05 November 2019

ಅದ್ವಿತೀಯ ದಿನಗಳ ಚಿತ್ರಣ

(ನೀನಾಸಂ ಕಥನ ಮಾಲಿಕೆ ೩) 


ರಾಕ್ಷಸ ತಂಗಡಿ 

ಮೊದಲೇ ಹೇಳಿದಂತೆ, ಎರಡನೇ ದಿನದ ಮೊದಲ ಕಲಾಪ - ಹಿಂದಿನ ಸಂಜೆ ನೋಡಿದ ನಾಟಕ - ರಾಕ್ಷಸ-ತಂಗಡಿಯ ವಿಮರ್ಶೆ, ಜಶವಂತ ಜಾಧವರ ನಿರ್ವಹಣೆಯಲ್ಲಿ ನಡೆಯಿತು. ಅವರು ಪ್ರಯೋಗದ ಕುರಿತು ಪೀಠಿಕೆ ಕೊಡಲಿಲ್ಲ, ಹೀಗೊಂದು ಸಣ್ಣ ಸೂಚನೆಯನ್ನಷ್ಟೇ ಕೊಟ್ಟರು. ಔಪಚಾರಿಕ ಅಭಿನಂದನೆ, ಹೊಗಳಿಕೆಗಳಲ್ಲಿ ತೇಲಿಹೋಗದೆ, ನೇರ ನಾಟಕದ ಕುರಿತ ನಿಮ್ಮ ಅಭಿಪ್ರಾಯವನ್ನಷ್ಟೇ ಕೊಡಿ. ಚರ್ಚೆಗೆ ಬಂದಲ್ಲಿ ವಿವರಣೆ ಕೊಡಿ. ಮೊದಲ ಅವಕಾಶಗಳು ಕಿರಿಯರವು, ಮುಂದುವರಿದಂತೆ ಹಿರಿಯರೂ ಮುಕ್ತ ಚರ್ಚೆಯಲ್ಲಿ
ಪಾಲ್ಗೊಳ್ಳುತ್ತಾರೆ. ರಾಕ್ಷಸ ತಂಗಡಿಯ ನಾಟಕಕಾರ ಗಿರೀಶ್ ಕಾರ್ನಾಡ್ ಬದುಕಿಲ್ಲ. ಉಳಿದಂತೆ, ನೀನಾಸಂ ಪರಂಪರೆಯಂತೆ, ನಿರ್ದೇಶಕ (ಬಿ. ಆರ್ ವೆಂಕಟ್ರಮಣ ಐತಾಳ) ಹಾಗೂ ತಂಡದ ಯಾರಿಂದಲೂ ‘ಉತ್ತರ’ವನ್ನು ನಿರೀಕ್ಷಿಸಬೇಡಿ. 

ರಾಕ್ಷಸ ತಂಗಡಿ ಇದೇ ಸರ್ವಪ್ರಥಮವಾಗಿ ರಂಗಕ್ಕೇರುತ್ತಿದೆ ಎಂದೊಂದು ಮಾತು ಬಂದಿತ್ತು - ಅದು ತಪ್ಪು. ನಾವು ತಿಂಗಳ ಹಿಂದೆಯೇ, ಉಡುಪಿ ನಿರ್ಮಾಣದಲ್ಲಿ ಇದನ್ನು ಮಂಗಳೂರಿನಲ್ಲೇ ನೋಡಿದ್ದೆವು. ಶಿಬಿರದಲ್ಲಿ ಮುಖ್ಯವಾಗಿ, ಇದು ಗಿರೀಶ ಕಾರ್ನಾಡರು ವಯೋಸಹಜವಾದ ದೌರ್ಬಲ್ಯಗಳ ಕಾಲದಲ್ಲಿ ಬರೆದ (ಕೊನೆಯದ್ದೂ ಹೌದು) ನಾಟಕವಾದ್ದರಿಂದ ತುಂಬ ಜಾಳಾಗಿದೆ. ಐತಿಹಾಸಿಕವಾಗಿ ವಿಜಯನಗರ ಸಾಮ್ರಾಜ್ಯದ ಅವನತಿ ಸಣ್ಣ ಸಂಚುಗಳ ಕೂಟ, ದೊಡ್ಡ ನಾಟಕೀಯ ರೂಪದ್ದಲ್ಲ. ಅಂಥದ್ದನ್ನು ಪ್ರಯೋಗಿಸುವಲ್ಲಿ ಪೂರ್ಣ ಪಠ್ಯಾನುಸರಣೆ ಮಾಡಿದ್ದು ಸರಿಯಾಗಿಲ್ಲ ಎಂಬರ್ಥದ ಮಾತುಗಳು ಬಂದವು. ನಾನು ಪಠ್ಯ ಓದಿಲ್ಲ. ನಾಟಕೀಯತೆಗಿಂತಲೂ ಐತಿಹಾಸಿಕ ಸ್ಪಷ್ಟತೆಗೆ ಒತ್ತುಕೊಡುವ ಉದ್ದುದ್ದ ಸಂಭಾಷಣೆಗಳು ಹಲವು ಪ್ರೇಕ್ಷಕರನ್ನು ಕಾಡಿತ್ತು ಮತ್ತು ಅದನ್ನು ಸಂಗ್ರಹಿಸಬಹುದಿತ್ತು ಎಂಬ ಮಾತುಗಳೂ ಬಂದವು. ಪ್ರದರ್ಶನವನ್ನು ಸ್ವಾರಸ್ಯಕರವಾಗಿಸಲು ಪಠ್ಯದಲ್ಲಿಲ್ಲದ ಉರ್ದು ಹಾಡುಗಳು, ನೇರ ರಂಗ ಸನ್ನಿವೇಶಗಳನ್ನು ಮುಟ್ಟುವುದಿಲ್ಲ. ಮತ್ತು ಶುದ್ಧ ಕನ್ನಡ ಪ್ರೇಕ್ಷಕನಿಗೆ ಭಾಷಾ ಔಚಿತ್ಯ ಮತ್ತು ಅರ್ಥ ಸಂವಹನತೆಯ ಕಟಿಪಿಟಿಗಳನ್ನೂ ಉಂಟುಮಾಡಿದ್ದವು. ಹಾಗಾಗಿ ಅವು ಅಸಂಗತ ಸೇರ್ಪಡೆಯಂತೆ, ಕೇವಲ ರಂಜನೆಗಾಗಿ ಅಳವಡಿಸಿದ ತಂತ್ರದಂತೆಯೂ ಕೆಲವರಿಗೆ ಕಂಡದ್ದಿದೆ. ಆದರೆ ಅನುಭವಿಗಳು ತುಸು ಭಿನ್ನ ನಿಲುವನ್ನು ತಾಳಿದರು. 

"ಕಾರ್ನಾಡರ ಸಮಗ್ರ ಕೃತಿಗಳ ಲೆಕ್ಕ ತೆಗೆದರೆ ಇದು ಅತ್ಯಂತ ದುರ್ಬಲ ರಚನೆ", ಎನ್ನುವುದನ್ನು ಹಿರಿಯರು ಅಲ್ಲಗಳೆಯಲಿಲ್ಲ. ಆದರೆ ಹೆಚ್ಚಿನೆಲ್ಲ ಹಾಡುಗಳು ಈ ಕಥಾನಕದ ಪ್ರಧಾನ ಪಾತ್ರದ ಭಾವಾವೇಶವನ್ನೇ ಮುಂದುವರಿಸಿದ ರಚನೆಗಳು ಎನ್ನುವಲ್ಲಿ ಸಮರ್ಥನೀಯವೇ ಇವೆ. ಯಾಕೆಂದರೆ ಕವಿ - ನಾಟಕದ ಪ್ರಮುಖ ಪಾತ್ರದ ಮೊಮ್ಮಗ, ಅಂದರೆ ಹೆಚ್ಚುಕಮ್ಮಿ ಅದೇ ಐತಿಹಾಸಿಕ ಕಾಲದವ. ಆತನಿಗೆ ಸಹಜವಾದ ಮತ್ತು ಅಂದಿನ ರಾಜಭಾಷೆಯೂ ಆದ ಉರ್ದುವಿನಲ್ಲಿದ್ದು, ಸುಂದರ ಕಾವ್ಯಗುಣಗಳೂ ಉಳ್ಳವುಗಳು. ಅರ್ಥ ಸಂವಹನತೆಗಾಗಿ ಭಿನ್ನ ತಂತ್ರಗಳನ್ನು ಸೇರಿಸುವುದು ಸಾಧ್ಯ ಎಂಬ ಅಭಿಪ್ರಾಯ ಮೂಡಿತು. ಇತಿಹಾಸ ಹೇಳದ, ವರ್ತಮಾನ ಹೇರುವ ಕೋಮು ಸಂಕೇತಗಳ (ಹಿಂದು-ಮುಸ್ಲಿಂ) ಮತ್ತು ಸೂಚನೆಗಳ (ತೌಳವ ಹಿರಿಮೆ) ಬಗ್ಗೆಯೂ ಚರ್ಚೆ ಸ್ವಾರಸ್ಯಕರವಾಗಿ ಬೆಳೆಯಿತು. ಅದು ನಿಗದಿತ ಚಾ ವಿರಾಮಕ್ಕೆ ತುಸು ಕಾಲಾತಿಕ್ರಮಣವನ್ನೇ ಮಾಡಿತ್ತು. 

