(ಕಿನ್ನಿಕಂಬಳದ
ಮೂಲಮೂರಿ ಮತ್ತು ಕರಾವಳಿಯ ಕಥನ - ಉತ್ತರಾರ್ಧ)
(ಬಾಗಲೋಡಿ
ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ
ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ - ಜಿ.ಟಿ. ನಾರಾಯಣ ರಾವ್)
(ಭಾಗ ೧೩)
-
ಕೆ. ಮಹಾಲಿಂಗ ಭಟ್
‘ಮಾನವೀಯತೆ - ಅಹಿಂಸೆ’ ಮೌಲ್ಯಗಳನ್ನು
ಮರುಶೋಧಿಸುವ ಬಾಗಲೋಡಿ ಗುಣವೇ ಪವಾಡ ಪುರುಷದಂಥ ಪ್ರಸಿದ್ಧ ಕತೆಯನ್ನು ಕೊಟ್ಟಿದೆ. ಸಾಹಿತ್ಯ ಪರಿಷತ್ತಿಗಾಗಿ
ಕೆ. ನರಸಿಂಹಮೂರ್ತಿ ಸಂಪಾದನೆಯಲ್ಲಿಯೂ (ಕೃತಿ: ಅತ್ಯುತ್ತಮ ಸಣ್ಣ ಕತೆಗಳು) ಗಿರಡ್ಡಿಯವರ ಮರೆಯಬಾರದ
ಹಳೆಯ ಕತೆಗಳು ಸಂಕಲನದಲ್ಲಿಯೂ ಇದು ಬಂದಿದೆ. ಬಾಗಲೋಡಿಯವರು ಇತಿಹಾಸ ಲೋಕಕ್ಕೆ ಪ್ರವೇಶಿಸುವಾಗ ಕಾಲದ
ಖಂಡಾಂತರಗಳನ್ನು ದಾಟಿ ನಿರ್ಮಿಸುವ ಪುರಾತನ ವಾತಾವರಣಕ್ಕೂ ಅವರದ್ದೇ ಆದ ಛಾಪೊಂದು ಇರುತ್ತವೆಂಬುದಕ್ಕೆ
ಇದು ಸಾಕ್ಷಿ. ಸರ್ವಾರ್ಥಸಿದ್ಧಿ ಎಂಬ ಭಿಕ್ಕು, ತಾನು ಕೊಲೆಯ ಹಿಂಸೆಯೊಂದನ್ನು ನಡೆಸಿ ಅಹಿಂಸೆಯನ್ನು
ಉಳಿಸಿದ್ದ ಸತ್ಯವನ್ನು ತನ್ನ ಕೊನೆಯುಸಿರಿನ ಜೊತೆಯಲ್ಲಿ ಸ್ಫೋಟಿಸುವ ಕತೆ ಇದು. ಹೆಸರುಗಳು, ಪರಿಭಾಷೆಗಳು,
ವಿವರಗಳ ಮೂಲಕ ಬೌದ್ಧ ಚಾರಿತ್ರಿಕ ವಾತಾವರಣದ ಹಿನ್ನೆಲೆಯಲ್ಲಿ ಈ ಮಹಾನ್ ಅಹಿಂಸಾಮೂರ್ತಿ ಭಿಕ್ಕು ಕ್ರೂರ,
ಮೂರ್ಖ ರಾಜನನ್ನು ಕೊಂದುಬಿಟ್ಟಿದ್ದ ಸತ್ಯವನ್ನು ಕತೆ ತೆರೆಯಿಸುತ್ತದೆ. "ನಾನೀ ಕಥೆಯನ್ನು ನಿನಗೆ
ಹೇಳಿದುದು ಪಶ್ಚಾತ್ತಾಪದಿಂದಲ್ಲ, ಆತ್ಮಲಾಂಛನದಿಂದಲ್ಲ, ಸರ್ವಥಾ ಅಲ್ಲ.... ನಿನಗೆ ಕರ್ತವ್ಯಜ್ಞಾನಕ್ಕಾಗಿರಲಿ
ಎಂದು ಹೇಳಿದ್ದೇನೆ," ಎನ್ನುತ್ತಾನೆ ಬೌದ್ಧ ಸಂನ್ಯಾಸಿ. ಅಹಿಂಸೆ ಕರುಣೆಗಳಂಥ ಭಿಕ್ಕುವಿನ ಮೂಲವಾಸನೆಗಳು
ಇಲ್ಲಿ ಹೊಸ ಅರ್ಥ ಪಡೆದು ಹೊಳೆವ ‘ಪವಾಡ’ ಸಾಧಿಸುತ್ತವೆ. ದೇವರಾಯರ ವ್ಯಂಗ್ಯ ವಿನೋದವೂ ಚಾರಿತ್ರಿಕ
ಕಾಲದ ನಿರ್ಮಾಣವೂ ಮಾನವೀಯತೆಯ ಪ್ರತಿಪಾದನೆಗಾಗಿ ‘ಮಾನಸಿಕ ದೂರ’ ಒಂದನ್ನು ನಿರ್ಮಿಸುತ್ತವೆ. ಈ ಒಂದು
ವಿಶಿಷ್ಟ ‘ಓರೆನೋಟ’ದ ಮೂಲಕ ರೂಢಿಸಿಕೊಂಡ
ಅಂತರದಿಂದಾಗಿಯೇ ಅವರ ಕತೆಗಳು ಹೊಮ್ಮಿಸುವ ಧ್ವನಿಗಳೂ ಈ ಧ್ವನಿಗಾಗಿ ಕಥಿಸಿದ ವಸ್ತುಗಳೂ ಕನ್ನಡ ಕಥಾಪ್ರಪಂಚದಲ್ಲಿ ಇಂದಿಗೂ ವಿಶಿಷ್ಟವೆನಿಸುತ್ತವೆ. ಸರ್ವಾರ್ಥಸಿದ್ಧಿ ಮೂರ್ಖ ರಾಜನಲ್ಲಿ ಜಾತಿಯ ಅಭಿಮಾನವನ್ನು ಕೆರಳಿಸಿಯೇ ಅವನನ್ನು ತನ್ನ ಬಳಿ ಕರೆಸುವುದು; ಧರ್ಮದ ದಾರಿಯಲ್ಲಿದ್ದಾಗಲೂ ಭಿಕ್ಕು ತನ್ನ ರಾಜಕೀಯ ಪ್ರಜ್ಞೆಯ ಹರಿತವನ್ನು ಕಳೆದುಕೊಳ್ಳದಿರುವುದು ದೇವರಾಯರ ಯೋಚನಾಕ್ರಮದ ‘ಆಧುನಿಕತೆ’ಯೇ ಆಗಿದೆ. ಹಾಗಾಗಿ ಬೌದ್ಧ ಧಾರ್ಮಿಕ ವಾತಾವರಣ ದಟ್ಟವಾಗಿದ್ದಾಗಲೂ ಕತೆ ಧಾರ್ಮಿಕವಾಗದೇ ಉಳಿಯುತ್ತದೆ. ಮರಣಕ್ಕೆ ಹತ್ತಿರವಾಗಿದ್ದ ಸಂಕಟದಲ್ಲಿ ದೇವರಾಯರು ಈ ಕತೆಯನ್ನೂ ಮುಂದಿನ ಕತೆಯನ್ನೂ ಬರೆದಿದ್ದರೆಂದು ಇನ್ನೊಮ್ಮೆ ನೆನಪಿಸಿಕೊಳ್ಳೋಣ.
ಅಂತರದಿಂದಾಗಿಯೇ ಅವರ ಕತೆಗಳು ಹೊಮ್ಮಿಸುವ ಧ್ವನಿಗಳೂ ಈ ಧ್ವನಿಗಾಗಿ ಕಥಿಸಿದ ವಸ್ತುಗಳೂ ಕನ್ನಡ ಕಥಾಪ್ರಪಂಚದಲ್ಲಿ ಇಂದಿಗೂ ವಿಶಿಷ್ಟವೆನಿಸುತ್ತವೆ. ಸರ್ವಾರ್ಥಸಿದ್ಧಿ ಮೂರ್ಖ ರಾಜನಲ್ಲಿ ಜಾತಿಯ ಅಭಿಮಾನವನ್ನು ಕೆರಳಿಸಿಯೇ ಅವನನ್ನು ತನ್ನ ಬಳಿ ಕರೆಸುವುದು; ಧರ್ಮದ ದಾರಿಯಲ್ಲಿದ್ದಾಗಲೂ ಭಿಕ್ಕು ತನ್ನ ರಾಜಕೀಯ ಪ್ರಜ್ಞೆಯ ಹರಿತವನ್ನು ಕಳೆದುಕೊಳ್ಳದಿರುವುದು ದೇವರಾಯರ ಯೋಚನಾಕ್ರಮದ ‘ಆಧುನಿಕತೆ’ಯೇ ಆಗಿದೆ. ಹಾಗಾಗಿ ಬೌದ್ಧ ಧಾರ್ಮಿಕ ವಾತಾವರಣ ದಟ್ಟವಾಗಿದ್ದಾಗಲೂ ಕತೆ ಧಾರ್ಮಿಕವಾಗದೇ ಉಳಿಯುತ್ತದೆ. ಮರಣಕ್ಕೆ ಹತ್ತಿರವಾಗಿದ್ದ ಸಂಕಟದಲ್ಲಿ ದೇವರಾಯರು ಈ ಕತೆಯನ್ನೂ ಮುಂದಿನ ಕತೆಯನ್ನೂ ಬರೆದಿದ್ದರೆಂದು ಇನ್ನೊಮ್ಮೆ ನೆನಪಿಸಿಕೊಳ್ಳೋಣ.
