05 December 2017

ಕಲ್ಯಾಣೋತ್ಸವಕ್ಕೊಂದು ಮಹಾಯಾನ



ನನ್ನ ಸೋದರಮಾವ ಎ.ಪಿ. ಗೌರೀಶಂಕರರ ಮಗಳು ಶೈಲಜ ಭಟ್ (ಉರುಫ್ ಶೈಲಗಾ!), ಮತ್ತವಳ ಗಂಡ - ಪುತ್ತೂರು ಮೂಲದ ಎಂ.ಎಸ್. ಭಟ್ಟರ ಮಗ, ಹಿರಿಯ ಉದ್ಯಮಿ ಶ್ಯಾಮಭಟ್, ಹೈದರಾಬಾದ್ ನಿವಾಸಿಗಳು. ಅವರ ಮಗಳು ಇಳಾ, ತನ್ನ ಬಿಟ್ಸ್ ಪಿಲಾನಿ ಸಹಪಾಠಿ ಋಷಿಲ್ ಜತೆ ಪರಸ್ಪರ ಅನುರಾಗದಲ್ಲಿ, ಮದುವೆಯ ಬಂಧ ಬಯಸಿದ್ದಳು. ಮಾರ್ವಾಡಿ ಸಂಪ್ರದಾಯದ ಋಷಿಲ್ಲನ ಕುಟುಂಬ ಮೂಲತಃ ಗುಜರಾಥಿನದ್ದು. ಅಜ್ಜಜ್ಜಿ - ಬೃಜಲಾಲ್ ಮತ್ತು ಸೂರ್ಯಕಾಂತ ತಾಪಡಿಯಾ, ಅಪ್ಪಮ್ಮ - ರಾಜೇಂದ್ರ ಕುಮಾರ್ ಮತ್ತು ಮೋನಿಕಾ ತಾಪಡಿಯಾ. ಅವರೆಲ್ಲ ವ್ಯವಹಾರಗಳ ಸೆಳವಿನಲ್ಲಿ ಕಳೆದೆರಡು ತಲೆಮಾರುಗಳಿಂದ ಹೈದರಾಬಾದಿಗಳೇ ಆಗಿದ್ದಾರೆ. ಈ ಎರಡೂ ಕುಟುಂಬಗಳು ವೈಚಾರಿಕ ಔದಾರ್ಯದಲ್ಲಿ ಮನುಷ್ಯ ಸಂಬಂಧವನ್ನಷ್ಟೇ ಗೌರವಿಸಿ, ನಿಶ್ಚೈಸಿದ್ದರಿಂದ ಇದೇ ೨೫ ನವೆಂಬರ್, ೨೦೧೭
ಶನಿವಾರದಂದು, ಹೈದರಾಬಾದಿನಲ್ಲಿ ಆತ್ಮೀಯ ಮದುವೆ ನಡೆಯಿತು. ಇದು ಹವ್ಯಕ ಮತ್ತು ಮಾರ್ವಾಡಿ ಸಂಪ್ರದಾಯಗಳ ಸುಂದರ ಕಸಿ. ಅದನ್ನು  ಸವಿಯುವಂತೆ ಊರಿನ ನಮಗೆ, ಅಂದರೆ ಸುಮಾರು ಮೂವತ್ತೆಂಟು ಮಂದಿ ಬಂಧು ಮಿತ್ರರಿಗೆ, ಶ್ಯಾಮನೇ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದ.


ಶೈಲಗನ ತಮ್ಮ (ಅದೇ ಅಚ್ಚೆಯಲ್ಲಿ ನಮ್ಮೆಲ್ಲರ ತಮ್ಮಣ್ಣ), ಇನ್ನೊಂದು ರೂಪದಲ್ಲಿ ಶ್ಯಾಮನ ಭಾವ ಸುಬ್ರಹ್ಮಣ್ಯ ನಮ್ಮ ಮದುವೆಯಾನಕ್ಕೆ ‘ರಾಜಪ್ರತಿನಿಧಿ’! ಆತ ಅಳೆದು ಸುರಿದು ವಿಜಯಾನಂದ (ವೀಯಾರೆಲ್) ಬಸ್ ಸಾರಿಗೆ ಜಾಲವನ್ನು ಒಪ್ಪಿಕೊಂಡ. ಈ ಸಂಸ್ಥೆಗೆ ಮಂಗಳೂರು - ಹೈದರಾಬಾದ್ ಒಂದು ನಿತ್ಯ ಸೇವೆಯ ದಾರಿ (ಸಂಜೆ ನಾಲ್ಕಕ್ಕೆ ಹೊರಡುವುದಿರಬೇಕು). ತಮ್ಮಣ್ಣ ಆ ಸೇವೆಯಲ್ಲೇ ನಮ್ಮ ತಂಡಕ್ಕೆ ಮುಂದಾಗಿ ಜಾಗ ಕಾಯ್ದಿರಿಸುವ ಯೋಚನೆಗಿಳಿದ. ಆದರೆ
ದಿನಕ್ಕೆ ನಾಲ್ಕು “ಇದ್ದೇನೆ, ಇಲ್ಲ, ಮತ್ತಿದ್ದೇನೆ, ಖಂಡಿತಕ್ಕೂ ಇಲ್ಲ”ಗಳ ಹಾವಳಿ ಆಗುತ್ತಿತ್ತು. ಪ್ರಯಾಣದ ದಿನ ಸಮೀಪಿಸುತ್ತಿದ್ದರೂ ಸಂಖ್ಯೆಗೆ ಸ್ಥಿರತೆ ಬರಲಿಲ್ಲ! ಆದರೆ ಒಟ್ಟಾರೆಯಲ್ಲಿ ಉತ್ಸಾಹಿಗಳ ಸಂಖ್ಯೆ ಏರುಮುಖದಲ್ಲೇ ಇದ್ದುದರಿಂದ ಕೊನೆಯಲ್ಲಿ ತಮ್ಮಣ್ಣ ಸುಮಾರು ನಲ್ವತ್ತು ಸುಖಾಸನಗಳ ಒಂದು ಇಡಿಯ ಸವಾರಿಯನ್ನೇ ಕಾಯ್ದಿರಿಸಿದ.

ವಾಸ್ತವದಲ್ಲಿ ಹೈದರಾಬಾದಿಗೆ ಪೂರ್ಣ ಶಯನ ವ್ಯವಸ್ಥೆಯ
ಸರಕಾರೀ ಬಸ್ಸಿನಿಂದ ತೊಡಗಿ, ರೈಲು, ವಿಮಾನಾದಿ ಅನೇಕ ಪರ್ಯಾಯ ವ್ಯವಸ್ಥೆಗಳಿದ್ದವು. ಸಮೀಪದ ಬಂಧುಗಳಲ್ಲಿನ ಮಜಲು ವಿಶ್ರಾಂತಿಯೊಡನೆ ಬೆಂಗಳೂರಾದಿ ಅನ್ಯ ದಾರಿಗಳೂ ಇದ್ದುವು. ಹಲವರು ಅವನ್ನು ಬಳಸಿಕೊಳ್ಳುತ್ತಾರೆಂದ ಮೇಲೂ ನಮ್ಮ ಸಂಖ್ಯೆ
ಮೂವತ್ತನ್ನು ಮೀರಿಯೇ ಉಳಿದಿತ್ತು. ಮಂಗಳೂರಿನಿಂದ ಎಷ್ಟೇ ಸಮೀಪದ ದಾರಿಯೆಂದರೂ ಹೈದರಾಬಾದ್ ಎಂಟನೂರು ಕಿಮೀ ಅಂತರದಲ್ಲಿತ್ತು. ಸುವೇಗದ ಕಾರಿನಲ್ಲಿ ಹೋದರೂ ಕನಿಷ್ಠ ೧೭ ಗಂಟೆ ಓಡಿಸಬೇಕಾಗುತ್ತಿತ್ತು. ಆದರೆ ನಮ್ಮ ತಂಡ ದೊಡ್ಡದು. ಇದಕ್ಕೆ ದೊಡ್ಡ ಬಸ್ಸೇ ಅನಿವಾರ್ಯವಿತ್ತು. ಅದು ಪೂರ್ಣ ವಾತಾಯನದ, ಅರೆ-ಶಯನ ಭಂಗಿಯ ಆಸನ ವ್ಯವಸ್ಥೆಯಿದ್ದ, ವೀಯಾರೆಲ್ ಸಂಸ್ಥೆಯ ಮಹಾಕಾಯ. ಸಹಜವಾಗಿ ಅಂಕೋಲದವರೆಗೆ ರಾಷ್ಟ್ರೀಯ ಹೆದ್ದಾರಿ, ಮುಂದೆ ಹುಬ್ಬಳ್ಳಿ ರಾಯಚೂರಾದಿ ಪ್ರಧಾನ ಜಿಲ್ಲಾಕೇಂದ್ರಗಳಲ್ಲೇ
ಹಾದುಹೋಗುವ ದೊಡ್ಡ ದಾರಿಯನ್ನೇ ಅನುಸರಿಸಿದೆವು. ಇದು ತುಸು ಬಳಸಂಬಟ್ಟೆ. ಆದರೆ ಬಸ್ಸಿನ ಇಡಿಯ ಒಂದು ಸೇವೆಯೇ ನಮ್ಮ ಬಳಕೆಗಿದ್ದುದರಿಂದ ಸಮಯದ ಕಡಿವಾಣ ಅಷ್ಟಾಗಿರಲಿಲ್ಲ. ಮತ್ತೆ ಒಳಗಿನ ಸ್ಥಳ ಹಂಚಿಕೆ, ದಾರಿಯಲ್ಲಿನ ನಿಲುಗಡೆ ಮತ್ತು ವರ್ತನಾ ಸ್ವಾತಂತ್ರ್ಯಗಳೂ ನಮಗೆ ಧಾರಾಳವಿತ್ತು. ಮದುವೆಗೆ ಹೋಗುವ
 ತಂಡ ಎನ್ನುವ ನಿಟ್ಟಿನಲ್ಲಿ ಸಾಮಾನುಗಳ ಭದ್ರತೆಯೂ ನಿಶ್ಚಿಂತವಿತ್ತು. ಇದರಿಂದ ಹೋಗುವಲ್ಲಿನ ೨೧ ಗಂಟೆ, ಮರಳುವಲ್ಲಿನ ೨೦ ಗಂಟೆ ನಮಗೆ ಹೊರೆ ಅನಿಸಲಿಲ್ಲ. ೨೩ ರ ಸಂಜೆ ಮಂಗಳೂರು ಬಿಟ್ಟು, ೨೬ರ ಸಂಜೆ ಮರಳಿದರೂ ಪ್ರಯಾಣದ ಬಳಲಿಕೆಯಿದ್ದರೂ ಅನಾರೋಗ್ಯ ಯಾರನ್ನೂ ಕಾಡಲಿಲ್ಲ. ಬದಲಿಗೆ "ಬಹು ಅಚ್ಚಿನ (ಮಲ್ಟಿ ಆಕ್ಸೆಲ್ ವಾಲ್ವೋ) ದಶಚಕ್ರದ ರಥ ನಮ್ಮದು. ಸರದಿ ಸಾರಥಿಗಳಿಬ್ಬರು. ನಾವು ಮೂವತ್ತಕ್ಕೂ ಮಿಕ್ಕ ಕಟ್ಟಾಳುಗಳು ಪೂರೈಸಿದ್ದು ವಿಜಯ ಯಾತ್ರೆ” ಎಂಬ ಸಂತೋಷ ಎಲ್ಲರ ಮುಖದಲ್ಲಿ ಮಿನುಗುತ್ತಿತ್ತು. “ನಾವು ಪ್ರಯಾಣಿಸಿದೆವು” ಎನ್ನುವುದಕ್ಕಿಂತಲೂ ನಮ್ಮ ಬಸ್ಸಿನಡಿಯಲ್ಲಿ “ಭೂಮಿಯೇ ಅತ್ತಲೂ ಇತ್ತಲೂ ತಿರುಗಿತ್ತು ಕಂಡಿರಾ" ಎಂದೇ ಉದ್ಗರಿಸುವ ಉತ್ಸಾಹ ತುಳುಕುತ್ತಿತ್ತು!

