15 December 2016

ಮಧ್ಯರಾತ್ರಿಯಲ್ಲಿ ಎದ್ದು ಹೋದ ರವಿಗೆ (ಎಂ.ಆರ್. ಬಂಗೇರಾ)

-    ಬಿ.ಎಂ. ರೋಹಿಣಿ
[ಸಂಪಾದಕೀಯ: ಇಂಗ್ಲಿಶ್ ಕವಿ ಥಾಮಸ್ ಗ್ರೇ ಬರೆದ ಕವನ ಎಲಿಜಿ ರಿಟನ್ ಇನ್ ಎ ಕಂಟ್ರೀ ಚರ್ಚ್ ಯಾರ್ಡ್, ನನಗೆ ವಿದ್ಯಾರ್ಥಿ ದಿನಗಳಲ್ಲಿ ಪಠ್ಯದ ಭಾಗವಾಗಿ ತಲೆಯಲ್ಲಿ ಅಚ್ಚೊತ್ತಿತ್ತು. ಮತ್ತದು ನನ್ನ ಮಗ ಅಭಯನಿಗೂ ಪಠ್ಯದಲ್ಲಿ ಬಂದಾಗ ಆತ ಅದನ್ನು ತನ್ನ ಅನುಭವ, ಭಾಷಾಮಿತಿಗಳನ್ನು ಮರೆತು ಕನ್ನಡಕ್ಕೆ ಅನುವಾದಿಸುವಷ್ಟು ಪ್ರಭಾವಿಯಾಗಿ ಕಾಡಿದ್ದಿರಬೇಕು. ಕಾಲಾನಂತರದಲ್ಲಿ, ಅಂದರೆ ತಿಂಗಳ ಹಿಂದೆ ಆ ಅನುವಾದ ನನಗೆ ತೀರಾ ಆಕಸ್ಮಿಕವಾಗಿ ಸಿಕ್ಕಾಗ, ಮತ್ತೆ ನನ್ನನ್ನು ಕೆಣಕಿ, ಅನುವಾದದ ಇನ್ನೊಂದೇ ಪಾಠಾಂತರವನ್ನು ನನ್ನಿಂದಲೇ ಹೊರಡಿಸಿತ್ತು. (ಅಭಯನ ಲಭ್ಯ ಅಪೂರ್ಣ ಅನುವಾದವನ್ನು ಆಸಕ್ತರು ನನ್ನ ಫೇಸ್ ಬುಕ್ಕಿನ `ಗೋಡೆ’ಯಲ್ಲಿ ಓದಿಕೊಳ್ಳಬಹುದು. ನನ್ನ ಪೂರ್ಣ ಪಾಠವನ್ನು ಇಲ್ಲೇ ಕೊನೆಯಲ್ಲಿ ಅನುಬಂಧಿಸಿದ್ದೇನೆ.) ಅದರ ಒಂದು ಕಾವ್ಯ ಖಂಡ ಹೀಗಿದೆ:
ಬಹುಮೆರುಗಿನ ಅಸಂಖ್ಯ ರತ್ನಗಳು || ಆಳವರಿಯದ ಕಡಲ ಕತ್ತಲಕೂಪಗಳಲ್ಲಿ || ಅದೆಷ್ಟು ಕಾಣದುಳಿದಿದೆ ಹೂಗಳ ಅಜ್ಞಾತ ಅರಳು || ವ್ಯರ್ಥವಾಗಿದೆ ಅದರ ಸುವಾಸನೆ ಮರಳುಗಾಡಿನಲ್ಲಿ. 

ಅಂಥ ಒಂದು ಬಹುಮೆರುಗಿನ ರತ್ನ – ರವಿ ಅಥವಾ ಎಂ. ಆರ್. ಬಂಗೇರಾ, ಇಲ್ಲೇ ಬಂಟ್ವಾಳದ ಸಮೀಪದ ಮಾರಿಪಲ್ಲದಲ್ಲಿದ್ದ ಆ ಸುಮಘಮವನ್ನು ಬಿ.ಎಂ. ರೋಹಿಣಿಯವರು ಆಘ್ರಾಣಿಸಿದ್ದರು. ಆದರೆ ಜೀವನ ಸಾಗರದ ಕತ್ತಲಕೂಪದಲ್ಲಿ ಅದು ಅಡಗಿಹೋಯ್ತು, ಅದರ ಸುವಾಸನೆ ವ್ಯಾವಹಾರಿಕ ಪ್ರಪಂಚದ ಮರಳುಗಾಡಿನಲ್ಲಿ ವ್ಯರ್ಥವಾಯ್ತು. ಈಗಲಾದರೂ ಆ ಸಾಮಾಜಿಕ ತಪ್ಪು ತಿದ್ದಿಕೊಳ್ಳುವುದು ಸಾಧ್ಯವಾದರೆ, ಆ ರತ್ನಕ್ಕೆ ಹೊಸತೇ ಹೊಳಪು ಮೆರೆಸಲು ಅವಕಾಶವಾದರೆ, ಕಂಪನ್ನು ಗ್ರಹಿಸುವ ರಸಿಕರೊದಗಿದರೆ ಎಂಬ ಘನತರವಾದ ಆಶಾವಾದದಿಂದ ರೋಹಿಣಿಯವರು ಅಜ್ಞಾತನಲ್ಲಿ ಮೊರೆಯಿಟ್ಟಂತೆ ಈ ಲೇಖನವನ್ನು ಬರೆದಿದ್ದಾರೆ. ಮನದುಂಬಿಕೊಳ್ಳಿ, ವಿಸ್ತೃತ ಪ್ರಚಾರ ಕೊಟ್ಟು `ಹುಡುಕಾಟ’ ಯಶಸ್ಸುಗಾಣುವಂತೆ ಮಾಡುವಿರಾಗಿ ನಂಬಿದ್ದೇನೆ – ಅಶೋಕವರ್ಧನ]  


