07 August 2018

ರಾಘವೇಂದ್ರ ಉರಾಳರು ದಿನ ಮುಗಿಸಿದರು


ಏರಿಕಲ್ಲು ನೆತ್ತಿಯಲ್ಲಿ ಸೊಂಟಕ್ಕೆ ಕೈಕೊಟ್ಟು ಬಲಕೊನೆಯಲ್ಲಿ ನಿಂತವರು ಉರಾಳ
೧೯೭೫ರಲ್ಲಿ ನಾನು ಮಂಗಳೂರಿಗೆ ಬಂದಾಗ ವಾಸಕ್ಕೆ ನೆಲೆ ಕೊಟ್ಟದ್ದು ಸಂತ ಅಲೋಶಿಯಸ್ ಕಾಲೇಜಿನ ಹಾಸ್ಟೆಲ್ (ಬಿ.ವಿ. ಕೆದಿಲಾಯರ ಕೃಪೆ). ಆಗ ಅಲ್ಲಿದ್ದ ಹತ್ತಿಪ್ಪತ್ತು ದುಡಿಯುವ ಮಂದಿಗಳಲ್ಲಿ ಒಬ್ಬರಾಗಿ, ಅಷ್ಟೂ ಮಂದಿಗಿಂತ ಹಿರಿಯರಾದರೂ ವೈಚಾರಿಕವಾಗಿ ಸದಾ ಅತ್ಯಾಧುನಿಕರಾಗಿ, ಪರಿಚಯಕ್ಕೆ ಬಂದವರು - ಡಾ| ಕೆ. ರಾಘವೇಂದ್ರ ಉರಾಳ. ಇವರು ವೃತ್ತಿಯಲ್ಲಿ (ಸರಕಾರೀ) ಪಶುವೈದ್ಯನಾಗಿ ಊರೂರು ಸುತ್ತಿದರೂ ಖಾಯಂ ವಾಸ್ತವ್ಯಕ್ಕೆ ಹುಟ್ಟೂರು ಕೋಟ, ಮತ್ತಲ್ಲಿನೊಂದು ಶಾಲೆಯಲ್ಲಿ (ಉಡುಪಿಯ ಸಿಸಿಲಿ ಶಾಲೆ) ಅಧ್ಯಾಪಿಕೆಯಾಗಿದ್ದ ಮಡದಿ ಹಾಗೂ ಮೂರು ಮಕ್ಕಳಿಂದ ಕಳಚಿಕೊಂಡವರಲ್ಲ. ಹಾಗಾಗಿ ನಾನು ಕಂಡಂತೆ, ಇವರಿಗೆ ಐದು ದಿನ ಹಾಸ್ಟೆಲ್, ವಾರಾಂತ್ಯ ಮತ್ತು ವಿಶೇಷ ಸಂದರ್ಭಗಳಲ್ಲಿ ಕೋಟ ರೂಢಿಸಿತ್ತು. ನಾವು ಎರಡು-ಮೂರು ವರ್ಷ ಅಲೋಶಿಯಸ್ ಹಾಸ್ಟೆಲ್‍ನಲ್ಲಿದ್ದೆವು. ಕಾಲೇಜಿಗೆ ಸಂಬಂಧಿಸದವರು ಹಾಸ್ಟೆಲ್ ಬಿಡಬೇಕೆಂದು ಆಡಳಿತ ಮಂಡಳಿ

ಆದೇಶಿಸಿದಾಗ ಉರಾಳರೂ ಸೇರಿದಂತೆ ನಾವು ಐದಾರು ಮಂದಿ, ಮತ್ತೆ ಎರಡುಮೂರು ವರ್ಷ ಬೇರೊಂದು ಬಾಡಿಗೆ ಮನೆಯಲ್ಲೂ ಒಟ್ಟಾಗಿದ್ದೆವು. ಆ ದಿನಗಳಲ್ಲಿ ಪಂಡಿತಾರಾಧ್ಯ, ಜನಾರ್ದನ ಪೈ, ವಸಂತ ರಾವ್, ಶಂಕರಲಿಂಗೇ ಗೌಡ, ಸುಬ್ರಹ್ಮಣ್ಯ ಭಟ್, ಕೆ.ಎಲ್ ರೆಡ್ಡಿ, ಪಾನ ಮಯ್ಯ ಮುಂತಾದ ತರುಣ ಗೆಳೆಯರ ಒಡನಾಟದಲ್ಲೇ (ಊಟ, ಸಿನಿಮಾ...) ಉರಾಳರು ಸಂತೋಷ ಕಾಣುತ್ತಿದ್ದರು. ಉರಾಳರ ಆಸಕ್ತಿ ಬಹುಮುಖೀ, ಉತ್ಸಾಹ ಅದಮ್ಯ. ಅವರಿಗೆ ಜನ್ಮಾರಭ್ಯ ಹಿಡಿದುಕೊಂಡಿದ್ದ ಅಸ್ತಮಾ ಒಂದಲ್ಲದಿದ್ದರೆ, ನನ್ನೆಲ್ಲ ಕಾಡುಬೆಟ್ಟಗಳ ಓಡಾಟಕ್ಕೂ ಅವರು ಸೈ ಎನ್ನುವವರೇ. ಆದರೂ ಹೀಗೇ ಜ್ಞಾಪಿಸಿಕೊಳ್ಳುವುದಾದರೆ.... 

