17 April 2017

ಲೇಖನಿಯಿಂದ ಲ್ಯಾಪ್‌ಟಾಪ್‌ಗೆ

ಶ್ಯಾಮಲಾ ಮಾಧವ ಇವರ ಆಥ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ
ಅಧ್ಯಾಯ - ೩೪


ಒಲಿಂಪಿಯನ್ ಗೋಲ್ಕೀಪರ್ ಸಂಜೀವ ಉಚ್ಚಿಲ್, ನಮ್ಮಮ್ಮನ ತಂಗಿ ಶಾರದ ಚಿಕ್ಕಮ್ಮನನ್ನು  ಮದುವೆಯಾಗಿ ವಧೂವರರು ಮೊದಲ ಬಾರಿಗೆ ಮುಂಬೈಗೆ ಹೊರಡುವಾಗ ನಾನು ಚಿಕ್ಕ ಹುಡುಗಿ. ರಾತ್ರಿ ನಮ್ಮಲ್ಲಿ ಅವರಿಗೆ ಔತಣ ಸಿದ್ಧವಾಗುವಾಗ ನಾನು ನಿದ್ದೆ ತೂಗುತ್ತಿದ್ದೆ. ಆದರೂ ಅವರು ಪಯಣಿಸಲಿರುವ ಹಡಗಿನ ಚಿತ್ರ ನನ್ನ ಬಗೆಗಣ್ಣಿನಲ್ಲಿ ಸಿಂದಬಾದ್ ನೌಕೆಯನ್ನೂ, ತಿಮಿಂಗಿಲದ ಬೆನ್ನನ್ನೇ ದ್ವೀಪವೆಂದುಕೊಂಡು ತಂಗಿ, ಮತ್ತೆ ಅದು ನಿದ್ದೆಯಿಂದೆದ್ದಾಗ ದ್ವೀಪದೊಡನೆ ತೇಲಿಕೊಂಡು ಹೋದ ಕೌತುಕವನ್ನೂ ಕುಣಿಸುತ್ತಿತ್ತು. ಮೊದಲೇ ಹೇಳಿದಂತೆ ನಾನು ಮುಂಬೈಗೆ ಬರುವಾಗ ಹಡಗು ಸಂಚಾರದ ಕನಸು ನುಚ್ಚುನೂರಾಗಿತ್ತು.

ಒಲಿಂಪಿಯನ್ ಸಂಜೀವ ಚಿಕ್ಕಪ್ಪ ಸಾಂತಾಕ್ರೂಜ಼್ ರೈಲ್ವೇ ಕ್ವಾರ್ಟರ್ಸ್ನಲ್ಲಿ ವಾಸವಿದ್ದರು. ಅವರ ಅಣ್ಣ ಎನ್.ಕೆ.ಉಚ್ಚಿಲ್ ಅಂತಾರಾಷ್ಟ್ರೀಯ ರೆಫ್ರೀ ಆಗಿದ್ದರು. ಊರಿಗೆ ಬಂದಾಗ ಸಮುದ್ರದಲ್ಲಿ ಫಿಶಿಂಗ್ ಅವರ ಮೆಚ್ಚಿನ ಹವ್ಯಾಸವಾಗಿತ್ತು. ಅವರ ಮನೆಯಲ್ಲಿದ್ದ ಆಲ್ಬಮ್ಗಳಲ್ಲಿ ಅವರ  ಕ್ರೀಡಾ ಜೀವನದ, ಗೆಳೆಯರ ಬಳಗದ ಅಮೂಲ್ಯ ಫೋಟೋಗಳಿದ್ದುವು. ಹಿಂದೀ ಚಿತ್ರನಟ ಪ್ರಾಣ್, ಖಳನಾಯಕ ಫೈಟರ್ ಶೆಟ್ಟಿ, ಕೆ. ನಾರಾಯಣ ಎಂಬ ನಮ್ಮೂರ ಬಂಧುವೊಬ್ಬರು ಮತ್ತು ಸಂಜೀವ ಚಿಕ್ಕಪ್ಪ - ನಾಲ್ವರು ಗಾಢ ಸ್ನೇಹಿತರಾಗಿದ್ದು, ಅವರ ಮೈತ್ರಿಯ ಅನೇಕ ಫೋಟೋಗಳು ಕ್ರೀಡಾ ಸಂಬಂಧಿ ಚಿತ್ರಗಳೊಡನೆ ಅವರ ಆಲ್ಬಮ್ನಲ್ಲಿದ್ದುವು.

