19 June 2020

ಬಹುಸಂಸ್ಕೃತಿಯ ರಾಜನಗರದಲ್ಲಿ

(ಜಾತಿ ಮತಗಳ ಚಕ್ರಸುಳಿ ಮೀರಿ - ೨) 

ಬೆಂಗಳೂರಿನ ದಿನಗಳು 


[ಕ್ಷಮಿಸಿ, ಮತ್ತೆ ನೆನಪಿಸುತ್ತೇನೆ: ಈ ಮಾಲಿಕೆ ನನ್ನ ಆತ್ಮಕಥೆ ಅಲ್ಲ. ನನ್ನ ಜೀವನದ ಆಯ್ದ ಘಟನೆಗಳನ್ನು ಒಡ್ಡಿಕೊಂಡು, ವ್ಯಕ್ತಿ ರೂಪಣೆಯಲ್ಲಿ ಕಾಲ್ಪನಿಕ ಜಾತಿ, ಮತ, ಅಂತಸ್ತು ಮುಂತಾದವು ವಹಿಸುವ ಪಾತ್ರವನ್ನು ಎತ್ತಿ ತೋರಿಸುವುದಷ್ಟೇ ಇದರ ಉದ್ದೇಶ. ಓದಿನ ಸ್ವಾರಸ್ಯಕ್ಕಾಗಿ ಇತರ ಸ್ವಲ್ಪ ಮಾಹಿತಿಗಳನ್ನೂ ಕೋದಿದ್ದೇನೆ.] 

೧. ವಿಧಾನಸೌಧದ ಬಯಕೆ (ನಗರ ದರ್ಶನ) 


ಬಳ್ಳಾರಿ - ಪುತ್ತೂರು ಓಡಾಟ ಕಾಲದಲ್ಲಿ ನಮ್ಮ ಬೆಂಗಳೂರು ಮಧ್ಯವರ್ತಿ, ಹಿಂದೆ ಹೇಳಿದಂತೆ ಚಿಕ್ಕಪ್ಪ ಮೂರ್ತಿ. ಆತ (೧೯೬೫) ನಮಗೆ ಹನುಮಂತ ನಗರದಲ್ಲಿ ಬಾಡಿಗೆ ಮನೆ ಹಿಡಿದಿಟ್ಟಿದ್ದ. ಒಂದೇ ಯಜಮಾನಿಕೆಯ ಕಟ್ಟಡ ಗೊಂದಲವದು.
ಒಂದು ಮಾಳಿಗೆ, ನಾಲ್ಕು ವ್ಯಾಪಾರೀ ಮಳಿಗೆ, ಸುಮಾರು ಎಂಟೋ ಒಂಬತ್ತೋ ಕುಟುಂಬಗಳ, ಅಷ್ಟೇ ಭಾಷಾ ಮತ್ತು ಸಾಂಸ್ಕೃತಿಕ ಗೋಜಲಿನೊಳಗೆ ನಮ್ಮದೂ ಒಂದು. 

ಬೆಂಗಳೂರು ಸೇರಿದ್ದೇ ವಿಧಾನ ಸೌಧ ನೋಡಬೇಕಲ್ಲ. ದಾರಿಯಾಚಿನ ಮನೆಯ ಹೊಸ ಗೆಳೆಯ ಪಕ್ಕಾ ಬೆಂಗಳೂರಿಗ, "ಅದು ಇಲ್ಲೇ" ಎಂದು ಒಂದು ಸಂಜೆ ಮಾರ್ಗದರ್ಶಿಯಾಗಿ ಒದಗಿದ. ಆನಂದನೂ ಸೇರಿಕೊಂಡ. ಅಮ್ಮನಿಗೇನು ಗೊತ್ತು, "ಕತ್ತಲೆ ಮಾಡಬೇಡಿ" ಎಂದು ಬಿಟ್ಟಳು. ಜೇಬಿನಲ್ಲಿ ನಾಲ್ಕು ಚಿಲ್ಲರೆ ಕಾಸಿದ್ದರೂ ‘ಇಲ್ಲೇ ತಾನೇ’ ಎಂದುಕೊಂಡು ನಡೆದೇ ಬಿಟ್ಟೆವು. ಗೆಳೆಯ ಬೆಂಗಳೂರು ಅರೆದು ಕುಡಿದವನ ಗತ್ತಿನಲ್ಲಿ, "ಇದು ಕೊಹಿನೂರ್ ಗ್ರೌಂಡ್ಸ್ - ಕೊಕ್ಕೋ ಆಟಕ್ಕೆ ಫೇಮಸ್ಸು, ಈ ರೋಡಲ್ಲೇ ಮೇಲಕ್ ಹೋದ್ರೇ ಬಸವಣ್ಣನಗುಡಿ, ಓ ಅದು ರಾಮಕೃಷ್ಣ ಆಶ್ರಮ, ಹೀಗೇ ಹೋದ್ರೇ ಗಾಂಧೀ ಬಜಾರ್, ನ್ಯಾಷನಲ್ ಹೈಸ್ಕೂಲ್, ಸಜ್ಜನರಾವ್ ಸರ್ಕಲ್, ಭಾರತ್ ಟಾಕೀಸ್, ಮಿನೆರ್ವ ಸರ್ಕಲ್, ರವೀಂದ್ರ ಕಲಾಕ್ಷೇತ್ರ, ಟೌನ್ ಹಾಲ್, ಕಾರ್ಪೊರೇಶನ್ ಆಫೀಸ್, ಕೆ.ಆರ್ ಸರ್ಕಲ್, ಆಗೋಯ್ತು ...." ಎಂದು ಮುಗಿಸಿದ್ದ. ಬೋಳು ಬಳ್ಳಾರಿಯಿಂದ ಬಂದಿದ್ದ ಗಾಂಪರು - ಕಟ್ಟಡ, ಜನ, ವಾಹನಗಳ ರಾಶಿಯಲ್ಲಿ ನಡೆದ ಲೆಕ್ಕ ಮರೆತೇ ಬಿಟ್ಟಿದ್ದೆವು. ಎಲ್ಲಕ್ಕೂ ಹೂಂಗುಟ್ಟಿ, ಕಣ್ಣರಳರಳಿಸಿ, ಕತ್ತು ಉದ್ದುದ್ದ ಮಾಡಿ ಬಳಲಿದ್ದೇ ಹೆಚ್ಚು. ನಮ್ಮ ವೇಗಕ್ಕೆ ಹೆಜ್ಜೆ ಸೇರಿಸಲು ಸೋತ ಸೂರ್ಯ ಎಂದೋ ಮನೆ ಸೇರಿದ್ದ. ಅಂತೂ ವಿಧಾನಸೌಧ ಕಂಡಾಗ "....ರಾತ್ರಿಯಾಗಿತ್ತು, ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು ...... ಆದರೆ ಪದುಮಳು ಒಳಗಿಲ್ಲ!" ಸಂಜೆ ಆರರ ಮೇಲೆ ವಿಧಾನಸೌಧಕ್ಕೆ ಪ್ರವೇಶವಿಲ್ಲ. 

ನಮ್ಮ ಚಿಲ್ರೆ ಕಾಸಿಗೆ ಹೊಂದುವಷ್ಟು ಸಿಟಿ ಬಸ್ಸೇರಿ, ಉಳಿದಂತೆ ಮತ್ತೆ ಕಾಲೆಳೆದು ಮನೆ ಸೇರುವಾಗ ಅಮ್ಮನ ಆಯ್ದ ಆಶೀರ್ವಚನಗಳು ಕಾದಿದ್ದವು. 

೨. ಪ್ರಮಾಣಪತ್ರದ ಸಾಕ್ಷಿ! (ತೋರಿಕೆಗಳು) 


ಒಕ್ಕಲಿಗರ ಸಂಘದ ಕಟ್ಟಡದಲ್ಲಿದ್ದ ಬೆಂಗಳೂರು ಪ್ರೌಢಶಾಲೆಯ ಎಂಟನೇ ತರಗತಿಗೆ ದಾಖಲಾದೆ. ಮನೆಯಿಂದ ಬುತ್ತಿ ಹಿಡಿದು, ನಡೆದೇ ಹೋಗಿ ಬರುತ್ತಿದ್ದೆ. ನನಗೆ ಸ್ಪರ್ಧಾರಹಿತ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ತುಸು ಹೆಚ್ಚು. ಸಹಜವಾಗಿ ಒಂದಿನ ನೋಟೀಸ್ ಬೋರ್ಡಿನಲ್ಲಿ ಕಂಡ ‘ರೆಡ್ ಕ್ರಾಸ್ ಪರೀಕ್ಷೆ’ಯ ಕರೆಗೆ ಓಗೊಟ್ಟೆ. ಅರ್ಜಿ ನಮೂನೆಯೊಡನೆ ಒಂದೋ ಎರಡೋ ರೂಪಾಯಿ ಕಟ್ಟಿದ್ದೇ ‘ಹೆನ್ರಿ ಡ್ಯೂನಾಂಟ್’ ಕಿರು ಪುಸ್ತಿಕೆಯೂ ಪರೀಕ್ಷಾ ದಿನಾಂಕವನ್ನೂ ಕೊಟ್ಟರು. ಪುಸ್ತಕ ಐದು ಹತ್ತು ಮಿನಿಟಿನ ಓದು. ವಾರ-ಹತ್ತು ದಿನ ಕಳೆದು ನಡೆದ ತೀರಾ ಸರಳ ಪ್ರಶ್ನಪತ್ರಿಕೆಯ ಪರೀಕ್ಷೆ ಎದುರಿಸಿದೆ. ಸಕಾಲದಲ್ಲಿ ಸುಂದರ ಪ್ರಮಾಣಪತ್ರವೂ ಬಂತು, ಅ-Stay! ಎಲ್ಲೋ ಆಸ್ಪತ್ರೆಗೆ ಅಥವಾ ಜಾತ್ರೆ/ ಕ್ರೀಡಾಕೂಟ ಮುಂತಾದೆಡೆ ಒಯ್ದು ಚಿಕಿತ್ಸಾ ತರಬೇತಿಯೋ ಅವಕಾಶವೋ ಕೊಟ್ಟಾರೆಂದು ನಾನು ಕಾದದ್ದು ವ್ಯರ್ಥ. 

ವಾಸ್ತವದಲ್ಲೂ ಇದೇ ಸಮಸ್ಯೆ - ನಾವು ಸ್ವೀಕರಿಸುವ ಪ್ರಮಾಣಕ್ಕೂ ಆಚರಣೆಗೂ ಸಂಬಂಧ ಉಳಿದೇ ಇಲ್ಲ! 

೩. ಗಣೇಶ ಸಂಹಾರ (ವಿಸರ್ಜನೆ) 


ಹನುಮಂತ ನಗರಕ್ಕೆ ಹೆಸರು ಕೊಟ್ಟದ್ದೇ ‘ಹನ್ಮಂತನ ಬೆಟ್ಟ’. ಒಟ್ಟಾರೆ ಸುರಿದ ಮರಳು ಮಿಶ್ರಿತ ಮಣ್ಣಿನ ರಾಶಿಯಲ್ಲಿ ಎಲ್ಲೋ ಕೆಲವೆಡೆ ಸ್ವಲ್ಪ ಹಾಸು ಬಂಡೆ, ಉಳಿದಂತೆ ಅಸಡಾ ಬಸಡಾ ಎಸೆದ ಬಂಡೆಗಳು, ಎಡೆ ಎಡೆಯಲ್ಲಿ ಕಷ್ಟದಲ್ಲಿ ಜೀವ ಹಿಡಿದ ಚೂರುಪಾರು ಕುರುಚಲುಗಳ ಮೊತ್ತವೇ ಹನುಮಂತನ ಗುಡ್ಡ. ಅದು ಇಂದಿನ ವಿಖ್ಯಾತ ‘ರಾಮಾಂಜನೇಯ ಗುಡ್ಡ’ದ ಪೂರ್ವಜನ್ಮದ ಸ್ಥಿತಿ! ಅದರ ತಪ್ಪಲಿನ ಕಲಾಮಂದಿರದ, ಅಂದರೆ ಅನ ಸುಬ್ಬರಾಯರ ಪೋಷಿತ ಪುತ್ರ - ಬಿಕೆ ಶ್ರೀನಿವಾಸ ವರ್ಮ. ಪುರಾಣ ಪುರುಷನ ಸೋಂಕಿಗೆ ಒಂದು ಬಂಡೆ ಒಂದು ಮಹಿಳೆಯಾದದ್ದು ರಾಮಾಯಣ ಓದಿದವರಿಗೆಲ್ಲ ತಿಳಿದಿದೆ. ಆದರೆ ಹನುಮಂತನ ಗುಡ್ಡದಲ್ಲಿ ವರ್ಮನ ಕಲಾಸ್ಪರ್ಷಕ್ಕೆ ಕಾಡು ಕಲ್ಲುಗಳೆಲ್ಲ ಇದ್ದಂತೇ ಪುರಾಣ ಪುರುಷರಾಗುತ್ತಿದ್ದದ್ದು ನನ್ನ ಕಾಲದಲ್ಲೇ! ಅಂಥಾ ಹನುಮಂತನ ಗುಡ್ಡದಿಂದಾಚೆ ಗವಿಗಂಗಾಧರೇಶ್ವರನ ಗುಹೆ/ಬೆಟ್ಟ. ಅದರ ತಪ್ಪಲಿನ ಒಂದು ಕಾಲದ ಜಲವೈಭವ, ನಾವಿದ್ದ ಕಾಲದಲ್ಲೇ ಕೊಳಚೆ ಹೊಂಡ ಕೆಂಪಾಂಬುಧಿ ಕೆರೆ. 

ಚೌತಿ ಕಾಲದಲ್ಲಿ ನಮ್ಮ ಮನೆ ಎದುರಿನ ರಸ್ತೆಯಲ್ಲಿ ‘ಊರಿನ ಎಲ್ಲಾ’ ಎನ್ನುವಷ್ಟು ಗಣಪತಿಗಳೂ ಯಥಾನುಶಕ್ತಿ ಮೆರವಣಿಗೆಗಳಲ್ಲಿ ವಿಸರ್ಜನೆಗೆ ಹೋಗುವುದನ್ನು ಕಾಣುತ್ತಿದ್ದೆ. ಒಂದೂವರೆ ಇಂಚಿನ ವಿಗ್ರಹವನ್ನು ಒಂದೂವರೆ ಜನ ಹೊತ್ತು ಪುಟ್ಟ ಗಂಟೆಯನ್ನು ಕಿಣಿಕಿಣಿಸುತ್ತಾ ನಡೆಯುವವರು ಎಷ್ಟೂ ಇದ್ದರು. ನೂರಾರು ಭಜಕರು, ಭರ್ಜರಿ ವಾದ್ಯ, ದೀಪಾಲಂಕಾರ, ಪಟಾಕಿ ಗದ್ದಲವನ್ನೆಲ್ಲ ಪೇರಿಸಿಕೊಂಡು ಲಾರಿಯ ಮೂಲಹಂದರವನ್ನೇ ಭಾರೀ ನಾಟಕೀಯ ನೆಲೆಯಾಗಿಸಿಕೊಂಡು ಸಾಗುವ ಆಳೆತ್ತರದ ಮಹಾಗಣಪತಿಗಳಿಗೂ ಏನೂ ಕೊರತೆಯಿರಲಿಲ್ಲ. ಏನಿದ್ದರೇನು ಈ ಎಲ್ಲ ಗಣಪರಿಗೂ ಅಂತಿಮವಾಗಿ ಒದಗುತ್ತಿದ್ದದ್ದು ಕೆಂಪಾಂಬುಧಿ ಎಂಬ ಮಹಾನರಕದ ನೀರಿನ ಶಿಕ್ಷೆ. 

ಬೆಂಗಳೂರು ಹೈಸ್ಕೂಲಿಗೂ ಚೌತಿಯಂದು ದೊಡ್ಡದಾಗಿಯೇ ಗಣೇಶನ್ನ ಕೂರಿಸುವ ಪರಂಪರೆ ಇತ್ತು. ನಾನು ಸೇರಿದ ವರ್ಷ ಶಾಲಾ ಸಮಗ್ರ ವಿದ್ಯಾರ್ಥಿ ಗಡಣದೊಡನೆ ಒಕ್ಕಲಿಗರ ಹಾಸ್ಟೆಲ್ ಕಟ್ಟಡದಿಂದ ಹೊರಟ ಭರ್ಜರಿ ವಿಸರ್ಜನಾ ಮೆರವಣಿಗೆ ಸ್ವಲ್ಪ ಊರೇನೋ ಸುತ್ತಿತು. ಮುಗಿದದ್ದು ಬಸವನ ಗುಡಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿದ್ದ ಶಾಲೆಯ ಸ್ವಂತ ನಿವೇಶನದ ಜಲಮೂಲದಲ್ಲಿ. ನಮ್ಮ ಗಣೇಶ ಪುಣ್ಯವಂತ! 

೪. ಪುಸ್ತಕ ವ್ಯಾಪಾರಿಯ ಮೊಳಕೆ ಬಾಡಿದ್ದು (ಕಟುಕರೋಹಿಣಿ) 


ರಾಮಕೃಷ್ಣಾಶ್ರಮದ ವಿವೇಕಾನಂದ ಬಾಲಕ ಸಂಘ, ಹೊರಗಿನ ಹುಡುಗರಿಗೆ ಎರಡು ತೆರನ ಶಿಕ್ಷಣ ಅಥವಾ ಸ್ವಯಂಸೇವಕತನದ ಅವಕಾಶವನ್ನು ಮುಕ್ತವಾಗಿಟ್ಟಿತ್ತು. ಒಂದು ಪ್ರತಿ ಸಂಜೆಯದು, ಇನ್ನೊಂದು ಆದಿತ್ಯವಾರಗಳಲ್ಲಿ ಮಾತ್ರ. ನಾನು ವಾರಕ್ಕೊಮ್ಮೆ ಬಳಗದಲ್ಲಿದ್ದೆ. ಮನೆಯಲ್ಲೇ ಉಪಾಹಾರಾದಿಗಳನ್ನು ಮುಗಿಸಿ ಹೋದರೆ ಸುಮಾರು ಎಂಟು ಗಂಟೆಯಿಂದ ಹನ್ನೆರಡರವರೆಗೆ ಸೌಮ್ಯವಾಗಿ ಮೊದಲು ದೈಹಿಕ ಮತ್ತೆ ಬೌದ್ಧಿಕ ಶಿಕ್ಷಣ ದೊರೆಯುತ್ತಿತ್ತು. ದೈಹಿಕದಲ್ಲಿ - ಆಶ್ರಮದ ಸಾರ್ವಜನಿಕ ಸ್ಥಳಗಳ ಶುಚಿ ಮತ್ತು ಕೆಲವು ಕ್ರೀಡಾವಕಾಶಗಳಿರುತ್ತಿತ್ತು. ಬೌದ್ಧಿಕದಲ್ಲಿ ಪ್ರಾಥಮಿಕ ಮಂತ್ರ, ಭಜನೆ ಮತ್ತು ಅಧ್ಯಾತ್ಮದ ಪರಿಚಯಗಳಿರುತ್ತಿದ್ದವು. ಎಲ್ಲೂ ಕಟು ಶಿಸ್ತಿಲ್ಲ, ಪ್ರೀತಿಯದೇ ಬಂಧ, ಭಕ್ತಿ ಅದರ ಲಕ್ಷ್ಯ. 

ಆಶ್ರಮದ ವಿಶೇಷ ಕಲಾಪಗಳಲ್ಲಿ ನಮ್ಮ ಬಿಡುವು ನೋಡಿಕೊಂಡು ಯಾವುದೇ ಸಹಾಯಕ ಜವಾಬ್ದಾರಿಗಳನ್ನು ವಹಿಸಿಕೊಳ್ಳುವುದಿದ್ದರೆ ಮುಕ್ತ ಅವಕಾಶ ಕೊಡುತ್ತಿದ್ದರು. ನನಗೆ ಆಶ್ರಮದ ಪುಸ್ತಕ ವಿಭಾಗದಲ್ಲಿ ವಿಶೇಷ ಆಸಕ್ತಿ ಬೆಳೆದಿತ್ತು. ಅಲ್ಲಿನ ಸ್ವಾಮಿಗಳು ಆಸುಪಾಸಿನ ಊರುಗಳಲ್ಲಿ ವಿಶೇಷ ಪ್ರವಚನ ನಡೆಸಿಕೊಡುವುದಿತ್ತು. ಅಂಥಾ ಸಂದರ್ಭಗಳಲ್ಲಿ ಮಾರಾಟ ವಿಭಾಗದ ಅಧಿಕಾರಿ, ಸಂಘದ ಎರಡು ಮೂರು ಸದಸ್ಯರ ತಂಡ ಮಾಡಿ, ಒಂದಷ್ಟು ಪುಸ್ತಕಗಳನ್ನು ಪ್ರದರ್ಶನ ಮಾರಾಟಕ್ಕೆಂದೇ ಕಳಿಸಿ ಕೊಡುವುದಿತ್ತು. ಹೀಗೆ ನನಗೆ ಸಿಕ್ಕ ಮೊದಲ ಅವಕಾಶ - ಬನ್ನೇರುಘಟ್ಟದ ದೇವಳದಲ್ಲಿ. ಇಬ್ಬರು ಹಿರಿಯ ಸದಸ್ಯರೊಡನೆ ನಾನೊಬ್ಬ ಕಿರಿಯ. ಭವ್ಯ ದೇವಳ, ಭಕ್ತಾದಿಗಳು ದೊಡ್ಡ ಸಂಖ್ಯೆಯಲ್ಲೇ ಇದ್ದರು. ಒಳಾಂಗಣದಲ್ಲಿ ಸ್ವಾಮಿಗಳ ಕಲಾಪವೂ, ಜಗುಲಿಯಲ್ಲಿ ನಮ್ಮ ಪ್ರದರ್ಶನ ಮಾರಾಟವೂ ಕಳೆಗಟ್ಟಿತು. ಒಳ್ಳೆ ಹುರುಪಿನಲ್ಲೇ ದಿನ ಮುಗಿಸಿ ಮರಳಿದೆವು. ಆದರೆ ಲೆಕ್ಕ ಒಪ್ಪಿಸುವಲ್ಲಿ ನಮಗೆ ಆಘಾತ ಕಾದಿತ್ತು. ಮಾರಾಟಪಟ್ಟಿಯ ಮೊತ್ತ, ಸಂಗ್ರಹಿಸಿದ ಹಣದ ಲೆಕ್ಕ ಸರಿಯಾಗಿಯೇ ಇತ್ತು. ಉಳಿದ ಪುಸ್ತಕಗಳಲ್ಲಿ ಮಾತ್ರ ದೊಡ್ಡ ಕೊರತೆಯಿತ್ತು. ನಮ್ಮೂವರೊಳಗೆ ಗೊಂದಲ, ಆತಂಕ. ನಷ್ಟವನ್ನು ನಾವೇ ಮನೆಯಿಂದ ಕೇಳಿ ತಂದು ತುಂಬುವವರೆಗೂ ಯೋಚಿಸಿದ್ದೆವು. ಅಧಿಕಾರಿ ಮತ್ತೆ ಸ್ವಾಮಿಗಳೂ ಸೌಮ್ಯವಾಗಿಯೇ ವಿಚಾರಿಸಿ, ಮೆದುವಾಗಿ ನಕ್ಕರು. ನಾವು ‘ಭಕ್ತ’ರನ್ನು ನಂಬಿದ್ದು ಹೆಚ್ಚಾಗಿತ್ತು. ಪುಸ್ತಕ ಕಳ್ಳರಿಂದಾದ ನಷ್ಟವನ್ನು ಅವರೇ ವಹಿಸಿಕೊಂಡರು. 

೫. ಹಿಂದಿ ಫೀಸಿಗೆ ಮುಂದು, ಪರೀಕ್ಷೆಗೆ ಹಿಂದು 


‘ದಕ್ಷಿಣ್ ಭಾರತ್ ಹಿಂದಿ ಪ್ರಚಾರ ಸಮಿತಿ’ಯ ಆಕರ್ಷಣೆ ನನ್ನನ್ನು ಒಮ್ಮೆ ಕಾಡಿತ್ತು. ಅದಕ್ಕಾಗಿ ಯಾರದೋ ಮನೆ ಪಾಠಕ್ಕೂ ಸೇರಿಕೊಂಡೆ. ಹಿಂದಿ ನೀತಿ ಕತೆಗಳನ್ನು ‘ಪರೀಕ್ಷಾ ದೃಷ್ಟಿ’ಯಲ್ಲಿ ಕೇಳುತ್ತಾ ಒಗ್ಗದಿಕೆ ಶುರುವಾಯ್ತು. ನಿರುತ್ಸಾಹದಲ್ಲೇ ಪರೀಕ್ಷೆ ಎದುರಿಸಿದ್ದೆ. ‘ಮಧ್ಯಮ ಪಾಸ್’ ಪ್ರಮಾಣಪತ್ರವೂ ಬಂತು; ಪೊಟ್ಟಣ ಕಟ್ಟಲೂ ಬಾರದಷ್ಟು ದಪ್ಪ ಮತ್ತು ಸಣ್ಣ! ಮುಂದುವರಿಕೆಯತ್ತ ತಲೆ ಹಾಕಲಿಲ್ಲ. 

