(ಮರಣೋತ್ತರ
ನುಡಿನಮನಗಳು ೩)
(ಬಾಗಲೋಡಿ
ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ
ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೧೮)
-
ಎಲ್.ಎಸ್. ಶೇಷಗಿರಿರಾವ್
ಆಧುನಿಕ ಕನ್ನಡ ಸಣ್ಣ ಕತೆಗಳ ಲೋಕದಲ್ಲಿ
‘ಅನನ್ಯ’ ಎನ್ನಿಸಿಕೊಳ್ಳುವ ಕಥೆಗಾರರು ಬಾಗಲೋಡಿ ದೇವರಾಯರು. ಬಾಗಲೋಡಿಯವರು ವ್ಯಂಗ್ಯವನ್ನು ಶಕ್ತವಾಗಿ
ಬಳಸಿದರು. ಬಲುಮಟ್ಟಿಗೆ ಅವರ ಸಾಹಿತ್ಯಕ್ಕೆ ಬಣ್ಣವನ್ನು ಕೊಟ್ಟಿದ್ದು ವ್ಯಂಗ್ಯ ಎನ್ನುವ ಮಾತು ಪರಿಚಿತವಾದದ್ದು.
ಆದರೆ ಅವರ ವಿಶಿಷ್ಟ ರೀತಿಯಲ್ಲಿ ವ್ಯಂಗ್ಯವನ್ನು ಬಳಸಿದ್ದನ್ನು ಕನ್ನಡ ಕಥಾಸಾಹಿತ್ಯದಲ್ಲಿ ಕಾಣಲಾರೆವು.
ರಷ್ಯದ ದೊಯಸ್ತವಿಸ್ಕಿ, ಟಾಲ್ ಸ್ಟಾಯ್ ಇಂಥವರ ಕಥಾಸಾಹಿತ್ಯದಲ್ಲಿ ಕಾಣುವ ವ್ಯಂಗ್ಯ ಇದು. ಈ ವ್ಯಂಗ್ಯ
ಬದುಕಿನ ವಿಶಿಷ್ಟ ದರ್ಶನದಿಂದ ಮೂಡಿದ್ದು. ಆ ದರ್ಶನ ಪ್ರಕಟವಾಗುವ ರೀತಿಗೆ ಅನಿವಾರ್ಯವಾದದ್ದು. ಬದುಕಿನ
ಸಂಕೀರ್ಣವಾದ ಅನುಭವವನ್ನು ಹಿಡಿದಿಡಲು ಸಾಹಿತ್ಯ ಸೃಷ್ಟಿಸಿರುವ ಸಾಧನಗಳಲ್ಲಿ ಒಂದು ವ್ಯಂಗ್ಯ. ಒಂದು
ಸನ್ನಿವೇಶದಲ್ಲಿ ಇರಬೇಕಾದ ಸ್ಥಿತಿಗಿಂತ ವಾಸ್ತವತೆ ಭಿನ್ನವಾಗಿದ್ದು, ಭಿನ್ನತೆ ಆಕ್ಷೇಪಾರ್ಹ ವಾದ
ಎಂದು ಕಂಡಾಗ ವ್ಯಂಗ್ಯ ಮೂಡುತ್ತದೆ; ನೇರವಾಗಿ ರೂಪ ತಾಳುತ್ತಿರುವ ನಿರೂಪಣೆಗಿಂತ ವಾಸ್ತವ ಭಿನ್ನ ಎಂಬುದು
ಹಲವು ರೀತಿಗಳಲ್ಲಿ - ಧ್ವನಿಯಿಂದ, ಧಾಟಿಯಿಂದ ಇತ್ಯಾದಿ ಪ್ರಕಟವಾಗುತ್ತದೆ. ಒಂದು ನಿರ್ದಿಷ್ಟ ಸಂದರ್ಭದಲ್ಲಿ
ಇರಬೇಕಾದ ಸ್ಥಿತಿಯ ಕಲ್ಪನೆ ಬರೆಯುವವನಿಗೂ ಓದುವವನಿಗೂ ಸಾಮಾನ್ಯವಾಗಿದ್ದಾಗ ಬರೆಯುವವನ ಕಾರ್ಯ ಸುಲಭವಾಗುತ್ತದೆ.
ಉದಾಹರಣೆಗೆ, ಕೈಲಾಸಂ ಅವರ ಟೊಳ್ಳುಗಟ್ಟಿಯಲ್ಲಿ ಮಕ್ಕಳ ಸ್ಕೂಲ್ ಮನೇಲಿ ಎನ್ನುವುದು ಇಬ್ಬರೂ ಸ್ವೀಕರಿಸುವ
ವಾಸ್ತವವಾದ್ದರಿಂದ ನಾಟಕಕಾರ ತನ್ನ ಮನಸ್ಸಿನಲ್ಲಿರುವ ಸ್ಥಿತಿಯನ್ನು ಸೂಚಿಸುವ, ಪರೀಕ್ಷವಾಗಿ ಚಿತ್ರಿಸುವ
ಅಗತ್ಯವಿರುವುದಿಲ್ಲ. ಹಾಗೆಯೇ ಸಮಾಜದ ಒಂದು ನಿರ್ದಿಷ್ಟ ದೋಷ, ಉದಾಹರಣೆಗೆ, ಅಸ್ಪೃಶ್ಯತೆ, ವ್ಯಂಗ್ಯದ
ಗುರಿಯಾದಾಗ, ಬರೆಯುವವನು ಮತ್ತು ಓದುವವನು ಆಗಲೇ ಒಂದು ನಿಲುವನ್ನು ತಳೆದಿರುವುದರಿಂದ ವ್ಯಂಗ್ಯ ಪರಿಣಾಮವನ್ನು
ಉಂಟುಮಾಡುವುದು ಸುಲಭವಾಗುತ್ತದೆ. ಆದರೆ ಸಂದರ್ಭ ವಿಶಾಲವಾದಷ್ಟು ಕತೆಗಾರ ವ್ಯಂಗ್ಯದಿಂದ ಪರಿಣಾಮವನ್ನು
ಸಾಧಿಸುವುದು ಕಠಿಣವಾಗುತ್ತದೆ. ಬಾಗಲೋಡಿ ದೇವರಾಯರ ಅಸಾಧಾರಣ ಸಾಧನೆ ಬದುಕನ್ನೇ ಹಲವು ಕತೆಗಳಲ್ಲಿ
ಸಂದರ್ಭವಾಗಿ ಸ್ವೀಕರಿಸಿ, ತಮ್ಮ ವಿಶಿಷ್ಟ ದರ್ಶನವನ್ನು ನಿರೂಪಿಸಹೊರಟು ಯಶಸ್ವಿಯಾಗುವುದು. ನನ್ನ
ಅಭಿಪ್ರಾಯದಲ್ಲಿ, ಅವರ ಸಾಧನೆ ಆಶ್ಚರ್ಯವನ್ನುಂಟು ಮಾಡುವುದಕ್ಕೆ ಕಾರಣ, ಅವರು ತಮ್ಮ ಪ್ರಾರಂಭದ ಕತೆಗಳಲ್ಲಿಯೇ
ಇದನ್ನು ಸಾಧಿಸಿದರು ಎನ್ನುವುದು.
