13 February 2017

ಸವಿಗನ್ನಡ ನುಡಿಗೆ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ
 ಅಧ್ಯಾಯ - ೨೫


ಎಲ್ಲರೂ ಎಲ್ಲರನ್ನೂ ಅರಿತಿದ್ದ ವಿರಳ ಜನಸಂಖ್ಯೆಯ ನಮ್ಮೂರಲ್ಲಿ, ಶಾಲಾ ಪಾರ್ಟಿ ಮತ್ತು ದೈವಸ್ಥಾನದ ಪಾರ್ಟಿ ಎಂದು ಇತ್ತಂಡಗಳಾಗಿ ವಿರಸ, ವ್ಯಾಜ್ಯವೇರ್ಪಟ್ಟು, ಒಂದು ಅಹಿತಕರ ಘಟನೆಯ ಬಳಿಕ ಹಲವು ಕಾಲದ ವರೆಗೆ ಕೋರ್ಟ್ನಲ್ಲೂ ವ್ಯಾಜ್ಯ ನಡೆಯಿತು. ಒಂದು ಕೋರ್ಟ್ ಹಿಯರಿಂಗ್ ಇದ್ದ ದಿನ, ಏನೋ ಕಾರಣದಿಂದ ಬಸ್ ಸ್ಟ್ರೈಕ್ ಇದ್ದು, ಶಾಲೆಯ ಪಾರ್ಟಿಯನ್ನು ಪ್ರತಿನಿಧಿಸುತ್ತಿದ್ದ ನಮ್ಮ ತಂದೆಯವರು ಹಿಯರಿಂಗ್ ಮುಗಿದು ಮನೆಗೆ ಬರುವುದು ತುಂಬ ತಡವಾದೀತೆಂದು ನಾವು ಭಾವಿಸಿದ್ದೆವು. ಆದರೆ ಅವರು ಬೇಗನೇ ಬಂದು ತಲುಪಿದಾಗ ನಮಗೆ ಅಚ್ಚರಿಯಾಗಿ ವಿಚಾರಿಸಿದರೆ, "ನಾನು ನಡೆದುಕೊಂಡು ಬರುತ್ತಿರುವಾಗ ಅವರ (ವಿರುದ್ಧ ತಂಡದ) ಜೀಪ್ನಿಂದ ಅಮೃತ (ಅಮೃತ ಸೋಮೇಶ್ವರ) ಕರೆದ. ಬಿಸಿಲಿಗೆ ಯಾಕಣ್ಣಾ ನಡೆದುಕೊಂಡು ಹೋಗ್ತೀರಿ? ನಮ್ಮೊಟ್ಟಿಗೆ ಬನ್ನಿ, ಎಂದ. ಹಾಗೆ ಬಂದೆ", ಎಂದು ತಂದೆಯವರು ಮೆಲುನಗು ನಕ್ಕಾಗ, ನಮಗೆಲ್ಲ ಕೌತುಕವೆನಿಸಿ ನಾವೂ ಘೊಳ್ಳನೆ ನಕ್ಕು ಬಿಟ್ಟೆವು.

