02 January 2017

ಮಧುರ ನೆನಪುಗಳ ತುಷಾರ ಹಾರ

ಶ್ಯಾಮಲಾ ಮಾಧವ ಇವರ `ನಾಳೆ ಇನ್ನೂ ಕಾದಿದೆ' - ಆತ್ಮಕಥಾನಕ ಧಾರಾವಾಹಿಯ 
ಅಧ್ಯಾಯ - ೨೦


ಮಂಗಳೂರ ಕೇಂದ್ರವಾದ ಬಾವುಟಗುಡ್ಡೆಯಿಂದ ಕೆಳಗೆ ಜ್ಯೋತಿ ಟಾಕೀಸ್ನತ್ತ ಸಾಗುವ ಹಾದಿಯಲ್ಲಿ ಡಾ. ಸಲ್ಡಾನಾ ಅವರ ಗ್ಲೆನ್ ವ್ಯೂ ನರ್ಸಿಂಗ್ ಹೋಮ್. ಪಕ್ಕದಲ್ಲೇ ಡಾಕ್ಟರ ಮನೆ; ಸುಂದರ ಹೂದೋಟ. ಬಹು ವಿಶಾಲ ಕೋಣೆಗಳ ಅನುಕೂಲಕರ ನರ್ಸಿಂಗ್ ಹೋಮ್ನಲ್ಲಿ ಒಳರೋಗಿಗಳಿಗೆ ಅತ್ಯುತ್ತಮ ಮನೆಯ ಆಹಾರ ಡಾಕ್ಟರ ಮನೆಯಿಂದಲೇ ಸರಬರಾಜಾಗುತ್ತಿತ್ತು. ಕಾಫಿ, ಬ್ರೆಡ್, ಬಟರ್, ಜ್ಯಾಮ್, ಹಾಲು, ಬಾರ್ಲಿ ನೀರು, ಒಳ್ಳೆಯ ತರಕಾರಿಯೂಟ, ಪುಡ್ಡಿಂಗ್ಗಳ ಸ್ವಾದಿಷ್ಟ ಊಟ. ಸ್ವಚ್ಛ ಕೋಣೆಗಳು; ಸೌಮ್ಯರಾದ ದಾದಿಯರು; ಹತ್ತುದಿನಗಳ ಮಲಗಿದಲ್ಲೇ ಆರೈಕೆಯ ಬಾಣಂತಿ ಉಪಚಾರ. ಎಲ್ಲಕ್ಕಿಂತ ಹೆಚ್ಚಾಗಿ ಮಮತಾಮಯಿಯಾದ ಡಾ. ಸಲ್ಡಾನಾ.
 