ಕಲ್ಲು ಮನಸ್ಸಿನ ರಾಜಮ್ಮ ಕತೆಯಲ್ಲಿ
ಧರ್ಮ ಮತ್ತು ಮುಗ್ಧತೆಯ ಶೋಧ ಇನ್ನೊಮ್ಮೆ ಮರುಕಳಿಸುತ್ತದೆ. ಶೋಧನೆಯ ಪಟ್ಟುಗಳು ಪುನರಾವರ್ತಿತವಾದರೂ
ಭಿನ್ನ ವಾತಾವರಣಗಳಲ್ಲಿ ಅವನ್ನು ಮರೆಸಬಲ್ಲಷ್ಟು ದೇವರಾಯರ ಶೈಲಿ ಶಕ್ತಿಶಾಲಿಯೇ ಆಗಿದೆ. ಹೀಗಾಗಿ ಮೂಲತಃ
ಸತ್ಯಮೇವ ಜಯತೇ ಹಾಗೂ ಪವಾಡಪುರುಷ ಕಥಾಂತರಂಗಗಳಲ್ಲಿ ಸಮಾನತೆ ಇದ್ದರೂ ಓದುಗನಿಗೆ ಅದನ್ನು ಗ್ರಹಿಸಲು
ಸುಲಭಕ್ಕೆ ಸಾಧ್ಯವಾಗದು. ರಾಜಮ್ಮನ ‘ಕಲ್ಲುಮನಸ್ಸೇ’ ಅವಳ ಅಂತರಂಗದ ಸಹಜವಾಸನೆಯೆಂದು ಹಲವು ಉದಾಹರಣೆಗಳಲ್ಲಿ
ನಂಬಿಸುತ್ತ ಸಾಗಿದ ಕತೆ. ಅಂತ್ಯದಲ್ಲಿ ಮಾತ್ರ ಒಂದು ಬಲವಾದ ವೈರುದ್ಧ್ಯವನ್ನು ನಿರೂಪಿಸುತ್ತದೆ. ಧರ್ಮಕ್ಷೇತ್ರದ
ಮೇಲೆ ತಾನಿಟ್ಟ ಆಣೆಯಿಂದಲೇ ನೆರೆಮನೆಯ ಮಗುವಿಗೆ ಜ್ವರ ಬಂದಿತೆಂದು ನಂಬಿದ ರಾಜಮ್ಮ ಅದಕ್ಕಾಗಿ ಸುರಿವ
ಮಳೆಯಲ್ಲಿ ಧರ್ಮಕ್ಷೇತ್ರಕ್ಕೆ ಸಾಗಿ ಒದ್ದಾಡುತ್ತಾಳೆ. ಈ ಚಿತ್ರದ ಮೂಲಕ ಕತೆಗಾರ ತನ್ನ ಆಸ್ತಿಕ ನಂಬಿಕೆಯನ್ನೂ
ದಾಟಿ ಕುದಿವ ಮಾನವೀಯತೆಗೆ ಎಡೆಮಾಡುತ್ತಾನೆ. ಉಜಿರೆಯನ್ನು ದಾಟಿ ಸಾಗುವಾಗ ಸಿಗುವ ಹಳ್ಳಿ ಸಂಕಗಳು,
ದಾರಿಯ ಬಸ್ ಏಜೆಂಟ್ ಗುಮಾಸ್ತರು - ಇವರೆಲ್ಲ ಸೇರಿ ತುಳುನಾಡಿನ ಸೀಮೆಯೊಂದರ ವಿವರಗಳೇ ಆಗುತ್ತವೆ.
ಮತ್ತೆ ಇಲ್ಲಿ ನಾಗಮ್ಮ ಹಠಮಾರಿ, ಉದ್ಧಟಳು; ನಿರೂಪಕನೋ ಆಕೆ ಎದುರು ಬಲು ದುರ್ಬಲ ಮಾಣಿ. ದೇವರಾಯರ
ಕೆಲವು ಕತೆಗಳಲ್ಲಾದರೂ ಕೇಂದ್ರ ಪಾತ್ರಗಳು ಪ್ರಬಲ ಸ್ತ್ರೀಯರೆಂಬುದು ಗಮನಾರ್ಹ ವಿಚಾರ.
ಹುಚ್ಚು ಮುದುಕಿ ಕತೆಯಲ್ಲಿ ಮತ್ತೆ
ಕಾಣಿಸುವ ತುಳುನಾಡಿನ ದನದ ಜಾತ್ರೆಯ ವಿವರಗಳ ದೇಸಿತನ ಪಕ್ಕಾ ಬಾಗಲೋಡಿತನ ಹೊಂದಿದೆ. ಇಲ್ಲಿಯ ನಿರೂಪಕ
‘ಹುಲಿ ಜೋಯಿಸ’ ಕತೆಯಲ್ಲಿರುವಂತೆಯೇ ಪರಂಗಿ ವಿದ್ಯಾಭ್ಯಾಸ ಉಡುಪುಗಳಿಗೆ ತೆರೆದುಕೊಂಡವ; ಚಿಕ್ಕಪ್ಪನೆದುರು
ತಗ್ಗಿಕೊಂಡೇ ಘಟನಾವಳಿಗಳನ್ನು ತನ್ನ ಪ್ರಜ್ಞೆಯಲ್ಲಿ ಗ್ರಹಿಸುವವ. ಒಂಟಿ ಮುದುಕಿಯ ಅಂತರಂಗದ ಬಿಡಲಾಗದ
ಗೀಳು ತನ್ನ ಜೊತೆಗಾತಿ ದನದ ಮೇಲಿನ ಪ್ರೀತಿ! ದಮಕ್ಕೂ ಒಂದು ವ್ಯಕ್ತಿತ್ವವಿದೆಯೆಂದು ನಂಬಿದ್ದರಿಂದಲೇ
ಜಾನುವಾರು ಜಾತ್ರೆಯಲ್ಲಿ ಉಳಿದ ದನಗಳ ಭೇಟಿಗಾಗಿ ತನ್ನ ಒಂಟಿ ದನವನ್ನು ಜಾತ್ರೆಗೆ ತಂದಿದ್ದ ವಿಚಿತ್ರ
ಮುದುಕಿ ಈಕೆ. ಡೇನಿಶ್ ಕತೆಯೊಂದರ ಆಧಾರವೆಂದು ಬಾಗಲೋಡಿ ಇದನ್ನು ಕರೆದರೂ ಇದು ತುಳುನಾಡಿನ ಕತೆಯೇ
ಆಗುವಷ್ಟು ಶಕ್ತಿಶಾಲಿಯಾದುದು. ವ್ಯಾಪಾರಕ್ಕೆ ಬರದೆ, ಜೀವಪ್ರೀತಿಯ ಭಾಗವಾಗಿ ಸುಮ್ಮನೆ ಜಾತ್ರೆಯಲ್ಲಿ
ದನ ಹಿಡಿದು ನಿಂತ ಮುದುಕಿಯನ್ನೂ ವ್ಯಾಪಾರವಾಗಿಯೇ ಜೀವನ ವ್ಯವಹಾರಗಳನ್ನು ಸರಳವಾಗಿ ಗ್ರಹಿಸಿದ ಚಿಕ್ಕಪ್ಪನನ್ನೂ
ಇಲ್ಲಿಯ ನಿರೂಪಕ ಕತೆಯೊಳಗೆ ಪರೋಕ್ಷ ತುಲನೆಗೆ ತರುತ್ತಾನೆ. ಮತ್ತೆ ಮಾನವೀಯತೆಯ ತಟ್ಟುಗಳಲ್ಲಿ ಕತೆ
ಕರಗುತ್ತದೆ.
ಆರಾಧನಾ ಕತೆ ಅನಾತೋಲ್ ಫ್ರಾನ್ಸ್‍ನ
ಫ್ರೆಂಚ್ ಕತೆಗೆ ಎಷ್ಟು ಋಣಿ ಎಂಬುದಕ್ಕಿಂತಲೂ ಅದು ಎಷ್ಟು ಪಕ್ಕಾ ಭಾರತೀಯವಾಗುತ್ತದೆಂಬ ಅಧ್ಯಯನವೇ
ಹೆಚ್ಚು ಕುತೂಹಲಕಾರಿ. ನಿಜವಾದ ಆರಾಧನೆಯನ್ನು ಡೊಂಬರಾಟದವನ ಮುಗ್ಧತೆಯಲ್ಲಿ ಕಾಣುವ ಕತೆ. ಇದಕ್ಕೆ
ಪ್ರತಿಯಾಗಿ ಬ್ರಾಹ್ಮಣ ಅರ್ಚಕನ ಆಸ್ತಿಕತೆಯ ಆಳದ ಡಾಂಭಿಕತೆಯನ್ನು ತೋರಿಸುತ್ತದೆ. ತುಳುನಾಡಿನ ಕಂಬಳ,
ಈ ನಾಡಿನಿಂದ ತಿರುಪತಿಗೆ ಒಪ್ಪಿಸುತ್ತಿದ್ದ ಹರಕೆ, ತುಳುನಾಡು-ತಿರುಪತಿ ಸಂಬಂಧ, ಇಲ್ಲಿಯ ಬ್ರಾಹ್ಮಣ
ಪುರೋಹಿತರ ದುರಾಸೆ ಇವೆಲ್ಲ ವಿವರಗಳಿಂದ ಕತೆಗೆ ಸ್ಥಳೀಯತೆಯ ಸ್ಪರ್ಶ ಪ್ರಬಲವಾಗಿ ಒದಗುತ್ತದೆ. ಈ ದೇಶಿ
ಮತ್ತು ದೇವರಾಯರ ಕಥನಕ್ರಮದ ಸೂಕ್ಷ್ಮಗಳಿಂದಾಗಿ, "ಡೊಂಬರಾಟದವನು ತನ್ನ ಲಾಗವನ್ನೇ ಮುಗ್ಧವಾಗಿ
ಪ್ರದರ್ಶಿಸಿದಾಗ ದೇವರು ಅವನಿಗೆ ಒಲಿದ" ಎಂಬ ವಿವರ ಸರಳ ಪವಾಡಕತೆಯ ಆಸ್ತಿಕತೆ ಹೊಂದುವುದಿಲ್ಲ. ಕತೆಗಾರನಲ್ಲಿ ಆಸ್ತಿಕತೆ ಬಲಿಷ್ಠವಾಗಿ
ಇದ್ದಾಗಲೂ ಕತೆಯ ಸೃಜನಶೀಲ ಗುಣಕ್ಕೆ ಬಾಧೆ ತಟ್ಟುವುದಿಲ್ಲ; ಬದಲಾಗಿ ಬ್ರಾಹ್ಮಣ ತೀರ ಖಳನಾಗುವ ಸರಳ
ಚಿತ್ರಣ ತಪ್ಪಿಹೋದ ಒಂದು ವಿಶಿಷ್ಟ ಚೆಲುವು ಲಭಿಸಿದೆ. ಬ್ರಾಹ್ಮಣನೂ ಡೊಂಬರಾಟದವನೂ ತಿರುಪತಿಯಾತ್ರೆಗೆ
ಜೊತೆಯಾಗಬೇಕಾಗಿ ಬಂದ ಸ್ಥಿತಿ, ಆ ಯಾತ್ರೆ ಮತ್ತು ಯಾತ್ರೆಯ ಬಳಿಕ ಆದ ಪರಿಣಾಮಗಳು - ಇವನ್ನೆಲ್ಲ ಕತೆ
ಸಹಜವಾಗಿ ಕಟ್ಟುತ್ತ ಹೋಗುತ್ತದೆ.
