ಶ್ಯಾಮಲಾ
ಮಾಧವ ಇವರ ಆತ್ಮಕಥಾನಕ ಧಾರಾವಾಹಿ `ನಾಳೆ ಇನ್ನೂ ಕಾದಿದೆ’ ಇದರ
ಅಧ್ಯಾಯ – ೪
ಶಾಲಾ ಮಕ್ಕಳ ಆಟಕ್ಕೆಂದು ಶಾಲೆಯೊಳಗಿನ ನಮ್ಮ ಮನೆಯ ಪಕ್ಕ ಏತ-ಪಾತ ಒಂದು ಬಂದು ಸ್ಥಾಪಿತವಾದ ದಿನ. ಎರಡು ಕಬ್ಬಿಣದ ಕಂಬಗಳನ್ನು ನೆಟ್ಟು ಅವುಗಳ ಮೇಲೆ ಅಡ್ಡಲಾಗಿ ಏಣಿ ನಿಲ್ಲಿಸಲಾಗಿತ್ತು. ಕಲ್ಲು, ಮಣ್ಣಿನ ತಳಭಾಗಕ್ಕೆ ಹೊಯ್ಗೆ ಇನ್ನೂ ತುಂಬಿರಲಿಲ್ಲ. ನಾನಾಗ ಐದನೆಯ ತರಗತಿಯ ಎಂಟು ವರ್ಷದ , ಕ್ಷೀಣ ಕಾಯದ ಹುಡುಗಿ.
ಹನ್ನೊಂದನೇ ತರಗತಿಯ ಗುತ್ತಿನ ಮನೆಯ ವಿಜಯಾ ಶೆಟ್ಟಿ, ಸೀರೆ ಉಡುವ, ಧಡೂತಿ ದೇಹದ ಹುಡುಗಿ. ಅವಳೂ, ನಾನೂ ಆಟಕ್ಕೆ ನಿಂತೆವು. ವಿಜಯಾ ಏಣಿಯ ಮೇಲಿದ್ದ ಕೊನೆ ಹಿಡಿದು ಕೆಳಗೆ ಬಂದುದೇ, ಇನ್ನೊಂದು ತುದಿ ಹಿಡಿದಿದ್ದ ನನ್ನ ಹಗುರ ದೇಹ ಥಟ್ಟನೆ ಮೇಲೇರಿತು. ಠಣ್ ಎಂದು ಏಣಿ ನೆಲಕ್ಕೆ ಬಡಿದ ರಭಸಕ್ಕೆ, ನಾನು ಕೈಬಿಟ್ಟು, ಅಷ್ಟೆತ್ತರದಿಂದ ಕೆಳಗೆ ಬಿದ್ದೆ. ಮೊಣಕಾಲಿಗೆ ಚೆನ್ನಾಗಿ ಜಜ್ಜಿದ ಗಾಯವಾಯ್ತು. ಹಲ್ಲೊಂದು ಕಿತ್ತು ಬಂದು, ಇನ್ನೊಂದು ಹಲ್ಲು ಸಡಿಲಾಗಿ ಆಡ ತೊಡಗಿತು. ಮೂಗಿನ ಕೆಳಗೂ ಗಾಯ ! ವಿಜಯಾ ಪೆಚ್ಚಾಗಿ ನನ್ನ ಬಳಿ ಓಡಿ ಬಂದರೆ, ಮನೆಯೊಳಗಿದ್ದ ನನ್ನ ಶಾರದತ್ತೆ, ಧಾವಿಸಿ ಬಂದು ಬೆನ್ನಿಗೊಂದು ಏಟು ಕೊಟ್ಟು ನನ್ನನ್ನೆತ್ತಿ ನಿಲಿಸಿ ಮತ್ತೆ ಡಾಕ್ಟರ ಬಳಿಗೊಯ್ದರು. ಬಿದ್ದ ನೋವಿಗಿಂತ ಹೆಚ್ಚಾಗಿ, ಪ್ರೀತಿಯ ಅತ್ತೆ ಪೆಟ್ಟು ಕೊಟ್ಟರೇಕೆ ಎಂಬ ನೋವೇ ತೀವ್ರವಾಗಿ ಕಾಡ ತೊಡಗಿತು. ಮಕ್ಕಳು ಬಿದ್ದಾಗ, ತಾಗಿದಾಗ ಭಯವನ್ನು ಓಡಿಸಲೆಂದು ಈ ಪೆಟ್ಟು ಎಂದು ನಂತರ ತಿಳಿಯಿತು.
