10 April 2017

ಜೀವನಯಾನ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ
ಅಧ್ಯಾಯ೩೩


ಬೆಂಗಳೂರಿನ ಸದಾಶಿವ ದೊಡ್ಡಪ್ಪ ನಮ್ಮ ತಂದೆಯ ದೊಡ್ಡಮ್ಮನ ಮಗ. ತಂದೆ ಗೌರವದಿಂದ ಕಾಣುತ್ತಿದ್ದ ಪ್ರೀತಿಯ ಅಣ್ಣ. ಅವರ ಪತ್ನಿ ನಮ್ಮ ರಾಧಮ್ಮ ಬೆಲ್ಯಮ್ಮ, ನಮ್ಮಮ್ಮನ ಚಿಕ್ಕಮ್ಮ. ದೊಡ್ಡಪ್ಪ ಹಿಂದೆ ವೀರಪ್ಪ ಮೊಯಿಲಿಯವರಿಗೆ ಗುರುಗಳಾಗಿದ್ದರು. ಮೊಯಿಲಿಯವರು ತಮ್ಮ `ರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯದ ಪ್ರತಿಯನ್ನು ದೊಡ್ಡಪ್ಪನ ಮನೆಗೇ ಬಂದು ಸಮರ್ಪಿಸಿ, ನಮಿಸಿದ್ದರು. ಹಾಗೆಯೇ ಮುಂದಿನ ಭಾಗವೂ ಅವರ ಕೈ ಸೇರಿತ್ತುಬೆಂಗಳೂರ ರಾಜಾಜಿ ನಗರದ ಮನೆ `ವೆಂಕಟಾದ್ರಿ’ ಅವರ ನಿವಾಸ. ಅವರ ಮಗಳು ಸ್ವರ್ಣಲತಾ ಬಾಲ್ಯದಿಂದಲೂ ನನ್ನ ಗೆಳತಿ, ಒಡನಾಡಿ. ಮಗ ವಿನೋದ್ ಕುಮಾರ. ಸೊಸೆ ಮಾಲಿನಿ. ವೆಂಕಟಾದ್ರಿಯ ಅನ್ನಪೂರ್ಣೆ ರಾಧಮ್ಮ ಬೆಲ್ಯಮ್ಮನ ಬಳಿಗೆ ಹೋದವರು, ಉಣ್ಣದೆ ಅಲ್ಲಿಂದ ಹೊರಡುವಂತಿರಲಿಲ್ಲ.

ದೊಡ್ಡಪ್ಪ ಶಿಸ್ತಿನ ಜೀವ; ವೃತ್ತಿನಿಷ್ಠೆಯ ಕರ್ತವ್ಯ ಶೀಲರು; ಪ್ರಾಮಾಣಿಕರು. ಮನೆಯಲ್ಲಿ ಕಾರುಗಳಿದ್ದರೂ ನಡೆದುಕೊಂಡೇ ತನ್ನ ಕಛೇರಿಗೆ ಹೋಗಿ ಬರುತ್ತಿದ್ದವರು. .ಜಿ.ಪಿ.. ಕಛೇರಿಯ ಕ್ಲೆರಿಕಲ್ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಪದವಿಗೇರಿ ನಿವೃತ್ತರಾದವರು. ನಿವೃತ್ತಿಯ ಬಳಿಕವೂ ದಿನವೂ ಬೆಳಿಗ್ಗೆ ಎದ್ದು, ಮನೆಯ ಎಲ್ಲ ಪೀಠೋಪಕರಣಗಳ ಧೂಳು ಒರೆಸಿ, ಸ್ನಾನ ಮಾಡಿ ಆಫೀಸ್ಗೆ ಹೋಗುವ ಉಡುಗೆ ತೊಟ್ಟು, ಮನೆಯ ಹೊರಜಗಲಿಯಲ್ಲಿ ಹೋಗಿ ಕೆಲ ಹೊತ್ತು ನಿಂತಿದ್ದು ಮತ್ತೆ ಒಳ ಬಂದು ಉಡುಪು ಬದಲಿಸುತ್ತಿದ್ದರು. ನಮ್ಮ ಸಮಾಜದ ಒಳಿತಿಗಾಗಿ, ಉಚ್ಚಿಲ ಶಾಲಾ ಅಭಿವೃಧ್ಧಿ ಕಾರ್ಯಗಳಿಗಾಗಿ ತುಂಬು ಮನದಿಂದ ಸಹಕಾರ ನೀಡಿದವರು. ತಮ್ಮ  ಎಂಬತ್ತೈದರ ಹರೆಯದಲ್ಲಿ ಹಲವು ದಿನಗಳ ಕಾಲ ದಿನವೂ ಬೆಳಿಗ್ಗೆ ಎದ್ದು, ಅಂದಿನ ವಿದ್ಯಾಮಂತ್ರಿ ವೀರಪ್ಪ ಮೊಯಿಲಿ ಅವರಲ್ಲಿಗೆ ಹೋಗಿ, ಸತತ ಪ್ರಯತ್ನದಿಂದ ನಮ್ಮ ಸಮಾಜಕ್ಕೆ ಮೈನಾರಿಟಿ ಲಿಂಗ್ವಿಸ್ಟಿಕ್ ಸ್ಟೇಟಸ್ ಸಿಗುವಂತೆಯೂ, ಹಾಗೂ ಉಚ್ಚಿಲ ಶಾಲೆಗೆ ಒಂದು ಲಕ್ಷ ರೂಪಾಯಿ ಮೊತ್ತದ 
ಅನುದಾನ ಸಿಗುವಂತೆಯೂ ಮಾಡಿದವರು, ನಮ್ಮ ದೊಡ್ಡಪ್ಪ.

