19 August 2016

ಅಸಾಧ್ಯ ಅಮೆದಿಕ್ಕೆಲ್

(ಮೂರು ಭಾಗಗಳ ಸಾಹಸ ಕಥನದಲ್ಲಿ ಪ್ರಥಮ ಭಾಗ)
ಉತ್ತರನ ಸಾಹಸ!

ಪುತ್ತೂರಿನ ಹಿರಿಯ ವಕೀಲ, ನನ್ನ ಸೋದರಮಾವ ಗೌರೀಶಂಕರರ ಗೆಳೆಯ-ಸಹೋದ್ಯೋಗಿ, ಸಾಹಿತ್ಯ, ಸಂಗೀತ, ಇತಿಹಾಸ, ನಕ್ಷಾಶಾಸ್ತ್ರವೇ ಮೊದಲಾದ ಹತ್ತೆಂಟು ಮುಖಗಳಲ್ಲಿ ತೀವ್ರ ಆಸಕ್ತ, ಹಿರಿಯ ಮಿತ್ರ - ಬಂದಾರು ಶ್ರೀಪತಿರಾಯರು ೧೯೭೫ರಲ್ಲಿ ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರ್ ತೆರೆದಾಗ ಸಂಭ್ರಮಿಸಿದ್ದು ಸಹಜವೇ ಇತ್ತು. ಅವರ ಸೀಮಿತ ಹಣಕಾಸು, ಅವರನ್ನು ಅಂಗಡಿಯ ದೊಡ್ಡ ಗಿರಾಕಿಯೇನೂ ಮಾಡಲಿಲ್ಲ. ಆದರೆ ಅವರ ಶ್ರೀಮಂತ ಮನಸ್ಸು, ಅವರ ಮಂಗಳೂರು ಭೇಟಿಗಳಲ್ಲಿ `ಅತ್ರಿ ವಿಹಾರ’ವನ್ನು ಮಾತ್ರ ಕಡ್ಡಾಯ ಕಲಾಪ ಮಾಡಿತ್ತು. ಅವರು ಯಥಾನುಶಕ್ತಿ ಖರೀದಿ ಅವಶ್ಯ ಮಾಡುತ್ತಿದ್ದರು. ಅದಕ್ಕೂ ಮಿಗಿಲಾಗಿ ಹಾಗೆ ಬಂದಾಗೆಲ್ಲಾ ನನ್ನ  ಬೆಟ್ಟಕಾಡುಗಳ ಹುಚ್ಚಿಗೊಂದಿಷ್ಟು ಸುಳುಹು, ನಕ್ಷೆಗಳ ಕಿಚ್ಚಿಟ್ಟು ಹೋಗುತ್ತಿದ್ದರು. ಹಾಗೇ ಒಮ್ಮೆ “ಹತ್ತಿದರೆ ಅಮೆದಿಕ್ಕೆಲ್ ಅಯ್ಯ, ಒಂದು ಶಿಖರ” ಎಂದು ಉದ್ಗರಿಸಿದ್ದಿತ್ತು. ಮತ್ತೆ ರಾಯರು ಆವಿಷ್ಟರಾಗಿ ಅಂಗಡಿಯ ಗೀಚು-ಕಾಗದದ ಹರಕಿನ ಮೇಲೆ ನನ್ನದೇ ಪೆನ್ನು ಇಟ್ಟು ಗೆರೆ ಎಳೆಯುತ್ತಿದ್ದಾಗ ಬೆಳ್ತಂಗಡಿಯ ಕಗ್ಗಾಡಮೂಲೆ - ಶಿಶಿಲದಲ್ಲೇ ನಿಂತಂತಿದ್ದರು. ಉತ್ತರಮುಖಿಯಾಗಿ ನಿಂತು, ಕತ್ತೆತ್ತಿ ಸುದೂರದಲ್ಲಿ ಗಗನಕ್ಕಂಟಿದಂತಿದ್ದ ದಿಕ್ಕೆಲ್ ಕಲ್ಲನ್ನೇ ದಿಟ್ಟಿಸುತ್ತ ಆ ಮಹಾಮೇರುವಿನ ನಿಖರ ಸೂಕ್ಷ್ಮ ಬಳಕುಗಳನ್ನೇ ಕಾಗದದ ಸಣ್ಣ ಆಯಕ್ಕಿಳಿಸಿದ್ದರು!

ನಾನು ಅಮೆದಿಕ್ಕೆಲ್ಲಿಗೆ ಚಾರಣ ಮಾಹಿತಿ ಸಂಗ್ರಹಕ್ಕೆ ಪ್ರಯತ್ನಿಸಿದೆ, ತೃಪ್ತಿಕರವಾಗಲಿಲ್ಲ. ತಂಡ ಕಟ್ಟಲು ಹೊರಟದ್ದೂ ಯಶಸ್ಸು ಕಾಣಲಿಲ್ಲ. ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿ ಲೋಕೇಶ್ ಒಬ್ಬರೇ ಒದಗಿದರು. ಆ ವೇಳೆಗೆ ಶ್ರೀಪತಿರಾಯರು ಸೂಚಿಸಿದಂತೇ ನಾನು ದಕ ಜಿಲ್ಲೆಯ ಸರ್ವೇ ಆಫ್ ಇಂಡಿಯಾದ ೨೬ ತುಣುಕುಗಳ ಭೂಪಟ ತರಿಸಿದ್ದಾಗಿತ್ತು. ಆ ನಕ್ಷೆಗಳನ್ನು ಹಿಡಿದು ಯಾವುದೇ ಕಗ್ಗಾಡು ನುಗ್ಗಿ ಬಂದೇನೆಂಬ ಭಂಡ ಧೈರ್ಯ ನನ್ನಲ್ಲಿ ಇತ್ತು. ಹಾಗಾಗಿ ನಮ್ಮ ಬೆನ್ನಚೀಲಕ್ಕೆ ಸರಳ ಶಿಬಿರ ಸಾಮಗ್ರಿಗಳು ತುಂಬಿ, ಕತ್ತಿಗೆ ಕ್ಯಾಮರಾ ಜೋತುಬಿಟ್ಟು,  ಕೈಯಲ್ಲಿ ಆ ವಲಯದ ನಕ್ಷೆ ಮತ್ತು ಕತ್ತಲು ಬೆಳಗಲು ಒಂದು ಲಾಂದ್ರ ಹಿಡಿದುಕೊಂಡು, ಅದೊಂದು ಶುಕ್ರವಾರ (೧೪-೪-೧೯೭೮) ರಾತ್ರಿ, ದಾವಣಗೆರೆ ಬಸ್ಸೇರಿಯೇ ಬಿಟ್ಟೆವು. ಮರುದಿನ ವಿಷು ಮತ್ತು ಹಿಂಬಾಲಿಸಿದಂತೆ ಆದಿತ್ಯವಾರದ ರಜೆಗಳಲ್ಲಿ ಸಾಹಸಯಾತ್ರೆ ಪೂರ್ಣಗೊಳಿಸುವ ಅಂದಾಜು ನಮ್ಮದು.