ಇದೇ ಸುಮಾರಿಗೆ ಶಾಲೆಗಳಲ್ಲಿ ‘ಕಡ್ಡಾಯ ಹಿಂದಿ’ಯ ವಿರುದ್ಧ ಹೋರಾಟ ಬಲಗೊಂಡಿತ್ತು. ತಮಿಳು ನಾಡಿನಲ್ಲಿ ಹಿಂದೀ ವಿರೋಧ ಉಗ್ರೋಗ್ರವಾದ್ದು ಕಂಡೋ ಎನ್ನುವಂತೆ ನಮ್ಮ ಸರಕಾರ ಜಾಣ್ಮೆ ಮೆರೆಯಿತು. "ಎಸ್ಸೆಸ್ಸೆಲ್ಸಿಗೆ ಹಿಂದಿ ಪರೀಕ್ಷೆ ಕಡ್ಡಾಯವಲ್ಲ" ಎಂದು ಘೋಷಿಸಿತು. ನಾನು ಹಾಗೊಂದು ಸಾಂಪ್ರದಾಯಿಕ ಕಟ್ಟು ಕಳಚಿಕೊಂಡದ್ದನ್ನು ಬಳಸಿಕೊಂಡೆ. ಅಪ್ಪನಿಗೆ ಪರೀಕ್ಷೆ ತಪ್ಪಿಸುವ ಶೈಕ್ಷಣಿಕ ಅಶಿಸ್ತು ಹಿಡಿಸಲಾರದು ಎಂದು ತಿಳಿದಿದ್ದೆ. ಅಮ್ಮನದು ಇನ್ನೊಂದು ಕತೆ. ಬಾಲ್ಯದಲ್ಲಿ ಆಕೆಗೆ ಎಸ್ಸೆಸ್ಸೆಲ್ಸಿಯಿಂದ ಮುಂದೆ ಕಲಿಯಬೇಕೆಂಬ ಬಯಕೆ ಇತ್ತು. ಆದರೆ ಅಜ್ಜ "ಹೆಚ್ಚು ಕಲಿತ ಹುಡುಗಿಗೆ ಗಂಡು ಸಿಕ್ಕ" ಎಂದು ಹೆದರಿ, ನಿರಾಕರಿಸಿದ್ದರು. ಆಗ ಅಮ್ಮ ಮನೆಯಲ್ಲಿದ್ದುಕೊಂಡೇ ಎರಡೋ ಮೂರೋ ಹಂತದ ಹಿಂದಿ ಪರೀಕ್ಷೆಗಳಲ್ಲಿ ಜಯಿಸಿದ್ದಳು. ಅಂಥಾ ಹಿಂದಿಯನ್ನು ಈಗ ಮಗ ತಪ್ಪಿಸುವುದೆಂದರೆ?! ಹಿಂದಿ ಪರೀಕ್ಷೆಯ ದಿನವೂ ನಾನು ಎಂದಿನದೇ ಶಿಸ್ತಿನಲ್ಲಿ ಮನೆ ಬಿಟ್ಟವನು, ಶಾಲೆಗೆ ಮಾತ್ರ ಚಕ್ಕರ್ ಹೊಡೆದಿದ್ದೆ! ಫಲಿತಾಂಶ ‘ಉತ್ತೀರ್ಣ’ ಎಂದು ಬಂದ ಕಾಲಕ್ಕೆ ಯಾರೂ ಹಿಂದಿ ಕಲಮು ನೋಡಲೇ ಇಲ್ಲ. 

೬. ಕಾವೇರಮ್ಮನ ಪಾದಕ್ಕೆ ಗೋ....... ! 


ಬುದ್ಧಿಪೂರ್ವಕ ಜನಸಂಖ್ಯಾ ನಿಯಂತ್ರಣ ಪ್ರಕೃತಿ ವಿರೋಧಿಯಾದರೂ ಇಂದು ಕಾಲಿಕ ಅಗತ್ಯ. ಇದನ್ನು ಗ್ರಹಿಸುವಲ್ಲಿ ನಿಧಾನಿಸುವ ಸಾಮುದಾಯಿಕ ಪ್ರಭಾವಗಳನ್ನು ದೂಷಿಸುವುದಲ್ಲ, ಸ್ವಯಂ ತಿದ್ದಿಕೊಳ್ಳುವಲ್ಲಿ (ವ್ಯಕ್ತಿಗಳಿಗಲ್ಲ, ಸಮುದಾಯಗಳಿಗೆ) ಕಾಳಜಿಪೂರ್ಣ ಸಹಕಾರಕೊಡುವಂತಾಗಬೇಕು. ನನಗೊಬ್ಬನೇ ಮಗ, ನನ್ನಪ್ಪನಿಗೆ ಮೂರು, ನನ್ನಜ್ಜಂದಿರಿಗೆ ಆರು ಮತ್ತು ಹತ್ತು! ನನ್ನಮ್ಮನ ಕಡೇ ತಂಗಿ ಅನುರಾಧಾ - ಹತ್ತರಲ್ಲಿ ಕೊನೆಯವಳು, ಪ್ರಾಯದಲ್ಲಿ ನನಗಿಂತ ಕಿರಿಯಳು, ನನಗೆ ಚಿಕ್ಕ-ಚಿಕ್ಕಮ್ಮ. ಹೀಗೇ ನನ್ನ ಚಿಕ್ಕಜ್ಜಿಯ ಕೊನೆಯ ಮಗ ಸದಾಶಿವ, ಚಿಕ್ಕಜ್ಜನ ನಾಲ್ಕು ಮಕ್ಕಳಲ್ಲಿ ಕೊನೆಯವನು, ಪ್ರಾಯದಲ್ಲಿ ನನಗಿಂತ ಕಿರಿಯ, ಚಿಕ್ಕ-ಚಿಕ್ಕಪ್ಪ. ಬಾಲ್ಯದಲ್ಲಿ ನಾವು ಸಮ ಅಧ್ಯಾಯಿಗಳೂ ಹೌದು. ನಾನು ಹಿರಿಯ ಪ್ರಾಥಮಿಕವನ್ನು ಸಮೀಪದ ಕಾನ್ವೆಂಟಿನಲ್ಲಿ ಮಾಡಿದರೂ ಮುಂದೆ ದೂರದ, ಅಂದರೆ ಸದಾಶಿವನ ಸರಕಾರೀ ಶಾಲೆಗೆ ಸೇರಿಕೊಳ್ಳಬೇಕಾಯ್ತು. ಮಧ್ಯಾಹ್ನ ಊಟಕ್ಕೆ ಕೆಲ ಕಾಲ ನಾನು ಸದಾಶಿವನ (ಜ್ಯೋತಿ) ಮನೆಗೇ ಹೋಗುತ್ತಿದ್ದೆ. ಇದರಿಂದ ನಮ್ಮ ಒಡನಾಟ ಹೆಚ್ಚು ಆಪ್ತವೂ ಇತ್ತು. ಆರನೇ ತರಗತಿಯಿಂದ ಮುಂದೆ ನನ್ನಪ್ಪನ ವರ್ಗಾವಣೆಗಳಿಂದ ನಾನೂ ದೂರಾದೆ. ಆದರೂ ಎಸ್ಸೆಸ್ಸೆಲ್ಸಿ ಫಲಿತಾಂಶ ಕಾದಿದ್ದಾಗ, ನಾನು ಸದಾಶಿವನ ಜ್ಯೋತಿ ಮನೆಯಲ್ಲೇ ಇದ್ದೆ. ಆ ಒಂದಾನೊಂದು ದಿನ..... 

ಪೇಟೆಯಿಂದ ಬಂದ ನಾರಾಯಣ - ಸದಾಶಿವನ ಚಿಕ್ಕಣ್ಣ, ಮನೆಯ ಯಜಮಾನ, ತುಸು ಗಂಭೀರವಾಗಿಯೇ "ನಾಳೆ ಎಸ್ಸೆಸ್ಸೆಲ್ಸಿ ರಿಸಲ್ಟ್" ಎಂದ. ನಾವಿಬ್ಬರೂ ಜಾಗೃತರಾದೆವು; ಕಳ್ಳರ ಮನಸ್ಸು ಹುಳ್ಳುಳ್ಳಗೆ! ಬೀಸೋ ದೊಣ್ಣೆ ತಪ್ಪಿಸಿಕೊಳ್ಳಲು, ತಲಕಾವೇರಿಗೆ ನಡೆದುಕೊಂಡು ಹೋಗಿ, ಬಸ್ಸಲ್ಲಿ ಮರಳುತ್ತೇವೆ ಎಂದು ಅಮ್ಮಜ್ಜಿಯಲ್ಲಿ ಅರ್ಜಿ ಗುಜರಾಯಿಸಿದೆವು. ತಲಕಾವೇರಿಯ ತಳಶಿಬಿರ - ಭಾಗಮಂಡಲ, ಚಿಕ್ಕಜ್ಜಿಗೆ ತವರೂರು. ಅವರಣ್ಣನ ಮಗ ಸೂರ್ಯ (ವರ್ತಮಾನದಲ್ಲಿ ಕ್ಷೇತ್ರದ ಮುಖ್ಯ ಪುರೋಹಿತ ಸೂರ್ಯ ನಾರಾಯಣ ವೈದ್ಯ) ಸದಾಶಿವನಿಗೆ ಆತ್ಮೀಯ ದೋಸ್ತ್ ಕೂಡಾ. ಪರವಾನಗಿ ಕೂಡಲೇ ಮಂಜೂರಾಯ್ತು. 

ಮಧ್ಯಾಹ್ನದ ಊಟ ಮುಗಿಸಿ, ಎರಡು ಗಂಟೆಯ ಸುಮಾರಿಗೆ ನಾವು ದಾರಿಗಿಳಿದಿದ್ದೆವು. ನಮ್ಮ ವೇಗ ಮತ್ತು ಲಭ್ಯ ಸಮಯಗಳ ಅಂದಾಜಿಲ್ಲದೆ, ಸುಮಾರು ಇಪ್ಪತ್ತೆರಡು ಮೈಲು ದೂರದ ಭಾಗಮಂಡಲವನ್ನು ಕತ್ತಲೆಗೆ ಮುನ್ನ ಮುಟ್ಟುವ ಗುರಿ ಹಾಕಿಕೊಂಡಿದ್ದೆವು. ಮೇಕೇರಿ, ವುಡವೊತ್ ಮೊಟ್ಟೆಗಾಗಿ ಅಪ್ಪಂಗಳದವರೆಗೆ ಒಂದು ಲೆಕ್ಕದಲ್ಲಿ ನಮ್ಮದೇ ದಾರಿ. ಅಪ್ಪಂಗಳದಲ್ಲೇ ಸದಾಶಿವನ ಕುಟುಂಬದ ಸುವಿಸ್ತಾರ ಕೃಷಿಭೂಮಿ ಇದೆ. ಹಾಗೆಂದು ನಾವು ನಿಲ್ಲಲಿಲ್ಲ. ಮುಂದೆ ಒಂದೆರಡು ಕಡೆ ದಾರಿ ಬದಿಯ ಕಾಡು ಮಾವಿನ ಮರದ ಕೃಪೆಯನ್ನು ಸದುಪಯೋಗಪಡಿಸಿಕೊಂಡದ್ದು ಬಿಟ್ಟರೆ ಎಲ್ಲೂ ನಿಧಾನಿಸದ ಗತಿ ನಮ್ಮದು. 

ಇಂದು ಗೂಗಲಿನಲ್ಲಿ ಭಾಗಮಂಡಲ ದಾರಿಯ ಮುಖ್ಯ ಪೇಟೆಗಳೇನೋ ಅಲ್ಲಲ್ಲೇ ಕಾಣುತ್ತವೆ. ಆದರೆ ಆ ವಲಯಗಳಲ್ಲಿ ವ್ಯಾಪಿಸಿದ ವಾಣಿಜ್ಯೀಕರಣ ದಿಗ್ಭ್ರಮೆ ಹುಟ್ಟಿಸುತ್ತದೆ. ನಾವು ನಡೆಯುತ್ತಿದ್ದ ಕಾಲದಲ್ಲಿ ಹಾಗಿರಲಿಲ್ಲ. ಕಾಫಿ ತೋಟ ಅಂದರೆ ನಿಜಕ್ಕೂ ಕಾಡಿನಂತೇ ಇರುತ್ತಿತ್ತು. ಸಾಲದ್ದಕ್ಕೆ ಬೆಟ್ಟಗಳ ನಾಡು. ಅಲ್ಲಿ ಬೆಳಗಾಗುವುದು ನಿಧಾನ, ಕತ್ತಲಾಗುವುದು ಬೇಗ. ವಾಹನ ಸಂಚಾರವೇ ವಿರಳವಿದ್ದ ದಿನಗಳವು. ನಾವು ಮೊದಲ ಹಂತದಲ್ಲಿ ಬಸ್ಸುಗಳನ್ನು ಗಮನಿಸಲಿಲ್ಲ. ದಿನ ಮಾಸುತ್ತ ವಾಹನ ಹಾರೈಸುವ ಕಾಲಕ್ಕೆ ಕಾಣಿಸಿದ್ದು ಒಂದು ಲಾರಿ. ನಾವು ಹೀಗೇ ಕೈ ತೋರಿದೆವು. ನಮ್ಮ ಆಶ್ಚರ್ಯಕ್ಕೆ ಅದು ಸ್ವಲ್ಪ ಮುಂದೆ ಹೋಗಿ ನಿಂತಿತು. ನೋಡಿದರೆ ಚಾಲಕಸ್ಥಾನದಲ್ಲಿ ಹುರಿ ಮೀಸೆಯ ಪರಿಚಿತ ನಗುಮುಖ - ಭೀಮಯ್ಯನವರು! ನಾವು ಮಡಿಕೇರಿಯಲ್ಲಿದ್ದಾಗ ನಮ್ಮ ಎದುರು ಮನೆಯವರು - ನನ್ನಪ್ಪನ ಅಭಿಮಾನಿ. ಪಕ್ಕದಲ್ಲೇ ಅವರ ಹೆಂಡತಿ - ಪಾರ್ವತಮ್ಮ, ಭಾರೀ ದೈವ ಬ್ರಾಹ್ಮಣ ಭೀರು! ಸಮೀಪದಲ್ಲೆಲ್ಲೋ ಇದ್ದ ಅವರ ಕೃಷಿ ಮನೆಯತ್ತ ಸಾಗಿದ್ದರು. ಒಂದೆರಡು ಮೈಲಿನಲ್ಲೇ ಅದು ಬಂತು. ಅವರೇನೋ "ಕತ್ತಲಾಗುತ್ತಿದೆ, ಸಣ್ಣವರು, ನಮ್ಮಲ್ಲಿ ಉಳಿದು ಹೋಗಿ" ಎಂದು ಬಹುತರದ ಒತ್ತಾಯ ಮಾಡಿದರು. ನಾವು ಜಾಗೃತವಾದ ಸ್ವಾಭಿಮಾನದಲ್ಲಿ ನಿರಾಕರಿಸಿ, ಪಾದ ಬೆಳೆಸಿದೆವು. 

ಕತ್ತಲೆರಗಿತು. ನಮ್ಮಲ್ಲಿ ಬೆಳಕಿನ ಸಾಧನವಿಲ್ಲ, ಗ್ರಾಮೀಣ ಪ್ರಜ್ಞೆ ಸೊನ್ನೆ. ನೋಡ ನೋಡುತ್ತ ಗಿಡ ಮರಗಳು ದೆವ್ವ, ಭೂತಗಳೇ ಆದವು. ಅವೆಲ್ಲ ಮೂಢ ನಂಬಿಕೆಯೆಂದೇ ಪಡೆದ ಶಿಕ್ಷಣದ ಅಡಿಪಾಯ ಅಲುಗುತ್ತಿತ್ತು. ಆಗೀಗ ಸ್ವಲ್ಪ ಓಡಿ ಮೈಲು ಕಲ್ಲುಗಳ ಲೆಕ್ಕ ಹಗುರಮಾಡಿಕೊಳ್ಳುತ್ತಿದ್ದೆವು. ಎಲ್ಲೋ ಒಂದು ಅಂಗಡಿ, ಮಿಣುಕು ಬೆಳಕಿನ ಮನೆ ಸಿಕ್ಕಾಗ ಧೈರ್ಯ ಕುದುರುತ್ತಿತ್ತು. ಮತ್ತೆ ಇನ್ಯಾವತ್ತೋ ನಡೆದ ಕೊಲೆ, ಕ್ರೂರಹುಲಿ, ವಿಷಸರ್ಪಗಳ ನೆನಪು ಬಂದಾಗ ಕುಸಿಯುತ್ತಿತ್ತು! ಅವನ್ನು ಹಂಚಿ ಹಗುರ ಮಾಡಿಕೊಳ್ಳುವ ನೆಪದಲ್ಲಿ ಹೆಚ್ಚೇ ಗಾಬರಿಗೆಡುತ್ತಿದ್ದೆವು. ಅದೃಷ್ಟಕ್ಕೆ ಸಿಕ್ಕ ಒಬ್ಬಿಬ್ಬ ಹಳ್ಳಿಗರು, ನಾವೇನೋ ಮಾಡಬಾರದ್ದು ಮಾಡಿದ್ದೇವೆಂಬಂತೆ ಕಾಣಲಿಲ್ಲ. ಕೊನೇ ಬಸ್ ಇನ್ನೇನು ಬರುವ ಹೊತ್ತು ಎಂದೇ ಸಮಾಧಾನಿಸಿದರು. ಭಾಗಮಂಡಲ ಇನ್ನೂ ಮೂರು ಮೈಲು ಎನ್ನುವ ಸುಮಾರಿಗೆ ಬಸ್ಸು ಸಿಕ್ಕಾಗ "ಬದುಕಿದೆವು" ಎಂದು ನಮ್ಮೊಳಗೇ ಹೇಳಿಕೊಂಡೆವು. ಆದರೆ ಮುಂದೆ ‘ಸಾಹಸ ಕಥನ’ದ ಕಾಲಕ್ಕೆ "ಬಸ್ ಐದು ಮಿನಿಟು ತಡವಾಗಿದ್ದರೆ ನಾವು ಪೂರೈಸಿಯೇ ಬಿಡುತ್ತಿದ್ದೆವು" ಎಂದು ಕೊಚ್ಚಿಕೊಳ್ಳಲು ಮರೆಯಲಿಲ್ಲ! 

ನಮ್ಮ ದರ್ಶನದಿಂದ ವೈದ್ಯನಾಥ ಭಟ್ಟರ ಮನೆ ಸೂರ್ಯ ನಿಶಿಯಲ್ಲೂ ಬೆಳಗಿದ್ದ. ಬೆಳಗ್ಗೆ ಮುಂಬೆಳಕಿನೊಡನೆ ಮತ್ತೆ ನಾವಿಬ್ಬರೇ ಒಳದಾರಿಯಲ್ಲಿ ತಲಕಾವೇರಿಗೆ ನಡೆದೆವು. ಕ್ಷೇತ್ರದ ಕುಂಡಿಗೆಯಲ್ಲಿ ನೀರಿದ್ದಿರಬೇಕು - ನಿಲುಕಲಿಲ್ಲ. ಕೆರೆ ಜೀರ್ಣೋದ್ಧಾರಕ್ಕಾಗಿ ಅಸ್ತವ್ಯಸ್ತ ಸ್ಥಿತಿಯಲ್ಲಿತ್ತು. ನಮ್ಮ ಅಸ್ಥಿರ-ಆಸ್ತಿಕತೆ ‘ಸ್ನಾನವಿಲ್ಲದೇ ಉದ್ಧಾರವಿಲ್ಲ’ ಎಂದು ಅಧೀರಗೊಂಡಿತು. ಪುರಾಣ ನೆನಪಿತ್ತು - ಲೋಪಾಮುದ್ರೆ (ಕಾವೇರಿಯ ನಿಜನಾಮ) ಕವೇರ ಮುನಿಯ ಕಮಂಡಲಿಗೆ (ಕುಂಡಿಗೆ) ಹಾರಿ, ಗುಪ್ತಗಾಮಿನಿಯಾಗಿ ಹರಿದಿದ್ದಳು. ನಾವು ಶೋಧ ನಡೆಸುತ್ತ ಕೆಳಗಿನ ಕಣಿವೆಗಿಳಿದೆವು. ಸುಮಾರು ನೂರಡಿ ಅಂತರದಲ್ಲೇ ಒರತೆ ಜಿನುಗಿ, ಕಲಕಲಿಸಿ, ಸಣ್ಣದಾಗಿ ಮಡುಗಟ್ಟಿದ್ದ ‘ಕಾವೇರಿ’ ಕಂಡೆವು. ಮುಂಜಾವಿನ ಶೀತ ಮತ್ತು ಮಂಜಿನಂಥ ನೀರಿಗೆ ಇಳಿಯಲು ಶೀತ ಪ್ರಕೃತಿಯ ಸದಾಶಿವ ಹಿಂಜರಿದ. ನಾನು ಭಗೀರಥ ಸ್ನಾನ ಮಾಡಿಯೇಬಿಟ್ಟೆ. ಭಾಗಮಂಡಲಕ್ಕೆ ಮರಳಿ, ವೈದ್ಯ ಭಟ್ಟರಲ್ಲಿ ಫಲಾರ ಮುಗಿಸಿ, ಸಿಕ್ಕ ಬಸ್ಸು ಹಿಡಿದು ಮಡಿಕೇರಿಸಿದೆವು. 

ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದಿತ್ತು - ಸದಾಶಿವ ಅನುತ್ತೀರ್ಣ, ನಾನು ಮುಂದಕ್ಕೆ ಬಿದ್ದಿದ್ದೆ. ಕಾವೇರಮ್ಮನ ಪಾದಕ್ಕೆ ಗೋವಿಂದಾನೇ ಗೋವಿಂದಾ..... ಗೋವಿಂದ! 

೭. ಕಾಫಿ ಕುಡಿಯದೆ ಕೆಟ್ಟವ (ನಂಬಿಗೆಯ ನಾಕ) 


ನನ್ನಪ್ಪನಿಗೆ ದಿನಕ್ಕೆರಡೇ ಕಾಫಿ. ಆದರೆ ಅದರ ಶುದ್ಧ ಮಾತ್ರ ಭಯಂಕರ!! ನಾಂದಿಯಲ್ಲಿ ಮಡಿಕೇರಿಯ ಶುದ್ಧ ಪೀಬರಿ ಬೇಳೆ ಇರಬೇಕು. ಅದನ್ನು ಕೆಂಡದಲ್ಲಿ ಹುರಿಯುವ ‘ಹ್ಯಾಂಡ್ ರೋಸ್ಟರ್’, ಹುಡಿ ಮಾಡುವ ‘ಹ್ಯಾಂಡ್ ಗ್ರೈಂಡರ್’ ಮತ್ತು ಎರಡು ಪದರದ ಫಿಲ್ಟರ್‍ಗಳೆಲ್ಲ ನಮ್ಮ ಮನೆ ಸಾಮಗ್ರಿಗಳ ಕಡ್ಡಾಯ ಭಾಗಗಳು. ಬೇಳೆಯನ್ನು ಹುರಿಯುವ ಹದ, ಗಟ್ಟಿ ಮುಚ್ಚಳದ ಡಬ್ಬಿಯಲ್ಲಿಟ್ಟು ಕಾಯ್ದುಕೊಳ್ಳುವ ಪರಿಗಳಲ್ಲಿ ಅಮ್ಮ ಪರಿಣತೆ. ಗ್ರೈಂಡರ್ ತಿರುವಿ ಹೊತ್ತು ಹೊತ್ತಿನ ಕಾಫಿಗೆ ಬೇಕಾದಷ್ಟೇ ಹುಡಿ ತಯಾರಿಸುವುದಕ್ಕಷ್ಟೇ ನಾವು. ಅದರ ತರಿಯ ಗಾತ್ರ, ಫಿಲ್ಟರಿಗೆ ಹಾಕುವ ಮೊತ್ತ ಮತ್ತು ಕೊನೆಗೆ ಎರೆಯುವ ಕುದಿ ನೀರಿಗಾಗುವಾಗ ಅಮ್ಮನ ಪರಿಣತಿಯೇ ಅಂತಿಮ. ಅಷ್ಟಾಗಿಯೂ ಸದಾ ಕಾಡುತ್ತ ಉಳಿಯುತ್ತಿತ್ತು ಯೋಗ್ಯ ಹಾಲು. 

