತ್ತದೆ. ಕಳೆದ ವರ್ಷ ಈ ಸಮಯದಲ್ಲಿ ಸರಸಿ ಕಣ್ವತೀರ್ಥದ ಗಾಳಿತೋಪಿನ ಅಂಚಿನಲ್ಲೇ ಬಾಯ್ದ್ರೆರೆದಿತ್ತು.

ಈ ಮಳೆಗಾಲದಲ್ಲಿ ಸರಸಿ ಮುಕ್ಕಾಲುವಾಸಿ ಕಣ್ವತೀರ್ಥದತ್ತ ಹೋದಲ್ಲಿಗೆ ತೆರೆದುಕೊಂಡಿರುವುದನ್ನು ಹಿಂದೆ ನೋಡಿದ್ದೆ. ತನ್ನದೇ ನೀರಿನ ಮೊತ್ತ ಮತ್ತು ಕಡಲಲೆಗಳ ತಾಕಲಾಟದಿಂದೇಳುವ ಸುಳಿಗಳಾಟದಲ್ಲಿ ನದೀಮುಖವನ್ನು ದಿಕ್ಕು, ಅಗಲ,
ಆಳಗಳಲ್ಲಿ ಇದು ಪ್ರತಿಕ್ಷಣವೂ ಬದಲಿಸುತ್ತಲೇ ಇರುತ್ತದೆ. ಈ ಕೊನೆಯಿಂದ ಆ ಕೊನೆಯವರೆಗೂ ಒಲೆಯುವುದು, ಮುಚ್ಚಿ ಕೂರುವುದು, ಒಡೆದು ಧಾವಿಸುವುದೆಲ್ಲವೂ ಇಲ್ಲಿ ಪ್ರಕೃತಿಯಾಟ. ಕಳೆದ ವರ್ಷದ್ದೊಂದು ವಿಡಿಯೋ ನೋಡಿ. ಮಳೆ ಬಿಟ್ಟು ಕೆಲ ದಿನಗಳಾಗಿದ್ದಿರಬೇಕು. ಆಹಾ, ತೆಳು ನೀರ ಹರಿವಿನ ವಯ್ಯಾರವೇ! 




೨೦೧೪ರಲ್ಲಿ ಅಂಥದ್ದೇ ಇನ್ನೊಮ್ಮೆ:


ಎಂದಿನಂತೆ ಸೈಕಲ್ ನೂಕುತ್ತ ನಡೆದೆ. ನಾವೇ ಕಳಿಸಿಕೊಟ್ಟ ವೈವಿಧ್ಯಮಯ ಕೊಳೆಯದ ಕಸದಲ್ಲಿ ಸಮುದ್ರ ಅಲ್ಪ ಸ್ವಲ್ಪವನ್ನು ಅಂಚುಗಳಲ್ಲೂ ಮರಳ ಮೇಲೂ ಎರಚಾಡಿ ಬಿಟ್ಟಿತ್ತು. ನನಗೆ ಮಾತ್ರ ಅದು ಭಾರೀಯಾಗಿ ಕಾಣಿಸಿತು! ತರಹೇವಾರಿ ಪ್ಲ್ಯಾಸ್ಟಿಕ್,
ನೈಲಾನ್ ಬಲೆಗಳ ತುಣುಕುಗಳು, ಚಪ್ಪಲಿಗಳಲ್ಲದೇ ಹೆಬ್ಬಾವು ಗಾತ್ರದ ಮಿಣಿ, ಸುಮಾರು ಇಪ್ಪತ್ತಡಿ ಉದ್ದದ ಗರಿಯಿಂದ ಬೇರಗಡ್ಡೆಯವರೆಗೆ ಪೂರ್ಣ ಕಿತ್ತು ಬಂದ ಎರಡು ತೆಂಗಿನ ಮರ ವಿಶಿಷ್ಟವಾಗಿ ಕಾಣಿಸಿತು. ಇನ್ನೂ ಮೀನುಗಾರಿಕಾ ಋತು ಬಂದಿಲ್ಲವೆಂಬ ಬಿಡುವಿನಲ್ಲೇ ಅಡ್ಡಾಡಿಕೊಂಡು ಬಂದ ಇಬ್ಬರು ಮೀನುಗಾರರು, ಎಲ್ಲೋ ದೂರದೂರದ ಒಳದಂಡೆಗಳಲ್ಲಿ ಕೈಯ ಬಾಂಡ್ಲೆಯಿಂದಲೇ ಮರಳನ್ನು ಗೋರಿ ದೋಣಿ ತುಂಬಿಸಿಕೊಳ್ಳುತ್ತಿದ್ದ (ಅಕ್ರಮ?) ನಾಲ್ಕೈದು ದೋಣಿ ಬಿಟ್ಟರೆ ಪೂರ್ಣ ನಿರ್ಜನ. 