ರಾತ್ರಿ ಹನ್ನೊಂದು ಗಂಟೆಗೆ ಚಾರ್ಮಾಡಿ ತಪ್ಪಲಿನ ಕಕ್ಕಿಂಜೆಯಲ್ಲಿ ಬಸ್ಸಿನಿಂದಿಳಿದೆವು. ನಮಗದು ಪೂರ್ಣ ಅಪರಿಚಿತ ನೆಲ. ಅಂದಿನ ಕಕ್ಕಿಂಜೆಗೆ ಬಹುಶಃ ವಿದ್ಯುತ್ ಸಂಪರ್ಕವೇ ಇರಲಿಲ್ಲ ಅಥವಾ ಆ ರಾತ್ರಿ ಅದು ಸತ್ತಿತ್ತು. ಅಲ್ಲಿದ್ದ ನಾಲ್ಕೆಂಟು ಜೋಪಡಿ ಅಂಗಡಿಗಳೂ ಮುಚ್ಚಿ ನಿರ್ಜನ, ಗಾಢಾಂಧಕಾರ. ಆ ದಿನಗಳಲ್ಲಿ ಇಂದಿನಂತೆ ಬಹು ಸಾಮರ್ಥ್ಯದ ಮತ್ತು ಬಾಳಿಕೆಯ ಟಾರ್ಚುಗಳು ಸಿಕ್ಕುತ್ತಿರಲಿಲ್ಲ. ಮತ್ತೆ ತೀರಾ ವಿರಳವಾಗಿ ರಾತ್ರಿ ಚಾರಣ ನಡೆಸುವ ಕಲಾಪಕ್ಕಾಗಿ ಟಾರ್ಚ್, ಬ್ಯಾಟರಿ ಖರೀಸುವಷ್ಟು ನಾವು ಧಾರಾಳಿಗಳೂ ಆಗಿರಲಿಲ್ಲ. ಇದೆಲ್ಲ ಯೋಚಿಸಿಯೇ ಕೈಯಲ್ಲಿ ಹಿಡಿದಿದ್ದ ಲಾಂದ್ರವನ್ನೇ ಹಚ್ಚಿ, ಗಂಟುಮೂಟೆ ಸಂಭಾಳಿಸಿ ನಡಿಗೆಯ ದಿಕ್ಕು ಅಂದಾಜಿಸಲು ಅಣಿಯಾದೆವು. (ನೋಡಿ: ದಟ್ಟಡವಿ, ಸಾಧಾರಣ ಮನೆ ) ನಮ್ಮ ಭೂಪಟ ಸ್ಪಷ್ಟ ವಾಹನಯೋಗ್ಯ ದಾರಿಯನ್ನೇ ಕಾಣಿಸಿತ್ತು. ಆದರಲ್ಲಿ ಡಾಮರ್ ಬಿಡಿ, ಇನ್ನು ಜಲ್ಲಿಯನ್ನೂ ಕಾಣದ ಮಣ್ಣ ದಾರಿಯನ್ನಷ್ಟೇ ನಾವು ಅಂದಾಜಿನಲ್ಲಿ ಗುರುತಿಸುವ ಸ್ಥಿತಿ. ನಮ್ಮ ಅದೃಷ್ಟಕ್ಕೆ ಸ್ಥಳೀಯರೊಬ್ಬರು, ನಮ್ಮದೇ ಬಸ್ಸಿನಲ್ಲಿ ಬಂದಿಳಿದವರು, ಅಲ್ಲೇ ಸ್ವಲ್ಪ ಆಚೆ ಬೀಡಿ ಹಚ್ಚಿ ನಿಂತು ನಮ್ಮನ್ನು ಬಹುಶಃ ಸಂಶಯದ ಕಣ್ಣಲ್ಲೇ ಗಮನಿಸಿಕೊಂಡಿದ್ದರು. ನಾವು ಅವರಿಗೇ ಅಂದರೆ, ಸಣ್ಣ ಮಟ್ಟದ ಕೃಷಿಕ ಮತ್ತು ಅಡಿಕೆ ಕಮಿಶನ್ ಏಜಂಟ್ ಮಮ್ಮದೆಯವರಿಗೆ, ತಗುಲಿಕೊಂಡೆವು. ಸುಮಾರು ಐದು ಕಿಮೀ ಅಂತರದ ನಮ್ಮ ಪ್ರಾಥಮಿಕ ಗುರಿ ನೆರಿಯ ಎಸ್ಟೇಟ್ಸ್. ಅದಕ್ಕೂ ತುಸು ಮೊದಲೇ ದಾರಿ ಬದಿಯಲ್ಲೇ ಮಮ್ಮದೆ ಬಿಡಾರ. ನಮ್ಮ ಕನ್ನಡ, ಸ್ಥಳದ ತಿಳುವಳಿಕೆ ಮತ್ತು ಉದ್ದೇಶ ತಿಳಿದ ಮೇಲೆ ಅವರು ಪೂರ್ಣ ಸಹಕಾರಿಯಾದರು. “ನಮ್ಮನೆಯಲ್ಲಿ ರಾತ್ರಿ ಉಳಿದು, ಬೆಳಿಗ್ಗೆ ಮುಂದುವರಿಯಿರಿ” ಎಂದ ಅವರ ಮಾತು ನಮಗೂ ಬಹಳ ಅಪ್ಯಾಯಮಾನವೇ ಆಯ್ತು. ಮೆಲು ಧ್ವನಿಯಲ್ಲಿ ಒಂದೆರಡು ಮಾತಾಡುತ್ತ ದಾಪುಗಾಲು ಹಾಕಿದೆವು. ದಾರಿಯಲ್ಲಿ ಒಂದೆರಡು ಕಡೆ ತಲೆಗೆ ಬ್ಯಾಟರಿ ದೀಪ ಕಟ್ಟಿ, ಸಣ್ಣಪುಟ್ಟ ಬೇಟೆಗೆ ಸಜ್ಜಾಗಿದ್ದವರು ನಮ್ಮ ಲಾಂದ್ರ ಕಂಡು ಸ್ವತಃ ಝಿಗ್ಗ ಬೆಳಗಿದಾಗ, ಬಾಲರ ಮೇಲೆ ಕಪ್ಪೆ ಬಿದ್ದ ಸ್ಥಿತಿ ನಮ್ಮದು. ಹನ್ನೆರಡು ಗಂಟೆಯ ಸುಮಾರಿಗೆ ನಾವು ಮಮ್ಮದೆ ಮನೆ ತಲಪಿದ್ದೆವು. ಸಂಸಾರಸ್ಥ ಮಮ್ಮದೆ ಅದ್ಯಾವ ಧೈರ್ಯದಲ್ಲೋ ನಮ್ಮನ್ನು ಮನೆಯ ಎದುರಿನ ಕೋಣೆಯಲ್ಲೇ ಮಲಗಲು ಒತ್ತಾಯಿಸಿದರು. ಬೇಸಗೆಯ ದಿನಗಳು, ಅಸಾಧ್ಯ ಹೊರೆ ಮತ್ತು ನಡಿಗೆಯ ಬಿರುಸು ಸೇರಿ ನಾವು ಬೆವರಹೊಳೆ ಹರಿಸಿದ್ದೆವು. ಹಾಗಾಗಿ ಅಪಾರ ಸಂಕೋಚ ಮನಸ್ಸಿನಲ್ಲಿದ್ದರೂ, ಬಯಲಿನ ತಂಪು ವಾತಾವರಣದ ನೆಪವನ್ನೇ ದೊಡ್ಡ ಮಾಡಿ ಅವರ ಅಡಿಕೆ ಒಣಗಿಸುವ ಅಂಗಳವನ್ನೇ ಆಯ್ದುಕೊಂಡೆವು. ಅವರಿಂದ ಕೇವಲ ಕುಡಿಯುವ ನೀರಷ್ಟೇ ಪಡೆದು, ಸೆಗಣಿ ಸಾರಿಸಿದ್ದ ನೆಲದಲ್ಲಿ ನಮ್ಮ ಜಮಖಾನ ಬಿಡಿಸಿದೆವು.