ಮೊದಲು ಕಾಡುವುದು ಏರಿಕಲ್ಲು. ಆ ದಿನಗಳಲ್ಲಿ ನನಗೆ ಪಶ್ಚಿಮಘಟ್ಟದ ಕುಮಾರ ಪರ್ವತ ಮತ್ತು ಕುದುರೆಮುಖಗಳನ್ನು ಒಮ್ಮೆ ಹತ್ತಿಳಿದ ಅನುಭವ ಮಾತ್ರ ಇತ್ತು. ಯಾರೋ ಚಾರ್ಮಾಡಿಯ ಎಂಟನೇ ಹಿಮ್ಮುರಿ ತಿರುವಿನ ಬಳಿಯಿರುವ ಏರಿಕಲ್ಲು ಶಿಖರದ ‘ಅಗಮ್ಯ’ವನ್ನು ರೋಚಕವಾಗಿ ಹೇಳಿದ್ದರು. ಈ ಮಾತು ಉರಾಳರ ಕಿವಿಗೆ ಬಿದ್ದದ್ದೇ ಹೋಗಿ ನೋಡಿಯೇ ಬಿಡೋಣ ಎಂದರು. ಅದರ ಪೂರ್ಣ ಕಥನವನ್ನು ನೀವು ಅವಶ್ಯ ಇಲ್ಲಿ ಓದಿಕೊಳ್ಳಿ: ಕೊಲಂಬಸ್ ಏರಿಕಲ್ಲನ್ನು ಕಂಡ

ಉರಾಳರ ಬಳಿ ಎರಡೇ ಬಾಗಿಲಿನ ಸ್ಟ್ಯಾಂಡರ್ಡ್ ಕಾರಿತ್ತು. ಅದು ಅವರ ವೃತ್ತಿ ಅಗತ್ಯದಷ್ಟೇ ಹವ್ಯಾಸೀ ಆಸಕ್ತಿಗಳಿಗೂ ನಿರ್ದಾಕ್ಷಿಣ್ಯವಾಗಿ ಹುಡಿಯಾಗುತ್ತಿದ್ದ ವಾಹನ. ೧೯೭೦ರ ದಶಕದಲ್ಲಿ ಪಶ್ಚಿಮ ಘಟ್ಟದ ದುರ್ಗಮ ಮೂಲೆಯ ‘ಮಲ್ಲೇಶ್ವರ’ ಎಂಬ ಕುಗ್ರಾಮವನ್ನು ಕೇಂದ್ರವಾಗಿರಿಸಿಕೊಂಡು ಕಬ್ಬಿಣ ಗಣಿಗಾರಿಕೆ ಶುರುವಾಗುವುದಿತ್ತು. ಅದಕ್ಕೆ ಮಂಗಳೂರು ಬಂದರದಿಂದ ವಿಶೇಷ ದಾರಿಯ ಅಗತ್ಯವಿತ್ತು. ಆಗ ಕಾಣಿಸಿದ್ದು ಮಂಗಳೂರು - ಉಡುಪಿ ಹೆದ್ದಾರಿಯಿಂದ ಪಡುಬಿದ್ರೆಯಲ್ಲಿ ಕವಲೊಡೆವ ಕಾರ್ಕಳ, ಬಜಗೋಳಿ, ಮಾಳದ ದಾರಿ. ಅದನ್ನು ಅತ್ಯಾಧುನಿಕವಾಗಿ ಪುನಾರೂಪಿಸುವುದರೊಡನೆ, ಮುಂದೆ ಘಟ್ಟವನ್ನು ಹೊಸದಾಗಿಯೇ ಕೆತ್ತಿ, ಹತ್ತಿ ‘ಕುದುರೆಮುಖ ನಗರಿ’ ಎಂದೇ ಹೆಸರು ಹೊರಲಿದ್ದ ಮಲ್ಲೇಶ್ವರದ ಒತ್ತಿನ ಬಯಲಿಗೆ ಸಂಪರ್ಕಿಸುವ ಕೆಲಸ ಭರದಿಂದ ನಡೆದಿತ್ತು. ಆ ಭಾರೀ ಯಂತ್ರಶಕ್ತಿಯ ಸಾಧನೆಗಳಿಗೆ ಸ್ವಲ್ಪವಾದರೂ ಸಾಕ್ಷಿಯಾಗುವ ಉಮೇದಿನಲ್ಲಿ ಮತ್ತೆ ಹೊರಟಿತು ನಮ್ಮ ಸೈನ್ಯ. ಅದಕ್ಕೆ ಉರಾಳರದೇ ಸೈನ್ಯಾಧಿಪತ್ಯ ಮತ್ತು ರಥ! ಪುಟ್ಟ ಡಬ್ಬಿಯಲ್ಲಿ ನಾವು ಆರು ಧಾಂಡಿಗರು, ಕೆಲವೆಡೆ ಅಕ್ಷರಶಃ ಕಾರನ್ನು ಎತ್ತಿ ದಾಟಿಸುತ್ತ ಎಲ್ಲ ನೋಡಿ ಬಂದದ್ದು ಅವಿಸ್ಮರಣೀಯ. ಅದರ ಪೂರ್ಣ ಕಥನವನ್ನೂ ನೀವು ಇಲ್ಲಿ ಓದಿ ಆನಂದಿಸಿ: ಭಗವತಿ ಘಾಟಿ

