(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೫)
ಲೇಖಕ: ಎ.ಪಿ. ಚಂದ್ರಶೇಖರ
(ಚಿತ್ರಗಳು: ಕೀರ್ತಿ, ಮಂಗಳೂರು)
(ಚಿತ್ರಗಳು: ಕೀರ್ತಿ, ಮಂಗಳೂರು)
[ಪಶ್ಚಿಮ ಘಟ್ಟದಲ್ಲಿ ನನ್ನ ಮೊದಲ ಹೆಜ್ಜೆ ಮೂಡಿಸುವ ದಿನ. ಮೈಸೂರಿನಿಂದ ಅದಕ್ಕೆಂದೇ ಬಂದ ಗೆಳೆಯ ವಿಶ್ವನಾಥ್ ಜತೆಗೆ ದಿಢೀರ್ ಸೇರ್ಪಡೆಯಾದವ, ಅಧಿಕೃತ ಪರ್ವತಾರೋಹಣಕ್ಕೇ ಅದೇ ಮೊದಲು ಪ್ರವೇಶ ಪಡೆದವ, ಸೋದರ ಮಾವನ ಮಗ ಎ.ಪಿ. ಚಂದ್ರಶೇಖರ. ಸಣ್ಣಾಳು, ಇನ್ನೂ ಚಡ್ಡಿ ಪ್ರಾಯ (೮/೯ನೇ ತರಗತಿ). ಆದರೆ ಔಪಚಾರಿಕ ವಿದ್ಯೆಯೊಡನೆ ಹಳ್ಳಿಯ ವಿದ್ಯೆಯಲ್ಲಿ ಅಪ್ಪನ ಗರಡಿಯಲ್ಲಿ (ನೋಡಿ: ಅಸಮ ಸಾಹಸಿ ಮರಿಕೆ ಅಣ್ಣ) ಪಳಗಿದವ ಎನ್ನುವುದೇ ಆತನ ಅರ್ಹತೆ. ಚಿಕ್ಕಪ್ಪ ಗೌರೀಶಂಕರರ ಪ್ಯಾಂಟ್ ಹಾಕಿ, ಬಡಕಲು ಹೊಟ್ಟೆಗೆ ಬೆಲ್ಟ್
ಕಾಯಿಸಿ, ನೇತುಬೀಳುವ ಪ್ಯಾಂಟ್ ಕಾಲುಗಳನ್ನು ಗೋಣಿ ಹಗ್ಗದಲ್ಲಿ ಎತ್ತಿ ಕಟ್ಟಿ, ಇನ್ಯಾರದೋ ಕ್ಯಾನ್ವಾಸ್ ಶೂಗೆ ಮೂರು ಉಣ್ಣೆ ಕಾಲ್ಚೀಲದಲ್ಲಿ ಬಿಗಿ ಕೊಟ್ಟು ಯಶಸ್ವಿಯಾಗಿ ನಡೆದಿದ್ದ. (ನೋಡಿ: ಗಡಿಬಿಡಿಯಲ್ಲಿ ಕುಮಾರಮುಡಿಗೆ) ಮುಂದೊಮ್ಮೆ ಹೀಗೇ ಮಳೆಗಾಲದ ಬಿರುಸಿನಲ್ಲಿ ನಾವು ಮೊದಲ ಬಾರಿಗೆ ಕೂಡ್ಲುತೀರ್ಥ ನೋಡಲು ಹೋಗುವಾಗಲೂ ಚಂದ್ರ ಜತೆಗಿದ್ದ. ಅಷ್ಟೇ ಅಲ್ಲ ಬೆಳೆದಿದ್ದ. ಕೂಡ್ಲುತೋಟದಲ್ಲಿ ನಾವು ಕಂಡ ಪೂರ್ಣ ಬಳ್ಳಿಯದೇ ಸೇತುವೆ ಕುರಿತು ‘ಅಟ್ಟೆ ಬೂರುದ ಕಟ್ಟೆ’ ಎಂದು ಉದಯವಾಣಿಗೆ ಒಂದು ಲೇಖನವನ್ನೂ ಬರೆಯುವಷ್ಟು ಪ್ರೌಢನಾಗಿದ್ದ. ಇಂಥವೇ ಉಮೇದುಗಳೊಡನೆ ಚಂದ್ರ ನಮ್ಮೊಡನೆ ಬಲ್ಲಾಳರಾಯನ ದುರ್ಗವನ್ನೂ ಅನುಭವಿಸಿದ, ವಯಸ್ಕರ ಶಿಕ್ಷಣ ಮಾಲೆಯವರ ಮಾಸಿಕ - ಪುಸ್ತಕ ಪ್ರಪಂಚದಲ್ಲಿ ಪ್ರಕಟವಾಗುವಂತೆ (ಆಗಸ್ಟ್ ೧೯೮೩) ಸಾಹಸಯಾನದ ಲೇಖನವನ್ನೂ ಬರೆದಿದ್ದ. ಅದರ ಪೂರ್ಣ ಪಾಠ ಈಗ ನಿಮ್ಮ ಮುಂದೆ.
ಕಾಯಿಸಿ, ನೇತುಬೀಳುವ ಪ್ಯಾಂಟ್ ಕಾಲುಗಳನ್ನು ಗೋಣಿ ಹಗ್ಗದಲ್ಲಿ ಎತ್ತಿ ಕಟ್ಟಿ, ಇನ್ಯಾರದೋ ಕ್ಯಾನ್ವಾಸ್ ಶೂಗೆ ಮೂರು ಉಣ್ಣೆ ಕಾಲ್ಚೀಲದಲ್ಲಿ ಬಿಗಿ ಕೊಟ್ಟು ಯಶಸ್ವಿಯಾಗಿ ನಡೆದಿದ್ದ. (ನೋಡಿ: ಗಡಿಬಿಡಿಯಲ್ಲಿ ಕುಮಾರಮುಡಿಗೆ) ಮುಂದೊಮ್ಮೆ ಹೀಗೇ ಮಳೆಗಾಲದ ಬಿರುಸಿನಲ್ಲಿ ನಾವು ಮೊದಲ ಬಾರಿಗೆ ಕೂಡ್ಲುತೀರ್ಥ ನೋಡಲು ಹೋಗುವಾಗಲೂ ಚಂದ್ರ ಜತೆಗಿದ್ದ. ಅಷ್ಟೇ ಅಲ್ಲ ಬೆಳೆದಿದ್ದ. ಕೂಡ್ಲುತೋಟದಲ್ಲಿ ನಾವು ಕಂಡ ಪೂರ್ಣ ಬಳ್ಳಿಯದೇ ಸೇತುವೆ ಕುರಿತು ‘ಅಟ್ಟೆ ಬೂರುದ ಕಟ್ಟೆ’ ಎಂದು ಉದಯವಾಣಿಗೆ ಒಂದು ಲೇಖನವನ್ನೂ ಬರೆಯುವಷ್ಟು ಪ್ರೌಢನಾಗಿದ್ದ. ಇಂಥವೇ ಉಮೇದುಗಳೊಡನೆ ಚಂದ್ರ ನಮ್ಮೊಡನೆ ಬಲ್ಲಾಳರಾಯನ ದುರ್ಗವನ್ನೂ ಅನುಭವಿಸಿದ, ವಯಸ್ಕರ ಶಿಕ್ಷಣ ಮಾಲೆಯವರ ಮಾಸಿಕ - ಪುಸ್ತಕ ಪ್ರಪಂಚದಲ್ಲಿ ಪ್ರಕಟವಾಗುವಂತೆ (ಆಗಸ್ಟ್ ೧೯೮೩) ಸಾಹಸಯಾನದ ಲೇಖನವನ್ನೂ ಬರೆದಿದ್ದ. ಅದರ ಪೂರ್ಣ ಪಾಠ ಈಗ ನಿಮ್ಮ ಮುಂದೆ.