ಪೆಟ್ಟೆಲ್ಲ ಕ್ರಮೇಣ ಗುಣವಾದರೂ, ಮುಖಕ್ಕೆ ಕೋರೆಹಲ್ಲೊಂದು ಅಲಂಕಾರವಾಗಿ ಬಂತು. ಮತ್ತೆ ದಸರಾ ವೇಷ ಸ್ಪರ್ಧೆಯಲ್ಲಿ ಮೈಗೆಲ್ಲ ಮಸಿ ಬಳಿದು, ಮಾವಿನೆಲೆಗಳಿಂದ ಸಿಂಗರಿಸಿ ಕೊಂಡು ಧರಿಸಿದ ಕೊರಗರ ವೇಷಕ್ಕೆ ಬಹುಮಾನ ಪಡೆದಂದೇ ರಾತ್ರಿ, ದೂರದಲ್ಲಿ ಹುಲಿವೇಷದ ಬ್ಯಾಂಡ್ ಕೇಳಿ ನೋಡಲೆಂದು ಓಡುವಾಗ, ಚೂಪಾದ ಬೆಣಚು ಕಲ್ಲ ಮೇಲೆ ಬಿದ್ದು ತೊಡೆ ಹರಿದು ಆದ ಗಾಯ ಮಾಯಲು ದೀರ್ಘಕಾಲವೇ ಹಿಡಿಯಿತು. ಗೆಳತಿಯರ ಜೊತೆ ಕೈ ಕೈ ಹಿಡಿದು ಮಟ್ಟಂಮಟ್ಟ ತಿರುಗುವುದು ನನ್ನ ಮೆಚ್ಚಿನ ದಣಿವಿರದ ಆಟವಾಗಿತ್ತು. ಒಂದಿನ ಈ ಆಟ ಅಂಕೆ ಮೀರಿ, ತಲೆ ಸುತ್ತು ಬಂದು ವಾಂತಿಯಾಗಿ, ಮತ್ತೆ ಯಾರೇ ಹಾಗೆ ತಿರುಗುವುದನ್ನು ಕಂಡರೂ ತಲೆ ಸುತ್ತ ತೊಡಗಿತು. ಒಂದಿನ ಇಂತಹ ಆಟದಲ್ಲಿ, ಗಿರಿಜ ಟೀಚರ ಮಗ ಮಧುಕರ, ಜೊತೆಗಾರನ ಕೈಬಿಟ್ಟು, ಸ್ಟೇಜ್‌ನ ಮೂಲೆಗೆ ಅವನ ತಲೆ ಬಡಿದು ಸುರಿದ ರಕ್ತದೋಕುಳಿಯಲ್ಲಿ ಅವನಿಗಿದ್ದ ಹೀಮೊಫಿಲಿಯಾ ರೋಗ ಪತ್ತೆಯಾಗಿತ್ತು., ಆಗ ನಮಗೆ ಅದೊಂದು ಹೊಸ ವಿಷಯವಾಗಿತ್ತು.
ಅಂಗಳದ ಸುತ್ತ ಅಮ್ಮನ ಹೂಗಿಡಗಳಿಗೆ
ಮನೆಯೆದುರಿನ ಬಾವಿಯಿಂದ ಚಿಕ್ಕ ಕೊಡದಲ್ಲಿ ನೀರೆಳೆದು ತಂದು ಎರೆಯುವ
ಕೆಲಸ ನನ್ನ ಪಾಲಿಗಿತ್ತು.
ಪುನಃ ಪುನಃ ಎಡವಿ ಬಿದ್ದು ಕೊಡ ಜಜ್ಜಿದಾಗ ಅಮ್ಮನಿಂದ ಬೈಗುಳು. ಶಾಲಾ ಸ್ಪೋರ್ಟ್ಸ್ ದಿನದಂದು, ಸ್ಕ್ವಾಡ್ ಲೀಡರ್ ಆಗಿ ರಿಲೇಯಲ್ಲಿ ವಿಜಯದ ಮೆಟ್ಟಲಲ್ಲಿ ಪೋಲ್ಗೆ ಕೊನೆಯ ಸುತ್ತು ಬರುವಾಗ, ನಾನು ಬಿದ್ದು ಬಿಟ್ಟೆ. ಎದ್ದು ಪುನಃ ಓಡಲು ಹೆಜ್ಜೆಯೆತ್ತುವಾಗ ಪುನಃ ಬಿದ್ದೆ. ಮೂರನೇ ಯತ್ನದಲ್ಲೂ ಬಿದ್ದಾಗ, ಆಟ ಟೀಚರ್ ನಮ್ಮಮ್ಮ , " ಏನ್ ಮಾಡ್ತಿದ್ದೀಯಾ, ಅಲ್ಲಿ? ಎದ್ದು ಓಡು" ಎಂದು ಕಟುವಾಗಿ ಗದರಿದರು. ನಿರಾಶೆ, ನೋವು ನನ್ನಲ್ಲಿ ಮಡುಗಟ್ಟಿತ್ತು. ಶಾಲೆಯ ಟೀಚರ್ಸ್ ಅಮ್ಮನನ್ನು ತರಾಟೆಗೆ ತೆಗೆದುಕೊಂಡರು. ಸ್ಪೋರ್ಟ್ಸ್ ಮುಗಿದುದೇ ನನ್ನನ್ನು ಡಾಕ್ಟರ ಬಳಿಗೊಯ್ಯುವಂತೆ ಅಮ್ಮನ ಮೇಲೆ ಒತ್ತಡ ಹೇರಿದರು. ಮನೆಯಿಂದ ಡಾ. ಎಂ.