ಎಮ್ಮೆ ಹಾಲಾದರೆ ಬೆಸ್ಟ್. ಅಲ್ಲದಿದ್ದರೂ ಚೂರೂ ನೀರು ಬೆರೆಸದ ಮಂದ ಹಸುವಿನ ಹಾಲು ಬೇಕೇ ಬೇಕು. ಇದಕ್ಕೆ ಹನುಮಂತ ನಗರದಲ್ಲಿ ಎಲ್ಲರೂ ಒಕ್ಕೊರಲಿನಲ್ಲಿ ಶಿಫಾರಸು ಮಾಡಿದ್ದು - ಮಾಯಣ್ಣನ ಡೈರಿ. ಪುಟ್ಟ, ಆದರೆ ಪಕ್ಕಾ ತಾರಸಿ ಕೋಣೆಯ ಡೈರಿ. ಅಲ್ಲಿ ಎದುರು ಎರಡು ಸ್ಟೀಲ್ ಪಾತ್ರೆಗಳಲ್ಲಿ ಹಾಲು, ಹಿಂದೆ ಪೂರಕವಾಗಿ ನಾಲ್ಕೈದು ಬಿಗಿ ಮುಚ್ಚಳದ ಪುಟ್ಟ ಡ್ರಂಗಳಲ್ಲೂ ಹಾಲು. ಸಹಾಯಕರು ಆಗೀಗ ಸೈಕಲ್ಲಿನಲ್ಲಿ ಹೊರಗಿನಿಂದ ದೊಡ್ಡ ಕ್ಯಾನುಗಳಲ್ಲಿ ಹಾಲು ತಂದು ಪಾತ್ರೆ, ಡ್ರಂಗಳನ್ನು ತುಂಬುವುದಿತ್ತು. ಕೆಲವೊಂದು ಗಲ್ಲಿ ಗೊಲ್ಲರು, ತಮ್ಮ ದನವನ್ನೇ ಹೊಡೆದುಕೊಂಡು ಬಂದು, ಡೈರಿ ಎದುರು ಕಟ್ಟಿ, ನೊರೆನೊರೆಯಾಗಿ ಕರೆದು, ಡ್ರಂಗಳಿಗೆ ತುಂಬಿ ಹೋಗುತ್ತಿದ್ದರು. ಎಲ್ಲಕ್ಕೂ ಕೇಂದ್ರದಲ್ಲಿ ಸ್ವತಃ ಮಾಯಣ್ಣನೇ ನಿಂತು ಬರುವ ಹಾಲಿನ ನಿಗಾ, ಕೊಡುವ ಹಾಲಿನ ಲೆಕ್ಕಗಳನ್ನು ಕೈಯಾರೆ ನಿರ್ವಹಿಸುತ್ತಿದ್ದ. ಆದರೂ ಅದೇನು ‘ಡ್ರಂ ಮಾಯೆ’ಯೋ ನನ್ನಪ್ಪನ ಕಾಫಿಯ ನಿರೀಕ್ಷೆಗೆ ಮಾಯಣ್ಣನ ಡೈರಿ ಹಾಲು ಬರಲೇ ಇಲ್ಲ. 

ಅಮ್ಮ ಅಲ್ಲಿ ಇಲ್ಲಿ ತನಿಖೆ ಮಾಡಿ, ನೂರಡಿ ಆಚಿನ ಗಲ್ಲಿಯಲ್ಲಿ ಮಾರಮ್ಮನ ಮನೆ-ಕೊಟ್ಟಿಗೆ ನಿಕ್ಕಿ ಮಾಡಿದಳು. ಮೊದಮೊದಲು ಮಾರಮ್ಮ ಬೆಳಿಗ್ಗೆ ದನವನ್ನು ನಮ್ಮನೆ (ಒಂದನೇ ಮಾಳಿಗೆಯಲ್ಲಿತ್ತು) ಪುಟ್ಟಪಥಕ್ಕೇ ತಂದು ನಿಲ್ಲಿಸಿ, ಕರೆದು ಕೊಟ್ಟು ಹೋಗುತ್ತಿದ್ದಳು. ಮತ್ತೆ ಮಾರಮ್ಮನ ಅನುಕೂಲಕ್ಕಾಗಿ ನಿಗದಿತ ವೇಳೆಗೆ ನಮ್ಮಲ್ಲಿ ಒಬ್ಬರು ಪಾತ್ರೆ ಹಿಡಿದುಕೊಂಡು ಅಲ್ಲಿಗೋಡುತ್ತಿದ್ದೆವು. ಮಾರಮ್ಮ ನಮ್ಮ ಕಣ್ಣೆದುರೇ ಹಾಲು ಕರೆಯುವ ಪಾತ್ರೆಯನ್ನು ಒಮ್ಮೆ ಕವುಚಿದಂತೆ ಮಾಡಿ, ಹಾಲು ಕರೆದು, ಅಳೆದು ಕೊಡುತ್ತಿದ್ದಳು. ಕೆಲವೊಮ್ಮೆ ನಮ್ಮ ಗೈರುಹಾಜರಿಯಲ್ಲಿ, ಮಾರಮ್ಮನ ಕೊನೆಯ ಮಗ - ಆರೇಳು ವರ್ಷದ ಪೋರ - ವರದ, ತಂದು ಕೊಟ್ಟು ಹೋಗುತ್ತಿದ್ದ. ಅಮ್ಮ ವರದನಿಗೆ ಸಣ್ಣ ಪುಟ್ಟ ತಿನಿಸು ಕೊಡುವುದಿತ್ತು. ಒಮ್ಮೆ ವರದ ಕೆಲವು ದಿನಗಳ ಮಟ್ಟಿಗೆ ಅಜ್ಜನ ಮನೆಗೆ ಹೋಗಿ ಬಂದ. ಅನಂತರ ನಮ್ಮನೆಗೆ ಬಂದಾಗ ಅಮ್ಮ ತಮಾಷೆಗೆ "ಅಯ್ಯೋ ತುಂಬಾ ಇಳ್ದೋಗಿದ್ದೀಯಲ್ಲೋ.." ಎಂದಿದ್ದಳು. ಠಮ್ಮಂತ ಬಂತು ವರದೋವಾಚ "ಹೂಂ, ಅಲ್ಲಿ ಕಾಪಿನೇ ಕೊಡ್ತಿರ್ಲಿಲ್ಲಾ"! 

೮. ಲೆಕ್ಕದ ಮಾಷ್ಟ್ರ ಮಗ ಲೆಕ್ಕ ಬಿಟ್ಟ (ಅಲರ್ಜಿ?) 


ಎರಡು ಮೂರನೇ ತರಗತಿಯಲ್ಲಿರುವಾಗ ನನಗೆ ‘ಲೆಕ್ಕದ ಮಾಷ್ಟ್ರ ಮಗ’ (ತಂದೆ ಕಾಲೇಜಿನಲ್ಲಿ ಗಣಿತಾಧ್ಯಾಪಕ) ಎಂಬ ಅಗ್ಗಳಿಕೆಯಿತ್ತು. ನಾನು ಎರಡು ಮೂರನೇ ತರಗತಿಯಲ್ಲಿ ಲೆಕ್ಕದಲ್ಲಿ ನೂರಕ್ಕೆ ನೂರು ಅಂಕಗಳನ್ನು ಸಹಜವಾಗಿಯೇ ಪಡೆದಿದ್ದೆ. ತರಗತಿಯಲ್ಲಿ ಒಟ್ಟಾರೆ ಪ್ರಥಮ ಸ್ಥಾನದ ಸಮೀಪ ಸುಳಿದಾಡಿದ್ದೆ. ನಿಜದಲ್ಲಿ ಅಪ್ಪ ನನಗೆ ಶಿಸ್ತು ಬಿಟ್ಟು, ಅನ್ಯ ಪಾಠ ಮಾಡಲೇ ಇಲ್ಲ! 

ಮಡಿಕೇರಿ ಮನೆಯಲ್ಲಿ ಅಪ್ಪನ ಅಧ್ಯಯನಕ್ಕೊಂದು ಪ್ರತ್ಯೇಕ ಸಣ್ಣ ಕೋಣೆ ಇತ್ತು. ಅಪ್ಪ ಮನೆಯಲ್ಲಿದ್ದಾಗ ನಮಗೆಲ್ಲ (ತಂದೆಯ ಮೂರು ತಮ್ಮ, ಓರ್ವ ತಂಗಿ ಸೇರಿದಂತೆ) ಆ ಕೋಣೆ ಪ್ರವೇಶ ಭಯಾವಹ. ಆದರೂ ಎಂದೋ ಒಮ್ಮೆ ನಾನು ಯಾವುದೋ ಲೆಕ್ಕ ಹಿಡಿದು ಹೋದದ್ದಿತ್ತು. ಅಪ್ಪ ಎದುರು ಪ್ರಶ್ನೆ ಕೇಳಿ, ಭಂಗಿಸಿದಾಗ ನಾನು ಹೆದರಿ ಮರಳಿದ್ದಿತ್ತು! (ನನ್ನ ತಮ್ಮಂದಿರ ಕಾಲಕ್ಕೆ ತಂದೆಗೆ ಬಾಲಮನಸ್ಸಿನ ಕುರಿತ ತಿಳುವಳಿಕೆ ಹೆಚ್ಚು ಬಂದಿತ್ತು!) ತಂದೆ ಕಾಲೇಜಿನಲ್ಲಿ ಲೆಕ್ಕದ ಮಾಸ್ಟ್ರು ಆಗಿ ಗಟ್ಟಿಗರೆನ್ನಿಸಿಕೊಂಡರೂ ಮನೆಯಲ್ಲಿ ನನಗೆ ಲೆಕ್ಕಕ್ಕೇ ಸಿಗಲಿಲ್ಲ. ಸಾಮಾನ್ಯ ನಂಬಿಕೆಯಂತೆ ನನಗೂ ಗಣಿತ ಕಠಿಣ ಅನಿಸತೊಡಗಿತ್ತು. 

ಪ್ರೌಢಶಾಲೆಯ ಒಂಬತ್ತನೇ ತರಗತಿಗಾಗುವಾಗ ಐಚ್ಛಿಕ ವಿಷಯಗಳ ಆಯ್ಕೆ ಬಂದಿತ್ತು. ನಮ್ಮಲ್ಲಿ (ಬೆಂಗಳೂರು ಪ್ರೌಢಶಾಲೆ) ವಿಜ್ಞಾನ ವಿಭಾಗದಲ್ಲಿ ಎರಡು ಕೂಟಗಳಿದ್ದವು - ಪಿ.ಸಿ.ಎಂ (ಭೌತ, ರಸಾಯನ ಮತ್ತು ಗಣಿತ ವಿಜ್ಞಾನಗಳು) ಪಿ.ಸಿ.ಬಿ (ಕೊನೆಯದ್ದು ಜೀವ ವಿಜ್ಞಾನ). ಸಹಜವಾಗಿ ನಾನು ಗಣಿತ ದೂರ ಮಾಡಿ, ಜೀವಶಾಸ್ತ್ರದ ವಿಭಾಗ ಆರಿಸಿಕೊಂಡೆ. ಆದರೆ ಅಂತಿಮ ಪರೀಕ್ಷೆ ಹತ್ತಿರ ಬಂದಾಗ, ಭೌತಶಾಸ್ತ್ರದಲ್ಲಿ ಬರುತ್ತಿದ್ದ ಗಣಿತೀಯ ಸಮಸ್ಯೆಗಳು ನನ್ನನ್ನು ಕಂಗಾಲು ಮಾಡಿದ್ದವು. ಕಾವೇರಮ್ಮನಿಗೆ ಜೈ ಹೇಳಿ (?) ಎಸ್ಸೆಸ್ಸೆಲ್ಸಿ ಪಾರಾದ್ದು ನಿಮಗೆ ತಿಳಿದೇ ಇದೆ. ಪದವಿಪೂರ್ವಕ್ಕಾಗುವಾಗ ಇನ್ನಷ್ಟು ‘ಜಾಣ’ನಾಗಿ ಭೌತ ಶಾಸ್ತ್ರವನ್ನೇ ಬಿಟ್ಟು, ಸಿ.ಬಿ.ಜೆಡ್ (ರಸಾಯನ, ಸಸ್ಯ ಮತ್ತು ಪ್ರಾಣಿ ಶಾಸ್ತ್ರ) ತೆಗೆದುಕೊಂಡಿದ್ದೆ. ಇಲ್ಲಿ ರಸಾಯನ ಶಾಸ್ತ್ರದ ಸಮೀಕರಣಗಳು ನನ್ನನ್ನು ಹಿಡಿದು ಹಾಕಿದವು; ಡುಮ್ಕಿ ಹೊಡೆದೆ. 

ಕೊನೆಯಲ್ಲಿ ‘ಗಣಿತ ವಿಜ್ಞಾನದ ರಾಣಿ’ ಎಂಬ ಖ್ಯಾತಿಗೇ ಹೆದರಿ, ನಾನು ಸ್ನಾತಕ ಓದಿನ ಕಾಲಕ್ಕೆ ವಿಜ್ಞಾನ ವಿಭಾಗವನ್ನೇ ಬಿಟ್ಟೋಡಿದೆ. (ಕಲಾ ವಿಭಾಗದಲ್ಲಿ ಇಮ್ಮಡಿ ಪದವೀಧರ - ಡಬ್ಬ-ಲ್ ಗ್ರಾಜುಯೇಟ್ ಆದೆ.) 

೯. ಹೆಸರಿನಲ್ಲೇನೆಲ್ಲಾ ಇದೆ (ಅಜಾತಿಸೂಚಕ) 


"ಹಾಜರಿ ಪುಸ್ತಕದಿಂದ ಹಿಡಿದು ಎಲ್ಲೇ ಇಂಗ್ಲಿಷಿನ ಅಕಾರಾದಿ ಹಿಡಿದರೆ, ‘ನಾರಾಯಣ’ಕ್ಕೆ ಕನಿಷ್ಠ ಹದಿನಾಲ್ಕು ಅಕ್ಷರಗಳನ್ನು ದಾಟಬೇಕು. ಅದನ್ನು ನಿವಾರಿಸುವಂತೆ ಕನ್ನಡ ‘ಅ’ಕಾರಕ್ಕೂ ಇಂಗ್ಲಿಷ್ ‘ಎ’ಕಾರಕ್ಕೂ ಹೊಂದುವಂತೆ ಹೆಸರಿರಬೇಕು." ಹೀಗಿತ್ತು ನನ್ನ ನಾಮಕರಣದ ಕಾಲಕ್ಕೆ, ತಂದೆಯ ಯೋಚನೆ. ಇನ್ನು ಸಾಂಪ್ರದಾಯಿಕ ಜಾಡು ಅನುಸರಿಸಿದ್ದೇ ಆದರೆ ಅಜ್ಜನ ಹೆಸರು - ‘ತಿಮ್ಮಪ್ಪಯ್ಯ’ನೋ ಜನ್ಮನಕ್ಷತ್ರಾಧಾರಿತ ‘ಮುರಳೀಧರ’ನೋ ಬರಬಹುದಿತ್ತು. ದೇವ ಸೂಚಕ ಹೆಸರುಗಳು ತಂದೆಯ ಪಟ್ಟಿಯಲ್ಲೇ ಇರಲಿಲ್ಲ. ಗುಣ ಸೂಚಕ ಮತ್ತು ಇತಿಹಾಸ ಪ್ರಸಿದ್ಧ ಎಂಬುದಕ್ಕೆ ‘ಅಶೋಕ’ ಎಂದರು, ಶಾಲೆಯಲ್ಲೂ ದಾಖಲಿಸಿದರು. ಅಂದು ಜನನ ಪ್ರಮಾಣ ಪತ್ರದ ಯೋಚನೆ ಯಾರೂ ಮಾಡಲೇ ಇಲ್ಲ. 

ಶಿವಮೊಗ್ಗ ಜಿಲ್ಲೆಯ ನಗರದ ಬಳಿಯಿಂದ ಬಂದ ನಮ್ಮ ಕುಟುಂಬ ನಾಮ - ಗುಡ್ಡೆ ಹಿತ್ಲುವಿನ ಆದ್ಯಕ್ಷರ ಮತ್ತು ತಂದೆ ಹೆಸರಿನ ಆದ್ಯಕ್ಷರ ಸೇರಿಸಿ ‘ಜಿ.ಎನ್. ಅಶೋಕ’ನಾಗಿದ್ದೆ. ತಂದೆ ತಮ್ಮ ಹುಟ್ಟಿನ ಆಕಸ್ಮಿಕವಾಗಿ ಸೇರಿಕೊಂಡ ‘ಅಯ್ಯ’ವನ್ನು (ನಾರಾಯಣಯ್ಯ), ಬುದ್ಧಿ ಬೆಳೆದ ಕಾಲಕ್ಕೆ ಜಾತಿಸೂಚಕ ಎಂಬಂತೆ ಬಿಟ್ಟು, ನಿರ್ಲಿಪ್ತ ‘ರಾವ್’ ಸೇರಿಸಿಕೊಂಡಿದ್ದರು. ಹಾಗೇ ನನ್ನ ಹೆಸರಿಗೊಂದು ಉತ್ತರಾರ್ಧ ಬೇಕೆಂದು ಯೋಚಿಸಿ ‘ವರ್ಧನ’ವನ್ನು ಕೇವಲ ಬಳಕೆಯಲ್ಲಿ ತಂದಿದ್ದರು. ಮಗನ ಪ್ರಾರಂಭಿಕ ದಾಖಲೆಗಳ ಬಗ್ಗೆ ತಂದೆಗೇ ಇರದ ಅರಿವು ನನಗಾದರೂ ಎಲ್ಲಿಂದ ಬರಬೇಕು. ನಾನು ಪ್ರೌಢಶಾಲಾ ಹಂತದಲ್ಲಿ, ಸ್ವಂತ ಉಮೇದಿನಲ್ಲಿ ಹೆಸರಿನ ಕೊನೆಗೆ ‘ರಾವ್’ ಬಡಿದುಕೊಂಡೆ! ಎಸ್ಸೆಸ್ಸೆಲ್ಸಿ ಅಂಕ ಪಟ್ಟಿಯಲ್ಲಿ ನನ್ನ ರುಜು, ನಾನು ಓದಿದ್ದು ಕನ್ನಡ ಮಾಧ್ಯಮದಲ್ಲೇ ಆದರೂ ಇಂಗ್ಲಿಷಿನಲ್ಲಿ - ಜಿ.ಎನ್. ಅಶೋಕ ವರ್ಧನ ರಾವ್. 

ಸರಕಾರೀ ಕಾಲೇಜಿನ ಪದವಿಪೂರ್ವ ಪ್ರವೇಶ ಕಾಲದಲ್ಲಿ ಗುಮಾಸ್ತರ ಹೆಚ್ಚುವರಿ ಹೊರೆಯನ್ನು ತಗ್ಗಿಸಲು ಕೆಲವು ಸಮರ್ಥ ಅಧ್ಯಾಪಕರು ಸ್ವಯಂಸೇವೆ ನಡೆಸುವುದಿತ್ತು. ಹಾಗೆ ಕುಳಿತಿದ್ದ ತಂದೆ, ಸಹಜವಾಗಿ ಮಗನ (ನನ್ನ) ದಾಖಲೆಗಳನ್ನು ಪರಿಶೀಲಿಸುವಾಗ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿ ‘ಜಿ.ಎನ್. ಅಶೋಕ’, ಅರ್ಜಿಯಲ್ಲಿ ಬಾಲವಾಗಿ ಬಂದ ‘ವರ್ಧನ’ ಮತ್ತೆ ಅರ್ಜಿದಾರನ ಸಹಿಯಲ್ಲಿ ಕೊಸರು - ‘ರಾವ್’ ಕಂಡು ನಕ್ಕಿರಬೇಕು. ತಂದೆ ‘ವರ್ಧನ’ ಉಳಿಸಿದರು, ‘ರಾವ್’ಗೆ ಕತ್ತರಿ ಹಾಕಿ, ಮನೆಯಲ್ಲಿ ನನಗೂ ತಾಕೀತು ಮಾಡಿದರು. ಮುಂದೆ ಬಿ.ಎ., ಎಂ.ಎಗಳಲ್ಲೆಲ್ಲ ತಂದೆಯ ತಿದ್ದುಪಡಿ ಊರ್ಜಿತವಾಯ್ತು. ಜೀವನರಂಗದಲ್ಲಿ ಯಾವುದೇ ಗಂಭೀರ ದಾಖಲಾತಿಗಳಿಗೆ ಜನನ ಪತ್ರಕ್ಕೆ ಪರ್ಯಾಯವಾಗಿ ಬಳಕೆಯಾಗುವುದು ಎಸ್ಸೆಸ್ಸೆಲ್ಸಿ ಅಂಕಪಟ್ಟಿ. ಆದರೆ ನಾನು ಸ್ವೋದ್ಯೋಗ ನೆಚ್ಚಿದ್ದರಿಂದ ಸಮಸ್ಯೆ ತೊಡರುಗಾಲು ಕೊಡಲಿಲ್ಲ. ಹಾಗಾಗಿ ನಿಯಮಾನುಸಾರ ಹೆಸರು ಬದಲಾವಣೆಯ ಔಪಚಾರಿಕತೆಗಳಿಗೆ (ಅದೆಷ್ಟೋ ಮೌಲ್ಯದ ಪ್ರಮಾಣಪತ್ರ, ವಕೀಲರ ರುಸುಂ, ಪತ್ರಿಕಾ ಜಾಹೀರಾತು ಇತ್ಯಾದಿ) ದಂಡ ಕೊಡದೇ ‘ಜಿ.ಎನ್.ಅಶೋಕ ವರ್ಧನ’ನಾಗಿಯೇ ಉಳಿದುಬಿಟ್ಟೆ. ಎಂಎ ಮಾಡುತ್ತಿದ್ದಂತೆ, ಹವ್ಯಾಸಿಯಾಗಿ ಅತ್ರಿ ಬುಕ್ ಸೆಂಟರ್ (ಮೈಸೂರು) ಶುರು ಮಾಡಿದಂದಿನಿಂದ ಆ ಎಲ್ಲ ಖಾತೆಗಳ ಜತೆ ಕನ್ನಡ ರುಜುವನ್ನೇ ನಾನು ರೂಢಿಗೆ ತಂದದ್ದರಿಂದ ಅದರ ತಕರಾರೂ ನನ್ನನ್ನು ಬಾಧಿಸಲಿಲ್ಲ. 

ತಂದೆ ನನ್ನ ಹೆಸರಿನೊಡನೆ ಕೊಟ್ಟ ಮಾರ್ಗಸೂಚಿಗಳನ್ನು ಇಷ್ಟಪಟ್ಟು, ಮುಂದೆ ನಮ್ಮ ಆಪ್ತವಲಯದಲ್ಲಿ ಎಷ್ಟೂ ಅಕಾರಾದಿ ಮಕ್ಕಳು ಬಂದಿದ್ದಾರೆ. ಅಭಯ, ಆಭಾ, ಆನಂದ, ಅನರ್ಘ್ಯ ಅಯ್‍ಶ್ವರ್ಯ, ಅನಂತ, ಅಕ್ಷರಿ, ಆರುಷ, ಅನಿತಾ, ಅಪರ್ಣ, ಆದರ್ಶ, ಅಲಕಾ, ಅಕ್ಷರ, ಅಯ್‍ಸಿರಿ, ಅನನ್ಯ, ಅಪೂರ್ವ, ಅವನಿ, ಅನೂಹ್ಯ, ಅನುಷ.... ನಾನಂತೂ ಇದನ್ನು ಅ-ವ್ಯಕ್ತಿಗಳಿಗೂ ಹಿಗ್ಗಿಸಿ - ಅತ್ರಿ ಬುಕ್..., ಆರೋಹಣ, ಅಭಯಾದ್ರಿ, ಅಭಯಾರಣ್ಯ, ಅಶೋಕವನ, ಅರಮನೆಗಳಿಗೂ ಹಿಗ್ಗಿಸಿದ್ದಿದೆ. ಹೀಗಿದ್ದೂ ‘ಜಿ.ಎ. ಅಭಯಸಿಂಹ’ನ ಜನನ ಪ್ರಮಾಣ ಪತ್ರ ನೋಡಿದಾಗ ತಂದೆ ಸಣ್ಣದಾಗಿ ವಿಷಾದಿಸಿದ್ದರು "ಕಾಲಪರೀಕ್ಷೆಯಲ್ಲಿ ಅರ್ಥ ಕಳೆದುಕೊಂಡ ‘ಜಿ’ಯನ್ನು ಬಿಟ್ಟು ಬಿಡಬಹುದಿತ್ತು. ಹಾಗೂ ಬೇಕಿದ್ದರೆ ‘ಅ(ತ್ರಿ)ಅ(ಶೋಕ)’ ಸೇರಿಸಬಹುದಿತ್ತು." ಜೀವನದ ಮಜಲೋಟದಲ್ಲಿ ನನ್ನಿಂದ ಕೈಕೋಲು ಪಡೆದ ಅಭಯ-ರಶ್ಮಿಯರು, ತಮ್ಮ ಮಗಳಿಗೆ ಕುಟುಂಬ ನಾಮವಿರಲಿ, ಮುನ್ಸಂಕೇತಾಕ್ಷರವನ್ನೂ ಬಿಟ್ಟು ಕೇವಲ ‘ಆಭಾಸಿಂಹ’ ಎಂದು ದಾಖಲಿಸಿದ್ದನ್ನು ನೋಡಲು ನನ್ನಪ್ಪನಿಲ್ಲ! 

