20 February 2017

ಗಾಳಿ ಬೀಸಿದತ್ತ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ
ಅಧ್ಯಾಯ - ೨೬


ತಮ್ಮ ಕೃತಿಯಲ್ಲಿ ಹೈದರಾಬಾದ್ ಸಾಂಸ್ಕೃತಿಕ ಪೆಂಪಿನೊಡನೆ ದಾಂಡೇಲಿಯ ಪ್ರಾಕೃತಿಕ ಕಂಪನ್ನು ಮಿಳಿತವಾಗಿಸಿ ಸುಂದರ ದೃಶ್ಯಕಾವ್ಯವನ್ನು ಹೆಣೆದವರು, ರಫಿಯಾ ಅವರು. ಮಂಜೂರುಲ್ ಅಮೀನರು ಧಾರಾವಾಡ ಆಕಾಶವಾಣಿಯ ನಿರ್ದೇಶಕರಾಗಿದ್ದ ಐದು ವರ್ಷಗಳ ಕಾಲ, ಅಲ್ಲಿ ನೆಲೆ ನಿಂತು ಕನ್ನಡ ನೆಲ, ಜನರ ಬಗ್ಗೆ ಪ್ರೀತಿ ಬೆಳೆಸಿಕೊಂಡವರು. "ಆಲಂಪನಾ ' ಕನ್ನಡ ಅನುವಾದ ಬೆಳಕು ಕಂಡ ಕೆಲದಿನಗಳಲ್ಲಿ, ರಫಿಯಾ ಹಾಗೂ ಮಂಜೂರುಲ್ ಅಮೀನ್ ಅವರು ಮುಂಬೈಗೆ ಬರುತ್ತಿರುವುದಾಗಿಯೂ ನನ್ನನ್ನು ಕಾಣಲು ಇಚ್ಛಿಸುವುದಾಗಿಯೂ ಪತ್ರ ಬರೆದರು. ಅಂತೆಯೇ `ಫರ್ಮಾನ್’ ಹಿಂದೀ ಧಾರಾವಾಹಿಯ  ನಿರ್ಮಾತೃ ಗುಲ್ ಆನಂದ್ ಅವರ ಪೆಡ್ಡರ್ ರೋಡ್ ಪ್ರತಿಷ್ಠಿತ ಬಡಾವಣೆಯ ಮನೆಯಲ್ಲಿ ಅವರನ್ನು ಕಾಣಲು ತುಷಾರ್ನೊಡನೆ ನಾನು ಹೋದೆ. ಅತ್ಯಂತ ಸ್ಮರಣೀಯ ಭೇಟಿಯದು. ಪ್ರೀತಿ ತುಂಬಿದ ಸೌಮ್ಯ ನಡೆನುಡಿಯ ಶ್ರೇಷ್ಠರು ತೋರಿದ ಆತ್ಮೀಯತೆಯನ್ನು, ತುಷಾರ್ ಮೇಲೆ ಸುರಿಸಿದ ವಾತ್ಸಲ್ಯವನ್ನು ಎಂದೂ ಮರೆವಂತಿಲ್ಲ. ಮುಂದೇನು ಮಾಡುವ ಇರಾದೆ ಎಂದು ಅವರು ಕೇಳಿದಾಗ ನಾನು ಬಹುವಾಗಿ ಮೆಚ್ಚಿದ  `ಗಾನ್ ವಿದ್ ವಿಂಡ್’ ಕೃತಿಯನ್ನು ಕನ್ನಡಕ್ಕೆ ತರಬೇಕೆಂದಿದ್ದೇನೆ ಎಂದು ನಾನಂದೆ. ಬಹಳ ಸಂತೋಷಪಟ್ಟ ರಫಿಯಾ ಖಂಡಿತ ಮಾಡುವಂತೆ ತಿಳಿಸಿ ಶುಭ ಹಾರೈಸಿದರು.