ಮೆಕ್ಯಾನಿಕಲ್ ಎಂಜಿನಿಯರಿಂಗಿನಲ್ಲಿ ವಿಶಿಷ್ಟ ಪ್ರಾವೀಣ್ಯ ಗಳಿಸಿಯೂ ಪ್ರಾಕೃತಿಕ ಜೀವನ ಶೈಲಿಗೆ ಒಲಿದ ಎಪಿ ಚಂದ್ರಶೇಖರ, ಇಂದು ಮೈಸೂರಿನಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ತನ್ನದೇ ಕೃಷಿಕ್ಷೇತ್ರದಲ್ಲಿ ನೆಲೆಸಿ, ಸಾವಯವ ಕೃಷಿಕನೆಂದು ಹೆಸರುವಾಸಿಯಾಗಿರುವುದು ನಿಮಗೆಲ್ಲ ತಿಳಿದೇ ಇದೆ ಎಂದು ಭಾವಿಸುತ್ತೇನೆ. - ಅಶೋಕವರ್ಧನ]
ವಸ್ತ್ರದಂಗಡಿ ಮಾಲೀಕರು, ಸಿಹಿಕೇಂದ್ರದೊಡೆಯರು ಕ್ರಿಸ್ಮಸ್ ಕೊಡುಗೆ ಘೋಷಿಸುವ ಮೊದಲೇ ‘ಆರೋಹಣ ಪರ್ವತಾರೋಹಿಗಳು ಸಾಹಸಿಗಳು’ ಮಂಗಳೂರು ಇವರು ಸಾಹಸಪ್ರಿಯರಿಗೆ, ಪ್ರಕೃತಿಪ್ರಿಯರಿಗೆ ಕೊಡುಗೆ ಘೋಷಿಸಿದರು - "ಬನ್ನಿ, ಬಲ್ಲಾಳರಯನದುರ್ಗಕ್ಕೆ." ಕರೆಗೆ ಓಗೊಟ್ಟು ಕ್ರಿಸ್ಮಸ್ ಪೂರ್ವ ಸಂಜೆ ಆರರ ಮೇಲೆ ಆರೋಹಿಗಳು ಅವರವರ ಅನುಕೂಲತೆಗನುಗುಣವಾಗಿ ಕುಕ್ಕಾವು (ಮಂಗಳೂರು - ಚಾರ್ಮಾಡಿ ಮಾರ್ಗದಲ್ಲಿ ಮುಂಡಾಜೆಯಿಂದ ಐದು ಮೈಲು ದೂರದ
ಹಳ್ಳಿ) ಸೇರುತ್ತಲೇ ಇದ್ದರು. ವಾಸ್ತವ್ಯ ಶ್ರೀ ವೆಂಕಟಸುಬ್ಬರಾಯರ ಕೂಡಬೆಟ್ಟು ಮನೆ.
ಹಳ್ಳಿ) ಸೇರುತ್ತಲೇ ಇದ್ದರು. ವಾಸ್ತವ್ಯ ಶ್ರೀ ವೆಂಕಟಸುಬ್ಬರಾಯರ ಕೂಡಬೆಟ್ಟು ಮನೆ.
ನಸುಕು ನಾಲ್ಕು ಗಂಟೆಯಿಂದಲೇ ಉತ್ಸಾಹಿಗಳು ಎದ್ದು ಮೂಲ ಅಗತ್ಯಗಳನ್ನು ಪೂರೈಸಹೊರಟರು. ಐದು ಗಂಟೆಗೆ ಉಪಾಹಾರ - ಉಪ್ಪಿಟ್ಟು, ಅವಲಕ್ಕಿ, ಚಿತ್ರಾನ್ನ, ಬಾಳೆ ಹಣ್ಣು, ರಾಗೀ ಮಾಲ್ಟ್ ಬಂಡಿ ಬಿರಿಯೆ ತಿಂದು ಹೊರಬರುತ್ತ ಹೆಬ್ಬಾಗಿಲಲ್ಲಿ ಸ್ವತಃ ಸುಬ್ಬರಾಯರೇ ನಿಂತು ನಮಗೆ ಬುತ್ತಿಯೂಟದ (ಚಿತ್ರಾನ್ನ) ಪೊಟ್ಟಣ, ಮೂಸುಂಬಿ, ಕೊಬ್ಬಿದ ಕಬ್ಬಿನ ದಂಟು ಇತ್ತರು.
ಹಳ್ಳಿ ಜನರ ಹೃದಯ ವೈಶಾಲ್ಯದಲ್ಲಿ ತಂಡದ ಮಂದಿ ಹೊಸ ಬೆಳಕನ್ನೇ ಕಂಡರು.
ಹಳ್ಳಿ ಜನರ ಹೃದಯ ವೈಶಾಲ್ಯದಲ್ಲಿ ತಂಡದ ಮಂದಿ ಹೊಸ ಬೆಳಕನ್ನೇ ಕಂಡರು.
ಪ್ಯಾಂಟು, ಶರ್ಟು, ಸ್ವೆಟ್ಟರ್ ಧರಿಸಿ, ಶೂ ಬಿಗಿದು, ಹಾಸು, ಹೊದಿಕೆ, ತಿನಿಸು, ಲೋಟ, ಟಾರ್ಚು, ಕತ್ತಿ ಇತ್ಯಾದಿ ಓರಣವಾಗಿ ತುಂಬಿದ ಚೀಲವನ್ನು ಬೆನ್ನಿಗೇರಿಸಿ (ಆ ವ್ಯವಸ್ಥೆಯಿಲ್ಲದವರು ಹೆಗಲಿಗೇರಿಸಿ ಅಥವಾ ಕೈಯಲ್ಲಿ ಹಿಡಿದು), ನೀರು ಚೀಲವನ್ನು ಹೆಗಲಲ್ಲಿಳಿಸಿ, ನೇಸರಿನ ನಿರೀಕ್ಷೆಯಲ್ಲಿದ್ದರು. ಮೂವತ್ತಾರು ಗಂಡು, ಒಂಬತ್ತು ಹೆಣ್ಣು - ಒಟ್ಟು ನಲವತ್ತೈದರ ತಂಡ. ಹದಿನಾಲ್ಕರ ಅಣುಗನಿಂದ ಐವತ್ತೈದರ ಮುದಿಯನವರೆಗೆ, ಊಳಿಗದವನಿಂದ ಒಡೆಯನವರೆಗೆ, ವಿದ್ಯಾರ್ಥಿಯಿಂದ ಗುರುವಿನವರೆಗೆ ಆರೋಹಣಾಸಕ್ತಿ ಒಂದೇ ಮಾನದಂಡವಾಗಿ ಸೇರಿದ್ದರು.
