01 October 2013

ಗುಂಡಿಗೆ ಬಿದ್ದರು ಶೇಷಯ್ಯ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ ವಿ-ಧಾರಾವಾಹಿಯ ಕಂತು ಇಪ್ಪತ್ನಾಲ್ಕು
ಅಧ್ಯಾಯ ಐವತ್ನಾಲ್ಕು

ಕಡಿದಾದ ಬೆಟ್ಟಗಳ ನಡುವೆ ಈ ಸೀದಾ ಮಾರ್ಗಗಮನ ಎನ್ನುವುದೊಂದು ಬಿಸಿಲ್ಗುದುರೆ. ಬೆಟ್ಟದ ಮೈಯಲ್ಲಿ ಬಳಸಿ ನಡೆದು ಒಂದು ಮಗ್ಗುಲಿನಿಂದ ಇನ್ನೊಂದು ಮಗ್ಗುಲಿಗೆ ತಗ್ಗಾಗಿರುವಲ್ಲಿ ದಾಟಬೇಕೇ ವಿನಾ ಶಿಖರದಿಂದ ಶಿಖರಕ್ಕೆ ಜಿಗಿಯುವುದಲ್ಲ. ಹೀಗೆ ಶಿಖರಾಭಿಮುಖವಾಗಿಯೇ ಹೋಗುವಾತ ಬೆಟ್ಟವೇರಿ ಕಣಿವೆಯಿಳಿದು ದಾರಿ ತಪ್ಪಿ ಕಷ್ಟಪಟ್ಟು ಗುರಿ ತಲಪುವಾಗ (ತಲಪಿದರೆ) ಬಳಸು ದಾರಿಯವನಿಗಿಂತ ಹೆಚ್ಚು ಶ್ರಮ ಪಟ್ಟಿರುತ್ತಾನೆ, ಕಾಲಹರಣ ಮಾಡಿರುತ್ತಾನೆ, ಅಪಾಯ ಎದುರಿಸಿರುತ್ತಾನೆ. ಕಣಿವೆಯ ತಳದಲ್ಲಿ ನೀರಿನ ಆಸರೆಯಿರುವುದು. ಅಲ್ಲಿಗೆ ಕಾಡು ಪ್ರಾಣಿಗಳು ಖಂಡಿತ ಬರುತ್ತವೆ. ಹಾವುಗಳ ಭಯವೂ ಇದೆ. ಇಷ್ಟಾಗುವಾಗ ಸಾಯಂಕಾಲವೂ ಸಮೀಪಿಸಿದರೆ ಅವನ ಕುಂಭ ಪೂರ್ಣವಾದಂತೆಯೇ.

ಇಲ್ಲಿ ಇದಕ್ಕೊಂದು ಉದಾಹರಣೆ ಬರೆಯುವುದು ವಿಹಿತ. ಆರು ವರ್ಷಗಳ ಹಿಂದೆ, ಆಗ ನಾನು ಮಡಿಕೇರಿಯಲ್ಲಿದ್ದೆ. ಅಲ್ಲಿಂದ ರಾಜಾಸೀಟ್ ಬೆಟ್ಟದ ಸಾಲಿನ ಮೇಲೆಯೇ ನಡೆದರೆ ಸುಮಾರು ಆರು ಮೈಲು ದೂರದಲ್ಲಿ ನಿಶಾನಿಮೊಟ್ಟೆ ಎಂಬ ಸಾಕಷ್ಟು ಎತ್ತರದ ಬೆಟ್ಟದ ಕೊಡಿ ತಲಪುತ್ತೇವೆ. ಮಡಿಕೇರಿಯಿಂದ ಸುಮಾರು ೩೦೦ ಅಡಿ ಮಾತ್ರ ಎತ್ತದರದಲ್ಲಿದೆ ಅ ಶಿಖರ. ಕಾರಣ, ಮಡಿಕೇರಿಯ ಬೆಟ್ಟದ ಮೇಲಿನ ಪಟ್ಟಣ. ಸರಕಾರದ ವಿವಿಧ ಇಲಾಖೆಗಳಲ್ಲಿ ಹಿರಿಯ ಅಧಿಕಾರಿಗಳಾಗಿದ್ದ ಶ್ರೇಷ್ಠ, ಶೇಷಯ್ಯ, ಜ್ವಾಲಣ್ಣ ಮತ್ತು ಪ್ರಭಾಚಂದ್ರ ಇವರೂ ಕಾರ್ಪೊರೇಷನ್ ಬ್ಯಾಂಕ್ ಏಜಂಟ್ ಪುರಾಣಿಕ ಇವರೂ ನನ್ನ ಸ್ನೇಹಿತರಾಗಿದ್ದರು. ನಮ್ಮ ಎನ್‌ಸಿಸಿ ದಳದವರ ನಿಶಾನಿಮೊಟ್ಟೆ ಸಾಹಸವನ್ನು ಅವರಿಗೆ ವಿವರಿಸುತ್ತಿದ್ದೆ. ನಾವೂ ಒಂದು ಸಲ ಹೋಗಬೇಕು ಇದು ಅವರ ಆಸೆ. ಅವರೆಲ್ಲರೂ ೪೦ರ ತಪ್ಪು ಮಗ್ಗುಲಲ್ಲಿದ್ದವರು. ಒಬ್ಬರಿಗೆ ನಡೆಯಲು ಕಷ್ಟ. ಸ್ಥೂಲಗಾತ್ರ, ಇನ್ನೊಬ್ಬರಿಗೆ ಬೆಟ್ಟ ಏರುವುದು ಇಳಿಯುವುದು ಎರಡೂ ಪ್ರಯಾಸವೇ, ತ್ರಾಣವಿಲ್ಲ. ಮತ್ತೊಬ್ಬರಿಗೆ ಔನ್ನತ್ಯದ ಭಯ. ಬೆಟ್ಟದ ಮೇಲೆ ನಿಂತರೆ ಥರಥರನೆ ನಡುಗುವರು. ಶೇಷಯ್ಯ ಮಾತ್ರ ಇವಕ್ಕೆಲ್ಲ ಅಪವಾದ. ಅಷ್ಟು ಮಾತ್ರವಲ್ಲ. ಪ್ರಾಯದಲ್ಲಿ ನನಗಿಂತ ಹಿರಿಯರಾಗಿದ್ದರೂ ಅವರೊಡನೆ ಯಾವ ವಿಧವಾದ ಸ್ಪರ್ಧೆಯಲ್ಲಿಯೂ ನಾನು ಗೆಲ್ಲುತ್ತಿರಲಿಲ್ಲ. ಅವರನ್ನು ಪಾದರಸ, ವಿದ್ಯುತ್ತು ಎಂದು ಕರೆಯುತ್ತಿದ್ದೆವು. ಹೇಗೂ ಇರಲಿ, ಈ ಪಾದರಸವನ್ನೂ ಅತಿಭಾರದ ಸೀಸದ ಗಟ್ಟಿಗಳನ್ನೂ ಸ್ನೇಹದ ದಾರದಿಂದ ಪೋಣಿಸಿ ನಿಶಾನಿಮೊಟ್ಟೆಯೆಡೆಗೆ ಹೊರಟೆವು. ಸಾಧಾರಣವಾಗಿ ಮಡಿಕೇರಿಯಿಂದ ಎರಡು ಗಂಟೆಗಳ ದಾರಿ ಅದು. ಆದರೆ ಈ ಹಿರಿಯ ಕಡಿವಾಣಗಳಿಂದ ನಮಗೆ ದಾರಿ ನಾಲ್ಕು ಗಂಟೆ ತೆಗೆದುಕೊಂಡಿತು. ಇದನ್ನು ತಿಳಿದೇ ನಾವು ೧೧ ಗಂಟೆಗೆ ಮಡಿಕೇರಿಯಿಂದ ಹೊರಟಿದ್ದೆವು. ಶೇಷಯ್ಯ ಲಂಗುಲಗಾಮಿಲ್ಲದ ಕುದುರೆ. ಇನ್ನೊಬ್ಬ ಮಿತ್ರ ಪಟ್ಟು ಹಿಡಿದುನಿಂತ ಕತ್ತೆ. ಇವರ ಮಧ್ಯೆ ರಾವುತ ನಾನು. ಅಂತೂ ೩ ಗಂಟೆ ಅಪರಾಹ್ಣ ನಿಶಾನಿ ಮೊಟ್ಟೆಯ ಮೇಲೆ ಒಟ್ಟಾಗಿ ಸೇರಿದೆವು - ದಾರಿ ನನಗೆ ಮಾತ್ರ ಗೊತ್ತಿದ್ದುದರಿಂದ. ಅಲ್ಲಿಂದ ಸ್ವಲ್ಪ ಕಡಿದಾದ ಕಾಲುದಾರಿಯಲ್ಲಿ ೨೦೦೦ ಅಡಿಗಳಷ್ಟು ಆಚೆ ಮಗ್ಗುಲಿಗೆ ಇಳಿದು ತಪ್ಪಲು ಸೇರಿ ಮುಂದೆ ಸುಮಾರು ೫ ಮೈಲು ನಡೆದರೆ ಮಡಿಕೇರಿ-ಮಂಗಳೂರು ಬಸ್ ದಾರಿಯನ್ನು ಜೋಡುಪಾಲ ಎಂಬಲ್ಲಿ ತಲಪುತ್ತೇವೆ. ಅಲ್ಲಿಗೆ ಶ್ರೇಷ್ಠರ ಕಾರನ್ನು ಅವರ ಡ್ರೈವರ್ ತಂದಿರುತ್ತಾನೆ. ಅದನ್ನೇರಿ ನಾವು ಮಡಿಕೇರಿಗೆ ಮರಳುವುದು - ಇದು ಮುಂದಿನ ಯೋಜನೆ.


ನಿಶಾನಿಮೊಟ್ಟೆಯನ್ನು ಇಳಿಯಲು ತೊಡಗಿದೆವು! ದೂರದಲ್ಲಿ ಮಂಗಳೂರು ರಸ್ತೆ ಹೆಬ್ಬಾವು ಬಿದ್ದಂತೆ ಮಲಗಿದೆ. ಬಳಸುದಾರಿ ಶೇಷಯ್ಯನಿಗೆ ಇಷ್ಟವಾಗಲಿಲ್ಲ. ಪಾದರಸವನ್ನು ಕೆಣಕುವುದೇ ಶ್ರೇಷ್ಠನ ಹಿರಿಯ ಆಟ. ಶೇಷಯ್ಯ! ಈ ಒಳದಾರಿಯನ್ನು ನೀವೇಕೆ ಶೋಧಿಸಬಾರದು? ಅವರ ಪ್ರಶ್ನೆ.
ಜೀಟಿ! ಮಂಗಳೂರು ದಾರಿ ಇಲ್ಲಿಯೇ, ಕಾಲಕೆಳಗೆ ಕಾಣುತ್ತಿದೆ. ಬನ್ನಿ ಷಾರ್ಟ್ ಕಟ್ ಮಾಡೋಣ ಶೇಷಯ್ಯನೆಂದರು.
ಬೆಟ್ಟದ ಅನುಭವ ನಿಮಗಿಲ್ಲ. ಇಲ್ಲಿ ಷಾರ್ಟ್ ಕಟ್ ಮರಣಕ್ಕೆ ಸ್ಟ್ರೇಟ್ ಕಟ್, ಅಂದರೆ ಹಾರ್ಟ್ ಫಟ್ ಆಗಬಹುದು. ಗಂಟೆಯೂ ೩ ದಾಟಿದೆ. ನನ್ನ ಹಿಂದೆಯೇ ಬನ್ನಿ! ನಾನೆಂದೆ.
ಜೀಟಿ ಹೇಡಿ ಶ್ರೇಷ್ಠನ ಇನ್ನೊಂದು ಅಸ್ತ್ರ.
ಬೇಡ ಶೇಷಯ್ಯ ಪ್ರಭಾಚಂದ್ರ.
ಶೇಷಯ್ಯ ಸದಾ ಟಾಪ್‌ಗಿಯರ್, ಶ್ರೇಷ್ಠನ full accelerator ಜೊತೆಗೆ. ನೀವು ಬರದಿದ್ದರೆ ಬೇಡ. ನಾನು ನೋಡಿ ನಿಮಗಿಂತ ಮೊದಲು ಬಸ್ ದಾರಿ ತಲಪಿರುತ್ತೇನೆ. ಶೇಷಯ್ಯ ಧಡ ಧಡನೆ ದುಮುಕುತ್ತ ಇಳಿಯತೊಡಗಿದರು. ಈಗ ಶ್ರೇಷ್ಠನಿಗೂ ಗಾಬರಿಯಾಯಿತು.
ಬೇಡ ಬೇಡ. ಹಿಂದೆ ಬನ್ನಿ, ಮುಂದೆಂದಾದರೂ ನೋಡೋಣ ಎಂದು ಕೂಗಿದರು. ಎಷ್ಟು ಕೂಗಿದರೂ ಶೇಷಯ್ಯ ಹಿಂದೆ ಬಾರ, ರಾಮಬಾಣದಂತೆ.
ನಿಮಗೇಕೆ ಇಷ್ಟು ಹೆದರಿಕೆ? ಬನ್ನಿ ನನ್ನ ಹಿಂದೆ,ಮತ್ತೆ ಶೇಷಯ್ಯನ ಪಂಥಾಹ್ವಾನ.
ಹೆದರಿಕೆ ಧೈರ್ಯ ಪ್ರಶ್ನೆ ಇವಲ್ಲ. ಕೂಟದ ಶಿಸ್ತಿನ ವಿಚಾರ. ನಮ್ಮ ಜೊತೆಯಲ್ಲಿರುವಾಗ ನಿಮಗೆ ಪ್ರಾಣ ಕಳೆದುಕೊಳ್ಳುವ ಅಧಿಕಾರವಿಲ್ಲ. ನೀವು ಬರುತ್ತೀರೋ ಇಲ್ಲವೋ? ಎಂದು ತಾರಶ್ರುತಿಯಲ್ಲಿ ಅರಚಿದೆ.