ರಫಿಯಾರ ಪ್ರೋತ್ಸಾಹದ ಮಾತು, ನನ್ನನ್ನು ಎಷ್ಟು ಹುರಿದುಂಬಿಸಿತೆಂದರೆ, ಮನೆಗೆ ಹಿಂದಿರುಗಿದವಳೇ, ತಕ್ಷಣ ನನ್ನ ಪ್ರಿಯ `ಗಾನ್ ವಿದ್ ವಿಂಡ್’ ಕೈಗೆತ್ತಿಕೊಂಡೆ. ಕೃತಿಯಲ್ಲಿ ಮೆಲನಿಯು, ಯುದ್ಧನಿಧಿಗೆ ತನ್ನ ಹೃದಯವನ್ನೇ ಕಿತ್ತುಕೊಟ್ಟಂತೆ ದಾನವಾಗಿತ್ತ ತನ್ನ ವಿವಾಹದುಂಗುರವನ್ನು, ಅವಳಿಗೆ ಮರಳಿಸುತ್ತಾ, ಕಥಾ ನಾಯಕ ರೆಟ್ ಬಟ್ಲರ್ ಆಡುವ ಆ ಚಿನ್ನದಂಥಾ ಮಾತುಗಳನ್ನು ಮೊದಲಿಗೆ ನನ್ನ ಕನ್ನಡ ನುಡಿಗಿಳಿಸಿ ನೋಡಿದೆ..... " ಸಂಘಟನೆಗೆ ತನ್ನ ಪುರುಷರ ಜೀವರಕ್ತದ ಅಗತ್ಯ ಖಂಡಿತವಾಗಿಯೂ ಇರಬಹುದು; ಆದರೆ ಅದಿನ್ನೂ ತನ್ನ ಸ್ತ್ರೀಯರ ಹೃದಯದ ರಕ್ತವನ್ನು ಖಂಡಿತವಾಗಿಯೂ ಬಯಸಿಲ್ಲ. ಪ್ರಿಯ ಮ್ಯಾಡಮ್, ತಮ್ಮ ಧೈರ್ಯಕ್ಕೆ ನನ್ನ ಗೌರವಸೂಚಕವೆಂದು ಇದನ್ನು ಸ್ವೀಕರಿಸಿ; ಹಾಗೂ ನಿಮ್ಮ ತ್ಯಾಗವು ವ್ಯರ್ಥವೆಂದು ನೊಂದುಕೊಳ್ಳದಿರಿ. ಉಂಗುರದ ಹತ್ತು ಪಟ್ಟು ಬೆಲೆಯನ್ನು ಸಲ್ಲಿಸಲಾಗಿದೆ  - ಕ್ಯಾಪ್ಟನ್ ರೆಟ್ ಬಟ್ಲರ್ .".... ಮತ್ತೆ ಯುದ್ಧಗಳ ಬಗ್ಗೆ ರೆಟ್ ಬಟ್ಲರ್ ಆಡುವ, ಸಾರ್ವಕಾಲಿಕ ಸತ್ಯದ ಮಾತನ್ನೂ ನನ್ನ ಕನ್ನಡ ನುಡಿಗಿಳಿಸಿದೆ – “ಕಾದುವವರ ಪಾಲಿಗೆ ಎಲ್ಲ ಯುದ್ಧಗಳೂ ಪವಿತ್ರವೇ! ಯುದ್ಧಗಳನ್ನು ಆರಂಭಿಸುವವರು ಅವನ್ನು ಪವಿತ್ರವಾಗಿಸದಿದ್ದಲ್ಲಿ, ಹೋರಾಡುವ ಮೂರ್ಖತನ ತೋರುವವರಾರು?"  ...... ಇಷ್ಟಾದ ಮೇಲೆ ಮತ್ತೆ ಸುಮ್ಮನೆ ಇರಲಾಗಲಿಲ್ಲ. ನನ್ನ ಮನದಲ್ಲಿ ಅಚ್ಚಳಿಯದ ಶಬ್ದಚಿತ್ರವಾಗಿ ಮೂಡಿನಿಂತ ಮಹತ್ಕೃತಿಯ ಸಂಪೂರ್ಣ ಅನುವಾದಕ್ಕೆ ತೊಡಗಿದೆ. ಕಥಾ ನಾಯಕಿ ಸ್ಕಾರ್ಲೆಟ್ ಒಹಾರಾ - ಅಮಿತ ಜೀವನೋತ್ಸಾಹದ, ಬಯಸಿದ್ದನ್ನು ಪಡೆದೇ ತೀರುವ ಛಲದ, ಇಚ್ಛೆ ಹಾಗೂ ಪ್ರಾಪ್ತಿ ಎರಡು ಭಿನ್ನ ವಿಷಯಗಳೆಂಬುದನ್ನೇ ಅರಿಯದ, ಹದಿಹರೆಯದ ಮೋಹಕ ಚೆಲುವೆಯ ರಮ್ಯಲೋಕ ಯುದ್ಧದ ಕಾವಿಗೆ ಕರಗಿ ಕುಸಿದಾಗ, ಬೂದಿಯಿಂದೆದ್ದು ಬಂದು ಇನ್ನಿಲ್ಲದ ಸ್ಥೈರ್ಯ, ಛಲದೊಂದಿಗೆ ಪುನಃ ತನ್ನ ಮನೆ, ಭೂಮಿಯನ್ನು ಎತ್ತಿ ನಿಲಿಸುವ ಸ್ಕಾರ್ಲೆಟ್ ಯಶೋಗಾಥೆಯೊಂದಿಗೆ, ಅವಳು ಕಳಕೊಳ್ಳುವ ಜೀವನಮೌಲ್ಯಗಳ ದುರಂತಕಥೆಯನ್ನು ನನ್ನ ಚೆಲುಗನ್ನಡ ನುಡಿಗಿಳಿಸುವ ಸಂತಸ ನನ್ನದಾಯ್ತು. ಸ್ಕಾರ್ಲೆಟ್ಳಂತೇ ರಮ್ಯಾದ್ಭುತ ಪ್ರಚಂಡ ವ್ಯಕ್ತಿತ್ವದ, ಅತ್ಯಾಕರ್ಷಕ ಮಾತುಗಳ ರೆಟ್ ಬಟ್ಲರ್, ಸೌಮ್ಯ ಸೌಜನ್ಯದ ಆಂತರ್ಯದಲ್ಲಿ ಧೈರ್ಯ, ಸ್ಥೈರ್ಯ ಮೈಗೂಡಿಸಿಕೊಂಡ ಮೆಲನಿ, ಸಾಹಿತ್ಯ, ಕನಸುಗಳಲ್ಲೇ ಕಳೆದುಹೋಗಿ ಪೂರ್ವೇತಿಹಾಸದಿಂದ ಹೊರಬರಲಾರದ ಆಶ್ಲೀ, ಶಿಸ್ತು, ಸೇವೆಯೇ ಉಸಿರಾದ ತಾಯಿ ಎಲೆನ್, ಐರಿಶ್ ಜನರ ಭೂಮಿಪ್ರೇಮವನ್ನೇ ಹೊತ್ತು ಬಂದ ತಂದೆ ಜೆರಾಲ್ಡ್ ಒಹಾರಾ, ಒಹಾರಾ ಮನೆತನಕ್ಕೆ ತಮ್ಮನ್ನೇ ತೆತ್ತುಕೊಂಡ ಶಿಸ್ತು, ನಿಷ್ಠೆಯ ಪ್ರತಿರೂಪಗಳಾದ ಮ್ಯಾಮಿ, ಪೋರ್ಕ್, ಜೀವನೋತ್ಸಾಹದಿಂದ ಪುಟಿವ ಟಾರ್ಲ್ಟನ್ ಅವಳಿಗಳು, ಆಂಟ್ ಪಿಟಿ, ಡಾ.ಮೀಡ್, ಮೆರಿವೆದರ್ ದಂಪತಿಗಳು, ಬೆಲೆವೆಣ್ಣು ಬೆಲ್ - ಇಂತಹ ಮರೆಯಲಾರದ ಪಾತ್ರಗಳನ್ನು, ಯುದ್ಧಕಾಲದ ವರ್ಣನೆ, ಅಂದಿನ ಮೌಲಿಕ, ಸಂಸ್ಕಾರಪೂರ್ಣ ಸಮಾಜದ ಪತನ ಹಾಗೂ ಪುನರುಜ್ಜೀವನದ ಅಮೋಘ  ಚಿತ್ರಣವನ್ನು ನನ್ನ ಕನ್ನಡ ಓದುಗರ ಕೈಗಿತ್ತು ನಾನು ಧನ್ಯಳಾದೆ.
`ಗಾನ್ ವಿದ್ ವಿಂಡ್’ ಅನುವಾದಕ್ಕೆ ನಾನು ತೊಡಗಿದ ಕಾಲದಲ್ಲಿ ಟಿ.ವಿ.ಯಲ್ಲಿ ಇಂದಿನಂತೆ ಹಲವು ಚಾನಲ್ಗಳ ಹಾವಳಿಯಿರಲಿಲ್ಲ. ಇಂಟರ್ನೆಟ್ ಅಂಟೂ ಇರಲಿಲ್ಲ. ದೂರದರ್ಶನದ ಒಂದೆರಡು ಕಾರ್ಯಕ್ರಮಗಳನ್ನು ನೋಡುವ ಜೊತೆಗೇ ನನ್ನ ಬರಹವೂ ನಡೆಯುತ್ತಿತ್ತು. ಮನೆಯ ಕೆಲಸ, ಬೊಗಸೆ, ಅಡುಗೆಯನ್ನೂ ನಿಭಾಯಿಸಿದಂತೆ ರಾತ್ರಿಯಲ್ಲೂ ಬರವಣಿಗೆ ನಡೆಯಿತು. ಬರೆದ ಅಧ್ಯಾಯಗಳನ್ನು ಒಂದೊಂದಾಗಿಯೇ ನನ್ನ ತಂದೆಯವರಿಗೆ ಕಳುಹಿ ಕೊಡುತ್ತಿದ್ದೆ. ಉಬ್ಬಸದ ತೀವ್ರ ಬಾಧೆಯಲ್ಲೂ ಅವರು ಓದಿ ಮೆಚ್ಚುತ್ತಿದ್ದರು. ಅನುವಾದ ನಡೆಯುತ್ತಿದ್ದ ದಿನಗಳಲ್ಲಿ ನಮ್ಮಲ್ಲಿಗೆ ಭೇಟಿಯಿತ್ತಿದ್ದ ಅಮೃತ ಸೋಮೇಶ್ವರರು, .ರಾ.ಅವರು, ಕೆಲ ಪುಟಗಳನ್ನೋದಿ ಮೆಚ್ಚಿಕೊಂಡಿದ್ದರು. ವರ್ಷದೊಳಗೆ ಅನುವಾದ ಪೂರ್ಣಗೊಂಡಿತು. ಕೊನೆಯ ಕಂತನ್ನು ಓದಿ ಮುಗಿಸಿದ ತಂದೆಯವರು, " ಬೇಬೀ, ನಿನ್ನ ಅನುವಾದ ತುಂಬ ಚೆನ್ನಾಗಿದೆ. ಆದರೆ ಇಷ್ಟು ದೊಡ್ಡ ಕೃತಿಗೆ ಪ್ರಕಾಶಕರು ಸಿಗಬಹುದೇ?" ಎಂದು ಬರೆದಿದ್ದರು. ಅವರ ಸಂಶಯ ನಿವಾರಣೆಯಾಗುವಂತೆ ಕೊನೆಗೂ ಪ್ರಕಾಶಕರು ದೊರೆತು, ಕೃತಿ ಪ್ರಕಟವಾಗಿ ಎಲ್ಲ ಗೌರವಕ್ಕೂ ಪಾತ್ರವಾದುದನ್ನು ಕಾಣಲು ಮಾತ್ರ ನನ್ನ ತಂದೆಯವರಿರಲಿಲ್ಲ. ಅವರ ಕೈಯಲ್ಲಿ ಪುಸ್ತಕವನ್ನಿಡುವ ಭಾಗ್ಯ ನನಗೆ ದೊರಕಲಿಲ್ಲ.
          