ಬೆಳಿಗ್ಗೆ ಆರೂಕಾಲು ಗಂಟೆಗೆ ಮೂಡಣಂಚು ಕೆಂಬಣ್ಣ ಕಟ್ಟಿತು. ಮಂದ ಮಂಜಿನಲ್ಲೂ ಅಷ್ಟಿಷ್ಟು ಕಾಣಹತ್ತಿತು. ವಾತಾವರಣದ ಕುಳಿರನ್ನು ಲೆಕ್ಕಿಸದೇ ತಂಡ ರಾಯರ ಮನೆಗೆ ವಿದಾಯ ಹೇಳಿತು. ದಾರಿಕಾರನನ್ನು ಮುಂದಿಟ್ಟು ಉತ್ತರಾಭಿಮುಖವಾಗಿ ಸಾಗಿತು. ಅಗಲ ಕಿರಿದಾದ ಗದ್ದೆ ಹುಣಿಯಲ್ಲಿನ ನಡುಗೆ ಅಸ್ವಾಭಾವಿಕ ವೇಶಭೂಷಣಗಳಿಂದ ಆಗಾಗ ಆಯ ತಪ್ಪುತ್ತಿತ್ತು. ಇಬ್ಬದಿಯ ಶೃಂಗ ಶ್ರೇಣಿಗಳು ಇಬ್ಬನಿಯ ನಡುವೆ ಹಿಮಾಲಯದ ಕಲ್ಪನೆ ಕೊಡುತ್ತಿದ್ದವು. ತಜ್ಞರು ಕುದುರೆಮುಖ, ಹಿರಿಮರುದುಪ್ಪೆಗಳನ್ನು ಗುರುತಿಸಿ ತೋರುತ್ತಿದ್ದರು. ಸಣ್ಣಪುಟ್ಟ ತೋಡುಗಳನ್ನು ದಾಟಿ, ಒಂದರ್ಧ ಮೈಲು (ಬೈಲನ್ನು) ಉಪಕ್ರಮಿಸಿ ಗುಡ್ಡ ಪ್ರದೇಶಕ್ಕೆ ಅಡಿಯಿಟ್ಟೆವು. ಹರಳುಕಲ್ಲು, ಕುರುಚಲು ಗಿಡಗಳ ವಿರಳ ಕಾಡು, ಸಾವಕಾಶ ಏರು. ಎಲ್ಲರಲ್ಲೂ ಬೆಳಗ್ಗಿನ ಉತ್ಸಾಹ. ಅನೇಕರಿಗೆ ತಾವು ‘ಪ್ರಥಮ’ವನ್ನು ಮಾಡುತ್ತಿರುವ ಬಗ್ಗೆ ಅಭಿಮಾನ. ಆದರೆ ಕಾಲ ಕಳೆದಂತೆ, ದಾರಿ ಸವೆದಂತೆ ನಿಸ್ತೇಜತೆ ಹೆಚ್ಚುತ್ತಿತ್ತು. ಆಗ ಇದಕ್ಕು ಹೆಚ್ಚಿನ ಸವಾಲಿನ ಕುದುರೆಮುಖ ಮಣಿಸಿದ ಮರ್ಯಾದೆ ಹೋಗಬಾರದೆಂದು ಮನಸ್ಸಿನ ಶಕ್ತಿಯನ್ನು ಕಾಲಿಗೆ ಧಾರೆಯೆರೆದು ಸಾಗುತ್ತಿದ್ದೆವು.
ಗುಡ್ಡ ಕಳೆದು ವಿರಳ ಕಾಡು ಸೇರಿದೆವು. ತಾಕತ್ತು, ಕಾಲ ತೀಟೆಗೆ ಅನುಗುಣವಾಗಿ ಗುಂಪುಗಳಾಗಿ ಪರಸ್ಪರ ಅಂತರ ಹೆಚ್ಚುತ್ತಿದ್ದಂತೆ ಬೆಟ್ಟ ಒಮ್ಮೆಲೇ ಕಡಿದಾಯಿತು. ಸಾಲದ್ದಕ್ಕೆ ಬಂಡೆಯೊಂದು ಗೋಡೆಯಾಗಿ ಬಂತು. ಚದುರಿದ ಗುಂಪು ಹತ್ತಿರವಾಯಿತು. ಒಬ್ಬೊಬ್ಬರಾಗಿ ಜಾಗ್ರತೆಯಿಂದ ಮೇಲೇರಿದರು. ಕೆಲವರಿಗಂತೂ ಇದು ನಿರ್ಣಾಯಕ ಘಟ್ಟವಾಯಿತು. ಅಲ್ಲಲ್ಲಿ
ಕಾಣುತ್ತಿದ್ದ ಕಾಡುಬಾಳೆ ಕೆಲವರಿಗೆ ಬಾಯಿ ನೀರೂರಿಸಿತು. ಚೀಲದಲ್ಲಿ ತುಂಬಿದ್ದ ನಾಡು ಬಾಳೆ ಹಣ್ಣು ನೀರಾಗಿತ್ತು. ನೀರು ಚೀಲ ಅರ್ಧ ಖಾಲಿಯಾಗಿತ್ತು. ಕಬ್ಬಿನ ಜಲ್ಲೆಗೆ ಹಲ್ಲು ಹೋಗಿತ್ತು. ದಾರಿಯ ನೆಲ್ಲಿಕಾಯಿ ಎಲ್ಲರ ಬಾಯಿ, ಜೋಬು ಸೇರಿತು. ನೆಲ್ಲಿಕಾಯಿ ನಡಿಗೆಗೆ ವರದಾನ, ಬಾಯಾರಿದವರಿಗೆ ನೀರಿನ ಸೆಲೆ.