೧೦. ಪತ್ತೇದಾರ ಪುರುಷೋತ್ತಮನ ಸೋಲು (ಓದು) 


ಗವೀಪುರಂ ವಿಸ್ತರಣೆಯೊಳಗಿನ ಸರಸ್ವತೀ ವಿದ್ಯಾಮಂದಿರ ನನ್ನ ತಮ್ಮಂದಿರಿಬ್ಬರ ಪ್ರಾಥಮಿಕ ಶಾಲೆ. ಅವರದು ಇಂಗ್ಲಿಷ್ ಮಾಧ್ಯಮ. ಆನಂದ ಎರಡೋ ಮೂರನೆಯದೋ ತರಗತಿಗೆ ಸೇರಿದ್ದಿರಬೇಕು. ಅನಂತ ಎರಡು ವರ್ಷಗಳ ಅಂತರದಲ್ಲೇ ಅವನ ಬೆನ್ನು ಹಿಡಿದಿದ್ದ. ಆನಂದನಿಗೆ ಬಲು ಬೇಗನೇ ಇತರ ಓದಿನ ರುಚಿ ಹತ್ತಿತ್ತು. ಬಹುಶಃ ಅದಕ್ಕೆ ದೊಡ್ಡ ಕುಮ್ಮಕ್ಕು ಕೊಟ್ಟದ್ದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರಿನ ಮಕ್ಕಳ ವಿಭಾಗದ ಗ್ರಂಥಾಲಯ. ನಾನು ಸ್ವಲ್ಪ ನಿಧಾನವಾಗಿ (ಕನ್ನಡ ಮಾಧ್ಯಮದಿಂದ ಬಂದವನಾದ್ದರಿಂದ?) ಎನಿಡ್ ಬ್ಲೈಟನ್ ಕಾದಂಬರಿಗಳ ಜತೆ ನಡೆದಿದ್ದರೆ, ಆನಂದ ವೇಗವಾಗಿ ಸಾಗಿದ್ದ. ಇದಕ್ಕೆ ಪರಿಹಾರವಾಗುವಂತೆ ನನಗೆ ಸಿಕ್ಕಿದ್ದು ಕನ್ನಡ ಸರ್ಕ್ಯುಲೇಟಿಂಗ್ ಗ್ರಂಥಾಲಯಗಳು. 

ನನ್ನಪ್ಪಮ್ಮರ ಸಂಬಂಧ ಸೋದರಿಕೆಯದು (ನನ್ನಮ್ಮನ ತಂದೆಯ ತಂಗಿ, ನನ್ನಪ್ಪನ ಅಮ್ಮ). ಹಾಗಾಗಿ ನಾವು ಬೆಂಗಳೂರಿಗೆ ಬಂದದ್ದೇ (ಚಿಕ್ಕಪ್ಪ) ಮೂರ್ತಿ, ಅಮ್ಮನಿಗೇನೂ ಮುಜುಗರವಿಲ್ಲದಂತೆ ತನ್ನ ಬ್ರಹ್ಮಚಾರಿ ಬಿಡಾರವನ್ನು ಮುಚ್ಚಿ, ಅಣ್ಣನ ಮನೆ ಸೇರಿಕೊಂಡಿದ್ದ. ಕೆಲವು ಕಾಲಾನಂತರ ಅವನಿಗೆ ಮದುವೆಯಾದಾಗ ನಮ್ಮ ಮನೆಗೆ ಸಮೀಪದಲ್ಲೇ ಪ್ರತ್ಯೇಕ ಬಾಡಿಗೆ ಮನೆ ಮಾಡಿದ. ಅವನ ಹೆಂಡತಿ - ವಿಜಯ (ಚಿಕ್ಕಮ್ಮ), ಗ್ರಾಮೀಣ ಹಿನ್ನೆಲೆಯಿಂದ ಬಂದಾಕೆ. ಹಾಗಾಗಿ ಆಕೆಯ ಮೊದಮೊದಲಿನ ಪೇಟೆಯ ಅನುಭವ ಮತ್ತು ಸಲಹೆಗಳಿಗೆಲ್ಲ ಅಮ್ಮ ಧಾರಾಳ ಒದಗುತ್ತಿದ್ದಳು. ಆದರೆ ಎರಡು ಮನೆಯ ನಡುವಣ ಓಡಾಟದ ಕಾರ್ಯಗಳಿಗೆಲ್ಲ ಹೆಚ್ಚಾಗಿ ಹೋಗುತ್ತಿದ್ದವನು ನಾನೇ. (ನನ್ನ ತಮ್ಮಂದಿರಿಬ್ಬರೂ ನನ್ನಿಂದ ೬,೮ ವರ್ಷಗಳಿಗೆ ಹಿಂದುಳಿದವರು, ಸ್ವತಂತ್ರ ಓಡಾಟಕ್ಕೆ ಚಿಕ್ಕವರು) 

ವಿಜಯನಿಗೆ ಜನಪ್ರಿಯ ಸಾಮಾಜಿಕ ಕಾದಂಬರಿಗಳ ಮೋಹ ತುಂಬಾ ಇತ್ತು. ಅವಕ್ಕೆ ಒಳ್ಳೆಯ ದಾರಿ ತೋರುವ ಮತ್ತು ಸಕಾಲಕ್ಕೆ ಪುಸ್ತಕ ಒದಗಿಸುವ ಜವಾಬ್ದಾರಿ ನಾನು ವಹಿಸಿಕೊಂಡೆ. ಜತೆಗೇ ಎನ್. ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳನ್ನು ಓದುವ ನನ್ನ ಸ್ವಾರ್ಥಕ್ಕೆ ಒಳ್ಳೆಯ ಸಂಗಾತಿ ಕಂಡುಕೊಂಡೆ. ಮೊದಲು ಬ್ಯೂಗಲ್ ರಾಕ್ ರಸ್ತೆಯ ನಾಗಸಂದ್ರ ರಸ್ತೆಯ (ಈಗಿನ ಡಿವಿಜಿ ರಸ್ತೆ) ಕೊನೆಗೆ ಹೋಗಿ ದೊಡ್ಡ ಸರ್ಕ್ಯುಲೇಟಿಂಗ್ ಲೈಬ್ರೆರಿಯಿಂದ ತರುತ್ತಿದ್ದೆ. ನನ್ನ ಅದೃಷ್ಟಕ್ಕೆ ಸ್ವಲ್ಪೇ ಸಮಯದಲ್ಲಿ ನಮ್ಮ ಮನೆಯ ಸಮೀಪದಲ್ಲೇ ಸಾಕಷ್ಟು (ಎಲ್ಲವೂ ಜನಪ್ರಿಯವೇ) ಪುಸ್ತಕಗಳಿದ್ದ ಬೇರೊಂದು ಖಾಸಗಿ ಸರ್ಕ್ಯುಲೇಟಿಂಗ್ ತೆರೆಯಿತು. ನಿಜದಲ್ಲಿ ನಾನು ಪತ್ತೇದಾರಿ ಕಾದಂಬರಿ ಓದುವುದು ನನ್ನಪ್ಪಮ್ಮರ ಶಿಸ್ತು ಸಂಹಿತೆಗೆ ಬಾಹಿರವಾದದ್ದು. ಆದರೆ ಗ್ರಂಥಾಲಯದಿಂದ ಪಡೆದ ಸಮಯ, ಮರಳಿಸುವ ಸಮಯಗಳ ನಡುವೆ ಹೊಂದಾಣಿಕೆಯಲ್ಲಿ ನಾನು ಹುಚ್ಚುಗಟ್ಟಿ ನರಸಿಂಹಯ್ಯ ಬೇಟೆಯಾಡಿದೆ. ಪಠ್ಯ ಪುಸ್ತಕಗಳ ಮರೆಯಲ್ಲಿ, ಶಾಲಾ ಪರೀಕ್ಷೆ, ಶಿಕ್ಷೆಗಳನ್ನು ಮರೆಸುವಂತೆ ನನ್ನನ್ನು ಆವರಿಸಿದ್ದರು - ಢಂ ಢಂ ದಗಾಕೋರ, ಭಯಂಕರ ಭೈರಾಗಿ, ಮಹೇಂದ್ರಲೋಕದಲ್ಲಿ ಪತ್ತೇದಾರ..... ಹೋದಲ್ಲಿ, ಬಂದಲ್ಲಿ ಪುರುಷೋತ್ತಮ, ರಾಮನಾಥ, ಮದುಸೂದನ.... ಅರಿಂಜಯ ಇನ್ನೂ ಬಾಗಿಲು ಕಟಕಟಾಯಿಸುತ್ತಿದ್ದ. ಮೂರ್ತಿ - ವಿಜಯರು ಚಾಮರಾಜಪೇಟೆಗೆ ಮನೆ ಬದಲಾಯಿಸಿದರು. ಇಷ್ಟರಲ್ಲಿ ಸ್ವತಂತ್ರ ಓಡಾಟ, ವ್ಯವಹಾರ ವಿಜಯಳಿಗೆ ರೂಡಿಸಿತ್ತು. ಸಿಕ್ಕಿಬಿದ್ದ ನನ್ನೊಳಗಿನ ಪತ್ತೇದಾರನಿಗೆ ಮತ್ತೆ ಬಾಗಿಲು ತೆರೆಯುವಾಗ ಅತ್ರಿಯುಗ ಆರಂಭವಾಗಿತ್ತು. ಒಬ್ಬಿಬ್ಬರಲ್ಲ, ಇಡಿಯ ಜಾತ್ರೆಯೇ ನಾನಾಗಿದ್ದೆ, ನನ್ನೊಳಗಿನ ಓದುಗ ಮಾತ್ರ ಇನ್ನೆಲ್ಲೋ ನೋಡುತ್ತಿದ್ದ. 

೧೧. ಕನ್ನಡ ಮಾಧ್ಯಮದಿಂದ ಇಂಗ್ಲಿಷ್ ಎಮ್ಮೆ (ಬ್ರಿಜ್ ಕೋರ್ಸ್) 


ಆ ದಿನಗಳಲ್ಲಿ (೧೯೬೮) ಪದವಿಪೂರ್ವ ಶಿಕ್ಷಣ ಮಂಡಳಿ ಅಥವಾ ಪ.ಪೂ ಕಾಲೇಜಿಗೆ ಸ್ವತಂತ್ರ ಅಸ್ತಿತ್ವ ಇರಲಿಲ್ಲ. ಮತ್ತೆ ಎಲ್ಲಾ ಕಾಲೇಜು ಶಿಕ್ಷಣದಲ್ಲಿ ಇದ್ದ ಮಾಧ್ಯಮ ಇಂಗ್ಲಿಷ್ ಮಾತ್ರ. ಅದಕ್ಕಿದ್ದ ದೊಡ್ಡ ಅಡ್ಡಿ - ಪ್ರವೇಶ ಬಯಸಿ ಬರುವ (ನಾನೂ ಸೇರಿದಂತೆ) ಹೆಚ್ಚಿನವರು ಕನ್ನಡ ಮಾಧ್ಯಮಿಗಳು. ಹಾಗಾಗಿ ಸರಿಯಾದ ಪಾಠಗಳು ತೊಡಗುವ ಮೊದಲೋ ಅಥವಾ ಜತೆಜತೆಗೋ ಒಂದು ತಿಂಗಳು ಬ್ರಿಜ್ ಕೋರ್ಸ್ ಎಂದು ಭಾಷಾ ತರಬೇತು ಕೊಡುವ ತರಗತಿಗಳನ್ನು ಕಡ್ಡಾಯ ಮಾಡಿದ್ದರು. (ಇದು ಪ್ರತಿ ವರ್ಷ ನಡೆಯುತ್ತಿತ್ತೋ... ಇತ್ಯಾದಿ ನನಗೆ ನೆನಪಿಲ್ಲ) ಇದನ್ನು ಕೆಲವು ಅನ್ಯ ವಿಷಯಕ (ಭಾಷಾ ಅಧ್ಯಾಪಕರಲ್ಲದವರು) ಅಧ್ಯಾಪಕರೂ ನಡೆಸಿದ್ದುಂಟು. ನಮ್ಮ ವಿಭಾಗಕ್ಕೆ ಮಾತ್ರ ಇಂಗ್ಲೆಂಡಿನ ಯಾವುದೋ ಭಾಷಾ ಕಲಿಕಾ ಕೇಂದ್ರದ ತರುಣ ಶಿಕ್ಷಕನೊಬ್ಬ ಬಂದಿದ್ದ. ಆತನಿಗೆ ಅದು ಸಂಶೋಧನಾ ವಿಸ್ತರಣೆಯೂ ಆಗಿತ್ತಂತೆ. ಕನ್ನಡವಿರಲಿ, ಭಾರತೀಯ ಎದೆ ಬಡಿತಕ್ಕೇ ಹೊಸಬನಾದವ, ಕನ್ನಡ ಮಾಧ್ಯಮದಲ್ಲಿ ಬಂದವರಿಗೆ ಇಂಗ್ಲಿಷ್ ಹೇಗೆ ಕಲಿಸಿಯಾನು ಎಂಬ ಕೆಟ್ಟ ಕುತೂಹಲ ನಮ್ಮಲ್ಲಿ ಅನೇಕರಿಗಿತ್ತು. ಆದರೆ ವಾಸ್ತವದಲ್ಲಿ ಪರಿಣಾಮ ಅದ್ಭುತವಾಗಿತ್ತು. ನನ್ನ ಇಂಗ್ಲಿಷ್ ಕುರಿತ ಕೀಳರಿಮೆಯನ್ನೇ ಕಿತ್ತು ಹಾಕಿತ್ತು ಬ್ರಿಜ್ ಕೋರ್ಸ್. ಬೆಂಗಳೂರು ವಿವಿ ನಿಲಯ ಆ ವರ್ಷ ಪರೀಕ್ಷಾ ಸುಧಾರಣೆಯನ್ನು ತಂದು, ಅಂತಿಮ ಇಂಗ್ಲಿಷ್ ಪರೀಕ್ಷೆಗೆ ಪ್ರಶ್ನ ಪತ್ರಿಕೆಯೇ ಉತ್ತರಪತ್ರಿಕೆಯೂ ಆಗಿತ್ತು; ಹೆಸರು ‘ನ್ಯೂ ಟೈಪ್’! ಅದರಲ್ಲಿ ಸಾಂಪ್ರದಾಯಿಕ ಪ್ರಬಂಧದಂಥ ಉತ್ತರದ ಬದಲು, ಸರಿ ತಪ್ಪು ಆಯ್ಕೆ, ಸೀಮಿತ ಸಾಲುಗಳಲ್ಲಿ ಚುಟುಕು ಉತ್ತರ ನಿರೀಕ್ಷೆ ಇತ್ತು. ಉರು ಹೊಡೆದು ಕಕ್ಕುವವರ ಮೇಲೆ ಬುದ್ಧಿವಂತಿಕೆ ಸವಾರಿ ಮಾಡಿತ್ತು. ನಾನು ಪ್ರಥಮ ದರ್ಜೆಯಲ್ಲೇ ಉತ್ತೀರ್ಣನಾಗಿದ್ದೆ. 

ಸ್ನಾತಕ ಕಲಿಕೆ ಕಾಲಕ್ಕೆ ನಾವು ಮೈಸೂರಿಗೆ ಬಂದಿದ್ದೆವು. ಬಹುಶಃ ‘ಇಂಗ್ಲಿಷ್ ಫಸ್ಟ್ ಕ್ಲಾಸ್’ ಗರ್ವದಲ್ಲೇ ನಾನು ಕಲಾ ಸ್ನಾತಕ ಪದವಿಗೆ ಸೇರುವಾಗ (ಮಹಾರಾಜ ಕಾಲೇಜು) ಇಂಗ್ಲಿಷನ್ನು ಒಂದು ಐಚ್ಛಿಕವಾಗಿ ಆಯ್ದುಕೊಂಡಿದ್ದೆ. (ಎರಡನೇ ಮುಖ್ಯ ಐಚ್ಛಿಕ - ಕನ್ನಡ, ಅಮುಖ್ಯ ಐಚ್ಛಿಕ - ಅರ್ಥಶಾಸ್ತ್ರ.) ಪ್ರಕಾಂಡ ಪಂಡಿತ, ಮೂಗಿನ ತುದಿಯಲ್ಲಿ ಸಿಡಿಸಿಡಿ ಕೋಪದ ಸಿಡಿಜಿ (ಪ್ರೊ| ಸಿಡಿ ಗೋವಿಂದರಾವ್), ಮೊದಲ ಭೇಟಿಯಲ್ಲಿ, "ಏನು ಮೂವತ್ಮೂರು ಮಂದಿ ಐಚ್ಛಿಕ ಇಂಗ್ಲಿಷಿನಲ್ಲಿ" ಎಂದೇ ವ್ಯಂಗ್ಯವಾಡಿದರು. ಮತ್ತು ಅದೇ ಕುತೂಹಲವನ್ನು ಮುಂದುವರಿಸಿದಂತೆ ಒಬ್ಬೊಬ್ಬರನ್ನೇ ವಿಚಾರಣೆಗೆ ಗುರಿಪಡಿಸಿದರು. ಹೆಚ್ಚಿನ ಸಹಪಾಠಿಗಳು ಮೈಸೂರು ಆಸುಪಾಸಿನವರೇ. ಅವರಲ್ಲೊಂದಷ್ಟು ಮಂದಿಯ ಗೇಲಿ ಮುಗಿದ ಮೇಲೆ ನನ್ನ ಸರದಿ. ಅಳುಕುತ್ತಲೇ "ಸರಕಾರೀ ಕಾಲೇಜು, ೭೩%..." ಹೇಳುತ್ತಿದ್ದಂತೆ, ಸಿಡಿಜಿ ಹುಬ್ಬು ಹಾರಿತ್ತು. "ಅರೆ, ಯಾವೂರು?" ನಾನು ಹೆಮ್ಮೆಯಿಂದ "ಬೆಂಗಳೂರು ಗ್ಯಾಸ್..." ಹೇಳುವುದರೊಳಗೆ, "ಹೋ ನ್ಯೂ ಟೈಪ್!! ಕೂತ್ಕಳಯ್ಯ" ಎಂದು ಮೊಟಕಿಬಿಟ್ಟರು. 

ಮೂರು ವರ್ಷದ ಅವಧಿಯಲ್ಲಿ ನಾನೇನು ಕಲಿತೆನೋ ಬಿಟ್ಟೆನೋ ಒಂದೇ ಪೆಟ್ಟಿನಲ್ಲಿ ಸ್ನಾತಕನಾದೆ. ಮತ್ತೆ ಸಾಗಣಾಪಟ್ಟಿಯಲ್ಲಿ ಬಿದ್ದು, ಇಂಗ್ಲಿಷ್ ಮತ್ತು ಕನ್ನಡ ಸ್ನಾತಕೋತ್ತರಕ್ಕೆ ಅರ್ಜಿ ಗುಜರಾಯಿಸಿದ್ದೆ. ಪ್ರಥಮ ಆಯ್ಕಾಪಟ್ಟಿಯಲ್ಲೇ ಇಂಗ್ಲಿಷ್ ಇಲಾಖೆ ಸೇರಿಸಿಕೊಂಡಿತು. ಬೆಂಡು ಎರಡುವರ್ಷದಲ್ಲಿ ತೇಲಿದ ಕತೆ, ಚೂರುಪಾರುಗಳಲ್ಲಿ ನನ್ನ ಮಾನಸಗಂಗೋತ್ರಿಯ ದಿನಗಳಲ್ಲಿದೆ. ಅದರ ಕೊನೆಯ ಅಂಕಣ ಮೌಖಿಕ ಪರೀಕ್ಷೆ. ಅಷ್ಟರಲ್ಲೇ ನಾನು ಮಂಗಳೂರಿನಲ್ಲಿ ಪುಸ್ತಕದಂಗಡಿ ತೆರೆಯುವ ನಿಟ್ಟಿನಲ್ಲಿ ಕೆಲಸ ಶುರು ಮಾಡಿದ್ದೆ. ಅಂತಿಮ ಪರೀಕ್ಷಾ ವೇಳೆಗೆ ಚೂರುಪಾರು ತಲೆಗೆ ತುಂಬಿಕೊಂಡವನ್ನೂ ಕಳೆದು, ತೊಳೆದು ಬಂದಿದ್ದೆ. ಸರದಿಯಲ್ಲಿ ಕರೆ ಬಂದಾಗ ನಿರುಮ್ಮಳವಾಗಿ ಪರೀಕ್ಷಾ ಕೊಠಡಿಯನ್ನು ಹೊಕ್ಕೆ. ನಿರೀಕ್ಷೆಯ ಇಲಾಖಾ ಮುಖ್ಯಸ್ಥ - ಸಿಡಿ ನರಸಿಂಹಯ್ಯನವರೂ ‘ಅದ್ವಿತೀಯ’ ಎಚ್ಚೆಚ್ ಅಣ್ಣೇಗೌಡರೂ ಕುಳಿತಿದ್ದರು. ಆಶ್ಚರ್ಯಕರವಾಗಿ ಇದ್ದ ಅನ್ಯ ಪ್ರೊಫೆಸರ್ ಸಿಡಿಜಿ! ನನ್ನನ್ನು ಕಾಣುತ್ತಿದ್ದಂತೆ ಸಿಡಿಜಿ ನಸು ನಗುತ್ತ, ತುಂಟ ಕಣ್ಣು ಮಿನುಗಿತು. ಸಟ್ಟಂತ ಉದ್ಗರಿಸಿದರು "ಅರೆ! ಸ್ನಾತಕೋತ್ತರ ಇಲಾಖೆಯಲ್ಲೂ ಹುರಿಮೀಸೆ ಉಳಿಸಿಕೊಂಡಿದ್ದೀ!" ನನ್ನ ಅಧ್ಯಯನಕ್ಕೆ ಮಣ್ಣು ಹಾಕಿ, ನಾನೇ ಕೊಟ್ಟ ಲಿಖಿತ ಉತ್ತರಪತ್ರಿಕೆಯ ಆಧಾರದಲ್ಲಾದರೂ ಪ್ರಶ್ನೆ ಬಂತೇ? ಇಲ್ಲ, ಮತ್ತೆರಡೇ ಅನೌಪಚಾರಿಕ ಮಾತುಗಳಲ್ಲಿ ‘ಇನ್ನೊಂದು ಎಮ್ಮೆ’ ಉದ್ಯೋಗ ಜಗತ್ತಿಗೆ ಬ್ರಿಜ್ ಕ್ರಾಸ್ ಮಾಡಿಯಾಗಿತ್ತು! 

೧೨. ಹಿಂದಿ ಚಳವಳಿಯಲ್ಲಿ ಎನ್.ಸಿ.ಸಿ (ತ್ರಿಭಾಷಾ ಗೊಂದಲ) 


ಅಧಿಕೃತ ಪ್ರವೇಶ ಇಲ್ಲದೇ ನಾನು ಮೂರು ನಾಲ್ಕು ಎನ್ಸಿಸಿ ಶಿಬಿರಗಳಲ್ಲಿ ಭಾಗವಹಿಸಿದ್ದು ನಿಮಗೆ ತಿಳಿದೇ ಇದೆ. ಅಲ್ಲಿ ಹತ್ತಿದ ರುಚಿಯಿಂದ ನಾನು ಪದವಿಪೂರ್ವ ತರಗತಿಗೆ ಸೇರುವ ಕಾಲಕ್ಕೆ (೧೯೬೮) ನಿಜದಲ್ಲಿ ನನ್ನ ಪ್ರಥಮ ಆದ್ಯತೆ ಇದ್ದದ್ದು ಎನ್.ಸಿ.ಸಿಗೆ. ಅದರ ಮೂಲಕ ಹಿಮಾಲಯದ ಪರ್ವತಾರೋಹಣ ತರಬೇತಿ ಕೇಂದ್ರಗಳಿಗೆ ಹೋಗುವ ಕನಸು ನನಸಾಗಿಸಲು ಕಾದಿದ್ದೆ. 