`ಗಾನ್ ವಿದ್ ವಿಂಡ್’ನ ೧೦೧೨ ಪುಟಗಳ ಹಸ್ತಪ್ರತಿ ಸುಧಾ, ತರಂಗ ಪತ್ರಿಕಾಲಯಗಳನ್ನು ಸಂದರ್ಶಿಸಿ, "ನಿಮ್ಮ ಅನುವಾದ ತುಂಬ ಚೆನ್ನಾಗಿದೆ; ಆದರೆ ನಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ತುಂಬ ದೀರ್ಘವಾಗಿದೆ, ಕ್ಷಮಿಸಿ", ಎಂಬ ಒಕ್ಕಣೆಯೊಂದಿಗೆ ಹಿಂದಿರುಗಿಸಲ್ಪಟ್ಟಿತು.

ಅನುವಾದಕ್ಕೆ ಆರಂಭಿಸಿದಂದಿನಿಂದ ಮೂಲಕೃತಿಯ ಹಕ್ಕುದಾರರನ್ನು ಅನುಮತಿಗಾಗಿ ಸಂಪರ್ಕಿಸಲು ಅರಸುವ ಕಾಯಕ ಬಿಡುವಿರದೆ ನಡೆಯಿತು. ಸೈಮನ್ ಆಂಡ್ ಶೂಸ್ಟರ್, ಮಾಕ್ಮಿಲನ್ ಪಬ್ಲಿಷರ್ಸ್ನಿಂದ ತೊಡಗಿ, ಅಮೆರಿಕಾ, ಇಂಗ್ಲೆಂಡ್ ಹಲವು ಪ್ರಕಾಶಕರನ್ನು ಸಂಪರ್ಕಿಸುವಂತಾಯ್ತು. ಸಂದುಹೋದ ವರ್ಷಗಳಲ್ಲಿ ಮೂಲಕೃತಿಯ ಹಕ್ಕು ಕೈಯಿಂದ ಕೈಗೆ ಬದಲಾಗಿತ್ತು. ಪ್ರತಿಯೊಂದು ಕಡೆಯಿಂದಲೂ ಬೇರೊಂದು ಹೆಸರು, ವಿಳಾಸ ಸೂಚಿಸಿ, ಅವರನ್ನು ಸಂಪರ್ಕಿಸುವಂತೆ ತಿಳಿಸಿ ಪತ್ರ ಬರುತ್ತಿತ್ತು. ಭಾರತ - ಅಮೆರಿಕಾ ನಡುವೆ, ಪ್ರಕಾಶನ ಸಂಸ್ಥೆ, ಇಂಡಿಯನ್ ಎಂಬೆಸಿ, ಅಮೆರಿಕನ್ ಎಂಬೆಸಿ ನಡುವೆ, ಅಮೆರಿಕನ್ ಕಾಪಿರೈಟ್ ಅಸೋಸಿಯೇಶನ್ಗೆ - ಹೀಗೆ ಹಲವು ಪತ್ರಗಳು, ಫ್ಯಾಕ್ಸ್ಗಳು ಓಡಿಯಾಡಿದುವು. ನಡೆದ ಹಲವಾರು ಫ್ಯಾಕ್ಸ್ ವ್ಯವಹಾರಗಳಲ್ಲಿ ಸರಿಯಾದ ವಿಳಾಸ ಹೊತ್ತು ಬಂದ ಫ್ಯಾಕ್ಸ್ ಒಂದು ನಡುವೆ ಎಲ್ಲೋ ಕೈತಪ್ಪಿ ಹೋದುದರಿಂದ ಅರಸುವಿಕೆ ದೀರ್ಘವಾಗಿ ನಿರಾಶೆ ಕವಿದಾಗ, ಕೊನೆಯ ಯತ್ನವೆಂದು ಅಮೆರಿಕಾದ ಅಂದಿನ ಪ್ರಥಮ ಮಹಿಳೆ ಹಿಲರಿ ಕ್ಲಿಂಟನ್ಗೆ ಪತ್ರ ಬರೆದು ಸಹಾಯ ಕೋರಿದೆ. ನನಗೆ ಅಚ್ಚರಿಯಾಗುವಂತೆ ಹಸ್ತಲಿಖಿತ ಪತ್ರವನ್ನೋದಿದ ಅಮೆರಿಕಾದ ಪ್ರಥಮ ಮಹಿಳೆಯ ಕಛೇರಿಯಿಂದ " ಅಮೆರಿಕಾದ ಹೆಮ್ಮೆಯ ಆಸ್ತಿಯಾದ " ಕೃತಿಯ ಹಕ್ಕುದಾರರ ವಿಳಾಸವನ್ನು ಹೊತ್ತ ಪತ್ರ ಬಂದು ಕೈ ಸೇರಿತು. ಇಷ್ಟಾಗುವಾಗ ಅನುವಾದ ಸಿದ್ಧವಾಗಿ ಹತ್ತು ವರ್ಷಗಳಾಗುತ್ತಾ ಬಂದಿದ್ದುವು. ಅದುವರೆಗಿನ ಪತ್ರ, ಫ್ಯಾಕ್ಸ್ ವ್ಯವಹಾರಗಳಲ್ಲಿ ವಿಳಾಸಗಳನ್ನರಸುವಲ್ಲಿ ನನಗೆ ಬೆಂಬಲವಾಗಿ ನಿಂತವನು, ನನ್ನ ತುಷಾರ್ಕೃತಿ ಪ್ರಕಟಣೆಗಾಗಿ ನಾನು ಪಟ್ಟ ಪಾಡನ್ನು ಕಣ್ಣಾರೆ ಕಂಡಿದ್ದ ಆತ್ಮೀಯರಾದ ಕೆ.ಟಿ.ಗಟ್ಟಿಯವರು, "ನಿಮ್ಮ ಕೃತಿಯ ಮಹಾಗಾತ್ರವೊಂದೇ ಸಮಸ್ಯೆ; ಇರಲಿ; ಹಸ್ತಪ್ರತಿಯನ್ನು ನನಗೆ ಕಳುಹಿ ಕೊಡಿ", ಎಂದು ತರಿಸಿಕೊಂಡಿದ್ದರು. ಅಷ್ಟರಲ್ಲಿ, ಹತ್ತು ವರ್ಷಗಳ ಪರಿಶ್ರಮವೆಲ್ಲ ಪರಿಹಾರವಾಗುವಂತೆ, ಮೂಲ ಲೇಖಕಿಯ ನಿಧನವಾಗಿ ಐವತ್ತು ವರ್ಷಗಳು ಕಳೆದ ಮೇಲೆ ಕೃತಿಸ್ವಾಮ್ಯದ ಪ್ರಶ್ನೆಯಿಲ್ಲ, ಎಂದಾಗಿ ಬೆಳಕಿನ ದಾರಿ ತೋರಿತು. ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ ಅವರೊಡನೆ ಮಾತಾಡಿ, ನನ್ನಾ ಮಹಾಗಾತ್ರದ ಹಸ್ತಪ್ರತಿಯನ್ನು ಅವರಿಗೆ ತಲುಪಿಸಿ, ಪ್ರಕಟಣೆಗೊಪ್ಪಿಸಿ, ಕೃತಿ ಬೆಳಕು ಕಾಣುವಂತೆ ಮಾಡಿದವರು, ಸಾಹಿತಿ ಕೆ.ಟಿ.ಗಟ್ಟಿ ಅವರು. ಪರಮಾಪ್ತರ ಬಗ್ಗೆ ಏನು ತಾನೇ ಹೇಳಲಿ?

