(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೩)
[೧೯೮೦ರ ಪರ್ವತಾರೋಹಣ ಸಪ್ತಾಹದ ಕೊನೆಯ ಕಲಾಪ - ನೀವೇ ಅನುಭವಿಸಿ - ರಾತ್ರಿ ಚಾರಣ ಮತ್ತು ಏರಿಕಲ್ಲು ಏರೋಣ, ಇವುಗಳ ಕೊನೆಯಲ್ಲಿ ಕೇಳಿದ ಸೊಲ್ಲು - ಮತ್ತೆಂದು, ಇಂಥ ಇನ್ನೊಂದು? ಅದಕ್ಕೆ ಸ್ಪಷ್ಟ ಉತ್ತರ ರೂಪದಲ್ಲಿ ನಡೆದ ಒಂದೇ ಸಾಹಸಯಾತ್ರೆಗೆ ಮೂರು ಭಿನ್ನ ಕಥನ ರೂಪ ಬಂದಿತ್ತು. ಅದರಲ್ಲಿ ಮೊದಲನೆಯದು ‘ಸುಧಾ’ ವಾರಪತ್ರಿಕೆ ೬-೩-೮೩ರ ಸಂಚಿಕೆಯಲ್ಲಿ ಪ್ರಕಟಿಸಿದ ನನ್ನದೇ ಕಥನವಿದು. ಇದರಲ್ಲಿ ಬಳಸಿದ ಚಿತ್ರಗಳು ಯಜ್ಞ ಹಾಗೂ ಕೀರ್ತಿಯವರವು]
ಬಲ್ಲಾಳ ರಾಯನ ದುರ್ಗದ ನನ್ನ ಮೊದಲ ಕಥನದಲ್ಲಿ (ನೋಡಿ: ಬ.ಬ.ರಾ. ದುರ್ಗ - ೧) ಪರಿಚಯಿಸಿದ ಕಿಲ್ಲೂರಿನ ಕೂಡಬೆಟ್ಟು ಮನೆಯ ಇನ್ನೊಂದು ಗುರುತು ಪಟೇಲರ ಮನೆ. ಆದರೆ ಅದಕ್ಕೂ ಮೂಲದಲ್ಲಿದ್ದವರು ಪಟೇಲ ವೆಂಕಟ ಸುಬ್ಬರಾಯರ ಮಗ ರಾಮಕೃಷ್ಣ ರಾಯರು. ರಾಮಕೃಷ್ಣ ರಾಯರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉಜಿರೆಯಲ್ಲಿ ಬಿಡಾರ ಮಾಡಿಕೊಂಡಿದ್ದರೂ ಕೃಷಿ ಸಂಬಂಧೀ ದೊಡ್ಡ ಅಗತ್ಯಗಳಿಗೆ ಆಗಾಗ ಮಂಗಳೂರಿಗೆ ಬರುತ್ತಿದ್ದರು. ಆಗೆಲ್ಲ ನನ್ನಂಗಡಿ ಭೇಟಿಯನ್ನೂ ಕಡ್ಡಾಯ ಮಾಡಿಕೊಂಡಿದ್ದರು. ಆ ಲೆಕ್ಕದಲ್ಲಿ ಅವರು ನನ್ನ ಗುರುತಕ್ಕೆ ಸಿಕ್ಕಿದ್ದು ಸ್ವಲ್ಪ ತಡವಾಗಿಯೇ ಎನ್ನಬೇಕು. ಕಾರಣ - ಇವರು ಮೌನಿ. ನಾನಾಯಿತು, ನನ್ನ ಕೆಲಸವಾಯ್ತು ಎನ್ನುವ ಸ್ವಭಾವ. ತಮ್ಮ ಬಹುಮುಖೀ ಆಸಕ್ತಿಯ ಪುಸ್ತಕ, ಮ್ಯಾಗಜೀನ್ (ಪಾಪ್ಯುಲರ್
