11 March 2020

ಮೇಘಾಲಯದ ಗಿರಿಕೊಳ್ಳಗಳಲ್ಲಿ

ಯೂಥ್ ಹಾಸ್ಟೆಲ್ಸ್ ಅನುಸಂಧಾನ - ೧ 


"ಪ್ರಾಯ ಅರವತ್ತು ಮೀರಿದವರು ಯೂಥ್ ಅಲ್ಲ, ಪ್ರವೇಶ ಇಲ್ಲ" ಎನ್ನುತ್ತದೆ ಯೂಥ್ ಹಾಸ್ಟೆಲ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ವೈಎಚ್ಚೇಐ). "ಆದರೆ ಭಾಗಿಗಳ ಸಾಧನೆ, ಚಟುಲತೆ ನೋಡಿ ಯಾರನ್ನೂ ಸ್ವಾಗತಿಸುತ್ತದೆ" ಎಂದು ಗಟ್ಟಿಯಾಗಿ ಹೇಳಿ, ಸುಮಾರು ಆರು ತಿಂಗಳಿಗೂ ಮೊದಲೇ ಮೈಸೂರು ಯೂಥ್ ಹಾಸ್ಟೆಲ್ ಸದಸ್ಯತನ ಕೊಡಿಸಿ, ‘ಮೇಘಾಲಯ ಚಾರಣ ಹಾಗೂ ಗುಹಾನ್ವೇಷಣೆ’ಗೆ
ನಮ್ಮಿಬ್ಬರ (ದೇವಕೀ ಸಮೇತ ಬೆಮರ್ನಾಥ!) ಭವಿಷ್ಯ ಬೆಸೆದವಳು ತಮ್ಮನ ಹೆಂಡತಿ - ರುಕ್ಮಿಣಿಮಾಲಾ. ತಮ್ಮ ಅನಂತವರ್ಧನ, ಆರೋಗ್ಯಪಾಲನೆಗಾಗಿ ಯೋಗ, ಚಾಮುಂಡಿ ಬೆಟ್ಟ ಏರೋಣವೆಲ್ಲ ಮಾಡುವವನೇ. ಆದರೂ ಸಾಹಸ, ಪ್ರವಾಸಗಳಲ್ಲೆಲ್ಲ ಕನಿಷ್ಠ ಆಸಕ್ತ. ನಮ್ಮಿಬ್ಬರ ನೆಪ ಮಾಡಿ ರುಕ್ಮಿಣಿ ಮೇಘಾಲಯಕ್ಕೆ ಅನಂತನನ್ನೂ ಹೊರಡಿಸಿದ್ದಳು. ಪ್ರಾಥಮಿಕ ಹಂತದ ಹೋಗಿ ಬರುವ (ತಲಾ ರೂ ೧೧,೦೦೦) ವಿಮಾನ ಸ್ಥಾನ ಕಾಯ್ದಿರಿಸುವ ಕಾಲಕ್ಕೆ ರುಕ್ಮಿಣಿಯ (ಬೆಂಗಳೂರಿನ) ತಂಗಿ ಮತ್ತು ಆಕೆಯ ಗೆಳತಿ
ಸಾವಿತ್ರೀ ಭಟ್ ಕೂಡಾ ಸೇರ್ಪಡೆಗೊಂಡಿದ್ದರು. ಅನಿವಾರ್ಯ ಪ್ರಸಂಗಗಳಲ್ಲಿ ರುಕ್ಮಿಣಿಯ ತಂಗಿಗೆ ಬರುವುದು ಅಸಾಧ್ಯವೆಂದಾದಾಗ, ಬದಲಿಯಾಗಿ ಒದಗಿದವರು ಸಾವಿತ್ರಿಯವರ ಗಂಡ - ಯಲ್ಲಾಪುರ ಮೂಲದ, ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಸೈನ್ಸಿನ ವಿಜ್ಞಾನಿ, ಗಣಪತಿ ಭಟ್. ಯಾತ್ರಾಫಲ ಬರೆಯುವಾಗ ರುಕ್ಮಿಣಿಗೆ ಪ್ರವಾಸದಲ್ಲೂ ಅವರ ದಾಂಪತ್ಯವನ್ನು ಕಾಪಾಡಿದ ಅಮಿತ ಪುಣ್ಯ ಸಲ್ಲಲಿದೆ! ಫೆಬ್ರುವರಿ ಎಂಟರ ಬೆಳಿಗ್ಗೆ ಆರೂ ಮಂದಿ, ಸಕಲಾಯುಧ ಸಜ್ಜಿತರಾಗಿ, ಬೆಂಗಳೂರಿನಿಂದ ಅಸ್ಸಾಂನ ರಾಜಧಾನಿ
ಗೌಹಾತಿಗೆ ಹಾರಿದೆವು. ಅಲ್ಲಿ ಚೌಕಾಸಿಯಲ್ಲಿ (ಸುಮಾರು ನಾಲ್ಕು ಸಾವಿರ) ಬಾಡಿಗೆ ಕಾರು ಹಿಡಿದು ಮೇಘಾಲಯದ ರಾಜಧಾನಿ ಶಿಲ್ಲಾಂಗಿನತ್ತ ಪಯಣಿಸಿದೆವು. 

೧೯೭೧ರ ಸುಮಾರಿಗೆ ನಾನು ಮೈಸೂರು ಮಹಾರಾಜಾ ಕಾಲೇಜು ವಿದ್ಯಾರ್ಥಿ, ಎನ್ಸಿಸಿ ಪಟು. ಆ ಒಂದು ಬೇಸಗೆಯಲ್ಲಿ, ಅಸ್ಸಾಂನಿಂದ ಮೂರು ವಾರಗಳ ಅಡ್ವಾನ್ಸ್ಡ್ ಲೀಡರ್ಶಿಪ್ ಕೋರ್ಸಿನ ಕರೆ ಬಂದಾಗ, ಕರ್ನಾಟಕದ ಹದಿಮೂರರಲ್ಲಿ ಒಂದಾಗಿ ಹೊರಟಿದ್ದೆ. ಮೂರೋ ನಾಲ್ಕೋ ದಿನಗಳ ಹೋರಾಟದ ರೈಲ್ವೇ ಪ್ರಯಾಣದಲ್ಲಿ ಗೌಹಾತಿ. ಅಲ್ಲಿ
ದೇಶಾದ್ಯಂತ ಬಂದು ಸೇರಿದ್ದ ಸುಮಾರು ನೂರೈವತ್ತು ಎನ್ಸಿಸಿ ಪಟುಗಳನ್ನು, ವಿಶೇಷ ಬಸ್ಸುಗಳಲ್ಲಿ ಹೇರಿ (ಅಂದು ಅಸ್ಸಾಂನ ಭಾಗವೇ ಆಗಿದ್ದ) ಶಿಲ್ಲಾಂಗಿನ ದಾರಿ ಹಿಡಿಸಿದ್ದರು. ಶಿಲ್ಲಾಂಗಿಗೂ ಸುಮಾರು ಹದಿಮೂರು ಕಿಮೀ ಮೊದಲು ಸಿಗುವ ‘ಬರಾಪಾನಿ’ (ಇಂದು ಉಮಿಯಮ್ ಲೇಕ್ ಎಂದೇ ಪ್ರಸಿದ್ಧ) ನಮ್ಮ ಶಿಬಿರತಾಣ. ಉಮಿಯಮ್ ನದಿಗೆ ಜಲವಿದ್ಯುತ್ ತಯಾರಿಕೆಗೆಂದೇ ಕಟ್ಟಿದ ಮಹಾಕಟ್ಟದ ನೆರಳ ಮೈದಾನದಲ್ಲೇ ಹತ್ತಿಪ್ಪತ್ತು ಗುಡಾರಗಳ ಶಿಬಿರ. ಈ ಬಾರಿ ನಾನು, ಉಮಿಯಮ್ ನದಿಯ ಎತ್ತರದ ಎಡ ದಂಡೆಯಲ್ಲಿ,
ಒಂದು ಕ್ಷಣ ಕಾರಿಳಿದು ನಿಂತು, ಸುವಿಸ್ತಾರ ಕಣಿವೆಗೊಂದು ವಿಹಂಗಮ ನೋಟ ಹಾಕುವಾಗ, ನೆನಪಿನಂಗಳದಲ್ಲಿ ರಿಂಗಣಿಸುತ್ತಿತ್ತು ನೂರೆಂಟು ನೆನಪುಗಳು. ಶಿಬಿರಕ್ಕೆ ಬರುವಂದು ರೈಲ್ವೇಯಲ್ಲಿ ಸೀಟು ಹಿಡಿದ ಸರ್ಕಸ್, ಶಿಬಿರದಲ್ಲಿ ಸೀನಿಯರ್ ಅಂಡರಾಫೀಸರ್ ಹುದ್ದೆಗೆ ಏರ್ಪಟ್ಟ ಗೊಂದಲಗಳಲ್ಲೂ (ಸರದಿಯಲ್ಲಿ ಮೂರೋ ನಾಲ್ಕೋ ಮಂದಿಗಷ್ಟೇ ಸೀಮಿತ) ನನಗೆ ಒಮ್ಮೆ ದಕ್ಕಿದ ಅಧಿಕಾರ, ವಾರಕ್ಕೆ ಎರಡೋ ಮೂರೋ ದಿನ ಕಡ್ಡಾಯವಾಗಿ ಸುರಿಯುತ್ತಿದ್ದ ಮಳೆಯಲ್ಲೂ ಸಹಜವಾಗಿ ನಡೆದ ಶಿಬಿರ,
ಮಲೇರಿಯ ಭೀತಿಯಲ್ಲಿ ಕಡ್ಡಾಯವಾಗಿ ಕಾರ್ಕೋಟಕ ಕಹಿಯ ಕ್ವಿನಾಯಿನ್ ನುಂಗುವ ಶಿಕ್ಷೆ ಒಂದೇ ಎರಡೇ. ಶಿಬಿರದ ಕೊನೆಯಲ್ಲಿ, ಅವರು ಕೊಟ್ಟ ತರಬೇತಿಯ ಪರೀಕ್ಷೆ ಎನ್ನುವಂತೆ ನಡೆಸಿದ ಅಣಕು ಯುದ್ಧದಲ್ಲಿ ರಕ್ಷಣಾವ್ಯೂಹ ರಚಿಸುವ ತುಕಡಿಯ (ಮೂವತ್ಮೂರು ಮಂದಿಯ ಪ್ಲಟೂನ್. ಉಳಿದವರದ್ದು ಆಕ್ರಮಣ ನಡೆಸುವವರ ಸಂತೆ.) ಮುಖ್ಯಸ್ಥನಾಗಿಯೂ ನಾನು ಆಯ್ಕೆಯಾದ್ದು ನನಗೆ ಸಿಕ್ಕ ದೊಡ್ಡ ಗೌರವ. ಅಲ್ಲಿಂದ ಊರಿಗೆ ಮರಳುವ ದಾರಿಯಲ್ಲಿ ಜಲಪೈಗುರಿಯಿಂದ ಡಾರ್ಜಿಲಿಂಗಿಗೆ ಕೊಟ್ಟ ಭೇಟಿ.......
ತಲೆಯಲ್ಲಿ ಕಾಡಿದ ನೂರೆಂಟು ವಿವರಗಳು ಇಲ್ಲಿ ಹೇಳಿ ಮುಗಿಯುವಂತದ್ದಲ್ಲ, ಹೆದರಬೇಡಿ, ಮುಂದುವರಿಯುವುದಿಲ್ಲ! ಇಂದಿನ ಸತ್ಯದಲ್ಲಿ, ಆ ಕಣಿವೆಯ ಬಹುತೇಕ ವೀಕ್ಷಣಾ ಅವಕಾಶಗಳನ್ನು ಚಾ ಕುರ್ಕುರೆಗಳ ಜೋಪಡಿಗಳು ಆಕ್ರಮಿಸಿಬಿಟ್ಟಿದ್ದವು. ಆ ಒಂದು ಗೂಡಿನಲ್ಲಿ ನಮ್ಮ ಕಾಡುಬಾಳೆಯಂತ ಬಾಳೆಗೊನೆ ನೇತುಕೊಂಡಿತ್ತು. ಚಳಿ ಝಾಡಿಸಲು ಏನಾದರೂ ಚಪ್ಪರಿಸುವ ಎಂದು ಹಣ್ಣಿನ ಕ್ರಯ ಕೇಳಿ (ಒಂದಕ್ಕೆ ಇಪ್ಪತ್ತು ರೂಪಾಯಿ) ಹೌಹಾರಿದೆ. ಅನಿವಾರ್ಯವಾಗಿ ಬಣ್ಣಗೆಟ್ಟ ಸಕ್ಕರೆ ನೀರಾದರೂ ಬಿಸಿ
ಇದೆಯಲ್ಲಾಂತ ಒಂದು ಚಾ ಹೀರಿದ್ದೆ. ಆಗ ದೇವಕಿ ತೆಗೆದ ಚಿತ್ರ ನೋಡುವಾಗ, ಇಂದು ಇನ್ನೂ ನನ್ನ ಬೆರಳಲ್ಲಿ ಉಳಿದ ಮತ ಚಲಾವಣೆಯ ಕುರುಹು (ಮಂಗಳೂರು ಮಹಾನರಕಪಾಲಿಕಾ ಚುನಾವಣೆಯದ್ದು!) ಅಣಕಿಸಿತು; ಉಚಿತ ನೂಡಲ್ಸ್ ಕಳಕೊಂಡೆ;-) 