ಕವಿ ಹೃದಯವುಳ್ಳವರ ವ್ಯಥೆಗಳು ಕತೆಯಾಗಿ, ಪಾಡು ಹಾಡಾಗಿ ಪರಿವರ್ತನೆಗೊಂಡು ಸಹೃದಯರಿಗೆ ಆನಂದವನ್ನು ಕೊಡುತ್ತದೆ ಅಲ್ಲವೇ? ತಮ್ಮ ಬದುಕಿನ ವ್ಯಥೆಗಳನ್ನು ಮರೆಯಲು, ಕೊರತೆಗಳನ್ನು ನೀಗಿಸಿಕೊಳ್ಳಲು, ಸಮಾನ ಮನಸ್ಕರ ಒಡನಾಟದಿಂದ ಜೀವನೋತ್ಸಾಹವನ್ನು ತುಂಬಿಸಿಕೊಳ್ಳಲು ಸಾಹಿತ್ಯಪ್ರೀತಿ ನೆರವಾಗುತ್ತದೆ. ಓದಿನ ಸುಖವನ್ನು ಹಂಚಿಕೊಳ್ಳಲು ಮತ್ತು ಬರೆದುದನ್ನು ವಿಮರ್ಶೆಯ ನಿಕಷಕ್ಕೆ ಒಡ್ಡಿಕೊಳ್ಳಲು ಸಾಹಿತಿಗಳಿಗೆ ಇಂತಹ ಒಂದು ಆತ್ಮೀಯ ಬಳಗವಿರದಿದ್ದರೆ ಕತ್ತಲೆಯಲ್ಲಿ ಪ್ರೇಯಸಿಗೆ ಕಣ್ಣು ಹೊಡೆದಷ್ಟೇ ವ್ಯರ್ಥ. ನಾನಂತೂ ಬರವಣಿಗೆ ಪ್ರಾರಂಭಿಸಿದ ಮೇಲೆ ಇಂತಹ ಒಂದು ಬಳಗವನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದೆ. ಯಾರಾದರೂ ಯುವಕ-ಯುವತಿಯರು ಕವನ, ಕತೆ, ಲೇಖನ ಇತ್ಯಾದಿ ಬರವಣಿಗೆಯ ಆಸಕ್ತಿಯನ್ನು ತೋರ್ಪಡಿಸಿದರಂತೂ ಅವರನ್ನು ತಕ್ಷಣಕ್ಕೆ ನನ್ನ ಆಪ್ತ ವಲಯಕ್ಕೆ ಸೇರಿಸಿಬಿಡುತ್ತಿದ್ದೆಅಂತಹ ಆಪ್ತ ವಲಯಕ್ಕೆ ಸೇರಿದ ರವಿ ಎಂಬ ಹುಡುಗನ ಬಾಳಿನ ವ್ಯಥೆಯ ಕತೆಯಿದು.
ಒಂದಿಪ್ಪತ್ತು ವರ್ಷಗಳ ಹಿಂದೆ ಎಂ.ಆರ್. ಬಂಗೇರಾ ಎಂದೇ ಸಾಹಿತ್ಯ ವಲಯದಲ್ಲಿ ಚಿರಪರಿಚಿತನಾದ ರವಿ ತುಳು, ಕನ್ನಡ ಭಾಷೆಗಳಲ್ಲಿ ಸಮರ್ಥವಾಗಿ ಬರೆಯಬಲ್ಲ ಪ್ರತಿಭಾವಂತ. ಮಂಗಳೂರು ಆಕಾಶವಾಣಿಯ ಪ್ರೋತ್ಸಾಹದಿಂದ ಅರಳಿದ ಪ್ರತಿಭೆ ಮುಂದೆ ಹತ್ತಾರು ಕವನ ಸ್ಪರ್ಧೆಗಳಲ್ಲಿ ಬಹುಮಾನ ಗಿಟ್ಟಿಸಿಕೊಂಡದ್ದು ದಾಖಲೆಯಾಗಿಯೇ ಉಳಿದಿದೆ. ಹಾಗೆಯೇ ಹಲವಾರು ಕವಿಗೋಷ್ಠಿಗಳಲ್ಲಿ ಕವನ ವಾಚಿಸಿದ ಕೀರ್ತಿ ರವಿಗೆ ಲಭಿಸಿತ್ತು.
ಕಾಸರಗೋಡಿನ ಕವಿಗೋಷ್ಠಿಯಲ್ಲಿ ಕವನವನ್ನು ಹಾಡುವುದರ ಬಗ್ಗೆ ಚರ್ಚೆ ಸಂವಾದಗಳು ನಡೆದಾಗ ಕವನ ವಾಚಿಸುವುದರ ಮಹತ್ವವನ್ನು ಸಭೆಯಲ್ಲಿ ಮಂಡಿಸಿ, ನೆರೆದ ಸಾಹಿತ್ಯ ಪ್ರೇಮಿಗಳಿಂದ ಮತ್ತು ಪಂಡಿತವರ್ಗದಿಂದ ಪ್ರಶಂಸೆಯನ್ನು ಪಡೆದುದನ್ನು ಮರೆಯಲಾಗದು. ಯಾವುದೇ ಸಾಹಿತ್ಯಿಕ ಕಾರ್ಯಕ್ರಮಗಳ ಬಗ್ಗೆ ಅಥವಾ ತಾನು ಕೈಗೊಳ್ಳುವ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ, ಹೆಚ್ಚೇಕೆ  ತನ್ನ ಬದುಕಿನ ವೈಯುಕ್ತಿಕ ವಿಷಯಗಳ ಬಗ್ಗೆ ಮುಕ್ತವಾಗಿ ಪತ್ರ ಬರೆದು ಹೃದಯ ಹಗುರಾಗಿಸಿಕೊಂಡ ರವಿಯ ಬದುಕಿನಲ್ಲಿ ಇಂಥದೊಂದು ಅನಿರೀಕ್ಷಿತ ಘಟನೆಗಳು ಸಂಭವಿಸಬಹುದೆಂದು ನಾನು ಊಹಿಸಿರಲೇ ಇಲ್ಲ. ಯಾಕೆಂದರೆ ಪ್ರತೀ ಪತ್ರವೂ ಕೂಡಾ ಆತ್ಮವಿಶ್ವಾಸದ, ದೃಢ ಚಿತ್ತದ, ವೈಚಾರಿಕ ಪ್ರಜ್ಞೆಯುಳ್ಳ, ಸ್ಥಿತಪ್ರಜ್ಞ ಮನಸ್ಥಿತಿಯುಳ್ಳ ಓರ್ವ ಕರ್ಮಯೋಗಿಯ ಮಾತುಗಳಂತೆ ನನಗೆ ಭಾಸವಾಗುತ್ತಿದ್ದುವು.

ಬಂಟ್ವಾಳ ತಾಲೂಕಿನ ಮಾರಿಪಳ್ಳ ಗ್ರಾಮದ ಪರಿಸರದ ತರುಣ ತರುಣಿಯರಲ್ಲಿ ಸಾಹಿತ್ಯ ಪ್ರೀತಿಯನ್ನು ಹುಟ್ಟಿಸಲು ಅವನು ಮಾಡಿದ ಪ್ರಯತ್ನಗಳನ್ನು ಮರೆಯಲಾಗದು. `ನಿರತ ಸಾಹಿತ್ಯ ಸಂಪದ' ಎಂಬ ಸಂಸ್ಥೆಯನ್ನು ಕಟ್ಟಿ ಪರಿಸರದ ಮಕ್ಕಳಲ್ಲಿ ಬೌದ್ಧಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಿಸುವಂತೆ ಮಾಡಿದ ಕ್ವಿಜ್ ಕಾರ್ಯಕ್ರಮಗಳಾಗಲೀ, ಕವಿಗೋಷ್ಠಿ, ಸಾಹಿತ್ಯಗೋಷ್ಠಿಗಳಾಗಲೀ ಅವನ ಕರ್ತೃತ್ವ ಶಕ್ತಿಯನ್ನು ಸಾಬೀತುಪಡಿಸಿತ್ತು. ಮಾತ್ರವಲ್ಲ ಹೀಗೆಯೇ ಸರ್ಜನ ಶಕ್ತಿಯುಳ್ಳ ಹಲವಾರು ಯುವಕರನ್ನು ಅಲ್ಲಿ ಸೃಷ್ಟಿಸಿತು.

ನಿರತ ಸಾಹಿತ್ಯ  ಸಂಪದಕ್ಕೆ ಅವನು ಬರೆದ ಧ್ಯೇಯ ಗೀತೆ ಹೀಗಿತ್ತು.
ನಿರತ ನಿರಂತರ
ಬದುಕು ಚಿರಂತನ
ಕಾವ್ಯ ಕನ್ನಡಿ ಅಡಿಗಡಿಗೆ

ಅನಿಶಾ ಅಚಂಚಲ
ಅಸೀಮಾ ಆಡುಂಬೊಲ
ದಿಸೆಗೆ ದಾಂಗುಡಿ ನಿಡುನಡಿಗೆ.

ವಿಮಲ ವಿಚಾರದ
ಸುಮನ ಸುನಾದದ
ಸುರ ಸ್ವರ ಸಾರದ ಮೆರವಣಿಗೆ

ಸಹನ ಸುಜ್ಞಾನದ
ಗಹನ ಗಂಭೀರದ
ವಹನ ಸಂವಹನಕೆ ಕರದೀವಿಗೆ

ನಿರತ ಸಾಹಿತ್ಯ ಸಂಪದದ ಉದ್ಘಾಟನೆಗೆ ಮಾರಿಪಳ್ಳಕ್ಕೆ ನನ್ನನ್ನು ಕರೆಸಿದಾಗ ಅಂದು ನಾಲ್ಕು ಒಳ್ಳೆಯ ಮಾತುಗಳನ್ನಾಡಿ ಹರಸಿ ನಾನು ಬಂದಿದ್ದೆ. ಆಮೇಲೆಯೂ ಅದರ ಹತ್ತನೇ ವರ್ಷದ ಕಾರ್ಯಕ್ರಮದಲ್ಲೂ ಭಾಗವಹಿಸಿದಾಗ ಎಳೆಯ ತರುಣರ ಪ್ರತಿಭೆ ಉತ್ಸಾಹ ಮತ್ತು ಕ್ರತುಶಕ್ತಿಗೆ, ಪ್ರೇರಕನಾದ ರವಿಯ ಸಂಘಟನಾ ಶಕ್ತಿಗೆ ಖುಶಿಯಾಗಿ ಹರಸಿದ್ದು ನೆನಪಾಗುತ್ತದೆ.