ಉರಾಳರ ವೈಜ್ಞಾನಿಕ ಮನೋಧರ್ಮವನ್ನೂ ಕೆಣಕುವಂತೆ, ನನಗೊಂದು ಸವಾಲು ಬಂದಿತ್ತು - ಸುಳ್ಯ ವಲಯದ ‘ಪೂಮಲೆ’ ಕಾಡು ಮನುಷ್ಯಮಾತ್ರದವನ ಶೋಧಕ್ಕೆ ನಿಲುಕುವುದು ಅಸಾಧ್ಯ! "ವಿಷ್ಣು ದೇವಳದ ಮೂಲಸ್ಥಾನ ಅಲ್ಲೆಲ್ಲೋ ಇದೆ. ಅದನ್ನು ಹುಡುಕಿ ಹೊರಟ ಯಾರೂ ವನಮೋಹಿನಿಯ ಪಾಶವನ್ನು ತಪ್ಪಿಸಿಕೊಂಡು ಹಿಂದೆ ಬಂದಿಲ್ಲ" ಎನ್ನುವುದು ಅದರ ಖ್ಯಾತಿ. ಆ ವೇಳೆಗೆ ಭಾರತೀಯ ಸರ್ವೇಕ್ಷಣ ಇಲಾಖೆಯ ನಕ್ಷೆಗಳನ್ನೂ ಸಂಗ್ರಹಿಸಿದ್ದ ನಾನು, "ಈ ವಲಯಗಳಲ್ಲಿ ‘ಅಗಮ್ಯ’ ಎನ್ನುವ ಭೂಭಾಗವೇ ಇಲ್ಲ" ಎಂದೇ ಸಾರುತ್ತಿದ್ದೆ. ಸರಿ, ಅದೊಂದು ಶನಿವಾರ ರಾತ್ರಿ ಉರಾಳರೊಡನೆ ಕಾರಿನಲ್ಲಿ ನಮ್ಮ ಸೇನೆ ಹೊರಟೇಬಿಟ್ಟಿತು. ರಾತ್ರಿ ಹನ್ನೆರಡು ಗಂಟೆಯ ಸುಮಾರಿಗೆ ಸುಳ್ಯದ ಹೊರವಲಯದಲ್ಲಿದ್ದ ವಿಷ್ಣು ದೇವಳದ ವಠಾರ ತಲಪಿ ಮಲಗಿದೆವು. ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಸಜ್ಜುಗೊಂಡು, ಒತ್ತಿನ ಪೂಮಲೆ ಕಾಡು ನುಗ್ಗಿದ್ದೆವು. ಕಾಡೇನೋ ದಟ್ಟವೇ ಇತ್ತು. ಆದರೆ ನಾವು ನಡೆದ ಜಾಡು ಗುರುತಿಸುವ ಕ್ರಮವನ್ನು ಅಳವಡಿಸುತ್ತ ಹೋಗಿ ಮಧ್ಯಾಹ್ನಕ್ಕೆ ಕಾಡಿನ ಪೈಚಾರ್ ಕೊನೆಯನ್ನು ಮುಟ್ಟಿದ್ದೆವು. ಅಲ್ಲಿ ಬುತ್ತಿಯೂಟ ಮುಗಿಸಿ ಸಂಜೆಗೆ ಸುಳ್ಯಕ್ಕೂ ರಾತ್ರಿಗೆ ಮಂಗಳೂರಿಗೂ ಸುಕ್ಷೇಮವಾಗಿ ಮರಳಿದ್ದೆವು. 

ಒಮ್ಮೆ ಉರಾಳರಿಗೆ ತಾನು ಅನುಭವಿಸಿದ ಪ್ರಾಕೃತಿಕ ವಿಶೇಷಗಳಲ್ಲಿ ಸ್ವಲ್ಪವನ್ನಾದರೂ ತನ್ನ ಮನೆಮಂದಿಗೂ ಕೊಡಬೇಕೆಂಬ ಉತ್ಸಾಹ ಬಂದಿತ್ತು. ಆಗ ಅವರ ಮಡದಿ ಮಕ್ಕಳೊಡನೆ, ಮಳೆಗಾಲದಲ್ಲೇ ಆಗುಂಬೆಯತ್ತ ಕಿರುಪ್ರವಾಸ ನಡೆಸಿದ್ದೆವು. ಅಂದು ಒನಕೆ ಅಬ್ಬಿಯ ಬಳಿ ಅವರ ಕೊನೆಯ ಮಗು ಸುಬ್ರಹ್ಮಣ್ಯ (ಇಂದು ಬೆಂಗಳೂರಿನಲ್ಲಿ ಇಂಜಿನಿಯರ್), ಬಹುಶಃ ಎರಡೋ ಮೂರೋ ವರ್ಷದ ಪೋರ, ಅಕ್ಕಂದಿರಿಬ್ಬರೂ ನಗುತ್ತಿರುವಂತೇ, ಜಿಗಣೆ ಮೆಟ್ಟಿ ನನ್ನ ಭುಜಕ್ಕೆ ಜಿಗಿದವ ಮತ್ತೆ ಇಳಿದದ್ದು ಕಾರಿನ ಸೀಟಿಗೇ! 

ಅವರಿವರ ಬಳಿ ನಾನು ಜಮಾಲಾಬಾದ್ ಏರಿಕೆಯ ಕುರಿತು ಕೊಚ್ಚಿಕೊಳ್ಳುವಾಗ "ನನ್ನ ಏದುಬ್ಬಸದೊಡನೆ, ಉರಿ ಬಿಸಿಲಿನಲ್ಲಿ ಅದನ್ನೇರುವುದು ಕಷ್ಟ ಮಾರಾಯ್ರೇ" ಎಂದು ಉರಾಳರು ಹೇಳಿದ್ದು, ನನಗೊಂದು ಸವಾಲಿನಂತೇ ಕೇಳಿತ್ತು. ಅದಕ್ಕೇನೆಂದು ಒಂದು ಹುಣ್ಣಿಮೆ ರಾತ್ರಿಗೆ ಕಾರ್ಯಕ್ರಮ ಹಾಕಿಕೊಂಡೆವು. ದೋಸೆಹಿಟ್ಟು, ಸ್ಟವ್ ಎಲ್ಲ ಸಜ್ಜುಗೊಳಿಸಿಕೊಂಡು, ಉರಾಳರನ್ನು ಮುಂದಿಟ್ಟುಕೊಂಡು ನಾವು ನಾಲ್ಕೈದು ಮಂದಿ ಜಮಾಲಬಾದ್ ಬುಡ ಸೇರಿದ್ದೆವು. ಹಾಲಹೊಳೆಯಲ್ಲಿ ಈಸುತ್ತ ನಡುರಾತ್ರಿಗೆ ಶಿಖರ ಸೇರಿದ್ದೆವು. ತಂಗದಿರನ ತಂಪನ್ನು ಬಂಡೆಯ ಬಿಸುಪಿನಲ್ಲಿ ಹಿತವಾಗಿಸಿಕೊಂಡು ನಿದ್ರೆ ತೆಗೆದದ್ದು, ಬೆಳಗ್ಗೆದ್ದು ದೋಸೆ, ಕಾಫಿ ಹೊಡೆದದ್ದು ಎಂದಾದರ್ಯೂ ಮರೆಯಲುಂಟೇ! 