`ಗಾನ್ ವಿದ್ ವಿಂಡ್’ನ ನನ್ನನುವಾದ ಪೂರ್ಣಗೊಂಡ ಸ್ವಲ್ಪ ಸಮಯದಲ್ಲೇ ಅರುಂಧತಿ ರಾಯ್ ಅವರ ಬುಕರ್ ಪ್ರಶಸ್ತಿ ವಿಜೇತ ಕೃತಿ, ` ಗಾಡ್ ಆಫ್ ಸ್ಮಾಲ್ ಥಿಂಗ್ಸ್ಪ್ರಕಟವಾಗಿ ಕೀರ್ತಿ, ಪ್ರತಿಷ್ಠೆಯ ಉತ್ತುಂಗಕ್ಕೇರಿತು. ಪುಸ್ತಕ ಕೊಂಡು ಓದಿ ಹೊಸಬಗೆಯ ಕಥಾನಕಕ್ಕೆ ಮಾರುಹೋದ ನಾನು, ಅದನ್ನೂ ನನ್ನ ಕನ್ನಡನುಡಿಗಿಳಿಸುವ ಆಶಯದಿಂದ ಕಾರ್ಯಪ್ರವೃತ್ತಳಾದೆ. ನನ್ನ `ಗಾನ್ ವಿದ್ ವಿಂಡ್’ನ ಹಸ್ತಪ್ರತಿಯ ಕೆಲ ಅಧ್ಯಾಯಗಳನ್ನೋದಿ ತುಂಬ ಮೆಚ್ಚಿದ್ದ ಆತ್ಮೀಯರಾದ ವ್ಯಾಸರಾಯ ಬಲ್ಲಾಳರು, ` ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಬಗ್ಗೆ ಹೇಳಿದಾಗ ವಿಚಾರವನ್ನು ಸ್ವಾಗತಿಸಲಿಲ್ಲ. ಚಿತ್ತಾಲರೂ, ಸನದಿ ಅವರು ಕೂಡಾ, "ನಿಮ್ಮ ಭಾಷೆ ತುಂಬ ಚೆನ್ನಾಗಿದೆ. ಇಂತಹ ಅನುವಾದ ಪ್ರಕ್ರಿಯೆಯ ಹಿಂದೆ ಬಿದ್ದು ನಿಮ್ಮ ಸಮಯ, ಪ್ರತಿಭೆ ಎಲ್ಲ ನಷ್ಟಗೊಳಿಸಲೇಕೆ? ಸ್ವತಂತ್ರ ಕೃತಿರಚನೆಗೆ ತೊಡಗಿ", ಎಂದು ಪ್ರೀತಿಯ ಸಲಹೆಯಿತ್ತರು. ಆದರೂ ಕೈಗೆತ್ತಿಕೊಂಡುದನ್ನು ಬಿಡಲಾಗದೆ ನಾನು ಮುಂದುವರಿದೆ. ಅನುಮತಿ ಕೋರಿ ಅರುಂಧತಿಗೆ ಪತ್ರ ಬರೆದೆ. ತಕ್ಷಣ ಉತ್ತರ ಬಂತು. ಕೃತಿ ಸಂಬಂಧವಾಗಿ ಕೇರಳ ಹೈಕೋರ್ಟ್ನಲ್ಲಿ ಕೇಸ್ ಒಂದು ನಡೆದಿರುವುದರಿಂದ, ವ್ಯಾಜ್ಯ ಪರಿಹಾರವಾಗುವವರೆಗೂ ಅನುಮತಿ ನೀಡುವಂತಿಲ್ಲ ಎಂದುತ್ತರಿಸಿದ ಅರುಂಧತಿ, "... ವಿಶ್ ಯೂ ಗುಡ್ ಲಕ್" ಎಂದು ಪತ್ರ ಮುಗಿಸಿದ್ದರು. ಸಕಾರಾತ್ಮಕವಾದ  ಉತ್ತರದಿಂದ ಸಂತುಷ್ಟಳಾಗಿ, ಅನುವಾದ ಮುಗಿಸಿ, ವ್ಯಾಜ್ಯ ಪರಿಹಾರಕ್ಕೆ ಕಾಯುವೆನೆಂದುಕೊಂಡು, ವರ್ಷದೊಳಗೆ ಅನುವಾದ ಪೂರ್ಣಗೊಳಿಸಿದೆ.
         
