16 January 2017

ಶ್ರೇಯಸ್ಸಿನ ಪಥ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ
ಅಧ್ಯಾಯ - ೨೧
                          
ಮಗು ತುಷಾರ್ನನ್ನು ಕರಕೊಂಡು ಮುಂಬೈಯ ಬಾಂದ್ರಾ, ಸಾಂತಾಕ್ರೂಜ್, ಗೋರೆಗಾಂವ್, ವಸಾಯಿ, ಒಪೆರಾಹೌಸ್, ವರ್ಲಿ, ಡೊಂಬಿವಿಲಿಯ ಸಮೀಪ ಬಂಧುಗಳ ಮನೆಗಳಿಗೆಲ್ಲ ಭೇಟಿಯೀಯುತ್ತಿದ್ದ ದಿನಗಳಿದ್ದುವು. ಒಂದು ರಾತ್ರಿ ಹೀಗೆ ವಸಾಯಿಯಿಂದ ಹಿಂದಿರುಗುವಾಗ ಮುಂಬೈಯ ಕರಾಳ ಮುಖದ ಪರಿಚಯವಾಯ್ತು. ನಿಲ್ದಾಣದಲ್ಲಿ ರೈಲು ನಿಂತಾಗ ಹತ್ತಿ ಒಳಬಂದ ವ್ಯಕ್ತಿಯೊಬ್ಬ, ನಮ್ಮೆದುರು ಕುಳಿತಿದ್ದ ಧಡೂತಿ ದೇಹದ ಹಾಲಿನ ಭಯ್ಯಾ ಒಬ್ಬನೆದುರು ಬಂದು ನಿಂತು ಕೆಕ್ಕರಿಸಿ ಅವನನ್ನು ನೋಡ ತೊಡಗಿದ. ಭಯ್ಯಾ, ಭಯದಿಂದ ನಡುಗುತ್ತ, ಕೈಮುಗಿದು ಬೇಡಿಕೊಳ್ಳತೊಡಗಿದ. ಕೈಯೊಂದನ್ನು ಬೆನ್ನ ಹಿಂದೆ ಇರಿಸಿಕೊಂಡಿದ್ದ ವ್ಯಕ್ತಿ, ನನ್ನರಿವಿಗೆ ನಿಲುಕದ ಮಾತುಗಳಿಂದ ಅವನನ್ನೆಬ್ಬಿಸಿ ಬಾಗಿಲಬಳಿ ಬರುವಂತೆ ಮಾಡಿದ. ಬೋರಿವಿಲಿ ನಿಲ್ದಾಣ ಸಮೀಪಿಸುತ್ತಿದ್ದಂತೆ ಮೇಲಿನ ಕೈಯಾಸರೆಯನ್ನು ಹಿಡಿದು ಇದ್ದೆಲ್ಲ ಶಕ್ತಿಯಿಂದ, ಭಯ್ಯಾ ರೈಲಿನಿಂದ ಹೊರಬೀಳುವಂತೆ ಕಾಲ್ಗಳಿಂದೊದ್ದು ಬಿಟ್ಟ. ಮತ್ತೆ ಕುಳಿತಿದ್ದವರೆಲ್ಲರತ್ತ ಎಚ್ಚರಿಕೆಯ ಕ್ರೂರ ನೋಟವೊಂದನ್ನು ಬೀರಿ, ಕಂಬಿಯಾಚೆ ಇನ್ನೊಂದು ಹಳಿಯಲ್ಲಿ ಅದೇ ಆಗ ಹೊರಡಲಿದ್ದ ರೈಲೊಳಕ್ಕೆ ಕಾಲಿರಿಸಿ ಮಾಯವಾದ!
ನಾನು ದಿಗ್ಮೂಢಳಾಗಿದ್ದೆ. ಅಷ್ಟೊಂದು ಜನರಿದ್ದೂ ಯಾರೊಬ್ಬರೂ ಏನೂ ಮಾತನಾಡದೆ ಉಳಿದ ಬಗ್ಗೆ, ಕಣ್ಣೆದುರೇ ಕ್ರೌರ್ಯ ನಡೆಯಲು ಬಿಟ್ಟ ಬಗ್ಗೆ ಸಿಟ್ಟಾಗಿ ನಾನು ನಮ್ಮವರನ್ನು ಪ್ರಶ್ನಿಸಿದೆ. "ಅವನು ಬೆನ್ನ ಹಿಂದಿಟ್ಟುಕೊಂಡ ಕೈಯಲ್ಲಿ ಏನಿತ್ತು, ನೋಡಿದೆಯಾ, ನೀನು?" ಎಂದರು ಇವರು. ನನ್ನ ಆಕ್ಷೇಪ ಅರಿವಾಗಿ, ಸುತ್ತ ಇದ್ದ ಜನರು, " ಬಂಬಯಿ ಹೇ, ಬೆಹನ್, ಕೋಯೀ ಕುಛ್ ನಹೀ ಕರ್ ಸಕ್ತಾ ಹೆ" ಎಂದು ವಿಷಾದದಿಂದಂದರು. ಆದರೂ, ನಾನೂ ಇಂತಹ ಕ್ರೌರ್ಯಕ್ಕೆ ಮೂಕಸಾಕ್ಷಿಯಾಗಿ ಉಳಿದೆನೆಂಬ ನೋವು ಇಂದಿಗೂ ನನ್ನಲ್ಲಿ ಹಾಗೇ ಉಳಿದು ಕೊಂಡಿದೆ. ಕೆಲವರ್ಷಗಳ ಬಳಿಕ ಗ್ಯಾಂಗ್ಸ್ಟರ್ ಅರುಣ್ ಗಾವ್ಲಿ ಮುಖ ವೃತ್ತಪತ್ರಿಕೆಯಲ್ಲಿ ಕಾಣಿಸಿಕೊಂಡಾಗ ಅಂದು ನೋಡಿದ ಮರೆಯಲಾಗದ ಕ್ರೌರ್ಯದ ಮುಖ ನನ್ನೆದುರಿತ್ತು. 
ಒಪೆರಾ ಹೌಸ್ಗೆ ಹೋಗಲು ನೇರವಾಗಿ ಕೊನೆಯ ನಿಲ್ದಾಣ ವಿ.ಟಿ.ಗೆ ರೈಲು ಹಿಡಿಯುವುದು ನನಗೆ ಕಷ್ಟವಿರಲಿಲ್ಲ. ವಿ.ಟಿ.ಯಲ್ಲಿ  ನನ್ನ ಹಾಗೂ ತುಷಾರ್ ಮೆಚ್ಚಿನ ವಿಕ್ಟೋರಿಯಾ - ಜಟಕಾ - ಹಿಡಿದು ಒಂದು ರೂಪಾಯಿ ಹನ್ನೆರಡು ಆಣೆಯಲ್ಲಿ ಒಪೆರಾ ಹೌಸ್ ತಲುಪುತ್ತಿದ್ದೆ. ಸಾಗರ ಹಾಗೂ ಚೌಪಾಟಿಯ ನೋಟ, ಒಪೆರಾ ಹೌಸ್ ಕಟ್ಟಡದ ಸೊಗಸು, ಅಲ್ಲಿ ಸೆಳೆಯುತ್ತಿದ್ದ ಫಿಲ್ಮ್ ಪೋಸ್ಟರ್ಗಳು, ಕೆನಡಿ ಬ್ರಿಜ್ ಕೆಳಗಿನ ಝವೇರಿ ನಿವಾಸ, ನಾನಾ ಚೌಕ್ ಅಜ್ಜನ ಮನೆ ಬಳಿಯ ನಾಝ್ ಥಿಯೇಟರ್, ಲಿಬರ್ಟಿ, ಮರಾಠಾ ಮಂದಿರ್, ಎರೋಸ್, ಮೆಟ್ರೋ ಥಿಯೇಟರ್ಗಳು, ಭವ್ಯ ಹಳೆ ಮುಂಬೈಯ ಬ್ರಿಟಿಶ್ ಕಟ್ಟಡಗಳು - ಇಂದಿಗೂ ಹಳೆ ಮುಂಬೈ ನನಗೆ ಬಹಳ ಇಷ್ಟ.