ದೈವಸ್ಥಾನದ ವಠಾರದಲ್ಲೇ ಇದ್ದ ಅಮೃತ ಸೋಮೇಶ್ವರರು, ಸಹಜವಾಗಿಯೇ ದೈವಸ್ಥಾನದ ಪಾರ್ಟಿಯಲ್ಲೇ ಇದ್ದರು. ಶಾಲಾ ಸಂಬಂಧಿತ ನಮ್ಮ ಹಿರಿಯರು, ಬಂಧು, ಮಿತ್ರರು ಶಾಲಾ ಪಾರ್ಟಿಯಲ್ಲಿದ್ದರು. ಶಾಲಾ ಕಮಿಟಿ ಬೋವಿ ವಿದ್ಯಾಸಂಘದಲ್ಲಿದ್ದವರು ಸುಧಾರಣಾ ಪ್ರವೃತ್ತಿಯ ಜನರು. ಸೋಮೇಶ್ವರ ದೇವಸ್ಥಾನದ ಜಾತ್ರೆಗೆ ಕೊಡಿಮರವೇರಿಸಲು ಕರೆಯೋಲೆ ಬರುತ್ತಿದ್ದುದು ವಿದ್ಯಾಸಂಘಕ್ಕೆ. ತಂದೆಯವರು ತೀವ್ರ ಅಸೌಖ್ಯವಾಗುವ ಕೊನೆಗಾಲದವರೆಗೂ ಕೊಡಿಮರ ಏರಿಸುವ ಕಾಯಕಕ್ಕೆ ತಪ್ಪದೆ ಹೋಗುತ್ತಿದ್ದರು. ಶಾಲಾ ಪಾರ್ಟಿ ಮತ್ತು ದೈವಸ್ಥಾನದ ಪಾರ್ಟಿ ಎಂಬ ವೈಷಮ್ಯ ತಾರಕಕ್ಕೇರಿದ ಸಮಯ, ಊರಲ್ಲಿ ಇತ್ತಂಡಗಳಲ್ಲಿ ನೆಂಟಸ್ತನ ನಡೆದ ಎರಡು ಮದುವೆಯ ಸಮಾರಂಭಗಳಲ್ಲಿ ವರನ ದಿಬ್ಬಣ ವಧುವಿನ ಮನೆವರೆಗೆ ಬಂದು ವರನನ್ನು ಮುಂದೆ ಕಳುಹಿಸಿ ಬೇಲಿಯಿಂದಲೇ ಹಿಂದಿರುಗಿದ ಸ್ವಾರಸ್ಯಕರ ಪ್ರಸಂಗವೂ ಮರೆಯುವಂತಹುದಲ್ಲ. ಸುವರ್ಣ ಮಹೋತ್ಸವ ಕಂಡ ನಮ್ಮೂರ ಶಾಲೆಯ ವಜ್ರ ಮಹೋತ್ಸವದ ಸಂದರ್ಭದಲ್ಲಿ, ಶಾಲಾ ಪಾರ್ಟಿ ಹಾಗೂ ದೈವಸ್ಥಾನದ ಪಾರ್ಟಿಗಳ ವಿಲೀನದ ಯತ್ನ ನಡೆದು, ಅಕ್ರಮವಾಗಿ ಕೋರಂ ಇಲ್ಲದ ಸಭೆಯಲ್ಲಿ ವಿಲೀನದ ನಿರ್ಣಯ ಅಂಗೀಕೃತವಾದಾಗ, ನ್ಯಾಯಬಾಹಿರವಾದ ಕ್ರಮವನ್ನು ವಿರೋಧಿಸಿ, ನಮ್ಮ ತಂದೆಯವರು ಮುಂದೆ ಎಲ್ಲದರಿಂದಲೂ ದೂರ ಉಳಿದರು. ಸಂಪೂರ್ಣ ಸಮರ್ಪಣಾಭಾವದಿಂದ ತಾವು ಜೀವಮಾನವಿಡೀ ದುಡಿದ ಶಾಲಾ ವ್ಯವಹಾರದಿಂದ ತಾವೇ ದೂರವಾಗಬೇಕಾಗಿ ಬಂದುದು ಅವರ ಹೃದಯವನ್ನು ಘಾತಿಸಿದ ಬಗೆಯನ್ನು ಬಲ್ಲವರೇ ಬಲ್ಲರು.

ಶಾಲಾ ಕಮಿಟಿಯಲ್ಲಿದ್ದ ಹಿರಿಯ ಜೀವಗಳ ನಿರಂತರ ಯತ್ನದಿಂದ ದಿ. ಪೂಣಚ್ಚ ಅವರು ರೈಲ್ವೇ ಮಂತ್ರಿಯಾಗಿದ್ದಾಗ, ಶಾಲೆಯೆದುರಲ್ಲೇ ರೈಲ್ವೇ ಗೇಟ್ ಸ್ಥಾಪಿಸಲ್ಪಟ್ಟು, ಊರಿಗೆ ವಿದ್ಯುದ್ದೀಪ ಸಂಪರ್ಕ ಪ್ರಾಪ್ತವಾಯ್ತು. ೧೯೬೮ರಲ್ಲಿ ಉಚ್ಚಿಲ ಶಾಲೆಯ ಸುವರ್ಣ ಮಹೋತ್ಸವ ಅತ್ಯಂತ ಸ್ಮರಣೀಯವಾಗಿ ನಡೆಯಿತು. ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಿಂದ ತೊಡಗಿ ಹಲವು ಗಣ್ಯರ ಶುಭಸಂದೇಶಗಳು ಅಚ್ಚಾಗಿದ್ದ ಚೊಕ್ಕ ಚೆಲುವಾದ ಸ್ಮರಣಸಂಚಿಕೆ ಬಿಡುಗಡೆಯಾಯ್ತು. ಹಾಗೂ ಸುವರ್ಣ ಮಹೋತ್ಸವ ಸ್ಮರಣಾರ್ಥ ಕಟ್ಟಡವಾಗಿ, ಶಾಲಾ ಮಕ್ಕಳಿಗೆ ಅತ್ಯಗತ್ಯವಾಗಿದ್ದ ಹೈಸ್ಕೂಲ್, ರೈಲು ಮಾರ್ಗದಾಚೆ  ಪೂರ್ವಕ್ಕಿದ್ದ ವಿಶಾಲ ಮೈದಾನದಲ್ಲಿ ಸ್ಥಾಪನೆಯಾಯ್ತು. ಮತ್ತೆ ಫಿಶರೀಸ್ ರೋಡ್ ಕೂಡಾ ಒದಗಿ ಬಂತು.