ಎಸ್. ಪ್ರಭು ಡಿಸ್ಪೆನ್ಸರಿಗೆ ನಡೆದ ದಾರಿಗುಂಟ ನನ್ನ ಎಡಗಾಲು ನೇತು ಬಿದ್ದಂತಾಗಿ ಕಾಲ ಉಂಗುಷ್ಠದ ತುದಿ ಕಿತ್ತುಕೊಂಡು ರಕ್ತ ಒಸರ ತೊಡಗಿತು. ನನ್ನ ಕಾಲ ಸಮಸ್ಯೆ ಪೋಲಿಯೋ ಇರಬಹುದೆಂದು ಸಂಶಯಿಸಿದ ಡಾಕ್ಟರ್, ಅದನ್ನು ಖಚಿತ ಪಡಿಸಲು ಡಾ .ಎಂ.ಎಸ್.ಪೈ ಬಳಿಗೆ ಕಳುಹಿದರು. ಅಲ್ಲಿಂದ ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ. ಕಾಲಿಗೆ ಪ್ಲಾಸ್ಟರ್ ಹಾಕಲಾಯ್ತು
ಒಂದೂವರೆ ದಿನದ ಆಸ್ಪತ್ರೆ ವಾಸದ ಬಳಿಕ ನಾನು ಪ್ಲಾಸ್ಟರ್ನೊಂದಿಗೆ ಮನೆಗೆ ಮರಳಿದೆ. ಆಸ್ಪತ್ರೆಯಲ್ಲಿ ನನ್ನ ಅತ್ತ ಇತ್ತ ಇದ್ದ ಇಬ್ಬರು ಮಕ್ಕಳು ನನ್ನ ಸ್ಮೃತಿಪಟಲದಲ್ಲಿ ಅಚ್ಚೊತ್ತಿ ಉಳಿದಿದ್ದಾರೆ. ಅಕ್ಕನ ಮದುವೆಯಲ್ಲಿ ಗರ್ನಾಲ್ ಉರಿಸ ಹೋಗಿ, ಅದು ಕೈಯಲ್ಲೇ ಸಿಡಿದು ತೋಳೆಲ್ಲ ಸುಟ್ಟು ಚಿಂದಿಯಾಗಿದ್ದ ಹುಡುಗ, ಡಾಕ್ಟರ್ ವಾರ್ಡ್ ಪ್ರವೇಶಿಸಿದರೆ ಸಾಕು, ಭಯದಿಂದ ಚೀತ್ಕರಿಸಿ ಓಡಲೆತ್ನಿಸುತ್ತಿದ್ದ. ಮಾಂಸವೆಲ್ಲ ಕಿತ್ತು ಬಂದಂತಿದ್ದ ಆ ತೋಳಿನ ಚಿತ್ರ ಇಂದೂ ಹಸಿಯಾಗಿದೆ! ಹಾಗೆಯೇ ತೆಂಗಿನ ಕಾಯಿ ತಲೆಗೆ ಬಿದ್ದು, ಅಡ್ಡವಾಗಿ ಸೀಳಿದ ತಲೆಯ ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿ ಕೊಳ್ಳುತ್ತಿದ್ದ ಮೂರು ವರ್ಷ ಪ್ರಾಯದ ಹೆಣ್ಣು ಮಗುವಿನ ನಗುಮುಖ! ಬಂಧು ಡಾ.ತಾರಾನಾಥ್ - ಆಸ್ಪತ್ರೆಯಲ್ಲಿ ಅನುಭವೀ ಡಾಕ್ಟರಾಗಿದ್ದರೆ, ಹೊಸದಾಗಿ ಸೇರಿದ್ದ
ಅವರ ತಮ್ಮ - ತರುಣ
ಡಾ.ಶೇಷಾದ್ರಿ ಅವರನ್ನು ರೌಂಡ್ಸ್ನಲ್ಲಿ ನರ್ಸ್ಗಳ ಆರಾಧನಾ ದೃಷ್ಟಿ ಹಿಂಬಾಲಿಸುವುದು, ಆ ಎಳೆಯ ಪ್ರಾಯದಲ್ಲೂ ನನ್ನರಿವಿಗೆ ಬಂದಿತ್ತು. ನಿಷ್ಣಾತ ಸರ್ಜನ್ ಆದ ಡಾ.ಶೇಷಾದ್ರಿ, ಬೆಂಗಳೂರಿನ ರಾಮಯ್ಯ ಹಾಸ್ಪಿಟಲ್ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ತಂಗಿ ಡಾ.ಗಿರಿಜಾ, ಬೆಂಗಳೂರಿನಲ್ಲಿ ಪ್ರಖ್ಯಾತ ಹೆರಿಗೆ ತಜ್ಞರಾಗಿದ್ದಾರೆ.