ಬೆಳಗ್ಗೆ ಮಮ್ಮದೆ ನಿದ್ದೆ ತಿಳಿದೇಳುವುದನ್ನಷ್ಟೇ ಕಾದಿದ್ದೆವು. ಮತ್ತೆ ಪ್ರಾತರ್ವಿಧಿಯೇ ಮುಂತಾದ ಎಲ್ಲ ಅಗತ್ಯಗಳ ಯೋಚನೆ ಬಿಟ್ಟು, ದಾರಿಯಲ್ಲಿ ಮುಂಬರಿದೆವು. ಅಣಿಯೂರಿನ ಸಣ್ಣ ಪೇಟೆ ಇನ್ನೂ ತೂಕಡಿಕೆಯಲ್ಲಿತ್ತು. ಎತ್ತರದ ಸೇತುವೆಯ ಮೇಲಾಗಿ ನೆರಿಯ ಹೊಳೆ, ಬೇಲಿ, ಅದೇನೋ ಲಾರಿಗೇಟು, ಅಡಿಕೆ ತೋಟಗಳಾದಿ ಹಿಂದಿಕ್ಕಿ ಸುಮಾರು ಎರಡು ಮೈಲು ಕಳೆಯುವುದರೊಳಗೆ ವನ್ಯಪರಿಸರ ತೊಡಗಿತ್ತು. ನೆರಿಯ ಹೊಳೆ ನಮ್ಮ ಎಡ ಮಗ್ಗುಲಿಗೇ ಬಂದಿತ್ತು. ಅಲ್ಲೇ ಅದಕ್ಕೊಂದು ಪುಟ್ಟ ಕಿಂಡಿ ಅಣೆಕಟ್ಟು, ಕಾಲಧರ್ಮಕ್ಕೆ ಸರಿಯಾಗಿ ಅದರಲ್ಲಿ ನೀರೂ ಇದ್ದುದರಿಂದ ನಮ್ಮ ಬೆಳಗ್ಗಿನ ಅನಿವಾರ್ಯತೆಗಳಿಗೆ ಬಹಳ ಪ್ರಶಸ್ತವಾಗಿಯೇ ಒದಗಿತ್ತು. [ನೆನಪಿರಲಿ, ಇಂದು ಆ ವಲಯದಲ್ಲಿ ಎಮ್ಮಾರ್ಪೀಯಲ್ಲಿನಿಂದ ಬೆಂಗಳೂರಿಗೆ ಹೋಗುವ ಭೂಗತ ಕೊಳಾಯಿಗಳು ಬಂದ ಮೇಲೆ ಪರಿಸ್ಥಿತಿ ಬಿಗಡಾಯಿಸಿದೆ. ದಾರಿ ಯದ್ವಾತದ್ವಾ ಹರಿದು ಹೋಗಿದೆ, ನೆರಿಯ ಹೊಳೆಗೆ ಅಪಾರ ಹೂಳು ತುಂಬಿ ಮಳೆಗಾಲದಲ್ಲಿ ಹಿಂದೆಂದೂ ಕೇಳರಿಯದ ನೆರೆ ಹಾವಳಿ ಕೃಷಿಕರನ್ನು ಕಾಡುತ್ತಿದೆ. ಇಡಿಯ ಭಾರೀ ಗುಡ್ಡೆಯೊಂದು ಬುಡ ಕೊರೆದು ಹೋದದ್ದರಿಂದ, ಜಾರಿ ಹಲವು ಕೃಷಿ, ಮನೆಗಳನ್ನು ಆಹುತಿ ತೆಗೆದುಕೊಂಡದ್ದಂತೂ ಕರಾವಳಿಯ `ಅಭಿವೃದ್ಧಿ ಪರ್ವಕ್ಕೆ’ ಭಾರೀ ಮುನ್ನುಡಿಯಂತೇ ಇದೆ]

ನಾವು ಹೊಳೆ ದಂಡೆಯಲ್ಲಿ ಕಲ್ಲಿನ ಒಲೆ ಹೂಡಿ, ಚಾ ಮಾಡಲು ನೀರಿಟ್ಟು, ಪ್ರಾತರ್ವಿಧಿಗಳನ್ನು ಮುಗಿಸಿಕೊಂಡೆವು. ಬ್ರೆಡ್, ಜ್ಯಾಂ ಗಂಟಲಲ್ಲೂ ಜ್ಯಾಂ ಆಗದಂತೆ ನಿಧಾನಕ್ಕೆ ಹೊಟ್ಟೆಗಿಳಿಸುತ್ತಿದ್ದಾಗ ದಾರಿಯಲ್ಲೊಂದು ಹಳೇ ಮಿಲ್ಟ್ರಿ ವ್ಯಾನ್ ಬಂತು. ಚಾಲಕ ಗಾಡಿ ನಿಲ್ಲಿಸಿ ಅಲ್ಲಿಂದಲೇ ನಮ್ಮನ್ನು ವಿಚಾರಿಸಿಕೊಂಡ. ಅನಂತರ “ಅಮೆದಿಕ್ಕೆಲ್ಲಿಗೆ ದಾರಿಯೇನೋ ಇದೇ. ಆದರೆ ಇವೆಲ್ಲ ಖಾಸಗಿ ನೆರಿಯ ಎಸ್ಟೇಟಿನ ಭಾಗ. ನೀವು ಮೈಲು ಹಿಂದೆಯೇ ದಾಟಿದ ಗೇಟಿನಲ್ಲಿ ಅನುಮತಿ ಪತ್ರ ಮಾಡಿಸಿಕೊಳ್ಳಬೇಕು. ಮುಂದುವರಿದಂತೆ ಕಾಡಾನೆ, ಬೆಟ್ಟದ ಕಠಿಣ ಏರು, ಕೊನೆಯಲ್ಲಿ ಏಲಕ್ಕಿ ಮಲೆ ಎಲ್ಲಾ ನಿಮ್ಮಿಂದಾಗದು. ವಾಪಾಸು ಹೋಗಿ” ಎಂದು ಸೌಮ್ಯವಾಗಿಯೇ ಸಲಹೆ ಕೊಟ್ಟ. ಮತ್ತೆ ಆತನ ಯಾವುದೋ ಕಾರ್ಯಾವಸರದಲ್ಲಿ ವ್ಯಾನ್ ದೌಡಾಯಿಸಿದ. ನಾವು ಛಲವಂತರು. ಬೇಗನೆ ಮರುಸಜ್ಜಾಗಿ, ಅನುಮತಿ ಪತ್ರದ ಕುರಿತು ಉಡಾಫೆ ಮಾಡಿ, ನಮ್ಮ ಯೋಜನೆಯಂತೇ ಕಾಲು ಹಾಕಿದೆವು. ಸ್ವಲ್ಪದರಲ್ಲೇ ಸಿಕ್ಕ ರಬ್ಬರ್ ತೋಪಿನ ನಡುವೆ ನಮಗೆ ಆನೆಭಯವೇನೋ ದೂರವಾಯ್ತು. ಆದರೆ ಬೆನ್ನೇರಿದ್ದ ಅಸಾಧ್ಯ ಹೊರೆಯೊಡನೆ ಏರು ಮಾತ್ರ ಜೀವ ಹಿಂಡುವಂತೇ ಇತ್ತು. ಅಲ್ಲಲ್ಲಿ ದಣಿವಾರಿಸಿಕೊಳ್ಳುತ್ತ, ಹೊತ್ತಿದ್ದ ನೀರನ್ನೇ ಮಿತವಾಗಿ ಕುಡಿಯುತ್ತ ರಬ್ಬರ್ ಕಳ ಕಳೆದು ಮತ್ತೆ ಕಾಡೊಳಗೆ ಸಾಗಿದ್ದ ದಾರಿಯನ್ನೇ ಅನುಸರಿಸಿದೆವು. ಅದರ ಏರಿನ ಒಂದು ಹಂತದಲ್ಲಿ, ಘಟ್ಟದ ಔನ್ನತ್ಯಕ್ಕೆ ತಕ್ಕಂತೆ ಮತ್ತೆ ಕೃಷಿ - ಈಗ ಕಾಫಿಯ ಸರದಿ.