ಬಹುಶಃ ದೇವರಾಯರು ತಮ್ಮ ವೈಯಕ್ತಿಕ
ಶ್ರದ್ಧೆಯ ಬಗ್ಗೆ ವಾಚ್ಯವಾಗಿ ಹೇಳಿಕೊಳ್ಳದಿದ್ದರೆ, ಕತೆಯೊಳಗೆ ಆ ಬಗ್ಗೆ ಸೂಚನೆಗಳೇ ಸಿಗದ ಸ್ಥಿತಿ
ಇಲ್ಲಿಯದು. ಜನರ ನಕಲಿತನವನ್ನು ಬಯಲಿಗೆಳೆವ ಅವರ ಹಿಂದಿನ ಕತೆಗಳ ಗುಣ ಇಲ್ಲಿಯೂ ಮುಕ್ಕಾಗದೆ ಉಳಿದಿದೆ.
ಡೊಂಬನ ಲಾಗವೆಂಬುದು ಅವನ ಬಾಳಿಗೇ ಸೇರಿ ಹೋದ ವಾಸನೆಯಾಗಿದ್ದು, ಇದರ ಮೂಲಕ ಅರಳಿದ ಭಕ್ತಿಯೇ ಹೆಚ್ಚು
ಸಹಜವಾಗುತ್ತದೆ; ಭಗವಂತನನ್ನೂ ಅದು ಒಲಿಸುತ್ತದೆ. ತನ್ನೊಳಗಿನ ‘ವಾಸನೆ’ಯಾಗಿ ಈ ಭಕ್ತಿಯನ್ನು ಸಾಧಿಸಲಾಗದ
ಬ್ರಾಹ್ಮಣನಿಗೆ, ಈ ಮಿತಿಯನ್ನು ಅರ್ಥಮಾಡಿಕೊಡುವ ಕತೆಯ ದಾರಿಯೇ ಅದರ ಮಾನವೀಯತೆಯ ತಟ್ಟು. ಕಲ್ಲು ಮನಸ್ಸಿನ
ರಾಜಮ್ಮ ಕತೆಯಲ್ಲಿ ಕನಕಮ್ಮನ ಗಂಡ ಶ್ರೀಮಂತನಾದುದು ಎರಡನೆಯ ಮಹಾಯುದ್ಧದಿಂದ; ಆರಾಧನಾ ಕತೆಯ ತಿರುಪತಿ
ಯಾತ್ರೆ ವಿಕ್ಟೋರಿಯಾ ರಾಣಿ ಕಾಲದ್ದಾಗಿದ್ದು, ಅದಕ್ಕೆ ಕಳ್ಳಕಾಕರ ಉಪದ್ರವ ಇತ್ತು - ಹೀಗೆಲ್ಲ ಕತೆಗಳೊಳಗೆ
ಸಮಾಜ ಚಲನೆಯನ್ನು ವಿಶಾಲ ದೃಷ್ಟಿಯಲ್ಲಿ ಕತೆಗಾರ ಕಾಣಬಲ್ಲ. ಆದರೆ ಈ ದೃಷ್ಟಿಯ ಅಂತಿಮ ಗಮನ ಮತ್ತೆ
ಮಾನವಾಂತರಂಗವೇ.
ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು
ಕುರಿತು: ದೇವರಾಯರು ಭಾರತ ಸರಕಾರದ ಪ್ರತಿನಿಧಿಯಾಗಿ ವಿದೇಶಗಳಲ್ಲಿ ಸುತ್ತುತ್ತ ಹೋದರು. ತಮ್ಮ ಆಡಳಿತ
ವ್ಯವಹಾರಗಳ ಕಾರ್ಯಬಾಹುಳ್ಯದಲ್ಲಿ ಕಳೆದೇ ಹೋದರು. ಅವರ ಕತೆಗಳ ಸೃಷ್ಟಿಯೇ ನಿಂತು ಹೋಯಿತು. ಅದೆಲ್ಲೋ
ಅವರ ಆಳಕ್ಕಿಳಿದ ‘ಸುಪ್ತವಾಸನೆ’ಯಾಯಿತು. ಕತೆ ಬರೆಯಲು ಅವರೂ ಮರೆತರು. ಅವರು ಕತೆ ಬರೆಯುತ್ತಿದ್ದರೆಂದು
ಓದುಗರೂ ಮರೆತರು. ೧೯೮೦ರ ದಶಕದ ಆರಂಭದ ಹೊತ್ತಿಗೆ ಕನ್ನಡ ಸಾಹಿತ್ಯ ಪ್ರಪಂಚಕ್ಕೆ, ಅವರು ಬಲು ಹಳೆಯ
ಸಾಹಿತಿಗಳಲ್ಲಿ ಒಬ್ಬರು ಎಂಬುದು ಕೂಡ ಅಸ್ಪಷ್ಟ ನೆನಪಾಗಿ ಉಳಿದಿತ್ತು. ಅವರು ಜೀವಂತ ಇದ್ದಾರೋ ಇಲ್ಲವೋ
ಎಂಬ ಸಂಶಯ ಅವರ ಸೃಜನಶಕ್ತಿಯ ಅರಿವಿದ್ದ ವೈಯೆನ್ಕೆಯಂಥವರನ್ನೂ ಕಾಡಿತ್ತು.
ದೂರ ದೇಶಗಳಲ್ಲೇ ಇದ್ದು, ಐವತ್ತೈದರ
ಹರೆಯ ತಲಪಿ ನಿವೃತ್ತಿಯ ಅಂಚಿಗೆ ಬರುತ್ತಿದ್ದ ಬಾಗಲೋಡಿಯವರನ್ನು ಸೋದರಳಿಯ ಎಂ. ಅರವಿಂದ ಶರ್ಮ ಸಂಪರ್ಕಿಸಿದರು.
ಇದುವರೆಗೆ ಲೌಕಿಕವಾಗಿ ಕಳೆದುಹೋಗಿ, ಇನ್ನೂ ಉಳಿದಿದ್ದ ತಮ್ಮ ಬದುಕಿಗೆ ಅರ್ಥವನ್ನು ಕತೆಗಳನ್ನು ಕಟ್ಟುವ
ಮೂಲಕವಾದರೂ ಇನ್ನೊಮ್ಮೆ ಕಂಡುಕೊಳ್ಳಬೇಕೆಂಬ ಉಮೇದಿನಲ್ಲಿ ಆಗ ಅವರು ಇದ್ದಂತಿತ್ತು! ಆರಾಧನಾದಂತೆಯೇ
ಇಲ್ಲಿ ಬಹುಶಃ ಇನ್ನೊಮ್ಮೆ ‘ಪುನರ್ಜನ್ಮ’ದ ಹಪಹಪಿಕೆ ಆ ಕತೆಗಾರ ಜೀವಕ್ಕೆ ಇತ್ತೋ ಏನೋ! ಕತೆಗಳ ‘ವಾಸನೆ’ಯು
ಅಂತರಂಗಕ್ಕೆ ಬಿಡದೆ ಕಾಡಿದ ದೇವರಾಯರ ಬಾಳು, ಅವರ ಕತೆಗಳ ಪಾತ್ರ ರೂಪಕಗಳಂತೆ ಭಾಸವಾಗುತ್ತದೆ. ಒಂದೆಡೆ
ಧೀಮಂತಿಕೆ, ಇನ್ನೊಂದೆಡೆ ಸುಪ್ತ ಕೀಳರಿಮೆ; ಒಮ್ಮೆ ಉದ್ಧಟತೆ, ಇನ್ನೊಮ್ಮೆ ಸೋಗಲಾಡಿತನದ ವಿರುದ್ಧ
ಸಿಡುಕು; ಒಮ್ಮೆ ಕುಳ್ಳತನ, ಇನ್ನೊಮ್ಮೆ ತನ್ನದೇ ಆಸಕ್ತಿಗಳ ಮೂಲಕ ತನ್ನನ್ನು ತಾನು ಕಾಣಬೇಕೆಂಬ ಹಠ;
ಒಮ್ಮೆ ಅದಮ್ಯ ಸಾಹಸೀ ಪ್ರವೃತ್ತಿ, ಇನ್ನೊಮ್ಮೆ ಮಾನವೀಯ ಕ್ಷಣಕ್ಕಾಗಿ ಕಾತರ - ಹೀಗೆ ಕತೆಗಾರನ ವ್ಯಕ್ತಿತ್ವಕ್ಕೂ
ಕತೆಯ ಪಾತ್ರಗಳಿಗೂ ಸೂಕ್ಷ್ಮ ಸಂಬಂಧ ಸಾಧಿಸಬಲ್ಲ ರೀತಿಯಂತೆ - ಇಲ್ಲೂ ಇದೊಂದು ವಾಸನೆಯ ಸಾಮ್ಯ!