ಅವರ ಪ್ರಾರಂಭದ ಕತೆಗಳಲ್ಲಿ ಒಂದಾದ ಹುಚ್ಚು ಮುನಸೀಫರ ಚರಿತ್ರೆಯನ್ನು ವಿಶ್ಲೇಷಿಸುವುದು ಕುತೂಹಲದ ಅನುಭವ. ಈ ಕತೆ ಸುಮಾರು ೧೯೪೮ರಲ್ಲಿ, ಮಾಸ್ತಿಯವರು ಸಂಪಾದಕರಾಗಿದ್ದ ಜೀವನ ಮಾಸ ಪತ್ರಿಕೆಯಲ್ಲಿ ಪ್ರಕಟವಾಯಿತು. ಆಗ ದೇವರಾಯರಿಗೆ ಇಪ್ಪತ್ತೊಂದು ವರ್ಷ. (ಮರುವರ್ಷ ಮಾಸ್ತಿಯವರೇ ಅವರ ಹುಚ್ಚು ಮುನಸೀಫ ಮತ್ತು ಇತರ ಕತೆಗಳು ಸಂಗ್ರಹವನ್ನು ಪ್ರಕಟಿಸಿದರು. ಮಾಸ್ತಿಯವರು ಗುರುತಿಸಿ ಪ್ರೋತ್ಸಾಹಿಸಿದ ಯುವ ಪ್ರತಿಭೆಗಳಲ್ಲಿ ದೇವರಾಯರೂ ಒಬ್ಬರು.)
ಈ ಕತೆಗಳಲ್ಲಿ ಕಥಾವಸ್ತು ಎನ್ನುವುದು
ಇಲ್ಲವೇ ಇಲ್ಲ ಎನ್ನಬಹುದು. ತುಂಬ ಆಸಕ್ತಿಯನ್ನುಂಟುಮಾಡುವ ಘಟನೆಗಳೂ ಸನ್ನಿವೇಶಗಳು ಇಲ್ಲ. ‘ಹುಚ್ಚ
ಮುನಸೀಫ’ ಎಂದೇ ಅವರಿಗೆ ಪರಿಚಿತರಾಗಿದ್ದ ಈತನ ನಿಜವಾದ ಹೆಸರು ಸುಂದರಪ್ಪ. ಪಳಗಿದ, ಕುತಂತ್ರದಲ್ಲೇ
ಹಣ್ಣಾದ ವಕೀಲರಿಗೂ ಈತ ಒಂದು ಒಗಟೇ ಆಗಿದ್ದ. "ಕಣ್ಣು ತೆರೆದೇ ಇದ್ದರೂ ಕಣ್ಣು ಮುಚ್ಚಿಯೇ ಇದ್ದಂತೆ,
ತನ್ನ ದೊಡ್ಡ ದೊಡ್ಡ ಬೊಗಸೆಗಣ್ಣುಗಳನ್ನು ಅಗಲವಾಗಿ ಹಣೆಯೆಲ್ಲ ತುಂಬಿ ಹೋಗುವಂತೆ ತೆರೆದು ಸಾಕ್ಷಿಗಳು,
ಸಾಕ್ಷಿಪೆಟ್ಟಿಗೆ, ಕೋರ್ಟು, ಪೇದೆ, ವಕೀಲರು ಇವರನ್ನೆಲ್ಲ ದಾಟಿ, ನುಂಗಿ, ಆವರಿಸಿ ನೋಡುತ್ತಿದ್ದ."
ಕತೆಯ ಪ್ರಾರಂಭದಲ್ಲಿ ಯಾರಿಗೂ ಅರ್ಥವಾಗದ ಈತನ ರೀತಿಯ ನಿರೂಪಣೆ. ಅನಂತರ, ಈತನಿಗೆ ‘ಹುಚ್ಚ’ ಎಂದು
ಬಿರುದನ್ನು ತಂದುಕೊಟ್ಟ ಕೇಸಿನ ಕತೆ, ಹೀಗೆ ಈ ‘ನಾಯಕ’ನನ್ನು ಕತೆ ಬೇರೆ ಬೇರೆ ಸಂದರ್ಭಗಳಲ್ಲಿ ತೋರಿಸುತ್ತದೆ.
ಅನಂತರ ಈತನ ಪೂರ್ವವೃತ್ತ, ಕಷ್ಟದ ಕಾಲದಲ್ಲಿ ಎರಡು ಹಸುಗಳನ್ನು ಮಾರಲು ಬಂದ ಸಂಸಾರದ ಹುಡುಗ ಬಸವನನ್ನು
ಪುಣ್ಯವಂತರ ಮನೆಯವರು ಕೊಂಡುಕೊಂಡು ‘ಸುಂದರಪ್ಪ’ನನ್ನಾಗಿ ಮಾಡಿದರು. ಹುಡುಗ ಮಾತ್ರ ಬಸಪ್ಪನಾಗಿಯೇ
ಇರಲು ಬಯಸಿದಂತೆ ಕಂಡಿತು. ಹಸುಗಳು ಕರೆದುವೆಂದು ಮನೆ ಬಿಟ್ಟು ಓಡಿದ್ದ ಒಮ್ಮೆ. ಶಾಲೆಯಲ್ಲಿ ಸೋಮಾರಿ
ಅಯೋಗ್ಯ ಎನ್ನಿಸಿಕೊಳ್ಳುತ್ತಿದ್ದ. ಶಾಲೆಗೆ ಹೊರಟವನು ದನಗಳ ಕೊರಳ ಗಂಟೆಯಿಂದ ಮಂತ್ರಬದ್ಧನಾದಂತೆ ಅವುಗಳ
ಹಿಂದೆ ನಡೆಯುತ್ತಿದ್ದ. ಮದುವೆಯಾದ ಮೇಲೆ ಎಂಟು ಹತ್ತು ಒಳ್ಳೇ ಜಾತಿಯ ದನಗಳನ್ನು ತಂದು ಹಟ್ಟಿ ತುಂಬಿಸಿದ.