ತ್ರಿವೇಣೀ ಸರೋವರದಂಥ ಹಿನ್ನೀರ ಹರಹುಗಳಲ್ಲಿ ಸಮುದ್ರ ಹೊಯ್ದಾಟದ ಅಪಾಯವಿಲ್ಲ, ಹೊಳೆಗಳ ಸುಳಿ ಸೆಳವುಗಳ ಭಯವೂ ಇಲ್ಲ. ಎಷ್ಟೇ ದೊಡ್ಡದಾದ ಈಜುಕೊಳದಕ್ಕೂ ಒಂದು ನಿಶ್ಚಿತ ಆಳ, ಅಗಲ, ಕಾಂಕ್ರೀಟ್ ದಂಡೆಗಳ ಏಕತಾನತೆ ಬಿಟ್ಟದ್ದಲ್ಲ. ಅದರ ದಡದಲ್ಲಿ ಉದ್ಯಾನ, ಕಾರಂಜಿ ಏನು ಹೊಸೆದರೂ ಪ್ರಾಕೃತಿಕ ಚಂದಕ್ಕೆ ಸಾಟಿಯಾಗಲಾರದು. ಇಲ್ಲಿನ
ಕಾಂಡ್ಲಾ ಸೇರಿದಂತೆ ಹಸಿರಿನ ವೈವಿಧ್ಯ, ಮೀನು ಹಕ್ಕಿಗಳ ಸಾಂಗತ್ಯ ಅಲ್ಲಿ ಕನಸುವುದೂ ಅಸಾಧ್ಯ. ಜಿಗಿಹಲಗೆ, ತರಹೇವಾರಿ ತೇಲುಬೆಂಡು, ಹೊಕ್ಕು ಹೊರಡುವ ಕೃತಕತೆಗಳಾದಿ ಏನು ಹೇರಿದರೂ ಕಾಡ ಬಳ್ಳಿಯ ಜೀಕು, ನಡುಗಡ್ಡೆಗಳ (ಕುದುರು) ವಿರಾಮ, ದಿಬ್ಬದಲ್ಲಿ ತಡವರಿಸಿ ತಗ್ಗಿನಲ್ಲಿ ಮುಳುಗು ಹಾಕಿ ಒದಗುವ ಆನಂದಗಳಿಗೆ ಬದಲಿ ಇಲ್ಲ. ಈಜುಕೊಳಗಳಲ್ಲಿ ನೆಲಕ್ಕೆ ಬಳಿದ ಬಣ್ಣ ಮತ್ತು ಹಚ್ಚಿದ ದೀಪಗಳ ಹಿಕ್ಮತ್ತು ನೀರನ್ನು ಎಷ್ಟು ಪಾರದರ್ಶಕವಾಗಿಯೂ ತೋರಿಸಬಹುದು. ಆದರೆ ನಿಜದಲ್ಲಿ ಅಲ್ಲಿನ ದೊಡ್ಡ ಸಂಖ್ಯೆಯ ಈಜುವವರ ‘ಶುದ್ಧಾಶುದ್ಧ’ಕ್ಕೆ ಹೊಡೆದ ರಾಸಾಯನಿಕಗಳ ನೆಂಟು ಮತ್ತು ಘಾಟು ಉಂಟು ಮಾಡುವ ಆರೋಗ್ಯ ಕೇಡು ಖಂಡಿತಕ್ಕೂ ಪ್ರಾಕೃತಿಕ ಸರೋವರಗಳಲ್ಲಿ ಇಲ್ಲ. ನಾಗರಿಕತೆಯ ಭ್ರಮಿತ ಅಭಿವೃದ್ಧಿಯ ಹಸ್ತಕ್ಷೇಪ ಒಂದಿಲ್ಲವಾದರೆ, ಜೈವಿಕ ಶುಚಿಕಾರಕಗಳ (ಮಣ್ಣು, ಸಸ್ಯ, ಮೀನು, ಹಕ್ಕಿ, ಬಿಸಿಲು, ಮಳೆ, ಗಾಳಿ...) ಶಕ್ತಿಗೆ ಸಾಟಿಯಿಲ್ಲ. ಸದ್ಯ ಕಾಣುವಂತೆ ನಾಗರಿಕ
ಕೊಳಚೆಯನ್ನು ಹೇರುವುದನ್ನು (ಹೊಳೆಗಳು ದಾಟಿ ಬರುವ ಎಲ್ಲ ಸೇತುವೆಗಳಲ್ಲಿ ಜನ ವಾಹನಗಳಿಂದ ಎಸೆಯಲ್ಪಡುವ ಮೂಟೆಗಟ್ಟಳೆ ಕಸ ನೋಡಿಯೇ ತಿಳಿಯಬೇಕು) ಬಿಟ್ಟರೆ, ಪ್ರಾಕೃತಿಕ ಸ್ಥಿತಿಯನ್ನು ಕೆಡಿಸುವ (ಸೌದೆ ಮಾಡುವುದು, ಮೀನು ಮರಳು ಸಂಗ್ರಹಿಸುವುದು, ವಾಹನ ತೊಳೆಯುವುದು.....) ಚಟುವಟಿಕೆಗಳನ್ನು ನಿಯಂತ್ರಿಸಿದರೆ, ನಮ್ಮ ಉಚ್ಚಿಲ ಬಟಪಾಡಿಯ ತ್ರಿವೇಣಿ ಸರೋವರ ಯಾವುದೇ ವೈಮಿಯಾಕ್ಕೆ ಕಡಿಮೆಯದ್ದಾಗುವುದೂ ಸಾಧ್ಯವೇ ಇಲ್ಲ.