ಎಸ್. ದಿವಾಕರರ ಸೂಚನೆಯಂತೆ ಮಲ್ಲಿಗೆ
ಮಾಸ ಪತ್ರಿಕೆಗಾಗಿ ‘ಹಳೆಯ ಕತೆ’ಗಳನ್ನು ಆರಿಸಿ ವಿಮರ್ಶಿಸುವಾಗ ಗಿರಡ್ಡಿ ಗೋವಿಂದರಾಜರು ದೇವರಾಯರ
ಸೃಜನೆಗಳನ್ನು ಹೆಕ್ಕಿಕೊಂಡಿದ್ದರು. ಸುಮಾರು ಇಪ್ಪತ್ತೆಂಟು ವರ್ಷಗಳ ಬಳಿಕ, ಅಂದರೆ ೧೯೮೨ರಲ್ಲಿ, ಯಾವುದೋ
ಕನ್ನಡ ಪತ್ರಿಕೆಯಲ್ಲಿ ತಮ್ಮ ಒಂದು ಕತೆ ಪ್ರಕಟವಾಯಿತೆಂಬ ಸುದ್ದಿ ದೂರದ ಬಲ್ಗೇರಿಯಾಕ್ಕೆ ತಲಪಿ ಕುತೂಹಲಿಗಳಾದ
ದೇವರಾಯರು ಅದನ್ನು ತರಿಸಿ ನೋಡಿದರು. ಅವರಲ್ಲಿದ್ದ ಕತೆಗಾರ ಎಚ್ಚತ್ತಿದ್ದ! ಅವನು ಇನ್ನೂ ಹನ್ನೆರಡು
ಕತೆಗಳನ್ನು ಕೇವಲ ಮೂರೇ ವರ್ಷಗಳ ಅವಧಿಯಲ್ಲಿ ಇನ್ನೊಮ್ಮೆ ರೂಪಿಸಿಕೊಟ್ಟ. ದೇವರಾಯರ ಕತೆಗಳಲ್ಲಿ ಅರ್ಧಾಂಶವೂ
ಹೀಗೆ ಕತೆಗಾರನಾಗಿ ಅವರ ಪುನರ್ಜನ್ಮವಾದಾಗಿನ ಬಳಿಕದ ಸೃಷ್ಟಿ! ‘ಮೊದಲ ಜನ್ಮ’ದಲ್ಲಿ ಏಳು ವರ್ಷ, ‘ಎರಡನೇ
ಜನ್ಮ’ದಲ್ಲಿ ಮೂರು ವರ್ಷ ಹೀಗೆ ಅವರ ಸಾಹಿತ್ಯ ಸೃಷ್ಟಿಯ ಕಾಲ ಕೇವಲ ಹತ್ತು ವರ್ಷಗಳ ಕಿರು ಅವಧಿಯಷ್ಟೇ
ಆಗಿತ್ತು ಎಂಬುದನ್ನು ಮರೆಯಬಾರದು. ನಿವೃತ್ತಿಯಾಗಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲಸಿದ ಬಳಿಕ,
ಮರಣದವರೆಗೂ (೧೯೮೫) ಅವರು ಕತೆಗಳನ್ನು ಕಟ್ಟಿದರು. ಮರುವರ್ಷವೇ ಧಾರವಾಡದ ಮನೋಹರ ಗ್ರಂಥಮಾಲೆ ಅವರ
ಈ ಎರಡನೆಯ ಹಂತದ ಕತೆಗಳನ್ನು ಪ್ರಕಟಿಸಿತು (೧೯೮೬). ಬಾಳಿನ ಸೃಜನಶೀಲ ಆಯುರ್ಭಾಗವನ್ನೆಲ್ಲ ಕಡಲಾಚೆಯಲ್ಲಿ
ಕತೆಗಳನ್ನು ಕಟ್ಟದೆ ಕಳೆದಿದ್ದ ತನ್ನ ಮಣ್ಣಿನ ಬರಹಗಾರನ ಈ ಕತೆಗಳನ್ನು ಮಂಗಳೂರು ವಿಶ್ವವಿದ್ಯಾಲಯ
ತನ್ನ ೧೯೯೦ರ ದಶಕದ ಆಚೆ ಈಚೆ ವರ್ಷಗಳಲ್ಲಿ ಪಠ್ಯಪುಸ್ತಕವಾಗಿಸಿ ಗೌರವ ತೋರಿಸಿತು.
ಪ್ರಪಂಚ ಸುತ್ತಾಟದ ವಿಸ್ತಾರ ಅನುಭವ,
ವಿಶಾಲ ಓದು, ದೇವರಾಯರ ಕತೆಗಳ ರೂಪವನ್ನು ಏನೂ ಮಾರ್ಪಡಿಸಿರಲಿಲ್ಲ. ಅವರ ಕತೆಗಳ ಮೂಲಸ್ವಭಾವದ ವಾಸನೆ
ದಶಕಗಳ ಬಳಿಕವೂ ಕೆಡದೆ ಉಳಿದಿತ್ತು. ಆದರೆ ಜನಜೀವನದ ವಿವರಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ರೀತಿಯಲ್ಲಿ,
ಹರಿತ ವ್ಯಂಗ್ಯವನ್ನು ಸಾಧಿಸುವಲ್ಲಿ, ಅಂತರಂಗದಲ್ಲಿ ಇರುವ ಆಶಯದ ಪುನರಾವರ್ತನೆಯನ್ನು ಬಹಿರಂಗದಲ್ಲಿ
ವಿವರಗಳಿಂದ ಅಲಂಕರಿಸಿ ಅದು ಕಾಣದಂತೆ ಮಾಡುವಲ್ಲಿ, ಇಲ್ಲೆಲ್ಲ ದೇವರಾಯರ ‘ಮ್ಯಾಜಿಕ್ ಗುಣ’ (ಮಾಂತ್ರಿಕ
ಸ್ಪರ್ಶ) ತಡವರಿಸುತ್ತಿತ್ತು. ಇದು ಹಳೆಯ ಗವಾಯಿಯೋರ್ವ ತನ್ನ ಪ್ರಾಚೀನ ತಾನುಗಳ ಪಟ್ಟುಗಳನ್ನೇ ಬಳಸಿ,
ತನ್ನ ಹಿಂದಿನ ಅನುಭವದ ಮೇಲೆ ಸಂಗೀತ ಸೃಷ್ಟಿಸುವಂತೆ! ಅಲ್ಲಿ ಮಧುರತೆ ಇದೆ, ಆದರೆ ಹೊಸತನದ ನಿಗೂಢ
ಜೀವಂತಿಕೆ ಕರಗಿಬಿಟ್ಟ ಬೋಳು ಸ್ಥಿತಿ ಬರುತ್ತದಲ್ಲ, ಹಾಗೆ ಇದು! ಅಂದರೆ ದೇವರಾಯರೊಳಗಿನ ಕತೆಗಾರನಿಗೆ
ಹೊಸ ಕತೆ ಹುಟ್ಟಿಸುವ ಶಕ್ತಿ ಇನ್ನೂ ಚೆನ್ನಾಗಿಯೇ ಇತ್ತು. ಇವೆಲ್ಲದರ ಆಳದಲ್ಲಿದ್ದ ಯಾವುದೋ ಒಂದು
ಮಾಂತ್ರಿಕತೆ ಎಲ್ಲೋ ಇನ್ನೂ ಆಳಕ್ಕಿಳಿದು ಕಂಗೆಡುವಂಥ ಸ್ಥಿತಿಯಾಗಿತ್ತು! ಬಾಗಲೋಡಿಯವರಲ್ಲಿ ಉತ್ಸಾಹವೂ
ಪ್ರಬಲವಾಗಿಯೇ ಇತ್ತು. ಕತೆಗಾರನಾಗಿ ಪುನರ್ಜನ್ಮ ಪಡೆದು ಅವರು ಬಲ್ಗೇರಿಯಾದಿಂದ ಕಳುಹಿಸಿದ ಮೊದಲ ಕತೆ
ಮೃಷ್ಟಾನ್ನ ಇದನ್ನು ದೊಡ್ಡ ಕ್ಯಾನ್ವಾಸಿನಲ್ಲಿ ಕಾದಂಬರಿಯಾಗಿ ವಿಸ್ತರಿಸುವ ಕನಸನ್ನೇ ಅವರು ಕಂಡಿದ್ದರು!
ಅರಸನ ಮಗ ಕುಲೋತ್ತುಂಗ, ರಾಜ್ಯದೊಳಗಿನ
ಹಲವು ಕಿರಿಕಿರಿ ಹಾಗೂ ತನ್ನ ಮಹತ್ತ್ವಾಕಾಂಕ್ಷೆ ಎರಡು ಸೇರಿದ್ದರಿಂದ ಹೊಸ ರಾಜ್ಯ ಕಟ್ಟಲು ಊರು ಬಿಟ್ಟಿದ್ದ.
ಅದು ಸಾಧ್ಯವಾಗದೆ ಮರಳಿದ, ತನ್ನ ಹಳೆಯ ರಾಜ್ಯಕ್ಕೇ ರಾಜನಾದ. ಅರಸೊತ್ತಿಗೆಯ ಮೃಷ್ಟಾನ್ನವಿದ್ದಾಗಲೂ
ಅತೃಪ್ತಿಯ ಹಸಿವು ಉಳಿದೇ ಹೋಗಿತ್ತು. ಹೆಬ್ಬುಲಿಯ ಸ್ವಚ್ಛಂದತೆ ಹೊಂದಿರಬೇಕೆಂಬ ಅಂತರಂಗದ ಬಯಕೆಯ ವಾಸನೆ
ಬಾಡದೆ ಉಳಿದಿತ್ತು! ಈ ಸ್ಥಿತಿ ಕುಲೋತ್ತುಂಗನ ಜೊತೆಗಾರರಾದ ರಾಜಗುರು ವರಾಹ, ಶ್ರೇಷ್ಠಿ ವಿಪುಲರದ್ದು
ಕೂಡ ಆಗಿತ್ತು. ಅನ್ವರ್ಥವೋ ಅರ್ಥಪೂರ್ಣವೋ ಆದ ಹೆಸರುಗಳನ್ನು ಪಾತ್ರಗಳಿಗೆ ಇಡುವ ಕತೆಗಾರನ ಬುದ್ಧಿ
ಇನ್ನೂ ಮುಂದುವರಿದಿದೆ! ಸೂಕ್ಷ್ಮವಾಗಿ ನೋಡಿದರೆ ಕುಲೋತ್ತುಂಗ ಇಲ್ಲಿಯೂ ಕುಟುಂಬದ ಜೊತೆ ಸಹಬಾಳ್ವೆ
ಸಾಧ್ಯವಾಗದಿದ್ದವನೇ. ತುಂಡು ರಾಜ್ಯದ ಕತೆಯೊಂದನ್ನು ಹೇಳುತ್ತಲೇ ಚರಿತ್ರೆಯುದ್ದಕ್ಕೆ ಆಗಿಹೋದ ಸಾಮ್ರಾಜ್ಯ
ನಿರ್ಮಾಣ ಅವುಗಳ ಹುಟ್ಟು, ಸಾವುಗಳ ನಿರಂತರತೆಯ ಅರಿವನ್ನು ತನ್ನಾಳದಲ್ಲಿ ಈ ಬರಹ ಇರಿಸಿಕೊಳ್ಳಬಲ್ಲದು.
ಈ ರಾಜ್ಯ ಕಟ್ಟುವ ಕತೆ ಮತ್ತು ಮಾನವನ ಮಹತ್ತ್ವಾಕಾಂಕ್ಷೆ ಎಂದೂ ಮುಗಿಯುವುದಿಲ್ಲ ಎಂಬ ಅನಂತದೆಡೆಗಿನ
ನೋಟದ ಜೊತೆಗೆ ಕತೆ ನಿಲ್ಲುವುದು ಕುತೂಹಲಕಾರಿಯಾಗಿದೆ.