ಭಾರತದ ಆ ಮೂಲೆಯಲ್ಲಿ ದ. ಭಾರತದ ನಮ್ಮ ಹಗಲಿನ ರೂಢಿ ತಡವರಿಸುತ್ತದೆ. ನಾಲ್ಕೂವರೆಯ ಸುಮಾರಿಗೆ ಕತ್ತಲಾವರಿಸುತ್ತಿದ್ದಂತೆ, ನಾವು ಶಿಲ್ಲಾಂಗ್ ಸೇರಿದ್ದೆವು. ಆ ಬೆಟ್ಟ ಕಣಿವೆಗಳ ನಾಡಿನಲ್ಲಿ ದಾರಿಯ ತಿರುವುಮುರುವುಗಳ
ಲೆಕ್ಕ ಹಿಡಿದರೆ ಎಲ್ಲ ಊರುಗಳೂ ಬಳ್ಕೂರುಗಳೇ! ಶಿಲಾಂಗ್ ಪಟ್ಟಣದೊಳಗೂ ತರಹೇವಾರಿ ಕಟ್ಟಡಗಳ ನಡುವೆ ಹಾವಾಡುವ ದಾರಿಗಳಲ್ಲಿ ದಿಕ್ಕರಿವು ಏನೂ ಉಳಿಸಿಕೊಳ್ಳದ ನಾವು ಯೂತ್ ಹಾಸ್ಟೆಲಿನ ಕಟ್ಟಡ ಸೇರಿದೆವು. ಕೇಂದ್ರ ಸರಕಾರದ ಯುವ ವಿಭಾಗ ಕಟ್ಟಿ, ಅನುದಾನವಾಗಿ ಯೂಥ್ ಹಾಸ್ಟೆಲ್ಸಿಗೆ ಒಪ್ಪಿಸಿದ ಕಟ್ಟಡವಂತೆ. ವಿಪರೀತವೆನ್ನುವಂತೆ ಅಡ್ಡಾತಿಡ್ಡ ಅಂತಸ್ತುಗಳು, ಮೆಟ್ಟಿಲುಗಳು, ಓಣಿಗಳಲ್ಲದೇ ಆರೇಳು ಮಹಾಕೋಣೆಗಳೂ ಕೆಲವು ಕಿರುಕೋಣೆಗಳೂ ಆ ರಚನೆಯಲ್ಲಿದ್ದವು. ಕೆಳ ಅಂತಸ್ತಿನಲ್ಲಷ್ಟೇ ಸ್ವಾಗತ ಕಚೇರಿ,
ಪುಟ್ಟ ಸಭಾಭವನ, ಅದೇ ಹಿಂದೆ ವಿಸ್ತರಿಸಿದಂತೆ ಭೋಜನ ಶಾಲೆ. ಕಾರ್ಯದರ್ಶಿ (ದೇಬಾಶೀಷ್) ಎಲ್ಲರನ್ನು ಆತ್ಮೀಯವಾಗಿಯೇ ಬರಮಾಡಿಕೊಳ್ಳುತ್ತ, ದಾಖಲಾತಿಯ ಮೇಜು ಕಾಣಿಸುತ್ತ, ಚಾ ಬಿಸ್ಕತ್ತುಗಳ ಉಪಚಾರ ತೋರುತ್ತ, ಸುಮಾರು ನಲ್ವತ್ತು ಮಂಚಗಳ ಒಂದು ಮಹಾಕೋಣೆ ಗಂಡಸರಿಗೂ ಸ್ವಲ್ಪ ಕಡಿಮೆಯದ್ದನ್ನು ಹೆಂಗಸರಿಗೂ ಒದಗಿಸಿದರು. ಎಲ್ಲ ಮಂಚಕ್ಕೂ ಹಾಸಿಗೆ, ದಿಂಬು, ದಪ್ಪ ಹೊದಿಕೆ ಏನೋ ಇತ್ತು. ಆದರೆ ಮೂಲದಲ್ಲಿ ಕೇಂದ್ರ ಸರಕಾರೀ ರಚನೆಯಾದ್ದಕ್ಕೋ ಏನೋ ಅವ್ಯವಸ್ಥೆ ಧಾರಾಳ.
ನಮ್ಮಲ್ಲಿ ಎರಡೇ ಕಕ್ಕೂಸ್, ಚಿಲಕವಿಲ್ಲದ ಒಂದೇ ಬಚ್ಚಲಮನೆ. ಸ್ನಾನ ಮಾಡುವವರೆಲ್ಲ ಸಂಗೀತಗಾರರಾಗುವುದೇ ಸರಿ! ಅಲ್ಲಿ ಇದ್ದೊಂದು ಗೀಸರ್ ಹಾಳಾಗಿ, ಹಿಂದೆಂದೋ ಬಲೆ ಕಟ್ಟಿದ್ದ ಜೇಡವೂ ಒಕ್ಕಲೆದ್ದಿತ್ತು. ಈಚಿನ ದಿನಗಳಲ್ಲಿ ಚಳಿಗೆ ನನ್ನ ಸ್ಪಂದನ ಸ್ವಲ್ಪ ಹೆಚ್ಚೇ ಇದೆ. ಸಹಜವಾಗಿ ನಾನು ಬಿಸಿ ಉಡುಪುಗಳನ್ನು ಹೇರಿಕೊಂಡದ್ದು ಮಾತ್ರ. ಕೈ ಮುಖ ತೊಳೆಯದೆಯೂ ‘ಫ್ರೆಶ್ ಲುಕ್’ ಕೊಟ್ಟೆ. ಆನಂತರ ತಿಳಿದಂತೆ ಚಳಿಗಾಲದ ಶೇಷವಿಟ್ಟುಕೊಂಡ ಆ ರಾತ್ರಿ ಪಾದರಸ ನಾಲ್ಕು ಡಿಗ್ರಿಗಿಳಿದಿತ್ತು! 

ಯೂಥ್ ಹಾಸ್ಟೆಲ್ಲಿನ ಶಿಲ್ಲಾಂಗ್ ಶಾಖೆ ತನ್ನ ಚಾರಣ, ಗುಹಾನ್ವೇಷಣಾ ಶಿಬಿರ ಸರಣಿಯನ್ನು ಈ ಬಾರಿ ಅಕ್ಟೋಬರ್ - ನವೆಂಬರ್ (ಮಳೆಗಾಲ ಬಿಟ್ಟ ಹೊಸತು) ಪರಂಪರೆಗೆ ಹೆಚ್ಚುವರಿಯಾಗಿ, ಫೆಬ್ರುವರಿ ೫ರಿಂದ ೧೭ರವರೆಗೆ (ಚಳಿಗಾಲದ ಕೊನೆ) ವ್ಯವಸ್ಥೆ ಮಾಡಿತ್ತು. ಇದರ ಹಾಸಲು (ತಲಾ ರೂ ಏಳು ಸಾವಿರದಿನ್ನೂರು) ತುಂಬಿಸಿಕೊಂಡು, ಮಿತಿ ವ್ಯವಸ್ಥೆಗಳನ್ನು ಗಟ್ಟಿ ಮಾಡಿದ್ದರು. ಆ ಪ್ರಕಾರ ಎಂಟಕ್ಕೆ ತೊಡಗಬೇಕಿದ್ದ ನಮ್ಮ ತಂಡದಿಂದ ಮೊದಲು, ಸರಾಸರಿಯಲ್ಲಿ ಐವತ್ತು ಸದಸ್ಯರ ಮೂರು ತಂಡಗಳು
ದಿನಕ್ಕೊಂದರಂತೆ ಕಾರ್ಯರಂಗದಲ್ಲಿದ್ದವು. ಹಾಗೇ ನಮ್ಮನ್ನು ಮತ್ತೆ ಮೂರೋ ನಾಲ್ಕೋ ತಂಡಗಳು ಮುಂದಿನ ದಿನಗಳಲ್ಲಿ ಅನುಸರಿಸಲಿದ್ದವು. ನಮ್ಮ ತಂಡದಲ್ಲಿ ನಾವಾರು ಕರ್ನಾಟಿಗರು ಮತ್ತು ಮೂರ್ನಾಲ್ಕು ಇತರ ರಾಜ್ಯಗಳವರು ಕತ್ತಲೆಗೆ ಮುನ್ನ ಶಿಬಿರ ಸೇರಿದ್ದೆವು. ತಂಡದ ದೊಡ್ಡಪಾಲು - ಮಹಾರಾಷ್ಟ್ರದ್ದು, ಇನ್ನೂ ಬಂದಿರಲಿಲ್ಲ. ಮೊದಲ ಔಪಚಾರಿಕ ಸಭೆಗೆ ಮತ್ತೂ ಒಂದೂವರೆ ಗಂಟೆಯ ಅವಧಿ (‘ಸಂಜೆ ಆರು’ ಎಂದಿದ್ದರು!) ಇದ್ದುದರಿಂದ ನಾವಾರು ಮಂದಿ ಸ್ವಲ್ಪ ಊರು ತಿರುಗಲು ಹೊರಟೆವು. 

‘ವಾಕ್’ ಸಜ್ಜಾದ ನನ್ನ ಆಹಾರ್ಯವನ್ನು ಸಣ್ಣದಾಗಿ ವಿವರಿಸಲೇಬೇಕು. ಮಾಮೂಲೀ ಒಳ ಉಡುಪಲ್ಲದೆ ಸಾಕ್ಸ್, ಶೂ, ತಲೆಗೆಂದಿದ್ದ ಮಂಗನ ಟೊಪ್ಪಿಯನ್ನು ಬಾಯಿ ಮೂಗಿಗೂ ಹಿಗ್ಗಿಸಿಕೊಂಡಿದ್ದೆ. ಮತ್ತೆ ಮೇಲಕ್ಕೂ ಕೆಳಕ್ಕೂ ‘ಥರ್ಮಲ್ ವೇರ್ಸ’ ಎಳೆದು ಕಾಲಿಗೆ ಮಾಮೂಲೀ ಪ್ಯಾಂಟ್. ಮೇಲಕ್ಕೆ (ಬನಿಯನ್ ಮೇಲೆ ತುಂಡುಗೈ ಸ್ವೆಟ್ಟರ್, ಮಾಮೂಲೀ ಜುಬ್ಬಾ, ಮುತ್ತುಕತ್ತು ಹಾಗೂ ಪೂರ್ಣಗೈಗಳ ಸ್ವೆಟ್ಟರ್, ಕೊನೆಯಲ್ಲಿ ತಲೆಮೈ ಸುತ್ತುವಂತೆ ಶಾಲೂ ಹೊದ್ದು, ಎರಡೂ ಕೈಗಳನ್ನು ಬೆಚ್ಚಗೆ ಕಿಸೆ ಸೇರಿಸಿಬಿಟ್ಟೆ. ಈ ಊರಿನಲ್ಲಿ
ಕಿಸೆಗಳ್ಳರಿಗೆ ದಂಧೆ ಕಷ್ಟ! ನಾನು ದಾರಿಗಿಳಿದಾಗ, ಸುಮಾರಿಗೆ ಹೀಗೇ ಸಜ್ಜುಗೊಂಡಿದ್ದ ದೇವಕಿಯ ಪರಿಚಯ ತಪ್ಪಿ, ನವೀಕರಿಸಿಕೊಳ್ಳುವ ಸಂದಿಗ್ಧ ಬಂದಿತ್ತು! ಅವಳು ಕೈಗವುಸುಗಳನ್ನೂ ತಂದಿದ್ದಳು. 