ಆಟವೊಂದರಲ್ಲಿ ಎದುರಾಳಿಯ ಸ್ಪೈಕ್ ಬೂಟುಗಾಲು ಅವರ ಮೊಣಕಾಲ ಹಿಂಭಾಗಕ್ಕೆ ಬಲವಾಗಿ ಒದೆದ ಆಘಾತದಲ್ಲಿ ತೊಂದರೆಗೀಡಾದ ಸಂಜೀವ ಚಿಕ್ಕಪ್ಪ ಮತ್ತೆ ಪಂದ್ಯಗಳಲ್ಲಿ ಆಡಲಾಗದೆ ಕೋಚ್ ಆಗಿ ಕಾರ್ಯನಿರತರಾದರು. ವೃದ್ದಾಪ್ಯದಲ್ಲಿ ಹಾಸಿಗೆ ಹಿಡಿದು ಅವಸಾನವನ್ನಪ್ಪಿದ ಅವರ ಗೌರವಾರ್ಥ ಬಿಪಿನ್ ಮೆಮೊರಿಯಲ್ ಸ್ಪೋರ್ಟ್ಸ್ ಕ್ಲಬ್ನಿಂದ ನಡೆದ ಪ್ರೆಸ್ ಕ್ಲಬ್ ಸಂತಾಪ ಸೂಚಕ ಸಭೆಯಲ್ಲಿ ಅವರಿಗೆ ಶ್ರದ್ಧಾಸುಮಗಳನ್ನರ್ಪಿಸಲಾಯ್ತು. ಒಲಿಂಪಿಯನ್ ಗೋಲ್ಕೀಪರ್ ಸಂಜೀವ ಉಚ್ಚಿಲ್ ಅವರ ಆಳುದ್ದದ ತೈಲವರ್ಣ ಚಿತ್ರ ತಿರುವಾಂಕೂರಿನ ಅರಮನೆಯ ಆರ್ಟ್ ಗ್ಯಾಲರಿಯಲ್ಲಿದೆ.
ಫೋರಮ್ ಆಫ್ ಫ್ರೀ ಎಂಟರ್ಪ್ರೈಸ್ಸ್ ಸಂಸ್ಥೆಯು, ಎಮ್.ಆರ್.ಪೈ. ಅವರ ಬಗೆಗಿನ `ಎಮ್.ಆರ್.ಪೈ. ಆನ್ ಅನ್ಕಾಮನ್ ಕಾಮನ್ ಮ್ಯಾನ್ಕೃತಿಯನ್ನು ಅನುವಾದಿಸಿ ಕೊಡುವಂತೆ ನನ್ನನ್ನು ಕೇಳಿಕೊಂಡಿತು. ಅಂತೆಯೇ `ಅಸಾಮಾನ್ಯ ಶ್ರೀ ಸಾಮಾನ್ಯ ಎಮ್.ಆರ್.ಪೈ’ ಕೃತಿ ಸಿದ್ಧವಾಗಿ, ಬೆಂಗಳೂರಿನಲ್ಲಿ .ಬಿ.ಎಚ್. ಪ್ರಕಾಶನದಿಂದ ಬೆಳಕು ಕಂಡಿತು. ಬೆಂಗಳೂರಿನ ಗೋಖಲೆ ಇನ್ಸ್ಟಿಟ್ಯೂಟ್ನಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಸಂತೋಷ್ ಹೆಗ್ಡೆ ಅವರ ಕೈಗಳಿಂದ ಕೃತಿ ಲೋಕಾರ್ಪಣೆಗೊಂಡಿತು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಪ್ರಧಾನ್ ಗುರುದತ್ತರೂ ಜೊತೆಗಿದ್ದರು. ಜಸ್ಟಿಸ್ ಸಂತೋಷ್ ಹೆಗ್ಡೆ ಅವರು ನನ್ನ ಅನುವಾದವನ್ನು ಮೆಚ್ಚಿಕೊಂಡು ಆಡಿದ ಮಾತುಗಳಿಂದ ಧನ್ಯತೆಯೆನಿಸಿತು.