ಕಡ್ಡಾಯ ಎನ್ಸಿಸಿ ಇದ್ದುದರಿಂದ ನಮ್ಮ ಕಾಲೇಜಿನ ತುಂಬಾ ಬೂಟುಗಾಲುಗಳದೇ ಸದ್ದು. ೧೨ನೇ ಮೈಸೂರು ಬಟಾಲಿಯನ್ ಎನ್ಸಿಸಿಗೆ ಪೂರ್ಣ ಕಾಲಿಕ ಮುಖ್ಯಸ್ಥರಾಗಿ ಮೇಜರ್ ನಾರಾಯಣ ಸಿಂಗ್ - ಪಕ್ಕಾ ಸೈನ್ಯದವರೇ ಇದ್ದರು. ಆದರೆ ಕಾಲೇಜಿನ ಲೆಕ್ಕದಲ್ಲಿ ನನ್ನ ತಂದೆಯೇ ವರಿಷ್ಠ. ಕ್ಯಾಡೆಟ್ಸನ್ನು ಎಲ್ಲ ಅಧ್ಯಾಪಕ-ಅಧಿಕಾರಿಗಳಿಗೆ ಹೊಂದುವಂತೆ (ಕೆ.ಎಸ್. ನಿಸಾರ್ ಅಹಮದ್, ಕೆ.ಎನ್.ಶಿವಪ್ಪ, ಕೆಂಡಗಣ್ಣ ಸ್ವಾಮಿ, ಕೃಷ್ಣಮೂರ್ತಿ, ಅಹಮದುಲ್ಲಾ ಖಾನ್.... ಒಟ್ಟು ಎಂಟು ಮಂದಿ) ಎಂಟು ‘ಕಂಪೆನಿ’ಗಳಿಗೆ ಹಂಚಿದ್ದರು. 

ಪದವಿಪೂರ್ವ ಹುಡುಗರೆಲ್ಲ ಎಂಟನೇ ಕಂಪೆನಿಯಲ್ಲಿದ್ದೆವು. ಅಹಮದುಲ್ಲಾಖಾನ್ ಕಾಲೇಜಿನ ದೈಹಿಕ ಶಿಕ್ಷಕ, ನಮ್ಮ ಅಧಿಕಾರಿ. ನಿವೃತ್ತಿ ಸಮೀಪದಲ್ಲಿದ್ದ ಖಾನ್ ಸಾಹೇಬರು ಮುಖವನ್ನು ನುಣ್ಣಗಿಟ್ಟುಕೊಂಡಿದ್ದದ್ದು ಬಿಟ್ಟರೆ, ವರ್ತಮಾನದ ಜನಪ್ರಿಯ ವ್ಯಕ್ತಿಯಂತೇ - ೫೬ ಇಂಚಿನ ಎದೆ, ಕಂಚಿನ ಧ್ವನಿ, ಭರ್ಜರಿ ಗತ್ತು! ಸದಾ ಕಳ್ಳು ಕುಡಿದ ವಾಸನೆ ಇದ್ದರೂ ಎಂದೂ ಮಾತು, ನಡೆಗಳಲ್ಲಿ ತಡವರಿಸಿದವರಲ್ಲ. ಕವಾಯತು, ಪ್ರದರ್ಶನಗಳಲ್ಲಂತೂ ಭೂಷಣಪ್ರಾಯರು. ಇವರು ವಿಶೇಷಪಟ್ಟ ದಿನಗಳಲ್ಲಿ ಕ್ಯಾಡೆಟ್ಟುಗಳ ಔಪಚಾರಿಕ ತನಿಖೆಗೆ ಹೊರಟರೆಂದರೆ ಎಲ್ಲರಿಗೂ ಅಳುಕು, ಸ್ವಲ್ಪ ಪುಳಕವೂ! ಬಟ್ಟೆಯ ಇಸ್ತ್ರಿ, ಲೋಹದ ಹೊಳಪು, ಸೊಂಟಪಟ್ಟಿಯ ಬಿಗಿ, ಟೊಪ್ಪಿಯ ಓರೆ, ಬೂಟಿನ ಮಿಂಚು ಖಾನ್ ಸಾಹೇಬರ ಗೃಧ್ರದೃಷ್ಟಿಗೆ ಸಿಕ್ಕಿ, ಸಿಡಿಯುವ ಕಟಕಿ ಹುಡುಗನಿಗೆ ತಲ್ಲಣವೇ ಆದರೂ ಉಳಿದವರಿಗೆ ಮನರಂಜನೆ. ನಮ್ಮಲ್ಲಿ ಬಹುತೇಕರದು ಇನ್ನೂ ಮೀಸೆ ಮೊಳೆಯುವ ಪ್ರಾಯ. ಒಬ್ಬಿಬ್ಬ ಅಪವಾದಿಗಳ ಗದ್ದದ ಮುಳ್ಳನ್ನು ಸಾಹೇಬರು ಸವರಿ, ಒಕ್ಕಣ್ಣು ಮಿಡಿದು "ಏನೋ ಕೋಳಿಕಳ್ಳಾ, ಹೆಂಡತಿ ಬಸುರಿಯೇನೋ..." ಎಂದರೆ ಸಾಕು ಪೆರೇಡಿನ ಗಾಂಭೀರ್ಯವೆಲ್ಲ ಹಾರಿಹೋಗುತ್ತಿತ್ತು. (ಕೋಳಿಕಳ್ಳಾ - ಸಾಹೇಬರ ಪ್ರೀತಿಯ ಬೈಗುಳು!) ಹಾಜರಿ, ಅಧಿಕೃತ ಪತ್ರ ವ್ಯವಹಾರಗಳನ್ನೆಲ್ಲ ಜಾಣತನದಲ್ಲಿ ನಮ್ಮ ಮೂಲಕ ಮಾಡಿಸಿಕೊಳ್ಳುತ್ತಿದ್ದ ಖಾನ್ ಸಾಹೇಬರ ಅಸಲಿಯತ್ತು ಏನೆನ್ನುವುದು ನನಗಂತೂ ತಿಳಿಯಲಿಲ್ಲ. 

ನನ್ನ ತಂದೆ ಅನ್ಯ ಕಂಪೆನಿ ವಹಿಸಿಕೊಂಡಿದ್ದರೂ ಬಟಾಲಿಯನ್ ಕವಾಯತುಗಳಲ್ಲಿ ಇಡಿಯ ಕಾಲೇಜಿನ ನೇತೃತ್ವ ವಹಿಸುತ್ತಿದ್ದರು. ಆದರೆ ಅಲ್ಲಿ ಅಥವಾ ಕಾಲೇಜಿನಲ್ಲೂ ಅವರು ಎಂದೂ ನನ್ನನ್ನು ವಿಶೇಷವಾಗಿ ಗುರುತಿಸಿದ್ದು, ದೊಡ್ಡವರಿಗೆ ಪರಿಚಯಿಸಿದ್ದು ಇರಲೇ ಇಲ್ಲ. ಆದರೆ ಖಾನ್ ಸಾಹೇಬರು ನನ್ನ ತಂದೆ ಕುರಿತ ಭಯ ಭಕ್ತಿಯನ್ನು ಪರೋಕ್ಷವಾಗಿ ನನ್ನ ಮೇಲೆ ತೋರಲು ಮರೆಯುತ್ತಿರಲಿಲ್ಲ. ಮತ್ತೆ ಸ್ವಲ್ಪ ನನ್ನ ಪೂರ್ವಾನುಭವವೂ ಸೇರಿದ್ದಕ್ಕೆ, ವರ್ಷ ಮುಗಿಯುವುದರೊಳಗೆ ‘ಬಿ’ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ, ಎರಡು ಸ್ಥಾನೋನ್ನತಿಯೂ ಸಿಕ್ಕಿತ್ತು. ಮಾಮೂಲೀ ಕವಾಯತುಗಳನ್ನು ನಡೆಸುವ ಮಟ್ಟಿಗೆ ಕಂಪೆನಿಯ ಹುಡುಗರ ನಾಯಕ ನಾನೇ ಆಗಿದ್ದೆ. 

ಮಡಿಕೇರಿಯಲ್ಲಿ ಎನ್.ಸಿ.ಸಿಯ ಕವಾಯತು ಆದೇಶಗಳನ್ನೆಲ್ಲ ಇಂಗ್ಲಿಷಿನಲ್ಲಿ ಕೇಳಿದ ನೆನಪು ನನ್ನದು. ಆದರೆ ನನ್ನ ಕಾಲಕ್ಕಾಗುವಾಗ ವಿದೇಶೀ ಇಂಗ್ಲಿಷ್ ‘ರೈಟ್ ಅಬೌಟ್ ಟರ್ನ್’ ಮಾಡಿ ‘ಕ್ವಿಕ್ ಮಾರ್ಚ್’ನಲ್ಲಿ ಹೋಗಿತ್ತು. ದಿಲ್ಲಿ ದರ್ಬಾರಿನ ಹಿಂದಿ ‘ಪೀಛೇ ಮೂಡ್’ ಮಾಡಿ ‘ದೇಸ್ ಛಲ್’ನಲ್ಲಿ ಬಂದು ಕೂತಿತ್ತು. ನಮ್ಮ ವಿದ್ಯಾವರ್ಷದ ನಡುವೆ ಬೆಂಗಳೂರಿನ ಹಿಂದಿ ವಿರೋಧೀ ಚಳವಳಿ ತುಸು ಬಿಸಿಯೇರಿಸಿಕೊಂಡಿತ್ತು. ಆಗ ಒಂದೆರಡು ವಾರದ ಮಟ್ಟಿಗೆ, ನಮ್ಮ ತರಬೇತಿನ ಅವಧಿಯಲ್ಲಿ ಇಂಗ್ಲಿಷಿನಲ್ಲೋ ಕನ್ನಡದಲ್ಲೋ ನಾನೇ ಅನುವಾದಿಸಿಕೊಂಡು ‘ಆದೇಶ’ ಕೊಟ್ಟಿದ್ದೆ. ಚಲ್ - ಮಾರ್ಚ್/ ನಡೆ, ಮೂಡ್ - ಟರ್ನ್/ ತಿರುಗ್.... ಒಂದೊಂದು ಪದಗಳದ್ದಾದರೆ, ಖುಲೀ ಲೈನ್ ಚಲ್ - ತೆರೆದ ಸಾಲಿಗೆ ನಡೆ.... ಮುಂತಾದ ಸಂಯುಕ್ತ ಆದೇಶಗಳೂ ತೀನೋ ತೀನ್ಮೇ ದೈನೇ ಚಲೇಗಾ ದೈನೇ ಮೂಡ್ - ಮೂರ್ಮೂರಲ್ಲಿ ಬಲಕ್ಕೆ ನಡೆಯಲು ಬಲಕ್ಕ್ ತಿರ್ಗೀ.... ಅಂಥಾ ಪ್ರದರ್ಶನ ಕವಾಯತು ಆದೇಶಗಳನ್ನೆಲ್ಲ ಹುಡುಹುಡುಕಿ ಗಂಟಲು ಹರಿದುಕೊಂಡಿದ್ದೆ. ಅಲ್ಲಿ ಭಾಷಾ ಪ್ರೀತಿ ಎಷ್ಟು, ಸನ್ನಿವೇಶದ ಗೇಲಿ ಎಷ್ಟು ಅಥವಾ ಬರಿಯ ಹುಡುಗಾಟಿಕೆಯೇ ಇಂದು ಹೇಳಲಾರೆ. ಆದರೆ ಒಂದಂತೂ ನಿಜ, ಕಾಲೇಜಿನಲ್ಲಿ ಶಿಕ್ಷಣ ಮಾಧ್ಯಮಕ್ಕಾಗುವಾಗ ಮಾತೃ ಭಾಷೆ - ಕನ್ನಡದಿಂದ ದೂರವಾಗಿ, ಇಂಗ್ಲಿಷಿನಲ್ಲಿ ತಿಣುಕಾಡಿಕೊಂಡಿದ್ದ ನಾವು, ಬರಿಯ ಸಾಂಕೇತಿಕ ಆದೇಶಗಳಿಗಾಗುವಾಗ ಹಿಂದಿ ನೂಕಿ, ಕನ್ನಡ ಅಪ್ಪಿದ್ದೆವು. ಪುರಂದರ ದಾಸರು ನೆನಪಾಗುವುದಿಲ್ಲವೇ - "ನಗೆಯೂ ಬರುತೀದೆ.... ಎನಗೆ ನಗೆಯೂ ಬರುತೀದೆ"! 

೧೩. ರುಚಿಗೆಟ್ಟ ರಸಾಯನ (ಕಂಠಪಾಕ/ಠ) 


ಮಾವಿನ ಹಣ್ಣಿನ ಉಚ್ಛ್ರಾಯದಲ್ಲಿ, ಸೊಸೆಯ ತವರಿಂದ ಬಂದ ಬಾಳೆಗೊನೆ ಕಳಿತಲ್ಲಿ, ಪುಳ್ಳಿಪ್ರೀತಿಗಾಗಿ ಖರ್ಜೂರಗಳು ಕರಗಿದಲ್ಲಿ ನೆನೆವುದೆನ್ನ ಮನಂ ರಸಾಯನಮಂ. ಆದರೆ ೧೯೬೮ರಷ್ಟು ಹಿಂದೆ, ಗ್ಯಾಸ್ (ಗವರ್ನಮೆಂಟ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್, ಬೆಂಗಳೂರು) ಕಾಲೇಜಿನ ಮುಖ್ಯ ವಠಾರದ ಹೊರ ಮೂಲೆಯಲ್ಲಿ, ಹಳತನ ಸುರಿವ ಕಟ್ಟಡದಲ್ಲಿ, ಒಡ್ಡು ಬೆಂಚು ಡೆಸ್ಕುಗಳ ಸಾಲಿನಲ್ಲಿ ಕುಳಿತು, ನೂರೆಂಟು ಧಾತು, ಸಾವಿರಾರು ಸಂಯುಕ್ತಗಳ ಸಂಕೇತಾಕ್ಷರಗಳ ಕಲಸು ಮೇಲೋಗರವನ್ನು ಅಧ್ಯಾಪಕವರೇಣ್ಯರು, ಮೆಲು ದನಿಯಲ್ಲಿ, ಅದೂ ಆಪ್ತವಾಗಿ ಕರಿಹಲಗೆಯೊಡನೆ ಸಲ್ಲಪಿಸುತ್ತ ಹರಡಿಕೊಳ್ಳುವಾಗ ನಿರ್ಧರಿಸಿಬಿಟ್ಟೆ, ಪೆರತಾವುದನ್ನೂ ನೆನೆಯ, ನೆನೆಯದಿರಣ್ಣ ರಸಾಯನ ವಿಜ್ಞಾನಮಂ. 

ಅಧ್ಯಾಪಕರು ತುಂಬಾ ಸೌಮ್ಯ, ಹುಡುಗರೊಡನೆ ಸಂವಾದ ಇಲ್ಲದವರು, ಒಲ್ಲದ ಕುದುರೆಗೆ ಬಲವಂತದ ನೀರು ಕುಡಿಸುವ ಹಠ ಬಿಟ್ಟವರು. ಅದನ್ನು ಸ್ಪಷ್ಟಪಡಿಸುವಂತೆ ಮೊದಲಲ್ಲೇ "ಅನಾಸಕ್ತರು ಹೊರ ನಡೆಯಬಹುದು, ಹಾಜರಿ ಎಲ್ಲರಿಗೂ ಕೊಡುತ್ತೇನೆ" ಎಂದು ಘೋಷಿಸಿದ್ದರು. ವೈಯಕ್ತಿಕವಾಗಿ, ಅವರಿಗೆ ನನ್ನ ಮುಖ ಪರಿಚಯ ಇರುವ, ಅಕಸ್ಮಾತ್ ಇದ್ದರೂ ತಂದೆಗೆ (ದೂರು ಕೊಡುವ) ತಿಳಿಸುವ ಅಪಾಯವೂ ಕಾಣಲಿಲ್ಲ. ಹಾಗೇ ನಾನು, ಎಂದೂ ತರಗತಿಗಳಿಗೆ ಚಕ್ಕರ್ ಹೊಡೆದವನಲ್ಲ, ಮತ್ತು ಹೊಡೆಯುವವರ ಬಗ್ಗೆ ಗೌರವವೂ ಇದ್ದವನಲ್ಲ. ಆದರೆ ಈ ತರಗತಿಗಳಲ್ಲಿ ಒತ್ತರಿಸಿ ಬರುವ ನಿದ್ರೆ, ನೃಪತುಂಗ ರಸ್ತೆಯಾಚಿನ ಕಬ್ಬನ್ ಪಾರ್ಕಿನ ಹಸುರು, ಮೆಲುಗಾಳಿಗೆ ತೂಗುವ ಮರಗಳ ನೆರಳು ಕರೆಯುವಾಗ ತರಗತಿಗಳಿಂದ ಬಿಡುಗಡೆ ಪಡೆದುಕೊಂಡದ್ದಕ್ಕೆ ಲೆಕ್ಕವೇ ಇಲ್ಲ! 

ಫಲಿತಾಂಶ ತುಂಬ ಸರಳ. ಆ ದಿನಗಳಲ್ಲಿ ಪದವಿಪೂರ್ವ ಶಿಕ್ಷಣ ಒಂದೇ ವರ್ಷದ್ದಿತ್ತು. ನಾನು ಮಾತ್ರ ಒಂದೂವರೆ ವರ್ಷ ತೆಗೆದುಕೊಂಡೆ. 

೧೪. ಪುರಂದರ ‘ಭರಣಿ’ಯಲ್ಲಿ ಇಟ್ಟಿಗೆ ತುಪ್ಪ! (ಶುದ್ಧ?) 


ಗ್ಯಾಸ್ ಕಾಲೇಜಿನ ಎನ್.ಸಿ.ಸಿಯಲ್ಲಿ (೧೨ನೇ ಮೈಸೂರು ಬಟಾಲಿಯನ್) ಒಂದು ವಿಶೇಷ ಪಡೆಯ ರಚನೆಯಾಗಿತ್ತು. (ಪಡೆಯ ಪೂರ್ಣ ವಿವರಗಳು ತಂದೆಯ ‘ಎನ್.ಸಿ.ಸಿ ದಿನಗಳು’ ಪುಸ್ತಕದಲ್ಲಿ ಲಭ್ಯ) ಪಡೆಯ ಮೂರು ಮುಖ್ಯ ವಿದ್ಯಾರ್ಥಿ ಶಿಕ್ಷಕರು - ಎ. ಲಕ್ಷ್ಮೀನಾರಾಯಣ, ಮೋಹನ್ ಮತ್ತು ಪಿಂಟೋ. ಇವರೆಲ್ಲ ಹಿಮಾಲಯದಲ್ಲಿ ಪ್ರಾಥಮಿಕ ಮತ್ತು ಉನ್ನತ ತರಬೇತಿಗಳನ್ನು ಪಡೆದ ಪರಿಣತರು. ಉತ್ತರೋತ್ತರವಾಗಿ, ಅಲ್ಲಿನ ಸಂಸ್ಥೆ ಇವರನ್ನು ಕುಲ್ಲುಪುಮೋರಿ ವಲಯದ ಒಂದು ಅನಾಮಧೇಯ ಹಿಮಶಿಖರವನ್ನು ಏರುವ ಗೌರವಕ್ಕೆ ಆಯ್ದುಕೊಂಡಿತ್ತು. ಇವರು ಅದನ್ನೂ ಯಶಸ್ವಿಯಾಗಿಸಿ, ಶಿಖರಕ್ಕೆ ತಮ್ಮ ಹೆಸರುಗಳ ಆದ್ಯಕ್ಷರ ಸೇರಿಸಿ BAMP (ಮಾರ್ಗದರ್ಶಿ ಭೋಲಾ ಸೇರಿ) ನಾಮಕರಣ ಮಾಡಿ ಬಂದರು. ಆ ಮೂವರಿಗೆ ಬೆಂಗಳೂರು ವಿವಿ ನಿಲಯದ ವತಿಯಿಂದ, ನನ್ನ ತಂದೆಯ ನಿರ್ದೇಶನದಲ್ಲಿ ವಿಶೇಷ ಸಮ್ಮಾನ ಸಭೆ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕೆ ತಂದೆಯೊಂದು ವಿಶಿಷ್ಟ ಸ್ವಾಗತ ಗೀತೆ ರಚಿಸಿದ್ದರು. ಮೊದಲು ಕಾಳಿದಾಸನ ಶ್ಲೋಕ - "ಅಸ್ತುಸ್ತರಸ್ಯಾಂ ದಿಶಿದೇವತಾತ್ಮಃ ಹಿಮಾಲಯೋ ನಾಮ‌ ನಗಾಧಿ ರಾಜಃ". ಮುಂದೆ ತಂದೆಯದೇ ರಚನೆ - "ಹಿಮವತ್ ಪರ್ವತ ಶಿಖರದ ಮೇಲೆ, ಕನ್ನಡ‌ಕುವರರ ಪ್ರತಾಪ ಲೀಲೆ! ಕೇಳಲು ಬಂದ ಹಿರಿಯರೇ ಸ್ವಾಗತ ನಿಮಗೆ ಸುಸ್ವಾಗತ...." ಎಂದೇನೋ ಸಾಗಿತ್ತು. ತಂದೆ ಕರ್ನಾಟಕ ಸಂಗೀತದ ಬಲು ದೊಡ್ಡ ರಸಿಕ. ಅದರ ಅಪಾರ ಕೇಳ್ಮೆಯ ಬಲದಲ್ಲಿ ಹಾಡಿನ ವಿವಿಧ ಭಾಗಗಳ ಭಾವಪೂರಣಕ್ಕೆ ಕೆಲವು ರಾಗಗಳನ್ನು ಸೂಚಿಸಿದ್ದರು. 

ಅದರ ಗಾಯನಕ್ಕೆ ಅವರ ಪ್ರಥಮ ಆಯ್ಕೆ - ಕಾಲೇಜಿನಲ್ಲಿ ತನ್ನ ಶಿಷ್ಯ, ಕರ್ನಾಟಕ ಸಂಗೀತದ ಮಹಾನ್ ಕಲಾವಿದ ಕುರೂಡಿ ವೆಂಕಣ್ಣಾಚಾರರ ಪುತ್ರ - ನಂದಕುಮಾರರನ್ನೇ ಹಿಡಿದರು. (ನಂದಕುಮಾರ್ ತಂದೆಯಿಂದ ಕರ್ನಾಟಕ ಸಂಗೀತವನ್ನೂ ಮುಂದೆ ಸ್ವಂತ ಒಲವಿನಲ್ಲಿ ಹಿಂದೂಸ್ತಾನಿಯ ಪಾಂಡಿತ್ಯವನ್ನೂ ಸಿದ್ಧಿಸಿಕೊಂಡರು. ಸದ್ಯ ಸ್ಟೇಟ್ ಬ್ಯಾಂಕಿನ ಉನ್ನತಾಧಿಕಾರದಿಂದ ನಿವೃತ್ತರಾಗಿ ಬೆಂಗಳೂರಿನಲ್ಲೇ ನೆಲೆಸಿದ್ದಾರೆ) ನಂದಕುಮಾರ್ ಆ ಹಾಡಿಗೆ ವೆಂಕಣ್ಣಾಚಾರ್ ಬಳಿ ರಾಗಗಳನ್ನು ಅಳವಡಿಸಿಕೊಂಡು ಬಂದು ಸ್ವಾಗತ ಗೀತೆಯನ್ನು ಕಳೆಗಟ್ಟಿಸಿದರು. ತಂದೆ ಗೀತೆಯನ್ನು ಮೂವರ ಸಮೂಹಗಾನವೆಂದೇ ಕಲ್ಪಿಸಿದ್ದಕ್ಕೆ ಸರಿಯಾಗಿ ಆರಿಸಿದ ಇನ್ನಿಬ್ಬರು ವಿದ್ಯಾರ್ಥಿ ಗಾಯಕರು - ಗಂಗಾಧರ್ ತಿಲಕ್ ಮತ್ತು ಪುರಂದರ ಭರಣಿ. ಇವರಿಬ್ಬರು ವಿಶೇಷ ಶಾಸ್ತ್ರೀಯ ಹಿನ್ನೆಲೆಯವರಲ್ಲದಿದ್ದರೂ ಮಧುರ ಕಂಠದ ಭಾವಗಾಯಕರಾಗಿಯೇ ಕಾಲೇಜಿನ ಸ್ಪರ್ಧೆಗಳಲ್ಲಿ ಹೆಸರಾಂತವರು. ಸಮ್ಮಾನ ಕಲಾಪ ಅಪೂರ್ವವೇ ಆಯ್ತು, ಬಿಡಿ. 