ಶುಕ್ರಾಚಾರ್ಯ, ಅರವಿಂದವದನೆಯ ತೊಡಕು,
ಭೀಮಸೇನ ಪಿಪೀಲಿಕಃ, ಮಗ್ಗದ ಸಾಹೇಬರು, ಕೃಷ್ಣಲೀಲೆ - ಈ ಕತೆಗಳಲ್ಲೆಲ್ಲ ಕತೆಗಾರನ ಪಟ್ಟುಗಳ ಪುನರಾವರ್ತನೆ
ನೇರ ನೋಟಕ್ಕೇ ಗೋಚರಿಸುತ್ತದೆ. ಕತೆಗಳನ್ನು ಅನುಕ್ರಮವಾಗಿ ಗಮನಿಸಿದರೆ ಸಮಾಜದ ಎಲ್ಲ ಧೂರ್ತ ಸಂಪ್ರದಾಯಗಳ
ವಿರುದ್ಧ ಅಶ್ವತ್ಥಾಮ ತಿರುಗಿಬಿದ್ದವ; ಕೃಷ್ಣಪ್ಪ ಮೇಸ್ತ್ರಿ ಗುತ್ತಿನ ಮನೆಯ ಹುಡುಗಿಯನ್ನು ಇಷ್ಟಪಟ್ಟ
ಕಾರಣಕ್ಕೆ ಅವರನ್ನು ಎದುರು ಹಾಕಿಕೊಂಡವ; ಭೀಮಸೇನನಲ್ಲಿದ್ದ ಕೃಶಿ ಮತ್ತು ಪ್ರಾಚ್ಯವಸ್ತುಗಳ ಸಂಬಂಧೀ
ದುಡಿಮೆ ಅಪ್ಪನ ಅಸಹನೆಗೆ ಕಾರಣವಾಗಿತ್ತು; ಮಗ್ಗದ ಸಾಹೇಬರಿಗೆ ತಮ್ಮ ಮಗನ ಮಗ್ಗದ ಆಸಕ್ತಿ ಕ್ರೋಧ ಕೆರಳಿಸಿತ್ತು;
ಕೃಷ್ಣ (ಕೃಷ್ಣಲೀಲೆ) ತನ್ನ ಹಠಕ್ಕಾಗಿ ಅಪ್ಪನನ್ನೆ ಎದುರು ಹಾಕಿಕೊಂಡು ಕೂಲಿ ಮಾಡಲು ಹೊರಟ - ಹೀಗೆ
ಹಿರಿಯರ ಮನೋಭಾವ ಆಸಕ್ತಿಗಳಿಗೆ ಭಿನ್ನವಾದ ಕಿರಿಯರೇ ಕತೆಗಳ ನಾಯಕರಾಗುತ್ತಾರೆ. ಅಶ್ವತ್ಥಾಮನನ್ನು
ಕರ್ಮಯೋಗಿಯಾಗಿ ರೂಪಿಸಿ, ಶುಕ್ರಾಚಾರ್ಯನಂತೆ ಭಿನ್ನ ಸ್ವಭಾವದವನನ್ನಾಗಿ ಮಾಡಿ, ಜಾತಿ ನಿಯಮ ಮೀರಿದ
ಅವನ ನಿಷ್ಠುರತೆಯೇ ತುಳುನಾಡಿನ ನಂದಾವರದಲ್ಲಿ ಕೊರಗರೆಂಬ ದಲಿತರ ರಾಜ್ಯ ಮರುಹುಟ್ಟಲು ಕಾರಣವಾದುದನ್ನು
ಕತೆಗಾರ ಕಾಣುತ್ತಾರೆ.
ಎಸ್. ದಿವಾಕರ್ ಶತಮಾನದ ಕತೆಗಳು ಸಂಕಲನಕ್ಕೆ
ಆರಿಸಿದ ವಿಶಿಷ್ಟ ಕತೆ ಶುಕ್ರಾಚಾರ್ಯ. ಇದು ಚಾರಿತ್ರಿಕ ಘಟನೆಗಳ ಸೋಗಿನ ಲೇಪನದಲ್ಲಿ, ಸಮಾಜದ ಧೂರ್ತ
ನಿಯಮಗಳ ಲೇವಡಿ ಎಬ್ಬಿಸಿ, ದುಡಿಮೆಯ ಪರವಾಗುವ, ಕಾಲಚಕ್ರದ ಬೆನ್ನೇರಿದ ಕತೆ. ಬ್ರಾಹ್ಮಣ ಮೌಢ್ಯದ ವಿರುದ್ಧದ
ಪ್ರತಿಭಟನೆಯೇ ಅಶ್ವತ್ಥಾಮನ ಬದುಕಿನ ಪ್ರಧಾನ ಗುಣವಾಗುವುದು. ಕೃಷ್ಣಪ್ಪ ಮೇಸ್ತ್ರಿಯ ಬದುಕಿನಲ್ಲಿ
ವರ್ಷಗಳನ್ನು ದಾಟಿಯೂ ಉಳಿದ ಅರವಿಂದವದನೆ ರುಕ್ಮಿಣಿಯ ಸಂಬಂಧ, ಭೀಮಸೇನನಲ್ಲಿ ಪಿಪೀಲಿಕದಂತೆ (ಇರುವೆ)
ಇರುವ ದುಡಿಮೆಯ ಪ್ರವೃತ್ತಿ, ಕರೀಂ ಸಾಹೇಬನಿಗಂಟಿದ ಮಗ್ಗದ ಹುಚ್ಚು, ಕೃಷ್ಣನಿಗೆ (ಕೃಷ್ಣಲೀಲೆ) ಯಂತ್ರಗಳು
ಒಲಿಯುವುದು, ಹೀಗೆ ಪಾತ್ರಗಳಿಗೆ ವಾಸನೆಯೊಂದನ್ನು ಸಿಂಪಡಿಸುವ ದೇವರಾಯರ ಚಟ ಇನ್ನೂ ಬಲಶಾಲಿಯೇ ಆಗಿದೆ!
ಕಾಲಗತಿಗೂ ಖ್ಯಾತಿ, ಹಣಗಳ ಸಂಪಾದನೆಗೂ
ನಂಟನ್ನು ಬೆಸೆದು, ಯಾರು ಯಾರು ಯಾವಾಗ ಹೇಗಾಗುತ್ತಾರೆಂದು ಹೇಳುವುದು ಕಷ್ಟ ಎನ್ನುವ ಕತೆ, ಶಾಲೆಯ
ಅಂಶಕ್ಕಿಂತಲೂ ಆಳದ ಪ್ರತಿಭಾನ್ವಿತ ವ್ಯಕ್ತಿತ್ವ ಮುಖ್ಯವೆಂಬಂತೆ ಪ್ರತಿಪಾದಿಸಿದ ಕತೆ, ತುಳುನಾಡಿಗೆ
ನಡೆದ ಮಹಾರಾಷ್ಟ್ರದ ಬ್ರಾಹ್ಮಣರ ವಲಸೆಯನ್ನು ಒಳಗೊಳ್ಳುವ ಕತೆ, ಆಧುನಿಕ ಕಂಪೆನಿ ವೈವಾಟು ವ್ಯಾಪಾರ
ವಿವರಗಳನ್ನೊಳಗೊಂಡ ಕತೆ ಹೀಗೆ ದೇವರಾಯರು ತಮ್ಮ ಕತೆಗಳಿಗೆ ಹಲವು ಹೊಸ ಕಾಲದ ನೋಟಗಳನ್ನು ಬೆಸೆಯುತ್ತ
ಸಾಗುತ್ತಾರೆ. ಆದರೆ ಕಡಲ ನೀರಿನಿಂದ ಹುಲ್ಲು ಬೆಳೆಸುವ
ಪ್ರಯೋಗ ವಿದೇಶಗಳಲ್ಲಾಗಿದೆ ಎಂಬ ಅಡಿಟಿಪ್ಪಣಿಗಷ್ಟೇ ತಮ್ಮ ವಿದೇಶಾನುಭವವನ್ನು ಸೀಮಿತಗೊಳಿಸುತ್ತಾರೆ.
ತುಳುನಾಡಿನ ಗುತ್ತುಗಳು, ಇಲ್ಲಿಯ ಮುಸ್ಲಿಂ ಮಗ್ಗದವರು, ವಿದ್ಯಾಭ್ಯಾಸದಲ್ಲಿ ತರಲಾಗಿದ್ದ ವೃತ್ತಿ
ಶಿಕ್ಷಣದ ಪ್ರಯೋಗಗಳು, ಇಲ್ಲಿಯ ಕನ್ನಡ ಪಂಡಿತರು ಮತ್ತು ಅವರು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದ
ಕುಮಾರವ್ಯಾಸ ಭಾರತ ಹೀಗೆ ದೇವರಾಯರ ಕತೆಗಳಿಗೆ ಹಲವು ಪುಟ್ಟ ರೆಕ್ಕೆ ಪುಕ್ಕಗಳು ಕೂಡಿಕೊಂಡದ್ದೂ ಉಂಟು.
ರುದ್ರಪ್ಪನ ರೌದ್ರ ಇದು ಇದೇ ಹೆಸರಿನ
ಸಂಕಲನದ ಒಂದು ಕತೆ. ರುದ್ರಪ್ಪನ ಸಮಾಧಾನ ಸ್ವಭಾವ, ಆದರೆ ಅದರ ಆಳದಲ್ಲಿ ಇರುವ ವಿಶಿಷ್ಟ ರೌದ್ರ -
ಕತೆ ಪೋಣಿಸಿಕೊಳ್ಳುವ ವ್ಯಕ್ತಿತ್ವ ವಾಸನೆಯಾಗಿವೆ. ಹೆಣ್ಣು ಮಗಳೊಬ್ಬಳನ್ನು ರಕ್ಷಿಸಲು ರುದ್ರಪ್ಪ
ಮಾಡಿದ ರೌಡಿಯ ಕೊಲೆ ಮತ್ತು ಸತ್ತವನ ಹೆತ್ತವರೇ ರುದ್ರಪ್ಪನ ಪರ ಹೇಳಿದ ಸಾಕ್ಷಿ - ಕತೆ ಮುಂದಿಡುವ
ಪ್ರಧಾನ ಘಟನೆಗಳು. ರುದ್ರಪ್ಪನ ಶಾಂತತೆ ಮತ್ತು ಕೆರಳುವಿಕೆಯ ಸ್ವಭಾವಕ್ಕೆ ಕೊಡುವ ಪೋಷಕ ವಿವರಗಳು
ಮತ್ತು ಈ ಸ್ವಭಾವಕ್ಕೆ ಸುತ್ತಲಿನ ಜನರ ವಿಶಿಷ್ಟ ಪ್ರತಿಕ್ರಿಯೆಗಳೇ ಕತೆಯ ಸ್ವಾರಸ್ಯ ಗುಣ. ಕರಾವಳಿಯಿಂದ
ಮುಂಬೈ ಸೇರಿ ರೌಡಿಯಾದವನು ಈ ಕತೆಯಲ್ಲಿ ಕೊಲೆಯಾಗುತ್ತಾನೆ ಎಂಬುದನ್ನು ಇಲ್ಲಿ ಗಮನಿಸಬಹುದು.