೨೦೧೦ ಅಕ್ಟೋಬರ್ ೧೩ರಂದು ಶಾರದಾ ಪೂಜೆಯ ದಿನವೇ ಮಂಗಳೂರಲ್ಲಿ ನನ್ನ ಮೊಮ್ಮಗಳು ಶ್ರುತಾ ಹುಟ್ಟಿ ಬಂದಳು. ಮನೆಯಲ್ಲಿ ಸಂತಸ ತುಂಬಿತು.
೨೦೧೧ ನವೆಂಬರ್ನಲ್ಲಿ ಕಿರಿಮಗ ಹರ್ಷನ ಮದುವೆ ಮಂಗಳೂರಲ್ಲಿ ನೆರವೇರಿತು. ದೇವಕಿ ಅತ್ತೆಯ ಮೊಮ್ಮಗಳು ಅಶ್ವಿನಿ ಸೊಸೆಯಾಗಿ ಬಂದಳುಸಕಲೇಶಪುರದ ಉಚ್ಚಿಲ್ಸ್ ಹೈಲ್ಯಾಂಡ್ ಎಸ್ಟೇಟ್ನಲ್ಲಿ ಮದುವೆಯ ಸಂಭ್ರಮದ ನಿಮಿತ್ತ ಸ್ನೇಹಕೂಟ ನಡೆಯಿತು. ಪಾರಂಪರಿಕ ಸೌಂದರ್ಯದ ವಿಶಾಲ ಎಸ್ಟೇಟ್ ಮನೆ! ಅಶ್ವಿನಿಯ ಚಿಕ್ಕಪ್ಪ ಕೃಷ್ಣ, ಪಾರಂಪರಿಕ ವಿನ್ಯಾಸದ ಹಳೆಯ ಮನೆಗಳಿಂದ ಸಂಗ್ರಹಿಸಿ ಉಳಿಸಿ ಪುನರ್ನಿರ್ಮಿಸಿದ ಸುವಿಶಾಲ ಸುಂದರ ಎಸ್ಟೇಟ್ ಮನೆ! ಅಂತೆಯೇ ಕಾಡು, ತೋಟ, ತೊರೆ, ಜಲಪಾತಗಳ ಪ್ರಕೃತಿ ಸೌಂದರ್ಯ ಸವಿಯುವ ಸುವರ್ಣಾವಕಾಶವೂ ಪ್ರಾಪ್ತವಾಯ್ತು.
ಮನೆಯೆದುರು ಜುಳು ಜುಳು ಹರಿವ ತೊರೆಯನ್ನು ದಾಟುವುದು ಕಷ್ಟದ, ಅಷ್ಟೇ ಮೋಜಿನ ಕೆಲಸವಾಗಿತ್ತು. ನೀರಡಿಯ ಕಲ್ಲುಗಳೆಲ್ಲ ಜಾರುತ್ತಿದ್ದು, ಕೈಕೈ ಹಿಡಿದು ಎಚ್ಚರದಿಂದ ದಾಟಿದರೂ, ಬಿದ್ದು ಒದ್ದೆಯಾಗುವುದು ತಪ್ಪಲಿಲ್ಲ. ಎಲ್ಲರೂ ಹೊದ್ದುಕೊಂಡು ಗಡಗಡನೆ ನಡುಗುತ್ತಾ ಚಳಿಯನ್ನನುಭವಿಸಿದರೆ, ನನಗೋ ಅದು ಸ್ವರ್ಗಸುಖದಂತಾಯ್ತು. ಜಲಪಾತದತ್ತ ನಡೆವ ತೋಟದ ದಾರಿಯಲ್ಲಿ ಜಿಗಣೆಗಳು ಕಾಲ್ಬೆರಳುಗಳ ನಡುವೆ, ಅಂಗಾಲು, ಕೋಲ್ಕಾಲುಗಳಲ್ಲಿ ಅಂಟಿಕೊಂಡು ರಕ್ತ ಸುರಿಯತೊಡಗಿದ್ದು ಹೊಸ ಅನುಭವವಾಗಿತ್ತು. ರಾತ್ರಿ ಕ್ಯಾಂಪ್ಫಯರ್ ಮೋಜು, ಸಿಡಿಮದ್ದಿನ ಗೌಜಿ, ಹೊಸ ಹೊಸ ಆಟಗಳ, ಸ್ಪರ್ಧೆಗಳ ಗಮ್ಮತ್ತಿನಲ್ಲಿ ಎಲ್ಲರಿಗೂ ಬಾಲ್ಯ ಮರುಕಳಿಸಿತ್ತು. ಎಸ್ಟೇಟ್ ಎಂದರೇ ಮೈ ನವಿರೇಳುವಂತಹ ಅನುಭವ!
 