ತೊಂಬತ್ತೆಂಟರ ತುಂಬು ಜೀವನವನ್ನು ಬಾಳಿ, ಕೊನೆಯ ಕೆಲ ದಿನಗಳು ಮಾತ್ರ ಹಾಸಿಗೆ ಹಿಡಿದು, ೨೦೦೭ ಮೇ ೧೯ರಂದು  ಶಾಂತರಾಗಿ ಕೊನೆಯುಸಿರೆಳೆದ ದೊಡ್ಡಪ್ಪನ ಅಗಲಿಕೆಯ ನಂತರ ನಮ್ಮ ಬೆಲ್ಯಮ್ಮ ಹೆಚ್ಚು ಕಾಲ ಇರದಾದರು. ಮುಂದಿನ ವರ್ಷ, ೨೦೦೮ ಸಪ್ಟೆಂಬರ್ ೩೦ರಂದು  ಅಲ್ಪ ಅಸೌಖ್ಯದ ಬಳಿಕ ಅವರು ಅಸು ನೀಗಿದರು. ಅನ್ನಪೂರ್ಣೆಯ ಆವಾಸವಾಗಿದ್ದ `ವೆಂಕಟಾದ್ರಿ’ ಇಂದಿಗೂ ಅತಿಥಿ, ಅಭ್ಯಾಗತರಿಗೆ ತೆರೆದ ಮನೆಯಾಗಿದೆ. ಬಳಿಯಲ್ಲೇ `ಬೆನಕ’ ವಾಸಿಯಾದ ಅವರ ಅಳಿಯ ಯಶೋಧರಣ್ಣ ಕಟ್ಟಿ ನಿಲ್ಲಿಸಿದ ಸರ್ಫಾಕೋಟ್ಸ್ ಸಾಮ್ರಾಜ್ಯ, ಹಲವರ ಬದುಕಿಗೆ ಇಂಬಾಗಿದೆ.

ನನ್ನ ಕಿರುಕಥೆಗಳ ಸಂಕಲನ ` ಲೋಕ’ ೨೦೦೯ರಲ್ಲಿ ಬೆಂಗಳೂರಿನ ಸುಮುಖ ಪ್ರಕಾಶನದಿಂದ ಬೆಳಕು ಕಂಡು, ೨೦೧೦ರಲ್ಲಿ ಬೆಂಗಳೂರಲ್ಲಿ ನನ್ನ ಪ್ರಿಯ ಸಾಹಿತಿ ನೇಮಿಚಂದ್ರರ ಕೈಗಳಿಂದ ಲೋಕಾರ್ಪಣಗೊಂಡಿತು. ಕನ್ನಡ ಕಥಾ ಸಾಹಿತ್ಯದ ಅಪ್ರತಿಮ ಪ್ರತಿಭೆ ಮಾನ್ಯ ಯಶವಂತ ಚಿತ್ತಾಲರು, ಕೇಳಿ ಕೊಂಡೊಡನೆ ನನ್ನೀ ಪ್ರಥಮ ಕಥಾ ಸಂಕಲನಕ್ಕೆ ಪ್ರೀತಿಯ ಬೆನ್ನುಡಿ ಬರೆದು ಕೊಟ್ಟರು. "ಇದು ಬೆನ್ನುಡಿಯಲ್ಲ; ಬೆನ್ತಟ್ಟು", ಎಂದು ಪ್ರೀತಿಯಿಂದ ಬರೆದಿತ್ತ ಅವರ ಮಾತುಗಳು ನನಗೆ ಆಶೀರ್ವಚನವೇ ಆಗಿವೆ. ನನ್ನ ಪ್ರೀತಿಯ ಭಾಮಾಂಟಿಗೆ ನನ್ನೀ ಪ್ರಥಮ ಕಥಾಸಂಕಲನವನ್ನು ಅರ್ಪಿಸಿದ್ದೆ. ಸುಮುಖ ಪ್ರಕಾಶನದ ನಾರಾಯಣ ಮಾಳ್ಕೋಡರ ವಿಜಯನಗರದ ಪುಸ್ತಕದಂಗಡಿಯ ಅಂಗಣದಲ್ಲೇ ಕೃತಿ ಬಿಡುಗಡೆ ನಡೆಯಿತು. ಅಂದಿನ ದಿನ ಕೈ ಸೇರಿದ ಅರ್ವತ್ತೈದು ಪ್ರತಿಗಳಷ್ಟೇ ಮುದ್ರಿತವಾಗಿದ್ದುವು.