ಮೂಲದಲ್ಲಿ ಗುರುವಾರ ಅಪರಾಹ್ನ ಪುತ್ತೂರು ಕೇಂದ್ರವಾಗಿ ಒಗ್ಗೂಡಿದ ಸುಮಾರು ಹದಿನೆಂಟು ಮಂದಿ, ಸರಕಾರೀ ಬಸ್ಸೇರಿ ಮಂಗಳೂರಿಸಿದರು. ಅವರೊಡನೆ ಮಂಗಳೂರಿಗರು ಹತ್ತು ಹನ್ನೆರಡು ಮಂದಿ. ಎಲ್ಲ ಸಂಜೆ ಕರಂಗಲ್ಪಾಡಿಯಲ್ಲಿ ಕಾದಿದ್ದ ವೀಯಾರೆಲ್ ಬಸ್ ಸೇರಿಕೊಂಡೆವು. ರಾತ್ರಿಯ ವೇಳೆ ಹೋಟೆಲುಗಳು ಮುಚ್ಚುವ ಸಮಯದಲ್ಲಿ, ಹೆದ್ದಾರಿ ಪಕ್ಕದಲ್ಲೇ ಮೂವತ್ತಕ್ಕೂ ಮಿಕ್ಕು ಊಟ ಹುಡುಕುವುದು ಕಷ್ಟ. ಇದನ್ನು ಮುಂಗಂಡು ಆದೇಶ ಕೊಟ್ಟಂತೆ ಬಿಸಿಬೇಳೆ ಬಾತ್ ಹಾಗೂ ಮೊಸರನ್ನದ ಡಬ್ಬಿಗಳೂ ಸಕಾಲಕ್ಕೆ ಬಸ್ ಸೇರಿದವು. ನಮ್ಮ ಸಾಂಪ್ರದಾಯಿಕ ಮದುವೆಯ ಅಂಗಗಳೇ ಆದ ಪುರೋಹಿತ, ಪರಿಕರ್ಮಿ, ಹಲವು ಪರಿಕರಗಳ (ಉದಾ: ಮಾವು ಹಲಸುಗಳ ಕುಡಿ, ವೀಳ್ಯದೆಲೆ, ಕುಸುಲಕ್ಕಿ, ಹಾಳೆ ಬಟ್ಟಲು ಇತ್ಯಾದಿ) ಯಥೋಚಿತ ಸಂಗ್ರಹವೂ ಅಲ್ಲಿ ಸಂಗಮಿಸಿತ್ತು. ಎಲ್ಲವನ್ನು ಸಮರ್ಪಕವಾಗಿ ಸಂಯೋಜಿಸಿದ ತಮ್ಮಣ್ಣನನ್ನು
ಯಾನಾರಂಭದಲ್ಲಿ ತಮಾಷೆಯಲ್ಲೇ ನಳಿನಿ ಮಾಯ್ಲಂಕೋಡಿ (ನನ್ನ ಹಿರಿಯ ಸೋದರಮಾವನ ಕಿರಿಯ ಮಗಳು) ಗೌರವಿಸಿದಳು; ಸೇರಿದೆಲ್ಲರ ಹುಯ್ಲಿನೊಡನೆ ಬಸ್ಸಿನೆದುರು ಅವನಿಗೊಂದು ಬಿಗಿಲಿನ ಹಾರ! ಈ ಹಾಸ್ಯದ ಕಂಡಕ್ಟರ್‍ಗಿರಿಯಲ್ಲಿ ಹಾಸ್ಯವನ್ನು ತಪ್ಪಿಸಿಕೊಂಡ ನಮ್ಮ ಬಸ್ಸಿನ ಚಾಲಕನೊಬ್ಬ ಗಂಭೀರವಾಗಿಯೇ ಕೇಳಿದ್ದು ಪ್ರತ್ಯೇಕ ಹಾಸ್ಯವಾಯ್ತು. ಅದನ್ನು ನಾನು ಫೇಸ್ ಬುಕ್ಕಿನಲ್ಲಿ ಹೀಗೆ ಪ್ರಸರಿದ್ದೆ  “ಕಲ್ಯಾಣೋತ್ಸವ ಕೂಟದ ಕಪ್ತಾನನ ಕೊರಳಿಗೆ ಕೂಗುಮಾರಿಯ ಕಂಠಾಹಾರವೇರಿಸಿದಳು ಕಲಕಂಠೆ ಕಮಲೆ. ಕಣ್ಕಣ್ಬಿಟ್ಟ ಖಾಸಗಿ ಕಂಡಕ್ಟರ್ ಕೇಳಿಯೇಬಿಟ್ಟ ‘ಕೇಎಸ್ಸಾರ್ಟೀಸೀ ಕಂಡಕ್ಟರ್ರಾ?”