ದಿನಗಳಲ್ಲಿ ನಮ್ಮೂರಲ್ಲಿ ಕೇಳಿ ಬರುತ್ತಿದ್ದ ಇನ್ನೋರ್ವ ಪ್ರತಿಭಾವಂತರೆಂಬ ಹೆಸರು, ಪ್ರೊ. ಕೇಶವ ಉಚ್ಚಿಲ್ ಅವರದು. ಉತ್ತಮ ಕವಿ, ಬರಹಗಾರ, ನಾಟಕ ನಿರ್ದೇಶಕರಾಗಿ ಹೆಸರಾದ ನೆತ್ತಿಲ ಕೇಶವಣ್ಣ, ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ನಿವೃತ್ತರಾದವರು. ಸಾವಿರಾರು ಪುಸ್ತಕಗಳ ದೊಡ್ಡ ಪುಸ್ತಕ ಭಂಡಾರವನ್ನೇ ಮನೆಯಲ್ಲಿಟ್ಟು ಕೊಂಡವರು. ಅಗಾಧ ಓದಿನ ರುಚಿಯನ್ನು ಮಕ್ಕಳಿಗೂ ಅಂಟಿಸಿದವರು

ತಂದೆಯವರನ್ನು ನಿರಂತರ ಕಾಡುತ್ತಿದ್ದ ಉಬ್ಬಸ ಬಾಧೆಯಲ್ಲಿ ಪ್ರಥಮ ಚಿಕಿತ್ಸೆಗೆ ಬರುತ್ತಿದ್ದವರು, ನಮ್ಮೂರ ಡಾಕ್ಟರ್ ಶೆಟ್ಟಿ ಅವರು. ಮಂಗಳೂರಲ್ಲಿ ಡಾ.ಅಡಪರ ಕಂಪೌಂಡರ್ ಆಗಿದ್ದು, ಮುಂದೆ ಎಲ್.ಎಮ್.ಪಿ. ಮಾಡಿ ನಮ್ಮೂರಲ್ಲಿ ಡಾಕ್ಟರ್ ಆಗಿ ಪ್ರಾಕ್ಟೀಸ್ ಮಾಡಿದ ಡಾ.ಶೆಟ್ಟಿ ನುರಿತ ವೈದ್ಯರಾಗಿದ್ದರಷ್ಟೇ ಅಲ್ಲ, ತುಂಬ ಸಜ್ಜನರು. ಕೇವಲ ಐದು ರೂಪಾಯಿ ಛಾರ್ಜ್ ತೆಗೆದು ಕೊಳ್ಳುತ್ತಿದ್ದ ಅವರನ್ನು ಸ್ವಲ್ಪವಾದರೂ ಹೆಚ್ಚಿಗೆ ತೆಗೆದುಕೊಳ್ಳುವಂತೆ ನಾವೇ ಆಗ್ರಹಿಸಿದ್ದೆವು. ಪರೀಕ್ಷಿಸಿ, "ಒಂಜಿ ಕಿನ್ಯ ಮಾತ್ರೆ ಕೊರ್ಪೆಮ್ಮಾ; ಮಾತ ಸಮ ಆಪುಂಡು", ಎನ್ನುತ್ತಿದ್ದ ಅವರ ನಯವಾದ ಸವಿಮಾತಿನಿಂದಲೇ ಅಸೌಖ್ಯ ಅರ್ಧಮಾಯವಾಗುತ್ತಿತ್ತು. ಅವರ ಕೈಯಲ್ಲಿ ಬಗೆಹರಿಯುವಂತಹುದಲ್ಲ ಎಂದನಿಸಿದರೆ, ತಕ್ಷಣ ಮಂಗಳೂರಿಗೆ ಹೋಗುವಂತೆ ತಿಳಿಸುತ್ತಿದ್ದರು. ಅವರ ಇಂಜೆಕ್ಷನ್ನಿಂದ ಅಸ್ತಮಾದ ತಕ್ಷಣದ ಅಪಾಯ ಕಳೆದ ಬಳಿಕ ತಂದೆಯವರನ್ನು ಮಂಗಳೂರಿಗೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆವು.
           