ಮಾಳ್ಕೋಡರಿಗೆ ಅವರ `.ಸಿ.ಯೂ.ನಲ್ಲಿ ನನ್ನ ಶಿಶು’ ಕೃತಿಯನ್ನು ನಾನು ಹಿಂದಿಗೆ ಅನುವಾದಿಸಬೇಕೆಂಬ ಇಚ್ಛೆಯಾಗಿತ್ತು. ಆದರೆ, ಹಲವು ಉಪದ್ವ್ಯಾಪಗಳಲ್ಲಿ ವ್ಯಸ್ತಳಾಗಿದ್ದ ನನಗೆ ಸಮಯಾವಕಾಶ ಆಗದೆಂದು, ನಮ್ಮ ಸೃಜನಾ ಬಳಗದ ಹಿರಿಯರಾದ ಅಲಮೇಲು ಅಯ್ಯರ್ ಅವರನ್ನು ಕಾರ್ಯಕ್ಕೆ ಒಪ್ಪಿಸುವಲ್ಲಿ ನಾನು ಸಫಲಳಾದೆ. ಪ್ರೇಮಚಂದ್ ಕತೆಗಳನ್ನು ಅನುವಾದಿಸುತ್ತಿದ್ದ ಸೌಜನ್ಯಶೀಲೆ ಅಲಮೇಲು, ತುಂಬ ಮುತುವರ್ಜಿಯಿಂದ ಅನುವಾದಿಸಿ ಕೊಟ್ಟರು. ಮುಂಬೈ ಕರ್ನಾಟಕ ಸಂಘದಲ್ಲಿ ಕೃತಿ ಬಿಡುಗಡೆಯೂ ನಡೆಯಿತು. ಪ್ರತಿಗಳು ಮಾತ್ರ ಬರಲಿಲ್ಲ. ಅನುವಾದಿಸಿ ಕೊಟ್ಟ ಅಲಮೇಲು ಅವರಿಗೆ ಯಾವುದೇ ಸಂಭಾವನೆಯೂ ಸಿಗಲಿಲ್ಲ. ಕೆಲವೇ ಉತ್ತಮ ಪ್ರಕಾಶಕರಲ್ಲಿ ಒಬ್ಬರೆಂದು ಹೆಸರಾಗಿದ್ದ ನಾರಾಯಣ ಮಾಳ್ಕೋಡ್ ಅವರು ಪ್ರಕಾಶನ ಕ್ಷೇತ್ರದಲ್ಲೋ, ಇನ್ನೆಂತೋ ಯಾವ ಸಮಸ್ಯೆಗಳಿಗೆ  ಸಿಲುಕಿ ಕೊಂಡರೋ, ಈಗ ಕೆಲ ವರ್ಷಗಳ ಹಿಂದೆ ಸಂಸಾರ ಸಮೇತ ನಾಪತ್ತೆಯಾಗಿ ಬಿಟ್ಟರು! ಮಗುವಿಗಾಗಿ ಪರಿ ಹಂಬಲಿಸಿ ಮತ್ತೆ ಪಡೆದ ಅಪರೂಪದ ನವಜಾತ ಶಿಶುವಿನ ಆರೋಗ್ಯ ಸಮಸ್ಯೆಯಿಂದ .ಸಿ.ಯೂ.ನಲ್ಲಿ ಆತಂಕದ ದಿನಗಳನ್ನು ಕಳೆದು, ಬಗ್ಗೆ ಕೃತಿರಚನೆ ಮಾಡಿದ ಮಾಳ್ಕೋಡ್! ಕೊನೆಗೂ ಉಳಿಸಿಕೊಂಡ ಮಗುವಿನೊಂದಿಗೇ ಪತ್ನೀ ಸಮೇತ ಕಾಣೆಯಾದರು! ನಾಲ್ಕು ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದ, ಹಲವಾರು ಕೃತಿಗಳ ಪ್ರಕಾಶನದಲ್ಲೂ ತೊಡಗಿದ್ದ ಅವರಿಗೆ ಏನಾಯ್ತೋ, ಹೀಗೆ ಒಂದು ಕುಟುಂಬವೇ ಕಾಣೆಯಾಗಿ ಹೋಗುವುದೆಂದರೆ ಅದರರ್ಥವೇನೋ ಯಾರು ಬಲ್ಲರು?

` ಲೋಕ’ದ ಮುಂಬೈ ಬಿಡುಗಡೆ ಮಾರ್ಚ್ ತಿಂಗಳ ಆರಂಭದಲ್ಲಿ ಮುಂಬೈ ಕರ್ನಾಟಕ ಸಂಘದಲ್ಲಿ ಮಿತ್ರಾ ವೆಂಕಟ್ರಾಜ್ ಅವರ ಕೈಗಳಿಂದಾಯ್ತು. ಪತ್ರಕರ್ತ, ಸಾಹಿತಿ ದಯಾಸಾಗರ ಚೌಟ ಅವರು ಸೊಗಸಾಗಿ ಕೃತಿ ಪರಿಚಯ ಮಾಡಿದರು. ಸೃಜನಾ ಬಳಗದ ಸಂಚಾಲಕಿಯಾಗಿ ನಾನು ಕಾರ್ಯ ನಿರ್ವಹಿಸಿದ ಎರಡು ವರ್ಷಗಳ ಅವಧಿಯಲ್ಲಿ ಹಲವಾರು ಸೃಜನಾತ್ಮಕ ಕಾರ್ಯಗಳು ಕೈಗೂಡಿದ ಸಂತಸ ನನ್ನದಾಯ್ತು


ಮುಂಬೈ ಯೂನಿವರ್ಸಿಟಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಡಾ| ತಾಳ್ತಜೆ ವಸಂತ ಕುಮಾರರು ನಿವೃತ್ತರಾಗಿ ತಮ್ಮೂರಿಗೆ ಹೊರಟು ಹೋಗುವ ಸಂದರ್ಭದಲ್ಲಿ, ಅವರಿಗೆ ವಿದಾಯಕೂಟವನ್ನೇರ್ಪಡಿಸಿ `ನುಡಿನಮನ’ ಎಂಬ ಕಿರುಲೇಖನಗಳ ಸಂಕಲನವನ್ನು ಸಮರ್ಪಿಸಿದೆವು.
     
ಚಿತ್ತಾಲರ ಲೇಖನ ಸಂಕಲನ `ಅಂತಃಕರಣ’, ನಮ್ಮ ಸೃಜನಾ ಬಳಗ ಹಾಗೂ ಮುಂಬೈ ಕರ್ನಾಟಕ ಸಂಘದ ಸಹಯೋಗದಲ್ಲಿ ಅನಾವರಣಗೊಂಡಿತು. ಬಳಗದ ಲೇಖಕಿಯರನ್ನು ಪ್ರೀತಿಯಿಂದ ಕಂಡು ಸದಾ ಪ್ರೋತ್ಸಾಹಿಸಿ ಮಾರ್ಗದರ್ಶನವನ್ನಿತ್ತವರು, ಸಹೃದಯಿ ಚಿತ್ತಾಲರು. `ಮಯೂರ’ ಮಾಸಪತ್ರಿಕೆಗಾಗಿ ಚಿತ್ತಾಲರ ಸಂದರ್ಶನ ಮಾಡಿ ಕೊಡುವಂತೆ ಕೋರಿ ಬಂದ ಸಂಪಾದಕರ ಕರೆಯಂತೆ ಚಿತ್ತಾಲರನ್ನು ಕೇಳಿಕೊಂಡಾಗ ಅವರು ತೆರೆದ ಮನದಿಂದ  ಸಹಕರಿಸಿದರು. ಸಂದರ್ಶನವನ್ನು ಮೆಚ್ಚಿ ಹಲವು ಪ್ರತಿಕ್ರಿಯೆಗಳೂ ಬಂದವು

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದೊಡಗೂಡಿ ನಡೆಸಿದ ಅನುವಾದ ಕಮ್ಮಟ ಎಲ್ಲ ವಿಧದಲ್ಲೂ ಯಶಸ್ವಿಯಾಯ್ತು. ಕಾರಂತ ಹಾಗೂ ಭೈರಪ್ಪನವರ ಹೆಚ್ಚಿನೆಲ್ಲ ಕೃತಿಗಳನ್ನು ಮರಾಠಿಗೆ ಅನುವಾದಿಸಿದ ಪುಣೆಯ ಉಮಾ ಕುಲಕರ್ಣಿಯವರು ಮುಖ್ಯ ಅತಿಥಿ ಹಾಗೂ ಮಾರ್ಗದರ್ಶಕರಾಗಿ ಬಂದಿದ್ದರು. ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪ್ರಧಾನ್ ಗುರುದತ್ತರು ನೀಡಿದ ಸಹಕಾರ, ಮಾರ್ಗದರ್ಶನ ಅಪಾರ. ಕಮ್ಮಟದಲ್ಲಿ ರಚಿತವಾದ ಸೃಜನಾ ಬಳಗದ  ಅನುವಾದಗಳ ಸಂಕಲನವೂ `ಮುಂಬೈ ಬಿಂಬ’ ಎಂಬ ಶೀರ್ಷಿಕೆಯೊಡನೆ ತಡವಾಗಿಯಾದರೂ ಪ್ರಕಟವಾಯ್ತು. ಸಾಹಿತ್ಯದ ಕಾಯಕ ಎಲ್ಲ ವಿಧದಲ್ಲೂ ನನ್ನನ್ನು ಚೇತರಿಸಿತು.

