11 January 2018

ಅಮ್ಮನ ವಿದಾಯದೊಡನೆ ಉಕ್ಕಿದ ನುಡಿಗಳು

ಜೀವನವೇ ಶಿಕ್ಷಣ, ಮನೆಯೇ ಪಾಠಶಾಲೆ ಎನ್ನುವ ಕಲ್ಪನೆಯಲ್ಲಿ ಮಕ್ಕಳಾದ ನಮಗೆ (ಅಶೋಕ, ಆನಂದ ಮತ್ತು ಅನಂತ - ವರ್ಧನರುಗಳಿಗೆ) ಅಪ್ಪ - ಜಿ.ಟಿ.ನಾರಾಯಣ ರಾವ್, ಸದಾ ಘನ ಆದರ್ಶವಾಗಿದ್ದರು. ಆದರ್ಶವನ್ನು ಸಾಧಿಸುವ ದಿಶೆಯಲ್ಲಿ ಮೊನ್ನೆಯವರೆಗೂ (೧-೧-೨೦೧೮), ಅಂದರೆ ತನ್ನ ೮೭ನೇ ಹರಯದವರೆಗೂ ನಿರಂತರ ಸಮನ್ವಯಕಾರಳಾಗಿ ನಿಂತಾಕೆ ಅಮ್ಮ - ಜಿ. ಲಕ್ಷ್ಮಿ ನಾ. ರಾವ್. ಅಪ್ಪ ಸ್ವಂತ ಅನುಷ್ಠಾನಕ್ಕೇ - ಪರೋಪದೇಶಕ್ಕಲ್ಲ - ರೂಢಿಸಿಕೊಂಡ ಕಠಿಣ ಶಿಸ್ತು, ತಾಯಿಯನ್ನೂ ಸೇರಿಸಿದಂತೆ ನಮ್ಮೆಲ್ಲರನ್ನು ಗಾಢವಾಗಿಯೇ ಪ್ರಭಾವಿಸಿತ್ತು. ಅದನ್ನು ತಮ್ಮ ಮದುವೆಯಾದಂದಿನಿಂದ (೧೯೫೧), ಅಂದರೆ ೬೬ ವರ್ಷಗಳ ಉದ್ದಕ್ಕೂ ಒಂದಿಷ್ಟೂ ಕುಂದಿಲ್ಲದಂತೆ ಕೌಟುಂಬಿಕ ನಿರ್ವಹಣಾ ಸೂತ್ರವಾಗಿಸಿದಾಕೆ ಅಮ್ಮ.
ಮಕ್ಕಳಾದ ನಮ್ಮೂವರಿಂದ ತೊಡಗಿ, ಕಾಲಧರ್ಮಾನುಸಾರ ನೇರವಾಗಿ
ಸೇರಿಕೊಂಡು ಬಂದ ಸೊಸೆಯಂದಿರು - ಕ್ರಮವಾಗಿ ದೇವಕಿ, ಜಯಶ್ರೀ ಮತ್ತು ರುಕ್ಮಿಣಿಮಾಲಾ, ಮೊಮ್ಮಕ್ಕಳು - ಕ್ರಮವಾಗಿ ನಮ್ಮ ಅಭಯಸಿಂಹ, ಆನಂದಶ್ರೀಯವರ ಅನರ್ಘ್ಯ, ಐಶ್ವರ್ಯ ಹಾಗೂ ಅನಂತಮಾಲಾರ ಅಕ್ಷರಿ, ಅವರ ಜೋಡಿಯಾಗಿ ಬಂದವರು - ಅಭಯನ ರಶ್ಮಿ, ಅನರ್ಘ್ಯಳ ಜೆ.ಜೇ, ಅಕ್ಷರಿಯ ಮಹೇಶ (ಐಶ್ವರ್ಯ ಈಗಷ್ಟೇ ಓದು ಮುಗಿಸಿದ್ದಾಳೆ), ಮತ್ತು ಸದ್ಯಕ್ಕೆ ಸರಣಿಯಲ್ಲಿ ಕೊನೆಯವಳಾದ ಅಭಯರಶ್ಮಿಯರ ಆಭಾಳವರೆಗೂ ಸಮಾಜ ಅಮ್ಮನನ್ನು ತಾಯಿ, ಅತ್ತೆ, ಅಜ್ಜಿ, ಮುತ್ತಜ್ಜಿ ಎಂದೇನೇ ಸಂಬೋಧಿಸಿದರೂ ಮಾರ್ದವತೆಯ
ನನ್ನ ಮದುವೆಯಾದ ಹೊಸತರಲ್ಲಿ ಅಜ್ಜಿಯೊಡನೆ
ಪಾಠವೊಂದನ್ನೇ ಕೊಟ್ಟಾಕೆ ಇವಳು. ಹೆತ್ತವರಿಗೆ ಹೆಮ್ಮೆ, ಸಾಹೋದರ್ಯದವರಿಗೆ (ಒಬ್ಬ ಅಣ್ಣ, ಮೂರು ತಮ್ಮಂದಿರು ಮತ್ತು ಐದು ತಂಗಿಯಂದಿರು) ಆಧಾರ, ಬಂಧುಗಳಿಗೆ ಇಂಬು, ಮಿತ್ರರಿಗೆ ಪ್ರೀತಿ, ನೆರೆಕರೆಯವರಿಗೆ ಮತ್ತು ಸಂಪರ್ಕಕ್ಕೊದಗಿದ ಎಲ್ಲರಿಗೂ ನಿರ್ವಂಚನೆಯ ಉಪಕಾರಿಯಾಗಿರುವಲ್ಲೇ ಜೀವಸಾರ್ಥಕ್ಯ ಕಂಡವಳು ಅಮ್ಮ. 

ಅಮ್ಮನ ಆಹಾರ ವಿಹಾರಗಳು ಶುದ್ಧ. ಸಹಜವಾಗಿ ವೃದ್ಧಾಪ್ಯದ ಕೊನೆಯ ಕಾಲವನ್ನಷ್ಟು ಬಿಟ್ಟರೆ, ಆಕೆ ಎಂದೂ ಅನಾರೋಗ್ಯದಿಂದ ಮಲಗಿದ್ದು ನನ್ನ ನೆನಪಿನಲ್ಲಿಲ್ಲ. ಅವಳಪ್ಪನ ತುಸು ಭಯ, ನನ್ನಪ್ಪನ ತುಸು ವೈಚಾರಿಕತೆಯ ಹಿತವಾದ ಮಿಶ್ರಣವಿಟ್ಟುಕೊಂಡೇ ಸ್ವಂತಿಕೆ ಸಾಧಿಸಿದವಳು ಈಕೆ. ನನ್ನಪ್ಪಮ್ಮರದು ಸೋದರಿಕೆಯ ಸಂಬಂಧ. ನನಗೆ ತಿಳಿದಂತೆ, ಕೊಡಗಿನ ಅರಸರ ಪುರೋಹಿತ ಕುಟುಂಬದ ನನ್ನ ಪಿತಾಮಹನಿಗೆ (ಗುಡ್ಡೇಹಿತ್ಲು ತಿಮ್ಮಪ್ಪಯ್ಯ), ಕರಣೀಕ ಕುಟುಂಬದ ಮಾತಾಮಹನ (ಅಡಮನೆಪಳ್ಳತಡಕ
ಸುಬ್ಬಯ್ಯ) ತಂಗಿಯನ್ನು (ವೆಂಕಟಲಕ್ಷ್ಮಿ) ಕೊಟ್ಟು ಮದುವೆಯಾಗಿತ್ತು. [ಮಕ್ಕಳಾದ ನಮಗೆ ಬುದ್ಧಿ ಬಲಿಯುವ ಕಾಲಕ್ಕೆ, ನನ್ನಪ್ಪ ಆಧುನಿಕ ವಿಜ್ಞಾನ ಕಂಡ ವಂಶವಾಹಿಗಳ ವರ್ತನೆಯ ತಿಳುವಳಿಕೆಯೊಡನೆ ಹೇಳುವುದಿತ್ತು, "ಸೋದರಿಕೆಯ ಸಂಬಂಧದಲ್ಲಿ ನಮ್ಮದು ಮೂರನೇ ತಲೆಮಾರು. ನಮ್ಮ ಮೂರೂ ಮಕ್ಕಳಲ್ಲಿ ಯಾವುದೇ ಊನತೆಗಳು ಬರದಿರುವುದು ಅದೃಷ್ಟ! ಯಾವುದೇ ಕಾರಣಕ್ಕೆ ನೀವು ಅದನ್ನು ಮುಂದುವರಿಸತಕ್ಕದ್ದಲ್ಲ."] ಇವೆರಡೂ ಸಾಂಪ್ರದಾಯಿಕ ಮನೆತನಗಳೇ ಆದ್ದರಿಂದ, ಅಡಮನೆಗೆ ದುರ್ಗೆ, ಗುಡ್ಡೇಹಿತ್ಲಿಗೆ ಗಣಪತಿ ನಿತ್ಯಪೂಜೆಯ ಮನೆದೇವರುಗಳು. ಆ ಲೆಕ್ಕದ ವ್ರತಾನುಷ್ಠಾನಗಳನ್ನು ಅಮ್ಮ ಶೈಶವದಿಂದಲೂ ಕಂಡು, ಒಪ್ಪಿ, ಕಾಲಾನುಸಾರಿಯಾಗಿ ಯಥಾಮತಿ/ ಮಿತಿ ಅನುಸರಿಸಿದವಳು. 

ಅಪ್ಪನ ಹಿನ್ನೆಲೆ ಅಮ್ಮನದ್ದಕ್ಕಿಂತ ಭಿನ್ನವೇನೂ ಅಲ್ಲ. ಅವರಿಗೆ ಸಮಾಜ ನಡೆಸಿಕೊಂಡು ಬಂದ ಗಂಡಸೆಂಬ ಹೆಚ್ಚುಗಾರಿಕೆಯಲ್ಲಿ ಲಭಿಸಿದ ಪ್ರಾಥಮಿಕ ಸಂಸ್ಕಾರಗಳೂ ತುಸು ಹೆಚ್ಚೇ. ಅಪ್ಪ ಇನ್ನೂ ಶಾಲಾ ಮಟ್ಟದಲ್ಲೇ ಇದ್ದಾಗ ಅನ್ಯರ ಮನೆಗಳಲ್ಲಿ ಪೌರೋಹಿತ್ಯ ನಡೆಸಿದ್ದೂ ಇತ್ತು. (ನೋಡಿ: ಉಪನಯನ ತಂದ ಅಪಾಯ) ಆದರೆ ಅಪ್ಪನ ಸಹಜ ವೈಚಾರಿಕ ಬಲ ಮತ್ತು ಗಳಿಸಿದ ಲೋಕಾನುಭವದ ಸ್ತರ ಬೇರೇ. ಇನ್ನೂ ಪ್ರೌಢಶಾಲಾ ಮಟ್ಟದಲ್ಲಿದ್ದಾಗಲೇ ಅಪ್ಪ ದೇವರ ನಂಬಿಕೆ ಮತ್ತು ಅದಕ್ಕೆ ತಗುಲಿ ಬಂದೆಲ್ಲ ಆಚರಣೆಗಳನ್ನು ದೂರ ಮಾಡುತ್ತಾ ಬಂದರು. ಆಧುನಿಕ ವಿದ್ಯೆಯೊಡನೆ ಸ್ವತಂತ್ರ ವೃತ್ತಿ ಹಿಡಿದ ಕಾಲಕ್ಕೆ ಸ್ಪಷ್ಟವಾಗಿ ದೇವರಿಲ್ಲ ಎಂದು ಸಾರಿ, ಮಾನವೀಯ ಆರ್ದ್ರತೆ ಕಳಚಿಕೊಳ್ಳದ ವೈಜ್ಞಾನಿಕ ಮನೋಧರ್ಮ ರೂಢಿಸಿಕೊಂಡರು. ಇಲ್ಲಿ ಅಮ್ಮ ಸಾಂಪ್ರದಾಯಿಕ ಹೆಣ್ಣಿಗೆ ಸಹಜವಾಗಿ ಮಧ್ಯ ಮಾರ್ಗವನ್ನು ಚೆನ್ನಾಗಿಯೇ
ದಿಲ್ಲಿಯಲ್ಲಿ ಹೇರಂಜೆ ಕೃಷ್ಣ ಭಟ್ಟರೊಡನೆ
ತೆರೆದುಕೊಳ್ಳುತ್ತ ನಡೆದಳು. ನಡೆಸಲು ಶಕ್ಯವಾದ ಪರಂಪರೆಯ ಅಂಶವನ್ನು ಕಾಲಕಾಲಕ್ಕೆ ವಿಮರ್ಶಿಸಿಕೊಳ್ಳುತ್ತ, ತನ್ನ ಮಿತಿಯ ಓದು, ಲೋಕಾನುಭವಗಳಿಂದ ಕಂದಾಚಾರಗಳಿಗೆ ಎಡೆಯಿಲ್ಲದಂತೆ ಬದಲುತ್ತ ಬಂದಳು. ಇದನ್ನು ನನ್ನದೇ ಉದಾಹರಣೆಯೊಡನೆ ತುಸು ವಿಸ್ತರಿಸುವುದಾದರೆ....

ನನಗೆ ಶೈಶವದಲ್ಲಿ ಕಿವಿ ಚುಚ್ಚಿ, ಒಂದು ಕಲ್ಲಿನ ಓಲೆ ಹಾಕಿದ್ದರು. ಪ್ರೌಢಶಾಲೆಯಲ್ಲಿದ್ದಾಗ, ಎನ್ಸಿಸಿ ಶಿಬಿರದಲ್ಲಿ
ಭಾಗಿಯಾಗುವ ಕಾಲಕ್ಕೆ ತಂದೆ "ಸಮವಸ್ತ್ರಕ್ಕೂ ಓಲೆಗೂ ಸರಿ ಹೊಂದುವುದಿಲ್ಲ" ಎಂದಾಗ ತಾಯಿ ಓಲೆ ತೆಗೆದಿಟ್ಟರು. ಮುಂದೆ ಆನಂದನಂತರಿಗೆ ಕಿವಿ ಚುಚ್ಚಲೇ ಇಲ್ಲ. ನಾನು ಪದವಿ ತರಗತಿಗೆ ಬರುವವರೆಗೂ ತಂದೆ ಉಪನಯನ ಸಂಸ್ಕಾರವನ್ನು ಕೊಡಿಸಲಿಲ್ಲ. (ನನಗೂ ಅದೊಂದು ಕೊರತೆ ಅನಿಸಿರಲಿಲ್ಲ.) ಆದರೆ ಅಮ್ಮನ ಸಾತ್ತ್ವಿಕ ಒಲವು ತಂದೆಯನ್ನು ಮಣಿಸಿ, ನಂಜನಗೂಡಿನ ದೇವಳದ ಪುರೋಹಿತರ ಮನೆಯಲ್ಲಿ ಚಿಕ್ಕದಾಗಿ ಉಪನಯನದ ಶಾಸ್ತ್ರ ಮಾಡಿಸಿತು. ಅದರ ‘ಬ್ರಾಹ್ಮಣ ಭೋಜನ’ಕ್ಕಿದ್ದ ನಾಲ್ಕೈದು ತಂದೆಯ ಸಹೋದ್ಯೋಗಿಗಳಲ್ಲಿ ಹೆಸರಿಸಲೇ ಬೇಕಾದವರು ಕೆಟಿ ವೀರಪ್ಪ (ಗೌಡರು). ಪುರೋಹಿತರಿಗೆ ಅದನ್ನು ತಿಳಿಸದೇ ಇದ್ದರೂ ಅಮ್ಮನಿಗೆ ತಿಳಿದಿತ್ತು, ಆದರೆ ಏನೂ ವಿರೋಧವಿರಲಿಲ್ಲ!