ಆಸ್ಪತ್ರೆಯಿಂದ ಮನೆಗೆ ಮರಳಿದಾಗ,
ನನ್ನ ತಂದೆ ನನ್ನನ್ನು ತೋಳಲ್ಲೆತ್ತಿ ಒಳ ತಂದು ಮಲಗಿಸಿದರು. ಎರಡು ತಿಂಗಳು ಮನೆಯಲ್ಲೇ ನನಗೆ ಗೃಹ ಬಂಧನವಾಯ್ತು. ಶಾರದತ್ತೆ ಬೊಂಬಾಯಿಗೆ ಪತಿಯ ಬಳಿಗೆ ತೆರಳಿದ್ದರಿಂದ, ಊರಿಂದ ಅಮ್ಮನ ಚಿಕ್ಕಮ್ಮ - ನಮ್ಮ ಆ ಈ ಬೆಲ್ಯಮ್ಮ - ನನ್ನ ಶುಶ್ರೂಷೆಗೆಂದು ಬಂದರು. ಹದಿನೈದು ದಿನಗಳ ಬಳಿಕ ಪುನಃ ಆಸ್ಪತ್ರೆಗೆ ಹೋಗಿ ಪ್ಲಾಸ್ಟರ್ ತೆಗೆಯಲಾಯ್ತು. ಎರಡು ತಿಂಗಳ ಔಷಧೋಪಚಾರದೊಡನೆ ದಿನವೂ ಕಾಲಿಗೆ ಕಾಡ್ ಲಿವರ್ ಎಣ್ಣೆ ಹಚ್ಚಿ ಬಿಸಿಲಲ್ಲಿ ನಿಲ್ಲುವ ಉಪಚಾರ. ದಿನವೂ ಬೆಳಿಗ್ಗೆ ಬೆಲ್ಯಮ್ಮ ನನ್ನ ಕ್ಷೀಣ ಕಾಲಿಗೆ ಕಾಡ್ಲಿವರ್ ಎಣ್ಣೆ ಹಚ್ಚಿ ತಿಕ್ಕಿದ ಬಳಿಕ, ತಂದೆಯವರು ನನ್ನನ್ನೆತ್ತಿ ಕೊಂಡು ಹೋಗಿ ಹೊರಗೆ ಬಿಸಿಲಿನಲ್ಲಿ ನಿಲ್ಲಿಸುತ್ತಿದ್ದರು. ಮದರಾಸಿನಿಂದ ನಮ್ಮಮ್ಮನ ದೊಡ್ಡಪ್ಪ ಜಡ್ಜ್ ರಾವ್ ಬಹದ್ದೂರ್ ರಾಮಪ್ಪ ಅಮ್ಮನಿಗೆ ಬರೆದ ಪತ್ರದಲ್ಲಿ ದಿನವೂ ಬೂತಾಯಿ ಮೀನು ಕಾಯಿಸಿ ನನಗೆ ತಿನಿಸುವಂತೆ ಸಲಹೆಯಿತ್ತರು. ಓದು ಕಲಿತಂದಿನಿಂದಲೂ ನನ್ನ ಸಂಗಾತಿಯಾಗಿದ್ದ ಪುಸ್ತಕಗಳು ಈ ಎರಡು ತಿಂಗಳಲ್ಲಿ ನನಗೆ ಮತ್ತೂ ಅಂಟಿ ಕೊಂಡವು. ಶಾಲೆಯಲ್ಲಿ ನಮ್ಮೆಲ್ಲರ ಅಕ್ಕನಾಗಿದ್ದ
ಸಾವಿತ್ರಿ ದೈತೋಟ, ಅದೇ ಆಗ ನಮ್ಮ ಹೈಸ್ಕೂಲ್ ಸೇರಿದ್ದರು. ಅವರು ತಮ್ಮ ತಂದೆ ಪಾಣಾಜೆ ಪಂಡಿತರನ್ನು ಕರೆ ತಂದರು. ಆ ವರೆಗಿನ ಅಲೋಪೆತಿಕ್ ಚಿಕಿತ್ಸೆಯಿಂದ ಸಂಪೂರ್ಣ ಗುಣ ಕಾಣುವುದು ಅಸಾಧ್ಯವೆಂದ ಪಂಡಿತರು, ಲೇಹ, ಹಸುವಿನ ತುಪ್ಪ, ಗುಳಿಗೆಗಳ ಆಯುರ್ವೇದೀಯ ಚಿಕಿತ್ಸೆಯನ್ನಾರಂಭಿಸಿದರು. ನಾನು ಸಂಪೂರ್ಣ ಗುಣಮುಖಳಾದುದಷ್ಟೇ, ಅಲ್ಲ, ಸಣಕಲಾಗಿದ್ದವಳು ದೇಹದಲ್ಲೂ ತುಂಬಿಕೊಳ್ಳುತ್ತಾ ಬಂದೆ. ಪುನಃ ಶಾಲೆಗೆ ಹೋಗಲು ಆರಂಭಿಸಿದಂದು ನಾನು ಜಗತ್ತನ್ನೇ ಜಯಿಸಿದಂತಿದ್ದೆ. ಆದರೆ ಕಾಲು ಸರಿಯಾದರೂ ನನ್ನ ಪ್ರಿಯ ಡಾನ್ಸ್ ಕ್ಲಾಸ್, ಆಟೋಟಗಳಿಗೆ ನಾನು ಎರವಾಗಿದ್ದೆ. ನನ್ನ ಕ್ಷೇಮದ ಬಗ್ಗೆ ತಂದೆಯವರಿಗಿದ್ದ ಆತಂಕ ನನ್ನನ್ನು ಇವೆಲ್ಲದರಿಂದ ನಿರ್ಬಂಧಿಸಿತ್ತು. ನೃತ್ಯಾಭ್ಯಾಸ ತಪ್ಪಿದ್ದು ನನಗೆ ತೀವ್ರ ನಿರಾಶೆಯಾಗಿತ್ತು. ಸಂಜೆ ಅಮ್ಮನ ಆಫ್ಟರ್ ಕ್ಲಾಸ್ ಗೇಮ್ಸ್ ಹಾಗೂ ಗೈಡಿಂಗ್ ತರಗತಿಗಳು ಶಾಲಾ ಬಯಲಿನಲ್ಲಿ ನಡೆವಾಗ ನಾನು ನಿರಾಸೆಯಿಂದ ಮನೆಯ ಮೆಟ್ಟಲಲ್ಲಿ ಕುಳಿತು ನೋಡುತ್ತಿದ್ದೆ. ಗರ್ಲ್ ಗೈಡ್ಸ್ ಗೀತೆಗಳನ್ನು ಆಲಿಸುತ್ತಿದ್ದೆ. ಗರ್ಲ್ಗೈಡ್ಸ್ನಲ್ಲಿದ್ದ, ಹಾಗೂ ನುರಿತ ಖೋ ಖೋ ಪ್ಲೇಯರ್ ಕೂಡಾ
ಆಗಿದ್ದ
ತಂಗಿ ಮಂಜುಳನೊಡನೆ ದೂರದೂರುಗಳಲ್ಲಿ ವಿವಿಧ ಸ್ಪೋರ್ಟ್ಸ್ ಮೀಟ್ಗಳಿಗೆ, ಗೈಡ್ ಕ್ಯಾಂಪ್ಗಳಿಗೆ, ದಸರಾ ಸ್ಪೋರ್ಟ್ಸ್ಗಾಗಿ ಮೈಸೂರಿಗೆ ಅಮ್ಮ ಹೊರಟಾಗಲೆಲ್ಲ ಈ ಅವಕಾಶ ವಂಚಿತಳಾದ ಬಗ್ಗೆ ನನಗೆ ತುಂಬ ದುಃಖವೆನಿಸುತ್ತಿತ್ತು. ನಗರದ ಎರಡು ಲೈಬ್ರೆರಿಗಳಿಂದ ಹಾಗೂ ಶಾಲಾಲೈಬ್ರೆರಿಯಿಂದ ಸಿಗುತ್ತಿದ್ದ ಪುಸ್ತಕಗಳು ನನ್ನ ಸಂಗಾತಿಯಾಗಿ ಆ ನೋವನ್ನು
ಸ್ವಲ್ಪ ಮಟ್ಟಿಗೆ ಮರೆಸಿದುವು.