ಎಷ್ಟೋ ಹೊತ್ತನ್ನು ಅವುಗಳ ಜೊತೆಗೇ ಕಳೆಯುವನು. ಅವುಗಳೊಡನೆ ಮಾತನಾಡುವನು. ಕಾಯಿಲೆಯಲ್ಲಿ ಮೈಮರೆತಾಗಲೂ
ತನ್ನ ಬಾಲ್ಯದಲ್ಲಿದ್ದ. ಓಡುತ್ತ ನೆಗೆಯುತ್ತ ಹಾಡುತ್ತ ಕುಣಿಯುವ ದನಗಳು, ಅರೆಬತ್ತಲೆ ಹುಡುಗರ ಸಖ್ಯದ
ದಿನಗಳೇ. ಮೃತ್ಯು ಪತ್ರಕ್ಕೆ ಅವನು ಸಹಿ ಹಾಕುತ್ತಾನೆಯೋ ಇಲ್ಲವೋ ಎಂದು ಹೆಂಡತಿಯ ಆತಂಕ, ದುಃಖ.
ಈ ಕತೆಗೆ ನಾನು ಇಷ್ಟು ಪ್ರಾಧಾನ್ಯ
ನೀಡುವುದು ದೇವರಾಯರ ಕಥಾಸಾಹಿತ್ಯದ ಪ್ರತಿನಿಧಿಗಳಲ್ಲಿ ಇದು ಒಂದು ಎನ್ನುವ ಕಾರಣಕ್ಕಾಗಿ. ಕತೆಯುದ್ದಕ್ಕೂ
ಎರಡು ಬಗೆಯ ಮಾನದಂಡಗಳಿಂದ ಮೌಲ್ಯ ಮಾಪನ ಸಾಗುತ್ತದೆ. ಒಂದು, ವ್ಯಾವಹಾರಿಕ ಜಗತ್ತಿನದು. ಮತ್ತೊಂದು
ಸುಂದರಪ್ಪ(ಬಸವ)ನದು. ವ್ಯಂಗ್ಯ ಈ ಕತೆಯಂತೆ ಸಂಕೇತಗಳನ್ನು ಬಳಸಿಕೊಳ್ಳುವುದು ವಿರಳ. ಮುನಸೀಫನ ಹೆಸರು,
ಹಸುಗಳೊಡನೆ ಅವನ ಒಡನಾಟ, ಅವುಗಳೊಡನೆ ಅವನು ಮಾತನಾಡುವುದು ಎಲ್ಲ ಅವನ ಜಗತ್ತನ್ನು ಸೂಚಿಸುತ್ತವೆ.
ಹಸುವಿನ ಒಡನಾಟದ, ಮುಗ್ಧತೆಯ, ಪ್ರಾಮಾಣಿಕತೆಯ, ನಿಷ್ಠೆಯ ಜಗತ್ತು ಅವನದು. ವ್ಯವಹಾರ ಜಾಣ್ಮೆಯ ಜಗತ್ತಲ್ಲ.
ಅವನು ಈ ವ್ಯವಹಾರ ಕುಶಲರ ಕಣ್ಣಿನಲ್ಲಿ ಹುಚ್ಚ. ಮನುಷ್ಯರ ಸುಳ್ಳು ಸಾಕ್ಷ್ಯ, ಲಂಚಗಳನ್ನು ಬದಿಗೊತ್ತಿ,
ಹಸುಗಳೊಡನೆ ವ್ಯವಹಾರ ಜಗತ್ತು ಕಾಣದ ಸಂಪರ್ಕವನ್ನು ಬೆಳೆಸಿ, ಸತ್ಯವನ್ನು ಹೊರತಂದ ಅವನ ತೀರ್ಪು ಮನುಷ್ಯರ
ಉಚ್ಛನ್ಯಾಯಾಲಯದಲ್ಲಿ ತೀರ ಬೇಕಾಯಿದೆ, ಸಲ್ಲದ್ದು. ಅವನೇ ರಾಜಿನಾಮೆ ಕೊಡಬೇಕಾಗುತ್ತದೆ. ಸಾಯುವ ಕಾಲದಲ್ಲಿ
ಅವನ ನೆನಪಿನಲ್ಲಿ ಉಳಿಯುವುದು ‘ಬಸವ’ ಎನ್ನುವ ಹೆಸರಲ್ಲದೆ ‘ಸುಂದರಪ್ಪ’ ಅಲ್ಲ. ಲೌಕಿಕ ಜಗತ್ತಿಗೆ ನೂರಕ್ಕೆ ನೂರು ಸೇರಿದ ಹೆಂಡತಿಗೆ ಅವನನ್ನು ಅರ್ಥಮಾಡಿಕೊಳ್ಳುವುದು
ಸಾಧ್ಯವಾಗದೆ ಸಂಸಾರ ಒಡೆಯುತ್ತದೆ. ಸಾಯುವಾಗ ಆತ ಹಸು ಬೆಳ್ಳಿಯನ್ನು ಕರೆದರೆ ಹೆಂಡತಿ ಮನೆಯ ಕೆಲಸದ
ಹುಡುಗಿ ಬೆಳ್ಳಿಯನ್ನು ಸ್ಮರಿಸುತ್ತಿದ್ದಾನೆ ಎಂದು ಕೆಂಡಕೆಂಡವಾಗುತ್ತಾಳೆ. ಇಲ್ಲಿ ವ್ಯಂಗ್ಯ ಮೂಡುವುದು
ಯಾವ ಬದುಕು ಶುದ್ಧವೋ ಸಹಜವೋ ಸೃಷ್ಟಿಗೆ ಹತ್ತಿರವೋ ಅದು, ಅಯಾವುದು ವಿವೇಕವೋ ಅದು ‘ಹುಚ್ಚು’ ಎಂದು
ತಿರಸ್ಕೃತವಾಗುವುದರಲ್ಲಿ; ನ್ಯಾಯಾಲಯದಲ್ಲಿ ಈ ಶುದ್ಧ ಕಣ್ಣು ಕಂಡ ಸತ್ಯ ತಿರಸ್ಕೃತವಾಗಿ ಅಸತ್ಯ ಗೆಲ್ಲುವುದು
ಈ ವ್ಯಂಗ್ಯವನ್ನು ಗಾಢಗೊಳಿಸುತ್ತದೆ.