ಆನಂದನಿಗೆ ಎರಡೋ ಮೂರೋ ವರ್ಷ ಪ್ರಾಯದಲ್ಲಿ ಸಿಡುಬು ಬಡಿದಾಗ ಅಮ್ಮ ತಿರುಪತಿಗೆ ಹರಿಕೆ ಹೇಳಿಕೊಂಡಿದ್ದಿರಬೇಕು. ಅದನ್ನು ಪ್ರವಾಸದ ಮುಸುಕಿನಲ್ಲಿಟ್ಟು ನಾವೆಲ್ಲ ಬಳ್ಳಾರಿಯಿಂದ ತಿರುಪತಿಗೆ ಹೋಗುವಂತಾದ್ದು, ನಮ್ಮರಿವಿಗೆ ಕಠಿಣ ವ್ರತ
ಪೂಜೆಗಳ ಬಾಧೆಯಿಲ್ಲದಂತೆ ಆಗ ಅಮ್ಮ ತನ್ನ ಹರಿಕೆ ಈಡೇರಿಸಿಕೊಂಡದ್ದು ಹಲವು ವರ್ಷಗಳ ಮೇಲೆ ನನ್ನ ಬೋಧಕ್ಕೆ ಬಂತು. ಅಪ್ಪನಿಗೆ ವರ್ಗವಾಗಿ ನಾವು ಹೋದಲ್ಲೆಲ್ಲ (ಮಂಗಳೂರಿನಿಂದ ತೊಡಗಿ ಮೈಸೂರುವರೆಗೆ) ಅಡುಗೆಮನೆಯ ಮೂಲೆಯಲ್ಲೋ ಸ್ಟೋರ್ರೂಂನ ಒಂದಂಕಣದಲ್ಲೋ ಅಮ್ಮನ ‘ದೇವರ ಮನೆ’ ಇದ್ದೇ ಇರುತ್ತಿತ್ತು. ಇದನ್ನೇ ಅಮ್ಮ ಮಂಗಳೂರಿನ ನನ್ನ ಮನೆಗೆ ಬಂದಾಗಲೂ ಅಭಯ ಬೆಂಗಳೂರಿನಲ್ಲಿ ಹೊಸಮನೆ ಸೇರಿದಾಗಲೂ ಶ್ರದ್ಧೆಯಿಂದ ನಡೆಸಿದ್ದಳು. (ಅಮ್ಮ
ಮರೆಯಾದ ಮೇಲೆ ನಾವದನ್ನು ಊರ್ಜಿತಗೊಳಿಸಲಿಲ್ಲ, ಬಿಡಿ.) ನಮ್ಮ ಬಾಲ್ಯದಲ್ಲಿ, ಅಮ್ಮ ಕನಿಷ್ಠ ಮುಸ್ಸಂಜೆಗೊಮ್ಮೆಯಾದರೂ ದೇವರಿಗೆ ಕೈ ಮುಗಿಯುವಂತೆ ನಮಗೆ ಹೇಳುವುದು ಇತ್ತು. ಆಕೆಗೆ ಜತೆಯಾಗಿಯೂ ನಾವು ಪುತ್ತೂರಿನ ಮಹಾಲಿಂಗೇಶ್ವರ, ಮೈಸೂರಿನ ಚಾಮುಂಡಿ, ಗೂಡಿನ ನಂಜುಂಡ, ಧರ್ಮಸ್ಥಳಗಳಾದಿ ಪುಣ್ಯಕ್ಷೇತ್ರಗಳಿಗೂ ಹೋದದ್ದಿತ್ತು. ಆದರೆ ಮೊದಮೊದಲೇ ನಮ್ಮ ಕಾಟಾಚಾರದ ಭಕ್ತಿ ತಿಳಿದುಕೊಂಡದ್ದಕ್ಕೆ, ಎಂದೂ ದೈಹಿಕವಾಗಿ ನಮ್ಮನ್ನು ದೇವ ಬಿಂಬಗಳಿಗೋ ದೇವಸ್ಥಾನಕ್ಕೋ ಮಣಿಯುವಂತೆ
ನನ್ನಮ್ಮನ ಅಮ್ಮ - ಅಜ್ಜಿಯೊಡನೆ
ಒತ್ತಡ ಹೇರಿದ್ದಿಲ್ಲ. ಅದಕ್ಕೆ ದೊಡ್ಡ ಉದಾಹರಣೆ - ನನ್ನ ಚಿಕ್ಕಜ್ಜಿ, ಅಂದರೆ ಅಮ್ಮನ ಬಲು ಪ್ರೀತಿಯ ಮಡಿಕೇರಿಯ ಭಾಂತೆಮ್ಮ (ವಿವರಗಳಿಗೆ ನೋಡಿ: ಅಜ್ಜಿಯೋ ಅಮ್ಮನೋ) ಬಂದಾಗ, ಅವರನ್ನು ನಾನು ನಂಜುಡೇಶ್ವರನ ಸನ್ನಿಧಿಗೆ ಒಯ್ದಿದ್ದೆ. ರೈಲಿನಲ್ಲಿ ಹೋಗಿ, ದರ್ಶನ ಎಲ್ಲ ಮುಗಿಸಿಯಾಗುವಾಗ ಊಟದ ವೇಳೆಯಾಗಿತ್ತು. ಅವರಿಬ್ಬರೂ ದೇವಸ್ಥಾನದ ಊಟ-ಪ್ರಸಾದದ ನಿರೀಕ್ಷೆಯಲ್ಲಿದ್ದರು. ಅದಕ್ಕೆ ದೇವಳದ ಕಛೇರಿಯಲ್ಲಿ ಚೀಟಿ ಮಾಡಿಸುವಾಗ, ಜಾತಿ ಉಲ್ಲೇಖ ಬಂದಾಗ (ಅದು ಬ್ರಾಹ್ಮಣ
ಮೊಮ್ಮಗ ಅಭಯನೊಡನೆ
ಭೋಜನ) ನಾನು ನಿರಾಕರಿಸಿದೆ, ಊಟ ತಪ್ಪಿಹೋಯ್ತು. ಅಮ್ಮ ಹಾಗೆ ಪ್ರಸಾದ ತಪ್ಪಿದ್ದನ್ನು ಎಂದೂ ಮರೆಯಲಿಲ್ಲ, ಆದರೆ ತಪ್ಪಿಯೂ ಅದಕ್ಕೆ ಗಂಭೀರ ಅಪರಾಧೀ ಸ್ಥಾನದಲ್ಲಿ ನನ್ನನ್ನು ನಿಲ್ಲಿಸಲೂ ಇಲ್ಲ! ಈ ಸಮನ್ವಯದ ನಿಲುವು ನನ್ನಜ್ಜನ (ಅಪ್ಪನಪ್ಪ) ಮರಣದಂದು, ಸಾಮಾಜಿಕರ ಕಣ್ಕಟ್ಟಿಗೆ ತಂದೆ ‘ಹಿರಿಮಗನ ಕರ್ತವ್ಯ’ ನಿರ್ವಹಿಸುವಂತೆ ನೋಡಿಕೊಂಡಿತು. ಮೂರೂ ಮಕ್ಕಳ ಸಾಂಪ್ರದಾಯಿಕ ಮದುವೆಗೂ ಒಲಿಸಿತು. ದೊಡ್ಡ ಕುಟುಂಬದೊಳಗಿನ ಮನೆಗಳೆಲ್ಲವಕ್ಕೂ ಹೊಕ್ಕು ಹೊರಡುವ, ಕಲಾಪಗಳೆಲ್ಲಕ್ಕೂ
ನನ್ನ ಸೋದರತ್ತೆ ಸರಸ್ವತಿ, ಅಪ್ಪನಮ್ಮ ಅಜ್ಜಿ, ಚಿಕ್ಕಮ್ಮ ಮೀನಾಕ್ಷಿ
(ಉಪನಯನ, ಮದುವೆ ಇತ್ಯಾದಿ) ನಮಗೆ ಮನೆಯವರೇ ಎಂಬ ಪ್ರೀತಿ ಮತ್ತು ಉಪಚಾರಗಳ ಅವಕಾಶವನ್ನೂ ಒದಗಿಸಿತು.

ಅಮ್ಮನಿಗೆ ಬಾಲ್ಯದಿಂದಲೇ ವಿಪರೀತ ಓದುವ, ಸಣ್ಣ ಮಟ್ಟಿಗೆ ಬರೆಯುವ ಒಲವಿತ್ತು. ನನ್ನಜ್ಜನೂ (ಅವಳಪ್ಪ) ಸಾಹಿತ್ಯ ಸಂಸ್ಕೃತಿಗಳ ದೊಡ್ಡ ಆರಾಧಕರೇ. ಅದನ್ನು ಮಕ್ಕಳೆಲ್ಲರಲ್ಲೂ ರೂಢಿಸಬೇಕೆಂಬ ಆಸೆಯೂ ಅವರಿಗಿದ್ದೇ ಇತ್ತು. ಆದರೆ ಮನೆಯ ಎರಡನೆಯ, ಹುಡುಗಿಯರಲ್ಲಿ ಹಿರಿಯವಳಾದ (ಒಬ್ಬನೇ ಅಣ್ಣ, ಉಳಿದಂತೆ ಮೂರು
ಅತ್ತೆ ದೇವಕಿ, ಅಮ್ಮ
ತಮ್ಮಂದಿರು ಮತ್ತು ಐದು ತಂಗಿಯಂದಿರು) ‘ಸ್ಥಾನ ಭಾಗ್ಯ’ಕ್ಕೆ ಬಿಡಲಿಲ್ಲ. ಆಕೆಯ ಅಮ್ಮನ ಹೆಚ್ಚು ಕಡಿಮೆ ವರ್ಷ ಎರಡಕ್ಕೊಮ್ಮೆ ನಡೆಯುತ್ತಿದ್ದ ಬಾಣಂತನ, ದೀರ್ಘ ತವರು ವಾಸ ಈಕೆಯ ಓದನ್ನು ಅಸ್ತವ್ಯಸ್ತಗೊಳಿಸಿತು ಎಂದೇ ಹೇಳಬೇಕು. ಅಮ್ಮನಮ್ಮನ ಮನೆ ಮುಂಡಾಜೆಯ ಶಾಲೆ, ಸೋದರತ್ತೆಯ ಊರು - ಮಡಿಕೇರಿಯ ಶಾಲೆ ಎಂದೆಲ್ಲ ಎಳೆದಾಡಿ ಎಸ್ಸೆಸ್ಸೆಲ್ಸಿಗೆ ಪೂರ್ಣ ವಿರಾಮ ಕಂಡಿತು. ಅಜ್ಜ ಕಾಲಧರ್ಮದಂತೆ ಆಕೆಯ ವಿದ್ಯಾನ್ವೇಷಣೆ ಬಿಟ್ಟು, ವರಾನ್ವೇಷಣೆ ನಡೆಸಿದರು. ಆ ಬಿಡುವಿನಲ್ಲಿ
‘ದೊಡ್ಡಮನೆಯ’ ಕೆಲಸಗಳೊಂದನ್ನೂ ಬಿಡದೆ, ಖಾಸಗಿಯಾಗಿ ಹಿಂದಿ ಕಲಿತು, ಉನ್ನತ ಹಂತದ ಪರೀಕ್ಷೆಗಳನ್ನು ಪಾರು ಮಾಡಿದ್ದಳು. ಅಣ್ಣನೊಡನೆ ಕಸರತ್ತು, ತಮ್ಮ ಗೋವಿಂದನೊಡನೆ ಪ್ರಯೋಗ ಮತ್ತು ‘ಸಾಹಿತ್ಯ ಕೃಷಿ’, ಮನೆಯ ದೊಡ್ಡ ಗ್ರಂಥಾಲಯವನ್ನು ಸೂರೆಗೊಂಡದ್ದು ಎಂದೆಲ್ಲ ಆಗೀಗ ಅಮ್ಮ ಹೇಳಿಕೊಂಡದ್ದು ನೆನಪಾಗುತ್ತದೆ. ಕೊನೆಯಲ್ಲಿ ಯಾವುದೇ ಪೂರ್ವ ಒಲವು ಅಥವಾ ಸೂಚನೆ ಇಲ್ಲದೆ, ಹೆಚ್ಚು ಕಮ್ಮಿ ಒಟ್ಟೊಟ್ಟಿಗೇ ಬೆಳೆದ ಸೋದರತ್ತೆಯ ಮಗನಿಗೇ (ನನ್ನಪ್ಪ) ಕೊಟ್ಟು ಮದುವೆಯೇ ನಡೆದಿತ್ತು.