ತುಷಾರ್ ಹುಟ್ಟಿ ಒಂದು ವರ್ಷದಲ್ಲಿ ನಮ್ಮಕ್ಕ, ಭಾವನ ಮಡಿಲೂ ತುಂಬುವಂತೆ ಪಲ್ಲವಿ ಹುಟ್ಟಿ ಬಂದಳು. ಬೆಳ್ಳನೆ ಚಿಕ್ಕ ಗಾತ್ರದ ಪಲ್ಲವಿ ಹೆಚ್ಚು ಚಟುವಟಿಕೆಯ ಮಗುವಾಗಿರಲಿಲ್ಲ. ಪಲ್ಲವಿ ಚಿತ್ರ ಅದೇ ತಾನೇ ತೆರೆ ಕಂಡಿತ್ತು. ಟಿ.ವಿ. ಆಗಷ್ಟೇ ಮನೆಗಳಿಗೆ ಪ್ರವೇಶಿಸ ತೊಡಗಿತ್ತು

ತುಷಾರ್ಗೆ ಮೂರೂವರೆ ವರ್ಷವಾದಾಗ ಪ್ರಜ್ವಲ್ ಹುಟ್ಟಿ ಬಂದ. ಹೆರಿಗೆಗೆ ಊರಿಗೆ ಅಮ್ಮನ ಮನೆಗೇ ಹೋಗಿದ್ದೆ. ಅಜ್ಜಿಮನೆ ಗುಡ್ಡೆಮನೆಯ ಹೊಳೆಬದಿಯ ಶೀತಲ ವಾತಾವರಣ ತಂದೆಯವರ ಅಸ್ಥಮಾ ಪ್ರಕೃತಿಗೆ ಹೊಂದದ ಕಾರಣ ಅಲ್ಲೇ ಸ್ವಲ್ಪ ದೂರ, ಉಚ್ಚಿಲದ ನಡುಮಧ್ಯೆ ಹೆದ್ದಾರಿಯ ಪಕ್ಕದಲ್ಲಿದ್ದ ನಮ್ಮ ಸೋದರತ್ತೆ ದೇವಕಿ ಅತ್ತೆಯ ಮನೆ 'ಸನ್ ವ್ಯೂ' ಗೆ ತಂದೆಯವರು ವಾಸ ಬದಲಿಸಿದ್ದರು. ನಮ್ಮ ಪ್ರೀತಿಯ ನಾಯಿ ಟೈಗರ್ ಮಾತ್ರ, ನಮ್ಮನ್ನು ಕಾಣದೆ ಇರಲಾಗದೆ, ದಿನವೂ ನಮ್ಮಲ್ಲಿಗೆ ಬಂದು ಮತ್ತೆ ಹೋಗೆಂದ ಮೇಲೆ ಹಿಂದಿರುಗುತ್ತಿತ್ತು. ದಾರಿಯಲ್ಲಿ ಎಷ್ಟೋ ನಾಯಿಗಳೊಡನೆ ಹೋರಾಟವೂ ನಡೆಯುತ್ತಿತ್ತು. ಸಿಂಗ ಮಾತ್ರ ಮನೆ ಬಿಟ್ಟು ಬರುತ್ತಿರಲಿಲ್ಲ. ಅವನು ತನ್ನ ಪುಟ್ಟ ಯಜಮಾನಿತಿಗಳಾದ ನಮ್ಮ ಚಿಕ್ಕಪ್ಪನ ಮಕ್ಕಳಿಗೆ ನಿಷ್ಠನಾಗಿದ್ದರೆ, ಟೈಗರ್ ನಿಷ್ಠೆ, ಪ್ರೀತಿ ನಮ್ಮೊಂದಿಗಿತ್ತು. ಮಹಾ ಪರಾಕ್ರಮಿಯಾಗಿ ಹಿತ್ತಿಲು ಹೊಗುತ್ತಿದ್ದ ದನ, ಆಡುಗಳಿಗೆ ಸಿಂಹಸ್ವರೂಪನಾಗಿದ್ದ ಟೈಗರ್, ಹೊರಗಿನವರ ಆಕ್ರೋಶಕ್ಕೂ ಈಡಾಗುತ್ತಿದ್ದ. ಇಂತಹ ಪಾಶವೀಯ ಕ್ರೌರ್ಯವೇ ಅವನ ಬೆನ್ನಿನಲ್ಲಿ ಆರಿಂಚು ಉದ್ದದ ಕತ್ತಿಯ ಏಟನ್ನು ಮೂಡಿಸಿತ್ತು. ಕುದಿನೀರ ಎರಚಾಟದ ಭೀಭತ್ಸತೆಯನ್ನೂ ತೋರಿತ್ತು. ಮನುಷ್ಯರ ಪಾಶವೀಯ ಕ್ರೌರ್ಯ ಕೆತ್ತಿದ ಗಾಯವು ವ್ರಣವಾದ ಸ್ಥಿತಿಯಲ್ಲೂ, ಟೈಗರ್ ನಮ್ಮಲ್ಲಿಗೆ ಒಮ್ಮೆಯಾದರೂ ಬಾರದೆ ಉಳಿಯದಾದ. ಅವನನ್ನು ಕೊನೆಯ ಬಾರಿ ಕಳುಹಿ ಕೊಟ್ಟ ಮೇಲೆ ಮತ್ತೆ ನಾನವನನ್ನು ಕಾಣಲಿಲ್ಲ. ಪ್ರೀತಿಸಿ ಕಳಕೊಂಡ ಹಲವು ಜೀವಗಳ ಸಾಲಿಗೆ ನಮ್ಮ ಟೈಗರ್ ಸೇರಿ ಹೋದ. ಆದರೆ, ಅವರಂತೇ ಬೆಚ್ಚನೆ ಹೃದಯದಲ್ಲುಳಿದ.        

ಹೆರಿಗೆಯ ದಿನಗಳು ಸಮೀಪಿಸುತ್ತಿದ್ದಾಗ ಒಂದು ರವಿವಾರ ಮಧ್ಯಾಹ್ನ, ನಾವು ಮನೆಯೊಳಗಿದ್ದಾಗ ಹೊರಗೆ ಮನೆಯ ಪಕ್ಕದಿಂದ ಧೊಪ್ ಎಂಬ ಸದ್ದು ಹಾಗೂ ವಿಹ್ವಲ ಚೀರಾಟ ಕೇಳಿಸಿತು. ಪಕ್ಕದ ಮನೆಯ ಹಲಸಿನ ಮರಕ್ಕೆ ಹಣ್ಣು ಕೊಯ್ಯಲು ಹತ್ತಿದ್ದ ಹನ್ನೆರಡು - ಹದಿಮೂರರ ಹರೆಯದ ಹುಡುಗನೊಬ್ಬ ಕಾಲುಜಾರಿ ಕೆಳಗೆ ದರೆಯ ಮೇಲೆ ಬಿದ್ದಿದ್ದ. ದರೆಯ ಮೇಲೆ ಮನೆಯ ಸುರಕ್ಷೆಗೆಂದು ನೆಟ್ಟಿದ್ದ ಗಾಜಿನ ದೊಡ್ಡ ಚೂಪಾದ ಚೂರುಗಳು ಅವನ ತೊಡೆಯನ್ನು ಹರಿದು ರಕ್ತದ ಕೋಡಿ  ಹರಿಸಿದ್ದುವು. ಮನೆಯಾಕೆ, "ಟೀಚರ್, ಟೀಚರ್, ಒಮ್ಮೆ ಬನ್ನಿ ", ಎಂದು ನಮ್ಮಮ್ಮನನ್ನು ಕರೆಯುತ್ತಿದ್ದರು. ಅಮ್ಮನ ಹಿಂದಿನಿಂದಲೇ ಓಡಿ ಬಂದ ನನ್ನನ್ನು ಅಮ್ಮ ಹಿಂದಕ್ಕೆ ಅಟ್ಟಿದರು. ಮನೆಯಿಂದ ತಮ್ಮನ ದೊಡ್ಡ ಟರ್ಕಿಶ್ ಟವೆಲ್ ತರಿಸಿ, ಅದನ್ನು ಗಾಯಕ್ಕೆ ಸುತ್ತಿ, ಹುಡುಗನ ತಂದೆಯನ್ನು ಕರೆಸಿ, ತಕ್ಷಣ ಆಸ್ಪತ್ರೆಗೆ ಕಳಿಸಿದರು. ಎಂತಹ ಪರಿಸ್ಥಿತಿಯಲ್ಲೂ ಅಮ್ಮ ವಿಚಲಿತರಾಗುತ್ತಿರಲಿಲ್ಲ. ಅಮ್ಮ ಹಿಂದಕ್ಕಟ್ಟಿದರೂ, ಕ್ಷಣ ಮಾತ್ರ ಕಂಡ ನೋಟವನ್ನು ನಾನಿನ್ನೂ ಮರೆತಿಲ್ಲ.