ತುಮಕೂರಿನಲ್ಲಿದ್ದ ನನ್ನ ಚಿಕ್ಕ ಸೋದರತ್ತೆ - ದೇವಕಿ ಅತ್ತೆಯ, ಆರೋಗ್ಯ ಕ್ಷೀಣಿಸುತ್ತಾ ಬಂದಿತ್ತು. ವರ್ಷಗಳ ಹಿಂದೆ ಮುಂಬೈಯಲ್ಲಿದ್ದ ದೇವಕಿ ಅತ್ತೆಯ ಸಂಸಾರ ಮತ್ತೆ ತುಮಕೂರಿನಲ್ಲಿ ನೆಲೆಯೂರಿತ್ತು. ಎಚ್.ಎಮ್.ಟಿ. ಲೇ ಔಟ್ ಸಮೀಪ ಹೆದ್ದಾರಿಯ ಪಕ್ಕ ಖಾಲಿ ಬಯಲಿನಾಚೆ ವಾಸ್ತು ವಿನ್ಯಾಸದ ಚೆಲುವಾದ ದೊಡ್ಡ ಮನೆ - `ಕ್ರಿಸೆಂಟ್’. ಮನೆ ತಾರಸಿಗೆ ಹೋಗಿ ನಿಂತರೆ, ಎದುರಿಗೆ ದೃಷ್ಟಿ ಹಾಯ್ವ ಕಣ್ಣಳತೆಯಲ್ಲೆಲ್ಲ ದೇವರಾಯನದುರ್ಗ, ಸಿದ್ಧಗಂಗಾ, ಮಧುಗಿರಿಯಂತಹ ಬೆಟ್ಟಗಳು! ಹಿಂಬದಿಗೆ ಹಾದುಹೋದ ರೈಲು ಮಾರ್ಗ. ಒಂದಿರುಳು ಮನೆಯೆದುರು ಗೇಟ್ ಬಳಿ ರಾತ್ರಿ ಪಾಳಿಯ ವಾಚ್ಮ್ಯಾನ್ ಗಾಢ ನಿದ್ದೆಯಲ್ಲಿದ್ದ ಹೊತ್ತು ಆರು ಮಂದಿ ಢಕಾಯಿತರು ಬಂದು ಅವನ ಬಾಯಿಗೆ ಪ್ಲಾಸ್ಟರ್ ಜಡಿದು ಕಟ್ಟಿ ಹಾಕಿ, ಹಿಂಬದಿ ಕಿಟಿಕಿಯ ಸರಳು ಮುರಿದು ಒಳಹೊಕ್ಕು ಮೇಲೆ ಹೋಗಿ ಮಾಸ್ಟರ್ ಬೆಡ್ರೂಮ್ ಹೊಕ್ಕರು. ಕೆಳಗಿನ ಕೋಣೆಯಲ್ಲಿ ಬಾಗಿಲಿಕ್ಕಿ ಮಲಗಿದ ಅತ್ತೆಯ ಆರೋಗ್ಯ ನಾಜೂಕಾಗಿದ್ದುದರಿಂದ ಮೇಲೆ ಬಾಗಿಲು ತೆರೆದಿಟ್ಟೇ ಮಲಗಿದ್ದ ದಂಪತಿಗಳ ಬಳಿಗೆ ಬಂದು ಮನೆಯೊಡತಿಯ ಬಳಿ ನಿಂತು ಅವಳನ್ನು ತಟ್ಟಿ ಎಬ್ಬಿಸಿದರು. ಕಣ್ತೆರೆದರೆ ಸುತ್ತ ದೊಣ್ಣೆಯೆತ್ತಿ ನಿಂತ ಆರು ಮಂದಿ ಢಕಾಯಿತರು! ಮಂಗಳಸೂತ್ರ ಸಹಿತ ಅವಳ ಮೈ ಮೇಲಿದ್ದ ಚಿನ್ನ, ಮನೆಯಲ್ಲಿದ್ದ ಇತರ ಚಿನ್ನ, ಬೆಳ್ಳಿಯೆಲ್ಲ ಅವರ ವಶವಾದವು. ಹಿಂದಿನ ದಿನವಷ್ಟೇ ಮಿತ್ರರ ಮದುವೆಗೆಂದು ಲಾಕರ್ ಚಿನ್ನ ಮನೆಗೆ ಬಂದಿತ್ತು. ಬೆಳ್ಳಿ ಸಾಮಾನುಗಳನ್ನಿರಿಸಿದ ರ್ಯಾಕ್, ಹಿಂದಿನ ದಿನ ಆಕಸ್ಮಿಕವಾಗಿ ಬಿದ್ದು ಹೋಗಿ, ಅದರಲ್ಲಿದ್ದ ಬೆಳ್ಳಿ ಪಾತ್ರೆ, ದೀಪ, ತಟ್ಟೆ, ಲೋಟ, ಬಟ್ಟಲುಗಳೆಲ್ಲವನ್ನು ದೊಡ್ಡ ಬ್ಯಾಗ್ ಒಂದರಲ್ಲಿ ತುಂಬಿಸಿಟ್ಟುದು ಕೈಯೆತ್ತಿ ಈಗ ಅವರಿಗೆ ಕೊಟ್ಟಂತಾಯ್ತು. ಬಳಿಕ ಗಂಡನನ್ನು ಎಬ್ಬಿಸಿದರೆ, ದೊಣ್ಣೆ ಹಿಡಿದ ಧಡಿಯರನ್ನು ನೋಡಿ, ದಯವಿಟ್ಟು ತಲೆಗೆ ಹೊಡೆಯಬೇಡಿ; ಬ್ರೇನ್ ಸರ್ಜರಿಯಿಂದ ಎದ್ದಿದ್ದೇನಷ್ಟೇ ಎಂದಾಗ, “ಇಲ್ಲ, ಹೇಳಿದಂತೆ ಕೇಳಿದರೆ ಚೂರೂ ನೋವು ಮಾಡುವುದಿಲ್ಲ,” ಎಂಬ ಉತ್ತರಆರು ಮಂದಿಯಲ್ಲಿ ಒಬ್ಬ ಮಾತ್ರ ಮಾತನಾಡುತ್ತಿದ್ದು, ಮೆಲುದನಿಯಲ್ಲಿ ಹಿಂದಿಯಲ್ಲಿ ಮಾತನಾಡುತ್ತಿದ್ದ. ಪಕ್ಕದ ಕೋಣೆಯಲ್ಲಿದ್ದ ಮಗನನ್ನೂ ಎಬ್ಬಿಸಿ, ಉಂಗುರ, ವಾಚ್, ಚಿನ್ನದ ಸರ, ಎಲ್ಲರ ಮೊಬೈಲ್, ಫ್ಯಾಕ್ಟರಿಯಲ್ಲಿ ಸಂಬಳ ಬಟವಾಡೆಗೆಂದು ತಂದಿರಿಸಿದ್ದ ಹಣ ಎಲ್ಲವನ್ನೂ ವಶಪಡಿಸಿಕೊಂಡರು. ಕೆಳಗೆ ಅತ್ತೆಯ ಬಾಗಿಲು ತೆರೆಸಲು ಮಗನನ್ನೇ ಕರೆದೊಯ್ದು, ಅವರ ಸರ, ಬಳೆಗಳನ್ನೂ ಪಡೆದು, ಕಿವಿಯ ಆಭರಣಕ್ಕೆ ಇರಲಿ, ಬಿಡಿ, ಎಂದು ರಿಯಾಯ್ತಿ ತೋರಿದರು. ದೇವರ ಕೋಣೆಯಲ್ಲಿದ್ದ ಬೆಳ್ಳಿಯ ದೊಡ್ಡ ನೀಲಾಂಜನಗಳನ್ನಾಗಲೀ, ಇತರ ಬೆಳ್ಳಿಯ ಪರಿಕರಗಳನ್ನಾಗಲೀ ಮುಟ್ಟಲೇ ಹೋಗಲಿಲ್ಲ. ಮತ್ತೆ  ಪೊಲೀಸರಿಗೆ ವರದಿ ಮಾಡಿದರೆ ಜೀವಕ್ಕೆರವಾದಂತೆ ಎಂದು ಎಚ್ಚರಿಸಿ ಪುನಃ ಎಲ್ಲರನ್ನೂ ಕಟ್ಟಿ ಒರಗಿಸಿ, ಕುಡಿಯಲು ನೀರು ಬೇಕೇ ಎಂದು ಕೇಳಿ, ಕುಡಿಸಿ ಹೊರಟುಹೋದ ದಯಾಮಯ ಢಕಾಯಿತರು!