ನಂದ ಕುಮಾರ್, ತಿಲಕ್ ಕುಮಾರ್ ಹಿರಿಯ ವಿದ್ಯಾರ್ಥಿಗಳಾದ್ದರಿಂದ ನನ್ನ ಸಂಪರ್ಕಕ್ಕೆ ಹೆಚ್ಚು ಸಿಗಲಿಲ್ಲ. ಆದರೆ ಪುರಂದರ ಭರಣಿ ನನ್ನ ಸಹಪಾಠಿಯೇ ಆದ್ದರಿಂದ ಹೆಚ್ಚಿನ ಆತ್ಮೀಯರಾದರು. ತುಂಬು ಪ್ರೀತಿಯ, ಬೆರಗು ಕಣ್ಣಿನ, ನೀಳ ಕಾಯದ ಸಮಪ್ರಾಯದ ಮಿತ್ರ. ಸದಾ ಗಾನ ಗುಂಗಿನಲ್ಲೇ ತೇಲುತ್ತಿದ್ದವ. ಭರಣಿ ಒಮ್ಮೆ ನನಗೊಂದು ಅದ್ಭುತವನ್ನು ತೋರಿಸುತ್ತೇನೆಂದು ಒತ್ತಾಯಿಸಿ ಕೆಂಪೇ ಗೌಡ ರಸ್ತೆಯ ಹೋಟೆಲೊಂದಕ್ಕೆ (ಮೈಸೂರು ಕೆಫೆ?) ಕರೆದೊಯ್ದಿದ್ದರು. ಅಲ್ಲಿ ಗಿರಾಕೀ ವಲಯದ ನಡುವೆ ಒಂದು ಪುಟ್ಟ ಪಾರದರ್ಶಕ ಗೂಡು ಸ್ಥಾಪಿಸಿದ್ದರು. ಅದರ ಒಳಗೆ ಎರಡೂ ಬದಿಗಳಲ್ಲಿ ಅಸಂಖ್ಯ ಸಿನಿ-ಹಾಡುಗಳ ಗಾನ ತಟ್ಟೆಗಳು ನಿಂತಿದ್ದವು. ನಡುವೆ ಗ್ರಾಮಾಫೋನ್ ಪ್ಲೇಯರ್. ಯಂತ್ರದ ಹೊರಮೈಯಲ್ಲಿ ‘ಇಂದಿನ ವಿಶೇಷ’ ಹಾಡುಗಳ ಪಟ್ಟಿ, ಪಕ್ಕದಲ್ಲಿ ನಾಣ್ಯ ತೂರಲೊಂದು ಸೀಳು. ಪುರಂದರ ನನ್ನನ್ನು ಕೂರಿಸಿ, ಬೈಟೂ ಕಾಫಿ ತಂದಿಟ್ಟು, ಯಂತ್ರದ ಪಟ್ಟಿಯಲ್ಲಿ ಆತನ ಪ್ರೀತಿಯ - ಬೆಳ್ಳಿ ಮೋಡ ಸಿನಿಮಾದ ಹಾಡಿನ ಸಂಖ್ಯೆ ಒತ್ತಿ, ಕಾಸು ಹಾಕಿ ಬಂದರು. ಪ್ಲೇಯರಿನ ಕೈ ತನ್ನಷ್ಟಕ್ಕೇ ಆ ತಟ್ಟೆಯನ್ನು ಆಯ್ದು, ಪೀಠದಲ್ಲಿಟ್ಟು ನಮ್ಮ ಕಾಫಿ ಕುಡಿತಕ್ಕೆ ಹೂವಿನ ಚೆಲುವು ಕೂಡಿಸಿತು. 

ಪುರಂದರರಿಗೆ ನನ್ನ ಮಲೆನಾಡು, ಕರಾವಳಿಯ ಮಿಶ್ರ ಸಂಸ್ಕೃತಿಯ ಬಗ್ಗೆ ಏನೇನೂ ತಿಳಿದಿರಲಿಲ್ಲ. ಒಮ್ಮೆ ಅವರು ನಮ್ಮ ಹನುಮಂತನಗರದ ಮನೆಗೆ ಬಂದಿದ್ದರು. ಆಗ ಅಮ್ಮ ಹೋಳಿಗೆ ಕೊಟ್ಟು, ಮೇಲೆ ಮನೆಯಲ್ಲೇ ಕಾಯಿಸಿದ ಶುದ್ಧ ತುಪ್ಪ ಎರಡು ಚಮಚ ಹಾಕಿದ್ದಳು. ಆಗ ಪುರಂದರರ ಬೆರಗುಗಣ್ಣು ಮತ್ತಷ್ಟು ಅಗಲಿ "ಇದು ತುಪ್ಪನಾ? ಬಣ್ಣವಿಲ್ಲ, ವಾಸನೆಯಿಲ್ಲ, ಎಣ್ಣೆಯ ಹಾಗಿದೆ..." ಎಂದು ಉದ್ಗರಿಸಿದ್ದರು. ವಿಚಾರಿಸಿದಾಗ ನಮಗಾಗಿತ್ತು ವಿಭಿನ್ನ ಬೆರಗು! ಅವರಲ್ಲಿ ಬೆಣ್ಣೆ ಕಾಯಿಸಿ ಉಕ್ಕು ಬರುವಾಗ ವೀಳ್ಯದೆಲೆ ಕೊನೆ, ಅರಿಶಿಣ... ಏನೆಲ್ಲ ಹಾಕಿದರಷ್ಟೇ ಅದಕ್ಕೊಂದು ತಾಜಾ ಬಣ್ಣ, ಪರಿಮಳದ ಕಳೆಗೂಡುತ್ತದಂತೆ. ಅದರಲ್ಲೂ ಮುಖ್ಯ ಪರಿಕರ - ಸಣ್ಣ ತುಂಡು ಅಪ್ಪಟ ಮಣ್ಣಿನ ಇಟ್ಟಿಗೆ ಎಂದು ಕೇಳಿದ್ದು ನಾನೆಂದೂ ಮರೆಯಲಾರೆ! 

೧೫. ಹೇಳದೇ ಉಳಿದದ್ದು ಮಧುರತಮ (ವಿದೇಶ ಗಮನ) 


"೧೨ನೇ ಮೈಸೂರು ಬಟಾಲಿಯನ್ನಿನ ‘ಎನ್.ಸಿ.ಸಿಯ ವಿಶೇಷ ಪಡೆ’ಗೆ (ಮತ್ತು ಬಹುಶಃ ವಾರ್ಷಿಕ ತರಬೇತಿ ಶಿಬಿರಕ್ಕೂ) ಪದವೀಪೂರ್‍ವ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ" ಎಂಬ ಫರ್ಮಾನು ಬಂದಾಗ, ಕಾಲೇಜು ಸೇರುವಾಗಿನ ನನ್ನ ಆಂತರಂಗಿಕ ಹಪಹಪಿಗೆ ದೊಡ್ಡ ಸೋಲಾಗಿತ್ತು. ಅದಕ್ಕೆ ಎನ್.ಸಿ.ಸಿ ಕೊಟ್ಟ ವಿವರಣೆ ಸರಳ: ಪದವಿಪೂರ್ವ ಓದಿನ ಫಲಿತಾಂಶ ಬಹುತೇಕರ ವೃತ್ತಿ ಶಿಕ್ಷಣಕ್ಕೆ (ಇಂಜಿನಿಯರಿಂಗ್ ಮತ್ತು ವೈದ್ಯಕೀಯ) ಸ್ಪಷ್ಟ ಕೈಕಂಬ. ಹಾಗಾಗಿ ವಿಶೇಷ ಪಠ್ಯೇತರ ಚಟುವಟಿಕೆಗಳು ಸ್ಪರ್ಧಾತ್ಮಕ ಓದಿಗೆ ಅಡಚಣೆಯಾಗುತ್ತದೆ. ಎಳೆ ಹರಯದವರ ತತ್ಕಾಲೀನ ಒಲವುಗಳನ್ನು ಸಣ್ಣ ಮಾಡಿ, ಅವರ ಪೋಷಕರ ಭವಿಷ್ಯ ರೂಪಣೆಯ ಆಶಯಗಳಿಗೇ ಮನ್ನಣೆ ಕೊಟ್ಟಿದ್ದರು. 

ಹೋಗಲಿ, ಅಂತಿಮ ಪರೀಕ್ಷೆ ಮುಗಿದ ಮೇಲಾದರೂ ಹಿಮಾಲಯಕ್ಕೆ ಹೋದೇನು ಎಂದು ನಾನು ಕಾದದ್ದೇ ಬಂತು. ಆ ಸಮಯಕ್ಕೆ ಇನ್ನೊಂದೇ ಆದೇಶ - "ಪದವಿಪೂರ್ವದವರಿಗೆ ಪರ್ವತಾರೋಹಣ ಅವಕಾಶ ಕೊಡಲಾಗದು. ಕಾರಣ, ಅವರ ಪರಿಣತಿ ಮುಂದಿನ ವರ್ಷ ನಮ್ಮ ಕಾಲೇಜಿಗೆ ಅಲಭ್ಯವಾಗುತ್ತದೆ." ಗಮನಿಸಿ - ಇಲ್ಲೆಲ್ಲೂ ತಂದೆ ನನ್ನ ಪರವಾಗಿ ಮೇಲಿನವರಲ್ಲಿ ಒಂದು ಮಾತೂ ಹೇಳಲಿಲ್ಲ! ‘ಹೇಳಬೇಕಿತ್ತು’ ಎಂಬ ಭಾವ ಅಂದು ನನಗೆ ಬರಲೇ ಇಲ್ಲ, ಇಂದು ಬಂದರೂ ಒಪ್ಪಿಗೆಯಿಲ್ಲ. ಹುಟ್ಟಿನಿಂದ ಇಂದಿನವರೆಗೂ ‘ತಂದೆ ನನಗೆ ಮಾಡಲಿಲ್ಲ’ ಎನ್ನುವುದು ಒಂದು ದೊಡ್ಡ ಪ್ರಕರಣವಾದದ್ದೇ ಇಲ್ಲ. 

ಅದೃಷ್ಟಕ್ಕೆ ಆ ಬೇಸಗೆ ರಜೆಯಲ್ಲಿ ‘ಸೈನ್ಯ ಸೇರ್ಪಡೆ ಶಿಬಿರ’ವೊಂದು ನನಗೆ ಮುಕ್ತವಾಗಿ ಸಿಕ್ಕಿತು. ಇದು ಭೂರೀ ಜಾತ್ರೆಯಂತ ಶಿಬಿರ. ಆದರೆ ನನಗದು ಪ್ರಥಮ ಅವಕಾಶ ಮತ್ತು ದೂರದ ರಾಜಸ್ತಾನದಲ್ಲಿದೆ ಎನ್ನುವುದು ವಿಶೇಷ ಆಕರ್ಷಣೆಯನ್ನೇ ಕೊಟ್ಟಿತ್ತು. ಭಾರತೀಯ ಸೈನ್ಯದ ಒಂದು ಮುಖ್ಯ ವಿಭಾಗ ‘ರಜಪುತಾನ್ ರೈಫಲ್ಸ್’. ಅದರ ಒಂದು ತರಬೇತಿ ಕೇಂದ್ರ, ಅಜ್ಮೀರಿನ ಸಮೀಪದ ನಾಸೀರಾಬಾದಿನಲ್ಲಿ ನಮ್ಮ ನಾಲ್ಕು ವಾರಗಳ ಸೈನ್ಯ ಸಹ-ವಾಸದ ಶಿಬಿರ ನಡೆಯಿತು. ಸುಮಾರು ಮೂವತ್ತು ಮಂದಿಯ ತಂಡಕ್ಕೆ ಅಧಿಕಾರಿ ಮುಖ್ಯಸ್ತರಾಗಿ ನಮ್ಮ ಮೇ| ಅಹಮದುಲ್ಲಾ ಖಾನ್ ಅವರೇ ಬಂದಿದ್ದರು. ಆ ಕಾಲದಲ್ಲಿ ಬೆಂಗಳೂರಿನಿಂದ ನಾಸಿರಾಬಾದಿಗೆ ನೇರ ರೈಲು ಸಂಪರ್ಕವಿರಲಿಲ್ಲ. ಆದರೆ ನಮ್ಮ ತಂಡದ ಗಾತ್ರ ನೋಡಿ ರೈಲ್ವೇಯವರು ನಮಗಾಗಿ ಒಂದು ಭೋಗಿಯನ್ನೇ ಕೊಟ್ಟಿದ್ದರು. ಅದು ಬಹುಶಃ ಮೊದಲು ಹೈದರಾಬಾದ್ ಮತ್ತೆ ಖಾಂಡ್ವಾ ಎಂಬ ಎರಡು ದೊಡ್ಡ ರೈಲ್ವೇ ಸಂಗಮಗಳಲ್ಲಿ ಗಂಟೆ ಗಟ್ಟಳೆ ಕಟ್ಟೆ ಪೂಜೆ ಮಾಡಿತ್ತು. ಆಗ ನಮಗೆ ಬಿಟ್ಟಿ ನಗರ ದರ್ಶನದ ಅವಕಾಶ. ಹಾಗೆ ಯಾವ್ಯಾವುದೋ ರೈಲಿಗೆ ನಮ್ಮ ಡಬ್ಬಿ ಸೇರಿಕೊಳ್ಳುತ್ತ, ಮೂರು ಮಜಲಿನಲ್ಲಿ, ಸುಮಾರು ಮೂರು ದಿನಗಳಲ್ಲಿ ನಮ್ಮನ್ನು ಗುರಿ ಮುಟ್ಟಿಸಿತ್ತು. ಬೇಸಗೆಯ ಅತ್ಯುನ್ನತಿಯಲ್ಲಿ ಮರುಭೂಮಿಯ ಹೃದಯದಲ್ಲಿ ಸೈನಿಕ ತರಬೇತಿಯೊಡನೆ ಕಳೆದ ಒಂದು ತಿಂಗಳು, ಅಜ್ಮೀರಿನ ಖ್ಯಾತ ಮಸೀದಿಗೆ ಕೊಟ್ಟ ಭೇಟಿ, ಜೋಧಪುರದಲ್ಲಿ ಸೈನಿಕರ ಪ್ಯಾರಾ ಜಂಪ್ ವೀಕ್ಷಣೆ... ಬರೆಯುತ್ತ ಹೋದರೆ ಪಟ್ಟಿ ಹನುಮಂತನ ಬಾಲವೇ ಆದೀತು. ಅದರ ಮೇಲೆ ನಾವು ಕಂಡ ಜನಪದರು, ನಮ್ಮನ್ನುಳಿಸಿಕೊಂಡ ಸೈನಿಕರು ಮತ್ತು ನಮ್ಮದೇ ಬಳಗದ ವರ್ತನಾವಿಶೇಷಗಳನ್ನು ಬಿಡಿಸಿಡಲು ಹೊರಟರೆ ಪ್ರತ್ಯೇಕ ಪುರಾಣವೇ ಆದೀತು. ಇಷ್ಟರ ಮೇಲೆ ಬೆಂಗಳೂರಿಗೆ ಮರಳುವ ದಾರಿಯದು ಇನ್ನೊಂದೇ ಕತೆ. 

ನಾಸಿರಾಬಾದ್ ಸೈನ್ಯ ಸಹಜೀವನ ಎಂಬ ಭಾರೀ ಆದರೆ ಅಷ್ಟೇ ಮಸಕು ಬೆಟ್ಟದಲ್ಲಿ ನಿಮ್ಮನ್ನು ಇನ್ನು ಹೆಚ್ಚು ಬಳಲಿಸಲಾರೆ. ‘ಕೇಳದೇ ಉಳಿದ ಸಂಗೀತ ಮಧುರತಮ’ ಎಂಬ ಕವಿವಾಣಿಯಂತೆ, ನಾಸಿರಾಬಾದ್ ಪ್ರವಾಸದ ಹೆಚ್ಚಿನ ವಿವರಗಳನ್ನು ನಾನು ಹೇಳದೇ ಉಳಿಸುವುದೇ ಸರಿ. ತಂಡದ ಲಕ್ಷ್ಯ ಒಂದೇ ಆಗಿದ್ದರೂ ಸಾಧನೆಗಳ ವಿಪುಳ ವೈವಿಧ್ಯತೆ ಹದಿಹರಯದ ನನ್ನನ್ನು ಹೇಗೆ ಕಂಡರಿಸಿರಬಹುದು ಎಂಬುದನ್ನಷ್ಟೇ ನೀವು ಗ್ರಹಿಸಿದರೆ ನನ್ನ ಪ್ರಯತ್ನ ಸಾರ್ಥಕ. 

೧೬. ಶಿಸ್ತೇ ಸುಸ್ತೇ? ರಾಘವೇಂದ್ರ ಪತ್ರಮಾಲೆ... (ಲೇಖಕ) 


೧೯೫೩ರಲ್ಲಿ ನನ್ನಪ್ಪ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಅಧ್ಯಾಪಕ ವೃತ್ತಿ ಬಿಟ್ಟು, ಮಡಿಕೇರಿ ಸರಕಾರೀ ಕಾಲೇಜಿಗೆ ಸೇರಿಕೊಂಡರು. ನಾನಾಗ ಒಂದು ವರ್ಷದ ಶಿಶು. ಆ ದಿನಗಳಲ್ಲಿ ನನ್ನಪ್ಪನ ಮನೋವಿಕಾಸದ ಒತ್ತಡಗಳನ್ನು ಸ್ಪಷ್ಟಪಡಿಸುವ ಏಕೈಕ ಉದ್ದೇಶದಿಂದ, ಸೂಕ್ಷ್ಮವಾಗಿ ಕುಟುಂಬ ಇತಿಹಾಸದ ಅಪ್ರಿಯವಾದ ತುಣುಕನ್ನು ಹೇಳಬೇಕಾಗಿದೆ. (ವಿವರಗಳಿಗೆ ಮುಗಿಯದ ಪಯಣ ನೋಡಿ) 

ನನ್ನಜ್ಜ ಮಡಿಕೇರಿಯ ಸಹಕಾರಿ ಬ್ಯಾಂಕಿನ ಖಡಕ್ ಅಧಿಕಾರಿಯಾಗಿದ್ದರು. ಅವರಿಗೆ ಪಾಲಿನಲ್ಲಿ ಬಂದ ಕೃಷಿಭೂಮಿ ಆರೇಳು ಮೈಲು ದೂರದ ಮೋದೂರಿನಲ್ಲಿದ್ದಂತೆ, ಬ್ರಾಹ್ಮಣ ಕೇರಿಯಲ್ಲಿ ಸಿಕ್ಕಿದ್ದ ಮನೆಯಲ್ಲೇ ಸಂಸಾರಹೂಡಿದ್ದರು. ಅವರದು ನನ್ನಪ್ಪ ಸೇರಿದಂತೆ ಆರು ಮಕ್ಕಳ ಸಂಸಾರ. ತಂದೆ ಮಡಿಕೇರಿ ಕಾಲೇಜ್ ಅಧ್ಯಾಪಕನಾಗಿ ಬಂದವರು ಸಹಜವಾಗಿ ಆ ದೊಡ್ಡ ವ್ಯವಸ್ಥೆಗೇ ಸೇರಿಕೊಂಡರು. ಆದರೆ ಸ್ವಲ್ಪ ಕಾಲದಲ್ಲೇ ಕೌಟುಂಬಿಕ ಶಾಂತಿಗಾಗಿ, ಹೊರ ನಡೆದು, ಪೂರ್ತಿ ತನ್ನದೇ ಖರ್ಚು ಮತ್ತು ಜವಾಬ್ದಾರಿಯಲ್ಲಿ, ಬಾಡಿಗೆ ಮನೆ ಹಿಡಿದರು. ಮತ್ತೆ ಕಂತುಗಳಲ್ಲಿ ಸಾಲ ತೀರಿಸುವ ಕರಾರಿನಂತೆ ಕೊಂಡ ಸ್ವಂತ ಮನೆಯನ್ನೂ ಸೇರಿಕೊಂಡೆವು. ಆ ಸುಮಾರಿಗೆ ಅಜ್ಜ ಪ್ರಾಯ ಸಹಜ ನಿವೃತ್ತಿಯೊಡನೆ, ಮಡಿಕೇರಿ ಮನೆ ಮುಚ್ಚಿ, ತೋಟದ ಮನೆ ಸೇರಿಕೊಂಡರು. ಆಗ ವಿದ್ಯಾಭ್ಯಾಸ ಬಾಕಿಯಿದ್ದ ಇತರ ಮಕ್ಕಳಿಗೆ ಅಜ್ಜ, ಕೇವಲ ಹಿರಿಯನ ಗತ್ತಿನಲ್ಲಿ "ಅಣ್ಣನ ಮನೆ ಸೇರಿಕೊಳ್ಳಿ" ಎಂದು ಕಳಿಸಿದ್ದರು. ನನ್ನ ಅಪ್ಪ ಒಪ್ಪಿಕೊಂಡರು. ಅಮ್ಮನಿಗಾದರೂ ಮೂಲದಲ್ಲಿ ಸೋದರತ್ತೆಯ ಮಕ್ಕಳೇ, ಒಪ್ಪಿಕೊಂಡಳು. ಅವರಲ್ಲಿ ದೊಡ್ಡವ - ಈಶ್ವರ, ಅಜ್ಜನೊಡನೆ ಭಿನ್ನಾಭಿಪ್ರಾಯದಲ್ಲಿ ಓಡಿಹೋಗಿ, ಸೈನ್ಯ ಸೇರಿಕೊಂಡ. ಅನಂತರದ ಮೂರ್ತಿ - ಸ್ವಲ್ಪೇ ಸಮಯದಲ್ಲಿ ಅಜ್ಜನೊಡನೆ ತೋಟದ ಜವಾಬ್ದಾರಿಗೆ ನಿಂತುಕೊಂಡ. ಉಳಿದ ಮೂವರು - ರಾಘವೇಂದ್ರ, ಸರಸ್ವತಿ ಮತ್ತು ದಿವಾಕರ ನಮ್ಮಲ್ಲಿದ್ದುಕೊಂಡು ವಿದ್ಯಾಭ್ಯಾಸ ಮುಂದುವರಿಸಿದರು. 

ಅಜ್ಜ ಮೂವರ ವಸನ, ವಿದ್ಯಾವೆಚ್ಚವನ್ನೇನೋ ನೋಡಿಕೊಂಡರು. ಊಟ-ವಸತಿಯನ್ನು ಮಾತ್ರ ನಿರ್ದಾಕ್ಷಿಣ್ಯವಾಗಿ ‘ಹಿರಿಯಣ್ಣನ ಕರ್ತವ್ಯ’ ಎಂಬಂತೇ ಕಂಡರು. ಮನೆಯ ಸಾಲದ ಕಂತು, ನಿರ್ವಹಣಾ ವೆಚ್ಚ, ದಿನವಹಿಗಳೆಲ್ಲ ಕೊಳ್ಳುವುದು ಇದ್ದದ್ದೇ. ಆದರೆ ಮುಖ್ಯ ಅಗತ್ಯವಾದ ಅಕ್ಕಿಯದು ಸ್ವಲ್ಪ ವಿಚಿತ್ರ ಕತೆ. ಹಳ್ಳಿಯಲ್ಲಿ ಅಜ್ಜ ಭತ್ತವನ್ನೂ ಬೆಳೆಯುತ್ತಿದ್ದರು. ಪೇಟೆಯಲ್ಲಿ ತಂದೆ ಆ ದಿನಗಳ ರೂಢಿಯಂತೆ, ವರ್ಷಕ್ಕೆ ಬೇಕಾದಷ್ಟು ಭತ್ತವನ್ನು ಒಮ್ಮೆಗೇ ಕೊಳ್ಳುವುದೂ ಇತ್ತು. ಅದಕ್ಕೆ ಅಜ್ಜ ಭತ್ತ ಪೂರೈಸಿದರು. ಪ್ರತಿಯಾಗಿ ತಂದೆ ಕೊಟ್ಟ ಬೆಲೆಯನ್ನು ನಿರ್ದಾಕ್ಷಿಣ್ಯವಾಗಿ ಸ್ವೀಕರಿಸಿದ್ದನ್ನು, ನನ್ನಮ್ಮ ಕೊನೆಗಾಲದವರೆಗೂ ಸಖೇದ ನೆನಪಿಸಿಕೊಳ್ಳುತ್ತಿದ್ದಳು. ಇಷ್ಟೆಲ್ಲ ಆರ್ಥಿಕ ಹೊರೆಗಳ ಮೇಲೆ, ನಮ್ಮ ಮಡಿಕೇರಿ ವಾಸದ ಸುಮಾರು ಒಂಬತ್ತು ವರ್ಷಗಳಲ್ಲಿ, ನನಗೆರಡು ತಮ್ಮಂದಿರು ಬಂದಿದ್ದರು, ತಂಗಿಯೊಬ್ಬಳು ಬಂದು ಕಾಲಕ್ಕೆ ಸಂದಿದ್ದಳು. ಆನಂದನ ಸಿಡುಬೂ ಸೇರಿದಂತೆ ಆರೋಗ್ಯದ ಅನಿವಾರ್ಯ ವೆಚ್ಚಗಳು ಅಷ್ಟಷ್ಟು ಏರುತ್ತ, ಪೇರುತ್ತ ಹೋಗಿದ್ದವು. ಇವೆಲ್ಲ ತಂದೆಯ ಗೃಹಸ್ಥ ಮುಖ ಮಾತ್ರ. ಅದೇ ಕಾಲದಲ್ಲಿ....... 