ಆದರೆ ಪಾದರಸ ಓಡಲು ತೊಡಗಿದರೆ ಹಿಡಿಯಲು ಸಿಕ್ಕುವುದೇ? ಶೇಷಯ್ಯ ನಗು ನಗುತ್ತ ಇಳಿದಿಳಿದೇ ಹೋದರು. ಮುಂದಿನ ಕ್ಷಣ ನಾವೂ ಅವರೂ ಬೆಟ್ಟದ ಬೇರೆ ಬೇರೆ ಮೈಗಳಲ್ಲಿ ನಡೆಯುತ್ತಿದ್ದೆವು. ಮತ್ತೊಂದು ಹತ್ತು ಹೆಜ್ಜೆ ಮುಂದೆ ಹೋಗುವಾಗ ಅವರಿಗೂ ನಮಗೂ ಮಧ್ಯೆ ಬೆಟ್ಟದ ಉಬ್ಬು ಅಡ್ಡ ಬಂದಿತು. ಇನ್ನೊಂದು ಗಳಿಗೆ ಅವರು ನಮ್ಮ ದೃಷ್ಟಿಯಿಂದ ಮರೆಯಾದರು. ಏನು ಬಂತಪ್ಪಾ ಈ ಮಾರಾಯನಿಗೆ ಎಂದು ನಾವು ಚಿಂತೆಯಿಂದಲೇ ಮುಂದೆ ನಡೆಯುತ್ತಿದ್ದೆವು. ಅಷ್ಟರಲ್ಲಿಯೇ ಭಯಂಕರ ಚೀತ್ಕಾರ: ನಾರಾಯಣರಾವ್, ನಾರಾ... ಎಂದು ಬೆಟ್ಟದ ಯಾವುದೋ ಮೂಲೆಯಿಂದ ಕರ್ಕಶ ಧ್ವನಿ ತಿವಿದು ನಮ್ಮನ್ನು ಕದಡಿಬಿಟ್ಟಿತು. ನೀರೊಳಗೆ ಮುಳುಗಿ ಹೋಗುವವನ, ಹೆಬ್ಬಾವಿನ ಹಿಡಿತಕ್ಕೆ ಸಿಕ್ಕಿದವನ, ಹುಲಿಯಿಂದ ಅಪ್ಪಳಿಸಲ್ಪಟ್ಟವನ ಕರುಣಾಕ್ರಂದನವದು, ಹಾ ಲಕ್ಷ್ಮಣಾ!

ನಮಗೆ ದಿಗ್ಭ್ರಮೆಯಾಯಿತು. ನಿಶಾನಿಮೊಟ್ಟೆಯೇ ಒಡೆದಂತಾಯಿತು. ಶೇಷಯ್ಯಾ ಶೇಷಯ್ಯಾ ಎಂದು ತಾರ ಸ್ಥಾಯಿಯಲ್ಲಿ ಮೇಲೇರಿ ಕೆಳಗಿಳಿದು ಎಲ್ಲ ದಿಕ್ಕಿಗೆ ತಿರುಗಿ ಕಿರುಚಿದೆವು. ಕಾಡುಮೇಡುಗಳು ಕಣಿವೆ ತೆಮರುಗಳು ಮರುದನಿಗೈದವು - ಶೇಷಯ್ಯಾ. ಶೇಷಯ್ಯ ಇಲ್ಲ. ಶೇಷಯ್ಯ ಇಲ್ಲದೇ ಊರಿಗೆ ಮರಳುವುದು ಹೇಗೆ? ಇದೇನು ಅವಸ್ಥೆ ಒದಗಿತು. ಆಲೋಚನೆ ಮಾಡಲಾಗದೇ ಮಾತಾಡಲಾರದೇ ಮುಂದುವರಿಯಲಾಗದೇ ಶೂನ್ಯ ದೃಷ್ಟಿಯನ್ನು ಚೆಲ್ಲುತ್ತ ನಿಂತುಕೊಂಡೆವು. ಗಂಟೆ ೫ ಆಗಿತ್ತು. ಸೂರ್ಯ ಆಗಲೇ ದೂರದ ಬೆಟ್ಟದ ಹಿಂದೆ ಮರೆಯಾಗಿದ್ದ. ಕರಿನೆರಳು ಕರಾಳವಾಗಿ ದೌಷ್ಟ್ಯದ ಪ್ರತೀಕವಾಗಿ ಹರಡಿತ್ತು. ದಾರಿ ಇನ್ನೂ ನಾಲ್ಕು ಮೈಲಿದ್ದಿರಬಹುದು. ಮತ್ತೆ ಮುಂದಿನ ನಿರ್ಧಾರ ಕೈಗೊಂಡೆವು. ಅದರ ಪ್ರಕಾರ ನಾನೊಬ್ಬನೆ ಮುಂದೆ ಓಡಿ ಓಡಿ ಹೋಗಿ ದಾರಿ ಸೇರಬೇಕು. ಅಲ್ಲಿ ಶ್ರೇಷ್ಠನ ಕಾರಿನಲ್ಲಿ ಕುಳಿತು ಮಡಿಕೇರಿಗೆ ಹೋಗಿ ಜನ, ಲೈಟು, ಡಾಕ್ಟರರು, ಬೇಟೆಗಾರರು ಎಲ್ಲರನ್ನೂ ಕರೆತರಬೇಕು. ರಾತ್ರಿಯಿಡೀ ಆ ಭೀಕರ ಏಕಾಂತತೆಯಲ್ಲಿ ಶೇಷಯ್ಯನನ್ನು ಹುಡುಕಬೇಕು. ಉಳಿದವರು ಅಲ್ಲಿಯೇ ಒಬ್ಬರಿಗೊಬ್ಬರು ಕಾಣುವಷ್ಟು ದೂರದಲ್ಲಿ ಹರಡಿ ಕಾಲುದಾರಿಯಲ್ಲಿಯೇ ಮುಂದೆ ನಿಧಾನವಾಗಿ ಇಳಿಯುತ್ತ ಶೇಷಯ್ಯ ನಾಮಸ್ಮರಣೆ ಗಟ್ಟಿಯಾಗಿ ಮಾಡುತ್ತ ಅರಸುತ್ತ ಸಾಗಬೇಕು. ಬೆಟ್ಟದ ತಳದಲ್ಲಿ ಕುಳಿತಿರಬೇಕು - ನಾನು ಬರುವ ತನಕ.

ನಾನು ಒಂದು ಮೈಲು ಓಡಿದೆ. ಓಡಿದೆನೋ ಹಾರಿದೆನೋ ಅಂತೂ ಬೆಟ್ಟದ ಬುಡಕ್ಕೆ ಬಂದಿದ್ದೆ. ಅಷ್ಟರಲ್ಲಿಯೇ ದೂರದ ಕಣಿವೆಯಿಂದ ಕೇಕೆ ಹಾಕಿ ಕರೆಯುತ್ತಿದ್ದಾರೆ ಶೇಷಯ್ಯ, ನಾ ಫಸ್ಟು! ಪಂಥದಲ್ಲಿ ಅವರು ಗೆದ್ದದ್ದು ನಿಜ. ಹತ್ತಿರ ಹೋಗಿ ನೋಡಿದೆ: ಮೈ ಕೈ ತೀರ ಗಾಯ, ಕೆಸರು. ಬಟ್ಟೆ ಹರಿದು ಹೋಗಿದೆ. ಆ ಗಳಿಗೆಯಲ್ಲಿ ಮೊದಲ ಭಾವ ಎಲಾ ಪ್ರಾಣೀ ಎನ್ನುವ ತಿರಸ್ಕಾರ. ಕೂಡಲೇ ಅಮಿತ ಸಂತೋಷ. ಈ ತುಮುಲಗಳ ನಡುವೆ ನನಗೆ ಮಾತೇ ಹೊರಡಲಿಲ್ಲ. ಅಂತೂ ಅವರು ಶೇಷಯ್ಯ ಹೌದೆಂದು ಸಮೀಪದಿಂದ ಖಚಿತವಾದ ಮೇಲೆ, ಏನು ನಿಮ್ಮ ಕತೆ? ಬಹಳ ಹೆದರಿಸಿ ಬಿಟ್ಟಿರಪ್ಪ ಎಂದು ನಿಟ್ಟುಸಿರು ಬಿಟ್ಟೆ.

ನಾನು ನಿಮ್ಮಿಂದ ಮುಂದೆ ಇಳಿದಂತೆ ಆ ಬೆಟ್ಟ ನನ್ನನ್ನು ಜೋರು ಜೋರಾಗಿ ನೂಕತೊಡಗಿತು. ನಡೆಯುವುದು ಕಷ್ಟವಾಗಿ ಓಡತೊಡಗಿದೆ. ಮುಂದೆ ಆಳೆರಡೆತ್ತರ ಹುಲ್ಲು ರಾಶಿಯೊಳಗೆ ಸಿಕ್ಕಿಹಾಕಿಕೊಂಡು ದಿಕ್ಕು ತಪ್ಪಿಹೋಯಿತು. ಅಂತೂ ಕೆಳಗೆ ಕೆಳಗೆಂದು ಕಾಲು ಹಾಕಿದೆ. ಒಂದೆಡೆ ಕಾಲಿಟ್ಟೆ - ಧಡೀರನೆ ಕುಸಿದು ಜಾರಿ ಪಾತಾಳಕ್ಕೆ ಬಿದ್ದೆ. ಆಗಲೇ ನಿಮ್ಮ ಹೆಸರನ್ನು ಕೂಗಿ ಕರೆದದ್ದು. ಆ ಆಳದಲ್ಲಿ ನೀರು ಕೆಸರು ಕೊಳೆತ ಎಲೆ ತುಂಬಿದ್ದುದರಿಂದಲೂ ಜಾರಿದ ಪ್ರಪಾತದ ಮೈ ಎಲ್ಲ ಹುಲ್ಲೇ ಮುಚ್ಚಿದ್ದುದರಿಂದಲೂ ನನಗೇನೂ ಅಪಾಯವಾಗಲಿಲ್ಲ. ನಾನೊಂದು ದಟ್ಟವಾದ ಕಾಡಿನ ಬುಡದಲ್ಲಿ ಬಿದ್ದಿದ್ದೆ. ಮೇಲೆ ನೋಡಿದರೆ ೩೦ ಅಡಿಯಾದರೂ ನಾನು ಕುಸಿದಿರಬೇಕೆಂದು ತೋರಿತು. ಪೂರ್ಣ ಕತ್ತಲೆ, ದಾರಿ ಎಲ್ಲಿಯೂ ಇಲ್ಲ. ನೀರು ಯಾವ ಕಡೆ ಹರಿಯುತ್ತಿದೆ ಎಂದು ಕೈಯಿಂದ ಪರಡಿ ತಡವಿ ಪರಿಶೀಲಿಸಿದೆ. ಅದರ ಗತಿಯ ಕಡೆಗೆ ತೆವಳಿ ಹರಿದು ಗಿಡಗಳನ್ನು ಮುರಿದು ಮುಂದುವರಿದೆ. ಹೀಗೆ ಎಷ್ಟೋ ಹೊತ್ತು ಸರಿಯುವಾಗ ಕಾಡಿನಿಂದ ಹೊರಗೆ ಬಂದೆ ಮತ್ತೆ ಇಲ್ಲಿಗೆ ತಲಪಿದೆ. ಇಲ್ಲಿಯ ಕಾಲ್ದಾರಿ ಎಲ್ಲ ನೋಡಿ ನೀವಿಲ್ಲಿಗೆ ಬಂದೇ ಬರುವಿರಿ ಎಂದು ಇಲ್ಲಿಯೇ ನಿಂತೆ!