ಏಕಮಾತ್ರ ಅಣ್ಣ, ಕೊನೆಯ ತಮ್ಮರೊಡನೆ
ನಾವು ಮೂವರೂ ಮಕ್ಕಳು ‘ಅವತರಿಸಿ’ಯಾದಮೇಲೆ, ಅಂದರೆ ಬಳ್ಳಾರಿಯಲ್ಲಿದ್ದಾಗ ತಂದೆ ದೊಡ್ಡವರಿಗಿಬ್ಬರಿಗೆ (ಅನಂತ ಇನ್ನೂ ಮಗು) ಮನೆಪಾಠಕ್ಕೆ ಓರ್ವ ಮಾಷ್ಟರರ ನೇಮಕ ಮಾಡಿದ್ದರು. ಅಮ್ಮ ಅವರ ಬಳಿ ಸ್ವಾಂತ ಸುಖಾಯ ಇಂಗ್ಲಿಷ್ ಪಾಠ ಹೇಳಿಸಿಕೊಳ್ಳುತ್ತಿದ್ದಳು! ನಾವು ಮೈಸೂರಿನಲ್ಲಿದ್ದಾಗ ಅಮ್ಮ ಸಂಜೆಯ ವೇಳೆಯಲ್ಲಿ ಒಂದೆರಡು ಗೆಳತಿಯರನ್ನು ಮನೆಯಲ್ಲೇ ಜತೆ ಮಾಡಿಕೊಂಡು, ಕರ್ನಾಟಕ ಸಂಗೀತದ ಹಿರಿಯ ಕಲಾವಿದರೊಬ್ಬರನ್ನು ಕರೆಸಿಕೊಂಡು ಒಂದೆರಡು ವರ್ಷಗಳೇ
ಪಾಠ ಹೇಳಿಸಿಕೊಂಡದ್ದೂ ಇತ್ತು. ಹೆಚ್ಚು ಕಮ್ಮಿ ಉಸಿರಿನ ಕೊನೆಯವರೆಗೂ ಆಕೆಯ ಓದಿನ ದಾಹ ಹಿಂಗಿದ್ದೇ ಇಲ್ಲ. ಪತ್ರಿಕೆ, ನಿಯತಕಾಲಿಕಗಳಂತೂ ಖಾಯಂ ಸ್ನೇಹಿತರು. ವಿಶೇಷ ಪುಸ್ತಕಗಳು, ಲೇಖನಗಳನ್ನು ಓದಿ, ಸ್ವಂತ ಅನುಷ್ಠಾನಕ್ಕೆ ತರಲು ಹೆಣಗುತ್ತ, ಆಪ್ತರೆಲ್ಲರಲ್ಲಿ ಪ್ರಚುರಿಸುತ್ತ (ಪುಸ್ತಕ ಕೊಟ್ಟು ಕಳೆದುಕೊಂಡದ್ದಕ್ಕೆ ಲೆಕ್ಕ ಇಲ್ಲ!) ಪಡುತ್ತಿದ್ದ ಸಂತೋಷ ಅಗಣಿತ. ಆ ಲೇಖನದ ಕರ್ತೃಗಳು ಪರಿಚಿತರೇ ಇದ್ದರೆ, ಅವರು ಸಿಕ್ಕಾಗ, ಓದಿನ ತುಣುಕುಗಳನ್ನು ಮೆಲುಕುತ್ತ ಅವರನ್ನು ಕುಶಿಪಡಿಸುವುದರಲ್ಲಿ ಬಹಳ ಸುಖ ಕಾಣುತ್ತಿದ್ದಳು. ಹೀಗೆ ಕೆಲವು ಸಲ ನಾಗೇಶ ಹೆಗಡೆ, ರಹಮತ್ ತರೀಕೆರೆಯೇ ಮುಂತಾದ ಅನೇಕ ಲೇಖಕ ಮಾನ್ಯರಿಗೂ ಅಮ್ಮ ದೂರವಾಣಿಸಿ ಅಭಿನಂದನೆಗಳನ್ನು ತಿಳಿಸಿದಾಗ, ನಮಗೆ ನಮ್ಮ ಓದಿನ ಬಗ್ಗೆ ಕೀಳರಿಮೆಯುಂಟಾಗುತ್ತಿತ್ತು! 

ಅಮ್ಮ ತನ್ನ ಓದಿನ ತಿಳುವಳಿಕೆಯನ್ನು ಸಿಕ್ಕಿದವರಲ್ಲೆಲ್ಲ ಹಂಚಿಕೊಂಡು, ನಿಜದಲ್ಲಿ ಕನ್ನಡ ಮನಸ್ಸು ಕಟ್ಟುವ ಕೆಲಸ ಮಾಡುತ್ತಿದ್ದಳು. ಆದರೆ ಹಾಗೆಂದು, ಎಂದೂ
ತನ್ನ ಯಾವುದೇ ಅಭಿಪ್ರಾಯಗಳನ್ನು ಅನ್ಯರು ಒಪ್ಪಬೇಕೆಂದು ಒತ್ತಾಯಿಸಿದ್ದಿಲ್ಲ. ಅಮ್ಮನ ಖಾಸಾ ಸೊಸೆಯಂದಿರು, ಅಂದರೆ, ಮೊದಲ ಇಬ್ಬರಾದ (ನನ್ನ) ದೇವಕಿ ಮತ್ತು (ಆನಂದನ) ಜಯಶ್ರೀ ಕೇವಲ ವಿಶೇಷ ಸಂದರ್ಭಗಳಲ್ಲಿ ಅಥವಾ ಆಗೀಗ ಕೆಲವೇ ದಿನಗಳ ಬಿಡುವಿನಲ್ಲಷ್ಟೇ ಅಮ್ಮನ ಒಡನಾಡಿದವರು. ಮೂರನೆಯಾಕೆ, ಮೈಸೂರಿನಲ್ಲಿ ಅಪ್ಪ ಅಮ್ಮಂದಿರ ಜತೆಗೇ ಇದ್ದ ಅನಂತನ ಹೆಂಡತಿ ರುಕ್ಮಿಣಿಯ ಸ್ಥಿತಿ ಹಾಗಲ್ಲ. ಹೋಲಿಕೆಯಲ್ಲಿ ಇವರಿಬ್ಬರಿಗಿಂತ ಎಳೆಪ್ರಾಯದಲ್ಲೂ ಕಡಿಮೆ ಲೋಕಾನುಭವದಲ್ಲೂ ಸೊಸೆಯಾಗಿ ಬಂದವಳು ಮತ್ತು ಮಾವ ಅತ್ತೆಯರ ಜತೆಯಲ್ಲೇ ಸಂಸಾರ ಕಟ್ಟಿಕೊಳ್ಳುವ ಸವಾಲು ಎದುರಿಸಿದವಳು ಆಕೆ. (ರುಕ್ಮಿಣಿ ಮಾಡಿಕೊಂಡ ಅತ್ತೆಯ ಸ್ಮರಣೆಯನ್ನು ನೀವು ಇಲ್ಲಿ ಓದಬಹುದು: ಲಕ್ಷಮ್ಮ ರೈಲು ಹತ್ತಿ ಹೋಗಿಯೇಬಿಟ್ಟರು) ಅಂಥ ರುಕ್ಮಿಣಿಯ ತ್ಯಾಗವನ್ನು ಸಣ್ಣಮಾಡದೆ ಹೇಳುವುದಾದರೆ, ಅಮ್ಮ ಸೊಸೆಯಂದಿರ ಮೇಲೂ ತನ್ನ ಅಭಿಪ್ರಾಯಗಳನ್ನು ಅಧಿಕಾರಯುತವಾಗಿ ಹೇರಿದ್ದು ಇಲ್ಲ. ಈಚಿನ ಒಂದೆರಡು ವರ್ಷ, ಅಂದರೆ
ಆಕೆಯನ್ನು ಆರೇಳು ವರ್ಷಗಳಿಂದ ಕಾಡುತ್ತಲೇ ಬೆಳೆದು ನಿಂತ ಗಂಟುವಾತದ ನಿರಂತರ ನೋವು ಮತ್ತು ಪ್ರಾಯಕ್ಕೆ ಸಹಜವಾದ ತುಸು ಮಾನಸಿಕ ಬಳಲಿಕೆ ಹಿಂಡಿದ ಮೇಲಷ್ಟೇ ಆಕೆ ಆಗೀಗ ಸಣ್ಣ ಹಠಕ್ಕೆ ಬೀಳುವುದಿತ್ತು. ಆದರೆ ಅದೂ ಸಣ್ಣ ಅವಧಿಗೆ ಮಾತ್ರ. ಮತ್ತೆ ತನ್ನ ವೈಚಾರಿಕತೆಯನ್ನು ಜಾಗೃತಗೊಳಿಸಿಕೊಂಡು, "ನನ್ನ ದೇಹದ ನೋವು, ಬಳಲಿಕೆಯಲ್ಲಿ ಏನೇನೋ ಮಾತಾಡಿಬಿಡುತ್ತೇನೆ..." ಎಂದು ಹೇಳಿಕೊಳ್ಳುತ್ತಿದ್ದಾಗ ಆಕೆಗಿಂತ ಹೆಚ್ಚಿಗೆ ಕೇಳುವವರಿಗೇ ಪಶ್ಚಾತ್ತಾಪವಾಗುತ್ತಿತ್ತು. 

ತಂದೆ "ದೇವರು ಮತ್ತು ಪ್ರಯಾಣ ನನ್ನ ವೈರಿಗಳು" ಎಂದೇ ಆಗೀಗ ಹೇಳಿಕೊಳ್ಳುವುದಿತ್ತು. (ಮತ್ತು ಕೊನೆಯವರೆಗೂ ನಡೆದುಕೊಂಡರು, ಬಿಡಿ.) ಆದರೆ ಅಮ್ಮನಿಗೆ ಎರಡೂ ಪ್ರಿಯವೇ! ತಂದೆ ಎನ್ಸಿಸಿ ಅಧಿಕಾರಿಯಾಗಿ ಅನಿವಾರ್ಯವಾಗಿ ನಡೆಸಿದ ಪರ್ವತಾರೋಹಣವೇ ಮುಂತಾದ ಚಟುವಟಿಕೆಗಳ ಅನುಭವ ಕಥನ ಬರೆದಾಗ (ಕುದುರೆಮುಖದೆಡೆಗೆ, ಎನ್ಸಿಸಿ ದಿನಗಳು, ಸವಾಲನ್ನು ಎದುರಿಸುವ ಛಲ ಇತ್ಯಾದಿ) ಮೊದಲ ಓದುಗಳು ನನ್ನಮ್ಮ. ಅಷ್ಟೇ ಏನು, ತಂದೆಯ ಎಲ್ಲ ಸಾಹಿತ್ಯ ಕೃತಿಗಳಿಗೂ - ಗಣಿತೀಯ ಗಹನತೆ, ತಾಂತ್ರಿಕ ವಿವರಗಳ ಕ್ಲಿಷ್ಟತೆಗಳಿದ್ದ ವಿಜ್ಞಾನ ಸಾಹಿತ್ಯಗಳಿಗೆ ಪ್ರವೇಶವಿಲ್ಲದ್ದರಿಂದ ಪೂರ್ಣ ಗ್ರಹಿಸಲಾಗದಿದ್ದರೂ ಇಷ್ಟದಿಂದ ಪ್ರಥಮ ಓದುಗಳಾಗಿ ಒಡ್ದಿಕೊಳ್ಳುತ್ತಿದ್ದವಳು ಅಮ್ಮನೇ. 

ಅಮ್ಮ ತನ್ನ ಪ್ರವಾಸಪ್ರಿಯತೆಯನ್ನು ಮಕ್ಕಳ, ಅದರಲ್ಲೂ ಮುಖ್ಯವಾಗಿ ಆನಂದನ ವೃತ್ತಿ ನೆಲೆಗಳನ್ನು ನೋಡುವಲ್ಲಿ, ಸಂಬಂಧ ಮತ್ತು ಮಿತ್ರ ಬಳಗದ
ಮಿತ ಅವಕಾಶಗಳಲ್ಲಿ ವಿಶೇಷ ಆರ್ಥಿಕ ಹೊರೆಯಾಗದ ಎಚ್ಚರದಲ್ಲಿ ಸುಮಾರು ಪೂರೈಸಿಕೊಂಡಿದ್ದಳು. ಅಸ್ಸಾಂ, ರಾಜಸ್ತಾನ, ಅಮೆರಿಕಾ ಆನಂದನ ಲೆಕ್ಕದಲ್ಲಿ ಆಕೆಗೆ ದಕ್ಕಿದ್ದು ಬಹಳ ಸಂತೋಷ ಕೊಟ್ಟಿತ್ತು. ತಂದೆಯ ಕಾರ್ಯನಿಮಿತ್ತದ (ಮೊದಲು ಒಂದೆರಡು ಬಾರಿ ಎಂ.ಎಸ್.ಐ.ಎಲ್ ಲೆಕ್ಕದಲ್ಲಾದರೆ, ಧರ್ಮಸ್ಥಳ ವಿದ್ಯಾಸಂಸ್ಥೆಗಳ ಕುರಿತ ಲೇಖನಕ್ಕೆ ಓಡಾಟ) ಕರ್ನಾಟಕ ತಿರುಗಾಟ, ತಂದೆಗೆ ಬಂದ ಶಿವರಾಮ ಕಾರಂತ ಪ್ರಶಸ್ತಿಯ ನೆಪದಲ್ಲಿ ದಿಲ್ಲಿ ಭೇಟಿಯೂ ಅಮ್ಮನ ಸವಿನೆನಪುಗಳಲ್ಲಿ ಮುಖ್ಯವಾದವೇ. ದಿಲ್ಲಿ ಯಾನದ ಕಾಲದಲ್ಲಿ ಪ್ರಾಯಸಂದ ಅವರಿಬ್ಬರ ಧೈರ್ಯಕ್ಕೆ ನಾನೂ ಜತೆಗೊಟ್ಟಿದ್ದೆ. ಆಗ ದಿಲ್ಲಿಯಲ್ಲಿ, ದೂರವಾಣಿ ಇಲಾಖೆಯ ರಾಷ್ಟ್ರೀಯ ಮಟ್ಟದ ಹಿರಿಯ ಅಧಿಕಾರಿಯಾಗಿದ್ದವರು ಮೈಸೂರಿನವರೇ ಆದ ಗೋಪಿನಾಥ್. ಅವರು ತಂದೆಯ ಮೇಲಿನ ಅಭಿಮಾನದಲ್ಲಿ, ನಮಗಿದ್ದ ಬಿಡುವಿನ ಒಂದು ದಿನಕ್ಕೆ ತನ್ನ ವೈಯಕ್ತಿಕ ಕಾರು ಮತ್ತು ಚಾಲಕನನ್ನೂ ಕೊಟ್ಟು "ಏನಾದರೂ ನೋಡಿ ಬನ್ನಿ" ಎಂದಿದ್ದರು. ಆಗ
ರಾಂಚಿ, ಹರಿದ್ವಾರಗಳ ಲಕ್ಷ್ಯ ನಿಶ್ಚಯಿಸಿದ್ದು ಅಮ್ಮ. ಎಲ್ಲಕ್ಕೂ ಮುಖ್ಯವಾಗಿ ವಿಶೇಷ ಯಾವುದೇ ಪ್ರವಾಸ ಮಾಡದ, ಊರೊಳಗಿನ ಬಂಧುಮಿತ್ರರ ಕೂಟಗಳಿಗೂ ಸ್ವತಂತ್ರವಾಗಿ ಹೋದ ಅನುಭವ ಇರದ ಉಡುಪಿಯ ಬೀಗೆತ್ತಿ (ಆನಂದನ ಅತ್ತೆ) - ಸುಮತಿ, ಮೈಸೂರಿನ ಗೆಳೆತಿಯರಾದ ಶಾರದಮ್ಮ ಮತ್ತು ಗಿರಿಜಮ್ಮರಿಗೆ ಬಹುಸಮರ್ಥ ನಾಯಕತ್ವ ಕೊಟ್ಟು, ವಿಕ್ರಮ್ ಟ್ರಾವೆಲ್ಸಿನವರ ಉತ್ತರ ಭಾರತ ಪ್ರವಾಸ ಕೈಗೊಂಡದ್ದಂತೂ ನಾಲ್ಕೂ ಜನಕ್ಕೆ ಸದಾ ಸ್ಮರಣೀಯ. (ಇಂದು ಗಿರಿಜಮ್ಮರನ್ನು ಹಿಂದೆ ಬಿಟ್ಟು, ಮೂವರೂ ಪರಲೋಕಯಾತ್ರೆಗೆ ಹೋಗಿಬಿಟ್ಟಿದ್ದಾರೆ!) ಅಮ್ಮ ಆ
ಪ್ರವಾಸದ ಮಾಹಿತಿಗಳನ್ನು ಕೇವಲ ಕಚ್ಚಾ ಟಿಪ್ಪಣಿಗಳ ಮೂಲಕ ದಾಖಲಿಸಿಕೊಂಡಿದ್ದಳು. ಆದರೆ ಪೂರ್ಣ ಪ್ರವಾಸ ಕಥನವಾಗಿ ವಿಸ್ತರಿಸಲು ಆಕೆಗೆ ಬಿಡುವು ಒದಗಲೇ ಇಲ್ಲ. ನಾನು ಆ ಪುಟಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದೇನೆ ಮತ್ತು ಮುಂದೊಂದು ದಿನ ನನ್ನ ಉತ್ತರಭಾರತ ಪ್ರವಾಸ ಕಥನದೊಡನೆ ಬೆಸೆದು ಪ್ರಕಟಿಸುವ ಯೋಚನೆ ಇದೆ. 