ತಂದೆ ಕಾಲೇಜಿನಲ್ಲಿ ದಕ್ಷ ಅಧ್ಯಾಪಕ, ಎನ್.ಸಿ,ಸಿಯಲ್ಲಿ ಶಿಸ್ತಿನ ಅಧಿಕಾರಿ ಮತ್ತು ಕಾಲೇಜು ಸಹಕಾರಿ ಸಂಘದ ಪ್ರಾಮಾಣಿಕ ಸಂಚಾಲಕನಾಗಿಯೂ (ವಿವರಗಳಿಗೆ ಮುಗಿಯದ ಪಯಣ ನೋಡಿ) ನೆಲೆಗೊಂಡಿದ್ದರು. ಬಹುಶಃ ಈ ಎಲ್ಲ ಒತ್ತಡಗಳ ಭಾಗವಾಗಿಯೇ ಅವರಿಗೆ ನನ್ನ ಕುರಿತಾಗಿದ್ದಿರಬಹುದಾದ ಕಾಳಜಿ, ಒರಟು ಶಿಸ್ತಾಗಿ ಪ್ರಕಟವಾಗುತ್ತಿದ್ದಿರಬೇಕು. (ನನಗೆ ನೆನಪಿದ್ದಂತೆ, ಅವರು ಅದನ್ನು ಅನುಜರ ಮೇಲೆ ಪ್ರಕಟಿಸಿದಿರಲಿಲ್ಲ.) ಇದಕ್ಕೆರಡು ಸಣ್ಣ ಉದಾಹರಣೆಗಳು. 

ತಂದೆ ನನ್ನ ಉತ್ತಮಿಕೆಗಾಗಿ, ಎರಡೋ ಮೂರನೆಯದೋ ತರಗತಿಯಿಂದಲೇ ಅವರದೇ ‘ಹೋಂ ವರ್ಕ್’ - ಎರಡು ಪುಟ ಕಾಪಿ ಮತ್ತು ಹತ್ತು ಗಣಿತ ಸಮಸ್ಯೆಗಳ ಪರಿಹಾರ, ವಿಧಿಸಿದ್ದರು. ಇದರ ಉಸ್ತುವಾರಿ ಮತ್ತು ತನಿಖೆಯನ್ನು ರಾಘವೇಂದ್ರನಿಗೆ (ಸರಸ್ವತಿಗೂ?) ಬಿಟ್ಟಿದ್ದರೆಂದು ನನ್ನ ಅರೆಬರೆ ನೆನಪು. ಬಹುಶಃ ನನ್ನ ಮೇಲಿನ ಅನುಕಂಪದಿಂದ, ರಾಘವೇಂದ್ರ ಇದನ್ನು ತುಂಬ ಉದಾರವಾಗಿ ನಡೆಸಿಕೊಡುತ್ತಿದ್ದ. ಎಲ್ಲೋ ಅಪರೂಪಕ್ಕೆ ತಂದೆ ತನಿಖೆ ಮಾಡಿದರೂ ನನ್ನ ಮೇಲೆ ಅಪರಾಧ ನಿಲ್ಲದಂತೆ ಸುಧಾರಿಸಿಕೊಡುತ್ತಿದ್ದ. 

ಒಂದು ವಿದ್ಯಾ ವರ್ಷದ ಮೊದಲ ದಿನ ಶಾಲೆಯಲ್ಲಿ ವಿದ್ಯಾರ್ಥಿಗಳು ತರಬೇಕಾದ ಪಠ್ಯ ಹಾಗೂ ನೋಟ್ಸ್ ಪುಸ್ತಕಗಳ ಪಟ್ಟಿಯನ್ನು ಕೊಟ್ಟಿದ್ದರು. ನಾನು ಅದನ್ನು ಮನೆಯಲ್ಲಿ ಯಾರ ಗಮನಕ್ಕೂ ತಾರದೆ, ನೇರ ತಂದೆಯ ಕಾಲೇಜಿನ ಸಹಕಾರಿ ಸಂಘಕ್ಕೆ ಒಯ್ದಿದ್ದೆ. ತಂದೆ ಹೊರ ಹೋಗಿದ್ದರು. ನಾನು ಗುಮಾಸ್ತರ ಬಳಿ ಪಟ್ಟಿಯ ಎಲ್ಲವನ್ನೂ ತಂದೆಯ ಹೆಸರಿನಲ್ಲಿ ಬಿಲ್ಲು ಮಾಡಿಸಿ, ಪುಸ್ತಕದ ಕಟ್ಟನ್ನು ಮಾತ್ರ ಮನೆಗೆ ಹೊತ್ತು ತಂದೆ. ಪುಸ್ತಕಗಳಿಗೆಲ್ಲ ಹಳೆ ಪತ್ರಿಕೆಗಳ ರಟ್ಟು ಹಾಕಿ, ಬಿಳಿ ಚೀಟಿ ಅಂಟಿಸಿ, ಹೆಸರು ತರಗತಿ ಎಲ್ಲ ಬರೆದು, ಉಸ್ಸಪ್ಪಾ ಎನ್ನುವಷ್ಟರಲ್ಲಿ ತಂದೆ ಬಂದರು. ಅವರು ನನ್ನ ಪಟ್ಟಿ ಹಾಗೂ ಬಿಲ್ ವಿವರಗಳನ್ನು ವಿಮರ್ಶೆ ಮಾಡಿ, ನನ್ನ ಕೊಳ್ಳುಬಾಕತನಕ್ಕೆ ನಾಲ್ಕು ಬಯ್ದರು (ಎರಡು ಪೆಟ್ಟು ಕೊಟ್ಟಿರಲೂಬಹುದು). ಕೋಪದ ಭರದಲ್ಲಿ ಒಂದೆರಡು ನೋಟ್ಸ್ ಪುಸ್ತಕಗಳನ್ನು ಅರ್ಧಕ್ಕೆ ಹರಿದು, ಸ್ಕೇಲ್ ಪೆನ್ಸಿಲ್ಲುಗಳನ್ನು ಮುರಿದು ಕಿಟಕಿಯಿಂದ ಹೊರಗೆಸೆದರು. 

ತಂದೆಯ ವಿಮರ್ಶೆಯಲ್ಲಿ ನನಗೆ ಒಂದು ಈಗಲೂ ನೆನಪಿದೆ: ಹಿಂದಿನ ವರ್ಷದಲ್ಲಿ ಗಣಿತಕ್ಕೆ ನಾನು ನೂರು ಪುಟದ ಖಾಲೀ ಪುಸ್ತಕ ಕೊಂಡಿದ್ದೆ. ವರ್ಷಾಂತ್ಯದಲ್ಲಿ ಅದರ ಅರ್ಧ ಭಾಗವೂ ಬಳಕೆಯಾಗಿರಲಿಲ್ಲ. ಆದರೂ ಪ್ರಸಕ್ತ ವರ್ಷದ ಗಣಿತಕ್ಕೆ ನಾನು ಇನ್ನೂರು ಪುಟದ ಪುಸ್ತಕ ಆಯ್ದುಕೊಂಡಿದ್ದೆ! ಅಗತ್ಯ ಮತ್ತು ದುಂದಿನ ಅಂತರ ತಿಳಿಯದೆ ನನ್ನ ಬಾಲಮನಸ್ಸು ದುಡುಕಿದ್ದು ನಿಜ. ಆದರೆ ತಿಂಗಳ ನಿಶ್ಚಿತ ಆದಾಯದಲ್ಲಿ ಎಲ್ಲ ಸಂಭಾಳಿಸಬೇಕಿದ್ದ ತಂದೆಯ ಸ್ಥಿತಿ? ತಂದೆ ಅವರ ಕೋಣೆ ಸೇರಿದ ಮೇಲೆ ರಾಘವೇಂದ್ರ ಗುಟ್ಟಾಗಿ ಹೊರಗೆ ಹೋಗಿ ಅವರು ಎಸೆದದ್ದನ್ನೆಲ್ಲ ಮರಳಿ ತಂದು, ರಟ್ಟು, ಗೋಂದೂ ಬಳಸಿ ರಿಪೇರಿ ಮಾಡಿ ಕೊಟ್ಟು ನನ್ನನ್ನು ಸಮಾಧಾನಿಸಿದ್ದ. 
ಎಡ - ಅನಂತವರ್ಧನ, ಬಲ - ರಾಘವೇಂದ್ರ

ಆ ಕಾಲದ ಹೆಮ್ಮಾರಿ ಸಿಡುಬು ನನ್ನ ಚಿಕ್ಕಜ್ಜನನ್ನೂ ಅವರ ಮಗ ಪುಂಡರೀಕನನ್ನೂ ಬಲಿ ತೆಗೆದುಕೊಂಡಿತ್ತು. ಮತ್ತು ಮೊದಲೇ ಹೇಳಿದಂತೆ ನಮ್ಮಲ್ಲಿ ಆನಂದನ ಮೇಲೆ ಭಾರೀ ದಾಳಿಯನ್ನೇ ಮಾಡಿತ್ತು, ಅದೃಷ್ಟವಶಾತ್ ಇವನು ಪಾರಾದ. ಆಗಲೂ ತಂದೆಗೆ ಹೊರಗಿನ ಜವಾಬ್ದಾರಿಗಳಿಂದ ಬಿಡುಗಡೆಯಿರಲಿಲ್ಲ, ಅಮ್ಮನಂತೂ ಮನೆಗೆಲಸಗಳಿಂದ ಕಳಚಿಕೊಳ್ಳುವಂತೆಯೇ ಇರಲಿಲ್ಲ. ಆಗ ಚೇತರಿಸಿಕೊಳ್ಳುತ್ತಿದ್ದ ಎರಡು ಮೂರರ ಹರಯದ ಆನಂದನಿಗೆ ದೊಡ್ಡ ಮಾನಸಿಕ ಆಸರೆ ರಾಘವೇಂದ್ರನದ್ದೇ ಇದ್ದಿರಬೇಕು. ರಾಘವೇಂದ್ರ ಅವನ ಸಿಡುಬು ಕಲೆಗಳನ್ನು ಮರೆಸುವಂತೆ ‘ಚಂದದ ಹಣೆ’ಯನ್ನು ಕೊಂಡಾಡುತ್ತಿದ್ದ. ಆನಂದನಿಗಂತೂ ರಾಘವೇಂದ್ರ ಪ್ರೀತಿಯ ‘ಅಪ್ಪಚ್ಚಿ ರಾರಾ’. ಅಂಥಾ ರಾಘವೇಂದ್ರ...... 

ಮುಂದೆ ಮಂಗಳೂರಿನಲ್ಲಿ ಪಾಲಿಟೆಕ್ನಿಕ್ ಮಾಡಿ, ನಾವು ಬೆಂಗಳೂರಿನಲ್ಲಿ ಇರುವ ಕಾಲದಲ್ಲೇ ಸೈನ್ಯದ ಇಂಜಿನಿಯರಿಂಗ್ ವಿಭಾಗಕ್ಕೆ ಆಯ್ಕೆಯಾಗಿದ್ದ. ಆತನ ಪ್ರಾಥಮಿಕ ತರಬೇತಿ (ಬಹುಶಃ ಆರು ತಿಂಗಳು) ಬೆಂಗಳೂರಿನ ಎಂ.ಇ.ಜಿ ಕೇಂದ್ರದಲ್ಲೇ ಇತ್ತು. ಸಹಜವಾಗಿ ಆತನ ಕೆಲವು ವಾರಾಂತ್ಯದ ರಜೆ, ಆಪತ್ತುಗಳಿಗೆ ನಮ್ಮ ಮನೆಯ ಬಳಕೆ ಹೆಚ್ಚಿತ್ತು. ಅವನ ಭೇಟಿ ನಮಗಂತೂ ತುಂಬ ಸಂಭ್ರಮವನ್ನೇ ತರುತ್ತಿತ್ತು. 

ತರಬೇತಿನ ಅವಧಿ ಮುಗಿದ ಮೇಲೆ ರಾಘವೇಂದ್ರನ ಕಾರ್ಯರಂಗವೆಲ್ಲಾ ಉತ್ತರದ ಯಾವ್ಯಾವುದೋ ಗಡಿ ವಲಯಗಳಲ್ಲೇ ಇತ್ತು. ಆ ದಿನಗಳಲ್ಲಿ ಭದ್ರತೆಯ ಕಾರಣದಿಂದ ಯಾವುದೇ ಸೈನಿಕನ ಕರ್ತವ್ಯದ ನೆಲೆಯ ಹೆಸರು, ಸ್ಪಷ್ಟ ವಿಳಾಸ ತಿಳಿಸುವ ಕ್ರಮವಿರಲಿಲ್ಲ. ಆದರೆ ಅವರಿಗೆ ವೃತ್ತಿಯ ಒತ್ತಡದಲ್ಲಿ ಮಾನಸಿಕ ಚೇತರಿಕೆಗೆ ಅವಕಾಶವಾಗುವಂತೆ, ಪೂರ್ಣ ಉಚಿತ ಅಂಚೆ ವ್ಯವಸ್ಥೆಯನ್ನು ಕೊಟ್ಟಿದ್ದರು. ರಾಘವೇಂದ್ರ ನಮ್ಮ ವಿಳಾಸವೇನೋ ಸರಿಯಾಗಿಯೇ ಬರೆಯುತ್ತಿದ್ದ. ನಾವು ಮಾತ್ರ ಆತನ ಸ್ಥಾನನಾಮದೊಡನೆ ಹೆಸರು ಮತ್ತು A(rmy)P(ost)O(ffice) - ನಿರ್ದಿಷ್ಟ ಸಂಖ್ಯೆ ಬರೆದರೆ ಸಾಕಾಗುತ್ತಿತ್ತು. ನಾವೂ ಅವನಿಗೆ ರವಾನಿಸುವ ಲಕೋಟೆಗೆ ಯಾವುದೇ ಅಂಚೆ ಚೀಟಿ ಹಚ್ಚಬೇಕಿರಲಿಲ್ಲ. 

ರಾಘವೇಂದ್ರನ ಕನ್ನಡ ಮೋಹ, ಬಂಧುಪ್ರೇಮವೆಲ್ಲ ದೀರ್ಘ ಮತ್ತು ಅಸಂಖ್ಯ ಪತ್ರಗಳಲ್ಲೇ ಊರಿನತ್ತ ಹರಿದು ಬರುತ್ತಿದ್ದಿರಬೇಕು. ಅವು ಯಾರಿಗೆಲ್ಲ ಮತ್ತು ಯಾರೆಲ್ಲ ಉತ್ತರಿಸುತ್ತಿದ್ದರು ಎಂದೆಲ್ಲಾ ನನಗೆ ತಿಳಿದಿಲ್ಲ. ಆದರೆ ನಾನೋ ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಅತ್ಯುತ್ಸಾಹಿ. (ತಂದೆ ಹೇಳುತ್ತಿದ್ದಂತೆ "Any reason is good enough to CUT DUTY.) ಹನುಮಂತನ ಬೆಟ್ಟದಲ್ಲಿ ಕಾಲಿಗೆ ಮುಳ್ಳು ಚುಚ್ಚಿದ್ದರಿಂದ ತೊಡಗಿ, ಗುತ್ತೇಹಳ್ಳಿಯ ರೌಡಿರುದ್ರ ನನ್ನ ಲಾಂಡಾ ಪಟಕ್ಕೆ  ಲಂಗರು ಹಾಕಿದವರೆಗೆ ಓತಪ್ರೋತವಾಗಿ, ಸಣ್ಣ ಅಕ್ಷರಗಳಲ್ಲಿ, ಯಾವುದೇ ಔಪಚಾರಿಕ ಅಂಚುಗಳನ್ನೂ ಖಾಲೀ ಬಿಡದಂತೆ, ಪುಟಗಟ್ಟಳೆ ಬರೆಯುತ್ತಿದ್ದೆ. ಕೆಲವು ಸಲ ವಿಷಯ ಸಂಗ್ರಹಕ್ಕೆಂದೇ ಕಹಳೆ ಬಂಡೆಗೋಡುವುದಿತ್ತು, ಕಳ್ಳೇಕಾಯ್ ಪರಿಷೆಯಲ್ಲಿ ಅಲೆಯುವುದಿತ್ತು, ಸುಂಕೇನಹಳ್ಳಿಯ ಸೈಕಲ್ ಸರ್ಕಸ್ಸಿನ ಹಗ್ಗದಂಚಿನಲ್ಲಿ ಒಣಗುವುದಿತ್ತು. ಅವನಿಗೆ ಒಂದು ಪತ್ರ ಕಳಿಸಿ, ಉತ್ತರ ಕಾಯುವ ಸಮಯದಲ್ಲಿ ಸಂಗ್ರಹವಾದ ವಿಷಯಗಳನ್ನು ಅಂದಂದೇ ಬರೆದಿಡುತ್ತ ಅವಕಾಶ ಕಾಯುವುದೂ ಇತ್ತು. ನಿಮ್ಮೆಲ್ಲರ ಪುಣ್ಯಕ್ಕೆ, ಆ ಪತ್ರಗಳ ಪ್ರತಿ ನಾನು ಇಡಲಿಲ್ಲ. ಮತ್ತೆ ಹೆಚ್ಚಿನಂಶ ರಾಘವೇಂದ್ರನ ಸಂಗ್ರಹದಲ್ಲೂ ಇಲ್ಲವೆಂದೇ ಭಾವಿಸುತ್ತೇನೆ. ಒಂದೊಂದು ಪತ್ರ ಕಳಿಸುವ ವೇಳೆ ಬಂದಾಗ, ಒಂದು ಮೈ ಖಾಲಿಯಿರುವ ಯಾವುದೇ ದಪ್ಪ ಕಾಗದದ ಲಕೋಟೆ ಮಾಡಿ, ತುಂಬಿ, ಅಂಟಿಸಿ, ಅಂಚೆ ಡಬ್ಬಿಗೆ ತುರುಕಿಬಿಡುತ್ತಿದ್ದೆ. ತುರುಕುವ ಮೊದಲು ಬರೆದ ಎರಡೇ ಸಾಲಿನ ವಿಳಾಸ ಖಾತ್ರಿ ಮಾಡಿಕೊಳ್ಳುತ್ತಿದ್ದೆ - JCO GT Raghavendra, APO - 56. 

(ವಿಶೇಷ ಸೂಚನೆ: ಇದು ಕಾಲಾನುವರ್ತಿಗಳಾದ ಹಿರಿಯರನ್ನು ದೂಷಿಸಲೆಂದು ಬರೆದದ್ದು ಅಲ್ಲ. ಅಜ್ಜಜ್ಜಿ ಮತ್ತು ಮೋದೂರು, ಮೊಮ್ಮಕ್ಕಳ ಲೆಕ್ಕಕ್ಕೆ ಅಂದೂ ಮುಂದೂ ಪ್ರಿಯವಾಗಿಯೇ ಇತ್ತು, ಇದೆ.) 

೧೭. ಕುಶಿ ಹರಿದಾಸ ಭಟ್ಟರ ‘ಕಾರಂತ ೬೦’ (ಸಾಹಿತ್ಯಲೋಕ) 


ಶ್ರೀ ಶ್ರೀ ಕುಶಿ ಹರಿದಾಸ ಭಟ್ಟರು ನನ್ನ ತಂದೆಯ ಆತ್ಮೀಯ ಮಿತ್ರರಾಗಿದ್ದರು. (‘ದಿವಂಗತ’ದ ಬದಲು ಎರಡು ‘ಶ್ರೀ’ ಕುಶಿಯವರೇ ಹೇಳಿದ್ದು) ಪ್ರಾಯದಲ್ಲಿ ಅವರು ಹಿರಿಯರಾದರೂ ವಿದ್ಯಾ ಸಮಕಾಲೀನತೆಯಲ್ಲಿ (ಅಂದಿನ ಮದ್ರಾಸಿನಲ್ಲಿ) ತಂದೆಯ ಸಹಪಾಠಿ. ಉಡುಪಿಯ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜಿನ ಬಹು ದೀರ್ಘ ಕಾಲೀನ ಪ್ರಾಂಶುಪಾಲತ್ವದಲ್ಲಿ ಕುಶಿಯವರು, ಕಾಲೇಜು ಮಾತ್ರವಲ್ಲ, ಇಡಿಯ ಉಡುಪಿಗೇ ಒಂದು ದೊಡ್ಡ ಸಾಂಸ್ಕೃತಿಕ ಆಯಾಮವನ್ನು ತಂದುಕೊಟ್ಟರು. ಅವರ ಕುರಿತು ಇನ್ನೂ ಹೆಚ್ಚಿನದ್ದನ್ನು ನನ್ನ ತಂದೆಯೇ ಮಾಡಿದ ಒಂದು ಅಭಿನಂದನಾ ಭಾಷಣದಲ್ಲಿ ಕೇಳಿ/ ನೋಡಿ.

೧೯೬೦-೭೦ರ ದಶಕಗಳಲ್ಲಿ ಹರಿದಾಸ ಭಟ್ಟರು ಶಿವರಾಮ ಕಾರಂತರ ಬಹುಮುಖೀ ಪ್ರತಿಭೆಗೆ ಇನ್ನಿಲ್ಲದಂಥ ಸಂಘಟನಾತ್ಮಕ ಬಲ ತುಂಬಿದ್ದರು. ಸ್ವಂತ ಊರು ಕೋಟ ಬಿಟ್ಟು, ದೂರದ ಪುತ್ತೂರಿನಲ್ಲಿದ್ದ ಕಾರಂತರ ಯಕ್ಷ-ಪ್ರಯೋಗಗಳಿಗೆ ತಮ್ಮ ಕಾಲೇಜಿನಲ್ಲಿ ಅವಕಾಶ ಮಾಡಿಕೊಟ್ಟರು. ಅದರಲ್ಲೂ ಬಡಗು ತಿಟ್ಟಿನ ಯಕ್ಷ ಶಿಕ್ಷಣಕ್ಕೊಂದು ಗುರುಕುಲವನ್ನೇ ಕಟ್ಟಿದ್ದು ಕುಶಿಯವರ ದೂರದರ್ಶಿತ್ವಕ್ಕೂ ಸಾಕ್ಷಿ. ಇಂದು ಆ ಕೇಂದ್ರ ಕಾರಂತ ಶಿಷ್ಯರೇ ಆದ ಬನ್ನಂಜೆ ಸಂಜೀವ ಸುವರ್ಣರ ಗುರುತ್ವದಲ್ಲಿ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ ದೃಢವಾಗಿ ನಿಂತಿದೆ! ಇಂದು ಕನ್ನಡ ನಾಟಕರಂಗಕ್ಕೆ ಹೆಗ್ಗೋಡಿನ ನೀನಾಸಂ ಎಷ್ಟೋ ಬಡಗು ತಿಟ್ಟಿನ ಯಕ್ಷಗಾನಕ್ಕೆ ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರವೂ ಅಷ್ಟೇ! 

ಕುಶಿಯವರು ೧೯೬೪ರ ಸುಮಾರಿಗೆ ಕಾರಂತರ ಷಷ್ಟ್ಯಬ್ದಿಯನ್ನು ಉಡುಪಿಯಲ್ಲಿ ನಾಲ್ಕೈದು ದಿನಗಳ ಉದ್ದಕ್ಕೆ ತುಂಬಾ ಅರ್ಥಪೂರ್ಣವಾಗಿ ಆಯೋಜಿಸಿದ್ದರು. ಕುಶಿಯವರು ಇಂಥ ಸಾರ್ವಜನಿಕ ಕಲಾಪಗಳಲ್ಲಿ ಪರಿಚಯದ ಎಲ್ಲರನ್ನೂ ಧಾರಾಳವಾಗಿ ಸೇರಿಸಿಕೊಳ್ಳುತ್ತಿದ್ದರು. ಮತ್ತೆ ಎಲ್ಲೂ ಮೆರೆಯದೇ ಸಮರ್ಥ ನಾಯಕತ್ವ ಕೊಡುತ್ತಿದ್ದರು. ಹಾಗೇ ‘ಕಾರಂತ ೬೦’ರ ಕುರಿತು ನನ್ನ ತಂದೆಯ ಬಳಿ ಮಾತಾಡುತ್ತಾ "ಕಾರ್ಯಕ್ರಮಗಳಿಗೆ ನಮ್ಮ ಕಾಲೇಜಿನ ವಿದ್ಯಾರ್ಥಿ ಸ್ವಯಂಸೇವಕರೊಡನೆ ನಿಮ್ಮ ಅಶೋಕನೂ ಇರಲಿ, ಕಳಿಸಿ" ಎಂದಿದ್ದರು. ಆಗ ಯಾವುದೋ ರಜೆಯಲ್ಲಿ ಪುತ್ತೂರಿನ ಅಜ್ಜನ ಮನೆಯಲ್ಲಿದ್ದ ನಾನು ಭಾರೀ ಸಂತೋಷದಿಂದ ಉಡುಪಿಗೆ ಧಾವಿಸಿದ್ದೆ, ಅನುಭವಿಸಿದೆ. 

