14 May 2018

ಮೂಸೋಡೀ ರಕ್ಷಣೆ ?

"ಕೌಟುಂಬಿಕ ಕಲಾಪಗಳಲ್ಲಿ ಪುತ್ತೂರು, ಕೊಣನೂರು, ಬೆಂಗಳೂರು ಎಂದೆಲ್ಲಾ ಓಡಾಡಿ ಓಡಾಡೀ ನನ್ನನ್ನು ಮರೆತದ್ದಾ?" ಕೇಳಿತು ಸೈಕಲ್. "ಮರೆಯಲಾಗದ್ದು ಮತ್ತು ಮರೆಯಬಾರದ್ದೂ ತುಂಬಾ ಇದೆ" ಎಂದು ಅದನ್ನು ಸಮಾಧಾನಿಸುತ್ತ, ಇಂದು ಬೆಳಿಗ್ಗೆಯೇ ಸವಾರಿ ಹೊರಟೆ. ಆ ಮರೆಯಬಾರದ ವಿಚಾರ - ಕಳೆದ ತಿಂಗಳು ಬಂದ ಉಬ್ಬರದ ಅಲೆಗಳಿಂದ, ಈಗ ಬರುತ್ತಿರುವ ಅಕಾಲಿಕ ಮಳೆಯಿಂದ ಮೂಸೋಡಿಯ ರಶೀದ್ ಮನೆ ಏನಾಗಿರಬಹುದು, ಒಂದನ್ನೇ ಧ್ಯಾನಿಸುತ್ತ ಕಾಸರಗೋಡಿನತ್ತ ಪೆಡಲಿದೆ. ನಿನ್ನೆ ಸಂಜೆಯ

ಮಳೆ, ಇನ್ನೂ ಕಳೆಯದ ಕಾವಳ ನನ್ನನ್ನು ತಂಪಾಗಿಟ್ಟದ್ದಕ್ಕೋ ಏನೋ ಮಂಜೇಶ್ವರದವರೆಗೂ ಅವಿರತ ಸಾಗಿತ್ತು ನನ್ನ ಚಕ್ರಾಧಿಪತ್ಯ. ಒಣಗುತ್ತಿದ್ದ ಗಂಟಲಿಗೆ ಮೂರು ಮುಕ್ಕಳಿ ನೀರು ಹನಿಸಿ, ಮುಂದುವರಿಸಿದವನು ಉಪ್ಪಳಕ್ಕೂ ತುಸು ಮೊದಲು ಹೆದ್ದಾರಿ ಬಿಟ್ಟು, ಬಲದ ಕವಲು ಹಿಡಿದೆ. ಮತ್ತೊಂದು ಮೂರು-ನಾಲ್ಕು ಕಿಮೀ ಸಪುರ ದಾರಿಗಳಲ್ಲಿ ಸುಳಿದು ನಿಂತದ್ದು ಮೂಸೋಡಿ ಕಡಲ ಕಿನಾರೆಯಲ್ಲಿ. ಉದ್ದಕ್ಕೂ ಕಾಡಿದ ಪ್ರಶ್ನೆಗೆ ಸಮಾಧಾನ ಪ್ರತ್ಯಕ್ಷವಾಗಿತ್ತು. (ಇದರ ಹಿನ್ನೆಲೆ ತಿಳಿಯದವರು ಅಥವಾ ಮರೆತವರು ಇಲ್ಲಿ
ಚಿಟಿಕೆ ಹೊಡೆಯಿರಿ - ಕಡಲ ಕಲಕಿನಲ್ಲೆದ್ದ ಅಮೃತದ ಹನಿಗಳು. ಅಲ್ಲೂ ಮುಖ್ಯವಾಗಿ ‘ಮೂಸೋಡೀ ಪುರಾಣ’ದ ಅಡಿ ಬರುವ ಮೂರು ಟಿಪ್ಪಣಿಗಳು) 