ಸೈನ್ಸ್, ಮೆಕ್ಯಾನಿಕ್ಸ್, ನ್ಯಾಶನಲ್ ಜಿಯಾಗ್ರಫಿಕ್ಕಿನಂತ ಅನ್ಯತ್ರ ವಿರಳವಾದ ಹಲವು ವಿದೇಶೀ ನಿಯತಕಾಲಿಕಗಳನ್ನು ನಾನು ಇಡುತ್ತಿದ್ದೆ) ಆಯ್ದು, ಕೊಂಡು ಹೋಗುತ್ತಿದ್ದರು. ಆದರೆ ಅಂಗಡಿಯಲ್ಲಿ ಆಗಾಗ ಅನುರಣಿಸುವ ನನ್ನ ಪರ್ವತಾರೋಹಣ ಹವ್ಯಾಸದ ‘ದೊಡ್ಡ ಬಾಯಿ’ಯ ಮಾತುಗಳು ಎಂದೋ ಇವರ ಕಿವಿಗೆ ಬಿದ್ದಾಗ ತಮ್ಮೂರಿನ ಪರಿಚಯ ಮಾಡಿಕೊಂಡಿದ್ದರು. ಅದು ಮುಂದುವರಿದು ನಮ್ಮ ಮೊದಲ ಬಲ್ಲಾಳರಾಯನ ದುರ್ಗದ ಭೇಟಿಗೂ ಕಾರಣವಾದದ್ದು ನಿಮಗೆ ತಿಳಿದೇ ಇದೆ. ಅದೇ ಮತ್ತಷ್ಟು ಬೆಳೆದದ್ದಕ್ಕೇ ನಮ್ಮ ಸಾರ್ವಜನಿಕ ಕಲಾಪ ‘ಬನ್ನಿ ಬಳ್ಳಾಳರಾಯನ ದುರ್ಗಕ್ಕೆ’ ರೂಪುಗೊಂಡಿತು. ೧೯೮೦ರಲ್ಲಿ ‘ಆರೋಹಣ’ ಜಿಲ್ಲಾದ್ಯಂತ ಪರ್ವತಾರೋಹಣ ಸಪ್ತಾಹ ನಡೆಸಿತ್ತಷ್ಟೆ. ಅದರ ಕೊನೆಯಲ್ಲಿ ಸಾರ್ವಜನಿಕರಿಗೆ ‘ನೀವೇ ಅನುಭವಿಸಿ’ ಎಂದು ಚಾರ್ಮಾಡಿ ಚಾರಣ, ಏರಿಕಲ್ಲಿಗೆ ಏರಿಳಿದದ್ದು ನಿಮಗೆ ತಿಳಿದೇ ಇದೆ. (ನೋಡಿ: ಏರಿಕಲ್ಲು) ಅದರ ಜನಪ್ರಿಯತೆಯ ಒತ್ತಾಯದ ಫಲ ಈ ‘ಬನ್ನಿ ಬಲ್ಲಾಳರಾಯನದುರ್ಗ’ದ ಕರೆ. ಕರೆಗೆ ಓಗೊಟ್ಟು....
ಆ ದಿನ (ಡಿಸೆಂಬರ್ ೨೩, ೧೯೮೨) ಬಾಡುವ ಹೊತ್ತಿಗೆ ಕೂಡಬೆಟ್ಟಿನ ಪಟೇಲರ ಮನೆಗೆ ಬಂದವರು ಮೂವತ್ತಾರು ಪುರುಷ, ಒಂಬತ್ತು ಸ್ತ್ರೀ ಕುತೂಹಲಿಗರು. ಅದೂ ರಾಜ್ಯದ ವಿವಿಧ ಭಾಗಗಳಿಂದ, ಜೀವನದ ಹಲವು ರಂಗಗಳಿಂದ, ಪೂರ್ವಾನುಭವದ ವಿವಿಧ ಸ್ತರಗಳಿಂದ. ಮನೆಯ `ಯುವರಾಜ’ ರಾಮಕೃಷ್ಣರಾಯರ ಕ್ರಿಯಾಮುಖದಲ್ಲಿ ಇಡಿಯ ಕುಟುಂಬ ಆತಿಥೇಯರು, ಅವರ ಮನೆಯೇ ಆವಾಸ. ಯೋಜನೆಯಂತೆ ವಾಸಕ್ಕಷ್ಟೇ ಬರಬೇಕಾಗಿದ್ದರೂ ಏನೇನೋ ಕಾರಣಕ್ಕೆ ಕೆಲವರು ಹಸಿದೇ ಬಂದಿದ್ದರು. ಅವರಿಗೆ ಊಟವನ್ನೂ ಕೊಟ್ಟು ಎಲ್ಲರ ರಾತ್ರಿಯನ್ನು ಬೆಚ್ಚಗಾಗಿಸಿದರು.