ಫೆಬ್ರವರಿ ಹದಿನೈದರ ರಾತ್ರಿ, ಮನೆಯಲ್ಲಿ ಮಲಗಿದ್ದವಳು ಹೊರಹೋಗಿ ಬರಲೆಂದು ಎದ್ದಾಗ, ಶಾರದತ್ತೆಯೂ ಎದ್ದು ಜೊತೆಗೆ ಬಂದರು. ಒಂಬತ್ತು ತಿಂಗಳು ತುಂಬುವುದರಲ್ಲಿದ್ದುದರಿಂದ ಶಾರದತ್ತೆ ಆತಂಕಿತರಾಗಿದ್ದರು. ಮಾಗಿಯ ಚಳಿಯ ರಾತ್ರಿಯಲ್ಲಿ ತಾರೆಗಳು ತುಂಬಿದ ಆಗಸದಡಿಯಲ್ಲಿ ತಂಗದಿರನ ಬೆಳಕಲ್ಲಿ ನಡುಗುತ್ತಿದ್ದ ನನ್ನನ್ನು ಕಂಡು ಶಾರದತ್ತೆ ತೀವ್ರ ಗಾಬರಿಯಾದರು." ಏನಾಯ್ತು, ಬೇಬಿ? ಏನಾಗ್ತಿದೆ? " ಎಂದು ಅವರು ವಿಹ್ವಲರಾದಾಗ ಅಮ್ಮ, ಅಚ್ಚ ಕೂಡಾ ಇನ್ನು ಕಾಯುವುದು ಬೇಡವೆಂದು ತಕ್ಷಣ ಟ್ಯಾಕ್ಸಿ ತರಿಸಿ ಮಂಗಳೂರಿಗೆ, ಗ್ಲೆನ್ ವ್ಯೂಗೆ ಹೊರಟು ಬಂದೆವು. ಶಾರದಾ, ದೇವಕಿಯರಲ್ಲದೆ ಲಕ್ಷ್ಮಿ ಎಂಬ ಸೋದರಿಯೂ ನಮ್ಮ ತಂದೆಯ ಒಡಹುಟ್ಟು ಆಗಿದ್ದರು. ಹೆರಿಗೆಯಲ್ಲಿ ತೀರಿಕೊಂಡ ಸೋದರಿಯ ನೆನಪೇ ನನ್ನ ಶಾರದತ್ತೆಯ ಆತಂಕಕ್ಕೆ ಕಾರಣವಾಗಿತ್ತು. ಗ್ಲೆನ್ ವ್ಯೂ ಸೇರಿದೊಡನೆ ನೋವು ಆರಂಭವಾಗಿ ಪ್ರತಿಯೊಂದು ನೋವಿನೊಡನೆಯೂ ವಾಂತಿಯಾಗಿ, ಮಗು ಮೇಲಕ್ಕೆ ಹೋಗುತ್ತಿತ್ತು. ಮತ್ತೆರಡು ದಿನಗಳೂ ಇದೇ ಪರಿಸ್ಥತಿ ಮುಂದುವರಿಯಿತು. ಡಾ.ಸಲ್ಡಾನಾ, ನನ್ನ ಬಳಿ ನಿಂತುಕೊಂಡು ಸಂತೈಸುತ್ತಿದ್ದರು. “ಸ್ವಲ್ಪ ಪ್ರಯತ್ನಿಸು; ಫೋರ್ಸೆಪ್ಸ್ ಮೂಲಕ ಮಗುವನ್ನು ಹೊರ ತೆಗೆಯ ಬಹುದು; ಆದರೆ ಸುಮ್ಮನೆ ನನಗೆ ಅರ್ವತ್ತು ರೂಪಾಯಿ ತೆರಲೇಕೆ? ಹಣದಲ್ಲಿ ನಿನಗೊಂದು ಸಿಲ್ಕ್ ಸೀರೆ ಕೊಂಡು ಉಡಬಹುದು”, ಎಂದು ಅನುನಯಿಸಲೆತ್ನಿಸುತ್ತಿದ್ದ ಪ್ರಿಯ ಡಾಕ್ಟರನ್ನು ಹೇಗೆ ತಾನೇ ಮರೆಯ ಬಲ್ಲೆ? ಈಗ ಲಕ್ಷ ರೂಪಾಯಿ ಮೊತ್ತವನ್ನೂ ಮೀರಿರುವ ಆಸ್ಪತ್ರೆ ಹೆರಿಗೆಗಳ ಖರ್ಚನ್ನು ನೆನೆದರೆ, ಡಾ. ಸಲ್ಡಾನಾ ಅವರು ದೇವರಂಥವರೆಂದೇ ಅನಿಸುತ್ತದೆ.