ಆಶ್ಚರ್ಯಕರವಾಗಿ ರಶೀದ್ ಮನೆ ಉಳಿದಿತ್ತು. ಅಂದು ರಕ್ಷಣೆಗಾಗಿ ಒಳನಾಡಿಗೆಲ್ಲೋ ವಲಸೆಹೋಗಿದ್ದ ಆತನ ಹೆಂಡತಿ ಮಕ್ಕಳೀಗ ಮರಳಿದ್ದರು. ಅಂದು ಹತಾಶೆಯಲ್ಲಿ ಹೇಗೂ ಕಡಲ ಪಾಲಾಗುವ ಮನೆಯ ಕೆಲವಾದರೂ ಅಂಶಗಳನ್ನು ಕಳಚಿ ಉಳಿಸಿಕೊಳ್ಳುವ ಅಂದಾಜಿನಲ್ಲಿದ್ದರು ರಶೀದ್. ಆದರಿಂದು ಅದು ಮರೆತಂತೆ ವಠಾರದಲ್ಲಿ
ಕೊರೆತಕ್ಕೆ ಒಳಗಾಗಿಯೂ ಉಳಿದ ಬೇರೊಂದು ರಚನೆಯ ಮೋಟುಗೋಡೆಗೇ ತತ್ಕಾಲೀನ ಮಾಡಿನ ವ್ಯವಸ್ಥೆ ಮಾಡಿದ್ದು ಕಾಣಿಸಿತು - ಅದು ಮಳೆಯಲ್ಲಿ ಬಿದ್ದು ಹೋಗಬಾರದಲ್ಲಾ! ಅದರ ಅಡಿಪಾಯ ಮತ್ತು ಮನೆಯ ಹಿತ್ತಿಲನ್ನೂ "ಇನ್ನೇನು ನುಂಗಿಬಿಡುತ್ತೇನೆ" ಎಂಬಂತೆ ಅಪ್ಪಳಿಸುತ್ತಿದ್ದ ಅಲೆಗಳನ್ನು ‘ರಕ್ಷಣಾ ಪಡೆ’ ಸುಮಾರು ನೂರಡಿ ದೂರಕ್ಕೆ ತಳ್ಳಿ ಮರಳು ತುಂಬಿಸಿದಂತಿತ್ತು. ಆ ಮರಳ ಹಾಸಿನ ಮೇಲೆ ಎಲ್ಲಿಂದಲೋ ಕೆಮ್ಮಣ್ಣು ತಂದು ಹಾಸಿ, ಲಾರಿಗಳನ್ನೋಡಿಸಿ, ಅಲೆಗೈಗಳಿಗೆ ಭಾರೀ ಬಂಡೆ ತುಣುಕುಗಳ ತತ್ಕಾಲೀನ ತಡೆ ಹಾಕಿದ್ದರು.
ಮುಂದುವರಿದು, ಇಂದು ಎರಡು ದುರುದುಂಡಿಗಳು ಆ ಕಲ್ಲುಗಳನ್ನು ಅತ್ತಣ ಬಂದರ್ ಕಟ್ಟೆಯವರೆಗೂ ಬಿಗಿ ಗೋಡೆಯಾಗಿ ವ್ಯವಸ್ಥೆಗೊಳಿಸುತ್ತಿತ್ತು. 


ಮರಳ ರಾಶಿಯ ಕಚ್ಚಾದಾರಿಯಲ್ಲಿ ಸಣ್ಣ ಸವಾರಿ ಮಾಡಿ, ‘ಕಲ್ಲು ಹೊಲಿಯುವ’ ಕ್ರಿಯೆ ನೋಡಿದೆ. ಈ ಶಾಂತ ದಿನಗಳಲ್ಲೂ ಅಲೆಗಳು ಇಟ್ಟ ಪ್ರತಿ ಕಲ್ಲನ್ನು ಅಲುಗಾಡಿಸುತ್ತಲೇ ಇವೆ. ಇನ್ನೊಂದು ಮೂರು ನಾಲ್ಕು ವಾರಗಳಲ್ಲೇ ಪೂರ್ಣ ದಂಡೆತ್ತಿ ಬರುವ ‘ಮಳೆಗಾಲ’ ಕ್ಕೆ ಇದು ಸಾಕೇ? ಸಾವಿರದ ಲೆಕ್ಕದ ಬಂಡೆ ತುಣುಕುಗಳು (ನಿಜ ಲೆಕ್ಕದಲ್ಲಿ ಕೆಲವು ನೂರುಗಳೇ ಇದ್ದರೆ ಆಶ್ಚರ್ಯವಿಲ್ಲ), ದಿನಗಟ್ಟಳೆ ಓಡಿದ ಲಾರಿ, ದುರುದುಂಡಿಗಳ ಶ್ರಮ ಅಕ್ಷರಶಃ ನೀರ ಮೇಲೆ ಮಾಡಿದ ಹೋಮವಾಗುವುದೇ ಸರಿ.
‘ಮಂಜೇಶ್ವರದ ಮೀನುಗಾರಿಕಾ ಬಂದರಿನ ಅಪರಿಪೂರ್ಣ ಯೋಜನಾನುಷ್ಠಾನ ತಂದ ಅನಿಷ್ಠ ಈ ಕಡಲಕೊರೆತ’ ಎನ್ನುವುದು ಮೂಸೋಡಿಯ ಮಹಾಜನತೆಗೆ ತಿಳಿದಿರಲಾರದು. ಹಾಗಾಗಿ ಮರಳಿ ಕೊರೆತ ವಕ್ಕರಿಸಿದಾಗ "ಪಾಪ ಸರ್ಕಾರ ಬಂದೋಬಸ್ತು ಮಾಡಿದರೂ ದೇವರು ಒಪ್ಪಲಿಲ್ಲ" ಎಂದೇ ಬಡಪಾಯಿಗಳು ದುಃಖವನ್ನು, ನಷ್ಟವನ್ನು ನುಂಗಿಕೊಳ್ಳುವ ಸ್ಥಿತಿ ನೆನೆದರೆ ಮನಸ್ಸು ಭಾರವಾಗುತ್ತದೆ. 