ಎಂಟು ತಿಂಗಳು ತುಂಬಿದಾಗ ರಕ್ತಸ್ರಾವವಾಗಿ ಮೂರು ದಿನಗಳ ಸಂಪೂರ್ಣ ಬೆಡ್ರೆಸ್ಟ್ ಬಳಿಕ, ಒಂಬತ್ತು ತಿಂಗಳು ತುಂಬುವ ಹಿಂದಿನ ದಿನವೇ ೧೯೭೪ರ ಆಗಸ್ಟ್ ೭ರಂದು ಹುಟ್ಟಿ ಬಂದ ಪ್ರಜ್ವಲ್, ಚಿಕ್ಕ ಗಾತ್ರದ ಆದರೂ ಗುಂಡಗೆ ಕೆಂಪು ಕೆಂಪಗಿದ್ದ ಮಗು. ತುಷಾರ್, ತನ್ನಮ್ಮನ ಕಡೆಯ ರೂಪವನ್ನಾಂತರೆ, ಪ್ರಜ್ವಲ್ ತಂದೆಯ ಸ್ವರೂಪ ಹೊಂದಿದ್ದ. ತುಷಾರ್ ಹಸಿವೆಯೆಂದೇ ಇರದೆ, ಸದಾ ನಗುತ್ತಾ ಆಡುತ್ತಾ ಇರುತ್ತಿದ್ದರೆ, ಪ್ರಜ್ವಲ್, ಹೊಟ್ಟೆ ತುಂಬದೆ ಅಳುತ್ತಿರುತ್ತಿದ್ದ. ತುಂಬ ಬೆಳ್ಳನೆ ಬಣ್ಣದ, ಕಪ್ಪು ಕಿರು ಕಣ್ಗಳ ,ಕಪ್ಪು ಕೂದಲ ಮಗು, ಪ್ರಜ್ವಲ್. ಮಗುವಿಗೆ ಮೂರು ತಿಂಗಳಾದಾಗ ಒಂದು ಸಂಜೆ, ತುಷಾರ್, ನೆರೆಯ ಮಕ್ಕಳಿಬ್ಬರೊಡನೆ ಅವರ ದೊಡ್ಡ ಆಟಿಕೆ ಕಾರಿನಲ್ಲಿ ಸುತ್ತಲು ಹೊರಟ. ದೊಡ್ಡ ಮಕ್ಕಳು, ಅವನನ್ನು ಕಾರಿನಲ್ಲಿ ಕುಳ್ಳಿರಿಸಿ ರೈಲ್ವೇ ಲೈನಿನಲ್ಲಿ ಅತ್ತಿತ್ತ ಓಡಾಡಿಸಿ , ಮುಸ್ಸಂಜೆಗೆ ಮನೆಗೆ ಹಿಂದಕ್ಕೆ ಕರೆತಂದಿದ್ದರು. ಆಡಿ ಕೊಳೆಯಾದ ಮಗುವಿಗೆ ಸ್ನಾನ ಮಾಡಿಸಿ ಎತ್ತಿ ತಂದು ಅಮ್ಮ ತಲೆಯ ಒದ್ದೆ ತೆಗೆಯುವಾಗ ಮಗುವಿಗೆ ಮೇಲಿಂದ ಮೇಲೆ ವಾಂತಿಯಾಯ್ತು. ಮೈ ಜ್ವರದಿಂದ ಕುದಿಯ ತೊಡಗಿತು. ಅಮ್ಮ ಕೂಡಲೇ ಮಗುವನ್ನು ಮಂಗಳೂರಿಗೆ ಕಂಕನಾಡಿ ಆಸ್ಪತ್ರೆಗೆ ಕರೆದೊಯ್ದರು. ನ್ಯುಮೋನಿಯಾ ಎಂದು ಡಾಕ್ಟರ್ ಸಾರಿದರು. ಪ್ರತಿ ರಾತ್ರಿ ನೂರ ಐದು ಡಿಗ್ರಿಗೆ ಏರುವ ಜ್ವರ, ಬೆಳಿಗ್ಗೆ ನೂರೊಂದಕ್ಕೆ ಇಳಿಯುತ್ತಿತ್ತು. ಬೆಳಗ್ಗೆ ಮನೆಯಲ್ಲಿ ಎಳೆ ಮಗುವಿಗೆ ಸ್ನಾನ ಮಾಡಿಸಿ ಮಲಗಿಸಿ, ನಾನು ಆಸ್ಪತ್ರೆಗೆ ಓಡುತ್ತಿದ್ದೆ. ತಂಗಿ ಮಂಜುಳಾ, ಮಗುವಿಗೆ ಬಾಟ್ಲ್ ಹಾಲು ಕುಡಿಸುತ್ತಾ, ತೊಟ್ಟಿಲು ತೂಗಿ ಮಲಗಿಸುತ್ತಾ ಅವನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಳು. ಆಸ್ಪತ್ರೆಯಲ್ಲಿ ಕ್ಷೀಣನಾಗಿದ್ದ ಮಗು, ನಾನು ಹಿಂದಿರುಗುವಾಗ, ಹೋಗಬೇಡವೆಂದು ಮಲಗಿದಲ್ಲಿಂದಲೇ ಸೆರಗು ಹಿಡಿದೆಳೆಯುತ್ತಿದ್ದ. ಬಲು ಕಷ್ಟದಿಂದಲೇ ಬಿಡಿಸಿಕೊಂಡು ನಾನು ಮನೆಗೆ ಹಿಂದಿರುಗುತ್ತಿದ್ದೆ. ಅಮ್ಮ, ಎಳೆ ಮಗುವಿನ ಬಗ್ಗೆ ಜಾಗ್ರತೆ ಹೇಳುತ್ತಿದ್ದರು. ಹದಿನೈದು ದಿನಗಳೂ ಅಮ್ಮ ಆಸ್ಪತ್ರೆಯಲ್ಲಿ ಮಗುವಿನ ಬಳಿಯಿಂದ ಕದಲಲಿಲ್ಲ. ಹದಿನೈದು ದಿನಗಳ ಬಳಿಕ ಜ್ವರ ನಿಂತು ಮನೆಗೆ ಹಿಂದಿರುಗಿದ ಮಗುವಿಗೆ ಎರಡು ತಿಂಗಳ ಕಾಲ ಚಿಕಿತ್ಸೆ ಮುಂದುವರಿಯಿತು. ಕೊನೆಗೆ ಮಗು ಚೇತರಿಸಿಕೊಂಡು ಸಂಕಟ ಪರಿಹಾರವಾಯ್ತು.