ಕಾಫಿ ತೋಟದ ದಾರಿಯಲ್ಲೊಂದೆಡೆ ವಿಶ್ರಮಿಸಿದ್ದಾಗ ಹೊಳೆದಂಡೆಯಲ್ಲಿ ಸಿಕ್ಕಿದ್ದ ಅದೇ ವ್ಯಾನ್, ಈಗ ಇಳಿದಾರಿಯಲ್ಲಿ ಬಂದು ಸಿಕ್ಕಿತು. ಈಗ ಚಾಲಕ ತುಸು ಗರಂ ಆದ. “ನೀವು ಅನುಮತಿಪತ್ರ ಇಲ್ಲದೇ ಇಲ್ಲಿವರೆಗೆ ಬಂದದ್ದಾ? ಇನ್ನು ಮುಂದೆ ಹೋಗುವಂತಿಲ್ಲ. ಮೇಲೆ ಏಲಕ್ಕಿ ಮಲೆಯಂಚಿನ ತತ್ಕಾಲೀನ ವಸತಿ - ಬಿದಿರು ಬಂಗ್ಲೆಯಲ್ಲಿ, ಧಣಿ ರಾಘವ ಹೆಬ್ಬಾರರು ಎರಡು ದಿನ ರಜಕ್ಕೆ ಬಂದವರಿದ್ದಾರೆ. ಅವರು ಕಂಡರೆ ಕೆಂಡಾಮಂಡಲವಾದಾರು. ಈಗ ನಿಮಗೊಂದು ಸದವಕಾಶವಿದೆ. ಬೆಳಿಗ್ಗೆ ನಾನವರಿಗೆ ಕೆಳಗಿನ ಮನೆಯಿಂದ ಕಾಫಿ, ತಿಂಡಿ ಕೊಟ್ಟು, ಈಗ ಮತ್ತೆ ಮೂಲ ಮನೆಗೆ ಮರಳುತ್ತಿದ್ದೇನೆ. ನೀವು ನನ್ನ ವ್ಯಾನ್ ಏರಿ. ಮನೆಯಲ್ಲಿ ನೀವು ಅನುಮತಿ ಪತ್ರ ಮಾಡಿಸಿಕೊಳ್ಳಿ. ಗಂಟೆ ಬಿಟ್ಟು, ನಾನು ಧಣಿಗಳಿಗೆ ಮತ್ತೆ ಊಟ ಹಿಡಿದುಕೊಂಡು ಹೀಗೇ ಹೋಗುವಾಗ ನಿಮ್ಮನ್ನು ಏಲಕ್ಕಿ ಮಲೆಯ ಅಂಚಿನವರೆಗೂ ಮುಟ್ಟಿಸುತ್ತೇನೆ.” ನಮಗೆ ಅನ್ಯ ಆಯ್ಕೆಗಳೇನೂ ಇರಲಿಲ್ಲ, ವ್ಯಾನ್ ಏರಿದೆವು. ಬೆಳಗ್ಗಿನ ಮಬ್ಬು, ಮಂಜಿನಲ್ಲಿ ನಮ್ಮ ಕಣ್ತಪ್ಪಿದ ನೆರಿಯ ಮನೆ, ವಾಸ್ತವದಲ್ಲಿ ಪ್ರಾತರ್ವಿಧಿ ತೀರಿಸಿದ ಹೊಳೆಗೂ ಕಿಮೀ ಆಚೆಯೇ ಇತ್ತು. ಅಲ್ಲೇ ಇದ್ದ ಎಸ್ಟೇಟಿನದೇ ತನಿಖಾ ಗೇಟನ್ನೂ ನಾವು ಪಾದಚಾರಿಗಳ ಸರಳತೆಯಲ್ಲಿ ನಿಶ್ಶಬ್ದವಾಗಿ ದಾಟಿ ಬಂದಿದ್ದೆವು. ಬಹುಶಃ ಪಹರಿಗಳು ಸವಿನಿದ್ದೆಯಲ್ಲಿದ್ದಿರಬೇಕು.

ಎಸ್ಟೇಟಿನವರು ಉದಾರಿಗಳು. ಸಾಕಷ್ಟು ಎಚ್ಚರಿಸಿ, ಅನುಮತಿ ಪತ್ರ ಕೊಟ್ಟರು. ಹನ್ನೆರಡು ಗಂಟೆಯ ಸುಮಾರಿಗೆ ಧಣಿಗಳಿಗೆ ಊಟ ಹೊತ್ತು ಹೊರಟ ವ್ಯಾನನ್ನೀಗ ನಾವು ಚಾಲಕನ ಗೆಳೆಯರಂತೇ ಏರಿದೆವು. ಯುದ್ಧಭೂಮಿಯಿಂದ ನಿವೃತ್ತವಾದ ಆ ಜೀಪನ್ನು ಎಸ್ಟೇಟಿನವರು ಹರಾಜಿನಲ್ಲಿ ಕೊಂಡದ್ದಿರಬೇಕು. ಅದರ ದಡಬಡ ಯಾನ ಚಾರಣಕ್ಕಿಂತ ಕಠಿಣ ಎಂದನ್ನಿಸುವಷ್ಟರಲ್ಲಿ ಏಲಕ್ಕಿ ಮಲೆ ಬಂದಿತ್ತು. ನಮ್ಮನ್ನು ಸ್ವಲ್ಪ ಮೊದಲೇ ಸಿಗುವ `ರೈಟ್ರ ಬಂಗ್ಲೆ’ ಬಳಿ ಇಳಿಸಿ ಜೀಪ್ ಮೇಲಿನ ಬಿದಿರು ಬಂಗ್ಲೆಯತ್ತ ಹೋಯ್ತು. ವಾಸ್ತವದಲ್ಲಿ ನಾವು ಕಂಡ ಆ ಕಟ್ಟಡ ಸ್ಥಳೀಯ ಕೆಲಸಗಳ ನಿರ್ವಾಹಕನ, ತಗ್ಗು ಮಾಡಿನ ಬಿಡಾರ ಮಾತ್ರ. `ಬಂಗ್ಲೆ’ ಎನ್ನುವ ದೊಡ್ಡ ಪದಕ್ಕಿದು ಅಪವಾದ! ಅಂದು ಹಬ್ಬದ ಲೆಕ್ಕದಲ್ಲಿ ಅಲ್ಲಿ ಯಾರೂ ಇರಲಿಲ್ಲ. ನಾವು ಸ್ಥಳದ ಧಣಿಯನ್ನು ಕಾಣುವ ಔಪಚಾರಿಕತೆಯಲ್ಲಿ ಸಮಯ ಕಳೆಯದೆ, ಮಧ್ಯಾಹ್ನದೂಟದ ಶಾಸ್ತ್ರ ನಡೆಸಿದೆವು. ಮಂಗಳೂರಿನ ಹೋಟೆಲಿನಲ್ಲಿ ಧಾರಾಳ ಮಾಡಿಸಿಕೊಂಡು ಒಯ್ದಿದ್ದ ಚಪಾತಿಗಳಲ್ಲಿ ಕೆಲವಕ್ಕೆ ಜ್ಯಾಂ, ಉಪ್ಪಿನಕಾಯಿಯ ಮೈತ್ರಿ ಮಾಡಿಸಿ ಹೊಟ್ಟೆ ಸೇರಿಸಿ, ಮೇಲಿನಿಂದ ಧಾರಾಳ ಝರಿ ನೀರು ಸುರಿದುಕೊಂಡೆವು. ಮತ್ತೆ ವೇಳೆಗಳೆಯದೆ, ಕೈಯಲ್ಲಿದ್ದ ನಕ್ಷೆ ಸೂಚಿಸುತ್ತಿದ್ದಂತೆ ಹೆಚ್ಚು ಕಡಿಮೆ ದಕ್ಷಿಣಮುಖಿಗಳಾಗಿ ನಡೆದೇ ಬಿಟ್ಟೆವು.

