12 December 2016

ಜೀವ - ಭಾವಗಳ ಅನುಬಂಧ

ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ ನಾಳೆ ಇನ್ನೂ ಕಾದಿದೆ ಇದರ ಅಧ್ಯಾಯ - ೧೮
ಮದುವೆಯಾದ ಎರಡು ವರ್ಷಗಳ ಬಳಿಕ ವಿದ್ಯಾರ್ಥಿ ಜೀವನ ಮುಗಿದು, ನಾನು ಮುಂಬೈಗೆ ನಮ್ಮವರ ಬಳಿಗೆ ಹೊರಟಿದ್ದೆ. ಕೆಲವೇ ದಿನಗಳ ಮೊದಲು ನನ್ನ ಗೆಳತಿ ಸ್ವರ್ಣಲತಾಳ ಮದುವೆ, ಅವಳ ಸೋದರತ್ತೆಯ ಮಗ, ನಮ್ಮ ಯಶೋಧರಣ್ಣನೊಂದಿಗೆ  ಅಡ್ಕದ ಅವರ ಮನೆ ಪುಷ್ಪವಿಹಾರದಲ್ಲಿ ನಡೆದಿತ್ತು. ಜೊತೆಗೆ ನಮ್ಮಮ್ಮನ ಚಿಕ್ಕಮ್ಮನ ಮಗ ರಾಜಮಾಮನ ವಿವಾಹವೂ  ನನ್ನ ಚಂಪಕ ವಿಲಾಸ ದೊಡ್ಡಪ್ಪನ ಮಗಳು ಸುಧಕ್ಕನೊಂದಿಗೆ ಅಲ್ಲೇ ಜೋಡಿ ಮದುವೆಯಾಗಿ ನಡೆದಿತ್ತು. ಎರಡು ವರ್ಷಗಳ ಹಿಂದೆ ನನ್ನ ಮದುವೆಯ ಚಪ್ಪರದಲ್ಲಿ ರಾತ್ರಿ ನನ್ನ ಜೊತೆ ಮಲಗಿದ್ದ ನನ್ನ ಗೆಳತಿ ಸ್ವರ್ಣ, ಬೆಳಗೆದ್ದು ನೋಡುವಾಗ ಮಾಯವಾಗಿದ್ದಳು. ಕೇಳಿದಾಗ ನನ್ನ ಸಮಾಧಾನಕ್ಕೆ ಸೀರೆ ಉಟ್ಟು ಬರುವಳೆಂದು ಹೇಳಲಾಗಿದ್ದರೂ, ಅವಳು ಬಂದಿರಲಿಲ್ಲ. ಮೈ ನೆರೆದ ಹುಡುಗಿಯರು ಹಾಗೆ ಮದುವೆಗೆ ಬರುವಂತಿಲ್ಲ ಎಂದು ಮತ್ತೆ ನನಗೆ ತಿಳಿಸಲಾಗಿತ್ತು. ಬೇಸರ, ಅಸಮಾಧಾನ ನನ್ನದಾಗಿತ್ತು. ಆದರೆ ಅವಳ ಮದುವೆಯಲ್ಲಿ ನಾನಿರಲು ಯಾವ ಅಡ್ಡಿಯೂ ಇರಲಿಲ್ಲ.

ಸ್ವರ್ಣ, ಮದುವೆಗೆ ಮೊದಲೇ ಪುಷ್ಪವಿಹಾರದ ದೊಡ್ಡ ಕುಟುಂಬದ ಮನೆಯಲ್ಲಿ ಒಗೆಯಲು ನೆನೆ ಹಾಕಿದ ರಾಶಿ ಬಟ್ಟೆಗಳಲ್ಲಿ ತನ್ನ ಸೀರೆಯ ಬಣ್ಣವನ್ನು ತನ್ನ ಭಾವೀ ಪತಿಯ ಅಚ್ಚ ಬಿಳಿಯ ಉಡುಪಿಗೆ ಹಚ್ಚಿಟ್ಟವಳು; ಯಶೋಧರಣ್ಣನ ಯಶಸ್ಸಿನ ಹಾದಿಯಲ್ಲಿ ಬಣ್ಣವೇ ದ್ಯೋತಕವಾಗಿ ಅವರ ಸರ್ಫಾಕೋಟ್ಸ್ ಪೇಂಟ್ಸ್ ಬೆಳೆದು ನಿಂತಿದೆ.