ಇನ್ನು ಕುದುರೆಮುಖದೆಡೆಗೆ ಮರಳೋಣ
ಅಧ್ಯಾಯ ಐವತ್ತೈದು

ಕುದುರೆಮುಖದ ಶಿಖರದೆಡೆಗೆ ಸೀದಾ ನಡೆಯಲು ಅಡ್ಡ ತಿರುಗಿದವನು ಕಾವೇರಿಯಪ್ಪ. ಇವನು ಕೊಡಗಿನ ಚತುರ. ನಮ್ಮ ತಂಡದ ಮೂಕ ಸದಸ್ಯ. ಇವನಾಯಿತು, ಇವನ ಕೆಲಸವಾಯಿತು. ಒಳ್ಳೆಯ ಶಿಸ್ತುಗಾರ, ದಕ್ಷ, ಸಮರ್ಥ. ಇವನನ್ನು ಹುಡುಗರು ಬ್ರಹ್ಮಗಿರಿ ಎಂದು ಸಾರ್ಥಕವಾಗಿ ಕರೆಯುತ್ತಿದ್ದರು. ಕುದುರೆಮುಖ ಇವನಿಗೆ ತವರ್ಮನೆ ಇದ್ದ ಹಾಗೆ. ಅದರ ಶ್ರೇಣಿಗೆ ಬಂದೊಡನೆ ನೇರದಾರಿ ತುಳಿದ. ಹಿಂದೆ ನೋಡಲಿಲ್ಲ. ಮೇಲೆ ನೋಡಲಿಲ್ಲ. ಹುಳು ಗೋಡೆಯ ಮೇಲೆ ಹರಿವಂತೆ ಏರತೊಡಗಿದ. ಲಕ್ಷ್ಮಿ, ಶ್ರೀಧರನ್, ಪಿಂಟೋ ಮೊದಲಾದವರು ಅವನ ಹಿಂದೆ ಹೊರಟರು. ಉಳಿದವರು ಬಲು ಹಿಂದೆ ಬಿದ್ದರು. ನಾನು ಎಲ್ಲರಿಗಿಂತಲೂ ಹಿಂದೆ ಇದ್ದರೂ ಇಡೀ ದೃಶ್ಯ ನನ್ನೆದುರು ಪ್ರಕಾಶಕ್ಕೆ ಬರುವಂತಿತ್ತು. ಸಿನಿಮಾ ಚಿತ್ರಪಟದ ಮೇಲೆ ಘಟನಾಪರಂಪರೆಗಳು ನಡೆಯುವಂತೆ. ಮೆಂಗಿಲಶೇಣವನ ಹಿಂದೆ ನಡೆದವರೂ ಸಾಕಷ್ಟು ಮಂದಿ. ಹಿಂದೆ ಇದ್ದ ನಾನು (ಪ್ರಾಯ ೪೨) ಯಾವ ದಾರಿಯಲ್ಲಿ ನಡೆಯಬೇಕು? ಸಂದಿಗ್ಧ ಪರಿಸ್ಥಿತಿ, ಪಕ್ವ ಪ್ರಾಯದ ಅನುಭವದ ದಾರಿಯೇ? ತರುಣ ಧಮನಿಯ ದಿಟ್ಟತನದ ಹಾದಿಯೇ? ಶಿಸ್ತಿನ ಪಥವೇ? ಸಾಹಸದ ನೂತನ ಮಾರ್ಗವೇ? ಇಂಥಲ್ಲೆಲ್ಲ ನಮ್ಮ ಗುರಿಯ ಸಾಧನೆ ಮುಖ್ಯ. ಗುರಿ ಎಂದರೆ ಕೊಡಿ ತಲಪುವುದು. ಆದ್ದರಿಂದ ನೇರ ದಾರಿಯೇ ಸರಿ ಎಂದು ನಾನೂ ಎಡಕ್ಕೆ ತಿರುಗಿದೆ. ಹುಡುಗರಾಗಲೇ ಶ್ರೇಣಿಯ ಅಂಚು ತಲಪಿ ಮರೆಯಾಗಿದ್ದರು. ಈಗ ಶಿಖರ ಕಾಣುತ್ತಿಲ್ಲ. ಮೇಲೆ ನೋಡಿದಷ್ಟು ಎತ್ತರಕ್ಕೆ ಕಲ್ಲು, ಮಣ್ಣು, ಜೊಂಡುಗಳ ರಾಶಿ. ಹಿಂದೆ ನೋಡುವಂತಿಲ್ಲ. ಹತ್ತಿದಷ್ಟೂ ಮುಗಿಯದು. ಒಂದುಹೆಜ್ಜೆಗೆ ಒಂದು ಚಮಚ ಬೆವರಿನಂತೆ ಹರಿದು ಮೈ ಎಲ್ಲ ಒದ್ದೆ. ದಾರಿ ತಪ್ಪಿ ಹೋಯಿತೇ? ಬೇರೆಲ್ಲಿಗಾದರೂ ಏರುತ್ತಿರುವೆನೇ? ಗಂಟೆ ೪.೩೦ ದಾಟಿತ್ತು. ಆದ್ದರಿಂದ ಅಪಾಯವೇನೂ ಇಲ್ಲ. ನಾನು ನೆಲದವರೆಗೆ ಬಗ್ಗಿ ತೆವಳುತ್ತಿದ್ದೆ. ಇದ್ದಕ್ಕಿದ್ದಂತೆ ಕುರುಡನಿಗೆ ಕಣ್ಣು ಬಂದರೆ ಆಗಬಹುದಾದಂಥ ಅನುಭವ. ಎಲ್ಲೆಲ್ಲಿಯೂ ಬೆಳಕಿನ ಕಡಲು. ವಿಶಾಲ ವಿಶ್ವ ನೋಡನೋಡುತ್ತಿದ್ದಂತೆಯೇ ತೆರೆ ತೆರೆಯುತ್ತ ವಿಸ್ತಾರವಾಗಿ ಹರಡಿ ಹೋಯಿತು. ಆ ಮೊದಲೇ ತಲಪಿದ್ದ ಹುಡುಗರು ಜಯ ಘೋಷಣೆ ಮಾಡಿದರು. ೧೨ನೇ ಮೈಸೂರು ಈಗ ಅಧಿಕೃತವಾಗಿ ಕುದುರೆಮುಖದ ಹೆಬ್ಬಂಡೆಯ ಮೇಲೆ ಜಯಭೇರಿ ಬಾರಿಸಿತು! ಆ ಗಳಿಗೆಯಲ್ಲಿ ಭಾವಪಾರವಶ್ಯದಿಂದ ಮನಸ್ಸಿನಲ್ಲಿ ಯೋಚನೆ ಕೈದಾಯಿತು. ೬೨೫೭ ಅಡಿ ಎತ್ತರದ ಮೇಲೆ ನಾವಿದ್ದೆವು. ಆ ಮಹೌನ್ನತ್ಯ ನಮಗೆ ಮಣಿದಿತ್ತು ಎನ್ನುವುದು ದಾರ್ಷ್ಟ್ಯದ ಮಾತು. ನಾವದನ್ನು ಸಮರ್ಥ ಪ್ರಯತ್ನದಿಂದ ಸಾಧಿಸಿದ್ದೆವು. ಅಲ್ಲಿ ಮೂಡಿದ ಭಾವ ಒಂದು ವಿಧದ ಸಮಾಧಿ ಸ್ಥಿತಿ. ಅಲ್ಲಿಗೆ ಹೋಗಿ ಅದನ್ನು ಅನುಭವಿಸಬೇಕೇ ವಿನಾ ಅಲ್ಲಿಂದ ಹಿಂತಿರುಗಿದ ನಮ್ಮ ಕೆಳಗಿನ ಮಟ್ಟದಲ್ಲಿ ಕಲ್ಪನಾದಾರಿದ್ರ್ಯ ಮುಸುಕಿದಾಗಿನ ವಿವರಣೆಯಿಂದಲ್ಲ. ವಾಸ್ತವತೆಯ ಮೂಕಾಶ್ಚರ್ಯಗಳ ಪ್ರತಿಬಿಂಬ ಸಾಹಿತ್ಯವಾಗುವುದು ಸಾಧ್ಯವಿಲ್ಲ. ನಾವು ಅಲ್ಲಿ ಕುಳಿತು ಭಾವೋದ್ವೇಗದಲ್ಲಿ ಅನಂತವನ್ನು ಅಳೆಯಲು ಪ್ರಯತ್ನಿಸುತ್ತಿದ್ದೆವು. ನಮ್ಮ ದೃಗನುಭವಗಳ ಮಿತಿಯಿಂದ ಅನಂತವು ಮಿತಿಗೆ ಒಳಪಡುತ್ತಿತ್ತೇ ವಿನಾ ಅನಂತದ ಸ್ವಾಭಾವಿಕ ಗುಣದಿಂದಲ್ಲ. ನಡೆದು ಬಂದ ದಾರಿ ದೂರದ ಕಣಿವೆಯಲ್ಲಿ ನುಸುಳಿ ಮಸಳಿ ಮಾಯವಾಗಿತ್ತು. ಎರಡು ದಿವಸಗಳಾ ಹಿಂದ ನಾವು ಏರಿದ್ದ ಬಂಡೆ, ಎಷ್ಟು ದೊಡ್ಡ ಗುಂಡುಕಲ್ಲು ಬಂಡೆ ಎಂದು ನಮಗೆ ಭಾವನೆ ತರಿಸಿದ್ದ ಜಮಾಲಾಬಾದ್, ಈಗ ಪ್ರಯಾಸದಿಂದ ಕಾಣಬಹುದಾದ ಮಣ್ಣು ಹೆಂಟೆಯಾಗಿತ್ತು. ಔನ್ನತ್ಯದ ಮಹಿಮೆಯೇ ಇದು. ಸಾಹಸದಿಂದ ಅದನ್ನೇರಿ ಅದರಲ್ಲಿ ಒಂದಾದರೆ ನಾವೂ ಹಿರಿಯರಾಗುತ್ತೇವೆ. ಅಲ್ಲಿ ಮೂಡುವುದು ಸಮರ್ಪಣ ಭಾವ. ನಾವು ಇವನ್ನು ಸಾಧಿಸಿದೆವು ಎಂದು ಅನ್ನಿಸುವುದಿಲ್ಲ - ಈ ಔನ್ನತ್ಯದ ಚೇತನ ನಮ್ಮನ್ನು ಅಲ್ಲಿಗೆ ಆಕರ್ಷಿಸಿ ಬರಸೆಳೆಯಿತು ಎಂದೆನ್ನಿಸುವುದು. ದೃಷ್ಟಿದಿಗಂತ ವಿಸ್ತಾರವಾಗುವುದು.

ಮರುಕ್ಷಣ ಉಳಿದವರ ಚಿಂತೆ. ದೂರದರ್ಶಿಯಿಂದ ನೋಡಿದರೆ ಅವರ ಸುಳಿವು ಎಲ್ಲಿಯೂ ಕಾಣುವುದಿಲ್ಲ. ಮೆಂಗಿಲ ಶೇಣವ, ಅಡುಗೆಯವರು, ಸೇವಕರು, ೧೭ ಕ್ಯಾಡೆಟ್ಟುಗಳು ಮತ್ತು ಶಿವಪ್ಪ ಆ ತಂಡದಲ್ಲಿದ್ದುದರಿಂದ ನಾವೇ ಮೈನಾರಿಟಿಯಲ್ಲಿದ್ದೆವು. ಅಲ್ಲದೇ ನಾವು ಉಳಿದುಕೊಳ್ಳಬೇಕಾದ ಪ್ರದೇಶ ಆ ಕಡೆ ಎಲ್ಲೋ ಇದೆ ಎಂದು ಹಿಂದಿನ ಅನುಭವದಿಂದ ತಿಳಿದಿತ್ತು. ನಾವು ಕುಳಿತಿದ್ದ ಬಂಡೆಯಷ್ಟೇ ಅಥವಾ ಅದಕ್ಕಿಂತ ಸ್ವಲ್ಪ ಎತ್ತರವಾದ ಇನ್ನೆರಡು ಶಿಖರಗಳು ನಮಗೆ ಸಮೀಪದಲ್ಲೇ ಇದ್ದುವು. ದಿಟ್ಟಿಸಿ ನೋಡುತ್ತಿದ್ದಂತೆಯೇ ಅವು ನಮಗಿಂತ ಎತ್ತರವೆಂಬ ಭಾವನೆ ದೃಢವಾಯಿತು. ಹಾಗಾದರೆ ನಾವು ಏರಿದ್ದು ಕೃತ್ರಿಮ ಕುದುರೆಮುಖವೇ? ಶೇಣವನ ತಂಡ ಕಾಡನ್ನು ಸುತ್ತುವರಿದು ನಮಗಿಂತ ಮೊದಲೇ ಅಲ್ಲಿಗೇ ತಲಪಿರಬಹುದೇ? ಆಚೆ ಕಡೆಯ ಮೈಯ್ಯಲ್ಲಿ ಬರುತ್ತಿರುವರೋ ಏನೋ? ನಮ್ಮ ಕಾವೇರಿಯಪ್ಪ, ಮೋಹನ ಅಲ್ಲಿಗೆ ಧಾವಿಸಿದರು. ಆದರೆ ನೂರು ಇನ್ನೂರು ಅಡಿ ಇಳಿದು ಮತ್ತೆ ಅಷ್ಟೇ ಹತ್ತಬೇಕಾದ ಪ್ರಮೇಯ. ಅವರಿಗೆ ಆ ದೂರ ತಲಪಲು ೨೦ ಮಿನಿಟು ಬೇಕಾಯಿತು. ಕಾಣಲು ಇಷ್ಟು ಹತ್ತಿರ, ನಡೆದರೆ ಅಷ್ಟು ದೂರ, ಬೆಟ್ಟಗಳ ಅವಸ್ಥೆಯೇ ಹೀಗೆ.

ಮುಂದೆ ಸ್ವಲ್ಪ ಹೊತ್ತಿನಲ್ಲಿ ನಾವು ಕುಳಿತಿದ್ದ ಬಂಡೆಯ ಶ್ರೇಣಿಯಲ್ಲಿ ದೂರದ ತಗ್ಗಿನಿಂದ ಪರ್ವತರೇಖೆಯನ್ನು ಆ ಕಡೆಯಿಂದ ಈ ಕಡೆಗೆ ದಾಟಿ ಕೆಲವರು ಹರಿಯುತ್ತಿರುವುದು ಕಂಡಿತು - ಬಿಳಿ ಚುಕ್ಕಿಗಳ ಚಲನೆ ಮಾತ್ರ ಗುರುತಿಸಿದೆವು. ದೂರದರ್ಶಿಯಿಂದ ನೋಡಿದಾಗ ಶೇಣವನನ್ನು ಕಂಡು ಧೈರ್ಯವಾಯಿತು. ಹಿಂದೆ ಹುಡುಗರೂ ಇದ್ದರು. ಅವರು ಯಾರೂ ಗಂಟು ಹೊತ್ತಿರಲಿಲ್ಲ. ಆದ್ದರಿಂದ ಆ ತಗ್ಗಿನಲ್ಲಿಯೇ ನಾವು ತಂಗಬೇಕಾದ ಪ್ರದೇಶವಿದೆ ಎಂದು ಖಾತ್ರಿಯಾಯಿತು. ನಾವು ಅವರೆಡೆಗೆ ಓಡಲು ತೊಡಗಿದೆವು. ಅಂದರೆ ಕುದುರೆ ಮುಖದ ಕತ್ತಿನಮೇಲೆ ನಿಬಿಡಾರಣ್ಯದ (ಅಯಾಲು) ಅಂಚಿನಲ್ಲಿ ಇಳಿದೆವು.