ಕಾಣುತ್ತಿದ್ದ ಕಾಡುಬಾಳೆ ಕೆಲವರಿಗೆ ಬಾಯಿ ನೀರೂರಿಸಿತು. ಚೀಲದಲ್ಲಿ ತುಂಬಿದ್ದ ನಾಡು ಬಾಳೆ ಹಣ್ಣು ನೀರಾಗಿತ್ತು. ನೀರು ಚೀಲ ಅರ್ಧ ಖಾಲಿಯಾಗಿತ್ತು. ಕಬ್ಬಿನ ಜಲ್ಲೆಗೆ ಹಲ್ಲು ಹೋಗಿತ್ತು. ದಾರಿಯ ನೆಲ್ಲಿಕಾಯಿ ಎಲ್ಲರ ಬಾಯಿ, ಜೋಬು ಸೇರಿತು. ನೆಲ್ಲಿಕಾಯಿ ನಡಿಗೆಗೆ ವರದಾನ, ಬಾಯಾರಿದವರಿಗೆ ನೀರಿನ ಸೆಲೆ.
ಎಂಟು ಗಂಟೆಯ ಸುಮಾರಿಗೆ ಒಂದು ಬೆಟ್ಟವನ್ನು ಮುಗಿಸಿ ಮೇಲೆ ಬಂದೆವು. ಬಲಭಾಗದಲ್ಲು ಮುಗಿಲೆತ್ತರಕ್ಕೆ ಎದ್ದು ನಿಂತ ಮಹಾಗೋಡೆ ಹೊಸಬರಿಗೆ ದಿಗ್ಭ್ರಮೆ ಹುಟ್ಟಿಸಿತು. ಸಾವಿರಗಟ್ಟಲೆ ಅಡಿಯ ನೇರ ಏರು, ತುದಿ ಕಾಣದ ಮಾಟ. ಆ ಎತ್ತರ ಅಲ್ಲ, ಅದಕ್ಕಿಂತಲೂ ಎತ್ತರಕ್ಕೆ ಏರಬೇಕೆಂಬ ಕಲ್ಪನೆ ಕೆಲವರಿಗೆ ಕರಾಳ ಸ್ವಪ್ನವಾಯಿತು. ಕೆಲವರಿಗೆ ಸುಂದರ ಕನಸೂ ಆಯಿತು. ಲೆಕ್ಕದ ಮೇಷ್ಟ್ರು ಸೂತ್ರ ಹಚ್ಚಿ Energy ಲೆಕ್ಕ ಹಾಕಿ ಗ್ಲುಕೋಸ್ ಸುರಕೊಂಡರು. ಕನ್ನಡ ಮೇಷ್ಟ್ರು ಸಾಹಿತ್ಯ ಸೃಷ್ಟಿಸಿದರು. ಹತ್ತು ಮಿನಿಟು ಸುಧಾರಿಸಿಕೊಂಡು ಮತ್ತೆ ಮುಂಬರಿದೆವು. ದೊಡ್ಡ ಮರಗಳ ಕಾಡುದಾರಿ, ಅವರವರದೇ ಕಾಡು ಹರಟೆಯೊಳಗೆ ನಾವು ಸಾಗುತ್ತಿದ್ದೆವು. ಹುಲ್ಲುಗುಡ್ಡೆ ಬಂತು. ಘಾಟಿಯ ಗಡಸು ಏಕ್ದಂ ಏರಿತು. ಏರುವವರ ದಂ ಕೂಡಾ ಏರಿತು. ಹತ್ತು ಗಂಟೆಯ ಹೊತ್ತಿಗೆ ಸುಮಾರು ಮಟ್ಟಸ ಪ್ರದೇಶದಲ್ಲಿ ಚೀಲ ಇಳಿಸಿ, ಕಾಲು ಚಾಚಿ ಕುಳಿತು ಮೂಸುಂಬಿ ತಿಂದು ಧನ್ಯರಾದೆವು.
ಮುಂದುವರಿದ ಸ್ವಲ್ಪ ಹೊತ್ತಿನಲ್ಲಿ ಕಗ್ಗಾಡು - ಸೂರ್ಯ ಇಣುಕದ ಕಾಡು ಬಂತು. ಸೆಕೆ ಎಂದು ಸ್ವೆಟ್ಟರ್ ತೆಗೆದವರಿಗೆಲ್ಲ ಇರುತ್ತಿದ್ದರೆ ತೊಂದರೆ ಇರಲಿಲ್ಲ ಎನಿಸತೊಡಗಿತು. ದಾರಿ ಮೇಲೆ ಕಾಟಿ ಸೆಗಣಿ, ಮುಳ್ಳು ಹಂದಿಯ ಕಣೆ (ಆಸಕ್ತರ ಚೀಲ ಸೇರಿತು), ಇಲ್ಲಿ ನಾವು ಮಾತ್ರವಲ್ಲ ಎಂಬುದನ್ನು ನೆನಪಿಸಿತು. ಹಾಗೆ ಸಾಗಿ ಕಾಡನ್ನು ಅಡ್ಡ ಹಾಯ್ದು ಬೆಟ್ಟದ ಅಂಚಿಗೆ ಬಂದೆವು. ಇನ್ನು ನಮ್ಮ ನಡಿಗೆ ರಾಜಮಾರ್ಗದಲ್ಲಿ - ಬಲ್ಲಾಳರಾಯ ಕಡಿದ ಸುಖದ ಹಾದಿಯಲ್ಲಿ. ಬೆಟ್ಟದಾಚೆ ಇರುವ ತಗ್ಗು ಪ್ರದೇಶದಲ್ಲಿ ಸಂದ ರಾಜರು ಕೃಷಿ ರಾಜಕೀಯ ಮಾಡುತ್ತಿದ್ದರಂತೆ. ಆ ಕಾರಣ ಈ ಬದಿಯಿಂದ ಆ ಬದಿಗೆ ಕುದುರೆ ಜಾಡು.
ಸೂರ್ಯ ಪ್ರಖರತೆ ಏರುತ್ತಿತ್ತಾದರೂ ಎತ್ತರದ ತಂಪು ನಮ್ಮನ್ನು ರಕ್ಷಿಸುತ್ತಿತ್ತು. ಎದುರಿಗಿದ್ದ ಅದ್ಭುತವಾದ ಬೆಟ್ಟ, ಕೋಟೆ ಕೊತ್ತಳಗಳನ್ನು ನೆನಪಿಸಿ ಎಲ್ಲರನ್ನೂ ಆಕರ್ಷಿಸಿತು. ಕೆಲ ಹೊತ್ತು ಹಾಗೇ ಏರಿ, ಶ್ರೇಣಿಯ ತಗ್ಗಿನ ಜಾಗದಲ್ಲಿ ನೆತ್ತಿ ಸೇರಿ ಮುನ್ನೂರ ಮುವತ್ತು ಡಿಗ್ರಿ ಪ್ರದಕ್ಷಿಣೆ ತಿರುಗಿ ಬೆಟ್ಟದ ಇನ್ನೊಂದು ಪಾರ್ಶ್ವದಲ್ಲಿ ಮುಂದುವರಿದೆವು. ನಮ್ಮವರ ಬಲ ಛಲ ಕಡಿಮೆಯಾಗುತ್ತ ಬಂದಿರಬೇಕು. ಕೀರ್ತಿ ಹೆಚ್ಚೆಚ್ಚು ಫೋಟೋ ತೆಗೆಯ ಹೊರಟರು. ಸಂಪತ್ ಕುಮಾರ್ ಹೆಜ್ಜೆ ಲೆಕ್ಕ ಮಾಡ ಹೊರಟರು. ಹುಲ್ಲು ಗುಡ್ಡದಲ್ಲಿ ಸುಮಾರಿಗೆ ಮಟ್ಟ ದಾರಿಯಲ್ಲಿ ಸಾಗಿ ಹನ್ನೊಂದು ಮುಕ್ಕಾಲಕ್ಕೆ ಒಂದು ನೀರ ಜಾಡಿಗೆ ಬಂದೆವು. ಚೀಲ ಇಳಿಸಿ, ಶೈತ್ಯೋಪಚಾರ ಮಾಡಿಕೊಂಡು, ಉಚಿತವಾಗಿ ಬಂದ ಆಜಾದ್ ಬಿಸ್ಕತ್ತು ಸವಿದು ಸುಸ್ತು ಪರಿಹರಿಸಿಕೊಂಡೆವು.