ದೇವರಾಯರ ಹಲವು ಕತೆಗಳು ಬೆಳಗುವುದು
ಲೌಕಿಕ ಜಗತ್ತಿನ ನಿಯಮಗಳನ್ನು ಮೀರಿದ ದಿವ್ಯ ನಿಯಮವನ್ನು: ವ್ಯಂಗ್ಯ ಮೂಡುವುದು ತಾವು ಜಾಣರೆಂದುಕೊಂಡವರ
ಮಿತಿಯಿಂದ. ಮೊದಲನೆಯ ಕತೆಯ ನಾಯಕನನ್ನು ಹುಚ್ಚ ಎಂದು ಕರೆದಿದ್ದರೂ ದೇವರಾಯರ ಕತೆಗಳ ಹುಚ್ಚರೆಲ್ಲ
ವಿವೇಕದಿಂದ ಆಯ್ಕೆ ಮಾಡಿಕೊಂಡ ಜಾಣರು. ‘ಸೆನ್ಸಿಟಿವ್ನೆಸ್’ ಇಲ್ಲದೆ ವ್ಯವಹಾರ ಜಗತ್ತಿನಲ್ಲಿ ರಾರಾಜಿಸುವ
ದಡ್ಡ ಆಯ್ಕೆ ಮಾಡುವವರು. ಲೋಕವ್ಯವಹಾರದ ಜಾಣರು ಯಾವ ಆಯ್ಕೆ ಮಾಡಿಕೊಳ್ಳಬೇಕೆಂದು ಹೇಳಿ ಕೊಟ್ಟರೂ ಕಲಿಯಲು
ನಿರಾಕರಿಸಿ, ವ್ಯವಹಾರ ಜಗತ್ತಿನ ಯಶಸ್ಸನ್ನು ಬದಿಗೊತ್ತಿ ತಮ್ಮ ಬದುಕನ್ನು ಸಫಲಗೊಳಿಸಿದವರು. ಸಕಲ
ಪ್ರಾಣಿಗಳ ಜಗತ್ತಿನ ಭಾಗವಾಗಿ ಹುಟ್ಟಿ, ನಿರ್ಮಲ ಮನಸ್ಸಿನೊಡನೆ ಹುಟ್ಟಿ, ಆ ಎರಡೂ ಭಾಗ್ಯಗಳನ್ನು ಉಳಿಸಿಕೊಂಡ
ಇವರು ಇವೆರಡನ್ನೂ ಮರೆತ ಲೌಕಿಕ ಜಗತ್ತಿನ ಆವರಣ, ಉಪದೇಶಗಳಿಂದ ಭ್ರಷ್ಟರಾಗದೆ, ಮನಸ್ಸನ್ನು ಕೊಳಕು
ಮಾದಿಕೊಳ್ಳದೆ ಉಳಿದವರು. ಲೌಕಿಕ ಜಗತ್ತಿಗೆ ಹಾಸ್ಯಾಸ್ಪದವಾದ, ದೇವರಿಗೆ ಪ್ರಿಯರಾದ ‘ಹುಚ್ಚರು’. ಹುಚ್ಚು
ಮುದುಕಿಯಲ್ಲಿ ಮುದುಕಿ ಎಲ್ಲವನ್ನೂ ಕಳೆದುಕೊಂಡಿದ್ದಾಳೆ. ಉಳಿದಿರುವುದು ಎರಡು ಸೊಗಸಾದ ಆಕಳು. ಅವನ್ನು
ಸಂತೆಗೆ ತಂದಿದ್ದಾಳೆ. ಲೌಕಿಕ ಬಲ್ಲ ವ್ಯವಹಾರ ಜಾಣರಿಗೆ ಅವುಗಳ ಮೇಲೆ ಕಣ್ಣು. ಎಷ್ಟು ಹಣವನ್ನಾದರೂ
ಕೊಡಲು ಸಿದ್ಧ. ಅವಳು ಅವನ್ನು ಮಾರುವುದಿಲ್ಲ ಎನ್ನುತ್ತಾಳೆ. "ಹಾಗಾದರೆ ಸಂತೆಗೇಕೆ ತಂದೆ?"
ಎಂದರೆ, "ಅವುಗಳು ಮನೆಯಲ್ಲೇ ಇರುತ್ತವೆ ಪಾಪ. ಇತರ ಆಕಳನ್ನು ಕರುಗಳನ್ನು ಸ್ವಲ್ಪ ಹೊತ್ತು ನೋಡಿ
ಅವುಗಳ ಜೊತೆಗಿರಲಿ" ಎನ್ನುತ್ತಾಳೆ. ಹೀಗೆ ಹಸುಗಳನ್ನು ಮಾರಿ ಹಣ ಮಾಡಿಕೊಳ್ಳದೆ ಮನುಷ್ಯರಂತೆ
ಪ್ರೀತಿಸಿ ನಡೆಸಿಕೊಳ್ಳುವ ವರ್ತನೆ ಹುಚ್ಚಲ್ಲದ ಮತ್ತೇನು?
ತಾನು ಬದುಕಿನ ಭಾಗವಾಗಿ, ಮನುಷ್ಯ ಸಹಜವಾದ
ಜೀವಪರ ಪ್ರವೃತ್ತಿಗಳಿಗೆ ತನ್ನನ್ನು ತೆರೆದುಕೊಂಡ ಮನುಷ್ಯ ಅರಳುತ್ತಾನೆ, ಬೆಳೆಯುತ್ತಾನೆ. ಇಲ್ಲವಾದರೆ,
ಮನುಷ್ಯನನ್ನು ಅರಳಿಸಿ ಬೆಳೆಸಬೇಕಾದದ್ದು ಅವನನ್ನು ಇನ್ನೂ ಕೆಳಕ್ಕಿಳಿಸುತ್ತವೆ. ಧರ್ಮ ಮನುಷ್ಯನನ್ನು
ಮೃದುಗೊಳಿಸಬೇಕು, ಬದುಕಿಸುವತ್ತ ನಡೆಸಬೇಕು. ಧರ್ಮ ಕಠಿಣ ನಿಯಮಗಳ ಸೆರೆಮನೆಯಷ್ಟೆ ಆಗಿ, ಇಂಗ್ಲಿಷ್
ಭಾಷೆಯ ಮಾತುಗಳನ್ನು ಬಳಸುವುದಾದರೆ selfrighteousness ಮತ್ತು holier than thou ಭಾವನೆಗಳನ್ನು
ಬೆಳೆಸುವ ಶಕ್ತಿಯಾದರೆ ಅದು ಮನುಷ್ಯ ಸ್ವಭಾವವನ್ನು ಹೇಗೆ ಭ್ರಷ್ಟಗೊಳಿಸುತ್ತದೆ ಎನ್ನುವುದನ್ನು ಸಮರ್ಥ
ವ್ಯಂಗ್ಯದೊಡನೆ ಸತ್ಯಮೇವ ಜಯತೆ ಕತೆ ನಿರೂಪಿಸುತ್ತದೆ. ಈ ಕತೆ ಮತ್ತು ಪವಾಡ ಪುರುಷ ಬಾಗಲೋಡಿಯವರ ಅತ್ಯುತ್ತಮ
ಕತೆಗಳಲ್ಲಿ ಸೇರಿವೆ. ವಜ್ರಧರ್ಮ, ಪುಷ್ಪಧರ್ಮರ ವೈದೃಶ್ಯ ವಿವರವಿವರಗಳಲ್ಲಿ ಅರ್ಥವಾಗುತ್ತದೆ. ಗುರುವೇ
ಅವನ ಉಜ್ವಲ ಕಠಿಣಾತಿಕಠಿಣ ಸಾಧನೆಯನ್ನು ಕೈಗೂಡಿಸಿಕೊಂಡ ಶಿಷ್ಯ ವಜ್ರಧರ್ಮ. ಅವನ ಸತ್ಯಪರಾಯಣತೆ ‘ಭಯಾವಹಃ’.
