04 October 2013

ನಾಚಿಕೆಯಲ್ಲೆ ಒಂದು ಕವನ ನಾಚಿಕೆ!

ಉಪ್ಪಿನಂಗಡಿಯ ಗೆಳೆಯ ಗೋಪಾಲಕೃಷ್ಣ ಕುಂಟಿನಿ ನನ್ನಂಗಡಿಗೆ ಬಂದಾಗೆಲ್ಲಾ “ನಿಮ್ಮ ಜಗಳಗಂಟ ಕಡತದಲ್ಲಿ ಹೊಸತೇನಿದೆ” ಎಂದು ಹಾಸ್ಯಕ್ಕೂ ವಾಸ್ತವಕ್ಕೂ ಕೇಳುವುದಿತ್ತು. ನಾನು ಪುಸ್ತಕೋದ್ಯಮಕ್ಕೇ ಸಂಬಂಧಿಸಿದ ಬಹುತೇಕ ಜಗಳಗಳನ್ನು ಒಟ್ಟು ಮಾಡಿ ‘ಪುಸ್ತಕ ಮಾರಾಟ ಹೋರಾಟ’ ಎಂದು  ಪುಸ್ತಕವನ್ನೇ ಮಾಡಿ ಪ್ರಕಟಿಸಿಬಿಟ್ಟೆ. ಆ ಕಾಲದಲ್ಲೇ ಉದಯವಾಣಿ ಆಡಳಿತಕ್ಕೂ ಸಾರ್ವಜನಿಕರಿಗೂ ಇರುವ ‘ಜಗಳ’ಗಳನ್ನೇ ಹೆದ್ದೀಪದಡಿಯಲ್ಲಿ ತೋರುವಂತೆ ‘ಜನತಾವಾಣಿ’ಯನ್ನು ವರ್ಗೀಕರಿಸಿ ‘ದೂರುಗಂಟೆ’ ಎಂದೇ ಸಾರ್ವಜನಿಕ ಅಂಕಣವನ್ನೇ ತೆರೆದಿಟ್ಟಿತ್ತು. ಆಗ ಅಹವಾಲು ಮಂಡನೆಯಲ್ಲಿ ನನ್ನ ಮಟ್ಟಿಗೆ ಒಂದು ವೈವಿಧ್ಯ ಕಾಣಿಸಲು ಒಂದು ಕಗ್ಗ ಗೀಚಿದ್ದೆ. (ಇಂಥ ಪ್ರಯೋಗವನ್ನು ಎಷ್ಟೂ ಜನ ಮೊದಲೂ ಅನಂತರವೂ ಎಷ್ಟೆಷ್ಟೋ ಶಕ್ತವಾಗಿ ಮಾಡಿದ್ದಾರೆ) ಸಾಲದ್ದಕ್ಕೆ ಸಂಕೋಚದಲ್ಲೇ ಉದಯವಾಣಿಗೆ ಕಳಿಸಿಯೂ ಬಿಟ್ಟೆ. ನನ್ನ ಕುಕವಿತ್ವ ೨೮-೧೧-೯೩ರ ಉದಯವಾಣಿಯಲ್ಲಿ ಪ್ರಕಟವೂ ಆಯ್ತು. ಕಾವ್ಯಾವಹೇಳನಕ್ಕೆ ನನಗೆಷ್ಟೂ ಜನ ಹಿಂದಿನಿಂದ ಬೈದಿರಬಹುದು. ಆದರೆ ಪರಿಸ್ಥಿತಿ ಏನೂ ಉತ್ತಮವಾಗಿಲ್ಲ, ಸಂದ ಎರಡು ದಶಕಗಳಲ್ಲಿ ಹಳೆಪದ್ಯಕ್ಕೆ ಎಷ್ಟೂ ಹೊಸ ಉದಾಹರಣೆಗಳು ಕಾಣುತ್ತಲೇ ಇವೆ! ಅದನ್ನು ಸಾರುವಂತೆ ಕೆಲವು ಹೊಸ ಚಿತ್ರಗಳ ಸಹಿತ ‘ಕವಿತೆ’ ಎಂಬುದನ್ನು ಇಲ್ಲಿ ಮರುಪ್ರಕಟಿಸುತ್ತಿದ್ದೇನೆ. (ದಯವಿಟ್ಟು ಗಮನಿಸಿ: ಚಿತ್ರದಲ್ಲಿ ಕಾಣುವ ಯಾವುದೇ ವ್ಯಕ್ತಿ, ವಾಹನ, ಸಂಸ್ಥೆ ಶುದ್ಧ ಆಕಸ್ಮಿಕ ಮತ್ತು ಕೇವಲ ಪ್ರಾತಿನಿಧಿಕ.)