ಹ್ಞಾ! ನಾವು ಬಂಗ್ಲೆಗೆ ಹೋಗಿ ಟೀ ಕಾಯಿಸಲು ಏರ್ಪಾಡು ಮಾಡಿ ನೀವೆಲ್ಲಿದ್ದೀರೆಂದು ಹುಡುಕಲು ಬಂದದ್ದು! ೬೦೦೦ ಅಡಿ ಎತ್ತರದಲ್ಲಿಯೂ ಶೇಣವನಿಗೆ ಅದೇ ಹುರುಪು, ಅದೇ ಮಿಂಚು, ಅದೇ ಆತ್ಮೀಯತೆ. ಎಲ್ಲರೂ ಅಲ್ಲಿಗೆ ನಡೆದೆವು. ಶಿಖರದಿಂದ ಮುಕ್ಕಾಲು ಮೈಲು ದೂರದಲ್ಲಿ, ಸುಮಾರು ೫೦೦ ಅಡಿ ತಗ್ಗಿನಲ್ಲಿ ಬಂಗ್ಲೆಗಳ ಭಗ್ನಾವಶೇಷಗಳಿವೆ. ೨೦ನೆಯ ಶತಮಾನದ ತರುಣದಲ್ಲಿ ಮಂಗಳೂರಿನಲ್ಲಿರುತ್ತಿದ್ದ ವಿದೇಶೀ ಪಾದ್ರಿಗಳು ಬೇಸಗೆಯಲ್ಲಿ ಬಂದು ತಂಗಲು ಅಲ್ಲಿ ಬಂಗ್ಲೆಗಳನ್ನೂ ಪ್ರಾರ್ಥನೆಗಾಗಿ ಇಗರ್ಜಿಯನ್ನೂ ಕಟ್ಟಿಸಿದ್ದರು. ಮಂಗಳೂರು ಇಟ್ಟಿಗೆ, ಹಂಚು, ಮರದ ಭಾರೀ ತೊಲೆಗಳಿಂದ ಸುಭದ್ರವಾಗಿ ಅವನ್ನು ರಚಿಸಿದ್ದರಂತೆ. ನಾನು ಹತ್ತು ವರ್ಷಗಳ ಹಿಂದೆ ಹೋಗಿದ್ದಾಗ ಇಗರ್ಜಿಯ ಗೋಡೆಯ ಮೇಲೆ ಏಸುಕ್ರಿಸ್ತನ ಅವತಾರ ಸಂಬಂಧವಾದ ವಿವಿಧ ತೈಲ ಚಿತ್ರಗಳನ್ನು ನೋಡಿ ವಿಸ್ಮಿತನಾಗಿದ್ದೆ. ಅವರ ಸೌಂದರ್ಯ ದೃಷ್ಟಿ ಮತ್ತು ಸಾಹಸ ಪ್ರಿಯತೆ ನಿಜವಾಗಿಯೂ ಶ್ಲಾಘನೀಯ. ಏಕಾಂತವಾಗಿ ನಿಸರ್ಗದಲ್ಲಿ ತನ್ಮಯತೆ ಹೊಂದುವುದರಲ್ಲಿ ಮಹದಾನಂದವನ್ನು ಅವರು ಪಡೆಯುತ್ತಿದ್ದರು. ಮೆಂಗಿಲ ಶೇಣವನ ಹೇಳಿಕೆಯ ಪ್ರಕಾರ ೧೯೩೦ರಿಂದೀಚೆಗೆ ವಿದೇಶೀ ಪಾದ್ರಿಗಳು ಬರಲಿಲ್ಲ. ದೇಶೀ ಪಾದ್ರಿಗಳಿಗೆ ಇದು ಬೇಕಾಗಲಿಲ್ಲ. ಬಂಗ್ಲೆಗಳು ಹಾಳುಬಿದ್ದುವು. ಗಾಳಿ, ಮಳೆ, ಕಾಡುಬೆಂಕಿ ಎಂಬ ನೈಸರ್ಗಿಕ ವಿಘಾತಕ ಶಕ್ತಿಗಳು ಒಂದು ಕಡೆ. ಅಪೂರ್ವಕ್ಕೆ ಬರುತ್ತಿದ್ದವರ ಸ್ವಂತ ಹಿತಸಾಧನೆಯ ನಾಶಕೃತ್ಯ ಇನ್ನೊಂದು ಕಡೆ; ಆ ಕಾಡಿನ ನಡುವೆಯೂ ಇವರಿಗೆ ಬೆಂಕಿ ಮಾಡಲು ಸಿಕ್ಕಿದ್ದು ಮರದ ತೊಲೆಗಳು. ಬೆಂಕಿ ಮಾಡಿದ್ದು ನೆಲ ಹಾಸಿನ ಮೇಲೆ. ಇವುಗಳಿಂದ ಹತಿಗೊಂಡ ಮೇಲೆ ಉಳಿದಿದ್ದೇನು? ಹಾಳುಗರೆಯುತ್ತ ಹಾಮಾಸು ಹಿಡಿದಿರುವ ತುಂಡು ಗೋಡೆಗಳು. ಚದರಿ ಬಿದ್ದಿರುವ ಇಟ್ಟಿಗೆಯ ತುಂಡುಗಳು. ಬಂಗ್ಲೆಗಳ ನೆಲವನ್ನೂ ಅಡಿಪಾಯವನ್ನೂ ಕಾಡು ಕಬಳಿಸಿವೆ. ಹೀಗಾಗಿ ಅಲ್ಲಿ ಕೂರಲು ಸಹ ಸಾಧ್ಯವಿಲ್ಲ. ಅಂಗಳದ ಅವಸ್ಥೆ ಇನ್ನೂ ಕಠಿಣ - ನೊಜೆ ಹುಲ್ಲಿನ ದೊಡ್ಡ ದೊಡ್ಡ ದಿಂಡುಗಳು ಬೆಳೆದಿದ್ದುದರಿಂದ ಅಲ್ಲಿ ಕೂರುವುದು ಅಥವಾ ಮಲಗುವುದು ಕಲ್ಲು ರಾಶಿಯ ಮೇಲೆ ಕುಳಿತಷ್ಟೇ ಸುಖ! ಆದರೂ ನಮ್ಮ ಶೇಣವನ ಪಂಗಡ ಅಲ್ಲಿಯೇ ಬಂದು ಬೀಡುಬಿಟ್ಟಿತ್ತು - ನ್ಯಾಯವೇ, ನಿರ್ಧಾರವನ್ನು ತೆಗೆದುಕೊಳ್ಳಬೇಕಾದವ ನಾನಾದ್ದರಿಂದ ತಾತ್ಕಾಲಿಕವಾಗಿ ಹೊರೆಯನ್ನು ಅಲ್ಲಿ ಇಳಿಸಿ ಅಲ್ಲಿಯೇ ಚಹಾ ಕಾಸಲು ಏರ್ಪಾಡು ಮುಂದುವರಿದಿತ್ತು. ಹರೂನ್ ಮತ್ತು ಅಡುಗೆಯವರು ಸೇರಿ ಕೆಳಗಿನ ಒಂದು ಫರ್ಲಾಂಗ್ ದೂರದ ತೊರೆಯಿಂದ ನೀರು ತರಿಸಿ ಟೀ ಮಾಡಿಟ್ಟಿದ್ದರು. ಕುಡಿಯುವಷ್ಟು ಚಹಾ, ತಿನ್ನುವಷ್ಟು ಮೈಸೂರುಪಾಕ, ಬಾದುಶಾ, ಚೌಚೌ. ಅವುಗಳ ರುಚಿ ಕುದುರೆಮುಖದ ಶಿಖರದ ಮೇಲಿನ ಪ್ರಥಮಾನುಭವದಷ್ಟೆ ಮಧುರವಾದದ್ದು. ಮುಂದಿನ ನಿರ್ಧಾರ? ಆ ಅಂಗಳದಲ್ಲಿ ನೆಲೆಯೂರುವುದು ಸಾಧ್ಯವಿಲ್ಲ. ನೀರು ತರುವುದೊಂದು ರಾಜಸೂಯವೇ. ಎಂದೇ ಎಲ್ಲಿ ನೀರಿನ ಸೆಲೆಯಿದೆಯೋ ಅಲ್ಲಿ ನಮ್ಮ ನೆಲೆವನೆ ಎಂದು ನಿಶ್ಚೈಸಿ ಅಲ್ಲಿಂದ ಗಂಟುಮೂಟೆ ಕಿತ್ತುಕೊಂಡು ಕೆಳಗಿಳಿದೆವು.

ಕುದುರೆಮುಖದ ಪರ್ಣ ಕುಟೀರ
ಅಧ್ಯಾಯ ಐವತ್ತಾರು

ನಾವೀಗ ಕುದುರೆಮುಖ ಶ್ರೇಣಿಯ ವನರಾಶಿಯ ಮಗ್ಗುಲಿನ ಇಳಿಜಾರಿನಲ್ಲಿದ್ದೇವೆ. ನಮಗೂ ಶಿಖರಕ್ಕೂ ನಡುವೆ ಗೊಂಡಾರಣ್ಯ ಬೆಳೆದಿದೆ. ಕುದುರೆಮುಖ ಆಚೆ ಮಗ್ಗುಲಲ್ಲಿ (ನಾವು ಏರಿಬಂದ ವಲಯ) ಒಂದು ಚಿಕ್ಕ ಗಿಡವೂ ಇಲ್ಲ. ಈಚೆ ಮಗ್ಗುಲಲ್ಲಿ ಗೊಂಡಾರಣ್ಯ! ಕಾರಣವಿಷ್ಟೇ - ಆಚೆ ಮಗ್ಗುಲಲ್ಲಿ ಗಾಳಿ ಬೆಂಕಿಗಳ ಹೊಡೆತ ವಿಪರೀತ. ಹಾಗಾಗಿ ಬೆಳೆಯುವ ಸಸ್ಯ ಒಂದೇ, ನೊಜೆಹುಲ್ಲು. ನಿಜ, ಹುಲ್ಲಾಗು ಬೆಟ್ಟದಡಿ!

ಕುರುಚಲು ಗಿಡಗಳನ್ನು ನಿವಾರಿಸಿಕೊಂಡು ಕೆಳಗೆ ಇಳಿದಂತೆ ದೊಡ್ಡದೊಂದು ಗೊಸರು ಭೂಮಿ. ಅದನ್ನಿಡೀ ನೊಜೆ ಹುಲ್ಲಿನ ದಿಂಡುಗಳು ಆಕ್ರಮಿಸಿವೆ. ಇದರ ದೂರದ ಅಂಚು ಗೊಂಡಾರಣ್ಯ. ಅಲ್ಲೇ ಒಂದು ಕಿರುತೊರೆ ಕುಪ್ಪಳಿಸಿ ದಾಟಿದೆವು. ಅದು (ನಮ್ಮ ಎಡಗಡೆಯ) ಕುದುರೆಮುಖ ಶಿಖರದಲ್ಲಿ ಹುಟ್ಟಿ ಕಾಡಿನೆಡೆಗಾಗಿ ಹರಿದುಬರುತ್ತಿದ್ದ ತೀರ್ಥ. ಅದರ ದಂಡೆಯಲ್ಲಿ ನೂರು ಜನ ಸುಖವಾಗಿ ಕೂರುವಷ್ಟು ವಿಶಾಲವಾದ ಹಾಸುಗಲ್ಲು ಹಬ್ಬಿತ್ತು. ಇದರಿಂದ ಮುಂದೆ ದಿಬ್ಬದಲ್ಲಿ ಯಾರೋ ಪುಣ್ಯಾತ್ಮರು ಹಿಂದೆ ಬಂದಿದ್ದವರು, ಕಡಿದು ಸಿದ್ಧಪಡಿಸಿದ್ದ ಮಣ್ಣಿನ ವಿಶಾಲವಾದ ಎರಡೆರಡು ವೇದಿಕೆಗಳು. ಇವನ್ನು ಆವರಿಸುವಂತೆ ಬೆಳೆದಿರುವ ಕಾಡು ಮರಗಳು! ಬಂಡೆ ಕಲ್ಲು ಮತ್ತು ಮಣ್ಣಿನ ವೇದಿಕೆಗಳ ಮೇಲೆ ಮರಗಳ ಕೊಂಬೆಗಳು ನಿಬಿಡವಾಗಿ ಹರಡಿ ನೈಸರ್ಗಿಕ ಮಾಡನ್ನು ನಿರ್ಮಿಸಿದ್ದವು. ನೀರು, ಅದರ ಪಕ್ಕದಲ್ಲಿ ಕುಳಿತು ಮಜಾ ಮಾಡಲು ಹಾಸುಗಲ್ಲು, ಅದರ ಇನ್ನೊಂದು ಬದಿಯಲ್ಲಿ ತಂಗಲು ಪರ್ಣಕುಟೀರ - ಬೇರೇನು ಬೇಕು? ಹಿಂದೆ ಬಂದವರು ಆ ವೇದಿಕೆಗಳ ಮೇಲೆ ಬೇಕಾದಷ್ಟು ನೊಜೆ ಹುಲ್ಲನ್ನು ಕೊಯ್ದು ಹಾಸಿದ್ದರು. ಹೀಗಾಗಿ ನಮಗೆಲ್ಲ ಸುಪ್ಪತ್ತಿಗೆಯ ಸೌಭಾಗ್ಯವೂ ಲಭಿಸಿತು. ನೀರಂಚಿನಲ್ಲಿ ಒಲೆ ಹೂಡಿದೆವು. ಅಲ್ಲಿಯೇ ಸಮೀಪದಲ್ಲಿ ಉಗ್ರಾಣ ಸ್ಥಾಪಿಸಿದೆವು. ಬೆಟ್ಟವನ್ನೇರುವ ಮೊದಲು ಪಟ್ಟಿಯ ಪ್ರಕಾರ ಕೊಟ್ಟಿದ್ದ ಸಾಮಗ್ರಿಗಳೆಲ್ಲವನ್ನೂ ಅದೇ ಪ್ರಕಾರ ಹಿಂದೆ ಪಡೆದು ಶೇಖರಿಸಿದೆವು. ಸಾಮೂಹಿಕವಾಗಿ ನಿರ್ವಹಿಸುವ ಯಾವ ಚಟುವಟಿಕೆಯಲ್ಲಿಯೂ ವೈಯಕ್ತಿಕವಾದ ಹೊಣೆಗಾರಿಕೆಯನ್ನು ಸ್ಪಷ್ಟವಾಗಿ ಮೊದಲೇ ವಿಧಿಸದಿದ್ದರೆ ಕಠಿಣ ಸನ್ನಿವೇಶ ಒದಗಿ ಬಂದಾಗ ಎಲ್ಲರೂ ಧರ್ಮಾರ್ಥ ವಿಪುಲ ಸೂಚನೆ ನೀಡುವವರೇ. ಎಲ್ಲರೂ ಮನಸ್ಸಿನಲ್ಲಿ ಮುಂದಾಳುವನ್ನು ಶಪಿಸುವವರೇ, ಪಟ್ಟಿಯನ್ನು ಮಾಡದೇ ಸಾಮಗ್ರಿಗಳನ್ನು ಹಾಗೆಯೇ ಕೈಗೆ ಬಂದಂತೆ ಹುಡುಗರ ಬೆನ್ನಮೇಲೆ ಹೇರಿದ್ದಿದ್ದರೆ, ಮೊದಲನೆಯದಾಗಿ ಭಾರದ ಸಮವಾದ ಹಂಚುವಿಕೆ ಆಗಿರುತ್ತಿರಲಿಲ್ಲ. ಇದರಿಂದ ಹೆಚ್ಚು ಭಾರ ಹೊರಬೇಕಾದವರಲ್ಲಿ ಅತೃಪ್ತಿ ಮೂಡಿರುತ್ತಿತ್ತು. ಎರಡನೆಯದಾಗಿ ಬಿಸ್ಕೆಟ್, ಕಿತ್ತಳೆಹಣ್ಣು, ಟೊಮೆಟೋ, ಸಿಹಿ ತಿಂಡಿಯಂಥ ಜಿಹ್ವಾಕರ್ಶಕ ವಸ್ತುಗಳನ್ನು ಹೊತ್ತವರು ಕೆಲವರಾದರೂ ತಮ್ಮ ಬಾಹ್ಯ ಭಾರವನ್ನು ಆಂತರಿಕವನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದ್ದರೆ ಆಶ್ಚರ್ಯವೆನಿಸುತ್ತಿರಲಿಲ್ಲ. ಅದು ಕನಕದಾಸರಲ್ಲದವರಿಗೆ ಇರುವ ಸಹಜ ದೌರ್ಬಲ್ಯ.