ಮೀನು ತಿಂದರೆ ಮಂದಾಕಿನಿಗೆ ಬುದ್ಧಿ
ಬರಬಹುದೆಂಬ ಪ್ರಯತ್ನ ಆಕೆಗೆ ಮೀನು ತಿನ್ನುವ ಚಟವನ್ನಷ್ಟೇ ಹುಟ್ಟಿಸಿತು. ಅದು ಅವಳ ವಿಧವಾ ಸ್ಥಿತಿಗೂ
ರಾಜಕಾರಣದಲ್ಲಿ ಬೆಳೆಯುವುದಕ್ಕೂ ಅಂತಿಮ ಕಾರಣವಾಯಿತು. ಮಂದಾಕಿನಿಯ ಬಾಳಿನ ತುಂಬ ಇದ್ದ, ಆಕೆಯ ಜನಾಂಗಕ್ಕೆ
ಭಿನ್ನವಾದ, ಈ ಮೀನು ತಿನ್ನುವ ಚಟ ಆಡಿದ ಆಟವೇ ಈ ಕತೆ - ಮಂದಾಕಿನ ಸೌಭಾಗ್ಯ. ಮಂದಬುದ್ಧಿಯವಳೂ ಪ್ರತಿಷ್ಠಿತ
ಅಧಿಕಾರ ಪಡೆವ ಅವಳ ಸ್ಥಿತಿ ನಮ್ಮ ರಾಜಕೀಯದ ವಿಡಂಬನೆ. ದೇವರಾಯರ ಕತೆಗಳಲ್ಲಿ ವ್ಯಂಗ್ಯ ವಿಡಂಬನೆ ಪೂರ್ತಿ
ಬತ್ತಿಕೊಂಡಿಲ್ಲ! ದೊಣ್ಣೆ ಗುದ್ದಪ್ಪನವರ ಅಕಾಲ ನಿಧನ ಕತೆ ಛಾಸರನ ಕತೆಯ ಭಾವಾನುವಾದವಾಗಿದ್ದರೂ ಅಧಿಕಾರಶಾಹಿಯ
ಕ್ರೌರ್ಯ ವಿಡಂಬನೆಯೇ ಆಗಿರುವುದನ್ನು ಇಲ್ಲಿ ಗಮನಿಸಬಹುದು.
ಕೇರಳದ ಮೇಸ್ತ್ರಿಗಳು ತುಳುನಾಡಿಗೆ
ಬಂದಾಗಿನ ಒಂದು ಸಮಾಜ ಚಲನೆಯನ್ನು ಇರಿಸಿ, ಕನ್ನಡ ತುಳು ಬಾರದ ಆತ ಕೇಳು ಜನಮೇಜಯ ಮಹೀಪಾಲ ಎಂಬ ಭಾರತವಾಚನವನ್ನು
ಅರ್ಥ ತಪ್ಪಿ ಗ್ರಹಿಸಿ, ಬದುಕಿನಲ್ಲಿ ಜಮೀನ್ದಾರನಾಗಲು ಹೊರಟು ಯಶಸ್ವಿಯಾದ್ದನ್ನು ಹೇಳುವ ಕತೆಯೇ ಕೇಳು
ಜನಮೇಜಯ. ಇದು ಪಂಜೆಯವರ ಭಾರತ ಶ್ರವಣವನ್ನು ನೆನಪಿಸಬಲ್ಲದು. ಭೂತಾಯಿ ಎಂಬ ಪದ ತುಳುವಿನಲ್ಲಿ ಒಂದು
ಜಾತಿಯ ಮೀನಾಗುವುದೆಂಬ ವಿನೋದ ಇಲ್ಲೂ ಮಂದಾಕಿನಿಯ ಸೌಭಾಗ್ಯ ಕತೆಯಲ್ಲೂ ನುಸುಳಿದೆ! ಕೇಳು ಜನಮೇಜಯದ
ನಿರೂಪಕ ಕೀಳರಿಮೆ-ಕುಳ್ಳತನ ಇರದ ನಿರ್ಲಿಪ್ತ. ಸ್ವತಃ ಆತ ವಿದೇಶದಲ್ಲಿರುವ ದೇವರಾಯನೇ ಆಗುತ್ತಾನೆ!
ಕೇಳು ಮೇಸ್ತ್ರಿಯಲ್ಲಿ ಸುಪ್ತವಾಸನೆಯಾಗಿ ಬೆಳೆದ ‘ಮಹೀಪಾಲ’ನಾಗುವ ಆಸೆಯನ್ನು ತನ್ನ ಮೂಲಕ ಕತೆಯಾಗಿಸುತ್ತಾನೆ.
ಅಜ್ಜ ನೆಟ್ಟ ಮರಕಥೆಯಲ್ಲೂ ಹೀಗೆಯೇ ಈ ಕಡೆ ಕಾಲಿಟ್ಟ ಮಲೆಯಾಳಿ ಮೇಸ್ತ್ರಿಗಳಿದ್ದರು!
ಒಗ್ಗರಣೆ ಶೀನಪ್ಪನವರು ಹಾಗೂ ಘಟ ಭಾಂಡೇಶ್ವರ
ಎಂಬ ಎರಡೂ ಕತೆಗಳಲ್ಲಿ ಜನಾಂಗಕ್ಕೆ ಇದ್ದ ಸಾಂಪ್ರದಾಯಿಕ ವೃತ್ತಿಗಳನ್ನು ಬದಲಿಸುವ ಅಶ್ವತ್ಥಾಮನಂಥ
(ಶುಕ್ರಾಚಾರ್ಯ) ಪಾತ್ರಗಳು ಕಾಣಿಸುತ್ತವೆ. ನೇಗಿಲು ಬಿಟ್ಟು ತಕ್ಕಡಿ ಹಿಡಿದ ಶೀನಪ್ಪ ಅಂತಿಮವಾಗಿ
ಪುನಃ ತನ್ನ ಮೂಲಸ್ಥಿತಿ ನೇಗಿಲಿಗೇ ಬಂದ. ‘ಖಾಲಿಕಾಗದಲ್ಲಿ ಹೊಸತು ಬರೆಯಲು ಸುಲಭ’ ಎಂಬ ಮಾತನ್ನು ಕತೆ
ಶೀನಪ್ಪ ಮತ್ತು ಆತನ ತಮ್ಮನ ಜೀವನ ಸಂದರ್ಭಗಳಲ್ಲಿ ಸಮರ್ಥಿಸುತ್ತ ಹೋಗುತ್ತದೆ. ಘಟ ಭಾಂಡೇಶ್ವರ ಕತೆಗೆ
ಹರಿತ ರಾಜಕೀಯ ಪ್ರಜ್ಞೆ ಇದೆ. ಕುಂಬಾರಿಕೆಯನ್ನು ತನ್ನ ಮೂಲವಾಸನೆಯಾಗಿ ಹೊಂದಿಲ್ಲದ ಬಾಲಕ ರಾಜನಾಗಿ
ಬೆಳೆದ ಕತೆ ಇದು. ಹಸ್ತ ರೇಖಾ ಬಲವನ್ನೂ ವಿಧಿವಾದವನ್ನೂ ಕರ್ತೃಪ್ರಜ್ಞೆ ನಂಬಿದಂತೆ ಕಾಣುವ ಕತೆಯ ಹೊರಸ್ಥಿತಿಯಲ್ಲಿ
ಕೂಡ, ಅದು ಕಾಣಿಸುವ ರಾಜಕೀಯ ಚಾಣಾಕ್ಷತೆ ಹೆಚ್ಚು ಢಾಳಾಗಿ ಬಿಡುತ್ತದೆ. ಕುಂಬಾರ ಹುಡುಗ ಐತಪ್ಪ ಆದಿತ್ಯವರ್ಮ
ಎಂಬ ರಾಜನಾಗಿ ಬದಲಿದಾಗ ತನ್ನಂತೆಯೇ ಅಕ್ಷರಾಭ್ಯಾಸದ ಆಸಕ್ತಿ ತೋರಿಸಿದ ಕೆಳವರ್ಗದವರನ್ನು ದುಡಿಸುವ
ರಾಜಕೀಯ ಪಟುವಾಗಿ ಬಿಡುತ್ತಾನೆ! ರಾಜವಂಶ ಮೂಲದ ಸಾಮಾನ್ಯತೆಯನ್ನು ಮುಚ್ಚಿ ಹಾಕುವ ಚರಿತ್ರೆಯ ವ್ಯಂಗ್ಯವನ್ನು
ಕತೆ ಕಣ್ಣು ಮಿಟಿಕಿಸದೆ ನೋಡುತ್ತಿರುತ್ತದೆ!
ಸಾರಾಂಶ
ದೇವರಾಯರ ಮಾನವೀಯತೆಯ ಒಲವು, ವಾಸನೆಯ
ಶೋಧ, ಆಧುನಿಕ ತಲ್ಲಣಗಳನ್ನು ಸಾಂಪ್ರದಾಯಿಕ ಕಥಾತಂತ್ರಗಳಲ್ಲಿ ಹಿಡಿದಿಡುವ ಗುಣ, ಬಾಲ್ಯದಲ್ಲಿ ಕಂಡ
ಕರಾವಳಿಯ ಸೊಗಡು ಮತ್ತೆ ಕೂಡ ಮುಂದುವರಿಯುತ್ತಲೇ ಇದ್ದುವು ಎಂಬುದನ್ನು ಈ ಕತೆಗಳೊಳಗೆ ಕಾಣಬಹುದು.