          
ಮತ್ತೊಂದು ತಿಂಗಳಲ್ಲಿ ೨೦೧೨ರ ಆರಂಭದಲ್ಲಿ ಇಲ್ಲಿ ಮುಂಬೈಯಲ್ಲಿ ತಂಗಿಯ  ಮನೆಯಲ್ಲಿ ಅವಳಿ ಮೊಮ್ಮಕ್ಕಳು ಆರಿಯಾ, ಆರವ್ ಹುಟ್ಟಿ ಬಂದು ನಲಿವು, ಸಂತಸ ಹೆಚ್ಚಿಕೊಂಡಿತ್ತು. ಊರಿನಲ್ಲಿ ನನ್ನ ಮೊಮ್ಮಗಳು ಶ್ರುತಾ ವರ್ಷ ತುಂಬಿ ಬೆಳೆಯುತ್ತಿದ್ದಳು.
        
ಸಾಹಿತ್ಯ ಕ್ಷೇತ್ರದಲ್ಲಿ ನನ್ನ ಲೇಖನಗಳ ಸಂಕಲನವೊಂದನ್ನು ಹೊರತರುವಂತೆ ಗೆಳತಿ ಸಾಹಿತಿ ನೇಮಿಚಂದ್ರ ಒತ್ತಾಯಿಸುತ್ತಿದ್ದರುಲಲಿತ ಪ್ರಬಂಧವೈಚಾರಿಕ ಲೇಖನಗಳುಪ್ರವಾಸ ಚಿತ್ರಗಳು ಹಾಗೂ ವ್ಯಕ್ತಿಚಿತ್ರಗಳಿದ್ದ ಲೇಖನಗಳನ್ನು ಒಗ್ಗೂಡಿಸಿದೆಪ್ರಿಯ ಸಾಹಿತಿ ಡಾ| ರಹಮತ್ ತರೀಕೆರೆ ಅವರುಕೇಳಿದೊಡನೆ ಕೃತಿಗೆ ತಮ್ಮ ಅಮೂಲ್ಯ ಮುನ್ನುಡಿ ಬರೆದಿತ್ತರುಬೆಂಗಳೂರಿನ ಬರಹ ಪಬ್ಲಿಕೇಶನ್ಸ್ ಡಾಭೈರೇ ಗೌಡರುಸಾಹಿತಿ ಕೆ.ಟಿ.ಗಟ್ಟಿ ಅವರ ಮಾತಿಗೆ ಮನ್ನಣೆಯಿತ್ತುಕೃತಿ ಪ್ರಕಾಶನಕ್ಕೆ ಮುಂದಾದರುಸಂಕಲನವನ್ನು `ಬದುಕು ಚಿತ್ರ ಚಿತ್ತಾರ’ ಎಂದು ನಾನು ಹೆಸರಿಸಿದೆ.

೨೦೧೨ ಆಗಸ್ಟ್ ೨೮ ನಮ್ಮಮ್ಮನ ೯೦ನೇ ಜನ್ಮದಿನಅಂದೇ ಸಮಾರಂಭವೊಂದನ್ನು ಏರ್ಪಡಿಸಿ ಅಮ್ಮನ ಕೈಗಳಿಂದಲೇ ನನ್ನ `ಬದುಕು ಚಿತ್ರ ಚಿತ್ತಾರ’ ಕೃತಿ ಬಿಡುಗಡೆ ನಡೆಸುವುದೆಂದು ನಾವು ನಿಶ್ಚಯಿಸಿದೆವುಅಮ್ಮನ ೯೦ನೇ ಹುಟ್ಟುಹಬ್ಬಕ್ಕಾಗಿ ನಾವೆಲ್ಲ ಒಟ್ಟು ಸೇರಿದೆವು. ಮುಂಬೈಯಿಂದ ಹೊಸ ಮದುಮಕ್ಕಳು - ಅಣ್ಣನ ಮಗ ಅವಿನಾಶ್ ಮತ್ತು ಕವಿತಾ ಕೂಡಾ ಜೊತೆಯಾದರು. ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸಹಕಾರದಲ್ಲಿ ನನ್ನ `ಬದುಕು ಚಿತ್ರ ಚಿತ್ತಾರ’ ಕೃತಿ ಬಿಡುಗಡೆ ನಡೆಯಿತು.