ರೈಟರ್ ಬಂಗ್ಲೆಯ ಒತ್ತಿನ ಏಲಕ್ಕಿ ತೋಟದ ನಡುವಣ ಕಾಲುದಾರಿ ತುಸು ಅಂತರದಲ್ಲೇ ಝರಿ ದಂಡೆ ಸೇರಿಸಿತ್ತು. ಮುಂದೆ ದಟ್ಟ ಕಾಡು. ನಾವು ಹೆಬ್ಬಂಡೆಗಳ ಬೆಟ್ಟದ ಝರಿಯನ್ನೇ ಅನುಸರಿಸುವ ಯೋಜನೆ ಹಾಕಿದೆವು. ಆದರೆ ನೀರಿನಗುಂಟ ಏರೋಣವೆಂದರೆ ಒಂದೋ ತೀರಾ ಕಡಿದಾದ ಜಾರುಬಂಡೆಯ ಮುಖಾಬಿಲೆ. ಇಲ್ಲಾ ಪುಡಿ ಬಂಡೆಗಳ ಕುಹಕದಲ್ಲಿ ಕಾಲಿರಿಕಿಸಿಕೊಳ್ಳುವ ಅಪಾಯ. ಇದು ಬೇಡವೆಂದು ಅಂಚಿನ ಮಣ್ಣಿಗೆ ಕಾಲಿಕ್ಕಿದರೆ ಅಡಿಕೀಳಲಾಗದ ಗೊಸರು. ಎದುರು ದಂಡೆಯಂತೂ ಸುಲಭದಲ್ಲಿ ಕಡಿದು ಮುಗಿಯದ ಕಾಡು. ಇಲ್ಲಿ ನಮ್ಮ ಪ್ರಗತಿ ಸಮಯದೊಡನೆ ಹೊಂದಾಣಿಕೆ ಮಾಡಲಾಗದ ಗೊಂದಲ ಮಾತ್ರ. ಹೆಚ್ಚಿನ ಅನುಕೂಲಕ್ಕೆಂಬಂತೆ ಅಕಾಲ ಮಳೆ ಸೇರಿಕೊಂಡಿತು. ನಾವು ಇದಕ್ಕೆ ತಯಾರಾಗಿರಲೇ ಇಲ್ಲ. ಅಂತದ್ದರಲ್ಲೂ ಮಳೆಯಲ್ಲಿ ಚಂಡಿಯಾಗುವುದು, ಮುಂದೆ ಒದ್ದೆ ಬಟ್ಟೆಗಳಲ್ಲಿ ರಾತ್ರಿ ಕಳೆಯುವುದು ನಮಗೆ ಸಮಸ್ಯೆಯಾಗಿ ಕಾಣಿಸಲಿಲ್ಲ. ಬದಲು ಪರ್ವತಾಗ್ರಗಳಲ್ಲಿ ಮಳೆಯಾದಾಗ ಒಮ್ಮೆಲೇ ಸೊಕ್ಕುವ ಬೆಟ್ಟದ ಝರಿಯ ಅಪಾಯ ಗ್ರಹಿಸಿ ಬಹಳ ಚುರುಕಾಗಿಯೇ ಹಿಂದೆ ಸರಿದೆವು. ಮಳೆ ಜೋರಾಗುವ ಮೊದಲೇ ಝರಿ ಪಾತ್ರೆ ತೊರೆದು, ಕಾಲುದಾರಿಯಲ್ಲಿ ಓಡಿ, ರೈಟರ ಬಂಗ್ಲೆ ತಲಪಿದ್ದೆವು. ಮಳೆ ಸುಮಾರು ಒಂದು ಗಂಟೆ ಭರ್ಜರಿಯಾಗಿಯೇ ಹೊಡೆದು, ಚೊಕ್ಕ ನಿಂತಿತು. ಅಂದೇ ಮರುಪ್ರಯತ್ನಕ್ಕೆ ಸಮಯ ಸಾಲದೆನ್ನಿಸಿತು. ಹಾಗಾಗಿ ವ್ಯಾನ್ ಚಾಲಕ ಕೊಟ್ಟಿದ್ದ ಸೂಚನೆಯಂತೆ ಬಂಗ್ಲೆಯಲ್ಲೆ ರಾತ್ರಿ ಕಳೆದು, ಮರುದಿನ ಶಿಖರಗಮನಕ್ಕೆ ಎರಡನೇ ಪ್ರಯತ್ನ ನಡೆಸುವುದೆಂದು ನಿರ್ಧರಿಸಿದೆವು. ಹೇಗೂ ಸಮಯವಿದೆಯಲ್ಲ, ಐದು ಮಿನಿಟಿನ ಏರಿನ ಮೆಟ್ಟಿಲ ಸಾಲ ಕೊನೆಯಲ್ಲಿರುವ ಎಸ್ಟೇಟ್ ಧಣಿಗಳನ್ನಾದರೂ ಮಾತಾಡಿಸಿಬಿಡೋಣವೆಂದು ಅತ್ತ ಹೋದೆವು.