ಪುಷ್ಪಧರ್ಮ ಸಹಜಪ್ರವೃತ್ತಿಗಳನ್ನು ಕಲ್ಲಾಗಿ ಮಾಡದೆ ಋಷಿಯಾಗಿ ಸನ್ಮಾನ ಪಾಲಿಸುವ ಶಿಷ್ಯ, ಕತೆಯ ಮುಕ್ತಾಯದ
ಭಾಗದಲ್ಲಿ ವ್ಯಂಗ್ಯವನ್ನು ಗಂಭೀರ ಮೌಲ್ಯಗಳ ಸ್ಥಾಪನೆಗೆ ಬಳಸಿರುವ ವಿಧಾನವನ್ನೇ ವಿಶ್ಲೇಷಿಸಬಹುದು.
ವಜ್ರಧರ್ಮನ ಸ್ವಭಾವ - ಅವನ ಧರ್ಮದ ಸ್ವರೂಪ ಇವಕ್ಕೆ ಪ್ರಮಾಣಬದ್ಧವಾಗಿ, ಅತ್ಯಂತ ಕಠಿಣ ತೀರ್ಪಿಗನುಗುಣವಾಗಿ
ಅವನಿಗೆ ‘ಸ್ವರ್ಗ ಸುಖ’ ದೊರೆಯುತ್ತದೆ. ಉದ್ದಕ್ಕೂ ಆಡು ಭಾಷೆಗೆ ಸಮೀಪವಾಗಿ ಸಂಭಾಷಣೆಗೆ ಹತ್ತಿರವಾಗಿ
‘ರಿಲ್ಯಾಕ್ಸ್‍ಡ್’ ಆಗಿ ಸಾಗುವ ವೃತ್ತಾಂತ ಇಲ್ಲಿ ಹೊಸ ಶೈಲಿಗೆ ತಿರುಗುತ್ತದೆ. ಈ ಭಾಗ ಪುಷ್ಪಧರ್ಮನನ್ನು
ಯಮಧರ್ಮ ನಡೆಸಿಕೊಳ್ಳುವ ರೀತಿಯ ನಿರೂಪಣೆಯ ಭಾಗ ಇವುಗಳ ಶೈಲಿಗಳ ವಿಭಿನ್ನತೆ ಅರ್ಥವತ್ತಾಗಿದೆ. ಇದಕ್ಕೆ
ವೈದೃಶ್ಯದ ಕತೆ ಪವಾಡ ಪುರುಷ ಮಹಾತ್ಮನೂ ಪೂಜ್ಯಪಾದನೂ ಆದ ಭಿಕ್ಕು ಸರ್ವಾರ್ಥಸಿದ್ಧಿ ರುಗ್ಣಶಯ್ಯೆಯಲ್ಲಿರುವ
ಸಂಗತಿಯಿಂದ ಪ್ರಾರಂಭವಾಗುವ ಕತೆ ನೇರ ನಿರೂಪಣೆ, ಬೇರೆ ದೇಶಗಳಲ್ಲಿ ಬಂದು ವಿಶಾಲವಾದ ಅನುಭವದ ನೆಲೆಯಿಂದ
ಪಕ್ಷಪಾತರಹಿತರಾಗಿ ತೀರ್ಪು ನೀಡುವ ವಿದೇಶೀ ಯಾತ್ರಿಕರ ದಾಖಲೆ ಇವುಗಳಿಂದ ಒಂದು ವಾತಾವರಣವನ್ನು ನಿರ್ಮಿಸುತ್ತದೆ.
ಅಜೇಯ ಯೋಧನಾದವನು ಅಹಿಂಸಾಮೂರ್ತಿಯಾದ ಸರ್ವಾರ್ಥ ಸಿದ್ಧಿಯ ಭವ್ಯ ವ್ಯಕ್ತಿತ್ವವನ್ನು ನಿರ್ಮಿಸುತ್ತದೆ.
ಈ ಕತೆಯ ಕಲೆ ವಿಶಿಷ್ಟವಾಗಿ ಗಮನಿಸುವಂತದ್ದು. ಕತೆಯ ಶೀರ್ಷಿಕೆಯೇ ‘ಪವಾಡ’ವನ್ನು - ವಾಸ್ತವತೆಗೆ ವಿರುದ್ಧವಾದುದನ್ನು
- ಸಾರುತ್ತದೆ. ಆದರೆ ಕತೆಯ ಪ್ರಾರಂಭದಲ್ಲಿ ವಾಸ್ತವತೆಗೇ ಒತ್ತು ಬೀಳುತ್ತದೆ. ದುರ್ಜೇಯ ಯೋಧ ಬೌದ್ಧ
ಸನ್ಯಾಸಿಯಾದದ್ದು ಪವಾಡಸದೃಶವಾದರೂ ಪವಾಡವಲ್ಲ; ಬದುಕಿನ ವಾಸ್ತವತೆಯ ಸಾಧ್ಯತೆಯೂ ಪರಿಧಿಯೊಳಕ್ಕೇ ಬರುವಂಥ
ಘಟನೆ. ಅನಂತರ ‘ಪವಾಡ’; ಕ್ರೂರಿಯಾದ, ಸ್ವೇಚ್ಛಾಚಾರಿಯಾದ ಕಾಮುಕನಾದ ಪ್ರಭು ಸರ್ವಾರ್ಥಸಿದ್ಧಿಯೊಡನೆ
ಒಂದು ಭೇಟಿಯಲ್ಲಿ ಪರಿವರ್ತಿತನಾಗಿ ಜನಕ್ಕೆ ಮುಖವನ್ನು ತೋರಿಸದೆ ಸನ್ಯಾಸಿಯಾಗಿ ಹೊರಟುಹೋದ ಪವಾಡ.