"ಬರೆದುದೆಲ್ಲವೂ ಸುಂದರವಾಗಿರುವಂತೆ ನೋಡಿಕೊಳ್ಳುವುದು ಮುಖ್ಯ", ಎಂದು ನನ್ನನ್ನು ಹರಸಿದ ದಿವಂಗತ ಪೂಜ್ಯ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರಿಗೆ ನಾನು ನನ್ನೀ ಕೃತಿಯನ್ನು ಸಮರ್ಪಿಸಿದ್ದೆ.   ಅಮ್ಮನ ಕೈಗಳಿಂದ ಕೃತಿ ಅನಾವರಣ ನಡೆದ ಬಳಿಕ  ವೇದಿಕೆಯಲ್ಲಿ ಮಾನ್ಯರೂ, ಆತ್ಮೀಯರೂ ಆದ ಡಾ| ಅಮೃತ ಸೋಮೇಶ್ವರರು, ಬಿ.ಎಂ.ರೋಹಿಣಿ ಹಾಗೂ ಚಂದ್ರಕಲಾ ನಂದಾವರ ಅವರು ಅಮ್ಮನ ಬಗ್ಗೆ, ಕೃತಿಯ ಬಗ್ಗೆ ಸೊಗಸಾದ ಮಾತುಗಳನ್ನಾಡಿದರು. ಮಾಲಿನಿ ಹೆಬ್ಬಾರರ ನಿರೂಪಣೆ ಕಾರ್ಯಕ್ರಮಕ್ಕೆ ಮೆರುಗನ್ನು ಇತ್ತಿತು. ಚಂದ್ರಕಲಾರಂತೇ ಅಮ್ಮನ ನೂರಾರು ಹಳೆ ವಿದ್ಯಾರ್ಥಿನಿಯರು, ಬಂಧು, ಮಿತ್ರರು, ಸಹೋದ್ಯೋಗಿಗಳು ಬಂದು ಸೇರಿ ಸಂತಸ, ಕೃತಾರ್ಥತೆಯ ಸೆಲೆ ಚಿಮ್ಮಿ ಹರಿಯಿತು. ಅಮ್ಮನ ಪಕ್ಕದಲ್ಲಿ ನನ್ನ ಪ್ರೀತಿಯ ಭಾಮಾಂಟಿ ಇದ್ದರು.


     
ತಿಂಗಳ ಬಳಿಕ ಮುಂಬೈಯಲ್ಲಿ ನಡೆದ `ಬದುಕು ಚಿತ್ರ ಚಿತ್ತಾರಹಾಗೂ `ಅಸಾಮಾನ್ಯ ಶ್ರೀ ಸಾಮಾನ್ಯ ಎಂ.ಆರ್.ಪೈ’ ಕೃತಿಗಳ ಅನಾವರಣ ಕಾರ್ಯಕ್ರಮದಲ್ಲಿ ಡಾ| ರಹಮತ್ ತರೀಕೆರೆ ಅವರು ಮುಖ್ಯ ಅತಿಥಿಗಳಾಗಿ ಬಂದು, ತಮ್ಮ ಅಮೂಲ್ಯ ವಿಚಾರಗಳೊಡನೆ ಕೃತಿಯನ್ನು ಪರಿಚಯಿಸಿದರು. `ಎಂ.ಆರ್.ಪೈ’ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದವರು, ಮಾನ್ಯ ಡಾ. ವ್ಯಾಸರಾವ್ ನಿಂಜೂರರು. ಅತಿಥಿಯಾಗಿ ಡಾ| ಭೈರೇಗೌಡರೂ ಜೊತೆಗಿದ್ದರು. ಕಾರ್ಯಕ್ರಮದ ಬಳಿಕ ಎರಡು ದಿನಗಳ ಕಾಲ ಮನೆಯಲ್ಲಿ ನಮ್ಮೊಡನಿದ್ದ ರಹಮತ್ ತುಂಬ ಆತ್ಮೀಯರಾದರು. ಕೊನೆಯ ದಿನ ಬೆಳಿಗ್ಗೆಯೇ ಏಶಿಯಾಟಿಕ್ ಲೈಬ್ರೆರಿಗೆ ಹೋಗಿದ್ದು, ಸಂಜೆಯ ವರೆಗೂ ಕುಳಿತು ಓದಿ ಓದಿ ಕೊನೆಗೆ ಹೊರದಬ್ಬಿಸಿಕೊಂಡು ಬಂದೆನೆಂದರು!