ನಾಯಿ ಕಚ್ಚಿದರೆ ಗಾಯವನ್ನು ತಕ್ಷಣ ಸಾಬೂನು ಹಚ್ಚಿ ತೊಳೆದು ಮತ್ತೆ ಡಾಕ್ಟರ ಬಳಿಗೆ ಇಂಜೆಕ್ಷನ್ಗೆ ಹೋಗಬೇಕೆಂದು ಡಾ.ಶೆಟ್ಟಿ ತಿಳಿಸಿ ಕೊಟ್ಟಿದ್ದರು. ರೂಬಿ ನಮ್ಮ ಮುದ್ದಿನ ಗೋಲ್ಡನ್ ರಿಟ್ರೀವರ್. ಅವನಿಗೆ ಜೊತೆಯಿರಲೆಂದು ಅಣ್ಣ ಕರೆತಂದುದು ಗ್ರೇಟ್ ಡೆನ್ ಹೀರೋನನ್ನುಆರು ತಿಂಗಳ ಹೀರೋ ದೊಡ್ಡ ಕರುವಿನಷ್ಟೆತ್ತರಕ್ಕೆ ಬೆಳೆದಿದ್ದ. ಏನು ಕೊಟ್ಟರೂ ತಿನ್ನುತ್ತಿದ್ದ ಹೀರೋನ ಹೊಟ್ಟೆಗೆ ಸಾಧಾರಣ ಆಹಾರ ಸಾಲುತ್ತಿರಲಿಲ್ಲ. ಒಂದು ದಿನ ಅಣ್ಣ ಗೇಟಿನ ಬಳಿ ಹೀರೋನ ಚೈನನ್ನು ಕೈಯಲ್ಲಿ ಹಿಡಿದು ನಿಂತು ನೆರೆಯವರೊಡನೆ ಮಾತನಾಡುತ್ತಿದ್ದಾಗ ಹೀರೋ ಅಣ್ಣನ ಹಿಡಿತದಿಂದ ಬಿಡಿಸಿ ಕೊಂಡು ರಸ್ತೆಗೆ ಓಡಿದವನು ಲಾರಿ ಢಿಕ್ಕಿಯಾಗಿ ರಸ್ತೆಗೆ ಅಪ್ಪಳಿಸಲ್ಪಟ್ಟಿದ್ದ. ಕರುವಿನಷ್ಟೆತ್ತರದ ನಾಯಿಯನ್ನು ಕಂಡು ತಕ್ಷಣ ಬ್ರೇಕ್ ಹಾಕಲೆತ್ನಿಸಿಯೂ ಸಫಲನಾಗದ ಲಾರಿ ಡ್ರೈವರ್ ತುಂಬ ನೊಂದು ಕೊಂಡಿದ್ದ. ಜೀವ ಬಿಟ್ಟಿರದಿದ್ದರೂ, ಉಳಿದೂ ಪ್ರಯೋಜನವಿಲ್ಲವೆಂದು, ಕರೆಸಲ್ಪಟ್ಟ ವೆಟರ್ನರಿ ಡಾಕ್ಟರ್ ಹೇಳಿದ ಬಳಿಕ ಅಂಥಾ ಭವ್ಯ ಆಕಾರದ ಹೀರೋನನ್ನು ಇಂಜೆಕ್ಷನ್ ಕೊಟ್ಟೇ ಚಿರನಿದ್ರೆಗಿಳಿಸ ಬೇಕಾಯ್ತು. ಪುಣ್ಯವಶಾತ್ ಅದನ್ನು ನೋಡಲು ನಾನಾಗ ಅಲ್ಲಿರಲಿಲ್ಲ.

ರೂಬಿಯೆಂದರೆ ನನಗೆ ತುಂಬ ಪ್ರೀತಿ. ಬೇಸಿಗೆಯ ಸೆಖೆಯ ದಿನಗಳಲ್ಲಿ ಮಧ್ಯಾಹ್ನ ಹೊತ್ತು ನಮ್ಮಮ್ಮ ಮೊಮ್ಮಕ್ಕಳೊಡನೆ ಹಾಲ್ನಲ್ಲಿ ಚಾಪೆ ಹಾಸಿ ಮಲಗಿರುತ್ತಿದ್ದರೆ, ರೂಬಿಗೂ ಅಲ್ಲೇ ಪಕ್ಕದಲ್ಲಿ ಮಲಗಬೇಕು. ಜೊತೆಗೆ ಫ್ಯಾನ್ ಕೂಡಾ ಬೇಕು. ಫ್ಯಾನ್ ಆನ್ ಮಾಡಿರದಿದ್ದರೆ ನಿಂತೇ ಇರುತ್ತಿದ್ದ ಅವನು ಆನ್ ಮಾಡಿದೊಡನೆ ಟಪ್ಪನೆ ಅಡ್ಡ ಮಲಗಿ ನಿದ್ದೆ ಹೋಗುತ್ತಿದ್ದ. ಹೊರಗಿನ ಎಲ್ಲರಿಗೂ ಅವನೆಂದರೆ ಭಯವಿದ್ದರೂ ಎಂದೂ ಯಾರನ್ನೂ ಕಚ್ಚಿರದ ರೂಬಿಗೆ ಅದೇನಾಯ್ತೋ ತಿಳಿಯದು. ಮನೆಗೆ ಬಂಧು ಮಕ್ಕಳು ಬಂದಿದ್ದು ಮಕ್ಕಳೆಲ್ಲ ಅಲ್ಲೇ ಅಂಗಳದಲ್ಲಿ ಅವನ ಸಮೀಪ ಆಡುತ್ತಿದ್ದಾಗ ಏನು ಅಸಹನೆಯಾಯ್ತೋ ಬಳಿ ಬಂದ ಹರ್ಷನನ್ನು ಕೆಳಗೆ ಕೆಡವಿ ತನ್ನ ಚೂಪಾದ ಹಲ್ಲುಗಳಿಂದ ತೊಡೆಗೆ ಕಚ್ಚಿ ಬಿಟ್ಟ! ಮತ್ತೊಮ್ಮೆ ಮಕ್ಕಳು ಮುಸ್ಸಂಜೆಗೆ ಸಮುದ್ರ ತೀರದಿಂದ ಹಿಂದಿರುಗಿದಾಗ, ಹರ್ಷ ಬಳಿ ಹೋಗಿ ತಲೆದಡವಲೆಂದು ಕೈಮುಂದು ಮಾಡಿದರೆ ಪುನಃ ಕೈಯ ಮಣಿಗಂಟನ್ನೇ ಕಚ್ಚಿಬಿಟ್ಟ. ಅವನ ನಡತೆಗೆ ಕಾರಣ ತಿಳಿಯಲೇ ಇಲ್ಲ.