ಕತೆ ಮುಕ್ತಾಯದತ್ತ ಸಾಗುತ್ತಿದ್ದಂತೆ ಈ ಪವಾಡವೂ ಬಿಚ್ಚಿಕೊಳ್ಳುತ್ತದೆ. ದುರಾತ್ಮನನ್ನು ಅಹಿಂಸೆಯ
ಸಾಕಾರಮೂರ್ತಿಯಾದ ಬೌದ್ಧ ಭಿಕ್ಷುವರೇಣ್ಯ ಕೈಯಾರ ಕೊಂದ ಎನ್ನುವ ವಾಸ್ತವ ನಮ್ಮ ಮುಂದೆ ನಿಲ್ಲುತ್ತದೆ.
ಈ ವಾಸ್ತವ ಅತ್ಯಂತ ಸಂಕೀರ್ಣವಾದದ್ದು. ಧರ್ಮ ಸಾಕ್ಷಿಯನ್ನು ತೆರೆದಿಡುವಂಥದ್ದು. ಸತ್ಯಮೇವ ಜಯತೆ ಕತೆಯ
ಕೊನೆಯಲ್ಲಿ ಬಾಗಲೋಡಿಯವರು ಅನಾತೋಲ್ ಫ್ರಾನ್ಸ್‍ನ ಒಂದು ವಾಕ್ಯವನ್ನು ಉದ್ಧರಿಸುತ್ತಾರೆ: My
dear friend, please, do not be just. Be simply kind. ಇಲ್ಲಿಯ ಹಲವು ಕತೆಗಳ ಹಿಂದೆ ಕೆಲಸ
ಮಾಡಿರುವ ಸತ್ಯ ಇದು. ಪವಾಡ ಪುರುಷನ ‘ಪವಾಡ’ ಸಾಧಿಸುತ್ತದೆ. ಈ ಪವಾಡವನ್ನು ನಡೆಸುವುದು ಯಾವುದೇ ಮಾನವಾತೀತ
ಶಕ್ತಿಯಲ್ಲ, ಮಾನವ ಗುರುತಿಸಿದ ಧರ್ಮದ ಸ್ವರೂಪದ ಅರಿವು, ಮಾನವನ ಸಂಕಲ್ಪ.
ನಿಜವಾದ ಧರ್ಮವಾದ ಹೃದಯವಂತಿಕೆ ಒಂದು
ಕಡೆ, ಲೌಕಿಕ ಜಗತ್ತಿನ ಆಮಿಷಗಳು ಅಥವಾ ರೂಢಿ ಸೃಷ್ಟಿಸಿದ ಹೃದಯ ವಿಹೀನ ಧರ್ಮ ಮತ್ತೊಂದು ಕಡೆ. ಬದುಕಿನಲ್ಲಿ
ಇವುಗಳ ಅಸ್ತಿತ್ವ ಬಾಗಲೋಡಿಯವರ ಮುಖ್ಯ ಕತೆಗಳ ವಸ್ತು. ಇವುಗಳಲ್ಲಿ ಯಾವುದರ ಫಲ ಏನು ಎನ್ನುವುದನ್ನು
ಹಿಂದಿನಿಂದ ಬೆಳಕು ಬಿಟ್ಟು ತೋರಿಸುವ ಸಾಧನ ವ್ಯಂಗ್ಯ. ಇದರ ಸರಳ ರೂಪವನ್ನು ಬರ್ಲಿನಿನಿಂದ ಭಾಗೀರಥಿಯಲ್ಲಿ
ನೋಡಬಹುದು. ಜರ್ಮನಿಯ ಪ್ರೊಫೆಸರ್ ಹೇರ್ಮನ್ ಮ್ಯೂಲರ್ ಭಾರತೀಯ ಸಂಸ್ಕೃತಿ ಶಾಸ್ತ್ರಕ್ಕೆ ತಮ್ಮನ್ನು
ತೆತ್ತುಕೊಂಡವರು. ತಮ್ಮ ದೇಹವನ್ನು ಸುಡಬೇಕೆಂದೂ ಭಸ್ಮಾವಶೇಷವನ್ನು ಕನ್ಯಾಕುಮಾರಿಯ ಎದುರಿನ ಸಮುದ್ರಕ್ಕೆ
ಒಪ್ಪಿಸಬೇಕೆಂದೂ ಉಯಿಲಿನಲ್ಲಿ ಬರೆದವರು. ಮಗನಿಗೂ ಭಾರತೀಯ ಸಂಸ್ಕೃತಿಯನ್ನು ಕಲಿಸಹೊರಟವರು. ವ್ಯವಹಾರ
ಜ್ಞಾನವುಳ್ಳ ಅವರ ಹೆಂಡತಿಯ ಕಣ್ಣಿನಲ್ಲಿ ಅವರೊಬ್ಬ ಹುಚ್ಚ. ಕೆಲವು ಕತೆಗಳಲ್ಲಿ ದೇವರಾಯರು ವ್ಯವಹಾರ
ಜಗತ್ತಿನ ‘ಭ್ರಷ್ಟೀಕರಣ’ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಚಿತ್ರಿಸುತ್ತ ಹೋಗುತ್ತಾರೆ. ಹುಡುಗ ಶಂಭುವನ್ನು
ಜೊತೆಯವರು ಧರ್ಮರಾಯ ಎಂದು ಹಾಸ್ಯ ಮಾಡುತ್ತಾರೆ. ಯಾರ ಕಷ್ಟವನ್ನು ಕಂಡರೂ ಅವನು ಕರಗಿಹೋಗುತ್ತಾನೆ.
ಅವರ ಚಿಕ್ಕಪ್ಪ ಕಷ್ಟಕ್ಕೆ ಸಿಕ್ಕಿ ಅವರ ಮನೆ ಹರಾಜಾಗುವ ಸ್ಥಿತಿಗೆ ಬಂದಾಗ, ಶಂಭುವಿನ ತಂದೆ ತಾಯಿಯರು
ಬಾಯಿ ತುಂಬ "ಅಯ್ಯೋ ಪಾಪ" ಎಂದು ಹೇಳಿ ಯಾವ ರೀತಿಯ ಸಹಾಯವನ್ನು ಮಾಡದೆ ಹೋಗುತ್ತಾರೆ.