ಕಂಡಕ್ಟರ್ ತಮ್ಮಣ್ಣನ ಟ್ರಿಪ್ ಶೀಟ್ ಪರ್ಫೆಕ್ಟ್! ಪ್ಯಾಸೆಂಜರ್ಸಿನ ಕೌಂಟು, ಉಡುಪಿ ಪಿಕಪ್ಪು, ಹೈದರಾಬಾದ್ ಎಕ್ಸ್ಚೇಂಜು ಮರಳು ದಾರಿಯ ಡ್ರಾಪು ಇತ್ಯಾದಿ ಸರಿಯಾಗಿಯೇ ದಾಖಲಾಗಿತ್ತು.
ಮಹಾನಗರಿ ಹೈದರಾಬಾದ್ ತನ್ನ ಸಾರಿಗೆ ಸಂಕಟದಲ್ಲಿ, ಹಗಲು ದೊಡ್ಡ ಬಸ್ಸುಗಳನ್ನು ಒಳಭಾಗಕ್ಕೆ ಬಿಟ್ಟುಕೊಳ್ಳುವುದಿಲ್ಲ. ಅಂದರೆ ನಮ್ಮ ವಸತಿ ಪ್ರದೇಶ ತಲಪಲು ಅವಶ್ಯವಿದ್ದ ಪರ್ಯಾಯ ವ್ಯವಸ್ಥೆಯೂ ಸಮರ್ಪಕವೇ ಇತ್ತು. ಒಂದೇ ಸಣ್ಣ ಎಡವಟ್ಟು, ದಾರಿಯಲ್ಲಿ ತಂಡದ ಪ್ರಾಕೃತಿಕ ಅಗತ್ಯಗಳಿಗೆ ನೆಲೆ ಗುರುತಿಸುವುದು ಸರಿಯಾಗಿರಲಿಲ್ಲ. ಅದರಲ್ಲೂ ಮುಖ್ಯವಾಗಿ ತ್ಯಾಜ್ಯದ ವ್ಯವಸ್ಥೆಯ ಮುಂದಾಲೋಚನೆ ಸಾಕಾಗಲಿಲ್ಲ. ಒಯ್ದ ಬುತ್ತಿಯೂಟವನ್ನು ಹಂಚಿ ತಿನ್ನಲು, ಜತೆಗೆ ನೀರು ಶೌಚದ ವ್ಯವಸ್ಥೆಗೆ ಸಾಸ್ತಾನದಲ್ಲಿ, ನಮ್ಮ ಹಳೆಗಾಲದ ಗೆಳೆಯ (ಮಂಟಪ) ಮಂಜುನಾಥ ಉಪಾಧ್ಯರ ಸುವಿಸ್ತಾರ ಮನೆಯ ಆವರಣ ಚೆನ್ನಾಗಿಯೇ ಒದಗಿತ್ತು. ಆದರೆ ಮುಂದುವರಿದು ಅಪರಾತ್ರಿಯಲ್ಲಿ ಸಿಕ್ಕ ಹುಬ್ಬಳ್ಳಿ, ಇನ್ನೂ ಮುಖ್ಯವಾಗಿ ಬೆಳಗ್ಗಿನ ರಾಯಚೂರು ಬಹಳ ಹಿಂಸೆಯದೇ ಆಯ್ತು. ಹಾಗೇ ಮರಳುವ ದಾರಿಯಲ್ಲೂ  ನಡುರಾತ್ರಿಯ ಸಿಂಧನೂರು, ಮುಂಜಾನೆಯ ಹುಬ್ಬಳ್ಳಿ ಇನ್ನಷ್ಟು ಹಿಂಸ್ರಕವೇ ಆಯ್ತು.
ಮಂಗಳೂರು ಅಂಕೋಲದೊಳಗಿನ ಅಂತರ, ಬಹುತೇಕ ಚತುಷ್ಪಥಗೊಂಡ ರಾಷ್ಟ್ರೀಯ ಹೆದ್ದಾರಿಯದ್ದು. ಅದು ತೀವ್ರ ಎಡಬಲದ ಹೊಯ್ದಾಟವಿಲ್ಲದ ನಯ ಓಟ. ಅದರಲ್ಲಿ ಹೋಗುವಾಗ ಸಾಸ್ತಾನದವರೆಗೆ ಬಸ್ಸು ತುಂಬಾ ಆತ್ಮೀಯ ಮಾತುಕತೆ, ಹಾಡು, ಹಾಸ್ಯ ಮೆರೆದುವು. ಊಟವಾದ ಮೇಲೂ ಗಮ್ಮತ್ತಿನ ಶೇಷಕ್ಕೆ, ನಿದ್ರೆ ಹೆದರಿಕೊಂಡೇ ಅಡಿ ಇಡುವಂತಾಗಿತ್ತು. ಅಂಕೋಲದ ಬಳಿ ಓಟ ಒಳನಾಡಿನತ್ತ ತಿರುಗಿದ ಮೇಲಷ್ಟೆ ನಿದ್ರೆ ಪೂರ್ಣ ವಿಜಯ ಸಾಧಿಸಿತು. ನಡುರಾತ್ರಿಯಲ್ಲಿ ಸಿಕ್ಕ ಹುಬ್ಬಳ್ಳಿಯ ವೀಯಾರೆಲ್ ಬಸ್ ಡಿಪೋ ನಮ್ಮನ್ನು ಸಣ್ಣದಾಗಿ ಸುಧಾರಿಸಿ ಬೀಳ್ಕೊಂಡಿತು. ಉದಯರವಿ ಕಿರಣಗಳು ರಂಗೇರಿಸುವ ಕಾಲಕ್ಕೆ ನಾವು ಪೂರ್ಣ ಬಯಲು ಸೀಮೆಯನ್ನೇ ಹಾಯುತ್ತಿದ್ದೆವು. ಅಲ್ಲಿ ದಿಗಂತದ ಅಲಂಕಾರಕ್ಕೆ ಬಂಡೆ ಗುಡ್ಡಗಳೂ
ಮೊಳಕೆಯೊಡೆದಿದ್ದವು. ಎಂಟು ಗಂಟೆಗೆ ಪ್ರಾತಃಕರ್ಮಗಳಿಗಾಗಿ ರಾಯಚೂರು ಸೇರಿದೆವು. ಅಲ್ಲಿ ಮೊದಲಿಗೆ ಅನುಭವಿಗಳ ನೆನಪು ಮತ್ತು ಗೂಗಲ್ ನಕ್ಷೆ ಹಿಡಿದು ಕೋಟೆಯ ಹೊರ ಅಂಚಿನ ಖ್ಯಾತ ಹೋಟೆಲ್ ಏನೋ ತಲಪಿದೆವು. ಆದರದು ನವೀಕರಣದ ಹೆಸರಿನಲ್ಲಿ ಮುಚ್ಚಿತ್ತು. ಮಹಾಕಾಯ ಬಸ್ಸನ್ನು ಅಲ್ಲೇ ಬಿಟ್ಟು, ಕೋಟೆಯ ಒಳ ನಡೆದೆವು. ಅಲ್ಲಿ ಸಿಕ್ಕ ಹೋಟೆಲ್ ನಮ್ಮ ‘ಉದರಂಭರಣ’ವನ್ನೇನೋ ರುಚಿಕರವಾಗಿಯೇ ಮಾಡಿತು. ಆದರೆ ‘ಖಾಲಿ ಮಾಡಲು’ ಮಾತ್ರ ಅದರ ವ್ಯವಸ್ಥೆ ಸಾಲಲಿಲ್ಲ. ಹೋಟೆಲಿನ ನೌಕರರ ಎರಡೇ
ಕಕ್ಕೂಸಿಗೆ ನಾವು ನಲ್ವತ್ತು ಮಂದಿ ಸ್ಪರ್ಧಿಸುವಂತಾಗಿತ್ತು. ನಮ್ಮಲ್ಲಿ ಕೆಲವರು ಹುಡುಕಾಡಿ ಬಳಿಯ ಕೇಎಸ್ಸಾರ್ಟೀಸಿ ನಿಲ್ದಾಣದ ವ್ಯವಸ್ಥೆಗೆ ಶರಣಾದರು. ಅಲ್ಲಿಗೆ ಬರುವ ದಾರಿಯಲ್ಲಿ ಬಳ್ಳಾರಿ ಜಾಲಿ ಪೊದರುಗಳ ಮರೆಯಲ್ಲಿ ಬಯಲು ಶೌಚ ನಡೆಸುವವರನ್ನು ನೋಡುತ್ತ, ನಾನು ಪರೋಕ್ಷವಾಗಿ ‘ಸ್ವಚ್ಛ ಭಾರತ್’
ಆಂದೋಲನವನ್ನು ಲಘುವಾಗಿ ಗೇಲಿ ಮಾಡಿದ್ದೆ. ಆದರೆ ರಾಯಚೂರಿನಲ್ಲಿ ನನಗೆ ಕೋಟೆಯ ಕಂದಕಕ್ಕೆ ಬೆನ್ನು ಹಾಕಿದ ಭೀಕರ ‘ಸುಲಭ (ಜೋಪಡಿ) ಶೌಚಾಲಯ’ವೇ ಬಳಕೆಗೆ ಸಿಕ್ಕಾಗ ನನ್ನ ‘ನಾಗರಿಕ’ನೆಂಬ ಬಿಂಕವೇ ಅಳಿದುಹೋಯ್ತು. ಯಾಕೆಂದರೆ ಅಲ್ಲಿನ ಕೊಳಚೆ ನೇರವಾಗಿ ಕೋಟೆಯ ಕಂದಕದಲ್ಲಿ ಮೆರೆದಿತ್ತು!

ರಾಯಚೂರು ಕೋಟೆ ಸಾಕಷ್ಟು ಎತ್ತರಕ್ಕೂ ವಿಸ್ತಾರಕ್ಕೂ ವ್ಯಾಪಿಸಿತ್ತು. ಆದರೆ ಭಾರತೀಯರ ಇತಿಹಾಸ ಪ್ರಜ್ಞೆಯ ಕೊರತೆ ಮತ್ತು ಸಂಕುಚಿತ ಸ್ವಾರ್ಥದ ಇನ್ನೊಂದೇ ಉದಾಹರಣೆಯಂತೆ ವರ್ತಮಾನದ ‘ನಾಗರಿಕತೆ’ ಅದನ್ನು ಮುಕ್ಕುತ್ತಿದ್ದುದು ಸ್ಪಷ್ಟವಿತ್ತು. ಕೋಟೆಯ ಒಳಮಗ್ಗುಲಿನಲ್ಲಿ ಜೀರ್ಣೋದ್ಧಾರ
ಕಾರ್ಯ ಎಂದೋ ಎಷ್ಟೋ ಕಂತಿನಲ್ಲಿ  ಅರೆಬರೆ ನಡೆದು, ಸದ್ಯ ಜೂಗರಿಸಿದ್ದನ್ನು ಕಂಡೆ. ಇವನ್ನೇ ನೋಡಲು ಬರುವ ನನ್ನಂಥ ಕುಹಕಿಗಳು, ಮುಂದುವರಿದು ರಾಷ್ಟ್ರೀಯ ಗೋಪ್ಯ
(ಹೊಣೆಗೇಡಿತನ?) ಬಯಲು ಮಾಡದಂತೆ, ಅಲ್ಲೊಬ್ಬ ವಾಚಾಳಿ ವಾಚ್ಮ್ಯಾನ್ ಇದ್ದ. ಆತ ಕ್ಯಾಮರಾ ಹಿಡಿದು ಹೋದ ನಮ್ಮನ್ನು ಗದರಿದ. ಕೋಟೆಯ ಪ್ರಾಚ್ಯ ಮಹತ್ವ ಸಾರಿ, ಸಂರಕ್ಷಣಾಸ್ಥಿತಿ ಘೋಷಿಸುವ ಫಲಕವನ್ನು ಹೊಸಕಾಲದ ಹಾಳಮೂಳ, ಬೀದಿ ವ್ಯಾಪಾರ, ಹೋಟೆಲ್ ಮಂಕುಮಾಡಿತ್ತು. ಕೋಟೆಯ ಇನ್ನೊಂದು ಮುಖದಲ್ಲಿ ಸಾರ್ವಜನಿಕ ವಾಚನಾಲಯದ ಬೋರ್ಡು ಕಂಗೊಳಿಸಿತ್ತು. ಅಲ್ಲಿ ನಿಜದಲ್ಲಿ ಒಳಗಿಲ್ಲದ ವಾಚನಾಲಯ ಕಾಣದ್ದು ನನ್ನ ದೃಷ್ಟಿ ದೋಷವೇ ಇರಬೇಕು! ಹೊರವಲಯದಲ್ಲಿ ‘ಕ್ರೂರನಕ್ರಾಕುಲ ಸಹಿತ ಜಲನಿಧಿ’ಯಾಗಿರಬೇಕಿದ್ದ
ದುರ್ಗಮ ಕಂದಕ, ಯಥೇಚ್ಛ ಕೊಳಚೆ, ಬಳ್ಳಾರಿ ಜಾಲಿ ಮತ್ತು ಸೂಕರ ಸೇನೆಯೊಡನೆ ನಿಜಕ್ಕೂ ಅಗಮ್ಯವಾಗಿತ್ತು! ನಮ್ಮ ಯಾತ್ರೆಯಾದರೂ ವಿವರಗಳಲ್ಲಿ ಸ್ಥಳಪರಿಚಯಕ್ಕಿದ್ದದ್ದಲ್ಲ. ಹಾಗಾಗಿ ಅಷ್ಟಕ್ಕೆ ತೃಪ್ತರಾಗಿ, ಎಲ್ಲ ಪ್ರಯಾಣದ ಕೊನೆಯ ಹಂತಕ್ಕೆ,
ಅಂದರೆ ಹೈದರಾಬಾದ್ ಮುತ್ತಿಗೆಗೆ ಮುಂದುವರಿದೆವು.