ಹಾಸ್ಟೆಲ್ ದಾರಿಯ ಇನ್ನೊಂದು ಮಗ್ಗುಲಿನಲ್ಲಿ ಬೀಎಸ್ಸೆನ್ನೆಲ್ ಪ್ರಾದೇಶಿಕ ಕಚೇರಿಯ ವಿಸ್ತಾರ ವಠಾರವಿತ್ತು. ಆದರೆ ನನ್ನ ಮನಸ್ಸಿನ ವ್ಯಂಗ್ಯ ಚಿತ್ರದಲ್ಲಿ ಅಲ್ಲಿನ ಬೋರ್ಡುಗಳೆಲ್ಲ ರಿಲಯೆನ್ಸ್ ಮಾಲಕತ್ವದ ಘೋಷಣೆಗೆ ಸಜ್ಜುಗೊಳ್ಳುತ್ತಾ ಇತ್ತು. ಅತ್ತ ಇಗರ್ಜಿ, ಇತ್ತ ವಿದೇಶೀ ಸಚಿವಾಲಯದ ಒಂದು
ಕಚೇರಿ, ಅತ್ತ ಗ್ರಂಥಾಲಯ, ಇತ್ತ ಮ್ಯೂಸಿಯಂ ಎಂದೆಲ್ಲ ದಾರಿ ಬಳುಕಾಡುತ್ತ, ಟಿಸಿಲೊಡೆಯುತ್ತ ಸಾಗಿತ್ತು. ನಮ್ಮೂರಿನ ಪುಟ್ಟಪಥಗಳಲ್ಲಿ ಪಳಗಿದ್ದರಿಂದ ಖಾಸಗಿ ವಠಾರಗಳಿಗೆ ಹೋಗುವ ತಗ್ಗು ದಾರಿಗಳು, ಕಿತ್ತು ಬಂದ ಕಲ್ಲು - ಗುಂಡಿ, ಕೊಳಚೆಗುಪ್ಪೆ, ಸಂಜೆ ಧಾವಂತದ ಜನ, ತಲೆಗೆ ಹೊಡೆಯುವ ಜಾಹೀರಾತುಗೈ ಅಥವಾ ಹಸುರೀಕರಣದ ಫಲ. ಪುಟ್ಟಪಥ ಸಪುರ, ಯಾಕೆ ಕಷ್ಟವೆಂದು ಫಕ್ಕನೆ ದಾರಿಗಿಳಿಯುವಂತಿರಲಿಲ್ಲ. ಅದಕ್ಕೂ ದಾರಿಗೂ ಅಂತರ ಅನಿಯತವಾಗಿ ಒಂದಡಿಗೆ ಮಿಕ್ಕೇ ಇರುತ್ತಿತ್ತು. ಹಾಗೂ
ಇಳಿದಲ್ಲಿ ಸರಭರಗುಟ್ಟುವ ಕಾರು ವ್ಯಾನುಗಳು ನಮ್ಮ ಅಪರಾಧ ಸಾರಲು ಸಹಜ ದೀಪ ಸಾಲದೆಂಬಂತೆ ಭೇರೀ ಹೊಡೆಯ ಹೊರಟಮೇಲೆ, ಸೋತು ಹಾಸ್ಟೆಲ್ಲಿಗೆ ಮರಳಿದೆವು. 

ಸಭಾಭವನ ಮತ್ತು ವಾಸದ ಮಹಾಕೋಣೆಗಳಲ್ಲಿ ಮರಾಠಾ ದಂಡು ಬಂದು ವ್ಯಾಪಿಸಿತ್ತು. ಏಳು ಗಂಟೆಯ ಸುಮಾರಿಗೆ ಕಾರ್ಯದರ್ಶಿ ಮತ್ತು ಯೂಥ್ ಹಾಸ್ಟೆಲ್ಸಿನ ಶಿಲ್ಲಾಂಗ್ ಶಾಖೆಯ ಅಧ್ಯಕ್ಷ, ಆತ್ಮೀಯ ಅನೌಪಚಾರಿಕತೆಯಲ್ಲೇ ಸಭೆ ನಡೆಸಿದರು. ಸ್ವಪರಿಚಯ, ಒಟ್ಟು ತಂಡವನ್ನೇ ಕೇಳಿಕೊಂಡು ನಾಮಕಾವಸ್ಥೆ ಎರಡು ನಾಯಕರನ್ನು ಹೆಸರಿಸಿ (ಏನೂ ಪ್ರಯೋಜನದ್ದಲ್ಲ), ಒಟ್ಟು ಶಿಸ್ತು ಹಾಗೂ ಮುಖ್ಯವಾಗಿ ನಾಲ್ಕು ದಿನಗಳ ಕಲಾಪದ ತೋರ ಪರಿಚಯ ಮಾಡಿಕೊಟ್ಟರು. ಹೆಚ್ಚುವರಿಯಾಗಿ ಐದನೇ ದಿನವನ್ನು, ಹಾಸ್ಟೆಲ್ಲಿನನ ಎಲ್ಲ
ವ್ಯವಸ್ಥೆಗಳೊಡನೆ ನಮ್ಮದೇ ವಿಹಾರಕ್ಕೂ ಉಳಿಸಿ ಕೊಟ್ಟರು. ಅಂದರೆ ನಮ್ಮ ತಂಡದ ಅಧಿಕೃತ ಕಲಾಪ ಮರು ಬೆಳಗ್ಗೆಯಿಂದ ಅಂದರೆ, ೯-೨ ರಂದು ಶಿಲ್ಲಾಂಗ್ ಬಿಡುವಲ್ಲಿಂದ ೧೨-೨ರ ಕತ್ತಲೆಗೆ ಶಿಲಾಂಗ್ ಮುಟ್ಟುವಲ್ಲಿಗೆ ಮುಗಿಯುವುದಿತ್ತು. ಇವೆಲ್ಲ ಮುಂದಾಗಿಯೂ ನಮಗೆ ತಿಳಿದಿತ್ತು. ಹಾಗಾಗಿ ನಾವಾರು ಮಂದಿ, ಮೇಘಾಲಯದೊಂದಿಗೆ ಅಸ್ಸಾಂ ಕೂಡಾ ತಿರುಗಾಡಿ, ೧೬-೨ರ ಸಂಜೆಯ ವಿಮಾನ ಹಿಡಿಯುವಂತೆ ವ್ಯವಸ್ಥೆ ಮಾಡಿಕೊಂಡೇ ಬಂದಿದ್ದೆವು. 

ಅಮಿತ ಚಪಾತಿ, ಗೊಜ್ಜು, ಅನ್ನ, ಸಾಂಬಾರುಗಳ ಸರಳ ಊಟ. ಸಂಭ್ರಮಕ್ಕೆ ಎಲ್ಲರಿಗೂ ಒಂದೊಂದು ರೊಶಗುಲ್ಲಾ! ನಾಲ್ಕೂವರೆಯಿಂದಲೇ ರಾತ್ರಿಯ ಭಾವನೆಯಲ್ಲಿದ್ದ ನಾವು ಭಾರೀ ತಡವಾಯಿತೆಂಬಂತೆ ಹಾಸಿಗೆಯಲ್ಲಿ ಹುಗಿದುಕೊಳ್ಳುವಾಗ ಗಂಟೆ ಇನ್ನೂ ಎಂಟೂವರೆ! ಮುಂಬೈ, ಪುಣೆ ವಲಯಗಳಿಂದ ರೈಲಿನಲ್ಲಿ ಬಹುಶಃ ಮೂವತ್ತಾರು ಗಂಟೆಯಷ್ಟು ಪಯಣಿಸಿ, ಗೌಹಾತಿಯಲ್ಲಿ ಸಮೂಹ ವಾಹನ ಮಾಡಿ, ಶಿಲಾಂಗ್ ಸೇರಿದ್ದ ಮರಾಠೀ ತಂಡಕ್ಕೆ ಸ್ನಾನ, ಬಟ್ಟೆ ಒಣಗಿಸುವುದರೊಡನೆ ಸುಮಾರು ಲೆಕ್ಕ, ಮಾತು
ಬಾಕಿಯಿದ್ದಿರಬೇಕು. ಹನ್ನೊಂದು ಗಂಟೆಯ ಸುಮಾರಿಗೆ ಅವರು ಮಲಗುವವರೆಗೂ ನಮ್ಮದು ಅರೆಬರೆ ನಿದ್ರೆಯೇ. ಮತ್ತಾದರೂ ಬಹುತೇಕ ಮಂದಿಯ ವೈವಿಧ್ಯಮಯ ಗೊರಕೆಗಳು (ವಿಡಿಯೋ ತುಣುಕಿಗೆ ಪೂರ್ಣ ಧ್ವನಿ ಕೊಟ್ಟು ಕೇಳಿ :-)) ನನ್ನ ನಿದ್ರೆಯನ್ನು ಓಲಾಡುವ ತಕ್ಕಡಿಯಲ್ಲೇ ಇಟ್ಟಿತ್ತು. 

ನನಗೆ ಮೊದಲೇ ಸೂಕ್ಷ್ಮ ನಿದ್ರೆ. ಹಾಗಾಗಿ ಹೆಚ್ಚು ಕಡಿಮೆ ಹನ್ನೆರಡು ಗಂಟೆಯವರೆಗೂ ನಾನು ಹಾಸಿಗೆ ಬಿಸಿ ಮಾಡಿದ್ದೇ ಬಂತು. ನಿತ್ಯದಲ್ಲಿ ಬೆಳಿಗ್ಗೆ ನಾನು ಕನಿಷ್ಠ ಕಾಲರಿಂದ ಅರ್ಧ ಗಂಟೆಯಾದರೂ ಕಕ್ಕೂಸಿನಲ್ಲಿ ಧ್ಯಾನ ಮಾಡುವವ. ಹಾಸ್ಟೆಲ್ಲಿನ ಕಕ್ಕೂಸ್ ಸ್ಥಿತಿ ಆಗಲೇ ಹೇಳಿದ್ದೇನೆ. ಬೆಳಿಗ್ಗೆ ಇತರ ಸುಮಾರು ನಲ್ವತ್ತು ಮಂದಿಯ ‘ಗಡಿಬಿಡಿ’ಗೆ ನಾನು ಅಡ್ಡಿಯಾಗಬಾರದೆಂಬ ಮನೋಸ್ಥಿತಿಯ ಹಿಂಸೆ ಬೇರೆ. ಹಿಂದೆಲ್ಲ ಮಾಡಿದಂತೆ, ಈ ಶಿಬಿರದ ಸಮೂಹ ವಾಸದ ಉದ್ದಕ್ಕೂ ನಾನು ಮಠದಯ್ಯಗಳಂತೆ (ಅತ್ರಿ ಮಠ?), ಎಲ್ಲರೂ ಮಲಗಿರಲು ಎದ್ದು, (ಬೋಧಿವೃಕ್ಷದ ಬುಡದಲ್ಲಲ್ಲ!) ಇದ್ದ ವ್ಯವಸ್ಥೆಯಲ್ಲೇ
ಧ್ಯಾನಸ್ಥನಾಗಿ ದೇಹಭಾರ ಇಳಿಸಿ, ಮತ್ತೆ ನಿದ್ರಾವಸ್ಥೆಯ ಎರಡನೇ ಅಧ್ಯಾಯಕ್ಕಿಳಿಯುವುದು ರೂಢಿಸಿಕೊಂಡೆ. ಆಗೆಲ್ಲ ಅನಿವಾರ್ಯ ತೊಳೆಯುವುದಕ್ಕಷ್ಟೇ ನೀರು ಬಳಸುತ್ತಿದ್ದೆ. ಆ ಚಳಿ, ಕೋಟಗುಡುವ ನೀರಿನಲ್ಲಿ ಸ್ನಾನ ಬಿಡಿ, ಕಾಲ್ಚೀಲ ಕಳಚಿ ಕಾಲು ತೊಳದದ್ದೂ ಇಲ್ಲ. ಇನ್ನು ಚಂದ ನೋಡುವವರು ಯಾರೂ ಇಲ್ಲವೆಂಬ ಧೈರ್ಯದಲ್ಲಿ ಮುಖ ತೊಳೆಯುವ ತಪ್ಪೂ ಮಾಡಲಿಲ್ಲ. 