ನನ್ನಂಗಡಿಯ ವೈಚಾರಿಕ, ವೈಜ್ಞಾನಿಕ, ಬಾಲಸಾಹಿತ್ಯಾದಿ ಪುಸ್ತಕಗಳಿಗೆ ಉರಾಳರು ಒಳ್ಳೆಯ ಗಿರಾಕಿಯಾಗಿದ್ದರು. ನ್ಯೂಚಿತ್ರ ಟಾಕೀಸಿನಲ್ಲಿ ಬರುತ್ತಿದ್ದ ಒಳ್ಳೊಳ್ಳೆ ಇಂಗ್ಲಿಷ್ ಚಿತ್ರಗಳನ್ನೊಂದೂ ನಾವು ತಪ್ಪಿಸಿಕೊಂಡದ್ದೇ ಇಲ್ಲ. ಹಾಸ್ಟೆಲ್ ಬಿಟ್ಟು ಬಾಡಿಗೆ ಕೋಣೆ ಹಿಡಿದ ಮೇಲೆ ನಮ್ಮೂಟವೆಲ್ಲ ಹೋಟೆಲುಗಳಲ್ಲೇ ಇರುತ್ತಿತ್ತು. ಹಾಗಾಗಿ ಹೆಚ್ಚು ಕಡಿಮೆ ಪ್ರತಿ ಸಂಜೆ, ಆಸ್ಪತ್ರೆ ಕೆಲಸ ಮುಗಿಸಿದ ಉರಾಳರೂ ಕೊಣಾಜೆಯ ಅಧ್ಯಾಪನ ವೃತ್ತಿ ಮುಗಿಸಿದ ಪಂಡಿತಾರಾಧ್ಯರೂ ನನ್ನಂಗಡಿಗೆ ಬರುತ್ತಿದ್ದರು. ಅಲ್ಲಿನ ನಮ್ಮ ಪಟ್ಟಾಂಗ, ನಾನು ‘ಬೀಗ ಜಗ್ಗಿದ’ ಯಾವುದೋ ಹೋಟೆಲಿಗೆ ಮುಂದುವರಿಯುತ್ತಿತ್ತು. ಹಾಗೇ ಸಿನಿಮಾಕ್ಕೂ ಮುಂದುವರಿದ ಲೆಕ್ಕ ತೆಗೆದರೆ, ಅಂದು ಸರಾಸರಿಯಲ್ಲಿ ವಾರಕ್ಕೆರಡು ಚಿತ್ರಗಳನ್ನೂ ನೋಡಿದ್ದಿತ್ತು! 

ಉರಾಳರ ಯಕ್ಷಗಾನದ ಆಸಕ್ತಿ ಕಡಿಮೆಯದ್ದೇನಲ್ಲ. ಅದು ನನಗೂ ಇದ್ದುದನ್ನು ಗುರುತಿಸಿಯೇ ಒಮ್ಮೆ ಅವರೂರಿಗೆ ಕರೆದೊಯ್ದಿದ್ದರು. ಆ ಕಾಲಕ್ಕೇ (೭೦ರ ದಶಕ) ಬಡಗು ತಿಟ್ಟಿನಲ್ಲಿ ‘ಹಳೇ ತಲೆಮಾರಿನವ’ ಎಂದನ್ನಿಸಿಕೊಂಡಿದ್ದ ಹಾರಾಡಿ ಕುಷ್ಟ ಗಾಣಿಗರ ಅಪರೂಪದ ವೇಷ ತೋರಿಸಿ, ಹಿರಿಮೆ ಕೊಂಡಾಡಿದ್ದರು. ಶಿವರಾಮ ಕಾರಂತರನ್ನು ಇವರು ಯಕ್ಷಗಾನ ಪ್ರಯೋಗಗಳೊಡನೆ ನೂರೆಂಟು ಸಾಹಸಗಳಿಗೆ ಮೆಚ್ಚಿ, ಉದಾಹರಿಸದ ದಿನವಿರಲಿಲ್ಲ. ಹಾಗೆಂದು ಅದು ಎಂದೂ ‘ನಮ್ಮೂರಿನವ’ ಎಂಬ ಸಣ್ಣತನಕ್ಕೋ, ಖಾಲೀ ವ್ಯಕ್ತಿಪೂಜೆಗೋ ಸೀಮಿತಗೊಳ್ಳದ ಎಚ್ಚರವನ್ನೂ ಉಳಿಸಿಕೊಂಡಿದ್ದರು. 