3 comments:

  1. ಸಮಯದ ಮಿತಿ ಮತ್ತು ಅಕಸ್ಮಾತ್ತಾಗಿ ಸುರಿದ ಮಳೆಯಿಂದಾಗಿ ತ್ರಿವೇಣಿಯ ಚಂದ ಸವಿಯಲು ಆಗಲಿಲ್ಲ ಅಲ್ಲೇ ಅನತಿ ದೂರದಲ್ಲಿರುವ ವಿಷ್ಣುಮೂರ್ತಿ ದೇವಸ್ಥಾನದ ಸುತ್ತಲಿನ ಚಂದ ಕಣ್ಣು ತುಂಬಿಕೊಂಡೆವು.

    ತ್ರಿವೇಣಿಯ ಇಷ್ಟೆಲ್ಲ ವೈಶಿಷ್ಟ್ಯಗಳು ಈ ಲೇಖನ ಓದಿಯೇ ಗೊತ್ತಾಗಿದೆ. ಇನ್ನೊಮ್ಮೆ ಹೋಗಬೇಕು

    ReplyDelete
  2. ಇಡಿ ಓದಲು ಪುರುಸೋತ್ತಿಲ್ಲೆ ಆದರೆ ಹವಾಯಿ ಆಗಬಾರದು ಎಂದು ನ್ನನ್ನದೂ ಮತ ಅದರೆ ಜನ ಸಂಖ್ಯೆ ಪ್ರಗತಿ ಜಗತ್ತಿನ ಅದೋಗತಿ ಎಂದಿಪ್ಪಗ ಇಂದಲ್ಲ ನಾಳೆ ನಮ್ಮ ಮಡಿಕೇಇ ತೋಟಗಳು ಪೇಟೆಯ ಶ್ರೀಮಂತರಿಗೆ ವಿಹಾರತಾಣ ಆದಂತೆ ಇದೂ ಆಗುತ್ತದೆ ...

    ReplyDelete
    Replies
    1. ಆನಂದಾ ಸದ್ಯ ಈ ಪ್ರಾಕೃತಿಕ ವೈಭವ ಕಸ, ಕೊಳಚೆಯ ತೊಟ್ಟಿಯಾಗಿದೆ. ನಾನದರ ಶುದ್ಧೀಕರಣಕ್ಕಾಗಿ, ಪ್ರಕೃತಿ ಪರವಾಗಿ ಜನ ಭಾಗೀದಾರಿಕೆಯನ್ನು ಆಹ್ವಾನಿಸುತ್ತಿದ್ದೇನೆ. ಯಾವುದೇ ನಾಗರಿಕ ಸೌಕರ್ಯವನ್ನು ಹೇರದೇ ಕೇವಲ ಹಿನ್ನೀರು, ಸಮುದ್ರಗಳ ಆಟದ ಬಗ್ಗೆ ಹೇಳುತ್ತಿದ್ದೇನೆ. ಆ ಮಟ್ಟದಲ್ಲಷ್ಟೇ ವೈಮಿಯಾ (ಹವಾಯ್ ದ್ವೀಪದ) ಮಾದರಿಯನ್ನು ತೋರಿಸಿದ್ದೇನೆ. ಒಟ್ಟಾರೆ ಪ್ರವಾಸೋದ್ಯಮವನ್ನಷ್ಟೇ ನೆಚ್ಚಿ ಉಳಿದ ಅನಿಷ್ಟಗಳನ್ನೂ ಎಳೆದು ಹಾಕಿಕೊಂಡಿರಬಹುದಾದ ಹವಾಯಿ ದ್ವೀಪಗಳ ದುರಾಚಾರಗಳನ್ನಲ್ಲ. ಲೇಖನಗಳನ್ನು ಪೂರ್ಣ ಓದದೇ ನೀನು ಅಭಿಪ್ರಾಯಗಳನ್ನು ಹಾಕುವುದರಿಂದ ಒಟ್ಟು ಆಶಯಕ್ಕೆ ತಪ್ಪು ದಿಕ್ಸೂಚೀ ಕೊಟ್ಟಂತಾಗುತ್ತದೆ. ಈ ಅವಸರ ಯಾಕೆ ಮಾಡುತ್ತಿಯೋ ನನಗೆ ತಿಳಿದಿಲ್ಲ.

      Delete