ತಿರುಗಾಟ ತಂಡದ ನಟ ಮತ್ತು ತಾಂತ್ರಿಕ ವರ್ಗಕ್ಕೆ ಸಂಜೆಯ ಎರಡನೇ ನಾಟಕಕ್ಕೆ ಸಜ್ಜುಗೊಳ್ಳಬೇಕಿತ್ತು. ಆದರೆ ಅದನ್ನು ಪಕ್ಕಕ್ಕಿಟ್ಟು, ನಿರ್ದೇಶಕರೊಡನೆ ಹಿಂದಿನ ಸಾಲಿನಲ್ಲಿದ್ದು ಪೂರ್ಣ ಚರ್ಚೆಗೆ ಸಾಕ್ಷಿಯಾಗಿದ್ದರು. ಹಾಗಾಗಿ ಮುಂದಿನೊಂದೆರಡು ದಿನ, ಕೆಲವು ‘ನಿಲಯದವರು’ ಆಡಿಕೊಳ್ಳುವ ಮಾತು ಕೇಳಿದ್ದೆ, "ಐತಾಳ ಮೇಷ್ಟ್ರು ರಂಗಪಠ್ಯವನ್ನು ಬಿಗಿ ಮಾಡಿದ್ದಾರೆ, ತಂಡ ರಾಜ್ಯ ಸುತ್ತಲು ಹೊರಡುವ ಮುನ್ನ ಎಂಬಂತೆ, ಗಡಿಯಾರದ ಸುತ್ತೂ ತಾಲೀಮು ನಡೆಸಿದ್ದಾರೆ"! ಬಹುಶಃ ನಮ್ಮ ಶಿಬಿರದ ಕೊನೆಯ ದಿನ, ‘ತಿರುಗಾಟ’ ನಿಜ ತಿರುಗಾಟಕ್ಕೆ ಹೊರಟಾಗ, ಶಿಬಿರದ ಅಭಿಪ್ರಾಯಗಳ ಹೊಳಪು ಹೊತ್ತೇ ಹೋಗಿರಬೇಕು. ನಾನಂತೂ ಅವರ ಮಂಗಳೂರು ಪ್ರದರ್ಶನಗಳಲ್ಲಿ (ನವೆಂಬರ್ ೫, ೬ ಪಾದುವಾ ಕಾಲೇಜು ಮತ್ತು ೯, ೧೦ ಅಲೋಶಿಯಸ್ ಕಾಲೇಜು) ಎರಡೂ ನಾಟಕಗಳನ್ನು ಅವಶ್ಯ ಮತ್ತೆ ನೋಡಲಿದ್ದೇನೆ. ನೀವು ನಿಂನಿಮ್ಮ ಊರುಗಳಲ್ಲಿ ಅಥವಾ ಸಮೀಪದ ಕೇಂದ್ರಗಳಲ್ಲಿ ಇಷ್ಟ ಮಿತ್ರರನ್ನು ಜತೆ ಮಾಡಿಕೊಂಡು ನೋಡುವುದನ್ನು ಮರೆಯಬೇಡಿ. 

ಸಿನಿ-ನಿರ್ದೇಶಕ ಹರಿಹರನ್: 

ಪೂರ್ವಾಹ್ನದ ಎರಡನೇ ಕಲಾಪ, ಬಹುಶ್ರುತ ಸಿನಿಮಾ ನಿರ್ದೇಶಕ ಕೆ. ಹರಿಹರನ್ ಅವರದ್ದು. ಇವರ ಹೆಸರನ್ನು ಮುಂದಾಗಿ ‘ಎಫ್.ಟಿ.ಐ.ಐಯ ಉತ್ಪನ್ನ’ವಾದ ಅಭಯನಿಗೆ (ನನ್ನ ಮಗ) ತಿಳಿಸಿದಾಗ "ನಮಗೆಲ್ಲ ಹೆಮ್ಮೆಯ ಹಿರಿಯಣ್ಣ" ಎಂದೇ ಹೇಳಿದ್ದ. ಹರಿಹರನ್ ತನ್ನ ಪುಣೆಯ ಗೌರವಾನ್ವಿತ ಗುರುಗಳು ಹೆಗ್ಗೋಡಿನ ಬಗ್ಗೆ ಕೊಟ್ಟ ಚಿತ್ರಣದ ಸಾಕ್ಷಾತ್ಕಾರದ ಧನ್ಯತೆಯೊಂದಿಗೇ ಮಾತಿಗಿಳಿದರು. ಮುಂದೆ (ದೇಶವಿದೇಶಗಳ) ಪೂರ್ವಸೂರಿಗಳ ಮತ್ತು ವರ್ತಮಾನದ ಕಸಬುದಾರರ ಯುಕ್ತ ಮೌಲ್ಯಮಾಪನದೊಂದಿಗೆ, ವಾಸ್ತವದೊಡನೆ ತನಗಾದ ಮುಖಾಮುಖಿಯ
ಅನುಭವವನ್ನು ಬೆಸೆದರು. ಪುಣೆಯ ಕಲಿಕೆಯಲ್ಲಿ ಸ್ವಾಂಗೀಕರಿಸಿಕೊಂಡ ಶುದ್ಧ ವ್ಯಾಕರಣ, ವಿಸ್ತೃತ ವೃತ್ತಿ ರಂಗದಲ್ಲಿ ಪಡೆದ ರೂಪಾಂತರವನ್ನು ಬಹಳ ಖಚಿತವಾಗಿ, ಸ್ಪಷ್ಟವಾಗಿ ಬಿಡಿಸಿಟ್ಟರು. ತೋರುಗಾಣ್ಕೆಗೆ ಚಲನಚಿತ್ರ ಜಗತ್ತಿನಲ್ಲಿ ತನ್ನ ವಿಕಾಸವನ್ನು ಹೇಳುವಂತೆ ಮಾತಾಡಿದರೂ ನಿಜದಲ್ಲಿ ಯುಕ್ತ ಚಲಚಿತ್ರ ತುಣುಕುಗಳ ಪ್ರದರ್ಶನ ಹಾಗೂ ನಿರ್ಭಿಡೆಯ ಸಂವಾದಗಳಿಂದ ನನ್ನಲ್ಲಿದ್ದ ಅಭಯನ ಮಾತನ್ನು ತುಂಬ ಗಟ್ಟಿಗೊಳಿಸಿದರು. 

ಪಾರಿಜಾತ ಭಜನಾ ಮಂಡಳಿ 

ಎರಡನೇ ದಿನದ ಅಪರಾಹ್ನದ ‘ನಿದ್ದೆ ಬಿರಿಸುವ ಕಲಾಪ’ಕ್ಕೆ ವಿಜಾಪುರ ಜಿಲ್ಲೆಯ ಹಡಲಗೇರಿ ಹಳ್ಳಿಯ ಹಲಗೆಮ್ಮ ಪಾರಿಜಾತ
ಭಜನಾ ಮಂಡಳಿಯ ಐದು ಯುವ ಜನರ ತಂಡ ಬಂದಿತ್ತು. ಕಲಬುರ್ಗಿ ವಿವಿ ನಿಲಯದ ಹಿರಿಯ ಪ್ರಾಧ್ಯಾಪಿಕೆ ಮೀನಾಕ್ಷಿ ಬಾಳಿಯವರು ಅವರ ನಿರ್ವಹಣೆಯನ್ನು ಬಹಳ ಚಂದಕ್ಕೆ ನಡೆಸಿದರು. ತಂಡ ಚರ್ಮಗಾರ ಸಮುದಾಯಕ್ಕೆ (ಮೇದರ) ಸೇರಿದ್ದು ಎಂದ ಮೇಲೆ, ಬಹುತೇಕ ಆರ್ಥಿಕ ಹಾಗೂ ಸಾಮಾಜಿಕ ಬಡತನದ್ದೇ ಹಿನ್ನೆಲೆಯದ್ದೇ ಇತ್ತು. ಆದರೆ ಅವರ ಗಾನಕಲೆ ಮತ್ತು ಅನುಸರಿಸಿದ ಜಾಡು ಅನುಭಾವಿಗಳದ್ದು. ಶುದ್ಧ ಭಕ್ತಿ, ಆರಾಧನಾ ಭಾವಗಳನ್ನು ಮೀರಿದ ಸಾಮಾಜಿಕ ತತ್ತ್ವಗಳದ್ದು (ಮಾಡು, ಬೇಡ). ಉತ್ತರ ಕರ್ನಾಟಕದ ಜನಪದ ವಲಯದಲ್ಲಿನ ಆಪ್ತ ಒಡನಾಟ ಮತ್ತು ಅಧ್ಯಯನಗಳ ಬಲದಲ್ಲಿ ಮಿನಾಕ್ಷಿ ಬಾಳಿಯವರು, ಸಹಜವಾಗಿ ತಂಡದ ಭಾವವನ್ನೇ ಆವಾಹಿಸಿಕೊಂಡಂತೆ ಕೊಟ್ಟ ನಿರೂಪಣೆ, ಅರ್ಥ ವಿವರಣೆ ನಮ್ಮೆಲ್ಲ ನಮ್ಮೆಲ್ಲ ಕಿವಿ, ಕಣ್ಣನ್ನು ಅರಳಿಸಿ, ಬುದ್ಧಿಯನ್ನು ಬೆಳಗಿತ್ತು. ಹಾಗೇ ತೀರಾ ವಿಭಿನ್ನ ಭಾಷಾ ಮತ್ತು ದೇಶ ಪರಿಸರಕ್ಕೆ ಬಂದಿದ್ದ ತಂಡಕ್ಕೂ ಅದು ಅಪಾರ ಧೈರ್ಯ ಉತ್ತೇಜನವನ್ನೂ ಕೊಟ್ಟಿತ್ತು. 

ಕತೆಗಾರರು 

ಅಪರಾಹ್ನದ ಎರಡನೇ ಅವಧಿಯಲ್ಲಿ ಸ್ವತಃ ಕತೆಗಾರರೇ ಆದ ಎಂ.ಎಸ್. ಶ್ರೀರಾಮ್, ಬಾನು ಮುಷ್ತಾಕ್ ಮತ್ತು ಜಯಂತ ಕಾಯ್ಕಿಣಿಯವರ ಕಥಾಲೋಕದ ‘ಕಲಾನುಭವ’ವನ್ನು ಕೇಳಿಸಿದರು. ಮುಸ್ಲಿಂ ಕುಟುಂಬದ ಸಾಂಪ್ರದಾಯಿಕ ಕಟ್ಟುಗಳನ್ನು ಬಿಡಿಸಿಕೊಂಡ ಬಾನು, ಕೇವಲ ಹೊಳಹುಗಳ ಸುಳಿಯಲ್ಲಿ ಕತೆಗಳನ್ನು ಅರಳಿಸಿಕೊಂಡ ಜಯಂತರ ಮಾತುಗಳು ನಮ್ಮ ತಿಳುವಳಿಕೆಯ ಎಷ್ಟೋ ಕೊರತೆಗಳನ್ನು ನೀಗಿ, ಕುಶಿ ಕೊಟ್ಟಿತು. 