೧೭ ಫೆಬ್ರವರಿ ಸಂಜೆ .೨೦ಕ್ಕೆ ಫೋರ್ಸೆಪ್ಸ್ ಪ್ರಯೋಗವಾಗಿ ಮಗು ತುಷಾರ್ ಹುಟ್ಟಿ ಬಂದ (೧೯೭೧). ಅರಿವಳಿಕೆಯ ಪ್ರಭಾವ ಅಡಗಿ ಜ್ಞಾನ ಮರುಕಳಿಸಿ ನಾನು ಕಣ್ಬಿಟ್ಟಾಗ ಬಳಿಯಲ್ಲಿ ನಿಂತಿದ್ದ ನನ್ನಚ್ಚನ ಕಣ್ಗಳಲ್ಲಿ ನೀರಿತ್ತು! ಪಕ್ಕದ ಮೇಜಿನಲ್ಲಿ ಪಿಂಕ್ ಟರ್ಕಿಶ್ ಟವೆಲ್ನಲ್ಲಿ ಸುತ್ತಲ್ಪಟ್ಟ ಮಗು ಕಣ್ಣು ಬಿಟ್ಟು ನೋಡುತ್ತಿತ್ತು. ತಲೆಯಲ್ಲಿ ತೆಳುವಾಗಿ ಕುರುಳುಗಳಿದ್ದುವುಹತ್ತು ದಿನಗಳ ಬಳಿಕ ಮಗುವಿನೊಂದಿಗೆ ಮನೆಗೆ ಮರಳಿದ ಮೇಲೆ ಎರಡು ತಿಂಗಳ ಶಿಸ್ತುಬದ್ಧ, ಅಚ್ಚುಕಟ್ಟಾದ ಬಾಣಂತನ ಕಾದಿತ್ತು. ತಾಯಿ ಮಗುವಿನ ಎಣ್ಣೆಸ್ನಾನ, ಡಾ. ಶಾಸ್ತ್ರಿ ಅವರ ಎಣ್ಣೆ, ಲೇಹ, ಕಷಾಯ, ಡಾ. ಮಥಾಯಸ್ ಅವರ ಮಗುವಿನ ತೈಲದ ಪರಿಮಳ, ಎಣ್ಣೆ ಸ್ನಾನದ ಬಳಿಕ ದೊಡ್ಡ ಲೋಟದಲ್ಲಿ ಓಲೆಬೆಲ್ಲದ ಗಟ್ಟಿ ಕಾಫಿ, ಬಾಣಂತಿ ಮದ್ದು, ಲೋಭಾನದ ಪರಿಮಳ! ಮಗುವನ್ನು ನೋಡಲು ಬರುವ ನೆಂಟರಿಷ್ಟರು! ಒಳಗೆ ಅಡಿಗೆ ಕೋಣೆಯಲ್ಲಿ ಅಮ್ಮ, ಅತ್ತೆ, ದೊಡ್ಡಮ್ಮ, ಚಿಕ್ಕಮ್ಮಂದಿರು ಬಾಣಂತಿ ಮದ್ದಿಗಾಗಿ ಕಡೆವ ಕಲ್ಲಿನಲ್ಲಿ ಅಷ್ಟು ಹೊತ್ತು ಅರೆಯುವ ಸದ್ದನ್ನು ಕೇಳಿಯೇ ಸಾಕಾಗಿ ಹೋಗುತ್ತಿತ್ತು.
[ಸಂಜೀವ ಚಿಕ್ಕಪ್ಪ]
ಎಷ್ಟೋ ವರ್ಷಗಳ ಬಳಿಕ, ಬೆಲ್ಯಮ್ಮ ತೀರಿಕೊಂಡಾಗ ನಮ್ಮ ಜೊತೆ ಊರಿಗೆ ಬಂದಿದ್ದ  ದೊಡ್ಡ ಚಿಕ್ಕಪ್ಪ, ಈಗ ಮಗುವನ್ನು ನೋಡಲು ಬಂದಿದ್ದರು. ನಕ್ಷತ್ರದ ಪ್ರಕಾರ ಹೆಸರು `ತ’ ಅಕ್ಷರದಿಂದ ಆರಂಭವಾಗಬೇಕು ಎಂದಾಗ ಮಗುವಿಗೆ ತುಷಾರ ಎಂಬ ಹೆಸರನ್ನೂ ಚಿಕ್ಕಪ್ಪನೇ ಸೂಚಿಸಿದ್ದರು. ಎಷ್ಟೋ ವರ್ಷಗಳಿಂದ ಮುಂಬಯಿಯಲ್ಲಿ ಗುಜರಾಥಿ ಸಮುದಾಯದ ಸಂಪರ್ಕದಲ್ಲಿದ್ದ ಚಿಕ್ಕಪ್ಪನಿಗೆ ಹೊಳೆದ ಹೆಸರದು. ತುಷಾರ ಪತ್ರಿಕೆಯೂ ಆಗಷ್ಟೇ ಜನ್ಮ ತಾಳಿತ್ತು. ಯಾ ಕುಂದೇಂದು ತುಷಾರ ಹಾರ ಧವಳಾ ಎಂಬ  ಶಾರದಾಸ್ತುತಿಯೂ ನನಗೆ ತುಂಬ ಪ್ರಿಯವಾಗಿತ್ತು.