ಸರದಿಯ ಮೇಲೆ ನಿದ್ರೆ ಹಾಗೂ ಬಸ್ಸಿನ ಕಾಳಜಿ ವಹಿಸಿಕೊಂಡ ಚಾಲಕರಿಬ್ಬರೂ ಈ ದಾರಿಗೆ ಅಷ್ಟೇನೂ ಪರಿಚಿತರಲ್ಲ. ಅವರು ನಮ್ಮನ್ನು ವಸತಿ ಕೇಂದ್ರಕ್ಕೆ (ಪಂಚತಾರಾ ಹೋಟೆಲ್ - ತಾಜ್ ಬಂಜಾರ) ಹತ್ತಿರದಲ್ಲಿ ಇಳಿಸುವ ಯೋಚನೆ ಬಿಟ್ಟಿದ್ದರು. ಬದಲಿಗೆ ತಮ್ಮ ಬಸ್ ಪೋಲಿ಼ಸರ ಅವಕೃಪೆಗೆ ತುತ್ತಾಗದ ಎಚ್ಚರ ವಹಿಸಿದರು. ನಮ್ಮನ್ನು ಹೊರ ಉಂಗುರ ರಸ್ತೆಯಿಂದ ಸ್ವೀಕರಿಸಬೇಕಾದ ಸಣ್ಣ ವಾಹನ ವ್ಯವಸ್ಥೆಯೂ ವೀಯಾರೆಲ್ಲಿನ ಹೈದರಾಬಾದ್ ಶಾಖೆಯದೇ ಜವಾಬ್ದಾರಿ ಇತ್ತು. ಆದರೆ ಹಾಗೆ ಬಂದ ಚಾಲಕನೂ ನಮ್ಮನ್ನು ಎಲ್ಲಿ ಇಳಿಸಿಕೊಳ್ಳಬಹುದು, ಎಲ್ಲಿಗೆ ಮುಟ್ಟಿಸಬೇಕು ಎಂದು ಹೇಳಬಲ್ಲವನಾಗಿರಲಿಲ್ಲ. ಇದು ಅನಾವಶ್ಯಕವಾಗಿ ನಮ್ಮ ಒಟ್ಟಾರೆ ಸಮಯ ಮತ್ತು ಪ್ರಯಾಣದ ಅಂತರವನ್ನು ಲಂಬಿಸಿತ್ತು. ಸಾಲದ್ದಕ್ಕೆ ಸಣ್ಣದರಲ್ಲಿ ಎರಡು ವಾಹನ ಭರ್ತಿಯಾಗಬಹುದಾದ ನಮ್ಮನ್ನು ಒಯ್ಯಲು ಬಂದದ್ದು ಒಂದೇ ವಾಹನ. ಅದರ ಒಂದು ಮೂಲೆಯಲ್ಲಿ
ಚೀಲಗಳ ಗುಡ್ಡೆ ಹಾಕಿ, ಉಳಿದಂತೆ ಎರಡರ ಆಸನಗಳಲ್ಲಿ ಮೂವರನ್ನಿರುಕಿ, ಕೆಲವರು ನಿಂತೇ ಹೊರಟೆವು. ನಮ್ಮವರೇ ಚರವಾಣಿಯಲ್ಲಿ ಗೂಗಲ್ ನಕ್ಷೆ ಆವಾಹಿಸಿ, ಸಂಶಯ ಬಂದಲ್ಲಿ ಅವರಿವರನ್ನು ಕೇಳಿ, ಹೋಟೆಲ್ ಸೇರುವಾಗ ಗಂಟೆ ಅಪರಾಹ್ನ ಮೂರಾಗಿತ್ತು!

ಮೊದಲೇ ಹೇಳಿದಂತೆ, ಈ ಮದುವೆ ಎರಡು ವಿಭಿನ್ನ ಸಂಪ್ರದಾಯಗಳ ಸಂಗಮ. ಮೇಲೆ ಕಾಲಧರ್ಮೀ ಕಿರು ಸಂಭ್ರಮಗಳೂ ಸೇರಿ ಕೊಂಡಿದ್ದವು. ಇವನ್ನೆಲ್ಲ ಭಾಗಿಗಳಲ್ಲಿ ಕಾಲಕಾಲಕ್ಕೆ ಹಂಚಿಕೊಳ್ಳಲು ಚರವಾಣಿಯಲ್ಲಿ ‘ಇಳಾ-ಋಷಿಲ್ ವಿವಾಹ’ದ್ದೇ ವಿಶೇಷ ಗುಂಪು ಬೇರೆ ಮಾಡಿದ್ದರು. ಚರವಾಣಿಯ ವಿಸ್ತೃತ ಬಳಕೆಯಲ್ಲಿ ನಾನು ಹಿಂದುಳಿದವ. ಆದರೆ ಈ ಯಾನದಲ್ಲಿ ದೇವಕೀಸಹಿತನಾಗಿ ನಾನು ಒಯ್ಲಿನಲ್ಲಿ ಒಂದಾಗಿಯೇ ಸಾಗಿದ್ದೆ! ಹಾಗೆ ಮದುವೆಯ
ಮುನ್ನಾ ದಿನದ ಸಂಜೆ ವಧೂಪಕ್ಷದಲ್ಲಿ ಮೆಹೆಂದಿ ಮತ್ತು ಗಾನಗೋಷ್ಠಿ ಎಂದೇ ತಯಾರಿಗಳು ನಡೆದಿದ್ದವು. ಆದರೂ ಮಂಗಳೂರಿನ ಬಸ್ ಬಳಗ ಸಕಾಲಕ್ಕೆ ತಲಪಲಿಲ್ಲವೆನ್ನುವ ಒತ್ತಡವನ್ನು ಶ್ಯಾಮಶೈಲರು ತುಂಬ ಕಾಳಜಿಯಿಂದಲೇ ನಿಭಾಯಿಸಿದ್ದರು. ಹೈದರಾಬಾದಿನ ಬಂಜಾರ ಗುಡ್ಡೆಯ, ಬಂಜಾರ ಸರಸಿಯ ದಂಡೆಯ ತಾಜ್ ಬಳಗದ ಪಂಚತಾರಾ ಹೋಟೆಲ್ ವಠಾರದಲ್ಲಿ ನಮ್ಮ ವ್ಯಾನ್ ನಿಲ್ಲುವಾಗ ಶ್ಯಾಮಶೈಲರೇ ಮುಂದೆ ನಿಂತು ಸ್ವಾಗತಿಸಿದರು. ಹೋಟೆಲಿನ ತಾರಾಮೌಲ್ಯಕ್ಕನುಗುಣವಾಗಿ ನೋಂದಣಿಯ ಔಪಚಾರಿಕತೆಗಳು ತುಸು ಜಾಸ್ತಿಯೇ ಇದ್ದರೂ ಚುರುಕಾಗಿಯೇ ಮುಗಿಸಿ ಕೊಟ್ಟರು. ಮತ್ತೆ ಪ್ರಥಮಾದ್ಯತೆಯ ಮೇಲೆ ಮನದಣಿಯುವ ಊಟಕ್ಕೆ ದಾರಿ ತೋರಿದರು.