ನಮ್ಮವರ ಗೆಳೆಯನೂ, ವಾವೆಯಲ್ಲಿ ತಮ್ಮನೂ ಆದ ರಾಜ, ಹಾಗೂ ತಂಗಿ ಮಂಜುಳಾ ಪರಸ್ಪರ ಮೆಚ್ಚಿ ಕೊಂಡಿದ್ದರು. ಅಣ್ಣ ಮೋಹನ್, ನಮ್ಮ ತಂದೆಯ ಮದರಾಸ್ ಚಿಕ್ಕಮ್ಮನ ಮಗಳು ರೋಹಿಣಿ ಅತ್ತೆಯ ಮಗಳು ಸುಜಾತಾಳನ್ನು ವಿವಾಹವಾಗುವುದಾಗಿ ಹಿರಿಯರು ನಿಶ್ಚಯಿಸಿದ್ದರು. ಅಂತೆಯೇ, ಮದುವೆಗಳನ್ನು ಒಟ್ಟಿಗೆ ನೆರವೇರಿಸುವುದೆಂದು ಹಿರಿಯರು ನಿಶ್ಚಯಿಸಿದಂತೆ, ೧೯೭೫ರ ಮೇ ೨೫ರಂದು ಮಂಗಳೂರಿನ ಕದ್ರಿ ದೇವಳದ ಕಲ್ಯಾಣ ಮಂಟಪದಲ್ಲಿ ಜೋಡಿ ಮದುವೆ ನಡೆದುವು. ಮುಂಬೈಯಲ್ಲೇ ಬೆಳೆದ ಸುಜಾತಾ ನಮ್ಮೂರು, ಮನೆ ಸೇರಿದರೆ, ಉದ್ಯಾವರ ಕಣ್ವತೀರ್ಥದ ಮನೆಗೆ ಮದುವೆಯಾಗಿ ಹೋದ ಮಂಜುಳಾ, ಮುಂಬೈ ಸೇರಿದಳು.