[ಮಗು ತುಷಾರ್ನೊಂದಿಗೆ ತಂಗಿ ಮಂಜುಳಾ ಜೊತೆ]
ಆಗಿನ್ನೂ ನಮ್ಮೂರಿಗೆ ವಿದ್ಯುದ್ದೀಪ ಬಂದಿರಲಿಲ್ಲ. ಲಾಂಟರ್ನ್, ಬೆಡ್ಲ್ಯಾಂಪ್ ಹಾಗೂ ಚಿಮಣಿ ದೀಪಗಳೇ ನಮ್ಮ ಬೆಳಕು. ಒಂದು ರಾತ್ರಿ  ಮಗು ತುಷಾರ್ ತೊಟ್ಟಿಲ ಬಳಿ ಏನೋ ಧಪ ಧಪ ಸದ್ದು. ಕ್ಷಣ ಬಿಟ್ಟು ಪುನಃ ಪುನಃ ಏನೋ ಬಡಿಯುವ ಸದ್ದು. ಅಮ್ಮ ಎದ್ದು ಚಿಮಣಿ ದೀಪ ಎತ್ತರಿಸಿ ನೋಡಿದರೆ, ತೊಟ್ಟಿಲ ಕೆಳಗೆ ದೊಡ್ಡದೊಂದು ಮುಗುಡು ಮೀನು ನೆಲಕ್ಕೆ ಬಾಲ ಬಡಿಯುತ್ತಿದೆ. ನಮ್ಮ ಬೆಕ್ಕು ಮಂಗಣ್ಣ, ಎದುರಲ್ಲಿ ಕುಳಿತು ಬೇಟೆಯನ್ನೇ ದಿಟ್ಟಿ ನೆಟ್ಟು ನೋಡುತ್ತಿದೆ. ತುಂಬ ತುಂಟಾಟ ಮಾಡುವ ಪ್ರತಾಪಶಾಲಿ ಬೆಕ್ಕು, ನಮ್ಮ ಮಂಗಣ್ಣ. ಕಪ್ಪುಮಚ್ಚೆಯ ಅಚ್ಚ ಬಿಳಿಯ ಚೆಲುವ. ಇಡಿಯ ಮನೆಯಲ್ಲಿ ಮಗುವಿನ ತೊಟ್ಟಿಲ ಕೆಳಗೇ ತನ್ನ ಬೇಟೆಗೆ ತಕ್ಕ ಜಾಗ ಎಂದು ಅದಕ್ಕೇಕೆ ಅನಿಸಿತೋ, ಯಾರು ಬಲ್ಲರು? ಅದು ಬಿರು ಮಳೆಗಾಲದ ಆರಂಭದ ದಿನಗಳು. ಹೊಳೆಯಲ್ಲಿ ನೆರೆಯೇರಿ ನಮ್ಮ ಸುತ್ತಣ ಗದ್ದೆಗಳಲ್ಲಿ ಪ್ರವಾಹ ಉಕ್ಕಿ ಹಿತ್ತಿಲೊಳಗೂ ಹರಿದು ಬರುತ್ತಿದ್ದ ದಿನಗಳು. ಒಮ್ಮೆ ಹಾವನ್ನೂ ಹಿಡಿದು ತಂದಿದ್ದ ಮಂಗಣ್ಣ, ಮತ್ತೆ ಕೆಲ ದಿನಗಳಲ್ಲೇ ವಿಷದ ಹಾವಿನೊಡನೆ ಸೆಣಸಿ ಜೀವ ತ್ಯಜಿಸಿತ್ತು.