ಕಾದಂಬರಿಯೊಂದು ಬಿಟ್ಟು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಪಳಗಿದ ರವಿ ನಾಟಕ ರಚಿಸಿ, ಗೀತೆ ರಚಿಸಿ ನಿರ್ದೇಶಿಸಿ, ನಟಿಸಿ ಹೀಗೆ ತನ್ನ ಪ್ರತಿಭೆಯು ಅನಾವರಣಗೊಳ್ಳಲು ಬೇಕಾದ ಅವಕಾಶಗಳೆಲ್ಲವೂ ಅವನಿಗೆ ಅಲ್ಲಿ ಲಭಿಸಿದುವು. ಎಲ್ಲಾ ಬೆಳವಣಿಗೆಯ ವಿವರಗಳನ್ನು ನನಗೆ ಪತ್ರಗಳ ಮೂಲಕ ವರದಿಯೊಪ್ಪಿಸಿದರೇ ಅವನಿಗೆ ಸಮಾಧಾನ. ೧೯೯೮ರಲ್ಲಿ ಮಾರ್ಚ್ ಆರರಂದು ನನಗೆ ಬರೆದ ಪತ್ರದಲ್ಲಿ ``ನೀವು ನನ್ನ ಅಮ್ಮನಾಗಿದ್ದರೆ ಎಷ್ಟು ಚೆನ್ನಾಗಿತ್ತು'' ಎಂದು ಬರೆದಾಗ ನನಗೆ ಹೃದಯ ತುಂಬಿ ಬಂದಿತ್ತು. ಇಂತಹ ಮಗನನ್ನು ಪಡೆಯ ಬೇಕಾದರೆ ನಾನು ಎಷ್ಟು ಜನ್ಮದಲ್ಲಿ ಪುಣ್ಯ ಮಾಡಿರ ಬೇಕೋ ಏನೋ? ಎಂದು ಸಂತೈಸಿದ್ದೆ. ಅವನು ಇದ್ದಲ್ಲಿ ಅಗಿಯುವ, ಬಿದ್ದಲ್ಲಿ ಚಿಗಿಯುವ ಆತ್ಮ ಶಕ್ತಿಯನ್ನು ಹೊಂದಿದ ಚೈತನ್ಯದ ಸೆಲೆಯಾದ ಯುವಕನಾಗಿದ್ದ. ಚಿಲುಮೆಯಲ್ಲಿ ತಿಳಿನೀರು ಚಿಮ್ಮುವಂತೆ ಅವನಲ್ಲಿ ಜೀವನೋತ್ಸಾಹ ಚಿಮ್ಮುತ್ತಿತ್ತು.
ಬಾಳಿನ ಗಾಳಿಪಟಕ್ಕೆ ಹೆಬ್ಬಯಕೆಯ ಸೂತ್ರಕಟ್ಟಿ ಎತ್ತರಕ್ಕೆ ಹಾರಿಸಬೇಕೆಂಬ ಕನಸು ಕಂಡಿದ್ದ. ಅವನ ಜೀವನವೆಂಬ ಕಲ್ಲು ಬಂಡೆಗಳಿಂದ ತುಂಬಿದ ದ್ವೀಪದಲ್ಲಿ ಕನಸುಗಳೆಂಬ ಮರಗಳನ್ನು ನೆಟ್ಟು ಪೋಷಿಸಿದವಳು ಅವನ ಪ್ರೇಯಸಿಯೂ ಮುಂದೆ ಬಾಳಸಂಗಾತಿಯೂ ಆದ ಲೀಲಾವತಿ. ಮರದ ಕೆಲಸ ಮಾಡುತ್ತಿದ್ದ, ಕೇವಲ ಎಸ್.ಎಸ್.ಎಲ್.ಸಿ. ಓದಿದ ಹುಡುಗನನ್ನು ಅವನಿಗಿಂತಲೂ ಹೆಚ್ಚು ಆರ್ಥಿಕ ಸಂಪನ್ನತೆಯುಳ್ಳ ಹೆಣ್ಣೊಂದು ಬಯಸಿ ಪ್ರೇಮಿಸಿದ್ದು ಅವನನ್ನು ಯೋಚಿಸುವಂತೆ ಮಾಡಿತು. ಸ್ವೀಕರಿಸಲೂ ಆಗದೆ ತಿರಸ್ಕರಿಸಲೂ ಆಗದೆ ಗೊಂದಲದಲ್ಲಿ ಕೆಡವಿದ್ದನ್ನು ಮುಕ್ತವಾಗಿ ನನ್ನಲ್ಲಿ ತೋಡಿಕೊಂಡಿದ್ದ. ವೀಣೆಯನ್ನು ನುಡಿಸುತ್ತಾ ಕಲಿಯುವಂತೆ ಜೀವನ ಜೀವಿಸುತ್ತ ಕಲಿಯಬೇಕು. ಅದು ದಿನವೂ ಹುಟ್ಟುವ ಸೂರ್ಯ, ಅದಲ್ಲದೆ ಅದು ಚಲಿಸುವ ನೆರಳು ಕೂಡಾ. ಕೂತರೆ, ನಿಂತರೆ, ಓಡಿದರೆ ಅದು ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ ಎಂಬ ಸತ್ಯವನ್ನು ಇಬ್ಬರೂ ಒಪ್ಪಿಕೊಂಡು ಮದುವೆಯಾಗಿ ಮುಂದೆ ಅಭಿಜಿತ್ ಎಂಬ ಮಗನ ತಂದೆಯೂ ಆದ. ಜವಾಬ್ದಾರಿ ಹೆಚ್ಚಿತು. ಅವನ ಹೆತ್ತತಾಯಿ ಮೊದಲು ಮದುವೆಗೆ ವಿರೋಧಿಸಿದರೂ ಲೀಲಾವತಿಯ ಸಹನೆ ಮತ್ತು ವಿನಯವಂತಿಕೆ ಅತ್ತೆಯನ್ನು ಪ್ರೀತಿಯ ಕಡಲಲ್ಲಿ ತೇಲಿಸಿತು. ಜೀವನವೆಂಬ ಸೋಜಿಗದ ಬಟ್ಟೆಯ ಹೆಣಿಗೆಯಲ್ಲಿ ಎಷ್ಟು ಬಣ್ಣಗಳು, ಎಷ್ಟೊಂದು ಎಳೆಗಳು ಎಂದು ಅರ್ಥವಾಗತೊಡಗಿತು. ಬದುಕೆಂದರೆ ಚಿಕ್ಕದೊಂದು ಕಂಬಳಿಯಂತೆ ತಲೆಗೆಳೆದರೆ ಕಾಲಿಗೆ ಚಳಿಯಾಗುತ್ತದೆ. ಕಾಲಿಗೆಳೆದರೆ ಶಿರ ಮತ್ತು ಕೊರಳಿಗೆ ಚಳಿಯಾಗುತ್ತದೆ. ಬುದ್ಧಿವಂತರು ತಮ್ಮ ಮಂಡಿಯನ್ನು ಮಡಚಿ ಹೊಂದಾಣಿಕೆ ಮಾಡುತ್ತಾರೆ. ಹಾಡುತ್ತಾ ಹಾಡುತ್ತಾ ಸಂಗೀತ ತಿಳಿದಂತೆ ಬದುಕುತ್ತಾ ಬದುಕುತ್ತಾ ಜೀವನವೆಂದರೇನೆಂದು ಅವನಿಗೆ ಅರ್ಥವಾಗುತ್ತದೆ. ಸೊನ್ನೆಯಿಂದ ಸಂಖ್ಯೆಯಾಗಿ ಮೇಲೇರುವ ಕನಸು ಕಾಣುವುದು ಸಹಜ ಗುಣವಲ್ಲವೇ.