ಚಿಕ್ಕದಾದ ನಮ್ಮ ಸಮುದಾಯದಲ್ಲಿ ಬಂಧುತ್ವದಲ್ಲೇ ಮದುವೆ ಸಂಬಂಧಗಳು ಜೋಡಿಸಲ್ಪಡುತ್ತಿದ್ದುವು. ವರದಕ್ಷಿಣೆಯ ಮಾತೇ ಇಲ್ಲದ ನಮ್ಮ ಸಮುದಾಯದ ಬಗ್ಗೆ ನನಗೆ ಹೆಮ್ಮೆಯಿದೆ. ಚಪ್ಪರದೊಂದು ಸೀರೆ ಮತ್ತು ಕರಿಮಣಿ - ಇಷ್ಟೇ ವಧುವಿಗೆ ತವರಿನಿಂದ ಬರಬೇಕಾದುದು. ಕರಿಮಣಿ, ಕಾಲುಂಗುರ, ಬಳೆಗಳನ್ನು ಹುಡುಗಿಯ ಸೋದರತ್ತೆ ತೊಡಿಸುವ ಕಾರಣ  ಅವಷ್ಟನ್ನು ವಧುವಾದವಳು ತವರಿನಿಂದಲೇ ಪಡೆಯುವಳು. ಮತ್ತವಳ ಅಗತ್ಯದ ಬಟ್ಟೆಗಳ ಹೊರತು ಬೇರಾವ ನಿರೀಕ್ಷೆಯೂ ವರನ ಮನೆಯವರಿಗಿರುವುದಿಲ್ಲ. ಅಗ್ನಿಧಾರೆಯ ನಮ್ಮ ಮದುವೆಯ ಸಂಪ್ರದಾಯವೂ ಬಲು ಚಂದ.

ಮುಂಬೈಗೆ ಹೊರಡುವ ಮುನ್ನ ನನ್ನಜ್ಜಿ ಮನೆಗೆ ಹೋಗಿ ಅಜ್ಜಿಯ ಕಾಲಿಗೆರಗಿ ಆಶೀರ್ವಾದ ಪಡೆದು ಭಾರವಾದ ಮನದಿಂದ ಹೊರಟು ಬಂದು ಮನೆಯೆದುರು ಗದ್ದೆಯಾಚೆ ರಸ್ತೆಯಲ್ಲಿ ಬಸ್ಸಿಗೆ ಕಾದು ನಿಂತಿದ್ದಾಗ ನನ್ನಜ್ಜಿ ಕೈತುಂಬ ನನ್ನ ಪ್ರಿಯ ಬೆಳ್ದಾವರೆ ಹೂಗಳನ್ನು ಕಿತ್ತು ತಂದು ನನ್ನ ಕೈಗಿತ್ತಿದ್ದರು. ಅದೇ ಕೊನೆಯ ಬಾರಿಗೆ ನಾನು ನನ್ನ ಪ್ರೀತಿಯ ಬೆಲ್ಯಮ್ಮನನ್ನು ಕಂಡುದುಪುನಃ ಅವರನ್ನು ಕಾಣಲಾರೆನೆಂದು ಯಾರರಿತಿದ್ದರು? ಬಾಲ್ಯದಲ್ಲಿ ನನ್ನನ್ನು ಊರಿಗೆ ಕರೆದೊಯ್ಯಲು ಬರುತ್ತಿದ್ದ ಬೆಲ್ಯಮ್ಮನಿಗಾಗಿ ನಾನು ಸದಾ ಕಾಯುತ್ತಿದ್ದೆ. ಕೊನೆಯ ಬಾರಿ ನಾನು ಅಜ್ಜಿಯೊಡನೆ ಹೋದುದು ನೈನ್ತ್ ಸ್ಟಾಂಡರ್ಡ್ನಲ್ಲಿದ್ದಾಗ. ಪಯಣದಲ್ಲಿ ತೊಕ್ಕೋಟಿನ ಬಳಿ ಗಬ್ಬದ ದನವೊಂದು ರೈಲಿನಡಿಗೆ ಬಿದ್ದು ರೈಲು ನಿಂತಿತ್ತು. ಅದೇ ವರ್ಷ ನಮ್ಮ ದೊಡ್ಡಪ್ಪ ತೀರಿದ ಬಳಿಕ ಬೆಲ್ಯಮ್ಮ ನನ್ನನ್ನು ಕರೆದೊಯ್ಯಲು ಮತ್ತೆಂದೂ ಬಂದಿರಲಿಲ್ಲ. ನಾನೂ ದೊಡ್ಡವಳಾಗಿದ್ದೆ.