ಮಾಳಿಗೆ ಆರರಿಂದ ಎಂಟರವರೆಗಿನ ವಿವಿಧ ಕೋಣೆಗಳಲ್ಲಿ ಎಲ್ಲರಿಗೂ ವಸತಿ ವ್ಯವಸ್ಥೆ. ಜೋಡಿ ಹಾಸಿಗೆಯ ಒತ್ತಿಗೊಂದು ಹೆಚ್ಚಿನ ಹಾಸಿಗೆ ಹಾಕಿ ಮೂರು ಮೂರು ಜನರಿಗೆ ಒಂದು ಕೋಣೆಯಂತೆ ಹಂಚಿಕೊಟ್ಟಿದ್ದರು. ಇಡೀ ಕಟ್ಟಡಕ್ಕೆ ಕೇಂದ್ರೀಕೃತ ವಾತಾಯನದ ವ್ಯವಸ್ಥೆಯಿಂದ ತೊಡಗಿ, ಬಿಡಿ ವಿವರಗಳವರೆಗೂ ತಾಜ್ ಪಂಚತಾರಾಖ್ಯಾತಿಗೆ ತಕ್ಕಂತೆಯೇ ಇತ್ತು. ವಠಾರ ಪ್ರವೇಶಿಸುತ್ತಿದ್ದಂತೆ ಕಂಡಿದ್ದ ಬಂಜಾರ ಸರಸಿ, ಅದರ ಹೋಟೆಲ್ ದಂಡೆಯ ಗಿಡಮರಬಳ್ಳಿಯಾದಿ ಉದ್ಯಾನದ ಚೊಕ್ಕ ಮನಸೆಳೆದಿತ್ತು. ಕೋಣೆಗಳಲ್ಲೂ ಆ ಸೌಂದರ್ಯ ಬೇಕೆಂದಾಗೆಲ್ಲಾ ಕಣ್ಣಿಗೆ ನಿಲುಕುವಂತೆ, ಆ ಬದಿಯ ಪೂರ್ಣ ಗೋಡೆಯನ್ನೆ ಪಾರದರ್ಶಕ ಮಾಡಿ, ಆವಶ್ಯಕತೆಯನುಸಾರ ಮರೆ ಮಾಡಿಕೊಳ್ಳಲು ಭಾರೀ ಪರದೆಗಳನ್ನೂ
ಇಳಿಬಿಟ್ಟಿದ್ದರು, ಆಚೆಗೆ ಬಾಲ್ಕನಿಯನ್ನೂ ಇಟ್ಟಿದ್ದರು. ಆ ಎತ್ತರದ ನೋಟದಲ್ಲಿ ಸರಸಿಯಂಚಿನ ಮಹಾಕಟ್ಟಡಗಳು
ನೀರಿಗೆ ಬಿದ್ದು ಮುಳುಗಿದಂತೆ, ನಟ್ಟಿರುಳಲ್ಲಿ ಊರ ದೀಪಗಳು ಅವನ್ನು ಮುಳುಗಿಯೇ ಹುಡುಕಿದಂತೆ ದೃಶ್ಯ ವೈವಿಧ್ಯ ನಿಜಕ್ಕೂ ಚಂದ. ಹೀಗೇ ದಿನದ ವಿವಿಧ ವೇಳೆಗಳಿಗೆ, ಋತುಮಾನದ ಬದಲಾವಣೆಗಳಿಗೆ ಅನ್ವಯಿಸುತ್ತಲಿದ್ದರೆ ಕಲ್ಪನಾ ಸೌಂದರ್ಯವೂ ಕಡಿಮೆಯದ್ದೇನೂ ಅಲ್ಲ. ಆದರೆ ಅಂಗಳದಲ್ಲಿ ಅಡ್ಡಾಡಿದಾಗ, ಬಾಲ್ಕನಿಗೆ ಹೋದಾಗ ಮೂಗಿಗೆ ದಕ್ಕುವ ದುರ್ನಾತ, ಅಪ್ಪಿತಪ್ಪಿ ಸಂಪರ್ಕ ಬಿಡಿ, ಸಮೀಪಿಸಿದರೂ ಕಾಣುವ ನೀರಿನ ಬಣ್ಣ, ತೇಲುವ ಕೊಳಚೆಗುಪ್ಪೆಗಳು ನಿಜಕ್ಕೂ ನಾಗರಿಕತೆಯ ದುರಂತ. ಇದು ನಮ್ಮದೇ ಬೆಂಗಳೂರಿನ ಮಹಾಗಟಾರ – ವೃಷಭಾವತಿ, ಬುರುಗು-ಬೆಂಕಿ ಕಾರುವ ಅಸಂಖ್ಯ ಸರಸಿಗಳಿಗೆ ಏನೂ ಕಡಿಮೆ ಇಲ್ಲ. ಕನ್ನಡಿ ಗೋಡೆಯ ಮೇಲೆ ಬಾಲ್ಕನಿ ಪ್ರಿಯರಿಗೆ ಎಚ್ಚರಿಕೆಯ ಮಾತುಗಳನ್ನು ತುಸು ಸೌಮ್ಯವಾಗಿಯೇ ಬರೆದಿದ್ದರು
“ಬಾಗಿಲು ತೆರೆದು ಹೋದದ್ದೇ ಆದರೆ ‘ಪೀಡೆ’ಗಳ ಬಗ್ಗೆ (ಮೂಗಿಗೂ ಸೊಳ್ಳೆಯದ್ದೂ) ಎಚ್ಚರವಿರಲಿ!” ಬಂಜಾರ ಸರಸಿಯ ಎಲ್ಲ ದಂಡೆಯೂ ತಾಜ್ ಹೋಟೆಲಿನ ವಶದಲ್ಲಿಲ್ಲದಿರುವುದು ಮೇಲ್ನೋಟಕ್ಕೆ ಕಾಣುವ ಕೊರತೆ. ಹಾಗೆಂದು ಸರಕಾರದ ವೈಫಲ್ಯವನ್ನು ಮರೆಮಾಡುವ ಉತ್ಸಾಹದಲ್ಲಿ ಕಲೆ (ಪುಣೆಯ ಎಫ್.ಟಿ.ಐ.ಐ), ವಿದ್ಯೆ (ಕರ್ನಾಟಕದ ಕನ್ನಡ ಶಾಲೆಗಳು), ಆರೋಗ್ಯ (ಉಡುಪಿಯ ಸರಕಾರೀ ಆಸ್ಪತ್ರೆ) ಮೊದಲಾದವನ್ನು ಬಹುಸಂಖ್ಯಾತರು ಕಳೆದುಕೊಳ್ಳುತ್ತಿರುವ ಪಟ್ಟಿಗೆ ನಮ್ಮ ಪ್ರಾಕೃತಿಕ ಸಂಪತ್ತುಗಳಾದ ನೀರು, ಕಾಡು ಮುಂತಾದವನ್ನೂ ಒಪ್ಪಿಸುವಂತಾಗಬೇಕೇ?

ಹೈದರಾಬಾದಿನಲ್ಲಿ ನಮ್ಮ ವಾಸ್ತವ್ಯಕ್ಕೊದಗಿದ ಬಹುತೇಕ ಸೌಕರ್ಯಗಳಿಗೆ (ಮರುದಿನದ ವಸತಿ ಹಾಗೂ ಮದುವೆ
ನಡೆದ ಸ್ಥಳ – ಹೋಟೆಲ್ ಮೆರಿಗೋಲ್ಡ್ ಮತ್ತು ರಿಸೆಪ್ಷನ್ ನಡೆದ ಪೈಗಾ ಪ್ಯಾಲೇಸ್ ಸೇರಿಸಿ), ನಾವು ಬಹುಮಂದಿ ಅನಾಗರಿಕರೇ ಆಗಿದ್ದೆವು. ತಾಜ್‍ನಲ್ಲಿ ಕೋಣೆ ಪ್ರವೇಶಕ್ಕಷ್ಟೇ ವಿದ್ಯುನ್ಮಾನ ‘ಬೀಗ’ವಿದ್ದರೆ, ಮೆರಿಗೋಲ್ಡಿನಲ್ಲಿ ಮಹಡಿಗಳಿಗೇರಿಳಿಯುವ ಸಾರ್ವಜನಿಕ ಎತ್ತುಗಗಳ (ಲಿಫ್ಟ್) ಬಳಕೆಗೂ ಅದರ ಕಪಿಮುಷ್ಟಿ ವಿಸ್ತರಿಸಿತ್ತು. ತಾಜ್‍ನಲ್ಲಿ ಶೌಚೋತ್ತರಕ್ಕೆ ಕಾಗದದ ಸುರುಳಿಯನ್ನಷ್ಟೇ ಒದಗಿಸಿದ್ದರು. ನೀರ ಬಳಕೆಗೆ ಬಕೇಟು, ನಲ್ಲಿ, ಪಾಟೆಯ ಹಳೇ ಶೈಲಿ ಬಿಡಿ, ಫಾಸೆಟ್-ವಾಶ್ ಎಂಬ ಪಿಚಕಾರಿ ಕೊಳಾಯಿ ಜೋಡಣೆಯೂ ಇರಲಿಲ್ಲ. ನೀರುಳಿಸುವ ಹುನ್ನಾರ ಇರಬಹುದು ಎಂದು ಭ್ರಮಿಸೀರಿ. ಹಾಗೇನೂ ಇಲ್ಲ, ಅಲ್ಲೇ ಪ್ರತಿ ಸ್ನಾನಕ್ಕೂ ಭರ್ಜರಿ ಸ್ನಾನತೊಟ್ಟಿಯನ್ನೇ ಬಿಸಿನೀರಲ್ಲಿ ತುಂಬಿ, ತೂಬಿಗಿಳಿಸುವ ವ್ಯವಸ್ಥೆ ಅಣಕಿಸುತ್ತಿತ್ತು. ಪ್ರತಿ ಕೋಣೆಕೋಣೆಯಲ್ಲಿದ್ದ ‘ನೀವೇ ಮಾಡಿಕೊಳ್ಳಿ’ ಕಾಫಿ/ಚಾ
ಸೌಕರ್ಯವಿತ್ತು. ನಮ್ಮವರು ಮೂರ್ನಾಲ್ಕು ಮಂದಿ ಅದನ್ನು ಉಪೇಕ್ಷಿಸಿ, ಹೋಟೆಲೊಳಗೇ ಇದ್ದ ಕಾಫೀ ಕಾರ್ನರಿಗೆ ಹೋಗಿ ಕಾಫಿ ಕೇಳಿ ಕುಡಿದರು. ಬಿಲ್ ಬಂದಾಗ
ಲೋಟ ಒಂದಕ್ಕೆ ಐದುನೂರರ ನೋಟೂ ಸಾಲದೆಂದು ತಿಳಿದಾಗ ಪಟ್ಟ ಪರಿತಾಪಕ್ಕೆ ನನ್ನಲ್ಲಿ ಮಾತುಗಳಿಲ್ಲ. ಹೀಗೇ ಇನ್ನಷ್ಟು ತಾರಾ ವ್ಯವಸ್ಥೆಯನ್ನೋ ನಮ್ಮ ಅವಸ್ಥೆಯನ್ನೋ ವಿಸ್ತರಿಸಿ ಆತ್ಮ-ಗೇಲಿಯೊಡನೆ ನಿಮ್ಮ ತಾಳ್ಮೆ ಕೆಡಿಸುವುದಿಲ್ಲ! ನಾಲ್ಕೈದು ದಶಕಗಳ ಹಿಂದೆ ದಾಶರಥಿ ದೀಕ್ಷಿತ್ ತಮ್ಮ ಹಾಸ್ಯ ಮಹಾಕಾದಂಬರಿಯಲ್ಲಿ ಗಾಂಪರ ಬಳಗವೊಂದನ್ನು ವಿದೇಶಕ್ಕೊಯ್ದದ್ದು ಓದಿ ನಾವೆಲ್ಲ ಮಹಾ ಬುದ್ಧಿವಂತ ನಗೆ ಬೀರಿದ್ದು ನೆನಪಾಗುತ್ತದೆ. ನಿಜದಲ್ಲಿ ಈ ತಾಜ್, ಮೆರಿಗೋಲ್ಡ್‍ಗಳಲ್ಲಿ ನಮ್ಮಲ್ಲಿ ಬಹುತೇಕರು ಪಕ್ಕಾ ಗಾಂಪ ಬಳಗದ ಸದಸ್ಯರೇ ಆಗಿದ್ದೆವು.