ಬಾಲ್ಯದ ಆ ದಿನಗಳಲ್ಲಿ ನಗರದಲ್ಲಿ ಆಗಾಗ ಸಾಗಿ ಹೋಗುತ್ತಿದ್ದ ಸ್ಮಶಾನಯಾತ್ರೆಯ ವಿವಿಧ ನೋಟಗಳು: ವೈದ್ಯವಿಜ್ಞಾನ ಇಂದಿನಂತೆ ಮುಂದುವರಿದಿರದ ಆ ದಿನಗಳಲ್ಲಿ ಆಗಾಗ ಕೇಳಿಸುವ ಹಿಂದೂ ಸ್ಮಶಾನ ಯಾತ್ರೆಯ ತಾಳ, ಭಜನೆಗಳ ಸದ್ದು ಹಾಗೂ ಅಗರ್ಬತ್ತಿಯ ಗಾಢ ವಾಸನೆ ! ಕ್ರೈಸ್ತರ ಶವಯಾತ್ರೆಯ ಎದೆಗೇ ಬಡಿವಂತಹ ಢೋಲಿನ ರವ ಹಾಗೂ ಪ್ರಾರ್ಥನೆಯೊಡನೆ ಶವ ವಾಹಕದ ಹಿಂದೆ ಗಂಭೀರವಾಗಿ ಸಾಗಿ ಹೋಗುವ ಶಿಸ್ತಿನ ಹೆಜ್ಜೆಗಳು ! ಮರಣವನ್ನು ನಗರಕ್ಕೆ ಸಾರುವಂತೆ ಮಾರ್ದನಿಸುವ
ಇಗರ್ಜಿಯ
ಘನಗಂಭೀರ ಘಂಟಾರವ ! ಅದೊಂದು ದಿನ, ಗೆಳತಿ ಲೋಹಿತಾಕ್ಷಿಯ ತಾಯಿ, ಹೆರಿಗೆಯಲ್ಲಿ ಕರುಳಬಳ್ಳಿ ಮಗುವಿನ ಕತ್ತಿಗೆ ಸುತ್ತಿಕೊಂಡು ತಾಯಿ- ಮಗು ಇಬ್ಬರೂ ತೀರಿಕೊಂಡಾಗ ಆ ತಾಯ ಮಡಿಲಲ್ಲೇ ಮಗುವನ್ನಿರಿಸಿ ಸಾಗಿ ಹೋದ ಆ ಸ್ಮಶಾನ ಯಾತ್ರೆ! ಎಳವೆಯಲ್ಲಿ ಮನದಲ್ಲಿ ಅಚ್ಚೊತ್ತಿದ ಇಂತಹ ದೃಶ್ಯಗಳನ್ನು ಮರೆಯುವುದಾದರೂ ಎಂತು?
ವರ್ಷ ವರ್ಷವೂ ಶಾಲೆಯಲ್ಲಿ ಸಿಡುಬು ನಿರ್ಬಂಧಕ ದಾಕು ಹಾಕಿಸಿ ಕೊಳ್ಳುವುದು ಬಲು ಅಪ್ರಿಯವೂ, ಅನಿವಾರ್ಯವೂ ಆಗಿತ್ತು. ಒಂದು ವರ್ಷ ಮೇಲ್ ತೋಳಿಗೆ
ಚುಚ್ಚಿದರೆ, ಮರುವರ್ಷ ಮುಂಗೈಗೆ. ನಮ್ಮ ಮನೆಯಲ್ಲಿ ಯಾರಿಗೂ ಚುಚ್ಚಿದ ದಾಕು ವ್ರಣವಾಗಿ ಉಲ್ಬಣಿಸುತ್ತಿರಲಿಲ್ಲ; ಆದರೆ ಎಷ್ಟೋ ಮಕ್ಕಳಲ್ಲಿ ಹಾಗಾಗಿ, ಅವರ ತೋಳಲ್ಲಿ, ದೊಡ್ಡ ಕಲೆಗಳನ್ನು ಉಳಿಸುತ್ತಿತ್ತು.