ರವಿಯೂ ಅದೇ ರೀತಿ ಕಂಡ ಕನಸೇ `ಐಸಿರಿ ಅದೃಷ್ಟದ ನಿಧಿ'. ಕಂತುಗಳಲ್ಲಿ ಅದೃಷ್ಟದ ಹುಡುಕಾಟ, ಸಂತೃಪ್ತಿಯ ಮೆರೆದಾಟ, ಪರಸ್ಪರ ವಿಶ್ವಾಸಕ್ಕೆ, ಪ್ರಾಮಾಣಿಕತೆಯ ಮೆರುಗು ಎಂದು ನಂಬಿ -೧೨-೨೦೦೦ದಂದು ಒಂದು ಉದ್ಯಮ ಪ್ರಾರಂಭಿಸಿದ. ಪ್ರಾರಂಭದ ವರ್ಷ ಏನೂ ತೊಂದರೆಯಿಲ್ಲದೆ ವ್ಯವಹಾರ ಸಾಗಿತು. ಮುಂದಿನ ವರ್ಷಗಳಲ್ಲಿ ಅವನ ವಿಶ್ವಾಸಕ್ಕೆ ಬೆಂಕಿ ಬಿತ್ತು. ಸಾಮಾನು ಒಯ್ದವರು ಕಂತು ಕಟ್ಟದೆ ಉದ್ಯಮವೇ ಮಕಾಡೆ ಮಲಗಿತು. ಬಾಳೆಹಣ್ಣು ತಿನ್ನುವವರೇ ಬೇರೆ, ಸಿಪ್ಪೆಯ ಮೇಲೆ ಕಾಲಿಟ್ಟು ಜಾರುವವರೇ ಬೇರೆ ಎಂದು ಅರ್ಥವಾದಾಗ ರವಿ ಕತ್ತಲೆಯ ಗೊಂಡಾರಣ್ಯದ ಮಧ್ಯೆ ನಿಂತಿದ್ದ. ಬದುಕೊಂದು ಗಣಿತದಂತೆ ಎನ್ನುತ್ತಾರೆ. ಸ್ನೇಹಿತರನ್ನು ಕೂಡಿಸಿ ಶತ್ರುಗಳನ್ನು ಕಳೆದು, ಸಂತೋಷವನ್ನು ಗುಣಿಸಿ, ದುಃಖವನ್ನು ಭಾಗಿಸಿ ಹಂಚಿಕೊಳ್ಳಬೇಕು. ಎಲ್ಲಕ್ಕೂ ಅವನ ಜೊತೆಗಿದ್ದ ದೊಡ್ಡ ಗುಂಪು ದುಃಖವನ್ನು ಭಾಗಿಸುವುದಕ್ಕೆ ನೆರವಾಗಲಿಲ್ಲ. ಈವರೆಗೆ ಬದುಕೊಂದು ಸುಂದರ ರಂಗೋಲಿಯೆಂದು ತಿಳಿದಿದ್ದ ರವಿಗೆ ಅದರ ಚುಕ್ಕೆ ತಪ್ಪಿದ್ದು ಗೊತ್ತಾಗುವಾಗ ತಡವಾಗಿತ್ತು. ಅವನ ಸೊರಗಿದ ಮನಸ್ಸು ಮತ್ತು ದೇಹಕ್ಕೆ ರಿಪೇರಿಯ ಅಗತ್ಯವಿತ್ತು. ಪ್ರೀತಿ, ವಾತ್ಸಲ್ಯ, ಆತ್ಮೀಯತೆಯ ಹಿತವಾದ ಸ್ಪರ್ಶ ಬೇಕಿತ್ತು. ಬದುಕಿನ ಜಟಕಾ ಬಂಡಿಯು ಉರುಳಿ ಬಿದ್ದಂತೆ ಭಾಸವಾಯಿತು. ಪದ ಕುಸಿದರೆ ನೆಲವಿದೆ ಎಂಬ ಆತ್ಮವಿಶ್ವಾಸವಿತ್ತು. ನೆಲವೂ ಆಧರಿಸಲು ಶಕ್ತವಾಗಿಲ್ಲವೆಂದಾಗ ನನಗೆ ಪತ್ರ ಬರೆದು ಸಣ್ಣ ಆರ್ಥಿಕ ಸಹಾಯವನ್ನು ಬಹಳ ಅಂಜಿಕೆಯಿಂದಲೇ ಕೇಳಿದ. ಇದು ೨೦೦೩ರ ಕತೆ. ಅವನು ಕೇಳಿದಷ್ಟು ನೀಡಿ ಹೆದರ ಬೇಡವೆಂದು ಧೈರ್ಯ ತುಂಬಿದ್ದೆ. ನನ್ನ ಮನೆಯ ಕಪಾಟುಗಳು, ಮೇಜು ಕುರ್ಚಿಗಳನ್ನು ತಾನೇ ಕೈಯಾರ ಪ್ರೀತಿಯಿಂದ ಮಾಡಿಕೊಟ್ಟ ಋಣ ಭಾರವಿತ್ತು. ಕೆಲಸಗಳನ್ನು ಒಂದೇ ವಾರದಲ್ಲಿ ಎಷ್ಟು ಶ್ರದ್ಧೆಯಿಂದ ಮಾಡಿದನೆಂದರೆ ನೋಡಿದವರು ಬೆರಗಾಗುವಷ್ಟು ಮತ್ತು ಮೆಚ್ಚಿ ಕೊಂಡಾಡುವಷ್ಟು. ಅವನ ಮರದ ಕೆಲಸದ ಕೌಶಲವು ಅದ್ವಿತೀಯವಾಗಿತ್ತು. ಆದರೆ ಜಾಣ್ಮೆ ಪ್ರತಿಭೆ ವ್ಯವಹಾರ ನಡೆಸುವಲ್ಲಿ ಉದ್ಯಮವನ್ನು ಮುಂದುವರಿಸುವಲ್ಲಿ ವಿಫಲವಾಯಿತು. ಕೆಲವು ಲಕ್ಷ ಸಾಲವಾಗಿದೆ ಎಂದು ಖಿನ್ನವಾಗಿ ಹೇಳಿಕೊಂಡ. ಮತ್ತಷ್ಟು ಆರ್ಥಿಕ ಸಹಾಯ ದೊರೆತರೆ ತಾನು ಬದುಕಿಕೊಳ್ಳಬಹುದು ಎಂದು ನನ್ನಲ್ಲಿ ದುಃಖ ತೋಡಿಕೊಂಡ. ಆದರೆ ನಾನು ಒಮ್ಮೆ ಕೊಟ್ಟಿದ್ದೇನಲ್ಲಾ ಸಾಲ, ಮತ್ತೆ ಪುನಃ ನೀಡಲು ಸಾಧ್ಯವಿಲ್ಲವೆಂದು ಕೈಚೆಲ್ಲಿ ಬಿಟ್ಟೆ. ಹೀಗೆ ಹೇಳಿದ ಎರಡು ವಾರಗಳಲ್ಲಿ ರವಿ ಕಾಣೆಯಾದ. ಇದ್ದಕ್ಕಿದ್ದಂತೆ ಮಾಯವಾದದ್ದು ಹೇಗೆ ಎಂಬುದೇ ನಿಗೂಢ. ಕೋಟಿಗಟ್ಟಲೆ ಸಾಲ ಇರುವವರು ರಾಜಾರೋಷವಾಗಿ ಕಾರಲ್ಲಿ ತಿರುಗುತ್ತಿರುವಾಗ ಕೆಲವು ಲಕ್ಷ ಸಾಲವಾಯಿತೆಂದು ಊರು ಬಿಟ್ಟು ಹೋಗುವ ಹೇಡಿಯಾಗಿ ಬಿಟ್ಟನೇ ರವಿ? ಅಡಿಜಾರಿ ಬೀಳುವುದು ತಡವಿಕೊಂಡೇಳುವುದು ಕಹಿ ಮದ್ದು ಕುಡಿಯುವುದು, ದುಡುಕಿ ಮತಿದಪ್ಪುವುದು, ತಪ್ಪನ್ನು ಒಪ್ಪೆನ್ನುವುದೇ ಬದುಕಿನ ಸಹಜ ಗುಣವೆಂದು ಡಿ.ವಿ.ಜಿ.ಯವರ ಮಾತು ಅವನಿಗೆ ಗೊತ್ತಿಲ್ಲದ ವಿಷಯವಲ್ಲ. ಪಾದರಸದಂತಹ ಚಟುವಟಿಕೆಯ ಚೈತನ್ಯ ಮೂರ್ತಿಯಾದ ರವಿ ಆತ್ಮಹತ್ಯೆ ಮಾಡಿಕೊಳ್ಳಲಾರ ಎಂದು ನನ್ನ ನಂಬಿಕೆ. ಪ್ರೀತಿಯ ಪತ್ನಿ ಮತ್ತು ಪುಟ್ಟ ಮಗು ಅಭಿಜಿತ್ನನ್ನು ಮಧ್ಯರಾತ್ರಿಯಲ್ಲಿ ಬಿಟ್ಟು, ಎದ್ದು ಹೊರಟು ಬಿಟ್ಟ ರವಿ ಪಲಾಯನ ಮಾಡುವ ಅಗತ್ಯವೇನಿತ್ತು? ಇವತ್ತಿಗೂ ನನಗೆ ಅರ್ಥವಾಗದ ವಿಷಯವಿದು. ಜೀವನಕ್ಕೆ ಎರಡನೇ ಮುದ್ರಣವಿಲ್ಲ. ಹೌದು. ಮಾತ್ರವಲ್ಲ ಅಚ್ಚಿನ ಮುದ್ರಣದೋಷವನ್ನು ತಿದ್ದುವುದೂ ಸಾಧ್ಯವಿಲ್ಲ. ಆದರೆ ಅಪಾಯಗಳಿಗೆ ಹೆದರಿ ನಾವೇ ಬೇಲಿಗಳನ್ನು ಹಾಕಿಕೊಂಡರೆ ನಾವೇ ಬಂಧಿಗಳಾಗಿ ನರಳಬೇಕಾದೀತು. ತಪ್ಪುಗಳೆಂಬ ಧೂಳು ಜೀವನದ ಸಮರಾಂಗಣದಲ್ಲಿ ಏಳುವುದು ಸಹಜ. ಹಾಗೆಂದು ಅದಕ್ಕೆ ಬೆನ್ನು ತಿರುಗಿಸಿ ಓಡುವವನು ಹೇಡಿಯಲ್ಲವೇ? ನಾನು ಕಂಡ ರವಿ ಇಂತಹವನಲ್ಲ.