ಮುಂಬೈ ಯೂನಿವರ್ಸಿಟಿಯ ಕನ್ನಡ ವಿಭಾಗದಲ್ಲಿ ವಿಭಾಗ ಮುಖ್ಯಸ್ಥ ಡಾ| ತಾಳ್ತಜೆ ವಸಂತಕುಮಾರರ ಮನೆಯಲ್ಲಿ ನಡೆದ ಸಾಹಿತ್ಯಿಕ ಕಾರ್ಯಕ್ರಮದಲ್ಲಿ ನನ್ನ ` ಗಾಡ್ ಆಫ್ ಸ್ಮಾಲ್ ಥಿಂಗ್ಸ್  ಹಸ್ತಪ್ರತಿಯ ಕೆಲ ಪುಟಗಳನ್ನೋದಿದಾಗ ಎಲ್ಲರೂ ಅದನ್ನು ಮೆಚ್ಚಿಕೊಂಡು, ಮತ್ತೆ ಭೇಟಿಯಾದಾಗಲೆಲ್ಲ ಕೃತಿ ಯಾವಾಗ ಪ್ರಕಟವಾಗುವುದೆಂದು ವಿಚಾರಿಸ ತೊಡಗಿದರು.

೧೯೯೬ರಲ್ಲಿ ನನ್ನ ತಾಯ್ತಂದೆ ನಮ್ಮ ಪ್ರಿಯ ಭಾಮಾಂಟಿಯನ್ನು ಕರಕೊಂಡು ಮುಂಬೈಗೆ ನಮ್ಮಲ್ಲಿಗೆ ಬಂದರು. ಸನಿಹ ಬಂಧುಗಳ ಮಕ್ಕಳ ವಿವಾಹ ಸಂಭ್ರಮದಲ್ಲಿ ಪಾಲ್ಗೊಳ್ಳಲು ಬಂದು ತಿಂಗಳ ಕಾಲ ನಮ್ಮಲ್ಲಿದ್ದರು. ಐವತ್ತು ವರ್ಷಗಳ ಹಿಂದೆ ತಾವಿದ್ದ ಮುಂಬೈಯ ವ್ಯಸ್ತ ದಿನಚರಿಯನ್ನು ಮೆಚ್ಚಿಕೊಂಡಿದ್ದ ತಂದೆಯವರು ಈಗಿನ ನಿಧಾನಗತಿಯ ಜೀವನದ ಬಗ್ಗೆ ಅಚ್ಚರಿಗೊಂಡಿದ್ದರು.

ಅದೇ ವರ್ಷ ೧೯೯೬ರಲ್ಲಿ  ಶಿವರಾಮ ಕಾರಂತರು ಮುಂಬೈಗೆ ಕೊನೆಯ ಬಾರಿಗೆ ಭೇಟಿಯಿತ್ತಾಗ, ಡಾ. ವ್ಯಾಸರಾವ್ ನಿಂಜೂರರ ಮನೆಯಲ್ಲಿ ಅವರನ್ನು ಕಾಣಲೆಂದು ನಾನು ಹೋಗಿದ್ದೆ. ನನ್ನನ್ನು ಪರಿಚಯಿಸಿಕೊಳ್ಳುತ್ತಾ, ಬೆಸೆಂಟ್ ಶಾಲೆಯ ವಸಂತಿ ಟೀಚರ ಮಗಳು, ಎಂದು ಹೇಳಿಕೊಂಡಾಗ, ", ಆಟ ಟೀಚರ್! ಸಚ್ ಡಿಸಿಪ್ಲಿನ್ಡ್ ಲೇಡಿ! ಈಗಂಥವರು ಎಲ್ಲಿ ?" ಎಂದುದ್ಗರಿಸಿದರು. ತಾಯ್ತಂದೆಯರ ಕ್ಷೇಮದ ಬಗ್ಗೆ ತಿಳಿಸಿದಾಗ ಸಂಭ್ರಮಿಸಿದರು. ನನ್ನ  `ಆಲಂಪನಾ’ ಅವರ ಕೈಗಿತ್ತು ನಮಿಸಿದಾಗ, ಓದಿ ಬರೆಯುತ್ತೇನೆ, ಎಂದರು. ಈಗೇನು ಯೋಜನೆ ಎಂದು ಕೇಳಿದಾಗ, `ಗಾನ್ ವಿದ್ ವಿಂಡ್’ ಬಗ್ಗೆ ಹೇಳಿಕೊಂಡೆ. ಅನುಮತಿ ಪಡೆದುಕೊಳ್ಳದೆ ಮುಂದುವರಿಯುವುದು ಬೇಡ; ವಿಷಯದಲ್ಲಿ ಪಾಶ್ಚಾತ್ಯರು ತುಂಬ ನಿರ್ದಯವಾಗಿ ನಡೆದುಕೊಳ್ಳಬಲ್ಲರು, ಎಂದು ಎಚ್ಚರಿಸಿದರು. ಊರಿಗೆ ಹಿಂದಿರುಗಿದವರು ಆಲಂಪನಾ ಓದಿ ಮೆಚ್ಚಿಕೊಂಡು ಪತ್ರವನ್ನೂ ಬರೆದರು. ಜೊತೆಗೆ ತಮ್ಮ ಭಾವಚಿತ್ರವಿರುವ ಪೋಸ್ಟ್ಕಾರ್ಡ್ ಕೂಡಾ ಕಳುಹಿಕೊಟ್ಟರು. ಪುನಃ ಕಾರಂತರನ್ನು ಮುಖತಃ  ಕಾಣುವ ಭಾಗ್ಯ ನನಗಿರಲಿಲ್ಲ.
  