ಪ್ರೈಮರಿಯ ಹೆಡ್ಮಿಸ್ಟ್ರೆಸ್ - ನನ್ನ ತಂದೆಯವರ ಚಂಪಕ ವಿಲಾಸ ದೊಡ್ಡಮ್ಮನ ಮಗಳು, ಯು. ಸುಂದರಿ ಟೀಚರ್. ಇವರು ಮಧ್ಯಾಹ್ನದ ಬಿಡುವಿನಲ್ಲಿ ನಮ್ಮ ಮನೆಗೆ ಬಂದು, ಸೆಖೆ, ಸೆಖೆ ಎನ್ನುತ್ತಾ ಸೆರಗಿನಿಂದ ಗಾಳಿ ಬೀಸಿಕೊಳ್ಳುತ್ತಾ ನೆಲದಲ್ಲಿ ಒರಗಿರುತ್ತಿದ್ದರು.
ಅವರ ಹೊಟ್ಟೆ ದೊಡ್ಡದಾಗುತ್ತಾ ಬಂದಿತ್ತೆಂದು ಗಮನಿಸಿದ ನಮ್ಮಮ್ಮ
ಒತ್ತಾಯದಿಂದ ಅವರನ್ನು ಡಾಕ್ಟರ ಬಳಿಗೊಯ್ಯುವಲ್ಲಿ ಸಫಲರಾದರು. ತಪಾಸಣೆಯಲ್ಲಿ ಕ್ಯಾನ್ಸರ್ ಪತ್ತೆಯಾಗಿ, ಮತ್ತೆ ಸ್ವಲ್ಪ ಸಮಯದಲ್ಲೇ ಸುಂದರಿ ಅತ್ತೆ ನಮ್ಮನ್ನು ಅಗಲಿದರು. ಅವರ ಕೊನೆಯ ದಿನಗಳಲ್ಲಿ ಅಮ್ಮನೇ ಅವರೊಂದಿಗೆ ಆಸ್ಪತ್ರೆಯಲ್ಲಿದ್ದರು. ಸುಂದರಿ ಅತ್ತೆಯ ಗಂಡ ವೆಂಕಟರಮಣ ಮಾಷ್ಟ್ರು ಕೆನರಾ ಹೈಸ್ಕೂಲ್ನಲ್ಲಿ ವಿಜ್ಞಾನದ ಮಾಷ್ಟ್ರು. ಅವರ ಮಗಳು ಇಂದು-ಅಕ್ಕನೆಂದರೆ ನನಗೆ ತುಂಬ ಪ್ರೀತಿ. ಅತ್ಯಂತ ಸೌಮ್ಯ ಮಾತು, ನಡೆಯ ಪ್ರಿಯ ಜೀವ, ನಮ್ಮ ಇಂದಕ್ಕ. ಅವರ ಗಂಡ ಭಾಸ್ಕರ ಯು – ಭಾಸ್ಕರಣ್ಣ, ಮಂಗಳೂರಿನ ತಹಶೀಲ್ದಾರರಾಗಿದ್ದರು. ಈ ದಂಪತಿ, ಭಾರತ ಸುತ್ತಾಡಿ ಬಂದ ಬಳಿಕ, ಭಾಸ್ಕರಣ್ಣ, 'ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ' ಎಂದು ಪ್ರವಾಸ ಕಥನ ಬರೆದಿದ್ದರು.
ಪೋಲಿಯೋದಿಂದ ನಾನು ಮನೆಯೊಳಗುಳಿದ ದಸರಾ ರಜೆಯ ದಿನಗಳಲ್ಲಿ, ಬೆಂಗಳೂರಿಂದ ನನ್ನಮ್ಮನ ಇನ್ನೋರ್ವ ಚಿಕ್ಕಮ್ಮನ ಮಗಳು, ಗೆಳತಿ ಸ್ವರ್ಣಲತಾ ಬಂದು ನನ್ನೊಡನಿದ್ದಳು. ನನ್ನಂತೆ ಅವಳಿಗೂ ಓದುವ ಹುಚ್ಚು. ಅಂದಿಗೆ ವರ್ಷದ ಹಿಂದೆ, ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಜಂಬೂರಿಗೆಂದು
ನಮ್ಮಮ್ಮ ಬೆಂಗಳೂರಿಗೆ ಹೋಗುವಾಗ, ನನ್ನನ್ನು ಜೊತೆಗೆ ಕರೆದೊಯ್ದು ಸ್ವರ್ಣನಲ್ಲಿ ಬಿಟ್ಟಿದ್ದರು. ಆಗಿನ ಬೆಂಗಳೂರು ಹೇಗಿತ್ತೆಂಬುದನ್ನು ಈಗ ನೆನೆದರೆ! ರಾಜಾಜಿ ನಗರದ ಅವರ ಮನೆಯ ಬಳಿ ಕೆರೆಯಿತ್ತು. ಒಂದು ಬೆಳಿಗ್ಗೆ
ಹಾಲು ತರಲೆಂದು
ಪೆಟಿಕೋಟ್ನಲ್ಲಿ ಹೊರಗೆ ಕೆರೆಯ ಬಳಿಗೆ ಹೋದ ನಾವು, ಅಂದಿನ ಬೆಂಗಳೂರ ಆ ಚಳಿಗೆ ಗಡ ಗಡ ನಡುಗಿದ್ದೆವು. ಇಂದು ಕಟ್ಟಡದ ಕಾಡಾಗಿರುವ ಬೆಂಗಳೂರಿನ ತಾಪಮಾನ ಜಗಜ್ಜಾಹೀರೇ ಆಗಿದೆ. ಬೆಂಗಳೂರಲ್ಲೇ ಕಾಕ್ಸ್ ಟೌನ್ನಲ್ಲಿದ್ದ ನಮ್ಮ
ಕಸ್ಟಮ್ಸ್ ಗುಡ್ಡಪ್ಪಂಕ್ಲ್
ತಮ್ಮಲ್ಲಿಗೆ ನನ್ನನ್ನು ಕರೆದೊಯ್ದಿದ್ದರು. ರಸ್ಸೆಲ್ ಮಾರ್ಕೆಟ್ಗೆ ಅವರೊಡನೆ ಹೋದಾಗ ಅಲ್ಲಿನ ಹೂವು, ಹಣ್ಣು, ತರಕಾರಿಗಳ ನೋಟ ಹಾಗೂ ಸುವಾಸನೆ ಇಂದಿಗೂ ನನ್ನ ನೆನಪಲ್ಲಿ ಹಸಿರಾಗಿದೆ. ಹಾಗೇ ಕಬ್ಬನ್ ಪಾರ್ಕ್ನಲ್ಲಿ ಅವರೆಲ್ಲರೊಡನೆ ವಿಹರಿಸಿದ ನೆನಪು ಸಹ.