ತುಷಾರ್, ತೊಟ್ಟಿಲ ಮಗುವಾಗಿದ್ದಾಗ ನಮ್ಮ ನಾಯಿ ಟೈಗರ್, ಕಾಡುಬೆಕ್ಕು ಬೆರುವನ್ನು ತೆಂಗಿನ ಮರದ ಕೆಳಗೆ ಕಾದು ನಿಂತು ಕೊಂದು ಹಾಕಿದ ಬಗ್ಗೆ ಬಹುಶಃ ಮೊದಲೇ ನನ್ನ ಗುಡ್ಡೆಮನೆ ಸಂಕಥನದಲ್ಲಿ ಬರೆದಿದ್ದೇನೆ. ಮಳೆಗಾಲ ಪೂರ್ತಿ ಎಂಥಾ ಮಳೆ! ಗದ್ದೆ, ಹಿತ್ತಿಲೆಲ್ಲ ನೀರೋ ನೀರು! ಚಿಕ್ಕಪ್ಪನ ಮಕ್ಕಳು ಅನು, ನಿರು, ಸುಕ, ಸುಜಿ ಶಾಲೆಗೆ ಹೊರಟರೆ ಚಿಕ್ಕಮ್ಮ, ಶಾರದತ್ತೆ ಅವರನ್ನು ಕೈತೋಡು ದಾಟಿಸಬೇಕಾಗುತ್ತಿತ್ತು. ಟೈಗರ್, ಸಿಂಗ ಅವರ ಜೊತೆಗೇ ಸಾಗಿ ಗದ್ದೆಗಳಾಚೆ ದಿಬ್ಬವೇರಿ, ರೈಲುಹಳಿಯ ವರೆಗೂ ಅವರನ್ನು ಕಳುಹಿ ಕೊಟ್ಟು ಹಿಂದೆ ಬರುತ್ತಿದ್ದುವು. ಹಿತ್ತಿಲಿಗೆ ಆಡು, ದನಗಳೇನಾದರೂ ಹೊಕ್ಕರೆ, ಟೈಗರ್ ಬಾಯಿಯಿಂದ ಅವನ್ನುಳಿಸುವುದು ಬಲು ಕಷ್ಟವಿತ್ತು. ಮತ್ತೆ ಅಪರಾಧೀ ಭಾವದಿಂದ ಹೊಳೆಯಾಚೆ ಹೋಗಿ ನಿಲ್ಲುತ್ತಿದ್ದ ಟೈಗರ್, ಅಲ್ಲಿ ತಲೆಯೆತ್ತಿ ನೋಡುತ್ತಾ, ನಮ್ಮ ತಂದೆಯವರು ಕ್ಷಮಿಸಿ, ಬಾ ಎಂದು ಕರೆಯುವುದನ್ನೇ ಕಾಯುತ್ತಾ ನಿಂತು ಕರೆದೊಡನೆ ಬಿಟ್ಟ ಬಾಣದಂತೆ ಓಡಿ ಬರುತ್ತಿತ್ತು.

ತಮ್ಮ ಮುರಲಿ ಮಗು ತುಷಾರ್ಗೆ ಸ್ನಾನ ಮಾಡಿಸಿ ಬಿಳಿ ವಸ್ತ್ರ, ಬಿಳಿ ಮುಂಡಾಸು  ತೊಡಿಸುವುದನ್ನೇ ಕಾಯುತ್ತಿದ್ದವನು, ಮಗುವಿನ ಪಕ್ಕದಲ್ಲಿ ನನ್ನ ಮದರಾಸಿನ ಚೆಲ್ವಕೃಷ್ಣ ಮೂರುತಿಯನ್ನು ತಂದು ಮಲಗಿಸಿ, ಮಗು ಎಷ್ಟು ಬೆಳೆದಿದ್ದಾನೆಂದು ನೋಡಿ ಆನಂದಿಸುತ್ತಿದ್ದ. ಮಗುವಿನ ಬಾಬಮಾಮನಿಂದ ತೊಡಗಿ, ಮನೆಯ ಮಕ್ಕಳು, ಹಿರಿಯರು ಎಲ್ಲರಿಗೂ ಮುದ್ದಾಗಿದ್ದ ಮಗು, ಎಲ್ಲರ ಬಾಯಲ್ಲಿ ಅಬ್ಬಣ್ಣೂ ಎಂದೇ ಕರೆಸಿಕೊಳ್ಳುತ್ತಿದ್ದ.
         