ವ್ಯಾಸರಾಯ ಬಲ್ಲಾಳರ ಮುಂಬಯಿ ಸದಾ ನನಗೆ ಕೌತುಕವಾಗಿ ಕಾಡಿತ್ತು. ವಾತ್ಸಲ್ಯ ಪಥ, ಹೇಮಂತಗಾನದ ಚಾಳ್ಗಳು, ಕಟ್ಟಡಗಳು, ಕಛೇರಿಗಳು, ಚೌಪಾಟಿ, ಕ್ವೀನ್ಸ್ ನೆಕ್ಲೇಸ್, ಓವಲ್, ಅಜಾದ್ ಮೈದಾನಗಳು, ರೈಲುಗಳು, ನಿಲುಮನೆಗಳು, ಜನರು, ಸಂಬಂಧಗಳು ಎಲ್ಲವೂ ಅದ್ಭುತ ಲೋಕವನ್ನೇ ಸೃಷ್ಟಿಸಿ ನನಗಾಗಿ ಕಾದಿದ್ದುವು. ಆದರೆ ಪ್ರಥಮ ಬಾರಿಗೆ ಮುಂಬೈಗೆ ಕಾಲಿಟ್ಟು, ನನ್ನ ವಾಸಸ್ಥಳವಾದ ಭಾಂಡುಪ್ಗೆ ಬಂದಾಗ ನನಗೆ ಪಿಚ್ಚೆನಿಸಿ ಭ್ರಮನಿರಸನವಾಗಿತ್ತು. ಬಸ್ ಇಳಿದಾಗ ಕರೆದೊಯ್ಯಲು ನಮ್ಮವರ ತಾರ್ದೇವ್ ಗೆಳೆಯ ಉದ್ಧವ್, ಕಾರ್ ತೆಗೆದುಕೊಂಡು ಬಂದಿದ್ದ. "ಭಾಭೀ, ಕೈಸಾ ಲಗಾ ಮುಂಬಯಿ?" ಎಂದವನು ಕೇಳಿದಾಗ ನಾನು ಪೆಚ್ಚಾಗಿ ನಗಲೆತ್ನಿಸಿದ್ದೆ. ಎರಡು ದಿನಗಳ ಬಳಿಕ ಮತ್ತಾರೋ ಕೇಳಿದಾಗ, "ಎಂಥದಿದು, ಮುಂಬೈ? ಬಲ್ಲಾಳರ ಮುಂಬೈ ಬೇರೆಯೇ; ಇದೇನೂ ಚೆನ್ನಾಗಿಲ್ಲ", ಎಂದಾಗ ಎಲ್ಲರೂ ನಕ್ಕಿದ್ದರು. ಒಳ್ಳೆಯ ಮುಂಬೈ ಬೇಗ ತೋರಿಸುವಾ, ಎಂದು ಭಾವ ನಕ್ಕಿದ್ದರು.