ಜಗತ್ತಿನ ಅತಿ ಉದ್ದದ ಗುಹಾಸರಣಿ - ಕ್ರೆಂಪುರಿ 

ಹಿಮಾಲಯ ಭೂಮಿಯಲ್ಲಿ ಮೊಳೆತು ಬೆಳೆದ ರೋಚಕತೆಗೆ ಭೂಖಂಡಗಳ ಚಲನೆಯೇ ಕಾರಣ ಎಂದು ನಿಮಗೆಲ್ಲ ತಿಳಿದೇ ಇದೆ. ಅಂದೇ ಸ್ವಲ್ಪ ಭಿನ್ನ ಉತ್ಪತ್ತಿಯಾಗಿ, ಭಾರತ ಭೂಭಾಗಕ್ಕೆ ಪೂರ್ವ ಅಂಚಿನಲ್ಲಿ ಜೋಡಣೆಗೊಂಡ ನೆಲ ಇಂದಿನ ಮೇಘಾಲಯ. ಅದು ಮಹಾಸಾಗರದಲ್ಲಿನ ಒಂದು ಹವಳದ್ವೀಪವಾಗಿತ್ತಂತೆ (ಸುಮಾರು ಮೂರೂವರೆ ಮಿಲಿಯ ವರ್ಷಗಳ ಹಿಂದೆ). ಖಂಡಾಂತರ ಚಲನೆಯ ಸೆಳೆತದ ಸುಳಿಯಲ್ಲಿ ಇದು ತಿರುತಿರುಗಿ, ಕನಿಷ್ಠ ಐದು ಬಾರಿಯಾದರೂ ಮುಖ್ಯಭೂಮಿಗೆ ಗುದ್ದಿಸಿಕೊಂಡಿದೆ. ಮೇಘಾಲಯದ ಇಂದಿನ
ಪ್ರಾಕೃತಿಕ ಸಂಪತ್ತುಗಳಾದ ಸುಣ್ಣ, ಕಲ್ಲಿದ್ದಲು, ಮರಳುಗಲ್ಲಾದಿ ಅಸಂಖ್ಯ ನಿಕ್ಷೇಪಗಳ, ಅಸಂಖ್ಯ ಗುಹಾಜಾಲಗಳ, ಬೆಟ್ಟ, ಕಣಿವೆ, ನೀರೇ ಅದಕ್ಕೆ ಸಾಕ್ಷಿ. ಇಂದಿನ ಮೇಘಾಲಯ ಮೂರು ಶಿಖರ ಶ್ರೇಣಿಗಳ ಕೂಟ. ಅವುಗಳಲ್ಲಿ ಪೂರ್ವದ ಖಾಸೀ ಶ್ರೇಣಿಗಳು ಅತ್ಯಂತ ಎತ್ತರದವು. ಮತ್ತೆ ದಕ್ಷಿಣದ ಗ್ಯಾರೋ, ಕೊನೆಯಲ್ಲಿ ಜೈಂಟಿಯಾ ಶ್ರೇಣಿಗಳು. ಶೋಧಕರು ಇಂದು ಇಲ್ಲಿ ಅಂದಾಜಿಸುವ ಗುಹಾ ಜಾಲಗಳು ಸುಮಾರು ೧೭೦೦ಕ್ಕೂ ಮಿಕ್ಕಿವೆ. ಮೊತ್ತದಲ್ಲಿ ಅವುಗಳ ಉದ್ದ ೪೯೧ ಕಿಮೀಗೂ ಹೆಚ್ಚು!
ಅವುಗಳಲ್ಲಿ ಈಚೆಗೆ ಮನುಷ್ಯ ಶೋಧಕ್ಕೆ ನಿಲುಕಿ, ಜಗತ್ತಿನ ಅತ್ಯಂತ ದೀರ್ಘ ಗುಹೆ (ವಿವಿಧ ಕವಲುಗಳ ಮೊತ್ತದಲ್ಲಿ ೨೪ ಕಿಮೀ) ಎಂದೇ ಖ್ಯಾತಿವೆತ್ತು, ಆಂಶಿಕವಾಗಿ ಸಾರ್ವಜನಿಕ ವೀಕ್ಷಣೆಗೂ ತೆರೆದುಕೊಂಡ ಗುಹೆ ಮೌಸಿನ್ರಮ್ ವಲಯದ ಕ್ರೆಮ್ ಪುರಿ ಗುಹೆ. ಶಿಲ್ಲಾಂಗಿನಿಂದ ಸುಮಾರು ೬೪ ಕಿಮೀ ದೂರದ್ದು. 

ಕ್ರೆಮ್ಪುರಿ ಗುಹಾ ದರ್ಶನದಿಂದಲೇ ನಮ್ಮ ಗುಹೆ ಹಾಗೂ ಚಾರಣ ಶಿಬಿರ ಆರಂಭವಾಗುವುದಿತ್ತು. ಶಿಬಿರದಲ್ಲಿ ಏಳೂವರೆಯ ಸುಮಾರಿಗೆ ಬೆಳಗ್ಗಿನ ತಿಂಡಿಯೊಡನೆ,
ಮಧ್ಯಾಹ್ನಕ್ಕೆ ಬುತ್ತಿ ಕಟ್ಟಿಕೊಳ್ಳುವಂತೆ (ಸೂಕ್ತ ಡಬ್ಬಿ ತರಲು ಪೂರ್ವಸೂಚನೆಯಿತ್ತು) ತಿನಿಸುಗಳನ್ನು ಸಜ್ಜುಗೊಳಿಸಿ ಧಾರಾಳ ಒದಗಿಸಿದರು. ನಮಗೆ ದಿನದ ಹೊರಾಂಗಣ ಚಟುವಟಿಕೆಗೆ ಆವಶ್ಯವಿರುವಷ್ಟೇ ಬೆನ್ನಹೊರೆ ಉಳಿಸಿಕೊಳ್ಳಲು ಸೂಚನೆಯಿತ್ತು. ಅದರಲ್ಲಿ ಬುತ್ತಿಯೂಟ, ನೀರು, ಸ್ವಂತದ ಸಣ್ಣಪುಟ್ಟ ತಿನಿಸುಗಳು, ಬೆಚ್ಚನ್ನ ಉಡುಪು, ಟಾರ್ಚು ಇತ್ಯಾದಿಗಳನ್ನಷ್ಟೇ ಉಳಿಸಿಕೊಂಡೆವು. ಉಳಿದವನ್ನೆಲ್ಲ ಸರಿಯಾಗಿಯೇ ಪ್ಯಾಕ್ ಮಾಡಿ ಪ್ರತ್ಯೇಕ ಸಾಗಣಾ ವಾಹನಕ್ಕೊಪ್ಪಿಸಿಬಿಟ್ಟೆವು. (ಅದು ಮತ್ತೆ ರಾತ್ರಿಯ
ಶಿಬಿರತಾಣದಲ್ಲಿ ಲಭ್ಯ) ಮೇಘಾಲಯದ ಬಹುತೇಕ ದಾರಿಗಳು ಯಾವುದೇ ದೊಡ್ಡ ವಾಹನಗಳಿಗೆ ತೆರೆದುಕೊಳ್ಳಲಾರವು. ಸಹಜವಾಗಿ ನಮ್ಮ ತಂಡದ ಹೆಚ್ಚು ಭಾಗಿಗಳನ್ನು ಒಮ್ಮೆಗೇ ಸಾಗಿಸುವಂತೆ, ಆ ವಲಯದ ಹಳೇ ಶೈಲಿಯ ‘ದೊಡ್ಡ ಬಸ್’ ಹೆಚ್ಚುವರಿ ಮಂದಿಗೊಂದು ವ್ಯಾನ್ ಸಜ್ಜಾಗಿದ್ದವು. ಬಸ್ಸು ಹೊರನೋಟಕ್ಕೆ ತಗ್ಗು, ಪುಟ್ಟ ಮರದ ಗೂಡು; ಯಾವ ಥಳಕೂ ಇಲ್ಲದ, ಬಹುತೇಕ ಮರದ ರೀಪು, ಫ್ರೇಮುಗಳದೇ ಬಂಧ. ಹಾಗೆಂದು ಮಳೆ ಮತ್ತು ಚಳಿ ಅತಿಯಾದ ಊರಿನಲ್ಲಿ ವಾತಾಯನದ ಕಂಡಿಗಳನ್ನು
ಮರೆಯುವುದುಂಟೇ! ಬಸ್ಸು ಸುತ್ತಣ ಕಂಡಿದಂಡೆಯ ಆಳದಲ್ಲಿ ಪುಟ್ಟ ಫೋಟೋಫ್ರೇಮಿನಂಥ ಪಡಿಗಳು ಹುದುಗಿದ್ದವು. ಅವನ್ನು ಮೇಲೆಳೆದು, ರಬ್ಬರ್ ಕೀಲು ಕೊಟ್ಟು ನಿಲ್ಲಿಸಿದಾಗ ಬಸ್ಸಿಗೆ ಹೊಸದೇ ಕಲಾಚೌಕಟ್ಟು ಬಂದ ಹಾಗಿತ್ತು. ಬಸ್ಸಿಗೆ ನಾನು ನಿರೀಕ್ಷಿಸದ, ತುಸು ಹೆಚ್ಚೇ ಅನ್ನಿಸುವ ಆಧುನಿಕ ಸಂಗೀತ ಮತ್ತು ಧ್ವನಿ ವ್ಯವಸ್ಥೆ ಇತ್ತು. ಅದು ಬಸ್ಸು ಹೊರಟಮೇಲೆ ಬಸ್ಸನ್ನೇ ಅದುರಿಸುವಂಥಾ ಸಂಗೀತ ಕೊಡತೊಡಗಿದಾಗ, ಎರಡೂ ಮಗ್ಗುಲುಗಳ ಕಿಟಕಿ ಪಡಿಗಳೂ ಸೇರಿದಂತೆ ಇಡಿಯ ಬಸ್ಸಿನ ಲಯಗಾರಿಕೆ (ಞ್ಯರಕ್, ಞ್ಯರಕ್...) ಅಲ್ಪ ಕಾಲಕ್ಕೆ ಬಹಳ ಮೋಜನ್ನೆ ಕೊಟ್ಟಿತು. ಎರಡು ಮಗ್ಗುಲುಗಳ ಸೀಟಿನ ನಡುವೆ ಮೆತ್ತೆ ಬಿಗಿದ ಹಲಿಗೆ, ಚಾಲಕನ ವಿಭಾಗದಲ್ಲೂ ಹೆಚ್ಚಿನ ಸೀಟಿನ ವ್ಯವಸ್ಥೆಗಳನ್ನೆಲ್ಲ ಹೊಂದಿಸಿದ್ದರು. ಆದರೆ ನಮ್ಮಲ್ಲಿನ ಕೆಲವು ತರುಣರು, ಅಂತಿಮ ದಿನದಂದು ಶಿಲ್ಲಾಂಗಿಗೆ ಮರಳುವಂದು, ಉತ್ಸಾಹ ಹೆಚ್ಚಿ, ಹೆಚ್ಚುವರಿ ಸೀಟುಗಳನ್ನೆಲ್ಲ ಕಳಚಿಟ್ಟು, ಗರಿಷ್ಠ ಮೂಝಿಕ್ಕು ಹಾಕಿ,
ಗಾಳಿಗುದ್ದುತ್ತ, ದೇಹ ತೊನೆದಾಡಿಸಿ ಕೊಟ್ಟ ನೃತ್ಯ ಭಯಂಕರವೇ ಇತ್ತು. ಬಸ್ಸೇ ಓಲಾಡಿ, ಪ್ರಪಾತಕ್ಕೆ ಉರುಳೀತು ಎಂದು ನನ್ನಂಥವರು ಭಾವಿಸಿದ್ದು, ಅದೃಷ್ಟವಶಾತ್ ಉತ್ಪ್ರೇಕ್ಷೆಯಾಗಿಯೇ ಉಳಿದುಹೋಯ್ತು. 

ಶಿಸ್ತಿನ ಪ್ರತಿರೂಪ ಮತ್ತು ಬಹುತೇಕ ಸಹಪಾಠೀ ತರುಣರ ಕೂಟ ಎನ್ನುವ ಎನ್ಸಿಸಿಯಂತಲ್ಲೇ ಸಮಯಪಾಲನೆ ಸದಾ ನಿರ್ಲಕ್ಷಿತ ಅಂಗ. ಇಲ್ಲಂತೂ ಜೀವಮಾನವಿಡೀ ವೈವಿಧ್ಯಮಯವಾಗಿ ಬಾಳಿದ ಮಂದಿ, ಪ್ರಾಯದಲ್ಲೂ ಹನ್ನೆರಡರಿಂದ ಎಪ್ಪತ್ನಾಲ್ಕರವರೆಗೂ ಏರಿಳಿತದ ಮಂದೆ, ಕೇವಲ ನಾಲ್ಕು ದಿನಗಳ ಕಲಾಪದಲ್ಲಿ ಏಕಸೂತ್ರಕ್ಕೆ ಒಗ್ಗಿಕೊಳ್ಳುವುದು ಕಷ್ಟವೇ ಇತ್ತು. ಬಹುಶಃ ನಿಗದಿತ ವೇಳೆಗೂ ಒಂದು ಗಂಟೆ ತಡವಾಗಿ ಶಿಲ್ಲಾಂಗ್ ಬಿಟ್ಟೆವು. ಶಿಲ್ಲಾಂಗಿನಿಂದ ತುಸು ಪಶ್ಚಿಮ ಓರೆಯಲ್ಲಿ ದಕ್ಷಿಣ ದಿಕ್ಕಿಗೆ ನಮ್ಮ ಬಸ್ಸೋಡಿತು. ದಾರಿ ಏನೋ ಗಿರಿವೃಂದಗಳ ನೆತ್ತಿಯಲ್ಲೇ ಸಾಗಿತ್ತು. ಬಹುತೇಕ ನಮ್ಮೂರಿನ ಹುಲ್ಲಗುಡ್ಡೆಗಳದೇ ಪರಿಸರ. ಆದರೆ ಕಣಿವೆಯ ಆಳ, ಕಡಿದು ಮಾತ್ರ ಸದಾ ಅಗಾಧ. ಹಲವು ಬೋರ್ಡುಗಳು ಮತ್ತು ಸಣ್ಣ ಪುಟ್ಟ ಹಳ್ಳಿಗಳನ್ನು ಹಾಯುತ್ತಲೇ ಇದ್ದೆವು. ಮತ್ತೆ ತೋರುತ್ತಿದ್ದ ಎಲ್ಲ ಪ್ರಕಟಣೆಗಳು ಇಂಗ್ಲಿಷ್ ಲಿಪಿಯಲ್ಲೇ ಇದ್ದವು. ಆದರೂ ನಮಗೆ ಒಂದೂ ಅರ್ಥವಾಗಲಿಲ್ಲ!
ಅವೆಲ್ಲ ಅಲ್ಲಿನ ದೇಶಭಾಷೆ - ಖಾಸಿಯಲ್ಲಿತ್ತು. ಖಾಸಿಗೆ ಲಿಪಿಯಿಲ್ಲ! ನಾವು ಮೇಲಿಂದ ಮೇಲೆ ಸಾರ್ವಜನಿಕ ಬೋರ್ಡುಗಳಲ್ಲಿ ಕಂಡ JINGMAHAM `ಪ್ರವಾಸೀ ಮಾಮ’ನಿಗೆ ಕೊಟ್ಟ ಅಕ್ಕರೆಯ ಮನವಿ ಇರಬಹುದೇ ಎಂದು ಭ್ರಮಿಸಿದ್ದು, ಎಚ್ಚರಿಕೆಯ ಪರಿಪತ್ರ (ವಾರ್ನಿಂಗ್!) ಎಂದು ತುಸು ತಡವಾಗಿ ತಿಳಿದುಕೊಂಡೆವು! ಸುಮಾರು ಎಪ್ಪತ್ತು ಕಿಮೀ ಪಯಣಿಸಿ, ದಟ್ಟ ಕಾಡು ದಾರಿಯೊಂದರಲ್ಲಿ, ಎರಡು ಅಪರಿಪೂರ್ಣ ಬೋರ್ಡುಗಳ ನಿರ್ಜನ ತಾಣದಲ್ಲಿ, ಹೆಚ್ಚು ಕಮ್ಮಿ ಎಲ್ಲೂ ಅಲ್ಲದ ಸ್ಥಳದಲ್ಲೆಂಬಂತೆ ಬಸ್ಸಿಳಿಸಿದರು. 