ಮುಂದಿನ ವರ್ಷ ಊರಿನಿಂದ ನಾನು ಹಿಂದಿರುಗಿದ ಮರುದಿನ ನಮ್ಮ ರೂಬಿ ಆಕಸ್ಮಿಕ ಮರಣವನ್ನಪ್ಪಿದ. ಎಲ್ಲರೂ ಒಳಗೆ ಊಟದಲ್ಲಿದ್ದಾಗ ರೂಬಿ ತನ್ನನ್ನು ಕಟ್ಟಿದ್ದ ಹೊರ ಜಗಲಿಯ ಕಟಕಟೆಯಿಂದ ಕೆಳಗೆ ಹಾರಿ ಸಂಕೋಲೆ ಕತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಂತೆ ಕೊನೆಯುಸಿರೆಳೆದಿದ್ದ. ಅದನ್ನು ಕಂಡ ಎದುರು ಮನೆಯ ನರಸಿಂಹ ಒಳಗಿದ್ದವರನ್ನು ಕರೆದು ತಿಳಿಸಿದನಂತೆ. ಮಹಾಕಾಯನಾಗಿದ್ದ ರೂಬಿ ಹಾಗೆ ಕಟಕಟೆಯಾಚೆ ಹಾರುವುದು ಹೇಗಾದರೂ ಸಾಧ್ಯ ಎಂಬುದು ನನಗೆಂದೂ ಬಗೆ ಹರಿಯದ ಪ್ರಶ್ನೆ! ನನ್ನ ಮುದ್ದು ರೂಬಿಯ ದಾರುಣ ಅಂತ್ಯವನ್ನು ಕಾಣಲು ನಾನು ಬಳಿಯಿರಲಿಲ್ಲ.

ರೂಬಿಯ ಬಳಿಕ ನಮ್ಮ ಮನೆಗೆ ಬಂದವನು ರಾಕಿ. ಕಂದು ಬಣ್ಣದ ಗಟ್ಟಿತಲೆಯ ದಷ್ಟಪುಷ್ಟನಾಗಿದ್ದ ಬಾಕ್ಸರ್. ಅಮ್ಮ, ನಾನು ಅವನನ್ನು ರಾಕಿ ಎಂದು ಕರೆದರೆ ಉಳಿದವರಿಗೆ ಅವನು ಗುಂಡೂ. ಬೆಳಿಗ್ಗೆ ಹೊತ್ತು ಸ್ವಲ್ಪಕಾಲ ಸಂಕೋಲೆ ಬಿಚ್ಚಿದರೆ ಗೇಟಿನಿಂದ ಇನ್ನೊಂದು ದರೆಯ ವರೆಗೂ ಬಿಲ್ಲಿನಿಂದ ಬಿಟ್ಟ ಬಾಣದಂತೆ ಅವನ ಓಟದ ವ್ಯಾಯಾಮ! ಒಂದಿನ ಬೆಳಿಗ್ಗೆ ನಾನು ಅಂಗಳ ಗುಡಿಸುತ್ತಿದ್ದಾಗ ತನ್ನ ವ್ಯಾಯಾಮ ನಡೆಸಿದ್ದ ರಾಕಿ ಓಡಿ ಬರುತ್ತಾ, ಬಗ್ಗಿ ಗುಡಿಸುತ್ತಿದ್ದ ನನ್ನ ತಲೆಗೆ ಅವನ ತಲೆಯನ್ನು ಢೀಕೊಟ್ಟ ಭರಕ್ಕೆ ನನಗೆ ಭೂಮಿಯೇ ಸುತ್ತಿದಂತಾಗಿತ್ತು. ಶಬ್ದ ಕೇಳಿದ ನಮ್ಮಮ್ಮ ತೆಂಗಿನ ಕಾಯಿ ಬಿತ್ತೆಂದೆಣಿಸಿ ಒಳಗಿನಿಂದ ನೋಡ ಬಂದಿದ್ದರು!
        