ನೆರಿಯ ಹೆಬ್ಬಾರ್ ಕುಟುಂಬದ ಮುಖ್ಯಸ್ಥ ಹಾಗೂ ಎಸ್ಟೇಟಿನ ಆಡಳಿತ ವರಿಷ್ಠ ರಾಘವ ಹೆಬ್ಬಾರ್ ನಮ್ಮನ್ನು ತುಂಬ ಆತ್ಮೀಯವಾಗಿ ನಡೆಸಿಕೊಂಡರು. ಆ ದಿನಗಳಲ್ಲಿ, ಸುಮಾರು ಐವತ್ತರ ಹರಯದ ರಾಘವ ಹೆಬ್ಬಾರರು ಮಂಗಳೂರಿನಲ್ಲಿ ನೆಲೆಸಿದ್ದರು. ಎಸ್ಟೇಟಿನ ಮನೆಯಲ್ಲಿ ಅವರ ಕೊನೆಯ ತಮ್ಮ - ರಾಜಗೋಪಾಲ ಹೆಬ್ಬಾರ್, ಕುಟುಂಬ ಸಮೇತ ನಿಂತು ಕೆಲಸಗಳ ನಿರ್ವಹಣೆ ನಡೆಸುತ್ತಿದ್ದರು. ಕರಾವಳಿಯ ಗದ್ದೆ, ಅಡಿಕೆಗಳಿಂದ ತೊಡಗಿ ಘಟ್ಟದೆತ್ತರದ ಕಾಫಿ, ಏಲಕ್ಕಿಯವರೆಗೂ ಸಾವಿರಾರು ಎಕ್ರೆ ವಿಸ್ತೀರ್ಣದ ಕೃಷಿ, ವನ್ಯಭೂಮಿಯ ನೆಲೆ ನೆರಿಯ. ಈ ವಲಯದ ಅತ್ಯುನ್ನತ ಶಿಖರ – ಅಮೆದಿಕ್ಕೆಲ್ಲಿಗೆ ಪ್ರಶಸ್ತವಾದ ಏಕೈಕ ದಿಕ್ಕು ಮತ್ತು ದಾರಿಯ ಸೌಕರ್ಯವೂ ನೆರಿಯವೇ ಆಗಿತ್ತು. ಸಹಜವಾಗಿ ಭಾರತವನ್ನು ವೈಜ್ಞಾನಿಕ ನಕ್ಷೆಗೊಳಪಡಿಸಿದ ಬ್ರಿಟಿಷ್ ಆಡಳಿತ ಎರಡು ಶತಮಾನಗಳ ಹಿಂದೆಯೇ ನೆರಿಯದೊಡನೆ ಅನೌಪಚಾರಿಕ ಸಂಬಂಧ ಹೊಂದಿತ್ತು. ಅವರು ಮೂಲದಲ್ಲಿ ಆಯ್ದ ಉನ್ನತ ಶಿಖರಗಳಿಗೆ (ಜಿಟಿ ಸ್ಟೇಶನ್ಸ್ ಎಂದೇ ಹೆಸರಿಸುತ್ತಿದ್ದರು) ನಿಖರ ಅಳತೆ ತೆಗೆಯುವ ವೈಜ್ಞಾನಿಕ ಸಲಕರಣೆಗಳನ್ನು ಒಯ್ದು  ಮಾಪನ ನಡೆಸಿದ್ದರು. ಪರೋಕ್ಷ ವಿಧಾನಗಳಲ್ಲಿ ಇತರ ಭೂಲಕ್ಷಣಗಳನ್ನೂ ದಾಖಲಿಸುತ್ತಿದ್ದರು. ಅವಶ್ಯವಿದ್ದಲ್ಲಿ ನಕ್ಷೆಯ ಮೇಲಿನ ಕಾಲ್ಪನಿಕ ಗಡಿರೇಖೆಗಳನ್ನು ಭೂಮಿಯಲ್ಲಿ ಕಾಣಿಸಲು, ಹಾಗೇ ಭೂಸತ್ಯಗಳನ್ನು ನಕ್ಷೆಗೆ ಇಳಿಸಿಕೊಳ್ಳಲು ನಿರ್ದೇಶನ, ಮಾಹಿತಿ ಸಂಗ್ರಹವನ್ನೂ ನಡೆಸುತ್ತಿದ್ದರು. ಮತ್ತು ಇದನ್ನು ಮುಂದೆ ಸ್ಥಳೀಯ ಸರಕಾರೀ ಪ್ರತಿನಿಧಿ ಎರಡು ವರ್ಷಗಳಿಗೊಮ್ಮೆ ನವೀಕರಿಸುವ ಕುರಿತೂ ಖಡಕ್ ವ್ಯವಸ್ಥೆಯನ್ನೂ ಮಾಡಿಟ್ಟಿದ್ದರು. ಆಗ ಇದ್ದ ಹೆಬ್ಬಾರರ ಹಿರಿಯರು ಏಲಕ್ಕಿ ಮಲೆವರೆಗೆ ವಾಹನಯೋಗ್ಯ ದಾರಿ, ಅಲ್ಲಿ ತತ್ಕಾಲೀನ ವಸತಿ (ಬಿದಿರುಬಂಗ್ಲೆ ಇತ್ಯಾದಿ), ಮುಂದೆ ಕಾಲುದಾರಿ, ಕೂಲಿಯಾಳುಗಳೆಲ್ಲವನ್ನೂ ಪೂರೈಸುತ್ತಿದ್ದರಂತೆ. ಇವೆಲ್ಲ ಹೆಬ್ಬಾರ ಕುಟುಂಬಕ್ಕೆ ಕೇವಲ ಖರ್ಚಿನ ಬಾಬುಗಳು. ಆದರೂ `ದಾಸ್ಯ’ ಕಳಚಿಕೊಂಡ ಸ್ವಚ್ಛಂದ ಭಾರತದ ಕಾಲದಲ್ಲಿ ಅಧಿಕಾರಿಗಳು ಈ ಜವಾಬ್ದಾರಿಯಿಂದಲೇ ಕಳಚಿಕೊಂಡದ್ದನ್ನು ಹೇಳುವಾಗ ರಾಘವ ಹೆಬ್ಬಾರರು ಸಂತೋಷಿಸಿದಂತೆ ಕಾಣಲಿಲ್ಲ!