ಸರಕಾರೀ ಪ್ರಾಯ-ನಿಯಮದಂತೆ ಉರಾಳರು ವೃತ್ತಿ ಸಂಕಲೆ ಕಳಚಿಕೊಂಡರೂ ಆಸಕ್ತಿ ವಿಮುಖರಾಗಲಿಲ್ಲ. ಅವರಿಗೆ ಪಶುವೈದ್ಯಕೀಯದಲ್ಲಿ ಆಸಕ್ತಿ ಎಂದೂ ಕುಂದಿರಲಿಲ್ಲ. ಮನುಷ್ಯ ವೈದ್ಯಕೀಯಕ್ಕಿಂತಲೂ ಭಾರೀ ರಗಳೆಯದ್ದು ಪಶುವೈದ್ಯಕೀಯ. ಅಲ್ಲಿ ‘ರೋಗಿ’ಗಳು ಆಸ್ಪತ್ರೆಗೆ ಬರುವುದಕ್ಕಿಂತಲೂ ವೈದ್ಯರೇ ಕೊಟ್ಟಿಗೆ, ಕೊಟ್ಟಿಗೆ ಸುತ್ತುವ ಅವಸ್ಥೆ ಹೆಚ್ಚು. ಸುಸಜ್ಜಿತ ಆಸ್ಪತ್ರೆಗಳ ಡೆಟ್ಟಾಲ್ ಫಿನಾಯಿಲ್ ಘಾಟಿಗಿಂತಲೂ ಜಾನುವಾರು ಸಾಕಿದ ಬಹುತೇಕ ಮನೆಗಳ ಬಚ್ಚಲ ಕೊಚ್ಚೆ ಮೆಟ್ಟಿ, ವಾಸನೆ ಸಹಿಸಿ, ಕಾಡುವ ಸೊಳ್ಳೆ ನೊಣಗಳ ನಡುವೆ ಜಾನುವಾರುಗಳ ಆರೋಗ್ಯವರ್ಧಿಸುವ ಕಾಯಕ ನೋಡಿಯೇ ಅನುಭವಿಸಬೇಕು. ಉರಾಳರು ಸೇವೆಯಲ್ಲಿದ್ದಾಗ, ಒಮ್ಮೆ ಒಂದು ದಿನವಿಡೀ ಅವರೊಡನೆ ಕಾರಿನಲ್ಲಿ ಸುಮ್ಮನೆ ಜತೆಗೊಟ್ಟದ್ದು ಮರೆಯಲಾರೆ. ಉರಾಳರು ನಿವೃತ್ತಿಯಾದ ಮೇಲೆ ಖಾಸಗಿಯಾಗಿ ಪಶುವೈದ್ಯಕೀಯವನ್ನೇನು ಮುಂದುವರಿಸಲಿಲ್ಲ. (ಊರಿನ ತರುಣ ವೈದ್ಯರಿಗೆ "ಇವನೊಬ್ಬ ವಕ್ಕರಿಸಿದ" ಎಂದು ಅನ್ನಿಸದ ಎಚ್ಚರವಿದ್ದಿರಬೇಕು!) ಆದರೆ ಮೊದಲಿನಿಂದಲೂ ತನ್ನ ಸಂಪರ್ಕಕ್ಕೆ ಬಂದವರಲ್ಲೂ ತನಗೆ ಅವಕಾಶ ಒದಗಿದಲ್ಲೂ ನಡೆಸುತ್ತಿದ್ದ ಉಚಿತ ಜ್ಞಾನಪ್ರಸಾರದ ಕೆಲಸವನ್ನು ಹೆಚ್ಚೇ ಮಾಡುತ್ತಬಂದರು. (ಊರಿನ ಕನ್ನಡ ಮಾಧ್ಯಮ ಮಕ್ಕಳಿಗೆ ಇವರು ಕ್ರಮಬದ್ಧವಾಗಿ ಉಚಿತ ಇಂಗ್ಲಿಷ್ ಪಾಠ ಮಾಡುತ್ತಿದ್ದದ್ದು ಕೇಳಿದ್ದೇನೆ!) 

ಇಂದು ಬೆಳಿಗ್ಗೆ ರಾಘವೇಂದ್ರ ಉರಾಳರ ಊರಿನವರೂ ಅಭಿಮಾನಿಯೂ ಆದ ಇನ್ನೊಬ್ಬ ಪಶುವೈದ್ಯ ಮಿತ್ರ ಮನೋಹರ ಉಪಾಧ್ಯರು ಫೋನಿಸಿ, ನನಗೆ ಶೋಕಸಮಾಚಾರವನ್ನು ಮುಟ್ಟಿಸಿದರು. ಪ್ರಾಯದ ಏರಿಕೆಯೊಡನೆ ಉಬ್ಬಸದ ಅಬ್ಬರವೂ ದೃಷ್ಟಿಯ ಸಂಕಟವೂ ರಾಘವೇಂದ್ರ ಉರಾಳರನ್ನು ಬಹುತೇಕ ಅವರದೇ ಮನೆಗೆ ನಿರ್ಬಂಧಿಸಿಬಿಟ್ಟಿತ್ತು. ಮಂಗಳೂರಿನಲ್ಲಿ ಅವರೊಬ್ಬ ಮಗಳು, ಅವಳ ಕುಟುಂಬದ ಇಚ್ಛಾನುಸಾರ ಹೊಸಮನೆ ಪ್ರವೇಶಕ್ಕೆ ವೈದಿಕ ಕಲಾಪಗಳನ್ನಿಟ್ಟುಕೊಂಡಿದ್ದಳು. ಪೂಜೆ ಪುನಸ್ಕಾರಗಳಲ್ಲಿ ಉರಾಳರಿಗೇನೂ ಆಸಕ್ತಿಯಿರಲಿಲ್ಲ. ಅದನ್ನವರು ನಿಸ್ಸಂದಿಗ್ದವಾಗಿ ಎಲ್ಲರಲ್ಲೂ ಹೇಳುತ್ತಿದ್ದರು. ಆದರೆ ಅದು ತನ್ನದೇ ಕುಟುಂಬದ ಇತರರೂ ಸೇರಿದಂತೆ ಯಾರಿಗೂ ಭಾರವಾಗದಂತೆ ನೋಡಿಕೊಳ್ಳುವ ವಿಚಾರಸ್ಪಷ್ಟತೆ ಉರಾಳರಿಗಿತ್ತು. ಅಂದು ನಾನು ಹೊಸಮನೆ ಊಟಕ್ಕೆ ಹೋಗಿದ್ದೆ. ಆಗ ಮಗಳು, "ಅಪ್ಪ ಬೆಳಿಗ್ಗೆಯೇ ಕೋಟಕ್ಕೆ ವಾಪಾಸು ಹೋದರು" ಎಂದು ಸುದ್ಧಿ ಮುಟ್ಟಿಸಿದಳು. ಮಗಳೂ ಸೇರಿದಂತೆ ಕುಟುಂಬದವರ ಪ್ರೀತಿಗೆ ಕೊರತೆಯಾಗದಂತೆ ಅವರು ಹಿಂದಿನವೇ ಬಂದಿದ್ದರು. ಆದರೆ ಉಬ್ಬಸದ ಕಾರಣ ಹೋಮದೂಮ ಅವರಿಗೆ ಒಗ್ಗದಿರುವುದರಿಂದ ಬೆಳಿಗ್ಗೆ ವಾಪಾಸು ಹೋಗಿದ್ದರು. ಅವರನ್ನು ತಿಳಿದ ಯಾರೂ ತಪ್ಪು ತಿಳಿಯಲಿಲ್ಲ. 