೧೯೯೬ ಆಗಸ್ಟ್ ೩೦ರಂದು ನಮ್ಮ ತಾಯ್ತಂದೆಯರ ವಿವಾಹ ಸ್ವರ್ಣಮಹೋತ್ಸವ! ಸನಿಹ ಬಂಧುಗಳು ನಮ್ಮ ಸಂತಸದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಮೊದಲ ಬಾರಿಗೆ ಮನೆಯಲ್ಲಿ ಪೂಜೆ ಇರಿಸಿಕೊಂಡಿದ್ದೆವು. ಜನ ಸೇರಿದಾಗ ಸಿಟ್ ಔಟ್ ಕಿಟಿಕಿಯ ಬಾಗಿಲು ತೆರೆಯಲು ಕೈಯಿಂದ  ಕಿಟಿಕಿ ಗಾಜನ್ನು ದೂಡಿದ ಹರ್ಷನ ಮುಂಗೈಯೇ ಸೀಳುವಂತೆ, ಗಾಜು ಒಡೆಯಿತು. ಸೀಳಿದ ಕೈಗೆ ಸುತ್ತಿದ ಅಷ್ಟು ದಪ್ಪದ ಬಿಳಿಯ ಟರ್ಕಿಶ್ ಟವೆಲ್ ಪೂರ್ತಿ ರಕ್ತದಿಂದ ಕೆಂಪಾಯ್ತು. ಆಸ್ಪತ್ರೆಗೆ ಧಾವಿಸಿ, ಕೈಗೆ  ಪ್ಲಾಸ್ಟಿಕ್ ಸರ್ಜರಿ ಆಗಿ ಹಿಂದಿರುಗುವ ತನಕ ಆತಂಕದ ಕ್ಷಣಗಳು!

ನಾವು ಮುಂಬೈಗೆ ಮರಳಿದ್ದೆವು. ಒಂದು ಮಧ್ಯಾಹ್ನ ಹನ್ನೆರಡರ ಬಿರುಬಿಸಿಲಲ್ಲಿ ನಮ್ಮ ತಂದೆ ಬೀರಿಯಿಂದ ರಿಕ್ಷಾದಲ್ಲಿ ಹಿಂದಿರುಗುವಾಗ, ಮನೆ ಸಮೀಪಿಸುತ್ತಿದ್ದಂತೇ ವಿಪರೀತ ವೇಗದಿಂದ ಹೊರಟ ರಿಕ್ಷಾ, ನಿಯಂತ್ರಣ ಕಳಕೊಂಡು ಮೂರುಬಾರಿ ಪಲ್ಟಿಯಾಗಿ ಬಿದ್ದಿತು. ನಮ್ಮ ಪಕ್ಕದ ಮನೆಯ ಹುಡುಗನೊಬ್ಬ ಅತ್ತಣಿಂದ ಬರುತ್ತಿದ್ದವನು, ಬಳಿ ಹೋಗಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಚ್ಚನನ್ನು ಕಂಡು, ಓಡಿ ಬಂದು, ಅಜ್ಜನಂತೇ ಕಾಣುತ್ತದೆ, ಸರಿಯಾಗಿ ತಿಳಿಯುತ್ತಿಲ್ಲ, ಎಂದು ವಿಷಯವನ್ನರುಹಿದ. ತೊಟ್ಟಿದ್ದ  ಅಚ್ಚ ಬಿಳಿಯ ವೇಷ್ಟಿ, ಶರ್ಟ್ ಎಲ್ಲ ಕೆಂಪಾಗಿ ಹೋಗಿದ್ದ ನಮ್ಮಚ್ಚನ ಗುರುತು ಯಾರಿಗೂ ಸಿಗುವಂತಿರಲಿಲ್ಲ. ಪುಣ್ಯವಶಾತ್, ಅತ್ತಣಿಂದ ಬಂದ, ವಾವೆಯಲ್ಲಿ ಅಚ್ಚನಿಗೆ ಸೋದರಳಿಯನೇ ಆದ ನಮ್ಮ ದಿನಕರ, ಬಳಿ ಬಂದು ನೋಡುವಾಗ, ಪ್ರಜ್ಞೆಯಿದ್ದ ಅಚ್ಚನೇ ಅವನನ್ನು ಕಂಡು, ಒಮ್ಮೆ ಆಸ್ಪತ್ರೆಗೆ ತಲುಪಿಸು, ಎಂದರಂತೆ. ಸ್ವರ ಕೇಳಿ ಗುರುತು ಹಿಡಿದ ದಿನಕರ ನಮ್ಮ ಪಾಲಿನ ದೇವರಾಗಿ ದಿನ ಬಂದವನು! ಅವನು ತಕ್ಷಣ ಅಚ್ಚನನ್ನು ಕಾರಿನಲ್ಲಿ ಮಂಗಳೂರಿಗೊಯ್ದು ಫಾ| ಮುಲ್ಲರ್ಸ್ ತಲುಪಿಸಿದ. ಸ್ವಲ್ಪ ತಡವಾಗಿದ್ದರೂ ಜೀವ ಉಳಿಯುವುದು ಕಷ್ಟವಿತ್ತೆಂದು ಡಾಕ್ಟರ್ಸ್ ಹೇಳಿದರು.
        