ನನ್ನ ತಂದೆ, ಮತ್ತವರ ತಂದೆ (ಅಜ್ಜ) ಬಹುತೇಕ ನಿರೋಗಿಗಳು, ಕೆಲವೊಮ್ಮೆ ದುಡುಕು ಎನ್ನುವಷ್ಟೂ ಧೈರ್ಯಸ್ಥರು. ನನ್ನಮ್ಮನ ಅಪ್ಪ ಹೇಳಿಕೊಳ್ಳುವಂತ
ಖಾಯಿಲಸ್ತರೇನೂ ಆಗಿರಲಿಲ್ಲ, ಆದರೆ ದೈಹಿಕ ಪೀಡೆಗಳ ಭಯ ಸ್ವಲ್ಪ ಹೆಚ್ಚು! ಅಮ್ಮ ಶೈಶವದಿಂದಲೇ ಎರಡೂ ಮುಖಗಳನ್ನು ಅನಿಭವಿಸಿದವಳೇ (ನೆನಪಿದೆಯಲ್ಲಾ ಸೋದರಿಕೆ ಸಂಬಂಧ) ಆದ್ದರಿಂದ ಹಿತಮಿಶ್ರಣವಾಗಿಯೇ ರೂಪುಗೊಂಡಿದ್ದಳು. ಆಕೆ ತಂದೆಯದೂ ಸೇರಿದಂತೆ ನಮ್ಮ ಯಾವುದೇ ‘ಸಾಹಸ’ಗಳನ್ನು ತಡೆಯುತ್ತಿರಲಿಲ್ಲ. ಆದರೆ ಕೆಲವೊಮ್ಮೆ ವಿಪರೀತ ಎನ್ನುವಷ್ಟು ಎಚ್ಚರಿಕೆ ಹೇಳುತ್ತಿದ್ದಳು, ಮತ್ತೆ ತನ್ನ ಧೈರ್ಯಕ್ಕೆ (ನಮ್ಮನ್ನು ಬದ್ಧರನ್ನಾಗಿಸದೇ) ಪ್ರಾರ್ಥನೆ, ವ್ರತ, ಹರಿಕೆಗಳನ್ನು ಅವಶ್ಯ ಮಾಡುತ್ತಿದ್ದಳು. ಕಾಡು, ಬೆಟ್ಟಗಳಿಗೆ ಹೋಗಿ ಸಕಾಲಕ್ಕೆ ಮರಳಿದಾಗ ಕಣ್ಣಲ್ಲಿ
ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಳು. ಅಮ್ಮನ ಪ್ರಾರ್ಥನೆಗಳು ಫಲಿಸದಿರಬಹುದು, ಆದರೆ ಅಮ್ಮನ ಭಾವನೆ ನಮಗೆ ನೈತಿಕ ಬಲ ಕೊಡುತ್ತಿದ್ದದ್ದಂತೂ ನಿಶ್ಚಯ. ನಾನು ಸೈನ್ಯಕ್ಕೆ, ಐಪೀಯೆಸ್ ಮೂಲಕ ಪೊಲಿಸ್ ಸೇವೆಗೆ ಸೇರುವ ಪ್ರಯತ್ನಗಳನ್ನು ನಡೆಸಿದ್ದಿತ್ತು. ಅಮ್ಮನಿಗೆ ಸ್ಪಷ್ಟವಾಗಿ ತಂದೆ, ಚಿಕ್ಕಪ್ಪಂದಿರು (ಈಶ್ವರ) ಪಡೆದ ಸೇನಾಸೇವೆಯ ಕಹಿ ತಿಳಿದಿತ್ತು. ಪೋಲಿಸ್ ಸೇವೆಯ ಅನ್ಯಾಯ ಕಥನಗಳು ಹಲವು ಅಮ್ಮನ ನೆನಪಿನ ಕಡತದಲ್ಲಿದ್ದವು. ಆದರೆ ಆಕೆ ತಪ್ಪಿಯೂ "ನಿನಗದೆಲ್ಲ ಬೇಡ" ಎನ್ನಲಿಲ್ಲ. ಕೊನೆಯಲ್ಲಿ ನಾನು ಸ್ವತಂತ್ರವಾಗಿ ಪುಸ್ತಕ ವ್ಯಾಪಾರಿಯಾಗುತ್ತೇನೆಂದಾಗ
ಎಷ್ಟೋ ಸಂಬಂಧಿಗಳೂ ಕುಟುಂಬ ಮಿತ್ರರೂ ಹೇಳಿದ್ದಿತ್ತು "ಏನು ನಾರಾಯಣನಿಗೆ ಅಶೋಕನಿಗೊಂದು ಲೆಕ್ಚರರ್ ಕೆಲಸ ಕೊಡಿಸುವುದಕ್ಕಾಗಲಿಲ್ಲವೇ?" ಆದರೆ ಅಮ್ಮ ಮಾಡಿದ್ದೇನು? ಅಂಗಡಿ ತೆರೆಯುವ ಹಿಂದಿನ ದಿನ, ಬಲ್ಮಠದ ಬಾಡಿಗೆ ಮಳಿಗೆಯಲ್ಲಿ, ನನ್ನ ಸಹಾಯಕ್ಕೆಂದೇ ತಿಂಗಳ ಕಾಲ ರಜೆ ಮಾಡಿ ಬಂದಿದ್ದ ತಂದೆ, ನಾನು, ಕೆಲಸದ ಹುಡುಗ ನೂರಾರು ಪುಸ್ತಕಗಳ ಕಟ್ಟುಗಳನ್ನು ಬಿಡಿಸುವುದು, ತನಿಖೆ ಮಾಡುವುದು, ಜೋಡಿಸುವುದರಲ್ಲಿ ತಲ್ಲೀನರಾಗಿದ್ದೆವು. ಅಮ್ಮ ಪುತ್ತೂರಿನಿಂದ ಅಣ್ಣ, ಪುರೋಹಿತರು ಮತ್ತು ಪೂಜಾ ಸಾಮಾಗ್ರಿಗಳನ್ನು ಜೋಡಿಸಿಕೊಂಡು ಬಂದು, ಮಳಿಗೆಯ
ಒಂದು ಮೂಲೆಯಲ್ಲಿ ಸಣ್ಣದಾಗಿ ಏನೋ ಪೂಜೆಯೋ ಹೋಮವೋ ಮಾಡಿಸಿ, ನಮಗೆಲ್ಲ ತೀರ್ಥ ಪ್ರಸಾದ ಕೊಡಿಸಿ ಸಂತೋಷಿಸಿದಳು.

ಅಮ್ಮನಿಗೆ ಆನಂದನ ಬೆನ್ನಿಗೊಂದು ಹೆಣ್ಣು ಶಿಶು (ಪುತ್ತೂರು) ತವರ್ಮನೆಯಲ್ಲೇ ಆಗಿತ್ತು. ಅದರ ಬಾಣಂತಿತನ ಪೂರೈಸುವ ಮುನ್ನ, ಅಂದರೆ ಎರಡೇ ತಿಂಗಳಲ್ಲಿ ಅಮ್ಮ, ಆ ಎಳೆ ಜೀವವನ್ನು ಅವುಚಿಕೊಂಡು, ತಪ್ಪಡಿಯಿಡುತ್ತಿದ್ದ ಎಳೆಯ ಆನಂದನನ್ನು ಸಾವರಿಸಿಕೊಂಡು, ಭೀಕರ ಮಳೆ ಚಳಿಗಳ ಮಡಿಕೇರಿ ಮನೆಗೆ ಧಾವಿಸಲೇಬೇಕಾಯ್ತು. ಕಾರಣ ಇಷ್ಟೇ:
"Duty First" (ಕಾಲೇಜ್ ಅಧ್ಯಾಪಕ ವೃತ್ತಿ!) ಎಂದೇ ಕಠಿಣವಾಗಿ ಸಾರುತ್ತಿದ್ದ ತಂದೆಗೆ, ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ನಾನು, ಶಿಕ್ಷಣಕ್ಕೆಂದೇ ನಮ್ಮ ಮನೆಯಲ್ಲಿದ್ದ ಮೂರ್ನಾಲ್ಕು ಸೋದರ, ಸೋದರಿಯನ್ನು (ಮೂರ್ತಿ-?, ರಾಘವೇಂದ್ರ, ಸರಸ್ವತಿ ಮತ್ತು ದಿವಾಕರ) ಅಡುಗೆ, ಮನೆಗೆಲಸಗಳೊಂದಿಗೆ ಸುಧಾರಿಸುವುದು ಅಸಾಧ್ಯವೆನಿಸಿತ್ತು. ಹೊರ ಕೆಲಸಗಳಿಗೇನೋ ಒಬ್ಬ ಹೆಣ್ಣು - ಬಹುಶಃ ರುಕ್ಮಿಣಿ ಎನ್ನುವಾಕೆ, ಬಂದು ಹೋಗುತ್ತಿದ್ದಳು. ಆದರೆ ಅಡುಗೆ ಮತ್ತು ಪೂರ್ಣಾವಧಿ ಮನೆ ನೋಡಿಕೊಳ್ಳಲು ಜನ ಮಾಡಲು ತಂದೆಗೆ ಬರುತ್ತಿದ್ದ ಸಂಬಳ ಸಾಲುತ್ತಿರಲಿಲ್ಲ. ಹಾಗೆ
ಬಂದ ಅಮ್ಮ ವೈಯಕ್ತಿಕವಾಗಿ ಎಷ್ಟೆಲ್ಲ ಕಷ್ಟಪಟ್ಟಳು ಎಂದು ಬುದ್ಧಿ ಬೆಳೆದ ಮೇಲೆ ನಾವು ಮಕ್ಕಳು ಅಥವಾ ಮುಂದೆ ಸೊಸೆಯಂದಿರಾದಿ ಯಾರು ಕೇಳಿದಾಗಲೂ ಸೂಚ್ಯವಾಗಿ ಹೇಳುತ್ತಿದ್ದಳೇ ವಿನಾ ವಿವರವಾಗಿ ಹಾಡಿ ಅತ್ತದ್ದಿಲ್ಲ. (ತಂದೆ ಆತ್ಮಕಥಾನಕದಲ್ಲಿ ಇದನ್ನೇ ಬೆರಗಿನಲ್ಲಿ, ‘ಕರುಣಾಳು ರಾಘವನಲ್ಲಿ ತಪ್ಪಿಲ್ಲ’ ಎಂಬ ಭಾವ ಎಂದೇ ಎಲ್ಲೋ ದಾಖಲಿಸಿದ್ದಾರೆ! ನೋಡಿ: ಅತ್ರಿ ವೃಕ್ಷದ ಬೀಜವಾಪನೆ) ಆದರೆ ತೀರಾ ಆತ್ಮೀಯ ಕೂಟದ, ವಿರಾಮದ ಮಾತುಗಳಲ್ಲಿ "ಆ ದಿನಗಳಲ್ಲಿ ನಿಮ್ಮಪ್ಪ ಮನೆ ಕಡೆಗೆ ಸ್ವಲ್ಪ ಹೆಚ್ಚು ಗಮನ ಹರಿಸಿದ್ದರೆ, ಆ ಹೆಣ್ಣು ಶಿಶು - ಇಂದಿರಾ, ಬರಿಯ ನ್ಯುಮೋನಿಯಾದಲ್ಲಿ ಅಕಾಲ ಮರಣ ಕಾಣುತ್ತಿರಲಿಲ್ಲ" ಎನ್ನುವುದಿತ್ತು! Duty ಅಂದರೆ ಆರ್ಥಿಕ ಗಳಿಕೆಗಾಗಿ ವೃತ್ತಿ, ಎಂದಷ್ಟೇ ಅರ್ಥ ಅಲ್ಲವಲ್ಲ. (ಇದು ಅಪ್ಪನ ಮೇಲಿನ ಆರೋಪಪಟ್ಟಿಯಲ್ಲ. ಅವರೂ ಎಲ್ಲ ಮಾನವೀಯತೆಯೊಡನೆ ಕಾಲಧರ್ಮದ ಬಂಧನದಲ್ಲಿದ್ದವರೇ.) 