ಭಾಂಡುಪ್ ಪಶ್ಚಿಮದ ಪೋಸ್ಟ್ ಆಫೀಸ್ ಬಿಲ್ಡಿಂಗ್ ಎಂದು ಹೆಸರಾದ ಈಶ್ವರ್ ನಗರ್ ನಮ್ಮ ವಾಸಸ್ಥಳವಾಗಿತ್ತು. ಈಶ್ವರ್ ನಗರ್, ಚಚ್ಚೌಕದ ನಾಲ್ಕು ವಿಂಗ್ಗಳೂ, ಮತ್ತೊಂದು ಅಡ್ಡ ವಿಂಗ್ ಕೂಡಾ ಇರುವ ನಾಲ್ಕು ಮಹಡಿಯ ಕಟ್ಟಡ. ಭಾರತದ ಉತ್ತರದಿಂದ ದಕ್ಷಿಣದ ವರೆಗಿನ ಎಲ್ಲ ರಾಜ್ಯಗಳ ಜನರೂ ಇದ್ದ ಕಾಸ್ಮೊಪಾಲಿಟನ್ ಸೊಸೈಟಿ. ನಮ್ಮದು ಒಂದು  ರೂಮ್, ಕಿಚ್ನ್ ಮನೆ. ಮದುವೆಯ ಬಳಿಕ ಸ್ಥಳಾಭಾವವಾಗುವುದೆಂದು ಅದುವರೆಗೆ ಜೊತೆಗಿದ್ದ ಜನಾರ್ದನಣ್ಣ, ರಮಣಿಯಕ್ಕ ಪಕ್ಕದ ರೂಮ್ ಖಾಲಿಯಾದೊಡನೆ ಅದನ್ನು ಕೊಂಡು ಅಲ್ಲಿಗೆ ಶಿಫ್ಟ್ ಮಾಡಿದ್ದರು. ಎರಡು ಮನೆಗಳ ನಡುವೆ ಒಂದು ಮಲಯಾಳಿ ಕುಟುಂಬವಾದರೆ, ನಮಗೆದುರಾಗಿ, ಜನಾರ್ದನಣ್ಣನವರ ಪಕ್ಕದ ರೂಮಿನಲ್ಲಿದ್ದ ಶೆಟ್ಟಿ ಮಾಮಿ, ನಾಲ್ಕು ಕೋಣೆಗಳ ಆವಾಸಕ್ಕೆ ಶಿಫ್ಟ್ ಆಗಿ, ಅವರ ಕೋಣೆಗೆ ಬಾಲುಮಾಮ, ವಿಜಯಾರ ತಮಿಳು ಸಂಸಾರ ಬಂದಿತ್ತು. ವಿಜಯಾ ನನ್ನ ಮೆಚ್ಚಿನ ಗೆಳತಿಯಾದಳು. ಪಕ್ಕದ ಕೋಣೆಯ ಮಲಯಾಳಿ ಮಿಸ್ಸ್ ಪಂಕಜಂ ಕೂಡಾ ಒಳ್ಳೆಯವರು. ಪ್ರತಿ ಬೆಳಗು ಕಛರಾ ಒಯ್ಯಲು ಬರುವವನಿಗೆ ಬಾಗಿಲು ತೆರೆದು ಡಬ್ಬ ಹೊರಗಿಡುವಾಗ, ಸ್ನಾನಮಾಡಿ ಬೆನ್ನ ಮೇಲೆ ಹರವಿದ ಅಲೆಯಲೆಯಾದ ನೀಳ ಗುಂಗುರು ತಲೆಗೂದಲಿಂದ ನೀರು ತೊಟ್ಟಿಕ್ಕುತ್ತಿತ್ತು. ಸೊಂಪಾದ ಕೂದಲನ್ನು ಕಂಡು, ತಲೆಸ್ನಾನಕ್ಕೆ ಏನು ಉಪಯೋಗಿಸುತ್ತೀರೆಂದು ಕೇಳಿದರೆ, ", ಒನ್ನುಮಿಲ್ಲ; ಪಚ್ಚವೆಳ್ಳೊಂ" ಎಂಬ ಸುಮಧುರ ಉತ್ತರ! ಮಿಸ್ಸ್ ಪಂಕಜಂ ತೀವ್ರ ಅಸ್ತಮಾ ರೋಗಿಯಾಗಿದ್ದರು. ಕೆಲವೊಮ್ಮೆ ಅಟಾಕ್ ಬಂದರೆ ಗಂಡ ಫಾಕ್ಟರಿಯಿಂದ ಓಡಿ ಬರಬೇಕಾಗುತ್ತಿತ್ತು. ಸುನಿಲ್, ಸುನೀತಾ ಎಂಬ ಮುದ್ದಾದ ಪುಟ್ಟ  ಮಕ್ಕಳು ಶಾಲೆಗೆ ಹೋಗುತ್ತಿದ್ದರು.
          
ಅಂಗಣದಾಚೆ ನಮ್ಮ ಎದುರು ವಿಂಗ್ನಲ್ಲಿ ನಮಗೆದುರಾಗಿದ್ದ ಫ್ಲಾಟ್ ಪಂಜಾಬಿ ಕುಟುಂಬದಲ್ಲಿ ಮರ್ಫಿ ಬೇಬಿಯಂತೆ ಕಾಣುತ್ತಿದ್ದ ಮುದ್ದಾದ ಮಗು, ಲಟ್ಟು. ತಲೆತುಂಬ ರೇಶ್ಮೆಯಂತೆ ನವಿರಾದ ಕಪ್ಪು ಅಲೆಗೂದಲ ಅಂಚಿಗೆ ತಲೆಯಲ್ಲಿ ಮರ್ಫಿ ಬೇಬಿಯ ಮುಂಡಾಸಿನಂತೆ ಕಾಣುತ್ತಿದ್ದ ಬ್ಯಾಂಡೇಜ್ ಇತ್ತು. ಹದಿಹರೆಯದ ಅಣ್ಣ ಮಗುವಿನ ಕೈ ಹಿಡಿದು ತಿರುಗಿಸುವಾಗ ಮೇಜಿನಂಚು ತಗುಲಿ ಆದ ಗಾಯವದು. ಮಗು ಲಟ್ಟು ತುಂಬ ಮುದ್ದಾಗಿದ್ದು ನನ್ನನ್ನು ಬಹಳ  ಹಚ್ಚಿಕೊಂಡಿತ್ತು. ದಿನಾಲೂ ಟೆರೇಸ್ನಲ್ಲೋ, ಅವರ ಮನೆಯಲ್ಲೋ ನಾವು ಸಿಗುತ್ತಿದ್ದೆವು. ಲಟ್ಟೂನ ಅಕ್ಕ ರೂಪಾ ಕೂಡಾ ತುಂಬ ಚೆಲುವಾದ ಮಗು.