ಈಚಿನ ಕೆಲವು ವರ್ಷಗಳಲ್ಲಿ ಮನೆಯಲ್ಲೇ ಆಮ್ಲಜನಕದ ಅಂಡೆಯನ್ನಿಟ್ಟುಕೊಂಡು, ಆಗೀಗ ಬಳಸಿಕೊಂಡು, ಸ್ವಂತ ಮನೆಯ ಉಪ್ಪರಿಗೆಗೂ ಏರದ ಸ್ಥಿತಿಯಲ್ಲಿದ್ದುಕೊಂಡೇ ಉರಾಳರು ದಿನ ಕಳೆಯುವಂತಾದದ್ದು ಎಲ್ಲರನ್ನೂ ಚಿಂತೆಗೀಡುಮಾಡಿತ್ತು. ಸ್ವತಃ ಜೀವಗಳ ಆರೋಗ್ಯಪಾಲನಾ ಅನುಭವಿಯಾಗಿ, ಅವರು ಒಮ್ಮೆ ನನ್ನಲ್ಲಿ ನಗುನಗುತ್ತಲೇ ಹೇಳಿದ್ದಿತ್ತು "ಇದು ಗುಣವಿಲ್ಲದ, ಸುಧಾರಿಸಿಕೊಂಡೇ ಕೊನೆಗಾಣಬೇಕಾದ ಸಂಗಾತಿ," ಇಂದು ಸಂಜೆ ಸಾಲಿಗ್ರಾಮದ ಗೆಳೆಯ ವೆಂಕಟ್ರಮಣ ಉಪಾಧ್ಯರೂ ಶೋಕ ಸಮಾಚಾರ ಹಂಚಿಕೊಳ್ಳಲು ನನಗೆ ಚರವಾಣಿಸಿದ್ದರು. ಆಗ ಅವರು "ಪ್ರಾಣೋತ್ಕ್ರಮಣದ ಸಂಕಟದ ಕೊನೆಯಲ್ಲೂ  ಯಾರಾದರೂ ‘ಆಸ್ಪತ್ರೆಗೊಯ್ಯಿರಿ, ಏನಾದರೂ ಮಾಡಿ’ ಎನ್ನುವಲ್ಲೂ ವೈಚಾರಿಕತೆಯನ್ನು ಕಳೆದುಕೊಳ್ಳದ ಉರಾಳರ ಮನೋಬಲ ಅಸಾಧಾರಣ" ಎಂದು ಹೇಳಿದ್ದನ್ನು ನಾನಾದರೂ ಅನುಮೋದಿಸುವುದಷ್ಟೇ ಉಳಿಯಿತು. ಡಾ| ಕೆ. ರಾಘವೇಂದ್ರ ಉರಾಳರು ಮನೆಯಲ್ಲೇ ‘ಸುಧಾರಿಕೆ’ಯನ್ನು ಮುಗಿಸಿದರು, ಇನ್ನಿಲ್ಲವಾದರು.

7 comments:

  1. Only you my brother can put a condition "‘ಮೃತರ ಆತ್ಮಕ್ಕೆ ಶಾಂತಿ ಕೋರುವ’ ಸಂದೇಶಗಳನ್ನು ಅಲ್ಲ" I do it too :) it is in our genes :). I will read this posting later and comment in Kannada. The only thing I recall is, he teaching you to drive ...

    ReplyDelete
  2. ಹುಡುಗನಾಗಿದ್ದಾಗ ಮಾತ್ರ ಅವರನ್ನು ಬಲ್ಲ ನನಗೆ ಅವರು ವೈಚಾರಿಕರಾಗಿದ್ದಂತೆಯೇ ತುಂಬ ಸ್ನೇಹಶೀಲರು ಹೌದು, ಬಹುಶಃ ಕಟುವಾದ ಧೋರಣೆ ಮತ್ತು ಮಾತು ಇರಲಿಲ್ಲ ಅಂತ ನೆನಪು. ಅವರೊಂದಿಗೆ ಧರ್ಮಸ್ಥಳದ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಬಳಿಕ ಕಾಲೇಜು ಓದುತ್ತಿದ್ದಾಗ, 83-84, ಸೇವಿಂಗ್ಸ್ & ಡೆಪೊಸಿಟ್ ಸರ್ವೆ ನೆಪದಲ್ಲಿ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದೆ. ಅದೇ ಕೊನೆ, ಆಮೇಲೆ ಭೇಟಿಯಾಗಲಿಲ್ಲ.

    ಆದರೇನು ಬಿವಿ ಕಾರಂತರ ಬಳಗ ಸತ್ತವರ ನೆರಳು ನಾಟಕಕ್ಕೆ ಹಾಡಿದ ಪುರಂದರದಾಸರ ಹಾಡುಗಳ ಗಾನದೋಸೆ ಮುದ್ರಿಸಿಕೊಳ್ಳಲು ಕೊಟ್ಟು ಸದಾ ನೆನಪಿನಲ್ಲಿ ಇದ್ದಾರೆ. ಆ ಹಾಡುಗಳು ನನ್ನಿಂದ ನನ್ನ ಅನೇಕ ಗೆಳೆಯರಿಗೂ ಪ್ರಸಾರ ಆಗಿದೆ.
    ಉರಾಳರಿಗೆ ಆತ್ಮೀಯ ಶ್ರಧ್ಧಾಂಜಲಿ

    ReplyDelete
  3. Let me have that sprit ...that you people had your younger days...

    ReplyDelete
  4. ಡಾ.ಉರಾಳರ ಪರಿಚಯವಾದದ್ದು ನಿಮ್ಮ ಹಾಗೂ ನಿಮ್ಮ ಲೇಖನಗಳಿಂದಲೇ. ಅವರು ನಮ್ಮನು ಬಿಟ್ಟು ತೆರಳಿದ್ದು ಕೇಳಿ ಬೇಸರವಾಯಿತು. ಅವರ ನೆನಪು ಸದಾ ಉಳಿಯಲಿ.