ಹೆಬ್ಬಾರರು ತಾರುಣ್ಯದಲ್ಲಿ ಅಮೆದಿಕ್ಕೆಲ್ಲಿಗೆ ಹೋದ ಕತೆಯನ್ನು ಹೇಳಿದರು. ನಾವು ಅನುಸರಿಸ ಹೊರಟ ನಕ್ಷೆಯ ದಿಕ್ಕು ಹತ್ತಿರ ನಿಜ ಆದರೆ ನೇರ ಹಾರಬಲ್ಲ ಹಕ್ಕಿಗಳಿಗೆ. ಅದು ಬಿಟ್ಟು, ಎರಡು ಕಾಲಿನ ಮಿತಿಯವರಿಗೆ ಸುಲಭವಾದ ಜಾಡಿನ ಸೂಚನೆಗಳನ್ನೂ ನೀಡಿದರು. ಕೊನೆಯದಾಗಿ ಆ ವಲಯದಲ್ಲಿ ಈಗ ಕೆಲವು ದಿನಗಳಿಂದ ಠಿಕಾಣಿ ಹೊಡೆದ ಒಂಟಿ ಆನೆಯ ಕುರಿತೂ ಎಚ್ಚರಿಕೆಯನ್ನೂ ಕೊಟ್ಟರು. ಒಂದೊಮ್ಮೆ ಆನೆಯ ಸೂಚನೆ ಸಿಕ್ಕರೆ ಅಥವಾ ಯಾವ ಕಾರಣಕ್ಕಾದರೂ ಶಿಖರದತ್ತ ಹೋಗುವುದು ಅಸಾಧ್ಯವಾಗಿ ಮರಳುವುದಿದ್ದರೆ ಬೆಳಗ್ಗೆ ಸುಮಾರು ಹನ್ನೊಂದು ಗಂಟೆಯವರೆಗೆ ತಾವು ಬಿದಿರುಬಂಗ್ಲೆಯಲ್ಲೇ ಇರುತ್ತೇವೆ. ವಾಪಾಸು ನೆರಿಯಕ್ಕೂ ಮಂಗಳೂರಿಗೂ ತಮ್ಮೊಡನೇ ಜೀಪು ಕಾರುಗಳಲ್ಲೇ ಪ್ರಯಾಣಿಸಬಹುದೆಂದು ಆಮಂತ್ರಣವನ್ನೂ ಹತ್ತುವ ಪ್ರಯತ್ನಕ್ಕೆ ವೀರವೀಳ್ಯವನ್ನೂ ಕೊಟ್ಟರು. ನಾವು ರಾತ್ರಿಗೆ ನಮ್ಮದೇ ಚಪಾತಿ ದಾಸ್ತಾನಿನ ಇನ್ನೊಂದು ಕಂತನ್ನು ಬಿಸಿ ಚಾದೊಡನೆ ಮುಗಿಸಿ, ರಾತ್ರಿ ನಿದ್ದೆಯನ್ನು ರೈಟರ ಬಂಗ್ಲೆಯಲ್ಲಿ ನಿಶ್ಚಿಂತೆಯಿಂದ ಮಾಡಿದೆವು.

ಬೆಳಕು ಹರಿಯುತ್ತಿದ್ದಂತೆ ನಾವು ಹೆಬ್ಬಾರರ ಸೂಚನೆಯಂತೆ ಹೊಸದೇ ಜಾಡಿನಲ್ಲಿ,ಬಿರುಸಿನ ನಡೆಗಿಳಿದೆವು. ಹಿಂದೆಂದೋ ಜೀಪು, ಲಾರಿ ಓಡಿರಬಹುದಾದ ಮಣ್ಣ ದಾರಿಯ ಅವಶೇಷವೇ ಇತ್ತು. ಆಚೀಚೆ ಹುಲ್ಲು ಪೊದರು ಕವಿದುಕೊಂಡಿದ್ದರೂ ನಡೆಯುವ ಮಟ್ಟಿಗೆ ಸವಕಲು ಜಾಡು ಪ್ರಶಸ್ತವಾಗಿಯೇ ಇತ್ತು. ಏರು ದಾರಿಯೇ ಆದರೂ ತೀವ್ರವಾಗೇನೂ ಇರಲಿಲ್ಲ.  ಸುಮಾರು ಒಂದು ಗಂಟೆಯೊಳಗೇ ಏಲಕ್ಕಿ ಮಲೆ ಬಿಟ್ಟು ಕುರುಚಲು ಕಾಡು ಸೇರಿದ್ದೆವು. ನುಗ್ಗಿದ ನಮಗೆ ಮೊದಲ ದೃಶ್ಯವೇ – ಇನ್ನೂ ಹಸಿರಾಗಿದ್ದ, ಆದರೆ ಕೆಡವಿ ಅಕರಾಳ ವಿಕರಾಳವಾಗಿ ಸಿಗಿದು ಹಾಕಲ್ಪಟ್ಟ ದೊಡ್ಡ ಬೈನೆ ಮರ. ಇದು ಸ್ಪಷ್ಟವಾಗಿ ಕಾಡಾನೆಯ ಇರವನ್ನು ಸಾರುತ್ತಿತ್ತು. ಮುಂದೆ ಅಲ್ಲಲ್ಲಿ ಆನೆ ಆಗಿಂದಾಗ್ಗೆ ನುಗ್ಗಿ ಮಾಡಿದ ಜಾಡುಗಳೂ ತಟ್ಟುಗಳೂ ಹತ್ತು ಹಲವು. ಇವು ನಮ್ಮ ಆನೆ-ಭಯವನ್ನು ದಟ್ಟವಾಗಿಸುತ್ತಾ ಇತ್ತು. ಒಮ್ಮೆಲೆ ಅನತಿ ದೂರದ ಬಲ ಕೊಳ್ಳದಿಂದ ಸಣ್ಣ ಮರ ಬೀಳಿಸಿದ ಸದ್ದು ನಮ್ಮನ್ನು ಮರಗಟ್ಟಿಸಿತು. ಮಿನಿಟೆರಡು ಕಳೆದಾಗ, ಬಹುಶಃ ಆನೆಯೇ ಇನ್ನೊಂದು ಬೈನೇ ಮರವನ್ನೇ ಸುಲಿದಂಥ ಸದ್ದು ಬರತೊಡಗಿದಾಗ ತುಸು ಹಗುರಾದೆವು; ಆನೆ ನಮ್ಮ ದಾರಿಯಲ್ಲಿಲ್ಲ. ಉಸಿರು ಬಿಗಿಹಿಡಿದು, ತುದಿಗಾಲಿನಲ್ಲಿ ಎಂಬಂತೆ ಪಾದ ಬೆಳೆಸಿದೆವು. ಪಿಸುನುಡಿಯಡಗಿ, ಒಣಕಡ್ಡಿ ಮೆಟ್ಟದೆ, ಪೊದರು ಸವರದೆ, ಮೈಯೆಲ್ಲ ಕಣ್ಣಾಗಿ ನಡೆದೆವು. ನಮ್ಮಾತಂಕಕ್ಕೆ ಬೇರೇ ರೂಪ ಬಂತು - ಒಮ್ಮೆಲೆ ನಮ್ಮೆದುರಿನಿಂದ ಬೆಟ್ಟದ ಮೇಲೊಂದು ಬೆಟ್ಟ ನಮ್ಮತ್ತಲೇ ಸಂಚರಿಸಿದ ಸದ್ದು, ಪೊದರುಗಳ ತೀವ್ರ ಕಂಪನ. ಸ್ಥಂಭೀಬೂತರಾದೆವು, ಕ್ಷಣಾರ್ಧದಲ್ಲಿ ಸುತ್ತಲೂ ಆರ್ತದೃಷ್ಟಿ ಬೀರಿದೆವು. ದರೆ ಚಿಕ್ಕದು, ಕೊಳ್ಳ ಆನೆಯದೇ ಮನೆ. ನಾವು ಸುಲಭದಲ್ಲಿ ಏರಬಹುದಾದಂಥ ದೊಡ್ಡ ಮರ ಬಳಿಯಲ್ಲೆಲ್ಲೂ ಇಲ್ಲ. ಮುಂದಿನ ಗಳಿಗೆಯಲ್ಲಿ ಅಷ್ಟನ್ನೂ ನಾವಿಬ್ಬರೂ ಗ್ರಹಿಸಿ, ಮೌನದಲ್ಲೇ ಒಮ್ಮತಕ್ಕೆ ಬಂದು, ಹಿಂದೆ ತಿರುಗಿದವರೇ ತುದಿಗಾಲಿನಲ್ಲಿ ಓಟ ಕಿತ್ತೆವು. ಎಡಗೈಯಲ್ಲಿ ಬೆನ್ನಚೀಲವನ್ನು ಆಧರಿಸಿ, ಬಲಗೈಯಲ್ಲಿ ಕ್ಯಾಮರಾ, ಕತ್ತಿ, ಲಾಂದ್ರ, ನಕ್ಷೆಯ ಸುರುಳಿಗಳೆಲ್ಲ ನೇಲುತ್ತಿದ್ದರೂ ಹತ್ತಿ ಹೆಜ್ಜೆಗಳೇ ಬೀಳುವಂತೆ ಓಡಿದೆವು. ಕೊಳ್ಳದಲ್ಲಿದ್ದ ಆನೆ ನಮ್ಮರಿವು ತಪ್ಪಿಸಿ ಮೇಲಿನ ದಾರಿಗೆ ಬಂದದ್ದೋ, ನಮ್ಮ ಸುಳುಹು ಸಿಕ್ಕಿ ವಿರಾಮದ ಮೆಲುಕಾಟ ನಡೆಸುತ್ತಿದ್ದ ಕಾಟಿ ಬೆಚ್ಚಿ ಓಡಿದ್ದೋ ಮೂರನೆಯದ್ದೇ ಕಾರಣವೋ ಎಂದೆಲ್ಲಾ ಜಿಜ್ಞಾಸೆಗೆ ಬೀಳದೆ, ಇಂದು ಬದುಕಿದರೆ ಇನ್ನೊಮ್ಮೆ ಅಮೆದಿಕ್ಕೆಲ್ ಎಂದು ಸುಮಾರು ಅರ್ಧ ಗಂಟೆಯ ಧಾವಂತಕ್ಕೆ ಕೊನೆಗಾಣಿಸಿದ್ದು ಬಿದಿರು ಬಂಗ್ಲೆಯ ಅಂಗಳದಲ್ಲೇ! ಹೋದಷ್ಟೂ ದಾರಿ ಸುಂದರ ಭಾವಚಿತ್ರಗಳ ಮೆರವಣಿಗೆಯಾದರೆ, ಹಿಂದೋಡಿದ್ದು ಎಳೆದು ಬಿಟ್ಟ ರಬ್ಬರ್!