ಮರುದಿನ ನಾಲ್ಕೂವರೆ ಗಂಟೆಗೇ ನಮಗೆಲ್ಲರಿಗೂ ಬೆಳಗಾಗಿತ್ತು. ಪಟೇಲರ ಉಚಿತಸೇವೆಯಲ್ಲಿ ಮೊದಲು ತಿನ್ನುವಷ್ಟು ಅವಲಕ್ಕಿ, ಉಪ್ಪಿಟ್ಟು, ಬಾಳೇ ಹಣ್ಣು, ರಾಗೀಮಾಲ್ಟ್ - ನೇರ ಹೊಟ್ಟೆಗೆ. ಮತ್ತೆ ಪೊಟ್ಟಣದೂಟ, ಮೊಸುಂಬಿ, ಕಬ್ಬಿನ ಜಲ್ಲೆ ಮತ್ತು ನಮ್ಮ ಅಂಡೆಗಳಲ್ಲಿ ತುಂಬಿಕೊಳ್ಳುವಂತೆ ಸುವಾಸಿತ ನೀರು - ದಾರಿಖರ್ಚಿಗೆ! ನಿಜದ ಬೆಳಕು ಹರಿಯುತ್ತಿದ್ದಂತೆ ಮನೆ ಬಿಟ್ಟೆವು. ಕರಾವಳಿಯತ್ತ ಸಾವಿರಕ್ಕೂ ಮಿಕ್ಕು ಅಡಿ ಎತ್ತರದ ಗೋಡೆ ಮೈ ಒಡ್ಡಿನಿಂತ ಪಶ್ಚಿಮಘಟ್ಟ ಮಾಲೆ ಅತ್ತ ಕುದುರೆಮುಖ, ಹಿರಿಮರುದುಪ್ಪೆ ಕಳೆದು ಪಶ್ಚಿಮ-ಪೂರ್ವವಾಗಿ ಬಂಗಾರುಬಳಿಗೆ ಶ್ರೇಣಿಯಾಗಿ ತಪ್ಪಲಿನ ಕಿಲ್ಲೂರಿನ ಅಂಚಿನವರೆಗೂ ಬರುತ್ತದೆ. ಅನಂತರ ಒಮ್ಮೆಲೆ ಉತ್ತರಕ್ಕೊಂದು ತಿರುವು ತೆಗೆದು ಭಾರೀ ಲಾಳಾಕೃತಿಯಲ್ಲಿ ಆವರಿಸಿದ ಕೊಳ್ಳವೇ ದಿಡುಪೆ. ಈ
ಲಾಳಾಕೃತಿಯ ಪಶ್ಚಿಮ ಮೂಲೆಯಲ್ಲಿನ ಪ್ರಾಕೃತಿಕ ಕಣಿವೆಯನ್ನು ಪರಿಷ್ಕರಿಸಿಕೊಂಡು ಜನಪದರು ಮೇಲಿನೂರು ಸಂಸೆಗೆ ನಡಿಗೆ ದಾರಿ ಮಾಡಿಕೊಂಡದ್ದಕ್ಕೆ ಹೆಸರು ಯಳನೀರು ಘಾಟಿ. ಹಾಗೇ ಲಾಳಾಕೃತಿಯ ಪೂರ್ವ ಮೈಯಲ್ಲೂ ಒಂದು ಆಯಕಟ್ಟಿನ ಇಳಿಯೋಣಿಯನ್ನು ಬಲ್ಲಾಳರಾಯನ ದುರ್ಗದ ಸೈನಿಕರು ಕರಾವಳಿಗೆ ಕುದುರೆ ಸವಾರಿಯಲ್ಲಿ ಇಳಿಯಲು ಬಳಸುತ್ತಿದ್ದರಂತೆ. ವಾಹನ ಸಂಚಾರದ ಮಾರ್ಗಗಳು ಅದೆಷ್ಟು ಬಳಸಾದರೂ ಜನಪ್ರಿಯವಾಗುತ್ತಿದ್ದಂತೆ ದುರ್ಗದ ವೈಭವ ಅಂತೆಕಂತೆಗಳನ್ನು ಸೇರಿದ ಮೇಲೆ ಜನ ಇಲ್ಲೂ ಕೇವಲ ಸವಕಲು ಜಾಡನ್ನಷ್ಟೇ ಊರ್ಜಿತದಲ್ಲಿಟ್ಟುಕೊಂಡರು. ಅದನ್ನು ಬಳಸಿ ಸುಮಾರು ಐದು ಮೈಲುಗಳ ಅಂತರದಲ್ಲಿ ಸುಮಾರು ನಾಲ್ಕು ಸಾವಿರ ಅಡಿಯ ಔನ್ನತ್ಯವನ್ನು ಏರಿ, ಬಲ್ಲಾಳರಾಯನ ದುರ್ಗವೆಂಬ ವಿಶಿಷ್ಟ ಶಿಖರ ಸಾಧಿಸುವುದು ನಮ್ಮ ಲಕ್ಷ್ಯ.