    ReplyDelete
  5. ಬದುಕಿನಲ್ಲಿ ಎಂದೂ ನೋಡಿರದ, ಕೇಳಿರದ , ಇದ್ದದ್ದು ಗೊತ್ತೇ ಇರದವರೊಬ್ಬರು ಇನ್ನಿಲ್ಲವಾದ ಸುದ್ದಿ ಗೊತ್ತಾದಾಗ ಏನು ಅನ್ನಿಸಬೇಕು? ಬಹುಷಃ ಏನೂ ಅನ್ನಿಸುವುದಿಲ್ಲ.
    ನಮಗೆ ಬೇಕಾದವರಿಗೆ ಬೇಕಾದವರು ಜೀವನ ಯಾತ್ರೆ ಮುಗಿಸಿದರು ಎಂದಾಗ, ಅವರ ಬಗ್ಗೆ ಒಂದು ಕುತೂಹಲ ಮೂಡಿ ಸ್ಮರಣ ಬರಹವನ್ನು ಓದಿಸಿಕೊಂಡು ಹೋಯಿತು. ಉರಾಳರ ಬಗ್ಗೆ ಒಂದು ಗೌರವ ಭಾವ ಮೂಡಿದ್ದು ಸತ್ಯ.
    ಅವರೊಡನೆ ಕಳೆದ ಒಡನಾಟದ ಬಗ್ಗೆ ಓದಿದಾಗ, ನಾನು ಗೌರವಿಸುವ ಇನ್ನಾರೊ ಆತ್ಮೀಯರ ಸ್ವಭಾವದ ಹೋಲಿಕೆ ಮೂಡಿ ಒಂದು ರೀತಿಯ ಅಗಲಿಕೆಯ ಭಾವ ಮೂಡಿತು. ಇಲ್ಲಿ ವ್ಯಕ್ತವಾದದ್ದು ಉರಾಳರ ಜೀವನ್ಮುಖಿ ಜೀವನೋತ್ಸಾಹ.