ಕಾಣಿಸಿಕೊಳ್ಳುವ ಚಟ 

ದಿನದ ಮೊದಲ ಕಲಾಪದಲ್ಲಿ ನಿರ್ವಾಹಕರು ಚರ್ಚೆಗಳ ಕುರಿತಂತೆ ಕೊಟ್ಟಿದ್ದ ಸೂಚನೆಗಳ ಸಾರ ಒಟ್ಟಾರೆ ನೀನಾಸಂನ ಎಲ್ಲ ಕಲಾಪಗಳ ಹಿಂದಿನ ಅನೌಪಚಾರಿಕತೆಯನ್ನೇ ಬಿಡಿಸಿ ಹೇಳಿತ್ತು. ಆದರೂ ಲೋಕರೂಢಿಯ ಚಟ ಕಳಚಿಕೊಳ್ಳಲಾಗದವರು ‘ತಮ್ಮ ಧ್ವನಿ’ ಕೇಳಬೇಕು ಎಂದು ಪಟ್ಟು ಹಿಡಿಯುವ ಕೆಲವರ ಕ್ರಮಗಳು ಬಹುತೇಕ ನಗೆ ತರಿಸುತ್ತಿತ್ತು, ಸಣ್ಣಪುಟ್ಟ ಕಿರಿಕಿರಿಯನ್ನೂ ಉಂಟು ಮಾಡುತ್ತಿತ್ತು. ಇದಕ್ಕೆ ಎರಡೇ ಉದಾಹರಣೆಗಳು: ಅತ್ಯುತ್ಸಾಹೀ ಹಿರಿಯರೊಬ್ಬರು, ಮುಗ್ಧವಾಗಿ, ರಾಕ್ಷಸ ತಂಗಡಿಯಲ್ಲಿ ನಟರ ಅಭಿನಯ, ವೇಷಪಲ್ಲಟ, ಗಾಯನವೇ ಮುಂತಾದ ಬಹುಮುಖೀ ರಂಗಕಲಾಪವನ್ನು ಅತಿಶಯೋಕ್ತಿಗಳಲ್ಲಿ ಮೆಚ್ಚಿ ನುಡಿದರು. ಅದರ ಮೇಲೆ ರಂಗ ಸಜ್ಜಿಕೆಯನ್ನೂ ಅವರೇ ಬದಲಿಸಿಕೊಳ್ಳುವ ಹೊರೆಯನ್ನು
"ದಯವಿಟ್ಟು ಹಗುರಗೊಳಿಸಿ" ಎಂದು ವ್ಯವಸ್ಥಾಪಕರಿಗೆ ಒತ್ತಾಯಪೂರ್ವಕ ಮನವಿ ಮಾಡಿದರು! ಆಗ ಸ್ಫೋಟಿಸಿದ ನಗೆಯ ಗದ್ದಲದಲ್ಲಿ, ಈಚಿನ ನಾಟಕಗಳಲ್ಲಿ ರಂಗಸಜ್ಜಿಕೆಯ ಬದಲಾವಣೆಯೂ ಪ್ರದರ್ಶನ ಕ್ರಿಯೆಯ ಭಾಗವೆಂದು ತಿಳಿ ಹೇಳುವುದು ಬಹಳ ಪ್ರಯಾಸದ ಕೆಲಸವೇ ಆಗಿತ್ತು! ಇನ್ನೊಂದೇ ಸಂದರ್ಭದಲ್ಲಿ, ಕಲಾಪ ನಿಗದಿತ ಕಾಲಮಿತಿಯನ್ನು ಮೀರಿದ್ದಕ್ಕೆ, ನಿರ್ವಾಹಕರು ಚರ್ಚೆಯನ್ನು ಮೊಟಕುಗೊಳಿಸಿದ್ದರು. ಅಂಥ ಎಲ್ಲ ಸಂದರ್ಭಗಳಲ್ಲೂ ಹೇಳುವಂತೆ "ಸಂಪನ್ಮೂಲ ವ್ಯಕ್ತಿಗಳು ಮಂದಿರದ ಹೊರಗೂ ಮುಕ್ತ ಸಂವಾದಕ್ಕೆ ಲಭ್ಯರು. ಆಸಕ್ತರು ಮಾತು ಬೆಳೆಸಲು ಸ್ವತಂತ್ರರು" ಎಂದಿದ್ದರು. ಆದರೆ ಒಟ್ಟು ಸಭೆಯ ಪ್ರಭೆಯಲ್ಲಿ ಪ್ರಶ್ನೆ ಕೇಳಿ, ತನ್ನನ್ನು (ಸ್ವಂತೀ?) ಕಂಡುಕೊಳ್ಳಬೇಕೆಂದು ಯೋಚಿಸಿದ್ದ ಒಬ್ಬರ ಅಸಮಧಾನ ಬಹಳ ಹೊತ್ತು ಹೊಗೆಯಾಡುತ್ತಲೇ ಇತ್ತು! 

ಕರ್ಣ ಸಾಂಗತ್ಯ 

೨೦೧೯ರ ತಿರುಗಾಟ ತಂಡದ ಎರಡನೇ ನಾಟಕ - ಕರ್ಣ ಸಾಂಗತ್ಯ, ನಿರ್ದೇಶನ - ಗಣೇಶ ಮಂದರ್ತಿ, ಎರಡನೇ ದಿನದ ಸಂಜೆ ಕಲಾಪವಾಗಿ ಬಂತು. ಇದರ ತುಸು ವಿವರಗಳನ್ನೂ ಮರುದಿನದ ಚರ್ಚೆಯ ಸಾರಾಂಶದೊಡನೆ ಮುಂದೆ ವಿಸ್ತರಿಸುತ್ತೇನೆ. ಇವೆರಡೂ ನಾಟಕಗಳನ್ನು ಪೂರ್ವ ಒಪ್ಪಂದದಂತೆ (ನೀನಾಸಂ - ಸಂಚಿ ಟ್ರಸ್ಟ್ ದಾಖಲೀಕರಣ) ವಿಡಿಯೋ ಗ್ರಹಣಕ್ಕಿಳಿಸಲು, ಶಿಬಿರಾರಂಭಕ್ಕೂ ಎರಡು ದಿನ ಮೊದಲು ಅಭಯ ತನ್ನ ತಂಡದೊಡನೆ ಬಂದಿದ್ದ. ಎಂದಿನಂತೆ ಶಿವರಾಮ ಕಾರಂತ ರಂಗ ಮಂದಿರದೊಳಗೆ, ತಿರುಗಾಟದ ತಂಡ ಖಾಲೀ ಭವನದೊಳಗೆ ಬೆಳಗ್ಗೊಂದು, ಮಧ್ಯಾಹ್ನ ಒಂದು ಪರಿಪೂರ್ಣ ಪ್ರಯೋಗವನ್ನು ಕೊಟ್ಟದ್ದಾಗಿತ್ತು. ಅಂದೇ ಬೆಂಗಳೂರಿಗೆ ಮರಳಿದ ಅಭಯ, ಅವೆಲ್ಲವನ್ನು ನಿಧಾನಕ್ಕೆ ಸಂಕಲಿಸಿ, ಯೂ ಟ್ಯೂಬಿಗೇರಿಸುವುದು ಇಷ್ಟರೊಳಗೆ ಆಗಿರಬಹುದು. ಆದರೆ ತಿರುಗಾಟ ತಂಡ ರಾಜ್ಯಾದ್ಯಂತ, ವಿವಿಧ ರಂಗಮಂಚಗಳಲ್ಲಿ ನಡೆಸುವ ಸಜೀವ ಪ್ರಯೋಗಗಳ ಸರಣಿ ಮುಗಿಯದೇ ಲೋಕಾರ್ಪಣಗೊಳಿಸುವ ಕ್ರಮವಿಲ್ಲ ಎನ್ನುವುದು ನಿಮ್ಮ ನೆನಪಿನಲ್ಲಿರಲಿ. ಹಾಗೇ ನಿರಂತರ ಪ್ರಯೋಗಗಳಿಂದ ಹುರಿಗೊಂಡ ತಂಡ ನಿಮ್ಮೂರಿಗೆ ಬರುವಾಗ ಖಂಡಿತವಾಗಿ ಹೆಚ್ಚು ಪಳಗಿದ ಹೊಸದೇ ಪ್ರಯೋಗವಾಗಿರುತ್ತದೆ. ಹಾಗಾಗಿ ಒಮ್ಮೆ ಹೆಗ್ಗೋಡಿನಲ್ಲಿ ನೋಡಿದವರೂ ಮೆಲುಕಾಡಿಸುವಂತೆ ಇನ್ನೊಮ್ಮೆ ಅವಶ್ಯ ನೋಡುವಂತವೇ ಎರಡೂ. 

ಮೂರನೇ ದಿನದ ಮೊದಲ ಚರ್ಚೆ 

ತಿರುಗಾಟಕ್ಕೆಂದೇ ಸಜ್ಜಾದ ಎರಡನೇ ಮತ್ತು ಶಿಬಿರವಾಸಿಗಳಿಗೆ ‘ಉಣಬಡಿಸಿದ’ಲ್ಲೂ ಎರಡನೇ ನಾಟಕ - ಕರ್ಣ ಸಾಂಗತ್ಯ. ನಮಗೆಲ್ಲ ಶಿಬಿರಾರಂಭದಲ್ಲೇ ಕೊಟ್ಟಿದ್ದ ಮುದ್ರಿತ ಪೂರಕ ಮಾಹಿತಿಯಲ್ಲಿ - ಜನಪದ, ಕುಮಾರವ್ಯಾಸ ಮತ್ತು ಪಂಪ ಭಾರತಗಳಲ್ಲದೆ ಅಮೃತ ಸೋಮೇಶ್ವರರ ಯಕ್ಷ ಪ್ರಸಂಗದ ಸಣ್ಣ ಭಾಗಗಳನ್ನು ಬಳಸಿದ ಉಲ್ಲೇಖವಿದೆ. ಅಂದ ಮಾತ್ರಕ್ಕೆ ಈ ನಾಟಕ ಕರ್ಣನ ಕತೆಯನ್ನು ಕಾಲಾನುಕ್ರಮದಲ್ಲೇ ಕೊಡುತ್ತದೆ ಅಥವಾ ಕೊಡಬೇಕು ಎಂದು ಭಾವಿಸುವುದು ತಪ್ಪಾಗುತ್ತದೆ. 