ಕುದುರೆಮುಖದ ತೀರ್ಥ ಮಂಜುಗಡ್ಡೆಯಷ್ಟು ಕೋಟ. ಅತಿ ಶುಭ್ರ. ಡಾಕ್ಟರು ಮಹಾಶಯರೆಂದರು, ಈ ನೀರಿಗೆ ಯಾವ ಬ್ಲೀಚಿಂಗ್ ಪೌಡರೂ ಬೇಡ. ನಮ್ಮ ಹೊಸ ಎಲೆವನೆ, ನೊಜೆ ಹಾಸಿಗೆ, ಬಂಡೆ ಪಕ್ಕದ ಒಲೆ ಎಲ್ಲ ಸಿದ್ಧವಾದಾಗ ಸಂಜೆ ೬ ದಾಟಿತ್ತು. ೨೦ ಪೌಂಡು ಭಾರದ ‘ಸಿಂದಬಾದನ ಮುದುಕನನ್ನು ಕಳೆದುಕೊಂಡ ಮತ್ತು ಬೆಟ್ಟದ ಚಿಲುಮೆಯಿಂದ ಚೇತನ ಹೀರಿದ ನಾವೆಲ್ಲರೂ ಸೂರ್ಯಾಸ್ತಮಾನ ನೋಡಲು ಶಿಖರದೆಡೆಗೆ ಧಾವಿಸಿದೆವು.

೬೨೫೭ ಅಡಿ ಎತ್ತರದ ಆ ಬಂಡೆ ಮಂಡೆಯ ಮೇಲೆ ನಾವಿದ್ದೇವೆ - ಅಂತ್ಯದ ಕರಗಳ ಅಂಚಿನಲ್ಲಿ ನಾವು ಕುಳಿತಿದ್ದೇವೆ. ಕೆಳಗಿನಿಂದ ಕಾಣುವ ಭೀಕರತೆ ಈಗ ಅದಕ್ಕಿಲ್ಲ. ನಮ್ಮ ದೃಷ್ಟಿ ಹೋಗುವವರೆಗೆ ಎಲ್ಲಿಯೂ ನಮಗಿಂತ ಎತ್ತರದ ಶಿಖರವಿಲ್ಲ. ಸಮೀಪದ ಎರಡು ಶಿಖರಗಳೂ ಈಗ ಇದಕ್ಕಿಂತ ತಗ್ಗಾಗಿಯೇ ಕಂಡುವು. ನಮ್ಮ ದೃಷ್ಟಿ ದಿಗಂತ ಆ ಔನ್ನತ್ಯದಲ್ಲಿ ಅತಿಶಯವಾಗಿ ವಿಸಾರವಯಿತು. ಕಾಡು ಗುಡ್ಡ ಹೊಳೆ ಮುಂತಾದವು ನಕ್ಷೆಯ ಮೇಲಿನ ಎಳೇಗಳು. ಶಿವಪ್ಪ ಬರೆದರು:
ಭೂಮಂಡಲದ ರಾಶಿ ಬಣ್ಣ ಬಣ್ಣಗಳ ವೈವಿಧ್ಯ
ಕರ್ತಾರನ ಕಮ್ಮಟ
ದೃಷ್ಟಿ ದೂರಸಾಗಿದಂತೆ ಭೂಮಿ ಸಾಗರವನ್ನು ಸ್ವಾಗತಿಸಿ ಮುದ್ದಿಸುವ ಮಹಾವೃತ್ತ ಕಾಣಿಸಿತು. ಅದರಾಚೆ ನೀರು, ಕಡು ನೀಲಿಯನ್ನು ಮೆತ್ತಿದಂತೆ, ಅದರ ಮೇಲೆ ನೊರೆನೊರೆಯಾಗಿ ಪ್ರತಿಬಿಂಬಿಸುವ ತೆರೆ ಅದು ನೀರಿನ ರಾಶಿಯೆಂದು ತಿಳಿಸುವುದು. ಮತ್ತು ಮುಂದುವರಿದರೆ ಈ ಕಡುನೀಲಿ ಆಕಾಶದ ತೆಳು ನೀಲಿಯನ್ನು ಸಂಧಿಸುವ ಇನ್ನೊಂದು ಮಹಾವೃತ್ತ. ಅದರಿಂದಾಚೆಗೆ ಏನುಂಟೋ ಕುದುರೆಮುಖದಿಂದ ಕಾಣುವುದಿಲ್ಲ. ಮೇಲೆ ಗೋಳಾಕಾರದ ತಿಳಿ ನೀಲಿ ಬಣ್ಣದ ಬಾನು - ಕೆಳಗೆ ನರಪೇತಲನಾದ ನಾನು!

‘ಗಗನವನು ನೋಡು ಮೈ ನೀಲಿಗಟ್ಟುವವರೆಗೆ ಎಷ್ಟೊಂದು ಸಾರ್ಥಕ ನುಡಿ. ಅಂಥ ನೀಲ ಪರದೆಗೆ ಅಂಟಿಸಿದ ಕೆಂಪು ತಗಡು ಸೂರ್ಯ. ಸೂರ್ಯ ರಶ್ಮಿ ಈಗ ಕಣ್ಣು ಕುಕ್ಕುವುದಿಲ್ಲ. ಸೂರ್ಯಬಿಂಬ ಅದರ ಬದಿಗಳಲ್ಲಿ ಉದ್ದುದ್ದವಾಗಿ ‘ದೇವರ ಪೆಪ್ಪರ್ ಮಿಂಟ್ನಂತೆ ಕಾಣುವುದು ಸಹಜ. ತೆಳು ನೀಲಿ ತನ್ನ ದಿನದ ಗಳಿಕೆಯ ಕಾಣಿಕೆಯಾಗಿ ಕಡು ನೀಲಿಗೆ ನೀಡುವ ಹೊಂಬಟ್ಟಲು ಸೂರ್ಯ. ಚಿನ್ನದ ಡಾಲರ್ ನಾಳಿನ ತೂತಿಗೆ ಜಾರುತಿದೆ ಎಂದನಂತೆ ನವ್ಯ ಕವಿ! ಸೂರ್ಯನ ಪ್ರತಿಬಿಂಬ ಸಮುದ್ರದಲ್ಲಿ ಕಾಣಲಿಲ್ಲ. ಆದರೆ ಸಮುದ್ರದ ಗೆರೆ ಸೂರ್ಯ ಬಿಂಬವನ್ನು ಕ್ರಮೇಣ ಸೆಳೆಯಿತು. ಹೋಗಿಯೇ ಬಿಟ್ಟಿತು. ಆ ಕೊನೆಯ ಚುಕ್ಕಿಯೂ ಇನ್ನಿಲ್ಲ. ‘ಕುರುಕುಲಾರ್ಕನುಮರ್ಕನುಮಸ್ತಮಿಸಿದಂ ಎಂದು ಹೇಳಿದ ಮಹಾಕವಿಯ ಉಪಮೆ ಎಷ್ಟೊಂದು ಉಚಿತ. ಆಗ ಸಾಯಂಕಾಲ ಮುಗಿಯಿತು.

ಇಂತಹ ಸುಂದರ ಸಾಯಂಕಾಲದಿ
ಜೀವಿಸುವುದಕಿಂತಲು ಬೇರೆಯ ಗುರಿ ಜೀವಕೆ  ಬೇಕಿಲ್ಲ      - ಕುವೆಂಪು ಕ್ಷಮೆ ಕೋರಿ

ಸಂಜೆಯಾಯಿತು: 
ಒಂದದ ಪಗಲಿರುಳೆರಡರ
ಸಂದುಗಳು ವರುಣಶಿಲ್ಪಿ ರಕ್ತಾಂಬರದಿಂ
ಸಂದಿಸಿ ಪೊಲ್ದವೊಲೆಸೆದುದು
ಮಂದೈಸಿದ ಸಂಜೆಗೆಂಪು ಪಡುವಣ ದೆಸೆಯೊಳ್            - ರನ್ನ

ಪಡುವಣ ತೆರೆಯಲ್ಲಿ ಶುಕ್ರ, ಬುಧ, ಶನಿ ಒಟ್ಟಾಗಿ ಶಾಂತಿ ಬೀರಿ ನಕ್ಕವು. ಮಹಾವ್ಯಾಧ, ಮಹಾಶ್ವಾನಗಳೊಡಗೂಡಿ ವೃಷಭವನ್ನು ನೀರಿನೆಡೆಗೆ ಅಟ್ಟುವ ಚಿರಂತನ ನಾಟಕ ಆಗ ಪ್ರದರ್ಶಿತವಾಗತೊಡಗಿತು. ಡಯಾನಾ ದೇವಿ (ಚಂದ್ರ) ತನ್ನ ಪ್ರೇಮಿ ಮಹಾವ್ಯಾಧನ ಸಮಾಗಮಕ್ಕಾಗಿ ಮಂದಹಾಸದ ಪ್ರಭೆಯನ್ನು ಸೂಸಿ ಬರುತ್ತಿದ್ದ ಇನ್ನೊಂದು ನಾಟಕವೂ ಸಿದ್ಧವಾಗುತ್ತಿತ್ತು. ಮಿಥುನ ರಾಶಿಯ ಹೊಸ್ತಿಲಲ್ಲಿ ನಿಂತಿದ್ದ ಬೆಳಕಿನ ಉಂಡೆ ಗುರು ಇನ್ನೊಂದು ಅದ್ಭುತ ದೃಶ್ಯ.