    ReplyDelete
  6. ಪ್ರಿಯ ಶ್ರೀ ಅಶೋಕವರ್ಧನರಿಗೆ ನಮಸ್ಕಾರಗಳು.
    ಪ್ರೀತಿಯ ಗೆಳೆಯರಾದ ಡಾ. ರಾಘವೇಂದ್ರ ಉರಾಳ ಅವರು ನಿಧನರಾದ ಸುದ್ದಿ ತಿಳಿದು ಆಘಾತವಾಯಿತು. ಉಷಾ ಸುಕನ್ಯಾ ಸುರೇಖಾ ಸುಬ್ರಹ್ಮಣ್ಯ ಅತ್ತಿಗೆ ಅವರಿಗೆ ಸಂತಾಪಗಳು. ನಾನು ಅವರನ್ನು ಮತ್ತೊಮ್ಮೆ ಭೇಟಿಯಾಗುವ ಅಸೆ ಹಾಗೆಯೇ ಉಳಿಯಿತು. ನಾನು ನಿಮ್ಮ ದುಃಖದಲ್ಲಿ ಭಾಗಿ.
    ನಾನು ೭೦ರ ದಶಕದಲ್ಲಿ ಮಂಗಳೂರಿನಲ್ಲಿದ್ದಾಗ ಆಶೋಕವರ್ಧನೆ ಪುಸ್ತಕದ ಅಂಗಡಿ ನಮ್ಮ ಸ್ನೇಹಿತರ ಕೇಂದ್ರ ಕಛೇರಿಯಾಗಿತ್ತು. ರಾತ್ರಿ ಅಶೋಕರು ಅಂಗಡಿ ಮುಚ್ಚಿದ ಮೇಲೆ ರಾತ್ರಿ ಊಟಕ್ಕೆ ಹೋಟೆಲುಗಳಿಗೆ ಹೋಗುತ್ತಿದ್ದೆವು. ಡಾ.ಉರಾಳರ ಕಾರು ನಮ್ಮ ವಾಹನ. ಆಗ ಉಡ್‌ಸೈಡ್ ಹೋಟೆಲಿನ ಮಾಣಿ ಒಬ್ಬ ಉರಾಳರ ಕೇಶ, ಅಶೋಕರ ಮೀಸೆ , ನನ್ನ ಗಡ್ಡ ಗಳನ್ನು ಅಭಿನಯಪೂರ್ವಕವಾಗಿ ಸೂಚಿಸುತ್ತಿದ್ದ! ಅಮಾವಾಸ್ಯೆ ಹುಣ್ಣಿಮೆ ರಾತ್ರಿಗಳಂದು ಊಟವಾದ ಮೇಲೆ ಉರಾಳರು ನಮ್ಮನ್ನು ನ್ಯೂ ಚಿತ್ರಾ ಸಿನಿಮಾ, ಸಮುದ್ರದ ತೀರಗಳಿಗೆ ಕರೆದೊಯ್ಯುತ್ತಿದ್ದರು. ಸಮಾನ ಓದಿನ ವ್ಯಸನಿಗಳಾದ ನಮಗೆ ಮಾತನಾಡಲು ವಿಷಯಗಳ ಕೊರತೆ ಇರಲಿಲ್ಲ. ರಾತ್ರಿ ಆಕಾಶದಲ್ಲಿ ನಕ್ಷತ್ರ ಪುಂಜಗಳನ್ನು ಗುರುತಿಸುತ್ತ
    ಕಾರಂತರು, ಯಕ್ಷಗಾನ, ಹರಟೆಹೊಡೆಯುತ್ತಿದ್ದೆವು. ಸಮುದ್ರದ ತೆರೆಗಳು ದಡಕ್ಜೆ ಅಪ್ಪಳಿಸುವ ಸ್ಪರ್ಧೆಗೆ ತೀರ್ಪುಗಾರರಾಗುತ್ತಿದ್ದೆವು.
    ಅಶೋಕವರ್ಧನರು ಆರಂಭಿಸಿದ ಆರೋಹಣ ಪರ್ವತಾರೋಹಿಗಳು ಸಾಹಸಿಗಳು ತಂಡದ ಹಲವು ರಾತ್ರಿ ಆರೋಹಣಗಳಲ್ಲಿ ಉರಾಳರು ನಮ್ಮೊಟ್ಟಿಗೆ ಇದ್ದರು.
    ಡಾ.ಉರಾಳರ ಬಳಿ ಇದ್ದ ಕಾರಂತರ ಭೀಷ್ಮ ವಿಜಯ ಎಲ್ ಪಿ ತಟ್ಟೆಯಿಂದ ನಾನು ಆಗತಾನೇ ಬಂದ ಕ್ಯಾಸೆಟ್ಟಿಗೆ ಪ್ರತಿಮಾಡಿಕೊಂಡಿದ್ದೆ. ಉರಾಳರ ಊರು ಗಿಳಿಯಾರಿಗೆ ಕೆಲವು ಬಾರಿ ಹೋಗಿದ್ದೆ. ಹಾರಾಡಿ ಕೃಷ್ಣ, ಕೋಟ ವೈಕುಂಠ, ಯಕ್ಷರಂಗದ ರಾಜಕುಮಾರ ಚಿಟ್ಟಾಣಿ, ಉಪ್ಪೂರು ಭಾಗವತರ ಸುಧನ್ವಾರ್ಜುನ ಕಾಳಗ ಗಿಳಿಯಾರಿನಲ್ಲಿ ನೋಡಿದ ನೆನಪು ಚಿರವಾಗಿದೆ. ಉರಾಳರ ಶ್ರೀಮತಿ, ಮಕ್ಕಳು ಅತ್ತಿಗೆ ಅವರ ಪ್ರೀತಿಯ ನೆನಪು ಹಸಿರಾಗಿದೆ. ಡಾ.ಉರಾಳರ ಅಗಲಿಕೆಯ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ನಾನು ಮೈಸೂರಿಗೆ ಹಿಂದಿರುಗಿದ ಮೇಲೆ ೧೯೮೫ರಲ್ಲಿ ಒಬ್ಬನೇ ಬುಲೆಟ್ ಮೋಟರ್ ಬೈಕಿನಲ್ಲಿ ಕರ್ನಾಟಕ ಪ್ರದಕ್ಷಿಣೆ ಹಾಕಿದ್ದೆ. ಆಗ ಮಡಿಕೇರಿ ಮಂಗಳೂರಿಗಾಗಿ ಗಿಳಿಯಾರಿನಲ್ಲಿದ್ದ ಡಾ.ಉರಾಳರ ಮನೆಗೂ ಹೋಗಿದ್ದೆ.
    ಡಾ.ಉರಾಳರೊಂದಿಗೆ ಕಳೆದ ಮಂಗಳೂರಿನ ದಿನಗಳು ನನ್ನ ಪಾಲಿಗೆ ಅಮೂಲ್ಯ ನೆನಪಾಗಿವೆ.
    ಮಂಗಳಗಂಗೋತ್ರಿಯಿಂದ ಸಂಜೆ ಬರುತ್ತಿದ್ದ ಕಡೆಯ ಬಸ್ ನಲ್ಲಿ ಮಂಗಳೂರಿಗೆ ಬಂದು ಜ್ಯೋತಿ ವೃತ್ತದಲ್ಲಿದ್ದ ಅಶೋಕರ ಅಂಗಡಿಯಲ್ಲಿ ಸೇರಿದ್ದ ಸ್ನೇಹಿತರೊಟ್ಟಿಗೆ ಊಟಕ್ಕೆ ಹೋಗುತ್ತಿದ್ದೆ. ಒಮ್ಮೆ ಸೂರ್ಯಾಸ್ತವಾದ ಮೇಲಿನ ಆಕಾಶದ ವರ್ಣವೈಬವಕ್ಕೆ ಮರುಳಾಗಿ ಆಕಾಶ ನೊಡುತ್ತ ಬಸ್ ಬರುವವರೆಗೆ ಬಯಲಿನಲ್ಲಿ ಸುತ್ತಾಡುತ್ತಿದ್ದಾಗ ನಾಗರಹಾವಿನ ಸಮೀಪ ಹೋಗಿ ಅದರ ಕರುಣೆಗೆ ಪಾತ್ರನಾಗಿ ಬಂದಿದ್ದೆ. ಅದನ್ನು ಸ್ನೇಹಿತರಿಗೆ ವಿವರಿಸುತ್ತಿದ್ದಾಗ ಡಾ. ಉರಾಳರು ನನ್ನ ಪ್ರತಿ ಮಾತಿಗೂ ಛೇ, ಛೇ, ಎಂಥ ಅನ್ಯಾಯವಾಯಿತು, ಎಂಥ ಛಾನ್ಸ್ ನಮಗೆ ತಪ್ಪಿಹೋಯಿತು ಎನ್ನುತ್ತಿದ್ದರು. ನಾನು, ಇಲ್ಲ, ಅಪಾಯವೇನೂ ಅಗಲಿಲ್ಲ ಎಂದು ವಿವರಣೆ ಕೊಟ್ಟಾಗ, ಎಅ.ಉರಾಳರು ಅದೇ ನಮಗೆ ತಪ್ಪಿಹೋಡ ಛಾನ್ಸ್! ನಾವು ನಿಮಗೆ ಭವ್ಯ ಶ್ರದ್ಧಾಂಜಲಿ ಭಾಷಣ ಮಾಡುವ ನಿಮ್ಮನ್ನು ಹಾಡಿಹೊಗಳುವ ಸುವರ್ಣಾವಕಾಶ ತಪ್ಪಿಹೋಯಿತಲ್ಲಾ! ಎಂದು ವಿಷಾದ ವ್ಯಕ್ತಪಡಿಸಿದ್ದರು. ಅವರ ಹಾಸ್ಯಪ್ರಜ್ಞೆಯನ್ನು ನೆನೆಯುತ್ತಾ ಅವರ ಅಗಲಿಕೆಗೆ ನಿಜವಾದ ವಿಷಾದದ ಶ್ರದ್ಧಾಂಜಲಿ ಸಲ್ಲಿಸುತ್ತೇನೆ.

    ReplyDelete
  7. It is a strange feeling. As I read, I have a feeling akin to regret. I somehow missed being part of this intimate and adventurous group of friends too (close by at Mulki)--for as long as 12 years--just out of sight, perhaps within hearing!

    ReplyDelete