೨೦೧೦ರಲ್ಲಿ ಎರಡು ಅಮೂಲ್ಯ ಕೊಡುಗೆಗಳು ನನ್ನ ಕೈ ಸೇರಿ ತುಂಬ ಸಂತಸವಿತ್ತವು. ಋಜುವಾತು ಪತ್ರಿಕೆಯಲ್ಲಿ ಡಾ| ಅನಂತಮೂರ್ತಿ ಅವರ ಲೇಖನವನ್ನೋದಿ ನನ್ನೂರಲ್ಲಿ ಅಳಿದು ಹೋದ ಕೃಷಿಗದ್ದೆಗಳ ಬಗ್ಗೆ, ನಾಶವಾದ ಸುರಮ್ಯ ಪ್ರಕೃತಿಯ ಬಗ್ಗೆ ನನ್ನ ಒಳತುಡಿತವನ್ನು ಪತ್ರ ಬರೆದು ನಾನು ತೋಡಿಕೊಂಡಿದ್ದೆ. ಅದನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ ಡಾ| ಅನಂತಮೂರ್ತಿ ಅವರು, ಕೆಂಡಸಂಪಿಗೆಯ ಅಬ್ದುಲ್ ರಶೀದ್, ಪತ್ರವನ್ನು ತಮ್ಮ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟಿಸಲು ನನ್ನನುಮತಿ ಕೋರಿರುವುದಾಗಿ ತಿಳಿಸಿದರು. ಅಂತೆಯೇ ಇಂಗ್ಲಿಷ್ ಭಾಷೆಯಲ್ಲಿದ್ದ ನನ್ನಾ   ಪತ್ರವನ್ನು ಕನ್ನಡಿಸಿ ರಶೀದ್ ಕೆಂಡಸಂಪಿಗೆಯಲ್ಲಿ ಪ್ರಕಟಿಸಿದರು. ಹಾಗೂ ನನ್ನ ಕೆಲ ಲೇಖನಗಳೂ ಮುಂದೆ ಅಲ್ಲಿ ಪ್ರಕಟವಾದವು. ನನ್ನ ಕನ್ನಡ ಬರವಣಿಗೆಗೆ ಕಂಪ್ಯೂಟರ್ ಉಪಯೋಗಿಸುವಂತೆ ಆತ್ಮೀಯರಾದ ಕೆ.ಟಿ.ಗಟ್ಟಿ ಅವರು ತಿಳಿ ಹೇಳುತ್ತಿದ್ದರು. ನನಗದು ಅಸಾಧ್ಯವೆಂದೇ ನಾನಂದು ಕೊಂಡಿದ್ದೆ. ಅರ್ಧಗಂಟೆಯಲ್ಲಿ ನಿಮಗದನ್ನು ಕರಗತ ಮಾಡಿಕೊಳ್ಳಬಹುದು, ಎಂದವರು ಅಂದುದು ನಂಬಲಸಾಧ್ಯವಾಗಿತ್ತು. ಆದರೆ, ನಿಜಕ್ಕೂ ನನಗದು ಸಾಧ್ಯವಾದಾಗ ನನ್ನ ಸಂತೋಷಕ್ಕೆ ಮಿತಿಯಿರಲಿಲ್ಲ. ಕೆಂಡಸಂಪಿಗೆ ಬಹಳಷ್ಟು ಓದಿಗೆ, ಪ್ರತಿಕ್ರಿಯೆಗೆ ದಾರಿಯಾಯ್ತು. ಹೂವಿನ ಕೊಲ್ಲಿಯ ಹುಡುಗನ ಮೇಲೆ ನನಗೆ ಅಪಾರ ವಾತ್ಸಲ್ಯ ಬೆಳೆಯಿತು .......
         