ಅಮ್ಮ ಹುಟ್ಟು ಮತ್ತು ಒಡನಾಟಗಳಿಂದ ರೂಢಿಸಿದ ತನ್ನ ‘ಹವ್ಯಕ ಬ್ರಾಹ್ಮಣತ್ವ’ ಬಗ್ಗೆ ಸದಾ ಪ್ರೀತಿ, ಹೆಮ್ಮೆ ಇಟ್ಟುಕೊಂಡಿದ್ದಳು. ಅದರ ಕುರಿತು ತನಗೆ ದಕ್ಕಿದ ಸಂಸ್ಕಾರಗಳನ್ನು ನಿಷ್ಠೆಯಿಂದಲೇ ಪಾಲಿಸಿಕೊಂಡೂ ಬಂದಳು. ಮನೆಯ ಹೊರಗೆಲಸಕ್ಕೆ ಬರುತ್ತಿದ್ದವರನ್ನಾಗಲೀ (ಅನ್ಯ ಜಾತಿ) ತಾನೇ ಮುಟ್ಟಾದಾಗಾಗಲೀ (ಮೈಲಿಗೆ ಎಂದು ನಮ್ಮನ್ನು ಮುಟ್ಟುತ್ತಿರಲಿಲ್ಲ, ಸ್ವತಃ ಅಡುಗೆ ಮತ್ತು ದೇವರಕೋಣೆಗಳಿಗೆ ಬರುತ್ತಿರಲಿಲ್ಲ) ಅಮ್ಮ ಅಡುಗೆಮನೆ/ ದೇವರಕೋಣೆಗೆ ಬಿಟ್ಟುಕೊಂಡದ್ದಿಲ್ಲ. ಹಾಗೆಂದು ಕೆಲಸದವಳ ಮುಟ್ಟನ್ನೂ ಯಾರದ್ದೇ ಜಾತಿಯನ್ನೂ ಕೆಟ್ಟ ದೃಷ್ಟಿಯಿಂದ ಅಮ್ಮ ವಿಚಾರಿಸಿದ್ದಿಲ್ಲ. ಅಮ್ಮನ ದೇವನಂಬಿಕೆ ತೀರಾ ಉದಾರವಾದದ್ದು. ಬೆಂಗಳೂರಿನಲ್ಲಿ ನಾನು ಆನಂದ
ಶಾಲಾಬಾಲಕರಾಗಿದ್ದಾಗ ಚೌತಿ ಸಂಭ್ರಮಕ್ಕಾಗಿ ‘ಗಣಪತಿ’ ಇಡುವುದನ್ನು ನಡೆಸಿದೆವು. ಅಮ್ಮ ನಮ್ಮ ಮಕ್ಕಳಾಟಕ್ಕೆ ಭಕ್ತಿಯ ಸ್ಪರ್ಷ ಕೊಟ್ಟು ನಡೆಸಿಕೊಂಡಳು. ಮುಂದೆ ನಾವಾಗಿಯೇ ಅದನ್ನು ಬಿಟ್ಟಾಗ, ಅಮ್ಮ ಒಪ್ಪಿಕೊಂಡಳೇ ವಿನಾ ನಮಗೆ ವ್ರತಭಂಗದ ಹೆದರಿಕೆ ಹುಟ್ಟಿಸಲಿಲ್ಲ. ಅಮ್ಮ ನಮ್ಮೂವರಿಗೂ ತಂದೆಯನ್ನು ಒಲಿಸಿಕೊಂಡು ಉಪನಯನ ಸಂಸ್ಕಾರವನ್ನೇನೋ ಕೊಡಿಸಿದಳು. ಆದರೆ ನಾವು ಮೊದಲಲ್ಲೇ ನಿಯತ ಸಂಧ್ಯಾವಂದನೆ ತಪ್ಪಿಸಿದಾಗ, ಕೊನೆಗೆ ತೋರಿಕೆಯ ಜನಿವಾರವನ್ನೂ ಬಿಟ್ಟಾಗ, ಕುಟುಂಬದೊಳಗಿನ ಮಂಗಳ ಕಲಾಪಗಳಲ್ಲಿ ನಿರೀಕ್ಷಿತ ಪ್ರಕ್ರಿಯೆಗಳಲ್ಲಿ ಸೇರಿಕೊಳ್ಳದಿದ್ದಾಗ....... ಅಮ್ಮ ಗೊಣಗಿದ್ದುಂಟು, ಹೇರಿದ್ದಿಲ್ಲ. ಕೊನೆಯವ ಅನಂತ, ಸ್ವಂತ ವಿವೇಚನೆಯಲ್ಲಿ ಕೆ. ಹೆಮ್ಮನ ಹಳ್ಳಿಯ ಮಹಾಲಿಂಗೇಶ್ವರ ದೇವಸ್ಥಾನವನ್ನು ವಹಿಸಿಕೊಂಡಾಗ (ನೋಡಿ: ಮಹಾಲಿಂಗೇಶ್ವರರಿಗೆ ಜಯವಾಗಲಿ!) ಅಮ್ಮನಷ್ಟು ಪ್ರಾಮಾಣಿಕ ಸಂಭ್ರಮ ಸ್ವತಃ ಅನಂತನೂ ಪಟ್ಟಿಲ್ಲ!

ಹೆಂಡತಿ ಹುಡುಕಿಕೊಳ್ಳುವ ಪ್ರಯತ್ನವನ್ನು (ಪ್ರೇಮಕ್ಕೆ ಬೀಳದೇ) ನಾವು ಮೂವರೂ ಮಕ್ಕಳು, ಸಕಾಲದಲ್ಲಿ ಅಮ್ಮನಿಗೇ ಬಿಟ್ಟಿದ್ದೆವು. ನಮ್ಮೂವರಿಗೆ ಹೆಣ್ಣು ಹುಡುಕುವಲ್ಲಿ ಮತ್ತೆ ಕೇಳಿ ಬಂದ ಸಂಬಂಧಿಕರೊಳಗೆ ಪರಿಚಿತ ಮೇಳಾಮೇಳಿ ಶಿಫಾರಸು ಮಾಡುವ ಅವಕಾಶ ಬಂದಲ್ಲಿ, ಅನ್ಯರನ್ನು ಗುರುತಿಸುವಲ್ಲೂ ಅಮ್ಮ ಹವ್ಯಕತನಕ್ಕೆ ಪ್ರಾಶಸ್ತ್ಯವನ್ನು ಮರೆತದ್ದಿಲ್ಲ. ಆದರೆ ಎಂದೂ ಯಾವುದೇ ಅನ್ಯ ಜಾತಿ, ಸಂಸ್ಕಾರಗಳನ್ನು ಆಕೆ ಕೀಳಾಗಿ ಕಂಡದ್ದಿಲ್ಲ. ತನ್ನ ಶಕ್ತ್ಯಾನುಸಾರ ಅವರ ಕೆಲಸಗಳನ್ನು ಮಾಡಿಕೊಡುವುದಾಗಲೀ ಅವರಿಂದ ಸೇವೆ ಪಡೆಯುವುದಕ್ಕಾಗಲೀ ಹಿಂಜರಿದದ್ದೂ ಇಲ್ಲ. ಕುಟುಂಬ ಸ್ನೇಹಿತರಾದ ಕೊಡವರೋರ್ವರ ಮಗಳು, ಅಮ್ಮನಿಗೆ ನಮ್ಮನೆಯದೇ ಹುಡುಗಿ. ಅವಳ ಪ್ರೇಮವಿವಾಹ ಅಯ್ಯಂಗಾರ್ಯರ ಹುಡುಗನೊಂದಿಗೆ ಎಂದಾದಾಗ, ಉಭಯ ಕುಟುಂಬಗಳನ್ನು ಒಪ್ಪಿಸಿದ್ದಲ್ಲದೇ ಅವರಿಗೆ ನೈತಿಕ ಬೆಂಬಲ ಕೊಡುವ ಉದ್ದೇಶದಿಂದ ತಿರುಪತಿಯಲ್ಲಿ ನಡೆದ ಮದುವೆಗೂ ಜತೆಗೊಟ್ಟವಳು ನನ್ನಮ್ಮ. ಬೆಂಗಳೂರ ಬಾಡಿಗೆ ಮನೆ ಮಾಲಿಕ ಜವರೇ ಗೌಡರೋ, ಬಾಡಿಗೆ ಕಾರಿನ ಚಾಲಕ ಜಾವೀದನೋ ಅಮ್ಮನ ಆತಿಥ್ಯಕ್ಕೆ ಸಿಕ್ಕಾಗ ಸಹಜವಾಗಿ ಮನೆಯವರದೇ ಉಪಚಾರಗಳನ್ನು ಪಡೆಯುತ್ತಿದ್ದರು. ಈ ಆರೋಗ್ಯಕರ ಮನಃಸ್ಥಿತಿ ಇದ್ದುದರಿಂದಲೇ ಅಮ್ಮನಿಗೆ ಸ್ವಂತ ಮೊಮ್ಮಗಳು, ಅಂದರೆ ಆನಂದನ ಮಗಳು ಅನರ್ಘ್ಯ, ಅಮೆರಿಕಾದ ಜ್ಯಾಕ್ಸನ್ ಎಂಬ ಯುವಕನನ್ನು ಒಲಿದು ನಡೆದ ಮದುವೆಯಲ್ಲಿ, ಪೂರ್ಣ ಸಂತೋಷದಿಂದ ಭಾಗಿಯಾಗುವುದು ಸಾಧ್ಯವಾಯ್ತು.

ಅಮ್ಮನಿಗೆ ತವರುಮನೆಯ ಕಡೆಯಿಂದ ಆರೋಗ್ಯ ಕಾಳಜಿ ಸ್ವಲ್ಪ ಹೆಚ್ಚೇ ಬಂದಿತ್ತು. ಅಮ್ಮನ ಅಪಾರ ಓದಿನಲ್ಲಿ ಆರೋಗ್ಯ ಸಂಬಂಧೀ ಲೇಖನ, ಪುಸ್ತಕಗಳು ಭಕ್ತಿ ಸಾಹಿತ್ಯದಷ್ಟೇ ಪ್ರಾಮುಖ್ಯ ಪಡೆಯುತ್ತಿದ್ದವು. ತಂದೆಯ ನಿರಂತರ ಶೀತ ಪ್ರವೃತ್ತಿ - ಸೀನು, ಮೂಗು ಕಟ್ಟುವುದು ಅಥವಾ ಸೋರುವುದು, ನಿದ್ದೆಗೇಡು ಮುಂತಾದವು ಹೇಳಿಕೊಳ್ಳಲು ತೀರಾ ಸಣ್ಣ ಸಮಸ್ಯೆ. ಆದರೆ ನಿರಂತರ ಅದನ್ನು ನಿವಾರಿಸುವ ಕ್ರಮಗಳ ಹುಡುಕಾಟ ಮತ್ತು ಪ್ರಯೋಗಗಳಲ್ಲಿ ತಂದೆಯಷ್ಟೇ ಅಮ್ಮನೂ ತೊಡಗುತ್ತಿದ್ದಳು. ಇದು ಮಡಿಕೇರಿಯ ದಿನಗಳಿಂದ ತೊಡಗಿ (ದಾಂಪತ್ಯದ ಮೊದಲ ಪಾದ) ತಂದೆಯ ಕೊನೆಯ ದಿನಗಳವರೆಗೂ ನಡೆದೇ ಇತ್ತು. ಹಾಗಾಗಿ ನಮ್ಮಲ್ಲಿ ಯಾರೇ ಸೀನಿದರೂ ಏನೇ ಅಸ್ವಾಸ್ಥ್ಯ ಎಂದರೂ ಅಮ್ಮನ ಸದುದ್ದೇಶದ ಬಿಟ್ಟಿ ಸಲಹೆ ಬರುತ್ತಲೇ ಇರುತ್ತಿತ್ತು, ಚಿಕಿತ್ಸೆ ಪಥ್ಯ ತೊಡಗುತ್ತಿತ್ತು. ನನ್ನದೇ ಒಂದು ಉದಾಹರಣೆ ಹೇಳುವುದಾದರೆ, ನಾನು ಮಂಗಳೂರಿನ ಸೆಕೆಗೆ ಮನೆಯಲ್ಲಿ ಕೇವಲ ಪಂಚೆ ಸುತ್ತಿಕೊಂಡು, ಹೆಚ್ಚಾಗಿ ಬರಿಮೈ ಬಿಟ್ಟುಕೊಂಡೇ ಇರುತ್ತೇನೆ. ಹಾಗಾಗಿ ಅಪ್ಪಿ ತಪ್ಪಿ ನಾನು ಸೀನಿದ್ದು ಅಮ್ಮನಿಗೆ ಕೇಳಿದರೂ ಸಾಕು, "ಒಂದು ಬನಿಯನ್ನಾದರೂ ಹಾಕಿಕೊಳ್ಳೋ ಪುರುಷಾಮೃಗ" ಎಂಬ ಛೇಡನೆ ಬಂದೇ ಬರುತ್ತಿತ್ತು.

ತಂದೆ ಶೀತ ಪ್ರಕೃತಿಯಿಂದ ವಿಪರೀತ ದೈಹಿಕ ಹಿಂಸೆ ಅನುಭವಿಸುತ್ತಿದ್ದರಾದರೂ ಅದರ ನಿರೋಧದ ಯೋಜನೆಗಳಲ್ಲಿ ಅಮ್ಮ ಪಟ್ಟ ಪಾಡು ಖಂಡಿತಾ ಸಣ್ಣವೇನೂ ಅಲ್ಲ. ಮಡಿಕೇರಿಯ ಮಳೆಗಾಲ ಮಧ್ಯರಾತ್ರಿಗಳಲ್ಲೆದ್ದು ತಂದೆಯ ಕಟ್ಟಿದ ಮೂಗಿಗೆ ಬಿಸಿ ತುಪ್ಪದ ಬೊಟ್ಟು ಬಿಡುವಲ್ಲಿಂದ ನೂರೆಂಟು ಪ್ರಯೋಗ, ವೈದ್ಯಕೀಯ ಸಲಹೆ, ಸಲಕರಣೆಗಳೆಲ್ಲಕ್ಕೂ ಈಕೆ ಎಂದೂ ಉತ್ಸಾಹ ಕಳೆದುಕೊಳ್ಳದ ಕ್ರಿಯಾಶೀಲ ಸಂಗಾತಿ. ತಂದೆಯ ಅನಾರೋಗ್ಯದ ಒಂದು ಉತ್ತುಂಗದಲ್ಲಿ, ಅತಿಯಾಗಿ ನಂಬಿದ್ದ ವೈದ್ಯನೊಬ್ಬ ವಿಪರೀತ ಚಿಕಿತ್ಸೆ ಕೊಟ್ಟು, ತಂದೆ ಬಹುತೇಕ ಗತಪ್ರಾಣರಾಗಿದ್ದರು. ಅಮೆರಿಕದಿಂದ ಓಡಿ ಬಂದಿದ್ದ ಆನಂದನ ಸಕಾಲಿಕ ಕ್ರಮದಲ್ಲಿ ಯೋಗ್ಯ ವೈದ್ಯಕೀಯ ಚಿಕಿತ್ಸೆಗೆ ವರ್ಗಾವಣೆಯಾದ ಮೇಲೆ, ತಿಂಗಳ ಕಾಲ ತಂದೆಯನ್ನು ಆಸ್ಪತ್ರೆಯಲ್ಲಿ ಕಾದು, ಪೂರ್ಣ ಈಚೆಗೆ ತಂದುಕೊಂಡ ಅಮ್ಮನ ಸಾಹಸ ಪುರಾಣದ ಸಾವಿತ್ರಿಗೇನೂ ಕಡಿಮೆಯದ್ದಲ್ಲ.