ಮೊದಲ ಸಂಜೆ ತಾಜ್‍ನ ಸುಂದರ ಈಜುಕೊಳದ ಒತ್ತಿನ ಹುಲ್ಲ ಹಾಸಿನ ಮೇಲೆ ಸಂಗೀತ-ರಂಜನೆ ವ್ಯವಸ್ಥೆ ಮಾಡಿದ್ದರು. ಅಲ್ಲೇ ಇನ್ನೊಂದು ಮಗ್ಗುಲಲ್ಲಿ ಅಲಂಕಾರಿಕ
ಉದ್ಯಾನದ ಮರೆಯಲ್ಲಿ ಬಂಜಾರ ಸರಸಿ ತನ್ನ ಇರವನ್ನು ವಾಸನೆಯಿಂದಲೇ ಸಾರುತ್ತಿದ್ದರೂ ಅದರ ಪರಿಣಾಮವಾದ ಸೊಳ್ಳೆಗಳು ಆಗೀಗ ಕಾಡಿದರೂ ಎಲ್ಲ ನಗಣ್ಯವಾಗುವಂಥ ಆತ್ಮೀಯ ವಾತಾವರಣ, ಕಲಾಪಗಳನ್ನು ಆ ಸಂಜೆ ನಿಸ್ಸಂದೇಹವಾಗಿ ನಮಗೊದಗಿಸಿತು. ಉದ್ಯಾನ ಪರಿಸರ ಕಣ್ಣುಗಳಿಗೆ ತಂಪನ್ನೀಯುತ್ತಿದ್ದಂತೆ, ಹೈದರಾಬಾದಿನಲ್ಲೇ ನೆಲೆಸಿರುವ ಪದ್ಯಾಣ ವಿನಯ ಭಟ್ ಮತ್ತು ಬಳಗ ನಡೆಸಿದ ವೈವಿಧ್ಯಮಯ ಸಂಗೀತ ಕಲಾಪ ಶ್ರಾವ್ಯ ಸುಖವನ್ನೂ ಜತೆಗೇ ಒತ್ತಿನ ಹುಲ್ಲ ಹಾಸಿನಲ್ಲಿ ವ್ಯವಸ್ಥೆ ಮಾಡಿದ್ದ ಸುಗ್ರಾಸ ಭೋಜನ ಜಿಹ್ವಾ ಶಾಂತಿಯನ್ನೂ ಕೊಟ್ಟಿತು. ಅಲ್ಲಿ ನಮಗೂ ಮುಂದಾಗಿ ಬಂದ ಇತರ ಬಂಧುಮಿತ್ರರ ಒಡನಾಟವೂ ಸಿಕ್ಕಿ, ನಮ್ಮ ಇಪ್ಪತ್ತಕ್ಕೂ ಮಿಕ್ಕ ಗಂಟೆಗಳ ಪ್ರಯಾಣದ ಬಿಗಿತಗಳನ್ನು ಇಳಿಸಿತು, ಮರುದಿನದ ಮದುವೆಗೆ ಮಾನಸಿಕ ಹದವನ್ನೂ ಕಲ್ಪಿಸಿತು. ಕೊನೆಯಲ್ಲಿ
ಕೇವಲ ದೈಹಿಕ ಬಳಲಿಕೆಯನ್ನಷ್ಟೇ ಕಳೆಯುವಂತೆ ಕೋಣೆಗಳನ್ನು ಸೇರಿ ಸುಖನಿದ್ರಾವಶರಾದೆವು.

ತಿಂಗಳುಗಳ ಮೊದಲೇ ಶ್ಯಾಮಶೈಲರು ಮದುವೆಗೆ ಹೋಟೆಲ್ ಕಾದಿರಿಸಿದ್ದರು. ಆದರೆ ಇವರ ತಾರೀಕುಗಳಲ್ಲೇ ಅಮೆರಿಕ ಅಧ್ಯಕ್ಷ ಟ್ರಂಪನ ಮಗಳ ಹೈದರಾಬಾದ್ ಭೇಟಿ ನಿಕ್ಕಿಯಾದಾಗ, ಆಕೆಯ ವಾಸ್ತವ್ಯದ ಅನಿವಾರ್ಯತೆಗೆ ಪ್ರಾಧಾನ್ಯ ಬಂದಿತ್ತು. ಅದು ಆಮಂತ್ರಣ ಪತ್ರಿಕೆ ಅಚ್ಚಿಗೆ ಹೋಗುವ ಮೊದಲೇ ಆದ್ದರಿಂದ, ಶ್ಯಾಮಶೈಲರು ಪರ್ಯಾಯ ವ್ಯವಸ್ಥೆಗಳನ್ನು ಕಂಡುಕೊಂಡಿದ್ದರು. ಅದರಂತೆ ನಾವೆಲ್ಲ ಬೆಳಗ್ಗಿನ ಉಪಾಹಾರದನಂತರ ತಾಜ್ ಬಿಡಾರ ಮುಚ್ಚುವುದಿತ್ತು. ಹಾಗಾಗಿ ನಾನು, ದೇವಕಿ ಬೆಳಗ್ಗಿನ ಕರ್ಮಗಳನ್ನು ಸಾಕಷ್ಟು ಮೊದಲೇ ಮುಗಿಸಿಕೊಂಡು ಸಣ್ಣ ಬೀದಿ ಸುತ್ತಾಟಕ್ಕೆ ಹೋಗಿ ಬಂದೆವು. ಹೋಟೆಲಿನ ಎದುರಿನ
ದಾರಿ, ಅಂದರೆ ನಗರದ ಒಳ ಉಂಗುರ ರಸ್ತೆಯಲ್ಲೇ ಒಂದೆರಡು ಕಿಮೀ ಪಾದ ಬೆಳೆಸಿ, ಬಂಜಾರ ಬೆಟ್ಟ ಏರು ಇಳಿ ಕಂಡುಕೊಂಡೆವು. ಒಂದೆರಡು ಆರೋಗ್ಯ ಕೇಂದ್ರಗಳನ್ನು ಬಿಟ್ಟು ಅನ್ಯ ವಾಣಿಜ್ಯ ವಹಿವಾಟುಗಳು ಇನ್ನೂ ಕಂದೆರೆದಿರಲಿಲ್ಲ. ವಾಹನ ಸಮ್ಮರ್ದವೂ ತೆಳುವಾಗಿತ್ತು. ಇತ್ತ ಚಳಿಯಲ್ಲ ಅತ್ತ ಬಿಸಿಯಿಲ್ಲ ಎನ್ನುವ ಆ ಮುಂಜಾನೆಯ ನಡಿಗೆ ಚೇತೋಹಾರಿಯಾಗಿತ್ತು. ಹೋಟೆಲ್ಲಿಗೆ ಮರಳುವಾಗ ನಮ್ಮ ಬಸ್-ಬಳಗದ ಕೆದಿಲ ವೆಂಕಟ್ರಮಣರೂ ಇನ್ನೊಂದೇ ದಿಕ್ಕಿನ ನಡಿಗೆ ಮುಗಿಸಿ ಸೇರಿಕೊಂಡರು.

ಎರಡನೇ ದಿನದ ನಮ್ಮ ವಾಸ್ತವ್ಯ ಮತ್ತು ಮದುವೆಯೂ ಇನ್ನೊಂದೇ ತಾರಾ ಹೋಟೆಲ್ – ಮೆರಿಗೋಲ್ಡಿನಲ್ಲಿತ್ತು. ಹಾಗೇ ಆ ಸಂಜೆಯ ರಿಸೆಪ್ಷನ್ ಮತ್ತೊಂದೇ ಸ್ಥಳ – ಪೈಗಾ ಪ್ಯಾಲೇಸಿನಲ್ಲಿತ್ತು. ಇಲ್ಲೆಲ್ಲ ಶ್ಯಾಮನ ಮಿತ್ರ-ಸಹಾಯಕರು, ವಾಹನಸೇನೆ ನಮಗೆ ಸಮರ್ಥ ಸೇವೆಯನ್ನೇ ಕೊಟ್ಟದ್ದರಿಂದ ಸಮಸ್ಯೆಯೇನೂ ಆಗಲಿಲ್ಲ. ಬದಲಿಗೆ, ಹೈದರಾಬಾದಿನಲ್ಲಿ ಇದ್ದ ಅಲ್ಪಾವಧಿಯಲ್ಲಿ ಅನುದ್ದಿಷ್ಟ ಪುಟ್ಟ ನಗರ ಪ್ರದಕ್ಷಿಣೆ ಮತ್ತು ಕನಿಷ್ಠ ಮೂರು ಸ್ಥಳ ವೀಕ್ಷಣೆಯ ಅವಕಾಶವನ್ನೇ ಕೊಟ್ಟಂತಾಗಿತ್ತು.