ಸ್ವರ್ಣನೊಡನೆ ಇಂದಿಗೂ ಹಸಿರಾಗಿರುವ ನಮ್ಮ ಗೆಳೆತನದ ಮುಖ್ಯ ಬೆಸುಗೆ ನಮ್ಮಿಬ್ಬರಿಗೂ ಪ್ರಿಯವಾದ ಪುಸ್ತಕಗಳೇ. ಆಗ, ಐತಿಹಾಸಿಕ ಕಾದಂಬರಿಗಳು ನಮಗೆ ಬಲು ಇಷ್ಟವಾಗಿದ್ದುವು. ತ.ರಾ.ಸು , ಕೊರಟಿ, ಸಿಧ್ಧಯ್ಯ ಪುರಾಣಿಕರ ಕಾದಂಬರಿಗಳಲ್ಲಿ ನಾವು ಮುಳುಗೇಳುತ್ತಿದ್ದೆವು. ರಜೆ ಮುಗಿದು ಹಿಂದಿರುಗಿದ ಸ್ವರ್ಣ ಮುಂದಿನ ಭೇಟಿಗಳಲ್ಲೆಲ್ಲ ಪುಸ್ತಕಗಳನ್ನು ನನಗೆ ಪ್ರೀತಿಯ ಕಾಣಿಕೆಯಾಗಿ ತರುತ್ತಿದ್ದಳು. ಶಾಲೆಯಲ್ಲಿ ರಾಷ್ಟ್ರೀಯ ದಿನಗಳ ಸಂಭ್ರಮಾಚರಣೆಗಳು, ಅಲ್ಲೂ, ಸುತ್ತಣ ಲೈಬ್ರೆರಿಗಳಲ್ಲೂ
ಲಭ್ಯವಾದ ಮೌಲಿಕ ಪುಸ್ತಕ ಸಂಪತ್ತು ನನ್ನ ಮನೋ ವಿಕಸನಕ್ಕೆ ಕಾರಣವಾದವು.
ಮನೆಯೆದುರು ರಸ್ತೆಯಾಚೆ ಕೆಲವೇ ಹೆಜ್ಜೆಗಳಂತರದಲ್ಲಿದ್ದ ಸಬ್ಜೈಲಿನ ಗೋಡೆ ಹಾರಿ ಕೈದಿ ಪೆರಿಸ್ ಪರಾರಿಯಾದಾಗ, ದೀರ್ಘವಾಗಿ ಧ್ವನಿಸಿದ ಪೊಲಿಸ್ ವಿಸಿಲ್ ಹಾಗೂ ನಂತರ ಎತ್ತರಿಸಿದ ಜೈಲಿನ ಗೋಡೆ! ಮನೆಯೆದುರಿನ ಕಾರ್ನಾಡ್ ಸದಾಶಿವರಾವ್ ಲೈಬ್ರೆರಿಯ
ಹಿತ್ತಿಲೊಳಗೆ ಹುಲ್ಲು ಮೇಯಲೆಂದು ಹೊಕ್ಕಿದ ತುಂಬುಗಬ್ಬದ
ದನವೊಂದು, ಮೇಲಿನ ದಿಬ್ಬದಿಂದ ಕಾಲು ಜಾರಿ, ಚೂಪಾದ ಸರಳುಗಳ ಆ ಗೇಟಿನ ಮೇಲೆ ಬಿದ್ದು, ಸರಳುಗಳು ಹೊಟ್ಟೆ ಹೊಕ್ಕು, ರಾತ್ರೆಯಿಡೀ ಅರಚುತ್ತಾ ಇದ್ದು, ಬೆಳಗಾಗುವಾಗ ಅಲ್ಲೇ ಪ್ರಾಣ ಬಿಟ್ಟ ಆ ಘೋರ ದುರಂತ! ಕ್ಲಾಸಿನಲ್ಲಿ ನಮಗೆ ರೇಬಿಸ್ ಬಗ್ಗೆ ಪಾಠ ಮಾಡಿದ ಕೆಲವೇ ದಿನಗಳಲ್ಲಿ, ಮನೆಯ ನಾಯಿಮರಿ ಕಚ್ಚಿ, ರೇಬಿಸ್ನಿಂದ ಕೊನೆಯುಸಿರೆಳೆದ ವಿಜ್ಞಾನದ ನಮ್ಮ ಎ. ಸುಂದರಿ ಟೀಚರ್.- ಇವೆಲ್ಲ ಮನದಲ್ಲಚ್ಚೊತ್ತಿದ ಗಾಢ
ಚಿತ್ರಗಳು!