ತಂದೆಯನ್ನು ‘ಮರಳಿ ತಂದ’ ತಪಸ್ಸಿನಲ್ಲಿ ಬಳಲಿದ ಅಮ್ಮನಿಗೆ ಗಂಟುವಾತ ತಗುಲಿಕೊಂಡಿತು. ಇದರಿಂದ ಅಮ್ಮನನ್ನು ಹಿಂತರುವಲ್ಲಿ ಮಾತ್ರ ನಮ್ಮ ಯಾವ ಪ್ರಯತ್ನಗಳೂ ಮಾರ್ಕಾಂಡೇಯ ಯಶಸ್ಸು ಕಾಣಲಿಲ್ಲ. ಅಮ್ಮನಿಗೆ ತನ್ನ ದೀರ್ಘ ಬಳಕೆಯ ಮೈಸೂರ ಪರಿಸರ ಬಿಟ್ಟು ದೀರ್ಘ ಕಾಲ ಮಂಗಳೂರೇ ಹಿಡಿಸುತ್ತಿರಲಿಲ್ಲ. (ಆನಂದನ ಅಮೆರಿಕವಂತೂ ಅಮ್ಮನ ಯೋಚನೆಗೂ ನಿಲುಕದು.) ರುಕ್ಮಿಣಿ, ಅನಂತರು ಇನ್ನಿಲ್ಲದ ಪ್ರೀತಿ ಕಾಳಜಿಗಳಲ್ಲೇ ಅಮ್ಮನನ್ನು ನೋಡಿಕೊಂಡರು. ಕಾಯಿಲೆಯ ಹೊಡೆತ ಮತ್ತು ಏರಿದ್ದ ಪ್ರಾಯದ ಬಳಲಿಕೆ ಸೇರಿಕೊಂಡಾಗ ಒಮ್ಮೊಮ್ಮೆ ಅಮ್ಮನ ಚಿಕಿತ್ಸಾ ಹಪಹಪಿಗಳು, ಚಡಪಡಿಕೆಗಳು ದಿಕ್ಕು ತಪ್ಪುವುದಿದ್ದವು. ಅವು ಇನ್ನಷ್ಟು ದೈಹಿಕ ಹಾನಿಗೆ ಕಾರಣವಾಗದಂತೆ, ಕರೆದಾಗೆಲ್ಲ ಬಂದು, ಮುಖ್ಯವಾಗಿ ಮಾನಸಿಕ ಸಮಾಧಾನ ಮತ್ತೆ ಚಿಕಿತ್ಸೆ, ಪೂರ್ಣ ಉಚಿತವಾಗಿ ನಡೆಸಿಕೊಟ್ಟ ಮಹಾತ್ಮ - ವೈದ್ಯ ಶ್ರೀನಿವಾಸ ಶರ್ಮ. ಈತ ದೂರದ ಸಂಬಂಧದಲ್ಲಿ (ಅಮ್ಮನಪ್ಪನ ದಾಯಾದಿ - ಎ.ಪಿ.ಶ್ರೀನಿವಾಸ ರಾವ್, ಅವರ ಮೊಮ್ಮಗ) ಮಾತ್ರವಲ್ಲ ನಿಜದ ಸಂಬಂಧದಲ್ಲೂ ಅಮ್ಮನಿಗೆ ಮಗನ ಸ್ಥಾನದಲ್ಲೇ ಸೇವೆ ಸಲ್ಲಿಸಿದ ಎಂದರೆ ತಪ್ಪಿಲ್ಲ. ರುಕ್ಮಿಣಿ ಅನಂತರ ಸಣ್ಣಪುಟ್ಟ ಅನಿವಾರ್ಯ ಗೈರುಹಾಜರಿಗಳ ಕಾಲದಲ್ಲಿ, ತಮ್ಮೆಲ್ಲ ಜವಾಬ್ದಾರಿಗಳನ್ನು ಸಣ್ಣದು ಮಾಡಿ ಒದಗುತ್ತಿದ್ದ ಆದ್ಯರಲ್ಲಿ ಮೈಸೂರಿನ ಆತ್ಮೀಯ ಗಳಿಕೆಯೇ ಆದ ಕಮಲಾಕ್ಷಿ ರಾಘವೇಂದ್ರ ಭಟ್ಟ ದಂಪತಿ ಪ್ರಥಮ ವಂದ್ಯರು. ಮೈಸೂರಿನಲ್ಲೇ ಇದ್ದ, ಸಂಬಂಧಿಕರುಗಳೂ ಆದ (ಅಮ್ಮನ ತಮ್ಮ ರಾಮನಾಥನ ಮಗಳು) ಕುಸುಮ, (ಇನ್ನೋರ್ವ ತಮ್ಮ ಗೋವಿಂದನ ಮಗಳು) ಲಲಿತ, (ಅಣ್ಣನ ಸೊಸೆ) ನಿರ್ಮಲರೂ ಧಾರಾಳ ಒದಗುತ್ತಿದ್ದರು. ಮತ್ತೆ ಅನಾರೋಗ್ಯದ ಉದ್ದಕ್ಕೂ ಅಮ್ಮನ ಬಹುತೇಕ ಆಪ್ತ ಕೆಲಸಗಳಿಗೆ - "ನಾನು ನಿಮ್ಮಗ್ಳಿದ್ದಂಗೆ" ಎಂದೇ ಒಪ್ಪಿಸಿಕೊಂಡು, ಒಂದು ಗೊಣಗು, ಒಂದು ಉದಾಸೀನದ ಕುರುಹೂ ಇಲ್ಲದಂತೆ ಒದಗಿದವಳು ಕೆಲಸದ ಸಿದ್ಧಮ್ಮಳ ಪಾತ್ರ ಖಂಡಿತಕ್ಕೂ ಮರೆಯುವಂತದ್ದಲ್ಲ.

ರುಕ್ಮಿಣಿ ಅನಂತರ ಸ್ವಲ್ಪ ದೀರ್ಘ ರಜಾ ಅಗತ್ಯಗಳಿಗೆ ಕೆಲವು ಬಾರಿ ಅಮ್ಮ ನಮ್ಮ ಜತೆ ಮಂಗಳೂರಿನಲ್ಲೋ ನಾವೇ ಮೈಸೂರಿನಲ್ಲೋ ಇದ್ದದ್ದೂ ಉಂಟು. ಈ ಪ್ರಸಂಗಗಳಲ್ಲೆಲ್ಲ ನನ್ನದೇನಿದ್ದರೂ ದೈಹಿಕ ಉಪಸ್ಥಿತಿಯೇ ಹೆಚ್ಚು, ಕೈಂಕರ್ಯ ದೇವಕಿಯದೇ. ಈ ಅವಕಾಶ ಅಮ್ಮನ ಕೊನೆಯ ದಿನಗಳಲ್ಲಿ ಸ್ವಲ್ಪ ಮೇಲಿಂದ ಮೇಲೆಯೇ ಬಂತೆನ್ನಬೇಕು. ತವರ್ಮನೆಯ ದೊಡ್ಡ ದೇವಕಾರ್ಯಕ್ಕೆಂದು ರುಕ್ಮಿಣಿ ಅನಂತರು ವಾರ ಕಾಲ ಮೈಸೂರು ಬಿಟ್ಟಾಗ ನಾವು ಅಮ್ಮನ ಜತೆಗಿದ್ದೆವು. ಮತ್ತೊಂದೇ ವಾರದಲ್ಲಿ ರುಕ್ಮಿಣಿಗೆ ಪಿತೃವಿಯೋಗ ಉಂಟಾದಾಗ ಮತ್ತೆ ಹತ್ತು - ಹನ್ನೆರಡು ದಿನಗಳೇ ನಾವು ಮೈಸೂರಿಸಬೇಕಾಯ್ತು. ಅದೂ ಮುಗಿಸಿ ಮರಳಿದ ನಾವು, ನಾಲ್ಕೇ ದಿನಕ್ಕೆ ಮೈಸೂರಿಗೆ ಧಾವಿಸುವಂತಾದಾಗ ಅಮ್ಮನೇ ಉಳಿದಿರಲಿಲ್ಲ. ಆಕೆಯ ಜೀವದ ತುಣುಕನ್ನೇ ಹಿಡಿದು ನಿಂತ ನನ್ನ ಸ್ಮರಣೆಗಳೆಲ್ಲ ನನ್ನ ಜೀವನದುದ್ದಕ್ಕೂ ಮರಳುತ್ತಲೇ ಇದ್ದರೆ ಆಶ್ಚರ್ಯವೇನೂ ಇಲ್ಲ. ನಮ್ಮ ನಿತ್ಯದ ಯಾವ್ಯಾವುದೋ ಸಂಗತಿಗಳೊಡನೆ "ಅಮ್ಮ ಹಾಗೆ ಮಾಡಿದ್ದಳು, ಹೀಗೆ ಹೇಳಿದ್ದಳು" ಎನ್ನುವಂತೆಯೇ ಹೊಸತೇನು ಅನುಭವಕ್ಕೆ ದಕ್ಕಿದರೂ "ಈಗ ಅಮ್ಮ ಏನು ಹೇಳುತ್ತಿದ್ದಳು, ಇದನ್ನು ಅಮ್ಮ ನೋಡಬೇಕಿತ್ತು" ಎಂಬಿತ್ಯಾದಿ ಮಾತುಗಳೂ ಮುಗಿಯುವುದು ಅಸಾಧ್ಯ. ಹಾಗಾಗಿ ಸದ್ಯದ ಲೇಖನಕ್ಕಷ್ಟೇ ಕೊನೆಯ ಮಾತನ್ನು ಬರೆಯುತ್ತೇನೆ.

ತಂದೆಯಷ್ಟೇ ನಿಷ್ಠೆಯಿಂದ ಅಮ್ಮನೂ ತನ್ನ ದೇಹದಾನವನ್ನು (ನೋಡಿ: ದೇಹದಾನ) ಬಯಸಿದ್ದಳು, ಬರೆದುಕೊಟ್ಟಿದ್ದಳು, ನಮ್ಮೆಲ್ಲರನ್ನು ಬದ್ಧರಾಗಿಸಿದ್ದಳು. ಹುಟ್ಟಿನ ಆಕಸ್ಮಿಕದಲ್ಲಿ ಹಿರಿಯನಾದ ನಾನವನ್ನು ನಡೆಸಿಕೊಡುತ್ತೇನೆನ್ನುವುದು ಸಮಾಜದ ನಿರೀಕ್ಷೆ, ತಪ್ಪಲ್ಲ. ಆದರೆ ನಿಜದ ಜವಾಬ್ದಾರಿಯ ಸ್ಥಾನದಲ್ಲಿ ಪೂರ್ಣ ನಿಂತ ಅನಂತ ರುಕ್ಮಿಣಿಯರಿಗೆ ಅಮ್ಮನ ಆದೇಶವನ್ನು ನಡೆಸುವಲ್ಲಿ ಸಹಕರಿಸುವುದಷ್ಟೇ ನನ್ನ/ನಮ್ಮ ಕರ್ತವ್ಯ ಎಂದು ನಂಬಿದವನು ನಾನು. (ಮಧ್ಯಮನಾದ ಆನಂದನ ನಿಲುವಾದರೂ ಇದಕ್ಕೆ ಭಿನ್ನವಲ್ಲ ಎಂದುಕೊಳ್ಳುತ್ತೇನೆ.) ಇನ್ನು ಉತ್ತರಕ್ರಿಯೆಗಳು: ತನಗೆ ಸಿಕ್ಕ ಮಾನಸಿಕ ಸಂಸ್ಕಾರದ ತೃಪ್ತಿಗಾಗಿ ಅಮ್ಮ ಪೂಜೆ, ದಾನವೇ ಮೊದಲಾದವನ್ನು ನಡೆಸಿದ್ದಾಳೆ. ಅದು ಸಮಾನಮನಸ್ಕರಿಗೆ ಅನುಕೂಲವಾಗುವುದಿದ್ದರೆ
ಎಂಬ ಭಾವದೊಡನೆ ಅವುಗಳ ಪ್ರಚಾರವನ್ನೂ ಮಾಡಿದ್ದಾಳೆ. ಆ ನಂಬಿಕೆಯ ಭಾಗವಾಗಿ ಅಮ್ಮ ಪುಣ್ಯ, ಪರಲೋಕ ಎಂದೆಲ್ಲ ಹೇಳುತ್ತಿದ್ದಳೇ ವಿನಾ ಅದೊಂದಿರಬಹುದು, ನನಗೆ ದಕ್ಕೀತು ಎನ್ನುವ ಭ್ರಮೆಯೇನೂ ಆಕೆಗೆ ಇದ್ದಂತಿರಲಿಲ್ಲ. ಹಾಗಾಗಿ ತಂದೆಯ ಉತ್ತರ ಕ್ರಿಯಾಕಾಲದಲ್ಲಿ ನಮ್ಮ ಸರಳತೆಯನ್ನು ಅಮ್ಮ ಒಪ್ಪಿಕೊಂಡಿದ್ದಳು. ಅಮ್ಮನ ಈ ಸೂಚ್ಯ ಭಾವಕ್ಕೆ ತಂದೆಯ ಸ್ಪಷ್ಟ ನಿರ್ದೇಶನ - ನಮ್ಮ ಮರಣೋತ್ತರ ಕಾಲದಲ್ಲಿ ಯಾವುದೇ ಅಕಾಲಿಕ ಕ್ರಿಯೆಗಳನ್ನೂ ನೀವು ಮಾಡತಕ್ಕದ್ದಲ್ಲ, ಎನ್ನುವ ಮಾತನ್ನು ಸೇರಿಸಿ, ಕೇವಲ ಈ ನುಡಿತರ್ಪಣವನ್ನಷ್ಟೇ ಬಿಟ್ಟು ಮುಗಿಸುತ್ತೇನೆ.

19 comments:

  1. ಇಡೀ ನಿದಾನವಾಗಿ ಓದಿದೆ, ಓದಿ ಧನ್ಯನಾದೆ, ದೇಹ ಇಲ್ಲಿದರು ಮನವೆಲ್ಲ ಭಾರಥದಲ್ಲಿದೆ ... ನಮ್ಮ ಸಂಸಾರ ನಡೆದು ಬಂದದಾರಿ .... ಎಲ್ಲ ಪಟ ನಿನ್ನತ್ತಿರ ಇರುವುದು ಬಾರೀ ವಿಶೇಷ, ನಿವೃತ್ತನಾದನಂತರ ನಿನ್ನ ಧ್ವನಿಮುದ್ರಿಕೆ ಕೇಳಬೇಕು. ತುಂಬಾ ಶ್ರಮಪಟ್ಟು ಇವೆರಡನ್ನೂ ಮಾಡಿದ್ದೇಯ ಅಮ್ಮನ ಪರವಾಗಿ ನನ್ನ ಕೄತಜ್ಞತೆಗಳು. ಮತ್ತೆ ಕಾಂಬ

    ReplyDelete
  2. ನಿಜ ಅರ್ಥದಲ್ಲಿ ಶ್ರದ್ಧಾಂಜಲಿ.

    ReplyDelete
  3. ಅಮ್ಮ ಮತ್ತೆ ಮತ್ತೆ ಜೀವಂತವಾಗುವುದು ಇದು.

    ReplyDelete
  4. ಇಷ್ಟೊಂದು ವಿವರಗಳನ್ನು ನೆನಪಿಟ್ಟುಕೊಂಡು ನಿರೂಪಿಸುವ ತಾಳ್ಮೆ,ಶ್ರದ್ಧೆ,ಅಕ್ಕರೆ ಅಸಾಮಾನ್ಯವಾದುದು. ಗತಿಸಿದ ಹಿರಿಯ ಜೀವಕ್ಕೆ ಒಪ್ಪುವ ಶ್ರದ್ಧಾಂಜಲಿ. ನಮನಗಳು...ಗೋಪಾಲ್, ಟಿ.ಎಸ್.