ಎಚ್.ಎಸ್.ಸಿ.ಯಲ್ಲಿ (ಪದವಿಪೂರ್ವ ಪರೀಕ್ಷೆ) ತುಷಾರ್ಗೆ ರಾಜ್ಯಕ್ಕೆ ಒಂಬತ್ತನೇ ರ್ಯಾಂಕ್ ಬಂದಾಗ ನಾನು ಊರಲ್ಲಿದ್ದೆ. ಮನೆಯಲ್ಲಿ ನಮ್ಮೆಲ್ಲರಿಗೂ ತುಂಬ ಸಂತೋಷವನ್ನಿತ್ತ ಘಳಿಗೆಯದು. ಉಜಿರೆಯಲ್ಲಿ ಕೆ.ಟಿ.ಗಟ್ಟಿ ಅವರ ಮಗಳು ಚಿತ್ಪ್ರಭಾ ತನ್ನ ರಾಜ್ಯಕ್ಕೆ ಮೊದಲಿಗಳಾಗಿ ಬಂದಿದ್ದಳು. ತುಷಾರ್ ಕಾಲೇಜ್ನಲ್ಲಿ ಉತ್ತಮ ಎನ್.ಸಿ.ಸಿ. ಕೆಡೆಟ್ ಆಗಿದ್ದು, ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರು ರೂಯಿಯಾ ಕಾಲೇಜಿಗೆ ಭೇಟಿಯಿತ್ತಾಗ ಅವರಿಗೆ ಗೌರವ ರಕ್ಷೆ ಸಲಿಸುವ ಅವಕಾಶ ಅವನ ಪಾಲಿಗೆ ಬಂದಿತ್ತು. ಅಂತರ್ಕಾಲೇಜ್ ಮೂಡ್ ಇಂಡಿಗೋ ಫೆಸ್ಟಿವಲ್ನಲ್ಲಿ ಅವನ ತಂಡ ಪ್ರಥಮ ಬಹುಮಾನ ಪಡೆದಿತ್ತು. ಮಳೆಗಾಲದಲ್ಲಿ ಗೆಳೆಯರ ಬಳಗದೊಡನೆ ಮಹಾರಾಷ್ಟ್ರದ ಗಿರಿ ಶಿಖರ, ಕಾಡು ಮೇಡುಗಳಲ್ಲಿ ಟ್ರೆಕ್ಕಿಂಗ್ ಅವನ ಹವ್ಯಾಸ. ಎಚ್.ಎಸ್.ಸಿ ಪರೀಕ್ಷೆ ಮುಗಿದೊಡನೆ ತಾನೇ ದೊಡ್ಡದೊಂದು ಟೆಂಟ್ ತಯಾರಿಸಿ ಗೆಳೆಯರೊಡನೆ ಕೊಡೈಕೆನಾಲ್ಗೆ ಪ್ರವಾಸ ಹೋಗಿದ್ದ. ಪ್ರವಾಸದಲ್ಲಿ ಎದುರಾದ ಅಪಾಯಗಳ ಸುಳಿಹೂ ನನಗೆ ನೀಡುವವನಲ್ಲ. ಅದು ಮತ್ತೆಂದೋ  ಮತ್ತಾರ ಮೂಲಕವೋ ನನಗೆ ತಿಳಿದು ಬರುತ್ತಿತ್ತು. ಈಗಲೂ ಗೆಳೆಯರ ಜೊತೆಗೋ, ಏಕಾಂಗಿಯಾಗಿಯೋ ನಡೆದಿರುವ ಅವನ ಹಿಮಾಚಲ, ಅರುಣಾಚಲ, ಉತ್ತರಾಖಂಡ ಲಡಖ್ ಮತ್ತಿತರ ಸ್ಥಳಗಳ ಪ್ರವಾಸದನುಭವಗಳು ಅತ್ಯುತ್ತಮ ಫೋಟೋಗ್ರಾಫರ್ ಆದ ಅವನ ಫೋಟೋಗಳೊಡನೆ ಪ್ರಕಟಿಸಲ್ಪಡಲೆಂಬ ಆಸೆ ನನ್ನದು. ಕಾಲೇಜಿನಲ್ಲಿದ್ದಾಗ ಇಕನಾಮಿಕ್ ಟೈಮ್ಸ್ನಲ್ಲಿ ಅವನ ಲೇಖನಗಳು ಅವನ ಹೆಸರಿಲ್ಲದೇ ಪ್ರಕಟವಾಗುತ್ತಿದ್ದುವು. ಇನಿತಾದರೂ ಪ್ರದರ್ಶನ ಒಲ್ಲದ ಜೀವವದು!