ಪ್ರಜ್ವಲ್ ಹಾಗೂ ತುಷಾರ್ ಜೊತೆಗೆ ನಾನು ಮುಂಬೈಗೆ ಹಿಂದಿರುಗಿದ್ದು, ಛೇಡಾ ನಗರದ ನಾಲ್ಕುಕೋಣೆಗಳ ಮನೆಗೆ. ಬೆಳೆಯುವ ಸಂಸಾರಕ್ಕೆ ಸ್ಥಳ ಸಾಲದೆಂದು ಭಾಂಡೂಪ್ ಮನೆಯಿಂದ ನಾವು ಇಲ್ಲಿಗೆ ಸ್ಥಳಾಂತರಗೊಂಡಿದ್ದೆವು. ಉಪ್ಪಿನ ಪ್ರದೇಶವಾಗಿದ್ದ ಛೇಡಾನಗರದಲ್ಲಿ ವಸತಿ ಸಂಕೀರ್ಣಗಳಿದ್ದ ಕಟ್ಟಡಗಳು ಎದ್ದು ನಿಲ್ಲ ತೊಡಗಿದ್ದವು. ಪಾರ್ವತಿ ಪರಿಹಾರ್ ಎಂಬ ಕಾರ್ಪೊರೇಟರ್, ಅತ್ಯಂತ ಮುತುವರ್ಜಿಯಿಂದ ಛೇಡಾನಗರವನ್ನು ಸ್ವಚ್ಛ, ಸುಂದರ ಪರಿಸರವಾಗಿ ಉಳಿಸಿಕೊಳ್ಳಲು ಶ್ರಮಿಸಿದ್ದರು. ಅವರ ಬಲಗೈಯಾಗಿ ನಮ್ಮ ಕಟ್ಟಡದೆದುರು ಬಂಧು ಎಸ್.ಕೆ.ಉಚ್ಚಿಲ್ ಇದ್ದರು. ಸುಬ್ರಹ್ಮಣ್ಯ ಮಠದ ಮೂರು ಮಹಡಿಗಳ ಮುರುಗಾ ಮಂದಿರ ತಲೆಯೆತ್ತಿತ್ತು. ದೇವಳ ನಿರ್ಮಾಣಕ್ಕೆ ಮದರಾಸಿನಿಂದಲೇ ಕಲ್ಲು ಚಪ್ಪಡಿಗಳು ಬಂದಿದ್ದುವು. ದೇವಳದ ಉದ್ಘಾಟನೆಗೆ ಬಂದ ಮದರಾಸ್ ಮುಖ್ಯಮಂತ್ರಿ ಎಂ.ಜಿ.ಆರ್, ಆನೆಯೊಂದನ್ನು ದೇವಳಕ್ಕೆ ಉಡುಗೊರೆಯಾಗಿ ನೀಡಿದ್ದರು.
         
ನಮ್ಮವರ ಬಾಸ್ ಖೈತನ್ ಒಂದಿನ ಪ್ರಜ್ವಲ್ನನ್ನು ನೋಡಲೆಂದು ಮನೆಗೆ ಬಂದರು. ಮಗುವನ್ನು ಮುದ್ದಿನಿಂದ ಮಡಿಲಲ್ಲಿರಿಸಿಕೊಂಡ ಅವರ ನೀರಿನ ಲೋಟಕ್ಕೆ ಮಗು ಬಿಸ್ಕಿಟ್ ಮುಳುಗಿಸಿ ತಿಂದಾಗ, ಅದೇ ನೀರನ್ನು ಅವರು ಕುಡಿದರು! ಬಾಸ್ ಬರುವುದು ಮೊದಲೇ ತಿಳಿದಿದ್ದರೆ, ಅವರಿಗೆ ನಮ್ಮ ದಕ್ಷಿಣದ ತಿಂಡಿ ತಿನಿಸನ್ನಾದರೂ ಸಿದ್ಧಪಡಿಸಿರಬಹುದಿತ್ತು ಎಂದು ನಾನು ಪರಿತಪಿಸಿದೆ.
          
ತುಷಾರ್, ಛೇಡಾನಗರದ ಮಾಡರ್ನ್ ಇಂಗ್ಲಿಷ್ ಸ್ಕೂಲ್ಗೆ ಸೇರಿಕೊಂಡ. ತುಷಾರ್ ಹುಟ್ಟಿದ  ಮರುವರ್ಷ ಅಕ್ಕನ ಬಸಿರಲ್ಲಿ ಬಂದ  ತಂಗಿ -  ಪಲ್ಲವಿ,  ಮರುವರ್ಷ  ಅಣ್ಣನಿಗೆ ಜೊತೆಯಾದಳು. ನಾವು `ಟವರಿಂಗ್ ಇನ್ಫರ್ನೋ' ಚಿತ್ರ ನೋಡಿ ಬಂದ ಮರುದಿನ, ತುಷಾರ್, ತಾನು ನೋಡಿ ಬಂದ ಚಿತ್ರವನ್ನು ಬಿಡಿಸಿ ತೋರುವುದಾಗಿ ಟೀಚರ್ಗೆ ಹೇಳಿಕೊಂಡಾಗ, ಅವರಿತ್ತ ಕುರ್ಚಿಯ ಮೇಲೆ ಹತ್ತಿ, ಬೋರ್ಡ್ನಲ್ಲಿ ಉರಿಯುತ್ತಿರುವ ಕಟ್ಟಡದ ಚಿತ್ರ ಬಿಡಿಸಿದನಂತೆ. ಮಗುವನ್ನು ಕರೆತರಲು ನಾನು ಶಾಲೆಗೆ ಹೋದಾಗ ಚಿತ್ರ ನನಗಾಗಿ ಕಾದಿತ್ತು! ನೆಹರೂ ಉಡುಗೆ ತೊಟ್ಟು, ತುಷಾರ್ ಆಡಿದ ನೆಹರೂರ ಮಧ್ಯರಾತ್ರಿಯ ಸ್ವಾತಂತ್ರ್ಯ ಉದ್ಘೋಷದ ಭಾಷಣವೂ ಎಲ್ಲರನ್ನು ಸೆಳೆದಿತ್ತು.
           