ರಜನಿಯಲಿ ಝಗಝಗಿಸುತಿರುವ ನಕ್ಷತ್ರಗಳು
ಸಪ್ತರ್ಷಿಮಂಡಲವು, ವ್ಯಾಧ, ಕೃತ್ತಿಕೆ, ರೋಹಿಣಿ,
ಕ್ಷೀರ ಪಥ ಗುರು ಶುಕ್ರ ಇಲ್ಲಿದೆ ನಭೋಮಂಡಲ
ಇಲ್ಲಿ ನೆರೆದಿಹುದಯ್ಯ ನಕ್ಷತ್ರದಕ್ಷೋಹಿಣಿ          - ವಿ. ಕೃ. ಗೋಕಾಕ

ಉತ್ತರದೆಡೆಗೆ ತಿರುಗಿದರೆ ಅಲ್ಲೊಂದು ಭರತನಾಟ್ಯದ ವಿನ್ಯಾಸವೇ ಪ್ರದರ್ಶಿತವಾಗುತ್ತಿತ್ತು. ಬಲಗಡೆ ಮೂಡುತ್ತಿರುವ ಸಪ್ತರ್ಷಿಮಂಡಲ, ಎಡಗಡೆ ಕಂತುತ್ತಿರುವ ಕುಂತೀ - ಇವೆರಡರ ನಡುವೆ ಇರುವ ಶಾಶ್ವತ ಧ್ರುವ ನಕ್ಷತ್ರಕ್ಕೆ ಚಾಮರ ಬೀಸುವ ಭಂಗಿಯಲ್ಲಿ ನಿಂತಿದ್ದುವು. ಒಂದೊಂದು ಮನೋಹರ ದೃಶ್ಯ ನೋಡಲೂ ವ್ಯಕ್ತಿಯ ಆಯುರ್ಮಾನ ಸಾಲದು. ಆಕಾಶದಿಂದ ಭೂಮಿಗೆ ಇಳಿದರೆ ಅಲ್ಲಿ ಇನ್ನೊಂದು ವಿಧದ ಬೆರಗು ಸಿದ್ಧವಾದಂತ್ತಿತ್ತು. ನಮಗಿಂತ ಕೆಳಮಟ್ಟಗಳಲ್ಲಿ ದೂರ ದೂರದ ಬೆಟ್ಟದ ಸಾಲುಗಳಿಗೆ ಕಾಡು ಬೆಂಕಿ ಬಿದ್ದಿತ್ತು. ಅವುಗಳ ಮೈಮೇಲೆ ವಿಪುಲವಾಗಿ ಬೆಳೆದಿದ್ದ ಹುಲ್ಲಿನ ಬಣಬೆಗಳು ಚಿಟಿಮಿಟಿ ಉರಿದು ಭೀಕರ ಕೆನ್ನಾಲಗೆ ಚಾಚಿದ್ದುವು. ಆ ಕತ್ತಲೆಯಲ್ಲಿಯೂ ಕರಾಳ ಹೊಗೆಯನ್ನು ಆಕಾಶದೆಡೆಗೆ ಕಾರುತ್ತಿದ್ದುದು ಕಾಣುತ್ತಿತ್ತು. ಅಲ್ಲಿ ಪ್ರವಹಿಸುತ್ತಿದ್ದ ಬೆಳಕು ನವರಾತ್ರಿಯ ಮೈಸೂರರಮನೆಯ ವೈಭವಕ್ಕಿಂತ ಮಿಗಿಲು. ಕನ್ನಂಬಾಡಿಯ ಬೆಳಕಿನ ಹೊಳೆ ಇದರ ಮುಂದೆ ಸೂರ್ಯನ ಮುಂದಿನ ಸೊಡರು. ಸರಿಯೇ ಸೂರ್ಯಗೆ ಕೋಟಿ ಮಿಂಚುಂಬುಳುಗಳ್? ಇದು ದೇವರ ದೀಪಾವಳಿ ಕಾಣೋ. ಆ ದೃಶ್ಯ ರುದ್ರ ಮನೋಹರ. ಒಂದು ಕಡೆ ಬೆಂಕಿಯ ಗೆರೆ ಪರ್ವತರಾಜನಿಗೆ ಚಿನ್ನದ ಹಾರ ತೊಡಿಸಿದಂತೆ. ಇನ್ನೊಂದು ಕಡೆ ಪರ್ವತದ ಸುಪ್ತ ಪ್ರೇಮ ಹೃದಯಾಕಾರದಲ್ಲಿ ವ್ಯಕ್ತವಾಗಿತ್ತು. ಮತ್ತೊಂದು ಕಡೆ ಪಲ್ಲಕ್ಕಿಯ ಕಮಾನಿನಂತೆ. ಬೇರೊಂದು ಕಡೆ ದಕ್ಷಿಣ ಭಾರತದ ಸುವರ್ಣ ರೇಖಾಚಿತ್ರ! ಉಳಿದ ಕಡೆ ಆಕಾರರಹಿತ ಆದರೂ ಸಾಕಾರ. ಬೆಂಕಿಯ ನಾಲಗೆ ಬೆಟ್ಟಗಳನ್ನು ನೆಕ್ಕುತ್ತಿತ್ತು. ನಿಜ, ಸಿರಿವಂತರೂ ಬಡವರೂ ಬೀಗವಿಕ್ಕಿರುವ ಎರಡು ಸಂದೂಕಗಳು, ಒಂದರ ಕೀಲಿ ಇನ್ನೊಂದರೊಳಗೆ.

ಎಂಟು ಗಂಟೆಗೆ ನಾವು ಆಶ್ರಮಕ್ಕೆ ಮರಳಿದೆವು. ಪಾಯಸ, ಚಿತ್ರಾನ್ನ, ಕೇಸರಿಬಾತ್, ತಿಳಿಸಾರು, ಸಾಂಬಾರು, ಅನ್ನ, ಚಪಾತಿ - ಸಾಕ್ಷಾತ್ ನಳ, ವಲಲರು ಅಲ್ಲಿ ಸಂಗಮಿಸಿದ್ದರು. ಊಟವಾಯಿತು - ಶಿಬಿರಾಗ್ನಿ. ಬೆಂಗಳೂರದು, ನಮ್ಮ ಬೆಂಗಾಳೂರದು ಬಲು ದೂಊರಾ... ಪಿಂಟೋ ಕೆನೆದ. ಚಂದ್ರಶೇಖರ ಬಾಬು ಮಲೆಯಾಳೀ ಹಾಡು ಕಳುಕಿದ, ಕುಣಿದರು, ಕತೆ ಹೇಳಿದರು, ನಕ್ಕು ನಲಿದರು. ಮಲಗುವ ಮುನ್ನ ಕಾಡು ಮೃಗಗಳಿಂದ ರಕ್ಷಣೆಗಾಗಿ ಸಶಸ್ತ್ರ ಪಹರೆಯನ್ನು ಏರ್ಪಾಡು ಮಾಡಲು ಮರೆಯಲಿಲ್ಲ. ಆದರೆ ಶಸ್ತ್ರಧಾರಿಗಳು ಮಾತ್ರ ಖಾನ್ವೀಲ್ಕರರು. ಪ್ರಭಾಕರ ರೆಡ್ಡಿ ದೊಡ್ಡ ಶಿಕಾರಿಗಾರನಂತೆ. ಬಗೆಬಗೆಯಾಗಿ ಬೇಡಿದ - ರಾತ್ರಿ ಸಂಗಡಿಗರೊಡನೆ ಶಿಕಾರಿಗೆ ಹೋಗಿಬರುವುದಾಗಿ, ರೈಫಲ್ ಕೊಡಬೇಕೆಂದು. ನನ್ನ ಮುಂದಾಳುತನದಲ್ಲಿ ಅದು ಅಸಾಧ್ಯ - ಬೇಟೆಗೆ ನಾನು ಬದ್ಧ ವೈರಿ ಎಂದು ಅವನನ್ನು ಹತಾಶೆಗೊಳಿಸಲಾಯಿತು. ಆ ನಿರಪರಾಧಿ ಕಾಟಿಯನ್ನು ನಾವು ಕೊಂದ ದೃಶ್ಯವನ್ನು ಎಂದೂ ಮರೆಯಲಾರೆ.

ಮರುದಿನ ಮಾಮೂಲಿನಂತೆ ೬.೩೦ಕ್ಕೆ ಉಪಾಹಾರ, ೭ಗಂಟೆಗೆ ಹೊರಟೆವು. ಒಂದು ತಂಡ ಬಂಡೆ ಜಾರಲು, ಏರಲು. ಇನ್ನೊಂದು ತಂಡ ಕಾಡು ಅಂಡಲೆಯಲು. ಶಿವಪ್ಪ, ಶೇಣವ, ಡಾಕ್ಟರರು ಎರಡನೆಯವರ ಜೊತೆ ಹೋದರು. ನಾನು ಮೊದಲಿನವರ ಸಂಗಡ ಹೋದೆ. ಊಟದ ಹೊತ್ತಿಗೆ ನಾವು ಮರಳಬೇಕು. ಊಟವಾದನಂತರ ತಂಡಗಳ ಬದಲಾವಣೆ. ಇದು ಕಾರ್ಯಕ್ರಮ.