ಪ್ರಪಂಚ ವಿಶಾಲ ಅನುಭವ ಮತ್ತು ಓದು ಅವರನ್ನು ಈ ನಿಟ್ಟಿನಲ್ಲಿ ಕದಲಿಸಲಿಲ್ಲ. ಒಬ್ಬ ಬರಹಗಾರ ತನ್ನ
ವಸ್ತು, ತಂತ್ರ, ಶೈಲಿ, ನೋಟಗಳಲ್ಲಿ ಬದುಕಿನುದ್ದಕ್ಕೆ ಅದೂ ಮೂರು ದಶಕಗಳ ಬಿಡುವಿನ ಬಳಿಕವೂ ಈ ಬಗೆಯ
ಸಾಮ್ಯ ಉಳಿಸಿಕೊಳ್ಳಬೇಕಾದರೆ ಅಲ್ಲಿ ಆಳವಾಗಿ ಜೀವಂತವಿದ್ದ ಕತೆಗಾರನ ಉಸಿರು ಬಲು ಬಲವಾದುದೆಂದೇ ಹೇಳಬೇಕಷ್ಟೆ.
ದೇವರಾಯರ ಉತ್ಕೃಷ್ಟ ಕತೆಗಳು ಅವರ ಮೊದಲ ಕತೆಗಳು ಹೌದೇ ಆದರೂ, ‘ಗವಾಯಿ ಗಾಯನದಲ್ಲಿ’ ಅದೊಂದೇ ಘರಾನಾದ
ವಾಸನೆ ಕೊನೆಯವರೆಗೂ ಅಳಿಯದಿದ್ದ ಸ್ಥಿತಿ ಇದು!
ದೇವರಾಯರನ್ನು ಪೂರ್ತಿ ಮರೆಯಲಾಯಿತು
ಎಂಬುದು ಎಂದೂ ನಿಜವಲ್ಲ. ಏಕೆಂದರೆ ವಿವಿಧ ‘ಆಂಥಾಲಜಿ’ಗಳಲ್ಲಿ ಅವರು ಕಾಣಿಸಿಕೊಂಡದ್ದನ್ನು ನಾವು ಈಗಾಗಲೇ
ಕಂಡಿದ್ದೇವೆ. ಕನ್ನಡದ ಅತ್ಯುತ್ತಮ ಸಣ್ಣ ಕತೆಗಳನ್ನು ಶತಮಾನದುದ್ದದಿಂದ ಹೆಕ್ಕುವಾಗಲೆಲ್ಲ ಅವರು ಹಲವು
ಬಾರಿ ಬಂದದ್ದಿದೆ; ಒಂದೆರಡು ಬಾರಿ ‘ಆಂಥಾಲಜಿ’ ಸಂಪಾದಕರು ನಿರ್ಲಕ್ಷಿಸಿದ್ದೂ ಇದೆ. ಎಲ್.ಎಸ್. ಶೇಷಗಿರಿರಾಯರ
ಹೊಸಗನ್ನಡ ಸಾಹಿತ್ಯ ವಿಮರ್ಶಾ ಗ್ರಂಥದಲ್ಲೂ ದೇವರಾಯರ ವಿಡಂಬನೆಯ ಶೈಲಿಯ ಪ್ರಸ್ತಾಪವಿದೆ. ಡಿ. ರಘುನಾಥರಾಯರೂ
ಶತಮಾನದ ಕನ್ನಡ ಸಾಹಿತ್ಯದ ಸಣ್ಣ ಕತೆಗಳ ಸಂದರ್ಭದಲ್ಲಿ ದೇವರಾಯರನ್ನು ಪ್ರಸ್ತಾವಿಸುತ್ತಾರೆ (ರಾಘವೇಂದ್ರ
ಪ್ರಕಾಶನದ ಶತಮಾನದ ಕನ್ನಡ ಸಾಹಿತ್ಯ). ದೇವರಾಯರ ಕತೆಗಳಿಗೆ ಸೂಕ್ಷ್ಮ ವಿಮರ್ಶೆ ನಡೆದಿಲ್ಲ ಎಂಬುದಷ್ಟೇ
ಹೆಚ್ಚು ನಿಜ. ಗಿರಡ್ಡಿ ಗೋವಿಂದರಾಜರು ಬರೆದ ವಿಮರ್ಶೆ (ಮರೆಯಬಾರದ ಹಳೆಯ ಕತೆಗಳು) ಮತ್ತು ಮುನ್ನುಡಿ
(ರುದ್ರಪ್ಪನ ರೌದ್ರ) ಬಿಟ್ಟರೆ ಅವರ ಕತೆಗಳ ಬಲಿಷ್ಠ ವಿಮರ್ಶೆ ಆಗಿರುವುದು ಬಲು ತಡವಾಗಿ. ಪ್ರಿಸ್ಮ್
ಸಂಸ್ಥೆ ಬಾಗಲೋಡಿ ದೇವರಾಯರ ಸಮಗ್ರ ಕತೆಗಳನ್ನು ಉತ್ಕೃಷ್ಟ ಗ್ರಂಥವಾಗಿ ಶತಮಾನದ ಅಂತ್ಯದಲ್ಲಿ ಹೊರತಂದಾಗ
(೨೦೦೦) ಕೆ. ಸತ್ಯನಾರಾಯಣರು ಕೊಡುವ ವಿಮರ್ಶಾತ್ಮಕ ಒಳನೋಟಗಳೇ ಇದುವರೆಗಿನ ಬಲಿಷ್ಠ ಚಿಂತನೆ. ದೇವರಾಯರ
ಎಲ್ಲ ಕತೆಗಳನ್ನೂ ಕನ್ನದ ಕಥಾಸಾಹಿತ್ಯದ ಬೃಹತ್ ಹಿನ್ನೆಲೆಯಲ್ಲಿ ಇಟ್ಟು ಅವರು ಒದಗಿಸಿರುವ ಪ್ರವೇಶ
ವಿಶಿಷ್ಟ ಫಲಿತಾಂಶಗಳನ್ನು ಕೊಟ್ಟಿದೆ. ತನ್ನ ಕಾಲದ ತಲ್ಲಣಗಳನ್ನು ತನ್ನದೇ ವಿಶಿಷ್ಟ ವಿಧಾನಗಳಲ್ಲಿ
ಗ್ರಹಿಸಿದ ಕತೆಗಾರನ ‘ಆತ್ಮ’ಕ್ಕೆ ಇಲ್ಲಿ ಬಲವಾಗಿಯೇ ಕಿವಿ ಕೊಡಲಾಗಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಮರೆಯಲಾಗದ
ಬರಹಗಾರರು ಮಾಲಿಕೆಯಲ್ಲಿ ದೇವರಾಯರ ಹದಿಮೂರು ಕತೆಗಳನ್ನು ಹೊರ ತಂದಿದೆ (೧೯೯೪); ಕನ್ನಡ ಪುಸ್ತಕ ಪ್ರಾಧಿಕಾರವೂ
ಆಯ್ದ ಏಳು ಕತೆಗಳನ್ನು ಹೊರತಂದಿದೆ (೧೯೯೪). ಅಕಾಡೆಮಿಗಾಗಿ ಪುಸ್ತಕ ಸಂಪಾದಿಸಿದ ಸೋಮಣ್ಣ ಹೊಂಗಳ್ಳಿಯವರು,
ಕೃತಿಯಲ್ಲಿ ಪುಟ್ಟ ವಿಮರ್ಶಾ ಪ್ರಯತ್ನವನ್ನು ಮಾಡುತ್ತಾರೆ. ಸಾಹಿತ್ಯ ಸಂಬಂಧೀ ಸಮಕಾಲೀನ ಸರಳ ಚರ್ಚೆಗಳ
ಬಲವಾದ ಬಿರುಗಾಳಿಯನ್ನು ಮೀರಿ ಬಾಗಲೋಡಿಯವರ ಕತೆಗಳ ಬಳಿ ಹೋಗದಿದ್ದರೆ, ಈ ಕತೆಗಳ ವಿಶಿಷ್ಟತೆ ಮರೆಯಲ್ಲೇ
ಉಳಿದುಬಿಡುವ ಅಪಾಯ ಹೆಚ್ಚು.
ಕರಾವಳಿಯ
ಕಥನದವರೆಗೆ ಬಂದು....
ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಕರಾವಳಿ
ಕಟ್ಟಿ ಬೆಳೆಸಿದ ಆರಂಭದ ಕತೆ-ಕಾವ್ಯಗಳು, ವಿಶಾಲ ಕರ್ನಾಟಕ ವ್ಯಾಪ್ತಿಯಲ್ಲಿ ನಿರ್ಲಕ್ಷ್ಯಕ್ಕೊಳಗಾದುದು
ಎಲ್ಲರಿಗೂ ಗೊತ್ತಿರುವ ಒಂದು ಐತಿಹಾಸಿಕ ಪ್ರಮಾದ. ಪಂಜೆಯವರಿಂದ ಹಿಡಿದು ಬೇಕಲ ರಾಮನಾಯಕ, ಸೇಡಿಯಾಪು
ಕೃಷ್ಣಭಟ್ಟರನ್ನೂ ಹಾದು, ಬಾಗಲೋಡಿಯವರನ್ನೂ ಒಳಗೊಂಡು, ಇತ್ತೀಚೆಗಿನ ತುದಿಯಡ್ಕ ವಿಷ್ಣ್ವಯ್ಯರ (ದೊರೆಯ
ಪರಾಜಯ ಮತ್ತು ಇತರ ಕತೆಗಳು)ವೆರೆಗೂ ಬಂದು ನಿಂತರೆ ಕರಾವಳಿಗಿದ್ದ ಸಣ್ಣ ಕತೆಗಳ ಕಥನಕ್ರಮದ ಅನನ್ಯ
ಚಹರೆಗಳು ಸ್ಪಷ್ಟವಾಗುತ್ತವೆ. ನವ್ಯ ಪ್ರಗತಿಶೀಲ ಚಳವಳಿಗಳು ಒಂದು ಬಗೆಯಲ್ಲಿ ಕರ್ನಾಟಕದುದ್ದಕ್ಕೆ
ಸ್ಥಳೀಯ ಕಥನ ಕ್ರಮಗಳು ಬೆಳೆಯದಷ್ಟು ಬಿರುಗಾಳಿಯಾಗಿದ್ದುವು. ಈ ರೀತಿಯಲ್ಲಿ ಯೋಚಿಸುವಾಗ ಸ್ಥಳೀಯ ವಿವರಗಳು
ಕತೆಯಲ್ಲಿ ಬರುವ ಬಗ್ಗೆ ಹೇಳುತ್ತಿಲ್ಲ - ಸ್ಥಳೀಯ ಕಥನಕ್ರಮದ ಬಗ್ಗೆ ಹೇಳುತ್ತಿದ್ದೇವೆ - ಎಂದು ಇನ್ನೊಮ್ಮೆ
ಸ್ಪಷ್ಟಪಡಿಸಿಕೊಳ್ಳೋಣ. ಪುರಾಣ ಪ್ರವಚನ, ತಾಳಮದ್ದಳೆ, ಯಕ್ಷಗಾನದ ಆಟ, ಪಂಚಾಯತಿಕೆ ಕಟ್ಟೆಗಳು, ಹರಿಕಥೆಯ
ಕ್ರಮ - ಹೀಗೆ, ಈ ಕರಾವಳಿಯ ಮಣ್ಣು ತನ್ನದೇ ಮೂಲಭಾಷೆಯಾಗಿದ್ದ ತುಳುವಿನ ಜೊತೆಗೆ ಕನ್ನಡವನ್ನು ಕಟ್ಟಿಕೊಂಡಿತ್ತಲ್ಲ;
ಹೀಗೆ ಕಟ್ಟಿಕೊಂಡ ಕನ್ನಡವನ್ನು ಸಣ್ಣ ಕತೆಯ ಶೈಲಿ, ವಿವರ, ತಂತ್ರಗಳಿಗೆ ಒಗ್ಗಿಸಿಕೊಂಡಿತ್ತಲ್ಲ -
ಇಲ್ಲಿ ಈ ಪ್ರದೇಶದ ಸೃಜನಶೀಲ ಮನಸ್ಸುಗಳು ಸಿದ್ಧಿಸಿಕೊಂಡ ದಾರಿಯ ಚಹರೆಗಳನ್ನು ನಾವಿನ್ನೂ ಸ್ಪಷ್ಟಪಡಿಸಿಕೊಂಡಿಲ್ಲ.