ಛೇಡಾ ನಗರದ ಮನೆಯಲ್ಲಿ ನಾವು ಹದಿನಾಲ್ಕು ಜನರಿದ್ದೆವು. ಪಲ್ಲವಿಯ ಬಳಿಕ, ಅವಳ ತಮ್ಮನಾಗಿ ಮಗು ರಾಧೇಶ್ ಹುಟ್ಟಿ ಬಂದಿದ್ದ. ಅಕ್ಕನ ತಮ್ಮ ಉಮೇಶ ಹಾಗೂ ಅವನ ಪತ್ನಿ, ನನ್ನ ಹರಿನಿವಾಸ್ ಅಜ್ಜನ ಮಗಳು ಸುಕನ್ಯಾ ಜೊತೆಗಿದ್ದಳು. ಅಕ್ಕನ ತಮ್ಮ ವಿಜಯ, ನನ್ನ ತಮ್ಮ ಮುರಲಿ, ನಮ್ಮವರ ಚಿಕ್ಕ ಪುಟ್ಟ ವ್ಯವಹಾರಗಳಲ್ಲಿ ಜೊತೆಗಾರರಾಗಿದ್ದ ಅವರ ರಮಾನಾಥ ಮಾವ, ಮತ್ತೊಬ್ಬರು ವಿಜ್ಞಾನಿ ರಾವ್, ಹಾಗೂ ನಮ್ಮತ್ತೆ ಕೂಡಾ ಜೊತೆಗಿದ್ದರು. ಅಕ್ಕ ಹಾಗೂ ಸುಕನ್ಯಾ ಟೀಚರಾಗಿದ್ದರೆ, ನಾನು ಮನೆಯಲ್ಲೇ ಗೃಹಿಣಿಯಾಗಿದ್ದೆ. ಮನೆಗೆಲಸಕ್ಕೆ ಆಳುಗಳನ್ನು ಇಟ್ಟುಕೊಳ್ಳುವ ಪರಿಪಾಠ ಆಗಿನ್ನೂ ನಮ್ಮಲ್ಲಿರಲಿಲ್ಲ.

ನಮ್ಮ ಭಾವ ಮಹಾ ಸಾಯಿಭಕ್ತರಾಗಿದ್ದು, ಗುರುವಾರ ಮನೆಯಲ್ಲಿ ಸತ್ಯಸಾಯಿ ಭಜನೆ ನಡೆಯುತ್ತಿತ್ತು. ಭಕ್ತಿಯಿರದ ನನಗದು ಹಿತವೆನಿಸುತ್ತಿರಲಿಲ್ಲವೆಂದೇ ಹೇಳಬೇಕು. ನಮ್ಮ ಎಳೆಯ ಶಿಶುಗಳ ಬಾಯಿಗೆ ಭಾವ, ಬಾಬಾ ವಿಭೂತಿ ತುರುಕುವಾಗ ನನಗೆ ಅಸಹನೆ ಅನಿಸುತ್ತಿತ್ತು. ಆಗೆಲ್ಲ ಸಾಯಿಭಕ್ತರ ಮನೆಗಳಲ್ಲಿ ಪಠದಿಂದ ವಿಭೂತಿ ಸುರಿದಿದೆಯೆಂದೋ, ಮಾಡಿಟ್ಟ ಪ್ರಸಾದವನ್ನು ಸೇವಿಸಲಾಗಿದೆಯೆಂದೋ ವದಂತಿಗಳು ಹಬ್ಬಿ, ಅವನ್ನು ಬಲವಾಗಿ ನಂಬುವವರೂ ಇದ್ದರು. ಅಂತೂ ವಾತಾವರಣ ಉಸಿರು ಕಟ್ಟುವಂತಿರುತ್ತಿತ್ತು.
         
ನಮ್ಮವರು ಕೆಲವು ಸಣ್ಣ ಪುಟ್ಟ ವ್ಯವಹಾರಗಳನ್ನೂ ಆರಂಭಿಸಿ ನಡೆಸ ತೊಡಗಿದ್ದರು. ವಾಟರ್ ಫಿಲ್ಟರ್ ನಿರ್ಮಾಣ, ಮೊದಲಿನದು. ಬಳಿಕ ಡಿಟರ್ಜೆಂಟ್ ಸೋಪ್ ತಯಾರಿ; ಫ್ಲಾಶ್ ಡಿಟರ್ಜೆಂಟ್ ಎಂಬ ಹೆಸರನ್ನು ನಾನೇ ಕೊಟ್ಟೆ. ತದನಂತರ ಮೋಟರ್ಗಳ ಗಾಸ್ಕೆಟ್ ತಯಾರಿ. ಎಲ್ಲವನ್ನೂ ಒಂದೆರಡು ವರ್ಷಗಳಲ್ಲಿ ಜೊತೆಗಾರರಿಗೇ ಬಿಟ್ಟು ಕೊಟ್ಟರು.
          