ಮನೆಯವರ ಕಾರಿನಲ್ಲೇ ಕೊಳ್ಳೆ ಹೊಡೆದುದೆಲ್ಲವನ್ನೂ ಹೇರಿಕೊಂಡು ಹೋದ ಢಕಾಯಿತರು, ಚುನಾವಣಾ ನಿಮಿತ್ತ ಪೊಲೀಸ್ ಪೆಟ್ರೋಲಿಂಗ್ ನಡೆದಿದ್ದರಿಂದ ದಾರಿಯಲ್ಲಿ ಕಾರನ್ನು ತ್ಯಜಿಸಿ, ತಮ್ಮದಾಗಿಸಿಕೊಂಡ ನಿಧಿಯೊಡನೆ ಪಲಾಯನಗೈದರುಎರಡು ವರ್ಷಗಳ ಬಳಿಕ, ಕದ್ದೊಯ್ದ ಮೊಬೈಲೊಂದು ಬಿಟ್ಟುಕೊಟ್ಟ ಸುಳಿವಿನಿಂದ ಢಕಾಯಿತರ ಪತ್ತೆಯಾಗಿ, ಹೆಚ್ಚಿನೆಲ್ಲ ಚಿನ್ನ ಕರಗಿಸಲ್ಪಟ್ಟ ಕಾರಣ, ಕಾಲಂಶಕ್ಕೂ ಕಡಿಮೆ ಹಣವಷ್ಟೇ ಮರಳಿಸಲ್ಪಟ್ಟಿತು. ಇಂತಹ ಢಕಾಯಿತ ಪಡೆಯನ್ನೇ ಕಂಡೂ, ಸಾಕಷ್ಟು ಕಳೆದುಕೊಂಡೂ ಮನೆಯವರಾರೂ ಭಯ, ಭೀತಿಯ ಆಘಾತಕ್ಕೆ ಸಿಲುಕದ್ದು ನಿಜಕ್ಕೂ ಆಶ್ಚರ್ಯ! ಅದರಲ್ಲೂ ಕಳ್ಳರಿಗೆ ಹೆದರಿ ಸದಾ ಕಿಟಿಕಿ ಬಾಗಿಲುಗಳೆಲ್ಲವನ್ನೂ ಮುಚ್ಚಿ ಮಲಗುತ್ತಿದ್ದ ನಮ್ಮ ದೇವಕಿ ಅತ್ತೆಯೂ ಹೆಚ್ಚೇನೂ ಆತಂಕಿತರಾಗದೆ ಇದ್ದುದು ನಮಗೆಲ್ಲ ಪರಮಾಶ್ಚರ್ಯವಾಗಿತ್ತು!