ಮಗ ಹೇಳಲು ಬಂದರೆ, "ನಿನಗೆ ತಿಳಿಯುವುದಿಲ್ಲ ಮಗ! ನಮ್ಮ ಕಷ್ಟವೇ ನಮಗೆ ಸಾಕಾಗಿದೆ....ಅವರವರ
ಸುಖದುಃಖ ಅವರವರಿಗೆ" ಎನ್ನುತ್ತಾರೆ. ಹುಡುಗ ರಂಪಾಟ ಮಾಡುತ್ತಾನೆ, ಕಡೆಗೆ ಸೋಲೊಪ್ಪುತ್ತಾನೆ.
ಆದರೆ ‘ಅವರವರ ಸುಖದುಃಖ ಅವರವರ ಪಾಲಿಗೆ’ ಅವನ ವ್ಯವಹಾರದ ಉಸಿರಾಗುತ್ತದೆ. ಅವನು ವಕೀಲನಾಗಿ ಕೈ ತುಂಬ
ಸಂಪಾದಿಸುವಾಗಲೂ ಅಪ್ಪ ಅಮ್ಮ ಕಷ್ಟ ಹೇಳಿಕೊಂಡರೆ ಅವರು ಕಲಿಸಿದ ಮಂತ್ರವೇ ಅವನ ನಾಲಿಗೆಯಲ್ಲಿ - ಅವನ
ಕಿವಿಯಲ್ಲಿ: ‘ಅವರವರ ಸುಖದುಃಖ ಅವರವರಿಗೆ.’ ಮುದುಕರಾದ ಅಪ್ಪ, ಅಮ್ಮ ಇಬ್ಬರೂ ಕಾಯಿಲೆ ಮಲಗಿ ಡಾಕ್ಟರಿಗೆ
ಕೊಡಲು ಹಣ ಇಲ್ಲದಾಗ ಮಗನ ಉತ್ತರ, "ಅವರವರ ಸುಖದುಃಖ ಅವರವರಿಗೆ."
ಈ ಸಂಗ್ರಹದ ಕಡೆಯ ಭಾಗದಲ್ಲಿ ಬಾಗಲೋಡಿ
ಅವರ ರುದ್ರಪ್ಪನ ರೌದ್ರ ಎನ್ನುವ ಕತೆ ಇದೆ. ಇದರಲ್ಲಿ ವ್ಯಂಗ್ಯದ ಬಳಕೆ ಭಿನ್ನವಾಗಿದೆ. ಅಲ್ಲಲ್ಲಿ
ಜನರ ನಡತೆಯನ್ನು ಚಿತ್ರಿಸುವಾಗ, ವ್ಯಂಗ್ಯದ ಸ್ಪರ್ಶವಾಗುತ್ತದೆ. ಆದರೆ ಕತೆಯ ಕೇಂದ್ರ ವ್ಯಕ್ತಿಯಾದ
ರುದ್ರಪ್ಪನ ಚಿತ್ರಣದಲ್ಲಿ ವ್ಯಂಗ್ಯವಿಲ್ಲ - ಆತನ ಹೆಸರು ರುದ್ರಪ್ಪನಾಗಿ ಆಕಾರ ಭವ್ಯವಾದರೂ ಸ್ವಭಾವ
ಸೌಮ್ಯ. ಶಾಂತ ಗುಣ ಅವನದು ಎನ್ನುವ ವಿವರದಲ್ಲಿ ವಿನಾ ಕತೆಯಲ್ಲಿ ಮುಖ್ಯವಾದ ಅಂಶ ಅವರ ‘ರೌದ್ರ’ ಕಾರ್ಯಪ್ರವೃತ್ತವಾಗುವ
ವಿಶಿಷ್ಟ ಬಗೆ. ಈ ಕತೆಯ ಮಟ್ಟಿಗೆ ನನ್ನ ನೆನಪೊಂದಿದೆ. ದೇವರಾಯರು ನಿವೃತ್ತರಾಗುವ ಒಂದು ವರ್ಷ ಮೊದಲು
ಭಾರತಕ್ಕೆ ಬಂದಾಗ, ಅಷ್ಟು ಪರಿಚಿತನಲ್ಲದ ನನ್ನೊಡನೆ ತಮ್ಮ ಸಾಹಿತ್ಯದ ಬಗೆಗೆ ನಾಲ್ಕು ಮಾತನ್ನಾಡಿದರು.
ಅವರ ಕತೆಗಳಲ್ಲಿಯ ವ್ಯಂಗ್ಯವನ್ನು ಕುರಿತು ನಾನು ಬರೆದಿದ್ದುದನ್ನು ಆಗಲೇ ಓದಿದ್ದರು. "ನನ್ನ
ರುದ್ರಪ್ಪನ ರೌದ್ರ ಓದಿದ್ದೀರಾ?" ಎಂದು ಕೇಳಿದರು. ನಾನು ಓದಿರಲಿಲ್ಲ. ತಮಗೆ ಒಂದು ಕಾಲದಲ್ಲಿ
ದೇವರಲ್ಲಿ ನಂಬಿಕೆ ಇರಲಿಲ್ಲ. ಅನಂತರ ಬಂದಿತು. ತಾವಿನ್ನು ವ್ಯಂಗ್ಯವನ್ನು ಆ ಮಟ್ಟಿಗೆ ಬಳಸದೆ ಹೊಸ
ಬಗೆಯಲ್ಲಿ ಬರೆಯುತ್ತೇನೆ ಎಂದರು. ದುರ್ದೈವ, ನಿವೃತ್ತರಾಗಿ ಬಂದ ಕೆಲವೇ ತಿಂಗಳಲ್ಲಿ ನಿಧನರಾದರು.
ಬಾಗಲೋಡಿಯವರು ಮಾಸ್ತಿ ಸಂಪ್ರದಾಯದಲ್ಲಿ
ಬರೆಯಲು ಪ್ರಾರಂಭಿಸಿದರು ಎನ್ನುವ ಮಾತು ವಿಮರ್ಶೆಯಲ್ಲಿ ಕೇಳಿಬಂದಿದೆ. ನನಗೆ ಇದು ಒಪ್ಪಿಗೆಯಾಗುವುದಿಲ್ಲ.