ಅದೃಷ್ಟವಶಾತ್ ನಮಗೆ ಅನುಕೂಲವಾದ ಸ್ಥಳ ಬೇಗನೆ ದೊರೆಯಿತು. ಅಲ್ಲಿ ಕುದುರೆಮುಖದ ಶ್ರೇಣಿ ಫಕ್ಕನೆ ಕೊನೆಗೊಂಡು ಕೆಳಕ್ಕೆ ಸುಮಾರು ೫೦ ಅಡಿ ಆಳದ ನೆಗೆತ. ಬಳಸಿಕೊಂಡು ಹೋಗಿ ಅದರ ತಳ ಸೇರಬಹುದು. ತಳದಿಂದ ಸೀದಾ ಮೇಲೆ ಏರಲು ಸಾಧ್ಯವಾಗುವಂಥ ಒಂದು ಕಡಿದಾದ ಕೊರಕಲೂ (ಚಿಮ್ನಿಯಂತೆ) ಅಲ್ಲಿಯೇ ಇತ್ತು. ಹೀಗಾಗಿ ಇದೊಂದೇ ಸ್ಥಳದಲ್ಲಿ ನಮಗೆ ಬಂಡೆ ಏರುವುದು, ಜಿಗಿಯುವುದು ಎರಡನ್ನೂ ಮಾಡಲು ಸಾಧ್ಯವಿತ್ತು. ಆದರೆ ೫೦ ಅಡಿ ಆಳ ಜಿಗಿಯಲು ನಿಲ್ಲುವ ವೇದಿಕೆ (ಅಂದರೆ ಪ್ರಪಾತದ ಅಂಚು) ನೆಲದಿಂದ ಸ್ವಲ್ಪ ಹೊರಕ್ಕೆ ಚಾಚಿರುವುದರಿಂದ ಅಲ್ಲಿಗೆ ಸಕಲ ರಕ್ಷಣಾಪೂರ್ವಕವಾಗಿಯೇ ಹೋಗಿ ನಿಂತಾಗ ಎಂಥ ಗಂಡೆದೆಯೂ ಒಂದು ಸಲ ಹಿಂದೆ ಮುಂದೆ ಯೋಚಿಸುವಂತಿತ್ತು. ಲಕ್ಷ್ಮಿ, ಮೋಹನರು ಇಲ್ಲಿ ಕುಪ್ಪಳಿಸಿ ನೆಗೆದು ಭದ್ರವಾಗಿದೆ ಎಂದರು. ಪಿಂಟೋ ಮೇಲುಗಡೆ ಕುಳಿತು, ಜಿಗಿವವರನ್ನು ಬಿಲೇ ಮಾಡುತ್ತಿದ್ದ. ಅವನ ಬಳಿಯಲ್ಲೇ ಲಕ್ಷ್ಮಿ ಕುಳಿತು ಚಿಮ್ನಿ ಕಲ್ಲನ್ನೇರುವವರನ್ನು ಬಿಲೇ ಮಾಡುತ್ತಿದ್ದ. ಇವರ ಸಹಾಯಕ್ಕೆ ಬೇರೆ ಇಬ್ಬರನ್ನು ಪ್ರತ್ಯೇಕ ಪ್ರತ್ಯೇಕವಾಗಿ ಕೂರಿಸಿ ಸುಬೆದಾರ್ ಖಾನ್ವೀಲ್ಕರರನ್ನು ಅಲ್ಲಿ ಉಸ್ತುವಾರಿಕೆಗೆ ಬಿಟ್ಟು ನಾನು ಕೆಳಗೆ ಬಂದೆ. ಮೊದಲು ಒಬ್ಬ ಜಿಗಿಯಬೇಕು. ಹೀಗೆ ಕೆಳಗೆ ಬಂದಾತ ಚಿಮ್ನಿಯ ಮೂಲಕ ಮೇಲೇರಿ ಹೋಗಬೇಕು. ಸಂಶಯಾತ್ಮರು (ವಿನಶ್ಶತೀ) ಈ ಯಾವುದನ್ನೂ ಮಾಡಬಾರದೆಂದು ಕಡ್ಡಾಯವಾಗಿ ವಿಧಿಸಿದೆ. ಇದುವರೆಗಿನ ನಮ್ಮ ಎಲ್ಲ ಸಾಹಸಗಳಿಗಿಂತಲೂ ಇದು ಹೆಚ್ಚು ಅಪಾಯಕಾರಿಯಾದದ್ದು. ಮೂರು ನಾಲ್ಕು ಜನ ಸರಿಯಾಗಿಯೇ ಮಾಡಿದರು. ಆದ್ದರಿಂದ ಧೈರ್ಯ ಬಂದಿತು ಇತರರಿಗೆ. ನನಗೆ ಸಹ. ನಾನೂ ಹೊರಟೆ. ಪ್ರಪಾತದ ಅಂಚಿಗೆ ಬಂದಾಗ ಎದೆ ನಡುಗಿತು. ಮೈಬೆವರಿತು. ಕಾರಣ ಏನೂ ಇಲ್ಲ. ಹಿಂದೆ ಹಾರಿದ್ದೇನೆ. ಆದರೆ ಇಂಥ ಆಳವನ್ನಲ್ಲ. ಆದರೂ ಮಾನ, ಪ್ರತಿಷ್ಠೆ ಇವೆಯಲ್ಲ. ಹೊರಟಮೇಲೆ ಆದದ್ದಾಗಲಿ, ಪ್ರಾಣ ಭಯವಿಲ್ಲ ಎಂದು ಜಿಗಿದೇ ಬಿಟ್ಟೆ. ಜಿಗಿದ ಕೋನ ಸರಿಯಾಗಲಿಲ್ಲ. ಸಮತೋಲ ತಪ್ಪಿತು. ಇಡೀ ದೇಹ ಬಲಗಡೆಗೆ ಲೋಲಕದಂತೆ ತೂಗಾಡಿ ಬಡಿಯಿತು. ಕಾಲು ಚಾಚಿದ್ದುದರಿಂದ ಅಲ್ಲಿ ನಿಂತೆ. ಇದನ್ನು ನೋಡುತ್ತಿದ್ದ ನನ್ನ ಭಾವ ಶಂಕರ ಇದು ಭಯಂಕರ ಎಂದು ಉದ್ಗರಿಸಿದ. (ಅಕ್ಕನ ಚಿಂತೆ?) ನನ್ನ ತಪ್ಪಿನಿಂದ ಭಯಂಕರವಾಯಿತಷ್ಟೆ. ಮತ್ತೆ ಸರಿಯಾಗಿ ನಿಂತು ಜಿಗಿದೆ. ಸರಿಯಾಗಿಯೇ ಕೆಳಗೆ ಬಂದೆ. ಸದ್ಯ, ಮರ್ಯಾದೆ ಉಳಿಯಿತು. ಚಿಮ್ನಿ ಏರಲು ನಾನು ಹೊರಡಲಿಲ್ಲ. ಐದಡಿ ಹತ್ತಿದ ಅನಂತರಾಜು ಕುಸಿದುಬಿದ್ದ. ಬಿಲೇ ಇದ್ದುದರಿಂದ ತೊಂದರೆ ಆಗಲಿಲ್ಲ. ಹತ್ತಡಿ ಹತ್ತಿದ ನಾಗರಾಜ ಸಾಧ್ಯವಿಲ್ಲ ಎಂದು ಕೆಳಗಿಳಿದ. ನಮ್ಮ ಮಾತುಭಾರೀ ಜಗನ್ನಾಥ ಶಾಸ್ತ್ರಿ, ನಾನು ನೋಡಿ ಸಾರ್, ಬೆಸ್ಟ್ ಡೆಮೋನ್ಸ್ಟ್ರೇಷನ್ ಕೊಟ್ಟೇ ಬಿಡುತ್ತೇನೆ ಎಂದ.
ಅದು ಮಾತಾಡಿದಷ್ಟು ಸುಲಭ ಅಲ್ಲ ನಾನೆಂದೆ.
ನಿಂಗಾಗೋದಿಲ್ಲ ಕಣೋ ಲಕ್ಷ್ಮಿ ರೇಗಿಸಿದ.
ಶಾಸ್ತ್ರಿ ಏರಿಯೇ ಬಿಟ್ಟ. ಲಕ್ಷ್ಮಿ ಮೇಲಿನಿಂದ (ಇವನಿಗೆ ಏರುತ್ತಿರುವವನನ್ನು ಕಾಣುವುದಿಲ್ಲ. ಹಗ್ಗದ ಹಿಡಿತದಿಂದ ಏರುವವನನ್ನು ನಿಯಂತ್ರಿಸಬೇಕು) ಬಿಲೇ ಹಿಡಿದಿದ್ದ. ಶಾಸ್ತ್ರಿ ಮಾತು ಆಡುತ್ತಲೇ ಗಲಭೆ ಮಾಡುತ್ತಲೇ ಏರತೊಡಗಿದ. ನಾನು ಹೇಳಿದೆ, ಏಕಾಗ್ರತೆಯಿಂದ ಏರಪ್ಪ, ಬೇರೆ ಕಡೆ ಗಮನವೀಯಬೇಡ.
೧೦-೧೨ ಅಡಿ ಏರಿರಬಹುದು, ಸಾರ್, ಸಾರ್! ನಾಳೆ ದಿವಸದ ಪ್ರೋಗ್ರಾಮ್ ಏನು? ನನ್ನ ಕಡೆಗೆ ತಿರುಗಿ ಕೇಳಿದ. ಹಿಡಿದ ಕಲ್ಲಿನ ಹಿಡಿತ ತಪ್ಪಿತು. ಓ ಬಿದ್ದೇ ಬಿದ್ದೇ ಎಂದು ಚೀತ್ಕರಿಸಿ ಧಿಡೀರನೆ ನೆಗೆದೇ ಬಿಟ್ಟ. ಯಾವ ಬಿಲೇ ಹಗ್ಗವೂ ಎಂಥ ಬಿಲೇಕಾರನೂ ಇಂಥ ಹುಚ್ಚು ನೆಗೆತವನ್ನು ನಿಯಂತ್ರಿಸುವುದು ಸಾಧ್ಯವಿಲ್ಲ. ಪ್ರತಿಯೊಬ್ಬನೂ ಅವನವನ ಪಾಲಿನ ಕರ್ತವ್ಯವನ್ನು ಶಿಸ್ತಿನಿಂದ ನಿರ್ವಹಿಸಲೆಂದೇ ಅವರಿಗೆ ಪೂರ್ವ ಶಿಕ್ಷಣವಿತ್ತು ಇಂಥಲ್ಲಿಗೆ ಕರೆದುಕೊಂಡು ಹೋಗುವುದು. ಆದರೂ ಪ್ರಾಯದ ಪ್ರಭಾವ, ನರನನ್ನು ಮೀರಿಸಿದ ವಾನರ. ಆ ದುರ್ಧರ ಪ್ರಸಂಗದಲ್ಲಿ ಮೂರು ಭೀಕರ ದುರಂತಗಳು ಸಂಭವಿಸದೇ ಇದ್ದದ್ದು ಪವಾಡವೆಂದು, ಅದೃಷ್ಟವೆಂದು ತಿಳಿದಿದ್ದೇನೆ. ಬಿದ್ದ ಶಾಸ್ತ್ರಿಗೆ ಎದೆಗೋ ತಲೆಗೋ ಬಲವಾಗಿ ಪೆಟ್ಟಾಗಬಹುದಿತ್ತು. ಅದೇ ಗಳಿಗೆಯಲ್ಲಿ ನಿರಪರಾಧಿ ತಿಮ್ಮಪ್ಪ ಅಲ್ಲೇ ಅಡ್ಡ ದಾಟುತ್ತಿದ್ದ. ಅವನ ತಲೆಯ ಮೇಲೆ ಹಠಾತ್ತಾಗಿ ಈ ಕಲ್ಲುಗುಂಡು ಶಾಸ್ತ್ರಿ ಕೆಡೆದ. ಒಂಡೆರಡು ಗಂಟೆ ಹೊತ್ತು ತಿಮ್ಮಪ್ಪ ನೋವಿನ ಬಾಧೆಯಿಂದ ನರಳುತ್ತಿದ್ದ. ಅವನಿಗೂ ಅಪಾಯ ಸಂಭವಿಸದೇ ಇದ್ದದ್ದು ಅದೃಷ್ಟ. ಇನ್ನು ಬಿಲೇ ಮಾಡಲು ಕುಳಿತಿದ್ದ ಸಾಕ್ಷಾತ್ Chief Instructor ಹಿಮಾಲಯದ ಕಲಿ ಲಕ್ಷ್ಮೀನಾರಾಯಣ ಬಿಲೇ ಹಗ್ಗವನ್ನು ತನ್ನ ಹೆಗಲಿಗಾಗಿ ಸುತ್ತಿ ಅದರ ಕೊನೆಯನ್ನು ಹಿಂದೆ ಇಳಿಬಿಟ್ಟಿದ್ದ. ಹಿಂದೆ ಯಾರೂ ಹಿಡಿದಿತ್ತಿಲ್ಲ; ಇವನು ಬೇಡವೆಂದು ಹೇಳಿದ್ದನಂತೆ! ಶಾಸ್ತ್ರಿ ದುಮುಕಿದ್ದು ಹಠಾತ್ತನೆ. ಆ ಜಗ್ಗಿನಿಂದ ಬಿಲೇ ಹಗ್ಗ ಲಕ್ಷ್ಮಿಗೆ ಯಮಪಾಶದಂತೆ ಸುತ್ತಿ (ಜಾರದೇ) ಅವನನ್ನು ಗಾಳಿಗೆ ಸಿಕ್ಕ ತರಗೆಲೆಯಂತೆ ಎಳೆದುಬಿಟ್ಟಿತು. ಅವನು ಕುಳಿತಿದ್ದದ್ದು ಪ್ರಪಾತದ ಅಂಚಿನಿಂದ ಕೇವಲ ಎರಡಡಿ ಹಿಂದೆ. ಹುಡುಗ ಬುದ್ಧಿವಂತನೋ ಅಲ್ಲವೋ ಅವನು ಹಿಡಿತ ಬಿಟ್ಟು ಕೈಕಾಲು ಚಾಚಿ ನೆಲದಮೇಲೆ ಹೊರಳಿಬಿಟ್ಟ. ಲಕ್ಷ್ಮಿಯ ತಲೆ ಪ್ರಪಾತದಂಚಿನಲ್ಲಿ ನೆಲಕ್ಕೆ ಅಪ್ಪಳಿಸಿದ್ದು ಕೆಳಗಿನಿಂದ ನನಗೆ ಕಂಡಿತು. ಇನ್ನೊಂದಡಿ ಮುಂಡೆ ಬಂದಿದ್ದರೆ ಅವನು ೫೦ ಅಡಿ ಕೆಳಗೆ. ಆದರೆ ಅಷ್ಟರಲ್ಲಿಯೇ ಶಾಸ್ತ್ರಿ ನೆಲ ಸೇರಿದ್ದರಿಂದ ಲಕ್ಷ್ಮಿ ಬಚಾವ್. ಬಂಡೆಯೊಡನೆ ಸೆಣಸಬೇಡಿ ಮಂಡೆಗಟ್ಟಿಗರೇ ಮಂಡೆಗೆಟ್ಟವರೇ ಭಂಡ ಗಂಡುಗಳೇ!
ಆ ಕ್ಷಣವೇ ನಾನು ಚಿಮ್ನಿಯನ್ನು ನಿಲ್ಲಿಸಿದೆ.

ಸಂಜೆ ಪುನಃ ಸೂರ್ಯಾಸ್ತಮಾನ ವೀಕ್ಷಣೆ. ಹೊಸ ನಾಟಕ. ನಿತ್ಯನೂತನತೆಯೇ ನಿಸರ್ಗದ ರಹಸ್ಯ - ನವನವೋನ್ಮೇಷಶಾಲಿನಿ. ನಾವು ಹಿಂತಿರುಗಿ ಹೋದಾಗ ಬಂಡೆಕಲ್ಲಿನ ಮೇಲೆ ಮೋಹನ ಅಂಗಾತ ಬಿದ್ದುಬಿಟ್ಟಿದ್ದಾನೆ. ಕೈಕಾಲು ಎಲ್ಲ ಕೊರಡಿನಂತೆ. ಕಣ್ಣುಗಳು ಮುಚ್ಚಿಹೋಗಿವೆ. ಬಾಯಿಯಿಂದ ನೊರೆ ಬರುತ್ತಿದೆ. ಅಪಸ್ಮಾರ? ಹುಡುಗರು ಸುತ್ತಲೂ ಸೇರಿದ್ದಾರೆ. ಗಾಳಿ ಹಾಕಿದರು ಕೆಲವರು. ಇದು ಆಟ, ನಿಜವಲ್ಲ ಎಂದರು ಬೇರಿಬ್ಬರು.
ನಾನೆಂದೆ, ಮೋಹನಾ! ಇದು ಆಟವಾದರೆ ಭಯಂಕರವಾದ ಆಟ. ಇದನ್ನು ಆಡಬಾರದು. ಅದೂ ಇಂಥ ಸ್ಥಳದಲ್ಲಿ ಖಂಡಿತವಾಗಿಯೂ ಆಡತಕ್ಕದ್ದಲ್ಲ. ಎದ್ದು ಬಿಡು ಸಾಕು. ನನಗೆ ಭಯವಾಗಿದೆ.
ಮೋಹನ ಏಳಲಿಲ್ಲ. ಮೊಸಳೆ ಬಂದ ಕತೆಯೇ? ಆಟ ವಾಸ್ತವವಾಯಿತೇ? ಸ್ವಲ್ಪ ಹಿಂದಿನಿಂದ ಬರುತ್ತಿದ್ದ ಡಾಕ್ಟರರಿಗೆ ತ್ವರೆಯಾಗಿ ಬರಲು ಹೇಳಿಕಳಿಸಲಾಯ್ತು. ಮೋಹನ ಯಥಾಸ್ಥಿತಿ. ಡಾಕ್ಟರರು ಬಂದರು. ಕಣ್ಣು ರೆಪ್ಪೆ ಅಗಲಿಸಿ ನೋಡಿದರು.
ಇನ್ನು ಮುಂದೆ ಈ ಹುಚ್ಚುಬೇಡ. ಏಳು ಎಂದು ಬಾರು ಕೋಲಿನಿಂದ ಬೆನ್ನಿಗೆರಡು ಬಾರಿಸಿದರು. ಚಂಗನೆ ನೆಗೆದ. ಮೋಹನ ಸರಿಯಾದ. ಬಾಯಿಗೆ ಟೂತ್ಪೇಸ್ಟ್ ಹಾಕಿ ನೊರೆ ಬರಿಸಿದ್ದಂತೆ. ನಾನವನನ್ನು ಚೆನ್ನಾಗಿ ಥಳಿಸಿದೆ.