ತಿಂಗಳುಗಳ ಹಿಂದೆ, ಅಬಾಧಿತವಾಗಿಯೇ ಉಳಿದ ರಶೀದರ ಮುಖ್ಯ ಮನೆ, ಇಂದು ಗೃಹಿಣಿ ಮತ್ತು ಮೂರು ಮಕ್ಕಳ
ಕಲರವದಲ್ಲಿ, ಒಣಗಲು ಹರಗಿದ ಬಟ್ಟೆಸಾಲಿನಲ್ಲಿ, ಏನೇನೋ ತತ್ಕಾಲೀನ ರಚನೆಗಳಲ್ಲಿ ಪೂರ್ಣ ಜೀವವಾಡುತ್ತಿತ್ತು. ಯಜಮಾನ ರಶೀದ್ ಹೊರಗೆಲ್ಲೋ ಹೋಗಿದ್ದರು. ಯಜಮಾನ್ತಿ "ಇವರ ಹೆಸರು ರಶೀದ್ ಅಲ್ಲ, ಹಮೀದ್" ಎಂದು ತಿದ್ದಿ ಕೊಟ್ಟರೂ ಅತಿಥಿ ಸತ್ಕಾರದಲ್ಲಿ ತಾನು ಆತನಿಗೆ ಕಡಿಮೆಯಲ್ಲ ಎಂಬಂತೆ "ಚಾಯ್ ಮಾಡ್ತೇನೆ...." ಎಂದು ವಿಚಾರಿಸಿದ್ದೇ ನನಗೆ ಸಮ್ಮಾನವಾಯ್ತು. ನಾನು ಆ ಸಂತ್ರಸ್ತರಿಗೆ ಹೊರೆಯಾಗಬಾರದೆಂದು ಅದನ್ನು ನಯವಾಗಿ ನಿರಾಕರಿಸಿ, ಮರಳುವ ದಾರಿಯಲ್ಲಿ ಹೊಸಂಗಡಿ ಹೋಟೆಲ್
ಗಿರಾಕಿಯಾದೆ. ಉಳಿದ ದಾರಿಯುದ್ದಕ್ಕೆ, ಕಡಲಿಗಿಕ್ಕಿದ ಬಂಡೆಗಳಂತೆ ಸೂರ್ಯ ತಡೆ ಮಾಡಿದ್ದ ಮೋಡಗಳು ಅಲ್ಲಲ್ಲಿ ಕೊರೆದು ಹೋಗಿದ್ದವು. ನಿತ್ಯ ಅಭ್ಯಾಸಕ್ಕೆ ಕಳ್ಳಬಿದ್ದು ಸಾರ್ವಜನಿಕ ವೇದಿಕೆ ಹತ್ತಿದ ಸಂಗೀತಗಾರನಂತೆ, ಮೂರು ನಾಲ್ಕು ಕಡೆ ತಡವರಿಸಿ (ತೋರಿಕೆಗೆ ನೀರು ಕುಡಿಯಲು ನಿಂತದ್ದು!), ಪೆಡಲಿಕೆಯ ಲಯ ತಪ್ಪಿ, ಬೆವರ ಹೊಳೆ ಹರಿಸಿ ಬೈಠಕ್ ಮುಗಿಸಿದೆ, ಮನೆ ತಲಪಿದೆ!

No comments:

Post a Comment