ಛೇಡಾನಗರದ ನಮ್ಮ ಶ್ರೇಯಸ್ ನಿವಾಸಕ್ಕೆ ನನ್ನ ಪ್ರೀತಿ, ಗೌರವದ ತೆಕ್ಕುಂಜೆ ಮಾಷ್ಟ್ರು, ಪತ್ನೀ ಸಮೇತರಾಗಿ ಭೇಟಿಯಿತ್ತರು. ನಮ್ಮ ವಿನಂತಿಗೆ ಒಪ್ಪಿ, ನಮ್ಮಲ್ಲಿ ಉಂಡು ಬೀಳ್ಕೊಂಡು ಹೋದರು. ಊರಿಗೆ ತಲುಪಿದ ಬಳಿಕ ಅವರ ಪತ್ರ ಬಂದಿತ್ತು. " ದಿನ ನಮಗೆ ವ್ರತವಿತ್ತು. ಆದರೂ ನಿನ್ನ ಪ್ರೀತ್ಯರ್ಥ ನಿಮ್ಮಲ್ಲಿ ಉಂಡು ಬಂದಿದ್ದೇವೆ. ಪ್ರೀತಿ, ವಿಶ್ವಾಸಗಳಿರುವಲ್ಲಿ, ಶುಚಿ ರುಚಿಗಳಿರುವಲ್ಲಿ ವ್ರತ ನಿಯಮಗಳು ಮುಖ್ಯವಲ್ಲ. ಬಹಳ ಕಾಲದಿಂದಲೂ ನಿನ್ನಲ್ಲಿ ಮಗಳೆಂಬ ವಾತ್ಸಲ್ಯ ಬೆಳೆದು ಬಂದಿದೆ....... ಸಮಯ ಸಿಕ್ಕಾಗ ಬರೆಯುತ್ತಿರು. ಅಲ್ಲಿ ನೀನೆಷ್ಟು ವ್ಯಸ್ತಳಿರುವೆಯೋ ಸ್ವತಃ ನೋಡಿರುವೆ. ಆದಾಗಲೆಲ್ಲ ನಾನೇ ಬರೆಯುತ್ತಿರುವೆ ", ಎಂದು ಬರೆದ ಪ್ರಿಯ ಜೀವಕ್ಕೆ ಸಮಯದಲ್ಲಿ ಉತ್ತರಿಸುವಲ್ಲಿ ನಾನು ಸೋತಿದ್ದೆ. ಕೆಲವೇ ದಿನಗಳಲ್ಲಿ, ಮಾಷ್ಟ್ರು ಶಸ್ತ್ರಕ್ರಿಯೆಯ ಅರಿವಳಿಕೆಯಿಂದ ಹೊರಬರದೆ ಪರಂಧಾಮವನ್ನೈದಿದ್ದರು. ವಾತ್ಸಲ್ಯಗುರುವಿಗೆ ನನ್ನ ಶತಕೋಟಿ ನಮನ.

(ಮುಂದುವರಿಯಲಿದೆ)

3 comments:

  1. ಶಾರದಾ ಶೆಟ್ಟಿ17 January, 2017 22:54

    ಶ್ಯಾಮಲಾ ಸಾಯಂಕಾಲ ಮಂದಗಾಳಿಯಲ್ಲಿ ಉದ್ದ ದಾರಿಯಲ್ಲಿ ನಡೆದುಕೊಂಡು ಹೋದ ಹಾಗೆ ಅನ್ನಿಸುತ್ತಿದೆ. ಬರೆಯುತ್ತಿರುವ ನಿಮಗೂ ಬ್ಲಾಗಿಸುತ್ತಿರುವ ಅಶೋಕ ವರ್ಧನರಿಗೂ ಒಳ್ಳೆಯದಾಗಲಿ.

    ReplyDelete
    Replies
    1. ಶಾರದಾ, ಇಂತಹ ಸವಿನುದಿಗಳೇ ನನಗೆ ಜೀವಜಲ.

      Delete
  2. ಅಧ್ಯಾಯಗಳ ಹೆಸರಿನಲ್ಲಿ ತುಂಡು ತುಂಡಾಗಿ ತಮ್ಮ ಆತ್ಮ ಕಥಾನಕ ಮುಂದುವರೆಯುತ್ತಿರುವುದರಿಂದ ನಾನು ಸಂಪೂರ್ಣವಾಗಿ
    ಓದಲಾಗದೇ ಅಭಿಪ್ರಾಯವನ್ನು ತಿಳಿಸುವುದು ಸೂಕ್ತವಲ್ಲ. ಹಾಗಾಗಿ ತಮ್ಮ ಆಧ್ಯಾಯಗಳನ್ನು ಒಂದು ಕಡೆ ನಕಲು ಮಾಡಿಕೊಂಡು ಬರುತ್ತಿದ್ದೇನೆ. ನಂತರ ಸಂಪೂರ್ಣವಾಗಿ ಓದಿ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ. ಅಲ್ಲಿಯವರೆಗೂ ತಾವೂ ತಾಳ್ಮೆಯಿಂದ ಇರಲೇಬೇಕು.

    ReplyDelete