ಐದು ತಿಂಗಳು ತುಂಬಿದ ಮಗುವಿನೊಡನೆ ಅತ್ತೆಮನೆಗೆ ಹೋಗಿದ್ದ ದಿನಗಳಲ್ಲಿ, ಸುರಿದ ಆಷಾಢದ ಬಿರುಮಳೆ ಹಾಗೂ ಪ್ರವಾಹಕ್ಕೆ ನಮ್ಮ ಗುಡ್ಡೆಮನೆ ಬಚ್ಚಲು ಮನೆ ಬಿದ್ದು ಹೋಯ್ತು. ಅಲ್ಲೇ ಇದ್ದು ಪ್ರವಾಹವನ್ನು ಕಾಣುವುದಾಗಲಿಲ್ಲವಲ್ಲಾ ಎಂಬ ವ್ಯಥೆ ನನ್ನದಾಯ್ತು.  'ಮಲೆಗಳಲ್ಲಿ ಮದುಮಗಳು' ಕೃತಿಯಲ್ಲಿ ಕಾಣಿಸಿದಂತಹ ಸತತ ಹೊಡೆವ ಜಡಿಮಳೆಯ ಪ್ರಕೃತಿಯೇ ಅದಾಗಿತ್ತು. ಹೊಳೆ ಹಾಗೂ ಗದ್ದೆನೀರಲ್ಲಿ ಕಿರುಮೀನುಗಳು, ಗದ್ದೆಹುಣಿಯ ಕೊರಕಲಲ್ಲಿ ಏಡಿಗಳು! ಸೂರ್ಯನನ್ನೇ ಕಾಣದ ಮಬ್ಬುಗತ್ತಲ ಹಗಲುಗಳು! ನನಗಂತೂ ಇಂತಹ ಪ್ರಕೃತಿ ಸ್ವರ್ಗಸಮಾನವೇ ಇತ್ತು.
     
ನಮ್ಮತ್ತೆಯ ಅಕ್ಕ, ನನ್ನ ದೊಡ್ಡತ್ತೆ, ಮುಲ್ಕಿಯಲ್ಲಿದ್ದ ತನ್ನ ತಮ್ಮನ ಸಂಸಾರದೊಂದಿಗೆ  ಅಲ್ಲಿನ ಮಕ್ಕಳ ಅಮ್ಮನಾಗಿಯೇ ಇದ್ದವರು. ನಮ್ಮವರು ಅಲ್ಲಿ ತಮ್ಮ ಮಾವ, ಅತ್ತೆ ಹಾಗೂ ಅಮ್ಮನೊಂದಿಗೇ ಬೆಳೆದವರು. ದೊಡ್ಡತ್ತೆ, ನನ್ನನ್ನೂ ಮಗುವನ್ನೂ ಮುಲ್ಕಿಗೆ ಕರೆದೊಯ್ದರು. ಬಸ್ಸಿನಲ್ಲಿ ಮುಲ್ಕಿಗೆ ಪಯಣಿಸಿ ಶಾಂಭವಿ ನದಿಯನ್ನು ದೋಣಿಯಲ್ಲಿ ದಾಟಿ ಗದ್ದೆಗಳನ್ನು ಹಾದು, ವಿಶಾಲ ಗದ್ದೆಗಳ ನಡುವಣ ಮನೆಯನ್ನು ಎಳೆ ಮಗುವಿನೊಡನೆ ಸೇರಿದ ರೋಚಕ ಅನುಭವ ಈಗಲೂ ಹಸಿಯಾಗಿದೆ. ತೊಟ್ಟಿಲು ತೂಗುತ್ತಾ ಹಾಡುತ್ತಿರುವುದು ನನಗೆ ತುಂಬ ಇಷ್ಟ. ಹಗಲು ಕಳೆದು ಮುಸ್ಸಂಜೆಯಾಯ್ತೆಂದರೆ, ಅಸಂಖ್ಯ ಗೋಂಕುರುಕಪ್ಪೆಗಳ ಟ್ರೊಂಯ್ಕಾರ ಹಿಮ್ಮೇಳ ನುಡಿಸುತ್ತಿದ್ದುವು. ಸುತ್ತ ಹರಡಿದ ಗದ್ದೆಗಳು, ತುಂಬಿದ ಕೊಳ, ತೋಡುಗಳು! ಪಶ್ಚಿಮದಲ್ಲಿ ಮೊರೆವ ಸಾಗರ; ಭೋರ್ಗರೆವ ಅಳಿವೆಯ ರುದ್ರ ಭಯಾನಕ ನೋಟ! ಸಮುದ್ರತಡಿಯಿಂದ ಬೀಸುವ ಗಾಳಿಯಲ್ಲಿ ಮೀನಿನ ಕಡು ವಾಸನೆ! ಒಂದಿನ ತಮ್ಮ ಕಿರಣನೊಂದಿಗೆ ಅಳಿವೆಯತ್ತ ಹೋದವಳು, ಅಲ್ಲಿ ಹೊಯ್ಗೆಯಲ್ಲಿ ಸಿಕ್ಕ ಮರದ ಗೊಂಬೆಯಂತಹ ದೊಡ್ಡ ಮೂರ್ತಿಯೊಂದನ್ನು ಖುಶಿಯಿಂದ ಹೊತ್ತು ತಂದಿದ್ದೆ. ಆದರೆ, ನಮ್ಮತ್ತೆ ಅಂಥದನ್ನೆಲ್ಲ ಹಾಗೆ ಮನೆಗೆ ತರಬಾರದು; ಹೋಗಿ ಅಲ್ಲೇ ಬಿಟ್ಟು ಬನ್ನಿ, ಎಂದು ಹಿಂದೆ ಕಳಿಸಿದ್ದರು.
         