ಕಾಡುಕೋಲುಗಳನ್ನು ಕಡಿದು, ಆಣಿ ಬಡಿದು ಮಾಡಿದ್ದ ಒಂದೆರಡು ಪುಟ್ಟ ಜೋಪಡಿ ಮಳಿಗೆಗಳೇನೋ ಕಾಣಿಸಿತಾದರೂ ಅವು ಹಾಳುಬಿದ್ದಿತ್ತು. ದಾರಿಯ ಬಲದಿಬ್ಬದಲ್ಲಿ ಸ್ವಲ್ಪ ಒಳಗೆ ಹೀಗೇ ಇದ್ದೊಂದು ಜೋಪಡಿ ಮಳಿಗೆಯಲ್ಲಿ ಎರಡು ಮೂರು ಹುಡುಗರಿದ್ದರು. ಅವರು ನಾಲ್ಕೈದು ಕಿಮೀ ಸಮೀಪದ ಹಳ್ಳಿಯಿಂದ ನಮಗೋಸ್ಕರ ನಡೆದು ಬಂದು ಕಾದಿದ್ದರು. ಅವರು
ಪ್ರವಾಸಿಗಳಿಗೆ (ನಾಮಕಾವಸ್ಥೆ ದರದ) ಟಿಕೆಟ್ ಕೊಟ್ಟು, ಅದಕ್ಕೂ ಮುಖ್ಯವಾಗಿ ಜನ ಗುಹಾಜಾಲದಲ್ಲಿ ಕಳೆದುಹೋಗದಂತೆ ಜವಾಬ್ದಾರಿ ಹೊತ್ತು ನಡೆಸುವ ಮಾರ್ಗದರ್ಶಿಗಳು. ಆದಿತ್ಯವಾರ - ಗುಹೆಗೆ ರಜಾದಿನವಾದರೂ ಯೂಥ್ ಹಾಸ್ಟೆಲ್ಸಿನ ವಿಶೇಷ ವ್ಯವಸ್ಥೆಗೆ ಅವರು ಬಂದಿದ್ದರು. (ನಾಲ್ಕೂ ದಿನಗಳ ನಮ್ಮೆಲ್ಲ ಪ್ರಾಥಮಿಕ ಪ್ರವೇಶ ಶುಲ್ಕಗಳನ್ನು ಯೂಥ್ ಹಾಸ್ಟೆಲ್ಸೇ ಭರಿಸುತ್ತಿತ್ತು) 

ಡಾಮರ್ ದಾರಿ ಬಿಟ್ಟು ಬಲದ ದಿಬ್ಬ ಹತ್ತುವ ನಾಲ್ಕು ಮೆಟ್ಟಿಲು, ಮುಂದುವರಿದಂತೆ ಐವತ್ತು ನೂರಡಿ ಅಂದರೆ,
ಆಚಿನ ಪ್ರಪಾತದಂಚಿನವರೆಗೆ ಕಾಂಕ್ರೀಟಿನ ಒರಟು ಪುಟ್ಟಪಥವಿತ್ತು. ಮುಂದೆ, ನಮ್ಮನ್ನು ನುಂಗಿಯೇ ಬಿಡುವಂತೆ ತೆರೆದುಕೊಂಡ ಮಹಾಕಣಿವೆಯ ಕಡಿದಾದ ಗೋಡೆಯಲ್ಲಿಳಿಯಲು ಅಪ್ಪಟ ಸವಕಲು ಜಾಡು ಮಾತ್ರ. ಅಂಚುಗಟ್ಟಿದ ಪೊದರಗೈಗಳು, ಮರಗಳ ಮೋಟು, ತೀರಾ ಅಪರೂಪಕ್ಕೆ ಹಳ್ಳಿಗರು ಬಳ್ಳಿಯಲ್ಲಿ ಕಟ್ಟಿಯೋ ಒತ್ತಿನ ಮರಗಳ ಕಾಂಡಕ್ಕೆ ಆಣಿ ಬಡಿದೋ ಮಾಡಿದ ಕೈತಾಂಗುಗಳು ಸಿಕ್ಕರೆ ನಿಮ್ಮ ಪುಣ್ಯ. ಮೊದಲ ಹೆಜ್ಜೆಯಲ್ಲೇ ಸೋಲನ್ನೊಪ್ಪಿಕೊಳ್ಳಲಾಗದ ಕಷ್ಟಕ್ಕೆ, ಎಷ್ಟೋ ಮಂದಿ
ಗುಂಡಿಗೆ ಗಟ್ಟಿ ಮಾಡಿ, ಸ್ವಂತ ಕೈಕಾಲುಗಳ ಜೊತೆಗೆ, ನಿಧಾನವಾದರೂ ಸರಿ ಎಂದು ಅಂಡಿನ ಬಲ ಕೊಟ್ಟೇ ಇಳಿದರು. ನೇರ ಪಾತಾಳ ಕಾಣಿಸಿ ಭಯ ಹುಟ್ಟದಂತೆ ಪೊದರ ಮುಸುಕು, ಅಡ್ಡಾದಿಡ್ಡಿ ಜಾಡು ಸಹಕರಿಸಿತು. ಜಾಡು ತುಸು ಅಗಲವಿದ್ದಲ್ಲಿ ಸೋರಿದ ಮಿನಿಟು ವಿರಾಮ ಪಡೆದು, ಸೋರಿದ ಧೈರ್ಯ ಒಟ್ಟುಮಾಡಿಕೊಂಡು, ಮೆಟ್ಟಿಲುಗಳಂತೇ ಒಡ್ಡಿಕೊಳ್ಳುತ್ತಿದ್ದ ಬೇರಗಟ್ಟೆಗಳು, ಗಟ್ಟಿ ಕೂರಿಸಿದ ಬಿದಿರ ಏಣಿಗಳನ್ನೆಲ್ಲ ಹಾಯುತ್ತ, ಎಲ್ಲಕ್ಕೂ ಮಿಗಿಲಾಗಿ ಜಾಗತಿಕ ದಾಖಲೆಯೊಂದನ್ನು ಸಂದರ್ಶಿಸುವ ಉತ್ಸಾಹದಲ್ಲಿ ಎಲ್ಲವನ್ನೂ ಸುಧಾರಿಸಿಕೊಂಡು ಸುಮಾರು ಅರ್ಧಗಂಟೆಯಲ್ಲಿ ಗುಹಾಮುಖವನ್ನು ಕಂಡೆವು. 
ಈ ಭೂಭಾಗದ ರಚನೆಯ ಕಾಲದಲ್ಲಿ, ಸಾವಿರಾರು ಅಡಿಗಳೆತ್ತರದ ಕಡಲಲೆಗಳು (ಮಹಾಸುನಾಮಿ ಎನ್ನಿ) ಒತ್ತಿ ನಿಲ್ಲಿಸಿದ ಮಣ್ಣು, ಮಹಾ ಬಂಡೆತುಂಡುಗಳ ಗೋಡೆಯೇ ಇಂದು ನಾವಿಳಿದ ಬೆಟ್ಟದ ಮೈ. ಅಲೆಯುಬ್ಬರ ಇಳಿದಂತೆ ಹಿಂಬಾಲಿಸಿದ ನೂರಾರು ಋತು ಬದಲಾವಣೆಗಳಲ್ಲಿ ಒಣಗಿ, ಜಗ್ಗಿ, ಕುಸಿದು, ಹಸಿರು, ಕುಸುರಿಗಳ ಹೊದಿಕೆಯಲ್ಲಿ ನೆಲ ತಕ್ಕ ಮಟ್ಟಿಗೆ ದೃಢತೆಯನ್ನು ಕಂಡುಕೊಂಡಿತ್ತು. ಆದರೂ ಬೆಟ್ಟದೊಳಗಿನ ನೀರಿನೊತ್ತಡಕ್ಕೋ ಹೊರಮೈಯಲ್ಲಿ ಬಲಿತ ಮರಗಳ ತುಯ್ತ-ಕುಸಿತಕ್ಕೋ ಇಲ್ಲೊಂದೆಡೆ ಹೊರಗಿನ ಮಣ್ಣ
ಲೇಪ ಕಳಚಿ, ಕೆಳಗಿನ ಮಹಾತೊರೆಗೆ ತನ್ನ ಪಾಲು ಸಲ್ಲಿಸ ತೊಡಗಿರಬೇಕು. ಎಲ್ಲ ಭೌಗೋಳಿಕ ಗಾಯಗಳನ್ನೂ ತಣಿಸುವ ಹಸಿರಹೊದಿಕೆ ಇಲ್ಲೂ ಸಾಕಷ್ಟು ಉದಾರವಾಗಿಯೇ ಗಾಯ ಮರೆಮಾಡಿತ್ತು. ಈಚೆಗೆ ಬೆತ್ತವೋ ಬಿದಿರೋ ಸೊಪ್ಪೋ ಗೆಡ್ಡೆಯೋ ಅರಸಿ ಈ ಕೊರಕಲ ಅಂಚಿನಲ್ಲಿ ಸುಳಿದ ಹಳ್ಳಿಗನಿಗೆ ಇದು ಹೊಸದೇ ಗುಹೆಯಾಗಿ ತೋರಿದ್ದು ಬಿಟ್ಟರೆ, ಹೊರತೋರಿಕೆಗೆ ಅಲ್ಲಿ ನಿಜ ಹೊಸತು ಏನೂ ಇರಲಿಲ್ಲ. ಸದಸ್ಯರು ಇಳಿದು ಸೇರುತ್ತಿದ್ದಂತೆ, ಐದಾರು ಮಾರ್ಗದರ್ಶಿಗಳು ನಮ್ಮನ್ನು ಸಣ್ಣ ಸಣ್ಣ ಗುಂಪುಗಳಲ್ಲಿ ಒಳ
ಕರೆದುಕೊಂಡು ಹೊರಟರು. 