ಸಣ್ಣ ಕಾಡನ್ನು ದಾಟಿ ಮುಂಬಂದಾಗ ಬಲ್ಲಾಳರಾಯನ ದುರ್ಗ ಮೇಲಿಂದ ನಮ್ಮನ್ನು ನೋಡಿ ಹರಸಿತು. ಗುರಿ ಹತ್ತಿರವಾದ ಉತ್ಸಾಹದಿಂದ ಎಲ್ಲರಲ್ಲೂ ಹೊಸ ಶಕ್ತಿ ಸಂಚಾರವಾಯಿತು. ಗಿಡ್ಡ ಹುಲ್ಲು, ನಡುವಿನ ಉರುಳು ಕಲ್ಲುಗಳನ್ನು ಲೆಕ್ಕಿಸದೆ ದುರ್ಗದಲ್ಲಿ ಪ್ರಥಮ ಹೆಜ್ಜೆಯೂರುವ ಹೆಚ್ಚುಗಾರಿಕೆಗಾಗಿ ನಾ ಮುಂದು, ತಾ ಮುಂದೆಂದು ಓಡಿದೆವು. ಹನ್ನೆರಡು ಮುಕ್ಕಾಲರ ಮಟಮಟ ಮಧ್ಯಾಹ್ನ ನಾಲ್ಕು ಸಾವಿರದ ಒಂಬೈನೂರಾ ನಲ್ವತ್ತಡಿ ಎತ್ತರದ ವಿಶಾಲ ಶಿಖರದ ಮೇಲಿನ ಕೋಟೆಯ ಸುತ್ತ ನಮ್ಮ ತಂಡ ನೆರೆಯಿತು. ಸುಮಾರು ಐದು ಎಕರೆ ಮಟ್ಟ ಜಾಗದಲ್ಲಿ ಎಂಟಡಿ ಐದಡಿ ಎತ್ತರ ದಪ್ಪದ ಕಾಡುಗಲ್ಲಿನ ಗೋಡೆಯೇ ಕೋಟೆ. ಸೌಂದರ್ಯ ದೃಷ್ಟಿಯಿಂದ ಇದಕ್ಕೆ ವೈಶಿಷ್ಟ್ಯವಿಲ್ಲವಾದರೂ ಈ ಎತ್ತರಕ್ಕೆ ಎಂದೋ ಬಂದು ಕಟ್ಟಿದ ಸಾಹಸಕ್ಕೆ ಯಾರು ಬೆರಗಾಗಬೇಕು. ಅಲ್ಲೇ ಯಾರೋ ಊರಿದ್ದ ಹತ್ತಡಿ ಎತ್ತರದ ಸ್ತಂಭಕ್ಕೆ ತಂದ ಧ್ವಜವೊಂದನ್ನು ಬಿಗಿದು ವಿಜಯೋತ್ಸವ ಆಚರಿಸಿದೆವು.
ಹೊಟ್ಟೇ ಚುರು ಚುರು ಹೇಳುತ್ತಿತ್ತು. ಪಕ್ಕದ ಕೊಳ್ಳಕ್ಕಿಳಿದು ಕಾಡಿನ ಮಧ್ಯದ ನೀರಿನ ಆಸರೆಯಲ್ಲಿ ಭೋಜನಾಸಕ್ತರಾದೆವು. ಸುಬ್ಬರಾಯರ ಕೊಡುಗೆ ನಮ್ಮ ಒಡಲ ಉರಿಯನ್ನು ತಣಿಸಿತು. ಯಥೇಚ್ಛ ನೀರು ಕುಡಿದು ಕಾರ್ಯಕ್ರಮದ ಒಂದಂಗವನ್ನು ಯಶಸ್ವೀ ಪೂರೈಸಿದ ಸಂಭ್ರಮದಿಂದ ಎರಡು ಗಂಟೆಗೆ ದಕ್ಷಿಣದ ಬಂಡಾಜೆ ಅರ್ಬಿಯತ್ತ ಹೆಜ್ಜೆ ಇಡತೊಡಗಿದೆವು.
ಸುಮಾರು ಒಂದು ಸಾವಿರ ಅಡಿ, ಎರಡು ಮೈಲಿನ ಅಂತರದಲ್ಲಿ ಇಳಿಯುವ ಕಾರ್ಯ. ಹುಲ್ಲು ಗುಡ್ಡೆಯ ಜಾಡು. ಕಾಲುಗಳು ಅಯಾಚಿತವಾಗಿ ಓಡುತ್ತಿದ್ದವು. ಬೀಳದಂತೆ ನಿಯಂತ್ರಿಸುವುದು ಮಾತ್ರ ನಮ್ಮ ಹೊಣೆ. ನಾಲ್ಕು ಗಂಟೆಗೆ ನಾವು ಹೆಸರರಿಯದ (ಮೈದಾಡಿ ವೀಕ್ಷಣಾ ತಾಣ) ಶಿಖರವನ್ನು ಹತ್ತಬೇಕಾದ ಅನಿವಾರ್ಯತೆಗೆ ಮುಟ್ಟಿದೆವು. ಶಿಖರದ ಎಡ ಪಾರ್ಶ್ವದಲ್ಲಿ ಮೇಲೇರಿದೆವು. ಅದರ ಬಲ ಪಾರ್ಶ್ವ ನಾವು ದುರ್ಗಕ್ಕೆ ಹತ್ತಿ ಬಂದಿದ್ದ ಕಾಡಿನೆಡೆಗೆ ನೇರ ಜಾರು. ಎಡದ ಒಂದು ಮೂಲೆ ಅರಸಿ ಎಪ್ಪತ್ತು ಡಿಗ್ರಿ ಇಳುಕಲಿನಲ್ಲಿ ಜಾರತೊಡಗಿದೆವು. ‘ಗುಡ್ಡೆಗೆ ಗುಡ್ಡೆ ಅಡ್ಡ’ ಗಾದೆಯ ಅರ್ಥ ನಮಗಿಲ್ಲಿ ಸ್ಪಷ್ಟವಾಯ್ತು. ಮೂರ್ನಾಲ್ಕು
ದೊಡ್ಡ ಸಣ್ಣ ಗುಡ್ಡೆಗಳನ್ನು ಕಳೆದ ಮೇಲೆ ಬಂಡಾಜೆ ಅರ್ಬಿಯ ಮೊದಲ ದರ್ಶನ ಸಾಧ್ಯವಾಯ್ತು. ಗಂಟೆ ಐದು - ಅರ್ಬಿ ಸಮೀಪವೇ ಕಾಣಿಸುತ್ತಿತ್ತು. ಆದರೆ ದಾರಿ? ಮತ್ತೆ ಬೆಟ್ಟವಿಳಿದು, ಕಾಡು ದಾಟಿ, ಬೆಟ್ಟ ಬಳಸಿ ಮತ್ತೊಂದು ಕಾಡುತ್ತರಿಸಿ ಕೊನೆ ಬೆಟ್ಟಕ್ಕೆ ಅಡಿಯಿಟ್ಟೆವು. ದೊಡ್ಡ ಸಣ್ಣ ಕರಿಬಂಡೆಗಳ ಬೆಟ್ಟ, ಸಾವಕಾಶದ ಇಳಿಜಾರು. ಕೊನೆಯಿಂದ ಭೋರ್ಗರೆತ ಹೇಳಿತು "ಇಲ್ಲಿರುವೆ ನಾನು ಜಲಪಾತ!"