೧೯೯೨ರಲ್ಲಿ ದೂರದರ್ಶನದಲ್ಲಿ "ಫರ್ಮಾನ್" ಧಾರಾವಾಹಿ ಪ್ರಕಟವಾದಾಗ ಅದರ ಕಥಾವಸ್ತು, ಸಂಭಾಷಣೆಗಳ ಸೊಗಸು, ಪಾತ್ರವರ್ಗ ನನ್ನನ್ನು ಸೆಳೆಯಿತು. ರಫಿಯಾ ಮಂಜೂರುಲ್ ಅಮೀನ್ ಅವರ `ಆಲಂಪನಾ’ ಉರ್ದೂ ಕಾದಂಬರಿ ಆಧಾರಿತ, ಎಂದು ಟೈಟ್ಲ್ ತೋರಿದ್ದರಿಂದ ಧಾರಾವಾಹಿ ಮುಗಿದುದೇ ನಾನು ಪುಸ್ತಕವನ್ನರಸಿ ಕೊಂಡು, ಓದಿ, ಅದರ ಭಾಷಾ ಸಂಪತ್ತುವರ್ಣನಾ ವೈಖರಿ, ಪಾತ್ರಚಿತ್ರಣ, ಪ್ರಕೃತಿ ವರ್ಣನೆ, ಸಂಸ್ಕೃತಿ ಚಿತ್ರಣ, ಅತ್ಯಾಕರ್ಷಕ ಸಂಭಾಷಣೆಗಳಿಗೆ ಮಾರು ಹೋದೆ. ಕೃತಿಯಲ್ಲಿನ ಪ್ರಕೃತಿ ವರ್ಣನೆಯ ಒಂದು ಪ್ಯಾರಾವನ್ನೂ, ನವಾಬ್ ವಿಕಾರ್ ಜಂಗ್ ಅವರು ಏಮನ್ಳೊಡನೆ ನಡೆಸಿದ ಸಂಭಾಷಣೆಯ ತುಣುಕನ್ನೂ ನನ್ನ ಕನ್ನಡ ನುಡಿಗಿಳಿಸಿ ಡೈರಿಯಲ್ಲಿ ಬರೆದೆ. ಮತ್ತೆ ಸುಮ್ಮನಿರಲಾಗದೆ ಸಂಪೂರ್ಣ ಕೃತಿಯನ್ನು ಕನ್ನಡಕ್ಕಿಳಿಸುವ ಆಸೆಯಿಂದ ಮೂಲ ಲೇಖಕಿಯನ್ನರಸ ಹೊರಟೆ. ಹೈದರಾಬಾದ್ ನವಾಬ ಸಂಸ್ಕೃತಿಯ ಅತ್ಯುತ್ತಮ ಚಿತ್ರಣವಿತ್ತ ಲೇಖಕಿ ಖಂಡಿತವಾಗಿಯೂ ಹೈದರಾಬಾದ್ನವರೇ ಇರಬೇಕನಿಸಿ ಸೆಕುಂದರಾಬಾದ್ ನಮ್ಮ ಆನಂದಂಕ್ಲ್ ಅವರನ್ನು ಸಂಪರ್ಕಿಸಿ ವಿಳಾಸವನ್ನರಸುವಂತೆ ಕೋರಿಕೊಂಡೆ. ತಕ್ಷಣ ಅಂಕ್ಲ್ ಸಹಕರಿಸಿ ಬಂಜಾರಾ ಹಿಲ್ಸ್ "ಫೇರ್ ವ್ಯೂ' ಮನೆಯ ವಿಳಾಸ, ಫೋನ್ ನಂಬರ್ ಇತ್ತರು. ಯಾವುದೇ ಬಿಗುಮಾನ ತೋರದೆ, ಸಹೃದಯತೆಯಿಂದ ತಕ್ಷಣ ಒಪ್ಪಿಗೆಯಿತ್ತ ರಫಿಯಾ ಹಾಗೂ ಮಂಜೂರುಲ್ ಅಮೀನರು, ಪ್ರಕಾಶಕರಾದ ಹಿಂದ್ ಪಾಕೆಟ್ ಬುಕ್ಸ್ ಮಲ್ಹೋತ್ರಾ ಅವರನ್ನು ಸಂಪರ್ಕಿಸುವಂತೆ ತಿಳಿಸಿದರು. ವರ್ಷದೊಳಗೆ ಸಿದ್ಧವಾದ ಆಲಂಪನಾದ ಹಸ್ತಪ್ರತಿ ತರಂಗ, ಸುಧಾ, ಕನ್ನಡಪ್ರಭಾ ಪತ್ರಿಕೆಗಳನ್ನು ಎಡತಾಕಿಅನುವಾದ ತುಂಬ ಚೆನ್ನಾಗಿದೆ; ಆದರೆ ಧಾರಾವಾಹಿಗಾಗಿ ಸಂಕ್ಷಿಪ್ತಗೊಳಿಸಿ ಅಧ್ಯಾಯಗಳಾಗಿ ರೂಪಿಸಿ ಕೊಟ್ಟರೆ ಉತ್ತಮ", ಎಂದುತ್ತರ ಬಂತು. ಸಂಕ್ಷಿಪ್ತಗೊಳಿಸಲು ನಾನು ಸಿದ್ಧಳಿರಲಿಲ್ಲ. ಸುಧಾಕ್ಕಾಗಿ ಅಧ್ಯಾಯಗಳನ್ನಾಗಿಸಿ ಕಳುಹಿ ಪ್ರಕಟಣೆಯ ದಿನಾಂಕವನ್ನು ಎದುರು ನೋಡುತ್ತಿರುವಾಗ, ಆತ್ಮೀಯರಾದ ಸಾಹಿತಿ ಕೆ.ಟಿ.ಗಟ್ಟಿ ಅವರ ಮಾತಿಗೊಪ್ಪಿ, ಬೆಂಗಳೂರಿನ ಭಾಗೀರಥಿ ಪ್ರಕಾಶನದ ರಾಜಾ ಚೆಂಡೂರರು ೧೯೯೪ರಲ್ಲಿ ಪುಸ್ತಕ ಪ್ರಕಟಿಸಿಯೇ ಬಿಟ್ಟರು. ಟಿ.ವಿ. ಧಾರಾವಾಹಿಯ ನಿರ್ದೇಶಕ ಲೇಖ್ ಟಂಡನ್ ಅವರಿಂದ ತರಿಸಿಕೊಂಡ ಧಾರಾವಾಹಿಯ ಫೋಟೋಗಳೊಡನೆ ಸುಧಾ ಕಛೇರಿಯಲ್ಲಿದ್ದ ಹಸ್ತಪ್ರತಿಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಾಯ್ತು.