ಸ್ವಯಂ ಸೇವಕರ ವಾಸ್ತವ್ಯಕ್ಕೆ ಕಾಲೇಜು ವಿದ್ಯಾರ್ಥಿ ನಿಲಯವನ್ನು ಒದಗಿಸಿದ್ದರು. ಅಲ್ಲಿ ಅದೇ ಮೊದಲ ಪರಿಚಯವಾಗಿ, ಎಂ.ಎಲ್ ಸಾಮಗರು (ಆಗಿನ್ನೂ ಬಿ.ಎ. ವಿದ್ಯಾರ್ಥಿ. ಅವರು ಮುಂದೆ ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕ, ಪ್ರಾಂಶುಪಾಲರಾಗಿ ನಿವೃತ್ತಿ ಕಂಡು, ಇಂದು ವಿಶ್ರಾಂತ ಜೀವನ ನಡೆಸಿದ್ದಾರೆ) ನನಗೆ ಸಂಗಾತಿಯಾಗಿ ಸಿಕ್ಕಿದ್ದರು. ಮೊದಲ ಮೂರೋ ನಾಲ್ಕೋ ದಿನ ಕಾರಂತರು ಬಯಸಿದ ಯಕ್ಷಗಾನ ಕಮ್ಮಟ. ಅನಾವಶ್ಯಕ ಆಡಂಬರ, ಔಪಚಾರಿಕತೆಗಳಿಗೆ ಎಡೆಯಿಲ್ಲದೆ ದಿನವಿಡೀ ನಡೆಯುತ್ತಿದ್ದ ಬಹುಮುಖೀ ಯಕ್ಷ-ಚಿಂತನ. (ಅಂಥದ್ದು ನಾನು ಮುಂದೆಂದೂ ಕಾಣಲೇ ಇಲ್ಲ.) ಆ ಕಾಲದ ಎಲ್ಲ ಘಟಾನುಘಟಿ ಕಲಾವಿದರನ್ನು ಒಟ್ಟು ಹಾಕಿ, ದಿನವಿಡೀ ಯಕ್ಷಗಾನದ ಒಂದೊಂದೇ ವಿಭಾಗಗಳನ್ನು ಅಕ್ಷರಶಃ ಕತ್ತರಿಸಿ, ವಿಶ್ಲೇಷಿಸಿ, ಉಪಶಮನಗಳನ್ನು ನಿಷ್ಕರ್ಷಿಸಿ ಮುಂದುವರಿಯುತ್ತಿದ್ದರು. ಕಾರಂತರು ಉದ್ದಕ್ಕೂ ಬಿಗಿ ಸೂತ್ರಧಾರನಾಗಿ ನಿಂತು, ಸನ್ನಿವೇಶಕ್ಕೆ ತಕ್ಕಂತೆ ಪ್ರಸ್ತಾವನೆ, ವಿಮರ್ಶೆ, ಅನುಭವ, ಪರಿಹಾರ, ಹಾಸ್ಯ, ಅನಿವಾರ್ಯವಾದಲ್ಲಿ ಸಿಡಿಲು ಕೊಟ್ಟು, ಕಲಾಪ ಎಲ್ಲೂ ದಾರಿ ತಪ್ಪದಂತೆ, ಅರ್ಥಪೂರ್ಣವಾಗುವಂತೆ ನಡೆಸುತ್ತಿದ್ದರು. ಅಲ್ಲಿ ಯಕ್ಷಗಾನದ ಮಾತಿನ ತೂಕ (ವಾಚಿಕಾಭಿನಯ), ರಾಗಗಳ ಭಾವ, ಕುಣಿತದ ನಿಖರತೆ, ಅಭಿನಯದ ನವಿರು, ತೊಡುಗೆಗಳ ಆಯಾಮ, ಬಣ್ಣಗಳ ಲೋಕ...... ಒಂದೊಂದರಲ್ಲೂ ಬೀಳುತ್ತಿದ್ದ ಕಾರಂತ ಛಾಪಿಗೆ ಸೋಲದವರಿಲ್ಲ, ಬೆರಗಾಗದವರೂ ಇಲ್ಲ. 

ಅದುವರೆಗಿನ ಬಹುತೇಕ ಯಕ್ಷಗಾನ ಪ್ರದರ್ಶನಗಳು ವ್ಯಕ್ತಿ ಕೇಂದ್ರಿತವಾಗಿ, ಪರಂಪರೆಯ ಹಳಿಯಗುಂಟ ಸಾಗಿತ್ತು. ಕಾರಂತರು ಅವನ್ನು ಜೀರ್ಣಿಸಿಕೊಂಡು, ಅಸಂಖ್ಯ ಲೋಕಕಲೆಗಳ ದರ್ಶನದ ಬಲದಲ್ಲಿ, ಯಕ್ಷಗಾನಕ್ಕೆ ಕಾಯಕಲ್ಪ ಕೊಡುವ ಛಲ ತೋರಿದ್ದರು. ಅದಕ್ಕೂ ಮಿಗಿಲಾಗಿ ತಾನು ಹೇಳಿದ್ದನ್ನು ಪ್ರಯೋಗಿಸಿಯೇ ತೋರಿಸುವ ಛಾತಿಯನ್ನೂ ‘ಯಕ್ಷರಂಗ’ದ ಮೂಲಕ ಮೆರೆದರು. ಈಗಾಗಲೇ ಉಲ್ಲೇಖಿಸಿದ ಯಕ್ಷಗಾನ ಕೇಂದ್ರದ ಬೌದ್ಧಿಕ ಆಯಾಮವನ್ನು ಪೂರ್ತಿ ಕಾರಂತರು ವಹಿಸಿಕೊಂಡು ಯೋಗ್ಯ ಭುಜಗಳಿಗೆ ವರ್ಗಾಯಿಸಿದ್ದರು. 

ಕೊನೆಯ ದಿನಪೂರ್ತಿ ಕಾರಂತ ಸಮ್ಮಾನ. ಅದರ ಭಾಗವಾಗಿ - ಕಾರಂತರ ಹತ್ತೂ ಮುಖಗಳ ಅರ್ಥಪೂರ್ಣ ದರ್ಶನವಾಗುವಂತೆ, ಸಾಮಾನ್ಯರಿಂದ ವಿದ್ವನ್ಮಣಿಗಳವರೆಗಿನ ಸ್ಮರಣೆ, ಲೇಖನಗಳ ಮಹಾಗ್ರಂಥ - ‘ಕಾರಂತ ಅರವತ್ತು’, ಲೋಕಾರ್ಪಣಗೊಂಡಿತ್ತು. ಕಾರಂತ-೬೦ಕ್ಕೆ ಕಾರಂತ-೬೦ಏ ಹೋಲಿಕೆ! ಅದರ ಒಂದು ವಿಭಾಗ - ಆಖ್ಯಾಯಿಕೆಗಳು. ಅದನ್ನು ನನ್ನ ತಂದೆಯೇ ಸಂಪಾದನೆ ಮಾಡಿಕೊಟ್ಟಿದ್ದರು. ಅದರಲ್ಲಿ ನನ್ನದೂ ಒಂದು ಪುಟ್ಟ ಲೇಖನವಿದೆ! 

ಅದುವರೆಗೆ ಪುತ್ತೂರಿನಲ್ಲಿ ನಾನು ಅಸಂಖ್ಯ ಯಕ್ಷಗಾನಗಳನ್ನೇನೋ (ಬಹುತೇಕ ತೆಂಕು ತಿಟ್ಟು) ನೋಡಿದ್ದೆ. ಆದರೆ ಎಂದೂ ಅವನ್ನು ಇಲ್ಲಿ ಕಂಡಷ್ಟು ದೊಡ್ಡ ಆಯಾಮದಲ್ಲಿ ಗ್ರಹಿಸಿರಲೇ ಇಲ್ಲ. ಅಂದಿನ ನನ್ನ ‘ಪ್ರಥಮ ನೋಟ’ದ ಕಥನಗಳನ್ನು ನಾನು ಭಾರೀ ವಿವರಗಳಲ್ಲಿ ರಾಘವೇಂದ್ರನಿಗೆ ಪತ್ರ ಮುಖೇನ ಬರೆದಿದ್ದೆ. ಕ್ಷಮೆಯಿರಲಿ, ಅದರಲ್ಲಿ ಇಂದಿಗೂ ನನ್ನ ಚಿತ್ತಭಿತ್ತಿಯಲ್ಲಿ ಅಚ್ಚಳಿಯದೇ ಉಳಿದ ಕೆಲವೇ ವಿಶೇಷಗಳನ್ನಷ್ಟೇ ಪಟ್ಟಿ ಮಾಡಿ ಮುಗಿಸುತ್ತೇನೆ. 

*ಯಕ್ಷ-ಕಮ್ಮಟಗಳ ಕೊನೆಯ ಹೊತ್ತಿಗೆ ವೃತ್ತಿಪರ ಭಾಗವತರುಗಳ ಗಾಯನ ಸ್ಪರ್ಧೆ ಏರ್ಪಡಿಸಿದ್ದರು. ಅದರ ತೀರ್ಪು ಕುರಿತಂತೆ ಹಿರಿಯ ಭಾಗವತರುಗಳಲ್ಲಿ ಅಸಮಾಧಾನ ಮೂಡಿತ್ತು. (ಅಂದು ‘ಕಾರಂತರ ಭಾಗವತ’ರೆಂದೂ ಖ್ಯಾತಿಯನ್ನು ಗಳಿಸಿದ್ದ ನಾರ್ಣಪ್ಪ ಉಪ್ಪೂರರು ಭಾಗವಹಿಸಿದ್ದರು. ಈ ಅಸಮಾಧಾನದ ಕುರಿತು ನಾರ್ಣಪ್ಪ ಉಪ್ಪೂರರ ಮಕ್ಕಳೇ ಆದ ಶ್ರೀಧರ ಉಪ್ಪೂರರೋ ದಿನೇಶ ಉಪ್ಪೂರರೋ ಎಲ್ಲೋ ಪ್ರಸ್ತಾವಿಸಿದ್ದು ನೋಡಿದ್ದೇನೆ.) 

*ಯಕ್ಷ-ಕಮ್ಮಟಗಳ ಕೊನೆಯ ಕಲಾಪ ಮುಗಿದ ರಾತ್ರಿ ತುಂಬ ತಡ ಹೊತ್ತಿನವರೆಗೂ ಸ್ವಯಂಸೇವಕರುಗಳಿಗೆ (ನಮಗೆ) ಭಾರೀ ಕೆಲಸವಿತ್ತು. ಕಮ್ಮಟದುದ್ದಕ್ಕೆ ಇದ್ದ ಸೀಮಿತ ಸಭಾ ವ್ಯವಸ್ಥೆಯನ್ನು ಕಳಚಿ, ಮರುದಿನದ ಭಾರೀ ಸಮ್ಮಾನಕ್ಕೆ ಹೊಸದೇ ವ್ಯವಸ್ಥೆಯನ್ನು, ಅಲಂಕಾರಗಳನ್ನೂ ಮಾಡಿದ್ದೆವು. ನಮಗೆಲ್ಲ ಅಪರಾತ್ರಿಯ ವಿಶೇಷ ಉಪಚಾರವಾಗಿ ತಿನ್ನುವಷ್ಟು ಅವಲಕ್ಕಿ, ಬಾಳೇಹಣ್ಣು, ಕುಡಿಯುವಷ್ಟು ಕೋಕಾಕೋಲಾ. ನಾನು ಅದೇ ಮೊದಲು ಕೋಕಾಕೋಲಾ ಎಂಬ ಅದ್ಭುತದ ರುಚಿ ಕಂಡದ್ದು! 

*ಕಮ್ಮಟದ ನಿಶ್ಚಿತ ಅವಧಿಗಳಲ್ಲಿ, ಅಂದರೆ ಕಾರಂತರ ಉಪಸ್ಥಿತಿ ಅಗತ್ಯವಿರದ ವಿದ್ವತ್ ಪ್ರಬಂಧ, ಚರ್ಚೆ ನಡೆಯುವ ಹೊತ್ತುಗಳಲ್ಲಿ ಕಾರಂತರು ಮಣಿಪಾಲಕ್ಕೆ ಹೋಗುತ್ತಿದ್ದರು. ಅಲ್ಲಿ ಅವರ ಯಕ್ಷಗಾನ ಬ್ಯಾಲೇ ತಂಡ, ದೇಶವಿದೇಶಗಳ ತಿರುಗಾಟಕ್ಕೆ ಹೊರಡುವ ಮೊದಲಿನ ತರಬೇತಿ ನಡೆದಿತ್ತು. ನನಗೆ ಅದನ್ನೂ ಕಣ್ತುಂಬಿಕೊಳ್ಳುವ ಆಸೆ ಇತ್ತು. ದಕ ಜಿಲ್ಲೆಯ ಉರಿ ಬಿಸಿಲಿನಲ್ಲಿ ಯಾರೋ ತೋರಿದ ಪೂರ್ಣ ಕೆಂದೂಳಿಯ ಕಚ್ಚಾರಸ್ತೆಯಲ್ಲಿ, ಇನ್ಯಾರೋ ಹೇಳಿದಂತೆ ಮೂರೋ ಐದೋ ಮೈಲು ದೂರದ ಮಣಿಪಾಲಕ್ಕೆ ಹೋಗುವ ಸಾರ್ವಜನಿಕ ವಾಹನಗಳು ಸಿಗಲೇ ಇಲ್ಲ! 

*ಕಾರಂತ ಸಮ್ಮಾನದಂದು ಕಾರಿನಲ್ಲಿ ಬಂದ ಕಾರಂತರನ್ನು ಯಕ್ಷ-ವೇಷಗಳು ಎಂಜಿಎಂ ಕಾಲೇಜಿನ ಗೇಟಿನಿಂದ ಸಭಾಮಂಟಪದವರೆಗೆ ಸಾಲುಗಟ್ಟಿ ನಿಂತು ಸ್ವಾಗತಿಸಿದ್ದವು. ಸಮ್ಮಾನಕ್ಕೆ ಉತ್ತರದಲ್ಲಿ ಕಾರಂತರು ಮೊದಲು ಅದನ್ನೇ ತೀವ್ರ ಕುಟುಕಿದ್ದರು - ‘ಯಕ್ಷ-ವೇಷಗಳನ್ನು ಅದರದೇ ರಂಗ ತಪ್ಪಿದ ಯಾವ ಕಲಾಪಕ್ಕೂ ಬಳಸಬಾರದು’ 

*ಸಮ್ಮಾನ ದಿನದ ಕೊನೆಯ ಕಲಾಪ (?) ದೂರದ ಊರಿನಿಂದ ಬಂದಿದ್ದ ಕಾರಂತರ ಅಭಿಮಾನಿ ಬಳಗವೊಂದರ ನಾಟಕ ಪ್ರಸ್ತುತಿ - ಕಾರಂತರದೇ ನಾಟಕ - ಕಿಸಾ ಗೌತಮಿ. ಪ್ರದರ್ಶನ ಮುಗಿದದ್ದೇ ರಂಗದ ಮೇಲೆ ಹೋಗಿ ಕಾರಂತರು ‘ಕೆಟ್ಟ ಪ್ರದರ್ಶನ’ವನ್ನು ನಿರ್ದಾಕ್ಷಿಣ್ಯವಾಗಿ ಭಂಗಿಸಿ ನುಡಿದಿದ್ದರು! 

*ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಾರಂತರ ಇಂಟರ್‍ಮೀಡಿಯೆಟ್ ಸಹಪಾಠಿಯಾಗಿದ್ದ ನನ್ನ ಮಡಿಕೇರಿ ಅಜ್ಜ ಸಮ್ಮಾನದ ದಿನ ಬಂದು, ಪ್ರೇಕ್ಷಕನಾಗಿದ್ದು ಆನಂದಿಸಿದ್ದರು. 

*ಚಪ್ಪರದ ಕಂಬಕ್ಕೆ ಹೊಂಡ ತೋಡುವವನಿಂದ ವೇದಿಕೆಯ ಮೇಲಿನ ಅತಿಗಣ್ಯ ವ್ಯಕ್ತಿಯವರೆಗೆ ಪ್ರೇರಣೆ ಕೊಡುವವರ, ಪ್ರೀತಿ ತೋರುವವರ ಹೆಸರು ಕುಶಿ ಹರಿದಾಸ ಭಟ್. ಸದಾ ಉಬ್ಬಸದ ಪೀಡೆಯೊಡನೆಯೂ ಕುಶಿ ಸರ್ವಂತರ್ಯಾಮಿ! 

೧೮. ಬೋಲ್ ರಾಧಾ ಬೋಲ್... ಹೋಗಾ ಕೀ ನಹೀ? 


ಕ್ಷಮಿಸಿ, ಒಮ್ಮೆ ಬಳ್ಳಾರಿಗೇ ಇನ್ನೊಂದು ನೋಟ ಹಾಕಿ ಬರುತ್ತೇನೆ. 
ಬಳ್ಳಾರಿ ಶಾಲೆಯ ಏಳನೇ ತರಗತಿಯಲ್ಲಿ ನನಗೊಬ್ಬ ಅದ್ಭುತ ಇಂಗ್ಲಿಷ್ ಉಪಾಧ್ಯಾಯರು ಸಿಕ್ಕಿದ್ದರು. ವಾಕ್ಯದಲ್ಲಿ ಕಾಲ, ಲಿಂಗ ಮತ್ತು ವಚನಾದಿಗಳನ್ನು ಅಳವಡಿಸಲು ಅವರೊಂದು ಭಯಾನಕ ಕೋಷ್ಠಕ ಮಾಡಿದ್ದರು. ಅದರ ಮೂವತ್ತೋ ನಲವತ್ತೋ ನಮೂದುಗಳನ್ನು ನಾವು ಕಂಠಪಾಠ ಮಾಡಿಕೊಳ್ಳಬೇಕಿತ್ತು. ಅನಂತರ ಅವರು ತರಗತಿಯಲ್ಲಿ ಬೆತ್ತ ಹಿಡಿದುಕೊಂಡು ಅಡ್ಡಾಡುತ್ತ "ಭೂತ ಕಾಲ....., ನಪುಂಸಕ ಲಿಂಗ....., ಏಕವಚನ..." ಎಂದು ರಾಗ ಎಳೆಯುತ್ತ ಯಾವುದೋ ಪದ ಪ್ರಯೋಗದ ಪ್ರಶ್ನೆಯೊಡನೆ ಒಮ್ಮೆಗೇ ಯಾರೋ ಒಬ್ಬನನ್ನು ಕೋಲಿನ ತುದಿಗೆ ಗುರಿ ಮಾಡುತ್ತಿದ್ದರು. ಪಾಸ್ಟ್, ಪ್ರೆಸೆಂಟ್, ಪ್ರೆಸೆಂಟ್ ಕಂಟಿನೂಯಸ್, ಫ್ಯೂಚರ್, ಸಿನ್ಗುಲರ್, ಪ್ಲೂರಲ್, ಮೇಲ್, ಫೀಮೇಲ್..... ಗೋಜಲು ಬಿಡಿಸುವಲ್ಲಿ ಸೋತವರೇ ಹೆಚ್ಚು. ಈ ಹಿಂಸಾತ್ಮಕ ಇಂಗ್ಲಿಷಿನಲ್ಲಿ ಕಡಿಮೆ ಅಂಕ ಗಳಿಸಿದವರ ಫೊಷಕರನ್ನು ಶಾಲೆಗೆ ಕರೆಸಿದ್ದರು. ನನ್ನಪ್ಪ ಸೈನ್ಯದ ಸಮವಸ್ತ್ರದಲ್ಲಿ, ಕಾರಿನಲ್ಲಿ ಬಂದದ್ದು ಕಂಡು ಮಾಷ್ಟ್ರು ಸ್ವಲ್ಪ ತಣ್ಣಗಾಗಿ, "ಮಗನಿಗೆ ಇಂಗ್ಲಿಷ್ ಮನೆಪಾಠ ಹೇಳಿಸುವುದೊಳ್ಳೆಯದು" ಶಿಫಾರಸು ಕೊಟ್ಟರು. 

ತಂದೆ ವೃತ್ತಿ ಜೀವನದ ಮೊದಲ ಚರಣದಲ್ಲಿ, ಮಂಗಳೂರಿನ ಅಲೋಶಿಯಸ್ ಕಾಲೇಜಿನ ಗಣಿತ ಅಧ್ಯಾಪಕನಾಗಿದ್ದಾಗ, ಯಾರದೋ ಹುಡುಗನ ಮನೆ ಪಾಠಕ್ಕೆ ತೊಡಗಿ, ಹೇಸಿಗೆ ಹುಟ್ಟಿ, "ಇನ್ನು ಮುಂದೆ ಮಾಡೆ" ಎಂದು ಶಪಥ ಮಾಡಿದ್ದರು.  ) ಆದರೂ (ಮಗನಿಗಾಗಿ) ಎಲ್ಲೋ ತಲಾಷ್ ಮಾಡಿ ನನಗೆ ಇಂಗ್ಲಿಷ್ ಮನೆಪಾಠ ನಿಶ್ಚೈಸಿದ್ದರು. ಯಾವುದೋ ಶಾಲೆಯ ನಿವೃತ್ತ ಉಪಾಧ್ಯಾಯ ......ನಾಯ್ಡು, ಸಂಜೆ ನಾನು ಶಾಲೆಯಿಂದ ಮನೆಗೆ ಬರುವಾಗ, ನನ್ನ ಕಾಫಿ ತಿಂಡಿಗೇ ಪಾಲುದಾರನಾಗಿ ಬಂದು ತಗುಲಿಕೊಳ್ಳುತ್ತಿದ್ದರು. 

ಬಾಲ್ಯದಲ್ಲಿ ಅಮ್ಮನಿಗೆ ಓದಿನ ಹಸಿವು ತುಂಬ ದೊಡ್ಡದಿತ್ತು. ಆದರೆ ಅಜ್ಜ ಕಡಿವಾಣ ಹಾಕಿದ್ದು ನಿಮಗೆ ಗೊತ್ತು. ಇಲ್ಲಿ ಮನೆಗೇ ಮಾಷ್ಟ್ರು ಎಂದ ಕೂಡಲೇ ಅಮ್ಮನೂ ತನ್ನ ಬಯಕೆ ಬಳ್ಳಿಗೆ ನೀರೂಡಿ, ಇಂಗ್ಲಿಷಾದರೂ ಕಲಿಯಲು ಸಜ್ಜಾಗಿದ್ದಳು. ಆದರೆ ಎರಡೋ ಮೂರೋ ತಿಂಗಳಲ್ಲಿ ಮೇಷ್ಟ್ರು ಕಾಫಿ, ತಿಂಡಿಗೆ ಕೊಟ್ಟ ಮಹತ್ವ ಪಾಠಕ್ಕೆ ಕೊಡುತ್ತಿಲ್ಲವೆಂದು ತೋರತೊಡಗಿತು. ಸಂಜೆ ದೂರದ ಕೌಲ್ ಬಜಾರಿನಿಂದ ತೇಲಿ ಬರುವ ಸಿನಿಮಾ ಹಾಡುಗಳಿಗಂತೂ ಮುದಿ ಮಾಷ್ಟ್ರು ಮರುಳುಗಟ್ಟುತ್ತಿದ್ದರು. "ಬೋಲ್ ರಾಧಾ ಬೋಲ್ ಸಂಗಮ್ ಹೋಗಾಕೀ ನಹೀ..." ಬರುವಾಗಂತೂ ನಮ್ಮ ಪಾಠ "ಹೋಗಾ ನಹೀ ನಹೀ..." ಆಗುತ್ತಿತ್ತು. ಸಂಗಂ ಸಿನಿಮಾದ ಆ ಹಾಡು ಮುಗಿದ ಮೇಲೂ ಅಜ್ಜ ಮಾಷ್ಟ್ರು ತಮ್ಮ ಫಳ ಫಳ ಗುಂಡುಮಂಡೆಯ ಮೇಲೆ ಬೆರಳಿನ ತಬ್ಲಾ ಬೋಲ್ ಬಾರಿಸುತ್ತ, ಹಾಡು ಗುನುಗುತ್ತಿದ್ದರು, ಕುಣಿಯುವುದೊಂದು ಬಾಕಿ! ಹಾಡಿನ ರಸಮಯ ಸನ್ನಿವೇಶ ವಿವರಿಸುವುದರಲ್ಲಂತೂ ಅವರು ಕಳೆದೇ ಹೋಗುತ್ತಿದ್ದರು. ಎರಡೋ ಮೂರೋ ತಿಂಗಳು ಕಳೆಯುವುದರೊಳಗೆ ನನ್ನಲ್ಲಿದ್ದ ಇಂಗ್ಲಿಷಾದರೂ ಉಳಿದುಕೊಳ್ಳಲೆಂದು ತಂದೆ ತಾಯಿ ಅವರನ್ನೇ ಕಳಚಿಬಿಟ್ಟರು. 

(ಮುಂದುವರಿಯಲಿದೆ) 

No comments:

Post a Comment