ದೊಡ್ಡ ಸಣ್ಣ ಗುಡ್ಡೆಗಳನ್ನು ಕಳೆದ ಮೇಲೆ ಬಂಡಾಜೆ ಅರ್ಬಿಯ ಮೊದಲ ದರ್ಶನ ಸಾಧ್ಯವಾಯ್ತು. ಗಂಟೆ ಐದು - ಅರ್ಬಿ ಸಮೀಪವೇ ಕಾಣಿಸುತ್ತಿತ್ತು. ಆದರೆ ದಾರಿ? ಮತ್ತೆ ಬೆಟ್ಟವಿಳಿದು, ಕಾಡು ದಾಟಿ, ಬೆಟ್ಟ ಬಳಸಿ ಮತ್ತೊಂದು ಕಾಡುತ್ತರಿಸಿ ಕೊನೆ ಬೆಟ್ಟಕ್ಕೆ ಅಡಿಯಿಟ್ಟೆವು. ದೊಡ್ಡ ಸಣ್ಣ ಕರಿಬಂಡೆಗಳ ಬೆಟ್ಟ, ಸಾವಕಾಶದ ಇಳಿಜಾರು. ಕೊನೆಯಿಂದ ಭೋರ್ಗರೆತ ಹೇಳಿತು "ಇಲ್ಲಿರುವೆ ನಾನು ಜಲಪಾತ!"
ಗಂಟೆ ಆರೂಕಾಲು. ಸೂರ್ಯ ಪಶ್ಚಿಮಾಂಬುಧಿಯಲ್ಲಿ ಪುಣ್ಯ ಸ್ನಾನಕ್ಕೆ ಸನ್ನಾಹ ನಡೆಸಿದ್ದ. ನೀಲಿಮೆ ಕೆಂಪಿಗೆ ತಿರುಗಿತ್ತು. ಮಾರುತನು ತಣ್ಣಗಾಗುತ್ತಿದ್ದ. ಅರ್ಬಿ, ಸುತ್ತಣ ದೃಶ್ಯ, ಸೂರ್ಯಾಸ್ತದ ಸೊಬಗು ಆ ಎತ್ತರದಿಂದ ನೋಡಿ ಸವಿಯುವ ಉಮೇದು ಎಲ್ಲರಿಗೂ ಇತ್ತಾದರೂ ಮೀರಿದ ಕಾಲದಲ್ಲಿ ನಾವು ಕರ್ತವ್ಯಾಸಕ್ತರಾಗಬೇಕಿತ್ತು. ಏರುವ ಚಳಿ, ಕಾಡುಪ್ರಾಣಿಗಳ ನಿರೋಧ, ಹಾಗೂ ಬೆಳಕಿಗಾಗಿ ಶಿಬಿರಾಗ್ನಿ ಅನಿವಾರ್ಯ. ಅರ್ಬಿಯಿಂದ ಸುಮಾರು ಐವತ್ತು ಹೆಜ್ಜೆ ಮೇಲೆ, ಆಯಕಟ್ಟಿನ ಸ್ಥಳದಲ್ಲಿ ಭೀಮ ಮರಗಳನ್ನು ಒಟ್ಟಿ ಬೆಂಕಿಯಿಟ್ಟೆವು. ರಾತ್ರಿ ಕಳೆಯಲು ಸಾಕಷ್ಟು ಸೌದೆ ಪಕ್ಕದಲ್ಲೆ ಕೂಡಿಟ್ಟೆವು. ರಾತ್ರಿ ಆಯಿತು. ಕಂಗೊಳಿಸುವ ದೂರದ ಕತ್ತಲಲ್ಲಿ ಧರ್ಮಸ್ಥಳ, ಉಜಿರೆ, ಮಲ್ಲೇಶ್ವರಗಳ (?) ದೀಪಮಾಲೆ ನಮ್ಮನ್ನು ನಿರುಕಿಸುತ್ತಿದ್ದವು.
ಮೂರು ಕಲ್ಲು - ಒಂದು ಒಲೆ. ದೊಡ್ಡ ಪಾತ್ರೆಯಲ್ಲಿ ಝರಿಯ ನೀರು ಕುದ್ದು ಬಿಸಿ ಚಾಯ. ಬಿಸ್ಕೆಟ್, ಸುಡುಚಾಯ ಸುರುವಾಗುತ್ತಿದ್ದ ಚಳಿಯಲ್ಲಿ ಪರಮಾನಂದ. ಆ ಅವಸರದಲ್ಲೂ ನೀರ ಗುಂಡಿಯಲ್ಲಿ ಮುಳುಗಿ ಎದ್ದು ಕಲಂಕು ಎಬ್ಬಿಸಿದ ಗರ್ವಿಗಳಿಗೆ ಶಿಬಿರಾಗ್ನಿ ವರದಾನ. ರಾತ್ರಿ ಆಹಾರ ಅವರವರದೇ ವ್ಯವಸ್ಥೆ. ಕೆಲವರು ಚೀಲ ಬಿಚ್ಚಿ ಸಿದ್ಧ ತಿನಿಸುಗಳನ್ನು ತಿಂದು ಹೊಟ್ಟೆಗಟ್ಟಿ ಮಾಡಿದರು. ಎರಡು ಪುಟ್ಟ ಗಂಜಿ ಕೇಂದ್ರ ಸ್ಥಾಪಿತವಾಗಿ ಬಿಸಿ ಗಂಜಿ, ಉಪ್ಪು, ಕಿಚಡಿಯ ಹೊಳೆಯೂ ಹರಿಯಿತು.