ಕನ್ನಡ "ಆಲಂಪನಾ' ತುಂಬ ಜನಪ್ರಿಯವಾಗಿ ಆರು ತಿಂಗಳೊಳಗೆ ಪ್ರತಿಗಳು ಮುಗಿದು ಹೋದವು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಕೊನೆಯ ಸುತ್ತಿನ ಸ್ಪರ್ಧೆಗಾಗಿ "ಆಲಂಪನಾ" ಎರಡು ವರ್ಷ ಅಕಾಡೆಮಿಯಿಂದ ಆಹ್ವಾನಿಸಲ್ಪಟ್ಟಿತ್ತು. "ಕನ್ನಡದ್ದೇ ಕೃತಿಯೆಂಬಷ್ಟು ನೈಜವೂ ಸುಂದರವೂ ಆಗಿದೆ ಎಂದು ಕೇಳಿದ್ದೇವೆ", ಎಂದು ರಫಿಯಾ ದಂಪತಿ ಸಂತಸಪಟ್ಟರು. ಆದರೆ ಕೃತಿ ಬಿಡುಗಡೆಯಾದ ಸಮಯದಲ್ಲೇ ನಡೆದ ಉರ್ದೂ ಸಮಾಚಾರ ಪ್ರಸಾರ ವಿರೋಧೀ ಅಂದೋಲನದಿಂದಾಗಿ ಕೃತಿಯ ಪ್ರಸಾರಕ್ಕೆ ತೊಂದರೆಯಾಯ್ತೆಂದು ಪ್ರಕಾಶಕರಂದರು. ಮುಂಬೈ ಕರ್ನಾಟಕ ಸಂಘದಲ್ಲಿ ಮಾನ್ಯ ವ್ಯಾಸರಾಯ ಬಲ್ಲಾಳರ ಕೈಗಳಿಂದ ಕೃತಿ ಬಿಡುಗಡೆ ಆಯ್ತು. ಅವರ ಪ್ರೀತಿ ವಾತ್ಸಲ್ಯದ ಮೆಚ್ಚುನುಡಿಗಳು ಮುಂಬೈ ಕನ್ನಡ ಸಾಹಿತ್ಯ ಲೋಕಕ್ಕೆ ನನಗೆ ಪ್ರವೇಶಿಕೆ ನೀಡಿದುವು. ಅದುವರೆಗೆ ನಗರದಲ್ಲಿ ಕನ್ನಡದ ಸಂಪರ್ಕವಿಲ್ಲದೆ ಹತಚೇತನಳಾಗಿದ್ದ ನನ್ನಲ್ಲಿ ಚೈತನ್ಯವನ್ನು ತುಂಬಿದುವು. ತಮ್ಮ `ಹೇಮಂತಗಾನ’, `ವಾತ್ಸಲ್ಯ ಪಥ’ ಕಾದಂಬರಿಗಳಿಂದ ನನಗೆ ತುಂಬ ಪ್ರಿಯರಾಗಿದ್ದ ಬಲ್ಲಾಳರು ನನ್ನ ಸಾಹಿತ್ಯಸಾಧನೆಗೆ ಪ್ರೋತ್ಸಾಹದ ತನಿರಸವನ್ನೆರೆದರು.
      
ಮಂಗಳೂರಿನ ಮನೋರಮಾ ಭಟ್ ಅವರು `ಮುಂಗಾರು’ ಪತ್ರಿಕೆಯಲ್ಲಿ `ಆಲಂಪನಾ’ ಕೃತಿ ಪರಿಚಯ ಮಾಡಿದರು. ಎಷ್ಟು ಬಾರಿ ಓದಿದರೂ ಪುನಃ ಪುನಃ ಓದಿಸಿಕೊಂಡು ಹೋಗುವ ಆಕರ್ಷಣೆ ಕೃತಿಯಲ್ಲಿದೆ ಎಂಬ ಮೆಚ್ಚುನುಡಿಗಳನ್ನು ಕೇಳಿದಾಗ ಧನ್ಯವೆನಿಸಿ ಹೃದಯ ತುಂಬಿ ಬರುತ್ತದೆ; ರಫಿಯಾರ ನೆನಪಿನಿಂದ ಕಣ್ಣು ಮಂಜಾಗುತ್ತದೆ.


(ಮುಂದುವರಿಯಲಿದೆ)

3 comments:

  1. We get a lot of money for temple work , renovation etc Fine. But kannada Elementary schools need real Brahma kalsaha
    There it is hard to get one tenth of what we get for a temple BrahmaKalasha.

    ReplyDelete
    Replies
    1. Yes, Sir; Completely true!
      This very school needs renovation, as it is approaching its Centenary and we are trying hard to fulfill the purpose.

      Delete
    2. ನಿಮ್ಮ ಮಾತು ಅಕ್ಷರಶಃ ಸತ್ಯ ಸರ್....

      Delete