    ReplyDelete
  5. A true tribute brought tears to my eyes. Salutations

    ReplyDelete
  6. ಎಷ್ಟೊಂದು ನೆನಪುಗಳನ್ನು ಕೊಟ್ಟು ಹೋಗಿದ್ದಾರೆ ನನಗೂ! ಅಜ್ಜಿಯ ಜೊತೆ ಮಾತಿಗಿಳಿದರೆ ಅಪ್ಪಟ ಸ್ನೇಹಿತೆ ಅವರು. 'ಅಯ್ಯೋ ಪಾಪಾ ಗಂಟು ನೋವು ನಿತ್ರಾಣಗಳನ್ನು ಸಹಿಸುತ್ತಿದದಾರಲ್ಲಾ ಅಜ್ಜಿ...' ಎಂಬ ಸಿಂಪತಿಗಾಗಲೀ, ತಾನು ಹಿರಿಯಳು, ಅನುಭವದಲ್ಲಿ ನೀನು ಕಿರಿಯಳೆಂಬ ಭಾವನೆಗಾಗಲೀ ಅವರೆದುರು ಅವಕಾಶವೇ ಇಲ್ಲ. ನಮ್ಮ ಮದುವೆಯ ಹೊಸತರಲ್ಲಿ ರೆಗ್ಯುಲರ್ ಆಗಿ ಫೋನಾಯಿಸುತ್ತಿದ್ದರು. ಅಭಯನ ಅಜ್ಜಿ ಫೋನ್ ಮಾಡಿದ್ದಾರೆಂದು ನಾನು ಇಲ್ಲದ‌ ಔಪಚಾರಿಕತೆ ತೋರಿದರೆ ಅವರ ರೀತಿಯೇ ಬೇರೆ! ಮನಸಾರೆ ಹರಟುತ್ತಿದ್ದರು.ನೇರವಾದ ಅಷ್ಟೇ ಆಪ್ತವೆನಿಸುವಂಥಾ ಮಾತು. 'ಅಭಯ ಅವನಜ್ಜನ ಹಾಗೆ. ಕೆಲಸದಲ್ಲಿ ತೊಡಗಿದರೆ ಮುಗೀತು, ಮನೆ ಕಡೆ ಚಿಂತೆಯೇ ಇರದು. ಮನೆ ಎಲ್ಲಾ ನಾನು ನಿಭಾಯಿಸ್ತೇನೆ ಒಬ್ಳೇ ಸುಧಾರಿಸ್ತೇನೆ ಅಂತೆಲ್ಲಾ ಭಾರೀ ಧೈರಯಸ್ಥೆ ಹಾಗೆಲ್ಲಾ ಮಾತಾಡಬೇಡ. ಹೇಗೂ ನಿಭಾಯಿಸ್ತಾಳಲ್ಲಾಂತ ನಮ್ಮ ಯೋಚ್ನೆ‌ಬಿಟ್ಟು ಹೋಗ್ತಾ ಇರ್ತಾರೆ. ಒಬ್ಳೆ ಇರಕ್ಕೆಲ್ಲಾ ಆಗಲ್ಲಪ್ಪಾ ಎರಡು ಮೂರು ದಿನ ಬೇರೆ ಕಡೆ ಶೂಟಿಂಗೂಂತ ಹೋದ್ರೆ ನಾನೂ ಬರ್ತೇನೆ ಅಂದು ಬಿಡು. ನಿಂಗೂ ಬೇರೆ ಬೇರೆ ಜಾಗ ನೋಡಿದ ಹಾಗಾಗತ್ತೆ,ಅವನಿಗೂ ಕೆಲಸಕ್ಕೆ ನಿನ್ನಿಂದ ಸಹಾಯ ಸಿಕ್ಕಿದ ಹಾಗಾಗತ್ತೆ ಅಲ್ವಾ? ಅಷ್ಟಕ್ಕೇ ಹೇಳಿದ್ದು. ಈ ಅಜ್ಜಿ ಏನೇನೋ ಹೇಳ್ತಾಳೆ ಅಂತ ನಗ್ಬೇಡ ಮತ್ತೆ! ಸಣ್ಣ ಟಿಪ್ಸ್' ಅಂತ ಅವರೇ ನಗ್ತಾ ಇದ್ರು. ಹೆಚ್ಚು ಕಮ್ಮಿ ಫೋನ್ ಮಾಡಿದಾಗಲೆಲ್ಲಾ ಇದನ್ನೇ ಹೇಳಿ ಕಡೆಗೆ ಎಲ್ಲಾ ತಮಾಷೆಗೆ ಹೇಳಿದ್ದು ಅಂತ ನಗ್ತಿದ್ರು. ಇದು ಕೇವಲ ಫೋನ್ ನಲ್ಲಿ. ಅಭಯನೂ ನಾನೂ ಎದುರಿಗೇ ಸಿಕ್ಕರಂತೂ ಕಾಲೆಳೆಯುತ್ತಲೇ ಕಾಳಜಿ ತೋರುತ್ತಿದ್ದು. 'ಶಿವಾ...ಎಷ್ಟು ಕಪ್ಪಗಾಗಿದ್ದೀ... ಶೂಟಿಂಗ್ ಮಾಡ್ಬೇಕಾದ್ರೆ ಛತ್ರಿಯೋ ಟೊಪ್ಪಿಯೋ ಹಾಕ್ಬಾರ್ದಿತ್ತಾ? ಮೊದಲೇನು ಭಾರೀ ಕೆಂಪಲ್ಲ ನೀನು! ಕರಿಯನೇ. ಈ ಕರಿ ಮಾಣಿಗೆ ಹೇಗಪ್ಪಾ ಹೆಣ್ಣು ಕೊಟ್ರು ನಿನ್ನ ಮಾವ..ಅವರು ಸಿಕ್ಕಿದ್ರೆ ಕೇಳ್ಬೇಕು..' ಎಂದು ಅಭಯನನ್ನು ಕಣಕುತ್ತಿದ್ದರು. ಎಷ್ಟೇ ಆದರೂ ಅವರ ಮೊಮ್ಮಗ ಅಭಯ. ಬಿಟ್ಟಾರೇ? 'ಇವಳದು ಮೂಲ ನಕ್ಷತ್ರ, ನಾನಲ್ಲದೆ‌ ಬೇರೆ ಗಂಡು ಸಿಗ್ತಿರ್ಲಿಲ್ಲ ಇವಳಿಗೆ' ಎಂದು ಅವರೂ ಅಜ್ಜಿಯ ರೀತಿಯಲ್ಲೇ ಮಾತಾಡುತ್ತಿದ್ರು. ಮತ್ತೆ ಈ ವಿನೋದವನ್ನು ಬೆಳೆಸುವ ಸರದಿ ಅಜ್ಜಿಯದೇ. 'ಹಾಗೋ... ಹಾಗಾದ್ರೆ ಕಪ್ಪು ಹುಡುಗನೋ ಬೆಪ್ಪು ಹುಡುಗನೋ ನನ್ ಮೊಮ್ಮಗ ಸಿಕ್ಕಿದ್ದು ನಿನ್ ಅದೃಷ್ಟ' ಎಂದೇ ಹರಟೆ ಮುಂದುವರೆಸುತ್ತಾ ಅಭಯನ ಕೆಲಸ, ನಮ್ಮ ಬದುಕಿನ ಅನುಭವಗಳನ್ನು ಕೇಳಿ ವಿಸ್ಮಯ ಪಡುತ್ತಿದ್ದರು. ತಾನೇನೋ ಹೊಸ ವಿಷಯ ಕೇಳುತ್ತಿದ್ದೇನೆಂಬಂತೆ ಆಸಕ್ತಿಯಿಂದ ಕೇಳಿ ರಿಯಾಕ್ಟ್ ಮಾಡುತ್ತಿದ್ದು ಅವರೊಂದಿಗೆ ಮಾತಾಡುವ ಯಾರೇ ಆದರೂ ಇಷ್ಟ ಪಡುವ ಗುಣ. ನನ್ನನ್ನು ಮೊಮ್ಮಗನ ಹೆಂಡತಿಯಂತೆ ಮಾತ್ರವಲ್ಲದೆ, ಒಬ್ಬ ಇಂಡಿಪೆಂಡೆಂಟ್ ವ್ಯಕತಿಯಂತೆ ನಡೆಸಿಕೊಳ್ಳುತ್ತಿದ್ದ ರೀತಿ ನನಗೆ ಯವಾಗಲೂ ಕಂಫರ್ಟ್ ಕೊಡುತ್ತಿತ್ತು. ನಮ್ಮ ಮೊದಲ ಬಾಡಿಗೆ ಮನೆಗೆ ನನ್ನ ಜೊತೆ ಬಂದು ಒಂದು ದಿನ ಉಳಿದದ್ದು(ಅಭಯ ಇಲ್ಲದ ಸಮಯದಲ್ಲಿ!), ಈಗ‌ ನಾವಿರುವ ಮನೆಗೆ ಅವರೇ ಉತ್ಸಾಹ ತೋರಿ ಬಂದು ಗಣಪನನ್ನಿಟ್ಟು, ಗಣಪನ ಜೊತೆ ಅವರೇ ತಂದ ಎರಡು ಹಣತೆಗಳನ್ನೂ ಹಚ್ಚಿ ನಮಗೆ ಆಶೀರ್ವದಿಸಿದ್ದು ಬಹಳ ಆಪ್ತವೆನಿಸಿದ ಕ್ಷಣಗಳು. ಇನ್ನು ನನಗೊಬ್ಬಳಿಗೇ ಸಿಕ್ಕಿದ ಅವಕಾಶವೊಂದಿದೆ. ಅಜ್ಜಿಯ ಜೊತೆ ನಾನು 'ಸ್ಕ್ರೀನ್ ಟೈಮ್' ಹಂಚಿಕೊಂಡದ್ದು. 'ಲೈಫು ಇಷ್ಟೇನೆ' ಸಿನೆಮಾ ನೋಡಿದರೆ, ದೃಶ್ಯವೊಂದರಲ್ಲಿ ನಾನು ಅಜ್ಜಿಯ ಜೊತೆಗಿರುವ ಫೋಟೋ ಗೋಡೆ ಮೇಲಿರುವುದು ಕಾಣುತ್ತದೆ! ಕುಳಿತು ನೆನಪು ಮಾಡಿಕೊಂಡರೆ ಇನ್ನೂ ಎಷ್ಟೋ ನೆನಪಿನ ಗುಚ್ಛಗಳಿವೆ. ನನ್ನ ಬಳಿ ಮಾತಾಡುವಾಗೆಲ್ಲಾ ಮಣಿಮುಂಡ ಹಾಗೂ ಶಿರಂಕಲ್ಲು ಇವುಗಳಲ್ಲಿ ಮಣಿ ಹಾಗೂ ಶಿರ ಎಲ್ಲಿರಬೇಕೆಂಬ ಗೊಂದಲ ಕೊನೆವರೆಗೂ ಗೊಂದಲವಾಗೇ ಉಳಿಯಿತು. ಆ ಗೊಂದಲ ಅವರಿಗೂ ನಗು ತರಿಸುತ್ತಿತ್ತು! ಆದರೆ ಅಂಥಾ ಒಗಟಿನ ಹೆಸರಿನ ಮಣಿಮುಂಡಕ್ಕೆ ಅಜ್ಜಿ ಒಮ್ಮೆ‌ ಬರುವುದು ಸಾಧ್ವಾಯಯಿತೆನ್ನುವುದು ಸಮಾಧಾನ. ಅವರು ಎಷ್ಟೋ ಕಾಲದಿಂದ‌ ನಿರೀಕ್ಷಿಸುತ್ತಿದ್ದ ಆಭಾಳೊಂದಿಗೆ ಅವರನ್ನು ಕೆಲವು ಸಲವಾದರೂ ಭೇಟಿಯಾಗುವುದು ಸಾಧ್ಯವಾದದ್ದು ಸಮಾಧಾನಕ್ಕಿಂತಲೂ ದೊಡ್ಡ ಸಮಾಧಾನ.

    ರಶ್ಮಿ.

    ReplyDelete
    Replies
    1. ರಶ್ಮಿ ಎಷ್ಟು ಚನ್ನಾಗಿ ಬರೆದಿದ್ದೀರಿ!!

      Delete
  7. ಜಿಟಿಎನ್ ರವರ ಮೊಮ್ಮಕ್ಕಳಲ್ಲಿ ನಾನು ಕಂಡಿರುವುದು ಅಕ್ಷರಿ ಮತ್ತು ಅಭಯನನ್ನು ಮಾತ್ರ. ಮೊನ್ನೆಮೊನ್ನೆಯಷ್ಟೇ ಶ್ರೀ ಶ್ರೀವತ್ಸ ಜೋಶಿಯವರು ತಮ್ಮ ತಿಳಿವಳಿಕೆ ಲೇಖನದಲ್ಲಿ ಅಕ್ಷರಿಯ ಪ್ರಸ್ತಾಪ ಮಾಡಿದ್ದರು. ಅಷ್ಟರಲ್ಲಿ ಈ ಸುದ್ದಿ ಕೇಲಿ ಖೇದವಾಯಿತು. ನಿಮ್ಮ ಮಾತೃಶ್ರೀಯವರ ನುಡಿತರ್ಪಣ ಮನಮುಟ್ಟುವಂತಹದು. ಅಪ್ಪ-ಅಮ್ಮನ ಬಾಂಧವ್ಯವೇ ಹಾಗೆ! ಅದು ನೆನಪುಗಳ ನಿರಂತರ ಭಂಡಾರ. ಅಪ್ಪನದ್ದು ಗಾಂಭೀರ್ಯ, ಅಮ್ಮನದ್ದು ಸಾಮೀಪ್ಯದ ಪ್ರೀತಿ. ಅವರ ಅಗಲಿಕೆಯು ನಮ್ಮ ಜೀವನದಲ್ಲಿ ಒಂದು ಅಳಿಯದ ನಿರ್ವಾತವನ್ನುಂಟುಮಾಡುತ್ತವೆ. ಇದು ಅವರೊಂದಿಗೇ ಇದ್ದ ಶ್ರೀ ಆನಂದವರ್ಧನ ಮತ್ತು ಶ್ರೀಮತಿ ರುಕ್ಮಿಣಿಯವರನ್ನು ಹೆಚ್ಚು ಕಾಡುತ್ತದೆ. ನೀವು ಇನ್ನಷ್ಟು-ಮತ್ತಷ್ಟು ಬರೆದಿದ್ದರೂ ಓದುವ ತುಡಿತ ನಿಮ್ಮೆಲ್ಲ ಮಿತ್ರ ಬಾಂಧವರಿಗೂ ಇತ್ತು. ನಿಮ್ಮ ಅಮ್ಮನನ್ನು ಬಲ್ಲ ಎಲ್ಲರಿಗೂ ಒಂದು ಅತ್ಯಮೂಲ್ಯ ಮಾನವತಾ ಮೂರ್ತಿಯನ್ನು ಕಳೆದುಕೊಂಡ ವೇದನೆಯಿದೆ.