ಕರ್ಣ ಸಾಂಗತ್ಯ ಎನ್ನುವ ಒಕ್ಕೂಟ ರೂಪ ತಳೆಯುವುದು ಒಂದು ನಾಟಕ ಅಥವಾ ಯಕ್ಷಗಾನ ತಂಡದ, ಒಬ್ಬ ಭಾಗವತನ ಭಾವಲೋಕದಲ್ಲಿ. ಅಂದರೆ ಬಹುತೇಕ ಪುತಿ ನರಸಿಂಹಾಚಾರ್ಯರ ‘ಗೋಕುಲ ನಿರ್ಗಮನ’, ವರ್ತಮಾನದ ಓರ್ವ ವೇಣುವಾದಕನ (ಕವಿ) ಮನೋಭೂಮಿಕೆಯಲ್ಲಿ ನಡೆದಂತೆ. ಬಹುಶಃ ಅದನ್ನು ಹೆಚ್ಚು ಸ್ಪಷ್ಟಪಡಿಸುವ ಸಲುವಾಗಿಯೇ ಕಾಲ್ಪನಿಕ ನಾಟಕದ ಕೃಷ್ಣ ಪಾತ್ರಧಾರಿ ವೇಷ ಕಟ್ಟುತ್ತಿದ್ದಲ್ಲಿಂದಲೇ ನಿಜ ನಾಟಕ ತೊಡಗುತ್ತದೆ. ಮುಂದೆ ‘ಆ ದಿನದ’ ಪ್ರಸಂಗದ (ರಸ) ಆಯ್ಕಾ ಪ್ರಕ್ರಿಯೆ ಮತ್ತು ಭಿನ್ನ ಕಥಾಖಂಡಗಳ ನಡುವಣ ಅವಧಿಗಳಲ್ಲಷ್ಟೇ ನಿಜದ ನಾಟಕ ನಡೆಯುತ್ತದೆ. ಅದರೊಳಗೆ ಬರುವ ಕರ್ಣನ ಆಖ್ಯಾಯಿಕೆಗಳೆಲ್ಲ ನಾಟಕದೊಳಗಿನ ನಾಟಕಗಳು. ಇನ್ನೂ ಸ್ಪಷ್ಟಪಡಿಸುವುದಿದ್ದರೆ, ಇಲ್ಲಿನ ಪ್ರಸಂಗಗಳಿಗೆ ಕಾಲಾನುಕ್ರಮಣದ ಅಥವಾ ಒಂದೇ ದೃಢವಾದ ಮೂಲ ಪಠ್ಯದ ಆಧಾರ ಇಲ್ಲ. ಅವೆಲ್ಲ ‘ಭಾಗವತ’ನ ಲಹರಿಯ ಸರಣಿ. ಇದಕ್ಕೆ ಒಂದೇ ಉದಾಹರಣೆ: ವ್ಯಾಸ ಭಾರತ ಮತ್ತು ಜನಪದ ಭಾರತಗಳಲ್ಲಿ ಪಾಂಡವರ ಕಾಮ್ಯಕಾವನದ ಕಲಾಪಗಳು ಪೂರ್ಣ ಭಿನ್ನ. ‘ಕರ್ಣಸಾಂಗತ್ಯ’ದಲ್ಲಿ ವಿಭಿನ್ನ ಪಠ್ಯಗಳ ಸಾಂಗತ್ಯ ಕಾಣಬೇಕಿರುವುದು ಭಾಗವತ ಮತ್ತು ಆತನ ಕೇಳುಗ ಬಳಗದ ಕಲಾಪಗಳಲ್ಲಿ ಮಾತ್ರ. ಸಣ್ಣ ಉದಾಹರಣೆ ಕಾಲ್ಪನಿಕ ನಾಟಕದ ಕೃಷ್ಣ ವೇಷಧಾರಿ, ಮನೋಭೂಮಿಕೆಯ ನಾಟಕದಲ್ಲಿ ಕುಂತಿಯ ನವಜಾತ ಶಿಶುವನ್ನು ಸೂತನಿಗೆ ಮುಟ್ಟಿಸುವ ಗಂಗೆ. ಹಾಗಾಗಿ ದ್ರೌಪದಿ ಪಾತಿವ್ರತ್ಯ ಪರೀಕ್ಷೆಯಷ್ಟೇ ಕರ್ಣನ ಕರ್ಮಫಲ ಚಿತ್ರಣಗಳೂ ಕರ್ಣಸಾಂಗತ್ಯವೆಂಬ ಹೊಸದೇ ನಾಟಕದಲ್ಲಿ ಪಡೆದ ಸ್ಥಾನಗಳು ಪ್ರಶ್ನಾತೀತವೆಂದೇ ನನಗನ್ನಿಸಿತು. 

ಶಿಬಿರ ಕಲಾಪದಲ್ಲಿ ಬಹುತೇಕ ಅಭಿಪ್ರಾಯಗಳೂ ಚರ್ಚೆಯೂ ಪ್ರಸ್ತುತ ಪ್ರಯೋಗವನ್ನು ಬಿಟ್ಟು, ಕರ್ಣನ ಜೀವನದ ಕುರಿತು ಸಾಹಿತ್ಯಕ (‘ನೆನೆವೊಡೆ ಕರ್ಣನಂ ನೆನೆಯ’, ‘ಕರ್ಣರಸಾಯನಮಲ್ತೆ’... ಎಲ್ಲ ಸಾಕಷ್ಟು ಶಾಲಾಕಾಲೇಜು ಪಠ್ಯ, ಪ್ರವಚನ, ಹರಿಕಥೆ, ಯಕ್ಷಗಾನಾದಿಗಳಲ್ಲಿ ಕೇಳಿದವೇ) ವ್ಯಾಖ್ಯಾನಗಳಿಗೇ ವಿನಿಯೋಗವಾಯ್ತು. ತಂಡದ ಅಭಿನಯ, ವೇಷಭೂಷಣ, ಭಾಷಾವೈವಿಧ್ಯ, ರಂಗಚಲನೆ, ಹಾಡು ಮುಂತಾದವುಗಳನ್ನು ನಿಸ್ಸಂದೇಹವಾಗಿ ಹೊಗಳಿದರೂ (ತುಣುಕುಗಳಲ್ಲಿ ಮೆಚ್ಚಿ,) ಒಟ್ಟಿನಲ್ಲಿ ಅಪಸ್ವರ ತೆಗೆದ ಹಾಗೇ ಆಯ್ತು. ಶಿವರಾಮ ಕಾರಂತರು ೧೯೬೦ರ ದಶಕದಲ್ಲಿ ಯಕ್ಷ-ನೃತ್ಯರೂಪಕ (ಬ್ಯಾಲೇ) ಮಾಡಿದಾಗ, ಇನ್ಯಾರೋ ಹಿರಿಯರು ಇವರ ಕಲ್ಪನೆಗೆ ಹೊಂದದ ಅಸಂಖ್ಯ ಸಲಹೆಗಳನ್ನು, ಪ್ರೀತಿಯಿಂದಲೇ ಬರೆದು ಕಳಿಸಿದ್ದರಂತೆ. ಅದಕ್ಕೆ ಕಾರಂತರು ಸವಿನಯ ‘ತುಂಬ ಚೆನ್ನಾಗಿದೆ. ಅವಶ್ಯ ನಿಮ್ಮ ಪ್ರಯೋಗದಲ್ಲಿ ಬಳಸಿಕೊಳ್ಳಿ’ ಎಂದೇ ಉತ್ತರಿಸಿದರಂತೆ! 

ತಿರುಗಾಟ ಹೊರ ಊರುಗಳಲ್ಲಿ, ಎರಡೂ ಪ್ರದರ್ಶನಗಳಾದ ಕೊನೆಯಲ್ಲೊಮ್ಮೆ ಕಲಾವಿದರನ್ನೆಲ್ಲ ಸಾಲಾಗಿ ನಿಲ್ಲಿಸಿ ಸಭೆಗೆ ಪರಿಚಯಿಸುತ್ತದೆ (ಹೆಸರು, ಊರು - ಅಷ್ಟೆ). ಆದರಿಲ್ಲಿ ಅದು ನಡೆಯಲಿಲ್ಲವೆಂಬ ಶಿಬಿರಾರ್ಥಿಗಳ ಕೊರಗನ್ನು ಇಂದು ಜಶವಂತ್ ಜಾಧವ್ ಪೂರೈಸಿದರು. ರಾಕ್ಷಸ ತಂಗಡಿಯ ನಿರ್ದೇಶಕರಾದ ವೆಂಕಟ್ರಮಣ ಐತಾಳರು, ನೀನಾಸಂ ರಂಗಶಾಲೆಯ ಪ್ರಾಂಶುಪಾಲರೂ ಆದ ಕಾರಣ ಶಿಬಿರದುದ್ದಕ್ಕೆ ಎಲ್ಲರಿಗೂ ಆತ್ಮೀಯ ಪರಿಚಯಕ್ಕೆ ಸಿಕ್ಕವರೇ. ಹಾಗಾಗಿ ಜಾಧವ್ ಒತ್ತಾಯಿಸಿದಾಗ, ನಗುತ್ತ ಹೀಗೆ ಬಂದು ಹಾಗೆ ಹೋದರು! ಕರ್ಣ ಸಾಂಗತ್ಯದ ನಿರ್ದೇಶಕ ಗಣೇಶ ಮಂದಾರ್ತಿ, ಅನ್ಯ ಕಾರ್ಯ ಒತ್ತಡದಲ್ಲೋ ಎಂಬಂತೆ ಊರಿನಲ್ಲೇ ಇಲ್ಲದ್ದರಿಂದ ನಮಗೆ ನೋಡುವ ಅವಕಾಶ ಸಿಗಲಿಲ್ಲ. 

ಜಾತಿ ಮಥನ 

ಜಾತಿಯಿಂದ ದೂಷಿತನಾದ ಕರ್ಣನ ಕುರಿತ ನಾಟಕದ ಪ್ರಭಾವ ಮುಂದುವರಿಯಿತೇ ಎನ್ನುವಂತೆ, ಪೂರ್ವಾಹ್ನದ ಎರಡನೇ ಕಲಾಪ ಬಂತು. ದಿಲ್ಲಿ ಜೆ.ಎನ್.ಯುವಿನ ಹಿರಿಯ ಪ್ರಾಧ್ಯಾಪಕ ಗೋಪಾಲ್ ಗುರು ಜಾತಿ, ಜನಾಂಗೀಯ ಅಧ್ಯಯನ, ಸಾಮಾಜಿಕ ಚಳುವಳಿಗಳ ವಲಯಗಳಲ್ಲಿ ಸಾಕಷ್ಟು ಕೆಲಸ ಮಾಡಿದವರು. ಕಲಾನುಭವದಲ್ಲಿ ಜಾತಿಯ ಅಸ್ಮಿತೆಯ ಕುರಿತು ಇವರು ತಮ್ಮ ವಿಚಾರಲಹರಿ
ವಿಸ್ತರಿಸಿದಂತಿತ್ತು. ಅವರ ಕೆಲವು ಕೃತಿ ಮತ್ತು ದಾಖಲಿತ ಸಂವಾದಗಳಲ್ಲಿ ಜತೆಗಾರನಾಗಿಯೇ ಇದ್ದ, ಸಮಭುಜ ವಿದ್ವಾಂಸ ಸುಂದರ್ ಸಾರುಕ್ಕೈ ಅಷ್ಟೇ ಸಮರ್ಥವಾಗಿ ಗೋಪಾಲರಿಗೆ ಜತೆಗೊಟ್ಟರು. ಇವರ ಮಾತು, ಚರ್ಚೆಯನ್ನು ಪೂರ್ಣ ಗ್ರಹಿಸುವಲ್ಲಿ ನನ್ನನ್ನು ಶೇಷ, ಕ್ಷಮಿಸಿ ಹಿಂದಿನ ರಾತ್ರಿಯ ನಿದ್ರಾಶೇಷ ಕಾಡಿ ಸೋಲಿಸಿತ್ತು! ಲಗತ್ತಿಸಿದ ಪ್ರಜಾವಾಣಿ ವರದಿ ಅದನ್ನು ಸಮರ್ಥವಾಗಿ ಹಿಡಿದಿಟ್ಟಿದೆ ಎಂದು ಭಾವಿಸುತ್ತೇನೆ. 