ಹದಿಮೂರು ವರ್ಷಗಳುರುಳಿವೆ. ಇಂದೂ ಕೂಡಾ ಪತ್ನಿ ಲೀಲಾವತಿಗೆ ರಾತ್ರಿ ನಾಯಿ ಬೊಗಳಿದರೆ, ಹಗಲಲ್ಲಿ ಯಾರಾದರೂ ಗೇಟು ತೆರೆದ ಸದ್ದು ಕೇಳಿದರೆ ತನ್ನ ಗಂಡನೇ ಬಂದಿರಬಹುದೇನೋ ಎಂದು ಕಾತರದಿಂದ ಕಾಯುತ್ತಾಳೆ. ಎದ್ದು ಓಡಿ ಬರುತ್ತಾಳೆ. ಮಗ ಅಭಿಜಿತ್ ಯುವಕನಾಗಿದ್ದಾನೆ. ತಂದೆಯ ನೆನಪನ್ನು ನಿಧಿಯಂತೆ ಕಾಪಿಟ್ಟುಕೊಂಡಿದ್ದಾನೆ. ಮಗನ ಭವಿಷ್ಯದ ಬಗ್ಗೆ ಏನೇನೋ ಕನಸು ಕಂಡ ರವಿ ಎಲ್ಲಾದರೂ ಬದುಕಿರಬಹುದೇ? ಬದುಕಿದ್ದರೆ ತನ್ನ ಕಾವ್ಯ, ಕತೆಗಳೆಂಬ ಹುಚ್ಚಿನಿಂದ ಮುಕ್ತನಾಗಲು ಸಾಧ್ಯವೇ ಇಲ್ಲ. ೨೦೦೪ರಲ್ಲಿ ಅವನು ನಾಪತ್ತೆಯಾದಾಗ ಎಲ್ಲಿ ಹೆಣ ಕಾಣಸಿಕ್ಕಿದರೂ ಹೋಗಿ ನೋಡಿಬರುವ ಒತ್ತಡವಿತ್ತು ಲೀಲಾವತಿಗೆ. ಆದರೆ ಈಗಲೂ ಆಕೆಗೆ ಗಂಡ ಆತ್ಮಹತ್ಯೆ ಮಾಡಲಾರನೆಂದೇ ನಂಬಿಕೆ ಇದೆ. ಎಲ್ಲಾದರೂ ಹಿಮಾಲಯಕ್ಕೆ ಹೋಗಿ ಸಂನ್ಯಾಸಿಯಾಗಿರಬಹುದೇ ಎಂಬ ಸಂದೇಹವಿದೆ. ಯಾಕೆಂದರೆ ಬಗ್ಗೆ ವಿಶೇಷ ಆಸಕ್ತಿ ಇಲ್ಲದಿದ್ದರೂ ಆಧ್ಯಾತ್ಮದ ಬಗ್ಗೆ ಕೂತೂಹಲವಿದ್ದುದನ್ನು ನನ್ನೊಂದಿಗೆ ಹಂಚಿಕೊಂಡಿದ್ದ. ಆದರೂ ಅವನು ಸಂನ್ಯಾಸಿಯಾಗಲಾರನೆಂದೇ ನನ್ನ ಒಳ ಮನಸ್ಸು ಹೇಳುತ್ತಿದೆ. ಈಗಲೂ ನನಗೆ ಪಶ್ಚಾತ್ತಾಪವಾಗುತ್ತಿದೆ. ಅವನು ಎರಡನೇ ಸಲ ಆರ್ಥಿಕ ಸಹಾಯ ಕೇಳಿದಾಗ ನಾನು ನೀಡುತ್ತಿದ್ದರೆ ರವಿ ನಮ್ಮ ಕಣ್ಣ ಮುಂದೆ ಇರುತ್ತಿದ್ದನಲ್ಲಾ. ನಾನೇಕೆ ನಿರಾಕರಿಸಿದೆ? ನೀವು ನನ್ನ ಅಮ್ಮನಾಗಿರುತ್ತಿದ್ದರೆ ಎಂದು ೨೦ ವರ್ಷಗಳ ಹಿಂದೆಯೇ ಹೇಳಿದ ಅವನ ಪ್ರೀತಿಗೆ ನಾನು ಸ್ಪಂದಿಸದೆ ನಿಷ್ಕರುಣಿಯಾದೆನೇ? ಗೊತ್ತಿಲ್ಲ. ಬದುಕು ಒಂದು ಸೇತುವೆಯಂತೆ ಅದನ್ನು ತೂರಿ ಕಾಲವೆಂಬ ನದಿ ಹರಿಯುತ್ತದೆಕಾಲಕ್ಕೆ ಅದರದ್ದೇ ಆದ ಶಾಮಕ  ಶಕ್ತಿ ಇದೆ. ಅಂತೂ ರವಿಯ ಜೀವನ ನನ್ನ ಒಂದು ಕಿವಿಗೆ ಸಂಗೀತವಾಗಿ ಇನ್ನೊಂದು ಕಿವಿಗೆ ಶೋಕಗೀತೆಯಾಗಿ ಕೇಳುತ್ತಿರುವುದು ವಿಧಿಯ ವೈಚಿತ್ರ್ಯವೆನ್ನಲೇ? ಹಾಗಿದ್ದೂ ಎಲ್ಲೋ ಮನಸ್ಸಿನ ಮೂಲೆಯಲ್ಲಿ ಒಂದು ಸಣ್ಣ ಆಸೆ ಇದೆ. ಜಾಲಲೇಖನವನ್ನು ಓದಿದವರು ಯಾರಾದರೂ ಅವನನ್ನು ಗುರುತಿಸಬಹುದೇ? ಅವನಿಂದ ಸಾಹಿತ್ಯದೀಕ್ಷೆ ಪಡೆದ ಸಾವಿರಾರು ಯುವಕ ಯುವತಿಯರು, ನನ್ನಂತಹ ನೂರಾರು ಹಿತೈಷಿಗಳು, ಅಭಿಮಾನಿಗಳು ಅವನನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ. ರವೀ, ಎಲ್ಲಿದ್ದರೂ ಓಗೊಡುವೆಯಾ?

ಹೀಗೆ ಅಜ್ಞಾತನಾಗಿ ಮುಖ ಮರೆಸಿಕೊಂಡು ಬದುಕುವ ಅಗತ್ಯವಿತ್ತೇ? ಇದು ನಿನ್ನ ಸಾಧನೆಯೇ? ಲೀಲಾವತಿ, ಅಭಿಜಿತ್ ಮತ್ತು  ನಿನ್ನ ತಾಯಿಯೆಂದು ಗೌರವಿಸಲ್ಪಡುವ ನಾನು ಇಂದೂ ನಿನ್ನ ಧ್ವನಿಯನ್ನು ಆಲಿಸಲು, ಕಣ್ಣಾರೆ ಕಾಣಲು ಕಾತರದಿಂದ ಕಾಯುತ್ತಿದ್ದೇನೆ. ನಿನ್ನ ಹುಟ್ಟೂರಿನ ಪರಿಸರದಲ್ಲಿ ನೀನು ಬಿತ್ತಿದ ಸಾಹಿತ್ಯ ಕೃಷಿ ಈಗ ಫಲ ಬಿಡುತ್ತಿದೆ. ಅವರ ಪ್ರೀತಿ, ವಿಶ್ವಾಸಗಳನ್ನು ಹುಸಿಗೊಳಿಸಬೇಡ. ರವೀ, ಯಾವಾಗ ಬರುತ್ತೀ?