ಇವರಲ್ಲಿ ಪಂಜೆಯವರ ಕತೆಗಳನ್ನು ‘ಆದಿಮ’ ಎನ್ನಲಾಯಿತು. ಬೇಕಲ ರಾಮನಾಯಕರು ತಮ್ಮ ಬರಹಗಳನ್ನು ಐತಿಹ್ಯಗಳೆಂದು
ಕರೆದರು; ಸೇಡಿಯಾಪು ತಮ್ಮ ಸೃಜನೆಗಳನ್ನು (ಪಳಮೆಗಳು)* ಓದುಗರು ‘ಸಣ್ಣಕಥೆ’ ಎಂದು ಕರೆಯದಿದ್ದರೂ ಪರವಾಗಿಲ್ಲವೆಂದು
ಅರ್ಥಪೂರ್ಣವಾಗಿ ನಿವೇದಿಸಿದರು! ‘ಕರ್ನಾಟಕದ ಸಣ್ಣ ಕತೆಗಳು’ ಎಂಬ ಸ್ಥೂಲ ರೂಪಕ್ಕೆ ಸಿಗದ ವಿಶಿಷ್ಟ
ಚಹರೆಗಳು ಕರಾವಳಿಯ ಕಥನಕ್ರಮದಲ್ಲಿರುವುದು ಇಲ್ಲೇ ಸ್ಪಷ್ಟವಾಗುತ್ತದೆ! ಇದನ್ನು ಗುರುತಿಸಿಕೊಳ್ಳುವ
ಮೂಲಕ ಕನ್ನಡದ ಸಣ್ಣ ಕತೆಗಳ ಹೆಗ್ಗಳಿಕೆ ಹೆಚ್ಚುತ್ತದೆ. ಹೀಗೆ ಇನ್ನೊಂದು ಹೊಸ ಅಧ್ಯಯನವಾಗಬಲ್ಲ ಸಾಧ್ಯತೆ
ನಮ್ಮೊಳಗೇ ಅಡಗಿದೆ. ನವ್ಯ, ಪ್ರಗತಿಶೀಲ, ಮತ್ತು ಅಖಿಲ ಕರ್ನಾಟಕ ವ್ಯಾಪ್ತಿಯ ದಿಕ್ಕಿನಲ್ಲಿ ಹಾದು
ಹೋದ ಕರಾವಳಿಯ ಬರಹಗಾರರಲ್ಲಿ ಶಕ್ತಿಶಾಲಿ ಆಶಯ ಧ್ವನಿಗಳಿದ್ದಿರಬಹುದು. ಆದರೆ ಕರಾವಳಿಯ ಕಥನವೆಂಬ ವಿಶಿಷ್ಟ
ಸೊಗಡನ್ನು ಇವರಿಂದೆಲ್ಲ ಹೊರತಾಗಿ ಈ ಹಿಂದೆ ಹೆಸರಿಸಿದ ಬರಹಗಾರರ ಮೂಲಕ ಹೊಸಬಗೆಯಲ್ಲಿ ವಿಸ್ತಾರವಾಗಿ
ಇನ್ನೊಮ್ಮೆ ಕಟ್ಟಬೇಕಾಗುತ್ತದೆ. ಬಾಗಲೋಡಿ ಈ ಅನನ್ಯ ಚಹರೆಗಳುಳ್ಳ ಕತೆಗಾರ ಎಂಬುದನ್ನು ಹೇಳಿದರೆ ಅವರ
ಯೋಗ್ಯತೆ ಸ್ಪಷ್ಟವಾಗುತ್ತದೆ.
ದೇವರಾಯರ ಇನ್ನೂ ಹಲವು ಕತೆಗಳು ಎಲ್ಲೋ
ಹಂಚಿ ಹೋಗಿರಬೇಕು. ಸಮಗ್ರ ಕತೆಗಳಲ್ಲೂ ಸೇರದ, ಕೇವಲ ಗಿರಡ್ಡಿಯೊಬ್ಬರು ಮಾತ್ರ ಓದಲು ಸಾಧ್ಯವಾಗಿದ್ದ,
ವಿಶಿಷ್ಟ ಕಥೆ ಎನ್ನಲಾದ ದುರ್ಗಾದೇವಿಯ ಮಹಾತ್ಮ್ಯ ಇಂಥವುಗಳಲ್ಲೊಂದು. ಇದನ್ನು ಸಂಗ್ರಹಿಸಿದ್ದ ಶೇಖರ
ಇಡ್ಯರು ಅನಾರೋಗ್ಯದಲ್ಲಿದ್ದಾರೆ, ಬರೆದಿದ್ದ ಬಾಗಲೋಡಿ ಪತ್ರಾಗಾರದಲ್ಲಿ (ಅದು ಇದ್ದರೆ!) ಅಲಭ್ಯ.
*ಅಡಿಟಿಪ್ಪಣಿ:
ಪಳಮೆಗಳು ಏನೋ ಓಬೀರಾಯನ ಕಾಲದ ಕಥೆಗಳೆಂದೂ.....
ಏನೋ ಕೆಲಸಕ್ಕೆ ಬಾರದ ವಸ್ತುಗಳನ್ನು ಬಯಲಿಗೆ ತರುವ ರೀತಿಯದೆಂದೂ ಮೂಗುಮುರಿಯುವವರಿರಬಹುದು.... ಓಬೀರಾಯನ
ಕಾಲದ್ದಾಗಲಿ, ಆತನ ತಾತನ ಕಾಲದ್ದಾಗಲಿ, ಕೃತಿಯು ಮನಸ್ಸಿಗೆ ರಂಜನೆಯನ್ನೂ ಸುಖವನ್ನು ತರುತ್ತದಾದರೆ,
ಅದನ್ನೇಕೆ ಬಿಡಬೇಕು? ವಿಷಯವು ಅತ್ಯಾಧುನಿಕವಾಗಲಿ, ಪ್ರಾಚೀನವಾಗಲಿ, ಕೃತಿಕಾರ ಯಾರೇ ಆಗಲಿ, ಎಲ್ಲಿಯವನೇ
ಆಗಲಿ, ಚೆಲುವೂ ಕಲೆಯೂ ಎಲ್ಲೆಲ್ಲಿವೆಯೋ ಅವನ್ನೆಲ್ಲ ಕಂಡುಕೊಂಡು ಮೆಚ್ಚುವುದು ನಮಗೆ ಮೈಗೂಡಿ ಬಂದಿರುವ
ವಿಚಾರವಷ್ಟೆ...... ಶ್ರೀಯುತರು [ಸೇಡಿಯಾಪು ಕೃಷ್ಣ ಭಟ್ಟ] ಪೌರಾಣಿಕ ಹಾಗೂ ಐತಿಹಾಸಿಕ ಕಥೆಗಳನ್ನು
ಬರೆದಿದ್ದಾರೆ. ಶಕುಂತಲೆ, ಮಾಲತೀ ಮಾಧವ, ಮಹಾರಾಣೀ ಲಕ್ಷ್ಮೀಬಾಯಿ - ಇವುಗಳಲ್ಲಿ ಆಯಾ ವಸ್ತುವಿಗೆ
ತಕ್ಕ ಶೈಲಿಯ ಉಡುಗೆ ತೊಡಿಸಿ ಅದು ಸಹಜರಮ್ಯವಾಗಿ ಕಂಗೊಳಿಸುವಂತೆ ಮಾಡುವ ಉಕ್ತಿವೈವಿಧ್ಯವನ್ನು ಕಾಣಬಹುದು.
ಪಳಗಿದ ಕೈಯಿಂದ ಚೆನ್ನೆಕಾಯಿಗಳು ಸರಿಯಾದ ಗುಳಿಗಳಿಗೆ ಲೀಲಾಜಾಲವಾಗಿ ಬೀಳುವಂತೆ, ಎಲ್ಲ ಕಥೆಗಳ ನುಡಿಹವಳಗಳಲ್ಲಿ
ತೋರಿ ಬರುತ್ತಿವೆ - ಅಚ್ಚುಗಟ್ಟುತನ, ಲೀಲಾವಿಲಾಸ.
- ಅಮೃತ ಸೋಮೇಶ್ವರ, ಒಸಗೆಯಲ್ಲಿ (೧೯೫೯)
(ಸಣ್ಣ ಕತೆಗಳ ಸೇಡಿಯಾಪು ಲೇಖನದಿಂದ)
(ಮಹಾಲಿಂಗ ಭಟ್ಟರ ಲೇಖನ ಮುಗಿಯಿತು.
ಸರಣಿ ಮುಂದುವರಿಯಲಿದೆ)
Amazingly modern, especially the story where the Brahmin and the acrobatjourney to Tirupathi reminds me of Putta and Praneshacharya's journey together.
ReplyDeleteThe ruch tapestry of themes, the social realism of the stories, representing a cross section of the milieu, all provides me with yhe idea of Sri Bagalodi's amazing narrative skills.
ಉತ್ತಮವಾದ ಲೇಖನ. ಧನ್ಯವಾದಗಳು.--ಅಜಕ್ಕಳ ಗಿರೀಶ
ReplyDelete