ಟಿ.ಎಂ ಕೃಷ್ಣ 

ಈ ವರ್ಷದ ಸುಬ್ಬಣ್ಣ ಸ್ಮೃತಿಯ ಹಿಂದಿನ ದಿನ ನಾನು ‘ಬಿಟ್ಟಿ ನಾಟಕ’ ನೋಡುವ ಆಸೆಗೆ ಹೆಗ್ಗೋಡಿನಲ್ಲಿದ್ದದ್ದು ನಿಮಗೆಲ್ಲ ತಿಳಿದೇ ಇದೆ. ಅಂದು ಹೀಗೇ ಅಕ್ಷರರೊಡನೆ ಮಾತಿನಲ್ಲಿ, ಮಂಗಳೂರಿನಲ್ಲಿ ನಡೆದ ಬಿವಿ ಕಕ್ಕಿಲ್ಲಾಯ ಶತಮಾನದ ಕಲಾಪ, ಅಲ್ಲಿ ಸಂಗೀತ ವಿದ್ವಾನ್ ಟಿಎಂ ಕೃಷ್ಣರ ಮಾತು, ಕಛೇರಿಗಳ ಕುರಿತು ಪ್ರಸ್ತಾಪಿಸಿದ್ದೆ. ಕೂಡಲೇ ಅಕ್ಷರ "ಈ ಸಲದ ಸಂಸ್ಕೃತಿ ಶಿಬಿರಕ್ಕೆ ಕೃಷ್ಣ ಬರುತ್ತಿದ್ದಾರೆ. ಶಿಬಿರದ ವಿಷಯ - ಕಲೆಯ ಅನುಭವ" ಎಂದರು. ನಾನು ಅಷ್ಟೇ ಚುರುಕಾಗಿ, ವಿಶೇಷ ಯೋಚಿಸದೇ ನನ್ನೆರಡು ಮನವಿಯನ್ನು ಅಕ್ಷರರಿಗೆ ಒಪ್ಪಿಸಿಯೇಬಿಟ್ಟೆ. ಮೊದಲನೇದು: ನೀನಾಸಂ, ಸಂಸ್ಕೃತಿ ಶಿಬಿರಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳ ಕಟ್ಟೊಂದನ್ನು ಕೊಡುತ್ತದೆ. ಈ ಸಲ ಅದರಲ್ಲಿ ನನ್ನದೇ ಪ್ರಕಾಶನದ, ನನ್ನ ತಂದೆ - ಜಿಟಿ ನಾರಾಯಣ ರಾವ್ ಬರೆದ, ‘ಸಂಗೀತ
ರಸನಿಮಿಷಗಳು’ ಪುಸ್ತಕವನ್ನು ಸೇರಿಸುವಂತೆ ಕೊಡುತ್ತೇನೆ. ಅದು ಕೊಟ್ಟದ್ದಾಯ್ತು. (ಅನಂತರವೂ ನನ್ನಲ್ಲಿ ಇನ್ನೂ ಕೆಲವು ಪ್ರತಿಗಳು ಲಭ್ಯ. ಆಸಕ್ತರು ಅರವತ್ತು ರೂಪಾಯಿ ಕಳಿಸಿ ಖರೀದಿಸಬಹುದು) ಮತ್ತು ಎರಡನೆಯ ಮನವಿ, ಪೂರ್ಣ ಶಿಬಿರಾನುಭವದೊಡನೆ ಟಿಎಂ ಕೃಷ್ಣರ ಮಾತು, ಸಂಗೀತ ಕೇಳುವ ಅವಕಾಶ. ಇದು ಶಿಬಿರದ ಮೂರನೇ ದಿನದ ಅಪರಾಹ್ನದ ಪೂರ್ಣಾವಧಿಯಲ್ಲಿ ಈಡೇರಿತು. 

ಕೃಷ್ಣ ತನ್ನ ಏಳು ಶಿಷ್ಯರು ಹಾಗೂ ಮೃದಂಗ ಮತ್ತು ಪಿಟೀಲುವಾದಕರ ಮೇಳದೊಡನೆ ಸುಮಾರು ನಾಲ್ಕು ಗಂಟೆಯ ಉದ್ದಕ್ಕೆ (ನಡುವೆ ಹತ್ತಿಪ್ಪತ್ತು ಮಿನಿಟಿನ ಚಾ ವಿರಾಮವಿತ್ತು), ಸಂಗೀತ ಕಲಾನುಭವದ ಕುರಿತಂತೆ, ಸೋದಾಹರಣ ವ್ಯಾಖ್ಯಾನ ನಡೆಸಿದರು. ಗುರು ಸಮ್ಮುಖದಲ್ಲಿ, ಸ್ವಂತ ನೆಲೆಯಲ್ಲಿ ಹಾಗೂ ಸಾರ್ವಜನಿಕ ವೇದಿಕೆಯಲ್ಲಿ ಸಂಗೀತಾನುಸಂಧಾನದ ಹಲವು ಮುಖಗಳನ್ನೂ ಅವು ಒದಗಿಸುವ ಸಮಸ್ಯೆಗಳನ್ನೂ ಸಂತೋಷವನ್ನೂ ಎಂದಿನ ದಿಟ್ಟ ಮಾತುಗಳಲ್ಲಿ ಅನಾವರಣಗೊಳಿಸಿದರು. ಮಾದರಿಗೆಂದು ನಾನು ಹಿಡಿದ ವಿಡಿಯೋ ತುಣುಕುಗಳು ನಿಮಗೆ ಇನ್ನೂ ಹೆಚ್ಚನ್ನು ಹೇಳಬಹುದು. 

ಕೃಷ್ಣರ ‘ಸಂಪ್ರದಾಯ’ದ ಗುಳ್ಳೆ ಒಡೆಯುವ ಕೆಲಸ ಲೇಖನ, ಉಪನ್ಯಾಸಗಳಿಂದಲೂ ಆಚೆ, ಸಾಮಾಜಿಕ ಮುಖಾಮುಖಿಯಲ್ಲೂ ಎಷ್ಟು ಸಹಜವಾಗಿ ನಡೆಯುತ್ತದೆ ಎನ್ನುವುದಕ್ಕೆ ನನ್ನನುಭವಕ್ಕೆ ನಿಲುಕಿದ ಕೆಲವು ಸಂಗತಿಗಳನ್ನು ಇಲ್ಲಿ ದಾಖಲಿಸುವುದು ಅವಶ್ಯ. ಕಳೆದ ವರ್ಷ ಉಡುಪಿಯಲ್ಲಿ ‘ಕರುಣ ಸಂಜೀವ’ ಕಲಾಪದ ಹಿಂದು ಮುಂದು ಕೃಷ್ಣರ ನಡೆ, ವಿಚಾರಧಾರೆಯನ್ನು ಮೊದಲ ಬಾರಿಗೆ ನಾನು ಕಂಡು, ತಿಳಿದು ಮನಸೋತಿದ್ದೆ. ಹಾಗಾಗಿ ಬಿವಿ ಕಕ್ಕಿಲ್ಲಾಯ ಶತಮಾನದ ಕಲಾಪಕ್ಕೆ ಅವರು ಮಂಗಳೂರಿಗೆ ಬರುವುದು ತಿಳಿದ ಕೂಡಲೇ ನನ್ನ ನಾಲ್ಕು ಪ್ರಕಟಣೆಗಳನ್ನು (Scientific Temper, With the great minds, Crossing the dateline ಮತ್ತು ಅವರ ಓದಿಗೆ ದಕ್ಕುವ ಮೂರು ಇಂಗ್ಲಿಷ್ ಲೇಖನಗಳೂ ಇವೆಯೆಂಬ ನೆಲೆಯಲ್ಲಿ ಸಂಗೀತ ರಸನಿಮಿಷಗಳು) ಅವರಿಗೆ ಖಾಸಗಿಯಾಗಿ ಕೊಡಲು ಒಯ್ದಿದ್ದೆ. ಅಂದು ವೇದಿಕೆಗೆ ಏರುವ ಮುನ್ನ ಕೃಷ್ಣ ನನ್ನ ಮುಂದಿನ ಕುರ್ಚಿ ಸಾಲಿನಲ್ಲಿ ಕುಳಿತಿದ್ದರು. ನಾನು ಇದ್ದಲ್ಲಿಂದಲೇ ಅವರ ಗಮನ ಸೆಳೆದು, ಎರಡೇ ಮಾತಿನಲ್ಲಿ ನನ್ನ ಪ್ರವರ ಹೇಳಿ, ಪುಸ್ತಕದ ಕಟ್ಟು ಕೊಟ್ಟೆ. ಅವರು ಕೃತಜ್ಞತಾಪೂರ್ವಕವಾಗಿಯೇ ಪಡೆದುಕೊಂಡರು. ಹೆಚ್ಚು ಮಾತಾಡಲು ಅವಕಾಶವಿಲ್ಲದಂತೆ ಅಷ್ಟರಲ್ಲಿ ಅವರು ವೇದಿಕೆಯ ಕರೆಗೆ ಓಗೊಟ್ಟು ಹೋಗಿದ್ದರು. ಯಾವುದೇ ಕಲಾಪಗಳು ಮುಗಿದ ಮೇಲೆ ಕಲಾವಿದರಿಗೆ ಮುತ್ತಿಗೆ ಹಾಕಿ, (ಠಕ್ಕು?) ಮಾತಾಡಿ, ‘ಕಾಡುವ’ ಪೈಕಿ ನಾನಿಲ್ಲ. ಹಾಗಾಗಿ ಮತ್ತೆ ನಮ್ಮೊಳಗೆ ಭೇಟಿ, ಮಾತು, ಪತ್ರವ್ಯವಹಾರವೂ ನಡೆಯಲಿಲ್ಲ. 