ಶಾಲೆಯ ಸೋಪಾನಗಳ ಅತ್ತಿತ್ತ ಇದ್ದ ದಂಡೆಗಳಲ್ಲೆಲ್ಲ ಅಮ್ಮ
ನೆಟ್ಟು ಬೆಳೆಸಿದ ಹೂಗಿಡಗಳು. ಹದಿನೆಂಟು ಮೆಟ್ಟಲುಗಳ ಈ ಸೋಪಾನದಲ್ಲಿ ದೀಪಾವಳಿ ಆಚರಣೆಗೆ ನಮ್ಮ ಡ್ರಾಯಿಂಗ್ ಟೀಚರ್ ಗ್ರೀಟಾ ಸತ್ಯಾರ್ಥಿ, ಭಾರತ ಭೂಪಟವನ್ನು ಬಿಡಿಸಿ, ಅದರಲ್ಲಿ ಹಣತೆಗಳನ್ನಿಟ್ಟು ದೀಪ ಬೆಳಗಿದಾಗ ಆ ನರುಗತ್ತಲಲ್ಲಿ ಅದು ಶೋಭಿಸಿದ ಪರಿ ;
ಧ್ವಜಾರೋಹಣಕ್ಕೆ ಇಲ್ಲಿನ ಗಿಡಗಳ ಗೌರಿ, ವೆಲ್ವೆಟ್, ಗೊಂಡೆ, ಗುಲಾಬಿ ಹೂಗಳ ಪುಷ್ಪವೃಷ್ಟಿ! ಆನಿ ಬೆಸೆಂಟ್ ಡೇ - ಅಕ್ಟೋಬರ್ ಒಂದು, ನಮ್ಮ ಸ್ಕೂಲ್ ಡೇ ಆಗಿತ್ತು. ಅಂದು ಧ್ವಜಾರೋಹಣದ ಬಳಿಕ ಎಲ್ಲ ಮಕ್ಕಳಿಗೂ ಕೊಡಿಯಾಲ ಗುತ್ತಿನ ಗದ್ದೆಯ ಒಂದೊಂದು ಇಡೀ ಕಬ್ಬು. ಕಬ್ಬನ್ನು ಎಳೆಯುತ್ತಾ ಮಕ್ಕಳು ಮನೆಗೆ ತೆರಳುವ ಗಡಿಬಿಡಿ. ಗುತ್ತಿನ ಗದ್ದೆಗಳೆಲ್ಲ ಮಾಯವಾಗಿರುವ ನಗರೀಕರಣದಲ್ಲಿ ಈಗ ಇಡಿ ಕಬ್ಬು ಇತ್ತರೆ, ಅದನ್ನು ಮನೆಗೊಯ್ವ ಮಕ್ಕಳೆಲ್ಲಿ? ಹಾಗೆ ಒಯ್ಯಲು ವಾಹನ ದಟ್ಟಣೆಯಿರದ ಖಾಲಿ ರಸ್ತೆಗಳೆಲ್ಲಿ? ಸ್ಕೂಲ್ ಡೇ ಹಾಗೂ ವಸಂತೋತ್ಸವದ ನೃತ್ಯನಾಟಕಗಳ ವೈಭವವನ್ನು ಮರೆಯುವುದೆಂತು? ಆ ದಿನಗಳಲ್ಲಿ ಡಾನ್ ಬಾಸ್ಕೋ ಹಾಲ್ನಲ್ಲಿ ನೋಡಿದ `ಝಾನ್ಸಿ ರಾಣಿ ಲಕ್ಷ್ಮೀ ಬಾಯಿ '
ನಾಟಕದಲ್ಲಿ ಅಮ್ಮನ ಗೆಳತಿ, ಗೈಡ್ ಕಮಿಶನರ್ ಹಮೀದಾ ಝಾನ್ಸಿ ರಾಣಿಯಾಗಿ ನಟಿಸಿದ ಪರಿಗೆ ನನ್ನ ರೋಮ ರೋಮವೂ ನಿಮಿರಿ ನಿಂತಿತ್ತು. ಹೌದು; ಆ ಕಾಲವೊಂದಿತ್ತು; ದಿವ್ಯ ತಾನಾಗಿತ್ತು; ಬಾಲ್ಯವಾಗಿತ್ತು!
(ಮುಂದುವರಿಯಲಿದೆ)
Nostalgic memories are always cherished. But, the tyranny of TIME never ever allows reverse gear except in 'down memory lane.' We are richer or poorer for the memories that we have!!
ReplyDeleteಬಾಲ್ಯ ಒಂದಿತ್ತು, ದಿವ್ಯ ತಾನಾಗಿತ್ತು ನೊಒವಿನ ಪ್ರಮಾಣ ಹೆಚ್ಚಿತ್ತು
ReplyDelete