(ಮುಗಿಯಿತು)

ಅನುಬಂಧ:
ಹಳ್ಳಿ ಇಗರ್ಜಿಯಂಗಳದೊಳಗೆ ಬರೆದೊಂದು ಶೋಕಗೀತೆ

೧. ದಿನಾಂತ್ಯದ ಗಂಟಾರವ ಅನುರಣಿಸುತ್ತಿದೆ,
ಗುಟುರು ಅಂಬಾಗಳ ಮಂದೆ ನಿಧಾನಕ್ಕೆ ಬಾಣೆಯಲಿ ಸಾಗಿವೆ
ಉಳುಮೆಗಾರನ ಒಜ್ಜೆ ಹೆಜ್ಜೆಗಳು ಮನೆಯತ್ತ ಬಸವಳಿದ ದಾರಿ ಹಿಡಿದಿವೆ,
ಬಿಟ್ಟು ಜಗವ ಕಗ್ಗತ್ತಲು ಹಾಗೂ ನನ್ನ ಮೇಲೆ.

೨. ಈಗ ಹೊಂಬಣ್ಣದ ದೃಶ್ಯ ಮಬ್ಬಾಗುತ್ತಿದೆ
ನಿಶ್ಚಲ ಗಭೀರತೆ ವಾಯುಮಂಡಲಕೆ ತೆಕ್ಕೆಬಿದ್ದಿದೆ,
ಆಗೀಗ ಜೀರುಂಡೆಯ ಜುಮುರ ಹಾರು
ಅಂತರಗಳ ಮಂಕುಗಾಣಿಸುವ ಕಿಂಕಿಣಿಯ ನುಡಿಯು

೩. ಸುದೂರದ ಬಳ್ಳಿಹೊದ್ದ ಗೋಪುರದಿಂದ
ದೂರುಗಾರ ಗೂಬೆ ಚಂದ್ರನಿಗೇ ಗೊಣಗಿದ್ದ
ತನ್ನ ಗೂಢ ಅಂತಃಪುರದತ್ತ ಸುಳಿದಾಡಿದ್ದಕ್ಕೆ,
ತನ್ನ ಪ್ರಾಚೀನ ಏಕಾಂತವನ್ನು ಕಲಕಿದ್ದಕ್ಕೆ.

೪. ಒರಟು ಎಲ್ಮ್ಸ್‍ಗಳ ತಳದಲ್ಲಿ, ಯೂ-ಮರಗಳ ನೆರಳಲ್ಲಿ
ಉಬ್ಬೆದ್ದ ನೆಲದ ಸವಕಳಿಯ ದಿಬ್ಬಗಳಲಿ
ಸಂಕುಚಿತ ಕೋಠಿಗಳ ಒಳಗೆಂದೆಂದಿಗೂ ಮಲಗಿಸಿದ್ದಾರೆ,
ಕಿರಿಯೂರಿನ ಹಿರಿಯರಲ್ಲಿ ಚಿರನಿದ್ದೆಯಲ್ಲಿದ್ದಾರೆ.

೫.
ಮುಂಜಾನೆಯ ಸುವಾಸಿತ ಸುಳಿಗಾಳಿಯ ಕರೆ,
ಹುಲ್ಲ ಜೋಪಡಿಗಳೊಳಗಿನ ಹಕ್ಕಿಗಳ ಕುಕಿಲು,
ಕೋಳಿ ಕೊಕ್ಕೋ, ಇಲ್ಲಾ ಮಾರ್ದನಿಸುವ ಕಹಳೆ,
ಎಬ್ಬಿಸಲಾರದು ಅವರ ಈ ಕೀಳು ತಲ್ಪಗಳಿಂದ.

೬.
ಅವರಿಗಾಗಿ ಒಲೆಗಳಿನ್ನು ಉರಿಯವು,
ಅಥವಾ ಕಾರ್ಯಾವಸರದ ಮನೆಯಾಕೆಯ ಸಂಜೆ ಕಾಳಜಿಗಳು,
ಹಿರಿಯರಾಗಮನಕ್ಕೋಡುವ ಬಾಲಭಾಷೆ ನುಡಿಗಳು,
ಅವರ ಮಡಿಲಿಗೇ ಏರೀವ ಮುದ್ದುಮುತ್ತೂ ದಕ್ಕವು.

೭.
ಬೆಳೆಗಳವರ ಕಟಾವನ್ನೊಲಿದು ಬರುತ್ತಿದ್ದುವು
ಇವರ ಹೂಟೆಗೆ ಗಾರುಗಟ್ಟಿ ನೆಲವೂ ಹಸನಾಗುತ್ತಿತ್ತು
ಇವರ ಸರಳಸರಸವೇ ಇವರ ಮಂದೆಯನ್ನು ಹೊಲಕ್ಕೆಳೆಯುತ್ತಿತ್ತು
ಹೆಮ್ಮರಗಳು ಇವರ ದೃಢಹೊಡೆತಕೆ ತಲೆಬಾಗುತ್ತಿದ್ದುವು!

೮.
ಮಹತ್ತ್ವಾಕಾಂಕ್ಷೆಗಳವರ ಉಪಯುಕ್ತ ದುಡಿಮೆಗಳ ಅಣಕಿಸದಿರಲಿ,
ಅವರ ಮನೆವಾರ್ತೆಯ ಸಂತಸಗಳ ಹಾಗೂ ನಿರೀಕ್ಷೆಯಿಲ್ಲದ ನಾಳೆಗಳಿಗೆ
ಹುಸಿ ವೈಭವಗಳು ವ್ಯಂಗ್ಯನಗೆಯ ಕಿವಿಯಾಗದಿರಲಿ;
ಬಡಜನರ ಚಿಕ್ಕ, ಚೊಕ್ಕ ದಿನಚರಿ.

೯.
ಭೋ ಪರಾಕುಗಳು, ಜೀ ಹುಜೂರುಗಳು
ಅತಿಶಯದ ಸೌಂದರ್ಯ, ಅಮಿತ ಸಂಪದ್ಸಾಧನಗಳೂ
ಅನಿವಾರ್ಯ ಗಳಿಗೆಯನ್ನೇಕ ಧ್ಯಾನದಿ ಕಾದಿವೆ.
ಕೀರ್ತಿಶಿಖರದ ದಾರಿಯೂ ಸಾಗುವುದು ಗೋರಿಗೇ

೧೦.
ಓ ಗರ್ವಿಯೇ, ಇವರ ಕೀಳೆಣಿಕೆಗೆ ಸಾಕ್ಷ್ಯಮಾಡದಿರು,
ಇವರ ಗೋರಿಯ ಮೇಲೆ ಸ್ಮರಣಿಕೆಗಳು ಮೆರೆಯದಿರುವುದಕೆ,
ದೇವಮಂದಿರದ ಓಣಿಗಳಲಿ, ಕಲಾಕುಸುರಿಯ ಛತ್ತಿನಡಿಯಲ್ಲಿ
ಶೋಕಗೀತೆಗಳಿವರ ಹಾಡಿ ಕೊಂಡಾಡದ್ದಕ್ಕೆ.

೧೧.
ಚಿತ್ರಕಾವ್ಯದ ಕುಂಭ, ಪಡಿಯಚ್ಚಿನ ಪ್ರತಿಮೆ
ಮರುಕಳಿಸೀತೇ ಹಾರಿಹೋದ ಉಸಿರ ಈ ಮಹಲಿಗೆ?
ಗೌರವದ ನುಡಿಗಳು ಪ್ರೇರಿಸೀತೇ ನಿಶ್ಶಬ್ದ ದೂಳಿಯ?
ಅಥವಾ ಹೊಗಳಿಕೆ ತಣಿಸೀತೇ ಮಂದ, ಶೀತಲ ಸಾವಿನಾ ಕಿವಿಯನ್ನು?

೧೨.
ಜಗತ್ತಿನೀ ನಗಣ್ಯ ಮೂಲೆಯಲ್ಲಿ ಮಲಗಿಸಿದ
ಅನಾಮಧೇಯ ಹೃದಯದಲೂ ದೈವೀ ಚೇತನ ಸುಪ್ತವಾಗಿದ್ದಿರಬಹುದು;
ತೋಳುಗಳೋ ರಾಜದಂಡವನಾಡಿಸಬಲ್ಲವಿದ್ದಿರಬಹುದು,
ಇಲ್ಲಾ ಕಿನ್ನರಿಯ ನಾದೋತ್ತುಂಗಕ್ಕೆ ಮುಟ್ಟಿಸುವುದಿದ್ದಿರಬಹುದು.