ಲಟ್ಟೂ ಮನೆಯ ಮೇಲ್ಗಡೆ ಎಡದಲ್ಲಿ ಚಂಪಾ ಬಂಗೇರರ ಮನೆಯಿತ್ತು. ಚಂಪಾ ನಮ್ಮಮ್ಮನ ಹಳೆ ವಿದ್ಯಾರ್ಥಿ. ಅದೇ ಕಟ್ಟಡದಲ್ಲಿ ಮಂಗಳೂರಿನ ಮಿಸ್ಸ್ ಫೆರ್ನಾಂಡಿಸ್ ಇದ್ದರು. ನಮ್ಮ ಕಟ್ಟಡದಲ್ಲಿ ಶೆಟ್ಟಿ ಮಾಮಿ ಇದ್ದರು. ಹೀಗಾಗಿ ಒಂದಿಷ್ಟಾದರೂ ನಮ್ಮವರೆಂಬ ಭಾವ ಸಮಾಧಾನ ನೀಡಿದರೂ, ಮುಸ್ಸಂಜೆಯಾಗುವಾಗ ನಿರ್ವಿಣ್ಣತೆ ಕವಿಯುತ್ತಿತ್ತು.

ನವರಾತ್ರಿಯ ಹತ್ತು ದಿನಗಳ ರಾಸ್ಗರ್ಭಾದ ಸಂಭ್ರಮ ನನಗೆ ಹೊಚ್ಚಹೊಸದಾಗಿತ್ತುಗರ್ಭಾ, ದಾಂಡಿಯಾ ಏನನ್ನೂ ಅರಿಯದ ನನ್ನನ್ನು ಬಿಲ್ಡಿಂಗ್ ಹುಡುಗುಪಾಳ್ಯ ಬಿಡದೆ ಕೈಗೆ ಕೋಲಾಟದ ಕೋಲಿತ್ತು ಎಳೆದೊಯ್ಯುತ್ತಿತ್ತು. ತಡರಾತ್ರಿಯವರೆಗೂ ನಡೆಯುತ್ತಿದ್ದ ರಾಸ್ಗರ್ಭಾದಲ್ಲಿ ಹೊಸ ಜೋಡಿಗಳು ಹುಟ್ಟಿಕೊಳ್ಳುತ್ತಿದ್ದವು. ಪ್ರಣಯದಾಟಗಳು ನಡೆಯುತ್ತಿದ್ದುವು. "ಅಂಬೇ ಮಾತಾ ಕೀ" ಎಂದು ಜೈಕಾರ ಹಾಕುವಾಗ ಒಬ್ಬಾಕೆಗೆ ದರ್ಶನ ಬರುತ್ತಿತ್ತು. ದುರ್ಗಾಪೂಜೆ, ಹೋಮ, ಹವನ ಶ್ರಧ್ಧೆಯಿಂದ ನಡೆಯುತ್ತಿತ್ತು. ಹೋಳಿ ಹಬ್ಬದಲ್ಲೂ ಅಷ್ಟೇ; ಬಾಗಿಲಿಕ್ಕಿ ಭದ್ರ ಪಡಿಸಿ ಕುಳಿತರೂ ಹುಡುಗರು ಬಿಡದೆ ಬಾಗಿಲು ತೆರೆಸಿ ಬಣ್ಣ ಎರಚಿಯೇ ಬಿಡುತ್ತಿದ್ದರು. ಅಂಗಣ, ಸೋಪಾನ ಎಲ್ಲವೂ ಬಣ್ಣದೋಕುಳಿಯಲ್ಲಿ ಮೀಯುತ್ತಿದ್ದುವು.
        