ಮರುದಿನ, ಅಂದರೆ ಮೂರನೆಯ ದಿನ, ಬೆಟ್ಟ ಕಾಡುಗಳ ಹಿಂದಿನಿಂದ ಸೂರ್ಯೋದಯವಾಗುವುದನ್ನು ನೋಡಲು ಶಿಖರಕ್ಕೆ ಧಾವಿಸಿದೆವು. ಚಿನ್ನದ ಡಾಲರ್ ಅಲ್ಲಿ ಮೇಲೇರಿ ಬರುವುದು ಇನ್ನೊಂದು ಮನೋಹರ ದೃಶ್ಯ. ಆ ಬೆಳಗ್ಗೆ ಅವರವರ ಮನ ಬಂದಂತೆ ಐದೈದು ಜನರ ಗುಂಪಾಗಿ ಅಡ್ಡಾಡಿ ಬರಲು ಸ್ವಾತಂತ್ರ್ಯವಿತ್ತೆ. ಶಿವಪ್ಪ, ಗೌರೀಶಂಕರ ಉಪಾಹಾರವಾದೊಡನೆ ಒಬ್ಬ ಶೆರ್ಪಾ ಜೊತೆ ನಾವೂರಿಗೆ ಹಿಂತಿರುಗಿದರು. ಮೆಂಗಿಲ ಶೇಣವನ ಜೊತೆಯಲ್ಲಿ ನಾನೊಬ್ಬನೇ ಹೊರಟೆ. ಡಾಕ್ಟರರೂ ಖಾನ್ವೀಲ್ಕರರೂ ಪರ್ಣಕುಟೀರದಲ್ಲಿ ಬೇರೆ ಹುಡುಗರೊಡನೆ ಆಡುತ್ತ ಹರಟುತ್ತ ಕುಳಿತರು. ಕುದುರೆಮುಖದ ಗೊಂಡಾರಣ್ಯದೊಳಕ್ಕೆ ನಾನೂ ಶೇಣವನೂ ಹೊಕ್ಕೆವು. ಸಾಲಾಗಿ ನಿಂತಿರುವ ತಳವಾರರಂಥ ಮರಗಾಡು. ಅದರಲ್ಲಿ ಪೊದೆಯಿಲ್ಲ. ಕುರುಚಲು ಇಲ್ಲ. ಹೀಗಾಗಿ ಯಾವ ಕಡೆಗೆ ಬೇಕಾದರೂ ಅಲೆಯುವ ಸೌಕರ್ಯವಿತ್ತು. ಅದರೊಳಗೆ ಸೂರ್ಯನ ಬಿಸಿಲು ಧಗೆ ಪ್ರವೇಶಿಸುವಂತೆಯೇ ಇಲ್ಲ. ನಮ್ಮ ನಡಿಗೆ ವಾಸನೆಗಳಿಗೆ ಹೆದರಿದ ಯಾವುದೋ ಪ್ರಾಣಿಗಳು ಧಡಧಡನೆ ಧಾವಿಸಿದ ಸದ್ದು ಮಾತ್ರ ನಮಗೆ ಕೇಳಿಸಿತು. ಕಾಡಿನ ಒಂದು ಅಂಚಿನಲ್ಲಿ ಬಂಡೆಗಳ ಮೇಲೆ ದುಮುಕುವ ಜಲಪಾತ; ನೈಸರ್ಗಿಕ ಕಾಮನಬಿಲ್ಲು, ತೆಕ್ಕನೆ ಮೈಮನ ಮರೆಸುವಂಥ ದೃಶ್ಯ. ಕಾಡನ್ನು ಸುತ್ತಿ ಬೆಟ್ಟದ ಇನ್ನೊಂದು ಮಗ್ಗುಲಿಗೆ ಬಂದರೆ ನಾವು ಕುದುರೆಮುಖದ ಜೊತೆಗಾರನಾದ ಗೋಮುಖದ (೬೧೭೭ ಅಡಿ) ಮೇಲಿದ್ದೇವೆ. ಇವೆರಡರ ಮಧ್ಯೆ ಇರುವ ಇನ್ನೊಂದು ಶಿಖರ ಗುಂಡುಕಲ್ಲು (೬೧೦೦ ಅಡಿ). ಕುದುರೆಮುಖ, ಗುಂಡುಕಲ್ಲು, ಗೋಮುಖ ಸಾಲಾಗಿ ದಕ್ಷಿಣ-ಪಶ್ಚಿಮ ದಿಕ್ಕಿಗೆ ಮುಖಮಾಡಿ ನಿಂತಿರುವ ಶಿಖರಗಳು. ನಾವೂರು ಕಡೆಯಿಂದ ಬರುವಾಗ ಅತಿ ಸಮೀಪದ ಅತಿ ಎತ್ತರದ ಕುದುರೆಮುಖ ಮೊದಲು ಕಾಣುವುದರಿಂದ ಉಳಿದ ಶಿಖರಗಳು ಅಲ್ಲಿಗೆ ಅದೃಶ್ಯ.

ಕುದುರೆಮುಖದ ಕೆಳಗೆ ಬೋಳು ಬೆಟ್ಟಗಳ ರಾಶಿ, ಬಯಲು ಸೀಮೆ. ಆದರೆ ಗೋಮುಖದ ಕೆಳಗಿನ ದೃಶ್ಯ ಲಕ್ಷಾಂತರ ನವಪಲ್ಲವ ಖಚಿತ ವೃಕ್ಷರಾಶಿ, ಒಂದರ ಮೇಲೊಂದು ಬಿದ್ದಂತೆ. ಆ ಚಿಗುರುಗಳ ವರ್ಣವೈವಿಧ್ಯ, ಪರ್ಣ ಸೌರಭ್ಯ, ನೊರೆನೊರೆಯಾಗಿ ಕುಸುರು ಕುಸುರಾಗಿ ಮೊಸರುಗಡಲಿನ ಬೆಣ್ಣೆಯಂತೆ ತೇಲಿಬರುವ ರಮಣೀಯ ದೃಶ್ಯ ಇನ್ನೊಂದು ಮರೆಯಲಾಗದ ಅನುಭವ. ಸೃಷ್ಟಿಕರ್ತ ಅತಿ ಸುಂದರ ವಿಶಾಲರತ್ನಗಂಬಳಿಯನ್ನು ಅಲ್ಲಿ ಆಚ್ಛಾದಿಸಿದಂತೆ ಇತ್ತು.

೧೨ ಗಂಟೆ ಮಧ್ಯಾಹ್ನ ಊಟ ಮುಗಿಸಿ ಹಿಂದೆ ಹೊರಡುವುದು ನಮ್ಮ ಕಾರ್ಯಕ್ರಮ. ನಾನು ಹಿಂತಿರುಗಿ ಬರುವುದನ್ನು ಎಲ್ಲರೂ ಕಾತರರಾಗಿ ಕಾಯುತ್ತಿದ್ದರು. ವ್ಯಕ್ತ ಸಂತೋಷ ಅವರ ಮುಖದ ಮೇಲೆ ಲಾಸ್ಯವಾಡಿತು.
ಡಾಕ್ಟರರೆಂದರು, ಮತ್ತೇನಾಯಿತು?
ಏನು? ನಾನೆಂದೆ.
ಅದೇ ನೀವು ಕೂಗಿದರಲ್ಲ?
ಇಲ್ಲವಲ್ಲ!?
ತಮಾಷೆ ಮಾಡಬೇಡಿ, ಸಾರ್ ಡಾಕ್ಟರರು.
ಡಾಕ್ಟ್ರೇ! ನಿನ್ನೆ ರಾತ್ರಿ ಮೋಹನನ ತಮಾಷೆ ನೋಡಿ ಹೆದ್ರಿ ಹೋದೆ. ಅದಕ್ಕೆ ಮೊದಲು ಲಕ್ಷ್ಮಿಯ ತಮಾಷೆಯೂ ನನ್ನನ್ನು ಅಲುಗಿಸಿತು. ಇನ್ನು ನಾನೇ ಮಾಡುವೆನೇ? ಈಗ ಮಾಡುತ್ತಿರುವವರು ನೀವು ನನಗೆ ಸಮಸ್ಯೆ.
ಅಲ್ಲ ಸರ್, ಬೈಸನ್ ಏನಾದರೂ!
ಹತ್ತು ವರ್ಷಗಳ ಹಿಂದೆ.
ಅಲ್ಲ, ಇವತ್ತು?
ಹೌದು.
ಅದೇ ನಾವು ಹೇಳುತ್ತಿರುವುದು!
ಹೌದು, ಅದರ ಲದ್ದಿ ಕಂಡೆ!
ಅಲ್ಲ ಸರ್, ನಿಮ್ಮ ಮೇಲೇನಾದರೂ?
ಹೌದು ಏರಿ ಬಂತು.
ಅದೇ ನಾವು ಹೇಳುತ್ತಿರುವುದು, ಮತ್ತೇನಾಯತು?
ಈ ಭೀಕರ ಕಾನನಾಂತರದೊಳ್ ನಾನುಂ ಮೇಣ್ ಮೆಂಗಿಲ ಶೇಣವನುಂ ಪೋಗುತ್ತಿರ್ಪಾ ಸಮಯದೊಳ್ ಕೂರ್ಗಣೆಯಂತೆ ಎತ್ತಣಿಂದಲೋ ಬಂದು ಫಕ್ಕನೆ ಮೇಲೆರಗಿದುದೈ...
ಏನು, ಏನು?
ಒಂದು ದೊಡ್ಡ ಸೊಳ್ಳೆ!
ಎಲ್ಲರೂ ನಕ್ಕರು. ಏನು ಕತೆ ಎಂದು ಡಾಕ್ಟರರನ್ನು ಕೇಳಿದಾಗ ಅವರೆಂದರು, ನೀವು ಕಾಡಿನೊಳಗೆ ನುಗ್ಗಿ ಹೋದ ಸ್ವಲ್ಪ ಹೊತ್ತಿನ ಬಳಿಕ ಅದೇ ದಿಕ್ಕಿನಿಂದ ನಿಮ್ಮ ಸ್ವರ ಕೇಳಿಸಿತು “Bison, bison help, help” ಎಂದು. ಖಾನ್ವೀಲ್ಕರ್, ನಾನು ಬೇರೆ ಹುಡುಗರು ಎಲ್ಲರೂ ಕೇಳಿ ನಡುಗಿದೆವು. ರೈಫಲ್ ಹಿಡಿದರು ಖಾನ್ವೀಲ್ಕರ್. ನಾವೆಲ್ಲರೂ ಅವರ ಹಿಂದೆ ಬೊಬ್ಬೆ ಹೊಡೆಯುತ್ತ ಓಡಿದೆವು. ಕಾಡೆಲ್ಲ ಅಲೆದೆವು. ನಿಮ್ಮ ಹೆಸರನ್ನೂ ಶೇಣವನ ಹೆಸರನ್ನೂ ಕೂಗಿ ಕರೆದೆವು. ಎಲ್ಲಿಯೂ ಸುದ್ದಿಯಿಲ್ಲ, ಸದ್ದಿಲ್ಲ. ದಿಗ್ಭ್ರಮೆಗೊಂಡ ನಾವು ಈಗ ತಾನೆ ಮರಳಿದೆವು.
ಮುಂದೆ ವಿಚಾರಿಸಿದಾಗ ಸತ್ಯ ಸಂಗತಿ ತಿಳಿಯಿತು. ಗುರು, ವಾಸು, ಶ್ರೀನಿವಾಸ, ಶಾಸ್ತ್ರಿ  ಆಡಿದ ಆಟ ಇದು. ನನ್ನ ಸ್ವರವನ್ನು ಯಶಸ್ವಿಯಾಗಿ ಅನುಕರಿಸಿದ್ದರು. ಮೋಹನನ್ನು ಪ್ರೀತಿಯಿಂದ ಥಳಿಸಿದಂತೆ ಇವರಿಗೂ ಸಹಸ್ರನಾಮಾರ್ಚನೆ ಮಾಡಿದೆ! ಅಪಾಯಕಾರಿ ಪ್ರಾಯೋಗಿಕ ತಮಾಷೆಯನ್ನು ಅಂಥ ಸನ್ನಿವೇಶಗಳಲ್ಲಿ ಪ್ರದರ್ಶಿಸಲೇಬಾರದು.

(ಮುಂದುವರಿದಿದೆ)

2 comments:

  1. Sheshayyanavaru khanditha ulididdarendu, avara dussahasa manovrithiyannu neevu chedisutha baredudannu nodiye arivaythu. Chennagi manaranjisida lekhana. Thank you.

    ReplyDelete
  2. ಅಶೋಕವರ್ಧನರೆ, ಇತ್ತೀಚೆಗೆ ನಾನು ನಿಮ್ಮ ಜಾಲತಾಣಕ್ಕೆ ಪ್ರವೇಶಪಡೆದವನು... ಈಗ ಯಾಕೆ ಮೊದಲೇ ಪ್ರವೇಶಿಸಲಿಲ್ಲ ಎನಿಸುತ್ತಿದೆ... ಅಶೋಕವರ್ಧನರು ಏಕೆ ಪುಸ್ತಕಾಲಯದ ವ್ಯವಹಾರದಿಂದ ವಿಮುಕ್ತಿ ಬಯಸಿದರು? ಅನ್ನುವ ಪ್ರಶ್ನೆಗೆ ಕೆಲವೊಮ್ಮೆ ಉತ್ತರ ಸಿಗದೆ ತಡಕಾಡುತ್ತಿದ್ದೆ. ಒಳ್ಳೆಯದೇ ಆಯಿತು, ಹೆಚ್ಚಿನವರಿಗೆ ಅವರಿಗೆ ಬೇಕಾದುದನ್ನೆ ಕೊಡುವ ಪ್ರತಿಫಲಾಪೇಕ್ಷೆಯಿಲ್ಲದ ವ್ಯವಹಾರದಲ್ಲಿ ತೊಡಗಿದ್ದೀರಿ. ಇದರಲ್ಲಿ ಸಿಗುವ ಲಾಭ ಎಂದೂ ನಷ್ಟವಾಗದ್ದು.. hats off ನಿಮಗೆ....

    ReplyDelete