೧೩.
ಜ್ಞಾನಕೋಶದ ಪುಟಗಳು ಸಂದ ಸಮಯದಿ
ಸಮೃದ್ಧವಾದರೂ ಅವರ ಕಣ್ಣುಗಳಿಗೆ ತೆರೆದುಕೊಳ್ಳಲೇ ಇಲ್ಲ
ಶೀತಲ ಬದುಕು ಅದುಮಿತವರ ಉದಾತ್ತ ಉತ್ಸಾಹಗಳ,
ಮರಗಟ್ಟಿಸಿತು ಆತ್ಮ ಕೆಳೆತನದ ಕಡಿಯದಾ ಧಾರೆ

೧೪.
ಬಹುಮೆರುಗಿನ ಅಸಂಖ್ಯ ರತ್ನಗಳು
ಆಳವರಿಯದ ಕಡಲ ಕತ್ತಲಕೂಪಗಳಲ್ಲಿ
ಅದೆಷ್ಟು ಕಾಣದುಳಿದಿದೆ ಹೂಗಳ ಅಜ್ಞಾತ ಅರಳು
ವ್ಯರ್ಥವಾಗಿದೆ ಅದರ ಸುವಾಸನೆ ಮರಳುಗಾಡಿನಲ್ಲಿ.

೧೫
ಹಳ್ಳಿಮುಕ್ಕನ ಕುಂದದ ಎದೆಗಾರಿಕೆ
ಶೋಷಕನಿಗೆ ಹೊಡೆದಿತ್ತು ಸೆಡ್ಡು;
ಒರಗಿರಬಹುದು ಇನ್ನೊಬ್ಬ, ಪ್ರಚಾರಕ್ಕೇರದ ಮಿಲ್ಟನ್,
ಮತ್ತೊಬ್ಬ ತನ್ನವರ ರಕ್ತದ ಸೋಂಕಿಲ್ಲದಾ ಕ್ರಾಂವೆಲ್.

೧೬
ಅಭಿಮಾನಿಗಳ ಕರತಾಡನದ ಮೊರೆತ,
ಭಂಗಿಸುವ ನೋವು, ನಷ್ಟಗಳ ಬೆದರಿಕೆ,
ನಗುವ ನೆಲ ತುಂಬ ಹರವಿ ನೋಡಲು
ಮತ್ತು ದೇಶಚರಿತೆಯನ್ನು ಅವರ ಕಂಗಳಲಿ ಓದಲು.

೧೭
ಆ ಸಮುದಾಯಕ್ಕಿತ್ತು ನಿಷೇಧ; ಪರಿಸ್ಥಿತಿಯ ಮಿತಿಗಳಲಿ
ಗುಣ ವೃದ್ಧಿಸಲಿಲ್ಲ, ಅಪರಾಧ ಹೆಚ್ಚಲೂ ಇಲ್ಲ;
ಕಗ್ಗೊಲೆಯ ಕೆಸರಹಾಯ್ದು ಸಿಂಹಾಸನಗಳ ಸಾಧಿಸಲಿಲ್ಲ,
ಮನುಕುಲಕ್ಕದು ಕರುಣಾದಿಡ್ಡಿ ಮುಚ್ಚಲೂ ಇಲ್ಲ.

೧೮
ಸತ್ಯ ಅದುಮಿಡುವ ಅಂತಃಸಾಕ್ಷಿಯ ಚಡಪಡಿಕೆ,
ಸುಳಿಮಿಂಚುವ ಮುಗ್ಧತಪ್ಪುಗಳ ದಾಹನೀಗುವ
ಆಡಂಬರ ಅಹಮಿಕೆಗಳ ದೇಗುಲದಲ್ಲಿ ಗುಪ್ಪೆ ಬೆಳೆಸಿ
ಕವಿಕಲ್ಪದ ಜ್ವಾಲೆಯಲಿ ಪರಿಮಳಿಸಲರಿಯರು.

೧೯
ಹುಚ್ಚು ಮಂದೆಗಳ ಅನುದಾತ್ತ ಹೋರಾಟಗಳಿಂದ ದೂರ,
ಇವರ ಗಂಭೀರ ಬಯಕೆಗಳೂ ಅಲೆಮಾರಿಯಾದದ್ದಿಲ್ಲ;
ಪ್ರತ್ಯೇಕಿಸಲ್ಪಟ್ಟ ಜೀವನದ ತಂಪು ಓಣಿಗಳಲ್ಲಿ
ಸಾರಿತ್ತವರ ನಿಶ್ಶಬ್ದ ಮಂದ್ರ ನಡೆ

೨೦
ಆದರೂ ಪಳೆಯುಳಿಕೆಗಳನ್ನು ಅವಹೇಳನದಿಂದ ಕಾಯ್ದುಕೊಳ್ಳಲು
ದುರ್ಬಲ ಸ್ಮಾರಕಗಳನ್ನು ನಿಲ್ಲಿಸಿದ್ದಿಲ್ಲ,
ಇರುವ ಅಸಂಬದ್ಧ  ಗೀತೆಗಳು, ರೂಪವಿಲ್ಲದ ಶಿಲ್ಪಗಳು
ಹಾದು ಹೋಗುವವನಲ್ಲಿ ತರುತ್ತದೊಂದು ಶ್ರದ್ಧಾಂಜಲಿಯ ನಿಟ್ಟುಸಿರು.

೨೧
ಅವರ ಹೆಸರು, ಹರಯ ಸ್ಫುಟಗೊಂಡರೆ ಅನಕ್ಷರ ಕಾವ್ಯ,
ಒದಗಿಸಿದೆ ಸ್ಥಳಮಹಿಮೆ ಹಾಗೂ ಚರಮಗೀತೆ;
ಅಲ್ಲದೆ ಹಲವು ಪವಿತ್ರಕಥನಗಳಿಂದಾವರಿಸಿ
ಬೋಳೇಬುದ್ಧಿವಂತನಿಗೂ ಸಾವಮೌಲ್ಯವನಿಲ್ಲಿ ಕಲಿಸಿದೆ.

೨೨
ನಿಸ್ಪಂದ ಮರೆವಿಗೆ ಬಲಿಯಾಗುವವರಿಂದ
ಈ ಸೌಮ್ಯ ಕುತೂಹಲಿ ಸದಾ ವಿದೂರ,
ಗೆಲುವಿನ ದಿನದ ಬೆಚ್ಚನ್ನ ತಾಣಗಳನ್ನು ಬಿಟ್ಟು,
ಹೋದನೇ ಕೊನೆಯ ಹಿನ್ನೋಟವೊಂದನ್ನೂ ಹಾಕದೇ?

೨೩
ಅಗಲುವ ಜೀವಕ್ಕೊಂದು ಎದೆಯಾಳದ ಆಸರೆ,
ಮುಚ್ಚುವ ಕಣ್ಣುಗಳಿಗೆ ಕೆಲವು ಪ್ರಾಮಾಣಿಕ ಕಂಬನಿ
ಗೋರಿಯಿಂದಲೂ ಪ್ರಕೃತಿಯ ಕರೆ ಹೊಮ್ಮುತ್ತದೆ,
ನಮ್ಮ ಬೂದಿಯಲ್ಲೂ ಅವರ ಜೀವಜ್ಯೋತಿ ಉರಿದಿದೆ.