ಜಾಡು ಮಾಸಿ, ಪೊದರು ಬೆಳೆದು, ನೆಲ ಕುಸಿದು, ಮರಬಿದ್ದು ಆದ ಬಾಹ್ಯ ಅಡಚಣೆಗಳು ಇಲ್ಲಿ ಹಲವಾರು. ರಮ್ಯ ಕಲ್ಪನೆಗಳೊಂದಿಗೆ ಏರ ಬಂದ ಹೊಸಬರಿಗೆ ಇಲ್ಲಿ ದಮ್ಮು ಕಟ್ಟುತ್ತದೆ. ಹಿಂದಕ್ಕೆಳೆಯುವ ಹೇರು, ಸಾಲನ್ನು ಬಿಡದೇ ನಡೆಯಬೇಕಾದ ಶಿಸ್ತು ಕಾಲನ್ನೂ ಕಟ್ಟುತ್ತದೆ. ಕಾಡೊಳಗೆ ನಡೆಯುತ್ತ ಬೇರು ಎಡವಿ, ಬಳ್ಳಿ ಕಾಲ್ಕಟ್ಟಿ, ತರಗೆಲೆ ಹಾಸಿನಲ್ಲಿ ಹೆಜ್ಜೆ ಬಿಗಿ ನಿಲ್ಲದಾಗ ಮೆಟ್ಟಿಲಿರಬಾರದಿತ್ತೇ ಎಂಬ ಕೊರಗು. ಅಕಸ್ಮಾತ್ ಸ್ವಲ ಮೆಟ್ಟಿಲ ಸಾಲೇ ಬಂದಾಗ ಕೂರಲು ಆಸನವಿರಬಾರದಿತ್ತೇ ಎಂಬ ಬಯಕೆ. ಕೊನೆಗೆ ಎಲ್ಲೆಂದರಲ್ಲಿ ಕೂತರೂ ಶೈತ್ಯೋಪಚಾರದೊಡನೆ ಅಡ್ಡಾಗಿ ಮೈಮರೆವ ಆಸೆಗೆ ಮಾತ್ರ ಇಲ್ಲಿಲ್ಲ ಆಸರೆ. ಕ್ಷಣಕ್ಷಣಕ್ಕೆ ವಿಕಸಿಸುತ್ತಿದ್ದ ಪ್ರಾಕೃತಿಕ ಸೌಂದರ್ಯ, ಮುಂದೆ ಮೋಡಗಳೆಡೆಯಲ್ಲೇ ನಡೆದಾಡುವ ಕಲ್ಪನೆ, ಏನಲ್ಲದಿದ್ದರೂ ಓರಗೆಯವರ ಕೆಣಕು ನುಡಿ ಎಲ್ಲರನ್ನೂ ಮುನ್ನೂಕುತ್ತಿತ್ತು. ಎಲ್ಲ ಬಲ ಒಂದಾದಂತೆ ಏರಿದೆವು - ಪಶ್ಚಿಮ ಘಟ್ಟದ ಮೈದಾನ ಶಿಖರ, ಐತಿಹಾಸಿಕ ಮಹತ್ವವಿದ್ದರೂ ಬಹುತೇಕ ಅವಶೇಷಗಳಲ್ಲೇ ಹುಗಿದ ಕೋಟೆ, ಎಲ್ಲಕ್ಕೂ ಮಿಗಿಲಾಗಿ ಸಮುದ್ರ ಮಟ್ಟದಿಂದ ೪೯೪೦ ಅಡಿ ಎತ್ತರದ ಶಿಖರ ತಲಪುವಾಗ ಗಂಟೆ ಹನ್ನೆರಡೂವರೆಯಾಗಿತ್ತು. ದುರ್ಗದ ಪಕ್ಕದ ನೀರಾಸರೆಗೆ ಇಳಿದು, ಬುತ್ತಿಯೂಟ ಬಿಚ್ಚಿ, ಜಠರಾಗ್ನಿ ತಣಿಸಿದೆವು.