ನೀನಾಸಂ ವಠಾರದಲ್ಲಿ ಊಟದ ಬಿಡುವಿನಲ್ಲೇ ನಾನು ಕೃಷ್ಣರನ್ನು ಕಂಡೆ. ಅವರು ಹಿಂದೆ ಮುಂದೆ ಯಾವುದೇ ಪರಿವಾರಗಳನ್ನು ಬಿಗುಮಾನಗಳನ್ನೂ ಇಟ್ಟುಕೊಳ್ಳದೆ, ಎಂದಿನಂತೆ ಸರಳ ದಿರಿಸಿನಲ್ಲಿ, ಮುಕುರುತ್ತಿದ್ದ ‘ಅಭಿಮಾನಿ’ಗಳೊಡನೆ ಒಡನಾಡುತ್ತಿದ್ದರು. (ಗೊತ್ತಲ್ಲಾ - ಕುಲುಕಲು ಕೊಟ್ಟ ಕೈಬಿಡದೆ ಜಗ್ಗಾಡುವುದು, ಒಂದು ಕೃತಿಯನ್ನೂ ಗಮನವಿಟ್ಟು ಅನುಭವಿಸದಿದ್ದರೂ ಹೊಗಳಿಕೆಯ ಹೊಳೆ ಹರಿಸುವುದು, ಮೈತಾಗಿಸಿ ನಿಂತು ಮೂರನೆಯವರಿಂದ ಪಟ ತೆಗೆಸಿಕೊಳ್ಳುವುದು, ಸ್ವಂತೀಗೆ
ತಾರಾಡುವುದು...) ನಾನು ಅಳುಕಿನಲ್ಲೇ ನಮಸ್ಕಾರ ವಿನಿಮಯ ಮಾಡಿಕೊಳ್ಳುತ್ತ "ಅಶೋಕ ವರ್ಧನ...." ಎಂದಿದ್ದೆನಷ್ಟೆ. ಪುಣ್ಯಾತ್ಮ "I know, from Mangalore, I remember the books.... " ಎಂದು ಹೆಚ್ಚಿನ ಮಾತಿಗೆ ತೆರೆದುಕೊಂಡಿದ್ದರು. ಆದರೆ ಇತರೇ ಮೇಲೆ ಬೀಳುವವರ ಉತ್ಸಾಹ ನೋಡಿ, ನಾನೇ ಮೆಲ್ಲನೆ ಹಿಂದೆ ಸರಿದುಬಿಟ್ಟೆ. 

ನೀನಾಸಂ ರಂಗ ಮಂದಿರದ ಸರಳ ವೇದಿಕೆಯ ಮೇಲೆ ಜಮಖಾನ ಹಾಸಿದ್ದರು. ಮೋಟು ತಂಬೂರಿ ಮಿಡಿಯುತ್ತ ಶಿಷ್ಯ ಬಳಗ, ಪಕ್ಕ ವಾದ್ಯದವರೂ ಸಜ್ಜಾಗುತ್ತಿದ್ದರು. ಸ್ವಯಂ ಸೇವಕನೊಬ್ಬ ಕುಳಿತಲ್ಲಿಗೇ ಕಲಾವಿದರ ಕೈಗೆ ನಿಲುಕುವಂತೆ, ಹಿಂದಿನ ಕಟ್ಟೆಯ ಮೇಲೆ ಉದ್ದಕ್ಕೆ ‘ಪರ್ಲ್ಪೆಟ್ ನೀರು’ ಇಡುತ್ತಿದ್ದ. ಅಲ್ಲೇ ಪಕ್ಕಕ್ಕೆ ನಿಂತು ಎಲ್ಲವನ್ನು ಗಮನಿಸುತ್ತಿದ್ದ ಕೃಷ್ಣ, ಆ ಹುಡುಗನನ್ನು ಮೆಲ್ಲ ಮುಟ್ಟಿ ಮಾತಾಡಿದ್ದು ಕಂಡೆ. ಆ ಹುಡುಗ ಸಣ್ಣದಾಗಿ ನಕ್ಕು, ಬಾಟಲಿಗಳನ್ನೆಲ್ಲ ವಾಪಾಸು ಒಯ್ದ. ಮಿನಿಟಿನೊಳಗೆ ಕುಡಿನೀರು ತುಂಬಿದ ಎರಡೆರಡು ಸ್ಟೀಲ್ ಜಗ್ಗು ಮತ್ತು ಲೋಟಗಳನ್ನು ತಂದಿಟ್ಟ! 

ಕೃಷ್ಣರ ಸಭಾ ವರ್ತನೆಯೂ ಅಷ್ಟೇ ಸಭ್ಯ. ಒಂದೆರಡು ದಿನಗಳಿಂದ ನೀನಾಸಂ ರಂಗಮಂದಿರದ ಧ್ವನಿ ವ್ಯವಸ್ಥೆಯಲ್ಲಿ ಏನೋ ಪತ್ತೆ ಹಚ್ಚಲಾಗದ ‘ಕಿರ್ಕಿರಿ ಭೂತ’ ಆಗೀಗ ಕಾಡುತ್ತಿತ್ತು. ಇಂದಂತೂ "ಏನೋ ಕೇಳಿದರಾಯ್ತು ಎನ್ನುವಂತೆ ಬರಿಯ ಮಾತಲ್ಲ, ಶ್ರುತಿ ರಾಗ ವೈವಿಧ್ಯಗಳ ಮೇಳ, ಒಂಬತ್ತು ಹತ್ತು ಮೈಕಿನ ಜಾಲ. ಗುರುತರ ಜವಾಬ್ದಾರಿಯನ್ನು ಕೆವಿ ಶಿಶಿರನೇ (ಅಕ್ಷರ ಪುತ್ರ, ಧ್ವನಿ ತಂತ್ರಜ್ಞ ಮತ್ತು ಪಡ್ಡಾಯಿ ಸಿನಿಮಾದ ಧ್ವನಿವಿನ್ಯಾಸದಲ್ಲೂ ಕೆಲಸ ಮಾಡಿದ ಅನುಭವಿ) ವಹಿಸಿಕೊಂಡಿದ್ದು ಸಕಾಲಕ್ಕೆ ಕಲಾಪ ನಡೆಯತೊಡಗಿತು. ಜ್ಞಾನ ಯಜ್ಞದ ನಡುವೆ ಮಾರೀಚ ಸುಬಾಹುಗಳ ಪ್ರವೇಶದಂತೆ ಒಮ್ಮೆಲೆ ‘ಕಿರ್ಕಿರಿ ಭೂತ’ ತಲೆ ಹಾಕಿತ್ತು. ಕಲಾಪ ನಿಂತು, ಶಿಶಿರ ಮತ್ತು ಸಹಾಯಕ ತಡಬಡಾಯಿಸಿದ್ದರು. ಕೃಷ್ಣ ಏನೂ ಆಗಿಲ್ಲವೆಂಬಂತೆ ಕಾದರು. ಒಂದೆರಡು ಮಿನಿಟು ಕಳೆದ ಮೇಲೆ, ಸಿಡುಕೋ ಮುಖ ಗಂಟೋ ಹಾಕದೆ "ಡೋಂಟ್ ವರಿ, ವಿಲ್ ಕಂಟಿನ್ಯೂ..." ಎಂದೇ ತೊಡಗುವವರಿದ್ದರು. ಅದೃಷ್ಟವಶಾತ್ ಶಿಶಿರನ ಪರಿಹಾರ ಕಾರ್ಯ ಯಶಸ್ವಿಯಾಯ್ತು. 

ಟಿ.ಎಂ. ಕೃಷ್ಣ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರೇ ಸರಿ. ಆದರೆ ಅಂದಂದಿನ ತಂಡವನ್ನವರು ಸ್ಥಳೀಯ ವಾಸ್ತವತೆಯಲ್ಲೇ ನಡೆಸಿಕೊಳ್ಳುವುದು ನನ್ನನುಭವಕ್ಕೆ ಬಂತು. ಸಹ ಕಲಾವಿದರನ್ನು ಭಂಗಿಸುವ, ಲಿಂಗ ತಾರತಮ್ಯ ನಡೆಸುವ, ದುರಹಂಕಾರ ಮೆರೆವ ಅನೇಕ ಮಾತುಗಳು ಅವರ ‘ಕಲಾನುಭವ’ ಕಥನದಲ್ಲಿ ಬಂತು. ಅಂಥ ದೋಷಗಳಿಗೆಲ್ಲ ಅತೀತವಾಗಿಯೇ ಇತ್ತು ಇವರ ಮೇಳ - ಪಿಟೀಲಿನಲ್ಲಿ ಜತೆಗೊಟ್ಟಾಕೆ ಮಹಿಳೆ, ತಾಳವಾದ್ಯದಲ್ಲಿ ಅಷ್ಟಾಗಿ ಇವರ ಪೂರ್ವ ಸಂಗವಿಲ್ಲದ ಮೃದಂಗಪಟು. ಅವರೀರ್ವರಿಗೂ ಶಿಷ್ಯ ಬಳಗಕ್ಕೂ ಹಿರಿಯ ಗೆಳೆಯನಂತೆ ಕೃಷ್ಣ ಕಲಾಪ ನಿರ್ವಹಿಸಿದರು. ಎಲ್ಲ ಎಳೆಯರೇ ಆದರೂ ಸಹವಾದಕರೆಂಬಂತೆ ಗಂಭೀರವಾಗಿ ನಡೆಸಿಕೊಂಡರು. ಒಟ್ಟು ಚರ್ಚೆಯ ಓಘದಲ್ಲಿ ಅವರಲ್ಲೂ ಸಹಜವಾಗಿ ಮೂಡಿದ ಭಿನ್ನಾಭಿಪ್ರಾಯಗಳನ್ನು ಕೃಷ್ಣ ಯಾವ ಭಾವವ್ಯತ್ಯಯವಿಲ್ಲದೆ (ಅವಿಧೇಯತೆಯೆಂದು ಭಾವಿಸದೆ,) ವೈಚಾರಿಕ ನೆಲೆಯಲ್ಲೇ ಸಮಾಧಾನಿಸಿದರು. ವೇದಿಕೆಯ ಕಲಾಪ ಮುಗಿದಮೇಲೆ, ಕೃಷ್ಣರಿಗೆ ಬಿಡುವಾದಾಗ, ನಾನು ಕೊಟ್ಟ ಪುಸ್ತಕಗಳೇನಾದರೂ ಅವರ ಕುತೂಹಲಕ್ಕೊದಗಿತೇ ಎಂದು ವಿಚಾರಿಸಿಸಬೇಕೆಂದಿದ್ದೆ; ಆಗಲೇ ಇಲ್ಲ. 