ರಾಘವ ಹೆಬ್ಬಾರ್ ಬಳಗ ಇನ್ನೂ ಬಿದಿರುಬಂಗ್ಲೆ ಬಿಟ್ಟಿರಲಿಲ್ಲ. ನಮ್ಮ ನಿರ್ಧಾರವನ್ನು ಅವರು ಮೆಚ್ಚಿದರು. ತುಸು ಹೊತ್ತಿನಲ್ಲೇ ಮನೆಯಿಂದ ಬಂದ ಹೆಚ್ಚು ಬಿಗಿಯ ಜೀಪಿನಲ್ಲಿ ಅವರೊಡನೆ ನಾವೂ ಏರಿಕೊಂಡೆವು. ನೆರಿಯ ಮನೆಯಲ್ಲಿ ಮೊದಲು ನಮಗೆ ಕಾಫಿ, ತಿನಿಸುಗಳ ಉಪಚಾರ ಸಿಕ್ಕಿತು. ನಾವಿಬ್ಬರೇ ವಿರಾಮದಲ್ಲಿ ನೆರಿಯ ಹೊಳೆಗೆ ಹೋಗಿ ಮನಸಾ ಮಿಂದು ಬಂದೆವು. ಮಧ್ಯಾಹ್ನದ ಊಟವೂ ಅಲ್ಲೇ ಮುಗಿಸಿದ ಮೇಲೆ ಮತ್ತೆ ಜೀಪಿನಲ್ಲಿ ಕಕ್ಕಿಂಜೆ. ಅಲ್ಲಿ ನೆರಿಯದ್ದೇ ಒಂದು ಬಿಡಾರವಿತ್ತು. ಅದರ ಅಂಗಳದಲ್ಲಿದ್ದ ಕಾರಿಗೆ ನಾವೆಲ್ಲ ವರ್ಗಾವಣೆಗೊಂಡು ಸಂಜೆಗೆ ಮಂಗಳೂರು ಸೇರಿದ್ದೆವು. ಎರಡೆರಡು ಪ್ರಯತ್ನಗಳಲ್ಲಿ ಶಿಖರಾರೋಹಣ ಯಶಸ್ವಿಯಾಗದಿದ್ದರೂ ಅಮೆದಿಕ್ಕೆಲ್ಲಿನ ಸವಾಲು ಇನ್ನೊಂದೇ ಸಾಹಸಯಾನವನ್ನು ಕೂಡಲೇ ಹೊರಡಿಸುವಷ್ಟು ಕೆರಳಿಸಿತ್ತು, ಸಿಕ್ಕಷ್ಟೇ ಅನುಭವದಲ್ಲಿ ಎಂದೂ ಮರೆಯಲಾಗದ ಮೋಹ ಹಚ್ಚಿತ್ತು! “ಹತ್ತಿದರೆ ಅಮೆದಿಕ್ಕೆಲ್ ಅಯ್ಯ, ಒಂದು ಶಿಖರ” ಎಂದ ಶ್ರೀಪತಿರಾಯರ ಮಾತು ತಲೆಯಲ್ಲಿ ಅನುರಣಿಸುತ್ತಲೇ ಇತ್ತು.

(ಮುಂದುವರಿಯಲಿದೆ) 

3 comments:

  1. ಉತ್ತರನ ಸಾಹಸವೆಂದೆನಿಸುವುದಿಲ್ಲ.... ಅಸಲಿ ಧೈರ್ಯ ಎದ್ದು ಕಾಣುತ್ತಿದೆ.. ಅಪರಿಚಿತ ಅರಣ್ಯ ಚಾರಣ ಯಾರಿಗೂ ಸುಲಭಸಾಧ್ಯವಲ್ಲ.

    ReplyDelete
  2. ಅಮೆದಿಕ್ಕೆಲ್ ಎಂದಾಗ ಪಕ್ಕದ ಎತ್ತಿನ ಭುಜದ ಮೇಲೆ ಹತ್ತಿದ್ದು ನೆನಪಾಯಿತು. ಅಮೆದಿಕ್ಕೆಲ್ ಇನ್ನೂ ಕೈಗೂಡಿಲ್ಲ‌.
    ಸಂಕವಾಳದ ಕತೆಗೆ ಮುಂದದಿನವಾರದವರೆಗೆ ಕಾಯಬೇಕಲ್ಲಾ..

    ReplyDelete
  3. ಲಕ್ಷೀನಾರಾಯಣ ಭಟ್ ಪಿ22 August, 2016 16:45

    ಪ್ರಕೃತಿ ಎದುರು ಮನುಷ್ಯ ಎಷ್ಟು ದುರ್ಬಲ ಎಂದುಕೊಂಡರೂ ಅದನ್ನು ಮಣಿಸುವ ಸಾಹಸಿಗಳಿಗೆ ಪ್ರಕೃತಿ ನಿರಂತರ ಪಂಥಾಹ್ವಾನ ನೀಡುತ್ತಲೇ ಇರುತ್ತದೆ, ಅಲ್ಲವೇ?! ಇದನ್ನು ಉತ್ತರಿಸುವ ಆಕರ್ಷಣೆಗೆ ಒಮ್ಮೆ ಮನಸೋತರೆ ಮತ್ತೆ ಹಿಂದಿರುಗಿ ನೋಡುವಂತಿಲ್ಲ!

    ReplyDelete