ಆದರೂ ಉಳಿದ ದಿನಗಳಲ್ಲಿ ಎಲ್ಲ ಸಂಭ್ರಮವನ್ನೂ ಮರೆಸುವಂತೆ ಇರುಳ ಕತ್ತಲಲ್ಲಿ ಏನೇನೋ ಅಹಿತಕರ ಬೆಚ್ಚಿ ಬೀಳಿಸುವ ಸದ್ದುಗಳು ಯಾವ್ಯಾವುದೋ ಮನೆಗಳಿಂದ ಕೇಳಿಸಿ ದಿಗಿಲು ಹುಟ್ಟಿಸುತ್ತಿತ್ತು. ಲಟ್ಟೂ ಮನೆಯ ಕೆಳಗಿನ ಮನೆಯ ಏಳು ವರ್ಷದ ಹುಡುಗನೊಬ್ಬ ತಾಯಿ ಬೈದರೆಂಬ ಸಿಟ್ಟಿನಿಂದ ಅಡಿಗೆಕೋಣೆ ಬಾಗಿಲು ಮುಚ್ಚಿ ಬೆಂಕಿ ಹಚ್ಚಿಕೊಂಡು ಸುಟ್ಟು ಹೋಗಿದ್ದ. ನಾನಂದು ಹೊರಗೆಲ್ಲೋ ಹೋಗಿದ್ದರಿಂದ ದುರಂತವನ್ನು ಕಣ್ಣಾರೆ ಕಾಣುವುದು ತಪ್ಪಿದರೂ, ನಮ್ಮಕ್ಕ ಅದನ್ನು ಕಾಣ ಬೇಕಾಯ್ತು. ರಸ್ತೆಯ ಮೂಲೆಯಲ್ಲಿ ಅಂಗಡಿಯಿದ್ದ ವಣಿಕರ ಮನೆ ನಮ್ಮ ಬಲಕ್ಕಿದ್ದ ವಿಂಗ್ ನಾಲ್ಕನೆ ಮಹಡಿಯಲ್ಲಿದ್ದು, ರಾತ್ರಿಯ ನೀರವದಲ್ಲಿ ಮನೆಯಿಂದ ಮುದುಕಿಯ ದಾರುಣ ನರಳಾಟ, ಕೂಗಾಟ ಕೇಳಿ ಬಂದು ನಿದ್ದೆಯನ್ನು ಕೆಡಿಸುತ್ತಿತ್ತು. ಮೊದಲ ಬಾರಿಗೆ ಬೆಳ್ಳುಳ್ಳಿ ತರಲೆಂದು ನಾನು ಅಂಗಡಿಗೆ ಹೋದಾಗ, ಅಕ್ಕ ಹೇಳಿ ಕಳುಹಿದ ಲಸೂನ್ ಎಂಬ ಶಬ್ದ ನೆನಪಿಗೆ ಬರಲೇ ಇಲ್ಲ. ಗಾರ್ಲಿಕ್ ಎಂದರೆ ಗುಜರಾಥಿಗೆ ತಿಳಿಯಲಿಲ್ಲ. ನಾನು ಕೈಯಲ್ಲಿ ಚಿಕ್ಕ ಗೋಲಾಕೃತಿ ತೋರುತ್ತಾ," ಸಫೇದ್ - ಗೋಲ್ವಾಲಾ " ಎಂದು ತಿಳಿಸಲೆತ್ನಿಸಿದ್ದೆ. ಮೇಲೆ ಯಾವಾಗ ಅಂಗಡಿಗೆ ಹೋದರೂ, ಅವರು " ಸಫೇದ್ ಗೋಲ್ವಾಲಾ ಚಾಹಿಯೇ?" ಎಂದು ಪರಿಹಾಸ ಮಾಡಿ ನಗುತ್ತಿದ್ದರು.
           