ವಿದ್ಯಾವಧಿ ಮುಗಿಸಿಕೊಂಡ ಗಣಕ ತಂತ್ರಾಂಶ ಪರಿಣತ ಋಷಿಲ್, ತನ್ನ ವೃತ್ತಿ-ವಾಸ್ತವ್ಯಕ್ಕೆ ಮುಂಬೈ ಆರಿಸಿಕೊಂಡಿದ್ದ. ಇಳಾ ಅಪ್ಪ ಶ್ಯಾಮನದೇ ಸಂಸ್ಥೆಯ ಬೆಂಗಳೂರು ಶಾಖೆಯಲ್ಲಿ ಕೆಲಕಾಲ ಕಳೆದು ಸದ್ಯ ಹೈದರಾಬಾದ್ ಕಛೇರಿಯಲ್ಲೇ ವೃತ್ತಿ ನಿರತಳಾಗಿದ್ದಳು. ಆದರೆ ಮದುವೆಯ ನಿಮಿತ್ತಕ್ಕೆ ಎರಡೂ ಪಕ್ಷದ ಮುಖ್ಯ ಸಂಬಂಧ ಜಾಲಗಳ ಅನುಕೂಲ ಹೈದರಾಬಾದಿಗೇ ಕೂಡಿಬಂದಿತ್ತು. ಮತ್ತೆ ಕಾಲದ ಅಗತ್ಯಕ್ಕೆ ಸಂಪ್ರದಾಯಗಳನ್ನು ಒಲಿಸಿಕೊಳ್ಳುವಲ್ಲೂ ಶ್ಯಾಮಶೈಲರಿಗೆ
(ಒಂದಿಬ್ಬರು ಪುತ್ತೂರಿನ ಪುರೋಹಿತರುಗಳನ್ನಷ್ಟೇ ನಮ್ಮ ಬಸ್ಸಿನಲ್ಲೇ ಸೇರಿಸಿ ಕರೆಸಿಕೊಂಡಿದ್ದರು) ಹೈದರಾಬಾದ್
ಹೆಚ್ಚು ಪ್ರಶಸ್ತವಾಗಿ ಕಂಡಿರಬೇಕು. ಇದನ್ನೆಲ್ಲ ಸಾಬೀತು ಪಡಿಸುವಂತೆಯೇ ಇತ್ತು, ಹೋಟೆಲ್ ಮೆರಿಗೋಲ್ಡಿನ ಅಂಗಳ, ಸಭಾಭವನ, ಸಹಾಯಕ ಸಿಬ್ಬಂದಿ ಸೇರಿದಂತೆ ಆತಿಥ್ಯದ ಎಲ್ಲಾ ವಿವರಗಳು. ರಾಜಕುಮಾರನಂತೆ ಅಲಂಕೃತನಾದ ಋಷಿಲ್, ತನ್ನ ಸಂಪ್ರದಾಯದಂತೆ ಕುದುರೆ ಏರಿ ‘ವಧುಬೇಟೆಗೆ’ ಹೊರಟ. ಅಬ್ಬರದ ವಾದ್ಯಮೇಳದೊಂದಿಗೆ ಬಂದ ಅವನನ್ನೂ ಹಿಂಬಾಲಿಸಿದ ಬಂಧುಗಳನ್ನೂ ಶ್ಯಾಮಶೈಲರ ಬಳಗ, ತಮ್ಮ
ಸಂಪ್ರದಾಯದಂತೆ ದಿಬ್ಬಣವಾಗಿಯೇ ಎದುರುಗೊಂಡರು. ಔಪಚಾರಿಕತೆಯ ಆತಿಥ್ಯ, ವಸ್ತ್ರಾಲಂಕಾರ ಕೊಟ್ಟು, ಮಂಟಪದಲ್ಲಿ ಕುಳ್ಳಿರಿಸಿ ಗುಣಗಾನ ನಡೆಸಿ, ಅಂತಃಪಟ ಏರಿಸಿದ್ದರು. ವರ-ಬಳಗದ ಸಂಭ್ರಮಕ್ಕೆ ಸಂವಾದಿಯಾಗಿ ವಧು ಇಳಾಳನ್ನು ಸೋದರ ಸಂಬಂಧಿಗಳು ಮೇನೆ ಏರಿಸಿ, ಭುಜ ಕೊಟ್ಟು ಸಭೆಗೆ ಹೊತ್ತು ತಂದಿದ್ದರು. ಸೋದರಮಾವನ ‘ಕರ್ತವ್ಯ’ಕ್ಕೆ ಅಳುಕದೆ ತಮ್ಮಣ್ಣ, ಆಕೆಯನ್ನು ಅನಾಮತ್ತಾಗಿ ಎತ್ತಿಯೇ ಮಂಟಪಕ್ಕೆ ಸೇರಿಸಿದ. ಪಟ ಸರಿದು, ವರಣಮಾಲಿಕೆ
ವಿನಿಮಯಕ್ಕಾಗುವಾಗ ಬಂಧುಗಳು ಸಂತೋಷದ ಜಿದ್ದಿನಲ್ಲಿ ವಧೂವರರನ್ನು ಎತ್ತೆತ್ತಿ ಮೆರೆದದ್ದು ನಿಜಕ್ಕೂ ಸ್ಮರಣೀಯ ದೃಶ್ಯವೇ ಆಗಿತ್ತು. ವರಪಕ್ಷದ ಕುದುರೆ ಮೆರವಣಿಗೆಯ ವಾದ್ಯಮೇಳದ ಸ್ಫೂರ್ತಿ ಮುಂದುವರಿಸಿದಂತೆ ವಧೂಪಕ್ಷದ ನಾಗಸ್ವರ ಬಳಗ ಬಜಾಯಿಸಿದ ರಾಗತಾಳಗಳು ಏನಾದರೇನು, ಸಭೆಯ ಉಲ್ಲಾಸ ಹೆಚ್ಚಿಸಿದ್ದಂತು ಹೌದೇ ಹೌದು. ಉತ್ತರೋತ್ತರವಾಗಿ ಮದುವೆಯ ಇತರ ಕ್ರಿಯಾಭಾಗಗಳನ್ನು (ಸಪ್ತಪದಿ, ಹೋಮ ಇತ್ಯಾದಿ) ವಧುಪಕ್ಷ ಭೋಜನಕ್ಕು ಮೊದಲೇ ಅಲ್ಲೇ ನಡೆಸಿತು.
ವರಪಕ್ಷ ಅಪರಾಹ್ನ ತಮ್ಮದೇ ಬಳಗದೊಂದಿಗೆ ನವವಧುವನ್ನು ಮನೆತುಂಬಿಕೊಳ್ಳುವ (ಬಹೂ-ಸ್ವಾಗತ್!) ಕಲಾಪಗಳನ್ನೂ ಇನ್ನೊಂದೇ ಕೊಠಡಿಯಲ್ಲಿ ಸಣ್ಣದಾಗಿ ಚಂದಗಾಣಿಸಿತು. ವಾಸ್ತವದಲ್ಲಿ ಬಹೂ-ಸ್ವಾಗತ್‍ಗೆ ಏನೂ ಗೋಪ್ಯತೆ ಇರಲಿಲ್ಲ. ಕೇವಲ ನಮ್ಮ ಅರಿವಿನ ಕೊರತೆಯಿಂದ ಅದನ್ನು ತಪ್ಪಿಸಿಕೊಂಡಿದ್ದೆವು. ಅದನ್ನು ನೋಡಿ ಬಂದ ಕೆಲವರು ಸಂತೋಷದಲ್ಲೇ “ನಾವು ಕನ್ಯಾದಾನ ಮಾಡಿದ್ದು ‘ಬಿದಾಯಿ’ ಅವರು ವಧೂಗೃಹಪ್ರವೇಶ ನಡೆಸಿದ್ದು ‘ಸ್ವಾಗತ್” ಎಂದೇ
ವಿವರಗಳನ್ನು ನಮ್ಮಲ್ಲಿ ಹಂಚಿಕೊಂಡರು.

ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ (ರಾಜಕುಟುಂಬದ ಗಣ್ಯ ಸದಸ್ಯರುಗಳೇ ಆದ) ಪೈಗಾಹ್ ಕುಟುಂಬದವನೊಬ್ಬ ನಿರ್ಮಿಸಿ, ಯಾವುದೋ ಸಂದರ್ಭದಲ್ಲಿ ಬಳುವಳಿಯಾಗಿ ಕೊಟ್ಟ ಸಣ್ಣ ಅರಮನೆಯೇ ಪೈಗಾಹ್ ಪ್ಯಾಲೇಸ್.  ಅರಮನೆಯ ಅಂಶ ನಮ್ಮ ಮದುವೆಯ ರಿಸೆಪ್ಷನ್ನಿನ ಪರಿಸರ ನಿರ್ಮಾಣಕ್ಕಷ್ಟೇ ಉಳಿದು, ವಾಸ್ತವದ ಕಲಾಪಗಳಿಗೆ ಪಕ್ಕದ ಮೈದಾನ ಹಾಗೂ ಚಪ್ಪರಗಳು ಸಾಲಂಕೃತವಾಗಿ ಸಜ್ಜಾಗಿದ್ದುವು. ಕತ್ತಲ ಜವನಿಕೆ ಇಳಿಯುತ್ತಿದ್ದಂತೆ, ವಾದ್ಯಗೋಷ್ಠಿ ತೊಡಗಿತು. ಸಾಲುಗಟ್ಟಿ ಬರುತ್ತಿದ್ದ ಆತ್ಮೀಯರು ವೇದಿಕೆಯ ಮೇಲಿನ ನವದಂಪತಿಗಳನ್ನೂ ಅವರ ಕುಟುಂಬ ಸದಸ್ಯರನ್ನೂ ಅಭಿನಂದಿಸುತ್ತಲಿದ್ದರು. ಮುಂದುವರಿದು, ಮೈದಾನದ ಸುತ್ತೆಲ್ಲ ತೆರೆದ
ಲಘೂಪಹಾರಗಳ ಅಡ್ಡೆಗಳನ್ನೂ ಚಪ್ಪರದೊಳಗಿನ ಘನ ತಿನಿಸುಗಳ ಅಂಕಣಗಳನ್ನೂ ಸವಿಯುತ್ತ ಸಂಭ್ರಮಿಸಿದರು. ಮಂಗಳೂರಿನ ಬಸ್-ಬಳಗವೂ ಯಥಾಮಿತಿ ತಿನಿಸು ಉಲ್ಲಾಸಗಳನ್ನು ತುಂಬಿಕೊಂಡು, ಕಾಲಮಿತಿಯನ್ನು ಮೀರಲಾಗದೆ ರಾತ್ರಿ ಒಂಬತ್ತೂವರೆಯ ಸುಮಾರಿಗೆ ಹೋಟೆಲ್ ಮೆರಿಗೋಲ್ಡಿಗೆ ಮರಳಿತು.