ಹುಲ್ಲು ಹಾಸಿನ ಮೇಲೆ ತಂದ ಹಾಸುಗಳನ್ನು ಹರಡಿ, ಹೊದಿಕೆಯಡಿ ಒಬ್ಬೊಬ್ಬರೇ ಮುರುಟತೊಡಗಿದರು. ಬೆಂಕಿಯ ಸುತ್ತ ಕುಳಿತ ಉತ್ಸಾಹಿಗಳು ಸಂಗೀತ ಸುಧೆ ಹರಿಸಿದರು. ಹತ್ತು ಗಂಟೆಗೆ ಎಲ್ಲರೂ ಕಡ್ಡಾಯವಾಗಿ ಮಲಗಿದರು. ಸರದಿಯ ಮೇಲೆ ಸಣ್ಣ ತಂಡಗಳು ಪಹರೆಗೆ ತೊಡಗಿದವು. ಮುಂಜಾವು ಮೂರರ ಸುಮಾರಿಗೆ ಕುಳಿರುಗಾಳಿ ಬೀಸತೊಡಗಿತು. ಮಂಜು ಸುರಿಯತೊಡಗಿತು. ಹೊದಿಕೆಗಳು ತೊಯ್ದವು. ಬೆಂಕಿಯೂ ಪೌರುಷಹೀನವಾಯಿತು. ಗಡಗಡನೆ ನಡುಗುತ್ತ ನಾವು ಏಳಬೇಕಾಯಿತು. ಇನ್ನಷ್ಟು ಸೌದೆ ಹೂಡಿ ಅಗ್ನಿವರ್ಧನೆ ಮಾಡಿ ಚಳಿ ಕಾಸತೊಡಗಿದೆವು. ನಾಲ್ಕು ಗಂಟೆಗೆ ಚಾ ತಯಾರಿ. ನಿತ್ಯಾಹ್ನಿಕಗಳನ್ನು ಹೆಪ್ಪುಗಟ್ಟುವ ನೀರಿನಲ್ಲಿ ತೀರಿಸಿ ಐದು ಗಂಟೆಗೆ ಚಾ ಹೀರಿ, ಅವರವರದೇ ತಿನಿಸುಗಳನ್ನು ತಿಂದುದಾಯಿತು.
ಸೂರ್ಯನ ಮುಂಬೆಳಕಿನೊಡನೆ ಅರ್ಬಿಯೆಡೆಗೆ ನಡೆದು ಹಾಸು ಬಂಡೆಯ ಮೇಲೆ ಕುಳಿತು ಅರ್ಬಿಯಬ್ಬರ ಕಂಡೆವು, ಕೇಳಿದೆವು. ನೀರು ಮೂರು ಸಣ್ಣ ಹಂತಗಳಲ್ಲಿ ಸುಮಾರು ಆರ್ನೂರಡಿಗೆ ಕಡಿಮೆ ಇಲ್ಲದ ಆಳಕ್ಕೆ ಧುಮುಕುತ್ತದೆ. ಎದುರಿನ ಕಾಡು ಸೂರ್ಯೋದಯವನ್ನು ನಮ್ಮಿಂದ ಬಚ್ಚಿಟ್ಟಿತ್ತು. ಪ್ರಪಾತದ ಕಗ್ಗಾಡಿನ ಹಸುರು ಸೀಳಿ ಹರಿವ ನೀರತೊರೆ, ಮುಂದಿನ ನೇರ ಜಾರಿನ ಬೃಹತ್ ಬೆಟ್ಟ, ಮೇಲೆ ಶುದ್ಧ ತಿಳಿನೀಲ ಆಗಸ ಮುಂಬೆಳಕಿನ ಕೆಲವು ಸುಂದರ ನೋಟ.
ಆರುಮುಕ್ಕಾಲಕ್ಕೆ ಮತ್ತೆ ಶಿಬಿರದ ಬಳಿಗೆ ಬಂದೆವು. ಶಿಬಿರ ಜಾಗವನ್ನು ಸ್ವಚ್ಛ ಮಾಡಿದೆವು. ಕಾಡ್ಗಿಚ್ಚಿಗೆ ನಮ್ಮ ದೇಣಿಗೆ ಇರಬಾರದೆಂಬ ಪ್ರಜ್ಞೆಯಿಂದ ಶಿಬಿರಾಗ್ನಿಯನ್ನು ತಣಿಸಿದೆವು. ಏಳು ಗಂಟೆಗೆ ಚೀಲಗಳನ್ನು ಮತ್ತೆ ಏರಿಸಿ ಬಿಡಾರ ಜಾಗವನ್ನು ಅಗಲಿದೆವು. ಝರಿಯನ್ನು ಬಂಡೆಗಳ ಮೇಲೆ ದಾಟಿ ಮೇಲೇರಿ, ಎರಡು ಬೆಟ್ಟಗಳನ್ನು ಕಳೆದು ಅರ್ಬಿಯ ಎಡಕ್ಕೆ ಬಂದೆವು. ಇಲ್ಲಿಗೆ ಅರ್ಬಿ ತೆರೆದು ಕಾಣುತ್ತಿತ್ತು. ಮುಂದೆ ನೇರ ಕೊಳ್ಳದತ್ತ ಸುಮಾರು ಎಪ್ಪತ್ತೈದು ಡಿಗ್ರಿಯಲ್ಲಿ ಒಬ್ಬನ ಹಿಂದೊಬ್ಬನಂತೆ ಜಾಗ್ರತೆಯಾಗಿ ಸರಿಯತೊಡಗಿದೆವು. ಹುಲ್ಲು ಗುಡ್ಡೆಯಿಂದ ದಟ್ಟ ಕಾಡಿಗೆ ನುಗ್ಗಿ, ಮರಬಳ್ಳಿಗಳನ್ನು ಆಧರಿಸುತ್ತ, ಕಾಲು ಜಾರಿಸುತ್ತ ಇಳಿದಿಳಿದು ಒಂಬತ್ತೂವರೆಗೆ ಬಂಡಾಜೆ ಝರಿಯ ಪಾತ್ರೆಗೆ ಬಂದೆವು.