೧೯೬೯ ಜೂನ್ನಲ್ಲಿ ನಾನು ಅಜ್ಜಿಯಿಂದ ಬೀಳ್ಕೊಂಡು ಮುಂಬೈಗೆ ಬಂದಿದ್ದೆ. ೧೯೭೦ ಎಪ್ರಿಲ್ ೧೨ರ ತಡರಾತ್ರಿ ನಾನು ನಿದ್ದೆಯಲ್ಲಿದ್ದಾಗ ನಮ್ಮಣ್ಣ ಹಾಗೂ ಪ್ರತಾಪಣ್ಣ ಆಘಾತಕರ ವಾರ್ತೆ ಹೊತ್ತು ಬಂದಿದ್ದರು. ವಿಶು ಹಬ್ಬಕ್ಕೆ ಎರಡು ದಿನವಿತ್ತು. ಬೆಲ್ಯಮ್ಮ ಮೊಮ್ಮಗಳು ಸುಜಿಯನ್ನು ಕರಕೊಂಡು ಅಂಗಡಿಯತ್ತ ಹೊರಟವರು, ದಾರಿಯಲ್ಲಿ ಸಂಕಟವೆನಿಸಿ ತಾವು ಹಿಂದೆ ಇದ್ದ ತಮ್ಮ ಗಂಡನ ಮನೆ ಹೊಸಮನೆ ಬಳಿ ಬಂದು, ಹೇಗೋ ಜಗಲಿಯಲ್ಲೊರಗಿದರು. ಪಕ್ಕದಲ್ಲೇ ಉಚ್ಚಿಲ ಶಾಲೆಯಲ್ಲಿ ನಮ್ಮ ತಂದೆ ಮೀಟಿಂಗ್ಗೆ ಬಂದಿದ್ದುದನ್ನು ಅರಿತಿದ್ದ ಸುಜಿ, ಓಡಿ ಹೋಗಿ ತಂದೆಯವರನ್ನು ಕರೆತಂದಳು. ವೈದ್ಯರು ಬಂದರೂ ನಮ್ಮ ಪ್ರಿಯ ಬೆಲ್ಯಮ್ಮನನ್ನು ಉಳಿಸಿ ಕೊಳ್ಳಲಾಗಿರಲಿಲ್ಲ. ಎಪ್ಪತ್ತೆರಡರ ಪ್ರಾಯದಲ್ಲಿ, ತಮ್ಮ ಗಂಡನ ಮನೆಯ ಜಗಲಿಯಲ್ಲೇ ಅವರು ಕೊನೆಯುಸಿರೆಳೆದರು.
[೧೪ರ ಹರೆಯದಲ್ಲಿ ಹೊಸಮನೆಗೆ ಮದುವೆಯಾಗಿ ಹೋದ ನನ್ನ ಸೋದರತ್ತೆ ದೇವಕಿ]
ಹೊಸಮನೆ, ನಮ್ಮಜ್ಜ ಕಟ್ಟಿಸಿದ ಮನೆ. ಮುಂಬಯಿಯಲ್ಲಿ, ಮಿರ್ಜಾ ಇಸ್ಕಂದರ್ ಬೇಗ್ ಅವರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು, ನಮ್ಮಜ್ಜ ವೀರಪ್ಪ. ವಿಭಜನೆಯ ಬಳಿಕ ಪಾಕಿಸ್ತಾನದ ಮೊದಲ ಅಧ್ಯಕ್ಷರಾದ ಮಿರ್ಜಾ ಸಾಹೇಬರು, ಭಾರತ ಬಿಟ್ಟು ಹೋಗುವಾಗ ತಮ್ಮೊಡನೆ ಬರುವಂತೆ ನಮ್ಮಜ್ಜನನ್ನು ಕರೆದರು. ಆದರೆ ಭಾರತದಲ್ಲೇ ಉಳಿಯಲಿಚ್ಛಿಸಿದ ಅಜ್ಜ, ಮಿರ್ಜಾ ಸಾಹೇಬರು ಹೊರಟು ಹೋಗುವಾಗ ಕೈಗಿತ್ತ ರೂ. ,೫೦೦/- ಮೊತ್ತದಿಂದ ಊರಲ್ಲಿ ಹೊಸಮನೆಯನ್ನು ಕಟ್ಟಿದ್ದರು. ಮಂಗಳೂರ ತುಲಸೀವಿಲಾಸದ ತಮ್ಮ ಪ್ರೀತಿಯ ಸೋದರಿಯ ಹೆಸರಲ್ಲಿ ನೋಂದಾಯಿಸಿದ ಮನೆಯನ್ನು, ಅಲ್ಲಿ ಜೊತೆಗಿದ್ದ ತಮ್ಮ, ತಂಗಿಯರಿಗಾಗಿ ತೊರೆದು ಹೋಗಬೇಕಾಗಿ ಬಂದಾಗ ಅಜ್ಜನಿಗೆ ತುಂಬ ನೋವಾಗಿತ್ತು. ಜೀವಿತದ ಶ್ರಮದ ದುಡಿಮೆಯ ಫಲ ಕೈ ಬಿಟ್ಟು ಹೋಗಿತ್ತು. ಪತಿಯ ಮಾತಿನಂತೆ ನಮ್ಮಜ್ಜಿ, ಮನೆಯಿಂದ ಹೊರಬಿದ್ದು, ಎಂಟು ಮಕ್ಕಳೊಡನೆ ಗುಡ್ಡೆಮನೆಗೆ ಬಂದು ನೆಲಸಿದರು. ಮನೆ, ಹಿತ್ತಿಲು, ತೆಂಗಿನ ತೋಟವನ್ನು ಊರ್ಜಿತಗೊಳಿಸಿದರು. ಗೌರವಯುತರಾಗಿ ಬಾಳಿದರು. ಬಂಧುವರ್ಗ, ನೆರೆಕರೆ, ಮನೆಗೆ ಬಂದು ಹೋಗುವವರು, ಕೋಟೆ ದೇವಳದ ಕಾರಂತರು ಎಲ್ಲರೂ ಅವರನ್ನು ಗೌರವಾದರದಿಂದ ಕಾಣುತ್ತಿದ್ದರು. 
[ಹೊಸಮನೆ ಸಂಸಾರ]
ನಮ್ಮಜ್ಜನೂ ತಮ್ಮ ಕೊನೆಗಾಲದಲ್ಲಿ ದೀರ್ಘಕಾಲ ರುಗ್ಣಶಯ್ಯೆಯಲ್ಲೊರಗಿ ಉಸಿರು ನಿಲ್ಲದೆ ಹೋದಾಗ, ತಮ್ಮ ಮನೆಯಲ್ಲೇ ಕೊನೆಯುಸಿರೆಳೆವ ಹಂಬಲವಿರಬಹುದು ಎಂದನಿಸಿ, ಅವರ ಹೊಸಮನೆಗೆ ಸ್ಟ್ರೆಚರ್ನಲ್ಲಿ ತಂದು ಜಗಲಿಯಲ್ಲೊರಗಿಸಿದ ಸ್ವಲ್ಪ ಹೊತ್ತಿನಲ್ಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತಂತೆ. ಈಗ ನಮ್ಮಜ್ಜಿಗೂ ಅಲ್ಲೇ ಮುಕ್ತಿ ದೊರೆಯಿತು. ಜೀವ - ಭಾವಗಳ ಅನುಬಂಧದ ಬಗೆ ಅರಿತವರಾರು?
        