ಸುದ್ದಿ ತಿಳಿದ ತಕ್ಷಣ ಫ್ಲೈಟ್ ಹಿಡಿದು, ನಾನು ನನ್ನಚ್ಚನ ಬಳಿ ಬಂದು ಸೇರಿದೆ. ತಲೆ ಪೂರ್ತಿ ಹಾಗೂ ಮೊಣಕಾಲಿನಲ್ಲಿ ಬ್ಯಾಂಡೇಜ್ ಇದ್ದ ಅಚ್ಚ, ನೋವಿನಲ್ಲೂ ನಕ್ಕರು. ಅಪಘಾತದ ಗಾಯಗಳು ಗುಣವಾಗಿ ಅವರು ಚೇತರಿಸಿ ಕೊಂಡು ಮನೆಗೆ ಮರಳಲು ಒಂದೂವರೆ ತಿಂಗಳು ಹಿಡಿಯಿತು. ಅಮ್ಮ, ನಾನು ಅವರ ಜೊತೆಗೇ ಇದ್ದೆವು. ತಲೆಯ ಗಾಯ, ಹೊಲಿಗೆ ಬೇಗನೇ ಒಣಗಿತು. ಆದರೆ ಮೊಣಕಾಲ ಚಿಪ್ಪಿನ ಗಾಯ ಮಾತ್ರ ಮಾಯಲು ಸಾಧಾರಣ ಸಮಯ ಹಿಡಿಯಿತು. ಅಸ್ತಮಾ ರೋಗಿಯಾದ್ದರಿಂದ ಚಿಕಿತ್ಸೆಯಲ್ಲಿ ಅರಿವಳಿಕೆ ಉಪಯೋಗಿಸುವಂತಿರಲಿಲ್ಲ. ಅಚ್ಚ ಚಾ ಚೂ ಎನ್ನದಿದ್ದರೂ ನಮಗದನ್ನು ನೋಡಲಾಗುತ್ತಿರಲಿಲ್ಲ. ಅತ್ಯಂತ ಶ್ರದ್ಧೆಯಿಂದ ಅಚ್ಚನ ಶುಶ್ರೂಷೆಗೈಯುತ್ತಿದ್ದ ಸ್ಟ್ಯೂಡೆಂಟ್ ನರ್ಸ್ಗಳಿಬ್ಬರು, ಬೀನಾ ಮತ್ತು ರೇಶ್ಮಾ. ಫ್ಲಾರೆನ್ಸ್ ನೈಟಿಂಗೇಲ್ ಎಂದೇ ನಾನನ್ನುತ್ತಿದ್ದ ಪ್ರಿಯಭಾಷಿಣಿ ಬೀನಾ! ಜೀವನ ಎಂತಹ ತಿರುವಿಗೀಡಾಗಬಹುದು, ಎಂಬುದಕ್ಕೆ ನಿದರ್ಶನವಾದ ಬೀನಾ ಬಗ್ಗೆ ಹೇಳದಿರುವುದೆಂತು?!


(ಮುಂದುವರಿಯಲಿದೆ)

2 comments:

  1. ಗಾನ್ ವಿತ್ ದಿ ವಿಂಡ್ ಓದಿಲ್ಲ ಅಂಕಿತಕ್ಕೆ ಹೋದಾಗ ತಂದು ಓದುವೆ.ಅರುಂಧತಿ ರಾಯ್ ನ್ಯಾಯಾಲಯ ಕರಣ ಮುಗಿದಿರಬಹುದು. ನಿಮ್ಮ ನಿರೂಪಣೆ ಸಹಜವಾಗಿದೆ. ನನಗೆ ಮೆಚ್ಚುಗೆಯಾಯಿತು.

    ReplyDelete
  2. ಹೌದು, ಸರ್, ಮುಗಿದಿದೆ. ಮುಂದೇನಾಯ್ತೆಂದೂ ಮುಂದೆ ಹೇಳುತ್ತೆಫೆ

    ReplyDelete