ಮರಳುಗಲ್ಲಿನ ಗುಹಾಜಾಲದೊಳಗೆ ನಮಗೆ ಕಾಣುವ ಆವರಣ ಮತ್ತು ತುಂಡುಗಲ್ಲುಗಳು ನಿಸ್ಸಂದೇಹವಾಗಿ ನೀರಿನ ಸವಕಳಿಗೀಡಾಗಿವೆ. ಹಾಗೇ ಕೆಲವು ಋತುಗಳಲ್ಲಿ ಹಲವು ಕಾರಣಗಳಿಗೆ ವ್ಯವಸ್ಥೆ ಸ್ಥಿರತೆ ಕಳೆದುಕೊಂಡಾಗ ಸಣ್ಣಪುಟ್ಟ ಕುಸಿತ, ಹೊಸದೇ ರೂಪ ಬಂದದ್ದೂ ಇರಬಹುದು. ಕೆಲವೆಡೆಗಳಲ್ಲಿ ನೀರಿನಲ್ಲಿ ಕರಗಿಬರುವ ಲವಣಾಂಶಗಳ ಶೇಖರಣೆಯಿಂದ ಸಣ್ಣ ಪುಟ್ಟ ತೊಂಗಲುಗಳು (Stalactites) ರೂಪುಗೊಂಡದ್ದೂ ಇದೆ. ಆದರೆ ಅಂತಿಮವಾಗಿ, ನನ್ನ
ಅನುಭವಕ್ಕೆ ನಿಲುಕಿದಂತೆ, ಕ್ರೆಂಪುರಿಯ ಗುಹಾಜಾಲದ ಮುಖ್ಯ ಶಿಲ್ಪಿ ಸವಕಳಿಯಲ್ಲ. ಅದೇ ನಮ್ಮೂರಿನ ಮುರಕಲ್ಲ (ಜಂಬಿಟ್ಟಿಗೆ) ಗುಹೆಗಳು ಅಪ್ಪಟ ಜಲ ಸವಕಳಿಯ ಮೂರ್ತಿಗಳು. ಅಲ್ಲಿ ಮುರಕಲ್ಲ ಹಾಸಿನ ಮಿದು ಸೆಲೆಯಾದ ಸೇಡಿ ಅಂಶವನ್ನು ನೀರು ವರ್ಷಾನುಗಟ್ಟಳೆ ತೊಳೆದು ಗುಹಾಜಾಲಗಳನ್ನು ಸೃಷ್ಟಿಸುತ್ತದೆ. ತಂಡದ ಹೆಚ್ಚಿನ ಸದಸ್ಯರು ಅದರಲ್ಲೂ ಪ್ರಾಕೃತಿಕ ಗುಹೆಗಳಿಗೆ ಮೊದಲ ಸಲ ತೆರೆದುಕೊಳ್ಳುವವರು. ಪೂರ್ವ ಸೂಚನೆಯಂತೇ ಎಲ್ಲ ಪ್ರತ್ಯೇಕ ಟಾರ್ಚ್ ಹೊತ್ತಿದ್ದರೂ ಪ್ರತಿ ಹೆಜ್ಜೆಯನ್ನು
ಅಧೀರವಾಗಿಡುತ್ತ ಬಂಡೆ, ಮೂಲೆ, ಉಪಗುಹೆಗಳನ್ನು ಬೆಳಕೋಲಿನಲ್ಲಿ ಬೆದಕುತ್ತ, ಮೇಲೆ ನೋಡಿದ್ದು ಹೆಚ್ಚಾಗಿ ಎಡವುತ್ತ, ಹೆಜ್ಜೆ ಹುಡುಕುವ ಗಡಿಬಿಡಿಯಲ್ಲಿ ತಲೆ ಹೆಟ್ಟಿಕೊಳ್ಳುತ್ತ, ಪ್ರತಿ ಕವಲಿನಲ್ಲು ದಿಕ್ಕು ತಪ್ಪದಂತೆ ಹಾರೈಸುತ್ತ, ಗಳಿಗೆಗೊಮ್ಮೆ "ಗಾಯಿಡ್, ಗಾಯಿಡ್..." ಬೊಬ್ಬಿಡುತ್ತ ತಂಡ ಒಳ ಸಾಗಿತು. ಗುಹಾ ಪ್ರವೇಶ ಭಾಗದಲ್ಲಿ ದಿನದ ಬೆಳಕಿನಿಂದ ಒಳಗಿನ ಅಂಧಕಾರಕ್ಕೆ ಹೊಂದುವಲ್ಲಿ ಎಲ್ಲರಿಗೂ ಸ್ವಲ್ಪ ಅಭ್ಯಾಸ ಇಲ್ಲವೇ ಸಮಯ ಬೇಕಾಗುತ್ತದೆ. ಕಾಲ ಕಳೆದಂತೆ ಧೈರ್ಯ ಹೆಚ್ಚಿ ಸಣ್ಣಪುಟ್ಟ ಕಳಕು, ಸ್ವಂತೀ,
ವಿಡಿಯೋ ಸರ್ಕಸ್ಸುಗಳೂ ನಡೆಯುತ್ತಿತ್ತು. ಪ್ರಾಕೃತಿಕ ಸ್ಥಿತಿಯನ್ನು ತಪ್ಪಿಸುವ ಯಾವುದೇ ಅತಿರೇಕದ ಚಟುವಟಿಕೆ ಮಾಡದೇ ಮಾರ್ಗದರ್ಶಿಗಳನ್ನು ಅಥವಾ ಹಿಂದು ಮುಂದಿನ ಸದಸ್ಯರ ಅಂತರ ಹೆಚ್ಚದಂತೆ ನೋಡಿಕೊಂಡರು. ಕ್ರೆಂಪುರಿಯ ಗುಹಾಜಾಲದಲ್ಲಿ ಬಹುತೇಕ ನಿರಾತಂಕವಾಗಿ ನಿಂತೇ ಸಾಗಬಹುದಾದ ಒಂದು ಜಾಡಿನಲ್ಲಿ ಮಾರ್ಗದರ್ಶಿಗಳು ಸಾರ್ವಜನಿಕರನ್ನು ಒಯ್ಯುತ್ತಾರೆ. ಹೋದದ್ದೇ ಜಾಡಿನಲ್ಲಿ ಮರಳಲು ಒಟ್ಟಾರೆ ಸುಮಾರು ಎರಡು-ಮೂರು ಗಂಟೆಗಳ ಕಾಲ ಅವಶ್ಯ. ಮರಳಿದೆವು.
ಒಂದೆಡೆ ಪುಟ್ಟ ಕೊರಕಲಿಗೆ ಬಿದಿರ ಸೇತು ಇಟ್ಟಿದ್ದರು. ಒಂದೆರಡು ಕಡೆ ನೇರ ಕವಲುಗಳು, ಕಿಷ್ಕಿಂಧೆಯೋ ತೆವಳು ಜಾಡೋ ಆದಲ್ಲಿ, ಸ್ಪಷ್ಟವಾಗಿ ಬಳಸು ಜಾಡುಗಳನ್ನು ಅನುಸರಿಸಿದ್ದೂ ಇತ್ತು. ಒಂದು ಹಂತದಲ್ಲಿ ಸಾಲಿನ ಹಿಂಬಾಲಕರಿಗೆ ಮುಂಚೂಣಿಯವರು ಸುಮಾರು ಮೂವತ್ತಡಿ ಆಳದಲ್ಲಿ ಅದೂ ಅಡ್ಡ ಜಾಡಿನಲ್ಲಿ ದಾಟುತ್ತಿರುವುದನ್ನು (ಹಾಗೇ ಕೆಳಗಿನವರಿಗೆ ಮೇಲಿನವರನ್ನು) ಕಂಡಾಗ ಗುಹಾಜಾಲದ ಅಗಾಧತೆಯ ಅರಿವು ಹೆಚ್ಚು ಅನುಭವಕ್ಕೆ ಬಂದಿರಬೇಕು. 

ಒಟ್ಟಾರೆ ಕ್ರೆಂಪುರಿ ಗುಹಾಜಾಲ ಸಾರ್ವಜನಿಕಕ್ಕೆ
ತೆರೆದುಕೊಂಡು ಬಹಳ ಕಾಲವಾಗಿಲ್ಲ. ಮತ್ತೆ ಮೇಘಾಲಯ ರಾಜ್ಯ, ಮೌಸಿನ್ರಾಂ ವಲಯ, ಕಾಡಿನ ನಡುವಣ ದಾರಿ ಮತ್ತು ಗುಹೆ ತೆರೆದುಕೊಳ್ಳುವ ದುರ್ಗಮ ಕೊಳ್ಳಗಳೆಲ್ಲ ‘ಜನಪ್ರೀಯ’ತೆಯಿಂದ ಬಹು ದೂರ. ಮತ್ತೆ ಆ ವಲಯದಲ್ಲಿರುವ ಪ್ರವಾಸಿ ಸೌಕರ್ಯಗಳು ಶೂನ್ಯವೆಂದರೂ ತಪ್ಪಾಗದು. ಹಾಗಾಗಿ ಇಂಥವುಗಳೊಡನೆ (ಕೊಡೈಕೆನಾಲ್ ಗುಹಾಜಾಲ) ಹಾಸು ಹೊಕ್ಕಾಗಿರುವ ಹುಚ್ಚು ಸಾಹಸಗಳ, ಅಪಘಾತಗಳ ಕತೆ ಇಲ್ಲಿ ಕೇಳಲಿಲ್ಲ. ನಾನು ಸಾಕಷ್ಟು ಮುರಕಲ್ಲ ಗುಹಾನ್ವೇಷಣೆ ಮಾಡಿದ ಅನುಭವದಿಂದಲೋ
ತುಸು ಉಡಾಫೆಯಿಂದಲೋ ಇಬ್ಬರಿಗೊಂದೇ ಟಾರ್ಚ್ ಒಯ್ದಿದ್ದೆ. (ಅಲ್ಲದಿದ್ದರೂ ಚರವಾಣಿಯ ವ್ಯವಸ್ಥೆಯಿದೆ ಎಂಬ ಸ್ವಲ್ಪ ಭಂಡತನ ಬೇರೆ!) ಆದರೆ ರುಕ್ಮಿಣಿಯಲ್ಲಿ ಹೆಚ್ಚುವರಿ ಟಾರ್ಚ್ ಇದ್ದದ್ದು ನಮಗೆ ಉಪಕಾರವೇ ಆಯ್ತು. ಪ್ರತಿಯೊಬ್ಬರಿಗೂ ಅವರದೇ ಬೆಳಕಿನ ಆಯ್ಕೆ ಮತ್ತು ಕ್ರಮಿಸುವ ವೇಗವಿರುವುದು ತಪ್ಪಲ್ಲ. ಹಾಗಾಗಿ ಒಳಗೆ ಎಲ್ಲರೂ ಹಿಂದುಮುಂದಾದಂತೆ ನಾವೂ ಚದರಿ ಹೋಗಿದ್ದೆವು. ನಾನು ತಿಳಿದಂತೆ ಒಂದು ಹಂತದಲ್ಲಿ ಅಂದಿಗೆ ಮುಕ್ತಾಯವೆಂದು ತಿಳಿದು ಮರಳಿದೆ. ಉಳಿದೈವರು ಬಹುಶಃ
ಇನ್ನೂ ಸ್ವಲ್ಪ ಮುಂದುವರಿದು, ಹೆಚ್ಚು ವೇಳೆ ಕಳೆದು ಹೊರಬಂದರು. ಇಂಥಲ್ಲೆಲ್ಲ ಭಾವುಕ (ಭ್ರಾಮಕ?) ಮನಸ್ಸುಗಳಿಗೆ ಕಲ್ಲು ಸಾಲಿಗ್ರಾಮವಾಗಿ, ದಿಬ್ಬ ಶಿವಲಿಂಗವಾಗಿ, ನೀರು ದೇವಗಂಗೆಯೇ ಆಗಿ ತೋರುವುದು ವಿಶೇಷವಲ್ಲ. ಅದರಲ್ಲೂ ಹೆಚ್ಚಾಗಿ ತೊಂಗಲಿನ ರಚನೆಗಳಲ್ಲಿ (ಅಮರನಾಥ ಗುಹೆಯೊಳಗಿನ ಹಿಮಲಿಂಗದಂತೆ) ಲಿಂಗ ರೂಪ ಮೂಡುವುದೂ ಸಹಜವೇ ಇರುತ್ತದೆ. ಅಂಥ ಒಂದನ್ನು ಕೊನೆಯಲ್ಲಿ ತಾವು ಮುಗಿಸಿದ ಜಾಡಿನ ಕೊನೆಯಲ್ಲಿ ಕಂಡ ಧನ್ಯತೆ ಕೆಲವರದು. ಬಟ್ಟೆ ಸೇರಿದಂತೆ ಮೈ ಪೂರಾ ಮಣ್ಣುಮೆತ್ತಿದ್ದರೂ ಬಂಡೆಗೆ ಹೆಟ್ಟಿಯೋ ಉಜ್ಜಿಸಿಕೊಂಡೋ ಸಣ್ಣ ಪುಟ್ಟ ಗಾಯಗಳಾಗಿದ್ದರೂ ಡೊಂಕಿ, ತೆವಳಿ, ಎಡವಿ ಹಲ ತರದ ಬಸವಳಿಕೆಯಿದ್ದರೂ ಕ್ರೆಂಪುರಿ ಗುಹಾಜಾಲದ ಆಪ್ತ ಪರಿಚಯ ಲಭಿಸಿದ ಧನ್ಯತೆ ಸಾರ್ವತ್ರಿಕವಾಗಿತ್ತು. 

ಗುಹೆಯ ಒಳಗೆಲ್ಲೋ ಇದ್ದ ಸಣ್ಣ ಆದರೆ ಖಾಯಂ ನೀರಸ್ರೋತವೊಂದಕ್ಕೆ ಕೊಳವೆ ಹಾಕಿ ಗುಹಾಮುಖದ ತುಸು ಆಚೆ ಸಾರ್ವಜನಿಕ ಉಪಯೋಗಕ್ಕೆ ಮುಕ್ತವಾಗಿಸಿದ್ದರು. ಸಾಧ್ಯವಾದಷ್ಟು ಮಣ್ಣು ತೊಳೆದು, ನೀರು ಕುಡಿದು ಸುಧಾರಿಸಿಕೊಂಡ ಮೇಲೆ ಅಪರಾಹ್ನ ಎರಡು ಗಂಟೆ ಕಳೆದದ್ದರ ಅರಿವಾಯ್ತು. ಸಹಜವಾಗಿ ಬುತ್ತಿಯೂಟ ಮುಗಿಸಿಕೊಂಡೆವು. ಇತರ ಎಷ್ಟೋ ಸದಸ್ಯರು ಇನ್ನೂ ನಿಧಾನಕ್ಕೆ ಒಬ್ಬೊಬ್ಬರಾಗಿ ಹೊರಬೀಳುತ್ತಲೇ ಇದ್ದರು. ಅಲ್ಲಿ ಎಲ್ಲರೂ ಒಟ್ಟಾದರೆ ಜಾಗವೂ ಸಾಲದಾಗುತ್ತಿತ್ತು. ಮತ್ತೆ
ಕಡಿದಾದ ಗೋಡೆ ಜಾಡನ್ನು ಏರಲು ನಮ್ಮದೇ ಸಮಬೇಕೆಂದುಕೊಳ್ಳುತ್ತ ನಾವು ದಾರಿಯತ್ತ ಪಾದ ಬೆಳೆಸಿದೆವು, ಬಸ್ಸು ಸೇರಿಕೊಂಡೆವು. ನಮ್ಮ ಬಳಗ (ಆರು ಮಂದಿ) ಸುಮಾರು ಎರಡೂವರೆ ಗಂಟೆಯ ಗುಹಾ ಅವಧಿ ಬಳಸಿತ್ತು. ಆದರೆ ತಂಡದ ಕೊನೆಯ ಸದಸ್ಯನೂ ಹೊರಬಿದ್ದು, ಊಟ ಮುಗಿಸಿ, ಗೋಡೆ ಏರಿ ಬಸ್ಸು ಸೇರುವಾಗ, ದಿನಮಣಿ ಅರ್ಥಾತ್ ಸೂರ್ಯ ಪಡುಮುಖಿಯಾಗಿ ಬಹಳ ಹೊತ್ತಾಗಿತ್ತು! ಪೂರ್ಣ ಕತ್ತಲಾಗುವ ಮುನ್ನವೆಂಬ ಆತುರದಲ್ಲಿ ಬಸ್ಸು ಡುರುಕಿ
ಹೊಡೆದು ಹೊಸದೇ ‘ಞರಕ್ ಞರಕ್’ ನೃತ್ಯಮೇಳದಲ್ಲಿ ಮುಂದುವರಿಯಿತು. 