ಮತ್ತೆ ಮನೆ ಕಾಯಲೆಂದು ರಾಟ್ವೀಲರ್ ತಳಿಯ ನಾಯಿಮರಿ – ರಿಚಿ, ಮನೆ ಸೇರಿತು. ಅಮೆರಿಕಾ, ಇಂಗ್ಲೆಂಡ್ಗಳಲ್ಲಿ ನಿಷಿದ್ಧವಾದ ಭಯಾನಕ ತಳಿಯ ನಾಯಿಯ ಕಾಯುವಿಕೆ ಮಾತ್ರವಲ್ಲ, ಬರ್ಗ್ಲರ್ ಅಲಾರ್ಮ್ ಕೂಡಾ ಸ್ಥಾಪಿತವಾಯ್ತು. ದೇವಕಿ ಅತ್ತೆಯ ಆರೋಗ್ಯ ಮತ್ತೂ ಕ್ಷೀಣಿಸುತ್ತಾ ಬಂದಿತು. ನೀಳ ಕಾಯದ, ನೆಟ್ಟನೆ ನಿಲುವಿನ, ಮುತ್ತಿನಂತಹ ಮೈ ಬಣ್ಣದ ದೇವಕಿ ಅತ್ತೆ, ಮೋಟರ್ ಆಕ್ಸನ್ ಡೀಜೆನರೇಶನ್ ತೊಂದರೆಯಿಂದ ಕ್ಷೀಣಿಸುತ್ತಾ ಸಾಗಿ ನಾಲಗೆಯ ಶಕ್ತಿ ಕಳಕೊಂಡರು. ಊರಿಗೆ ಬಂದರೆ ಮಾವು, ಹಲಸು, ಗೇರು ಹಣ್ಣು ಎಂದು ಸಂಭ್ರಮಿಸುತ್ತಿದ್ದ, ಪಾಯಸ, ಹಾಲುಬಾಯಿ, ನೈಯಪ್ಪ, ಪತ್ರಡೆ ಎಂದು ಉತ್ಸಾಹದಿಂದ ಅಡಿಗೆಗೆ ತೊಡಗುತ್ತಿದ್ದ, ಪಾತ್ರೆ ಪಡಗಗಳನ್ನು ಸದಾ ತೊಳೆದು, ಒರೆಸಿ ಒಪ್ಪವಾಗಿ ಸ್ವಸ್ಥಾನಗಳಲ್ಲಿ ಇರಿಸುತ್ತಾ ಅಡಿಗೆಮನೆಯನ್ನು ಲಕ ಲಕ ಹೊಳೆಯಿಸುತ್ತಿದ್ದ ಉತ್ಸಾಹಿ ದೇವಕಿ ಅತ್ತೆ! ಒಮ್ಮೆ ಅವರು ಊರಿಗೆ ಬಂದಿದ್ದಾಗ, ಜೊತೆಯಾಗಿ  ಹೊರಗೆ ಹೋದವರು ಹಿಂದಿರುಗುವಾಗ ಬಾಲ್ಯದ ದಿನಗಳ ನೆನಪಿಗೆ ಗುಡ್ಡೆಮನೆ ಗದ್ದೆ ಹಾದು ಬರುವ ಯತ್ನದಲ್ಲಿ, ಗದ್ದೆಯಲ್ಲಿ ಕಂಡ ನರ್ತೆಗಳನ್ನು ಸಂಭ್ರಮದಿಂದ ಹೆಕ್ಕಿ ತಂದು ತೊಳೆದು, ಬಸಳೆ ಪದಾರ್ಥಕ್ಕೆ ಹಾಕಿ, ಮತ್ತೆ ತಿನ್ನಲಾಗದೆ ಪೆಚ್ಚಾದುದು ನೆನಪಾಗುತ್ತದೆ. ಅತ್ತೆಯೋ, ಹದಿಮೂರು ವರ್ಷಕ್ಕೇ ಮದುವೆಯಾಗಿ ಮುಂಬೈಗೆ ಹೋದವರು! ನಾನೋ, ಅಜ್ಜಿ, ಅತ್ತೆ, ದೊಡ್ಡಮ್ಮ, ಚಿಕ್ಕಮ್ಮ ಎಲ್ಲರೂ ಇದ್ದ ಮನೆಯಲ್ಲಿ ಅಟ್ಟುದನ್ನು ಉಂಡು ಸವಿದವಳು! ನರ್ತೆಗಳನ್ನು ದಿನವಿಡೀ ನೀರಲ್ಲಿ ಮುಳುಗಿಸಿಟ್ಟು ಮರುದಿನ ಅಡುಗೆಗೆ ಬಳಸಬೇಕೆಂಬುದು ನಮಗೆ ತಿಳಿದಿರಲೇ ಇಲ್ಲ!
        
ಕ್ಷೀಣಿಸುತ್ತಾ ಬಂದ ದೇವಕಿ ಅತ್ತೆ, ೨೦೧೦ ಮಾರ್ಚ್ ೨೬ ರಂದು ಇಹವನ್ನಗಲಿದರುಮನೆಯ ಸುತ್ತಲೂ ಸೊಂಪಾಗಿ ಕಂಗೊಳಿಸುತ್ತಿದ್ದ ಹೂದೋಟದ ಮಲ್ಲಿಗೆ, ದುಡ್ಡುಮಲ್ಲಿಗೆ, ಇರುವಂತಿಗೆ, ಅಬ್ಬಲಿಗೆಗಳ ಮಾರುದ್ದದ ಮಾಲೆಗಳನ್ನು ನೇಯ್ದು, ವಿಧ ವಿಧ ಬಣ್ಣದ ದಾಸವಾಳ, ಗುಲಾಬಿ, ಸೇವಂತಿಗೆ ಹೂಗಳ್ನು ಕೊಯ್ದು ಭವ್ಯ ದೇವರ ಕೋಣೆಯ ದೇವರುಗಳ ಅಲಂಕಾರಕ್ಕೆ ಸಿದ್ಧವಾಗಿಡುತ್ತಿದ್ದ ಅತ್ತೆ! ಸೊಂಪಾದ ಕಾಯ ದಿನ ಕಳೆದ ಹೂಗಳಂತೇ ಒಣಗಿ ಹೋಗಿತ್ತು.! ಜೀವನಯಾತ್ರೆ ಮುಗಿಸಿ ಚಿರವಿಶ್ರಾಂತಿಗೆ ಸಂದಿತ್ತು.
        
ಚೇತೋಹಾರಿಯಾದ ವಿಶಾಲ ಹೂತೋಟದ, ಮೃಷ್ಟಾನ್ನದಡುಗೆಗಳು ಸದಾ ಊಟದ ದುಂಡುಮೇಜನ್ನು ಸಿಂಗರಿಸುತ್ತಿದ್ದ, ನೆಂಟರಿಷ್ಟರು ಬಂದು ಹೋಗುತ್ತಿದ್ದ ಚೊಕ್ಕ ಚೆಲುವಾದ ಮನೆ, ಕ್ರಿಸೆಂಟ್! ಜೀವನಯಾನದಲ್ಲಿ ಸಂಬಂಧಗಳ ಪ್ರೀತಿಬಂಧ ಎಲ್ಲಿಯ ವರೆಗೆ?

(ಮುಂದುವರಿಯಲಿದೆ)


No comments:

Post a Comment