೨೪
ನಿನಗೇ, ಅಲಕ್ಷಿತರ ಮರಣವನ್ನೂ ಮನದುಂಬಿಕೊಳ್ಳುವವನೇ
ಈ ಸಾಲುಗಳವರ ಸರಳತೆಯ ಕಥನ;
ಅವಕಾಶ ಒದಗಿ, ಏಕಾಂತ ಧ್ಯಾನ ಹಿಡಿದರೂ
ಸತ್ಪ್ರೇರಣಾ ಶಕ್ತಿಯೊಂದು ನಿನ್ನ ಭವಿಷ್ಯವನ್ನು ವಿಚಾರಿಸಿಕೊಳ್ಳುತ್ತದೆ

೨೫
ನರೆಗೂದಲ ಗಮಾರ ಹೇಳಿದರೂ ಹೇಳಿಯಾನು,
ಆತನನ್ನು ಕೆಲವು ಬಾರಿ ಕಂಡದ್ದುಂಟು ಸೂರ್ಯನಿಣುಕುವ ಮುನ್ನ
ಸರಭರದ ಹೆಜ್ಜೆಯಲಿ ಇಬ್ಬನಿಯ ಸರಿಸುತ್ತ
ಬಾಣೆ ಮೇಲಣ ಹುಲ್ಲಹಾಸಿನಲ್ಲಿ ಸೂರ್ಯ ಭೇಟಿಗಾಗಿ

೨೬
ಸುದೂರದಿ ತಲೆದೂಗುವ ಬೀಚ್ ಮರದ ತಳದಲ್ಲಿ
ಎತ್ತೆತ್ತರಕ್ಕೆ ಹೊಸೆದ ಬೇರ ಹಾಸಿನ ಮೇಲೆ
ಹಗಲ ಜಡವೇಳೆಯುದ್ದಕ್ಕೆ ತನ್ನ ದೇಹ ಚಾಚಿ
ಗುಳುಗುಳಿಸುವ ತೊರೆಗೆಲ್ಲ ತೋಡಿಕೊಳ್ಳುತ್ತಿದ್ದ.

೨೭
ಒತ್ತಿನಾ ಕಾಡಿನಲಿ ಅಲೆದಾಡುತಿದ್ದ, ಸಿನಿಕ ನಗೆ ಬೀರುತಿದ್ದ,
ತಿರುಬೋಕಿ ಕನಸುಗಳ ಗುಣುಗುಣಿಸುತ್ತ ಹಾಯುವನು,
ಬಸವಳಿದ, ನಿಸ್ತೇಜ, ಅನಾಥಮೂರ್ತಿಯೋ
ಅತಿ ಅಚ್ಚೆಯ, ಭಗ್ನಪ್ರೇಮದ ಫಲವೋ.

೨೮
ಇರಲಿಲ್ಲ, ಒಂದು ದಿನ ಆತ ರೂಢಿಯಾದ ಬೆಟ್ಟದ ಮೇಲೆ,
ನೊಜೆಗಂಟುಗಳ ಜಾಡಿನಲಿ, ಆತನ ಪ್ರೀತಿಪಾತ್ರ ಮರದ ಬಳಿ;
ಮರುದಿನವೂ ಸುಳಿಯಲಿಲ್ಲ ತೊರೆಯ ಬಳಿ,
ಹುಲ್ಲ ಬಾಣೆಯಲೂ ಇಲ್ಲ, ಕಾಡಿನಲೂ ಇಲ್ಲ.

೨೯
ಮರುದಿನ ವಿಷಾದಪೂರ್ಣ ಶೋಕಗೀತೆಗಳೊಡನೆ
ನಿಧಾನಕ್ಕೆ ಇಗರ್ಜಿಯ ಹಾದಿಯಲಿ ಆತ ಹೊರೆಯಾಗಿ ಸಾಗಿದ್ದ ಕಂಡೆವು.
ಬಳಿಸಾರಿ ಮಲಗಿದ್ದವನನ್ನು ಓದಿದೆವು (ಆತ ಓದಲರಿಯದಿದ್ದರೂ)
ಮುಳ್ಳಹೊದರ ತಳದ ಗೋರಿಗಲ್ಲಿನ ಬರಹ.

೩೦
ಚರಮಗೀತೆ

ಇಲ್ಲಾತನ ತಲೆ ಪ್ರಕೃತಿಯ ಮಡಿಲಲ್ಲೊರಗಿಹುದು
ಸಿದ್ಧಿ ಪ್ರಸಿದ್ಧಿಗಳಿಗೆ ಅಪರಿಚಿತ ತರುಣನದು.
ವಿಶೇಷಜ್ಞಾನಗಳು ಆತನ ಬಡಬಾಳಿಗೆ ಸಿಡುಕಿದ್ದಿಲ್ಲ,
ಶೋಕಮೂರ್ತಿ ತನ್ನವನೆಂದು ಗುರುತಿಸಿದ್ದೂ ಇಲ್ಲ.

೩೧
ಉದಾರ ಚರಿತನು, ಪ್ರಾಮಾಣಿಕ ಚಿತ್ತನು,
ಸಗ್ಗವಾತನಿಗೆ ವಿಶೇಷ ಪರಿಹಾರವನ್ನೇ ಕೊಟ್ಟಿತ್ತು:
ಕಾರ್ಪಣ್ಯಕ್ಕಾತ ಇದ್ದುದನ್ನೆಲ್ಲ ಕೊಟ್ಟಿದ್ದ, ಒಂದು ಕಣ್ಣಹನಿ,
ಸಗ್ಗದಿಂದಾತ ಗಳಿಸಿದ್ದ (ಆತ ಇಚ್ಛಿಸಿದಂತೇ) ಒಬ್ಬ ಗೆಳೆಯ.

೩೨
ಅದರಾಚೆ ತೆರೆದಿಡಲು ಆತನ ಸಾಮರ್ಥ್ಯಗಳ ಅರಸಿಕೆ,
ಅಲ್ಲಾ ಆತನ ಅಜ್ಞಾನ ನೆಲೆಗಳಿಂದ ದೌರ್ಬಲ್ಯಗಳ ಸೆಳೆತ ಬೇಕಿಲ್ಲ,
(ಅವು ಸಮಾನ ಆಶಾಕಂಪನದಿ ಒರಗಿಹ)
ಜನಕ ಮತ್ತು ದೇವರ ವಿಶಾಲ ಹೃದಯದಿಂದ.

(ಅನುಬಂಧ ಮುಗಿಯಿತು)

4 comments:

  1. ,Thanks to both for bringing back M R Bangera to life. Yes.There are many such AJANATHA CHETHANAS
    who made great contributions and yet remained almost unknown The few names which come to my mind are--
    poet Aa Gou, kinnigoli, K R rai of Akashavani, Ulitthaya Vishnu asra of Uliya kasargod( yakshagana arthadari, organizer and patron to many cultural persiuts), .May be many more such great souls remain unknown

    ReplyDelete
  2. ಓದಿದ ಮೇಲೆ ನೆನಪಾಗುತ್ತಿದೆ. ಸುಮಾರು ಇಪ್ಪತೈದು ವರ್ಷಗಳ ಹಿಂದೆ ಮಂಗಳೂರು ಆಕಾಶವಾಣಿಯ ಪತ್ರೋತ್ತರ ಕಾರ್ಯಕ್ರಮದಲ್ಲಿ ಖಾಯಂ ಆಗಿ ಕೇಳಿ ಬರುತ್ತಿದ್ದ ಹೆಸರುಗಳಲ್ಲಿ ’ಮಾರಿಪಳ್ಳದಿಂದ ಎಂ. ಆರ್. ಬಂಗೇರಾ’ ಕೂಡಾ ಒಂದು. ಆವರ ಅಪೂರ್ವ ಪ್ರತಿಭೆ ಹಾಗೂ ದುರಂತ ವ್ಯವಹಾರಗಳ ಬಗ್ಗೆ ಈಗಷ್ಟೇ ತಿಳಿಯಿತು. ಬೇಸರವೆನಿಸುತ್ತಿದೆ.

    ReplyDelete
  3. ಈ ಪತ್ರವೇನಾದರೂ ಬಂಗೇರಾ ಗಮನಕ್ಕೆ ಬಂದರೆ ಖಂಡಿತವಾಗಿ ಓಗೊಡುತ್ತಾರೆ. ಸೃಜನಶೀಲ ಭಾವುಕತೆಯಿಂದ ಬಂದಿರಬಹುದಾಧ ವೈರಾಗ್ಯವೇ ಹೀಗೆ ಕತ್ತಲಲ್ಲಿ ಕರಗಿಯೇ ಹೋಗುವಂತೆ ಮಾಡಿರಬೇಕು. ಜಾಣ ವ್ಯವಹಾರಸ್ಥರಾದರೆ ಹೊರ ಜಗತ್ತಿಗೆ ಕಾಣದಾದರೂ ಕುಟುಂಬದೊಂದಿಗೆ ಹೇಗೋ ಸಂಪರ್ಕವಿರಿಸಿಕೊಳ್ಳುತ್ತಾರೆ. ಅಂತಹ ನಿದರ್ಶನಗಳು ನಮ್ಮ ಮುಂದಿವೆ.
    ಅನುಪಮಾ ಪ್ರಸಾದ್

    ReplyDelete
  4. olleya baraha

    ReplyDelete