ಮೌಜಿಬುಯಿನ್, ಲೈಟ್ರಿಂಗ್ಲ್ಯು - ನಾಲಿಗೆ ತಿರುಚಕವಲ್ಲ, ಸ್ಥಳನಾಮಗಳು 

ದಿನಮಣಿ ಕಾಳಯ್ಯನ ಮನೆ ಸೇರುವ ಮೊದಲು, ಅಂದರೆ ದಿನಾಂತ್ಯದ ಕಾರ್ಯಕ್ರಮಕ್ಕಾಗಿ, ನಮ್ಮ ಕುಣಿಪೆ ಬಸ್ಸಿಗೊಂದೆಡೆ ನಿಲುಗಡೆ ಬಂತು. ಮೌಜಿಬುಯಿನ್ ಎಂಬ
ಸ್ವಲ್ಪ ನಾಗರಿಕ ವಲಯ. ದಾರಿಯ ಬಲ ಕಿರುಕೊಳ್ಳದಲ್ಲೊಂದು ಭಿನ್ನ ಗುಹೆ ಇತ್ತು. ಅದರಂಗಳಕ್ಕೆ ವಾಹನಗಳನ್ನಿಳಿಸಲು ಪ್ರತ್ಯೇಕ ದಾರಿಯಿದ್ದರೂ ನಾವು ಮೆಟ್ಟಿಲ ಸರಣಿಯನ್ನು ಬಳಸಿ ಮುಂದುವರಿದೆವು. ಎದುರು ತಗ್ಗಿನಲ್ಲಿ, ತಲೆಯ ಮೇಲೆ ಕುರುಚಲು ಕಾಡು ಹೊತ್ತ ಭಾರೀ ಬಂಡೆ ಕಾಣಿಸಿತು. ಅದರ ವಿಸ್ತಾರ ತಳಭಾಗದ ಒಂದಷ್ಟು ಬಂಡೆ ತುಣುಕು ಕಳಚಿ ಹೋಗಿ ಒಮ್ಮೆಗೆ ದೊಡ್ಡ ಬಾಯಿಯ ಗುಹೆಯಂತೇ ತೋರುತ್ತಿತ್ತು. ಹೊರನೋಟದಲ್ಲಿ ಇದು ನಮ್ಮ ಕಾರ್ಕಳದ ಪರ್ಪಲೆ ಗುಡ್ಡೆಯ ಗುಹೆಯನ್ನು ಹೋಲುತ್ತದೆ.
ನನ್ನ ಪರ್ವತಾರೋಹಣ ತಿಳುವಳಿಕೆ ಇಂಥವನ್ನು ಬಂಡೆಯ ಮುಂಚಾಚಿಕೆ (Overhang) ಎಂದಷ್ಟೇ ಗುರುತಿಸುತ್ತದೆ. ಅಂಥಲ್ಲಿ ಒಳಭಾಗದ ನೆಲದಲ್ಲಿ ಸಣ್ಣ ಪುಟ್ಟ ಗುಹಾದ್ವಾರಗಳು (ಕಾರ್ಕಳದಲ್ಲಿವೆ) ಕಾಣಿಸಿದರೂ ಅವು ಬಹುತೇಕ ಮಳೆನೀರ ಚರಂಡಿಗಳೇ ಹೊರತು ಗುಹಾಜಾಲಕ್ಕೆ ದ್ವಾರವಾಗಬೇಕಿಲ್ಲ. 

ಮೌಜಿಬುಯಿನ್ ಮುಂಚಾಚಿಕೆಯ ಉದ್ದಕ್ಕೆ ಭಾರೀ ಬಿರುಕಿದೆ. ಅದರಲ್ಲಿ ನೆತ್ತಿಯ ಮಣ್ಣು, ಕಾಡು ಹಿಡಿದಿಟ್ಟ ನೀರ ಮೊತ್ತ ನುಸುಳಿ, ವರ್ಷಪೂರ್ತಿ ಸಣ್ಣಧಾರೆಯೋ ಹನಿಮಾಲೆಯೋ ಆಗಿ ನೂರಾರು ವರ್ಷಗಳಿಂದ ಸೋರುತ್ತಲೇ ಇದೆ. ಆ
ನೀರಿನಲ್ಲಿ ಕರಗಿದ ಲವಣಾಂಶಗಳು ಬಿರುಕಿನುದ್ದಕ್ಕೆ ಅನಿಯತವಾಗಿ ಶೇಖರಣೆಗೊಂಡು, ಸಣ್ಣ ತೋರಣ ಮಾಲೆಯಂತೇ ರೂಪವಡೆದಿದೆ. ಹಾಗೆ ಅಲ್ಲಲ್ಲೇ ನೆಲಕ್ಕೆ ಬಿದ್ದ ಸಣ್ಣ ದಾರೆಗಳ ನೆಲದ ರಚನೆ, ಅಡ್ಡಾಡುವವರ ‘ಕಾಲಕ್ರೀಡೆ’ಯಲ್ಲಿ ಒರೆಸಿಹೋಗಿರಬಹುದು. ಆದರೆ ಬಂಡೆಮಾಡಿನ ಇಳಿಜಾರಿನ ಕೊನೆಯದ್ದು ಹೆಚ್ಚು ನಿರಂತರವಾದ್ದಕ್ಕೋ ರಕ್ಷಣೆ ಒದಗಿದ್ದಕ್ಕೋ ಇಂದು ನೆಲದ ಸಪಾಟು ಬಂಡೆಯಲ್ಲಿ ಗಟ್ಟಿಗೊಳ್ಳುತ್ತಾ ಪುಟ್ಟ ಶಿವಲಿಂಗದ ರೂಪವನ್ನೇ ಮೂಡಿಸಿದೆ. ಈ ‘ತೊಂಗಲು’ ವಿಜ್ಞಾನಕ್ಕೇನೂ
ಹೊಸದಲ್ಲ. (ಸುರಿಯುವಂತದ್ದು Stalactite, ತಳದಲ್ಲಿ ಸ್ಥಿರಗೊಂಡದ್ದು Stalagmite.) ನಾನು ಕಂಡಂತೆ, ವಿಶಾಖಪಟ್ಟಣ ಹಾಗೂ ಅಂಡಮಾನಿನ ಗುಹೆಗಳಲ್ಲಿ ಇಂಥಾ ಅಸಂಖ್ಯ ರಚನೆಗಳಿಗೆ ರೂಪ ಸಾದೃಶನಾಮವಾಗಿ ಶಿವಲಿಂಗ, ಋಷಿಯ ಗಡ್ಡ, ದ್ರಾಕ್ಷೀಗೊಂಚಲು ಎಂದು ಹತ್ತೆಂಟು ಬಗೆಯಲ್ಲಿ ಕರೆಯುತ್ತಾರೆ. ಅಂಥ ಗುರುತು, ಸಾಹಿತ್ಯ, ಭಕ್ತಿಗಳ ಸೋಪಾನದಲ್ಲಿ ಇಳಿಯುವಾಗ
ಬಹುಸಂಖ್ಯಾತರು ರಮ್ಯವನ್ನೇ ನೆಚ್ಚುತ್ತಾರೆ. ಸಹಜವಾಗಿ ಅಂಥವರು ಮೌಜಿಬುಯಿನ್ನಿನ ‘ಸಂಗ್ರಹ’ವನ್ನು ಲಿಂಗವಾಗಿಯೂ ‘ಸೋರಿಕೆ’ಯನ್ನು ನಿತ್ಯಾಭಿಷೇಕಿಸುವ ಗಂಗೆಯಾಗಿಯೇ ಕಾಣುತ್ತಾರೆ. ಹಾಗಾಗಿ ಪ್ರವೇಶದ್ವಾರದಲ್ಲೇ ಬೋರ್ಡುಗಳು, "ತೊಂಗಲುಗಳಿಗೆ ಯಾವುದೇ ರೀತಿಯ ಹಾನಿಯಾಗುವ ಅಭಿಷೇಕ (ಮುಖ್ಯವಾಗಿ ಕ್ಷೀರ!), ಆರಾಧನಾ ಚಟುವಟಿಕೆಗಳನ್ನು ಹೇರತಕ್ಕದ್ದಲ್ಲ" (ಅಲ್ಲಿಂದ ತೆಗೆಯಲೂ ಬಾರದು) ಎಂದು ಸ್ಪಷ್ಟವಾಗಿ ಸಾರಿದ್ದವು. ನೂರಡಿ ದೂರದಿಂದಲೇ ನಮ್ಮ ತಂಡದ ಹೆಚ್ಚಿನವರ ಜಯಕಾರಗಳು
ಮುಗಿಲು ಮುಟ್ಟಿದ್ದವು. ಲಿಂಗಾಕೃತಿಯ ತೊಂಗಲು ದಿಬ್ಬದ ಸುತ್ತಣ ಬೇಲಿಯನ್ನಾವರಿಸಿ ಕೈ ಮುಗಿದು ನಿಂತು, ಉಚ್ಛಕಂಠದ ಸ್ತೋತ್ರ, ಭಜನೆ ಧಾರಾಳ ನಡೆಸಿದರು. ಕೊನೆಯಲ್ಲಿ ಕೆಲವರಾದರೂ ಕದ್ದುಮುಚ್ಚಿ ಆ ನೆಲದ ಮಣ್ಣನ್ನು (ಮೃತ್ತಿಕಾಪ್ರಸಾದ) ಲಲಾಟಶೋಭೆಗೂ ನೀರಹನಿಯನ್ನು ತೀರ್ಥತೃಷೆಗೂ ಬಳಸಿಕೊಂಡಿದ್ದರೆ ಆಶ್ಚರ್ಯವೇನೂ ಇಲ್ಲ. ಅಷ್ಟು ಉದ್ದಕ್ಕೆ ನಾವಂತೂ ಅಲ್ಲಿರಲಿಲ್ಲ. 