    ReplyDelete
  8. Please accept my deepest condolences on sad demise of your mother.
    The write up on your mother would linger in my heart for long.
    Regards,

    ReplyDelete
  9. ನಿಮ್ಮ 'ಅಮ್ಮನ ವಿದಾಯ' ನುಡಿ ತರ್ಪಣ ಓದಿ ಅಳು ಬಂತು. ಬಚ್ಚಿಟ್ಟ-ಒತ್ತಿಟ್ಟ ದು:ಖ -ದುಮ್ಮಾನಗಳು ಬುದ್ಧ -ಪ್ರಬುದ್ಧಳಾದ ತಾಯಿ ಕಲಿಸಿದ ತಾಯ್ನುಡಿಯಲ್ಲಿ ಹಾಗೂ ಮಧ್ಯ-ಸಮನ್ವಯ ರೀತಿಯಲ್ಲಿ ಬರೆದ ನುಡಿ-ನಮನ- ವಾಲ್ಮೀಕಿ ಹಾಡಿದ
    'ಮಾನಿಷಾದ ಪ್ರತಿಷ್ಟಾಂತ್ವಂ ಅಗಮ: ಶಾಶ್ವತೀಸಮಾ
    ಯಾ ಕ್ರೌನ್ಚಮಿಥುನಾದೇಕಮವಧೀ: ಕಾಮ ಮೋಹಿತಂ '
    ಎಂಬ ಆದಿ ಕಾವ್ಯ ರಾಮಾಯಣದ ಆದಿ ಕವಿತೆಯಂತೆ ಹೃದಯಸ್ಪರ್ಶಿಯಾಗಿದೆ.

    ಮುದ್ದಣ ಹೇಳಿದಂತೆ ಕಸ್ತೂರಿಯಾದ ಕನ್ನಡದ ಹೃದ್ಯಮಪ್ಪ ಗದ್ಯದಲ್ಲಿ ಬರೆದ ಅವಿಸ್ಮರಣೀಯ
    ಚರಮ ಗೀತೆ!

    ಗಂಡಿಗಾಗಲೀ ಹೆಣ್ಣಿಗಾಗಲೀ 'ಅಮ್ಮ' ಒಂದು ಅದ್ವಿತೀಯ ಶಕ್ತಿ! ಅದಕ್ಕೇ ಮನು ಹೇಳಿದ್ದು:
    ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ:!

    ಈ ಚರಮ ಗೀತೆಯ ಇನ್ನೊಂದು ವಿಶೇಷ - ನಾಲ್ಕು ತಲೆಮಾರುಗಳ ಸಮಗ್ರ ಇತಿಹಾಸ ಸಂಕ್ಷಿಪ್ತವಾಗಿ ಮೂಡಿ
    ಬಂದಿದೆ . 'ಅತ್ರಿ'ಯಿಂದ ಹಿಡಿದು 'ಆಭಾ' 'ಐಶ್ವರ್ಯ' ದ ವರೆಗಿನ 'ಅ' ಕ್ಷರಗಳ ಸರಮಾಲೆ;
    'ಊರ್ಧ್ವ ಮೂಲಂ ಅಧ: ಶಾಖಮ್ ಅಶ್ವಥಮ್ ಪ್ರಾಹುರವ್ಯಮ್ ' ಎಂಬಂತೆ ಎರಡು (ತಂದೆ-ತಾಯಿ) ತಲೆಮಾರುಗಳ ಕಲಸು ಮೇಲೊರಗ; ಅತಿ ಮಿತಿ ಇಲ್ಲದ ಹಿತ ಮಿತ ನಿರೂಪಣೆ; ತರ್ಪಣ ಚಿಕ್ಕದ್ದಾದರೂ ಸಾಂದ್ರತೆ ಘನತೆಯಲ್ಲಿ ತಿಲತರ್ಪಣದಷ್ಟು ಆಳ ಗಂಭೀರ! ಉದ್ದಾಮ ಉಲ್ಲೇಖ!

    ಅಶೋಕ ವರ್ಧನರೇ, ಈ ವಿದಾಯ ಶೋಕದಲ್ಲಿ ಮೂಡಿ ಬಂದ ಒಂದು ಸುಸಂಸ್ಕೃತ ಹವ್ಯಕ ಕುಟುಂಬದ ಮಾರ್ಮಿಕ ಹಕ್ಕಿ ನೋಟ ಅದ್ಭುತ ವಾಗಿದೆ!

    ದು:ಖ ಶೋಕ ಸಹಿಸುವ ಸಾಮರ್ಥ್ಯ ಎಲ್ಲರಿಗೂ ಬರಲೆಂದು ನಿಮ್ಮಂತೆ ತಬ್ಬಲಿಯಾಗಿರುವ ನನ್ನ ಬಯಕೆ!

    ReplyDelete
  10. Dear Ashok,my condolences to you ,brothers and family.I knew your mother during my brief stay at Mysore.A very kind and hospitable lady.she helped me a lot.May her soul rest in peace .

    ReplyDelete
  11. Please accept my sincere condolences.
    Your article brought back so many fond memories of our family connections with AP Subbayya's family and your father's family.. The photos added great value too. My best wishes to you all.

    ReplyDelete
  12. ಲಕ್ಷ್ಮೀದೇವಮ್ಮನವರು ಚಿರನಿದ್ರೆಗೆ ಹೋಗಿದ್ದು ತಿಳಿಯಿತು. ನನ್ನ ಅಂಕಣವನ್ನು ಆಗಾಗ ಓದಿ ಅವರು ನನಗೆ ಫೋನ್ ಮಾಡುತ್ತಿದ್ದರು. ಅದಕ್ಕೆ ಸಂಬಂಧಿಸಿ ಕೆಲವು ಮಾತುಕತೆ ನಡೆಯುತ್ತಿತ್ತು. ಇದೀಗ ಅದೇ ನಂಬರಿಗೆ ಫೋನ್ ಮಾಡಿದೆ, ರುಕ್ಮಿಣಿ ಜೊತೆ ಮಾತಾಡಿದೆ.
    ಹೀಗೆ ನನಗೆ ಆಗಾಗ ಫೋನ್ ಮಾಡುತ್ತಿದ್ದ ಮೈಸೂರಿನ ಇನ್ನೊಬ್ಬ ಹಿರಿಯ ಜೀವ ಜೆಆರ್‍ ಲಕ್ಷ್ಮಣರಾಯರಿಗೂ ಈಚೆಗಷ್ಟೇ ವಿದಾಯ ಹೇಳಬೇಕಾಯಿತು.
    ಸಜ್ಜನರ ಸಂಖ್ಯೆ ಕಡಿಮೆಯಾಗುತ್ತಿದೆ.

    ReplyDelete
  13. ಮಿತ್ರ ಬಾಂಧವ, ಅಶೋಕರೇ, ವಂದೇಮಾತರಂ, ಲಕ್ಶ್ಮೀ ದೇವಮ್ಮ, ನನ್ನಮ್ಮ ಕೂಡಾ.
    ನಂ. ೮, ಅತ್ರೀ, ಕುವೆಂಪುನಗರ, (ಸರಸ್ವತಿ ನಗರ) ದೂರವಾಣಿ ಸಂಖ್ಯೆ ಮರೆತಿದ್ದೇನೆ.
    ಗಂಟೆ ಬಾರಿಸಿದೋಡನೇ, "ನಮಸ್ಕಾರ, ಲಕ್ಷ್ಮಿ ದೇವಿ" ಶಬ್ಧ ಅಣಗಿಹೋಯಿತು. ಎರಡು ತಿಂಗಳ ಕೆಳಗೆ ಮೈಸೂರಿಗೆ ಹೋದಾಗ ಅವರನ್ನು ನೋಡುವ ಯೋಜನೆ ಇತ್ತು. ಕಾರಣಾಂತರಗಳಿಂದ ತಪ್ಪಿ ಹೋಯಿತು. "ಅಮ್ಮಾ ಕ್ಷಮಿಸು". ಅವರು ಇಹಲೋಕ ಪ್ರಯಾಣ ಅಯಾವಾಗ ಮುಗಿಸಿದರು? ನೀ ವು ಹೇಳಿದ ಸಮಯ ಸಂದರ್ಭ ಗಳನ್ನು ನೋಡಿದಲ್ಲಿ ಅದು 1.1.2018 ಇರಬೇಕು. ನಿಮ್ಮಮ, ಅಪ್ಪ, ನಿಮ್ಮ ಮಗ ಅಭಯ ಸಿಂಹ, (ದೇವಕಿಯಮ್ಮ ಕೂಡಾ ಇರಬೇಕು) 1984(?) ರಲ್ಲಿ ನಮ್ಮಲ್ಲಿಗೆ ಬಂದಿದ್ದರು. ಅಂದು ಶಿವರಾಮ ಕಾರಂತರು ಕೂಡಾ ಇಲ್ಲಿಗೆ ಬಂದಿದ್ದರು. ಅಭಯ ಸಿಂಹ ಅವರೊಂದಿಗೆ ತುಂಬಾ ಪಟಾಪಟಿ, ಚಟಾಕಿ ಹಾರಿಸಿದ್ದ. ಅದು ಕಾರಂತ - ಜಿ.ಟಿ.ಎನ್. ರ ಹಾಣಾಹಾಣಿಯ ಮೊದಲ ದಿನಗಳು.
    ಅಕಾಲವಲ್ಲವಾದರೂ, "ತಾಯಿಯೇ ಲೋಕದಲಿ ನಿಜವಾದ ಬಂಧು". ಕಳೆದುಕೊಂಡ ಮಕ್ಕಳು ತಬ್ಬಲಿ."ತಬ್ಬಲಿಯು ನೀನಾದೆ ಮಗನೇ"! ಹೆಬ್ಬುಲಿ ಇಲ್ಲ. ಸಾರ್ಥಕ ಜೀವನವನ್ನ್ನು ನಡೆಸಿದ ಲಕ್ಷ್ಮೀ ದೇವಮ್ಮನವರಿಗೆ, ನಿಮ್ಮ ನಂಬಿಕೆ ಎಂತೇ ಇರಲಿ, ಪುನರ್ಜನ್ಮವಿರಲಿಕ್ಕಿಲ್ಲ. ನೀವು ಮತ್ತು ಅನಂತ ನನಗೆ ಪರಿಚಯದವರೇ? ಅಮೇರಿಕಾವಾಸಿ ಆನಂದ, ನಿಮ್ಮೆಲ್ಲರೊಂದಿಗಿನ ಸಂಭಾಷಣೆಯಿಂದಾಗಿ ನನಗೆ ಪರಿಚಯ, ಅವರಿಗೆ ನನ್ನ ಪರಿಚಯವಿರಲಿಕ್ಕಿಲ್ಲ.
    ಇಳಿ ವಯಯಸ್ಸಾರಾದರೂ ಹಿರಿಯರ ಅಗಲುವಿಕೆಯಿಂದಾಗಿ ಬಂದಿರುವ ದುಃಖವನ್ನು ಸಹಹಿಸಿ ಕೊಳ್ಳುವ ಶಕ್ತಿ ಸಾಮರ್ಥ್ಯಗಳನ್ನು ತುಟುಂಬದವರಿಗೆಲ್ಲಾ ಕೊಟ್ಟು ಅಗಲಿದ ಆತ್ಮಕ್ಕೆ ಶಾಂತಿಯನ್ನು ಮೋಕ್ಷವನ್ನೂ ನೀಡೆಂದು ನಿಮ್ಮ ಕುಲದೇವತೆ ಶ್ರೀ ಮಹಾಲಿಂಗೇಶ್ವರನಲ್ಲಿ ಪ್ರಾರ್ಥಿಸುತ್ತಾ,ನಿಮ್ಮ ವಿಸ್ತೃತ ಕುಟುಂಬದವರಿಗೆಲ್ಲಾ (ಮಿತ್ರ ಬಾಂಧವರು) ಸಂತಾಪವನ್ನು ತಿಳಿಸುತ್ತಾ.
    ಭವದೀಯ,

    ReplyDelete
  14. Priya Ashoka Vardhana mattu kutumbakke taayi Lakshmidevammanavara agalikeya duhkha sahisikolluva shaktiyannu Aa devaru kodali. Enoo helalu toradantaha galigeyalloo abhyaasabaladalli nuditarpana kottiddeeri. Sincere condolences.

    ReplyDelete
  15. ವೈ.ಕೆ.ಸಂಧ್ಯಾ ಶರ್ಮ14 January, 2018 23:23

    ಅಮ್ಮನ ಬಗ್ಗೆ ನಿಮ್ಮ ಅಂತರಾಳದ ನಿರೂಪಣೆ ಓದಿ ಹೃದಯ ಭಾರವಾಗಿದೆ. ತಾಯಿ ಈ ಪ್ರಪಂಚದ ದೊಡ್ಡ ವಸ್ತು. ಅವರ ಆತ್ಮಕ್ಕೆ ಶಾಂತಿ ಲಭಿಸಲಿ.-ವೈ.ಕೆ.ಸಂಧ್ಯಾ ಶರ್ಮ

    ReplyDelete
  16. Noted the passing away of your mother. My condolences. Also thank you for your tarpana writing, the unpretentious, yet moving depiction of her palce in your family.
    Very few people are blessed with such a personality pillaring the family milieu. Death of a dear one is one occasion when recollection of what the person meant to the web of relations in which one lives is very much called for.

    I also take this occasion to thank you for your regular postings from which I have profited very much. I don't always read them immediately, but browse very often, and store them diligently. They are also documentatiions worth preserving

    ReplyDelete
  17. Dear Ashok Vardhana,

    Condolences.

    Such a long interaction, clubbed with gratitude for all inputs that the Mother has given, makes such departures difficult.

    May her principles continue to guide.

    - Rajmohan

    ReplyDelete
  18. ನಿಮ್ಮ ಎಲ್ಲ ಲೇಖನಗಳಿಗಿಂತ , ಈ ನಿಮ್ಮ ಲೇಖನದಲ್ಲಿ ಆರ್ದ್ರಭಾವ ಘನವಾಗಿ ಪ್ರಕಟಗೊಂಡಿದೆ. ನಾನೂ ಅವರೊಡನೆ ಮೂರು ದಿನ ಪ್ರಯಾಣ ಮಾಡಿದ್ದೆ. ಆಗ ಅವರ ಬಗ್ಗೆ , ಅವರ ಹಿನ್ನೆಲೆ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಆದರೆ ಅವರು ಇಡೀ ಪ್ರಯಾಣದಲ್ಲಿ ನಡೆದುಕೊಂಡ ರೀತಿ ಮತ್ತು ಶಿಸ್ತು(ಪ್ರವಾಸದಲ್ಲಿ ಮತ್ತೊಬ್ಬರಿಗೆ ತೊಂದರೆ ಕೊಡದಂತಹಾ ಶಿಸ್ತು, ಸಭ್ಯತೆ ,ವಿನಯ, ನನಗೆ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಮೈಸೂರಿಗೆ ವಾಪಾಸಾದ ನಂತರ ಅವರು ಯಾರೆಂದು ಕುತೂಹಲದೊಂದಿಗೆ ವಿಚಾರಿಸಿಕೊಂಡಿದ್ದೆ. (ಆಗಿನ್ನೂ ಬ್ಯಾಂಕ್ ಉದ್ಯೋಗಿಯಾಗಿ ಯಾರ ಪರಿಚಯವೂ ಇಲ್ಲದ ಕೂಪಮಂಡೂಕಳಾಗಿದ್ದರಿಂದ ಜಿಟಿಎನ್ ಅವರೆಲ್ಲರ ಬಗ್ಗೆ ನಂತರವೇ ಗೊತ್ತಾಗಿದ್ದು )

    ReplyDelete