ಸಣ್ಣ ಕತೆಯಲ್ಲಿ ಹೊಸದೊಂದು ಮಾರ್ಗ ಪ್ರಾರಂಭವಾಗುವ ಸೂಚನೆ ಅವರ ಪ್ರಾರಂಭದ ಕತೆಗಳಲ್ಲಿತ್ತು. ವ್ಯಂಗ್ಯವನ್ನು
ಬಳಸದ ಮಾಸ್ತಿಯವರ ಕತೆಗಳಿಂದ ಇವು ಭಿನ್ನವಾಗಿದ್ದುವು. ಅಲ್ಲದೆ ಮಾಸ್ತಿಯವರಂತೆ ಸಂಸ್ಕೃತಿಯಲ್ಲಿ ಪರಿಹಾರವನ್ನು
ಕಾಣದೆ, ಸೃಷ್ಟಿಯೊಡನೆ ತನ್ನನ್ನು ಗುರುತಿಸಿಕೊಳ್ಳುವ ಮತ್ತು ಧರ್ಮದ ಆಚರಣೆಯ ವಿಶಿಷ್ಟ ರೀತಿಯನ್ನು
ನಿರೂಪಿಸುವ ಈ ಕತೆಗಳು ಹೊಸ ಭರವಸೆಯನ್ನು ಮೂಡಿಸುವಂಥವಾಗಿದ್ದವು. ಇದೇ ವಿಧಾನದಲ್ಲಿ ಬಾಗಲೋಡಿಯವರು
ಸಾಕಷ್ಟು ಸಂಖ್ಯೆಯ ಕತೆಗಳನ್ನು ಬರೆದಿದ್ದರೆ ನಾವು ಕಂಡ ನವ್ಯ ಕತೆಗಿಂತ ಭಿನ್ನವಾದ ನವ್ಯಕತೆ ಮೂಡಿಬರುವ
ಸಾಧ್ಯತೆ ಇತ್ತು. ನವ್ಯ ಕತೆಯಲ್ಲಿ ‘ಐರನಿ’ ಪ್ರಧಾನವಾಗಿದ್ದರೂ ಅದು ಎಲ್ಲವನ್ನೂ ಗುಮಾನಿಯಿಂದ
ನೋಡುವ ಐರನಿ. ಪ್ರಾಯಶಃ ಅವರ ಮೊದಲನೆಯ ಕತೆಯಾದ ಶುದ್ಧ ಫಟಿಂಗನಲ್ಲಿರುವ ವೈರುದ್ಧ್ಯಗಳ ಕಲ್ಪನೆ ಮಾಸ್ತಿಯವರಲ್ಲಿ ಕಾಣುವುದಿಲ್ಲ. ಘಟಭಾಂಡೇಶ್ವರ ಒಂದು ಕತೆಯ ಮಿತಿಯಲ್ಲಿ ಒಳಗೊಳ್ಳುವ ಅನುಭವ, ಮನುಷ್ಯ ಸ್ವಭಾವದ ಅನಾವರಣ ಎತ್ತುವ ಪ್ರಶ್ನೆಗಳು ಅದನ್ನು ವಿಶಿಷ್ಟ ರಚನೆಯನ್ನಾಗಿ ಮಾಡುತ್ತವೆ. ಕುಂಬಾರನ ಹುಡುಗ ಐತನು ಸಾಮ್ರಾಟ ಆದಿತ್ಯನಾಗುವ ಪ್ರಕ್ರಿಯೆ ಜಾತಿಯನ್ನು ಕುರಿತು, ಮನುಷ್ಯ ಸ್ವಭಾವದ ಸಾಧ್ಯತೆಗಳನ್ನು ಕುರಿತು ಪ್ರಶ್ನೆಗಳನ್ನೆತ್ತುತ್ತದೆ. ಇವೆಲ್ಲ ಮಾಸ್ತಿಯವರ ಪರಂಪರೆಯಿಂದ ತೀರ ಭಿನ್ನವಾದ ಸೃಷ್ಟಿ.
ನೋಡುವ ಐರನಿ. ಪ್ರಾಯಶಃ ಅವರ ಮೊದಲನೆಯ ಕತೆಯಾದ ಶುದ್ಧ ಫಟಿಂಗನಲ್ಲಿರುವ ವೈರುದ್ಧ್ಯಗಳ ಕಲ್ಪನೆ ಮಾಸ್ತಿಯವರಲ್ಲಿ ಕಾಣುವುದಿಲ್ಲ. ಘಟಭಾಂಡೇಶ್ವರ ಒಂದು ಕತೆಯ ಮಿತಿಯಲ್ಲಿ ಒಳಗೊಳ್ಳುವ ಅನುಭವ, ಮನುಷ್ಯ ಸ್ವಭಾವದ ಅನಾವರಣ ಎತ್ತುವ ಪ್ರಶ್ನೆಗಳು ಅದನ್ನು ವಿಶಿಷ್ಟ ರಚನೆಯನ್ನಾಗಿ ಮಾಡುತ್ತವೆ. ಕುಂಬಾರನ ಹುಡುಗ ಐತನು ಸಾಮ್ರಾಟ ಆದಿತ್ಯನಾಗುವ ಪ್ರಕ್ರಿಯೆ ಜಾತಿಯನ್ನು ಕುರಿತು, ಮನುಷ್ಯ ಸ್ವಭಾವದ ಸಾಧ್ಯತೆಗಳನ್ನು ಕುರಿತು ಪ್ರಶ್ನೆಗಳನ್ನೆತ್ತುತ್ತದೆ. ಇವೆಲ್ಲ ಮಾಸ್ತಿಯವರ ಪರಂಪರೆಯಿಂದ ತೀರ ಭಿನ್ನವಾದ ಸೃಷ್ಟಿ.
ಬಾಗಲೋಡಿ ದೇವರಾಯರು ಒಂದು ‘ಫೆನಾಮಿನನ್.’
ಇನ್ನು ಕೆಲವು ವರ್ಷ ಬದುಕಿದ್ದರೆ ಪ್ರಾಯಶಃ ಕವಿ ಅಡಿಗರಲ್ಲಿ ಕಂಡಂಥ ಹೊಸ ಪ್ರಾರಂಭವನ್ನು ಕತೆಗಾರ
ದೇವರಾಯರಲ್ಲಿ ಕಾಣಬಹುದಾಗಿತ್ತು. ಅವರ ಸಮಗ್ರ ಕತೆಗಳ ಪ್ರಕಟಣೆ ಸ್ವಾಗತಾರ್ಹ.
- ಮಯೂರ ಅಕ್ಟೋಬರ್ ೨೦೦೦. ಪ್ರಿಸಮ್
ಬುಕ್ಸ್ ಪ್ರಕಾಶಿಸಿದ (೨೦೦೦) ಬಾಗಲೋಡಿ ದೇವರಾಯ ಸಮಗ್ರ ಕತೆಗಳು ಕುರಿತು.
(ಮುಂದುವರಿಯಲಿದೆ)
No comments:
Post a Comment