ನಡು ಬೇಸಗೆಯಿರುಳ ನಲ್ಗನಸು 

ಮೂರನೆಯ ದಿನದ ಕೊನೆಯ ಕಲಾಪ - ನಾಟಕ, ನಡುಬೇಸಗೆಯಿರುಳ ನಲ್ಗನಸುಗಳು. ಶೇಕ್ಸ್ಪಿಯರನ ಈ ಇಂಗ್ಲಿಷ್ ನಾಟಕವನ್ನು ಕನ್ನಡಕ್ಕೆ ಒಗ್ಗಿಸಿದವರು ಕೆ.ಎಸ್. ನಿಸಾರ್ ಅಹಮದ್, ರಂಗಕ್ಕಳವಡಿಸಿದವರು ಇಕ್ಬಾಲ್ ಅಹಮದ್. ಇದೇ ಜುಲೈ ೧೬ರ ಸುಬ್ಬಣ್ಣ ಸ್ಮೃತಿ ದಿನದಂದು, ಹೆಗ್ಗೋಡಿನ ಜನ ನಟಿಸಿ ಅರ್ಪಿಸಿದ ಪ್ರಯೋಗಕ್ಕೆ ಇಲ್ಲಿ ಎರಡನೇ ಅವಕಾಶ. ಇದನ್ನೂ ಅಂದೇ ಅಭಯ ದಾಖಲಿಸಿದ್ದೂ ಆಗಿದೆ. ಮತ್ತೆ ತಿರುಗಾಟದ ಔಪಚಾರಿಕ ನಿರ್ಬಂಧ ಇದಕ್ಕೇನೂ ಇಲ್ಲವಾದ್ದರಿಂದ ಇಂದೋ ನಾಳೆಯೋ ಯೂ ಟ್ಯೂಬಿನಲ್ಲಿ ಮುಕ್ತವಾದರೆ ಅವಶ್ಯ ನೋಡಿ. [ಈ ಸ್ಮೃತಿ ದಿನದ ಸಂಪ್ರದಾಯದಲ್ಲಿ, ಹಿಂದೆ ಬಿಡುಗಡೆಯಾದ ನಾಟಕಗಳ ಎರಡು ಸೇತುಗಳನ್ನಷ್ಟೇ ಸದ್ಯ ಇಲ್ಲಿ ಲಗತ್ತಿಸಿದ್ದೇನೆ: ೨೦೧೬ರ - ಮಾಲತಿ ಮಾಧವ, ೨೦೧೫ರ ಒರೆಸ್ತಿಸ್ ಪುರಾಣ] ಹೊಸದಾಗಿ ‘ನಡುಬೇಸಗೆಯಿರುಳ ನಲ್ಗನಸುಗಳ’ ಪ್ರಭಾವದ ಸಂಸ್ಕೃತಿ ಶಿಬಿರಾರ್ಥಿಗಳು, ಭೋರೆಂದು
ಸುರಿದ ಮಳೆಯ ರಾತ್ರಿಯಲ್ಲಿ, ಏನೇನು ಕನಸು ಕಂಡಿರಬಹುದೆಂಬ ಚರ್ಚೆ ‘ನಾಳೆ’ ಬೆಳಗ್ಗಿನ ಮೊದಲ ಕಲಾಪವನ್ನು ಕಾದು ಕೇಳೋಣ :-) 

ಸಂಖ್ಯೆ ಸಣ್ಣದು ಆದರೆ ಜನ ಎಂತೆಂಥವರು!! 

ಕಲಾನುಭವದ ಬೆನ್ನು ಬಿದ್ದ ಶಿಬಿರಾನುಭವದಲ್ಲಿ ಇನ್ನೂ ನಾಲ್ಕನೇ ದಿನ ಕಣ್ಣರಳಿಸುತ್ತಿತ್ತು. ಊರಿಗೆ ಮೊದಲೇ ಹೊರಟುಕೊಂಡ ನಾವು ಅಂದಿನ ‘ಸಾಗರಶೋಧ’ (ನಗರದ ವಿವಿಧ ದಾರಿಗಳಲ್ಲಿ ಬೆಳಗ್ಗಿನ ವಿಹಾರ!) ಮುಗಿಸುವ
ದಾರಿಯಲ್ಲಿ, ಅಷ್ಟೇ ಸಹಜವಾಗಿ ಎದುರಾದವರು ಪ್ರಜಾವಾಣಿ ಬಳಗದ ಶಾಂತ ಕುಮಾರ್ ಮತ್ತು ಅವರ ಗೆಳೆಯ ಸತ್ಯಪ್ರಕಾಶ್. ಹಿಂದೆ ಅಭಯ, ಇಸ್ಮಾಯಿಲ್ ಪರಿಚಯದ ಮೂಲಕ, ಪ್ರಜಾವಾಣಿ ಬಳಗಕ್ಕೆ ಕೆಲವು ಕೆಲಸ ನಡೆಸಿದಾಗ ಶಾಂತಕುಮಾರ್ ಪರಿಚಯ ಆದದ್ದು, ಮುಂದದು ಸ್ನೇಹಾಚಾರವೇ ಆದ್ದನ್ನು ನೆನಪಿಸಿದೆ. ಸತ್ಯಪ್ರಕಾಶ್ - ರಾಷ್ಟ್ರ ಮಟ್ಟದ ಬಹುಕ್ರಿಯಾಶೀಲ ಪತ್ರಕರ್ತ ಎಂದು ನನಗೆ ಸ್ವಲ್ಪ ತಡವಾಗಿ ತಿಳಿಯಿತು. ಇವರೂ ಸಂಸ್ಕೃತಿ ಶಿಬಿರದ ಅತಿಥಿಗಳಾಗಿಯೇ ವರದಶ್ರೀಯಲ್ಲಿದ್ದರು. ಆ ಲೆಕ್ಕದಲ್ಲಿ ಒಟ್ಟು
ಐದು ದಿನಗಳಲ್ಲಿ ನಮಗೆ ಶಿಬಿರಾನುಭವದಲ್ಲಿ, ಯಾವ ಔಪಚಾರಿಕ ಬಂಧಗಳಿಲ್ಲದೆ ಒಡನಾಟ ಕೊಟ್ಟ (ಎಲ್ಲರೂ ವೇದಿಕೆಯ ಮೇಲಿನ ಕಲಾಪಕ್ಕೆ ಬಂದವರೆಂದೇನೂ ಅಲ್ಲ), ಘನ ವ್ಯಕ್ತಿಗಳನ್ನು ನೆನೆಸಿದರೆ ಆಶ್ಚರ್ಯವಾಗುತ್ತದೆ. 

ಸುಧಾದ ದಾಂಪತ್ಯ ಸಂಬಂಧೀ ಅಂಕಣಕಾರ ವಿನೋದ್ ಛೆಬ್ಬಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂಎ ಹೆಗಡೆ, ವಿದ್ವಾನ್ ಶ್ರೀರಾಮ ಭಟ್ಟ, ಥಟ್ಟಂತ ಹೇಳಿಯ ನಾ ಸೋಮೇಶ್ವರ, ಮನೋಹರ ಗ್ರಂಥಮಾಲೆಯ ರಮಾಕಾಂತ ಜೋಶಿ, ಮಲ್ಲಾಡಿ ಹಳ್ಳಿ ಮೂಲೆಯಲ್ಲಿದ್ದೂ ಗಟ್ಟಿ ಪ್ರಕಾಶನವನ್ನೂ
ನಡೆಸಿದ್ದ ಲೇಖಕ ರಾಘವೇಂದ್ರ ಪಾಟೀಲ, ತನ್ನ ಕತೆಗಳ ಬಲದಲ್ಲೇ ಐಟಿ ಸಾಗರ ಬಿಟ್ಟು ತನ್ನದೇ ಪ್ರಕಾಶನದ ಕೊಳ ಮಾಡಿಕೊಂಡು ಈಜುವ ವಸುಧೇಂದ್ರ, ಮುಂಬೈ ಕನ್ನಡಿಗ-ತುಳುವ ಭರತ್ ಕುಮಾರ್ ಪೊಲಿಪು, ಪುತ್ತೂರಿನ ವೈದ್ಯ ಎಪಿ ಭಟ್, ಜಯಪ್ರಕಾಶ ಮಾವಿನಕುಳಿ, ಅರವಿಂದ ಕುಡ್ಲ, ವಸಂತ ಕಜೆ, ಸುಳ್ಯದ ಸುಂದರ ಕೇನಾಜೆ, ಗುಡ್ಡಿಯಂಗಡಿ ಸಂತೋಷ್, ವಿನ್ಯಾಸ್, ವಿಜೇತ, ವಿಶಾಲಾ, ನಿತ್ಯಾನಂದ ಶೆಟ್ಟಿ, ರಾಜಾರಾಂ ತೋಳ್ಪಾಡಿ, .......ಹೀಗೇ ನೆನಪಿನ ಅಂಗಳದಲ್ಲಿ ನಾನು ಸುಲಭದಲ್ಲಿ ಹೆಸರಿಸಲಾಗದಿದ್ದರೂ ನೀನಾಸಂ ವಠಾರದಲ್ಲಿ ಕೇವಲ ವೈಯಕ್ತಿಕ ಆಸಕ್ತಿಯಲ್ಲೇ
ಭಾಗವಹಿಸಿದ್ದ ಖ್ಯಾತನಾಮಗಳು ಅಸಂಖ್ಯ. 