ದುರ್ಗದ ಶಿಖರ ಪ್ರದೇಶ ಸುಮಾರು ಎರಡು ಮೈಲಿನಷ್ಟು ಉತ್ತರ ದಕ್ಷಿಣಕ್ಕೂ ಒಂದು ಮೈಲಿನಷ್ಟು ಪೂರ್ವ ಪಶ್ಚಿಮಕ್ಕೂ ಹಬ್ಬಿದೆ. ಇಲ್ಲಿಯ ಪುಟ್ಟ ಕಣಿವೆಗಳ ಹತ್ತೆಡೆಗಳಲ್ಲಿ ಮೂಡಿ, ಘಟ್ಟದ ದಕ್ಷಿಣ ಅಂಚಿಗೆ ಬರುವ ಮೊದಲು ಒಗ್ಗೂಡಿದ ನೀರ ಮೊತ್ತದ ಹೆಸರು ಬಂಡಾಜೆ ಹೊಳೆ. ಅಲ್ಲಿನ ಬಂಡೆಯಂಚಿನಿಂದ ಅಬ್ಬಿಯಾಗಿ (ಜಲಪಾತ) ಕರಾವಳಿಯತ್ತ ಸುಮಾರು ಆರ್ನೂರಡಿ ಆಳಕ್ಕೆ ಧುಮುಕಿ, ಹರಿದು, ನೇತ್ರಾವತಿಯಲ್ಲಿ ಒಂದಾಗುತ್ತದೆ. ದುರ್ಗದಿಂದ ಅರ್ಬಿಯ ನೆತ್ತಿಗೆ ಸಂದ ಬಲ್ಲಾಳರ ಕಾಲದ ಸಾರೋಟು ದಾರಿ ಇದೆ. ನಾವದನ್ನು ಉಪೇಕ್ಷಿಸಿ, ಮೊದಲೇ ಹೇಳಿದ ಲಾಳಾಕೃತಿಯ ಪ್ರಪಾತದಂಚಿನಲ್ಲೇ ಜಾಡು ಮೂಡಿಸಿಕೊಂಡು ನಡೆದು, ನಾಲ್ಕೆಂಟು ಗುಡ್ಡ ಡುಬ್ಬಗಳನ್ನು ಏರಿಳಿದು, ಅಪೂರ್ವ ದೃಶ್ಯಗಳನ್ನು ಸೂರೆಗೊಂಡೆವು. ಕೊನೆಯಲ್ಲಿ ಅನಿವಾರ್ಯವಾಗಿ ಪುಟ್ಟ ಕಗ್ಗಾಡ ಕೊರಕಲಿಗೆ ಇಳಿದು ಪಾರಾಗುವ ಸಾಹಸ ಮಾಡಿ, ಮುಸ್ಸಂಜೆಗೆ ಜಲಪಾತದ ನೆತ್ತಿ ಸೇರಿದೆವು.
ಅರ್ಬಿಯ ಗಭೀರತೆ, ಸೂರ್ಯಾಸ್ತದ ಸೌಂದರ್ಯ, ನೋಡಿದಷ್ಟೂ ಸಾಲದೆನ್ನಿಸುವ ಪಶ್ಚಿಮ ಕೊಳ್ಳದ ಹರಹುಗಳೂ ಮೋಹಕವೇ ಇದ್ದವು. ಆದರೆ ಪೂರ್ಣ ಅದರಲ್ಲೇ ಮೈಮರೆತು ಕುಳಿತುಕೊಳ್ಳುವಷ್ಟು ಸಮಯ ನಮ್ಮಲ್ಲಿರಲಿಲ್ಲ. ಎಲ್ಲವನ್ನೂ ಕತ್ತಲ ಪತ್ತಲ ಆವರಿಸುತ್ತಿದ್ದಂತೆ ತೊರೆ ದಂಡೆಯಲ್ಲಿ ಶಿಬಿರಾಗ್ನಿ ಎದ್ದಿತು. ಚಳಿಯೋಡಿಸುವ, ಬೆಳಕೂಡುವ ಬೆಂಕಿಯ ಒಂದು ಮಗ್ಗುಲಲ್ಲಿ
ನಿರಂತರ ತನನ ನಡೆಸುವ ಹೊಳೆ, ಇನ್ನೊಂದು ಮಗ್ಗುಲಿನ ಹುಲ್ಲ ಹಾಸಿನ ಮೇಲೆ ಶಿಬಿರವಾಸಿಗಳು. ಮೊದಲೇ ಸ್ಪಷ್ಟವಾಗಿ ಸೂಚಿಸಿದ್ದಂತೆ, ಒಟ್ಟು ತಂಡದೊಳಗೆ ಅನುಕೂಲಕ್ಕೆ ತಕ್ಕಂತೆ ಕೆಲವು ಸಣ್ಣ ಅಡುಗೆ ಗುಂಪುಗಳಿದ್ದವು. ಅವೆಲ್ಲ ಸ್ವತಂತ್ರವಾಗಿ ಮೂರು ಮೂರು ಕಲ್ಲು ಜೋಡಿಸಿ, ಒಣ ಕಡ್ಡಿಯ ಕಿಚ್ಚೆಬ್ಬಿಸಿ ಬಿಸಿ ಹಾಲು, ಚಾ, ಕಾಫಿ ಮಾಡಿದರು. ಬಿಸ್ಕೆಟ್, ಚಪಾತಿ, ಬ್ರೆಡ್, ಜ್ಯಾಮ್, ಮೊಟ್ಟೆ ಎಂದು ಹಲ ಬಗೆಯ ಸಿದ್ಧ ತಿನಿಸುಗಳೊಂದಿಗೆ ಗಂಜಿ ಕಾಯಿಸಿದವರು, ಹಸಿ ತರಕಾರಿಗಳ ಪಚ್ಚಡಿ ಕೊಚ್ಚಿದವರು, ಅವಲಕ್ಕಿ ಕಲಸಿದವರು ಎಂದಿತ್ಯಾದಿ ಹತ್ತೆಂಟು ಪಾನಕ, ಪಾಕಗಳು ಅಭ್ಯರ್ಥಿಗಳ ಬೆನ್ನುಚೀಲದ ಕಟ್ಟೆಯೊಡೆದು ಎಲ್ಲರ ಹೊಟ್ಟೆ ತಣಿಸಿತು. ಜೊತೆಗೇ ಹತ್ತು ಗಂಟೆಯವರೆಗೂ ಹಾಡು ಹಾಸ್ಯಗಳ ಲಘುರಂಜನೆಯೂ ನಡೆದಿತ್ತು. ಮತ್ತೆ ಸರದಿ ಪಹರೆಯ ರಕ್ಷಣೆಯಲ್ಲಿ ನಿದ್ರೆ. ಸ್ಥಳಕ್ಕನುಗುಣವಾದ ಚಳಿಯ ವಿರುದ್ಧ ಶಿಬಿರಾಗ್ನಿಯ ಧಗೆ, ಸುರಿವ ಮಂಜಿನ ಶೀತ ಮುಟ್ಟದಂತೆ ಎರಡು ಹೊದಿಕೆಗಳ ಮುಸುಕು. ಇಣುಕಿ ನೋಡಿದರೆ ಶಿಬಿರಾಗ್ನಿ ಎಬ್ಬಿಸಿದ ಕಿಡಿಗಳು ಎತ್ತರಕ್ಕೇರಿ ಚಿಕ್ಕೆ ಚಂದ್ರರಾಗುವ ಪರಿ ಮಬ್ಬಾದ ತಿಂಗಳ ಬೆಳಕಿನಲ್ಲಿ ಹೊಸತೇ ಅನುಭವ; ಎಲ್ಲ ಶಬ್ದ ಜಾಲಕ್ಕೆ ಮಿಗಿಲು.
ಅಭ್ಯರ್ಥಿಗಳದೇ ತಿನಿಸು, ಪೇಯಗಳ ಮತ್ತೊಂದೇ ಮಹಾಪೂರದೊಡನೆ ಬೆಳಗಾಯಿತು. ಆರೂವರೆ ಗಂಟೆಗೆ ಅಬ್ಬಿಯ ಎಡ ಪಾರ್ಶ್ವದಿಂದ ಅವರೋಹಣ ಶುರು. ಸಾಮಾನ್ಯ ಪ್ರವಾಸೀಕೇಂದ್ರಗಳಲ್ಲಿ ದೃಶ್ಯಗಳು ನಿರ್ಬಂಧಿತ ಅಥವಾ ಪೂರ್ವ ನಿರ್ದೇಶಿತವಾಗಿರುತ್ತದೆ. ಆದರೆ ನಾವಾದರೋ ಬಂಡಾಜೆಯ ಮೂಲ ನೋಡಿದ ನೆನಪಿನೊಡನೆ, ಮೊದಲಿಗೆ ಅಬ್ಬಿಯ ಬೀಳು,
ಬಳುಕು ಮುಂದುವರಿದಂತೆ ಝರಿಯ ವೈಯ್ಯಾರ ನೋಡುತ್ತ ಸಾಗುವ ಬಯಕೆಯವರು. ಸಹಜವಾಗಿ ಬೆಟ್ಟದ ಏಣನ್ನು ಬಳಸಿ ಇಳಿಯುವಂತಿದ್ದ ಸವಕಲು ಜಾಡನ್ನು ಹೆಚ್ಚು ಬಳಸಲಿಲ್ಲ. ಆಳೆತ್ತರದ ಬಿರುಹುಲ್ಲನ್ನು ಬೇಧಿಸುತ್ತ, ಅದರದೇ ಕೈಯಾಸರೆ ಪಡೆಯುತ್ತ, ಪ್ರಥಮಾವಕಾಶದಲ್ಲೇ ಎಂಬಂತೆ ನೇರ ಹೊಳೆಯ ಕೊಳ್ಳವನ್ನೇ ಲಕ್ಷ್ಯವಾಗಿಸಿಕೊಂಡು ಇಳಿದೆವು. ಸಹಜವಾಗಿ ಆ ಹೊತ್ತಿಗೆ ಏರಿದ್ದ ಬಿಸಿಲಿನ ಬೇಗೆ ನಮ್ಮನ್ನು ತಟ್ಟದಂತೆ ಕಾಡಿನ ಛತ್ರಿ ಕಾಪಾಡಿತು.