ನಾಚಿಕೆ

ಕೈಗಿಕ್ಕಿದ್ದ ಗಬಕ್ಕರಿಸಿ ಮತ್ತೆ ಕೈಯೊಡ್ಡುವ 
ಮಕ್ಕಳ ಸತ್ತೇ ಗೋಳೆಬ್ಬಿಸುವ




ಜಾಣರೇ, ದೊಡ್ಡವರೇ
ಸಂಬಳ ಮುಕ್ಕಿ ಸವಲತ್ತು ನೆಕ್ಕಿ 



ಬಾಧ್ಯತೆಯ ಸವಾಲನ್ನು ಗಿಂಬಳದೋಟಕ್ಕಿಟ್ಟ
ನಿಮಗೆ ನಾಚಿಕೆಯಾಗುವುದಿಲ್ಲವೇ ಸ್ವಾಮೀ?

ದಾರಿ ದಾಟುವ ಜನಜಾನುವಾರಿಗೆ ಹಾರ್ನಿನಲಿ ಬೈದು

ಅವಸರಿಸದ ಮುಂದಿನವನಿಗೆ ಮಾತು ಹೊಲೆಗೈದು
ನಿಧಾನಿಸದ ಹಿಂದಿನವನ ಮೇಲೆ ತೋಳೇರಿಸಿ ಹಾಯ್ದು 


ಪೋಲೀಸಿನವರ ಸೀಟಿ, ದೋಟಿ, ಚೀಟಿ
ಸಂಗ್ರಹಿಸುವವರೆಗೂ ಎಲ್ಲೆಂದರಲ್ಲಿ ನೆಗರುವ


ನಿಮಗೆ ನಾಚಿಕೆಯ ಭಾವ ಕಾಡುವುದಿಲ್ಲವೇ ಸ್ವಾಮೀ?
ಟೆಂಡರಿನಲ್ಲಿರದ ಒಡಕು ರಸ್ತೆಯ ಜನಕರೇ

ಯಾವ ಠೇವಣಿಯೂ ತುಂಬಿಕೊಡದ ಹೊಂಡಗಳ ಕರ್ತರೇ
ಮೂಳೆ ತಜ್ಞರ, ಬಿಡಿಭಾಗ ಮಾರಾಟಗಾರರ ಅಂತರಂಗ ದೋಸ್ತರೇ

ರಾಜಮಾರ್ಗದ ಜಲ್ಲಿ ಜಗಿದು ಡಾಂಬರು ಕುಡಿದು
ರಾಯಸದನಗಳ ಅಂಗಳಗನ್ನಡಿಯಲ್ಲಿ ಮುಖನೋಡುವ

ನಿಮಗೆ ನಾಚಿಕೆಯಾಗುವುದು ಎಂದಾದರೂ ಉಂಟೇ ಸ್ವಾಮೀ?

ಏರಿದ್ದು ಒಂದಾದರೆ ನೀವು ಹೇರಿದ್ದು ನಾಕು


ಅಳೆದದ್ದು ಅಡಿಯಾದರೆ ತುಳಿದದ್ದು ಮುಡಿ
ಹತ್ತಿರಕೆ ಏರಿಸಿದ ಕನಿಷ್ಠ ದೂರಕ್ಕೆ ಹೇಗೂ ಅನಿಷ್ಟ 

ಇಲ್ಲದಿರೆ ಕಾಲು ನೋವು ಇದ್ದರೋ ತಲೆ (ಕೀಲು ಕೀಲು) ನೋವು
ತುಂಬಿದರೆ ಜಂಬೋ ಹಾರಿದರೆ ರಾಕೆಟ್ಟು
ಸುಲಿದರೆ ವಿ-ಮಾನಗೊಳಿಸುವ ನಿಮಗೆ
ನಾಚಿಕೆ, ಕೋಶದೊಳಗಣ ಶಬ್ದ ಅನ್ನಿಸದೇ ಸ್ವಾಮೀ?