ಪ್ರಸಾದ್ ಮತ್ತು ರಾಧೆ ರಕ್ಷಿದಿ ದಂಪತಿ (ನೋಡಿ: http://www.athreebook.com/2019/04/blog-post.html ) ಬೆಳಗ್ಗಿನಿಂದ ರಾತ್ರಿಯವರೆಗೂ ನಮಗೆ ಬಗಲಿನ ಸಂಗಾತಿಗಳೇ ಆಗಿದ್ದರು. ಬಿವಿ ಕಾರಂತ ಭವನ, ಗ್ರಂಥ ಸಂಗ್ರಹಗಳನ್ನು ನೀನಾಸಂಗೆ ವಹಿಸಿಕೊಟ್ಟ ಜಯರಾಮ ಪಾಟೀಲ ದಂಪತಿ ‘ಹೆಣ್ಣುಕೊಟ್ಟ’ ಬೀಗರ ಸಂಭ್ರಮ ಮತ್ತು ನಿರುಮ್ಮಳದಲ್ಲಿ ಎಲ್ಲ ಕಲಾಪಗಳಲ್ಲೂ ಹಾಸುಹೊಕ್ಕಾಗಿದ್ದರು. ಅಕ್ಷರ "ಎಷ್ಟೋ ಬಾರಿ ನಮ್ಮ
ಸಂಖ್ಯಾಮಿತಿಯಲ್ಲಿ ಹೊಸಬರಿಗೆ, ಎಳೆಯರಿಗೆ ಅವಕಾಶ ತಪ್ಪಬಾರದೆಂದು, ನಾವು ಮತ್ತೆ ಮತ್ತೆ ಪ್ರವೇಶ ಕೋರುವವರನ್ನು ನಿರುತ್ತೇಜಿಸಿದ್ದೂ ಉಂಟು" ಎಂದೊಮ್ಮೆ ಹೇಳಿದ್ದು ಕೇಳಿದ್ದೆ. ಆದರೂ ಸಾಂಪ್ರದಾಯಿಕ ವಾರ್ಷಿಕ ಜಾತ್ರೆಯಲ್ಲಿ ಭಾಗವಹಿಸಿದಷ್ಟೇ ಉತ್ಸಾಹದಿಂದಲೂ ಒಂದಕ್ಕಿಂತಲೂ ಹೆಚ್ಚು ಬಾರಿ ಬಂದವರೆಷ್ಟೋ ಮಂದಿಯಿದ್ದರು. ವೃತ್ತಿ ಅಗತ್ಯಕ್ಕೆ ಭಾರತ ಸುತ್ತಿದರೂ ನೆಲೆ ನಿಂತದ್ದು ಕೊಯಂಬತ್ತೂರಾದರೂ ಮೂಲ ಕನ್ನಡ ಪ್ರಜ್ಞೆಯನ್ನು ಜೀವಂತವಾಗಿಟ್ಟುಕೊಂಡು, ಶಿಬಿರದಲ್ಲಿ ಹೊಸ ಪೋಷಕಾಂಶಗಳನ್ನು ಕೂಡಿಸಿಕೊಳ್ಳುತ್ತಲೇ ಬಂದ ಹಿರಿಯ ದಂಪತಿಯೊಂದೂ ಅಂಥವರಲ್ಲಿದ್ದರು. ಮುಂಬೈ ಕನ್ನಡಿಗರ ಅಭಿಮಾನ ಇಲ್ಲೂ ಅಸಂಖ್ಯವಾಗಿಯೇ ಕಾಣುತ್ತಿತ್ತು. ಎಷ್ಟೋ ಮಂದಿ ಭಾಷೆಯ ಗಡಿಯನ್ನು ಅವಗಣಿಸಿ (ಅಲ್ಪಸ್ವಲ್ಪ ಅಂದಾಜಿಸಿಯೂ ಆಗೀಗ ಬಲ್ಲವರಿಂದ
ತಿಳಿದೂ) ದಕ್ಕಿಸಿಕೊಂಡ ಭಾವ, ನಾಟಕಾದಿ ಕಲೆಗಳನ್ನು ಸವಿದ ಪರಿ ಇತರರದ್ದಕ್ಕೇನೂ ಕಡಿಮೆಯದ್ದಲ್ಲ. ಅಂಥವರಲ್ಲಿ ನಾನು ಮುಖ್ಯವಾಗಿ ಗುರುತಿಸಿದವರು ಮೂವರು. ಸಣ್ಣ ವೇದಿಕೆ ಕಲಾಪದಲ್ಲಿ ಭಾಗಿಯೂ ಆದ ಅಂತಾರಾಷ್ಟ್ರೀಯ ಮಟ್ಟದ ವಿದ್ವಾಂಸ - ರುಸ್ತುಂ ಭರೂಚ, ಉದ್ಘಾಟನೆಯ ಸಣ್ಣ ಔಪಚಾರಿಕತೆಯನ್ನು ಪೂರೈಸಿದ ರಾಜೀವ್ ನಾಯಕ್ ಮತ್ತು ಔಪಚಾರಿಕ ಹೊಣೆಗಾರಿಕೆ ಏನಿಲ್ಲದೆಯೂ ಎಲ್ಲ
ಸವಿಯಲೆಂದೇ ಬಂದ ಓರ್ವ ಮಲಯಾಳದ ಜನಪದ ವಿದ್ವಾಂಸ (ಇವರು ನನ್ನಂಗಡಿಯ ಖಾಯಂ ಗಿರಾಕಿಯೂ ಆಗಿದ್ದರು. ದುರದೃಷ್ಟಕ್ಕೆ ನಾನವರ ಹೆಸರು ಮರೆತಿದ್ದೇನೆ). ಇವರೆಲ್ಲ ಐದೂ ದಿನಗಳುದ್ದಕ್ಕೆ ಶಿಬಿರದ ಭಾಗವೇ ಆಗಿದ್ದರು. 

ಅನ್ಯಾನ್ಯ ಕೆಲಸಗಳ ಒತ್ತಡಗಳಿದ್ದರೂ ಕೆಲವಾದರೂ ಕಲಾಪಗಳನ್ನು ಅನುಭವಿಸಲೆಂದೇ ಎಷ್ಟೂ ದೂರ ಸಮಯ ಶ್ರಮವನ್ನು ವ್ಯಯಿಸಿ ಭಾಗವಹಿಸಿದವರ ಲೆಕ್ಕವೂ ಅಷ್ಟೇ ದೊಡ್ಡದು. ಅಂಥವರಲ್ಲಿ ನನ್ನ ಸಣ್ಣ ನೆನಪಲ್ಲಿ ಉಳಿದವರು ಉಡುಪಿಯಿಂದ ವೈದೇಹಿ ಮತ್ತವರ ಪತಿ, ವರದೇಶ್
ಹಿರೇಗಂಗೆ, ಸತ್ಯಗಣಪತಿ, ಪೃಥ್ವೀರಾಜ್ ಕವತ್ತಾರ್, ಮಂಗಳೂರಿನಿಂದ ಮಹಾಲಿಂಗಭಟ್, ವೈದ್ಯ ಸತ್ಯನಾರಾಯಣ ನೂಜಿ, ಶಿವಮೊಗ್ಗದಿಂದ ಡಿ.ಎಸ್ ನಾಗಭೂಷಣ ಮತ್ತು ಸವಿತಾ ದಂಪತಿ, ಕನ್ನಡ ಸಂಘದ ನಾಗಭೂಷಣ (ನೋಡಿ: ಶಿವಮೊಗ್ಗ ಕರ್ನಾಟಕ ಸಂಘ – ಕೂಡಲಿ!), ವಿಜಯವಾಮನ್....... 

ನನ್ನ ಚಾರಣದ ಹುಚ್ಚನ್ನು ನೆನಪಿನಲ್ಲಿಟ್ಟು, ತಮ್ಮ ಕೈಲಾಸ ಪರಿಕ್ರಮದ ಸಾಹಸ ಕಥನವನ್ನು ನನಗೆ ಉಡುಗೊರೆಯಾಗಿಯೇ ಕೊಟ್ಟ ಮುಂಬೈಯ ಮಮತಾ ರಾವ್ ಅವರ ಮಮತೆಗೇನು ಹೇಳಲಿ! ಪಕ್ಕಾ ‘ಗೃಹಿಣಿ’ಯಾಗಿ ಕೌಟುಂಬಿಕ ಜವಾಬ್ದಾರಿಯನ್ನು ಗಟ್ಟಿ ಮಜಲಿಗೆ ಸೇರಿಸಿದ ಮೇಲೆ ಕಲೆ ಸಾಹಿತ್ಯಗಳ ದಾಹವನ್ನು ಹಿಂಗಿಸಿಕೊಳ್ಳಲೆಂದೇ ಬಂದಿದ್ದ ನಳಿನಿಯವರ ಸಹಜ ಉತ್ಪ್ರೇಕ್ಷೆಯ ಉತ್ಸಾಹದ ಬಗ್ಗೆ ಏನು ಹೇಳಿದರೂ ಕಡಿಮೆಯೇ! 

ಭಯಂಕರ ಅಂತಾರಾಷ್ಟ್ರೀಯ ಮಟ್ಟದ ಉದ್ಯೋಗಿ, ಯು.ಆರ್. ಅನಂತಮೂರ್ತಿಯವರ ಅಳಿಯ ಎಂದೇ ನಾನು ಮೊದಲಿಗೆ ಕೇಳಿದ್ದ ಹೆಸರು ವಿವೇಕ್ ಶಾನಭಾಗ್. ಅವರ ಕತೆಗಾರಿಕೆ, ತೀವ್ರ ಕನ್ನಡಾಭಿಮಾನ, ಸೌಮ್ಯ ಆದರೆ ಖಚಿತ ನಡೆಗಳೆಲ್ಲದರ ಪರಿಚಯ, ಹಾಗಾಗಿ ಆತ್ಮೀಯ ಸಂಬಂಧವೂ ಸಾಧ್ಯವಾದದ್ದು ಅವರದೇ ‘ದೇಶಕಾಲ’ (ನೋಡಿ: http://www.athreebook.com/2012/01/blog-post_14.html) ಪ್ರಕಾಶನದೊಂದಿಗೆ. ಇವರು ಪತ್ನಿ ಅನುರಾಧ, ಅತ್ತೆ ಎಸ್ತರ್ ಅನಂತಮೂರ್ತಿ, ಭಾವ ಶರತ್ ಮುಂತಾದವರೊಡನೆ ನೀನಾಸಂ ವಠಾರವನ್ನು ಸ್ವಂತ ಕುಟುಂಬದ ಮನೆಯಂತೇ ಚಂದಗಾಣಿಸಿದ್ದರು. "ನಾನು ನಿಮ್ಮ ಫೇಸ್ ಬುಕ್ ಫ್ರೆಂಡೂ..." ಎನ್ನುತ್ತ ಭ್ರಮಾಗೆಳೆತನವನ್ನು ವಾಸ್ತವಕ್ಕೆ ತಂದವರು, ನೀನಾಸಂನ ಹಳೆಯ ವಿದ್ಯಾರ್ಥಿ ಮತ್ತು ತಿರುಗಾಟದ ಕಲಾವಿದರು (ಗಿರಿಜಾ ಮತ್ತು ಗೀತಾ ಸಿದ್ಧಿಸೋದರಿಯರು, ಅವಿನಾಶ್ ರೈ, ಸದಾಶಿವ ಧರ್ಮಸ್ಥಳ, ನಾಗರಾಜ ಸಿರ್ಸಿ, ಮಂಜು ಕಾಸರಗೋಡು, ಚಂದನ್ ಮತ್ತು ನನಗೀಗ ಹೆಸರು ನೆನಪಿಗೆ ಬಾರದ ಅಸಂಖ್ಯರು), ಕಾಲೇಜು ವಿದ್ಯಾರ್ಥಿಗಳು ಎಂದೆಲ್ಲ ಅಪಾರ ಸಂಖ್ಯೆಯಲ್ಲಿ ಮತ್ತು ಶಿಸ್ತಿನಲ್ಲಿ ಶಿಬಿರವನ್ನು ಅನುಭವಿಸಿದ ಯುವಶಕ್ತಿಯನ್ನು ನೋಡುವಾಗಂತೂ ಯಾರಿಗೂ ನಮ್ಮ ದೇಶ, ಭಾಷೆ, ಕಲೆ, ಸಂಸ್ಕೃತಿಗಳ ಭವಿಷ್ಯದ ಬಗ್ಗೆ ಭರವಸೆ ಕಳೆದುಹೋಗದು, ಧನ್ಯತೆ ಮೂಡದಿರದು. 

(ಮುಂದುವರಿಯಲಿದೆ)

1 comment:

  1. ...(ನೋಡಿ: ಶಿವಮೊಗ್ಗ ಕರ್ನಾಟಕ ಸಂಘ – ಕೂಡಲಿ!), ಕೊಂಡಿ ತಪ್ಪಾಗಿದೆ (missing one letter in URL - htp://www.athreebook.com/2014/07/blog-post_11.html)
    ದಯವಿಟ್ಟು ಹೀಗೆ ಸರಿಪಡಿಸಿ - http://www.athreebook.com/2014/07/blog-post_11.html

    ReplyDelete