ನನಗೆ ಅತ್ಯಂತ ಪ್ರಿಯರಾಗಿದ್ದ, ಮೊಮ್ಮಕ್ಕಳೆಲ್ಲರಿಗೂ ಉಣಿಸಿದಷ್ಟೂ ತಣಿಯದ ನನ್ನ ವಾತ್ಸಲ್ಯಮೂರ್ತಿ ಬೆಲ್ಯಮ್ಮನ ಕೊನೆಯ ಘಳಿಗೆಯಲ್ಲಿ ನಾನು ಬಳಿಯಿರಲಿಲ್ಲ. ಅವರ ಪಾರ್ಥಿವ ಶರೀರವನ್ನೂ ಕಾಣಲಾಗಲಿಲ್ಲ. ವಿಶು ಹಬ್ಬದಲ್ಲಿ ಕಣಿಯ ಬಳಿ ನಮ್ಮನ್ನು ಹರಸಲು ನಿಂತು ಕೈ ತುಂಬ ಸುಟ್ಟ ಗೇರುಬೀಜ, ಓಲೆಬೆಲ್ಲ ಕೊಡುತ್ತಿದ್ದ ಬೆಲ್ಯಮ್ಮನನ್ನು ನಾವು ಮತ್ತೆಂದೂ ಕಾಣುವಂತಿರಲಿಲ್ಲ. 'ಬಾಂಙ ಹೋಯ್ತು; ಮಕ್ಕಳಿಗೆ ಊಟ ಬಡಿಸಿ" ಎನ್ನುತ್ತಿದ್ದ ಅಕ್ಕರೆಯ ಕಂಠವನ್ನು ಕೇಳುವಂತಿರಲಿಲ್ಲ. ಕೈತುಂಬ ನನ್ನ ಪ್ರೀತಿಯ ಬೆಳ್ದಾವರೆ ಹೂಗಳನ್ನು ತಂದಿತ್ತು ನನ್ನನ್ನು ಬೀಳ್ಕೊಂಡ ನನ್ನ ಬೆಲ್ಯಮ್ಮನ ಚಿತ್ರ ನನ್ನ ಚಿನ್ಮನದಲ್ಲಿ ಅಚ್ಚೊತ್ತಿ ಉಳಿದಿದೆ. ಕಾಲ ದುಃಖವನ್ನು ಮರೆಸುವುದೆಂದವರು ಯಾರು?

(ಮುಂದುವರಿಯಲಿದೆ)

No comments:

Post a Comment