ಮಹಾನಗರದ ಸಾರಿಗೆ ಸಮಸ್ಯೆಗಳು ತಡರಾತ್ರಿಗಳಲ್ಲಿ ಸಡಿಲುವುದನ್ನು ಪರಿಗಣಿಸಿ, ಈಗ ನಮ್ಮ ಮಹಾರಥ - ಮಲ್ಟಿ ಆಕ್ಸ್ಲ್ ವಾಲ್ವೋ, ಮೆರಿಗೋಲ್ಡಿಗೇ ಬಂದು ಕಾದಿತ್ತು. ನಮ್ಮ ಮೂಲ ತಂಡದಲ್ಲಿ ಕೆಲವರು ಹೆಚ್ಚಿನ ಕರ್ತವ್ಯದ ಲೆಕ್ಕದಲ್ಲೂ ಕೆಲವರು ಪ್ರಯಾಣದ ಬಳಲಿಕೆಯನ್ನು ಮತ್ತೆ ಅನುಭವಿಸಲು ಸಿದ್ಧರಿಲ್ಲದೆಯೂ ಕಳಚಿಕೊಂಡಿದ್ದರು. ಆದರೆ ಅನ್ಯ
ಮಾರ್ಗಗಳಲ್ಲಿ ಮದುವೆಗೇ ಬಂದಿದ್ದ ಒಂದಿಬ್ಬರು
ಹೊಸದಾಗಿ ಸೇರಿಕೊಂಡಿದ್ದರು. ಹತ್ತೂವರೆಗೆ ನಮ್ಮ ಮರುಯಾನ ಪ್ರಾರಂಭವಾಯ್ತು. ಈ ಬಾರಿಯ (ಬೇರೇ) ಚಾಲಕ ಜೋಡಿ ಹೆಚ್ಚು ಅನುಭವಿಗಳೂ ಆಗಿದ್ದುದರಿಂದ ಮಾರ್ಗಕ್ರಮಣ ಚುರುಕಾಗಿಯೇ ತೊಡಗಿತ್ತು. ಎರಡು ದಿನಗಳ ದಣಿವಿಗೆ ಮಲಗುವ ಸಮಯವೂ ಸೇರಿಕೊಂಡಿತ್ತು. ವಿಶೇಷ ಮಾತು, ಗಮ್ಮತ್ತುಗಳ ‘ಹಾವಳಿ’ ಇಲ್ಲದೆ ರಾತ್ರಿಯಾನ ಸರಿದು ಹೋಯ್ತು. ಈ ಸಲ ಮುಂಜಾನೆಗೆ ಸಿಕ್ಕ ಊರು ಹುಬ್ಬಳ್ಳಿಯಾದರೂ ವ್ಯವಸ್ಥೆಯ ಸಮಸ್ಯೆ ಹಗುರಾಗಲಿಲ್ಲ; ಅನಾವಶ್ಯಕ ಸಮಯ ಹಾಳುಮಾಡಿತು. ಮತ್ತೆ ದಾರಿಯಲ್ಲಿ - ಸೂರ್ಯಕಾಂತಿ ಹೊಲದ ಆಕರ್ಷಣೆ, ಯಲ್ಲಾಪುರದ ಚಾಯ್-ದುಕಾನದ ಅನಿವಾರ್ಯತೆ, ಘಟ್ಟ ಇಳಿಯುವಲ್ಲಿ ಹಗಲಿಗೆ ಸಹಜವಾದ ಇತರ ವಾಹನಗಳ ಸತಾವಣೆ (ಅವುಗಳ ತಪ್ಪೇನಲ್ಲ, ದಾರಿ ಸಪುರ ಅಷ್ಟೆ), ಅಂಕೋಲದಲ್ಲಿ ಮಧ್ಯಾಹ್ನ ಊಟದ ತಂಗಣೆ,
ಗಂಗೊಳ್ಳಿ ಸೇತುವೆಗಳಲ್ಲಿ ಕಾಡಿದ ‘ಸಂಚಾರಿಗೊಜ್ಜು’ಗಳೆಲ್ಲ (ಟ್ರಾಫಿಕ್ ಜ್ಯಾಮ್!) ಸೇರಿ ನಮ್ಮ ನಿರೀಕ್ಷೆಯನ್ನು ಮೀರಿ
ಪ್ರಯಾಣಾವಧಿಯನ್ನು ಲಂಬಿಸಿತು. ವಾಸ್ತವದಲ್ಲಿ, ನಾವು ಉಡುಪಿಯ ಧರ್ಮಸಂಸತ್ತಿನ ಸಮಾರೋಪದ ದಿನದ ಸಾರಿಗೆ ನಿರ್ಬಂಧಗಳು ನಮ್ಮನ್ನು ಕಾಡಬಹುದು ಎಂದು ಹೆದರಿದ್ದು ಹುಸಿಯಾಯ್ತು. ಗಂಟೆ ಮಿನಿಟುಗಳ ಲೆಕ್ಕದಲ್ಲೇ ಹೇಳುವುದಿದ್ದರೂ ಸರಿಯಾಗಿ ಮೂರನೇ ದಿನಾಂತ್ಯಕ್ಕೆ ಮತ್ತೆ ಮಂಗಳೂರು ಮುಟ್ಟಿದ್ದೆವು. ಬಹುಕಾಲಕ್ಕೆ ನೆನಪಿನಲ್ಲುಳಿಯುವಂತೆ ದಕ್ಕಿದ ಕಲ್ಯಾಣೋತ್ಸವದ ಆನಂದದ ಎದುರು ತತ್ಕಾಲೀನ ನಿದ್ರಾ ಬಳಲಿಕೆಗಳನ್ನು ಮರೆತು ಎಲ್ಲರೂ ಮನಸ್ವೀ ಇಳಾಋಷಿಲ್ಲರಿಗೆ ಶುಭಾಶೀರ್ವಾದಗಳನ್ನೂ ನಮ್ಮ ಲೆಕ್ಕಕ್ಕೆ ಇವನ್ನೆಲ್ಲ ಸುಲಭ ಸಾಧ್ಯ ಮಾಡಿಕೊಟ್ಟ ಶ್ಯಾಮಶೈಲರಿಗೆ ಅಭಿನಂದನೆಗಳನ್ನೂ ಹಾರೈಸಿದೆವು.
   

4 comments:

  1. ಮತ್ತೊಮ್ಮೆ ಹೈದರಾಬಾದ್ ಪ್ರಯಾಣ ಮತ್ತು ಇಳಾ ಋಷಿಲ್ - ಕಲ್ಯಾಣೋತ್ಸವ ದಲ್ಲಿ ಪಾಲ್ಗೊಂಡಂತೆ ಅನಿಸಿತು - ಸುಮಾರು ೨೦ ಗಂಟೆಯ ದೀರ್ಘ ಪ್ರಯಾಣ - ತ್ರಾಸದಾಯಕ ವಾಗಬಹುದೇನೋ ಎಂಬ ಸಂಶಯ ಕಾಡಿತ್ತು ಆದರೆ ಬಂಧುಗಳ ಗುಂಪಿನಲ್ಲಿ "ದಿಬ್ಬಣದ" ಪರಿಯಲ್ಲಿ ಪ್ರಯಾಣಿಸುವ ಆನಂದದ ಆಕರ್ಷಣೆ ಸಹ ಇತ್ತು. ನೀವು ಬರೆದಂತೆ ೩ ದಿನದ ಪ್ರಯಾಣ, ಅಲ್ಲಿಯ ಅದ್ಧೂರಿಯ ಸಂಭ್ರಮ ಮತ್ತು ಮಿಗಿಲಾಗಿ ಶಾಮ ಶೈಲರ - ಅಚ್ಚುಕಟ್ಟಿನ ವ್ಯವಸ್ಥೆ ಮತ್ತು ಪ್ರೀತಿಯ ಉಪಚಾರ ಉಪಹಾರ ಎಲ್ಲವೂ ಮನ ಹೊಟ್ಟೆ ತುಂಬಿತು.
    ನಮ್ಮ ದೇಶದಲ್ಲಿ ( ನಾನು ಹೊರದೇಶ ಭೂಪಟದಲ್ಲಿ ಮಾತ್ರ ನೋಡಿದ್ದು ) ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯದ ಸೌಚಾಲಯಗಳಿಲ್ಲದಿರುವುದೇ ಅತಿ ದೊಡ್ಡ ಸಮಸ್ಯೆ. ಬಹುಶಃ ಬಸ್ ಕಂಪನಿಯವರೇ ಇದರ ವ್ಯವಸ್ಥೆ ಮಾಡಬಹುದೇನೋ - ಅಗತ್ಯ ಬಿದ್ದಲ್ಲಿ ಈ ಬಾಬ್ತು ಶುಲ್ಕ ಟಿಕೆಟ್ ಗೆ ಸೇರಿಸಬಹುದು ಅಥವಾ ಹಣ ಕೊಟ್ಟು ಉಪಯೋಗಿಸುವಂತಹ ವ್ಯವಸ್ಥೆ ಯನ್ನೂ ಮಾಡಬಹುದು. ಸರಕಾರದವರು ಅಲ್ಲಲ್ಲಿ ಇಂತಹ ವ್ಯವಸ್ಥೆಯನ್ನು ಸ್ಥಳೀಯ ಆಡಳಿತದವರ ಜವಾಬ್ದಾರಿಗೂ ಕೊಡಬಹುದೇನೋ. ವೀಯಾರೆಲ್ ಸಂಸ್ಥೆ ಬಹಳ ದೊಡ್ದಾದು ಆದರೆ ಅವರ ಖಾಸಗಿ ನಿಲ್ದಾಣಗಳಲ್ಲಿ ಇರುವ ಸೌಚಾಲಯವು ಬಹಳ ಕಿರಿದು !!

    ReplyDelete
    Replies
    1. ಹೌದು.ಆದರೆ ಈಗ ಕೆಲವು ವರ್ಷಗಳಿಂದ ಕೆಲವು ಕಡೆ ಶುಚಿಯಾದ ಶೌಚಾಲಯ ಸಿಗುತ್ತದೆ. 30 ವರ್ಷಗಳ ಹಿಂದೆ ಕತೆ ಬೇರೇ ಇರ್ತಿತ್ತು.

      Delete
  2. ಅಂಕಲ್,ಇಂತ ದೂರಮು ಒಚಿ ನನು ಕಲವಲೇದು������

    ReplyDelete
  3. ಮಹಾಯಾನವನ್ನೋದಿದಾಗ ನಿಮ್ಮೊಂದಿಗೆ ನಾನೂ ಬಂದಂತೆ ಅನಿಸಿತು.
    ಹನ್ನೆರಡು ವರ್ಷಗಳ ಹಿಂದೆ ನನ್ನ ಅಳಿಯನ ಮದುವೆಗೆ ಎರಡು ಐರಾವತ ಬಸ್ಸುಗಳಲ್ಲಿ ತಿರುಪತಿಗೆ ಹೋಗಿಬಂದ ನೆನಪಾಯಿತು. ನಮ್ಮ ಊಹೆಗೂ ಮೀರಿ ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ನಮಗೆ ಬೇಕಾದಂತೆ ಅತ್ಯುತ್ತಮವಾದ ರೀತಿಯಲ್ಲಿ ಸೇವೆಯೊದಗಿಸಿತ್ತು.

    ReplyDelete