ಮುಗ್ಗಾಲಿ ವಟವೃಕ್ಷಕ್ಕೆ ಡೊಗ್ಗಾಲು ಹಾಕುವ 

ಗುಂಡಿ ರಸ್ತೆಗಳ ಸುತ್ತಳತೆಗೆ ನಡೆಯುವ
ಉಸಿರೆತ್ತಲೂ ಬೇಡದಂತೆ ಗಿಡಿದು ಇಡಿಕಿರಿಯುವ
ಕೆಲಸವನ್ನು ಉಪಕಾರವೆಂಬಂತೆ ಇನಾಮಿಸುವ
ಹೇಡಿ, ತಾಳ್ಮೆವಂತ, ದಾಕ್ಷಿಣ್ಯಪರ ದಡ್ಡವರೇ ಆದ
ನಮಗಾದರೂ ನಿಜ ನಾಚಿಕೆಯಾಗಲೇಬೇಕು.


ಹೌದು, ನಮಗೆ ನಾಚಿಕೆ ಆಗುತ್ತದೆ!



9 comments:

  1. ಹೊಸ ಕಾವ್ಯ ಪ್ರಕಾರ ಚಿತ್ರ ಕಾವ್ಯ.
    ಕವಿಯೆ ಕ್ಯಾಮರಾ ಹಿಡಿದು ಸವ್ಯಸಾಚಿಯಾಗಿರುವುದು.
    ಶಾಬ್ದಿಕ ರೂಪಕವನ್ನು ದೃಶ್ಯರೂಪಕವಾಗಿಸುವುದು.
    ಪದ ಕುಸಿಯೆ ಕ್ಯ‌ಾಮರಾವುಂಟು ಮಂಕುತಿಮ್ಮ!

    ReplyDelete
  2. Enjoyed reading it.
    natesh

    ReplyDelete
  3. ಸ್ವಾಮಿ ಎಂಬ ಸಂಬೋಧನೆ ಹೊರತು ಪಡಿಸಿ ಬಾಕಿ ಎಲ್ಲವೂ ಪಸಂದಾಗಿದೆ..

    ReplyDelete
    Replies
    1. Swami =SAHEBRE= BUDDHI =DHANI =SIR ,A polite way of addressing in D.K

      Delete
  4. Chennagide chithra-kavana.
    Abhinandanegalu

    Sadanand Suvarna

    ReplyDelete
  5. SIR
    PADYA OllEYADAGIDE. THANKS
    NANNA HESARU EKE?
    - Mahalinga

    ReplyDelete
    Replies
    1. ಪ್ರಾಸ ಬಿಟ್ಟವರಿಂದ ತೊಡಗಿ, ಛಂದಸ್ಸು ತ್ಯಜಿಸಿದವರಿಂದ ಹಾದು, ಅರ್ಥವನ್ನೂ ಪ್ರಶ್ನಿಸಿದವರವರೆಗೆ ಬರೆದು ನನ್ನ ಅಧಿಕಪ್ರಸಂಗಕ್ಕೆ ‘ಆಧಾರ’ ಕಾರ್ಡ್ ಕೊಟ್ಟವರು ನೀವಲ್ಲವೇ :-)

      Delete
  6. ಚಿತ್ರ ಕವನ ಚೆನ್ನಾಗಿತ್ತು.
    ಲವಲೇಶ ನಾಚಿಕೆ ಇಲ್ಲದವರಿಗೂ ಕವನ ಓದಿ ಸ್ವಲ್ಪವಾದರೂ ನಾಚಿಕೆಯಾದೀತು.

    ಕುಶಲ ಶೆಟ್ಟಿ, ಅಳಿಕೆ

    ReplyDelete
  7. ನಾಚುವುದನ್ನು ಮೆರೆತೇ ದೊಡ್ಡವರಾದವರಿಗೆ ಇದೆಲ್ಲ ಎಲ್ಲಿ ಅರ್ಥವಾಗುತ್ತೆ... ಅವರ ಕಿವಿ ಕಣ್ಣುಗಳನ್ನು ತೆರೆಸುವ ತಂತ್ರಾಂಶ ಯಾರು ಹುಡುಕಿ ತೆಗೆಯಬಲ್ಲರೋ ಕಾಣೆ....

    ReplyDelete