ಬಂಡೆಯಿಂದ ಬಂಡೆಗೆ ಎಚ್ಚರದಲ್ಲಿಳಿಯುತ್ತ, ನುಸುಲು ಮಣ್ಣಿನಲ್ಲಿ ಜಾರಿ, ಆಗೀಗ ತರಗೆಲೆ ಹಾಸಿನಲ್ಲಿ ಅನಿರೀಕ್ಷಿತ ಉರುಳು ಸೇವೆ ನಡೆಸಿ, ಮರಗಿಡ ಬಳ್ಳಿ ಆಧರಿಸಿ ವೇಗ ನಿಯಂತ್ರಿಸಿಕೊಳ್ಳುತ್ತ ಹೊಳೆಪಾತ್ರೆ ಸೇರಿದೆವು. ಸುಲಭ ಅನುಸರಣೆ ಅಸಾಧ್ಯವಾದ ಹೊಳೆಗಳ ಇಳುಕಲನ್ನು ಸಾಮಾನ್ಯವಾಗಿ ಝರಿ ಎನ್ನುವುದೇ ಹೆಚ್ಚು ಸೂಕ್ತ. ಯುಗಯುಗಗಳಿಂದ ಋತುಮಾನಗಳ ಮಹಾನ್ ಏರಿಳಿತಗಳಿಂದ ಆ ಝರಿಪಾತ್ರೆಯಲ್ಲಿ ಮಹಾಮಹಾ ಬಂಡೆಗಳದೇ ರಾಜ್ಯಭಾರ. ನಾವು ಕಾಣದ ಸಂದು ಆಳಗಳಲ್ಲಿ ಬೇರೂರಿ, ಬಂಡೆಗಳನ್ನು ತಡೆದೋ ಬಿಗಿದೋ ಮುಚ್ಚಿಗೆ ಹಾಕಿದ ಮರಗಳು ದೂರನೋಟಕ್ಕೆ ಎಲ್ಲವನ್ನೂ ನುಣ್ಣಗೆ ಕಾಣಿಸುವುದೊಂದು ಭ್ರಮೆ. ಸಣ್ಣ ಗುಂಡುಗಳಲ್ಲಿ ಕುಪ್ಪಳಿಸಿ, ಹಾಸು ಬಂಡೆಗಳಲ್ಲಿ ಜಾರಿ, ಅಗಲ ಕಿರಿದಾದ ಕೊರಕಲುಗಳನ್ನು ಹಾರಿ, ಒಮ್ಮೊಮ್ಮೆ ನೀರು ತರಗೆಲೆ ಗುಡ್ಡೆಗಳ ಮೋಸಕ್ಕೆ ಸಿಕ್ಕಿ ಸಣ್ಣಪುಟ್ಟ ಆಘಾತಗಳನ್ನೂ ಅನುಭವಿಸುತ್ತ ಹೊಳೆಪಾತ್ರೆಯನ್ನು ಅಡ್ಡ ಹಾಯುವ ಸವಕಲು ಜಾಡು ಸೇರಿದೆವು. ಗುಡ್ಡೆಯ ಓರೆಯನ್ನೇ ಅನುಸರಿಸಿ ಬಂದ ಸವಕಲು ಜಾಡಿನಲ್ಲೇ ಬಂದಿದ್ದರೆ ಇನ್ನು ಬೇಗ ತಲಪುತ್ತಿದ್ದೆವು ನಿಜ. ಆದರೆ ಎಲ್ಲ ಮುಗಿದು ಮನೆಯ ವಿರಾಮದಲ್ಲಿ ಕುಳಿತಂದು, ಝರಿ
ಅನುಸರಣೆಯ ಅನುಭವಕ್ಕೇ ವಂಚಿತರಾಗುತ್ತಿದ್ದೆವು ಎಂಬ ಅರಿವು ಬಂದಂದು, ಚಾರಣದ ಉದ್ದೇಶ ಸಫಲವಾಯ್ತೆನ್ನುವುದು ಹೆಚ್ಚು ನಿಜ.
ಜಾಡು ಬಹುತೇಕ ದೃಢ ಮಣ್ಣಿನಲ್ಲೇ ಝರಿಯಿಂದ ನಿಧಾನಕ್ಕೆ ದೂರ ಸರಿಯುತ್ತಾ ನಮ್ಮನ್ನು ತಪ್ಪಲಿನ ವಳಂಬ್ರ ಮನೆ ಮುಟ್ಟಿಸುವಾಗ ಗಂಟೆ ಹನ್ನೆರಡೂವರೆ. ಮಹಾಮನೆಯ ಯಜಮಾನ ಎಳ್ಯಣ್ಣ ಗೌಡರನ್ನು ನಮಗಾಗಿ ಸಂಪರ್ಕಿಸಿದವರೂ ಕೂಡಬೆಟ್ಟಿನ ರಾಮಕೃಷ್ಣರಾಯರೇ. ಅವರು ಪ್ರೀತಿಯಿಂದ ನಮಗಾಗಿ ವ್ಯವಸ್ಥೆ ಮಾಡಿದ್ದ ಸರಳ ಆದರೆ ರುಚಿಕರವಾದ ಧಾರಾಳ ಭೋಜನಕ್ಕೆ ನಮ್ಮ ಸಾಹಸಾನುಭವ ಹೆಚ್ಚಿನ ರುಚಿಯನ್ನೇ ಕೊಟ್ಟಿತ್ತು.