ಮೌಜಿಬುಯಿನ್ನಿನ ‘ಲಿಂಗ’ದ ಹಿಂದೆ ನೆಲ ಇಳಿಜಾರಾಗಿತ್ತು. ಅದನ್ನು ವಿವರಗಳಲ್ಲಿ ಓಡಾಡಿ ನೋಡುವಷ್ಟು ಬೆಳಕೂ
ಸಮಯವೂ ನಮ್ಮಲ್ಲುಳಿದಿರಲಿಲ್ಲ. ಮೊದಲೇ ದಾರಿಯ ಅರಿವೇನೂ ಗಮನಿಸದಂತ ಗದ್ದಲ, ಗಡಬಡಗಳಲ್ಲಿ ಬಂದವರು ಮತ್ತೆ ಶುದ್ಧ ಕತ್ತಲಲ್ಲಿ ರಾತ್ರಿಯ ಶಿಬಿರತಾಣ - ಲೈಟ್ರಿಂಗ್ಯು, ಹಳ್ಳಿಯನ್ನು ಸೇರಿದೆವು. ಗುಡ್ಡೆ ನೆತ್ತಿಯ ಬಟಾಬಯಲೆಂಬಂತಲ್ಲಿ ಅನಾಥ ನೋಟ ಕೊಡುವ ಸನ್ನೀಫೀಲ್ಡ್ ಹಿರಿಯ ಪ್ರಾಥಮಿಕ ಶಾಲೆ ನಿಂತಿತ್ತು. ಅದರ ತೀರಾ ಸರಳ ಮತ್ತು ರಚನೆಯ ಪ್ರಾಥಮಿಕ ಹಂತದಲ್ಲೇ ಇದ್ದ ನಾಲ್ಕೈದು ಖಾಲೀ ಖೋಲಿಗಳನ್ನೇ ನಮ್ಮ ತಂಡದ ಸ್ತ್ರೀ ಪುರುಷರಿಗೆ ಪ್ರತ್ಯೇಕವಾಗಿ ಹಂಚಿಕೊಟ್ಟಿದ್ದರು.
ಸೂರ್ಯನಿಳಿದದ್ದೇ ಬದಲಾದ ಹವೆಗೆ ಸರಿಯಾಗಿ ನಾವೆಲ್ಲ ಯುಕ್ತ ಕವಚಧಾರಿಗಳೇ ಆಗಿದ್ದರೂ ಬಯಲಿನಲ್ಲಿ ಬಸ್ಸಿಳಿದಾಗ ಒಮ್ಮೆ ನಡುಗಿಹೋಗಿದ್ದೆವು. ಕೋಣೆಗಳೊಳಗೆ ಕೋಟಗಟ್ಟಿದ ನೆಲಕ್ಕೆ ಸಿಲ್ಪಾಲಿನ್ ಶೀಟ್ ಹಾಸಿ, ಲೆಕ್ಕ ಹಾಕಿದಂತೆ ಒತ್ತೊತ್ತಾಗಿ ಪ್ಲ್ಯಾಸ್ಟಿಕ್ ಚಾಪೆ ಮತ್ತು (ಪುಣ್ಯಕ್ಕೆ!) ಒಂದೊಂದು ದಪ್ಪನ್ನ ಮಲಗುಚೀಲ ಒದಗಿಸಿದ್ದರು. ಮುಖ್ಯ ಕಟ್ಟಡದ ಹಿತ್ತಲಿನ ಇಳಿಜಾರಿನಲ್ಲಿ ಹಾಕಿದ್ದ ಸಣ್ಣ ಚಪ್ಪರ ನಮ್ಮ ಪಾಕಶಾಲೆ, ದೊಡ್ಡ ಚಪ್ಪರ ಭೋಜನಶಾಲೆ. ತತ್ಕಾಲೀನ ವ್ಯವಸ್ಥೆಯ ನಲ್ಲಿಗೆ ಮುಖ ತೊಳೆಯುವ
ದುರಾಲೋಚನೆಯಿಂದ ಕೈ ಒಡ್ಡಿದಾಗ ಸೂಜಿ ಸರಣಿಯೇ ಬಿದ್ದಂತಾಗಿ ಅಷ್ಟಕ್ಕೇ ಮುಗಿಸಿದ್ದೆ. ಅಲ್ಲೆ ಸ್ವಲ್ಪ ಆಚೆ ಖಾಯಂ ನೆಲೆಯ ಕಕ್ಕೂಸುಗಳೇನೋ ಇದ್ದವು. ಆದರೆ ಶಿಲ್ಲಾಂಗ್ ಸಮಸ್ಯೆ ಉಲ್ಬಣಿಸಿದಂತೆ, ಇಲ್ಲಿ ಎಲ್ಲರಿಗಾಗಿ ಇದ್ದವು ಕೇವಲ ಎರಡೋ ಮೂರೋ! ಬಿಸಿನೀರು, ಸ್ನಾನದ ಮನೆ, ಅಪರಾತ್ರಿಯ ದೇಹಬಾಧೆಯ ತುರ್ತು ಎಲ್ಲಕ್ಕೂ ತಾರಕ ರಕ್ಷೆ - ಶೀತಲ ನೀರಿನ ಅವೇ ಸೀಮಿತ ಕಕ್ಕೂಸ್! ಸಂಜೆಯ ಚಾಶಾಸ್ತ್ರ, ಊಟದ ಹರಿಕೆಗಳೆಲ್ಲ ಬಿಸಿಯಾದದೆನ್ನುವುದಕ್ಕೇ ಧಾರಾಳ ಪುರಸ್ಕರಿಸಿದೆವು. ಹೊರಗೆ ಕುಡಿಯಲು ಪ್ರತ್ಯೇಕ
ನಲ್ಲಿಯುಕ್ತ ಬಿಸಿನೀರಿನ ಹಂಡೆ ಇಟ್ಟಿದ್ದರು. ಚಳಿಪ್ರದೇಶಗಳಲ್ಲಿ ಸಹಜವಾಗಿ ನೀರು ಕುಡಿಯುವುದು ಕಡಿಮೆಯಾಗಿ ನಿರ್ಜಲೀಕರಣ ಸಮಸ್ಯೆ ಮೂಡುತ್ತದೆ. ಹಾಗಾಗದಂತೆ ಧಾರಾಳ ಬಿಸಿ ನೀರು ಕುಡಿಯುವುದರೊಡನೆ ಗುಟ್ಟಾಗಿ ಎಲ್ಲರೂ ಕೈ ತೊಳೆದದ್ದೂ (ಕೆಲವರು ಹಲ್ಲುಜ್ಜಿ ಮುಖ ತೊಳೆದದ್ದೂ) ಇದೇ ಔನ್ಸ್ ಗ್ಲಾಸಿನಲ್ಲಿ ಹಿಡಿಯುತ್ತಿದ್ದ ಬಿಸಿನೀರಿನಲ್ಲಿ! (ಇಲ್ಲಿ ಎಲ್ಲರೂ ಸಹಜವಾಗಿ ಜಲಸಂರಕ್ಷಕರೇ!) 

ರಾತ್ರಿ ಹೇಗೆ ಕಳೆಯಿತು, ಪ್ರಾತಃಕರ್ಮಗಳ ಗತಿ ಏನಾಯ್ತೆಂದೆಲ್ಲ ನಿಮ್ಮ ತಲೆ ತಿನ್ನುವುದಿಲ್ಲ. ಅವೆಲ್ಲ ಕಳೆದು ಅರುಣರಾಗ ಹಾಗೂ ಸೂರ್ಯೋದಲ್ಲೇ ನಾವೊಂದಷ್ಟು ಸುತ್ತ ಮುತ್ತಣ ಗಲ್ಲಿ, ಹಳ್ಳಿಗಳಲ್ಲಿ ಕಾಲಾಡಿಸಿ ದೇಹ ಬಿಸುಪೇರಿಸಿಕೊಂಡೆವು. ಸರಕಾರ ನಮ್ಮಲ್ಲಿನಂತೇ ಅನಗತ್ಯವಾಗಿ, ಇನ್ನೊಂದು ಕೈ ಹೆಚ್ಚೇ ಕಳಪೆಯಾಗಿ ಕಾಂಕ್ರೀಟ್ ರಸ್ತೆಗಳನ್ನೂ ಸಾರ್ವಜನಿಕ ಕಟ್ಟಡಗಳನ್ನೂ ಮಾಡಿದ್ದು ಕಂಡೆವು. ಜನರಾದರೂ ಹರಕು ಜೋಪಡಿ,
ಶೀಟಿನ ಮನೆಗಳಲ್ಲಿದ್ದರೂ ಅಂಗಳದಲ್ಲಿ ಎರಡೆರಡು ಕಾರು ನಿಲ್ಲಿಸಿಕೊಂಡ ವಿಚಿತ್ರ ದರ್ಶನ ಕೊಟ್ಟರು. ಸಿಕ್ಕ ಕೆಲವೇ ಮಕ್ಕಳು ಮತ್ತು ಜನ ಮಾತ್ರ ಬಡತನ ಹೊದ್ದಂತ್ತಿದ್ದರೂ ಅಪ್ಪಟ ಸ್ನೇಹಜೀವಿಗಳು. ಬೆಳಗ್ಗಿನ ತಿಂಡಿ ಮುಗಿಸಿ, ಮಧ್ಯಾಹ್ನದ ಬುತ್ತಿ ಕಟ್ಟಿ, ಮತ್ತೆ ಮುಖ್ಯ ಹೊರೆಯನ್ನು ಸಾಗಣೆಯ ವ್ಯಾನಿಗೇರಿಸಿ ದಿನದ ಕಲಾಪ ಪೀಠಿಕೆಗೆ ಹಾಜರಾದೆವು. ಶಾಲೆಯ ಮಹಡಿಗೇರುವ ಅಪೂರ್ಣ ಮೆಟ್ಟಿಲ ಕಟ್ಟೆ ಏರಿ ಮಾರ್ಗದರ್ಶಿಗಳು, ಹರಕು ಮುರುಕು ಹಿಂದಿ ಮಿಶ್ರಿತ ಇಂಗ್ಲಿಷಿನಲ್ಲಿ "ಇಂದು ಸುಮಾರು ಹದಿನೈದು ಕಿಮೀ
ಚಾರಣ....." ಎಂದು ಸೂಚನೆಗಳಿಗಿಳಿದರು. ಬರಿಯ ಮಾತೇಕೆ, ಅನುಭವಿಸಿದ ವಿವರಗಳನ್ನೇ ಮುಂದಿನ ಕಂತಿನಲ್ಲಿ ಕೊಡುತ್ತೇನೆ, ಕಾದಿರಿ. 

(ಮುಂದುವರಿಯಲಿದೆ)

5 comments:

  1. ಕ್ರಮವಾಗಿ ಓದುವ ಪ್ರಕ್ರಿಯೆ ಆರಂಭವಾಯಿತು...

    ReplyDelete
  2. After a long time I am reading again your pictorial narration. Engulfing EXPERIENCE.

    ReplyDelete
  3. ಪದ್ಮಕುಮಾರಿಯವರು ಇದಕ್ಕೆ ಫೇಸ್ ಬುಕ್ಕಿನಲ್ಲಿ ಪ್ರತಿಕ್ರಿಯಿಸಿದ್ದು:
    ಚಿರ್ರಾಪುಂಜಿ ಸ್ಥಾನ ಪಲ್ಲಟಗೊಂಡು ಮೌನ್ಶಿರಾಂ ಪ್ರಥಮ ಸ್ಥಾನಕ್ಕೆ ಬಡ್ತಿ ಪಡೆದಾಗ ಹೆಸರು ನೆನಪಿಡಲು ಉರು ಹೊಡೆಯುತ್ತಿದ್ದೆವು. ಕಷ್ಟಪಟ್ಟು ಗುಹೆಯನ್ನಾದರೂ ಹೊಕ್ಕಬಹುದು. ಈ ಹೆಸರುಗಳನ್ನು ಹೇಗೆ ನೆನಪಿಡುವುದು?

    ಕ್ಷೀರಾಭಿಷೇಕ, ಮೃತ್ತಿಕಾ ಪ್ರಸಾದದ ಹಂಗಿಲ್ಲದೆ, ಸೂಚನಾ ಫಲಕದ ಅವಶ್ಯಕತೆಯೂ ಇರದಿದ್ದ, ನಾನು ಅಮೆರಿಕದಲ್ಲಿ ಕಂಡ ಸಹಜ ಗುಹೆಯ ಒಳನೋಟ ಮತ್ತೊಮ್ಮೆ ಕಣ್ಣೆದುರಿಗೆ ಬಂತು. ಎಷ್ಟೇ ಹೋಲಿಸಬಾರದೆಂದರೂ ಸಾಧ್ಯವಾಗಲಿಲ್ಲ. ಸಹಜವಾದದ್ದನ್ನು ಹಾಗೇ ಉಳಿಸಿಕೊಂಡು ಕಾಪಿಟ್ಟುಕೊಳ್ಳುವ ಬದ್ಧತೆ ನಮಗಿನ್ನೂ ರೂಢಿ ಯಾಗಬೇಕು. ನಮಗೆ ಅಲ್ಲಿ ಗೈಡ್ ಆಗಿ ಬಂದಿದ್ದವ ಕಾಲೇಜು ಹುಡುಗ, ಪಾರ್ಟ್ ಟೈಮ್ ಕೆಲಸ. ಶಿಸ್ತಾಗಿ ಎಲ್ಲವನ್ನೂ ವಿವರಿಸಿದ ನಂತರವೂ ಪ್ರಶ್ನೆಗಳನ್ನು ಕೇಳಲು ಉತ್ತೇಜಿಸಿದ್ದು ನೆನಪಾಯಿತು.

    ಚಂದ್ರಕಾಣಿ ಪಾಸ್ ಚಾರಣದ ಕೊನೆಯ ದಿನ ಬೆಳಗಿನ ಜಾವ ಮೂರು ಗಂಟೆಗೆ ನಮ್ಮನ್ನು ಎಬ್ಬಿಸಿದ್ದರು. ಹದಿಮೂರು ಸಾವಿರ ಅಡಿ ಎತ್ತರದದಲ್ಲಿ ನಮ್ಮ ಪ್ರಾತಃಕರ್ಮ ತೀರಿಸಿಕೊಳ್ಳಲು ಬಯಲು ಇತ್ತು. ಆ ಚಳಿಗೆ ಎಲ್ಲಾ ಫ್ರೀಜ್ ಆಗಿ ಕೆಲಸ ಆಗಲಿಲ್ಲ. ಹಾಗಾಗಿ ನೀವಿದ್ದ ವಾತಾವರಣಕ್ಕೆ ಎರಡೇ ಕಕ್ಕೂಸ್ ಸಾಕಷ್ಟಾಯಿತು ಎನಿಸಲಿಲ್ಲವೇ :-)

    ReplyDelete
  4. I don't have any other reaction to this trip and narration: except : JEALOUSY!!!

    ReplyDelete
  5. Sorry, I forgot to enter my name in the above comment, I am Devu Hanehalli

    ReplyDelete