೨೦೧೦ರಲ್ಲಿ ವೃತ್ತಿಸಂಬಂಧ ಅಮೆರಿಕೆಗೆ ಹೋದ ತುಷಾರ್ ಹಿಂದಿರುಗುವಾಗ ನನಗೊಂದು ಡಿಜಿಟಲ್ ಕ್ಯಾಮೆರಾ ತಂದಿತ್ತ. ಮತ್ತೆ ಕೆಲದಿನಗಳಲ್ಲೇ ಹರ್ಷ, ಒಂದು ಲ್ಯಾಪ್ಟಾಪ್ ತಂದಿತ್ತ. ಎಂದೂ ನನಗೆ ಪ್ರಿಯವಾದ ಪೆನ್ ನನ್ನಿಂದ ದೂರವಾಗದೆಂದು ನಾನಂದುಕೊಂಡರೂ, ಅಯಾಚಿತವಾಗಿ, ತಾನೇ ತಾನಾಗಿ ಲ್ಯಾಪ್ಟಾಪ್ ನನ್ನ ಪೆನ್, ಪೇಪರ್ಗಳ ಸ್ಥಾನವನ್ನು ಕಸಿದುಕೊಂಡಿತು. ಸಾವಿರಾರು ಪುಟಗಳಷ್ಟಾಗಬಹುದಾಗಿದ್ದ ಪತ್ರಲೇಖನ ಅಲ್ಲಿಗೇ ನಿಂತುಹೋಯ್ತು. ಎಮ್. ಆರ್. ಪೈ. ಅನುವಾದದ ಅರ್ಧಾಂಶ ಪೇಪರ್ನಲಾಗಿದ್ದರೆ, ಉಳಿದರ್ಧ ಲ್ಯಾಪ್ಟಾಪ್ನಲ್ಲಿ ಆಯ್ತು. ಅಂತೆಯೇ ಅಂಬೇಡ್ಕರ್ ಬರಹ ಮತ್ತು ಭಾಷಣಗಳ ಅನುವಾದವೂ ಸಹ.
        
ಅಂಬೇಡ್ಕರ್ ಮುಗಿಸಿ, ನನಗೆ ಬಹುಪ್ರಿಯವಾಗಿದ್ದ ಜೇನ್ ಏರ್ ಅನುವಾದಕ್ಕೆ ತೊಡಗಿದೆ. ಹದಿನಾಲ್ಕು ಅಧ್ಯಾಯಗಳಾಗಿದ್ದಾಗ ಒಂದಿನ ಇದ್ದಕ್ಕಿದ್ದಂತೆ ಜೇನ್ ನನ್ನ ಲ್ಯಾಪ್ಟಾಪ್ನಿಂದ ಮಾಯವಾಗಿ ಬಿಟ್ಟಳು. ಮಕ್ಕಳು ಅವಳನ್ನು ಹುಡುಕಿ ಪುನಃ ಎತ್ತಿಕೊಡಲು ಯತ್ನಿಸಿದರೂ ಎಲ್ಲ ಯತ್ನ ನಿರರ್ಥಕವಾಯ್ತು. ಬೇರೆಲ್ಲೂ ಸೇವ್ ಮಾಡಿರಲೂ ಇಲ್ಲ; ಪ್ರಿಂಟ್ಔಟ್ ತೆಗೆದಿರಲೂ ಇಲ್ಲ. ನನಗಾದ ಅಪಾರ ನಿರಾಸೆಯನ್ನು ಕಂಡು, ತುಷಾರ್, "ಇರಲಿ, ಅಮ್ಮಾ. ಎಲ್ಲರಿಗೂ ಮೊದಮೊದಲು ಇಂತಹ ಅನುಭವ ಆಗುತ್ತದೆ. ಮತ್ತೆ ಜಾಗರೂಕರಾಗಿರ್ತಾರೆ" , ಎಂದು ಸಮಾಧಾನ ಪಡಿಸಿದ.
        
ಹೌದು, ಲ್ಯಾಪ್ಟಾಪ್, ಅಂತರ್ಜಾಲ ಹಾಗೂ ಕ್ಯಾಮೆರಾ ಕಣ್ಣಿನ ಬಲೆಯಲ್ಲಿ ನಾನೀಗ ಬಂಧಿ. ಬರೆದು ಮುಗಿಯುವುದೇ ಸಂಧಿ?

(ಮುಂದುವರಿಯಲಿದೆ)



No comments:

Post a Comment