ಕೇವಲ ಔಪಚಾರಿಕ ಪರಿಚಯ ಬಲದಿಂದ ‘ಆರೋಹಣ’ ಸಂಪರ್ಕಿಸಿದ್ದಕ್ಕೇ ಮೊದಲ ರಾತ್ರಿಯ ಆತಿಥ್ಯ ವಹಿಸಿಕೊಂಡು ಬೀಳ್ಕೊಂಡ ವೆಂಕಟಸುಬ್ಬರಾಯರು, ಕೊನೆಯಲ್ಲಿ ಊಟಕೊಟ್ಟು ಅನೌಪಚಾರಿಕ ಸಮಾರೋಪ ನಡೆಸಿದ ಎಳ್ಯಣ್ಣಗೌಡರು ಸೇರಿದಂತೆ ಅನೇಕ ಮಹನೀಯರ ನಿರೀಕ್ಷೆ ಮೀರಿದ ಔದಾರ್ಯದಲ್ಲಿ ಕಾರ್ಯಕ್ರಮ ವಿಶೇಷ ಯಶಸ್ಸನ್ನೇ ಕಂಡಿತ್ತು. ಇಂಥ ಇನ್ನಷ್ಟು ಮಾನವನಿಧಿಗಳ ಸಾಹಚರ್ಯಕ್ಕೆ, ದುರ್ಗ ಅಬ್ಬಿಗಳಂಥ ಪಾಕೃತಿಕ ವೈಭವಗಳಿಗೆ ತೆರೆದುಕೊಳ್ಳಬೇಕೆಂಬ ಬಯಕೆ ಬಲಿತಂತೆ ತಂಡ ಬರ್ಖಾಸ್ತಾಯಿತು. ಬಂದಂತೆ ಎಲ್ಲ ಅವರವರ ಊರಿಗೆ ಲಭ್ಯ ವಾಹನ ಸೌಕರ್ಯಗಳನ್ನು ಕಂಡುಕೊಂಡರು.
ವಿಸೂ: ಮುಂದಿನ ಕಂತುಗಳಲ್ಲಿ: ಇದೇ ಅನುಭವದ ಮೇಲೆ - ತಿಲಕನಾಥ ಮಂಜೇಶ್ವರ್ ಮತ್ತು ಎ.ಪಿ. ಚಂದ್ರಶೇಖರ್ ಲೇಖನಗಳು ಬರಲಿವೆ. ನಿರೀಕ್ಷೆಯಲ್ಲಿರಿ
(ಮುಂದುವರಿಯಲಿದೆ)
ಮತ್ತೊಮ್ನೆ ಅಲ್ಲೆಲ್ಲ ಓಡಾಡಿದಂತಾಯಿತು. ವಳಂಬ್ರ ಎಲ್ಯಣ್ಣ ಗೌಡರ ಮಗನಿಗೆ ನನ್ನ ಚಿಕ್ಕಪ್ಪನ ಮಗಳನ್ನು ಕೊಟ್ಟ ಕಾರಣ ಅಲ್ಲಿಗೆ ಹೋಗುತ್ತಿದ್ದೆ. ಅಲ್ಲಿ ನಡೆಯುವ ಪುರುಷರ ಕುಣಿತ ನೋಡಲು ಹೋದವನು ಬಂಡಾಜೆ ಅಬ್ಬಿ ನೋಡಲು ಹೋಗಿ, ಕಾಟಿಗಳನ್ನು ಕಂಡು ಹೆದರಿಕೊಂಡು ಹಿಂದೆ ಬಂದಿದ್ದೆ. ನಿಮ್ಮ ತಂಡದಲ್ಲಿ ನಾನಿರಬಾರದಿತ್ತೇ ಎಂದು ಈಗ ಸಂಕಟವಾಗುತ್ತಿದೆ
ReplyDeleteರವಿಚಂದ್ರ ಚಿತ್ತಂಪಲ್ಲಿ ಮಿಂಚಂಚೆಯಲ್ಲಿ ಬರೆದರು: Very interesting. Long ago I had trekked to kudremukh camped overnight at the top and then got down via Diduppe. There was a fresh kill by a leopard at the top. Of course we could only see a trail of blood and pug marks.
ReplyDelete