ನೇತ್ರಾವತಿಯ ಮುಖ್ಯ ಮೂಲಗಳಲ್ಲಿ ಒಂದಾದ ಬಂಡಾಜೆ ಹೊಳೆ ಇಲ್ಲಿ ಸುಮಾರು ಹದಿನೈದಡಿ ಅಗಲದ ಪಾತ್ರೆಯನ್ನು ಸೃಷ್ಟಿಸಿದೆ. ಅಲ್ಲಿ ದಣಿವಡಗಿಸಿಕೊಂಡು ಮತ್ತೆ ಪಯಣ ನದಿಗುಂಟ - ತಪ್ಪಲಿಗೆ. ಒಣ ಬಂಡೆಯಿಂದ ಬಂಡೆಗೆ ನೆಗೆದು, ಇಳಿದು, ಹಾರಿ, ತೆವಳಿ ಮುಂಬಂದೆವು. ಕಾಡಿನ ಹಸುರು ಬೆಳಕಿನಲ್ಲಿ ಒಂದೊಂದು ಬಂಡೆಯೂ ಕಲಾಸೃಷ್ಟಿ, ನೀರಿನ ಹರಿವು ಸುಂದರ ನೃತ್ಯ.
ನದಿಯ ಬಲದಡದಲ್ಲಿದ್ದ ನಾಗಬನವನ್ನು ಹತ್ತೂವರೆ ಗಂಟೆಗೆ ಹೊಕ್ಕೆವು. ವಿವಿಧ ರೂಪು, ಭಂಗಿಗಳಲ್ಲಿ ಕಡೆಯಲ್ಪಟ್ಟ ಹಲವು ನಾಗ ವಿಗ್ರಹಗಳು ಇಲ್ಲಿ ಚೌಕಾಕಾರದಲ್ಲಿ ನೆಡಲ್ಪಟ್ಟಿವೆ. ಅವನ್ನು ದಾಟಿ ಕಾಲುದಾರಿಯಲ್ಲಿ ಸಾಗಿತು ನಮ್ಮ ಸಾಲು. ವಿರಳ ಕಾಡಿನಲ್ಲಿ ಹನ್ನೆರಡು ಗಂಟೆಯವರೆಗೂ ಇಳಿದು ಬೋಳು ಗುಡ್ಡೆಗೆ ಬಂದಾಗ ಸೆಖೆ, ಬಾಯಾರಿಕೆ, ಹಸಿವು ಮುಪ್ಪುರಿಗೊಂಡು
ಕಾಡತೊಡಗಿತು. ಆಗಲೇ ನಮ್ಮ ಆಶಾಜ್ಯೋತಿ - ವಳಂಬ್ರ ಎಳ್ಯಣ್ಣ ಗೌಡರ ಮನೆಯ ದರ್ಶನವಾಯಿತು. ನಮ್ಮ ಪರವಾಗಿ ಕೂಡಬೆಟ್ಟು ಮನೆಯ ರಾಮಕೃಷ್ಣರಾಯರು ಮಾಡಿದ್ದ ವಿನಂತಿಯನ್ನು ಸ್ವೀಕರಿಸಿದ್ದ ಗೌಡರು ಆದರದಿಂದ ಸ್ವಾಗತಿಸಿದರು. ಭಾರ ಇಳಿಸಿ, ಬೂಟುಕಳಚಿ ಸಡಿಲಾದೆವು. ಮುಖ ಕೈಕಾಲುಗಳನ್ನು ತೊಳೆದು, ಕುಳಿತು ಬಿಸಿ ಕುಸುಲಕ್ಕಿ ಗಂಜಿ, ಗೊಜ್ಜು, ಉಪ್ಪಿನಕಾಯಿ, ಮಜ್ಜಿಗೆ ಊಟವನ್ನು ಬರಗೇಡಿಯ ತೆರದಿ ಕಬಳಿಸಿದೆವು.
ಕಾಡತೊಡಗಿತು. ಆಗಲೇ ನಮ್ಮ ಆಶಾಜ್ಯೋತಿ - ವಳಂಬ್ರ ಎಳ್ಯಣ್ಣ ಗೌಡರ ಮನೆಯ ದರ್ಶನವಾಯಿತು. ನಮ್ಮ ಪರವಾಗಿ ಕೂಡಬೆಟ್ಟು ಮನೆಯ ರಾಮಕೃಷ್ಣರಾಯರು ಮಾಡಿದ್ದ ವಿನಂತಿಯನ್ನು ಸ್ವೀಕರಿಸಿದ್ದ ಗೌಡರು ಆದರದಿಂದ ಸ್ವಾಗತಿಸಿದರು. ಭಾರ ಇಳಿಸಿ, ಬೂಟುಕಳಚಿ ಸಡಿಲಾದೆವು. ಮುಖ ಕೈಕಾಲುಗಳನ್ನು ತೊಳೆದು, ಕುಳಿತು ಬಿಸಿ ಕುಸುಲಕ್ಕಿ ಗಂಜಿ, ಗೊಜ್ಜು, ಉಪ್ಪಿನಕಾಯಿ, ಮಜ್ಜಿಗೆ ಊಟವನ್ನು ಬರಗೇಡಿಯ ತೆರದಿ ಕಬಳಿಸಿದೆವು.
ಕಾರ್ಯಕ್ರಮದ ಯಶಸ್ಸಿನ ಮುಖ್ಯ ಕಾರಣರಾದ ವೆಂಕಟಸುಬ್ಬರಾಯರನ್ನೂ ಅವರ ಮಗ ರಾಮಕೃಷ್ಣರಾಯರನ್ನೂ ಎಳ್ಯಣ್ಣ ಗೌಡರನ್ನೂ ಎಲ್ಲರಿಗೂ ಒದಗುವಂತೆ ಎರಡು ಡಬ್ಬಿ ಉಚಿತ ಬಿಸ್ಕೆಟ್ ಕಳಿಸಿಕೊಟ್ಟ ಆಜಾದ್ ಬಿಸ್ಕೆಟ್ ಕಂಪೆನಿಯನ್ನೂ ಮನಸಾರೆ ವಂದಿಸಿದೆವು. ಎರಡು ಗಂಟೆಗೆ ವಳಂಬ್ರ ಬಿಟ್ಟು ಅವರವರ ದಾರಿಯಲ್ಲಿ ಚದುರಿದೆವು. "ಕಷ್ಟಪಟ್ಟರೆ ಇಷ್ಟ ಸಿದ್ಧಿ" - ನಮ್ಮ ಸಾಹಸಕ್ಕೆ ಸಂದ ಸಂಭಾವನೆ. ಎಂದೂ ಮರೆಯದ
ರಸಪ್ರಸಂಗ - ಬಲ್ಲಾಳ ಬಂಡಾಜೆ ಸಂದರ್ಶನ.
ರಸಪ್ರಸಂಗ - ಬಲ್ಲಾಳ ಬಂಡಾಜೆ ಸಂದರ್ಶನ.
(ಎ.ಪಿ.ಚಂದ್ರಶೇಖರನ ಕಥನ ಮುಗಿಯಿತು)
ಹೊಸದೇ ದಿಕ್ಕು ಹೊಸದೇ ಅನುಭವದೊಡನೆ ಮಾಲಿಕೆ.....
(ಮುಂದುವರಿಯಲಿದೆ)
No comments:
Post a Comment