ಮನೆಯೆದುರಿನ ಗದ್ದೆಯಲ್ಲಿ ನಮ್ಮತ್ತೆ ಮೆಣಸು, ಗೆಣಸು, ಕುಂಬಳಕಾಯಿ, ಸೋರೆಕಾಯಿ, ಟೊಮೇಟೋ, ಬೆಂಡೆಕಾಯಿ, ಅಲಸಂಡೆ, ಹರಿವೆ, ಬಸಳೆ ಬೆಳೆಯುತ್ತಿದ್ದರು. ಹೆಜಮಾಡಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ನಮ್ಮ ಮಾವನಿಗೆ ಊರವರು ಗೌರವಾರ್ಥ ಕಡಲತಡಿಯಿಂದ ತಾಜಾ ಮೀನು ತಂದು ಕೊಡುತ್ತಿದ್ದರು. ಹೊರಗಿನ ತಿನಿಸು, ವಸ್ತುಗಳೇನೂ ಇರದ ಅಂದಿನ ಸರಳ, ಸುಂದರ ಜೀವನಕ್ಕೆ ಇಂದಿನದನ್ನು ಹೋಲಿಸಿದರೆ! ಕಣ್ತುಂಬುವ ಹಸಿರು ಹೊಲಗಳು, ನೀರಮಡುಗಳಿಂದ ಬೀಸಿ ಬರುತ್ತಿದ್ದ ತಂಗಾಳಿ, ನೀಲಹೂಗಳ ಕಡುಹಸಿರು ಜಲಸಸ್ಯಗಳು ತುಂಬಿದ ತೆರೆದ ಬಾವಿ, ಪಕ್ಕದಲ್ಲೇ ಹರಿವ ಶಾಂಭವಿ ಹೊಳೆಯ ಮೂಲ್ಕಿ ನನಗೆ ಇಷ್ಟವಾಗಿತ್ತು. ಆದರೆ ಮಾವನೂ ನಿವೃತ್ತರಾದ ಬಳಿಕ, ತಮ್ಮೂರಿಗೇ ವಾಸ್ತವ್ಯ ಬದಲಿಸಿದುದರಿಂದ, ಮದುವೆಯಾದ ಆರಂಭದಲ್ಲೊಮ್ಮೆ, ಮತ್ತೀಗ ಮಗುವಿನೊಡನೆ - ಹೀಗೆ ಎರಡೇ ಬಾರಿ ಮೂಲ್ಕಿಯ ಪ್ರಕೃತಿ ಸೌಂದರ್ಯವನ್ನು ಸವಿಯುವ ಭಾಗ್ಯ ನನ್ನದಾಗಿತ್ತು. ಈಗ  ಮುಂಬೈ ಬಸ್ ದಾರಿಯಲ್ಲಿ ಸಾಗುವಾಗ ಬಪ್ಪನಾಡು ದೇವಳದ ಹಿಂಭಾಗದಲ್ಲಿ ದೊಡ್ಡದೊಂದು ಬಹುಮಹಡಿ ಆಧುನಿಕ ಕಟ್ಟಡ ಎದ್ದು ನಿಂತಿರುವುದು ಕಣ್ಣಿಗೆ ರಾಚುತ್ತಿದೆ.

 (ಮುಂದುವರಿಯಲಿದೆ)

No comments:

Post a Comment